Wednesday, February 23, 2011

ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ-ಡಾ.ರಹಮತ್ ತರೀಕೆರೆ
"ಧರ್ಮ -ರಾಜಕಾರಣ ನಮ್ಮನ್ನು ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ. ಕವಿಸಮಯದಲ್ಲಿ ಎಲ್ಲರೂ ಒಂದಾಗಿ ಕುಳಿತು ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು. ಇತ್ತೀಚಿನ ತಲೆಮಾರಿನ ಲೇಖಕರು,ಸಾಹಿತಿಗಳು ಹಿರಿಯರಿಗಿಂತ ಉತ್ತಮವಾದ ಸಾಹಿತ್ಯ ರಚನೆ ಮಾಡುತ್ತಿರುವುದು ಒಳ್ಳೆಯ ಸಂಗತಿ. ಕೊಪ್ಪಳ ನನ್ನ ಕರ್ಮಭೂಮಿಯಾಗಿ ನನ್ನನ್ನು ಬೆಳೆಸಿದೆ. ಇಲ್ಲಿಯ ಗೆಳೆಯರ ಬಳಗ ಯಾವಾಗ ಕರೆದರೂ ನಾನು ತಪ್ಪದೇ ಬರುತ್ತೇನೆ. ಈ ಸನ್ಮಾನಗಳು ನನ್ನ ಬಗ್ಗೆ ನಾನು ಪುನರ್ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿವೆ" ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ರಹಮತ್ ತರೀಕೆರೆ ಹೇಳಿದರು.ಅವರು ನಗರದ ಜಚನಿ ಜನ್ಮಶತಾಬ್ದಿ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಪುಸ್ತಕಗಳ ಬಿಡುಗಡೆ ಹಾಗೂ ಸನ್ಮಾನ ಕಾರ್‍ಯಕ್ರಮದಲ್ಲಿ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕೊಪ್ಪಳದಲ್ಲಿ ಕವಿಗಳ ಸಂಖ್ಯೆ ಹೆಚ್ಚಿದೆ ಅದೇ ರೀತಿ ಸಂಶೋಧಕರು ಮತ್ತು ವಿಮರ್ಶಕರ ಸಂಖ್ಯೆ ಹೆಚ್ಚಾಗಲಿ.ಕವಿಸಮಯದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಲಿ. ವಿಮರ್ಶೆ, ಸಾಹಿತ್ಯ ವಿಶ್ಲೇಷಣೆ ನಡೆಯಲಿ ಎಂದು ಹೇಳಿದರು.
ಕಾರ್‍ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಾಜ್ ಬಿಸರಳ್ಳಿ ಕವಿಸಮಯ ನಡೆದುಬಂದ ದಾರಿ ಹಾಗೂ ಕಾರ್‍ಯಕ್ರಮದ ಕುರಿತು ಮಾತನಾಡಿದರು.ಉದ್ಘಾಟನಾ ಭಾಷಣ ಮಾಡಿದ ವಿಠ್ಠಪ್ಪ ಗೋರಂಟ್ಲಿಯವರು ಕವಿ ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತ ತನ್ನ ಕವಿತೆಯಲ್ಲಿ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ತುಡಿಯಬೇಕಾಗುತ್ತದೆ. ಸಾಹಿತಿ ಸಾಯಬಹುದು ಆದರೆ ಸಾಹಿತ್ಯ ಸಾಯುವುದಿಲ್ಲ. ಸಿರಾಜ್ ಬಿಸರಳ್ಳಿ ತಮ್ಮ ತಂದೆ ದಿ.ಬಾಬುಸಾಬ ಬಿಸರಳ್ಳಿಯವರ ಆದರ್ಶದ ವಾರಸುದಾರ,ದಿ.ಬಾಬುಸಾಬ ಬಿಸರಳ್ಳಿಯವರ ಕಾವ್ಯ ಯಾವತ್ತೂ ಸ್ಮರಣೀಯವಾದದ್ದು ಎಂದರು.ಬಿಡುಗಡೆಗೊಂಡ ಪುಸ್ತಕಗಳ ಕುರಿತು ಮಾತನಾಡಿದ ಕವಿ, ವಿಮರ್ಶಕ ಪ್ರಮೋದ ತುರ್ವಿಹಾಳ" ಕ್ರಾಂತಿ ಸೂರ್ಯನ ಕಂದೀಲು ಕವನ ಸಂಕಲನದಲ್ಲಿ ಅಪ್ಪ-ಮಗನ ಕಾವ್ಯ ಜುಗಲ್ ಬಂದಿ ನಡೆದಿದೆ. ಅಪ್ಪ ಮತ್ತು ಮಗ ಸೇರಿ ಕವನ ಸಂಕಲನ ಹೊರತಂದಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ದಾಖಲೆ. ದಿ.ಬಾಬುಸಾಬ ಬಿಸರಳ್ಳಿಯವರು ರಚಿಸಿರುವ ಅಪ್ಪ-ಅಮ್ಮ ಕವನ ,ಹರಾಜು ಕವನಗಳು ಮನುಷ್ಯ ಸಂಬಂಧವನ್ನು ಎತ್ತಿಹಿಡಿಯುತ್ತವೆ. ಸಿರಾಜ್ ಬಿಸರಳ್ಳಿ ತಮ್ಮ ತಂದೆ ದಿ.ಬಾಬುಸಾಬ ಬಿಸರಳ್ಳಿಯವರ ಜ್ಞಾನಪ್ರಜ್ಞೆಯ ವಾರಸುದಾರರಾಗಿ ಮುಂದುವರೆಯುತ್ತಿದ್ದಾರೆ. ಸಿರಾಜ್ ಬಿಸರಳ್ಳಿಯವರ ಕವನಗಳು ಬದುಕಿನ ದಟ್ಟ ಅನುಭವವನ್ನು ನೀಡುತ್ತವೆ. ಅದೇ ರೀತಿ ಕವಿಸಮೂಹದ ಕವಿಸಮಯ ಕವನಸಂಕಲನ ಸಹ ಉತ್ತಮ ಕವನಗಳನ್ನು ಹೊಂದಿದೆ. ಭರವಸೆ ಹುಟ್ಟಿಸುವಂತಹ ಕವಿಗಳು ಇದರಲ್ಲಿದ್ದಾರೆ" ಎಂದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಅನುಭವ ಎನ್ನುವ ಮೂಲದ್ರವ್ಯದ ಜೊತೆಗೆ ಅಧ್ಯಯನವೂ ಸೇರಿದಾಗ ಉತ್ತಮ ಕಾವ್ಯ ಸಾಧ್ಯ,ಕವಿಸಮಯಕ್ಕೆ ನಾನಾ ಅರ್ಥಗಳಿವೆ ಡಾ.ರಹಮತ್ ತರೀಕೆರೆಯವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು ಎಂದರು. ವೇದಿಕೆಯ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಉಧ್ಯಮಿ ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಉಪಸ್ಥಿತರಿದ್ದರು.
ನಂತರ ಕವಿಗೋಷ್ಠಿ ನಡೆಯಿತು.ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಬಿ.ಪೀರಬಾಷಾ ವಹಿಸಿಕೊಂಡಿದ್ದರು.ಕವಿಗೋಷ್ಠಿಯನ್ನು ಶಿವಪ್ರಸಾದ ಹಾದಿಮನಿ, ಅರುಣಾ ನರೇಂದ್ರ ಮಾಡಿದರು. ಸುಮಾರು ೪೫ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ವಿ.ಬಿ.ರಡ್ಡೇರ್,ಹೆಚ್.ಎಸ್.ಪಾಟೀಲ್,ಮುನಿಯಪ್ಪ ಹುಬ್ಬಳ್ಳಿ,ಬಿ.ಎಸ್.ಪಾಟೀಲ್,ವೀರಣ್ಣ ಹುರಕಡ್ಲಿ, ಎನ್. ಜಡೆಯಪ್ಪ, ಹನುಮಂತಪ್ಪ ಅಂಡಗಿ, ಶಾಂತಾದೇವಿ ಹಿರೇಮಠ, ಪ್ರಕಾಶ ಬಳ್ಳಾರಿ, ಆರ್.ಎಂ.ಪಾಟೀಲ್, ಬಸವರಾಜ್ ಆಕಳವಾಡಿ,ಶಿವಪ್ಪ ಶೆಟ್ಟರ್, ಮಂಜುನಾಥ ಗೊಂಡಬಾಳ,ಫಕೀರಪ್ಪ ವಜ್ರಭಂಡಿ ಸೇರಿದಂತೆ ಕವಿಸಮೂಹದ ಕವಿಗಳು, ಹಿರಿಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಸ್ವಾಗತವನ್ನು ಮಹೇಶ ಬಳ್ಳಾರಿ,ಪ್ರಾರ್ಥನೆಯನ್ನು ಪ್ರಿಯಾಂಕ,ಪಲ್ಲವಿ ನಿರೂಪಣೆಯನ್ನು ಸುಮತಿ ಹಿರೇಮಠ ನಡೆಸಿಕೊಟ್ಟರು. ಪುಷ್ಪಲತಾ ಏಳುಬಾವಿ ವಂದನಾರ್ಪಣೆ ಮಾಡಿದರು.

ಜ್ಯೋತಿ ಬಾ ಫುಲೆ

ಈ ಪ್ರಬಂಧ ಬರೆಯಲು ಒಂದು ನಿಶ್ಚಿತ ಉದ್ದೇಶ ಮನಸ್ಸಿನಲ್ಲಿದೆ. ನೂರಾರು ವರ್ಷಗಳಿಂದ ಬ್ರಾಹ್ಮಣಶಾಹಿಯ ನೊಗಕ್ಕೆ ಹೆಗಲು ಕೊಟ್ಟು ಶೂದ್ರರು ಹಾಗೂ ಅತಿಶೂದ್ರರು ಅಸಂಖ್ಯ ಯಾತನೆಗಳನ್ನನುಭವಿಸಿ ಹೀನಾಯ ಸ್ಥಿತಿಯ ಜೀವನವನ್ನು ನಡೆಸಿದ್ದಾರೆ. ಎಷ್ಟೋ ಕಾಲದಿಂದ ತೀವ್ರ ಬಡತನ ಮತ್ತು ಕಷ್ಟನಷ್ಟಗಳನ್ನನುಭವಿಸುತ್ತ ಬಂದಿದ್ದಾರೆ. ಈ ಪ್ರಬಂಧದ ಏಕೈಕ ಉದ್ದೇಶ ಶೋಷಿತರಿಗೆ ತಮ್ಮ ಕಷ್ಟಗಳ ಬಗೆಗೆ ಎಚ್ಚರ, ಅರಿವು ಮೂಡಿಸುವುದು ಮತ್ತು ಆ ಮೂಲಕ ಬ್ರಾಹ್ಮಣರ ಗುಲಾಮಗಿರಿ, ಶೋಷಣೆ, ಅನ್ಯಾಯಗಳಿಂದ ಬಿಡುಗಡೆಗೊಳಿಸುವುದು. ಈ ದೇಶವನ್ನು ಬ್ರಾಹ್ಮಣರು ೩೦೦೦ ವರ್ಷಗಳಿಂದಲೂ ಆಳಿರಬಹುದೆಂಬುದು ಒಂದು ಊಹೆ. ಭಾರತಕ್ಕೆ ದೂರ ದೇಶಗಳಿಂದ ವಲಸೆ ಬಂದು, ಆಕ್ರಮಿಸಿ, ಇಲ್ಲಿನ ಮೂಲ ನಿವಾಸಿಗಳನ್ನು ಸೋಲಿಸಿ, ಬಲವಂತವಾಗಿ ಅವರನ್ನು ಗುಲಾಮರನ್ನಾಗಿಸಿ, ನಾನಾ ವಿಧದ ಶೋಷಣೆಗೊಳಪಡಿಸುತ್ತಿದ್ದಾರೆ. ನಂತರ ಅವರಿಗೆ ಅದೆಲ್ಲದರ ನೆನಪು ಮಾಸತೊಡಗಿದಾಗ ಬ್ರಾಹ್ಮಣರು ಅವರಿಂದ ಉಪಾಯವಾಗಿ ನಿಜವನ್ನು ಬಚ್ಚಿಟ್ಟು ತಾವು ಹೊರಗಿನಿಂದ ಬಂದವರೆಂಬುದನ್ನೂ, ಅವರನ್ನು ಸೋಲಿಸಿ ಗುಲಾಮರಾಗಿ ಮಾಡಿಕೊಂಡಿದ್ದನ್ನೂ ಮರೆಮಾಚಿದರು. ಈ ಜನರ ಮೇಲೆ ಮೇಲುಗೈ ಸಾಧಿಸಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಬ್ರಾಹ್ಮಣರು ಹಲವು ತಂತ್ರಗಳನ್ನು ಹೂಡಿದರು. ಈ ಪ್ರಯತ್ನದಲ್ಲಿ ಎರಡು ಕಾರಣಗಳಿಂದ ಸಫಲರೂ ಆದರು: ಮೊದಲನೆಯದು ಮೂಲ ನಿವಾಸಿಗಳನ್ನು ಆಗಲೇ ಜಯಿಸಿ ಅವರ ಸ್ವಾತಂತ್ರ ಕಸಿಯಲಾಗಿತ್ತು; ಎರಡನೆಯದಾಗಿ ಬ್ರಾಹ್ಮಣರು ಅವರಿಗೆ ಜ್ಞಾನದ ಎಲ್ಲ ದಾರಿಗಳನ್ನೂ ಮುಚ್ಚಿ ಮೌಢ್ಯದ ಕರುಣಾಜನಕ ಸ್ಥಿತಿಗೆ ತಲುಪಿಸಿದ್ದರು. ಆದ್ದರಿಂದ ಆ ಜನರು ಬ್ರಾಹ್ಮಣರ ತಂತ್ರ, ಕಾರ್ಯಶೈಲಿಯನ್ನು ಅರಿಯದೇ ವಿಫಲರಾದರು. ಹೀಗೆ ಮೇಲುಗೈ ಸಾಧಿಸಿದ ಬ್ರಾಹ್ಮಣರು ಆ ಮೇಲ್ಮಟ್ಟವನ್ನು ಕಾಪಾಡಿಕೊಳ್ಳಲು ದೇವರಿಂದಲೇ ಸೀದಾ ಬಂದವೆಂದು ಹೇಳಿ ಕೆಲವು ಕತೆ-ಪುರಾಣ ರಚಿಸಿದರು. ಹೀಗೆ ಅದು ದೇವರಿಗೂ ಒಪ್ಪಿತವೆಂದು ಮುಗ್ಧ ಜನರು ನಂಬುವ ಹಾಗೆ ಮಾಡಿದರು. ತಮ್ಮ ಪುರಾಣಗಳಲ್ಲಿ ಬ್ರಾಹಣರು, `ದೇವನು ಉದ್ದೇಶ ಪೂರ್ವಕವಾಗಿ ಶೂದ್ರರನ್ನು ತನ್ನ ಪಾದಗಳಿಂದ ಹುಟ್ಟಿಸಿದ ಮತ್ತು ಅವರ ಹುಟ್ಟಿನ ಏಕೈಕ ಉದ್ದೇಶ ಬ್ರಾಹಣರ ಸೇವೆಯೇ ಆಗಿತ್ತು ಎಂದು ನಂಬಿಸಿದರು. ಅವರ ಪ್ರಕಾರ ಶೂದ್ರರು ಬ್ರಾಹಣರಿಗೆ ಉತ್ತಮ ಸೇವೆ ಒದಗಿಸಿ ಖುಷಿ ಪಡಿಸುವುದೇ ದೈವ ವಿಧಿಸಿದ ಕರ್ತವ್ಯವಾಗಿದೆ. ಆಗಲೇ ಅವರ ಜೀವನಕ್ಕೊಂದು ಉದ್ದೇಶ ಮತ್ತು ಜನ್ಮಕ್ಕೆ ಸಾರ್ಥಕತೆ ಬರುವುದೆಂದು ಬರೆದರು.
ಈ ಗ್ರಂಥಗಳ ಕಡೆ ಒಮ್ಮೆ ಇಣುಕುನೋಟ ಬೀರಿದರೂ ಸಾಕು, ಇವು ದೇವರಿಂದ ಬಂದ ವಾಕ್ಯಗಳಲ್ಲ ಎಂಬ ಸಮರ್ಥನೆ ಸಿಗುತ್ತದೆ. ದೇವರು ನ್ಯಾಯಪರ, ಸರ್ವವ್ಯಾಪಿ ಮತ್ತು ಅವನೇ ವಿಶ್ವದ ಸಕಲ ಚರಾಚರಗಳ ಕರ್ತೃ ಎಂಬುದನ್ನು ಈ ಗ್ರಂಥಗಳು ಹುಸಿಗೊಳಿಸುತ್ತವೆ. ನಮ್ಮ `ಜ್ಞಾನಿ ಬ್ರಾಹ್ಮಣ ಸಹೋದರರ ವಿವೇಕ! ನಮ್ಮ ಸೋದರರೆಂದು ಅವರನ್ನು ಕರೆಯಲಿಕ್ಕೇ ನಾಚಿಕೆಯಾಗುತ್ತದೆ. ಶೂದ್ರರ ಮೇಲೆ ಕಷ್ಟದ ರಾಶಿಯನ್ನೇ ಗತಕಾಲದುದ್ದಕ್ಕೂ ಸುರಿದಿದ್ದಾರೆ ಮತ್ತು ಈಗಲೂ ಧಾರ್ಮಿಕ ಅಧಿಕಾರದಿಂದ ಅದನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ. ಯಾರಿಗಾದರೂ ತೊಂದರೆ ಕೊಡುವುದು ಸಹೋದರತ್ವದ ಲಕ್ಷಣವಲ್ಲ. ಆದರೂ ನಮ್ಮನ್ನು ಸೃಷ್ಟಿಸಿದ ಭಗವಂತನೇ ಅವರನ್ನೂ ಸೃಷ್ಟಿಸಿದ್ದರಿಂದ ನಮ್ಮ ಸೋದರರೆಂದು ಅವರನ್ನು ಕರೆಯಬೇಕಾಗಿದೆ. ನಿಸ್ವಾರ್ಥ ಹಾಗೂ ಮುಕ್ತ ಮನಸ್ಸಿನಿಂದ ವಿಮರ್ಶಿಸಿ ನೋಡಿದರೆ ಬ್ರಾಹ್ಮಣರೇ ಇದನ್ನು ಒಪ್ಪಿಕೊಳ್ಳುತ್ತಾರೆ. ನಮ್ಮ ವಿದ್ವಾಂಸ ಗೆಳೆಯರಾದ ಇಂಗ್ಲಿಷರು, ಫ್ರೆಂಚರು, ಜರ್ಮನರು, ಅಮೆರಿಕನ್ನರು ಮತ್ತಿತರರು ಕೂಡಾ ಈ ಗ್ರಂಥಗಳು ಸ್ವಾರ್ಥದ ದುರುದ್ದೇಶದಿಂದ ಇತರರ ಮೇಲೆ ಮೇಲುಗೈ ಸಾಧಿಸಲು, ಬ್ರಾಹ್ಮಣರ ಮೇಲುಗೈ ಸಾಧಿಸಿ ಅವರು ದೇವರಿಗಿಂತ ದೊಡ್ಡವರೆಂದು ಬಿಂಬಿಸಲೆಂದೇ ಬರೆಯಲಾಗಿದೆಯೆಂದು ಒಪ್ಪುತ್ತಾರೆ. ಎಷ್ಟೋ ಇಂಗ್ಲಿಷ್ ವಿದ್ವಾಂಸರು ಹೇಗೆ ಬ್ರಾಹ್ಮಣರು ಶೂದ್ರಾತಿಶೂದ್ರರನ್ನು ದಾಸರನ್ನಾಗಿ ಮಾಡಿದರೆಂದು ಚರಿತ್ರೆಯ ಗ್ರಂಥಗಳನ್ನೇ ಬರೆದಿದ್ದಾರೆ. ತಾವು ದೇವರಿಗಿಂತ ದೊಡ್ಡವರೆನ್ನುತ್ತಾ ಅವರು ದೇವರ ಮಹಿಮೆಯನ್ನೇ ಕಳಂಕಗೊಳಿಸಿದ್ದಾರೆ. ದೇವರು ಈ ಭೂಮಿಯನ್ನೂ, ಇದರ ಮೇಲಿರುವ ಸಕಲ ಚರಾಚರ ವಸ್ತುಗಳನ್ನೂ ಸೃಷ್ಟಿಸಿದ. ಶೂದ್ರಾತಿಶೂದ್ರರನ್ನೂ ಒಳಗೊಂಡಂತೆ ಮಾನವರೆಲ್ಲರಿಗೂ ಅವುಗಳನ್ನು ಅನುಭವಿಸುವ ಸ್ವಾತಂತ್ರ ಕೊಟ್ಟ. ಆದರೂ ದೇವರ ಹೆಸರಿನಲ್ಲಿ ಸುಳ್ಳನ್ನು ಪ್ರತಿಪಾದಿಸಿ ಗ್ರಂಥಗಳನ್ನು ಬರೆದ ಬ್ರಾಹ್ಮಣರು ಉಳಿದವರ ಹಕ್ಕುಗಳನ್ನು ಕಸಿದುಕೊಂಡು ತಾವು ಸಶಕ್ತರಾದರು. ನಮ್ಮ ಕೆಲ ಬ್ರಾಹ್ಮಣ ಸೋದರರು ಈಗ ಕೇಳಬಹುದು: ಈ ಪುಸ್ತಕಗಳು ಸುಳ್ಳನ್ನೇ ಪ್ರತಿಪಾದಿಸಿದ್ದು ಹೌದಾಗಿದ್ದಲ್ಲಿ ಅದನ್ನು ಶೂದ್ರಾತಿಶೂದ್ರರ ಪೂರ್ವಜರು ಹೇಗೆ ನಂಬಿದರು? ಅಲ್ಲದೇ ಈಗಲೂ ಜನ ಅದನ್ನು ಹೇಗೆ ನಂಬುತ್ತಿದ್ದಾರೆ? ಈ ಪ್ರಶ್ನೆಗೆ ಒಂದು ಉದಾಹರಣೆಯಿಂದ ಉತ್ತರಿಸಬಹುದು. ನೋಡಿ, ತಮ್ಮ ತಮ್ಮ ವಿಚಾರ ಅನಿಸಿಕೆಗಳನ್ನು ಈ ಪ್ರಗತಿಪರ ಕಾಲದಲ್ಲಿ ಮುಕ್ತವಾಗಿ ವ್ಯಕ್ತಪಡಿಸಬಹುದು. ಯಾರಿಗೂ ಅದರ ಬಗ್ಗೆ ನಿರ್ಬಂಧವಿಲ್ಲ. ಒಬ್ಬ ಖದೀಮನು ಗೌರವಾನ್ವಿತ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಸುಳ್ಳುಪತ್ರ ಬರೆದುಕೊಂಡು ಇನ್ನೊಬ್ಬ ಗಣ್ಯ ವ್ಯಕ್ತಿಯನ್ನು ಸಂಪರ್ಕಿಸಿದ ಎಂದಿಟ್ಟುಕೊಳ್ಳಿ. ಆಗ ಎರಡನೆಯ ವ್ಯಕ್ತಿ ಎಷ್ಟೇ ಬುದ್ಧಿವಂತನಾಗಿದ್ದರೂ ಮೊದಲನೆಯ ವ್ಯಕ್ತಿ ಕೊಟ್ಟ ಪತ್ರ ಅಧಿಕೃತವೆಂದೇ ನಂಬಿಬಿಡುತ್ತಾನೆ. ಹೀಗೆ ಈ ರೀತಿ ಖದೀಮ ವ್ಯಕ್ತಿಯಿಂದ ಮತ್ತೊಬ್ಬನು ವಂಚನೆಗೊಳಗಾಗುತ್ತಾನೆ. ಇವತ್ತೂ, ಹಿಂದೆಯೂ ಶೂದ್ರಾತಿಶೂದ್ರರು ಹೀಗೇ ಮೋಸಹೋಗಿದ್ದರೆ ಆಶ್ಚರ್ಯವಿಲ್ಲ. ಬ್ರಾಹ್ಮಣರು ಅವರನ್ನು ತುಳಿದು ಎಷ್ಟು ಮೌಢ್ಯದಲ್ಲಿ ಇಟ್ಟಿದ್ದರೆಂದರೆ ತಾವೇ ಬರೆದ ಪುಸ್ತಕಗಳನ್ನು ದೇವರ ವಾಕ್ಯಗಳೆಂದು ಹೇಳಿದಾಗಲೂ ನಂಬಿಬಿಟ್ಟರು. ಇದು ಈಗಲೂ ಮುಂದುವರೆದು ಬಹುಪಾಲು ಶೂದ್ರಾತಿಶೂದ್ರರು ಬ್ರಾಹ್ಮಣರನ್ನು ನಂಬಿ ಮೋಸಹೋಗುತ್ತಾರೆ. ಇದು ಮೊದಲು ಕೊಟ್ಟ ಉದಾಹರಣೆಯಂತೆಯೇ ನಡೆಯುತ್ತಿದೆ. ಎಲ್ಲ ಕಡೆಯೂ ಯಾವಾಗಲೂ ತಮ್ಮ ಸ್ವಾರ್ಥಪೂರಿತ ಗ್ರಂಥಗಳನ್ನು ಉದ್ಧರಿಸುತ್ತ
ಬ್ರಾಹ್ಮಣರು ಜೀವನ ಸಾಗಿಸುತ್ತಾರೆ. ಅವರು ಹೇಳಿದ್ದೆಲ್ಲವನ್ನೂ ನಂಬುತ್ತ, ಬಡ ಮುಗ್ಧ ಶೂದ್ರರನ್ನು ವಂಚಿಸುತ್ತ, ದೇವರಿಗೆ ಮಾತ್ರ ಅರ್ಹವಾದ ಪೂಜ್ಯ ಭಾವನೆಯನ್ನು ತಾವೂ ಪಡೆದುಕೊಳ್ಳುತ್ತಿದ್ದಾರೆ. ಇದೇನೂ ಸಣ್ಣ ವಿಷಯವಲ್ಲ. ಒಂದಲ್ಲಾ ಒಂದು ದಿನ ಬ್ರಾಹ್ಮಣರು ದೇವರಿಗೆ ಉತ್ತರಿಸಬೇಕಾಗುತ್ತದೆ. ಬ್ರಾಹ್ಮಣರ ವಾದಗಳು ಶೂದ್ರರ ಮನಸ್ಸಿನಲ್ಲಿ ಎಷ್ಟು ತಳವೂರಿದೆಯೆಂದರೆ ಅಮೆರಿಕದ ನೀಗ್ರೋ ಗುಲಾಮರ ತರಹವೇ ತಮ್ಮ ಬಿಡುಗಡೆಗಾಗಿ ಯತ್ನಿಸುವವರನ್ನೇ, ಅವರ ಪ್ರಯತ್ನಗಳನ್ನೇ ವಿರೋಧಿಸುತ್ತಾರೆ. ಶೋಷಿತರು ತಮ್ಮ ಹೀನಾಯ ಅಸ್ತಿತ್ವದ ಸ್ಥಿತಿಯನ್ನೇ ಒಪ್ಪಿ ಸುಮ್ಮನೇ ಬದುಕುವುದು ಆಶ್ಚರ್ಯ ಹುಟ್ಟಿಸುತ್ತದೆ. ತಮ್ಮ ಸ್ಥಿತಿಯ ಬಗೆಗೆ ಯಾವುದೇ ದೂರುಗಳಿಲ್ಲ ಎನ್ನುತ್ತ ತಮ್ಮ ಹಕ್ಕುಗಳ ಬಗೆಗೆ ಹೋರಾಡಬಂದವರ ವಿರುದ್ಧ ತಿರುಗಿ ಬೀಳುತ್ತಾರೆ. ಸಹಾಯವನ್ನು ನಿರಾಕರಿಸುವುದಷ್ಟೇ ಅಲ್ಲ, ಸಹಾಯ ಮಾಡಬಂದವರ ವಿರುದ್ಧವೇ ಹೋರಾಡುತ್ತಾರೆ. ಶೋಷಿತರ ಪರ ಹೋರಾಡುವುದರಿಂದ ಅವರ ಗೆಳೆಯರಿಗೇನಾದರೂ ಲಾಭವಿದೆಯೆ? ಅದರ ಬದಲು ಅವರು ಇಂಥ ಹೋರಾಟದಲ್ಲಿ ನೂರಾರು ತಮ್ಮದೇ ಜನರನ್ನು ಎದುರಿಸಿ, ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಬೇಕಿದೆ. ಈ ಪರೋಪಕಾರದ ಹಿಂದಿರುವ ಉದ್ದೇಶವೇನು? ಅದು ಸ್ವಾತಂತ್ರವೆಂಬ ತತ್ವ, ನೀತಿ. ಮಾನವನಿಗೆ ಸ್ವಾತಂತ್ರ ಮೂಲಭೂತ ಅವಶ್ಯಕತೆ. ಮನುಷ್ಯ ಸ್ವತಂತ್ರನಾಗಿದ್ದಾಗ ತನ್ನ ವಿಚಾರಗಳನ್ನು ಬರಹ, ಮಾತಿನ ಮೂಲಕ ಸ್ಪಷ್ಟವಾಗಿ ತಿಳಿಸಬಲ್ಲ. ಆದರೆ ಸ್ವತಂತ್ರವಿರದ ಮನುಷ್ಯ ತನ್ನ ವಿಚಾರಗಳನ್ನು - ಬೇರೆಯವರಿಗೆ ಅದೆಷ್ಟೇ ಉಪಯೋಗಿಯಾಗಿದ್ದರೂ - ಸಂವಹನದಿಂದ ತಿಳಿಸಲಾರ. ಮತ್ತು ಅದು ಗಾಳಿಯಲ್ಲಿ ತೇಲಿ ಹೋಗುತ್ತದೆ. ದೇವರಿಂದ ಎಲ್ಲ ಮಾನವರಿಗೂ ಸಮನಾಗಿ ನೀಡಲ್ಪಟ್ಟ ಹಕ್ಕುಗಳನ್ನು ಕೆಲ ಸ್ವಾರ್ಥಿಗಳ ಸ್ವಾರ್ಥ ಉದ್ದೇಶಕ್ಕಾಗಿ ಕಸಿಯಲ್ಪಟ್ಟಾಗ ಅದನ್ನು ಪಡೆಯಲು ಸ್ವತಂತ್ರ ಮನುಷ್ಯ ಹಿಂಜರಿಯುವುದಿಲ್ಲ. ತನ್ನ ಹಕ್ಕು ದೊರೆತಾಗಲೇ ಆತ ನೆಮ್ಮದಿಯಿಂದ ವಿರಮಿಸುವುದು. ಅದೇ ರೀತಿ ಸ್ವತಂತ್ರಗೊಂಡ ಮನುಷ್ಯ ಇನ್ನಿತರ ಶೋಷಿತರನ್ನು ಶೋಷಕರ ಅನ್ಯಾಯ ಮತ್ತು ದೌರ್ಜನ್ಯದಿಂದ ಮುಕ್ತಗೊಳಿಸದೇ ಇರಲಾರ. ಈ ಗುರಿ ತಲುಪಲು ಪ್ರಾಣಾಪಾಯ ಎದುರಿಸಲೂ ಆತ ಸಿದ್ಧನಿರುತ್ತಾನೆ. ಎಂತಹ ಮಹತ್ತಾದ ಧರ್ಮಾರ್ಥ ಕಾರ್ಯ ಇದು! ಇಂತಹ ಉನ್ನತ ಕಾರ್ಯಕ್ಕೆ ದೇವರ ಆಶೀರ್ವಾದವಿದ್ದಲ್ಲಿ ಏನೂ ಆಶ್ಚರ್ಯವಿಲ್ಲ! ಅಂತಹವರ ಭವಿಷ್ಯತ್ತಿನ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳಲ್ಲಿ ಜನರನ್ನು ಹಿಡಿದು ದೂರ ದೇಶದ ವ್ಯಾಪಾರಿಗಳಿಗೆ ಅವರನ್ನು ಮಾರುವ ಹೀನ ಪದ್ಧತಿ ಜಾರಿಯಲ್ಲಿತ್ತು. ಅದು ಯೂರೋಪ್ ಹಾಗೂ ಮತ್ತಿತರ ಮುಂದುವರಿದ ದೇಶಗಳಿಗೆ ನಾಚಿಕೆ ಹುಟ್ಟಿಸುವಂತಿತ್ತು. ಆ ಕ್ರೂರ ಪದ್ಧತಿ ನಿರ್ಮೂಲನ ಮಾಡಲು ಎಷ್ಟೆಷ್ಟೋ ಉದಾರ ಬ್ರಿಟಿಷರು, ಅಮೆರಿಕನ್ನರು ಶ್ರಮಿಸಿದ್ದಾರೆ. ತಮ್ಮ ಜೀವ ಲೆಕ್ಕಿಸದೆ ಹೋರಾಡಿ, ಸಾವಿರಾರು ಗುಲಾಮರು ತಮ್ಮ ಪಾಲಕರು, ಸೋದರ ಸೋದರಿಯರು, ಮಕ್ಕಳು, ಗೆಳೆಯರನ್ನು ಕೂಡಿಕೊಳ್ಳಲು ಕಾರಣರಾಗಿದ್ದಾರೆ. ತಮ್ಮವರನ್ನು ಮತ್ತೆ ಕಾಣುವ ಆಸೆಯೇ ಇಲ್ಲದೇ ದೈಹಿಕವಾಗಿ, ಮಾನಸಿಕವಾಗಿ ತೀವ್ರ ಜರ್ಜರಿತರಾಗಿ ಹೋದ ಅವರಿಗೆ ತಮ್ಮ ಬಂಧುಬಳಗದವರನ್ನು ಕೂಡಿಕೊಂಡಾಗ ಅಪರಿಮಿತ ಆನಂದವಾಗಿರಬೇಕು. ಒಳ್ಲೆಯ ಮನಸ್ಸಿನ ಅಮೆರಿಕನ್ನರ ಉತ್ತಮ ಕಾರ್ಯ ಇದು. ಅನಾಥ ಬಡ ಗುಲಾಮರ ಮೇಲೆ ಅವರಿಗೆ ಕರುಣೆ ಹುಟ್ಟದಿದ್ದರೆ ತಮ್ಮವರನ್ನು ಎಂದೂ ಕಾಣದೇ ಆ ಗುಲಾಮರು ತೀರಿ ಹೋಗುತ್ತಿದ್ದರು. ಗುಲಾಮರನ್ನು ಅವರ ಯಜಮಾನರುಗಳು ಕರುಣೆಯಿಂದ ನಡೆಸಿಕೊಂಡರೆ? ಎಂದೂ ಇಲ್ಲ. ತಮ್ಮ ಯಜಮಾನರುಗಳ ಕೈಯಲ್ಲಿ ಗುಲಾಮರು ಅನುಭವಿಸಿದ ಕಷ್ಟ ಕಥೆಗಳನ್ನು ಕೇಳಿದರೆ ಕಲ್ಲು ಹೃದಯವೂ ಕಣ್ಣೀರಿಟ್ಟೀತು. ಯಜಮಾನರುಗಳು ಎಂದೆಂದೂ ಅವರನ್ನು ತಮಗೆ ಹೊರೆಯಾಗಿರುವ ಪ್ರಾಣಿಗಳಂತೆ ಭಾವಿಸಿ ಒದೆಯುತ್ತಾ, ಹೊಡೆಯುತ್ತಾ ಹಸಿವಿನಲ್ಲಿ ಬೇಯಿಸುತ್ತಿದ್ದರು. ಕೆಲವು ಸಲ ಗುಲಾಮರನ್ನು ಎತ್ತುಗಳಂತೆ ಬಳಸಿಕೊಂಡು ಉರಿಬಿಸಿಲಿನಲ್ಲಿ ನೆಲ ಉಳಲು ಬಳಸುತ್ತಿದ್ದರು. ಸಣ್ಣ ತಪ್ಪಿಗೂ ಚರ್ಮ ಸುಲಿಯುವಂತೆ ಚಾಟಿಯಿಂದ ಹೊಡೆಯುತ್ತಿದ್ದರು. ಹೊಟ್ಟೆ ತುಂಬ ಊಟ ಕೂಡ ಕೊಡದೇ ಗುಲಾಮರು ಹಸಿವಿನಿಂದ ನರಳುತ್ತಿದ್ದರು. ಅವರ ಕಡೆ ಬಿಸಾಕಿದ ನಾಲ್ಕು ತುತ್ತಿನಲ್ಲೇ ಬದುಕುಳಿಯಬೇಕು. ಆ ಆಹಾರದ ಗುಣ ಮಟ್ಟವೂ ತೀರಾ ಕೆಳಮಟ್ಟದ್ದಾಗಿ ಸತ್ವ ಸಾಕಾಗುತ್ತಿರಲಿಲ್ಲ. ರಕ್ತ ವಾಂತಿಯಾಗುವವರೆಗೂ ಅವರು ಗೇಯಬೇಕಿತ್ತು. ರಾತ್ರಿ ಕುರಿದೊಡ್ಡಿಗಳಲ್ಲಿ ಪ್ರಾಣವಿಲ್ಲದವರಂತೆ ಮಲಗಿದಾಗಲೂ ವಿಶ್ರಾಂತಿಯಿರುತ್ತಿರಲಿಲ್ಲ. ಒಡೆಯ ಯಾವಾಗ ಬೇಕಾದರೂ ಕರೆಯಬಹುದಿತ್ತು. ಹಸಿದ ಹೊಟ್ಟೆ ನಿದ್ರಿಸಲು ಬಿಡುತ್ತಿರಲಿಲ್ಲ. ಬಾರು ಕೋಲಿನ ಹೊಡೆತದ ಗಾಯಗಳಿಂದ ಉಂಟಾದ ನೋವು ಬೆಚ್ಚಿಬೀಳುತ್ತಾ ನಿದ್ರಿಸುವ ಹಾಗೆ ಮಾಡುತ್ತಿತ್ತು. ತಾವು ಹಿಂದೆ ಬಿಟ್ಟು ಬಂದ ಬಂಧು ಬಳಗ, ಊರು, ಎಲ್ಲವೂ ಕಣ್ಣೀರಿನ ಜೊತೆ ಕಣ್ಣು ತುಂಬುತ್ತಿದ್ದವು. ಅವರು ಸತತ ದೇವರನ್ನು ಪ್ರಾರ್ಥಿಸುತ್ತ ತಮ್ಮನ್ನು ಕೊನೆಯಿಲ್ಲದ ಕಷ್ಟದಿಂದ ಪಾರು ಮಾಡುವಂತೆ ಬೇಡುತ್ತಿದ್ದರು. ಇದೆಲ್ಲದರಿಂದ ತಮ್ಮನ್ನು ಮುಕ್ತಗೊಳಿಸುವ ಸಾವಾದರೂ ಬರಲಿ ಎಂದು ಪ್ರಾರ್ಥಿಸುತ್ತಿದ್ದರು. ಹೀಗವರು ರಾತ್ರಿ ಕಳೆಯುತ್ತಿದ್ದರು. ಪದಕೋಶದಲ್ಲಿರುವ ದುಃಖಭರಿತ ಪದಗಳು ಎಲ್ಲ ಸೇರಿಯೂ ಅವರ ವಿಷಾದ ಮತ್ತು ನೋವು ತುಂಬಿದ ಜೀವನವನ್ನು ವಿವರಿಸಲಾರವು. ನೂರಾರು ವರ್ಷದಿಂದ ನಡೆದುಬಂದ ಗುಲಾಮಿ ಪದ್ಧತಿಗೆ ಅಂತೂ ಅಮೆರಿಕನ್ನರು ಕೊನೆ ಹಾಡಿ ಅನಾಥ ಬಡ ಗುಲಾಮರನ್ನು ತಮ್ಮ ಯಜಮಾನರ ಬಿಗಿ ಮುಷ್ಟಿಯಿಂದ ಬಿಡುಗಡೆಗೊಳಿಸಿ ಸಂತೋಷಮಯ ಜೀವನಕ್ಕೆ ದಾರಿ ಮಾಡಿಕೊಟ್ಟರು. ಗುಲಾಮಗಿರಿಯ ಅನುಭವ ಹೊಂದಿದ ಶೂದ್ರಾತಿಶೂದ್ರರು ಗುಲಾಮರ ಕಷ್ಟವನ್ನು ಉಳಿದವರಿಗಿಂದ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಒಬ್ಬ ಗುಲಾಮ ಮಾತ್ರ ಗುಲಾಮನ ಕಷ್ಟಗಳನ್ನು ಬಿಡುಗಡೆಯ ಖುಷಿಯನ್ನೂ ಅರ್ಥಮಾಡಿಕೊಳ್ಳಬಲ್ಲ. ಗುಲಾಮರಿಗೂ ಭಾರತದ ಶೂದ್ರರಿಗೂ ಇರುವ ವ್ಯತ್ಯಾಸವೆಂದರೆ ಕಪ್ಪು ಜನರನ್ನು ಸೆರೆ ಹಿಡಿದು ಮಾರಿ ಗುಲಾಮರನ್ನಾಗಿಸುತ್ತಿದ್ದರು, ಶೂದ್ರಾತಿಶೂದ್ರರನ್ನು ಬ್ರಾಹ್ಮಣರು ಗುಲಾಮರನ್ನಾಗಿಸಿದ್ದರು. ಇಷ್ಟು ಬಿಟ್ಟರೆ ಅವರ ಜೀವನ, ಸ್ಥಿತಿಗತಿ ಎಲ್ಲವೂ ಒಂದೇ. ಒಂದು ಚೂರೂ ವ್ಯತ್ಯಾಸ ಇಲ್ಲ. ಗುಲಾಮರು ಅನುಭವಿಸಿದ ಎಲ್ಲ ಹಿಂಸೆಗಳನ್ನು ಶೂದ್ರಾತಿಶೂದ್ರರು ಬ್ರಾಹ್ಮಣರ ಕೈಯಲ್ಲಿ ಅನುಭವಿಸುತ್ತಿದ್ದಾರೆ. ಅವರ ನೋವಿನ ಕತೆಗಳು ಕಲ್ಲು ಹೃದಯವನ್ನು ಕರಗಿಸುವುದಷ್ಟೇ ಅಲ್ಲ, ಭೂಮಿಯ ಗಟ್ಟಿ ಮೇಲ್ಪದರವನ್ನು ಕರಗಿಸಿ, ಒಳಗಿನ ಕಣ್ಣೀರು ಚಿಲುಮೆಗಳೆಲ್ಲ ಉಕ್ಕಿ ಹರಿದಾವು, ಆಗ ಇಡಿಯ ಪ್ರಪಂಚವೇ ಮುಳುಗಿಹೋದೀತು. ಇದರಿಂದ ಪೂರ್ವಪಿತರಿಗಿಂತ ಮೃದುಹೃದಯದ ಕೆಲವು ಬ್ರಾಹ್ಮಣರಿಗೆ ತಮ್ಮ ಪ್ರಳಯ ಕಾಲ ಬಂತೆಂದೂ ಅನಿಸಬಹುದು. ಶೂದ್ರಾತಿಶೂದ್ರರು ಬ್ರಾಹ್ಮಣರ ಕೈಯಲ್ಲಿ ಅನುಭವಿಸಿದ, ಅನುಭವಿಸುತ್ತಿರುವ ಕಷ್ಟಗಳ ಬಗೆಗೆ ನಮ್ಮ ಕರುಣಾಳು ಬ್ರಿಟಿಷ್ ಸರ್ಕಾರಕ್ಕೆ ಏನೂ ಅರಿವಿಲ್ಲ. ಅದರ ಬಗ್ಗೆ ಸರಿಯಾದ ಮಾಹಿತಿ ದೊರಕಿದರೆ, ಭಾರತದ ಚರಿತ್ರೆಯ ಅತಿ ಮುಖ್ಯ ಭಾಗವೊಂದನ್ನೇ ಬಿಟ್ಟಿರುವುದು ಅವರಿಗೆ ತಿಳಿಯುತ್ತದೆ. ಒಮ್ಮೆ ಶೂದ್ರಾತಿಶೂದ್ರರ ಬವಣೆಗಳ ಬಗೆಗೆ ಅರಿತರೆ ಅವರ ಬಗೆಗೆ ಖಂಡಿತ ಮರುಗುತ್ತಾರೆ ಹಾಗೂ ಇನ್ನು ಮುಂದೆ ಯಾವುದೇ ಶೋಷಿತರ ನೋವುಗಳ ಬಗೆಗೆ ಬರೆಯುವಾಗ ಇಲ್ಲಿಯ ಕಷ್ಟಗಳನ್ನೇ ಅಳತೆಗೋಲಾಗಿ ಮಾಡಿಕೊಳ್ಳುತ್ತಾರೆ. ದುಃಖ ಮತ್ತು ನೋವನ್ನು ವಿವರಿಸಬಯಸುವ ಕವಿಯೊಬ್ಬ ಇದಕ್ಕಿಂತ ಉತ್ತಮ ಉದಾಹರಣೆಯನ್ನು ಬೇರೆಲ್ಲೂ ಕಂಡುಕೊಳ್ಳಲಾರ. ಅವರ ಕಷ್ಟಗಳಿಗೆ ಕವಿ ಹೃದಯ ಮಿಡಿದರೂ, ಕಷ್ಟವನ್ನು ಊಹಿಸಿ ಬರೆಯುವುದು ತಪ್ಪಿತೆಂದು ಆತ ನಿರಾಳವಾಗಬಹುದು. ಹೀಗಾಗಿಯೇ ಇಂದಿನ ಶೂದ್ರಾತಿಶೂದ್ರರ ಹೃದಯಗಳಿಗೆ ತಮ್ಮ ಹಿರಿಯರು ಅನುಭವಿಸಿದ ಕಷ್ಟ ಕೋಟಲೆಗಳನ್ನು ಕೇಳಿದರೆ ಎದೆ ಒಡೆದುಹೋದಂತೆನಿಸುವುದು. ಬ್ರಾಹ್ಮಣರ ಆಡಳಿತದಲ್ಲಿ ಅವರು ಅನುಭವಿಸಿದ ಭಯಂಕರ ಕಷ್ಟಗಳ ಬಗೆಗೆ ಯೋಚಿಸಿದರೆ ಭಯದಿಂದ ನಮ್ಮ ಮನಸ್ಸುಗಳೂ ನಿಶ್ಚೇಷ್ಟಿತವಾಗುವುದು. ಅದನ್ನು ನೆನೆಯುವುದರಿಂದಲೇ ನಮಗೆ ಇಷ್ಟು ಆಕ್ರೋಶ ಹುಟ್ಟುವುದಾದರೆ, ಅದನ್ನು ಅನುಭವಿಸಿದವರ ಮನಸ್ಥಿತಿ ಹೇಗಿರಬಹುದು? ಬ್ರಾಹ್ಮಣನೊಬ್ಬ ಬರೆದ ಪುಸ್ತಕದಿಂದಲೇ ಇದಕ್ಕೆ ಉದಾಹರಣೆ ಸಿಗುತ್ತದೆ. ಈ ಪುಸ್ತಕದಲ್ಲಿ ಬ್ರಾಹ್ಮಣರ ಮಹಾಪುರುಷ ಪರಶುರಾಮ ಹೇಗೆ ಈ ನೆಲದ ಮೂಲನಿವಾಸಿಗಳಾಗಿದ್ದ ಕ್ಷತ್ರಿಯರ ಬಗ್ಗೆ ವರ್ತಿಸಿದ ಎಂದು ನೋಡಬಹುದು. ಅವನು ಎಷ್ಟೋ ಕ್ಷತ್ರಿಯರನ್ನು ಕೊಂದಿದ್ದಲ್ಲದೆ, ಅನಾಥರಾದ ಅವರ ಹೆಂಡತಿಯರನ್ನೂ, ಅವರ ಕೈಗೂಸುಗಳನ್ನೂ ನಿಷ್ಕರುಣೆಯಿಂದ ಸೆಳೆದು ಕೊಂದ. ಈ ನೀಚ ಕೃತ್ಯ ಎಸಗುವಾಗ ಅವನ ಹೃದಯ ಚೂರೂ ತಳಮಳಿಸಲಿಲ್ಲ. ಆದರೂ ಇದನ್ನು ಅವನು ಅಲ್ಲಿಗೇ ನಿಲ್ಲಿಸಲಿಲ್ಲ. ವಿಧವೆಯರಾಗಿ ಅಸಹಾಯಕರಾಗಿದ್ದ ಕ್ಷತ್ರಿಯ ಮಹಿಳೆಯರು ಬಸುರಿ ಎಂದು ತಿಳಿದೊಡನೆ, ತಪ್ಪಿಸಿಕೊಂಡು ಓಡುತ್ತಿದ್ದ ಅವರನ್ನು ಬೇಟೆಗಾರನಂತೆ ಅಟ್ಟಿಸಿಕೊಂಡು ಹೋಗಿ ಸೆರೆ ಹಿಡಿಯುತ್ತಿದ್ದ. ಹುಟ್ಟಿದ್ದು ಗಂಡು ಸಂತಾನ ಎಂದು ತಿಳಿಯುತ್ತಲೇ ಅವನ್ನು ಕೊಂದು ಹಾಕಿದ. ಇದರ ಬಗ್ಗೆ ಬ್ರಾಹ್ಮಣರೇ ಬರೆದ ಪುಸ್ತಕದಲ್ಲಿ ವಿವರಣೆಯಿದೆ. ಬ್ರಾಹ್ಮಣರು ಕ್ಷತ್ರಿಯರ ವೈರಿಗಳಾಗಿದ್ದರೆಂದು ನಾವು ನೆನಪಿಡಬೇಕು. ಕ್ಷತ್ರಿಯರ ಮೇಲೆ ತಾವು ಎಸಗಿದ ಕ್ರೌರ್ಯದ ಕುರಿತು ಏನೂ ಮುಚ್ಚಿಡದೇ ಅವರು ಬರೆದಿದ್ದಾರೆಂಬುದು ದೂರದ ಮಾತಾಯಿತು. ನಿಸ್ಸಂಶಯವಾಗಿ ಅವರು ಕೆಲ ಭಾಗಗಳನ್ನು ಕೈ ಬಿಟ್ಟಿರುತ್ತಾರೆ. ತಮ್ಮ ತಮ್ಮ ನಾಚಿಗೆಟ್ಟ ವರ್ತನೆಯ ಬಗ್ಗೆ ಸಹಜವಾಗಿಯೇ ಯಾರೂ ಕೊಚ್ಚಿಕೊಳ್ಳುವುದಿಲ್ಲ. ಆದ್ದರಿಂದ ಕ್ಷತ್ರಿಯ ವಂಶದ ಹಸುಳೆಗಳನ್ನು ಕೊಲ್ಲುವ ಹೇಯ ಕೃತ್ಯದ ವಿವರಗಳನ್ನು ಅಷ್ಟು ವಿವರವಾಗಿ ಬರೆದಿರುವುದು ಆಶ್ಚರ್ಯವೇ ಸರಿ. ಕ್ಷತ್ರಿಯರನ್ನು ಈ ಭೂಮಿಯ ಮೇಲಿನಿಂದಲೇ ಒಂದೆರೆಡಲ್ಲ, ಇಪ್ಪತ್ತೊಂದು ಸಲ ನಾಶ ಮಾಡುವ ಹೀನ ಕ್ರಿಯೆಯನ್ನು, ಅದೂ ಎಳೆ ಹಸುಳೆ ಮಕ್ಕಳನ್ನೂ ಬಿಡದೇ ಕೊಂದಿದ್ದನ್ನು ಬ್ರಾಹ್ಮಣರು ಅತಿ ಪರಾಕ್ರಮದ ಸಾಧನೆಯೆಂಬಂತೆ ಭಾವಿಸಿದ್ದರು. ಸೂರ್ಯನನ್ನು ಅಂಗೈನಿಂದ ಮುಚ್ಚಿಡಲಾಗದೆಂದು ಒಂದು ಗಾದೆಯಿದೆ. ಈ ಹತ್ಯೆಗಳನ್ನು ಎಲ್ಲ ಕಡೆ ಎಷ್ಟು ಖಂಡಿಸಲಾಗಿದೆ ಹಾಗೂ ಇದು ಎಷ್ಟು ಜಿಗುಪ್ಸೆ ಹುಟ್ಟಿಸುವುದು ಎಂದರೆ ಅದರಲ್ಲಿ ಕೆಲಭಾಗ ಮುಚ್ಚಿಡದೇ ಬರೆದಿರುವುದು ಸಾಧ್ಯವಿಲ್ಲ. ಹಾಗಾಗಿ ಅದನ್ನು ಸಂಕ್ಷಿಪ್ತವಾಗಿ ಬರೆದಿದ್ದಾರೆ. ಬರೆದಿದ್ದಷ್ಟನ್ನೇ ಪರಿಗಣಿಸಿದರೂ ಆ ಹೇಯ ಕೃತ್ಯದ ನೆನಪಿಗೇ ಹೃದಯದ ನೆತ್ತರು ಹೊರಹರಿದು ಬರುತ್ತದೆ. ಪರಶುರಾಮ ಅಟ್ಟಿಸಿಕೊಂಡು ಹೋದಾಗ ಕ್ಷತ್ರಿಯ ಹೆಂಗಸರ ಭಯ ಆಕ್ರೋಶವನ್ನು ಒಮ್ಮೆ ಊಹಿಸಿಕೊಳ್ಳಿ. ಹೆಂಗಸರಿಗೆ ಓಡುವ ರೂಢಿಯಿರುವುದಿಲ್ಲ. ಅವರಲ್ಲಿ ಹೆಚ್ಚಿನವರು ಅನುಕೂಲಸ್ಥ ಕುಟುಂಬದವರಾಗಿದ್ದರಿಂದ ಮನೆ ಹೊರಗೆ ಕಾಲೇ ಇಟ್ಟಿರಲಿಕ್ಕಿಲ್ಲ. ಎಲ್ಲಕ್ಕೂ ಆಳುಕಾಳುಗಳನ್ನೇ ನಂಬಿದ್ದವರು ಅವರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗಂಡ, ಮಕ್ಕಳ ಜೊತೆ ಸುಖದಿಂದ ಜೀವಿಸಿದ್ದವರು. ಅಂಥವರು ಇದ್ದಕ್ಕಿದ್ದಂತೆ ಭಯಂಕರ ಆಪತ್ತನ್ನೆದುರಿಸುವಂತಾಯಿತು. ಉರಿವ ಬಿಸಿಲಿನಲ್ಲಿ, ಸಣ್ಣ ದಾರಿಯ ಸಂದುಗೊಂದುಗಳಲ್ಲಿ ಇನ್ನೂ ಹುಟ್ಟದ ಮಗುವಿನ ಭಾರ ಹೊತ್ತು ಅವರು ಓಡುವಂತಾಯಿತು. ಓಡಿ ರೂಢಿಯಿಲ್ಲದ ಕಾರಣ ಅವರು ಎಡವಿರಬಹುದು, ಬಿದ್ದಿರಬಹುದು. ಎದುರು ಸಿಕ್ಕ ಕಲ್ಲುಬಂಡೆಗೆ ಅಪ್ಪಳಿಸಿರಬಹುದು. ತಲೆ ಕೈ ಕಾಲುಗಳ ಮೇಲಾದ ಗಾಯದಿಂದ ರಕ್ತ ಸುರಿದಿರಬಹುದು. ತೀವ್ರ ಶೋಧದಲ್ಲಿರುವ ಪರಶುರಾಮನ ಭಯಕ್ಕೆ ಜೀವವುಳಿಸಿಕೊಳ್ಳಲು ಹತಾಶರಾಗಿ ಓಡಿರಬಹುದು. ದಾರಿ ಮೇಲಿನ ಮುಳ್ಳಿನಿಂದ ಅವರ ಕಾಲುಗಳೂ, ವಸ್ತ್ರಗಳೂ ಹರಿದುಹೋಗಿರಬಹುದು. ಉದ್ದ ಕೊಂಬೆಗಳು ತರಚಿ ಆದ ಗಾಯದಿಂದ ರಕ್ತ ಹರಿದಿರಬಹುದು. ಮೃದುವಾದ ನುಣುಪು ನೀಲಿ ಮೈ ಸೂರ್ಯನ ಶಾಖಕ್ಕೆ ಸುಟ್ಟು ಕೆಂಪಾಗಿರಬಹುದು. ಓಡಿ ಓಡಿ ದಣಿದು ಬಾಯಿ ಒಣಗಿರಬಹುದು. ಹೊಟ್ಟೆಯೊಳಗಿನ ಮಗುವೂ ಕಳವಳಗೊಂಡು ಚಲಿಸಿ ನೋವು ಶುರುವಾಗಿರಬಹುದು. ಈ ನಿಷ್ಕರುಣೆಯ ಬೇಟೆಗಾರನಿಂದ ತಪ್ಪಿಸಿಕೊಳ್ಳಲು ಭೂಮಿಯೇ ಬಾಯ್ಬಿರಿಯಲಿ ಎಂದು ಬೇಡಿಕೊಂಡಿರಬಹುದು. ಕಣ್ಣೀರು ಸುರಿಸುತ್ತ ದೇವರಲ್ಲಿ, `ನಮಗೇನು ಕಷ್ಟ ಕೊಟ್ಟೆ? ನಾವು ಅಬಲೆಯರೆಂದು ತಿಳಿದಿಲ್ಲವೇ ನಿನಗೆ? ನಮ್ಮ ಗಂಡಂದಿರ ಬಲವೇ ನಮ್ಮ ಬಲ. ಅವರಿಲ್ಲದೇ ನಮಗೀಗ ರಕ್ಷಣೆಯಿಲ್ಲ. ಈ ಕ್ರೂರಿ ಅವರನ್ನೆಲ್ಲ ನಾಶ ಮಾಡಿದ. ಅದೆಲ್ಲ ತಿಳಿದೂ ನಮ್ಮ ಸಹನೆ ಪರೀಕ್ಷಿಸುತ್ತಿರುವೆಯಾ ದೇವರೇ? ನಮ್ಮ ಶತ್ರುವು ಗಂಡಂದಿರನ್ನು ಕೊಲ್ಲುವಾಗ ಅಂಥ ಹೇಯ ಕೃತ್ಯದ ಬಗೆಗೆ ಕೊಚ್ಚಿಕೊಳ್ಳುವಾಗ ನೀನು ಹೇಗೆ ತಾನೇ ಮೌನವಾಗಿ ನೋಡುತ್ತಿರುವೆ? ಅವನನ್ನು ಶಿಕ್ಷಿಸಬಾರದೇ? ನೀನು ಸರ್ವಾಂತರ್ಯಾಮಿ. ಆದರೂ ನಮ್ಮ ಮೇಲಾಗುತ್ತಿರುವ ಅನ್ಯಾಯ ನಿಲ್ಲಿಸುತ್ತಿಲ್ಲವಲ್ಲ? ಹೀಗೆ ಅವರೆಲ್ಲ ದೇವರನ್ನೇ ಪ್ರಶ್ನಿಸುತ್ತಿರುವಾಗ ಪರಶುರಾಮ ಬಂದು ಅವರನ್ನೆಲ್ಲ ಒತ್ತಾಯವಾಗಿ ಎಳೆದೊಯ್ದಿರಬಹುದು. ಎಷ್ಟು ದುಃಖ ಅನುಭವಿಸಿರಬಹುದು ಅವರು? ಎಷ್ಟು ಜನ ಸಾವಿಗೆ ಶರಣಾಗಿರಬಹುದು? ಎಷ್ಟು ಜನ ಪರಶುರಾಮನ ಕಾಲಿಗೆ ಬಿದ್ದು ಜೀವವುಳಿಸುವಂತೆ ಬೇಡಿಕೊಂಡಿರಬಹುದು? `ನಮ್ಮನ್ನು ಬೇಕಾದರೆ ಕೊಲ್ಲು. ನಮ್ಮ ಹಸುಗೂಸುಗಳ ಜೀವವುಳಿಸು. ದಯವಿಟ್ಟು ಮಕ್ಕಳನ್ನು ಉಳಿಸು. ನಮ್ಮ ಗಂಡಂದಿರನ್ನು ಕೊಂದು ನಮ್ಮನ್ನು ವಿಧವೆಯರನ್ನಾಗಿಸಿದೆ. ನಮಗೀಗ ಯಾವ ಸುಖವೂ ಉಳಿದಿಲ್ಲ. ನಾವು ಮತ್ತೆ ಬಸುರಾಗುವುದೂ ಇಲ್ಲ. ನಮಗೀಗ ಇರುವ ಒಂದೇ ಆಸರೆ ಹುಟ್ಟುವ ಮಕ್ಕಳದ್ದು. ಅದೊಂದೇ ಆಶಾಕಿರಣ. ಅವರನ್ನೂ ಕೊಂದು ನಮ್ಮನ್ನು ದುಃಖ ಸಾಗರದಲ್ಲಿ ಮುಳುಗಿಸಬೇಕೆಂದಿರುವೆಯಾ? ನಿನ್ನ ಮೊಮ್ಮಕ್ಕಳ ಮೇಲೆ ಕರುಣೆ ತೋರುವಂತೆ ನಮ್ಮ ಮೇಲೂ ದಯೆ ತೋರು. ಮತ್ತೆಮತ್ತೆ ಬೇಡಿಕೊಳ್ಳುತ್ತಿದ್ದೇವೆ. ಹೀಗೆ ಅವರು ಪುನಃಪುನಃ ಬೇಡಿಕೊಳ್ಳುತ್ತಿದ್ದರೂ ಅದು ಕಿವುಡನಿಗೆ ಮೊರೆಯಿಟ್ಟಂತೆಯೇ ಆಗಿರಬೇಕು. ಅವರೆಲ್ಲ ಹೆತ್ತ ಕೂಡಲೇ ಪರಶುರಾಮ ಆ ಮಕ್ಕಳನ್ನು ಎತ್ತಿಕೊಂಡು ಹೋಗಿ ಬಡಿದು ಕೊಂದಿರಬೇಕು. ದುಃಖ ತಡೆದುಕೊಳ್ಳಲಾರದ ಹೆಂಗಸರು ಅವನ ಕಾಲಿಗೆ ಬಿದ್ದು ಉಳಿದ ಮಕ್ಕಳನ್ನು ಅಡಗಿಸಿಕೊಂಡು ಕೇಳಿರಬೇಕು: `ಓ ಪರಶುರಾಮ! ನಮ್ಮ ಮಕ್ಕಳನ್ನು ಕೊಲ್ಲುವುದಾದರೆ ಮೊದಲು ನಮ್ಮ ತಲೆ ಕತ್ತರಿಸು. ನಂತರ ಅವನ್ನು ಏನಾದರೂ ಮಾಡು. ನಮ್ಮ ಕಣ್ಣೆದುರು ಅವನ್ನು ಕೊಲ್ಲಬೇಡ. ಆದರೆ ಅಯ್ಯೋ! ಅವರ ಬೇಡಿಕೆಗಳಾವುವೂ ಈಡೇರಲಿಲ್ಲ. ಇದನ್ನು ಬರೆಯುವಾಗ ಪೆನ್ನು ಕೈಯಿಂದ ಜಾರತೊಡಗಿದೆ. ದುರಾದೃಷ್ಟದ ಆ ತಾಯಂದಿರ ದುಃಖವನ್ನು ವರ್ಣಿಸಲೇ ಸಾಧ್ಯವಾಗುತ್ತಿಲ್ಲ. ಆ ಕ್ರೂರಿಯು ತಮ್ಮ ಹಸುಳೆಗಳನ್ನು ಕೊಲ್ಲುವುದು ನೋಡಲಾಗದೇ ಎದೆ ಬಡಿದುಕೊಂಡು, ಕೂದಲೆಳೆದುಕೊಂಡು, ಮುಖವನ್ನು ನೆಲದಲ್ಲಿ ಹೊರಳಾಡಿಸಿ ಅತ್ತು ಆತ್ಮಹತ್ಯೆಗೆ ಯೋಚಿಸಿರಬೇಕು. ಕೆಲವರು ದುಃಖದಲ್ಲೇ ಸವೆದುಹೋಗಿರಬಹುದು. ಮತ್ತೆ ಕೆಲವರು ಹುಚ್ಚರಾಗಿ ಅಳುತ್ತ, ಸತ್ತ ಮಕ್ಕಳನ್ನು ಕರೆಯುತ್ತ ಸಾಗಿರಬಹುದು. ಆದರೆ ಇವಾವುದನ್ನೂ ಬ್ರಾಹ್ಮಣಗಳಲ್ಲಿ ಬರೆದಿಟ್ಟಿಲ್ಲ. ಹೀಗೆ ಪರಶುರಾಮ ನೂರಾರು ಕ್ಷತ್ರಿಯರನ್ನು ಕೊಂದು, ಅವರ ಹೆಂಗಸರು ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡಿದ. ಹೀಗೆ ಕ್ಷತ್ರಿಯರನ್ನು ನಿರ್ದಯವಾಗಿ ಕೊಚ್ಚಿ ಕೊಂದ ಪರಶುರಾಮನನ್ನು ಬ್ರಾಹ್ಮಣರು ಶೂದ್ರಾತಿಶೂದ್ರರಿಗೆ ತೋರಿಸಿ, ಅವನೇ ಸೃಷ್ಟಿಕರ್ತ ಮತ್ತು ಶಕ್ತ ದೇವತೆ ಎಂದು ಹೇಳಿದರು. ಅವನು ಸತ್ತ ಮೇಲೂ ಉಳಿದ ಬ್ರಾಹ್ಮಣರು ಉಳಿದ ಕ್ಷತ್ರಿಯರ ಮೇಲೆ ಅದೇ ಕಿರುಕುಳ ಮುಂದುವರಿಸಿದರು. ಅವರನ್ನು ಹಿಂಸಿಸಿ ತಮ್ಮ ಕಟ್ಟಡಗಳ ನೆಲಗಟ್ಟಾಗಿ ಹೂಳಿದರು. ಅದರ ಬಗೆಗೆ ಈ ಪುಸ್ತಕದಲ್ಲಿ ಮುಂದೆ ಹೇಳಲಾಗಿದೆ. ಬ್ರಾಹ್ಮಣರು ತಮ್ಮನ್ನು ತಾವೇ ಎಂಥ ಜೀವಿಗಳೆಂದು ಹೇಳಿಕೊಳ್ಳುತ್ತಿದ್ದರೆಂದರೆ, ಅವರು ಹೊಳೆದಂಡೆಗೇನಾದರೂ ಬಂದರೆ ಅಲ್ಲಿ ಬಟ್ಟೆ ತೊಳೆಯುತ್ತಿದ್ದ ಶೂದ್ರಾತಿಶೂದ್ರರು ಹನಿ ನೀರು ಆತನ ಮೇಲೆ ಹಾರಿ ಬೀಳಬಹುದೆಂದು ಆಚೆ ಹೋಗಬೇಕು. ಎಲ್ಲ ಮುನ್ನೆಚ್ಚರಿಕೆಯ ಹೊರತಾಗಿಯೂ ಒಂದೆರೆಡು ಹನಿ ಬ್ರಾಹ್ಮಣರ ಮೇಲೆ ಏನಾದರೂ ಬಿದ್ದರೆ, ಅಥವಾ ಬ್ರಾಹ್ಮಣ ಹಾಗೆ ಭಾವಿಸಿದರೆ ತಮ್ಮ ಕೈಲಿದ್ದ ಪಾತ್ರೆಯಿಂದಲೇ ಶೂದ್ರರ ತಲೆಯ ಮೇಲೆ ಹೊಡೆಯುತ್ತಿದ್ದರು. ರಕ್ತ ಸುರಿಸುತ್ತ ಶೂದ್ರ ಕೆಳಗೆ ಬೀಳುತ್ತಿದ್ದ. ಅಥವಾ ರಕ್ತಸೋರುವ ಜಾಗ ಒತ್ತಿ ಹಿಡಿದು ಮೌನವಾಗಿ ಆಚೆ ಸರಿದು ಹೋಗುತ್ತಿದ್ದ. ಇದಕ್ಕಾಗಿ ಯಾರಲ್ಲೂ ದೂರುವಂತಿಲ್ಲ. ಯಾರಿಗೆ ದೂರು ಕೊಡುವುದು? ಆಳುವವರು, ಆಡಳಿತ ನಡೆಸುವವರು ಅವರೇ ಆಗಿರುವಾಗ ದೂರು ಕೊಡಲು ಹೋದವನನ್ನೇ ಶಿಕ್ಷೆಗೆ ಒಳಪಡಿಸುತ್ತಿದ್ದರು. ಓ ದೇವರೇ! ಎಂಥ ಭಯಂಕರ ಅನ್ಯಾಯ? ಆದರೆ ಇಂಥ ಹಲವು ಅವಮಾನಗಳಾಗುತ್ತಿದ್ದಾಗ ಯಾರಲ್ಲಿ ಹೇಳಿಕೊಳ್ಳುವುದು? ಬ್ರಾಹ್ಮಣರ ಆಳ್ವಿಕೆಯ ಕಾಲದಲ್ಲಿ ಶೂದ್ರಾತಿಶೂದ್ರರು ಇಂಥ ಕಷ್ಟವನ್ನು ಬಹಳ ಅನುಭವಿಸಿದ್ದಾರೆ. ತಮ್ಮ ವ್ಯಾಪಾರ ವ್ಯವಹಾರಗಳಿಗೆ ದೂರದೂರುಗಳಿಗೆ ಪ್ರಯಾಣ ಮಾಡಬೇಕಾದ ಶೂದ್ರರು ರಸ್ತೆ ಮೇಲೆ ಹಲವು ತೊಂದರೆ ಎದುರಿಸಬೇಕಾಗಿತ್ತು. ಬೆಳಗಿನ ಜಾವ ನಡೆಯುವುದು ತುಂಬ ಕಷ್ಟವಾಗಿತ್ತು. ಆಗ ನೆರಳು ಉದ್ದುದ್ದ ಬೀಳುತ್ತದೆ. ರಸ್ತೆಯ ಮೇಲೆ ನಡೆವ ಶೂದ್ರನೊಬ್ಬ ಬ್ರಾಹ್ಮಣನೊಬ್ಬ ಹತ್ತಿರ ಬರುವುದು ನೋಡಿದರೆ ಅವನು ನಡೆಯುವುದನ್ನು ನಿಲ್ಲಿಸಿ ರಸ್ತೆಯ ಮೇಲೆ ಕೂತು, ತನ್ನ ನೆರಳು ಬ್ರಾಹ್ಮಣನ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು. ತನಗೆ ತೊಂದರೆಯಾದರೂ ಬ್ರಾಹ್ಮಣನಿಗೆ ಸಿಟ್ಟು ಬರದಂತೆ ನೋಡಿಕೊಳ್ಳಬೇಕು. ಬ್ರಾಹ್ಮಣ ಆಚೆ ಹೋದ ನಂತರ ಮತ್ತೆ ನಡೆಯಲು ಶುರುಮಾಡಬೇಕು. ಅವನ ನೆರಳೇನಾದರೂ ಬಿದ್ದರೆ ಬ್ರಾಹ್ಮಣ ಆತನ ಚರ್ಮ ಸುಲಿಯುವವರೆಗೂ ಹೊಡೆದು ನಂತರ ಶುದ್ಧವಾಗಲು ಹೊಳೆಗೆ ಹೋಗಿ ಮೀಯುತ್ತಿದ್ದ. ಶೂದ್ರ ನೆಲದ ಮೇಲೆ ಉಗುಳುವಂತಿರಲಿಲ್ಲ. ಬ್ರಾಹ್ಮಣರ ಬೀದಿಗಳಲ್ಲಿ ಓಡಾಡುವಾಗ ಉಗಿದುಕೊಳ್ಳಲು ಒಂದು ಬಟ್ಟಲನ್ನು ತಾನೇ ಹೊತ್ತೊಯ್ಯಬೇಕು. ಉಗಿಯುವಾಗ ಯಾರಾದರೂ ಬ್ರಾಹ್ಮಣ ನೋಡಿಬಿಟ್ಟರೆ ಮುಗಿಯಿತು. ಅವನ ಜೀವ ಹೋಯಿತೆಂದೇ ಲೆಕ್ಕ. ಹೀಗೆ ಶೂದ್ರರು ದೀರ್ಘಕಾಲ ಅವಮಾನ, ಕಷ್ಟ ಅನುಭವಿಸಿದ್ದಾರೆ. ಜೈಲಿನೊಳಗಿರುವ ಕೈದಿ ಬಿಡುಗಡೆಯ ದಿನ ಎದುರು ನೋಡುವಂತೆ, ಬಿಡುಗಡೆಯಾಗಿ ಬಂಧುಬಳಗವನ್ನು ಭೇಟಿ ಮಾಡುವ ಕ್ಷಣಕ್ಕಾಗಿ ಎದುರು ನೋಡುವಂತೆ ಇವರೂ ನೋಡುತ್ತಿದ್ದರು. ದೇವರೇ ಕರುಣೆ ತೋರಿದನೋ ಎಂಬಂತೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಶುರುವಾಯಿತು. ಶೂದ್ರರು ಇದಕ್ಕಾಗಿ ಬ್ರಿಟಿಷರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾರೆ ಮತ್ತು ಕೃತಜ್ಞರಾಗಿದ್ದಾರೆ. ಬ್ರಿಟಿಷರ ಮೇಲಿನ ಋಣವನ್ನು ಅವರೆಂದೂ ಮರೆಯಲಾರರು. ಅವರನ್ನು ಜೈಲುಗಳಿಂದ ಬ್ರಿಟಿಷರು ಬಿಡುಗಡೆಗೊಳಿಸಿದರು ಹಾಗೂ ಈಗ ಅವರ ಮಕ್ಕಳು ಮರಿ ಬೆಳಕು ಕಾಣಲು ಕಾರಣರಾದರು. ಬ್ರಿಟಿಷರಿಲ್ಲದಿದ್ದರೆ ಬ್ರಾಹ್ಮಣರು ಅವರನ್ನು ಧೂಳೀಪಟ ಮಾಡುತ್ತಿದ್ದರು. ಕೆಲವರು ಇದಕ್ಕೆ ಆಕ್ಷೇಪವೆತ್ತಬಹುದು - ಶೂದ್ರಾತಿಶೂದ್ರರ ಸಂಖ್ಯೆ ಬ್ರಾಹ್ಮಣರದಕ್ಕಿಂತ ಹತ್ತು ಪಟ್ಟು ಹೆಚ್ಚಿರುವಾಗ ಬ್ರಾಹ್ಮಣರು ಅವರನ್ನು ಹೇಗೆ ನಾಶಗೊಳಿಸಿಯಾರು? ಇದಕ್ಕೆ ಉದಾಹರಣೆಯೆಂದರೆ ಒಬ್ಬ ಚಾಣಾಕ್ಷ ಮನುಷ್ಯ ಹತ್ತು ಮುಗ್ಧರನ್ನು ಮನವೊಲಿಸಿ ಆಳಬಲ್ಲ. ಎರಡನೆಯದಾಗಿ ಈ ಹತ್ತು ಜನ ಒಂದೇ ಅಭಿಪ್ರಾಯ ಹೊಂದಿದ್ದರೆ ಒಬ್ಬ ಮನುಷ್ಯ ತಮ್ಮನ್ನಾಳಲು ಬಿಡುತ್ತಿರಲಿಲ್ಲ. ಹತ್ತು ಜನರಿಗೆ ಹತ್ತು ವಿವಿಧ ಅಭಿಪ್ರಾಯಗಳಿದ್ದುದರಿಂದ ಬುದ್ಧಿವಂತನಿಗೆ ಅವರನ್ನು ಮೋಸಗೊಳಿಸುವುದು ಕಷ್ಟವಾಗಲಿಲ್ಲ. ಹಾಗೆಯೇ ಬ್ರಾಹ್ಮಣರೂ ಬೇರೆ ಬೇರೆ ಮೋಸದ ಉಪಾಯಗಳಿಂದ ಶೂದ್ರಾತಿಶೂದ್ರರು ಬೇರೆಬೇರೆ ಇರುವಂತೆ ನೋಡಿಕೊಂಡರು. ಶೂದ್ರಾತಿಶೂದ್ರರ ಸಂಖ್ಯೆ ಹೆಚ್ಚುತ್ತ ಹೋದ ಹಾಗೆ ಬ್ರಾಹ್ಮಣರಿಗೆ ಹೆದರಿಕೆ ಶುರುವಾಯಿತು. ತಮ್ಮ ಅಧಿಕಾರ ಮತ್ತು ಉನ್ನತ ಸ್ಥಾನ ಉಳಿಸಿಕೊಳ್ಳಲು ಶೂದ್ರಾತಿಶೂದ್ರರನ್ನು ಒಡೆದು ಇಡುವುದೇ ಸರಿ ಎಂದು ಅವರಿಗೆ ಅನಿಸಿತು. ಹೀಗಾಗಿ ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿ ಕಟ್ಟಿದರು. ಯಾವ ಶ್ರಮವಿಲ್ಲದೇ ಸುಖ ಸಂತೋಷದ ಜೀವನ ಕಳೆದರು. ತಮ್ಮದಷ್ಟೇ ಅಲ್ಲ, ತಮ್ಮ ಭವಿಷ್ಯದ ಪೀಳಿಗೆಯೂ ಸುಖವಾಗಿರಲೆಂದು ಶೂದ್ರಾತಿಶೂದ್ರರ ಶ್ರಮವನ್ನು ಬಳಸಿಕೊಂಡರು. ಇದನ್ನು ಸಾಧಿಸಲೆಂದೇ ಮೋಸದ ಜಾತಿ ಪದ್ಧತಿ ಜಾರಿಗೆ ತಂದು ಅದನ್ನು ಸಮರ್ಥಿಸಿಕೊಳ್ಳಲು ಅನೇಕ ಪುಸ್ತಕಗಳನ್ನು ಬರೆದರು. ಆ ಗ್ರಂಥಗಳ ಮೂಲಕ ಶೂದ್ರಾತಿಶೂದ್ರರ ಮನಸ್ಸಿನ ಮೇಲೆ ಹಿಡಿತ ಸಾಧಿಸಿದರು. ಆಗ ಶೂದ್ರರ ಒಂದು ವರ್ಗ ಬ್ರಾಹ್ಮಣರ ವಿರುದ್ಧ ತಿರುಗಿ ಬಿತ್ತು. ಅವರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಬ್ರಾಹ್ಮಣರು ಅವರನ್ನು ಹಾಗೂ ಅವರ ಮಕ್ಕಳನ್ನು ಯಾರೂ ಮುಟ್ಟಬಾರದೆಂದು ಕಟ್ಟಳೆ ವಿಧಿಸಿದರು. ಹೀಗಾದ ನಂತರ ಆ ಶೂದ್ರರ ವ್ಯಾಪಾರ ವ್ಯವಹಾರ ಸ್ಥಗಿತಗೊಂಡು ದಾರುಣ ಬಡತನಕ್ಕೆ ತುತ್ತಾಗಿ ಜೀವಂತವಾಗುಳಿಯಲು ಸತ್ತ ಪ್ರಾಣಿಗಳನ್ನು ತಿನ್ನಲು ಮೊದಲು ಮಾಡಿದರು. ತಮ್ಮನ್ನು ತಾವೇ ಮಾಲಿ, ರೈತ, ಅಕ್ಕಸಾಲಿ, ದರ್ಜಿ, ಕಮ್ಮಾರ, ಬಡಗಿ ಇತ್ಯಾದಿಯಾಗಿ ಕರೆದುಕೊಳ್ಳುತ್ತಿದ್ದ ಶೂದ್ರರು ಬ್ರಾಹ್ಮಣರ ಪ್ರಭಾವದಿಂದ ಹೊರಗುಳಿದ ಶೂದ್ರರನ್ನು ದೂರವೇ ಇಟ್ಟರು. ಬ್ರಾಹ್ಮಣರ ಕುತಂತ್ರ ಅವರಿಗೂ ತಿಳಿಯಲಿಲ್ಲ. ಶೂದ್ರರೆಲ್ಲ ಒಂದೇ ಕುಲದವರು. ಆದರೆ ತಮ್ಮ ವಿರುದ್ಧ ತಿರುಗಿಬಿದ್ದ ಶೂದ್ರರ ಮೇಲೆ ಸೇಡು ತಿರಿಸಿಕೊಳ್ಳಲು ಬ್ರಾಹ್ಮಣರು ಅವರನ್ನು ಉಳಿದವರಿಂದ ಬೇರ್ಪಡಿಸಿದರು. ಬ್ರಾಹ್ಮಣರು ಒಂದಲ್ಲಾ ಒಂದು ದಿನ ದೇವರ ಎದುರು ಉತ್ತರಿಸಬೇಕಾದದ್ದು ಬಹಳವಿದೆ. ಉಳಿದ ಶೂದ್ರರ ಮನಸ್ಸು ಕೆಡಿಸಿದ ಬ್ರಾಹ್ಮಣರು ಅಸ್ಪೃಶ್ಯರನ್ನು ಸೃಷ್ಟಿಸಿದರು. ಹಬ್ಬ ಹರಿದಿನಗಳಲ್ಲೂ ಸಹ ಆಹಾರ ಬೇಡುತ್ತಾ ಬಂದವರನ್ನು ಹಚಾ ಹಚಾ ಎಂದು ಕೋಲಿನಿಂದ ಓಡಿಸಿದರು. ಹೀಗೆ ಬ್ರಾಹ್ಮಣರು ಶೂದ್ರರನ್ನು ಹಲವು ಗುಂಪುಗಳಾಗಿ ವಿಭಾಗಿಸಿ ತಮಗೆ ತೋರಿಸಿದ ವಿಧೇಯತೆಯ ಆಧಾರದ ಮೇಲೆ ಶಿಕ್ಷೆ ಅಥವಾ ಕಾಣಿಕೆ ನೀಡುತ್ತಿದ್ದರು. ಈ ವಿಭಜನೆಯ ನಂತರ ಶೂದ್ರರು ತಮ್ಮ ಐಕ್ಯತೆ ಕಳೆದುಕೊಂಡರು. ಹಾಗೂ ವಿಭಿನ್ನ ಅಭಿಪ್ರಾಯಗಳನ್ನು ತಳೆದರು. ಇದು ಬ್ರಾಹ್ಮಣರಿಗೆ ಸಮಾಜ ವ್ಯವಸ್ಥೆಯನ್ನು ತಮಗಿಷ್ಟ ಬಂದ ಹಾಗೆ ಬೆಳೆಸಲು ಅವಕಾಶ ನೀಡಿತು. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆಯಿದೆ. ಹೀಗೆ ಶೂದ್ರಾತಿಶೂದ್ರರನ್ನು ಒಡೆದ ಬ್ರಾಹ್ಮಣರು ಅದರ ಬೆಲೆಯಲ್ಲಿ ತಾವು ಸುಖವಾಗಿದ್ದಾರೆ.
ಬ್ರಿಟಿಷರು ಬಂದ ಮೇಲೆ ಶೂದ್ರಾತಿಶೂದ್ರರು ದೈಹಿಕ ಮತ್ತು ಮಾನಸಿಕ ದಾಸ್ಯದಿಂದ ಬಿಡುಗಡೆ ಹೊಂದಿದರು ಎಂದು ಈ ಮೊದಲೇ ಹೇಳಿದೆ. ಆದರೆ ಅದೇ ಬ್ರಿಟಿಷ್ ಸರ್ಕಾರ ಶೂದ್ರಾತಿಶೂದ್ರರ ಶಿಕ್ಷಣದ ಬಗೆಗೆ ಗಮನ ಹರಿಸುತ್ತಿಲ್ಲವೆಂದು ದುಃಖದಿಂದ ಹೇಳಬೇಕಾಗಿದೆ. ಹೀಗಾಗಿಯೇ ಅವರು ಈಗಲೂ ಮಾನಸಿಕವಾಗಿ ಬ್ರಾಹ್ಮಣರಿಗೆ ದಾಸರಾಗಿಯೇ ಉಳಿಯಬೇಕಾಗಿ ಬಂದಿದೆ. ಸರ್ಕಾರಕ್ಕೆ ಮನವಿ ಸಲ್ಲಿಸುವ ಶಕ್ತಿಯೂ ಶೂದ್ರರಿಗಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಬ್ರಾಹ್ಮಣರು ಅವರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದೂ ತಿಳಿದುಬರುತ್ತಿಲ್ಲ. ಸರ್ವಶಕ್ತ ಭಗವಂತನನ್ನೇ ಬೇಡಿಕೊಳ್ಳುತ್ತಿದ್ದೇವೆ ಹಾಗೂ ಸರ್ಕಾರ ಶೂದ್ರಾತಿಶೂದ್ರರನ್ನು ಬ್ರಾಹ್ಮಣರ ದಾಸ್ಯದಿಂದ ಮುಕ್ತಿಗೊಳಿಸಲಿ ಎಂದು ಕೇಳಿಕೊಳ್ಳುತ್ತಿದ್ದೇವೆ.
ನನ್ನ ಗೆಳೆಯರಾದ ಶ್ರೀ ವಿನಾಯಕರಾವ್ ಬಾಪೂಜಿ ಭಂಡಾರ್‌ಕರ್, ಶ್ರೀ ಸ. ರಾಜಣ್ಣಲಿಂಗು ಅವರಿಗೆ ಈ ಪುಸ್ತಕ ಬರೆಯುವ ವೇಳೆ ನೀಡಿದ ಸತತ ಬೆಂಬಲಕ್ಕಾಗಿ ಅಭಾರಿಯಾಗಿದ್ದೇನೆ, ಮತ್ತು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಬಯಸುತ್ತೇನೆ.
---ಅನುಪಮಾ

ಮುಂಬೈ ಭಯೋತ್ಪಾದನೆ ಯ ಪ್ರತಿಕ್ರಿಯೆ: ಈಗ ಬೇಕಾಗಿರುವುದು ಸಂಯಮ ಹಾಗೂ ರಾಜತಾಂತ್ರಿಕತೆ, ಯುದ್ಧ ಅಲ್ಲ


ಮುಂಬೈ ಭಯೋತ್ಪಾದನೆ ಯ ಪ್ರತಿಕ್ರಿಯೆ: ಈಗ ಬೇಕಾಗಿರುವುದು ಸಂಯಮ ಹಾಗೂ ರಾಜತಾಂತ್ರಿಕತೆ, ಯುದ್ಧ ಅಲ್ಲ
- ಪ್ರಫುಲ್ ಬಿದ್ವಾಯಿ
- ಅನುವಾದ ಹೃಷಿಕೇಶ ಬಹದ್ದೂರ ದೇಸಾಯಿ
ಮುಂಬೈ ದಾಳಿಯ ಹಿನ್ನೆಲೆ

ಮುಂಬೈ ಯಲ್ಲಿ ನವಂಬರ್ ೨೬, ೨೦೦೮ ರಂದು ನೂರಾರು ನಿರಪರಾಧಿಗಳ ಜೀವ ತೆಗೆದ ಭಯೋತ್ಪಾಕರಲ್ಲಿ ಅಜ್ಮಲ್ ಅಮೀರ್ ಇಮಾನ್ (ಕಸಬ್) ಜೀವಂತವಾಗಿ ಸೆರೆಸಿಕ್ಕ. ಅದರೆ ಇದು ಭಯೋತ್ಪಾದನೆಯ ಇತಿಹಾಸದಲ್ಲಿಯೇ ಅಪರೂಪವೆನ್ನುವಂತಹ ಘಟನೆ. ಇಂಥ ಘಟನೆ ಬೇರೆಲ್ಲೂ ನಡೆದೇ ಇಲ್ಲ ಎನ್ನುವಂತೇನೂ ಇಲ್ಲ ವಾದರೂ ಇದರ ಪ್ರಾಮುಖ್ಯತೆಯನ್ನು ಕಡೆಗಣಿಸುವಂತಿಲ್ಲ. ಅವನ ವಿಚಾರಣೆಯಿಂದ ಮಹತ್ವದ ಸತ್ಯಗಳು ಹೊರಹೊಮ್ಮಿವೆ. ಮುಂಬೈ ದಾಳಿಯ ತಯಾರಿ, ಅದು ನಡೆದ ರೀತಿ, ಇತ್ಯಾದಿಗಳ ಮಾಹಿತಿ ಅಪರೂಪದ ತನಿಖಾ ಸಂಸ್ಥೆಗಳಿಗೆ ದೊರಕಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ.
ಧೈರ್ಯ ಸಾಹಸದ ಫಲ
ಬಹಳ ಜನರಿಗೆ ಗೊತ್ತಿರಲಾರದ ವಿಷಯವೇನೆಂದರೆ, ಇಂಥ ಮುಖ್ಯ ಸಾಕ್ಷಿಯನ್ನು ಜೀವಂತವಾಗಿ ಬಂಧಿಸಲು ಸಾಧ್ಯವಾಗಿದ್ದು ನಮ್ಮಲ್ಲಿದ್ದ ಅತ್ಯಾಧುನಿಕ ಆಯುಧಗಳಿಂದಲ್ಲ. ಉನ್ನತ ತರಬೇತಿ ಪಡೆದ ಕಮಾಂಡೋಗಳಿಂದಲ್ಲ. ಸುಧಾರಿತ ಸಂವಹನ ತಂತ್ರಜ್ಞಾನ ಬಳಕೆಯಿಂದಲ್ಲ. ಸುರಕ್ಷಾ ಸಂಸ್ಥೆಗಳು ಸಂಗ್ರಹಿಸಿದ ಗುಪ್ತ ಮಾಹಿತಿಯಿಂದಲ್ಲ. ಇದು ದುರದೃಷ್ಟಕರ.
ಅದು ಸಾಧ್ಯವಾದದ್ದು ಧೈರ್ಯವೊಂದನ್ನು ಬಿಟ್ಟು ಬೇರೇನನ್ನೂ ಹೊಂದಿರದ ಬಡಪಾಯಿ ಪೋಲಿಸ್ ಸಿಬ್ಬಂದಿಗಳ ಸಾಹಸೀ ಹೋರಾಟದಿಂದ. ಅವರ ಸಮಯ ಪ್ರಜ್ಞೆಯಿಂದ, ಅವರ ಬಲಿದಾನದಿಂದ.
ಬಲಿದಾನ
ಸಹಾಯಕ ಸಬ್ ಇನ್ಸ್ ಪೆಕ್ಟರ್ ತುಕಾರಾಮ್ ಓಂಬಳೆ ಅವರು ಕಸಬ್ ನೊಂದಿಗೆ ಜೀವದ ಹಂಗು ತೊರೆದು ಹೋರಾಟ ಮಾಡಿದಾಗ ಅವರಲ್ಲಿ ಇದ್ದದ್ದು ಪೋಲಿಸ್ ಇಲಾಖೆ ಹಲವಾರು ವರ್ಷಗಳ ಹಿಂದೆ ಅವರ ಸವವಸ್ರ್ರದ ಜತೆ ನೀಡಿದ್ದ ಲಾಠಿ ಒಂದೇ.
ಅಬು ಇಸ್ಮಾಯಿಲ್ ಎಂಬ ಭಯೋತ್ಪಾದಕನ ಸಾವಿನ ನಂತರ ಕಸಬ್ ಓಂಬಳೆ ಅವರ ಮೇಲೆ ಹಲ್ಲೆ ಮಾಡಿದ.
ಕಸಬ್ ತಮ್ಮೆದೆಯ ಮೇಲೆ ಗುಂಡಿನ ಮಳೆ ಸುರಿಸುತ್ತಿದ್ದಾಗಲೂ ಓಂಬಳೆ ಅವರು ಅವನ ಬಂದೂಕಿನ ನಳಿಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಸಾಯುವವರೆಗೂ ಬಿಡಲಿಲ್ಲ. ಇದರಿಂದ ಇತರ ಪೋಲಿಸ್ ಸಿಬ್ಬಂದಿಗಳು ಅವನ ಬಂದೂಕು ಕಸಿದು ಅವನನ್ನು ಬಂಧಿಸಲು ಸಾಧ್ಯವಾಯಿತು.
ಓಂಬಳೆ ಪ್ರಾಣ ತೆತ್ತರು. ಆದರೆ ಅವರು ಇತರರಿಗೆ ಮಾದರಿಯಾಗ ಬಲ್ಲ ಕೆಲಸ ಮಾಡಿಹೋಗಿದ್ದರು. ಅವರ ಸಾಹಸ ದಿಂದ ಆ ಆಕ್ರಮಣದಲ್ಲಿ ಭಾಗಿಯಾದ ಪ್ರಮುಖನೊಬ್ಬ ಸೆರೆಸಿಕ್ಕ. ಪ್ರಕರಣದ ಪ್ರಮುಖ ಸಾಕ್ಷಿ ಲಭ್ಯವಾಯಿತು.
ಪಾರದರ್ಶಕ ವಿಚಾರಣೆ
ಕಸಬ್ ಹಾಗೂ ಆತನ ಸಹಚರರು ರಾಕ್ಷಸೀ ಕೃತ್ಯ ಎಸಗಿದ್ದಾರೆ. ಅತ್ಯಂತ ಘೋರ ಹಾಗೂ ಅಮಾನವೀಯ ಹಿಂಸೆಗೆ ಕಾರಣರಾಗಿದ್ದಾರೆ. ಆದರೆ ಅವನ ವಿಚಾರಣೆ ಭಾರತ ಸರಕಾರ ಹಾಗೂ ನ್ಯಾಯ ವ್ಯವಸ್ಥೆ ಪಾರದರ್ಶಕವಾಗಿ, ಕಾನೂನು ರೀತ್ಯಾ ನಡೆಯಬೇಕು. ಅದು ನಮ್ಮ ವ್ಯವಸ್ಥೆಯ ಜವಾಬ್ದಾರಿ. ಅವನ ವಿಚಾರಣೆ ಕಟ್ಟುನಿಟ್ಟಾಗಿ, ಕ್ರಮಬದ್ಧವಾಗಿ, ನಡೆಯಬೇಕು. ಕಾನೂನಿನ ಪ್ರಕಾರ ಅವನಿಗೆ ಲಭ್ಯವಿರುವ ಎಲ್ಲ ಹಕ್ಕುಗಳನ್ನು ಅವನಿಗೆ ಒದಗಿಸಬೇಕು. ಮಹಾರಾಷ್ಟ್ರದ ಕಾನೂನು ಸೇವಾ ಪ್ರಾಧಿಕಾರ ಅವನ ಪರವಾಗಿ ವಾದಿಸಲು ಒಬ್ಬ ಸಮರ್ಥ ವಕೀಲರನ್ನು ನೇಮಿಸಬೇಕು. ಯಾರಿಗೂ ಯಾವುದೇ ಸಂದೇಹ ಬರದಂತೆ ಕಾಯಿದೆ ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ನಡೆಸಬೇಕು.
ಮುಂಬೈ ಮೇಲೆ ದಾಳಿ ಮಾಡಿದವರು ಪಾಕಿಸ್ತಾನದ ಲಷ್ಕರ್ -ಎ -ತಯ್ಯಬಾ ಭಯೋತ್ಪಾದಕ ಸಂಘಟನೆ ಸದಸ್ಯರು ಎನ್ನುವುದು ಕಸಬನ ಹೇಳಿಕೆಗಳಿಂದ ಸಿದ್ಧವಾಯಿತು.
ಈ ದಾಳಿ ನಡೆಸಲು ಅದು ವರ್ಷಗಟ್ಟಲೇ ತಯಾರಿ ನಡೆಸಿತ್ತು. ಆ ಸಂಘಟನೆ ಈ ಕೆಲಸಕ್ಕಾಗಿಯೇ ಅನೇಕ ಯುವಕರನ್ನು ಆಯ್ಕೆ ಮಾಡಿ, ಯುದ್ಧ ತರಬೇತಿ ನೀಡಿ, ಅವರಿಗೆ ರಾಜಕೀಯ ಹಾಗೂ ಸೈದ್ಧಾಂತಿಕ ಉಪದೇಶ ಕೊಟ್ಟು ಕೊಟ್ಟು ಅವರ ತಲೆ ತೊಳೆದು ಬಿಟ್ಟರು ಎನ್ನುವುದೂ ಖಚಿತವಾಯಿತು. ಈ ಮಾತು ಗಳಿಗೆ ಪುಷ್ಟಿ ಕೊಟ್ಟಿದ್ದು ಪಾಕಿಸ್ತಾನದ ಮಾಧ್ಯಮಗಳು. ಅಲ್ಲಿನ ಪತ್ರಿಕೆ ಹಾಗೂ ಟಿವಿ ಚಾನೆಲ್ ಗಳು ಕಸಬನ ಊರು, ವಿಳಾಸ, ಇತ್ಯಾದಿ ಪತ್ತೆ ಹಚ್ಚಿದವು. ಪಾಕಿಸ್ತಾನದ ಓಕ್ರಾ ಜಿಲ್ಲೆಯ ಫರೀದಕೋಟ್ ನಲ್ಲಿ ಕಸಬನ ಮನೆಗೆ ಹೋಗಿ ಅವನ ಅಪ್ಪನನ್ನು ಮಾತಾಡಿಸಿವೆ.
ಇನ್ನು ಎಲ್ ಇ ಟಿ ಯ ಸಹ ಸಂಸ್ಥೆಯಾದ ಜಮಾತ್ ಉದ್ ದುವಾ ಸಂಸ್ಥೆಯ ಮೇಲೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಪ್ರತಿಬಂಧ ಹೇರಿತು. ಇದು ಮಂಡಳಿಯ ಗೊತ್ತುವಳಿ ಸಂಖ್ಯೆ ೧೨೬೭ ಪ್ರಕಾರ ಅಲ್ ಕಾಯಿದಾ, ತಾಲಿಬಾನ್ ಇತ್ಯಾದಿ ಸಂಘಟನೆಗಳಿಗೆ ವಿಧಿಸಿದ ಪ್ರತಿಬಂಧಕಾಜ್ಞೆ ಗೆ ಸಂಬಂಧಿಸಿದ್ದಾದ್ದರಿಂದ ಇದಕ್ಕೆ ಅಂತರರಾಷ್ಟ್ರೀಯ ಸಮುದಾಯ ದಲ್ಲಿ ಹೆಚ್ಚಿನ ಮಹತ್ವ ಬಂತು.
ಇತರ ಜೆಹಾದಿ ಸಂಘಟನೆಗಳಿಗೂ ಎಲ್ ಇ ಟಿ ಗೂ ವ್ಯತ್ಯಾಸ ಇದೆ. ಇದರ ವಿಶೇಷತೆ ಏನೆಂದರೆ, ಇದು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ ಎಸ್ ಐ ಜೊತೆಗೆ ವಿಶೇಷ ಸಂಬಂಧ ಹೊಂದಿದೆ. ಐ ಎಸ್ ಐ ಇದಕ್ಕೆ ರಕ್ಷಣೆ ನೀಡುತ್ತಿದೆ. ಜೈಷ್ ಎ ಮಹಮ್ಮದ್ ನಂತಹ ಇತರ ಉಗ್ರಗಾಮಿ ಸಂಘಟನೆಗಳು ದೇವಬಂದ್ ಸಿದ್ಧಾಂತವನ್ನು ಒಪ್ಪುವವರಾದರೆ, ಎಲ್ ಇ ಟಿ ಸಲಾಫಿ ಸಿದ್ಧಾಂತವನ್ನು ಪಾಲಿಸುವುದು. ಇದರ ಅರ್ಥ ಎಲ್ ಇ ಟಿ ಸದಸ್ಯರು ಇಸ್ಲಾಮಿಕ್ ರಾಷ್ಟ್ರಗಳ ಜತೆ ಸಂಘರ್ಷಕ್ಕೆ ಇಳಿಯಲಾರರು. ಅಂತೆಯೇ ಪಾಕಿಸ್ತಾನ ಸರಕಾರ ಅಫ್ಘಾನಿಸ್ತಾನz ಗಡಿಪ್ರದೇಶದಲ್ಲಿ ಅಲ್ ಕಾಯಿದಾ ಹಾಗೂ ತಾಲಿಬಾನ್ ವಿರೋಧಿ ಕಾರ್ಯಾಚರಣೆಯನ್ನು ಎಲ್ ಇ ಟಿ ಅಷ್ಟೊಂದು ತೀವ್ರವಾಗಿ ವಿರೋಧಿಸುವುದಿಲ್ಲ.
ಇನ್ನು ಮುಂಬೈ ದಾಳಿಯಲ್ಲಿ ಐಎಸ್ ಐ ನೇರ ಪಾತ್ರ ವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದು ಐಎಸ್ ಐ ನ ಪೂರ್ವ ಯೋಜಿತ ದಾಳಿಯೇ ಅಥವಾ ಅದು ದಾಳಿಕೋರರಿಗೆ ಬೇಕಾದ ಮದ್ದು ಗುಂಡು, ಸಾಮಗ್ರಿ ಒದಗಿಸಿ ಅವರಿಗೆ ಸಹಾಯ ಮಾಡಿತೆ ಎನ್ನುವುದು ಖಚಿತವಾಗಿಲ್ಲ. ಐ ಎಸ್ ಐ ಇದರಲ್ಲಿ ಅಧಿಕೃತವಾಗಿ ಪಾಲ್ಗೊಂಡಿತ್ತೇ ಅಥವಾ ಈ ದುಷ್ಕೃತ್ಯದಲ್ಲಿ ಐ ಎಸ್ ಐ ನಲ್ಲಿನ ಕೆಲವು ದುಷ್ಟ ಶಕ್ತಿಗಳ ಪಾತ್ರ ಇದೆಯೇ ಅಂತ ಸಹ ತಿಳಿದುಬಂದಿಲ್ಲ.
ಆದರೆ ಇಂತಹದೊಂದು ದಾಳಿಯಿಂದ ಐ ಎಸ್ ಐ ನಂತಹ ಸಂಸ್ಥೆಗೆ ಅನುಕೂಲವಾಗುವುದಂತೂ ಖಚಿತ. ಈ ದಾಳಿಯಿಂದ ಸಹನೆ ಕಳೆದು ಕೊಂಡ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎನ್ನುವುದೇ ದಾಳಿಕೋರರ ಉದ್ದೇಶ. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಿಲ್ಲ.
ಹಾಗೇನಾದರೂ ಆದಲ್ಲಿ, ಈ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಉಂಟಾಗುವುದು. ಗಡಿಯ ಆ ಕಡೆ, ಈ ಕಡೆ ದೊಡ್ಡ ಸಂಖ್ಯೆಯಲ್ಲಿ ಸೈನ್ಯ ಜಮಾವಣೆ ಆಗುವುದು ಇವೆಲ್ಲ ಸ್ವಾಭಾವಿಕ ಬೆಳವಣಿಗೆಗಳು.
ಭಾರತದ ಗಡಿಗೆ ಸೈನ್ಯ ಕಳಿಸಬೇಕಾದರೆ, ಪಾಕಿಸ್ತಾನ ಅಫ್ಘಾನಿಸ್ತಾನದ ಗಡಿಯಿಂದ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಗುತ್ತದೆ. ಅದರ ಅರ್ಥ ಅಫ್ಘಾನ್ ಗಡಿಯಲ್ಲಿ ಅಮೇರಿಕ ಸೈನಿಕರೊಡನೆ ಸೇರಿ ಪಾಕಿಸ್ತಾನ ಸೈನಿಕರು ನಡೆಸುತ್ತಿರುವ ತಾಲಿಬಾನ್ ವಿರೋಧಿ ಕಾರ್ಯಾಚರಣೆ ಯನ್ನು ಕಡೆಗಣಿಸಬೇಕಾಗುತ್ತದೆ.
ಅಫ್ಘಾನ್ ಗಡಿಯಲ್ಲಿ ಭಯೋತ್ಪಾದನೆ ಮಟ್ಟ ಹಾಕುವಂತೆ ಪಾಕ್ ಸೈನಿಕರಿಗೆ ಅಮೇರಿಕೆ ಸೈನ್ಯ ಸತತವಾಗಿ ಒತ್ತಾಯ ಮಾಡುತ್ತಿರುವುದರಿಂದ ಪಾಕ್ ಸೈನಿಕರು ತುಂಬ ಒತ್ತಡದಲ್ಲಿದ್ದಾರೆ.
ಅದನ್ನು ಬಿಟ್ಟು ಸುಮಾರು ಒಂದು ಲಕ್ಷ ಪಾಕ್ ಸೈನಿಕರು ಭಾರತದ ಗಡಿಗೆ ಬಂದರೆ ನಿರಾಳವಾಗುವವರು ತಾಲಿಬಾನ್ ಹಾಗೂ ಅಲ್ ಕಾಯಿದಾ ಉಗ್ರರು. ಸಹಜವಾಗಿಯೇ ಅವರು ಅಫ್ಘಾನ್ ಗಡಿ ಹಾಗೂ ಪಾಕಿಸ್ತಾನ ಬುಡಕಟ್ಟು ಜನ ವಸತಿ ಪ್ರದೇಶಗಳಲ್ಲಿ ಬೇರು ಬಿಟ್ಟು ತಮ್ಮ ಚಟುವಟಿಕೆ ಬೆಳೆಸಿಕೊಳ್ಳಲು ಅನುಕೂಲವಾಗುವುದು.
ಮುಂಬೈ ದಾಳಿಯ ಎರಡನೇಯ ದುರುದ್ದೇಶ ಹಿಂದೂ ಮುಸ್ಲಿಂ ಬಾಂಧವ್ಯವನ್ನು ಹಾಳು ಮಾಡುವುದು. ಈ ದಾಳಿಯ ಕಾರಣದಿಂದಾಗಿ ಹಿಂದೂಗಳು ಎಲ್ಲ ಮುಸ್ಲೀಮರನ್ನು ದ್ವೇಷಿಸುವಂತೆ ಮಾಡುವುದು. ಹಿಂದೂ ಮುಸ್ಲೀಮರು ಭಾವನಾತ್ಮಕವಾಗಿ ದೂರ ಸರಿಯುವುದು, ಮುಸ್ಲೀಮರ ಮೇಲೆ ಹಲ್ಲೆಗಳಾಗುವುದು, ಮತೀಯ ಗಲಭೆಗಳಾಗುವುದು ಇವೆಲ್ಲವೂ ಉಗ್ರವಾದದ ತೀವ್ರತೆ ಹೆಚ್ಚಲು ಕಾರಣವಾಗುವುದು. ಇದರಲ್ಲಿ ಸಂದೇಹವೇ ಇಲ್ಲ.
ದೇವರ ದಯೆಯಿಂದ ಹೀಗಾಗಿಲ್ಲ. ಸಂಘ ಪರಿವಾರದವರಿಂದಾಗಿ ಹೀಗಾಗಿಲ್ಲ. ಅವರು ಇದ್ದಾಗಲೂ ಹೀಗಾಗಿದೆ ಎನ್ನುವುದು ವಿಶೇಷ. ವಿಚಿತ್ರವೆಂದರೆ ಈ ದಾಳಿಯಿಂದ ಹಿಂದೆಂದೂ ಕಾಣದ ಹಿಂದೂ ಮುಸ್ಲಿಂ ಸಾಧ್ಯವಾಗಿದೆ , ಏಕತೆ ಎದ್ದು ಕಾಣುತ್ತಿದೆ. ಬಹುತೇಕ ಮುಸ್ಲಿಂ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳು ಒತ್ತಾಸೆಯಿಂದ ಈ ದಾಳಿಯನ್ನು ಖಂಡಿಸಿವೆ.
ಇನ್ನು ಕೆಲವರು ಹೇಳುವಂತೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅಥವಾ ಬೇರೆ ಯಾವುದೋ ರೀತಿಯಲ್ಲಿ ಭಾರತದ ಸೈನ್ಯ ಪ್ರತಿಕ್ರಿಯಿಸಿದರೆ, ಅದರಿಂದ ನಮ್ಮ ದೇಶಕ್ಕೆ ಹಾನಿಯೇ ಹೊರತು ಲಾಭವಲ್ಲ. ಭಾರತ ಪಾಕಿಸ್ತಾನ ಹೊಡೆದಾಡಿಕೊಂಡು ಸಾಯಲಿ ಅನ್ನುವುದೇ ಎಲ್ ಇ ಟಿ ಉದ್ದೇಶ. ನಾವು ನಮಗೆ ಗೊತ್ತಾಗದಂತೆ ? ದುರುದ್ದೇಶವನ್ನೇ ಸಫಲಗೊಳಿಸಿದಂತಾಗುತ್ತದೆ. ಇನ್ನು ಪಾಕಿಸ್ತಾನ ಪಡೆಗಳು ಅಫ್ಘಾನ್ ಗಡಿಯಲ್ಲಿ ಉಗ್ರರ ಮೇಲೆ ಒತ್ತಡ ಕಡಿಮೆ ಮಾಡಿದರೆ, ಈಗಾಗಲೇ ಅತಂತ್ರ ಸ್ಥಿತಿಯಲ್ಲಿ ಇರುವ ಪಾಕಿಸ್ತಾನವನ್ನು ಮತ್ತಷ್ಟು ಅಭದ್ರಗೊಳಿಸದಂತಾಗುತ್ತದೆ. ಇದು ಅತಿಯಾದ ಮಟ್ಟಕ್ಕೆ ಹೋಗಿ ಪಾಕಿಸ್ತಾನವೇ ಛಿದ್ರವಾಗಿ ಹೋಗಿಬಿಡಬಹುದು, ಅಲ್ಲಿನ ಕಾನೂನು ಸುವ್ಯವಸ್ಥೆ ಸ್ಥಿತಿ ಹದಗೆಟ್ಟು ಹೋಗಬಹುದು. ಹೀಗೇನಾದರೂ ಆದರೆ ನಷ್ಟವಾಗುವುದು ನಮಗೆ. ಇದರಿಂದ ನಮ್ಮ ಪ್ರಜಾಪ್ರಭುತ್ವ, ನಮ್ಮ ಅರ್ಥ ವ್ಯವಸ್ಥೆ, ಹಾಗೂ ಸಮಾಜಕ್ಕೆ ಭಾರಿ ಕೇಡು ಉಂಟಾಗಬಹುದು.
ಈ ಹಿನ್ನೆಲೆಯಲ್ಲಿ ನೋಡಿದರೆ, ಭಾರತ ಸರಕಾರ ಈಗ ಸರಿಯಾದ ಕ್ರಮವನ್ನೇ ಕೈಗೊಂಡಿದೆ. ಇಂಥ ವಿಚಿತ್ರ ಬಿಕ್ಕಟ್ಟನ್ನು ಎದುರಿಸಲು ಸೈನ್ಯವನ್ನು ಬಳಸುವ ಗೋಜಿಗೆ ಹೋಗದೆ, ತುಂಬ ಸಂಯಮದಿಂದ ರಾಜತಾಂತ್ರಿಕ ಕ್ರಮಗಳನ್ನು ಬಳಸುತ್ತಿದೆ.
ದಾಳಿ ನಡೆದ ವರ್ಷ ಡಿಸೆಂಬರ್ ನಲ್ಲಿ ಕೆಲವು ಸದಸ್ಯರು ಭಾರತ ಪಾಕಿಸ್ತಾನದ ಮೇಲೆ ಸೇನಾ ದಾಳಿ ನಡೆಸಬೇಕು ಎಂದು ಆಗ್ರಹ ಪಡಿಸಿದರು. ಆಗ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಅದನ್ನು ತಿರಸ್ಕರಿಸಿದರು. ಅವರು ಹೇಳಿದ ಮಾತು ಸರಕಾರದ ನೀತಿ ಯನ್ನು ಪುಷ್ಟೀಕರಿಸುತ್ತದೆ. ``ಅದು ಈ ಸಮಸ್ಯೆಗೆ ಪರಿಹಾರವೇ ಅಲ್ಲ. ಇದನ್ನು ನಾವೆಲ್ಲ ಯಾವುದೇ ಮುಚ್ಚುಮರೆ ಇಲ್ಲದೇ ಒಪ್ಪಿಕೊಳ್ಳಬೇಕು. ಇದನ್ನು ಸ್ಪಷ್ಟ ಪಡಿಸುತ್ತಿದ್ದೇನೆ.
ಯುದ್ಧವೇ ಪರಿಹಾರವೇ
ನಮ್ಮ ಹಾಗು ನಮ್ಮ ನೆರೆ ಹೊರೆಯವರ ನಡುವಿನ ಸಮಸ್ಯಗಳಿಗೆ ಯುದ್ಧವೊಂದೇ ಪರಿಹಾರ ಎಂದು ನಂಬುವ ಕೆಲ ಯುದ್ಧ ತಂತ್ರ ಪರಿಣಿತರು ಇದ್ದಾರೆ. ಇದೇ ತೀವೃಗಾಮಿ ಮನೋಭಾವ ಹೊಂದಿರುವ ಬಿಜೆಪಿ ನಾಯಕರೂ ಕೆಲವರು ಇದ್ದಾರೆ. ಇವರಲ್ಲಿ ರಾಜ್ಯಸಭಾ ಸದಸ್ಯ ಅರುಣ ಶೌರಿ ಪ್ರಮುಖರು. ಅವರ ಕಲ್ಪನೆಯ ಯುದ್ಧ ಎಂದರೆ ಏನು ಎನ್ನುವುದನ್ನು ನೋಡೋಣ.
ಶೌರಿ ಅವರು ಡೇಲಿ ಸ್ಟಾರ್ ವೆಬ್ ಸೈಟಿನಲ್ಲಿ ೨೦೦೯ ರಲ್ಲಿ ಬರೆದ ಲೇಖನ ವೊಂದರ ಪ್ರಕಾರ, ಭಾರತ ಪಾಕಿಸ್ತಾನದ ಮೇಲೆ ಎರಡು ರೀತಿಯಿಂದ ಯುದ್ಧ ಮಾಡಬೇಕು. ಒಂದು ನೇರವಾಗಿ ಅವರ ಸೈನ್ಯ ಶಿಬಿರಗಳು, ನೌಕಾ ನೆಲೆಗಳು, ಅವರ ಮಿಲಿಟರಿ ಗೆ ಸಂಬಂಧ ಪಟ್ಟ ಆಯಕಟ್ಟಿನ ಪ್ರದೇಶಗಳು.
ಇನ್ನೊಂದು, ಪಾಕಿಸ್ತಾನದ ಕೆಲವು ಸೂಕ್ಷ್ಮ ಪ್ರದೇಶಗಳಾದ ಬಲೋಚಿಸ್ತಾನ, ಗಿಲಗಿಟ್, ಬಾಲ್ತಿಸ್ತಾನ ಹಾಗೂ ಪಾಕ್ ಅಕ್ರಮಿತ ಕಾಶ್ಮೀರಗಳಲ್ಲಿ ಗಲಾಟೆ ಎಬ್ಬಿಸಬೇಕು. ಆ ದೇಶದಲ್ಲಿ ಆಂತರಿಕ ಸಮಸ್ಯೆ ಗಳನ್ನು ಹುಟ್ಟುಹಾಕಿ ಅವರಿಗೆ ಭಾರತದ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯ ಸಿಗದಂತೆ ಮಾಡಬೇಕು.
``ನಮ್ಮ ಪ್ರತೀಕಾರ ಶಕ್ತಿಯುತವಾಗಿರಬೇಕು. ಒಂದು ಕಣ್ಣಿಗೆ ಇನ್ನೊಂದು ಕಣ್ಣಲ್ಲ. ಒಂದು ಕಣ್ಣಿಗೆ ಎರಡೂ ಕಣ್ಣು ಕೀಳಬೇಕು. ಒಂದು ಹಲ್ಲಿಗೆ ಒಂದು ಹಲ್ಲಲ್ಲ. ಇಡೀ ದವಡೆಯನ್ನೇ ಉದುರಿಸಬೇಕು, ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ.
ಇದು ಹುಚ್ಚುತನ. ಭಾರತ ಪಾಕಿಸ್ತಾನದ ನಡುವೆ ಯಾವುದೇ ಸಂಘರ್ಷವಾಗಲೀ ಸ್ವಲ್ಪ ಮುಂದುವರೆದರೆ ಅದು ಅಣ್ವಸ್ತ್ರ ಯುದ್ಧ ವಾಗಿ ಪರಿವರ್ತಿತವಾಗಬಲ್ಲದು.
ಅಣ್ವಸ್ತ್ರಗಳ ಪರವಾಗಿ ಮಾತಾಡುವವರ ವಾದ ವೇನೆಂದರೆ, ಅಣ್ವಸ್ತ್ರ ಹೊಂದಿದ ದೇಶಗಳ ಜತೆ ಯುದ್ಧ ಮಾಡಲು ಇತರ ದೇಶಗಳು ಹಿಂಜರಿಯುತ್ತವೆ. ಹೀಗಾಗಿ ಅಣ್ವಸ್ತ್ರಗಳು ಯುದ್ಧದ ಸಂಭವ ಕಮ್ಮಿ ಮಾಡುತ್ತವೆ ಅಂತ.
ಆದರೆ ಈ ತರ್ಕಕ್ಕೆ ದಕ್ಷಿಣ ಏಷಿಯಾದಲ್ಲಿ ಮನ್ನಣೆ ಸಿಕ್ಕಿಲ್ಲ. ಭಾರತ-ಪಾಕಿಸ್ತಾನ ಎರಡೂ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿದ ದೇಶಗಳಾದರೂ, ಕಾರ್ಗಿಲ್ ಯುದ್ಧವನ್ನು ತಪ್ಪಿಸಲಾಗಿಲ್ಲ. ಇನ್ನು ೨೦೦೨ ರಲ್ಲಿ ಎರಡೂ ದೇಶದ ಸೈನಿಕರು ಮುಖಾಮುಖಿಯಾಗಿ ಇನ್ನೇನು ಯುದ್ಧ ಆಗಿಯೇ ಬಿಡುತ್ತದೆ ಎನ್ನುವ ಸ್ಥಿತಿ ಉಂಟಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂತಹ ಬಿಗುವಿನ ವಾತಾವರಣ ತಪ್ಪಿಸಲು ಸಹ ಅಣ್ವಸ್ತ್ರಗಳಿಂದ ಸಾಧ್ಯವಾಗಿಲ್ಲ. ಈಗಿನ ಯುದ್ಧಗಳಲ್ಲಿ ಅಣ್ವಸ್ತ್ರಗಳನ್ನು ಬಳಸಲಾದರೆ, ಅದರಲ್ಲಿ ಗೆದ್ದವರು, ಸೋತವರು ಅಂತ ಯಾರೂ ಇರೋದಿಲ್ಲ. ಲೆಕ್ಕಕ್ಕೆ ಸಿಗದಷ್ಟು ಜನ ಸಾಯುತ್ತಾರೆ ಅಷ್ಟೆ.
ಭಾರತ-ಪಾಕಿಸ್ತಾನದ ನಡುವೆ ಒಂದು ಯುದ್ಧ ನಡೆದು ಅದರಲ್ಲಿ ಅತಿ ಕಮ್ಮಿ ಅಣ್ವಸ್ತ್ರಗಳ ಬಳಕೆಯಾಯಿತು ಎಂದುಕೊಳ್ಳಿ. ಅದರಿಂದ ಸಹ ಹೇಳತೀರದ ಹಾನಿಯಾಗುವುದು. ಲಕ್ಷಾನುಗಟ್ಟಲೇ ಸಾವುಗಳಾಗುತ್ತವೆ. ಅದರಿಂದ ನಮ್ಮ ಎರಡೂ ದೇಶಗಳ ವಾತಾವರಣ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ಆಗುವ ನಷ್ಟ ಎಷ್ಟೆಂದರೆ ಅದರಿಂದ ಎರಡೂ ದೇಶಗಳೂ ದಶಕಗಳ ಮಟ್ಟಿಗೆ ಹಿಂದಕ್ಕೆ ಹೋಗಬೇಕಾಗುತ್ತದೆ.
ಹೀರೋಷಿಮಾ-ನಾಗಾಸಾಕಿ ನಗರಗಳ ಮೇಲೆ ಬಳಸಿದ ಗಾತ್ರದ ಒಂದು ಬಾಂಬ್ ಯಾವುದಾದರೂ ದೊಡ್ಡ ನಗರದ ಮೇಲೆ ಬಿದ್ದರೆ ೮-೨೦ ಲಕ್ಷ ಜನ ಸಾಯಬಹುದು. ಭಾರತ -ಪಾಕಿಸ್ತಾನ ಎರಡೂ ದೇಶಗಳ ಬಳಿಯಲ್ಲಿಯೂ ಇಂಥ ಅನೇಕ ಬಾಂಬುಗಳಿವೆ. ಅದಕ್ಕಿಂತ ಹೆಚ್ಚು ಶಕ್ತಿಶಾಲಿ ಬಾಂಬುಗಳೇ ಇವೆ. ಅದೇನೂ ಈಗ ರಹಸ್ಯವಾಗಿ ಉಳಿದಿಲ್ಲ.
ಭಾರತ -ಪಾಕ್ ಯುದ್ಧ ಆರಂಭವಾಗಿ ತಾನು ಸೋಲಬಹುದು ಅಂತ ಪಾಕಿಸ್ತಾನಕ್ಕೆ ಅನ್ನಿಸತೊಡಗಿದರೆ, ಅದು ಅಣ್ವಸ್ತ್ರಗಳನ್ನು ಬಳಸುವುದು ಖಚಿತ. ತನ್ನ ವಶದಲ್ಲಿದ್ದ ಪ್ರದೇಶಗಳನ್ನು ಭಾರತೀಯ ಸೇನೆ ಆಕ್ರಮಿಸಿಕೊಳ್ಳತೊಡಗಿದರೆ, ಅಥವಾ ಹೆಚ್ಚಿನ ಸಂಖ್ಯೆಯ ಸೈನಿಕರು ಸಾಯತೊಡಗಿದರೆ, ಅದಕ್ಕೆ ಈ ಭಾವನೆ ಬರಬಹುದು. ಅಂತಹ ಸಮಯದಲ್ಲಿ ಭಾರತ ಪ್ರತಿದಾಳಿ ಮಾಡುವುದು ಸಹಜ. ಇದರ ಪರಿಣಾಮ ಗಳು ಊಹೆಗೂ ನಿಲುಕದಷ್ಟು ಘೋರ. ಯಾವ ಕಡೆಯಿಂದ ಲೆಕ್ಕ ಹಾಕಿದರೂ ಈ ತರ್ಕ ಮೂಡುತ್ತಿದೆ. ಇದನ್ನು ಬಿಟ್ಟು ಹೊಸ ದಾರಿ ತೋರುತ್ತಿಲ್ಲ.
ಇನ್ನು ಇಂತಹದೊಂದು ಯುದ್ಧ ಮಾಡಿ ಲಕ್ಷಾನುಗಟ್ಟಲೇ ನಾಗರಿಕರ ಬಲಿ ಕೊಡಲು ಭಾರತದ ಪ್ರಧಾನಿ ಮನಮೋಹನ ಸಿಂಗ್ ಆಗಲೀ, ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಆಗಲೀ ಹಕ್ಕಿಲ್ಲ. ಐದು ವರ್ಷ ಆಳಲು ಅವರಿಗೆ ಜನ ನೀಡಿರುವ ಜನಾದೇಶ ದಲ್ಲಿ ಈ ಹಕ್ಕು ಸೇರಿಕೊಂಡಿಲ್ಲ. (ಸೌಥ್ ಏಷಿಯಾ ಟೈಮ್ಸ್, ೨೦೦೮)
ಅಣ್ವಸ್ತ್ರ ಯುದ್ಧ ತಪ್ಪಲ್ಲ, ಅದು ಇಂದಿನ ಅಗತ್ಯ ಎಂದು ಒಪ್ಪುವವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದಿನ ಮುಖ್ಯಸ್ಥರಾದ ಕೆ ಎಸ್ ಸುದರ್ಶನ್ ರಂತಹ ಉಗ್ರ ಕೋಮುವಾದಿ ಧೋರಣೆ ಹೊಂದಿರುವ ನಾಯಕರು. ಅವರು ವಿಶ್ವ ಪ್ರಳಯವಾದರೆ ಆಗಲಿ, ನಮ್ಮ ಕೈ ಮೇಲಾಗಲಿ ಎಂದು ನಂಬಿದವರು.
ಇತ್ತೀಚಿನ ಸಂದರ್ಶನ ವೊಂದರಲ್ಲಿ ಅವರು ಹೀಗೆ ಹೇಳಿದ್ದಾರೆ: ``ಈ ಭೂಮಿಯ ಮೇಲೆ ಅಸುರೀ ಶಕ್ತಿಗಳ ದಬ್ಬಾಳಿಕೆ ಹೆಚ್ಚಾದಂತೆಲ್ಲಾ ಯುದ್ಧ ಅನಿವಾರ್ಯವಾಗುತ್ತದೆ. ಅದು ಅಲ್ಲಿಗೇ ನಿಲ್ಲುವುದಿಲ್ಲ ಅಂತ ನನಗೆ ಗೊತ್ತು. ಆ ಮಹಾಯುದ್ಧ ದಲ್ಲಿ ಅಣ್ವಸ್ತ್ರ ಬಳಕೆ ಯಾಗಿ ಅನೇಕ ಜನ ನಾಶ ಹೊಂದುತ್ತಾರೆ. ಹಾಗಾದರೂ ಪರವಾಗಿಲ್ಲ, ಆ ಅಸುರೀ ಶಕ್ತಿಗಳನ್ನು ನಾಶ ಪಡಿಸಲೇಬೇಕು. ಆದರೆ ಅದರ ನಂತರ ಹೊಸ ಜಗತ್ತೊಂದು ಹುಟ್ಟಲಿದೆ. ಅದರಲ್ಲಿ ಭಯೋತ್ಪಾದನೆ ಯಾಗಲೀ, ಇತರ ಕೇಡುಗಳಾಗಲಿ, ಇರಲಾರವು. ಇದರ ಬಗ್ಗೆ ನನಗೆ ಅತೀವ ವಿಶ್ವಾಸವಿದೆ.
ನೀವು ಉಗ್ರಗಾಮಿಗಳನ್ನು ಮಟ್ಟ ಹಾಕದಿದ್ದರೆ ನಿಮ್ಮೊಂದಿಗೆ ಯುದ್ಧ ಮಾಡುತ್ತೇವೆ ಎಂದು ಭಾರತ ಪಾಕಿಸ್ತಾನಕ್ಕೆ ಧಮಕಿ ಹಾಕಿದರೆ ಆ ದೇಶದಲ್ಲಿನ ಸರಕಾರ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಯನ್ನು ಚುರುಕುಗೊಳಿಸುವುದಿಲ್ಲ. ಹಾಗೆಂತ ನಿರೀಕ್ಷಿಸುವುದು ಅಸಂಬದ್ಧ ಹಾಗೂ ಅಪಾಯಕಾರಿ. ನಿಜ ಹೇಳಬೇಕೆಂದರೆ ಹಾಗೇನಾದರೂ ಆದಲ್ಲಿ ಪಾಕಿಸ್ತಾನ ಇನ್ನೂ ಬೇಜವಾಬ್ದಾರಿಯಿಂದ ವರ್ತಿಸಬಹುದು. ಅಷ್ಟೇ ಅಲ್ಲ, ಯುದ್ಧ ಆಗೇ ಬಿಡಲಿ ಎಂದು ಸಹ ಪ್ರಯತ್ನಿಸಬಹುದು.
ಪಾಕಿಸ್ತಾನ ಅಮೇರಿಕೆ ಸರಕಾರದಿಂದ ಅಪಾರ ನೆರವು ಪಡೆದಿದೆ. ಅದರಿಂದ ಅದು ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಿದೆ. ಇದು ಅಲ್ಲಿನ ಮಿಲಿಟರಿ ನಾಯಕರಲ್ಲಿ ನಾವು ಮಹಾ ಶಕ್ತಿವಂತರು ಎಂಬ ಭ್ರಮೆ ಉಂಟು ಮಾಡಿದೆ. ಈ ಶಕ್ತಿಯಿಂದ ನಾವು ಭಾರತದೊಂದಿಗೆ ಅನೇಕ ವರ್ಷಗಳಗಟ್ಟಲೇ ಯುದ್ಧ ಮಾಡುತ್ತಲೇ ಇರಬಹುದು ಎಂದು ಅವರು ತಮ್ಮನ್ನು ತಾವು ನಂಬಿಸಿಕೊಂಡಿರಲೂಬಹುದು.
ಪಾಕಿಸ್ತಾನದಲ್ಲಿ ರುವ ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ಮಾತ್ರ ದಾಳಿ ನಡೆಸಿ ಅವರನ್ನು ನಾಶ ಮಾಡಬಹುದು, ಇತರ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಬೇಕಿಲ್ಲ, ಎಂಬ ಕೆಲವು ತಂತ್ರಗಾರಿಕೆ ನಿಪುಣರ ವಿಚಾರ ಕೂಡ ಮೂರ್ಖತನದ್ದೇ.
ಮೊದಲನೇಯದಾಗಿ ಪಾಕಿಸ್ತಾನದಲ್ಲಿರುವ ತರಬೇತಿ ಶಿಬಿರಗಳು ಯಾವುದೇ ಕಟ್ಟಡಗಳಲ್ಲಿಲ್ಲ. ತಾತ್ಕಾಲಿಕ ಟೆಂಟ್ ಗಳಲ್ಲಿವೆ. ಒಂದು ಕಡೆ ನಾಶಮಾಡಿದರೆ ಇನ್ನೊಂದು ಕಡೆ ಆರಂಭವಾಗುತ್ತವೆ. ಅದರಿಂದ ಅವುಗಳನ್ನು ನಡೆಸುವವರಿಗೆ ಅಷ್ಟೇನೂ ನಷ್ಟವಾಗುವುದಿಲ್ಲ. ಅಲ್ಲದೇ ಇಂಥ ಕೆಲಸ ಗಳು ರಹಸ್ಯವಾಗಿ ನಡೆಯುವುದಿಲ್ಲ. ಇಂತಹ ಸಣ್ಣ ದಾಳಿಗಳಿಗೂ ಕೂಡ ಅಲ್ಲಿನ ಸರಕಾರ ತೀವ್ರವಾಗಿ ಪ್ರತಿಕ್ರಯಿಸುತ್ತದೆ. ಅದನ್ನು ನಿಲ್ಲಿಸುವುದು, ಅಥವಾ ನಿಯಂತ್ರಿಸುವುದು ಸಾಧ್ಯವಾಗದ ಮಾತು.
ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವುದುಕ್ಕೂ, ಅಮೇರಿಕೆ ಸದ್ದಾಂ ಹುಸೇನರ ಇರಾಕಿನ ಮೇಲೆ ದಾಳಿ ಮಾಡುವುದಕ್ಕೂ ವ್ಯತ್ಯಾಸವಿದೆ. ಅಲ್ಲಿ ಅಮೇರಿಕೆ ಸೈನ್ಯ ಎಲ್ಲಾ ಮಿಲಿಟರಿ sಸಂಪರ್ಕ ವ್ಯವಸ್ಥೆಯನ್ನು ಹಾಳು ಮಾಡಿತು. ಒಂದು ಕಡೆ ನಡೆದ ದಾಳಿಯ ಬಗ್ಗೆ ಇನ್ನೊಂದು ಕಡೆ ಸುದ್ದಿ ಹರಡುವುದು, ಅಲ್ಲಿಂದ ಪ್ರತಿಕ್ರಿಯೆ ಬರುವುದು ಅಲ್ಲಿ ಸಾಧ್ಯವಿರಲಿಲ್ಲ.
ಇನ್ನು ಐಎಸ್ ಐ ಭಾರತದ ಕೆಲವು ಕಡೆಗಳಲ್ಲಿ ನಡೆಸುವಂತೆ ರಹಸ್ಯದಾಳಿ ಗಳನ್ನು, ಅಥವಾ ಗುಪ್ತ ಕಾರ್ಯಾಚರಣೆಗಳನ್ನು ನಾವು ನಡೆಸಬೇಕೆನ್ನಿ. ಅದಕ್ಕೆ ನಾವು ನಮ್ಮದೇ ಆದ ಐಎಸ್ ಐ ಎಂಬ ರಾಕ್ಷಸನನ್ನು ತಯಾರು ಮಾಡಬೇಕಾಗುತ್ತದೆ. ಹಾಗೆ ಆಗೇ ಹೋಯಿತು ಎಂದರೆ ಸಹ ಅದು ಅಪಾಯದಿಂದ ಹೊರತಲ್ಲ. ಇದರಿಂದ ಸಹ ನಾವು ಯುದ್ಧದ ಭಯದಿಂದ ಹೊರಬಂದಂತಾಗುವುದಿಲ್ಲ.
ಆದರೆ ಇವೆಲ್ಲಕ್ಕೂ ಪರ್ಯಾಯಗಳಿವೆ. ಭಾರತ ಸರಕಾರ ತನ್ನ ಮಟ್ಟಿಗೆ ತಾನು ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರುತ್ತಿರಬೇಕು. ಅಲ್ಲದೇ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಪ್ರಮುಖ ದೇಶಗಳೂ ಸಹ ಪಾಕಿಸ್ತಾನಕ್ಕೆ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಸೂಚಿಸುವಂತಹ ಸ್ಥಿತಿ ನಿರ್ಮಾಣ ಮಾಡಬೇಕು. ಪ್ರಧಾನಿ ಸಿಂಗ್ ಅವರು ದೇಶದ ಆಂತರಿಕ ಸುರಕ್ಷೆ ವ್ಯವಸ್ಥೆಯಲ್ಲಿ ಸಹ ತೀವ್ರ ತರವಾದ ಬದಲಾವಣೆ ಗಳನ್ನು ತರುವುದಾಗಿ ಆಶ್ವಾಸನೆ ನೀಡಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ನಡೆಸಿದ ರಾಜತಾಂತ್ರಿಕ ಪ್ರಯತ್ನಗಳು ಫಲ ನೀಡಿವೆ. ಜಮಾತ್ ಉದ್ದುವಾ ಸಂಘಟನೆ ಮೇಲೆ ನಿರ್ಬಂಧ ಹೇರಲಾಗಿದೆ.
ಆದರೆ ಇದು ಸಾಲದು. ಭಾರತ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆ ಕ್ರಮ ಕೈಗೊಳ್ಳುವಂತೆ ಮಾಡಬೇಕು. ವಿಶ್ವ ಸಂಸ್ಥೆ ಗೊತ್ತುವಳಿ ೧೩೭೩ ರ ಪ್ರಕಾರ ಯಾವ ದೇಶ ಭಯೋತ್ಪಾದಕರನ್ನು ಬೆಂಬಲಿಸುವ, ಅವರಿಗೆ ಆಶ್ರಯ ಕೊಡುವ, ಆರ್ಥಿಕ ಬೆಂಬಲ ನೀಡುವ ರೀತಿಯಲ್ಲಿ ನಡೆದುಕೊಳ್ಳುತ್ತದೋ ಅಥವಾ ಅಂಥ ವ್ಯಕ್ತಿಗಳನ್ನು ನಿಗ್ರಹಿಸುವ ಕರ್ತವ್ಯದಿಂದ ತಪ್ಪಿಸಿಕೊಳ್ಳುತ್ತದೋ ಆ ದೇಶವನ್ನು ನಿರ್ಬಂಧಿಸಬಹುದು.
ಇನ್ನು ಭಾರತ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮುಖಾಮುಖಿ ಎದುರಿಸಬೇಕು. ಮುಂಬೈ ದಾಳಿಯಲ್ಲಿ ಎಲ್ ಇ ಟಿ ಕೈವಾಡವನ್ನು ತಿಳಿಸುವ ಸಾಕ್ಷಿಗಳನ್ನು, ವಿವರ ಮಾಹಿತಿಯನ್ನು ಪಾಕಿಸ್ತಾನ ಸರಕಾರದೊಂದಿಗೆ ಹಂಚಿಕೊಂಡು, ಅವನ್ನು ಅವರ ಮುಂದೆ ಇರಿಸಬೇಕು. ಅಲ್ಲದೇ ಭಾರತ ಪಾಕಿಸ್ತಾನದ ಅಂತರಿಕ ವಿಷಯಗಳಲ್ಲಿ ಕೈ ಹಾಕುತ್ತಿಲ್ಲ ಎಂದು ಸ್ಪಷ್ಟ ಪಡಿಸಬೇಕು. ಬಲೋಚಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಭಾರತ ರಹಸ್ಯ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಪ್ರಮಾಣ ಪಡಿಸಬೇಕು.
ನಮ್ಮ ಆಂತರಿಕ ಭದ್ರತೆ ವ್ಯವಸ್ಥೆಯನ್ನು ಸರಿ ಪಡಿಸುವ ಉತ್ಸಾಹದಲ್ಲಿ ಕೇಂದ್ರ ಸರಕಾರ ದುಡುಕಬಾರದು. ಈ ವಿಷಯದಲ್ಲಿ ನಮ್ಮ ನಾಯಕರು ಸುಪ್ರೀಂ ಕೋಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರ ಸಲಹೆ ಅನುಸರಿಸುವುದು ಒಳ್ಳೆಯದು. ಸರಕಾರ ನಾಗರಿಕರ ಮೇಲೆ ಹದ್ದಿನ ಕಣ್ಣಿಡುವುದು, ಭಯೋತ್ಪಾದನೆ ಆರೋಪಿಗಳ ನ್ನು ವಿಚಾರಣೆಗೆ ಗುರಿಪಡಿಸದೇ ಅನಿರ್ದಿಷ್ಟ ಕಾಲದ ವರೆಗೆ ಜೈಲಿನಲ್ಲಿಡುವುದು, ಇಂಥ ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸುವಾಗ ಕ್ರೂರ ಎನ್ನಿಸುವಂತಹ ವಿಧಾನ ಗಳನ್ನು ಬಳಸುವುದು ಇವನ್ನೆಲ್ಲ ಮಾಡಕೂಡದು. ಪ್ರತಿಯೊಬ್ಬನಿಗೆ ಸಂವಿಧಾನದಿಂದ ದೊರಕಿದ ಹಕ್ಕುಗಳು ದೊರಕುವಂತೆ ಮಾಡಬೇಕು. ಆಂತರಿಕ ಭದ್ರತೆ ಬಲಪಡಿಸುವ ಕೆಲಸ ಸಹ ಕಾನೂನು ಚೌಕಟ್ಟಿನಲ್ಲಿಯೇ ನಡೆಯಬೇಕು.
ವಿಷಾದದ ಸಂಗತಿ ಏನೆಂದರೆ, ಇಂತಹ ಸಲಹೆಗಳು ಸರಕಾರಕ್ಕೆ ಹಿಡಿಸಿದಂತೆ ಕಾಣುತ್ತಿಲ್ಲ. ಸರಕಾರ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ.
ಕುಖ್ಯಾತ ಪೋಟಾ (ಭಯೋತ್ಪಾದನೆ ತಡೆ ಕಾಯಿದೆ) ಯಲ್ಲಿನ ಅನೇಕ ಅಮಾನವೀಯ ನಿಬಂಧನೆಗಳನ್ನು ಒಳಗೊಂಡ ಕಾಯಿದೆಯೊಂದನ್ನು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಿ, ಅದು ಅಂಗೀಕಾರವಾಗುವಂತೆ ನೋಡಿಕೊಂಡಿದೆ. ಇದು ಆರೋಪಿಗಳನ್ನು ವಿಚಾರಣೆ ಇಲ್ಲದೇ ೧೮೦ ದಿನ ಗವರೆಗೆ ಬಂದಿಯಾಗಿರಿಸಬಲ್ಲ ಅಧಿಕಾರವನ್ನು ತನಿಖಾಧಿಕಾರಿಗಳಿಗೆ ನೀಡುತ್ತದೆ. ಹಳೆಯ ಕಾಯಿದೆಯಲ್ಲಿದ್ದ- ಪೋಲಿಸರೆದುರು ನೀಡಿದ ಹೇಳಿಕೆಗಳನ್ನು ಸಾಕ್ಷಿ ಎಂದು ಪರಿಗಣಿಸಬಹುದಾದ ಭಾಗವೊಂದಿಲ್ಲ ಅಷ್ಟೇ.
ರಾಷ್ಟ್ರೀಯ ತನಿಖಾ ಮಂಡಳಿ ಕಾಯಿದೆ ಸಹ ತಪ್ಪುಗಳಿಂದ ಕೂಡಿದೆ. ಇದರಲ್ಲಿನ ಮುಖ್ಯ ದೋಷ ಏನೆಂದರೆ ಈ ಮಂಡಳಿಯಲ್ಲಿ ವಿಪರೀತ ಅಧಿಕಾರವನ್ನು ಕೇಂದ್ರೀಕರಿಸುವುದು. ಮಂಡಳಿಯ ಅಧಿಕಾರವನ್ನು ಗಲಭೆ ಪೀಡಿತ ಪ್ರದೇಶಗಳಿಗೆ ಹಾಗೂ ಎಡ ಪಂಥೀಯ ಉಗ್ರವಾದ ದಿಂದ ನರಳುತ್ತಿರುವ ಪ್ರದೇಶಗಳಿಗೂ ಕೂಡ ವಿಸ್ತರಿಸಲಾಗಿದೆ. ಇವನ್ನು ಹಿಂದಕ್ಕೆ ಪಡೆಯಬೇಕು.

ಕಡಲ ವಿಸ್ತಾರದ ಒಡಲು ವಿಭಾ


ವಿಭಾ ನನಗಿಂತ ವಯದಲ್ಲಿ ಹತ್ತು ವರ್ಷ ಚಿಕ್ಕವಳಾದರೂ ಕಾವ್ಯಗುಣಗಳನ್ನು ಅಪರೂಪವೆಂಬಂತೆ ಮೈಗೂಡಿಸಿಕೊಂಡವಳಾಗಿ ನನಗಿಂತ ಹಿರಿಯಳು. ಬೌಗೋಲಿಕವಾಗಿ ಇಷ್ಟು ಸನಿಹದಲ್ಲಿದ್ದೂ ಮುಖತಃ ಅವಳನ್ನು ನೋಡಲಾಗದಿದ್ದರೂ ದೂರವಾಣಿಯಲ್ಲಿ ಕೆಲವು ಸಲ ಮಾತನಾಡುವ ಮೂಲಕವೇ ವಿಭಾ ಮನಸ್ಸಿಗೆ ಹತ್ತಿರವಿದ್ದವಳು. ಅವಳ ಕೊರಳ ಇನಿದನಿಯಿಂದಲೇ ಕರುಳಿನ ಮಿಡಿತ ಆಲಿಸಿದ್ದೆ. ಅವಳಿಂದ ಬರೆಸಿಕೊಳ್ಳಬೇಕಾಗಿದ್ದ ಕವಿತೆಗಳೀಗ ಚಡಪಡಿಸುತ್ತಿರುವಂತಿವೆ. ನಿತ್ಯ ಸೂರ್ಯನ ಪ್ರಭೆಯಂತೆ ಈಗ ವಿಭಾ ನೆನಪು ಮತ್ತು ಎಚ್ಚರ. ಅವಳ ಪ್ರತಿ ಸಾಲಿನಲ್ಲೂ ಪ್ರೀತಿಯ ಅನೇಕ ಬಣ್ಣಗಳಿವೆ, ಅಲ್ಲಲ್ಲಿ ಹಸಿರಿನಂಗಣ ಕೈಚಾಚಿದೆ ಮತ್ತು ತೀಕ್ಷ್ಣ ಬೆಳಕು ಎಲ್ಲೆಲ್ಲಿಂದಲೋ ತೂರಿಕೊಂಡು ಒಳಬಂದು ಸಹೃದಯರ ಮನಸಿನ ಹಲವಾರು ಬಣ್ಣಗಳನ್ನು ತೆರೆದು ತೋರುತ್ತವೆ.
ಸಮುದ್ರದಲ್ಲಿ ತೆರೆಗಳಿರುವಂತೆ ವಿಭಾನ ಒಳಗೂ ಅನೇಕ ತೆರೆಗಳಿದ್ದವು. ಅವು ವಿಸ್ತಾರಕ್ಕೆ ಹರಡಿದ ತನ್ನದೇ ತೀರವನ್ನು ತಲುಪಲು ಬಂದಂತೆ ಒಮ್ಮೆಲೇ ಧಾವಿಸಿದ್ದವು. ತೀರದ ಮರಳಿನ ಕಣಗಳಲ್ಲಿ ಅಲೆಗಳು ತನ್ನ ನೊರೆಯ ಆಹ್ಲಾದವನ್ನು ಉಣ್ಣಿಸಿದವು. ವಿಭಾ ಕಾವ್ಯ ಅವಳ ಮಾನಸದ ಬಿಂಬದಿಂದಲೂ ಅದರ ಪ್ರತಿಬಿಂಬದ ಸತ್ವದಿಂದಲೂ ಹುಟ್ಟಿಬಂದಿದೆ. ಅವಳ ಹೃದಯದೊಳಗಿದ್ದ ಅಪಾರ ಬಯಲು, ಭಾವನೆ ಚಿಂತನೆ ಗಳಿಂದ ಪ್ರಕ್ಷುಬ್ಧವಾಗಿತ್ತು. ವಿಭಾ ಕಾವ್ಯದ ಪ್ರತಿಯೊಂದು ಪದವೂ ಅಷ್ಟು ಶಕ್ತಿಯುತವಾಗಿ ಅರಳಿ ನಿಂತಿರುವುದಕ್ಕೆ ಅವಳೊಳಗಿರುವ ಸುವರ್ಣದ ಮಾನಸ ಕಡಲೇ ಕಾರಣ. ಆ ಕಡಲಿನಿಂದ ಎದ್ದ ಹೊಳೆವ ತೆರೆಗಳು ಕನ್ನಡ ಓದುಗರ ಮನಸ್ಸನ್ನು ತೊಳೆಯುತ್ತಿದೆ. ಅವರ ಮೆಚ್ಚಿಗೆಯ ತೀರಗಳ ತಲುಪಿವೆ.
ವಿಭಾ 'ಜೀವ ಮಿಡಿತದ ಸದ್ದು' ಅವಳ ಪ್ರತಿರೂಪದಂತೆ ಶಾಂತ ಸ್ನಿಗ್ಧ. ಪಾರಿವಾಳಗಳ ಹಾಗೆ ಅವು ಅಪಾರಕ್ಕೆ ನೆಗೆಯುತ್ತವೆ. ಅವಳ ಕಾವ್ಯ ಸರೋವರದ ದಂಡೆಯಲ್ಲಿ ಶುಭ್ರ ಸುಂದರ ಬೆಳ್ಳಗೆ ಹಾಗೂ ಭಾವಪೂರ್ಣತೆಯಿಂದ ಕೂಡಿದ ಒಂದು ಕಥನವಿದೆ. ಅದಕ್ಕೆ ಕೊನೆಯಿಲ್ಲದ ಅಪಾರದ ದಾಹವೇ ನಮ್ಮನ್ನು ಈ ಕಾವ್ಯದ ಮಾಯಾಲೋಕಕ್ಕೂ ಕರೆದೊಯ್ಯುತ್ತದೆ. ಅವಳ ಭಾವದ ಕೊಂಡಿ ಪುನಃ ಪುನಃ ಚೌಕ ಕಿಟಕಿಯಿಂದಾಚೆ ನೋಡುತ್ತ ಅಲ್ಲಿಯ ವಿಶಾಲ ವಿಶ್ವಕ್ಕೆ ಕೈನೀಡುತ್ತವೆ, ಪರಿಣಾಮವೆಂಬಂತೆ ಇಂತೆಲ್ಲ ಹಾಡು ಮೂಡಿಸುವ ಸಹಜ ಕ್ರಿಯೆಗೆ ಶರಣಾಗುತ್ತದೆ. ಕರಗುವ ಕೊರಗುವ ಕನವರಿಸುವ ಹಲವಾರು ಜೀವದ ಆಶಾಭಾವವಾಗಿ ಇಲ್ಲಿಯ ಅಮೂರ್ತಭಾವ ಕೆಲಸ ಮಾಡುತ್ತದೆ.
/ಎಷ್ಟಾದರೂ ಕವಿತೆಯಲ್ಲವೇ ಅವಳು?/ ಮಾಗದ ಹುಡುಗನ ಗೆಳತಿ/ ಸ್ವತಃ ವಿಭಾನೇ ಇಲ್ಲಿ ಒಂದು ಒಳ್ಳೆಯ ಕವಿತೆ. ತನ್ನೊಡಲಲ್ಲಿ ಏನೇನನ್ನೋ ಬಚ್ಚಿಟ್ಟುಕೊಳ್ಳಲು ಹೋಗಿ ವಿಭಾ ಕವಿತೆಗಳು ಸಹೃದಯಿಯ ಮನಸ್ಸನ್ನು ಬೆತ್ತಲೆಗೊಳಿಸಿ ಒಳಗನ್ನು ಕಾಣಿಸ ತೊಡಗುತ್ತವೆ. ಈ ಅಪ್ಪಟ ಕವಿಯ ಕನಸು ಮತ್ತು ಕನವರಿಕೆಗಳಲ್ಲಿ ಕವಿತೆಯ ಬೀಜಗಳಿದ್ದವು. ಅದನ್ನು ನಮಗೆಲ್ಲ ವರ್ಗಾಯಿಸುವ ಅವಳ ಅಕ್ಷರಗಳು ಅಂತರಗಂಗೆ ದಾಟಿಸುವ ಸೇತುವೆಯಂತೆ ಸುಭದ್ರವೂ ಸುಲಲಿತವೂ ಆಗಿವೆ. ಒದ್ದೆಗಣ್ಣಿನಲ್ಲಿ ಬಿಂಬವಾಗುವ ಇಲ್ಲಿಯ ಭಾವೋತ್ಕರ್ಷ ಉತ್ಕಟವಾದದ್ದು. ವಿಭಾ ಕವಿತೆಗಳು ಇಡೀ ಜಗತ್ತಿನ ಕಣ್ಣೀರಿಗೆ ಬೊಗಸೆಯಾಗಹೊರಟಿತ್ತು. ಅವಳ ಕವಿತೆಗಳು ಅವಳದೇ ಕವಿತೆಯ ಸಾಲಲ್ಲಿ ಕಾಣುವಂತೆ, ಎಲ್ಲ ಕಲ್ಮಶವನ್ನೂ ತಳ್ಳಿ ಅಬ್ಬರವಿಲ್ಲದೇ ಹರಿದು ಹೋಗುವ ಶಾಂತ ನದಿ.
ನಮ್ಮ ನಮ್ಮ ದೌರ್ಬಲ್ಯಗಳನ್ನು ಪಟ್ಟಿ ಮಾಡಿಸುವ ಇಲ್ಲಿಯ ಮೌನಗಳು ಶಬ್ದಗಳ ಹಂಗಿಗೆ ಒಳಪಡುವಂಥದ್ದಲ್ಲ. ಹೆಣ್ಣಿನ ಅಂತಃಕರಣದ ಬೊಗಸೆಯಲ್ಲಿ ಇಡೀ ಬೃಹ್ಮಾಂಡವಿದೆ ಎಂಬುದನ್ನು ವಿಭಾ ಹೇಳಿದ ಬಗೆ ಹೀಗಿದೆ. /ನಾವು/ ಎದೆಯೊಳಗೆ ಬಯಲು/ ತುಂಬಿಕೊಂಡು / ಅನಂತ ಅವಕಾಶಕ್ಕೆ/ ಸವಾಲೊಡ್ಡಿದವರು/ ನಮ್ಮ ಬೊಗಸೆಯಲ್ಲಿದೆ ಭೂಮಿ/ ಹೀಗೆ ಈ ಕವಿತೆಗಳ ಸನಿಹವಿಲ್ಲದೇ ಅವಳಿಗೆ ಬದುಕಲು ಗೊತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ವಿಭಾಳ ಕಾವ್ಯದಲ್ಲಿ ಅವಳದೇ ಆದ ವಿಶಿಷ್ಟ ಉಸಿರನ್ನು ನಾವು ಕಾಣುತ್ತೇವೆ.
ಸಂಯಮದ ನೆಲೆಯಲ್ಲಿ ಹುಡುಕುವ ಸತ್ಯದ ಹುಡುಕಾಟದಂತಿದೆ ವಿಭಾ ಪದ್ಯಗಳು. ಕವಿತೆ ತೀಡುವಾಗ ಅವಳ ಮನಸ್ಸು, ಬಣ್ಣದ ಚಿಟ್ಟೆಯಂತೆ ಸಂಭ್ರಮಿಸುವುದು ನಮ್ಮ ನೋಟಕ್ಕೆ ದಕ್ಕುತ್ತದೆ. ಆ ಚಿಟ್ಟೆಯ ಬಣ್ಣಗಳನ್ನೆಲ್ಲ ತನ್ನ ನಾಜೂಕಿನ ಕಣ್ಣುಗಳಿಂದ ಕವಿತೆಗೆ ಭಟ್ಟಿ ಇಳಿಸಿ, ಅವನ್ನು ನಮ್ಮಗಳ ಎದೆಗೆ ದಾಟಿಸುವ ವಿನೀತ ಕಲಾತ್ಮಕತೆಯೊಂದು ಅವಳ ಸೊತ್ತೇ ಆಗಿತ್ತು. ಹೀಗೆ ವಿಭಾ ಮತ್ತು ಅವಳ ಕಾವ್ಯ ಎರಡೂ ಕಾವ್ಯಪ್ರಿಯರ ಹೃದಯಗಳ ಗೆದ್ದುಕೊಂಡಿವೆ.
ಅಂಗೈಲಿ ಹೃದಯ ಹಿಡಿದು/ ಕಣ್ಣಗಲಿಸಿ ನೋಡುತ್ತೇನೆ/ ತಣ್ಣಗೆ ಮಲಗಿದ ಕೆಂಪು/ ದೇಹದ ಪುಟ್ಟ ಜೀವವನ್ನು/ ಇದೋ ನಿರಾಳ ನಿಟ್ಟುಸಿರು/ ಸದ್ಯ ಇದು ನನಂದುಕೊಂಡ ಮಗುವಲ್ಲ/ ಯಾರದೋ ಜೀವವಾಗಿದ್ದದ್ದು ಎಲ್ಲರ ಒಳ ಮಿಡಿತಗಳಾಗಿ ತಲ್ಲಣಿಸುವಾಗ, ಇಡೀ ಜಗವೇ ತಂತಮ್ಮ ನಿರಾಳತೆ ಹುಡುಕುತ್ತ ದೂರ ಉಳಿದ ಮಾನವೀಯ ದುರಂತವನ್ನು ವಿಭಾ ಹೃದಯಂಗಮವಾಗಿ ಹಿಡಿಯುವ ಛಾತಿ ತೋರಿದವಳು. ಆ ಮೂಲಕ ಬದುಕು ಮತ್ತು ಬರಹದ ನಡುವಿನ ಲಕ್ಷ್ಮಣ ರೇಖೆಯನ್ನು ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವತ್ತ ನಡೆಯುತ್ತಿದ್ದವಳು. ವಿಭಾ ತೆರೆದಿಟ್ಟ ಕಕ್ಕುಲಾತಿಯ ಕವಿತೆಗಳ ಲೋಕ ಕನ್ನಡ ಜನ ಮಾನಸದಲ್ಲಿ ಈಗಾಗಲೇ ನೆಲೆ ನಿಂತಿದೆ.
ವಿಭಾ, ನಿನ್ನ ಕವಿತೆಗಳ ಭಾವ ಸ್ಪುರಣ, ಸದಾ ಸುರಿವ ಮೋಡಗಳ ಹಾಗೆ. ಇದು ಕಡಲ ವಿಸ್ತಾರದ ಒಡಲೇ ಸರಿ. ಲ್ಯಾವಿಗಂಟಿನಲ್ಲಿರುವ ನಿನ್ನ ಪಾಲಿನ ಅಕ್ಷರಗಳನ್ನು ನಾವೆಲ್ಲ ಅಕ್ಕರೆಯಿಂದ ಹಂಚಿಕೊಳ್ಳುತ್ತಿದ್ದೇವೆ. ನೀನು ನಕ್ಷತ್ರವಾಗಿ ಜೊತೆಗಿದ್ದೀ. ಆ ವಿಧಿ ನಿಯಮದ ಏದುರು ನಾವುಗಳೂ ನಿನ್ನಷ್ಟೇ ನಿರುಪಾಯರು. ಜಗತ್ತಿನ ಯಾವ ಮನಸುಗಳೂ ಅನಾಥವಾಗದಂತೆ ನಿನ್ನ ಕನಸುಗಳ ಮೇಲೆ ಗಿಡ ನೆಡಲು ಯತ್ನಿಸುತ್ತೇವೆ.
-ಸುನಂದಾ ಪ್ರಕಾಶ ಕಡಮೆ

ಹುಟ್ಟಿದ ದಿನ


ಇಂದು ನಾನು ಹುಟ್ಟಿದ ದಿನ, ಬದುಕಿದ್ದೇನೆಂದು
ರುಜುವಾತುಪಡಿಸಲು ನನ್ನ ಬಳಿ ಯಾವ ಪುರಾವೆಗಳೂ ಇಲ್ಲ
ಇದ್ದ ಸಾಕ್ಷಿಗಳನೆಲ್ಲ ಯಾರೊ ಕದ್ದು ಬಿಟ್ಟರು,ಇಲ್ಲ ಕಳೆದುಕೊಂಡದ್ದು ನನ್ನ ತಪ್ಪು
ಯಾರ ಬದುಕಿನಲ್ಲಿಯೂ ತಮಗೆ ತಾವು ಮಾತ್ರ
ಹೇಳಿಕೊಳ್ಳಬಹುದಾದ ಸತ್ಯ ಹುಟ್ಟಬಾರದು, ನನ್ನ ಬದುಕಿನಲ್ಲಿ
ನನಗೆ ನಾನು ಕೂಡ ಹೇಳಿಕೊಳ್ಳಲಾಗದ ನಿಜ ಉದ್ಭವಿಸಿದ್ದಕ್ಕೆ
ಉಸಿರು ನಿಲ್ಲುವವರೆಗಿನ ಪರದಾಟ ತಪ್ಪಿದ್ದಲ್ಲ
ಬಟ್ಟೆ ತೊಟ್ಟೂ ಎಲ್ಲ ಕಾಣಿಸುತ್ತಿರುವ ಪರಪಂಚದ ಬಟಾಬಯಲಿನಲಿ
ಎಲ್ಲ ದಸ್ತಾವೇಜುಗಳ ಹಂಗು ಹರಿದು ನಿಲ್ಲಬೇಕೆನುತಿದೆ ಜೀವ

ಕತ್ತಲಲ್ಲಿ ಕಪ್ಪು ಬೆಕ್ಕಿನ ಹೊಂಚು, ಬಿಲದಲಿ ಸತ್ತಂತೆ ಬಿದ್ದಿರುವ
ಪಾಪಿ ಇಲಿಗೆ ಹೇಗೆ ತಾನೆ ತಿಳಿದೀತು?
ಲೋಕದ ಆದಿಯಿಂದಲೂ ಹೀಗೆಯೇ.......ಎನ್ನುತ್ತದೆ ಇತಿಹಾಸ
ನನ್ನ ಪ್ರಶ್ನೆ ಒಂದಿದೆ ಜಗಕಂಟಕ ತೀರ್ಪುಗಾರರಿಗೆ
ಕಾಣುತ್ತಿರುವ ಬಿದ್ದ ಹೆಣದ ಮುಂದೆ ಕುಳಿತು ಸಿಹಿತಿನ್ನುವ ಕಾಲವಿತ್ತೆ ?
ಮನೆಯ ಮುಂದಿನ ತಿರುಬೋಕಿ ಹಂದಿ ಓಡಿಸುವ ತ್ರಾಣವಿಲ್ಲದವರೆ
ಅದೆಷ್ಟು ಹತಿಯಾರಗಳು ತುಕ್ಕುಹಿಡಿದವು ನಿಮ್ಮವು ನಿಮ್ಮಂತೆ
ಸತ್ತ ಹೂವಿನ ಪರಿಮಳಕ್ಕೆ ಮುಗಿಬೀಳುವ ಜಗತ್ತು
ತುತ್ತು ಅನ್ನಕ್ಕೆ ಬಾಯಿ ತೆರೆಯುವ ನನ್ನ ಅವಳ ಬಿರುಕು ತುಟಿ
ಬೆಸೆದುಕೊಳ್ಳಲು ಹೇಗೆ ತಾನೇ ಬಿಟ್ಟೀತು?

ಹಾದಿ ಬೀದಿಯಲ್ಲಿ ಹರಾಜಿಗಿರುವ ಹೂಹೆಣದ ನಗು ನನ್ನದು
ಹೊಟ್ಟೆಬಾಕ ಕ್ರೂರ ಕೈಗಳ ಮಡಿಲು ಸೇರಿದೆ
ಲೋಕದಲ್ಲಿ ಮೊದಲ ಬಾರಿಗೆ ಹುಟ್ಟಿದ ಮಗು...... ನನ್ನಂತೆಯೇ
ಅದೆಷ್ಟು ಬಾರಿ ಅತ್ತೆ ನಾನು ಸತ್ತೆ ನಾನು ಲೆಕ್ಕ ಸಿಗುತ್ತಿಲ್ಲ
ಸತ್ಯ ಗೊತ್ತಿರುವ ಮುಖ ಹೇಡಿಗಳು ಹೇಗೆ ತಾನೇ ಹೇಳಿಯಾರು
ಯಾರಿಗೂ ಗೊತ್ತಾಗದಂತೆ ಸಾಯಿಸುವ, ಸಾಯುವವರಿಗೂ
ಹೊಸ ವಿಧಾನಗಳ ಪ್ರಯೋಗ ನಡೆಸಿದ್ದಾರೆ ಈ ಕಾಲದ ಮೇಲೆ ನನ್ನ ಮೇಲೂ
ನಾನೂ ಹೀಗೆಯೇ ಎಲ್ಲದಕ್ಕೂ ಎದೆಯೊಡ್ಡುವ ವಂಡ ಮಣ್ಣು ಮುಕ್ಕುವ ಹಾವಿನಂತೆ
ಬದುಕಿದ್ದೇನೆಯೋ ಇಲ್ಲವೋ ನನಗೆ ಗೊತ್ತಿಲ್ಲದಂತೆ ಬದುಕಿದ್ದೇನೆ. ಇಲ್ಲವೋ?
ಕರಗುತ್ತಿರುವ ಜೀವಸಾಕ್ಷಿಯ ಎದಿರು ಎದೆ ಮುಟ್ಟಿಕೊಂಡು ಹೇಳಬಲ್ಲಿರಾ ನೀವು
ಎಷ್ಟು ಪಾಲು ಜೀವವಿದೆ ನಿಮ್ಮ ಆಳದ ಚೇತನಕ್ಕೆ?
ಹುಟ್ಟು, ಹಬ್ಬವಾಗದ ಎಳೆಯ ಕೂಸಿನ
ಸಾವಿನ ರುಚಿ ನೋಡುವ ಅಂಗಾಂಗವೆಲ್ಲ ನಾಲಿಗೆಯಾದ
ತ್ರಿಶೂಲ ಬಾಂಬು ತುಪಾಕಿಯ ಗುಂಡಿಗೆ
ಏನು ಹೇಳುತ್ತದೆ ನಿಮ್ಮ ಗುಂಡಿಗೆ?
(ಪ್ರತಿರೋಧದ ಜೀವಸೆಲೆ ಇರೋಮ್ ಶರ್ಮಿಳಾ ಚಾನೂಗೆ ಈ ಕವಿತೆ ಅರ್ಪಿತ)

-Veeranna Madivalar
ಜಾತಿ ಮತ್ತು ಜನಗಣತಿ-ಪ್ರೊ. ಗೇಲ್ ಓಂವೆಡ್ತ್

`ಜಾತಿಯನ್ನು ನೋಡದಿರು, ಜಾತಿಯನ್ನು ಕೇಳದಿರು, ಜಾತಿ ಕುರಿತು ಮಾತನಾಡದಿರು -ಭಾರತದ ಮೇಲ್ವರ್ಗದ ಜಾತಿ ಕುರಿತಾದ ಈ ನೀತಿ ನಿರಾಕರಣೆಯೇ ತತ್ವವಾಗಿರುವ ಮೂರು ಮಂಗಗಳ ನೀತಿಯಂತಿದೆ. ಅದು ಅಸ್ತಿತ್ವದಲ್ಲೇ ಇಲ್ಲ; ಇದ್ದರೂ ಅದು ಅಷ್ಟೇನೂ ಕೆಟ್ಟದ್ದಲ್ಲ; ಅದರ ಬಗೆಗೆ ಮಾತನಾಡಬಾರದು, ಮಾತನಾಡುವವರು ಅಥವಾ ಅದರಂತೆ ನಡೆದುಕೊಳ್ಳುವವರು `ಜಾತೀಯತೆ ಅನುಸರಿಸುವವರು. ಈ ಧೋರಣೆಯಿರುವುದರಿಂದ ಹೋರಾಟದ ಪೂರ್ತಿ ಜವಾಬ್ದಾರಿಯ ಹೊರೆ ಜಾತಿ ಪದ್ಧತಿಯ ಬಲಿಪಶುಗಳ ಹೆಗಲಿಗೇ ಹೊರಿಸಲಾಗಿದೆ.
ಇದೇ ಧೋರಣೆಯು ಭಾರತ ಸರ್ಕಾರದ ನೀತಿಗಳನ್ನೂ ನಿರ್ದೇಶಿಸಿದೆ. ಈಗ ನಡೆಯಬೇಕಿರುವ ೨೦೧೧ರ ಜನಗಣತಿ ಹತ್ತಿರವಾಗಿ ಅದರ ತಯಾರಿಗಳು ನಡೆಯುತ್ತಿರುವಾಗ, ಬಹುಪಾಲು ಉದ್ದೇಶಗಳಿಗೆ ನಿರುಪಯೋಗಿಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗಣತಿ ಬಿಟ್ಟು ಉಳಿದ ಜಾತಿಗಳ ಗಣತಿ ನಡೆಯುವಂತೆ ಕಾಣುತ್ತಿಲ್ಲ. ಮೊದಲೂ ಈ ವಿಷಯವನ್ನು ಅನೇಕ ಸಾರಿ ಎತ್ತಲಾಗಿದ್ದರೂ ಆಗೆಲ್ಲ ಜಾತಿಗಣತಿಯು ಇನ್ನಷ್ಟು ಗೊಂದಲ, ಭಿನ್ನಾಭಿಪ್ರಾಯ ಹಾಗೂ ಕಹಿಯಾದ ವಿವಾದಗಳಿಗೆ ದಾರಿಮಾಡಿಕೊಡುವುದೆಂಬ ಉದ್ರೇಕಿತ ಪ್ರತಿಕ್ರಿಯೆಗಳನ್ನು ನೀಡಿ ಮೊಟಕುಗೊಳಿಸಲಾಗಿತ್ತು.
ಆದರೂ ವರ್ಷಾನುಗಟ್ಟಲೆ ಬ್ರಿಟಿಷ್ ಸರ್ಕಾರವು ಜಾತಿ ಕುರಿತ ಪ್ರಶ್ನೆಗಳನ್ನು ಗಣತಿಯಲ್ಲಿ ಕೇಳಿತು; ಇದರಿಂದ ಕೆಲ ಗುಂಪುಗಳು ತಮ್ಮ ಅಸ್ತಿತ್ವದ ಬಗ್ಗೆ ಎಚ್ಚೆತ್ತು ರಾಜಕೀಯ ಸ್ವರೂಪ ಪಡೆದುಕೊಂಡರೂ ಅಂತಹ ತೀವ್ರ ಸಮಸ್ಯೆಯನ್ನೇನೂ ತಂದೊಡ್ಡಲಿಲ್ಲ. ಅಮೆರಿಕವು ಪ್ರತಿ ಜನಗಣತಿಯ ವೇಳೆಯೂ `ಜನಾಂಗ ಯಾವುದೆಂಬ ಪ್ರಶ್ನೆಯನ್ನು ಎಲ್ಲರಿಗೂ ಕೇಳುತ್ತದೆ; ಅಮೆರಿಕದಲ್ಲಿ `ಜನಾಂಗವೆಂಬುದು ಭಾರತದಲ್ಲಿ `ಜಾತಿಯಾಗಿ ಮತ್ತದು ವರ್ತಮಾನದಲ್ಲಿ ವಿವಾದಾತ್ಮಕ ವಿಷಯವಾಗಿದೆ. ಆದರೆ ಅಮೆರಿಕಾದಲ್ಲಿ `ಜನಾಂಗವೆಂಬುದು ಅಂಥ ದೊಡ್ಡ ಸಮಸ್ಯೆ ಸೃಷ್ಟಿಸಲಿಲ್ಲ.
ಯಾವುದೇ ವಿವಾದದ ಬಗ್ಗೆ ಮಾತನಾಡಬೇಕಾದರೂ ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ಯಾವುದೇ ಜನಪರ ಕಾರ್ಯನೀತಿಯನ್ನು ರೂಪಿಸಬೇಕಾದರೆ ಅದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಮತ್ತು ವಿಶ್ಲೇಷಿಸಬೇಕು; ಜಾತಿಯ ಅಸ್ತಿತ್ವ ಇಲ್ಲವೆಂದು ನಿರಾಕರಿಸುವುದು ಬಹುಶಃ ಅದನ್ನು ಶಾಶ್ವತಗೊಳಿಸುವ ಅತ್ಯುತ್ತಮ ವಿಧಾನವಾಗಬಹುದು. ಒಂದು ಕಡೆ ಹಲವಾರು ಕಾಯಿದೆ - ನಿಯಮಗಳು ಜಾತಿ ಕುರಿತು ವ್ಯವಹರಿಸುತ್ತವೆ; ಮತ್ತೊಂದು ಕಡೆ ಜಾತಿ ಕುರಿತ ಪಕ್ಕಾ ಮಾಹಿತಿಯ ಕೊರತೆಯಿದೆ. ಜಾತಿ ಕುರಿತ ಅಧ್ಯಯನಕ್ಕೆ ಈ ದೇಶದಲ್ಲಿ ಅಂತಹ ದೊಡ್ಡ ಪ್ರೋತ್ಸಾಹವಿಲ್ಲ; ವಾಸ್ತವದಲ್ಲಿ ಇಂದು ಜಾತಿ ಕುರಿತ ಅಧ್ಯಯನ ನಡೆಸುವ ಸಮಾಜಶಾಸ್ತ್ರ ವಿದ್ಯಾರ್ಥಿಯು ಹೆಚ್ಚಾಗಿ ತಳಸಮುದಾಯದ ಹಿನ್ನೆಲೆಯಿಂದ ಬಂದವನಾಗಿದ್ದು ಆತನಿಗೆ ತನ್ನ ಜನರ ಕುರಿತೇ ಬರೆಯಲು ಕಲಿಸಲಾಗುತ್ತದೆ. ಆದರೆ ಜಾತಿಪದ್ಧತಿಯನ್ನು ಒಂದು ವ್ಯವಸ್ಥೆಯೆಂದು ಬಹಳಷ್ಟು ಸಲ ಪರಿಗಣಿಸುವುದೇ ಇಲ್ಲ. ಉದಾಹರಣೆಗೆ ನ್ಯಾಷನಲ್ ಸ್ಯಾಂಪಲ್ ಸರ್ವೆ(ಎನ್‌ಎಸ್‌ಎಸ್)ಯು ಇತ್ತೀಚೆಗಷ್ಟೇ ವಿಶಾಲ ಸಮುದಾಯವಾದ ಹಿಂದುಳಿದ ವರ್ಗಗಳ ಕುರಿತು ಅಷ್ಟೇನೂ ಉಪಯೋಗಕ್ಕೆ ಬಾರದ ವರ್ಗೀಕರಣ ಮಾಡುತ್ತಿದೆ; ಆದರೆ ಇದು ಶ್ರೇಣೀಕೃತ ವ್ಯವಸ್ಥೆಯ ವೈವಿಧ್ಯಮಯ ಜಾತಿಗಳನ್ನು ಒಂದೇ ಪ್ರವರ್ಗವೆಂದು ಗುರುತಿಸುವ ಕೆಲಸದಂತೆ ಕಾಣುತ್ತದೆ. ಸಮಾಜ ಶಾಸ್ತ್ರಜ್ಞರಾದ ಪ್ರೊ.ಸತೀಶ್ ದೇಶಪಾಂಡೆ ವಾದಿಸುವಂತೆ `ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವ ಬ್ರಾಹ್ಮಣರು ಯಾರ ಗಮನಕ್ಕೂ ಬಾರದೇ ಹೋಗುತ್ತಾರೆ; ಎಲ್ಲಾ ಮೇಲ್ಜಾತಿಗಳನ್ನು ಒಂದೇ ಗುಂಪಿನಲ್ಲಿಟ್ಟು ನೋಡಲಾಗುತ್ತಿದೆ. ಅವರ ಬಗೆಗೆ ಹೆಚ್ಚೂಕಮ್ಮಿ ಯಾವುದೇ ಖಚಿತ ಅಂಕಿಅಂಶಗಳು ಈವರೆಗೂ ಲಭ್ಯವಿಲ್ಲ. ಅಂತರ್ಜಾತೀಯ ವಿವಾಹಗಳ ಕುರಿತು ಯಾವ ದಾಖಲೆಗಳೂ ಇಲ್ಲದ್ದರಿಂದ ವೈಯುಕ್ತಿಕ ಅನುಭವ ಹಾಗೂ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಶೇ.೯೫-೯೯ರಷ್ಟು ಮದುವೆಗಳು ಜಾತಿಯೊಳಗೇ ನಡೆಯುತ್ತಿದೆ ಎಂಬುದನ್ನು ಊಹೆ ಮಾಡಬಹುದಾಗಿದೆ.
ಆದರೂ ಜನಗಣತಿಯ ವೇಳೆ ಜಾತಿಯ ಕುರಿತು ಒಂದು ಪ್ರಶ್ನೆಯನ್ನು ಸೇರಿಸುವುದು ತುಂಬ ಸರಳವಾಗಿದೆ. ಇದು ಒಂದು ಸ್ವಯಂ ಗುರುತಿಸುವಿಕೆಯ ವಿಷಯವಾಗಲಿ; ಜನರು ತಮ್ಮ ಜಾತಿಯನ್ನು ತಮಗಿಷ್ಟ ಬಂದಂತೆ ಗುರುತಿಸಬಹುದು, ಅಥವಾ `ಜಾತಿರಹಿತ ಅಥವಾ `ಮಿಶ್ರ ಎಂದೂ ಉತ್ತರಿಸಬಹುದು. ಇಷ್ಟರಿಂದಲೇ ಅಮೂಲ್ಯ ಮಾಹಿತಿ ದೊರೆಯುತ್ತದೆ. ನನ್ನ ಊಹೆಯ ಪ್ರಕಾರ `ಜಾತಿರಹಿತ ಎಂದು ಹೇಳಿಕೊಳ್ಳುವವರ ಸಂಖ್ಯೆ ಶೇ.೧ಕ್ಕಿಂತ ಕಡಿಮೆ ಇದೆ! ನಂತರ ರಾಜ್ಯ ಮಟ್ಟದ ಸಮಿತಿಗಳು ವಿಶಾಲ ವರ್ಗಗಳಾಗಿ ಸಂಗ್ರಹಿಸಲ್ಪಟ್ಟ ಸಮುದಾಯದ ದಾಖಲೆಗಳನ್ನು ಸಂಕ್ಷಿಪ್ತಗೊಳಿಸಬಹುದು.
ಇದೇನೂ ಕನಸಿನಂಥ ಆದರ್ಶವಲ್ಲ. ಆದರೆ ಇದರಿಂದ ಸಮಸ್ಯೆಯೊಂದರ ಬಗೆಗೆ ಪ್ರಾಮಾಣಿಕವಾಗಿ ಮಾಹಿತಿ ಸಂಗ್ರಹಿಸಿ ವ್ಯವಹರಿಸಲು ಮೊದಲ ಪ್ರಯತ್ನ ಮಾಡಿದಂತಾಗುತ್ತದೆ. ನಿಸ್ಸಂಶಯವಾಗಿ ಆಧುನಿಕ ಭಾರತದಲ್ಲಿ ಜಾತಿ ಬದಲಾಗಿದೆ ಎಲ್ಲೋ ಕೆಲವು ವಿರಳ ಊಳಿಗಮಾನ್ಯ ಮತ್ತು ಪುರಾತನ ರೂಪಗಳು ಉಳಿದಿವೆ; ಉದಾಹರಣೆಗೆ ಇನ್ನೂ ಹಲವು ಭಾಗಗಳಲ್ಲಿ ದಲಿತರಲ್ಲಿ ಒಂದು ನಿರ್ದಿಷ್ಟ ಜಾತಿಯ ಜನ ಮಾತ್ರ ಭಂಗಿ ಕೆಲಸ ಮಾಡುತ್ತಿದ್ದಾರೆ. ಭಾರತದ ಮುಂದುವರಿದ ಮತ್ತು ಎಡಪಂಥೀಯ ಸರ್ಕಾರ ಹೊಂದಿದ ಕೇರಳದಲ್ಲೂ ಚಾಲ್ತಿಯಲ್ಲಿರುವ ಕ್ರೂರ ಪರಂಪರೆಯು ಕೆಲವು ವೃತ್ತಿಗಳನ್ನು ಕೆಲವು ಜಾತಿಗಳಿಗಷ್ಟೇ ಹೇಗೆ ಸೀಮಿತಗೊಳಿಸಿದೆ ಎಂಬುದನ್ನು ಈಚಿನ ಚಿತ್ರಲೇಖಾ ಪ್ರಕರಣವು ತೋರಿಸುತ್ತದೆ. ಉಳಿದಂತೆ ಹಳೆಯ ಪದ್ಧತಿಗಳು ನಾಶವಾಗಿದ್ದರೂ ಜಾತಿ ಮತ್ತು ಆರ್ಥಿಕ ಸ್ಥಿತಿಯ ನಡುವಿನ ಸಂಬಂಧ ಮಾತ್ರ ಗಟ್ಟಿಯಾಗಿದೆ. ಶಿಕ್ಷಣನೀತಿಯ ದ್ವಂದ್ವದಿಂದ ತಳಸಮುದಾಯದ ಮಕ್ಕಳೇ ತೊಂದರೆಗೊಳಗಾಗುತ್ತಿದ್ದಾರೆ.
ಇನ್ನೊಂದು ಜನಗಣತಿಯು ಭಾರತದ ಸಾಮಾಜಿಕ ವ್ಯವಸ್ಥೆಯ ಕ್ರೂರ ಮತ್ತು ವಿಲಕ್ಷಣ ಅಂಶವೊಂದನ್ನು ಪರಿಗಣಿಸದೇ ನಡೆಯುವ ತಯಾರಿಯಲ್ಲಿದೆ. ಇಂತಹ ಗಣತಿ ಇದೇ ಕೊನೆಯದಾಗಲಿ.

ಮೀಸಲಾತಿ : ಜಾತಿ ಮೀರಿದ ಪ್ರಶ್ನೆ

- ಡಿ. ಎಸ್. ನಾಗಭೂಷಣ
ಕೇಂದ್ರ ಸರ್ಕಾರೀ ಸ್ವಾಮ್ಯಕ್ಕೆ ಸೇರಿದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ. ೨೭ರಷ್ಟು ಮೀಸಲಾತಿ ಪ್ರಕಟವಾದಾಗಿನಿಂದ ಈ ಮೀಸಲಾತಿ ವಿರುದ್ಧ ಆರಂಭವಾದ ಪ್ರತಿಭಟನೆಯ ವ್ಯಾಪಕತೆ ಹಾಗೂ ಅದು ಪಡೆದ ಪ್ರಚಾರ; ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ನಿಧಾನವಾಗಿಯಾದರೂ ಆರಂಭವಾದ ಮೀಸಲಾತಿ ಪರವಾದ ಮತಪ್ರದರ್ಶನ ಹಾಗೂ ವಾದಗಳ ರಭಸದ ಮಧ್ಯೆ, ಈ ಯಾವುದಾದರೊಂದು ಪಕ್ಷದೊಂದಿಗೆ ಸಂಪೂರ್ಣ ಗುರುತಿಸಿಕೊಳ್ಳದೆ ಮೀಸಲಾತಿಯ ಬಗ್ಗೆ ಮಾತನಾಡುವುದೇ ಕಷ್ಟವೆನಿಸತೊಡಗಿದೆ. ಮೀಸಲಾತಿ ಪ್ರಶ್ನೆಯು ಕೇವಲ ಜಾತಿ ಹಿತಾಸಕ್ತಿಗಳ ಆಧಾರದ ಭಾವಾವೇಶದ ವಿವಾದವಾಗಿ ಪರಿವರ್ತಿತವಾಗಿರುವುದೇ ಇದಕ್ಕೆ ಕಾರಣವಾಗಿದೆ. ಇದು ಮೀಸಲಾತಿ ತತ್ವದ ವಿಕೃತಿಯಲ್ಲದೇ ಮತ್ತೇನಲ್ಲ. ಈ ಹಿನ್ನೆಲೆಯಲ್ಲಿ, ಮೀಸಲಾತಿಯಿಂದಾಗಿ ಪ್ರತಿಭೆಗೆ ಹಿನ್ನಡೆಯಾಗಿ ರಾಷ್ಟ್ರದ ಪ್ರಗತಿಗೆ ಧಕ್ಕೆಯಾಗುವುದೆಂಬ ಮೀಸಲಾತಿ ವಿರೋಧಿಗಳ ಸಮಾನ ಅವಕಾಶಗಳ ಬೇಡಿಕೆಯನ್ನಾಧರಿಸಿದ ಅಮಾಯಕ ವಾದವಾಗಲಿ; ಮೀಸಲಾತಿಯು ಚರಿತ್ರೆಯ ಅನ್ಯಾಯಗಳಿಗೆ ತುತ್ತಾಗುತ್ತಿರುವ ಜನವರ್ಗಗಳಿಗೆ ಒದಗಿಸಲಾಗುತ್ತಿರುವ ನ್ಯಾಯಬದ್ಧ ಪರಿಹಾರವೇ ಆಗಿದೆಯೆಂಬ ಮೀಸಲಾತಿ ಪರವಾಗಿರುವವರ ಪ್ರತಿವಾದವಾಗಲೀ, ಕಳೆದ ನಾಲ್ಕು ದಶಕಗಳ ಮೀಸಲಾತಿ ಜಾರಿ ಅನುಭವದ ಹಿನ್ನೆಲೆಯಲ್ಲಿ ಸಂಪೂರ್ಣ ಸತ್ಯವನ್ನು ಬಿಚ್ಚಿಡುತ್ತಿದೆ ಎನ್ನಿಸುವುದಿಲ್ಲ. ಮೀಸಲಾತಿ ವಿರೋಧಿಗಳ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ಸಂಬಂಧ ಸರ್ವೋನ್ನತ ನ್ಯಾಯಾಲಯವು ಮಧ್ಯ ಪ್ರವೇಶಿಸಿರುವುದರಿಂದಾಗಿ ಸದ್ಯಕ್ಕೆ ಈ ಸಾಮಾಜಿಕ ಮುಖಾಮುಖಿ - ಹೋರಾಟ ಸ್ಥಗಿತಗೊಂಡಿದೆ. ಆದರೆ ಈ ಹೋರಾಟದ ಎರಡೂ ಕಡೆಯವರು ಎತ್ತಿರುವ ಅನೇಕ ಪ್ರಶ್ನೆಗಳು ನ್ಯಾಯಾಂಗ ಪರಿಹಾರದ ವ್ಯಾಪ್ತಿಯನ್ನು ಮೀರಿದ್ದು, ವ್ಯಾಪಕ ಸಾರ್ವಜನಿಕ ಚರ್ಚೆ ಹಾಗೂ ಒಮ್ಮತದ ಮೂಲಕ ಮಾತ್ರ ಪರಿಹಾರಗೊಳ್ಳಬಲ್ಲವಾಗಿವೆ. ಅಲ್ಲದೆ, ಇಂದು ಅಭಿಪ್ರಾಯಗಳು ಎರಡೂ ಕಡೆ ಭಾವಾವೇಶಕ್ಕೆ ಸಿಕ್ಕಿ ಧೃವೀಕರಣಗೊಂಡು, ವಸ್ತುನಿಷ್ಠ ಚರ್ಚೆ ಸಾಧ್ಯವಾಗದಂತಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಜಾತಿವ್ಯವಸ್ಥೆಯನ್ನು ಬಾಯಿ ಮಾತಿನ ಹೊರತಾಗಿ, ತಮ್ಮ ಮಿಕ್ಕೆಲ್ಲ ಚಟುವಟಿಕೆಗಳ ನೆಲೆಯಲ್ಲಿ ಒಪ್ಪಿಕೊಂಡಿರುವ (ಇದು ಎಲ್ಲಾ ಜಾತಿಗಳಿಗೂ ಅನ್ವಯಿಸುತ್ತದೆ) ದೊಡ್ಡ ಜನವರ್ಗವನ್ನು ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಅಸಮಾನತೆ ಅಂತರ್ಗತವಾಗಿದೆ. ಮೀಸಲಾತಿ ಈ ಅಸಮಾನತೆಯನ್ನು ತೊಡೆದುಹಾಕಿ ಸಮಾಜವನ್ನು ಜಾತಿವ್ಯವಸ್ಥೆಯ ಬಂಧನದಿಂದ ಬಿಡುಗಡೆಗೊಳಿಸುವ ಆಶಯವನ್ನು ಹೊಂದಿದೆ. ಹೀಗಾಗಿ ಮೀಸಲಾತಿಯನ್ನು ವಿರೋಧಿಸುವುದು ಎಂದರೆ ಸಮಾನತೆಯನ್ನು ವಿರೋಧಿಸುತ್ತಾ ಜಾತಿವ್ಯವಸ್ಥೆಯನ್ನು ಒಪ್ಪಿಕೊಳ್ಳುವುದೇ ಆಗಿದೆ. ಇಂತಹ ಸರಳ ಸತ್ಯ `ಕಲಿತವರಿಗೆ ಅರ್ಥವಾಗುತ್ತಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಇವರ ಈ ವಿರೋಧವನ್ನು ಮನುವಾದದ ಹೆಸರಿನಲ್ಲಿ ಮೇಲ್ಜಾತಿ ಮಾನಸಿಕತೆ ಎಂದು ದೂಷಿಸಿ ಕೈತೊಳೆದುಕೊಳ್ಳುವವರು ಕೆಳಜಾತಿ ಮಾನಸಿಕತೆಯ ದೂಷಣೆಗೆ ಒಳಗಾಗಬೇಕಾಗುತ್ತದೆ. ಈಗ ಪ್ರಸ್ತಾಪಿಸಲ್ಪಟ್ಟಿರುವ ಮೀಸಲಾತಿಯು ಮಂಡಲ್ ವರದಿಯ ಶಿಫಾರಸುಗಳ ವಿಸ್ತರಣೆಯೇ ಆಗಿದ್ದು ಈವರೆಗೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸದಿದ್ದ ಮೀಸಲಾತಿಯನ್ನು ಈಗ ವಿಸ್ತರಿಸಲಾಗುತ್ತಿದೆಯಷ್ಟೇ. ಅದಕ್ಕೇಕೆ ಇಷ್ಟು ರಂಪ? ಈ ಪ್ರಶ್ನೆಯ ಹಿಂದೆ ಅನೇಕ ಪ್ರಶ್ನೆಗಳಿವೆ.
ಮೊದಲನೆಯದು, ಈವರೆಗೆ ಸುಮ್ಮನಿದ್ದ ಸರ್ಕಾರ ಇದ್ದಕ್ಕಿದ್ದಂತೆ ಈಗೇಕೆ ಈ ಕ್ರಮಕ್ಕೆ ಕೈಹಾಕಿದೆ? ಓಟ್‌ಬ್ಯಾಂಕ್ ರಾಜಕೀಯವೇ ಇದರ ಉದ್ದೇಶವೆ? ಎರಡನೆಯ ಪ್ರಶ್ನೆ, ಉನ್ನತ ಶಿಕ್ಷಣದವರೆಗೆ ಮೀಸಲಾತಿ ಪಡೆದ ವರ್ಗಗಳೇಕೆ ಮೀಸಲಾತಿ ಇಲ್ಲದೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಾಗುತ್ತಿಲ್ಲ? ಆರ್ಥಿಕ ಅನುಕೂಲತೆಯ ಜೊತೆಗೇ ಸಾಕಷ್ಟು ಸಾಮಾಜಿಕ ಪ್ರತಿಷ್ಠೆಯನ್ನೂ ಹೊಂದಿರುವಂತಹ ಗಣನೀಯ ಜಾತಿ ಸಮೂಹವನ್ನು ಒಳಗೊಂಡಿರುವ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಕೊನೆಯ ಹಂತದವರೆಗೂ ಮೀಸಲಾತಿ ನೀಡುವುದು ಆ ವರ್ಗಗಳಲ್ಲಿನ ಪ್ರಯತ್ನಶೀಲತೆಯನ್ನೇ ಕುಂಠಿತಗೊಳಿಸಬಹುದಲ್ಲವೆ? ಇದು ಮೂಲತಃ ಆ ವರ್ಗಗಳಿಗೆ ಮಾಡುವ ಅನ್ಯಾಯವಲ್ಲವೆ? ಈ ಪ್ರಶ್ನೆಗಳನ್ನು ದಾಟಿಕೊಂಡೇ ಮೀಸಲಾತಿ ವಿರೋಧಿಗಳು ಉಂಟುಮಾಡಿರುವ ರಂಪವನ್ನು ಎದುರಿಸಬೇಕಾಗುತ್ತದೆ.
ಯಾವುದೇ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ರಾಜಕೀಯ ಆಯಾಮ ಇದ್ದೇ ಇರುತ್ತದೆ. ತಾನು ಕೈಗೊಂಡ ಕ್ರಮಗಳ ಮೂಲಕ ಜನಬೆಂಬಲ ಗಳಿಸಿಕೊಳ್ಳಲೆತ್ನಿಸುವುದು ಸರ್ಕಾರದಲ್ಲಿರುವ ರಾಜಕೀಯ ಪಕ್ಷಗಳ ಸಹಜ ಹಕ್ಕು. ಆದರೆ ಆ ಕ್ರಮ ರಾಜ್ಯ ರಾಷ್ಟ್ರದ ಒಳಿತಿಗಾಗಿಯೋ ಅಲ್ಲವೋ ಎಂಬ ಪ್ರಶ್ನೆಯಷ್ಟೇ ಇಲ್ಲಿ ಮುಖ್ಯ. ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿ ಸಮೂಹ ಹಾಗೂ ಶಿಕ್ಷಕ ವೃಂದದ ಜಾತಿವಾರು ಅಂಕಿ ಅಂಶಗಳನ್ನು ಗಮನಿಸಿದರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ದೇಶದ ಜನಸಂಖ್ಯೆಯಲ್ಲಿ ಶೇ. ೫೨ರಷ್ಟಿರುವ (ಇದನ್ನು ಸದ್ಯದ ಸ್ಥಿತಿಯಲ್ಲಿ ಖಚಿತಪಡಿಸಿಕೊಳ್ಳಲು ಜಾತಿಜನಸಂಖ್ಯಾಗಣತಿ ಅತ್ಯವಶ್ಯಕವಾಗಿದೆ) ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆ ಶೇ. ೧೦ಕ್ಕಿಂತ ಕಡಿಮೆ! ಅಂದರೆ ಸರ್ಕಾರವು ಸಮಾಜದ ಎಲ್ಲ ವರ್ಗಗಳಿಂದ ಪಡೆದ ಹಣವನ್ನು - ಏಳು ಸಾವಿರ ಕೋಟಿ ರೂಪಾಯಿಗಳನ್ನು ಒಂದು ಸೀಮಿತ ಗಾತ್ರದ ವರ್ಗಕ್ಕಷ್ಟೇ ಖರ್ಚು ಮಾಡುತ್ತಿದೆ. ಈ ಚಿಕ್ಕ ವರ್ಗದಲ್ಲಿ ಅತಿ ದೊಡ್ಡ ಪಾಲನ್ನು ಒಂದು ಜಾತಿಯಷ್ಟೇ - ಬ್ರಾಹ್ಮಣ - ಪಡೆಯುತ್ತಿದೆ. ಇದು ಹೇಗೆ ಸಾಧ್ಯವಾಯಿತು? ಹಾಗೂ ಇದು ಎಷ್ಟು ನ್ಯಾಯಬದ್ಧವಾದ ಪಾಲಾಗಿದೆ?
ತಾವು ತಮ್ಮ ಪ್ರತಿಭೆಯಿಂದ ಪಾಲು ಪಡೆದಿರುವುದಾಗಿ ಮೇಲ್ಜಾತಿ ಜನರ ವಕ್ತಾರರು ಹೇಳಿಕೊಳ್ಳುತ್ತಾರೆ. `ಮುಕ್ತಸ್ಪರ್ಧೆಯಲ್ಲಿ `ಜಯಶಾಲಿಗಳಾದ ಈ ಜನ ಹೀಗೆ ಹೇಳಿಕೊಳ್ಳುವುದು ಸಹಜವೂ, ಮೇಲ್ನೋಟಕ್ಕೆ ಸರಿಯೂ ಆಗಿದೆ. ಆದರೆ ಸ್ಪರ್ಧೆಯಲ್ಲಿ ಇತರರನ್ನು - ಸಮಾಜದ ಬಹುದೊಡ್ಡ ಭಾಗವನ್ನು - ಸೋಲಿಸಬಲ್ಲ `ಪ್ರತಿಭೆ ಈ ಚಿಕ್ಕ ವರ್ಗಕ್ಕೆ ಎಲ್ಲಿಂದ ಬಂತು? ಹುಟ್ಟಿನಿಂದ ಬಂದದ್ದು ಅದು. ಆದರೆ ಕೆಲವೇ ಜಾತಿಗಳಿಗೆ ಹುಟ್ಟಿನಿಂದಲೇ ಈ ಪ್ರತಿಭೆ ದತ್ತವಾಗುವುದರ ಮರ್ಮವಾದರೂ ಏನು? ಪ್ರಕೃತಿ ಹಾಗೆ ಮಾಡಲಾರದು. ಹಾಗೆ ಮಾಡಿದರೆ ಪ್ರಕೃತಿ ಎಂದು ಅದನ್ನು ಕರೆಯಲಾಗದು. ಹುಟ್ಟು ಪ್ರತಿಭೆ ಎಂದರೆ ಮತ್ತೇನೂ ಆಗಿರದೆ, ತಲೆಮಾರುಗಳ ಮೂಲಕ ಜೈವಿಕವಾಗಿ ಹರಿದುಬರುವ ಒಂದು ದಕ್ಷತೆ ಮಾತ್ರ. ಭಾರತದ ಒಂದೊಂದು ಜಾತಿಯೂ ಇಂತಹ ಒಂದೊಂದು ರೀತಿಯ ದಕ್ಷತೆಗೆ ವಾರಸುದಾರನಾಗಿದೆ. ಆದರೆ ಇಂದಿನ ಸಂದರ್ಭದಲ್ಲಿ ಆಧುನಿಕ ನಾಗರಿಕತೆಯ ಸಂರಚನೆಗಳಲ್ಲಿ ಅಕ್ಷರಜ್ಞಾನದ ವಾರಸುದಾರಿಕೆಗೇ ಪ್ರಾಮುಖ್ಯತೆ ಬಂದಿರುವುದರಿಂದ, ತಲೆ-ತಲೆಮಾರುಗಳಿಂದ ಅಕ್ಷರ ಜ್ಞಾನ ರೂಢಿಸಿಕೊಂಡು ಆ ಶಿಸ್ತಿನಲ್ಲಿ ಪರಿಣಿತವಾದ ಜಾತಿಗಳಲ್ಲಿ ಈ ದಕ್ಷತೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಈ ಜಾತಿಗಳಿಗೆ ಸೇರಿದ ಈಚಿನ ತಲೆಮಾರುಗಳಿಗೆ ಇದು, ಶ್ರಮವಿಲ್ಲದೇ ದತ್ತ ಮಾಡಿಕೊಂಡ `ಪ್ರತಿಭೆ. ಆದರೆ ಶತಶತಮಾನಗಳ ಕಾಲದ ಜಾತಿವ್ಯವಸ್ಥೆಯಿಂದಾಗಿ ಬಹಳಷ್ಟು ಜಾತಿಗಳು ಈ `ಪ್ರತಿಭೆಯನ್ನು ಈಗ ಶ್ರಮದಿಂದ ದತ್ತಮಾಡಿಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ತಾವು ಜಯಶಾಲಿಗಳಾಗಿರುವುದು ಮುಕ್ತ ಸ್ಪರ್ಧೆಯಲ್ಲಿ ಎಂದು ಮೇಲ್ಜಾತಿಗಳವರು ಅಥವಾ ಅವರ ವಕ್ತಾರರು ಹೇಳಿಕೊಂಡರೆ, ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೊಂದಿರಲಾರದು.

ಜಾತಿ ವ್ಯವಸ್ಥೆಯೆಂಬುದೇ ಒಂದು ದೊಡ್ಡ ಮೀಸಲಾತಿ ವ್ಯವಸ್ಥೆ. ಒಂದು ಇನ್ನೊಂದನ್ನು ಅತಿಕ್ರಮಿಸಕೂಡದೆಂಬ ಒಪ್ಪಂದದನ್ವಯ ದಕ್ಷತೆ - ಪ್ರತಿಭೆಗಳು ಬೆಳೆಯುವ ರೀತಿಯಲ್ಲಿ ವಿನ್ಯಾಸಗೊಂಡಿದ್ದ ಜಾತಿವ್ಯವಸ್ಥೆಯ ಮೀಸಲಾತಿ ಲಾಭವನ್ನು ಯಾವುದೇ ಶ್ರಮವಿಲ್ಲದೇ ಕೆಲವು ಜಾತಿಗಳು ಜನ್ಮತಃ ಪಡೆದುಕೊಂಡಿವೆ. ಇಂದು ಈ ಮೇಲ್ಜಾತಿಗಳು ಇಂತಹ `ಲಾಭsವನ್ನು ಶ್ರಮವಹಿಸಿ ಪಡೆಯಲೆತ್ನಿಸುತ್ತಿರುವ ಜಾತಿಗಳಿಗೆ ನ್ಯಾಯ ಹಾಗೂ ಸಮಾನ ಅವಕಾಶಗಳ ಸಂದೇಶವನ್ನು ಬೋಧಿಸಹೊರಟಿರುವುದು ಈ ಮೇಲ್ಜಾತಿ ಪ್ರತಿಭೆಗಳು ಎಷ್ಟು ಅಚಾರಿತ್ರಿಕವಾದುದು ಎಂಬುದನ್ನಷ್ಟೇ ತೋರಿಸುತ್ತದೆ. ಚಾರಿತ್ರ್ಯ ಎಂಬ ಶಬ್ದ ಚರಿತ್ರೆ ಎಂಬ ಶಬ್ದದಿಂದ ಹುಟ್ಟಿದುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂದಿನ ಮೀಸಲಾತಿ, ಈ ಹಿಂದಿನ ಮೀಸಲಾತಿಯ ದುಷ್ಪರಿಣಾಮಗಳನ್ನು ತೊಡೆದುಹಾಕಲಷ್ಟೆ ಜಾರಿಯಲ್ಲಿರುವುದು ಎಂಬುದನ್ನು ಅರಿಯಲಾಗದವರ ಚಾರಿತ್ರ್ಯ ಅನುಮಾನಾಸ್ಪದವೆನಿಸಿಕೊಳ್ಳುತ್ತದೆ. ಹಿಂದಿನ ವ್ಯವಸ್ಥೆಯ ಲಾಭವನ್ನು ಪಡೆದುಕೊಳ್ಳುತ್ತಿರುವ ಇಂದಿನವರು, ತಮ್ಮ ಹಿಂದಿನವರು ಮಾಡಿದ ತಪ್ಪಿಗೆ (ವಿದ್ಯೆಯ ನಿರ್ಬಂಧ) ನಮಗೇಕೆ ಶಿಕ್ಷೆ ಎಂದು ಕೇಳುವುದು ಕಲಿತವರ `ಕಲಿತ ಅಮಾಯಕತನ ಮಾತ್ರವಾದೀತು. ಇನ್ನು ಮೀಸಲಾತಿ ಮೂಲಕ ಶಿಕ್ಷಣ ಪಡೆದವರ ವೃತ್ತಿ ದಕ್ಷತೆ (ಕೆಟ್ಟ ವೈದ್ಯರು, ಕೆಟ್ಟ ಇಂಜಿನಿಯರು ಇತ್ಯಾದಿ) ಬಗ್ಗೆ ಇವರು ವ್ಯಕ್ತಪಡಿಸುತ್ತಿರುವ ಅನುಮಾನಗಳು, ಬುದ್ಧಿಪೂರ್ವಕ ಅಪಪ್ರಚಾರದ ಉದ್ದೇಶದಿಂದಲೇ ಹೊರಹೊಮ್ಮಿರುವಂತೆ ತೋರುತ್ತವೆ. ಏಕೆಂದರೆ ಮೀಸಲಾತಿಯಲ್ಲಿ ಶಿಕ್ಷಣ ಪಡೆದವರಿಗೆ ಪರೀಕ್ಷೆ ತೇರ್ಗಡೆ ಅಂಕಗಳಲ್ಲಿ ರಿಯಾಯ್ತಿಯೇನೂ ಇಲ್ಲ. ಅಲ್ಲದೆ ಮೀಸಲಾತಿ ವಿರೋಧಿಗಳು ಹಣ(ಕ್ಯಾಪಿಟೇಷನ್) ಕೊಟ್ಟು ಪ್ರವೇಶ ಪಡೆದ ಹಾಗೂ ಅನಿವಾಸಿ ಭಾರತೀಯರಿಗಾಗಿ ಶೇ. ೧೫ರ ಮೀಸಲಾತಿಯಡಿಯಲ್ಲಿ ನಡೆಯುವ ಸೀಟುಗಳ ಹರಾಜಿನಲ್ಲಿ ಪ್ರವೇಶ ಪಡೆಯುವ ಪ್ರತಿಭಾ ವಿಹೀನರಿಂದ ಉಂಟಾಗುವ ಅನಾಹುತಗಳ ಬಗ್ಗೆ ಸೊಲ್ಲೇ ಎತ್ತುತ್ತಿಲ್ಲ! ಆದುದರಿಂದ ಇಂದಿನ ಮೀಸಲಾತಿ ವಿರೋಧೀ ಚಳುವಳಿ ಈ ಅನಾಹುತಗಳ ಬಗ್ಗೆ ಸೊಲ್ಲೆತ್ತದಿರುವವರೆಗೆ ಜಾತೀಯತೆಯ ಕಳಂಕದಿಂದ ಸಂಪೂರ್ಣ ಮುಕ್ತವಾಗಲಾರದು.
ಇಷ್ಟೆಲ್ಲಾ ವಿಶ್ಲೇಷಣೆಯ ಆಚೆಯೂ ಇನ್ನೊಂದು ಮುಖ್ಯ ಪ್ರಶ್ನೆ ಉಳಿದೇ ಇದೆ. ಅದೆಂದರೆ ಉನ್ನತ ಶಿಕ್ಷಣದವರೆಗೂ ಮೀಸಲಾತಿ ಪಡೆದ ವರ್ಗಗಳೇಕೆ ಉನ್ನತ ಶಿಕ್ಷಣಕ್ಕೂ ಮೀಸಲಾತಿ ಅಗತ್ಯವೆನ್ನಿಸುವಷ್ಟರ ಮಟ್ಟದ ದುಃಸ್ಥಿತಿಗೆ ಈಡಾಗಿವೆ? ಇದನ್ನು ಮೀಸಲಾತಿ ಮಾನಸಿಕತೆ ಎನ್ನಬಹುದೇ? ಮೀಸಲಾತಿಯ ಸುರಕ್ಷತೆಯಡಿಯಲ್ಲಿ ಮಾತ್ರ ಮುನ್ನಡೆಯಬಲ್ಲ ಜಡ ಚೇತನಗಳಾಗಿಬಿಟ್ಟಿವೆಯೇ ಈ ವರ್ಗಗಳು? ಹಿಂದಿನ ಮೀಸಲಾತಿಯ ಪ್ರೋತ್ಸಾಹದ ಲಾಭ ಪಡೆದುಕೊಂಡು ಮುಂದಿನ ಹಂತಕ್ಕೆ ತನ್ನ ಸ್ವಂತ ಶಕ್ತಿಯಿಂದ ಪ್ರವೇಶ ಪಡೆಯುವ ಸಾಮರ್ಥ್ಯ ಗಳಿಸಿಕೊಳ್ಳಲಾಗದ ವರ್ಗ; ದುರ್ಬಲತೆಯನ್ನೇ ಶಕ್ತಿಯನ್ನಾಗಿ ಬಳಸಿಕೊಳ್ಳಲೆಣಿಸುವ ಪ್ರವೃತ್ತಿ ಬೆಳೆಸಿಕೊಂಡು, ಒಟ್ಟಾರೆ ಸಮಾಜದ ಮುನ್ನಡೆಗೆ ಅಡ್ಡಿಯಾಗಬಹುದಲ್ಲವೆ? ಆದರೆ ಈ ವರ್ಗದ ಕೆಲವರಾದರೂ ಈವರೆಗಿನ ಮುಕ್ತ ಸ್ಪರ್ಧೆಯಲ್ಲಿಯೇ ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಗಳಿಸಿದ್ದಾರೆಂಬ ಅಂಶ, ಈ ಪ್ರಶ್ನೆಯನ್ನು ಈ ವರ್ಗಗಳ ಬಗ್ಗೆ ಸಾರಾಸಗಟಾಗಿ ಕೇಳಲಾಗದೆಂದು ಸೂಚಿಸುತ್ತದೆ. ಅಲ್ಲದೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಈ ವರ್ಗದ ಅಭ್ಯರ್ಥಿಗಳು ಮುಕ್ತ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದು, ಈಗಾಗಲೇ ಈ ಸಂಸ್ಥೆಗಳಲ್ಲಿ ತುಂಬಿ ಹೋಗಿರುವ ಪ್ರತಿಭಾವಾದಿಗಳ ಅಚಾರಿತ್ರಿಕ ಮಾನಸಿಕ ಪೂರ್ವಾಗ್ರಹಗಳಿಂದಾಗಿ, ಆಯ್ಕೆ ಪ್ರಕ್ರಿಯೆಗಳಲ್ಲಿ ತಾಂತ್ರಿಕವಾಗಿ ( ಅಂದರೆ ಒಂದೆರೆಡು ಶೇಕಡಾವಾರು ಅಂಕಗಳ ಅಂತರದಲ್ಲಿ) ಹೊರಗುಳಿಯಲ್ಪಟ್ಟಿರುವ ಸಂಭವ ಇಲ್ಲದಿಲ್ಲ. ಅದೇನೇ ಇರಲಿ, ಯಾವುದೇ ಸಂಸ್ಥೆ ಸಂಘಟನೆಯಲ್ಲಿ, ಚರಿತ್ರೆಯ ಒಂದು ಭಾಗದ ಅದೂ ಅತ್ಯಲ್ಪ ಭಾಗದ ವಾರಸುದಾರರು ಮಾತ್ರ ಇರುವುದು ಸಮಾಜದ ಒಟ್ಟಾರೆ ಮುನ್ನಡೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ಈ ದಿಸೆಯಲ್ಲಿನ ಒಂದು ನಿರ್ದಿಷ್ಟ ಕಾರ್ಯಕ್ರಮಾಧಾರಿತವಾದ ಸೀಮಿತ ಅವಧಿಯವರೆಗೆ, ಈ ಹಂತದಲ್ಲಿ ಮೀಸಲಾತಿ ಅಗತ್ಯವೆನಿಸುತ್ತದೆ.
ಈ ಸೀಮಿತ ಅವಧಿಯ ಮೀಸಲಾತಿ ಪ್ರಸ್ತಾಪಕ್ಕೆ ನಮ್ಮನ್ನು ತಂದು ನಿಲ್ಲಿಸಿದ ವಿಚಾರ ಲಹರಿಯು, ಮೀಸಲಾತಿ ಕುರಿತಂತೆ ಇನ್ನೂ ಅನೇಕ ಹೊಸ ಪ್ರಸ್ತಾಪಗಳಿಗೆ ದಾರಿ ಮಾಡುತ್ತದೆ. ನಾವು ಈವರೆಗೆ ಮೀಸಲಾತಿ ಪರವಾದ ತಾತ್ವಿಕ ಜಿಜ್ಞಾಸೆಯನ್ನಷ್ಟೇ ಮಾಡಿದೆವು. ಅಂದರೆ ಮೀಸಲಾತಿಯು ಸದ್ಯದ ಸಂದರ್ಭದಲ್ಲಿ ತಾತ್ವಿಕವಾಗಿ ಸರಿ ಎಂದು ಹೇಳಿದೆವು. ಆದರೆ ಮೀಸಲಾತಿ ಜಾರಿಗೆ ಬಂದು ಸರಿ ಸುಮಾರು ಐದು ದಶಕಗಳೇ ಕಳೆದಿವೆ. ಮೊದಲ ನಾಲ್ಕು ದಶಕಗಳಲ್ಲಿ ಈ ಮೀಸಲಾತಿಗೆ ಅಂತಹ ಯಾವುದೇ ವಿರೋಧ ಕಂಡುಬರಲಿಲ್ಲ. ಈಗ ಕಳೆದೊಂದು ದಶಕದಲ್ಲಿ ವಿಶೇಷವಾಗಿ ಮೀಸಲಾತಿ ವಿಸ್ತರಣೆಯ ವಿವಿಧ ಹಂತಗಳಲ್ಲಿ ಅಪಸ್ವರಗಳೆದ್ದು, ಅದು ವ್ಯಾಪಕಗೊಳ್ಳುತ್ತಿದೆ. ಅಂದರೆ ಮೀಸಲಾತಿ ತತ್ವದ ಬಗ್ಗೆ ಹೆಚ್ಚೇನೂ ತಕರಾರಿಲ್ಲ; ಆದರೆ ಜಾರಿಯಾದ ರೀತಿ-ನೀತಿ ಹಾಗೂ ಅದರ ಅನುಭವಗಳು ಹಲವು ನೆಲೆಗಳಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಿವೆ. ಈ ಪ್ರತಿಭಟನೆಗಳ ಒಂದು ನೆಲೆ ಮೀಸಲಾತಿಯ ಸದ್ಯದ ಸ್ವರೂಪವನ್ನು ಪ್ರಶ್ನಿಸುತ್ತಿದ್ದರೆ, ಇನ್ನೊಂದು ನೆಲೆ ಸದ್ಯದ ಜಾಗತೀಕರಣದ ಸಂದರ್ಭದಲ್ಲಿ ಮೀಸಲಾತಿಯ ಪ್ರಸ್ತುತತೆಯನ್ನೇ ಪ್ರಶ್ನಿಸುತ್ತಿದೆ. ಅಂದರೆ ಮೊದಲ ನೆಲೆ ಮೀಸಲಾತಿಯ ಸಾರಾಸಗಟುತನವನ್ನು ಪ್ರಶ್ನಿಸುತ್ತಿದ್ದರೆ, ಎರಡನೆಯ ನೆಲೆ ಅದರ ಸಾರ್ವಕಾಲಿಕತೆಯನ್ನು ಪ್ರಶ್ನಿಸುತ್ತದೆ.
ಒಂದು ಜಾತಿಯಲ್ಲಿ ಅದು ಮೇಲು ಅಥವಾ ಕೆಳಜಾತಿಯೇ ಆಗಿರಲಿ - ನೆಲೆ ನಿಂತವರಿಗೆ, ಈ ಪ್ರಶ್ನೆಗಳು ಅಸಂಗತವಾಗಿ ಕಂಡಾವು. ಆದರೆ ಮೀಸಲಾತಿ ತತ್ವವನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದು, ನಾವು ಜಾತಿ ಮೀರಿ ನಿಂತು ಒಟ್ಟಾರೆ ಸಮಾಜದ ಸಾರ್ವತ್ರಿಕ ಆರೋಗ್ಯದ ದೃಷ್ಟಿಯಿಂದ ಯೋಚಿಸಿದಾಗ. ಹೀಗಿರುವಾಗ ಮೀಸಲಾತಿ ವಿರೋಧವನ್ನು ಅರ್ಥಮಾಡಿಕೊಳ್ಳಲು ಕೂಡಾ ಜಾತಿ ಮೀರಿ ನಿಲ್ಲಬೇಕಾದ್ದು ನಮ್ಮ ಧರ್ಮವೇ ಆಗಿದೆ. ಅದ್ದರಿಂದ ಮೀಸಲಾತಿ ವಿರೋಧೀ ಪ್ರತಿಭಟನೆಗಳನ್ನು ಜಾತಿ ನೆಲೆಯ ಆಧಾರದ ಮೇಲೆ, ಅಂದರೆ ಕೇವಲ ಮೇಲ್ಜಾತೀಯತೆಯ ಆಧಾರದ ಮೇಲೆ ತಳ್ಳಿ ಹಾಕದೇ - ಹಾಗೆ ಮಾಡಿದವರು ಕೆಳ ಜಾತೀಯತೆಯ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ - ಐದು ದಶಕಗಳ ಈ ಮೀಸಲಾತಿ ಜಾರಿ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗಳ ನೆಲೆಗಳನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳಲೆತ್ನಿಸಿ ತೀರ್ಮಾನಗಳಿಗೆ ಬರಬೇಕಾಗುತ್ತದೆ.
ಮೊದಲ ನೆಲೆ, ಮೀಸಲಾತಿಯ ಸಾರಾಸಗಟುತನದ ಪ್ರಶ್ನೆಯನ್ನೊಳಗೊಂಡದ್ದು. ಹಿಂದುಳಿದ ವರ್ಗಗಳೆಂದು ಗುರುತಿಸಲ್ಪಟ್ಟಿರುವ ಎಲ್ಲ ಜಾತಿಗಳಿಗೂ ಸಮಾನ ಮಾನದಂಡಗಳ ಮೀಸಲಾತಿ ಅಗತ್ಯವೇ ಎಂಬ ಪ್ರಶ್ನೆ ಇದು. ಈ ಹಿಂದುಳಿದ ಜಾತಿಗಳಲ್ಲಿ ಕೆಲವು ಆಧುನಿಕ ಜಮೀನ್ದಾರೀ ಅಥವಾ ಕಸುಬುದಾರಿಕೆಗೆ ಪರಿವರ್ತಿತವಾದ ವರ್ಗಗಳಾಗಿದ್ದು ಇವು ಇತರೆ ಹಿಂದುಳಿದ ಜಾತಿಗಳಿಗೆ ಹೋಲಿಸಿದರೆ ಆರ್ಥಿಕ ಹಾಗೂ ಸಾಮಾಜಿಕ ಮುನ್ನಡೆಯ ಚೇತನವನ್ನು ಗಳಿಸಿಕೊಂಡಿರುವಂಥವುಗಳಾಗಿವೆ. ಈ ವರ್ಗಗಳೇ ಸಹಜವಾಗಿ ಮೀಸಲಾತಿಯ ಪ್ರಯೋಜನದ ಬಹುಭಾಗವನ್ನು ಪಡೆಯಲು ಶಕ್ಯವಾಗಿವೆ. ಇದು ಅನೇಕ ಮಾದರಿ ಸಮೀಕ್ಷೆಗಳಿಂದ ಸಾಬೀತಾಗಿದೆ. ಇದರ ಪರಿಣಾಮವೆಂದರೆ ಆಧುನೀಕರಣದ ಅನುಕೂಲಗಳಿಂದ ಇನ್ನೂ ವಂಚಿತವಾಗಿರುವ ಜಾತಿಗಳು ಮೀಸಲಾತಿಯಿಂದ ಕೂಡಾ ವಂಚಿತವಾಗಿವೆ. ಈ ಕಾರಣದಿಂದಾಗಿಯೇ ಸರ್ವೋಚ್ಛ ನ್ಯಾಯಾಲಯವು ಹಿಂದುಳಿದ ಜಾತಿ ಮೀಸಲಾತಿ ವ್ಯಾಪ್ತಿಯಿಂದ ಅನುಕೂಲಸ್ಥ ವರ್ಗವನ್ನು ಹೊರಗಿಡಬೇಕೆಂದು ಸೂಚಿಸಿದೆ. ಆದರೆ ಇದು ಯಾವುದೇ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಗಂಭೀರ ಪರಿಗಣನೆಗೆ ಒಳಗಾಗಿಲ್ಲ. ಹೀಗಾಗಿ ದುರ್ಬಲ ಜಾತಿಗಳಿಗೆ ಬದಲಾಗಿ ಅದರಲ್ಲಿನ ಪ್ರತಿಷ್ಠಿತ ವರ್ಗಗಳೇ ಮೀಸಲಾತಿ ಪಡೆದು ಬರುತ್ತಿರುವುದು ತಮ್ಮ ವರ್ಗಕ್ಕಾಗುತ್ತಿರುವ ಅನ್ಯಾಯ ಎಂದು ವಾದಿಸಿ ಪ್ರತಿಭಾವಾದಿಗಳು ಸದ್ಯದ ಮೀಸಲಾತಿ ಪದ್ಧತಿಯನ್ನು ವಿರೋಧಿಸುತ್ತಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆರ್ಥಿಕವಾಗಿ ಮುಂದುವರಿದ ಕೆಳಜಾತಿಗಳಿಗೂ ಮೀಸಲಾತಿ ಒದಗಿಸುವುದಾದರೆ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೂ ಮೀಸಲಾತಿ ಒದಗಿಸಬೇಕಾಗುತ್ತದೆಂದು ಇವರು ವಾದಿಸಿದರೆ ಅದನ್ನು ತಳ್ಳಿಹಾಕುವಂತೆಯೂ ಇಲ್ಲ. ಆದರೆ ಇದು ಚಾರಿತ್ರಿಕ ಅನ್ಯಾಯದ ವಾದವನ್ನೇ ಅಲ್ಲಗಳೆದು, ಮೀಸಲಾತಿ ತತ್ವವನ್ನೇ ಅಪಹಾಸ್ಯಕ್ಕೀಡುಮಾಡುತ್ತದೆ. ಕರ್ನಾಟಕ ಸರ್ಕಾರವೂ ಸೇರಿದಂತೆ ಅನೇಕ ಸರ್ಕಾರಗಳು ಯಾವುದೇ ವ್ಯವಸ್ಥಿತ ಸಮೀಕ್ಷೆಗಳ ಆಧಾರವಿಲ್ಲದೇ ಕೇವಲ ರಾಜಕೀಯ ಒತ್ತಡದಿಂದಾಗಿ ಹೆಚ್ಚೆಚ್ಚು ಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸುವ ಮೂಲಕ ಮಾಡಿರುವುದೂ ಇದನ್ನೇ. ಇದರಿಂದಾಗಿ ಮೀಸಲಾತಿ ತತ್ವದ ಕಾರ್ಯಾಚರಣೆಯೇ ದಾರಿ ತಪ್ಪಿ, ಅದರ ಉದ್ದೇಶಗಳೇ ವಿಚಲಿತವಾಗುತ್ತ ಹೋಗಿ, ಸಲ್ಲದ ದಾಳಿಗೆ ಈಡಾಗುತ್ತವೆ ಈಗ ಹಾಗಿರುವ ಹಾಗೆ.
ಇದೇ ನೆಲೆಯ ಇನ್ನೊಂದು ಪ್ರಶ್ನೆಯೆಂದರೆ, ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೂ ಅನ್ವಯವಾಗುವಂತೆ, ಒಮ್ಮೆ ಮೀಸಲಾತಿ ಪಡೆದು ಮೇಲ್ಮುಖ ಚಲನೆಗೆ ಒಳಗಾದ ಕುಟುಂಬಕ್ಕೆ ಮತ್ತೆ ಮೀಸಲಾತಿ ಸೌಲಭ್ಯ ಬೇಕೇ ಎಂಬುದು. ತಂದೆಯೋ, ತಾಯಿಯೋ ಒಮ್ಮೆ ಮೀಸಲಾತಿಯಿಂದ ಸಾಮಾಜಿಕ ಚೇತನ ಪಡೆದು ಒಂದು ಹಂತ ತಲುಪಿದ ಮೇಲೂ ಅವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ನೀಡುವ ಮೂಲಕ ಆ ಸೌಲಭ್ಯದಿಂದ ವಂಚನೆಯಾಗುವುದಿಲ್ಲವೇ ಎಂಬ ಪ್ರಶ್ನೆ ಇದು. ಅವಕಾಶಗಳು ಕಡಿಮೆಯಾಗುತ್ತಾ, ಸ್ಪರ್ಧೆ ತೀವ್ರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಪ್ರಶ್ನೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ನಿಜ, ಇಲ್ಲಿ ಮೊದಲ ಮೀಸಲಾತಿ ಸೌಲಭ್ಯದಿಂದ ಆ ಕುಟುಂಬ ತಲುಪಿರುವ ಸಾಮಾಜಿಕ ಆರ್ಥಿಕ ಸ್ಥಿತಿಯು, ಆ ಕುಟುಂಬದ ಮುಂದಿನ ತಲೆಮಾರನ್ನು ಮಾನವ ಸಂಪನ್ಮೂಲಗಳ ನೆಲೆಯಲ್ಲಿ ಎಷ್ಟರಮಟ್ಟಿಗೆ ಸಜ್ಜುಗೊಳಿಸಿದೆ ಎಂಬುದರ ಆಧಾರದ ಮೇಲೆ ಈ ಹಂತವನ್ನು ನಿರ್ಧರಿಸಬೇಕಾಗಿದೆ. ಉದಾಹರಣೆಗೆ, ಮೇಲ್ವಿಚಾರಣೆ ಹುದ್ದೆಗೆ ಸಮನಾದ ಎಲ್ಲ ಹುದ್ದೆಗಳನ್ನು ಆ ಕುಟುಂಬಕ್ಕೆ ಮೀಸಲಾತಿ ನಿಲ್ಲಿಸಲು ನಿರ್ಗಮನ ( ಕಟ್ ಆಫ್) ಹಂತದ ಹುದ್ದೆಗಳೆಂದು ಗುರುತಿಸಲು ಸಾಧ್ಯವೇ ನೋಡಬೇಕು. ಹಾಗೇ, ಮೀಸಲಾತಿ ಕಾರ್ಯಕ್ರಮವನ್ನು ಉನ್ನತ ಹುದ್ದೆಗಳಿಗೆ ವಿಸ್ತರಿಸಿದಂತೆ, ಕೆಳಹಂತದ ಹುದ್ದೆಗಳಲ್ಲಿ ಮೀಸಲಾತಿ ಈಗ ಎಷ್ಟರ ಮಟ್ಟಿಗೆ ಅಗತ್ಯ ಎಂಬುದನ್ನು ಪರಿಶೀಲಿಸತೊಡಗಬೇಕು. ಇದನ್ನು ವಿವಿಧ ಸಾಮಾಜಿಕ ಹಿನ್ನೆಲೆಗಳುಳ್ಳ ವೃತ್ತಿಪರರಿಂದ ಕೂಡಿದ ಆಯೋಗಕ್ಕೆ ಒಪ್ಪಿಸಬೇಕು. ಅದರ ಶಿಫಾರ್ಸುಗಳಿಗೆ ಅನುಗುಣವಾಗಿ ಅಗತ್ಯವೆನಿಸಿದರೆ, ಕೆಳ ಹಂತಗಳಿಂದ ಮೊದಲ್ಗೊಂಡು ಮೀಸಲಾತಿಯನ್ನು ಕ್ರಮೇಣ ಶೇಕಡಾವಾರು ಕಡಿಮೆ ಮಾಡುತ್ತಾ ಹೋಗಿ ಸಂಪೂರ್ಣವಾಗಿ ತೆಗೆದುಹಾಕುವ ಕಾಲಮಿತಿಯುಳ್ಳ ಕಾರ್ಯಕ್ರಮವೊಂದನ್ನು ರೂಪಿಸಬೇಕು. ಇದಕ್ಕೆ ಮೊದಲಾಗಿ ಪರಿಶಿಷ್ಟ ಜಾತಿ ವರ್ಗಗಳೂ ಸೇರಿದಂತೆ ಸಮಾಜದ ಎಲ್ಲ ವರ್ಗಗಳನ್ನೂ ಮಾನಸಿಕವಾಗಿ ಸಿದ್ಧಗೊಳಿಸಬೇಕು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಝಾಡಮಾಲಿ ಹುದ್ದೆಗಳಿಗೆ ಬ್ರಾಹ್ಮಣರೂ ಅರ್ಜಿ ಸಲ್ಲಿಸಿ, ಪರಿಶಿಷ್ಟ ಜಾತಿ ಸಂಘಟನೆಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿರುವ ವಿಚಿತ್ರ ಸನ್ನಿವೇಶವನ್ನು ನಾವು ಬಹು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.
ಇನ್ನು ಎರಡನೆಯ ನೆಲೆಯ ಸಾರ್ವಕಾಲಿಕತೆಯ ಪ್ರಶ್ನೆ ಎಂದರೆ, ಎಷ್ಟು ವರ್ಷ ಈ ಮೀಸಲಾತಿ? ಜಾತಿ ಮೂಲವಾದ ಅಸಮಾನತೆಯಿರುವವರೆಗೆ ಈ ಮೀಸಲಾತಿ ಎಂಬುದು ಇದಕ್ಕೆ ಸರಿಯಾದ ತಾತ್ವಿಕ ಉತ್ತವಿರಬಹುದು. ಆದರೆ ವಾಸ್ತವ ಮಟ್ಟದ ಉತ್ತರ? ಜಾತಿಮೀಸಲಾತಿ ತತ್ವದ ಮೂಲ ಪ್ರತಿಪಾದಕರಾದ ಡಾ. ಅಂಬೇಡ್ಕರರೇ ಮೀಸಲಾತಿಯ ಶಾಶ್ವತ ವ್ಯವಸ್ಥೆಯಾಗಬಾರದೆಂಬ ಎಚ್ಚರದಿಂದ ಹತ್ತು ವರ್ಷಗಳ ನಂತರ ಈ ಮೀಸಲಾತಿ ನೀತಿಯನ್ನು ಮರುವಿಮರ್ಶೆಗೆ ಒಳಪಡಿಸಬೇಕೆಂದು ಸೂಚಿಸಿದ್ದರೂ, ಇಂತಹ ಐದು ಹತ್ತು ವರ್ಷಗಳು ಕಳೆದುಹೋದರೂ ಮೀಸಲಾತಿ ನೀತಿ ತನ್ನ ವ್ಯಾಪ್ತಿಯನ್ನು ಕುಗ್ಗಿಸಿಕೊಳ್ಳುವುದಿರಲಿ, ವಿವಿಧ ರೀತಿಯಲ್ಲಿ ಹಿಗ್ಗಿಸಿಕೊಳ್ಳುತ್ತಲೇ ಹೋಗುತ್ತಿದೆ. ಅಲ್ಲದೇ ಮುಕ್ತ ಸ್ಪರ್ಧೆ ಆಧಾರಿತ ಜಾಗತೀಕರಣದ ಪ್ರತಿಪಾದಕರಾದ ನಮ್ಮ ಪ್ರಧಾನಿ ಮನಮೋಹನಸಿಂಗರೂ ಈಚೆಗೆ ಜಾತಿ ಮೀಸಲಾತಿಯನ್ನು ಖಾಸಗೀ ವಲಯದಲ್ಲೂ ಪ್ರತಿಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ನಿವಾಸಿ ಹಾಗೂ ಅನಿವಾಸಿ ಶ್ರೀಮಂತರಿಗಾಗಿರುವ ಕ್ಯಾಪಿಟೇಷನ್ ಆಧಾರಿತ ಹೊಸ ಹಾಗೂ ಶಾಶ್ವತವಾದ ಮೀಸಲಾತಿ ಪ್ರಭೇದಗಳಿಗೆ ಬೆಂಬಲ ಗಳಿಸಿಕೊಳ್ಳುವ ಹುನ್ನಾರವಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಇವೆರೆಡೂ ನಿಜವಾದ ಆತಂಕಕಾರಿ ಬೆಳವಣಿಗೆಗಳು. ನಮ್ಮ ದುರ್ಬಲ ವರ್ಗಗಳನ್ನು ಶಾಶ್ವತ ದುರ್ಬಲವರ್ಗಗಳನ್ನಾಗಿ ಪರಿವರ್ತಿಸಿ ಆರ್ಥಿಕ ಸಬಲರ ಸಾಮ್ರಾಜ್ಯ ವಿಸ್ತರಣೆಗೆ ಅವರನ್ನು ಕಾಲಾಳುಗಳಾಗಿ ಬಳಸಬಹುದಾದ ಈ ಬೆಳವಣಿಗೆಗಳು, ಸದ್ಯದ ಮೀಸಲಾತಿ ನೀತಿಯಲ್ಲಿ ಅಂತರ್ಗತವಾಗಿರುವ ಅಪಾಯಗಳನ್ನು ಸಾಬೀತುಪಡಿಸುವಂತಿದೆ. ಹೀಗಾಗಿ ಮೀಸಲಾತಿ ನೀತಿಯು ತನ್ನ ಸದ್ಯದ ಸ್ವರೂಪದಲ್ಲಿ ತನ್ನೆಲ್ಲಾ ತಾತ್ವಿಕತೆಯನ್ನು ಕಳೆದುಕೊಂಡು ತನ್ನ ಮೂಲ ಉದ್ದೇಶವಾದ ಸಾಮಾಜಿಕ ಏಕೀಕರಣದ ಆಶಯವನ್ನು ಹುಟ್ಟಿಸುವಲ್ಲಿ ವಿಫಲವಾಗಿದೆ.
ಇದಕ್ಕೆ ಮುಖ್ಯ ಕಾರಣ ಮೀಸಲಾತಿ ಕಾರ್ಯಕ್ರಮ ವಾಸ್ತವ ಮಟ್ಟದಲ್ಲಿ ಸಾಮಾಜಿಕ `ಲಾಭದ ಜಡ ಸಾಧನವಾಗಿ ಪರಿವರ್ತಿತಗೊಂಡು ಸಾಮಾಜಿಕ ಎಚ್ಚರದ, ಉನ್ನತಿಯ ಹಾಗೂ ಏಕೀಕರಣದ ಚೈತನ್ಯ ಶಕ್ತಿಯಾಗಿ ಬೆಳೆದೇ ಇಲ್ಲದಿರುವುದು. ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡೇ ಮೀಸಲಾತಿ ನೀತಿಯನ್ನು ಜಾರಿಗೆ ತರುತ್ತಿರುವುದರ ದುರಂತವಿದು. ಈ ಸಂಬಂಧ ಸರ್ಕಾರವಾಗಲೀ, ಮೀಸಲಾತಿ-ಜಾತಿ ಪ್ರಶ್ನೆ ವಿವಾದಕ್ಕೆ ಸಿಕ್ಕಾಗ ಮಾತ್ರ ಎಚ್ಚರಗೊಳ್ಳುವ ಸಾಮಾಜಿಕ ನ್ಯಾಯ ಚಳುವಳಿಕಾರರಾಗಲೀ, ಅಥವಾ ಸಂಘಟನೆಗಳಾಗಲೀ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದೇ ತಂತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲೇ ತೃಪ್ತಗೊಂಡಿವೆ. ಹೀಗಾಗಿ ಈಗ ಮೀಸಲಾತಿಯ ಜೊತೆಜೊತೆಗೇ ಜಾತಿವಿನಾಶ ಚಳುವಳಿಯನ್ನು ಸಮರೋಪಾದಿಯಲ್ಲಿ ಪುನಾರಚಿಸಬೇಕಿದೆ. ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ; ಅವರಿಗೆ ಕೆಲಸದಲ್ಲಿ ಹಾಗೂ ಅವರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ; ಜಾತಿ ಆಧಾರಿತ ಕಾಲೋನಿಗಳ, ವಿದ್ಯಾರ್ಥಿನಿಲಯಗಳ ಹಾಗೂ ಸಂಘಸಂಸ್ಥೆಗಳ ರದ್ಧತಿ; ಎಲ್ಲಾ ಪೂಜಾ ಸ್ಥಳಗಳನ್ನು ಸಾರ್ವಜನಿಕ ಸ್ಥಳಗಳೆಂದು ಘೋಷಿಸಿ ಅಲ್ಲಿ ಯಾವುದೇ ಜಾತಿ ತಾರತಮ್ಯ ಆಚರಣೆಗಳನ್ನು ಶಿಕ್ಷಾರ್ಹ ಅಪರಾಧಗಳನ್ನಾಗಿ ಮಾಡುವುದು; ಹಾಗೂ ಇದಕ್ಕಾಗಿ ನ್ಯಾಯಾಂಗ ಅಧಿಕಾರಗಳನ್ನುಳ್ಳ ಪ್ರಾಧಿಕಾರವೊಂದನ್ನು ಸ್ಥಾಪಿಸುವುದು; ಜಾತಿ ಸಂಬಂಧೀ ವೃತ್ತಿಗಳಲ್ಲಿ (ಉದಾ: ಪೂಜಾರಿಕೆ, ಪೌರ ಕಾರ್ಮಿಕ) ವಿಜಾತಿಯವರಿಗೆ ಪ್ರೋತ್ಸಾಹ ಕಾರ್ಯಕ್ರಮ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಸದ್ಯದ ಸಾಮಾಜಿಕ ರಚನೆಯ ವೈರುಧ್ಯಗಳು ಮತ್ತು ಸರ್ವರ ಹಿತಕ್ಕಾಗಿ ಅವುಗಳನ್ನು ತುರ್ತಾಗಿ ನಿವಾರಿಸಬೇಕಾದ ಅಗತ್ಯವು ಮಕ್ಕಳಿಗೆ ಮನದಟ್ಟಾಗುವಂತೆ ಜಾತಿವ್ಯವಸ್ಥೆ ಚರಿತ್ರೆಯ ಪರಿಚಯವನ್ನು ಅಳವಡಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಈ ಪುನಾರಚನೆ ಒಳಗೊಂಡಿರಬೇಕು. ಇದರಲ್ಲಿ ಸರ್ಕಾರದ ಜೊತೆಗೆ ಈಗ ಮೀಸಲಾತಿ ಸಂಬಂಧ ಪರಸ್ಪರ ದೂಷಣೆಯಲ್ಲಿ ತೊಡಗಿರುವ ಗುಂಪುಗಳು ಮೀಸಲಾತಿ ಪರ ಅಥವಾ ವಿರೋಧಿ ಹೋರಾಟಗಳಲ್ಲಿ ತೋರಿದಷ್ಟೇ ಆಸಕ್ತಿಯೊಂದಿಗೆ ಸಕ್ರಿಯವಾಗಿ ಭಾಗಿಯಾಗಬೇಕಿದೆ. ಇಲ್ಲದೇ ಹೋದಲ್ಲಿ ಅವುಗಳ ಸದ್ಯದ ಹೋರಾಟಗಳು ಅನುಮಾನಾಸ್ಪದವೆನಿಸಿಕೊಳ್ಳುತ್ತವೆ.
ಸದಾ ದುರ್ಬಲತೆಯ ಸುರಕ್ಷೆಯಲ್ಲಿರಬಯಸುವ ಯಾವುದೇ ಸಾಮಾಜಿಕ ಗುಂಪು ಒಟ್ಟಾರೆ ಸಮಾಜಕ್ಕೆ ಕಂಟಕಪ್ರಾಯವೇ ಆಗಿರುತ್ತದೆ. ಅದು ಪ್ರತ್ಯೇಕತೆಯಲ್ಲಿ ಸ್ವತಃ ದುರ್ಬಲವಾಗುತ್ತಾ ಹೋಗುವ ಮೂಲಕ ಸಮಾಜದ ಸೃಜನಶೀಲತೆಯನ್ನು ಮುಕ್ಕುಗೊಳಿಸಿ ಒಟ್ಟಾರೆ ಸಮಾಜದ ಮುಂದುವರಿಕೆಗೂ ಅಡ್ಡಿಯಾಗಿ ನಿಲ್ಲುತ್ತದೆ. ಆದ್ದರಿಂದ ಮೀಸಲಾತಿ ಎಂದರೆ ಅವಕಾಶ ವಂಚಿತ ವರ್ಗದವರೆಲ್ಲರಿಗೂ ಎಲ್ಲ ಹಂತಗಳ ಕೆಲಸ ಕೊಡಿಸುವ ನಿರುದ್ಯೋಗ ಅಥವಾ ಬಡತನ ನಿವಾರಣಾ ಕಾರ್ಯಕ್ರಮವಲ್ಲ, ಬದಲಿಗೆ ಆ ವರ್ಗಗಳಲ್ಲಿ ಬದಲಾದ ಸಾಮಾಜಿಕ ಸಂದರ್ಭದಲ್ಲಿ ಇತರ ವರ್ಗಗಳೊಂದಿಗೆ ಒಟ್ಟಾರೆ ಸಮಾಜದ ಹಿತಕ್ಕಾಗಿ ಹೆಗಲು ಕೊಟ್ಟು ದುಡಿಯುವ ಹೊಸರೀತಿಯ ದಕ್ಷತೆ ಮತ್ತು ಆತ್ಮವಿಶ್ವಾಸ ರೂಢಿಸುವ ಸಾಮಾಜಿಕ ಏಕೀಕರಣದ ಪ್ರೇರಕ ಸಾಧನ ಮಾತ್ರವಾಗಿದೆ ಎಂಬುದನ್ನು ಸಂಬಂಧಪಟ್ಟವರೆಲ್ಲರೂ ಮನಗಾಣಬೇಕಿದೆ. ಇಲ್ಲದೇ ಹೋದಲ್ಲಿ ಸದ್ಯದ ಮೀಸಲಾತಿ ನೀತಿಯು ಕೆಲವು ವರ್ಗಗಳಲ್ಲಿ ಎಂದೂ ತಣಿಯದ ನಿರಂತರ ಸಾಮಾಜಿಕ ದಾಹವನ್ನೂ, ಇನ್ನು ಕೆಲವು ವರ್ಗಗಳಲ್ಲಿ ಎಂದೂ ಆರದ ಸಾಮಾಜಿಕ ಅಶಾಂತಿಯನ್ನೂ ಉಂಟುಮಾಡುವ ರಾಕ್ಷಸ ಸಾಧನವಾಗಿ ಪರಿವರ್ತಿತವಾಗುವ ಎಲ್ಲ ಸಾಧ್ಯತೆಗಳಿವೆ. ಇಂದಿನ ಜಾಗತೀಕರಣ ಸಂದರ್ಭದ ಸಾಮಾಜಿಕ ಆರ್ಥಿಕ - ಸಾಂಸ್ಕೃತಿಕ ಒತ್ತಡಗಳ ಮಧ್ಯೆ ಇಂತಹ ಬೆಳವಣಿಗೆ ಉಂಟುಮಾಡಬಹುದಾದ ಸಾಮಾಜಿಕ ಅನಾಹುತಗಳು ಊಹಾತೀತವಾಗಿವೆ. ಈ ದೃಷ್ಟಿಯಿಂದ ಜ್ಞಾನ ಆಯೋಗ(ನಾಲೆಜ್ ಕಮಿಷನ್)ದ ಓರ್ವ ಸದಸ್ಯರು ಮುಂದಿಟ್ಟಿರುವ, ಇನ್ನು ಹದಿನೈದು ವರ್ಷಗಳಲ್ಲಿ ಯಾವುದೇ ಮೀಸಲಾತಿಯ ಅಗತ್ಯವಿಲ್ಲದಂತಹ ಸಾಮಾಜಿಕ ವಾತಾವರಣ ನಿರ್ಮಾಣ ಮಾಡುವುದೆಂದು ಹೇಳಲಾದ, ಸರ್ವರಿಗೂ ಸಮಾನ ಗುಣಮಟ್ಟದ ಶಾಲಾಶಿಕ್ಷಣ ಕಾರ್ಯಕ್ರಮದ ಪ್ರಸ್ತಾಪವು, ಸಂಬಂಧಪಟ್ಟವರಲ್ಲೆ ಪರಿಶೀಲನೆಗೆ ಅರ್ಹವಾಗಿದೆ. ಅದೇನೇ ಇರಲಿ, ಸದ್ಯದ ಮೀಸಲಾತಿ ನೀತಿಯನ್ನು ಪೂರಕ ಕಾರ್ಯಕ್ರಮಗಳೊಂದಿಗೆ ಈವರೆಗಿನ ಅನುಭವದ ಆಧಾರದ ಮೇಲೆ ಅದರಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವ ಮೂಲಕ ಅದು ದೀರ್ಘಕಾಲಿಕ ದೃಷ್ಟಿಯಲ್ಲಿ ಸರ್ವರ ಉನ್ನತಿಗೂ ಬದ್ಧವಾದ ಹಾಗೂ ಒಂದು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕಾದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂಬುದನ್ನು ಸಮಾಜದ ಎಲ್ಲ ವರ್ಗಗಳಿಗೆ ಮನವರಿಕೆ ಮಾಡಿಕೊಡಬೇಕಿದೆ.
ಇನ್ನು ಮೀಸಲಾತಿ ಪರವಾಗಿ ಇಂದು ಸಾರಾಸಗಟಾಗಿ ವಾದಿಸುತ್ತಿರುವವರು ಮುಂದಿಟ್ಟಿರುವ ಕೆಲವು ಸಲಹೆ ಬೇಡಿಕೆಗಳನ್ನು ಪರಿಶೀಲಿಸೋಣ. ಮೊದಲನೆಯದು ಕುಗ್ಗುತ್ತಿರುವ ಸರ್ಕಾರೀ ವಲಯಕ್ಕೆ ಪ್ರತಿಯಾಗಿ ಹಿಗ್ಗುತ್ತಿರುವ ಖಾಸಗೀ ವಲಯದಲ್ಲಿ ಮೀಸಲಾತಿ ಜಾರಿಯ ಸಲಹೆ. ಇದು ರಾಜಕೀಯವಾಗಿ ಖಾಸಗೀಕರಣವನ್ನು ಒಂದು ನೀತಿಯಾಗಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ಒಪ್ಪಿಕೊಳ್ಳುತ್ತಿರುವ ಮೊದಲ ಸೂಚನೆಯಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಒತ್ತಟ್ಟಿಗಿಟ್ಟು ಯೋಚಿಸಿದರೂ ಎಲ್ಲ ರೀತಿಯ ಮೀಸಲಾತಿಗಳನ್ನೂ ಕ್ರಮೇಣ ಕೊನೆಗಾಣಿಸಬೇಕಾದ ಅಗತ್ಯವನ್ನು ಸಮಾಜದ ಹೆಚ್ಚೆಚ್ಚು ಭಾಗಗಳು ಹಿಂದೆಂದಿಗಿಂತ ಇಂದು ಹೆಚ್ಚು ಮನಗಾಣುತ್ತಿರುವಾಗ ಮೀಸಲಾತಿ ವಿಸ್ತರಣೆಯ ಆ ಸಲಹೆ ಮೊದಲ ನೋಟಕ್ಕೆ ಸರಿಯೆನಿಸುವುದಿಲ್ಲ. ಜೊತೆಗೆ ವೈಯುಕ್ತಿಕ ಸ್ಪೂರ್ತಿ ಸಾಹಸ ಮುಕ್ತ ಸ್ಪರ್ಧೆಯನ್ನೇ ನಂಬಿ, ಸಾಮಾಜಿಕ ನ್ಯಾಯವನ್ನು ನಂಬಿದ ಸರ್ಕಾರಿ ವಲಯವನ್ನು ಬಹು ಹಿಂದಿಕ್ಕಿ ಬೆಳೆಯುತ್ತಿರುವ ಖಾಸಗೀ ವಲಯದಲ್ಲೂ ಮೀಸಲಾತಿ ಕೇಳುವುದು ತಾತ್ವಿಕವಾಗಿ ವಿರೋಧಾಭಾಸದ ಸಂಗತಿಯಾಗುತ್ತದೆ. ಆದರೆ ಭಾರತದ ಖಾಸಗೀ ವಲಯವು ಲಾಭವೊಂದನ್ನೇ ಗುರಿಯಾಗಿಟ್ಟುಕೊಂಡು ಸರ್ಕಾರದಿಂದ ಅಂದರೆ ಜನಸಾಮಾನ್ಯರಿಂದ ಪೋಷಿಸಲ್ಪಟ್ಟ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡೇ ಬೆಳೆದಿದೆ. ಈ ವಲಯದಲ್ಲಿ ಇತ್ತೀಚಿನ ಸಂಸ್ಥೆಗಳಂತೂ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂಥವು ಕೋಟಿಗಟ್ಟಲೇ ಲಾಭ ಮಾಡಿ ಸಮಾಜದಲ್ಲಿ ವರಮಾನ ತಾರತಮ್ಯ ತಾರಕಕ್ಕೇರಿಸುವ ಮೂಲಕ ಶ್ರೀಮಂತಿಕೆ ಎಂದರೇ ಸಾಮಾಜಿಕ ಅಶ್ಲೀಲತೆ ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕ ಅಭಿರುಚಿ ಆದ್ಯತೆಗಳನ್ನು ಬುಡಮೇಲುಗೊಳಿಸಿವೆ. ಇದರಿಂದಾಗಿ ಉಂಟಾಗಿರುವ ಸಾಮಾಜಿಕ ಒತ್ತಡಗಳು ಹೆಚ್ಚುತ್ತಿರುವ ಅಕಾರಣ ಹಿಂಸೆಯ ವೈವಿಧ್ಯ ಹಾಗೂ ಅದರ ಆಧಾರದ ಮೇಲೆ ವಾಣಿಜ್ಯೋದ್ಯಮ ಸಂಸ್ಥೆಗಳಂತೆ ಬೆಳೆಯುತ್ತಿರುವ ಮಾನಸಿಕ ಶಾಂತಿ ಕೇಂದ್ರಗಳು, ಪದೇ ಪದೇ ಭಂಗಗೊಳ್ಳುತ್ತಿರುವ ಕಾನೂನು ಸುವ್ಯವಸ್ಥೆ ಪ್ರಕರಣಗಳ ಮೂಲಕ ಎದ್ದು ಕಾಣತೊಡಗಿದೆ.
ಅಲ್ಲದೇ ಈ ಸಂಸ್ಥೆಗಳ ಜಾತಿ ಸ್ವರೂಪವಂತೂ ನಮ್ಮ ಖಾಸಗೀ ವಲಯವು ಮೇಲ್ಜಾತಿಗಳಲ್ಲಿ ಪ್ರಕಟಗೊಳ್ಳುವ ಪ್ರತಿಭೆ ದಕ್ಷತೆಗಳ ಮೂಲಕ ಮಾತ್ರ ತಮ್ಮ ಸ್ವತ್ತು ನಿರ್ಮಾಣವಾಗಬಲ್ಲುದು ಎಂಬ ಮೂಢನಂಬಿಕೆಗೆ ತುತ್ತಾಗಿರುವುದನ್ನು ಸಾಬೀತುಪಡಿಸುತ್ತದೆ. ಹೀಗಾಗಿ ಈ ಸಂಸ್ಥೆಗಳ ಸಾಮಾಜಿಕ ಲೆಕ್ಕ ಪರೀಕ್ಷೆ ( ಸೋಷಿಯಲ್ ಆಡಿಟಿಂಗ್) ನಡೆಸಿ ಅವುಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಬೇಕಿದೆ. ಸಮಾಜ ಸೇವೆ ಎಂದರೆ ದಾನ ಧರ್ಮ ಮಾತ್ರವಲ್ಲ, ಅದಕ್ಕಿಂತ ಮುಖ್ಯವಾಗಿ ಅದು ಸಮಾನತೆಯ ಆಶಯವುಳ್ಳ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಕಾರ್ಯಕ್ರಮ; ಅದರ ಮೂಲಕ ಮಾತ್ರ ಯಾವುದೇ ಉದ್ಯಮ ಸಂಸ್ಥೆ ತನ್ನ ದಕ್ಷತೆಯ ಪರಿಕಲ್ಪನೆಗೆ ಹೊಸ ಆಯಾಮಗಳನ್ನು ಸೇರಿಸಿಕೊಂಡು ತಾನು ಸೃಷ್ಟಿಸುವ ಸ್ವತ್ತಿನ ಮೌಲ್ಯವನ್ನು ಮಾತ್ರವಲ್ಲ, ಮೌಲ್ವಿಕತೆಯನ್ನೂ ಹೆಚ್ಚಿಸಿಕೊಳ್ಳಬಹುದು. ಇದು ಮಾತ್ರ ತಾನು ಬದುಕುತ್ತಿರುವ ಅಭಿವೃದ್ಧಿಶೀಲ ಅಸಮಾನ ಸಮಾಜದಲ್ಲಿ ನಿಜವಾದ ಹಾಗೂ ಸ್ಥಿರವಾದ ಸಾಧನೆ ಎಂದು ಅವುಗಳಿಗೆ ತಿಳಿಹೇಳಬೇಕಿದೆ. ಈ ಸಂಬಂಧವಾಗಿ ಖಾಸಗಿ ವಲಯದ ಆರ್ಥಿಕತೆಯನ್ನೇ ಆಧರಿಸಿದ ಅಮೆರಿಕ ತನ್ನ ಕರಿ ಜನರ ಸಾಮಾಜಿಕ ಏಕೀಕರಣಕ್ಕಾಗಿ ಅಳವಡಿಸಿಕೊಂಡ ಸಕಾರಾತ್ಮಕ ಕ್ರಿಯಾಯೋಜನೆಯ ಕಡೆ ಅವುಗಳ ಗಮನ ಸೆಳೆಯಬೇಕಾಗಿದೆ.
ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದಲ್ಲಿ ಕರಿ ಜನರ ಹಕ್ಕುಗಳಿಗಾಗಿ ನಡೆದ ಚಳವಳಿಯ ಫಲವಾಗಿ ರೂಪುಗೊಂಡ ನಾಗರಿಕ ಹಕ್ಕುಗಳ ಕಾಯಿದೆಯಡಿ ಅಮೆರಿಕಾ ಸರ್ಕಾರವು ಕರಿಜನರು ಗಣನೀಯ ಸಂಖ್ಯೆಯಲ್ಲಿರುವ ತನ್ನ ೧೯ ರಾಜ್ಯಗಳಲ್ಲಿ ಈ ಕ್ರಿಯಾಯೋಜನೆಯನ್ನು ಜಾರಿಗೊಳಿಸಿ ಮಿಕ್ಕ ರಾಜ್ಯಗಳಲ್ಲಿ ಅದನ್ನು ಸ್ವಯಂ ಇಚ್ಛೆಗೆ ಬಿಟ್ಟಿದೆ. ಈ ಯೋಜನೆ ಯಾವುದೇ ಮೀಸಲಾತಿಯನ್ನು ಮೇಲಿನಿಂದ ಹೇರದೆ ಶಿಕ್ಷಣ ಹಾಗೂ ಉದ್ಯಮ ಸಂಸ್ಥೆಗಳು ರಾಷ್ಟ್ರದ ಸಾಮಾಜಿಕ ವೈವಿಧ್ಯತೆಯನ್ನು ತನ್ನ ಶಿಕ್ಷಣಾರ್ಥಿ ಹಾಗೂ ಸಿಬ್ಬಂದಿ ವಲಯದಲ್ಲಿ ಪ್ರತಿಬಿಂಬಿಸುವಂತೆ ಶಾಸನಾತ್ಮಕವಾಗಿ ಸೂಚಿಸುತ್ತದೆ. ಆಶ್ಚರ್ಯವೆಂದರೆ ಈ ಯೋಜನೆಯನ್ನು ಕಡ್ಡಾಯಗೊಳಿಸದ ರಾಜ್ಯಗಳ ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳೂ - ಹಾರ್ವರ್ಡ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೂ ಸೇರಿದಂತೆ ಅನುಷ್ಠಾನಕ್ಕೆ ತಂದಿವೆ. ಇದಕ್ಕೆ ಕಾರಣ ಎಲ್ಲರೀತಿಯ ಮಾನವ ಸಂಪನ್ಮೂಲಗಳ ಸೂಕ್ತ ಸಂಯೋಜನೆ ಮಾತ್ರ ಸಂಸ್ಥೆಯೊಂದರ ದಕ್ಷತೆಯನ್ನು ಎಲ್ಲ ರೀತಿಯಲ್ಲಿ ಹೆಚ್ಚಿಸಬಲ್ಲುದು ಎಂಬುದನ್ನು ಅಲ್ಲಿನ ಉದ್ಯಮಿಗಳು ಮನಗಂಡಿರುವುದು ಹಾಗೂ ಅಲ್ಲಿನ ಕರಿಜನರು ಯಾವುದೇ ಪೂರ್ವಗ್ರಹವಿಲ್ಲದೆ ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುತ್ತಿರುವುದು.
ಹೀಗಾಗಿ ಸ್ವತಃ ಉದ್ಯಮ ಸಂಸ್ಥೆಗಳೇ ಮಾಹಿತಿ ತಂತ್ರಜ್ಞಾನದ ಜಾಗತಿಕ ಸಂಸ್ಥೆ ಎನಿಸಿರುವ ಮೈಕ್ರೋಸಾಫ್ಟ್ ಕಂಪನಿ ಸೇರಿದಂತೆ ಕರಿ ಜನರಲ್ಲಿ ಪ್ರತಿಭಾವಂತರನ್ನು ಗುರುತಿಸಿ ವಿಶೇಷ ಶಿಕ್ಷಣ, ತರಬೇತಿ ನೀಡಿ ಅವರನ್ನು ತಮ್ಮ ಸಂಸ್ಥೆಗಳಲ್ಲಿ ಎಲ್ಲ ಹಂತಗಳ ಹುದ್ದೆಗಳಿಗೆ ನೇಮಿಸುತ್ತಿವೆ. ಆದರೆ ಇದಕ್ಕಾಗಿ ಆಯ್ಕೆ ಕೇವಲ ಅಂಕ ಗಳಿಕೆಯ ಮೇಲೆ ನಡೆಯದೇ ವ್ಯಕ್ತಿತ್ವ ಪರಿಶೀಲನೆಯ ಮೇಲೆ ಆಧರಿತವಾಗಿರುತ್ತದೆ. ಎಲ್ಲ ರೀತಿಯ ಸಾಮಾಜಿಕ ಹಿನ್ನೆಲೆಯುಳ್ಳ ಮತ್ತು ತನ್ನ ಪರಿಶ್ರಮಶೀಲತೆಯ ಬಗ್ಗೆ ಸ್ಪಷ್ಟತೆ ಹಾಗೂ ನಂಬಿಕೆಯುಳ್ಳ ವಿದ್ಯಾರ್ಥಿ, ನೌಕರ ವರ್ಗದಿಂದ ಕೂಡಿದ ಸಂಸ್ಥೆಗಳು ಮಾತ್ರ ತಮ್ಮ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಕೊಡುಗೆ ಸಲ್ಲಿಸಬಲ್ಲವು ಎಂಬ ನಂಬಿಕೆಯೇ ಈ ಕ್ರಿಯಾ ಯೋಜನೆಯ ಯಶಸ್ಸಿಗೆ ಕಾರಣವಾಗಿರುವುದು. ಅಮೆರಿಕಾದ ಮಾಜಿ ರಕ್ಷಣಾ ಮಂತ್ರಿ ಕಾಲಿನ್ ಪೊವೆಲ್ ಹಾಗೂ ಹಾಲಿ ವಿದೇಶಾಂಗ ಮಂತ್ರಿ ಕಾಂಡೊಲಿನಾ ರೈಸ್ ಈ ಯೋಜನೆಯ ಉತ್ಕೃಷ್ಟ ಫಲಗಳು. ಜಾತಿ ವ್ಯವಸ್ಥೆಯ ಪೂರ್ವಾಗ್ರಹಗಳಿಲ್ಲದ ಸೂಕ್ತ ವಾತಾವರಣ ನಿರ್ಮಾಣವಾದಲ್ಲಿ ಎಲ್ಲ ಮಾದರಿಗಳಿಗೂ ಅಮೆರಿಕಾದ ಕಡೆ ನೋಡುವ ಹಾಗೂ ಉದಾಹರಣೆ ನೀಡುವ ನಮ್ಮ ಖಾಸಗಿ ಉದ್ಯಮಪತಿಗಳನ್ನು ಈ ವಿಷಯದಲ್ಲಿ ಒಪ್ಪಿಸುವುದು ಕಷ್ಟವಾಗಲಾರದು. ಸರ್ಕಾರ ಹಾಗೂ ಸಾಮಾಜಿಕ ನ್ಯಾಯದ ಪರವಾದ ಸಂಘಟನೆಗಳು ಈ ದಿಸೆಯಲ್ಲಿ ಕೂಡಲೇ ಪ್ರಯತ್ನಗಳನ್ನು ಆರಂಭಿಸಬೇಕಿದೆ.
ಮೀಸಲಾತಿ ಪರವಾದಿಗಳ ಇನ್ನೊಂದು ಸಲಹೆ, ಜಾತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ. ಮೀಸಲಾತಿ ನೀತಿಯ ಅಸಮರ್ಪಕ ಅನುಷ್ಠಾನದಿಂದ ಉಂಟಾದ ಹತಾಶೆಯಿಂದ ಮೂಡಿರಬಹುದಾದ ಈ ಸಲಹೆ ಸಮಾಜ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಅಪಾಯಕಾರಿ ಹಾಗೂ ಹಿಮ್ಮುಖಪ್ರಗತಿಯಾಗಿದೆ. ಏಕೆಂದರೆ ಇದು ಮೀಸಲಾತಿಯನ್ನು ಅಗತ್ಯಗೊಳಿಸಿದ ಜಾತಿ ವ್ಯವಸ್ಥೆಯನ್ನು ಆರ್ಥಿಕವಾಗಿಯಲ್ಲದಿದ್ದರೂ ಸಾಮಾಜಿಕವಾಗಿ ಸುಸ್ಥಿರಗೊಳಿಸುತ್ತದೆ ಹಾಗೂ ಸಮಾಜದಲ್ಲಿ ಜಾತಿ ಮೀರಿದ ಉನ್ನತೀಕರಣದ ಸ್ಪೂರ್ತಿಯನ್ನೇ ಇಲ್ಲವಾಗಿಸುತ್ತದೆ. ಇದರಿಂದ ದೀರ್ಘಕಾಲಿಕ ದೃಷ್ಟಿಯಿಂದ ಹೆಚ್ಚು ನಷ್ಟಕ್ಕೊಳಗಾಗುವವರು ಜಾತಿ ಮೀಸಲಾತಿಯವರೇ. ಏಕೆಂದರೆ ಉನ್ನತೀಕರಣಕ್ಕಾಗಿ ಇಂದಿನ ವ್ಯವಸ್ಥೆ ಒಪ್ಪಿಕೊಂಡಿರುವ ದಕ್ಷತೆಯ ಮಟ್ಟದಲ್ಲಿ ಹಿಂದುಳಿದಿರುವುದರಿಂದ ಅಲ್ಲವೇ ಈ ಜಾತಿ ವರ್ಗಗಳ ಹಿತದೃಷ್ಟಿಯಿಂದಲೇ ಸದ್ಯದ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಮುಕ್ತ ಸ್ಪರ್ಧೆ ಅವಶ್ಯಕವೆನಿಸಿಕೊಳ್ಳುತ್ತದೆ. ಅಲ್ಲದೆ ಸಾವಿರಾರು ಜಾತಿ ಉಪಜಾತಿಗಳಾಗಿ ಒಡೆದು ಹೋಗಿರುವ ಭಾರತೀಯ ಸಮಾಜದಲ್ಲಿ ಜಾತಿ ಜನಸಂಖ್ಯಾಧಾರಿತ ಮೀಸಲಾತಿ ನೀತಿಯು ಅನುಷ್ಠಾನದ ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದಲ್ಲದೇ ಅಲ್ಪಸಂಖ್ಯಾತ ಜಾತಿಗಳನ್ನು ಇನ್ನಷ್ಟು ಅವಕಾಶವಂಚಿತರನ್ನಾಗಿಸುವ ಸಾಧ್ಯತೆಗಳನ್ನೊಳಗೊಂಡಿದೆ.
ಇದು ಮೀಸಲಾತಿ ಪರವಾದಿಗಳು ಮಂಡಿಸುವ ಇನ್ನೊಂದು ವಾದದ ವಿರೋಧಾಭಾಸದೆಡೆಗೂ ನಮ್ಮ ಗಮನ ಸೆಳೆಯುತ್ತದೆ. ಅದೆಂದರೆ ಪ್ರತಿಭೆಯ ಪುನರ್ನಿರೂಪಣೆ. ಆಧುನಿಕ ಜ್ಞಾನ ಗಳಿಕೆಗೆ ಬೇಕಾದ ಮೇಲ್ಜಾತಿಗಳು ನಿರೂಪಿಸುವುವೆಂದು ಹೇಳಲಾದ - ಪ್ರತಿಭೆಗೆ ಪ್ರತಿಯಾಗಿ ಇವರು ನಿರೂಪಿಸುವ ಯಾವ ಜ್ಯಾಮಿತಿಯ ಉಪಕರಣವಿಲ್ಲದೆ ಹೊಲದಲ್ಲಿ ನೇರವಾಗಿ ಉಕ್ಕೆ ಹೊಡೆಯುವ ರೈತ ಮಕ್ಕಳ ಪ್ರತಿಭೆ ಹಾಗೂ ಹಲವು ಹಗಲು ರಾತ್ರಿ ನಿರಂತರವಾಗಿ ಹಾಡಬಲ್ಲ ಜಾನಪದ ಗಾಯನ ಪ್ರತಿಭೆ ಮುಂತಾದ ಉದಾಹರಣೆಗಳು ಇಂದಿನ `ಪ್ರಗತಿಪರ ವ್ಯವಸ್ಥೆಗೆ ಅಗತ್ಯವಾದ ದಕ್ಷತೆಯ ದೃಷ್ಟಿಯಿಂದ ಅಸಂಗತವೆನಿಸುತ್ತವೆ. ಅವು ಪ್ರತಿಭೆಗಳೇ ಹೌದು, ಆದರೆ ಈ ಆಧುನಿಕ ವಿಜ್ಞಾನಾಧಾರಿತ ವ್ಯವಸ್ಥೆಯನ್ನು ಕಟ್ಟಬಲ್ಲ ದಕ್ಷತೆಗೆ ಬೇಕಾದ ಪ್ರತಿಭೆಗಳಲ್ಲ. ಅಥವಾ ಅವು ಈವರೆಗೆ ಅಂತಹ ಸಾಧ್ಯತೆಗಳನ್ನು ಪ್ರಕಟಪಡಿಸಿಲ್ಲ. ನಿಜವಾಗಿ ಅಂತಹ ಪ್ರತಿಭೆಗಳೂ ಸಮಾಜವೊಂದರ ದಕ್ಷತೆಯ ಆಧಾರಗಳಾಗಬೇಕಾದರೆ ಹಿಂದುಳಿದ ವರ್ಗಗಳು ಮೀಸಲಾತಿ ಹೋರಾಟವನ್ನು ನಿಲ್ಲಿಸಿ `ಪ್ರಗತಿಪರತೆಯ ಬೇರೆಯೇ ವ್ಯಾಖ್ಯಾನವನ್ನು ತನಗೆ ಸೂಕ್ತ ಕಂಡಂತಹುದನ್ನು ಆಧರಿಸಿ ಅಭಿವೃದ್ಧಿ ಮಾದರಿಯ ಮೇಲೆ ಕಟ್ಟಬೇಕಾದ ಹೊಸ ವ್ಯವಸ್ಥೆಗಾಗಿ ಹೋರಾಟ ರೂಪಿಸಬೇಕಾಗುತ್ತದೆ.
ಇದು ಸಾಧ್ಯವೇ? ಸಾರಾಸಗಟಾಗಿ ಮೀಸಲಾತಿ ಪರ ವಾದಿಸುವವರು ಯೋಚಿಸಬೇಕು. ಸಾಧ್ಯವಿಲ್ಲವೆಂದಾದರೆ ಈವರೆಗಿನ ಅನುಭವದ ಆಧಾರದ ಮೇಲೆ ಒಟ್ಟಾರೆ ಸಮಾಜ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಮೀಸಲಾತಿ ನೀತಿಯ ಇಂದಿನ ಗೊತ್ತುಗುರಿ ಹಾಗೂ ಸ್ವರೂಪಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕು. ಈ ಮರುವಿಮರ್ಶೆಯಲ್ಲಿ ಸದ್ಯದ ಮೀಸಲಾತಿ ನೀತಿಯು ಮೀಸಲಾತಿಯನ್ನು ಅಗತ್ಯಗೊಳಿಸಿದ ಜಾತಿ ಪದ್ಧತಿಯನ್ನು ನಾಶಮಾಡಹೊರಟಿದೆಯೋ, ಅದನ್ನು ಇನ್ನೊಂದು ರೂಪದಲ್ಲಿ ಪೋಷಿಸಹೊರಟಿದೆಯೋ ಅಥವಾ ಸಮಾಜದ ಕ್ರಿಯಾಶೀಲತೆಯ ಒಟ್ಟು ದಕ್ಷತೆಯನ್ನು ಹೆಚ್ಚಿಸುತ್ತಿದೆಯೋ ಎಂಬುದರ ಪರಿಶೀಲನೆಯೂ ಒಳಗೊಂಡಿರಬೇಕು. ಇಂತಹ ಪರಿಶೀಲನೆಯ ಆಧಾರದ ಮೇಲೆ ಮೀಸಲಾತಿ ನೀತಿಯನ್ನು ಪುನರ್ರೂಪಿಸಬೇಕು.
ಹಾಗೇ ಸದ್ಯದ ಚರ್ಚೆಯನ್ನು ಹುಟ್ಟುಹಾಕಿರುವ ಮೀಸಲಾತಿ ವಿಸ್ತರಣೆ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತರಬಹುದಾದ ರೀತಿ ನೀತಿಗಳ ಅಧ್ಯಯನ ಮಾಡುತ್ತಿರುವ ವೀರಪ್ಪ ಮೊಯ್ಲಿ ಸಮಿತಿಯು ಎಲ್ಲರನ್ನೂ ಮೆಚ್ಚಿಸಲು ಹೋಗಿ ಸೂಕ್ತ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗದೆಯೇ ಮತ್ತು ಪ್ರಸ್ತಾಪಿತ ಮೀಸಲಾತಿ ಅನುಷ್ಠಾನಕ್ಕಾಗಿಯೇ ಶಿಕ್ಷಣ ಸಂಸ್ಥೆಗಳ ಸೀಟುಗಳನ್ನು ಹೆಚ್ಚಿಸಿ - ಶಿಕ್ಷಣದ ಗುಣಮಟ್ಟವನ್ನು ಕೆಡಿಸುವಂತಹ ಕ್ರಮಗಳನ್ನು ಶಿಫಾರ್ಸು ಮಾಡಿ ಮೀಸಲಾತಿ ನೀತಿಯನ್ನು ಇನ್ನಷ್ಟು ವಿವಾದಗೊಳಿಸದಂತೆ ನೋಡಿಕೊಳ್ಳಬೇಕಾಗಿದೆ.
`ಕೆನೆಪದರದ ಪ್ರಶ್ನೆ:
ಮೀಸಲಾತಿಗೆ ಸಂಬಂಧಪಟ್ಟಂತೆ ಸರ್ವೋನ್ನತ ನ್ಯಾಯಾಲಯವು ೨೦೦೬ರ ಅಕ್ಟೋಬರ್‌ನಲ್ಲಿ ಪ. ಜಾತಿ/ಪಂಗಡಗಳ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿರುವಂತೆ `ಕೆನೆಪದರದ(ಸಾಮಾಜಿಕ - ಶೈಕ್ಷಣಿಕದ ಜೊತೆಗೇ ಆರ್ಥಿಕ ಮಾನದಂಡದ) ತತ್ವವನ್ನು ಜಾರಿಗೆ ತರಬೇಕೆಂದು ಕೊಟ್ಟಿರುವ ತೀರ್ಪು ಮತ್ತೆ ವಿವಾದಗಳನ್ನೆಬ್ಬಿಸಿದೆ. ಅನೇಕ ರಾಜಕೀಯ ಪಕ್ಷಗಳು, ಜಾತಿಗುಂಪುಗಳು, ಹಾಗೂ ರಾಜಕೀಯ ನಾಯಕರನೇಕರು, ಈ ತೀರ್ಪನ್ನು ಟೀಕಿಸಿ ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರಲ್ಲದೇ ಸರ್ಕಾರ ಈ ತೀರ್ಪನ್ನು ಮಾನ್ಯ ಮಾಡುವ ಅಗತ್ಯವಿಲ್ಲವೆಂದು ಮಾನ್ಯ ಮಾಡಿದಲ್ಲಿ ಮೀಸಲಾತಿಯ ಅರ್ಥೋದ್ದೇಶಗಳಿಗೇ ಭಂಗ ಬರುವುದೆಂದು ವಾದಿಸುತ್ತಾ ಅಚ್ಚರಿ ಹುಟ್ಟಿಸಿದ್ದಾರೆ. ಅವರ ವಾದಗಳ ನೆಲೆಗಳಲ್ಲಿ ಕೆಲವು ತಾತ್ವಿಕವಾದವುಗಳಾದರೆ ಮತ್ತೆ ಕೆಲವು ತಾಂತ್ರಿಕವಾದವುಗಳಾಗಿವೆ. ತಾತ್ವಿಕವಾದ ವಾದಗಳಲ್ಲಿ ಮುಖ್ಯವಾದವುಗಳೆಂದರೆ:
೧. ಹಿಂದುಳಿದ ವರ್ಗಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ನಿರೂಪಿಸಲಾಗಿರುವುದರಿಂದ ಆ ವರ್ಗಗಳಲ್ಲಿ ಆ ಅಂಶಗಳ ಆಧಾರದ ಮೇಲೆ ಮೇಲ್ಮುಖ ಚಲನೆ ಸಾಧ್ಯವಾಗಿ `ಕೆನೆಪದರ ಸೃಷ್ಟಿಯಾಗುವ ಸಾಧ್ಯತೆ ಇರುವಂತೆ ಪ. ಜಾತಿ/ಪಂಗಡಗಳ ವಿಷಯದಲ್ಲಿ ಅಂತಹ ಸಾಧ್ಯತೆಗೆ ಅವಕಾಶವೇ ಇಲ್ಲ. ಏಕೆಂದರೆ ಈ ಜಾತಿ ಪಂಗಡಗಳು ನಿರೂಪಿತವಾಗಿರುವುದೇ ಅಸ್ಪೃಶ್ಯತೆ - ಪ್ರತ್ಯೇಕತೆಗಳೆಂಬ ಅಂಶಗಳ ಆಧಾರದ ಮೇಲೆ.
೨. `ಕೆನೆಪದರ ಷರತ್ತು ಜಾರಿಯಾದರೆ ಮೀಸಲಾತಿಯನ್ನು ಆಡಳಿತ ದಕ್ಷತೆಗೆ ಧಕ್ಕೆಯಾಗದಂತೆ ಅನುಷ್ಠಾನಗೊಳ್ಳಬೇಕೆಂಬ ಸಾಂವಿಧಾನಿಕ ನಿರ್ದೇಶನಕ್ಕೆ ಭಂಗ ತಂದಂತಾಗುತ್ತದೆ.
೩. `ಕೆನೆಪದರದವರು ಅವಕಾಶ ವಿಹೀನರಾಗಿ ಸಮಾನ ಅವಕಾಶದ ಸಾಂವಿಧಾನಿಕ ತತ್ವಕ್ಕೆ ಭಂಗ ಬಂದಂತಾಗುತ್ತದೆ.
ಇವುಗಳನ್ನು ಒಂದೊಂದಾಗಿ ನೋಡೋಣ. ಮೊದಲನೆಯ ವಾದವು ಪರಿಶಿಷ್ಟರಲ್ಲಿ ಚಲನೆಯ ಸಾಧ್ಯತೆಯನ್ನೇ ಅಲ್ಲಗಳೆಯುತ್ತದೆ. ಇದು ಸಂವಿಧಾನವು ಮೀಸಲಾತಿ ತತ್ವವನ್ನು ಅಳವಡಿಸಿಕೊಂಡಿರುವುದರ ಉದ್ದೇಶವನ್ನೇ ಅಪ್ರಸ್ತುತಗೊಳಿಸಿ, ಮೀಸಲಾತಿಯನ್ನು ಪರಿಶಿಷ್ಟರಲ್ಲೇ ಒಂದು ಪ್ರತಿಷ್ಠಿತ ವರ್ಗದ ಸೃಷ್ಟಿ ಹಾಗೂ ವಿಸ್ತರಣೆಗಾಗಿ ಬಳಕೆಯಾಗುವ ಶಾಶ್ವತ ಸೌಲಭ್ಯವನ್ನಾಗಿ ಪರಿವರ್ತಿಸುವ ಹುನ್ನಾರದಂತೆ ತೋರುತ್ತದೆ. ಮೀಸಲಾತಿಯ ಉದ್ದೇಶವೇ ಅವಕಾಶ ಹಾಗೂ ಪ್ರಾತಿನಿಧ್ಯದ ಅಸಮಾನತೆಗಳನ್ನು ನಿವಾರಿಸಲು ಅಸ್ಪೃಶ್ಯತೆ ಮತ್ತು ಪ್ರತ್ಯೇಕತೆಗಳ ಗೋಡೆಯನ್ನೊಡೆದು ಸಮಾಜದ ಏಕೀಕರಣವನ್ನು ಸಾಧಿಸುವುದಾಗಿರುವಾಗ ಅದರ ಸಾಧ್ಯತೆಯನ್ನೇ ನಿರಾಕರಿಸುವುದು ಮೀಸಲಾತಿ ತತ್ವದ ಸ್ವಯಂವಿರೋಧವಾಗುತ್ತದೆ.
ಇನ್ನು ಕೆನೆಪದರದವರನ್ನು ಬಿಟ್ಟರೆ ಆಡಳಿತ ದಕ್ಷತೆಗೆ ಧಕ್ಕೆಯುಂಟಾಗುತ್ತದೆ ಎಂಬ ವಾದವು ಮೀಸಲಾತಿ ತತ್ವಮೀಮಾಂಸೆಗೇ ವಿರುದ್ಧವಾಗಿದೆ. ಏಕೆಂದರೆ ಮೀಸಲಾತಿ ಮೀಮಾಂಸೆಯ ಮೊದಲ ತತ್ವವೇ `ಅವಕಾಶವೇ ದಕ್ಷತೆಯ ಮೊದಲ ಮೆಟ್ಟಿಲು ಎಂಬುದಾಗಿದೆ. ಕೆಲವರಿಗೆ ಪರೋಕ್ಷವಾಗಿ ಅವಕಾಶವನ್ನೇ ನಿರಾಕರಿಸುವ ಮೂಲಕ ಈ ವಾದ `ಸಮಾನ ಅವಕಾಶದ ತತ್ವವನ್ನು ಪ್ರತ್ಯಕ್ಷವಾಗಿ ನಿರಾಕರಿಸುತ್ತದೆ. ಈ ವಾದದ ಪ್ರಕಾರ ಈವರೆಗಿನ ಮೀಸಲಾತಿ ಕೆನೆಪದರಕ್ಕೆ ಲಭ್ಯವಾಗಿದ್ದು ಆ ಕಾರಣ ಆಡಳಿತ ದಕ್ಷತೆಗೆ ಧಕ್ಕೆಯಾಗಿಲ್ಲ! ಇದು ಈವರೆಗಿನ ಮೀಸಲಾತಿ ತತ್ವದ ಕ್ರಿಯಾಶೀಲತೆಯನ್ನೇ ವಿರೋಧಾಭಾಸಕ್ಕೆ ಈಡುಮಾಡುತ್ತದೆ.
ಕೊನೆಯದಾಗಿ ಕೆನೆಪದರದವರು ಅವಕಾಶವಿಹೀನರಾಗುವ ವಿಷಯ. ಏಕೆ ಅವರಿಗೆ ಶೇ. ೫೦ರಷ್ಟಿರುವ ಸಾರ್ವತ್ರಿಕ ಸ್ಪರ್ಧೆಯಲ್ಲಿ ಅವಕಾಶ ನಿಷೇಧಿಸಲಾಗಿದೆಯೆ? ಇಲ್ಲವಲ್ಲ!
ಇನ್ನು ತಾಂತ್ರಿಕ ನೆಲೆಯ ವಾದಗಳಿಗೆ ಬಂದರೆ ಮುಖ್ಯವಾದದ್ದು : ಹಿಂದುಳಿದ ವರ್ಗಗಳಿಗೆ ಕೆನೆಪದರ ಅನುಸರಿಸಬೇಕೆಂಬ ತೀರ್ಪು ಕೊಟ್ಟ ಈ ಹಿಂದಿನ ಪೀಠವು ಸದ್ಯದ ತೀರ್ಪು ಕೊಟ್ಟಿರುವ ಪೀಠಕ್ಕಿಂತ ದೊಡ್ಡದಿರುವುದರಿಂದ ಮತ್ತು ಅದು ತನ್ನ ತೀರ್ಪು ಪರಿಶಿಷ್ಟ ಜಾತಿ/ಪಂಗಡಗಳಿಗೆ ಅನ್ವಯವಾಗದು ಎಂದು ಹೇಳಿರುವುದರಿಂದ ಸದ್ಯದ ತೀರ್ಪು ತಪ್ಪಿನಿಂದ ಕೂಡಿದೆ ಎಂಬುದು. ಆದರೆ ಮೊದಲ ತೀರ್ಪು ಒಂದು ವಿಶಿಷ್ಟ ಪ್ರಕರಣ ಹಾಗೂ ಸಂದರ್ಭಕ್ಕೆ ಸಂಬಂಧಪಟ್ಟಿದ್ದು ಎಂಬುದನ್ನು ಮರೆತಂತೆ ಈ ವಾದವು ತೋರುತ್ತದೆ. ಆ ಪೀಠ ತನ್ನ ತೀರ್ಪಿನ ಅನ್ವಯ ವ್ಯಾಪ್ತಿಯನ್ನು ಸ್ಪಷ್ಟೀಕರಿಸಲು ಮಾತ್ರ ಹೇಳಿದ ಮಾತನ್ನು ಸಾರ್ವತ್ರಿಕ ತೀರ್ಪನ್ನಾಗಿಸಲು ಇದು ಯತ್ನಿಸುತ್ತಿರುವಂತಿದೆ. ಹಾಗಾಗಿ ಈ ವಾದ ದೊಡ್ಡ, ಚಿಕ್ಕ ಪೀಠದ ಮಾತೂ ಸೇರಿದಂತೆ ಅಸಂಬದ್ಧವಾಗೇ ತೋರುತ್ತದೆ.
ಕೆನೆಪದರ ತತ್ವದ ವಿರೋಧಿಗಳು ಮಂಡಿಸುತ್ತಿರುವ ಮತ್ತೊಂದು ವಾದವೆಂದರೆ, ಸಂವಿಧಾನದ ೩೪೧ ಹಾಗೂ ೩೪೨ನೇ ಅನುಚ್ಛೇದಗಳ ಪ್ರಕಾರ ಪರಿಶಿಷ್ಟ ಜಾತಿ/ಪಂಗಡಗಳ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇರುವುದರಿಂದ, ಸರ್ವೋನ್ನತ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವ ಜರೂರತ್ತು ಸರ್ಕಾರಕ್ಕೆ ಇರಬೇಕಾದ್ದಿಲ್ಲ ಎಂಬುದು. ಇದು ತೀರ್ಪನ್ನು ಉದ್ದೇಶಪೂರ್ವಕವಾಗಿಯೆಂಬಂತೆ ತಿರುಗುಮುರುಗಾಗಿ ನೋಡುವ ಹಾಗೂ ಆ ಮೂಲಕ ನ್ಯಾಯಾಂಗ ಹಾಗೂ ಶಾಸಕಾಂಗಗಳ ನಡುವೆ ಸಲ್ಲದ ಸಂಘರ್ಷ ಉಂಟುಮಾಡುವ ಪ್ರಯತ್ನ. ಸರ್ವೋನ್ನತ ನ್ಯಾಯಾಲಯವನ್ನು ನಮ್ಮ ಸಂವಿಧಾನದ ಪ್ರಕಾರ ಶಾಸನ ಪರಾಮರ್ಶೆಯ ಅಂತಿಮ ವೇದಿಕೆಯೆಂದು ಒಪ್ಪಿಕೊಂಡಿರುವುದರಿಂದ ಅದರ ತೀರ್ಪನ್ನು ಗೌರವದಿಂದ ಪರಿಶೀಲಿಸಬೇಕಾದ್ದು ಸಾಂವಿಧಾನಿಕ ಧರ್ಮ. ಸಂಸತ್ತು ಅದನ್ನು ಪಾಲಿಸುವ ಜರೂರತ್ತು ಇಲ್ಲವೆಂದು ಹೇಳುವುದು ಸಂವಿಧಾನದ ಚೇತನದಲ್ಲೇ ಅಪನಂಬಿಕೆಯನ್ನು ಬಿತ್ತುವಂತಹ ಪ್ರಯತ್ನವಾಗುತ್ತದೆ. ಇದು ಒಟ್ಟಾರೆಯಾಗಿ ಯಾರು ಮೀಸಲಾತಿ ತತ್ವದಿಂದಾಗಿ ಸಾಂಪ್ರದಾಯಿಕ ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳಿಂದ ರಕ್ಷಣೆ ಪಡೆದರೋ ಅವರೇ ಇಂದು ಹೊಸ ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳಾಗಿ ಮೂಡಿ ನಿಂತಿರುವ ದುರಂತ ಚಿತ್ರವಾಗಿದೆ. ಮೀಸಲಾತಿ ತತ್ವಗಳನ್ನು ಚಲನಶೀಲಗೊಳಿಸಿ ಅದರ ಆತ್ಯಂತಿಕ ಗುರಿಯನ್ನು ಸಾಧಿಸುವಂತೆ ಮಾಡುವ ರಾಷ್ಟ್ರೀಯ ಕರ್ತವ್ಯವನ್ನೇ ಮರೆತಂತಿರುವ ಇವರು, ಅಂತಿಮವಾಗಿ ಮೀಸಲಾತಿ ತತ್ವದ ಸಾರ್ವತ್ರಿಕ ವಿಶ್ವಾಸಾರ್ಹತೆಯನ್ನು ಹಾಳುಗೆಡವುದರಲ್ಲಿ ಯಶಸ್ವಿಯಾದರೆ ಆಶ್ಚರ್ಯವಿಲ್ಲ.
ಕೆನೆಪದರ ತತ್ವದ ನಿರ್ಬಂಧಗಳಿಂದಾಗಿ ಮೀಸಲು ಸ್ಥಾನಗಳು ಬಹುಕಾಲ ಖಾಲಿ ಉಳಿದುಹೋಗುವ ಆತಂಕವೇನಾದರೂ ಈ ಕೆನೆಪದರ ವಿರೋಧಿಗಳಲ್ಲಿದ್ದರೆ ಹಾಗೆ ಉಳಿದುಹೋಗದ ಹಾಗೆ ನೋಡಿಕೊಳ್ಳುವ ಉಪಕ್ರಮಗಳನ್ನು ಸೂಚಿಸುವುದು ಹೆಚ್ಚು ರಚನಾತ್ಮಕವಾದ ಪ್ರತಿಕ್ರಿಯೆ ಎನ್ನಿಸಿಕೊಳ್ಳುತ್ತದೆ. ಉದಾಹರಣೆಗೆ ನೇಮಕಾತಿಯ ಮೊದಲ ಸುತ್ತಿನಲ್ಲಿ ಕೆನೆಪದರದವರನ್ನು ಹೊರಗಿಟ್ಟು ನೋಡಿ ನಂತರ ಅಗತ್ಯ ಬಿದ್ದರೆ ಒಂದು ಸೀಮಿತ ಅವಧಿಯೊಳಗೆ ಇನ್ನೊಂದು ಸುತ್ತಿನಲ್ಲಿ ಕೆನೆಪದರವನ್ನು ನೇಮಕಾತಿಗೆ ಪರಿಗಣಿಸುವ ವ್ಯವಸ್ಥೆಯನ್ನು ಅಳವಡಿಸಬಹುದು. ಅಥವಾ ಕೆನೆಪದರದಲ್ಲೇ ಎರಡು ಅಥವಾ ಮೂರು ವಿಭಾಗ ಮಾಡಿ ಹಂತಾನುಹಂತವಾಗಿ ಈ ವಿಭಾಗಗಳನ್ನು ಅಲಭ್ಯ ಅಭ್ಯರ್ಥಿಗಳ ಸ್ಥಾನಗಳನ್ನು ತುಂಬಲು ಮೀಸಲಾತಿ ತೆರೆದಿಡಬಹುದು.
ಕೃಪೆ: ಲೋಹಿಯಾ ಸಮಾಜವಾದ ದರ್ಶನ.

ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ಪ್ರಚಾರ

http://samvaada.com/themes/article/195/Speech_about_documentary_culture.htm-

ತೂತು ಬಿದ್ದ ಹಡಗು-
ರಾಜ್ಯ ಮಟ್ಟದಲ್ಲಿ ಇದು ಸುದ್ದಿಯಾಗಲಿಲ್ಲ. ಜನವರಿ ೧೧ರಂದು ಪ್ರೈಮರಿ ಮಿಲ್ಸ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಎಂಬ ತರುಣ ಕಾರ್ಮಿಕನೊಬ್ಬ ಅಪಘಾತಕ್ಕೀಡಾಗಿ ಮೃತಪಟ್ಟ. ದಪ್ಪ ಕಬ್ಬಿಣದ ತೊಲೆಗಳು ಪ್ರೈಮರಿ ಮಿಲ್ಸ್ ಎಂಬ ಗಾಣದಂತಹ ರಚನೆಯೊಂದರಲ್ಲಿ ಹೊಕ್ಕು ಹೊರಬರುವಾಗ ತಮ್ಮ ಆಕಾರ, ಸೈಜು ಬದಲಿಸಿಕೊಂಡು ಹೊರಬರುತ್ತವೆ. ಅದನ್ನು ಅಲ್ಲಿ ಯಂತ್ರದ ಬಾಯಿಗೆ ಕೊಡುವಾಗ ಅಕಸ್ಮಾತ್ ಕೈಜಾರಿಬಿದ್ದ ರಾಮಚಂದ್ರನ ದೇಹ ಆಚೆಯಿಂದ ಈಚೆ ಬರುವುದರಲ್ಲಿ ಗಾಣಕ್ಕೆ ಸಿಕ್ಕ ಕಬ್ಬಿನಂತೆ ಅಕ್ಷರಶಃ ಪುಡಿಪುಡಿಯಾಗಿತ್ತು. ಭೀಭತ್ಸವೆಂದರೆ ಇದೇ. ಕ್ಷಣಾರ್ಧದ ಮೈಮರೆವಿಗೆ ಜೀವದಾನ.
ಇಂತಹ ದುರ್ಮರಣಗಳ ನೆನಪಿನಲ್ಲೇ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್‌ಎಲ್) ನೋಡಹೋದಾಗ `ಬ್ಲಾಸ್ಟ್ ಫರ್ನೇಸ್ ಎಂಬ ಕಬ್ಬಿಣವನ್ನೂ ನೀರಾಗಿ ಕರಗಿಸಿ ಹರಿಸಿಬಿಡಬಲ್ಲ ಭಯಂಕರ ಶಾಖದ ಕುಲುಮೆಯೆದುರು ಬೇಯುತ್ತಾ ನಿಂತ ಕೆಲಸಗಾರರನ್ನು ನೋಡಿ ಅವರ ಕೆಲಸದ ಅಪಾಯವನ್ನು ಊಹಿಸಿಯೇ ಭಯವಾಯಿತು. ಕರಗಿ ಹರಿವ ಕಬ್ಬಿಣವನ್ನು ನೋಡಲು ತನ್ನ ರಕ್ಷಣಾ ಕನ್ನಡಕವನ್ನು ತೆಗೆದುಕೊಟ್ಟ ಕೆಲಸಗಾರನೊಬ್ಬ ಹೀಗೆ ಹೇಳಿದ:
`ಇಲ್ಲಿ ಮಾಡೋನಿಗೆ ಮೂರಾಣೆ, ನೋಡೋನಿಗೆ ಹತ್ತಾಣೆ ಬೆಲೆ ಕಣಮ್ಮಾ..
ಭೋರ್ಗರೆಯುವ ಬಿಸಿಗಾಳಿಯ ಶಬ್ದದ ನಡುವೆ ಕಿವಿಯಲ್ಲಿ ಪಿಸುಗಟ್ಟಿದಂತೆ ಕೇಳಿದ ಆ ಮಾತು ಮತ್ತು ಆತನ ಚಹರೆ ಶ್ರಮದ ಬೆಲೆ ಎಷ್ಟೆಂಬುದನ್ನು ಅರ್ಥಮಾಡಿಕೊಟ್ಟವು. ಕಣ್ಣುಕೋರೈಸುವ ದ್ರವ ಕಬ್ಬಿಣದ ಎದುರು ಕಪ್ಪು ಧೂಳು ತುಂಬಿ ಸುಟ್ಟು ಹೋದ ಮುಖದಲ್ಲೂ ಜ್ವಾಜಲ್ಯಮಾನವಾದ ಕಣ್ಣುಗಳು ಕುಲುಮೆಯ ಬೆಂಕಿಯನ್ನು ಪ್ರತಿಫಲಿಸುತ್ತಿದ್ದವು.
******
೧೯೨೩ರಲ್ಲಿ ಭದ್ರಾವತಿಯಲ್ಲಿ ಶುರುವಾದ ವಿಐಎಸ್‌ಎಲ್ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಮಹತ್ವಾಕಾಂಕ್ಷೆಯ ಯೋಜನೆ. ೧೯೨೩ರಲ್ಲಿ ಈ ಕಾರ್ಖಾನೆ ಶುರುವಾದಾಗ ಶಿವಮೊಗ್ಗ ಹತ್ತಿರದ ಕುಂಸಿ-ಚಟ್ನಳ್ಳಿಯಿಂದ ಕಬ್ಬಿಣದ ಅದಿರು ಪೂರೈಕೆಯಾಗುತ್ತಿತ್ತು. ಅದಿರು ಕಾಯಿಸುವ ಇಂಧನವಾಗಿ ಇದ್ದಿಲು ಬಳಕೆಯಾಗುತ್ತಿದ್ದು ಮಲೆನಾಡಿನ ಕಾಡುಗಳ ದಪ್ಪ ಮರಗಳನ್ನು ಕಡಿದು ಸಾಗಿಸಲು ೧೯೩೯ರಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗ ಶುರುವಾಯಿತು. ನಂತರ ೧೯೫೨ರಲ್ಲಿ ವಿದ್ಯುಚ್ಚಾಲಿತ ಯಂತ್ರೋಪಕರಣಗಳು ಬಂದ ನಂತರ ಕೋಕ್ ಅನ್ನು ಇಂಧನವನ್ನಾಗಿ ಬಳಸಲಾಗುತ್ತಿದೆ. ಕಲ್ಲಿದ್ದಲಿನ ಉಪಉತ್ಪನ್ನವಾದ ಕೋಕ್ ಅತಿಶಾಖ ಬಿಡುಗಡೆ ಮಾಡಿ ಆಕ್ಸಿಜನ್ ನೆರವಿನಿಂದ ಬೂದಿ ಉಳಿಸದೇ ಉರಿಯಬಲ್ಲದು.
ದಿನಕ್ಕೆ ೬೫೦-೭೦೦ ಟನ್ ಕಬ್ಬಿಣ ಉತ್ಪಾದಿಸಬಲ್ಲ ಒಂದು ಊದುಕುಲುಮೆ ಭದ್ರಾವತಿಯ ಕಾರ್ಖಾನೆಯಲ್ಲಿದೆ. ೭೫೦ ವಿವಿಧ ಗ್ರೇಡ್‌ಗಳ ಕಬ್ಬಿಣವನ್ನು ತಯಾರಿಸಲಾಗುತ್ತದೆ. ರೇಲ್ವೆ ಆಕ್ಸೆಲ್‌ಗಳು, ಫಿರಂಗಿಗಳಿಗೆ ಬಳಸುವ ಕ್ಯಾನನ್‌ಗಳು, ಕಬ್ಬಿಣದ ತೊಲೆಗಳಿಂದ ಹಿಡಿದು ೨೦ ಎಮ್‌ಎಮ್ ಅಳತೆಯ ಕಬ್ಬಿಣದ ಸರಳುಗಳು, ಅಚ್ಚುಗಳು - ಹೀಗೇ ಕೇಳುವವರ ಬೇಡಿಕೆಗೆ ತಕ್ಕಂತೆ ಕಬ್ಬಿಣವನ್ನು ತಯಾರಿಸುತ್ತಾರೆ. ಕಬ್ಬಿಣದಂತಹ ಗಟ್ಟಿ ಲೋಹವೂ ನಿಗಿನಿಗಿ ಕಾದಾಗ ಮಾನವ ಹಸ್ತದಲ್ಲಿ ಬಾಗಿ ಬಳುಕಿ ವಿವಿಧ ರೂಪು, ಆಕಾರ ಪಡೆಯುವುದನ್ನು ನೋಡುವುದು ನಿಜಕ್ಕೂ ಸೋಜಿಗ.
ಅಭಿವೃದ್ಧಿಯ ಮೂಲ ಸರಕೇ ಕಬ್ಬಿಣ. ಅದಿಲ್ಲದೇ ಯಾವ ಅಭಿವೃದ್ಧಿಯನ್ನೂ ಊಹಿಸಲಾರೆವು. ಕಾರ್ಖಾನೆ, ಕಟ್ಟಡ, ಸೇತುವೆ, ವಿಮಾನ, ರೈಲು, ವಾಹನಗಳು, ಶಸ್ತ್ರಾಸ್ತ್ರಗಳು ಎಲ್ಲದಕ್ಕೂ ಕಬ್ಬಿಣ ಬೇಕೇಬೇಕು. ಈ ಕಾರ್ಖಾನೆಯನ್ನು ಒಮ್ಮೆ ಹೊಕ್ಕರೆ ಹೊರಬರುವಾಗ `ಬಾಗಿಲೊಳು ಕೈ ಮುಗಿದು ಬರಬೇಕೆನಿಸುತ್ತದೆ. ಆ ಕೆಲಸಕ್ಕೂ, ಅಲ್ಲಿನ ಬದುಕಿಗೂ, ಉಳಿದವರಿಗೂ ಇರುವ ಅಂತರ ತಟ್ಟನೆ ಹೊಳೆಯುತ್ತದೆ. ಕಿವಿಗಡಚಿಕ್ಕುವ ಸದ್ದಿನಲ್ಲಿ, ಅತಿ ಉಷ್ಣತೆಯ ವಾತಾವರಣದಲ್ಲಿ, ಹೊಗೆ, ಧೂಳಿನ ಪರಿಸರದಲ್ಲಿ, ಕಣ್ಣುಕುಕ್ಕುವ ಬೆಳಕಿನ ನಡುವೆ ಒಂದೇ ಸಮ ದುಡಿವ ಕೆಲಸಗಾರನ ದುಡಿಮೆಯು ಉಳಿದವರ ದುಡಿಮೆಗಿಂತ ಎಷ್ಟು ಭಿನ್ನ, ಅಪಾಯಕಾರಿ ಮತ್ತು ಕಷ್ಟದ್ದು ಎಂಬ ಅರಿವಾಗುತ್ತದೆ.
ಕಬ್ಬಿಣದ ಅದಿರಿಗಾಗಿ ಮಣ್ಣುಗುಡ್ಡಗಳನ್ನೇ ಅಗೆದು, ಬರಿದುಮಾಡಿ, ಊರುಕೇರಿಗಳನ್ನೆಲ್ಲ ಕೆಂಧೂಳಿನಲ್ಲಿ ಮುಳುಗಿಸಿ, ತಾವು ಮಾತ್ರ ಹೆಲಿಕಾಪ್ಟರಿನಲ್ಲಿ ತಿರುಗುವ ಗಣಿಕುಳಗಳ ಬಗೆಗೆ, ಅವರ ಕುಟಿಲ ರಾಜಕೀಯದ ಬಗೆಗೆ ವಾಕರಿಕೆ ಬರುವಷ್ಟು ಓದುತ್ತಿದ್ದೇವೆ. ರಾಜ್ಯದ ಒಡಲಲ್ಲೇ ಕಬ್ಬಿಣದ ಅದಿರಿನ ಇಷ್ಟು ಗಣಿ ಸಂಪತ್ತಿದ್ದರೂ ಈಗಲೋ ಆಗಲೋ ಮುಳುಗುವ ಹಡಗಿನಂತೆ ಜೀವ ಹಿಡಿದುಕೊಂಡಿರುವ ಒಂದಾನೊಂದು ಕಾಲದ ಪ್ರತಿಷ್ಠಿತ ಕಂಪನಿ `ವಿಐಎಸ್‌ಎಲ್ ಈಗ ಎಲ್ಲರ ಮರೆವಿಗೆ ಸರಿಯುತ್ತಿದೆ. ೧೨-೧೪ ಸಾವಿರ ಕಾರ್ಮಿಕರಿಗೆ ಉದ್ಯೋಗ ನೀಡಿದ್ದ, `ಆಯುಧ ಪೂಜೆಗೆ ಲೋಡುಗಟ್ಟಲೇ ಲಾರಿಗಳಲ್ಲಿ ಮಂಡಕ್ಕಿ ತರಿಸುತ್ತಿದ್ದ, ಭದ್ರಾವತಿ ಎಂಬ ಊರನ್ನು ತನ್ನ ಕಪ್ಪು ಧೂಳಿನ ಸೆರಗಿನಲ್ಲಿ ಮುಚ್ಚಿಟ್ಟುಕೊಂಡ, ಸೈರನ್ನಿನ ಕೂಗಿನಿಂದ ಜಾಗೃತವಾಗಿಟ್ಟಿದ್ದ ವಿಐಎಸ್‌ಎಲ್ ಇಂದು ನಷ್ಟದಲ್ಲಿ ಮುಚ್ಚುವ ಸ್ಥಿತಿಗೆ ಬಂದಿದ್ದರೆ ಅದಕ್ಕೆ ಕಾರಣ ಅಗತ್ಯಕ್ಕಿಂತ ಹೆಚ್ಚು ಕೆಲಸಗಾರರಿದ್ದುದು ಹಾಗೂ ಯೂನಿಯನ್ ರಾಜಕೀಯವೋ? ಅಕಾಲಿಕ ಬಡತನವೋ? ಅಥವಾ ಇದು ನೈಸರ್ಗಿಕ ವೃದ್ಧಾಪ್ಯವೋ?
*****
`ನನ್ ಹೆಣ್ತಿ ಬೈತಾಳೆ, ನಿಮಗೇನ್ ಕೆಪ್ಪೇನ್ರಿ? ಎಷ್ಟು ಸಲ ಹೇಳಿದ್ರೂ ಆಂ?ಆಂ? ಅಂತೀರ. ಮಾತಿನ ಮೇಲೆ ಗಮನವೇ ಇಲ್ಲ ಅಂತ. ಇಲ್ಲಿ ಕೆಲಸ ಮಾಡ್ತಾ ಇಡೀ ದಿನ ಭರೋ ಎಂಬ ಶಬ್ದ ಕಿವೀಲಿ ಹ್ಯಾಗ್ ತುಂಬಿಬಿಡುತ್ತೆ ಅಂದ್ರೆ ಸಣ್ಣ ಮಾತುಗಳು ಕಿವಿ ಮೇಲೆ ಬಿದ್ರೂ ತಲೆ ಒಳಗೇ ಹೋಗಿರಲ್ಲ. ಕಿವಿ ಸೂಕ್ಷ್ಮನ ಕಳಕಂಡ್ ಬಿಟ್ಟಿವೆ.
`ಈ ಧೂಳ್ನಲ್ಲಿ ಕಾಪಿ ಕುಡಿದು, ಕೂತು, ಎದ್ದು ನಂಗೆ ತುಂಬ ಕ್ಲೀನಾಗಿರೋ ಕಡೆ ಹೋದ್ರೆ ನಾನೇ ಅಲ್ಲೆಲ್ಲ ಕೊಳೆ ಮಾಡ್ತಿದೀನೇನೋ ಅನ್ಸಿ ಗಂಟ್ಲಲ್ಲಿ ಏನೂ ಇಳಿಯದೇ ಇಲ್ಲ ಹಂಗಾಗಿಬಿಟ್ಟಿದೆ.
`ರಾತ್ರಿ ಹಗಲು ಏನಿಲ್ಲ ಬಿಡಮ್ಮ, ಎಷ್ಟೊತ್ಗೆ ಮಲಗಿದ್ರೂ ಗೊರಕೆನೇ ನಂಗೆ. ರಾತ್ರಿ ಶಿಫ್ಟ್ ಮುಗ್ಸಿ ಹೋದವ ಊಟ ಮಾಡಿ ಮಲಗ್ಬಿಟ್ರೆ ಮತ್ತೆ ಸಂಜೆನೇ ಎದ್ದು ಸ್ನಾನ ಮಾಡದು. ಅಂಥಾ ನಿದ್ದೆ...
`ಮನುಷ್ಯರ ಹೆಣದ ವಾಸನೆ ಅಷ್ಟು ಕೆಟ್ಟದಾಗಿರುತ್ತೆ ಅಂತ ಅವತ್ತೇ ಗೊತ್ತಾಗಿದ್ದು. ಈಗೊಂದೈದಾರು ವರ್ಷದ ಕೆಳಗೆ ಒಂದು ರಾತ್ರಿ ಸ್ಟೀಲ್ ಮೆಲ್ಟಿಂಗ್ ಸೆಕ್ಷನ್‌ನಲ್ಲಿ ಒಂದು ಬ್ಲಾಸ್ಟ್ ಆಗಿ ೭ ಜನ ಸತ್ತೋದ್ರು. ಒಬ್ಬನಂತೂ ಪೂರಾ ಸುಟ್ಟು ಬೆಂದು ಹೋಗಿದ್ದ. ಅವನ್ನ ಆಂಬುಲೆನ್ಸ್‌ನಲ್ಲಿ ತಗೊಂಡು ಆಸ್ಪತ್ರೆಗೆ ಹೋಗದ್ರಲ್ಲಿ ಸತ್ತೋದ. ಆದ್ರೆ ಅವನ ಮೈಯಿಂದ ಬರ್ತಿದ್ದ ಸುಟ್ಟ ವಾಸನೆ ನೆನಪಾದ್ರೆ ಎಷ್ಟೋ ದಿನದ ತಂಕ ಹೊಟ್ಟೆ ತೊಳೆಸೋದು. ಅಯ್ಯಯ್ಯೋ, ಭಾರೀ ಕೆಟ್ಟ ಸಾವು.

ನೌಕರರ ಈ ಮಾತುಗಳಲ್ಲಿಯೇ ಅವರ ಜೀವನಶೈಲಿ, ಕೆಲಸದ ಅಪಾಯವನ್ನು ತಿಳಿದುಬಿಡಬಹುದು. ಅಪಾಯದ ನಡುವೆ ಕೆಲಸ ಮಾಡುತ್ತಿರುವುದರಿಂದಲೋ ಏನೋ, ಎಲ್ಲರೂ ದೈವಭಕ್ತರು. ಎಲ್ಲ ಯುನಿಟ್‌ಗಳಲ್ಲೂ ಹೂವು, ಕುಂಕುಮ, ಮೋಂಬತ್ತಿಯ ಬೆಳಕಿನೊಂದಿಗೆ ಹಲವು ದೇವಾನುದೇವತೆಗಳ ಫೋಟೋಗಳು ಇದ್ದವು. ವಿಶೇಷವೆಂದರೆ ದೇವರುಗಳ ಜೊತೆ ವಿಶ್ವೇಶ್ವರಾಯ ಕೂಡಾ ಇದ್ದಾರೆ. ನಾಲ್ವಡಿ ಒಡೆಯರ ಒಂದೂ ಫೋಟೋ ಕಾಣಲಿಲ್ಲ. ನೌಕರರ ಪ್ರಕಾರ ವಿಶ್ವೇಶ್ವರಾಯ ಎಂಬ ಹೆಸರಿಲ್ಲದಿದ್ದರೆ ಕಾರ್ಖಾನೆ ಎಂದೋ ಮುಚ್ಚಿರುತ್ತಿತ್ತಂತೆ. ಅವರೇ ಶುರು ಮಾಡಿದ್ದು, ಅವರ ಹೆಸರು ಹೊತ್ತದ್ದು ಎಂದೇ ಇದು ಇಷ್ಟು ದಿನ ನಡೆಯುತ್ತಿದೆಯಂತೆ. `ಹೋಗುವಾಗ ಅವರ ಮ್ಯೂಸಿಯಂ ನೋಡಿ ಹೋಗಿ ಎಂದು ಹೇಳಲು ಅವರು ಮರೆಯಲಿಲ್ಲ.
*******
ಮೈಸೂರರಸರ ಕಾಲದಲ್ಲಿ ಶುರುವಾದ ಕಾರ್ಖಾನೆಯು ೧೯೬೨ರಲ್ಲಿ ಸರ್ಕಾರೀ ಸ್ವಾಮ್ಯದ ಎಮ್‌ಐಎಸ್‌ಎಲ್ ಎಂದಾಯಿತು. ೧೯೭೫ರಲ್ಲಿ ಅದರ ಸಂಸ್ಥಾಪಕರಾದ ವಿಶ್ವೇಶ್ವರಾಯನವರ ಹೆಸರನ್ನಿಡಲಾಯಿತು. ೧೯೮೯ರಲ್ಲಿ ಉಕ್ಕು ಪ್ರಾಧಿಕಾರದ ಒಂದು ಘಟಕವಾಗಿದ್ದಿದ್ದು ೯೮ರಲ್ಲಿ ಉಕ್ಕು ಪ್ರಾಧಿಕಾರದಲ್ಲಿ ವಿಲೀನವಾಯಿತು. ಇದಕ್ಕೆ ಅದಿರಿನ ಲಭ್ಯತೆ ಒಂದು ಸಮಸ್ಯೆಯಾಯಿತು. ಮೊದಲು ಕುಂಸಿ ಬಳಿ, ನಂತರ ಕೆಮ್ಮಣ್ಣುಗುಂಡಿಯಿಂದ ಹಾಗೂ ಕುದುರೆಮುಖದಿಂದ ಅದಿರು ಸರಬರಾಜಾಗುತ್ತಿತ್ತು. ಈ ಎಲ್ಲವೂ ಪರಿಸರ ರಕ್ಷಣೆಗಾಗಿ ನಿಂತ ಮೇಲೆ ದೂರದ ಛತ್ತೀಸ್‌ಘರ್‌ನಿಂದ ಅದಿರು ಬರಬೇಕು. ಇಲ್ಲೇ ಇರುವ ಬಳ್ಳಾರಿಯ ಕಬ್ಬಿಣದ ಅದಿರು ಎಷ್ಟು ತುಟ್ಟಿಯೆಂದರೆ ಅದನ್ನು ಖಾಸಗಿ ಗಣಿ ಮಾಲೀಕರಿಂದ ಕೊಂಡು ತಂದು, ಕಬ್ಬಿಣ ತಯಾರಿಸಿದರೆ ದುಪ್ಪಟ್ಟು ನಷ್ಟವಂತೆ. ಎಂತಹ ವಿಪರ್ಯಾಸ! ಕವಡೆ ಕಿಮ್ಮತ್ತಿಗೆ ತನ್ನ ನೆಲದ ಗಣಿಗಳನ್ನು ಖಾಸಗೀ ಗಣಿ ಕಂಪನಿಗಳಿಗೆ ಕೊಟ್ಟು ಬಿಲಿಯನಾಧಿಪತಿಗಳನ್ನು ಸೃಷ್ಟಿಸುವ ಸರ್ಕಾರ, ತಾನೇ ಆ ಗಣಿಗಳನ್ನು ನಡೆಸಿದ್ದರೆ ಅದನ್ನು ನಂಬಿದ ಕಾರ್ಖಾನೆಗಳನ್ನು, ಅದನ್ನು ನೆಚ್ಚಿಸ ಸಾವಿರಾರು ಕಾರ್ಮಿಕ ಕುಟುಂಬಗಳನ್ನೂ ಬೀದಿಪಾಲು ಮಾಡುವುದು ತಪ್ಪುತ್ತಿತ್ತು! ಈ ಸೂಕ್ಷ್ಮಗಳು ಫೈಲುಗಳ ಅಂಕಿಸಂಖ್ಯೆಗಳಲ್ಲಿ ಕರಗಿಹೋದ ಲಾಭನಷ್ಟದ ಲೆಕ್ಕಾಚಾರಕ್ಕೆ, ಭ್ರಷ್ಟ ವ್ಯವಸ್ಥೆಗೆ ಹೊಳೆಯುವುದೆ?
ಇಲ್ಲಿಯ ನೌಕರರು ಹೇಳುವಂತೆ: `ಕರ್ನಾಟಕದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಇನ್ನೊಂದು ಕಾರಣ. ಕಾಲಕಾಲಕ್ಕೆ ಹೊಸ ಟೆಕ್ನಾಲಜಿ ತರಬೇಕು. ಅದಾಗುತ್ತಿಲ್ಲ. ಮೂರೂವರೆ ಸಾವಿರ ಕೋಟಿ ರೂಪಾಯಿಯಲ್ಲಿ ಇಡೀ ಪ್ಲಾಂಟ್ ರಿವೈವ್ ಮಾಡುವ ಅವಕಾಶವಿತ್ತು, ಆಗಲಿಲ್ಲ. ಯಲಹಂಕದಲ್ಲಿ ರೇಲ್ವೆಯವರ ಅಚ್ಚುಗಾಲಿ ಕಾರ್ಖಾನೆ ಶುರುವಾದಾಗ ಇಲ್ಲಿಗೆ ಬರುತ್ತದೆ ಎಂದರು, ಅದೂ ಆಗಲಿಲ್ಲ. ಪಶ್ಚಿಮ ಬಂಗಾಳ, ಯುಪಿ, ಛತ್ತೀಸ್‌ಗಡ ನೋಡಿ. ಒಂದೊಂದು ಪ್ಲಾಂಟ್‌ಗೂ ಸಾವಿರಾರು ಕೋಟಿ ಅನುದಾನ ಸ್ಯಾಂಕ್ಷನ್ ಮಾಡಿಸಿಕೊಂಡು ಬರುವ ಎಮ್‌ಪಿಗಳು ಕಾರ್ಖಾನೆಗಳು ಮುಚ್ಚದ ಹಾಗೆ, ಸಾಯದ ಹಾಗೆ ನೋಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಕೆಲಸ ಮಾಡಿ ಹೋದ ಅಧಿಕಾರಿಗಳೇ ಇಂದು ಕರ್ನಾಟಕದ ಪ್ರತಿಷ್ಠಿತ ಖಾಸಗಿ ಕಂಪನಿಗಳಿಗೆ ಅದಿರು ಪೂರೈಕೆಯ ವಹಿವಾಟು ನಡೆಸುತ್ತಿದ್ದಾರೆ. ದೇವೇಗೌಡರು ಪ್ರಧಾನಮಂತ್ರಿ ಆದಾಗ ಒಂದು ಅವಕಾಶ ನಮಗೆ ಇತ್ತು. ಆದರೆ ಅವರೇ ಹೆಚ್ಚು ದಿನ ಉಳಿಯಲಿಲ್ಲ, ನವೀಕರಣ ಯೋಜನೆಗಳಲ್ಲಿ ಬಹುಪಾಲು ನೆನೆಗುದಿಗೆ ಬಿದ್ದವು. ಈಗ ಒಂದು ಹೊಸ ಪ್ಲಾಂಟ್ ಹಾಕಲಾಗಿದೆ. ಆ ಬ್ಲೂಮ್ಸ್ ಕ್ಯಾಸ್ಟಿಂಗ್ ಪ್ಲಾಂಟ್ ನಮಗೆ ಅನ್ನ ಕೊಡುತ್ತಿದೆ ಎನ್ನಬಹುದು. ನಮ್ಮ ಕಾರ್ಖಾನೆ ಈಗ ಉಕ್ಕು ಪ್ರಾಧಿಕಾರದ ಕರುಣೆಯ ಹಂಗಿನಲ್ಲಿ ಅಳಿದುಳಿದ ಕೆಲಸ ಮಾಡಿಕೊಂಡು ಬದುಕುತ್ತಿದೆ ಅಷ್ಟೇ.
ಇದು ಮರುಹುಟ್ಟು ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ? ಒಬ್ಬ ನೌಕರ ಹೇಳಿದ, `ಒಡೆದ ಹಡಗು ಹ್ಯಾಗೆ ಗೊತ್ತಾ ಮೇಡಂ? ಒಂದು ತೂತು ಗುರ್ತಿಸಿ ಮುಚ್ಚುವುದರಲ್ಲಿ ಮತ್ತೆ ನಾಕು ಪತ್ತೆಯಾಗ್ತಾವೆ. ಅದ್ನ ಮುಚ್ಚೋ ಕೆಲಸದಲ್ಲಿ ಹಡಗು ನಡೆಸಕ್ಕೇ ಪುರುಸೊತ್ತಿಲ್ಲದೆ ಮುಳುಗೋಗುತ್ತೆ ಅಷ್ಟೇ. ಈಗ ಇದು ಒಡೆದ ಹಡಗು, ಯಾರ್ಗೂ ಬೇಡ.
ವಿ.ಐ.ಎಸ್.ಎಲ್ ಅಷ್ಟೇ ಅಲ್ಲ, ನಮ್ಮ ಊರು ಪಟ್ಟಣಗಳಲ್ಲಿ ಹೀಗೆ ನಲುಗುತ್ತ ಕಣ್ಮುಚ್ಚುತ್ತಿರುವ ಹಲವು ಕಾರ್ಖಾನೆಗಳನ್ನು ನೋಡಬಹುದು. ಹಂಚಿನ ಕಾರ್ಖಾನೆ, ಗ್ಲಾಸ್ ಮತ್ತು ಐಸ್ ಪ್ಲಾಂಟ್‌ಗಳು, ಸಣ್ಣ ಔಷಧ ತಯಾರಿಕಾ ಘಟಕಗಳು, ರೇಶ್ಮೆ ನೂಲಿನ ಗಿರಣಿಗಳು - ಹೀಗೇ ಇಂಥವೆಷ್ಟೋ ಭರಿಸಲಾಗದಷ್ಟು ನಷ್ಟದಲ್ಲಿ ಮುಳುಗಿವೆ. ಆದರೆ ನಗರದ ಸಂದು ಗೊಂದುಗಳ ಮಂಡಕ್ಕಿ ಭಟ್ಟಿಗಳಾಗಲೀ, ಎಣ್ಣೆ ಭತ್ತದ ಗಿರಣಿಗಳಾಗಲೀ, ಬೀಡಿ ಕಟ್ಟುವ, ಊದುಬತ್ತಿ ಹೊಸೆಯುವ ಮನೆಗಳಲ್ಲಾಗಲೀ ಎಳ್ಳಷ್ಟೂ ಬದಲಾವಣೆಯಿಲ್ಲ. ಹೋಳಿಗೆ ಚಕ್ಕುಲಿ ಖಾರವನ್ನು ಬೇಕರಿಗೆ ಮಾರುವ, ಮೆಣಸಿನ ಪುಡಿ ಸಾಂಬಾರು ಪುಡಿ ಘಾಟಿನಲ್ಲಿ ಏಗುವ, ಗಾಡಿಯಲ್ಲಿ ತರಕಾರಿ ನೂಕುವ, ಗ್ಯಾರೇಜುಗಳಲ್ಲಿ ವಾಹನಗಳ ಕೆಳಗೆ ಮಲಗಿ ಮಸಿ ಹಿಡಿಸಿಕೊಂಡಿರುವ, ರಾಶಿ ಬಟ್ಟೆಗಳ ನಡುವೆ ಹೊಲಿಯುತ್ತ ಜೀವ ಮುಳುಗಿ ಹೋಗಿರುವ ತಾಣಗಳು ಮುಂಚೆ ಹೇಗಿದ್ದವೋ ಈಗಲೂ ಹಾಗೆಯೇ ಇವೆ. ಅವರ ಶ್ರಮಕ್ಕೆ ಸಿಗಬಹುದಾದ ಪ್ರತಿಫಲದ ಬಗ್ಗೆ ಅವರು ನಿಶ್ಚಿಂತರು. ಅಷ್ಟು ನಿಶ್ಚಿಂತೆಯೂ ವಿಐಎಸ್‌ಎಲ್ ಉದ್ಯೋಗಿಗಳಿಗಿಲ್ಲ. ಹೀಗೇಕಾಯಿತು? ವೈಯುಕ್ತಿಕ ಶ್ರಮಕ್ಕೆ ಬರುವ ಪ್ರತಿಫಲ, ಸಾಂಸ್ಥಿಕವಾದಾಗ ವಿಫಲವಾಗುತ್ತಿದೆ ಏಕೆ? ರಾಶಿಗಟ್ಟಲೇ ಉತ್ಪಾದಿಸುವಲ್ಲಿ ಯಂತ್ರಗಳೂ, ಸ್ವಲ್ಪ ಬೇಕಾದಲ್ಲಿ ಮನುಷ್ಯರೂ ಯಾಕೆ ಗೆಲ್ಲುತ್ತಿದ್ದಾರೆ? ಗೆಲುವಿನ ಸೂತ್ರ ಯಾವುದು?
ಬಹುಶಃ ಮಾನವ ಶಕ್ತಿಯ ಅನಿವಾರ್ಯತೆಯಿಂದ ನಡೆಯುವ ಉದ್ಯಮಗಳು ಸಣ್ಣ ಪ್ರಮಾಣದಲ್ಲಿ ನಡೆದಾಗ ಯಶಸ್ವಿಯಾಗುತ್ತವೆ. ಯಂತ್ರದಿಂದ ಸಾಧ್ಯವಿದ್ಯಾಗ್ಯೂ ಮನುಷ್ಯನನ್ನೇ ನೆಚ್ಚಿದ ಉದ್ಯಮಗಳು ನೆಲ ಕಚ್ಚಿವೆ. ಇಷ್ಟಂತೂ ನಿಜ, ನಾವೀಗ ಹಿಂದಿರುಗಲಾರದಷ್ಟು ಮುಂದೆ ಬಂದಿದ್ದೇವೆ. ಅದು ಗಾಂಧಿಯ ಹಿಂದ್ ಸ್ವರಾಜ್ ಕಾಲಕ್ಕಷ್ಟೇ ಅಲ್ಲ, ನೆಹರೂ ಯುಗಕ್ಕೂ ಹಿಂತಿರುಗಲಾರದಷ್ಟು. ಇದು ಮನಮೋಹನ್ ಯುಗ. ಈಗ ವಿ.ಐ.ಎಸ್.ಎಲ್, ಎಚ್.ಎಮ್.ಟಿ, ಐ.ಟಿ.ಐ ಇವೆಲ್ಲವೂ ನೆಹರೂ ಯುಗದ ಪಳೆಯುಳಿಕೆಗಳಾಗಿ ಅವಸಾನಗೊಳ್ಳುತ್ತಿರುವಾಗ, ವಿಶ್ವದ ಮೂಲೆಮೂಲೆಯಲ್ಲಿದ್ದ ದೊಡ್ಡ ದೊಡ್ಡ ಕಂಪನಿಗಳು ನಮ್ಮ ಹಳ್ಳಿಗಳ ಬೀಡಾ ಅಂಗಡಿಗೂ ಬಂದು ತಲುಪುವಷ್ಟು ಸರಕನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ ಎಲ್ಲ ಬ್ರಾಂಡೆಡ್ ಆಗಿರುವಾಗ - ಶ್ರಮವೂ ಬ್ರಾಂಡೆಡ್ ಆಗಿದ್ದರೆ ಲಾಭ ತಂದೀತು, ಇಲ್ಲದಿದ್ದರೆ ಇಲ್ಲ. ಅಷ್ಟೇ. ----ಅನುಪಮಾ

ಸಾಹಿತ್ಯಕ್ಕಿಂತ ಸಮಾಜ ದೊಡ್ಡದು

***ಇದು ಮುಂಬೈ ನ ಗೊರೆಗಾಂವ್ ಕರ್ನಾಟಕ ಸಂಘದವರು ಇತ್ತೀಚೆಗೆ ಏರ್ಪಡಿಸಿದ್ದ ೧೩ನೇ ವಿಚಾರಭಾರತಿ ಸಮ್ಮೇಳನದಲ್ಲಿ ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಭಾಷಣದ ಲೇಖನರೂಪ. ಅದರಲ್ಲಿ ಭಾಗವಹಿಸಿದ್ದ ನಾನು ಈ ಭಾಷಣ ಮುಖ್ಯವೆನಿಸಿದ್ದರಿಂದ ನಿಮ್ಮ ಓದಿಗೂ ಅದನ್ನು ಒದಗಿಸುತ್ತಿದ್ದೇನೆ.-ಸರ್ಜಾಶಂಕರ್ ಹರಳಿವ್ಮಠ***
ಸಾಹಿತ್ಯಕ್ಕಿಂತ ಸಮಾಜ ದೊಡ್ಡದು,ಸಮಾಜವನ್ನು ಬಿಟ್ಟು ಸಾಹಿತ್ಯ ಇಲ್ಲ ಎಂದು ನಿಮ್ಮಲ್ಲಿ ಅನೇಕರಂತೆ ನಾನೂ ತಿಳಿದುಕೊಂಡವನು. ಆದ್ದರಿಂದ ಸಮಾಜದ ಬಗ್ಗೆಯೇ ಮಾತನಾಡುತ್ತೇನೆ. ನಮ್ಮಲ್ಲಿರುವುದು ಒಂದಲ್ಲ ಎರಡು ಸಮಾಜ. ಒಂದು ಇಂಡಿಯಾ, ಇನ್ನೊಂದು ಭಾರತ. ಇಂಡಿಯಾದೊಳಗೆ ನಿಂತು ನೋಡಿದರೆ ಗಗನಚುಂಬಿ ಕಟ್ಟಡಗಳು, ಝಗಝಗಿಸುವ ಮಾಲ್‌ಗಳು, ಐಷಾರಮಿ ಬಂಗಲೆಗಳು, ತುಂಬಿತುಳುಕುತ್ತಿರುವ ವಿಮಾನ ನಿಲ್ದಾಣಗಳು, ಅತ್ಯಾಧುನಿಕ ಕಾರುಗಳು, ಬಣ್ಣದ ಅಕ್ಷರಗಳಲ್ಲಿ ಸರ್ಕಾರ ಮುದ್ರಿಸಿ ಹಂಚುತ್ತಿರುವ ಅಭಿವೃದ್ಧಿಯ ಸಾಹಸಗಾಥೆಗಳು.. ಇವೆಲ್ಲವನ್ನೂ ಕಾಣಬಹುದು. ಇದರ ಪಕ್ಕದಲ್ಲಿ ದೊಡ್ಡದಾದ ಭಾರತ ಇದೆ. ಈ ಭಾರತ ನಮ್ಮ ಅನೇಕ ಸುಖಜೀವಿಗಳು ಕಲ್ಪಿಸಿಕೊಂಡಷ್ಟು ಸುಂದರವಾಗಿಲ್ಲ. ಜಗತ್ತಿನಲ್ಲಿಯೇ ಅತೀ ಹೆಚ್ಚು ಕ್ಷಯರೋಗಿಗಳು, ಕುರುಡರು, ಎಚ್‌ಐವಿ ಸೋಂಕಿತರು, ಹೆಪಟೈಟಿಸ್-ಬಿ ಯಿಂದ ನರಳುತ್ತಿರುವವರು, ನಿರುದ್ಯೋಗಿಗಳು ಭಾರತದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಬೇಕಿದ್ದರೆ ಭ್ರಷ್ಟರನ್ನೂ ಸೇರಿಸಿಕೊಳ್ಳಬಹುದು. ಜಗತ್ತಿನಲ್ಲಿಯೇ ಅತಿಹೆಚ್ಚು ಮಲೇರಿಯಾ ರೋಗದ ಸಾವುಗಳು ನಡೆಯುತ್ತಿರುವುದು ಇಲ್ಲಿಯೇ, ಹುಟ್ಟಿದ ಮಕ್ಕಳು ಬೆಳೆಯುವ ಮೊದಲೇ ಸಾವಿಗೀಡಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯೇ, ಇಲ್ಲಿನ ಶೇಕಡಾ ೩೫ರಷ್ಟು ಮಂದಿ ಹಾಲು-ಮೊಸರು-ಹಣ್ಣು,ಮೊಟ್ಟೆಗಳಿಲ್ಲದ ಒಂದು ಹೊತ್ತಿನ ಊಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ದೇಶದಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುವ ದವಸಧಾನ್ಯದಲ್ಲಿ ಶೇಕಡಾ ೪೩ರಷ್ಟು ಮಾತ್ರ ಅರ್ಹರನ್ನು ತಲುಪುತ್ತಿದೆಯಂತೆ. ಇಲ್ಲಿ ಬಡವರಿಗೆ ಒಂದು ರೂಪಾಯಿ ಮೌಲ್ಯದ ನೆರವನ್ನು ತಲುಪಿಸಲು ಸರ್ಕಾರ ಐದುವರೆ ರೂಪಾಯಿ ಖರ್ಚುಮಾಡುತ್ತಿದೆ. ಸರ್ಕಾರಿ ಆದಾಯದ ಅರ್ಧಭಾಗ ಸರ್ಕಾರಿ ನೌಕರರ ಸಂಬಳಕ್ಕೆ ಖರ್ಚಾಗುತ್ತಿದೆ.
ಇಲ್ಲಿನ ಶೇಕಡಾ ೫೨ರಷ್ಟು ಮಂದಿ ಮಾತ್ರ ಅಕ್ಷರಸ್ಥರು, ಮೂರರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಒಂದನೇ ತರಗತಿ ಸೇರಿ ಎಂಟನೇ ತರಗತಿಗೆ ಹೋಗುತ್ತಾನೆ, ನೂರರಲ್ಲಿ ಒಬ್ಬ ವಿದ್ಯಾರ್ಥಿನಿ ಮಾತ್ರ ಎಂಟನೇ ತರಗತಿಗೆ ಹೋಗುತ್ತಾಳೆ, ಆರರಿಂದ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಾತ್ರ ಶಾಲೆಗೆ ಹೋಗುತ್ತಾರೆ,. ಕೊಲೆ, ಸುಲಿಗೆ,ಅತ್ಯಾಚಾರ, ಶಿಶುಮರಣ, ಸ್ತ್ರಿಭ್ರೂಣಹತ್ಯೆ, ವರದಕ್ಷಿಣೆ ಸಾವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಾನಮುಚ್ಚಲು ಬಟ್ಟೆ, ತಲೆಮೇಲೊಂದು ಸ್ವಂತದ ಸೂರು, ಕುಡಿಯಲು ಶುದ್ದನೀರು, ವೈದ್ಯಕೀಯ ಚಿಕಿತ್ಸೆ ಮೊದಲಾದ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ದೇಶದ ಬಹುಸಂಖ್ಯಾತ ಜನವರ್ಗವನ್ನು ಇನ್ನೂ ತಲುಪಿಲ್ಲ. ೨೦೦೧ರ ಜನಗಣತಿ ಪ್ರಕಾರ ಮುಂಬೈನ ಶೇಕಡಾ ೪೮.೮ರಷ್ಟು ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ, ನಿಮ್ಮ ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರವೇ ದೇಶದ ಒಟ್ಟು ಕೊಳೆಗೇರಿ ನಿವಾಸಿಗಳಲ್ಲಿ ಶೇಕಡಾ ೪೧ರಷ್ಟು ಜನ ಹತ್ತುಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಗ್ರಾಮೀಣ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಮಳೆ ಇಲ್ಲದೆ, ಬೆಳೆ ಇಲ್ಲದೆ, ಬೆಳೆದ ಬೆಳೆಗೆ ಬೆಲೆ ಇಲ್ಲದೆ, ಬಲತ್ಕಾರದ ಭೂಸ್ವಾಧೀನದಿಂದಾಗಿ ಭೂಮಿಯನ್ನು ಉಳಿಸಿಕೊಳ್ಳಲಾಗದೆ ಗಂಟೆಗೆ ಸರಾಸರಿ ಇಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಹತ್ತುವರ್ಷಗಳಲ್ಲಿ ಈ ಸಂಖ್ಯೆ ಎರಡು ಲಕ್ಷ ದಾಟಿದೆ. ಆತ್ಮಹತ್ಯೆ ಮಾಡಿಕೊಳ್ಳದವರು ನಗರದ ಕಡೆ ವಲಸೆ ಹೋಗುತ್ತಿದ್ದಾರೆ. ಒಂದಷ್ಟು ವಿದ್ಯೆ ಕಲಿತ ಬೆಳೆದ ಮಕ್ಕಳು ಯಾರೂ ಹಳ್ಳಿಗಳಲ್ಲಿ ಇರಲು ಇಷ್ಟಪಡುತ್ತಿಲ್ಲ. ಇದರಿಂದಾಗಿ ಹಳ್ಳಿಗಳು ವೃದ್ಧಾಶ್ರಮವಾಗುತ್ತಿದೆ, ನಿಧಾನವಾಗಿ ಸ್ಮಶಾನವಾಗುತ್ತಿದೆ.
ಇದು ಕಳೆದ ೬೩ ವರ್ಷಗಳಲ್ಲಿ ನಾವು ಕಟ್ಟಿದ ಭಾರತ. ಕಳೆದ ಶತಮಾನದ ಮೊದಲರ್ಧ ಭಾಗ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಗಳಿಸುವುದಕ್ಕಾಗಿ, ಅನಂತರದ ೫೦ವರ್ಷಗಳನ್ನು ಗಳಿಸಿಕೊಂಡ ದೇಶವನ್ನು ಕಟ್ಟುವುದಕ್ಕೆ ವ್ಯಯವಾಗಿದೆ. ಆದರೆ ನಾವು ಕಟ್ಟಿದ್ದು ಈ ಭಾರತವನ್ನು. ನಾವು ಸಾಧಿಸುತ್ತೇವೆ ಎಂದು ಬಗೆದದ್ದೆಷ್ಟು, ಸಾಧಿಸಿದ್ದೆಷ್ಟು? ನಮ್ಮದು ಸಂಸದೀಯ ಪ್ರಜಾಪ್ರಭುತ್ವ, ಇದು ಅರಸೊತ್ತಿಗೆಯೂ ಅಲ್ಲ, ಸೇನಾ ಸರ್ವಾಧಿಕಾರವೂ ಅಲ್ಲ. ಪ್ರಜೆಗಳೇ ಪ್ರಭುಗಳಾಗಿ ನಡೆಸುತ್ತಿರುವ ಸರ್ಕಾರ. ಇತಿಹಾಸದಲ್ಲಿ ಈ ವರೆಗೆ ಹಲವು ಬಗೆಯ ಸರ್ಕಾರಗಳು ಆಗಿಹೋಗಿವೆ. ರಾಜಕೀಯ ಶಾಸ್ತ್ರದ ವಿಕಾಸಶೀಲ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವವೇ ಸರ್ಕಾರದ ಅತ್ಯುನ್ನತ ರೂಪ ಎನ್ನಬಹುದು. ಯಾಕೆಂದರೆ ಇದಕ್ಕೆ ಸಮರ್ಥ ಪರ್ಯಾಯ ಇಲ್ಲ. ಆದರೆ ಪ್ರಜೆಯೇ ಪ್ರಭುವೆಂಬ ಮೂಲಮಂತ್ರದ ಹಳಿಯಲ್ಲಿ ಮುನ್ನಡೆಯಬೇಕಾದ ಪ್ರಜಾಪ್ರಭುತ್ವದ ರೈಲು ಹಾದಿ ತಪ್ಪಿಹೋಗುತ್ತಿದೆಯೋ ಎಂಬ ಆತಂಕ ಮೂಡುತ್ತಿದೆ. ಭರವಸೆಯ ಆಧಾರಸ್ಥಂಭಗಳೆಲ್ಲ ನಮ್ಮ ಕಣ್ಣೆದುರಿಗೆ ಒಂದೊಂದಾಗಿ ಕುಸಿದುಬೀಳುತ್ತಿವೆ. ಮುನ್ನಡೆಯ ಹಾದಿಯಲ್ಲಿನ ಬೆಳಕು ಮಂಕಾಗುತ್ತಿದೆ. ಯಾಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆಗೆ ಕನಿಷ್ಠ ಕರ್ನಾಟಕದಿಂದ ಬಂದವರಿಗಾದರೂ ಉತ್ತರ ಗೊತ್ತಿದೆ ಎಂದು ಅಂದುಕೊಂಡಿದ್ದೇನೆ. ಆ ರಾಜ್ಯವನ್ನು ಬಿಟ್ಟು ಇಷ್ಟು ದೂರಬಂದಿದ್ದರೂ ಅಲ್ಲಿನ ಹಸಿಹಸಿ ಭ್ರಷ್ಟಾಚಾರದ ವಾಸನೆ ನಮಗೆ ಅಂಟಿಕೊಂಡೇ ಇದೆಯೇನೋ ಎಂದು ಅನಿಸಿ ಅಸಹ್ಯವಾಗುತ್ತಿದೆ.
ಬರ್ಲಿನ್‌ನ ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆ ೧೦೨ ದೇಶಗಳಲ್ಲಿ ಸಮೀಕ್ಷೆ ನಡೆಸಿ ತಯಾರಿಸಿದ ಭ್ರಷ್ಟದೇಶಗಳ ಪಟ್ಟಿಯಲ್ಲಿ ಭಾರತ ೭೨ನೇ ಸ್ಥಾನ ಪಡೆದಿದೆ. ಭ್ರಷ್ಟತೆಯಲ್ಲಿ ನಮ್ಮನ್ನು ಮೀರಿಸಿದ ದೇಶಗಳಲ್ಲಿ ಪಾಕಿಸ್ತಾನ (೭೭) ನೈಜೀರಿಯಾ (೧೦೧) ಮತ್ತು ಬಾಂಗ್ಲಾದೇಶ (೧೦೨)ಗಳು ಸೇರಿವೆ. ದೇಶದಲ್ಲಿ ಯೇ ಕರ್ನಾಟತ ಅತ್ಯಂತ ಭ್ರಷ್ಟ ರಾಜ್ಯ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡಾ ಇದನ್ನು ಪುನರುಚ್ಚರಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆ ಅಧಿಕಾರಗಳಲ್ಲಿ ಪ್ರಾಮಾಣಿಕತೆ ಎಂಬ ವಿಷಯದ ಮೇಲೆ ಇತ್ತೀಚೆಗೆ ೪೯ ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತ ೪೫ನೇ ರ್ಯಾಂಕ್‌ನಲ್ಲಿದೆ. ಅತ್ಯಂತ ಸ್ವಚ್ಚ ಆಡಳಿತಕ್ಕೆ ೧೦ ಮತ್ತು ಅತ್ಯಂತ ಭ್ರಷ್ಟ ಆಡಳಿತಕ್ಕೆ ೦ ಅಂಕ ನೀಡಿ ನಡೆಸಿದ ಸಮೀಕ್ಷೆಯಲ್ಲಿ ಭಾರತ ೨.೭ರ ಸ್ಥಾನ ಪಡೆದಿದೆ. ವಿಶ್ವದ ಅತ್ಯಂತ ಸ್ವಚ್ಚ ಆಡಳಿತದ ಮೂರು ದೇಶಗಳಲ್ಲಿ ಫಿನ್‌ಲೇಂಡ್ (೯.೯), ಡೆನ್ಮಾರ್ಕ್ (೯.೫) ಮತ್ತು ನ್ಯೂಜಿಲೇಂಡ್ (೯.೪) ದೇಶಗಳು ಸೇರಿವೆ. ಭಾರತದ ತೆರಿಗೆ ವಂಚಕರು ವಿದೇಶಿ ಬ್ಯಾಂಕುಗಳಲ್ಲಿ ಕೂಡಿಟ್ಟ ಹಣ ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿ ಎಂದು ಕಳೆದ ವರ್ಷ ವಾಷಿಂಗ್‌ಟನ್‌ನ ಅಂತರರಾಷ್ಟ್ರೀಯ ನೀತಿ ಕೇಂದ್ರದ `ಜಾಗತಿಕ ಹಣಕಾಸು ವ್ಯವಹಾರದ ಪ್ರಾಮಾಣಿಕತೆ ಎಂಬ ಕಾರ್ಯಕ್ರಮದಡಿ ನಡೆಸದಿ ಅಧ್ಯಯನದ ವರದಿ ಬಹಿರಂಗಗೊಳಿಸಿದೆ.
ಭ್ರಷ್ಟಾಚಾರದ ಗಂಗೋತ್ರಿಯನ್ನು ಕೆಲವರು ಆಡಳಿತ ವ್ಯವಸ್ಥೆಯಲ್ಲಿ, ಇನ್ನು ಕೆಲವರು ರಾಜಕೀಯ ವ್ಯವಸ್ಥೆಯಲ್ಲಿ ಗುರುತಿಸುತ್ತಾರೆ. ಇದೊಂದು ರೀತಿಯ ಬೀಜವೃಕ್ಷ ನ್ಯಾಯ. ರಾಜಕಾರಣಿಗಳಿಗೆ ಇರುವ ಉತ್ತರದಾಯಿತ್ವ ಅಧಿಕಾರಿಗಳಿಗೆ ಇಲ್ಲವಾದ ಕಾರಣ ಅವರೇ ಭ್ರಷ್ಟಾಚಾರದ ಮೂಲ ಎನ್ನುವ ವಾದವೂ ಇದೆ. ಆದರೆ ಕಾರ್ಯಾಂಗದ ಮೇಲೆ ಸಂವಿಧಾನ ಕರ್ತರಿಗೂ ಪೂರ್ಣ ಭರವಸೆ ಇರಲಿಲ್ಲ. ಇದಕ್ಕಾಗಿಯೇ ಅದನ್ನು ಕಾಯಲೆಂದು ಶಾಸಕಾಂಗ ಸೃಷ್ಟಿಯಾದದ್ದು. ಆದರೆ ಕಾವಲು ಹಾಕಿದ ಬೇಲಿ ಹೊಲಮೇಯಲು ಬಹಳ ಕಾಲಬೇಕಾಗಲಿಲ್ಲ. ೨೦೦೪ರಲ್ಲಿ ಕೇವಲ ೧೫೪ ಕೋಟ್ಯಧಿಪತಿ ಸದಸ್ಯರನ್ನು ಹೊಂದಿದ್ದ ದೇಶದ ಸಂಸತ್‌ನಲ್ಲಿ ಈ ಬಾರಿ ೩೦೦ ಕೋಟ್ಯಧಿಪತಿಗಳು ವಿರಾಜಮಾನರಾಗಿದ್ದಾರೆ. ಆಳುವ ಕಾಂಗ್ರೆಸ್ ಪಕ್ಷದ ೨೦೨ ಸದಸ್ಯರಲ್ಲಿ ೧೩೮ ಮಂದಿ ಕೋಟ್ಯಧಿಪತಿಗಳು, ಬಿಜೆಪಿಯ ೧೧೬ರಲ್ಲಿ ೫೮ ಸಂಸದರು ಕೋಟ್ಯಧಿಪತಿಗಳು. ೧೫೩ ಸಂಸದರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತರೇ ಇತ್ತೀಚೆಗೆ ಹೇಳಿದ್ದಾರೆ. ಇವರು ಮಾಡುವ ಕೆಲಸಕ್ಕೆ ನಮ್ಮ ತೆರಿಗೆ ಹಣದಿಂದ ಪ್ರತಿಯೊಬ್ಬರಿಗೂ ಮಾಸಿಕ ಅಂದಾಜು ಎರಡುವರೆಯಿಂದ ಮೂರು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ಬಹುಸಂಖ್ಯೆಯಲ್ಲಿ ಅಶಿಕ್ಷಿತರು ಮತ್ತು ದುರ್ಬಲರು ಇರುವ ಭಾರತದಂತಹ ದೇಶದಲ್ಲಿ ನ್ಯಾಯಾಲಯವೇ ಬಾಯಿಬಲ ಇಲ್ಲದವರ ನಾಲಿಗೆ, ಆತ್ಮಬಲ ಇಲ್ಲದವರ ಆತ್ಮಶಕ್ತಿ. ಇದಕ್ಕಾಗಿಯೇ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಾಮಾನ್ಯ ಜನರಿಗೆ ತಾವು ನಂಬುವ ದೇವರ ಮೇಲಷ್ಟೇ ಇರುವ ಭಕ್ತಿ-ಗೌರವ. ಆದರೆ ಇತ್ತೀಚಿನ ವರ್ಷಗಳಲ್ಲಿ ನ್ಯಾಯದೇವಾಲಯದ ಅಂಗಳದಲ್ಲಿ ಸುಳಿದಾಡುತ್ತಿರುವ ಕೆಲ ಹಗರಣಗಳು ಅದರ ಗರ್ಭಗುಡಿಯನ್ನೂ ಪ್ರವೇಶಿಸುತ್ತಿದೆ ಎಂಬ ಸುದ್ದಿ ನ್ಯಾಯಾಂಗದ ಬಗ್ಗೆ ಅಭಿಮಾನ ಇಟ್ಟುಕೊಂಡವರನ್ನು ಕಳವಳಕ್ಕೆಡುಮಾಡಿದೆ. ಶೇಕಡಾ ೨೦ರಷ್ಟು ನ್ಯಾಯಪಾಲಕರು ಭ್ರಷ್ಟರು ಎಂದು ಎಂಟುವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಾಗಿದ್ದ ಎಸ್.ಪಿ.ಭರೂಚಾ ಹೇಳಿ ಅಚ್ಚರಿ ಹುಟ್ಟಿಸಿದ್ದರು. ಅದರ ನಂತರ ಬಯಲಾದ ನ್ಯಾಯಾಂಗದ ಹಗರಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮುಖ್ಯನ್ಯಾಯಮೂರ್ತಿ ಭರೂಚಾ ಮಾಡಿರುವ ಅಂದಾಜು ಯಾರಲ್ಲಿಯೂ ಅಚ್ಚರಿ ಹುಟ್ಟಿಸುತ್ತಿಲ್ಲ. ಸುಪ್ರೀಂಕೋರ್ಟ್‌ನ ಆರು ನಿವೃತ್ತ ಮುಖ್ಯನ್ಯಾಯಮೂರ್ತಿಗಳ ಮೇಲೂ ಭ್ರಷ್ಟಾಚಾರದ ಆರೋಪ ಹೊರಿಸಿ ಸುಪ್ರೀಂಕೋರ್ಟ್‌ನ ವಕೀಲರೊಬ್ಬರು ಇತ್ತೀಚೆಗೆ ರಿಟ್‌ಅರ್ಜಿ ಸಲ್ಲಿಸಿದ್ದಾರೆ.
ಪಂಜಾಬ್ ಹೈಕೋರ್ಟ್ ನ್ಯಾಯಮೂರ್ತಿಗಳು ಷಾಮೀಲಾದ ಬಹುಕೋಟಿ ರೂಪಾಯಿ ಲಂಚವನ್ನೊಳಗೊಂಡ ಲೋಕಸೇವಾ ಆಯೋಗದ ಹಗರಣ ಬಯಲಾಯಿತು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಮೀತ್ ಮುಖರ್ಜಿ ಭೂಮಾಫಿಯಾಗಳ ಜತೆಯಲ್ಲಿಯೇ ಷಾಮೀಲಾಗಿ ಹಣ-ಹೆಂಡ ಮತ್ತು ಹೆಣ್ಣುಗಳ ಆಮಿಷಕ್ಕೆ ಬಲಿಯಾಗಿ ತೀರ್ಪುಗಳನ್ನು ನೀಡಿದ್ದರು. ಸುಪ್ರೀಂಕೋರ್ಟ್‌ನಿಂದ ಹಿಡಿದು ಕೆಳ ನ್ಯಾಯಾಲಯಗಳ ವರೆಗಿನ ೩೪ ನ್ಯಾಯಮೂರ್ತಿಗಳುನ್ಯಾಯಾಲಯದ ಕಾರ್ಮಿಕರ ಭವಿಷ್ಯನಿಧಿಯ ೨೪ ಕೋಟಿ ರೂಪಾಯಿಗಳನ್ನು ಸ್ವಂತ ಉಪಯೋಗಕ್ಕೆ ಐಷಾರಮಿ ಸಾಮಾನು ಖರೀದಿಸಲು ದುರ್ಬಳಕೆ ಮಾಡಿಕೊಂಡಿದ್ದರು.
ಆರೋಪಿಗಳ ಕಟಕಟೆಯಲ್ಲಿ ನಿಂತವರ ಸಾಲು ಅಲ್ಲಿಗೆ ಕೊನೆಗೊಂಡಿಲ್ಲ, ಅಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ತನ್ನನ್ನು ತಾನೇ ಬಣ್ಣಿಸಿಕೊಂಡ ಪತ್ರಿಕೋದ್ಯಮದ ಸರದಾರರು ನಿಂತಿದ್ದಾರೆ. ಇದರಿಂದಾಗಿ ಪತ್ರಿಕಾರಂಗವೂ ಇತರೆಲ್ಲ ಅಧಿಕಾರ ಗದ್ದುಗೆಗಳ ಶೈಲಿಯಲ್ಲೇ ಜನರ ನಿರಾಸೆಯ ನಿಟ್ಟುಸಿರಿನ ಹಬೆಯಾಗಿ ಹೋಗಿದೆ, ಗುಮಾನಿಗೆ ಗುರಿಯಾಗಿರುವ ಗುಮ್ಮನಾಗಿದೆ. `ಎಲ್ಲದಕ್ಕೂ ಒಂದು ಬೆಲೆ ಇದೆ, ಕೊಂಡುಕೊಳ್ಳುವ ತಾಕತ್ತು ಇರಬೇಕು' ಎನ್ನುತ್ತದೆ ವ್ಯಾಪಾರಿ ಲೋಕ. ಇದೇ ವಾಣಿಜ್ಯಮಯ ಜಗತ್ತಿನಲ್ಲಿ ಈಗ ಎಲ್ಲವೂ ಮಾರಾಟವಾಗತೊಡಗಿದೆ..... ಸತ್ಯ, ನ್ಯಾಯ, ನಿಷ್ಠೆ, ಪ್ರೀತಿ, ಸ್ನೇಹ, ಪ್ರಾಮಾಣಿಕತೆ ಎಲ್ಲವೂ. ಈಗ ಸುದ್ದಿಯೂ ಈ ಸಂತೆಯಲ್ಲಿ ಬಂದು ಕೂತಿದೆ, ಕಾಸು ಕೊಡು ಸುದ್ದಿ ತಗೋ. ಅನುಮಾನವೇ ಬೇಡ ಇದು ಪತ್ರಿಕೋದ್ಯಮಕ್ಕೆ ಅಂಟಿಕೊಂಡಿರುವ ಹೊಸ ಜಾಡ್ಯ. ಇದರ ಹೆಸರು `ಸುದ್ದಿಗೂ ಕಾಸು' ಅರ್ಥಾತ್ `ಪೇಯ್ಟ್ ನ್ಯೂಸ್'.
ಇದು ರಾತ್ರಿಬೆಳಗಾಗುವುದರೊಳಗೆ ಕಾಣಿಸಿಕೊಂಡ ಕಾಯಿಲೆಯೇನಲ್ಲ. ಒಟ್ಟು ಜನಸ್ತೋಮದ ಬದುಕಿನ ಜೀವತಂತುವಾಗಬೇಕಾಗಿದ್ದ ಪತ್ರಿಕಾರಂಗ `ವೃತ್ತಿ'ಯಾಗಿ ಉಳಿಯದೆ `ಉದ್ಯಮ'ವಾಗಿ ಬೆಳೆಯತೊಡಗಿದಾಗಲೇ ರೋಗಗ್ರಸ್ತವಾಗಿತ್ತು. ವಿಚಿತ್ರವೆಂದರೆ ಆರ್ಥಿಕ ಉದಾರೀಕರಣದ ಯುಗದ ಜತೆಯಲ್ಲಿಯೇ ಈ ಹೊಸರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಆಗಲೇ ಪತ್ರಿಕಾ ಕಚೇರಿಗಳಲ್ಲಿ ಸಂಪಾದಕೀಯ ಮತ್ತು ಜಾಹಿರಾತು ವಿಭಾಗಗಳ ನಡುವಿನ ಗೆರೆ ತೆಳುವಾಗಲು ಪ್ರಾರಂಭವಾಗಿದ್ದು, ಪತ್ರಿಕೆಗಳ ಅತೀ ದೊಡ್ಡ ಶಕ್ತಿಯಾಗಿರುವ ವಿಶ್ವಾಸಾರ್ಹತೆಯ ಬೆಟ್ಟ ಕರಗತೊಡಗಿದ್ದು. ಆದರೆ ಈ ರೋಗ ಹಣಕಾಸು ಪತ್ರಿಕೋದ್ಯಮದಲ್ಲಷ್ಟೇ ಇತ್ತು, ಇಂಗ್ಲೀಷ್ ದಿನಪತ್ರಿಕೆಗಳಿಗಷ್ಟೇ ಸೀಮಿತವಾಗಿತ್ತು. ಸಾಮಾನ್ಯ ಓದುಗರಿಗೆ ಈ ವ್ಯವಹಾರ ಸೂಕ್ಷ್ಮಅರ್ಥವಾಗಿರಲಿಲ್ಲ. ಬಣ್ಣದ ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಹೊಸ ಕಾರು,ಟಿವಿ, ರೆಫ್ರಿಜರೇಟರ್‌ಗಳನ್ನು ಪರಿಚಯಿಸುವ ಲೇಖನಗಳು ಸಾಮಾನ್ಯ ಸುದ್ದಿಯಲ್ಲ. ಅದು ಸುದ್ದಿಯ ಛದ್ಮವೇಷ ಧರಿಸಿದ ಜಾಹೀರಾತುಗಳಾಗಿತ್ತು. ಅದೇ ರೀತಿ ಬಹುತೇಕ `ಪೇಜ್ ತ್ರಿ' ಪಾರ್ಟಿ ಸುದ್ದಿಗಳು ಮಾರಾಟವಾದ ಸುದ್ದಿಗಳೇ. ಹೊಸದಾಗಿ ಸ್ಥಾಪನೆಗೊಂಡ ಕಂಪೆನಿಗಳ ದೌರ್ಬಲ್ಯಗಳನ್ನೆಲ್ಲಾ ಬಚ್ಚಿಟ್ಟು ಅದರ ವಿಶ್ವಾಸಾರ್ಹತೆ-ಗುಣವಿಶೇಷಗಳನ್ನಷ್ಟೇ ಬಣ್ಣಿಸುವ ಲೇಖನಗಳ ಪ್ರಕಟಣೆ ಕೂಡಾ ಇದೇ ಮಾದರಿಯವು. ಈ ಮೂಲಕ ಷೇರು ಮಾರುಕಟ್ಟೆಯಲ್ಲಿ ಆ ಕಂಪೆನಿಗಳ ಷೇರುಗಳ ಬೆಲೆ ಏರಿಸುವುದು ಇದರ ಹಿಂದಿನ ಹುನ್ನಾರ. ಇಂತಹ ಒಂದು ವಿಷವರ್ತುಲದಲ್ಲಿಯೇ ಹುಟ್ಟಿಕೊಂಡವ -ಹರ್ಷದ್ ಮೆಹ್ತಾ ಎಂಬ ವಂಚಕ. ಇತ್ತೀಚಿನ ಉದಾಹರಣೆ `ಸತ್ಯಂ' ಹಗರಣ.
ವಿವಿಧ ರೂಪಗಳಲ್ಲಿ ಕಾಣಿಸಿಕೊಂಡ ಇಂತಹ `ಸುದ್ದಿಗೂಕಾಸು' ಕಾಯಿಲೆ ಬಹಳ ವರ್ಷಗಳಿಂದ ಇಂಗ್ಲೀಷ್ ದಿನಪತ್ರಿಕೆಗಳಿಗಷ್ಟೇ ಅಂಟಿಕೊಂಡಿತ್ತು. ಪ್ರಸಾರ ಸಂಖ್ಯೆಯಲ್ಲಿ ತಾವೇ ಮುಂದಿದ್ದರೂ ಜಾಹೀರಾತು ನೀಡುವ ಉದ್ಯಮ ಕ್ಷೇತ್ರದ ಗಮನಸೆಳೆಯಲು ಇಂಗ್ಲೀಷೇತರ ಪತ್ರಿಕೆಗಳಿಗೆ ಸಾಧ್ಯವಾಗಿರಲಿಲ್ಲ. ಇಂಗ್ಲೀಷ್ ಪತ್ರಿಕೋದ್ಯಮದ ನಾಗಾಲೋಟದ ಆರ್ಥಿಕ ಪ್ರಗತಿಯನ್ನು ಕಂಡು ದೂರದಿಂದಲೇ ಕರುಬುತ್ತಿದ್ದ ಇಂಗ್ಲೀಷೇತರ ಪತ್ರಿಕೆಗಳಿಗೆ ತನ್ನ ಶಕ್ತಿಪ್ರಯೋಗದ ಕ್ಷೇತ್ರ ಕಾಣಿಸಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ. ಆ ಕ್ಷೇತ್ರದ ಹೆಸರು ರಾಜಕೀಯ. ಇದರಿಂದಾಗಿ ಹತ್ತಿಕೊಂಡ ಕಾಯಿಲೆ ಹಿಂದಿಭಾಷೆಯ ಪತ್ರಿಕೆಗಳಲ್ಲಿ ಪ್ರಾರಂಭವಾಗಿ ಪ್ರಾದೇಶಿಕ ಭಾಷೆಗಳಿಗೂ ಈಗ ಹರಡಿದೆ. ಇತ್ತೀಚಿನ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ರಾಜಾರೋಷವಾಗಿ ಚುನಾವಣಾ ಸುದ್ದಿಗಳು ಮಾರಾಟವಾಗತೊಡಗಿದವು. ಕನ್ನಡದ ಕೆಲವು ದಿನಪತ್ರಿಕೆಗಳು ಮತ್ತು ಚಾನೆಲ್‌ಗಳು ಕೂಡಾ ಈ ಗುಂಪಿನಲ್ಲಿ ಕಾಣಿಸಿಕೊಂಡಿವೆ. ಇಲ್ಲಿಯೂ ಒಂದು ಸಣ್ಣ `ವರ್ಗಸಂಘರ್ಷ' ಇದೆ. ಇಂಗ್ಲೀಷ್ ದಿನಪತ್ರಿಕೆಗಳು ಉದ್ಯಮಿಗಳಿಗೆ ಸುದ್ದಿ ಮಾರಿಕೊಂಡು ಓದುಗರನ್ನು ವಂಚಿಸಿ ದುಡ್ಡು ಮಾಡಿಕೊಳ್ಳುತ್ತಿದ್ದಾಗ ತೆಪ್ಪಗಿದ್ದವರು, ಇಂಗ್ಲೀಷೇತರ ಭಾಷೆಯ ಪತ್ರಿಕೆಗಳು ರಾಜಕಾರಣಿಗಳಿಗೆ ಅದೇ ಸುದ್ದಿ ಮಾರಾಟಮಾಡತೊಡಗಿದಾಗ ಯಾಕೆ ಹುಯಿಲೆಬ್ಬಿಸುತ್ತಿದ್ದಾರೆ ಎಂದು ಕೇಳುವವರೂ ಇದ್ದಾರೆ.
`ಸುದ್ದಿಗಾಗಿ ಕಾಸು' ಕಾಯಿಲೆಯ ಪರೋಕ್ಷ ಸಮರ್ಥನೆಗೆ ನೀಡುವ ಇನ್ನೊಂದು ಕಾರಣ ಪತ್ರಿಕಾ ಸಂಸ್ಥೆಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು. ಆದರೆ ಇದು ಎಲ್ಲ ಸಂದರ್ಭಗಳಲ್ಲಿಯೂ ನಿಜವೇನಲ್ಲ. ಅಚ್ಚರಿಯೆಂದರೆ ಈ ಕಾಯಿಲೆಯ ಸೃಷ್ಟಿಗೆ ಕಾರಣವಾದ ದೇಶದ ಪ್ರಮುಖ ಪತ್ರಿಕಾ ಸಂಸ್ಥೆ ಆರ್ಥಿಕವಾಗಿ ಎಂದೂ ಬಡವಾಗಿರಲಿಲ್ಲ. ಇತ್ತೀಚಿನ ವರದಿಯ ಪ್ರಕಾರವೇ ಅದರ ವಾರ್ಷಿಕ ವಹಿವಾಟು ೧೫೦೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿತ್ತು. ಆರ್ಥಿಕವಾಗಿ ಈ ಸಂಸ್ಥೆಗಿಂತಲೂ ಬಡವಾದ ಪತ್ರಿಕಾಸಂಸ್ಥೆಗಳು ಈ ಕಾಯಿಲೆಯ ಸೋಂಕಿನಿಂದ ತಪ್ಪಿಸಿಕೊಂಡು ಪತ್ರಿಕಾಧರ್ಮ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಉದಾಹರಣೆಗಳು ಕಣ್ಣಮುಂದಿವೆ. ಆದ್ದರಿಂದ ಈ ಕಾಯಿಲೆ ಪತ್ರಿಕಾ ಸಂಸ್ಥೆಗಳ ಅನಿವಾರ್ಯ ಸಂಕಟವೇನಲ್ಲ, ಇದರಲ್ಲಿ ಹಣದ ಬಗೆಗಿನ ದುರಾಸೆಯ ಪಾತ್ರ ದೊಡ್ಡದು.
ಕಳೆದ ಒಂದು ದಶಕದ ಪತ್ರಿಕೋದ್ಯಮದ ಕಡೆ ಹಿನ್ನೋಟ ಹರಿಸಿದರೆ ನಾವು ಗುರುತಿಸಲಾಗದಷ್ಟು ಈ ಕ್ಷೇತ್ರ ಬದಲಾಗಿದೆ. ವಿಷಾದದ ಸಂಗತಿ ಎಂದರೆ ಹೆಚ್ಚಿನ ಬದಲಾವಣೆಯಾಗಿರುವುದು ಆವರಣದಲ್ಲಿ, ಹೂರಣದಲ್ಲಿ ಅಲ್ಲ. ವಿಷಯಜ್ಞಾನ, ವಿಶ್ಲೇಷಣಾ ಸಾಮರ್ಥ್ಯ, ಬರವಣಿಗೆಯ ಶಕ್ತಿ,ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆ ಇವುಗಳಷ್ಟೇ ಒಬ್ಬ ಪತ್ರಕರ್ತನ ಅರ್ಹತೆ ಎನ್ನುವ ಕಾಲವೊಂದಿತ್ತು. ನಮ್ಮ ಬಹಳಷ್ಟು ಹಿರಿಯ ಪತ್ರಕರ್ತರು ಈ ಅರ್ಹತೆಗಳ ಮೂಲಕವೇ ಸಾಧಕರೆನಿಸಿಕೊಂಡವರು. ಆದರೆ ಇತ್ತೀಚಿನ ಮಾಧ್ಯಮರಂಗದಲ್ಲಿ ಪತ್ರಕರ್ತನ ಅರ್ಹತೆಯ ಮಾನದಂಡವೇ ಬದಲಾಗಿದೆ. ಆತನ ಮುಖ್ಯ ಅರ್ಹತೆ ಆತನಿಗೆ ಇರುವ `ಕಾಂಟಾಕ್ಟ್'. ಒಬ್ಬ ಪತ್ರಕರ್ತನ ಉಳಿದ ಅರ್ಹತೆಗಳು ಅಷ್ಟೇನು ಮುಖ್ಯ ಅಲ್ಲ ಎನಿಸುವಷ್ಟು ನಿರ್ಲಕ್ಷ್ಯಕ್ಕೆಡಾಗಿವೆ. ಒಬ್ಬ ಪತ್ರಕರ್ತನಲ್ಲಿ ಎಷ್ಟು ಪ್ರಮುಖ ರಾಜಕಾರಣಿಗಳ ಪರ್ಸನಲ್ ಮೊಬೈಲ್ ನಂಬರ್‌ಗಳಿವೆ, ಅವರಲ್ಲಿ ಎಷ್ಟುಮಂದಿಗೆ ಕರೆ ಮಾಡಿದರೆ ಪೋನ್ ಎತ್ತುತ್ತಾರೆ ಎನ್ನುವುದರ ಮೇಲೆಯೇ ಆತನ `ಗ್ರೇಡ್', 'ರೇಟ್' ನಿರ್ಧಾರವಾಗುತ್ತದೆ. ಇಂಗ್ಲೀಷ್ ಮತ್ತು ಹಿಂದಿಭಾಷೆಯ ಪತ್ರಿಕೆಗಳಲ್ಲಿ ನಿಧಾನವಾಗಿ ಕಾಣಿಸಿಕೊಂಡ ಈ `ಕಾಂಟಾಕ್ಟ್' ಕಾಯಿಲೆ ಟಿವಿ ಚಾನೆಲ್‌ಗಳ ರಂಗಪ್ರವೇಶದ ನಂತರ ಉಲ್ಭಣಗೊಂಡಿದೆ.ಟಿವಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಪತ್ರಕರ್ತರು ಸಿನೆಮಾ ತಾರೆಯರ ರೀತಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಇವರನ್ನು ರಾಜಕಾರಣಿಗಳು ಥಟ್ಟನೆ ಗುರುತಿಸಲು ಸಾಧ್ಯವಿರುವ ಕಾರಣ ಬಹಳ ಬೇಗ ರಾಜಕೀಯದ ಒಳಕೋಣೆಗಳಿಗೆ ಇವರ ಪ್ರವೇಶವಾಗುತ್ತದೆ. ರಾಜಕಾರಣಿ ಮತ್ತು ಪತ್ರಕರ್ತರ ಸಂಬಂಧ ಅನೈತಿಕತೆಯ ದಾರಿಗೆ ಜಾರುವುದು ಇದೇ ಅಂತರಂಗದ ಚಾವಡಿಗಳಲ್ಲಿ. ನೀರಾ ರಾಡಿಯಾ ಟೇಪ್ ಪ್ರಕರಣದ ಮೂಲ ಇದು.
ಇಪ್ಪತ್ತೈದು ವರ್ಷಗಳ ಹಿಂದೆ ನಾವೆಲ್ಲ ಪತ್ರಿಕಾವೃತ್ತಿ ಕೈಗೊಂಡಾಗ ಇಂದಿರಾಗಾಂಧಿಯವರೇ ಪತ್ರಿಕೋದ್ಯಮದ ದೊಡ್ಡ ಶತ್ರು ಎಂದು ತಿಳಿದುಕೊಂಡಿದ್ದೆವು. ಯಾಕೆಂದರೆ ಅವರು ಪತ್ರಿಕಾಸ್ವಾತಂತ್ರ್ಯದ ಕೊರಳು ಹಿಸುಕಲು ಹೊರಟಿದ್ದರು. ಇದರಿಂದಾಗಿಯೇ ತುರ್ತುಪರಿಸ್ಥಿತಿಯ ವಿರುದ್ಧ ವಿರೋಧಪಕ್ಷಗಳ ಜತೆಗೂಡಿ ಪತ್ರಿಕೆಗಳು ಕೆಲಸ ಮಾಡಿದ್ದವು. ಆದರೆ ಇಂದಿನ ರಾಜಕಾರಣಿಗಳ್ಯಾರೂ ಪತ್ರಕರ್ತರ ಶತ್ರುಗಳಲ್ಲ, ಮಿತ್ರರು. ಕೇಳಿದ್ದನ್ನೆಲ್ಲ ಕರುಣಿಸುವ ಕಾಮಧೇನುಗಳು. ಸೈಟು, ಮನೆ, ಕಾರು, ಫಾರಿನ್ ಟೂರ್...ಆಯಕಟ್ಟಿನ ಸ್ಥಾನದಲ್ಲಿರುವ ಪತ್ರಕರ್ತರು ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುವ ರಾಜಕಾರಣಿಗಳಿದ್ದಾರೆ. ಇಂತಹ ಮಿತ್ರರು ಇರುವಾಗ ಮಾಧ್ಯಮರಂಗದ ನಾಶಕ್ಕೆ ಶತ್ರುಗಳು ಯಾಕೆ ಬೇಕು?
ಆದರೆ ಕೆಟ್ಟು ಹೋಗಿರುವುದು ಕೇವಲ ಕಾರ್ಯಾಂಗ,ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗವೇ? ಈ ಕ್ಷೇತ್ರದಲ್ಲಿರುವವರು ಮಾತ್ರ ಭ್ರಷ್ಟರು, ದುಷ್ಟರು,ಸ್ವಜನಪಕ್ಷಪಾತಿಗಳು, ಜಾತಿವಾದಿಗಳು, ಲಂಪಟರು, ಲೋಭಿಗಳೇ? ದೇಶದ ಸುಮಾರು ನೂರು ಕೋಟಿ ಜನಸಂಖ್ಯೆಯಲ್ಲಿ ಇವರ ಸಂಖ್ಯೆ ಎಷ್ಟಿರಬಹುದು? ಒಂದು ಕೋಟಿ? ಬೇಡ ಹತ್ತುಕೋಟಿ ಎಂದೇ ಇಟ್ಟುಕೊಳ್ಳಿ. ಉಳಿದ ೯೦ ಕೋಟಿ ಜನರು ಏನು? ಇವರೆಲ್ಲ ಸಕಲಗುಣ ಸಂಪನ್ನರೇ? ರಾಜಕಾರಣಿಗಳು ಕೆಟ್ಟಿರುವುದು ಇತ್ತೀಚೆಗೇ ಏನಲ್ಲ. ೨೦-೩೦ ವರ್ಷಗಳ ಹಿಂದೆಯೂ ಹೀಗೆಯೇ ಇದ್ದರು. ದೇವರಾಜ ಅರಸು ಅವರಿಗೆ ತೋರಿಸುವ ನಿಷ್ಠೆಗಾಗಿ ಪ್ರತಿತಿಂಗಳು ಅವರಿಂದ `ಹಪ್ತಾ' ವಸೂಲಿ ಮಾಡುತ್ತಿದ್ದ ಶಾಸಕರಿರಲಿಲ್ಲವೇ? ಆಗಲೂ ಬೈರೇಗೌಡರ ಟೇಪ್ ಇತ್ತು, ರೇವಜೀತು, ಬಾಟ್ಲಿಂಗ್ ಹಗರಣಗಳು ನಡೆದಿದ್ದವು. ರಾಜ್ಯಪಾಲರ ರಾಜಕೀಯವೂ ಇತ್ತು. ಪಕ್ಷಾಂತರ, ಕುದುರೆ ವ್ಯಾಪಾರ,ಬ್ಲಾಕ್‌ಮೇಲ್, ಭ್ರಷ್ಟಾಚಾರ, ಸ್ವಜನಪಕ್ಷಪಾತ, ರಾಜಭವನದ ರಾಜಕೀಯ, ಟೇಪ್-ಸಿಡಿ... ಇವ್ಯಾವುದೂ ಕರ್ನಾಟಕಕ್ಕಾಗಲಿ ದೇಶಕ್ಕಾಗಲಿ ಹೊಸತಲ್ಲ.
ರಾಜಕಾರಣಿಗಳಲ್ಲಿ ಕೆಟ್ಟವರು ಹಿಂದೆಯೂ ಇದ್ದರು.ಸ್ವತಂತ್ರ ಭಾರತದಲ್ಲಿ ಬಹುಷ: ಮೊದಲೆರಡು ದಶಕಗಳನ್ನು ಹೊರತುಪಡಿಸಿದರೆ ರಾಜಕಾರಣ ಎನ್ನುವುದು ಸಭ್ಯರ, ಸಜ್ಜನರ, ಪ್ರಾಮಾಣಿಕರ ಆಸಕ್ತಿಯ ಕ್ಷೇತ್ರವಾಗಿ ಉಳಿಯಲೇ ಇಲ್ಲ. ಇದರಿಂದಾಗಿಯೇ `ರಾಜಕಾರಣ ಎನ್ನುವುದು ಫಟಿಂಗರ ಕೊನೆಯ ತಾಣ' ಎನ್ನುವ ಕುಖ್ಯಾತಿ ಗಳಿಸಿದ್ದು. ಸಂಸತ್ ಮತ್ತು ವಿಧಾನಮಂಡಳದ ಹಳೆಯ ಮತ್ತು ಇತ್ತೀಚಿನ ಸದಸ್ಯರ `ಬಯೋಡಾಟ'ವನ್ನು ಅವಲೋಕಿಸಿದರೆ ಈ ಬದಲಾವಣೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆಯೇ ಕೆಟ್ಟವರನ್ನು ನಿವಾರಿಸಿಕೊಳ್ಳುವ 'ಅಸ್ತ್ರ' ಇದೆ. ಅದನ್ನೇ ಚುನಾವಣೆ ಎನ್ನುವುದು. ಸಂವಿಧಾನ ಈ `ಅಸ್ತ್ರ'ವನ್ನು ಮತದಾರನ ಕೈಗೆ ನೀಡಿದೆ. ಇಂತಹ ಅಸ್ತ್ರದ ಭೀತಿ ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಇಲ್ಲ. ಒಬ್ಬ ಭ್ರಷ್ಟ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿಗಳನ್ನು ನಿವಾರಿಸಿಕೊಳ್ಳಬೇಕೆಂದರೆ ಅದೊಂದು ದೀರ್ಘ ತನಿಖಾ ಪ್ರಕ್ರಿಯೆ, ಅವರಿಗೆ ಅಷ್ಟೊಂದು ರಕ್ಷಣಾ ಕವಚಗಳಿವೆ. ಇಂತಹ ಶಾಶ್ವತ ರಕ್ಷಣೆ ಜನಪ್ರತಿನಿಧಿಗಳಿಗಿಲ್ಲ, ಅವರು ಪ್ರತಿ ಐದುವರ್ಷಗಳಿಗೊಮ್ಮೆ, ಒಮ್ಮೊಮ್ಮೆ ಅದಕ್ಕಿಂತ ಮೊದಲೇ ಮತದಾರ ಪ್ರಭುವಿನ ಮುಂದೆ ಮಂಡಿ ಊರಲೇ ಬೇಕು. ಪ್ರಜೆಗಳನ್ನೇ ಪ್ರಭುವಿನ ಸ್ಥಾನದಲ್ಲಿ ಇಟ್ಟಿರುವ ಪ್ರಜಾಪ್ರಭುತ್ವದ ಶಕ್ತಿಯೇ ಇದು.
ಚುನಾವಣೆಯ ಅಸ್ತ್ರವನ್ನು ಪ್ರಯೋಗಿಸಿ ರಾಜಕಾರಣಿಗಳಿಗೆ ಪಾಠ ಕಲಿಸಿದ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ. ಇಂದಿರಾಗಾಂಧಿಯವರಿಂದ ಹಿಡಿದು ಲಾಲುಪ್ರಸಾದ್ ವರೆಗೆ, ಕೂತ ಕುರ್ಚಿಯನ್ನು ಅಲ್ಲಾಡಿಸುವವರೇ ಇಲ್ಲ ಎಂದು ತಿಳಿದುಕೊಂಡವರನ್ನು ಜಾಗೃತ ಮತದಾರ ಕೆಳಗುರುಳಿಸಿದ್ದಾನೆ.ಈಗಲೂ ಇತಿಹಾಸ ಮರುಕಳಿಸಬಹುದು. ಈಗಿನ ಭ್ರಷ್ಟ-ದುಷ್ಟ ಶಾಸಕರಿಗೆಲ್ಲ ಚುನಾವಣೆಯಲ್ಲಿ ಮತದಾರನೇ ಬುದ್ದಿ ಕಲಿಸಬಹುದು ಎನ್ನುವವರಿದ್ದಾರೆ. ಇಂತಹ ಆಶಾವಾದಿಗಳ ಆಶಯ ನಿಜವಾಗಲಿ ಎಂದೇ ಹಾರೈಸೋಣ. ಆದರೆ ಕಳೆದೆರಡು ವರ್ಷಗಳ ಕರ್ನಾಟಕದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಹಾರೈಕೆ ನಿಜವಾಗಬಹುದೆಂಬುದನ್ನು ನಂಬಲು ಕಷ್ಟವಾಗುತ್ತಿದೆ. ಓದು-ಬರಹಕ್ಕಷ್ಟೇ ಸೀಮಿತವಾದ ಸಾಕ್ಷರತೆಯನ್ನು ಮೀರಿದ ಶಿಕ್ಷಣವನ್ನು ಪಡೆದವರ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ, ಮುದ್ರಣ ಮಾಧ್ಯಮಗಳು ಭ್ರಷ್ಟರ ಎದುರು ಮೊನಚು ಕಳೆದುಕೊಳ್ಳುತ್ತಿದ್ದೆಯೇನೋ ಎಂದು ಅಂದುಕೊಳ್ಳುತ್ತಿರುವಾಗಲೇ ಇಪ್ಪತ್ತನಾಲ್ಕು ಗಂಟೆಗಳ ನ್ಯೂಸ್ ಚಾನೆಲ್‌ಗಳು ಮೈಯೆಲ್ಲ ಕಣ್ಣು ಮಾಡಿಕೊಂಡು ದಾಳಿ ಇಟ್ಟಿವೆ. ಅಂದಿನ ಪರಿಸ್ಥಿತಿ ಈಗ ಇಲ್ಲ. ಹುಂಬನೋ, ಜಾಣನೋ ಯಾವುದೇ ವರ್ಗದ ರಾಜಕಾರಣಿಗಳಿರಲಿ, ಅವರು ಮಾಡಿದ ಭಾನಗಡಿಗಳೆಲ್ಲ ಹೊರಬರಲು ಇಪ್ಪತ್ತನಾಲ್ಕು ಗಂಟೆಗಳೂ ಬೇಕಾಗಿಲ್ಲ. ಜನ ಎಲ್ಲವನ್ನೂ ಪ್ರತಿನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದಾರೆ, ಟಿವಿ ಪರದೆಗಳಲ್ಲಿ ನೋಡುತ್ತಿದ್ದಾರೆ. ಚುನಾವಣಾ ಆಯೋಗದ ನಿಯಮಾವಳಿಗಳಿಂದಾಗಿ ಅಭ್ಯರ್ಥಿ ತನ್ನ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾಮಪತ್ರ ಸಲ್ಲಿಸುವಾಗಲೇ ನೀಡಬೇಕಾಗುತ್ತದೆ. ಅವುಗಳು ಮಾಧ್ಯಮಗಳಲ್ಲಿ ಕೂಡಾ ಪ್ರಕಟವಾಗುತ್ತವೆ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರನಿಗೆ ಈಗ ಅಪರಿಚಿತರೇನಲ್ಲ. ಹೀಗಿದ್ದರೂ....'ಅಯ್ಯೆ, ನಮಗೆ ಆಯ್ಕೆ ಎಲ್ಲಿದೆ? ಎಲ್ಲರೂ ಕೆಟ್ಟವರೇ..' ಎಂದು ಮತದಾರರು ಗೊಣಗಾಡುತ್ತಿರುತ್ತಾರೆ ಮತ್ತು ದುಷ್ಟರನ್ನೇ ಆಯ್ಕೆ ಮಾಡುತ್ತಾರೆ.
ಕರ್ನಾಟಕದ ಹೈಕೋರ್ಟ್ ಹನ್ನೊಂದು ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಾಗ 'ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿ ಆಯಿತು' ಎಂಬ `ಸಾರ್ವಜನಿಕ ಅಭಿಪ್ರಾಯ' ವ್ಯಕ್ತವಾಗಿದೆ. ಆದರೆ ಪಕ್ಷಾಂತರಿಗಳಿಗೆ ಪಾಠ ಕಲಿಸಲು ನ್ಯಾಯಾಲಯ ಮಧ್ಯೆ ಪ್ರವೇಶ ಮಾಡಬೇಕಾಗಿತ್ತೇ? ಇಂತಹವರನ್ನು ಮನೆಗೆ ಕಳುಹಿಸುವ ಅವಕಾಶ ಮತದಾರರ ಕೈಯ್ಯಲ್ಲಿಯೇ ಇತ್ತಲ್ಲವೇ? `ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದಲ್ಲಿ ಷಾಮೀಲಾಗಿ ಮರುಆಯ್ಕೆ ಬಯಸಿದ ಒಂಭತ್ತು ಪಕ್ಷಾಂತರಿಗಳನ್ನು ಮತದಾರರು ಸೋಲಿಸಿಬಿಟ್ಟಿದ್ದರೆ ಈಗಿನ ಅಸಹ್ಯ ರಾಜಕಾರಣಕ್ಕೆ ನಾಡು ಸಾಕ್ಷಿಯಾಗುವಂತಹ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಚುನಾವಣೆಯಲ್ಲಿ ಹಣ ಮತ್ತು ಜಾತಿಯ ಪ್ರಭಾವ ಹಿಂದಿನಿಂದಲೂ ಇತ್ತು. ಆದರೆ ಹಿಂದೆಲ್ಲ ಮತದಾರರು ಹಣಕ್ಕೆ ಕೈಯೊಡ್ಡಿದರೂ ಅವರಲ್ಲಿ ಹೆಚ್ಚಿನವರು ಮತಗಳನ್ನು ಮಾತ್ರ ತಮ್ಮ ಆಯ್ಕೆಯ ಅಭ್ಯರ್ಥಿಗೆ ಹಾಕುತ್ತಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆ ಇಷ್ಟೊಂದು ಪ್ರಮಾಣದಲ್ಲಿ ಹರಿಯಿತೆಂದರೆ ಮತದಾರು ಅದರಲ್ಲಿ ತೇಲಿಹೋದರು, ದುಡ್ಡಿಲ್ಲದ ಅಭ್ಯರ್ಥಿಗಳು ಕೊಚ್ಚಿಹೋದರು. ಈ ರೀತಿ ಭ್ರಷ್ಟಗೊಂಡ ಮತದಾರರಲ್ಲಿ ಬಡವರು ಮಾತ್ರ ಇರಲಿಲ್ಲ, ಉಂಗುರ,ಮೂಗುತಿ ಪಡೆದುಕೊಂಡ ಶ್ರೀಮಂತರೂ ಇದ್ದರು. ಜಾತಿ ಕೂಡಾ ರಾಜ್ಯದ ರಾಜಕಾರಣದಲ್ಲಿ ಹೊಸದೇನಲ್ಲ. ಆದರೆ ಅದು ಇಷ್ಟೊಂದು ಸಂಘಟಿತ ರೂಪದಲ್ಲಿ ಕಾಣಿಸಿಕೊಂಡು ಜನರನ್ನು ಕುರುಡರನ್ನಾಗಿ ಮಾಡಿರಲಿಲ್ಲ. `ಹಿಂದಿನವರು ಮಾಡಿರಲಿಲ್ಲವೇ?' ಎಂದು ಬಿ.ಎಸ್.ಯಡಿಯೂರಪ್ಪನವರು ಮಾತ್ರ ಕೇಳುತ್ತಿಲ್ಲ, ಅವರ ಬೆಂಬಲಕ್ಕೆ ನಿಂತ ಜಾತಿ ನಾಯಕರು ಕೂಡಾ ಕೇಳುತ್ತಿದ್ದಾರೆ. ಕೆಟ್ಟಿರುವುದು ಕೇವಲ ರಾಜಕಾರಣಿಗಳಲ್ಲ, ಮತದಾರರು ಕೂಡಾ. ಪ್ರಜಾಪ್ರಭುತ್ವದಲ್ಲಿ ಜನತೆ ತಮ್ಮ ಅರ್ಹತೆಗೆ ತಕ್ಕ ಸರ್ಕಾರ ಪಡೆಯುತ್ತಾರೆ.
ಯಾಕೆ ಹೀಗಾಯಿತು? ರಾಜಕಾರಣ ಎಂದರೆ ಹೋರಾಟ ಎನ್ನುವ ಕಾಲವೊಂದಿತ್ತು, ಇಂತಹ ಹೋರಾಟಗಳ ಮಧ್ಯದಿಂದಲೇ ನಾಯಕರು ಹುಟ್ಟಿಕೊಳ್ಳುತ್ತಿದ್ದರು. ಇಂದಿಗೂ ಜನತೆ ಅಭಿಮಾನದಿಂದ ನೆನೆಸಿಕೊಳ್ಳುವಂತಹ ನಾಯಕರೆಲ್ಲರೂ ರಾಜಕೀಯ ಹೋರಾಟದ ಮೂಲಕ ರೂಪುಗೊಂಡವರೇ ಆಗಿದ್ದಾರೆ. ದೇಶದ ರಾಜಕೀಯ,ಸಾಮಾಜಿಕ ಹಾಗೂ ಆರ್ಥಿಕ ಅಭ್ಯುದಯದ ದಾರಿಯನ್ನು ನಿಚ್ಚಳವಾಗಿ ಕಾಣಬಲ್ಲ ಹಿರಿಯ ರಾಜಕಾರಣಿಗಳು, ಸ್ವಾತಂತ್ರ್ಯಹೋರಾಟದ ಕಾಲದಲ್ಲಿಯೇ ಹುಟ್ಟಿಕೊಂಡವರು. ರಾಷ್ಟ್ರಜೀವನದಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಬಲ್ಲ ಬುದ್ದಿ ಬಲವಿದ್ದ ಇಂತಹ ರಾಜಕಾರಣಿಗಳ ಪೀಳಿಗೆ ಈಗ ಬಹುಮಟ್ಟಿಗೆ ನಮ್ಮನ್ನು ಅಗಲಿದೆ. ಉಳಿದ ಕೆಲವೇ ಮಂದಿ ಹಿರಿಯರು ತೀವ್ರಗತಿಯಲ್ಲಿ ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಸುಳಿಗೆ ಸಿಕ್ಕಿ ಅಪ್ರಸ್ತುತರಾಗುತ್ತಿದ್ದಾರೆ. ಹಳೆಯ ಹುಲಿಗಳು ಅಪ್ರಸ್ತುತರೆನ್ನಿಸಿರುವ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬುದ್ದಿಬಲವುಳ್ಳ ರಾಜಕಾರಣಿಗಳ ಉಗಮ ಆಗಿಲ್ಲದಿರುವುದೊಂದು ಕೊರತೆ. ಜನಜೀವನದಲ್ಲಿ ನೇರವಾಗಿ ಬೆರೆಯಬಲ್ಲ, ಅವರ ನೋವು-ನುರಿಗಳಿಗೆ ಸ್ಪಂದಿಸಬಲ್ಲ, ಭಾರತೀಯ ಸಮಾಜದ ಪುನರ್ರಚನೆಯ ಬಗ್ಗೆ ನಿಖರವಾದ ವೈಚಾರಿಕ ಒಲವುಳ್ಳ, ವೈಯಕ್ತಿಕ ಬೇಕುಬೇಡಗಳ ಬಯಕೆಯಿಂದ ಮುಕ್ತರಾದ ಹಾಗೂ ಹೋರಾಟದ ಮನೋಭಾವ ಬೆಳೆಸಿಕೊಂಡ ನಾಯಕರೇ ಇಲ್ಲದಂತಾಗಿದೆ. ಹಳೆಯ ಹಾಗೂ ಹೊಸ ತಲೆಮಾರಿನ ನಡುವೆ ಅನುಭವದ ಸೇತುವೆಯಾಗಿ ಕೆಲಸ ಮಾಡುವಂತಹವರೂ ಕಾಣಿಸುತ್ತಿಲ್ಲ. ಇದರಿಂದಾಗಿ ಚಳುವಳಿ-ಹೋರಾಟಗಳು ಇತಿಹಾಸದ ವಸ್ತುವಾಗುತ್ತಿದೆ. ಸರ್ಕಾರ ರಾಕ್ಷಸನ ರೂಪು ಪಡೆಯುತ್ತಿದೆ.
ಸ್ವಾತಂತ್ರೋತ್ತರ ಭಾರತದ ಪ್ರಾರಂಭದ ದಿನಗಳಲ್ಲಿ ಹುಟ್ಟಿಕೊಂಡ ಅನೇಕ ಚಳುವಳಿಗಳು ಹಲವಾರು ಬಗೆಯ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಪಲ್ಲಟಗಳಿಗೆ ಕಾರಣವಾಗಿರುವುದನ್ನು ಇತಿಹಾಸ ಹೇಳುತ್ತಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ದಲಿತರು, ಆದಿವಾಸಿಗಳು ಇಂತಹ ಹೋರಾಟದ ಕೇಂದ್ರದಲ್ಲಿದ್ದರು. ಸ್ವತಂತ್ರಭಾರತದಲ್ಲಿ ಮೊದಲ ಬಾರಿ ದೇಶದ ಗಮನಸೆಳೆದ ಚಳುವಳಿ ಈಗ ಸುದ್ದಿಯಲ್ಲಿರುವ ತೆಲಂಗಾಣದಲ್ಲಿಯೇ ನಡೆದದ್ದು. ೧೯೪೬ರಿಂದ ಸುಮಾರು ಐದುವರ್ಷಗಳ ಅಲ್ಲಿ ನಡೆದ ರೈತ ಚಳುವಳಿಯನ್ನು ಕೊನೆಯಲ್ಲಿ ಸರ್ಕಾರ ಸೇನೆಯ ಬಲದಿಂದ ಹತ್ತಿಕ್ಕಿದರೂ ಅಲ್ಲಿನ ಹೋರಾಟದ ಕಾವು ಆರಿಹೋಗಿರಲಿಲ್ಲ ಎನ್ನುವುದಕ್ಕೆ ಆ ಪ್ರದೇಶದಲ್ಲಿನ ಈಗಿನ ಬೆಳವಣಿಗೆಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಉತ್ತರಪ್ರದೇಶ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ರೈತ ಚಳುವಳಿಗೂ ತೆಲಂಗಾಣ ರೈತರ ಹೋರಾಟವೇ ಪರೋಕ್ಷ ಸ್ಪೂರ್ತಿಯಾಗಿತ್ತು. ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆಯ ಆಡಳಿತದ ವಿರುದ್ಧ ನಡೆದ ರಾಜಕೀಯ ಚಳುವಳಿ ನಂತರದ ದಿನಗಳಲ್ಲಿ ಇಂದಿರಾ ಯುಗ ಸಮಾಪ್ತಿಯಲ್ಲಿ ಕೊನೆಗೊಂಡಿತ್ತು. ಆದರೆ ಅದು ಸ್ಥಳೀಯವಾಗಿ ಪ್ರಾರಂಭಗೊಂಡದ್ದು ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಂದ ಎನ್ನುವುದು ಗಮನಾರ್ಹ. ಅಹ್ಮದಾಬಾದ್‌ನ ಕಾಲೇಜೊಂದರಲ್ಲಿ ಬೋಧನಾಶುಲ್ಕ ಏರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಒಂದೇ ತಿಂಗಳ ಅವಧಿಯಲ್ಲಿ ರಾಜ್ಯಾದಾದ್ಯಂತ ಹರಡಿ `ನವನಿರ್ಮಾಣ' ಚಳುವಳಿಯ ರೂಪುಪಡೆದು ಅಂತಿಮವಾಗಿ ಚಿಮನ್‌ಬಾಯ್ ಪಟೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದಲ್ಲಿ ಕೊನೆಗೊಂಡಿತು. ಅದೇ ವೇಳೆ ಬಿಹಾರದ ಪಾಟ್ನಾದಲ್ಲಿ ಬೆಲೆ ಏರಿಕೆ ಮತ್ತು ವಿದ್ಯಾರ್ಥಿಗಳ ಬೋಧನಾ ಶುಲ್ಕ ಹೆಚ್ಚಳದ ವಿರುದ್ಧ ಶುರುವಾದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ನಂತರದ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ' ಚಳುವಳಿಗೆ ಕಾರಣವಾಯಿತು. ಆದರೆ ಈ ಚಳುವಳಿಯಿಂದಾಗಿ ಹುಟ್ಟಿಕೊಂಡ ಪರ್ಯಾಯ ರಾಜಕೀಯ ಶಕ್ತಿ ಬಹಳ ದಿನ ಬಾಳಲಿಲ್ಲ.
ಮಂಡಲ ವರದಿಯ ಪರ-ವಿರುದ್ಧ ನಡೆದ ಹೋರಾಟಗಳೇ ರಾಷ್ಟ್ರಮಟ್ಟದಲ್ಲಿ ಸಂಚಲನ ಉಂಟುಮಾಡಿದ ಕೊನೆಯ ಚಳುವಳಿ. ಆಗಿನ ಪ್ರಧಾನಿ ವಿ.ಪಿ.ಸಿಂಗ್ ಅವರು ತಕ್ಷಣ ರಾಜಕೀಯದ ಕಾರಣಕ್ಕಾಗಿ ಅವಸರದಲ್ಲಿ ಮಂಡಲ ವರದಿಯನ್ನು ಅನುಷ್ಠಾನಗೊಳಿಸಿದರೂ ಅದು ಹಿಂದುಳಿದ ಜಾತಿ ಜನರಲ್ಲಿ ಹುಟ್ಟಿಸಿದ ಜಾಗೃತಿ ನಂತರದ ದಿನಗಳಲ್ಲಿ ಹಲವಾರು ರಾಜಕೀಯ ಪಲ್ಲಟಗಳಿಗೆ ಕಾರಣವಾಯಿತು. ಅದರಂತೆ ದೇಶದಲ್ಲಿ ಕೋಮುವಾದಿ ರಾಜಕೀಯದ ಇನ್ನೊಂದು ಯುಗಕ್ಕೂ ನಾಂದಿ ಹಾಡಿತು. ಇದರ ನಂತರದ ಚಳುವಳಿ-ಹೋರಾಟಗಳು ಬಿಡಿಬಿಡಿಯಾಗಿ ಸ್ಥಳೀಯ ಮಟ್ಟದಲ್ಲಷ್ಟೇ ನಡೆಯುತ್ತಿವೆ. ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಎಂಬತ್ತರ ದಶಕದ ಉತ್ತರಾರ್ಧದಲ್ಲಿ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ರೈತರ ಸಂಘಟನೆಗೆ ತೊಡಗಿದರೂ ಅದು ಆ ರಾಜ್ಯದ ಗಡಿದಾಟಿ ಹೊರಗೆ ಬರಲಿಲ್ಲ. ಇದೇ ರೀತಿ ಶೇತ್ಕರಿ ಸಂಘಟನೆಯ ಶರದ್ ಜೋಷಿ ನೇತೃತ್ವದ ಚಳುವಳಿ ಮಹರಾಷ್ಟ್ರದ ಕೆಲವು ಭಾಗಗಳಿಗಷ್ಟೇ ಸೀಮಿತವಾಗಿದೆ. ಎಂಬತ್ತರದ ದಶಕದ ವೈಭವದ ನಂತರ ಕರ್ನಾಟಕದ ರೈತ ಸಂಘಟನೆ ಕೂಡಾ ಒಡೆಯುತ್ತಾ, ಒಂದಾಗುತ್ತಾ ಜನಪ್ರಿಯತೆ ಕಳೆದುಕೊಳ್ಳುತ್ತಿವೆ. ದತ್ತಾ ಸಾಮಂತ್ ನೇತೃತ್ವದಲ್ಲಿ ಮುಂಬೈನಲ್ಲಿ ನಡೆದ ಗಿರಣಿ ಕಾರ್ಮಿಕರ ಚಳುವಳಿಯಿಂದಾಗಿ ಬಟ್ಟೆಗಿರಣಿಗಳೇ ಮುಚ್ಚಿಹೋಯಿತೇ ವಿನ: ಕಾರ್ಮಿಕರಿಗೆ ಲಾಭವಾಗಲಿಲ್ಲ. ಉತ್ತರಖಂಡ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಪರಿಸರವಾದಿ ಚಳುವಳಿಗಳು ಸುಂದರಲಾಲ ಬಹುಗುಣ ಮತ್ತು ಮೇಧಾ ಪಾಟ್ಕರ್ ಅವರಂತಹ ನಾಯಕರಿಂದಾಗಿ ಉಳಿದುಕೊಂಡಿವೆ. ಅಲ್ಲಲ್ಲಿ ದಲಿತ ಮತ್ತು ಆದಿವಾಸಿಗಳು ಹೋರಾಟ ನಡೆಸುತ್ತಿದ್ದರೂ ಪರಿಣಾಮ ಗೌಣ. ಇವ್ಯಾವುದೂ ಪ್ರಭುತ್ವವನ್ನು ಕಂಪನಕ್ಕೆಡುಮಾಡುವಷ್ಟು ಸಶಕ್ತವಾಗಿಲ್ಲ. ಈ ಹೋರಾಟಗಾರರು ಎತ್ತುತ್ತಿ ರುವ ವಿಷಯಗಳು ಯಾವುದೂ ರಾಜಕೀಯ ಪಕ್ಷಗಳ ಮುಖ್ಯ ಕಾರ್ಯಸೂಚಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದೊಂದು ವಿಪರ್ಯಾಸ. ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿರುವ ಈ ಚಳುವಳಿಗಳನ್ನು ಹೊರತುಪಡಿಸಿದರೆ ನಿರಂತರವಾಗಿ ಸದ್ದು ಮಾಡುತ್ತಿರುವುದು ಪ್ರತ್ಯೇಕತಾವಾದಿಗಳು ಮತ್ತು ಮಾವೋವಾದಿಗಳ ಬಾಂಬು-ಬಂದೂಕುಗಳು ಮಾತ್ರ.
ಹೋರಾಟದ ರಾಜಕೀಯ ನೆಲೆ ಕಳೆದುಕೊಳ್ಳಲು ಕಾರಣಗಳು ಇವೆ. ರಾಜಕೀಯ ಶಕ್ತಿ ಗಳಿಕೆಗೆ ಹೋರಾಟದ ಹಾದಿಗಿಂತ ಸುಲಭವಾದ ಒಳದಾರಿಗಳು ತೆರೆದುಕೊಳ್ಳುತ್ತಿವೆ. ಹೋರಾಟದ ರಾಜಕೀಯದ ಸ್ಥಾನವನ್ನು ಹಣಬಲ, ಜಾತಿಬಲ ಮತ್ತು ತೋಳ್ಬಲದ ರಾಜಕೀಯ ಆಕ್ರಮಿಸಿಕೊಳ್ಳತೊಡಗಿದೆ. ವರ್ತಮಾನದ ರಾಜಕೀಯ ನಕಾಶೆಯಲ್ಲಿ ಮೆರೆಯುತ್ತಿರುವ ಬಹುತೇಕ ನಾಯಕರು ಈ ಒಳದಾರಿಯಿಂದಲೇ ಬಂದವರು. ದುಡ್ಡು ಇಲ್ಲದವರು, ಜಾತಿ ಬೇಡ ಎಂದವರು, ಹಿಂಸೆಯನ್ನು ಒಪ್ಪದವರು ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಮೂಹವನ್ನು ಸೆಳೆಯಬಲ್ಲಂತಹ ವಿಶ್ವಾಸಾರ್ಹ ನಾಯಕರ ಕೊರತೆ ಕೂಡಾ ಹೋರಾಟದ ರಾಜಕೀಯ ಅಪ್ರಸ್ತುತವಾಗಲು ಕಾರಣ. ಜೆಪಿ ಚಳುವಳಿ ಉತ್ತರಭಾರತದಲ್ಲಿ ಹಲವಾರು ನಾಯಕರನ್ನ ಹುಟ್ಟುಹಾಕಿತ್ತು. ಈ ಚಳುವಳಿಯ ಉತ್ಪನ್ನಗಳೇ ಆಗಿರುವ ಮುಲಾಯಂಸಿಂಗ್ ಸಿನೆಮಾ ನಟ-ನಟಿಯರು ಮತ್ತು ರಾಜಕೀಯ ದಲ್ಲಾಳಿಗಳ ಸಂಗಕ್ಕೆ ಬಿದ್ದು ದಾರಿ ತಪ್ಪಿದರೆ, ಲಾಲುಪ್ರಸಾದ್ ಅವರು ರಾಜಕೀಯವನ್ನು ಮನರಂಜನೆಯ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ಜೆಪಿ ಚಳುವಳಿಯ ಮೂಲಕವೇ ರಾಜಕೀಯವಾಗಿ ಜೀವ ಪಡೆದುಕೊಂಡ ಜನಸಂಘದ ನಾಯಕರೆಲ್ಲರೂ ಮುಂದಿನ ದಿನಗಳಲ್ಲಿ ಕೋಮುವಾದಿ ರಾಜಕೀಯಕ್ಕೆ ತಮ್ಮನ್ನು ತೆತ್ತುಕೊಂಡರು. ಮಂಡಲ ಚಳುವಳಿಯ ಮೂಲಕ ರಾಜಕೀಯ ಬಲ ಪಡೆದುಕೊಂಡ ನಾಯಕರು ಕೂಡಾ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಪ್ರಬಲ ಸಾಮಾಜಿಕ ಚಳುವಳಿಯೊಂದರ ಮೂಲಕ ರಾಜಕೀಯ ಪ್ರವೇಶಿಸಿದ ತಮಿಳುನಾಡಿನ ಎಂ.ಕರುಣಾನಿಧಿ ಈಗ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮತದಾರರಿಗೆ ಬಣ್ಣದ ಟಿವಿಗಳನ್ನು ಹಂಚಬೇಕಾಗಿದೆ. ಮಣ್ಣಿನ ಮಗನೆಂದು ಹೇಳಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೋರಾಟಕ್ಕೆ ಸರಿಯಾದ ವಿಷಯಗಳನ್ನೇ ಎತ್ತಿಕೊಳ್ಳುತ್ತಾರೆ, ಆದರೆ ಅದನ್ನೊಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೆ ನಡುಹಾದಿಯಲ್ಲಿ ಕೈಬಿಟ್ಟು ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತಾರೆ.ಎಲ್ಲಿದ್ದಾರೆ ಪ್ರಾಮಾಣಿಕ ಜನಪರ ರಾಜಕೀಯ ಹೋರಾಟಗಾರರು?
ಸರ್ಕಾರಗಳು ನಮಗಾಗಿ ಮತ್ತು ನಮ್ಮಿಂದಲೇ ರಚನೆಗೊಂಡರೂ ಇದು ಸದಾ ಜನಪರವಾಗಿಯೇ ಕೆಲಸ ಮಾಡಿದೆ ಎಂದು ಹೇಳಲಾಗದು. ಪ್ರಭುತ್ವ ಜಡವಾದಾಗ, ಭ್ರಷ್ಟಗೊಂಡಾಗ, ಜನವಿರೋಧಿಯಾದಾಗ ಅದನ್ನು ಮಣಿಸಿ ಸರಿದಾರಿಗೆ ತಂದದ್ದು ಜನರೇ ನಡೆಸಿದ ಚಳುವಳಿಗಳು ಮತ್ತು ಹೋರಾಟಗಳು. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದಲ್ಲಿಯೇ ಸಿಗುತ್ತದೆ. ಎಂಬತ್ತರ ದಶಕದ ಪ್ರಾರಂಭದಲ್ಲಿ ರಾಜ್ಯದಲ್ಲಿ ನಡೆದ ರೈತಚಳುವಳಿ, ಭಾಷಾ ಚಳುವಳಿ ಮತ್ತು ದಲಿತ ಚಳುವಳಿಗಳ ಉದ್ದೇಶಗಳು ಬೇರೆಬೇರೆಯಾಗಿದ್ದರೂ ಅಂತಿಮವಾಗಿ ಅವುಗಳು ರಾಜಕೀಯ ಬದಲಾವಣೆಯ ತಾರ್ಕಿಕ ಅಂತ್ಯದಲ್ಲಿ ಕೊನೆಗೊಂಡವು.
ಪ್ರಜಾಪ್ರಭುತ್ವ ಯಶಸ್ಸು ಕಾಣಬೇಕಾದರೆ ಜನಜಾಗೃತಿಯ ಕುಲುಮೆ ಉರಿಯುತ್ತಲೇ ಇರಬೇಕು, ಆದರೆ ಈ ಕುಲುಮೆಯಲ್ಲಿನ ಬೆಂಕಿ ಆರಿಹೋಗುತ್ತಿದೆಯೇನೋ ಎಂಬ ಆತಂಕ ಈಗ ಮೂಡತೊಡಗಿದೆ. ಜನಜಾಗೃತಿಯ ಮೂಲಕ ಪ್ರಜಾಪ್ರಭುತ್ವವನ್ನು ಅದರ ಎಲ್ಲ ಆಶಯಗಳೊಂದಿಗೆ ಜೀವಂತವಾಗಿಡಲು ನೆರವಾಗುವ ಪ್ರಮುಖ ಸಾಧನ ಸಾಹಿತ್ಯ. ಈ ಸಾಧನ ಮೊಂಡಾಗುತ್ತಿದೆ ಎಂದು ಅನಿಸಿದಾಗೆಲ್ಲ ಅದಕ್ಕೆ ಸಾಣೆ ಹಿಡಿಯುವ ಕೆಲಸವನ್ನು ಕಾಲಕಾಲಕ್ಕೆ ಹೊಸ ತಲೆಮಾರಿನ ಸಾಹಿತಿಗಳು ಮಾಡುತ್ತಲೇ ಬಂದಿದ್ದಾರೆ. ಈ ಮೂಲಕ ಸಾಹಿತ್ಯದ ಗಡಿಯನ್ನು ವಿಸ್ತರಿಸಿದ್ದಾರೆ, ಸಾಹಿತ್ಯವನ್ನು ನೋಡುವ ಕ್ರಮವನ್ನು ಬದಲಿಸಿದ್ದಾರೆ ಹಾಗೂ ಸಾಹಿತ್ಯವನ್ನು ಕಲಿಯುವ ಮತ್ತು ಕಲಿಸುವ ರೀತಿಯಲ್ಲಿ ಬದಲಾವಣೆ ತಂದಿದ್ದಾರೆ. ಕರ್ನಾಟಕದಲ್ಲಿ ನಡೆದ ಅನೇಕ ರಾಜಕೀಯ ಮತ್ತು ಸಾಮಾಜಿಕ ಪಲ್ಲಟಗಳ ಹಿಂದೆ ಸಾಹಿತ್ಯದ ಪ್ರಭಾವ ಇದೆ.ಆದರೆ ಇದನ್ನೆಲ್ಲ ಈ ಕಾಲದ ಹೊಸ ತಲೆಮಾರಿನ ಲೇಖಕರ ಬಗ್ಗೆ ಹೇಳಲು ಸಾಧ್ಯವೇ? `ಮಾನವ ಪರಿಸರದಿಂದ ರೂಪುಗೊಳ್ಳುವುದಾದರೆ ಅವನ ಪರಿಸರವನ್ನೇ ಮಾನವೀಯಗೊಳಿಸಬೇಕಾಗಿದೆ' ಎಂದು ಕಾರ್ಲ್‌ಮಾರ್ಕ್ಸ್ ಹೇಳಿದ್ದರು. ಆದರೆ ಈ ಕೆಲಸವನ್ನು ಮಾಡುವವರು ಯಾರು?
ಇತ್ತೀಚೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಹಿರಿಯ ವಿದ್ವಾಂಸ ಜಿ.ವೆಂಕಟಸುಬ್ಬಯ್ಯ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದರು. ಮರುದಿನ ಅವರು ಅದಕ್ಕೆ ಒಂದಷ್ಟು ತಿದ್ದುಪಡಿ ಮಾಡಿರುವುದು ನಿಜ. ಇದಕ್ಕಾಗಿ ಅವರ ಮೇಲೆ ಬಿದ್ದಿರಬಹುದಾದ ಒತ್ತಡವನ್ನು ಅರ್ಥಮಾಡಿಕೊಳ್ಳಬಹುದು. ಈ ಕಾರಣಕ್ಕಾಗಿ ಅವರನ್ನು ತಪ್ಪು ತಿಳಿಯಬೇಕಾಗಿಲ್ಲ. ಆದರೆ ನಾಡು-ನುಡಿ-ನೆಲ-ಜನ-ಜಲಕ್ಕೆ ಸಂಬಂಧಿಸಿದ ಅನ್ಯಾಯಗಳು ನಡೆದಾಗ, ಸರ್ಕಾರ ಭ್ರಷ್ಟಗೊಂಡು ಹಾದಿ ತಪ್ಪಿ ಜನವಿರೋಧಿಯಾದಾಗ, ಊರುಗೋಲು ಇಟ್ಟುಕೊಂಡಿರುವ ಹಿರಿಯ ಸಾಹಿತಿಗಳೇ ಯಾಕೆ ಪ್ರತಿಕ್ರಿಯಿಸಬೇಕಾಗುತ್ತದೆ? ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾದ, ದೈಹಿಕವಾಗಿ ಗಟ್ಟಿಮುಟ್ಟಾಗಿರುವ, ಆರ್ಥಿಕವಾಗಿ ಸುಖವಾಗಿರುವ ಸಾಹಿತಿಗಳೆಲ್ಲ ಏನು ಮಾಡುತ್ತಿದ್ದಾರೆ? ಭ್ರಷ್ಟಾಚಾರ,ಕೋಮುವಾದ, ಪ್ರಾಕೃತಿಕ ಸಂಪತ್ತಿನ ಲೂಟಿ, ಕನ್ನಡ ಭಾಷೆ,ನೆಲ-ಜಲಕ್ಕೆ ಆಗುತ್ತಿರುವ ಅನ್ಯಾಯದ ಪ್ರಶ್ನೆಯನ್ನೆತ್ತಿಕೊಂಡು ನಡೆಯುವ ಪ್ರತಿಭಟನೆಯಲ್ಲಿ ಯಾರು ಪಾಲ್ಗೊಂಡಿದ್ದಾರೆ ಎಂದು ಪತ್ರಕರ್ತರು ಸ್ಥಳಕ್ಕೆ ಭೇಟಿ ನೀಡದೆಯೇ ವರದಿ ಮಾಡುವಂತಹ ಸ್ಥಿತಿ ಕರ್ನಾಟಕದಲ್ಲಿದೆ. ಅದೇ ಅನಂತಮೂರ್ತಿ, ಬರಗೂರು, ಕಂಬಾರ, ದೇವನೂರು, ಕಾರ್ನಾಡ್,ಚಂಪಾ, ಎಸ್.ಜಿ.ಸಿದ್ದರಾಮಯ್ಯ, ಡಿ.ಎಸ್.ನಾಗಭೂಷಣ, ಮರುಳಸಿದ್ದಪ್ಪ, ಜಿ.ರಾಜಶೇಖರ ಮೊದಲಾದ ಅರ್ವತ್ತು ದಾಟಿ ಎಪ್ಪತ್ತರ ಕಡೆ ಹೊರಟ ಇಲ್ಲವೇ ಎಪ್ಪತ್ತು ದಾಟಿರುವ ಹತ್ತಿಪ್ಪತ್ತು ಹಳೆಯ ಮುಖಗಳನ್ನಷ್ಟೇ ಅಲ್ಲಿ ಕಾಣಬಹುದು. ಪತ್ರಿಕೆಗಳಲ್ಲಿ ಪ್ರಕಟವಾಗುವ ಟಾಪ್ ಟೆನ್ ಕೃತಿಗಳ ಲೇಖಕರಲ್ಲಿ ಯಾರಾದರೂ ಅಲ್ಲಿ ಕಣ್ಣಿಗೆ ಬೀಳುವುದು ಅಪರೂಪ. ಹೀಗ್ಯಾಕೆ?
ಸಾಮಾನ್ಯವಾಗಿ ಯುವಜನರು ಬಂಡುಕೋರರ ಸಾಲಿನಲ್ಲಿ ಮೊದಲನೆಯವರಾಗಿರುತ್ತಾರೆ. ಅದು ಬಿಸಿರಕ್ತದ ಸಹಜ ಗುಣ. ಲೇಖಕರು, ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರು ಯಾರೇ ಆಗಿರಬಹುದು ಕನಿಷ್ಠ ಯೌವ್ವನದ ದಿನಗಳಲ್ಲಿಯಾದರೂ ಅನ್ಯಾಯದ ವಿರುದ್ಧ ದನಿ ಎತ್ತುವ, ವ್ಯವಸ್ಥೆಯನ್ನು ಪ್ರಶ್ನಿಸುವ, ಸವೆಯದ ದಾರಿ ತುಳಿಯುವ ದಿಟ್ಟತನವನ್ನು ತೋರಿಸುತ್ತಾ ಬಂದಿರುವುದನ್ನು ನಾವು ಕಾಣಬಹುದು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ಈ ಪರಂಪರೆ ಇತ್ತು. ಪುಸ್ತಕದ ಮಾರುಕಟ್ಟೆ ಈಗಿನಷ್ಟು ಬೆಳೆಯದ ದಿನಗಳಲ್ಲಿ ಬರೆದು ಬದುಕುತ್ತೇನೆ ಎಂದು ಹೊರಟವರು ಶಿವರಾಮ ಕಾರಂತರು. ಅವರಿಗಿಂತ ಮೊದಲು ಅನಕೃ, ತರಾಸು ಮೊದಲಾದವರು ಅದನ್ನೇ ಮಾಡಿದ್ದರು. ಕಾರಂತರು ಕೊನೆವರೆಗೆ ಭದ್ರತೆಯ ಉದ್ಯೋಗವನ್ನೇ ಮಾಡದೆ ಹುಚ್ಚುಸಾಹಸಗಳ ಮೂಲಕವೇ ಕನ್ನಡದ ಸೇವೆ ಮಾಡಿದರು. ೮೦ ವರ್ಷಗಳ ಹಿಂದೆಯೇ ಕೋಟಾದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ ಕಾರಂತರು ಶೂದ್ರ ಹುಡುಗಿಯನ್ನು ಮದುವೆಯಾದರು. ಪುತ್ತೂರಿಗೆ ಹೋಗಿ ಹರಿಜನರಿಗಾಗಿ ಶಾಲೆ ಪ್ರಾರಂಭಿಸಿದರು, ಬಸರೂರಿನ ವೇಶ್ಯೆಯರ ಮಕ್ಕಳನ್ನು ಜತೆಯಲ್ಲಿಟ್ಟು ಸಾಕಿದರು. ವೈದಿಕ ಧರ್ಮದ ನೆಲೆಯೇ ಕಂಪನಕ್ಕೆಡಾಗುವಂತೆ ಮಾಡಿದ ಸಂಸ್ಕಾರ ಬರೆದಾಗ ಅನಂತಮೂರ್ತಿಯವರು ನಲ್ವತ್ತರ ಆಜುಬಾಜಿನಲ್ಲಿದ್ದರೆಂದು ಕಾಣುತ್ತದೆ. ಕುವೆಂಪು, ತೇಜಸ್ವಿ, ಕಂಬಾರ,ದೇವನೂರು,ಡಿ.ಆರ್.ನಾಗರಾಜ್ ಮೊದಲಾದವರೆಲ್ಲ ಅವರವರ ಯೌವ್ವನದ ದಿನಗಳಲ್ಲಿ ಆ ಕಾಲದ ಸಾಮಾಜಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಲೇ ಬರೆದವರು, ಬೀದಿಗಿಳಿದು ಹೋರಾಟ ಮಾಡಿದವರು. ಎದುರಾದ ವಿರೋಧಕ್ಕೆ ಅಂಜಿ ಹಿಮ್ಮೆಟ್ಟಿದವರಲ್ಲ,ಲೆಕ್ಕಾಚಾರದ ಬದುಕು ಬದುಕಿದವರಲ್ಲ. ಲೌಕಿಕ ಜಗತ್ತಿನ ಬೇಕು-ಬೇಡಗಳ ಬಗ್ಗೆ ಅಷ್ಟೇನು ತಲೆಕೆಡಿಸಿಕೊಂಡವರಲ್ಲ. ಆದ್ದರಿಂದಲೇ ಹಂಗಿಲ್ಲದ ಬರವಣಿಗೆ ಅವರಿಗೆ ಸಾಧ್ಯವಾಗಿರಬಹುದು.
ಆದರೆ ಯಾಕೆ ಹೀಗಾಗಿದೆ ಎನ್ನುವ ಪ್ರಶ್ನೆಗೆ ನನಗೆ ತಿಳಿದ ಉತ್ತರ ಹೇಳಿ ನನ್ನ ಮಾತು ಮುಗಿಸುತ್ತೇನೆ. ವ್ಯಕ್ತಿಯ ಜೀವನ ಕ್ರಮ ಆತನ ಆಲೋಚನಾ ವಿಧಾನವನ್ನು ರೂಪಿಸುತ್ತದೆ. ಇಂದಿನ ಹೊಸತಲೆಮಾರಿನ ಹೆಚ್ಚಿನ ಲೇಖಕರು ಕೈತುಂಬಾ ಸಂಬಳ ತರುವ ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು. ಸ್ವಂತದ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳೇ ಇಲ್ಲದ, ವ್ಯವಸ್ಥೆಯ ವಿರುದ್ಧ ದನಿ ಎತ್ತದ, ಅನ್ಯಾಯವನ್ನು ಪ್ರಶ್ನಿಸದೆ ನಾಜೂಕಾಗಿ ಜಾರಿಕೊಳ್ಳುವ ಲೇಖಕರ ಹೊಸ ಪೀಳಿಗೆ ಇದು. ಬಹಳ ಲೆಕ್ಕಾಚಾರದ, ಎಚ್ಚರಿಕೆಯ ನಡೆಯ, ಸುರಕ್ಷಿತ ಬದುಕು ಅವರದ್ದು. ಇವರ ನಡೆ-ನುಡಿಗಳೆಲ್ಲ `ಯಶಸ್ಸಿಗೆ ನೂರು ಸೂತ್ರಗಳು,' `ಗೆಳೆಯರನ್ನು ಸಂಪಾದಿಸುವುದು ಹೇಗೆ?' ಇತ್ಯಾದಿ ಪುಸ್ತಕಗಳನ್ನು ಓದಿ ಅರಗಿಸಿಕೊಂಡವರ ಹಾಗೆ ಇರುತ್ತದೆ. ಹೊರಜಗತ್ತಿನ ಪರಿವೆಯೇ ಇಲ್ಲದಂತೆ ಬದುಕುತ್ತಿರುವ ಕೋಟ್ಯಂತರ ಮಧ್ಯಮವರ್ಗದ ಜನರಿದ್ದಾರಲ್ಲಾ ಅವರಿಗೂ ಇವರಿಗೂ ಏನೂ ವ್ಯತ್ಯಾಸ ಇಲ್ಲ. ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡು ತೋಳೇರಿಸಿ ಚರ್ಚೆ-ವಾಗ್ವಾದಕ್ಕೆ ಇಳಿಯುವುದಿಲ್ಲ. ಒಂದು ರೀತಿಯ ಹಿಟ್ ಆ?ಯಂಡ್ ರನ್ ತಂತ್ರ. ಹಸಿವು, ಅವಮಾನ, ಧರ್ಮ, ಸಂಸ್ಕೃತಿ ವಿಷಯಗಳ ಪುನರ್‌ವ್ಯಾಖ್ಯಾನ ಮಾಡುವ ನೆಪದಲ್ಲಿ ಇತಿಹಾಸದ ಚಕ್ರವನ್ನು ಹಿಂದಕ್ಕೆ ಉರುಳಿಸಲು ಹೊರಟವರ ತಂತ್ರವೂ ಇದೇ ಆಗಿದೆ. ಕಾಲಕಾಲಕ್ಕೆ ಇವರ ಒಂದಷ್ಟು ಚಂದದ ಪುಸ್ತಕಗಳು ಪ್ರಕಟವಾಗುತ್ತದೆ. ಪುಸ್ತಕ ಪ್ರಕಾಶನ ಕೂಡಾ ದೊಡ್ಡ ಹಗರಣವಾಗಿರುವ ಕಾರಣ ಒಬ್ಬ ಲೇಖಕನ ಪುಸ್ತಕದ ಒಂದು ಸಾವಿರ ಪ್ರತಿ ಮಾರಾಟ ಕನ್ನಡದಲ್ಲಿ ದೊಡ್ಡ ಸಮಸ್ಯೆ ಅಲ್ಲ. ವೆಬ್-ಬ್ಲಾಗ್‌ಗಳಲ್ಲಿ ಪ್ರಚಾರ, ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆ ಹೀಗೆ ಕಮರ್ಷಿಯಲ್ ಸಿನೆಮಾಗಳ ಪ್ರಚಾರದ ರೀತಿಯಲ್ಲಿ ಪುಸ್ತಕಗಳ ಮಾರ್ಕೆಟಿಂಗ್ ನಡೆಯುತ್ತಿರುತ್ತದೆ. ಟಾಪ್ ಟೆನ್‌ಗಳ ಪಟ್ಟಿಯಲ್ಲಿ ಅದೇ ಕೃತಿಗಳು ಇರುತ್ತವೆ.
ಆದರೆ ನಮ್ಮೆಲ್ಲರನ್ನು ಕಾಡುತ್ತಿರುವ, ಆತಂಕಕ್ಕೆಡುಮಾಡಿರುವ ಹಲವಾರು ಜ್ವಲಂತ ಸಂಗತಿಗಳಿವೆ. ನಾನು ಈಗಾಗಲೇ ಹೇಳಿದಂತೆ ದೇಶದಲ್ಲಿ ಎರಡು ಭಾರತಗಳ ನಡುವೆ ಶೀತಲವಾದ ಸಂಘರ್ಷ ನಡೆಯುತ್ತಿದೆ, ಪ್ರಜಾಪ್ರಭುತ್ವದ ಆಧಾರಸ್ಥಂಭಗಳು ಕುಸಿದುಬೀಳುತ್ತಿವೆ, ಹೊಸ ಆರ್ಥಿಕ ನೀತಿಯ ಪೋಷಾಕು ತೊಟ್ಟು ಬಂದ ಜಾಗತೀಕರಣ ನವವಸಾಹತುಷಾಹಿಯನ್ನು ಹುಟ್ಟುಹಾಕಿದೆ,ಭ್ರಷ್ಟಾಚಾರ ತಾಂಡವವಾಡುತ್ತಿದೆ, ಜಾತೀಯತೆ ಬತ್ತಲೆನರ್ತನ ಮಾಡುತ್ತಿದೆ, ಕೋಮುವಾದದ ಬೆಂಕಿ ನಮ್ಮೆಲ್ಲರನ್ನೂ ಸುಟ್ಟುಹಾಕುವಂತೆ ಉರಿಯುತ್ತಿದೆ. ಮತ್ತೊಂದು ಸ್ವಾತಂತ್ರ್ಯಹೋರಾಟ ನಡೆಯಬೇಕಾದ ಕಾಲ ಇದು. ಆದರೆ ಸುದ್ದಿ-ಪ್ರಸಿದ್ಧಿಯಲ್ಲಿರುವ ಹೊಸ ತಲೆಮಾರಿನ ಎಷ್ಟು ಸ್ಟಾರ್ ಲೇಖಕರ ಕೃತಿಗಳಲ್ಲಿ ಈ ಸಂಗತಿಗಳು ಕಾಣಿಸಿಕೊಂಡಿವೆ? ಇವರ ಸಾಹಿತ್ಯ ನಿರ್ದೇಶಿಸುವ ಮೌಲ್ಯಗಳು, ವ್ಯಕ್ತವಾಗುವ ಸಾಮಾಜಿಕ ನಿಲುವುಗಳು ಯಾವುದು? ಬರವಣಿಗೆ ಎನ್ನುವುದು ಕೇವಲ ಸ್ವಂತದ ಸಂತೋಷಕ್ಕಾಗಿಯೇ? ಸಮೂಹದ ಹಿತ ಕಾಯುವ ಸಾಮಾಜಿಕ ಜವಾಬ್ದಾರಿ ಕೇವಲ ರಾಜಕಾರಣಿಗಳದ್ದೇ? ಒಬ್ಬ ರಾಜಕಾರಣಿಗೆ ಮತದಾರನ ಋಣ ಇರುವುದಾದರೆ ಒಬ್ಬ ಸಂವೇದನಾಶೀಲ ಸಾಹಿತಿಗೆ ಓದುಗನ ಋಣ ಇರುವುದಿಲ್ಲವೇ? ಆತನ ಬದುಕಿನ ಕಾರ್ಪಣ್ಯಗಳು, ದುಮ್ಮಾನಗಳು ಸಾಹಿತಿಗಳಿಗೆ ಸಂಬಂಧಿಸಿದ ವಿಷಯ ಅಲ್ಲವೇ? ಭ್ರಷ್ಟ, ರೋಗಗ್ರಸ್ತ ಸ್ಥಿತಿಯ ವಿರುದ್ಧ ಹೋರಾಡುವುದು ಬದುಕನ್ನು ಪ್ರೀತಿಸುವ ಲೇಖಕರೆಲ್ಲರ ಜವಾಬ್ದಾರಿಯಲ್ಲವೇ? ಹೌದು ಎಂದಾದರೆ ಈ ಹೋರಾಟಕ್ಕೆ ಬೇಕಾದ ಹತಾರುಗಳು ಸಾಹಿತ್ಯದ ಮೂಲಕವೇ ತಯರಾಗುವುದು ಬೇಡವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಈ ಸಮ್ಮೇಳನದಲ್ಲಿ ನಡೆಯಲಿ ಎಂದು ಆಶಿಸುತ್ತೇನೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...