Wednesday, August 31, 2011

ಮೂರು ಹನಿ


ಬೆಳಗಾಯಿತು ;
ನನ್ನದಷ್ಟೇಯಲ್ಲ
ಲೋಕದ ಎಲ್ಲ
ಗಾಯಗಳು
ಬೀದಿ ತಲುಪಿದವು

ಎಷ್ಟು ನಿರಾಳವಾಗಿ ರೆಕ್ಕೆ ಬಿಚ್ಚಿದೆ
ಕನ್ಕಪ್ಪಡಿ ಇರುಳಿನಲ್ಲಿ ;
ಏನೂ ಕಾಣುವುದಿಲ್ಲವೆಂದು ಈಗಲೂ ಇರುಳನ್ನೇಕೆ
ದೂರುತ್ತಿ ..

ನಿನ್ನ ನಾಜೂಕು ಬೆರಳುಗಳಿಂದ
ನನ್ನ ಹೆಸರನ್ನ ಎದೆಯ ಮೇಲೆ ಬರೆಯಿಸಿಕೊಳ್ಳುವ
ಆಸೆ ಇನ್ನೂ ಇತ್ತು
ಬದುಕು ನಿನ್ನೆ ದಿನ
ನನ್ನ ಬೆರಳುಗಳಿಂದ ನಿನ್ನ ಹೆಸರನ್ನ
ನಿನ್ನ ಸಮಾದಿಯ ಮೇಲೆ
ಬರಿಯಿಸಿತು ....

- ಅನಾಮಿಕ

ಇಳಿಸಂಜೆ ಹೊತ್ತು


ನೆರೆಗೂದಲು
ಬೆಳಕಿಗೆ ಹೊಳೆವಾಗ
ಎಲ್ಲ ಸಾಕೆನಿಸಿ
ಇಳಿಸಂಜೆ ಹೊತ್ತು
ಕಣ್ಮುಚ್ಚಿ ಕುಳಿತ ಜೀವವೇ
ತೆರೆ ಕಣ್ಣು
ಹೊರಗಿನ ಬೆಳಕು
ಹೊರಗಡೆಯೇ ಉಳಿದಿದೆ

ಎಲ್ಲ ದಾಟಿ ಬಂದ ಮೇಲೆ
ನಿನಗಿರುವ ಹಾಗೆ
ನನಗೂ ಉಳಿಯಲಿ
ಒಲವುಯಿತ್ತವರನ್ನೇ ಎಣಿಯಾಗಿಸದ
ನೆಮ್ಮದಿ
ಇರುವಷ್ಟೇ ಹಾಸುಗೆಯಲ್ಲಿ
ಕಣ್ಮುಚ್ಚುವ ತಾಳ್ಮೆ
ನಡೆದ ಹಾದಿಯ ಬಗ್ಗೆ
ಹಿಡಿಯಷ್ಟು ಹೆಮ್ಮೆ

ಕಣ್ಮುಚ್ಚಿ ಕುಳಿತ ಜೀವವೇ
ತೆರೆ ಕಣ್ಣು
ಹೊರಗಿನ ಬೆಳಕು
ಹೊರಗಡೆಯೇ ಉಳಿದಿದೆ

- ಅನಾಮಿಕ

ನಾಳೆಯಿಂದ `ಪುಸ್ತಕ ಪ್ರಪಂಚ'

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಂಡ್ಯಾ ಕಾಮಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ನಗರದ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 2ರಿಂದ 10ರವರೆಗೆ `ಪುಸ್ತಕ ಪ್ರಪಂಚ` ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿ ಕುಲಪತಿ ಡಾ.ಎನ್.ಪ್ರಭುದೇವ್, `ಪ್ರದರ್ಶನದಲ್ಲಿ ಸುಮಾರು 250 ಪುಸ್ತಕ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಾರ್ವಜನಿಕ ಗ್ರಂಥಾಲಯ, ರಾಜಾ ರಾಮ್‌ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಸದಸ್ಯ ಕಾಲೇಜುಗಳ ಸಹಕಾರದೊಂದಿಗೆ ಪ್ರದರ್ಶನ ನಡೆಯುತ್ತಿದೆ` ಎಂದರು.

ರಿಯಾಯ್ತಿ: `ಸುಮಾರು 5 ಕೋಟಿ ರೂಪಾಯಿಯ ವಹಿವಾಟು ನಿರೀಕ್ಷಿಸಲಾಗಿದೆ. ಶೇ 10 ರಿಂದ 15ರ ರಿಯಾಯ್ತಿ ದರದಲ್ಲಿ ಪುಸ್ತಕಗಳು ದೊರೆಯಲಿವೆ. ಗುರುತಿನ ಚೀಟಿ ಹೊಂದಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ 20 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗಿದೆ. ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ವಿಐಪಿ ಪಾಸ್‌ಗಳನ್ನು ವಿತರಿಸಲಾಗಿದೆ` ಎಂದು ತಿಳಿಸಿದರು.

`ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್.ಆಚಾರ್ಯ ಉದ್ಘಾಟಿಸಲಿದ್ದಾರೆ. ಸಾಹಿತಿಗಳಾದ ಜಿ.ಎಸ್.ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ` ಎಂದರು.

`ಈ ಹಿಂದೆ ವಿಶ್ವವಿದ್ಯಾಲಯದ ಮಟ್ಟಿಗೆ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ನಗರದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದನ್ನು ವಿಸ್ತೃತಗೊಳಿಸಲಾಗಿದೆ. ಶಿಶುವಿಹಾರದಿಂದ ಉನ್ನತ ಶಿಕ್ಷಣದವರೆಗೆ ಹಲವು ಬಗೆಯ ಪುಸ್ತಕಗಳು ದೊರೆಯಲಿವೆ. ರೋಬೋಟಿಕ್ಸ್‌ನಿಂದ ಅಡುಗೆಯವರಗೆ, ಆಡಳಿತದಿಂದ ಪುರಾಣದವರೆಗೆ, ತಂತ್ರಜ್ಞಾನದಿಂದ ಇತ್ತೀಚಿನ ಅಧ್ಯಯನಗಳವರೆಗೆ ವಿವಿಧ ಆಸಕ್ತಿಗಳ ಜನರಿಗಾಗಿ ಪ್ರದರ್ಶನ ಆಯೋಜಿಸಲಾಗಿದೆ. ಆಡಿಯೊ ಹಾಗೂ ವಿಡಿಯೊ ಸಿಡಿಗಳು, ಶೈಕ್ಷಣಿಕ ಗೊಂಬೆಗಳು ಹಾಗೂ ಇ- ಪುಸ್ತಕಗಳ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ` ಎಂದು ಹೇಳಿದರು.

`ಪ್ರದರ್ಶನದಲ್ಲಿ ಸೆ. 5ರಿಂದ 9ರವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಯಕತ್ವ ಹಾಗೂ ಸಂಪರ್ಕ ಕೌಶಲ್ಯದ ಬಗ್ಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಇದೇ ದಿನಗಳಲ್ಲಿ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳಿಗೆ ಸಮಾಲೋಚನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲಾ ಕಾರ್ಯಾಗಾರಗಳು ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು. ಸೆ.7ರಂದು ಗ್ರಂಥಪಾಲಕರ ಸಭೆ ಏರ್ಪಡಿಸಲಾಗಿದ್ದು `ಓದುವ ಹವ್ಯಾಸ ಉತ್ತೇಜಿಸುವಲ್ಲಿ ಗ್ರಂಥಪಾಲಕರ ಎದುರಿಗಿರುವ ಸವಾಲುಗಳು` ಕುರಿತು ಚರ್ಚೆ ಆಯೋಜಿಸಲಾಗಿದೆ` ಎಂದು ಅವರು ತಿಳಿಸಿದರು.

ಮಳಿಗೆಗಳಿಗೆ ಸಬ್ಸಿಡಿ: ಹತ್ತು ದಿನಗಳ ಪ್ರದರ್ಶನದಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಪ್ರತಿ ಮಳಿಗೆಗೆ ತಲಾ ಹತ್ತು ಸಾವಿರ ರೂಪಾಯಿ ಶುಲ್ಕ ವಿಧಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಪುಸ್ತಕ ಮಳಿಗೆಗಳಿಗೆ ಸಬ್ಸಿಡಿ ನೀಡುತ್ತಿದೆ. ಇತರೆ ಭಾಷೆಗಳ ಪುಸ್ತಕ ಮಳಿಗೆಗಳಿಗೆ ತಲಾ 20 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.

ವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಬಿ.ವೇದಮೂರ್ತಿ, ಪ್ರೊ. ಎಂ.ಬಿ. ಗಿರೀಶ್, ಇಂಡ್ಯಾ ಕಾಮಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುರಾಂ, ವಿವಿ ಗ್ರಂಥಪಾಲಕ ಡಾ. ಪಿ.ವಿ.ಕೊಣ್ಣೂರ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಿರಣ್ ಬೇಡಿಯ ವಿರೂಪಗೊಂಡ ಮುಖಕ್ಕೆ ಯಾವ ಕ್ರೀಮ್ ಹಚ್ಚೋಣ?


ಕಿರಣ್ ಬೇಡಿ ಟಿ.ವಿ. ಚಾನೆಲ್ ಒಂದರ ರಿಯಾಲಿಟಿ ಶೋನ ಮೂಲಕವೇ ಇತ್ತೀಚಿನ ದಿನಗಳಲ್ಲಿ ಚಲಾವಣೆಯಲ್ಲಿದ್ದವರು. ಇದರ ಜೊತೆಗೆ ಬೇರೆ ಬೇರೆ ಜಾಹೀರಾತುಗಳಲ್ಲೂ ಕಾಣಿಸಿ ಕೊಳ್ಳುತ್ತಿದ್ದರು. ನಟನೆ, ನಾಟಕೀಯತೆ ಇತ್ಯಾದಿ ಳನ್ನು ತನ್ನ ವೃತ್ತಿಯ ದಿನಗಳಲ್ಲೇ ಮೈಗೂ ಡಿಸಿಕೊಂಡವರು ಕಿರಣ್ ಬೇಡಿ. ಆದುದರಿಂ ದಲೇ, ಆಕೆ ತನ್ನ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿದ್ದರು ಮಾತ್ರವಲ್ಲ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಟೀಕೆ, ಹೊಗಳಿಕೆ ಹೀಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದ ಕಿರಣ್ ಬೇಡಿಯಿಂದ ಈ ಸಮಾಜ ಪಡೆದಿರುವುದಕ್ಕಿಂತಲೂ ಟಿವಿ ಚಾನೆಲ್‌ಗಳು ಪಡೆದಿರುವುದೇ ಹೆಚ್ಚು.ಬಡವರ್ಗದಿಂದ ಬಂದ ಜನರ ನೋವುಗಳನ್ನು, ಕುಟುಂಬ ಕಲಹಗಳನ್ನು ಮನರಂಜನೆಯ ಸರಕನ್ನಾಗಿಸಿ, ಅದರ ಕಟ್ಟೆ ಪಂಚಾಯತ್ ನಡೆಸುವ ಮೂಲಕ ಟಿವಿ ಚಾನೆಲ್ ಒಂದರಲ್ಲಿ ಎಲ್ಲರ ಮನ ಗೆದ್ದಿದ್ದ ಕಿರಣ್ ಬೇಡಿ ಒಬ್ಬ ಅತ್ಯುತ್ತಮ ಅಭಿನೇತ್ರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆಕೆಯನ್ನು ಅವಲಂ ಬಿಸಿದ್ದ ಚಾನೆಲ್‌ಗಳಿಗಂತೂ ಇದು ಸ್ಪಷ್ಟವಾಗಿ ಗೊತ್ತಿದೆ.

ಅಣ್ಣಾ ಅವರ ಚಳವಳಿಯಲ್ಲಿ ವೇದಿಕೆಯ ಮೇಲೆ ನಿಂತು ತನ್ನ ಅಭಿನಯ ಕಲೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಇಡೀ ಚಳವಳಿಯನ್ನು ಒಂದು ಅದ್ಭುತ ‘ರಿಯಾಲಿಟಿ ಶೋ’ ಆಗಿ ಮಾರ್ಪಡಿಸಿದ ಖ್ಯಾತಿಯೂ ಈ ಕಿರಣ್ ಬೇಡಿಗೇ ಸೇರಬೇಕು. ಇಂದಿನ ತಲೆಮಾರಿನ ಅಗತ್ಯವಾಗಿರುವ ಕ್ರೇಝ್‌ನ್ನು ಅವರು ಅರ್ಥಮಾಡಿಕೊಂಡು ಅದರಂತೆ ಚಳವಳಿಯನ್ನು ಮುನ್ನಡೆಸಿದ್ದರು. ಎಲ್ಲ ಟಿ. ವಿ. ರಿಯಾಲಿಟಿ ಶೋಗಳಿಗೂ ಒಂದು ಸ್ಕ್ರಿಪ್ಟ್ ಇರುತ್ತದೆ. ಅಣ್ಣಾ ಅವರ ಚಳವಳಿಗೂ ಒಂದು ಸ್ಕ್ರಿಪ್ಟನ್ನು ರಚಿಸಲಾಗಿತ್ತು. ಆ ಸ್ಕ್ರಿಪ್ಟನ್ನು ಬರೆದವರು ಕಿರಣ್ ಬೇಡಿ. ಐಟಿ ಬಿಟಿ ಹುಡುಗರು ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಸಂಭ್ರಮ ವನ್ನು ಇದರಲ್ಲೂ ಅನುಭವಿಸಿದ್ದಾರೆ.

ಟಿ.ವಿ.ಗಳು ಕೂಡ ಇದನ್ನು ಅಷ್ಟೇ ಸಂಭ್ರಮದಲ್ಲಿ ನಿರೂಪಿಸಿ ತಮ್ಮ ಟಿಆರ್‌ಪಿಯನ್ನೂ ಹೆಚ್ಚಿಸಿಕೊಂಡವು. ಒಟ್ಟಿನಲ್ಲಿ ಕಿರಣ್ ಬೇಡಿ ರಾಖಿ ಸಾವಂತ್ ಗಿಂತಲೂ ಹೆಚ್ಚು ಜನಪ್ರಿಯತೆಯನ್ನು ಇಂದು ಟಿ.ವಿ. ಚಾನೆಲ್‌ಗಳಲ್ಲಿ ಪಡೆದುಕೊಂಡಿದ್ದಾರೆ. ಕಿರಣ್ ಬೇಡಿಯವರ ನಟನೆಯನ್ನು ರಾಖಿಸಾವಂತ್‌ಗೆ ಹೋಲಿಸುವುದಕ್ಕೂ ಕಾರಣವಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ತಮ್ಮ ಕೈ ಬಿಡುತ್ತವೆ ಎನ್ನುವಾಗ ಕಿರಣ್ ಬೇಡಿ ಹತಾಶೆಯಿಂದ ರಾಮ್‌ಲೀಲಾ ಮೈದಾನದಲ್ಲಿ ಮಾಡಿದ ಅಗ್ಗದ ನಟನೆ, ರಾಖಿ ಸಾವಂತ್ ನಟನೆಯೊಂದಿಗೆ ಸ್ಪರ್ಧಿಸುವಂತಿತ್ತು.

ಒಂದು ಚಳವಳಿಯ ನೇತೃತ್ವವನ್ನು ವಹಿಸಿದ ವರಿಗೆ ಜವಾಬ್ದಾರಿಯಿದೆ. ಗಾಂಧಿಯ ಹೆಸರನ್ನು ಮುಂದಿಟ್ಟು ಚಳವಳಿ ನಡೆಸುವವರಿಗಂತೂ ವಿಶೇಷ ಜವಾಬ್ದಾರಿಯಿದೆ. ಆದರೆ ದುರದೃಷ್ಟವಶಾತ್ ಇದನ್ನೆಲ್ಲ ಅಣ್ಣಾ, ಕಿರಣ್ ಬೇಡಿಯಂತಹ ನಾಯಕರಿಂದ ನಿರೀಕ್ಷಿಸುವುದು ಸ್ವಲ್ಪ ಕಷ್ಟ. ಯಾಕೆಂದರೆ, ಅಣ್ಣಾ ಮಿಲಿಟರಿಯಲ್ಲಿ ಕೆಲಸ ಮಾಡಿ ವಿಫಲರಾಗಿ ಬಂದವರು. ಬೇಡಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಭ್ರಮನಿರಸನ ಗೊಂಡು ಬಂದವರು. ಕಿರಣ್ ಬೇಡಿಗೆ ರಾಜಕಾರಣಿಗಳ ಜೊತೆಗೆ ಕೆಲವು ಖಾಸಗಿ ತಿಕ್ಕಾಟಗಳಿವೆ. ತನ್ನ ಅಧಿಕಾರಾವಧಿಯ ಸಂದರ್ಭದಲ್ಲಿ ರಾಜಕಾರಣಿಗಳಿಂದ ಅವರಿಗೆ ಕೆಲವು ತೊಂದರೆಗಳು ಎದುರಾಗಿವೆ.

ಅದು ಈಗಲೂ ಅವರನ್ನು ಕಿತ್ತು ತಿನ್ನುತ್ತಿರುವಂತೆ ಕಾಣುತ್ತಿದೆ. ರಾಮ್‌ಲೀಲಾದಲ್ಲಿ ಅವರೊಳಗಿನ ಆ ಒತ್ತಡ ಸ್ಫೋಟಗೊಂಡಿತ್ತು. ಒಂದೆಡೆ ಸಂತೋಷ್ ಹೆಗ್ಡೆ, ಅಗ್ನಿವೇಶ್ ಅವರ ಅಸಮಾಧಾನ. ಮಗದೊಂದೆಡೆ ಸರಕಾರದ ನಿರ್ಲಕ್ಷ. ಇನ್ನೊಂದೆಡೆ ಬಿಜೆಪಿಯಿಂದಲೂ ದ್ವಂದ್ವ ಮಾತು. ಇದು ಬೇಡಿಯ ನಿಜ ಮುಖವನ್ನು ಬಯಲಿಗೆಳೆಯಿತು. ಆವರೆಗೆ ದೊಡ್ಡ ಬಾವುಟವನ್ನು ಹಿಡಿದುಕೊಂಡು ಆಕಡೆ, ಈಕಡೆ ಬೀಸುತ್ತಾ ಟಿ.ವಿ. ಪ್ರೇಕ್ಷಕರನ್ನು ಪ್ರಚೋದಿಸುತ್ತಿದ್ದ ಬೇಡಿ, ಕಟ್ಟ ಕಡೆಗೆ ತೀರಾ ಅಗ್ಗದ ನಾಟಕಕ್ಕೆ ಇಳಿದರು. ಇಡೀ ದೇಶ ಆರಿಸಿ ಕಳುಹಿಸಿದ ಸಂಸತ್ತನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮಾತ್ರವಲ್ಲ, ಮುಖಕ್ಕೆ ಮುಸುಕು ಹಾಕಿ ಒಂದು ನಾಟಕವನ್ನೇ ಮಾಡಿದರು. ಇದು ಎಲ್ಲ ಗಣ್ಯರನ್ನೂ ಕೆಣಕಿಸಿತ್ತು.

ಚಳವಳಿಯ ಕುರಿತಂತೆ ಒಂದಿಷ್ಟು ಆಶಾಭಾವನೆ ಇಟ್ಟುಕೊಂಡಿದ್ದ ಚಿಂತಕರಲ್ಲೂ ಕಿರಣ್ ಬೇಡಿಯ ‘ಟಿ.ವಿ. ನಾಟಕ’ ಅಸಹ್ಯವನ್ನು ಹುಟ್ಟಿಸಿತು. ಕಿರಣ್ ಬೇಡಿ ಎಷ್ಟು ಹತಾಶೆಯಲ್ಲಿದ್ದರು ಎಂದರೆ, ತನ್ನ ನಾಟಕದ ಮೂಲಕ ಸೇರಿದ ಜನರನ್ನು ಪ್ರಚೋದಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಎಲ್ಲ ಸಂಸದರ ಕುರಿತಂತೆಯೂ ಹೀನ ಭಾಷೆಯನ್ನು ಬಳಸುವ ಮೂಲಕ, ಪ್ರಜಾಸತ್ತೆಯನ್ನು, ಸಂಸತ್ತನ್ನು ತನ್ನ ‘ಆಪ್ ಕಿ ಕಚೇರಿ’ ರಿಯಾಲಿಟಿ ಶೋದ ಮಟ್ಟಕ್ಕೆ ಇಳಿಸಿ ಬಿಟ್ಟರು. ಇದೀಗ ಕಿರಣ್ ಬೇಡಿಯ ಮೇಲೆ ಹಕ್ಕು ಚ್ಯುತಿ ನಿರ್ಣಯವನ್ನು ಮೀರಾಕುಮಾರ್ ಅಂಗೀಕರಿಸಿದ್ದಾರೆ.

ಆದರೆ ಕಿರಣ್ ಬೇಡಿ ಹೆಚ್ಚು ಕಮ್ಮಿ ಟಿ.ವಿ.ಯಲ್ಲಿ ಪಳಗಿದ ನಟಿ. ಆಕೆಗೆ ಯಾವುದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ. ಆದುದರಿಂದಲೇ, ಕ್ಷಮಾಯಾಚನೆಗೆ ಆಕೆ ಹಿಂದೇಟು ಹಾಕಿದ್ದಾರೆ ಮಾತ್ರವಲ್ಲ, ಯಾವುದೇ ಶಿಕ್ಷೆಗೂ ಸಿದ್ಧ ಎಂದಿದ್ದಾರೆ. ಅಂದರೆ, ಮತ್ತೆ ಆಕೆ ಜನರನ್ನು ರಂಜಿಸುವುದಕ್ಕೆ, ಅವರನ್ನು ಭಾವೋನ್ಮಾದಕ್ಕೆ ತಳ್ಳಲು ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ.ಇಂದು ಯುವಕರಿಗೆ, ಈ ಇಡೀ ಬೆಳವಣಿಗೆಗಳು ಟಿವಿಯ ಒಂದು ಹೊಸ ರಿಯಾಲಿಟಿ ಶೋಗಿಂತ ಹೆಚ್ಚು ಪರಿಣಾಮವನ್ನೇನೂ ಮಾಡಿಲ್ಲ. ಅಣ್ಣಾ ಚಳವಳಿಯ ತಮಾಷೆಗಳ ರೋಚಕತೆ ಮುಗಿಯುವಾಗ ಅವರನ್ನು ಜೀವಂತ ಇಡಲು ಇನ್ನೊಂದು ರೋಚಕ ದೃಶ್ಯಗಳ ಅಗತ್ಯವಿದೆ.

ಇದು ಅಣ್ಣಾಗಿಂತ ಹೆಚ್ಚಾಗಿ ಕಿರಣ್ ಬೇಡಿಗೆ ಗೊತ್ತಿದೆ. ಆದುದರಿಂದಲೇ ಸಾರ್ವಜನಿಕವಾಗಿ ಹುತಾತ್ಮನಾಗುವ ನಾಟಕವೊಂದನ್ನು ಆಡುವುದಕ್ಕೆ ‘ಹಕ್ಕುಚ್ಯುತಿ’ಯನ್ನು ಬಳಸುವುದಕ್ಕೆ ಮುಂದಾಗಿದ್ದಾರೆ ಕಿರಣ್ ಬೇಡಿ. ಅಂದರೆ, ಇಲ್ಲಿ ಕಳಂಕಿತಳು, ಅವಮಾನಿತಳು ಕಿರಣ್ ಬೇಡಿಯೇ ಆಗಿದ್ದರೂ, ಅದನ್ನೇ ತನ್ನ ಪರವಾಗಿ ಮಂಡಿಸುವುದಕ್ಕೆ ಬೇಡಿ ಯೋಜನೆ ರೂಪಿಸಿದ್ದಾರೆ. ಇಂದು ರಾಜಕಾರಣಿ ಗಳನ್ನು ಬೈಯುವುದು, ಟೀಕಿಸುವುದು ಒಂದು ಫ್ಯಾಶನ್ ಆಗಿದೆ. ಯಾರೂ ಅದನ್ನು ಮಾಡಬಲ್ಲರು.

ಈ ದೇಶವನ್ನು ಲೂಟಿ ಮಾಡುತ್ತಿರುವ ಉದ್ಯಮ ವಲಯ, ತಾವು ತಿಂದು ಅದನ್ನು ಸಂಸತ್ತಿನ ಮೋರೆಗೆ ಒರೆಸುತ್ತಿದೆ. ಮಾತ್ರವಲ್ಲ, ಸಂಸತ್ತೇ ಎಲ್ಲದಕ್ಕೂ ಕಾರಣ ಎನ್ನುವುದನ್ನು ದೇಶಕ್ಕೆ ನಂಬಿಸುವುದಕ್ಕೆ ಹೊರಟಿದೆ. ಇಲ್ಲಿ ಕಿರಣ್ ಬೇಡಿ ಸಂಸತ್ತಿನಲ್ಲಿ ಛೀಮಾರಿಗೊಳಗಾದರೂ ತನ್ನ ‘ರಾಖಿಸಾವಂತ್’ ಅಭಿನಯದ ಮೂಲಕ ಅದನ್ನೂ ತನ್ನ ಪರವಾಗಿ ಮಾಡಿಕೊಳ್ಳಬಲ್ಲಳು.ಆದರೆ ಈ ನಾಟಕಗಳೆಲ್ಲ ಮುಗಿದು ಒಂದಲ್ಲ ಒಂದು ದಿನ ಕಿರಣ್ ಬೇಡಿ ಮತ್ತು ಆಕೆಯ ಬಳಗದ ನಿಜ ಮುಖ ಹೊರಗೆ ಬರಲೇ ಬೇಕು. ಈಗಾಗಲೇ ಮುಖದ ಸೌಂದರ್ಯವರ್ಧಕ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬೇಡಿ, ತನ್ನ ಕಳಂಕಿತ ಮುಖವನ್ನು ಯಾವ ಕ್ರೀಂ ಮೂಲಕ ಸುಂದರಗೊಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ

ಸಂಪಾದಕೀಯ - ವಾರ್ತಾರ್ಭರತಿ

ಭೂಸ್ವಾಧೀನ ಬ್ರಹ್ಮಾಸ್ತ್ರಕ್ಕೆ ರೈತ ಬೀದಿಪಾಲು ಜಿ ಶಿವಣ್ಣಕೊತ್ತೀಪುರ
ಜಿ ಶಿವಣ್ಣ ಕೊತ್ತಿಪುರ

ರಾಜ್ಯ ಸರ್ಕಾರ ಬಾಯಿತೆರೆದರೆ ಸಾಕು ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಮಾತನ್ನಾಡುತ್ತಿದೆ. ಒಂದೊಂದು ಕಂಪೆನಿಗೆ 3000 ಎಕರೆಯಂತೆ ಭೂಮಿ ಕೊಡುತ್ತಾ ಸಮಗ್ರ ಕರ್ನಾಟಕವನ್ನೇ ಮಾರಾಟಕ್ಕಿಟ್ಟಿದೆ.

ಬಂಡವಾಳಶಾಹಿಗಳಿಗೆ ನೆರವಾಗಲು ಸಹಸ್ರಾರು ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಹುಟ್ಟಿ ಬೆಳೆದ ಹಳ್ಳಿಗಳನ್ನು ಬಿಟ್ಟು ಹಣ ಹಿಡಿದುಕೊಂಡು ಅವರು ಎಲ್ಲಿಗೆ ಹೋಗಬೇಕು? ರಾಜಕಾರಣಿಗಳ ಈ ಭೂ ಭಕ್ಷಣೆಯ ಭಯೋತ್ಪಾದನೆಗೆ ರೈತರು ತತ್ತರಿಸುವಂತಾಗಿದೆ.

ಉದ್ಯೋಗ ಸೃಷ್ಟಿಸುವ ದುರಾಸೆಯಿಂದ ಆಹಾರದ ಅಭದ್ರತೆ ಸೃಷ್ಟಿಯಾಗುವುದನ್ನು ಮರೆತಿದೆ. ಬಂಡವಾಳಶಾಹಿಗಳ ಕೈಗೊಂಬೆಯಾಗಿ ಅನ್ನದಾತರ ಹಕ್ಕುಗಳನ್ನು ದಮನ ಮಾಡುತ್ತಿದೆ.

ಇದರಿಂದ ಎದುರಾಗುವ ಸಮಸ್ಯೆಗಳ ಅರಿವಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದೆ. ಏರುತ್ತಿರುವ ಜನಸಂಖ್ಯೆಗೆ ಅಗತ್ಯವಾಗಿರುವ ಆಹಾರದ ಬೇಡಿಕೆಯ ಪ್ರಮಾಣ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಜನರಲ್ಲಿ ಅನ್ನ ಚಿನ್ನವಾಗುವ ಕಾಲ ಸಮೀಪಿಸಲಿದೆ.

ಭೂಮಿಗೂ ರೈತನಿಗೂ ಕರುಳಬಳ್ಳಿಯ ಸಂಬಂಧ. ಭೂಮಿಯನ್ನು ಉತ್ತು ಬೆಳೆ ಬೆಳೆಯುವುದನ್ನು ಬಿಟ್ಟು ಬೇರೆ ಕಾಯಕ ಅವನಿಗೆ ಗೊತ್ತಿಲ್ಲ. ಏಕಾಏಕಿ ಭೂಮಿಯನ್ನು ಕಳೆದು ಕೊಂಡರೆ ನೇಗಿಲು, ನೊಗ, ಕುಂಟೆ, ಕೂರಿಗೆಗಳನ್ನು ಎಲ್ಲಿಗೆ ಎಸೆಯುವುದು? ಬೇಸಾಯದೊಂದಿಗೆ ಬೆಸೆದುಕೊಡಿದ್ದ ಹಸು-ಕರು, ಆಡು-ಕುರಿ, ಎಮ್ಮೆಗಳನ್ನು ಎಲ್ಲಿಗೆ ಕೊಂಡೊಯ್ಯುವುದು?

ಕಷ್ಟ ಸುಖಗಳನ್ನು ಹಂಚಿಕೊಂಡಿದ್ದ ಸೋದರ, ಸ್ನೇಹ, ಸಂಬಂಧಗಳು, ಕೆರೆ ಕಟ್ಟೆ, ಬೆಟ್ಟ ಗುಡ್ಡ, ಮರ-ಗಿಡಗಳನ್ನು ಮರೆಯಲಾದೀತೆ? ಭಕ್ತಿ ಭಾವನೆಗಳಿಗೆ ಹೆಸರಾದ ದೇವಾಲಯಗಳು, ಹಬ್ಬ, ಆಚರಣೆಗಳು, ಪೂರ್ವಿಕರ ಸಮಾಧಿಗಳು, ಹುಟ್ಟಿ ಬೆಳೆದ ಮನೆ, ಒಟ್ಟಾಗಿ ಬಾಳಿದ ಹಳ್ಳಿಯನ್ನು ತೊರೆದು ಕಗ್ಗತ್ತಲೆಗೆ ಸರಿದಂತಾಗುತ್ತದೆ.

ಒಂದು ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಬಂದು 200 ವರ್ಷ ಭಾರತೀಯರನ್ನು ಗುಲಾಮಗಿರಿಗೆ ನೂಕಿತ್ತು. ಸಹಸ್ರಾರು ಜನರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಬಂತು. ನಮ್ಮದೇ ಸರ್ಕಾರ ಬಂದರೆ ಇನ್ನೆಂದು ಪರಕೀಯರ ಕಪಿಮುಷ್ಠಿಯಲ್ಲಿ ಇರಬೇಕಿಲ್ಲ ಎಂದು ಭಾವಿಸಲಾಗಿತ್ತು.

ಆದರೆ ರಾಜ್ಯದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ 20 ಸಾವಿರ ಎಕರೆ, ಕೇವಲ 20 ತಿಂಗಳ ಅವಧಿಯಲ್ಲಿ ಜೆಡಿಎಸ್ 48 ಸಾವಿರ ಎಕರೆಯನ್ನು, ಧರ್ಮದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮೂರು ವರ್ಷಗಳಲ್ಲಿ ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ವಶಕ್ಕೆ ಪಡೆದಿದೆ.

ನೂರಾರು ಪರದೇಸಿ ಕಂಪೆನಿಗಳಿಗೆ ಸಹಸ್ರಾರು ಎಕರೆಯನ್ನ ಸ್ವಾಧೀನಕ್ಕೆ ಕೊಟ್ಟು ಭಾರತೀಯರ ಸಾರ್ವಭೌಮತ್ವಕ್ಕೆ ಭಂಗ ತರುತ್ತಿದೆ.

ಗಡಿ ಸಮಸ್ಯೆ ಬಗ್ಗೆ ಮಾತನಾಡುವಾಗ ಕನ್ನಡದ ನೆಲ ಅನ್ಯ ಭಾಷಿಕರ ಸ್ವತ್ತಾಗಿದೆ ಎಂದು ಬೊಗಳೆ ಬಿಡುತ್ತಾರೆ. ಅನ್ಯದೇಶೀಯರನ್ನು ಕರೆದು ಲಕ್ಷಾಂತರ ಎಕರೆ ಭೂಮಿಯನ್ನು ದೇಶದ ಒಳಭಾಗದಲ್ಲಿ ನೀಡುತ್ತಿದ್ದಾರೆ.

ನೂರಾರು ಹಳ್ಳಿಗಳನ್ನು ವಿದೇಶಿ ಕಂಪೆನಿಗಳ ವಶಕ್ಕೆ ಒಪ್ಪಿಸಲಾಗುತ್ತಿದೆ. ಪರರು ತಮ್ಮ ಸ್ವಾರ್ಥಕ್ಕಾಗಿ ಬರುತ್ತಾರೆ ಎಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯಾತ ಉದಾಹರಣೆಗಳಿವೆ. ಸಹಸ್ರಾರು ವರ್ಷಗಳಿಂದ ಅಲ್ಲಿ ಜನರು ಜೀವನ ನಡೆಸಿಲ್ಲವೆ? ನಮ್ಮ ಅಭ್ಯುದಯವನ್ನು ನಾವೇ ಮಾಡಿಕೊಳ್ಳಬೇಕು ಅನ್ಯರಿಂದಲ್ಲ.

ಒಂದು ಕೈಗಾರಿಕೆ ಕಟ್ಟಲು ಮೂರು ಸಾವಿರ ಎಕರೆ ಭೂಮಿಕೊಟ್ಟರೆ ಇನ್ನು ಅವರು ಗಣಿಗಾರಿಕೆ, ಉತ್ಪನ್ನ ಸಂಗ್ರಹಣೆ, ಸಾಗಾಣಿಕೆಗೆ ಮಾಡಲು ಮತ್ತೆ ಎಷ್ಟು ಎಕರೆ ಜಮೀನು ಕೊಡಬೇಕು? ಇವರ ಘಾತುಕತನ, ದೈತ್ಯ ಶಕ್ತಿಗೆ ಸಂಪನ್ಮೂಲಗಳು ಬಹುಬೇಗ ಬರಿದಾಗುತ್ತವೆ.

ಸರಕು ಉತ್ಪಾದಿಸುವಾಗ ಬಿಡುಗಡೆಯಾಗುವ ಬಿಸಿಗಾಳಿ, ಹೊಗೆ, ವಿವಿಧ ರಾಸಾಯನಿಕಗಳು ಹಾಗೂ ಬಳಸಿ ಬಿಸಾಡಿದ ತ್ಯಾಜ್ಯಗಳಿಂದ ಪರಿಸರ ಕಲುಷಿತಗೊಳ್ಳುತ್ತದೆ, ರಾಜಕಾರಣಿಗಳಿಗೆ ಹಣ ಕೊಟ್ಟು ತಮಗೆ ಅನುಕೂಲಕರ ನೀತಿ ರೂಪಿಸಿಕೊಳ್ಳುತ್ತಾರೆ. ನಮ್ಮ ಗ್ರಾಮೀಣ ಸಂಸ್ಕೃತಿ ವಿನಾಶವಾಗಿ ದೇಸಿಯರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ.

ಕೃಷಿಯು ಶೇ 75 ರಷ್ಟು ಉದ್ಯೋಗ ಕೊಡುತ್ತದೆ. ವಿದೇಶಿ ಕಂಪನಿಗಳಿಗೆ ನೀಡುತ್ತಿರುವ ಬಗೆಬಗೆಯ ಪ್ರೋತ್ಸಾಹವನ್ನು ರೈತರಿಗೂ ನೀಡಿದರೆ ಭಾಷೆ, ನೆಲ, ಜಲ, ಸ್ವಾಭಿಮಾನ ಉಳಿಯುತ್ತದೆ. ಆಹಾರದ ಅಗತ್ಯತೆಗೆ ತಕ್ಕಂತೆ ಭೂಮಿಯನ್ನು ಹೆಚ್ಚಿಸಿಕೊಳ್ಳುವುದು ಅಸಾಧ್ಯ.

ಕೃಷಿ ಭೂಮಿಯ ಕೊರತೆಯಿಂದ ಆಹಾರದ ಆಹಾಕಾರ ಉಂಟಾಗಲಿದೆ. ಆಗ ಸರ್ಕಾರ ಜನರ ಹಸಿವು ನೀಗಿಸಲು ವಿದೇಶಿ ಕಂಪನಿಗಳು ತಯಾರಿಸಿಕೊಡುವ ಕಬ್ಬಿಣ ಉಕ್ಕನ್ನು ಕೊಡಲಾಗುವುದಿಲ್ಲ. ಅಷ್ಟಕ್ಕೂ ಭೂಮಿಯನ್ನು ಕೊಡುತ್ತೇವೆ, ಉದ್ಯೋಗ ಕೊಡಿ ಎಂದು ಯಾರೂ ಕೇಳಿಲ್ಲ. ಮುಂದಿನ ಚುನಾವಣೆಗೆ ಹಣ ಹೊಂದಿಸಲು ಭ್ರಷ್ಟ ಮಾರ್ಗ ಹಿಡಿದಿರುವುದು ಜಗಜ್ಜಾಹಿರಾಗಿದೆ.

ಭೂಮಿಯು ರೈತನಿಗೆ ಜೀವನ ನಡೆಸುವ ಭದ್ರತೆಯನ್ನು ನೀಡುತ್ತದೆ. ಧಾನ್ಯ ಬೆಳೆದು ಹಲವು ತಲೆಮಾರಿನ ಜನರು ಬದುಕು ದೂಡಿದ್ದಾರೆ. ಸರ್ಕಾರ ನೀಡುತ್ತಿರುವ ಅಲ್ಪ ಮೊತ್ತದ ಹಣವು ಭೂಮಿ ಕೊಡುವ ಆಸರೆಯನ್ನು ನೀಡುವುದಿಲ್ಲ. ಕೆಲವೇ ದಿನಗಳಲ್ಲಿ ಹಣ ಖಾಲಿಯಾಗಿ ರೈತರು ಬೀದಿಪಾಲಾಗುತ್ತಾರೆ.

ಭೂ ಸ್ವಾಧೀನ ಎಂದರೆ ರೈತರ ಬದುಕುವ ಹಕ್ಕನ್ನು ಕಸಿದುಕೊಂಡಂತೆ. ಆಯಾ ಪ್ರದೇಶದಲ್ಲಿ ನೆಲೆಸಿರುವ ಜನರನ್ನು ಅಲ್ಲಿಯೇ ನೆಲೆ ನಿಲ್ಲುವಂತೆ ಮಾಡುವುದು ನಿಜವಾದ ಅಭಿವೃದ್ಧಿ. ಜೀವನಾಧಾರವಾದ ಜಮೀನನ್ನು ಕಿತ್ತುಕೊಂಡು ಈ ನೆಲದ ಮೂಲ ನಿವಾಸಿಗಳನ್ನು ವಿಳಾಸರಹಿತರನ್ನಾಗಿ ಮಾಡುವುದು ಘೋರ ಅನ್ಯಾಯ.

ಕೈಗಾರಿಕೆಗಳ ಅಭಿವೃದ್ಧಿಯಿಂದ ಪರಿಸರ ಕಲುಷಿತವಾಗಿ ಕುಡಿಯುವ ನೀರು, ಉಸಿರಾಡುವ ಗಾಳಿ. ನಡೆದಾಡುವ ನೆಲ, ತಿನ್ನುವ ಆಹಾರ ವಿಷವಾಗುತ್ತದೆ. ಪರಿಸರಕ್ಕೆ ವಿರುದ್ದವಿರುವ ಕೈಗಾರಿಕೆಗಳಿಗೆ ಭೂಮಿ ಕೊಡುವುದನ್ನು ನಿಲ್ಲಿಸಿ.

ಅಸಂಖ್ಯಾತ ಜೀವ ಸಂಕುಲಕ್ಕೆ ಆಹಾರ ಒದಗಿಸಿ, ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ಸಲ್ಲಿಸುವ ಬೇಸಾಯ ಸಂಸ್ಕೃತಿಯನ್ನು ಗೌರವಿಸಬೇಕು. ಸರ್ಕಾರ ಭೂ ಸ್ವಾಧೀನ, ಭೂ ನೋಂದಣಿ ಹಾಗೂ ಭೂ ಪರಿವರ್ತನೆಯನ್ನು ರದ್ದುಪಡಿಸಿ, ಫಲವತ್ತಾದ ಭೂಮಿಯನ್ನು ಆಹಾರೋತ್ಪಾದನೆಗೆ ಮೀಸಲಿಡಲು ತೀರ್ಮಾನಿಸಬೇಕು.

ಹಂಪನಾ ಅವರ ಹೊಸ ಪುಸ್ತಕ ಬಿಡುಗಡೆಗೆ ಬನ್ನಿ …11 ವರ್ಷಗಳಿಂದ ಉಪವಾಸ ಸತ್ಯಾಗ್ರಹ; ಅಣ್ಣಾ...ನನ್ನ ಬೆಂಬಲಕ್ಕೆ ನಿಲ್ಲುವರೆ..?


ಇರೋಂ ಶರ್ಮಿಳಾಇಂಪಾಲ್ (ಪಿಟಿಐ): ಸಶಸ್ತ್ರ ಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದು ಮಾಡಬೇಕೆಂದು ಆಗ್ರಹಿಸಿ ತಾವು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುವಂತೆ ಮಣಿಪುರದ ಸಾಮಾಜಿಕ ಕಾರ್ಯಕರ್ತೆ ಇರೋಂ ಶರ್ಮಿಳಾ, ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ಕೋರಿದ್ದಾರೆ.

ಕಳೆದ 11 ವರ್ಷಗಳಿಂದ ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಮ್ಮ ಹೋರಾಟವನ್ನು ಬೆಂಬಲಿಸಲು ಅಣ್ಣಾ ಇಂಫಾಲಕ್ಕೆ ಆಗಮಿಸುವರೆಂಬ ನಿರೀಕ್ಷೆ ಇಟ್ಟುಕೊಂಡಿರುವ ಶರ್ಮಿಳಾ, `ಜನರ ಬೆಂಬಲದಿಂದಾಗಿ ಅಣ್ಣಾ ತಮ್ಮ ಗುರಿ ಸಾಧಿಸಬಲ್ಲರು` ಎಂದು ಹೇಳಿದ್ದಾರೆ.

`ದೇವರು ನನ್ನ ಕನಸನ್ನು ಸಾಕಾರಗೊಳಿಸಲು ದಾರಿ ತೋರಿಸುತ್ತಾನೆಂದು ನಂಬಿದ್ದೇನೆ. ಹಾಗಾಗಿ ನನ್ನ ಈ ಹೋರಾಟದಲ್ಲಿ ನಾನು ಅಂತಿಮವಾಗಿ ಜಯ ಸಾಧಿಸುತ್ತೇನೆ` ಎಂದು 37 ವರ್ಷದ ಶರ್ಮಿಳಾ ಭರವಸೆ ವ್ಯಕ್ತಪಡಿಸಿದ್ದಾರೆ.

ದಶಕದಿಂದಲೂ ಶರ್ಮಿಳಾ ಅವರಿಗೆ ಅಧಿಕಾರಿಗಳು ಬಲವಂತವಾಗಿ ಮೂಗಿನ ಮೂಲಕ ದ್ರವರೂಪದ ಆಹಾರ ನೀಡುತ್ತಿದ್ದಾರೆ. ಆಸ್ಪತ್ರೆಯೇ ಸೆರೆಮನೆಯಾಗಿ ಪರಿವರ್ತನೆಯಾಗಿದ್ದು, ಸೋಮವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ನ್ಯಾಯಾಂಗ ಬಂಧನವನ್ನು ವಿಸ್ತರಿಸುವ ಸಲುವಾಗಿ ಇವರನ್ನು ಪ್ರತಿ 15 ದಿನಗಳಿಗೊಮ್ಮೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

ಇಂಫಾಲ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿ 10 ಮಂದಿಯನ್ನು ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಶರ್ಮಿಳಾ 2000ದ ನವೆಂಬರ್ 4ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಎಎಫ್‌ಎಸ್‌ಪಿಎ ಕಾಯ್ದೆ ಅಡಿ ಭದ್ರತಾ ಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ವಾರೆಂಟ್ ಇಲ್ಲದೆಯೇ ಬಂಧಿಸಬಹುದು ಮತ್ತು ಕಂಡಲ್ಲಿ ಗುಂಡಿಕ್ಕಬಹುದು.

1980ರ ಸೆಪ್ಟೆಂಬರ್ 8 ರಂದು ಎಎಫ್‌ಎಸ್‌ಪಿಎ ಜಾರಿಗೆ ಬಂದಾಗಿನಿಂದ ನಕ್ಸಲ್ ಸಂಬಂಧಿ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾಗಿ ಅಧಿಕೃತ ಮೂಲಗಳು ತಿಳಿಸಿವೆ

ಪಿ . ಮಹಮ್ಮದ್ ಕಾರ್ಟೂನ್

ಪಿ. ಮಹಮ್ಮದ್
ಪಿ. ಮಹಮ್ಮದ್

ಅಮಾನವೀಯ ಮಲ ಹೊರುವ ಪದ್ದತಿಯ ಜೀವಂತಿಕೆಗೆ ಏನು ಹೇಳೋಣಭಾರತದಂತ ‘ಜಾತ್ಯತೀತ’ ರಾಷ್ಟ್ರದಲ್ಲಿ ಅತ್ಯಾಧುನಿಕ ವಿಜ್ಞಾನ ಬೆಳೆದಿದ್ದರೂ ಮಲ ಹೊರುವ ಅಮಾನವೀಯ ಪದ್ಧತಿ ದೇಶದ ಹಲವು ಭಾಗಗಳಲ್ಲಿ ಇವತ್ತಿಗೂ ಯಾವುದೇ ಅಡ್ಡಿ ಆಂತಕಗಳಿಲ್ಲದೆ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಯೆಂದರೆ ಇತ್ತೀಚೆಗಷ್ಟೆ ಬೆಂಗಳೂರಿನ ವಸಂತನಗರದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ನೀರು ಮತ್ತು ಒಳಚರಂಡಿ ಸ್ವಚ್ಛತಾ ವಾಹನ ಲಾರಿ (ನಂ:ಕೆಎ:04, ಸಿ:5127)ಯ ಪೌರಕಾರ್ಮಿಕ ವ್ಯಕ್ತಿಯನ್ನು ಮಲಪೂರಿತ ಮ್ಯಾನ್ ಹೋಲ್‌ನಲ್ಲಿ ಸ್ವಚ್ಛತಾ ಕಾರ್ಯದ ನಿಮಿತ್ತ ಮಳೆ ಯಲ್ಲಿಯೇ ತೊಡಗಿಸಲಾಗಿತ್ತು. ನಾಗರಿಕ ಸಮಾಜವೆಂದು ಹೇಳಿ ಕೊಳ್ಳುವ ಈ ಸಮಾಜದಲ್ಲಿ ಇಂದಿಗೂ ಮಲ ಹೊರುವ ಪದ್ಧತಿ ಅಚರಣೆಯಲ್ಲಿರುವುದು ನಾಚಿಕೆಗೇಡಿನ ವಿಚಾರ. ವ್ಯಕ್ತಿಯ ಅತ್ಮಗೌರವ ಸ್ವಾಭಿಮಾನ ಕುಂದಿಸುವ ದೊಡ್ಡದೊಂದು ಸಾಮಾಜಿಕ ಅನಿಷ್ಟ ಪದ್ಧತಿ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ.

ಈ ದೇಶದ ದಲಿತರು ಸಪಾಯಿ ಕರ್ಮಚಾರಿಗಳಾಗಿ ಮಲಹೊರುವುದು, ಚರಂಡಿಗಳನ್ನು ಸ್ವಚ್ಛಮಾಡುವುದು, ಹಲಗೆ ಬಾರಿಸುವುದು, ಶೌಚಾಲಯ ಗುಂಡಿಗಳನ್ನು ಶುದ್ಧೀಕರಿಸುವುದು, ಹೆಣಸುಡುವುದು, ತೋಟಿಚಾಕರಿ ಮಾಡುವುದು, ಇತ್ಯಾದಿಗಳನ್ನು ಒಳಗೊಂಡಂತೆ ಸಮಾ ಜದ ಅತ್ಯಗತ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಾವಿರಾರು ಅಸಂಘಟಿತ ಪೌರಕಾರ್ಮಿಕರು ಮುಖ್ಯವಾಗಿ ದಲಿತರು ಇಂದಿಗೂ ಅಪಾಯ ಮತ್ತು ಅಭದ್ರತೆಯಲ್ಲಿ ಬದುಕಿರುವುದು ದುರಾದೃಷ್ಟಕರ.

ಈ ವರ್ಷದ ಆರಂಭದಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಈ ಮಲ ಹೊರುವ ಪದ್ಧತಿಯನ್ನು ಮನುಷ್ಯ ವಿರೋಧಿ ಅಚರಣೆಯೆಂದು, 6 ತಿಂಗಳ ಒಳಗೆ ಈ ಪದ್ಧತಿಯನ್ನು ರದ್ದುಗೊಳಿಸುವುದು ಸೇರಿದಂತೆ, ಗಂಭೀರ ಕ್ರಮಕ್ಕೆ ಆಗ್ರಹಿಸಿರುವುದು ಸ್ವಾಗತಾರ್ಹವಾದರೂ, ಇದೇ ಸರಕಾರಿ ಪ್ರಾಯೋಜಿತ ಸಂಸ್ಥೆಗಳಾದ ಗ್ರಾಮಸಭೆ, ಪುರಸಭೆ, ನಗರಸಭೆ, ವ್ಯಾಪ್ತಿಯೊಳಗೆ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಸ್ವಚ್ಛತೆ ಹೆಸರಿನಲ್ಲಿ ಮಲಗುಡಿಸುವ ಕೆಲಸದಲ್ಲಿ ನಿಯೋಜನೆ ಮಾಡಿರುವುದು ಸ್ಪಷ್ಟವಾಗಿದೆ.

ಕರ್ನಾಟಕದಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕಾಯ್ದೆ ನಾಲ್ಕು ದಶಕಗಳ ಹಿಂದೆಯೇ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ. ಬಸವಲಿಂಗಪ್ಪನವರು ಜಾರಿಗೆ ತಂದಿರುವ ಹೆಗ್ಗಳಿಕೆ ಇದ್ದರೂ, ಇಂದಿಗೂ ಕೋಲಾರದ ಕೆಜಿಎಫ್, ಚಾಮರಾಜನಗರ ಜಿಲ್ಲೆ, ಮೈಸೂರು, ರಾಯಚೂರು, ಬೆಂಗಳೂರು ಮುಂತಾದ ಎಲ್ಲಾ ಜಿಲ್ಲೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಚರಣೆಯಲ್ಲಿರುವುದು ಕಾಣಬಹುದಾಗಿದೆ. ಸಮಾಜ ಕಲ್ಯಾಣ ಸಚಿವರು, ನಗರಾಭಿವೃದ್ಧಿ ಸಚಿವರು, ಮಲಹೊರುವ ಪದ್ದತಿಯು ಇಲ್ಲವೇ ಇಲ್ಲವೆಂದು ಹೇಳಿಕೆ ನೀಡುತ್ತಿದ್ದಾರೆ.

ಅದರೆ ಇತ್ತೀಚೆಗೆ ಮಾಧ್ಯಮಗಳ ಮೂಲಕ ಹಲವು ಕಡೆ ದಲಿತರು ಇಂದಿಗೂ ಮಲಹೊರುವ ದೃಶ್ಯಗಳು, ಮ್ಯಾನ್‌ಹೋಲ್‌ಗಳಲ್ಲಿ ಮುಳುಗಿ ಶುದ್ಧಿ ಕಾರ್ಯಕೈಗೊಳ್ಳುತ್ತಿರುವ ಸುದ್ದಿಗಳು ಪ್ರಸಾರವಾದವು. ಒಬ್ಬ ಸಪಾಯಿ ಕರ್ಮಚಾರಿ ಮಲಹೊರುವ ಕಾಯಕದಲ್ಲಿ ನಿರತನಾಗಿದ್ದುದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಆ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರ ಎದೆ, ಬೆನ್ನು, ದೇಹ ಸೇರಿದಂತೆ ವಿವಿಧ ಅಂಗಾಂಗಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿರುವ ಉದಾ ಹರಣೆಗಳು ಪ್ರಸಾರವಾದವು.

ಈ ಸಾಂಕ್ರಾಮಿಕ ರೋಗ ಅವರ ಕುಟುಂಬದ ಸದಸ್ಯರನ್ನು ಸಹ ಬಿಟ್ಟಿಲ್ಲವೆಂಬುದು ಬೇರೆ ಮಾತು. ಆದರೆ ಈ ಕೆಲಸಗಳಿಗೆ ಅವರನ್ನು ನೇಮಿ ಸುವ ಪುರಸಭೆಗಳು, ನಗರಪಾಲಿಕೆಗಳು ಅವರ ಆರೋಗ್ಯದ ರಕ್ಷಣೆಗಾಗಿ ನೀಡಿರುವ ಕಾಳಜಿ ಎದ್ದು ತೊರುತ್ತದೆ. ಕಳೆದ ವರ್ಷ ತಮ್ಮ ಬೇಡಿಕೆಗಳಿಗಾಗಿ, ಸವಣೂರಿನ ಭಂಗಿ ಸಮುದಾಯಕ್ಕೆ ಸೇರಿದ ಪೌರಕಾರ್ಮಿಕರು ಮೈ ಮೇಲೆ ಮಲ ಸುರಿದು ಕೊಂಡು ಪ್ರತಿಭಟಿಸಿದ ಬೆನ್ನಲ್ಲೆ ಇತ್ತೀಚೆಗೆ ಬೆಳಗಾವಿಯ ಪೌರ ಕಾರ್ಮಿಕರು ಸಹ ಇದೇ ಮಾದರಿ ಅನುಸರಿಸಬೇಕಾಗಿ ಬಂದದ್ದು ವಿಷಾದನೀಯ.

ಕಸ ಮತ್ತು ಕಕ್ಕಸ್ಸು ಒಳಚಂರಂಡಿಯು ವಿಷಾನಿಲದಿಂದ ಕೊಡಿರುತ್ತದೆ ಅಲ್ಲದೇ ಅದು ಅಪಾಯಕಾರಿ. ಇದನ್ನು ಪರಿಗಣಿಸದ ಗುತ್ತಿಗೆದಾರರು ಅಧಿಕಾರಿ ವರ್ಗ, ನಿರ್ಲಕ್ಷ ವಹಿಸಿ ಆ ವಿಷಾನಿಲದಿಂದ ಪಾರಾಗಲೂ ರಕ್ಷಣೆಗಾಗಿ ಮುಖವಾಡ, ಕೈ ಕವಚಗಳನ್ನು ಕೊಡದೆ ಅವರ ಪ್ರಾಣದ ಬಗ್ಗೆ ಬೇಜವ್ದಾರಿಯಿಂದ ವರ್ತಿಸುವುದೆ ಹೆಚ್ಚು. ಈ ವಿಷ ಅನಿಲದಿಂದ ಸಾವನ್ನಪ್ಪಿದ ವೀರ, ಮುರುಗ, ಮಹದೇವ, ಜೀವನ್, ಭೋಜ ಇಂಥವರಿಗೆ ಯಾವ ರೂಪದ ಪರಿಹಾರ ದೊರೆಯಿತೋ ತಿಳಿಯದು.

ಆದ್ದರಿಂದ ಇನ್ನಾದರೂ ಮಲಹೊರುವ ಪದ್ದತಿ ನಿರ್ಮೂಲನೆಯಾಗಬೇಕು ಅಲ್ಲದೆ ಮ್ಯಾನ್ ಹೋಲ್‌ಗಳಲ್ಲಿ ಸಪಾಯಿ ಕರ್ಮಚಾರಿಗಳು ಇಳಿದು ಕೆಲಸ ಮಾಡುವುದು ತಪ್ಪಬೇಕು. ಸಪಾಯಿ ಕರ್ಮಚಾರಿಗಳ ಮೇಲೆ ಮಲಹೊರಿಸುವುದು ಇಲ್ಲವೆ ಆ ಕೆಲಸಕ್ಕೆ ಒತ್ತಾಯ ಮಾಡಿದವರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ಹೂಡಬೇಕು. ನಗರಸಭೆ ಪುರಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಮಲ ಹೀರುವ ಯಂತ್ರಗಳನ್ನು ಖರೀದಿಸಬೇಕು. ಸಮರ್ಪಕವಾದಂಥ ಯಂತ್ರ ಬಳಕೆಗೆ ಅದೇಶ ಹೊರಡಿಸ ಬೇಕು.

ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಶೋಷಣೆ ಮಾಡುವುದನ್ನು ತಪ್ಪಿಸ ಬೇಕು. ಪೌರಕಾರ್ಮಿಕರ ಬಗ್ಗೆ ಸಮರ್ಪಕ ಸರ್ವೆ ಮಾಡಿ ಅವರಿಗೂ ಅರೋಗ್ಯ ವಿಮೆ, ಪಿಂಚಣಿ, ನಿವೃತ್ತಿ ವೇತನ, ಕೆಲಸದ ಖಾಯಂ ಸೇರಿದಂತೆ ಮೂಲಭೂತಸೌಲಭ್ಯ ಒದಗಿಸುವುದು ಸಂಬಂಧ ಪಟ್ಟ ಅಧಿಕಾರಿ ವರ್ಗದ್ದಾಗ ಬೇಕಿದೆ.ಮನುಷ್ಯನೊಬ್ಬನ ಮಲವನ್ನು ಇನ್ನೊಬ್ಬರ ತಲೆ ಮೇಲೆ ಹೊರಿಸುವುದು, ದೇವರು ಧರ್ಮ ಕಂದಾಚಾರದ ನೆಪದಲ್ಲಿ ಈ ಕೊಳಕು ವ್ಯವಸ್ಥೆಯನ್ನು ಇಂದಿಗೂ ಉಳಿಸಿಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಕೆಲಸ. ಈ ಪದ್ಧತಿ ಕೂಡಲೆ ರದ್ದಾಗಲಿ.

-ಮಾರುತಿ. ಹೆಚ್.

ಉಪನ್ಯಾಸಕರು, ಬೆಂಗಳೂರು

ಜೋಗತಿ ಕಲೆ ಕಲಿತವರ ಕಸರತ್ತುಗಳು


-ಅರುಣ್

ಚಿತ್ರಗಳು- ಸೋಮೇಶ್ ಉಪ್ಪಾರ್ ಮರಿಯಮ್ಮನಹಳ್ಳಿ‘ಜೋಗತಿ’ ಪದ ನೆನಪುಗಳನ್ನು ಕೆದಕುತ್ತದೆ. ನಾವಿದ್ದ ಕೂಡ್ಲಿಗಿ ತಾಲೂಕು ಹಾರಕನಾಳಿನ ಊರ ಹೊರಗಿನ ಅಂಗನವಾಡಿ ಕಟ್ಟಡ ನಮ್ಮ ಮನೆಯೂ ಆಗಿತ್ತು. ಊರಿಗೆ ಬರುವ ದೊಂಬಿದಾಸರು, ಕಾಡುಸಿದ್ಧರು, ಗೊಂದಲಿಗರು, ಜೋಗತಿಯರು ವೇಷ ಬದಲಿಸುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ನಮ್ಮ ಮನೆ ಪಕ್ಕವೇ ಇತ್ತು. ಹಾಗಾಗಿ ಹಾಗೆ ಬಂದವರೆಲ್ಲಾ ನಮಗೆ ಆತ್ಮೀಯರಾಗಿ ಪರಿಚಿತರಾಗಿಬಿಡುತ್ತಿದ್ದರು. ಇದರಲ್ಲಿ ಗಂಡು ಜೋಗತಿಯರು (ಗಂಡಿನೊಳಗಿನ ಹೆಣ್ತನದ ಭಾವಗಳಿಂದಾಗಿ ಸೀರೆಯುಟ್ಟು ಯಲ್ಲಮ್ಮ ಅಥವಾ ರೇಣುಕೆಯ ಭಕ್ತರಾದವರು) ಬಂದಾಗ ಊರ ಯುವಕರೆಲ್ಲಾ ಶಾಲೆಯ ಸುತ್ತಮುತ್ತ ಸುಳಿದಾಡುತ್ತಿದ್ದರು. ಶಾಲಾ ಮಕ್ಕಳು ಅವರುಗಳನ್ನು ಕಾಡು ಪ್ರಾಣಿಗಳಂತೆ ವಿಚಿತ್ರವಾಗಿ ನೋಡುತ್ತಿದ್ದರು. ಆಗ ಅವರು ‘ ಏ ಮನ್ಸಾರ‍್ನ ಎಂದೂ ನೋಡಿರೋ ಇಲ್ಲೋ ಒಕ್ಕಿರೋ ಕಲ್ಲು ತಗಳ್ಳಲೋ’ ಎಂದು ಗಡಸು ದ್ವನಿಯಲ್ಲಿ ಮಾತಾಡಿದಾಗ ಮಕ್ಕಳೆಲ್ಲಾ ಕೇ,,ಕೇ ಎಂದು ಕೇಕೆ ಹಾಕುತ್ತಾ ಓಡುತ್ತಿದ್ದರು. ಆಗ ಮಕ್ಕಳಲ್ಲಿ ಗಂಡು ಜೋಗತಿಯರು ವಿಚಿತ್ರವಾದ ಕುತೂಹಲ ಮೂಡಿಸುತ್ತಿದ್ದುದಂತೂ ನಿಜ.

ಹಾಗೆ ಬರುತ್ತಿದ್ದ ಗಂಡು, ಹೆಣ್ಣು ಜೋಗತಿಯರ ಒಂದು ಜೋಡಿ ವಿಚಿತ್ರವಾಗಿತ್ತು. ಒಬ್ಬ ಹೆಣ್ಣು ಜೋಗತಿ,(ಜಡೆ ಹೆಣೆದು ದೇವಿ ಒಲಿದಿದ್ದಾಳೆಂದು ಜೋಗತಿಯರಾಗುವ ಹೆಣ್ಣು) ಇನ್ನೊಬ್ಬ ಗಂಡು ಜೋಗತಿ. ಇವರಿಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುವಂತೆ ಕಾಣುತ್ತಿದ್ದರು. ರಾತ್ರಿಯಾಗುತ್ತಲೂ ಇಬ್ಬರೂ ಕಂಠಪೂರ್ತಿ ಕುಡಿದು ಶಾಲೆಯ ಆವರಣದಲ್ಲಿ ಮಲಗುತ್ತಿದ್ದರು, ರಾತ್ರಿಯೆಲ್ಲಾ ಪೇಚಾಡುತ್ತಿದ್ದರು.ಒಮ್ಮೊಮ್ಮೆ ಮಧ್ಯರಾತ್ರಿ ಹೆಣ್ಣು ಜೋಗತಿ ಜೋರಾಗಿ ಅಳತೊಡಗಿ, ಗದ್ದಲವಾಗುತ್ತಿತ್ತು. ಆಗ ರಾತ್ರಿ ಊರ ಕೆಲವರು ಎದ್ದು ಬಂದು ಗಂಡು ಜೋಗತಿಯನ್ನು ಬೈದು ಸುಮ್ಮನ ಮಲಗ್ರಿ ಎಂದು ಗದರು ಹಾಕಿ ಹೋಗುತ್ತಿದ್ದರು. ಬೆಳಕಾಗುತ್ತಲೂ ಇಬ್ಬರು ಅಮರ ಪ್ರೇಮಿಗಳಂತೆ ರಾತ್ರಿಯ ಗದ್ದಲಗಳನ್ನು ಮರೆತು ಒಂದಾಗಿರುತ್ತಿದ್ದರು. ಬೆಳಗ್ಗೆ ಮಿರ್ಚಿ ವಗ್ಗರಣೆ ಕಟ್ಟಿಸಿಕೊಂಡು ಬಂದು ಒಬ್ಬರಿಗೊಬ್ಬರು ತಿನ್ನಿಸಿಕೊಂಡು ತಾವು ಒಂದಾಗಿರುವುದನ್ನು ತೋರುತ್ತಿದ್ದರು.


ಎಂಟು ಗಂಟೆಯ ಹೊತ್ತಿಗೆ ಮತ್ತೆ ನಾಲ್ಕಾರು ಗಂಡು, ಹೆಣ್ಣು ಜೋಗತಿಯರು ಇವರ ಜತೆ ಸೇರುತ್ತಿದ್ದರು. ಆಗ ಊರೊಳಗೆ ಅವರ ಎಲ್ಲಮ್ಮನ ಕುರಿತ ಹಾಡುಗಳು, ನೃತ್ಯ ಆರಂಭವಾಗುತ್ತಿತ್ತು. ಒಬ್ಬರು ಕೊಡ ಹೊತ್ತು ಕುಣಿದರೆ ನಾಲ್ಕು ಜನ ಚೌಡಕಿ ಪದಗಳನ್ನು ಹಾಡುತ್ತಿದ್ದರು. ಕೆಲವೊಮ್ಮೆ ಊರ ಮುಂದಿನ ದುರುಗಮ್ಮನ ಗುಡಿ ಎದುರು ರೇಣುಕ ಎಲ್ಲಮ್ಮನ ಮಹಾತ್ಮೆಯ ನಾಟಕವನ್ನು ಅಭಿನಯಿಸುತ್ತಿದ್ದರು. ಆಗ ಜೋಗತಿ ನೃತ್ಯ ಹಗಲು ಮಾಡಿದ್ದಕ್ಕಿಂತ ಭಿನ್ನವಾಗಿರುತ್ತಿತ್ತು . ಅದಕ್ಕೆ ಭಕ್ತಿಯ ಆಯಾಮ ಬಂದಿರುತ್ತಿತ್ತು. ಜನರು ಜೋಗತಿ ನೃತ್ಯ ನಡೆವ ಹೊತ್ತಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ತಮ್ಮ ಭಕ್ತಿಯನ್ನು ತೋರುತ್ತಿದ್ದರು. ಕೆಲವೊಮ್ಮೆ ಇದರಲ್ಲಿ ನಡು ನಡುವೆ ಹಾಸ್ಯ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಅದರಲ್ಲಿ ಸೀರೆ ಉಟ್ಟ ಗಂಡು ಜೋಗತಿಯರು ಗಂಡಾಳುಗಳನ್ನು ಕಿಚಾಯಿಸುತ್ತಿದ್ದರು. ಆಗ ಹರೆಯದ ಹುಡುಗರು ಮಂಡಕ್ಕಿ ತೂರಿಯೋ ಕೇಕೆ ಹಾಕಿಯೋ ಖುಷಿ ಪಡುತ್ತಿದ್ದರು. ಈ ನಾಟಕವನ್ನು ನೋಡಲು ಕೆಳ ಸಮುದಾಯದ ಜನ ಹೆಚ್ಚು ಸೇರುತ್ತಿದ್ದರು. ರಾತ್ರಿಪೂರಾ ಇರುತ್ತಿದ್ದ ಈ ನಾಟಕದಲ್ಲಿ ನಡು ನಡುವೆ ಊರ ಜನರ ಸಂಗತಿಗಳನ್ನೂ ಸೇರಿಸಿ ಹಾಸ್ಯ ಮಾಡುತ್ತಿದ್ದರು. ಇದರಲ್ಲಿ ಜನರ ಪಾಲ್ಗೊಳ್ಳುವಿಕೆ ಅದ್ಭುತವಾಗಿರುತ್ತಿತ್ತು. ಇದೆಲ್ಲವೂ ಮೊನ್ನೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ ಮಂಜಮ್ಮ ಜೋಗತಿ(ಜೋಗತಿ ಕಲೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದೆ) ನಡೆಸಿದ ಜೋಗತಿ ನೃತ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಹೋದಾಗ ನೆನಪಾಯಿತು.


****
ಕಾರ್ಯಕ್ರಮ ಮದ್ಹಾನ ಮೂರಕ್ಕಿತ್ತು. ಆದರೆ ನಾನು ಒಂದು ಗಂಟೆಗಾಗಲೇ ಅಲ್ಲಿಗೆ ಹೋಗಿದ್ದೆ. ಆಗ ಇಪ್ಪತ್ತಕ್ಕಿಂತ ಹೆಚ್ಚಿನ ಗಂಡು ಜೋಗತಿಯರು ಸೇರಿದ್ದರು. ಅವರಲ್ಲಿ ಕೆಲವರು ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದರು.ಇನ್ನು ಕೆಲವರು ಸಿದ್ದತೆ ಮಾಡುವವರನ್ನು ನೋಡುತ್ತಾ ಕೂತಿದ್ದರು. ಕೆಲವು ಗಂಡು ಜೋಗತಿಯರು ಹೊಸದಾಗಿ ಬಂದಂತಿತ್ತು. ಅವರುಗಳೆಲ್ಲಾ ಇದನ್ನು ಕುತೂಹಲದಿಂದಲೂ, ಮುಜುಗರದಿಂದಲೂ ನೋಡುತ್ತಿದ್ದರು. ಇದರಲ್ಲಿ ಕೆಲವರು ಲಿಂಗ ಬದಲಾವಣೆ ಮಾಡಿಸಿಕೊಂಡವರಿದ್ದರು. ಇವರು ಬೆಂಗಳೂರಿನಲ್ಲಿ ಹಿಜಿಡಗಳಾಗಿ ಭಿಕ್ಷೆ ಬೇಡುತ್ತಾ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದವರು. ಇದರಲ್ಲಿ ಕೆಲವರು ಹೆಣ್ಣನ್ನು ನಾಚಿಸುವಂತಹ ವನಪು ವೈಯಾರವನ್ನು ಕಣ್ಣಂಚಿನಲ್ಲೇ ಮಿಂಚಿಸಿ ಮರೆಯಾಗಿಸುತ್ತಿದ್ದರು. ಮಂಜಮ್ಮನ ಜತೆಗಿದ್ದ ಹಳೆ ಜೋಗತಿಯರು ಈ ನಗರದ ಹಿಜಿಡಾಗಳನ್ನು ತುಂಬಾ ಕುತೂಹಲದಿಂದ ನೋಡುತ್ತಿದ್ದರು. ಬೆಂಗಳೂರಿನ ಅನುಭವವನ್ನು ಬಾಯಿತೆರೆದು ಕೇಳಿ ಅಚ್ಚರಿ ಪಡುತ್ತಿದ್ದರು. ಕಲೆ ಕಲಿತ ಶಿಷ್ಯೆಯರು ನೃತ್ಯ ಮಾಡಲು ವೇಷ ಧರಿಸುತ್ತಿದ್ದರು. ಇಡೀ ವೇದಿಕೆಯನ್ನು ಹಳದಿ ಸೀರೆ ಬಳಸಿ ಸಿದ್ದಪಡಿಸಿದ್ದರು. ಮಂಜಮ್ಮ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಾ ಚಡಪಡಿಸುತ್ತಾ ಓಡಾಡಿಕೊಂಡಿದ್ದರು. ಸೋಮೇಶ ನಿರೂಪಣೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು.

***
ಜಾನಪದ ಕಲೆ ಕಲಿಸುವಿಕೆಗಾಗಿ ‘ಗುರು ಶಿಷ್ಯ ಪರಂಪರೆ’ಎನ್ನುವ ಯೋಜನೆಯಿದೆ. ಇದು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ. ಆಯಾ ಜನಪದ ಕಲೆಯ ಹಿರೀಕರನ್ನು ಗುರುತಿಸಿ, ಅವರನ್ನು ಗುರುವನ್ನಾಗಿಯೂ ಆಯಾ ಕಲೆಯನ್ನು ಆಸಕ್ತಿ ಇರುವ ಶಿಷ್ಯರನ್ನು ಒಳಗೊಂಡಂತೆ, ಆರು ತಿಂಗಳು ಕಾಲ ಕಲೆ ಕಲಿಯಲು ಗುರುಶಿಷ್ಯರಿಗೆ ಸಹಾಯಧನ ಇರುತ್ತದೆ. ಇದು ಜನಪದ ಕಲೆ ಉಳಿಸುವ ಮತ್ತು ಅದನ್ನು ಆಸಕ್ತಿ ಇರುವವರ ಮೂಲಕ ಮುಂದುವರೆಸುವ ಒಂದು ಯೋಜನೆ. ಆದರೆ ಈ ಯೋಜನೆ ಆಯಾ ಜನಪದ ಕಲೆಯನ್ನು ಆಯಾ ಸಮುದಾಯದಲ್ಲಿ ಮಾತ್ರ ಮುಂದುವರಿಯುವಂತೆ ಮಾಡಿ, ಒಂದು ಜಾತಿ ಸಮುದಾಯಕ್ಕೆ ಆಯಾ ಕಲೆಯನ್ನು ಗಂಟು ಹಾಕುತ್ತದೆಯೇ ಎನ್ನುವ ಭಯ ನನಗಿದೆ. ಈ ಯೋಜನೆ ಆಯಾ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಆಧರಿಸಿ ಅದು ಅನುಷ್ಠಾನಕ್ಕೆ ಬಂದಂತೆ ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೋರನೂರು ಕೊಟ್ರಪ್ಪ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಂತೆ ಕಾಣುತ್ತದೆ.


ಈ ಬಾರಿ ಮಂಜಮ್ಮನಿಗೆ ಮಹಾರಾಷ್ಟ್ರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಇವರು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಜೋಗತಿ ಕಲೆ ಕಲಿಸಲು ಅನುವುಮಾಡಿಕೊಟ್ಟಿದ್ದರು. ಹಾಗಾಗಿ ಮಂಜಮ್ಮ ನಾಲ್ಕು ಜನ ಶಿಷ್ಯರನ್ನು , ಒಬ್ಬ ಸಹಾಯಕರನ್ನು ತೆಗೆದುಕೊಂಡು ಜೋಗತಿ ಕಲೆಯನ್ನು ಮರಿಯಮ್ಮನಹಳ್ಳಿಯ ತಮ್ಮ ಮನೆ ಆವರಣದಲ್ಲಿ ಕಲಿಸಿದರು. ಈ ಆರು ತಿಂಗಳ ತರಬೇತಿ ಮುಗಿದು ಮೊನ್ನೆಯಷ್ಟೆ ಸಮಾರೋಪ ನಡೆಯಿತು. ಹಾಗೆ ಜೋಗತಿ ಕಲೆ ಕಲಿತ ಶಿಷ್ಯೆಯರು ದುರುಗಮ್ಮ, ಕೆ. ಮಂಜಮ್ಮ, ಎಲ್ಲಮ್ಮ, ಗೌರಮ್ಮ. ಸಹಾಯಕರಾಗಿ ಹಿರಿಯ ಜೋಗತಿ ರಾಮವ್ವ ಕಲೆ ಕಲಿಸಲು ನೆರವಾಗಿದ್ದಾರೆ.ಮಕ್ಕಳು ಶಾಲೆಯಲ್ಲಿ ಕಲಿತಿದ್ದನ್ನು ಅಮ್ಮನ ಎದುರು ಹೇಳಲು ತೋರುವ ಉತ್ಸಾಹದ ಚಿಲುಮೆಯಂತೆ ಕಲೆ ಕಲಿತ ಜೋಗತಿಯರು ವೇದಿಕೆಯಲ್ಲಿ ನೃತ್ಯ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಮಂಜಮ್ಮನೂ ಅವರುಗಳಿಗೆ ನಿರ್ದೇಶನ ನೀಡುತ್ತಾ ಹೇಗೆ ಮಾಡುತ್ತಾರೋ ಎಂಬ ಆತಂಕದಲ್ಲಿದ್ದಂತಿತ್ತು. ಸಾಂಪ್ರದಾಯಿಕವಾಗಿ ಯಲ್ಲಮ್ಮನ ಪ್ರಾರ್ಥನ ಗೀತೆಯನ್ನು ರಾಮಕ್ಕ ಮತ್ತು ಸಂಗಡಿಗರು ಚೌಟಗಿ ಹಿಡಿದು ಹಾಡತೊಡಗಿದರು. ಆ ಹಾಡಿಗೆ ತಕ್ಕ ಹಾಗೆ ವೇದಿಕೆಯ ಮೇಲೆ ಒಬ್ಬೊಬ್ಬರಾಗಿ ಯಲ್ಲಮ್ಮನ ಕೊಡ ಹೊತ್ತು ಪ್ರವೇಶ ಮಾಡಿದರು. ಹಾಡು ಸಾಂಪ್ರದಾಯಿಕವಾಗಿದ್ದರೂ ನೃತ್ಯದಲ್ಲಿ ಮಾತ್ರ ಆಧುನಿಕ ವರಸೆಗಳ ಪ್ರಭಾವ ಇದ್ದಂತೆ ಕಾಣುತ್ತಿತ್ತು. ಇದರಲ್ಲಿ ಭರತನಾಟ್ಯದ ಭಂಗಿಗಳು, ಸಾಹಸಮಯ ಕಸರತ್ತುಗಳು ಕಾಣುತ್ತಿದ್ದವು . ಕೊಡ ಹೊತ್ತು ಅದನ್ನು ಬ್ಯಾಲನ್ಸ ಮಾಡುತ್ತಾ ಬಾಗುವ ಭಂಗಿಗಳು ನೋಡುಗರಲ್ಲಿ ಕೌತುಕ ಮತ್ತು ಅಚ್ಚರಿ ಮೂಡಿಸುವಂತಿತ್ತು. ಕುಣಿತದ ಲಯಗಳು ಕೂಡ ಆಧುನಿಕ ನೃತ್ಯದ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತಿತ್ತು. ಇಡೀ ನೃತ್ಯ ಅತ್ಯಂತ ನಯ ನಾಜೂಕಿನಿಂದ ರೋಚಕಗೊಳಿಸಿ ನೋಡುಗರನ್ನು ರೋಮಾಂಚನಗೊಳಿಸುವಂತಿತ್ತು. ಇಲ್ಲಿ ಜೋಗತಿ ಕಲೆಯನ್ನು ಈ ಕಾಲದ ಜತೆ ಮರು ಹೊಂದಾಣಿಕೆ ಮಾಡಲು ಮಾಡಿದ ಪ್ರಯತ್ನ ಕಾಣುತ್ತಿತ್ತು. ಈ ನಿಟ್ಟಿನಲ್ಲಿ ನೃತ್ಯ ಯಶಸ್ವಿಯೂ ಆಯಿತು.

ದೇಹದಲ್ಲಿನ ಹಾರ್ಮೊನ್ಸ ವೈಪರೀತ್ಯದಿಂದಾಗಿ ಗಂಡಿನ ಒಳಗೆ ಹೆಣ್ಣೇ ಆಗಬೇಕೆಂಬ ತೀವ್ರತೆರನಾದ ಒತ್ತಡ ಶುರುವಾದಾಗ ಇವರುಗಳೆಲ್ಲಾ ಸೀರೆಯುಟ್ಟು ಜೋಗತಿಯಾದವರು. ಲಿಂಗ ಬದಲಾಯಿಸಿಕೊಂಡು ಹಿಜಿಡಾಗಳಾಗಿ ಭಿಕ್ಷೆ ಬೇಡುವ, ಲೈಂಗಿಕ ಕಾರ್ಯಕರ್ತರಾಗುವವರಿಗಿಂತ ಇವರು ಬೇರೆಯ ರೀತಿಯವರು. ಇವರುಗಳೆಲ್ಲಾ ಎಲ್ಲಮ್ಮ ಅಥವಾ ರೇಣುಕೆಯ ಭಕ್ತರು. ಗಂಡು ಹೆಣ್ಣಾಗುವುದು ಜೈವಿಕವಾಗಿ ಹಾರ್ಮೋನ್ಸ ಉತ್ಪತ್ತಿಯಲ್ಲಾಗುವ ಬದಲಾವಣೆಯಿಂದಾದರೂ, ಇವರುಗಳು ತಿಳಿಯುವುದು ಗಂಡಿನ ಅಹಂ ಮುರಿದು ಹೆಣ್ಣಾಗಿಸಿದ ರೇಣುಕೆಯ ಪ್ರಭಾವದಿಂದಾಗಿ ಎಂದು. ಹಾಗಾಗಿ ನಾವು ಸೀರೆ ಉಟ್ಟು ಜೋಗತಿಯರಾಗಿದ್ದೇವೆಂದು ಭಾವಿಸುತ್ತಾರೆ. ಹೀಗೆ ರೇಣುಕೆಯ ಭಕ್ತರಾಗಿ ಜೀವಮಾನವಿಡೀ ಜೋಗತಿ ಹಾಡು ನೃತ್ಯವನ್ನು ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇವರದು ಭಿಕ್ಷೆಯೇ ಆದರೂ ಇವರುಗಳಿಗೆ ಜನರಲ್ಲಿರುವ ದೈವದ ನಂಬಿಕೆಯ ಕಾರಣಕ್ಕೆ ಗೌರವ ಸಿಗುತ್ತದೆ. ಆದರೆ ಇವರು ತಮ್ಮೊಳಗೆ ಇರುವ ಹೆಣ್ತನದ ತೀವ್ರತೆರನಾದ ಕಾಮನೆಗಳನ್ನು ದೈವದ ಕಾರಣಕ್ಕೆ ತಮ್ಮೊಳಗೇ ಅದುಮಿಡುತ್ತಾರೆ. ಈ ವಿಷಯದಲ್ಲಿ ಹಿಜಿಡಾಗಳು ತಮ್ಮೊಳಗಿನ ಹೆಣ್ತನದ ಕಾಮನೆಗಳಿಗೆ ತೆರೆದುಕೊಂಡು ತಮ್ಮಿಷ್ಟದಂತೆ ಬದುಕಿ ಹಗುರಾಗುತ್ತಾರೆ. ಆದರೆ ಅವರಿಗೆ ದೈವದ ನೆಲೆಯ ಗೌರವಾಧರಗಳು ಸಿಗುವುದಿಲ್ಲ, ಅದನ್ನವರು ಬಯಸುವುದೂ ಇಲ್ಲ. ಈ ಇಬ್ಬಂದಿತನ ಗಂಡು ಜೋಗತಿ ಮತ್ತು ಹಿಜಿಡಾಗಳಲ್ಲಿದೆ.

ಈ ತರಬೇತಿ, ಜೋಗತಿ ಕಲೆ ಕೇವಲ ಗಂಡುಜೋಗತಿಯರಲ್ಲಿ ಮಾತ್ರ ಮುಂದುವರೆಸಲು ಸಾದ್ಯ ಎಂಬ ನಂಬಿಕೆಯನ್ನು ಬಲಗೊಳಿಸಿತು. ಜೋಗತಿ ಕಲೆ ಒಂದು ಪ್ರದರ್ಶನಾತ್ಮಕ ಕಲೆ ಅದನ್ನು ಬೇರೆ ಬೇರೆ ಸಮುದಾಯಗಳ ಯುವಕ ಯುವತಿಯರೂ ಮಾಡಬಹುದು ಎಂಬ ಹೊಸ ನಂಬಿಕೆಯನ್ನು ಹುಟ್ಟಿಸಲು ಸಾದ್ಯವಾಗಲಿಲ್ಲ ಅನ್ನಿಸಿತು. ಈ ಕುರಿತು ಮಂಜಮ್ಮನನ್ನು ಕೇಳಿದರೆ, ‘ನಾವೇನೋ ಕಲಿಸ್ತಿವಿ ಆದರೆ ಸಮಾಜ ಒಪ್ಪಬೇಕಲ್ಲ, ಹಾಗ್ಮಾಡಿದ್ರೆ ನಮ್ಮ ಮಕ್ಕಳನ್ನು ಜೋಗತಿ ಮಾಡ್ತೀ ಅಂತ ನನ್ನ ಸುಮ್ನೆ ಬಿಡ್ತಾರೇನು? ಎಂದಾಗ ತಕ್ಷಣಕ್ಕೆ ಏನು ಉತ್ತರಿಸಬೇಕೋ ಗೊತ್ತಾಗಲಿಲ್ಲ.

ಮತ್ತೆ ನನ್ನ ಬಾಲ್ಯದ ನೆನಪುಗಳಿಗೆ ಮರಳುವುದಾದರೆ, ಬಾಲ್ಯದಲ್ಲಿ ನಾನು ನೋಡಿದ ಜೋಗತಿ ನೃತ್ಯಕ್ಕೂ ಈಗ ನಡೆದ ನೃತ್ಯಕ್ಕೂ ವ್ಯತ್ಯಾಸಗಳಿದ್ದವು. ಇದು ಬದಲಾದ ಕಾಲದಲ್ಲಿ ಸಹಜ ಕೂಡ. ಮಂಜಮ್ಮ ಕಾರ್ಯಕ್ರಮದ ಕೊನೆಗೆ ಮಾತನಾಡುತ್ತಾ ‘ನಮ್ಮನ್ನೂ ಮನುಷ್ಯರಂತೆ ನೋಡಿ, ನಾವು ಮನುಷ್ಯರೇ ಅಲ್ಲ, ನಾವೇನೋ ಘೋರ ಅಪರಾಧ ಮಾಡಿದ್ದೇವೆಂಬಂತೆ, ನಮ್ಮನ್ನು ನೋಡಬೇಡಿ, ನಮ್ಮ ಸಮುದಾಯ ನಿಮ್ಮಿಂದ ಬೇಡುವುದು ಒಂದಿಡಿ ಪ್ರೀತಿ ಮಮತೆಯನ್ನಷ್ಟೆ’ ಎಂದು ಬೇಡಿಕೊಂಡಳು. ಈ ಅಂತಃಕರಣದ ಮಾತು ನನ್ನೊಳಗೆ ಈಗಲೂ ಹಸಿಯಾಗಿದೆ.

ಹನಿ... ಹನಿ...


ನಿನ್ನ ಕಾಲು ನೋವಿನ ಸುದ್ದಿ ಈಗಷ್ಟೆ ತಲುಪಿತು
ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀನು ಅಷ್ಟು ಓಡಾಡಬಾರದಿತ್ತು

ಇದೆಂಥ
ನೋಟ ಗೊತ್ತಿಲ್ಲ
ಇರುಳಿನಲಿ ಚಂದ್ರನ
ಕಂಡು
ಲೋಕ ಬೆಳಗಿನಲಿ
ಹಬ್ಬ ಆಚರಿಸುತ್ತಿದೆ
ಅದಕ್ಕೆಂದೇ
ಕರುಣಾಳು ಹಗಲು
ಕನಸ ಬಿಟ್ಟು ಬಂದವರಿಗೆ
ರೊಟ್ಟಿ ಕೊಡುತ್ತಿದೆ

ಬೆಳಕು
ಕಣ್ಣು ತೆರೆಯಿಸಿದೆಂದರು ;
ಎದ್ದು ನೋಡಿದೆ
ಬೆಳಗಿನಲಿ ಮರಕ್ಕೆ
ಜೋತು ಬಿದ್ದಿತ್ತು
ಬೆಳಕು ಕುರುಡಾಗಿಸಿದ
ಕನ್ಕಪ್ಪಡಿ ..!

- ಅನಾಮಿಕ

"ಕತ್ತಲಗರ್ಭದ ಮಿಂಚು"ಕಥಾಸಂಕಲನ ಬಿಡುಗಡೆಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹಣಮಂತ ಹಲಗೇರಿ ಅವರ ಪ್ರಥಮ ಕಥಾಸಂಕಲನ "ಕತ್ತಲಗರ್ಭದ ಮಿಂಚು" ಬಿಡುಗಡೆಯಾಗುತ್ತಿದೆ.

ಇದರಲ್ಲಿನ ೬ ಕಥಗಳಿಗೆ ಕಥಾಸ್ಪರ್ದೆಯಲ್ಲಿ ಬಹುಮಾನಗಳು ಸಿಕ್ಕಿದೆ . ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ ಧನ ಪಡೆದುಕೊಂಡಿದ್ದು, ಪ್ರಕಟಣೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಬೀಳಗಿ ಘಟಕದ ದತ್ತಿ ಪ್ರಶಸ್ತಿಯನ್ನು ಪಡೆದಿದೆ . ಇಲ್ಲಿನ ಎಲ್ಲ ಕಥೆಗಳು ಶೋಷಣೆಯ ದವಡೆಯಲ್ಲಿ ಸಿಕ್ಕ ದಲಿತರ ಮತ್ತು ಸ್ತ್ರೀಯರ ಹೋರಾಟ ಮತ್ತು ಜೀವನ ಪ್ರೀತಿಯನ್ನು ಒಟ್ಟೊಟ್ಟಿಗೆ ವಿವರಿಸುವ ಕಥಾವಸ್ತುವನ್ನು ಒಳಗೊಂಡಿವೆ.

ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್ ಪುಸ್ತಕ ಬಿಡುಗಡೆ ಮಾಡಲಿದ್ದು, ಕವಿ ಎಲ್.ಎನ್.ಮುಕುಂದರಾಜ್ ಕಥೆಗಳ ಕುರಿತು ಮಾತನಾಡಲಿದ್ದಾರೆ. ಮೇಸ್ಟ್ರು ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸಲಿದ್ದಾರೆ. ಡಾ.ವೀರೇಶ್ ಬಳ್ಳಾರಿ ತಮ್ಮ ಸ್ನೇಹಸೇತು ವೇದಿಕೆಯಿಂದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ.

ಬನ್ನಿ

1.TIF

ಮುಸ್ತಾಫ ಅಬ್ದುಲ್‌ ಜಲೀಲ್: ಲಿಬಿಯದ ಕ್ರಾಂತಿಯ ಸಾರಥಿ

ಮುಸ್ತಾಫ ಅಬ್ದುಲ್‌ ಜಲೀಲ್: ಲಿಬಿಯದ ಕ್ರಾಂತಿಯ ಸಾರಥಿ

ಮುಅಮ್ಮರ್ ಗದಾಫಿಯ ಸರ್ವಾಧಿಕಾರದ ವಿರುದ್ಧ ಲಿಬಿಯದ ಪೂರ್ವ ಪ್ರಾಂತ್ಯದಲ್ಲಿ ಜನತೆ ಫೆಬ್ರವರಿ 17ರಂದು ಬಂಡೆದ್ದಾಗ, ಪರಿಸ್ಥಿತಿ ಯನ್ನು ನಿಯಂತ್ರಿಸಲು ಗದಾಫಿ ತನ್ನ ಸಂಪುಟದ ನ್ಯಾಯಾಂಗ ಸಚಿವ ಮುಸ್ತಾಫ ಅಬ್ದುಲ್ ಜಲೀಲ್‌ರ ನೆರವು ಯಾಚಿಸಿದ್ದರು.ಮೃದುಭಾಷಿಯೂ, ನೇರನಡೆನುಡಿ ಹಾಗೂ ಸ್ನೇಹಪರ ವ್ಯಕ್ತಿತ್ವದಿಂದ ಜನಪ್ರಿಯರಾದ ಜಲೀಲ್ ತಡಮಾಡದೆ ಬಂಡುಕೋರರ ಭದ್ರಕೋಟೆ ಯಾದ ಬೆಂಗಾಝಿಗೆ ಪ್ರಯಾಣಿಸಿದರು. ಅಲ್ಲಿ ಬಂಡುಕೋರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತೆಸೆರೆಯಿರಿಸಿದ್ದ ಅಧಿಕಾರಿಗಳ ಬಿಡುಗಡೆಗೊಳಿಸಲು ಸಂಧಾನಕ್ಕಾಗಿ ಅವರನ್ನಲ್ಲಿಗೆ ಕಳುಹಿಸಲಾಗಿತ್ತು. ಆದರೆ ಬೆಂಗಾಝಿಯಲ್ಲಿ ಗದಾಫಿಗೆ ನಿಷ್ಠರಾದ ಸೈನಿಕರು ಅಮಾಯಕ ನಾಗರಿಕರ ಮೇಲೆ ನಡೆಸಿದ ದೌರ್ಜನ್ಯ, ಹಿಂಸೆಗಳನ್ನು ಕಂಡು ಆಕ್ರೋಶಗೊಂಡ ಜಲೀಲ್, ಫೆಬ್ರವರಿ 21ರಂದು ನ್ಯಾಯಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಾತ್ರವಲ್ಲ, ಗದಾಫಿ ಪದಚ್ಯುತಿಗಾಗಿ ಆರಂಭಗೊಂಡ ಸಶಸ್ತ್ರ ಹೋರಾಟದ ನೇತೃತ್ವ ಕೂಡಾ ವಹಿಸಿದರು.

ಹಾಗೆ ನೋಡಿದರೆ, ಉತ್ತರ ಆಫ್ರಿಕದ ತೈಲ ಸಮೃದ್ಧ ರಾಷ್ಟ್ರವಾದ ಲಿಬಿಯ ಯಾವತ್ತೋ ಶ್ರೀಮಂತ ರಾಷ್ಟ್ರವಾಗಬೇಕಾಗಿತ್ತು. ಆದರೆ ಗದಾಫಿಯ ನಿರಂಕುಶ ಆಡಳಿತದಿಂದ ನಲುಗಿದ ಆ ದೇಶದ ಜನತೆ ಬಡತನ, ನಿರುದ್ಯೋಗದ ಸಮಸ್ಯೆಗಳಿಂದ ತತ್ತರಿಸುತ್ತಿದೆ. ಲಿಬಿಯದ ಸರ್ವಾಧಿಕಾರಿ ಆಡಳಿತದ ವಿರುದ್ಧ ಒಳಗೊಳಗೆ ಕುದಿಯುತ್ತಿದ್ದ ದೇಶದ ಯುವ ಸಮುದಾಯಕ್ಕೆ ಜಲೀಲ್ ಅವರು ಗದಾಫಿ ವಿರೋಧಿ ಚಳವಳಿಗೆ ಕೈಜೋಡಿಸಿದುದು ಹೊಸ ಹುರುಪನ್ನು ನೀಡಿತು.

ಹೀಗೆ ಗದಾಫಿಗೆ ಅತ್ಯಂತ ಆಪ್ತರೆನಿಸಿಕೊಂಡಿದ್ದ ಜಲೀಲ್, ಈಗ ಅವರ ನಂ.1 ವೈರಿಯಾಗಿ ಪರಿಣಮಿಸಿದರು. ಜಲೀಲ್ ಅವರ ಬಂಧನಕ್ಕಾಗಿ ಗದಾಫಿ ಆಡಳಿತವು 8 ಲಕ್ಷ ದಿನಾರ್ (ಅಂದಾಜು 7 ಲಕ್ಷ ಡಾಲರ್)ಗಳ ಬಹುಮಾನ ಕೂಡಾ ಘೋಷಿಸಿತ್ತು.
ಗದಾಫಿ ಸಂಪುಟದಲ್ಲಿ ಸಚಿವರಾಗಿದ್ದಾಗಲೂ, ನೇರ ನಡೆನುಡಿಯ ಜಲೀಲ್ ಬಂಡುಕೋರರ ಗೌರವಾದರಗಳಿಗೆ ಪಾತ್ರರಾಗಿ ದ್ದರು. ಮಾತ್ರವಲ್ಲ, ಲಿಬಿಯದ ಭದ್ರತಾ ಪಡೆಗಳ ಮೇಲೆ ಅವರಿಗೆ ಬಿಗಿಯಾದ ಹಿಡಿತವಿತ್ತು. ಕಳೆದ ಮಾರ್ಚ್‌ನಲ್ಲಿ ಪ್ರತಿಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಪರಿವರ್ತನಾ ಮಂಡಳಿಯನ್ನು ಸ್ಥಾಪಿಸುವುದರೊಂದಿಗೆ ಗದಾಫಿ ಪದಚ್ಯುತಿ ಆಂದೋಲನವು ತೀವ್ರ ರೂಪವನ್ನು ಪಡೆಯಿತು. ಜಲೀಲ್ ಅದರ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಗದಾಫಿ ಪದಚ್ಯುತಿಗಾಗಿ ನಡೆದ ಸಶಸ್ತ್ರ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ. ಕಳೆದ ವಾರ ಲಿಬಿಯದ ರಾಜಧಾನಿ ಟ್ರಿಪೋಲಿಯ ಮೇಲೆ ಬಂಡುಕೋರರು ಸಂಪೂರ್ಣ ನಿಯಂತ್ರಣವನ್ನು ಸಾಧಿಸುವಲ್ಲಿ ಯಶಸ್ವಿಯಾಗು ವುದರೊಂದಿಗೆ, ನಾಲ್ಕು ದಶಕಗಳ ಗದಾಫಿ ಯುಗ ಅಂತ್ಯಗೊಂಡಿದೆ. ಆದರೆ ‘ಉಪ್ಪು ತಿಂದವ ನೀರು ಕುಡಿಯಲೇ ಬೇಕು’ ಎಂಬಂತೆ ಗದಾಫಿ ತನ್ನ ಆಡಳಿತಾವಧಿಯಲ್ಲಿ ನಡೆಸಿದ ಘೋರ ಅಪರಾಧಗಳಿಗಾಗಿ ಆತನನ್ನು ವಿಚಾರಣೆ ಗೊಳಪಡಿಸಬೇಕು ಎಂದು ಜಲೀಲ್ ಪ್ರತಿಪಾದಿಸುತ್ತಾರೆ. ಗದಾಫಿಯನ್ನು ಜೀವಂತ ವಾಗಿ ಸೆರೆಹಿಡಿಯಲಾಗುವುದು ಮಾತ್ರವಲ್ಲ, ಆತನನ್ನು ನ್ಯಾಯಸಮ್ಮತವಾದ ರೀತಿಯಲ್ಲಿ ವಿಚಾರಣೆಗೊಳ ಪಡಿಸಲಾಗುವುದೆಂಬ ಭರವಸೆಯನ್ನು ಜಲೀಲ್ ನೀಡಿದ್ದಾರೆ.

ಬಂಡುಕೋರರು ಕಾನೂನನ್ನು ಗೌರವಿಸು ವಂತೆಯೂ ಜಲೀಲ್ ತಾಕೀತು ಮಾಡಿದ್ದಾರೆ ಮಾತ್ರವಲ್ಲ, ಗದಾಫಿಯ ದುಷ್ಕೃತ್ಯಗಳಿಗಾಗಿ ಆತನ ಆಡಳಿತದ ಅಧಿಕಾರಿಗಳ ವಿರುದ್ಧ ಸೇಡು ತೀರಿಸುವ ಕ್ರಮಗಳಿಗೆ ಮುಂದಾಗದಂತೆಯೂ ಅವರು ಮನವಿ ಮಾಡಿದ್ದಾರೆ. ವಿಜಯದ ಬಳಿಕ ಬಂಡುಕೋರರಲ್ಲಿ ಅಶಿಸ್ತಿನ ವರ್ತನೆ ಕಂಡುಬಂದಲ್ಲಿ ತಾನು ರಾಜೀನಾಮೆ ನೀಡಲು ಹಿಂಜರಿಯೆನೆಂಬ ಬೆದರಿಕೆಯನ್ನು ಕೂಡಾ ಅವರೊಡ್ಡಿದ್ದಾರೆ.1975ರಲ್ಲಿ ಲಿಬಿಯದ ಪೂರ್ವ ಪ್ರಾಂತ್ಯದ ನಗರ ಬಯ್ಡಾದಲ್ಲಿ ಪದವಿ ಪಡೆದ ಜಲೀಲ್, ವಕೀಲರಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದರು. 1978ರಲ್ಲಿ ಅವರು ನ್ಯಾಯಾಧೀಶರಾಗಿ ನೇಮಕಗೊಂಡರು. ಅತ್ಯಂತ ನಿಷ್ಪಕ್ಷಪಾತ ನ್ಯಾಯದಾನದಿಂದಾಗಿ ಖ್ಯಾತಿ ಗಳಿಸಿದ ಅವರು, ಗದಾಫಿ ಆಡಳಿತದ ವಿರುದ್ಧ ಹಲವಾರು ಪ್ರಕರಣಗಳಲ್ಲಿ ತೀರ್ಪು ಸಹ ನೀಡಿದ್ದರು.

2007ರಲ್ಲಿ ಗದಾಫಿ ಸಂಪುಟದಲ್ಲಿ ನ್ಯಾಯಾಂಗ ಸಚಿವರಾಗಿ ಜಲೀಲ್ ನೇಮಕ ಗೊಂಡರಾದರೂ, 2010ರಲ್ಲಿ ಗದಾಫಿ ಸರಕಾರವು ರಾಜಕೀಯ ಕೈದಿಗಳನ್ನು ಬಿಡುಗಡೆ ಗೊಳಿಸಲು ವಿಫಲವಾದಾಗ ರಾಜೀನಾಮೆಗೆ ಮುಂದಾದರು. ಆದರೆ ಅವರ ರಾಜೀನಾಮೆ ಯನ್ನು ಗದಾಫಿ ತಿರಸ್ಕರಿಸಿದ್ದರು. ರಾಜಕೀಯ ಕೈದಿಗಳ ಬಗ್ಗೆ ಜಲೀಲ್ ತಾಳಿದ್ದ ನಿಲುವಿಗಾಗಿ ಕಳೆದ ವರ್ಷ ಮಾನವ ಹಕ್ಕುಗಳ ಕಾವಲು ಸಂಸ್ಥೆಯು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿತ್ತು.ಜಲೀಲ್ ಆಗಮನಕ್ಕೆ ಮುನ್ನ ಲಿಬಿಯದ ಪ್ರತಿಪಕ್ಷಗಳಲ್ಲಿ ಒಗ್ಗಟ್ಟೆಂಬುದು ಮರೀಚಿಕೆ ಯಾಗಿತ್ತು. ಅವುಗಳ ವಿಚಾರಧಾರೆಗಳಲ್ಲಿ ಕೂಡಾ ಅಜಗಜಾಂತರಗಳಿದ್ದವು. ಆದರೂ ಅವುಗಳನ್ನು ಒಟ್ಟಾಗಿಸಿ, ಗದಾಫಿ ಹಠಾವೋ ಚಳವಳಿಯನ್ನು ಮುನ್ನಡೆಸುವಲ್ಲಿ ಜಲೀಲ್‌ರ ಕೊಡುಗೆ ಅಸಾಮಾನ್ಯವೇ ಸರಿ.

ಲಿಬಿಯಕ್ಕೆ ಸಮರ್ಥ ನಾಯಕತ್ವವನ್ನು ನೀಡಬಲ್ಲರೆಂಬ ಭರವಸೆಯನ್ನು ಮೂಡಿಸಿರುವ ಜಲೀಲ್ ದಿನದಿಂದ ದಿನಕ್ಕೆ ರಾಜಕೀಯ ಪಕ್ವತೆಯನ್ನು ಪಡೆಯುತ್ತಿದ್ದಾರೆ. ಇಸ್ಲಾಂ ಧರ್ಮದ ತತ್ವಗಳನ್ನು ಶ್ರದ್ಧೆಯಿಂದ ಪಾಲಿಸುವ ಜಲೀಲ್, ಲಿಬಿಯದ ಉನ್ನತಿಗೆ ಧರ್ಮದ ತಳಹದಿಯಿರುವ ಪ್ರಜಾಪ್ರಭುತ್ವ ಆಡಳಿತವೇ ಉತ್ತಮ ಎಂದು ಪ್ರತಿಪಾದಿಸುತ್ತಾರೆ.ಇಸ್ಲಾಮ್ ಧರ್ಮದ ಚೌಕಟ್ಟಿನಲ್ಲಿ ಸ್ವಾತಂತ್ರ, ಪ್ರಜಾಪ್ರಭುತ್ವ, ಸಮಾನತೆ ಹಾಗೂ ಪಾರದರ್ಶಕತೆಯಿರುವ ಸರಕಾರವನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದು ಬಂಡುಕೋರರು ರಾಜಧಾನಿ ಟ್ರಿಪೋಲಿಗೆ ಲಗ್ಗೆಯಿಟ್ಟ ಬಳಿಕ ಜಲೀಲ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದರು. ಲಿಬಿಯಕ್ಕೆ ಸಮರ್ಥ ನಾಯಕತ್ವವನ್ನು ನೀಡಬಲ್ಲರೆಂಬ ಭರವಸೆಯನ್ನು ಮೂಡಿಸಿರುವ ಜಲೀಲ್‌ರಿಂದ ಆ ದೇಶದ ಜನತೆ ನಿರೀಕ್ಷಿಸುವುದು ಬಹಳಷ್ಟಿದೆ.

-ರಾನಾ

ಭೂಸ್ವಾಧೀನ ಕಾಯ್ದೆ: ವಸಾಹತುಶಾಹಿಯ ಪಳೆಯುಳಿಕೆ

ಡಾ. ಚಂದ್ರಶೇಖರ್ ಹರಿಹರನ್


ಅಣ್ಣಾ ಹಜಾರೆ ಎಂಬ ಸಾತ್ವಿಕ ವ್ಯಕ್ತಿ ಯಾರಿಗೂ ಜಗ್ಗದ ತನ್ನ ನಿಲುವಿನಿಂದ ಮತ್ತು ತನಗೆ ದೊರೆತ ಜನರ ಅದ್ವಿತೀಯ ಬೆಂಬಲದ ಸಹಾಯದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಮುಗ್ಧ ನಗುವಿನ ಅವರು ಮನನೊಂದವರಂತೆ ಕಾಣಿಸುತ್ತಿದ್ದಾರೆ.

ಸರ್ಕಾರವನ್ನು ಪ್ರತಿನಿಧಿಸುವ ಗೋಲಿಯಾತ್‌ನನ್ನು ಮಣಿಸಿದ ದಾವೀದಿನಂತಾಗಿದ್ದಾರೆ ಅವರೀಗ. (ಬೈಬಲ್‌ನಲ್ಲಿ ಬರುವ ಭಾಗ ಇದು ದಾವೀದ್ ಮತ್ತು ಗೋಲಿಯಾತ್)
ಭೂ ಸ್ವಾಧೀನ ಮತ್ತು ಅದರ ಪರಿಹಾರಕ್ಕೆ ಸಂಬಂಧಿಸಿದಂತೆ ಸುಧಾರಣೆಗಳನ್ನು ತರಬೇಕೆಂದು ನಡೆಸಿದ ಹೋರಾಟದ ಅದೇ ಆತ್ಮವಿಶ್ವಾಸವನ್ನು ನಾವಿಂದು ಅವರಲ್ಲಿ ಕಾಣಬಹುದಾಗಿದೆ.

ಇದರಿಂದ ಅವರು ಬಯಸುವುದಾದರೂ ಏನನ್ನು. ದನಿ ಇಲ್ಲದ, ಅಸಹಾಯಕ ರೈತರ ಫಲವತ್ತಾದ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವುದರಿಂದ ಯಾವ ಸನ್ನಿವೇಶ ನಿರ್ಮಾಣವಾಗಬಹುದು. ಭೂಸ್ವಾಧೀನದ ಘೋರ ಮುಖಕ್ಕೆ ಶೀಘ್ರದಲ್ಲಿಯೇ ಬದಲಾವಣೆ ನಡೆಯಬೇಕಾದ ಅಗತ್ಯವಿದೆ.

1894ರಲ್ಲಿ ಬ್ರಿಟಿಷರು ಈ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದರು ಎನ್ನುವುದು ಚರಿತ್ರೆಯ ಪುಟಗಳನ್ನು ತಿರುವಿದಾಗ ನಮಗೆ ತಿಳಿದು ಬರುತ್ತದೆ. ರೈಲು ಸಂಚಾರ, ನೀರಾವರಿ ಯೋಜನೆ, ಹಿಮಾಲಯ ಪ್ರಾಂತ್ಯದಿಂದ ಮರದ ದಿಮ್ಮಿಗಳನ್ನು ಸಾಗಿಸುವುದು ಮುಂತಾದ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ಅಗತ್ಯವೆನಿಸಿದ್ದ ವೇಳೆ ತಕ್ಷಣವೇ ಭೂಮಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಅವರು ಈ ಕಾಯ್ದೆಯನ್ನು ಜಾರಿಗೆ ತಂದರು.

ಹೀಗಾಗಿಯೇ ಅವರು ಇಂತಹ ಸ್ವಾಧೀನ ಪ್ರಕ್ರಿಯೆಯಲ್ಲಿ ಬ್ರಿಟಿಷ್ ಆಡಳಿತಕ್ಕೆ ಪರಮಾಧಿಕಾರದ ಅಗತ್ಯವನ್ನು ಒತ್ತಿಹೇಳುತ್ತಾ ಇದನ್ನು ಬಲವಾದ ಕಾರ್ಯವಿಧಾನವುಳ್ಳ ಕಾನೂನಾಗಿ ಮಾರ್ಪಡಿಸಿದರು.

ಈ ಕಾಯ್ದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನುಕೂಲಕರವಾಗಿದ್ದರಿಂದ ಅದು ಹಾಗೆಯೇ ಮುಂದುವರಿದುಕೊಂಡು ಬಂತು. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಅದರಲ್ಲಿರಲಿಲ್ಲ.

ಸ್ವಾತಂತ್ರ್ಯ ದೊರೆತು 60ಕ್ಕೂ ಹೆಚ್ಚು ವರ್ಷಗಳು ಸಂದರೂ ಇಂದಿನವರೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಕಾನೂನು ರೂಪಿಸಿದ್ದು ನಮಗೆ ತಿಳಿದಿಲ್ಲ. ವಸಾಹತುಶಾಹಿ ಆಡಳಿತವಿದ್ದಾಗ ಇದನ್ನು `ಭೂ ಸ್ವಾಧೀನ` ಎಂದು ಕರೆಯುವುದು ಸರಿ ಎನಿಸಿತ್ತು. ಆದರೆ, ಕಳೆದ ದಶಕಗಳಲ್ಲಿ ಸಾಂಪ್ರದಾಯಿಕ ನಡವಳಿಕೆಯಂತೆ ನಡೆದುಕೊಂಡು ಬಂದಿರುವ ಈ ಸ್ವಾಧೀನ ಪ್ರಕ್ರಿಯೆ ಎಂಬ ಚಿಂತನೆಯೇ ಅಸಾಂವಿಧಾನಿಕವಾಗಿದೆ.

ಹಾಗಾಗಿ ಈಗ ನೀವೇನು ಮಾಡಬಹುದು. ಸ್ವಾಧೀನದ ಬದಲಾಗಿ ಮನವಿಯ ಮೊರೆ ಹೋಗಬೇಕಾಗುತ್ತದೆ. ಭೂಮಿಯ ಒಡೆಯನಿಂದ ನಿಮಗೆ ಆ ಭೂಮಿಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಅದೇ ವೇಳೆ ಆ ಭೂಮಾಲಿಕರ ಹಕ್ಕುಗಳನ್ನು ನೀವು ಒಪ್ಪಿಕೊಳ್ಳಲೇ ಬೇಕು.

ಯಾವುದೇ ಒಂದು ಸಂಸ್ಥೆ, ಗಣಿ ಕಂಪನಿಯೇ ಆಗಿರಲಿ ಅಥವಾ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಆಗಿರಲಿ, ಅದು ತನ್ನ ಕಾರ್ಯಯೋಜನೆಗಳಿಗಾಗಿ ಭೂಮಾಲಿಕ ತನ್ನ ಭೂಮಿಯನ್ನು ಅಥವಾ ಸಂಪನ್ಮೂಲಗಳನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ಆದರೆ, ಅದರಿಂದ ಅವರು ಅನುಭವಿಸಬೇಕಾದ ಸಂಕಷ್ಟಗಳು, ಜೀವನಾಧಾರ ಕಳೆದುಕೊಳ್ಳುವ ಭೀತಿ, ತನ್ನ ಸಮುದಾಯ ಮತ್ತು ತಾನು ಹೊಂದಿದ್ದ ಭೂಮಿಯಿಂದ ಬೇರ್ಪಡಬೇಕಾದ ಮನೋವೇದನೆ, ಪುನರ್ವಸತಿ ಸಮಸ್ಯೆ ಇವುಗಳೆಲ್ಲದಕ್ಕೂ ನಿರ್ದಿಷ್ಟ ಸಂಸ್ಥೆ ಅಥವಾ ಸರ್ಕಾರ ಪರಿಹಾರವನ್ನು ನೀಡಲು ಒಪ್ಪಿಕೊಳ್ಳುತ್ತದೆ.

ಅದಕ್ಕಾಗಿ ನೂರು ವರ್ಷಗಳಷ್ಟು ಹಳೆಯದಾದ ಕಾಯ್ದೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಸರಿಸಮಾನವಾದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವ ಮಾದರಿಯಲ್ಲಿ ಪುನರ್‌ನವೀಕರಿಸಬೇಕಾದ ಅಗತ್ಯವಿದೆ.

ರಾಜಸ್ತಾನಕ್ಕೆ ಅನ್ವಯಿಸುವುದೆಲ್ಲವೂ ಹಿಮಾಚಲ ಪ್ರದೇಶಕ್ಕೆ ಅನ್ವಯಿಸಲಾರದು. ಪ್ರಸ್ತುತ ಮಸೂದೆಯನ್ವಯ ಒಟ್ಟಾಗಿ 100 ಎಕರೆಯನ್ನು ಸ್ವಾಧೀನಪಡಿಸಿಕೊಂಡಲ್ಲಿ ಮಾತ್ರ ಪುನರ್ವಸತಿಗೆ ಸಂಬಂಧಿಸಿದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯ. ಆದರೆ ಪರ್ವತ ಪ್ರದೇಶದಲ್ಲೇ ಆಗಲಿ, ಅಥವಾ ಪಶ್ಚಿಮ ಘಟ್ಟದಲ್ಲೇ ಆಗಲಿ 100 ಎಕರೆ ಎನ್ನುವುದು ಬಹು ದೊಡ್ಡ ಪ್ರಮಾಣವೇ ಸರಿ.

ಹೀಗೆ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿಕೊಟ್ಟಲ್ಲಿ ಆಯಾ ಪ್ರದೇಶಗಳ ನೂರಾರು ವರ್ಷಗಳಷ್ಟು ಹಳೆಯದಾದ ಸಮುದಾಯಗಳೇ ಕಣ್ಮರೆಯಾಗುತ್ತವೆ. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಇಂತಹ ಭೂ ಸ್ವಾಧೀನ ಪ್ರಕ್ರಿಯೆಯ ಸೂಕ್ಷ್ಮತೆ ಅರಿತುಕೊಳ್ಳಬೇಕಾಗಿದೆ. ನವದೆಹಲಿಯ ಕಾರಿಡಾರ್‌ಗಳಲ್ಲಿ ಕುಳಿತು ಕಾನೂನು ಜಾರಿಗೊಳಿಸುವ ಬದಲಾಗಿ ಕನಿಷ್ಠ ಪಕ್ಷ ಸ್ಥಳೀಯಾಡಳಿತವಾದರೂ ಸ್ಥಳೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿ ಅತಿಯಾದ ಕಾರ್ಯವಿಧಾನಗಳಿಂದಾಗಿ ಕೇಂದ್ರದ ಕಾಯ್ದೆಗೆ ತನ್ನ ಉದ್ದೇಶವನ್ನು ಈಡೇರಿಸುವುದು ಕಷ್ಟ. ಕಲ್ಲಿದ್ದಲ್ಲಿನ ಬೇಡಿಕೆ, 2030ರ ವೇಳೆಗೆ ಪ್ರಸ್ತುತ ಇರುವ 300 ದಶಲಕ್ಷ ಟನ್‌ಗಳಿಂದ 2 ಶತಕೋಟಿ ಟನ್‌ಗಳಿಗೆ ತಲುಪಲಿದೆ. ಇನ್ನು ಕಬ್ಬಿಣದ ಅದಿರು, ಬಾಕ್ಸೈಟ್ ಮುಂತಾದ ಹಲವು ಯೋಜನೆಗಳು ಅಗತ್ಯವಾಗಿವೆ. ಈ ಯೋಜನೆಗಳಿಗೆಲ್ಲ ಅಗತ್ಯವಾದ ಭೂಮಿಯನ್ನು `ಮಾನವೀಯ ಮುಖ`ದ ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ.

ವಿಶ್ವದ ಉಳಿದೆಲ್ಲ ದೇಶಗಳು ನಮಗೆ ಕಲಿಸುತ್ತಿರುವ ಪಾಠವಾದರೂ ಏನು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ `ಮುಕ್ತವಾದ, ಆದ್ಯತೆಯ, ಮಾಹಿತಿಪೂರ್ಣ ಒಪ್ಪಂದವನ್ನು ರೈತರಿಂದ ಬಯಸಿದೆ. ಅಂದರೆ ಸರ್ಕಾರವಾಗಲಿ, ಸಂಸ್ಥೆಯಾಗಲಿ ರೈತರ ಬಳಿ ತೆರಳಿ `ನಮ್ಮ ಯೋಜನೆಗಳಿಗೆ ಇಂತಿಷ್ಟು ಭೂಮಿ ಬೇಕು ಎಂದು ಹೇಳುವಂತಿಲ್ಲ. ಬದಲಾಗಿ ` ಈ ಭೂಮಿ ನಮಗೆ ಬೇಕಾಗಿದೆ` ಎನ್ನುತ್ತಾ ಅದರ ಪರಿಣಾಮಗಳನ್ನು ವಿವರಿಸಬೇಕು.

`ಈ ಯೋಜನೆಯಿಂದ ಇಂತಿಷ್ಟು ಅರಣ್ಯ ಪ್ರದೇಶ ನಾಶವಾಗುತ್ತದೆ, ಇಂತಿಷ್ಟು ಪ್ರಮಾಣದ ನೀರಿನ ಅಗತ್ಯವಿದೆ. ಜನ ಸ್ಥಳಾಂತರಗೊಳ್ಳಬೇಕಾಗುತ್ತದೆ. ದೂಳು ಏಳುತ್ತದೆ ಎನ್ನುವುದನ್ನು ಸರ್ಕಾರ ವಿವರಿಸಬೇಕಾಗುತ್ತದೆ.

ಸರ್ಕಾರವಾಗಲಿ, ಸಂಸ್ಥೆಯಾಗಲಿ ಏನು ಮಾಡುತ್ತಿದೆ ಎಂದು ಜನ ತಿಳಿದುಕೊಳ್ಳುವಂತಾಗಬೇಕು. ಒಂದು ಸಮುದಾಯ ಮತ್ತು ಅವರು ಹೊಂದಿರುವ ಪರಂಪರಾಗತವಾದ ಮತ್ತು ಫಲವತ್ತಾದ ಭೂಮಿ ಮತ್ತು ಅದರ ಸುತ್ತಲಿನ ಅರಣ್ಯಕ್ಕಾಗುವ ಧಕ್ಕೆ ಮತ್ತು ಎದುರಿಸಬೇಕಾದ ಸವಾಲುಗಳನ್ನು ಜನ ತಿಳಿದುಕೊಳ್ಳಬೇಕಾದುದು ಅಗತ್ಯವಾಗಿದೆ.

ಒಂದು ಯೋಜನೆಗೆ ಅಗತ್ಯವಾದ ಭೂಮಿಯನ್ನು ನೀವು ಹೇಗೆ ಅಳತೆ ಮಾಡುವಿರಿ. ಎರಡು ದಶಕಗಳ ಹಿಂದೆ ಹಾಜಿರಾ-ಬಿಜೈಪುರ-ಜಗದೀಶ್‌ಪುರ ಕೊಳವೆ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಂಡಾಗ ಕೇವಲ ಏಳು ರಾಸಾಯನಿಕ ಕಾರ್ಖಾನೆಗಳಿದ್ದವು. ಹೆಚ್ಚು ಕಡಿಮೆ ಇಟಲಿಯ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತಿದ್ದ ಈ ಎಲ್ಲಾ ಘಟಕಗಳು ಪ್ರತಿ ದಿನ 1,350 ಟನ್ ರಾಸಾಯನಿಕ ಉತ್ಪಾದಿಸುತ್ತಿದ್ದವು.

ಎಚ್‌ಬಿಜೆ ಘಟಕಗಳ ಸರಣಿಯಲ್ಲೇ ಐಎಫ್‌ಎಫ್‌ಸಿಒ 376 ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂಡೋ-ಗಲ್ಫ್ ರಾಸಾಯನಿಕ ಕಾರ್ಖಾನೆ 672 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದರೆ ಎನ್‌ಎಫ್‌ಎಲ್ 700 ಎಕರೆ ಪ್ರದೇಶವನ್ನು ಹೊಂದಿದೆ. ಇದೇ ವೇಳೆ ಟಾಟಾ 2100 ಎಕರೆ ಪ್ರದೇಶವನ್ನು ಹೊಂದಿದೆ.

ಹೊಸ ಗಣಿ ಮಸೂದೆ ಅನ್ವಯ ಯಾವುದೇ ಒಂದು ಗುತ್ತಿಗೆಯ ಪ್ರಕಾರ ಯಂತೆ 100 ಚದರ ಕಿ. ಮಿ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಬಹುದು. ಆದರೆ ಕಂಪನಿಗಳು ಮಾಡುತ್ತಿರುವುದಾದರೂ ಏನನ್ನು? ಒಂದು ಗುತ್ತಿಗೆಯ ಮೂಲಕ ಮತ್ತೊಂದು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಲ್ಲದೆ ಎರಡು ಪ್ರದೇಶಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತಿವೆ.

ಸೂಕ್ಷ್ಮ ಪರಿಸರದ ಹಾನಿ ಮತ್ತು ಭೂಸ್ವಾಧೀನ ಪಡಿಸಿಕೊಳ್ಳುವ ಸರ್ಕಾರ ಮತ್ತು ಸಂಸ್ಥೆಗಳ ಶ್ರಮವನ್ನು ತಡೆಯುವಲ್ಲಿ ಕಾನೂನುಗಳಿದ್ದರೂ ಕೂಡ ಸ್ಥಳೀಯಾಡಳಿತದ ಇಚ್ಛಾ ಶಕ್ತಿಯ ಕೊರತೆಯಿಂದ ಅದು ತನ್ನ ಉದ್ದೇಶ ಸಾಧನೆಯಿಂದ ದೂರ ಸರಿದಿದೆ.

ಇವೆಲ್ಲವೂ ಖಂಡಿತವಾಗಿ ಬಹಳ ಸಂಕೀರ್ಣವಾದ ಸಮಸ್ಯೆಗಳೇ ಹೌದು. ಆದರೆ, ಭೂ ಸ್ವಾಧೀನದಷ್ಟೇ ಹಳೆಯದಾದ ಇಂಥ ವ್ಯವಸ್ಥೆಗೆ ರಚನಾತ್ಮಕವಾದ ಬದಲಾವಣೆ ಮಾಡಬೇಕೆನ್ನುವ ಪ್ರತಿಯೊಂದು ಸಲಹೆಯಲ್ಲಿ ಅಡಗಿರುವ ಸವಾಲುಗಳನ್ನು ಪರಿಣತರು ಕಂಡುಕೊಳ್ಳಬೇಕಾಗಿದೆ.

ರೈತರಿಗೆ ಯಾವುದು ಪ್ರಯೋಜನಕಾರಿ? ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರದಿಂದಾಗಿ ಲಕ್ಷಗಟ್ಟಲೆ ಜನರ ನರಳುತ್ತ್ದ್ದಿದಾರೆ. ಸರ್ಕಾರದ ಈ ಘೋರ ಮುಖವನ್ನು ಹೊರಗೆಳೆಯುವುದಾದರೂ ಹೇಗೆ?. ಅಣ್ಣಾ ಹಜಾರೆ ಅವರು ಕೇಳುತ್ತಿರುವ ಪ್ರಶ್ನೆಯೂ ಇದೇ

- ನಿಮ್ಮ ಅಭಿಮತ ತಿಳಿಸಿ

-
ಪ್ರಜಾವಾಣಿ

ಪ್ರಶಸ್ತಿಗೆ ಕೃತಿಗಳ ಆಹ್ವಾನಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದೂವರೆ ಕೋಟಿ ರೂಪಾಯಿಗಳ ದತ್ತಿ ನಿಧಿಯಿಂದ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಗಳನ್ನು ನೀಡುತ್ತಿದೆ. ಇದಕ್ಕಾಗಿ ಕನ್ನಡದ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. 2011ರ ಆ.15ಕ್ಕೆ 35 ವರ್ಷ ಮೀರಿರದ ಕನ್ನಡ ಯುವ ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕವನ, ಸಣ್ಣಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಪರಿಸರ, ವಿನೋದ ಸಾಹಿತ್ಯ, ಅನುವಾದ, ಮಕ್ಕಳ ಸಾಹಿತ್ಯ, ವಿಮರ್ಶೆ/ಸಂಶೋಧನೆ-ಈ ಹತ್ತು ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡದಲ್ಲಿ ರಚಿಸಿದ ಪುಸ್ತಕಗಳನ್ನು ಸ್ಪರ್ಧೆಗೆ ಕಳುಹಿಸಬಹುದು.

2010ರ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಪುಸ್ತಕಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಪ್ರತಿ ಪ್ರಕಾರಕ್ಕೂ ಪುಸ್ತಕದ ಮೂರು ಪ್ರತಿಗಳನ್ನು ಕಳುಹಿಸಬೇಕು. ಆಯ್ಕೆಯಾದ ಪುಸ್ತಕ ಕೃತಿಗಳಿಗೆ ತಲಾ 10,000 ರೂ. ನಗದು ಹಾಗೂ ಪ್ರಶಸ್ತಿಗಳಿರುತ್ತವೆ.

ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸುವ ವಿಳಾಸ: ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18. ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಲು ಸೆ.30 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 (ದೂರವಾಣಿ ಸಂಖ್ಯೆ: 080-26623584) ಸಂಪರ್ಕಿಸಬಹುದಾಗಿದೆ ಎಂದು ಗೌರವ ಕಾರ್ಯದರ್ಶಿ ಎಚ್.ಕೆ.ಮಳಲಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ


ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿಲುವು ತಾಳಿದ್ದಾರೆ. ಈ ವಿಧೇಯಕ ಕಾನೂನು ರೂಪ ಪಡೆದು ಜನಲೋಕಪಾಲ ಅಸ್ತಿತ್ವಕ್ಕೆ ಬಂದ ನಂತರ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ತೊಲಗಿ ಹೋಗುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಸ್ವತಃ ಅಣ್ಣಾ ಹಝಾರೆ ಯವರಿಗೂ ಇಲ್ಲ. ಲಂಚ ಪಡೆಯುವಾಗ ಸಿಕ್ಕಿ ಬೀಳುವ ಸರಕಾರಿ ನೌಕರರನ್ನು, ರಾಜಕಾರಣಿ ಗಳನ್ನು ಶಿಕ್ಷಿಸುವುದಕ್ಕೆ ಮಾತ್ರ ಇದರಿಂದ ಸಾಧ್ಯವಾಗುತ್ತದೆ. ಯಾರ ಕಣ್ಣಿಗೂ ಕಾಣದೇ ನಡೆ ಯುವ ಭ್ರಷ್ಟಾಚಾರ ಎಂದಿನಂತೆ ಮುಂದುವರಿ ಯುತ್ತದೆ.ಈ ಹೋರಾಟದ ಪರಿಣಾಮವಾಗಿ ಇಡೀ ದೇಶದಲ್ಲಿ, ಅದರಲ್ಲೂ ಮಧ್ಯಮವರ್ಗದಲ್ಲಿ ಜಾಗೃತಿ ಮೂಡಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಿಂದ ಭ್ರಷ್ಟಾಚಾರ ತೊಲಗುತ್ತದೋ, ಬಿಡುತ್ತದೋ...

ಆದರೆ ರಾಜಕೀಯವಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಅಣ್ಣಾ ಹಝಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿ ಕೇಂದ್ರದ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್‌ನ್ನು ಗುರಿಯಾಗಿಸಿ ಕೊಂಡಿತ್ತು. ಹೀಗಾಗಿ ಇಡೀ ಚಳವಳಿಯಲ್ಲಿ ಕಾಂಗ್ರೆಸ್ ವಿರೋಧಿ ಘೋಷಣೆ, ಭಾಷಣಗಳು ಎದ್ದು ಕಾಣುತ್ತಿದ್ದವು. ಈ ಕಾಂಗ್ರೆಸ್ ವಿರೋಧಿ ಅಲೆಯಿಂದ ಅತ್ಯಂತ ಹೆಚ್ಚು ಲಾಭ ಪಡೆಯುವ ಪಕ್ಷವೆಂದರೆ ಬಿಜೆಪಿ. ಅಣ್ಣಾ ಹಝಾರೆ ಮತ್ತು ಅವರ ಬೆಂಬಲಿಗರು ಪಕ್ಷವನ್ನು ಕಟ್ಟಿಕೊಂಡು ಚುನಾವಣಾ ಕಣಕ್ಕೆ ಇಳಿಯುವುದಿಲ್ಲ. ಆಗ ಜನರ ಕಣ್ಣಿಗೆ ನೇರವಾಗಿ ಗೋಚರಿಸುವುದು ಕಾಂಗ್ರೆಸ್ ಎದುರಾಳಿಯಾದ ಬಿಜೆಪಿ.

ಅಂತಲೇ ಅಣ್ಣಾ ಚಳವಳಿಯಲ್ಲೂ ಕೂಡ ಪರಂಪರಾಗತವಾಗಿ ಬಿಜೆಪಿಯನ್ನೇ ಬೆಂಬಲಿಸುತ್ತ ಬಂದ ಮೇಲುಜಾತಿ-ಮೇಲುವರ್ಗಗಳ ನವ ಮಧ್ಯಮ ವರ್ಗದ ಯುವಕರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ.ಅಣ್ಣಾ ಹಝಾರೆ ಚಳವಳಿ ತೀವ್ರ ಸ್ವರೂಪ ಪಡೆದಿದ್ದಾಗ ನನ್ನ ಮೊಬೈಲ್‌ಗೆ ಒಂದು ಮೆಸೇಜು ಬಂತು. ಬ್ರಾಹ್ಮಣಿಸಂ ಬಿಕ್ಕಟ್ಟಿನಲ್ಲಿದೆ. ಅಣ್ಣಾ ಹಝಾರೆಯವರನ್ನು ಅದು ಬಳಸಿಕೊಳ್ಳುತ್ತಿದೆ. ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿದವರು. ನಂತರ ಕಮಂಡಲ ಹಿಡಿದು ಹೊರಟವರು ಹಝಾರೆ ಚಳವಳಿಯ ಮುಂಚೂಣಿಯಲ್ಲಿದ್ದಾರೆ. ಈ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಸಂವಿಧಾನದ ಮೇಲೆ ಮತ್ತು ಸಂಸ ದೀಯ ಜನತಂತ್ರದ ಮೇಲೆ ಸವಾರಿ ಮಾಡಲು ಹೊರಟಿವೆ. ನಾವು ಎಚ್ಚರವಾಗಿರಬೇಕು.

ಹೀಗಂತ ನನ್ನ ಮೊಬೈಲ್‌ಗೆ ಎಸ್‌ಎಂಎಸ್ ಬಂದಿದೆ. ಕಳುಹಿಸಿದವರು ಹೆಸರಾಂತ ವಕೀಲ ಸಿ.ಎಸ್.ದ್ವಾರಕಾನಾಥ್. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ಸಂಘ ಪರಿವಾರದ ಆಸೆ-ಆಮಿಷ-ಒತ್ತಡಗಳಿಗೆ ಮಣಿಯದೆ ಮತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಸೊಪ್ಪು ಹಾಕದೇ ಅಧಿಕಾರ ತ್ಯಜಿಸಿ ಸ್ವಾಭಿಮಾನದಿಂದ ಹೊರಗೆ ಬಂದವರು. ಹೊರಗೆ ಬರುವಾಗ ಸಮಗ್ರವಾದ ವರದಿಯನ್ನು ನೀಡಿ ಬಂದರು. ಇಂಥವರು ಇಂಥದೊಂದು ಮೆಸೇಜು ಕಳುಹಿಸುತ್ತಾರೆಂದರೆ ಅದನ್ನು ನಾವೆಲ್ಲ ಗಂಭೀರವಾಗಿ ತೆಗೆದುಕೊಳ್ಳದೇ ಇರಲಿಕ್ಕಾಗುವುದಿಲ್ಲ. ಯಾಕೆಂದರೆ ಅವರು ಪ್ರಸ್ತಾಪಿಸಿರುವ ವಿಷಯ ನಾವೆಲ್ಲ ಆತಂಕ ಪಡುವಂಥದ್ದು. ಸಂಘ ಪರಿವಾರದ ಹಿಂದುತ್ವ ಮುಸುಕಿನ ಬ್ರಾಹ್ಮಣವಾದ ಮಾತ್ರವಲ್ಲ, ಬಂಡವಾಳ ವಾದವೂ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಹೀಗೆ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲ, ಅಣ್ಣಾ ಹಝಾರೆ ಅಂಥವರನ್ನು ತನ್ನ ಉಳಿವಿಗಾಗಿ ಅದು ಸೃಷ್ಟಿಸುತ್ತದೆ.

ದ್ವಾರಕಾನಾಥ ಅವರ ಮೆಸೇಜು ಬಂದಾಗ ನಾನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿದ್ದೆ. ಅಂದು ಹಝಾರೆಯನ್ನು ಬಂಧಿಸಿದ ಎರಡನೆ ದಿನ. ಈ ಮರಾಠಿ ಪ್ರದೇಶದಲ್ಲೂ ಭಗವಾಧ್ವಜ ಹಿಡಿದ ಶಿವಸೇನೆ, ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರೇ ಎದ್ದು ಕಾಣುತ್ತಿದ್ದರು. ಆದರೆ ಬರೀ ಇವರೇ ಇರಲಿಲ್ಲ. ಆ ಜನಜಂಗುಳಿ ಯಲ್ಲಿ 90ರ ನಂತರದ ಕಾರ್ಪೊರೇಟ್ ಮಧ್ಯಮವರ್ಗದ ಜನರು ಕಾಣುತ್ತಿದ್ದರು.

ಭ್ರಷ್ಟಾಚಾರ ವಿರುದ್ಧ ದನಿಯೆತ್ತಿದ ಹಝಾರೆ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆ ಬಗ್ಗೆ ಚರ್ಚೆ ಅನಗತ್ಯ. ಅವರು ಕೋಮುವಾದಿ ಎಂದು ಹೇಳಲು ಆಗುವುದಿಲ್ಲ. ಆರೆಸ್ಸೆಸ್ ಪ್ರಭಾವದಿಂದ ತಪ್ಪಿಸಿಕೊಳ್ಳಲು ಅವರು ಚಡಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಲೋಕಸಭೆಯಲ್ಲಿ ಲಾಲೂ ಪ್ರಸಾದ ಯಾದವ್ ಹೇಳಿದಂತೆ ಈ ಚಳವಳಿಯನ್ನು ಬಳಸಿಕೊಳ್ಳಲು ಸಂಘ ಪರಿವಾರ ಷಢ್ಯಂತ್ರ ರೂಪಿಸಿತ್ತು. ಆರೆಸ್ಸೆಸ್‌ನ ಸೈದ್ಧಾಂತಿಕ ಹಿನ್ನಲೆ ಹೊಂದಿರುವ ಗೋವಿಂದಾಚಾರ್ಯ ಆಗಾಗ ವೇದಿಕೆಯಲ್ಲಿ ಕಾಣುತ್ತಿದ್ದರು. ಅವರ ಸುತ್ತ ಸೇರಿದವರೆಲ್ಲ ಮೀಸಲಾತಿ ವಿರೋಧಿಗಳು, ಕೋಮುವಾದಿಗಳು, ಉದ್ಯಮ ಪತಿಗಳು, ಲೂಟಿಕೋರ ಮಠಾಧೀಶರು, ಪ್ರಚಾರಪ್ರಿಯ ಕೋಡಂಗಿಗಳು.

ಬೆಂಗಳೂರಿನಲ್ಲಿ ನಡೆದ ಹಝಾರೆ ಪರ ಸತ್ಯಾಗ್ರಹದಲ್ಲಿ ಯಡಿಯೂರಪ್ಪನವರು ಭಾಗವಹಿಸಲು ಹೊರಟಿದ್ದರು. ಆದರೆ ಸಂತೋಷ್ ಹೆಗ್ಡೆ ಅದಕ್ಕೆ ಅವಕಾಶ ನೀಡಲಿಲ್ಲ. ಆದರೂ ರೇಣುಕಾ ಚಾರ್ಯ, ಉಮೇಶ್ ಕತ್ತಿ ಅಂಥ ಚೇಲಾಗಳು ನಿರಶನದಲ್ಲಿ ಪಾಲ್ಗೊಂಡರು.
70ರ ದಶಕದಲ್ಲಿ ನಡೆದ ಜೆ.ಪಿ.ಚಳವಳಿ ಎಲ್ಲಿಂದ, ಹೇಗೆ ಆರಂಭವಾಗಿ ಎಲ್ಲಿಗೆ ತಲುಪಿತು. ಯಾರ್ಯಾರನ್ನು ಬೆಳೆಸಿತು ಎಂಬ ಸಂಗತಿ ಗೊತ್ತಿರುವ ಎಲ್ಲರಿಗೂ ದ್ವಾರಕಾನಾಥ ರಂತೆ ಆತಂಕ ಉಂಟಾಗುವುದು ಸಹಜ. ಜಯ ಪ್ರಕಾಶ ನಾರಾಯಣ ಸ್ವಾತಂತ್ರ್ಯ ಚಳವಳಿಯಲ್ಲಿ ಅಗ್ರ ಪಾತ್ರವಹಿಸಿದವರು. ಗಾಂಧೀಜಿಗೆ ಅತ್ಯಂತ ಆಪ್ತರಾಗಿದ್ದವರು. ಇದೆಲ್ಲಕ್ಕಿಂತ ಹೆಚ್ಚಾಗಿ ಸಮಾಜವಾದಿ ಹಿನ್ನಲೆಯುಳ್ಳವರು. ಸಾಕಷ್ಟು ಓದಿಕೊಂಡವರು. ಇಂತಹ ಮಹಾಚೇತನವನ್ನೇ ದಾರಿ ತಪ್ಪಿಸಿದ ಪ್ರಳಯಾಂತಕರ ಬಗ್ಗೆ ತಿಳಿದವರಿಗೆ ಹಝಾರೆ ಚಳವಳಿಯ ಆಕಾರ-ವಿಕಾರಗಳ ಬಗ್ಗೆ ಭೀತಿ ಉಂಟಾಗುವುದು ಸಾಮಾನ್ಯ.

1974-75ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಸಂಪೂರ್ಣ ಕ್ರಾಂತಿ ಚಳವಳಿಗೆ ಕರೆ ನೀಡಿದ್ದ ಜೆ.ಪಿ., ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುವಂತೆ ಬಲವಂತ ಮಾಡಬೇಕು ಎಂದು ಜನರಿಗೆ ಕರೆ ನೀಡಿದರು. ಭ್ರಷ್ಟ ಸರಕಾರದ ವಿರುದ್ಧ ಸಿಡಿದೇಳುವಂತೆ, ಸರಕಾರಿ ನೌಕರರನ್ನು, ಪೊಲೀಸರನ್ನು ಮತ್ತು ಸೈನಿಕರನ್ನು ಪ್ರಚೋದಿಸಿದರು. ಈಗ ಅಣ್ಣಾ ಹಝಾರೆಯವರು ಸಂಸದರಿಗೆ ಘೇರಾವ್ ಹಾಕುವಂತೆ ಕರೆ ನೀಡಿದ್ದು ಕೂಡ ಆ ಜೆ.ಪಿ. ದಿನಗಳನ್ನು ನೆನಪಿಗೆ ತಂದಿತು. ಹೆಸರಿಗೆ ಪಕ್ಷಾತೀತವಾಗಿದ್ದ ಆ ಚಳವಳಿ ಯಲ್ಲಿ ಗಾಂಧಿ ಹಂತಕ ಪರಿವಾರಕ್ಕೆ ಸೇರಿದವರು ಮುಂಚೂಣಿಯಲ್ಲಿದ್ದರು. ಆಗ ಕಮ್ಯುನಿಸ್ಟರು ಮತ್ತು ಕೆಲ ಪ್ರಗತಿಪರರು ಆಕ್ಷೇಪ ವ್ಯಕ್ತ ಪಡಿಸಿದಾಗ, ಜೆ.ಪಿಯಂಥ ಜೆ.ಪಿ.ಯವರೇ, ‘‘ಆರೆಸ್ಸೆಸ್ ಕೋಮುವಾದಿಯಾದರೆ, ನಾನೂ ಕೋಮುವಾದಿ’’ ಎಂಬ ಅಪಾಯಕಾರಿ ಹೇಳಿಕೆ ನೀಡಿದರು.

ಜೆ.ಪಿ ಚಳವಳಿ ಆರಂಭವಾಗುವವರೆಗೆ ಆರೆಸ್ಸೆಸ್ ಇಲ್ಲವೇ ಬಿಜೆಪಿ (ಅಂದಿನ ಜನಸಂಘ) ರಾಷ್ಟ್ರರಾಜಕಾರಣದಲ್ಲಿ ಮುಖ್ಯ ವಾಹಿನಿಯಲ್ಲಿ ಇರಲಿಲ್ಲ. ಗಾಂಧಿ ಹತ್ಯೆಯ ನಂತರ ಈ ಸಂಘಟನೆಗಳನ್ನು ಜನ ದೂರವಿಟ್ಟಿ ದ್ದರು. ಲೋಕಸಭೆಯಲ್ಲೂ ಇವರ ಬಲ ಬೆರಳೆಣಿಕೆಯಷ್ಟಿತ್ತು. ಸಾಮಾಜಿಕ ಮಾನ್ಯತೆಗಾಗಿ ಹಾತೊರೆಯುತ್ತಿದ್ದ ಇವರಿಗೆ ಜೆ.ಪಿ ಚಳವಳಿ ಮರಳುಗಾಡಿನಲ್ಲಿ ಧುಮ್ಮಿಕ್ಕುವ ಜಲಧಾರೆಯಂತೆ ಬಂದು ಬಾಲ ಬಿಚ್ಚಲು ಅವಕಾಶ ನೀಡಿತು. ಆನಂತರ ನಡೆದ ಚುನಾವಣೆಗಳಲ್ಲಿ ಇವರು ಗೆದ್ದು ಬಂದರು. ಕೇಂದ್ರದ ಅಧಿಕಾರಸೂತ್ರವನ್ನು ಹಿಡಿದರು. ಅಧಿಕಾರ ಸಿಕ್ಕ ತಕ್ಷಣ ಸುಮ್ಮನಿರದೆ ತಮ್ಮ ಕರಾಳವಾದ ‘ಹಿಡನ್ ಅಜೆಂಡಾ’ ಜಾರಿಗೆ ತರಲು ಮುಂದಾದರು.

1992ರಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ನಂತರ ಅದನ್ನು ಕಾಲಕಸಕ್ಕೆ ಸಮನಾಗಿ ಕಂಡು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ನೆಲ ಸಮಗೊಳಿಸಿದರು. ಕೇಂದ್ರದಲ್ಲಿ ಅಧಿಕಾರ ಪಡೆದ ನಂತರ ಗೋ-ಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ, ಹಿಂದೂ ಮಂದಿರಗಳ ವಿಮೋಚನೆ, ಮತಾಂತರ....ಹೀಗೆ ಕೆಲಸಕ್ಕೆ ಬಾರದ ವಿವಾದಗಳನ್ನು ಹುಟ್ಟು ಹಾಕಿದರು. ಜನತೆಯ ಜ್ವಲಂತ ಸಮಸ್ಯೆಗಳು ಕಡೆಗಣಿಸಲ್ಪಟ್ಟವು. ಇವರ ಕಾರ್ಯಸೂಚಿಯ ಸುತ್ತ ಜನರನ್ನು ಅಣಿನೆರೆಸಿ ಕಾದಾಟಕ್ಕಿಳಿಸಿದರು. ಇವೆಲ್ಲ ವಿಧ್ವಂಸಕ ಚಟುವಟಿಕೆ ನಡೆಸಲು ಬಲ ಪಡೆದದ್ದು ಜೆ.ಪಿ.ಚಳವಳಿಯಿಂದ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಈಗಲೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಕ್ಕೆ ಬಂದಲ್ಲೆಲ್ಲ ಇವರ ಹಗರಣಗಳು ದುರ್ವಾಸನೆ ಹಬ್ಬಿಸಿವೆ. ಜನ ಇವರನ್ನು ನಂಬುತ್ತಿಲ್ಲ. ರಾಮಮಂತ್ರದ ಪುಂಗಿ ನಡೆಯುತ್ತಿಲ್ಲ. ಈಗ ಮತ್ತೆ ಸಾಮಾಜಿಕ ಮಾನ್ಯತೆ ಪಡೆದು ಅಧಿಕಾರಸೂತ್ರ ಹಿಡಿಯಲು ಹುನ್ನಾರ ನಡೆಸಿದ್ದಾರೆ. ಮೊದಲು ಬಾಬಾ ರಾಮ್‌ದೇವ್ ಮುಂದೆ ಬಿಟ್ಟು ಪ್ರಯೋಗ ಮಾಡಿದರು. ದಿಲ್ಲಿ ಪೊಲೀಸರ ಮಧ್ಯರಾತ್ರಿಯ ಹೊಡೆತಕ್ಕೆ ತತ್ತರಿಸಿದ ರಾಮ್‌ದೇವ್ ಪಲಾಯನ ಮಾಡಿದರು. ಆ ಪ್ರಯೋಗ ವಿಫಲಗೊಂಡ ನಂತರ ಅಣ್ಣಾ ಹಝಾರೆಯ ಚಳವಳಿಯಲ್ಲಿ ತೂರಿಕೊಂಡು ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದರು.

ಗಾಳಿ ಬಿಟ್ಟಾಗ ತೂರಿಕೊಳ್ಳುವುದು ಇವರ ಜಾಯಮಾನ. ನೇರವಾಗಿ ಜನರ ಮುಂದೆ ಬರುವ ನೈತಿಕ ಬಲ ಇವರಿಗಿಲ್ಲ. ಹಝಾರೆಯವರ ಗಾಂಧಿ ಟೋಪಿಯಡಿಯಲ್ಲಿ ರಕ್ಷಣೆ ಪಡೆಯಲು ಯತ್ನಿಸಿದರು. ಹಝಾರೆಗೂ ಇದು ಗೊತ್ತಿತ್ತು. ಅಂತಲೇ ಅವರು ಎಚ್ಚರದ ಹೆಜ್ಜೆಯಿಡುತ್ತಿದ್ದರು. ಆದರೆ ಆರೆಸ್ಸೆಸ್ ನೇರವಾಗಿ ಮಧ್ಯಪ್ರವೇಶ ಮಾಡದೇ ಬೆಂಗಳೂರಿನ ಭೂಮಾಫಿಯಾಗಳ ಗುರು ರವಿಶಂಕರ್ ಅಂಥವರ ಮೂಲಕ ತಮ್ಮ ಆಟವಾಡುತ್ತಿತ್ತು. ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಹಝಾರೆ ಜೊತೆಗೆ ರಾಮ್‌ದೇವ್ ಮತ್ತು ಭೂಗಳ್ಳ ರವಿಶಂಕರ್ ಪಾಲ್ಗೊಂಡಿದ್ದರು.. ಇವರನ್ನು ತಡೆಯಲು ಹಝಾರೆಯಿಂದಲೂ ಸಾಧ್ಯವಾಗಲಿಲ್ಲ. ಈ ಕಾವಿಧಾರಿಗಳನ್ನು ಮುಂದಿಟ್ಟುಕೊಂಡು ಸಂಘ ಪರಿವಾರ ಷಡಂತ್ರ ರೂಪಿಸಿತು.

ಅಣ್ಣಾ ಹಝಾರೆಯ ಚಳವಳಿಯಿಂದ ಹೇಗೆ ಲಾಭ ಮಾಡಿಕೊಳ್ಳಬೇಕು ಎಂಬುದರ ಕುರಿತು ಆರೆಸ್ಸೆಸ್ ಮೂರು ದಿನಗಳ ಕಾಲ ಉಜೈನಿಯಲ್ಲಿ ಸಮನ್ವಯ ಬೈಠಕ್‌ವೊಂದನ್ನು ನಡೆಸಿತ್ತು. ಇದರಲ್ಲಿ ಅಡ್ವಾಣಿ, ವೆಂಕಯ್ಯ ನಾಯ್ಡು, ಅನಂತಕುಮಾರ್, ಗಡ್ಕರಿ ಸೇರಿದಂತೆ ಪರಿವಾರದ 40ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜೆ.ಪಿ ಅಂಥವರನ್ನು ದಾರಿ ತಪ್ಪಿಸಿದವರಿಗೆ ಅಮಾಯಕ ಹಝಾರೆಯವರನ್ನು ಬಲೆಗೆ ಬೀಳಿಸುವುದು ಕಷ್ಟವೇನಲ್ಲ. ಆದರೆ ಇದರಿಂದ ಭಾರತದ ಜಾತ್ಯತೀತ ಜನತಂತ್ರ ಪ್ರಾಣಸಂಕಟ ಅನುಭವಿಸಬೇಕಾಗುತ್ತದೆ. ಹೀಗೆ ಆಗಬಾರದು ಎಂದರೆ ನಾವು ಎಚ್ಚರವಾಗಿರಲೇಬೇಕು.

ಯಾರು ಏನೇ ಹೇಳಲಿ, ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕಂಡು ಬರುತ್ತಿರುವುದು ಬಿಜೆಪಿ ಮಾತ್ರ. ಮೂರನೆ ರಂಗ ಎಂಬುದು ಕೇವಲ ಹೆಸರಿಗೆ ಮಾತ್ರವಿದೆ. ಕಾಂಗ್ರೆಸೇತರ ಜಾತ್ಯತೀತ ಪಕ್ಷಗಳು ಈಗಲಾದರೂ ಎಚ್ಚೆತ್ತು ಒಂದುಗೂಡದಿದ್ದರೆ, ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯುವುದು ನಿಶ್ಚಿತ.

ಸನತ್‌ ಕುಮಾರ್‌ ಬೆಳಗಲಿ

- ನಿಮ್ಮ ಅಭಿಮತ ತಿಳಿಸಿ
-ವಾರ್ತಾಭಾರತಿ

ಈ ಬಾರಿಯದು ಒಂದು ಪ್ರಹಸನ

- ಆದಿತ್ಯ ಮುಖರ್ಜಿ,

ಕನ್ನಡಕ್ಕೆ: ಸುರೇಶ್‌ ಭಟ್‌ ಬಾಕ್ರಬೈಲು


ಭ್ರಷ್ಟಾಚಾರ ನಿರ್ಮೂಲನೆಗಾಗಿ ತಾವು ರೂಪಿಸಿರುವ ಜನ ಲೋಕಪಾಲ ಮಸೂದೆಯನ್ನೇ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುತ್ತಾ ಟೀಂ ಅಣ್ಣಾ ನೇತೃತ್ವದಲ್ಲಿ ಚಳವಳಿ ನಡೆಯಿತಷ್ಟೆ. ಬಹುತೇಕ ವಾಗಿ ಮಧ್ಯಮವರ್ಗದ ನಗರವಾಸಿಗಳೇ ಭಾಗವಹಿಸಿರುವ ಈ ಚಳವಳಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ಪ್ರತಿಭಟನೆಗಳ ವ್ಯಾಪ್ತಿ, ನ್ಯಾಯಸಮ್ಮತತೆ, ವಿಶ್ವಾಸಾರ್ಹತೆ ಮತ್ತು ಇವುಗಳನ್ನು ಸತತವಾಗಿ ಮುಂದುವರಿಸಿಕೊಂಡು ಹೋಗುವು ದರ ಬಗೆಗೆ ಪ್ರಶ್ನೆಗಳು ಎದ್ದಿವೆ. ಕೆಲ ವರು ಇದನ್ನು ಹಿಂದಿನ ಭಾರಿ ಶಕ್ತಿಯುತ ಚಳವಳಿಗಳಿಗೆ ಹೋಲಿ ಸುವ ಅತ್ಯವಸರದ ತೀರ್ಮಾನಗಳನ್ನೂ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಇಂದಿಗೂ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಚಳವಳಿ ಯೆಂದು ಸಾಧಿಸಲು ಸಾಧ್ಯ. ಪ್ರಸಕ್ತ ಪ್ರತಿಭಟನೆಯನ್ನು ಇಂತಹ ಒಂದು ಅಪರೂಪದ ಚಳವಳಿಗೆ ಹೋಲಿಸಿರುವುದನ್ನಂತೂ ನಂಬಲೇ ಆಗುತ್ತಿಲ್ಲ. ಇನ್ನು ಈ ಟೀಂ ಅಣ್ಣಾ ಚಳವಳಿಯಲ್ಲಿ ಮಹಾತ್ಮಾ ಗಾಂಧಿಯ ಹೆಸರನ್ನೂ ಎಳೆದು ತಂದಿರುವುದು ತೀರಾ, ತೀರಾ ಅಸಹಜವಾಗಿದೆ.

ಖಾದಿ ಬಟ್ಟೆ ತೊಟ್ಟು, ಗಾಂಧಿ ಟೋಪಿ ಧರಿಸಿ ಸತ್ಯಾಗ್ರಹ, ಅಹಿಂಸೆಯ ಹುರುಳನ್ನೊಪ್ಪಿಕೊಳ್ಳದೆ, ಕೇವಲ ಅವುಗಳ ಬಗ್ಗೆ ಮಾತನಾಡುತ್ತಾ ಜನರನ್ನು ಗುಂಪುಗೂಡಿಸುವುದು ಇವಿಷ್ಟೇ ಗಾಂಧಿ ಜೊತೆ ಹೋಲಿಸಲು ಬೇಕಾದ ಅರ್ಹತೆಗಳೆಂದಾದರೆ ವಿಶ್ವಾದ್ಯಂತ ರಾಶಿರಾಶಿ ಮಹಾತ್ಮರುಗಳು ತಲೆಯೆ ತ್ತಲಿದ್ದಾರೆ. (ನನಗೆ ತಿಳಿದಿರುವ ಮಟ್ಟಿಗೆ ಗಾಂಧಿ ಜೊತೆ ಹೋಲಿಸುವ ಕೆಲಸವನ್ನು ಸಾಮಾನ್ಯ ವಾಗಿ ಆರೆಸ್ಸೆಸ್/ಬಿಜೆಪಿ ನಾಯಕರು ಮಾಡಿಲ್ಲ). ಬೀದಿ ಪ್ರತಿಭಟನೆಗಳಿಗೆ ಇಂದಿನ ಸರಕಾರ ತೋರಿದ ಪ್ರತಿಕ್ರಿಯೆಗಳನ್ನು ಹಿಂದಿನ ಸರಕಾರಗಳು ಪ್ರತಿಕ್ರಿಯಿಸಿದ ಬಗೆಯೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.

ಪ್ರಸಕ್ತ ಸನ್ನಿವೇಶಕ್ಕೂ ಜೆಪಿ ಚಳವಳಿ ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ ಸನ್ನಿವೇಶಕ್ಕೂ ಸಾಮ್ಯಗಳಿವೆಯೆಂದು ಬಿಜೆಪಿಯ ಅತ್ಯಂತ ಹಿರಿಯ ನಾಯಕ ಅಡ್ವಾನಿ ಮತ್ತಿತರ ಅನೇಕ ಮುಖಂಡರು ಮತ್ತೆ ಮತ್ತೆ ಹೇಳಿದ್ದಾರೆ. (ಗಾಂಧಿ ಹಂತಕನ ರಾಜಕೀಯ ಉತ್ತರಾಧಿ ಕಾರಿಗಳು ಎಷ್ಟೇ ಅವಕಾಶವಾದಿಗಳಾದರೂ ಅವರು ಗಾಂಧಿಯ ಹೆಸರ್ಹೇಳಿ ನ್ಯಾಯಸಮ್ಮತತೆ ದೊರಕಿಸಿಕೊಳ್ಳುವುದು ದುಸ್ತರವಿದೆ. ಅದೇ ರೀತಿ ಸ್ವಾತಂತ್ರ್ಯ ಚಳವಳಿಯಲ್ಲೆಂದೂ ಭಾಗವಹಿಸದ ಇವರುಗಳು ಅದನ್ನು ಬಳಸಿಕೊಳ್ಳುವುದೂ ಕಷ್ಟವಿದೆ.). ಮೇಲಿನ ಈ ಹೋಲಿಕೆಗಳು ಸಮಂಜಸವಲ್ಲವೆನ್ನಲು ಹಲವು ಕಾರಣಗಳನ್ನು ನೀಡಬಹುದು. ಹಝಾರೆಯವರ ಚಳವಳಿ ಒಂದೇ ವಿಷಯಕ್ಕೆ ಸೀಮಿತವಾಗಿದೆ.

ಘೋಷಿತ ಉದ್ದೇಶಗಳ ವಿಷಯ ವನ್ನು ಅಥವಾ ವ್ಯಾಪ್ತಿ ಮತ್ತು ರಾಷ್ಟ್ರವ್ಯಾಪಿ ಜನ ಬೆಂಬಲದ ಸ್ವರೂಪವನ್ನು ತೆಗೆದುಕೊಂಡರೆ ಹಝಾರೆಯವರ ಚಳವಳಿ ಸ್ವಾತಂತ್ರ್ಯ ಚಳವಳಿ ಬಿಡಿ, ಜೆಪಿ ಚಳವಳಿಯಂತೆಯೂ ಇಲ್ಲ. ಇಂದಿರಾ ಗಾಂಧಿ ತೆಗೆದುಕೊಂಡಿದ್ದ ರಾಜಕೀಯ ವಾಗಿ ನಿರ್ಧಾರಾತ್ಮಕವಾದ ಕ್ರಮಗಳಲ್ಲಿ ದೋಷ ಗಳಿದ್ದವು ನಿಜ. ಆದರೆ ಅದಕ್ಕೂ ಇಂದಿನ ನಾಯಕತ್ವದ ಪೊಳ್ಳು ಹರಟೆಗಳಿಗೂ ಹೋಲಿಕೆಯೇ ಇಲ್ಲ. ಇಂದಿನದು ಇತಿಹಾಸದ ಪುನರಾವರ್ತನೆ ಅಲ್ಲ, ಒಂದು ಅಣಕ ಎನ್ನುವುದಂತೂ ಖಚಿತ.
ಆದರೆ ಕೆಲವು ವಿಷಯಗಳಲ್ಲಿ ಸ್ವಲ್ಪ ಹೋಲಿಕೆ ಯಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

ಆ ಕೆಲವು ವಿಷಯಗಳನ್ನಿಲ್ಲಿ ಪ್ರಸ್ತಾಪಿಸ ಬಯಸುತ್ತೇನೆ. ಪ್ರಸಕ್ತ ಚಳವಳಿಗೂ ಜೆಪಿ ಚಳವಳಿಯ ಅನಂತರದ ಹಂತಗಳಿಗೂ ಸಾಮ್ಯಗಳಿರುವುದನ್ನು ಗಮನಿಸಬ ಹುದು. ಒಂದು, ಪದೇ ಪದೇ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉಪೇಕ್ಷಿಸುವುದು. ಎರಡು, ಸರಕಾರ ಪದತ್ಯಾಗ ಮಾಡಬೇಕೆಂದು ಚುನಾವಣಾ ವಿಜಯ ಗಳಿಂದಲ್ಲ, ಬೀದಿಗಳಲ್ಲಿನ ಜನ ಬೆಂಬಲದ ಮೂಲಕ ಕಟ್ಟ ಕಡೆಯ ಎಚ್ಚರಿಕೆ ನೀಡುವುದು. ಜೆಪಿ ಚಳವಳಿಗೆ ಆರಂಭಿಕ ಹಂತದಲ್ಲಿ ಜನ ಬೆಂಬಲ ದೊರೆತದ್ದೇ ಭ್ರಷ್ಟಾಚಾರ, ದುರಾಡಳಿತ, ಹಣದುಬ್ಬರಗಳ ಬಗೆಗೆ ಜನರಿಗಿದ್ದ ನೈಜ ಅಸಮಾ ಧಾನದ ಆಧಾರದಲ್ಲಿ.

ಕಾಲಾಂತರದಲ್ಲಿ ಜೆಪಿ ಚಳವಳಿಯನ್ನು ಜನ ಸಂಘ ಮತ್ತು ಆರೆಸ್ಸೆಸ್‌ನ ಕೂಟ ಹೈಜಾಕ್ ಮಾಡಿತು. ಅವೆರಡರ ಏಕಾಂಶ ಕಾರ್ಯಸೂಚಿ ಆಗಿದ್ದುದು ಇಂದಿರಾ ಗಾಂಧಿಯ ಪದಚ್ಯುತಿ. ಹೀಗೆ ಜೆಪಿ ಚಳವಳಿಯ ಮುಂದಿನ ಹಂತಗಳ ಈ ಜನ ಬೆಂಬಲದ ಹಿಂದೆ ಆರೆಸ್ಸೆಸ್ ಕೈವಾಡವಿದ್ದ ನಿಜಾಂಶ ಹಲವಾರು ವಿದ್ವಾಂಸರ ಸಂಶೋಧನೆಗಳಿಂದ ನಿರ್ಧಾರಾತ್ಮಕವಾಗಿ ಸಾಬೀತುಪಟ್ಟಿದೆ.ಇಂದು ಹಝಾರೆ ಚಳವಳಿಗೆ ಐಷಾರಾಮಿ ಮೇಲ್ವರ್ಗಗಳನ್ನೂ ಒಳಗೊಂಡಂತೆ, ಭ್ರಷ್ಟಾಚಾರದೆ ದುರು ಸಂಪೂರ್ಣ ಅಸಹಾಯಕರಾಗಿ ನಿಂತಿರುವ ಎಲ್ಲಾ ವರ್ಗಗಳ ಜನರ ಸ್ವಯಂಪ್ರೇರಿತ ಬೆಂಬಲ ವಿದೆ. ಈ ಅಂಶವನ್ನು ಕಡೆಗಣಿಸುವುದು ಮೂರ್ಖ ತನವಾಗುತ್ತದೆ. ಆದರೆ ಈ ಚಳವಳಿಯ ಹಿಂದೆ ಯೂ ಆರೆಸ್ಸೆಸ್ ಇರುವ ಕುರಿತಂತೆ ಅಶುಭ ಸೂಚಕ ವರದಿಗಳು ಬರುತ್ತಿವೆ.

ಸಂಘ ಪರಿವಾರದ ಒಂದು ಅಂಗ ಸಂಸ್ಥೆಯಾಗಿರುವ ಎಬಿವಿಪಿ ರಾಷ್ಟ್ರಾ ದ್ಯಂತ ಶಾಲೆ ಕಾಲೇಜು ಬಂದ್‌ಗೆ ಕರೆ ನೀಡಿತು. ಕಾಂಗ್ರೆಸ್ ನೇತೃತ್ವದ ಆಡಳಿತವನ್ನು ಕೊನೆಗಾಣಿ ಸಲು ಸಂಘಟಿತ ಕ್ರಮಗಳಾಗಬೇಕೆಂದು (ಬಹುಶಃ ಭಾರತ್ ಬಂದ್ ಎಂದಾಗಿರಬಹುದು) ಅಡ್ವಾನಿ ಕರೆ ಕೊಟ್ಟರು. ಕಾಂಗ್ರೆಸ್ ಸರಕಾರ ಜನಾದೇಶ ವನ್ನು ಎಂದೋ ಕಳೆದುಕೊಂಡಿದೆ ಎನ್ನುತ್ತಿರುವವರು ಇವರೇ ಹೊರತು ಮತದಾರರಲ್ಲ. ಭ್ರಷ್ಟಾ ಚಾರ ಎನ್ನುವುದು ವ್ಯವಸ್ಥೆಯ ಜಾಡ್ಯವಾಗಿದ್ದು, ಅದು ಎಲ್ಲಾ ರಾಜಕೀಯ ಪಕ್ಷಗಳನ್ನೂ ಒಳ ಗೊಂಡಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟ ದಿಂದ ಆರಂಭವಾದ ಟೀಂ ಅಣ್ಣಾ ಆಗ್ರಹಗಳು ಮತ್ತು ಉದ್ದೇಶಗಳು ಬಹುಬೇಗನೆ ಬದಲಾಗಿ ಈಗ ಕಾಂಗ್ರೆಸನ್ನು ಕಿತ್ತೊಗೆಯುವ ವಿಷಯಕ್ಕೆ ಬಂದು ನಿಂತಿವೆ.

ಅಣ್ಣಾ ಟೀಂನ ಜನಲೋಕ ಪಾಲ ಮಸೂದೆಯ ಕರಡನ್ನು ಬಿಜೆಪಿ ಸೇರಿದಂತೆ ಮಿಕ್ಕೆಲ್ಲ ಪ್ರತಿಪಕ್ಷಗಳು ಬೆಂಬಲಿಸದಿರುವುದು ಗಮನಾರ್ಹವಿದೆ. ಯಾವ ಅಸಮಾಧಾನಕ್ಕೆ ಹಝಾರೆ ಧ್ವನಿ ಕೊಟ್ಟಿರುವರೋ ಆ ಅಸಮಾ ಧಾನದ ಉರಿಯಲ್ಲಿ ಅವೆಲ್ಲವೂ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಪ್ರಯತ್ನಿಸುತ್ತಿವೆ. ಕನಿಷ್ಠ ಎಡಪಕ್ಷಗಳು ಈ ಅಣ್ಣಾ ಹಝಾರೆ ಬಂಡಿ ಯನ್ನೇರಲು ಹಿಂದೇಟು ಹಾಕುತ್ತಿ ರುವಂತೆ ತೋರುವುದನ್ನು ನಮ್ಮ ಅದೃಷ್ಟವೆನ್ನಬೇಕು.

ಜನರ ನೈಜ ಅಸಮಾಧಾನವನ್ನು ಒಂದು ಸ್ಪಷ್ಟ ಸೈದ್ದಾಂತಿಕ ನೋಟ ವುಳ್ಳ, ಸುಸಂಘಟಿತ ಚಳವಳಿಯ ಅಡಿಯಲ್ಲಿ ನಿಗ್ರಹಿಸದೆ ಹೋದರೆ ಸುಸ್ಪಷ್ಟ ಅಜೆಂಡಾಗಳಿರುವ ಸುಸಂಘಟಿತ ರಾಜಕೀಯ ಶಕ್ತಿ ಗಳು ಅದನ್ನು ಹೈಜಾಕ್ ಮಾಡಿ ಕೊಳ್ಳುವ ಅಪಾಯವಿದೆ. (ಅಣ್ಣಾರ ನೋಟ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸೀಮಿತವಾಗಿದೆ. ಭ್ರಷ್ಟಾಚಾರದಿಂದ ಆಗುವ ಹಣದುಬ್ಬರ ಮಹಿಳೆಯರ ಆತಂಕಕ್ಕೆ ಕಾರಣವಾ ಗಿದೆ ಎನ್ನುತ್ತಿದ್ದಾರೆ ಅಣ್ಣಾ!). ಚಾರಿತ್ರಿಕವಾಗಿ ನೋಡಿದರೆ ಬಲಪಂಥೀಯರು ಅಧಿಕಾರಕ್ಕೇರಿರು ವುದೇ ಅವ್ಯವಸ್ಥೆ ಮತ್ತು ಅಸಮಾಧಾನಗಳಿರುವ ಕಾಲಾವಧಿಗಳಲ್ಲಿ. ಅಸ್ತಿತ್ವದಲ್ಲಿರುವ ಸಂಸ್ಥೆಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲವೆಂಬ ನೆಪ ವೊಡ್ಡಿ ಅವನ್ನು ನಾಶಗೊಳಿಸಿದ ಬಲಪಂಥೀಯರು ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ಅವ್ಯವಸ್ಥೆಯನ್ನು ತೊಡೆದು ಹಾಕುವುದಾಗಿ ಭರವಸೆ ನೀಡಿ ಅಧಿಕಾರದ ಗದ್ದುಗೆ ಹಿಡಿದಿದ್ದರು.

ಈ ಸಂದರ್ಭದಲ್ಲಿ, 1920ರ ದಶಕಗಳಲ್ಲಿ ಇಟೆಲಿಯಲ್ಲಿ ಫ್ಯಾಶಿಸಂ ಮತ್ತು 1930ರ ದಶಕಗಳಲ್ಲಿ ಜರ್ಮನಿಯಲ್ಲಿ ನಾಜಿಸಂನ ಉಚ್ಛ್ರಾಯವನ್ನು ಆಳವಾಗಿ ಅಭ್ಯಸಿಸಬೇಕಾಗಿದೆ. ಭಾರತದ ಬಲಪಂಥೀ ಯರು ಯುರೋಪಿನ ಫ್ಯಾಶಿಸಂ ಅನುಭವ ಗಳಿಂದ ಅಗತ್ಯಕ್ಕಿಂತ ಸ್ವಲ್ಪಜಾಸ್ತಿಯೇ ಕಲಿತು ಕೊಂಡಿದ್ದಾರೆ. (ಭಾರತದ ಮಟ್ಟಿಗೆ ಫ್ಯಾಶಿಸಂ ಬಹುಸಂಖ್ಯಾತರ ಕೋಮು ವಾದದ ರೂಪವನ್ನು ತಳೆಯಲಿದೆ ಎಂದು ಜವಹರ್‌ಲಾಲ್ ನೆಹರೂ ಭವಿಷ್ಯ ನುಡಿದಿ ದ್ದರು). ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆ ಯಲ್ಲಿ ನಂಬಿಕೆ ಇಟ್ಟಿರುವವರೆಲ್ಲ ಚರಿತ್ರೆ ಯಿಂದ ಪಾಠ ಕಲಿಯಬೇಕಾಗಿದೆ.

ನಮ್ಮ ಪ್ರಜಾಸತ್ತೆಯನ್ನು ಪೋಷಿಸುವ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸುವುದರ ವಿರುದ್ಧ ಅವರೆಲ್ಲರೂ ಐಕ್ಯಮತದಿಂದ ಕಾರ್ಯಾ ಚರಿಸದಿದ್ದರೆ ಮುಂದೊಂದು ದಿನ ಅಗಾಧ ಬೆಲೆ ತೆರಬೇಕಾಗಿ ಬರಬಹುದು. ಅಣ್ಣಾ ಟೀಂನ ಬೇಡಿ, ಕೇಜ್ರಿವಾಲ್, ಭೂಷಣ್‌ಗಳು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ವಿದ್ಯುಕ್ತ ಪ್ರಕ್ರಿಯೆಗಳಿಗೆ ನಿರೀಕ್ಷಿತ ಮಟ್ಟದ ಗೌರವವನ್ನು ತೋರಿಸಿಲ್ಲ. ಅವರು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತಮ್ಮ ಹೇಳಿಕೆಯೇ ಅಂತಿಮ ಎಂದು ನಿರ್ಧರಿಸಿ ಬಿಟ್ಟಿದ್ದಾರೆ. ಸರಕಾರ ಕೇವಲ ತಮ್ಮ ಆವೃತ್ತಿಯನ್ನೇ ಸಂಸತ್ತಿನಲ್ಲಿ ಮಂಡಿಸ ಬೇಕೆಂದು ಆಗ್ರಹಿಸುತ್ತಾರೆ.

ಅಲ್ಲವಾದರೆ ಸರಕಾರ ಭ್ರಷ್ಟ ಎನ್ನುತ್ತಾರೆ. ಸಂಸತ್ತಿನಲ್ಲಿ ಖಾಸಗಿ ಮಸೂದೆ ಯೊಂದನ್ನು ಮಂಡಿಸುವಂತೆ ಯಾವುದೇ ರಾಜ ಕೀಯ ಪಕ್ಷದ ಅಥವಾ ಯಾವನೇ ವ್ಯಕ್ತಿಯ ಮನ ವೊಲಿಸುವುದು ಇವರ ಅಜೆಂಡಾದಲ್ಲಿ ಇಲ್ಲ. ಯಾಕೆಂದರೆ ಇವರ ದೃಷ್ಟಿಯಲ್ಲಿ ಪ್ರಾಯಶಃ ಎಲ್ಲಾ ರಾಜಕಾರಣಿಗಳೂ ಭ್ರಷ್ಟರು, ಸಂಸತ್ತಿನ ಆಗು ಹೋಗುಗಳನ್ನು ನಿರ್ಧರಿಸುವವರು ತಾವೇ ಖುದ್ದು ನಿರೂಪಿಸುವ ನಾಗರಿಕ ಸಮಾಜ ಎಂದಿರ ಬಹುದು.ಎನ್‌ಸಿಪಿಆರ್‌ಐ ಸಂಸ್ಥೆಯ ಖ್ಯಾತ ಧುರೀಣರು ಹಾಗೂ ಬೆಂಬಲಿಗರಾದ ಅರುಣಾ ರಾಯ್, ಶೇಖರ್ ಸಿಂಗ್, ನಿಖಿಲ್ ಡೇ, ನ್ಯಾ ಎ.ಪಿ. ಶಾರಂತಹವರು ಲೋಕಪಾಲಕ್ಕಾಗಿ ಮೊದಲು ಹೋರಾಟ ಮಾಡಿದವರು. ನಿನ್ನೆ ತನಕ ಅವರ ಜೊತೆಯಲ್ಲೇ ಕೆಲಸ ಮಾಡಿದ ಇವರು ಇಂದು ಅವರ್ಯಾರ ಮಾತು ಕೇಳಲೂಸಿದ್ಧರಿಲ್ಲ.

ಇವರ ಕ್ರಮಗಳೆಲ್ಲವೂ ಗಾಂಧಿ ಮಾರ್ಗಕ್ಕಿಂತ ಹರದಾರಿ ದೂರವಾಗಿವೆ. ಪ್ರಜಾತಂತ್ರದ ಮೂಲಮಂತ್ರವೇ ಪರ್ಯಾಲೋಚನೆ, ಚರ್ಚೆ ಮತ್ತು ಮನವೊಲಿಸುವಿಕೆ. ಹೊರತು ಸತ್ಯದ ಮೇಲೆ ಸ್ವಾಮ್ಯವನ್ನು ಹೊಂದಿದವರು ತಾವು ಮಾತ್ರ ಎನ್ನುವುದಲ್ಲ. ‘ಇತರರ ಅಭಿಪ್ರಾಯಗಳನ್ನು ಒಪ್ಪದೆ ಎಷ್ಟೇ ದೃಢವಾಗಿ ವಿರೋಧಿಸಿದರೂ ಅವರನ್ನು ಗೌರವದಿಂದ ಕಾಣಬೇಕು’-ಗಾಂಧಿಯ ಅಹಿಂಸಾ ಮಾರ್ಗದ ಕಲ್ಪನೆ ಭಾಗಶಃ ಇದೇ ಭಾವನೆಯಿಂದ ಜನಿಸಿದೆ. ಗಾಂಧಿ ಮಾರ್ಗದ ಸತ್ಯಾಗ್ರಹಿಯೊಬ್ಬ ದೈನ್ಯತೆಯಿಂದ ಕೂಡಿರಬೇಕಿತ್ತು; ಕಲಿಯಲು ಸಿದ್ಧನಿರಬೇಕಿತ್ತು; ಮತ್ತು ಸಂಧಾನದ ಮೂಲಕ ತೀರ್ಮಾನಕ್ಕೆ ಬರಲು ಸಿದ್ಧನಿರಬೇಕಿತ್ತು.

ಮೌಲ್ಯಗಳಿಗಾಗಿ ಹೋರಾಡುತ್ತಿದ್ದ ಸತ್ಯಾಗ್ರಹಿಗಳು ಖುದ್ದು ತಾವೇ ಶುದ್ಧರಾಗಿದ್ದುಕೊಂಡು ಅದೇ ಮೌಲ್ಯಗಳನ್ನು ತಾವೂ ಅನುಸರಿಸಬೇಕಿತ್ತು. ಜಾತ್ಯತೀತತೆ ಮತ್ತು ಹಿಂದೂ, ಮುಸ್ಲಿಂ ಐಕ್ಯತೆಯಲ್ಲಿ ನಂಬಿಕೆ ಇಲ್ಲದವರನ್ನು ಸತ್ಯಾಗ್ರಹಿಗಳಾಗಲು ಗಾಂಧೀಜಿ ಕನಸಿನಲ್ಲಿ ಸಮೇತ ಅನುಮತಿಸುತ್ತಿರಲಿಲ್ಲ. ಗಾಂಧಿಯ ಉತ್ತರಾಧಿಕಾರಿಗಳೆಂದು ಎಣಿಸಲ್ಪಟ್ಟಿರುವ ಅನೇಕ ಮಂದಿ ಜನಸಮೂಹವನ್ನು ಒಟ್ಟುಸೇರಿಸುವ ಹಂಬಲದ ಮಧ್ಯೆ ಇದನ್ನೆಲ್ಲ ಮರೆತುಬಿಟ್ಟಿದ್ದಾರೆ. ........................

-ನಿಮ್ಮ ಅಭಿಮತ ತಿಳಿಸಿ

ಕೃಪೆ: express@expressindia.com

ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!

ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ ಯಥಾಪ್ರತಿ: ಯಾವುದೇ ಪುಸ್ತಕದ ಚರಮಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಂಗ್ರಹಿಸುವ ಕೊಳ್ಳುಗನನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಈ ಪುಸ್ತಕ ನೀತಿ ನಿಜ ಅರ್ಥಕ್ಕೆ ದೊಡ್ಡ ಅವಹೇಳನ. ‘ಹರನ ಜಡೆಯಿಂದ, ಋಷಿಯ ಅಡಿಯಿಂದ’ ಎಂಬಂತೆ ಇಬ್ಬಿಬ್ಬರು ಅಧ್ಯಕ್ಷರ (ಪ್ರೊ| ಸಿದ್ಧರಾಮಯ್ಯ ಮತ್ತು ಡಾ| ಸಿದ್ಧಲಿಂಗಯ್ಯ) ಅವಧಿಯಲ್ಲಿ ಬಿಡದೆ ಸುದ್ದಿಮಾಡಿ ಬರಲಿರುವ ಈ ಭಾಗೀರಥಿ ಹೆಚ್ಚೆಂದರೆ ಕನ್ನಡ ಪುಸ್ತಕೋದ್ಯಮದ ತಟದಲ್ಲಿ ಉಕ್ಕುವ ಇಲಾಖೆಗಳ ಗಟಾರ, ಬಿಸಿ ಆರುವ ಮುನ್ನ ಬಯಲಿಗೆಳೆದ ಕರಡುಗಳು, ಅರೆ ಬೆಂದ ಬರಹಗಳನ್ನೆಲ್ಲ ಹೊರುವ ಪಾಪಧಾರಿಣಿಯಷ್ಟೇ ಆದಾಳು. ಪುಸ್ತಕ ನೀತಿಗೆ ಅಂಕೋಲದಲ್ಲಿ ಕಪುಪ್ರಾ ಆಯೋಜಿಸಿದ್ದ ಕಮ್ಮಟದಲ್ಲಿ ನಡೆದ ಅಂಕುರಾರ್ಪಣೆಯಿಂದ, ಈಚೆಗೆ ೨೦೧೦-೧೧ರ ಆರ್ಥಿಕ ವರ್ಷಾಂತ್ಯದಲ್ಲಿ ಹಳ್ಳಿ ಮೂಲೆಯವರೆಗೂ ಭ್ರಷ್ಟಾಚಾರದ ಶಾಖೆಗಳನ್ನು ಯಶಸ್ವಿಯಾಗಿ ಮುಟ್ಟಿಸಿದ ಪುಸ್ತಕ ಮೇಳದವರೆಗೂ ನಾನು ಪತ್ರ, ಪತ್ರಿಕೆ, ಬ್ಲಾಗ್‌ಗಳಲ್ಲಿ ಬರೆದವಕ್ಕೂ ಕೊಟ್ಟ ಸಂದರ್ಶನ, ಭಾಷಣಕ್ಕೂ ಪ್ರತಿಯಾಗಿ ಒಂದು ಸಾಲು, ಸೊಲ್ಲು ಬಂದದ್ದಿಲ್ಲ. (ಕ್ಷಮಿಸಿ, ವಿವರಗಳನ್ನು ಬರೆಯಲು ಇಲ್ಲಿ ಅವಕಾಶ ಸಾಲದು. ಆಸಕ್ತರು www.athree.wordpress.com ನೋಡಬಹುದು) ಈಗ ಬರಲಿರುವುದು ಪುಸ್ತಕ ನೀತಿ ಅಲ್ಲ, ಸಾರ್ವಜನಿಕ ಹಣದಲ್ಲಿ ‘ನಂಗಿಷ್ಟು-ನಿಂಗಿಷ್ಟು’ ಬಳಗ ನಡೆಸುವ ಅಣಕು ಸಂತರ್ಪಣೆಯ ಬಹುವರ್ಣ ರಂಜಿತ ಪಾಕ ಪಟ್ಟಿ ಮಾತ್ರ.

ಗಾತ್ರದಲ್ಲಿ ಇಷ್ಟು ಸಣ್ಣದನ್ನೂ ಪ್ರಜಾವಾಣಿ ತನ್ನ ೧೩-೭-೨೦೧೧ರ ವಾಚಕರ ವಾಣಿಯಲ್ಲಿ ಕತ್ತರಿಸಿ ಪ್ರಕಟಿಸಿತು. ಇಂದು ಬಹುತೇಕ ಪತ್ರಕರ್ತರು – ಕಟ್ ಆಂಡ್ ಪೇಸ್ಟ್ ಕಲಾವಿದರು. ಆದರೆ ಪದನಿಮಿತ್ತದಿಂದ (ಮತ್ತು ಮಾಧ್ಯಮಕ್ಕಿರುವ ಜನಸಂಪರ್ಕದ ಬಲದಲ್ಲಿ) ತಾವು ಸಕಲವಿಷಯ ಪಾರಂಗತರು ಎಂಬ ಹಮ್ಮು ಬಿಡದವರು. ದಿನಪತ್ರಿಕೆಯೊಂದರ ಓದುಗ ಓಲೆಯ ಸೀಮಿತ ಅವಕಾಶದ ಅರಿವಿದ್ದೇ ನಾನು ಬರೆದ ನಾಲ್ಕೇ ನಾಲ್ಕು ವಾಕ್ಯಗಳನ್ನೂ ವಿಕಲಾಂಗಗೊಳಿಸಿದರು. ಕನಿಷ್ಠ ಅಷ್ಟು ಸೂಕ್ಷ್ಮವಾಗಿ ಯಾಕೆ ಬರೆದೆ ಎಂಬುದಕ್ಕೆ ನಾನೇ ಕೊಟ್ಟಿದ್ದ ಪರೋಕ್ಷ ವಿವರಣೆ ಮತ್ತು ಹೆಚ್ಚಿನ ಓದಿಗೆ ಆಕರದ ಉಲ್ಲೇಖವನ್ನೂ ಪತ್ರಿಕೆ ಉಳಿಸಿಕೊಡಲಿಲ್ಲ. ಆದರೂ ನಾನು ಉಲ್ಲೇಖಿಸಿದ ವಿಷಯದ ಹಿಂದುಮುಂದಿನ ಅರಿವಿದ್ದ ಮತ್ತು ನನ್ನ ಹೋರಾಟದ ಜಾಡು ಚೆನ್ನಾಗಿ ತಿಳಿದಿದ್ದ ಪತ್ರಕರ್ತ ಗೆಳೆಯನೊಬ್ಬ ದೂರವಾಣಿಸಿ, ಪುಸ್ತಕ ನೀತಿಯ ರೂವಾರಿಗಳು ನನ್ನ ತಲೆಯ ಮೇಲೆ ಕವುಚಿಬೀಳುವ ಆತಂಕ ತೋಡಿಕೊಂಡರು. ಆದರೆ ನನಗೆ ಸ್ಪಷ್ಟವಿತ್ತು – ಬಹುಸಂಖ್ಯಾತರಾದ ಆ ರೂವಾರಿಗಳು ಎಂದೂ ನನ್ನ ತಾತ್ತ್ವಿಕ ನಿಲುವುಗಳಿಗೆ ಮುಖ ಕೊಟ್ಟದ್ದೇ ಇಲ್ಲ. ಅವರು ‘ಸಾರ್ವಜನಿಕದ ನೆನಪು ಕ್ಷಣಿಕ’ ಎಂಬ ಸ್ಪಷ್ಟ ಅರಿವಿನೊಡನೆ ನನ್ನ ಟೀಕೆಗಳನ್ನು ಸಗಟಾಗಿ ಉಪೇಕ್ಷಿಸಿಬಿಡುತ್ತಾರೆ. ಸಾಲದ್ದಕ್ಕೆ ವಿಶ್ಲೇಷಣೆ ಇಲ್ಲದೆ ಮುಖವಾಣಿಯಾಗಲು ಹೆಣಗುವ ಮಾಧ್ಯಮಗಳಲ್ಲಿ ಇನ್ನಷ್ಟು ಪ್ರಖರವಾಗಿ ಬೆಳಗುತ್ತಾ ಸಾಗುತ್ತಾರೆ.

ಪ್ರೊ| ಸಿದ್ಧರಾಮಯ್ಯನವರ ಅಧ್ಯಕ್ಷತೆಯ ಕಾಲದಲ್ಲಿ ನನಗೆ ತಿಳಿದಂತೆ ಕಪುಪ್ರಾ ‘ಪುಸ್ತಕಲೋಕ’ ಎನ್ನುವ ತನ್ನದೇ ಮುಖವಾಣಿಯನ್ನು (ನಿಯತಕಾಲಿಕ) ಪ್ರಕಟಿಸತೊಡಗಿತು. ಕಸಾಪ, ಕನ್ನಡ ವಿವಿ ಹಂಪಿ ಕೂಡಾ ಹೀಗೆ ತಮ್ಮದೇ ಬಣ್ಣದ ತಗಡಿನ ತುತ್ತೂರಿಗಳನ್ನು ಮಾಡಿಕೊಂಡಿವೆ. ಎಲ್ಲಾ ಪ್ರಾಧಿಕಾರ, ಅಕಾಡೆಮಿಗಳೂ ಈ ನಿಟ್ಟಿನಲ್ಲಿ ಅರೆಬರೆ ಪ್ರಯತ್ನ ನಡೆಸುತ್ತಲೂ ಇರುತ್ತವೆ. ಪತ್ರಿಕೋದ್ಯಮ ಸಂಶೋಧಕರು ಯಾರಾದರೂ ಇಂಥ ಪರಪುಟ್ಟಗಳನ್ನು ಸಾರ್ವಜನಿಕ ಉಪಯುಕ್ತತೆಯ ಒರೆಗಲ್ಲಿಗೆ ಹಚ್ಚಿದರೆ ರದ್ದಿ ಮೌಲ್ಯವೇ ಎದ್ದು ಕಂಡೀತು. ಅದಕ್ಕೂ ಮಿಗಿಲಾಗಿ ಅಂಥ ಪ್ರಕಟಣೆಗಳ ಖರ್ಚಿನ ಲೆಕ್ಕ ತೆಗೆದರೆ ಇನ್ನೊಂದೇ ‘ಗಣಿಹಗರಣ’ ಮೇಲೇಳುವುದು ಖಂಡಿತ! ನಿಜದಲ್ಲಿ ‘ಪುಸ್ತಕಲೋಕ’ ಎಂಬುದನ್ನು ಎಷ್ಟೋ ದಶಕಗಳ ಹಿಂದೆ ಮೈಸೂರು ಪ್ರಸಾರಾಂಗದ ಉಪ-ನಿರ್ದೇಶಕರಾಗಿದ್ದ ಪ್ರೊ| ಆರ್.ಎಲ್. ಅನಂತರಾಮಯ್ಯನವರು ಪೂರ್ತಿ ವೈಯಕ್ತಿಕ ನೆಲೆಯಲ್ಲೇ ಆದರೂ ಬಹು ವ್ಯಾಪಕವಾಗಿ ಮತ್ತು ನಿಜಪುಸ್ತಕಲೋಕಕ್ಕೆ ಉಪಯುಕ್ತವಾಗುವಂತೆ ಹಲವು ವರ್ಷಗಳ ಕಾಲ ನಡೆಸಿದ್ದರು. (ಆ ಕಾಲದಲ್ಲೇ ಸ.ರ. ಸುದರ್ಶನ ತಮ್ಮ ಚೇತನ ಕನ್ನಡ ಸಂಘದಿಂದಲೂ ಇಂಥದ್ದೇ ಒಂದು ಪ್ರಯತ್ನ ನಡೆಸಿದ್ದು ಅಷ್ಟೇ ಗಮನಾರ್ಹ) ಮುಂದೆ ಅದರ ಆಶಯವನ್ನು ಉಲ್ಲೇಖಿಸುತ್ತಾ ಎಲ್ಲ ಇಲಾಖೆಗಳೂ ಕೇವಲ ತಂತಮ್ಮ ಶಂಖ ಊದಿಕೊಳ್ಳಲು ಪುಸ್ತಕಲೋಕದ ಅಪಭ್ರಂಶಗಳನ್ನು ಪ್ರಕಟಿಸುತ್ತಲೇ ಬಂದಿವೆ. ಅದೇ ಹೆಸರಿನಲ್ಲಿ ಮತ್ತೆ ಪ್ರಕಟಣೆಗಿಳಿದ ಖ್ಯಾತಿಯನ್ನಷ್ಟು ಪ್ರೊ| ಸಿದ್ಧರಾಮಯ್ಯನವರಿಗೆ ಕೊಡಬಹುದಿತ್ತು. ಆದರೆ ಇವರು ಸಾರ್ವಜನಿಕ ಮರೆವನ್ನು ಇನ್ನಷ್ಟು ಅಲ್ಪಕಾಲೀನ ಮಾಡಿಕೊಂಡು ಪುಸ್ತಕಲೋಕ ಕನ್ನಡದಲ್ಲೇ ಪ್ರಥಮ ಪ್ರಯೋಗವೆಂದು ಅದರದೇ ಸಂಪಾದಕೀಯದಲ್ಲಿ ಸಾರಿಕೊಂಡರು. ವಾಸ್ತವದಲ್ಲಿ ಈ ‘ಪ್ರಥಮ’ ಕಪುಪ್ರಾಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬುದು ಹೆಚ್ಚಿನವರಿಗೆ ಹೊಳೆಯಲಿಲ್ಲ. ವಿಚಾರಿಸಿದ್ದರೆ ಕೆಳಧ್ವನಿಯಲ್ಲಿ “ಹತಃ ಕುಂಜರ” ಹೇಳುತ್ತಿದ್ದರೋ ಏನೋ!

‘ಪುಸ್ತಕಲೋಕ’ ಕಪುಪ್ರಾಕ್ಕೂ ಪ್ರಥಮವಲ್ಲ ಎನ್ನುವ ಪ್ರಯತ್ನ ಈಗ ನಡೆದಿದೆ! ಇಂದು ಪುಸ್ತಕಲೋಕವನ್ನು ಮತ್ತೆ ಸುರುವಿನಿಂದ ಎಂಬಂತೆ, ಕಾಲಕ್ಕೆ ತಕ್ಕಂತೆ ಹೊರಗುತ್ತಿಗೆಯ ಬಲದಲ್ಲಿ ಬಹಳ ಅದ್ದೂರಿಯಿಂದ ಡಾ| ಸಿದ್ಧಲಿಂಗಯ್ಯವರು ತರುತ್ತಿದ್ದಾರೆ. ತಮಾಷೆ ಎಂದರೆ ಇವರು ಈ ಅವತಾರವನ್ನೇ ಅದ್ವಿತೀಯ ಎಂದು ಪ್ರಚುರಿಸಿಕೊಂಡಿದ್ದಾರೆ. ಮುಂದೆ ಬರಬಹುದಾದ ಅಧ್ಯಕ್ಷರುಗಳು ಭರತ ಚಕ್ರಿಯಂತೆ ಹಿಂದಿನೆಲ್ಲವನ್ನು ಅಳಿಸಿ, ಪ್ರಪ್ರಪ್ರಥಮ ಎಂದೇ ಸಾರಿಕೊಂಡರೆ ಆಶ್ಚರ್ಯವೂ ಇಲ್ಲ!

ಪತ್ರಿಕಾಲೋಕದವರೇ ಆಗಿದ್ದು, ಅದರೊಳಗಿನ ಹುಳುಕುಗಳ ಅರಿವಿರುವ ಮತ್ತು ಹಲವು ವರ್ಷಗಳಿಂದ ನನ್ನ ಸಾಕಷ್ಟು ಪರಿಚಯವಿರುವ ಮಿತ್ರರೊಬ್ಬರು ಪ್ರಜಾವಾಣಿಯಲ್ಲಿ ನನ್ನ ಪ್ರಕಟಿತ ಪತ್ರ ನೋಡಿ, “ಇವರು ಹೀಗ್ಯಾಕೆ ಬರೀತಾರೆ” ಎಂದು ಉದ್ಗರಿಸಿದರಂತೆ. ಅವರಿಗೆ ನೇರ ಉತ್ತರ ಅಲ್ಲ. ಆದರೆ ಅವರು ಧ್ವನಿಸಿದ ನನ್ನದೂ ಸಂಕಟಕ್ಕೆ ಇಲ್ಲಿ ಪತ್ರದ್ದೇ ವಿಚಾರದಲ್ಲಿ ಹೆಚ್ಚಿನ ವಿವರಗಳನ್ನು ಕೊಡಲು ಪ್ರಯತ್ನಿಸುತ್ತೇನೆ.

ತಾಳೆಗರಿಯ ಕಾಲದಲ್ಲಿ ಪ್ರತಿ ಮಾಡುವವರಿಂದ ತೊಡಗಿ ಮುದ್ರಣ ಯಂತ್ರದವರೆಗೆ ಬರಹಗಳು ಬಹುಸಂಖ್ಯೆಯಲ್ಲಿ ಬಂದಲ್ಲೆಲ್ಲಾ ಪುಸ್ತಕ ಹೆಚ್ಚೆಚ್ಚು ಓದುಗರನ್ನು ಮುಟ್ಟುವ ಹಂಬಲವೇ ಕೆಲಸ ಮಾಡುತ್ತಿತ್ತು. ಈ ವ್ಯವಸ್ಥೆಯ ಅನಿವಾರ್ಯ ವಾಣಿಜ್ಯ ಹೊರೆಯನ್ನು ಮನಗಂಡೇ ಐತಿಹಾಸಿಕ ಕಾಲದಲ್ಲಿ ಸ್ಥಿತಿವಂತರು ಹಣಕೊಟ್ಟು ಪ್ರತಿಕಾರರನ್ನು ಸಾಕಿದ್ದು ಓದಿದ್ದೇವೆ. ಆ ಪರಂಪರೆಯಲ್ಲೇ ಹಿಂದೆ ಮೈಸೂರಿನ ಮಹಾರಾಜರು ವೇದಪುರಾಣಗಳನ್ನೂ ಮತ್ತೆ ಪ್ರಜಾಸತ್ತಾತ್ಮಕ ಸರಕಾರ ಬಂದ ಮೇಲೆ ನನಗೆ ತಿಳಿದಂತೆ ಮೊದಲ ಬಾರಿಗೆ ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕುಮಾರವ್ಯಾಸ ಭಾರತದಂಥ ಬಹುಜನ ಅಪೇಕ್ಷಿತ ಕೃತಿಗಳನ್ನೂ ಕಡಿಮೆ ಬೆಲೆಗೆ ಪ್ರಕಟಿಸಿದ್ದು ಕಾಣುತ್ತೇವೆ. ಇವರಿಗೆಲ್ಲ ಇದ್ದ ಏಕೈಕ ಲಕ್ಷ್ಯ ಸರಸ್ವತೀ ಪೂಜೆ ಅಂದರೆ ವಿದ್ಯಾಪ್ರಸರಣ; ಓದುಗನ ಕೈಗೆ ಮುಟ್ಟಿಸುವುದು.

[ಉಪಕಥೆಗೆ ಕ್ಷಮೆಯಿರಲಿ: ಹೆಚ್ಚಾಗಿ ತಾವೇ ಬರೆದು, ಅಲ್ಲದಿದ್ದರೂ ತಮ್ಮದೇ ಸೀಮಿತ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲೋ ಮುದ್ರಿಸಿ, ಪ್ರಕಟಿಸಿ, ಪುಸ್ತಕದ ಹೊರೆ ಹೊತ್ತು ಊರೂರಿನ, ಮನೆಮನೆಯ ತಿರುಗಾಟ ನಡೆಸಿದ ಮೊದಲ ತಲೆಮಾರಿನ ‘ಪ್ರಕಾಶಕ’ರಾದ ಗಳಗನಾಥ, ಜಿಬಿ ಜೋಶಿ, ಗೋವಿಂದರಾವ್, ಡಿವಿಕೆ ಮೂರ್ತಿ, ಕೂಡಲಿ ಚಿದಂಬರರೇ ಮುಂತಾದವರು ತಮ್ಮ ಕನಿಷ್ಠ ಖರ್ಚನ್ನು ಮರಳಿ ಗಳಿಸುತ್ತಾ ಆಧುನಿಕ ಪುಸ್ತಕರಂಗದ ಅಡಿಪಾಯ ಇಟ್ಟದ್ದು ಸದಭಿರುಚಿಯ ಓದುಗರ ಮಹಾಮನೆ ಕಟ್ಟುವ ಆಶಯದಲ್ಲೇ. ಇವರು ಯಾರೂ ಬಹುಸ್ಥಿತಿವಂತರಾಗಿರಲಿಲ್ಲ. ಆದರೆ ಅನ್ಯ ಉದ್ಯಮಶೀಲತೆಗಿಳಿದಿದ್ದರೆ ಕೈ ಸೋಲಬಹುದಾಗಿದ್ದ ಹೆಡ್ಡರೂ ಅಲ್ಲ. ತೋರಗಾಣ್ಕೆಯಲ್ಲಿ ಪುಸ್ತಕರಂಗದ ಆ ಆರಂಭಿಕರಿಗೆ ಓದಿನ ಪರಿಣಾಮದ ಹೊರತು (ಭಾಷೆ, ಸಂಸ್ಕೃತಿ, ದೇಶದ ಕುರಿತು ಜಾಗೃತಿ ಇತ್ಯಾದಿ) ಅನ್ಯ ಉದ್ದೇಶಗಳೇನೂ (ಮುಖ್ಯವಾಗಿ ವಾಣಿಜ್ಯಮುಖ) ಇದ್ದಂತಿರಲಿಲ್ಲ. ಹಾಗೆಂದು ಅವರ ಆದರ್ಶಗಳನ್ನು ಮುಂದುವರಿದ ತಲೆಮಾರಿಗೆ ಅನ್ವಯಿಸಲಾಗುವುದಿಲ್ಲ ಎನ್ನುವುದನ್ನು ಸಖೇದ ಹೇಳಲೇ ಬೇಕು ಮತ್ತು ಇದನ್ನು ಒಂದು ಮಿತಿಯಲ್ಲಿ ಕಾಲಧರ್ಮ ಎನ್ನಲೂಬಹುದು. ವಿವರಗಳು ಇಲ್ಲಿ ಅಪ್ರಸ್ತುತ.]

ನನಗೆ ತಿಳಿದಂತೆ ೧೯೭೦ರ ದಶಕದವರೆಗೂ ಪ್ರಜಾಸತ್ತಾತ್ಮಕ ಸರಕಾರಕ್ಕೆ ಸಾರ್ವಜನಿಕ ವಿದ್ಯೆ ಕೊಡುವುದು ಪ್ರಥಮಾದ್ಯತೆಯಲ್ಲಿತ್ತು. ಅದಕ್ಕೆ ಪೂರಕವಾಗಿ ಒದಗುವ ಪುಸ್ತಕಗಳ ಕುರಿತಂತೆ ಗುಣ ಮತ್ತು ಧನ ಮಟ್ಟದಲ್ಲಷ್ಟೇ ಎಚ್ಚರವನ್ನು ತಾಳಿತ್ತು. ಸರಕಾರದ ಅಂಗೀಕೃತ ಪುಸ್ತಕ ಮಾರಾಟಗಾರ, ಪಠ್ಯ ಆಯ್ಕೆಗೊಂದು ಸಮಿತಿ, ಗ್ರಂಥಾಲಯಗಳ ವಿಸ್ತರಣೆ, ದೊಡ್ಡ ಖರೀದಿ ನೆಲೆಯಲ್ಲಿ ರಿಯಾಯ್ತಿ ದರಪಡೆದು ಹೆಚ್ಚಿನ ಪುಸ್ತಕ ಸಂಗ್ರಹಿಸುವ ಉದ್ದೇಶಗಳೆಲ್ಲಾ ಚೂಪು ಪಡೆಯುತ್ತಿದ್ದದ್ದು ಓದುಗನ ಉಪಯುಕ್ತತೆಗೇ. ಅಲ್ಲಿ ಭ್ರಷ್ಟತೆ ಇರಲಿಲ್ಲವೆಂದಲ್ಲ. ಆದರೆ ಪ್ರಕಾಶಕನ ನೈತಿಕತೆ ಪುಸ್ತಕದ ಚರಮ ಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಪುಸ್ತಕ ಸಂಗ್ರಹಿಸುವ ಕೊಳ್ಳುಗನನ್ನೂ ಉಪೇಕ್ಷಿಸುವಷ್ಟು ಬೆಳೆದಿರಲಿಲ್ಲ. ‘ವೆಚ್ಚಕ್ಕೆ ಹೊನ್ನುಂಟು, ಚಚ್ಚಿ ಹಾಕಲು ಅಚ್ಚುಕೂಟಗಳುಂಟು, ಕಚ್ಚಿ ಹಿಡಿಯಲು ನೂರೆಂಟು ಸ್ಕೀಮುಗಳುಂಟು, ನೀನ್ಯಾರಿಗಾದೆಯೋ ಎಲೆ ಓದುಗಾ’ ಎನ್ನುವ ವರ್ತಮಾನದ ಸೂತ್ರ ರೂಪುಗೊಂಡಿರಲಿಲ್ಲ!

ಮೊನ್ನೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಹೀಗೇ ನನ್ನಂಗಡಿಗೆ ಬಂದಾಗ ತೋಡಿಕೊಂಡರು, “ಏಳು ತರಗತಿಗಳಿಗೆ ಅಧಿಕೃತವಾಗಿ ನಾವು ಮೂವರು ಶಿಕ್ಷಕರಿದ್ದೆವು. ನಾನು ಊರ ದಾನಿಗಳನ್ನು ಹಿಡಿದು, ಕೈಯಿಂದಲೂ ಹಣ ಹಾಕಿ ತತ್ಕಾಲೀನ ಹೆಚ್ಚುವರಿ ಟೀಚರುಗಳನ್ನು ಗೊತ್ತುಮಾಡಿಕೊಂಡು ಸುಧಾರಿಸುತ್ತಿದ್ದೆ. ಈಗ ‘ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು’ ಎಂಬ ನಿಯಮ ಜ್ಯಾರಿಗೊಳಿಸಿ, ಇಬ್ಬರನ್ನು ವರ್ಗಾಯಿಸಿದ್ದಾರೆ. ಈಗ ಏಳಕ್ಕೂ ನಾನೊಬ್ಬನೇ ಉಪಾಧ್ಯಾಯ!” ಇಂದು ನಿಸ್ಸಂದೇಹವಾಗಿ ಮೌಲ್ಯಗಳಲ್ಲಿ ಶೈಥಿಲ್ಯ ಬಂದಿದೆ. ಪ್ರಜಾಸತ್ತಾತ್ಮಕ ಸರಕಾರ ಎಂದೆನ್ನಿಸಿಕೊಂಡರೂ ಸಮಷ್ಟಿಯ ವಿದ್ಯೆಗಾಗಿ ಘನ ನಿಲುವುಗಳನ್ನು ತಳೆಯುವುದಕ್ಕಿಂತ ಜನಪ್ರಿಯ ಅದೂ ತತ್ಕಾಲೀನ ಸಲಕರಣೆಗಳಲ್ಲೇ ಕಳೆದುಹೋಗಿವೆ. ಹಾಲು, ಮೊಟ್ಟೆಯಿಂದ ತೊಡಗಿದ್ದು ಬಿಸಿಯೂಟದ ಹೊರಗುತ್ತಿಗೆವರೆಗೆ ಬೆಳೆದು ನಿಂತಿದೆ. ಬಸ್ ಪಾಸಿನಿಂದ ತೊಡಗಿದ್ದು ಸೈಕಲ್ ಕಾರ್ಖಾನೆಗಳನ್ನೇ ಖರೀದಿಸುವ ಮಟ್ಟಕ್ಕೆ ಮುಟ್ಟಿದೆ. ಸಾಕಷ್ಟು ಸಂಖ್ಯೆಯಲ್ಲಿ ಯೋಗ್ಯ ಉಪಾಧ್ಯಾಯರುಗಳು ಮತ್ತು ಕಲೆತು ಕಲಿಯಲು ಸೂಕ್ತ ಆಶ್ರಯದಂತ ಮೂಲಭೂತ ಸವಲತ್ತುಗಳನ್ನು ಒದಗಿಸುವುದಿರಲಿ, ಇದ್ದವನ್ನು ಊರ್ಜಿತದಲ್ಲಿಡಲೂ ಸರಕಾರಕ್ಕೆ ಯೋಜನೆಗಳೇ ಇಲ್ಲ. ಈ ಬೆಳಕಿನಲ್ಲಿ ಪುಸ್ತಕಲೋಕಕ್ಕೊಂದು ಇಣುಕುನೋಟ ಹಾಕಿ.

ಶಾಲೆಗಳಲ್ಲಿ ಎರಡೋ ಮೂರೋ ಭಾಷಿಕ (ಕನ್ನಡ, ಇಂಗ್ಲಿಶ್ ಮತ್ತು ಹಿಂದಿ) ಹಾಗೇ ಎರಡೋ ಮೂರೋ ವಿಷಯಕ (ಗಣಿತ, ವಿಜ್ಞಾನ ಮತ್ತು ಸಮಾಜ) ಪಠ್ಯಗಳಿಗೆ ಸೀಮಿತವಾಗಿದ್ದ ಪುಸ್ತಕರಂಗ ಅಸಾಧ್ಯ ಬೆಳವಣಿಗೆ ಕಂಡಿದೆ. ಸಕಾಲದಲ್ಲಿ ಮೂಲಭೂತ ಪಠ್ಯಗಳನ್ನು ಒದಗಿಸುವುದೊಂದು ಬಿಟ್ಟು, ಪೂರಕ ಪಠ್ಯ, ಗ್ರಂಥಾಲಯ, ಗಣಕ, ಅಂತರ್ಜಾಲ ಸಂಪರ್ಕ ಇತ್ಯಾದಿ ವಾಣಿಜ್ಯ ಆಸಕ್ತಿಗಳು ಇಲ್ಲಿ ಹೆಚ್ಚುತ್ತಲೇ ಇವೆ. ಹೀಗೆ ವಿದ್ಯಾರಂಗವೂ ಸೇರಿದಂತೆ ಪುಸ್ತಕ ಜಗತ್ತಿನ ಎಲ್ಲಾ ಅವಕಾಶಗಳ ಅರಿವಿದ್ದೂ ಅವನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಈ ಕಪುಪ್ರಾ ಪ್ರಣೀತ ಪುಸ್ತಕ ನೀತಿ ನಿಜ ಅರ್ಥಕ್ಕೆ ದೊಡ್ಡ ಅವಹೇಳನ.

‘ಅಸಹಾಯಕ ಲೇಖಕ-ಪ್ರಕಾಶಕ’ರಿಗೆ ಅಂದರೆ ಸೃಜನಶೀಲ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಸದಭಿರುಚಿಯ ಓದುಗರಿಗೆ ಮುಟ್ಟಿಸುವ ಉದಾತ್ತ ಉದ್ದೇಶಗಳೇ ಎಲ್ಲಾ ಪ್ರಸಾರಾಂಗ, ಇಲಾಖೆ, ಅಕಾಡೆಮಿ, ಪ್ರಾಧಿಕಾರ, ಪರಿಷತ್ತುಗಳ (ಹುಟ್ಟು, ಅನುದಾನ, ಪುರಸ್ಕಾರ, ಬಹುಮಾನ, ಸಗಟು ಖರೀದಿ ಮುಂತಾದ ಕಲಾಪಗಳದ್ದೂ) ಅಡಿಪಾಯ. ಅವುಗಳನ್ನು ಮೌಲಿಕ ನೆಲೆಯಲ್ಲಿ ಸಮರ್ಥಿಸಿಕೊಳ್ಳುವಂತೆ, ಪಾರದರ್ಶಕವಾಗಿಯೂ ಇರುವಂತೆ ಸಮಿತಿಗಳು ಮತ್ತವುಗಳ ನಿರ್ಧಾರಗಳು ಪ್ರಾಥಮಿಕ ಹಂತದಲ್ಲಿ ಕಂಗೊಳಿಸುವುದೂ ಉಂಟು. ಆದರೆ ಮುಂದುವರಿಕೆಯಲ್ಲಿ ಪುಢಾರೀಕರಣ ಒಂದೇ ಊರ್ಜಿತವಾಗಿ ಸಾರ್ವಜನಿಕ ವಿನಿಯೋಗಕ್ಕೆ ಈ ಎಲ್ಲಾ ಸಂಸ್ಥೆಗಳೂ ಮದ್ದಿಲ್ಲದ ಮಹಾಸೋರು ಹುಣ್ಣುಗಳಾಗಿವೆ. ಇದಕ್ಕೆರಡು ಉದಾಹರಣೆಗಳು.

ಕಪುಪ್ರಾ ರೂಪುಗೊಳ್ಳುವ ಮುನ್ನ ಮತ್ತು ಪ್ರಥಮಾಧ್ಯಕ್ಷರಾಗಿಯೂ ಕಂಗೊಳಿಸಿದವರು ಪ್ರೊ|ಎಲ್ಲೆಸ್ ಶೇಷಗಿರಿರಾವ್. ಆದರೆ ಅವರ ತಂಡ ಆಶಯಗಳಿಗೆ ಖಚಿತ ರೂಪು ಕೊಡುವ ಮುನ್ನ, ಅಂದರೆ ಅಕಾಲಿಕವಾಗಿ ರಾಜೀನಾಮೆ ಕೊಟ್ಟು ಹೊರನಡೆಯುವಲ್ಲಿಂದ ಕಪುಪ್ರಾ ಇನ್ನೊಂದೇ ರಾಜಕೀಯ ಸಂತ್ರಸ್ತರ ಗಂಜಿಕೇಂದ್ರವಾಗಿ, ಇನ್ನೂ ಸೌಮ್ಯವಾಗಿ ಹೇಳುವುದಾದರೆ ಪರೋಕ್ಷ ಓಲೈಕೆಯ ನೆಲೆಯಾಗಿ ಖಾಯಂ ಆಯಿತು! ಸಹಜವಾಗಿ ಮತ್ತೆ ಬಂದ ಐದಾರು ಅಧ್ಯಕ್ಷರು ಮತ್ತು ಅವರ ಸದಸ್ಯ ತಂಡಗಳು ವೈಯಕ್ತಿಕ ನೆಲೆಯಲ್ಲಿ ಏನಿದ್ದರೂ ಕಾರ್ಯರಂಗದಲ್ಲಿ ಯಥಾಸ್ಥಿತಿವಾದದಿಂದ ಎಂದೂ ಮೇಲೆ ಏಳಲೇ ಇಲ್ಲ! (ಇದರ ಕುರಿತು ಕೆಲವು ಉದಾಹರಣೆಗಳಿಗೆ ಇಲ್ಲೇ ನನ್ನ ಹಳೇ ಕಡತಗಳನ್ನೂ ನನ್ನದೇ ‘ಪುಸ್ತಕ ಮಾರಾಟ ಹೋರಾಟ’ ಪುಸ್ತಕವನ್ನೂ ನೋಡಬಹುದು)

ಕಪುಪ್ರಾದ ಸಗಟು ಖರೀದಿಯ ಕುರಿತಂತೆ ಅಹವಾಲುಗಳು ಹೆಚ್ಚಿದ ಕಾಲಕ್ಕೆ ಸತ್ಯನಿಷ್ಠುರಿ ಪ್ರೊ| ಜಿ.ಎಚ್ ನಾಯಕರ ಹೆಸರಿನಲ್ಲಿ ಆಯ್ಕಾಸಮಿತಿಯನ್ನು ಹೊರಡಿಸಿದರು. ಸಮಿತಿಯ ನಿರ್ಧಾರ ಪುಸ್ತಕ-ಮಾಫಿಯಾದ ಹಿತಾಸಕ್ತಿಗೆ ಸಹಜವಾಗಿ ಮಾರಕವಾದಾಗ ಅಧಿಕೃತ ಕಲಾಪಗಳಿಂದ ಹೊರಗೆ ಅಸಾಂವಿಧಾನಿಕ ಘೇರಾವೋ ಮತ್ತು ಬೊಬ್ಬೆಗಳೆದ್ದವು. ಪ್ರೊ|ನಾಯಕರ ಬೆನ್ನಿಗೆ ಕಪುಪ್ರಾ ನಿಲ್ಲಲಿಲ್ಲ. ಅವರು ಹೇಸಿಕೊಂಡು ರಾಜೀನಾಮೆ ಕೊಟ್ಟು ಹೊರ ಬಂದರು. ಕಪುಪ್ರಾ ಪಾರದರ್ಶಕತೆ, ಪ್ರಾಮಾಣಿಕತೆ ಕೇಳಿದವರ ತಾಳ್ಮೆ ಖರೀಸಿತ್ತು. ಮತ್ತೆ ‘ವ್ಯವಹಾರಜ್ಞಾನ’ ಇರುವ ಆಯ್ಕಾ ಸಮಿತಿಯೇ ರೂಪುಗೊಂಡಿರಬೇಕು. ಭಕ್ತಿ ಇಲ್ಲದ ಭಜನೆಯಂತೆ, ಗುಣವಿಲ್ಲದ ಪೋಷಣೆಯಂತೆ ಕಪುಪ್ರಾ ಸಗಟು ಖರೀದಿ ನಡೆದೇ ಇದೆ; ಸಾಮಾಜಿಕ ವೆಚ್ಚದಲ್ಲಿ!

ಪ್ರೊ| ಜಿ.ಎಸ್. ಸಿದ್ಧರಾಮಯ್ಯನವರ ಅಧ್ಯಕ್ಷತೆಯ ಕಾಲದಲ್ಲಿ, ಅಂಕೋಲದಲ್ಲಿ ಕಪುಪ್ರಾ ನಡೆಸಿದ ಒಂದು ದಿನದ ಕಮ್ಮಟಕ್ಕೆ ನನ್ನನ್ನು ಒತ್ತಾಯಪೂರ್ವಕವಾಗಿ ಕರೆಸಿಕೊಂಡಿದ್ದರು. (ನನಗೆ ಕಟುಟೀಕಾಕಾರನೆಂಬ ಹೆಸರಿತ್ತು) ನನಗೆ ತಿಳಿದ ಮಟ್ಟಿಗೆ ಅದು ‘ಪುಸ್ತಕ ನೀತಿ’ಯ ಅಂಕುರಾರ್ಪಣ ಸಭೆ. ಆದರೆ ಬಂದವರಾದರೂ ಎಂಥವರು! ಎರಡು ಕಾಲವಿಹಾರಿಗಳು – (double standard ?) ಐತಿಹಾಸಿಕ ಕಾಲದಲ್ಲಿ ರಾಜಮಹಾರಾಜರುಗಳು ಕವಿ ಕಲಾವಿದರ ಪೋಷಣೆ (ಏನು ಅನಿವಾರ್ಯತೆಯೋ ಪಾಪ!) ಮಾಡಿದಂತೇ ಸರಕಾರ ಮಾಡಬೇಕು ಎನ್ನುವುದು ಇವರ ಸ್ವಾರ್ಥದ ಸ್ತರ. ಅಕಾಲಿಕ ಮೌಲ್ಯಪೋಷಣೆಯನ್ನೇ ಒಪ್ಪಿ ವರ್ತಮಾನಕ್ಕೆ ಅಳವಡಿಸುವಾಗ ವ್ಯಕ್ತಿ ಸ್ವಾತಂತ್ರ್ಯದ (‘ನಮ್ಗೂ ಹಕ್ಕಿಲ್ವಾ’ ಎನ್ನುವ ಸ್ವಾರ್ಥಮೂಲವಾದ ಪ್ರಜ್ಞೆ) ಮಾತು ಎಸೆಯುವುದು ಅವರ ಎರಡನೇ ಮುಖ! ಭಾಗವಹಿಸಿದವರಲ್ಲಿ ಹೆಚ್ಚಿನವರು ಲೇಖಕ-ಪ್ರಕಾಶಕರು ಅಥವಾ ಸರಕಾರೀ ಪುಸ್ತಕೋದ್ಯಮದಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಹೊಂಚುವವರೇ ಆಗಿದ್ದರು; ಸಗಟು ಖರೀದಿಗೆ ಹುಟಿದವರು! ಇವರು ಡೊಂಕುಬಾಲದ ನಾಯಕನನ್ನು ಕನಕದ ಕನಸಿನೊಡನೇ ಅನುಸರಿಸುತ್ತಾರೆ. ರಾಜಪೋಷಾಕಿನ ಮೇಲೆ ಹರಕು ಶಾಲು ಹೊದ್ದವರನ್ನು ಓಲೈಸುವಲ್ಲಿ ಇವರು ಅತ್ಯುತ್ಸಾಹಿಗಳು. ನಿತ್ಯದಲ್ಲಿ ಎಂಜಲು ಕೈಯಲ್ಲಿ ಕಾಗೆ ಓಡಿಸದಿದ್ದರೂ ಹೆಲಿಕಾಪ್ಟರಿನಲ್ಲಿ ಬಂದವರಿಗೆ ಚಾಪೆ ಹಾಸಿ, ಗಂಗಾಳದಲ್ಲಿ ರಾಗಿ ಮುದ್ದೆ ತಿನ್ನಿಸುವವರು – ಭಡವರು. ಸಹಜವಾಗಿ ಅಂಕೋಲದ ಕಮ್ಮಟದಲ್ಲಿ ಉಲ್ಲೇಖಗೊಂಡ ಮುಖ್ಯ ವಿಚಾರಗಳೆಲ್ಲಾ ಸಗಟು ಖರೀದಿಯ ಪರಿಧಿಯನ್ನು ಮೀರಿ ಬೆಳೆಯಲೇ ಇಲ್ಲ.

ಕಮ್ಮಟದ ಮೊದಲ ಗೋಷ್ಠಿಗಳು ಸರಕಾರೀ ಯಂತ್ರದ ನಟ್ಟುಬೋಲ್ಟುಗಳಾದ (ಸ್ವತಂತ್ರವಾಗಿ ಯೋಚಿಸುವುದನ್ನೂ ಮರೆತ) ಇಲಾಖಾ ವರಿಷ್ಟರ, ಪ್ರಸಾರಾಂಗದ ಮುಖ್ಯರ ‘ಪ್ರಬಂಧ’ ಮಂಡನೆಗೆ ಸೀಮಿತವಿತ್ತು. ಸವಲತ್ತುಗಳಿಗೆ ಹೊಂಚುವಲ್ಲಿ ಇವರ ಆಯಾಮ ಬೇರೆಯಾದುದರಿಂದ, ಮಂಡನೆಯ ಬಹ್ವಂಶ ಖಾಸಗಿ ಕಂಪೆನಿಗಳ ಸರ್ವಸದಸ್ಯರ ಸಭೆಯಲ್ಲಿ ವಿಸ್ತರಿಸಿಕೊಳ್ಳುವ ‘ಸಾಧನಾಪಟ್ಟಿಯೇ’ ಆಗಿರುತ್ತಿತ್ತು. ಏಕಮುಖ ಕೊರೆತಗಳ ಕೊನೆಯಲ್ಲಿ ಚರ್ಚೆಗೆ ಅವಕಾಶವೇನೋ ಕೊಡುತ್ತಿದ್ದರು. ಆದರೆ ಆ ಮಂಡನೆಗಳು ಪುಸ್ತಕೋದ್ಯಮದ ಮೂಲ ಆಶಯವಾದ ‘ಓದುಗನಿಗೆ ಪುಸ್ತಕ’ವನ್ನು ಮುಟ್ಟುತ್ತೇ ಇರಲಿಲ್ಲವಾಗಿ ನನಗೆ ಪ್ರತಿಕ್ರಿಯಿಸಲು ಅವಕಾಶವೇ ಒದಗಲಿಲ್ಲ. ಹಾಗೇ ನಾನು ಮೀಸೆ ತೂರಿದ್ದರೆ ಸಭಾ ಮರ್ಯಾದೆಯನ್ನು ಭಂಗಪಡಿಸಿದಂತೋ ದುರುದ್ದೇಶಪೂರಿತ ವಿಷಯಾಂತರವಾಗಿಯೋ ಕಾಣಿಸುವ ಅಪಾಯವಿತ್ತು. ಚೌಕಟ್ಟೇ ಡೊಂಕಾದರೆ ಚಿತ್ರ ಶೋಭಿಸುವುದುಂಟೇ!

ದಿನದ ಕೊನೆಯಲ್ಲಿ, ಮುಕ್ತ ಅಭಿಪ್ರಾಯ ಮಂಡನೆಗೊಂದು ಔಪಚಾರಿಕ ಅವಕಾಶ ಇತ್ತು. ಆದರೆ ಎಲ್ಲಾ ಪ್ರಾಯೋಜಿತ ಅಥವಾ ಅನುದಾನಿತ ಗೋಷ್ಠಿಗಳಿಗೆ ಮಂಡೆಗಿಂತ ಮುಂಡಾಸು ದೊಡ್ಡ ಎಂಬಂತೆ ಬಡಿದ ಶಾಪ – ಉದ್ಘಾಟನೆ ಮತ್ತು ಸಮಾರೋಪ ಎಂಬ ನವವೈದಿಕಗಳು. ಸಹಜವಾಗಿ ಇಲ್ಲಿ ಸಮಾರೋಪ ಸಮಾರಂಭಕ್ಕೆ ಮುಹೂರ್ತ ಮೀರುವ ಭಯ ಭಜಕರನ್ನು ಕಾಡುತ್ತಿತ್ತು! ಸಹಜವಾಗಿ ಅಭಿಪ್ರಾಯ ಮಂಡಿಸಲು ಮುಂದೆ ಬಂದವರಿಗೆ ಸೂಕ್ಷ್ಮವಾಗಿ ಮಾತಾಡುವ ಒತ್ತಡದೊಡನೆ, ಚರ್ಚೆಯ ಅವಕಾಶವನ್ನೇ ನಿರಾಕರಿಸಲಾಗಿತ್ತು! ಆಗ ನಾನು ನೇರ ಅಲ್ಲಿನ ಕಲಾಪದ ಔಚಿತ್ಯವನ್ನೇ ಪ್ರಶ್ನಿಸಿದೆ. (ವಿವರಗಳಿಗೆ ಇಲ್ಲೇ ಜೂನ್ ೧೮, ೨೦೦೮ರ ಶೀರ್ಷಿಕೆ, ‘ಅನ್ಯತ್ರ ಮೋಸಹೋಗಬೇಡಿ, ನಮ್ಮಲ್ಲಿಗೆ ಬನ್ನಿ’ ನೋಡಿ) ನನ್ನ ಮಾತುಗಳು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಪಕ್ಷ ರಾಜಕಾರಣದ ಫಲವಾಗಿ ರೂಪುಗೊಂಡ ಸರಕಾರದ ಅಧೀನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಅಡಿಯಾಳಾದ ಒಂದು ಇಲಾಖೆಯಷ್ಟೇ ಆಗಿರುವ ಕಪುಪ್ರಾ ರೂಪಿಸುವ ‘ಪುಸ್ತಕ ನೀತಿ’ಗೆ ಕಚ್ಚಲು ಹಲ್ಲಿಲ್ಲ, ಒಟ್ಟಾರೆ ಕನ್ನಡ ಪ್ರಪಂಚವನ್ನು ಮುಟ್ಟುವ ವ್ಯಾಪ್ತಿ ಮೊದಲೇ ಇಲ್ಲ. (ಸಂಸ್ಕೃತಿ ಇಲಾಖೆಯ ಗುಮಾಸ್ತನೆದುರು ಹಲ್ಲುಗಿಂಜುವ ಕಪುಪ್ರಾ ಅಧ್ಯಕ್ಷರನ್ನು ಕಂಡವರಿದ್ದಾರೆ. ನನ್ನಂಗಡಿಗೆ ಬಂದಾಗ ಏನೂ ಅಲ್ಲದ ನನ್ನ ಬಳಿಯೂ “ಕ್ಯಾಬಿನೆಟ್ ದರ್ಜೆಯಿಂದ ಕಪುಪ್ರಾ ಅಧ್ಯಕ್ಷಪದವಿಯನ್ನು ಇಳಿಸಿಬಿಟ್ಟರು ಸಾರ್” ಎಂದು ಗೋಳಾಡಿದ ಅಧ್ಯಕ್ಷರನ್ನು ನಾನೇ ಕಂಡಿದ್ದೇನೆ. ಕಪುಪ್ರಾದೊಳಗೂ ಅಧ್ಯಕ್ಷನೋ ಸಮಿತಿಯೋ ಉದಾತ್ತತೆಯಲ್ಲಿ ತೆಗೆದುಕೊಂಡ ಯಾವುದೇ ನಿಲುವನ್ನು ಬಗಲಲ್ಲಿ ಕೂತ ರಿಜಿಸ್ಟ್ರಾರ್ ಎನ್ನುವ ಕುಲಪುರೋಹಿತ ‘ಆಡಿಟ್ ಆಬ್ಜೆಕ್ಷನ್’ ಎಂಬ ಮಂತ್ರದಂಡದಿಂದ ಯಾವತ್ತೂ ನಿರ್ವೀರ್ಯಗೊಳಿಸಬಲ್ಲ ಎನ್ನುವುದೂ ಮರೆಯಲಾಗದು) ‘ಮುಕ್ತ ವಿಚಾರ’ ಮಂಡನೆಯ ಮಾತುಗಳಿಗೊಂದು ತಾರ್ಕಿಕ ಕೊನೆ ಕೊಡುವ ಅಧ್ಯಕ್ಷ ಭಾಷಣವನ್ನು ಸ್ವತಃ ಕಪುಪ್ರಾದ ಅಧ್ಯಕ್ಷರೇ ಮಾಡಿದರು. ಆದರೆ ಅವರು ನಾನೆತ್ತಿದ ವಿಷಯದ ಹತ್ತಿರವೂ ಸುಳಿಯಲಿಲ್ಲ ಎನ್ನುವುದು ಅಜ್ಞಾನವೋ ಜಾಣತನವೋ ಅಂದು ನನಗೆ ತಿಳಿಯಲಿಲ್ಲ.

ಅಂಕೋಲದಲ್ಲಿ ನಾನು ಹೇಳಿದ ವಿಚಾರಗಳು ಗಾಳಿಗೆ ಸೇರಿಹೋಗದಂತೆ ಮುಂದೆ ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಹೆಸರಿಸಿ, ವಿಸ್ತಾರ ಲೇಖನವನ್ನೇ ಮಾಡಿ, ಅಧ್ಯಕ್ಷರಿಗೂ ಹಲವು ವಿಚಾರವಂತರಿಗೂ ಪತ್ರಿಕೆಗಳಿಗೂ ಕಳಿಸಿಕೊಟ್ಟೆ. ಕಪುಪ್ರಾದ ಮುಖವಾಣಿಯಾಗಿ ಹೊರಟ ಪುಸ್ತಕಲೋಕದಲ್ಲಿ ಪ್ರಕಟಿಸಿ ಚರ್ಚೆಗೆ ಒಡ್ಡಲೂ ಸೂಚಿಸಿದೆ. ಬುದ್ಧಿಪೂರ್ವಕವಾಗಿ ಪುಸ್ತಕೋದ್ಯಮವನ್ನೇ ವೃತ್ತಿಯಾಗಿ ನೆಚ್ಚಿ, ಅದನ್ನು ಮೂವತ್ತಕ್ಕೂ ಮಿಕ್ಕು ವರ್ಷ ಸಾಮಾಜಿಕ ಜವಾಬ್ದಾರಿಯೊಡನೇ ನಡೆಸಿದವನಿಗೆ ಕೇವಲ ಪದನಿಮಿತ್ತದಲ್ಲಿ ಪುಸ್ತಕೋದ್ಯಮದ ಆಗುಹೋಗುಗಳನ್ನು ನಿರ್ದೇಶಿಸುವವರಿಂದ ಎಲ್ಲಕ್ಕೂ ಜಾಣ ಮೌನವೇ ಉತ್ತರ. ಜಾಹೀರಾತುಗಳು, ವಾರಕ್ಕೊಮ್ಮೆ (ಕೆಲವರು ಪಕ್ಷಕ್ಕೊಮ್ಮೆ) ಬಲವಂತದ ಬಸಿರಿಳಿಸುವವರ ಅಂಕಣ ಮತ್ತು ಪ್ರಾಯೋಜಿತ ಸುದ್ದಿಗಳ ನಡುವೆ ಪ್ರಜಾಪ್ರಭುತ್ವದ ಕಾವಲುಗಾರರೆಂದೇ ಕರೆಸಿಕೊಳ್ಳುವ ಪತ್ರಿಕೆಗಳಿಗೆ ಈ ಲೇಖನ ಹಾಕುವುದಕ್ಕೆ ಜಾಗ ಉಳಿದಿರಲಾರದು ಅಥವಾ ಗ್ರಹಿಕೆ ಮೀರಿದ ಕಗ್ಗವಾಗಿಯೂ ಕಾಣಿಸಿ ಅವಕಾಶ ಕಳೆದುಕೊಂಡಿರಬಹುದು. (ಸಾಮಾಜಿಕ ಬದ್ಧತೆಯೆಂಬುದಿಂದು ಹಲವು ಪತ್ರಕರ್ತ ಮಿತ್ರರಲ್ಲಿದೆಯಾದರೂ ಯಾವುದೇ ಪತ್ರಿಕೆಗದು ಧೋರಣೆಯಾಗಿ ಉಳಿದಿಲ್ಲ. ಪ್ರಸಾರ ಸಂಖ್ಯೆ, ತತ್ಪರಿಣಾಮವಾಗಿ ಸಿಗುವ ಜಾಹೀರಾತುಗಳ ಮೂಲಕ ವಾಣಿಜ್ಯ ಯಶಸ್ಸನ್ನೇ ಗಮನದಲ್ಲಿಡುವ ಯಜಮಾನರುಗಳಿಂದ ಇಂದು ಪತ್ರಿಕೆಗಳು ಸಂಪಾದಕನ ಖಯಾಲಿಗನುಗುಣವಾಗಿ ‘ಬಣ್ಣ’ ಬದಲಿಸುವುದು ಎಲ್ಲರಿಗೂ ತಿಳಿದದ್ದೇ.)

‘ಹರನ ಜಡೆಯಿಂದ, ಋಷಿಯ ಅಡಿಯಿಂದ’ ಎಂಬಂತೆ ಇಬ್ಬಿಬ್ಬರು ಅಧ್ಯಕ್ಷರ (ಪ್ರೊ| ಸಿದ್ಧರಾಮಯ್ಯ ಮತ್ತು ಡಾ| ಸಿದ್ಧಲಿಂಗಯ್ಯ) ಅವಧಿಯಲ್ಲಿ ಬಿಡದೆ ಸುದ್ದಿಮಾಡಿ ಬರಲಿರುವ ಈ ಭಾಗೀರಥಿ ಹೆಚ್ಚೆಂದರೆ ಕನ್ನಡ ಪುಸ್ತಕೋದ್ಯಮದ ತಟದಲ್ಲಿ ಉಕ್ಕುವ ಇಲಾಖೆಗಳ ಗಟಾರ (ಅಕ್ರಮ ಸಕ್ರಮ?), ಬಿಸಿ ಆರುವ ಮುನ್ನ ಬಯಲಿಗೆಳೆದ ಕರಡುಗಳು ಅಥವಾ ಅರೆ ಬೆಂದ ಬರಹಗಳನ್ನು (ಪದವಿಟ್ಟಳುಪದೊಂದಗ್ಗಳಿಕೆ?) ಹೊರುವ ಪಾಪಧಾರಿಣಿಯಷ್ಟೇ ಆದಾಳು. ಪುಸ್ತಕ ನೀತಿಗೆ ಅಂಕೋಲದಲ್ಲಿ ಕಪುಪ್ರಾ ಆಯೋಜಿಸಿದ್ದ ಕಮ್ಮಟದಲ್ಲಿ ನಡೆದ ಅಂಕುರಾರ್ಪಣೆಯಿಂದ, ಈಚೆಗೆ ೨೦೧೦-೧೧ರ ಆರ್ಥಿಕ ವರ್ಷಾಂತ್ಯದಲ್ಲಿ ಹಳ್ಳಿ ಮೂಲೆಯವರೆಗೂ ಭ್ರಷ್ಟಾಚಾರದ ಶಾಖೆಗಳನ್ನು ಯಶಸ್ವಿಯಾಗಿ ಮುಟ್ಟಿಸಿದ ಪುಸ್ತಕ ಮೇಳದವರೆಗೂ ನಾನು ಪತ್ರ, ಪತ್ರಿಕೆ, ಬ್ಲಾಗ್‌ಗಳಲ್ಲಿ ಬರೆದವಕ್ಕೂ ಕೊಟ್ಟ ಸಂದರ್ಶನ, ಭಾಷಣಕ್ಕೂ ಪ್ರತಿಯಾಗಿ ಒಂದು ಸಾಲು, ಸೊಲ್ಲು ಬಂದದ್ದಿಲ್ಲ. (ಇನ್ನಷ್ಟು ವಿವರಗಳಿಗೆ ಇಲ್ಲಿನ ಆಯ್ಕಾ ಕಿಂಡಿಯಲ್ಲಿ ‘ಪುಸ್ತಕಲೋಕ’ ಕ್ಕೆ ಚಿಟಿಕೆ ಹೊಡೆದು ಹಳೆಯ ಕಡತಗಳನ್ನು ಅವಶ್ಯ ನೋಡಿ) ಈಗ ಬರಲಿರುವುದು ಪುಸ್ತಕ ನೀತಿ ಅಲ್ಲ, ಸಾರ್ವಜನಿಕ ಹಣದಲ್ಲಿ ‘ನಂಗಿಷ್ಟು-ನಿಂಗಿಷ್ಟು’ ಬಳಗ ನಡೆಸುವ ಅಣಕು ಸಂತರ್ಪಣೆಯ ಬಹುವರ್ಣ ರಂಜಿತ ಪಾಕ ಪಟ್ಟಿ ಮಾತ್ರ.

-ನಿಮ್ಮ ಅಭಿಮತ ತಿಳಿಸಿ

ಅಸಭ್ಯಕರ ವರ್ತನೆ


ಕೆ. ಮರುಳಸಿದ್ದಪ್ಪ, ಬೆಂಗಳೂರು


ಎಚ್‌ಡಿಕೆ-ಹೆಗ್ಡೆ ವಾಕ್ಸಮರ` ತಾರಕಕ್ಕೇರಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಅಸಭ್ಯವಾದ ಪರಸ್ಪರ ದೋಷಾರೋಪಗಳ ಪ್ರಭಾವ ಸಮಾಜದ ಮೇಲೆ ಹೇಗಿರಬಹುದೆಂಬುದನ್ನು ಇಬ್ಬರೂ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು. ಅದೇನಿದ್ದರೂ ಪುಕ್ಕಟೆ ಮನರಂಜನೆ ಮಹಾಜನತೆಗೆ ಸಿಗುತ್ತಿದೆ.

ಮಾಜಿ ಮುಖ್ಯಮಂತ್ರಿಯವರ ಅಸಭ್ಯ ಆರೋಪಕ್ಕೆ ನ್ಯಾಯಮೂರ್ತಿ ಹೆಗ್ಡೆಯವರು ಮೌನವಹಿಸುವುದರ ಮೂಲಕ ಪರಿಣಾಮಕಾರಿಯಾದ ಉತ್ತರ ಕೊಡಬಹುದಿತ್ತು. ಹಾಗಾಗದೆ, ನ್ಯಾಯಮೂರ್ತಿಗಳೂ ಕೆಸರೆರೆಚಾಟದ ಸ್ಪರ್ಧೆಯಲ್ಲಿ ತೊಡಗಿರುವುದು ಗಾಬರಿ ಹುಟ್ಟಿಸುವಂತಿದೆ.

ಕಾಚಾ ಹಾಕಿಕೊಂಡು ಕುಸ್ತಿಗೆ ಕರೆದವರ ಜೊತೆ ಕಾದಾಡಲು ಹಿಂಜರಿಯಬೇಕಿಲ್ಲ. ಆದರೆ ಕಾಚಾ ಬಿಚ್ಚಿ ಹಾಕಿ, ತೊಡೆ ತಟ್ಟುತ್ತಾ ಮುಂದೆ ನಿಂತ ಎದುರಾಳಿಗೆ ಶರಣಾಗತನಾಗುವುದೊಂದೇ ಸಭ್ಯಮಾರ್ಗ ಎಂಬ ಸರಳ ಲೋಕಾರೂಢಿ ಸಂಗತಿ ನಮ್ಮ ಬಹುದೊಡ್ಡ ನ್ಯಾಯ ಪಂಡಿತರಿಗೇಕೆ ಹೊಳೆಯಲಿಲ್ಲ?

ಗಣಿಗಾರಿಕೆ ನಿಷೇಧ : ಯಾರಿಗೆ ನಷ್ಟ ?

ರಾಜ್ಯದಲ್ಲಿ ಗಣಿಗಾರಿಕೆಯ ನಿಷೇಧದಿಂದ ಸರ್ಕಾರದ ಬೊಕ್ಕಸಕ್ಕೆ ರೂ. 4000 ಕೋಟಿ ನಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ವರದಿಯಾಗಿದೆ.

ಆದರೆ ಅಕ್ರಮ ಗಣಿಗಾರಿಕೆಯಿಂದ ಕಳೆದ ಎರಡು ವರ್ಷಗಳಲ್ಲಿ ರೂ. 16,000 ಕೋಟಿ ಬೊಕ್ಕಸಕ್ಕೆ ನಷ್ಟವಾಗಿದೆಯೆಂದು ಕರ್ನಾಟಕ ಲೋಕಾಯುಕ್ತರು ತಮ್ಮ ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯಲ್ಲಿ ಹೇಳಿದ್ದಾರೆ.

ಅದನ್ನು ವಸೂಲಿ ಮಾಡುವುದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ ನ್ಯಾಯಾಲಯದ ತೀರ್ಪಿನ ಬಗ್ಗೆ ಇವರು ಹರಿ ಹಾಯುತ್ತಿದ್ದಾರೆ.

ಅಕ್ರಮ ಗಣಿಗಾರಿಕೆಯಲ್ಲಿ ಆಪಾದಿತರಾದವರು ಬಹಳ ಪ್ರಭಾವಶಾಲಿಗಳು ಎಂಬ ಕಾರಣಕ್ಕೆ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಒಳದಾರಿಯನ್ನು ಹುಡುಕಲಾಗುತ್ತಿದೆಯೇ ವಿನಾ ಅವರನ್ನು ಕಾನೂನಿನ ಚೌಕಟ್ಟಿಗೆ ತರುವುದರ ಬಗ್ಗೆ ಮತ್ತು ಶಿಕ್ಷೆಗೆ ಒಳಪಡಿಸುವುದರ ಬಗ್ಗೆ ಸರ್ಕಾರ ಕಿಂಚಿತ್ತೂ ಯೋಚಿಸುತ್ತಿಲ್ಲ.

ಆಳುವ ಪಕ್ಷವು ಅಪರಾಧಿಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿದೆ. ಆದರೆ ಅಕ್ರಮ ಗಣಿಗಾರಿಕೆಗೆ ಕಾರಣರಾದ ಮಂತ್ರಿಗಳು, ಗಣಿ ಮಾಲಿಕರು, ಅದಕ್ಕೆ ಬೆನ್ನೆಲುಬಾಗಿ ನಿಂತ ಸರ್ಕಾರಿ ಅಧಿಕಾರಿಗಳು, ಆಳುವ ಪಕ್ಷದ ಕಾರ್ಯಕರ್ತರು ಮುಂತಾದವರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವುದರ ಬಗ್ಗೆ ಯೋಚಿಸುತ್ತಿಲ್ಲ.

ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಳನದ ಬೆನ್ನಲ್ಲಿ ಇದು ನಡೆದಿದೆ ಎಂಬುದು ಕರ್ನಾಟಕ ಜನತೆ ಅನುಭವಿಸಬೇಕಾದ ದುರಂತವಾಗಿದೆ.


ಟಿ.ಆರ್.ಚಂದ್ರಶೇಖರ

ವಿದ್ಯಾರಣ್ಯ-ಹಂಪಿ,

Tuesday, August 30, 2011

ಇರುಳ - ಬೆಳಕಿನ ಸೊಲ್ಲು


ಹಗಲೆಂದರೆ ಬೆಳಕು
ಇರುಳೆಂದರೆ ಕತ್ತಲು
ಹೆಚ್ಚೇನಿಲ್ಲ
ಕುರುಡರ ಪಾಠಕ್ಕೆ
ಒಂದೇ ಸಾಲು ....!

ಲೋಕದ ಪಟ್ಯದಲಿ
ಇನ್ನೂ
ನೋವು , ಬಡತನ
ಜಾತಿ -ಮತದ ಪದಗಳು
ಹೇರಳವಾಗಿ ಕಾಣುತ್ತಿವೆ ;
ಈ ದಿನವಾದರೂ
ಬೆಳಗಾಯಿತೆಂದು
ಹೇಗೆ ಹೇಳಲಿ ....?

ಹಗಲ ಕಣ್ಣಿಂದ
ಇರುಳ ನೋಡುವುದ
ನಿಲ್ಲಿಸಿದೆ ;
ಈಗ
ಇರುಳು
ಬರೀ ಕತ್ತಲೆಂದು
ಹೇಳುವುದು ನನ್ನಿಂದಾಗದು ...!

ನಿನಗೂ ಮಿತಿಯಿದೆ
ನನಗೂ ಮಿತಿಯಿದೆ
ಮಿತಿಯ ಬದುಕಿನ ಬಗ್ಗೆ
ಅಸಮಾಧಾನದ ದೀಪ
ಬೆಳಗಾಗುವ ತನಕ
ಉರಿಯಲಿ ಬಿಡು
ಈ ಕ್ಷಣ ನನಗೆ
ನೆನಪಿನಲ್ಲಿ ಉಳಿದಿರುವುದಿಷ್ಟೇ
ಮಿತಿಗಳಿಲ್ಲದ್ದು
ಮಾನವೀಯವಾಗಿಯೂ ಇರಲ್ಲ ...!

ಬೆಳಕ ಬಲ್ಲವ
ಇರುಳಾಯಿತು ಎನ್ನಲಾರ
ಇರುಳ ಬಲ್ಲವ
ಬೆಳಕಾಯಿತು ಎನ್ನಲಾರ
ಇರುಳು ಬೆಳಕಿನ ಬೀಜ
ಬೆಳಕು ಇರುಳಿನ ಬೀಜ
ಹೊರ ಪದರಷ್ಟೇ
ಕಪ್ಪು -ಬಿಳಿ ಬಣ್ಣ
ಎಂಬುದು
ನೀನು ಇಲ್ಲದಿದ್ದಾಗಷ್ಟೇ
ಅರಿವಿಗೆ ಬರುವುದು ...!

ಬೆಳಗಾಯಿತು
ನಿಜ ;
ಬರೀ ಕತ್ತಲೆಯಲ್ಲ
ಕನಸೂ
ಹಾಸುಗೆಯಿಂದ
ಎದ್ದು ನಡೆಯಿತು ..


ಬೆಳಗು
ಕತ್ತಲು ಇಲ್ಲದಿರುವುದಕ್ಕೊಂದು
ಹೆಸರು ..;
ನೆನಪಿಡು
ಬೆಳಕಿನಲ್ಲಿ
ಕನ್ನಡಿ ಇದ್ದರಷ್ಟೇ
ನಿನಗೆ ನಿನ್ನ
ಮುಖ ಕಾಣುವುದು ..!

ರಾತ್ರಿ ಬರೆದ
ಸಾವಿನ ಕವನ
ಮುಂದುವರಿಸಿದೆ
ಸುಮ್ಮನೆ
ಹಗಲು -ರಾತ್ರಿ ತದ್ವಿರುದ್ದ
ಅಂದವರಾರು ...!

ಇರುಳು
ಕಣ್ಣಿಲ್ಲದವನ ಕೈಯಲ್ಲಿ
ಕಂದೀಲಿದ್ದರೂ
ಕಣ್ಣಿದ್ದವನು ಪ್ರಪಾತದ
ಪಾಲಾಗುವುದು ತಪ್ಪುವುದು ...!
೧೦
ಬೆಳಗಾದ ಮೇಲೂ
ಆರಿ ಹೋಗದ
ಹಣತೆಯ ಹಾಗೆ ನೀನು
ನನ್ನ ಬೆಳಕಿನ ಲೋಕದ
ಕತ್ತಲೆ ಕಳೆಯಲು
ಉರಿಯುತ್ತಲೇ ಇದ್ದಿ ..!
೧೧
ಇನ್ನೂ
ಉಳಿದೇ ಇತ್ತು
ಬೆಳಕಿನ ಹಂಬಲ
ಇರುಳಿಗೆ ಮಾತು ಕೊಟ್ಟವರು
ಉಳಿಯುವದಾದರೂ ಹೇಗೆ
ನನ್ನ ಬಳಿ ..
೧೨
ಸೂರ್ಯ ಬರುತ್ತಿರುವ ಹಾಗೆ
ಎಲ್ಲ ದೀಪಗಳು
ಆರುವವು ಎಂದಲ್ಲ ..
ಸೂರ್ಯನ ಬೆಳಕು
ಎಷ್ಟಿದ್ದರೂ
ಸಾಲದಾಯಿತೇನೋ
ಸ್ಮಶಾನದ ದೀಪ
ಆರದೇ ಉಳಿಯುವುದು ...!
-ಅನಾಮಿಕ
ಕವಿತೆ

ಪಾದಗಳ ರಕ್ಷೆಯಾದ
ಚಪ್ಪಲಿ
ಕಾಲಲ್ಲಿದ್ದಾಗ ಹೇಗಿತ್ತೋ
ಕೈಗೆ ಬಂದಾಗಲೂ
ಹಾಗೆ ಇತ್ತು ;
ಕೈ -ಕಾಲು ಇರುವ
ಮನುಷ್ಯನ
ಕಲ್ಪನೆಯ ಅಪಮಾನದ
ಕಳಂಕ
ಚಪ್ಪಲಿಗೆ ಮೆತ್ತಿದ ಮೇಲೆ
ಚಪ್ಪಲಿಯಾಗಿ ಉಳಿಯದೆ
ಗಾಳಿಯಲಿ ತೂರಾಡಿತು

ಮನುಕುಲದ ಚರಿತ್ರೆ
ಹೀಗೇನೆ ;
ಯಾರದೋ ಕಲ್ಪನೆ
ಗಾಳಿಯಲಿ ಇನ್ನ್ಯಾರದೋ ತೂರಾಟ
ಅಷ್ಟೇ ..!

-ಅನಾಮಿಕ

ಅಣ್ಣಾ ಹೋರಾಟ- ವಿಭಿನ್ನ ಆಯಾಮ ಅಗತ್ಯ


ಅವಧಿ

-ನಾ ದಿವಾಕರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಏರ್ಪಡುವ ಯಾವುದೇ ಸಂಘರ್ಷದ ಪರಿಹಾರ ಇರುವುದು ದೇಶದ ಸಾರ್ವಭೌಮ ಜನತೆಗೆ ಒಪ್ಪಿತವಾಗಿರುವ ಸಂವಿಧಾನದ ಚೌಕಟ್ಟಿನೊಳಗೆ ಮಾತ್ರ. ಭಾರತದ ಆರು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಆಳುವ ಸರ್ಕಾರಗಳು ಎಷ್ಟೇ ವೈಫಲ್ಯ ಎದುರಿಸಿದ್ದರೂ, ಈ ಅವಧಿಯಲ್ಲಿ ರೂಪುಗೊಂಡಿರುವ ಕಾಯ್ದೆ-ಕಾನೂನುಗಳು, ಶಾಸನಗಳು ಸಂವಿಧಾನಾತ್ಮಕ ಕ್ರಮಗಳ ಮೂಲಕವೇ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಿವೆ. ಭಾರತದ ಪ್ರಭುತ್ವ ಮತ್ತು ಚುನಾಯಿತ ಸಕರ್ಾರಗಳು ಸಾಂವಿಧಾನಿಕ ಮೌಲ್ಯ ಮತ್ತು ತತ್ವಗಳನ್ನು ಉಲ್ಲಂಘಿಸಿ ಜನವಿರೋಧಿ ನೀತಿಗಳನ್ನು ಅನುಸರಿಸಿದ ಪ್ರತಿಯೊಂದು ಸಂದರ್ಭದಲ್ಲೂ ಸಂವಿಧಾನದ ಪರಿಧಿಯಲ್ಲೇ, ನ್ಯಾಯಾಂಗದ ಮೂಲಕ, ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ 1967ರ ನಂತರದ ಪ್ರಕ್ಷುಬ್ಧ ಸನ್ನಿವೇಶ, ತುತರ್ುಪರಿಸ್ಥಿತಿ ಮತ್ತು ಇತ್ತೀಚಿನ ಸಲ್ವಾಜುಡಂ ಪ್ರಕರಣಗಳು ಉಲ್ಲೇಖನಾರ್ಹ. ಅಣ್ಣಾ ಹಜಾರೆ ತಂಡದ ಜನಲೋಕಪಾಲ್ ಮಸೂದೆಯ ಸುತ್ತ ದೇಶಾದ್ಯಂತ ಹರಡಿರುವ ಜನಾಂದೋಲನದ ಮೂಲಭೂತ ನ್ಯೂನತೆಯನ್ನೂ ಈ ನಿಟ್ಟಿನಲ್ಲೇ ಗ್ರಹಿಸಬೇಕಾಗಿದೆ. ನವ ಉದಾರವಾದದ ಎಲ್ಲ ಫಲಾನುಫಲಗಳನ್ನೂ ಅನುಭವಿಸಿರುವ ದೇಶದ ಮಧ್ಯಮವರ್ಗದ ಜನತೆಗೆ ಭ್ರಷ್ಟಾಚಾರದ ಮುಕ್ತ ಆಳ್ವಿಕೆ ಅನಿವಾರ್ಯವಾಗುವುದು ತಮ್ಮ ನಗರೀಕೃತ ಜೀವನ ಶೈಲಿಗೆ ಕುತ್ತು ಬಂದಾಗ ಮಾತ್ರ. ತಮ್ಮ ಸಾಮಾಜಿಕ-ಆಥರ್ಿಕ ಮೇಲ್ ಚಲನೆಗೆ ಅಡ್ಡಿ ಆತಂಕ ಉಂಟುಮಾಡುವ ಎಲ್ಲ ವಿದ್ಯಮಾನಗಳನ್ನೂ ತೊಡೆದುಹಾಕುವ ಈ ವರ್ಗದ ಹಿತಾಸಕ್ತಿಗಳು ಸದಾ ಆಳ್ವಿಕರ ಹಿತಾಸಕ್ತಿಗಳೊಡನೆ ರಾಜಿ ಮಾಡಿಕೊಳ್ಳುತ್ತಲೇ ಸಾಗುತ್ತವೆ. ಹಾಗಾಗಿಯೇ ಈ ಮಧ್ಯಮ ವರ್ಗಗಳ ಆಕ್ರೋಶ, ಹತಾಶೆಗಳು ಬಹಿರಂಗವಾಗಿ ವ್ಯಕ್ತವಾದಾಗಲೆಲ್ಲಾ ದೇಶದಲ್ಲಿ ಆಂದೋಲನದ ಹುರುಪು ಕಾಣಿಸಿಕೊಳ್ಳುತ್ತದೆ. ಮಂಡಲ್ ವಿರೋಧಿ ಚಳುವಳಿ ಈ ನಿಟ್ಟಿನಲ್ಲಿ ಉತ್ತಮ ನಿದರ್ಶನ.

ಸಮಾಜೋ-ಆರ್ಥಿಕ ಸಂದರ್ಭಗಳು- 1970 ಮತ್ತು 1990ರಲ್ಲಿ ಸಂಭವಿಸಿದ ಘಟನೆಗಳೂ ಇಲ್ಲಿ ಉಲ್ಲೇಖನಾರ್ಹ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ ಮತ್ತು ಆರ್ಥಿಕ ಎದುರಿಸಿದ ಭಾರತದ ದುಡಿಯುವ ವರ್ಗಗಳು 70ರ ದಶಕದಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಹೋರಾಟಕ್ಕೆ ಸಜ್ಜಾದಾಗ ಪ್ರಭುತ್ವ ಕ್ರಮಿಸಿದ ದಾರಿ, ಸರ್ವಾಧಿಕಾರಿ ಧೋರಣೆಯದು. ಪರಿಣಾಮ ತುರ್ತು ಪರಸ್ಥಿತಿ ಮತ್ತು ಜನಾಂದೋಲನಗಳ ದಮನ. ಪ್ರಭುತ್ವದ ಈ ಕ್ರಮಕ್ಕೆ ಪರ್ಯಾಯವಾಗಿ ರೂಪುಗೊಂಡಿದ್ದು ಜೆಪಿಯವರ ಸಂಪೂರ್ಣ ಕ್ರಾಂತಿ. ನಿಜ, ಸಂಪೂರ್ಣ ಕ್ರಾಂತಿಯ ಧ್ಯೇಯೋದ್ದೇಶಗಳು ಪ್ರಜಾತಾಂತ್ರಿಕವಾಗಿಯೇ ಇತ್ತು. ಆದರೆ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋದ ಜನತೆಯ ಆಕ್ರೋಶ ಕೊನೆಗೊಂಡದ್ದು ಮತ್ತೊಂದು ರೀತಿಯ ದಮನಕಾರಿ ಆಳ್ವಿಕೆಯ ಅಧಿಕಾರ ಗ್ರಹಣದಲ್ಲಿ. ಇಲ್ಲಿಯೂ ಮೇಲುಗೈ ಸಾಧಿಸಿದ್ದು ಮಧ್ಯಮವರ್ಗಗಳ ಹಿತಾಸಕ್ತಿಯೇ ಹೊರತು, ಶ್ರಮಜೀವಿಗಳದ್ದಲ್ಲ. ಸಂವಿಧಾನದ ಆಡಳಿತಾತ್ಮಕ ನೀತಿಗಳನ್ನೇ ವೈಭವೀಕರಿಸುತ್ತಾ, ಅದರೊಳಗಿನ ಜನಪರ ಕಾಳಜಿಗಳನ್ನು ನಿರ್ಲಕ್ಷಿಸುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡ ಆಳುವ ವರ್ಗಕ್ಕೆ ಮತ್ತೆ ಸವಾಲು ಎದುರಾದದ್ದು 1990ರಲ್ಲಿ.1980ರ ದಶಕದಲ್ಲಿ ಸಂಭವಿಸಿದ ರಾಜಕೀಯ ಪಲ್ಲಟಗಳು ದೇಶದ ರಾಜಕಾರಣದ ರೂಪುರೇಷೆಗಳನ್ನು ಬದಲಾಯಿಸಿತ್ತೇ ಹೊರತು ಮೂಲಭೂತ ಪರಿವರ್ತನೆಗೆ ಸಹಕಾರಿಯಾಗಲಿಲ್ಲ. ಹಿಂದುಳಿದ ವರ್ಗಗಳ ಹಕ್ಕೊತ್ತಾಯಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲೇ, ದಾರ್ಮಿಕ -ಮತೀಯ ಭಾವನೆಗಳನ್ನು ಬಡಿದೆಬ್ಬಿಸಿದ ಆಳುವ ವರ್ಗಗಳು ಮತ್ತೊಮ್ಮೆ ಮಧ್ಯಮ ವರ್ಗಗಳ ತುಷ್ಟೀಕರಣದಲ್ಲಿ ತೊಡಗಿದ್ದನ್ನು ಮಂಡಲ್ ವಿರೋಧಿ ಆಂದೋಲನ ಮತ್ತು ಜಾಗತೀಕರಣ ಪರವಾದ ಅಲೆಯಲ್ಲಿ ಕಾಣಬಹುದಾಗಿತ್ತು. ಭಾರತದ ಸಂವಿಧಾನದ ಮೂಲ ತತ್ವಗಳಿಗೆ ತದ್ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ನವ ಉದಾರವಾದಿ ಆರ್ಥಿಕತೆ ಅನುಷ್ಟಾನಗೊಳಿಸಿದ ಸಂದರ್ಭದಲ್ಲೂ ಲೈಸೆನ್ಸ್ ಪಮರ್ಿಟ್ ಆಳ್ವಿಕೆಯ ವಿರುದ್ಧ ಹುಯಿಲೆಬ್ಬಿಸಿದ್ದು ಇದೇ ಮಧ್ಯಮ ವರ್ಗಗಳೇ. ಪರಿಣಾಮ, ಮಂಡಲ್ ಸಮರ್ಥಕರು, ರಾಮಮಂದಿರ ವಿರೋಧಿಗಳು ಮತ್ತು ಜಾಗತೀಕರಣ ವಿರೋಧಿಗಳು ದೇಶದ್ರೋಹಿಗಳಂತೆ ಕಾಣಲ್ಪಟ್ಟರು. ಈ ಸಂದರ್ಭದಲ್ಲೂ ಸಂವಿಧಾನದ ಆಡಳಿತಾತ್ಮಕ ನೀತಿಗಳೇ ವೈಭವೀಕರಿಸಲ್ಪಟ್ಟಿದ್ದನ್ನು ಸ್ಮರಿಸಬಹುದು. ಈ ಎರಡೂ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಅಂಶವೆಂದರೆ ಮಧ್ಯಮವರ್ಗ ಪ್ರೇರಿತ ಜನಾಂದೋಲನಗಳು ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿರುವ ದೇಶದ ಬಹುಸಂಖ್ಯಾತ ಜನತೆಯ ಪರವಾದ ಕಾಳಜಿಗಳನ್ನು ವ್ಯವಸ್ಥಿತವಾಗಿ ಮರೆಮಾಚಿದ್ದು. ನವ ಉದಾರವಾದ ತನ್ನ ಕಬಂಧ ಬಾಹುಗಳಿಂದ ದೇಶದ ಎಲ್ಲ ಕ್ಷೇತ್ರಗಳನ್ನೂ ಆವರಿಸುತ್ತಾ , ತನ್ನದೇ ಆದ ಪ್ರಭುತ್ವವನ್ನು ಪೋಷಿಸುತ್ತಾ, ಕಾರ್ಪೊರೇಟ್ ಆಳ್ವಿಕೆಗೆ ಭದ್ರ ಬುನಾದಿ ಒದಗಿಸುತ್ತಿರುವ ಸಂದರ್ಭದಲ್ಲಿ ಜಾಗತೀಕರಣದ ಫಲಾನುಭವಿಗಳಾದ ಮಧ್ಯಮವರ್ಗಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಕಾರ್ಯಾಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಭ್ರಷ್ಟಾಚಾರ. ಮೇಲ್ ಮಧ್ಯಮ ವರ್ಗಗಳಿಗೆ ಜಾಗತೀಕರಣಕ್ಕೆ ಮುನ್ನ ತೊಡಕಿನಂತೆ ಕಾಣುತ್ತಿದ್ದ ಲೈಸೆನ್ಸ್ ಪಮರ್ಿಟ್ ಆಳ್ವಿಕೆಯಷ್ಟೇ ಅಪಾಯಕಾರಿಯಾಗಿ ಇಂದಿನ ರಾಜಕೀಯ ಭ್ರಷ್ಟಾಚಾರವೂ ಕಾಣುತ್ತಿರುವುದು ಸ್ಪಷ್ಟ. ಹಾಗಾಗಿಯೇ ಅಣ್ಣಾ ಹಜಾರೆಯ ಹೋರಾಟಕ್ಕೆ ತಂಡೋಪತಂಡವಾಗಿ ಜನಸಾಗರ ಹರಿದುಬಂದಿದ್ದೂ ಹೌದು.

ಸಾಮಾಜಿಕ ಪ್ರತಿಕ್ರಿಯೆ ಆದರೆ ಭಾರತದ ಜನಸಂಖ್ಯೆಗನುಗುಣವಾಗಿ ನೋಡಿದಾಗ ಪ್ರಸ್ತುತ ಆಂದೋಲನದ ಹಿಂದಿರುವ ಜನಸಂಖ್ಯೆ ಗೌಣವೆಂದೇ ಹೇಳಬಹುದು. ಮಾಧ್ಯಮಗಳಲ್ಲಿ ಪದೇ ಪದೇ ಬಿತ್ತರಿಸಲಾಗುತ್ತಿರುವ ದೃಶ್ಯಗಳು ಪುನರಾವರ್ತನೆಯೆಂದು ಹೇಳಬೇಕಿಲ್ಲ. ದುರಂತವೆಂದರೆ ವಿದ್ಯುನ್ಮಾನ ಮಾಧ್ಯಮಗಳು ಇದಕ್ಕಿಂತಲೂ ಹೆಚ್ಚಿನ ಜನ ಧೃವೀಕರಣಗೊಂಡಿದ್ದ ಗ್ಯಾಟ್ ವಿರೋಧಿ ಅಂದೋಲನ, ಅಣ್ವಸ್ತ್ರ ವಿರೋಧಿ ಅಂದೋಲನ, ಜಾಗತೀಕರಣ ವಿರೋಧಿ ಅಂದೋಲನಗಳನ್ನು ತಮ್ಮ ರಂಜನೀಯ ಪರದೆಗಳ ಮೇಲೆ ಬಿಂಬಿಸಲೇ ಇಲ್ಲ. ಪೋಖ್ರಾನ್ ವಿರುದ್ಧ ನಡೆದ ಆಂದೋಲನದಲ್ಲಿ ಕಲ್ಕತ್ತಾದಲ್ಲೇ ನಾಲ್ಕು ಲಕ್ಷ ಜನ ಸೇರಿದ್ದರೂ ಮಾಧ್ಯಮಗಳಲ್ಲಿ ನಿರ್ಲಕ್ಷಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮಾಧ್ಯಮಗಳಿಗೆ ಹಜಾರೆ ಹೋರಾಟವನ್ನು ವೈಭವೀಕರಿಸುವ ಅವಶ್ಯಕತೆ ಹೆಚ್ಚಾಗಿದೆ. ಕಾರಣ, ಪ್ರಸಕ್ತ ಆಂದೋಲನ ನವ ಉದಾರವಾದದ ಹಿತಾಸಕ್ತಿಗಳನ್ನು ಎಲ್ಲಿಯೂ ಪ್ರಶ್ನಿಸುತ್ತಿಲ್ಲ. ಅಥವಾ ದೇಶದ ಬಹುಸಂಖ್ಯಾತ ಶ್ರಮಜೀವಿ ವರ್ಗಗಳನ್ನು, ದಲಿತ ಸಮುದಾಯಗಳನ್ನು, ಆದಿವಾಸಿಗಳನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಿಂಬಿಸುತ್ತಿಲ್ಲ. ನಿಜ, ಭ್ರಷ್ಟಾಚಾರ ದೇಶದ ಆಂತರಿಕ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿದೆ. ಆದರೆ ಇದು ಇಂದಿನ ವಿದ್ಯಮಾನವಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ದುಡಿಯುವ ವರ್ಗಗಳು ಭ್ರಷ್ಟಾಚಾರದ ಪಾಪಕೃತ್ಯಗಳನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದಿವಾಸಿಗಳು, ದಲಿತ ಸಮುದಾಯಗಳು, ಅಲ್ಪಸಂಖ್ಯಾತರು, ಮಹಿಳೆಯರು ಈ ಎಲ್ಲಾ ಶ್ರಮಜೀವಿ ವರ್ಗಗಳು ಆಳ್ವಿಕರ ಭ್ರಷ್ಟ ಆಡಳಿತದಲ್ಲಿ ರೂಪುಗೊಂಡ ಆರ್ಥಿಕ ನೀತಿಗಳಿಂದ ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದಾರೆ. ಕಾಯರ್ಾಂಗದ ಅಧಿಕಾರಶಾಹಿಯಲ್ಲಿ ನಾಗರಿಕರಿಂದ ಪಡೆಯುವ ಲಂಚವನ್ನು ಮಾತ್ರ ಭ್ರಷ್ಟಾಚಾರ ಎಂದು ಪರಿಗಣಿಸುವ ಬದಲು, ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ದೇಶದ ಉತ್ಪಾದಕೀಯ ಶಕ್ತಿಗಳ ಹಿತಾಸಕ್ತಿಗಳ ವಿರುದ್ಧ ರೂಪಿಸಲಾದ ಯಾವುದೇ ನೀತಿಯಾದರೂ ಭ್ರಷ್ಟ ಪರಂಪರೆಯ ಸಂಕೇತ ಎಂದು ಪರಿಗಣಿಸುವುದಾದರೆ, ಭ್ರಷ್ಟಾಚಾರ ಎಂಬ ಪಿಡುಗು ಸ್ವತಂತ್ರ ಭಾರತದ ಇತಿಹಾಸದುದ್ದಕ್ಕೂ ಹರಡಿರುವುದು ಸ್ಪಷ್ಟವಾಗುತ್ತದೆ. ಆದರೆ ಈ ದೇಶದ ಮಧ್ಯಮವರ್ಗಗಳಿಗೆ, ಶ್ರೀಮಂತರಿಗೆ ಈ ಸಾಂಸ್ಥಿಕ ಭ್ರಷ್ಟಾಚಾರದ ಗ್ರಹಿಕೆಯೇ ಇಲ್ಲವಾಗಿದೆ.

ದೇಶಾದ್ಯಂತ ನಿರಂತರವಾಗಿ ನಡೆಯುತ್ತಿರುವ ಪರಿಸರ ಹೋರಾಟಗಳು, ಕೃಷಿ ಬಿಕ್ಕಟ್ಟು, ಭೂಸ್ವಾಧೀನ, ಅರಣ್ಯ ಅತಿಕ್ರಮಣ, ಬೃಹತ್ ಅಣೆಕಟ್ಟು ಯೋಜನೆಗಳ ವಿರುದ್ಧದ ಆಂದೋಲನಗಳು ಮಧ್ಯಮವರ್ಗಗಳ ತಾತ್ವಿಕ ಬೆಂಬಲವನ್ನೂ ಗಳಿಸದಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಪೋಸ್ಕೋ, ವೇದಾಂತಗಳ ವಿರುದ್ಧ, ಮಿತ್ತಲ್ ವಿರುದ್ಧ, ನರ್ಮದಾ ವಿರುದ್ಧ ಹೋರಾಡುವವರನ್ನು ಪ್ರಗತಿ ವಿರೋಧಿಗಳೆಂದೇ ಬಿಂಬಿಸುವ ಸಮಾಜದಲ್ಲಿ, ಪ್ರಸ್ತುತ ಅಣ್ಣಾ ಹಜಾರೆ ಹೋರಾಟ ವ್ಯಾಪಕ ಬೆಂಬಲ ಗಳಿಸಿರುವುದು ಭಾರತದ ಸಮಾಜ ಮಧ್ಯಮವರ್ಗ ಕೇಂದ್ರಿತವಾಗುತ್ತಿರುವುದರ ಸಂಕೇತವಾಗಿದೆ. ಅದ್ದರಿಂದಲೇ ಆರಂಭದಲ್ಲಿ ತಮ್ಮ ಜನಲೋಕಪಾಲ್ ಮಸೂದೆ ಜಾರಿಯಾಗುವವರೆಗೂ ಉಪವಾಸ ನಿಲ್ಲಿಸುವುದಿಲ್ಲ ಎಂಬ ಷರತ್ತು ಒಡ್ಡಿದ್ದ ಅಣ್ಣಾ ಈಗ ಮೂರು ಸಂಕೀರ್ಣ ಬೇಡಿಕೆಗಳನ್ನು ಮುಂದಿಟ್ಟು ತಮ್ಮ ನಿರಶನ ಅಂತ್ಯಗೊಳಿಸುವ ಪ್ರಸ್ತಾವನೆ ಮಂಡಿಸಿದ್ದಾರೆ. ಮಧ್ಯಮವರ್ಗಗಳ ಯಾವುದೇ ಚಳುವಳಿ ರಾಜಿ-ಸಂಧಾನಗಳಲ್ಲಿ ಅಂತ್ಯಗೊಳ್ಳುವ ಚಾರಿತ್ರಿಕ ಪರಂಪರೆಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು. 42 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಮಸೂದೆ ಈಗ ಐದು ವಿಭಿನ್ನ ಆಯಾಮಗಳಿಂದ ಸಕರ್ಾರದ ಮುಂದಿದೆ. ಆಗಸ್ಟ್ 30ರ ಒಳಗಾಗಿ ಮಸೂದೆ ಜಾರಿಯಾಗಬೇಕೆಂದು ಪಟ್ಟು ಹಿಡಿದಿದ್ದ ಗಾಂಧಿವಾದಿ ಈಗ ಕೇವಲ ಸಂಸತ್ತಿನ ಮೂರು ನಿರ್ಣಯಗಳಿಗೆ ತಮ್ಮ ಷರತ್ತುಗಳನ್ನು ಸೀಮಿತಗೊಳಿಸಿರುವುದು, ಇಡೀ ಹೋರಾಟದ ವ್ಯಾಪ್ತಿ ಮತ್ತು ಸಮಗ್ರತೆಯಲ್ಲಿನ ಕೊರತೆಯ ಸಂಕೇತವಾಗಿದೆ. ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಯ ದೃಷ್ಟಿಯಿಂದ ತಮ್ಮ ನಿಲುವುಗಳನ್ನು ಬದಲಾಯಿಸಿದ್ದರೂ ಅಣ್ಣಾ ತಂಡದ ಬೇಡಿಕೆಗಳನ್ನು ಮಾನ್ಯ ಮಾಡಿದರೂ ಸಹ ಆಳುವ ವರ್ಗಗಳ ಮತ್ತು ಕಾರ್ಪೋರೆಟ್ ಆಳ್ವಿಕೆಯ ನವ ಉದಾರವಾದಿ ನೀತಿಗಳಿಗೆ ಯಾವುದೇ ಅಪಾಯವಿಲ್ಲದಿರುವುದನ್ನು ಸೂಕ್ಷ್ಮವಾಗಿ ಗಮನಿಸಿವೆ. ಹಾಗಾಗಿ ಮುಂಬರುವ ಅಧಿವೇಶನದಲ್ಲಿ ಸಂವಿಧಾನಬದ್ಧವಾದ ಒಂದು ಮಸೂದೆ ಜಾರಿಯಾದರೂ ಅಚ್ಚರಿಯೇನಿಲ್ಲ. ಆದರೆ ಭ್ರಷ್ಟಾಚಾರವನ್ನು ನಿಯಂತ್ರಿಸುವ ಒಂದು ಪ್ರತಿಬಂಧಕ ಕಾಯ್ದೆಯ ಇತಿಮಿತಿಗಳನ್ನು ಗಮನಿಸಿ ನೋಡಿದಾಗ, ಭಾರತದ ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ಚೌಕಟ್ಟಿನಲ್ಲಿ ಅಂತರ್ಗತವಾಗಿರುವ ಭ್ರಷ್ಟ ಪರಂಪರೆಯನ್ನು ಅಂತ್ಯಗೊಳಿಸಲು, ದೇಶದ ಬಹುಸಂಖ್ಯಾತ ಶ್ರಮಜೀವಿಗಳನ್ನು ಪ್ರತಿನಿಧಿಸುವ ಸಮಗ್ರ ಹೋರಾಟದ ಅವಶ್ಯಕತೆ ಎದ್ದುಕಾಣುತ್ತದೆ. ಅಣ್ಣಾ ಕ್ರಮಿಸಿದ ಹಾದಿಯಲ್ಲಿನ ಕೊರತೆ ಇರುವುದೇ ಇಲ್ಲಿ.

ನಾ ದಿವಾಕರ

- ಅಭಿಮತ ತಿಳಿಸಿ

ಜಾತಿ ವ್ಯವಸ್ಥೆ, ಕೋಮುವಾದ ಮತ್ತು ಸಾಮಾಜಿಕ ನ್ಯಾಯ


ನಾವಿಂದು ಕ್ರಿ.ಶ. ಇಪ್ಪತ್ತೊಂದನೇ ಶತಮಾನದಲ್ಲಿದ್ದೇವೆ. ಒಂದೆಡೆ, ಅತ್ಯದ್ಭುತವಾದ ವೈಜ್ಞಾನಿಕ ಸಂಶೋಧನೆಗಳೂ, ತಂತ್ರಜ್ಞಾನದಲ್ಲಾಗುತ್ತಿರುವ ಪ್ರಗತಿಗಳೂ ಮಾನವನ ಜೀವನವನ್ನು ಹಸನುಗೊಳಿಸುವಲ್ಲಿ ನೆರವಾಗುತ್ತಿರುವ ಕಾಲದಲ್ಲಿಯೇ, ಮನುಕುಲವನ್ನು ದಾಸ್ಯದ ಅಂಧಕಾರದತ್ತ ತಳ್ಳುವ ಹುನ್ನಾರವು ಕೂಡಾ ಇನ್ನೊಂದೆಡೆ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಧರ್ಮ, ಕೋಮು, ಜಾತಿ, ಪಂಗಡ, ಭಾಷೆ, ಪ್ರದೇಶ ಇತ್ಯಾದಿಗಳ ಹೆಸರಲ್ಲಿ ಮನುಷ್ಯ-ಮನುಷ್ಯರ ಬೆಸುಗೆಯನ್ನು ಮುರಿದು, ಅಶಾಂತಿಯನ್ನೂ, ಅರಾಜಕತೆಯನ್ನೂ ಸೃಷ್ಟಿಸುವಲ್ಲಿ ವಿವಿಧ ವಿಚ್ಛಿದ್ರಕಾರಿ ಶಕ್ತಿಗಳು ಸಫಲರಾಗುತ್ತಿರುವಂತೆ ತೋರುತ್ತಿರುವ ಇಂದಿನ ಸನ್ನಿವೇಶದಲ್ಲಿ ಜನಸಾಮಾನ್ಯರು, ಅದರಲ್ಲೂ ಯುವಜನರು, ತಮ್ಮ ಭವಿಷ್ಯದ ಒಳಿತಿಗಾಗಿ ಪ್ರಗತಿಪರವಾದ ಪಥವನ್ನು ಹಿಡಿದು ಮುನ್ನಡೆಯಬೇಕಾದ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಾಗಿ ಕಂಡುಬರುತ್ತಿದೆ. ಸತ್ಯದ ಅರಿವು ಯಾವತ್ತೂ ನಮ್ಮ ಕೈದೀವಿಗೆಯಾಗಿದ್ದು, ಪ್ರಸಕ್ತ ಚರ್ಚೆಯಲ್ಲಿರುವ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಅತ್ಯಗತ್ಯ; ಮನುಷ್ಯನ ಉಗಮ, ಧರ್ಮ-ಜಾತಿಗಳ ಉಗಮ ಮತ್ತು ಬೆಳವಣಿಗೆಗಳ ಇತಿಹಾಸವನ್ನು ನಾವು ಅರಿಯಬೇಕಾದದ್ದು ಅತ್ಯಗತ್ಯ.

ಮಾನವನ ಉಗಮ:

ಚಾರ್ಲ್ಸ್ ಡಾರ್ವಿನ್

ಚಾರ್ಲ್ಸ್ ಡಾರ್ವಿನ್

ಬ್ರಿಟಿಷ್ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನನ ಜೀವ ವಿಕಾಸವಾದಕ್ಕೀಗ ನೂರೈವತ್ತು ವರ್ಷ. ಓರ್ವ ಪಾದ್ರಿಯಾಗಲು ತರಬೇತಾಗಿದ್ದ ಡಾರ್ವಿನ್, ಎಚ್ ಎಮ್ ಎಸ್ ಬೀಗಲ್ ನೌಕೆಯಲ್ಲಿ ವಿಶ್ವ ಪರ್ಯಟನೆ ಮಾಡುತ್ತಾ ಇಂಡೋನೇಶ್ಯಾದ ಬಳಿಯಿರುವ ಗಲಪಗೋ ದ್ವೀಪಗಳಲ್ಲಿ ತಾನು ಕಂಡ ವಿಭಿನ್ನ ರಚನೆಯ ಹಲವು ಪ್ರಾಣಿ-ಪಕ್ಷಿಗಳಿಂದ ಪ್ರೇರಿತನಾದನು; ಜೀವಿಗಳು ಯಾರೊಬ್ಬನ ಸೃಷ್ಟಿಯೂ ಆಗಿರದೆ ಭೂಮಿಯ ಮೇಲಿನ ಪರಿಸ್ಥಿತಿಗನುಗುಣವಾಗಿ ಒಂದರಿಂದೊಂದು ವಿಕಾಸಗೊಂಡವು ಎಂಬ ಸಿದ್ದಾಂತವನ್ನು ಮಂಡಿಸಿದನು. ಮೊದಲಲ್ಲಿ ಸಾಕಷ್ಟು ಪ್ರತಿರೋಧವನ್ನು ಎದುರಿಸಿದರೂ, ವಿಕಾಸವಾದವನ್ನು ಪುಷ್ಠೀಕರಿಸುವ ಪ್ರಬಲವಾದ ಸಾಕ್ಷ್ಯಾಧಾರಗಳು ದೊರೆತಾಗ ಡಾರ್ವಿನನ ಸಂಶೋಧನೆಯು ವಿಶ್ವಮಾನ್ಯವಾಯಿತು. ನಂತರದ ವರ್ಷಗಳಲ್ಲಿ ವಂಶವಾಹಿಗಳ ಕುರಿತು ನಡೆದ, ನಡೆಯುತ್ತಿರುವ ಸಂಶೋಧನೆಗಳೆಲ್ಲವೂ ಅದನ್ನು ಇನ್ನಷ್ಟು ಬಲಪಡಿಸಿದವು. [ಆದರೂ, ಹಲವು ಧರ್ಮಗಳು ಮತ್ತು ಧರ್ಮಾನುಯಾಯಿ ನಾಯಕರುಗಳು ಇನ್ನೂ ಡಾರ್ವಿನನ ವಾದವನ್ನು ಒಪ್ಪದೆ, ಜೀವಿಗಳೆಲ್ಲವೂ ‘ಬುದ್ದಿವಂತನ ಅದ್ಭುತ ಸೃಷ್ಟಿ’ ಎಂದೇ ವಾದಿಸುತ್ತಿರುತ್ತಾರೆ].

ಮಾನವನ ನಡಿಗೆ - ಆಫ್ರಿಕಾದಿಂದ ಎಲ್ಲೆಡೆಗೆ

ಮನುಷ್ಯನ ವಿಕಾಸವು ಆಫ್ರಿಕಾ ಖಂಡದ ಕಾಡುಗಳಲ್ಲಾಗಿರಬಹುದೆಂಬ ಡಾರ್ವಿನನ ತರ್ಕವನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳು ದೊರೆತಿವೆ. [ಭೂಮಿಯ ಭೂಭಾಗಗಳೆಲ್ಲವೂ ಒಂದು ಕಾಲದಲ್ಲಿ ಗೊಂಡಾವನವೆಂಬ ಒಂದೇ ಭೂಭಾಗವಾಗಿದ್ದು, ಕಾಲಕ್ರಮೇಣ ಸಿಡಿದು ಇಂದಿನ ಖಂಡಗಳಾಗಿ ಪ್ರತ್ಯೇಕಗೊಂಡವು ಎನ್ನುವುದಕ್ಕೆ ಇದೀಗ ಪುರಾವೆಗಳು ಲಭಿಸುತ್ತಿವೆ.] ಸುಮಾರು ಎರಡರಿಂದ ಮೂರು ಲಕ್ಷ ವರ್ಷಗಳ ಹಿಂದೆ ವಾನರರಿಂದ ಆದಿಮಾನವರಾಗಿ ನಂತರ ಆಧುನಿಕ ಮಾನವನಾಗಿ ವಿಕಾಸ ಹೊಂದಿದ ಬಳಿಕ ಇತರ ಭೂಭಾಗಗಳತ್ತ ಮಾನವನ ನಡಿಗೆಯು ಆರಂಭಗೊಂಡಿತು; ಏಷ್ಯಾ, ಆಸ್ಟ್ರೇಲಿಯಾ, ಯೂರೋಪ್ ಮತ್ತು ಅಮೆರಿಕಾಗಳನ್ನು ಆತನು ಸೇರಿಕೊಂಡನು. ದಕ್ಷಿಣ ಭಾರತದ ಕೆಲವು ಆದಿವಾಸಿಗಳಲ್ಲಿ ಆಫ್ರಿಕಾದ ಆದಿವಾಸಿಗಳಲ್ಲಿರುವ ವಂಶವಾಹಿಗಳನ್ನು ಗುರುತಿಸಲಾಗಿದ್ದು, ಮಾನವನು ವಿಶ್ವವ್ಯಾಪಿಯಾದ ಹಾದಿಯ ಬಗ್ಗೆ ಇವು ಕುರುಹನ್ನು ನೀಡಿವೆ. ಅಂದಿನಿಂದ ಇಂದಿನವರೆಗೆ ಮಾನವನ ಖಂಡಾಂತರ ನಡಿಗೆಯು ಮುಂದುವರಿದಿದೆ, ಮನುಕುಲವೆಲ್ಲಾ ಒಂದೇ ಎನ್ನುವುದನ್ನು ದೃಢಪಡಿಸುತ್ತಿದೆ.

ಧರ್ಮ-ಜಾತಿಗಳ ಉಗಮ:

ಸುಮಾರು ಒಂದೂವರೆ ಲಕ್ಷ ವರ್ಷಗಳಷ್ಟು ಹಿಂದೆ ವಿಕಾಸಗೊಂಡ ಮಾನವನು ಬಹು ಕಾಲದವರೆಗೆ ತನ್ನ ತವರಾದ ಕಾಡಿನಲ್ಲೇ ಜೀವಿಸಿದ್ದ. ತನ್ನದೇ ಆದ ಗುಂಪನ್ನು ಕಟ್ಟಿಕೊಂಡು ಜತೆಯಾಗಿ ಬಾಳುತ್ತಿದ್ದ. ಮಾತೃ ಪ್ರಧಾನವಾಗಿದ್ದ ಈ ವ್ಯವಸ್ಥೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದವರೆಲ್ಲಾ ಒಟ್ಟಾಗಿ ಜೀವಿಸುತ್ತಿದ್ದರು; ಬೇಟೆಯಾಡಿ, ಕಾಡಿನಲ್ಲಿ ದೊರೆಯುವ ಆಹಾರೋತ್ಪನ್ನಗಳನ್ನು ಸಂಗ್ರಹಿಸಿ ಹಂಚಿ ತಿಂದು ಬಾಳುವುದು ಆಗಿನ ವ್ಯವಸ್ಥೆಯಾಗಿತ್ತು. ಕೇವಲ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಆಹಾರಕಾಗಿ ಧಾನ್ಯಗಳನ್ನು ಬೆಳೆಯುವ ಕೃಷಿಕೆಲಸಗಳನ್ನು ತೊಡಗಿದ ನಂತರ ಆಸ್ತಿಯ ಪರಿಕಲ್ಪನೆ ಮೂಡಿತಲ್ಲದೆ, ಅದರ ಆಧಾರದಲ್ಲಿ ಗುಂಪುಗಳು, ಅವಕ್ಕೆ ನಾಯಕರು, ನಂತರ ರಾಜರುಗಳು ಇವೇ ಮುಂತಾದ ವ್ಯವಸ್ಥೆಗಳು ರೂಪುಗೊಂಡವು. ಆಸ್ತಿಗಾಗಿ ಜಗಳಗಳೂ, ಯುದ್ಧಗಳೂ ನಡೆದವು. ಕೃಷಿ ಆಧಾರಿತ ಜೀವನಕ್ರಮವನ್ನು ಅಳವಡಿಸಿಕೊಂಡ ಪಂಗಡಗಳು ಆಹಾರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರಿಂದ ಇತರ ಚಟುವಟಿಕೆಗಳತ್ತ ಗಮನ ಹರಿಸಲು ಸಾಧ್ಯವಾಗಿ ಇನ್ನಿತರ ಕುಶಲಕೈಗಾರಿಕೆಗಳೂ, ಉದ್ದಿಮೆಗಳೂ ಒಂದೊಂದಾಗಿ ಬೆಳೆದವು. ಅದರ ಜೊತೆಗೆ ಶ್ರಮದ ವಿಭಜನೆಯಾಗಿ ವಿವಿಧ ಕಸುಬುದಾರರು ಹುಟ್ಟಿಕೊಂಡಂತೆ ಸಮಾಜದಲ್ಲಿ ವಿವಿಧ ಶ್ರೇಣಿಗಳೂ ಉಂಟಾದವು; ಕೆಲವರು ಹೆಚ್ಚು ಆಸ್ತಿವಂತರೂ, ಧನಿಕರೂ ಆದರೆ, ಇನ್ನು ಕೆಲವರು ಬಡವರಾದರು. ಇನ್ನೊಂದೆಡೆ, ಈ ಪಂಗಡಗಳ ಜನಸಂಖ್ಯೆಯು ಬೆಳೆದಂತೆ ಆಹಾರದ ಅಗತ್ಯವೂ ಹೆಚ್ಚಿ ಇನ್ನಷ್ಟು ಕಾಡುಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವ ಕೆಲಸವೂ ನಿರಂತರವಾಗಿ ನಡೆಯಿತು; ಈ ವಿಸ್ತರಣೆಯ ನೆಪದಲ್ಲಿ ಕಾಡುಗಳಲ್ಲಿದ್ದ ಆದಿವಾಸಿಗಳೊಂದಿಗೆ ಕಾದಾಟಗಳಾಗಿ ಹಲವು ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವಂತಾಯಿತು., ಇಂತಹಾ ಸಾಮಾಜಿಕ ಅಸಮಾನತೆಗಳು ಹಾಗೂ ಆಸ್ತಿ-ಪಾಸ್ತಿಗಾಗಿ ಆಕ್ರಮಣಗಳು ಇಂದಿಗೂ ಮುಂದುವರಿದಿರುವುದನ್ನು ನಾವು ಕಾಣಬಹುದು.

ಪ್ರಕೃತಿಯ ಭಾಗವೇ ಆಗಿ ಕಾಡುಗಳಲ್ಲಿ ಜೀವಿಸುತ್ತಿದ್ದ ಮನುಷ್ಯನ ಕಲ್ಪನೆಗೂ, ಸಾಮರ್ಥ್ಯಕ್ಕೂ ನಿಲುಕದ ಹಲವಾರು ನೈಸರ್ಗಿಕ ಘಟನೆಗಳು ಸಹಜವಾಗಿಯೇ ಅವನಲ್ಲಿ ಆತಂಕವನ್ನೂ, ಭಯವನ್ನೂ ಮೂಡಿಸಿದವು. ಇಂತಹವುಗಳಿಂದ ತನಗೇನೂ ಅಪಾಯವಾಗದಿರಲೆಂದು ಪ್ರಕೃತಿಯ ಮಹಾನ್ ಶಕ್ತಿಗಳನ್ನು ಪೂಜಿಸುವ ಕ್ರಮವೂ ಆರಂಭಗೊಂಡಿತು. ಸೂರ್ಯ, ಚಂದ್ರ, ಬೆಂಕಿ, ಗಾಳಿ ಇತ್ಯಾದಿಯಾಗಿ ‘ಪ್ರಕೃತಿ ದೇವತೆಗಳ’ ಆರಾಧನೆಯನ್ನು ಬಹಳಷ್ಟು ಸಮಾಜಗಳಲ್ಲಿ ನಾವು ಇಂದಿಗೂ ಕಾಣುತ್ತೇವೆ. ಭಾರತದಲ್ಲಿರುವ ಹಲವಾರು ಆದಿವಾಸಿ-ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಯಾವುದೇ ಆಧುನಿಕ ಧರ್ಮಗಳ ಸೋಂಕಿಲ್ಲದೆ, ಪ್ರಕೃತಿ ದೇವತೆಗಳ ಆರಾಧನೆಯೇ ಮುಖ್ಯವಾಗಿರುವುದನ್ನು ಕಾಣಬಹುದು.

ಸಮಾಜದಲ್ಲಿ ಅಸಮಾನತೆಗಳು ಹೆಚ್ಚಿದಂತೆ ಉಳ್ಳವರು ಇಲ್ಲದವರನ್ನು ಇನ್ನಷ್ಟು ಶೋಷಿಸಿ, ಪೀಡಿಸಿ ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದಕ್ಕೆ ಹೊಸ ಹೊಸ ವಿಧಾನಗಳ ಬಳಕೆಯು ಆರಂಭವಾಯಿತೆನ್ನಬಹುದು. ಸಾರ್ವತ್ರಿಕವಾಗಿದ್ದ ಪ್ರಕೃತಿ ಪೂಜೆಯು ನಿಧಾನವಾಗಿ ಪುರೋಹಿತವರ್ಗದ ಪಾಲಾಯಿತು; ಹೊಸ ಹೊಸದಾದ ಅನೇಕ ದೇವತೆಗಳೂ ಹುಟ್ಟಿಕೊಂಡವು. ಬಲಿಷ್ಠರಾಗಿದ್ದ ರಾಜರುಗಳು, ವಿಶೇಷ ಸಾಮರ್ಥ್ಯಗಳನ್ನು ಹೊಂದಿದ್ದವರು ಮುಂತಾದವರೂ ಕಾಲಕ್ರಮೇಣ ದೈವತ್ವವನ್ನು ಸಂಪಾದಿಸಿದರು.[ಕೆಲವು ಚಲನಚಿತ್ರ ತಾರೆಯರು ದೈವತ್ವಕ್ಕೇರುವುದನ್ನು ಸಮಕಾಲೀನ ಸಮಾಜದಲ್ಲಿಯೂ ನಾವು ಕಾಣುತ್ತೇವೆ!] ಆಳುವ/ಬಲಿಷ್ಠ ವರ್ಗಗಳು ಪುರೋಹಿತ ವರ್ಗದೊಂದಿಗೆ ಸೇರಿಕೊಂಡು ಶೋಷಣೆಯನ್ನು ವ್ಯವಸ್ಥಿತಗೊಳಿಸಿದರು; ‘ಧರ್ಮ’ವು ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿಬಿಟ್ಟಿತು.

ಈ ಶೋಷಣೆಯ ವಿರುದ್ಧ ಅಲ್ಲಲ್ಲಿ ಬಂಡಾಯಗಳೂ ನಡೆದವು. ಯೇಸು, ಬುದ್ಧ, ನಾನಕ, ಬಸವಣ್ಣ ಮುಂತಾದವರು ಸಮಕಾಲೀನ ವ್ಯವಸ್ಥೆಯ ವಿರುದ್ಧ ಬಂಡೆದ್ದು ಬೇರೆ ದಾರಿ ತೋರಿದರು. ಕಾಲಕ್ರಮೇಣ ಇವರು ತೋರಿದ ಬದಲಿ ದಾರಿಗಳೇ ಪ್ರತ್ಯೇಕ ಧರ್ಮಗಳಾಗಿ ಬೆಳೆದವು; ಅವುಗಳಲ್ಲಿ ಕೆಲವು ಇನ್ನಷ್ಟು ಶೋಷಣೆಯ, ಪುರೋಹಿತ ಪ್ರಾಬಲ್ಯದ ಧರ್ಮಗಳಾಗಿ ಬೆಳೆದವು ಎನ್ನುವುದೊಂದು ವಿಪರ್ಯಾಸವೇ ಸರಿ. ಭಾರತದ ನೆಲದಲ್ಲಿ ಹುಟ್ಟಿದ ಬೌದ್ಧ, ಜೈನ, ಸಿಕ್ಖ, ಲಿಂಗಾಯತ ಇತ್ಯಾದಿ ಧರ್ಮಗಳು ನಂತರದ ವರ್ಷಗಳಲ್ಲಿ ನಡೆದ ಅವ್ಯಾಹತ ತಂತ್ರಗಳಿಂದಾಗಿ ಮತ್ತೆ ಇವೆಲ್ಲವೂ ಸನಾತನ ಧರ್ಮದ ಭಾಗಗಳೇನೋ ಎನ್ನುವಂತಹ ಪರಿಸ್ಥಿತಿಯನ್ನು ನಿರ್ಮಿಸಲಾದದ್ದನ್ನು ನಾವಿಂದು ಕಾಣುತ್ತಿದ್ದೇವೆ. ಅದೇ ರೀತಿ, ದೇವರೊಬ್ಬನೇ ಮತ್ತು ಅವನು ನಮ್ಮವನೇ ಎಂದು ಬೋಧಿಸಿದ ಧರ್ಮಗಳಲ್ಲಿಯೂ ಕಾಲಕ್ರಮೇಣ ಹಲವು ಉಪದೇವತೆಗಳು ಹುಟ್ಟಿಕೊಂಡವು, ಪೂಜೆಯ ವ್ಯಾಪ್ತಿಯನ್ನು ಹೆಚ್ಚಿಸಿದವು. ವಿಗ್ರಹಾರಾಧನೆಯನ್ನು ಖಂಡಿಸಿದ ಧರ್ಮಗಳಲ್ಲೂ ಚಿತ್ರಗಳು, ನಿರ್ದಿಷ್ಟ ಹೆಸರುಗಳು, ರಚನೆಗಳು ಮತ್ತು ಕಾಲಕ್ರಮೇಣ ತಮ್ಮವೇ ಆದ ಮೂರ್ತಿಗಳು ಅಥವಾ ಚಿಹ್ನೆಗಳು ಆರಾಧನಾ ವಸ್ತುಗಳಾದವು.

ಜಗತ್ತಿನ ವಿವಿಧೆಡೆಗಳಲ್ಲಿ ಧರ್ಮಗಳ ಹಿಂಬಾಲಕರೊಳಗೆ ಮಹಾಯುದ್ಧಗಳೇ ನಡೆದಿವೆ, ಧರ್ಮಯುದ್ಧಗಳ ಹೆಸರಲ್ಲಿ ರಕ್ತದ ಕೋಡಿಯೇ ಹರಿದಿದೆ. ಎಲ್ಲಾ ಧರ್ಮಗಳು ಶಾಂತಿಯನ್ನೂ, ಸಹಿಷ್ಣುತೆಯನ್ನೂ ಬೋಧಿಸುತ್ತವೆಯೆಂದು ಹೇಳಲಾಗುತ್ತದೆಯಾದರೂ, ಪ್ರತಿಯೊಂದು ಧರ್ಮವೂ ತನ್ನ ಶ್ರೇಷ್ಠತೆಯನ್ನು ಸಾರುವ ಮೂಲಕ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಧರ್ಮಗಳ ನಡುವಿನ ಕಲಹಗಳನ್ನು ಪ್ರಚೋದಿಸುತ್ತವೆ, ಸಮರ್ಥಿಸುತ್ತವೆ. ಧರ್ಮದ ಹೆಸರಲ್ಲಾದ ಸಾವುನೋವುಗಳು ಬೇರೆಲ್ಲಾ ಯುದ್ದಗಳಲ್ಲಾದ ಸಾವುನೋವುಗಳಿಗಿಂತಲೂ ಹೆಚ್ಚು ಎನ್ನುವುದು ಮನುಕುಲದ ಚರಿತ್ರೆಯಲ್ಲಿ ದಾಖಲಾಗಿರುವ ಸತ್ಯವಾಗಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹೋರಾಟಗಳಾಗಲೀ, ‘ಧರ್ಮ ಯುದ್ಧಗಳಾಗಲೀ’ ಜನಸಾಮಾನ್ಯರಿಗೆ ಯಾತನೆಯನ್ನಲ್ಲದೆ ಬೇರಾವುದೇ ಫಲವನ್ನೂ ನೀಡಲಾರವು. ಅಂತಹಾ ಹಿಂಸೆಯ ಮುಂಚೂಣಿಯಲ್ಲಿ ಕೆಳವರ್ಗಗಳ ಜನರನ್ನು ಬಳಸಿಕೊಂಡು, ಮೇಲ್ವರ್ಗಗಳು ಹಾಗೂ ಪುರೋಹಿತ ವರ್ಗಗಳು ತಮ್ಮ ಅಧಿಕಾರವನ್ನೂ, ಸಮಾಜದ ಮೇಲಿನ ಹಿಡಿತವನ್ನೂ ಬಲಪಡಿಸಲು ಪ್ರಯತ್ನಿಸುತ್ತವೆ ಮತ್ತು ಅವರ ಈ ಯತ್ನಕ್ಕೆ ಧನಿಕರು, ಬಂಡವಾಳಶಾಹಿಗಳು, ಭೂಮಾಲಿಕರು ಮತ್ತಿತರ ಲಾಭಬಡುಕರ ಬೆಂಬಲವು ಸದಾ ಇರುತ್ತದೆ. ನಷ್ಟಗಳೇನೇ ಇದ್ದರೂ ಅದು ಕೆಳವರ್ಗದವರಿಗೆ, ಲಾಭಗಳೆಲ್ಲವೂ ಅವರನ್ನು ಬಳಸಿಕೊಂಡ ಮೇಲ್ವರ್ಗದವರಿಗಷ್ಟೇ. ಅಧಿಕಾರದಲ್ಲಾಗಲೀ, ಸಂಪತ್ತಿನಲ್ಲಾಗಲೀ ಕೆಳವರ್ಗಗಳ ಜನರು ಯಾವುದೇ ಪಾಲನ್ನು ಕೇಳುವಂತಿಲ್ಲ.

ಪುರೋಹಿತ ವರ್ಗ ಹಾಗೂ ಅವರ ಕಪಿಮುಷ್ಠಿಯಲ್ಲಿರುವ ಆಳುವ ವರ್ಗಗಳು ಸದಾ ಕಾಲವೂ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳಿಂದ ಭಯಗೊಂಡು ಅವುಗಳನ್ನು ಮೆಟ್ಟಿಹಾಕಲು ಪ್ರಯತ್ನಿಸಿವೆ. ಸಾಕ್ರಟೀಸ್, ಗೆಲಿಲಿಯೋ, ಜಿಯೋರ್ಡಾನೋ ಬ್ರುನೊ, ಚಾರ್ವಾಕರು, ಕಣಾದ ಮುಂತಾದ ಎಷ್ಟೋ ಮಂದಿ ಮತಿಭ್ರಾಂತರೆಂದು ಜರೆಯಲ್ಪಟ್ಟಿರುವ, ಹಿಂಸೆಗೊಳಗಾಗಿರುವ ಅಥವಾ ಜೀವವನ್ನೇ ಕಳೆದುಕೊಂಡಂತಹ ನಿದರ್ಶನಗಳು ನಮ್ಮ ಮುಂದಿವೆ. ಇಂದಿಗೂ ಕೂಡಾ ಬುದ್ಧಿಜೀವಿಗಳು ಹಾಗೂ ವಿಚಾರವಂತರನ್ನು ಅವಹೇಳನಕಾರಿಯಾಗಿ ನಿಂದಿಸುವ ಅಭ್ಯಾಸವನ್ನು ಪುರೋಹಿತಶಾಹಿ ಶಕ್ತಿಗಳು ಮುಂದುವರಿಸಿವೆ. ‘ಧರ್ಮದ ವಕ್ತಾರರುಗಳು’ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಕಲ ಪ್ರಯೋಜನಗಳನ್ನು ಪಡೆಯುವಲ್ಲಿ ಯಾವ ಹಿಂಜರಿಕೆಯನ್ನು ತೋರದಿದ್ದರೂ, ವಿಜ್ಞಾನ ಹಾಗೂ ವೈಚಾರಿಕ ಚಿಂತನೆಗಳನ್ನು ಖಂಡಿಸುವಲ್ಲಿ ಇಂದಿಗೂ ಕೂಡಾ ಮುಂಚೂಣಿಯಲ್ಲಿರುವುದು ಅವರ ಇಬ್ಬಗೆಯ ನೀತಿಗೆ ಸ್ಪಷ್ಟವಾದ ನಿದರ್ಶನವಾಗಿದೆ.

ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿಯೂ, ಅಧಿಕಾರಗ್ರಹಣಕ್ಕಾಗಿಯೂ ದುರ್ಬಳಕೆ ಮಾಡುವ ಪರಿಪಾಠವು ಇಂದಿಗೂ ಮುಂದುವರಿದಿದೆ. ಅಮೆರಿಕಾದಲ್ಲಿ ದೊಡ್ಡ ಬಂಡವಾಳಶಾಹಿಗಳು, ನವ ವಸಾಹತುವಾದಿಗಳು ಹಾಗೂ ಸಾಮ್ರಾಜ್ಯಶಾಹಿ ವಿಸ್ತರಣಾವಾದಿಗಳೆಲ್ಲರನ್ನು ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷವು ಕ್ರಿಶ್ಚಿಯನ್ ಧರ್ಮವನ್ನು ಮತ್ತದರ ವಿಜ್ಞಾನ ವಿರೋಧಿ, ಗರ್ಭಪಾತ ವಿರೋಧಿ ಧೋರಣೆಗಳನ್ನು ಊರುಗೋಲಾಗಿ ಬಳಸುತ್ತದೆಯಲ್ಲದೆ, ಈ ವಿಷಯಗಳನ್ನು ಚುನಾವಣಾ ಪ್ರಣಾಲಿಕೆಯೊಳಕ್ಕೂ ತುರುಕಿಸುತ್ತದೆ. ಭಾರತದಲ್ಲಿಯೂ ಬಂಡವಾಳಶಾಹಿ, ಪುರೋಹಿತಶಾಹಿ ಸರ್ವಾಧಿಕಾರಿ ಆಡಳಿತ ಮಂತ್ರವನ್ನು ಹೊಂದಿರುವ ಬಿಜೆಪಿಯು ಹಿಂದೂ ಧರ್ಮದ ಹೆಸರನ್ನು ಮತ್ತದರ ಹೆಸರಲ್ಲಿ ಹಿಂಸೆಯನ್ನು ತನ್ನ ಅಸ್ತ್ರಗಳಾಗಿ ಬಳಸಿಕೊಳ್ಳುತ್ತದೆ ಮತ್ತು ಅದಕ್ಕಾಗಿ ಸಮಾಜದ ಕೆಳವರ್ಗಗಳ ಜನರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.

ಭಾರತದಲ್ಲಿ ಧರ್ಮಗಳು ಮತ್ತು ಜಾತಿಗಳು:

ಅದಾಗಲೇ ಹೇಳಿರುವಂತೆ, ಆಫ್ರಿಕಾದಿಂದ ಭರತ ಖಂಡವನ್ನು ತಲುಪಿದ ಮೊದಲ ಮನುಷ್ಯರು ಇಲ್ಲಿನ ಸಮೃದ್ಧ ಕಾಡುಗಳಲ್ಲಿ, ಗುಹೆಗಳಲ್ಲಿ ಸಾವಿರಾರು ವರ್ಷಗಳ ಕಾಲ ವಾಸವಾಗಿದ್ದು ಭಾರತದ ಆದಿವಾಸಿಗಳಾದರು. ಯುರೇಷಿಯಾದಲ್ಲಿ ಕೃಷಿ ಹಾಗೂ ಪಶುಸಾಕಣೆಯನ್ನು ಜೀವನವಿಧಾನವಾಗಿ ಅಳವಡಿಸಿಕೊಂಡಿದ್ದ ಜನಾಂಗದವರು ತಮ್ಮ ರಾಜ್ಯವಿಸ್ತರಣೆಯ ಅಂಗವಾಗಿ ಸುಮಾರು ಎಂಟು ಸಾವಿರ ವರ್ಷಗಳ ಹಿಂದೆ ಭರತ ಖಂಡಕ್ಕೂ ಕಾಲಿಟ್ಟರು, ಇಲ್ಲಿನ ಆದಿವಾಸಿಗಳನ್ನು ಎದುರಿಸಿದರು. ಆದಿವಾಸಿಗಳಲ್ಲಿ ಕೆಲವರು ಶರಣಾಗಿ ಅವರ ಅಡಿಯಾಳಾಗಿ ದುಡಿಯತೊಡಗಿದರು; ಇನ್ನು ಕೆಲವು ದಿಟ್ಟರು ಈ ದಾಳಿಗಳನ್ನೆದುರಿಸಿ ಈ ಹೊಸ ವ್ಯವಸ್ಥೆಯಿಂದ ಹೊರಗಿಡಲ್ಪಟ್ಟು ದಾನವರೋ, ಅಸ್ಪ್ರಶ್ಯರೋ ಆಗಿಬಿಟ್ಟರು.

ಭಾರತದ ಆದಿವಾಸಿ

ಹೊರಗಿನಿಂದ ಬಂದವರು ಇಲ್ಲಿನವರ ಕೆಲವು ಜೀವನಕ್ರಮಗಳನ್ನು ಅಳವಡಿಸಿಕೊಂಡರೆ, ಅವರೊಂದಿಗೆ ಸೇರಿಕೊಂಡ ಇಲ್ಲಿನವರು ದಾಳಿಗಾರರ ಸಾಮಾಜಿಕ ವ್ಯವಸ್ಥೆಯ ಭಾಗವಾಗಿಬಿಟ್ಟರು. ‘ತಲೆಯಿದ್ದ’ ಬ್ರಾಹ್ಮಣರು, ಭುಜಬಲದಲ್ಲಿ ಆಳುವ ಕ್ಷತ್ರಿಯರು, ತೊಡೆಯಲ್ಲಿ ತಿಜೋರಿಯಿಟ್ಟ ವೈಶ್ಯರು ಜೊತೆ ಸೇರಿ ಆಡಳಿತವನ್ನೂ, ಸಂಪತ್ತನ್ನೂ ತಮ್ಮೊಳಗಿಟ್ಟುಕೊಂಡರೆ, ಅವರಿಗಾಗಿ ದುಡಿಯುತ್ತಿದ್ದವರು ಶೂದ್ರರಾಗಿ ಪಾದ ಸೇರಿದರು. ಕರ್ಮವಷ್ಟೇ ನಿನ್ನ ಧರ್ಮ, ಅದಕ್ಕೆ ಫಲಾಪೇಕ್ಷೆಯನ್ನು ಮಾಡಕೂಡದು, ಅದೇನಿದ್ದರೂ ಮೇಲಿನವರಿಗೆ ಬಿಟ್ಟದ್ದೆನ್ನುವ ಬೋಧೆಯು ಧರ್ಮದ ಭಾಗವೇ ಆಗಿಬಿಟ್ಟಿತು. ರಾಜರುಗಳ ನೆರವಿನಿಂದ ಬೃಹತ್ ದೇವಾಲಯಗಳು ಕಟ್ಟಲ್ಪಟ್ಟು ಪುರೋಹಿತರು ಗರ್ಭಗುಡಿಯೊಳಗೆ ಅಡಗಿಸಲ್ಪಟ್ಟ ದೇವರಿಗೆ ಹತ್ತಿರವಾಗಿ, ದುಡಿಯುವವರು ದೂರವಿಡಲ್ಪಟ್ಟರು. ಈ ಪರಿಸ್ಥಿತಿ ಇಂದಿಗೂ ಹಾಗೆಯೇ ಮುಂದುವರಿದಿದೆಯೆನ್ನಬಹುದು.

ಹೀಗೆ ರೂಪುಗೊಂಡ ಭಾರತದ ಮೊದಲ ನಾಗರಿಕತೆಯಲ್ಲಿ ಬೇರೂರಿದ್ದ ಹಿಂಸೆ, ಅನ್ಯಾಯ ಹಾಗೂ ಅಸಮಾನತೆಗಳಿಂದ ಬೇಸತ್ತ ಕೆಲವರಿಂದ ಅನ್ಯ ಮಾರ್ಗಗಳ ಅನ್ವೇಷಣೆಯೂ ನಡೆಯಿತು. ಚಾರ್ವಾಕರ ಲೋಕಾಯತ ದರ್ಶನ, ಬೌದ್ಧ, ಜೈನ ಧರ್ಮಾದಿಗಳು ಹುಟ್ಟಿದವು. ಬಸವಣ್ಣ, ನಾನಕ, ನಾರಾಯಣ ಗುರು ಮುಂತಾದ ಹಲವರು ಕೂಡಾ ಬೇರೆ ದಾರಿ ತೋರಿದರು. ಅಶೋಕನ ಕಾಲದಲ್ಲಿ ಬೌದ್ಧ ಧರ್ಮವು ತನ್ನ ಉಚ್ಛ್ರಾಯವನ್ನು ತಲುಪಿತಾದರೂ ನಂತರದ ವರ್ಷಗಳಲ್ಲಿ ಬ್ರಾಹ್ಮಣ್ಯದ ಸಮರ್ಥಕರಾದ ಕೆಲವು ರಾಜರುಗಳ ಅವ್ಯಾಹತ ದಾಳಿಗಳಿಂದಾಗಿ ಈ ಎಲ್ಲ ಬದಲಿ ದಾರಿಗಳೂ ತಮ್ಮ ಅವನತಿಯನ್ನು ಕಂಡವು ಅಥವಾ ಇವೆಲ್ಲಾ ಹಿಂದೂ ಧರ್ಮದ ಭಾಗಗಳೇ ಎನ್ನುವಂತೆ ಬಿಂಬಿಸಲ್ಪಟ್ಟವು.

ಗ್ರೀಕರು, ಇಸ್ಲಾಂ ಧರ್ಮಾನುಯಾಯಿಗಳಾಗಿದ್ದ ಪರ್ಷಿಯನರು/ತುರ್ಕರು, ಕ್ರಿಶ್ಚಿಯನ್ ಧರ್ಮಾನುಯಾಯಿಗಳಾಗಿದ್ದ ಯುರೋಪಿನ ಸಾಮ್ರಾಜ್ಯಶಾಹಿಗಳೆಲ್ಲರೂ ಕಾಲಕ್ರಮೇಣ ಭಾರತಕ್ಕೆ ದಾಳಿಯಿಟ್ಟರು; ಇಲ್ಲಿನ ಸಂಪತ್ತನ್ನು ದೋಚಿದರು. ಆಯಾ ಕಾಲದಲ್ಲಿ ಇಲ್ಲಿದ್ದ ಆಳುವ ವರ್ಗಗಳವರು ದಾಳಿಕೋರರೊಂದಿಗೆ ಸೆಣಸಿದರು, ಸೋತರು, ಶರಣಾಗತರಾದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬಯಸಿದ ಬಹಳಷ್ಟು ರಾಜರುಗಳು ಹೊರಗಿನಿಂದ ಬಂದವರೊಂದಿಗೆ ಸೇರಿಕೊಂಡು ವೈವಾಹಿಕ ಸಂಬಂಧಗಳನ್ನೂ ಏರ್ಪಡಿಸಿಕೊಂಡರು, ಹೀಗೆ ನಿಧಾನಕ್ಕೆ ಇನ್ನಿತರ ಧರ್ಮಗಳೂ ಇಲ್ಲಿ ಕಾಲೂರಲು ಸಾಧ್ಯವಾಯಿತು. ಈ ಎಲ್ಲವುಗಳ ಮಧ್ಯೆ, ಇಲ್ಲಿದ್ದ ಆದಿವಾಸಿಗಳು ಇನ್ನಷ್ಟು ದಾಳಿಗಳಿಗೊಳಗಾದರು, ಮೂಲೆಗುಂಪಾದರು. ವಿಶೇಷವೆಂದರೆ ಜಗತ್ತಿನ ಬಹುಭಾಗಗಳಲ್ಲಿ ಆದಿವಾಸಿಗಳ ದುರ್ಗತಿಯು ಇದೇ ಆಗಿರುವುದನ್ನು ಕಾಣಬಹುದು. ಅಮೆರಿಕಾದ ರೆಡ್ ಇಂಡಿಯನರು, ಆಸ್ಟ್ರೇಲಿಯಾದ ಮೂಲ ನಿವಾಸಿಗಳು, ಆಫ್ರಿಕಾದ ಮೂಲ ಜನಾಂಗಗಳೆಲ್ಲರೂ ಇಂದಿಗೂ ನಾಗರಿಕತೆಯ ಹೊರವ್ಯಾಪ್ತಿಗಳಲ್ಲಿಯೇ ಬಾಳುತ್ತಿರುವುದನ್ನು ನಾವು ಕಾಣುತ್ತೇವೆ. ಮನುಕುಲದ ತೊಟ್ಟಿಲಾದ ಆಫ್ರಿಕಾದಲ್ಲಿ ಬಡತನ ಹಾಗೂ ಅನಾರೋಗ್ಯಗಳು ತಾಂಡವವಾಡುತ್ತಿದ್ದು ದೈತ್ಯ ರಾಷ್ಟ್ರಗಳ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿವೆ.

ಸಾಮಾಜಿಕ ನ್ಯಾಯ ಹೇಗೆ?

ಹೀಗೆ ಮನುಕುಲದ ಚರಿತ್ರೆಯನ್ನು ವೈಜ್ಞಾನಿಕವಾಗಿ ಅವಲೋಕಿಸಿದರೆ, ಮನುಕುಲವೆಲ್ಲವೂ ಒಂದೇ ಎನ್ನುವುದೂ, ಧರ್ಮ ಹಾಗೂ ಜಾತಿಗಳ ಹೆಸರಲ್ಲಿ ನಾವಿಂದು ಕಾಣುತ್ತಿರುವ ಶ್ರೇಣೀಕೃತ ವ್ಯವಸ್ಥೆಯು ಉಳ್ಳವರು ಇಲ್ಲದವರನ್ನು ಶೋಷಿಸಲು ಮಾಡಿಕೊಂಡಿರುವ ಏರ್ಪಾಡೆನ್ನುವುದೂ ಸ್ಪಷ್ಟವಾಗುತ್ತದೆ. ಆದ್ದರಿಂದ ನಿಜಾರ್ಥದಲ್ಲಿ ಸಾಮಾಜಿಕ ನ್ಯಾಯವು ದೊರೆಯಬೇಕಾದರೆ ಈ ಶ್ರೇಣೀಕೃತ ವ್ಯವಸ್ಥೆಯನ್ನು ಕಿತ್ತೊಗೆದು ಎಲ್ಲ ಮನುಷ್ಯರಿಗೂ ಸಮಾನ ಅವಕಾಶಗಳಿರುವ ಸಾಮಾಜಿಕ ವ್ಯವಸ್ಥೆಯನ್ನು ಮತ್ತೆ ಕಟ್ಟುವುದೊಂದೇ ದಾರಿಯಾಗಿದೆ. ದೇವರು, ಧರ್ಮ, ಜಾತಿ ಮತ್ತಿತರ ಕೃತಕವಾದ, ಮಾನವ ನಿರ್ಮಿತ ವರ್ಗೀಕರಣಗಳ ಹಂಗಿಲ್ಲದ ಸಶಕ್ತ ಸಮಾಜದ ನಿರ್ಮಾಣವೇ ನಮ್ಮ ಗುರಿಯಾಗಿರಬೇಕು. ಅಲ್ಲಿಯವರೆಗೆ, ಈಗಿರುವ ವ್ಯವಸ್ಥೆಯ ನಿಜ ಸಂಗತಿಗಳನ್ನು ಅರ್ಥೈಸಿಕೊಂಡು ಅದರಲ್ಲಾಗುತ್ತಿರುವ ಶೋಷಣೆಯನ್ನು ಎಲ್ಲರೊಂದಾಗಿ ಎದುರಿಸಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ. ಸಂವಿಧಾನದ, ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಈ ಅಸಮಾನತೆಯ ವಿರುದ್ಧ ಹೋರಾಡುತ್ತಾ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನೂ, ಅದನ್ನು ಸಮರ್ಥಿಸಲು ಹೇಳಲಾಗುತ್ತಿರುವ ಸುಳ್ಳುಗಳನ್ನೂ ಎದುರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಮಾಜದಲ್ಲಿರುವ ಅವಕಾಶವಂಚಿತರು, ದುರ್ಬಲರು, ದಲಿತರೆಂದು ಕರೆಸಿಕೊಳ್ಳುತ್ತಿರುವ ಇಲ್ಲಿನ ಮೂಲನಿವಾಸಿಗಳು, ದುಡಿಯುವ ಜನರು ಮತ್ತಿತರ ಎಲ್ಲಾ ಶೋಷಿತ ವರ್ಗಗಳ ಜನರು ಒಂದಾಗಿ ತಮ್ಮ ಬದುಕುವ, ಶಿಕ್ಷಣ ಪಡೆಯುವ ಹಾಗೂ ಆರೋಗ್ಯವನ್ನು ಪಡೆಯುವ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...