Saturday, December 31, 2011

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1


ಡಾ. ಎನ್. ಜಗದೀಶ್ ಕೊಪ್ಪ

ಅದು 1985ರ ಚಳಿಗಾಲದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಪ್ರಾರಂಭದ ಒಂದು ದಿನ. ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಚಾನಲ್‌ನ ತಂಡ ಕಲದೊಂಗಿಯ ಕಾರ್ಬೆಟ್ ಮನೆಯಲ್ಲಿ ಬೀಡು ಬಿಟ್ಟು ಆತನ ಬಗ್ಗೆ ಚಿತ್ರೀಕರಣ ಮಾಡುತಿತ್ತು.

ಕಾರ್ಬೆಟ್‌ನ ಶಿಖಾರಿ ಅನುಭವ ಹಾಗೂ ಆತನಿಗೆ ಕಾಡಿನ ಶಿಖಾರಿಯ ವೇಳೆ 30ಕ್ಕೂ ಹೆಚ್ಚು ವರ್ಷಗಳ ಕಾಲ ನೆರವಾಗಿದ್ದ ಕುನ್ವರ್ ಸಿಂಗ್ ಪಾತ್ರಗಳನ್ನು ಮರು ಸೃಷ್ಟಿ ಮಾಡಲಾಗಿತ್ತು. ಕಾರ್ಬೆಟ್‌ನ ಪಾತ್ರಕ್ಕಾಗಿ ಆತನನ್ನೇ ಹೋಲುವಂತಹ, ಅದೇ ವಯಸ್ಸಿನ ವ್ಯಕ್ತಿಯನ್ನು ಲಂಡನ್ನಿನ ರಂಗಭೂಮಿಯಿಂದ ಕರೆತರಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ ಜಿಮ್ ಕಾರ್ಬೆಟ್ ಕುರಿತು “ಕಾರ್ಪೆಟ್ ಸಾಹೇಬ್” ಹೆಸರಿನಲ್ಲಿ ಆತ್ಮ ಕಥನ ಬರೆದಿದ್ದ ಲೇಖಕ ಮಾರ್ಟಿನ್ ಬೂತ್ ಚಿತ್ರಕಥೆ ಬರೆದಿದ್ದರು.

ಚಿತ್ರಿಕರಣದ ವೇಳೆ ಸ್ಥಳಿಯರೊಂದಿಗೆ ಮಾತುಕತೆ, ಇನ್ನಿತರೆ ವ್ಯವಹಾರಗಳಿಗೆ ಅನುಕೂಲವಾಗಲೆಂದು ಮುಂಬೈನಿಂದ ತಂತ್ರಜ್ಙರು ಮತ್ತು ಸಹಾಯಕರನ್ನು ಸಹ ಕರೆಸಲಾಗಿತ್ತು. ಅದೊಂದು ದಿನ ಚಿತ್ರೀಕರಣ ನಡೆಯುತಿದ್ದ ಬೆಳಿಗ್ಗೆ ವೇಳೆ ಸ್ಥಳೀಯರು ಬಂದು ದೂರದ ಊರಿನಿಂದ ಕಾರ್ಬೆಟ್‌ನನ್ನು ನೋಡಲು ವೃದ್ಧನೊಬ್ಬ ಬಂದಿದ್ದಾನೆ ಎಂದರು. ಚಿತ್ರದ ತಂಡ ಬಹುಷಃ ಕಾರ್ಬೆಟ್‌ನ ಪಾತ್ರಧಾರಿಯನ್ನು ನೋಡಲು ಬಂದಿರಬೇಕು ಎಂದು ಊಹಿಸಿ ಆ ವೃದ್ಧನಿಗೆ ಅವಕಾಶ ಮಾಡಿಕೊಟ್ಟಿತು.

ಕಲದೊಂಗಿಯಿಂದ ಸುಮಾರು 90 ಕಿಲೋಮೀಟರ್ ದೂರದ ಹಳ್ಳಿಯಿಂದ ಗುಡ್ಡಗಾಡು ಪ್ರದೇಶವನ್ನು ಹತ್ತಿ ಇಳಿದು, ನಾಲ್ಕು ದಿನಗಳ ಕಾಲ ತನ್ನ ಮೊಮ್ಮಕ್ಕಳ ಜೊತೆ ಕಾಲು ನಡಿಗೆಯಲ್ಲಿ ಬಂದಿದ್ದ ಆ ವೃದ್ಧ ಮರದ ಟೊಂಗೆಯೊಂದನ್ನ ಮುರಿದು ಅದನ್ನೇ ಊರುಗೋಲು ಮಾಡಿಕೊಂಡು ನಡೆದು ಬಂದಿದ್ದ.

ಗೇಟಿನ ಹೊರ ಭಾಗದಲ್ಲಿ ನಿಂತಿದ್ದ ಅವನಿಗೆ ಕಾರ್ಬೆಟ್ ಪಾತ್ರಧಾರಿಯನ್ನು ಬೇಟಿ ಮಾಡಲು ಅವಕಾಶ ಕಲ್ಪಿಸುತಿದ್ದಂತೆ, ಮನೆಯ ವರಾಂಡದಲ್ಲಿ ನಿಂತಿದ್ದ ಪಾತ್ರಧಾರಿಯತ್ತ ನಿಧಾನವಾಗಿ ಮೈ ಬಗ್ಗಿಸಿ ನಡೆದು, ಅವನ ಪಾದದ ಮೇಲೆ ಕಾಡಿನಿಂದ ಕಿತ್ತು ತಂದಿದ್ದ ಹೂವುಗಳನ್ನು ಹಾಕಿ ತನ್ನ ಹಣೆಯನ್ನ ಅವನ ಪಾದಗಳಿಗೆ ಒತ್ತಿ ತನ್ನ ಕಣ್ಣೀರಿನಿಂದ ಪಾದಗಳನ್ನ ತೋಯಿಸಿಬಿಟ್ಟ. ಇಡೀ ದೃಶ್ಯವನ್ನ ಸ್ಥಂಭೀಭೂತರಾಗಿ ನೋಡುತಿದ್ದ ಬಿ.ಬಿ.ಸಿ. ಚಿತ್ರ ತಂಡಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ನಿಧಾನವಾಗಿ ಸಾವರಿಸಿಕೊಂಡ ಆ ವೃದ್ಧ ಎದ್ದು ನಿಂತು ಪಾತ್ರಧಾರಿಗೆ ಕೈ ಮುಗಿಯುತ್ತಾ ತನ್ನ ಗಢವಾಲ್ ಭಾಷೆಯಲ್ಲಿ :ಸಾಬ್ ನಮ್ಮನ್ನು ಇಷ್ಟು ವರ್ಷ ಅನಾಥರನ್ನಾಗಿ ಮಾಡಿ ಎಲ್ಲಿ ಹೋಗಿದ್ದೀರಿ? ದಯಮಾಡಿ ನೀವು ಇಲ್ಲಿಂದ ನಮ್ಮನ್ನು ತೊರೆದು ಹೋಗಬೇಡಿ,” ಎಂದು ಅಂಗಲಾಚತೊಡಗಿದ. ಪರಿಸ್ಥಿತಿಯನ್ನು ಗ್ರಹಿಸಿದ ಚಿತ್ರ ತಂಡ ಮುಂಬೈ ಸಹಾಯಕರ ಮೂಲಕ, “ಈತ ಕಾರ್ಬೆಟ್ ಅಲ್ಲ, ಅವರು ತೀರಿ ಹೋಗಿ 30 ವರ್ಷಗಳಾದವು, ಅವರ ಬಗ್ಗೆ ಚಿತ್ರ ತಯಾರು ಮಾಡುತಿದ್ದೇವೆ,” ಎಂದು ಹೇಳಿಸಿ, ಅ ವೃದ್ಧನಿಗೆ ವಾಸ್ತವ ಸಂಗತಿಯನ್ನು ಮನದಟ್ಟು ಮಾಡಿಕೊಡಲು ಅರ್ಧ ದಿನ ಬೇಕಾಯಿತು. ಇದು ಕಾರ್ಬೆಟ್ ಕುರಿತಾಗಿ ಅಲ್ಲಿನ ಜನತೆ ಹೊಂದಿದ್ದ ಅವಿನಾಭಾವ ಸಂಬಂಧಕ್ಕೆ ಒಂದು ಸಾಕ್ಷಿ ಅಷ್ಟೇ.

1830ರ ದಶಕದಲ್ಲಿ ಇಂಗ್ಲೆಂಡ್‌ನಿಂದ ವಲಸೆ ಬಂದ ಕುಟುಂಬದಲ್ಲಿ ನೈನಿತಾಲ್ ಎಂಬ ಗಿರಿಧಾಮದಲ್ಲಿ ಕಾರ್ಬೆಟ್ ಜನಿಸಿದರೂ ಕೂಡ ತನ್ನ ಬದುಕಿನುದ್ದಕ್ಕೂ ಅವನು ಹಚ್ಚಿಕೊಂಡದ್ದು ಸ್ಥಳೀಯ ಜನರನ್ನು ಮತ್ತು ಕಾಡನ್ನು ಮಾತ್ರ. ಅವನ ವ್ಯಕ್ತಿತ್ವಕ್ಕೆ ಭಾರತದಲ್ಲಿ ಉದಾಹರಣೆ ನೀಡಬಹುದಾದರೆ, ಅದು ಕೊಲ್ಕತ್ತಾದ ಮದರ್ ತೆರೆಸಾ ಮಾತ್ರ. ಅಂತಹ ಮಾತೃ ಹೃದಯ ಆತನದು.

ಕಾರ್ಬೆಟ್ ಕುಟುಂಬ ನೈನಿತಾಲ್‌ನಲ್ಲಿ ವಾಸವಿತ್ತಾದರೂ, ಚಳಿಗಾಲದಲ್ಲಿ ಅಲಿನ್ಲ ಚಳಿ ತಡೆಯಲಾರದೆ ಗಿರಿಧಾಮದ ತಪ್ಪಲಿನಲ್ಲಿ ಇದ್ದ ಚೋಟಾ ಹಲ್ದಾನಿ ಮತ್ತು ಕಲದೋಂಗಿ ಎಂಬ ಹಳ್ಳಿಗಳ ನಡುವೆ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದ ಮನೆಯಲ್ಲಿ ವಾಸ ಮಾಡುತಿತ್ತು. ನೈನಿತಾಲ್‌ನ ವಿಶಾಲವಾದ ಬಂಗಲೆಯಲ್ಲಿ (ಗಾರ್ನಿ ಹೌಸ್) ಬಾಲ್ಯ ಕಳೆದು ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ ಕಾರ್ಬೆಟ್ ಆಗಿನ ಕಾಲದಲ್ಲಿ ಸುಲಭವಾಗಿ ಇಂಗ್ಲೀಷರಿಗೆ ದೊರೆಯುತಿದ್ದ ಸರ್ಕಾರಿ ಕೆಲಸಕ್ಕೆ ಮನಸ್ಸು ಮಾಡದೆ, ಕಾಡಿನತ್ತ ಮುಖಮಾಡಿದ. ಶಿಖಾರಿ ಅವನಿಗೆ ಉಸಿರಿನಷ್ಟೇ ಪ್ರಿಯವಾಗಿತ್ತು. ಒಮ್ಮೆ ತನ್ನ ಮಧ್ಯ ವಯಸ್ಸಿನಲ್ಲಿ ಅರಿಯದೇ ಎರಡು ಮರಿಗಳಿಗೆ ಹಾಲುಣಿಸುತ್ತಾ ಮಲಗಿದ್ದ ತಾಯಿ ಚಿರತೆಗೆ ಗುಂಡಿಟ್ಟು ಕೊಂದು, ನಂತರ ಪಶ್ಚಾತಾಪ ಪಟ್ಟು ಅಂದಿನಿಂದ ಶಿಖಾರಿಗೆ ತಿಲಾಂಜಲಿ ನೀಡಿದ. ಆದರೆ, ಹಳ್ಳಿಗರಿಗೆ ಶಾಪವಾಗುತಿದ್ದ ಹುಲಿ ಮತ್ತು ಚಿರತೆಗಳನ್ನು ಮಾತ್ರ ಸರ್ಕಾರದ ಮತ್ತು ಹಳ್ಳಿಗರ ಮನವಿ ಮೇರೆಗೆ ಭೇಟೆಯಾಡಿ ಕೊಲ್ಲುತಿದ್ದ. ಇದಕ್ಕಾಗಿ ಅವನು ಯಾವ ಸಂಭಾವನೆಯನ್ನು ಪಡೆಯುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ನರ ಭಕ್ಷಕ ಪ್ರಾಣಿಗಳನ್ನು ಬೇಟೆಯಾಡಲು ಐದರಿಂದ ಹತ್ತು ಸಾವಿರ ಹಣವನ್ನು ಗೌರವ ಸಂಭಾವನೆಯಾಗಿ ಸರ್ಕಾರ ನೀಡುತಿತ್ತು. ಹೀಗೆ ಬಂದೂಕು ಬಿಟ್ಟು ಕ್ಯಾಮರಾ ಹಿಡಿದ ಕಾರ್ಬೆಟ್ ಜೀವನ ನಿರ್ವಹಣೆಗೆ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಮೆಲೆ ಕಾರ್ಮಿಕರನ್ನು ಒದಗಿಸುವ ಕಂಟ್ರಾಕ್ಟರ್ ಆಗಿ ಸೇವೆ ಸಲ್ಲಿಸಿದ. ಜೊತೆಗೆ ನೈನಿತಾಲ್ ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ಸಾಮಾಗ್ರಿ ವೈವಹಾರವನ್ನು ಗೆಳೆಯನ ಜೊತೆ ನಡೆಸುತಿದ್ದ.

ತನ್ನ ಜೀವಿತದ ಕಡೆಯವರೆಗೂ ಅವಿವಾಹಿತನಾಗಿ ಉಳಿದ ಕಾರ್ಬೆಟ್ ಗೆ ತನ್ನ ಸಹೋದರಿ ಮಾರ್ಗರೇಟ್ ( ಮ್ಯಾಗಿ) ಎಂದರೆ ಪ್ರಾಣ. ಹಾಗಾಗಿ ಆಕೆಯೂ ಕೂಡ ಮದುವೆಯಾಗದೇ ಜೀವನಪೂರ್ತಿ ತಮ್ಮನ ಜೊತೆ ಉಳಿದಳು. ಈ ಇಬ್ಬರೂ ತಮ್ಮ ಭವಿಷ್ಯದ ಬಗ್ಗೆ ಕರಾರುವಾಕ್ಕಾದ ಯೋಜನೆಗಳನ್ನು ರೂಪಿಸಿಕೊಂಡು ಮುಂದುವರಿಯುತ್ತಿದ್ದರು. ಹಣ ಉಳಿತಾಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತಿದ್ದ ಈ ಇಬ್ಬರು ಬಡವರ ಬಗ್ಗೆ ಮಾತ್ರ ತುಂಬಾ ಉದಾರವಾಗಿ ನಡೆದುಕೊಳ್ಳುತಿದ್ದರು. ಅಂದಿನ ದಿನಗಳಲ್ಲಿ ಮಳೆ ಮತ್ತು ಚಳಿಗಾಲದಲ್ಲಿ ವಿಷಮಶೀತ ಜ್ವರದಿಂದ, ಬೇಸಿಗೆಯಲ್ಲಿ ವಾಂತಿ ಬೇಧಿ, ಹಾವು ಮತ್ತು ಅಪಾಯಕಾರಿ ಕ್ರಿಮಿ ಕೀಟಗಳು ಕಚ್ಚಿ ಜನ ಸಾಯುವುದು ಸಾಮಾನ್ಯವಾಗಿತ್ತು. ಕಾರ್ಬೆಟ್ ಕುಟುಂಬದಲ್ಲಿ ಅವನ ಮಲ ಸಹೋದರ ವೈದ್ಯನಾಗಿದ್ದುದು, ಜೊತೆಗೆ ಅವನ ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕುರಿತಾದ ಅಪಾರ ಪುಸ್ತಕಗಳಿದ್ದ ಕಾರಣ ಅವರ ಬಳಿ ಸದಾ ಎಲ್ಲಾ ಬಗೆಯ ಔಷಧಗಳು ದೊರೆಯುತಿದ್ದವು.

ಕಾರ್ಬೆಟ್‌ನ ತಂದೆತಾಯಿ ತೀರಿ ಹೋದನಂತರ, ಸಹೋದರಿಯರು ಮದುವೆಯಾಗಿ, ಇನ್ನಿತರೆ ಸಹೋದರರು ಉದ್ಯೋಗ ಅರಸಿ ವಿದೇಶಕ್ಕೆ ಹೊರಟುಹೋದ ನಂತರ, ನೈನಿತಾಲ್‌ನ ಗಾರ್ನಿ ಹೌಸ್ ಮನೆ ಮತ್ತು ಕಲದೋಂಗಿ ಬಂಗಲೆ ಅವಿವಾಹಿತರಾಗಿ ಉಳಿದ ಕಾರ್ಬೆಟ್ ಹಾಗೂ ಅವನ ಅಕ್ಕ ಮಾರ್ಗರೇಟ್ ಪಾಲಾಯಿತು. ಹಾಗಾಗಿ ಈ ಎರಡು ಮನೆಗಳು ಹಳ್ಳಿಗರ ಪಾಲಿಗೆ ಆಸ್ಪತ್ರೆಗಳಾದವು. ಹಾವು ಕಡಿತ ಅಥವಾ ವಾಂತಿ ಬೇಧಿ, ಇಲ್ಲವೆ ಜ್ವರ ಹೀಗೆ ಚಿಕಿತ್ಸೆ ಬಯಸಿ ಬಂದವರಿಗೆ ಅಕ್ಕ ತಮ್ಮ ಪ್ರೀತಿಯಿಂದ ಉಪಚರಿಸುತಿದ್ದರು. ಎಷ್ಟೋ ವೇಳೆ ವಾರಗಟ್ಟಲೆ ತಮ್ಮ ಮನೆಯ ಜಗುಲಿಯಲ್ಲಿ ಆಶ್ರಯ ನೀಡಿ ರೋಗಿಗಳು ಚೇತರಿಸಿಕೊಂಡ ಮೇಲೆ ಮನೆಗೆ ಕಳಿಸುತಿದ್ದರು. ಇವರಿಗೆ ಸ್ಥಳಿಯರ ಬಗ್ಗೆ ಅದೆಂತಹ ಅದಮ್ಯ ಪ್ರೀತಿ ಇತ್ತೆಂದರೆ, ಕಾರ್ಬೆಟ್ ಕಾಡು ಪ್ರಾಣಿಗಳಿಂದ ತನ್ನ ಹಳ್ಳಿಯ ಜನ ಹಾಗೂ ಅವರ ಬೆಳೆಗಳನ್ನು ರಕ್ಷಿಸಲು ತನ್ನ ಸ್ವಂತ ಖರ್ಚಿನಿಂದ ಇಡೀ ಹಳ್ಳಿಗೆ ನಾಲ್ಕು ಅಡಿ ದಪ್ಪ ಹಾಗೂ ಆರು ಅಡಿ ಎತ್ತರದ ಕಲ್ಲಿನ ಗೋಡೆಯನ್ನ ಕಟ್ಟಿಸಿಕೊಟ್ಟಿದ್ದಾನೆ. ಈ ಗೋಡೆಯ ಸುತ್ತಳತೆ ಸುಮಾರು ಮೂರು ಕಿಲೋಮೀಟರ್ ಉದ್ದವಿದೆ.

ಇದಲ್ಲದೆ ಪ್ರತಿವರ್ಷ ಹಳ್ಳಿಯಲ್ಲಿ ನಡೆಯುತಿದ್ದ ಬೈಸಾಕಿ ಮತ್ತು ಹೋಳಿ ಹಬ್ಬದಲ್ಲಿ ಇಬ್ಬರೂ ಪಾಲ್ಗೊಳ್ಳುತಿದ್ದರು. ತಮ್ಮ ಮನೆಯಲ್ಲಿ ಆಚರಿಸುತಿದ್ದ ಕ್ರಿಸ್ ಮಸ್ ಹಬ್ಬಕ್ಕೆ ಹಳ್ಳಿಯ ಜನರೆಲ್ಲರನ್ನು ಕರೆಸುತಿದ್ದರು. ಅವರಿಗೆ ಬಡವ ಬಲ್ಲಿದ. ಜಾತಿ, ಧರ್ಮ ಇವುಗಳ ಬಗ್ಗೆ ಬೇಧವಿರಲಿಲ್ಲ. ಸ್ವಾತಂತ್ರ ಪೂರ್ವದ ಭಾರತದ ಎಲ್ಲಾ ಬ್ರಿಟೀಷ್ ವೈಸ್‌ರಾಯ್‌ಗಳ ಜೊತೆ ಕಾರ್ಬೆಟ್ ಒಳ್ಳೆಯ ಸಂಬಂಧ ಹೊಂದಿದ್ದ. ಅವರುಗಳು ಬೇಸಿಗೆಯಲ್ಲಿ ಮಸ್ಸೂರಿ ಅಥವಾ ನೈನಿತಾಲ್ ಗಿರಿಧಾಮಗಳಿಗೆ ಬಂದಾಗ ತಪ್ಪದೆ ಕಾರ್ಬೆಟ್ ಮನೆಗೆ ಬೇಟಿ ನೀಡುತಿದ್ದರು. ಈ ಸಮಯದಲ್ಲಿ ವೈಸ್‌ರಾಯ್‌ಗಳಿಗೆ ಹಳ್ಳಿಗರನ್ನ ಭೆೇಟಿ ಮಾಡಿಸಿ ಚಹಾ ಕೂಟ ಏರ್ಪಡಿಸುತಿದ್ದ. ಇಂದಿಗೂ ಹಳ್ಳಿಗರ ಮನೆಯಲ್ಲಿ ಇಂತಹ ಅಪರೂಪದ ಫೋಟೊಗಳನ್ನು ನೋಡಬಹುದು. ಇಂತಹ ಒಂದು ಅನನ್ಯ ಪ್ರೀತಿಯ ಕಾರಣ ಅಲ್ಲಿನ ಜನ ಕಾರ್ಬೆಟ್‌ನನ್ನು ನಡೆದಾಡುವ ದೇವರು ಎಂದು ನಂಬಿದ್ದರು.

ಅಲ್ಲಿನ ಹಳ್ಳಿಗಳಲ್ಲಿ ಒಂದು ಪ್ರತೀತಿ ಇದೆ. ಅವರನ್ನು ಕಾಡು ಪ್ರಾಣಿಗಳಿಂದ ರಕ್ಷಿಸುತ್ತಿರುವವರು ಹನುಮಾನ್ ಮತ್ತು ಕಾರ್ಪೆಟ್ ಸಾಹೇಬ್ ಎಂದು ಅವರು ನಂಬಿದ್ದಾರೆ. ಅರ್ಧ ಶತಮಾನ ಕಳೆದರೂ ಕಾರ್ಬೆಟ್‌ನನ್ನು ನೋಡದ, ಕೇಳದ ಈಗಿನ ತಲೆಮಾರು ಆತನನ್ನು ಮರೆತಿಲ್ಲ. ಕಲದೋಂಗಿ, ಚೋಟಾಹಲ್ದಾನಿ ಮತ್ತು ರಾಮನಗರ ಎಂಬ ಪಟ್ಟಣದಲ್ಲಿ ಅವನ ಹೆಸರಿನ ಹೋಟೇಲ್, ಶೇವಿಂಗ್‌ಸಲೊನ್, ಟೈಲರಿಂಗ್ ಶಾಪ್, ಹೊಸದಾಗಿ ತಲೆ ಎತ್ತಿರುವ ಬಡಾವಣೆಗಳನ್ನು ಕಾಣಬಹುದು. ಇದು ನಮ್ಮ ಗ್ರಾಮ ಸಂಸ್ಕೃತಿಯ ಜನ ತಮಗೆ ನೆರವಾದ ಒಬ್ಬ ಹೃದಯವಂತನನ್ನು ನೆನೆಯುವ ಬಗೆ. ಆದರೆ ಇದೇ ಮಾತನ್ನು ನೈನಿತಾಲ್ ಗಿರಿಧಾಮದ ಪಟ್ಟಣಕ್ಕೆ ಅನ್ವಯಿಸಲಾಗದು.

ನೈನಿತಾಲ್ ಪಟ್ಟಣ ಪುರಸಭೆಯ ಸದಸ್ಯನಾಗಿ, ನಂತರ ಉಪಾಧ್ಯಕ್ಷನಾಗಿ ಅದಕ್ಕೊಂದು ಸುಂದರ ಕಟ್ಟಡ ನಿರ್ಮಾಣ ಮಾಡಿದುದಲ್ಲದೆ ಭಾರತದಲ್ಲಿ ಪ್ರಪ್ರಥಮವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ಕೀರ್ತಿ ಜಿಮ್ ಕಾರ್ಬೆಟ್‌ನದು. ಇಂತಹ ವ್ಯಕ್ತಿಯ ಬಗ್ಗೆ ಪುರಸಭೆಯಲ್ಲಿ ಇಂದು ಯಾವುದೇ ಮಾಹಿತಿ ಇಲ್ಲ. ಅಷ್ಟೇ ಏಕೆ ಕಾರ್ಬೆಟ್ ಅಂದರೆ ಯಾರು ಎಂದು ಅಲ್ಲಿನ ಸಿಬ್ಬಂದಿ ನಮ್ಮನ್ನೇ ಕೇಳುವ ಸ್ಥಿತಿ. ಇದು ಅವರ ತಪ್ಪಲ್ಲ. ಏಕೆಂದರೆ ಈಗ ನೈನಿತಾಲ್‌ನಲ್ಲಿ ಇರುವುದು ಮೂರು ವರ್ಗದ ಜನ, ಒಂದು ನಿವೃತ್ತ ಸೇನಾಧಿಕಾರಿಗಳು ಮತ್ತು ಭಾರತದ ಪ್ರಸಿದ್ಧ ಕೈಗಾರಿಕೊದ್ಯಮಿಗಳು ಹಾಗೂ ಅವರ ಬೃಹತ್ ತೋಟದ ಮನೆಗಳು. ಇನ್ನೋಂದು ಸರ್ಕಾರಿ ಸಿಬ್ಬಂದಿ. ಮಗದೊಂದು ಪ್ರವಾಸೊದ್ಯಮವನ್ನು ನಂಬಿಕೊಂಡಿರುವ ಮಧ್ಯಮ ವರ್ಗದ ಜನ. ಹಾಗಾಗಿ ಇವರೆಲ್ಲರಿಗೂ ನೈನಿತಾಲ್ ಇತಿಹಾಸದ ಬಗ್ಗೆ ಯಾವುದೇ ಆಸಕ್ತಿ ಇಲ್ಲ.

ನಾನು ನೈನಿತಾಲ್‌ನ ಗಾರ್ನಿ ಹೌಸ್ ಅನ್ನು ಹುಡುಕಲು ಪಟ್ಟ ಪಾಡು ಹೇಳತೀರದು. ಏಕೆಂದರೆ ಆ ಮನೆ ನೋಡದಿದ್ದರೆ ನನ್ನ ಪ್ರವಾಸ ವ್ಯರ್ಥವಾಗುತಿತ್ತು. ಕಾರ್ಬೆಟ್ ಭಾರತ ತೈಜಿಸುವ ಮುನ್ನ ಆ ಮನೆಯನ್ನ ಕೊಂಡುಕೊಂಡಿದ್ದ ಸಕ್ಕರೆ ವ್ಯಾಪಾರಿಯೊಬ್ಬ ತನ್ನೆಲ್ಲಾ ಬಂಧು ಮಿತ್ರರಿಗೆ ತಾನು “ಸ್ವರ್ಗದ ಮೇಲೆ ಭೂಮಿ ತೆಗೆದುಕೊಂಡಿದ್ದೀನಿ,” ಎಂದು ಪತ್ರ ಬರೆದಿದ್ದ. ಅರ್ಧದಿನದ ಹುಡುಕಾಟದ ನಂತರ ಸರೋವರದ ಎದುರಿನ ಗುಡ್ಡದ ಮೇಲೆ ಕಾರ್ಬೆಟ್‌ನ ಆ ಮನೆ ಇರುವುದು ಸ್ಥಳೀಯ ಪುಸ್ತಕದ ಅಂಗಡಿ ಮಾಲಿಕನ ಮೂಲಕ ತಿಳಿಯಿತು. ಆದರೆ, ಈಗ ಆ ಪ್ರದೇಶ ಮಿಲಿಟರಿ ಅಧಿಕಾರಿಗಳ ವಾಸಸ್ಥಳವಾದ್ದರಿಂದ ಯಾರಿಗೂ ಅಲ್ಲಿ ಪ್ರವೇಶ ಇಲ್ಲ. ಕೊನೆಯ ಪ್ರಯತ್ನ ಮಾಡೋಣವೆಂದು ಹೊರಟ ನನಗೆ ನಿರಾಸೆಯಾಗಲಿಲ್ಲ. ಆ ಗುಡ್ಡದ ದಾರಿಯ ಪ್ರವೇಶದಲ್ಲಿ ಇದ್ದ ಮಿಲಿಟರಿ ತಪಾಸಣಾ ಕೇಂದ್ರಕ್ಕೆ ಹೋಗಿ ನನ್ನ ಗುರುತಿನ ಕಾರ್ಡ್ (ಕರ್ನಾಟಕ ಸರ್ಕಾರ ನೀಡಿರುವ ಅಧಿಕೃತ ಪತ್ರಕರ್ತರ ಮಾನ್ಯತಾ ಪತ್ರ) ತೋರಿಸಿ, ಜೊತೆಗೆ ಉತ್ತರಾಂಚಲದ ರಾಜ್ಯಪಾಲರಾದ ನಮ್ಮವರೇ ಆದ ಮಾರ್ಗರೇಟ್ ಆಳ್ವ ನನ್ನ ವಾಹನಕ್ಕೆ ತಪಾಸಣೆಯ ನೆಪದಲ್ಲಿ ಅಡ್ಡಿಯುಂಟು ಮಾಡಬಾರದು ಎಂದು ಪೋಲಿಸರಿಗೆ ನೀಡಿದ್ದ ಪತ್ರ ಎಲ್ಲವನ್ನು ತೋರಿಸಿದೆ. (ಆ ವೇಳೆ ಹರಿದ್ವಾರದಲ್ಲಿ ಮಹಾಕುಂಭ ಮೇಳ ನಡೆಯುತಿತ್ತು. ಅದಕ್ಕಾಗಿ ಡೆಹರಾಡೂನಿನ ರಾಜಭವನದಲ್ಲಿ ಅವರನ್ನು ಬೇಟಿ ಮಾಡಿ ಪತ್ರ ಪಡೆದಿದ್ದೆ.) ಸಮಾರು ಐದು ನಿಮಿಷಗಳ ಕಾಲ ತಮ್ಮ ತಮ್ಮಲ್ಲೇ ಚಱಿಸಿದ ಅಧಿಕಾರಿಗಳು ನನ್ನೊಬ್ಬನನ್ನು ಕರೆದೊಯ್ಯಲು ಸಮ್ಮತಿಸಿದರು. ಆದರೆ ನನ್ನ ಮೊಬೈಲ್ ಮತ್ತು ಕ್ಯಾಮೆರವನ್ನು ತಪಾಸಣಾ ಕೇಂದ್ರದಲ್ಲಿ ಇಟ್ಟು ಬಂದರೆ ಮಾತ್ರ ಪ್ರವೇಶ ಎಂಬ ಷರತ್ತು ವಿಧಿಸಿದರು. ಮನೆ ನೋಡಿದರೆ ಸಾಕು ಎಂಬ ಸ್ಥಿತಿಯಲ್ಲಿದ್ದ ನಾನು ಎಲ್ಲವನ್ನು ಒಪ್ಪಿ ಅವರ ಜೊತೆ ಹೆಜ್ಜೆ ಹಾಕಿದೆ.

ಸುಮಾರು ಒಂದೂವರೆ ಕಿಲೋಮೀಟರ್ ಸಾಗಿದ ನಂತರ ಈಗ ಉದ್ಯಮಿಯೊಬ್ಬರ ಬೇಸಿಗೆ ಅತಿಥಿ ಗೃಹವಾಗಿರುವ ಕಾರ್ಬೆಟ್ ಮನೆಯನ್ನು ತೋರಿಸಿದರು. ನೈನಿತಾಲ್‌ನ ದಕ್ಷಿಣ ಭಾಗದ ಎತ್ತರ ಪ್ರದೇಶದಲ್ಲಿರುವ ಈ ಮನೆಯಿಂದ ಕಾರ್ಬೆಟ್ ಕಾಡಿಗೆ ತೆರಳುತಿದ್ದ ದಾರಿ, ಅಲ್ಲಿಂದ ಕೆಳಗಿನ ತಪ್ಪಲಿನಲ್ಲಿ ಕಾಣುವ ಹಳ್ಳಿಗಳನ್ನು ನೋಡಿ ಕಣ್ತುಂಬಿಕೊಂಡೆ. ವ್ಯಾಪಾರಿಯ ಮಾತುಗಳಲ್ಲಿ ಅತಿಶಯೋಕ್ತಿ ಇಲ್ಲವೆಂದು ಆ ಮನೆಯ ಪರಿಸರ ನೋಡಿದಾಗ ನನಗೆ ಮನದಟ್ಟಾಯಿತು. ಮಿಲಿಟರಿ ಅಧಿಕಾರಿಗಳಿಗೆ ವಂದನೆ ಹೇಳಿ ಇನ್ನೊಂದು ಎತ್ತರದ ಪ್ರದೇಶದತ್ತ ಪ್ರಯಾಣ ಬೆಳಸಿದೆ.

ನೈನಿತಾಲ್ ಗಿರಿಧಾಮದಲ್ಲಿ ಅತ್ಯಂತ ಎತ್ತರದ “ಚೀನಾ ಹೈಟ್” ಎಂದು ಕರೆಯುವ ಈ ಪ್ರದೇಶ ಕಾರ್ಬೆಟ್‌ನ ಪ್ರೀತಿಯ ಸ್ಥಳಗಳಲ್ಲೊಂದು. ಇಲ್ಲಿಂದ ನಾವು ದೂರದ ಟಿಬೇಟ್ ಮತ್ತು ಚೀನಾ ಗಡಿಭಾಗದಲ್ಲಿ ಹಿಮದಿಂದ ಆವೃತ್ತವಾಗಿ ಬೆಳ್ಳಿಯ ಬೆಟ್ಟಗಳಂತೆ ಬಿಸಿಲಿಗೆ ಹೊಳೆಯುವ ಶಿವಾಲಿಕ್ ಪರ್ವತಗಳನ್ನು ಬರಿಗಣ್ಣಿನಿಂದ ನೋಡಬಹುದು.

(ಮುಂದುವರಿಯುವುದು)

ವರ್ತಮಾನ ಕೃಪೆ

ಉಳಿದುಹೋದ ನೆನಪಿನ ಚಿತ್ರ


ಐದು ದ್ವಿಪದಿಗಳು

1

ಮತ್ತೆ ದೀಪ ಹಚ್ಚಿಡುವಂತದ್ದೇನಿತ್ತು ನಿನಗೆ
ನಿನ್ನ ರೆಕ್ಕೆ ಸುಟ್ಟ ಮೇಲಷ್ಟೇ ಕತ್ತಲಾಗಿತ್ತು
2

ಕಂಡಲ್ಲಿ ಗುಂಡಿಕ್ಕುವ ಆಜ್ಹೆ ಜಾರಿಯಲ್ಲಿತ್ತು
ನೊಣಗಳಷ್ಟೆ ಒಂದುಕ್ಷಣ ಹೆಣದ ಮೇಲೆ ಒಂದು ಕ್ಷಣ ಬಂದೂಕಿನ ಮೇಲೆ


3

ರಾತ್ರಿಯಿಂದ ರಾತ್ರಿಗೆ ಭಿಕ್ಷೆಯ ಬಟ್ಟಲಲಿ ಪ್ರಶ್ನೆಗಳು ದಾಟಿಕೊಂಡು ಹೋದವು
ಕರ್ಪ್ಯೂವಿನ ಬೀದಿಯಲಿ ಬಿಕ್ಕುವ ಸದ್ದು ಹೆಣದ ಮೇಲೆ ಕೂತ ನೊಣಗಳಿಗೆ ಕೇಳದು

4


ಆ ಹಾದಿ ಹಿಡಿದು ಬರುವಾಗ ವಿಶ್ವಾಸದ್ರೋಹದ ನಗು ಕಪಟದಳು ಗಾಳಿಯೂದುತ್ತಿದ್ದವು
ಚಪ್ಪಾಳೆ ತಟ್ಟುವ ಕೈಗಳನು ದಾಟಿಕೊಂಡು ಬಂದೆ ಕಣ್ಣೋರಿಸುವ ಬೆರಳು ನನಗಾಗಿ ಕಾಯುತ್ತಿತ್ತು
5

5

ಮಾತು ಎಲ್ಲಿಗೆ ತಲುಪಿತೊ ಸಂಜೆಹೊತ್ತಿಗೆ ಅವಳ ಕಣ್ಣೊಳಗಿನ ಬಣ್ಣದ ಚಿಟ್ಟೆ ಅಸುನೀಗಿತು

ಮುಂಜಾನೆ ಅವಳ ಕಂಗಳು ಕಂಡೊಡನೆ ವೇದಾಂತದ ಮಾತು ಮುನ್ನಲೆಗೆ ಬಂದಿತು

ಯಡಿಯೂರಪ್ಪನ ಯಾಗ ಮತ್ತು ನರಸತ್ತ ನಾಗರೀಕ ಸಮಾಜ


ಪ್ರಿಯ ಮಿತ್ರರೆ,

ಅತ್ಯಂತ ನೋವು ಮತ್ತು ಯಾತನೆಯಿಂದ ಈ ಲೇಖನ ಬರೆಯುತಿದ್ದೇನೆ. ಇಲ್ಲಿನ ಶಬ್ಧಗಳು ಕಟುವಾಗಿದ್ದರೆ, ಕ್ಷಮೆಯಿರಲಿ.

ನಿನ್ನೆ ಅಂದರೆ 19-12-11ರ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡನೇ ಭಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಗ ನಡೆಸಿದರು. ಇದಕ್ಕೆ ಕೊಟ್ಟ ಕಾರಣ ಮಾತ್ರ “ಲೋಕ ಕಲ್ಯಾಣಕ್ಕಾಗಿ” ಎಂಬುದಾಗಿತ್ತು. ಇದಕ್ಕೂ ಮುನ್ನ 17ರ ಶನಿವಾರ ಯಲಹಂಕ ಉಪನಗರದ ಬಳಿ 10 ಸಾವಿರ ಮಹಿಳೆಯರ ಜೊತೆಗೂಡಿ ಲಲಿತ ಸಹಸ್ರ ಕುಂಕುಮಾರ್ಚನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನ ನೀವು ಗಮನಿಸಿದ್ದೀರಿ.

ಯಡಿಯೂರಪ್ಪ ಮತ್ತು ಆ ಹತ್ತು ಸಹಸ್ರ ಮಹಿಳೆಯರು ತಮಗೆ ಅರ್ಥವಾಗದ ಮಂತ್ರಗಳನ್ನು ವದರುತ್ತಾ ಸಹಸ್ರಾರು ರುಪಾಯಿಗಳ ಕುಂಕುಮವನ್ನು ಗಾಳಿಗೆ ತೂರುವ ಬದಲು 10 ಸಾವಿರ ಗಿಡಗಳನ್ನ ಅದೇ ಯಲಹಂಕದ ಸುತ್ತ ಮತ್ತಾ ನೆಟ್ಟಿದ್ದರೆ ಅದು ಎಷ್ಟು ಅರ್ಥಪೂರ್ಣವಾಗಿರುತಿತ್ತು ಅಲ್ಲವೆ? ಒಮ್ಮೆ ಯೋಚಿಸಿ.

ಮುಖ್ಯಮಂತ್ರಿಯ ಗಾದಿಯಿಂದ ಇಳಿದ ಮೇಲೆ ಈ ಮನುಷ್ಯನ ವರ್ತನೆ, ಪ್ರತಿಕ್ರಿಯೆ, ದೇವಸ್ಥಾನಗಳ ಸುತ್ತಾಟ ಇವೆಲ್ಲಾ ಗಮನಿಸಿದರೆ, ಇವರು ಮಾನಸಿಕ ಅಸ್ವಸ್ಥ ಎಂಬ ಗುಮಾನಿ ಮೂಡುತ್ತಿದೆ. ಈಗ ಯಡಿಯೂರಪ್ಪನವರ ಪಾಲಿಗೆ ಮೂರ್ಖ ಜೊತಿಷಿಗಳೇ ಆಪ್ತ ಬಾಂಧವರಾಗಿದ್ದಾರೆ. ಮತ್ತೇ ಅಧಿಕಾರ ಪಡೆಯುವುದಕ್ಕಾಗಿ ಏನೆಲ್ಲಾ ಕಸರತ್ತು ನಡೆಸಿರುವ ಯಡಿಯೂರಪ್ಪನವರಿಗೆ ಸದ್ಯಕ್ಕೆ ಬಾಕಿ ಉಳಿದಿರುವುದೊಂದೇ ಅದು ನರಬಲಿ. ಇಂತಹ ಮನೆಹಾಳತನದ ಸಲಹೆಯನ್ನು ಇವರಿಗೆ ಯಾರೂ ನೀಡಿಲ್ಲ.

ಇವರಿಗೆಲ್ಲಾ ಆತ್ಮಸಾಕ್ಷಿ, ಪ್ರಜ್ಷೆ ಎಂಬುದು ಇದ್ದಿದ್ದರೆ, ಜನ ನಾಯಕರಾಗಿ ಈ ರೀತಿ ವರ್ತಿಸುತ್ತಿರಲಿಲ್ಲ. ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಯಾವ ಮುಖ್ಯ ಮಂತ್ರಿಯೂ ಅಲ್ಲಿಗೆ ಬೇಟಿ ನೀಡಲಿಲ್ಲ. ಬೇಟಿ ನೀಡದಿದ್ದರೂ ಯಾಕೆ ಅಧಿಕಾರ ಕಳೆದುಕೊಂಡೆವು ಎಂಬುದನ್ನ ಯಾವ ಮುಖ್ಯಮಂತ್ರಿಯೂ ಆಲೋಚಿಸಲಿಲ್ಲ. ಇದು ಈ ನಾಡಿನ ವೈಚಾರಿಕ ಪ್ರಜ್ಙೆಗೆ ಗರ ಬಡಿದ ಸಂಕೇತವೇ? ನನಗಿನ್ನೂ ಅರ್ಥವಾಗಿಲ್ಲ.

ಎರಡು ತಿಂಗಳ ಹಿಂದೆ ಯಡಿಯೂರಪ್ಪನವರ ಆಪ್ತರಾದ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಚಾಮರಾಜನಗರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದಿಂದ ಪುರೋಹಿತರನ್ನು ಕರೆಸಿ ಯಜ್ಞ ಯಾಗ ಮಾಡಿದರು. ಲಕ್ಷಾಂತರ ರೂಪಾಯಿಯ ತುಪ್ಪ ಬೆಣ್ಣೆ, ರೇಷ್ಮೆ ಬಟ್ಟೆಗಳನ್ನ ಬೆಂಕಿಗೆ ಹಾಕಿ ಆಹುತಿ ಮಾಡಿದರು. ನಾಡಿನ ಜನಪ್ರತಿನಿಧಿಗಳಾಗಿದ್ದುಕೊಂಡು, ಸಚಿವರಾಗಿ ಇಂತಹ ಅರ್ಥಹೀನ ಆಚರಣೆಗಳ ಮಾಡುವ ಮುನ್ನ ಈ ಮೂರ್ಖರು ಒಮ್ಮೆ ಉತ್ತರ ಕರ್ನಾಟಕದ ಸ್ಥಿತಿ ಏನಾಗಿದೆ ಎಂದು ನೋಡಿ ಬಂದಿದ್ದರೆ ಚೆನ್ನಾಗಿರುತಿತ್ತು. ಅಲ್ಲಿಯ ಬದುಕು ಅರ್ಥವಾಗುತಿತ್ತು

ಕಳೆದ ಹತ್ತು ವರ್ಷಗಳ ನಂತರ ಉತ್ತರ ಕರ್ನಾಟಕ ಭೀಕರ ಬರಗಾಲದಲ್ಲಿ ತತ್ತರಿಸುತ್ತಿದೆ. ಬಿಜಾಪುರ ಜಿಲ್ಲೆಯಲ್ಲಿ ಈ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆ ಬಿದ್ದಿದೆ ಎಂದರೆ ನೀವು ನಂಬಲಾರರಿ. ಅಲ್ಲಿನ ಜನ ತಮಗೆ ಹಾಗೂ ತಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ, ತಿನ್ನುವ ಅನ್ನ ಮತ್ತು ಮೇವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಸ್ಥಿತಿವಂತ ರೈತರು ತಮ್ಮ ದನ ಕರುಗಳನ್ನ ಮೇವು ನೀರು ಇರುವ ಪ್ರದೇಶಗಳ ನೆಂಟರ ಮನೆಗಳಿಗೆ ಸಾಗಿಸುತಿದ್ದಾರೆ, ಏನೂ ಇಲ್ಲದವರು ಗೋವಾ ಹಾಗೂ ಕೇರಳದ ಕಸಾಯಿಖಾನೆಗಳಿಗೆ ಅಟ್ಟುತಿದ್ದಾರೆ. ಅವುಗಳ ಮೇಲಿನ ಪ್ರೀತಿ ಮತ್ತು ಭಾವುಕತೆಯಿಂದ ಮಾರಲಾಗದ ಅಸಹಾಯಕರು ಮೂಕ ಪ್ರಾಣಿಗಳನ್ನ ಬಟ್ಟ ಬಯಲಿನಲ್ಲಿ ಬಿಟ್ಟು ರಾತ್ರೋರಾತ್ರಿ ಕೂಲಿ ಅರಸಿಕೊಂಡು ಪೂನಾ, ಮುಂಬೈ ರೈಲು ಹತ್ತುತಿದ್ದಾರೆ. ಡಿಸಂಬರ್ ಚಳಿಗಾದಲ್ಲಿ ಕೂಡ ಉರಿಯುತ್ತಿರುವ ಸೂರ್ಯನ ಬಿಸಿಲಿಗೆ ಮೇವು ನೀರಿಲ್ಲದ ಈ ಮೂಕ ಪ್ರಾಣಿಗಳು ನಿಂತಲ್ಲೆ ನೆಲಕ್ಕೊರುಗುತ್ತಿವೆ.

ಕಳೆದ ಒಂದು ತಿಂಗಳಿನಿಂದ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡದ ಗ್ರಾಮಾಂತರ ಪ್ರದೇಶಗಳನ್ನು ಸುತ್ತಿ ಬಂದ ಮೇಲೆ ನನಗೆ, ಜನಪ್ರತಿನಿಧಿಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಇಲ್ಲಿನ ಜನತೆ ಕಪಾಳಕ್ಕೆ ಇನ್ನೂ ಬಾರಿಸಿಲ್ಲವಲ್ಲ ಏಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಅಲ್ಲದೆ ನನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದ ಜನಪದ ಗೀತೆಗಳು ನೆನಾಪಾಗುತ್ತಿವೆ.

1) ಹಾದೀಲಿ ಹೋಗುವವರೇ ಹಾಡೆಂದು ಕಾಡಬೇಡಿ
ಇದು ಹಾಡಲ್ಲ ನನ್ನೊಡಲುರಿ ದೇವರೆ
ಇದು ಬೆವರಲ್ಲ ನನ್ನ ಕಣ್ಣೀರು

2) ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ
ಒಡಲ ಬೆಂಕೀಲಿ ಹೆಣ ಬೆಂದೋ ದೇವರೆ
ಬಡವರಿಗೆ ಸಾವ ಕೊಡಬೇಡೋ

3) ಹೆಣ್ಣಿನ ಗೋಳಟ್ಟಿ ಬನ್ನಿಯ ಮರ ಬೆಂದೋ
ಅಲ್ಲಿ ಸನ್ಯಾಸಿ ಮಠ ಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೋ

4) ಕಣಜ ಬೆಳೆದ ಮನೆಗೆ ಉಣಲಾಕೆ ಕೂಳಿಲ್ಲ
ಬೀಸಾಕ ಕವಣೆ ಬಲವಿಲ್ಲ ಕೂಲಿಯವರ
ಸುಡಬೇಕ ಜನುಮ ಸುಖವಿಲ್ಲ

ಗೋರಕ್ಷಣೆಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಅವುಗಳ ಪಕ್ಕ ನಿಂತು ಚಿತ್ರ ತೆಗೆಸಿಕೊಳ್ಳುವ ಕಪಟ ಸ್ವಾಮಿಗಳಿಗೆ, ನಕಲಿ ರೈತರ ಹೆಸರಿನ ಅಸ್ತಿತ್ವಕ್ಕೆ ಬಂದ ಸಾವಯವ ಕೃಷಿ ಮಿಷನ್ ಮೂಲಕ ರೈತರಲ್ಲದವರಿಗೆ ವರ್ಷಕ್ಕೆ ನೂರಾರು ಕೋಟಿ ಹಣ ನೀಡುತ್ತಿರುವ ಸರ್ಕಾರದ ಕ್ರಮವನ್ನು ನಾಗರೀಕ ಸಮಾಜದಲ್ಲಿ ಬದುಕುತ್ತಿರುವ ನಾವು ಈಗಲಾದರೂ ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ, ಈ ಸಮಾಜವನ್ನು ನರಸತ್ತ ನಾಗರೀಕ ಸಮಾಜವೆಂದು ನಾವೆಲ್ಲರೂ ಒಕ್ಕೊರಲಿನಿಂದ ಘೋಷಿಸಿ ಕೊಳ್ಳಬೇಕಾಗಿದೆ.

ಸಮ್ಮನೆ ಒಮ್ಮೆ ತಣ್ಣಗೆ ಕುಳಿತು ಯೋಚಿಸಿ. ಈ ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ದೇಗುಲಗಳಿಗೆ, ಮಠ ಮಾನ್ಯಗಳ ಬೇಟಿಗಾಗಿ ಖರ್ಚು ಮಾಡಿದ ಪ್ರಯಾಣದ ವೆಚ್ಚ, ಹಾಗೂ ಇವುಳಿಗೆ ನೀಡಿದ ಅನುದಾನ ಇದನ್ನು ಲೆಕ್ಕ ಹಾಕಿದರೆ, ನೂರು ಕೋಟಿ ರೂಪಾಯಿ ದಾಟಲಿದೆ.

ಇದೇ ಹಣವನ್ನ ದನಕರುಗಳ ಮೇವಿಗಾಗಿ ಇಂದು ಉತ್ತರ ಕರ್ನಾಟಕದಲ್ಲಿ ವಿನಿಯೋಗಿಸಿದ್ದರೆ, ದೇವಸ್ಥಾನ, ಮಠ ಬೇಟಿ ನೀಡಿದ್ದಕ್ಕೆ ಹಾಗು ಹೋಮ ಹವನ ಮಾಡಿಸಿದ್ದಕ್ಕೆ ಸಿಗುವ ಫಲಕ್ಕಿಂತ ಹೆಚ್ಚಿನ ಪುಣ್ಯ ಯಡಿಯೂರಪ್ಪನವರಿಗೆ ಸಿಗುತ್ತಿತ್ತೇನೊ?

ಡಾ. ಎನ್. ಜಗದೀಶ್ ಕೊಪ್ಪ

ಹೊಸ ವರ್ಷ ಹೊಸ ಬೆಳಗನ್ನು ಹೊತ್ತು ತರಲಿ

ಜ್ಯೋತಿ ಗುರುಪ್ರಸಾದ

2011 ಇಸವಿಗೆ ವಿದಾಯ ಹೇಳುವ ಮುನ್ನ ಪ್ರೀತಿಸುವ ಮನಸ್ಸನ್ನು ಉಳಿಸಿಕೊಳ್ಳುವ ಗಟ್ಟಿ ತನ -ಸೌಜನ್ಯ ನಮ್ಮದಾಗಲಿ ಎಂಬ ಸ್ಥಿರ ಆಶಯವನ್ನು 2012ನೆ ಹೊಸ ವರ್ಷಕ್ಕೂ ವರ್ಗಾಯಿಸುತ್ತಾ ಈ ವರ್ಷದ ಕೊನೆಯ ಅಂಚನ್ನು ಗಮನಿಸುತ್ತಾ ಇಂದು ಏನು ಹೇಳ ಬಹುದೆಂದು ನೋಡುತ್ತಿದ್ದೇನೆ.ಬಂಗಾಳ ಕೊಲ್ಲಿಯ ನೈರುತ್ಯ ದಿಕ್ಕಿನಿಂದ ತೀವ್ರಗತಿಯಿಂದ ಬೀಸುತ್ತಿರುವ ‘ಥೇನ್’ ಎಂಬ ಚಂಡಮಾರುತವು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಾ ಸಮುದ್ರದ ಅಲೆಗಳಲ್ಲಿ ಏರಿಳಿತ ಉಂಟಾಗುತ್ತದೆ ಎಂಬ ವರ್ತಮಾನವೂ ಇದೆ. ಈ ವರ್ತಮಾನವನ್ನು ಎದುರಿಸಲು ಸನ್ನದ್ಧವಾಗು ವಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು, ಮೀನುಗಾರರನ್ನು ಕಾಪಾಡಲು ಹವಾಮಾನ ಇಲಾಖೆ ಸಜ್ಜಾಗುತ್ತಿದೆ. ಇದು ನಮ್ಮ ಭೌಗೋ ಳಿಕ ಸಂದರ್ಭದ ಎಚ್ಚರವಾಯಿತು. ಸದ್ಯ ಮೀನುಗಾರರಿಗೆ ಅಪಾಯ ಸಂಭವಿಸದಂತೆ ಚಂಡಮಾರುತ ನಿರ್ಗಮಿಸಲಿ. ಆದರೆ ನಮ್ಮ ಆಂತರ್ಯಕ್ಕೂ ಪ್ರೀತಿಯ ಹವಾಮಾನ ಎಂಬ ತಂಗಾಳಿ ನಿರಂತರ ಬೀಸುತ್ತಿರಬೇಕಾಗುತ್ತದೆ. ಆಗ ಮಾತ್ರ

ಬಿರುಗಾಳಿ ಬೀಸಿ ಎದುರಾದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು
ಮಳೆಯಂತೆ ಬೆಂಕಿ ಧರೆಗಿಳಿದರೇನು
ಜೊತೆಯಿರಲು ನೀನು ಭಯ ಪಡೆನು ನಾನು’

ಎಂಬ ಪ್ರೀತಿಯ ಜೊತೆಯ ಭರವಸೆಯ ಹಾಡಿನ ನಿರ್ಭಯ ಸಾಲುಗಳು ಜೀವಂತ ರೂಪ ತಾಳುತ್ತದೆ. ಪ್ರೀತಿಸುವ ಮನಸ್ಸಿನ ಕೊರತೆ ಹುಟ್ಟು ಹಾಕುವ ಅತ್ಯಾಚಾರದಂತ ವಿಕೃತ ಕೃತ್ಯವನ್ನು ಇಲ್ಲವಾಗಿಸಲು ಯಾವ ಇಲಾಖೆ ಸನ್ನದ್ಧವಿದೆ? ಎಂಬ ಗಂಭೀರ ಪ್ರಶ್ನೆಯೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಬರ್ಬರ ಅತ್ಯಾಚಾರದ ಸುದ್ದಿ ತಿಳಿದಾಗ ತೇವಗೊಂಡ ಕಣ್ಣಿನಿಂದ ಹೊರ ಬಿತ್ತು.ರಾತ್ರಿ 9ಗಂಟೆಯ ಹೊತ್ತಿನಲ್ಲೇ ಬೆಂಗಳೂರಿನಂತ ಕರ್ನಾಟಕದ ರಾಜಧಾನಿಯಲ್ಲೇ ಇಂತಹ ಒಂದು ದುಷ್ಕೃತ್ಯ ಸಂಭವಿಸುತ್ತದೆಂದರೆ ಇದಕ್ಕಿಂತ ಭಯಭೀತ ವಾತಾವರಣ ಬೇರೊಂದಿದೆಯೇ?

ರಸ್ತೆ ಸುರಕ್ಷತೆಯಾಗಲಿ- ಹೊಸ ವರ್ಷವನ್ನು ಸ್ವಾಗತಿಸುವ ಸಮರ್ಪಕ ಜವಾಬ್ದಾರಿಯಾಗಲಿ ವಿನೋದದ ಮುಗ್ಧತೆಯಾಗಲಿ ಇಲ್ಲದ ಇಂತಹ ಸನ್ನಿವೇಶ ಸಾಮೂಹಿಕ ಅತ್ಯಾಚಾರದಂತ ಹೇಯ ಕೃತ್ಯಕ್ಕೆ ದಾರಿ ಮಾಡಿಕೊಟ್ಟಿದೆ.ನಾಗರಿಕತೆಯೇ ತಲೆತಗ್ಗಿಸುವಂತಹ ಕೃತ್ಯವಿದು.ಹೊಸ ವರ್ಷವನ್ನು ಮೋಜಿನ ವಿಕೃತಿಯಾಗಿ ಆಚರಿ ಸಲು ಹೊರಡುವ ಯುವ ಜನಾಂಗವನ್ನು ಹದ್ದು ಬಸ್ತಿನಲ್ಲಿಡುವ ಕಾನೂನನ್ನು ಸರಿಯಾಗಿ ಪಾಲಿಸಲಾಗದಿದ್ದರೆ ಇದು ಸಮಾಜದ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ದೊಡ್ಡ ದುರಂತ. ಇಂತಹ ವಿಕೃತಿಗಳು ಮತ್ತೆ ಸಂಭವಿಸದಂತ ಹಚ್ಚ ಹೊಸ ಬೆಳಗನ್ನು 2012ನೆ ಇಸವಿ ಹೊತ್ತು ತರಲಿ ಎಂಬ ಪ್ರಾರ್ಥನೆಯ ಪಾತ್ರ ಮಾತ್ರ ದೊಡ್ಡದೆನಿಸುತ್ತದೆ.

ರಾಜಕಾರಣವೆಂಬುದೇ ವಿಫಲವಾಗುತ್ತಿರು ವಾಗ ವ್ಯವಸ್ಥೆಯ ಭ್ರಷ್ಟಾಚಾರದ ಲೋಪ ದೋಷಕ್ಕೆ ಇದಕ್ಕಿಂತ ಮಹತ್ತರವಾದ ಕಾರಣ ಬೇರೆ ಯಾವುದಿದೆ? ಇದಕ್ಕೆ ಜ್ವಲಂತ ನಿದರ್ಶನದಂತೆ ಕೇವಲ ಅಧಿಕಾರವನ್ನು ಉಳಿಸಿಕೊಳ್ಳಲು ಮಾತ್ರ ಹೆಣಗುತ್ತಿರುವ ಪ್ರಸ್ತುತ ರಾಜಕೀಯ ಯಾವ ಇಲಾಖೆಯ ಕರ್ತವ್ಯವನ್ನಾದರೂ ಸೂಕ್ತವಾಗಿ ನಿರ್ವಹಿಸಿ ಜನರಿಗೆ ನ್ಯಾಯ ಕೊಡಲು ಸಾಧ್ಯವೇ? ರಾಜಕಾರಣವೆಂಬುದು ರಾಜನೀತಿ ಎಂದು ಮರೆತಿರುವ ಸರಕಾರ. ನನಗೆ ಮತ್ತೆ ಮತ್ತೆ ಯು.ಆರ್. ಅನಂತಮೂರ್ತಿ ಯವರ ಮನೋಜ್ಞ ಕಾದಂಬರಿಯಾದ ‘ಅವಸ್ಥೆ’ ಯ ಪ್ರಸ್ತುತತೆಯೇ ನೆನಪಾಗುತ್ತದೆ. ಅದರಲ್ಲಿ ‘ಪ್ರೇಮ ಮುಖ್ಯ’ ಎಂದು ಹೇಳಿ ರಾಜಕೀಯದಿಂದ ನಿವೃತ್ತಿಯಾಗುವ ಸಮಾಜವಾದದ ದೃಢ ಮನಸ್ಸುಳ್ಳ ಕೃಷ್ಣಪ್ಪ ಗೌಡರಂತ ಮಾನವೀಯ ಘನತೆಯುಳ್ಳ ರಾಜಕಾರಣಿಗಳು ಮಾತ್ರ ಇಂದಿಗೆ ಅಗತ್ಯವಿದ್ದಾರೆ.


ಅದು ಬರೀ ಕಾಲ್ಪನಿಕ ಪಾತ್ರವಲ್ಲ. ಸಮಾಜವಾದಿ ಘನತೆಯಲ್ಲೇ ಜೀವಿಸಲು ಮಾತ್ರ ರಾಜಕಾರಣವನ್ನು ಬಳಸಿಕೊಂಡು ಜನತೆಯ ಹಿತಕ್ಕಾಗಿಯೇ ಹೋರಾಟ ನಡೆಸಿ ನಿಜದ ಲಯದಲ್ಲಿ ನಡೆದುಕೊಂಡ ಇದೇ ನೆಲ ದಲ್ಲಿ ಜೀವಿಸಿದ್ದ ಕೃಷ್ಣಪ್ಪಗೌಡರಂತ ದೊಡ್ಡ ವ್ಯಕ್ತಿತ್ವದ ಹಿರಿತನದ ಕತೆ. ಇಂತಹ ನಿಷ್ಕಳಂಕ ಸಮಾಜವಾದಿ ವ್ಯಕ್ತಿತ್ವವನ್ನು ಆಚರಣೆಗೆ ತರಲು ಸಾಧ್ಯವಾಗದಿದ್ದರಿಂದಲೇ ಕೊನೆಗೆ ಬಂಗಾರಪ್ಪನವ ರಂತ ಬಡವರ ಪರವಾಗಿದ್ದ ಸೋಲಿಲ್ಲದ ಸರದಾರರಂತಹ ರಾಜಕಾರಣಿ ಕೂಡ ಸೋಲಿನ ಕಹಿ ಅನುಭವವನ್ನು ಉಂಡರು ಎಂದೇ ಹೇಳ ಬೇಕು.

ಸ್ವತಃ ಅವರು ತಮ್ಮ ವೌಲ್ಯಕ್ಕೆ ಬದ್ಧವಾದ ಪಕ್ಷದಲ್ಲಿದ್ದುಕೊಂಡೇ ತಮ್ಮ ರಾಜಕೀಯ ಪಯಣವನ್ನು ಸ್ಥಿರವಾಗಿ ಮುಂದುವರಿಸದೆ ರಾಜಬೀದಿಯ ರಾಜದನಿಯನ್ನು ಮರೆತು ಬಿಜೆಪಿ ಪಕ್ಷಕ್ಕೆ ತಮ್ಮ ಒಲವನ್ನು ಬದಲಾಯಿಸಿ ವೌಲ್ಯರಹಿತ ರಾಜಕಾರಣಕ್ಕೆ ಮುಖ ಮಾಡಿಬಿಟ್ಟರು. ಈ ಲೋಪವನ್ನು ಎತ್ತಿ ಹಿಡಿದ ತಾನೇ ಆಡಿಸಿ ಬೆಳೆಸಿದ ತನ್ನ ಸ್ವಂತ ಹಿರಿ ಮಗನ ಟೀಕೆಗೆ -ವಿಮರ್ಶೆಗೆ ಓ ಗೊಡದೆ ಆತನನ್ನೇ ಅಪರಾಧಿಯನ್ನಾಗಿಸಿ ನಿಲ್ಲಿಸಿಬಿಟ್ಟರು. ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಹಿರಿಮಗನಾಗಿ ಅವರ ಚಿತೆಯ ಬಳಿ ಹೋಗಲೂ ಸಹ ನನಗೆ ಅರ್ಹತೆಯಿಲ್ಲವೇ ಎಂದು ಕಂಬನಿ ಮಿಡಿಯುತ್ತಿದ್ದ ಕುಮಾರ್ ಬಂಗಾರಪ್ಪನವರ ಕಂಬನಿ ನನಗ್ಯಾಕೋ ಹುಸಿ ಎನಿಸಲಿಲ್ಲ.

ಅವರ ಮಾನವೀಯ ಹಕ್ಕನ್ನು ದಮನ ಗೊಳಿಸಿರುವ ಕುಟುಂಬದ ಚಿತ್ರಣ ಪೂರ್ಣಪ್ರಮಾಣದ ಕುಟುಂಬವೆನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾತ್ರ ಅನಿಸಿ ಖೇದವೆನಿಸಿತು. ಕ್ಷಮಾಗುಣವೊಂದು ಈ ಸಂದರ್ಭದಲ್ಲಿ ಮೆರೆದಿದ್ದರೆ ಅದು ಕುಟುಂಬದ ಹೆಗ್ಗಳಿಕೆಯಾಗುತ್ತಿತ್ತು. ಇದೀಗ ಇದು ಕೇವಲ ಅಣ್ಣ ತಮ್ಮಂದಿರ ದಾಯಾದಿ ಕಲಹದ ರಾಜಕೀಯದ ಅಧಿಕಾರದ ಆಸೆಯಾಗಿ ಮಾತ್ರ ಬಂಗಾರಪ್ಪನವರ ಕುಟುಂಬ ಗಮನ ಸೆಳೆಯುವ ಕೇಂದ್ರಬಿಂದುವಾಗಿದೆ ಎಂದು ವಿಧಿ ಇಲ್ಲದೆ ಹೇಳಲೇಬೇಕಾಗಿದೆ. ಇತ್ತೀಚೆಗೆ ಬಂಗಾರಪ್ಪನವರ ಜೊತೆ ಜೊತೆಗೆ ದೂರದಲ್ಲೆಲ್ಲೋ ನಿಧನ ಹೊಂದಿದ ಕನ್ನಡದ ಶ್ರೇಷ್ಠ ಪತ್ತೆದಾರಿ ಸಾಹಿತ್ಯದ ಕಾದಂಬರಿಕಾರ ಎನ್. ನರಸಿಂಹಯ್ಯನವರು ಯಾಕೋ ಮಾಧ್ಯಮಗಳ ಗಮನಕ್ಕೆ ಅಷ್ಟು ದೀರ್ಘವಾಗಿ ಬರಲೇ ಇಲ್ಲ.

ವೃತ್ತ ಪತ್ರಿಕೆಗಳಲ್ಲಿ ಮಾತ್ರ ಸಣ್ಣ ಸುದ್ದಿ ಕಾಣಿಸಿಕೊಂಡಿತು. ಎನ್. ನರಸಿಂಹಯ್ಯನವರ ಪತ್ತೆದಾರಿ ಸಾಹಿತ್ಯದ ಸವಿಯನ್ನು ಸವಿದ ಯುವಜನಾಂಗ ಆ ಮಹಾನ್ ಪತ್ತೆದಾರಿ ಸಾಹಿತಿಗೆ ನಮನ ಸಲ್ಲಿಸದಿದ್ದರೆ 2011ನೆ ಇಸವಿ ಅಪೂರ್ಣವಾಗುತ್ತದೆ. ‘ಪತ್ತೆದಾರ ಪುರುಷೋತ್ತಮ’ನಂತಹ ಸಿಐಡಿಯ ಪಾತ್ರವನ್ನು ಉತ್ಕೃಷ್ಟ ಮಟ್ಟದಲ್ಲಿ ಸೃಷ್ಟಿಸಿ ಅನೇಕ ಕಾದಂಬರಿಗಳನ್ನು ಬರೆದು ಅಪರಾಧಿಗಳ ಸಾಧ್ಯತೆಯ ನಿಗೂಢತೆಯ ಬಗ್ಗೆ ಸರಳವಾಗಿಯೇ ಆರೋಗ್ಯಕರವಾಗಿ ಆಲೋಚಿಸಲು ಕಲಿಸಿದಂತಹ ಪತ್ತೆದಾರಿ ಕಾದಂಬರಿಕಾರ ಎನ್. ನರಸಿಂಹಯ್ಯನವರು. ಇತ್ತೀಚೆಗೆ ತಮ್ಮ ವೃದ್ಧಾಪ್ಯದಲ್ಲಿ 89ನೆಯ ವಯಸ್ಸಿನಲ್ಲಿ ನಿಧನ ಹೊಂದಿ ಅದುವರೆಗೂ ನಿಗೂಢವಾಗಿ ಪ್ರಸಿದ್ಧಿಯ ಮುಖ್ಯವಾಹಿನಿಗೆ ಬರದೆಯೇ ಬದುಕಿದವರು.

ಅವರು ಬರೀ ನಾಲ್ಕನೆ ತರಗತಿಯ ವಿದ್ಯಾಭ್ಯಾಸ ನಡೆಸಿದ್ದರಂತೆ. ಆದರೆ ಇವರ ಪತ್ತೆದಾರಿ ಕಾದಂಬರಿಗಳನ್ನು ಲೈಬ್ರರಿಯಲ್ಲಿ ಪಡೆದು ಓದುತ್ತಾ ನನ್ನ ಬಾಲ್ಯ ಸಮೃದ್ಧವಾಗಿತ್ತು. ಜನಪದರಿಗಂತೂ ಯಾವ ಹುಸಿ ರಾಜಕಾರಣಕ್ಕೂ ಬೆಲೆಕೊಡದೆ ತಮ್ಮ ಹೃದಯದ ಲಯವನ್ನು ಮುಕ್ತವಾಗಿಟ್ಟುಕೊಂಡು ತಮ್ಮ ದಿನಚರಿಯಲ್ಲಿ ಆಚರಣೆಗೆ ತರುವ ಪ್ರಾರ್ಥನೆಯ ಸಾಮಾನ್ಯ ಜ್ಞಾನ-ಮುಗ್ಧತೆ ಸಿದ್ಧಿಸಿತ್ತು. ತಾವು ರಾಗಿ ಬೀಸುವ ಕಲ್ಲನ್ನು ಕೂಡಾ ಅದರ ಕ್ರಿಯೆಯಿಂದಾಗಿ ದೇವರಾಗಿ ಕಂಡು ಕೃತಜ್ಞತೆ ಸಲ್ಲಿಸುವ ವಿನಯಶೀಲತೆಯೊಂದು ಅವರಲ್ಲಿ ಮನೆ ಮಾಡಿತ್ತು.

ಇಂತಹ ಜನಪದದ ರಿದಂ ಒಂದು ನಮ್ಮ ಆಂತರ್ಯವನ್ನು ಕಾಪಾಡುವ ಕೃತಜ್ಞತೆಯಾಗಿ ಹೊಮ್ಮಲಿ ಎನ್ನುತ್ತಾ ಹೊಸ ವರ್ಷ

2012ರ ಹೊಸ ಬೆಳಗಿಗೆ ಶುಭದ ಸ್ವಾಗತ...
ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ

ಎದ್ದೋನೆ ನಿಮಗ್ಯಾನ ಏಳುತಲೇ ನಿಮಗ್ಯಾನ ಸಿದ್ದಾರಗ್ಯಾನ ಶಿವುಗ್ಯಾನ

ಸಿದ್ದಾರನೇಗ್ಯಾನ ಶಿವುಗ್ಯಾನ ಮಾಶಿವ್ನೆನಿದ್ದೆಗಣ್ಣಾಗೇ ನಿಮಧ್ಯಾನ

ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗಿಯ ಜಲ್ಲಜಲ್ಲನೆ ಉದುರವ್ವ

ಜಲ್ಲಜಲ್ಲನೆ ಉದುರವ್ವ ನಾನಿನಗೆ ಬೆಲ್ಲದಾರತಿಯ ಬೆಳಗೇನು

ರಾಗಿ ಬೀಸೋ ಕಲ್ಲೇ ರಾಜನ ಒಡಿಗಲ್ಲೇ ರಾಯಅಣ್ಣಯ್ಯನ ಅರಮನೆ

ರಾಯ ಅಣ್ಣಯ್ಯನ ಅರಮನೆ ರಾಗಿಕಲ್ಲೇ ನೀ ರಾಜಬೀದಿಗೆ ದನಿತೋರೆ..

ಆರೇಲೆ ಮಾವಿನ ಬೇರಾಗೆ ಇರುವೊಳೆ ವಾಲ್ಗದ ಸದ್ದಿಗೆ ಒದಗೋಳೆ

ವಾಲ್ಗದ ಸದ್ದಿಗೆ ಒದಗೋಳೆ ಸರಸತಿಯೇ ನಮ ನಾಲಿಗೆ ತೊಡರ ಬಿಡಿಸಮ್ಮ

ಎಂಟೆಲೆ ಮಾವಿನ ದಂಟಾಗೆ ಇರುವೊಳೆ ಗಂಟೆಯ ಸದ್ದಿಗೆ ಒದಗೊಳೆ

ಗಂಟೆಯ ಸದ್ದಿಗೆ ಒದಗೊಳೆ ಸರಸತಿಯೇ ನಮ ಗಂಟಲ ತೊಡರ ಬಿಡಿಸಮ್ಮ..

ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ..

ವಾರ್ತಾಭಾರತಿ ಕೃಪೆ

Friday, December 30, 2011

ಎರಡು ಪದ್ಯಗಳು -ಅಲಿ ಸರ್ದಾರ ಜಾಫ್ರಿ

ಒಂದು ಕವಿತೆ
ಕತ್ತಲು
ಮನುಷ್ಯನ ರಕ್ತದ
ನಿಲುವಂಗಿ ತೊಟ್ಟು
ಕಣ್ಣ ಕಾಣದವರಿಗೆ
ಭರವಸೆಯ ಮರೀಚಿಕೆ ಧಾರೆಯರೆದಿದೆ !

ಕವಿ

ನಾನು, ನೀಲಿಗಟ್ಟಿದ ನೋವು ತುಂಬಿದ
ಗಲ್ಲದ ಮೇಲಿಳಿದ ಕಣ್ಣೀರಿನ ಹವಳ
ಒರಟು ಕತ್ತಿಯ ಮೊನಚು ತುದಿಗೆ
ಹತ್ತಿದ ನಿಷ್ಪಾಪಿ ನೆತ್ತರಿನ ಒಂದು ಹನಿ !

- ಅಲಿ ಸರ್ದಾರ ಜಾಫ್ರಿ
- ಅನು : ವಿಭಾ

ಟಿ.ಆರ್.ಸಿ ಅಮಾನತು: ಯಾರ ಮಸಲತ್ತು?

-ಪರುಶುರಾಮ ಕಲಾಲ್
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದವರಲ್ಲಿ ಟಿ.ಆರ್. ಚಂದ್ರಶೇಖರ್ ಒಬ್ಬರು. ಅವರನ್ನು ಈಗ ತಾಂತ್ರಿಕ ಕಾರಣವೊಂದರ ನೆಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಅಮಾನತ್ತುಗೊಳಿಸಿದೆ. ಕನ್ನಡ ವಿವಿಯಲ್ಲಿ ಇದೊಂದು ಕೆಟ್ಟ ಬೆಳವಣಿಗೆ. ಕುತ್ಸಿತ ಮನಸ್ಸುಗಳು ಹಾಗೂ ವಿಘ್ನ ಸಂತೋಷಿಗಳು ಮಾತ್ರ ಇಂತಹ ನಿರ್ಣಯ ಕೈಗೊಳ್ಳಬಲ್ಲರು.

ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಿದ ಅಭಿವೃದ್ಧಿ ಯೋಜನೆಯಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಚಂದ್ರಶೇಖರ್ ಅವರು ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಕನ್ನಡ ವಿಶ್ವವಿದ್ಯಾಲಯ ಕಾರ್ಯ ಕಾರಿ ಸಮಿತಿ ಅಮಾನತ್ತುಗೊಳಿಸಿದೆ. ವಾಸ್ತವವೆಂದರೆ ಅದನ್ನು ಯಾರ ಗಮನಕ್ಕೂ ತಂದಿಲ್ಲ ಎನ್ನುವುದು ಮಾತ್ರ ಅಪ್ಪಟ ಸುಳ್ಳಾಗಿದೆ.
ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ ಯೋಜನೆ (ಟುವರ್ಡ್ಸ್ ಎ ಚೈಲ್ಡ್ ಫ್ರೆಂಡ್ಲಿ ಡಿಸ್ಟಿಕ್ಟ್-ವಿಲೇಜ್ ಲೆವೆಲ್ ಮೈಕ್ರೋ ಪ್ಲಾನಿಂಗ್ ಅಂಡ್ ಕನ್ವರ್ಜೆಂಟ್ ಮಾನಿಟರಿಂಗ್ ಆಫ್ ಬೇಸಿಕ್ ಸರ್ವೇಸ್ ಇನ್ ರಾಯಚೂರು ಡಿಸ್ಟಿಕ್) ಈ ಯೋಜನೆಯಲ್ಲಿ ಪಾಲ್ಗೊಳ್ಳುವ ತಮ್ಮ ಇರಾದೆಯನ್ನು ಪ್ರಸ್ತಾಪವೊಂದರ ಮೂಲಕ ವಿಭಾಗದ ಗಮನಕ್ಕೆ ತಂದಿದ್ದಾರೆ. 2008 ನವೆಂಬರ್ 26ರಂದು ನಡೆದ ವಿಭಾಗದ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಈ ಯೋಜನೆಯ ಬಗ್ಗೆ ವಿಭಾಗದ ಅನುಮತಿಯನ್ನು ಪಡೆದಿದ್ದಾರೆ. ಈ ಸಭೆಯ ನಡಾವಳಿಯ ಪ್ರತಿಯನ್ನು ಆಡಳಿತಾಂಗಕ್ಕೂ ಕಳಿಸಲಾಗಿದೆ.
2008-09ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಅದೇ ವರ್ಷ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಯೋಜನೆ ಪೂರ್ಣಗೊಳಿಸಿರುವುದನ್ನು ವಿವಿ ಗಮನಕ್ಕೆ ತಂದಿದ್ದಾರೆ. ವಿವಿ ಗಮನಕ್ಕೆ ತರದೇ ಈ ಯೋಜನೆಯ ಜವಾಬ್ದಾರಿ ನಿರ್ವಹಿಸುವ ಉದ್ದೇಶ ಟಿ.ಆರ್. ಚಂದ್ರಶೇಖರ್ ಅವರಿಗಿದ್ದರೆ ಯೋಜನೆ ಪ್ರಸ್ತಾವನೆಯನ್ನೇ ವಿಭಾಗಕ್ಕೆ ಸಲ್ಲಿಸುತ್ತಿರಲಿಲ್ಲ. ವಾರ್ಷಿಕ ವರದಿಯಲ್ಲಿ ಇದನ್ನು ದಾಖಲಿಸುತಲೂ ಇರಲಿಲ್ಲ.
ತಪ್ಪಿತಸ್ಥ ವ್ಯಕ್ತಿ ಮುಂದೆ ನಡೆಯಲಿರುವ ತನಿಖೆಯನ್ನು ಪ್ರಭಾವಿಸಬಹುದೆನ್ನುವ ಕಾರಣಕ್ಕಾಗಿ ತನಿಖೆಗೆ ಮುನ್ನ ವ್ಯಕ್ತಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕ್ರಮವಿದೆ. ಟಿ.ಆರ್. ಚಂದ್ರಶೇಖರ್ ಅವರು ವಿವಿ ಆಡಳಿತಾಂಗದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅವರು ಅಧ್ಯಾಪಕರು ಮಾತ್ರ. ತನಿಖೆ ನಡೆಸಿ, ತಪ್ಪಿತಸ್ಥರೆಂದು ತೀರ್ಮಾನವಾಗುವ ಮುಂಚೆಯೇ ಅಮಾನತ್ತು ಮಾಡಿರುವುದರ ಹಿಂದಿನ ಉದ್ದೇಶ ಏನು?
1996ರಲ್ಲಿ ಕನ್ನಡ ವಿವಿಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಸ್ಥಾಪನೆಗೊಂಡಾಗ ವಿಭಾಗದ ಉದ್ದೇಶವೇ ಅಭಿವೃದ್ಧಿ ಸಿದ್ಧಾಂತ ಮತ್ತು ಆಚರಣೆಯನ್ನು ಅಧ್ಯಯನ ಮಾಡುವುದು. ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು. ಅಭಿವೃದ್ಧಿ ತಜ್ಞರ ರೂಪದಲ್ಲಿ ವಿವಿಧ ಸಂಘ, ಸಂಸ್ಥೆಗಳಿಗೆ ನೆರವು ನೀಡುವುದೇ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಮುಂಬಯಿ ಕರ್ನಾಟಕದ ಪ್ರದೇಶಗಳ ಜಿಲ್ಲಾ ಪಂಚಾಯತ್ಗಳೊಂದಿಗೆ ಸೇರಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ, ಜನಯೋಜನೆ ಸಿದ್ದಪಡಿಸುವುದು, ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇಲ್ಲೂ ಕೂಡ ವಿಭಾಗದ ಉದ್ದೇಶದ ಭಾಗವಾಗಿಯೇ ಡಾ. ಟಿ.ಆರ್. ಚಂದ್ರಶೇಖರ್ ಯುನಿಸೆಫ್ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಯುನಿಸೆಫ್ ಮತ್ತು ಜಿಲ್ಲಾ ಪಂಚಾಯ್ತಿಯು ಜಂಟಿಯಾಗಿ ಕೈಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವು ಎರಡೂ ಸರ್ಕಾರಿ ಸಂಸ್ಥೆಗಳೇ ಆಗಿವೆ. ಲೆಕ್ಕಪತ್ರಗಳನ್ನು ಐ.ಎ.ಎಸ್. ಅಧಿಕಾರಿಗಳು ಧೃಢೀಕರಿಸಿದ್ದಾರೆ. ಅವರು ಯಾವ ಆರೋಪವನ್ನೂ ಸಹ ಮಾಡಿಲ್ಲ. ಟಿ.ಆರ್.ಚಂದ್ರಶೇಖರ್ ಅವರೇ ಸಲ್ಲಿಸಿದ ವಾರ್ಷಿಕ ವರದಿಯನ್ನು ಉಲ್ಲೇಖಿಸಿಯೇ ಅಮಾನತ್ತು ಶಿಕ್ಷೆ ನೀಡಲಾಗಿದೆ.
ಯೊಜನೆಗಳ ನಿರ್ವಹಣೆಗಾಗಿ ವಿಶ್ವವಿದ್ಯಾಲಯದ ಧನ ಸಹಾಯ ಪಡೆದುಕೊಂಡು ಯೋಜನೆಯನ್ನು ಪೂರ್ಣಗೊಳಿಸದಿರುವ, ಯೋಜನೆಗಾಗಿ ಪಡೆದ ಹಣದ ಹೊಂದಾಣಿಕೆಯನ್ನು ವರ್ಷಾನುಗಟ್ಟಲೆ ಮಾಡದಿರುವ ಹಲವಾರು ಪ್ರಕರಣಗಳು ಕನ್ನಡ ವಿವಿಯಲ್ಲಿ ಇವೆ. ಈ ಬಗ್ಗೆ ಹಲವಾರು ಬಾರಿ ಕನ್ನಡ ವಿವಿ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಗಳೂ ಆಗಿವೆ. ಇವುಗಳ ಬಗ್ಗೆ ವಿವಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎನ್ಜಿಓಗಳೊಂದಿಗೆ ಯೋಜನೆಯನ್ನು ಹಂಚಿಕೊಂಡು ಅಲ್ಲೂ ಇಲ್ಲೂ ಲಾಭ ಮಾಡಿಕೊಂಡವರೂ ವಿ.ವಿ.ಯಲ್ಲಿ ಇದ್ದಾರೆ. ಸರ್ಕಾರಿ ಸಾರ್ವಜನಿಕ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಯೋಜನೆ ಪೂರ್ಣಗೊಳಿಸಿದವರಿಗೆ ಮಾತ್ರ ಈ ಶಿಕ್ಷೆ ನೀಡಲಾಗಿದೆ.
ಟಿ.ಆರ್. ಚಂದ್ರಶೇಖರ್ ಅವರ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಸಮಾಜೋಮುಖಿ ಅಭಿವೃದ್ಧಿ ಬರಹಗಳು ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ನೇರ ಟೀಕೆಯಿಂದ ಕೂಡಿರುತ್ತಿದ್ದವು. ಅವರು ಕನ್ನಡ ವಿವಿಯ 80 ಏಕರೆ ಭೂಮಿಯ ಪರಭಾರೆ ವಿರುದ್ಧ ಹೋರಾಟದ ಮಂಚೂಣಿಯಲ್ಲಿದ್ದರು. ಆಡಳಿತಾಂಗದ ನಿರ್ಣಯವನ್ನು ಸದಸ್ಯರಾಗಿ ತಡೆ ಹಿಡಿಯುವ ಕೆಲಸ ಮಾಡಿದರು. ಆತ್ಮ ಸಾಕ್ಷಿಯಂತೆ ಕೆಲಸ ಮಾಡಿದ್ದ ಅವರ ನಿಲುವಿನಿಂದಾಗಿ ಭಗ್ನಗೊಂಡಿದ್ದ ಮನಸ್ಸುಗಳು ತಾಂತ್ರಿಕ ಕಾರಣವನ್ನು ಹೆಕ್ಕಿ ತೆಗೆದು, ಅವರ 17 ವರ್ಷದ ವಿವಿಯ ಸೇವೆಯನ್ನು ಪರಿಗಣಿಸಿದೇ ಅಮಾನತ್ತು ಎನ್ನುವ ಘೋರ ಶಿಕ್ಷೆಯನ್ನು ನೀಡಿ ಕೇಕೇ ಹಾಕಿ ನಕ್ಕಿವೆ. ಕನ್ನಡ ವಿವಿಯಲ್ಲಿ ಚೂರುಪಾರು ಮಾನ ಮರ್ಯಾದೆಯಿಂದ ಕೂಡಿದವರು ಕನ್ನಡ ವಿವಿಯ ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಅಂತವರ ಮನಸ್ಸುಗಳನ್ನು ಜಡಗೊಳಿಸಿ, ಅಧ್ಯಾಪಕರನ್ನು ಗುಮಾಸ್ತರನ್ನಾಗಿ ಮಾಡಿ ಹಾಕಲಿದೆ ಈ ಅಮಾನತ್ತು ಎಂಬ ನಿರ್ಣಯ. ಇದೊಂದು ಯಕಶ್ಚಿತ ಘಟನೆ ಎಂಬಂತೆ ವಿಶ್ವವಿದ್ಯಾಲಯದ ಅಧ್ಯಾಪಕರು ಯೋಚಿಸುತ್ತಿದ್ದಾರೆ. ಅವರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಬಲಿಗಳು ಅವರೇ ಆಗಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ ಕಾರ್ಯಕಾರಿ ಸಮಿತಿಯು ಕೂಡಲೇ ಅಮಾನತ್ತು ಹಿಂತೆಗೆದುಕೊಳ್ಳುವ ಮೂಲಕ ವಿವಿಯ ಘನತೆ ಉಳಿಸಿಕೊಳ್ಳಬೇಕು.

ಲೋಕಪಾಲ ಮತ್ತು ಜನ ಸಾಮಾನ್ಯರು

ಮಿಹಿರ್ ಶ್ರಿವಾಸ್ತವ

ಲೋಕಪಾಲ ಮಸೂದೆಯ ಮೂರು ಮಾದರಿಗಳು ಈಗ ನಮ್ಮ ಮುಂದಿವೆ. ಅವುಗಳ ಪೈಕಿ ಒಂದು ‘ಟೀಮ್ ಅಣ್ಣಾ’ ರೂಪಿಸಿದ ಜನ ಲೋಕ ಪಾಲ ಮಸೂದೆ, ಇನ್ನೊಂದು ಕೂಡ ‘ಜನರ ಮಾಹಿತಿ ಹಕ್ಕಿಗಾಗಿ ರಾಷ್ಟ್ರೀಯ ಅಭಿಯಾನ (ಎನ್‌ಸಿಪಿಆರ್‌ಐ)’ ಎಂಬ ಸಂಘಟನೆ ರೂಪಿಸಿದ ನಾಗರಿಕ ಸಮಾಜದ ಲೋಕಪಾಲ ಮಾದರಿ, ಮೂರನೆಯದು ಆಡಳಿತಾರೂಢ ಯುಪಿಎ ಸರಕಾರ ರೂಪಿಸಿದ ಲೋಕಪಾಲ ಮಸೂದೆ ಮಾದರಿ. ಈಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಈ ಅಧಿಕೃತ ಮಾದರಿಯ ವಿಶ್ಲೇಷಣೆ ನಡೆಸುವುದು ಈಗಿನ ಅಗತ್ಯವಾಗಿದೆ.ಈ ಮಸೂದೆಯ ಬಗ್ಗೆ ತುಂಬಾ ಹಿಂದಿನಿಂದಲೂ ಬೇಕಾದಷ್ಟು ಚರ್ಚೆ ನಡೆಯುತ್ತಾ ಬಂದಿದೆ. ನಿರ್ದಿಷ್ಟ ವಿಧಿಯೊಂದು ಮಸೂದೆಯನ್ನು ಹೇಗೆ ದುರ್ಬಲ ಮಾಡಬಹುದು ಅಥವಾ ಹೇಗೆ ಬಲಗೊಳಿಸಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ. ಆದರೆ ಮಸೂದೆಯ ಯಾವುದೇ ಮಾದರಿ ಒಬ್ಬ ಸಾಮಾನ್ಯ ಮನುಷ್ಯನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಯಾರೂ ಯೋಚನೆ ಮಾಡಿಲ್ಲ.

ಸಾಮಾನ್ಯ ಜನಜೀವನದಲ್ಲಿ ಭ್ರಷ್ಟಾಚಾರ ಯಾವ ರೀತಿ ಇರುತ್ತದೆ ಹಾಗೂ ಅವುಗಳೊಂದಿಗೆ ಲೋಕಪಾಲ ಮಸೂದೆಯು ಹೇಗೆ ವ್ಯವಹರಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ.ಈ ಭ್ರಷ್ಟಾಚಾರ 2ಜಿ ಹಗರಣದಲ್ಲಿ ಕಂಡಂಥ ಅಗಾಧ ಪ್ರಮಾಣದಿಂದ ಪ್ರತಿ ಭಾರತೀಯ ತನ್ನ ದೈನಂದಿನ ಬದುಕಿನಲ್ಲಿ ಎದುರಿಸುವಂಥ ಸಮಸ್ಯೆ ಗಳವರೆಗೆ ವ್ಯಾಪಿಸಿದೆ.ವಾಸ್ತವಿಕ ನೆಲೆಗಟ್ಟಿನಲ್ಲಿ ಕಾನೂನೊಂದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ನಾವು ಪ್ರತಿದಿನ ಟಿವಿಗಳಲ್ಲಿ ಕೇಳುವ ಚರ್ಚೆಗಳು ಮತ್ತು ಪತ್ರಿಕೆಗಳಲ್ಲಿ ಓದುವ ಲೇಖನಗಳಿಗಿಂತ ತೀರಾ ಭಿನ್ನವಾಗಿರುತ್ತದೆ.

ಸಂಸತ್ತಿನಲ್ಲಿ ಕೇಳಿಬರುವ ಚರ್ಚೆಗಳನ್ನು ಆಲಿಸುವಾಗ ಈ ವಿಷಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಿ. ನಿಜವಾದ ಪ್ರಶ್ನೆಯಿರುವುದು ಒಂದು ನಿರ್ದಿಷ್ಟ ಅಧಿಕಾರಿಗಳ ಸಮೂಹ ಲೋಕಪಾಲದ ವ್ಯಾಪ್ತಿಯಲ್ಲಿ ಬರುತ್ತದೆಯೇ ಇಲ್ಲವೇ ಎನ್ನುವುದಲ್ಲ; ಬದಲಿಗೆ ಜಾರಿಯಾದ ಕಾನೂನು ನಿಮ್ಮ ಬದುಕಿನಲ್ಲಿ ಏನಾದರೂ ಪರಿಣಾಮವನ್ನು ಉಂಟುಮಾಡಬಹುದೇ ಎನ್ನುವುದು.ಮಸೂದೆಯು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಯಾವುದೇ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಿದರೂ ಪ್ರಸಕ್ತ ಸ್ಥಿತಿಗತಿಗಿಂತ ಅದು ಉತ್ತಮವಾಗಿರುತ್ತದೆ. ಆದರೆ, ಅದು ನಿಮಗೆ ಪ್ರಯೋಜನಕ್ಕೆ ಬರುತ್ತದೆಯೇ ಎನ್ನುವುದು ಅದರ ನಿರ್ದಿಷ್ಟ ವಿಧಿಗಳು ನಿರ್ದಿಷ್ಟ ಪ್ರಕರಣ ಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹ ರಿಸುತ್ತದೆಯೇ ಎನ್ನುವುದನ್ನು ಅವಲಂಬಿಸಿದೆ.

ಸಂದರ್ಭ 1: ಪತ್ವಾರಿ

ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಝಾರೆ ಚಳ ವಳಿ ಮುಖ್ಯವಾಗಿ ನಗರ ಕೇಂದ್ರಿತ ಮಧ್ಯಮ ವರ್ಗದವರ ಚಳವಳಿಯಾಗಿದೆ ಎಂಬ ಟೀಕೆಯ ಹಿನ್ನೆಲೆಯಲ್ಲಿ, ಭಾರತದ ಬೃಹತ್ ಪ್ರಮಾಣದ ಗ್ರಾಮೀಣ ಜನತೆ ಸಾಮಾನ್ಯವಾಗಿ ಎದುರಿಸು ತ್ತಿರುವ ಪ್ರಕರಣಗಳೊಂದಿಗೆ ಆರಂಭಿಸೋಣ. ಉದಾಹರಣೆಗೆ: ಬಿಹಾರದ ಬೆಗುಸರಾಯಿ ಜಿಲ್ಲೆ ಯಲ್ಲಿರುವ ಒಬ್ಬ ಪತ್ವಾರಿ (ಗ್ರೂಪ್ ಸಿ ಅಥವಾ ಡಿ ಅಧಿಕಾರಿ) ರೈತನೊಬ್ಬನ ಕೃಷಿ ಭೂಮಿಯನ್ನು ಸರಿಯಾಗಿ ಅಳತೆ ಮಾಡಲು ರೈತನಿಂದ ಲಂಚ ಅಪೇಕ್ಷಿಸುತ್ತಾನೆ (ಇಲ್ಲಿನ ಹೆಚ್ಚಿನ ವಾದಗಳು ಒಬ್ಬ ಕೆಳಸ್ತರದ ಪೊಲೀಸನೊಬ್ಬ ಲಂಚ ಕೇಳುವುದಕ್ಕೂ ಅನ್ವಯಿಸುತ್ತದೆ).ಈಗಿನ ವ್ಯವಸ್ಥೆಯಲ್ಲಿ ಈ ಸಮಸ್ಯೆಯೊಂದಿಗೆ ವ್ಯವಹರಿಸಲು ಯಾವುದೇ ಪರಿಣಾಮಕಾರಿ ವಿಧಾನಗಳಿಲ್ಲ. ರೈತ ಲಂಚವನ್ನು ಕೊಡಲೇಬೇಕಾ ಗುತ್ತದೆ. ತಾಂತ್ರಿಕವಾಗಿ, ಲೋಕಾಯುಕ್ತ ವ್ಯವಸ್ಥೆ ಜಾರಿಯಿರುವ ರಾಜ್ಯಗಳಲ್ಲಿ ದೂರೊಂದನ್ನು ದಾಖ ಲಿಸಬಹುದು. ಆದರೆ ವಾಸ್ತವವಾಗಿ, ಆ ದೂರಿನ ಬಗ್ಗೆ ಕ್ರಮ ಆಗುವುದನ್ನು ಖಾತರಿಪಡಿಸುವ ಯಾವುದೇ ವ್ಯವಸ್ಥೆಯಿಲ್ಲ.

ಯುಪಿಎ ಮಾದರಿ ಲೋಕಪಾಲ: ಸರಕಾರ ಸಮಸ್ಯೆ ಪರಿಹಾರ ಮಸೂದೆಯೊಂದನ್ನು ಪ್ರಸ್ತಾಪಿಸಿದೆ. ಇದು ಕಾನೂನು ಮಾನ್ಯತೆಯಿರುವ ನಾಗರಿಕ ಸನದನ್ನು ರಚಿಸಿದ್ದು, ಒಂದು ಕೆಲಸ ನಿರ್ದಿಷ್ಟ ಸಮಯ ಮಿತಿಯೊಳಗೆ ಆಗಬೇಕೆಂದು ಇದು ವಿಧಿಸುತ್ತದೆ. ತೊಂದರೆಪೀಡಿತ ರೈತನಿಗೆ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಕಂದಾಯ ಇಲಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸುವ ಅವಕಾಶವಿರುತ್ತದೆ (ಕಂದಾಯ ಇಲಾಖೆಯ ಮುಖ್ಯಸ್ಥರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಕಂದಾಯ) ಆಗಿರಬಹುದು). ಸೇವೆ ನೀಡುವಲ್ಲಿ ಉಂಟಾದ ವಿಳಂಬ ಉದ್ದೇಶ ಪೂರ್ವಕ ಹಾಗೂ ನಿರ್ಲಕ್ಷದ ಕಾರಣದಿಂದ ಸಂಭವಿಸಿದೆ ಎಂದು ಸಾಬೀತಾದರೆ ಸಂಬಂಧಪಟ್ಟ ಪತ್ವಾರಿಯ ಮೇಲೆ ದಂಡ ವಿಧಿಸಲು ಅವಕಾಶ ವಿಲ್ಲ. ಪತ್ವಾರಿ ಸಾಕಷ್ಟು ಸೇವಾ ಹಿರಿತನ ಹೊಂದಿ ದ್ದರೆ ಆತ ಸಿ ಗುಂಪಿನ ನೌಕರನೂ ಆಗಿರಬಹುದು ಹಾಗೂ ಯುಪಿಎ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ಬರಲೂಬಹುದು. ಆದರೆ, ಈ ವ್ಯವಸ್ಥೆ ನಿಖರವಾಗಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಸರಕಾರ ಇನ್ನಷ್ಟೇ ಸ್ಪಷ್ಟಪಡಿಸ ಬೇಕಾಗಿದೆ.

ಟೀಮ್ ಅಣ್ಣಾ ಪ್ರಸ್ತಾಪ: ಇಲ್ಲಿ ಎರಡು ಮಾರ್ಗಗಳಿವೆ. ಒಂದು ತನಿಖೆ. ಲೋಕಪಾಲರು ದೇಶದ ಪ್ರತಿ ಜಿಲ್ಲೆಯಲ್ಲಿ ಒಂದು ಕಚೇರಿ ಅಥವಾ ಪೊಲೀಸ್ ಠಾಣೆ ಹೊಂದಿರುತ್ತಾರೆ. ರಾಜ್ಯದ ಪ್ರತಿಯೊಂದು ಬ್ಲಾಕ್‌ನಲ್ಲಿ ಅವರ ಸುಪರ್ದಿಯಲ್ಲಿ ಲೋಕಾಯುಕ್ತರಿರುತ್ತಾರೆ. ಕೇಂದ್ರ ಸರಕಾರದ ಕಚೇರಿಯಲ್ಲಿ ಭ್ರಷ್ಟಾಚಾರ ಸಂಭವಿಸಿದರೆ ನಿಮ್ಮ ಜಿಲ್ಲೆಯ ಲೋಕಪಾಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದು. ರಾಜ್ಯ ಸರಕಾರದ ಕಚೇರಿ ಯಲ್ಲಿ ಭ್ರಷ್ಟಾಚಾರ ಸಂಭವಿಸಿದರೆ ನಿಮ್ಮ ಬ್ಲಾಕ್ ನಲ್ಲಿರುವ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದು.

ಎರಡನೆಯದು ಸಮಸ್ಯೆ ಪರಿಹಾರ ವ್ಯವಸ್ಥೆ. ಪ್ರತಿ ಇಲಾಖೆಯಲ್ಲಿ ನಾಗರಿಕರ ಸನದು ಇರುತ್ತದೆ. ಅದು ಸಮಸ್ಯೆಗಳನ್ನು ಪರಿಹರಿಸಲು ಸಮಯ ಮಿತಿಯನ್ನು ನಿಗದಿಪಡಿಸುತ್ತದೆ. ಇಲ್ಲಿ ರೈತನಿಗೆ ಪರಿಹಾರ ನೀಡುವ ವ್ಯವಸ್ಥೆಯಿದೆ. ಇದನ್ನು ಸಮಸ್ಯೆಯನ್ನು ನಿರ್ದಿಷ್ಟ ಸಮಯಮಿತಿಯಲ್ಲಿ ಪರಿಹರಿಸಿ ಕೊಡದ ಪತ್ವಾರಿಗೆ ದಂಡ ವಿಧಿಸುವ ಮೂಲಕ ಸಂಗ್ರಹಿಸಬೇಕು. ನಾವೀಗ ಎತ್ತಿ ಕೊಂಡಿರುವ ಜಾಗ ಅಳತೆ ಪ್ರಕರಣದಲ್ಲಿ ಇದೇ ವಿಧಿಯನ್ನು ಅನ್ವಯಿಸಲಾಗುತ್ತದೆ. ನಿಯಮಗಳ ಪ್ರಕಾರ, ತನ್ನ ಬ್ಲಾಕ್‌ನ ಲೋಕಾಯುಕ್ತ ಪೊಲೀಸ್ ಠಾಣೆಗೆ ಹೋಗಿ ರೈತ ದೂರು ಸಲ್ಲಿಸಬಹುದು. ಆದರೆ, ಈ ವ್ಯವಸ್ಥೆ ಯಲ್ಲಿ ಪೊಲೀಸ್ ತಂಡವೊಂದು ಆಗಮಿಸಿ ಪತ್ವಾರಿಯನ್ನು ಬಂಧಿಸಲು ಪ್ರಯತ್ನಿಸುತ್ತಾರೆಂದು ಭಾವಿಸುವುದು ಕಷ್ಟ.

ಎನ್‌ಸಿಪಿಆರ್‌ಐ ಮಾದರಿ: ಇದು ಈ ಹಂತದಲ್ಲಿ ಲೋಕಾಯುಕ್ತ ಅಥವಾ ಲೋಕಪಾಲ ಮಧ್ಯಪ್ರವೇ ಶಿಸಬೇಕೆಂದು ಹೇಳುವುದಿಲ್ಲ. ಯಾವುದೇ ಸಮಸ್ಯೆಯನ್ನು ಸ್ವೀಕರಿಸಿ 15 ದಿನಗಳಲ್ಲಿ (ತುರ್ತು ಸಮಸ್ಯೆಗಳ ಪ್ರಕರಣದಲ್ಲಿ 48 ಗಂಟೆಗಳು) ಇತ್ಯ ರ್ಥಪಡಿಸಲು ಪ್ರತಿ ಇಲಾಖೆಯಲ್ಲಿ ಸಮಸ್ಯೆ ಪರಿಹಾರ ಅಧಿಕಾರಿಯೊಬ್ಬರಿರುತ್ತಾರೆ. ರೈತನು ತನ್ನ ಜಿಲ್ಲೆಯ ಕಂದಾಯ ಇಲಾಖೆಯ ಸಮಸ್ಯೆ ಪರಿಹಾರ ಅಧಿಕಾರಿಯನ್ನು ಸಂಪರ್ಕಿಸಬೇಕು. ನಿಗದಿ ಪಡಿಸಿದ ಸಮಯ ಮಿತಿಯಲ್ಲಿ ತನ್ನ ಸಮಸ್ಯೆ ಪರಿಹಾರವಾಗದಿದ್ದರೆ ರೈತನು ಸ್ವತಂತ್ರ ಜಿಲ್ಲಾ ಸಮಸ್ಯೆ ನಿವಾರಣಾ ಪ್ರಾಧಿಕಾರ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಪ್ರತ್ಯೇಕವಾಗಿ ಮೇಲ್ಮ ನವಿ ಸಲ್ಲಿಸಬಹುದು. ಪತ್ವಾರಿಯ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ರೈತನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ಯಾವುದೇ ಕ್ರಮ ತೆಗೆದು ಕೊಳ್ಳದಿದ್ದರೆ ಆತ ಬ್ಲಾಕ್ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹು ದಾಗಿದೆ.

ನಮ್ಮ ಅಭಿಪ್ರಾಯ: ಸಣ್ಣಪುಟ್ಟ ಭ್ರಷ್ಟಾ ಚಾರದ ಹೆಚ್ಚಿನ ಪ್ರಕರಣಗಳನ್ನು ಸಮಯ ಮಿತಿಯನ್ನು ನಿಗದಿಪಡಿಸುವ ಸಮಸ್ಯೆ ಪರಿಹಾರ ವ್ಯವಸ್ಥೆಗಳ ಮೂಲಕ ಪರಿಣಾಮ ಕಾರಿಯಾಗಿ ಬಗೆಹರಿಸಿಕೊಳ್ಳಬಹುದು.

ಸಂದರ್ಭ 2: ಪೊಲೀಸ್
ಪಾಸ್‌ಪೋರ್ಟ್‌ಗಾಗಿ ನಿಮ್ಮ ವಿಳಾಸ ಪರಿಶೀಲನೆಗೆ ದಿಲ್ಲಿಯ ಪೊಲೀಸ್ ಕಾನ್ ಸ್ಟೇಬಲ್ ಒಬ್ಬ ಲಂಚಕ್ಕೆ ಕೈಚಾಚಿದಾಗ.

ಯುಪಿಎ ಮಾದರಿ:ಇಲ್ಲಿ ಈ ಪ್ರಕರಣ ವನ್ನು ಮೊದಲು ದಿಲ್ಲಿ ಸರಕಾರದ ಭ್ರಷ್ಟಾ ಚಾರ ನಿಗ್ರಹ ವಿಭಾಗ (ಎಸಿಬಿ) ಎತ್ತಿಕೊಳ್ಳು ತ್ತದೆ. ಅದೂ ಅಲ್ಲದೆ, ದಿಲ್ಲಿ ಪೊಲೀಸರೇ ತುಂಬಿರುವ ಹಾಗೂ ಭಾರೀ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿರುವ ಜಾಗೃತ ಇಲಾಖೆಯೂ ಇದೆ. ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ ಎಸಿಬಿಯಾಗಲಿ ಜಾಗೃತ ಇಲಾಖೆಯಾಗಲಿ ಇಂಥ ಪ್ರಕರಣಗಳನ್ನು ನಿಭಾಯಿಸುವಲ್ಲಿ ಆಸಕ್ತಿ ಹೊಂದಿಲ್ಲ. ಆದರೆ, ಅಲ್ಲಿ ಪ್ರಸ್ತಾಪಿತ ಸಮಸ್ಯೆ ಪರಿಹಾರ ವ್ಯವಸ್ಥೆಯೂ ಇದೆ.

ಅದರ ನಾಗರಿಕ ಸನದು ಹಾಗೂ ದಿಲ್ಲಿ ಪೊಲೀಸ್‌ನಲ್ಲಿರುವ ಮಾಹಿತಿ ಹಾಗೂ ಸೌಲಭ್ಯ ಕೇಂದ್ರವು ಸಮಸ್ಯೆಗಳು ವ್ಯವಸ್ಥಿತವಾಗಿ ದಾಖಲಾಗುವುದನ್ನು ಖಾತರಿಪಡಿಸುತ್ತದೆ ಹಾಗೂ ಟೆಲಿಫೋನ್, ಮೊಬೈಲ್ ಟೆಕ್ಸ್ಟ್ ಸಂದೇಶಗಳು ಮತ್ತು ಇಂಟ ರ್‌ನೆಟ್ ಮೂಲಕ ದೂರಿನ ಪ್ರಗತಿಯ ಮೇಲೆ ನಿಗಾ ಇಡುತ್ತದೆ.ನೀವು ಇಲಾಖೆಯ ಸಮಸ್ಯೆ ಪರಿಹಾರ ಅಧಿಕಾರಿಯನ್ನು ಸಂಪರ್ಕಿಸಬೇಕು.ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನೀವು ಪೊಲೀಸ್ ಕಮಿಶನರ್ ಅಥವಾ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರಬಹುದು.ಇದು ಅಪ್ರಾಯೋಗಿಕ.ಯಾಕೆಂದರೆ, ಪೊಲೀಸ್ ಕಮಿಶನರ್ ಅವರನ್ನು ಸಂಪರ್ಕಿಸುವುದು ಎಷ್ಟು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದೆ.

- ವಾರ್ತಾಭಾರತಿ ಕೃಪೆ

ಮಡೆಸ್ನಾನಕ್ಕೆ ಕಾನೂನಿನ ನಿಷೇಧ ಔಷಧಿಯಾಗಬಹುದೇ?

ಕೆ. ದೇಜಪ್ಪ ವಕೀಲರು, ಉಡುಪಿ

ಕರಾವಳಿ ಕರ್ನಾಟಕದ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ‘ಮಡೆಸ್ನಾನ’ದ ಆಚರಣೆಯು ಶತಮಾನಗಳಿಂದ ನಿರಂತರವಾಗಿ ನಡೆದು ಬರುತ್ತಿದ್ದರೂ ಇತ್ತೀಚೆಗೆ ಅದನ್ನು ವಿಸ್ತೃತವಾಗಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸುದ್ದಿವಾಹಿನಿ ಗಳು ಬಿತ್ತರಿಸಿದ ಪರಿಣಾಮಗಾಗಿ, ಅದರ ಪರ ಮತ್ತು ವಿರುದ್ಧ ಭುಗಿಲೆದ್ದ ವಿಚಾರ ಸಂಕಿರಣ ಜನರ ಯೋಚನೆಗೆ ಸಾಕಷ್ಟು ಉರುವಲನ್ನು ನೀಡಿವೆ. ಈಗ ಕೊಂಚ ಶಮನಗೊಂಡಿರುವ ಆ ಚರ್ಚೆಯನ್ನು ಇನ್ನೊಮ್ಮೆ ಉಲ್ಬಣಿಸುವುದು ಈ ಲೇಖನದ ಉದ್ದೇಶವಲ್ಲ. ಇದರ ವ್ಯಾಪ್ತಿ ಅಂತಹ ಆಚರಣೆಗಳಿಗೆ ಕಾನೂನಿನ ನಿಷೇಧ ಔಷಧಿಯಾಗಬಹುದೇ ಎಂಬುದಕ್ಕಷ್ಟೇ ಸೀಮಿತ. ಒಂದು ಸಮಾಜದಲ್ಲಿ ಘರ್ಷಣೆ ಅಥವಾ ವಿರೋಧದ ಮೂಲ ಒಬ್ಬರ ‘ಸರಿ’ ಇನ್ನೊಬ್ಬರ ದೃಷ್ಟಿಯಲ್ಲಿ ‘ತಪ್ಪು’ ಎಂದಾಗುವುದು. ಒಂದೇ ಕೃತ್ಯವನ್ನು ಒಬ್ಬರು ಸರಿಯೆಂದು, ಇನ್ನೊಬ್ಬರು ತಪ್ಪೆಂದು ಗ್ರಹಿಸುವುದು ಅವರವರ ಭಾವಕ್ಕನುಗುಣವಾಗಿ. ಕಾನೂನು, ಇಂತಹ ಮಾನವ ಸಂಬಂಧಗಳನ್ನು ಕ್ರೋಡೀಕರಿಸಿ, ನಿಯಂತ್ರಿಸುವ ಒಂದು ಸಾಧನ. ಅದು, ಸಮಾಜದ ಸಹಬಾಳ್ವೆಯಲ್ಲಿ ತಪ್ಪು-ಸರಿ ಗಳನ್ನು ವಿಶ್ಲೇಷಿಸುವ, ಮಾಡು-ಬಿಡುಗಳನ್ನು ಸೂಚಿಸುವ ಮಾರ್ಗದರ್ಶಿ. ನ್ಯಾಯವನ್ನು ಕಾಪಾಡಲು ರೂಪಿಸುವ ಒಂದು ವ್ಯವಸ್ಥೆಯೇ ಕಾನೂನು.

ಅದರ ಮುಖ್ಯ ಉದ್ದೇಶ ಪಾಲಕರಿಗೆ ರಕ್ಷೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ. ಆದರೆ ನಮ್ಮ ವಿಷಯಕ್ಕೆ ಬೇಕಾದ ಅಂಶವೆಂದರೆ ಮಾನವನ ನಂಬಿಕೆ ಯನ್ನು ಕಾನೂನಿನಿಂದ ನಿಯಂತ್ರಿಸಲು ಸಾಧ್ಯವೇ ಎಂಬುದು.ಈ ಚಿಂತನೆಗೆ ಪೂರಕವಾಗಿ ಒಂದು ಉದಾಹರಣೆಯನ್ನು ಗಮನಿಸಿ. ಕೇರಳದ ಶಬರಿಮಲೆಯಲ್ಲಿ ‘ಮಕರ ಜ್ಯೋತಿ’ಯನ್ನು ವೀಕ್ಷಿಸಲು ಸೇರುವ ಅಸಂಖ್ಯಾತ ಭಕ್ತಾದಿ ಗಳಲ್ಲಿ ಹಲವರು ನೂಕುನುಗ್ಗಲಿನಿಂದ ಸಾಯುತ್ತಾರೆ. ಕೆಲವು ವರ್ಷಗಳ ಹಿಂದೆ, ಜ್ಯೋತಿವೀಕ್ಷಣೆಗೆಂದು ಲಕ್ಷಾಂತರ ಜನರು ಜಮಾಯಿಸಿದ್ದ ಗುಡ್ಡವೊಂದು ಕುಸಿದುಬಿದ್ದು ಐವತ್ತಕ್ಕೂ ಹೆಚ್ಚು ಸಾವು ಸಂಭವಿಸಿತ್ತು.

ವಿಚಾರ ವಾದಿಗಳ ನಿರಂತರ ಪರಿಶ್ರಮದ ಫಲವಾಗಿ, ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ ಮತ್ತು ಅಲ್ಲಿಯ ರಾಜ್ಯ ಸರಕಾರ ಆ ಜ್ಯೋತಿ ಯು ದೈವಿಕವಲ್ಲ, ಮಾನವ ಸೃಷ್ಟಿಯೆಂಬುದನ್ನು ಕೇರಳ ಉಚ್ಚನ್ಯಾಯಾಲಯದಲ್ಲಿ ಒಪ್ಪಿಕೊಂಡಿವೆ. ಇದು ಭಕ್ತಾದಿಗಳ ಮುಗ್ಧತೆಯನ್ನು ಬಳಸಿ ದುಡ್ಡುಮಾಡುವ ಒಂದು ಕುತಂತ್ರವೆಂಬುದೂ ಸಾಬೀತಾಗಿದೆ. ಈ ಗುಟ್ಟು ಈಗ ರಟ್ಟಾಗಿ ಸಾಕಷ್ಟು ಪ್ರಚಾರವೂ ದೊರೆತಿದೆ. ಆದರೂ ಜೀವದ ಹಂಗುತೊರೆದು ಆ ‘ಜ್ಯೋತಿ’ಯನ್ನು ವೀಕ್ಷಿಸುವ ಭಕ್ತಾದಿಗಳಿಗೆ ಈಗಲೂ ಕೊರತೆ ಯಿಲ್ಲ. ಮುಂದಿನ ಜನವರಿ 14ರಂದು ಈ ಪ್ರಕ್ರಿಯೆ ಪುನರಾವರ್ತಿಸುತ್ತದೆ.

ಇನ್ನೊಂದು ಉದಾಹರಣೆಯನ್ನು ತೆಗೆದು ಕೊಳ್ಳಿ. ಬೆಳಗಾವಿ ಜಿಲ್ಲೆಯ ಯೆಲ್ಲಮ್ಮ ಗುಡ್ಡದಲ್ಲಿ ನಡೆಯುವ ‘ಬೆತ್ತಲೆ ಸೇವೆ’ಯನ್ನು ಸರಕಾರ ನಿಷೇಧಿಸಿದೆ.ಅದರ ಪರಿಣಾಮವೇನಾಗಿದೆ ಯೆಂಬುದನ್ನು ತಿಳಿಯಲು ಮುಂದಿನ ಜಾತ್ರೆಯ ನಂತರ ಆ ಸಮಾಚಾರದತ್ತ ಸ್ವಲ್ಪಗಮನವಿಟ್ಟರೆ ಸಾಕು.ಅದು, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಿದ ಪರಿಣಾಮಕ್ಕಿಂತ ಹೆಚ್ಚು ಭಿನ್ನವಾಗಿಲ್ಲ.ಮತ್ತೊಂದು ಉದಾಹರಣೆಯನ್ನು ನೋಡಿ. ಕರಾವಳಿಯ ಮಾರಿಗುಡಿಗಳಲ್ಲಿ, ವರ್ಷದಲ್ಲಿ ಎರಡರಿಂದ ಮೂರು ಬಾರಿ ನಡೆಯುವ ‘ಮಾರಿಪೂಜೆ’ಯಲ್ಲಿ ಹಿಂದೆ ಅಪಾರ ಸಂಖ್ಯೆಯ ಕುರಿ, ಆಡು, ಕೋಳಿಗಳನ್ನು ಬಲಿಕೊಡಲಾಗುತ್ತಿತ್ತು.

ರಾಮಕೃಷ್ಣ ಹೆಗ್ಡೆಯವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಇದನ್ನು ಸರಕಾರ ನಿಷೇಧಿಸಿತ್ತು. ಅದರ ಪರಿಣಾಮವಾಗಿ ಆಡು, ಕುರಿಗಳ ಬಲಿ ನಿಂತಿದೆಯಾದರೂ ಕೋಳಿಗಳ ‘ಅರ್ಪಣೆ’ ಇನ್ನೂ ಮುಂದುವರಿದಿದೆ.ಮೇಲಿನವು ಕೇವಲ ಸಾಂಕೇತಿಕ ಉದಾ ಹರಣೆಗಳು. ಇಂತಹವುಗಳನ್ನು ಒಂದರ ಹಿಂದೊಂದರಂತೆ ಉಲ್ಲೇಖಿಸಬಹುದು. ಇವುಗಳಲ್ಲಿ ಕಾನೂನು ವಿಧಿಸಿದ ನಿಷೇಧ ಪುಸ್ತಕದ ಬದನೆಕಾಯಿಯಂತಾಗಿದೆ. ಇಲ್ಲಿ ನಾವು ಗಮನಿಸಬೇಕಾದುದೆಂದರೆ, ಎಲ್ಲಿಯವರೆಗೆ ಒಂದು ವಿಚಾರದ ಬಗ್ಗೆ ಜನರ ನಂಬಿಕೆ ಅಚಲವಾಗಿದೆಯೋ ಅಲ್ಲಿಯವರೆಗೆ ಅದರ ವಿರುದ್ಧ ಮಾಡುವ ಯಾವುದೇ ಬಾಹ್ಯ ಒತ್ತಡ ಪೂರ್ಣ ಫಲಕಾರಿಯಾಗದೆಂಬ ಅಂಶ.

ಯಾವುದೇ ಆಚರಣೆಯ ಮುಂದುವರಿಕೆಗೆ ಮೂಲಕಾರಣ ಅದರ ಹಿಂದಿರುವ ನಂಬಿಕೆ. ಈ ಮಾತನ್ನು ಧಾರ್ಮಿಕ ವಿಚಾರಗಳಿಗೆ ಹೇಳುವುದಾದರೆ, ಯಾವುದರಲ್ಲಿ ಜನರಿಗೆ ವಿಶ್ವಾಸವಿದೆಯೋ ಅದನ್ನ ವರು ಶ್ರದ್ಧೆಯಿಂದ ಪಾಲಿಸುತ್ತಾರೆ. ಕಾಲಕ್ರಮೇಣ ಅದು ವಿವೇಚನೆಯಿಲ್ಲದೆ ಆಚರಿಸಲ್ಪಡುವ ಸಂಪ್ರದಾಯವಾಗಬಹುದು. ಆದರೆ ಎಲ್ಲಿಯ ವರೆಗೆ ಆಚರಿಸುವವರ ಮನದಲ್ಲಿ ನಂಬಿಕೆ ದೃಢವಾಗಿದೆಯೋ ಅಲ್ಲಿಯವರೆಗೆ ಆ ಆಚರಣೆ ಮುಂದುವರಿಯುತ್ತದೆ.ಒಬ್ಬ ಒಂದು ಹರಕೆ ಹೊರುತ್ತಾನೆ; ಅವನ ಬಯಕೆ ಈಡೇರುತ್ತದೆ. ಆದರೆ ಇನ್ನೊಬ್ಬನ ಹರಕೆ ಅವನ ಬಯಕೆಯನ್ನು ಈಡೇರಿಸು ವುದಿಲ್ಲ. ಆದರೆ ಈ ಇಬ್ಬರಲ್ಲೂ ಕಂಡುಬರುವ ಸಮಾನಾಂಶವೆಂದರೆ, ಅವರಿಬ್ಬರೂ ತಮ್ಮ ತಮ್ಮ ಹರಕೆಗಳನ್ನು ಮುಂದುವರಿಸುವುದು.

ಮೊದಲಿನವ ತನ್ನ ಇಚ್ಛೆಯನ್ನು ಈಡೇರಿಸಿದ ದೇವರಿಗೆ ಇನ್ನೊಂದು ಹರಕೆಯ ಮೂಲಕ ತನಗಿರುವ ಅನನ್ಯ ಭಕ್ತಿಯನ್ನು ತೋರಿಸಿದರೆ, ಇನ್ನೊಬ್ಬ ತನ್ನ ಹಾರೈಕೆಯನ್ನು ಈಡೇರಿಸದ ದೇವರು ಇನ್ನೊಂದು ಹರಕೆಯಿಂದಾದರೂ ತನ್ನನ್ನು ಕರುಣಿಸಬಹುದೆಂದುಕೊಳ್ಳುತ್ತಾನೆ! ಇದು ಮಾನವ-ಮಾನವ ಮತ್ತು ಮಾನವ-ದೇವರ (ನಂಬಿಕೆಯ) ಸಂಬಂಧಗಳಲ್ಲಿ ಕಂಡುಬರುವ ಮುಖ್ಯ ವ್ಯತ್ಯಾಸ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 1532ನೆ ವರ್ಷಗಳಿಂದಲೂ ಮಡೆಸ್ನಾನ ಆಚರಣೆಯಲ್ಲಿತ್ತು ಎಂದು ವರದಿಯಾಗಿದೆ. ಇದರರ್ಥ ಅದಕ್ಕೂ ಹಿಂದೆ ಅದು ಇರಲಿಲ್ಲವೆಂದಲ್ಲ; ಆ ಪದ್ಧತಿಯ ಬಗ್ಗೆ ಇರುವ ದಾಖಲೆ ಆ ವರ್ಷದಿಂದೀಚಿನದ್ದು ಎಂದಷ್ಟೇ ಅರ್ಥ.

ಮಡೆಸ್ನಾನ ಆ ದೇವಾಲಯದಲ್ಲಿ ಅದಕ್ಕಿಂತಲೂ ನೂರಾರು ವರ್ಷಗಳ ಹಿಂದಿನಿಂದಲೂ ಇದ್ದಿರಬಹುದು; ಅದರ ದಾಖಲಾತಿಯಿಲ್ಲ ಅಷ್ಟೆ. ನಾವು 1532ನೇ ಇಸವಿಯನ್ನು ಆಧಾರವಾಗಿಟ್ಟುಕೊಂಡರೂ, ಸುಮಾರು ಐನ್ನೂರು ವರ್ಷಗಳಿಂದ ಈ ಪದ್ಧತಿ ಆಚರಣೆಯಲ್ಲಿತ್ತೆಂಬುದು ನಿರ್ವಿವಾದ. ಐದು ಶತಮಾನಗಳಿಂದ ನಿರಂತರವಾಗಿ ನಡೆದು ಬರು ತ್ತಿದ್ದ ಈ ಪದ್ಧತಿಗೆ ಮೊಟ್ಟ ಮೊದಲ ತೀವ್ರ ವಿರೋಧ ಕಂಡುಬಂದುದು 2011ರಲ್ಲಿ! ಇದನ್ನು ಕೂಡಲೇ ನಿಲ್ಲಿಸಬೇಕೆಂದು ಬಯಸುವ ವರು ನಿಜವಾಗಿಯೂ ಮಾನವನ ಮನೋಗುಣ ವನ್ನು ಅರಿಯರು.ಸಮಾಜ ಸುಧಾರಣೆಯೆಂದರೆ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲ್ಪಡುವ, ಅಥವಾ ಎಷ್ಟು ಚರ್ಚಿಸಿದರೂ ನಿರ್ಣಯಿಸಲಾರದೆ ನನೆಗುದಿಗೆ ತಳ್ಳಲ್ಪಡುವ ಸಂಸತ್ತಿನ ಮಸೂದೆ ಯಲ್ಲ.

ಅದು ಆಗು-ಹೋಗುಗಳನ್ನು ಗಮನಿಸದೆ, ತಮ್ಮ ಜೀವನವಿಡೀ ಹೋರಾಡಿದರೂ ಫಲಿಸದಿದ್ದರೆ, ಮುಂದಿನ ಮತ್ತು ತದ ನಂತರದ ತಲೆಮಾರುಗಳು ಮುಂದುವರಿಸಿ ಕೊಂಡು ಹೋಗುವ ಅವಿರತ ಪ್ರಯತ್ನ. ಉದಾಹರಣೆಗೆ ಅಸ್ಪಶತೆಯನ್ನು ಹೋಗ ಲಾಡಿಸಲು ಗಾಂಧೀಜಿಯವರಂತೆ ಎಷ್ಟು ಜನ ಜೀವನವಿಡೀ ಹೋರಾಡಿದರು, ಹೋರಾಡುತ್ತಿದ್ದಾರೆ? ಆದರೂ ನಮ್ಮಲ್ಲಿ ಅಸ್ಪಶತೆ ಕೊನೆಗೊಂಡಿದೆಯೇ? ಇಲ್ಲ, ಆದರೆ ಪ್ರಯತ್ನ ಮುಂದುವರಿಯುತ್ತಿದೆ; ಮುಂದುವರಿಯಬೇಕು.‘ಮಡೆ’ ಒಂದು ತುಳು ಶಬ್ದ; ಅದರ ಸಮೀಪದ ಕನ್ನಡಾನುವಾದ ‘ಎಂಜಲು’ ಎಂದಾಗುತ್ತದೆ. ಅಂದರೆ, ಮಡೆಸ್ನಾನವೆಂದರೆ ಎಂಜಲು ಸ್ನಾನ ಎಂದಾಯಿತು. ಸ್ನಾನ ಶುದ್ಧತೆಯ ಪ್ರತೀಕವಾದರೆ, ಎಂಜಲು ಅಶುದ್ಧತೆಯನ್ನು ಬಿಂಬಿಸುತ್ತದೆ.

ಇದೆಂತಹ ‘ಸ್ನಾನ’ವೆನ್ನುವುದು ತಾರ್ಕಿಕ ಆಕ್ಷೇಪ; ಆದರೆ ನಂಬಿಕೆಯ ತಳಹದಿ ತರ್ಕಶಾಸ್ತ್ರವಲ್ಲ! ನಂಬಿಕೆಯ ಆಧಾರದಲ್ಲಿ ಮುಂದುವರಿ ಯುವ ಯಾವುದೇ ಆಚರಣೆಯನ್ನು ತರ್ಕದಿಂದ ನಿಲ್ಲಿಸಲಾಗದು. ಅದನ್ನು ನಿಲ್ಲಿಸಲು ಈಗಿನ ನಂಬಿಕೆಗಿಂತ ಬಲಯುತವಾದ ನಂಬಿಕೆ ಯನ್ನು ಆಚರಿಸುವವರ ಮನದಲ್ಲಿ ಬೇರೂರಿಸ ಬೇಕು. ಉದಾಹರಣೆಗೆ, ಎಂಜಲೆಲೆಯ ಮೇಲೆ ಉರುಳಾಡುವುದರಿಂದ ರೋಗಗಳು ಹರಡುತ್ತವೆ ಯೆಂಬುದನ್ನು ತಿಳಿಸಲು ವಿಚಾರವಾದಿಗಳು ಶ್ರಮಿಸುತ್ತಿದ್ದಾರೆ. ಈ ಮಾತನ್ನು ಸಾಕಷ್ಟು ಅಧ್ಯಯನ ನಡೆಸಿದ ವರದಿಗಳಿಂದ ಅದರ ಆಚರಣಾಕರ್ತರಿಗೆ ಮನವರಿಕೆ ಮಾಡ ಬಹುದು. ಒಟ್ಟಿನಲ್ಲಿ ಅದನ್ನು ಆಚರಿಸುವವರಿಗೆ ಆ ಆಚರಣೆ ಬೇಡವಾಗಬೇಕು; ಆಗ ಮಾತ್ರ ಅದು ನಿಲ್ಲುತ್ತದೆ.

ಎಲ್ಲೆಲ್ಲಿ ಕಾನೂನು ಅಪಾರ ನಂಬಿಕೆಗೆ ವಿರುದ್ಧವಾಗಿ ಬಳಸಲ್ಪಟ್ಟಿದೆಯೋ ಅಲ್ಲಲ್ಲಿ ಅದು ಸೋತಿದೆ. ಅಲ್ಲದೆ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗದ ಕಾನೂನು ತನ್ನ ಹಿರಿಮೆಯನ್ನು ಕಳೆದುಕೊಳ್ಳುತ್ತದೆ. ಜನರಿಗೆ ಅದರ ಮೇಲಿರಬೇಕಾದ ಗೌರವ ಮತ್ತು ಭಯ ಮಾಯವಾಗುತ್ತದೆ. ಇದರಿಂದ ಒಳಿತಿಗಿಂತ ಹೆಚ್ಚು ಕೆಡುಕಾಗುತ್ತದೆ. ಕೆಲವೊಮ್ಮೆ ವಿರೋಧ ಒಂದು ಆಚರಣೆಯನ್ನು ನಿಲ್ಲಿಸುವ ಬದಲು ಅದನ್ನು ತೀವ್ರಗೊಳಿಸಬಹುದು. ನಿಶ್ಚಿತವಾಗಿ ಹೇಳಬಹುದಾದ ಒಂದು ಮಾತೆಂದರೆ ಮನಸ್ಸು ಯಾವುದನ್ನು ಬಲವಾಗಿ ನಂಬುತ್ತದೆಯೋ ಅದನ್ನು ಬುದ್ಧಿಯೂ ತಿರಸ್ಕರಿಸಲಾರದು (ಮೇಲೆ ಹೇಳಿದ ಮಕರ ಜ್ಯೋತಿ ಇದಕ್ಕೊಂದು ಉತ್ತಮ ಉದಾಹರಣೆ). ಮನಸ್ಸಿನ ಈ ಶಕ್ತಿಯನ್ನು ವಿಶ್ಲೇಷಿಸದೆ, ನಂಬಿಕೆಯನ್ನು ‘ಸರಿ’ ಮತ್ತು ‘ತಪ್ಪು’ ಗಳನ್ನಾಗಿ ವಿಂಗಡಿಸುವುದು ಸಮಸ್ಯೆಗೆ ಪರಿಹಾರವಲ್ಲ.

ರೋಗಲಕ್ಷಣವನ್ನು ಕಂಡುಹಿಡಿಯುವುದು ಮತ್ತು ಅದಕ್ಕೆ ಪರಿಣಾಮಕಾರಿ ಔಷಧಿ ನೀಡು ವುದು ಬೇರೆ-ಬೇರೆ. ಒಂದು ಆಚರಣೆಯನ್ನು ಕಾನೂನಿನಿಂದ ನಿಷೇಧಿಸಬಹುದು, ಅದರ ಹಿಂದಿರುವ ನಂಬಿಕೆಯನ್ನಲ್ಲ. ನಂಬಿಕೆಯನ್ನು ಬದಲಿಸಬಹುದು; ಆದರೆ ನಿಷೇಧಿಸಲಾಗದು. ಆದರೂ ಸಹ, ಮಡೆಸ್ನಾನದಂತಹ ಪದ್ದತಿ ಒಂದಲ್ಲ ಒಂದು ದಿನ ಸಂಪೂರ್ಣವಾಗಿ ನಿಂತುಹೋಗುವುದಂತೂ ಶತಸ್ಸಿದ್ಧ. ಹಾಗಾಗಲು ವರ್ಷ, ದಶಕ ಅಥವಾ ಶತಮಾನಗಳ ಸಮಯ ಬೇಕಾಗಬಹುದು. ಆದರೆ ಅದಕ್ಕೆ ಕಾರಣವಾಗುವುದು ಕೇವಲ ಜನರ ವಿರೋಧವಲ್ಲ. ವಿರೋಧ ಈ ನಿಲುಗಡೆಯನ್ನು ಕ್ಷಿಪ್ರಗೊಳಿಸಬಹುದು; ಆದರೆ ಒಮ್ಮಿಂದೊಮ್ಮೆಗೇ ನಿಲ್ಲಿಸಲಾರದು. ಅದು ಅಳಿಯುವ ಏಕೈಕ ಕಾರಣವೆಂದರೆ ‘ಎಲ್ಲರಿಗೂ ಸಮಾನವಾಗಿ ಅನ್ವಯಿಸದ ಯಾವುದೇ ಸಂಪ್ರದಾಯ ತನ್ನ ನಿರಂತರತೆಯನ್ನು ಉಳಿಸಿಕೊಳ್ಳಲಾರದು’ ಎನ್ನುವ ಸಾರ್ವಕಾಲಿಕ ಸತ್ಯ.

ಈ ಸಂಪ್ರದಾಯವನ್ನು ಸಮುದಾಯದ ಪ್ರತಿಯೊಬ್ಬರೂ ಆಚರಿಸುತ್ತಿದ್ದರೆ, ಅದಕ್ಕೆ ವಿರೋಧವಿರುತ್ತಿರಲಿಲ್ಲ. (ದೇವಸ್ಥಾನದ ಒಳಗೆ ಹೊಗುವಾಗ ಪಾದರಕ್ಷೆಯನ್ನು ಹೊರಗಿಡುವುದಕ್ಕೆ ಯಾರದ್ದಾದರೂ ವಿರೋಧವಿದೆಯೇ?) ಮಡೆಸ್ನಾನದ ವಿರೋಧದ ಮೂಲ ಅದರ ಆಚರಣೆಯಲ್ಲಿ ಕಂಡುಬರುವ ಅಸಮಾನತೆ; ಮುಂದೊಂದು ದಿನ ಈ ಅಸಮಾನತೆಯೇ ಅದರ ಅವಸಾನಕ್ಕೆ ಕಾರಣವಾಗುತ್ತದೆ. ಈ ಕೆಲಸವನ್ನು ಕಾನೂನು ಮಾಡಲಾರದು.

-ವಾರ್ತಾಭಾರತಿ ಕೃಪೆ


Thursday, December 29, 2011

ಸರ್ಕಾರದ ಹೊಸ `ಜಾತಿ ಪದ್ಧತಿ'; `ನವಬ್ರಾಹ್ಮಣ'ರ ಜಾಣ ಮೌನ

ಸರ್ಜಾಶಂಕರ ಹರಳಿಮಠ, ಶಿವಮೊಗ್ಗ


ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಸಂಬಳದಲ್ಲಿ ತಮಗಾಗುತ್ತಿರುವ ತಾರತಮ್ಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಇತ್ತೀಚೆಗೆ ರಾಜ್ಯದಾದ್ಯಂತ ಮುಷ್ಕರ ನಡೆಸಿದರು.

`ಪದವಿ ಕಾಲೇಜುಗಳ ಉಪನ್ಯಾಸಕರು ಪಡೆಯುತ್ತಿರುವ ಸಂಬಳಕ್ಕೆ ಹೋಲಿಸಿದರೆ ತಮಗೆ ನೀಡುತ್ತಿರುವ ಸಂಬಳ ಕಡಿಮೆ, ಅದನ್ನು ಸರಿಪಡಿಸಿ` ಎನ್ನುವುದು ಇವರ ಬೇಡಿಕೆಯಾಗಿತ್ತು.

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ತಿಂಗಳ ಸಂಬಳ ಒಟ್ಟಾರೆ ಇಪ್ಪತ್ತು ಸಾವಿರ ರೂಪಾಯಿಗಳಾದರೆ, ಪದವಿ ಕಾಲೇಜುಗಳ ಉಪನ್ಯಾಸಕರು ಪಡೆಯುವ ತಿಂಗಳ ಸಂಬಳ ನಲ್ವತ್ತು ಸಾವಿರ ರೂಪಾಯಿಗಳು.

ಅಂದರೆ ಎರಡು ಪಟ್ಟು ಅಧಿಕ. `ಸೇವಾವಧಿ ಹೆಚ್ಚಾದಂತೆ ಪದವಿ ಕಾಲೇಜುಗಳ ಉಪನ್ಯಾಸಕರು ಒಂದು ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಾರೆ. ನಾವು ಮಾಡುವ ಉಪನ್ಯಾಸ, ಉಪನ್ಯಾಸದ ಅವಧಿ ಪದವಿ ಕಾಲೇಜುಗಳ ಉಪನ್ಯಾಸಕರು ಮಾಡುವ ಉಪನ್ಯಾಸ ಮತ್ತು ಉಪನ್ಯಾಸದ ಅವಧಿಗಿಂತಲೂ ಅಧಿಕ.

ಆದರೆ ಸಂಬಳ ನೀಡಿಕೆಯಲ್ಲಿ ಮಾತ್ರ ನಮಗೇಕೆ ಮಾತ್ರ ಅವರಿಗಿಂತ ಕಡಿಮೆ?` ಎಂಬ ಪದವಿಪೂರ್ವ ಕಾಲೇಜು ಉಪನ್ಯಾಸಕರ ಪ್ರಶ್ನೆ ನ್ಯಾಯೋಚಿತವಾದದ್ದೆೀ.

ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಒಂದೇ ವಿಭಾಗದಲ್ಲಿ ಬರುವ (ಹೈಯರ್ ಸೆಕೆಂಡರಿ) ಪ್ರೌಢ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ನಡುವೆಯೂ ಇದೇ ಬಗೆಯ ವೇತನ ತಾರತಮ್ಯವಿದೆ.

ಪ್ರೌಢಶಾಲಾ ಶಿಕ್ಷಕರು ಒಟ್ಟಾರೆ ಮಾಸಿಕ 15,000 ರೂಪಾಯಿ ಸಂಬಳ ಪಡೆದರೆ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಬಳ 20,000 ರೂಪಾಯಿಗಳಾಗಿವೆ.

ಪ್ರೌಢಶಾಲಾ ಶಿಕ್ಷಕರು `ಪದವಿಪೂರ್ವ ಕಾಲೇಜು ಉಪನ್ಯಾಸಕರಷ್ಟೆ ನಾವು ಪಾಠ ಮಾಡುತ್ತೇವೆ, ಅವರಷ್ಟೇ ಕೆಲಸ ಮಾಡುತ್ತೇವೆ, ನಮಗೇಕೆ ಈ ತಾರತಮ್ಯ?` ಎಂದು ಕೇಳಬಹುದು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಬಳ ಪ್ರೌಢಶಾಲಾ ಶಿಕ್ಷಕರ ಸಂಬಳಕ್ಕಿಂತ ಇನ್ನೂ ಐದು ಸಾವಿರ ಕಡಿಮೆ. ಅವರೂ ಹೀಗೆ ಪ್ರಶ್ನಿಸಬಹುದು.

ಶಿಕ್ಷಣ ಕ್ಷೇತ್ರದ ಮೊದಲ ಹಂತವಾದ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಪ್ರಾಥಮಿಕ ಶಾಲಾ ಶಿಕ್ಷಕರು ಪಡೆಯುವ ಒಟ್ಟಾರೆ ಸಂಬಳದ ಕಾಲುಭಾಗಕ್ಕಿಂತ ಕಡಿಮೆ. ಅದೂ ಸಂಬಳವಲ್ಲ, `ಗೌರವಧನ`! `ಈ ಮೊತ್ತದ ಗೌರವಧನವನ್ನು ಅವರಿಗೆ ಕೊಡುತ್ತೇನೆ` ಎಂದು ಸರ್ಕಾರ ಘೋಷಿಸಿದ್ದರೂ ಅದು ಇನ್ನೂ ಅವರ ಕೈಗೆ ಬಂದಿಲ್ಲ. ಈಗಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುತ್ತಿರುವುದು ಕೇವಲ ಮೂರು ಸಾವಿರ ಮಾತ್ರ.

ಕೆಳಹಂತದ ನೌಕರರು ದುಡಿಮೆಗೆ ತಕ್ಕ ಸಂಬಳ ಕೇಳಿದಾಗ ನೂರೆಂಟು ಸಮಸ್ಯೆಗಳನ್ನು ಮುಂದು ಮಾಡುವ ಸರ್ಕಾರಗಳು ವಿಶ್ವವಿದ್ಯಾನಿಲಗಳ ಉಪನ್ಯಾಸಕರಿಗೆ ಅದು ಹೇಗೆ ಲಕ್ಷಾಂತರ ರೂಪಾಯಿ ಸಂಬಳ ಕೊಡುತ್ತವೆ? ವಾಸ್ತವ ಏನು? ಸರ್ಕಾರ ತನ್ನ ನೌಕರರಿಗೆ ಸೂಕ್ತ ಸಂಬಳ ಕೊಡದೇ ಇರುವಷ್ಟು ನಿಶ್ಯಕ್ತವಾಗಿದೆಯೇ ಅಥವಾ ಲಕ್ಷಾಂತರ ರೂಪಾಯಿ ನೀಡುವಷ್ಟು ಸಂಪದ್ಭರಿತವಾಗಿದೆಯೇ?

ದೈಹಿಕ ಶ್ರಮ ಕೀಳೆಂಬ, ಬೌದ್ಧಿಕ ಶ್ರಮ ಶ್ರೇಷ್ಠವೆಂಬ ಮಾನದಂಡ ಭಾರತೀಯ ಸನಾತನ ಸಮಾಜದ ಪುರಾತನ ನಂಬಿಕೆಯೇ ಆಗಿದೆ. ಈ ನಂಬಿಕೆಯೇ ಜಾತಿ ವ್ಯವಸ್ಥೆಯ ಬುನಾದಿಯೂ ಆಗಿದೆ. ಆದ್ದರಿಂದಲೇ ಇಲ್ಲಿ ಬೆವರಿಗಿಂತ ಬುದ್ಧಿವಂತಿಕೆಗೆ ಹೆಚ್ಚಿನ ಬೆಲೆ.

ಶಿಕ್ಷಣ ಎಲ್ಲರಿಗೂ ದೊರಕಿದಂತೆ ಜಾತಿಯ ಗೋಡೆಗಳು ಕುಸಿದು, ಮೇಲು ಕೀಳಿನ ತಾರತಮ್ಯವಿಲ್ಲದೆ ಎಲ್ಲರೂ ಉಂಡುಟ್ಟು ನೆಮ್ಮದಿಯಾಗಿರುವಂತಹ ಸಮಸಮಾಜ ನಿರ್ಮಾಣವಾಗುತ್ತದೆ ಎಂಬ ಕನಸು ನಮ್ಮದಾಗಿತ್ತು. ಈ ಕನಸು ನನಸಾಗುತ್ತಿದೆಯೇನೋ ಎಂಬ ದಿನಗಳಲ್ಲಿ `ನವಜಾತಿ` ವ್ಯವಸ್ಥೆಯನ್ನು ಈಗ ಸರ್ಕಾರವೇ ಜಾರಿಗೆ ತರುತ್ತಿದೆ.

ಆದ್ದರಿಂದಲೇ ದಿನಕ್ಕೆ 8 ಗಂಟೆ ದುಡಿಯುವ ಅಂಗನವಾಡಿ ಕಾರ್ಯಕರ್ತೆಗೆ ನಾಲ್ಕೂವರೆ ಸಾವಿರ ಸಂಬಳವಾದರೆ ದಿನಕ್ಕೆ ಮೂರು ಗಂಟೆಯೂ ದುಡಿಯದ (ಆರು ತಿಂಗಳ ಒಂದು ಸೆಮಿಸ್ಟರ್‌ನಲ್ಲಿ ಒಂದು ಗಂಟೆಯೂ ಪಾಠ ಮಾಡದೆ `ಹೆಚ್ಚುವರಿ ಆದಾಯ ತರುವ` ಯುಜಿಸಿ ಪ್ರಾಯೋಜಿತ ಪ್ರಾಜೆಕ್ಟು ಮತ್ತು ಸೆಮಿನಾರುಗಳಲ್ಲಿ ಮುಳುಗುತ್ತಾರೆಂದು ವಿದ್ಯಾರ್ಥಿಗಳು ಆರೋಪಿಸುವ ಉಪನ್ಯಾಸಕರನ್ನು `ಅಪವಾದ`ವೆಂದು ಸದ್ಯಕ್ಕೆ ಪಕ್ಕಕ್ಕಿಡೋಣ) ಕಾಲೇಜು ಅಧ್ಯಾಪಕರಿಗೆ ಒಂದು ಲಕ್ಷ ರೂಪಾಯಿ ಸಂಬಳ.

ಈ ಹಿನ್ನೆಲೆಯಲ್ಲಿ ಸಮಕಾಲೀನ ಜಾತಿ ವ್ಯವಸ್ಥೆಯನ್ನು ವಿವಿಧ ವರ್ಗಗಳು ಪಡೆಯುತ್ತಿರುವ ಸಂಬಳ ಸವಲತ್ತು ಸಾಮಾಜಿಕ ಮನ್ನಣೆಗಳ ಆಧಾರದಲ್ಲಿ ಪುನರ್ ವ್ಯಾಖ್ಯಾನಕ್ಕೆ ಒಳಪಡಿಸುವುದಾದರೆ ಈಗ ಅಂಗನವಾಡಿಯ ಕಾರ್ಯಕರ್ತೆಯರು `ದಲಿತ`ರಾದರೆ ವಿಶ್ವವಿದ್ಯಾನಿಲಯದ ಬುದ್ಧಿಜೀವಿಗಳೇ `ಬಾಹ್ಮಣ`ರು.

ವಿಪರ್ಯಾಸದ ಸಂಗತಿಯೆಂದರೆ, ನಮಗೆ ಆದರ್ಶ ಸಮಾಜದ ಕನಸು ಬಿತ್ತಿದವರು, ಸಮಾಜವಾದದ ಪಾಠ ಮಾಡಿದವರು ಬಹುತೇಕ ಹುಟ್ಟಿನಿಂದ ದಲಿತ, ಹಿಂದುಳಿದ ವರ್ಗದಿಂದ ಬಂದ ಮತ್ತು ಹುಟ್ಟಿನಿಂದ ಬ್ರಾಹ್ಮಣರಾದರೂ ಅದನ್ನು ತಿರಸ್ಕರಿಸಿದ ಈ `ನವಬ್ರಾಹ್ಮಣರೇ`.

ಪ್ರಭುತ್ವ ಯಾವಾಗಲೂ ತನಗೆ ಬರುವ ವಿರೋಧವನ್ನು ತಣ್ಣಗಾಗಿಸಲು ಒಡೆದು ಆಳುವ ನೀತಿ ಅನುಸರಿಸುತ್ತ ತುಂಬಾ ಲೆಕ್ಕಾಚಾರದಿಂದಲೇ ತಾರತಮ್ಯ ಮಾಡುತ್ತಿರುತ್ತದೆ. ಆದರೆ ಪ್ರಭುತ್ವ ಮಾಡುತ್ತಿರುವ ತಾರತಮ್ಯವನ್ನು ಪ್ರಶ್ನಿಸಬೇಕಾದವರೇ ಜಾಣಕಿವುಡರಾದರೆ ಪರಿಹಾರವೇನು?

ನಾಡಿನ ಜನ ಗೌರವಿಸುವ ಬಹುಪಾಲು ಸಾಹಿತಿಗಳು, ಬುದ್ಧಿಜೀವಿಗಳು, ಚಿಂತಕರು ಇರುವುದು ನಮ್ಮ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ. ಜನಪರ ಹೋರಾಟಗಳಿಗೆ ಕಸುವು ತುಂಬುತ್ತಿದ್ದ, ಚಳವಳಿಗಳಿಗೆ ಸೈದ್ಧಾಂತಿಕ ನೆಲೆಗಟ್ಟು ರೂಪಿಸುತ್ತಿದ್ದ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಒಂದಷ್ಟು ಪ್ರಾಧ್ಯಾಪಕರಾದರೂ ಯಾಕೆ ಈ ದಿನಗಳಲ್ಲಿ ಮಂಕಾಗಿದ್ದಾರೆ? ಪ್ರಭುತ್ವ ನೀಡುತ್ತಿರುವ ಉತ್ತರದಾಯಿತ್ವರಹಿತ ಲಕ್ಷಾಂತರ ರೂಪಾಯಿಗಳ ಸಂಬಳ ಸವಲತ್ತುಗಳು ಇವರ ದನಿಯನ್ನು ಕಸಿದುಕೊಂಡಿದೆಯೇ?

ಈಗ ಅಂಗನವಾಡಿ ಕಾರ್ಯಕರ್ತೆಯರು ತಾವು ಮಾಡುವ ಪಾಠ, ಪಾಠ ಮಾಡುವ ಅವಧಿ, ಇತರೆ ಕೆಲಸ ಮತ್ತು ಸರ್ಕಾರ ಆದೇಶಿಸುವ ಹೆಚ್ಚುವರಿ ಕೆಲಸ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಮನಾಗಿರುವಾಗ ಸಂಬಳ ನೀಡಿಕೆಯಲ್ಲಿ ಮಾತ್ರ ನಮಗೇಕೆ ಈ ತಾರತಮ್ಯ ಎಂದು ಕೇಳುವ ಬದಲಿಗೆ ತಾವು ಮಾಡುವ ಪಾಠ, ಪಾಠ ಮಾಡುವ ಅವಧಿ,

ಇತರೆ ಕೆಲಸ ಮತ್ತು ಸರ್ಕಾರ ಆದೇಶಿಸುವ ಹೆಚ್ಚುವರಿ ಕೆಲಸ- ಪದವಿ ಕಾಲೇಜುಗಳ ಉಪನ್ಯಾಸಕರಿಗಿಂತ ಹೆಚ್ಚಿರುವಾಗ ನಮಗೆ ನೀಡುತ್ತಿರುವ ಮಾಸಿಕ ನಾಲ್ಕೂವರೆ ಸಾವಿರ ರೂಪಾಯಿ (?) `ಗೌರವಧನ`ದ ಬದಲಿಗೆ ಕನಿಷ್ಠ ಪದವಿ ಉಪನ್ಯಾಸಕರು ಪಡೆಯುವ ಸಂಬಳವಾದ ಒಂದು ಲಕ್ಷ ರೂಪಾಯಿಗಳನ್ನಾದರೂ ಕೊಡಿ` ಎಂದು ಕೇಳಿದರೆ ಅದನ್ನು ತಪ್ಪು ಎಂದು ಹೇಳುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಗೈರು ಹಾಜರಿ

ನೀನು ಬರದೆ ಇರುವಾಗಲೂ
ನೀನಿಲ್ಲೇ ಇರುತ್ತಿ
ನನ್ನ ಕಣ್ಣ ನೋಟದ ಹಾಗೆ
ನನ್ನ ಹೃದಯ ಬಡಿತದ ಹಾಗೆ
ನನ್ನ ನೋವಿನುರಿಯ ಹಾಗೆ
ಪ್ರೀತಿಯ-ಪರಿಮಳದ ಹಾಗೆ
ನಿನ್ನೊಡನೆ ಮುರಿದ ಭಾಷೆ
ಪ್ರಮಾಣಗಳ ತಣ್ಣನೆಯ
ಸಮಾಧಾನ ತಂದಿರುತ್ತಿ

ನೀನು ಬರದೆ ಇರುವಾಗಲೂ
ನೀನಿಲ್ಲೇ ಇರುತ್ತಿ
ರಾತ್ರಿಯ ಹೃದಯದೊಳಗೆ
ಇರಿಸಿದ ಚಂದ್ರನ ಚೂರಿಯ ಹಾಗೆ
ನಸುಕಿನ ಕೈಗಳು ಸೂರ್ಯನ
ಬಟ್ಟಲು ಹಿಡಿದ ಹಾಗೆ
ಬಯಕೆಯ ರಕ್ತ-ಸಿಕ್ತ ಬಳ್ಳಿಯಲ್ಲಿ
ಅರಳಿದ ಹೂವಿನ ಹಾಗೆ

ನೀನು ಬರದೆ ಇರುವಾಗಲೂ
ನೀನಿಲ್ಲೇ ಇರುತ್ತಿ
ನೆನಪಿನ ಹಾಗೆ
ಹೃದಯದ ಕಂಪನದ ಹಾಗೆ
ದುಃಖದ ಬಟ್ಟಲು ಚೆಲ್ಲಿದ ಹಾಗೆ
ತುಟಿ-ಗಲ್ಲಗಳ ಎಸಳುಗಳು ಪರಿಮಳಿಸಿದ ಹಾಗೆ
ಅರೆಸತ್ತ ಬಯಕೆಗಳ ಬೂದಿಯ ಎಚ್ಚರಿಸಿದ ಹಾಗೆ

ರಾತ್ರಿಯ ಬಣ್ಣ
ಜಡೆಯಿಂದ ಜಡೆಗೆ ಹರಡುತ್ತಿದೆ
ಅಗಲಿಕೆಯ ರಾತ್ರಿ
ಒಂದಾಗುವ ರಾತ್ರಿಯಂತೆ ಭಾಸವಾಗುತ್ತದೆ
ಪ್ರತಿ ಮುಂಜಾವು , ಪ್ರೀತಿಯ ನೆಲದಿಂದ
ಗಾಳಿ ಸಂದೇಶ ತರುತ್ತದೆ
ಪ್ರತಿ ನಸುಕು ಅಗಲಿಕೆಯ
ಮಂತ್ರ ಹಾಡುತ್ತದೆ
ಈಗ ನೀನು ಬಂದಿರುವೆ
ಬರುವ ಮಾತನ್ನಷ್ಟೆ ಆಡೋಣ
ನೀನೀಗ ಬಂದಿರುವೆ
ನಾ ನಿನಗೇನು ಕೊಡಲಿ
ನನ್ನ ಬಳಿ ಇರುವುದೆಲ್ಲ ಬರಿ ಪ್ರೀತಿ ವಿಶ್ವಾಸ
ನನ್ನ ಬಳಿ ಇರುವುದೆಲ್ಲ ಬರಿ ಒಂದು ಅನಾಥ ಭರವಸೆ !

- ಅಲಿ ಸರ್ದಾರ ಜಾಫ್ರಿ
-
ಅನು : ವಿಭಾ

Wednesday, December 28, 2011

ಜಾಫ್ರಿಯವರ ಕವಿತೆಗಳು
1
ಮಾರಾಟ
ಒಂದು ರೊಟ್ಟಗಾಗಿ
ನಾನು ನನ್ನ
ಮೈ-ಮಾಂಸವನ್ನು ಮಾರಿಕೊಂಡೆ
ಆದರೆ ನೀನೇಕೆ ನಿನ್ನಆತ್ಮವನ್ನು
ಮಾರಿಕೊಂಡಿ?

2

ನೋವೆಂಬ ಸಂಪತ್ತು

ನೋವಿನ ಮುತ್ತುಗಳನ್ನು ಒಳಗೆ ಬಚ್ಚಿಟ್ಟಿಕೋ
ನಿನ್ನ ಸಂಪತ್ತನ್ನೇಕೆ ಪ್ರದರ್ಶಿಸುತ್ತಿ? ಇದು ಕಳ್ಳರ ಜಗತ್ತು


3

ಸೃಷ್ಟಿಯ ವೇದನೆ

ನನ್ನ ಎಚ್ಚರಿಕೆಯ ಕಂಗಳು ಈಗಷ್ಟೇ ಕಂಡಿವೆ
ನಕ್ಷತ್ರಗಳ ಕೊನೆಯ ನಿಲುಗಡೆಯನ್ನು
ಕಗ್ಗತ್ತಲ ರಾತ್ರಿಯ ಹುಲ್ಲುಗಾವಲಲ್ಲಿ
ಇದು ಕತ್ತಲೆಯ
ಎದೆ ಬಡಿತವೋ ?
ನನಗೆ ಹೇಳಲಾಗದು
ಹಾಡಿನ ವ್ಯಥೆ
ಶಬ್ದಗಳಿಗೆ ನಿಲುಕದ್ದು
ನನ್ನೆದೆಯ ವೀಣೆಯಿಂದ
ರಕ್ತ ಹನಿಯುತ್ತದೆ

- ಅನು : ವಿಭಾ


ಮನೆಗೆ ಮರಳುವುದೀಗ ಕಷ್ಟ-ಕಷ್ಟಮನೆಗೆ ಮರಳುವುದೀಗ ಕಷ್ಟ-ಕಷ್ಟ
ಗುರುತಿಸುವರೇ ಯಾರಾದರು ಈಗ?
ಸಾವು ಹಣೆಯ ಮೇಲೆ ಮುದ್ರೆಯೋತ್ತಿದೆ
ಸಂಗಾತಿಗಳು ಮುಖದ ಮೇಲೆ ಪಾದ ಊರಿ ಹೋಗಿದ್ದಾರೆ
ಮತ್ತಾವುದೋ ಮುಖ ದಿಟ್ಟಿಸುತ್ತದೆ ಕನ್ನಡಿಯೋಳಗಿನಿಂದ
ಮುರಿದ ಮಾಳಿಗೆಯಿಂದ ಸೋರುವ ಬೆಳಕಿನ ಕಿರಣಗಳಂತೆ
ಕಂಗಳು ನಿಸ್ತೆಜವಾಗಿ ಬೆಳಗುತ್ತಿದೆ

ಮನೆಗೆ ಮರಳುವುದೀಗ ಕಷ್ಟ-ಕಷ್ಟ

ಅಮ್ಮ ಭೀತಳಾದಾಳು.
ಯೋಚಿಸಬಹುದು--
ಮಗನಿಗೆ ವಯಸ್ಸಾಗಿದೆ!
ಯಾರ ಶಾಪ ತಟ್ಟಿತೋ!
ಯಾವ ಮಾಟಗಾತಿಯ ಮಾಟವೋ!
ತಾಯಿ ಭೀತಳಾದಾಳು
ಮನೆಗೆ ಮರಳುವುದೀಗ ಕಷ್ಟ-ಕಷ್ಟ

ಎಷ್ಟೊಂದು ಸೂರ್ಯ ಅಸ್ತಂಗತವಾಗಿಲ್ಲ?
ಎಷ್ಟೊಂದು ದೇವರು ಸಾವ ಕಂಡಿಲ್ಲ?
ತಾಯಿಯನ್ನು ಕಂಡರೀಗ
ಸಂಶಯವಾಗುವುದು-
ಯಾರು ಜೀವಂತ ಉಳಿದಿದ್ದಾರೆ ಇಲ್ಲಿ?

ಹಳೆಯ ಮಿತ್ರ ಎದುರಾದರೆ
ಸಾವಿರ ನೆನಪುಗಳು ನುಗ್ಗಿ ಬರುವವು--
ಸತ್ತ ದೇವರ ಮೇಲಿದ್ದ ಮರೆತ ಪ್ರೀತಿಯ ನೆನಪುಗಳು.
ಬಿಕ್ಕಿಬಿಡಬಹುದು ನಾನು.
ಆದರೆ ನೆನಪಿರಲಿ--
ಆ ಕಿಸೆಯಲ್ಲಿ ಅನಾಥ ಬಿದ್ದಿದೆ ಕಣ್ಣೀರು
ಈ ಕಿಸೆಯಲ್ಲಿವೆ ಹೊಸ ಬೆಳೆಗಾಗಿ
ಚಿಂದಿ ಕಾಗದದ ಮೇಲೆ ಬರೆದ ಸಾಲುಗಳು.

ಹಿರಿಯರು ತಲೆ ಮುಟ್ಟಿದರೆ ಆಶಿರ್ವದಿಸಲು
ಏನ ಹೇಳಲಿ
ಎಂಥಾ ಆಲೋಚನೆಗಳು ಒಳಗಿವೆಯೆಂದು?
ಹೇಗೆ ಹೇಳಲಿ
ತನ್ನ ಹೆಣವನ್ನು ತಾನೇ ಹೊರಿತ್ತಿರುವ ವ್ಯಕ್ತಿಯ ಕುರಿತು?
ತನ್ನ ಗಂಡನ ಚಿತೆಯ ಮೇಲೆ
ಅನ್ನ ಬೇಯಿಸುವ ಹೆಣ್ಣಿನ ಕುರಿತು?
ಯುಗಗಳಿಂದ ಸುಡುತ್ತಿರುವ ಹೆಣಗಳ ಬೆಂಬೂದಿಯ ಮೇಲೆ
ಮೈಕಾಸಿಕೊಳ್ಳುತ್ತಿರುವ ದೇವರ ಕುರಿತು?
ನೋವು-ನರಳಾಟ ಕಂಡಿರುವ ಕಂಗಳಲಿ
ಹೇಗೆ ನೋಡಲಿ
ನನ್ನದೇ ಕಂಗಳನು ಬಾಲ್ಯದ ಭಾವಚಿತ್ರದಲಿ?
ಮನೆಗೆ ಮರಳುವುದೀಗ ಕಷ್ಟ-ಕಷ್ಟ.

ಸ್ಮಶಾನದಲ್ಲಿ ಮುಸ್ಸಂಜೆಯ ಹೊತ್ತು ಬೆಳಕು ಹತ್ತಿಕೊಂಡಾಗ
ಗುರುದ್ವಾರ ಗಾಳಿಯಲಿ ಮಂತ್ರಗಳ ತೇಲಿಬಿಟ್ಟಾಗ
ಇನ್ನಿಲ್ಲದವನು ನೆನಪಾಗುತ್ತಾನೆ--
ಅವನ ಸಾವಿನ ಕುರಿತು ಯಾರಿಗೂ ತಿಳಿದಿಲ್ಲ ಈ ಊರಿನಲಿ.
ಅವನನ್ನರಸುತ್ತಾ ಯಾರೇ ಹೊರಟರು
ಭಯಗೊಳ್ಳುತ್ತೇನೆ.
ಅಂತರಂಗದಲ್ಲಿ ನಾನೀಗ ಮತ್ತಷ್ಟು ಏಕಾಂಗಿ
ಶತ್ರು ದೇಶದಲ್ಲಿನ ಗೂಡಾಚರನಂತೆ.

ಮನೆಗೆ ಮರಳುವುದೀಗ ಕಷ್ಟ-ಕಷ್ಟ
ಸಾವು ಹಣೆಯ ಮೇಲೆ ಮುದ್ರೆಯೋತ್ತಿದೆ
ಸಂಗಾತಿಗಳು ಮುಖದ ಮೇಲೆ ಪಾದ ಊರಿ ಹೋಗಿದ್ದಾರೆ
ಮತ್ತಾವುದೋ ಮುಖ ದಿಟ್ಟಿಸುತ್ತಿದೆ ಕನ್ನಡಿಯೋಳಗಿನಿಂದ.

- ಸುರ್ಜಿತ್ ಪತ್ತಾರ್ (ಪಂಜಾಬಿ ಮೂಲ)
ಅನು: ಸಂವರ್ತ 'ಸಾಹಿಲ್'
Samvartha 'Sahil'

ಜಾಫ್ರಿಯವರ ದ್ವಿಪದಿಗಳು

1

ನನ್ನ ಬಯಕೆಗಳು ಕೈಗೂಡಲು ಯತ್ನಿಸುತ್ತಿವೆ
ಆಕೆಯ ನೀಳ್ಜಡೆ ಸೊಂಟ ತೋಳಗಳನ್ನು ಅಲಂಕರಿಸುತ್ತಲಿದೆ
2
ಶತಮಾನಗಳಿಂದ ನಕ್ಷತ್ರಗಳು ಶೋಕಿಸುತ್ತಿವೆ
ಈ ಕಪ್ಪು ರಾತ್ರಿಗೆ ನಸುಕಿನ ಮುಸುಕು ಮುಡಿಸೋಣ !
3
ಬದುಕಿನ ಸೂರ್ಯ ಏಕಾಂಗಿ ಮತ್ತು ಕ್ರೂರಿ
ಗೆಳೆಯರ ನೆನಪು ನಿತ್ಯ ಹಸಿರಾದ ಕಾಡು
4
ಹುಚ್ಚು ಮನುಷ್ಯ ಆಕಸ್ಮಾತ ಸತ್ತು ಎಲ್ಲ ನೆತ್ತರೂ ವ್ಯರ್ಥ ಚಲ್ಲಿಹೋಯಿತು
ಕಲ್ಲಿನ ಮಳೆ ಕೆಂಡದ ಪ್ರವಾಹ ಬರುವ ಮುನ್ನ !


- ಅಲಿ ಸರ್ದಾರ ಜಾಫ್ರಿ
-ಅನು : ವಿಭಾ{ಬೇರೆ ಬೇರೆ ಪತ್ರಿಕೆಯಲ್ಲಿ ಪ್ರಕಟಿತ , ಹರಿವ ನೀರೊಳಗಿನ ಉರಿ ಸಂಕಲನದಿಂದ ಆಯ್ದುಕೊಂಡಿದ್ದು}

Tuesday, December 27, 2011

ಈ ಮೀಸಲಾತಿಗೆ ಅಪಸ್ವರವೇಕೆ?

ಸನತಕುಮಾರ ಬೆಳಗಲಿ

 

ಮತಾಂತರ ಮತ್ತು ದನ ಹತ್ಯೆ ನಿಷೇಧದ ಜೊತೆಗೆ ಸಂಘಪರಿವಾರಕ್ಕೆ ಈಗ ಇನ್ನೊಂದು ಅಸ್ತ್ರ ದೊರೆಕಿದೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4.5ರಷ್ಟು ಒಳಮೀಸಲು ನಿಗದಿ ಮಾಡಿರುವ ಕೇಂದ್ರ ಸರಕಾರದ ತೀರ್ಮಾನವೇ ಕೋಮುವಾದಿಗಳಿಗೆ ದೊರೆತ ಹೊಸ ಅಸ್ತ್ರ. ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೋಮು ಧ್ರುವೀಕರಣ ಉಂಟು ಮಾಡಿ, ಹಿಂದೂ ವೋಟ್‌ಬ್ಯಾಂಕ್ ನಿರ್ಮಿಸಲು ಈ ವಿಭಜನಕಾರಿ ಶಕ್ತಿಗಳು ಷಡ್ಯಂತ್ರ ರೂಪಿಸಿವೆ. ಬರಲಿರುವ ದಿನಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಭಾರತೀಯರನ್ನು ಕೋಮು ಆಧಾರದಲ್ಲಿ ಒಡೆದು ಈ ಒಡಕನ್ನೇ ಮೆಟ್ಟಿಲು ಮಾಡಿಕೊಂಡು ಚುನಾವಣೆಯನ್ನು ಗೆಲ್ಲಲು ಮಸಲತ್ತು ನಡೆದಿದೆ.‘ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದರೆ, ದೇಶದಲ್ಲಿ ಯಾದವೀ ಕಲಹಕ್ಕೆ ದಾರಿಯಾಗುತ್ತದೆ’ ಎಂದು ಬಿಜೆಪಿ ಈಗಾಗಲೇ ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಹಿಂದುಳಿದ ವರ್ಗಗಳನ್ನು ವಿಭಜಿಸಲು ಸಂಘಪರಿವಾರ ತನ್ನದೇ ಸಂಸ್ಥೆಗಳನ್ನು ಕಟ್ಟಿಕೊಂಡಿದೆ. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಇಂತಹ ಸಂಸ್ಥೆಗಳಲ್ಲಿ ಒಂದು.
ಹಿಂದುಳಿದವರಿಗೆ ಅನ್ಯಾಯವಾದ ಸಂದರ್ಭಗಳೆಲ್ಲ ಮೂರ್ಛೆ ಹೋದವರಂತೆ ಪ್ರಜ್ಞೆ ತಪ್ಪಿ ಬೀಳುವ ಈ ಮೋರ್ಚಾ ಅಲ್ಪಸಂಖ್ಯಾತರ ಪ್ರಶ್ನೆ ಬಂದಾಗ,ಮೈಮೇಲೆ ಭೂತ ಬಂದವರಂತೆ ಕುಣಿದಾಡುತ್ತದೆ.ಅಲ್ಪಸಂಖ್ಯಾತರಿಗೆ ಮೀಸಲು ನೀಡಿದರೆ,ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಈಗ ಬೆದರಿಕೆ ಹಾಕಿದೆ. ಈ ಮೀಸಲಾತಿಯ ವಿರುದ್ಧ ಹಿಂದುಳಿದ ವರ್ಗಗಳ ಎಲ್ಲ ಜಾತಿಯ ನಾಯಕರ ಬೃಹತ್ ಸಮಾವೇಶ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮತ್ತು ಸಂಸದ ಪಿ.ಸಿ.ಮೋಹನ್ ಇದಕ್ಕೆ ದನಿಗೂಡಿಸಿದ್ದಾರೆ.

ಉಡುಪಿಯ ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಪುರೋಹಿತಶಾಹಿ ಮಠಾಧೀಶ ತಾಳಕ್ಕೆ ತಕ್ಕಂತೆ ಕುಣಿದು ಕನಕದಾಸರಿಗೆ ಕುರುಬ ಸಮಾಜಕ್ಕೆ ದ್ರೋಹ ಬಗೆದಿದ್ದ ಈಶ್ವರಪ್ಪನವರಿಗೆ ಈಗ ಇದ್ದಕ್ಕಿದ್ದಂತೆ ಹಿಂದುಳಿದವರ ಬಗ್ಗೆ ದಿಢೀರ್ ಕಾಳಜಿ ಹುಟ್ಟಿಕೊಂಡಿದೆ. ಸಂಘಪರಿವಾರದಲ್ಲಿ ಬೆಳೆದು ಬಂದ ಬಹುತೇಕ ಹಿಂದುಳಿದ ವರ್ಗಗಳ ನಾಯಕರು ಮನುವಾದಿಗಳ ಪಾದಸೇವಕರು ಎಂಬುದು ಆಗಾಗ ಸಾಬೀತಾಗುತ್ತಲೇ ಬಂದಿದೆ.ವಿ.ಪಿ.ಸಿಂಗ್ ಸರಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ವರದಿ ಜಾರಿಗೆ ಮುಂದಾದಾಗ,ಅದನ್ನು ತಡೆಯಲೆಂದೇ ಆರೆಸ್ಸೆಸ್ ನಾನಾ ಹುನ್ನಾರ ನಡೆಸಿತು. ಅಯೋಧ್ಯೆಯ ಬಾಬ್ರಿ ಮಸೀದಿ-ರಾಮ ಮಂದಿರ ವಿವಾದವನ್ನು ಸೃಷ್ಟಿಸಿತು.
ಮಂದಿರವಲ್ಲೇ ಕಟ್ಟುವೆವು ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಹೊರಟಿದ್ದರು.ಈ ರಥಯಾತ್ರೆ ರಕ್ತಯಾತ್ರೆಯಾಗಿ ರಥದ ಗಾಲಿಗಳು ಸಾವಿರಾರು ಜನರನ್ನು ಬಲಿ ತೆಗೆದುಕೊಂಡವು.ಆಗ ಮಂಡಲ ಅಯೋಗದ ಶಿಫಾರಸು ವಿರೋಧಿಸಿದ ಇವರೀಗ ಹಿಂದುಳಿದವರ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದಾರೆ.

ಹೀಗೆ ವಿರೋಧ ಮಾಡುವ ಮೂಲಕ ಇತರ ಹಿಂದುಳಿದ ವರ್ಗದ ಯುವಕರನ್ನು ದಾರಿ ತಪ್ಪಿಸಿ, ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಪ್ರಚೋದಿಸುವ ಮಸಲತ್ತು ನಡೆದಿದೆ. ಆ ಮೂಲಕ ಸಮಾಜದಲ್ಲಿ ವೈಷಮ್ಯದ ವಿಷಬೀಜವನ್ನು ಬಿತ್ತಿ ಕೋಮು ವಿಭಜನೆ ಮಾಡಿ, ರಾಜಕೀಯ ಲಾಭ ಮಾಡಿಕೊಳ್ಳುವುದು ಇವರ ಉದ್ದೇಶವಾಗಿದೆ. ದಲಿತ ಕ್ರೈಸ್ತರಿಗೆ ಮೀಸಲಾತಿ ನೀಡುವ ಪ್ರಶ್ನೆಯಲ್ಲೂ ಈ ಶಕ್ತಿಗಳು ಇಂಥದ್ದೇ ಕುತಂತ್ರ ನಡೆಸುತ್ತ ಬಂದಿವೆ. ಹೇಗಾದರೂ ಮಾಡಿ, ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಿ, ತಮ್ಮ ಅಂತಿಮ ಗುರಿಯಾದ ಮೇಲ್ಜಾತಿಗಳಿಗೆ ಪ್ರಾಧಾನ್ಯ ನೀಡುವ ಹಿಂದೂರಾಷ್ಟ್ರ ನಿರ್ಮಾಣ ಮಾಡುವುದು ಸಂಘ ಪರಿವಾರದ ಹುನ್ನಾರವಾಗಿದೆ. ಈ ಗುರಿ ಸಾಧಿಸಬೇಕೆಂದಿದ್ದರೆ, ತಕ್ಷಣಕ್ಕೆ ಅಧಿಕಾರಕ್ಕೆ ಬರುವುದು ಅದಕ್ಕೆ ಅಗತ್ಯವಾಗಿದೆ.
ದೇಶದಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ. ಯುಪಿಎ ಸರಕಾರ ತಪ್ಪು ಮಾಡಿಲ್ಲವೆಂದಲ್ಲ. ಆದರೆ ವಿದೇಶಿ ಬಂಡವಾಳಗಾರರನ್ನು, ಹೂಡಿಕೆದಾರರನ್ನು ಓಲೈಸುವ, ಖಾಸಗೀಕರಣಗೊಳಿಸುವ ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ನೀಡುವ ಹಾಗೂ ಕಷಿಯನ್ನು ಕಾರ್ಪೊರೇಟ್ ತಿಮಿಂಗಲುಗಳ ಬಾಯಿಗೆ ಹಾಕುವ ನೀತಿಗಳ ಬಗ್ಗೆ ಬಿಜೆಪಿ ಸೇರಿದಂತೆ ಸಂಘಪರಿವಾರಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಹಿಂದೆ ವಾಜಪೇಯಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದಾಗಲೂ ಇದೇ ಜಾಗತೀಕರಣದ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನು ಪಾಲಿಸಿಕೊಂಡು ಬಂದಿತ್ತು. ಅಂತಲೇ ಆರ್ಥಿಕ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನೊಂದಿಗೆ ಬಿಜೆಪಿ ಮೂಲಭೂತ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಮೀಸಲಾತಿಯಂಥ ಪ್ರಶ್ನೆಯನ್ನು ದೊಡ್ಡದು ಮಾಡಿ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಅದು ತಂತ್ರ ರೂಪಿಸಿದೆ.
ಅಲ್ಪಸಂಖ್ಯಾತರ, ಅದರಲ್ಲೂ ಮುಸಲ್ಮಾನರ ಶೋಚನೀಯ ಪರಿಸ್ಥಿತಿಯ ಬಗ್ಗೆ ಸ್ವಾತಂತ್ರಾ ನಂತರ ಅನೇಕ ತಜ್ಞರ ಸಮಿತಿಗಳು ಅಧ್ಯಯನ ಮಾಡಿ,ವರದಿಗಳನ್ನು ನೀಡಿವೆ.2006ರಲ್ಲಿ ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಸಮಿತಿ ನೀಡಿದ ವರದಿ ಪ್ರಕಾರ,ಮುಸಲ್ಮಾನರಿಗೆ ಸರಕಾರಿ ನೌಕರಿಯಲ್ಲಿ ನ್ಯಾಯವಾದ ಪಾಲು ನೀಡಬೇಕಾಗಿದೆ.ಆ ನಂತರ ರಚಿಸಲ್ಪಟ್ಟ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ,ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸಲ್ಮಾನರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು.
ಮುಸಲ್ಮಾನರ ಪರಿಸ್ಥಿತಿ ದಲಿತರಿಗಿಂತ ಶೋಚನೀಯವಾಗಿದೆ ಎಂದು ಸಾಚಾರ್ ಮತ್ತು ರಂಗನಾಥ ಮಿಶ್ರಾ ಸಮಿತಿಗಳೆರಡೂ ಆಳವಾದ ಅಧ್ಯಯನ ನಡೆಸಿ, ವರದಿ ನೀಡಿವೆ. ಅನೇಕ ಸರಕಾರಿ ಅಂಕಿ-ಅಂಶಗಳೇ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿದಿವೆ. ಕೇಂದ್ರ ಸರಕಾರದ ನೌಕರರಿಗಳಲ್ಲಿ ಶೇ.2ರಷ್ಟು ಕೂಡ ಮುಸಲ್ಮಾನರಿಲ್ಲ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಲ್ಲೂ ಅವರ ಸಂಖ್ಯೆ ಅತ್ಯಂತ ಕಡಿಮೆ. ಶೈಕ್ಷಣಿಕವಾಗಿ ಮುಂದುವರಿಯದ ಬಹುತೇಕ ಮುಸಲ್ಮಾನ ಯುವಕರು ಗ್ಯಾರೇಜುಗಳಲ್ಲಿ,ಹೊಟೇಲ್‌ಗಳಲ್ಲಿ,ಬೀಡಿ ಉದ್ದಿಮೆಯಲ್ಲಿ,ಸಣ್ಣಪುಟ್ಟ ವ್ಯಾಪಾರಗಳಲ್ಲಿ ದುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.ಯಾರೋ ಒಬ್ಬಿಬ್ಬರು ಅಜೀಂ ಪ್ರೇಮ್‌ಜಿ ಅಂಥವರು ಇರಬಹುದು. ಆದರೆ ಶೇ.90ರಷ್ಟು ಭಾಗ ಬೀಡಿ ಕಟ್ಟುವ, ಅಗರಬತ್ತಿ ಸುತ್ತುವ, ಖಾದರಬಿ, ಜನ್ನತ್‌ಬಿ, ಹುಸ್ಸೇನ್‌ಬಿ ಅಂಥವರ ಸಂಖ್ಯೆ ಮುಸಲ್ಮಾನರಲ್ಲಿ ಹೆಚ್ಚಿದೆ.
ಕೇಂದ್ರದ ಯುಪಿಎ ಸರಕಾರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಈ ಮೀಸಲಾತಿ ಪ್ರಕಟಿಸಿರಬಹುದು.ಆದರೆ ಬಿಜೆಪಿ ಇದನ್ನು ನಖಶಿಖಾಂತವಾಗಿ ವಿರೋಧಿಸುತ್ತಿದ್ದರೆ,ಎಡಪಕ್ಷಗಳು ಅಲ್ಪಸಂಖ್ಯಾತರಿಗೆ ನೀಡಿರುವ ಶೇ.4.5ರಷ್ಟು ಮೀಸಲಾತಿ ಕೂಡ ಸಾಲದು.ರಂಗನಾಥ ಮಿಶ್ರಾ ಸಮಿತಿ ಶಿಫಾರಸು ಮಾಡಿದಂತೆ ಶೇ 10ರಷ್ಟು ಮೀಸಲಾತಿ ನೀಡಲೇಬೇಕು ಎಂದು ಪಟ್ಟು ಹಿಡಿದಿವೆ. ಸರಕಾರ ಬರೀ ಹೇಳಿಕೆ ನೀಡಿದರೆ ಸಾಲದು, ಒಳಮೀಸಲಾತಿಗೆ ಅಗತ್ಯವಾದ ಸಂವಿಧಾನಾತ್ಮಕ ತಿದ್ದುಪಡಿ ತರಬೇಕು ಎಂದು ಪ್ರಗತಿಪರ ಶಕ್ತಿಗಳು ಒತ್ತಾಯಿಸಿವೆ.
ಕೇಂದ್ರ ಸರಕಾರ ನೀಡಿರುವ ಶೇ 4.5 ಮೀಸಲಾತಿ ವ್ಯಾಪ್ತಿಗೆ ಮುಸಲ್ಮಾನರು ಮಾತ್ರವಲ್ಲ ಬೌದ್ಧರು, ಕ್ರೈಸ್ತರು, ಜೈನರು, ಪಾರ್ಸಿಗಳು ಸೇರಿದಂತೆ ವಿವಿಧ ಜಾತಿ-ಪಂಗಡಗಳು ಸೇರುತ್ತವೆ. ಆದರೆ ರಂಗನಾಥ ಮಿಶ್ರಾ ಸಮಿತಿ ಮುಸಲ್ಮಾನ ಸಮುದಾಯದ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಸಿ, ಅಲ್ಪಸಂಖ್ಯಾತರಲ್ಲೇ ಅವಕಾಶ ವಂಚಿತರಾದ ಮುಸ್ಲಿಂ ಸಮುದಾಯಕ್ಕೆ ನ್ಯಾಯವಾದ ಪಾಲು ನೀಡಬೇಕು ಎಂದು ಶಿಫಾರಸು ಮಾಡಿದೆ.
ಆದರೆ ಮನುವಾದಿ ಶಕ್ತಿಗಳಿಗೆ ಈ ಮೀಸಲಾತಿ ಹೊಟ್ಟೆಯುರಿ ಉಂಟು ಮಾಡಿದೆ. ಇತರ ಹಿಂದುಳಿದ ವರ್ಗಗಳನ್ನು ಅಲ್ಪಸಂಖ್ಯಾತರೊಂದಿಗೆ ಎತ್ತಿ ಕಟ್ಟಲು ಸಂಘಪರಿವಾರ ತಂತ್ರ ರೂಪಿಸಿದೆ. ಬರಲಿರುವ ದಿನಗಳಲ್ಲಿ ಇದೇ ಪ್ರಶ್ನೆಯನ್ನು ಮುಂದೆ ಮಾಡಿಕೊಂಡು ದ್ವೇಷದ ದಳ್ಳುರಿ ಎಬ್ಬಿಸಲು ಮಸಲತ್ತು ನಡೆಸಿದೆ. ಆದ್ದರಿಂದ ಎಲ್ಲ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳು ಒಂದುಗೂಡಿ ಈ ಕುತಂತ್ರವನ್ನು ವಿಫಲಗೊಳಿಸಬೇಕಾಗಿದೆ.
-ವಾರ್ತಾಭಾರತಿ ಕೃಪೆ

ಮಡೆಸ್ನಾನ, ಸಂವಿಧಾನ ಮತ್ತು ಮತಾಂತರ

ವೈ ಮರಿಸ್ವಾಮಿ

ಮಾನವ ಕುಲಕ್ಕೆ ಕಳಂಕಪ್ರಾಯವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಮಡೆಸ್ನಾನವನ್ನು ನಿಷೇಧಿಸುವಂತೆ ಕಳೆದ ವರ್ಷ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ತೀವ್ರ ರೀತಿಯ ಒತ್ತಾಯ ಕೇಳಿ ಬಂದಿತ್ತು. ಈ ಬಾರಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಶಿವರಾಮ್‌ರವರ ನೇತೃತ್ವದಲ್ಲಿ, ಯಾವುದೇ ಕಾರಣಕ್ಕೂ ಸರಕಾರ ಮಡೆಸ್ನಾನ ಪದ್ಧತಿಗೆ ಅವಕಾಶ ನೀಡಬಾರದೆಂದು ಆರಂಭದಲ್ಲೇ ಪ್ರತಿಭಟನಾತ್ಮಕ ಎಚ್ಚರಿಕೆಯನ್ನು ಕೊಡಲಾಗಿತ್ತು.ಈ ಆಗ್ರಹಕ್ಕೆ ಪೂರಕವಾಗಿ ಸ್ಥಳೀಯ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಚನ್ನಪ್ಪಗೌಡರು ಮಡೆಸ್ನಾನ ನಿಷೇಧಿಸಿ ಆಜ್ಞೆ ಹೊರಡಿಸಿದ್ದರು.ಜಿಲ್ಲಾಧಿಕಾರಿಗಳ ಈ ದಿಟ್ಟ ಕ್ರಮದಿಂದ ಕಂಗಾಲಾದ ದೇವಸ್ಥಾನದ ಆಡಳಿತ ಮಂಡಳಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ರಾಜ್ಯ ಮುಜರಾಯಿ ಸಚಿವ ಡಾ. ವಿ.ಎಸ್. ಆಚಾರ್ಯರ ಮೂಲಕ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ, ನಿಷೇಧವನ್ನು ಹಿಂಪಡೆಯುವಂತೆ ಮಾಡಿದರು.ಇದರಿಂದ 3 ದಿನಗಳ ಕಾಲ ಬ್ರಾಹ್ಮಣರು ತಿಂದುಂಡು ಉಳಿಸಿದ ಬಾಳೆ ಎಲೆ ಎಂಜಲಿನ ಮೇಲೆ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಸಹಸ್ರಾರು ಜನ ಉರುಳು ಸೇವೆ ಮಾಡಿದರು. ಅದರಲ್ಲೂ ಎಳೆ ಮಕ್ಕಳನ್ನು ಬಲವಂತದಿಂದ ತಾಯಂದಿರು ಅವರ ಇಷ್ಟಕ್ಕೆ ವಿರುದ್ಧವಾಗಿ ಕೈ ಕಾಲು ಕಟ್ಟಿ ಪಶುಗಳಂತೆ ಉರುಳಿಸಲು ಪ್ರಯತ್ನಿಸುತ್ತಿದ್ದ ಘಟನೆಗಳು ಹೃದಯ ವಿದ್ರಾವಕವಾಗಿದ್ದವು.
ಮೂಲತಃ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನವಾಗಿದ್ದು, ಮುಜರಾಯಿ ಸಚಿವರಾದ ಆಚಾರ್ಯರು ಮಡೆಸ್ನಾನವನ್ನು ಸ್ಥಳೀಯರ ಭಾವನೆ, ಧಾರ್ಮಿಕ ನಂಬಿಕೆ ಮತ್ತು ಪರಂಪರೆಯ ಹೆಸರಿನಲ್ಲಿ ಸಮರ್ಥಿಸಿಕೊಂಡಿರುವುದು ಹಾಗೂ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮ್‌ರವರ ಮೇಲೆ ದೇವಾಲಯದ ಗೂಂಡಾ ಸಿಬ್ಬಂದಿ ಹಲ್ಲೆ ಮಾಡಿರುವುದು, ಮಡೆಸ್ನಾನ ಪದ್ಧತಿ ಸರಕಾರಿ ಪ್ರಾಯೋಜಿತ ಜಾತಿ ಪದ್ಧತಿಯ ಆಚರಣೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಸ್ವತಃ ‘ಡಾಕ್ಟರ್’ ಎನ್ನುವ ಬಿರುದಾಂಕಿತರಾಗಿರುವ ಡಾ.ವಿ.ಎಸ್. ಆಚಾರ್ಯರವರು, ಮಡೆಸ್ನಾನಕ್ಕೆ ಚರ್ಮರೋಗ, ಇತ್ಯಾದಿ ಅಗೋಚರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದಿರುವುದು, ಇವರ ‘ಡಾಕ್ಟರಿಕೆ’ಯ ಕುರಿತು ಅನುಮಾನ ಹುಟ್ಟಿಸುತ್ತದೆ. ವಾದಿರಾಜರ ‘ಸ್ಕಂದ’ ಪುರಾಣದಲ್ಲಿಯೇ (15ನೆ ಶತಮಾನ) ಮಡೆಸ್ನಾನದ ಬಗ್ಗೆ ಉಲ್ಲೇಖವಿದೆ ಎಂಬ ಅವರ ವಾದವನ್ನು ಗಮನಿಸಿದಾಗ, ಸಮಾನತೆಯ ತಳಹದಿಯನ್ನೇ ಉಸಿರಾಗಿಸಿಕೊಂಡಿರುವ ಸಂವಿಧಾನ ದಡಿಯಲ್ಲಿ ಇವರು ಸಚಿವರಾಗಿ ಕಾರ್ಯ ನಿರ್ವಹಿಸುವುದಕ್ಕಿಂತಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಚಾರ್ಯ ಹುದ್ದೆಗೆ ಸೂಕ್ತ ವ್ಯಕ್ತಿ ಎಂದೆನಿಸುತ್ತದೆ!
ವಿಧಾನ ಪರಿಷತ್‌ನ ಬಿಜೆಪಿಯ ಸಭಾ ನಾಯಕರಾಗಿರುವ ಆಚಾರ್ಯರು,ಶತಮಾನಗಳಿಂದಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು,ಇದನ್ನು ಬಲತ್ಕಾರದಿಂದ ನಿಷೇಧಿಸಲು ಸಾಧ್ಯವಿಲ್ಲ.ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ,ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಸ್ಥಳೀಯ ಪ್ರಮುಖರ ಜೊತೆ ಚರ್ಚಿಸಿ,ನಂತರ ಈ ಪದ್ಧತಿಯನ್ನು ಅನುಸರಿಸುತ್ತಿರುವ ಜನರ ಮನವೊಲಿಸಲು ಸರಕಾರ ಪ್ರಯತ್ನ ನಡೆಸಲಿದೆ ಎಂದು ಹೇಳುತ್ತಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸಿದಾಗ ಬಹಳ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ, ರಾಜ್ಯ ಬಿಜೆಪಿ ಸರಕಾರ ಹಾಗೂ ಸಂಘ ಪರಿವಾರಕ್ಕೆ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವ ಇಚ್ಛಾಶಕ್ತಿ ಇಲ್ಲ.
ಭಾರತದ ಸಂವಿಧಾನ ಮತ್ತು ಈ ನೆಲದ ಕಾನೂನಿಗಿಂತ ಈ ಪ್ರತಿಗಾಮಿ ಶಕ್ತಿಗಳಿಗೆ ವಿಶ್ವೇಶ ತೀರ್ಥರಂತಹ ವೈದಿಕ ವೌಲ್ಯಗಳ ಪ್ರತಿಪಾದಕರೇ ಪರಮೋಚ್ಚರು. ನಂಬಿಕೆ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಮಲೆಕುಡಿಯ ಜನಾಂಗದಂತಹ ತಳಸಮುದಾಯಗಳನ್ನು ಹಿಂದುತ್ವದ ಗುಲಾಮಗಿರಿಯ ಕತ್ತಲೆ ಕೂಪದಲ್ಲಿ ಅದುಮಿಡುವ ಪ್ರಯತ್ನ ಈ ಮನುವಾದಿಗಳಿಂದ ನಡೆಯುತ್ತಿದೆ.

ಅಸ್ಪಶತೆಯ ಆಚರಣೆ, ಸತಿಸಹಗಮನ ಪದ್ಧತಿ, ಜೀತದಾಳು ಪದ್ಧತಿ, ದೇವದಾಸಿ ಪದ್ಧತಿ ಹಾಗೂ ಇತ್ತೀಚೆಗೆ ನಿಷೇಧಿಸಲ್ಪಟ್ಟ ಅಜಲು ಪದ್ಧತಿ ಕೂಡ ನಂಬಿಕೆ,ಸಂಪ್ರದಾಯದ ಭಾಗವೇ ಆಗಿದ್ದಂಥವುಗಳು. ಇಂದು ಮಡೆಸ್ನಾನ ಪದ್ಧತಿಯನ್ನು ಸಮರ್ಥಿಸುವ ಪ್ರತಿಗಾಮಿಗಳಿರುವಂತೆ, ಅಂದು ಕೂಡ ಆ ಎಲ್ಲಾ ಅಮಾನವೀಯ ಪದ್ಧತಿಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಶೋಷಕ ಧ್ವನಿಗಳಿದ್ದವು. ಅಂದಿನ ಸರಕಾರಗಳ ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದ ಕಾಲ ಕಾಲಕ್ಕೆ ಸೂಕ್ತ ಕಾನೂನುಗಳನ್ನು ತರುವುದರ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡುವ ಕೈಂಕರ್ಯ ನಡೆದುಕೊಂಡು ಬಂದಿದೆ.
ಮಡೆಸ್ನಾನ ಪದ್ಧತಿಯನ್ನು ಅನುಸರಿಸುತ್ತಿರುವವರಲ್ಲಿ ಬಹುಸಂಖ್ಯಾತರು ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರು ಎನ್ನುವುದರ ಆಧಾರದ ಮೇಲೆ, ಈ ಅವೈಜ್ಞಾನಿಕ ಪದ್ಧತಿಯನ್ನು ಘೋಷಣೆ ಮಾಡಿ ಕೊಂಡು ಬರುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಯ ವಿರುದ್ಧ, ಅದನ್ನು ಸಮರ್ಥಿಸುವ ಸಚಿವರು ಹಾಗೂ ಶ್ರೀಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಬಹುದಾಗಿದೆ. ಸಂವಿಧಾನದ ಪರಿಚ್ಛೇದ17-ಅಸ್ಪಶತೆಯ ಆಚರಣೆಯನ್ನು ನಿಷೇಧಿಸಿದ್ದು, ಜಾತಿಯ ಆಧಾರದ ಮೇಲೆ ಅರ್ಚಕ ಹುದ್ದೆಯಿಂದ ಹಿಡಿದು ಪೌರ ಕಾರ್ಮಿಕ ಹುದ್ದೆಯ ತನಕ ಯಾವುದನ್ನು ತಾರತಮ್ಯದ ಆಧಾರದ ಮೇಲೆ ನಿಗದಿ ಮಾಡುವುದು ಕೂಡ ಸಂವಿಧಾನದ ಪರಿಚ್ಛೇದ 17ರ ಉಲ್ಲಂಘನೆಯಾಗಿದೆ.
ಧರ್ಮ,ವರ್ಣ,ಜಾತಿ,ಅಥವಾ ಜನ್ಮಸ್ಥಳದ ಆಧಾರದ ಮೇಲಿನ ತಾರತಮ್ಯ ನಿಷೇಧಿಸಿರುವ ಪರಿಚ್ಛೇದ 15ರ ಉಲ್ಲಂಘನೆಯೂ ಆಗಿದೆ.ಈ ಸರಕಾರಿ ಪ್ರಾಯೋಜಿತ ಅಸ್ಪಶತೆಯ ಆಚರಣೆ ವಿರುದ್ಧ ಕೆಲವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಸದರು, ಶಾಸಕರು, ಸಚಿವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೇಂದ್ರ ಮತ್ತು ರಾಜ್ಯ ಆಯೋಗಗಳ ಅಧ್ಯಕ್ಷರು ಮುಗುಮ್ಮಾಗಿರುವುದು, ಅವರ ಅವಕಾಶವಾದಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕನ್ನಡದ ಅನೇಕ ಹೆಸರಾಂತ ಸಾಹಿತಿಗಳು, ಜ್ಞಾನಪೀಠ ಪುರಷ್ಕೃತರು, ಭ್ರಷ್ಟಾಚಾರದ ವಿರುದ್ಧ ಏಕಪಕ್ಷೀಯವಾಗಿ ಆಂದೋಲನಕ್ಕಿಳಿ ಯುವವರು ಇಂದಿಗೂ ತಮ್ಮ ವೌನ ಸಮ್ಮತಿಯ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ!
ಪ್ರಸ್ತುತ ಸನ್ನಿವೇಶದಲ್ಲಿ ಮಡೆಸ್ನಾನ ನಿಷೇಧಕ್ಕಾಗಿ ಹೋರಾಟ ಮಾಡುವುದರ ಜೊತೆಗೆ ಶ್ರೇಣೀಕೃತ ಜಾತಿಪದ್ಧತಿ, ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಸಂಪೂರ್ಣವಾಗಿ ವಿಮುಖರಾಗಲು ಹಿಂದೂ ಧರ್ಮವನ್ನು ಧಿಕ್ಕರಿಸುವ ತಾರ್ಕಿಕ ಮತ್ತು ಸೈದ್ಧಾಂತಿಕ ಚಳುವಳಿ ನಡೆಯಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಕೋನದಲ್ಲಿ ಮತಾಂತರವೊಂದೇ ಸ್ವಾತಂತ್ರದ ಸೂಕ್ತ ಮಾರ್ಗ. ಧಾರ್ಮಿಕ ಬದಲಾವಣೆಯು (ಮತಾಂತರವು) ಒಂದು ಹೊಸ ಅಸ್ತಿತ್ವವನ್ನು (ಐಡೆಂಟಿಟಿ) ಕೊಡುವುದರ ಮುಖಾಂತರ ಅಂತಿಮವಾಗಿ ಸಮಾನತೆಯೆಡೆಗೇ ಮುನ್ನಡೆಸುತ್ತದೆ. ಮತಾಂತರ ಪಲಾಯನದ ಮಾರ್ಗವಲ್ಲ, ಹೇಡಿತನದ ಮಾರ್ಗವೂ ಅಲ್ಲ, ಅದು ವಿಮೋಚನಾ ಮಾರ್ಗ, ಜ್ಞಾನದ ಮಾರ್ಗ.
-ವಾರ್ತಾಭಾರತಿ ಕೃಪೆ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...