Monday, December 31, 2012

ರಾಮಚಂದ್ರ ಗುಹಾ : ಮರೆ ಮೋಸಶ್ರೀಪಾದ್ ಭಟ್ 


 

ಖ್ಯಾತ ಇತಿಹಾಸಕಾರರಾಗಿ ಜಗತ್ಪ್ರಸಿದ್ಧಿ ಪಡೆದಂತಹ ’ರಾಮಚಂದ್ರ ಗುಹಾ’ರಂತಹ ಲೇಖಕರನ್ನು "ಸಾಹಿತಿ ಪರಿಚಾರಕರು"ರಾಗಿ ಪಡೆದಂತಹ ಯು.ಆರ್.ಅನಂತಮೂರ್ತಿಯವರು ನಿಜಕ್ಕೂ ಧನ್ಯರು.ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ, ನಾನು ಕನ್ನಡಿಗ ಎಂದು ಯಾವ ಎಗ್ಗಿಲ್ಲದೆ ಹೇಳಿಕೊಳ್ಳುವ ಗುಹಾರವರಿಗೆ ಒಂದಕ್ಷರವೂ ಕನ್ನಡ ಬರುವುದಿಲ್ಲ.ಆದರೂ ಇವರು ತಾವು ಕನ್ನಡಿಗರೆಂದು ಹೇಳಿಕೊಳ್ಳುತ್ತಾರೆ ಅದನ್ನು ಜಗತ್ತು ನಂಬುತ್ತದೆ!! 
ಅದಿರಲಿ, ಗುಹಾರವರು ತಮ್ಮ ನಿರಂತರ ಅಧ್ಯಯನದ ಮೂಲಕ,ಪಾಂಡಿತ್ಯದ ಮೂಲಕ ಪಶ್ಚಿಮ ರಾಷ್ಟ್ರಗಳು,ಪೂರ್ವದ ರಾಷ್ತ್ರಗಳ ಸಾಂಸ್ಕೃತಿಕ,ರಾಜಕೀಯ ಇತಿಹಾಸಗಳನ್ನು ಬಹಳ ಅದ್ಭುತವಾಗಿ ಗ್ರಹಿಸಿದ್ದಾರೆ ಮತ್ತು ಬರೆದಿದ್ದಾರೆ,ನಮ್ಮ ತಿಳುವಳಿಕೆಗಳನ್ನು ವಿಸ್ತರಿಸಿದ್ದಾರೆ ಇದರ ಕುರಿತಾಗಿ ಯಾವುದೇ ಅನುಮಾನವೇ ಇಲ್ಲ.ಇದರ ಕುರಿತಾಗಿ ನಮಗೆ ಅಪಾರ ಗೌರವವಿದೆ.
ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಇತಿಹಾಸಕಾರ ಗುಹಾರವರ ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದ ಅಧ್ಯಯನ ಮಾತ್ರ ತೀರಾ ಮೊಂಡಾಗಿದೆ.ಗುಹಾರವರು ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದ ಕುರಿತಾಗಿ ಮಾತನಾಡುವಾಗ ಉದಾಹರಿಸುವುದು, ಉಲ್ಲೇಖಿಸುವುದು ಶಿವರಾಮ ಕಾರಂತ,ಅನಂತಮೂರ್ತಿ,ಗಿರೀಶ್ ಕಾರ್ನಾಡ್ ರವರ ಹೆಸರುಗಳನ್ನು, ಮತ್ತು ಹೆಗ್ಗೋಡಿನ ಶಿಬಿರಗಳು ಮಾತ್ರ.ಅನೇಕ ವೇದಿಕೆಗಳಲ್ಲಿ,ಕೆಲವು ಲೇಖನಗಳಲ್ಲಿ, ಬಾಪೂ ನಂತರದ ಭಾರತ ದಂತಹ ಮಹತ್ವದ ಕೃತಿಯ ಕಡೆಯ ಅಧ್ಯಾಯಗಳಲ್ಲಿ ಪದೇ ಪದೇ ಪ್ರಸ್ತಾವಿಸುವುದು ಇವರ ಹೆಸರುಗಳನ್ನು ಮಾತ್ರ! ಕೆಲವೊಮ್ಮೆ ಎ.ಕೆ.ರಾಮಾನುಜನ್ ರವರಿಗೂ ಈ ಅದೃಷ್ಟ ಲಭಿಸಿದೆ.ಡಿ.ಆರ್.ಸ್ನೇಹಿತರಾಗಿದ್ದಕ್ಕಾಗಿ ಪ್ರಸ್ತಾವಿಸಲ್ಪಡುತ್ತಾರೆ.
ಹಾಗಿದ್ದರೆ ಕನ್ನಡದ ಉಳಿದ ಅಸಂಖ್ಯಾತ ಮಹತ್ವದ ಲೇಖಕರು ಮತ್ತು ಸಾಹಿತಿಗಳು ಗುಹಾರವರ ಅಧ್ಯಯನಕ್ಕೆ ದಕ್ಕದೆ ಎಲ್ಲಿ ಹೋದರು ??? ಗುಹಾರವರಿಗೆ ಪರಿಕರಗಳ,ಮಾರ್ಗದರ್ಶನಗಳ ಕೊರತೆ ಕಾಡಿತೆ?ನಂಬಲಿಕ್ಕೂ ಆಗದು. ಬೇರೆ ಯಾರಾದರೂ ಇಂತಹ ಲೋಪವನ್ನೆಸೆಗಿದ್ದರೆ ಅವರ ಮಿತಿಯೆಂದು ಒಪ್ಪಬಹುದಿತ್ತು,ಆದರೆ ಪ್ರಖರ ಅಧ್ಯಯನಶೀಲರಾದ,ನುರಿತ ಇತಿಹಾಸಕಾರರಾದ ಗುಹಾರವರಿಂದ ಇಂತಹ ಮಹತ್ವದ ದೋಷವನ್ನು ಹೇಗೆ ವಿಶ್ಲೇಷಿಸಬೇಕು? ಮರೆ ಮೋಸವೇ ? ಅಥವಾ ಮುಗ್ಧ ನಿರ್ಲಕ್ಷ್ಯವೇ? ಯಾವುದಾದರೂ ಸರಿಯೇ ಇದು ಪ್ರಶ್ನಾರ್ಹ. ಏಕೆಂದರೆ ಇಂತಹ ತೀವ್ರತರವಾದ ದೋಷಗಳ ಮೂಲಕ ಗುಹಾರವರು ಹೊರ ಜಗತ್ತಿಗೆ ಹಾದಿ ತಪ್ಪಿಸುವುದನ್ನು ಇನ್ನಾದರೂ ಇಲ್ಲಿನ ಪ್ರಜ್ನಾವಂತರು ತಡೆಯಬೇಕು

ಬೆಂಗಳೂರ್ : ಜ ೪ ರಂದು ಡಾ .ಎಚ್ .ಎಸ್ . ರಾಘವೇಂದ್ರರಾವ್ ಅವರ ಹೊಸ ಪುಸ್ತಕ ಬಿಡುಗಡೆ

https://mail-attachment.googleusercontent.com/attachment/?ui=2&ik=64db019aae&view=att&th=13bf1248870e1369&attid=0.1&disp=inline&realattid=f_hbdmw8y90&safe=1&zw&saduie=AG9B_P_apJ-8s6ZpZQ22vq2XigUY&sadet=1356962331760&sads=2c4KOzxmL9Kni2_6Dg7TJIAyUgw

Sunday, December 30, 2012

ಪುಸ್ತಕ ಪ್ರಕಾಶನವೆಂಬ ಮೌಲ್ಯವ ನೆನೆದು

 ಜಿ.ಪಿ.ಬಸವರಾಜು
ಕಳೆದ 38 ವರ್ಷಗಳಿಂದ ಕ್ರಿಯಾಶೀಲವಾಗಿದ್ದ ಶಿವಮೊಗ್ಗೆಯ 'ಪರಿಸರ ಸಾಹಿತ್ಯ' ಪ್ರಕಾಶನ ತನ್ನ ಆಟಕ್ಕೆ ತೆರೆ ಎಳೆಯಲು ನಿರ್ಧರಿಸಿದೆ. ಏಳೆಂಟು ಜನ ಮಿತ್ರರು ಹೂಡಿದ ಸಣ್ಣ ಪ್ರಮಾಣದ ಬಂಡವಾಳದಿಂದ ಆರಂಭವಾದ ಈ ಪ್ರಕಾಶನ ಸಂಸ್ಥೆ ಅನೇಕ ಏಳುಬೀಳುಗಳನ್ನು ಎದುರಿಸಿಯೂ ಇಲ್ಲಿಯವರೆಗೆ ಉಳಿದುಕೊಂಡು ಬಂದಿದೆ. ನಿರ್ಗಮಿಸುವ ಈ ಹೊತ್ತಲ್ಲಿ ರೂ.25,000 ವನ್ನು ಉಳಿಸಿರುವ 'ಪರಿಸರ ಸಾಹಿತ್ಯ' ಈ ಮೊತ್ತವನ್ನು ದತ್ತಿಯಾಗಿ ನೀಡಲು ಸತ್ಪಾತ್ರರನ್ನು ಹುಡುಕುತ್ತಿದೆ. ಈ ಸಂಸ್ಥೆ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ, ಇದರ ಬಂಡವಾಳದ ಮೊತ್ತ, ಆಯವ್ಯಯ ಇತ್ಯಾದಿ ಆರ್ಥಿಕ ಸಮೀಕ್ಷೆಯನ್ನು ಮಾಡುವುದಕ್ಕಿಂತ ಇಷ್ಟು ಸುದೀರ್ಘ ಕಾಲದಲ್ಲಿ ಈ ಸಂಸ್ಥೆ ಪ್ರತಿಪಾದಿಸಿದ ಮೌಲ್ಯಗಳೇನು ಎಂದು ಕೇಳುವುದು ಹೆಚ್ಚು ಉಚಿತವಾಗಿ ಕಾಣಿಸುತ್ತದೆ.

ಬಂಡವಾಳದ ಪ್ರಶ್ನೆಯನ್ನು ಇಟ್ಟುಕೊಂಡರೆ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಕನ್ನಡ ಪ್ರಕಾಶನ ಸಂಸ್ಥೆಗಳು ಕಣ್ಣು ಕುಕ್ಕುತ್ತವೆ. ಏಳೆಂಟು ಸಾವಿರ ಪುಸ್ತಕಗಳು ಕನ್ನಡದಲ್ಲಿ ಪ್ರತಿವರ್ಷ ಪ್ರಕಟವಾಗುತ್ತಿವೆ ಎಂದು ಕನ್ನಡಿಗರು ಬೀಗಬಹುದು. ಕನ್ನಡ ಪುಸ್ತಕಗಳ ಹೊರ ನೋಟ, ವಿನ್ಯಾಸ, ಹೊದಿಕೆ, ಮುದ್ರಣದ ಗುಣಮಟ್ಟಗಳನ್ನು ಗಮನಿಸಿದರೆ ಕನ್ನಡ ಪುಸ್ತಕಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿವೆ ಎಂದು ಹೆಮ್ಮೆಪಡಬಹುದು. ಇದು ಸಂತೋಷದ ಸಂಗತಿಯೇ.

ಆದರೆ ಕನ್ನಡ ಪುಸ್ತಕ ಪ್ರಕಾಶನದ ನಿಜರೂಪ ನೋಡಿದರೆ? ಬಹುಪಾಲು ಪ್ರಕಾಶಕರು ಲೇಖಕರನ್ನು ನಡೆಸಿಕೊಳ್ಳುತ್ತಿರುವ ರೀತಿ, ಪುಸ್ತಕಗಳನ್ನು ಮಾರುವ ಕ್ರಮ, ಈ ಉದ್ಯಮದ ಹಿಂದಿರುವ ಮೌಲ್ಯಗಳು, ನೈತಿಕತೆ ಇತ್ಯಾದಿ ಅಂಶಗಳನ್ನು ಗಮನಿಸಿದರೆ ವಿಷಾದವೇ ಮಡುಗಟ್ಟುತ್ತದೆ. ಶೇ 90 ಭಾಗ ಪ್ರಕಾಶಕರು ಲೇಖಕರನ್ನು ಸುಲಿಯುವ ಹುನ್ನಾರದಲ್ಲಿಯೇ ಇರುತ್ತಾರೆ. ಸರ್ಕಾರದ ಸಗಟು ಖರೀದಿಗಾಗಿ ಎಂಥ ಕಳಪೆಯ ಪುಸ್ತಕವನ್ನಾದರೂ ಪ್ರಕಟಿಸುವುದು, ಹೇಗಾದರೂ ಮಾಡಿ ಅದನ್ನು ಗ್ರಂಥಾಲಯಗಳಿಗೆ ತುಂಬುವುದು ಇದನ್ನೆಲ್ಲ ನೋಡಿದರೆ ಕನ್ನಡಿಗರು ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಗಟು ಖರೀದಿ ಯೋಜನೆ ಥಟ್ಟನೆ ನಿಂತು ಹೋದರೆ ಮುಕ್ಕಾಲುಪಾಲು ಪ್ರಕಾಶನ ಸಂಸ್ಥೆಗಳು ಮುಚ್ಚಿಬಿಡುತ್ತವೆ. ಹಾಗಾಗುವುದು ಸಾರ್ವಜನಿಕ ಆರೋಗ್ಯದ ದಷ್ಟಿಯಿಂದ ಒಳ್ಳೆಯದು. ಸಾರ್ವಜನಿಕ ಹಣವನ್ನು ಅಕ್ಷರದ ಹೆಸರಲ್ಲಿ ನುಂಗುವುದಕ್ಕೆ ಸ್ವಲ್ಪಮಟ್ಟಿಗಾದರೂ ತಡೆಯುಂಟಾಗುತ್ತದೆ. ಇಲ್ಲವಾದರೆ ಭ್ರಷ್ಟಾಚಾರ ಬೆಳೆಬೆಳೆದು, ಅಯೋಗ್ಯರ ಜೇಬುಗಳು ತುಂಬುವುದು ಮಾತ್ರವಲ್ಲ, ನಮ್ಮ ಸಾರ್ವಜನಿಕ ಗ್ರಂಥಾಲಯಗಳು ಕಸದ ರಾಶಿಯನ್ನೇ ತುಂಬಿಕೊಂಡು ಗೊಬ್ಬರದ ಗುಂಡಿಗಳಾಗಿ ಮುಂದುವರಿಯುವುದು ತಪ್ಪುವುದಿಲ್ಲ. ಆದರೆ ಈ ಯೋಜನೆಯನ್ನು ನಿಲ್ಲಿಸಬೇಕಾದವರು ಯಾರು? ಅವರೇ ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವಾಗ, ಇಂಥ ಯೋಜನೆ ನಿಲ್ಲುವುದು ಹೇಗೆ ಸಾಧ್ಯ? ಈ ವ್ಯವಹಾರದ ಮೇಲೆ ಕಣ್ಣಿಡಲು ಯಾವ ಲೋಕಾಯುಕ್ತವೂ ಇಲ್ಲವಲ್ಲ!

ಇಂಥ ಯೋಜನೆಗಳು ಇಲ್ಲದ ಕಾಲದಲ್ಲಿ ಪ್ರಕಾಶನ ಎನ್ನುವುದು ಒಂದು ಮೌಲ್ಯವಾಗಿತ್ತು. ಬಂಡವಾಳ, ಮಾರಾಟ ಇತ್ಯಾದಿ ಎಲ್ಲವೂ ಇದ್ದ ಪುಸ್ತಕ ಪ್ರಕಾಶನ ಆಗಲೂ ಒಂದು ಉದ್ಯಮವಾಗಿತ್ತು ಎನ್ನುವುದು ನಿಜವಾದರೂ, ಆ ಉದ್ಯಮಕ್ಕೆ ಒಂದು ಘನತೆ, ಮೌಲ್ಯ, ನೈತಿಕ ಪ್ರಜ್ಞೆಗಳು ಇದ್ದವು. ಮೌಲಿಕ ಗ್ರಂಥಗಳನ್ನು ಪ್ರಕಟಿಸುವ ಧ್ಯೇಯ; ಓದುಗ, ಲೇಖಕ, ಪ್ರಕಾಶಕರ ಮಧ್ಯೆ ಸೌಹಾರ್ದ ಸಂಬಂಧ ಇದ್ದವು. ಇದಕ್ಕೊಂದು ನೀತಿಯ ನೆಲೆಗಟ್ಟೂ ಇತ್ತು.

ಮಾಸ್ತಿ ತಮ್ಮ ಪುಸ್ತಕಗಳನ್ನು ತಮ್ಮದೇ ಜೀವನ ಕಾರ್ಯಾಲಯದ ಮೂಲಕ ಪ್ರಕಟಮಾಡುತ್ತಿದ್ದರು. ಕುವೆಂಪು ಅವರ 'ಉದಯರವಿ' ಪ್ರಕಾಶನ ಕುವೆಂಪು ಅವರ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು. ಬೇಂದ್ರೆಯವರ ಹಿಂದೆ ಗೆಳೆಯರ ಗುಂಪಿತ್ತು. ಸಾಹಸಿ ಶಿವರಾಮ ಕಾರಂತರು 'ಹರ್ಷ ಪ್ರಕಟಣಾಲಯ'ವನ್ನು ಅನೇಕ ವರ್ಷ ನಡೆಸಿ ತಮ್ಮ ಪುಸ್ತಕಗಳನ್ನು ಪ್ರಕಟಿಸಿದರು. ಕೂಡಲಿ ಚಿದಂಬರಂ ಅವರ 'ಕಾವ್ಯಾಲಯ', ಡಿವಿಕೆ ಮೂರ್ತಿ ಅವರ 'ಡಿವಿಕೆ ಪ್ರಕಾಶನ', ಸಿಂಧುವಳ್ಳಿಯವರ 'ಸುರುಚಿ', ಮೈಸೂರಿನ ಉಷಾ ಸಾಹಿತ್ಯ ಮಾಲೆ, ಬೆಂಗಳೂರಿನ ಅನೇಕ ಪ್ರಕಟಣ ಸಂಸ್ಥೆಗಳು, ಧಾರವಾಡದ ಸಮಾಜ ಪುಸ್ತಕಾಲಯ, ಹುಬ್ಬಳ್ಳಿಯ ಸಾಹಿತ್ಯ ಭಂಡಾರ, ಶಿವಮೊಗ್ಗೆಯ ಕರ್ನಾಟಕ ಸಂಘ ಇತ್ಯಾದಿ ಅನೇಕ ಪ್ರಕಾಶನಗಳು ಮಹತ್ವದ ಕೆಲಸವನ್ನು ಮಾಡಿ ಜನಮನ್ನಣೆ ಗಳಿಸಿದವು. ಇವತ್ತಿಗೆ ಹೋಲಿಸಿದರೆ ಪುಸ್ತಕಗಳ ಸಂಖ್ಯೆ ಅಂದು ದೊಡ್ಡದಾಗಿರಲಿಲ್ಲ; ಆದರೆ ಗುಣಾತ್ಮಕತೆಯನ್ನು ಗಮನಿಸಿದರೆ ಮಹತ್ವದ ಪುಸ್ತಕಗಳೇ ಓದುಗರನ್ನು ತಲುಪಿದವು.

ನವ್ಯ ಸಾಹಿತ್ಯ ಸಂದರ್ಭವನ್ನು ಗಮನಿಸಿದರೆ, ಎರಡು ಪ್ರಮುಖ ಪ್ರಕಾಶನ ಸಂಸ್ಥೆಗಳು ಗಮನ ಸೆಳೆಯುತ್ತವೆ. ಧಾರವಾಡದ ಮನೋಹರ ಗ್ರಂಥಮಾಲೆ ಮತ್ತು ಹೆಗ್ಗೋಡಿನ (ಶಿವಮೊಗ್ಗ ಜಿಲ್ಲೆ) 'ಅಕ್ಷರ ಪ್ರಕಾಶನ'. ಮನೋಹರ ಗ್ರಂಥಮಾಲೆಯ ಹಿಂದೆ ವಿಮರ್ಶಕ ಕೆ.ಡಿ.ಕುರ್ತಕೋಟಿಯವರ ಸಮಗ್ರ ಚಿಂತನೆ ವಿಜಂಭಿಸುತ್ತಿತ್ತು; ವ್ಯಾವಹಾರಿಕ ಜಾಣ್ಮೆಯ ಜಿ.ಬಿ.ಜೋಶಿ ಇದನ್ನು ಸಮರ್ಥವಾಗಿ ಬಳಸಿಕೊಂಡರು. 'ಅಕ್ಷರ ಪ್ರಕಾಶನ' ಕೆ.ವಿ.ಸುಬ್ಬಣ್ಣನವರ ಕ್ರಿಯಾಶೀಲತೆ ಮತ್ತು ಕವಿ ಎಂ.ಗೋಪಾಲಕಷ್ಣ ಅಡಿಗರ ನವ್ಯಪ್ರಜ್ಞೆಯ ಪ್ರಯೋಗಶಾಲೆಯಾಗಿತ್ತು. ಹೊಸ ಸಂವೇದನೆಯೊಂದನ್ನು ಕನ್ನಡದಲ್ಲಿ ರೂಪಿಸುವ ದಿಕ್ಕಿನಲ್ಲಿ ಈ ಪ್ರಕಾಶನ ಸಂಸ್ಥೆಗಳ ಕೊಡುಗೆ ಐತಿಹಾಸಿಕ ಮಹತ್ವವನ್ನು ಪಡೆದಿತ್ತು. ಜೊತೆಗೆ ಅಕ್ಷರ ಪ್ರಕಾಶನದ 'ಸಾಕ್ಷಿ' ಮತ್ತು ಮನೋಹರ ಗ್ರಂಥಮಾಲೆಯ 'ಮನ್ವಂತರ' ವಹಿಸಿದ ಪಾತ್ರವೂ ಗಮನಾರ್ಹವೇ. ಆ ಕಾಲಘಟ್ಟದಲ್ಲಿ ಅನೇಕ ಮಹತ್ವದ ಕತಿಗಳನ್ನು ಪ್ರಕಟಿಸಿದ ಈ ಪ್ರಕಾಶನ ಸಂಸ್ಥೆಗಳು ಪ್ರಕಾಶನವನ್ನು ಒಂದು ಉದ್ಯಮದಂತೆ ನೊಡಿದರೂ ಅದರ ಹಿಂದಿನ ನೈತಿಕ ಮೌಲ್ಯವನ್ನು ಬಿಟ್ಟುಕೊಡಲಿಲ್ಲ. ಮುಂದೆ ಸುಬ್ಬಣ್ಣ ಮತ್ತು ಅವರ ಮಗ ಕೆ.ವಿ.ಅಕ್ಷರ, ಹೆಗ್ಗೋಡನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿದರೆಂಬುದೂ ಮಹತ್ವದ ಸಂಗತಿಯೇ.

ಪೂರ್ಣಚಂದ್ರ ತೇಜಸ್ವಿ ಮತ್ತು ಬಿ.ಎನ್.ಶ್ರೀರಾಮ ಅವರು ರೂಪಿಸಿದ 'ಪುಸ್ತಕ ಪ್ರಕಾಶನ' ಸಾರ್ವಜನಿಕ ಗ್ರಂಥಾಲಯದ ಸಗಟು ಖರೀದಿ ಯೋಜನೆಯತ್ತ ಮುಖವನ್ನೂ ಹಾಕಲಿಲ್ಲ. ನೇರವಾಗಿ ಓದುಗರಿಗೆ ತಲುಪಿಸುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿರುವ ಈ ಪ್ರಕಾಶನ ಇವತ್ತಿಗೂ ತನ್ನ ಮೌಲ್ಯಗಳಿಗೆ ಬದ್ಧವಾಗಿಯೇ ನಡೆಯುತ್ತಿದೆ. ಬಳ್ಳಾರಿಯ ಸಿ.ಚನ್ನಬಸವಣ್ಣ ಅವರ 'ಲೋಹಿಯಾ ಪ್ರಕಾಶನ' (ಸಮಾಜವಾದಿ ಚಿಂತಕ ಲೋಹಿಯಾ ಅವರ ನೆನಪಿನಲ್ಲಿ) ಕೂಡಾ ಈ ಸಗಟು ಖರೀದಿಯನ್ನು ತಿರಸ್ಕರಿಸಿ (ಅದರಲ್ಲಿರುವ ಭ್ರಷ್ಟಾಚಾರದ ಕಾರಣಕ್ಕಾಗಿ) ಅನೇಕ ವರ್ಷಗಳಿಂದ ಹಲವಾರು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಈಗ ಚನ್ನಬಸವಣ್ಣ ದಣಿದಿದ್ದಾರೆ; ಪ್ರಕಾಶನಕ್ಕೆ ಪರದೆ ಎಳೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಅಂಕೋಲೆಯ ವಿಷ್ಣುನಾಯ್ಕರ 'ಶ್ರೀ ರಾಘವೇಂದ್ರ ಪ್ರಕಾಶನ' ಕೂಡಾ ಮೌಲ್ಯಗಳಿಗೆ ಬದ್ಧವಾಗಿ ಕ್ರಿಯಾಶೀಲವಾಗಿರುವ ಪ್ರಕಾಶನ. ವಿಷ್ಣುನಾಯಕರ ಉತ್ಸಾಹ ಮೊದಲಿನ ಹಾಗಿಲ್ಲ; ಅವರೂ ಸುಸ್ತಾಗಿದ್ದಾರೆ.

ಶಿವಮೊಗ್ಗೆಯ 'ಪರಿಸರ ಸಾಹಿತ್ಯ'ಕ್ಕೆ ಇನ್ನೂ ಒಂದು ಆಯಾಮವಿದೆ. ಕಳೆದ ಮೂರ‌್ನಾಲ್ಕು ದಶಕಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅನೇಕ ಪ್ರಗತಿಪರ ಹೋರಾಟಗಳಲ್ಲಿ ಈ ಪ್ರಕಾಶನದ ಎಂ.ಬಿ.ನಟರಾಜ್, ಸತ್ಯನಾರಾಯಣರಾವ್ ಅಣತಿ, ಶೇಷಾದ್ರಿ ಕಿನಾರ, ಬಿದರಹಳ್ಳಿ ನರಸಿಂಹಮೂರ್ತಿ, ಶ್ರೀಧರ ಆರಾಧ್ಯ, ಓ.ಎಲ್.ನಾಗಭೂಷಣಸ್ವಾಮಿ ಸಕ್ರಿಯವಾಗಿ ಪಾಲ್ಗೊಂಡವರು. ಪ್ರಕಾಶನದಂತೆಯೇ ವೈಚಾರಿಕ ಚಿಂತನೆಯನ್ನು ಮತ್ತು ಹೋರಾಟವನ್ನು ರೂಪಿಸಿದ, ಬೆಂಬಲಿಸಿದ ಕೀರ್ತಿಯೂ ಇವರಿಗೆ ಸಲ್ಲಬೇಕು. ವೈಚಾರಿಕ ಸಂಘರ್ಷದಲ್ಲಿ ಮೂಲಭೂತವಾದಿಗಳಿಂದ ಏಟುತಿಂದ ಲಾಭವನ್ನೂ ಈ ಮಿತ್ರರಲ್ಲಿ ಕೆಲವರು ಮಾಡಿಕೊಂಡಿದ್ದಾರೆ. ಹೊಸ ತಲೆಮಾರನ್ನು ವೈಚಾರಿಕ ಚಿಂತನೆಯತ್ತ ಸೆಳೆದದ್ದು ಈ ಪ್ರಕಾಶನದ ಇನ್ನೊಂದು ಆಯಾಮವೇ. ಹೀಗಾಗಿ ಈ ಪ್ರಕಾಶನಕ್ಕೆ ತೆರೆ ಎಳೆಯುವ ಸಂಗತಿಯನ್ನು ತಿಳಿದಾಗ ಹದಯ ಭಾರವಾಗುತ್ತದೆ.

ಪ್ರಕಾಶನ ಎಂದರೆ ಲೇಖಕನಿಗೆ ನಾಮ, ಸರ್ಕಾರಿ ಹಣಕ್ಕೆ ಕನ್ನ ಎಂಬ ಹುನ್ನಾರವಲ್ಲ; ಅದೊಂದು ಮೌಲ್ಯ; ಮೌಲ್ಯಯುತ ಬದುಕನ್ನು ರೂಪಿಸುವ ಸಾಹಸ.

ಆರದಿರಲಿ ಕ್ರೋಧದ ಕೆಂಡ- ಬತ್ತದಿರಲಿ ಕಣ್ಣೀರು
ಡಿ. ಉಮಾಪತಿ
ಸೌಜನ್ಯ: ವಿಜಯ ಕರ್ನಾಟಕ
ಸುತ್ತಮುತ್ತಲ ಕಣ್ಣೀರಿನ ಕಠೋರ ವಾಸ್ತವಗಳಿಗೆ ಕುರುಡಾಗಿ ಮಲೆತು ಮೆರೆತಿರುವ ಭವ್ಯ ಭಾರತದ ಮೈ ಮನಸ್ಸುಗಳಿಗೆ ಏರಿರುವ ಅಮಲು ಇಳಿಯಬೇಕಿದೆ

ಪೇಟೆ ಪಟ್ಟಣಗಳು ಭಾರಿ ಶಹರಗಳ ಯುವ ಭಾರತ ಸಿಟ್ಟಿಗೆದ್ದಿದೆ. ಸರಕು ಸಂಸ್ಕೃತಿಯ ಥಳಗುಟ್ಟುವ ಮಂದಿರಗಳೇ ಆಗಿ ಪರಿಣಮಿಸಿರುವ ಮಾಲ್‌ಗಳಿಗೆ ಮಾರು ಹೋಗಿರುವ ಪೀಳಿಗೆ ಸಿಡಿದೆದ್ದಿದೆ. ದೀಪದ ಕೆಳಗಿನ ಕರಾಳ ಕತ್ತಲಿನಂತೆ ಕಂಡೂ ಕಾಣದೆ ಹಿಂಬಾಲಿಸುವ ಕರಿನೆರಳಿನಂತೆ ನಿಕೃಷ್ಟ ಬದುಕನ್ನು ನೀಗುವುದು ಮತ್ತೊಂದು ಭಾರತ. ಸುತ್ತಮುತ್ತಲ ಹಸಿವು ಸಂಕಟ ಶೋಷಣೆ ಕಣ್ಣೀರಿನ ಕಠೋರ ವಾಸ್ತವಗಳಿಗೆ ಕುರುಡಾಗಿ ಮಲೆತು ಮೆರೆಯುವುದು ಭವ್ಯ ಭಾರತ. ಕೊಂಬೆ ಕೊಂಬೆಗಳಲ್ಲಿ ಚಿನ್ನದ ಪಕ್ಷಿಗಳು ಕುಳಿತು ಉಲಿಯುವ ಈ ಭಾರತದ ಮೈ ಮನಸ್ಸುಗಳಿಗೆ ಏರಿರುವ ಅಮಲು ಇಳಿಯಬೇಕಿದೆ.
ರವಿವಾರ - ಡಿಸೆಂಬರ್-30-2012
ಅತ್ಯಾಚಾರದ ಅತ್ತಿತ್ತ...ದೇಶದ ರಾಜಧಾನಿ ದಿಲ್ಲಿಯ ಪ್ರತಿಷ್ಠಿತ ಜನವಸತಿಯ ಇಂತಹುದೇ ಮಾಲ್ ಒಂದರಲ್ಲಿ ಸಿನೆಮಾ ನೋಡಿಕೊಂಡು ಮನೆಗೆ ತೆರಳುತ್ತಿದ್ದ ಅಮಾಯಕ ಯುವ ಜೋಡಿ. ಸಂತ ರವಿದಾಸನ ಹೆಸರಿಟ್ಟುಕೊಂಡ ಕೊಳೆಗೇರಿಯ ಕ್ರಿಮಿಗಳ ವಿಕೃತ ಲಾಲಸೆಗೆ ಬಲಿಪಶು ಆಗಿದೆ. ಸರಳು ತೂರಿಸಿ ಯುವತಿಯ ಕರುಳು ಬಗೆದು ಭೋಗಿಸಿ ಬೆತ್ತಲೆ ಮಾಡಿ ಬಸ್ಸಿನಿಂದ ಬಿಸಾಡಿರುವ ಕಿರಾತಕ ಕೃತ್ಯ ಮನುಷ್ಯ ಮತ್ತೊಬ್ಬ ಮನುಷ್ಯನ ಮೇಲೆ ಎಸಗಬಹುದಾದ ದೌರ್ಜ್ಯನ್ಯಕ್ಕೆ ಇತಿಮಿತಿಗಳಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಚೀರಿ ಸಾರಿದೆ.

ಅಂದು ರಾತ್ರಿ ಜರ್ಝರಿತ ರಕ್ತಸಿಕ್ತ ಜೋಡಿ ಮೈ ಮರಗಟ್ಟುವ ಚಳಿಯಲ್ಲಿ ಬೆತ್ತಲೆಯಾಗಿ ಬಿದ್ದಿದ್ದರೆ, ದಾರಿಹೋಕ ಕಾರುಗಳಲ್ಲಿನ ಮಂದಿ ಕಿಟಕಿಯ ಗಾಜನ್ನು ಕೆಳಗಿಳಿಸಿ ತಮಾಷೆ ನೋಡಿ ಸುಳಿವಿರದಂತೆ ಸರಿದು ಹೋಗಿದ್ದಾರೆ. ಬಟ್ಟೆಯನ್ನು ಬಿಸುಟುವ ಕನಿಷ್ಠ ಜೀವದಯೆ ಆ ಹೃದಯಗಳಲ್ಲಿ ಹುಟ್ಟಿಲ್ಲ. ಪೊಲೀಸರೇ ಬಂದು ಪಕ್ಕದ ಹೊಟೆಲೊಂದಕ್ಕೆ ತೆರಳಿ ಬಿಳಿಯ ಹಾಸುಗಳನ್ನು ತಂದು ಹೊದೆಸುವ ತನಕ ಕುತೂಹಲದ ಕುರುಡು ಕಣ್ಣುಗಳು ಬೆತ್ತಲೆ ದೇಹಗಳನ್ನು ನಿರ್ಲಜ್ಜೆಯಿಂದ ಸವರಿವೆ.

ನಂಜೇರಿದ ಕರುಳ ಬಳ್ಳಿಯನ್ನು ಕತ್ತರಿಸಿದ ನಂತರವೂ ಬದುಕಿಗಾಗಿ ಹಂಬಲಿಸಿದ ಯುವತಿ ಸಾವಿನೆದುರು ಸೋತಿದ್ದಾಳೆ. ಆಕೆ ಅನುಭವಿಸಿದ ಯಾತನೆ ಕುರುಡು ಭಾರತದ ಮನಸ್ಸು ಕರಗಿಸಿದೆ. ಉದಾರ ಆರ್ಥಿಕ ವ್ಯವಸ್ಥೆಯ ಫಲಾಫಲಗಳನ್ನು ಉಂಡು ಬೆಳೆದ ಪೀಳಿಗೆ ತಮ್ಮ ನಡುವೆ ನಡೆದ ಈ ಘೋರಕ್ಕೆ ಕುದಿದು ರೋದಿಸಿದೆ. ದೀಪದ ಕೆಳಗಿನ ಕತ್ತಲೆಯ ಲೋಕದ ಕ್ರಿಮಿಗಳ ನೆತ್ತರಿಗೆ ತಹತಹಿಸಿದೆ.

ಈ ರೋದನ, ಈ ಕುದಿತ, ಈ ಕಣ್ಣಿರು, ಈ ತಳಮಳ ಆವಿ ಆಗಬಾರದು. ಥಳಗುಟ್ಟುವ ಭಾರತದ ಆಚೆಗೆ ಬದುಕಿರುವ ಭಾರತದ ಉದ್ದಗಲಗಳಲ್ಲಿ ದಿಲ್ಲಿಯಲ್ಲಿ ನಡೆದಂತಹ ಕಿರಾತಕ ಕೃತ್ಯಗಳು ನಿತ್ಯ ನಡೆಯುತ್ತಿವೆ. ಜಾತಿಯ ಬಲವುಳ್ಳವರು, ಹಣದ ಸೊಕ್ಕಿನವರು, ಧರ್ಮ ದುರಂಧರರು, ಪಿತೃ ಪ್ರಾಧಾನ್ಯತೆಯ ಪರಿಪಾಲಕರು, ಪೊಲೀಸರು, ಪ್ಯಾರಾಮಿಲಿಟರಿಗಳ ಅಟ್ಟಹಾಸದಲ್ಲಿ ನಲುಗಿ ಹೋಗುತ್ತಿರುವವರು ಅವರು. ಆ ಭಾರತದಲ್ಲಿನ ಬಲಿಪಶುಗಳು ಮಾತು ಸತ್ತವರು. ರೆಟ್ಟೆಗಳಲ್ಲಿ ಕಸುವಿಲ್ಲದವರು. ಕಾಸಿಲ್ಲದವರು. ತುಳಿಸಿಕೊಂಡವರು, ಒಕ್ಕಲೆಬ್ಬಿಸಿ ದಬ್ಬಲಾದ ಅನಾಥ ಆದಿವಾಸಿಗಳು, ತಮ್ಮ ಮಾನ, ಪ್ರಾಣ, ಬದುಕು, ಕಣ್ಣೀರುಗಳಿಗೆ ಕಾಸಿನ ಕಿಮ್ಮತ್ತೂ ಇಲ್ಲದ ದೈನೇಸಿಗಳು. ಖೈರ್ಲಂಜೆ, ಕಂಬಾಲಪಲ್ಲಿಗಳಲ್ಲಿ ಧೂಳಾದವರು. ದಿಲ್ಲಿಯಲ್ಲಿ ಸ್ಫೋಟಗೊಂಡಿರುವ ಆಕ್ರೋಶದತ್ತ ಆಸೆಗಣ್ಣುಗಳಿಂದ ನೋಡುತ್ತಿರುವವರು.

ದಿಲ್ಲಿಯ ಹಾದಿ ಬೀದಿಗಳಲ್ಲಿ ನಿಗಿ ನಿಗಿಸಿರುವ ಈ ಕ್ರೋಧದ ಕೆಂಡವನ್ನು ಹಳ್ಳಿಯ ಆ ಅವರಿಗಾಗಿ ಎದೆಯಲ್ಲಿಟ್ಟು ಜತನ ಮಾಡಿಕೊಳ್ಳಬೇಕಿದೆ.

ಕಾಶ್ಮೀರದ ಕುಗ್ರಾಮ. ಉಗ್ರಗಾಮಿಗಳನ್ನು ಬೆದಕುವ ಮಿಲಿಟರಿ ಆಕೆಯ ಮನೆ ಹೊಕ್ಕು ಮೈ ಮೇಲೆ ಎರಗುತ್ತದೆ. ಬಾಯಿಲ್ಲದ ಕಿವಿ ಕೇಳದ ಆಕೆ ಮೂಕ ಬಲಿಪಶು. ಬದುಕಿಡೀ ಕಾಲಮೇಲೆ ಎದ್ದು ನಿಲ್ಲಲಾಗದೆ ತೆವಳುವಂತೆ ಮಾಡುವಷ್ಟು ಬರ್ಬರ ದೈಹಿಕ ಆಕ್ರಮಣ. 1990ರ ದಶಕಗಳ ಈ ಘಟನೆಯ ದೂರನ್ನೂ ದಾಖಲಿಸಲು ಒಂಬತ್ತು ವರ್ಷಗಳ ಕಾಲ ನಿರಾಕರಿಸಿದ್ದರು ಪೊಲೀಸರು. ರಾಜ್ಯ ಮಾನವ ಹಕ್ಕುಗಳ ಆಯೋಗ ಐದು ವರ್ಷಗಳ ವಿಚಾರಣೆಯ ನಂತರ 2007ರಲ್ಲಿ ಮಿಲಿಟರಿ ಆಳುಗಳನ್ನು ಪಾತಕಿಗಳೆಂದು ಸಾರಿತು. 75 ಸಾವಿರ ರುಪಾಯಿಗಳ ಪರಿಹಾರಕ್ಕೆ ಸೂಚಿಸಿತು. ಆದರೂ ಪೊಲೀಸರು ತನಿಖೆ ನಡೆಸಲಿಲ್ಲ. ಪರಿಹಾರ ದಕ್ಕಲಿಲ್ಲ. ಹೋರಾಟ ನಿಲ್ಲಲಿಲ್ಲ. ಮೂಕಿಯಾದ ಆಕೆ ಯಾರ ಬಳಿಯೂ ತನ್ನ ಮನೋಯಾತನೆ ತೋಡಿಕೊಳ್ಳಲಾಗಲಿಲ್ಲ. ಬದುಕು ನರಕವಾಗಿತ್ತು.

ವರ್ಷವೊಪ್ಪತ್ತಿನ ಹಿಂದೆ ಆಕೆ ಸತ್ತು ಹೋದಳು. ಆಕೆಯನ್ನು ಸೀಳಿ ಸುಖಿಸಿದ ಅಪರಾಧಿಗಳನ್ನು ಕಾನೂನಿನ ಕೈಗಳಿಂದ ಈಗಲೂ ಸ್ವತಂತ್ರರು.

ಪಂಜಾಬಿನ ಈ ಕತೆ ಹತ್ತು ವರ್ಷಗಳ ಹಿಂದಿನದು. ಈ ದಲಿತ ಯುವತಿಯನ್ನು ಮೇಲ್ಜಾತಿಯ ಗೆಳತಿಯೇ ನರಕಕ್ಕೆ ನೂಕಿದ್ದಳು. ಬೆರಣಿ ಹೊತ್ತು ಸಾಗಿಸಲು ಸಹಾಯ ಕೋರಿದ್ದ ಗೆಳತಿ, ತನ್ನ ಮನೆಯಲ್ಲಿ ಅವಿತಿದ್ದ ಹಾವುಗಳ ಹವಸಕ್ಕೆ ಯುವತಿಯ ಬಲಿ ನೀಡಿದ್ದಳು. ರಾಜೀ ಮಾಡಿಕೊಂಡು ಬಾಯಿ ಹೊಲಿದುಕೊಳ್ಳಬೇಕೆಂಬ ಮೇಲ್ಜಾತಿಗಳ ಬೆದರಿಕೆಗಳಿಗೆ ಯುವತಿಯ ತಂದೆ ಸೊಪ್ಪು ಹಾಕಲಿಲ್ಲ. ಹತ್ತು ಲಕ್ಷ ರುಪಾಯಿಗಳ ನಗದು, ಮೂರೆಕರೆ ಜಮೀನಿನ ಆಮಿಷಕ್ಕೂ ಮಣಿಯಲಿಲ್ಲ. ಮೂವರು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಹತ್ತು ವರ್ಷಗಳ ಜೈಲುವಾಸದ ನಂತರ ಒಬ್ಬನಿಗೆ, ಮೂರ್ನಾಲ್ಕು ವರ್ಷಗಳ ನಂತರ ಮತ್ತಿಬ್ಬರಿಗೆ ಜಾಮೀನಿನ ಬಿಡುಗಡೆ. ಹೈಕೋರ್ಟಿನಲ್ಲಿ ಕೇಸಿನ ವಿಚಾರಣೆ ಈಗಲೂ ಮುಗಿದಿಲ್ಲ.

ಈ ನಡುವೆ ಯುವತಿಯ ತಂದೆಯ ಮೇಲೆ ಮೂರು ಬಾರಿ ಹಲ್ಲೆ. ಮೂರನೆಯ ಸಲ 2008ರಲ್ಲಿ ನಡೆದ ಹಲ್ಲೆಯಲ್ಲಿ ಸತ್ತನೆಂದೇ ತಿಳಿದ ಹಲ್ಲೆಕೋರರು ಹೊಲದಲ್ಲೇ ಬಿಸುಟು ಹೋಗಿದ್ದರು. ಬದುಕಿ ಉಳಿದಿದ್ದ. ಆದರೆ ಗ್ಯಾಂಗ್ರೀನ್ ಕಾರಣ ಎರಡೂ ಬಾಹುಗಳನ್ನು, ಎಡಗಾಲನ್ನೂ ಕತ್ತರಿಸಬೇಕಾಯಿತು. ಎರಡು ವರ್ಷಗಳ ನಂತರ ಹಲ್ಲೆಕೋರರಿಗೆ ಸಜೆ.

ಯುವತಿಗೀಗ 27 ವರ್ಷ. ವಿವಾಹಿತೆ. ಮೂರು ಮಕ್ಕಳ ತಾಯಿ. ಅತ್ಯಾಚಾರದ ಅವಹೇಳನ ಆರಿಲ್ಲ. ಈಗಲೂ ಕಣ್ಣೆದುರಿಗೆ ತಿರುಗುವ ಅವರನ್ನು ಬಂದೂಕಿನಿಂದ ಸುಟ್ಟು ಕೊಲ್ಲುವ ರೋಷ ಆಕೆಯದು.

ಏಳು ವರ್ಷಗಳ ಹಿಂದೆ ಉತ್ತರಪ್ರದೇಶದ ಹದಿಹರೆಯದ ಈಕೆಯನ್ನು ಕಾರಿನೊಳಗೆ ಎಳೆದುಕೊಂಡು ಸಿಗರೇಟಿನಿಂದ ಮೈ ಮೇಲೆಲ್ಲ ಸುಟ್ಟ ಆರು ಮಂದಿ ಅತ್ಯಾಚಾರಿಗಳು ಬಾಯಿಗೆ ಪಿಸ್ತೂಲು ತುರುಕಿ ಉಲ್ಲಂಘಿಸಿದ್ದರು. ತಂದೆ ಚಿಂದಿ ಆಯುವವನು. ತಾಯಿ ಕಸಮುಸುರೆ ತೊಳೆಯುವ ಮನಗೆಲಸದಾಕೆ. ಆಪಾದಿತರು ಧನಾಡ್ಯರು, ರಾಜಕೀಯ ಪ್ರಭಾವ ಇದ್ದವರು. ಮೂರು ಕೋರ್ಟುಗಳಲ್ಲಿ ವರ್ಷಗಟ್ಟಲೆ ಜರುಗಿದ ವಿಚಾರಣೆ. ಪದೇ ಪದೇ ಅವೇ ಪ್ರಶ್ನೆಗಳು. ಎಷ್ಟು ಹೊತ್ತು ರೇಪ್ ಮಾಡಿದರು, ಎಷ್ಟು ನಿಮಿಷಗಳ ಕಾಲ?

ಹಣ ಪಡೆದು ರಾಜೀ ಮಾಡಿಕೊಳ್ಳಲು ಒಪ್ಪದೆ ಹೋರಾಟದ ದಾರಿ ತುಳಿದ ಈಕೆಗೆ ಪೂರ್ಣ ನ್ಯಾಯ ಇನ್ನೂ ದೊರೆತಿಲ್ಲ.

1998ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದಾಗ ವಡೋದರದ ಈ ದಲಿತ ಬಾಲೆಯ ವಯಸ್ಸು ಹದಿಮೂರು. ದೂರು ದಾಖಲೆಗೆ ನಾಲ್ಕು ದಿನ ಹೋರಾಟ. ಹುಚ್ಚಿ ಎಂದು ಸಾರುವ ಹುನ್ನಾರ. ಸಂಧಾನ ಮಾಡಿಕೊಳ್ಳಿ ಎಂದ ನ್ಯಾಯಾಲಯ. ಒಲ್ಲೆನೆಂದ ನಂತರ ನ್ಯಾಯಾಲಯಕ್ಕೆ ಅಲೆದಾಟ. 2007ರಲ್ಲಿ ವಿಚಾರಣೆ ಮುಗಿಯುವ ಹಂತ ತಲುಪಿದಾಗ ತಾಂತ್ರಿಕ ಕಾರಣಕ್ಕಾಗಿ ಮರುವಿಚಾರಣೆಯ ಆದೇಶ. ಅಷ್ಟರಲ್ಲಿ ಒಬ್ಬ ಅತ್ಯಾಚಾರಿ ಸತ್ತಿದ್ದ. ಇನ್ನೊಬ್ಬ ಖುಲಾಸೆ ಆಗಿದ್ದಾನೆ. ಹದಿನಾಲ್ಕು ವರ್ಷಗಳ ನಂತರವೂ ನ್ಯಾಯ ಬಿಸಿಲುಗುದುರೆ.

ಆಕೆ ಹತಾಶಳು. ಇನ್ನು ನನ್ನಿಂದ ಆಗದು ಎಂದು ಕೈ ಚೆಲ್ಲಿದ್ದಾಳೆ. ಇಂತಹ ಲಕ್ಷಾಂತರ ಕಣ್ಣೀರುಗಳು, ಯಾತನೆಗಳು ಮತ್ತೊಂದು ಭಾರತದಲ್ಲಿ ನ್ಯಾಯಕ್ಕಾಗಿ ಚೀರುತ್ತಿವೆ.

ಸಾಮಾಜಿಕ ಎಚ್ಚರ ಬಿತ್ತುವ ಕತೆಗಾರ್ತಿ ಓಲ್ಗಾ ಅವರ ''ಮೊದಲ ಸಾವು'' ಎಂಬ ಕತೆಯಲ್ಲಿ ಅತ್ಯಾಚಾರಕ್ಕೀಡಾಗಿ ಗರ್ಭಪಾತಕ್ಕೆ ಒಳಗಾಗಿ ಮರಣಯಾತನೆ ಅನುಭವಿಸುವ ಹದಿಮೂರು ವರ್ಷದ ಮಗಳಿಗೆ ಅಮ್ಮ ಹೇಳುವ ಸಾಂತ್ವನ-

ಸತ್ತು ಬದುಕಬೇಕು ಮಗಳೇ... ಹೆಣ್ಣಿಗಿರೋದು ಒಂದೇ ಸಾವಲ್ಲ... ಹೆಂಗಸರ ಹೊಟ್ಟೇಲಿ ಸುರುಳಿ ಸುತ್ತಿ ಬಿದ್ದಿರೋದು ಅಳುವೇ ವಿನಾ ಕರುಳುಗಳಲ್ಲ.

ಈ ಕಗ್ಗತ್ತಲಲ್ಲಿ ಬೆಳಕಿನ ಹಾದಿ ಎಲ್ಲಿದೆ?
ಸನತಕುಮಾರ ಬೆಳಗಲಿ


ನವ ಉದಾರೀಕರಣದ ವಿಷವರ್ತುಲದಲ್ಲಿ ಸಿಲುಕಿರುವ ಭಾರತದ ಮುಂದಿನ ದಾರಿ ಯಾವುದು? ಕಳೆದು ಹೋಗುತ್ತಿರುವ 2012ರಲ್ಲೂ ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಬರಲಿರುವ 2013ರಲ್ಲೂ ಹೊಸದಾರಿ ಗೋಚರಿಸುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಸುತ್ತಲೂ ಕವಿದಿರುವ ಕಾರ್ಗತ್ತಲಲ್ಲೂ ಅಲ್ಲಲ್ಲಿ ಬೆಳಕಿನ ಕಿರಣಗಳೇನೋ ಗೋಚರಿಸುತ್ತಿವೆ. ಆದರೆ ಬೆಳಕಿನ ದಾರಿ ಕಾಣುತ್ತಿಲ್ಲ.
ಕಾಣುವುದಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳಬೇಕಾಗಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಕಾರಿರುಳಿನಲ್ಲೂ ಮುನ್ನುಗ್ಗಬೇಕಾಗಿದೆ. ಈ ನೆಲದ ಕೋಟಿ ಕೋಟಿ ಜನರಿಗೆ ಜಗ್ಗದೆ, ಕುಗ್ಗದೆ ಮುನ್ನುಗ್ಗುವದೊಂದೇ ಉಳಿದ ಏಕೈಕ ದಾರಿಯಾಗಿದೆ. ಈ ನೆಲದ ಸಂಪತ್ತನ್ನು ಕೊಳ್ಳೆ ಹೊಡೆದವರು ಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ. ಸಂಪತ್ತನ್ನು ಸೃಷ್ಟಿಸಿದವರು ಬೀದಿಗೆ ಬಿದ್ದಿದ್ದಾರೆ. ಒಂದು ಕೋಟಿ 76 ಲಕ್ಷ ರೂ.ದ 2ಜಿ ಹಗರಣ, 86 ಲಕ್ಷ ಕೋಟಿ ರೂ.ನ ಕಲ್ಲಿದ್ದಲ ದರೋಡೆ, ಲಕ್ಷಾಂತರ ಕೋಟಿ ರೂಪಾ ಯಿಗಳ ಗಣಿ ಲೂಟಿ. ಕೇಂದ್ರದ ಅಧಿಕಾರ ಸೂತ್ರ ಹಿಡಿದವರು, ರಾಜ್ಯದ ಚುಕ್ಕಾಣಿ ಹಿಡಿದವರು ಮೈತುಂಬ ಹೊಲಸನ್ನು ಮೆತ್ತಿ ಕೊಂಡು ನಿಂತಿದ್ದಾರೆ.
ಕಾಂಗ್ರೆಸ್‌ನ್ನು ಬಿಟ್ಟು ಬಿಜೆಪಿ ಯನ್ನು ಆರಿಸಬೇಕೇ? ಬಿಜೆಪಿ ಬದಲಾಗಿ ಕಾಂಗ್ರೆಸ್‌ಗೆ ಇನ್ನೊಂದು ಚಾನ್ಸ್ ಕೊಡ ಬೇಕೇ - ಜನತೆಯೆದುರು ಆಯ್ಕೆಗಳೇ ಇಲ್ಲ. ಯಾರನ್ನು ಚುನಾಯಿಸಿದರೂ ವಿಷ ಸೇವಿಸಿ ಆಳವಾದ ಕಂದಕಕ್ಕೆ ಬಿದ್ದಂತಲ್ಲದೆ ಬೇರೇನೂ ಅಲ್ಲ. ಗುಜರಾತ್‌ನಲ್ಲಿ ನರೇಂದ್ರ ಮೋದಿಯ ಆಯ್ಕೆ ಜನ ವಂಚಕರಿಗೆ ಹೊಸ ಹುರು ಪನ್ನು ತಂದಿದೆ. ಬಲ ಪಂಥೀಯ ಕೋಮುವಾದಿ ಶಕ್ತಿಗಳು ಮತ್ತೆ ಚಿಗಿತುಕೊಳ್ಳು ತ್ತಿವೆ. ತನ್ನ ದರೋಡೆಕೋರ ಅಜೆಂಡಾವನ್ನು ಜಾರಿಗೆ ತರಲು ಅಮೆರಿಕನ್ ಸಾಮ್ರಾಜ್ಯಶಾಹಿ ಹಾಗೂ ಮೋದಿಯಂಥ ಫ್ಯಾಸಿಸ್ಟ್ ಸರ್ವಾಧಿಕಾ ರಿಯೇ ಬೇಕು. ಮನಮೋಹನ್ ಸಿಂಗ್ ಕೈಯಿಂದ ಮಾಡಲಾಗದ್ದನ್ನು ಮೋದಿ ಕೈಯಿಂದ ಮಾಡಿಸಲು ವಿದೇಶಿ ಬಂಡವಾಳಗಾರರು ಮಸಲತ್ತು ನಡೆಸಿದ್ದಾರೆ. ಈ ದೃಷ್ಟಿಯಿಂದ ಬರಲಿರುವ ಹೊಸ ವರ್ಷ ಭಾರತೀಯರ ಪಾಲಿಗೆ ಎಂದೂ ಕಂಡರಿಯದ ಸವಾಲುಗಳ ವರ್ಷವಾಗಲಿದೆ. ಜಾಗತೀಕರಣದ ಅಬ್ಬರದಲ್ಲಿ, ಭಾರತದ ಪ್ರಜಾಪ್ರಭುತ್ವ ತಬ್ಬಲಿಯಾಗಿ ನಿಂತಿದೆ. ಕಣ್ಣಾರೆ ಕಂಡ ಸತ್ಯವನ್ನು ವರದಿ ಮಾಡುವುದೂ ಅಪರಾಧವಾಗಿದೆ.
ವರದಿ ಮಾಡಿದ ತಪ್ಪಿಗಾಗಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆ ಜೈಲು ಸೇರಿ ಎರಡು ತಿಂಗಳ ಮೇಲಾಯಿತು. ಆ ದಿನ ಹೋಂ ಸ್ಟೆ ಮೇಲೆ ದಾಳಿ ಮಾಡಿದ ಬಜರಂಗಿಗಳ ಮೇಲೆ ಹಾಕಿದ ಖಟ್ಲೆಯನ್ನೇ ನವೀನ್ ಮೇಲೆ ಹಾಕಿದ್ದಾರೆ. ಯುವತಿಯರ ಮೇಲೆ ಹಲ್ಲೆ, ವಸ್ತ್ರಾಪರಣ, ಹೀಗೆ ಎಲ್ಲ ಆರೋಪಗಳನ್ನು ತಲೆಗೆ ಕಟ್ಟಿದ್ದಾರೆ. ನ್ಯಾಯಾಲಯದಲ್ಲೂ ಆತನಿಗೆ ಜಾಮೀನು ಸಿಕ್ಕಿಲ್ಲ. ಸೂರಿಂಜೆಯನ್ನು ಕಮ್ಯೂನಿಸ್ಟ್ ನಾಯಕರ ಹೊರತು ಯಾರೂ ಭೇಟಿಯಾಗಿ ಸಾಂತ್ವನ ಹೇಳಿಲ್ಲ. ನವೀನ್ ಸೂರಿಂಜೆ ಬಂಧನವಾದಾಗ ರಾಜ್ಯದ ಕೆಲವೆಡೆ ಪತ್ರಕರ್ತರ ಪ್ರತಿಭಟನೆ ಗಳು ನಡೆದವು. ನಂತರ ಎಲ್ಲರೂ ತಣ್ಣಗಾ ದರು. ಬಿಜೆಪಿ ಸರಕಾರದಿಂದ ಮಾಧ್ಯಮ ಅಕಾಡಮಿಗೆ ಅಧ್ಯಕ್ಷರಾಗಿ ನೇಮಕಗೊಂಡ ಪತ್ರಕರ್ತನೊಬ್ಬ ನಿರ್ಲಜ್ಜವಾಗಿ ಅಧಿಕಾರವನ್ನು ಸ್ವೀಕರಿಸಿಯೂ ಆಯಿತು. ಇನ್ನು ಮಂಗಳೂರಿನ ಬಹುತೇಕ ಪತ್ರಿಕಾ ಮಿತ್ರರು ನವೀನ್ ಸೂರಿಂಜೆಯ ಬಂಧನಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ.

ನವೀನ್ ಸೂರಿಂಜೆ ಬಂಧನ ಪ್ರಕರಣ ಒಂದು ಉದಾಹರಣೆ ಮಾತ್ರ. ಇನ್ನು ಮುಂದೆ ಯಾವುದೇ ಪತ್ರಕರ್ತ ಬಜರಂಗಿಗಳ ದುಷ್ಕೃತ್ಯಗಳ ಮೇಲೆ ಬೆಳಕು ಚೆಲ್ಲುವಂಥ ವರದಿ ಮಾಡಿದರೆ ಸೂರಿಂಜೆಯ ಗತಿ ಆತನಿಗೂ ಆಗುತ್ತದೆ ಎಂಬ ಎಚ್ಚರಿಕೆಯ ಗಂಟೆಯನ್ನು ಪ್ರಭುತ್ವ ಬಾರಿಸಿದೆ. ಈ ರಾಜ್ಯವನ್ನು ಲೂಟಿ ಮಾಡಿ ಲೋಕಾಯುಕ್ತರಿಂದ ಖಟ್ಲೆ ಹಾಕಿಸಿಕೊಂಡು ಜಾಮೀನು ಪಡೆದು ಹೊರಗೆ ಬಂದವರು ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿದ್ದರೆ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಅಪಾರ ಸಂಪತ್ತಿನ ಜೊತೆ ನೋಟು ಎಣಿಸುವ ಯಂತ್ರವೂ ಸಿಕ್ಕಿದೆ. ಆದರೂ ಅವರು ಜೈಲಿಗೆ ಹೋಗಿಲ್ಲ ನಮ್ಮ ಶಾಸಕರು, ಸಚಿವರಿಗೆ ಇರುವಂತೆ ವಿಶೇಷ ಸಾಂವಿಧಾನಿಕ ಸೌಕರ್ಯ ಸೂರಿಂಜೆಯಂಥ ಪತ್ರಕರ್ತರಿಗಿಲ. ಒಬ್ಬ ಶಾಸಕರನ್ನು - ಆತ ಅತ್ಯಾಚಾರ ಮಾಡಿ ದರೂ - ಬಂಧಿಸಬೇಕಾದರೆ ವಿಧಾನ ಸಭಾಧ್ಯಕ್ಷರ ಅನುಮತಿ ಪಡೆಯಬೇಕಾಗು ತ್ತದೆ. ಇನ್ನು ಬಿಜೆಪಿ ಸರಕಾರದಲ್ಲಂತೂ ಕಲ್ಲಡ್ಕ ಪ್ರಭಾಕರ ಭಟ್ಟರಂಥ ಸಂವಿಧಾನೇತರ ಸರ್ವಾಧಿಕಾರಿಗಳಿಗೆ ಇಂಥ ವಿಶೇಷ ಸವಲತ್ತು ಅನಾಯಾಸವಾಗಿ ಲಭಿಸಿದೆ. ಕೋಮು ಪ್ರಚೋದಕ ಭಾಷಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ದೂರು ದಾಖಲಿಸಿಕೊಂಡರೂ ಭಟ್ಟರನ್ನು ಬಂಧಿಸುವಂತಿಲ್ಲ. ಇದು ನಮ್ಮ ಪ್ರಜಾಪ್ರಭುತ್ವ. ನವ ಉದಾರೀಕರಣ ದೇಶದಲ್ಲಿ ದಾಪುಗಾಲಿಡುತ್ತ ಬರುತ್ತಿದ್ದಂತೆ ಪ್ರಜಾಪ್ರಭುತ್ವೆಯ ಪ್ರತಿಭಟನೆಯ ಅವಕಾಶಗಳು ಸಂಕುಚಿತಗೊಳ್ಳುತ್ತಿವೆ.
ನಮ್ಮ ಪ್ರಭುತ್ವ ಪ್ರತಿಭಟನೆಗೆ ಸ್ಪಂದಿಸುವ ಸ್ಪಂದನಶೀಲತೆಯನ್ನು ಕಳೆದುಕೊಂಡು ಎಷ್ಟೋ ವರ್ಷಗಳಾದವು. ಈಗ ಭಿನ್ನಮತವನ್ನು ಸಹಿಸುವ ತಾಳ್ಮೆಯನ್ನೂ ಅದು ಕಳೆದುಕೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಮೋದಿಯಂಥವರು ರಾಷ್ಟ್ರ ರಾಜಕಾರಣಕ್ಕೆ ಬಂದರೆ ಇಡೀ ದೇಶ ಅಡಾಲ್ಫ್ ಹಿಟ್ಲರ್‌ನ ‘‘ಕಾನ್ ಸೆಂಟ್ರೆಷನ್ ಕ್ಯಾಂಪ್’ನಂತೆ ಆಗುತ್ತದೆ. ಜನಾದೇಶವೊಂದೇ ಎಲ್ಲ ಅಪರಾಧಗಳಿಗೆ ಮುಕ್ತಿಯ ಮಾರ್ಗ ಎಂದು ಲೂಟಿಗಾರ ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಈಗಂತೂ ಭಾರೀ ಬಂಡವಾಳಗಾರರು, ಉದ್ಯಮಪತಿಗಳೇ ರಾಜಕಾರಣಿಗಳಾಗಿ ಸಂಸತ್ತು ಶಾಸನ ಸಭೆಗಳನ್ನು ಪ್ರವೇ ಶಿಸುತ್ತಿರುವದರಿಂದ ಜನತೆಯ ಪ್ರಶ್ನೆಗಳಿಗೆ ಚುನಾಯಿತ ಸದನಗಳಲ್ಲೂ ಉತ್ತರ ಲಭಿಸುತ್ತಿಲ್ಲ. ಬೊಬ್ಬೆ ಹೊಡೆಯಲು ಅವಕಾಶವಿದೆ. ಆದರೆ ಅದೂ ಈಗ ಅರಣ್ಯರೋದನವಾಗುತ್ತಿದೆ. ಬೊಬ್ಬೆ ಹೊಡೆದವರ ಬಾಯಿ ಊದಿಕೊಳ್ಳುತ್ತಿವೆ.
‘‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ’’ ಎಂಬ ಸಿದ್ದಲಿಂಗಯ್ಯನವರ ಕವನ ಮತ್ತೆ ಮತ್ತೆ ನೆನಪಾಗುತ್ತದೆ. ಆಗ ಅವರು ಗುರುತಿಸಿದ್ದ ಟಾಟಾ ಬಿರ್ಲಾಗಳು ಮಾತ್ರಗಳು ಅಂಬಾನಿಗಳು, ಮಿತ್ತಲ್‌ಗಳು, ವಾಲ್ ಮಾರ್ಟ್‌ಗಳು... ಹೀಗೆ ಸ್ವಾತಂತ್ರದ ಫಲವನ್ನು ನುಂಗಲು ಸಾವಿರಾರು ಬಂಡವಾಳಗಾರರು ಬಕಾಸುರ ರಂತೆ ಬಾಯಿದೆರೆದು ನಿಂತಿದ್ದಾರೆ. ಈ ಬಕಾಸು ರರನ್ನು ಪ್ರತಿಭಟಿಸಬೇಕಾದ ದುಡಿಯುವ ಜನ ಕೋಮು, ಜಾತಿ, ಒಳ ಮೀಸಲಾತಿ, ಎಡಗೈ-ಬಲಗೈ ಎಂದು ಹೋಳು ಹೋಳಾಗಿ ನಿಂತಿದ್ದಾರೆ.
ಒಡೆದು ಹೋಳು ಹೋಳಾದ ದುಡಿಯುವ ಜನರನ್ನು, ಬಡವರನ್ನು, ದಲಿತರನ್ನು ಒಗ್ಗೂಡಿಸಿ ರಣರಂಗಕ್ಕೆ ಇಳಿಸುವುದೇ ಹೊಸ ವರ್ಷದ ಸವಾಲಾಗಿದೆ. ಜನರು ಮಾತ್ರವಲ್ಲ, ಸಮತೆಯ ಸಮಾಜದ ಕನಸು ಕಾಣುತ್ತಿರುವ ಸಂಘಟನೆಗಳೂ ಚೂರು ಚೂರಾಗಿ ಹೋಗಿವೆ. ಈ ಬಿರುಕಿನಲ್ಲೆ ನುಸುಳಿ ಎಫ್‌ಡಿಐ ವಾಲ್‌ಮಾರ್ಟ್‌ಗಳು ಈ ದೇಶಕ್ಕೆ ಬರುತ್ತಿದೆ. ಬರಲಿರುವ ದಿನಗಳಲ್ಲಿ ನಮ್ಮ ಬ್ಯಾಂಕ್‌ಗಳು, ವಿಮಾ ಸಂಸ್ಥೆಗಳು, ಆಸ್ಪತ್ರೆಗಳು ವಿದೇಶಿ ದಲ್ಲಾಳಿಗಳ ಮಡಿಲನ್ನು ಸೇರಲಿವೆ. ಮಧ್ಯಮ ವರ್ಗವೂ ಬೀದಿಗೆ ಬೀಳುವ ದಿನಗಳು ದೂರವಿಲ್ಲ.
ಇಂಥ ಸನ್ನಿವೇಶದಲ್ಲೂ ಎಡ ಪಕ್ಷಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಅಲ್ಪಸಂಖ್ಯಾತ ಸಂಘಟನೆಗಳು ಒಂದುಗೂಡಿ ನಿಲ್ಲುವುದಿಲ್ಲ ಎಂದಾದರೆ ಈ ದೇಶಕ್ಕೆ ಭವಿಷ್ಯವಿಲ್ಲ ‘‘ನಾವೆಲ್ಲ ಒಂದಾಗುವುದು ಯಾವಾಗ?’’ ಈ ಪ್ರಶ್ನೆಗೆ ಹೊಸ ವರ್ಷದಲ್ಲಾದರೂ ಉತ್ತರ ಕಂಡುಕೊಳ್ಳೋಣ.

ಸಣ್ಣ ಪುಟ್ಟ ಪಾಪಗಳು
`ಅರಬ್ ಜಗತ್ತಿನ' ಹೆಣ್ಣು ಮಕ್ಕಳ ಕವಿತೆಗಳ ಅನುವಾದ ಫ್ರಂಚ್ ಮತ್ತು ಇಂಗ್ಲಿಶ್ ಭಾಷೆಯಿಂದ -ಎಂ.ಆರ್. ಕಮಲಾ
 

  -ಮರ್ರಮ್ ಮಸ್ರಿ 
ಅನುವಾದ : ಎಂ.ಆರ್. ಕಮಲಾ-ನೀನು,
ಎಲ್ಲಿಗೆ ಕರೆದೊಯ್ಯುವೆ?
`ಕೆಫೆ'ಗೆ?
ನನ್ನಂಥ ಹೆಣ್ಣುಗಳಿಗೆ
`ಕೆಫೆ' ಎಂದರೆ ಬಿಡುಗಡೆ!

-ನೀನು,
ಎಲ್ಲಿಗೆ ಕರೆದೊಯ್ಯುವೆ?
`ತೋಟ'ಕ್ಕೆ?
ನನ್ನದೇ ತೋಟವಿದೆ.
ನಿನ್ನೊಂದಿಗದು
ವಿಭಿನ್ನ ವರ್ಣಗಳ ತಳೆಯುತ್ತದೆ

-ನೀನು,
ಎಲ್ಲಿಗೆ ಕರೆದೊಯ್ಯುವೆ?
ಗೊತ್ತು ಗುರಿಯಿಲ್ಲದೆ ಅಲೆಯುವುದೇ ಇಷ್ಟ
ನಿನ್ನೊಂದಿಗಿದ್ದರೆ ಎಲ್ಲದಕ್ಕೂ ಗೊತ್ತು ಗುರಿ!

-ಕೈ ಹಿಡಿದುಕೊ
ನಿನ್ನೆಡೆಗೆ ಕರೆದುಕೋ
ನಿನ್ನ ಮನೆಯೇ ನನ್ನ ಬಯಕೆ
ಓ ಕವಿತೆಯೇ!

ಗಜೇಶ ಮಸಣಯ್ಯನ ವಚನ


ಒಲಿದವರ ಕೊಲುವಡೆ ಮಸೆದ ಕೂರಲಗೇಕೆ
ಅವರನೊಲ್ಲೆನೆಂದಡೆ ಸಾಲದೆ
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ


Saturday, December 29, 2012

ಐದು ವಿಷಯಗಳು


ಜಲಾಲುದ್ದೀನ್ ರೂಮಿ
ಅನು : ಡಾ .ಎಚ್ .ಎಸ್ ಅನುಪಮಾ

Anupama in shimoga.JPG 
ಐದು ಸಂಗತಿಗಳ ಕುರಿತು ಹೇಳಬೇಕು ನಾನು 
ನಿನ್ನ ದಯೆಗಾಗಿ ಅರ್ಪಣೆ ಈ ಐದು ಬೆರಳೂ

ಮೊದಲು, ನಾನು ನಿನ್ನಿಂದ ದೂರವಿದ್ದಾಗ
ಈ ಲೋಕವೇ ಇರಲಿಲ್ಲ, ಬೇರಾವ ಲೋಕವೂ..

ಎರಡು, ನಾನು ಹುಡುಕುತ್ತಿದ್ದುದೆಲ್ಲವೂ,
ಎಂದೆಂದೂ, ನೀನೇ ಹೊರತು ಬೇರೇನಲ್ಲ..

ಮೂರು, ನಾ ಯಾಕಾದರೂ
ಮೂರು ಎಂದು ಎಣಿಸಲು ಕಲಿತೆ?

ನಾಲ್ಕು, ನನ್ನ ಮೆಕ್ಕೆಕಾಳಿನ ಹೊಲ
ಸುಟ್ಟು ಕರಕಲಾಗುತ್ತಿದೆ!

ಐದು, ಈ ಬೆರಳು ಸಂತ ರಬಿಯಾಳಿಗಾಗಿ
ಮತ್ತು ಈ ಇನ್ನೊಂದು ಬೇರೊಬ್ಬರಿಗಾಗಿ.
ಏನು ವ್ಯತ್ಯಾಸವಿದೆ ಇದರಲ್ಲಿ?

ಇವು ಪದಗಳೇ ಅಥವಾ ಕಣ್ಣಹನಿಗಳೇ?
ರೋದನವೇ ಮಾತೇ?
ನಾನೇನ ಮಾಡಲಿ ನನ್ನೊಲವೆ?

ಇಂಥ ಮಾತು ಆಡಿದರೆ ಪ್ರೇಮಿ, ಸುತ್ತಮುತ್ತಲ ಮಂದಿ  
ಅಳತೊಡಗುವರು ಅವನೊಡನೆ, ನಗುವರು ಹುಚ್ಚರಂತೆ 
ಗೋಳಿಡುವರು ಪ್ರೇಮಿಗಳೊಂದಾಗಿ ಐಕ್ಯರಾದೊಡನೆ.

ಇದು ಮಾತ್ರ ನಿಜಧರ್ಮ. ಮತ್ತೆಲ್ಲ ಅದರ ಬಳಿ
ಬಿಸಾಡಿದ ಗಾಯ ಸುತ್ತಿದ ಬಟ್ಟೆಯ ತುಂಡು.

ಇದು ಗುರುಗುಲಾಮರು ಒಂದಾಗಿ ನರ್ತಿಸುವ 
ಧ್ಯಾನದ ಕ್ಷಣ. ಇಲ್ಲಿ ನಾನೆಂಬುದೇ ಇಲ್ಲ. 

ನರ್ತಿಸುವ ಇವರ ನಾ ಬಲ್ಲೆ. ಈ ಪಂಜರ
ಅಂತಿಂಥದಲ್ಲ, ಅದರೊಳಗೆ ರಾತ್ರಿ ಹಗಲು  
ನಾನವರ ಹಾಡನೇ ಹಾಡುತಿರುವೆ..

ನಾದಲೋಕಗಳ ಸಮೃದ್ಧಿಯ ಸುತ್ತ
ನಾದಲೋಕಗಳ ಸಮೃದ್ಧಿಯ ಸುತ್ತ

ಶೂದ್ರ ಶ್ರೀನಿವಾಸ
ಸೌಜನ್ಯ: ವಾರ್ತಾಭಾರತಿ


ಇಂಥ ಪಂಡಿತ್ ರಾಜೀವ ತಾರಾನಾಥರು ಸುಮಾರು ವರ್ಷಗಳ ಹಿಂದೆ ದೂರವಾಣಿ ಕರೆಯ ಮೂಲಕ ಸಂಪರ್ಕಿಸಿದರು. ಅದು ‘ರಥಯಾತ್ರೆ’ ರಾಜಕೀಯವನ್ನು ಕುರಿತು ಚರ್ಚಿಸಲು: ‘ಶ್ರೀನಿವಾಸ್, ಬಿಡುವು ಮಾಡಿಕೊಂಡು ಕೃಷ್ಣರಾವ್ ಪಾರ್ಕ್‌ಗೆ ಬರುವಿರಾ? ಪ್ರೊ. ಜಿ. ಕೆ.ಜಿ. ಮತ್ತು ಸುಮತೀಂದ್ರ ನಾಡಿಗ ಬರುವರು’ ಎಂದರು. ನಾನು ಆಗಲಿ ಎಂದು ಹನ್ನೆರಡು ಮೂವತ್ತರ ಸುಮಾರಿಗೆ ಹೋದೆ. ಪ್ರೊ. ಜಿ.ಕೆ.ಜಿ ಮತ್ತು ನಾಡಿಗರೂ ಬಂದರು. ಪಂಡಿತ್ ತಾರಾನಾಥರು ಮೊದಲೇ ಬಂದಿದ್ದರು. ಸುಮಾರು ಎರಡು ಗಂಟೆ ‘ರಥಯಾತ್ರೆಯ ರಾಜಕೀಯ’ವನ್ನು ಕುರಿತು ಎಷ್ಟು ಮಾರ್ಮಿಕವಾಗಿ ಮಾತಾಡಿದರು. ಇಂದಿಗೂ ಅವರ ಮಾತುಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿರುವೆ. ಯಾಕೆಂದರೆ ಅಷ್ಟರ ಮಟ್ಟಿಗೆ ಒಳನೋಟಗಳಿಂದ ಕೂಡಿತ್ತು. ಅವರ ಮಾತುಗಳಿಂದ ನಾವು ಕಾರ್ಯತತ್ಪರರಾದೆವು. ಒಂದು ವೇದಿಕೆಯನ್ನು ರೂಪಿಸಲು ಡಿ.ಆರ್. ನಾಗರಾಜ್ ಮತ್ತು ಕಿ.ರಂ. ನಾಗರಾಜ್ ಕ್ರಿಯಾಶೀಲರಾದರು. ಒಟ್ಟು ವಿಷಯವನ್ನು ಲಂಕೇಶ್ ಅವರಿಗೆ ತಿಳಿಸಿದಾಗ; ಅವರೂ ಭಾಗಿಯಾದರು. ಇದಕ್ಕಾಗಿ ಚರ್ಚಿಸಿ ಪತ್ರಿಕಾಗೋಷ್ಠಿಯನ್ನು ಕರೆಯಲು ಪ್ರೆಸ್‌ಕ್ಲಬ್‌ನಲ್ಲಿ ಸೇರಿದೆವು. ಅದೇ ಸಮಯಕ್ಕೆ ಬಿಜೆಪಿಯವರು ಯಡಿಯೂರಪ್ಪನವರ ನೇತೃತ್ವದಲ್ಲಿ ‘ರಥಯಾತ್ರೆ’ಪರವಾಗಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಆಗ ಗೆಳೆಯ ಡಿ.ಆರ್. ನಾಗರಾಜ್ ‘‘ಏಯ್ ಶೂದ್ರ ಗೊತ್ತಾಯಿತಾ? ನಾಡಿಗ ಅವರು ನಮ್ಮ ಕ್ಯಾಂಪ್ ಬಿಟ್ಟು ಅವರ ಕಡೆ ಸೇರಿಕೊಂಡಿದ್ದಾರೆ. ಯಾರೂ ಅವರನ್ನು ಮಾತಾಡಿಸಲು ಹೋಗಬೇಡಿ’’ ಎಂದು ಹೇಳುತ್ತಲೇ; ಸಿಗಲಿ ಭೂತ ಬಿಡಿಸ್ತೀನಿ ಎಂದು ಗೊಣಗತೊಡಗಿದ್ದ. ಆಗ ನಾನೇ ಅವನಿಗೆ ಬುದ್ಧಿವಾದ ಹೇಳಬೇಕಾಯ್ತು. ಇದನ್ನು ಕೇಳಿಸಿಕೊಂಡ ಲಂಕೇಶ್ ಅವರು ‘‘ಏಯ್ ತರಲೆಗಳ್ರಾ ಸುಮ್ಮನೆ ಬಂದು ಕೂತ್ಕೊಳ್ಳಿ’’ ಎಂದಿದ್ದರು.
ನಾನು ಎಲ್ಲ ವ್ಯವಸ್ಥೆ ಮಾಡಲು ಓಡಾಡುತ್ತಿದ್ದೆ. ಯಾಕೆಂದರೆ ಪ್ರೆಸ್‌ಕ್ಲಬ್‌ನ ಸದಸ್ಯನಾಗಿದ್ದೆ ನಾನು. ಅದೇ ಸಮಯಕ್ಕೆ ಪ್ರೆಸ್ ಕ್ಲಬ್‌ನ ಮೆಟ್ಟಿಲುಗಳ ಬಳಿ ಯಡಿಯೂರಪ್ಪ, ಪ್ರಮೀಳಾ ನೇಸರ್ಗಿ, ರಾಮಚಂದ್ರೇಗೌಡ ಮತ್ತು ಅನಂತ್‌ಕುಮಾರ್ ಮುಂತಾದವರು ನಿಂತಿದ್ದರು. ನನ್ನನ್ನು ಪ್ರಮೀಳಾ ನೇಸರ್ಗಿಯವರು ‘‘ಏನ್ ಶ್ರೀನಿವಾಸ್ ಮೇಷ್ಟ್ರು ನೀವೇಲ್ಲಾ ಸೇರಿದ್ದೀರಾ?’ ಎಂದು ಕೇಳಿದರು. ನಾನು ನಗುತ್ತ ‘ನೀವು ಶ್ರೀರಾಮನನ್ನು ಮುಂದಿಟ್ಟುಕೊಂಡು’ ‘ರಥಯಾತ್ರೆ’ ಮಾಡ್ತೀರಿ. ನಾವು ಸೀತೆಯನ್ನು ಮುಂದಿಟ್ಟುಕೊಂಡು ರಥಯಾತ್ರೆ ಮಾಡಲು ಯೋಜನೆ ರೂಪಿಸಿದ್ದೀವಿ’’ ಎಂದೆ. ಅದಕ್ಕೆ ಯಡಿಯೂರಪ್ಪನವರು ‘ಏನ್ರೀ ಮಾತಾಡ್ತಿರೋದು’ ಎಂದರು. ನಾನು ಏನೂ ಮುಂದೆ ಮಾತಾಡದೆ ನಗುತ್ತ ಒಳಗೆ ಹೋದೆ. ಅಲ್ಲಿ ನಿಂತಿದ್ದ ಕೆಲವರು ಇದು ಗಲಾಟೆಯಾಗಬಹುದು ಎಂದು ಭಾವಿಸಿದ್ದರು. ಆದರೆ ಆ ರೀತಿ ಆಗಲು ಮಾತು ಮುಂದುವರಿಸದೆ; ನಮ್ಮ ಗುಂಪಿನಲ್ಲಿ ಭಾಗಿಯಾಗಿ ನಡೆದ ವಿಷಯವನ್ನು ತಿಳಿಸಿದೆ. ಲಂಕೇಶ್ ಅವರು ‘‘ಸಾಕು ಬಿಡು ಇನ್ನು ಮುಂದುವರಿಸಬೇಡ’’ ಎಂದು ನಗುತ್ತ ಸಿಗರೇಟಿನ ಮೊರೆ ಹೋಗಿದ್ದರು.
ನಾವು ನಾನಾ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆವು. ಇಂಥದ್ದನ್ನು ಮಾಡಬೇಕೆಂದರೆ ಡಿ.ಆರ್.ನಾಗರಾಜ್ ಮತ್ತು ಡಾ. ಸಿದ್ದಲಿಂಗಯ್ಯ ಅವರಿಗೆ ಎಲ್ಲಿಲ್ಲದ ಉತ್ಸಾಹ ತುಂಬಿಕೊಳ್ಳುತ್ತಿತ್ತು. ಆಗ ದಲಿತ ಕ್ರಿಶ್ಚಿಯನ್ ಸಂಘಟನೆಯಲ್ಲಿ ಕ್ರಿಯಾಶೀಲ ನಾಯಕರಾಗಿದ್ದ ಜಾಫೆಟ್ ಅವರನ್ನು ಸೇರಿಸಿಕೊಂಡೆವು. ಈಗ ಬೆಂಗಳೂರಿನ ನ್ಯಾಷನಲ್ ಕಾನೂನು ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬೆಂಗಳೂರಿನ ಗಾಂಧೀಜಿ ಪ್ರತಿಮೆಯ ಬಳಿ ಎಲ್ಲ ಧರ್ಮದವರ ಪ್ರಾರ್ಥನಾ ಸಭೆಯನ್ನು ಏರ್ಪಡಿಸಿದ್ದೆವು. ಇದರಲ್ಲಿ ಸುಮಾರು ನಾನೂರು ಮಂದಿ ಕ್ರೈಸ್ತ ಸಮುದಾಯದ ಸೋದರಿಯರು ಭಾಗವಹಿಸಿದ್ದರು. ಪ್ರಾರ್ಥನೆಯ ಜೊತೆಗೆ ಕೆಲವು ರಸ್ತೆಗಳಲ್ಲಿ ಜಾಥಾವನ್ನು ವ್ಯವಸ್ಥೆ ಮಾಡಿದ್ದೆವು. ಇದನ್ನೆಲ್ಲ ಪಂಡಿತ್ ತಾರಾನಾಥ ಅವರಿಗೆ ತಿಳಿಸಿದಾಗ ಖುಷಿಯಿಂದ ‘‘ಇಂಥದ್ದನ್ನ ಮಾಡ್ತಾನೆ ಇರಬೇಕು. ಇಲ್ಲದಿದ್ದರೆ ಈ ಸಮಾಜವನ್ನು ರಾಜೀವ ನಾಶ ಮಾಡಿ ಬಿಡ್ತಾರೆ’’ ಎಂದಿದ್ದರು. ಇದರ ಮುಂದುವರಿದ ಭಾಗವಾಗಿ ಕೆಲವು ಹಿರಿಯ ಲೇಖಕರನ್ನು ಭೇಟಿ ಮಾಡಿ ಸಹಿ ಪಡೆದೆವು. ರವೀಂದ್ರ ಕಲಾಕ್ಷೇತ್ರದ ಬಳಿ ಒಂದು ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಇದಕ್ಕಾಗಿ ನಾವು ಕವಿ ರಾಮಚಂದ್ರಶರ್ಮ ಅವರ ಜೊತೆಯಲ್ಲಿ ಪುತಿನ ಅವರಂಥ ಹಿರಿಯ ಕವಿಗಳನ್ನು ನೋಡಲು ಹೋದೆವು. ಅವರು ಮನೆಯ ಕಾಂಪೌಂಡಿನಲ್ಲಿ ಕಲ್ಲು ಬೆಂಚಿನ ಮೇಲೆ ಕೂತು ಕಲಾತ್ಮಕವಾಗಿ ಹಣೆಗೆ ನಾಮ ಇಟ್ಟುಕೊಳ್ಳುತ್ತಿದ್ದರು. ನಮ್ಮನ್ನು ನೋಡಿ ‘‘ಬನ್ನಿ, ಬನ್ನಿ ನಿಮಗ್ಯಾರಿಗೂ ನಾಮ ಇಡುವುದಿಲ್ಲ’’ ಎಂದು ತಮಾಷೆ ಮಾಡುತ್ತ ಆಹ್ವಾನಿಸಿದರು. ಅವರ ನಾಮ ಇಟ್ಟುಕೊಳ್ಳುವ ವೈಖರಿಯನ್ನು ನೋಡುತ್ತ ನಿಂತೆ. ಕೆಲವರು ಒಳಕ್ಕೆ ಹೋಗಿ ಕೂತುಕೊಂಡರು. ತುಂಬ ಹಾಸ್ಯಪ್ರಜ್ಞೆಯ ಪುತಿನ ಅವರು ನಮ್ಮ ಮಾತನ್ನು ಕೇಳಿಸಿಕೊಂಡರು. ಕಾರ್ಯಕ್ರಮಕ್ಕೆ ಬರುತ್ತೇನೆಂದರು. ಮತ್ತು ನಾವು ಸಿದ್ಧಪಡಿಸಬೇಕಿದ್ದ ಕರಪತ್ರದ ವಿಷಯಕ್ಕೆ ಸಹಿಯನ್ನು ಹಾಕಿದರು.
 
ಕಲಾಕ್ಷೇತ್ರದ ಬಳಿ ವರ್ಣರಂಜಿತ ಕಾರ್ಯಕ್ರಮವನ್ನು ರೂಪಿಸಿದೆವು. ಪುತಿನ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ವಿಷ್ಣು ವರ್ಧನ್ ಮುಂತಾದವರೆಲ್ಲ ಭಾಗವಹಿಸಿದರು. ಸುಗಮ ಸಂಗೀತದ ಗಾಯಕ ಸಿ.ಅಶ್ವತ್ಥ್ ಅವರು ನಮ್ಮ ಒಟ್ಟು ಕಾರ್ಯಕ್ರಮವನ್ನು ಗಬ್ಬೆಬ್ಬಿಸಲು ಕೆಲವರನ್ನು ಗುಂಪುಕಟ್ಟಿಕೊಂಡು ಬಂದು ಹುಚ್ಚಾಪಟ್ಟೆ ಗದ್ದಲವೆಬ್ಬಿಸಿದರು. ವಾದ-ಪ್ರತಿವಾದದ ಸಮಯದಲ್ಲಿ ಅಶ್ವತ್ಥ್ ಅವರ ಕೂಗಾಟ ಮಿತಿಮೀರಿತ್ತು. ಇದು ವಿಕೋಪಕ್ಕೆ ಹೋಗುವುದೆಂದು ತಿಳಿದ ಪೊಲೀಸರು ನಮ್ಮನ್ನೆಲ್ಲ ಬಂಧಿಸಿದರು. ನಮ್ಮೆಡನೆ ಲಂಕೇಶ್ ಮತ್ತು ಬಿ.ಸಿ. ರಾಮಚಂದ್ರ ಶರ್ಮ ಅವರೂ ಇದ್ದರು. ಬೆಂಗಳೂರಿನ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ನಾವು ಇರಬೇಕಾಗಿತ್ತು. ಎರಡು ಗಂಟೆಗೂ ಮೇಲ್ಪಟ್ಟು ನಾವು ಪೊಲೀಸ್ ಠಾಣೆಯಲ್ಲಿದ್ದೆವು. ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ನಮ್ಮನ್ನೆಲ್ಲ ವಿಚಾರಿಸಿಕೊಂಡು ಹೋದರು. ಲಂಕೇಶ್ ಅವರೂ ನಮ್ಮ ಜೊತೆಯಲ್ಲಿ ಇದ್ದುದರಿಂದ ಏನೂ ಅನುಚಿತತೆ ಸಂಭವಿಸದಿರಲೆಂದು ಎಚ್ಚರ ವಹಿಸಿದ್ದರು. ಅಲ್ಲಿದ್ದ ಇನ್ಸ್‌ಪೆಕ್ಟರ್ ಬಿ.ಕೆ.ಶಿವರಾಂ ಅವರು ಸಾಹಿತ್ಯ ಪ್ರೇಮಿ. ಲಂಕೇಶ್ ಅವರನ್ನು ಕಂಡರೆ ಎಲ್ಲಿಲ್ಲದ ಅಭಿಮಾನ. ಏನೇನೋ ಅಪೂರ್ವವಾದ ಮಾತುಕತೆಯಲ್ಲಿ ಕಾಲಕಳೆದು ಹೊರಗೆ ಬಂದೆವು. ಇದೇ ಸಮಯಕ್ಕೆ ಈ ಪೊಲೀಸ್ ಠಾಣೆಯಲ್ಲಿ ಸುಮಾರು ವರ್ಷಗಳ ಹಿಂದೆ ಹಿರಿಯ ವಿಚಾರವಾದಿ ಕಾದಂಬರಿಕಾರರಾದ ಬೀಚಿ ಮತ್ತು ನಾನು ಬಂಧನಕ್ಕೆ ಒಳಗಾಗಿದ್ದೆವು. ಒಬ್ಬ ದಲಿತ ಮೇಸ್ಟ್ರು ಬೆಂಗಳೂರಿನ ತಿಲಕ್‌ನಗರದಲ್ಲಿ ಬೇರೊಂದು ಜಾತಿಯ ತನ್ನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ಮದುವೆಗೆ ನಾವು ಮುಂದೆ ನಿಂತು ನೆರವೇರಿಸಿದ್ದೆವು. ಅಪ್ರಾಪ್ತ ವಯಸ್ಸಿನ ಹುಡುಗಿಗೆ ಮದುವೆ ಮಾಡಿಸಿದ್ದೀರಿ ಎಂದು ನಮ್ಮನ್ನು ಬಂಧಿಸಿದ್ದರು. ಆದರೆ ಬೀಚಿಯವರ ಜೊತೆ ಕಾಲಕಳೆಯುವುದೇ ಒಂದು ರೋಚಕ ಸಂಗತಿ. ಎಂಥ ಅಮೂಲ್ಯವಾದ ನೆನಪುಗಳನ್ನು ನನ್ನ ಮುಂದಿಟ್ಟರು.
ನಾವು ‘ರಥಯಾತ್ರೆ’ಯ ವಿರುದ್ಧ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಅದರಲ್ಲಿ ಮುಖ್ಯವಾಗಿ ಚರ್ಚೆ ಸಂವಾದಗಳ ಜೊತೆಗೆ; ಶೂದ್ರ ಪ್ರಕಾಶನದಿಂದ ‘ರಥಯಾತ್ರೆಯ ರಾಜಕೀಯ ‘ಮತೀಯ ವಾದದ ಮುಖಗಳು, ‘ಕರ್ನಾಟಕದಲ್ಲಿ ರಾಮರಾಜ್ಯ ಕರ್ಮಖಾಂಡ’ ಎಂಬ ಮೂರು ಕೃತಿಗಳನ್ನು ಪ್ರಕಟಿಸಿದೆವು. ಅವುಗಳಲ್ಲಿ ಜಿ. ರಾಜಶೇಖರ್ ಅವರು ಬರೆದ ‘ರಥಯಾತ್ರೆಯ ರಾಜಕೀಯ’ ಕೃತಿಯನ್ನು ಬೆಂಗಳೂರಿನ ‘ಡೈಲಿಸಾಲಾರ್’ ಉರ್ದು ಪತ್ರಿಕೆಯು ಅನುವಾದಿಸಿ ಅದರಲ್ಲಿ ಪ್ರಕಟಿಸಿತು. ಇದರ ಜೊತೆಗೆ ‘ಧರ್ಮಸಂವಾದ’ ಎಂಬ ಎರಡು ದಿನಗಳ ಚರ್ಚೆಯಲ್ಲಿ ಸಿರಿಗೆರೆಮಠದ ಇಬ್ಬರೂ ತತ್ವಬದ್ಧ ಸ್ವಾಮಿಗಳೂ ಭಾಗವಹಿಸಿದ್ದರು. ಜೊತೆಗೆ ಇಸ್ಲಾಂ ಧರ್ಮದ ಮಹಾನ್ ಚಿಂತಕ ಅಸ್ಘರ್ ಅಲಿ ಎಂಜಿನಿಯರ್ ಅವರು ಹಾಗೂ ಲಂಕೇಶ್, ಗಿರೀಶ್ ಕಾರ್ನಾಡ್ ಮತ್ತು ಸಿದ್ದಯ್ಯ ಪುರಾಣಿಕ್ ಮುಂತಾದವರೆಲ್ಲ ಭಾಗವಹಿಸಿದ್ದರು. ಒಂದು ದೃಷ್ಟಿಯಿಂದ ನಮ್ಮ ನಮ್ಮ ಭಾವಲೋಕಗಳು ವಿಸ್ತರಿಸಲು ಸಾಧ್ಯವಾಯಿತು. ಇದರಿಂದ ಬೇರೆ ಬೇರೆ ಮತಧರ್ಮದ ಬಂಧುಗಳನ್ನು ಹೆಚ್ಚು ಹೆಚ್ಚು ನಮ್ಮಿಳಗೆ ಬಿಟ್ಟುಕೊಳ್ಳಲು ಸಾಧ್ಯವಾಯಿತು.
ಒಂದು ದೃಷ್ಟಿಯಿಂದ ನಾನು ಪಂಡಿತ್ ರಾಜೀವ ತಾರಾನಾಥರ ಸರೋದ್ ಕೇಳುವಾಗ; ಆ ಸ್ಮರಣೀಯ ನಾದದಲ್ಲಿ ಈ ಎಲ್ಲ ನೆನಪುಗಳೂ ಗರಿಗೆದರಿ ನನ್ನ ಮನಸ್ಸನ್ನು ಫುಳಕಗೊಳಿಸಿತ್ತು. ನನ್ನ ಮುಂದೆ ಕೂತಿದ್ದ ಹಿರಿಯರಾದ ಯು.ಆರ್. ಅನಂತಮೂರ್ತಿಯವರು; ಒಟ್ಟು ಸಂಗೀತವನ್ನು ಅಪ್ಪಿಕೊಂಡವರಂತೆ ತಲ್ಲೀನರಾಗಿದ್ದರು. ಕೊನೆಗೆ ಕಾರ್ಯಕ್ರಮ ಮುಗಿದಾಗ; ಇಬ್ಬರ ಕೈಹಿಡಿದು ನಿಂತಾಗ; ಲೋಕದ ಧ್ವನಿಗೆ ಎಂತೆಂಥ ತರಂಗಗಳು ಎಂಬ ಅವ್ಯಕ್ತ ಧ್ವನಿಯೊಂದು ನಾದವನ್ನು ಸಮೃದ್ಧಿಗೊಳಿಸುತ್ತಿತ್ತು.

ಇದು ಕೆಂಪು ವರ್ಸಸ್ ನೀಲಿ ಅಲ್ಲ
Anand Teltumbde, grandson of Dr. Ambedkar, addressing a symposium on ‘Post-era of Dr. Ambedkar—his philosophy and mission' at Tirupati on Saturday. — Photo: K V Poornachandra Kumar


ಡಾ. ಆನಂದ್ ತೇಲ್ತುಂಬ್ಡೆ
ಅನು: ಡಾ. ಎಚ್. ಎಸ್. ಅನುಪಮಾ
 
 
 
ಭಾರತ ವಿಪರ್ಯಾಸಗಳ ನಾಡು. ಆದರೆ ದಲಿತ ಮತ್ತು ಕಮ್ಯುನಿಸ್ಟ್ ಚಳುವಳಿಗಳ ಭಿನ್ನ ಇತಿಹಾಸದಷ್ಟು ಪರಿಣಾಮಕಾರಿ ವಿಪರ್ಯಾಸ ಇನ್ನಾವುದೂ ಇರಲಿಕ್ಕಿಲ್ಲ. ಎರಡೂ ಹೆಚ್ಚುಕಮ್ಮಿ ಒಂದೇ ಕಾಲಾವಧಿಯಲ್ಲಿ ಹುಟ್ಟಿದವು. ಹೆಚ್ಚುಕಡಿಮೆ ಒಂದೇ ವಿಷಯದ ಪರ ಅಥವಾ ವಿರೋಧವಾಗಿ ಮಾತನಾಡಿದವು. ಒಂದೇ ರೀತಿ ಬೆಳೆದವು, ಒಡೆದವು. ಎರಡೂ ಇವತ್ತು ಅಷ್ಟೇ ನಿರಾಶಾದಾಯಕವಾಗಿ ಕಾಣತೊಡಗಿವೆ. ಆದರೂ ಅವೆರೆಡೂ ಕಣ್ಣಲ್ಲಿ ಕಣ್ಣಿಟ್ಟು ಪರಸ್ಪರ ನೋಡಿಕೊಳ್ಳಲೂ ನಿರಾಕರಿಸುತ್ತವೆ. ಈ ನಿಲುವಿಗೆ ಬಹುಮಟ್ಟಿಗೆ ಕಾರಣ ಅಂಬೇಡ್ಕರ್, ಏಕೆಂದರೆ ಅವರು ಮಾರ್ಕ್ಸ್‌ವಾದ ಮತ್ತು ಕಮ್ಯುನಿಸಮ್ಮಿನ ಕಟು ವಿಮರ್ಶಕರಾಗಿದ್ದರು. ಸಂಪೂರ್ಣ ತಪ್ಪಲ್ಲದಿದ್ದರೂ ಇದು ಸರಳ ವಿವರಣೆ.

ಅಂಬೇಡ್ಕರ್ ಮಾರ್ಕ್ಸ್‌ವಾದಿಯಲ್ಲ. ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ದಿನಗಳಿಂದಲೂ ಅವರ ಮೇಲೆ ಪ್ರಭಾವ ಬೀರಿದ್ದು ಫೇಬಿಯನ್ ಸಮಾಜವಾದವೇ. ತನ್ನ ಇಡೀ ಬೌದ್ಧಿಕತೆಯನ್ನು ರೂಪಿಸಿದರೆಂದು ಅಂಬೇಡ್ಕರ್ ಬಹುವಾಗಿ ಗೌರವಿಸಿದ ಜಾನ್ ದವೆ ಅಮೆರಿಕದ ಫೇಬಿಯನ್ ಸಮಾಜವಾದಿಯಾಗಿದ್ದರು. ಫೇಬಿಯನ್ನರಿಗೆ ಸಮಾಜವಾದ ಬೇಕಿತ್ತು. ಆದರೆ ಮಾರ್ಕ್ಸ್ ಪ್ರತಿಪಾದಿಸಿದ ಸಮಾಜವಾದವಲ್ಲ. ಅವರ ನಂಬಿಕೆಯಂತೆ ಸಮಾಜವಾದವನ್ನು ಸುಧಾರಣೆಯಿಂದ ತರಬಹುದೇ ಹೊರತು ಕ್ರಾಂತಿಯಿಂದಲ್ಲ. ಈ ಪ್ರಭಾವದ ಹೊರತಾಗಿ, ಅಂಬೇಡ್ಕರ್ ಮಾರ್ಕ್ಸ್‌ವಾದಿಯಲ್ಲದಿದ್ದರೂ ಕೂಡಾ ಮಾರ್ಕ್ಸ್‌ವಾದವನ್ನು ಗಂಭೀರವಾಗಿ ಅರಗಿಸಿಕೊಂಡಿದ್ದರು ಹಾಗೂ ತಮ್ಮ ಜೀವನದ ಬಹು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವಾಗ ಅದನ್ನೊಂದು ಮಾನದಂಡವನ್ನಾಗಿ ಬಳಸಿದರು.

ಅಂಬೇಡ್ಕರ್ ಮಾರ್ಕ್ಸಿಸ್ಟ್ ಅರ್ಥದಲ್ಲಿ ಅಲ್ಲದಿದ್ದರೂ ವರ್ಗ ರಾಜಕಾರಣದಲ್ಲಿ ತೊಡಗಿಕೊಂಡಿದ್ದರು. ಅವರು ಅಸ್ಪೃಶ್ಯರನ್ನು ವರ್ಣಿಸುವಾಗಲೂ ವರ್ಗ ಎಂಬ ಪದವನ್ನೇ ಬಳಸುತ್ತಿದ್ದರು. ಅವರು ೨೫ ವರ್ಷ ವಯಸ್ಸಿನವರಾಗಿದ್ದಾಗ ಪ್ರಕಟಿಸಿದ ಮೊತ್ತಮೊದಲ ಪ್ರಬಂಧ, ‘ಭಾರತದಲ್ಲಿ ಜಾತಿಗಳು’ ವಿನಲ್ಲಿ ಕೂಡಾ ಜಾತಿಯನ್ನು ‘ಮುಚ್ಚಿದ ವರ್ಗ’ಗಳೆಂದು ವ್ಯಾಖ್ಯಾನಿಸಿದರು. ಅದನ್ನು ಸೈದ್ಧಾಂತೀಕರಿಸುವ ಗೋಜಿಗೆ ಹೋಗದಿದ್ದರೂ ಅದು ಲೆನಿನ್ ವಿಚಾರಗಳ ಜೊತೆ ಕೆಲ ಮೂಲಭೂತ ಸಹಮತ ಹೊಂದಿತ್ತು. ಲೆನಿನ್ ವರ್ಗ ವಿಶ್ಲೇಷಣೆಯನ್ನು ನಿರ್ವಾತದ ಶೂನ್ಯದಲ್ಲಿ ಮಾಡಬಾರದು, ವರ್ತಮಾನದ ಸನ್ನಿವೇಶಕ್ಕೆ ತಕ್ಕಂತೆ ಮಾಡಬೇಕೆಂದು ಹೇಳಿದ್ದನು. ಜಾತಿಗಳು ಭಾರತದ ಪರಿಪೂರ್ಣ ವಾಸ್ತವ ಹಾಗೂ ವರ್ಗ ವಿಶ್ಲೇಷಣೆಯನ್ನು ಜಾತಿ ಮರೆತು ಮಾಡಲಾಗದು ಎಂಬ ಅರಿವು ಅಂಬೇಡ್ಕರರಿಗಿತ್ತು. ಆದರೆ ಆಗಿನ ಕಮ್ಯುನಿಸ್ಟರು ಮಾರ್ಕ್ಸ್ ಮತ್ತು ಲೆನಿನ್ ಮೇಲೆ ತಮ್ಮ ಏಕಸ್ವಾಮ್ಯ ಸಾಧಿಸುತ್ತ ವಿದೇಶದಿಂದ ಆಮದಾದ ಅಚ್ಚಿನಲ್ಲಿ ಜಾತಿಯನ್ನು ನೋಡಿ ಅದನ್ನು ಸೂಪರ್‌ಸ್ಟ್ರಕ್ಚರ್ ಎಂದೇ ಪರಿಗಣಿಸಿದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜಾತಿ ಸಂಘರ್ಷ ಅವರಿಗೆ ಒಂದು ಬಿಕ್ಕಟ್ಟಾಗಿ ಕಾಣಿಸಲೇ ಇಲ್ಲ. ಬ್ರಾಹ್ಮಣ್ಯವು ಪದ ಶುದ್ಧತೆಗಾಗಿ ಇಟ್ಟುಕೊಳ್ಳುವ ಭ್ರಮೆಯನ್ನೇ ಮುಂದುವರೆಸಿ ಮಾರ್ಕ್ಸ್-ಲೆನಿನ್ ಹೇಳಿದ್ದೇ ವೇದವಾಕ್ಯವೆಂಬಂತೆ ವರ್ತಿಸಿದರು. 

ಕಮ್ಯುನಿಸ್ಟರು ಜಾತಿ ಸಂಬಂಧಿ ಸಂಕಷ್ಟಗಳನ್ನು ಪರಿಗಣಿಸುವುದಿಲ್ಲವೆನ್ನುವುದು ಮುಂಬಯಿಯಲ್ಲಿ ದಲಿತ ಗಿರಣಿ ಕಾರ್ಮಿಕರಿಗೆ ತೋರಿಸುವ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆದಾಗ ಗೊತ್ತಾಯಿತು. ಅಂಬೇಡ್ಕರರು ಉತ್ತಮ ವೇತನ ಸಿಗುವ ನೇಯುವ ಕೆಲಸಕ್ಕೆ ದಲಿತರನ್ನೇಕೆ ನೇಮಿಸಿಕೊಳ್ಳುವುದಿಲ್ಲ ಎಂಬ ಪ್ರಶ್ನೆಯನ್ನೆತ್ತಿದಾಗ; ಕಮ್ಯುನಿಸ್ಟರ ‘ಗಿರಣಿ ಕಾಮಗಾರ್ ಯೂನಿಯನ್’ ಇದ್ದರೂ ಗಿರಣಿಗಳಲ್ಲಿ ಅಸ್ಪೃಶ್ಯತೆಯನ್ನು ಎಲ್ಲೆಡೆ ಅನುಸರಿಸುತ್ತಿದ್ದಾಗ; ಅದರ ಕಡೆ ಕಮ್ಯುನಿಸ್ಟರು ಗಮನವನ್ನೇ ಕೊಡಲಿಲ್ಲ. ೧೯೨೮ರಲ್ಲಿ ಅವರು ನಡೆಸುತ್ತಿದ್ದ ಮುಷ್ಕರವನ್ನು ಒಡೆಯುತ್ತೇನೆಂದು ಧಮಕಿ ಹಾಕಿದಾಗಲೇ ಅವರು ಅರೆಮನಸ್ಸಿನಿಂದ ಆಗಿರುವ ಪ್ರಮಾದ ಸರಿಪಡಿಸಲು ಒಪ್ಪಿದ್ದರು. 

೧೯೩೭ರ ಪ್ರಾಂತ್ಯ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಅವರು ತಮ್ಮ ಮೊದಲ ಸಾರ್ವಜನಿಕ ಪಕ್ಷ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯನ್ನು ೧೯೩೬ರ ಆಗಸ್ಟ್‌ನಲ್ಲಿ ಸ್ಥಾಪಿಸಿದರು. ಅದನ್ನು ಶ್ರಮಿಕರ ಪಕ್ಷವೆಂದು ಕರೆದರು. ಅದರ ಪ್ರಣಾಳಿಕೆಗಳಲ್ಲಿ ಜನಪರವಾದ ಬಹಳಷ್ಟು ವಿಷಯಗಳಿದ್ದವು. ಕೇವಲ ಒಂದೇ ಒಂದು ಬಾರಿ ಜಾತಿ ಎಂಬ ಪದವನ್ನು ಬಳಸಲಾಗಿತ್ತು. ಕ್ರಿಸ್ಟೋಫ್ ಜೆಫರ್‌ಲಾಟ್‌ನಂತಹ ಎಷ್ಟೋ ವಿದ್ವಾಂಸರು ಐಎಲ್‌ಪಿಯನ್ನು ಭಾರತದ ಮೊದಲ ಎಡಪಂಥೀಯ ಪಕ್ಷವೆಂದು ಕರೆದಿದ್ದಾರೆ. ಅದುವರೆಗೆ ಕಮ್ಯುನಿಸ್ಟರು ಕೆಲವರು ಭೂಗತರಾಗಿದ್ದರು ಹಾಗೂ ಮತ್ತೆ ಕೆಲವರು ಕಾಂಗ್ರೆಸ್ಸಿನ ಸಮಾಜವಾದಿ ಬ್ಲಾಕ್‌ನಡಿ ಕೆಲಸ ಮಾಡುತ್ತಿದ್ದರು.
೧೯೩೦. ಅದು ಅಂಬೇಡ್ಕರರ ಕ್ರಾಂತಿಕಾರಿ ವಿಚಾರಧಾರೆ ಅತ್ಯುತ್ತಮ ಹೊಳಪು ಪಡೆದ ಸಮಯ. ೧೯೩೫ರಲ್ಲಿ ಅವರು ಮುಂಬೈ ಕಾಮಗಾರ್ ಸಂಘವನ್ನು ಸ್ಥಾಪಿಸಿದರು. ಅದು ಜಾತಿ ಮತ್ತು ವರ್ಗಗಳು ಒಗ್ಗೂಡಬಹುದೆಂದು ಆಶಿಸಿದ್ದು ಕೊನೆಗೆ ಐಎಲ್‌ಪಿಯಲ್ಲಿ ಹಾಗೇ ಆಯಿತು. ಭಿನ್ನಾಭಿಪ್ರಾಯಗಳಿದ್ದಾಗ್ಯೂ ಅವರು ಕಮ್ಯುನಿಸ್ಟರ ಜೊತೆ ಕೈ ಜೋಡಿಸಿ ೧೯೩೮ರ ‘ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಆಕ್ಟ್’ ವಿರುದ್ಧ ಬೃಹತ್ ಮುಷ್ಕರದಲ್ಲಿ ಪಾಲ್ಗೊಂಡರು. ೧೯೪೨ರ ಕ್ರಿಪ್ಸ್ ವರದಿಯಲ್ಲಿ ಐಎಲ್‌ಪಿ ಪಕ್ಷ ಯಾವುದೇ ಸಮುದಾಯವನ್ನು ಪ್ರತಿನಿಧಿಸುವುದಿಲ್ಲವೆಂದು ಕೈಬಿಲಾಗಿತ್ತು. ಆಗ ಅಂಬೇಡ್ಕರ್ ಐಎಲ್‌ಪಿಯನ್ನು ವಿಸರ್ಜಿಸಿ ಸಮುದಾಯ ಕೇಂದ್ರಿತವಾದ ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಅನ್ನು ಕಟ್ಟಿದರು. ಆದರೆ ವೈಸರಾಯ್ ಅವರ ಎಕ್ಸಿಕ್ಯುಟಿವ್ ಕೌನ್ಸಿಲ್‌ನ ಸದಸ್ಯರಾಗಿದ್ದಾಗ್ಯೂ ಸಹಾ ಅವರ ಎಡಪಂಥೀಯ ಒಲವು ಮುಂದುವರೆಯಿತು. ಅದು ಅವರ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಎಂಬ ಪ್ರಬಂಧದಲ್ಲಿ ವ್ಯಕ್ತವಾಗಿದ್ದಷ್ಟೇ ಅಲ್ಲ, ಅದೇ ಮುಂಬರಲಿರುವ ಸಂವಿಧಾನದ ಸಮಾಜವಾದಿ ಆರ್ಥಿಕತೆಯ ನೀಲನಕಾಶೆಯಾಯಿತು. ಆದರೆ ಕಮ್ಯುನಿಸ್ಟರು ಅಂಬೇಡ್ಕರರನ್ನು ಕಾರ್ಮಿಕ ಚಳುವಳಿಯನ್ನು ಒಡೆಯುವ ವ್ಯಕ್ತಿಯೆಂದು ಪರಿಗಣಿಸಿದರು. ಈ ವಿರೋಧವು ೧೯೫೨ರಲ್ಲಿ ಡಾಂಗೆ ಮತದಾರರು ಮತವನ್ನು ಅನರ್ಹಗೊಳಿಸಿದರೂ ಪರವಾಗಿಲ್ಲ, ಅಂಬೇಡ್ಕರರ ಪರವಾಗಿ ಮಾತ್ರ ಮತ ಹಾಕಬಾರದೆಂದು ದುಷ್ಟ ಮನವಿ ಮಾಡುವವರೆಗೂ ಮುಂದುವರೆಯಿತು. ಕೊನೆಗೂ ಅದರ ಫಲವಾಗಿ ಅಂಬೇಡ್ಕರ್ ಸೋತರು.

ಬೌದ್ಧಧರ್ಮಕ್ಕೆ ಅವರ ಮತಾಂತರವನ್ನೂ ಸಹಾ ಹತಾಶ ವ್ಯಕ್ತಿತ್ವವೊಂದರ ಆದ್ಯಾತ್ಮಿಕ ಹುಡುಕಾಟದಂತೆಯೋ ಅಥವಾ ಮಾರ್ಕ್ಸ್ ವಿರೋಧಿ ನಡೆಯೆಂದೋ ಗುರುತಿಸಲಾಗುತ್ತದೆ. ಎಷ್ಟೋ ವಿದ್ವಾಂಸರು ಈ ತಪ್ಪು ಗ್ರಹಿಕೆಯನ್ನು ಗುರುತಿಸಿದ್ದರೂ, ಅದು ಮಾರ್ಕ್ಸ್‌ನನ್ನು ಅವರು ಉಲ್ಲೇಖಿಸಿದ ಕೊನೆಯ ಘಟನೆಯೆಂದು ಹೇಳಬಹುದು. ತಮ್ಮ ಸಾವಿಗಿಂತ ೧೫ ದಿನ ಮೊದಲು ಮಾರ್ಕ್ಸ್‌ವಾದ ಹಾಗೂ ಬುದ್ಧನ ಧರ್ಮವನ್ನು ಹೋಲಿಸುತ್ತಾ ಮಾರ್ಕ್ಸ್‌ವಾದದಿಂದ ಹಿಂಸೆ ಮತ್ತು ಸರ್ವಾಧಿಕಾರವನ್ನು ತೆಗೆದರೆ ಅದು ಹೊಂದಿಕೊಂಡೀತೆಂಬ ತಮ್ಮ ನಿಲುವನ್ನು ಊರ್ಜಿತಗೊಳಿಸಿದರು. ವಿಷಾದವೆಂದರೆ ಮಾರ್ಕ್ಸ್‌ನನ್ನು ಅಪ್ಪಿಕೊಳ್ಳುವುದೆಂದರೆ ಅಂಬೇಡ್ಕರರನ್ನು ಹೊರಗಿಡುವುದೆಂಬ ಅವಿವೇಕದ ನಿರ್ಣಯಗಳು ಈಗಲೂ ಹಾಗೆಯೇ ಮುಂದುವರೆದಿವೆ. Friday, December 28, 2012

ಮಡೆಸ್ನಾನ ನಿಷೇಧಿಸಿ


Chethan Ka


 ಕೆ  ಚೇತನ

ಮಾನವ ಕುಲಕ್ಕೆ ಕಳಂಕಪ್ರಾಯವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಮಡೆಸ್ನಾನವನ್ನು ನಿಷೇಧಿಸುವಂತೆ ಕಳೆದ ವರ್ಷ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ತೀವ್ರ ರೀತಿಯ ಒತ್ತಾಯ ಕೇಳಿ ಬಂದಿತ್ತು. ಈ ಬಾರಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಶಿವರಾಮ್‌ರವರ ನೇತೃತ್ವದಲ್ಲಿ, ಯಾವುದೇ ಕಾರಣಕ್ಕೂ ಸರಕಾರ ಮಡೆಸ್ನಾನ ಪದ್ಧತಿಗೆ ಅವಕಾಶ ನೀಡಬಾರದೆಂದು ಆರಂಭದಲ್ಲೇ ಪ್ರತಿಭಟನಾತ್ಮಕ ಎಚ್ಚರಿಕೆಯನ್ನು ಕೊಡಲಾಗಿತ್ತು.ಈ ಆಗ್ರಹಕ್ಕೆ ಪೂರಕವಾಗಿ ಸ್ಥಳೀಯ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಚನ್ನಪ್ಪಗೌಡರು ಮಡೆಸ್ನಾನ ನಿಷೇಧಿಸಿ ಆಜ್ಞೆ ಹೊರಡಿಸಿದ್ದರು.ಜಿಲ್ಲಾಧಿಕಾರಿಗಳ ಈ ದಿಟ್ಟ ಕ್ರಮದಿಂದ ಕಂಗಾಲಾದ ದೇವಸ್ಥಾನದ ಆಡಳಿತ ಮಂಡಳಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ರಾಜ್ಯ ಮುಜರಾಯಿ ಸಚಿವ ಡಾ. ವಿ.ಎಸ್. ಆಚಾರ್ಯರ ಮೂಲಕ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ, ನಿಷೇಧವನ್ನು ಹಿಂಪಡೆಯುವಂತೆ ಮಾಡಿದರು.ಇದರಿಂದ 3 ದಿನಗಳ ಕಾಲ ಬ್ರಾಹ್ಮಣರು ತಿಂದುಂಡು ಉಳಿಸಿದ ಬಾಳೆ ಎಲೆ ಎಂಜಲಿನ ಮೇಲೆ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಸಹಸ್ರಾರು ಜನ ಉರುಳು ಸೇವೆ ಮಾಡಿದರು. ಅದರಲ್ಲೂ ಎಳೆ ಮಕ್ಕಳನ್ನು ಬಲವಂತದಿಂದ ತಾಯಂದಿರು ಅವರ ಇಷ್ಟಕ್ಕೆ ವಿರುದ್ಧವಾಗಿ ಕೈ ಕಾಲು ಕಟ್ಟಿ ಪಶುಗಳಂತೆ ಉರುಳಿಸಲು ಪ್ರಯತ್ನಿಸುತ್ತಿದ್ದ ಘಟನೆಗಳು ಹೃದಯ ವಿದ್ರಾವಕವಾಗಿದ್ದವು.
ಮೂಲತಃ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನವಾಗಿದ್ದು, ಮುಜರಾಯಿ ಸಚಿವರಾದ ಆಚಾರ್ಯರು ಮಡೆಸ್ನಾನವನ್ನು ಸ್ಥಳೀಯರ ಭಾವನೆ, ಧಾರ್ಮಿಕ ನಂಬಿಕೆ ಮತ್ತು ಪರಂಪರೆಯ ಹೆಸರಿನಲ್ಲಿ ಸಮರ್ಥಿಸಿಕೊಂಡಿರುವುದು ಹಾಗೂ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮ್‌ರವರ ಮೇಲೆ ದೇವಾಲಯದ ಗೂಂಡಾ ಸಿಬ್ಬಂದಿ ಹಲ್ಲೆ ಮಾಡಿರುವುದು, ಮಡೆಸ್ನಾನ ಪದ್ಧತಿ ಸರಕಾರಿ ಪ್ರಾಯೋಜಿತ ಜಾತಿ ಪದ್ಧತಿಯ ಆಚರಣೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಸ್ವತಃ ‘ಡಾಕ್ಟರ್’ ಎನ್ನುವ ಬಿರುದಾಂಕಿತರಾಗಿರುವ ಡಾ.ವಿ.ಎಸ್. ಆಚಾರ್ಯರವರು, ಮಡೆಸ್ನಾನಕ್ಕೆ ಚರ್ಮರೋಗ, ಇತ್ಯಾದಿ ಅಗೋಚರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದಿರುವುದು, ಇವರ ‘ಡಾಕ್ಟರಿಕೆ’ಯ ಕುರಿತು ಅನುಮಾನ ಹುಟ್ಟಿಸುತ್ತದೆ. ವಾದಿರಾಜರ ‘ಸ್ಕಂದ’ ಪುರಾಣದಲ್ಲಿಯೇ (15ನೆ ಶತಮಾನ) ಮಡೆಸ್ನಾನದ ಬಗ್ಗೆ ಉಲ್ಲೇಖವಿದೆ ಎಂಬ ಅವರ ವಾದವನ್ನು ಗಮನಿಸಿದಾಗ, ಸಮಾನತೆಯ ತಳಹದಿಯನ್ನೇ ಉಸಿರಾಗಿಸಿಕೊಂಡಿರುವ ಸಂವಿಧಾನ ದಡಿಯಲ್ಲಿ ಇವರು ಸಚಿವರಾಗಿ ಕಾರ್ಯ ನಿರ್ವಹಿಸುವುದಕ್ಕಿಂತಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಚಾರ್ಯ ಹುದ್ದೆಗೆ ಸೂಕ್ತ ವ್ಯಕ್ತಿ ಎಂದೆನಿಸುತ್ತದೆ!
ವಿಧಾನ ಪರಿಷತ್‌ನ ಬಿಜೆಪಿಯ ಸಭಾ ನಾಯಕರಾಗಿರುವ ಆಚಾರ್ಯರು,ಶತಮಾನಗಳಿಂದಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು,ಇದನ್ನು ಬಲತ್ಕಾರದಿಂದ ನಿಷೇಧಿಸಲು ಸಾಧ್ಯವಿಲ್ಲ.ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ,ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಸ್ಥಳೀಯ ಪ್ರಮುಖರ ಜೊತೆ ಚರ್ಚಿಸಿ,ನಂತರ ಈ ಪದ್ಧತಿಯನ್ನು ಅನುಸರಿಸುತ್ತಿರುವ ಜನರ ಮನವೊಲಿಸಲು ಸರಕಾರ ಪ್ರಯತ್ನ ನಡೆಸಲಿದೆ ಎಂದು ಹೇಳುತ್ತಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸಿದಾಗ ಬಹಳ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ, ರಾಜ್ಯ ಬಿಜೆಪಿ ಸರಕಾರ ಹಾಗೂ ಸಂಘ ಪರಿವಾರಕ್ಕೆ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವ ಇಚ್ಛಾಶಕ್ತಿ ಇಲ್ಲ.
ಭಾರತದ ಸಂವಿಧಾನ ಮತ್ತು ಈ ನೆಲದ ಕಾನೂನಿಗಿಂತ ಈ ಪ್ರತಿಗಾಮಿ ಶಕ್ತಿಗಳಿಗೆ ವಿಶ್ವೇಶ ತೀರ್ಥರಂತಹ ವೈದಿಕ ವೌಲ್ಯಗಳ ಪ್ರತಿಪಾದಕರೇ ಪರಮೋಚ್ಚರು. ನಂಬಿಕೆ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಮಲೆಕುಡಿಯ ಜನಾಂಗದಂತಹ ತಳಸಮುದಾಯಗಳನ್ನು ಹಿಂದುತ್ವದ ಗುಲಾಮಗಿರಿಯ ಕತ್ತಲೆ ಕೂಪದಲ್ಲಿ ಅದುಮಿಡುವ ಪ್ರಯತ್ನ ಈ ಮನುವಾದಿಗಳಿಂದ ನಡೆಯುತ್ತಿದೆ.

ಅಸ್ಪಶತೆಯ ಆಚರಣೆ, ಸತಿಸಹಗಮನ ಪದ್ಧತಿ, ಜೀತದಾಳು ಪದ್ಧತಿ, ದೇವದಾಸಿ ಪದ್ಧತಿ ಹಾಗೂ ಇತ್ತೀಚೆಗೆ ನಿಷೇಧಿಸಲ್ಪಟ್ಟ ಅಜಲು ಪದ್ಧತಿ ಕೂಡ ನಂಬಿಕೆ,ಸಂಪ್ರದಾಯದ ಭಾಗವೇ ಆಗಿದ್ದಂಥವುಗಳು. ಇಂದು ಮಡೆಸ್ನಾನ ಪದ್ಧತಿಯನ್ನು ಸಮರ್ಥಿಸುವ ಪ್ರತಿಗಾಮಿಗಳಿರುವಂತೆ, ಅಂದು ಕೂಡ ಆ ಎಲ್ಲಾ ಅಮಾನವೀಯ ಪದ್ಧತಿಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಶೋಷಕ ಧ್ವನಿಗಳಿದ್ದವು. ಅಂದಿನ ಸರಕಾರಗಳ ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದ ಕಾಲ ಕಾಲಕ್ಕೆ ಸೂಕ್ತ ಕಾನೂನುಗಳನ್ನು ತರುವುದರ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡುವ ಕೈಂಕರ್ಯ ನಡೆದುಕೊಂಡು ಬಂದಿದೆ.
ಮಡೆಸ್ನಾನ ಪದ್ಧತಿಯನ್ನು ಅನುಸರಿಸುತ್ತಿರುವವರಲ್ಲಿ ಬಹುಸಂಖ್ಯಾತರು ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರು ಎನ್ನುವುದರ ಆಧಾರದ ಮೇಲೆ, ಈ ಅವೈಜ್ಞಾನಿಕ ಪದ್ಧತಿಯನ್ನು ಘೋಷಣೆ ಮಾಡಿ ಕೊಂಡು ಬರುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಯ ವಿರುದ್ಧ, ಅದನ್ನು ಸಮರ್ಥಿಸುವ ಸಚಿವರು ಹಾಗೂ ಶ್ರೀಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಬಹುದಾಗಿದೆ. ಸಂವಿಧಾನದ ಪರಿಚ್ಛೇದ17-ಅಸ್ಪಶತೆಯ ಆಚರಣೆಯನ್ನು ನಿಷೇಧಿಸಿದ್ದು, ಜಾತಿಯ ಆಧಾರದ ಮೇಲೆ ಅರ್ಚಕ ಹುದ್ದೆಯಿಂದ ಹಿಡಿದು ಪೌರ ಕಾರ್ಮಿಕ ಹುದ್ದೆಯ ತನಕ ಯಾವುದನ್ನು ತಾರತಮ್ಯದ ಆಧಾರದ ಮೇಲೆ ನಿಗದಿ ಮಾಡುವುದು ಕೂಡ ಸಂವಿಧಾನದ ಪರಿಚ್ಛೇದ 17ರ ಉಲ್ಲಂಘನೆಯಾಗಿದೆ.
ಧರ್ಮ,ವರ್ಣ,ಜಾತಿ,ಅಥವಾ ಜನ್ಮಸ್ಥಳದ ಆಧಾರದ ಮೇಲಿನ ತಾರತಮ್ಯ ನಿಷೇಧಿಸಿರುವ ಪರಿಚ್ಛೇದ 15ರ ಉಲ್ಲಂಘನೆಯೂ ಆಗಿದೆ.ಈ ಸರಕಾರಿ ಪ್ರಾಯೋಜಿತ ಅಸ್ಪಶತೆಯ ಆಚರಣೆ ವಿರುದ್ಧ ಕೆಲವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಸದರು, ಶಾಸಕರು, ಸಚಿವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೇಂದ್ರ ಮತ್ತು ರಾಜ್ಯ ಆಯೋಗಗಳ ಅಧ್ಯಕ್ಷರು ಮುಗುಮ್ಮಾಗಿರುವುದು, ಅವರ ಅವಕಾಶವಾದಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕನ್ನಡದ ಅನೇಕ ಹೆಸರಾಂತ ಸಾಹಿತಿಗಳು, ಜ್ಞಾನಪೀಠ ಪುರಷ್ಕೃತರು, ಭ್ರಷ್ಟಾಚಾರದ ವಿರುದ್ಧ ಏಕಪಕ್ಷೀಯವಾಗಿ ಆಂದೋಲನಕ್ಕಿಳಿ ಯುವವರು ಇಂದಿಗೂ ತಮ್ಮ ವೌನ ಸಮ್ಮತಿಯ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ!
ಪ್ರಸ್ತುತ ಸನ್ನಿವೇಶದಲ್ಲಿ ಮಡೆಸ್ನಾನ ನಿಷೇಧಕ್ಕಾಗಿ ಹೋರಾಟ ಮಾಡುವುದರ ಜೊತೆಗೆ ಶ್ರೇಣೀಕೃತ ಜಾತಿಪದ್ಧತಿ, ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಸಂಪೂರ್ಣವಾಗಿ ವಿಮುಖರಾಗಲು ಹಿಂದೂ ಧರ್ಮವನ್ನು ಧಿಕ್ಕರಿಸುವ ತಾರ್ಕಿಕ ಮತ್ತು ಸೈದ್ಧಾಂತಿಕ ಚಳುವಳಿ ನಡೆಯಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಕೋನದಲ್ಲಿ ಮತಾಂತರವೊಂದೇ ಸ್ವಾತಂತ್ರದ ಸೂಕ್ತ ಮಾರ್ಗ. ಧಾರ್ಮಿಕ ಬದಲಾವಣೆಯು (ಮತಾಂತರವು) ಒಂದು ಹೊಸ ಅಸ್ತಿತ್ವವನ್ನು (ಐಡೆಂಟಿಟಿ) ಕೊಡುವುದರ ಮುಖಾಂತರ ಅಂತಿಮವಾಗಿ ಸಮಾನತೆಯೆಡೆಗೇ ಮುನ್ನಡೆಸುತ್ತದೆ. ಮತಾಂತರ ಪಲಾಯನದ ಮಾರ್ಗವಲ್ಲ, ಹೇಡಿತನದ ಮಾರ್ಗವೂ ಅಲ್ಲ, ಅದು ವಿಮೋಚನಾ ಮಾರ್ಗ, ಜ್ಞಾನದ ಮಾರ್ಗ.

ಭ್ರಷ್ಟಾಚಾರ ಆರೋಪ ಮತ್ತು ಜಾತಿ


Dr Anand Teltumbde

-ಡಾ. ಆನಂದ್ ತೇಲ್ತುಂಬ್ಡೆ
ಅನು: ಡಾ. ಎಚ್. ಎಸ್. ಅನುಪಮಾ


ರಾಬರ್ಟ್ ವಾಧ್ರಾ, ಸಲ್ಮಾನ್ ಖುರ್ಷಿದ್, ನಿತಿನ್ ಗಡ್ಕರಿಯವರ ಭ್ರಷ್ಟ ಹಗರಣಗಳು ಒಂದಾದ ಮೇಲೊಂದು ಅರವಿಂದ್ ಕೇಜ್ರಿವಾಲ್ ಮತ್ತು ‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ ಕಾರ್ಯಕರ್ತರಿಂದ ಅನಾವರಣಗೊಳ್ಳುತ್ತಿವೆ. ಭಾರತದ ರಾಜಕಾರಣಿಗಳು ಎಷ್ಟು ನಿರ್ಲಜ್ಜರೆಂದು ಆಗಲೇ ಎಲ್ಲರೂ ತಿಳಿದಿರುವ ಸತ್ಯವನ್ನು ಇವು ಬಹಿರಂಗಗೊಳಿಸಿವೆ. ಇದುವರೆಗೆ ಹೆಸರೇ ಇಲ್ಲದಿದ್ದ ವಾಧ್ರಾ ಎಂಬ ವ್ಯಾಪಾರಿ ನೆಹರೂ-ಗಾಂಧಿ ಮನೆತನದ ಅಳಿಯನಾಗಿದ್ದೇ ಇದ್ದಕ್ಕಿದ್ದಂತೆ ದೊಡ್ಡ ವ್ಯಾಪಾರಿ ಕುಳವಾಗಿ ಹೊರಹೊಮ್ಮಿ ಭೂಮಿ ಕಬಳಿಸುವ ಎಷ್ಟೆಷ್ಟೋ ಡೀಲುಗಳಲ್ಲಿ ಪಾಲುದಾರನೆಂಬುದು ಗೊತ್ತಾದಾಗ, ಯಾವ ಕಳಂಕವಿಲ್ಲದೆ ಆತ ಪಾರಾದರೂ ಯಾರಿಗೂ ಆಶ್ಚರ್ಯವಾಗಲಿಲ್ಲ. ಸಲ್ಮಾನ್ ಖುರ್ಷಿದ್ ಪತ್ಮಿ ಮತ್ತು ತಾಯಿಯ ಹೆಸರಿನಲ್ಲಿ ನಡೆಸುವ ಸರ್ಕಾರೇತರ ಸಂಸ್ಥೆಯೊಂದರ ಹಣಕಾಸು ಅವ್ಯವಹಾರಗಳು ಬಹಿರಂಗವಾದಾಗ ಅದನ್ನು ಅರಗಿಸಿಕೊಳ್ಳಲಾಗದ ಖುರ್ಷಿದ್ ಮಾಫಿಯಾ ಡಾನ್ ರೀತಿ ವರ್ತಿಸಿದರು. ಟಿವಿ ಕ್ಯಾಮೆರಾ ಮುಂದೆ ಮೂರ್ಖರಂತೆ ಎಗರಾಡುತ್ತ ಇಂಥ ಆರೋಪ ಮಾಡಿದ ಕೇಜ್ರಿವಾಲರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಾಣಭಯ ಒಡ್ಡುತ್ತ ಕಿರುಚಾಡುತ್ತಿದ್ದರು. ಆದರೂ ನಂತರ ನಡೆದ ಮಂತ್ರಿಮಂಡಲ ವಿಸ್ತರಣೆಯಲ್ಲಿ ಅವರಿಗೆ ಬಡ್ತಿ ನೀಡಲಾಯಿತು. ಆದರೆ ಯಾರಿಗೂ ಆಶ್ಚರ್ಯವಾಗಲಿಲ್ಲ.

ನಿತಿನ್ ಗಡ್ಕರಿಯ ಹಗರಣ ಬಯಲುಗೊಳಿಸುವಿಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಗುರಿ ಮಾಡಿದ್ದೇವೆಂದು ಕೇಜ್ರಿವಾಲಾ ಮತ್ತವರ ಸಂಗಡಿಗರು ತೋರಿಸುವ ಬ್ಯಾಲೆನ್ಸಿಂಗ್ ಆಟ. ಅದು ಮೊದಮೊದಲು ಅಂತಹ ಸಂಚಲನ ಉಂಟುಮಾಡಲಿಲ್ಲ. ಆದರೆ ನಂತರ ಮಾಧ್ಯಮಗಳು ಕೆದಕುತ್ತ ಹೋದಹಾಗೆ ಅದೊಂದು ದೊಡ್ಡ ದುಷ್ಕೃತ್ಯವಾಗಿ ಬೆಳಕಿಗೆ ಬಂತು. ತೆಹೆಲ್ಕಾ ಡಾಟ್‌ಕಾಂನ ಕುಟುಕು ಕಾರ್ಯಾಚರಣೆಯಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಂಗಾರು ಲಕ್ಷ್ಮಣ್ ಹೇಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದ್ದರೋ ಹಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಗಡ್ಕರಿ ರಾಜೀನಾಮೆ ಕೊಡಬಹುದೆಂದು ದಿಗ್ಭ್ರಮೆಗೊಂಡ ಕೆಲವರಾದರೂ ಭಾವಿಸಿದ್ದರು. ಆದರೆ ಗಡ್ಕರಿ ಲಕ್ಷ್ಮಣ್ ದಾರಿ ಅನುಸರಿಸಲಿಲ್ಲ. ಹೀಗಾಗಿ ಭ್ರಷ್ಟಾಚಾರ ಬಯಲಲ್ಲೂ ಜಾತಿಯ ಕೈವಾಡವಿರುವುದು ತಿಳಿದುಬಂತು.

ಜಾತಿ ಮತ್ತು ಭ್ರಷ್ಟತೆ

ನವ ಉದಾರವಾದದ ವಕ್ತಾರರಂತೆ ಬೆಳೆಯುತ್ತಿರುವ ಭಾರತೀಯ ಮಧ್ಯಮ ವರ್ಗವು ಆಧುನಿಕ ಭಾರತ ಸಮಾಜದಲ್ಲಿ ಜಾತಿ ಪ್ರಭಾವರಹಿತ ಎಂದು ಭಾವಿಸಿದ್ದರೂ ಅದು ಎಲ್ಲ ಕಡೆ ತನ್ನ ಅಟಾಟೋಪ ತೋರಿಸುವುದನ್ನು ನೋಡಬಹುದು. ಅದನ್ನು ತಿಳಿಯಬೇಕಾದರೆ ಗ್ರಹಿಸುವ ಸೂಕ್ಷ್ಮ ಮನಸ್ಸಿರಬೇಕು ಅಷ್ಟೆ. ಮೆರಿಟ್ ಇಲ್ಲದೆ ಮೀಸಲಾತಿ ಪಡೆಯಲು ಹಾಗೂ ರಾಜಕಾರಣದಲ್ಲಿ ದಾಳವಾಗಿ ಉಪಯೋಗಿಸಲು ಜಾತಿ ಎನ್ನುವುದು ಒಂದು ನೆಪವಷ್ಟೆ ಎಂದು ಈ ಮಧ್ಯಮವರ್ಗದ ಗುಂಪು ಬಿಸಿಬಿಸಿ ವಾಗ್ವಾದದಲ್ಲಿ ತೊಡಗಿರುತ್ತದೆ. ಇರಬಹುದು, ಆದರೆ ಎಲ್ಲ ದಲಿತರ ಬದುಕಿನಲ್ಲೂ ತಮ್ಮ ಉತ್ತಮಿಕೆಗಾಗಿ ಮೀಸಲಾತಿ ಸೌಲಭ್ಯ ಬಳಸಿಕೊಳ್ಳಲಾಗುವುದಿಲ್ಲ. ಎಷ್ಟೋ ದಲಿತರಿಗೆ ಜಾತಿ ಇಂದಿಗೂ ದೊಡ್ಡ ಕಳಂಕವಾಗಿದೆ. ದಲಿತರು ಮತ್ತು ದಲಿತೇತರರ ನಡುವೆ ಜಾತಿ ಇರುವಿಕೆಯ ಕುರಿತ ಈ ಭಿನ್ನಾಭಿಪ್ರಾಯಗಳೇ ಸಮಸ್ಯೆ ಇದೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ಹಳ್ಳಿಗಳ ಇಕ್ಕಟ್ಟು ಕೇರಿಗಳಲ್ಲಿ ವಾಸಿಸುತ್ತಾ ದುಡಿಯುವ; ನಗರದ ಸ್ಲಂಗಳಲ್ಲಿದ್ದು ಎರಡು ಹೊತ್ತಿನ ಊಟಕ್ಕಾಗಿ ಪರದಾಡುವ ದಲಿತರು ಯಾರೊಂದಿಗೂ ಸ್ಪರ್ಧೆಗಿಳಿಯುವುದಿಲ್ಲ. ಅವರನ್ನು ಅವರ ಜಗತ್ತು ಮೆರಿಟ್ ಇಲ್ಲದವರೆಂದೂ ಭಾವಿಸುವುದಿಲ್ಲ. ಆದರೂ ಈ ದಲಿತ ಸಮುದಾಯ ಜಾತಿ ಹೆಸರಲ್ಲಿ ಅಪಮಾನ, ದೌರ್ಜನ್ಯಕ್ಕೆ ಒಳಗಾಗುತ್ತದೆ. ಕೆಲವೇ ಕೆಲವು ದಲಿತರು ಮಾರುಕಟ್ಟೆ ಉದಾರೀಕರಣದ ಫಲಾನುಭವಿಗಳು. ಅವರಿಗೆ ಮೆರಿಟ್ ಕುರಿತು ಮಾತನಾಡುವವರ ಕುಹಕಗಳು ಅನ್ವಯಿಸಿಯಾವು. ಮಾರುಕಟ್ಟೆ ನೀತಿಗಳಿಂದ ಪ್ರಯೋಜನ ಪಡೆದ ದಲಿತರನ್ನೂ ಜಾತಿ ಬಾಧಿಸುತ್ತದೆ, ಆದರೆ ಅದು ಅದೃಶ್ಯವಾದ ‘ಕಂತು ಮತ್ತು ರಿಯಾಯ್ತಿ’ ರೂಪದಲ್ಲೋ ಅಥವಾ ‘ಲಾಸ್ಟ್ ಇನ್ ಫಸ್ಟ್ ಔಟ್’ ರೂಪದಲ್ಲೋ ಆಗಿರುತ್ತದೆ. ಏನೇ ಆದರೂ ಭ್ರಷ್ಟಾಚಾರ ಭ್ರಷ್ಟಾಚಾರವೇ. ಅದರ ಎಲ್ಲಾ ರೂಪಗಳನ್ನೂ ಖಂಡಿಸಲೇಬೇಕು. ಆದರೆ ದುರದೃಷ್ಟವಶಾತ್ ಅದೂ ಕೂಡ ಜಾತಿಯಿಂದ ಹೊರತಾಗಿಲ್ಲ. ದಲಿತನೊಬ್ಬ ಲಂಚ ಪಡೆದರೆ ಅದು ದೊಡ್ಡದಾಗಿ ಬಿಂಬಿಸಲ್ಪಟ್ಟು ಹಾಹಾಕಾರವೇಳುತ್ತದೆ; ದಲಿತೇತರ ಪಡೆದರೆ ಅದು ಪರಿಣಾಮರಹಿತ ಘಟನೆಯೆಂಬಂತೆ ಕೆಲಸಮಯದಲ್ಲೇ ತಣ್ಣಗಾಗುತ್ತದೆ. 

ಭ್ರಷ್ಟಾಚಾರ ಯಾವುದೇ ಜಾತಿ, ಮತ, ಕುಲ, ದೇಶದ ಏಕಸ್ವಾಮ್ಯವಲ್ಲ. ವಿಶಾಲ ಅರ್ಥದಲ್ಲಿ ಅದು ಅತಿ ಉತ್ಪಾದಕತೆಯ ಶಕ್ತಿಯಿರುವವರು ಮತ್ತು ಕೊಳ್ಳಬಲ್ಲವರ ನಡುವೆ ಇರುವ ಕೊಡುಕೊಳುವ ಮಾರುಕಟ್ಟೆ ನೀತಿಯ ಉಪ ಉತ್ಪನ್ನ. ಭಾರತದಲ್ಲಿ ಲಂಚ ಮೇಲ್ಜಾತಿಗಳೊಂದಿಗೆ ತಳುಕು ಹಾಕಿಕೊಂಡಿದೆ ಏಕೆಂದರೆ ಅವರಿಗೆ ಉತ್ಪಾದಕ ಶಕ್ತಿಯೂ ಇದೆ, ಕೊಳ್ಳಬಲ್ಲವರೂ ಆಗಿದ್ದಾರೆ. ಅಧಿಕಾರ ಕೇಂದ್ರದತ್ತ ದಲಿತರು ಬಂದಿರುವುದು ಇತ್ತೀಚಿನ ವಿದ್ಯಮಾನ. ಸಾಮಾಜಿಕ ಪೂರ್ವಗ್ರಹಗಳ ದೆಸೆಯಿಂದ ಶಕ್ತಿ ರಾಜಕಾರಣದ ಕಾರಿಡಾರುಗಳಲ್ಲಿ ದಲಿತರು ಎದ್ದು ಕಾಣಿಸುತ್ತಾರೆ, ಆದರೆ ಮೇಲ್ಜಾತಿ ಯಜಮಾನಿಕೆ ವಿರುದ್ಧ ದನಿಯೆತ್ತಿ ಮಾತನಾಡುವ ಕೌಶಲ್ಯವನ್ನು ಅವರು ಹೊಂದಿಲ್ಲ. ಅವರ ಆಕಾಂಕ್ಷೆಗಳು ಕಡಿಮೆಯವು ಮತ್ತು ಭ್ರಷ್ಟಾಚಾರಕ್ಕೆ ಇರುವ ಅವಕಾಶಗಳೂ ಕಡಿಮೆಯವು. ಎಂದೇ ಸಣ್ಣಪುಟ್ಟ ಲಂಚ ಪ್ರಕರಣ, ಅವ್ಯವಹಾರಗಳಲ್ಲಿ ಸಿಲುಕಿಬೀಳುತ್ತಾರೆ. ಆದರೆ ಅವರು ಸಿಕ್ಕಿಬಿದ್ದರೆ ಸಾಕು, ಆಕಾಶವೇ ಕಳಚಿ ಬಿದ್ದಂತೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. 

ಒಪ್ಪೋಣ, ಅಷ್ಟು ಕರಾರುವಾಕ್ ಆಗಿ ಈ ವಿಷಯಕ್ಕೆ ಜಾತಿ ಅನ್ವಯಿಸದೇ ಇರಬಹುದು. ಆದರೆ ಅಧಿಕಾರ ಜಾಲದ ಒಂದು ಭಾಗವಾಗಿರುವ ದಲಿತರು - ಇವರ ಸಂಖ್ಯೆ  ಹೆಚ್ಚುತ್ತಲೇ ಇದೆ - ಆ ಜಾಲದ ಭಾಗವಾಗಿಯಷ್ಟೇ ಅಲ್ಲ, ಇಡೀ ರಾಚನಿಕ ವ್ಯವಸ್ಥೆಯ ಭಾಗವಾಗಿರುವುದರಿಂದ ಅವರನ್ನು ಅನುಚಿತವಾಗಿ ನಡೆಸಿಕೊಳ್ಳಲಾಗುತ್ತದೆ. ಅವರ ಉಪಯುಕ್ತತೆಯಿಂದ ಅವರನ್ನು ಅನಿವಾರ್ಯ ಎಂದುಕೊಳ್ಳಲಾಗಿದೆ, ಅಷ್ಟೇ ಅಲ್ಲ ವ್ಯವಸ್ಥೆ ತಾರತಮ್ಯರಹಿತ ಮತ್ತು ನ್ಯಾಯಬದ್ಧವೆಂದು ತೋರಿಸಲೂ ಅವರ ಇರುವಿಕೆ ಸಹಾಯ ಮಾಡುತ್ತದೆ.

ಗಡ್ಕರಿ ಮತ್ತು ಬಂಗಾರು

ಯಾವುದೇ ದಲಿತ ಬಂಗಾರು ಲಕ್ಷ್ಮಣ್ ಅವರ ಹೆಜ್ಜೆಗಳನ್ನು ಅನುಸರಿಸಬಾರದು. ಇಷ್ಟು ಹೇಳಿದ ನಂತರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಅವರಿಗಾದಂತೆ ಅಂತಹ ಸ್ಥಾನವೇರಿದರೂ ದಲಿತರು ಜಾತಿಯ ಹಿಡಿತದಿಂದ ಪಾರಾಗಲಾರರು. ಬಂಗಾರು ಲಕ್ಷ್ಮಣ್ ಬ್ರಾಹ್ಮಣ್ಯವೇ ಪ್ರಧಾನವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಎಳೆಯ ವಯಸ್ಸಿನಲ್ಲೇ ಸೇರಿದರು. ಬ್ರಾಹ್ಮಣ್ಯವೇ ಕೇಂದ್ರವಾದ ಕೇಸರಿ ಪಡೆ ತನ್ನ ಪೊಳ್ಳು ಮುಖವಾಡ ಮೆರೆಸಲು ಅತ್ಯಮೂಲ್ಯ ಉತ್ಸವಮೂರ್ತಿಯಾದರು. ದಲಿತ ಹಿತಚಿಂತನೆ ಮಾಡುವಲ್ಲಿ ಕಾಂಗ್ರೆಸ್‌ಗಿಂತ ತಾನೇನು ಕಡಿಮೆಯಿಲ್ಲ ಎಂದು ತೋರಿಸಲು ಬಿಜೆಪಿ ಆಗಸ್ಟ್ ೨೦೦೦ದಲ್ಲಿ ಅವರನ್ನು ಐದನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿತು. ಈ ಮನುಷ್ಯ ಎಂಥ ದಡ್ಡನೆಂದರೆ ಕೇವಲ ಒಂದು ಲಕ್ಷ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದರು. ಎಷ್ಟೇ ಮೂರ್ಖತನದ ನಡೆಯೇ ಆಗಿರಲಿ, ರಾಷ್ಟ್ರೀಯ ವಿರೋಧ ಪಕ್ಷದ ಅಧ್ಯಕ್ಷನಾಗಿ ಅಂಥ ಜುಜುಬಿ ಹಣ ಪಡೆಯುವಾಗ ಅವರು ಸಿಕ್ಕಿಬಿದ್ದಿದ್ದು ಹೇಗೆ? ಮತ್ತೊಬ್ಬ ದಲಿತ ನಾಯಕ ಬೇಣಿ ಪ್ರಸಾದ್ ವರ್ಮ ಒಬ್ಬ ಕ್ಯಾಬಿನೆಟ್ ಸಚಿವರಾಗಿ ಸಲ್ಮಾನ್ ಖುರ್ಷಿದ್ ತೆಗೆದುಕೊಂಡ ೭೧ ಲಕ್ಷ ಹಣ ಜುಜುಬಿ ಎಂದು ನೀಡಿದ ಹೇಳಿಕೆಯನ್ನು ನೆನಪಿಸಿಕೊಳ್ಳಿ. ಬಂಗಾರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುವಂತೆ ಒತ್ತಡ ಹೇರಲಾಯಿತು. ಕ್ರಿಮಿನಲ್ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಲಂಚ ತಡೆ ಕಾಯ್ದೆಯನ್ವಯ ೭೨ ವರ್ಷದ ಬಂಗಾರು ಲಕ್ಷ್ಮಣ್ ನಾಲ್ಕು ವರ್ಷ ಸೆರೆವಾಸ ಅನುಭವಿಸಬೇಕೆಂದು ಏಪ್ರಿಲ್ ೨೦೧೨ರಲ್ಲಿ ತೀರ್ಪು ನೀಡಿತು. ಇತ್ತೀಚೆಗೆ ವಯಸ್ಸಾಗಿರುವಿಕೆ ಮತ್ತು ಕಾಯಿಲೆಯ ನೆಪವೊಡ್ಡಿ ಅವರು ಬೇಲ್ ಪಡೆದು ಹೊರಬರಲು ಸಾಧ್ಯವಾಯಿತು.

ಲಕ್ಷ್ಮಣ್‌ಗೆ ಆಗಿದ್ದನ್ನು ಗಡ್ಕರಿ ಜೊತೆಗೆ ಹೋಲಿಸಿ ನೋಡಿ. ನಾಗ್ಪುರದ ಬ್ರಾಹ್ಮಣ ಜಮೀನ್ದಾರ ಗಡ್ಕರಿ ಲಕ್ಷ್ಮಣ್‌ಗಿಂತ ತುಂಬ ಸಣ್ಣವರು. ಅಕಸ್ಮಾತ್ ಆರ್‌ಎಸ್‌ಎಸ್ ಸೇರಿದವರು. ಆ ಸಂಘಟನೆಯ ನಾಯಕರ ಜೊತೆಗಿನ ಸಾಮೀಪ್ಯದಿಂದ ಸರಸರನೆ ಶ್ರೇಣಿಯ ಉನ್ನತ ಸ್ಥಾನಕ್ಕೇರಿದರು. ೧೯೯೫-೨೦೦೦ದಲ್ಲಿ ಮಹಾರಾಷ್ಟ್ರದ ಪಿಡಬ್ಲ್ಯುಡಿ ಮಂತ್ರಿಯಾದರು. ೨೦೦೧ರಲ್ಲಿ ಪುರ್ತಿ ಪವರ್ ಅಂಡ್ ಶುಗರ್‍ಸ್ ಎಂಬ ಕಂಪನಿ ಶುರುಮಾಡಿದರು. ಕೇಜ್ರಿವಾಲ್ ಮತ್ತವರ ಬೆಂಬಲಿಗರು ಗಡ್ಕರಿ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ನಡುವೆ, ಅದರಲ್ಲೂ ಕಳಂಕಿತ ಮಂತ್ರಿ ಅಜಿತ್ ಪವಾರ್ ಜೊತೆಗೆ, ಒಂದು ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಹೊಂದಾಣಿಕೆ ಇರುವುದನ್ನು ಪತ್ತೆಹಚ್ಚಿದಾಗ ಗಡ್ಕರಿ ಆ ಆರೋಪವನ್ನು ಸಂತೋಷದಿಂದ ಒಪ್ಪಿಕೊಂಡಂತೆ ವರ್ತಿಸಿದರು. ಖಚಿತ ನಿಲುವಿನಲ್ಲಿ ಎಲ್ಲ ಟಿವಿ ಚಾನೆಲ್ಲುಗಳಿಗೂ ಭೇಟಿಕೊಟ್ಟು ತಮ್ಮನ್ನು ವಿದರ್ಭದ ರೈತರ ಅನುಕೂಲಕ್ಕಾಗಿ ಕೆಲಸ ಮಾಡುವ ‘ಸಮಾಜವಾದಿ ಉದ್ಯಮಿ’ ಎಂದು ಕರೆದುಕೊಂಡರಲ್ಲದೆ ಎಲ್ಲ ಆರೋಪಗಳನ್ನೂ ತಳ್ಳಿ ಹಾಕಿದರು. ಅವರ ಭೂಮಿಯನ್ನು ಉಳುತ್ತಿದ್ದ ರೈತನೊಬ್ಬ ಕಾಣೆಯಾದನೆಂದು ಆತನ ಹೆಂಡತಿ ದೂರು ನೀಡಿದಾಗ ಹಾಗೂ ಇತರ ರೈತರು ಗಡ್ಕರಿ ಅವರ ಹೇಳಿಕೆಗಳನ್ನು ಅಲ್ಲಗಳೆದಾಗ ಮಾಧ್ಯಮಕ್ಕೆ ಏನೋ ಸುಳುಹು ಹತ್ತಿತು. ಅದನ್ನು ಆಳವಾಗಿ ಕೆದಕಿ ನೋಡಿದಾಗ ಅಸ್ಥಿಪಂಜರಗಳನ್ನು ತುಂಬಿದ್ದ ಪೆಟ್ಟಿಗೆಗಳು ಕಾಲಿಗೆ ತೊಡರಿದವು.

ಮಾಧ್ಯಮದ ತನಿಖಾ ವರದಿಗಳು ೧೦೦ಕ್ಕಿಂತ ಹೆಚ್ಚು ಕಂಪನಿಗಳು ಯಾವ ಹಣಕಾಸು ಮೂಲವನ್ನೂ ಹೊಂದದೆ ನೀರಿನಂತೆ ಹಣಚೆಲ್ಲಿ ನಡೆಯುತ್ತಿದ್ದ ಅತಿದೊಡ್ಡ ಮೋಸದ ಸಾಮ್ರಾಜ್ಯವನ್ನು ಪತ್ತೆ ಹಚ್ಚಿದರು. ಇಲ್ಲಿಯವರೆಗೆ ಗತ್ಯಂತರವಿಲ್ಲದೆ ಇವೆಲ್ಲ ಗೊತ್ತಿದ್ದೂ ನಿರ್ಲಕ್ಷಿಸಿ ಸುಮ್ಮನಿದ್ದ ಸರ್ಕಾರಿ ತನಿಖಾ ಏಜೆನ್ಸಿಗಳು ಈಗ ಎಚ್ಚೆತ್ತವು. ಇದ್ದಕ್ಕಿದ್ದಂತೆ ಬಿಜೆಪಿ ಮೌನವಾಯಿತು. ಬಂಗಾರು ಲಕ್ಷ್ಮಣ್ ಮೇಲೆ ರಾಜೀನಾಮೆ ನೀಡುವ ಒತ್ತಡ ಹಾಕಿದಂತೆಯೇ ಗಡ್ಕರಿಗೂ ಆಗಬಹುದೆಂದು ಎಲ್ಲರೂ ಭಾವಿಸಿದ್ದರು. ಏನೂ ಆಗಲಿಲ್ಲ. ಅದರ ಬದಲಾಗಿ ದೀರ್ಘಕಾಲದ ಮೌನ ಮುರಿದು ಬಿಜೆಪಿ ಗಡ್ಕರಿ ನೆರವಿಗೆ ಧಾವಿಸಿತು. ಬಂಗಾರುವನ್ನು ಧೂಳಿನಂತೆ ಪರಿಗಣಿಸಿದ್ದ ಪಕ್ಷವೇ ಗಡ್ಕರಿಯನ್ನು ಅವರ ಕೊಳಕಿನೊಂದಿಗೇ ಅಪ್ಪಿಕೊಂಡಿತು. ಕಾರಣ ಜಾತಿ ಗುರುತುಗಳು.

ಮುಳುಗುತ್ತಿರುವ ಗಡ್ಕರಿಯ ನೆರವಿಗಿರುವ ಕ್ಷುಲ್ಲಕ ಕಾನೂನು ಆಧಾರ ಏನೆಂದರೆ ಕಾರ್ಪೋರೇಷನ್ ಒಂದು ಕಾನೂನು ರೀತ್ಯಾ ಅದರ ಪ್ರೊಮೋಟರ್‌ಗಿಂತ ಬೇರೆ ಎನ್ನುವುದು. ಹಿಂದಿನ ದಿನದವರೆಗೂ ಪುರ್ತಿ ತನ್ನ ಸಮಾಜಮುಖಿ ಉದ್ಯಮ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ವ್ಯಕ್ತಿಯೇ ಈಗ ಇದ್ದಕ್ಕಿದ್ದಂತೆ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನತೊಡಗಿದರು. ಇದು ಅವರನ್ನು ಪಾರು ಮಾಡಬಲ್ಲುದಾದರೆ ಬಂಗಾರುವಿಗೂ ಒಂದು ಹುಲ್ಲುಕಡ್ಡಿ ಆಸರೆಗಿತ್ತು - ಅವರು ಹಣವನ್ನು ಸ್ವಂತಕ್ಕಾಗಿ ಅಲ್ಲದೆ ಪಕ್ಷಕ್ಕಾಗಿ ತೆಗೆದುಕೊಂಡಿದ್ದರು ಹಾಗೂ ತೆಗೆದುಕೊಂಡ ಕೂಡಲೇ ಅದನ್ನು ಖಜಾಂಚಿಗೆ ನೀಡಿ ಆತ ಅದಕ್ಕೆ ರಶೀತಿಯನ್ನೂ ಸಿದ್ಧಮಾಡಿದರು. ಆದರೆ ಬಂಗಾರು ಪರವಾಗಿ ಇದ್ಯಾವುದೂ ಕೆಲಸ ಮಾಡಲಿಲ್ಲ ಹಾಗೂ ಗಡ್ಕರಿ ಪರವಾಗಿ ಎಲ್ಲವೂ ಕೆಲಸ ಮಾಡಿದವು.

ಆಂತರಿಕ ವಿಷಯ

ಅತಿ ಬಲಿಷ್ಠ ಅಲ್ಪಸಂಖ್ಯಾತ ವರ್ಗ ಹಾಗೂ ಶಕ್ತಿಹೀನ ಜನಸಮುದಾಯ ಹೊಂದಿರುವ ಈ ಸಾಮಾಜಿಕ ವ್ಯವಸ್ಥೆಯೇ ಭ್ರಷ್ಟಾಚಾರದ ಆಡುಂಬೊಲವಾಗಲು ತಕ್ಕದ್ದಾಗಿರುವಾಗ ಈ ಆಧುನಿಕ ಕಾಲದಲ್ಲಿ ಭ್ರಷ್ಟಾಚಾರವು ಪ್ರಜಾಪ್ರಭುತ್ವದ ರಚನೆಗಲಲ್ಲಿ ಸಾಂಸ್ಥೀಕರಣಗೊಂಡಿದೆ. ಎಲ್ಲರಿಗೂ ಗೊತ್ತಿರುವ ಸತ್ಯವೆಂದರೆ ರಾಜಕಾರಣಿಗಳು ವಿಧಿಸಿರುವುದಕ್ಕಿಂತ ತುಂಬ ಹೆಚ್ಚು ಹಣವನ್ನು ಚುನಾವಣೆಗಾಗಿ ಖರ್ಚು ಮಾಡುತ್ತಾರೆ. ೧೯೯೯-೨೦೦೦ನೇ ಇಸವಿಯಲ್ಲಿ ಚುನಾವಣಾ ಆಯೋಗವು ಸಿದ್ಧಪಡಿಸಿದ ರಾಷ್ಟ್ರೀಯ ಚುನಾವಣಾ ಆಡಿಟ್ ವರದಿಯಂತೆ ಪ್ರತಿ ಅಭ್ಯರ್ಥಿಯೂ ಸರಾಸರಿ ೮೩ ಲಕ್ಷ ಖರ್ಚು ಮಾಡಿದ್ದಾನೆ. ಕಾನೂನು ಪ್ರಕಾರ ಮಾಡಬಹುದಾದ ಗರಿಷ್ಟ ಚುನಾವಣಾ ವೆಚ್ಚ ೧೫ ಲಕ್ಷ! ಈ ಹೆಚ್ಚುವರಿ ಹಣವನ್ನು ಕಾರ್ಪೋರೇಟ್ ಜಗತ್ತು ತನ್ನ ಅನುಕೂಲಕ್ಕಾಗಿ ಸರ್ಕಾರೀ ಯಂತ್ರ ಬಳಸಿಕೊಳ್ಳುವುದಕ್ಕೆ ಬದಲಾಗಿ ನೀಡುತ್ತದೆ. ಹೀಗೆ ಸರ್ಕಾರದ ಇಡೀ ಆಡಳಿತ ಯಂತ್ರವೇ ಭ್ರಷ್ಟಗೊಂಡರೂ ಅನುಕೂಲ ಪಡೆಯುವಲ್ಲಿ ಮಾತ್ರ ಜಾತಿ ಕೆಲಸ ಮಾಡುತ್ತದೆ.

ಆಡಳಿತ ಚುಕ್ಕಾಣಿ ಹಿಡಿದ ದಲಿತರು ಸಣ್ಣಪುಟ್ಟ ಲಂಚರುಷುವತ್ತುಗಳಲ್ಲಿ ಮುಳುಗಿದರೆ, ಯಜಮಾನಿಕೆಯನ್ನೂ ಮತ್ತು ಮೇಲ್ಮಟ್ಟದ ಅಧಿಕಾರವನ್ನೂ ಪಡೆದ ಮೇಲ್ಜಾತಿಗಳು ‘ನಿಯಮ ವಿರುದ್ಧ ಆಡಳಿತಾತ್ಮಕ ತಪ್ಪು’ಗಳಲ್ಲಿ ತೊಡಗುತ್ತವೆ. ಅದರಿಂದ ಅವರಿಗೆ ವ್ಯಕ್ತಿಗತವಾಗಿ ಲಾಭವಾಗುತ್ತ ಹೋಗುವುದಲ್ಲದೆ ಉಳಿದರಿಗೆ ನಷ್ಟವುಂಟಾಗುತ್ತದೆ. ಅಧಿಕಾರಕ್ಕಿರುವ ಜಾತಿ ಆಯಾಮವನ್ನು ಗಮನಿಸಿದರೆ ಬಂಗಾರುಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾರೆ. ಗಡ್ಕರಿಗಳು ‘ನಿಯಮ ವಿರುದ್ಧ’ ಕ್ರಿಯೆ ಎಂಬ ಹಣೆಪಟ್ಟಿಯಲ್ಲಿ ಉಳಿದುಕೊಳ್ಳುತ್ತಾರೆ. ಈ ದೇಶವನ್ನೇ ಲೂಟಿ ಹೊಡೆದು ಸೂರೆ ಮಾಡುತ್ತಿರುವ ಕಾರ್ಪೋರೇಟ್ ಭ್ರಷ್ಟಾಚಾರ ಮೇಲ್ಜಾತಿಗಳೊಂದಿಗೆ ಸ್ಪಷ್ಟವಾಗಿ ಸಂಬಂಧ ಹೊಂದಿದೆ. ರಫ್ತನ್ನು ಕೊಂಡಿರುವುದಕ್ಕಿಂತಲೂ ಕಡಿಮೆ ಎಂದು ತೋರಿಸುವುದು, ಆಮದನ್ನು ಮಾರಿದ್ದಕ್ಕಿಂತ ಹೆಚ್ಚು ಎಂದು ತೋರಿಸುವುದು, ಸುತ್ತು ಬಳಸಿ ಬಂಡವಾಳ ಹೂಡುವುದು, ಲಂಚ ರುಷುವತ್ತು, ಮೆರಿಟ್ ಪಡೆದ ಆಡಿಟರ್‌ಗಳ ಜೊತೆ ಸೇರಿ ಹೇಗೆಂದರೆ ಹಾಗೆ ಮೋಸ ಮಾಡುವುದು - ಇವೆಲ್ಲ ಮೇಲ್ಜಾತಿ ಜಾಣರ ಮೆರಿಟ್ ಕ್ರಿಯೆಗಳು. ಜನರಿಗೆ ನಿಜವೇನೆಂದು ತೋರಿಸಲು ಜಗತ್ತಿನ ಎಲ್ಲ ರಾಮಲಿಂಗರಾಜುಗಳನ್ನೇನು ಹಿಡಿದು ಜೈಲಿಗೆ ಹಾಕುವುದಿಲ್ಲ. ಬಾಬಾ ರಾಮ್ ದೇವ್ ತರಹದವರು ಸ್ವಿಸ್ ಬ್ಯಾಂಕಿನಿಂದ ಹಣ ವಾಪಸು ತರುವುದೆಂಬ ಮಾತುಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತಿರುವಾಗಲೇ ರಿಯಲ್ ಎಸ್ಟೇಟ್, ಸ್ಟಾಕ್ ಎಕ್ಸ್‌ಚೇಂಜ್, ಮತ್ತಂಥವೇ ಬಾಬ್ತುಗಳಲ್ಲಿ ತೊಡಗಿಸಿ ಅಂತರರಾಷ್ಟ್ರೀಯ ಆರ್ಥಿಕ ವಹಿವಾಟುದಾರರಿಂದ ಆ ಎಲ್ಲ ಹಣವನ್ನೂ ಹೊರಹರಿಯಬಿಡಲಾಗಿರುತ್ತದೆ. 

ಜಾತಿ ಕುರುಡು ಮಧ್ಯಮ ವರ್ಗದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ವನ್ನು ಬೆಂಬಲಿಸುತ್ತಲೇ, ಕಣ್ಣೆದುರು ಕಾಣುವುದನ್ನು ಮಾತ್ರ ಸತ್ಯವೆಂದು ಒಪ್ಪಿಕೊಳ್ಳುತ್ತ ಅದರ ಅದೃಶ್ಯ ರೂಪಗಳನ್ನು ಅವರು ಗ್ರಹಿಸಲಾರದೇ ಹೋಗಿರುವರೆಂದು ಹೇಳಬೇಕಾಗಿದೆ. ಬಂಗಾರುಗಳನ್ನು ಶಿಕ್ಷಿಸಲೇಬೇಕು, ಆದರೆ ಗಡ್ಕರಿಗಳನ್ನು ಶಿಕ್ಷೆಯಿಲ್ಲದೆ ಹಾಗೇ ಬಿಟ್ಟುಬಿಡಬಹುದೆ? ಭಾರತದಲ್ಲಿ ಭ್ರಷ್ಟಾಚಾರವು ಜಾತಿಯಿಂದ ಹೊರತಾಗಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನವು ಅರ್ಥ ಮಾಡಿಕೊಳ್ಳಲೇಬೇಕಾಗಿದೆ. 

Thursday, December 27, 2012

ಅತ್ಯಾಚಾರ ಮತ್ತೂ..
ಸಣ್ಣ ಕತೆದೂರದಿಂದ ಸಾಮೂಹಿಕ ಅತ್ಯಾಚಾರವಾದ ಸುದ್ದಿ ಬಂದಿತು
ಆ ಮನೆಯಲ್ಲಿ ಕೋಲಾಹಲ. ಆ ಮನೆಯ ಯಜಮಾನತಿಗೆ ವಿಪರೀತ ಸಿಟ್ಟು ಬಂದು ಕೂಗಾಡಿದಳು. ಘಟನೆಯ ಪೂರ್ವಾಪರ ತಿಳಿದಾಗ ಸಹಜವಾಗಿಯೇ ಅವಳ ಒಡಲು ಕುದಿಯತೊಡಗಿತು. ರಾಜಕೀಯ ಸಂಪರ್ಕ ತಿಳುವಳಿಕೆ ಇದ್ದವಳು ಈಗ ಸುಮ್ಮನಿದ್ದರೆ ಹೇಗೆಂದು ಸುತ್ತಮುತ್ತ ಇರುವ ಮಹಿಳೆಯರನ್ನು ಸೇರಿಸಿ ಪ್ರತಿಭಟನೆಗಿಳಿದಳು. ಆ ಊರಿನ ಜನರೂ ಅವಳನ್ನು ಬೆಂಬಲಿಸಿದರು.. ಸಣ್ಣ ಮಗು ಮೇಲೆ ಒಮ್ಮೊಮ್ಮೆ ಮುದುಕಿಯ ಮೇಲೆ ಹೀಗೆ ಅತ್ಯಾಚಾರದ ಸುದ್ದಿ ಕೇಳಿದಾಗಲೆಲ್ಲ ಊರಬೀದಿಯಲ್ಲಿ ಅವಳ ಕೂಗು ಕೇಳತೊಡಗಿತು

ಅವಳ ಚಟುವಟಿಕೆ ಗಮನಿಸುತ್ತಿದ್ದ ಅವಳಿರುವ ರಾಜಕೀಯ ಪಕ್ಷ ಆಕೆಯನ್ನು ಸಭೆಗಳಿಗೆ ಹೆಚ್ಚೆಚ್ಚು ಆಹ್ವಾನಿಸತೊಡಗಿತು. ಬೈಠಕ್ ಗಳಿಗೆ ಕಳಿಸತೊಡಗಿತು. ಇಷ್ಟೆಲ್ಲ ಆಗುವ ಹೊತ್ತಿಗೆ ಅವಳಿರುವ ಬೀದಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದ್ದವು. ಸೇನೆಯ ಹೆಸರಿನಲ್ಲಿ ಗುಂಪು ಗುಂಪಾಗಿ ಹುಡುಗರು ಅವಳ ಮನೆಯಲ್ಲಿಯೇ ಸೇರತೊಡಗಿದರು. ದೇಶಪ್ರೇಮ ದೇಶದ್ರೋಹದ ಪಾಠಗಳಾದ ಮೇಲೆಯೂ ಊರು ಶಾಂತವಾಗಿಯೇ ಇತ್ತು..

ಯಾವುದೊ ಊರಿನಲ್ಲಿ ಧರ್ಮ ಕಲಹವೆದ್ದ ಸುದ್ದಿ ಈ ಊರಿಗೂ ತಲುಪಿದಾಗ ಸೇನೆ ಹುಡುಗರೆಲ್ಲ ಅವಳ ಮನೆಯಲ್ಲಿಯೇ ಸೇರಿದ್ದರು. ಗುಟ್ಟು ಗುಟ್ಟಿನ ಮಾತುಕತೆಗಳಾದವು. ಅವಳ ಬೆಳೆದ ಮಗಳೂ ಅವರೊಂದಿಗಿದ್ದಳು.

ಸಂಜೆಹೊತ್ತು ಆ ಊರಿನಲ್ಲಿಯೂ ಗಲಾಟೆ ಸುರುವಾಯಿತು. ಕಾಯಿಪಲ್ಲೆ ಮಾರುಕಟ್ಟೆ ಮೇಲೆ ಹಿಡಿತವಿದ್ದ ದುಡಿದು ಬದುಕುವ ಬಾಗವಾನರು ಇರುವ ಓಣಿಗೆ ಬೆಂಕಿ ಬಿದ್ದು ಬೆಂಕಿಯ ಕೆನ್ನಾಲಿಗೆ ಇಡೀ ಊರಿಗೆ ಚಾಚುವಂತೆ ಹರಡತೊಡಗಿತು. ಅದನ್ನೆಲ್ಲ ನೋಡಲು ಅವಳು ಮನೆಯ ಮಾಳಿಗೆ ಹತ್ತಿದಳು. ಊರ ತುಂಬ ಚೀರಾಟ .. ಅಳು ಆಕ್ರಂದನ. ಧಗಧಗ ಉರಿವ ಬೆಂಕಿಯ ಜ್ವಾಲೆ. ಅದನ್ನೆಲ್ಲ ನೋಡುತ್ತ ಅವಳ ತುಟಿಯಲ್ಲಿ ನಗು ಮೂಡುತ್ತಿರುವಾಗಲೆ ಅವಳ ಮೊಬೈಲ್ ಸದ್ದು ಮಾಡಿತು. ತಗೆದು ಕಿವಿಗಿಟ್ಟುಕೊಂಡರೆ ಆ ಕಡೆ ಪರಿಚಿತ ದನಿ . ಆ ಅಂಗಡಿ ಲೂಟಿಯಾಯಿತು.. ಅಲ್ಲಿ ಬೆಂಕಿ ಬಿತ್ತು. ಹತ್ತು ಸಾಬರ ಹೆಂಗಸರನ್ನು ... ಅದನ್ನು ಕೇಳುತ್ತಲೇ ಅವಳ ಮುಖ ಇನ್ನಷ್ಟು ಅರಳಿತು. ಎಂತೆಂಥ ಧರ್ಮ ಲಂಡರನ್ನು ಹೆತ್ತಿದ್ದಾರೆ ಅವರಿಗೆ ಹಂಗೇ ಆಗಬೇಕು ಅದೇ ತಕ್ಕ ಶಾಸ್ತಿ ಎನಿಸಿತು. ಖುಷಿ ಉಕ್ಕಿ ಚಪ್ಪಾಳೆ ತಟ್ಟಿದಳು ತುಸು ಕುಣಿದಾಡಿ ಬಿಟ್ಟಳು

ಮಗಳು ನೆನಪಾದಳು. ಕೆಳಗಿದ್ದ ಮಗಳಿಗೆ ಇದನ್ನು ಹೇಳಿ ತನಗಾದ ಸಂತೋಷವನ್ನು ಹಂಚಿಕೊಳ್ಳಬೇಕೆನಿಸಿತು. ಮಾಳಿಗೆಯಿಂದ ಇಳಿದುಬಂದಳು.. ಹಾಲ್ ನಲ್ಲಿ ಮಗಳು ಕಾಣಲಿಲ್ಲ. ಒಮ್ಮೆ ಮಗಳೆ ಎಂದಳು. ಓಗೊಡುವ ಯಾವ ಸದ್ದೂ ಕೇಳಿಬರಲಿಲ್ಲ. ಈ ಗಲಾಟೆಯಲ್ಲಿ ಎಲ್ಲಿ ಹೋದಳೆಂದು ಅವಸರಿಸಿ ಒಳಕೋಣೆಯಲ್ಲಿ ಇಣುಕಿದಳು. ಆ ದೃಶ್ಯ ನೋಡಿ ಅವಳ ಕಣ್ಣಿಗೆ ಕತ್ತಲಿಟ್ಟಿತು. ಮಂಚದ ಮೇಲೆ ಬೆತ್ತಲೆ ಮಗಳು. ಗಾಯಗೊಂಡು ಸಣ್ಣಗೆ ನರಳುತ್ತಿದ್ದಾಳೆ. ಕೋಣೆಯ ತುಂಬ ಬಟ್ಟೆಗಳು ಅಸ್ತವ್ಯಸ್ತವಾಗಿ ಬಿದ್ದುಬಿಟ್ಟಿವೆ. ಅಸ್ತವ್ಯಸ್ತ  ಬಟ್ಟೆಗಳ ಅ ನಡುವೆ ಸೇನೆಯ ಶಾಲೂ ಸೇರಿದ್ದವು.. ಅದನ್ನೆಲ್ಲ ನೋಡುತ್ತ ಗಂಟಲು ಕಟ್ಟಿ ಮಗಳೇ ಎಂದು ಕೂಗುತ್ತ ಕಸಿದುಬಿದ್ದಳು

ಮರುದಿನ ಪೇಪರಿನಲ್ಲಿ ವಿಸ್ತಾರ ವರದಿ ಬಂದಿತು.. ಹಿಂದು ಹುಡುಗಿಯ ಮಾನಭಂಗದ ಪ್ರಕರಣದಲ್ಲಿ ಮುಸ್ಲಿಂ ಹುಡುಗರ ಬಂಧನ ಸೇರಿದಂತೆ ವಿವರವಾದ ಸುದ್ದಿಗಳು ಪ್ರಕಟವಾಗಿದ್ದವು

Tuesday, December 25, 2012

ಇಬ್ಬನಿಗಳಂಥಾ ನೆನಪುಗಳು


1

ಬಚ್ಚಿಡುವ ಆಸೆಯಲಿ
ತಂಪನೆ ಗೂಡಿನಲಿ
ನಿನ್ನ ನೆನಪು
ಮಗುವಂತೆ ಮಲಗಿರಲು,
ಬೆಳದಿಂಗಳ ಬೆಳಕು ಜೊತೆಗೊಂದು
ನವಿಲುಗರಿಯಂಥಾ
ತುಂಟ ಕನಸು...
***
2

ಒಂದು ಚಿಟ್ಟೆ ಸತ್ತಿತ್ತು
ಆ ಪುಟ್ಟಿ
ಅಳುತ್ತಾ ಮಣ್ಣಲಿ
ಮುಚ್ಚಿ ಮಲಗಿಸಿದಳು
ಒಂದು ಹೂವನಿಟ್ಟು ನೇವರಿಸಿದಳು...
***
3

ನಾ ಬರೆದ ಕವನದ ಹಾಳೆ
ಆ ಪುಟ್ಟ ಮಗುವಿನ
ಪುಟ್ಟ ದೋಣಿಯಾಯಿತು...
ನನ್ನ ಕವನದ ಪ್ರಕಾಶಕನಿಗೆ
ಆಭಾರಿ ನಾನಿಂದು...
***
4

ಇದೇ ಇರಬೇಕು ಕವಿತೆ
ಅವಳು ಬಂದು ಹೋದಾಗಲೆಲ್ಲಾ ಮೂಡುತ್ತಿದ್ದ ಹೆಜ್ಜೆಗುರುತಂಥ ಸಾಲುಗಳು, ಸಾಕ್ಷಿಯಾದವು ನೆನಪುಗಳಿಗೆ...

-ಮೋಹನ ಮೋದ
 

ಸಾವಿನ ಗುಟ್ಟು

`ಅರಬ್ ಜಗತ್ತಿನ' ಹೆಣ್ಣು ಮಕ್ಕಳ ಕವಿತೆಗಳ ಅನುವಾದ ಫ್ರಂಚ್ ಮತ್ತು ಇಂಗ್ಲಿಶ್ ಭಾಷೆಯಿಂದ -ಎಂ.ಆರ್. ಕಮಲಾ

 
 
  -ಎತೆಲ್ ಅದ್ನಾನ್ 
 ಅನುವಾದ:ಎಂ.ಆರ್. ಕಮಲಾ
 

ಬೆಟ್ಟದಡಿಯ
ಕಲ್ಲು ಬಂಡೆಗಳ ನಡುವೆ
ಸಾಯಲೆಂದು ಚಿಟ್ಟೆಯೊಂದು ಬಂತು!
ಬೆಟ್ಟ ತನ್ನ ನೆರಳನ್ನು ಚೆಲ್ಲಿ ಸಾವಿನ ಗುಟ್ಟನ್ನು
ಮುಚ್ಚಿಟ್ಟು ಬಿಟ್ಟಿತು!
 

Monday, December 24, 2012

ವ್ಯಾಪಾರ

ಸಣ್ಣ ಕತೆ
ಬಿ.ಎಂ.ಬಶೀರ್


ಅವಳು ತನ್ನ ಆಗಷ್ಟೇ ಹುಟ್ಟಿದ ಕೂಸನ್ನು ಹಿಡಿದು ಕೇಳಿದಳು ‘‘ಸ್ವಾಮಿ, ಒಂದು ಸಾವಿರ ರೂಪಾಯಿ ಕೊಡಿ...ಕೂಸು ಕೊಡ್ತೇನೆ...’’
‘‘ತುಂಬಾ ಜಾಸ್ತಿಯಾಯಿತು’’
‘‘ಹಾಗಾದ್ರೆ 500 ರೂ. ಕೊಡಿ ಸಾಮಿ’’
‘‘ಅದೂ ಜಾಸ್ತಿಯಾಯಿತು...’’
‘‘ನೂರು ರೂ. ಕೊಡಿ ಸಾಮಿ’’
‘‘ಊಹುಂ...ಅದೂ ಜಾಸ್ತಿಯಾಯಿತು...’’
‘‘ಹಾಗಾದ್ರೆ...ಮಧ್ಯಾಹ್ನ ಊಟ ಕೊಡಿ...ಮಗು ಕೊಡ್ತೀನಿ...’’
‘‘ಊಹುಂ....’’
‘‘ಸರಿ...ಹಂಗಾರೆ...ಈ ಮಗುವಿಗಾದರೂ ಹಾಲು ಕುಡಿಸಿ...ತಗೊಂಡೋಗಿ...’’

ಕರಿಬೊಟ್ಟುಚಿತ್ರ ಕವನ


Krishna Giliyarಡಾ. ಜಿ. ಕೃಷ್ಣ

ಬಿದ್ದ ಕರಿಬೊಟ್ಟು
ಅಳಿಸಲಾಗದ ಶಾಯಿಯಿಂದಿರಲಾರದು
ಮುಳ್ಳುಕೋಲಿನಿಂದ
ಉಜ್ಜಿತೆಗೆಯೋಣ
ರಕ್ತ ಒಸರೀತು
ಅದನ್ನೂ ಬಳಸೋಣ.
ಬಿದ್ದ ಕರಿಬೊಟ್ಟು 
ಅಳಿಸಲಾಗದ ಶಾಯಿಯಿಂದಿರಲಾರದು
ಮುಳ್ಳುಕೋಲಿನಿಂದ
ಉಜ್ಜಿತೆಗೆಯೋಣ
ರಕ್ತ ಒಸರೀತು
ಅದನ್ನೂ ಬಳಸೋಣ.

ದಿಲ್ಲಿ ಸಾಮೂಹಿಕ ಅತ್ಯಾಚಾರ : ಮಾನಗೇಡಿಗಳ ಮೌನ


 

ವಾರ್ತಾಭಾರತಿ ಸಂಪಾದಕೀಯ


ಸಾಮೂಹಿಕ ಅತ್ಯಾಚಾರದ ವಿರುದ್ಧ ದಿಲ್ಲಿ ದಂಗೆ ಎದ್ದಿದೆ. ಅಥವಾ ಸದ್ಯದ ಪ್ರತಿಭಟನೆ ಅಂತಹದೊಂದು ವಾತಾವರಣವನ್ನು ಸೃಷ್ಟಿಸಿದೆ. ಅತ್ಯಾಚಾರಕ್ಕಾಗಿ ದೇಶದಲ್ಲಿ ಈ ಪರಿ ಜನರು ಒಂದಾಗಿ ನಿಂತುದು, ಸರಕಾರದ ವಿರುದ್ಧ ಧ್ವನಿಯೆತ್ತಿದುದು ಇದೇ ವೊದಲ ಬಾರಿ ಯಾಗಿರಬಹುದೇನೋ. ಅದರರ್ಥ ಈ ದೇಶದಲ್ಲಿ ಈವರೆಗೆ ಇಂತಹ ಬರ್ಬರ ಅತ್ಯಾಚಾರ ನಡೆದುದು ಇಲ್ಲ ಎಂದಲ್ಲ. ಈವರೆಗೆ ನಡೆದ ಅತ್ಯಾಚಾರಕ್ಕೆ ಸಮಾಜ ಕೆಲವು ಚೌಕಟ್ಟುಗಳನ್ನು ಹಾಕಿ ನೋಡುತ್ತಿತ್ತು. ಉದಾಹರಣೆಗೆ ಗುಜರಾತಿನಲ್ಲಿ ನಡೆದದ್ದು ಮುಸ್ಲಿಮರ ಮೇಲೆ ಅತ್ಯಾಚಾರ. ಅವರೇನೂ ಮೆಡಿಕಲ್ ಸ್ಟೂಡೆಂಟ್‌ಗಳೋ ಅಥವಾ ನ್ಯೂಇಯರ್ ಪಾರ್ಟಿ ಮುಗಿಸಿಕೊಂಡು ಬರುತ್ತಿರುವವರೋ ಆಗಿರಲಿಲ್ಲ. ಇಷ್ಟಕ್ಕೂ ಅಲ್ಲಿ ನಡೆದುದು ಒಂದಿಬ್ಬರ ಮೇಲೆ ಅತ್ಯಾಚಾರವಲ್ಲ. ನೂರಾರು ಹೆಣ್ಣು ಮಕ್ಕಳ ಮೇಲೆ ಬರ್ಬರ ಅತ್ಯಾಚಾರ ನಡೆಸಿ ಕೊಂದು ಹಾಕಲಾಯಿತು. ಅವುಗಳು ದಂಗೆ, ಹತ್ಯಾಕಾಂಡ ಎಂಬಿತ್ಯಾದಿ ತಲೆಬರಹಗಳ ಕೆಳಗೆ ವರದಿಯಾಗಿರುವುದರಿಂದ, ಅಲ್ಲಿ ಅತ್ಯಾಚಾರ ಒಂದು ದೊಡ್ಡ ಸುದ್ದಿಯೇ ಆಗಲಿಲ್ಲ. ವಿಶೇಷವೆಂದರೆ, ಆ ಘಟನೆಯನ್ನು, ಹಿಂದುತ್ವದ ಪುನರುತ್ಥಾನ ಎಂದು ಅಲ್ಲಿನ ಮುಖ್ಯಮಂತ್ರಿ ಕರೆದಿದ್ದರು. ಅವರೀಗ ಮೂರನೆ ಬಾರಿ ಆಯ್ಕೆಯಾಗಿದ್ದಾರೆ. ದಿಲ್ಲಿ ಅತ್ಯಾಚಾರದ ಕುರಿತಂತೆ ಗುಲ್ಲೆಬ್ಬಿಸುತ್ತಿರು ವಾಗಲೇ, ಮೋದಿಯವರನ್ನು ಈ

ದೇಶದ ಪ್ರಧಾನಮಂತ್ರಿಯಾಗಿ ಬಿಂಬಿಸುವ ಪ್ರಯತ್ನ ವನ್ನೂ ಕೆಲವು ಹಿತಾಸಕ್ತಿಗಳು ನಡೆಸುತ್ತಿವೆ. ಬಹುಶಃ ಬರ್ಬರ ಅತ್ಯಾಚಾರಕ್ಕೆ ಗುಜರಾತ್ ಮತ್ತು ಖೈರ್ಲಾಂಜಿ ಅತಿ ಭಯಾನಕ ಉದಾಹರಣೆಗಳು. ಖೈರ್ಲಾಂಜಿಯಲ್ಲಿ ನಡೆದ ಅತ್ಯಾಚಾರ ಇಡೀ ಜಗತ್ತೇ ತಲೆ ತಗ್ಗಿಸುವಂತಿತ್ತು. ದಲಿತ ಹೆಣ್ಣು ಮಕ್ಕಳು ಶಾಲೆ ಕಲಿಯುವುದೇ ಅಲ್ಲಿನ ಮೇಲ್ವರ್ಗದ ಆಕ್ರೋಶಕ್ಕೆ ಕಾರಣವಾಗಿ, ಅವರದನ್ನು ಅತ್ಯಾಚಾರ ಮತ್ತು ಕೊಲೆಯ ಮೂಲಕ ತೀರಿಸಿಕೊಂಡರು.  ಸಾಮೂಹಿಕವಾಗಿ ಅತ್ಯಾಚಾರಗೈದು ತಾಯಿ ಮಕ್ಕಳ ದೇಹಗಳನ್ನು ಯಾವುದೋ ಕಾಲುವೆಯ ಪಕ್ಕ ಎಸೆದಿದ್ದರು.

ಆಗ ದಿಲ್ಲಿಯ ಜನರಿಗೆ ಅತ್ಯಾಚಾರಕ್ಕೊಂದು ಕಾನೂನು ಬೇಕು ಅನ್ನಿಸಿರಲಿಲ್ಲ. ರಾಮ್‌ದೇವ್ ರಂತಹ ಯೋಗಿಗಳಿಗೆ ಅದು ಪ್ರತಿಭಟಿಸ ಬೇಕಾದ ವಿಷಯ ಎಂದೂ ತಿಳಿದಿರಲಿಲ್ಲ. ಅದೃಷ್ಟವಶಾತ್ ಈ ಬಾರಿಯಾದರೂ ಜನರು ಎಚ್ಚೆತ್ತುಕೊಂಡಿದ್ದಾರೆ. ಒಂದು ವೇಳೆ ಅವಳು ಜೋಪಡಾ ಪಟ್ಟಿಯ ಹುಡುಗಿಯಾಗಿದ್ದರೆ ಕೂಗು ಇಷ್ಟು ಎತ್ತರವನ್ನು ಮುಟ್ಟುತ್ತಿತ್ತೇ ಎನ್ನುವ ಪ್ರಶ್ನೆಯನ್ನು ನಾವು ಮತ್ತೆ ಮತ್ತೆ ಕೇಳಿಕೊಳ್ಳುವ ಅಗತ್ಯವಿಲ್ಲ. 

ಯಾಕೆಂದರೆ, ಈ ದೇಶದಲ್ಲಿ ಕೆಲವರ ಜೀವ, ಕೆಲವರ ಮಾನ ಒಂದಿಷ್ಟು ವಿಶೇಷ ಮಾನ್ಯತೆಯನ್ನು ಪಡೆದಿರುತ್ತದೆ. ಆದುದರಿಂದ, ಅತ್ಯಾಚಾರ ನಡೆಸಿದ ಜನರು ಯಾರು, ಅತ್ಯಾಚಾರ ಕ್ಕೊಳಗಾದ ಜನರು ಯಾರು? ಎಲ್ಲಿ? ಹೇಗೆ? ಎನ್ನುವುದು ಮುಖ್ಯವಾಗುತ್ತದೆ. ಬಿಹಾರದ ಯಾವುದೇ ಗ್ರಾಮೀಣ ಪ್ರದೇಶದಲ್ಲಾದರೆ ಅದು ವಿಶೇಷವಾಗಬೇಕಾಗಿಲ್ಲ. ದಿಲ್ಲಿಯಲ್ಲಿ, ನಗರಪ್ರದೇಶದಲ್ಲಿ ಒಂದಿಷ್ಟು ಉನ್ನತ ನಾಗರಿಕರ ಮೇಲೆ ಅತ್ಯಾಚಾರ ನಡೆದಾಗ ಅದು ರಾಜಕೀಯ ರೂಪ ಪಡೆದುಕೊಳ್ಳುತ್ತದೆ.
ಅದೇನೇ ಇರಲಿ, ಈ ಕಾರಣಕ್ಕಾದರೂ ಈ ದೇಶದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಗಳು ಪ್ರತಿಭಟನೆಗೆ ಯೋಗ್ಯವಾದ ವಿಷಯ ಎಂದು ಅನ್ನಿಸಿರುವುದು ನಾಗರಿಕ ಸಮಾಜದ ಪುಣ್ಯ-ಎರಡು ದಿನಗಳಿಂದ ದಿಲ್ಲಿಯಲ್ಲಿ ವಿದ್ಯಾರ್ಥಿಗಳು, ಯುವಕರು ಈ ಅತ್ಯಾಚಾರವನ್ನು ಪ್ರತಿಭಟಿಸಿ ಗದ್ದಲ ಎಬ್ಬಿಸಿದ್ದಾರೆ. ನಿನ್ನೆಯಂತೂ ಹಿಂಸಾಚಾರ ಸಂಭವಿಸಿ ಬಿಟ್ಟಿತು. ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ, ರಾಮ್ ದೇವ್ ಮತ್ತು ಅವರ ಬಳಗದ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ. ಸದ್ಯಕ್ಕೆ ಈ ಪ್ರತಿಭಟನೆಗೆ ರಾಮ್‌ದೇವ್ ಬಳಗ, ಕೇಜ್ರಿವಾಲ್ ಬಳಗವೂ ಸೇರಿಕೊಂಡಿದ್ದು, ಇನ್ನಷ್ಟು ಭೀಕರವಾಗುವ ಸೂಚನೆಯನ್ನೂ ನೀಡಿದೆ.

ಆದರೆ ಸರಕಾರ ಎಂದಿನಂತೆಯೇ ತನಿಖೆ, ತಂಡ ಎಂಬಿತ್ಯಾದಿಯಾಗಿಯೇ ಕಾಲಕಳೆಯು ತ್ತಿದೆಯೇ ಹೊರತು, ಅದಕ್ಕೆ ಒಟ್ಟು ಪ್ರಕರಣದ ಗಂಭೀರತೆ ಅರ್ಥವಾದಂತಿಲ್ಲ. ಆದುದರಿಂದಲೇ, ಪ್ರತಿಭಟನೆಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಲು ಹವಣಿಸುತ್ತಿದೆ. ಈ ಮೂಲಕ ಒಟ್ಟು ವಾತಾವರಣವನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದೆ. ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಅದಕ್ಕೊಂದು ಗಟ್ಟಿಯಾದ ಕಾನೂನನ್ನು ಮಾಡಲು ಇದು ಒಳ್ಳೆಯ ಅವಕಾಶ. ಈ ಸಂದರ್ಭದಲ್ಲಿ ಎಲ್ಲ ಪಕ್ಷೀಯರು ಜೊತೆಗೂಡಿದ್ದಾರೆ ಮಾತ್ರವಲ್ಲ, ಈ ಕುರಿತಂತೆ ಕಾನೂನನ್ನು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆಯುವುದಕ್ಕೆ ಬಿಜೆಪಿಯೂ ಆಸಕ್ತಿವಹಿಸಿದೆ.
ರಾಷ್ಟ್ರಪತಿಯನ್ನೂ ಸಂಪರ್ಕಿಸಿದೆ. ಯುಪಿಎ ಸರಕಾರ ಇದಕ್ಕೆ ಮನ್ನಣೆ ನೀಡಿ, ವಿಶೇಷ ಚರ್ಚೆಯನ್ನು ನಡೆಸಲು ಮುಂದಾದರೆ ಅದರಿಂದ ಭಾರತಕ್ಕೂ ಒಂದು ಘನತೆಯಿದೆ. ಮಹಿಳೆಯನ್ನು ದೇವತೆಯೆಂದು ನಂಬುವ ದೇಶದಲ್ಲಿ ಇಷ್ಟಾದರೂ ಆಗದಿದ್ದರೆ ಈ ಸರಕಾರ ಇದ್ದರೆಷ್ಟು, ಬಿದ್ದರೆಷ್ಟು? ಸರಕಾರ ತನ್ನ ಮಾನಗೇಡಿ ಮೌನವನ್ನು ಕಳಚಿಕೊಂಡು, ಇನ್ನಾದರೂ ಸ್ಪಷ್ಟ ಧ್ವನಿಯಲ್ಲಿ ಮಾತನಾಡಬೇಕಾಗಿದೆ.

ದಲಿತರ ಭಾವನೆಗಳ ಜೊತೆ ಚೆಲ್ಲಾಟವಾಡಿದ ಬಾಳಾಠಾಕ್ರೆ


ರಘೋತ್ತಮ ಹೊ.ಬ.
ಚಾಮರಾಜನಗರ

ಚಾಮರಾಜನಗರ ಬಾಳಾಠಾಕ್ರೆಯನ್ನು ಎಲ್ಲರೂ ಮುಸ್ಲಿಂ ವಿರೋಧಿ, ಬಿಹಾರಿಗಳ ವಿರೋಧಿ, ಕನ್ನಡಿಗರ ವಿರೋಧಿ ಹಾಗೆ ಹೀಗೆ ಎಂದೇ ಬಿಂಬಿಸುತ್ತಾರೆ. ಆದರೆ ಠಾಕ್ರೆಯೊಳಗಿದ್ದ ದಲಿತ ವಿರೋಧಿ, ಆ ಹಿಂದೂ ಸಾಮ್ರಾಜ್ಯಶಾಹಿಯ ಆ ಹಮ್ಮು, ಅಸ್ಪಶ್ಯತಾ ಚರಣೆಯ ಆ ಹೆಪ್ಪುಗಟ್ಟಿದ ರಕ್ತ? ಹೌದು, ಮುಂಬೈನಲ್ಲಿ ಇನ್ನಿಲ್ಲವಾದ ಬಾಳಾಠಾಕ್ರೆ (ಕೆಲವರು ಹೇಳುವ ಹಾಗೆ ಹುಲಿ)ಯ ಬೇಟೆಯ ಪ್ರಮುಖ ಬಲಿಪಶುಗಳು ದಲಿತರು.  Infact ದಲಿತರನ್ನು violent ಆಗಿ ವಿರೋಧಿಸಲೆಂಬಂತೆಯೇ ಬಾ deadly gangwar ಠಾಕ್ರೆ ತನ್ನ ಶಿವಸೇನೆ ಕಟ್ಟಿದ್ದು! ಹೌದು, 70ರ ದಶಕದಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌ (ದಲಿತ ಚಿರತೆಗಳು) ಕಾರ್ಯ ಕರ್ತರಿಗೂ, ಶಿವಸೇನೆಯ ಕಾರ್ಯಕರ್ತರಿಗೂ ನಡೆದ Infact violentಗಳು ಠಾಕ್ರೆಯ ರಕ್ತಸಿಕ್ತ ರಾಜಕಾರಣದ ಪ್ರಾರಂಭವಷ್ಟೆ. 1974ರಲ್ಲಿ ದಲಿತ ನಾಯಕ ಭಾಗವತ್ ಜಾಧವ್‌ರನ್ನು ಕ್ರೂರವಾಗಿ ಕೊಲ್ಲಿಸುವ ಮೂಲಕ ಠಾಕ್ರೆಯ ಈ ಅಧ್ಯಾಯ ಪ್ರಾರಂಭವಾಯಿತು. ಅದು ಎಂತಹ ಅಧ್ಯಾಯವೆಂದರೆ ದಲಿತ ಪ್ಯಾಂಥರ್ಸ್‌ ಮತ್ತು ಶಿವಸೇನೆಯ ಕಾರ್ಯಕರ್ತರು ಮುಂಬೈಯ ಬೀದಿಬೀದಿಗಳಲ್ಲಿ ಚಾಕು, ಕಲ್ಲು ತೂರಾಟದ ಮೂಲಕ ಪರಸ್ಪರ ಹಿಂಸಾತ್ಮಕವಾಗಿ ಕಾದಾಡುವ ಮಟ್ಟಕ್ಕೆ ಇಳಿಯುವ ಮಟ್ಟಿಗೆ. 


ಹೆಸರು ಹೇಳಲಿ ಚ್ಛಿಸದ ಆ ಕಾಲದ ದಲಿತ ಮುಖಂಡರೊಬ್ಬರು ಹೇಳುವ ಹಾಗೆ ಆ ಕಾಲದಲ್ಲಿ ದಲಿತ ಪ್ಯಾಂಥರ್ಸ್‌ ಮತ್ತು ಶಿವಸೇನೆಯ ಈ ಕಾದಾಟಕ್ಕೆ ಮುಂಬೈ ಮಹಾನಗರ ಕೆಲದಿನಗಳ ಮಟ್ಟಿಗೆ ಅಕ್ಷರಶಃ ಸ್ತಬ್ಧವಾಗಿತ್ತು! ಭಗವತ್ ಜಾಧವರ ಸಾವಿಗೆ ಸೇಡು ತೀರಿಸಿಕೊಳ್ಳಲು ಕಾದಿದ್ದ ದಲಿತ ಪ್ಯಾಂಥರ್ಸ್‌ ಕಾರ್ಯಕರ್ತರು ಇಡೀ ಮುಂಬೈ ನಗರವನ್ನೇ ತಮ್ಮ ವಶಕ್ಕೆ ಪಡೆದಿದ್ದರು! ಈ ಸಮಯದಲ್ಲಿ ಮಹಾರಾಷ್ಟ್ರ ಸರಕಾರ ಬಾಬಾಸಾಹೇಬ್ ಅಂಬೇಡ್ಕರರ ಹಿಂದೂ ಧರ್ಮದ ಒಗಟುಗಳು ಕೃತಿಯನ್ನು ಪ್ರಕಟಿಸಲು ಮುಂದಾದಾಗ ಉರಿಯುವ ಬೆಂಕಿಗೆ ತುಪ್ಪಸುರಿಯಲೆಂಬಂತೆ ಠಾಕ್ರೆ ಅದರ ವಿರುದ್ಧವೂ ದನಿ ಎತ್ತಿದ್ದ! 

ರೊಚ್ಚಿಗೆದ್ದ ಪ್ಯಾಂಥರ್ಸ್‌ ಹುಡುಗರು ಠಾಕ್ರೆಯ ವಿರುದ್ಧ ಬುಸುಗುಡಲಾರಂಭಿಸಿದ್ದರು. ಖಂಡಿತ, ಆ ಸಂಧರ್ಭದಲ್ಲಿ ಹೆಚ್ಚು ಕಮ್ಮಿಯಾಗಿದ್ದಿದ್ದರೆ ಪರಸ್ಪರ ಬಣದ ಸಾವಿರಾರು ಕಾರ್ಯಕರ್ತರು, ನಾಗರಿಕರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು. ಇಂತಹದಕ್ಕೆ ಅವಕಾಶ ಕೊಡಬಾರದು ಎಂದು ದಲಿತ ಮುಖಂಡರು ಠಾಕ್ರೆಯನ್ನು ಖುದ್ದು ಭೇಟಿಮಾಡಿ ಹೇಳಿದಾಗಲೆ ಪರಿಸ್ಥಿತಿ ತಿಳಿಯಾದದ್ದು.  ಅಂದಹಾಗೆ ದಲಿತ ಚಳವಳಿಯ ಕಾರ್ಯಕರ್ತರ ಮೇಲೆ, ಬಾಬಾಸಾಹೇಬ್ ಅಂಬೇಡ್ಕರರ ಮೇಲೆ ಠಾಕ್ರೆಯ ಸಿಟ್ಟು ಇದಿಷ್ಟಕ್ಕೆ ಕಮ್ಮಿಯಾಗಲಿಲ್ಲ.

1980ರ ಸಮಯದಲ್ಲಂತೂ ದಲಿತರ ಮನೆಗಳ ಮೇಲೆ ದಾಳಿ ಮಾಡುವಂತೆ, ಕಂಡಕಂಡಲ್ಲಿ ಸುಡುವಂತೆ ಠಾಕ್ರೆ ತನ್ನ ಕಾರ್ಯಕರ್ತರಿಗೆ ಅಜ್ಞಾಪಿಸಿದ. ದುರಂತವೆಂದರೆ ಅಂದಿನ ಆಡಳಿತಾರೂಢ ಕಾಂಗ್ರೆಸ್ ಠಾಕ್ರೆಯ ಇಂತಹ ಹೀನ ಕೃತ್ಯಗಳಿಗೆಲ್ಲ ಬೆಂಗಾವಲಾಗಿತ್ತು.ಇನ್ನು ಮರಾಠವಾಡ ವಿ.ವಿ.ಗೆ ಅಂಬೇಡ್ಕರ್ ಹೆಸರಿಡಬೇಕೆಂದು ನಡೆಸಿದ ಹೋರಾಟವಂತೂ ಎಂಥವರನ್ನು ಬೆಚ್ಚಿಬೀಳಿಸುವಂಥದ್ದು. ವಿಶ್ವವಿದ್ಯಾಲಯಯೊಂದಕ್ಕೆ ಹೆಸರು ಇಡುವುದೇನೋ ದೊಡ್ಡ ಕೆಲಸವಲ್ಲ. ಆದರೆ ಬಾಳಾಠಾಕ್ರೆ ದಲಿತರ ಇಂತಹ ಆತ್ಮಗೌರವದ ಬೇಡಿಕೆಯ ವಿರುದ್ಧವೂ ಯುದ್ಧ ಸಾರಿದ. ಮರಾಠವಾಡ ವಿ.ವಿ.ಗೆ ಅಂಬೇಡ್ಕರ್ ವಿ.ವಿ. ಎಂಬ ಹೆಸರಿಡಬಾರದೆಂದು ಖಂಡತುಂಡವಾಗಿ ವಿರೋಧಿಸಿ ಚಳವಳಿಯನ್ನು ಠಾಕ್ರೆ ವಿಷಮ ಗೊಳಿಸಿದ.

1984ರ ಸಮಯದಲ್ಲಂತೂ ವಿದರ್ಭ ಪ್ರಾಂತ್ಯದ ಸಾವಿರಾರು ದಲಿತರ ಗುಡಿಸಲುಗಳು ಠಾಕ್ರೆಯ ಗೂಂಡಾಗಳ ದಾಳಿಗೆ ಸುಟ್ಟು ಭಸ್ಮವಾದವು. ಲಕ್ಷಾಂತರ ದಲಿತ ರೈತರ ಬೆಳೆಗಳು ಕ್ಷಣದಲ್ಲೇ ನಾಶವಾದವು. ಠಾಕ್ರೆಯ ದಲಿತ ವಿರೋಧಿ, ದೌರ್ಜನ್ಯದ ಆದೇಶವನ್ನು ಅವನ ಕಾರ್ಯಕರ್ತರು ಚಾಚೂ ತಪ್ಪದೆ ಪಾಲಿಸಿದ್ದರು! ಠಾಕ್ರೆಯ ಪಕ್ಷದ ಚಿಹ್ನೆ ಹುಲಿ. ಠಾಕ್ರೆ ಇದನ್ನು ಆರಿಸಿದ್ದು ಕೂಡ ದಲಿತ ಪ್ಯಾಂಥರ್ಸ್‌ನ ಚಿರತೆ ಚಿಹ್ನೆಗೆ ವಿರುದ್ಧವಾಗಿ! ದಲಿತರು ಚಿರತೆಗಳಾದರೆ ನಾವು ಹುಲಿಗಳೆಂದು ಆತ ಅಬ್ಬರಿಸಿದ. ಇಂತಹ ಅಬ್ಬರಿಸುವವನ ಪಾಲಿಗೆ 1995ರಲ್ಲಿ ಆ ರಾಜ್ಯದ ಅಧಿಕಾರ ಕೂಡ ಬಂತು. ಸಾಮಾಜಿಕ ಪೊಲೀಸರಿಗೆ ಗವರ್ನಮೆಂಟ್ ಪೊಲೀಸ್ ಕೂಡ ಸಿಕ್ಕರೆ?
ಹೌದು, 1997 ರಲ್ಲಿ ಶಿವಸೇನೆ-ಬಿಜೆಪಿ ನೇತೃತ್ವದ ಸರಕಾರ ಮುಂಬೈಯ ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಸಶ್ತ್ರಾಸ್ತ್ರ ರಹಿತ ಅಮಾಯಕ 10 ಜನ ದಲಿತರನ್ನು ಗುಂಡಿಕ್ಕಿ ಕೊಲ್ಲಿಸಿತು. 30 ಜನರು ತೀವ್ರವಾಗಿ ಗಾಯಗೊಂಡರು. ಅದರಲ್ಲಿ ಮಕ್ಕಳೂ, ಮಹಿಳೆಯರೂ ಇದ್ದರೆಂದರೆ ಠಾಕ್ರೆಯ ಕ್ರೂರತನವನ್ನು ಯಾರಾದರೂ ಊಹಿಸಬಹುದು! ಸಾಲದಕ್ಕೆ ಈ ಸಮಯದಲ್ಲಿ ಠಾಕ್ರೆ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ ಸವರ್ಣೀಯರ ವಿರುದ್ಧ ದಾಖಲಾಗಿದ್ದ 1,100ಕ್ಕೂ ಹೆಚ್ಚು ದಲಿತ ದೌರ್ಜನ್ಯದ ಪ್ರಕರಣಗಳನ್ನು ವಾಪಸ್ ತೆಗೆಸಿದ. ಆ ಮೂಲಕ ದೌರ್ಜನ್ಯಕೋರರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ!

ಠಾಕ್ರೆಯ ಇಂತಹ ದಲಿತ ವಿರೋಧಿ ಕೃತ್ಯಗಳನ್ನು ಹೇಳುತ್ತಾ ಹೋದರೆ ಎಂತಹವರ ಎದೆಯೂ ನಡುಗುತ್ತದೆ. ಅಂದಹಾಗೆ ಠಾಕ್ರೆಯ ಇಂತಹ ಸಾಧನೆಗಳನ್ನು ಯಾವ ಪತ್ರಿಕೆಯಾಗಲಿ, ಟಿವಿಯಾಗಲಿ,facebook   ಆಗಲಿ ಮುಚ್ಚಿಡಲು ಸಾಧ್ಯವಿಲ್ಲ. ಯಾಕೆಂದರೆ ಅದೆಲ್ಲ ಮಹಾರಾಷ್ಟ್ರದ ಪ್ರತಿಯೊಬ್ಬ ದಲಿತನಿಗೂ ತಿಳಿದ open truth. ಸ್ವತಃ ಅಂಬೇಡ್ಕರರ ಮೊಮ್ಮಗ ಪ್ರಕಾಶ್ ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ 1970-80ರ ಸಮಯದ ದಲಿತ ಪ್ಯಾಂಥರ್ಸ್‌-ಶಿವಸೇನೆಯ ನಡುವಿನ ಯುದ್ಧ ಅಕ್ಷರಶಃ ಕ್ರೂರವಾದದ್ದು. ಸಹಸ್ರಾರು ಮುಗ್ಧ ದಲಿತರು ಈ ಸಂಧರ್ಭದಲ್ಲಿ ಮಾರಣ ಹೋಮವಾಗಬೇಕಾಯಿತು.

ಈ ನಿಟ್ಟಿನಲಿ ದಲಿತರ ವಿರುದ್ಧ ಇಂತಹ ಹಿಂಸಾತ್ಮಕ ದಂಗೆ ನಡೆಸಿದ, ಅಂತಹ ಹಿಂಸೆಯಲ್ಲಿ ಮುಸ್ಲಿಮರು, ಬಿಹಾರಿಗಳು, ಕನ್ನಡಿಗರು ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಮಹಾರಾಷ್ಟ್ರದ ಪ್ರತಿಯೊಬ್ಬರನ್ನೂ ಕಾಡಿದ ಬಾಳಾಠಾಕ್ರೆ ಖಂಡಿತ ಕ್ಷಮೆಗೆ ಅರ್ಹನಲ್ಲ. ಇಂತಹದ್ದೆನ್ನಲ್ಲ ನೋಡಿದರೆ ಎಲ್ಲೋ ಒಂದೆಡೆ ಬಾಬಾಸಾಹೇಬ್ ಅಂಬೇಡ್ಕರರ ಸಿದ್ಧಾಂತವನ್ನು ವಿಫಲಗೊಳಿಸಲೆಂದೇ ಠಾಕ್ರೆ ಮಹಾರಾಷ್ಟ್ರದಲ್ಲಿ ಈ ರೀತಿ ಶುರುವಚ್ಚಿ ಕೊಂಡನೆನಿಸುತ್ತದೆ. ಅಂದಹಾಗೆ ಇತ್ತೀಚೆಗೆ ಕೂಡ ಠಾಕ್ರೆ ತನ್ನ ಇಂತಹ ದಲಿತ ವಿರೊಧಿತನವನ್ನು ಬಿಟ್ಟಿರಲಿಲ್ಲ.

ಮುಂಬೈನ ದಾದರ್‌ನ ರೈಲು ನಿಲ್ದಾಣಕ್ಕೆ ಚೈತ್ರಭೂಮಿ ನಿಲ್ದಾಣ ಎಂದು ಹೆಸರಿಡ ಬೇಕೆಂದು ದಲಿತರು ಒತ್ತಾಯಿಸಿದಾಗ ಠಾಕ್ರೆ ಕೇಳಿದ್ದೇನು ಗೊತ್ತೇ? ದಾದರ್ ರೈಲು ನಿಲ್ದಾಣದ ಹೆಸರು ದಾದರ್ ಆಗಿಯೇ ಮುಂದುವರಿಯಲಿದೆ. ಹೆಸರು ಬದಲಾಯಿಸುವುದರಿಂದ ನಿಮ್ಮ (ದಲಿತ) ಜೀವನದ ಮೇಲೆ ಏನು ಪರಿಣಾಮ ಉಂಟಾಗುತ್ತದೆ? ಎಂದು. ಇದಕ್ಕೆ ಆರ್.ಪಿ.ಐ. ನಾಯಕ ಜೋಗೇಂದ್ರ ಕಾವಡೆ ಠಾಕ್ರೆಯನ್ನು ಅಷ್ಟೆ ಖಾರವಾಗಿ ‘ಹಾಗಿದ್ದರೆ ನೀವು ಔರಂಗಾಬಾದನ್ನು ಸಾಂಬಾಜಿನಗರ ಎಂತಲೂ, ಮುಂಬೈನ ವಿಕ್ಟೋರಿಯಾ ಟರ್ಮಿನಸ್ ( ರೈಲು ನಿಲ್ದಾಣ)ಅನ್ನು ಛತ್ರಪತಿ ಶಿವಾಜಿ ಟರ್ಮಿನಸ್ ಎಂದೂ ಬದಲಾಯಿಸಬೇಕೆಂದು ಒತ್ತಾಯಿಸುತ್ತಿದ್ದೀರಿ. 

ಅದರಿಂದ ನಿಮ್ಮ ಜೀವನದಲ್ಲೇನಾದರೂ ಬದಲಾವಣೆಯಾಗುತ್ತದಾ?’ ಎಂದು ಪ್ರಶ್ನಿಸಿದ್ದರು. ಠಾಕ್ರೆ ಸತ್ತ ನಂತರವೂ ಶಿವಸೇನೆಯು ದಲಿತರನ್ನು ಕೆಣಕುವ ಬುದ್ಧಿ ಬಿಟ್ಟಿಲ್ಲ! ಯಾಕೆಂದರೆ ಠಾಕ್ರೆ ಸತ್ತ ನಂತರ ಅವನ ಅನುಯಾಯಿಗಳು ಬಹುತೇಕ ದಲಿತರೇ ಹೆಚ್ಚಾಗಿ ವಾಸಿಸುವ, ಬಾಬಾಸಾಹೇಬ್ ಅಂಬೇಡ್ಕರರ ಸ್ಮಾರಕ ಸ್ಥಳ ಇರುವ ಪ್ರದೇಶ ದಲ್ಲಿಯೇ ಠಾಕ್ರೆ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಠಾಕ್ರೆಯ ಆ ಹೀನಕೃತ್ಯವನ್ನು ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದ್ದಾರೆ ಅವನ ಹಿಂಬಾಲಕರು.   

ಅದೇನೆ ಇರಲಿ, ಠಾಕ್ರೆ ಹಿಂದುತ್ವವಾದಿ. ಹಿಂದುತ್ವವಾದಿಯ ಪ್ರಮುಖ ಲಕ್ಷಣ ಮುಸ್ಲಿಂ ವಿರೋಧವಾದರೂ ಮೂಲ ಲಕ್ಷಣ ದಲಿತ ವಿರೋಧಿ ನೀತಿ. ಠಾಕ್ರೆ ಹೇಳಿದ್ದು, ಹೇಳದಿದ್ದದ್ದು, ಬೆಳೆದದ್ದು ಎಲ್ಲವೂ ದಲಿತರ ಹೆಣಗಳ ಮೇಲೆ, ಅವರ ಭಾವನೆಗಳ ಜೊತೆ ಚೆಲ್ಲಾಟದ ಜೊತೆ ಜೊತೆಗೆ. ಈ ನಿಟ್ಟಿನಲ್ಲಿ ಇಂತಹ ಈ ಶತಮಾನದ ದೌರ್ಜನ್ಯಕೋರನನ್ನು ಮಹಾರಾಷ್ಟ್ರದ ಸರಕಾರ ಏನೂ ಮಾಡಲಿಲ್ಲವೆಂದರೆ ಆಳುವ ಸರಕಾರ (ಕಾಂಗ್ರೆಸ್)ಗಳು ಅವನಿಗೆ ನೀಡಿದ್ದ ಬೆಂಬಲವನ್ನು ಯಾರಾದರೂ ಊಹಿಸಬಹುದು. 

ಈ ನಿಟ್ಟಿನಲಿ ಕಾಂಗ್ರೆಸ್ ಕೂಡ ಕ್ಷಮೆಗೆ ಅರ್ಹವಲ್ಲ.ಠಾಕ್ರೆ ಇನ್ನಿಲ್ಲ. ದೂರದಿಂದ ಮಹಾರಾಷ್ಟ್ರದ ದಲಿತರ ಮೇಲೆ, ಬಾಬಾಸಾಹೇಬ್ ಅಂಬೇಡ್ಕರರ ಸಿದ್ಧಾಂತದ ಮೇಲೆ ಆತ ನಡೆಸುತ್ತಿದ್ದ ದೌರ್ಜನ್ಯವನ್ನು, ದಬ್ಬಾಳಿಕೆಯನ್ನು ಕೇಳಿ ಕೇಳಿ ರೋಸಿಹೋಗಿದ್ದವರಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ. ಮುಂದೆ ಇಂತಹ ಜನವಿರೋಧಿಗಳಿಗೆ ಜಾಗವಿಲ್ಲವೆಂದು ಸಾರಬೇಕಾಗಿದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...