Thursday, May 31, 2012

ಅಡ್ವಾಣಿಗಾಗಿ ಕಾಯುತ್ತಿರುವ ಶರಶಯ್ಯೆ

-ವಾರ್ತಾಭಾರತಿ ಸಂಪಾದಕೀಯ

ಅಡ್ವಾಣಿಗಾಗಿ ಕಾಯುತ್ತಿರುವ ಶರಶಯ್ಯೆ
‘‘ಬಿಜೆಪಿಯ ಕುರಿತಂತೆ ಜನರು ನಿರಾಶೆಗೊಂಡಿ ದ್ದಾರೆ. ಭ್ರಮನಿರಸನ ಹೊಂದಿದ್ದಾರೆ’’ ಈ ಮಾತನ್ನು ಆಡಿರುವುದು ಯಾವುದೇ ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರಲ್ಲ. ಸ್ವತಃ ಬಿಜೆಪಿಯ ಅಧಿನಾಯಕ ಎಲ್. ಕೆ. ಅಡ್ವಾಣಿ. ಇದೊಂದು ರೀತಿಯಲ್ಲಿ ಬಿಜೆಪಿಯನ್ನು ಅಧಿಕಾರದೆಡೆಗೆ ತಂದ ಅಡ್ವಾಣಿಯ ನಿಟ್ಟುಸಿರಿನಂತಿದೆ. ಪ್ರಧಾನಿ ಹುದ್ದೆಗಾಗಿ ಕಾದು, ಬಳಲಿ ಬೆಂಡಾಗಿ, ಆ ಕುರಿತ ಎಲ್ಲಾ ಆಸೆಯನ್ನು ಕೈ ಚೆಲ್ಲಿದ ವೃದ್ಧ ನಾಯಕನೊಬ್ಬನ ಅಸಹಾಯಕತೆಯಂತೆಯೂ ಇದೆ. ಒಂದು ಕಾಲದಲ್ಲಿ ಬಿಜೆಪಿಯ ರಥವನ್ನು ಮುನ್ನಡೆಸಿ, ಅದನ್ನು ಅಧಿಕಾರದೆಡೆಗೆ ತಂದು, ಇದೀಗ ಅದೇ ಬಜೆಪಿ ಮಂದಿಯ ನಿರ್ಲಕ್ಷ ಕ್ಕೊಳಗಾಗಿರುವ ಅಡ್ವಾಣಿ ಮಹಾಭಾರತದ ಭೀಷ್ಮನನ್ನು ಹೋಲುತ್ತಾರೆ. ದ್ವಿಗ್ವಿಜಯಗಳನ್ನು ಮಾಡಿ, ದುರ್ಯೋಧನನ್ನು ಅಧಿಕಾರಕ್ಕೇರಿಸಿದ ಭೀಷ್ಮನಿಗೆ, ಕೊನೆಯ ದಿನಗಳಲ್ಲಿ ಅದೇ ದುರ್ಯೋಧನನ ಹೀನ ಮಾತುಗಳನ್ನು ಕೇಳುತ್ತಾ ಬದುಕುವ ಸ್ಥಿತಿ ಎದುರಾಯಿತು. ಇಲ್ಲಿ ಅಡ್ವಾಣಿಯ ಕತೆಯೂ ಅದನ್ನೇ ಹೋಲುತ್ತದೆ. ರಥಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ, ಇದೇ ಅಡ್ವಾಣಿ ದೇಶಾದ್ಯಂತ ವಿಜಯಂಗೈದು, ಅಮಾಯಕರ ರಕ್ತದಲ್ಲಿ ಓಕುಳಿಯಾಡಿದರು. ಆ ಕಳಂಕ ಇಂದಿಗೂ ಅಡ್ವಾಣಿಯನ್ನು ಅಂಟಿಕೊಂಡಿದೆ. ಆದರೆ, ಅಧಿಕಾರಕ್ಕೇರಿದ್ದು ಮಾತ್ರ ಅಟಲ್ ಬಿಹಾರಿ ವಾಜಪೇಯಿ. ಈ ದೇಶ ಕಂಡ ಅತ್ಯಂತ ದುರ್ಬಲ ಮತ್ತು ದ್ವಂದ್ವ ಮನಸ್ಥಿತಿಯನ್ನೊಳಗೊಂಡ ವಾಜಪೇಯಿಯ ವೈಫಲ್ಯಗಳು ಅಡ್ವಾಣಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ವಾಜಪೇಯಿಯ ಬೆನ್ನಿಗಿದ್ದ ಆರೆಸ್ಸೆಸ್ ನಾಯಕರು ಮತ್ತು ವಾಜಪೇಯಿಯ ಸೆಕ್ಯುಲರ್ ಮುಖವಾಡದ ಮುಂದೆ ಅಡ್ವಾಣಿ ಅಸಹಾಯಕ ರಾಗಿದ್ದರು. ಕೊನೆಗೂ ಅಡ್ವಾಣಿಗೆ ಅಧಿಕಾರ ದಕ್ಕಲೇ ಇಲ್ಲ. ದುರಂತವೆಂದರೆ, ಇಂದು ಅಡ್ವಾಣಿಯ ಮುಂದೆಯೇ ಚೆಲ್ಲರೆ ನಾಯಕರು ಬಾಲ ಬಿಚ್ಚುತ್ತಿದ್ದಾರೆ.
ನಿಜಕ್ಕೂ ಅಡ್ವಾಣಿಗೆ ಬಿಜೆಪಿಯ ಭ್ರಷ್ಟರ ಕುರಿತಂತೆ ಆಕ್ರೋಶವಿದೆಯೆ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಅವರ ಆಕ್ರೋಶಕ್ಕೆ ಬಿಜೆಪಿಯೊಳಗಿನ ಭ್ರಷ್ಟತೆ ಮಾತ್ರ ಕಾರಣವಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಡ್ವಾಣಿಯ ಮಾತುಗಳಿಗೆ ಪ್ರಾಧಾನ್ಯತೆ ದೊರಕುತ್ತಿಲ್ಲ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಸೆಡ್ಡು ಹೊಡೆದಿದ್ದರೆ, ಕರ್ನಾಟಕದಲ್ಲಿ ಯಡಿಯೂರಪ್ಪ ಸೆಡ್ಡು ಹೊಡೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಅಡ್ವಾಣಿಯ ಹಿಡಿತ ಸಡಿಲಾಗುತ್ತಿದೆ. ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕವನ್ನೇ ಉದಾಹರಣೆ ಯಾಗಿ ತೆಗೆದುಕೊಳ್ಳೋಣ. ಕರ್ನಾಟಕದಲ್ಲಿ ಬಿಜೆಪಿ ಹೇಗೆ ಅಧಿಕಾರ ಹಿಡಿಯಿತು ಎನ್ನುವುದು ಅಡ್ವಾಣಿಗೆ ತಿಳಿಯದ ಸಂಗತಿಯಲ್ಲ. ರೆಡ್ಡಿಗಳ ಹಣದ ತಳಹದಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ವಿರೋಧ ಪಕ್ಷಗಳ ಶಾಸಕರನ್ನು ಕೋಟಿ ಕೋಟಿ ಹಣಕೊಟ್ಟು ಬಿಜೆಪಿ ಕೊಂಡುಕೊಂಡಿತು. ಆಗೆಲ್ಲ ಅಡ್ವಾಣಿ ಬಾಯಿ ಮುಚ್ಚಿ ಕೂತಿದ್ದರು. ಅಂದರೆ ವೌನವಾಗಿ ಅದನ್ನು ಸಮ್ಮತಿಸಿದ್ದರು. ಅದರ ಫಲವನ್ನು ಈಗ ಅಡ್ವಾಣಿ ಉಣ್ಣುತ್ತಿದ್ದಾರೆ.
ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದು ಅಡ್ವಾಣಿ ಹೊರಗಿಟ್ಟಿದ್ದಾರೆ. ಸಂತೋಷ. ಆದರೆ ಅವರು ತನ್ನ ಮಡಿಲಲ್ಲಿಟ್ಟು ಸಾಕುತ್ತಿರುವುದು ಅನಂತಕುಮಾರ್ ಎಂಬ ಇನ್ನೊಬ್ಬ ಭ್ರಷ್ಟನನ್ನು. ಹುಡ್ಕೋ ಹಗರಣದಲ್ಲಿ, ನೀರಾ ರಾಡಿಯಾ ಪ್ರಕರಣದಲ್ಲಿ ಈತನ ಪಾತ್ರವೇನು ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತು. ನಿಜಕ್ಕೂ ಭ್ರಷ್ಟಾಚಾರದ ಕುರಿತಂತೆ ಅಡ್ವಾಣಿಗೆ ಆಕ್ರೋಶವಿದೆಯಾದರೆ, ಈ ಅನಂತಕುಮಾರ್‌ನನ್ನು ಬಗಲಲ್ಲಿ ಬೆಳೆಸುತ್ತಿರಲಿಲ್ಲ. ಅಡ್ವಾಣಿಯ ಈ ಸ್ವಜನ ಪಕ್ಷಪಾತದ ಅರಿವುದ್ದುದರಿಂದಲೇ, ಬಿಜೆಪಿ ರಾಷ್ಟ್ರಮಟ್ಟದಲ್ಲಿ ಒಡೆದಿದೆ. ಇಂದು ಭಾರತ ಬಂದ್ ಸಂದರ್ಭದಲ್ಲಿ ಯುಪಿಎ ಸರಕಾರಕ್ಕೆ ಏನು ನಷ್ಟವಾಯಿತೋ, ಆದರೆ ಬಿಜೆಪಿಗಂತೂ ದೊಡ್ಡ ನಷ್ಟವಾಗಿದೆ. ಭಾರತ ಬಂದ್‌ನ ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಲು ಬಿಜೆಪಿಯ ಪಕ್ಷ ಕಚೇರಿಯಲ್ಲಿ ಕರೆದ ಸಭೆಗೆ ಅಡ್ವಾಣಿ ಗೈರು ಹಾಜರಾಗುವ ಮೂಲಕ ಬಿಜೆಪಿಗೆ ಭಾರೀ ದೊಡ್ಡ ನಷ್ಟ ಮಾಡಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಮುಖಭಂಗವುಂಟಾಗಿದೆ. ಬಿಜೆಪಿ ಜನರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಅಡ್ವಾಣಿಯೇ ತಪ್ಪೊಪ್ಪಿಕೊಂಡ ಮೇಲೆ, ಉಳಿದ ನಾಯಕರು ತಮ್ಮನ್ನು ತಾವು ಸಮರ್ಥಿಸಿ ಕೊಳ್ಳುವುದಾದರೂ ಹೇಗೆ?ಬಿಜೆಪಿ ಹಣ, ಹಣ, ಹಣ ಎನ್ನುವ ವೌಲ್ಯವನ್ನು ತನ್ನಗಾಸಿಕೊಂಡಿದೆ ಮಾತ್ರವಲ್ಲ, ಭ್ರಷ್ಟಾಚಾರದಿಂದ ಅದು ಕೊಳೆತು ನಾರುತ್ತಿದೆ. ಜೊತೆಗೆ ಬಿಜೆಪಿಯನ್ನು ಮುನ್ನಡೆಸುವ ರಾಷ್ಟ್ರಮಟ್ಟದ ನಾಯಕರೂ ಅದಕ್ಕೆ ಇಲ್ಲವಾದಂತಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮೋದಿಯ ಕಡೆಗೆ ನೋಡುತ್ತಿರುವುದು ವಿಪರ್ಯಾಸ. ರಾಷ್ಟ್ರಮಟ್ಟದಲ್ಲಿ ರಾಜಕೀಯ ನಡೆಸಿದ ಬಿಜೆಪಿ ನಾಯಕರೆಲ್ಲ ಅಪ್ರಸ್ತುತರೆನಿಸಿದ್ದಾರೆ. ಇದೀಗ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಆರೆಸ್ಸೆಸ್ ಒಪ್ಪಿಕೊಳ್ಳುತ್ತದೆಯೆ? ಎನ್ನುವುದು ಬಹುದೊಡ್ಡ ಪ್ರಶ್ನೆ. ಈಗಾಗಲೇ ಬಿಜೆಪಿಯ ಹಿರಿಯ ನಾಯಕರ ನಿಷ್ಟುರ ಕಟ್ಟಿಕೊಂಡಿರುವ ಮೋದಿಯನ್ನು ಪ್ರಧಾನಿಯಾಗಿ ಮಾಡುವುದು ಕಷ್ಟ ಸಾಧ್ಯ. ಒಟ್ಟಿನಲ್ಲಿ ಇಂದು ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಯುಪಿಎ ಸರಕಾರದ ಕುರಿತಂತೆ ಮಾಡುವ ಟೀಕೆಗಳು ಆರ್ತನಾದದಂತೆ ಕೇಳಿಸುತ್ತಿದೆ.ಅಡ್ವಾಣಿ ಏನಿದ್ದರೂ ಶರಶಯ್ಯೆ ಏರುವ ಕಾಲ ಹತ್ತಿರ ಬಂದಿದೆ ಎನ್ನುವುದರ ಸೂಚನೆಗಳು ಬಿಜೆಪಿಯೊಳಗೆ ಕಾಣಿಸಿಕೊಳ್ಳುತ್ತಿದೆ. ಹಣದಿಂದಲೇ ಎಲ್ಲವನ್ನು ಕೊಳ್ಳಬಲ್ಲೆವು ಎನ್ನುವ ಆತ್ಮವಿಶ್ವಾಸ ವಿರುವ ನಾಯಕರ ಸಂಖ್ಯೆ ಬಿಜೆಪಿಯೊಳಗೆ ಅಧಿಕವಾಗುತ್ತಿದೆ. ಹಣವೇ ನಾಯಕತ್ವದ ಪ್ರಧಾನಗುಣಗಳು ಎಂದು ನಂಬಿದವರ ನಡುವೆ ವೌಲ್ಯಗಳನ್ನು ಹುಡುಕುವುದು ಮೂರ್ಖತನ. ಬಿಜೆಪಿ ತಾನು ಮಾಡಿದ ಪಾಪದ ಫಲವನ್ನು ಉಣ್ಣುತ್ತಿದೆ. ಕೊಂದ ಪಾಪ ತಿಂದು ಪರಿಹಾರವಾಗಬೇಕು. ರಥಯಾತ್ರೆಯಲ್ಲಿ ಸತ್ತ ಮನುಷ್ಯರೆಷ್ಟು ಎನ್ನುವುದನ್ನು ಎಣಿಸಲು ಅಡ್ವಾಣಿಗೆ ಇದು ಸಕಾಲ.

‘‘ಬಿಜೆಪಿಯ ಕುರಿತಂತೆ ಜನರು ನಿರಾಶೆಗೊಂಡಿದ್ದಾರೆ. ಭ್ರಮನಿರಸನ ಹೊಂದಿದ್ದಾರೆ’’ ಈ ಮಾತನ್ನು ಆಡಿರುವುದು ಯಾವುದೇ ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರಲ್ಲ. ಸ್ವತಃ ಬಿಜೆಪಿಯ ಅಧಿನಾಯಕ ಎಲ್. ಕೆ. ಅಡ್ವಾಣಿ. ಇದೊಂದು ರೀತಿಯಲ್ಲಿ ಬಿಜೆಪಿಯನ್ನು ಅಧಿಕಾರದೆಡೆಗೆ ತಂದ ಅಡ್ವಾಣಿಯ ನಿಟ್ಟುಸಿರಿನಂತಿದೆ. ಪ್ರಧಾನಿ ಹುದ್ದೆಗಾಗಿ ಕಾದು, ಬಳಲಿ ಬೆಂಡಾಗಿ, ಆ ಕುರಿತ ಎಲ್ಲಾ ಆಸೆಯನ್ನು ಕೈ ಚೆಲ್ಲಿದ ವೃದ್ಧ ನಾಯಕನೊಬ್ಬನ ಅಸಹಾಯಕತೆಯಂತೆಯೂ ಇದೆ. ಒಂದು ಕಾಲದಲ್ಲಿ ಬಿಜೆಪಿಯ ರಥವನ್ನು ಮುನ್ನಡೆಸಿ, ಅದನ್ನು ಅಧಿಕಾರದೆಡೆಗೆ ತಂದು, ಇದೀಗ ಅದೇ ಬಜೆಪಿ ಮಂದಿಯ ನಿರ್ಲಕ್ಷ ಕ್ಕೊಳಗಾಗಿರುವ ಅಡ್ವಾಣಿ ಮಹಾಭಾರತದ ಭೀಷ್ಮನನ್ನು ಹೋಲುತ್ತಾರೆ. ದ್ವಿಗ್ವಿಜಯಗಳನ್ನು ಮಾಡಿ, ದುರ್ಯೋಧನನ್ನು ಅಧಿಕಾರಕ್ಕೇರಿಸಿದ ಭೀಷ್ಮನಿಗೆ, ಕೊನೆಯ ದಿನಗಳಲ್ಲಿ ಅದೇ ದುರ್ಯೋಧನನ ಹೀನ ಮಾತುಗಳನ್ನು ಕೇಳುತ್ತಾ ಬದುಕುವ ಸ್ಥಿತಿ ಎದುರಾಯಿತು. ಇಲ್ಲಿ ಅಡ್ವಾಣಿಯ ಕತೆಯೂ ಅದನ್ನೇ ಹೋಲುತ್ತದೆ. ರಥಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ, ಇದೇ ಅಡ್ವಾಣಿ ದೇಶಾದ್ಯಂತ ವಿಜಯಂಗೈದು, ಅಮಾಯಕರ ರಕ್ತದಲ್ಲಿ ಓಕುಳಿಯಾಡಿದರು. ಆ ಕಳಂಕ ಇಂದಿಗೂ ಅಡ್ವಾಣಿಯನ್ನು ಅಂಟಿಕೊಂಡಿದೆ. ಆದರೆ, ಅಧಿಕಾರಕ್ಕೇರಿದ್ದು ಮಾತ್ರ ಅಟಲ್ ಬಿಹಾರಿ ವಾಜಪೇಯಿ. ಈ ದೇಶ ಕಂಡ ಅತ್ಯಂತ ದುರ್ಬಲ ಮತ್ತು ದ್ವಂದ್ವ ಮನಸ್ಥಿತಿಯನ್ನೊಳಗೊಂಡ ವಾಜಪೇಯಿಯ ವೈಫಲ್ಯಗಳು ಅಡ್ವಾಣಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ವಾಜಪೇಯಿಯ ಬೆನ್ನಿಗಿದ್ದ ಆರೆಸ್ಸೆಸ್ ನಾಯಕರು ಮತ್ತು ವಾಜಪೇಯಿಯ ಸೆಕ್ಯುಲರ್ ಮುಖವಾಡದ ಮುಂದೆ ಅಡ್ವಾಣಿ ಅಸಹಾಯಕ ರಾಗಿದ್ದರು. ಕೊನೆಗೂ ಅಡ್ವಾಣಿಗೆ ಅಧಿಕಾರ ದಕ್ಕಲೇ ಇಲ್ಲ.

ದುರಂತವೆಂದರೆ, ಇಂದು ಅಡ್ವಾಣಿಯ ಮುಂದೆಯೇ ಚೆಲ್ಲರೆ ನಾಯಕರು ಬಾಲ ಬಿಚ್ಚುತ್ತಿದ್ದಾರೆ.ನಿಜಕ್ಕೂ ಅಡ್ವಾಣಿಗೆ ಬಿಜೆಪಿಯ ಭ್ರಷ್ಟರ ಕುರಿತಂತೆ ಆಕ್ರೋಶವಿದೆಯೆ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಅವರ ಆಕ್ರೋಶಕ್ಕೆ ಬಿಜೆಪಿಯೊಳಗಿನ ಭ್ರಷ್ಟತೆ ಮಾತ್ರ ಕಾರಣವಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಡ್ವಾಣಿಯ ಮಾತುಗಳಿಗೆ ಪ್ರಾಧಾನ್ಯತೆ ದೊರಕುತ್ತಿಲ್ಲ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಸೆಡ್ಡು ಹೊಡೆದಿದ್ದರೆ, ಕರ್ನಾಟಕದಲ್ಲಿ ಯಡಿಯೂರಪ್ಪ ಸೆಡ್ಡು ಹೊಡೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಅಡ್ವಾಣಿಯ ಹಿಡಿತ ಸಡಿಲಾಗುತ್ತಿದೆ. ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕವನ್ನೇ ಉದಾಹರಣೆ ಯಾಗಿ ತೆಗೆದುಕೊಳ್ಳೋಣ. ಕರ್ನಾಟಕದಲ್ಲಿ ಬಿಜೆಪಿ ಹೇಗೆ ಅಧಿಕಾರ ಹಿಡಿಯಿತು ಎನ್ನುವುದು ಅಡ್ವಾಣಿಗೆ ತಿಳಿಯದ ಸಂಗತಿಯಲ್ಲ. ರೆಡ್ಡಿಗಳ ಹಣದ ತಳಹದಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ವಿರೋಧ ಪಕ್ಷಗಳ ಶಾಸಕರನ್ನು ಕೋಟಿ ಕೋಟಿ ಹಣಕೊಟ್ಟು ಬಿಜೆಪಿ ಕೊಂಡುಕೊಂಡಿತು. ಆಗೆಲ್ಲ ಅಡ್ವಾಣಿ ಬಾಯಿ ಮುಚ್ಚಿ ಕೂತಿದ್ದರು. ಅಂದರೆ ವೌನವಾಗಿ ಅದನ್ನು ಸಮ್ಮತಿಸಿದ್ದರು. ಅದರ ಫಲವನ್ನು ಈಗ ಅಡ್ವಾಣಿ ಉಣ್ಣುತ್ತಿದ್ದಾರೆ.

ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದು ಅಡ್ವಾಣಿ ಹೊರಗಿಟ್ಟಿದ್ದಾರೆ. ಸಂತೋಷ. ಆದರೆ ಅವರು ತನ್ನ ಮಡಿಲಲ್ಲಿಟ್ಟು ಸಾಕುತ್ತಿರುವುದು ಅನಂತಕುಮಾರ್ ಎಂಬ ಇನ್ನೊಬ್ಬ ಭ್ರಷ್ಟನನ್ನು. ಹುಡ್ಕೋ ಹಗರಣದಲ್ಲಿ, ನೀರಾ ರಾಡಿಯಾ ಪ್ರಕರಣದಲ್ಲಿ ಈತನ ಪಾತ್ರವೇನು ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತು. ನಿಜಕ್ಕೂ ಭ್ರಷ್ಟಾಚಾರದ ಕುರಿತಂತೆ ಅಡ್ವಾಣಿಗೆ ಆಕ್ರೋಶವಿದೆಯಾದರೆ, ಈ ಅನಂತಕುಮಾರ್‌ನನ್ನು ಬಗಲಲ್ಲಿ ಬೆಳೆಸುತ್ತಿರಲಿಲ್ಲ. ಅಡ್ವಾಣಿಯ ಈ ಸ್ವಜನ ಪಕ್ಷಪಾತದ ಅರಿವುದ್ದುದರಿಂದಲೇ, ಬಿಜೆಪಿ ರಾಷ್ಟ್ರಮಟ್ಟದಲ್ಲಿ ಒಡೆದಿದೆ. ಇಂದು ಭಾರತ ಬಂದ್ ಸಂದರ್ಭದಲ್ಲಿ ಯುಪಿಎ ಸರಕಾರಕ್ಕೆ ಏನು ನಷ್ಟವಾಯಿತೋ, ಆದರೆ ಬಿಜೆಪಿಗಂತೂ ದೊಡ್ಡ ನಷ್ಟವಾಗಿದೆ. ಭಾರತ ಬಂದ್‌ನ ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಲು ಬಿಜೆಪಿಯ ಪಕ್ಷ ಕಚೇರಿಯಲ್ಲಿ ಕರೆದ ಸಭೆಗೆ ಅಡ್ವಾಣಿ ಗೈರು ಹಾಜರಾಗುವ ಮೂಲಕ ಬಿಜೆಪಿಗೆ ಭಾರೀ ದೊಡ್ಡ ನಷ್ಟ ಮಾಡಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಮುಖಭಂಗವುಂಟಾಗಿದೆ.

ಬಿಜೆಪಿ ಜನರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಅಡ್ವಾಣಿಯೇ ತಪ್ಪೊಪ್ಪಿಕೊಂಡ ಮೇಲೆ, ಉಳಿದ ನಾಯಕರು ತಮ್ಮನ್ನು ತಾವು ಸಮರ್ಥಿಸಿ ಕೊಳ್ಳುವುದಾದರೂ ಹೇಗೆ?ಬಿಜೆಪಿ ಹಣ, ಹಣ, ಹಣ ಎನ್ನುವ ವೌಲ್ಯವನ್ನು ತನ್ನಗಾಸಿಕೊಂಡಿದೆ ಮಾತ್ರವಲ್ಲ, ಭ್ರಷ್ಟಾಚಾರದಿಂದ ಅದು ಕೊಳೆತು ನಾರುತ್ತಿದೆ. ಜೊತೆಗೆ ಬಿಜೆಪಿಯನ್ನು ಮುನ್ನಡೆಸುವ ರಾಷ್ಟ್ರಮಟ್ಟದ ನಾಯಕರೂ ಅದಕ್ಕೆ ಇಲ್ಲವಾದಂತಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮೋದಿಯ ಕಡೆಗೆ ನೋಡುತ್ತಿರುವುದು ವಿಪರ್ಯಾಸ. ರಾಷ್ಟ್ರಮಟ್ಟದಲ್ಲಿ ರಾಜಕೀಯ ನಡೆಸಿದ ಬಿಜೆಪಿ ನಾಯಕರೆಲ್ಲ ಅಪ್ರಸ್ತುತರೆನಿಸಿದ್ದಾರೆ. ಇದೀಗ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಆರೆಸ್ಸೆಸ್ ಒಪ್ಪಿಕೊಳ್ಳುತ್ತದೆಯೆ? ಎನ್ನುವುದು ಬಹುದೊಡ್ಡ ಪ್ರಶ್ನೆ. ಈಗಾಗಲೇ ಬಿಜೆಪಿಯ ಹಿರಿಯ ನಾಯಕರ ನಿಷ್ಟುರ ಕಟ್ಟಿಕೊಂಡಿರುವ ಮೋದಿಯನ್ನು ಪ್ರಧಾನಿಯಾಗಿ ಮಾಡುವುದು ಕಷ್ಟ ಸಾಧ್ಯ. ಒಟ್ಟಿನಲ್ಲಿ ಇಂದು ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದಿದೆ.

ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಯುಪಿಎ ಸರಕಾರದ ಕುರಿತಂತೆ ಮಾಡುವ ಟೀಕೆಗಳು ಆರ್ತನಾದದಂತೆ ಕೇಳಿಸುತ್ತಿದೆ.ಅಡ್ವಾಣಿ ಏನಿದ್ದರೂ ಶರಶಯ್ಯೆ ಏರುವ ಕಾಲ ಹತ್ತಿರ ಬಂದಿದೆ ಎನ್ನುವುದರ ಸೂಚನೆಗಳು ಬಿಜೆಪಿಯೊಳಗೆ ಕಾಣಿಸಿಕೊಳ್ಳುತ್ತಿದೆ. ಹಣದಿಂದಲೇ ಎಲ್ಲವನ್ನು ಕೊಳ್ಳಬಲ್ಲೆವು ಎನ್ನುವ ಆತ್ಮವಿಶ್ವಾಸ ವಿರುವ ನಾಯಕರ ಸಂಖ್ಯೆ ಬಿಜೆಪಿಯೊಳಗೆ ಅಧಿಕವಾಗುತ್ತಿದೆ. ಹಣವೇ ನಾಯಕತ್ವದ ಪ್ರಧಾನಗುಣಗಳು ಎಂದು ನಂಬಿದವರ ನಡುವೆ ವೌಲ್ಯಗಳನ್ನು ಹುಡುಕುವುದು ಮೂರ್ಖತನ. ಬಿಜೆಪಿ ತಾನು ಮಾಡಿದ ಪಾಪದ ಫಲವನ್ನು ಉಣ್ಣುತ್ತಿದೆ. ಕೊಂದ ಪಾಪ ತಿಂದು ಪರಿಹಾರವಾಗಬೇಕು. ರಥಯಾತ್ರೆಯಲ್ಲಿ ಸತ್ತ ಮನುಷ್ಯರೆಷ್ಟು ಎನ್ನುವುದನ್ನು ಎಣಿಸಲು ಅಡ್ವಾಣಿಗೆ ಇದು ಸಕಾಲ

ಜಾತಿಯನ್ನು ನಿರಾಕರಿಸಿದರೆ ಮಾತ್ರ ಜಾತಿ ನಾಶ ಸಾಧ್ಯ : ಆನಂದ್ ತೇಲ್ತುಂಬ್ಡೆ


Teltumbde Anand

‘ಖೈರ್ಲಾಂಜಿ ಖ್ಯಾತಿಯ ಚಿಂತಕ, ಮಾನವ ಹಕ್ಕು ಹೋರಾಟಗಾರ ಆನಂದ್ ತೇಲ್ತುಂಬ್ಡೆ ಅವರನ್ನು ಆರ್.ಕೆ.ಬಿಜುರಾಜ್ ಇಂಟರ್ನೆಟ್ ಮೂಲಕ ಸಂದರ್ಶಿಸಿದಾಗ ಪ್ರಸ್ತುತ ದಲಿತ ರಾಜಕೀಯ ಪರಿಸ್ಥಿತಿ, ದಲಿತ್ ಪ್ಯಾಂಥರ್ ಚಳುವಳಿ, ಕಮ್ಯುನಿಸ್ಟರು, ಮಾಯಾವತಿ ಹಾಗೂ ಇತ್ತೀಚಿನ ಕೋರ್ಟ್ ತೀರ್ಪುಗಳ ಬಗ್ಗೆ ಪ್ರಶ್ನಿಸಿದ್ದು ಅದಕ್ಕೆ ಅವರು ನೀಡಿದ ಉತ್ತರಗಳು ಈ ಕೆಳಗಿನಂತೆ ಇವೆ.

ದಲಿತರ ಇಂದಿನ ಸ್ಥಿತಿಗತಿಗಳೇನು? ಪ್ರಗತಿಪರ ಅಭಿವೃದ್ಧಿ ಆಗುತ್ತಿದೆ ಎನಿಸುತ್ತಿದೆಯೆ? ಅಥವಾ ಹಿನ್ನಡೆ ಎದುರಿಸುತ್ತಿದೆಯೆ?

ದಲಿತರು ಹಿಂದೆಂದಿಗಿಂತ ಇಂದು ಬಹುರೂಪಿ ಸಮುದಾಯ. ಬಹುಶಃ ದಲಿತ ಎನ್ನುವುದು ಅಸ್ಪೃಶ್ಯ ಸಮುದಾಯವನ್ನು ಒಂದೆಡೆ ತರುವ ಉದ್ದೇಶದಿಂದ ಬಳಸಿದ ಪದ. ಅದನ್ನು ಗ್ರಹಿಸಿದ ಮೊದಲ ದಿನಗಳಲ್ಲಿ ಒಂದು ಸ್ಪಷ್ಟವಾದ ವರ್ಗ ಸಮುದಾಯವನ್ನು ಅದು ಪ್ರತಿನಿಧಿಸುತ್ತಿತ್ತು. ಉಳಿದ ಸಮಾಜದಲ್ಲಿ ಹೇಗೆ ಭಿನ್ನ ವರ್ಗಗಳಿವೆಯೋ ಹಾಗೇ ಸರ್ಕಾರದ ಮೀಸಲಾತಿ ನೀತಿ ಮತ್ತಿತರ ಆಧುನೀಕರಣದ ಕ್ರಮಗಳಿಂದ ಭಿನ್ನವರ್ಗ ಸಮುದಾಯವಾದ ದಲಿತರನ್ನು ಅದು ಪ್ರತಿನಿಧಿಸುತ್ತದೆ. ಸರ್ಕಾರದ ನವ ಉದಾರವಾದದ ದೆಸೆಯಿಂದ ೯೦%ಗಿಂತ ಹೆಚ್ಚಿನ ದಲಿತರು ಇಂದಿಗೂ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಉತ್ತಮ ಶಿಕ್ಷಣ, ಉದ್ಯೋಗಕ್ಕೆ ಅವರಿಗೆ ಅವಕಾಶವಿಲ್ಲ. ಮೀಸಲಾತಿಯ ಬಗೆಗೆ ಇಷ್ಟೆಲ್ಲ ಮಾತನಾಡಿದರೂ ಮೀಸಲಾತಿಗಾಗಿ ಲಭ್ಯವಿರುವ ಉದ್ಯೋಗಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ದಲಿತರು ಭಾಗವಾಗಿರುವ ಗ್ರಾಮೀಣ ಆರ್ಥಿಕತೆ ಚೂರುಚೂರಾಗುತ್ತಿದೆ. ಅಧಿಕಾರ ಸರಿಯಾಗಿ ಹಂಚಿಕೆಯಾಗದಿರುವ ಪರಿಣಾಮ ಜಾತಿ ದೌರ್ಜನ್ಯಗಳು ಈಗಲೂ ಸಂಭವಿಸುತ್ತಿವೆ. ಜಾಗತೀಕರಣವಾದ ಈ ಎರಡು ದಶಕಗಳಲ್ಲಿ ಯಾವುದೇ ಮಹತ್ತಾದ ಬದಲಾವಣೆ ಸಂಭವಿಸುತ್ತಿರುವಂತೆ ನನಗನಿಸುತ್ತಿಲ್ಲ. ಒಳ್ಳೆಯದೇನು ಸಂಭವಿಸುತ್ತಿದೆಯೋ ಅದು ಕೈಬೆರಳೆಣಿಕೆಯಷ್ಟು ಗಣ್ಯ ದಲಿತರಿಗಷ್ಟೇ ಸಂಭವಿಸುತ್ತಿದೆ. ತಮ್ಮ ಮೇಲ್ಜಾತಿ ಸ್ನೇಹಿತರಂತೇ ಕೆನೆಪದರ ಅನುಭವಿಸುವ ಸವಲತ್ತುಗಳನ್ನು ದೊರಕಿಸಿಕೊಂಡು ಅವರು ನೆಮ್ಮದಿಯಾಗಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ನಿಜವಾದ ದಲಿತರು ಹಿನ್ನಡೆ ಅನುಭವಿಸುತ್ತಿದ್ದಾರೆ.

ಜಾತಿಪದ್ಧತಿಯನ್ನು ನಾಶ ಮಾಡುವುದು ಹೇಗೆ? ಅದೂ ರಾಜಕೀಯವಾಗಿ ಹೇಗೆ ಆ ಕುರಿತು ಪ್ರಯತ್ನಿಸಬಲ್ಲೆವು?

ಜಾತಿಪದ್ಧತಿಯನ್ನು ನಾಶಮಾಡಲು ಮೊದಲು ಅದನ್ನು ನಿರಾಕರಿಸಬೇಕು, ನಂತರ ಅದರ ಅಳಿದುಳಿದ ರೂಪಗಳ ವಿರುದ್ಧ ಹೋರಾಡಬೇಕು. ಇದರರ್ಥವೇನು? ಏನೆಂದರೆ ಬರಿಯ ಮುಗ್ಧತೆಯಿಂದಲೋ ಅಥವಾ ಜಾತಿಸಂಘರ್ಷದಿಂದಲೋ ಜಾತಿಪದ್ಧತಿಯನ್ನು ವಿರೋಧಿಸುವುದರಿಂದ ಅದು ನಾಶವಾಗುವುದಿಲ್ಲ. ಅದನ್ನು ನಾಶಮಾಡಲು ಅದನ್ನು ಮೀರಿಹೋಗಬೇಕು. ಜಾತಿಯು ಮೂಲತಃ ವಿಭಜಿಸುವ ಸಂಗತಿ; ಅದು ಶ್ರೇಣಿ ಮತ್ತು ನಿರಂತರತೆಯನ್ನು ಬಯಸುತ್ತದೆ. ಅದು ಎಂದಿಗೂ ಒಗ್ಗೂಡಿಸುವುದಿಲ್ಲ. ಜಾತಿಗೆ ಪ್ರತಿಮದ್ದು ಏನೆಂದರೆ ಅದರ ಮತ್ತೊಂದು ತುದಿಯಲ್ಲಿರುವ ವರ್ಗವ್ಯವಸ್ಥೆಯನ್ನು ಬಳಸಿಕೊಳ್ಳುವುದು. ಐಹಿಕವಾಗಿಯಾದರೂ ಅದು ಜನರನ್ನು ಒಗ್ಗೂಡಿಸುತ್ತದೆ.

ಇದು ಕಷ್ಟವೆನಿಸಬಹುದು, ಆದರೆ ಹಾಗೇನಿಲ್ಲ. ಜಾತಿ ಸಂಪ್ರದಾಯಗಳ ಒಂದೇ ಕಾರಣ ಒಡ್ಡಿ ಅಸ್ಪೃಶ್ಯ ಜಾತಿಗಳನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ನೀವು ಜಾತಿಯನ್ನು ತಂದ ಕೂಡಲೇ ಜಾತಿಪ್ರಜ್ಞೆ ಮತ್ತು ಜಾತಿ ಅಹಂಕಾರ ಅದರೊಟ್ಟಿಗೆ ಬಂದೇ ಬರುತ್ತವೆ. ಇವು ನಿಮ್ಮನ್ನು ಒಗ್ಗೂಡಲು ಎಂದೂ ಬಿಡುವುದಿಲ್ಲ. ಜಾತಿಯನ್ನು ಬಳಸದೇ ವರ್ಗಚಹರೆಯ ಆಧಾರದ ಮೇಲೆ ಜನರನ್ನು ಗುರುತಿಸಲು ಶುರುಮಾಡಿ. ಎಲ್ಲ ಸಾಮಾಜಿಕ ಅನಿಷ್ಟಗಳ ವಿರುದ್ಧ ವಿಶಾಲ ಸಮುದಾಯವನ್ನು ಆಗ ಒಗ್ಗೂಡಿಸಬಹುದು ಎಂದು ನಿಮಗೇ ಅರಿವಾಗುತ್ತದೆ.

ಪ್ರಾಯೋಗಿಕವಾಗಿ ಇದನ್ನು ಸಾಧಿಸಬೇಕೆಂದರೆ ಜಾತಿಯ ವಿರುದ್ಧ ಇರುವ ಶಕ್ತಿಗಳನ್ನು ನಿಧಾನ ಬೆಳೆಸಬೇಕು. ಅದರಲ್ಲೂ ಇಂದು ಉಪಜಾತಿಗಳಾಗಿ ಸಂಘಟನೆ ಒಡೆದು ಹೋಗಿರುವ ದಿನಗಳಲ್ಲಿ ತಾವೊಬ್ಬರೇ ಜಾತಿಪದ್ಧತಿ ನಾಶ ಮಾಡಲು ಅಸಾಧ್ಯ ಎಂದು ಅರಿತು ದಲಿತ ಚಳುವಳಿಯು ಪ್ರಜ್ಞಾಪೂರ್ವಕವಾಗಿ ವರ್ಗನೆಲೆಯ ಗ್ರಹಿಕೆ ಬೆಳೆಸಿಕೊಳ್ಳಬೇಕು. ಎಡಪಂಥೀಯ ಚಳುವಳಿಯೂ ಸಹಾ ಜಾತಿವಿನಾಶದಲ್ಲಿ ಪಾಲ್ಗೊಳ್ಳದೇ ತಳಸಮುದಾಯಗಳ ಕಾರ್ಮಿಕ-ಶ್ರಮಿಕರನ್ನು ಬಿಡುಗಡೆಗೊಳಿಸಿ ತಮ್ಮ ಜೊತೆ ಸೇರಿಸಿಕೊಳ್ಳದೇ ಸಾಮಾಜಿಕ ಕ್ರಾಂತಿಯ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಅರಿಯಬೇಕು.

ಚಳುವಳಿಗಳು ಇಲ್ಲಿನವರೆಗೆ ತಪ್ಪು ಹಾದಿ ಹಿಡಿದಿವೆ. ತಮ್ಮ ವಿಫಲತೆಯ ಹಿನ್ನೆಲೆಯಲ್ಲಿ ಇದನ್ನು ಅರಿಯಲು ಅವರಿಗೆ ಕಷ್ಟವಾಗಲಿಕ್ಕಿಲ್ಲ. ಕೆಳಜಾತಿಗಳ ಒಗ್ಗೂಡುವಿಕೆಯೇ ಸಮಾಜದ ಜಾತಿಪ್ರಜ್ಞೆಯನ್ನು ದುರ್ಬಲಗೊಳಿಸಬಹುದು. ಆದರೆ ಇಷ್ಟರಿಂದಲೇ ಜಾತಿನಾಶವಾಗುವುದಿಲ್ಲ, ಅದು ಒಂದಲ್ಲಾ ಒಂದು ಜಾತಿ ದೌರ್ಜನ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಎದುರಿಸಲು ಎಡಪಂಥೀಯರು ಒಗ್ಗೂಡಬೇಕು ಹಾಗೂ ಬಲಪ್ರಯೋಗ ಅನಿವಾರ್ಯವಾದಲ್ಲಿ ಸಿದ್ಧರಾಗಬೇಕು. ದಲಿತರ ಆತಂಕದ ಕ್ಷಣಗಳಲ್ಲಿ ಎಡಪಂಥವು ಅವರ ರಕ್ಷಣೆಗೆ ಧಾವಿಸಿದರೆ ಅವರಿಗೆ ಎಡಪಂಥದ ಬಗ್ಗೆ ಇರುವ ಅನುಮಾನವೂ ಪರಿಹಾರವಾಗುತ್ತದೆ, ಅವರನ್ನು ಹತ್ತಿರ ತರುತ್ತದೆ ಹಾಗೂ ಎಡಶಕ್ತಿ ಬಲಗೊಳ್ಳುತ್ತದೆ. ಈ ಬಲವನ್ನೇ ಜಾತಿನಾಶಕ್ಕೆ ಬಳಸಿಕೊಳ್ಳಬಹುದು. ಹೀಗೆ ಜಾತಿವಿರೋಧಿ ಶಕ್ತಿಗಳ ಪರಸ್ಪರ ಹೊಂದಾಣಿಕೆಯಿಂದ ಜಾತಿವಿನಾಶ ಕೊನೆಗೊಮ್ಮೆ ಸಾಧ್ಯವಾಗಬಹುದು.

ಜಾತಿಸಂಘರ್ಷ ಹಿಂಸಾತ್ಮಕವಾಗಿರಬೇಕೋ, ಅಹಿಂಸಾತ್ಮಕವಾಗಿರಬೇಕೋ?

ಇತಿಹಾಸದ ಉದಾಹರಣೆ ಹೇಳುವಂತೆ ಜಾತಿಸಂಘರ್ಷ ಎಂದೂ ವಿಧ್ವಂಸಕಾರಿಯಾಗಿಯೇ ಇದೆ. ಆದರೆ ಜಾತಿಗಳು ತಮ್ಮತಮ್ಮಲ್ಲೇ ಮೇಲ್ಮೆಗಾಗಿ ಕಚ್ಚಾಡಿದವೇ ಹೊರತು ಮೇಲ್ಜಾತಿ ಸ್ಥಾನ ಅನಿರ್ಬಂಧಿತವಾಗಿ ಮುಂದುವರೆಯಿತು. ನಿಜವಾದ ಸಂಘರ್ಷವಿಲ್ಲದಿದ್ದರೆ ಜಾತಿಸಂಘರ್ಷ ಕೇವಲ ಅವ್ಯಾವಹಾರಿಕ ಹಾಗೂ ಪೊಳ್ಳು ಆಡಂಬರವಾಗುತ್ತದೆ. ಜಾತಿಸಂಘರ್ಷ ಎಂದರೇನು? ಯಾವ ಜಾತಿ ಯಾವ ಜಾತಿಯ ವಿರುದ್ಧ ಹೋರಾಡುತ್ತದೆ? ಇತಿಹಾಸದಲ್ಲಿ ಈ ತೆರನ ಯುದ್ಧ ನಡೆದ ಉದಾಹರಣೆಗಳಿಲ್ಲ. ಹಾಗೆ ಸಂಭವಿಸಿತೆಂದು ಹೇಳುವವರಿಗೆ ತಾವೇನು ಹೇಳುತ್ತಿದ್ದೇವೆಂಬ ಅರಿವಿರಲಿಕ್ಕಿಲ್ಲ. ಹಿಂಸೆಯೋ, ಅಹಿಂಸೆಯೋ ಅದು ನನಗೆ ಮುಖ್ಯವಲ್ಲ.

ಕ್ರಿಯಾಶೀಲ ದಲಿತ್ ಪ್ಯಾಂಥರ್ ಚಳುವಳಿ ನೋಡಿದ್ದೇವೆ. ಆ ಚಳುವಳಿಯಿಂದ ಕಲಿಯಬೇಕಾದ ಪಾಠಗಳಿವೆಯೇ?

ವಿಶ್ವವಿದ್ಯಾಲಯಗಳಿಂದ ಹೊರಬಂದ, ಭವಿಷ್ಯದಲ್ಲಿ ಯಾವ ಭರವಸೆಯೂ ಕಾಣದ, ಜಾತಿದೌರ್ಜನ್ಯಗಳು ನಡೆಯುತ್ತ ಅದಕ್ಕೆ ಮುಖ್ಯವಾಹಿನಿಯ ನಾಯಕರಿಂದ ಯಾವ ಪ್ರತಿಕ್ರಿಯೆಯನ್ನೂ ಕಾಣದೆ ಹತಾಶಗೊಂಡಿದ್ದ ದಲಿತ ತರುಣರ ಗುಂಪಿನ ಸಹಜ ಪ್ರತಿಕ್ರಿಯೆ ದಲಿತ್ ಪ್ಯಾಂಥರ್ಸ್ ಉಗಮಕ್ಕೆ ಕಾರಣವಾಯಿತು. ಅದೇ ವೇಳೆಗೆ ಪ್ರಪಂಚದಾದ್ಯಂತ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುತ್ತಿದ್ದವು. ದಲಿತ್ ಪ್ಯಾಂಥರ್ಸ್ ಮಿಲಿಟಂಟ್ ಭಾಷೆಯಲ್ಲಿ ಮಾತನಾಡಿದ್ದೂ ಸಹಜವಾಗಿತ್ತು. ಅವರಿಗೆ ಅಮೆರಿಕದ ಬ್ಲ್ಯಾಕ್ ಪ್ಯಾಂಥರ್ಸ್ ಸ್ಫೂರ್ತಿಯಾಗಿದ್ದರು. ಆದರೆ ಅವರ ಅವರ ಮಿಲಿಟೆಂಟ್ ಹೋರಾಟಕ್ಕೆ ಬೆಂಬಲವಾಗಿ ಅಂಬೇಡ್ಕರ್ ೧೯೩೬ರಲ್ಲಿ ಹೇಳಿದ ಮೂರು ವಿಷಯಗಳು - ಸಂಘಟನಾ ಶಕ್ತಿ, ಆರ್ಥಿಕ ಶಕ್ತಿ ಮತ್ತು ಬೌದ್ಧಿಕ ಶಕ್ತಿ ಬೆಂಬಲವಾಗಿ ದೊರೆಯಲಿಲ್ಲ.

ರ್‍ಯಾಡಿಕಲ್ ಐಡಿಯಾಲಜಿಯನ್ನಿಟ್ಟುಕೊಂಡು ಅವರು ಮುಗ್ಗರಿಸಿದರು. ಆದರೆ ಅದೇ ಐಡಿಯಾಲಜಿಯಿಂದ ಬೌದ್ಧಿಕ ಹಾಗೂ ಸಂಘಟನಾತ್ಮಕ ಶಕ್ತಿ ಪಡೆಯಬಹುದಾಗಿತ್ತು. ಅವರಲ್ಲೇ ಒಂದು ಗುಂಪು ಅಂಬೇಡ್ಕರ್ ಬೋಧಿಸಿದ ಬೌದ್ಧಧರ್ಮದ ದಾರಿಯಿಂದ ದೂರ ಸರಿಯುತ್ತಿರುವುದನ್ನು ಬೊಟ್ಟುಮಾಡಿ ತೋರಿಸಿ ಬೇರೆಯಾದರು. ಇದು ದಲಿತ ಚಳುವಳಿಯ ಸೈದ್ಧಾಂತಿಕ ಮಿತಿಯನ್ನು ಬಹಿರಂಗಗೊಳಿಸಿತು. ಈಗ ಅದರ ಪಳೆಯುಳಿಕೆ ಸ್ವಲ್ಪ ಕಾಣಿಸಿದರೂ ದಲಿತ್ ಪ್ಯಾಂಥರ್ಸ್ ಅಕಾಲಮೃತ್ಯುವಿಗೀಡಾಯಿತು. ವ್ಯಾವಹಾರಿಕವಾಗಿ ವಿಶ್ಲೇಷಿಸಿದರೆ ಅದರಿಂದ ಇತ್ಯಾತ್ಮಕ ಫಲಿತಾಂಶವೇನೂ ಬಂದಿಲ್ಲವೆನಿಸಬಹುದು. ಆದರೆ ಸಾಂಕೇತಿಕವಾಗಿ ದಲಿತ ತರುಣರ ಪ್ರತಿರೋಧವು ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸಿ ಭಯಗೊಳಿಸಿದ್ದು ಸುಳ್ಳಲ್ಲ. ದಲಿತ್ ಪ್ಯಾಂಥರ್ಸ್‌ಗೆ ದೊರಕಿದ ಖ್ಯಾತಿ ಮುಖ್ಯವಾಗಿ ಅದು ವ್ಯವಸ್ಥೆಗೆ ತಂದೊಡ್ಡಿದ ಅಪಾಯದಿಂದಲೇ ಎನ್ನುವುದೂ ಗಮನಿಸಬೇಕಾದ ಸಂಗತಿಯೇ.

ನನ್ನ ಪ್ರಕಾರ ದಲಿತ್ ಪ್ಯಾಂಥರ್ಸ್ ವಿಫಲತೆಯಿಂದ ಕಲಿಯಬಹುದಾದ ಪಾಠ ಏನೆಂದರೆ: ದಲಿತರ ವಾಸ್ತವ ಅಗತ್ಯಗಳಿಗೂ ಮತ್ತು ದಲಿತ ಚಳುವಳಿಯ ಕಲ್ಪಿತ ಸಿದ್ಧಾಂತಕ್ಕೂ ನಡುವೆ ಹೊಂದಾಣಿಕೆ ಇಲ್ಲದೇ ಇದ್ದದ್ದು. ರಾಜಾ ಢಾಳೆ ನೇತೃತ್ವದ ಗುಂಪು ಅಂಬೇಡ್ಕರ್ ಮಾರ್ಗದ ಅಂತಿಮ ಗುರಿ ಬೌದ್ಧದರ್ಮದೆಡೆಗಿನ ನಡಿಗೆಯೇ ಎಂದು ಭಾವಿಸಿತು ಹಾಗೂ ಎಡ ಸಿದ್ಧಾಂತ ಅದಕ್ಕೆ ಸಂಪೂರ್ಣ ವಿರೋಧಿಯೆಂದು ಬಗೆಯಿತು. ಅಂಬೇಡ್ಕರ್ ಜೊತೆಜೊತೆ ಪರಿಭಾವಿಸುವುದರಿಂದ ಬೌದ್ಧಧರ್ಮವು ಭಾವುಕವಾಗಿ ತುಂಬ ಆಕರ್ಷಕವೇನೋ ಹೌದು. ಈ ವಿಚಾರ ಭಿನ್ನತೆ ದಲಿತ್ ಪ್ಯಾಂಥರ್ಸ್‌ನ್ನು ಒಡೆಯಿತು ಮತ್ತು ಅದು ನಂತರ ಒಡೆದು ಹೋಳಾಗುತ್ತಲೇ ಬಂತು. ಜಾತಿಯಾಧಾರಿತ ಸಂಘಟನೆಗಳಿಗೆ ಅದು ಸಹಜವೂ ಹೌದು.

ಈಗ ಉಳಿದಿರುವುದು ಅದರ ಸವಕಲು ದೇಹ, ಅದೂ ಅದರ ವಿರೋಧಾಭಾಸವಾಗಿ ಕಾಣಿಸುತ್ತದೆ. ಅದು ಆಳುವವರ ಪರವಾಗಿ ದಲಿತ ಚಳುವಳಿಯನ್ನು ಸಂಪೂರ್ಣ ನಾಶಮಾಡುತ್ತಿದೆ. ಅದು ಬೇರೆ ರಾಜ್ಯಗಳಲ್ಲಿಯೂ ಶುರುವಾದರೂ ಮಹಾರಾಷ್ಟ್ರದ ಮಾದರಿಯಲ್ಲೇ ಅಕಾಲ ಮರಣಕ್ಕೀಡಾಯಿತು. ಇದರಿಂದ ಕಲಿಯಬೇಕಾಗಿರುವ ಇನ್ನೊಂದು ಪಾಠವೆಂದರೆ ದಲಿತರು ತಮ್ಮದೇ ವರ್ಗದ ಇತರರೊಂದಿಗೆ ಕೈಜೋಡಿಸದಿದ್ದರೆ ತಮ್ಮ ಗುರಿ ಸಾಧಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಮೂರನೆಯ ಪಾಠವೆಂದರೆ ನೀತಿಯ ಕುರಿತಾದುದು. ಸರಿಯಾದ ನೀತಿಬೆಂಬಲವಿಲ್ಲದಿದ್ದರೆ ಮಿಲಿಟೆಂಟ್ ಧೋರಣೆಯೇ ಚಳುವಳಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ.

ಮೇಲ್ಕಾಣಿಸಿದ ವಿಷಯಗಳು ದಲಿತ್ ಪ್ಯಾಂಥರ್ಸ್ ಎಲ್ಲಿ ತಪ್ಪಿತು ಎಂದು ಸೂಚಿಸುತ್ತವೆ. ಮತ್ತೆ ಒತ್ತಿ ಹೇಳಬೇಕೆಂದರೆ ಅದು ರ್‍ಯಾಡಿಕಲ್(ಪುರೋಗಾಮಿ) ಕಾರ್ಯನೀತಿಗೆ ತಕ್ಕ ಸೈದ್ಧಾಂತಿಕ ಪುನಾರಚನೆ ಮಾಡುವಲ್ಲಿ ವಿಫಲವಾಯಿತು. ಮುಖ್ಯವಾಹಿನಿಯ ದಲಿತ ಚಳುವಳಿ ಏಕೆ ವಿಫಲವಾಯಿತು ಎಂಬ ಬಗ್ಗೆ ಪ್ಯಾಂಥರ್ಸ್ ಯೋಚಿಸಿ ಹೆಜ್ಜೆ ಇಟ್ಟಿದ್ದರೆ ಬಹುಶಃ ಸೈದ್ಧಾಂತಿಕ ಮತ್ತು ಇನ್ನಿತರ ತಪ್ಪುಗಳನ್ನು ತಿದ್ದಿಕೊಳ್ಳಬಹುದಿತ್ತು. ಅದಕ್ಕೆ ಪುರೋಗಾಮಿಯಾದ ಗುರಿಯಿದ್ದರೂ ಜಾತಿ ಸಮುದಾಯಗಳ ಹುದಲದಲ್ಲಿ ಸಿಲುಕಿಕೊಂಡಿತು ಮತ್ತು ತನ್ನ ಸಂಘಟನಾ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳುವಲ್ಲಿ ಸೋಲಬೇಕಾಯ್ತು.

ನೀವು ದಲಿತ ಪ್ರಜ್ಞೆ ಹಾಗೂ ಜಾತಿವಿನಾಶ ಚಳುವಳಿಯಲ್ಲಿ ಹೇಗೆ ತೊಡಗಿಸಿಕೊಂಡಿರಿ?

ಭೂಹೀನ ಕೃಷಿಕಾರ್ಮಿಕ ಕುಟುಂಬದಲ್ಲಿ ಹುಟ್ಟಿ ನಮ್ಮ ಹಳ್ಳಿಯಲ್ಲಿದ್ದ ಬೇರೆಬೇರೆ ತೆರನ ಅಸಮಾನತೆಗಳ ಕುರಿತು ತಿಳುವಳಿಕೆ ಹುಟ್ಟಿತು. ಹಾಗೆ ನಮ್ಮದು ಪಕ್ಕಾ ಹಳ್ಳಿಯೇನಾಗಿರಲಿಲ್ಲ. ಅಲ್ಲೊಂದು ರೈಲ್ವೇ ಸ್ಟೇಷನ್ ಇತ್ತು. ತಾಲೂಕು ಕೇಂದ್ರ ಸಂಪರ್ಕಿಸುವ ರಸ್ತೆಯಿತ್ತು. ಸುಣ್ಣದ ಫ್ಯಾಕ್ಟರಿಗಳು ಹಾಗೂ ಕಲ್ಲಿದ್ದಲು ಗಣಿಗಳಿದ್ದವು. ಜಾತಿ ಸಾಮಾಜೀಕರಣವನ್ನು ದಾಟಿ ಆಚೆ ಬರಲು ನನಗಿದರಿಂದ ಸಾಧ್ಯವಾಯ್ತು. ಎಲ್ಲವನ್ನೂ ಕ್ರಾಂತಿಕಾರಿ ದೃಷ್ಟಿಕೋನದಿಂದ ನೋಡತೊಡಗಿದೆ. ಎರಡನೇ ತರಗತಿಯಿರುವಾಗ ತರಗತಿಗೆ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕೆ ದೊರೆತ ಜೋಸೆಫ್ ಸ್ಟಾಲಿನ್ನನ ಆತ್ಮಕತೆ ಓದಿ ಮಾರ್ಕ್ಸಿಸಂನತ್ತ ಆಕರ್ಷಿತನಾದೆ. ಅದು ಅಂಬೇಡ್ಕರ್ ಕುರಿತು ಏನಾದರೂ ಓದುವ ಬಹಳ ವರ್ಷಗಳ ಮುಂಚೆಯೇ ಸಂಭವಿಸಿದ್ದು.

ಮಾರ್ಕ್ಸ್‌ವಾದ ಕಲಿಸಲು ನನಗ್ಯಾರೂ ಗುರುಗಳಿರಲಿಲ್ಲವಾಗಿ ನಿಧಾನವಾಗಿ ವಾಸ್ತವ ಮತ್ತು ಸಿದ್ಧಾಂತಗಳನ್ನು ಜಿಜ್ಞಾಸೆಗೊಳಪಡಿಸುತ್ತ ಅರಿತುಕೊಳ್ಳುತ್ತ ಹೋದೆ. ಅದು ಬಗೆಹರಿಸಿಕೊಳ್ಳಬೇಕಾದ ಎಷ್ಟೋ ಅಸಂಬದ್ಧತೆಗಳನ್ನು ತೋರಿಸಿಕೊಟ್ಟಿತು. ಜಾತಿಪ್ರಜ್ಞೆಯು ವರ್ಗಪ್ರಜ್ಞೆ ಮೂಡುವ ಪ್ರಕ್ರಿಯೆಯನ್ನೇ ತಡೆದುಬಿಡುವ ವಾಸ್ತವದೆದುರು ಇದು ನನ್ನನ್ನು ತಂದು ನಿಲ್ಲಿಸಿತು. ನನಗೆ ನಂತರ ಗಟ್ಟಿಯಾಯಿತು - ಜಾತಿಪ್ರಜ್ಞೆ ಮತ್ತು ವರ್ಗಪ್ರಜ್ಞೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇರುವ ದ್ವಂದ್ವವೇ ಮೊದಲ ಕಮ್ಯುನಿಸ್ಟರ ವಿಫಲತೆ ಎಂದು. ವರ್ಗ ವಿಶ್ಲೇಷಣೆ ಮಾಡುವಾಗ ಈ ದೇಶದ ಸಾಮಾಜಿಕ ವಾಸ್ತವದ ವಿಶಿಷ್ಟತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿ ಪಾಶ್ಚಿಮಾತ್ಯ ಎರಕಕ್ಕೆ ತಕ್ಕಂತೆ ಇಲ್ಲಿನ ವಿಶ್ಲೇಷಣೆ ಕೈಗೊಂಡರು. ಯಾವುದೇ ದೇಶದ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ವರ್ಗ ವಿಶ್ಲೇಷಣೆ ಮಾಡಬೇಕಾಗುತ್ತದೆ. ಇದನ್ನು ಮಾಡಿದ್ದರೆ ಜಾತಿಗಳನ್ನು ವರ್ಗದೊಳಗೆ ಕೂರಿಸಿಬಿಡಬಹುದಿತ್ತು. ದುರದೃಷ್ಟವಶಾತ್ ಹಾಗಾಗದೇ ಇಂದಿನವರೆಗೂ ದ್ವಂದ್ವ ಉಳಿದುಕೊಂಡೇ ಬಂತು. ಹಾಗೇನಾದರೂ ಆಗಿದ್ದಲ್ಲಿ ಭಾರತ ದೇಶದ ಚರಿತ್ರೆಯೇ ಬದಲಾಗಿಬಿಡುತ್ತಿತ್ತು.

ಈ ವಿಷಯಕ್ಕೆ ಮುಖಾಮುಖಿಯಾಗದೇ ಗಮನಾರ್ಹವಾದದ್ದೇನೂ ಇಲ್ಲಿ ಸಂಭವಿಸುವುದಿಲ್ಲ.ಜನರನ್ನು ಒಡೆಯಲು ಜಾತಿಯೆನ್ನುವುದು ಯಾವಾಗಲೂ ಆಳುವ ವರ್ಗದ ಅಸ್ತ್ರವಾಗಿದೆ. ಈ ಅಸ್ತ್ರವನ್ನು ನಾಶ ಮಾಡುವುದು ಅತ್ಯವಶ್ಯವಾಗಿದೆ. ತಳ ಸಮುದಾಯಗಳನ್ನು ಪೂರಾ ಒಗ್ಗೂಡಿಸುವುದು ಭಾರತದ ಯಾವುದೇ ಕ್ರಾಂತಿಕಾರಿ ಚಳುವಳಿಯ ಪ್ರಥಮ ಹೆಜ್ಜೆಯಾಗಬೇಕಾಗಿದೆ.(ಮುಂದುವರೆಯುವುದು)
ಕನ್ನಡಕ್ಕೆ : ಡಾ . ಎಚ್ .ಎಸ್ . ಅನುಪಮಾ

Wednesday, May 30, 2012

ಹನ್ನೊಂದು ದ್ವಿಪದಿಗಳು


1
ಬಂಜೆ ಎಂದು ಹಂಗಿಸಿದ ಮನೆ-ಮಂದಿಯಾಸೆ ಅಲ್ಲೇ ನೆಲೆ ನಿಂತಿತು
ಮನೆ ಬಾಗಿಲಿಗೆ ಬಂದು ತಾಯೀ ಎಂದು ಕರೆದ ಭಿಕ್ಷುಕನ ಬಯಕೆ ಹಾಗೆ ಮುನ್ನಡೆಯಿತು

2

ಹಾರುವ ಹಕ್ಕಿ ನಗುವ ನಿನ್ನ ಕಂಗಳು
ಪದಗಳಿಲ್ಲದ ನನ್ನ ಕವಿತೆಯನ್ನು ಇನ್ನೆಲ್ಲೂ ಹುಡುಕಬೇಡ

3

ಬದುಕೆ ಹೀಗೆ ಕಾಡುವುದಕ್ಕಿಂತ ಇರುವ ಕಣ್ಣೀರೆಲ್ಲ ಒಮ್ಮೆಗೆ ಕುಡಿದುಬಿಡು
ಕೊನೆಯ ಹನಿಗೆ ನಾಲಿಗೆ ಚಾಚಿದ ಉನ್ಮಾದವ ಹೆಜ್ಜೆಗೊಮ್ಮೆ ಕೊಲ್ಲಬೇಡ

4

ಹಿಂದಿನಂತಲ್ಲ ಈ ಸಲದ ಬೇಸಿಗೆ ಬಿಸಿಲ ಬೇಗೆಗೆ ಬವಳಿ ಬರುವಂಥ ಸೂರ್ಯನುರಿ
ನಮ್ಮಿಂದಾಗಿಯೇ ನಮ್ಮಂತೆ ಆ ಸೂರ್ಯನಲ್ಲೂ ಬೆಳೆದಿದೆ ಸುಮ್ಮನೆ ಸುಡುವ ಗುಣ

5

ಕಾಲದಿಂದ ಕಾಲಕೆ ಈ ಬದುಕು ಸೋಲುತ್ತಲೇ ಬಂದಿತು
ಏನು ಮಾಡುವುದು ಶತ್ರು ಹೊರಗಡೆ ಇರುವನೆಂದು ತಿಳಿದಿದ್ದೆ ತಪ್ಪಾಯಿತು

6

ನಾನು ನಿನ್ನ ಪ್ರೀತಿಸುತ್ತಿರುವೆ ಆ ಕಾರಣಕ್ಕಾಗಿ ನೀನು ನನ್ನನು ಕೊಲ್ಲುತ್ತಿರುವೆ
ಮನ್ನಿಸು ಜೀವವೆ ವಿರಹದ ಬೇಗೆಗೆ ನನ್ನಲಿ ಬೇರೆ ಶಬ್ದಗಳಿಲ್ಲ..................

7

ಈ ದುಃಖವನು ಗಾಳಿಗೆ ತಲುಪಿಸಿದೆ
ದಯಾಳು ಗಾಳಿ ಉದುರಿಬೀಳುವ ಎಲೆಯ ಮೌನದ ಗಳಿಗೆಯನು ಬೊಗಸೆಗೆ ತುಂಬಿತು

8

ನಿನ್ನ ಅಂದಾಜಿನಂತೆ ಲೋಕವೆ ಅದೆಷ್ಟೊ ಸಲ ದಾರಿ ತಪ್ಪಿದ್ದೇನೆ
ನನ್ನ ತಪ್ಪೇನಿತ್ತು ನಿನ್ನ ಸರಿ ದಾರಿಯಲಿ ಹೋದಾಗಲೆಲ್ಲ ನನಗವಳ ಮನೆಯೇ ಕಾಣಲಿಲ್ಲ!

9

ಅಕ್ಷರವಾಗುವ ದುಃಖವೆ ನೀನಿಲ್ಲಿರಬೇಡ
ಕಣ್ಣೀರನ್ನ ಕವಿತೆಯೆಂದು ಯಾರೂ ಕರೆಯುವುದಿಲ್ಲ

10

ಕೇಳಿದ ಮಾತು ಕಠೋರ ಕೇಳದಿರುವ ಮಾತು ಇನ್ನೂ ಕಠೋರ
ಆ ಮಾತು ಸುಳ್ಳೆನ್ನಲಾರೆ ನಾನುಂಡನುಭವವು ನಿನ್ನ ಹಾಗೆ ಬರಿಯಗೊಡದು

11

ನೀನು ಬದುಕಿಸಿದೆ
ಅದಕೆಂದೇ ನನಗೀಗ ಸಾವಿನನುಭವ

Tuesday, May 29, 2012

ಅಂಬೇಡ್ಕರ್ ನಂತರ ದಲಿತ ಚಳುವಳಿ ಮತ್ತು ಚಳುವಳಿಗಾಗಿ ಅಂಬೇಡ್ಕರ್

August 19th, 2011
Email this page

Nothing changes in India fundamentally


Teltumbde Anand
-ಆನಂದ ತೇಲ್ತುಂಬ್ಡೆ


ಅಂಬೇಡ್ಕರರ ನಂತರ ದಲಿತ ಚಳವಳಿ ಅಂಬೇಡ್ಕರರ ಸುತ್ತ ಕಟ್ಟಿಕೊಂಡಿರುವ ಪ್ರತಿಮೆಗಳು ಅಂಬೇಡ್ಕರರನ್ನು ಸಂವಿಧಾನದ ಕರ್ತೃವೆಂದೂ, ಪ್ರಸ್ತುತ ವ್ಯವಸ್ಥೆಗೆ ಕಾರಣೀಭೂತರೆಂದೂ, ಒಬ್ಬ ಭೋಧಿಸತ್ವನೆಂದೂ, ಒಬ್ಬ ಸಂವಿಧಾನವಾದಿಯೆಂದೂ, ಒಬ್ಬ ಅವಧೂತನೆಂದೂ, ಒಬ್ಬ ರಕ್ಷಕನೆಂದೂ, ಒಬ್ಬ ಉದಾರವಾದಿ ಪ್ರಜಾತಂತ್ರವಾದಿಯೆಂದೂ, ಒಬ್ಬ ದಲಿತರ ನಾಯಕನೆಂದೂ, ಒಬ್ಬ ಕಡು ಕಮ್ಯುನಿಸ್ಟ್ ವಿರೋಧಿಯೆಂದೂ, ಸುಧಾರಣಾವಾದದಲ್ಲಿ ನಂಬಿಕೆಯಿಟ್ಟಿದ್ದ ಮತ್ತು ಕ್ರಾಂತಿಗಳ ವಿರೋಧಿಯೆಂದೂ ಬಣ್ಣಿಸುತ್ತವೆ. ಈ ಬಗೆಯಲ್ಲಿ ಅಂಬೇಡ್ಕರರ ಬಗ್ಗೆ ಇರುವ ಒಂದು ಪೆಟಿ-ಬೂರ್ಜ್ವಾ ಚಿತ್ರಣವೇ ಇಂದು ದಲಿತ ಚಳವಳಿಯನ್ನು ಆವರಿಸಿಕೊಂಡಿದೆ. ಈ ಬಗೆಯ ಬಣ್ಣನೆಗಳು ಅಂಬೇಡ್ಕರರೊಳಗಿದ್ದ ಯಾವುದೇ ಬಗೆಯ ಶೋಷಣೆ, ಅನ್ಯಾಯ, ಕಪಟಗಳಿಲ್ಲದ ಮಾನವ ಸಮಾಜದ ಕನಸುಗಾರನನ್ನು ಕಟ್ಟಿಕೊಡಲು ವಿಫಲವಾಗುತ್ತವೆ.

ದಲಿತ ಚಳವಳಿಯ ಬಹಳಷ್ಟು ಅಧ್ಯಯನಗಳು ಅಂಬೇಡ್ಕರರನ್ನು ಒಬ್ಬ ಉದಾರವಾದಿ ಪ್ರಜಾತಂತ್ರವಾದಿಯೆಂದು ಚಿತ್ರಿಸುವ ಚೌಕಟ್ಟಿನಿಂದಲೇ ಪ್ರಭಾವಿತವಾಗಿವೆ. ಆದರೆ ಅದು ನಿಜವಾದ ಅಂಬೇಡ್ಕರರನ್ನು ಪ್ರತಿನಿಧಿಸುತ್ತದೆಯೆ? ಅದು ಅಂಬೇಡ್ಕರ್ ಚಳವಳಿಯ ನಿಜವಾದ ಅಂತಃಸತ್ವವನ್ನು ಹಿಡಿದಿಡುತ್ತದೆಯೇ? ಎಲ್ಲಕ್ಕಿಂತ ಹೆಚ್ಚಾಗಿ ದಲಿತರ ವಿಮೋಚನಾ ಚಳವಳಿಯಲ್ಲಿ ನಾವು ಅಸ್ತ್ರದಂತೆ ಬಳಸಬೇಕೆಂದಿರುವುದು ಅಂಬೇಡ್ಕರರ ಈ ಪ್ರತಿಮೆಯನ್ನೇ?

ಒಂದು ಸಾಮಾಜಿಕ ಸಮುದಾಯವಾಗಿ ದಲಿತರು ಈಗಲೂ ಅತ್ಯಂತ ಬಡವರ್ಗದವರು. ಅವರಲ್ಲಿ ಕೆಲವೇ ಕೆಲವರು ಮೀಸಲಾತಿ ಮತ್ತು ರಾಜಕೀಯ ಅವಕಾಶಗಳಂತಹ ಪ್ರಭುತ್ವ ನೀತಿಗಳಿಂದಾಗಿ ಬಡತನದ ಬಲೆಯಿಂದ ಮುಕ್ತರಾಗಿ ಹೇಳಿಕೊಳ್ಳಬಹುದಾದಷ್ಟು ಸಂಪನ್ನರಾಗಿದ್ದಾರೆ. ಆದರೆ ಸಾಮಾಜಿಕ ಸ್ತರದಲ್ಲಿ ಆರ್ಥಿಕ ಸ್ಥಾನಮಾನಗಳೇನೇ ಇದ್ದರೂ ಎಲ್ಲಾ ದಲಿತರು ಇನ್ನೂ ದಮನಕ್ಕೆ ಒಳಗಾಗಿಯೇ ಇದ್ದಾರೆ. ಈ ಸಾಮಾಜಿಕ್ಕ ದಮನವು ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವ ಅತಿ ಕ್ರೂರ ಅಸ್ಪೃಶ್ಯತೆಯಂತಹ ಆಚರಣೆಗಳಿಂದ ಹಿಡಿದು, ನಗರ ಜೀವನದ ಆಧುನಿಕ ಕ್ಷೇತ್ರಗಳಲ್ಲೂ ಕಂಡುಬರುವ ಸೂಕ್ಷ್ಮ ಭೇದಭಾವಗಳವರೆಗೆ ಹರಡಿಕೊಂಡಿದೆ. ಕಳೆದ ಐದು ದಶಕಗಳ ಅಂಕಿಅಂಶಗಳು ತೋರಿಸಿಕೊಡುವಂತೆ ದಲಿತರ ಸ್ಥಿತಿಗತಿ ಎಲ್ಲಾ ಕ್ಷೇತ್ರಗಳಲ್ಲೂ ಮೊದಲಿಗಿಂತ ಸುಧಾರಿಸಿದ್ದರೂ ದಲಿತರಿಗೂ ಹಾಗೂ ದಲಿತೇತರಿಗೂ ನಡುವೆ ಇರುವ ಅಂತರ ಅದೇ ರೀತಿ ಇದೆ ಅಥವಾ ಇನ್ನಷ್ಟು ಹೆಚ್ಚಾಗಿದೆ. ದಲಿತರಲ್ಲಿ ಈಗಲೂ ಶೇ.೭೫ರಷ್ಟು ಇನ್ನೂ ಭೂಮಿಗೇ ಅಂಟಿಕೊಂಡಿದ್ದಾರೆ. ಇವರಲ್ಲಿ ಶೇ.೨೫ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತಾಪಿಯಾಗಿದ್ದರೆ ಉಳಿದ ಶೇ.೫೦ರಷ್ಟು ಭೂ ಹೀನ ಕೂಲಿಗಳೇ. ಒಟ್ಟಾರೆ ರೈತಕೂಲಿಗಳಲ್ಲಿ ದಲಿತರ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ನಗರ ಪ್ರದೇಶದಲ್ಲೂ ಅವರು ಹೆಚ್ಚಾಗಿ ಅಸಂಘಟಿತ ವಲಯಗಳಲ್ಲೇ ಕೆಲಸ ಮಾಡುತ್ತಾರೆ. ಅಲ್ಲಿನ ಕೆಲಸದ ವಾತವರಣ ಹಳ್ಳಿಗಾಡಿನ ಊಳಿಗಮಾನ್ಯ ಪರಿಸ್ಥಿತಿಯನ್ನೇ ನೆನಪಿಸುವಂತಿರುತ್ತದೆ. ಒಟ್ಟಾರೆ ದಲಿತರ ಜನಸಂಖ್ಯೆ ೧೩.೮ ಕೋಟಿಯಾಗಿದ್ದರೆ ಅದರಲ್ಲಿ ಕಸಗುಡಿಸುವ ಕೆಲಸವನ್ನೂ ಒಳಗೊಂಡಂತೆ ಸೇವಾ ಕ್ಷೇತ್ರಗಳಲ್ಲಿ ಮೀಸಲಾತಿಯಿಂದ ದೊರೆಯುವ ಉದ್ಯೋಗದ ಸಂಖ್ಯೆ ೧೩ ಲಕ್ಷಗಳನ್ನು ದಾಟುವುದಿಲ್ಲ. ಇದು ಒಂದು ಪರ್ಸೆಂಟಿನಷ್ಟು ಆಗುವುದಿಲ್ಲ. ಈ ಅಂಕಿಅಂಶಗಳೂ ಸಹ ಸರಿಯಾದ ಚಿತ್ರಣವನ್ನೇನೂ ನೀಡುವುದಿಲ್ಲ. ಏಕೆಂದರೆ ಈ ೧೩ ಲಕ್ಷದಷ್ಟು ಉದ್ಯೋಗಗಳಲ್ಲಿ ಹಲವಾರು ಸಾರ್ವಜನಿಕ ಉದ್ಯಮಗಳಲ್ಲಿರುವ ಗುಮಾಸ್ತ ರೀತಿಯ ಉದ್ಯೋಗಗಳನ್ನೂ ಸೇರಿಸಿ ಎ ಮತ್ತು ಬಿ ವರ್ಗದ ಉದ್ಯೋಗಗಳು ಕೇವಲ ೭೨೨೧೨. ಆದರೆ ಚಪರಾಸಿ ಉದ್ಯೋಗಗಳ ಸಂಖ್ಯೆ ೧೩೧೮೪೧!

ವಿಶ್ವದಲ್ಲಿ ಹೊಸ ರಾಜಕೀಯ ಆರ್ಥಿಕ ವ್ಯವಸ್ಥೆ ಜಗತ್ತನ್ನೇ ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ದಲಿತರ ವಿಮೊಚನಾ ಹೋರಾಟಗಳ ವ್ಯಾಕರಣ ದಲಿತರಿಗೆ ಈವರಗೆ ಪರಿಚಿತವಾಗಿರುವ ಭಾಷೆಗಿಂತ ಸಂಪೂರ್ಣ ಭಿನ್ನವಾಗಿದೆ. ಈ ಘಾತುಕ ಶಕ್ತಿಗಳ ಆಕ್ರಮಣವನ್ನು ವಿಶ್ವದ ಎಲ್ಲ್ಲಾ ದಮನಿತರು ಅರ್ಥ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ದಲಿತರು ತಮ್ಮನ್ನು ಅವರ ಭಾಗವಾಗಿ ಕಂಡುಕೊಳ್ಳದೇ ಹೋಗುವುದು ಮೂರ್ಖತನವಾಗುತ್ತದೆ. ಒಂದು ಸಾಮಾಜಿಕ ಘಟಕವಾಗಿ ದಲಿತರ ಬದುಕನ್ನು ದೇಶದ ಆರ್ಥಿಕತೆಯ ಸಂಘಟಿತ ಕ್ಷೇತ್ರಕ್ಕೆ ಸೇರಿಕೊಂಡು ಮಾಯವಾದ ಅಲ್ಪಸಂಖ್ಯಾತ ದಲಿತ ಸಮುದಾಯ ಪ್ರತಿನಿಧಿಸುವುದಿಲ್ಲ. ಬದಲಿಗೆ ಈಗಲೂ ಹಳ್ಳಿಯಲ್ಲೇ ಉಳಿದುಕೊಂಡಿರುವ ಮತ್ತು ನಗರದ ಅಸಂಘಟಿತ ಕ್ಷೇತ್ರಗಳಲ್ಲಿ ನಲುಗುತ್ತಿರುವ ದಲಿತರ ಬದುಕು ಅದರ ನಿಜವಾದ ಪ್ರತಿನಿಧಿ. ವಾಸ್ತವವಾಗಿ ತಮ್ಮ ವಿಮೊಚನೆಗಾಗಿ ಸಮರವನ್ನು ನಡೆಸುತ್ತಿರುವ ಈ ಸಮುದಾಯಕ್ಕೆ ಅಸ್ತ್ರಗಳ ಅಗತ್ಯವಿದೆ. ಈ ಸಮರವನ್ನು ಏಕಕಾಲದಲ್ಲಿ ಎರಡು ಅಂಗಣಗಳಲ್ಲಿ ನಡೆಸುವ ಅಗತ್ಯವಿದೆ-ಜಾತಿ ಮತ್ತು ವರ್ಗ. ಆದರೆ ಈ ಎರಡು ಅಂಶಗಳನ್ನು ಅತ್ಯಂತ ಸಂಕುಚಿತವಾಗಿ ಹಾಗೂ ವಿಭಾಗೀಕರಿಸಿ ಅರ್ಥೈಸಿಕೊಂಡಿರುವುದರಿಂದ ಒಂದನ್ನು ಹೊರತುಪಡಿಸಿ ಮತ್ತೊಂದನ್ನು ನೋಡುವ ಪ್ರವೃತ್ತಿ ಬೆಳೆದಿದೆ. ಆದರೆ ಇಂದಿಗೂ ದಲಿತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಇತರ ಯಾವುದಕ್ಕಿಂತಲೂ ಅಂಬೇಡ್ಕರ್ ಉತ್ತಮವಾದ ಚೌಕಟ್ಟನ್ನು ಒದಗಿಸಿಕೊಡುವುದರಿಂದ ಹಾಗೂ ಅಂಬೇಡ್ಕರ್ ಈಗಲೂ ದಲಿತರ ಹೃದಯಗಳಲ್ಲಿ ಅಚಲವಾದ ಸ್ಥಾನವನ್ನು ಪಡೆದಿರುವುದರಿಂದ ಅಂಬೇಡ್ಕರರ ಶಸ್ತ್ರಾಗಾರದಲ್ಲಿರುವ ಶಸ್ತ್ರಾಸ್ತ್ರಗಳಿಗೆ ಹಿಡಿದಿರುವ ತುಕ್ಕನ್ನು ತೊಳೆದು ಹರಿತಗೊಳಿಸುವ ಅಗತ್ಯವಿದೆ. ಬದಲಾದ ಸಂದರ್ಭದಲ್ಲಿ ಅದರ ಪರಿಣಾಮಕಾರಿಯಾದ ಬಳಕೆಗಾಗಿ ಅಗತ್ಯವಿರುವ ಪರಾಮರ್ಶೆಯನ್ನು ಮಾಡುವ ಹಾಗೂ ಮತ್ತಷ್ಟು ಪುಷ್ಟಿಗೊಳಿಸುವ ಅಗತ್ಯವಿದೆ. ಬುದ್ಧನ ರೀತಿ ಅಂಬೇಡ್ಕರ್ ಸಹ ತಮ್ಮ ಕೈಯಲ್ಲೇ ಪುನರ್‌ನಿರ್ವಚನಕ್ಕೆ ಒಳಪಡುವ ಅಗತ್ಯವಿದೆ. ನಮ್ಮನ್ನು ಲೂಟಿ ಹೊಡೆಯುತ್ತಿರುವ ದರೋಡೆಕೊರರ ಬಳಿ ಸಣ್ಣಪುಟ್ಟ ಉಪಕಾರಕ್ಕಾಗಿ ಭಿಕ್ಷೆ ಬೇಡದೆ ಇಡೀ ಪ್ರಪಂಚವನ್ನೇ ತಮ್ಮದೆಂದು ಹಕ್ಕಿನಿಂದ ಪ್ರತಿಪಾದಿಸುವಂತೆ ಜನತೆಯನ್ನು ಸ್ಪೂರ್ತಿಗೊಳಿಸುವ ರೀತಿಯಲ್ಲಿ ಕ್ರಾಂತಿಕಾರಿ ಅಂಬೇಡ್ಕರ್‌ರನ್ನು ಜಾನಪದ ಅಂಬೇಡ್ಕರ್ ಜಾಗದಲ್ಲಿ ಪ್ರತಿಷ್ಠಾಪಿಸಬೇಕಿದೆ. ಎದುರಿಗಿರುವ ಸತ್ಯವನ್ನು ಕಾಣಬಲ್ಲ ಶಕ್ತಿ ಇರುವ ಪ್ರತಿಯೊಬ್ಬರು ಈ ಕರ್ತವ್ಯವನ್ನು ಈಡೇರಿಸಲು ಕೊಡುಗೆಗಳನ್ನು ನೀಡಬೇಕಿದೆ. ಏಕೆಂದರೆ ಅಂಬೇಡ್ಕರ್‌ರನ್ನು ಈ ರೀತಿಯಲ್ಲಿ ಪುನರ್‌ನಿರ್ವಚನ ಮಾಡಿಕೊಳ್ಳದಿದ್ದರೆ ಅಂಬೇಡ್ಕರ್ ದೇವಶಿಲೆಯಾಗಬಹುದೇ ವಿನಃ ವಿಮೋಚನೆ ಮಾಡುವಲ್ಲಿ ವಿಫಲವಾಗುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು ಆವರನ್ನು ಅತಿ ಎತ್ತರದ ಪೀಠದಲ್ಲಿ ಕುಳ್ಳಿರಿಸಬಹುದು. ಆದರೆ ಅಂಬೇಡ್ಕರ್ ಎಲ್ಲಿ ಅತ್ಯಂತ ಅಗತ್ಯವಿದೆಯೋ ಅಲ್ಲಿ ಮುಟ್ಟಲಾಗದೆ ಇತಿಹಾಸದ ವಿಪರ್ಯಾಸಗಳಲ್ಲಿ ಒಂದಾಗಿಬಿಡಬಹುದು.

ಅಂಬೇಡ್ಕರರ ಪುನರ್ನಿರ್ವಚನ:

ವಿದ್ವಾಂಸರು ಅಂಬೇಡ್ಕರರ ಚಿಂತನೆಯನ್ನು ಬೇರೆಬೇರೆ ರೀತಿಯಲ್ಲಿ ಮುಂದಿಟ್ಟಿದ್ದಾರೆ. ಕೆಲವರು ಅವುಗಳನ್ನು ಸುಪರಿಚಿತ ಅಕ್ಯಾಡೆಮಿಕ್ ಶಾಖೆಗಳಾದ ಸಾಮಾಜಿಕ, ರಾಜಕೀಯ, ಧಾರ್ಮಿಕ ಎಂಬಿತ್ಯಾದಿಯಾಗಿ ವಿಂಗಡಿಸಿದ್ದಾರೆ. ಇನ್ನೊಂದು ವಿಧಾನವನ್ನು ಜೀವನ ಕಥನ ವಿಧಾನವೆಂದು ಹೇಳಿಬಿಡಬಹುದು. ಮೊದಲನೆ ವಿಧಾನದಲ್ಲಿರುವ ಸಮಸ್ಯೆಯೆಂದರೆ ಅದು ಅಂಬೇಡ್ಕರ್‌ರ ಚಿಂತನೆಯನ್ನು ಅಕೆಡೆಮಿಕ್ ಶಿಸ್ತುಗಳಲ್ಲಿ ಕೃತಕವಾಗಿ ವಿಭಾಗೀಕರಿಸಿಬಿಡುತ್ತದೆ. ಎರಡನೆಯ ಪದ್ಧತಿ ಕಥನ ಮಾದರಿಯಲ್ಲಿ ವೈಭವೀಕರಣದ ನೆಲೆಯಲ್ಲಿ ನಡೆಯುತ್ತಾ ಯಾವುದೇ ವಿಮರ್ಶೆ-ವಿಶ್ಲೇಷಣೆ ನಡೆಸುವುದಿಲ್ಲ. ಹೀಗಾಗಿ ಅವೆರೆಡೂ ವಿಧಾನಗಳು ಒಂದು ಸಮಗ್ರ ಚಿಂತನಾ ವಿಧಾನದ ಪ್ರಮುಖ ಅಂಶಗಳಾದ ಲೋಕದೃಷ್ಟಿ ಮತ್ತು ಭವಿಷ್ಯದ ಕಾಣ್ಕೆಗಳನ್ನು ಹಿಡಿದಿಡುವಲ್ಲಿ ವಿಫಲವಾಗುತ್ತವೆ.

ಅಂಬೇಡ್ಕರ್: ಬದ್ಧತೆ ಮತ್ತು ತೊಡಕುಗಳು:

ಬಾಬಾಸಾಹೇಬ್ ಅಂಬೇಡ್ಕರರ ವಿಷಯದಲ್ಲಿ ಅವರೊಂದು ಪ್ರತಿಮೆಯಾಗಿಬಿಡುವುದು ಅನಿವಾರ್ಯವೇ ಅಗಿತ್ತು. ಅವರ ಉನ್ನತ ಸ್ಥಾನಮಾನ, ತನ್ನ ಜನರ ಬಗ್ಗೆ ಅವರಿಗೆ ಇದ್ದ ಬದ್ಧತೆ, ಅವರಿದ್ದ ಚಾರಿತ್ರಿಕ ಸನ್ನಿವೇಶ, ಜನತೆಯ ಅನಕ್ಷರತೆ ಹಾಗೂ ಕಡಿಮೆ ಮಟ್ಟದ ರಾಜಕೀಯ ತಿಳುವಳಿಕೆ, ಮತ್ತು ಒಳಗಿನ ಹಾಗೂ ಹೊರಗಿನ ಜನರ ಪಟ್ಟಭದ್ರ ಹಿತಾಸಕ್ತಿಗಳಂತಹ ಸಂಗತಿಗಳೇ ಇದಕ್ಕೆ ಕಾರಣ. ಸಮಸ್ಯೆ ಇರುವುದು ಪ್ರತಿಮೀಕರಣದಲ್ಲಲ್ಲ. ಬದಲಿಗೆ ಅದರ ಬಹು ಪುನುರುತ್ಪಾದನೆಯಲ್ಲಿ. ಆದರೆ ಇಲ್ಲಿಯೂ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ಅಂಬೇಡ್ಕರ್‌ರನ್ನು ಕೇವಲ ಒಂದು ಪ್ರತಿಮೆಯಾಗಿ ಗ್ರಹಿಸಬಹುದೇ? ಅಂಬೇಡ್ಕರರ ಶತಮಾನೋತ್ಸವ ಸಂದರ್ಭದಲ್ಲಿ ಪ್ರೊ. ಉಪೇಂದ್ರ ಭಕ್ಷಿಯವರು ತಮ್ಮ ಒಂದು ಲೇಖನದಲ್ಲಿ ಪ್ರಶ್ನಿಸಿದಂತೆ ಹಲವು ಅಂಬೇಡ್ಕರ್‌ಗಳಿರುವುದರಿಂದ ನಾವು ಯಾವ ಅಂಬೇಡ್ಕರ್ ಅವರನ್ನು ಸ್ಮರಿಸುತಿದ್ದೇವೆ? ಪ್ರೊ. ಭಕ್ಷಿಯವರು ಹಾಗೆ ಕೇಳಿದಾಗ ಅವರ ಮನಸ್ಸಿನಲ್ಲಿ ಹಲವು ರೀತಿಯಲ್ಲಿ ವಿಂಗಡಿಸಬಹುದಾದ ಅಂಬೇಡ್ಕರ್‌ರವರ ವ್ಯಕ್ತಿತ್ವವಿತ್ತು. ಅವುಗಳಲ್ಲಿ ಕೆಲವನ್ನು ಕಾಲಾನುಕ್ರಮವಾಗಿ ವಿಂಗಡಿಸಲೂಬಹುದು. ಉದಾಹರಣೆಗೆ ೧೯೪೨ ಕ್ಕೆ ಮುಂಚಿನ ಅಪ್ರತಿಮ ವಿದ್ವತ್ತು ಹೊಂದಿದ್ದ, ತನ್ನ ಜನರ ವಿಮೋಚನೆಗಾಗಿ ಒಳಗೂ ಹೊರಗೂ ಹೋರಾಡುತ್ತಿದ್ದ, ಅಸ್ಪೃಶ್ಯ ಯುವ ಅಂಬೇಡ್ಕರ್‌ಗೂ; ವೈಸ್‌ರಾಯರ ಆಡಳಿತ ಸಮಿತಿಯ ಸದಸ್ಯರಾಗಿದ್ದ ಅಥವಾ ಆ ನಂತರ ನೆಹ್ರೂ ಕ್ಯಾಬಿನೆಟ್‌ನಲ್ಲಿ ಕಾನೂನು ಮಂತ್ರಿಯಾದ ಅಂಬೇಡ್ಕರ್‌ಗೂ; ಅದಕ್ಕೂ ಮುಂಚೆ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಥವಾ ಆ ನಂತರದ ವರುಷಗಳಲ್ಲಿ ಬೌದ್ಧ ಧರ್ಮದ ಜೊತೆಗೆ ಸಂಪೂರ್ಣವಾಗಿ ಗುರುತಿಸಿಕೊಂಡು ಒಂದು ರೀತಿಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನೆ ಸ್ಪಿರಿಚುಯಲ್ ಆಗಿಸಿಕೊಂಡ ಅಂಬೇಡ್ಕರ್‌ಗೂ ಸಾಕಷ್ಟು ವ್ಯತ್ಯಾಸಗಳಿವೆ.

ಆದರೆ ಅದು ಏನೇ ಇದ್ದರೂ ಈ ಪರಾಮರ್ಶೆಯಲ್ಲಿ ಎದ್ದು ಕಾಣುವ ಸಂಗತಿಯೇನೆಂದರೆ ಅವರ ದೃಷ್ಟಿಕೋನದಲ್ಲಿ ಹಾಗೂ ಅವರ ಪಾತ್ರದಲ್ಲಿ ಬಂದ ಬದಲಾವಣೆಗಳೆಲ್ಲವೂ ದಮನಿತ ಜನತೆಯ ಅದರಲ್ಲೂ ನಿರ್ದಿಷ್ಟವಾಗಿ ದಲಿತರ ವಿಮೋಚನೆಯ ಬಗ್ಗೆ ಅವರಿಗಿದ್ದ ಅಚಲ ಬದ್ಧತೆಯಿಂದಲೇ ಚಾಲನೆಗೊಂಡಿದ್ದವು. ತಾವು ಹೋರಾಡುತ್ತಿದ್ದ ಸಮಸ್ಯೆಯ ನಿವಾರಣೆಯನ್ನು ಸಾಧಿಸಲು ಅಗತ್ಯವಿದ್ದ ಸೂಕ್ತ ಉಪಕರಣಗಳು ಅವರ ಬಳಿ ಇಲ್ಲದೇ ಇದ್ದಿರಬಹುದು. ಸಮಾಜಶಾಸ್ತ್ರದ ವಿದ್ವತ್‌ಲೋಕದಲ್ಲಿ ಬಳಸುವ ಉಪಕರಣಗಳನ್ನು ಬಳಸಿಕೊಂಡೇ ಅವರು ಇತಿಹಾಸವನ್ನು ಪರಿಶೀಲಿಸಿದರು. ವಿಪರ್ಯಾಸವೆಂದರೆ ಯಾವ ಉಪಕರಣಗಳು ಆಳುವ ವರ್ಗಗಳ ಸೇವೆಗೆಂದೇ ರೂಪುಗೊಂಡಿವೆಯೋ ಅವೇ ಉಪಕರಣಗಳನ್ನು ಬಳಸಿಕೊಂಡು ಅಂಬೇಡ್ಕರ್ ವ್ಯವಸ್ಥೆಯನ್ನು ನಾಶ ಮಾಡಲು ಯತ್ನಿಸಿದರು. ಅವರಿಗಿದ್ದ ಶೈಕ್ಷಣಿಕ ಹಿನ್ನೆಲೆ ಮಾನವ ಇತಿಹಾಸವು ಒಂದು ಅಂತರ್ಗತವಾಗಿ ತರ್ಕಬದ್ಧವಾಗಿರುವ ಸರಣಿಯೆಂದು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯಮಾಡಲಿಲ್ಲ. ಬದಲಾಗಿ ಇತಿಹಾಸವನ್ನು ಮಾನವನಿರ್ಮಿತ ಘಟನಾವಳಿಗಳ ಸರಪಳಿಯೆಂದು ಅರ್ಥಮಾಡಿಕೊಂಡರು. ಅದಕ್ಕೆ ಒಂದು ತರ್ಕವನ್ನು ಅವರು ಆರೋಪಿಸಿದರೂ ಅದರ ಮೂಲವನ್ನು ಹೊರಗಡೆಯೇ ಹುಡುಕಿದರು.

ಗತಿತರ್ಕರಹಿತವಾದ ಪರಿಹಾರ: ಪ್ರಭುತ್ವ ಮತ್ತು ಧರ್ಮ:

ಒಂದು ರೀತಿಯಲ್ಲಿ ನೋಡಿದರೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಬುದ್ಧ ಧಮ್ಮದ ಮೂಲ ಸೂತ್ರಗಳಲ್ಲಿರುವ ಕ್ಷಣಿಕವಾದ ಅಥವಾ ಅನಿತ್ಯವಾದವನ್ನು ಇಡಿಯಾಗಿ ಅರಗಿಸಿಕೊಂಡಿದ್ದರೆಂದು ಕಾಣುತ್ತದೆ. ಹೀಗಾಗಿಯೇ ಅವರು ತಮ್ಮ ಚಿಂತನಾಧಾರೆಯಲ್ಲಿ ಹಾಗೂ ಅಭಿಪ್ರಾಯಗಳಲ್ಲಿ ಏಕಸೂತ್ರತೆಯನ್ನು ಉಳಿಸಿಕೊಳ್ಳಲು ನಿರಾಕರಿಸಿದ್ದಂತೆ ತೋರುತ್ತದೆ. ಈ ಸಿದ್ಧಾಂತವು ಪ್ರತಿಯೊಂದೂ ಪ್ರತಿಕ್ಷಣವೂ ಬದಲಾಗುತ್ತಿರುತ್ತದೆ ಹಾಗೂ ವಸ್ತುಗಳೂ ಹಾಗೂ ಸಂಗತಿಗಳೂ ನಿರಂತರವಾಗಿ ಉದ್ಭವಗೊಳ್ಳುತ್ತಿರುತ್ತವೆ ಎಂದು ಪ್ರತಿಪಾದಿಸುತ್ತದೆ. ಹೀಗಾಗಿ ಈ ನಿರಂತರ ಚಲನಶೀಲ ಭೌತಿಕ ಪ್ರಪಂಚಕ್ಕೆ ಸಂವಾದಿಯಾಗಿ ಬೌದ್ಧಿಕ ಪ್ರಕ್ರಿಯೆಗಳು ಚಲನಶೀಲವಾಗಿಯೇ ಇರಬೇಕೆಂದು ಪ್ರತಿಪಾದಿಸುತ್ತದೆ. ಹೀಗಾಗಿ ಬದಲಾದ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಲೋಚನೆಗಳನ್ನು ಹಾಗೂ ತಮ್ಮ ಸಮರ ತಂತ್ರಗಳನ್ನು ಬದಲಿಸಿಕೊಳ್ಳಲು ಅವರೆಂದೂ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಮತ್ತೊಂದು ರೀತಿಯಲ್ಲಿ ನೋಡಿದರೆ ಈ ಬದಲಾವಣೆಗಳನ್ನು ನಿಯಂತ್ರಣ ನಡೆಸುವ ಕೇಂದ್ರಬಿಂದುವಿನ ಜೊತೆ ವ್ಯಕ್ತಿಗೆ ಇರುವ ಸಂಬಂಧಗಳಂತೆಯೂ ಅರ್ಥಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಆಚರಣೆ ಹಾಗೂ ಚಿಂತನೆಗಳಲ್ಲಿ ನಿರಂತರತೆಯೆಂಬುದು ತನ್ನ ಸುತ್ತಮುತ್ತಲಿನ ಪರಿಸರವನ್ನು ನಿಯಂತ್ರಿಸುವ ಕೇಂದ್ರಬಿಂದುವಿನಿಂದ ಆ ವ್ಯಕ್ತಿ ಎಷ್ಟು ದೂರವಿದ್ದಾನೆ ಎಂಬುದರ ಜೊತೆ ವಿಲೋಮ ಸಂಬಂಧವನ್ನೇ ಹೊಂದಿರುತ್ತದೆ. ಅಂದರೆ ಆ ಸುತ್ತಮುತ್ತಲಿನ ಪರಿಸರವನ್ನು ನಿಯಂತ್ರಿಸುವ ನಿಯಂತ್ರಣ ಬಿಂದುವಿಗೆ ಆ ವ್ಯಕ್ತಿ ಹತ್ತಿರವಿದ್ದರೆ ಆಚರಣೆ ಹಾಗೂ ಚಿಂತನೆಯಲ್ಲಿ ನಿರಂತರತೆ ಜಾಸ್ತಿ. ಇಲ್ಲದಿದ್ದಲ್ಲಿ ಕಡಿಮೆ. ತನ್ನ ಸುತ್ತಮುತ್ತಲಿನ ಪರಿಸರದ ಮೇಲೆ ಅಂಬೇಡ್ಕರ್‌ಗೆ ಹೆಚ್ಚೂ ಕಡಿಮೆ ಯಾವುದೇ ನಿಯಂತ್ರಣವಿರಲಿಲ್ಲ. ಅವರು ಲಭ್ಯ ಪರಿಸರದಲ್ಲಿ ಸತತವಾಗಿ ತಮಗಾಗಿ ಒಂದು ಅವಕಾಶವನ್ನು ನಿರ್ಮಿಸಿಕೊಳ್ಳಬೇಕಿತ್ತು ಮತ್ತು ಸಂದರ್ಭವನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳಲು ಸದಾ ತಂತ್ರಗಳನ್ನು ಹೆಣೆಯುತ್ತಲೆ ಇರಬೇಕಿತ್ತು. (ಇಂತಹ ಸಂದರ್ಭಗಳ ಗತಿಯನ್ನು ವಿವಿಧ ವಿರೋಧಿ ಬಣಗಳಲ್ಲಿದ್ದ ಶಕ್ತಿಗಳೇ ಪ್ರಭಾವಿಸುತ್ತಿದ್ದವು.) ಅಂಬೇಡ್ಕರ್ ರೂಪಿಸಿದ್ದ ಹೋರಾಟಗಳ ಚೌಕಟ್ಟು ಈ ಗತಿತರ್ಕಕ್ಕೆ ಸದಾ ಸ್ಪಂದಿಸಬೇಕಿತ್ತು. ಅಂಬೇಡ್ಕರ್ ಚಿಂತನೆಯ ಪ್ರಧಾನವಾದ ಅಂಶವೇನೆಂದರೆ ಚಲನಶೀಲ ತರ್ಕ. ಅದನ್ನೇ ಅವರು ನಿರಂತರವಾಗಿ ಬದಲಾಗುತ್ತಿದ್ದ ಸಂದರ್ಭಗಳನ್ನು ಗ್ರಹಿಸಲೂ ಹಾಗೂ ಅದನ್ನು ದಮನಿತ ಜನತೆಯ ಪರವಾಗಿ ಬಳಸಿಕೊಳ್ಳಲು ಸೂಕ್ತವಾದ ತಂತ್ರವನ್ನು ರೂಪಿಸಲು ಬಳಸುತ್ತಿದರು. ಹೀಗಾಗಿ ಅಂಬೇಡ್ಕರ್ ಅವರನ್ನು ಒಂದು ಸ್ಥಿರ, ನಿಶ್ಚಲ ಪರಿಭಾಷೆಯಲ್ಲಿ ಹಿಡಿದಿಡಲಾಗುವುದಿಲ್ಲ. ಅಂಬೇಡ್ಕರ್ ಎಂದು ನಾವು ಹಿಡಿದಿಡುವ ಪ್ರತಿಮೆಯು ಅದರ ಅಂತಃಸತ್ವವಾದ ಈ ಚಲನಶೀಲತೆಯನ್ನು ಪ್ರತಿಫಲಿಸಬೇಕಾಗುತ್ತದೆ. ಆದರೆ ಇದು ಸಾಧ್ಯವಾಗುವ ವಿಷಯವಲ್ಲ. ಆದರ ಬದಲಿಗೆ ಅವರ ಎಲ್ಲಾ ಕೃತಿಗಳಲ್ಲಿ ಅಂತರ್ಗತವಾಗಿರುವ ದರ್ಶನಗಳನ್ನು ಅರ್ಥೈಸಿಕೊಂಡು ಮತ್ತು ಅವರ ಇಡೀ ಜೀವನದ ತಾತ್ಪರ್ಯವನ್ನು ಗ್ರಹಿಸಿಕೊಂಡು ಒಂದು ಸೂಕ್ತ ಪ್ರತಿಮೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಅಂಬೇಡ್ಕರರ ಈ ಪ್ರತಿಮೆಯು ನಮಗೆ ಚಿರಪರಿಚಿತವಾಗಿರುವ ಅಂಬೇಡ್ಕರರ ಪ್ರತಿಮೆಯಾಗಿಲ್ಲದಿದ್ದರೂ ಅದು ಮಾತ್ರವೇ ದಲಿತ ಚಳವಳಿಯ ನಿಜವಾದ ದಿಕ್ಕು ತೋರಿಸುವ ಪಂಜಾಗಿರುತ್ತದೆ.

ಬೌದ್ಧ ದಮ್ಮದಲ್ಲಿರುವ ಅನಿತ್ಯವಾದವು ಗತಿತಾರ್ಕಿಕತೆಗೇ ಸಂಬಂಧಿಸಿದ್ದು ಅದು ಬುದ್ಧನನ್ನು ವಿಶ್ವದ ಮೊತ್ತಮೊದಲ ಗತಿತಾರ್ಕಿಕ ತತ್ವಜ್ಞಾನಿಯನ್ನಾಗಿ ಮಾಡುತ್ತದೆ. ಇದರಲ್ಲಿ ಉದ್ಭವವಾಗುವ ದ್ವಂದ್ವಗಳನ್ನು ಗತಿತಾರ್ಕಿಕ ಪದ್ಧತಿಯಿಂದಲೇ ಬಗೆಹರಿಸಿಕೊಳ್ಳಲು ಸಾಧ್ಯ. ಇಲ್ಲಿಯೂ ಅಂಬೇಡ್ಕರರ ವಿಧಾನವು ಒಂದು ಗತಿತಾರ್ಕಿಕ ವಿಧಾನವೇ ಎಂಬ ಪ್ರಶ್ನೆ ಹಾಕಿಕೊಳ್ಳಬಹುದು. ಅವರು ವಸ್ತುವಿನ ಸತತ ಉಗಮವನ್ನು ವಿಶ್ವದ ಅಂತಃಸೂತ್ರವೆಂದು ಪರಿಭಾವಿಸಿದರೂ ಹಾಗೆ ಉದ್ಭವವಾದ ನಂತರದಲ್ಲಿ ಅದರಲ್ಲಿ ರೂಪುಗೊಳ್ಳುವ ಸುಸ್ಥಿರ ವ್ಯವಸ್ಥೆಯ ಸ್ಥಿತಿಗೆ ಕಾರಣವೇನೆಂಬುದರ ಪ್ರಶ್ನೆ ಬಂದಾಗ ದ್ವಂದ್ವಕ್ಕೊಳಗಾಗುತ್ತಾರೆ. ಆದರೆ ಈ ಪ್ರಶ್ನೆಯನ್ನು ಆ ರೀತಿಯಲ್ಲಿ ಉಗಮಗೊಂಡ ವ್ಯವಸ್ಥೆಗಳಲ್ಲಿ ಅಂತರಿಕವಾಗಿಯೇ ಸ್ವ-ನಿಯಂತ್ರಣವಿರುತ್ತದೆಂಬ ಪರಿಕಲ್ಪನೆಯ ಮೂಲಕ ಗತಿತಾರ್ಕಿಕವಾಗಿ ಪರಿಹರಿಸಿಕೊಳ್ಳಬಹುದು. ಆದರೆ ಸುವ್ಯವಸ್ಥೆ(ಆರ್ಡರ್) ಬಗ್ಗೆ ಇರುವ ಸಾಂಪ್ರದಾಯಿಕ ಪರಿಕಲ್ಪನೆಗಳು, ಸಾರಾಂಶದಲ್ಲಿ ಗತಿತಾರ್ಕಿಕವಲ್ಲದ ಪರಿಕಲ್ಪನೆಗಳು, ವ್ಯವಸ್ಥೆಯೊಳಗಡೆಯೇ ಇರುವ ಸ್ವ ನಿಯಂತ್ರಣದ ಮೂಲವನ್ನು ವ್ಯವಸ್ಥೆಯ ಹೊರಗಡೆಯೇ ಹುಡುಕುತ್ತದೆ. ಇತಿಹಾಸದ ಅತಿಕ್ರೂರ ಅಂಶಗಳನ್ನು ಸ್ವತಃ ಅನುಭವಿಸಿದ್ದ ಹಾಗೂ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಸತತವಾಗಿ ಶೋಷಿಸುವುದನ್ನು ಅನುಭವಿಸಿದ್ದ ಅಂಬೇಡ್ಕರ್‌ರವರು ಸಮಾಜದಲ್ಲಿ ಅಗತ್ಯವಿರುವ ಸುಸ್ಥಿತಿಯನ್ನು ಕಾಪಾಡಿಕೊಂಡು ಬರಲು ಮನುಷ್ಯನ ಒಳಗೆ ಹಾಗೂ ಹೊರಗೆ ಎರಡೂ ಕಡೆಯಿಂದ ನಿಯಂತ್ರಿಸುವ ಅಗತ್ಯವಿದೆಯೆಂದು ಭಾವಿಸುತ್ತಿದ್ದರೆಂದು ಕಾಣುತ್ತದೆ. ಅವರ ಪ್ರಕಾರ ಆಂತರಿಕ ನಿಯಂತ್ರಣವು ಧರ್ಮವು ನೀಡುವ ನೀತಿಸಂಹಿತೆಯಿಂದ ದತ್ತವಾದರೆ ಹೊರಗಿನ ನಿಯಂತ್ರಣವನ್ನು ಪ್ರಭುತ್ವದ ಮೂಲಕ ಸಾಧಿಸಬೇಕು. ಈ ನೀತಿ ಸಂಹಿತೆಯನ್ನು ಎಲ್ಲ ವ್ಯಕ್ತಿಗಳು ಅಂತರಂಗೀಕರಿಸಿಕೊಂಡಾಗ, ಉದಾರವಾದಿ ಪರಂಪರೆಯ ಪ್ರಕಾರ ಸಮಾಜವೆಂಬುದು ವ್ಯಕ್ತಿಗಳ ಸಮೂಹವೇ ಆಗಿರುವುದರಿಂದ, ಸಮಾಜವೂ ಅಂತರಂಗೀಕರಿಸಿಕೊಂಡಂತಾಗಿ ಸಮಾಜವು ಆಂತರಿಕ ನಿಯಂತ್ರಣವನ್ನು ಹೊಂದುತ್ತದೆ ಎಂದು ನಿರೀಕ್ಷಿಸಲಾಗುತ್ತದೆ. ಆದರೆ ಕೆಲವು ವ್ಯಕ್ತಿಗಳ ಅಥವಾ ಒಂದು ಗುಂಪಿನ ಮೃಗೀಯ ಸ್ವಭಾವಗಳು ತಾವು ಆಚರಿಸುತ್ತಿರುವ ವಿಭಿನ್ನ ಸಂಹಿತೆಯ ಕಾರಣದಿಂದಾಗಿಯೋ ಅಥವಾ ಬೇರೆ ಯಾವುದೇ ಕಾರಣಗಳಿಂದಾಗಿ ಈ ಆಂತರಿಕ ನಿಯಂತ್ರಣವನ್ನು ಮೀರಿದಾಗ ಪ್ರಭುತ್ವವು ಮಧ್ಯಪ್ರವೇಶಿಸಿ ಸುವ್ಯವಸ್ಥೆಯನ್ನು ಕಾಪಾಡಬೇಕು. ಜನ ಸಮುದಾಯದ ಅಭೀಪ್ಸೆಯು ಸಂವಿಧಾನದ ಮೂಲಕ ಪ್ರಭುತ್ವದಲ್ಲಿ ನೆಲೆಗೊಂಡಿರುತ್ತದೆಂದು ಭಾವಿಸಲಾಗುತ್ತದೆ. ಆದ್ದರಿಂದಲೆ ಧರ್ಮವು ಜನತೆಯ ಅಫೀಮೆಂಬ ಹಾಗೂ ಪ್ರಭುತ್ವವು ಉದುರಿಹೋಗುತ್ತದೆಂಬ ಮಾರ್ಕ್ಸ್‌ರ ಹೇಳಿಕೆಯನ್ನು ಒಪ್ಪಿಕೊಳ್ಳಲು ಅಂಬೇಡ್ಕರ್‌ರಿಗೆ ಸಮಸ್ಯೆಯಾಗುತ್ತಿತ್ತು. ಆದರೆ ಸುವ್ಯವಸ್ಥೆ ಎಂಬುದು ಆಯಾ ವ್ಯವಸ್ಥೆಯಲ್ಲೇ ಅಂತರಿಕವಾಗಿರುತ್ತದೆಂದು ಅಂಬೇಡ್ಕರ್ ಖಂಡಿತಾ ಭಾವಿಸಿರಲಿಲ್ಲ. ಆದರೆ ಎಪ್ಪತ್ತರ ದಶಕದಲ್ಲಿ ಸಿಬರ್ನೆಟಿಕ್ಸ್ ತಂತ್ರಜ್ಞಾನದ ಅವಿಷ್ಕಾರವಾದ ನಂತರ ಸಂಕೀರ್ಣ ವ್ಯವಸ್ಥೆಗಳು - ಅವುಗಳಲ್ಲಿ ಮಾನವ ಸಮಾಜವೂ ಖಂಡಿತವಾಗಿ ಒಂದು - ತಮ್ಮದೇ ಆದ ಆಂತರಿಕ ಸ್ವ-ನಿಯಂತ್ರಣದ ಹಾಗೂ ಸ್ವ-ಸಂಘಟನೆಯ ವ್ಯವಸ್ಥೆ ಹೊಂದಿರುತ್ತದೆಂದು ಸಾಬೀತಾಯಿತು.

ಉದಾರವಾದ ಮತ್ತು ಸುಧಾರಣಾವಾದ:

ಅಂಬೇಡ್ಕರರ ಬೆಳವಣಿಗೆ ಹಾಗೂ ತರಬೇತಿಗಳೆರಡೂ ಪಾಶ್ಚಿಮಾತ್ಯ ಉದಾರವಾದದ ಪ್ರಭಾವಕ್ಕೆ ಒಳಗಾಗಿದ್ದವು. ಅವರೇ ಹೇಳಿಕೊಂಡಂತೆ ಪಾಶ್ಚಿಮಾತ್ಯ ಸಮಾಜದ ಮುಕ್ತ ಹಾಗೂ ಉದಾರವಾದಿ ಮೌಲ್ಯಗಳು ಅವರಿಗೆ ಸಂತಸಾಶ್ಚರ್ಯವನ್ನು ಉಂಟುಮಾಡಿದ್ದವು. ಅವರು ಜಾತಿಗಳ ಬಗ್ಗೆ ಬರೆದ ಮೊದಲ ಪ್ರಬಂಧವು ಸ್ವಲ್ಪ ಮಟ್ಟಿಗೆ ಮಾರ್ಕ್ಸ್‌ವಾದಿ ವಿಶ್ಲೇಷಣಾ ಧೋರಣೆಯನ್ನು ಹೊಂದಿದ್ದವು. ಅವರ ಅಕೆಡೆಮಿಕ್ ಅಧ್ಯಯನದ ಒಂದು ವಿಷಯವೂ ಮಾರ್ಕ್ಸ್‌ವಾದಿ ಸಮಾಜವಾದಕ್ಕೇ ಸಂಬಂಧಪಟ್ಟಿದ್ದಾಗಿತ್ತಲ್ಲದೆ, ಅವರ ಗೈಡ್ ಆಗಿದ್ದ ಪ್ರೊ. ಸೆಲಿಗ್‌ಮ್ಯಾನ್ ಇತಿಹಾಸದ ಆರ್ಥಶಾಸ್ತ್ರೀಯ ವ್ಯಾಖ್ಯಾನದಲ್ಲಿ ನಿಪುಣರಾಗಿದ್ದರು. ಅದೇನೇ ಇದ್ದರೂ ಅವರ ನಂತರದ ಕೃತಿಗಳು ಸ್ಪಷ್ಟಪಡಿಸುವಂತೆ ಅಂಬೇಡ್ಕರ್‌ರವರು ಮಾರ್ಕ್ಸ್‌ವಾದಕ್ಕಿಂತ ಹೆಚ್ಚಾಗಿ ಉದಾರವಾದಿ ಸಂಪ್ರದಾಯಕ್ಕೆ ಹೆಚ್ಚು ಹತ್ತಿರವಾಗಿದ್ದರೆಂಬುದನ್ನು ತಿಳಿಸುತ್ತದೆ. ಅದೇನೇ ಇರಲಿ ಅವರೆಂದೂ ಪ್ರಜ್ಞಾಪೂರ್ವಕವಾಗಿ ಉದಾರವಾದದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ. ಆ ಸಿದ್ಧಾಂತದ ಒಳಅಪಾಯಗಳನ್ನು ಅರಿತಿದ್ದ ಅವರು ತಾವು ಉದಾರವಾದಿ ಸುಧಾರಣಾವಾದಿಯಲ್ಲವೆಂದು ಘೋಷಿಸಿಕೊಳ್ಳುವ ಅಗತ್ಯ ಉಂಟಾಯಿತಲ್ಲದೆ ಮಾರ್ಕ್ಸ್‌ವಾದದ ನಿರೂಪಣೆಗಳ ಬಗ್ಗೆ ಎಷ್ಟೇ ಗುಮಾನಿಗಳಿದ್ದರೂ ಅದರ ಬಗ್ಗೆ ತಮಗಿದ್ದ ಆಕರ್ಷಣೆಯನ್ನು ಮುಚ್ಚಿಟ್ಟುಕೊಳ್ಳಲಿಲ್ಲ.

ಅವರ ಚಿಂತನೆಯಲ್ಲಿದ್ದ ದೌರ್ಬಲ್ಯಗಳು ಭೌತಿಕ ವಾಸ್ತವಗಳ ಜೊತೆ ಸಂಬಂಧ ಕಡಿದುಕೊಂಡ ಧರ್ಮದ ನೈತಿಕ ಶಕ್ತಿಯ ಪರಿಕಲ್ಪನೆಯಿಂದ ಉಗಮವಾಗುತ್ತದೆ. ಆದ್ದರಿಂದಲೇ ಅವರು ಯಾವುದೇ ರಕ್ತಪಾತವಿಲ್ಲದೇ ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ತಳಹದಿಯುಳ್ಳ ಸಮಾಜವನ್ನು ಸ್ಥಾಪಿಸಲು ಸಾಧ್ಯ ಎಂದು ಭರವಸೆ ಇಟ್ಟಿದ್ದರು. ಈ ತತ್ವಗಳನ್ನು ಆಧರಿಸಿಯೇ ಅವರು ಸಂವಿಧಾನಾತ್ಮಕ ಪ್ರಭುತ್ವದ ಪರಿಕಲ್ಪನೆಯನ್ನು ಕಟ್ಟಿಕೊಂಡಿದ್ದರು. ಈ ಬಗೆಯ ಸ್ವಕಲ್ಪಿತ ಆಶಯಗಳಿಂದಾಗಿಯೇ ಅವರು, ಆಳುವ ವರ್ಗಗಳು ಎಷ್ಟೇ ನಾಟಕವಾಡಿದರೂ ಒಂದು ಬಹು ಕೇಂದ್ರಗಳುಳ್ಳ, ಅಸಮಾನತೆಯುಳ್ಳ ಸಮಾಜದ ಮೇಲೆ ಉದಾರವಾದಿ ಪ್ರಭುತ್ವದ ಪ್ರಭಾವವು ಅಂತಹ ಬಹುಕೇಂದ್ರಗಳನ್ನು ಹಾಗೂ ಅಸಮಾನತೆಯನ್ನು ಉಳಿಸಿಕೊಂಡು ಹೋಗಲೇ ಸಹಕರಿಸುತ್ತದೆಂಬುದನ್ನು ಕಡೆಗಣಿಸಿದರು. ಈ ಬಗೆಯ ಉದಾರವಾದವು ಹೆಚ್ಚೆಂದರೆ ಜಾತಿವಾದದ, ಕೋಮುವಾದದ ರಾಜಕಾರಣವನ್ನೂ, ದಲಿತರ ನಡುವೆ ಒಡಕುಗಳನ್ನೂ, ರಾಜಕೀಯ ಚದುರಂಗದಾಟದಲ್ಲಿ ಅವರ ಬಳಕೆಯನ್ನೂ, ಅವರ ನಿಜವಾದ ಸಮಸ್ಯೆಗಳ ಬದಿಗೊತ್ತುವಿಕೆಯನ್ನೂ ಹೆಚ್ಚಿಸಿ ಕೆಲವೇ ಶ್ರೀಮಂತರ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಪರ್ಯಾವಸನಗೊಳ್ಳುತ್ತದೆ. ಬೂರ್ಜ್ವಾಗಳ ರಾಜಕೀಯ ಅಧಿಕಾರದ ಅಭಿವ್ಯಕ್ತಿಯಾಗಿರುವ ಉದಾರವಾದಿ ಪ್ರಜಾತಂತ್ರವು ಬಡಬಗ್ಗರ ಹಿತಕಾಯುತ್ತದೆಂದು ನಿರೀಕ್ಷಿಸುವುದೇ ಒಂದು ವೈರುಧ್ಯಾತ್ಮಕ ಸಮಸ್ಯೆ. ಅದು ಒಂದಷ್ಟು ರಿಯಾಯಿತಿಗಳನ್ನು ದುರ್ಬಲವರ್ಗಗಳಿಗೆ ಕೊಡುತ್ತಿರುವಂತೆ ಕಂಡರೂ ಅದರ ನಿಜವಾದ ಉದ್ದೇಶ ಅಸ್ತಿತ್ವದಲ್ಲಿರುವ ಆಳುವವರ್ಗಗಳ ಆಳ್ವಿಕೆಯನ್ನು ಉಳಿಸಿಕೊಂಡು ಬರುವುದೇ ಅಗಿರುತ್ತದೆ. ಕೊಳೆತ ಹಿಂದೂ ಜಾತಿಪದ್ಧತಿಗಿಂತ ಉದಾರವಾದಿ ಪ್ರಜಾತಂತ್ರವು ಉತ್ತಮವೆಂದು ಅನಿಸಿದರೂ ಅದು ದಲಿತರ ಪರವಾಗಿ ಯಾವುದೇ ನೈಜ ಬದಲಾವಣೆಯನ್ನು ತರುವಲ್ಲಿ ಅಸಮರ್ಥವಾಗಿರುತ್ತದೆ. ಅದು ಶೋಷಕ ವ್ಯವಸ್ಥೆಯಲ್ಲಿರುವ ಬಿಕ್ಕಟ್ಟನ್ನು ಮೃದುಗೊಳಿಸುತ್ತದಲ್ಲದೆ ಅದಕ್ಕೆ ಬಲಿಯಾಗಿರುವವರಲ್ಲಿ ಕ್ರಾಂತಿಕಾರಿ ಜಾಗೃತಿಯನ್ನು ಕೊಂದುಹಾಕುತ್ತದೆ.

ಪುನರ್‌ನಿರ್ವಚನದ ಯೋಜನೆ:

ಬಾಬಾಸಾಹೇಬ್ ಅಂಬೇಡ್ಕರ್‌ರವರು ತಮ್ಮ ಕೃತಿಯಲ್ಲಿ ಬಳಸಿದ ಹಲವಾರು ನಿರ್ಮಿತಿಗಳಿಗೆ ತನ್ನದೇ ಆದ ನಿರ್ದಿಷ್ಟ ಅರ್ಥಗಳಿವೆ. ಮೊದಲನೆಯದಾಗಿ ಅವು ತೋರಿಕೆಗೆ ಕಾಣುವ ರೀತಿಯಲ್ಲಿ ಸ್ವಸಂಪೂರ್ಣವಾದ ವ್ಯಾಖ್ಯೆಗಳಲ್ಲ. ಅವು ಅವರ ಆಲೊಚನಾ ಕ್ರಮದ ಉಪ ಉತ್ಪನ್ನಗಳಾಗಿದ್ದು ಅದರ ಮೂಲಸೆಲೆಯನ್ನು ಅವರ ಮೂಲಭೂತ ಲಕ್ಷ್ಯವಾಗಿದ್ದ ಜಾತಿ ನಿರ್ಮೂಲನೆ ಮತ್ತು ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಯನ್ನು ಆಧರಿಸಿದ ಸಮಾಜ ನಿರ್ಮಾಣದಲ್ಲಿ ಹುಡುಕಬಹುದು. ಅವರ ಹೃದಯಕ್ಕೆ ಅತಿ ಸಮೀಪವಾಗಿದ್ದ ಈ ಮೂರು ತತ್ವಗಳೂ ಸಹಾ ಫ್ರೆಂಚ್ ಕ್ರಾಂತಿಯಲ್ಲಿ ಮೂಡಿಬಂದ ಅರ್ಥಗಳಿಗಿಂತ ಭಿನ್ನವಾದ ಅರ್ಥಗಳನ್ನೇ ಹೊರಡಿಸುತ್ತದೆ. ತಾವು ಇದನ್ನು ಬುದ್ಧನಿಂದ ಪಡೆದೆನೆಂದು ಅವರು ಹೇಳುತ್ತಾರೆ. ಬುದ್ಧ ಏನು ಹೇಳಿದ್ದರೆಂಬುದನ್ನೂ ಸಹಾ ಅಂಬೇಡ್ಕರ್‌ರ ವ್ಯಾಖ್ಯಾನದ ಮೂಲಕ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಅದು ಈಗಾಗಲೇ ಭೌದ್ದ ನಿಲಯಗಳು ಸುಪರಿಚಿತಗೊಳಿಸಿರುವ ವ್ಯಾಖ್ಯಾನಕ್ಕಿಂತ ಭಿನ್ನವೇ ಇರಬಹುದು. ಏಕೆಂದರೆ ಅವರ ಬುದ್ಧ ಮತ್ತು ಅವರ ಧಮ್ಮಗಳು ಪ್ರಾರಂಭದಲ್ಲಿ ಹಲವಾರು ಭೌದ್ಧರಿಂದ ಆ ಬಗೆಯ ನಿರಾಕರೆಣೆಗೆ ಗುರಿಯಾಗಿತ್ತು. ಆದ್ದರಿಂದ ಅಂಬೇಡ್ಕರ್‌ರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವರು ಬಳಸುವ ಪರಿಕಲ್ಪನೆಗಳ ಮತ್ತು ನಿರ್ಮಿತಿಗಳ ನಿರ್ಧಿಷ್ಟ ಅರ್ಥವೇನೆಂದು ಗ್ರಹಿಸಲು ವಿಶೇಷ ಪರಿಶೀಲನೆ ಮಾಡಬೇಕಾಗುತ್ತದೆ. ಅದರ ಕೊರತೆಯೇ ಈಗಾಗಲೇ ಹಲವು ಜನರಲ್ಲಿ ಸಾಕಷ್ಟು ತಪ್ಪುಗ್ರಹಿಕೆಗಳನ್ನು ಹುಟ್ಟುಹಾಕಿದೆ. ಅವರು ನಿಜವಾಗಿ ಹೇಳಿದ್ದೇನು ಅಥವಾ ಉದ್ದೇಶಿಸಿದ್ದೇನು ಎಂದು ಅರ್ಥ ಮಾಡಿಕೊಳ್ಳುವುದು ಒಂದು ವಿಷಯವಾದರೆ ಅದನ್ನೇ ಅವರ ಮೂಲಭೂತ ಲಕ್ಷ್ಯ ಹಾಗೂ ದರ್ಶನಗಳಿಗೆ ಸಂವಾದಿಯಾಗುವಂತೆ ವಿಸ್ಥರಿಸಿ ಭವಿಷ್ಯದ ಚಳವಳಿಗೂ ಅನುಕೂಲವಾಗುವಂತೆ ವ್ಯಾಖ್ಯಾನಿಸುವುದು ಬೇರೆಯದೇ ಆದ ವಿಷಯ. ಮಾರ್ಕ್ಸ್ ತತ್ವಶಾಸ್ತ್ರದ ಬಗ್ಗೆ ಹೇಳಿದಂತೆ ಅಂಬೇಡ್ಕರ್‌ರನ್ನು ಹೇಗಿದ್ದರೋ ಹಾಗೆ ಅರ್ಥ ಮಾಡಿಕೊಳ್ಳುವ ಸಮಸ್ಯೆಯಲ್ಲ-ಬದಲಿಗೆ ಅವರು ತಮ್ಮ ಜೀವಮಾನವಿಡಿ ತಮ್ಮನ್ನು ಮುಡುಪಾಗಿಟ್ಟ ಹೋರಾಟಗಳಲ್ಲಿ ಒಂದು ಅಸ್ತ್ರವಾಗಿ ಹೇಗೆ ಬಳಸಿಕೊಳ್ಳಬಹುದೇಂದು ಚಿಂತಿಸುವುದೇ ಪ್ರಧಾನವಾದ ವಿಷಯ. ಇಲ್ಲಿ ಪ್ರಸ್ತಾಪಿತವಾದ ಪುನರ್ನಿರ್ವಚನದ ವಿಷಯವೂ ಪ್ರಯಶಃ ಸಾರಾಂಶದಲ್ಲಿ ಇವೆರಡನ್ನೂ ಉದ್ದೇಶಿಸಿರಬೇಕಾಗುತ್ತದೆ.

ಅಂಬೇಡ್ಕರ್ ಬಳಸಿದ ಸಂಶೋಧನಾ ವಿಧಾನವು ಮೂಲಭೂತವಾಗಿ ವೈಚಾರಿಕವಾಗಿದ್ದು ಅದರ ಹಿಂದಿನ ಉದ್ದೇಶವೂ ನಿಸ್ಸಂದೇಹವಾಗಿ ಕ್ರಾಂತಿಕಾರಿಯಾದದ್ದೇ ಆಗಿದೆ. ಒಂದು ನಿರ್ಧಿಷ್ಟ ಯೋಜನೆಯಲ್ಲಿ ಅಥವಾ ಒಂದು ನಿರ್ದಿಷ್ಟ ಸಂಶೋಧನಾ ಪ್ರಕ್ರಿಯೆಯನ್ನು ಅಳವಡಿಸುವಲ್ಲಿ ಲೋಪಗಳಿರಬಹುದು. ಅದಕ್ಕೆ ಸಂದರ್ಭದ ಸಂಕೀರ್ಣತೆ ಮತ್ತು ಅಂಬೇಡ್ಕರರ ಪರಿಸ್ಥಿತಿ ಕಾರಣವಾಗಿರಬಹುದು. ಅದೇನೇ ಇದ್ದರೂ ಅಂತಿಮ ಪರಿಣಾಮವು ಸಂಶೋಧನೆಗೆ ಬಳಸಿದ ಪರ್ಯಾಯಗಳನ್ನೇ ಆಧರಿಸಿರುತ್ತದೆ. ಇದರರ್ಥವೇನೆಂದರೆ ನಿರ್ದಿಷ್ಟವಾದ ಯಾವುದೇ ವಿಧಾನ, ಚಿಂತನೆ ಅಥವಾ ಆಚರಣೆಗಳು ಐತಿಹಾಸಿಕವಾಗಿ ವಾಸ್ತವ ಸಂಗತಿಗಳೆ ಆಗಿದ್ದರೂ ಅಂಬೇಡ್ಕರರ ಸೈದ್ಧಾಂತಿಕ ಅಂಶಗಳನ್ನು ಗ್ರಹಿಸಿಕೊಳ್ಳಬೇಕೆಂದರೆ ಅವುಗಳನ್ನು ತೋರಿಕೆಗೆ ಕಾಣುವ ರೀತಿಯಲ್ಲಿ ಪರಿಗಣಿಸಲು ಬರುವುದಿಲ್ಲ. ಉದಾಹರಣೆಗೆ ಮೇಲೆ ಹೇಳಲ್ಪಟ್ಟ ಯಾವುದೇ ಅಂಶಗಳನ್ನು ಅದರ ಅಕ್ಯಾಡೆಮಿಕ್ ತೀವ್ರತೆಯೊಂದಿಗೆ ಅವರು ಬಳಸುವುದಿಲ್ಲ. ಅದಕ್ಕೆ ಬಹಳಷ್ಟು ಬಾರಿ ಉದ್ದೇಶಿಸಿ ಮಾತಾಡುತ್ತಿದ್ದುದು ಅಕ್ಯಾಡೆಮಿಕ್ ಅಲ್ಲದ ಜನಗಳನ್ನು ಎಂಬುದು ಒಂದು ಕಾರಣವಾದರೆ, ಬಹಳಷ್ಟು ಬಾರಿ ಅವರು ತಾವು ಬಳಸುತ್ತಿದ್ದ ಪದಗಳಿಗೆ ತಮ್ಮದೇ ಆದ ಅರ್ಥಗಳನ್ನು ಕೊಡುತ್ತಿದ್ದರು. ಬದಲಾದ ಸಂದರ್ಭಗಳಲ್ಲಿ ಮತ್ತು ಬದಲಾದ ಮಾಹಿತಿಗಳ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಿಂಜರಿಕೆಯಿಲ್ಲದೇ ಬದಲಾಯಿಸಿಕೊಳ್ಳುತ್ತಿದ್ದರು. ಒಂದು ಊಹಾತ್ಮಕ ಉದಾಹರಣೆ ಕೊಡುವುದಾದರೆ ಅಂಬೇಡ್ಕರ್ ಈಗ ಇದ್ದಿದ್ದರೆ ತಮ್ಮ ಕೆಲವು ನಂಬಿಕೆಗಳ ಹಾಗೂ ಅಭಿಪ್ರಾಯಗಳ ಅನಪೇಕ್ಷಿತ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದು ಅಥವಾ ಅನುಭವಿಸಿ ಅವುಗಳನ್ನು ಖಂಡಿತಾ ಬದಲಿಸಿಕೊಳ್ಳುತ್ತಿದ್ದರು. ಇಲ್ಲದಿದರೆ ತಾವೇ ಕಷ್ಟಪಟ್ಟು ಬರೆದ, ಸಮರ್ಥಿಸಿಕೊಳ್ಳುತ್ತಿದ್ದ ಸಂವಿಧಾನ ತನ್ನನ್ನು ಕೇವಲ ಉಪಕರಣವಾಗಿ ಮಾತ್ರ ಬಳಸಿಕೊಂಡಿದೆ ಎಂದು ಧಿಕ್ಕರಿಸಿ ಹೊರನಡೆಯುತ್ತಿದ್ದರೆ? ಅವರು ಮಾಡಿದ ಹಲವು ವಿಷಯಗಳಲ್ಲಿ ಮಿತಿಗಳಿದ್ದವು. ಆದರೆ ಅವು ತಪ್ಪೆಂದು ಮನವರಿಕೆಯಾದಾಗ ಅದನ್ನು ಬದಲಾಯಿಸಿಕೊಳ್ಳಲು ಹಿಂಜರಿದಿರಲಿಲ್ಲ. ಇಲ್ಲಿ ಪ್ರಸ್ತಾಪಿಸಲಾಗುತ್ತಿರುವ ಪುನರ್ ನಿರ್ವಚನವನ್ನು ಅವರೇ ತಮ್ಮ ಬಗ್ಗೆ ಹಲವು ಬಾರಿ ಮಾಡಿಕೊಂಡಿದ್ದರು. ಮತ್ತು ಅವರು ಜೀವಂತವಾಗಿದ್ದರೆ ಅದನ್ನೇ ಮುಂದುವರೆಸುತ್ತಿದ್ದರು. ಅವರ ಅಸಂಪೂರ್ಣವಾದ ವಿಮೋಚನಾ ಯೊಜನೆಯನ್ನು ಪೂರೈಸಲು ಇದು ಅವಿಭಾಜ್ಯ ಅಂಗ.

ಇದನ್ನು ಪೂರೈಸಲು ಅನುಸರಿಸಬೇಕಾದ ವೈಧಾನಿಕ ಮಾರ್ಗವು ಅಂಬೇಡ್ಕರರ ಜೀವನವನ್ನು ಅದರ ಸಾಂದರ್ಭಿಕ ಚೌಕಟ್ಟಿನಲ್ಲಿಟ್ಟು ವಿಶ್ಲೇಷಣಾತ್ಮಕ ಅಧ್ಯಯನ ಕೈಗೊಳ್ಳುತ್ತಲೆ ಅದರ ಅಂತರ್ಗತ ಸಾರಾಂಶವನ್ನು ಹಿಡಿದಿಡುವ ಕಡೆ ಕೇಂದ್ರೀಕರಿಸುತ್ತಾ ಅವರ ಜೀವನ ದರ್ಶನದ ಮತ್ತು ಸೈದ್ಧಾಂತಿಕ ಮೂಸೆಯನ್ನು ಪರಿಕಲ್ಪಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಅದು ಅದರ ಮೂಲಭೂತ ಉದ್ದೇಶವಾದ ದಲಿತರ ವಿಮೋಚನಾ ಚಳುವಳಿಯನ್ನು ತೇಜಿಗೊಳಿಸುವ ಮತ್ತು ಅ ಮೂಲಕ ಇಡೀ ಭಾರತ ಸಮಾಜವನ್ನು ಪ್ರಜಾತಾಂತ್ರೀಕರಿಸುವ ಆಶಯವನ್ನು ಪ್ರತಿಫಲಿಸುವಂತಿರಬೇಕು. ಈ ಪ್ರಕ್ರಿಯೆಯು ಪೂರ್ವಾಗ್ರಹಗಳಿಂದ ಮುಕ್ತವಿಲ್ಲದೇ ಇರಬಹುದು. ಆದರೆ ಆ ಪೂರ್ವಗ್ರಹಗಳು ಈವರೆಗೆ ಇತಿಹಾಸದ ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದ ಶೋಷಕ ವರ್ಗಗಳಿಗಾಗಿಯಲ್ಲದೇ ಬದಲಾವಣೆಯನ್ನು ಹಂಬಲಿಸುತ್ತಿರುವ ನಿರ್ಗತಿಕರ ಪರವಾಗಿದ್ದರೆ ತೊಂದರೆಯೇನಿಲ್ಲ. ಅದು ಅವರ ದೃಷ್ಟಿಕೋನದಿಂದ ಮುಕ್ತವಾಗಿಲ್ಲದೇ ಇರಬಹುದು. ಬದಲಿಗೆ ದಲಿತರ ಮುಂದಿನ ವಿಮೋಚನಾ ಹೋರಾಟಗಳಿಗೆ ಅಂಬೇಡ್ಕರರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕೆಂಬ ಆಶಯದಲ್ಲೇ ಅದು ಅಡಕವಾಗಿದೆ.

ಇಂಗ್ಲಿಷ್ ಮೂಲ: ಡಾ. ಆನಂದ್ ತೇಲ್ತುಂಬ್ಡೆ (೧೯೯೭ ಮಾರ್ಚ್ ೨೭-೨೮ರಂದು ಪುಣೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂಬೇಡ್ಕರ್ ನಂತರದ ದಲಿತ ಚಳವಳಿಗಳು ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ.)

ಕನ್ನಡಕ್ಕೆ: ಶಿವಸುಂದರ್

ಇದು ಜಾಣ ಕುರುಡು ಅಲ್ಲವೆ?

- ಸುರೇಶ್ ಭಟ್, ಬಾಕ್ರಬೈಲ್

-ವಾರ್ತಾಭಾರತಿಯಿಂದ

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಜುಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಕೈಯೊಳಗಿದೆ ಎನ್ನುವುದು ಬಹಳ ಕಾಲದಿಂದಲೂ ಒಂದು ತೆರೆದ ರಹಸ್ಯ.ಆದರೂ ಅನೇಕ ಜನ ಇದನ್ನು ನಂಬಲು ಸಿದ್ಧರಿರಲಿಲ್ಲ. ಇನ್ನಿತರರು ಜಾಣ ಕುರುಡು ನಟಿಸುತ್ತಿದ್ದರು.ಆದರೆ ಇದೀಗ ಪೊಲೀಸ್ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವೇ ಖುದ್ದಾಗಿ ಎಲ್ಲವನ್ನೂ ಹೊರಗೆಡವಿದೆ.ಆರೆಸ್ಸೆಸ್ ಪಥ ಸಂಚಲನದ ಚಿತ್ರವೊಂದನ್ನು ಎಡೆಬಿಡದೆ ಒಂದು ವರ್ಷ ಕಾಲ ಪ್ರಕಟಿಸುವ ಮೂಲಕ ಅಳಿದುಳಿದ ರಹಸ್ಯವನ್ನೆಲ್ಲ ಬಟಾಬಯಲಾಗಿಸಿದೆ.ಇಲ್ಲಿ ಎರಡು ಸಾಧ್ಯತೆಗಳು ಗೋಚರಿಸುತ್ತವೆ. ಒಂದು, ಹಿರಿಯ ಅಧಿಕಾರಿಗಳಿಗೆ ಈ ಜಾಹೀರಾತಿನ ಬಗ್ಗೆ ಮಾಹಿತಿ ಇದ್ದಿರಲೇ ಬೇಕು.ಎರಡು, ಅವರು ಬ್ಲಾನ್ನು ದಿನಂಪ್ರತಿ ಪರಿಶೀಲಿಸುವುದಿಲ್ಲ. ಇದು ಆರೆಸ್ಸೆಸ್‌ನ ಪ್ರಭಾವ ವಲಯ ಎಲ್ಲಿಯತನಕ ಚಾಚಿದೆ ಎಂಬುದನ್ನು ಸೂಚಿಸುವುದರೊಂದಿಗೆ ತಮ್ಮ ಬ್ಲಾಗ್ ಬಗ್ಗೆ ಪೊಲೀಸರಿಗೇ ಇರುವ ತಾತ್ಸಾರ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಕೆಯ ಧೋರಣೆಯನ್ನೂ ತೋರಿಸುತ್ತದೆ.

ಮೊತ್ತಮೊದಲಾಗಿ ಬ್ಲಾಗ್ ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಕೊಟ್ಟಿರುವುದೇ ತಪ್ಪು. ಯಾಕೆಂದರೆ ಪೊಲೀಸ್ ಇಲಾಖೆಯಲ್ಲಿ ಅನೇಕ ರಹಸ್ಯ ಮಾಹಿತಿಗಳಿರುತ್ತವೆ. ಹಾಗಾಗಿ ಪೊಲೀಸ್ ಸಿಬ್ಬಂದಿಗೆ ಬ್ಲಾಗ್ ನಿರ್ವಹಣೆಯ ತರಬೇತು ಕೊಟ್ಟು ಅವರಿಂದಲೇ ಈ ಕೆಲಸ ಮಾಡಿಸುವುದು ಸುರಕ್ಷಿತತೆಯ ದೃಷ್ಟಿಯಿಂದ ಹೆಚ್ಚು ಸೂಕ್ತವಾದುದು. ಅದು ಬಿಟ್ಟು ‘ಜೆಸ್ಟ್ ಸರ್ವಿಸಸ್’ ಎಂಬ ಖಾಸಗಿ ಸಂಸ್ಥೆಗೆ ನಿರ್ವಹಣೆಯ ಗುತ್ತಿಗೆ ನೀಡುವುದರ ಒಳಮರ್ಮವೇನು?

ಪೊಲೀಸ್ ಇಲಾಖೆಯ ಮೇಲೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾ ಅಪರಾಧಗಳನ್ನು ತಡೆಯುವ ಮಹತ್ವದ ಹೊಣೆಗಾರಿಕೆ ಇದೆ. ಐಪಿಎಸ್ ಶ್ರೇಣಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೇಶದ ಎಲ್ಲಾ ಕೋಮುವಾದಿ, ಸಂವಿಧಾನ ವಿರೋಧಿ, ಕ್ರಿಮಿನಲ್ ಮತ್ತು ಉಗ್ರಗಾಮಿ ಸಂಘಟನೆಗಳ ಹಿನ್ನೆಲೆ ಮತ್ತು ಪ್ರಸಕ್ತ ಚಟುವಟಿಕೆಗಳ ಮಾಹಿತಿ ಇರಲೇ ಬೇಕಾಗುತ್ತದೆ. ಮಾತ್ರವಲ್ಲ ಇದ್ದೇ ಇರುತ್ತದೆ. ಆರೆಸ್ಸೆಸ್ ಸಂಸ್ಥೆಯನ್ನು ಅದರ ದೇಶವಿರೋಧಿ ಚಟುವಟಿಕೆಗಳಿಗಾಗಿ ಒಮ್ಮೆ ಮಹಾತ್ಮಾ ಗಾಂಧಿ ಹತ್ಯೆಯ ಬಳಿಕ ಮತ್ತೊಮ್ಮೆ ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೀಗೆ ಎರಡೆರಡು ಬಾರಿ ನಿಷೇಧಿಸಲಾಗಿರುವ ಸಂಗತಿಯೂ ಅವರಿಗೆ ಹೊಸದೇನಲ್ಲ.

ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಆರೆಸ್ಸೆಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದನೆಂದು ಆತನ ಸಹೋದರ ಗೋಪಾಲ ಗೋಡ್ಸೆಯೇ ಬಹಿರಂಗಪಡಿಸಿದ್ದಾನೆ. ಸ್ವಾತಂತ್ರ್ಯಾಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದಿರುವ ಹಲವಾರು ಕೋಮು ದುರ್ಘಟನೆಗಳಲ್ಲದೆ ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ ದರ್ಗಾ, ಸಂಜೋತಾ ಎಕ್ಸ್‌ಪ್ರೆಸ್ ಮುಂತಾದ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿಯೂ ಆರೆಸ್ಸೆಸ್ ಮತ್ತದರ ಬಾಲಂಗೋಚಿ ಸಂಘಟನೆಗಳ ಕೈವಾಡವಿರುವ ವಿಷಯವೂ ಪ್ರಾಥಮಿಕ ತನಿಖೆಗಳಲ್ಲಿ ಬಯಲಾಗಿದೆ. ಲೆ. ಕ ಪುರೋಹಿತ್, ಸಾಧ್ವಿ ಪ್ರಜ್ಞಾಸಿಂಗ್, ಸ್ವಾಮಿ ಅಸೀಮಾನಂದ ಸೇರಿದಂತೆ ಸಂಘ ಪರಿವಾರದ ಅನೇಕ ಕಾರ್ಯಕರ್ತರು ಈಗಾಗಲೇ ಬಂಧನಕ್ಕೊಳಗಾಗಿ ನ್ಯಾಯಾಂಗ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಿರುವಾಗ ಇಂತಹ ಅಪ್ಪಟ ಕೋಮುವಾದಿ ಸಂಸ್ಥೆಯೊಂದರ ಪಥಸಂಚಲನದ ಚಿತ್ರ ಪೊಲೀಸ್ ಇಲಾಖೆಯ ವೆಬ್‌ಸೈಟಿನಲ್ಲಿ ಪ್ರಕಟವಾಗುತ್ತದೆ ಅಂದರೆ ಏನರ್ಥ?

ಇಂತಹ ಚಿತ್ರಗಳು ಸಂಘ ಪರಿವಾರದ ಬ್ಲಾಗ್‌ಗಳಲ್ಲಿ ಪ್ರಕಟವಾದರೆ ಅದಕ್ಕೆ ಯಾರ ಆಕ್ಷೇಪಣೆಯೂ ಇಲ್ಲ. ಆದರೆ ಇಲ್ಲಿ ಪೊಲೀಸ್ ಇಲಾಖೆಯ ಅಧಿಕೃತ ತಾಣದಲ್ಲಿಯೇ ಇಂತಹ ಜಾಹೀರಾತು ಪ್ರಕಟವಾಗಿರುವುದನ್ನು ಎಲ್ಲೋ ಕಣ್ತಪ್ಪಿನಿಂದಾದ ಆಕಸ್ಮಿಕವೆಂದು ತಳ್ಳಿಹಾಕಲು ಸಾಧ್ಯವೇ? ಇದನ್ನು ಹಾಕಿದವರು ಉದ್ದೇಶಪೂರ್ವಕವಾಗಿಯೇ ಆ ಕೃತ್ಯವನ್ನು ಎಸಗಿದ್ದಾರೆಂದೇ ತಿಳಿಯಬೇಕಾಗುತ್ತದೆ.ಹಾಗಾದರೆ ಇಷ್ಟೂ ಸಮಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಕೂಡ ಏಳುತ್ತದೆ. ಈ ಚಿತ್ರ ಪ್ರಕಟವಾದ ದಿನವೇ ಅದು ಗುಪ್ತಚರ ಇಲಾಖೆಯ ಗಮನಕ್ಕೆ ಬರಬೇಕಾಗಿತ್ತು. ಅವರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಿ ಸೂಕ್ತ ಕ್ರಮ ಜರುಗಬೇಕಿತ್ತು. ಇದ್ಯಾವುದೂ ಆಗಿಲ್ಲವೆಂದರೆ ಆ ಇಲಾಖೆ ಕೂಡ ಭಾಗಶಃ ಕೇಸರೀಕರಣಕ್ಕೆ ತುತ್ತಾಗಿದೆಯೇ ಎಂಬ ಸಂದೇಹ ಮೂಡುತ್ತದೆ.

ಹಾಗಾಗಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದೇ ಸೂಕ್ತ. ಇನ್ನಿತರ ವಿಚಾರಗಳೊಂದಿಗೆ ‘ಜೆಸ್ಟ್ ಸರ್ವಿಸಸ್’ಗೆ ಗುತ್ತಿಗೆ ನೀಡಿರುವ ಹಿನ್ನೆಲೆ ಮತ್ತು ಅದಕ್ಕೂ ಸಂಘಪರಿವಾರಕ್ಕೂ ಇರಬಹುದಾದ ನಂಟುಗಳ ಬಗ್ಗೆಯೂ ತನಿಖೆಯಾಗಬೇಕು. ತಪ್ಪಿತಸ್ಥರಿಗೆಲ್ಲ ಆಜೀವ ಪರ್ಯಂತ ಕಾರಾಗೃಹ ವಾಸದ ಶಿಕ್ಷೆಗಿಂತ ಕಡಿಮೆ ಶಿಕ್ಷೆ ಸಲ್ಲದು.ಸಂಘ ಪರಿವಾರದ ನಾಯಕರಿಗೆ ಡೊಗ್ಗು ಸಲಾಮು ಹಾಕುವಂತಹ ಅಧಿಕಾರಿಗಳು ಜಿಲ್ಲೆಯಲ್ಲಿರುವಾಗ ಸಹಜವಾಗಿಯೇ ಇಲ್ಲಿ ಪ್ರಧಾನ ಸಂಸ್ಥೆ ಯಾವುದು, ಉಪಸಂಘಟನೆ ಯಾವುದು, ಯಾರ ಜುಟ್ಟು ಯಾರ ಕೈಲಿದೆ ಎಂಬುದು ಬಹಳ ಸ್ಪಷ್ಟವಿದೆ.

ಈಗಾಗಲೇ ಆಡಳಿತ, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ, ಕಟ್ಟಡನಿರ್ಮಾಣ ಸಂಸ್ಥೆ, ಮಾಲ್ ಇತ್ಯಾದಿಗಳ ಭದ್ರತಾ ವ್ಯವಸ್ಥೆ, ಹೋಟಲ್, ಖಾಸಗಿ ಬಸ್ ವ್ಯವಸ್ಥೆ, ಪೇಪರ್, ಹಾಲು ವಿತರಣಾ ವ್ಯವಸ್ಥೆ ಮೊದಲಾದ ಕಡೆಗಳಲ್ಲಿ ವ್ಯವಸ್ಥಿತವಾಗಿ ಸಂಘ ಪರಿವಾರದ ಕಾರ್ಯಕರ್ತರನ್ನು ಅಥವಾ ಬೆಂಬಲಿಗರನ್ನು ತೂರಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದವ ರೆಲ್ಲಾ ದ.ಕ.ಜಿಲ್ಲೆ ಒಂದು ಕೇಸರಿ ರಿಪಬ್ಲಿಕ್ ಆಗಿದೆ ಮತ್ತು ಇಲ್ಲಿನ ಪೊಲೀಸ್ ಇಲಾಖೆ ಬಹುತೇಕವಾಗಿ ಕೇಸರೀಕರಣಕ್ಕೆ ತುತ್ತಾಗಿದೆ ಎಂಬ ತೀರ್ಮಾನಕ್ಕೆ ಬರತೊಡಗಿದ್ದರು.

ಕೆಲವು ಉದಾಹರಣೆಗಳನ್ನು ಗಮನಿಸಿ: * ಸಂಘ ಪರಿವಾರದ ಅನೇಕ ತೋಲಾಂಡ ಮುಖಂಡರು ಅತ್ಯಂತ ಕೋಮು ಪ್ರಚೋದನಕಾರಿ ಭಾಷಣಗಳನ್ನು ಮಾಡಿಯೂ ಕಾನೂನಿನ ಕುಣಿಕೆಯಿಂದ ಪಾರಾಗುತ್ತಿದ್ದಾರೆ.

*2006ರ ಕೋಮು ದಾಳಿ, 2008ರ ಚರ್ಚ್ ದಾಳಿಗಳನ್ನೂ ಒಳಗೊಂಡಂತೆ ಜಿಲ್ಲೆಯಲ್ಲಿ ಸಂಭವಿಸಿರುವ ಹೆಚ್ಚು ಕಡಿಮೆ ಪ್ರತಿಯೊಂದು ಕೋಮು ದುರ್ಘಟನೆಯ ಸಂದರ್ಭದಲ್ಲಿ ಪೊಲೀಸರ ಪಕ್ಷಪಾತೀಯ ವರ್ತನೆ ಹಲವಾರು ಸ್ವತಂತ್ರ ತನಿಖೆಗಳ ಮೂಲಕ ದೃಢಪಟ್ಟಿದೆ.

*ಕಳೆದ ದಸರಾ ಹಬ್ಬದ ವೇಳೆ ಶಂಕಿತ ಹಿಂದೂ ಭಯೋತ್ಪಾದಕಿ ಸಾಧ್ವಿಪ್ರಜ್ಞಾ ಸಿಂಗ್ ಠಾಕೂರಳ ಬೃಹತ್ ಕಟೌಟೊಂದು ಉಳ್ಳಾಲದಲ್ಲಿ ಮೂರು ದಿನಗಳ ಕಾಲ ಅನಿರ್ಬಂಧಿತವಾಗಿ ರಾರಾಜಿಸುತ್ತಿತ್ತು.

*ಕ್ರೈಸ್ತ ಪಾಸ್ಟರ್‌ಗಳನ್ನು ಪೊಲೀಸ್ ಠಾಣೆಗಳಿಗೆ, ಕೇಂದ್ರ ಕಚೇರಿಗೆ ಕರೆಸಿ ಅವರು ಮನೆಗಳಲ್ಲಿ ಮತ್ತು ಹಾಲ್‌ಗಳಲ್ಲಿ ಪ್ರಾರ್ಥನೆ ಮಾಡಬಾರದು ಎಂದು ಧಮಕಿ ಹಾಕಲಾಗಿತ್ತು.

* ಕೆಲವು ತಿಂಗಳ ಕೆಳಗಷ್ಟೆ ‘ಸನಾತನ ಸಂಸ್ಥೆ’ ಎಂಬ ಶಂಕಿತ ಭಯೋತ್ಪಾದಕ ಸಂಘಟನೆ ಮೊಬೈಲ್ ಮಳಿಗೆಯೊಂದರ ಮೂಲಕ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಪುಸ್ತಕ ಮಾರಾಟದಲ್ಲಿ ತೊಡಗಿತ್ತು. ಈ ಪ್ರದೇಶ ಜಿಲ್ಲಾಡಳಿತ ಕಚೇರಿ ಮತ್ತು ಪೊಲೀಸ್ ಇಲಾಖೆಯ ಕೇಂದ್ರ ಕಾರ್ಯಾಲಯದಿಂದ ಕೂಗಳತೆಯ ದೂರದಲ್ಲಿದೆ. ಅಷ್ಟೇ ಅಲ್ಲ, ಎಸ್‌ಬಿಐ ವೃತ್ತದಲ್ಲಿ ನಡೆಯುವ ಸಕಲ ವಿದ್ಯಮಾನಗಳನ್ನೂ ಪೊಲೀಸರು ಸಿಸಿಟಿವಿ ಕ್ಯಾಮರಾ ಮೂಲಕ ಕಚೇರಿಯಲ್ಲೇ ಕುಳಿತು ವೀಕ್ಷಿಸಲೂ ಸಾಧ್ಯವಿದೆ. ಆ ಮಳಿಗೆಯಲ್ಲಿ ಲವ್ ಜಿಹಾದ್, ಮತಾಂತರ ಬಗ್ಗೆ ಕಪೋಲ ಕಲ್ಪಿತ ಮಾಹಿತಿಗಳಿರುವ ಪುಸ್ತಕಗಳು, ಹಿಂದೂ ರಾಷ್ಟ್ರ ಕ್ಯಾಲೆಂಡರ್ ಇತ್ಯಾದಿಗಳನ್ನು ಇತರ ಸಾಹಿತ್ಯದ ನಡುವೆ ಇರಿಸಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿತ್ತು. ಆದರೂ ಪೊಲೀಸರಾಗಲಿ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

*ಇತ್ತೀಚೆಗೆ ಆರೆಸ್ಸೆಸ್ ಜೊತೆ ನಿಕಟ ಸಂಬಂಧವುಳ್ಳ ಕಲ್ಲಡ್ಕದ ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಹೊದೆದು ಸ್ಥಾನೀಯ ಆರೆಸ್ಸೆಸ್ ನಾಯಕನೊಂದಿಗೆ ವೇದಿಕೆಯಲ್ಲಿ ಕುಳಿತಿದ್ದರು.

*ಸಂಘಪರಿವಾರದ ರೌಡಿಗಳಿಂದ ಜಾನುವಾರು ಸಾಗಾಟಗಾರರ ಮೇಲೆ ಪೊಲೀಸರ ಸಮ್ಮುಖದಲ್ಲೇ ಸಶಸ್ತ್ರ ದಾಳಿಗಳಾಗುತ್ತವೆ.

*ನೈತಿಕ ಪೊಲೀಸ್‌ಗಿರಿ, ಮತಾಂತರದ ಆರೋಪದಲ್ಲಿ ಕಿರುಕುಳ, ಹಲ್ಲೆ, ಸುಲಿಗೆ ಇತ್ಯಾದಿ ಸಂವಿಧಾನಬಾಹಿರ ಚಟುವಟಿಕೆ ಗಳಲ್ಲಿ ತೊಡಗಿರುವ ಸಂಘ ಪರಿವಾರ ಸಂಘಟನೆಗಳಿಗೆ ಶ್ರೀರಕ್ಷೆ ಸಿಗುತ್ತದೆ.

*ಅಡ್ವಾನಿಯವರ ಜನಚೇತನ ಯಾತ್ರೆಗೆ ಮೂರು ದಿನ ಮೊದಲು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಕೋಮು ಸೌಹಾರ್ದಪ್ರಿಯ ಸಂಘಟನೆಗಳಿಗೆ ಅವಕಾಶ ನಿರಾಕರಿಸಲಾಗಿತ್ತು.

*ಆರೆಸ್ಸೆಸ್ ಈಶಾನ್ಯ ರಾಜ್ಯಗಳಿಂದ ಮಕ್ಕಳನ್ನು ಕರ್ನಾಟಕಕ್ಕೆ ಅನಧಿಕೃತವಾಗಿ ಸಾಗಿಸಿ ತನ್ನ ಸರಸ್ವತಿ ಶಿಶುಮಂದಿರ ಮತ್ತಿತರ ಶಾಲೆಗಳಲ್ಲಿ ವೈದಿಕೀಕರಣಕ್ಕೆ ಒಳಪಡಿಸುವ ವಿಚಾರವನ್ನು ‘ತೆಹೆಲ್ಕಾ’ ನಿಯತಕಾಲಿಕ ಬಯಲುಗೊಳಿಸಿದೆ ಯಾದರೂ ಇದುವರೆಗೆ ಯಾವುದೇ ಕಾನೂನು ಕ್ರಮ ಜರುಗಿಲ್ಲ.

*ಪ್ರೊ ಪಟ್ಟಾಭಿ ಮೇಲೆ ಸಗಣಿ ಸವರಿದ ತೀರಾ ಇತ್ತೀಚಿನ ಪ್ರಕರಣದಲ್ಲೂ ತಪ್ಪೊಪ್ಪಿಕೊಂಡ ಬಜರಂಗ ದಳದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ.

ಇದೀಗ ಈ ಜಾಹೀರಾತು ಪ್ರಕರಣ ಅಳಿದುಳಿದ ಸಂದೇಹಗಳನ್ನೆಲ್ಲ ನಿವಾರಿಸುವುದರ ಜೊತೆಗೆ ಇಲ್ಲಿಯೂ ಗುಜರಾತ್ ಮಾದರಿಯನ್ನು ಪುನರಾವರ್ತಿಸುವ ಹುನ್ನಾರಗಳು ನಡೆಯುತ್ತಿವೆ;ಹಿಂದೂ ರಾಷ್ಟ್ರ ಸ್ಥಾಪನೆಗೆ ತೆರೆಮರೆಯ ಪೂರ್ವ ಸಿದ್ಧತೆಗಳಾಗುತ್ತಿವೆ ಎಂಬ ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ.

ಪ್ರಧಾನಿ ಪಟ್ಟಕ್ಕೆ ಮೀಸಲಾತಿ ಏಕಿಲ್ಲ?

ರಘೋತ್ತಮ ಹೊ ಚಾಮರಾಜನಗರ

-ವಾರ್ತಾಭಾರತಿಯಿಂದ


ಮತ್ತೊಮ್ಮೆ ಚುನಾವಣೆಗಳು ಬಂದಿವೆ. ಅಂದ ಹಾಗೆ ಈ ಚುನಾವಣೆ ನಡೆಯುತ್ತಿರುವುದು ರಾಜ್ಯ ವಿಧಾನಪರಿಷತ್ತಿಗೆ. ರಾಜ್ಯ ವಿಧಾನಸಭೆ ಯಿಂದ ಮತ್ತು ವಿವಿಧ ಮತದಾರ ಸಮೂಹ ಕ್ಷೇತ್ರಗಳಿಂದ ಈ ಚುನಾವಣೆ ನಡೆಯುತ್ತಿದೆ. ದುರಂತವೆಂದರೆ ಈ ುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪಾತ್ರ ಬರೀ ಮತದಾನ ಮಾತ್ರ! ಸ್ಪರ್ಧೆ? ಹೌದು, ಪರಿಷತ್ತಿನ ಈ ಚುನಾ ವಣೆಯಲ್ಲಿ ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಕ್ಷಮಿಸಿ, ಗೆಲ್ಲುವವರು ಮಾತ್ರ ಯಾರು ಇರಲಿಕ್ಕಿಲ್ಲ! ಏಕೆಂದರೆ ‘ಪರಿಶಿಷ್ಟರು’, ಅವರೂ ಕೂಡ ಸ್ಪರ್ಧಿಸಿದ್ದಾರೆ ಅವರನ್ನು ಅವರ ಜನಸಂಖ್ಯೆಗೆ ಅನು ಗುಣವಾಗಿ ಆಯ್ಕೆಮಾಡಬೇಕು ಎಂಬ ಸಾಮಾಜಿಕ ನ್ಯಾಯದ ಮನಸ್ಥಿತಿಗೆ ಇನ್ನೂ ಈ ದೇಶದ ‘ಸಾಮಾನ್ಯ’ ಜನವರ್ಗ ಬಂದಿಲ್ಲ ಅದಕ್ಕೆ.ಹಾಗಿದ್ದರೆ ಪರಿಶಿಷ್ಟರು ವಿಧಾನ ಪರಿಷತ್ತಿಗೆ ಆಯ್ಕೆಯಾಗುವುದು ಬೇಡವೆ? ಯಾಕೆಂದರೆ ರಾಜ್ಯ ಶಾಸಕಾಂಗದಲ್ಲಿ ಒಬ್ಬ ವಿಧಾನಸಭೆಯ ಸದಸ್ಯನಿಗೆ ಎಷ್ಟು ಹಕ್ಕು ಅಧಿಕಾರ ಇರುತ್ತದೆಯೋ ಅಷ್ಟೆ ಹಕ್ಕು ಆಧಿಕಾರ ಪರಿಷತ್ತಿನ ಆ ಸದಸ್ಯನಿಗೂ ಇದೆ. ಕೆಲವು ಹಕ್ಕು, ಅಧಿಕಾರಗಳು ಅಂದರೆ ಸರಕಾರ ಬೀಳಿಸುವ ಅಥವಾ ಉಳಿಸುವ ಹಾಗೆಯೇ ಕೆಲವು ಹಣ ಕಾಸು ಮಸೂದೆಗಳನ್ನು ಅಂಗೀಕರಿಸುವ ಅಧಿಕಾರ ಗಳು ಇಲ್ಲದಿರಬಹುದು. ಆದರೆ, ಪರಿಷತ್ತಿನ ಸದಸ್ಯನೊಬ್ಬ ಶಾಸಕಾಂಗದ ಒಳಗೆ ಅಕ್ಷರಶಃ ಜನಪ್ರತಿನಿಧಿಯಾಗಬಲ್ಲ.

ಜನಸಾಮಾನ್ಯರ ಸಮಸ್ಯೆಗಳನ್ನು ಎತ್ತಿ ಹೇಳಬಲ್ಲ. ಅವರ ನೋವಿಗೆ ದನಿಯಾಗಬಲ್ಲ. ಹಾಗೆಯೇ ಆಡಳಿತ ವ್ಯವಸ್ಥೆಯ ಮೇಲೆ ತನ್ನದೇ ಆದ ನಿಯಂತ್ರಣವನ್ನು ಸಹ ಆತ ಹೊಂದಬಲ್ಲ. ಸಾಲದಕ್ಕೆ ಆತ ಮಂತ್ರಿ, ಮುಖ್ಯಮಂತ್ರಿ ಕೂಡ ಆಗ ಬಲ್ಲ! ಇಷ್ಟು ಹೇಳಿದ ಮೇಲೆ ಮುಗಿದು ಹೋಯಿತು. ಪರಿಷತ್ತಿನ ಸದಸ್ಯನ ಅಧಿಕಾರ ವ್ಯಾಪ್ತಿ ಏನು ಎಂಬುದಕ್ಕೆ. ಅಂದಹಾಗೆ ಅಂತಹ ಸದಸ್ಯ ಮೇಲ್ಜಾತಿ, ಮೇಲ್ವರ್ಗಕ್ಕೆ ಸೇರಿದವನಾದರೆ? (ಬಹುತೇಕರು ಅದೇ ವರ್ಗದವರೇ!) ಖಂಡಿತ, ಆತ ಹೇಳುವುದು ಅಥವಾ ಪ್ರಶ್ನೆ ಕೇಳುವುದು ಆ ತನ್ನ ಮೇಲ್ಜಾತಿ, ಮೇಲ್ವರ್ಗದ ಜನರ ಪರ ಮಾತ್ರ.

ಜಾತಿ ಎಂಬ ರೋಗಗ್ರಸ್ತ ಈ ಭಾರತದಲ್ಲಿ ಮೇಲ್ಜಾತಿ ಸದಸ್ಯನೊಬ್ಬ ಸಮಾಜದ ಎಲ್ಲಾ ವರ್ಗದ ಪರ ನಿಲ್ಲುತ್ತಾನೆ ಎಂದರೆ ಅದನ್ನು ನಂಬಲಿಕ್ಕಾಗದು. ಸ್ವತಃ ಮಹಾತ್ಮ ಗಾಂಧೀಜಿ ಯವರೇ ‘‘ನಾನೇ ಅಸ್ಪಶ್ಯರ ನಿಜವಾದ ಪ್ರತಿನಿಧಿ’’ ಎಂದು ಎರಡನೆ ದುಂಡು ಮೇಜಿನ ಪರಿಷತ್ತಿನ ಸಭೆಯಲ್ಲಿ ಬ್ರಿಟಿಷರೆದುರು ಗುಡುಗಿ ದಾಗ ಅಂಬೇಡ್ಕರರು ಗಾಂಧೀಜಿಯ ಅಂತಹ ವಂಚನೆಯ ಮಾತುಗಳನ್ನು ಬ್ರಿಟಿಷರ ಮುಂದೆ ಅಷ್ಟೇ ಸಾರಾಸಗಟಾಗಿ ದಾಖಲೆಗಳ ಸಮೇತ ತಿರಸ್ಕರಿಸಿ ತಿಪ್ಪೆಗೆ ಎಸೆದಿದ್ದರು. ಹೀಗಿರುವಾಗ ವಿಧಾನ ಪರಿಷತ್ ಸದಸ್ಯನೊಬ್ಬ ಈ ರಾಜ್ಯದ ಎಲ್ಲಾ ಜಾತಿ ಜನರ ಪ್ರತಿನಿಧಿಯಾಗುತ್ತಾನೆಂದರೆ ಅದನ್ನು ಯಾರೂ ಕೂಡ ನಂಬಲಾರರು. ಅಕಸ್ಮಾತ್ ಯಾರಾದರೊಬ್ಬರು ನಾನು ಹಾಗೆ ಮಾಡಿಯೇ ತೀರುತ್ತೇನೆಂದು ಮುಂದೆ ಬಂದರೆ ಪ್ರಸ್ತುತದ ದಿನಗಳಲ್ಲಿ ಅದು ತಮಾಷೆಯೆನಿಸುತ್ತದೆಯೇ ಹೊರತು ಬೇರೇನಲ್ಲ.

ಯಾಕೆಂದರೆ ಅದು ಅಂದರೆ ಜಾತಿಪ್ರಜ್ಞೆ ಬಲವಾಗುತ್ತಿರುವ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಮತ್ತಷ್ಟು ಆಳಕ್ಕೆ ಬೇರು ಬಿಡುತ್ತಿರುವ ಈ ಕ್ಷಣದಲ್ಲಿ ‘‘ನಾನು ಇನ್ನೊಂದು ಜಾತಿಯನ್ನು ಉದ್ಧಾರಮಾಡುತ್ತೇನೆ’’ ಎಂಬುದು ಖಂಡಿತ ಕಾರ್ಯಸಾಧುವಲ್ಲ. ಹಾಗೆಯೇ ಅದು ಪ್ರಾಯೋಗಿಕವೂ ಕೂಡ ಅಲ್ಲ. ಹೀಗಿರುವಾಗ ಇದಕ್ಕಿರುವ ಪರಿಹಾರ? ‘‘ನಿಮ್ಮ ನಿಮ್ಮ ಜಾತಿಗಳನ್ನು ನೀವೇ ಉದ್ಧಾರಮಾಡಿ ಕೊಳ್ಳಿ’’ ಎಂದು ಪ್ರೋತ್ಸಾಹಿಸುವುದು, ಹಾಗೆಯೇ ಹುರಿದುಂಬಿಸುವುದು.ಹೌದು, ಆಯಾಯ ಜಾತಿಗಳನ್ನು ಅವರವರೇ ಉದ್ಧಾರಮಾಡಿಕೊಳ್ಳಬೇಕು. ತಮ್ಮ ತಮ್ಮ ಜಾತಿ ಯ ಮಹಾಪುರುಷರನ್ನು ಅವರವರೇ ಹುಡುಕಿ ಕೊಳ್ಳಬೇಕಿದೆ. ಸಂಘಟನೆಯ ಮತ್ತು ಅಭಿವೃದ್ಧಿ ಯ ದೃಷ್ಟಿಯಿಂದಲೇ ಹೊರತು ಇನ್ನಾರದೇ ಮೇಲಿನ ದ್ವೇಷದಿಂದಲ್ಲ.

ಕುರುಬ, ನಾಯಕ, ಉಪ್ಪಾರ ಇತ್ಯಾದಿ ಸಮುದಾಯಗಳಲ್ಲಿ ಇಂತಹ ಟ್ರೆಂಡನ್ನು ನಾವು ಕಾಣಬಹುದು.. ಅಂದರೆ ಐತಿಹಾಸಿಕ ವ್ಯಕ್ತಿಗಳಲ್ಲೆ ಅಥವಾ ಪುರಾಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳಲ್ಲೆ ಜಾತಿ ಹುಡುಕುವ, ಜಾತಿಯ ಮೂಲ ಹುಡುಕುವ ಟ್ರೆಂಡ್ ಪ್ರಾರಂ ಭವಾಗಿದೆ ಎಂದರೆ ಅದೇ ಪ್ರಸ್ತುತ ದಿನಗಳಲ್ಲಿ ಆ ಸಮುದಾಯದ ಪ್ರತಿನಿಧಿ ಎಂದು ಹೇಳಿಕೊಳ್ಳುವ ವನೊಬ್ಬ ಆ ಜಾತಿಗೆ ಸೇರಿದವನಲ್ಲವೆಂದರೆ? ಆತ ಹೇಗೆ ಆ ಸಮುದಾಯದ ಪ್ರತಿನಿಧಿಯಾಗುತ್ತಾನೆ? ಅಂದಹಾಗೆ ಆತ ಅಂದರೆ ಮೇಲ್ಜಾತಿ/ ಮೇಲ್ವರ್ಗಕ್ಕೆ ಸೇರಿದ ಆ ಸದಸ್ಯನೊಬ್ಬ ತಳ ಸಮುದಾಯದ ಪ್ರತಿನಿಧಿಯಾಗಲಸಾಧ್ಯ ಎಂಬ ಆ ಕಾರಣಕ್ಕೇ ವಿಧಾನಸಭೆ ಮತ್ತು ಲೋಕಸಭೆ ಯಲ್ಲಿ ಮೀಸಲಾತಿ ಜಾರಿಗೊಳಿಸಿರುವುದು.

ಸರಕಾರಿ ಹುದ್ದೆಯಲ್ಲಿ ಮೀಸಲಾತಿ ನೀಡಿರುವುದು.ಆದರೆ ಸರಕಾರಿ ಮೀಸಲಾತಿ ಎಂದರೆ ಅದು ಸರಕಾರದ ವ್ಯಾಪ್ತಿಯ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಬೇಕಲ್ಲವೆ? ಯಾಕೆಂದರೆ ಸಂವಿಧಾನದ ಅನುಚ್ಛೇದ 16(4) ಹೇಳುವುದು ಶೋಷಿತ ಸಮುದಾಯಗಳಿಗೆ ಸರಕಾರಿ ಸೇವೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬುದನ್ನು.ಅಂದರೆ ಅದು ಸರಕಾರದ ಪ್ರತಿಯೊಂದು ಯೋಜನೆ,ಕಾರ್ಯವ್ಯಾಪ್ತಿಯಲ್ಲಿ ಎಂದು ಅರ್ಥ.ದುರಂತವೆಂದರೆ ಈಗಲೂ ವಿಧಾನಪರಿಷತ್ತನ್ನು ಒಳ ಗೊಂಡಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಅಂದರೆ ನ್ಯಾಯಾಂಗ, ರಕ್ಷಣೆ, ವೈಜ್ಞಾನಿಕ ಇತ್ಯಾದಿ ಕ್ಷೇತ್ರ ಗಳಲ್ಲಿ ಮೀಸಲಾತಿ ಇಲ್ಲ. ಇವಿಷ್ಟೆ ಅಲ್ಲ, ಮೀಸಲಾತಿ ಎಲ್ಲೆಲ್ಲಿ ಇಲ್ಲ ಎಂದು ಹೇಳುತ್ತಾ ಹೊರಟರೆ ಪುಟಗಳು ಸಾಲುವುದಿಲ್ಲ.

ಇನ್ನು ಈಗಾಗಲೇ ಇರುವ ಮೀಸಲಾತಿಯನ್ನು ಸ್ವಾತಂತ್ರ್ಯ ಬಂದಾಗಿ ನಿಂದ ಅದೆಷ್ಟು ಮಟ್ಟಿಗೆ ಜಾರಿಗೊಳಿಸಿದ್ದಾರೆ ಎಂದು ಹೇಳಹೊರಟರೆ ಅದೊಂದು ಘೋರ ವಂಚನೆ. ಅಷ್ಟೊಂದು ಅಗಾಧ ಪ್ರಮಾಣದಲ್ಲಿ ನಡೆಯುತ್ತಾ ಬಂದಿದೆ ಮೀಸಲಾತಿಯ ವಂಚನೆ.ಹಾಗೆಯೇ ಆ ಮೀಸಲಾತಿ ಒದಗಿಸಿಕೊಡಿ ಎಂದು ಹೇಳುವ ಸಂವಿಧಾನದ ಅನುಚ್ಛೇದ 16(4)ರ ಉಲ್ಲಂಘನೆ. ನಯಾಕೆಂದರೆ ರಾಷ್ಟ್ರಪತಿ, ಪ್ರಧಾನಮಂತ್ರಿ, ಮಂತ್ರಿ, ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ, ಸುಪ್ರೀಂಕೋರ್ಟ್ ನ್ಯಾಯಾಧೀಶ, ಹೈಕೋರ್ಟ್ ನ್ಯಾಯಾಧೀಶ ಇವರೆಲ್ಲರೂ ಪಡೆಯುತ್ತಿರುವುದು ಸರಕಾರಿ ಸಂಬಳ ತಾನೆ? ಇವರೆಲ್ಲರೂ ಸರಕಾರಿ ಸೇವಕರು ತಾನೆ? ಖಾಸಗಿ ಸೇವೆ ಮಾಡಲೆಂದು ಖಾಸಗಿ ಕಂಪೆನಿಗಳು ಇವರನ್ನು ನೇಮಿಸಿಕೊಂಡಿವೆಯೇ? ಖಂಡಿತ ಇಲ್ಲ.

ಹೀಗಿರುವಾಗ ಇಲ್ಲೆಲ್ಲಾ ಮೀಸಲಾತಿ ಏಕಿಲ್ಲ? ಯಾಕೆ ಇದುವರೆಗೂ ಒಬ್ಬ ದಲಿತ ಈ ದೇಶದ ಪ್ರಧಾನಮಂತ್ರಿಯಾಗಿಲ್ಲ? ಇರುವ ವನೊಬ್ಬನೇ ಪ್ರಧಾನಿ ಎನ್ನಬಹುದು.ಆದರೆ ರೊಟೇಷನ್ ಪದ್ಧತಿಯ ಪ್ರಕಾರ ದಲಿತರೊ ಬ್ಬರಿಗೆ ಈಗ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಮಹಾನಗರ ಪಾಲಿಕೆಗಳಲ್ಲಿ ಮಾಡುತ್ತಿರುವ ಹಾಗೆ ಪ್ರಧಾನಿ ಪಟ್ಟ ನೀಡಬಹುದಲ್ಲವೇ? ಒಬ್ಬನೇ ರಾಷ್ಟ್ರಪತಿ ಎನ್ನಬಹುದು.ಆದರೆ ಇಪ್ಪತ್ತೈದು ವರ್ಷಕ್ಕೊಮ್ಮೆ ಒಂದು ಅವಧಿಗೆ ದಲಿತನೊಬ್ಬನನ್ನು ನೇಮಕ ಮಾಡುವಂತೆ ಅವಧಿಯನ್ನು ಮೀಸಲಿಡಬಹು ದಲ್ಲವೆ? ಎಲ್ಲವನ್ನು ಮಾಡಬಹುದು. ಆದರೆ ಅದ್ಯಾವುದಕ್ಕೂ ಈ ದೇಶದ ಪಟ್ಟಭದ್ರ ಜನ ಅವಕಾಶ ನೀಡುತ್ತಿಲ್ಲ. ಅಥವಾ ದಲಿತ ಜನಪ್ರತಿನಿಧಿಗಳು ಎದೆ ತಟ್ಟಿ ಕೇಳುತ್ತಿಲ್ಲ. ಆಳುವ ವರ್ಗಗಳ ಕಿವಿ ಕಿತ್ತು ಹೋಗುವ ಹಾಗೆ ಕೂಗಿ ಹೇಳುತ್ತಿಲ್ಲ.

ಕೊಟ್ಟಿದ್ದೆ ಪ್ರಸಾದ ಎಂದಷ್ಟೆ ಸುಮ್ಮನಾಗಿದ್ದಾರೆ.ಹಾಗಿದ್ದರೆ ಈ ಪ್ರಸಾದ ಅಥವಾ ಭಿಕ್ಷೆ ಎಲ್ಲಿಯವರೆಗೆ? ಭಿಕ್ಷೆ ನೀಡುವವ ಮನಸ್ಸು ಮಾಡುವವರೆಗೆ! ಹಾಗಿದ್ದರೆ ಇದನ್ನು ನಾವು ಅಂದರೆ ಮೀಸಲಾತಿಯನ್ನು ಏನು ಮಾಡ ಬೇಕು? ‘ಹಕ್ಕು’ ಎಂದು ಸಾಬೀತುಮಾಡ ಬೇಕು! ಭಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಇಡೀ ಜಗತ್ತಿಗೆ ಸಾರಿಹೇಳಬೇಕು. ಅದು ಹಕ್ಕು ಎಂಬ ಕಾರಣಕ್ಕಾಗಿಯೇ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಅದನ್ನು ಅಂದರೆ ಸರಕಾರಿ ಸೇವೆಯಲ್ಲಿ ಮೀಸ ಲಾತಿ ನೀಡುವ ಅನುಚ್ಛೇದ 16(4)ನ್ನು ಮೂಲಭೂತ ಹಕ್ಕಿನ ಅಡಿಯಲ್ಲಿ ಅಂದರೆ ಸಮಾನತೆಯ ಹಕ್ಕಿನ ಅಡಿಯಲ್ಲಿ ಸೇರಿಸಿರು ವುದು. ಅಕಸ್ಮಾತ್ ಅದನ್ನು ಅಂದರೆ ಮೀಸ ಲಾತಿಯನ್ನು ಭಿಕ್ಷೆಯ ರೀತಿ ಮಾಡುವ ಹಾಗಿದ್ದರೆ ಅಂಬೇಡ್ಕರರು ಖಂಡಿತ ಅದನ್ನು ಮೂಲಭೂತ ಕರ್ತವ್ಯದ ವ್ಯಾಪ್ತಿಯಲ್ಲಿ ಸೇರಿಸಿರುತ್ತಿದ್ದರು. ಅಂದರೆ ಅದನ್ನು ಕೊಟ್ಟರೆ ಕೊಡಬಹುದು ಬಿಟ್ಟರೆ ಬಿಡಬಹುದು ಎಂಬಂತೆ!

ಆದರೆ ಅಂಬೇಡ್ಕರರಿಗೆ ಈ ದೇಶದ ಮೇಲ್ವರ್ಗದ ಮನಸ್ಥಿತಿಯ ಪರಿಚಯ ಚೆನ್ನಾಗಿ ತಿಳಿದಿತ್ತು. ಅದಕ್ಕೆ ಅದನ್ನು ಅಂದರೆ ಮೀಸಲಾತಿಯನ್ನು ಅವರು ಮೂಲಭೂತ ಹಕ್ಕಿನ ಅಡಿಯಲ್ಲಿ ಸೇರಿಸಿದ್ದು.ಒಂದು ಪ್ರಶ್ನೆ ಅಂಬೇಡ್ಕರರೇನೊ ಪ್ರಧಾನಿ, ರಾಷ್ಟ್ರಪತಿ, ಕ್ಯಾಬಿನೆಟ್, ವಿಧಾನಪರಿಷತ್ ಇತ್ಯಾದಿ ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಗೊಳಿಸಿ ಎಂದು ಸೂಚಿಸಿಲ್ಲ ಅಥವಾ ಸಂವಿಧಾನದ ಅಡಿಯಲ್ಲಿ ಅಂತಹ ಅನುಚ್ಛೇದಗಳನ್ನು ಅವರು ಸೇರಿ ಸಲು ಹೋಗಿಲ್ಲ. (ಅಕಸ್ಮಾತ್ ಅವರು ಸೇರಿಸಲು ಇಚ್ಛಿಸಿದ್ದರೂ ಪಟ್ಟಭದ್ರ ಶಕ್ತಿಗಳು ಅವರ ಕೈಯನ್ನು ಕಟ್ಟಿಹಾಕಿರಬಹುದು).ಆದರೆ ಅನುಚ್ಛೇದ 16(4)ವನ್ನು ಅವರು ಸೇರಿಸಿದ್ದಾರೆ ಎಂದರೆ ಅದರ ಅಡಿಯಲ್ಲಿ ಪ್ರತಿಯೊಂದನ್ನೂ ಈ ದೇಶದ ಪರಿಶಿಷ್ಟರು ಕೇಳಲಿ ಅಥವಾ ಅವರ ಪ್ರತಿನಿಧಿಗಳು ಸಂಸತ್ತಿನಲ್ಲಿ ಕೇಳಲಿ ಆ ಮೂಲಕ ಅದರ ಪ್ರತಿ ಯೊಂದು ಅವಕಾಶವನ್ನೂ ದೇಶದ ಆಡಳಿತ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ಅವರು ಜಾರಿಗೊಳಿಸಿಕೊಳ್ಳಲಿ(ಕೊಳ್ಳುತ್ತಾರೆ) ಎಂಬುದು ಅಂಬೇಡ್ಕರರ ಆಶಯವಾಗಿತ್ತು.

Sunday, May 27, 2012

ಕಠಿಣ ಪಾಠಗಳು

<span title=ಕಠಿಣ ಪಾಠಗಳು">


- ವಂದನಾ

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಶಿಕ್ಷಣದ ಹಕ್ಕು ಕಾಯ್ದೆಯೇನೋ ಜಾರಿಗೆ ಬಂದಿದೆ. ಆದರೆ ಅದನ್ನು ಜಾರಿಗೆ ತರುವುದು ಸರಕಾರಕ್ಕೆ ಕಗ್ಗಂಟಾಗುವ ಎಲ್ಲ ಲಕ್ಷಣಗಳಿವೆ. ಹಾಗೂ ಗಡುವುಗಳನ್ನು ವಿಸ್ತರಿಸಬೇಕಾದ ಅನಿವಾರ್ಯತೆಗಳಿವೆ. ಕಾಯ್ದೆಗೆ ಖಾಸಗಿ ಶಾಲೆಗಳಿಂದ ಎದುರಾಗಿರುವ ವಿರೋಧವನ್ನು ಸರಕಾರ ಈಗ ಎದುರಿಸುತ್ತಿದೆ. ಜೊತೆಗೆ ತರಬೇತಿ ಹೊಂದಿದ ಶಿಕ್ಷಕರ ಕೊರತೆ ಬೇರೆ.ಪ್ರತಿ ಶಿಕ್ಷಕರಿಗೆ ತರಬೇತಿ ನೀಡುವುದಕ್ಕಾಗಿ ಹಾಕಿಕೊಂಡಿರುವ 2015ರ ಗಡುವನ್ನು ಬದಲಿಸಬೇಕಾದ ಅಗತ್ಯವಿದೆ ಎಂಬುದಾಗಿ ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳು ಹೇಳುತ್ತವೆ.ಶಿಕ್ಷಣದ ಹಕ್ಕು ಕಾಯ್ದೆ ಅಗತ್ಯ ಅರ್ಹತೆಗಳುಳ್ಳ ತರಬೇತಿ ಪಡೆದ ಶಿಕ್ಷಕರನ್ನು ಮಾತ್ರ ನೇಮಿಸಬೇಕು ಎಂಬುದಾಗಿ ಕಡ್ಡಾಯಪಡಿಸಿದೆ. ಈ ಅರ್ಹತೆಗಳೆಂದರೆ: ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಮಟ್ಟಗಳಲ್ಲಿ ಮಕ್ಕಳಿಗೆ ಕಲಿಸುವುದಕ್ಕಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮ, ಸೆಕಂಡರಿ ಮತ್ತು ಸೀನಿಯರ್ ಸೆಕಂಡರಿ ಶಾಲೆಗಳಲ್ಲಿ ಕಲಿಸುವ ಶಿಕ್ಷಕರಿಗೆ ಬಿ.ಎಡ್. ಮತ್ತು ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಕಲಿಸುವುದಕ್ಕಾಗಿ ಎಂ.ಎಡ್.ಅದೇ ವೇಳೆ, ಈ ಶಿಕ್ಷಕರು ನೇಮಕಗೊಂಡ ಐದು ವರ್ಷಗಳಲ್ಲಿ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

2011ರಿಂದ ಎಲ್ಲ ನೂತನ ಶಿಕ್ಷಕರು ಬಿ.ಎಡ್. ಪದವಿಯ ಜೊತೆಗೆ ಟಿಇಟಿಯಲ್ಲಿ ಉತ್ತೀರ್ಣರಾಗಬೇಕು ಎಂದು ಸರಕಾರ ಕಡ್ಡಾಯಗೊಳಿಸಿದೆ. ಪ್ರತಿ ರಾಜ್ಯವೂ ತನ್ನದೇ ಆದ ಟಿಇಟಿಯನ್ನು ಹೊಂದಿದೆ ಹಾಗೂ ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜಕೇಶನ್) ಕೇಂದ್ರೀಯ ಮತ್ತು ಖಾಸಗಿ ಶಾಲೆಗಳಿಗೆ ಸೇರುವ ಶಿಕ್ಷಕರಿಗೆ ಕೇಂದ್ರೀಯ ಟಿಇಟಿಯನ್ನು ನಡೆಸುತ್ತದೆ.ಆದರೆ, ಟಿಇಟಿಗಳ ಫಲಿತಾಂಶ ಆಘಾತಕಾರಿಯಾಗಿದೆ. ಈ ವರ್ಷ ಸಿಬಿಎಸ್‌ಇ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ 93 ಶೇ.ದಷ್ಟು ಮಂದಿ ಅನುತ್ತೀರ್ಣರಾಗಿದ್ದಾರೆ.

ಜಾರ್ಖಂಡ್‌ನಲ್ಲಿ ರಾಜ್ಯ ಶಿಕ್ಷಣ ಮಂಡಳಿ ನಡೆಸಿದ ಟಿಇಟಿಯಲ್ಲಿ ಕೇವಲ 7 ಶೇ. ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದ ಮೊದಲ ಟಿಇಟಿ ಅನುಚಿತ ಕಾರಣಗಳಿಗಾಗಿ ವಿವಾದಾತ್ಮಕವಾಯಿತು. ಪರೀಕ್ಷೆಯಲ್ಲಿ ಪಾಸು ಮಾಡಿಸುವುದಾಗಿ ನಿರುದ್ಯೋಗಿ ಯುವ ಜನರಿಗೆ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಅಲ್ಲಿನ ಸೆಕೆಂಡರ್ ಎಜಕೇಶನ್ ನಿರ್ದೇಶಕರನ್ನು ಬಂಧಿಸಲಾಯಿತು. ಬಳಿಕ ಆ ಪರೀಕ್ಷೆಯನ್ನೂ ರದ್ದುಗೊಳಿಸಲಾಯಿತು.

ಹೆಚ್ಚಿನ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರಕ್ಕೆ ಶಿಕ್ಷಕ ಶಿಕ್ಷಣ ಮತ್ತು ತರಬೇತಿ ದೊಡ್ಡ ಸಮಸ್ಯೆಯಾಗಿದೆ. ‘‘ಕಲಿಸುವ ಸಾಮರ್ಥ್ಯ ಕಡಿಮೆಯಾಗಿದೆ. ಹಲವು ಕಾರಣಗಳಿಂದಾಗಿ ಹೀಗಾಗಬಹುದು. ಉದಾ: ಜನರು ಶಿಕ್ಷಕ ಹುದ್ದೆಯನ್ನು ತಾತ್ಕಾಲಿಕ ಉದ್ಯೋಗವಾಗಿ ಪಡೆದುಕೊಳ್ಳುವುದು ಹಾಗೂ ವೇತನ ಮತ್ತು ಬಡ್ತಿಗೆ ಸಂಬಂಧಿಸಿದ ವಿಷಯಗಳು’’ ಎಂದು ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಉಪಕುಲಪತಿ ಶ್ಯಾಮ್ ಬಿ. ಮೆನನ್ ಹೇಳುತ್ತಾರೆ.ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು 8 ಲಕ್ಷ ತರಬೇತಿಯಿಲ್ಲದ ಶಿಕ್ಷಕರಿದ್ದಾರೆ. ಅವರ ಪೈಕಿ 6.6 ಲಕ್ಷ ಮಂದಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬಿಹಾರ್, ಛತ್ತೀಸ್‌ಗಡ, ಝಾರ್ಖಂಡ್, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳಗಳಲ್ಲಿದ್ದಾರೆ. ಈ ರಾಜ್ಯಗಳಿಗೆ 9.73 ಶಿಕ್ಷಕರ ಅವಶ್ಯಕತೆಯಿದೆ.

ಶಿಕ್ಷಣ ಹಕ್ಕು ಕಾಯ್ದೆಯು ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು 1:30ಕ್ಕೆ ಇಳಿಸಿರುವುದರಿಂದ ಶಿಕ್ಷಕರ ಅಗತ್ಯ ಇನ್ನೂ ಹೆಚ್ಚಾಗಿದೆ.ತರಬೇತಿ ಪಡೆದ ಶಿಕ್ಷಕರು 20ದಿನಗಳ ಕಡ್ಡಾಯ ಸೇರ್ಪಡೆ ತರಬೇತಿ ಪಡೆಯಬೇಕಾಗಿದೆ ಹಾಗೂ ತರಬೇತಿಯಿಲ್ಲದವರು 2015ರೊಳಗೆ ಅಗತ್ಯ ವೃತ್ತಿಪರ ಪದವಿಯನ್ನು ಪಡೆಯಬೇಕಾಗಿದೆ.‘‘ಸೇವೆಯಲ್ಲಿದ್ದು ಪಡೆಯುವ ಶಿಕ್ಷಕ ತರಬೇತಿಗಿಂತ ಸೇವೆ ಪೂರ್ವದ ಶಿಕ್ಷಕ ತರಬೇತಿ (ಬಿ.ಎಡ್., ಎಂ.ಎಡ್., ಮತ್ತು ಡಿ.ಎಡ್.)ಯಲ್ಲಿ ಪರಿಸ್ಥಿತಿ ಹೆಚ್ಚು ಬಿಗಡಾಯಿಸಿದೆ.ಯಾಕೆಂದರೆ, ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಸಾಕಷ್ಟು ಶಿಕ್ಷಕರಿಲ್ಲ’’ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯ ಮಾಜಿ ನಿರ್ದೇಶಕ ಹಾಗೂ ದಿಲ್ಲಿ ವಿಶ್ವವಿದ್ಯಾನಿಲಯದ ಕೇಂದ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ಪ್ರೊ. ಕೃಷ್ಣಕುಮಾರ್ ಹೇಳುತ್ತಾರೆ.

ದೇಶದ ಮಹತ್ವದ ಶಿಕ್ಷಣ ಕಾಲೇಜುಗಳ ಪೈಕಿ ಒಂದಾಗಿರುವ ಕೇಂದ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಕೇವಲ 50 ಎಂ.ಎಡ್. ಸೀಟ್‌ಗಳಿವೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಸಂಯೋಜನೆಗೊಂಡ ಶಿಕ್ಷಣ ಕಾಲೇಜುಗಳ ಬೋಧಕ ಸಿಬ್ಬಂದಿಯ ಪೈಕಿ 38 ಶೇ. ಹುದ್ದೆಗಳು ಖಾಲಿಯಿವೆ. ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಹೀಗೆ ಖಾಲಿಯಿರುವ ಹುದ್ದೆಗಳ ಪ್ರಮಾಣ ಶೇ. 55. ಕುತೂಹಲದ ವಿಷಯವೆಂದರೆ, ಭಾರತದಲ್ಲಿರುವ 40 ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪೈಕಿ 17ರಲ್ಲಿ ಶಿಕ್ಷಣ ವಿಭಾಗವಿಲ್ಲ. ಸೇವಾ ಪೂರ್ವ ಶಿಕ್ಷಕ ಶಿಕ್ಷಣದ ಗುಣಮಟ್ಟ ಹದಗೆಡುವಲ್ಲಿ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಮಂಡಳಿ (ಎನ್‌ಸಿಟಿಇ) ತನ್ನ ದೇಣಿಗೆ ನೀಡಿದೆ. ಅನರ್ಹ ಖಾಸಗಿ ಕಾಲೇಜುಗಳಿಗೆ ಪರವಾನಿಗೆ ನೀಡುವ ಮೂಲಕ ಶಿಕ್ಷಕ ಶಿಕ್ಷಣವನ್ನು ವಾಣಿಜ್ಯೀಕರಿಸಿದ್ದು ಪರಿಸ್ಥಿತಿ ಹದಗೆಡಲು ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಸಂಬಂಧ ಹಲವಾರು ರಾಜ್ಯಗಳಲ್ಲಿ ಎನ್‌ಸಿಟಿಇ ಮೊಕದ್ದಮೆಗಳನ್ನೂ ಎದುರಿಸುತ್ತಿದೆ.ಅದರ ಪ್ರಾದೇಶಿಕ ಸಮಿತಿಗಳು ಕಾಲೇಜುಗಳಿಗೆ ಮಾನ್ಯತೆ ನೀಡುತ್ತಿರುವುದರಿಂದ, ಈ ಸಮಿತಿಗಳ ಸದಸ್ಯರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಗಳು ದಾಖಲಾಗುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಧ್ಯಪ್ರದೇಶ. ಖಾಸಗಿ ಕಾಲೇಜುಗಳಿಗೆ ಅಕ್ರಮವಾಗಿ ಮಾನ್ಯತೆ ನೀಡಿರುವುದಕ್ಕಾಗಿ ಎನ್‌ಸಿಟಿಇಯ ಪಶ್ಚಿಮ ಪ್ರಾದೇಶಿಕ ಸಮಿತಿಯ ಅಧಿಕಾರಿಗಳನ್ನು ಇಲ್ಲಿ ಪ್ರಶ್ನಿಸಲಾಗುತ್ತಿದೆ. ಇಲ್ಲಿನ ಮಂಡಳಿಗೆ ಈಗ ಅಧ್ಯಕ್ಷರಿಲ್ಲ.ಹಿಂದಿನ ಅಧ್ಯಕ್ಷ ಎಂ.ಎ. ಸಿದ್ದೀಕಿ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ವಜಾಗೊಳಿಸಲಾಗಿತ್ತು.

ಬಿಹಾರ ಮತ್ತು ಮಧ್ಯಪ್ರದೇಶ ಮುಂತಾದ ರಾಜ್ಯಗಳು ಶಿಕ್ಷಣ ಶಿಕ್ಷಕರ ಕೊರತೆಯನ್ನು ತುಂಬುವುದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಗುತ್ತಿಗೆ ಶಿಕ್ಷಕರನ್ನು ನೇಮಿಸಿಕೊಂಡಿತು. ಆದರೆ, ಅವರಿಗೆ ತರಬೇತಿ ನೀಡಲು ವಿಫಲವಾಯಿತು. ತರಬೇತಿ ಪಡೆದ ಶಿಕ್ಷಕರನ್ನು ಹೊಂದುವುದನ್ನು ಶಿಕ್ಷಣದ ಹಕ್ಕು ಕಡ್ಡಾಯಗೊಳಿಸಿರುವುದರಿಂದ, ಇದನ್ನು ಸಾಧಿಸುವ ಪ್ರತಿಯೊಂದು ಸಾಧ್ಯತೆಗಳತ್ತ ಈ ರಾಜ್ಯಗಳು ನೋಟ ಹರಿಸಿವೆ. ದೂರ ಶಿಕ್ಷಣ ಮತ್ತು ಮೊಬೈಲ್ ಫೋನ್‌ಗಳ ಮೂಲಕ ತರಬೇತಿ ನೀಡುವುದೂ ಅದರಲ್ಲಿ ಸೇರಿದೆ. ಗುತ್ತಿಗೆ ಶಿಕ್ಷಕರಿಗೆ ತರಬೇತಿ ನೀಡುವುದಕ್ಕಾಗಿ ಬಿಹಾರ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಐಜಿಎನ್‌ಒಯು)ದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಆದರೆ, ಈ ಎಲ್ಲ ಕ್ರಮಗಳ ಯಶಸ್ಸಿನ ಬಗ್ಗೆ ತಜ್ಞರು ಸಂಶಯ ಹೊಂದಿದ್ದಾರೆ. ‘‘ದೂರ ಶಿಕ್ಷಣವು ಎದುರು-ಬದುರಾಗಿ ಕಲಿಯುವುದಕ್ಕೆ ಸಾಟಿಯಾಗ ಲಾರದು. ಅದೂ ಅಲ್ಲದೆ, ಶಿಕ್ಷಣ ಹಕ್ಕಿನ ಪ್ರಕಾರ ಪೂರ್ಣ ಕಾಲಿಕ ಬಿ.ಎಡ್. ಅಥವಾ ಎಂ.ಎಡ್. ಶಿಕ್ಷಕರನ್ನು ನೇಮಿಸಿಕೊಳ್ಳಬೇಕಾಗಿದೆ’’ ಎಂದು ಮಾನವ ಸಂಪನ್ಮೂಲ ಸಚಿವಾಲಯದ ತಾಂತ್ರಿಕ ನೆರವು ಗುಂಪಿನ ಸದಸ್ಯ ಅಜಯ್ ಸಿಂಗ್ ಹೇಳುತ್ತಾರೆ.

ಸೇವಾ ಪೂರ್ವ ಹಾಗೂ ಸೇವಾ ನಿರತ ಶಿಕ್ಷಕರಿಗೆ ತರಬೇತಿ ನೀಡಲು ಸರಕಾರವು ಸರ್ವ ಶಿಕ್ಷಾ ಅಭಿಯಾನದಡಿಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿದೆ. ಆದರೆ, ಅವುಗಳೂ ನಿರೀಕ್ಷಿತ ಗತಿಯಲ್ಲಿ ಸಾಗುತ್ತಿಲ್ಲ. ದೇಶದಲ್ಲಿರುವ 622 ಇಂಥ ಸಂಸ್ಥೆಗಳ ಪೈಕಿ 45 ಶೇ. ಕಾರ್ಯಸ್ಥಗಿತಗೊಳಿಸಿವೆ. ‘‘ಹೆಚ್ಚಿನ ಸಂಸ್ಥೆಗಳಲ್ಲಿ ಭಾರೀ ಪ್ರಮಾಣದ ಬೋಧಕ ಸಿಬ್ಬಂದಿ ಹುದ್ದೆ ಖಾಲಿಯಾಗಿದೆ.ಜಿಲ್ಲಾ ಶಿಕ್ಷಣ ಅಧಿಕಾರಿಗಳು ಯಾವುದೇ ಶಿಕ್ಷಕ ತರಬೇತಿಯಿಲ್ಲದೆ ಈ ಸಂಸ್ಥೆಗಳಲ್ಲಿ ಪ್ರಾಂಶುಪಾಲರಾಗಿ ನೇಮಕಗೊಳ್ಳುತ್ತಾರೆ.ಹಲವು ಸಂದರ್ಭಗಳಲ್ಲಿ ಹೈಸ್ಕೂಲು ಶಿಕ್ಷಕರೂ ಉಪನ್ಯಾಸಕರಾಗಿ ನೇಮಕಗೊಳ್ಳುತ್ತಾರೆ’’ ಎಂದು ಶಿಕ್ಷಣ, ಮಕ್ಕಳಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದಲ್ಲಿ ಪರಿಣತಿ ಹೊಂದಿರುವ ಸಂಶೋಧನಾ ಸಂಸ್ಥೆ ‘ಇಆರ್‌ಯು ಕನ್ಸಲ್ಟೇಂಟ್ಸ್’ನ ನಿರ್ದೇಶಕಿ ವಿಮಲಾ ರಾಮಚಂದ್ರನ್ ಹೇಳುತ್ತಾರೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಿಗೆ ತರಬೇತಿ ಮಾದರಿಯನ್ನು ರೂಪಿಸಲು ಹಾಗೂ ಅವುಗಳಿಗೆ ಮಾರ್ಗದರ್ಶನ ನೀಡಲು ಸ್ಥಾಪಿಸಲಾಗಿದ್ದ ರಾಜ್ಯ ಶೈಕ್ಷಣಿಕ ತರಬೇತಿ ಮತ್ತು ಸಂಶೋಧನಾ ಮಂಡಳಿ (ಎಸ್‌ಸಿಇಆರ್‌ಟಿ)ಗಳೇ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿವೆ. ಉದಾಹರಣೆಗೆ, ಜಾರ್ಖಂಡ್ ನಲ್ಲಿ ಎಸ್‌ಸಿಇಆರ್‌ಟಿಯೇ ಇಲ್ಲ, ಅಲ್ಲಿ ಕಟ್ಟಡಕ್ಕಾಗಿ ಹಾಕಲಾದ ಅಡಿಗಲ್ಲು ಮಾತ್ರವಿದೆ.‘‘ತರಬೇತಿ ಮಾದರಿಗಳನ್ನು ರಾಜ್ಯಗಳ ಪ್ರಧಾನ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಕುಳಿತು ಸಿದ್ಧಪಡಿಸಲಾ ಗುತ್ತಿದೆ. ಶಿಕ್ಷಕರಿಗೆ ವಾಸ್ತವವಾಗಿ ಅಗತ್ಯವಿರುವ ಕೌಶಲದ ಬಗ್ಗೆ ಅಧ್ಯಯನ ನಡೆದಿಲ್ಲ. ಶಿಕ್ಷಕರಿಗೆ ಏನು ಬೇಕು ಹಾಗೂ ಅವರಿಗೆ ಏನು ಸಿಗುತ್ತಿದೆ ಎಂಬುದರ ನಡುವೆ ಭಾರೀ ಅಂತರವಿದೆ. ಹಾಗಾಗಿ, ಈ ಇಡೀ ಪ್ರಕ್ರಿಯೆ ಔಪಚಾರಿಕವಾಗಿದೆ ಅಷ್ಟೆ’’ ಎಂದು ವಿಮಲಾ ಹೇಳಿದರು.

ಶಿಕ್ಷಕರಿಗೆ ಪಾವತಿಸಲು ಅಗತ್ಯ ಹಣವೂ ಇಲ್ಲ. ಹಾಗಾಗಿ, ತರಬೇತಿಯಿಲ್ಲದ ಶಿಕ್ಷಕರನ್ನು ಪಡೆಯುವುದಲ್ಲದೆ ಬೇರೆ ಆಯ್ಕೆಯಿಲ್ಲ ಎಂಬಂತಾಗಿದೆ.ಆದರೆ,12ನೆ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಕ ಶಿಕ್ಷಣಕ್ಕೆ 6,308 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಇದು ಶಿಕ್ಷಕ ಶಿಕ್ಷಣಕ್ಕೆ ಈವರೆಗೆ ಒದಗಿಸಲಾದ ಅತ್ಯಂತ ಗರಿಷ್ಠ ಅನುದಾನವಾಗಿದೆ.ದೇಶದಲ್ಲಿ ಶಿಕ್ಷಕ ಶಿಕ್ಷಣವನ್ನು ಪುನರುಜ್ಜೀವನಗೊಳಿಸಲು ಸಚಿವಾಲಯವು ಹಲವು ವಿಸ್ತೃತ ಯೋಜನೆಗಳನ್ನು ರೂಪಿಸುತ್ತಿದೆ.ಆದರೆ, ಇವುಗಳಿಗೆ ಸ್ವಲ್ಪ ಸಮಯ ಹಿಡಿಯಲಿದೆ ಹಾಗೂ 2015ರ ಗಡುವನ್ನೂ ಪೂರೈಸುವ ಬಗ್ಗೆ ಸಂದೇಹವಿದೆ.

ಕೃಪೆ: ದ ವೀಕ್

ಬಿಜೆಪಿಯ ಪಡಿಪಾಟಲು

ಸನತಕುಮಾರ ಬೆಳಗಲಿ

ಆತ ರಾಷ್ಟ್ರೀಯ ಸ್ವಯಂ-ಸೇವಕ ಸಂಘದ ಪ್ರಚಾರಕ. ಜಗನ್ನಾಥರಾವ್ ಜೋಶಿ ಭಾಷಣ ಮತ್ತು ಹೂ.ವೆ.ಶೇಷಾದ್ರಿಯವರ ಲೇಖನಗಳಿಂದ ರೋಮಾಂಚಿತನಾಗಿ ಕಾಲಿಗೆ ಚಡ್ಡಿ ಸಿಗಿಸಿ ಕೊಂಡವ. ಕಳೆದ 30 ವರ್ಷಗಳಿಂದ ಉತಿಷ್ಟತ- ಜಾಗ್ರತ ಎಂದು ಶಾಖೆಗಳಲ್ಲಿ ಮೈದಂಡಿಸಿ ಕೊಳ್ಳುತ್ತಲೇ ಬಂದಿದ್ದಾನೆ.ಇಂತಹ ಸಾವಿರಾರು ಯುವಕರು ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಮೆದುಳಿಗೆ ವಿಶ್ರಾಂತಿ ಕೊಟ್ಟು ದೇಹದಂಡನೆ ಮಾಡಿಕೊಳ್ಳುತ್ತಲೇ ಇದ್ದಾರೆ. ಇದರಲ್ಲಿ ವಿಶೇಷ ವೇನಿಲ್ಲ. ಆದರೆ ಈ ದೈಹಿಕ ಕಸರತ್ತಿನೊಂದಿಗೆ ಸಿಹಿಲೇಪಿತ ಕೋಮುವಾದ ಎಂಬ ಪಾಷಾಣದ ಮಾತ್ರೆಗಳನ್ನು ಈ ಯುವಕರಿಗೆ ನುಂಗಿಸಲಾಗುತ್ತದೆ. ಅದರ ಪರಿಣಾಮವಾಗಿ ಈ ದೇಶದಲ್ಲಿ ಗಾಂಧಿ ಹತ್ಯೆ, ಗುಜರಾತ್ ಹತ್ಯಾಕಾಂಡ, ಬಾಗಲಪುರ ಮಾರಣ ಹೋಮ, ಜಬ್ಬಲಪುರ ದಂಗೆ, ಬಿವಂಡಿ ಗಲಭೆ ಹೀಗೆ ಹಲವಾರು ಅನಾಹುತಗಳು ನಡೆದಿವೆ.ಈಗ ಹೇಳಹೊರಟಿರುವುದು ಅದನ್ನಲ್ಲ. ನನಗೆ ತುಂಬ ಪರಿಚಿತನಾದ ನಮ್ಮೂರ ಕಡೆಯ ಪ್ರಚಾರಕ ಮೊನ್ನೆ ಅಕಸ್ಮಾತ್ ಭೇಟಿಯಾಗಿದ್ದ. ಹಿಂದೆಲ್ಲ ಆವೇಶದಿಂದ ಮಾತನಾಡುತ್ತಿದ್ದ ಆತ ಈ ಬಾರಿ ತುಂಬ ಗೊಂದಲದಲ್ಲಿದ್ದ. ತಾನು ತುಂಬ ನಂಬಿಕೊಂಡಿದ್ದ ಸಂಘದ ನಾಯಕರು ಹೀಗೇಕೆಯಾದರು?

ತನ್ನಂತೆ ಚಡ್ಡಿ ಧರಿಸಿ, ಶಾಖೆಗೆ ಹೋದ ಯಡಿ ಯೂರಪ್ಪ ಈ ಪರಿ ಹೊಲಸನ್ನು ಯಾಕೆ ಮೆತ್ತಿಕೊಂಡು ನಿಂತಿದ್ದಾರೆ. ಅನಂತಕುಮಾರ್-ನೀರಾ ರಾಡಿಯಾ ರಾಡಿಯೇನದು? ಮುಂಬೈ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಬರಬೇಕಾದರೆ ನಿಷ್ಠಾವಂತ ಸಂಜಯ್ ಜೋಶಿಯನ್ನು ಏಕೆ ಬಲಿಕೊಡಬೇಕಾಯಿತು? ಮೋದಿ- ಯಡಿಯೂರಪ್ಪ ಬಂದ ನಂತರ ಅಡ್ವಾಣಿ-ಸುಷ್ಮಾ ಸ್ವರಾಜ್ ಯಾಕೆ ಪರಾರಿಯಾದರು? ಈ ಪ್ರಶ್ನೆಗಳೆಲ್ಲ ಆತನ ತಲೆ ತಿನ್ನತೊಡಗಿವೆ. ಇದು ಆತನೊಬ್ಬನ ತಳಮಳವಲ್ಲ, ದೇಶವ್ಯಾಪಿ ಆರೆಸ್ಸೆಸ್ ಕಾರ್ಯಕರ್ತರಲ್ಲಿ ಇಂತಹ ಒಂದು ಗೊಂದಲ ಉಂಟಾಗಿದೆ.ಸಂಜಯ್ ಜೋಶಿ ಕೂಡ ಆರೆಸ್ಸೆಸ್ ನಿಷ್ಠಾವಂತ ಕಾರ್ಯಕರ್ತ, ಪ್ರಚಾರಕ. ಆತ ಯುವತಿಯೊಬ್ಬಳೊಂದಿಗೆ ಬೆತ್ತಲಾಗಿದ್ದ ದೃಶ್ಯವುಳ್ಳ ಸೀಡಿ ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಹರಿದಾಡಿತ್ತು. ಈ ಸೀಡಿ ಅನೇಕರ ಕೈಗೆ ಸಿಕ್ಕು ಕೋಲಾಹಲ ಉಂಟಾಗುವ ಮುನ್ನ ಸಂಜಯ್‌ಜೋಶಿ ಸಭ್ಯ, ಸಂಭಾವಿತ ಬ್ರಹ್ಮಚಾರಿ ಎಂಬ ಪ್ರತೀತಿಯನ್ನು ಹೊಂದಿದ್ದರು.

ನಾಗಪುರದ ಸಂಘದ ವಲಯದಲ್ಲಿ ಆತನನ್ನು ಸಂಜಯ್‌ಭಾಯಿಯೆಂದೇ ಕರೆಯುತ್ತಿದ್ದರು. ಇಂಜಿನಿಯರಿಂಗ್ ಪದವೀಧರನಾಗಿ ಸಂಘದ ಕಾರ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದ ಜೋಶಿ ಚಾಲಾಕಿ ಸಂಘಟಕ. ಆದರೆ ಪ್ರಚಾರಪ್ರಿಯನಲ್ಲ. ಇಂತಹವನಿಗೆ ಇಂತಹ ದುರ್ಗತಿ ಯಾಕೆ ಬಂತು ಎಂದು ಅನೇಕರು ಮರುಕಪಟ್ಟಿದ್ದರು.ಇಂತಹ ಸಂಜಯ್‌ಜೋಶಿಯನ್ನು ಬಿಜೆಪಿ ಕಾರ್ಯಕಾರಿಣಿ ಸಮಿತಿಯಿಂದ ತೆಗೆದು ಹಾಕದೇ ಮುಂಬೈ ಸಭೆಗೆ ಬರುವುದೇ ಇಲ್ಲವೆಂದು ನರೇಂದ್ರ ಮೋದಿ ಹಠ ಹಿಡಿಯಲು ಕಾರಣವೇನು? ಈತನನ್ನು ತೆಗೆದು ಹಾಕಿದ ನಂತರ ಮೋದಿ ಒಮ್ಮೆಲೇ ಮುಂಬೈ ಸಭೆಗೆ ಬಂದರು.

ಜೋಶಿಯ ಮೇಲೆ ಮೋದಿಗೆ ಈ ಪರಿ ಕೋಪವೇಕೆ ಎಂದು ತಿಳಿಯಬೇಕಾದರೆ, ಮತ್ತೆ ಆ ಸೀಡಿ ವೃತ್ತಾಂತ ಬಿಚ್ಚಿಕೊಳ್ಳುತ್ತದೆ. ಆ ಸೀಡಿಯ ದೆಸೆಯಿಂದಾಗಿ ಗುಜರಾತ್ ಬಿಜೆಪಿ ನಾಯಕತ್ವದಿಂದ ಮತ್ತು ಸಂಘದ ಪ್ರಚಾರಕ ಸ್ಥಾನದಿಂದ ಪದಚ್ಯುತಗೊಳ್ಳಬೇಕಿದ್ದ ಜೋಶಿ ನಂತರ ನಾಪತ್ತೆಯಾಗಿದ್ದ. ಆಗ ಈ ಸೀಡಿಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಮತ್ತು ಮಾಧ್ಯಮದವರಿಗೆ ತಲುಪಿಸುವುದರ ಹಿಂದೆ ಇದೇ ನರೇಂದ್ರ ಮೋದಿಯ ಕೈವಾಡವಿತ್ತು. ಬಿಜೆಪಿ ಹಿರಿಯ ನಾಯಕರಾದ ಪ್ರಮೋದ್ ಮಹಾಜನ್, ಗೋವಿಂದಾಚಾರ್ಯ, ಉಮಾಭಾರತಿ, ನರೇಂದ್ರ ಮೋದಿಯ ಅಂತರಂಗದ ಲೀಲಾ-ವಿನೋದಗಳು ಈ ಜೋಶಿಗೆ ಗೊತ್ತಿದ್ದವು. ಅಂತಲೇ ಆತನ ಬಾಯಿ ಮುಚ್ಚಿಸಲು ಈ ಸೀಡಿ ಸೃಷ್ಟಿಯಾಯಿತು.

ನಂತರ ಸೀಡಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದಾಗ, ಅದರಲ್ಲಿದದ್ದು ಜೋಶಿ ಎಂಬುದು ಸ್ಪಷ್ಟವಾಗಲಿಲ್ಲ. ಇಂತಹ ಜೋಶಿ ಆರೆಸ್ಸೆಸ್‌ನಿಂದ ಡೆಪ್ಯೂಟ್ ಆಗಿ ಗುಜರಾತ್ ಬಿಜೆಪಿ ಸಂಘಟನಾ ಕಾರ್ಯದರ್ಶಿಯೆಂದು ಹೋದಾಗ, ಅಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ತಳವೂರಿದ್ದ ನರೇಂದ್ರ ಮೋದಿಯನ್ನು ದಿಲ್ಲಿಗೆ ಓಡಿಸಿದ್ದ. ಜೋಶಿಗೆ ಅಂದಿನ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಸಾಥ್ ನೀಡಿದ್ದರು. ಮೋದಿ ಹಾಗೂ-ಹೀಗೂ ದಿಲ್ಲಿಗೆ ಬಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾದರು. ಅರುಣ್ ಜೇಟ್ಲಿಯಂತಹವರ ಸ್ನೇಹ ಸಂಪಾದಿಸಿದರು. ಈ ನಡುವೆ ಗುಜರಾತ್‌ನಲ್ಲಿ ಬಿಜೆಪಿಯ ಪ್ರಭಾವ ಕುಗ್ಗತೊಡಗಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆ ಪಕ್ಷ ಪರಾಭವಗೊಂಡಿತು. ಆಗ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ರನ್ನು ಬದಲಾವಣೆ ಮಾಡುವುದು ಅನಿವಾರ್ಯವಾಯಿತು.

ಈ ಸಂದರ್ಭ ಬಳಸಿಕೊಂಡ ಮೋದಿ ಮತ್ತೆ ಗುಜರಾತ್‌ಗೆ ಒಕ್ಕರಿಸಿದರು. ಮೋದಿ ಬಂದ ನಂತರ ಸಂಜಯ್ ಜೋಶಿಗೆ ವನವಾಸ ಆರಂಭವಾಯಿತು. ಆದರೂ ನಾಗಪುರದ ಆರೆಸ್ಸೆಸ್‌ನವರಿಗೆ ಜೋಶಿ ಮೇಲೆ ವಿಶೇಷ ಮಮತೆ. ಜೋಶಿಗೆ ಕೆಲ ದಿನ ಸುಮ್ಮನಿರಲು ಹೇಳಿದರು.ಆಡ್ವಾಣಿಯವರನ್ನು ಮೂಲೆಗುಂಪು ಮಾಡಿ, ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಬಿಜೆಪಿಯಲ್ಲೇ ನೇರ ಹಸ್ತಕ್ಷೇಪ ನಡೆಸಿದರು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಗಪುರದ ನಿತಿನ್ ಗಡ್ಕರಿಯನ್ನು ತಂದು ಕೂರಿಸಿದರು. ಆ ಗಡ್ಕರಿ ಮೂಲಕ ಸಂಜಯ್ ಜೋಶಿಯನ್ನು ಮತ್ತೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ತೂರಿಸಿದರು. ತನ್ನ ವೈರಿ ಬಿಜೆಪಿ ಕಾರ್ಯಕಾರಿಣಿ ಸೇರಿದ್ದನ್ನು ಕಂಡು ಮೋದಿ ಕೆರಳಿಕೆಂಡವಾದರು. ಅಂತಲೇ ಉತ್ತರ-ಪ್ರದೇಶ ಚುನಾವಣಾ ಪ್ರಚಾರಕ್ಕೆ ಆತ ಹೋಗಲಿಲ್ಲ. ಮುಂಬೈ ಸಭೆಗೂ ಬರುವುದಿಲ್ಲವೆಂದು ಹಠ ಹಿಡಿದರು. ಕೊನೆಗೆ ಮೋದಿಗೆ ಮಣಿದ ಗಡ್ಕರಿ ಜೋಶಿಯಿಂದ ರಾಜೀನಾಮೆ ಕೊಡಿಸಿ ಮೋದಿಯನ್ನು ಕೈಮುಗಿದು ಬರಮಾಡಿಕೊಂಡರು.

ಇಂತಹ ಮೋದಿಗೆ ಯಡಿಯೂರಪ್ಪ ಆಪ್ತಸ್ನೇಹಿತ. ಇಬ್ಬರು ಗಾಣಿಗ ಉಪಜಾತಿಗೆ ಸೇರಿದವರು. ಅಡ್ವಾಣಿ ಮತ್ತು ಅನಂತಕುಮಾರನನ್ನು ಕಂಡರೆ ಇಬ್ಬರಿಗೂ ಆಗುವುದಿಲ್ಲ. ಅಂತಲೇ ಮುಂಬೈ ಸಭೆಗೆ ಬರುವುದಿಲ್ಲವೆಂದು ಮುನಿಸಿ ಕೊಂಡು ಕೂತಿದ್ದ ಯಡಿಯೂರಪ್ಪ ಮೋದಿ ಬರುತ್ತಾರೆಂದು ಗೊತ್ತಾದಾಗ ಮೋದಿ ದೇಶದ ಪ್ರಧಾನಿಯಾಗಲಿಯೆಂದು ಪಠಣ ಮಾಡುತ್ತಲೇ ಮುಂಬೈಗೆ ಹೊರಟರು. ಇವರಿಬ್ಬರು ಅಲ್ಲಿ ಬರುತ್ತಿದ್ದಂತೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅಲ್ಲಿಂದ ಕಾಲ್ಕಿತ್ತರು.

ಇದು ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರವನ್ನು ಆಳಲು ಹೊರಟಿರುವ ಶಿಸ್ತಿನ ಚಾರಿತ್ರವಂತರ ಪಕ್ಷದ ಕತೆ. ಈಗ ಬಿಜೆಪಿಗೆ ವಾಜಪೇಯಿಯವರಂತಹ ಪ್ರಭಾವಿ ನಾಯಕರಿಲ್ಲ. ಪಕ್ಷವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಆರೆಸ್ಸೆಸ್‌ಗೆ ಹಿಂದಿಗಿಂತ ಸುಲಭವಾಗಿಲ್ಲ. ಅಂತಲೇ ಮಂಡಿಪೇಟೆಯ ಅಂಗಡಿ ಯೊಂದರ ಗಲ್ಲಾಪೆಟ್ಟಿಗೆ ಮುಂದೆ ಕೂತುಕೊಳ್ಳುವ ಮಾಲಕನಂತಿರುವ ನಿತಿನ್ ಗಡ್ಕರಿಗೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಮೂಲತಃ ವ್ಯಾಪಾರಿ ಯಾಗಿರುವ ಈತ ಇಲ್ಲಿಯೂ ಅದನ್ನೇ ನಡೆಸಿದ್ದಾನೆ.
ಇನ್ನು ಯಡಿಯೂರಪ್ಪ- ಅನಂತಕುಮಾರ್ ಕತೆ. 90ರ ದಶಕದ ಕೊನೆಯವರೆಗೆ ಇವರಿಬ್ಬರು ಗುರು- ಶಿಷ್ಯರಂತೆ ಇದ್ದರು. ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತನಾಗಿದ್ದ ಅನಂತಕುಮಾರರನ್ನು ಬೆಂಗಳೂರಿಗೆ ಕರೆದುಕೊಂಡು ಬಂದವರು ಯಡಿಯೂರಪ್ಪ. ರಾಜಧಾನಿಗೆ ಕರೆ ತಂದು ಈತನನ್ನು ಪಕ್ಷದ ಕಾರ್ಯದರ್ಶಿಯನ್ನಾಗಿ ಮಾಡಿದರು. ಯಡಿಯೂರಪ್ಪ ಅಧ್ಯಕ್ಷರಾಗಿದ್ದರು. ಇವರಿಬ್ಬರು ಅಂಟಿಕೊಂಡೇ ಓಡಾಡುತ್ತಿದ್ದರು. ಅನೇಕ ಬಾರಿ ಪ್ರವಾಸಕ್ಕೆ ಹೋದಾಗಲೆಲ್ಲ, ಯಡಿಯೂರಪ್ಪ ಅವರ ಕೈಚೀಲವನ್ನು ಅನಂತಕುಮಾರ್ ಅವರು ಹಿಡಿದಿದ್ದನ್ನು ನಾನೇ ನೋಡಿದ್ದೇನೆ.ಮುಂದೆ ಅನಂತಕುಮಾರ್ ಲೋಕಸಭೆಗೆ ಚುನಾಯಿತರಾಗಿ ವಾಜಪೇಯಿ ಸರಕಾರದಲ್ಲಿ ಮಂತ್ರಿಯಾದರು. ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷಾ ಚಾಲಾಕಿತನದಿಂದ ರಾಷ್ಟ್ರೀಯ ನಾಯಕರ ಸಂಪರ್ಕ ಸಾಧಿಸಿದರು. ಯಡಿ ಯೂರಪ್ಪ ಅವರು ಕರ್ನಾಟಕದ ಲಿಂಗಾಯಿತ ವಲಯದಲ್ಲಿ ಬೇರು ಬಿಟ್ಟರು.

ಹೆಗಡೆ, ಬೊಮ್ಮಾಯಿ, ಪಟೇಲ್ ನಿರ್ಗಮನದ ನಂತರ ನಾಯಕನಿಲ್ಲದೇ ದಿಕ್ಕೇಡಿಯಾಗಿದ್ದ ಸಮುದಾಯಕ್ಕೆ ಹೊಸ ನಾಯಕನಾಗಿ ಯಡಿಯೂರಪ್ಪ ಬಂದರು. ಅಂತಲೇ ಜನತಾ ಪರಿವಾರದಲ್ಲಿದ್ದ ಉದಾಸಿ, ಬಸವರಾಜ ಬೊಮ್ಮಾಯಿ, ಕತ್ತಿ ಹಾಗೂ ಕಾಂಗ್ರೆಸ್‌ನ ಪ್ರಭಾಕರ ಕೋರೆ, ಸೋಮಣ್ಣ, ಬಸವರಾಜ ಬಿಜೆಪಿ ಸೇರಿ ಲಿಂಗಾಯಿತ ರಾಜಕೀಯ ಆರಂಭಿಸಿದರು.
ಮುಂದೇನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ, ಮಕ್ಕಳು- ಅಳಿಯಂದಿರನ್ನು ದೂರವಿಟ್ಟು ಪ್ರಾಮಾಣಿಕ ಆಡಳಿತ ನಡೆಸಿದ್ದರೆ ಅನಂತಕುಮಾರ್‌ನವರಂತಹ ನೂರು ಜನರು ಬಂದರೂ ಏನನ್ನೂ ಮಾಡಲಾಗುತ್ತಿರಲಿಲ್ಲ. ಆದರೆ ಆಪರೇಷನ್ ಕಮಲದ ಮೂಲಕ ಮುಖ್ಯಮಂತ್ರಿಯಾದ ವ್ಯಕ್ತಿಗೆ ಪ್ರಾಮಾಣಿಕ ನಾಗಿರುವುದು ಅಸಾಧ್ಯವಾಯಿತು. ಹಗಲು-ರಾತ್ರಿ ಕಬಳಿಸತೊಡಗಿದರು. ತಾವೊಬ್ಬರೇ ತಿನ್ನಲಿಲ್ಲ, ಪಕ್ಷದ ರಾಷ್ಟ್ರೀಯ ನಾಯಕರಿಗೆ, ಆರೆಸ್ಸೆಸ್ ಗುರುಗಳಿಗೆ ಹೊಟ್ಟೆ ಬಿರಿಯುವಷ್ಟು ತಿನ್ನಿಸಿದರು.

ಸಂಘ ಪರಿವಾರ ಅನೇಕ ಸರಕಾರಿ ನಿವೇಶನಗಳನ್ನು ನುಂಗಿ ಹಾಕಿತು. ಇದನ್ನೆಲ್ಲ ಕರ್ನಾಟಕದ ಜನರ ಮುಂದೆ ಬಿಚ್ಚಿಡುವುದಾಗಿ ಯಡಿ ಯೂರಪ್ಪಬಹಿರಂಗವಾಗಿ ಹೇಳಿದ ನಂತರ ಗಡಗಡ ನಡುಗಿದ ಗಡ್ಕರಿ ಯಡಿಯೂರಪ್ಪನವರ ಕೈಕಾಲು ಹಿಡಿದು ಮುಂಬೈ ಸಭೆಗೆ ಕರೆಸಿಕೊಂಡರು.ಇಂತಹ ಬಿಜೆಪಿ ರಾಷ್ಟ್ರಕ್ಕೆ ಎಂತಹ ಪರ್ಯಾಯ ನೀಡಬಲ್ಲದು? ನರೇಂದ್ರ ಮೋದಿ ಪ್ರಧಾನಿಯಾದರೆ, ಈ ದೇಶದ ಗತಿಯೇನು? ಅಷ್ಟಕ್ಕೂ ಕೇವಲ ಗುಜರಾತ್‌ಗೆ ಸೀಮಿತವಾದ ಆತನನ್ನು ಇಡೀ ದೇಶ ಒಪ್ಪಿಕೊಳ್ಳುವುದೇ? ಕನಿಷ್ಠ ಎನ್‌ಡಿಎ ಪಾಲುಗಾರ ಪಕ್ಷಗಳಾದರೂ ಸಮ್ಮತಿ ನೀಡುವುವೇ? ಯಡಿ ಯೂರಪ್ಪ, ಅನಂತಕುಮಾರ್ ಜಗಳಕ್ಕೆ ಅಧಿಕಾರ ಮತ್ತು ಅಮೇಧ್ಯ ಕಬಳಿಸುವುದನ್ನು ಬಿಟ್ಟರೆ ಇನ್ನೇನು ಕಾರಣವಿದೆ? ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕಲು ಪರದಾಡಬೇಕಾಗಿಲ್ಲ.ಕೃಪೆ: ವಾರ್ತಾಭಾರತಿ

Saturday, May 26, 2012

ಆತ್ಮಕಥೆ ಎಂದರೆ ಬರಿ ಬೆಡ್ ರೂಂ ರಹಸ್ಯವೇ!?

ಕೃಪೆ : ಕಾಲಂ

ಪ್ರತಿಭಾ ನಂದಕುಮಾರ್‌ರವರ ಆತ್ಮಕಥನ ’ಅನುದಿನದ ಅಂತರಗಂಗೆ’ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಗೊಂಡು, ಕೆಲವು ಮಳಿಗೆಗಳ ಮಾರಾಟದ ಟಾಪ್ ಟೆನ್ ಪಟ್ಟಿಯಲ್ಲಿ ಸೇರಿಹೋಗಿದೆ.

ಪ್ರತಿಭಾರವರ ಆತ್ಮಕಥೆಯನ್ನು ಮಹಿಳೆಯೊಬ್ಬಳ, ಕವಯತ್ರಿಯೊಬ್ಬಳ ಆತ್ಮಕಥಾನಕ ಎಂಬ ಯಾವ ಗೆರೆಗಳೂ ಇಲ್ಲದೇ ಓದಿಕೊಂಡಾಗ ಕೆಲವು ಸಂಗತಿಗಳನ್ನು ಟಿಪ್ಪಣಿ ಮಾಡಬೇಕಾಗಿದೆ. ಇಡೀಯ ಆತ್ಮಕಥನ ಯಾರೊಬ್ಬರನ್ನೂ ಪೂರ್ವಗ್ರಹದಿಂದ ನೋಡದೇ ತನ್ನ ಕಥೆ ಹೇಳಿಕೊಂಡು ಹೋದುದು ಮೆಚ್ಚಬೇಕಾದದ್ದೇ. ಪ್ರಾರಂಭದಿಂದ ಕೊನೆಯವರೆಗೂ ಒಂದಷ್ಟು ಕುತೂಹಲದಿಂದ ಓದುವಂತೆ ಮಾಡುವ ಪ್ರತಿಭಾರವರ ನಿರೂಪಣಾ ಶೈಲಿ ಅದ್ಭುತವಾದದ್ದು. ಕನ್ನಡದ ವಾರಪತ್ರಿಕೆ ’ಅಗ್ನಿ’ಯಲ್ಲಿ ಬಿಡಿ ಬಿಡಿಯಾಗಿ ಪ್ರಕಟವಾಗಿದ್ದ ಆತ್ಮಕಥೆಯ ಸಂಕಲನ ಪ್ರತಿಭಾರವರೇ ಹೇಳಿಕೊಂಡಂತೆ ಬದುಕಿನ ಅರ್ಧ ಅನುಭವಗಳಂತೆ ಅಂದರೆ ಆತ್ಮಕಥೆಯ ಇನ್ನೊಂದು ರಸವತ್ತಾದ ಭಾಗ ಬರಲಿದೆಯಂತೆ!

ಅಮೆಜಾನ್ ದಾಟಬಹುದು, ಈ ಅನುದಿನದ ಅಂತರಗಂಗೆ ದಾಟುವುದು ಹೇಗೆ? ಕಣ್ಣೊಳಗಿನ ಈ ಕ್ಷಿತಿಜ ಮುಟ್ಟುವುದು ಹೇಗೆ ಎಂಬ ರಾಮಾನುಜನ್‌ರವರ ಪ್ರಶ್ನೆಗೆ ಈ ಜ್ವರ ಇಳಿಯುವ ಮೊದಲು, ಚನ್ನಾಗಿ ಬೆವರಬೇಕು, ಒಳಗಿನದೆಲ್ಲ ಹೊರಬರಬೇಕು, ಅನುದಿನದ ಅಂತರಗಂಗೆ ದಾಟುವ ಯತ್ನ ಇದು ಎಂದು ಪ್ರತಿಭಾರವರು ಉತ್ತರಿಸುತ್ತಾ ಯು.ಆರ್. ಅನಂತಮೂರ್ತಿಯವರ ಮುನ್ನುಡಿಯೊಂದಿಗೆ ಆತ್ಮಕಥೆ ತೆರೆದುಕೊಂಡಿದೆ.

ಸಾಮಾನ್ಯವಾಗಿ ಮನುಷ್ಯನೊಬ್ಬನ ಆತ್ಮಕಥೆ ಎಂದರೆ ಒಂದು ಕಾಲಘಟ್ಟದ ಸಾಂಸ್ಕೃತಿಕ ದಾಖಲೆ. ಆದರೆ ಪ್ರತಿಭಾರವರ ಆತ್ಮಕಥೆ ಯಾವ ಕಾಲಘಟ್ಟದ ದಾಖಲೆಯಾಗಿಯೂ ಉಳಿಯಲು ಇಚ್ಛಿಸುವುದಿಲ್ಲ. ಅಂದರೆ ಸಾಂಸ್ಕೃತಿಕ ದಾಖಲೆಯಾಗಬಹುದಾದ ಮಿತಿಯನ್ನು ಮೀರಿರಬಹುದು. ಇಡೀ ಆತ್ಮಕಥೆ ಎನ್ನುವುದು ತೀರಾ ಖಾಸಗಿ ಎನ್ನಬಹುದಾದ ಕೆಲವು ಸಂಬಂಧಗಳ ಹಸಿಹಸಿ ವರ್ಣನೆಗಳಿಂದ ಕೂಡಿದೆ. ಅಂದರೆ, ಈ ರೀತಿಯಾಗಿ ’ಬಿಂದಾಸ್’ ಆಗಿ ಬರೆಯುವುದು ಪ್ರತಿಭಾರವರಿಗೆ ಸಿದ್ಧಿಸಿದ ಶೈಲಿಯೋ, ಶಕ್ತಿಯೋ ಅಥವಾ ದೌರ್ಬಲ್ಯವೋ?

ಬಿಡಿ ಬಿಡಿ ಲೇಖನದಲ್ಲಿ, ಪ್ರತಿಭಾರವರ ಅತ್ಯುತ್ತಮ ಕವನಗಳನ್ನು ಸಾಂದರ್ಭಿಕವಾಗಿ ಜೋಡಿಸಿ ನಿರೂಪಿಸಿದ ಆತ್ಮಕಥೆ ರಸವತ್ತಾಗಿಯೇ ಇದೆ. ಇಡೀ ಸಂಕಲನವನ್ನು ಓದಿದಾಗ, ಪ್ರಾಮಾಣಿಕವಾಗಿ ನಡೆದುದ್ದೆಲ್ಲವನ್ನೂ ತೆರೆದಿಟ್ಟಿದ್ದಾರೆ ಎಂದು ಬೇಷ್ ಅನ್ನಬಹುದಾದರೂ ತೆರೆದಿಡುವಿಕೆಯಲ್ಲಿಯೇ ಮಸಾಲೆ ಸೇರಿಸುವ ದುರುದ್ದೇಶವೂ ಇದ್ದಂತಿದೆ.

ಇಡೀ ಆತ್ಮಕಥನದಲ್ಲಿ ’ಅವರು’ ಎಂದು ಉಲ್ಲೇಖಿಸುವ ವ್ಯಕ್ತಿಯೊಂದಿಗಿನ ಸಂಬಂಧಗಳು ಹಲವು ಜನರೆಡೆಗೆ ಅನುಮಾನಗಳ ನೋಟಬೀರುವಂತಾಗಿದೆ. ಇಲ್ಲಿ ’ಅವರು’ ಎಂದು ಉಲ್ಲೇಖಿಸಿದ ವ್ಯಕ್ತಿಯ ಪಾತ್ರ ಪರಿಚಯ ಆತ್ಮಕಥನದ ಮುಂದಿನ ಸಂಚಿಕೆಯಲ್ಲಿ ಬರಬಹುದೇನೋ? ಸದ್ಯಕ್ಕಂತೂ ಪ್ರತಿಭಾ ಉಲ್ಲೇಖಿಸುವ ’ಅವರು’ ಎಂಬುವವರ ಧರ್ಮಪತ್ನಿಯ ತಾಳ್ಮೆಯನ್ನು ನಾವೆಲ್ಲಾ ಗೌರವಿಸಬೇಕಾಗಿದೆ. ಆದರೂ ಆ ವ್ಯಕ್ತಿಯ ವಿವರಣೆ ಸಂದರ್ಭದಲ್ಲಿ ಪ್ರತಿಭಾರೊಂದಿಗೆ ಒಡನಾಡಿದ ಹಲವು ಗಂಡಸರ ವ್ಯಕ್ತಿತ್ವವನ್ನು ಓದುಗನು ಶಂಕಿಸಬೇಕೆಂಬ ಸಣ್ಣ ಸಂಚು ಮೂಡಿದಂತಿದೆ.

ಒಂದು ಆತ್ಮಕಥಾನಕವೆಂದರೆ ಬರಿ ಗಂಡು ಹೆಣ್ಣಿನೊಂದಿಗೆ ಒಡನಾಟ, ಆಕರ್ಷಣೆ, ಮುಟ್ಟುವುದು, ಮುತ್ತಿಡುವುದು ಇಷ್ಟಕ್ಕೇ ಸೀಮಿತವಾಗುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇಲ್ಲಿ ಪ್ರಾಮಾಣಿಕ ನಿರೂಪಣೆ ಎಂಬ ಶಬ್ದ ಉಲ್ಲೇಖಿಸಬಹುದಾದರೂ ವ್ಯಕ್ತಿಯೊಬ್ಬನ ಬದುಕಿನಲ್ಲಿ ಪರಪುರುಷ ಯಾ ಪರಮಹಿಳೆಯ ’ಸಹವಾಸ’ ಎಂಬುವುದು ಒಂದು ಸಾಂದರ್ಭಿಕ ಘಟನೆಗಳಾಗಬಹುದೇ ಹೊರತು ಬದುಕಿನ ಅರ್ಧದ ಘಟನೆಗಳು ಪರಪುರುಷ ಸಂಘದಲ್ಲೇ ಕಳೆದಂತೆ ಕಾಣುವ ವಿವರಣೆಗಳು ಎಂತಹದೇ ವಾದ, ವೈಚಾರಿಕತೆಗಳನ್ನೇ ಅನುಮಾನಗಳಿಂದ ನೋಡುವಂತಾಗುತ್ತದೆ.

ಮುನ್ನುಡಿಯಲ್ಲಿ ಮಹಾತ್ಮ ಗಾಂಧೀಜಿಯ ಆತ್ಮಕಥೆಯ ಎಳೆಯನ್ನು ಹಿಡಿದು ಅನಂತಮೂರ್ತಿಯವರು ಪ್ರತಿಭಾರವರ ಶೈಲಿಯನ್ನು ಸಮರ್ಥಿಸಲು ಯತ್ನಿಸಿದಂತಿದೆ. ಆದರೂ, ಪ್ರತಿಭಾರವರ ಭಾವ ತೀವ್ರತೆಗೆ ಒಳಗಾಗದೇ ಮನಸ್ಸಿನ ಸ್ವಾಸ್ಥ್ಯವನ್ನು ಕಳೆದುಕೊಳ್ಳದ ಹಾಗೆ ದೂರವಿರಲು ಯತ್ನಿಸುವ, ಪ್ರತಿಭಾರವರ ಶೈಲಿಯನ್ನು ಅವರ ದೇವಿಯ ಉಪಾಸನೆಯ ಕಾರಣಕ್ಕಾಗಿ ಆಧ್ಯಾತ್ಮದ ಎತ್ತರಕ್ಕೆ ಕೊಂಡೊಯ್ಯುವ ಅನಂತಮೂರ್ತಿಯವರ ಪ್ರಯತ್ನ ಆತ್ಮ ಮತ್ತು ಆಧ್ಯಾತ್ಮಕ್ಕೆ ಸಂಬಂಧವಿಲ್ಲದ್ದು. ಪೊಳ್ಳುಪೊಳ್ಳಾದ ಸಂಬಂಧಗಳನ್ನು ಆಧ್ಯಾತ್ಮಕ್ಕೆ ಹೋಲಿಸುವ ಪ್ರಯತ್ನ ಒಂದು ಒಳ್ಳೆಯ Advocacy ಅಷ್ಟೆ.

ಖಾಸಗೀತನ ಮತ್ತು ಸಾರ್ವತ್ರಿಕ ಪ್ರದರ್ಶನ ಪ್ರಚಾರದ ನಡುವೆ ಒಂದು ಆರೋಗ್ಯಕರ ಅಂತರ ಇರಬೇಕಾದದ್ದು ಅನಿವಾರ್ಯವೇ ಆಗಿದೆ. ಇದನ್ನು ಅಲ್ಲಗಳೆಯುವುದೇ ಅಥವಾ ನಿರಾಕರಿಸುವುದೇ ಆತ್ಮಕಥೆಯ ಉದ್ದೇಶವಾಗಿದ್ದರೇ, ’ಅನುದಿನದ ಅಂತರಗಂಗೆ’ ಆ ಮಟ್ಟಿಗೆ ಯಶಸ್ವಿಯಾಗಿದೆ ಎಂದೇ ಭಾವಿಸಬೇಕು.

ಕನ್ನಡದಲ್ಲಿ ಇಷ್ಟು ನೇರಾನೇರ ಬರೆಯುವ ಶೈಲಿ ಪ್ರತಿಭಾ ಪ್ರಾರಂಭಿಸಿದ್ದಕ್ಕೆ ಅಭಿನಂದಿಸಬೇಕಾದರೂ ಇಡೀ ಆತ್ಮಕಥೆ ಎನ್ನುವುದು ಒಂದು ಕೆಳಮಟ್ಟದ ಪ್ರಚಾರದ ಗೀಳಿಗೆ ಬಿದ್ದು ಬರೆದಂತಿದೆ. ಅಪ್ಪ ಮತ್ತು ಭಾವನ ನಡವಳಿಕೆಯನ್ನು ಧಿಕ್ಕರಿಸುವ ಪ್ರತಿಭಾರವರು ’ಅವರು’ ಎನ್ನುವವರೊಂದಿಗೆ ಹಾಗೂ ಇನ್ನೂ ಕೆಲವರೊಂದಿಗೆ ನಡೆದುಕೊಂಡಿದ್ದನ್ನು ಯಾವ ರೀತಿ ಸಮರ್ಥಿಸುತ್ತಾರೋ ಅವರು ಈಗ ಆರಾಧಿಸುತ್ತಿರುವ ದೇವಿಯೇ ಹೇಳಬೇಕು.

‘ಅನುದಿನದ ಅಂತರಗಂಗೆ’ಯಲ್ಲಿ ಬರುವ ಫರ‍್ಹಾನರವರ ಘಟನೆಯಲ್ಲಿ ಪ್ರತಿಭಾ ತಳೆಯುವ ನಿಲುವು, ಹಲವು ಸಂಕಷ್ಟಗಳ ನಡುವೆಯೂ ಗಂಡನನ್ನು ಬದುಕಿಸಿಕೊಂಡುಬರುವ ಛಲ, ಬೇರೆಯಾದ ಮೇಲೂ ಮತ್ತೆ ಸರಿದೂಗಿಸಿಕೊಂಡು ಸಂಸಾರ ಕಟ್ಟಿಕೊಳ್ಳುವ ಪ್ರತಿಭಾರವರ ಆತ್ಮಸಂಯಮ ಅತ್ಯುತ್ತಮವಾಗಿ ನಿರೂಪಣೆಗೊಂಡಿದೆ.

ಕೊನೆಯದಾಗಿ- ಪಿ. ಲಂಕೇಶ್ ಪ್ರಕಾಶನದ ’ಎ. ರೇವತಿ ಬದುಕು ಬಯಲು-ಹಿಜ್ರಾವೊಬ್ಬಳ ಆತ್ಮಕಥೆ’, ಓದಿಕೊಂಡಾಗ ನನ್ನಲ್ಲಿ ಗಾಢ ವಿಷಾದ ಆವರಿಸಿತ್ತು. ‘ಚಕ್ಕಾ’ಗಳೆಂದು ನಾನು ಗೆಳೆಯರೊಡಗೂಡಿ ಅಂತಹವರನ್ನು ತಮಾಷೆ ಮಾಡಿದ್ದರ ಬಗ್ಗೆ ಅಪರಾಧಿ ಪ್ರಜ್ಞೆ ಕಾಡಿತ್ತು. ಆದರೆ ‘ಅನುದಿನದ ಅಂತರಗಂಗೆ’ ಓದಿ ಮುಗಿಸಿದ ಮೇಲೆ ಪ್ರತಿಭಾ ನಂದಕುಮಾರ್ ಮೇಲೆ ಒಂದು ಹೇವರಿಕೆಯ ಭಾವ ಮೂಡಿತು. ಏಕೆಂದರೇ, ಆತ್ಮಕಥೆ ಎಂದರೆ ವ್ಯಕ್ತಿಯೊಬ್ಬನ ಬರಿ ಬೆಡ್ ರೂಂ ರಹಸ್ಯ ಮಾತ್ರವಲ್ಲ ಎಂದು ಹಲವು ಆತ್ಮಕಥೆಗಳನ್ನು ಸಡಗರದಿಂದ ಓದಿದ ನನಗೆ ಅನ್ನಿಸಿತು.

- ಸುಧೀರ್ ಕುಮಾರ್ ಮೂರೊಳ್ಳಿ

Friday, May 25, 2012

ಸಂಕಲ್ಪ ಶಕ್ತಿ’ಯ ಸುತ್ತ...Profile Picture

-ಶೂದ್ರ ಶ್ರೀನಿವಾಸ

ಸುಮಾರು ಎರಡು ದಶಕಗಳ ಹಿಂದಿನ ಮಾತು. ಯಾವುದೋ ಒಂದು ಸಾಮರಸ್ಯದ ಸಭೆ ಇತ್ತು. ಸಭೆ ಮುಗಿದ ಮೇಲೆ ನಾನು ತುಂಬ ಗೌರವಿಸುವ ನ್ಯಾಯಮೂರ್ತಿ ಕೃಷ್ಣಯ್ಯರ್, ಹಿರಿಯ ಪತ್ರಕರ್ತ ರಾದ ಕುಲದೀಪ್ ನಾಯರ್, ನ್ಯಾಯಮೂರ್ತಿ ಎಸ್.ಡಿ.ವೆಂಕಟೇಶ್ ಹಾಗೂ ಫಾದರ್ ಪಿಂಟೋ ಮುಂತಾದವರು ಇದ್ದೆವು. ಹೀಗೆಯೇ ಖಾಸಗಿಯಾಗಿ ಮಾತನಾಡುತ್ತಿರುವಾಗ ನ್ಯಾಯ ಮೂರ್ತಿ ಕೃಷ್ಣಯ್ಯರ್‌ವರು ಒಂದು ಮಾತು ಹೇಳಿದರು, ನೋಡಿ ಇಂದು ಕೇರಳದಲ್ಲಿ ನೂರಾರು ಪ್ರಶಸ್ತಿಗಳನ್ನು ಕೊಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ಅವುಗಳನ್ನು ನಿಯಂತ್ರಿಸಲು ಯಾರಿಂದಲೂ ಆಗು ತ್ತಿಲ್ಲ. ಹೀಗೆ ಪ್ರಶಸ್ತಿಯನ್ನು ಪಡೆಯುವಾಗ ಯಾರು ಅರ್ಹರು, ಯಾರು ಅರ್ಹರಲ್ಲ ಎಂಬುದನ್ನು ತೀರ್ಮಾನಿಸುವುದೇ ಕಷ್ಟವಾಗುತ್ತಿದೆ ಎಂದು. ನ್ಯಾಯ ಮೂರ್ತಿ ಕೃಷ್ಣಯ್ಯರ್, ಅವರು ಭಾರತದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಮತ್ತು ನಂತರದ ದಿನಗಳಲ್ಲೂ ಇಂದಿನವರೆಗೂ ತತ್ವ ಬದ್ಧ ಚಿಂತಕರಾಗಿ ಮತ್ತು ಸಾಮಾಜಿಕ ಹೋರಾಟಗಾರರಾಗಿ ಕ್ರಿಯಾ ಶೀಲರಾಗಿರುವಂಥವರು.ತಮ್ಮ ತೊಂಬತ್ತೈದನೆಯ ವಯಸ್ಸಿನಲ್ಲಿಯೂ ಬರವಣಿಗೆ ಮತ್ತು ಚಿಂತನೆಯಲ್ಲಿ ಆರೋಗ್ಯಪೂರ್ಣ ಮನಸ್ಸನ್ನು ಉಳಿಸಿಕೊಂಡಿರುವಂಥವರು.

ಪ್ರಶಸ್ತಿಗಳ ವಿಷಯಕ್ಕೆ ಸಂಬಂಧಿಸಿದ ಅವರ ಮಾತನ್ನು ತೆಗೆದುಕೊಂಡು ಎರಡು ದಶಕಗಳ ಹಿಂದೆ ಒಂದು ಲೇಖನವನ್ನು ಬರೆದಿದ್ದೆ. ಆದರೆ ಇಂದು ಕೇರಳವೇನು? ಕರ್ನಾಟಕವೇನು? ಎಲ್ಲಾ ಕಡೆ ಪ್ರಶಸ್ತಿ ಕೊಡುವ ಮತ್ತು ಕೊಡಿಸಿಕೊಳ್ಳುವ ಸಂಘಟ ನೆಗಳು ಅಣಬೆಗಳ ರೀತಿಯಲ್ಲಿ ಆವರಿಸಿ ಕೊಂಡಿವೆ. ಇವುಗಳಲ್ಲಿ ಕೆಲವು ಪ್ರಾಮಾ ಣಿಕವೂ ಇರಬಹುದು. ಒಂದು ದೊಡ್ಡ ಸಮಾಜದಲ್ಲಿ ಇವೆಲ್ಲ ನಿಯಂತ್ರಿಸಲಾರ ದಂತವು ಎಂದುಕೊಂಡರೂ ನಿಯಂತ್ರ ಣವೂ ಬೇಕಾಗುತ್ತದೆ. ಇದಕ್ಕೆ ಹೊಂದಿ ಕೊಂಡಂತೆ ನಮ್ಮ ವಿಶ್ವವಿದ್ಯಾಲಯಗಳ ಪಿಎಚ್‌ಡಿಗಳು ಹಾಗೂ ಗೌರವ ಡಾಕ್ಟ ರೇಟ್ ಪದವಿಗಳ ಮೇಲೂ ನಿಯಂತ್ರಣ ಬೇಕಾಗುತ್ತದೆ.

ಡಾಕ್ಟರೇಟ್‌ಗಳ ಹಾವಳಿ ಯಂತೂ ಗಾಬರಿ ಹುಟ್ಟಿಸುವಂತದ್ದು. ಇದನ್ನು ಗೇಲಿ ಮಾಡುವುದಕ್ಕಾಗಿಯೇ ‘ಶೂದ್ರ’ ದ ಮೂಲಕ ಕೆಲವು ಪಾತ್ರರಿಗೆ ಡಾಕ್ಟರೇಟ್ ಕೊಟ್ಟು ಅಪಾತ್ರರನ್ನು ಗೇಲಿ ಮಾಡಿದ್ದೆವು. ಇಂಥದನ್ನು ನಾವು ಒಂದಷ್ಟು ಗೆಳೆಯರು ಕೂಡಿಕೊಂಡು ಕ್ರಮಬದ್ಧವಾಗಿ ಮಾಡುತ್ತಿದ್ದೆವು. ಕೆಲವರಿಂದ ತೀವ್ರ ರೀತಿಯ ಪ್ರತಿಭಟನೆ ಇದ್ದರೂ ಕೂಡ, ನಮ್ಮಂಥವರಿಗೆ ಲಂಕೇಶ್ ಅವರಂಥವರು ಯಾವಾಗಲೂ ಬೆಂಗಾವಲಾಗಿರುತ್ತಿದ್ದರು. ಆಗ ನಾವು ಅಭಿನಂದನಾ ಕಾರ್ಯಕ್ರಮಗಳನ್ನು ಹಾಗೂ ಅಭಿನಂದನಾ ಗ್ರಂಥಗಳ ವೈಪರೀತ್ಯಗಳನ್ನು ಕುರಿತು ಎಷ್ಟು ಗೇಲಿ ಮಾಡುತ್ತಿದ್ದೆವು. ಈಗಂತೂ ಅಭಿನಂದನಾ ಗ್ರಂಥಗಳು ಬರುತ್ತಿರುವ ನೆನಪು ಮಾಡಿಕೊಂಡರೆ ಒಂದು ಕ್ಷಣ ಸಾಂಸ್ಕೃತಿಕವಾಗಿ ಎಂಥ ದುರಂತ ಮಯ ಸ್ಥಿತಿಯಲ್ಲಿದ್ದೇವೆ ಅನಿಸುತ್ತದೆ.

ನನಗೆ ಗೊತ್ತಿರುವ ಒಬ್ಬ ಸ್ನೇಹಿತರಿದ್ದಾರೆ.ತುಂಬ ಶ್ರೀಮಂತ ಕುಟುಂಬದಿಂದ ಬಂದವರು, ಕಾಲೇ ಜು ಅಧ್ಯಾಪಕರಾಗಿದ್ದವರು. ಈಗ ನಿವೃತ್ತರಾಗಿದ್ದಾರೆ. ಆತನಿಗೆ ಒಂದು ದೊಡ್ಡ ಮಾನಸಿಕ ರೋಗವಿದೆ. ಅದೇನೆಂದರೆ: ಬೇರೆ ಬೇರೆಯವರಿಗೆಲ್ಲ ದುಡ್ಡು ಕೊಟ್ಟು ಸನ್ಮಾನ ಮಾಡಿಸಿಕೊಳ್ಳುವುದು. ಹಾರ, ತುರಾಯಿ, ಫಲಕಗಳನ್ನು ವ್ಯವಸ್ಥೆ ಮಾಡುವುದು ಮತ್ತು ಅಲ್ಲಿ ಪಡೆದ ಫಲಕಗಳನ್ನು ಮನೆ ತುಂಬ ತುಂಬಿಸಿಕೊಂಡು ಪ್ರದರ್ಶಿಸುವುದು. ಅದರ ಮಧ್ಯೆ ತನ್ನದೊಂದು ದೊಡ್ಡದಾದ ಭಾವಚಿತ್ರ. ಈ ರೀತಿಯ ಮನಸ್ಥಿತಿಯ ವೀಕ್‌ನೆಸ್‌ನ ಕುರಿತು ಯಾವ ರೀತಿಯಲ್ಲಿ ವಿವರಿಸುವುದು ಅನಿಸುತ್ತದೆ. ಆದರೆ ಇಂಥದ್ದು ಒಂದು ಸಾಂಕ್ರಮಿಕ ರೋಗದಲ್ಲಿ ವ್ಯಾಪಿಸಿಕೊಳ್ಳುತ್ತಿದೆಯೆಂಬುದೇ ತಲ್ಲಣಗೊಳಿಸುವ ವಿಷಯವಾಗಿದೆ.

ಕೆಲವು ವರ್ಷಗಳ ಹಿಂದೆ ಹತ್ತಿರದ ಬಂಧು ಒಬ್ಬರು ಸಿಕ್ಕಿದರು. ಆತ ದೊಡ್ಡ ಕಂಟ್ರಾಕ್ಟರ್. ಸಾವಿರಾರು ಮತ್ತು ಲಕ್ಷಗಳು ಆತನಿಗೆ ಏನೇನೂ ಅಲ್ಲ. ಅತ್ಯಂತ ಮುಗ್ದ ವ್ಯಕ್ತಿ. ಲೇಖಕರನ್ನು ಮತ್ತು ಕಲಾವಿದರನ್ನು ಕಂಡರೆ ಇಷ್ಟಪಡುವಂಥವರು. ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ಕೇಳಿದರು. ನೀವು ಪತ್ರಿಕೆಗಳಲ್ಲಿ ಕಥೆ, ಕವನ ಮತ್ತು ಲೇಖನ ಬರೆಯುತ್ತೀರಲ್ಲ ಅವು ಪ್ರಕಟವಾಗು ವುದಕ್ಕೆ ಎಷ್ಟು ದುಡ್ಡು ಕೊಡುತ್ತೀರಿ? ಹಾಗೆಯೇ ದೂರದರ್ಶನದಲ್ಲಿ ಇಷ್ಟೊಂದು ಬಾರಿ ಮಾತ ನಾಡುತ್ತೀರಿ? ಅದಕ್ಕೆ ಎಷ್ಟು ಹಣ ಕೊಡಬೇಕು? ಎಂದು ಕೇಳುತ್ತಲೇ ತಮ್ಮ ಹೆಸರಿನಲ್ಲಿ ಪ್ರಕಟವಾದ ಎರಡು ಕಥೆಗಳನ್ನು ತೋರಿಸಿದರು. ಆ ಕಥೆಗಳು ಆತನ ಭಾವಚಿತ್ರದೊಂದಿಗೆ ಪ್ರಕಟವಾಗಿತ್ತು.

ಒಂದು ಕ್ಷಣ ಆ ಪ್ರಕಟವಾದ ಕಥೆಗಳನ್ನು ಕಂಡು ಖುಷಿ ಆಯಿತು, ಆತನ ಕೈ ಕುಲುಕಿದೆ. ಆದರೆ ಹಾಗೆ ಕೈ ಕುಲುಕಿದಾಗ ಸಂಭ್ರಮದಿಂದ ಸ್ವೀಕರಿಸ ಲಿಲ್ಲ, ಒಂದು ಕ್ಷಣ ತಡವರಿಸುತ್ತಾ ‘‘ನಾನು ಈ ಎರಡೂ ಕಥೆಗಳಿಗೂ ಹತ್ತು ಸಾವಿರ ಕೊಟ್ಟೆ’’ ಅಂದರು. ಸ್ವಲ್ಪ ಸಮಯ ಆತನ ಮುಖವನ್ನೇ ನೋಡುತ್ತಾ ನಿಂತೆ. ಹಾಗೆ ಹತ್ತು ಸಾವಿರ ತೆಗೆದು ಕೊಂಡ ಪತ್ರಿಕೆಯ ಸಂಪಾದಕರು ನನಗೆ ಚೆನ್ನಾಗಿ ಗೊತ್ತಿದ್ದವರು. ಅವರ ಬಗ್ಗೆ ಗೌರವ ಸಹ ಇತ್ತು. ಇಷ್ಟಾದರೂ ಆ ಸಂಪಾದಕ ಆ ರೀತಿ ಮಾಡು ವವರಲ್ಲ. ಯಾಕೆ ಆ ರೀತಿ ಮಾಡಿದರು ಅನ್ನುವ ಪ್ರಶ್ನೆ ನನ್ನನ್ನು ಕಾಡತೊಡಗಿತ್ತು. ಮತ್ತು ಅಂಥ ಆರ್ಥಿಕ ಕ್ರೈಸಿಸ್‌ಗೆ ಎದುರಾಗಿದ್ದರೆ? ಎಂಬ ಭಾವನೆ ಬಂತು.

ನಮ್ಮ ಕಥೆಗಳಿಗೆ, ಕವನಗಳಿಗೆ ಹಾಗೂ ಮಾತಾಡುವುದಕ್ಕೇ ದುಡ್ಡು ಕೊಡುತ್ತಾರೆ; ಅರ್ಥಾಥ್ ಗೌರವಧನ ಕೊಡುತ್ತಾರೆ ಎಂದು ಹೇಳಲು ನನ್ನ ಧ್ವನಿ ಗಟ್ಟಿಯಾಗಲಿಲ್ಲ. ಯಾಕೆಂದರೆ ನಾನು ಸುಳು ಹೇಳುತ್ತೇನೆ ಅಂತನ್ನಿಸಿದರೆ ಏನು ಮಾಡುವುದು? ಹೀಗೆ ನನಗೆ ತುಂಬ ಹತ್ತಿರದ ವ್ಯಕ್ತಿ ಭೇಟಿಯಾಗಲು ಬಂದ. ಆತನಿಗೂ ಮೊದ ಲಿನಿಂದ ಕನ್ನಡದಲ್ಲಿ ಎಂ.ಎ ಮಾಡಬೇಕೆಂದು ಆಸೆ ಇತ್ತು. ಬಂದವನೇ ನನ್ನ ಕೈಗೆ ಸಿಹಿಯ ಪೊಟ್ಟಣ ವನ್ನು ಕೊಡುತ್ತ, ‘‘ನಾನು ಮೊದಲನೆಯ ದರ್ಜೆ ಯಲ್ಲಿ ಎಂ.ಎ ಪಾಸು ಮಾಡಿದೆ. ಐವತ್ತು ಸಾವಿರ ವೆಚ್ಚ ಮಾಡಿದೆ’’ ಎಂದ. ನನಗೆ ಆತನ ಕೈಕುಲು ಕಲು ಧೈರ್ಯ ಬರಲಿಲ್ಲ. ಆದರೆ ಹತ್ತಾರು ಪ್ರಶ್ನೆಗಳು ಎದುರಾದವು. ನಮ್ಮ ಓದು, ಬರವಣಿಗೆ, ಸಂಸ್ಕೃತಿ ಕುರಿತಂತೆ ನಮ್ಮ ಚಿಂತನೆ ಕೊನೆಗೂ ಏನು? ಎಂಬುದು ಬೃಹದಾಕಾರವಾಗಿ ಭೂತದ ರೀತಿಯಲ್ಲಿ ನಿಂತಿತ್ತು. ಆಗ ದುಡ್ಡು ಕೊಟ್ಟು ಸನ್ಮಾನ ಮಾಡಿಕೊಳ್ಳುವುದಕ್ಕೂ; ದುಡ್ಡು ಕೊಟ್ಟು ಡಿಗ್ರಿಗಳನ್ನು ಪಡೆಯುವುದಕ್ಕೂ ಏನೂ ವ್ಯತ್ಯಾಸ ಕಾಣುವುದಿಲ್ಲ. ಆದರೆ ‘ಸಂಕಲ್ಪ ಶಕ್ತಿ’ ( ವಿಲ್ ಪವರ್) ಎಂಬುದು ಈ ಸಮಾಜದಲ್ಲಿ ಅಥವಾ ಇತಿಹಾಸದಲ್ಲಿ ಅತ್ಯಂತ ಮಹತ್ವಪೂ ರ್ಣವಾದುದು ಎಂದು ಯೋಚಿಸುವುದೇ ಇಲ್ಲ.

ಕಳೆದ ವಾರ ಮೇಲಿನ ಎಲ್ಲಾ ಘಟನೆಗಳನ್ನು ಸಿಂಹಾವಲೋಕನ ಮಾಡಿಕೊಳ್ಳುವಂತೆ ಒಂದು ಕಾರ್ಯಕ್ರಮ ಎದುರಾಯಿತು. ಅದು ‘ಸುರ್ವೆ ಪತ್ರಿಕೆ’ಯ ರಮೇಶ್ ಸುರ್ವೆಯವರು ‘ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ’ ಅವರ ಹೆಸರಿನಲ್ಲಿ ಕವಿ ಸಮ್ಮೇಳನ ನಡೆಸು ತ್ತಾರೆ. ಸಾಕಷ್ಟು ಮಂದಿಗೆ ಬೇರೆ ಬೇರೆ ಹಂತದ ಪ್ರಶಸ್ತಿಗಳನ್ನು ಕೊಡುತ್ತಾರೆ. ಕೊಡುವಾಗ ಪ್ರಸ್ತಾವಿಕವಾಗಿ ಈ ಮಾತು ಗಳನ್ನು ಆಡಿದರು. ‘‘ನೋಡಿ ನಾನು ಮನೆ ಮಾಡಿಕೊಂಡಿಲ್ಲ, ಅಲ್ಲಿ ಇಲ್ಲಿ ಹಣ ಸಂಗ್ರಹಿಸಿ, ಈ ಕಾರ್ಯಕ್ರಮ ಮಾಡಿ ಸಂತೋಷಪಡುತ್ತೇನೆ. ಸರ್ ಎಂ ವಿಶ್ವೇಶ್ವರಯ್ಯ ಅವರ ಚಿಂತನೆಗಳು ಸಣ್ಣ ಪ್ರಮಾಣದಲ್ಲಿಯಾದರೂ ಜೀವಂತವಾಗಿರಲಿ ಎಂಬುದು ನನ್ನ ಆಶಯ’’ ಎಂದರು.

ನನ್ನ ಪಕ್ಕದಲ್ಲಿ ಕೂತಿದ್ದ, ನಾನು ಗೌರವಿಸುವ ಅನುವಾದಕರಾದ ಡಾ. ಪಂಚಾಕ್ಷರಿ ಹಿರೇಮಠ ಅವರು ‘‘ಶ್ರೀನಿವಾಸ್ ಎಲ್ಲರಿಗೂ ಇಂಥ ಮನ ಸ್ಥಿತಿ ಇದ್ದರೆ ಸಾಕು’’ ಎಂದರು. ನಾನು ಬೇಡವೆಂದರೂ ಬಂದು ಭಾಗವಹಿಸಲೇ ಬೇಕು ಎಂದು ‘ವಿಶ್ವೇಶರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಕರೆದಿದ್ದರು. ನನ್ನ ಜೊತೆಗೆ ಹಂಪಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಗೆಳೆಯರಾದ ಡಾ.ಸಿ.ಆರ್ ಗೋವಿಂದ ರಾಜು ಅವರಿಗೂ ಮತ್ತು ಅಂಥ ಕೆಲವರಿಗೆ ಕೊಟ್ಟಿದ್ದರು. ಪ್ರಶಸ್ತಿಯನ್ನು ಕೊಡಲು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಡಾ. ಪಂಚಾಕ್ಷರಿ ಹಿರೇಮಠ, ಕಾಂಗ್ರೆಸ್‌ನ ಮಾಜಿ ಸಚಿವರಾದ ಎಚ್.ಎಂ ರೇವಣ್ಣ , ಹಿರಿಯ ನಟರಾದ ಶ್ರೀ ಶಿವರಾಂ ಮುಂತಾದವರು ಇದ್ದರು.

ಎಲ್ಲರೂ ಉದ್ಘಾಟನೆಯ ನಂತರ ಗೌರವದಿಂದಲೇ ಮಾತಾಡಿದರು. ಎಚ್. ಎಂ. ರೇವಣ್ಣ ಅವರು ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡುತ್ತ ಡಿ. ಆರ್. ನಾಗರಾಜ್, ಡಾ.ಸಿದ್ಧಲಿಂಗಯ್ಯ ಮತ್ತು ನನ್ನನ್ನು ಸೇರಿಸಿ ಚಳವಳಿಗಳನ್ನು ನೆನಪು ಮಾಡಿಕೊಂಡರು. ನಂತರ ಪತ್ರಿಕೆಗಳ ಛಾಯಾ ಚಿತ್ರಕಾರರಿಗಾಗಿ ಮೊದಲು ನನಗೆ ಮತ್ತು ಖ್ಯಾತ ಜ್ಯೋತಿಷ್ಯ ವಿದ್ವಾಂಸರಾದ ಸುರೇಂದ್ರ ಕುಮಾರ್ ಜೈನ್ ಅವರನ್ನು ಅಕ್ಕಪಕ್ಕ ಕೂರಿಸಿ ಸನ್ಮಾನ ಮಾಡಿದರು. ನನಗೆ ನಿಜವಾಗಿಯೂ ದಿಗಿಲಾಯಿತು. ನಾನು ಯಾವುದನ್ನು ಜೀವನ ದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದೆನೋ ಅಂಥ ಆಲೋಚನಕ್ರಮದವರ ಪಕ್ಕದಲ್ಲಿ ಕೂತು ಸನ್ಮಾನ ಮಾಡಿಸಿಕೊಳ್ಳುವುದನ್ನು ಎಚ್.ಎಂ ರೇವಣ್ಣ ಅವರು ‘‘ಶ್ರೀನಿವಾಸ್ ಇದೊಂದು ನಿಜವಾಗಿಯೂ ದುರಂತವೇ’’ ಎಂದರು.ಎಲ್ಲರೊಡನೆ ಸನ್ಮಾನ ಮಾಡುವಾಗ ಕಿವಿಯಲ್ಲಿ, ನಾನು ನಗುತ್ತಾ ಸುಮ್ಮನಾದೆ. ಸಂಘಟಕರೊಬ್ಬರು ಬಂದು ಇದು ಪತ್ರಿಕೆಯವರಿಗಾಗಿ ಆಕಸ್ಮಿಕವಾಗಿ ನಡೆದದ್ದು ಎಂದರು ವಿಷಾದ ಮಿಶ್ರಿತ ಧ್ವನಿಯಲ್ಲಿ. ಇದೂ ಒಂದು ಅನುಭವವೆಂದು ಸ್ವೀಕರಿಸಿದೆ.

ಪ್ರಶಸ್ತಿ ಸ್ವೀಕರಿಸಿದವರ ಪರವಾಗಿ ಮೊದಲು ಜ್ಯೋತಿಷಿಗಳಾದ ಸುರೇಶ್‌ಕುಮಾರ್ ಜೈನ್ ಅವರು ಮಾತಾಡಿದರು. ನಮ್ಮ ಟಿ.ವಿ ಮಾದ್ಯಮ ಗಳ ಮೂಲಕ ಜನಪ್ರಿಯರಾದವರು. ರಾಮ ಮತ್ತು ಕೃಷ್ಣನ ಹೆಸರನ್ನು ಸೇರಿಸಿದ ಮಂತ್ರದ ಮೂಲಕ ಜ್ಯೋತಿಷ್ಯದ ಮಹಿಮೆ ಇಂಥದ್ದು ಎಂದು ಮಾತಾಡುವಾಗ ನನಗೆ ದಿಗಿಲಾಗುತ್ತಿತ್ತು. ನಮ್ಮ ಮುಗ್ಧ ಜನತೆಯನ್ನು ಜ್ಯೋತಿಷ್ಯ ಮತ್ತು ವಾಸ್ತುಪರಿಕಲ್ಪನೆಗಳ ಮೂಲಕ ಹೇಗೆ ದಾರಿ ತಪಿಸುತ್ತಿದ್ದಾರೆಂದು ಎರಡು ಮೂರು ಬಾರಿ ಎಲ್ಲರೂ ಜೊರಾಗಿ ಕೂಗುವಂತೆ ರಾಮ ಮತ್ತು ಕೃಷ್ಣನ ಹೆಸರಿನ ಮಂತ್ರವನ್ನು ಇಡಿ ಸಭೆ ಒಕ್ಕೊರಲಿನಿಂದ ಕೂಗುವಂತೆ ಹೇಳಿಸಿದರು. ನೀವು ಮನೆಗಳಿಗೆ ಹೋದ ಮೇಲೆ ದಿನಾ ಇದನ್ನು ಪಠಿಸಿ ಮಲಗಲು ಪ್ರಯತ್ನಿಸಿ, ನಿಮಗೆ ಒಳ್ಳೆಯದಾಗುವುದು.

ಜ್ಯೋತಿಷ್ಯ ಎಂದೂ ಸುಳ್ಳಾಗಲು ಸಾಧ್ಯವಿಲ್ಲ ಎಂದು ಏನೇನೊ ಮೋಡಿ ಮಾಡುವ ರೀತಿಯಲ್ಲಿ ಹೇಳಿದರು. ಆಗ ಅವರ ನಂತರ ನಾನು ಮಾತಾಡುವಾಗ ಯಾವ ರೀತಿಯ ನಿಲುವನ್ನು ತೆಗೆದುಕೊಂಡು ಮಾತಾಡಬೇಕು ಎಂದು ಕ್ಷಣ ತಬ್ಬಿಬ್ಬಾದೆ. ಯಾಕೆಂದರೆ ರಮೇಶ್ ಸುರ್ವೆ ಮತ್ತು ಅವರ ಸ್ನೇಹಿತರು ಇಷ್ಟು ಕಷ್ಟಪಟ್ಟು ಮಾಡಿರುವ ಕಾರ್ಯಕ್ರಮವನ್ನು ಯಾರ್ಯಾರೋ ಹಿರಿಯರ ಮುಂದೆ ಕುಲಗೆಡಿಸಬಾರದು. ಜೊತೆಗೆ ಜ್ಯೋತಿಷ್ಯದ ಸಂದೇಶವನ್ನು ಸಭಿಕರು ಮನೆಗೊಯ್ಯಬಾರದು. ಮತ್ತು ಜ್ಯೋತಿಷ್ಯ ವಿದ್ವಾಂಸರಾದ ಸುರೇಂದ್ರಕುಮಾರ್ ಜೈನ್ ಅವರನ್ನು ತುಂಬಾ ಕ್ರೂಡಾಗಿ ಅಥವಾ ಒರಟಾಗಿ ವಿರೋಧಿಸದೆ ಒಟ್ಟು ವಿಷಯವನ್ನು ಹೇಗೆ ಏಕತ್ರಗೊಳಿಸುವುದು ಎಂಬ ಪ್ರಶ್ನೆ ನನ್ನ ಮುಂದಿತ್ತು.

ಈ ಧೋರಣೆಯನ್ನು ಧೃಷ್ಟಿಯಲ್ಲಿಟ್ಟುಕೊಂಡೇ ಮಾತಾಡಲು ಪ್ರಯತ್ನಿಸಿದ್ದೆ. ಯಾಕೆಂದರೆ ಮುಖ್ಯವಾಗಿ ಸಂಕಲ್ಪ ಶಕ್ತಿ (ವಿಲ್ ಪವರ್) ಮತ್ತು ದೂರದೃಷ್ಟಿಯನ್ನು ಒಂದುಗೂಡಿಸಿ ಮಾತಾಡುವ ಆಶಯವನ್ನು ಮುಂದಿಟ್ಟುಕೊಂಡೆ, ‘‘ಸಂಕಲ್ಪ ಶಕ್ತಿ ಮತ್ತು ದೂರದೃಷ್ಟಿ ಇಲ್ಲದಿದ್ದರೆ ನಮ್ಮ ಸರ್ ಎಂ.ವಿ ಅವರ ಕನಸಿನ ಕೆ.ಆರ್. ಸಾಗರ ಅಥವಾ ಇನ್ನಿತರ ಯೋಜನೆಗಳು ಆಸ್ತಿತ್ವಕ್ಕೆ ಬರುತ್ತಿರಲಿಲ್ಲ. ಅವರು ಜ್ಯೋತಿಷ್ಯದ ಮೂಲಕ ಕೃಷ್ಣರಾಜಸಾಗರವನ್ನು ನಿರ್ಮಾಣ ಮಾಡಲಿಲ್ಲ. ಹಾಗೆಯೇ ಬುದ್ಧ, ಗಾಂಧೀಜಿ, ಮದರ್ ಥೆರೆಸಾ, ಮತ್ತು ಅಂಬೇಡ್ಕರ್ ಅಂಥವರು ತಮ್ಮ ಅಗಾಧವಾದ ಸಂಕಲ್ಪಶಕ್ತಿಯಿಂದ ಮನುಷ್ಯ ಸಂಬಂಧಗಳನ್ನು ಹೇಗೆ ಬೆಸುಗೆಗೈದರು ಎಂಬುದು ನಾವು ಮತ್ತೆ ಮತ್ತೆ ಚಿಂತಿಸಬೇಕಾದ ವಿಷಯ.

ಜಗತ್ತಿಗೆ ಇಲ್ಲಿಯವರೆಗೆ ಚಾಲನೆಯಿದ್ದರೆ ಅದು ವಿಲ್ ಪವರ್‌ನ ಮುಂದುವರೆದ ಭಾಗವಾಗಿ ನಡೆದು ಬಂದಿದೆ. ನಾವು ಬೆಳೆಯಬೇಕು ಮತ್ತು ಈ ಸಮಾಜದ ಮನುಷ್ಯ ಸಂಬಂಧಗಳನ್ನು ವಿಸ್ತರಿಸಬೇಕು ಎಂಬುದು ಪ್ರತಿಯೊಬ್ಬರ ಸಂಕಲ್ಪ ಶಕ್ತಿಯಿಂದ ಬರುವಂಥದ್ದು. ಸಿದ್ಧಯ್ಯ ಪುರಾಣಿಕರ (ಕಾವ್ಯಾನಂದರ) ‘ಮೊದಲು ಮಾನವನಾಗು’ ಪರಿಕಲ್ಪನೆಯನ್ನು ಕಲಾವಿದ ಬಾಳಪ್ಪ ಹುಕ್ಕೇರಿಯವರು ಹೋದ ಕಡೆಯಲ್ಲೆಲ್ಲಾ ರೋಮಾಂಚನ ಗೊಳಿಸಿದರು. ಯಾಕೆ ಅದರ ಮುಂದುವರಿದ ಭಾಗವಾಗಿ ನಮ್ಮ ಎಲ್ಲ ಕಲೆ ಮತ್ತು ಸಾಹಿತ್ಯ ಧ್ವನಿಪೂರ್ಣವಾಗುತ್ತಿದೆ. ನಾನು ಜ್ಯೋತಿಷ್ಯವನ್ನು ಆರೋಪಿಸುವುದು; ಅದು ಮನುಷ್ಯನಲ್ಲಿರುವ ಅಗಾಧವಾದ ಸೃಜನಾತ್ಮಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬ ಕಾರಣಕ್ಕಾಗಿ, ನಮ್ಮನ್ನು ಇಲ್ಲಿಯವರೆಗೆ ಒಂದು ಮಾಡುತ್ತ ಬಂದಿರುವ ನಮ್ಮ ಮಹಾ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಜ್ಯೋತಿಷ್ಯದ ಮೂಲಕ ಬಂದವುಗಳಲ್ಲ.

ನಮ್ಮೆಲ್ಲರ ಆಸ್ತಿತ್ವ ಇಲ್ಲಿರುವುದು ಕಗ್ಗತ್ತಲ ಕಡೆಗೆ ಹೊಗುವುದಕ್ಕಲ್ಲ. ಬೆಳಕಿನೆಡೆಗೆ ಹೊಗುವುದಕ್ಕೆ. ಸಂಬಂಧಗಳನ್ನು ಶ್ರೀಮಂತಗೊಳಿಸುವುದರ ಕಡೆಗೆ, ಜ್ಯೋತಿಷ್ಯರ ಮಹಾನ್ ಗುರುಗಳಾದ ಪ್ರೊ.ಬಿ.ವಿ.ರಾಮನ್ ಅವರ ಮಾತನ್ನು ಕೇಳಿಸಿಕೊಂಡಿದ್ದೇನೆ.ಆದರೆ ಅವರು ಎಂದೂ ನಮ್ಮ ಸಮಾಜಕ್ಕೆ ಅಥವಾ ನನಗೆ ದರ್ಶನದ ಕೇಂದ್ರವಾಗಲಿಲ್ಲ. ಈ ಧೃಷ್ಟಿಯಿಂದ ಜೆ.ಕೃಷ್ಣಮೂರ್ತಿ ಯಂಥವರು ಓಶೋ ಅಂಥವರು ಮತ್ತು ಗಾಂಧೀಜಿ ಮತ್ತು ಅಂಬೇಡ್ಕರ್ ಅಂಥವರು ಚಿಂತನೆಗಳನ್ನು ವಿಸ್ತರಿಸುತ್ತಲೇ ಹೋಗುವರು. ಮತ್ತು ಸರ್.ಎಂ.ವಿ ಅವರ ರೀತಿಯಲ್ಲಿ ಕರ್ತವ್ಯ ಪ್ರಜ್ಞೆಯನ್ನು ಧ್ಯಾನದ ಸ್ಥಿತಿಗೆ ಕೊಂಡೊಯ್ಯುವರು.’’ ಎಂದು ಸಭೆಗೆ ನಮಸ್ಕರಿಸಿ ಕುಳಿತುಕೊಂಡೆ. ಸಭೆ ಒಂದು ಕ್ಷಣ ಚಪ್ಪಾಳೆಯಿಂದ ಗೌರವಿಸಿತು. ಡಾ. ಪಂಚಾಕ್ಷರೀ ಹಿರೇಮಠ ಅವರು ಕೈ ಕುಲಿಕಿದರು.ಕೃಪೆ :ವಾರ್ತಾಭಾರತಿ

Thursday, May 24, 2012

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-2

ಶಿವಸುಂದರ್


ಉದಾಹರಣೆಗೆ ನಮ್ಮ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್, ಕೃಪಲಾನಿ, ಲೋಹಿಯಾ, ಕಮ್ಯುನಿಸ್ಟ್ ನಾಯಕರುಗಳು ಆ ಕಾಲಘಟ್ಟದ ಸರಾಸರಿ ಜನಪರತೆಯ ಮೌಲ್ಯ ಗಳನ್ನು ಮೈಗೂಡಿಸಿಕೊಂಡಿದ್ದರೆ ಸರ್ದಾರ್ ವಲ್ಲಭಬಾಯಿ ಪಟೇಲ್, ಪುರುಷೋತ್ತಮ್ ದಾಸ್ ಟಂಡನ್, ಗೋಲ್ವಾಲ್ಕರ್ (ಇವರಲ್ಲಿ ಹಲವರು ಆ ಕಾಲಘಟ್ಟದ ವಿವಿಧ ತಿಳವಳಿಕೆಯ ನಾಯಕರೇ ಹೊರತು ಸಂವಿಧಾನ ರಚನಾ ಸಭೆಯ ಸದಸ್ಯರಲ್ಲ..) ಇನ್ನಿತರರು ಆ ಕಾಲದ ಪ್ರಗತಿಪರತೆಯ ಒಂದಿಂಚನ್ನೂ ಮೈಗೂಡಿಸಿ ಕೊಳ್ಳದ ಪ್ರತಿಗಾಮಿಗಳು. ನೆಹರು ಹಾಗೂ ಇನ್ನಿತರರು ಇವೆರಡರ ಮಧ್ಯೆ ತೇಲುತ್ತಿದ್ದ ಯಥಾಸ್ಥಿತಿವಾದಿಗಳು. ಅದೇ ಮಾನದಂಡ ಗಳನ್ನು ಸೃಜನಶೀಲ ಪ್ರತಿಭೆಗಳ ಬಗ್ಗೆಯೂ ಅನ್ವಯಿಸಿ ಹೇಳುವುದಾದರೆ ಶಂಕರ್ ಅವರ ಸೃಜನಶೀಲ ಪ್ರತಿಭೆಯನ್ನು ಮಾರ್ಗದರ್ಶನ ಮಾಡುತ್ತಿದ್ದ ತಿಳವಳಿಕೆ ಹೆಚ್ಚು ಮೊದಲ ಬಗೆಗೆ ಸೇರುವ ಆ ಕಾಲದ ಪ್ರಗತಿಪರ ಚಿಂತನೆಯದ್ದೇ ಆಗಿತ್ತು. ಹಾಗೆ ನೋಡಿದರೆ ಬಾಳಾ ಠಾಕ್ರೆ ಯಂತವರನ್ನು ಹೊರತು ಪಡಿಸಿದರೆ ವ್ಯಂಗ್ಯ ಚಿತ್ರಕಾರನೊಬ್ಬ ಹುಟ್ಟುವುದೇ ಯಥಾಸ್ಥಿತಿ ವಾದದ ವಿಮರ್ಶೆಯಲ್ಲಿ..

ಹೀಗಾಗಿ ಶಂಕರ್ ಅವರ ವ್ಯಂಗ್ಯಚಿತ್ರ ಆ ಕಾಲಘಟ್ಟದ ಮಿತಿಯನ್ನು ಹೊಂದಿದ್ದರೂ ಪ್ರಧಾ ನವಾಗಿ ಆ ಕಾಲದ ಜನಪರ ಆಶಯಗಳನ್ನು ಪ್ರತಿಬಿಂಬಿಸುತ್ತವೆ ಎಂಬುದು ನಿರ್ವಿವಾದ.ಆದರೆ ಪ್ರಶ್ನೆ ಅದಲ್ಲ. 63 ವರ್ಷಗಳಷ್ಟು ಹಿಂದಿನ ವ್ಯಂಗ್ಯಚಿತ್ರವನ್ನು ಒಂದು ಐತಿಹಾಸಿಕ ದಾಖಲೆಯಾಗಿ ನೋಡುವುದಕ್ಕೂ ಮತ್ತು ವರ್ತಮಾನದಲ್ಲಿ ಇತಿಹಾಸದ ಅಂಶವೊಂದನ್ನು ಗತಿಶೀಲವಾಗಿ ಅರ್ಥ ಮಾಡಿಕೊಳ್ಳಲು ಸಾಧನವಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ. 1949ರಲ್ಲಿ ಶಂಕರ್ ಎಂಬ ವ್ಯಂಗ್ಯಚಿತ್ರಕಾರರು ಸಂವಿಧಾನ ರಚನೆಯ ಬಗ್ಗೆ ಈ ರೀತಿಯ ವ್ಯಂಗ್ಯ ಚಿತ್ರ ಬರೆದಿದ್ದರು ಎಂಬಂತೆ ಒಂದು ಐತಿಹಾಸಿಕ ಸಂಗತಿಯಂತೆ ಈ ವ್ಯಂಗ್ಯಚಿತ್ರ ಬಳಕೆ ಯಾಗಿದ್ದರೆ ಅದರಲ್ಲಿ ಹೆಚ್ಚು ಗೊಂದಲವೇ ಇರುತ್ತಿರಲಿಲ್ಲ.

ಆದರೆ 63 ವರ್ಷಗಳ ನಂತರವೂ ಸಂವಿಧಾನ ರಚನಾ ಸಭೆಯ ಬಗ್ಗೆ ಪ್ರಸ್ತಾಪ ಮಾಡುತ್ತಾ ಸಂವಿಧಾನ ರಚನೆಯ ಬಗ್ಗೆ ಮೌಲಿಕವಾಗಿ ಅರ್ಥಮಾಡಿಕೊಳ್ಳುವ ಸಾಧನವಾಗಿ ವ್ಯಂಗ್ಯಚಿತ್ರ ಬಳಕೆಯಾದಾಗ ಸಹಜವಾಗಿಯೇ ಅದರ ಬಗ್ಗೆ ಭಿನ್ನವಾದ ಧ್ವನಿಗಳು ಕೂಡಾ ಹುಟ್ಟಿಕೊಳ್ಳುತ್ತವೆ.1949ರಲ್ಲಿ ಶಂಕರ್ ಅವರು ಗ್ರಹಿಸಿದಂತೆ, ಅಥವಾ ಈ ವ್ಯಂಗ್ಯಚಿತ್ರ ಸಲಹೆ ಮಾಡುವಂತೆ, ರಾಷ್ಟ್ರೀಯ ಹೋರಾಟದಲ್ಲಿ ಮತ್ತು ಸಂವಿಧಾನ ರಚನೆಯಲ್ಲಿ ನೆಹರು ಮತ್ತು ಅಂಬೇಡ್ಕರ್ ಅವರ ಪಾತ್ರ ವನ್ನು ಪರಸ್ಪರ ಪೂರಕವಾಗಿತ್ತೇಂದೇನೂ ಇಂದಿನ ಎಚ್ಚೆತ್ತ ದಲಿತ ಪ್ರಜ್ಞೆ ಸಕಾರಣವಾಗಿ ಗ್ರಹಿಸುವುದಿಲ್ಲ. ಗಾಂಧಿ ಮತ್ತು ನೆಹರು ಅವರ ಬಗ್ಗೆ ದಲಿತ ವಿಮರ್ಶೆ ಸಕಾರಣವಾಗಿ ಹರಿತವಾಗಿದೆ.

1949ರಲ್ಲಿ ಈ ವ್ಯಂಗ್ಯ ಚಿತ್ರ ರಚನೆ ಯಾದ ನಂತರದಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ನಡುವೆ ಈ ದೇಶದ ದಮನಿತ ಸಮುದಾಯಗಳ ವಿಮೋಚನೆಯ ಕುರಿತಾದ ಸಂಘರ್ಷ ಇನ್ನಿತ್ಯಾದಿಗಳ ಹಿನ್ನೆಲೆಯಲ್ಲಿ, ಈ ವ್ಯಂಗ್ಯಚಿತ್ರ ಸಂವಿಧಾನ ರಚನೆಯಲ್ಲಿ ಮತ್ತು ದೇಶದ ಕಟ್ಟೋಣದಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ಪಾತ್ರದ ಬಗ್ಗೆ ವ್ಯಂಗ್ಯಚಿತ್ರ ಹೇಳುವ ರೀತಿಯ ಓದನ್ನು ಆಗಮಾಡುವು ದಿಲ್ಲ. ದಮನಿತ ಕಣ್ಣುಗಳು ಆ ವ್ಯಂಗ್ಯಚಿತ್ರದಲ್ಲಿ ನೆಹರು ಅಂಬೇಡ್ಕರ್ ಅವರನ್ನು ಉಸ್ತುವಾರಿ ಮಾಡುವಂತೆ ಕಂಡರೆ ಅದರಲ್ಲಿ ಆ ಕಣ್ಣಿನ ತಪ್ಪೇನೂ ಇಲ್ಲ. ಹಾಗೆಯೇ ಕೆಲವು ಕಾಮಾಲೆ ಕಣ್ಣುಗಳು ನೆಹರು ಚಾಟಿ ಬೀಸುತ್ತಿರುವುದು ಅಂಬೇಡ್ಕರ್ ಮೇಲೆ ಎಂದು ಅಂದುಕೊಳ್ಳು ವುದನ್ನೂ ಆ ವ್ಯಂಗ್ಯಚಿತ್ರ ತಡೆಯುವುದಿಲ್ಲ.

ಈ ಬಗೆಯ ಓದಿನ ಹಿಂದೆ ಒಂದು ಅವ ಕಾಶವಾದಿ ರಾಜಕಾರಣ ಇರುವುದು ಸ್ಪಷ್ಟವಾ ದರೂ ಒಟ್ಟಾರೆ ನೆಹರು ಮತ್ತು ಅಂಬೇಡ್ಕರ್ ಅವರ ವಿಚಾರ ಭೇದ ಮತ್ತು ಪ್ರಧಾನಿ ಮತ್ತು ಕಾಂಗ್ರೆಸ್ ಪಕ್ಷ ಪ್ರತಿನಿಧಿಸುತ್ತಿದ್ದ ಹಿತಾಸಕ್ತಿಗಳು ಅಂಬೇಡ್ಕರ್ ಅವರು ಪ್ರತಿನಿಧಿಸುತ್ತಿದ್ದ ಹಿತಾಸಕ್ತಿಗಳ ಮೇಲೆ ಚಾಟಿಯನ್ನೇ ಬೀಸಿದ ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ನೋಡಿದಾಗ ವ್ಯಂಗ್ಯಚಿತ್ರ ಅನುದ್ದೇಶಪೂರ್ವಕವಾಗಿ ಹಲವು ಓದುಗಳನ್ನು ಹುಟ್ಟಿಸುತ್ತದೆ. ಹೀಗಾಗಿ ಬಹು ಬಗೆಯ ಓದಿನ ಸಾಧ್ಯತೆ ವ್ಯಂಗ್ಯ ಚಿತ್ರದಲ್ಲೂ ಇದೆ. ನೋಡುಗರಲ್ಲೂ ಇದೆ. ಹೀಗಾಗಿ ಅದರ ಬಗ್ಗೆ ಹುಯಿಲೆಬ್ಬಿಸುವ ಅವಕಾಶವಾದಿ ರಾಜಕಾರಣಿಗಳ ದುರುದ್ದೇಶವನ್ನು ಟೀಕಿಸಬಹುದಾದರೂ ಆ ಬಗೆಯ ಓದಿನ ಸಾಧ್ಯತೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿ ಅರ್ಥವಾಗದವರ ಬುದ್ಧಿಹೀನ ಓದು ಎಂದು ತಿರಸ್ಕರಿಸಲಾಗುವುದಿಲ್ಲ.

ಹೀಗಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿರುವ ಅವಕಾಶವಾದಿ ರಾಜಕರಣವನ್ನು ಟೀಕಿಸುವ ಹೊತ್ತಿನಲ್ಲೇ ಬದಲಾದ ಸಂದರ್ಭ ಮತ್ತು ಎಚ್ಚೆತ್ತ ದಮನಿತ ಪ್ರಜ್ಞೆಗಳ ಹಿನ್ನೆಲೆಯಲ್ಲಿ ಒಟ್ಟಾರೆ ವಿರೋಧವನ್ನು ಸಹಾನುಭೂತಿಯಿಂದಲೇ ಪರಿಶೀಲಿಸಬೇಕಾಗುತ್ತದೆ.ಈ ವ್ಯಂಗ್ಯಚಿತ್ರವನ್ನು ಅಪಮಾನವೆಂಬಂತೆ ಪ್ರಾಮಾಣಿಕವಾಗಿಯೇ ಗ್ರಹಿಸಬಹುದಾದ ತಿಳವಳಿಕೆಯನ್ನು ರಾಜಕೀಯ ಮುಗ್ಧತೆಯೆಂದು ಅವಗಣನೆ ಮಾಡುವುದು ಸಹ ಇಂದಿನ ದಲಿತ ಪ್ರಶ್ನೆಯನ್ನು ತಿರಸ್ಕರಿಸುವ ದುಷ್ಟ ವಿಧಾನವೇ ಆಗಿಬಿಡುವ ಸಾಧ್ಯತೆ ಇದೆ..ಅದೇನೇ ಇರಲಿ. ಈ ವಿರೋಧಕ್ಕೆ ಐತಿ ಹಾಸಿಕ ತಳಹದಿಯಿದೆ ಎಂದು ಒಪ್ಪಿಕೊಂಡ ಮೇಲೆ ಆ ವ್ಯಂಗ್ಯಚಿತ್ರವನ್ನು ಮತ್ತು ಪಠ್ಯವನ್ನು ಏನು ಮಾಡಬೇಕು?

ಈ ಪ್ರಶ್ನೆಗೆ ಮಾತ್ರ ನಮ್ಮ ಪಾರ್ಲಿಮೆಂಟು ಅತ್ಯಂತ ಕೆಟ್ಟ ಉತ್ತರವನ್ನು ನೀಡಿದೆ. ಆ ವ್ಯಂಗ್ಯ ಚಿತ್ರವಾಗಲೀ, ಅದನ್ನು ಪಠ್ಯಕ್ಕೆ ಸೇರಿಸಿದ ಸುಭಾಷ್ ಮತ್ತು ಯಾದವ್ ಅವರಿಗಾಗಲೀ ಯಾವುದೇ ಜಾತಿವಾದಿ ದುರುದ್ದೇಶಗಳಿಲ್ಲ. ಹೀಗಾಗಿ ಅವರ ಮೇಲೆ ಅದನ್ನು ಆರೋಪಿಸುವುದು, ಇಡೀ ಪಠ್ಯಪುಸ್ತಕವನ್ನೇ ಹಿಂತೆಗೆದುಕೊಳ್ಳುವುದು ಹಾಗೂ ಅವರ ಮೇಲೆ ಕೇಸು ಗಳನ್ನು ಜಡಿಯುವುದು, ಹಲ್ಲೆ ಮಾಡುವುದು ಇತ್ಯಾದಿಗಳೆಲ್ಲಾ ಅತಿರೇಕದ ಮತ್ತು ಅವ ಕಾಶವಾದಿ ಜಾತಿ ರಾಜಕಾರಣದ ಕ್ರಮಗಳಾ ಗಿವೆ.ಈ ಕ್ರಮಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ದ್ವೇಷದ ರಾಜಕಾರಣವನ್ನು ಮತ್ತು ಸಂಕುಚಿತ ತಾತ್ವಿಕತೆಯನ್ನು ಗಟ್ಟಿಗೊಳಿಸುತ್ತದೆ.

ಸಂದರ್ಭದ ವ್ಯಂಗ್ಯವೇನೆಂದರೆ ವಿದ್ಯಾರ್ಥಿಗಳನ್ನು ಪಠ್ಯ ಪುಸ್ತಕದ ಆಚೆ ಮತ್ತು ಅವು ನೀಡುತ್ತಿದ್ದ ಅಧಿಕೃತ ಸತ್ಯಗಳನ್ನು ವಿಮರ್ಶೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮಾನಸಿಕತೆಯನ್ನು ಬುದ್ಧಿಮತ್ತೆಯನ್ನು ತಯಾರು ಮಾಡ ಬೇಕೆಂಬ ಅತ್ಯಂತ ಪ್ರಗತಿಪರ ದೃಷ್ಟಿಯಿಂದ ಈಗ NCERTಮಾರ್ಗದರ್ಶನದಂತೆ ಪಠ್ಯಗಳು ತಯಾರಾಗುತ್ತಿವೆ.ಹಾಗೂ ಪಠ್ಯದಲ್ಲಿ ಏಕತಾನತೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮತ್ತು ವಿದ್ಯಾರ್ಥಿ ಗಳಲ್ಲಿ ಟೀಕಾತ್ಮಕ ಮತ್ತು ವಿಮರ್ಶಾತ್ಮಕ ಸಂವೇದನೆಯನ್ನು ಬೆಳಸುವ ದೃಷ್ಟಿಯಲ್ಲಿ ವ್ಯಂಗ್ಯಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಸದರಿ ವ್ಯಂಗ್ಯಚಿತ್ರವೂ ಆ ದೃಷ್ಟಿಕೋನದ ಭಾಗ. ಪ್ರಾಯಶಃ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಕೊಟ್ಟಿದ್ದನ್ನು ತುಂಬಿ ಕೊಳ್ಳುವ ಗೋಣಿಚೀಲದಂಥ ವಿದ್ಯಾರ್ಥಿ ಗಳನ್ನು ಸೃಷ್ಟಿಸುವ ಬದಲಿಗೆ ವಿಮರ್ಶೆ ಮತ್ತು ಸ್ವಂತ ಚಿಂತನೆಯುಳ್ಳ ಪ್ರಬುದ್ಧ ವಿದ್ಯಾರ್ಥಿಗಳನ್ನು ನಾಗರಿಕರನ್ನು ಸೃಷ್ಟಿಸುವ ಉದ್ದೇಶದಿಂದ ವಿದ್ಯಾರ್ಥಿ ಕೇಂದ್ರಿತ ಮತ್ತು ಪ್ರಜಾತಾಂತ್ರಿಕ ಪ್ರಜ್ಞೆ ಪಠ್ಯರಚನೆಯಲ್ಲಿ ಬರುತ್ತಿದೆ. ಇದು ಸ್ವಾಗತಾರ್ಹ.

ಹೀಗಾಗಿ ಈ ಪ್ರಕರಣದಲ್ಲಿ ಈ ವ್ಯಂಗ್ಯಚಿತ್ರದ ಜೊತೆಗೆ ಸಂವಿಧಾನ ರಚನೆಯ ಬಹುಮುಖಿ ಓದನ್ನು ಸಾಧ್ಯವಾಗಿಸಬಲ್ಲ ಮತ್ತಷ್ಟು ಚಿತ್ರವೋ, ಪಠ್ಯವೋ, ಹೇಳಿಕೆಗಳೊ ಸೇರ್ಪಡೆಯಾಗಿ ವಿದ್ಯಾರ್ಥಿಗೆ ಸಂವಿಧಾನ ರಚನೆಯ ಬೇರೆ ಮುಖಗಳು ಮತ್ತು ಅದರಲ್ಲ ಡಗಿದ್ದ ಸಂಕೀರ್ಣತೆಯನ್ನು ಪರಿಚಯಿಸು ವಂತಾಗಬೇಕೆ ಹೊರತು ಈ ವ್ಯಂಗ್ಯಚಿತ್ರವ ನ್ನಾಗಲೀ, ಪಠ್ಯವನ್ನಾಗಲೀ ಹಿಂತೆಗೆದುಕೊಳ್ಳ ಬಾರದು.ಹಾಗಾದಲ್ಲಿ ಅದು ಯಥಾಸ್ಥಿತಿವಾದದ ವಿಜಯವಾಗುತ್ತದೆ. ಅದೇ ರೀತಿ ಅಂಬೇಡ್ಕರ್ ಅವರು ದಮನಿತ ಸಮುದಾಯದ ಐಕಾನ್ ಆದ್ದರಿಂದ ಅವರನ್ನು ಟೀಕಿಸುವುದು ತಪ್ಪು ಎಂಬ ಅಭಿಪ್ರಾಯವೂ ಸಹ ಸ್ವತಃ ಅಂಬೇಡ್ಕರ್ ಅವರೇ ವಿರೋಧಿಸು ತ್ತಿದ್ದ ಮೂರ್ತಿಪೂಜೆಗೆ ಇಂಬುಕೊಟ್ಟಂತಾಗುತ್ತದೆ.

ಅಂಬೇಡ್ಕರ್ ಆಗಲೀ, ಮಾರ್ಕ್ಸ್ ಆಗಲೀ, ಪ್ರತಿಮೆಗಳಾದ ತಕ್ಷಣ ವರ್ತಮಾನದಲ್ಲಿ ಅವರ ಸಿದ್ಧಾಂತದ ಬಳಕೆ ಸಾಯುತ್ತದೆ. ಆಯಾ ಕಾಲ ಘಟ್ಟದ ಉತ್ಪನ್ನಗಳಾದ ಮಾರ್ಕ್ಸ್, ಅಂಬೇಡ್ಕರ್ ಅವರಂಥ ದಾರ್ಶನಿಕರು ಪ್ರತಿಪಾದಿಸಿದ ದರ್ಶನ ಮತ್ತು ವಿಮೋಚನಾ ಮಾರ್ಗಗಳಲ್ಲಿ ಕಾಲಾತೀತ ಸತ್ಯಗಳು ಇದ್ದಂತೆಯೇ ಕಾಲಬಾಹಿರವಾದ ಸಂಗತಿಗಳೂ ಇವೆ. ಅದರಲ್ಲಿನ ಸಾರ್ವತ್ರಿಕತೆಯನ್ನು ಮುಂದುವರೆಸಿ ವರ್ತಮಾನ ಬೇಡುವಂತೆ ಆಯಾ ಸಿದ್ಧಾಂತಗಳನ್ನು ಪುನರುಜ್ಜೀವೀಕರಿಸುವ ಮೂಲಕ ಮಾತ್ರ ಅಂಬೇಡ್ಕರ್ ಆಗಲಿ ಮಾರ್ಕ್ಸ್ ಆಗಲಿ ಮರುಜೀವ ಪಡೆಯುತ್ತಾರೆ.ಅದರ ಬದಲಿಗೆ ಅವರನ್ನು ಪ್ರತಿಮೆಗಳನ್ನಾಗಿ ಮಾಡುವವರು ಮತ್ತು ಅವರ ದರ್ಶನಗಳನ್ನು ಚಲನರಹಿತ ಶಾಸ್ತ್ರಗಳನ್ನಾಗಿಸುವವರು ಈ ದಾರ್ಶನಿಕರನ್ನು ಪ್ರತಿನಿತ್ಯ ಸಾಯಿಸುತ್ತಾರೆ.

ಹಾಗೆ ನೋಡಿದರೆ ಇಂದಿನ ದಮನಿತ ಸಮುದಾಯಗಳ ರಾಜಕಾರಣ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಈ ಜೀವಂತ ಸಿದ್ಧಾಂತಗಳ ಪ್ರಾಣವನ್ನು ತೆಗೆದು ಸ್ಥಾವರ ಮಾಡುವ ಪ್ರತಿಮಾ ರಾಜಕಾರಣವೇ.....
ಹೀಗಾಗಿ...
1.ಮೊದಲಿಗೆ ಸುಭಾಷ್ ಪಾಲ್ಷೀಕರ್ ಮತ್ತು ಯೋಗೇಂದ್ರ ಯಾದವ್ ಮೇಲೆ ಹಾಕಿರುವ ಪ್ರಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಇಡೀ ಪಠ್ಯವನ್ನು ಹಿಂತೆಗೆದುಕೊಳ್ಳುವ ಸರ್ಕಾರ ನಿರ್ಧಾರ ಖಂಡನಾರ್ಹ. ಕೂಡಲೇ ಆ ನಿರ್ಧಾರವನ್ನು ವಾಪಸ್ ಪಡೆಯಬೇಕು.
2. ವ್ಯಂಗ್ಯಚಿತ್ರಕ್ಕೆ ಬರುತ್ತಿರುವ ಒಟ್ಟಾರೆ ಪ್ರತಿರೋಧವನ್ನು ಅವಕಾಶವಾದಿ ರಾಜಕಾರಣ ಎಂದು ತಿರಸ್ಕರಿಸಲು ಸಾಧ್ಯವಿಲ್ಲ. ಬದಲಾದ ಸಂದರ್ಭ ಮತ್ತು ಎಚ್ಚೆತ್ತ ದಮನಿತ ಪ್ರಜ್ಞೆಗಳು ಇತಿಹಾಸಕ್ಕೆ ಸಂಬಂಧ ಪಟ್ಟಂತ ಎಲ್ಲಾ ಓದನ್ನು ಮರುನಿರ್ವಚನಕ್ಕೆ ಒಳಪಡಿಸುವುದು ಪ್ರಜಾತಂತ್ರಕ್ಕೆ ಪೂರಕವಾದದ್ದೇ. ಹೀಗಾಗಿ ಈ ವಿರೋಧವನ್ನು ಸಹಾನುಭೂತಿಯಿಂದಲೇ ನೋಡಬೇಕು ಮತ್ತು ಆ ವಿರೋಧದ ಧ್ವನಿಗೂ ಅವಕಾಶವಿರುವಂತೆ ನಮ್ಮ ಇತಿಹಾಸದ ಓದನ್ನು ಬಹುಮುಖಿ ನಿರ್ವಚನಕ್ಕೆ ಒಳಪಡಿಸಬೇಕು.
3. ಹೀಗಾಗಿ ಇಂದಿನ ಸಂದರ್ಭ ಹೆಚ್ಚೆಚ್ಚು ಓದಿನ ಸಾಧ್ಯತೆಗಳನ್ನು ಆಗಮಾಡುವ ಪಠ್ಯ ಸಾಮಗ್ರಿಗಳ ಸೇರ್ಪಡೆಯನ್ನು ಕೇಳುತ್ತವೆಯೇ ವಿನಃ ವಿಮರ್ಶೆ ಮತ್ತು ಟೀಕೆಯನ್ನೇ ತೆಗೆದುಹಾಕುವಂತ ಅವಿಮರ್ಶಾತ್ಮಕ ಓದನ್ನಲ್ಲ. ಅಂಥ ಕ್ರಮ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಜ್ಞಾನವನ್ನು ಹುಟ್ಟಿಸುವ ಬದಲಿಗೆ ಯಂತ್ರಗಳನ್ನು ಸೃಷ್ಟಿಸುತ್ತದೆ.
4. ನಮ್ಮ ಐಕಾನ್‌ಗಳನ್ನು ಪದೇಪದೇ ಪುನರ್ ವಿಮರ್ಶೆಗೊಳಪಡಿಸುವ ಮತ್ತು ಅವರ ಸಾಧನೆಯ ಶಕ್ತಿಯನ್ನು ಪಡೆದುಕೊಂಡು ಅವರ ಮಿತಿಯನ್ನು ಮೀರಿ ಬೆಳೆಯುವ ರಾಜಕೀಯ ಸಂಸ್ಕೃತಿ ಬೆಳೆಸಬೇಕೆ ವಿನಃ ನಾಯಕರನ್ನು ಪ್ರಶ್ನಾತೀತ ಪ್ರತಿಮೆಗಳನ್ನಾಗಿಸುವುದು ತಪ್ಪು.
ನಮ್ಮ ಪಾರ್ಲಿಮೆಂಟಿನಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆಗಳು ದಿನನಿತ್ಯ ನಡೆಯುತ್ತಿರುವಾಗಲೂ ಎಂದೂ ಅದರ ವಿರುದ್ಧ ಇಷ್ಟು ದೊಡ್ಡ ಧ್ವನಿ ಎದ್ದಿರಲಿಲ್ಲ.ಆದರೆ ಈ ವ್ಯಂಗ್ಯಚಿತ್ರವನ್ನು ವಾಪಸ್ ತೆಗೆದುಕೊಳ್ಳಬೇಕೆಂಬ ಧ್ವನಿ ಮಾತ್ರ ಪಾರ್ಲಿಮೆಂಟಿನಲ್ಲಿ ಅತಿ ಗಟ್ಟಿಯಾಗಿ ಕೇಳಿಸಿದ್ದು ಮಾತ್ರವಲ್ಲದೆ ದಲಿತ ವಿರೋಧಿಗಳು,ಅವಕಾಶವಾದಿಗಳು ಮತ್ತು ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಒಂದಾಗಿ ಹುಯಿಲೆಬ್ಬಿಸಿ ಇಡೀ ಪಠ್ಯ ಪುಸ್ತಕವನ್ನೇ ಹಿಂತೆಗೆದುಕೊಳ್ಳುವಂತೆ ಮಾಡಿಬಿಟ್ಟರು. ಪ್ರಾಯಶಃ ಇದು ನಮ್ಮ ಸಂದರ್ಭದ ಅತಿ ದೊಡ್ಡ ವ್ಯಂಗ್ಯಚಿತ್ರವಲ್ಲವೇ?

ಲಡಾಯಿ ಪ್ರಕಾಶನ : ಮತ್ತೆರಡು ಹೊಸ ಪುಸ್ತಕಗಳು

ನಮ್ಮ ಪ್ರಕಾಶನವು ಮತ್ತೆರಡು ಹೊಸ ಪುಸ್ತಕಗಳನ್ನು ಪ್ರಕಟಿಸಿದೆ .... ಅರಂಧತಿ ರಾಯ್ ಅವರ 'ವಿದ್ಯುತ್ತ್ ಕ್ಷೇತ್ರದ ರಾಜಕಾರಣ '. ಇದನ್ನು ಅನುವಾದ ಮಾಡಿದವರು ಪ್ರೊ . ಬಿ ಗಂಗಾಧರ ಮೂರ್ತಿ . ಬೆಲೆ ರೂ ೩೦ . ಇನ್ನೊಂದು ಪುಸ್ತಕ ಶರಣಪ್ಪ ವಡಿಗೇರಿ ಅವರ ಕಥಾ ಸಂಕಲನ 'ಮಾಯಕಾರತಿ' . ಬೆಲೆ ೫೦ . ಆಸ್ತಕರು ಸಂಪರ್ಕಿಸಬಹುದು . ಸಂಪರ್ಕಿಸುವ ನಂಬರ್ ೯೪೮೦೨೮೬೮೪೪https://mail-attachment.googleusercontent.com/attachment/?ui=2&ik=64db019aae&view=att&th=13778c9360277265&attid=0.4&disp=inline&realattid=23cd7815491544d7_0.4&safe=1&zw&saduie=AG9B_P_apJ-8s6ZpZQ22vq2XigUY&sadet=1337858548749&sads=qqApTQVt2ojhW0NCr7FIL_AwwXchttps://mail-attachment.googleusercontent.com/attachment/?ui=2&ik=64db019aae&view=att&th=13778c9360277265&attid=0.3&disp=inline&realattid=23cd7815491544d7_0.3&safe=1&zw&saduie=AG9B_P_apJ-8s6ZpZQ22vq2XigUY&sadet=1337858543927&sads=3pJZsWFJRmxe8HuHSU1vgQezAwc

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...