Tuesday, April 30, 2013

ದುಃಖ


ರಿಲ್ಕ್


ನೀನು ದುಃಖಿಯಾಗಿದ್ದಾಗ ನಿನ್ನೊಳಗೆ ಎಲ್ಲೋ ಒಂದು ಕಡೆ ಬಹಳ ಮುಖ್ಯವಾದ ಬದಲಾವಣೆ ಆಗಬಹುದು. ಯಾವ ದುಃಖಗಳನ್ನು ಸಾರ್ವಜನಿಕವಾಗಿ ಮೆರೆಸುತ್ತ ಸದ್ದುಗದ್ದಲದಲ್ಲಿ ಮುಳುಗಿಸುತ್ತೇವೆಯೋ ಅವು ಅಪಾಯಕಾರಿ ದುಃಖಗಳು. ನಮ್ಮ ಸಂತೋಷವನ್ನು ನಂಬುವುದಕ್ಕಿಂತ ಹೆಚ್ಚಿನ ವಿಶ್ವಾಸದಿಂದ ದುಃಖವನ್ನು ಸಹಿಸಬೇಕು. ಯಾಕೆಂದರೆ ದುಃಖವೆಂದರೆ ಹೊಸತಾದ, ಅಜ್ಞಾತವಾದ ಏನೋ ಒಂದು ನಮ್ಮೊಳಗೆ ಪ್ರವೇಶಿಸುವ ಕ್ಷಣ. ನಮ್ಮ ಭಾವಗಳು ಕಸಿವಿಸಿಪಡುತ್ತ, ನಮ್ಮೊಳಗಿನದೆಲ್ಲ ಹಿಂಜರಿಯುತ್ತ ಮೌನವು ಎಚ್ಚೆತ್ತುಕೊಳ್ಳುವ ಕ್ಷಣ. ದುಃಖ ಒಳಹೊಕ್ಕ ಕ್ಷಣ ನಮ್ಮ ಅಸ್ತಿತ್ವದೊಂದಿಗೆ ಒಬ್ಬಂಟಿಯಾಗಿರುತ್ತೇವೆ. ನಾವು ನಂಬಿದ್ದ, ವಿಶ್ವಾಸವಿಟ್ಟಿದ್ದ ಎಲ್ಲವೂ ದೂರವಾಗುವ ಹೊತ್ತು ಅದು. ಆ ಕ್ಷಣ ನಾವು ಏಕಾಂಗಿಯಾಗಿದ್ದು ಗಮನವಿಟ್ಟು ನೋಡಿಕೊಳ್ಳಬೇಕು. ಅವು ಬದುಕಿನ ಅತ್ಯಂತ ನಿಕಟ ಗಳಿಗೆಗಳಾಗಿರುತ್ತವೆ


ಕಾರ್ಮಿಕ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ಚಿರಾಯುವಾಗಲಿ

ವೆಂಕಟೇಶ ಕೋಣಿ, 
ಬೈಂದೂರು

ಚಾರಿತ್ರಿಕ ಮೇ ದಿನ ದುಡಿಯುವ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ದಿನ. ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಮೇ ದಿನದಂದು ಕಾರ್ಮಿಕ ವರ್ಗದ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸಲು ಮತ್ತು ಉಳಿಸಿಕೊಳ್ಳಲು ತಾನು ಬದ್ಧ ಎಂದು ಪುನರುಚ್ಚರಿಸುತ್ತದೆ. ಮೇ 1 ರಂದು ಇಡೀ ವಿಶ್ವದಾದ್ಯಂತ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಮೇ ದಿನಕ್ಕೆ ಮಹತ್ತರವಾದ ಚಾರಿತ್ರಿಕ ಮಹತ್ವ ಇದೆ. ಆದ ಕಾರಣ ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನವಾಗಿದೆ. ಅಂದು ಪ್ರಪಂಚದಾದ್ಯಂತ ಕಾರ್ಮಿಕ ವರ್ಗದ ಐಕ್ಯತೆಯ ಉತ್ಸವವನ್ನು ಆಚರಿಸಲಾಗುತ್ತದೆ.ಕಾರ್ಮಿಕರು 8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿರಾಮಕ್ಕಾಗಿ ನಡೆದ ಸುದೀರ್ಘವಾದ ಹೋರಾಟದ ಅಂತಿಮ ಜಯವೇ ಮೇ ದಿನ. ‘‘ವಿಶ್ವದ ಕಾರ್ಮಿಕರೇ ಒಂದಾಗಿ, ನೀವು ಸಂಕೋಲೆಗಳನ್ನಲ್ಲದೆ, ನೀವು ಕಳೆದುಕೊಳ್ಳಲು ಬೇರೇನೂ ಇಲ್ಲ’’ ಜಗತ್ತಿನ ಶ್ರಮ ಜೀವಿಗಳ ಅಂತಾರಾಷ್ಟ್ರೀಯತೆ ಒಂದು ಗುಡುಗಿನಂತೆ ಮೊಳಗಿದ್ದು ಈ ಘೋಷಣೆಯೊಂದಿಗೆ.

ಪ್ಯಾರೀಸ್‌ನಲ್ಲಿ 1889ರಲ್ಲಿ ಕೊಟ್ಟ ಕರೆಯೊಂದಿಗೆ 1890ರಲ್ಲಿ ಮೇ ದಿನದ ಆಚರಣೆ ಆರಂಭವಾಯಿತು. ಅದರ ತಕ್ಷಣದ ಗುರಿ ಚಿಕಾಗೋದ ಮೇ ದಿನ 1886ರ ಹುತಾತ್ಮರ ಸ್ಮರಣೆಯಾಗಿತ್ತು.ಅಮೆರಿಕದ ಟ್ರೇಡ್ ಯೂನಿಯನ್ ಆಂದೋಲನದ ಚರಿತ್ರೆಯಲ್ಲಿ ಹೇ ಮಾರ್ಕೆಟ್ ಪ್ರಕರಣ ಒಂದು ಆಕಸ್ಮಿಕ ಯಕಶ್ಚಿತ ಘಟನೆಯಾಗಿರಲಿಲ್ಲ. ಅದಕ್ಕಿಂತ ಹಿಂದೆ ಅಮೆರಿಕದಲ್ಲಿ ಭಾರೀ ಸಮರಶೀಲ ಟ್ರೇಡ್ ಯೂನಿಯನ್ ಆಂದೋಲನಗಳು ಕಾಣಿಸಿಕೊಂಡಿದ್ದವು. ಕಾರ್ಮಿಕರ ಅದರಲ್ಲಿಯೂ ವಿಶೇಷವಾಗಿ ಚಿಕಾಗೋ ನಗರದ ಕಾರ್ಮಿಕರು ಅನೇಕ ಧೀರ ಹೋರಾಟಗಳನ್ನು ಮಾಡಿದ್ದರು. 

ಹತ್ತಾರು ಸಂಘರ್ಷಗಳನ್ನು ಸಂಘಟಿಸಿ ಕಾರ್ಮಿಕ ವರ್ಗದ ಅನನ್ಯ ಐಕ್ಯತೆಗೆ ನಾಂದಿ ಹಾಡಿದ್ದರು. ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ಅಲ್ಲಲ್ಲಿ ಆಂದೋಲನಗಳು ನಡೆದಿದ್ದರೂ ಈ ಬೇಡಿಕೆಯೊಂದಿಗೆ ನಡೆಸಿದ ಕಾರ್ಮಿಕ ವರ್ಗದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಚಿಕಾಗೋ ನಗರದ ಕಾರ್ಮಿಕರೇ. ಹೇ ಮಾರ್ಕೆಟ್ ದುರಂತ ಘಟನೆ ನಡೆಯುವ ಮುಂಚೆ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಹು ತುರುಸಿನ ಹೋರಾಟ ನಡೆಸಿಕೊಂಡು ಬಂದಿದ್ದರು.

ಅಗಸ್ಟ್ 20, 1986ರಂದು ಏಳು ಮಂದಿಗೆ ಮರಣ ದಂಡನೆ, ಒಬ್ಬರಿಗೆ 15ವರ್ಷಗಳ ಕಾರಾಗೃಹ ವಾಸ ವಿಧಿಸಲಾಯಿತು. ಗಮನಿಸಬೇಕಾದ ಸಂಗತಿ ಏನೆಂದರೆ ಮೇ 1, 1886ರಂದು ಹೇ ಮಾರ್ಕೇಟ್ ಚೌಕದಲ್ಲಿ ಬಾಂಬ್ ಸ್ಫೋಟವಾದಾಗ ಇವರಲ್ಲಿ ಒಬ್ಬರು ಮಾತ್ರ ಆ ಸ್ಥಳದಲ್ಲಿದ್ದರು. ವಿಶ್ವದಾದ್ಯಂತ ಈ ಶಿಕ್ಷೆಯ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು. ಆದರೂ 7 ಮಂದಿ ಮರಣ ದಂಡನೆಗೊಳಗಾದವರಲ್ಲಿ ಇಬ್ಬರ ಶಿಕ್ಷೆಯನ್ನು ಜೀವಾವಧಿಗಿಳಿಸಲಾಯಿತು. 

ಒಬ್ಬಾತ ಬಂಧನದಲ್ಲೆ ಅಸುನೀಗಿದ. ಉಳಿದ ನಾಲ್ವರಾದ ಪಾರ್ಸನ್ಸ್, ಪಿಶರ್, ಸ್ಪೋಸ್ ಮತ್ತು ಏಂಗಲ್ಸ್ ಎಂಬ ಕಾರ್ಮಿಕರು ನವೆಂಬರ್ 11,1887ರಂದು ನೇಣುಗಂಬ ಏರಿದರು. ‘‘ನೀವಿಂದು ಹಿಸುಕಿ ಹಾಕಿದ ದನಿಗಳಿಗಿಂತ ನಮ್ಮ ಮೌನವೇ ಹೆಚ್ಚು ಬಲಿಷ್ಠವಾಗುವ ದಿನ ಬಂದೇ ಬರುತ್ತದೆ’’ ಎಂದು ಸ್ಪೋಸ್ ನೇಣುಗಂಬ ಏರುತ್ತಾ ನುಡಿದ ಭವಿಷ್ಯವಾಣಿ ಈಗ ನಿಜವಾಗಿದೆ.ಜಗತ್ತನ್ನೇ ಬದಲಿಸುವ ಶಕ್ತಿ ಕಾರ್ಮಿಕರಿಗಿದೆ. ಕಾರ್ಮಿಕರು ಧರ್ಮ, ಭಾಷೆ ಮತ್ತು ಜಾತಿ ಮೀರಿದವರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ತರುವ ಶಕ್ತಿ ಉಳ್ಳವರು. ತ್ಯಾಗ, ಬಲಿದಾನ ಹೋರಾಟದ ಫಲದಿಂದಾಗಿಯೇ ಕಾರ್ಮಿಕರು ತಮ್ಮ ಹಕ್ಕು ಪಡೆಯಲು ಸಾಧ್ಯವಾಗಿದೆ.

ಜಾಗತೀಕರಣ ನೀತಿಗಳು ಬಡವರ, ಶ್ರಮಿಕರ, ದುಡಿಯುವ ಜನರ ಬದುಕನ್ನು ಕಿತ್ತು ತಿನ್ನುತ್ತಿದೆ. ಮತ್ತೊಂದೆಡೆ ನಮ್ಮನ್ನಾಳುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಶೇಕಡಾ 90% ರಷ್ಟು ಇರುವ ದುಡಿವ ಜನರ ಬೆವರಿನ ಗಳಿಕೆಯನ್ನು ಶೇಕಡಾ 10%ರಷ್ಟು ಇರುವ ಬಂಡವಾಳಶಾಹಿ ದೋಚುತ್ತಿದೆ. ಹಲವಾರು ಕಾಯಿದೆಗಳು ಬಂದರೂ ಇಂದು ಅಸಮಾನತೆ, ತಾರತಮ್ಯಗಳು ಜೀವಂತ ಇದೆ. ಅಭಿವೃದ್ಧಿ ಎಂದರೆ ಭ್ರಷ್ಟಾಚಾರ ಎನ್ನುವಂತಾಗಿದೆ.

ಭಷ್ಟಾಚಾರದ ಹಣ ಮಠಮಾನ್ಯಗಳಿಗೆ ಪವಿತ್ರ ಸೇವೆಯ ಹೆಸರಿನಲ್ಲಿ ಬಳಕೆಯಾಗುತ್ತದೆ. ಅಲ್ಲಿ ಶೇಖರಣೆಯಾಗುತ್ತಿದೆ. ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ತರಿಸುವಷ್ಟು ಪ್ರಾಮುಖ್ಯತೆಯನ್ನು, ಮಠದಲ್ಲಿರುವ ಹಣವನ್ನು ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತಾಗಬೇಕು.ಭಾರತವನ್ನು ಯುವ ಭಾರತ ಎಂದು ಚಿತ್ರಿಸಲಾಗುತ್ತಿದೆ. ನಮ್ಮ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಯುವ ಜನರು. ಇವರಲ್ಲಿ ಶೇಕಡಾ 42% ವಯಸ್ಕರಾಗುವ ಮೊದಲೇ ಸಾಯುತ್ತಿರುವ ಮಕ್ಕಳೂ ಇದ್ದಾರೆ. ಇವರು ಭಾರತದ ಒಣಗುತ್ತಿರುವ ರೆಂಬೆಗಳು ಎಂಬ ಯೋಚನೆಯೇ ನಮ್ಮ ಮೈ ನಡುಗಿಸುತ್ತಿದೆ. ನಾವು ಭಾರತದ ಕಾರ್ಮಿಕ ಆಂದೋಲನ ನಮ್ಮ ಕ್ರಾಂತಿಕಾರಿ ಕರ್ತವ್ಯವನ್ನು ನೆರವೇರಿಸದಿದ್ದರೆ ಈ ಯುವ ಭಾರತಕ್ಕೆ ಭವಿಷ್ಯ ಎಲ್ಲಿದೆ?

ಮೇ ದಿನಾಚರಣೆ ಜಗತ್ತಿನ ಎಲ್ಲಾ ದೇಶಗಳ ದುಡಿಯುವ ಜನ ಆಚರಿಸುವ ಹೆಮ್ಮೆಯ ದಿನವಾಗಿದೆ. ಮೇ ದಿನವನ್ನು ದೇಶ, ಭಾಷೆ, ಧರ್ಮಗಳ, ಗಡಿಗಳ ಅಡಚಣೆ ಇಲ್ಲದೇ ಆಚರಿಸಲಾಗುತ್ತಿದೆ. ಸಂಪತ್ತು ಸೃಷ್ಟಿಸುವ ಕಾರ್ಮಿಕರಿಗೆ ಬೆವರಿನ ಪಾಲು ಸಿಗಲಿ. ಮೇ ದಿನ... ಕೇವಲ ಆಚರಣೆಯಲ್ಲ. ಶೋಷಿತರ ಬದುಕನ್ನು ಅರಳಿಸುವ ದಿನ... ಚಿಕಾಗೋದ ಬೀದಿಯಲಿ
ಅಂದು ಹರಿದ ನಿಮ್ಮಯ ರಕ್ತ... ವ್ಯರ್ಥವಲ್ಲ

ನಿಮ್ಮಯ ತ್ಯಾಗ ವ್ಯರ್ಥವಲ್ಲ.... ಎಂದು ಮೇ ದಿನದ ಹುತಾತ್ಮರನ್ನು ಸ್ಮರಿಸೋಣ. ನಿರಂತರ ಹೋರಾಟವೇ ಬಿಡುಗಡೆಗೆ ದಾರಿ.
ಮೇ ದಿನವು ವಿಶ್ವದ ಎಲ್ಲಾ ಕಾರ್ಮಿಕ ವರ್ಗವನ್ನು ಏಕತ್ರಗೊಳಿಸಿ, ಬಂಡವಾಳಶಾಹಿಗಳ ಶೋಷಣೆಯ ವಿರುದ್ಧ ಹೋರಾಟಕ್ಕೆ ಇಳಿಸಿದ ಚರಿತ್ರಾರ್ಹ ದಿನ ಎಂಬುದರಲ್ಲಿ ಅನುಮಾನವಿಲ್ಲ. ‘ವಿಶ್ವದ ಕಾರ್ಮಿಕರೇ ಒಂದಾಗಿರಿ!’ ಎಂಬ ರಣಕಹಳೆ ಊದಿ ಎಲ್ಲರನ್ನೂ ಒಗ್ಗೂಡಿಸುವಲ್ಲಿ ಮೇ ದಿನ ನಿರ್ವಹಿಸಿದ ಪಾತ್ರದ ಶಕ್ತಿ ಅಪಾರವಾದದ್ದು.ಮೇ ದಿನ ದುಡಿಯುವ ಜನಗಳ ನಿರ್ದಯ ಶೋಷಣೆಯ ವಿರುದ್ಧ ಸಮಸ್ತ ಕಾರ್ಮಿಕ ವರ್ಗವನ್ನು ಸಮರ್ಪಿಸುವ ದಿನವಾಗಿ ಸ್ಥಾಪನೆಗೊಳ್ಳಲಿ.


ಪ್ರತಿಭಟನೆಯ ಧ್ವನಿಗಳು ಸದನ ಪ್ರವೇಶಿಸಲಿ
- ಸನತ್‌ಕುಮಾರ ಬೆಳಗಲಿ


ಸೌಜನ್ಯ : ವಾರ್ತಾಭಾರತಿಈ ಚುನಾವಣೆಯಲ್ಲಿ ನಾವು ಯಾರನ್ನು ಚುನಾಯಿಸಬೇಕು? ವಿಧಾನಸಭೆಯಲ್ಲಿ ಯಾರು ನಮ್ಮ ಪ್ರತಿನಿಧಿಯಾಗಿರಬೇಕು? ಈ ಪ್ರಶ್ನೆಗಳಿಗೆ ಜನತೆ ಇನ್ನೊಂದು ವಾರದಲ್ಲಿ ಉತ್ತರ ನೀಡುತ್ತಾರೆ. ಆಯ್ಕೆಗೆ ಬೇರೆ ಆದ್ಯತೆ ಗಳೇ ಇಲ್ಲ. ಎದುರಿಗೆ ಮೂರು ವಿಷದ ಬಾಟ್ಲಿಗಳಿವೆ.ಮೊದಲನೆಯದ್ದು ನರೇಂದ್ರ ಮೋದಿ ಬ್ರಾಂಡ್, ಎರಡನೆಯದ್ದು ಮನಮೋಹನ್ ಸಿಂಗ್ ಮತ್ತು ಚಿದಂಬರಂ ಬ್ರಾಂಡ್, ಮೂರನೆಯದ್ದು ಕುಮಾರಸ್ವಾಮಿ ಬ್ರಾಂಡ್. ಈ ಮೂರರಲ್ಲಿ ಮನಮೋಹನ್ ಸಿಂಗ್ ಬ್ರಾಂಡ್ ವಿಷಯದಲ್ಲಿ ಗಾಂಧಿ-ನೆಹರೂ ರಾಸಾಯಿನಿಕ ಮಿಶ್ರಣಗಳು ಇರುವುದರಿಂದ ಅಷ್ಟೊಂದು ದುಷ್ಪರಿಣಾಮ ಮಾಡುವುದಿಲ್ಲ. ಕುಮಾರಸ್ವಾಮಿ ಬ್ರಾಂಡ್ ನಲ್ಲಿ ದೇವೇಗೌಡ ಎಂಬ ಮಿಶ್ರಣ ಇರುವುದರಿಂದ ಅದು ಅಷ್ಟು ಅಪಾಯಕಾರಿ ಯಲ್ಲ. ಆದರೆ ನರೇಂದ್ರ ಮೋದಿ ಬ್ರಾಂಡ್ ನಲ್ಲಿ ಹಿಟ್ಲರ್ ಮತ್ತು ಗೋಡ್ಸೆ ಎಂಬ ಪ್ರಾಣ ತೆಗೆಯುವ ವಿಷಯ ಇರುವುದರಿಂದ ಅದು ಅತ್ಯಂತ ಅಪಾಯಕಾರಿ. ಇವು ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಅವಕಾಶವಿದೆ. ಈ ನಡುವೆ ಅಲ್ಲಲ್ಲಿ ಜೀವರಕ್ಷಕ ಔಷಧಿಗಳಿವೆ. ಅವುಗಳ ಸಂಖ್ಯೆ ತುಂಬ ಕಡಿಮೆ. ಜನ ಹುಡುಕಿ ಆಯ್ಕೆ ಮಾಡಿಕೊಳ್ಳಬೇಕಿದೆ.

ಗಣಿ ಹಗರಣ, ಭೂ ಮಾಫಿಯಾ, ಬಂಡವಾಳ ಹೂಡಿಕೆ ಹೆಸರಿನಲ್ಲಿ ರೈತರ ಭೂಮಿ ಅಪಹರಣ. ಅರಣ್ಯ ಗಳ ಕಾರ್ಪೋರೇಟೀಕರಣ ಈ ದುರ್ವಾಸನೆ ಎಲ್ಲ ಬಲ ಪಂಥೀಯ ಪಕ್ಷಗಳ ಕಿಟಕಿ, ಬಾಗಿಲುಗಳಿಂದ ಮೂಗಿಗೆ ರಾಚುತ್ತಿದೆ. ಕಾಂಗ್ರೆಸ್, ಜೆಡಿಎಸ್‌ಗಳಲ್ಲಿ ಇಲ್ಲದ ಇನ್ನೊಂದು ಪ್ರಾಣಘಾತುಕ ವಿಷ ಬಿಜೆಪಿಯ ಅಗ್ರಹಾರ ದಲ್ಲಿದೆ. ಅದು ಜನಾಂಗದ್ವೇಷದ ಕೋಮುವಾದಿ ವಿಷ. ಸಾರ್ವ ಜನಿಕ ಸಂಪತ್ತನ್ನು ದೋಚುವಲ್ಲಿ, ಕಾಂಗ್ರೆಸ್, ಜೆಡಿಎಸ್‌ಗಳನ್ನು ಮೀರಿಸಿದ ಬಿಜೆಪಿ ಹಗರಣಗಳ ಬಿಕ್ಕಟ್ಟಿನಿಂದ ಪಾರಾಗಲು ಹಿಂದುತ್ವದ ಕಾರ್ಡು ಬಳಸುತ್ತದೆ. ಅಂತಲೇ ಅದು ಪ್ರಜಾ ಪ್ರಭುತ್ವದ ವೊದಲ ಶತ್ರು. ಈ ಮೂರರ ನಡುವೆ ಆಯ್ಕೆ ಪ್ರಶ್ನೆ ಬಂದಲ್ಲಿ, ಕೋಮುವಾದಿ ವಿಷ ವನ್ನು ದೂರವಿಡುವುದು ಸೂಕ್ತ.

ಕಳೆದ ಒಂದು ದಶಕದಲ್ಲಿ ರಾಜಕಾರಣದ ಸ್ವರೂಪ ಸಂಪೂರ್ಣ ಬದಲಾಗಿದೆ. ಹಿಂದೆ ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲ ಗೌಡ, ವೈಕುಂಠ ಬಾಳಿಗಾ, ಬಿ.ವಿ.ಕಕ್ಕಿಲಾಯ, ಬಿ.ಎಂ.ಇದಿನಬ್ಬ, ನಿಜಲಿಂಗಪ್ಪ ಅವ ರಂತಹ ಸಜ್ಜನ ಮುಖಗಳು ಕಾಣುತ್ತಿದ್ದವು. ಈಗ ಕೃಷ್ಣಯ್ಯ ಶೆಟ್ಟಿ, ಕಟ್ಟಾಸುಬ್ರಮಣ್ಯ ನಾಯ್ಡು, ರಘುಪತಿ ಭಟ್ಟರಂತಹ ಮಹಾನು ಭಾವರನ್ನು ನೋಡುತ್ತಿದ್ದೇವೆ. ಸದನದಲ್ಲಿ ಬ್ಲೂಫಿಲಂ ನೋಡಿದ ಮೂವರು ಮಾಜಿ ಮಂತ್ರಿಗಳಿಗೂ ಅವರ ಸಾಧನೆಯನ್ನು ಮನ್ನಿಸಿ, ಬಿಜೆಪಿ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಿದೆ.

ಈಗ ಸರಕಾರದ ಆದ್ಯತೆಗಳು ಬದಲಾಗಿವೆ. 70ರ ದಶಕದವರೆಗೆ ಭೂಮಿಯಿಲ್ಲದವ ರಿಗೆ ಭೂಮಿ, ಊಳುವವನೇ ಭೂ ಒಡೆಯ, ಸಾಮಾಜಿಕ ನ್ಯಾಯದ ಘೋಷಣೆಗಳನ್ನು ಕೇಳುತ್ತಿದ್ದೆವು. ಆಗ ಸಮಾಜವಾದಿ ಸೋವಿಯತ್ ರಷ್ಯಾ ಎಲ್ಲ ಅಭಿವೃದ್ಧಿ ಶೀಲ ದೇಶಗಳಿಗೆ ಆದರ್ಶವಾಗಿತ್ತು. ವೊದಲ ಪ್ರಧಾನಿ ನೆಹರೂ ರಷ್ಯದಿಂದ ಸ್ಫೂರ್ತಿ ಪಡೆದೇ ಸಾಮೂಹಿಕ ಕೃಷಿ ಸರಕಾರಿ ರಂಗದ ಉದ್ಯಮವಲಯಕ್ಕೆ ಆದ್ಯತೆ ನೀಡಿದರು. ಆದರೆ 90ರ ದಶಕದಲ್ಲಿ ಯಾವಾಗ ರಷ್ಯಾ ಪತನಗೊಂಡಿತೋ, ಆಗ ಅಮೆರಿಕ ನೇತೃತ್ವದ ಬಂಡವಾಳಶಾಹಿ ದೇಶಗಳ ಕೈ ಮೇಲಾಯಿತು. 

ಮಾರುಕಟ್ಟೆ ಸುಧಾರಣೆ ಹೆಸರಿನಲ್ಲಿ ಪಡಿತರ ವ್ಯವಸ್ಥೆಯನ್ನು ನಾಶ ಮಾಡಿ, ಸರಕಾರಿ ರಂಗವನ್ನು ಸಮಾಧಿ ಮಾಡಿ, ಸಾಮಾಜಿಕ ನ್ಯಾಯದ ಸಿದ್ಧಾಂತದ ಮೇಲೆ ಗೋರಿ ಕಟ್ಟಲಾಯಿತು.ಭೂಮಿ, ಅರಣ್ಯ, ನೀರು, ವಸತಿ ಹೀಗೆ ಎಲ್ಲ ಜನರಿಗೆ ಲಭ್ಯವಾಗಬೇಕಾದ ಸೃಷ್ಟಿಯ ಆಸರೆ ತಾಣಗಳು ಒಂದೊಂದಾಗಿ ಲಾಭ ಕೋರ ಬಹುರಾಷ್ಟ್ರೀಯ ಕಂಪೆನಿಗಳ ಮಡಿಲನ್ನು ಸೇರಡತೊಡಗಿದವು. ಬಂಡವಾಳ ಹೂಡಿಕೆಗೆ ಪ್ರೋತ್ಸಾಹದ ಹೆಸರಿನಲ್ಲಿ ನಮ್ಮ ಕಾಡನ್ನು, ನದಿಗಳನ್ನು ಕಂಪೆನಿಗಳ ವಶಕ್ಕೆ ಒಪ್ಪಿಸಲಾಯಿತು.

ಸೇನಾಪಡೆಗಳನ್ನು ಬಳಸಿಕೊಂಡು ಆದಿವಾಸಿಗಳನ್ನು, ರೈತರನ್ನು ಶತಮಾನ ಗಳಿಂದ ಅವರು ನೆಲೆಸಿದ ತಾಣಗಳಿಂದ ಹೊರದಬ್ಬುವ ಪ್ರಕ್ರಿಯೆ ಆರಂಭವಾಯಿತು. ಜಲಮೂಲಗಳ ಮೇಲೆ ಸಮುದಾಯಗಳ ಹಿಡಿತ ತಪ್ಪಿತು. ನೀರು ಮಾರಾಟದ ವಸ್ತುವಾಯಿತು. ಸರಕಾರಿ ಗೃಹನಿರ್ಮಾಣ ಸಂಸ್ಥೆಗಳು ಹೆಸರಿಗೆ ಮಾತ್ರ ಉಳಿದು, ಕೆರೆಗಳನ್ನು ಮುಚ್ಚಿ ಸೌಧಗಳನ್ನು ನಿರ್ಮಿಸುವ ರಿಯಲ್ ಎಸ್ಟೇಟ್ ಮಾಫಿಯಾ ತಲೆಯೆತಿತ್ತು. ಇದನ್ನೇ ಅಭಿವೃದ್ಧಿಯೆಂದು ಕರೆಯುತ್ತೇವೆ.

ಭಾರತಮಾತೆಯ ಗರ್ಭವನ್ನು ಸೀಳಿ, ಕಬ್ಬಿಣದ ಅದಿರನ್ನು ದರೋಡೆ ಮಾಡಲು ಕರ್ನಾಟಕದ ಬಿಜೆಪಿ ಸರಕಾರ ಅವಕಾಶ ನೀಡಿತು. ಕೇಂದ್ರ ಸರಕಾರವು ಅದಕ್ಕೆ ಮೌನ ಸಮ್ಮತಿ ನೀಡಿತು. ಈ ದರೋಡೆಯಲ್ಲಿ ದೇಶದ ಸಂಪತ್ತನ್ನು ತಮ್ಮ ತಿಜೋರಿಗಳಿಗೆ ತುಂಬಿಕೊಂಡ ದಗಾಕೋರರು ಈಗ ನೇರ ರಾಜಕಾರಣಕ್ಕೆ ಇಳಿದಿದ್ದಾರೆ. ಸಮಾಜ ಸೇವಕರ ಸೋಗು ಹಾಕಿ, ಅಧಿಕಾರ ಸೂತ್ರ ಹಿಡಿಯಲು ಸನ್ನದ್ಧರಾಗಿದ್ದಾರೆ. ಎಡ ಪಕ್ಷಗಳನ್ನು ಹೊರತುಪಡಿಸಿ, ಎಲ್ಲ ಪಕ್ಷಗಳಲ್ಲೂ ಈ ಖದೀಮರು ಠಳಾಯಿಸುತ್ತಿದ್ದಾರೆ.

ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡರು ಕೇವಲ ಐದು ಸಾವಿರ ರೂಪಾಯಿ ಖರ್ಚು ಮಾಡಿ, ವಿಧಾನಸಭೆಗೆ ಆರಿಸಿ ಬಂದ ನೆಲದಲ್ಲಿ ಈಗ ನಾವು ಕಾಣಬಾರದ ದೃಶ್ಯಗಳನ್ನು ನೋಡುತ್ತಿದ್ದೇವೆ. ಸ್ಪರ್ಧೆಗಿಳಿದ ಒಬ್ಬೊಬ್ಬರು ಘೋಷಿಸಿಕೊಂಡ ಆಸ್ತಿ ವಿವರ ನೋಡಿದರೆ ಎದೆ ನಡುಗುತ್ತದೆ. ಇನ್ನು ಘೋಷಿಸಿಕೊಳ್ಳದ ಆಸ್ತಿಯ ಮೂಲಕ್ಕೆ ಹೋದರೆ, ಹೃದಯಾಘಾತವೇ ಆಗುತ್ತದೆ.
ಇತ್ತೀಚೆಗೆ ನಾನು ಬಾಗೇಪಲ್ಲಿಗೆ ಹೋದಾಗ, ಅಲ್ಲಿ ಕಮ್ಯುನಿಸ್ಟ್ ನಾಯಕ ಜಿ.ವಿ.ಶ್ರೀರಾಮರೆಡ್ಡಿ ವಿರುದ್ಧ ಸುಬ್ಬಾರೆಡ್ಡಿ ಎಂಬ ಹೋಟೆಲ್ ಉದ್ಯಮದ ಕೋಟ್ಯಾಧೀಶ ಸ್ಪರ್ಧಿಸಿದ್ದನ್ನು ಕಂಡೆ. ಈ ಸುಬ್ಬಾರೆಡ್ಡಿ ಘೋಷಿಸಿಕೊಂಡ ಆಸ್ತಿ ೮೦ ಕೋಟಿ ರೂಪಾಯಿ. ಆತನ ಬಳಿ ಕೆಜಿಗಟ್ಟಲೇ ಬಂಗಾರವಿದೆ. ಕೋಟ್ಯಂತರ ರೂಪಾಯಿ ಕಿಮ್ಮತ್ತಿನ ಕಾರುಗಳಿವೆ. ಈತನಿಗೆ ಭಾಷಣ ಮಾಡಲು ಬರುವುದಿಲ್ಲ. ಆದರೆ ಶಾಸಕನಾಗಬೇಕು ಎಂಬ ಹಟ. ಅದಕ್ಕಾಗಿ ನೀರಿನಂತೆ ಹಣ ಚೆಲ್ಲುತ್ತಿದ್ದಾನೆ. ಸಮಾಜಸೇವಕ ಎಂಬ ಸೋಗು ಬೇರೆ.
ಆದರೆ ನಮ್ಮ ಜನಾಂಗ ಬುದ್ಧಿವಂತರು. ಈತನ ಮಾಯಾ ಜಾಲಕ್ಕೆ ಅವರು ಮೋಸ ಹೋಗುವವರಲ್ಲ. ಇದು ಒಂದು ಉದಾಹರಣೆ ಮಾತ್ರ. ಇಂತಹವರು ಎಲ್ಲ ಮತಕ್ಷೇತ್ರಗಳಲ್ಲೂ ಕಾಣುತ್ತಾರೆ. ದೇಶ ದೋಚುವ ಈ ಕರಾಳಶಕ್ತಿಯನ್ನು ವಿರೋಧಿಸಬೇಕಾದ ಪ್ರಗತಿಪರ ಶಕ್ತಿಗಳು ಒಡೆದು ಹೋಳುಹೋಳಾಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಂಡು ಬಂದ ಒಗ್ಗಟ್ಟು ಕೂಡ ಕಾಣುತ್ತಿಲ್ಲ. ರಾಜ್ಯ ರೈತ ಸಂಘ ಕೆಜೆಪಿ ಜೊತೆ ಕೈಜೋಡಿಸಿದೆ. ಶ್ರೀರಾಮುಲು ಜೊತೆಗೆ ಕೆಲವರು ತಮಟೆ ಬಾರಿಸುತ್ತಿದ್ದಾರೆ. 

ಚಂಪಾರಂತಹ ಬಂಡಾಯ ಸಾಹಿತಿ ಕೆಜೆಪಿಯಲ್ಲಿ ಹೊಸ ಬೆಳಕನ್ನು ಕಾಣುತ್ತಿದ್ದಾರೆ. ದಲಿತ ಸಂಘಟನೆಗಳು ದಿಕ್ಕಾಪಾಲಾಗಿವೆ. ಕಮ್ಯುನಿಸ್ಟ್ ಪಕ್ಷಗಳು ತಮ್ಮ ಪಾಡಿಗೆ ತಾವು ಚುನಾವಣಾ ಕಣಕ್ಕೆ ಇಳಿದಿವೆ. ಗೆಲ್ಲುವ ಭರವಸೆ ಅವರ ಕಣ್ಣಲ್ಲೂ ಕಾಣುತ್ತಿಲ್ಲ. ಹಾಗೆಂದು ಲೂಟಿಗಾರರಿಗೆ ಅವಕಾಶ ಮಾಡಿಕೊಡಬಾರದು. ಪ್ರಗತಿಪರ ಶಕ್ತಿಗಳು ಸರಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಆದರೆ ಪ್ರತಿಪಕ್ಷ ಸಾಲಿನಲ್ಲಿ ಕುಳಿತು ಪ್ರಭುತ್ವದ ಲೋಪದೋಷಗಳ ವಿರುದ್ಧ ಕೆಲವರಾದರೂ ಗೆದ್ದು ಬರಬೇಕಾಗಿದೆ. ಕಳೆದ ವಿಧಾನಸಭೆಯಲ್ಲಿ ಅಂತಹವರು ಕಾಣಲೇ ಇಲ್ಲ.

ಈ ಬಾರಿ ಹಾಗಾಗಬಾರದು. ಗೆಲುವಿಗೆ ಹತ್ತಿರದಲ್ಲಿರುವ ಕಮ್ಯುನಿಸ್ಟ್ ನಾಯಕ ಜಿ.ವಿ. ಶ್ರೀರಾಮರೆಡ್ಡಿ, ‘ಸಾಥಿ’ ಸುಂದರೇಶ್, ರೈತ ಸಂಘದ ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ವಾಟಾಳ್ ನಾಗರಾಜ್ ಇಂತಹವರು ಸದನವನ್ನು ಪ್ರವೇಶಿಸಬೇಕು. ಆಗ ಕಲಾಪಗಳಿಗೆ ಒಂದು ಘನತೆ ಬರುತ್ತದೆ.ಕಳೆದ ಐದು ವರ್ಷಗಳಲ್ಲಿ ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳಿಂದ ಕರ್ನಾಟಕ ತತ್ತರಿಸಿ ಹೋಗಿದೆ. ಯಾವುದೇ ಕಾರಣಕ್ಕೂ ಈ ಶಕ್ತಿಗಳು ಮತ್ತೆ ಅಧಿಕಾರಕ್ಕೆ ಬರಬಾರದು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಅದು ಕೂಡ ಬಂಡವಾಳಶಾಹಿ ಆರ್ಥಿಕ ನೀತಿ ಅನುಸರಿಸುವುದರಿಂದ ಅದಕ್ಕೆ ಚಾಟಿ ಏಟು ನೀಡಲು ಎಡಪಂಥೀಯ ಜನಪರ ಹೋರಾಟಗಾರರು ಕೆಲವರಾದರು ಶಾಸನಸಭೆಯನ್ನು ಪ್ರವೇಶಿಸಬೇಕು. ಈ ನಿಟ್ಟಿನಲ್ಲಿ ಜನತೆ ನೀಡುವ ತೀರ್ಪು ಗಮನಾರ್ಹವಾಗಿದೆ.

ಆಳುವ ಅಧಿಕಾರದ ಸಮಾನ ಹಂಚಿಕೆ
ಸೌಜನ್ಯ : ಪ್ರಜಾವಾಣಿ


ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ದಲಿತ ಅಭ್ಯರ್ಥಿ ವಾಸ್ತವದಲ್ಲಿ ಒಂದು ಅಸಮಾನ ಕಣದಲ್ಲಿರುತ್ತಾನೆ. ಏಕೆಂದರೆ ಸರ್ಕಾರಿ ಉದ್ಯೋಗ ಅಥವಾ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಸೀಟು ಪಡೆಯಲು ಇರುವ ಮೀಸಲಾತಿಗೂ ರಾಜಕೀಯ ಮೀಸಲಾತಿಗೂ ನಡುವೆ ರಾಚನಿಕ ವ್ಯತ್ಯಾಸಗಳಿವೆ. ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯಲ್ಲಿ ಸ್ಪರ್ಧಿಸುವವನ ಬಲಕ್ಕೆ ಅನುಗುಣವಾಗಿ ಫಲ ದೊರೆಯುತ್ತದೆ.

ಆದರೆ ರಾಜಕೀಯ ಮೀಸಲಾತಿಯಲ್ಲಿ ದಲಿತ ಅಭ್ಯರ್ಥಿ ದಲಿತೇತರರ ಮತಗಳನ್ನು ಅವಲಂಬಿಸಿ ತನ್ನ ಗೆಲುವನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಅಸಮಾನ ಕಣವೊಂದರಲ್ಲಿ ನಡೆಯುವ ಸ್ಪರ್ಧೆಯನ್ನು ಎದುರಿಸಿ ದಲಿತರು ತಮ್ಮ ಶಾಸನ ಸಭೆಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆಯಬೇಕಾಗುತ್ತದೆ. ಕಳೆದ ಅರವತ್ತು ವರ್ಷಗಳಲ್ಲಿ ರಾಜಕೀಯ ಪಕ್ಷಗಳು ದಲಿತರ ಸ್ಥಿತಿಯನ್ನು ಸಾಕಷ್ಟು ದುರ್ಬಳಕೆ ಮಾಡಿಕೊಂಡಿವೆ.

ಜಾತಿ ಪರಿಕಲ್ಪನೆಯಲ್ಲಿ ಅತಿ ಮುಖ್ಯವಾದ ಪ್ರಭಾವವಿರುವುದು ರಾಜಕಾರಣದ ಮೇಲೆ. ರಾಜಕಾರಣವೆಂಬುದು ಮೂಲತಃ ಸಾಮಾಜಿಕ ಅಧಿಕಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಜಾತಿ ಪರಿಕಲ್ಪನೆಯ ಪ್ರಭಾವ ಅದರ ಮೇಲಿರುವುದು ನಿರೀಕ್ಷಿತ ವಿದ್ಯಮಾನ. ಸ್ವಾತಂತ್ರ್ಯಾ ನಂತರ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಬೇಕೆಂದು ತೀರ್ಮಾನಿಸಿದ್ದೂ ಕೂಡ ಜಾತಿ ಪ್ರಶ್ನೆಯನ್ನು ಮುಖ್ಯವಾಗಿಸಿತು. ಆಧುನಿಕ ಭಾರತದ ನೆಲೆಗಟ್ಟಾಗಿದ್ದ ಎಲ್ಲಾ ಆದರ್ಶಗಳೂ ಕ್ರಾಂತಿಕಾರಿಯಾಗಿದ್ದವು.
ಹಲವರ ವಿರೋಧದ ನಡುವೆಯೇ ನಮ್ಮ ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿತು. ಹಲವರು, ಕೇವಲ ಶಿಕ್ಷಿತರು (ಉದಾಹರಣೆಗೆ ಕೇವಲ ಪದವೀಧರರು ಮಾತ್ರ) ಅಥವಾ ಮೇಲ್ವರ್ಗದ, ಮೇಲ್ಜಾತಿಯ ಜನರಿಗಷ್ಟೇ ಮತದಾನದ ಹಕ್ಕಿರಬೇಕೆಂದು ವಾದಿಸಿದ್ದರು. ಅದೃಷ್ಟವಶಾತ್ ಈ ವಾದಗಳಿಗೆ ಮನ್ನಣೆ ದೊರೆಯದೇ ಹೋಯಿತು. ಪರಿಣಾಮವಾಗಿ ಸ್ವತಂತ್ರ ಭಾರತದ ಹುಟ್ಟಿನ ಕ್ಷಣದಿಂದಲೇ ರಾಜಕೀಯವೆಂಬುದು ಎಲ್ಲಾ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡುವ ಮಾರ್ಗವಾಯಿತು.
ರಾಜಕೀಯ ಎಂಬುದು ಪೌರನೊಬ್ಬ ಮತ ಚಲಾಯಿಸುವುದಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಆಳ್ವಿಕೆ ನಡೆಸುವ ಅಧಿಕಾರದ ಪಡೆಯುವಿಕೆಯೂ ಸೇರಿದೆ. ಒಬ್ಬ ಪೌರನಿಗಿರುವ ಒಂದು ಮತ ಹೇಗೆ ಆಳ್ವಿಕೆಯ ಅಧಿಕಾರವನ್ನು ಗಳಿಸಿಕೊಡುತ್ತದೆ? ಚುನಾವಣೆ ಮೂಲಭೂತವಾಗಿ ಸಂಖ್ಯೆಗೆ ಸಂಬಂಧಿಸಿದ್ದು. ಒಂದು ಮತ ಏನನ್ನೂ ಮಾಡಲಾರದು. ಆದರೆ ಇದರ ಜೊತೆಗೆ ಇತರರ ಮತಗಳೂ ಸೇರಿಕೊಂಡರೆ ಅದು ಬಹುದೊಡ್ಡ ಬದಲಾವಣೆಯನ್ನು ಸಾಧಿಸಬಲ್ಲದು.

ಹಾಗಾಗಿ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯೇ ಒಂದು ಬಗೆಯಲ್ಲಿ ಮತ ಬ್ಯಾಂಕುಗಳನ್ನು ನಿರಂತರವಾಗಿ ಸೃಷ್ಟಿಸುವ ಕ್ರಿಯೆ. ಜಾತಿ ಕೂಡಾ ಈ ಬಗೆಯ ಮತ ಬ್ಯಾಂಕ್. ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತವಾಗಿ ಚುನಾವಣೆಗಳಲ್ಲಿ ಸ್ಪರ್ಧೆ ನಡೆಯದೇ ಇರುವುದರಿಂದ ಜಾತಿ ಒಂದು ಬಹುಮುಖ್ಯ ಮತ ಬ್ಯಾಂಕ್ ಆಗಿದೆ.

ಹಲವರು ನಮ್ಮ ಚುನಾವಣೆಗಳೆಂದರೆ ಜಾತಿಗಳ ನಡುವಣ ಸ್ಪರ್ಧೆ ಎನ್ನುತ್ತಾರೆ. ಮುಖ್ಯಮಂತ್ರಿಗಳ ಆಯ್ಕೆಯೂ ಅವರು ಯಾವ ಜಾತಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದರ ಮೇಲೆ ನಡೆಯುತ್ತದೆ. ಪೌರರಾದ ನಾವು ಈ ಸ್ಪರ್ಧೆಯ ವೀಕ್ಷಕರು. ಕೆಲವರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವಾಗ ಇನ್ನು ಕೆಲವರು ಇಡೀ ಪ್ರಕ್ರಿಯೆಯನ್ನು ಸಿನಿಕರಾಗಿ ವೀಕ್ಷಿಸುತ್ತಾರೆ.
ಈ ಜಾತಿ ರಾಜಕಾರಣದ ಮುಖ್ಯ ನೆಲೆ ಇರುವುದು ಮತದಾರರು ತಮ್ಮ ಜಾತಿಯವರಿಗೆ ಮತ ಚಲಾಯಿಸುತ್ತಾರೆ ಎಂಬ ರಾಜಕಾರಣಿಗಳ ನಂಬಿಕೆಯಲ್ಲಿ. ಇವರು ಒಕ್ಕಲಿಗ ಮತದಾರರು ಒಕ್ಕಲಿಗ ಅಭ್ಯರ್ಥಿಗೇ ಮತ ಚಲಾಯಿಸುತ್ತಾರೆ ಅಥವಾ ಲಿಂಗಾಯತರು ತಮ್ಮ ಜಾತಿಯವರಿಗೇ ಮತ ನೀಡುತ್ತಾರೆ ಎಂದು ನಂಬುತ್ತಾರೆ. ಇದೆಷ್ಟು ನಿಜ? ಈ ನಂಬಿಕೆಗೆ ಕಾರಣವೇನು? ಇದನ್ನು ಓದುತ್ತಿರುವ ನೀವೆಲ್ಲರೂ ಅಭ್ಯರ್ಥಿಯ ಜಾತಿ ನೋಡಿ ಮತ ಚಲಾಯಿಸುತ್ತೀರಾ? ಅಥವಾ ರಾಜಕಾರಣಿಗಳ ಈ ನಂಬಿಕೆಯೇ ತಪ್ಪೇ? ಅವರ ಆಲೋಚನೆ ಸುಳ್ಳು ಎಂಬುದನ್ನು ಈಗ ನಡೆಯಲಿರುವ ಚುನಾವಣೆಯಲ್ಲಿ ಸಾಬೀತು ಮಾಡುತ್ತೀರಾ?

***
ಈ ಹಿಂದೆ ನಾವು ಶಿಕ್ಷಣದಲ್ಲಿರುವ ಮೀಸಲಾತಿಯ ಕುರಿತು ಚರ್ಚಿಸಿದ್ದೆವು. ಮೀಸಲಾತಿಯ ಬಹುಮುಖ್ಯ ಮಾದರಿಗಳಿರುವುದೇ ಶಿಕ್ಷಣ ಮತ್ತು ರಾಜಕೀಯದಲ್ಲಿ. ರಾಜಕೀಯ ಮೀಸಲಾತಿಯನ್ನು ನಿರ್ದಿಷ್ಟ ಅವಧಿಗಷ್ಟೇ ಸೀಮಿತಗೊಳಿಸಬೇಕೆಂದು ಅಂಬೇಡ್ಕರ್ ಕೂಡ ಹೇಳಿದ್ದರು. ಮೀಸಲಾತಿಯ ಅವಧಿಗೆ ಸಂಬಂಧಿಸಿದಂತೆ ಅವರ ಅಭಿಪ್ರಾಯ ಇದೊಂದು ಕ್ಷೇತ್ರಕ್ಕಷ್ಟೇ ಸೀಮಿತವಾಗಿತ್ತು.
ಸ್ವತಂತ್ರ ಭಾರತ ಯಾಕೆ ರಾಜಕೀಯ ಮೀಸಲಾತಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿತು?


ಸಂವಿಧಾನದ 330 ಮತ್ತು 332ನೇ ವಿಧಿಗಳು ದಲಿತರಿಗೆ ರಾಜಕೀಯ ಮೀಸಲಾತಿಯನ್ನು ಒದಗಿಸುತ್ತಿದೆ. ಈ ಮೀಸಲಾತಿ ವಿಧಾನ ಮಂಡಲ ಮತ್ತು ಸಂಸತ್ತಿನ ಎರಡೂ ಮನೆಗಳಲ್ಲಿ ದಲಿತರ ಪ್ರಾತಿನಿಧ್ಯವನ್ನು ಖಾತರಿ ಪಡಿಸುತ್ತದೆ. ಜಾತಿ ಆಧಾರಿತ ಸಮಾಜದಲ್ಲಿ ದಲಿತ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರಗಳಿಂದ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕಾಗಿ ಈ ಮೀಸಲಾತಿಯನ್ನು ಕಾರ್ಯರೂಪಕ್ಕೆ ತರಲಾಯಿತು. ಸಾಮಾನ್ಯ ಕ್ಷೇತ್ರಗಳಿಂದ ದಲಿತರು ಆಯ್ಕೆಯಾಗುವುದರ ಕುರಿತಂತೆ ಸಂವಿಧಾನ ರಚನಾ ಸಭೆಗಿದ್ದ ಅನುಮಾನ ವರ್ತಮಾನದಲ್ಲಿ ಸಾಬೀತಾಗಿದೆ.

ಈ ದುರದೃಷ್ಟಕರ ಸನ್ನಿವೇಶದಲ್ಲಿಯೂ ಮಹಾರಾಷ್ಟ್ರದ ಒಂದೆರಡು ಸಾಮಾನ್ಯ ಕ್ಷೇತ್ರಗಳಿಂದ ದಲಿತರು ಸಂಸತ್ತಿಗೆ ಆಯ್ಕೆಯಾಗಿರುವ ಅಪವಾದಗಳಿವೆ. ಆದರೆ ಹೆಚ್ಚಿನ ಸಂಸತ್ತು ಹಾಗೂ ಶಾಸನಸಭೆಗಳಲ್ಲಿರುವ ಬಹುತೇಕ ದಲಿತರು ಮೀಸಲು ಕ್ಷೇತ್ರಗಳ ಸವಲತ್ತನ್ನು ಬಳಸಿಕೊಂಡು ವಿವಿಧ ಪಕ್ಷಗಳನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದಾರೆ. ದಲಿತರು ಸಾಮಾನ್ಯ ಕ್ಷೇತ್ರಗಳಿಂದ ಆಯ್ಕೆಯಾಗುವಂತೆ ನೋಡಿಕೊಳ್ಳುವ ವಿಷಯದಲ್ಲಿ ಎಡಪಕ್ಷಗಳ ಸಾಧನೆಯೂ ಬಹುತೇಕ ಶೂನ್ಯವೇ.
ಕರ್ನಾಟಕದಲ್ಲಿ ಈಗ ಸೃಷ್ಟಿಯಾಗಿರುವ ಹೊಸ ರಾಜಕೀಯ ಪಕ್ಷಗಳೂ ದಲಿತರನ್ನು ಸ್ವೀಕರಿಸುವ ವಿಷಯದಲ್ಲಿ ಬಹಳ ಧನಾತ್ಮಕವಾಗಿಯೇನೂ ಇಲ್ಲ. ಈ ಬಗೆಯ ಕೆಲವು ಹೊಸ ರಾಜಕೀಯ ಪಕ್ಷಗಳಂತೂ ದಲಿತರಿಗೆ ನೀಡುವ ರಾಜಕೀಯ ಮೀಸಲಾತಿಯೂ ಸೇರಿದಂತೆ ಎಲ್ಲ ಮೀಸಲಾತಿಗಳನ್ನೂ ವಿರೋಧಿಸುತ್ತಿವೆ.

ರಾಜಕೀಯ ಮೀಸಲಾತಿಯ ಪರಿಕಲ್ಪನೆ ದಲಿತೇತರ ಜಾತಿಗಳಿಗೆ ಬಹುದೊಡ್ಡ ನೈತಿಕ ಜವಾಬ್ದಾರಿಯೊಂದನ್ನು ಹೊರಿಸುತ್ತಿದೆ. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗುವ ದಲಿತ ಅಭ್ಯರ್ಥಿ ಮೊದಲಿಗೆ ಅಸ್ಪೃಶ್ಯರ ಪರವಾಗಿ ಮತ್ತೆ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕೆಂಬ ನೈತಿಕ ಒತ್ತಡವನ್ನು ಹೇರುವ ಕೆಲಸ ದಲಿತೇತರರಾಗಿರುತ್ತದೆ. ದಲಿತರಿಗೆ ನೀಡುವ ರಾಜಕೀಯ ಮೀಸಲಾತಿ ಸಾರ್ವಜನಿಕ ಸೇವೆಗಳಲ್ಲಿ ನೀಡುವ ಮೀಸಲಾತಿಗಿಂತ ಭಿನ್ನ. ಇದರ ಸಾರ್ಥಕತೆ ಮತ್ತು ಪರಿಣಾಮಗಳೆರಡೂ ದಲಿತೇತರ ಬಹುಸಂಖ್ಯಾತರ ಮತಗಳನ್ನು ಅವಲಂಬಿಸಿದೆ.

ಸರ್ಕಾರಿ ಕ್ಷೇತ್ರದ ಮೀಸಲಾತಿಯನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಸವಲತ್ತನ್ನು ಪಡೆಯುವ ವ್ಯಕ್ತಿ ನಿರ್ಧರಿಸಲು ಸಾಧ್ಯವಿದೆ. ಹಾಗೆಯೇ ಸರ್ಕಾರಿ ಉದ್ಯೋಗವೊಂದಕ್ಕೆ ಮೀಸಲಾತಿಗೆ ಅರ್ಹರಾಗಿರುವವರ ಮಧ್ಯೆಯೇ ಸ್ಪರ್ಧೆ ಏರ್ಪಟ್ಟಿದೆ ಎಂದುಕೊಳ್ಳೋಣ. ಇಲ್ಲಿ ದಲಿತರೇ ಸ್ಪರ್ಧಿಸಿ ಅಂಕಗಳನ್ನುಗಳಿಸಿ ತಮ್ಮ ಅರ್ಹತೆಯನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಾರೆ.
ಆದರೆ ಈ ಅಂಕಗಳನ್ನು ಪಡೆಯುವುದು ಮತಗಳನ್ನು ಗಳಿಸುವಷ್ಟು ಕಷ್ಟವಲ್ಲ. ರಾಜಕೀಯ ಮೀಸಲಾತಿಯನ್ನು ತಮ್ಮದಾಗಿಸಿಕೊಳ್ಳಲು ದಲಿತ ಅಭ್ಯರ್ಥಿಗೆ ಕೇವಲ ಪ್ರಮಾಣಾತ್ಮಕ ಅನುಕೂಲ ದೊರೆತರಷ್ಟೇ ಸಾಕಾಗುವುದಿಲ್ಲ. ಇದರ ಜೊತೆಗೆ ದಲಿತೇತರ ಮತದಾರರಿಂದ ಗುಣಾತ್ಮಕ ಅನುಕೂಲಗಳನ್ನು ಪಡೆಯಲು ಹೋರಾಟ ನಡೆಸಬೇಕಾಗುತ್ತದೆ.
ರಾಜಕೀಯ ಮೀಸಲಾತಿ ಎಂಬ ಸವಲತ್ತಿನ ಮೂಲಕ ಪ್ರಮಾಣಾತ್ಮಕ ಅನುಕೂಲ ದೊರೆತು ಬಿಟ್ಟಿರುತ್ತದೆ. ಆದರೆ ದಲಿತೇತರ ಮತದಾರರನ್ನು ಒಲಿಸಿಕೊಳ್ಳುವ ಕೆಲಸ ಅಷ್ಟು ಸುಲಭದ್ದಲ್ಲ. ಮೆಡಿಕಲ್ ಸೀಟೊಂದನ್ನು ಪಡೆಯಲು ಸ್ಪರ್ಧಿಸಿರುವ ಅಭ್ಯರ್ಥಿ ಪರೀಕ್ಷೆಯಲ್ಲಿ ಶೇಕಡಾ 90ರಷ್ಟು ಅಂಕಗಳನ್ನು ಪಡೆಯಬಹುದು. ಈ ಸ್ಪರ್ಧೆಯ ಕಣ ಸಮಾನವಾದದ್ದು.
ಆದರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವಾತನ ಸ್ಥಿತಿ ಭಿನ್ನ. ಈತ ಸಮಾನವಲ್ಲದ ಒಂದು ಕಣದಲ್ಲಿರುತ್ತಾನೆ ಎಂಬುದಷ್ಟೇ ಅಲ್ಲದೆ ಒಂದು ಅಸಮಾನ ಸ್ಥಿತಿಯೊಳಗೆ ಆತ ತನ್ನ ಹೋರಾಟವನ್ನು ನಡೆಸಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಕ್ಷೇತ್ರದ ದಲಿತೇತರ ಮತದಾರರ ಮೇಲೆ ಎರಡು ಜವಾಬ್ದಾರಿಯಿರುತ್ತದೆ. ಮೊದಲನೆಯಾದಾಗಿ ದಲಿತ ಅಭ್ಯರ್ಥಿಗಳೊಳಗಿಂದ ಅವರು ಆರಿಸುವಾತ ದಲಿತರ ಹಿತವನ್ನು ಕಾಪಾಡುವವನೂ ಅದರ ಜೊತೆಗೆ ಕ್ಷೇತ್ರದ ಸಾಮಾನ್ಯ ಹಿತವನ್ನು ಕಾಪಾಡುವವನೂ ಆಗಿರಬೇಕಾಗುತ್ತದೆ.

ಹಾಗಾಗಿ ಅವರು ಪಕ್ಷ ರಾಜಕಾರಣವನ್ನು ಬದಿಗಿಟ್ಟು ದಲಿತರ ಹಿತ ಮತ್ತು ಕ್ಷೇತ್ರದ ಹಿತವನ್ನು ಒಟ್ಟಾಗಿ ಪರಿಗಣಿಸಿ ತಮ್ಮ ಆಯ್ಕೆಯನ್ನು ನಡೆಸಬೇಕು. ಹಾಗೆಯೇ ರಾಜಕೀಯ ಪಕ್ಷಗಳು ಈ ಮೀಸಲು ಕ್ಷೇತ್ರಗಳನ್ನು ತಮ್ಮ ಉದ್ದೇಶಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಕಳೆದ ಆರು ದಶಕಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಮೊದಲನೆಯದಾಗಿ ರಾಜಕೀಯ ಪಕ್ಷಗಳು ಮೀಸಲು ಕ್ಷೇತ್ರಗಳಲ್ಲಿ ನೈತಿಕವಾಗಿ ಅಷ್ಟೇನೂ ಅರ್ಹರಲ್ಲದ ಮತ್ತು ಕ್ಷೇತ್ರದ ಹೊರಗಿನವರನ್ನು  ಕಣಕ್ಕಿಳಿಸಿದ್ದೇ ಹೆಚ್ಚು.

ಎರಡನೆಯದಾಗಿ ಕ್ಷೇತ್ರ ಪುನರ್‌ವಿಂಗಡಣಾ ಆಯೋಗಗಳು ಮೀಸಲ ಕ್ಷೇತ್ರಗಳ ಗಡಿಗಳನ್ನು ಪುನಾರಚಿಸುವ ಪ್ರಲೋಭನೆಯನ್ನು ಮೀರಬೇಕು. ಇದರಿಂದಾಗಿ ಕ್ಷೇತ್ರದ ಆಡಳಿತಾತ್ಮಕ ಏಕತೆ ಇಲ್ಲವಾಗುತ್ತದೆಯಷ್ಟೇ ಅಲ್ಲದೆ ಶೇಕಡಾ 20ರಿಂದ 25ರ ನಡುವೆ ಇರುವ ದಲಿತ ಮತದಾರರ ಸಂಖ್ಯೆಯಲ್ಲಿ ವ್ಯತ್ಯಯ ಸಂಭವಿಸುತ್ತದೆ.

ಮೀಸಲು ಕ್ಷೇತ್ರಗಳಲ್ಲಿರುವ ದಲಿತೇತರ ಮತದಾರರಿಗೆ ದಲಿತರ ರಾಜಕೀಯ ಶಾಸನಾತ್ಮಕ ಕ್ರಿಯಾಶೀಲತೆಯನ್ನು ನಿಯಂತ್ರಿಸುವ ಅಧಿಕಾರವಿದೆ. ಮತದಾರರೂ ಕೂಡಾ ತಮ್ಮ ತಮ್ಮ ಜಾತಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಮತ ಚಲಾಯಿಸುವುದರಿಂದ ಅವರು ತಟಸ್ಥರಾಗಿರಬಹುದು ಅಥವಾ ಪಕ್ಷದ ಹಿತಗಳನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪಮಟ್ಟಿಗೆ ಕ್ರಿಯಾಶೀಲರಾಗಿರಬಹುದು.

ಉತ್ತರ ಪ್ರದೇಶವನ್ನು ಹೊರತು ಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಮೀಸಲು ಕ್ಷೇತ್ರದಲ್ಲಿ `ದಲಿತ ಪಕ್ಷ'ವೊಂದರ ಅಭ್ಯರ್ಥಿ ಆಯ್ಕೆಯಾದ ಉದಾಹರಣೆಯಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿ ದಲಿತ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸುವುದು ದಲಿತ ಮತದಾರರಲ್ಲ. ಬದಲಿಗೆ ಲೋಕಸಭೆ ಮತ್ತು ವಿಧಾನ ಸಭೆಗಳ ಮೀಸಲು ಕ್ಷೇತ್ರಗಳಲ್ಲಿರುವ ಸರಿ ಸುಮಾರು ಶೇಕಡಾ 80ರಷ್ಟು ದಲಿತೇತರರು ಗೆಲುವನ್ನು ನಿರ್ಧರಿಸುತ್ತಾರೆ.

ಮೀಸಲಾತಿ ಬೇಡ, ಆದರೆ...

 
ಸೌಜನ್ಯ : ಪ್ರಜಾವಾಣಿನಾನೊಬ್ಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ. ಎಲ್ಲರಿಗೂ ತಿಳಿದ ಹಾಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ. ಇದರ ವಿರುದ್ಧ ಕೇಳಿಬರುತ್ತಿರುವ ಟೀಕೆ, ಕುಹಕ ಇತ್ಯಾದಿಗಳ ಕಾರಣಕ್ಕೆ ಅದು ಬೇಡವೇ ಬೇಡ ಅನ್ನಿಸುತ್ತಿದೆ.
ಮೀಸಲಾತಿಯ ಹಂಗು ತೊರೆದು ಸ್ವಾಭಿಮಾನಿಯಾಗಿ ಬೇರೆ ಸಮುದಾಯಗಳ ಹಾಗೆ ಏನಾದರೂ ಮಾಡೋಣ ಎಂದು  ಪೇಟೆ ಬೀದಿಯ ಕಡೆಗೆ ನಡೆದೆ. ಅಲ್ಲಿ  ಚಿನ್ನದ ಅಂಗಡಿ, ಕಬ್ಬಿಣದ ಅಂಗಡಿ,  ಪಾತ್ರೆ ಪಗಡೆ ಅಂಗಡಿ, ಬಟ್ಟೆ ಅಂಗಡಿ, ಹೋಟೆಲ್ ಗಳು (ಸಸ್ಯಾಹಾರಿ ಮತ್ತು ಮಾಂಸಾಹಾರಿ), ರೆಸ್ಟೋರೆಂಟ್‌ಗಳು ಹೀಗೆ ನಾನಾ ತರಹದ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಇದನ್ನೆಲ್ಲಾ ಕಂಡು ಖುಷಿಯಾಯಿತು.

ಎಷ್ಟೊಂದು ಅವಕಾಶಗಳಿವೆ.  ನಾವ್ಯಾಕೆ  ಆ ದರಿದ್ರ ಮೀಸಲಾತಿಗೆ ಜೋತು ಬೀಳಬೇಕು ಎಂದುಕೊಳ್ಳುತ್ತಾ ಚಿನ್ನದ ಅಂಗಡಿ, ಕಬ್ಬಿಣದ ಅಂಗಡಿ, ಪಾತ್ರೆ ಪಗಡೆಗಳ ಅಂಗಡಿಗಳನ್ನು  ವಿಚಾರಿಸಿದೆ. ಅವರೆಲ್ಲ ಬಹುತೇಕ ಶೇಟುಗಳೆ ಆಗಿದ್ದರು! ಹಾಗೆಯೇ  ಹೋಟೆಲ್‌ಗಳತ್ತ ಮುಖ ಮಾಡುತ್ತಲೇ ಬೋರ್ಡುಗಳೇ ಹೇಳುತ್ತಿದ್ದವು ಅವು ಯಾವ ಜಾತಿಯವು ಎಂಬುದನ್ನು. ಮಾಂಸಾಹಾರಿ ಹೋಟೆಲ್ ಆರಂಭಿಸೋಣ ಹೋಟೆಲ್ ಏನಾದರೂ ಪ್ರಾರಂಭಿಸೋಣ ಎಂದು ತಿರುಗಿದರೆ ಹಿಂದೂ ಧರ್ಮದ ನಾನ್ ವೆಜ್ ಮೇಲ್ಜಾತಿಗಳು ಅದಾಗಲೇ ಆ ಹೋಟೆಲ್‌ಗಳ ಮಾಲೀಕರಾಗಿದ್ದರು! ಒಟ್ಟಾರೆ ಅಲ್ಲೆಲ್ಲ ನಮ್ಮವರ (ಪರಿಶಿಷ್ಟರ) ಸುಳಿವೇ ಇಲ್ಲ.
ಹಾಗೇ ಮುಂದುವರಿದು ಫುಟ್‌ಪಾತ್‌ನತ್ತ ಬಂದೆ. ಅಲ್ಲಲ್ಲಿ ಬಾಳೆ ಹಣ್ಣುಮಾರುವವರು, ಸೊಪ್ಪು-ಸೆದೆ ಮಾರುವವರು, ಹೂ ಮಾರುವವರು, ಮಾಂಸ ಮಾರಾಟ ಮಾಡುವವರು ಇತ್ಯಾದಿ ಸಣ್ಣ ಸಣ್ಣ ವ್ಯಾಪಾರಗಾರರಿದ್ದರು. ಸೊಪ್ಪು, ಬಾಳೆಹಣ್ಣು, ಹೂ ಮಾರಾಟ ಇತ್ಯಾದಿ ವ್ಯಾಪಾರಗಳನ್ನು ನಾಯಕ, ಉಪ್ಪಾರ, ಕುರುಬ ಇತ್ಯಾದಿ ಹಿಂದೂ ಧರ್ಮದ ಹಿಂದುಳಿದ ಜಾತಿಗಳು ಮಾಡಿದರೆ ಮಾಂಸ ಮಾರಾಟಗಾರರು ಬಹುತೇಕ ಮುಸ್ಲಿಮರೇ ಆಗಿದ್ದರು!

ಒಟ್ಟಾರೆ ಇಡೀ ಪೇಟೆಯನ್ನು  ಬಗಬಗನೇ ಸುತ್ತಿದರೂ ನಮ್ಮವರ ಮಾಲೀಕತ್ವದ ಒಂದು ಸಣ್ಣ ಗೂಡಂಗಡಿಯೂ ಸಿಗಲಿಲ್ಲ! ಕಡೆಗೆ ಸುಸ್ತಾಗಿ ಒಂದು ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡೆ. ಅಲ್ಲಿ ವಯಸ್ಕನೊಬ್ಬ ಮರದ ಪೆಟ್ಟಿಗೆ ಅಂಗಡಿಯೊಳಗೆ  ಕುಳಿತು ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದ. ಅವನ ಅಂಗಡಿಗೆ ತಗಲುಹಾಕಿದ್ದ ಅಂಬೇಡ್ಕರ್ ಫೋಟೋನೇ ಹೇಳುತ್ತಿತ್ತು ಅವನು ಯಾವ ಜಾತಿಯವನು ಎಂದು. ಮೀಸಲಾತಿ ಬೇಡ ಎಂದರೆ ನನಗೆ ಉಳಿಯುವುದು ಚಪ್ಪಲಿ ಹೊಲಿಯುವ ಕೆಲಸ! ಹಾಗೆಯೇ ಚರಂಡಿ ಶುಚಿಗೊಳಿಸುವ, ಮ್ಯೋನ್ ಹೋಲ್ ಕ್ಲೀನ್ ಮಾಡುವ, ಕಕ್ಕಸ್ಸು ಶುಚಿಗೊಳಿಸುವ ಅತ್ಯಂತ ಕೀಳು ದರ್ಜೆಯ ಕೆಲಸ!
ಮೀಸಲಾತಿಯನ್ನು ನೋಡಬೇಕಾದದ್ದೇ ಹೀಗೆ. ಯಾಕೆಂದರೆ ಜಾತಿಗೊಂದರಂತೆ ಉದ್ಯೋಗ  ಸೃಷ್ಟಿಸಿ ಪರಿಶಿಷ್ಟರನ್ನು ಎಲ್ಲಾ ಉದ್ಯೋಗಗಳಿಂದ  ದೂರ ಇಟ್ಟು ಬರೀ ಕೂಲಿ ಕೆಲಸ, ಹೊಲಸು ಕೆಲಸಗಳಿಗೆ ಮೀಸಲಿಟ್ಟರೆ ಏನು ಮಾಡುವುದು? ಬರೀ ಹೊಲಸು ಕೆಲಸ ಮಾಡುತ್ತಾ ಹೊಲಸಾಗಿಯೇ ಬದುಕಬೇಕೆ? ಸಮಾಜದಲ್ಲಿ ನಾವೂ ಕೂಡ ಘನತೆಯಿಂದ ತಲೆ ಎತ್ತಿ ನಿಲ್ಲುವುದು ಬೇಡವೆ? ನಿಲ್ಲಬೇಕಾದರೆ ಏನು ಮಾಡಬೇಕು?

ಬಟ್ಟೆ ಅಂಗಡಿ, ಚಿನ್ನದ ಅಂಗಡಿ (ಬಹುಶಃ ಅದನ್ನು ಕಲ್ಪಿಸಿಕೊಳ್ಳಲೂ ಕೂಡ ದಲಿತರು ಸಾಧ್ಯವಿಲ್ಲ!) ಇನ್ಯಾವುದೇ ಅಂಗಡಿ ತೆಗೆದರೂ ಮಾಲೀಕ ದಲಿತ ಎಂದಾಕ್ಷಣ ಯಾರೂ ಬರುವುದಿಲ್ಲ. ಹೋಟೆಲ್‌ಗಳನ್ನು ತೆಗೆಯೋಣವೆರಂದರೆ ಅಲ್ಲಿ ಕ್ಲೀನಿಂಗ್ ಡಿವಿಷನ್ ಬಿಟ್ಟರೆ ಬೇರೆಲ್ಲೂ ನಮ್ಮನ್ನೂ ಸೇರಿಸುವುದಿಲ್ಲ. ಶಾಲೆಗಳಲ್ಲಿ ದಲಿತರು ಬಿಸಿಯೂಟ ತಯಾರಿಸಿದರೆ ಬೇರೆಯವರು  ಮೂಸಿಯೂ ನೋಡುವುದಿಲ್ಲ.

ಹೀಗಿರುವಾಗ ಹೋಟೆಲ್ ತೆರೆದರೆ ಯಾರು ಬರುತ್ತಾರೆ? ಒಟ್ಟಿನಲ್ಲಿ ಸರ್ವರೀತಿಯ ವ್ಯಾಪಾರ ವ್ಯವಹಾರ ಪರಿಶಿಷ್ಟರಿಗೆ ಬಂದ್. ಇನ್ನು ಹೊಲಗಳಲ್ಲಿ ದುಡಿಯೋಣವೆಂದರೆ ಸ್ವಂತ ಜಮೀನಿಲ್ಲ. ಉಳಿಯುವುದು ಕೂಲಿಯೊಂದೇ. (ಸಾಮಾಜಿಕ ಬಹಿಷ್ಕಾರವಾದರೆ ಅದೂ ಇಲ್ಲ!)

ಒಟ್ಟಾರೆ  ಆರ್ಥಿಕ ವ್ಯವಹಾರದ ಪ್ರತಿಯೊಂದು ಕ್ಷೇತ್ರ ದಲಿತರಿಗೆ ಬಂದ್...ಬಂದ್...ಬಂದ್...! ಹಾಗಿದ್ದರೆ ನಾವು ಬದುಕುವುದು ಹೇಗೆ? ಕಕ್ಕಸ್ಸು ಗುಂಡಿಯಲ್ಲಿ? ಮ್ಯೋನ್ ಹೋಲ್ ಗಲೀಜಿನಲ್ಲಿ? ಶೌಚಾಲಯದ ಗಬ್ಬಿನಲ್ಲಿ? ಸಾಕಾಗಿದೆ. ಅದಕ್ಕೆ ಮೀಸಲಾತಿ ಇರಬೇಕಾಗಿದೆ. ಕಡೇ ಪಕ್ಷ ಸರಕಾರಿ ಸಂಬಳವಾದರೂ ಪಡೆದು ನಿಮ್ಮ ಅಂಗಡಿಗಳಿಗೆ ಸ್ವಾಭಿಮಾನಿ ಗ್ರಾಹಕರಾಗಿ ಬರಲಿಕ್ಕೆ. ಗೌರವಯುತವಾಗಿ ಸಮಾಜದಲ್ಲಿ ತಲೆ ಎತ್ತಿ ಬದುಕಲಿಕ್ಕೆ

ವಚನ ಸಾಹಿತ್ಯ ಜಾತಿ ಚರ್ಚೆ : ವಸಂತರಾಜು ಪ್ರತಿಕ್ರಿಯೆ


ವಸಂತರಾಜುವಚನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡಿರುವ ಡಂಕಿನ್ ಜಳಕಿರವರು ದಾರಿ ತಪ್ಪಿರುವುದು ಅವರು ಆಯ್ಕೆ ಮಾಡಿಕೊಂಡಿರುವ ಮೂಲದಿಂದಾಗಿ (source)(ವಚನ ಸಾಹಿತ್ಯ). ಅವರು ಉಪಯೋಗಿಸಿರುವ ಸಂಶೋಧನ ವಿಧಾನ ಸೃಜನಾತ್ಮಕ ಬರಹಗಳಾದ ವಚನ ಸಾಹಿತ್ಯಕ್ಕೆ ಅನ್ವಯಿಸುವುದು ಅಷ್ಟು ಸಮಂಜಸವಲ್ಲ. ಯಾವುದೇ ಸಾಹಿತ್ಯ ಬರಹ ತನ್ನ ಅಂತರ್ಯದಲ್ಲಿ ಅನೇಕ ಧ್ವನಿಯನ್ನು ಹೊಂದಿರುತ್ತದೆ. ಅದನ್ನು ಸಂಖ್ಯಾಶಾಸ್ರದ ಪರಧಿಯೊಳಗಿಟ್ಟು ಅಲ್ಲಿ ಉಪಯೋಗಿಸಿರುವ ಪದಗಳ ಅಧಾರದ ಮೇಲೆ ವಚನಗಳು, ಕವನಗಳು, ಕಥೆಗಳು, ಕಾದಂಬರಿಗಳು ಇಂತದನ್ನು ಹೇಳುತ್ತವೆ ಎಂದು ಹೊರಡುವುದು ಮತ್ತು ಅದು ಸಂಶೋಧನೆಗಳೆಂದು ಸಮರ್ಥಿಸಿಸುವುದು ಅಷ್ಟು ಸರಿಯಾದ ಕ್ರಮವಲ್ಲ. 

ಡಂಕಿನ್ ಜಳಕಿಯವರು ಉಪಯೋಗಿಸಿರುವ ಸಂಶೋಧನ ವಿಧಾನವನ್ನು ಬಳಸಿ ಅನೇಕ ಸಂಶೋಧನೆಗಳನ್ನು ವಿದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಮಾಡಲಾಗಿದೆ. ಅಲ್ಲಿ ಅವರು ಆಯ್ಕೆ ಮಾಡಿಕೊಂಡಿರುವ ಮೂಲಗಳು ಬಹುತೇಕ ಸೃಜನೇತರ ಸಾಹಿತ್ಯ ಮೂಲಗಳು. ಉದಾಹರಣೆಗೆ content analysis ಮತ್ತು discourse analysis ನಂತಹ ವಿಧಾನಗಳನ್ನು ಬಳಸಿ ಮಾಡಿರುವ ಸಂಶೋಧನೆಗಳನ್ನು ನೋಡಬಹುದು. 

ಇಂತಹ ವಿಧಾನಗಳನ್ನು ಡಂಕಿನ್ ಜಳಕಿಯವರು ವಚನ ಸಾಹಿತ್ಯಕ್ಕೆ ಬಳಸಿರುವುದು ಅಷ್ಟು ಸರಿಯಾದ ಸಂಶೋಧನಾ ಮಾರ್ಗವಲ್ಲ. ಈ ಬಗ್ಗೆಯ ಸಂಶೋಧನಾ ವಿಧಾನಗಳನ್ನು ಇತ್ತೀಚಿಗೆ ಭಾರತದಲ್ಲಿ ಕೂಡ ಹೆಚ್ಚಾಗಿ ಬಳಸಲಾಗುತ್ತಿದೆ. ಬಹತೇಕ ನಮ್ಮ ವಿಶ್ಸವಿದ್ಯಾನಿಲಯಗಳಲ್ಲಿ ನೆಡೆಯುವ ಸಮಾಜಶಾಸ್ತ್ರೀಯ ಸಂಶೋಧನೆಗಳು ಪ್ರಶ್ನಾವಳಿಯನ್ನು ಅಧಾರಿಸಿದ ಸಂಶೋಧನೆಗಳಾಗಿದ್ದು, ಇಂತಹ ಸಂಶೋಧನಾ ವಿಧಾನಗಳನ್ನು ಬಳಸುವುದು ಒಳ್ಳೇಯ ಬೆಳವಣಿಗೆಯಾದರು ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಮೂಲಗಳು ಅಷ್ಟು ಸಮಂಜಸವಾಗಿಲ್ಲ. ಡಂಕಿನ್ ಜಳಕಿಯಾವರ ಸಂಶೋಧನೆ ಅದಕ್ಕೆ ಒಂದು ಸ್ಪಷ್ಟ ಉದಾಹರಣೆ.

ವಸಂತರಾಜು ಎನ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಪಿರಿಯಾಪಟ್ಟಣ

ಕೊಲ್ಲದಿರಿ ಬಂಗಾರ ತತ್ತಿಯ ಬಾತು ಕೋಳಿಯನು!
ಡಿ. ಉಮಾಪತಿ

ಸೌಜನ್ಯ : ವಿಜಯ ಕರ್ನಾಟಕ


ಗುಜರಾತಿನಿಂದ ಆರಂಭವಾಗಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ತನಕ ಹಬ್ಬಿರುವ ಸುಮಾರು 60 ಸಾವಿರ ಚದರ ಕಿ.ಮೀ.ಗಳ ವಿಸ್ತೀರ್ಣದ ಪಶ್ಚಿಮ ಘಟ್ಟಗಳಲ್ಲಿ ಸೂಕ್ಷ್ಮ ಪರಿಸರ ಹೊಂದಿರುವ ಪ್ರದೇಶದ ಪ್ರಮಾಣ ಶೇ.37ರಷ್ಟು ಮಾತ್ರ ಎಂದು ಕೆ. ಕಸ್ತೂರಿರಂಗನ್ ನೇತತ್ವದ ಉನ್ನತ ಸಮಿತಿ ಸಾರಿದೆ.

ಈ ವರದಿಯ ಪುಟ ಪುಟಗಳಲ್ಲಿ ಅಡಗಿರುವುದು ವಿಶ್ವದ ಅಪರೂಪದ ಜೀವ ಸಂಪತ್ತಿನ ಅಳಿವು ಉಳಿವಿನ ಆ ಮೂಲಕವಾಗಿ ಅಂತಿಮವಾಗಿ ದಕ್ಷಿಣ ಭಾರತದ ಈ ಭೂಭಾಗ ಮತ್ತು ಜನಜೀವನದ ಅಳಿವು ಉಳಿವಿನ ಪ್ರಶ್ನೆ.

ಇಡೀ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಸ್ವರೂಪಿ ಎಂದು ಸಾರಿದ್ದ ಪ್ರೊ.ಮಾಧವ ಗಾಡ್ಗೀಳ ಅಧ್ಯಕ್ಷತೆಯ ತಜ್ಞ ಸಮಿತಿಯ ವರದಿಯು ಅನುಷ್ಠಾನ ಯೋಗ್ಯ ಅಲ್ಲ ಎಂಬ ಟೀಕೆಯ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕಸ್ತೂರಿರಂಗನ್ ಸಮಿತಿ.

ಕೈಗಾರಿಕೆಗಳಿಗೆ ಮಾರಕ, ಅರಣ್ಯವಾಸಿ ಬುಡಕಟ್ಟು ಜನರ ಹಕ್ಕುಗಳ ದಮನ ಹಾಗೂ ಘಟ್ಟಗಳ ಸಂರಕ್ಷಣೆಗೆ ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಬದಿಗೊತ್ತುವ ರಾಕ್ಷಸ ಶಕ್ತಿಯ ಪ್ರಾಧಿಕಾರದ ರಚನೆ ಶಿಫಾರಸು ಮಾಡಿದೆ. ಘಟ್ಟಗಳ ಸಂರಕ್ಷಣಾ ಕಾರ್ಯದಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಘರ್ಷಣೆಗೆ ಹಚ್ಚಿದೆ ಎಂದು ಗಾಡ್ಗೀಳ್ ಸಮಿತಿಯ ವರದಿಯ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯಿತು. ಪರಿಸರ ಮತ್ತು ಅಭಿವೃದ್ಧಿಯ ನಡುವೆ ಹುಸಿ ವೈರುಧ್ಯಗಳನ್ನು ವಿಕೃತ ರೀತಿಯಲ್ಲಿ ಕಟ್ಟಿದ ಹಿತಾಸಕ್ತಿಗಳು ವರದಿಯ ಆಯ್ದ ಭಾಗಗಳನ್ನಷ್ಟೇ ಸ್ಥಳೀಯ ಭಾಷೆಗಳಿಗೆ ತರ್ಜುಮೆ ಮಾಡಿ ಹಂಚಿದವು.

ಅರಣ್ಯವಾಸಿ ಬುಡಕಟ್ಟು ಜನ ಮತ್ತು ರೈತರನ್ನು ಗಾಡ್ಗೀಳ್ ವರದಿಯ ವಿರುದ್ಧ ಎತ್ತಿ ಕಟ್ಟಿದವರು ಯಾರು, ತಿರುಗಿ ನಿಂತ ಕೈಗಾರಿಕೆ, ಗಣಿಗಾರಿಕೆ ಲಾಬಿ, ರಾಜಕಾರಣಿಗಳ ಬೆಂಬಲದಿಂದ ಅರಣ್ಯ ಭೂಮಿಯನ್ನು ಕಬಳಿಸಿರುವ ಭೂ ಮಾಫಿಯಾ ಇತರೆ ಇತ್ಯಾದಿ ಆಸಕ್ತ

ಹಿತಗಳು ಯಾವುವು, ಅವುಗಳಿಗೆ ಕೇಂದ್ರ ಸರ್ಕಾರ ಮಣಿದದ್ದು ಯಾಕೆ ಎಂಬುದು ಬೇರೆಯೇ ಪ್ರಶ್ನೆ.

ಅಸಲು ಸಂಗತಿಯೇನೆಂದರೆ ಗಾಡ್ಗೀಳ್ ಸಮಿತಿಯ ವರದಿ ರೈತರು ಮತ್ತು ಬುಡಕಟ್ಟು ಜನರ ವಿರುದ್ಧ ಚಕಾರ ಎತ್ತಿಲ್ಲ. ಅವರನ್ನು ಅರಣ್ಯ ಪ್ರದೇಶಗಳಿಂದ ಒಕ್ಕಲೆಬ್ಬಿಸುವ ಪ್ರಸ್ತಾಪ ವರದಿಯಲ್ಲಿ ಇಲ್ಲ. ಬದಲಾಗಿ ಪಾರಂಪರಿಕ ಮತ್ತು ಸಾವಯವ ಬೇಸಾಯ ಪದ್ಧತಿಯನ್ನು ಅವಲಂಬಿಸುವ ರೈತರಿಗೆ ಪ್ರೋತ್ಸಾಹ ಕ್ರಮದ ಶಿಫಾರಸು ಮಾಡಿದೆ. ಶಿಫಾರಸುಗಳನ್ನು ಜಾರಿಗೊಳಿಸುವ ಹಕ್ಕನ್ನು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಿದೆ.

ಹಿಮಾಲಯ ವಲಯಕ್ಕಿಂತ ಪುರಾತನ ಎಂದು ಪರಿಗಣಿಸಲಾಗಿರುವ ಪಶ್ಚಿಮ ಘಟ್ಟದ ಪರಿಸರವು ಜಗತ್ತಿನ ಕೆಲವೇ ಜೀವ ವೈವಿಧ್ಯ ಸಂಪತ್ತಿನ ಅಪರೂಪದ ಖಜಾನೆಗಳ ಪೈಕಿ ಒಂದು ಎಂದು ಪ್ರಸಿದ್ಧ. ವಿಶ್ವಸಂಸ್ಥೆಯ ಪರಿಸರ ವಿಭಾಗದ ಪ್ರಕಾರ ಪ್ರಮುಖವಾಗಿ ಮತ್ತು

ಪ್ರತ್ಯೇಕವಾಗಿ ಭದ್ರವಾಗಿ ಮುಚ್ಚಿಟ್ಟು ಕಾಪಾಡಿಕೊಳ್ಳಬೇಕಿರುವ ಪ್ರದೇಶವಿದು. ಹದಿನೈದು ಕೋಟಿ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತೆನ್ನಲಾದ ಎಣೆಯಿಲ್ಲದ ಬೆಲೆ ಕಟ್ಟಲಾಗದ ಈ ಪ್ರಾಕೃತಿಕ ಸಿರಿ ಸಂಪತ್ತಿನ ಆಳ ಅಗಲಗಳ ಕೀರ್ತನೆ- ಕೊಂಡಾಟ ವಿವಾದಾತೀತ.

ದಕ್ಷಿಣ ಭಾರತದ ಪರಿಸರ ಮತ್ತು ಅರ್ಥಿಕ ಸ್ಥಿತಿಗತಿಯ ಬೆನ್ನೆಲುಬು. ಕೃಷ್ಣೆ, ಕಾವೇರೀ, ಗೋದಾವರೀ ಅಲ್ಲದೆ ಚಕ್ರಾ, ಕಾಳಿ, ಶರಾವತಿ, ಬೇಡ್ತಿ, ಮಹದಾಯಿ, ಅಘನಾಶಿನಿ, ಕಪಿಲೆ ಮುಂತಾದ ಹತ್ತಾರು ಉಪನದಿಗಳ ಜಲರಾಶಿಯ ಜೀವಸ್ರೋತ. ಹೋಲಿಕೆಯಲ್ಲಿ ಅಮೆಜಾನ್ ಕಾಡುಗಳಿಗೆ ನಿಲುಕುವ ಈ ಜೀವಲೋಕ, ಅಳಿವಿನ ನಿರಂತರ ಬೆದರಿಕೆಯಲ್ಲಿ ದಿನ ದೂಡಿರುವ

ವಿದ್ಯಮಾನ ನಮ್ಮ ನಡುವಿನ ಅತಿ ಕಠೋರ ವಾಸ್ತವ.

ಪಶ್ಚಿಮ ಘಟ್ಟಗಳ ಹಾಲಿ ಪರಿಸರ ಪರಿಸ್ಥಿತಿಯನ್ನು ಅಂದಾಜು ಮಾಡಿ, ಸೂಕ್ಷ್ಮ ಪರಿಸರದ ವಲಯಗಳನ್ನು ಗುರುತಿಸಿ ಅವುಗಳ ಜತನಕ್ಕೆ 1986ರ ಪರಿಸರ ಸಂರಕ್ಷಣಾ ಕಾಯಿದೆಯ ಪ್ರಕಾರ ಅಧಿಸೂಚನೆ ಹೊರಡಿಸುವಂತೆ ಶಿಫಾರಸು ಮಾಡುವುದು ಹಾಗೂ ಸಂಬಂಧಿಸಿದ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಜನರನ್ನು ಒಳಗೊಳ್ಳುವ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಘಟ್ಟಗಳ ರಕ್ಷಣೆ ಮತ್ತು ಪುನರುಜ್ಜೀವನ ಕ್ರಮಗಳನ್ನು ಸೂಚಿಸುವುದು ಗಾಡ್ಗೀಳ್ ಸಮಿತಿಗೆ ಕೇಂದ್ರ ಸರ್ಕಾರ ಒಪ್ಪಿಸಿದ್ದ ಕೆಲಸ.

ವರದಿಯನ್ನು ಹನ್ನೊಂದು ತಿಂಗಳ ಕಾಲ ಸಾರ್ವಜನಿಕರಿಂದ ಮರೆಮಾಚಿ ಇಟ್ಟುಕೊಂಡಿತ್ತು ಕೇಂದ್ರ ಸರ್ಕಾರ. ಇನ್ನೂ ಪರಿಗಣನೆಯ ಹಂತದಲ್ಲಿರುವ ವರದಿಯನ್ನು ಬಹಿರಂಗಪಡಿಸಿದರೆ ದೇಶದ ವೈಜ್ಞಾನಿಕ ಮತ್ತು ಆರ್ಥಿಕ ಹಿತಗಳಿಗೆ ಧಕ್ಕೆ ಆಗುತ್ತದೆ ಎಂಬುದು ಮುಂದೆ ಮಾಡಲಾಗಿದ್ದ ಕಾರಣ!

ಕಡೆಗೆ ನ್ಯಾಯಾಲಯದ ಆದೇಶಕ್ಕೆ ಅನಿವಾರ್ಯವಾಗಿ ತಲೆಬಾಗಿ ಬಹಿರಂಗಪಡಿಸಿದ್ದು ಗಾಡ್ಗೀಳ್ ವರದಿ. ಆದರೆ ಈ ವರದಿಯ ಅಧ್ಯಯನಕ್ಕೆಂದು ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿಯನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. ಸರ್ಕಾರದ ಈ ನಡೆಯನ್ನು ಕುರಿತು ಎತ್ತಲಾಗಿದ್ದ ಹತ್ತು ಹಲವು ಪ್ರಶ್ನೆಗಳಿಗೆ ಕಸ್ತೂರಿರಂಗನ್ ಸಮಿತಿಯ ವರದಿ 'ಉತ್ತರ' ನೀಡಿದಂತೆ ತೋರುತ್ತಿದೆ.

ಪರಿಸರ ಪೋಷಕ ಅಭಿವೃದ್ಧಿ ಎಂಬುದು ಘಟ್ಟ ಪ್ರದೇಶದ ಜೀವನೋಪಾಯ ಮತ್ತು ಆರ್ಥಿಕ ಆಯ್ಕೆಗಳನ್ನು ಮುಚ್ಚಿ ಹಾಕಬಾರದು. ಘಟ್ಟಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೇಗೆ ಎಂಬ ಪ್ರಶ್ನೆಯ ಉತ್ತರ ಹೆಚ್ಚು ಹಸಿರುದಾಯಕ ಮತ್ತು ಪರಿಸರ ಪೋಷಕ ಆಚರಣೆಗಳತ್ತ ಸ್ಥಳೀಯ ಸಮುದಾಯಗಳನ್ನು ನಡೆಸುವುದರಲ್ಲಿ ಅಡಗಿದೆಯೇ ವಿನಾ ಆರ್ಥಿಕ ಆಯ್ಕೆಗಳನ್ನು ಮುಚ್ಚಿ ಹಾಕುವುದರಲ್ಲಿ ಇಲ್ಲ ಎಂಬ ವಾಕ್ಯದಲ್ಲಿ ಕಸ್ತೂರಿರಂಗನ್ ಸಮಿತಿಯ ವರದಿಯ ಧ್ವನಿ- ಧೋರಣೆಯನ್ನು ಗುರುತಿಸಬಹುದು.

ಭೂಮಿಯ ಇನ್ಯಾವುದೇ ಭಾಗದಲ್ಲಿ ಕಂಡು ಬಾರದೆ ಪಶ್ಚಿಮ ಘಟ್ಟಗಳಿಗೆ ಮಾತ್ರವೇ ಸೀಮಿತ ಆಗಿರುವ ವಿರಳಾತಿವಿರಳ ಸ್ಥಾನಿಕ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳ ಇರವನ್ನು ಎಲ್ಲ ಕಾಲಕ್ಕೂ ಅಳಿಸಿ ಹಾಕಿಬಿಡುವ ಜಲ ವಿದ್ಯುತ್ ಯೋಜನೆಗಳಿಗೆ, ಹೊಸ ರೇಲ್ವೆ ಮಾರ್ಗಗಳು

ಹೆದ್ದಾರಿಗಳು ಮುಂತಾದ ನಿರ್ಮಾಣಗಳಿಗೆ ಆಸ್ಪದ ನೀಡಕೂಡದು ಎಂದು ಗಾಡ್ಗೀಳ್ ಸಮಿತಿ ವಿಧಿಸಿತ್ತು. ಶೇ.75ರಷ್ಟು ಘಟ್ಟ ಪ್ರದೇಶವನ್ನು ಗಣಿಗಾರಿಕೆಯ ಲಾಭಬಡುಕತನದ ವಿನಾಶದಿಂದ ದೂರ ಇರಿಸಬೇಕೆಂದು ಸಾರಿತ್ತು. ಆದರೆ ಕಸ್ತೂರಿರಂಗನ್ ಸಮಿತಿ ಗಣಿ ನಿಷೇಧವನ್ನು ಶೇ.50ಕ್ಕೆ ತಗ್ಗಿಸಿ ಸಡಿಲಗೊಳಿಸಿದೆ. ಕರ್ನಾಟಕದ ಗುಂಡ್ಯ ಮತ್ತು ಕೇರಳದ ಅತ್ತಿರಪಳ್ಳಿ ಜಲವಿದ್ಯುತ್ ಯೋಜನೆಗಳಿಗೆ ಅಸ್ತು ಎಂದಿದೆ.

ಗಾಡ್ಗೀಳ್ ಸಮಿತಿಯ ವರದಿಯನ್ನು ಮತ್ತು ವರದಿಯಲ್ಲಿನ ಶಿಫಾರಸುಗಳ ಕುರಿತ ಜನತಾಂತ್ರಿಕ ಸಂವಾದವನ್ನು ತುಳಿದಿಡುವ ಪ್ರಯತ್ನ ಮಾಡಿದ ಆರೋಪ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ವರದಿ ಕುರಿತು ವಿಕತ ಅಪಪ್ರಚಾರಗಳ ಪರಿಣಾಮವಾಗಿ ಹಿತಾಸಕ್ತ ಗುಂಪುಗಳು ಎಬ್ಬಿಸಿದ ಪ್ರತಿಭಟನೆಯ ಧೂಳಿಗೆ ಕೇಂದ್ರ ಸರ್ಕಾರದ ಧೋರಣೆಯೇ ಕಾರಣ ಎಂಬುದು

ಖುದ್ದು ಗಾಡ್ಗೀಳ್ ಮಾಡಿರುವ ಆಪಾದನೆ.

ಹತ್ತು ಹಲವು ಕಠೋರ ಸತ್ಯಗಳೆಡೆಗೆ ಬೊಟ್ಟು ಮಾಡಿ ತೋರಿಸಿರುವುದರಿಂದಲೇ ವರದಿಯ ಮೇಲೆ ದಾಳಿ ನಡೆದಿದೆ. ರೈತರು, ಮೀನುಗಾರರು, ಸ್ವಯಂಸೇವಾ ಸಂಸ್ಥೆಗಳು, ತಜ್ಞರು ಹಾಗೂ ಪಂಚಾಯಿತಿ ಸದಸ್ಯರಿಂದ ಮೊದಲುಗೊಂಡು ಸಂಸದರು ಮತ್ತು ರಾಜ್ಯ- ಕೇಂದ್ರ ಸಚಿವರ ಜೊತೆ ವ್ಯಾಪಕ ಸಮಾಲೋಚನೆ ನಡೆಸಿ ಪಾರದರ್ಶಕ ವಿಧಾನದಲ್ಲಿ ತಯಾರಿಸಿದ ವರದಿಯಿದು. ಸೂಕ್ಷ್ಮ

ಪರಿಸರ ವಲಯಗಳನ್ನು ಅಂತಿಮವಾಗಿ ಗುರುತಿಸುವ ಕಾರ್ಯ ಸ್ಥಳೀಯ ಸಮುದಾಯಗಳು ಮತ್ತು ಪಂಚಾಯತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಬೇಕು. ಆದರೆ ಸಾರ್ವಜನಿಕ ಸಂವಾದಕ್ಕೆ ಅವಕಾಶವೇ ಸಿಗಲಿಲ್ಲ ಎಂಬುದು ಗಾಡ್ಗೀಳ್ ದೂರು.

ಅತ್ಯಾಧುನಿಕ ಉಪಗ್ರಹ ಬಿಂಬ ತಂತ್ರಜ್ಞಾನವನ್ನು ಅನುಸರಿಸಿ ಪಶ್ಚಿಮ ಘಟ್ಟ ಪ್ರದೇಶವನ್ನು ತಾನು ಗುರುತಿಸಿರುವುದಾಗಿ ಕಸ್ತೂರಿರಂಗನ್ ಸಮಿತಿ ಹೇಳಿಕೊಂಡಿದೆ. ಜನವಸತಿಗಳು, ಕೃಷಿ ಪ್ರದೇಶಗಳು ಹಾಗೂ ಪ್ಲಾಂಟೇಷನ್‌ಗಳು ಘಟ್ಟಗಳ ಶೇ.58.44ರಷ್ಟು

ಪ್ರದೇಶವನ್ನು ಆವರಿಸಿವೆ. ಉಳಿದ 41.66ರಷ್ಟು ಘಟ್ಟ ಪ್ರದೇಶದ ಶೇ.90ರಷ್ಟು ಭೂಭಾಗ ಸೂಕ್ಷ್ಮ ಸ್ವರೂಪದ ಪರಿಸರ ಹೊಂದಿದೆ.

ಈ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಗಣಿಗಾರಿಕೆ ಕೂಡದು. ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದನಾ ಸ್ಥಾವರಗಳ ಸ್ಥಾಪನೆ ಸಲ್ಲದು, ಆಹಾರ ಮತ್ತು ಹಣ್ಣು ಸಂಸ್ಕರಣೆ ಘಟಕಗಳ ಸ್ಥಾಪನೆ ನಿಷೇಧಿತವಲ್ಲ. ರಾಸಾಯನಿಕ ಗೊಬ್ಬರಗಳ ಕಾರ್ಖಾನೆಗಳು, ತೈಲಾಗಾರಗಳು,

ಚರ್ಮೋದ್ಯಮಗಳು, ತಾಮ್ರದ ಕುಲುಮೆಗಳು ಮುಂತಾದವುಗಳಿಗೆ ಆಸ್ಪದ ಇಲ್ಲ. ನಿರ್ಮಿಸಲಾಗುವ ಕಟ್ಟಡಗಳ ವಿಸ್ತೀರ್ಣ 20 ಸಾವಿರ ಚದರ ಗಜಗಳನ್ನು ಮೀರುವಂತಿಲ್ಲ ಎನ್ನುತ್ತದೆ ಕಸ್ತೂರಿರಂಗನ್ ಸಮಿತಿ.

ಪಶ್ಚಿಮ ಘಟ್ಟಗಳಲ್ಲಿ ಮಾನವ ನಿರ್ಮಿತ ಬಂಡವಾಳ ಬೆಳೆಯತೊಡಗಿದಂತೆ ಪ್ರಕೃತಿ ನಿರ್ಮಿತ ಇಡುಗಂಟು ಶರವೇಗದಲ್ಲಿ ಕರಗತೊಡಗಿತು ಎಂಬುದು ಗಾಡ್ಗೀಳ್ ವರದಿಯಲ್ಲಿನ ಒಂದು ಮಾತು. ಅಭಿವೃದ್ಧಿ ಹಾದಿಯ ದೊಡ್ಡ ಅಡ್ಡಗಲ್ಲು ಎಂದು ಗಾಡ್ಗೀಳ್ ವರದಿಗೆ ಕಲ್ಲು ಹೊಡೆದ ರಾಜ್ಯ ಸರ್ಕಾರಗಳು ಹಾಲಿ ಅಭಿವೃದ್ಧಿಯ ಪರಿಕಲ್ಪನೆ, ಅದರ ಅಂತರ್ಗತ ದೌರ್ಬಲ್ಯಕ್ಕೆ ಕುರುಡಾಗಿರುವುದು ನಿಚ್ಚಳ ಗೋಚರ.

ದಿನೇಶ್ ಕುಕ್ಕಜಡ್ಕ ಕಾರ್ಟೂನ್

Photo

ಸಂಚಾರಿ ಭಾವಗಳ ಹೆಜ್ಜೆ ಗುರುತು
ಓ.ಎಲ್. ನಾಗಭೂಷಣ ಸ್ವಾಮಿ
ಸೌಜನ್ಯ : ಚುಕ್ಕು ಬುಕ್ಕು( ಮೇ ೧೯ಕ್ಕೆ ಧಾರವಾಡದಲ್ಲಿ ಬಿಡುಗಡೆಯಾಗಲಿರುವ ಕವನ ಸಂಕಲನ ‘ತೇವ ಕಾಯುವ ಬೀಜ'ದ ಮುನ್ನುಡಿ)

ಈ ಸಂಕಲನದ ಒಂದೊಂದು ಕವಿತೆಯೂ ಒಂದೊಂದು ಹೆಜ್ಜೆ ಗುರುತು. ಸಾರ್ವಜನಿಕವಾದ ಭಾಷೆಯನ್ನು ಬಳಸಿಕೊಂಡು ಅತ್ಯಂತ ಆಪ್ತವಾದ ಭಾವ ಸಂಕೀರ್ಣವನ್ನು ನಿವೇದಿಸಿಕೊಳ್ಳುವ, ಸಂಚಾರಿ ಭಾವಗಳ ಕಥನವನ್ನು ನಿರೂಪಿಸುವ ಬಲು ಕಷ್ಟದ ದಾರಿಯಲ್ಲಿ ಬಸೂ ಅವರು ಸಾಗಿರುವ ಹೆಜ್ಜೆ ಗುರುತುಗಳು ಈ ಕವಿತೆಗಳು.

ತೀರ ಹಳೆಯ ಮಾತೊಂದು ನೆನಪಾಗುತ್ತಿದೆ: ಕೆಲವು ಕವಿತೆಗಳು ಇಬ್ಬರ, ಹಲವರ ಸಂವಾದವನ್ನು ಕೇಳಿದಂತಿರುತ್ತದೆ, ಇನ್ನು ಕೆಲವು ಕವಿತೆಗಳು ತಾವು ಕಂಡದ್ದನ್ನು ನಮಗೆ ವಿವರಿಸಿದಂತಿರುತ್ತವೆ, ಮತ್ತೆ ಕೆಲವು ಕವಿತೆಗಳು ಕವಿಗಳು ತಮಗೇ ಹೇಳಿಕೊಂಡ ಸ್ವಗತದ ಮಾತುಗಳನ್ನು ಅಕಸ್ಮಾತ್ ಕೇಳಿದಂತೆ ಇರುತ್ತವೆ ಅನ್ನುತ್ತಾರೆ. ಬಸೂ ಅವರ ಕವಿತೆಗಳು ಮೂರನೆಯ ಬಗೆಯವು.

'ತೇವ ಕಾಯುವ ಬೀಜ'ದ ಕವಿತೆಗಳನ್ನು ಓದಿದ ಮೇಲೆ ಉಳಿದದ್ದು ಮೌನ. ಇಂಥ ರಚನೆಗಳ ಬಗ್ಗೆ ಏನು ಹೇಳಿದರು ಕಡಮೆಯಾಗುತ್ತದೆ, ಇಲ್ಲವೇ ಹೆಚ್ಚಾಗುತ್ತದೆ, ಅಥವಾ ಅಪಾರ್ಥಗಳ ಮಂಡನೆಯಾಗುತ್ತದೆ. ಯಾವುದನ್ನು ಲೋಕದೊಡನೆ ಮಾತಿನಲ್ಲಿ ಹೇಳಿಕೊಳ್ಳಲು ಬಾರದೋ ಅಂಥವನ್ನು ಮಾತಿನೊಳಗೆ ತರುವ ಯತ್ನ ಇಲ್ಲಿದೆ. 'ನನ್ನನ್ನು ನಾನಿರುವಂತೆಯೇ ಅರಿಯಬೇಕು' ಅನ್ನುವ ಮನುಷ್ಯ ಹಂಬಲ ಎಂದಿಗೂ ಈಡೇರದೋ ಏನೋ. ಜೀವಂತವಾದದ್ದು, ಕ್ಷಣಕ್ಷಣವೂ ಬೇರೆ ಬೇರೆ ಆಕಾರಪಡೆಯುವಂಥದ್ದು ಯಾವುದೂ ಅದು ಇರುವಂತೆಯೇ ಅರ್ಥವಾಗುವುದಿಲ್ಲ.
ಅರ್ಥವಾಗಬೇಕೆಂದರೆ ಅದನ್ನು ಜಡವಾಗಿಸಿ, ವಸ್ತುವಾಗಿಸಿ ಅರ್ಥಕ್ಕೆ ಒಳಗುಮಾಡಿಕೊಳ್ಳಬೇಕು. ಹಾಗೆ ಅರ್ಥಮಾಡಿಕೊಳ್ಳುವುದಕ್ಕೆ ಓದುಗರು ಕವಿಯ ವ್ಯಕ್ತಿತ್ವದೊಳಕ್ಕೆ ಪರಕಾಯ ಪ್ರವೇಶ, ಪರಮನ ಪ್ರವೇಶ ಮಾಡಬೇಕೆಂದು ಈ ಕವಿತೆಗಳು ಬಯಸುತ್ತವೆ. ಇವು ಕೇಳಲು ಚಂದದ ಮಾತುಗಳಾದರೂ ಅಂಥ ಆದರ್ಶ ಓದುಗರು ಸಿಗುವುದು ದುರ್ಲಭ, ಅಥವ ಅಸಾಧ್ಯ. ಹೆಚ್ಚೆಂದರೆ ಓದುಗರು ತಮಗೆ ತಿಳಿದಿರುವಷ್ಟು ಮಟ್ಟಿಗೆ ಬಸೂ ಅವರ ಸಾರ್ವಜನಿಕ ವ್ಯಕ್ತಿತ್ವದೊಡನೆ ಈ ಕವಿತೆಗಳಲ್ಲಿ ರೂಪುಗೊಳ್ಳುವ ವ್ಯಕ್ತಿತ್ವವನ್ನು ತಾಳೆ ಹಾಕಿ ನೋಡುತ್ತ ಕೂರಬಹುದು ಅಥವಾ ಈ ಕವಿತೆಗಳಲ್ಲಿ ಬರುವ 'ನಾನು' ಅನ್ನುವ ಪಾತ್ರವನ್ನು ತಾವೇ ನಿರ್ವಹಿಸಲು ಯತ್ನಿಸಬಹುದು.

ಮೊದಲನೆಯ ಯತ್ನ ನಿಷ್ಫಲ, ನಿರುಪಯುಕ್ತ. ಯಾಕೆಂದರೆ ಯಾರದೇ ಸಾರ್ವಜನಿಕ ವ್ಯಕ್ತಿತ್ವ ಅವರ ಇಡಿತನದ ಕಿಂಚಿತ್ ಭಾಗ ಮಾತ್ರ. ಎರಡನೆಯ ಸಾಧ್ಯತೆ ಓದುಗರ ಮನಸಿನಲ್ಲಿ ಉಳಿದಿರುವ ಇತರ ಕವಿತೆಗಳ ಓದಿನೊಂದಿಗೆ ಬೆರೆಯುತ್ತ, ಬೇರೆಯಾಗುತ್ತ ಈ ಕವಿತೆಗಳ ಅನುಭವ ನನ್ನದೂ ಹೌದೋ, ಇದು ಮನುಷ್ಯರೆಲ್ಲರಿಗೂ ಆಗುವಂಥ ಅನುಭವವೋ, ನಿರ್ದಿಷ್ಟ ಗುಣ, ಸ್ವಭಾವ, ಹಿನ್ನೆಲೆ, ಕಾಲದಲ್ಲಿ ಬದುಕುವ ವಿಶಿಷ್ಟ ವ್ಯಕ್ತಿಯ ಅನುಭವವೋ ಎಂದು ತಾತ್ವಿಕ ಪರಿಶೀಲನೆಗೆ ತೊಡಗಬಹುದು. ಹೇಗಾದರೂ ಈ ಕವಿತೆಗಳು ಬಯಸುವ ಆದರ್ಶ ಓದುವಿಕೆ ಅಸಾಧ್ಯವಾಗುತ್ತದೆ.

ಹಾಗಾದರೆ ಮಾಡಬಹುದಾದದ್ದೇನು? ಇಲ್ಲಿನ ಸುಮಾರು ಇನ್ನೂರಕ್ಕೂ ಹೆಚ್ಚಿನ ರಚನೆಗಳಲ್ಲಿ ಮತ್ತೆ ಮತ್ತೆ ಎದುರಾಗುವ ಭಾವ ಸಂಕೀರ್ಣವನ್ನು, ಅದರ ವಿನ್ಯಾಸವನ್ನು ಸ್ಥೂಲವಾಗಿ ಗುರುತಿಸಲು ಯತ್ನಿಸಬಹುದು; ಭಾವಕ್ಕೂ ಭಾಷೆಗೂ ಇರುವ ನಂಟನ್ನು ಪರಿಶೀಲಿಸಬಹುದು; ಒಂದೇ ಭಾವದ ಹಲವು ಮಗ್ಗುಲುಗಳನ್ನು ಪರಿಶೀಲಿಸುವ ಯತ್ನವನ್ನು ಕಾಣಬಹುದು. ಇವೆಲ್ಲವೂ ಈ ಸಂಕಲನವನ್ನು ಓದಲಿರುವವರೊಡನೆ, ಅಥವಾ ಒಮ್ಮೆ ಓದಿದ ಓದುಗರೊಡನೆ ಮತ್ತೊಬ್ಬ ಓದುಗ ಹಂಚಿಕೊಳ್ಳುವ ಟಿಪ್ಪಣಿಗಳ ಹಾಗೆ.

ನನ್ನಿರುವಿಕೆ ನೆನಪಾಗಿ ಎಂದು ಶುರುವಾಗುವ ೫ನೆಯ ನಂಬರಿನ ರಚನೆ ಈ ಇಡೀ ಸಂಕಲನವು ಓದುಗರ ಮುಂದಿಡುವ ಸಂದಿಗ್ಧತೆಯನ್ನು ಸೂಚಿಸುತ್ತದೆ. ಇದು 'ನಾನು', 'ನೀನು' ಮತ್ತು 'ಲೋಕ' ಎಂಬ, ಇಲ್ಲಿನ ಎಲ್ಲ ರಚನೆಗಳ ಜೀವಾಳವಾಗಿರುವ, ಮೂರು ಪಾತ್ರಗಳನ್ನು ನಮ್ಮೆದುರು ನಿಲ್ಲಿಸುತ್ತದೆ. ಈ ಮೂರೂ ಕ್ಷಣ ಕ್ಷಣವೂ ಬದಲಾಗುವಂಥವಾದ್ದರಿಂದಲೇ ಇಲ್ಲಿನ ಭಾವಲೋಕಕ್ಕೆ ರಂಗು ಬಂದಿದೆ.
ಅದಕ್ಕಿಂತ ಮಿಗಿಲಾಗಿ ಇದು ಕವಿತೆಯಲ್ಲ, ಅದನ್ನು ಮೀರಿದ್ದು; ಇದು ನಾನು ಬರೆದದ್ದಲ್ಲ, ನೀನು ಅಪೂರ್ಣವಾಗಿ ಉಳಿಸಿದ್ದನ್ನು ಪೂರ್ಣಗೊಳಿಸಿದ್ದು; ಇದು ಲೋಕಕ್ಕೆ ಕವಿತೆಯಂತೆ ಕಾಣುತ್ತದೆ ಅಷ್ಟೆ; ಆದರೆ ನನ್ನೊಳಗಿರುವುದು ಕವಿತೆಯಲ್ಲ, ನೋವು, ಭಾವ, ಅಪೂರ್ಣತೆ, ಅಸ್ತವ್ಯಸ್ತತೆ ಇತ್ಯಾದಿಯಾಗಿ ಯಾವ ಹೆಸರೂ ಇಡಲಾಗದ ಏನೋ ಒಂದು ಅನ್ನುತ್ತದೆ ಈ ರಚನೆ. ಮಸಿ ಹೆಚ್ಚಿದಷ್ಟೂ ಚಂದ್ರನ ತೇಜಸ್ಸು ಹೆಚ್ಚಿದಂತೆ ನನ್ನೊಳಗಿನ 'ಅದು' ಹೆಚ್ಚಿದಷ್ಟೂ ಲೋಕಕ್ಕೆ ಕವಿತೆ ಕಂಡ ಸಂಭ್ರಮ ಅನ್ನುತ್ತದೆ.

ಒಳಗು-ಹೊರಗುಗಳ ವಿಪರ್ಯಾಸ, ಒಳಗಿನ ನೋವು ಹೊರಗಿನ ಕಲೆಯಾಗುವ ವಿಪರ್ಯಾಸ, ನೀನು ಅಪೂರ್ಣವಾಗಿ ಉಳಿಸಿದ್ದನ್ನು ಪೂರ್ಣಗೊಳಿಸುತ್ತ ನಾನು 'ಕವಿ' ಅನ್ನುವ ನಿಲುವು ಇವೆಲ್ಲ ಸೇರಿ ಈ ಸಂಕಲನದ ಕವಿತೆಗಳನ್ನು ಕೇವಲ ಕವಿತೆಗಳೆಂದು ಓದಬಾರದು ಅನ್ನುವ ಎಚ್ಚರಿಕೆಯ ಸೂಚನೆಯನ್ನು ಕೊಡುತ್ತಿವೆ.
ನಾನು ಕಳೆದುಹೋದೆ ಎಂದು ಶುರುವಾಗುವ ೧೪೧, ಮತ್ತು ನನ್ನ ಆಸ್ತಿಯ ಬಗ್ಗೆ ಯಾಕಿಷ್ಟು ಲೆಕ್ಕಾಚಾರ ಎಂದು ಶುರುವಾಗುವ ೧೫೦ನೆಯ ರಚನೆಗಳು ಇಡೀ ಸಂಕಲನದ ಮುಖ್ಯ ವಸ್ತುವನ್ನು ಸೂಚಿಸುವಂತಿವೆ. ಅರ್ಥವೆಂದರೆ ವ್ಯತ್ಯಾಸ; ವಿರುದ್ಧಗಳೆಲ್ಲ ಸ್ಥಾನಪಲ್ಲಟಗೊಳ್ಳುತ್ತ, ಇದು ಅದಾಗಿ ಅದು ಇದಾಗಿ ಆಗುತ್ತಲೇ ಇರುವ ಕೊನೆಯಿರದ ಪ್ರೋಸೆಸ್, ಅದನ್ನು ಅನುಭವಿಸುವುದಷ್ಟೇ ಸರಿ. ಮತ್ತೇನೋ ಆಗುವ ಹಂಬಲ ಸರಿಯಲ್ಲ ನೀನು ನಾನಾಗುವ, ನಾನು ನೀನಾಗುವ ಪ್ರಯತ್ನ ಇತ್ಯಾದಿಯೆಲ್ಲ ದುಃಖಕ್ಕೆ ಕಾರಣ ಅನ್ನುವ ರನೆಯ ಕವಿತೆಯೂ ಒಂದು ಭಾವವೇ, ಮತ್ತು ಈ ಭಾವವೂ ಅಸ್ಥಿರವಾದ ಸಂಚಾರಿಯೇ! ಅಸ್ಥಿರವನ್ನೇ ಸ್ಥಿರವೆಂದ ನಾಗಾರ್ಜುನ ನೆನಪಾಗುತ್ತದೆ.

'ಬೆಳಕು-ಕತ್ತಲಾಚೆಗಿನ ಧ್ಯಾನ/ಎವೆಗಳಲಿ ಅವಿತ ಅವಳ ಕನಸು/ಸದಾ ತಾಕುವ ಅವಳೆದೆಯ ಹಾಡು/ಬೇಕಂದಾಗ ಕನ್ನಡಿಯಾಗುವ ಕವಿತೆ' ಇಷ್ಟೇ ನನ್ನ ಆಸ್ತಿ, ಆದರೂ ಲೋಕ ಯಾಕೆ ನನ್ನ ಬಗ್ಗೆ ಕರುಬುತ್ತದೆ ಅನ್ನುವ 'ನಾನು ಯಾಕೆ ಲೋಕಕ್ಕೆ ಅರ್ಥವಾಗುವುದಿಲ್ಲ' ಅನ್ನುವ ತಳಮಳ ಇಲ್ಲಿನ ರಚನೆಗಳಲ್ಲಿ ಬೆರೆತಿರುವ ದ್ರವ್ಯ. ಈ ಎರಡೂ ರಚನೆಗಳ ಭಾವ ಈ ಸಂಕಲನದ ಕೇಂದ್ರದಲ್ಲಿದೆ ಅನ್ನಿಸುತ್ತದೆ.
ಈ ಅಸ್ಥಿರತೆ, ತಳಮಳ, ಪಲ್ಲಟಗಳನ್ನು ವಿವಿಧ ಬಗೆಗಳಲ್ಲಿ ಕಂಡರಿಸುವಾಗ ಹಗಲು-ಇರುಳುಗಳ ಪ್ರತಿಮಾವಳಿ ಕವಿಗೆ ಒದಗಿ ಬಂದಿದೆ. ಉದಾಹರಣೆಗೆ ೩೯, ೩೭, ೩೧, ೪೧, ೪೩, ೮೦, ೯೭, ೧೦೭ ಇಂಥ ರಚನೆಗಳನ್ನು ಗಮನಿಸಬಹುದು. ನಾನು-ನೀನು-ಲೋಕ ಎಂಬ ವಿಷಯದ ಪರಿಶೀಲನೆಗೆ ಈ ಹಗಲು-ಇರುಳುಗಳ ಪ್ರತಿಮಾವಳಿ ಬಳಕೆಯಾಗಿದೆ. ಪ್ರೀತಿ-ಕಾಮ, ಮನುಷ್ಯ-ಮೃಗ-ಸಂತ ಇವುಗಳ ಬಿಡಿಸಲಾಗದ ಹೆಣಿಗೆ ಇಲ್ಲಿನ ಕವಿತೆಗಳ ಇನ್ನೊಂದು ಮುಖ್ಯ ಸಾಮಗ್ರಿ. ಇವುಗಳ ನಿರ್ವಹಣೆಯನ್ನು ೫೪, ೬೦, ೧೧೬, ೧೨೯, ನೆಯ ರಚನೆಗಳಲ್ಲಿ ಕಾಣಬಹುದು.
ಇವೆಲ್ಲ ಭಾವ ಸಂಕೀರ್ಣಗಳನ್ನು ವ್ಯಕ್ತಪಡಿಸುವಾಗ ಭಾಷೆ ಮತ್ತು ಮೌನದ ಯುಗಳ ಕಾಡುವುದು ಅನಿವಾರ್ಯ. 'ಇಲ್ಲದಿರುವುದು ಇರುವ ರೂಪದಲಿ ಇರುವುದೆಂದು ಯಾರು ತಿಳಿದಿದ್ದರು' ಎಂದು ಆಶ್ಚರ್ಯದಲ್ಲಿ, ನೋವಿನಲ್ಲಿ ಕೇಳುವ ೧೯೩ನೆಯ ರಚನೆಯು ವ್ಯಕ್ತವಾಗುವ ಭಾಷೆ-ಅವ್ಯಕ್ತವಾದ ಮೌನಗಳ ಸಂಬಂಧವನ್ನು, ಅವ್ಯಕ್ತವೆನಿಸುವ ಮೌನವೇ ಪ್ರಬಲವಾದ ವ್ಯಕ್ತ ಸಂಗತಿಯಾಗುವುದನ್ನು ಹೇಳುತ್ತದೆ.

ಈ ಸಂಕಲನದಲ್ಲಿ ನನಗೆ ತುಂಬ ಇಷ್ಟವಾದ ಕೆಲವು ರಚನೆಗಳನ್ನು ಕುರಿತು ಹೇಳಬೇಕು. 'ಎಲ್ಲ ಉನ್ಮಾದಿಗಳ ಹಾಗೆ' ಎಂದು ಆರಂಭವಾಗುವ ದೃಢವಾದ, ಸಶಕ್ತವಾದ ೨೧ನೆಯ ರಚನೆ; ಸಂದರ್ಭ, ವ್ಯಕ್ತಿತ್ವಗಳು, ಭಾವ ಎಲ್ಲವೂ ಹದವಾಗಿ ರೂಪು ಪಡೆದು ವಿಷಾದ ತನ್ನಷ್ಟಕ್ಕೇ ವ್ಯಕ್ತವಾಗಿ ದೊರೆಯುವ ನಿರಾಳತೆಯ ೨೩ನೆಯ ರಚನೆ; ಅರ್ಥವು ಮೂಡುವ ಕ್ರಮವನ್ನು ಚಿತ್ರಿಸುವ 'ಹೂ ಮುಡಿಗಿಡುವಾಗಿನ ಖದರು' ಎಂದು ಆರಂಭವಾಗುವ ೧೨೦ನೆಯ ರಚನೆ, /ಭಾವ, ನೋಟ, ಭಾಷೆಗಳ ಹದವಿರುವ 'ಒಂದೊಂದಾಗಿ ನೀ ತೊಟ್ಟಬಟ್ಟೆ' ಎಂದು ಆರಂಭವಾಗುವ  ೧೬೩ನೆಯ ಮತ್ತು 'ಸಿಪ್ಪೆ ಬಿಡಿಸಿ ಹಣ್ಣ ತೊಳೆ ಬಾಯಿಗಿಟ್ಟುಕೊಂಡಹಾಗೆ' ಎಂದು ಆರಂಭವಾಗುವ ೧೭೧ಯ ರಚನೆಗಳು; ಆಪ್ತಕ್ಷಣಗಳ ಸಶಕ್ತ ಮತ್ತು ಸಂಕೀರ್ಣ ಚಿತ್ರವಾಗಿರುವ 'ನಿನ್ನ ಪುಕ್ಕಲುತನ ಕಳಚಲು' ಎಂದು ಆರಂಭವಾಗುವ ೧೮೦ನೆಯ ರಚನೆ ಇವು ಇಷ್ಟವಾಗಿ ನನ್ನ ಮನಸ್ಸಿನಲ್ಲಿ ಉಳಿದುಕೊಂಡವು.

ಈ ರಚನೆಗಳಲ್ಲಿ ಕವಿತೆಯ ಸಂದರ್ಭ ಆಯಾ ರಚನೆಗಳ ಒಳಗೇ ಖಚಿತವಾಗಿ ಓದುಗರ ಮನಸಿನಲ್ಲಿ ಮೂಡುತ್ತದೆ; ಆಯಾ ಸಂದರ್ಭದಲ್ಲಿನ ಪಾತ್ರಗಳು ತಾವು ಮಾಡುವ ಕ್ರಿಯೆಗಳಿಂದಲೇ ಸ್ಪಷ್ಟವಾಗಿ ಮೂಡುತ್ತಾರೆ; ಬೌದ್ಧಿಕತೆಯ ಅನಗತ್ಯ ಭಾರವಿಲ್ಲದೆ ನವಿರಾದ ಭಾವಗಳನ್ನು ನವಿರಾಗಿಯೇ ವಿವರಿಸುತ್ತಿರುವಾಗಲೇ ಭಾಷೆಯ ಬಳಕೆಯಲ್ಲೇ ಸಹಜವಾಗಿ ಮೂಡುವ ಅರ್ಥಸಂದಿಗ್ಧಗಳು ಓದುಗರ ಬುದ್ಧಿ, ಭಾವಗಳನ್ನು ತುಂಬುತ್ತವೆ.

ಭಾವಗಳನ್ನು ಬೆಂಬಲಿಸುವ ವಿವರಗಳಿಲ್ಲದೆ ಕೇವಲ ಭಾವಗಳಲ್ಲೆ ಸಂಚರಿಸುವ ಕವಿತೆ (ಉದಾ, ೧೬) ಕೇವಲ ಡೈರಿಯ ಖಾಸಗೀ ನಮೂದು ಆಗಿ ಉಳಿಯಬಹುದು; ಆದ ಅನುಭವವನ್ನು ಮನಸಿನೊಳಗೇ ಅರ್ಥೈಸಿಕೊಂಡು ಕೇವಲ ಫಲಿತಾಂಶ ರೂಪವನ್ನಷ್ಟೇ ಓದುಗರ ಮುಂದೆ ಮಂಡಿಸಿದರೆ ಅದು ಕೇವಲ ಜಾಣತನದ ರಚನೆಯೋ ಅನ್ನುವ ಸಂದೇಹ ಮೂಡಬಹುದು (ಉದಾ, ಗಝಲ್‌ನ ನೆನಪು ತರುವ ೬೨ನೆಯ ರಚನೆ); ತರ್ಕದ ತೊಡಕುಗಳನ್ನು ನಿರ್ಮಿಸುವಂಥ ವಿಚಾರಗಳ ಮಂಡನೆ (ಉದಾ, ೧೦೩) ಕವಿಯ ನಿಲುವನ್ನು ಪ್ರಶ್ನಿಸುವಂತೆ ಮಾಡುತ್ತದೆ; ಸಂದರ್ಭ ರಹಿತವಾಗಿ ಸುಮ್ಮನೆ ಮಿಂಚಿ ಮರೆಯಾಗುವ ಹನಿಗಳು ಮನಸಿನಲ್ಲಿ ಉಳಿಯದೆ ಹೋಗುತ್ತವೆ; ಭಾವ ಮತ್ತು ಭಾಷೆಗಳ ಹೊಂದಾಣಿಕೆ ಸಾಧಿಸಲಾಗದ ರಚನೆಗಳು ಓದುಗರನ್ನು ದಣಿಸುತ್ತವೆ.

ನಾನು-ನೀನು-ಕಾಲ-ಪ್ರೀತಿ-ಕಾಮ-ಸಾವು ಇವು ಜಗತ್ತಿನ ಮಹಾಕವಿಗಳನ್ನೆಲ್ಲ ಕಾಡಿರುವ, ತಾಕಲಾಡಿಸಿರುವ, ಉತ್ತರಗಳಿಲ್ಲದ, ಮತ್ತೊಬ್ಬರು ಕಂಡ ಉತ್ತರಗಳು ಎಂದೂ ಸಮಾಧಾನ ತಾರದ, ಸದಾ ಪ್ರಶ್ನೆಗಳಾಗಿಯೇ ಉಳಿಯುವ ದೊಡ್ಡ ಸಂಗತಿಗಳು. ಇವನ್ನು ತಮ್ಮ ಕಾವ್ಯದ ವಸ್ತುವಾಗಿ ಆರಿಸಿಕೊಳ್ಳುವ ಯುವ ಕವಿಗಳು, ಹೊಸ ಕವಿಗಳು ಬಲು ದೊಡ್ಡ ಸವಾಲನ್ನೇ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಹಾಗೆ ಎಳೆದುಕೊಂಡರೂ ಸಾರ್ಥಕ ಕವಿತೆಗಳನ್ನು ರಚಿಸುವುದು ಕಷ್ಟವೇ.
ಸಾಹಿತ್ಯ ಪರಂಪರೆಯ ಭಾರ, ಓದುಗರ ನಿರೀಕ್ಷೆಯ ಭಾರ ಮತ್ತು ತಮ್ಮದೇ 'ದರ್ಶನ' (ಹಾಗೆಂದರೇನು ಅನ್ನುವ ಪ್ರಶ್ನೆ ಇರಲಿ)ವನ್ನು ರೂಪಿಸಿಕೊಳ್ಳುವ ಜವಬ್ದಾರಿ ಹೀಗೆ ಆ ಕಷ್ಟಕ್ಕೆ ಹಲವು ಕಾರಣಗಳಿವೆ. ಬಸೂ ಅವರ ಈ ಸಂಕಲನವು ಸಫಲ, ವಿಫಲ, ಅರೆ, ಬರೆ ಯತ್ನಗಳೆಲ್ಲದರ ಸಂಕಲನವಾಗಿದೆ.

ಇಡೀ ಸಂಕಲನವನ್ನು ಕವಿ ತನ್ನ ಅಭಿವ್ಯಕ್ತಿಯ ದಾರಿ, ಅಭಿವ್ಯಕ್ತಿಯ ರೂಪ, ತನ್ನ ದರ್ಶನವನ್ನು ಕಂಡುಕೊಳ್ಳಲು ನಡೆಸುವ ಪ್ರಯತ್ನಗಳ ಮೊತ್ತ ಎಂದು ನೋಡಬೇಕು. ಶಿಲ್ಪಿಯೊಬ್ಬನ ಪ್ರಯತ್ನದ ಹಾಗೆ, ರಾಗವನ್ನು ತನ್ನದಾಗಿಸಿಕೊಳ್ಳಲು ಅಭ್ಯಾಸ ನಡೆಸುವ ಸಂಗೀತಗಾರನ ಹಾಗೆ ಕವಿಯೂ. ಇಂಥ ಕವಿತೆ ಚೆನ್ನಾಗಿದೆ ಅನ್ನುವ ಮೊದಲು ಇದಕ್ಕೆ ಅನುವು ಮಾಡಿಕೊಟ್ಟ ಅಷ್ಟು ಚೆನ್ನಾಗಿಲ್ಲದ ಕವಿತೆಗಳ ಹಿನ್ನೆಲೆಯಲ್ಲಿ ಹಾಗನ್ನಿಸುತ್ತದೆ ಅನ್ನುವುದನ್ನು ಮರೆಯಬಾರದು.

೬೯
ಈ ಋತುವಿನ ಕಡುಬೇಸಿಗೆಯಲಿ
ಕಲ್ಲು ಹೃದಯ ನೀರಾಗಿಬಿಟ್ಟಿತು
ಆ ಕ್ಷಣ
ಮುಳ್ಳುಕಂಟಿಗಳಲಿ ನಗೆ ಚಿಮ್ಮಿತು
ಬಾಯಾರಿದ ಹಕ್ಕಿಯ ನಾಲಿಗೆ ಒದ್ದೆಯಾಯಿತು
ಶತಮಾನಗಳಿಂದ ಕುದಿವ ಮರುಭೂಮಿ ಮಡಿಲು
ಹನಿ ಪ್ರೀತಿ ಸಿಕ್ಕಿತೆಂದು ಕುಣಿದಾಡಿತು
ಸುಟ್ಟ ಒಡಲಿನ ತಗ್ಗು ದಿನ್ನೆಯಲ್ಲಿ
ಗರಿಕೆಯ ಒಂದೆಸಳು ಮರುಹುಟ್ಟು ಪಡೆಯಿತು
ಆಗೆಲ್ಲ ನಾನು ಒಂದು ಸಾರ್ಥಕ ಕ್ಷಣ ಅನುಭವಿಸಿದೆ
ಇಲ್ಲದಿರೆ ನಿನ್ನ ಪ್ರೀತಿಸಿಯೂ
ಈ ಬದುಕು ಎಷ್ಟೊಂದು ನಿರರ್ಥಕ ಎನಿಸಿಬಿಡುತ್ತಿತ್ತು!

ಸಾರ್ಥಕತೆಯ ಕ್ಷಣವನ್ನು ಹಿಡಿದಿಡುವ ಈ ರಚನೆಯನ್ನು ನೋಡಿ. ಇಲ್ಲಿ ಗಮನಿಸಬೇಕಾದ ವಿಚಿತ್ರವೊಂದಿದೆ. ದುಃಖ, ವಿಷಾದ ಇತ್ಯಾದಿಗಳನ್ನು ಹೇಳುವುದಕ್ಕೆ ಒದಗಿ ಬರುವ ಸಶಕ್ತ ಪ್ಯಾರಡಾಕ್ಸ್‌ಗಳು ಸಂತೃಪ್ತಿ, ಸಮಾಧಾನ, ಸಾರ್ಥಕತೆಯನ್ನು ಹೇಳುವಾಗ ಒದಗಿ ಬರುವುದಿಲ್ಲ. ಯಾಕಿರಬಹುದು? ಋಣಾತ್ಮಕ ಭಾವಗಳನ್ನು ಅನುಭವಿಸುವಾಗ ಅಹಂ ಎಚ್ಚತ್ತಿರುತ್ತದೆ, ಸಂತೃಪ್ತಿ, ಸಾರ್ಥಕತೆ, ಸಮಾಧಾನಗಳನ್ನು ಅನುಭವಿಸುವಾಗ ಅದೇ ಅಹಂ ಬಲುಮಟ್ಟಿಗೆ ಗೈರುಹಾಜರಾಗಿರುತ್ತದೆ ಅನ್ನುವುದು ಕಾರಣವಿದ್ದೀತು.
ನಿಜವಾಗಿ ಅನಿರ್ವಾಚ್ಯವಾದದ್ದು ಸಂತೋಷ, ಸಮಾಧಾನ, ಸಂತೃಪ್ತಿಗಳೇ ಹೊರತು ದುಃಖ, ದುಮ್ಮಾನ, ತಳಮಳಗಳಲ್ಲ! ಹೇಳಲು ಹೊರಟ ತಕ್ಷಣ ಅವೆಲ್ಲ ಈ ಧನಾತ್ಮಕ ಭಾವಗಳೆಲ್ಲ ಸುಳ್ಳು ಅನಿಸಿಬಿಡುತ್ತವೆ. ಕಲೆ, ಸಾಹಿತ್ಯ ಇತ್ಯಾದಿಗಳೆಲ್ಲ ಹುಟ್ಟಿದ್ದು ಕೊರತೆಯನ್ನು ತುಂಬಿಕೊಳ್ಳುವುದಕ್ಕೆ, ದುಃಖದಿಂದ ಪಾರಾಗುವುದಕ್ಕೆ, ನೋವು ಹೇಳಿಕೊಳ್ಳುವುದಕ್ಕೆ ಎಂದಾದರೆ ಪಾಸಿಟಿವ್ ಫೀಲಿಂಗ್‌ಗಳ ನಿರಾಳತೆ ಸಾಹಿತ್ಯ/ಕವಿತೆ/ಕಲೆಗೆ ಹೊರತಾದದ್ದೋ? ಇಂಥ ಕಾವ್ಯಮೀಮಾಂಸೆಯ ಪ್ರಶ್ನೆಯನ್ನೂ ರಚನೆ ನಮ್ಮ ಮುಂದೊಡ್ಡುತ್ತದೆ.

೧೨೯
ನೀನು ಪ್ರೀತಿಸದಿದ್ದರೆ ಏನಾಗುತ್ತಿತ್ತು?
ಏನಿಲ್ಲ
ಎಲ್ಲವೂ ಹಾಗೆಯೇ ಇರುತ್ತಿತ್ತು..
ನಾನೂ..
ನನ್ನೊಳಗಿನ ರಾಕ್ಷಸ ವಿಲಾ(ಳಾ)ಸವೂ..

ಇದು ಅಚ್ಚರಿ ಮೂಡಿಸುವಂಥ ಮಾತು. ಪ್ರೀತಿಸದಿದ್ದರೆ ಏನೂ ಆಗುತ್ತಿರಲಿಲ್ಲ, ರಾಕ್ಷಸತ್ವ ಇದ್ದುಬಿಡುತಿತ್ತು ಅನ್ನುವಾಗ ಇಡೀ ಮಾತು ತನ್ನನ್ನೇ ಸುಳ್ಳಾಗಿಸಿಕೊಳ್ಳುತ್ತದೆ. ಅಂದರೆ ಪ್ರೀತಿಸಿದ್ದರಿಂದ ಏನೋ ಅಗಾಧವಾದದ್ದು ಆಗಿದೆ ಅಂತಲೇ ಹೇಳುತ್ತಿದೆ.

ಅಭಿವ್ಯಕ್ತಿಯ ಸಾಧ್ಯತೆಯ ಬಗ್ಗೆಯೇ ಸಂದೇಹಗಳನ್ನಿಟ್ಟುಕೊಂಡು, ಅಭಿವ್ಯಕ್ತಿಯ ಪವಾಡಗಳ ಬಗ್ಗೆ ಅಚ್ಚರಿಪಡುತ್ತ, ಹೇಳಬೇಕಾದುದನ್ನು ಹೇಳಿದೆನೋ ಇಲ್ಲವೋ ಎಂದು ತಳಮಳಗೊಳ್ಳುತ್ತ, ಪ್ರೀತಿಯಲ್ಲಿ ನಂಬಿಕೆ ಇಟ್ಟುಕೊಂಡೂ ಅದನ್ನು ನಿಷ್ಠುರವಾಗಿ ಹಲವು ಕೋನಗಳಿಂದ ಪರಿಶೀಲಿಸುತ್ತ, ನಿಜವನ್ನು ಕಾಣಬೇಕು, ಹೇಳಬೇಕು ಎಂಬ ಹಟದಲ್ಲಿ ತೊಳಲುತ್ತ ಈ ಕವಿ ಸಾಗುತ್ತಿರುವ ಹಾದಿಯನ್ನು ಸಹನೆಯಿಂದ ನೋಡಬಲ್ಲ ಓದುಗರಿಗೆ ಹಲವು ಉತ್ತಮ ರಚನೆಗಳು ಈ ಸಂಕಲನದಲ್ಲಿ ದೊರೆಯುತ್ತವೆ;
ಅವನ್ನು ಎದುರುಗೊಳ್ಳಲು ಅಗತ್ಯವಾದದ್ದು ಸಂಕಲನದ ಏಕತಾನತೆಯನ್ನು ಸಹಿಸಿಕೊಳ್ಳಬಲ್ಲ ತಾಳ್ಮೆ. ಬಸೂ ಅವರಿಗೆ ತಮ್ಮ ಯತ್ನದಲ್ಲಿ ಸಿದ್ಧಿ ದೊರೆಯಲಿ, ಅವರ ಕವಿತೆಗೆ ತಕ್ಕ ಓದುಗರು ದೊರೆಯಲಿ ಎಂದು ಹಾರೈಸುತ್ತೇನೆ.

ಅನಿಸಿಕೆ
Prawin  
 
ನೀನು ಪ್ರೀತಿಸದಿದ್ದರೆ ಏನಾಗುತ್ತಿತ್ತು?
ಏನಿಲ್ಲ
ಎಲ್ಲವೂ ಹಾಗೆಯೇ ಇರುತ್ತಿತ್ತು..
idakkinta olle padagalu innavudoo iralaaradu :)


ಮಹಾದೇವ ಹಡಪದ 
ಬಸೂ ಅವರ ಪುಸ್ತಕಕ್ಕಾಗಿ ಕಾಯುತ್ತಿದ್ದೇನೆ. ಸಂಚಾರಿಗಿಂತಲೂ ಅವರ ಕವಿತೆಗಳಲ್ಲಿ ಸ್ಥಾಯಿಯಾಗುಳಿವ ಭಾವ ಬಹಳ ಮಹತ್ವದ್ದಾಗಿ ಕಾಣಿಸುತ್ತಿದೆ. ಹಲವು ಕೋನಗಳಿಗೆ ಬಿಚ್ಚಿಕೊಳ್ಳುವ ಮೊದಲು ಅವರ ಭಾಷೆ ಭಾವವಾಗುವಾಗ ಎಷ್ಟು ಸರಳ ಸಜ್ಜನಿಕೆಯ ಹಂಬಲ ಇದೆಯಲ್ಲ ಅನಿಸ್ತದೆ.

ಮತ ಬಹಿಷ್ಕಾರವೆಂಬ ಚುನಾವಣೆ ಪ್ರಾಥಮಿಕ ಪಾಠ
-ಅರುಣ್ ಜೋಳದಕೂಡ್ಲಿಗಿ

 ಸೌಜನ್ಯ : ಪ್ರಜಾವಾಣಿಯಾವುದೇ ಚುನಾವಣೆ ಮುನ್ನ ಮತ ಬಹಿಷ್ಕಾರದ ಘಟನೆಗಳು ನಡೆಯುತ್ತಿರುತ್ತವೆ. ಅವು ಆಡಳಿತದ ವಿರುದ್ಧ ಜನರೊಳಗಿದ್ದ ಸಿಟ್ಟು ಸೆಡವುಗಳನ್ನು, ಪ್ರತಿರೋಧದ ರೂಪದಲ್ಲಿ ಹೊರ ಹಾಕುತ್ತವೆ. ಇಂತಹ ಬಹಿಷ್ಕಾರವು ಮೂಲಭೂತ ಸೌಲಭ್ಯಗಳಿಲ್ಲದ್ದನ್ನು ಒಕ್ಕೊರಲಿನಿಂದ ಹೇಳುವ ಪ್ರಯತ್ನಗಳಂತೆ ಕಾಣುತ್ತದೆ. ಮುಖ್ಯವಾಗಿ ಈ ಹಿಂದಿನ ಜನಪ್ರತಿನಿಧಿಯ ಆಡಳಿತ ವೈಖರಿಯ ಪ್ರತಿಬಿಂಬವೂ ಆಗಿರುತ್ತದೆ. ಈ ಬಾರಿಯೂ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ ಹಲವು ಘಟನೆಗಳು ವರದಿಯಾಗಿವೆ. 
ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿಯ ಜನರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಪೊಲೀಸರ ದೌರ್ಜನ್ಯ, ಕಾನೂನು ಉಲ್ಲಂಘನೆ, ಮೂಲ ಸೌಕರ್ಯ ಕೊರತೆ ಎಂಬ ಕಾರಣ ಹೇಳಿದ್ದರೂ, ಬಹಿಷ್ಕಾರಕ್ಕೆ ಮೂಲ ಕಾರಣ ಕುದಾಪುರ, ವರವು ಕಾವಲು ಹಾಗೂ ಉಳ್ಳಾರ್ತಿ ಅಮೃತ ಮಹಲ್ ತಳಿಗಳ ಸಂಶೋಧನ ಕೇಂದ್ರವಿರುವ ಭೂಮಿಯನ್ನು ಡಿಆರ್‌ಡಿಒ, ಇಸ್ರೋ, ಐಐಎಸ್ಸಿ, ಬಾಬಾ ಅಣು ಸಂಶೋಧನ ಸಂಸ್ಥೆ ಮುಂತಾದವುಗಳಿಗೆ ಕಾನೂನು ಬಾಹಿರವಾಗಿ ನೀಡಲಾಗಿದೆ. ಇದನ್ನು ವಿರೋಧಿಸಿ ಭೂಮಿಯನ್ನು ಉಳಿಸಿಕೊಳ್ಳುವ ಯತ್ನ ಇವರದ್ದು. ಈ ಮತ ಬಹಿಷ್ಕಾರವನ್ನು ಚಳ್ಳಕೆರೆ ತಾಲೂಕಿನ 80 ಗ್ರಾಮದವರು ಬೆಂಬಲಿಸಿದ್ದಾರೆ.

ಸಿದ್ದಾಪುರ ಭಾಗದ ವಿರಾಜಪೇಟೆ ತಾಲೂಕಿನಲ್ಲಿ ಬಹುತೇಕ ಗಿರಿಜನರೇ ಹೆಚ್ಚಾಗಿದ್ದು, ಸರ್ಕಾರ ತಮಗೆ ಯಾವುದೇ ಮೂಲ ಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. `ಕುಡಿಯುವ ನೀರು, ಮನೆ, ವಿದ್ಯುತ್, ರಸ್ತೆ ವ್ಯವಸ್ಥೆ ಇಲ್ಲದೆ ವಂಚಿತರಾಗಿದ್ದೇವೆ. ಈಗಲೂ ನಮ್ಮದು ಕತ್ತಲ ಬದುಕು, ಸೂಕ್ತ ಮನೆಗಳ ವ್ಯವಸ್ಥೆ ಇಲ್ಲದೆ ಗುಡಿಸಿಲಿನಲ್ಲಿ ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಸಂಕಷ್ಟಕ್ಕೆ ಒಳಗಾಗಿದ್ದೇವೆ.

ತೋಡು ನೀರನ್ನೇ ಕುಡಿಯಲು ಅವಲಂಬಿಸಿದ್ದೇವೆ' ಎಂದು ಗಿರಿಜನ ಮುಖಂಡರಾದ ಮುತ್ತಮ್ಮ ಹಾಗೂ ಅಪ್ಪಾಜಿ ಆರೋಪಿಸಿದ್ದಾರೆ. ಉಳಿದಂತೆ ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಗೊಳಪಡುವ ತಟ್ಟಳ್ಳಿ, ದಿಡ್ಡಳ್ಳಿ, ಚೆಟ್ಟಿಪಾರೆ, ಬಸವನಹಳ್ಳಿ ಮುಂತಾದ 250ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ 15 ಮನೆಗಳಿರುವ ಗ್ರಾಮ ಪಾಲಹಳ್ಳಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. `ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 65 ವರ್ಷಗಳಾದರೂ ನಮ್ಮ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ದೊರಕಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ವೈವಾಹಿಕ ಸಂಬಂಧಗಳಿಗೂ ಕಡಿವಾಣ ಬಿದ್ದಿದೆ. ಆನೆಗಳ ಕಾಟ ಹೆಚ್ಚಿರುವುದರಿಂದ ಮುಗ್ಧ ಜನರ ಜೀವಕ್ಕೆ ಬೆಲೆ ಇಲ್ಲ' ಎಂದು ಇಲ್ಲಿಯ ಜನ ಅಲವತ್ತುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕಲ್ಲೆಂಚಿಪಾದೆಯ ಪರಿಶಿಷ್ಟ ಜಾತಿಯ ನಿವಾಸಿಗಳು ಕಾಲೋನಿಗೆ ಮೂಲ ಸೌಕರ್ಯ ಒದಗಿಸುವಂತೆ ಬೇಡಿಕೆ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಲ್ಲೆಂಚಿಪಾದೆ ಶ್ರೀದೇವಿ ಭಜನಾ ಮಂಡಳಿ ಮುಂಭಾಗದಲ್ಲಿ ಬ್ಯಾನರ್ ಹಾಕಿದ್ದಾರೆ.
 
ಕಲ್ಲೆಂಚಿಪಾದೆಯ ಪರಿಶಿಷ್ಟ ಜಾತಿಯ ಸುಮಾರು 12 ಕುಟುಂಬಗಳು ಮೂಲ ಸೌಕರ್ಯ ಒದಗಿಸುವಂತೆ ನಿವೇದಿಸಿಕೊಂಡರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ. ಬೇಸಿಗೆ ಸಮಯದಲ್ಲಿ  ಸುಮಾರು ಮೂರು ಫರ್ಲಾಂಗು ದೂರದಿಂದ ನೀರು ತರಬೇಕಾಗಿದೆ. 20 ವರ್ಷಗಳಿಂದಲೂ ಈ ಎಲ್ಲ ಸಮಸ್ಯೆಗಳು ಪರಿಹಾರ ಕಂಡಿಲ್ಲ ಎಂದು ಅಲ್ಲಿನ ಪ್ರಮುಖರು ತಿಳಿಸಿದ್ದಾರೆ
ಮೂಲ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಅತ್ತೂರು ನಲ್ಲೂರು ಗ್ರಾಪಂ ವ್ಯಾಪ್ತಿಯ ಕುಟ್ಟಿಕೇರಿ ಪೈಸಾರಿ ನಿವಾಸಿಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಮೊದಲ ಬಾರಿಗೆ ಸಾಣೂರು ಗ್ರಾ.ಪಂ. ವ್ಯಾಪ್ತಿಯ ಜನತೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಅಸಹಕಾರ ಹಾಗೂ ಅಭಿವೃದ್ಧಿಪರ ಚಿಂತನೆಯನ್ನು ಹೊಂದದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ. ಹಲವು ಬಾರಿ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ರಿಪೇರಿಯಾಗದ ರಸ್ತೆಯಲ್ಲಿ ಶ್ರಮದಾನದ ಮೂಲಕ ಹೊಂಡಗಳನ್ನು ಮುಚ್ಚುವ ಪ್ರಯತ್ನ ಮಾಡಿದ್ದರು. ಇಷ್ಟೆಲ್ಲ ಆದರೂ ಜನಪ್ರತಿನಿಧಿಗಳ ಬೇಜವಾಬ್ದಾರಿ ವಿರುದ್ಧ ಮತ ಬಹಿಷ್ಕಾರವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಬಂಟ್ವಾಳ ಸಮೀಪದ ಗೋಳ್ತಮಜಲು ಗ್ರಾಪಂ ವ್ಯಾಪ್ತಿಯ ಮದಕ ಪರಿಸರಕ್ಕೆ ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸಲು ವಿಫಲವಾದ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಮದಕ ಆಸುಪಾಸಿನ ನಾಗರಿಕರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದಿದ್ದುದರಿಂದ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಸುತ್ತಮುತ್ತಲಿನ ಮಕ್ಕಳು ಆಗಾಗ ಜ್ವರ, ಶೀತದಿಂದ ಬಳಲುವಂತಾಗಿದೆ.

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಸಹಿತ ಹಲವು ಜನಪ್ರತಿನಿಧಿಗಳಿಗೆ ಮದಕ ನಾಗರಿಕರು ಮನವಿ ಸಲ್ಲಿಸಿದ್ದರೂ, ಯಾವುದೇ ಸ್ಪಂದನ ದೊರೆತಿಲ್ಲವಾದ್ದರಿಂದ ನಾಗರಿಕರು ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ, ಚುನಾವಣೆ ಬಹಿಷ್ಕರಿಸಿ ಹಾಕಲಾಗಿದ್ದ ಬ್ಯಾನರನ್ನು ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ತೆಗೆಸಿದ್ದಾರೆ ಎಂದು ಮದಕ ಪರಿಸರದ ನಾಗರಿಕರು ಆರೋಪಿಸಿದ್ದಾರೆ.

ಶೃಂಗೇರಿ ತಾಲೂಕಿನಲ್ಲಿ ಭಿನ್ನವಾದ ಬಹಿಷ್ಕಾರ ಸುದ್ದಿ ವರದಿಯಾಗಿದೆ. ಮರ್ಕಲ್ ಗ್ರಾಮ ಪಂಚಾಯಿತಿಯ ಹುಲ್ಸೆ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿರುವ ಸಿಪಿಐ ಮಾವೋವಾದಿ ಎಂದು ಬರೆಯಲಾಗಿದ್ದ ಬ್ಯಾನರ್ ಪತ್ತೆಯಾಗಿದೆ. ಇದನ್ನು ನಕ್ಸಲರು ಕಟ್ಟಿರಬಹುದೆಂದು ಶಂಕಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದ ಅಂಚಿನಲ್ಲಿರುವ ಮಾವಿನಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಈ ಹಿಂದೆ ಪರ್ಯಾಯ ಆಡಳಿತ ನಡೆಸುವಷ್ಟು ಪ್ರಬಲವಾಗಿದ್ದ ನಕ್ಸಲರ ಪ್ರಭಾವ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಾ ಬಂದಿತ್ತು.

ಇದೀಗ ಪುನಃ ಈ ಬ್ಯಾನರ್‌ನಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಪ್ರಕರಣಗಳು ಸಾಂಕೇತಿಕ ಅಷ್ಟೆ. ಇಲ್ಲಿ ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿಲ್ಲದ ಬಗ್ಗೆ ಸಿಟ್ಟು ವ್ಯಕ್ತವಾಗಿದೆ. ಅಂತೆಯೇ ಇಲ್ಲಿನ ಜನಾಭಿಪ್ರಾಯ ಮತ ಚಲಾವಣೆಯ ಬಗ್ಗೆ ನಂಬಿಕೆ ಕಳೆದುಕೊಂಡಂತಿದೆ. ಇಲ್ಲಿನ ಬಹುತೇಕ ಬೇಡಿಕೆಗಳು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ್ದು. ಅಂದರೆ ಜನರಿಗೆ ಅತ್ಯಗತ್ಯವಾದ ಕುಡಿಯುವ ನೀರು, ಬೆಳಕು, ನಡೆದಾಡುವ ದಾರಿ, ವಾಸಿಸುವ ಪುಟ್ಟ ಮನೆ, ಪರಿಸರದ ಸ್ವಚ್ಚತೆಗೆ ಸಂಬಂಧಿಸಿದ್ದು. ಈ ಬಹಿಷ್ಕಾರ ಬಹುಪಾಲು ಹಳ್ಳಿಗಳಲ್ಲಿ ಹುಟ್ಟಿರುವುದು ಗಮನಾರ್ಹ. ಕೆಲವು ಬಹಿಷ್ಕಾರಗಳು ರಾಜಕೀಯ ಪ್ರೇರಿತವಾಗಿದ್ದರೂ, ಬಹುಪಾಲು ನಿಜದ ಪ್ರತಿರೋಧಗಳೇ ಆಗಿವೆ.

 ಚುನಾವಣಾ ಅಧಿಕಾರಿಗಳು ಜನರನ್ನು ಮತ ಚಲಾಯಿಸುವ ಹಾಗೆ ಮನವೊಲಿಸಬಹುದು, ಚುನಾವಣಾ ಕಣದಲ್ಲಿರುವ ಸ್ಪರ್ಧಿಗಳು ಭರವಸೆ ನೀಡಿ ಆಮಿಷಗಳನ್ನು ಒಡ್ಡಿ ಮತ ಹಾಕುವಂತೆ ಪ್ರೇರೇಪಿಸಬಹುದು. ಹೀಗೆ ಮತ ಬಹಿಷ್ಕಾರ ಮಾಡಿದವರು, ಕೊನೆಗೆ ಮತ ಚಲಾಯಿಸಲೂಬಹುದು. ಆದರೆ ಮತ ಬಹಿಷ್ಕಾರದ ಈ ಘಟನೆಗಳು ಪ್ರಜಾಪ್ರಭುತ್ವದ ಬಹು ಸಾಧ್ಯತೆಗಳನ್ನು ತೋರುತ್ತಿವೆ.
ಜನ ಪ್ರತಿನಿಧಿಗಳನ್ನು ಚುನಾಯಿಸುವ ಮತ್ತು ಚುನಾಯಿಸದಿರುವ ಎರಡು ಮುಖಗಳನ್ನು ಕಾಣಿಸುತ್ತಿದೆ. ಅಂತೆಯೇ ಮತ ಚಲಾಯಿಸುವ ಮತದಾರರಿಗೂ, ಚುನಾವಣೆಯ ಕಣದಲ್ಲಿರುವ ಸ್ಪರ್ಧಿಗಳಿಗೂ ಈ ಘಟನೆಗಳು ಪ್ರಾಥಮಿಕ ಪಾಠಗಳಂತೆಯೂ ಕಾಣುತ್ತವೆ. ಈ ಪಾಠಗಳು ಪರಿಣಾಮಕಾರಿಯಾಗಿ ಅವರನ್ನು ತಟ್ಟಬೇಕಷ್ಟೆ.

Monday, April 29, 2013

ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ?ದೇವನೂರ ಮಹಾದೇವ


ಸೌಜನ್ಯ: ಪ್ರಜಾವಾಣಿ
ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? `ನಿಮ್ಮ ತಾಯಿ ಬಂಜೆ' ಅಂದರೆ ಏನು ತಾನೇ ಹೇಳಲು ಸಾಧ್ಯ? `ನಿಮಗೆ ತಲೆ ಕೆಟ್ಟಿದೆಯಾ' ಎಂದು ನಾವು ಪ್ರಶ್ನಿಸಬಹುದು ಅಷ್ಟೇ. ಅದಕ್ಕೆ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ, `ನಾವು ಸಂಶೋಧನೆ ಮಾಡಿದ್ದೇವೆ' ಅಂತ. `ಏನಪ್ಪಾ ಅಂಥ ಸಂಶೋಧನೆ?' ಅಂದರೆ `ನೀವು ಹುಟ್ಟಿದಾಗಲಿಂದ ಇಷ್ಟು ಕೋಟಿ, ಇಷ್ಟು ಲಕ್ಷ, ಇಷ್ಟು ಸಾವಿರ ಪದಗಳನ್ನು ಉಚ್ಚಾರ ಮಾಡಿರುತ್ತೀರಿ. ಅದರಲ್ಲಿ ಶೇಕಡಾ ಒಂದರಷ್ಟು ತಾಯಿ ಅಥವಾ ಅವ್ವ ಪದ ನಿಮ್ಮ ಬಾಯಿಂದ ಬಂದಿರುವುದಿಲ್ಲ.

ಹಾಗಾಗಿ ನಿಮ್ಮ ತಾಯಿ ಬಂಜೆ ಅಲ್ಲವೇ?' ಎಂದು ದಿಗ್ವಿಜಯ ಸಾಧಿಸಿದವರಂತೆ ಎದೆ ತಟ್ಟಿ ಹೇಳುತ್ತಾರೆ. ಡಂಕಿನ್ ಝಳಕಿಯವರ  ತಳಪಾಯವೇ ಅಲ್ಲಾಡುತ್ತಿದೆ. ಅದರ ಮೇಲೆ ಸಂಶೋಧನಾ ಸೌಧ ಕಟ್ಟಲು ಹೊರಡುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳು ಸೂಟುಬೂಟು ಹ್ಯಾಟು ಟೈ ಹಾಕಿಕೊಂಡು ತಲೆಗೆ ಬಿಳಿ ವಿಗ್ ಕಣ್ಣಿಗೆ ಸೋಡಾಗ್ಲಾಸಿನ ಕನ್ನಡಕ ಧರಿಸಿ ಇದನ್ನು ಒಂದು `ಸಂಶೋಧನಾ ಪ್ರಹಸನ'ದಂತೆ ಪ್ರದರ್ಶಿಸಿದ್ದರೆ ಈ ಬಾಲಗುಂಪಿನ ಚಾತುರ್ಯಕ್ಕೆ ನಾವೂ ಸಂತಸಪಡಬಹುದಿತ್ತು.
ಆದರೆ ಇದು ಹಾಗಲ್ಲ. ಸಂತೆಗೆ ಮಾರಲು ಆಡು ಹಿಡಿದುಕೊಂಡು ಹೋಗುವ ಬಡವನೊಬ್ಬನಿಗೆ ನಾಕಾರು ಕಳ್ಳರು ಮೈಲಿಗೊಬ್ಬರಂತೆ ನಿಂತು `ನಾಯಿ ಹಿಡಿದುಕೊಂಡು ಎಲ್ಲಿಗೆ ಹೊರಟೆ?' ಎಂದು ಅಪಹಾಸ್ಯ ಮಾಡುತ್ತಾ ಬಡವನಿಗೆ ಮಂಕು ಕವಿಸಿ ಅವನೂ ಭ್ರಮೆಗೆ ಒಳಗಾಗಿ ತನ್ನ ಆಡನ್ನು ನಾಯಿ ಎಂದೇ ತಾನೂ ಭ್ರಮಿಸಿ ಅಲ್ಲೇ ಬಿಟ್ಟು ಹೋದಮೇಲೆ ಆಗ ಮಾತ್ರವೇ ಆ ಆಡನ್ನು ಕದಿಯುವ ಚತುರ ಚೋರರ ಸಂಚಿನ ಜಾಲದಂತೆ ಈ ಬಾಲಗುಂಪಿನ ಕೃತ್ಯ ಗೋಚರಿಸುತ್ತದೆ. ಆ ನಾಲ್ವರು ಕಳ್ಳರು ಆ ಬಡವನಿಂದ ಆಡನ್ನು ಬಲಾತ್ಕಾರದಿಂದ ಕಿತ್ತುಕೊಂಡೇ ಹೋಗಬಹುದಿತ್ತು. ಆದರೆ ಅವರು ಇಲ್ಲಿ ಮಾಡಿದ್ದು ಅಭಿಪ್ರಾಯ ರೂಪಿಸುತ್ತ ಮಾಡುವ ಮರೆಮೋಸದ ಕಳ್ಳತನ. ಅವರೂ ಸಂಶೋಧಕರೇ ಇರಬಹುದು. ಇಂದು ಕಾರ್ಪೊರೆಟ್ ಸೆಕ್ಟರ್‌ಗಳು ಅಭಿಪ್ರಾಯ ರೂಪಿಸಿ ಕಳ್ಳತನ ಮಾಡುವ ವಂಚನಾ ಕಲೆಯ ಕೌಶಲದಂತೆ ಈ ಸಂಶೋಧನೆ ಎಂಬುದೂ ಈ ಮಾರ್ಗ ಹಿಡಿಯುತ್ತಿದೆ.
ಇಲ್ಲೇನು ಕಳ್ಳತನ? ಅಥವಾ ಇದು ಯಾಕಾಗಿ? `ಸಾಮಾಜಿಕ ನ್ಯಾಯ, ಮೀಸಲಾತಿ, ಸರ್ವರಿಗೂ ಶಿಕ್ಷಣ, ಪ್ರಜಾಪ್ರಭುತ್ವ, ಸೆಕ್ಯುಲರಿಸಂ ಇಂಥವುಗಳೆಲ್ಲ ಪಾಶ್ಚಿಮಾತ್ಯ ವಸಾಹತುಶಾಹಿ ಪ್ರಭಾವದಿಂದ ಕಟ್ಟಲ್ಪಟ್ಟವು, ಇಂಥವುಗಳು ಭಾರತೀಯ ಅಲ್ಲ' ಎಂದು ಇವರು ಸಂಶೋಧನೆ ಜರುಗಿಸುತ್ತಿದ್ದಾರೆ. ಇಂಥವು ಇಲ್ಲಿಯವು ಅಲ್ಲ ಅಂತ ಇವುಗಳನ್ನು ಬುಡಸಮೇತ ಕಿತ್ತುಹಾಕುವ ಹುನ್ನಾರ ಇಲ್ಲಿದೆ. ಅದಕ್ಕಾಗಿ ಜಾತಿ, ಧರ್ಮ, ಅಧ್ಯಾತ್ಮ ಹಿಡಿದುಕೊಂಡು ಇದರ ಸುತ್ತಲೇ ಸುತ್ತುತ್ತಿದ್ದಾರೆ, ಬಲಿಪಶುವಿನ ಸುತ್ತಾ ಸುತ್ತುವ ಆಚರಣೆಯ ಪ್ರದರ್ಶನಕಾರರಂತೆ, ವೈದಿಕಶಾಹಿಯ ಯಾವುದೋ ಪಳೆಯುಳಿಕೆಯಂತೆ.
ಹೀಗೆ ಇವರ ಸಂಶೋಧನೆ `ಜಾತಿಗಳು ಇವೆ. ಆದರೆ ಜಾತಿವ್ಯವಸ್ಥೆ ಎಂಬುದು ಇಲ್ಲ' ಎಂದು  ಹೇಳುತ್ತದೆ. ನನಗೆ ತಲೆಕೆಟ್ಟು ಹೋಗಿ ಪಿಯುಸಿ ಓದಿ, ಗಾರೆ ಕೆಲಸ ಮಾಡುವ ಹುಡುಗನೊಬ್ಬನಿಗೆ `ಏನಪ್ಪಾ ಹೀಗೆ ಅಂದರೆ' ಎಂದು ಕೇಳಿದೆ. ಅದಕ್ಕೆ ಅವ `ಇದು ಯಾವ್ತರಪ್ಪಾ ಅಂದ್ರೆ... ಹುಟ್ಟುಸ್ದೇ ಹೆರದೇ ಮಕ್ಳಾಯ್ತು ಅನ್ನೋತರ ಆಯ್ತದಲ್ಲಾ ಸಾರ್!' ಅಂದ! ಈ ಸಂಶೋಧಕರು ಬೆಟ್ಟ ಅಗೆದು ಇಲಿ ಹಿಡಿಯುತ್ತಿದ್ದಾರೆ ಅನಿಸುತ್ತೆ. ಇದರೊಡನೆ ಜಾತಿಗಳ ನಡುವೆ ಮೇಲು ಕೀಳು ಇಲ್ಲ ಅಂತ ತೋರಿಸಲು ದಣಿವರಿಯದ ಸಂಶೋಧನೆ ನಡೆಸುತ್ತಿದ್ದಾರೆ. ಜಾತಿವ್ಯವಸ್ಥೆ, ಜಾತಿಗಳ ನಡುವೆ ಮೇಲು ಕೀಳು ಇದ್ದರೆ ತಾನೇ ಸಾಮಾಜಿಕ ನ್ಯಾಯ, ಮೀಸಲಾತಿ ಇತ್ಯಾದಿಗಳಿಗೆ ಅರ್ಥ. ಅದೇ ಇಲ್ಲ ಎಂದು ಭ್ರಮಿಸುವಂತೆ ಮಾಡಿಬಿಟ್ಟರೆ? ಮೀಸಲಾತಿ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಕದಿಯುವುದಲ್ಲದೆ ಇದು ಮತ್ತೇನು? ಅದಕ್ಕಾಗಿ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಹುಟ್ಟು ಹಾಕಿದ್ದೇ ಬ್ರಿಟಿಷ್ ವಸಾಹತುಶಾಹಿ ಅಂತ `ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ' ಎಂಬಂತೆ ಮಾಡುತ್ತಿದ್ದಾರೆ. ಕಣ್ಣೆದುರು ಕಾಣುವುದನ್ನು ಮರೆಮಾಚಿ ತಮಗೆ ಬೇಕಾದ್ದನ್ನು ವಿಜೃಂಭಿಸಿ ವಾದಿಸುವ ವಕೀಲರಂತಾಗಿಬಿಟ್ಟಿದ್ದಾರೆ.

ಮುಂದುವರೆದಂತೆ ಇವರು ಜಾತಿಯನ್ನು ಜಾತಿಯಷ್ಟಕ್ಕೇ ಉಳಿಯಗೊಡಲೂ ಬಿಡುವುದಿಲ್ಲ. ಇವರ ಚಿಂತನಾ ಲಹರಿ ಹೀಗಿದೆ: “ಜಾತಿಗಣತಿಯು ಸಮಾಜದಲ್ಲಿ ಬದುಕುತ್ತಿರುವ ಜನರ  ಸ್ವ-ಅನುಭವವನ್ನು ಗ್ರಹಿಸುವಂತಿರಬೇಕು. ಲಿಂಗಾಯತ ಎಂಬುದನ್ನು (ಒಂದು) ಜಾತಿಯನ್ನಾಗಿ ಗುರುತಿಸದೆ ಸಾದರು, ಬಣಜಿಗ, ಪಂಚಾಚಾರ್ಯ ಮುಂತಾದ ಸಮಾಜದ ಹತ್ತು ಹಲವು ವಾಸ್ತವ ಗುಂಪುಗಳನ್ನು ಜಾತಿ ಎಂದು ಗುರುತಿಸಬೇಕಾಗುತ್ತದೆ. ಅಂತೆಯೆ ಕುರುಬರನ್ನು ಒಂದು ಜಾತಿಯಾಗಿಸದೆ ಅದರಲ್ಲಿನ ಕಾಡುಕುರುಬ, ಊರುಕುರುಬ, ಹತ್ತಿ ಕಂಕಣ, ಉಣ್ಣೆ ಕಂಕಣ ಎಂಬ `ಸಾಮಾಜಿಕವಾಗಿ ಗುರುತಿಸುವಿಕೆಯುಳ್ಳ' ಜಾತಿಗಳನ್ನು ಗುರುತಿಸಬೇಕಾಗಿದೆ. ಹೀಗೆ ಜನರ ಅನುಭವಕ್ಕೆ ಪೂರಕವಾಗಿಯೇ ಗುರುತಿಸಬೇಕಾಗುತ್ತದೆ”. ಇದು ಈ ಗುಂಪಿನ ವಾದ.  ಇದರ ಜೊತೆಗೆ,  ಭಾರತೀಯತೆ ಎಂದರೆ ಅದು ಆಚರಣೆ ಮತ್ತು ಸಂಪ್ರದಾಯ ಎಂದು ಈ ಸಂಶೋಧಕರು ವಾದಿಸುತ್ತಾರೆ. ಭಾರತದಲ್ಲಿ ಆಚರಣೆ ಮತ್ತು ಸಂಪ್ರದಾಯ ಅಂದರೆ ಏನು? ಇದನ್ನು ಕಣ್ಣು ಮುಚ್ಚಿಕೊಂಡು ಆಚರಣೆ ಉರುಫ್ ಉಪಜಾತಿ ಎಂದುಬಿಡಬಹುದಲ್ಲವೇ? ಅಂದರೆ ಈ ಸಂಶೋಧಕರು ಉಪಜಾತಿಗಳನ್ನು ಉಳಿಸಿಕೊಳ್ಳಲು ಉರುಳುಸೇವೆ ಮಾಡುತ್ತಿದ್ದಾರೆ. ಇವರಿಗೆ ಉಪಜಾತಿಗಳೆಲ್ಲವೂ ಸೇರಿ ಜಾತಿಯಾಗುವುದೂ ಬೇಕಿಲ್ಲ. ಆ ಜಾತಿ ಈ ಜಾತಿ ಬೆರೆತು ಒಂದು ಧರ್ಮವಾಗುವುದೂ ಬೇಕಿಲ್ಲ. ಒಟ್ಟಿನಲ್ಲಿ ಭಾರತೀಯರು ತಂತಮ್ಮ ಉಪಜಾತಿ ಬಚ್ಚಲೊಳಗೆ ಹುಳಗಳಂತಿರಬೇಕು. ಇದನ್ನೆ ಇವರು ಭಾರತೀಯತೆ ಅಂತಾರೆ. ಈ ಹಿಂದೆ ಬ್ರಿಟಿಷರು ಆಳ್ವಿಕೆ ನಡೆಸಲು ಭಾರತವನ್ನು ಜಾತಿಗಳಾಗಿ ಒಡೆದರು ಎಂದು ವಾದಿಸುವ ಇವರು ಈಗ ಯಾರು ಆಳ್ವಿಕೆ ನಡೆಸಲಿ ಎಂದು ಉಪಜಾತಿಗಳನ್ನು ಉಲ್ಬಣಿಸುತ್ತಿದ್ದಾರೆ? ದುಡಿಯುವ ವರ್ಗ ಎಂದೂ ಒಂದಾಗಬಾರದು ಎಂಬ ಈ ಆಶಯದೊಳಗೆ ಏನೇನಿದೆ? ಇಂದು ಕಾರ್ಪೊರೆಟ್ ಸೆಕ್ಟರ್ ಕೃಪಾಪೋಷಿತರಾದ ಕೆಲವು ಎನ್.ಜಿ.ಓ.ಗಳು ಭಾರತದಲ್ಲಿ ಇರುವ ಸಮಸ್ಯೆ, ಪ್ರತ್ಯೇಕತೆಗಳನ್ನು ಉಲ್ಬಣಿಸಿ ದುಡಿಯುವ ವರ್ಗ ಒಂದಾಗದಂತೆ ಕಾಯುವ ಕೆಲಸ ಮಾಡುತ್ತಾ ಸಮುದಾಯ ಆಂದೋಲನಕ್ಕೆ (mass movement) ತೊಡರುಗಾಲು ಹಾಕುತ್ತಿರುವಂತೆಯೇ ಈ ಬಾಲುಗುಂಪೂ ಕೂಡ ಭಾರತದ ಸಾಮಾಜಿಕ ಛಿದ್ರತೆಗಳನ್ನು ಮತ್ತೂ ಛಿದ್ರಗೊಳಿಸುವ ಕೃತ್ಯದಲ್ಲಿ ತೊಡಗಿರಬಹುದಾ? ಭಾರತವು ಉಪಜಾತಿಗಳಾಗಿ ಛಿದ್ರಾತಿಛಿದ್ರವಾದರೆ ಅಮೆರಿಕಾ ಅಥವಾ ಐರೋಪ್ಯ ವಸಾಹತುಶಾಹಿಗೆ ಭಾರತವನ್ನೇ ಆಹಾರವಾಗಿಸಿ ಉಣಬಡಿಸಿದಂತಾಗುವುದಿಲ್ಲವೇ? ದುಡಿಯುವ ವರ್ಗ ಒಂದಾಗದಂತೆ ಮಾಡುವ ಈ ಸಂಶೋಧನೆಯು ಯೂರೋ ಲಿಂಕ್ ಸಂಚಿನ ಫಲವೇ? ಗುಮಾನಿ ಹುಟ್ಟುತ್ತಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದೆ.

ಹಾಗೆ ಇವರು ಜಾತಿಗಳನ್ನು ಉಳಿಸಿಕೊಂಡು ಜಾತಿವ್ಯವಸ್ಥೆ ಇಲ್ಲ ಎನ್ನುವುದರಲ್ಲಿ ಮತ್ತೊಂದು ಒಳಮರ್ಮವೂ ಇದ್ದಿರಬಹುದೇ? ಈ ಭ್ರಮಾಧೀನ ಬಾಲಸಂಶೋಧಕರಿಗೆ, ಜಾತಿ ಹುಟ್ಟುಹಾಕಿದ ಪಿತೃಗಳು ಮೋಕ್ಷ ಕಾಣದೆ ಭೂಮಿ ಮೇಲೆ ಅಲೆದಾಡುತ್ತಿರುವಂತೆ ಆಗಾಗ ಗೋಚರಿಸುತ್ತಾ, ಅದನ್ನು ಮರೆಮಾಚುವ ಹತಾಶ ಪ್ರಯತ್ನ ಇಲ್ಲಿರಬಹುದೇ? ಜಾತಿ ವ್ಯವಸ್ಥೆಯೇ ಇಲ್ಲ ಎಂದು ವಾದ ಕಟ್ಟಿಬಿಟ್ಟರೆ(Fabricated), ಆಗ ಜಾತಿಗಳ ಹುಟ್ಟಿಗೆ ಕಾರಣರು ಯಾರೂ ಅಲ್ಲ ಅಂತಾಗಿ ಬಿಟ್ಟರೆ, ಆಗ ಯಾವ ತಪ್ಪಿನ ಭಾವನೆಯೂ ಇಲ್ಲದೆ ನೆಮ್ಮದಿಯಿಂದ ಇರಬಹುದಲ್ಲ ಎಂದು ಇವರು ಹೊರಟಿದ್ದಾರೆಯೆ?  ಹಾಗಾದರೆ ನೆನಪಿರಲಿ, ಈ ಮರೆಮಾಚಿ ಬರುವ ನೆಮ್ಮದಿಯು- ಆತ್ಮ ಎಂಬುದು ಇದ್ದರೆ ಅದನ್ನೇ ಕೊಂದುಬಿಡುತ್ತದೆ, ಸತ್ಯಕ್ಕೆ ಮುಖಾಮುಖಿಯಾಗುವುದನ್ನು ತಪ್ಪಿಸಿಬಿಡುತ್ತದೆ; ಸಂವೇದನಾಶೀಲ ಸೃಷ್ಟಿಶೀಲ ಮನಸ್ಸಿಗೆ ಎಳ್ಳು ನೀರು ಬಿಟ್ಟಂತೂ ಆಗುತ್ತದೆ. ಇಂಥದೇನಾದರೂ ಇದ್ದಲ್ಲಿ ಈ ಸಂಶೋಧಕರು ಅದನ್ನು ನಿವಾರಿಸಿಕೊಂಡರೆ ಅವರಿಗೇ ಕ್ಷೇಮ. ಹಾಗೂ ಸುತ್ತಲಿನ ಸಮಾಜಕ್ಕೂ ಒಳ್ಳೆಯದು.

ಈ ಜಾತಿಯಾದ ಮೇಲೆ ಈ ಸಂಶೋಧಕರು ಮುಂದೆ ಭಾರತದ ಧರ್ಮಗಳ ಕತ್ತು ಹಿಸುಕಲು ಹೊರಡುತ್ತಾರೆ. ಅದಕ್ಕಾಗಿ ಈ ಸಂಶೋಧಕರು, ಕ್ರಿಶ್ಚಿಯನ್ ಥಿಯಾಲಜಿ ಪರಿಭಾಷೆಯಲ್ಲಿ ಭಾರತವನ್ನು ನೋಡಿದ ದೃಷ್ಟಿಕೋನದಿಂದಾಗಿ ಇಲ್ಲಿ ರಿಲಿಜನ್ ಪರಿಕಲ್ಪನೆ ಬಂತೆಂದೂ ಈ ದೃಷ್ಟಿಕೋನದ ಕಾರಣವಾಗೆ ಬುದ್ಧ ಅಲ್ಲಮ ಬಸವಣ್ಣ ಮುಂತಾದವರನ್ನು ಪ್ರೊಟೆಸ್ಟೆಂಟ್ ಸುಧಾರಕರಂತೆ ಭಾವಿಸಲು ಕಾರಣವಾಯಿತು ಎಂದೂ ವಾದಿಸುತ್ತಾರೆ. ಭಾರತದ ದೇವಸ್ಥಾನಗಳನ್ನು, ಮಸೀದಿಗಳನ್ನು ಅಗೆಯುತ್ತ ಆಳಕ್ಕೆ ಹೋದರೆ ಬೌದ್ಧ,ಜೈನ, ಲಿಂಗಾಯತ ಎಲ್ಲವೂ ಒಂದರೊಳಗೊಂದು ಸಿಕ್ಕುವುವು. ಕ್ರಿಸ್ತ ಹುಟ್ಟುವ ಮೊದಲು ಇಲ್ಲಿ ಮತಾಂತರ ಜರುಗಿದೆ. ಕೇವಲ ಸಂಪ್ರದಾಯ ಆಚರಣೆಗಳೇ ಭಾರತವಾಗಿದ್ದರೆ ಇದೆಲ್ಲ ಹೇಗಾಗುತ್ತಿತ್ತು? ಇವರ ಉದ್ದಿಶ್ಯ ಇಷ್ಟೆ ಅನ್ಸುತ್ತೆ: ಭಾರತದಲ್ಲಿ ಯಾವುದೇ ಧರ್ಮಗಳು ಇರಬಾರದು. ಜಾತಿಗಳೂ ಇರಬಾರದು. ಉಪಜಾತಿಗಳು ಮಾತ್ರ ಇದ್ದು ಇದು ಭಾರತವಾಗಿರಬೇಕು. ಇದು ಭಾರತ ಇವರಿಗೆ.

ಜೊತೆಗೆ, ಈ ಸಂಶೋಧಕರು ಭಾರತವನ್ನು ತಮಗೆ ಬೇಕಾದಂತೆ ಗ್ರಹಿಸುತ್ತಾರೆ ಎಂಬುದಕ್ಕೆ ಉದಾಹರಣೆ- ವಚನಗಳನ್ನು ಕುರಿತು ಇವರು ಆಡುತ್ತಿರುವ ಮಾತು. ವಚನಗಳು ಇಡೀ ಕರ್ನಾಟಕವನ್ನು ಉದ್ದೇಶಿಸಿ ಮಾತಾಡುತ್ತಿದ್ದರೂ, ಈ ವಚನಗಳು ತನ್ನ ಮಾರ್ಗದ ಸಾಧಕರ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತವೆ ಎನ್ನುವ ಇವರು ತಾವು ಮಾತ್ರ ಇಡೀ ಭಾರತವನ್ನೇ ತಮ್ಮದು ಎನ್ನುವಂತೆ ಮಾತಾಡುತ್ತಾರೆ. ಹಾಗೇ ಬಾಲಗಂಗಾಧರರು ಅಧ್ಯಾತ್ಮದ ಬಗ್ಗೆ ಬರೆಯತ್ತಾ `ಪಾಶ್ಚಾತ್ಯರ ಆನಂದದ ಕಲ್ಪನೆಯಲ್ಲಿ ಈ ಪ್ರಪಂಚವನ್ನೇ ಬದಲಾಯಿಸುವ ಕಾರ್ಯಕ್ರಮ ಮೂಲಭೂತವಾಗಿರುತ್ತದೆ. ಆದರೆ ಭಾರತೀಯರ ಅಧ್ಯಾತ್ಮವು ಕಂಡುಕೊಂಡ ಉತ್ತರವೆಂದರೆ ಪ್ರಪಂಚವು ಈಗಿರುವಂತೆಯೇ ಮನುಷ್ಯನು ಯಾವುದೇ ಅವಸ್ಥೆಯಲ್ಲೂ ಆ ಆನಂದವನ್ನು ಹೊಂದುವುದು ಸಾಧ್ಯ. ಈ ಸ್ಥಿತಿಯನ್ನು ತಲುಪಲಿಕ್ಕೆ ಪ್ರಪಂಚವನ್ನು ಬದಲಿಸುವುದರ ಬದಲಾಗಿ ಒಬ್ಬನು ತನ್ನ ಪ್ರಾಪಂಚಿಕ ಅನುಭವದಿಂದಲೇ ಮುಕ್ತನಾಗಬೇಕು' ಎನ್ನುತ್ತಾರೆ. ತನ್ನ ಸುತ್ತಲಿನ ಸಮಾಜದ ಬಿಡುಗಡೆಯೊಳಗೇ ತನ್ನ ಬಿಡುಗಡೆಯೂ ಇದೆ ಎಂಬ ಆಶಯದ ಮಹಾಯಾನ, ವಚನಧರ್ಮ ಮುಂತಾದವು ಇವರ ಕಣ್ಣಿಗೆ ಕಾಣುತ್ತಿಲ್ಲ. ಕಂಡರೂ ಭೂಗತಮಾಡುತ್ತಿದ್ದಾರೆ. ವೈದಿಕದ `ಅಹಂ'ಕಾರವು ವೈದಿಕ `ಶಾಹಿ'ಯಾಗಿ  ಭಾರತದಲ್ಲಿ ತಾನು ಮಾತ್ರವೇ  ವ್ಯವಸ್ಥೆ,  ತಾನು ಮಾತ್ರವೇ ಆಳ್ವಿಕೆ ಎಂಬ `ಶಾಹೀ' ಕುಬುದ್ಧಿ ಕುತಂತ್ರವನ್ನು ಬಿಟ್ಟು `ವೈದಿಕ'ವಾಗಿ ತನ್ನಷ್ಟಕ್ಕೆ ತಾನೇ ಇದ್ದರೆ ಅದಕ್ಕೂ ಕ್ಷೇಮ. `ವೈದಿಕ'ದ ಹಿತವೂ ಇಲ್ಲಿದೆ. ಯಾಕೆಂದರೆ, ಈಗ ಇವರು ಆರಂಭಿಸಿರುವ ಕ್ರಿಶ್ಚಿಯನ್ ವಸಾಹತುಶಾಹಿ ಮುಗಿದು, ಮುಂದೆ ಈ ಸಂಶೋಧಕರು ಇಸ್ಲಾಂ ವಸಾಹತುಶಾಹಿಗೆ ಬಂದು ಅಬ್ಬರಿಸಿ, ಈ ಪರಿಪಾಠ ಮುಂದುವರೆದರೆ ಅದು ಎಲ್ಲಿಗೆ ತಲುಪುತ್ತದೆ? ಈ ನವಗೋಸುಂಬೆ ವೈದಿಕಶಾಹಿಯ ಕುತ್ತಿಗೆಗೆ ಕವೆಗೋಲು ಬೀಳುವಲ್ಲಿಗೆ ಬಂದು ನಿಲ್ಲುತ್ತದೆ.

ವೈದಿಕಶಾಹಿಯ ಇತಿಹಾಸ ಪುರಾಣವು ಈ ಸಂಶೋಧಕರ ಇಂಥದೇ ಪಟ್ಟುಗಳನ್ನು  ಹಾಕಿಕೊಂಡು ಲಾಗಾಯ್ತಿನಿಂದ ಬರುತ್ತ- ಇಲ್ಲಿನ ಧರ್ಮಗಳನ್ನು ಜಾತಿಯನ್ನಾಗಿ ಉಳಿಸಿಕೊಂಡು ನೀಚಗೊಳಿಸಿದೆ. ಉದಾ: ಜೈನ, ಲಿಂಗಾಯತ. ಆದರೆ ಜಾತಿಯಾಗಿ ಬಗ್ಗದ ಧರ್ಮಗಳನ್ನು ಇದೇ ವೈದಿಕಶಾಹಿಯು ಭಾರತದ ಆಚೆಗೆ ಪಲಾಯನ ಮಾಡುವಂತೆ ಮಾಡಿದೆ. ಉದಾ-ಬೌದ್ಧ. ಈಗ ಬೌದ್ಧವು ತನ್ನ ಮನೆಗೆ ಅಂದರೆ ಭಾರತಕ್ಕೆ ಮರಳುತ್ತಿದೆ. ಹಾಲಿ ಜಾತಿಯಾಗಿಬಿಟ್ಟಿರುವ ವಚನಧರ್ಮವೂ ತನ್ನೊಳಗಿನ ವಚನಗಳೊಳಗಿನ ಅಂತಃಸತ್ವದಿಂದಲೇ ಮುಂದೊಂದು ದಿನ ಜಾತಿ ಬಚ್ಚಲಿನಿಂದ ಹೊರಬಂದು ಧರ್ಮವೂ ಆಗಿಬಿಡುವ ಸಾಧ್ಯತೆಯನ್ನು ಒಳಗೊಂಡಿದೆ. ಇದಾದರಂತೂ ಕರ್ನಾಟಕದ ನೆಲದ ಫಸಲಾದ ವಚನಧರ್ಮವು ಇಡೀ ಜಗತ್ತಿನ ದುಡಿಯುವ ವರ್ಗದ ಧರ್ಮವಾಗುವ ಸಾಧ್ಯತೆಯೂ ಅದರೊಳಗೇ ಇದೆ. ಇದೆಲ್ಲದರ ವಾಸನೆ ಹಿಡಿದ ವೈದಿಕಶಾಹಿಗೆ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಈ ಉಪಜಾತಿ ಸಿದ್ಧಾಂತಿಗಳು ಈ ಸಂಶೋಧನೆಯ ಮಡೆಮಡೆಸ್ನಾನದ ಉರುಳುಸೇವೆ ಮಾಡುತ್ತಿದ್ದಾರೆ. ಬೌದ್ಧ, ವಚನ ಇತ್ಯಾದಿ ಸತ್ವಶಾಲಿ ಧರ್ಮಗಳನ್ನು ಹಿಡಿದು ಹಿಡಾಹೊಡೆದು ಅವುಗಳನ್ನು ಜಾತಿ ಉಪಜಾತಿಗಳಾಗಿಸಲು ಬ್ಯುಸಿಯಾಗಿದ್ದಾರೆ. ಇವರ ಪ್ರಕಾರ, ಧರ್ಮಗಳು ಭಾರತದಲ್ಲಿ ಬದುಕುಳಿಯಲೇಬೇಕಾದರೆ ಅವು ಜಾತಿ ಉಪಜಾತಿಯಾಗಿ, ಅಂದರೆ ಸಂಪ್ರದಾಯ ಆಚರಣೆಗಳಾಗಿ ಜೀವಚ್ಛವಗಳಂತೆ ನೀಚವಾಗಿ ಉಳಿಯಬೇಕು- ಇದಕ್ಕಾಗಿ ನಡೆಯುತ್ತಿರುವ ಬೌದ್ಧಿಕ ಕಸರತ್ತಲ್ಲದೆ ಇದು ಮತ್ತೇನು? ಯಾವುದೋ ಕಾಲದಲ್ಲಿ ಕಟ್ಟಲ್ಪಟ್ಟ ಸಂಪ್ರದಾಯ,ಆಚರಣೆಗಳೂ ಅವು ಕಟ್ಟಲ್ಪಟ್ಟ ಕಾಲದಲ್ಲಿ ಆಹಾರವಾಗಿರಲೂಬಹುದು. ಆದರೆ ಅದೇ ಆಹಾರ ಕಾಲಾನಂತರ ಮಲವಾಗಿ ಪರಿಣಮಿಸಿಬಿಟ್ಟಿರುತ್ತದೆ. ಈ ಮಲದೇವತಾ ಅರ್ಚಕರಿಗೆ ಏನೆನ್ನಬೇಕು?
ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?

ಭಾರತದಲ್ಲಿ ಆಚರಣೆ, ಸಂಪ್ರದಾಯಗಳು ಆಳ್ವಿಕೆ ನಡೆಸುವುದಾದರೆ ಏನೇನು ದೃಶ್ಯಾವಳಿಗಳನ್ನು ನಾವು ಕಾಣಬೇಕಾಗಿಬರಬಹುದು: ಕುದುರೆ ಮೇಲೆ ಓರ್ವ ಮಹಿಳೆ ಅಲಂಕೃತಳಾಗಿ ಒಂದು ಕೈಲಿ ಕನ್ನಡಿ ಇನ್ನೊಂದು ಕೈಲಿ ನಿಂಬೆಹಣ್ಣು ಹಿಡಿದು ಹಸನ್ಮುಖಳೋ ಉನ್ಮತ್ತಳೋ ಆಗಿ ಪಯಣಿಸುತ್ತಿರುತ್ತಾಳೆ. ಸುತ್ತ ಜನ ಜೈಕಾರ ಹಾಕುತ್ತಾ ಸಾಗುತ್ತಾ ಗಂಡನ ಹೆಣದೊಡನೆ ಚಿತೆಗೆ ಆಹುತಿಯಾಗುತ್ತಾಳೆ. ಅವಳೇನಾದರು ಬೆದರಿ ಓಡಿದರೆ ಸುತ್ತ ಆವರಿಸಿಕೊಂಡವರು ಹಿಡಿದು ತಂದು ಅವಳನ್ನು ಆ ಚಿತೆಗೆ ಎಸೆಯುತ್ತಾರೆ. ಆಗ ಸತಿ ಸಹಗಮನ ಪೂರ್ಣಗೊಂಡು ಮಾಸ್ತಿಕಲ್ಲು ಅಲ್ಲಿ ನಿಲ್ಲುತ್ತದೆ. ಇನ್ನೊಂದು ಕಡೆ  ಪುಟ್ಟ ಬಾಲೆಯೊಬ್ಬಳಿಂದ ವಯಸ್ಕನಿಗೆ ಮಾಲೆ ಹಾಕಿಸುತ್ತಾರೆ, ಅವ ಸತ್ತರೆ ಈ ಕಂದಮ್ಮಗೆ ತಲೆ ಬೋಳಿಸಿ ವಿಧವೆ ಪಟ್ಟ ಕಟ್ಟಿ ಯಾಕಾದರೂ ಬದುಕಿದೆನೊ ಎನ್ನಿಸಿಬಿಡುತ್ತಾರೆ. ಅಸ್ಪೃಶ್ಯ, ತಳಸಮುದಾಯ, ಮಹಿಳೆ, ಶೂದ್ರರನ್ನು ಶಿಕ್ಷಣ, ಸಾಮಾಜಿಕ ನ್ಯಾಯ ಎಲ್ಲಾ ಕ್ಷೇತ್ರದಲ್ಲೂ ವಂಚಿತರನ್ನಾಗಿಸಿ ಸಮಾನತೆ, ಸಾಮಾಜಿಕ ನ್ಯಾಯದಿಂದ ಮತ್ತೂ ದೂರದೂರವಾಗಿಸುತ್ತಾರೆ- ಇತ್ಯಾದಿ ಇತ್ಯಾದಿಯಾಗಿ ಈ ಸಂಪ್ರದಾಯ, ಆಚರಣೆಗಳು ಹೆಚ್ಚಾದಂತೆ ಇದು ಕೊನೆಗೆ ನರಬಲಿ ಕೇಳುತ್ತದೆ. ಈ ಸಂಶೋಧಕರ ಪ್ರಕಾರ ಇದೆಲ್ಲಾ ಆಚರಣೆ ಪ್ರಧಾನ ಜ್ಞಾನದ (Performative Knowled-ge) ಭಾರತೀಯತೆ ಆಗುತ್ತದೆ!
ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?

`ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ' ಎಂಬ ಬಸವಣ್ಣನ ವಚನ ಉದ್ಧರಿಸಿ `ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ' ಎನ್ನುವ ಈ ಸಂಶೋಧಕರಿಗೆ- ಅಯ್ಯೊ, ಲೋಕದ ಡೊಂಕಿನ ಭಾಗವಾಗಿಯೇ ನಿನ್ನೊಳಗೂ ಡೊಂಕಿರುತ್ತದೆ, ಈ ಡೊಂಕನ್ನು ನೀನೂ ತಿದ್ದಿಕೊಂಡರೆ ಅಷ್ಟರ ಮಟ್ಟಿಗೆ ಲೋಕದ ಡೊಂಕೂ ಸರಿಯಾಗುತ್ತದೆ ಎಂಬ ಅಂತರಂಗ ಬಹಿರಂಗ ಶುದ್ಧಿಯ ಧ್ವನಿ ತಿಳಿಯದವರಿಗೆ ಹೇಗೆ ಹೇಳಲಿ?

ಗಾಂಧಿ ತಾನೊಬ್ಬ ಹಿಂದೂ, ಹಿಂದೂ ಎಂದು ಬಾಯಿ ತೆರೆದಾಗಲೆಲ್ಲಾ ಜಪಿಸಿದರೂ `ಸತ್ಯವೇ ನನ್ನ ಧರ್ಮ, ನಿತ್ಯ ಪ್ರಾರ್ಥನೆಯ ಮೂಲಕ ನಾನು ಸತ್ಯದ ಸಾಮೀಪ್ಯವನ್ನು ಬಯಸುತ್ತೇನೆ. ಎಲ್ಲಾ ಜೀವಿಗಳ ಸೇವೆಗಾಗಿ ನಿರಂತರ ತನ್ನನ್ನು ವ್ಯಯಿಸುವುದು ಧರ್ಮ' ಎಂದು ಹೇಳುವ ಗಾಂಧಿಯೊಳಗೆ ಏಸುಕ್ರಿಸ್ತ  ಕುಳಿತಿರುವುದನ್ನು ಕಾಣದ, ಈ ಒಳಗಣ್ಣು ಇಲ್ಲದವರಿಗೆ ಏನು ತಾನೆ ಹೇಳುವುದು?
ಊರಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ಕುಟುಂಬವೊಂದಕ್ಕೆ ಊರ ನಡುವೆ ವಸತಿ ಕಲ್ಪಿಸಿಕೊಟ್ಟಲ್ಲಿ ಆಗ, ಸುಮ್ಮನಿದ್ದಂತೆ ಇದ್ದ ಜಾತಿಗಳು ತಾವೇ ಒಂದು ವ್ಯವಸ್ಥೆಯಾಗಿ ರೂಪು ತಳೆದು ಭುಗಿಲೇಳುವುದನ್ನು ಕಾಣಲಾಗದ ಪರದೇಶಿಗಳಿಗೆ ಹೇಗೆ ಹೇಳುವುದು? ಹೇಗೆ ತಿಳಿಸುವುದು?

ಈ ಎಸ್.ಎನ್.ಬಾಲಗಂಗಾಧರ ಮತ್ತವರ ಸಂಶೋಧನಾ ತಂಡದ ರೋಗಿಷ್ಟ ಸಂಶೋಧನಾ ವಿಚಾರಗಳು `ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?' ಎಂಬ ಡಂಕಿನ್ ಝಳಕಿ ಸಂಪಾದಿಸಿ ನಿರೂಪಿಸಿದ ಪುಸ್ತಕದಲ್ಲಿ ಹೇಗಿವೆ ಅಂದರೆ, (ರಾಜೇಂದ್ರ ಚೆನ್ನಿಯವರು ಪ್ರಸ್ತಾಪಿಸಿರುವ) ಈ ಪುಸ್ತಕದ ಪುಟ 123ರಲ್ಲಿ “ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ದಲಿತರೇ (1999-2000ದಲ್ಲಿ) ಇರುವಾಗ ಕೇವಲ 38 (ದಲಿತರ) ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ?' ಎಂದು ಈ ಸಂಶೋಧಕರು ಪ್ರಶ್ನಿಸುತ್ತಾರೆ. ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ತೋರಿಸಲು ಹೆಚ್ಚು ದಲಿತರ ಕೊಲೆಗಳ ದಾಖಲಾತಿ ಕೇಳುವ ಈ ಸಂಶೋಧಕರು ಮನುಷ್ಯರಾ ಎಂದು ಮೊದಲು ಸಂಶೋಧಿಸಬೇಕಾಗಿದೆ. ಮನುಧರ್ಮಶಾಸ್ತ್ರದ ಹೆಣದೊಳಗಿಂದ ಉತ್ಪತ್ತಿಯಾದ ಹುಳುಗಳಂತಾಡುತ್ತಿರುವ ಈ ಬಾಲೂಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ.

Sunday, April 28, 2013

`ಜನ ಸಾಹಿತ್ಯ ಸಮಾವೇಶ : ಹೊಸ ಸಾಧ್ಯತೆ ಹೊಸ ಪ್ರಶ್ನೆಆರ್. ರಾಮಕೃಷ್ಣ6
..ಜಾಗತೀಕರಣ ನೀತಿಗಳು ಜನರ ಬದುಕಿನಲ್ಲೂ ಸಾಂಸ್ಕೃತಿಕ ಬದುಕಿನಲ್ಲೂ ಹತ್ತೆಂಟು ತಲ್ಲಣಗಳನ್ನು ಹುಟ್ಟು ಹಾಕಿವೆ….ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬದುಕು ಅರಸಿ ಬಡ ಜನ ಗುಳೆ ಏಳುತ್ತಿದ್ದಾರೆ. ಮನುಷ್ಯ ಸಂಬಂಧಗಳು, ಕುಟುಂಬ ಸಂಬಂಧಗಳು ಪುನರ್ ವ್ಯಾಖ್ಯಾನಕ್ಕೆ ಒಳಗಾಗುತ್ತಿವೆ….. ಮಾರುಕಟ್ಟೆ ಮನೋಧರ್ಮ ವಿಸ್ತರಿಸುತ್ತಿದೆ…ಅಂತರ ರಾಷ್ಟ್ರೀಯ ಬಂಡವಾಳ, ಮಾರುಕಟ್ಟೆ ಸಂಸ್ಕೃತಿ ಎಲ್ಲದರ ಮೇಲೂ ದಾಳಿ ಮಾಡುತ್ತಿವೆ. ಆಳುವ ಸಕರ್ಾರಗಳು ಕಾಪರ್ೋರೇಟ್ ಜಗತ್ತಿನ ಕೈ ಚೀಲಗಳಾಗುತ್ತಿವೆ. ಕಾಪೋರೇಟ್ ಲೂಟಿಗೆ ಸಮುದಾಯದ ಒಪ್ಪಿಗೆಯನ್ನು ಉತ್ಪಾದಿಸುವುದಕ್ಕೆ ಸಾಹಿತ್ಯ-ಸಾಹಿತಿಗಳನ್ನು ಬಳಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ದೇಶ ಕೋಶಗಳನ್ನು ಹರಾಜು ಹಾಕಲು ಸಾರ್ವಜನಿಕ ಒಪ್ಪಿಗೆ ಪಡೆಯಲು ಯತ್ನಿಸಲಾಗುತ್ತಿದೆ….ವೈಚಾರಿಕತೆಯ ಕತ್ತನ್ನೆ ಕತ್ತರಿಸಲಾಗುತ್ತಿದೆ….
ಹೀಗೆ ಮುಂದುವರೆದಿತ್ತು ಮಾತು.
…..70-80 ರ ದಶಕದಲ್ಲಿ ಪುರೋಹಿತಶಾಹಿ, ಅರಸೊತ್ತಿಗೆ, ಪಾಳೇಗಾರಿ ಮೌಲ್ಯಗಳ ವಿರುದ್ದ ಸಿಡಿದು ಬಂದ ಬಂಡಾಯ, ದಲಿತ, ಮಹಿಳಾ ಚಳುವಳಿಗಳು ಜನಪರ ಮೌಲ್ಯಗಳನ್ನು ಪ್ರತಿನಿಧಿಸಿ ಅಂದಿನ ಸಂದರ್ಭದ ಅಗತ್ಯಗಳಿಗೆ ಸ್ಪಂದಿಸಿ ತಮ್ಮ ಕರ್ತವ್ಯ ನಿಭಾಯಿಸಲು ಶ್ರಮಿಸಿದವು. ಆದರೆ ಇಂದಿನ ಸಂದರ್ಭದ ಅಗತ್ಯಗಳಿಗೆ ಅವು ಸ್ಪಂದಿಸುತ್ತಿಲ್ಲ. ಈ ವೇದಿಕೆಗಳೀಗ ಬಹುತೇಕ ಕ್ರಿಯಾಶೀಲತೆ ಇಲ್ಲದೇ ಸ್ಥಗಿತವಾಗಿವೆ.
ಹಿಂದೆ `ಕಲೆಗಾಗಿ ಕಲೆ’ ಎಂಬ ವಾದವನ್ನು ವಿರೋಧಿಸಿ `ಜನತೆಗಾಗಿ ಕಲೆ’ ಎಂಬ ನೆಲೆಯಲ್ಲಿ ಪ್ರಗತಿಪರ ಸಾಹಿತ್ಯ ಚಳುವಳಿ ಬೆಳೆದು ಬಂತು. ಈ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು “ ಘೋಷಣೆಗಳು, ಕಲಾತ್ಮಕತೆ ಇಲ್ಲದ ಸವಕಲು ಸಾಹಿತ್ಯ” ಎಂದು ಟೀಕಿಸಲಾಯಿತು. ಈಗ `ಸಾಹಿತಿಗಳು ಯಾವುದೇ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಅದು ಸಾಹಿತಿಯ ಸೃಜನ ಶೀಲತೆಗೆ ಮಾರಕ’ ಎಂಬ ವಾದವನ್ನು ಹರಿಯ ಬಿಡಲಾಗುತ್ತಿದೆ. ಸಾಹಿತಿ ಮುಕ್ತವಾಗಿ, ಸ್ವತಂತ್ರವಾಗಿ ಯೋಚಿಸಬೇಕು, ಸಾಹಿತ್ಯಕ್ಕೆ ಯಾವುದೇ ಸಿದ್ದಾಂತದ ಹೊರೆ-ಬಾರ, ಚೌಕಟ್ಟು-ನೆಲೆಗಟ್ಟು ಅಗತ್ಯವಿಲ್ಲ..” ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಪರ್ೋರೇಟ್ ವಲಯ ಪ್ರಾಯೋಜಿಸುವಂತಹ ಪ್ರವೃತ್ತಿಗಳು ಹೆಚ್ಚುತ್ತಿವೆ. ಇಂತಹ ಅಪಾಯಕಾರಿ ಜನವಿರೋಧಿ ಪ್ರವೃತ್ತಿಗಳ ವಿರುದ್ದ ಇಂದಿನ ಸಂದರ್ಭದ ಸವಾಲುಗಳನ್ನು ಎದುರಿಸುವ ಶಕ್ತಿಶಾಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಳುವಳಿಯನ್ನು ಹುಟ್ಟು ಹಾಕಬೇಕು…..
ಇದು ಮಾಚರ್್ 23 ಮತ್ತು 24, 2013 ರಂದು ಎರಡು ದಿನಗಳ ಕಾಲ ಧಾರವಾಡದಲ್ಲಿ ನಡೆದ `ಜನ ಸಾಹಿತ್ಯ ಸಮಾವೇಶ’ದಲ್ಲಿ ವಿಭಿನ್ನ ಗೋಷ್ಠಿಗಳಲ್ಲಿ, ಸಂದರ್ಭಗಳಲ್ಲಿ ಕೇಳಿ ಬಂದ ಮಾತುಗಳು ಮತ್ತು ಮಾತಿನ ಸಾರ.
`ವರ್ತಮಾನದ ತವಕ-ತಲ್ಲಣಗಳು’
ವರ್ತಮಾನದ ತವಕ ತಲ್ಲಣಗಳು ಎಂಬ ಗೋಷ್ಠಿಯಲ್ಲಿ ನಾನಾ ಸಾಹಿತಿಗಳು ಚಿಂತಕರು ಮಾತನಾಡಿದರು. ಕೋಮುವಾದ, ಅಸ್ಪೃಶ್ಯತೆ, ಜಾತೀಯತೆ, ಮಹಿಳೆಯರ ಮೇಲಿನ ಕ್ರೌರ್ಯ, ದೌರ್ಜನ್ಯಗಳು…ಜಾಗತೀಕರಣದ ಹುನ್ನಾರಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ, ಬಂಡವಾಳಗಾರರಿಗೆ ರೈತರ ಭೂಮಿ ಕಿತ್ತುಕೊಳ್ಳುವ ಸಂಚುಗಳು, ಪರಿಸರದ ಮೇಲೆ ನಡೆಯುತ್ತಿರುವ ಆಕ್ರಮಣಗಳು…ಮುಂತಾದ ನಾನಾ ಅಂಶಗಳನ್ನು ಗುರುತಿಸಲಾಯಿತು. “ ಪ್ರಭುತ್ವ ಮತ್ತು ಪ್ರಭುತ್ವದ ಶಕ್ತಿಗಳಿಂದ ಶೋಷಣೆಗೆ ಒಳಗಾದ ಜೀವಗಳ ಪರವಾಗಿ ಈ ಸಮಾವೇಶದ ಲೇಖಕರು ನಿಲ್ಲುತ್ತಾರೆ ಮತ್ತು ಪ್ರಭುತ್ವ ಹಾಗೂ ಪ್ರಭುತ್ವ ಶಕ್ತಿಗಳ ಶೋಷಣೆಯನ್ನು ಸಮಾವೇಶದ ಲೇಖಕರು ಖಂಡಿಸುತ್ತಾರೆ” ಎಂಬ ಎರಡು ವಾಕ್ಯಗಳ ನಿರ್ಣಯವನ್ನು ಸಮಾವೇಶ ಕೊನೆಯಲ್ಲಿ ಅಂಗೀಕರಿಸಿತು. ಸಾಹಿತಿ, ಲೇಖಕರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಭಟನೆಗೆ ಇಳಿಯುವುದು, ಬರೆಯುವಷ್ಟೇ ಮುಖ್ಯ. ಅಥವಾ ಅದಕ್ಕಿಂತಲೂ ಮುಖ್ಯ ಎಂಬ ಅಭಿಪ್ರಾಯದ ಪ್ರತಿಪಾದನೆಗಳೂ ನಡೆದವು. ಇಂತಹ ಕ್ರಿಯಾಶೀಲತೆಗಳ ನಡುವೆ ಬಿಡುವಾದರೆ ಮಾತ್ರ ಬರೆಯುವೆ ಎಂದು ಕೆಲವರು ಘೋಷಿಸಿದರು. ಶೋಷಿತ ಜನಸಮುದಾಯಗಳ ಒಗ್ಗಟ್ಟನ್ನು ಮುರಿಯುವ-ಒಡಕು ತರುವ ಪ್ರಯತ್ನಗಳ ವಿರುದ್ದ ಎಚ್ಚರಿಕೆಯ ಮಾತುಗಳು ಕೇಳಿ ಬಂದವು. ಪ್ರಶಸ್ತಿ, ಸ್ಥಾನ ಮಾನ, ಸವಲತ್ತುಗಳ ಆಕರ್ಷಣೆಗೆ ಬಲಿಬಿದ್ದ ಸಾಹಿತಿಗಳು ಜನಪರ ಚಳುವಳಿಯ ಆಶಯಗಳ ವಿರುದ್ದವಾಗಿ ಪ್ರಭುತ್ವದ ಸೇವೆಗೆ ನಿಂತರು. ದಮನಕಾರಿ ಪ್ರಭುತ್ವಗಳಿಗಿಂತ `ಮೃದು ಧೋರಣೆ’ಯ ಪ್ರಭುತ್ವಗಳು ಜನಪರ ಸಾಹಿತಿಗಳನ್ನು ಭ್ರಷ್ಟಗೊಳಿಸಿ ಜನಪರ ಸಾಹಿತ್ಯಿಕ-ಸಾಂಸ್ಕೃತಿಕ ಚಳುವಳಿಗಳನ್ನು ದುರ್ಬಲಗೊಳಿಸಿದವು. ಸಾಹಿತಿಗಳು ವೈಯುಕ್ತಿಕ ಹಿತಾಸಕ್ತಿಗಳನ್ನು ಮೀರಿ ಜನಹಿತಕ್ಕೆ ಬದ್ದವಾಗಬೇಕು. ಸಾಹಿತ್ಯ-ಚಳುವಳಿ ಬೇರೆ ಬೇರೆ ಅಲ್ಲ. ಸಾಹಿತ್ಯ ಚಳುವಳಿ ಜನ ಚಳುವಳಿಗಳ ಭಾಗವಾಗಬೇಕು. ಬಂಡಾಯ, ದಲಿತ ಚಳುವಳಿಯ ಅರಂಭಿಕ ಹಂತದಲ್ಲಿ ಸೃಷ್ಟಿಯಾದ ಸಾಹಿತ್ಯಕ್ಕಿಂತ ಇಂದು ಹೆಚ್ಚು ಸತ್ವಶಾಲಿಯಾದ ಜನಪರ ಸೃಜನಶೀಲ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಹೊಸ ತಲೆಮಾರು ಜನಪರವಾದ ಹೊಸ ಸಾಹಿತ್ಯ ಚಳುವಳಿಯನ್ನು ಆರಂಭಿಸಬೇಕು. ಇದಕ್ಕೆ ಹಿರಿಯರು, ಅವರ ಅನುಭವ ಗೊಬ್ಬರದಂತೆ ಒದಗಬೇಕು ಎಂಬ ಆಶಯಗಳು ಸಮಾವೇಶದಲ್ಲಿ ವ್ಯಕ್ತವಾದವು. ಈ ಜನಪರ ಸಾಹಿತ್ಯ ಚಳುವಳಿ ಬಲಪಂಥೀಯತೆಯನ್ನು ತಿರಸ್ಕರಿಸುತ್ತದೆ.ಇದಕ್ಕೆ ಪ್ರಗತಿಪರ, ಎಡಪಂಥೀಯ ನೆಲೆಗಟ್ಟು ಇರುತ್ತದೆ. ಇಂತಹ ಸೈದ್ದಾಂತಿಕ ನೆಲೆಗಟ್ಟು ಸಾಹಿತಿಯ ಜನಪರತೆಗೆ, ಬದ್ದತೆಗೆ ಆಧಾರವಾಗುತ್ತದೆ. ಸಾಹಿತ್ಯಿಕ- ರಾಜಕೀಯ ಪ್ರಗ್ನೆಯನ್ನು ವಿಸ್ತರಿಸುತ್ತದೆ. ಕಲಾತ್ಮಕತೆಗೆ ಇದರಿಂದ ಯಾವ ಧಕ್ಕೆ ಇಲ್ಲ ಎಂದೂ ಸ್ಪಷ್ಟ ಪಡಿಸಲಾಯಿತು.
ಸಾಹಿತ್ಯ ಚಳುವಳಿಯನ್ನು ಮುಂದೊಯ್ಯುವ ಉದ್ದೇಶಕ್ಕೆಂದು ರಾಜ್ಯ ಮಟ್ಟದ ಸಂಘಟನೆಯ ಅಗತ್ಯವೆಂದು ಅದನ್ನು `ಕನರ್ಾಟಕ ಜನ ಸಾಹಿತ್ಯ ವೇದಿಕೆ’ ಎಂದು ಹೆಸರಿಸಿ ಅದಕ್ಕೆ ಹತ್ತು ಜನ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.ಮಹಾರಾಷ್ಟ್ರದ ಖ್ಯಾತ ದಲಿತ ಸಾಹಿತಿ ಲಕ್ಷ್ಮಣ ಗಾಯಕ್ವಾಡ್ ಅವರು ಸಮಾವೇಶವನ್ನು ಉದ್ಘಾಟಿಸಿದರು. ಡಾ. ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಭಾನು ಮುಷ್ತಾಕ್, ಎಂ.ಡಿ. ಒಕ್ಕುಂದ ಮುಂತಾದವರು ಪಾಲ್ಗೊಂಡಿದ್ದರು. ಡಾ. ರಹಮತ್ ತರಿಕೆರೆ, ಬಿ.ಎಂ. ಪುಟ್ಟಯ್ಯ, ಡಾ. ಸಿದ್ದನಗೌಡ ಪಾಟೀಲ, ಎಚ್.ಎಸ್. ಅನುಪಮ, ದು. ಸರಸ್ವತಿ. ಡಾ. ವಿನಯ, ಬಸವರಾಜ ಸೂಳಿಬಾವಿ, ಬಂಜಗೆರೆ ಜಯಪ್ರಕಾಶ್, ಹೀಗೆ ಸಾಹಿತ್ಯ ಚಳುವಳಿ, ಜನ ಚಳುವಳಿಗಳಲ್ಲಿ ಕ್ರಿಯಾಶೀಲರಾದ ಹಲವರು ಹಾಗೂ ಸಾಹಿತಿಗಳೂ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ಇದೇ ಧಾರವಾಡದಲ್ಲಿ ನಡೆದ `ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವು ನಾಡಿನ ಸಾಹಿತ್ಯಿಕ -ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂಬುದು ಹಲವರು ಗಮನಿಸಿರಬಹುದು. ಜನರ ಸಂಕಟಗಳಿಗೆ ದನಿಯಾಗಬೇಕಾದ ತುತರ್ು ಅಗತ್ಯ ಹೆಚ್ಚುತ್ತಿರುವ ಹೊತ್ತಲ್ಲಿ ಸಾಹಿತ್ಯ ಸಮಾರಂಭ ಸಂಘಟಿಸಿ `ಸಂಭ್ರಮಿಸು’ವಂಥದ್ದೇನಿದೆ ? ಇಂತಹ ಸಂದರ್ಭಕ್ಕೆ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ನೀಡದೇ ನಿರ್ಬಂದಿಸುವುದೇಕೇ ? ಜನಮುಖಿಯಾಗಿರ ಬೇಕಾದ, ಜನರಿಗೆ ಉತ್ತರದಾಯಿ ಆಗಿರಬೇಕಾದ ಸಾಹಿತ್ಯ ಕ್ಷೇತ್ರ ಮತ್ತು ಸಾಹಿತಿಗಳು ಕಾಪರ್ೋರೇಟ್ ಕಂಪನಿಗಳ ಪ್ರಾಯೋಜಕತ್ವದ ಹಂಗಿಗೆ ಬೀಳುವುದು ತರವೇ ? ದುಬಾರಿ ಪ್ರತಿನಿಧಿ ಶುಲ್ಕವನ್ನು ಕೊಟ್ಟು ಬಯಸಿದವರೆಲ್ಲರೂ ಭಾಗವಹಿಸಲು ಸಾಧ್ಯವಾಗುವುದೇ…? ಮುಂತಾದವುಗಳೇ ಆ ಚಚರ್ೆಯ ಕೆಲವು ಪ್ರಮುಖ ಅಂಶಗಳು.
ಈ ಸಮಾವೇಶದಲ್ಲಿ ಇಂತಹ ಪ್ರಶ್ನೆಗಳನ್ನು ಎತ್ತಲಾಯಿತಾದರೂ ನಂತರದಲ್ಲಿ ಈ ಸಮಾವೇಶ ಯಾವುದೇ ಮತ್ತೊಂದು ಸಾಹಿತ್ಯಿಕ ಕಾರ್ಯಕ್ರಮಕ್ಕೆ ಪ್ರತಿಯಾಗಿ ಅಲ್ಲ, ಅದು ಒಂದು ನೆಪವಷ್ಟೆ ಎಂದು ಸಂಘಟಕರ ಸ್ಪಷ್ಟೀಕರಣ ಪ್ರಕಟಗೊಂಡಿತು. ಮತ್ತು ಮುಂದೆ ಹುಟ್ಟು ಹಾಕಬೇಕೆಂದಿರುವ ಸಾಹಿತ್ಯಿಕ ಚಳುವಳಿ ಬಂಡಾಯ, ದಲಿತ ಮುಂತಾದ ಸಾಹಿತ್ಯಿಕ-ಸಾಂಸ್ಕೃತಿಕ ಚಳುವಳಿಗಳಿಗೆ ಬದಲಿಯಾಗಲಿ ಅಥವಾ ಪಯರ್ಾಯವಾಗಲಿ ಅಲ್ಲ… ಆಯಾ ಸಂದರ್ಭದಲ್ಲಿ ಈ ಚಳುವಳಿಗಳು ನೀಡಿರುವ ಕೊಡುಗೆಗಳನ್ನು ಗುರುತಿಸಿ ಅದರ ಆಶಯವನ್ನು ಮುಂದೊಯ್ಯುವ ಹೊಸ ಚಳುವಳಿ ಕಟ್ಟಬೇಕಿದೆ ಎಂದು ಸಮಾವೇಶದ ಆಶಯದ ಕುರಿತು ತಿಳಿಸಲಾಯಿತು.
ಜನ ಸಾಹಿತ್ಯ ಸಮಾವೇಶದಲ್ಲಿ ಚಚರ್ಿತವಾದ ಪ್ರಶ್ನೆಗಳು, ಮಂಡಿತವಾದ ವಿಚಾರಗಳು ಹಾಗೂ `ಸಾಹಿತ್ಯ ಸಂಭ್ರಮ’ ದಂತೆಯೇ `ಜನ ಸಾಹಿತ್ಯ ಸಮಾವೇಶ’ವೂ ಕೆಲವೊಂದು ಉತ್ತರ ಬೇಡುವ ಪ್ರಶ್ನೆಗಳನ್ನು ಚಚರ್ೆಗಳನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು. ಸಮಾವೇಶದ ನಾನಾಗೋಷ್ಠಿಗಳಲ್ಲಿ ಪಾಲ್ಗೊಂಡ ಹಲವು ಸಾಹಿತಿಗಳು, ಚಿಂತಕರು ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ಚಳುವಳಿಗಳೇ ಇಲ್ಲ. ಚಳುವಳಿಗಳೆಲ್ಲ ನಿಜರ್ೀವವಾಗಿ ಹೋಗಿವೆ…ಎಂಬ ಅಭಿಪ್ರಾಯವನ್ನು ಮಂಡಿಸಿದರು. ಹೊಸ ಚಳುವಳಿಯ ಸಾಧ್ಯತೆಯನ್ನು ಕುರಿತ ಗೋಷ್ಠಿಯಲ್ಲಿ ಚಚರ್ೆಗಳು ಈ ಛಾಯೆಯಲ್ಲೇ ಇದ್ದವು. ಜಾಗತೀಕರಣ, ಕೋಮುವಾದ, ಜಾತೀಯತೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ದ ಸಮಸ್ಯೆಯ ತೀವ್ರತೆ-ಅಗಾಧತೆಗೆ ತಕ್ಕಂತೆ ಯಾವ ಪ್ರಮಾಣದಲ್ಲಿ ಚಳುವಳಿ ನಡೆಯಬೇಕಿತ್ತೋ ಆ ಪ್ರಮಾಣದಲ್ಲಿ ನಡೆದಿಲ್ಲ ಎಂದರೆ ಆ ಮಾತಿನ ಹಿಂದಿನ ಆಶಯವನ್ನು ಒಪ್ಪಬಹುದು. ಆದರೆ ನಡೆದಿರುವ, ನಡೆಯುತ್ತಿರುವ ನಾನಾ ಧಾರೆಯ ಜನ ಚಳುವಳಿಗಳನ್ನು ಕಣ್ಣು ಬಿಟ್ಟು ನೋಡದೇ, ಚಳುವಳಿಯ ಜೊತೆಗೆ ಹೆಜ್ಜೆ ಹಾಕದೇ ದೂರ ನಿಂತು ರಾಜ್ಯದಲ್ಲಿ ಚಳುವಳಿಗಳೇ ನಡೆಯುತ್ತಿಲ್ಲ… ಚಳುವಳಿಗಳೆಲ್ಲ ಸತ್ತು ಹೋಗಿವೆ ಎಂಬಂತಹ ಅಭಿಪ್ರಾಯಗಳನ್ನು ಹರಡುವುದು ಜನ ಚಳುವಳಿಯ ಬೆಳವಣಿಗೆಗೆ ಪೂರಕವಾಗಿದೆಯೇ ಎಂದು ಕೇಳಲೇ ಬೇಕಿದೆ. ಚಳುವಳಿಗಳ ನಡುವೆ ಚಚರ್ೆಯಲ್ಲಿ ಅಣ್ಣಾ ಹಜಾರೆಯವರ ಚಳುವಳಿ, ದೆಹಲಿ ಅತ್ಯಾಚಾರದ ವಿರುದ್ದದ ಚಳುವಳಿಗಳು ಇಣುಕಿ ಹೋದವು.
ಮಡೆಸ್ನಾನ-ಮಠ ದೇಗುಲಗಳಲ್ಲಿನ ಪಂಕ್ತಿ ಬೇಧ ತಾರತಮ್ಯಗಳ ವಿರುದ್ದ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವು ಹಂತಗಳ ಚಳುವಳಿ ಯಾಕೆ ಯಾರ ಕಣ್ಣಿಗೂ ಬೀಳಲಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಎಕರೆ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ, ಸಾಗುವಳಿ ಮಾಡಿದ ಅರಣ್ಯ ಭೂಮಿಗೆ ಹಕ್ಕುಪತ್ರಕ್ಕಾಗಿ ನಡೆದ ಬಡರೈತರ ಬೃಹತ್ ಚಳುವಳಿಗಳು, ಮನೆ-ನಿವೇಶನ ರಹಿತರ ಚಳುವಳಿಗಳು, ಆಹಾರದ ಹಕ್ಕಿಗಾಗಿ-ಜನ ವಿರೋಧಿ ಆಹಾರ ಕಾಯ್ದೆ ವಿರುದ್ದ ಆಹಾರದ ಹಕ್ಕು ಪ್ರತಿಪಾದಿಸಿ ನಡೆದ ಚಳುವಳಿಗಳು ಚಳುವಳಿಗಳೇ ಅಲ್ಲವೇನು ? ಎರಡು ಹೊತ್ತಿನ ಗಂಜಿಗೂ ಸಾಲದ ನಿಕೃಷ್ಟ ವೇತನದಲ್ಲಿ ದುಡಿಯುತ್ತಿರುವ ಅಂಗನವಾಡಿ, ಬಿಸಿಯೂಟ ನೌಕರರು, ಹಮಾಲಿ ಕಾಮರ್ಿಕರು, ಗ್ರಾಮಪಂಚಾಯತ್, ಕಟ್ಟಡ ಕಾಮರ್ಿಕರು ಕನಿಷ್ಟ ಕೂಲಿಗಾಗಿ ಚಳುವಳಿ ನಡೆಸಿ ಲಾಟಿ ಬೂಟುಗಳ ಏಟು ತಿಂದದ್ದನ್ನು ಎಷ್ಟು ಜನ ಈ ಸಾಹಿತಿಗಳು ಕನಿಷ್ಟ ಗಮನಿಸಿದ್ದಾರೆ ?
ದುಡಿಯುವ ಜನರು ಬದುಕನ್ನು ಉತ್ತಮಪಡಿಸಿಕೊಳ್ಳಲು ಹೋರಾಟ ನಡೆಸಿದರೆ ಅವು ಚಳುವಳಿಯೇ ಅಲ್ಲವೇನು ? ಇವೆಲ್ಲಾ `ಜನಪರ ಚಳುವಳಿ’ ಎಂಬ `ಕವರೇಜ್ ಏರಿಯಾ’ದಿಂದ ಹೊರಗಿರುವ ಚಟುವಟಿಕೆಯಾ ? ಜನಪರ ಚಳುವಳಿ ಅಂದರೆ ಮತ್ತೇನು ? ದೆಹಲಿಯಲ್ಲಿ ಹತ್ತು ಲಕ್ಷ ದುಡಿಯುವ ಜನ ಒಂದೆಡೆ ಸೇರಿ ಆಳುವ ಸಕರ್ಾರಕ್ಕೆ `ಛೀ’ ಅಂದರೂ ಲೆಕ್ಕಕ್ಕಿಲ್ಲ. ಬ್ರೇಕಿಂಗ್ ನ್ಯೂಸು ಬಿಡಿ, ಮುಖಪುಟ ಬೇಡವೇ ಬೇಡ.. ಒಳಪುಟದ ಮೂಲೆಯಲ್ಲೂ ಮೂರು ಸಾಲಿಗೆ ಜಾಗವಿಲ್ಲ.. ಮಧ್ಯಮ ವರ್ಗದ ಜನರು ಎದ್ದು ಬಂದದ್ದು ಮಾತ್ರವೇ ಚಳುವಳಿ. ಅದೇ ಸ್ಫೋಟಕ ಸುದ್ದಿ, ಹೆಡ್ ಲೈನು. ಹಗಲು ರಾತ್ರಿ ಅದಕ್ಕೆ ಬಣ್ಣ ಬಳಿ… ಎಂಬುದು ಆಳುವ ವರ್ಗಗಳ ತೆವಲುಗಳೇ ತಿಕ್ಕಲುಗಳೇ ದೇಶದ ನೂರ ಮೂವತ್ತು ಕೋಟಿ ಜನರ ಹಿತಾಸಕ್ತಿ ಎಂದು ತಾವೂ ನಂಬಿ ಹಾಗೇ ಬಿಂಬಿಸುವುದು ನಮ್ಮ ಕಾಪರ್ೋರೇಟ್ ಮಾಧ್ಯಮದ ಧೋರಣೆ. ಅದೇ ರೀತಿ ಮಧ್ಯಮ ವರ್ಗ ಮಾಡಿದ್ದನ್ನು ಮಾತ್ರ ಕಾಣುವ ಜಾಣ ಕುರುಡು ನಮ್ಮ ಸಾಹಿತಿ, ಬರಹಗಾರರ ಮೆದುಳಿನಲ್ಲಿ ಎಲ್ಲೆಲ್ಲಿ ಅಡಗಿ ಕುಂತಿದೆ ಎಂಬ ವಿಷಯಗಳ ಬಗೆಗೆ ಈ ಗೋಷ್ಠಿಗಳಲ್ಲಿ ವಸ್ತುನಿಷ್ಟ ಆತ್ಮ ಶೋಧ ಒಂದು ಎದ್ದು ಕಾಣುವ ಅಂಶವಾಗಬೇಕಿತ್ತು. ವರ್ತಮಾನದ ತವಕ ತಲ್ಲಣಗಳ ಕುರಿತ ಚಚರ್ೆಯಲ್ಲಿ ನಮ್ಮ ನಾಡಿನ ಕೋಟ್ಯಾಂತರ ಜನರ ಬದುಕನ್ನೇ ಬದಲಿಸ ಬಲ್ಲಂತಹ ಒಂದು ಜ್ವಲಂತ ಪ್ರಶ್ನೆಯಾದ ಭೂ ಸುಧಾರಣೆಯ ಪ್ರಶ್ನೆಯೇ ಮಾಯ !!. ನಾಗೇಶ ಹೆಗಡೆಯವರೇನೋ ಜನಪರ ಕಾಳಜಿಯ ಬರಹಗಾರರೇ. ಅನುಮಾನವಿಲ್ಲ. ಆದರೆ ಅವರು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಂಡಿಸಿದ ವಿಚಾರಗಳಲ್ಲಿ ಹಲವಾರು, ಜನರನ್ನು ಅನವಶ್ಯಕವಾಗಿ ಭೀತಿಗೊಳಿಸುವ ಅತಿರೇಕ ಅಂದರೆ ತಪ್ಪೇನಿಲ್ಲ. ಅಂತಹ ಧೋರಣೆಯನ್ನು ಇತರರು ಹಲವರು ವ್ಯಕ್ತ ಮಾಡಿದರು. ದು. ಸರಸ್ವತಿಯವರು ಪೌರ ಕಾಮರ್ಿಕರ ಪ್ರಶ್ನೆಯಾಗಿ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಅಸಂಘಟಿತ ಕಾಮರ್ಿಕರ ಕನಿಷ್ಟ ಕೂಲಿಯ ಪ್ರಶ್ನೆ ಎಲ್ಲಿಯೂ ಚಚರ್ೆಗೆ ಬರಲಿಲ್ಲ. ತಿಂಗಳಿಗೆ ಕನಿಷ್ಟ ಹತ್ತು ಸಾವಿರ ಕನಿಷ್ಟ ಕೂಲಿ ನೀಡಬೇಕೆಂದು ರಾಜ್ಯದಲ್ಲಿ ಇತ್ತೀಚಿನ ಅವಧಿಯಲ್ಲಿ ನಡೆದ ಚಳುವಳಿಗಳೆಷ್ಟು. ?
ಮೊನ್ನೆ ಮೊನ್ನೆ ಫೆಬ್ರವರಿ 20-21 ರಂದು ನಡೆದ ಎರಡು ದಿನಗಳ ಅಖಿಲ ಭಾರತ ಮುಷ್ಕರವೂ ಈ ಸಾಹಿತಿ ಚಿಂತಕರ ಗಮನ ಸೆಳೆಯಲಿಲ್ಲ ಎಂದರೆ ನಮ್ಮ ನಾಡಿನ ಕಾಪರ್ೋರೇಟ್ ಮಾಧ್ಯಮಗಳಿಗೆ ಬಡಿದಿರುವ ಜಾಹಿರಾತು ದಾಹದ ಗರ, ಟಿಆರ್ಪಿ ಗರದ ಬಗೆಗೆ ಮಾತನಾಡಲು ಸಾಹಿತಿಗಳಾದವರಿಗೆ ಯಾವ ನೈತಿಕ ಹಕ್ಕಿದೆ ಎಂಬ ಪ್ರಶ್ನೆ ಏಳುವುದಿಲ್ಲವೇ ? ಸಮಾವೇಶದ ಸಂದರ್ಭದಲ್ಲಿ ತೋರಿಸಲಾದ ಕೆಸರಿ ಹರವು ಅವರ ಗುಂಡ್ಯಾ ಯೋಜನೆಯ ಕುರಿತ `ಡಾಕ್ಯುಮೆಂಟರಿ’ ಸಿನಿಮಾಕ್ಕಿಂತ ಮುಖ್ಯವಾದ ಬೇರೆ ಡಾಕ್ಯುಮೆಂಟರಿ ಸಿನಿಮಾ ಯಾವುದು ಸಿಗಲಿಲ್ಲವೇ ? ಒಂದು `ಅಣೆ ಕಟ್ಟೆ’ ಕಟ್ಟಬಾರದು ಎಂಬುದೇ ಒಂದು ಪ್ರಗತಿಪರ ಸಿದ್ದಾಂತ ಆಗುತ್ತದೆಯಾ ? ಈ ಡಾಕ್ಯುಮೆಂಟರಿಯಲ್ಲಿ ಅಣೆಕಟ್ಟೆ ಬೇಡ ಎಂಬ ಅಂಶವನ್ನು ಒಪ್ಪಿಕೊಂಡು ಯೋಚಿಸಿದರೂ ಅರಣ್ಯ ಅಂಚಿನಲ್ಲಿ, ಅರಣ್ಯದ ನಡುವೆ ಅಲ್ಲಲ್ಲಿ ಸಾಗುವಳಿ ಮಾಡಿಕೊಂಡು ಬದುಕುತ್ತಿರುವ ಬಡ ರೈತರಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟು ಬಿಡಬೇಕೆಂದು ಹೇಳಿರುವ `ಬುದ್ದಿವಾದ’, ಇಂಥದ್ದೊಂದು ಪ್ರಶ್ನೆ ಆ ರೈತರ ಬದುಕಿನಲ್ಲಿ ಸೃಷ್ಟಿಸಬಹುದಾದ ತವಕ-ತಲ್ಲಣಗಳು ಯಾಕೆ ಈ ಸಾಹಿತಿಗಳನ್ನು ಕಾಡಲಿಲ್ಲವೋ ಅರ್ಥವಾಗಲಿಲ್ಲ. ಪ್ರಾಣಿಗಳು, ಜೀವ ಸಂಕುಲ ಬದುಕ ಬೇಕು, ಉಳಿಯ ಬೇಕು ಸರಿ. ಮನುಷ್ಯರು ?
ಇತ್ತೀಚೆಗೆ ನಿಧನರಾದ ಆಫ್ರಿಕಾ ಖಂಡದ ನೈಜೀರಿಯಾ ದೇಶದ ಸಾಹಿತಿ ಚಿನುವಾ ಅಚಿಬೆ ಅವರಿಗೆ ಸಮಾವೇಶ ಶ್ರದ್ದಾಂಜಲಿ ಸಲ್ಲಿಸಿದ್ದು ಸರಿ. ದುಷ್ಟ ಅಮೆರಿಕದ ಸಂಚುಗಳನ್ನು ಸೋಲಿಸಿ, ಜಾಗತೀಕರಣ ನೀತಿಗಳನ್ನು ಹಿಮ್ಮೆಟ್ಟಿಸಿ ದೇಶದ ಅಗಾಧ ತೈಲ ಸಂಪನ್ಮೂಲದಿಂದ ಬರುವ ಆದಾಯವನ್ನು ಜನರಿಗೆ ಶಿಕ್ಷಣ, ಆರೋಗ್ಯ ಸೌಕರ್ಯ, ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಹರಿಸಿದ, ಲಕ್ಷಾಂತರ ಎಕರೆ ಭೂಮಿಯನ್ನು ಕಾಪರ್ೋರೇಟ್ ಕಂಪನಿಗಳಿಂದ ಕಿತ್ತುಕೊಂಡು ಬಡರೈತರಿಗೆ ಹಂಚಿದ, ಉದಾರೀಕರಣ ನೀತಿಗಳಿಗೆ ಪಯರ್ಾಯ ನೀತಿಗಳನ್ನು ಸಾಧಿಸಿ ತೋರಿಸಿದ ವೆನೆಜುವೆಲಾದ ನೇತಾರ ಚವೇಸ್ಗೆ ಯಾಕೆ ಸಮಾವೇಶ ಶ್ರದ್ದಾಂಜಲಿ ಸಲ್ಲಿಸಲಿಲ್ಲ ಎಂಬ ಪ್ರಶ್ನೆ ಸಹ ಉತ್ತರವನ್ನು ಬಯಸುತ್ತದೆ. ಬಹುತೇಕ ಡಾ. ಸಿದ್ದನಗೌಡ ಪಾಟೀಲರನ್ನು ಬಿಟ್ಟರೆ ಯಾರಿಗೂ ಚವೇಸ್ ಎಂಬ `ಕ್ರಾಂತಿಕಾರಿ’ ನೆನಪಾಗದೇ ಹೋದರು ಎಂದರೆ ಅದಕ್ಕೆ ಏನು ಹೇಳುವುದು ? ಚವೇಸ್ ಚುನಾವಣೆಯ ಮೂಲಕ ಗೆದ್ದು ಬಂದ ಮನುಷ್ಯ ಅಂತ ಮಡಿವಂತಿಕೆಯಾ ? ಚಳುವಳಿಗಳ ಮುಂದಿನ ದಾರಿಯನ್ನು ಹುಡುಕುವ ಚಚರ್ೆಯಲ್ಲಿ ಬಿ.ಎಂ. ಪುಟ್ಟಯ್ಯನವರು ತೆಲಂಗಾಣದ ಚರಿತ್ರೆಯನ್ನು, ಆ ಚಳುವಳಿಯ ಧೀಮಂತಿಕೆಯನ್ನು ನೆನಪಿಸಿಕೊಂಡರು. ಭಾರತ ದೇಶದ ಜನಚಳುವಳಿಗಳ ಒಂದು ಭವ್ಯ ಇತಿಹಾಸವಾದ ಚಾರಿತ್ರಿಕ ತೆಲಂಗಾಣ’ದ ವೀರ ಚಳುವಳಿಯಿಂದ ಸ್ಫೂತರ್ಿಯನ್ನು ಖಂಡಿತ ಪಡೆಯಬಹುದು. ಹಾಗೆಯೇ ಅದರಿಂದ ಹಲವಾರು ತರನಾದ ಪಾಠಗಳನ್ನೂ ಕಲಿಯಬಹುದು. ಯಾವ ವಿಷಯದಲ್ಲಿ ಯಾವ ಪಾಠವನ್ನು ಕಲಿಯುವೆವು ಎಂಬುದು ಬಹಳ ಮುಖ್ಯ ಪ್ರಶ್ನೆ. 21 ನೇ ಶತಮಾನದ ಎರಡನೇ ದಶಕದಲ್ಲಿ ನಿಂತಿರುವ ನಾವು ನಮ್ಮ ಚಳುವಳಿ ನಡೆಯ ದಿಕ್ಕು ದೆಸೆಗಳನ್ನು ಇನ್ನೂ ಹೆಚ್ಚು ಖಚಿತ ಮಾಡಿಕೊಳ್ಳಬೇಕಾಗುತ್ತದೆ.
ರಾಜ್ಯದ ಪ್ರಗತಿಪರವಾದ ಎಲ್ಲ ಧಾರೆಗಳ ಸಾಹಿತ್ಯಿಕ-ಸಾಂಸ್ಕೃತಿಕ ಚಳುವಳಿಯನ್ನು ಒಳಗೊಂಡು, ಎಲ್ಲ ಧಾರೆಯ ಜನಚಳುವಳಿಗಳನ್ನು ಹತ್ತಿರಕ್ಕೆ ಸೆಳೆದುಕೊಂಡು ಕ್ರಿಯಾ ಶೀಲತೆಗೆ ಒಂದು ಸ್ಪಷ್ಟ ತಾತ್ವಿಕ ಆ ನೆಲೆಗಟ್ಟನ್ನು, ಗಟ್ಟಿ ಪ್ರಣಾಳಿಕೆಯನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕನರ್ಾಟಕ ಜನ ಸಾಹಿತ್ಯ ವೇದಿಕೆ ಇಡುವ ಹೆಜ್ಜೆಗಳು ಅದರ ಭವಿಷ್ಯವನ್ನು ನಿರ್ಧರಿಸುತ್ತವೆ.
0

Friday, April 26, 2013

ಮಗಳೇ..ಡಾ. ಎಚ್.ಎಸ್. ಅನುಪಮಾ


ಮಗಳೇ ಸುಮ್ಮಸುಮ್ಮನೆ ಹೆದರದಿರು
ಪುರುಷರೆಲ್ಲ ಅತ್ಯಾಚಾರಿಗಳಲ್ಲ
ನೆನಪಿರಲಿ ನೀನೆಂಬ ನಿನ್ನ ಕಡೆದಿರುವುದು ಅಪ್ಪನ ವಾತ್ಸಲ್ಯ

ಮಗಳೇ ಅಂಜದಿರು 
ಬದಲಾಗದ ಋತುವಿಲ್ಲ, ಕರಗದ ಬಂಡೆಯಿಲ್ಲ 
ನೆನಪಿರಲಿ ನಿಲ್ಲದೆ ಹರಿಯುವ ಪ್ರವಾಹವಿಲ್ಲ

ಮಗಳೇ ತಪ್ಪಾಗಿ ಗ್ರಹಿಸದಿರು
ಅತ್ಯಾಚಾರ ದೇಹದ ಮೇಲಷ್ಟೆ ಅಲ್ಲ
ಮಾತು ನೋಟ ಪದಗಳಲೂ ಬೆತ್ತಲಾಗಿಸುವವರೇ ಎಲ್ಲ

ಮಗಳೇ ಪ್ರೀತಿಸು ಈ ಪುಟ್ಟ ಜೀವಿತವ
ಬಂಡೆ ಬಿರುಕಿನಲೂ ಮೊಳೆಯಬಹುದು ಜೀವತತ್ವ 
ನೊಂದ ಮುಳ್ಳುಕಂಟಿಯಿಂದ ಜಿನುಗದೆ ಅಂಟುರಸ?

ಮಗಳೇ ಎಚ್ಚರದ ಹೆಜ್ಜೆಗಳನಿಡು
ಕಾಲಡಿಯ ನೋಡಿ ನಡೆ ಅದು ಸರ್ಪಜಾಡು
ಕಣ್ಣು ತುಂಬಿಕೊಳಲಿ ಮುಗಿಲ ನಕ್ಷತ್ರ ಧೂಳು
ಎಳೆಯ ಆತ್ಮಕೆ ದೇಹ ಸಂಭ್ರಮವೆ ಹೌದು
ತೊಡಕಾಗದಿರಲಿ ಜಟಿಲ ಬದುಕಿನ ಕುಟಿಲ ಎಳೆಯು 

ಕಾಪಿಡು ಕಣ್ಣಹನಿಗಳ ಎಲ್ಲ ಹತಭಾಗ್ಯರ ನೋವುಗಳಿಗೂ
ದಯೆಯಿರಲಿ ನ್ಯಾಯಾನ್ಯಾಯದ ಗಡಿಗಳಾಚೆಗೂ..

ರಾಜಕೀಯ ಪ್ರವೇಶ: ಮಹಿಳೆಯರ ಕಷ್ಟಗಳುಕೆ. ನೀಲಾ


ನನಗೆ ಸರಿಯಾಗಿ ನೆನಪಿದೆ. ಆನೆಕಲ್ ತಾಲೂಕಿನ ಮಂಜುಳಾ ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿದ್ದಳು. ಒಂದು ದಿನ ಸಭೆ ನಡೆವಾಗಲೇ ಮನೆಗೆ ಹೋಗಿ ಚೀಟಿ ಬರೆದಿಟ್ಟು ನೇಣು ಬಿಗಿದುಕೊಂಡು ಸಾವಿಗೀಡಾದಳು. ತನ್ನದೇ ಪಕ್ಷದ ಶಾಸಕ ಮತ್ತು ಮುಖಂಡ ತನಗೆ ಕಿರುಕುಳ ಕೊಡುತ್ತಿರುವರು. ಇದರಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟನಲ್ಲಿ ಬರೆದಿದ್ದಳು.

ಕಳೆದ ವರ್ಷ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳು ಸುದ್ದಿಗೆ ಗ್ರಾಸವಾಗಿದ್ದವು. ಜಿಲ್ಲಾ ಪಂಚಾಯತ್ ಸದಸ್ಯೆಯರು ಸಭೆಗೆ ತಮ್ಮ ಗಂಡಂದಿರು ಬರಲು ಪರವಾನಗಿ ಕೊಡಬೇಕೆಂದು ಆಗ್ರಹಿಸಿ ಸಭೆ ಬಹಿಷ್ಕಾರ ಮಾಡಿದ್ದರು. ಸ್ವತಂತ್ರವಾಗಿ ಆಯ್ಕೆ ಯಾದ ಮಹಿಳೆಯೊಬ್ಬಳು ಮಾತ್ರ ಗಂಡನ ಮುಲಾಜಿಗೆ ಒಳ ಗಾಗದೆ ಸಭೆ ನಡೆಸಿ ಎಂದು ಒತ್ತಾಯಿಸಿದ್ದಳು. ಈ ಮಹಿಳೆಯು ರಾಜಕೀಯ ತಿಳುವಳಿಕೆಯುಳ್ಳ ಸ್ವತಂತ್ರ ಆಲೋಚನೆಯುಳ್ಳ ಮಹಿಳೆಯಾಗಿರುವುದರಿಂದಲೇ ಕಾಂಗ್ರೆಸ್ ಮತ್ತಿತರ ಪಕ್ಷಗಳಿಂದ ಟಿಕೇಟು ನಿರಾಕರಿಸಲಾಗಿತ್ತು. ಕೊನೆಗೆ ಸ್ವತಂತ್ರಳಾಗಿ ಆಖಾಡಕ್ಕೆ ಇಳಿದು ಆರಿಸಿ ಬಂದದ್ದಾಯಿತು. ಹಾಗೆಂದು ಉಳಿದ ಮಹಿಳಾ ಸದಸ್ಯೆಯರು ರಾಜಕೀಯ ಅಜ್ಞಾನಿಗಳೇ ನಾಗಿರಲಿಲ್ಲ. ಆದರೆ ಅವರ ಗಂಡಂದಿರರ ಒತ್ತಡವು ಅವರನ್ನು ಅಜ್ಞಾನಿಗಳನ್ನಾಗಿ ಬಿಂಬಿಸಿತ್ತು. ಅವರ ರಾಜಕೀಯ ಪಕ್ಷಗಳು ಮತ್ತು ಗಂಡಂದಿರರು ಒಂದಾಗಿ ಮಹಿಳೆಯರ ಮೇಲೆ ಹತೋಟಿ ಸಾಧಿಸಲು ಮುಂದಾಗಿದ್ದರು. ಹೀಗೆ ಮಹಿಳೆಯರನ್ನು ನಿಂತ್ರಿಸುವ ಕೈಗಳು ಕುಟುಂಬ, ರಾಜಕೀಯ ಪಕ್ಷಗಳು, ಸಮಾಜ ಎಲ್ಲ ಕಡೆಗೂ ಅವಿತುಕೊಂಡಿವೆ. ಈ ಪ್ರಕರಣಗಳು ತುಂಬ ಕೆಳಹಂತದಲ್ಲಿ ನಡೆದವು ಎಂದು ಅನಿಸಬಹುದು. ಆದರೆ ಕಾಂಗ್ರೆಸ್ ಬಿಜೆಪಿ ಜೆಡಿ(ಎಸ್)ನಂಥ ಮುಂತಾದ ಪಕ್ಷಗಳಲ್ಲಿರುವ ರಾಜ್ಯ , ರಾಷ್ಟ್ರ ಮಟ್ಟದ ಮಹಿಳೆಯರ ಪರಿಸ್ಥಿತಿ ಏನಿದೆ? ಮಹಿಳೆಯರನ್ನು ಮಾತೆಯಾಗಿ ಗೌರವಿಸುವ ಸಂಸ್ಕೃತಿ ತಮ್ಮದೆಂದು ಬಡಾಯಿ ಕೊಚ್ಚುವ ಬಿಜೆಪಿ ಶೋಭಾ ಕರಂದ್ಲಾಜೆಯನ್ನು ಮಿನಿಸ್ಟ್ರಿಗಿರಿಯಿಂದ ಕೆಳಗಿಳಿಸಿತು. ತನ್ನ ತಪ್ಪೇನು? ಎಂದು ಶೋಭಾ ಎಷ್ಟೇ ಅಲವತ್ತುಕೊಂಡರೂ ಉತ್ತರ ಸಿಗಲಿಲ್ಲ. ಉಮಾಭಾರತಿಯದ್ದೂ ಇದೇ ಅಲ್ಲವೇ?

ಮಹಿಳಾ ಮೀಸಲಾತಿ ಮಸೂದೆಯು ಪಾರ್ಲಿಮೆಂಟಿನಲ್ಲಿ ಬಂದಾಗೆಲ್ಲ ಯಾದವತ್ರೈಮೂರ್ತಿಗಳು ಯಾವತ್ತೂ ವಿರೋಧಿಸುವರು. ಇತರ ಹಿಂದುಳಿದ ಸಮುದಾಯದ ಮಹಿಳೆಯರಿಗೆ ಮಸೂದೆಯಲ್ಲಿ ಮೀಸಲಾತಿ ಕಲ್ಪಿಸದ ಹೊರತು ಬಿಲ್ಲು ತರಲು ಬಿಡುವುದಿಲ್ಲವೆಂದು ಪಾರ್ಲಿಮೆಂಟಿನಲ್ಲಿ ಬಿಲ್ಲು ಹರಿದು ಥೇಟ್ ಗೂಂಡಾಗಳಂತೆ ವರ್ತಿಸಿದ್ದರು. ಆದರೆ ತಮ್ಮದೇ ಪಕ್ಷದಲ್ಲಿ ಟಿಕೇಟು ಕೊಡುವಾಗ ಹಿಂದುಳಿದ ಮಹಿಳೆಯರ ನೆನಪೇ ಆಗುವುದಿಲ್ಲ. ಮೀಸಲಾತಿ ಮಸೂದೆಯ ಪ್ರಶ್ನೆ ಬಂದಾಗ ಮಹಿಳಾಪರ ಮಾತಾಡುವ ಇವರ ಹುಸಿಪ್ರೀತಿಯ ಹಿಂದೆಯೂ ಸ್ವಾರ್ಥ ಪುರುಷ ರಾಜಕಾರಣವಿದೆ ಎಂಬುದು ಅಷ್ಟೇ ಸತ್ಯವಾದದ್ದು. ಉದ್ದೇಶ ಮಾತ್ರ ಮಹಿಳಾ ಮೀಸಲಾತಿ ಮಸೂದೆ ವಿರೋಧಿಯಾದದ್ದೇ. ಆದ್ದರಿಂದಲೇ ಮಹಿಳಾ ನಾಯಕತ್ವ ಹೊಂದಿದ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ಮಸೂದೆ ಜಾರಿಗೆ ತಾನು ಬದ್ಧ ಎಂದು ಹೇಳಿಕೊಳ್ಳುತ್ತಲೇ ಮಸೂದೆಯನ್ನು ನೆನಗುದಿಗೆ ತಳ್ಳಿದ ಸತ್ಯ ಈಗ ದೇಶದ ಅಂಗೈ ಹುಣ್ಣು. ಎಡ ಪಕ್ಷಗಳು ಹೊರತುಪಡಿಸಿ ಎಲ್ಲ ಪಕ್ಷಗಳು ಒಂದೊಂದು ನೆಪ ಮುಂದೆ ಮಾಡಿ ಮಹಿಳಾ ಮೀಸಲಾತಿ ಮಸೂದೆಗೆ ಕಡೆಯ ಮೊಳೆ ಹೊಡೆಯಲು ಕಾಯುತ್ತಿರುವರು. ನೀತಿ ನಿರೂಪಣಾ ಸ್ಥಾನದಲ್ಲಿ ಮಹಿಳೆಯರು ಇರಬೇಕೆಂದು ನಿರಂತರ ಹೋರಾಡುತ್ತಿರುವ ಮಹಿಳಾ ಸಂಘಟನೆಗಳು ಇಂದಿನ ರಾಜಕೀಯ ಬೆಳವಣಿಗೆಯನ್ನು ಇನ್ನಷ್ಟು ತೀವ್ರವಾಗಿ ವಿಮರ್ಶಿಸುವ ಜರೂರಿ ಇದೆ. ಯಾಕೆಂದರೆ ಮೀಸಲಾತಿಯ ಪರವಾಗಿರುವ ಪಕ್ಷಗಳು ಸಹ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಟಿಕೇಟು ಕೊಡುವಲ್ಲಿ ಹಿಂದೇಟು ಹಾಕುತ್ತವೆ. ಈ ಚುನಾವಣೆಯಲ್ಲಿಯೂ ಸಹ ಮಹಿಳಾ ಲೋಕವನ್ನು ನಿರ್ಲಕ್ಷಿಸಿಯೇ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಹೊರಟಿವೆ. ಗೆಲ್ಲುವ ಅಭ್ಯರ್ಥಿಗಳಿದ್ದಲ್ಲಿ ಮಾತ್ರ ಟಿಕೇಟು ಕೊಡುವರು. ಉದಾಹರಣೆಗೆ ಪ್ರಸಿದ್ಧ (!) ಮಂತ್ರಿ-ಶಾಸಕರು ಸತ್ತು ಹೋದರೆ ಸಿಂಪಥಿಯ ಪ್ರವಾಹದಲ್ಲಿ ಅವರ ಹೆಂಡತಿ ಆಯ್ಕೆಯಾಗುವರೆಂದು ಅನಿಸಿದಲ್ಲಿ ಟಿಕೇಟು ಕೊಡುವರು.

ಕರ್ನಾಟಕದ ವಿಧಾನಸಭೆಯಲ್ಲಿ 1952ರಿಂದ ಇಲ್ಲಿವರೆಗೆ ಕೇವಲ 103 ಮಹಿಳೆಯರು ಮಾತ್ರ ಆಯ್ಕೆಯಾಗಿರುವರು. 1957 ಮತ್ತು 1962ರಲ್ಲಿ ಮಾತ್ರ ತಲಾ 18 ಜನ ಮಹಿಳೆಯರು ಶಾಸನಸಭೆಯಲ್ಲಿ ಇದ್ದಿದ್ದೇ ದೊಡ್ಡ ಸಂಖ್ಯೆ. 1983ರಲ್ಲಿ ಒಬ್ಬ ಮಹಿಳೆ ಮಾತ್ರ ಇದ್ದರು. ಇದು ಮಹಿಳೆಯೇ ತನ್ನ ಭಾಗಿದಾರಿಕೆ ನಿರಾಕರಿಸುತ್ತಿರುವಳು ಎಂದರ್ಥವೇ? ಟಿಕೇಟಿಗಾಗಿ ಸೋನಿಯಾಗಾಂಧಿ ಮನೆ ಮುಂದೆ ಮಹಿಳೆಯರು ಧರಣಿ ನಡೆಸಿರುವರು. ಮಹಿಳೆಯರು ರಾಜಕೀಯ ಪ್ರವೇಶಿಸುವ ಇಚ್ಛೆ ಮತ್ತು ಸಾಮರ್ಥ್ಯ ಹೊಂದಿರುವರು. ಆದರೆ ನೀತಿ ನಿರೂಪಣೆಯಲ್ಲಿ ಮಹಿಳಾ ಪಾಲುದಾರಿಕೆ ಬೇಕಿಲ್ಲದ ಮತ್ತು ಸಹಿಸಲಾರದ ಪಾಳೆಗಾರಿಕೆ ಮತ್ತು ಪುರುಷಪ್ರಧಾನ ಮೌಲ್ಯವೇ ರಾಜಕೀಯ ಪಕ್ಷಗಳು ಹೊಂದಿರುವುದು ಇದರಿಂದ ಸಾಬೀತಾಗುತ್ತದೆ. ಆದ್ದರಿಂದಲೇ ಈ ಬಾರಿಯೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೇಟು ನೀಡುತ್ತಿಲ್ಲವಾದ್ದರಿಂದ ಅದೇ ಪಕ್ಷದ ಮಹಿಳೆಯರು ಪ್ರತಿಭಟಿಸುತ್ತಿರುವರು. ಆದರೆ ಇವರನ್ನೂ ನಿಯಂತ್ರಿಸುವ ಹುನ್ನಾರಗಳು ಆಯಾ ರಾಜಕೀಯ ಪಕ್ಷಗಳಿಗೂ ಪುರುಷರಿಗೂ ಅಸಾಧ್ಯವೇನಿಲ್ಲ.

ಯಾಕೆ ಹೀಗಾಗುವುದು? ನಮ್ಮ ಮಹಿಳೆಯರು ಪುರುಷರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಕೆಲಸ ಮಾಡುವರು. ಜಾಣತನದಿಂದ ಮನೆ ನಿರ್ವಹಿಸುವರು. ಶೇ.45ಕ್ಕೂ ಹೆಚ್ಚು ಕುಟುಂಬಗಳು ಮಹಿಳಾ ನೇತತ್ವದ್ದಾಗಿವೆ. ಅನೇಕ ಮಹಿಳೆಯರು ಕುಡುಕ ಗಂಡಂದಿರನ್ನು ನಿಭಾಯಿಸುತ, ಬೇಜವಾಬ್ದಾರಿತನವನ್ನೂ ನಿರ್ವಹಿಸುತ್ತಾ, ಸಂಕಟ ಎರಗಿದಾಗ ಎದೆಗುಂ ದದೆ ಎದುರಿಸುತ್ತಾ ಬದುಕ ನೊಗಕ್ಕೆ ಹೆಗಲು ಕೊಟ್ಟಿರುವರು.

ಸಭೆಯಲ್ಲಿ ಮಹಿಳಾ ಪ್ರಶ್ನೆಗೆ ಸಂಬಂಧಿಸಿದ ಅಜೆಂಡಾ ಬರುವುದು ಕಡೆಯಲ್ಲಿ. ಪಟ್ಟಿಯಲ್ಲಿ ಹೆಸರು ಬರೆಯುವುದು ಕೊನೆಯಲ್ಲಿ. ಮಕ್ಕಳೆಷ್ಟಾಗಬೇಕು? ಆಸ್ತಿ ಯಾರ ಹೆಸರಿಗೆ? ಇದಾವುದರಲ್ಲಿಯೂ ಮಹಿಳೆಗೆ ನಿರ್ಣಯ ನಿಷೇಧವಿದೆ. ಇದು ಮಹಿಳಾ ಅಸ್ತಿತ್ವ ಹೊಸಕುವ ಹುನ್ನಾರವಲ್ಲವೇ? ಆದರೆ ಬದಲಾಗುತ್ತಿರುವ ಈ ಹೊತ್ತಿನಲ್ಲಿ ರಾಜಕೀಯ ಪಕ್ಷಗಳಿಗೂ ಮಹಿಳೆಯರು ಬೇಕು. ಆಗಾಗ ವೇದಿಕೆಯ ಮೇಲಿರಬೇಕು. ಯಾಕೆಂದರೆ ಮಹಿಳೆಯ ಆಕರ್ಷಕ ಭಾಷಣಕ್ಕೆ ಜನ ಒಲಿಯಲೆಂದು. ಚುನಾವಣಾ ಪ್ರಚಾರಕ್ಕೆ ಗ್ಲಾಮರಸ್ ನಟಿಯರು ಬೇಕು. ಅವರ ಸಭೆಗಳಿಗೆ ಸ್ತ್ರೀಶಕ್ತಿ-ಸ್ವಸಹಾಯ ಸಂಘಗಳ ಮಹಿಳೆಯರು ದಂಡಿಯಾಗಿ ಬರಬೇಕು. ಇತ್ತೀಚೆಗೆ ಎಲ್ಲ ರಾಜಕೀಯ ಪಕ್ಷಗಳ ಸಭೆ ರ‌್ಯಾಲಿಗಳಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿ. ಹೌದು. ಅವರು ಸಂಖ್ಯೆಯಾಗಿ ಬರಬೇಕು. ಓಟಾಗಿ ಬರಬೇಕು. ಬಿಡಿಬಿಡಿಯಾಗಿ. ಸಂಘಟಿತ ಓಟ್‌ಬ್ಯಾಂಕಿನ ಶಕ್ತಿಯಾಗಿಯಲ್ಲ. ಮಹಿಳೆ ಶಾಸಕಿ-ಸಂಸದೆಯಾಗಿ ಬೇಕಿಲ್ಲ. ಎಚ್ಚೆತ್ತ ರಾಜಕೀಯ ಪ್ರಜ್ಞೆಯಾಗದೆ ಅವರ ಹಿಂಬಾಲಕರಾಗಿದ್ದಲ್ಲಿ ಸಹಿಸುವರು. ಇದರ ಮದ್ಯದಲ್ಲಿಯೂ ಕೆಲವು ಗಟ್ಟಿಗಿತ್ತಿ ಮಹಿಳೆಯರು ಪಾದರಸದಂತೆ ಹರಿದಾಡಿ ತಮ್ಮ ಅಸೀಮ ಸಾಮರ್ಥ್ಯದಿಂದ ಮುಂಚೂಣಿಗೆ ಬಂದರೂ ಸಾಕು ಅವಳ ಚಾರಿತ್ರ್ಯವಧೆಯ ಸಂಚು ನಡೆಯುತ್ತಿರುತ್ತದೆ. ತನ್ಮೂಲಕ ಮಹಿಳೆಯರು ರಾಜಕೀಯ ಪ್ರವೇಶಿಸುವಲ್ಲಿಯೇ ತಡೆಗೋಡೆ ನಿರ್ಮಿಸುವರು.

ಈಗ ರಾಜಕೀಯ ಪಕ್ಷಗಳಿಗಂತೂ ಚುನಾವಣೆಗಳೆಂದರೆ ಭರ್ತಿ ಲಾಭದ ದಂಧೆಗಳೇ. ಜಾಗತೀಕರಣ ಹುಟ್ಟು ಹಾಕಿದ ಹಣದ ದಾಹ ಮತ್ತು ಅಸ್ಮಿತೆಯ ಬಿಕ್ಕಟ್ಟಿನ ಪ್ರಭಾವಳಿಗೆ ಬಲಿಯಾದವುಗಳೇ. ಸಾಮಾಜಿಕ ನ್ಯಾಯ, ನೈತಿಕ ರಾಜಕಾರಣ, ಪ್ರಜಾಪ್ರಭುತ್ವೀಯ ನಡಾವಳಿಕೆ, ಊಹುಂ. ಯಾವುದೂ ಇಲ್ಲ. ಸೀಟು ಬರಬೇಕು. ಅಧಿಕಾರಕ್ಕಾಗಿ. ಸಂಪತ್ತನ್ನು ಕಬ್ಜಾ ಮಾಡಲು. ಅದಕ್ಕಾಗಿ ಸೇಡು ಸಂಸ್ಕೃತಿಯ ರಾಜಕಾರಣ. ಕುರುಡು ಕಾಂಚಾಣದ ಥಕಥೈಯ ರಾಜಕಾರಣ. ಮಹಿಳಾ ಅಸ್ಮಿತೆಗೆ ಜಾಗವಿಲ್ಲದ ರಾಜಕಾರಣವಿದು. ಈ ಅರ್ಭಟದಲ್ಲಿ ಮಹಿಳೆಗೆ ನೆಲೆಯಿಲ್ಲವೇ? ಆದರೆ ಲಿಂಗಸಂವೇದನೆಯುಳ್ಳ ಎಚ್ಚೆತ್ತ ರಾಜಕೀಯ ಪ್ರಜ್ಞೆಯೊಂದಿಗೆ ಚಳವಳಿಗಳು ತೀವ್ರ ಗೊಂಡಲ್ಲಿ ಎಲ್ಲವೂ ಬದಲಾಗಬೇಕಾಗುತ್ತದೆ. ಮೀಸಲಾತಿ ಮಸೂದೆ ಜಾರಿಯಾಗದ ಹೊರತು ಯಾವ ಪಕ್ಷಗಳೂ ಮಹಿಳೆಯರನ್ನು ಶಾಸನ-ಸಂಸತ್ತಿಗೆ ಆರಿಸಿ ಕಳಿಸಲಾರರು ಎಂಬುದು ಶತಃಸಿದ್ದ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...