Sunday, June 30, 2013

ಹಾಯ್ಕು


1
ಬೊಗಸೆ ಕಾಳು
ಹಿಂಡು ಹಕ್ಕಿ
ಒಬ್ಬನೇ ಬೇಟೆಗಾರ

2
ತುಂಬಿದೆ ಒಂದರಲಿ ಮಬ್ಬು
ಇನ್ನೊಂದರಲಿ ಬೆಳಕು
ವರ್ಗಾವಣೆಗೊಳುತಿವೆ ಎರಡೂ ಕಣ್ಣು

ದಿನದ ಸಾಲುಗಳು- 25

1
ಮುನಿದು ನಿನ್ನೆ ಜಗಳಾಡಿ ಹೋದವಳು ಇಂದು ಮುಗುಳ್ನಕ್ಕಿದ್ದು ಏನಚ್ಚರಿ ?
ಮೊನ್ನೆ ಸುರಿದ ಮಳೆಗೆ ಚಿಗುರತೊಡಗಿದೆ ಕಡಿದುರುಳಿಸಿದ ಮರದ ತುಂಡೂ..

2
ಆಕಾಶದಿಂದ ಕಣಿವೆಗೆ ಜಾರುತಿರುವೆನೆಲ ಎಂದು ಮಳೆಹನಿ ಕಣ್ಣುಮುಚ್ಚಿತು
ಅಲ್ಲೂ ಹೂವರಳಿ ನಗುವುದು ಕಣಿವೆಕೂಡಿದ ಮಳೆಹನಿ ಕಣ್ಬಿಟ್ಟಾಗ ಕಂಡಿತು3
ಎಲ್ಲ ಹನಿಗಳುದುರಿಸಿ ಮೋಡ ಖಾಲಿಯಾಯಿತೆಂದು ಭಾವಿಸಿದೆ
ಎಷ್ಟೋ ಹನಿಗಳು ಎದೆಯೊಳಗೇ ಉಳಿದವೆಂದು ನಿನ್ನ ನೋಡಿದಾಗನಿಸಿತು
 

ಇಂದು ವೈದ್ಯರ ದಿನಡಾ . ಎಚ್.ಎಸ್. ಅನುಪಮಾ


ಡಾ. ಬಿಧಾನ್ ಚಂದ್ರ ರಾಯ್( ಬಿ.ಸಿ.ರಾಯ್) ಅವರ ನೆನಪಿನಲ್ಲಿ ಪ್ರತಿ ವರ್ಷ ಜುಲೈ ಒಂದನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ೧೯೬೨ರ ಜುಲೈ ಒಂದರ ಬೆಳಿಗ್ಗೆ ರೋಗಿಗಳನ್ನು ನೋಡುತ್ತಿದ್ದಾಗಲೇ ಕೊನೆಯುಸಿರೆಳೆದ ಕಾಯಕಜೀವಿ ಬಿ. ಸಿ. ರಾಯ್. ಅವರು ಹುಟ್ಟಿದ ಹಾಗೂ ಮರಣ ಹೊಂದಿದ ದಿನವಾದ ಜುಲೈ ಒಂದನ್ನು ವೈದ್ಯರ ದಿನವೆಂದೇ ಕರೆಯಲಾಗುತ್ತದೆ. ಭಾರತದ ಕಂಡ ಮೇಧಾವಿ ವೈದ್ಯ, ರಾಜಕಾರಣಿ, ಸ್ವಾತಂತ್ರ ಹೋರಾಟಗಾರ, ಉತ್ತಮ ಆಡಳಿತಗಾರರಾದ ಬಿ.ಸಿ ರಾಯ್ ಅವರ ಜೀವನವೃತ್ತಾಂತವನ್ನು ಬರಿಯ ವೈದ್ಯರಷ್ಟೇ ಅಲ್ಲ, ಈಗಿನ ಯುವ ಪೀಳಿಗೆಯೂ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಹದಿನಾಲ್ಕು ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಅವರ ಜೀವನ ಚರಿತ್ರೆಯ ಆಯ್ದ ಭಾಗ ಇಲ್ಲಿದೆ:
 
 ೧೮೮೨ರ ಜುಲೈ ಒಂದರಂದು ಬಿಹಾರದ ಪಾಟ್ನಾದಲ್ಲಿ ಹುಟ್ಟಿದ ಬಿಧಾನ್ ಚಂದ್ರ ರಾಯ್ ಪಾಟ್ನಾ ಹಾಗೂ ಕೋಲ್ಕತಾಗಳಲ್ಲಿ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕೋಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿಗೆ ತೆರಳುವ ಮಹತ್ವಾಕಾಂಕ್ಷೆ ಇದ್ದರೂ ಆರ್ಥಿಕ ಬಲವಿಲ್ಲದೇ ಕೆಲಸಕ್ಕೆ ಸೇರಿದ್ದರು. ಪ್ರವೇಶ ಪರೀಕ್ಷೆಗಳನ್ನು ಬರೆದು ಅರ್ಹತೆ ಗಳಿಸಿಕೊಂಡರೂ ನಾನಾ ಸಬೂಬುಗಳಿಂದ ಲಂಡನಿನಲ್ಲಿ ಸೀಟು ನಿರಾಕರಿಸಲಾಗಿತ್ತು. ಕೊನೆಗೆ ೩೦ನೆಯ ಸಲ ಅವಕಾಶ ಸಿಕ್ಕಿದಾಗ ಕೇವಲ ೨ ವರ್ಷ ಮೂರು ತಿಂಗಳಲ್ಲಿ ಈಖಅS ಹಾಗೂ ಒಖಅP ಪದವಿಗಳನ್ನು ಪೂರೈಸಿದರು. ಅಷ್ಟು ಕಡಿಮೆ ಅವಧಿಯಲ್ಲಿ, ಮೆಡಿಸಿನ್ ಹಾಗೂ ಸರ್ಜರಿಗಳೆಂಬ ಎರಡು ಭಿನ್ನ ವೈದ್ಯಕೀಯ ಸ್ನಾತಕೋತ್ತರ ಪದವಿಗಳನ್ನು ಏಕಕಾಲದಲ್ಲಿ ಪೂರೈಸಿದ ಮೊದಲಿಗರು ಅವರು. ನಂತರ ಕೋಲ್ಕತಾಗೆ ಹಿಂದಿರುಗಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡರು.

     ಕೆಲವೇ ವರ್ಷಗಳಲ್ಲಿ ಉನ್ನತ ಹುದ್ದೆಗೇರಿ ಕೋಲ್ಕತಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಹತ್ತಾರು ಆಧುನಿಕ ವೈದ್ಯಕೀಯ ಪದ್ಧತಿಯ ಆಸ್ಪತ್ರೆಗಳನ್ನೂ, ಮೆಡಿಕಲ್ ಕಾಲೇಜುಗಳನ್ನೂ ತೆರೆದರು. ಬಂಗಾಳವೆಂದರೆ ಸಾಂಕ್ರಾಮಿಕ ಕಾಯಿಲೆಗಳ ತವರೆಂದೇ ಕುಖ್ಯಾತವಾಗಿ ಬ್ರಿಟಿಷ್ ಆಫೀಸರುಗಳು ಪೋಸ್ಟಿಂಗ್ ಮೇಲೆ ಕೋಲ್ಕತಾಗೆ ಹೋಗಲು ಹೆದರುತ್ತಿದ್ದ ಕಾಲವದು. ಜನರ ಆರೋಗ್ಯ ಸುಧಾರಿಸದೇ ಮತ್ಯಾವ ಸುಧಾರಣೆಗೂ ಅರ್ಥವಿಲ್ಲವೆಂದು ಅರಿತ ಬಿ.ಸಿ.ರಾಯ್ ಆರೋಗ್ಯಸೇವೆ ಎಲ್ಲರ ಕೈಗೆಟುಕುವ ಹಾಗೆ ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೌಲಭ್ಯ ಕಲ್ಪಿಸಿದರು. ಲಕ್ನೋ ವಿಶ್ವವಿದ್ಯಾಲಯವನ್ನೂ ಆರಂಭಿಸಿದರು.

    ಸ್ವಾತಂತ್ರ ಚಳುವಳಿಯ ಕಾಲವದು. ಪೂನಾದಲ್ಲಿ ಅಸ್ವಸ್ಥರಾಗಿ ಮಲಗಿದ್ದ ಗಾಂಧಿಯನ್ನು ನೋಡಲು ಹೋದಾಗ, ‘ನೀವು ಭಾರತದ ೪೦ ಮಿಲಿಯ ಜನರಿಗೆ ಉಚಿತವಾಗಿ ಔಷಧಿ ಕೊಡುವಿರಾದರೆ ನಾನೂ ತೆಗೆದುಕೊಳ್ಳಬಯಸುವೆ’ ಎಂದು ಗಾಂಧಿ ಅವರ ವಿಶೇಷ ಚಿಕಿತ್ಸೆ ನಿರಾಕರಿಸಿದರು. ‘ಭಾರತದ ೪೦ ಮಿಲಿಯ ಜನರ ಬಳಿ ಹೋಗಬಲ್ಲೆನೋ ಇಲ್ಲವೋ, ಆದರೆ ಅವರ ಪ್ರತಿನಿಧಿಯಾದ ನಿಮಗೆ ಚಿಕಿತ್ಸೆ ನೀಡಬೇಕೆಂದೇ ಬಂದಿರುವೆ’ ಎಂದುತ್ತರಿಸಿದ ರಾಯ್ ಅಂದಿನಿಂದ ಗಾಂಧೀಜಿಯ ನಿಕಟ ಸಹವರ್ತಿಯಾಗುತ್ತಾರೆ. ೧೯೨೫ರಲ್ಲಿ ರಾಜಕೀಯ ಪ್ರವೇಶಿಸುವ ಅವರು ಸುರೇಂದ್ರನಾಥ ಬ್ಯಾನರ್ಜಿಯವರನ್ನು ಸೋಲಿಸಿ ಆಯ್ಕೆಯಾದರು. ಬಾರಕ್‌ಪೋರ್‌ನಿಂದ ಗೆದ್ದ ಬಳಿಕ ಹೂಗ್ಲಿ ನದಿಯ ನೀರು ಕಲುಷಿತಗೊಳ್ಳುತ್ತಿದ್ದು ಅದರ ಶುದ್ಧೀಕರಣ ಯೋಜನೆ ಕೈಗೊಳ್ಳಬೇಕೆಂದು ಒತ್ತಾಯ ತಂದರು. ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಹೋದಾಗ ‘ನೀವೂ ನಮ್ಮ ಜೊತೆ ಜೈಲು ಸೇರುವುದು ಬೇಡ, ನಿಮ್ಮ ಕೆಲಸ ಜೈಲಿನ ಹೊರಗೆ. ಜನಪರ ಕೆಲಸ ಮಾಡುತ್ತ ನಮ್ಮ ಬೆಂಬಲಕ್ಕಿರಿ’ ಎಂದು ಗಾಂಧೀಜಿ ಹಿಂದೆ ಕಳಿಸಿದರು.  

     ಸ್ವಾತಂತ್ರಾನಂತರ ೧೯೪೮ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ಅನಂತರ ೧೪ ವರ್ಷ ಕಾಲ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಅವರು ಮುಖ್ಯಮಂತ್ರಿಯಾದ ಅವಧಿ ನಿರಾಶ್ರಿತರು, ಸಾಂಕ್ರಾಮಿಕ ರೋಗಗಳು, ಕೋಮುಗಲಭೆ, ನಿರುದ್ಯೋಗ ಇವೆಲ್ಲ ಬಂಗಾಳವನ್ನು ಕ್ಷೆಭೆಗೊಳಪಡಿಸಿದ್ದ ಕಾಲ. ಕೇವಲ ೩ ವರ್ಷಗಳಲ್ಲಿ ಕಟ್ಟುನಿಟ್ಟಾದ ಹಾಗೂ ಶಿಸ್ತಿನ ಆಡಳಿತದಿಂದ ಅವೆಲ್ಲವನ್ನು ತಹಬಂದಿಗೆ ತಂದ ಅವರನ್ನು ‘ಪಶ್ಚಿಮ ಬಂಗಾಳದ ಪಿತಾಮಹ’ ಎಂದೇ ಕರೆಯಲಾಗುತ್ತದೆ. ೧೯೬೧ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
***
ವೈದ್ಯರಿಗೊಂದು ನೀತಿಸಂಹಿತೆ ಇರಬೇಕು. ನೀತಿಸಂಹಿತೆ ಎಂದರೆ ಕಾನೂನಲ್ಲ. ಕಾನೂನು ತಪ್ಪಿದವರನ್ನು ಹುಡುಕಿ ಶಿಕ್ಷಿಸಿದರೆ ನೀತಿಸಂಹಿತೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಸುತ್ತದೆ. ಸಮಾಜದಲ್ಲಿ ಈಗಲೂ ವೈದ್ಯರನ್ನು ಅರ್ಧ ದೇವರೆಂದೇ ನಂಬಿದವರಿದ್ದಾರೆ. ಅದರ ಜೊತೆಗೇ ಅವರ ಚಿಕಿತ್ಸೆಯ ಉದ್ದೇಶ ಮತ್ತು ಗುಣಾತ್ಮಕ ಮೌಲ್ಯವನ್ನು ಪ್ರಶ್ನಿಸುವವರೂ ಇದ್ದಾರೆ. ಜೀವಮಾನವಿಡೀ ಎಡೆಬಿಡದೆ ಪ್ರಾಕ್ಟೀಸಿನಲ್ಲಿ ತೊಡಗಿಕೊಂಡವರಿರುವಂತೆಯೇ ಯಮದೂತರೆಂಬ ಬಿರುದು ಪಡೆದವರೂ ಇದ್ದಾರೆ. ಹೀಗಿರುತ್ತ ಪ್ರತಿ ವೈದ್ಯನೂ ವೈಯಕ್ತಿಕ ನೀತಿ ಸಂಹಿತೆಯೊಂದನ್ನು, ಜನಸ್ನೇಹಿ- ಜನಮುಖಿ ಚಿಕಿತ್ಸಾ ವಿಧಾನವೊಂದನ್ನು ರೂಪಿಸಿಕೊಳ್ಳಬೇಕಾದ ತುರ್ತಿದೆ. ಹಾಗೆಯೇ ಆ ವೃತ್ತಿಗಿರುವ ಘನತೆ, ಗೌರವವನ್ನು ಮರಳಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.

- ಅನುಪಮಾ

ಚುನಾವಣೆ ಲೆಕ್ಕದ ಬಾರಾ ಬಾನಗಡಿ
- ಸನತ್‌ಕುಮಾರ ಬೆಳಗಲಿ
ಸೌಜನ್ಯ : ವಾರ್ತಾಭಾರತಿ


ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ತೀರ್ಥಹಳ್ಳಿಯಿಂದ 1962ರಲ್ಲಿ ಸ್ಪರ್ಧಿಸಿ ಕೇವಲ ಹತ್ತು ಸಾವಿರ ರೂ. ಖರ್ಚು ಮಾಡಿ ವಿಧಾನಸಭೆಗೆ ಗೆದ್ದು ಬಂದರು. ಎಂಬತ್ತರ ದಶಕಕ್ಕಿಂತ ಮುಂಚೆ ಇಂಥ ಉದಾಹರಣೆಗಳು ಕಡಿಮೆ ಇರಲಿಲ್ಲ. ದಾವಣಗೆರೆಯಿಂದ 1978ರಲ್ಲಿ ಸಿಪಿಐನಿಂದ ಗೆದ್ದು ಬಂದಿದ್ದ ಪಂಪಾಪತಿಯವರು ಕೇವಲ ಐವತ್ತು ಸಾವಿರ ರೂಪಾಯಿನಲ್ಲಿ ಪ್ರಚಾರಕಾರ್ಯ ಮುಗಿಸಿದ್ದರು. ಹುಬ್ಬಳ್ಳಿಯಲ್ಲಿ ಕಮ್ಯುನಿಸ್ಟ್ ಪಕ್ಷದ ಪರವಾಗಿ 1978ರಲ್ಲಿ ಸ್ಪರ್ಧಿಸಿದ್ದ ಅಬ್ದುಲ್ ರಹ್ಮಾನ್ ಮುಧೋಳರ ಚುನಾವಣಾ ಖರ್ಚು ಎಪ್ಪತ್ತು ಸಾವಿರ ದಾಟಿರಲಿಲ್ಲ. ಅವರು ಬಿಜೆಪಿ ಅಭ್ಯರ್ಥಿ ಎದುರು 243 ಮತಗಳ ಅಂತರದಲ್ಲಿ ಸೋತಿದ್ದರು.ಈ ಪೈಕಿ ಪಂಪಾಪತಿ ಮತ್ತು ಮುಧೋಳರ ಚುನಾವಣೆಗಳಲ್ಲಿ ನಾನು ಸ್ವತಃ ಪಾಲ್ಗೊಂಡಿದ್ದೆ. ಇವರಿಬ್ಬರ ಚುನಾವಣೆ ಪ್ರಚಾರದ ಖರ್ಚು ಇಷ್ಟು ಕಡಿಮೆಯಾಗಲು ಅವರ ಬೆನ್ನಿಗಿದ್ದ ಕಾರ್ಯಕರ್ತರ ಪಡೆ ಕಾರಣ. ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರು ತಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಬಂದು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. 

‘ಸಂಯುಕ್ತ ಕರ್ನಾಟಕ’ದಲ್ಲಿ ಆಗ ಹಿರಿಯ ಉಪಸಂಪಾದಕನಾಗಿದ್ದ ನಾನೇ ರಾತ್ರಿ ವಾಲ್ ರೈಟಿಂಗ್ (ಗೋಡೆಬರಹ) ಮಾಡಲು ಹೋಗುತ್ತಿದ್ದೆ. ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಾಗಿದ್ದ ಆನಂದ ಹೆಗಡೆ, ರಾಮರಾವ್ ಮುಂತಾದವರು ಇರುತ್ತಿದ್ದರು. ಯಾರೂ ಬಾಡಿಗೆ ಜನರಲ್ಲ.ಈಗ ಆ ಕಾಲ ಹೋಯಿತು. ಒಂದು ಕ್ಷೇತ್ರದ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಖರ್ಚಾಗುವುದಿಲ್ಲ. ದೇಶದಲ್ಲಿ ನವಉದಾರೀಕರಣದ ವಿಷಗಾಳಿ ಬೀಸತೊಡಗಿದ ನಂತರ ಚುನಾವಣಾ ಖರ್ಚು ವೆಚ್ಚಕ್ಕೆ ಕಡಿವಾಣ ಇಲ್ಲದಂತಾಗಿದೆ. 

ಎಂಬತ್ತರ ದಶಕದವರೆಗಿನ ಪ್ರಚಾರ ಅಂದರೆ ಕರಪತ್ರ ಮುದ್ರಿಸಿ ಹಂಚುವುದು, ಭಿತ್ತಿಪತ್ರ ಅಂಟಿಸುವುದು, ಮನೆಮನೆಗೆ ಹೋಗಿ ಮತಯಾಚಿಸುವುದು, ಇದನ್ನು ಹೊರತುಪಡಿಸಿದರೆ ಕೆಲ ಸಿರಿವಂತ ಅಭ್ಯರ್ಥಿಗಳು ಹೆಂಡದ ಬಾಟಲಿಗಳ ಮತ್ತೇರಿಸುತ್ತಿದ್ದರು.ಆದರೆ ಈಗ ಹಾಗಿಲ್ಲ. ಮನೆಮನೆಗೆ ಸೀರೆ, ಪ್ಯಾಂಟ್‌ಪೀಸ್‌ಗಳ ಉಡುಗೊರೆ. ಮತಯಾಚನೆಗೆ ಹೋದಾಗ ಆರತಿ ತಟ್ಟೆ ಹಿಡಿದುಕೊಂಡು ಬಂದ ಮಹಿಳೆಯರಿಗೆ 501, 1001 ರೂಪಾಯಿ ತಟ್ಟೆ ಕಾಣಿಕೆ. ಒಂದು ಓಟಿಗೆ ಒಂದು ಸಾವಿರದಂತೆ ಖರೀದಿ. 

ಒಂದು ಮನೆಯಲ್ಲಿ ಹತ್ತು ಓಟಿದ್ದರೆ ಹತ್ತು ಸಾವಿರ ಲಕೋಟೆ ಕಾಣಿಕೆ. ಇವೆಲ್ಲ ಸಾಮಾನ್ಯ ಸಂಗತಿಗಳು.ಗಣಿಧೂಳಿನ ಬಳ್ಳಾರಿಯಿಲ್ಲಂತೂ ಸುಷ್ಮಾಸ್ವರಾಜ್ ದತ್ತು ಪುತ್ರರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಈ ಹಿಂದೆ ಸ್ಪರ್ಧಿಸಿದಾಗ ಒಂದು ಓಟಿಗೆ 5 ಸಾವಿರದಂತೆ ನೀಡಿದ್ದಾರೆ ಎಂದು ಅಲ್ಲಿನ ಗೆಳೆಯರು ಹೇಳುತ್ತಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಇದೇ ಕರಾಮತ್ತು ನಡೆದಿತ್ತು.

ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಗೆ ಹತ್ತು ಲಕ್ಷ ರೂಪಾಯಿ, ಲೋಕಸಭಾ ಚುನಾವಣೆಗೆ 25 ಲಕ್ಷ ರೂಪಾಯಿ ಎಂದು 2009ರಲ್ಲಿ ನಿಗದಿ ಮಾಡಿತ್ತು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ತಾನು ಪ್ರಚಾರಕ್ಕಾಗಿ 8 ಕೋಟಿ ರೂಪಾಯಿ ಖರ್ಚು ಮಾಡಿದ್ದಾಗಿ ಮಹಾರಾಷ್ಟ್ರದ ಬಿಜೆಪಿ ನಾಯಕ ಗೋಪಿನಾಥ ಮುಂಢೆ ಬಹಿರಂಗವಾಗಿ ಹೇಳಿದ್ದಾರೆ. 1980ರ ಚುನಾವಣೆಯಲ್ಲಿ ಮೊದಲ ಬಾರಿ ಚುನಾವಣಾ ಕಣಕ್ಕಿಳಿದಾಗ 29 ಸಾವಿರ ರೂಪಾಯಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿರುವ ಮುಂಢೆ 2009ರ ಚುನಾವಣೆಯಲ್ಲಿ 8 ಕೋಟಿ ರೂ. ಖರ್ಚಾಯಿತು ಎಂದಿದ್ದಾರೆ.

2009ರಲ್ಲಿ ಚುನಾವಣಾ ಪ್ರಚಾರವೆಚ್ಚದ ಮಿತಿ 25 ಲಕ್ಷ ರೂಪಾಯಿಯಿತ್ತು. 2011ರಲ್ಲಿ 25ರಿಂದ 40 ಲಕ್ಷಕ್ಕೆ ಏರಿಸಲಾಗಿದೆ. ಚುನಾವಣಾ ಆಯೋಗದ ಈ ಮಿತಿಯನ್ನು ಉಲ್ಲಂಘಿಸಿ 8 ಕೋಟಿ ರೂಪಾಯಿ ಖರ್ಚು ಮಾಡಲು ಈ ಮುಂಢೆಗೆ ಹಣ ಎಲ್ಲಿಂದ ಬಂತು? ಪ್ರಮೋದ್ ಮಹಾಜನ್ ಸೋದರಿಯನ್ನು ವಿವಾಹವಾಗಿದ್ದ ಮುಂಢೆ ರಿಲಯನ್ಸ್ ಕಂಪೆನಿಯ ಅಂಬಾನಿಗಳ ನಿಕಟವರ್ತಿ. ಅದೇನೇ ಇರಲಿ ಸತ್ಯವನ್ನು ನುಂಗಿಕೊಳ್ಳಲಾಗದ ಮುಂಢೆ ಉಗುಳಿಬಿಟ್ಟಿದ್ದಾರೆ. ಈಗ ಚುನಾವಣಾ ಆಯೋಗದ ಕ್ರಮ ಎದುರಿಸಲು ಕೈಕಟ್ಟಿ ನಿಂತಿದ್ದಾರೆ.

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಖರ್ಚು ವೆಚ್ಚಗಳ ಸಂಗತಿ ಸ್ವಾರಸ್ಯಕರ. ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳೆಲ್ಲ ಚುನಾವಣಾ ಆಯೋಗ ನಿಗದಿಪಡಿಸಿದ ಮಿತಿಯೊಳಗೆ ಖರ್ಚು ಮಾಡಿದ್ದಾಗಿ ಲೆಕ್ಕ ಕೊಟ್ಟಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಘೋಷಿಸಿಕೊಂಡಿದ್ದ ಆಸ್ತಿ ವಿವರಗಳಿಗೂ, ಈ ಬಾರಿ ಘೋಷಿಸಿಕೊಂಡ ಆಸ್ತಿ ವಿವರಗಳಿಗೂ ಭೂಮಿ ಆಕಾಶದಷ್ಟು ಅಂತರವಿದ್ದರೆ, ಒಬ್ಬೊಬ್ಬರ ಆಸ್ತಿಯೂ ಒಂದಲ್ಲ, ಎರಡಲ್ಲ ನೂರಾರು ಪಟ್ಟು ಹೆಚ್ಚಾಗಿದೆ. ಅಂದರೆ ಇವರು ಚುನಾವಣೆಯಲ್ಲಿ ಮಾಡಿದ ಖರ್ಚು ಮಾತ್ರ ನಿಗದಿತ ಮಿತಿ ದಾಟಿದೆ.

ಬಾಗೆಪಲ್ಲಿ ಮತಕ್ಷೇತ್ರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಸುಬ್ಬಾರೆಡ್ಡಿ ಭಗಿನಿ ಹೊಟೇಲ್ ಸಮೂಹದ ಮಾಲಕ. ಈತನ ಬಾರ್, ರೆಸ್ಟೊರೆಂಟ್, ಹೊಟೇಲ್‌ಗಳು ಬೆಂಗಳೂರು, ಹೈದರಾಬಾದ್, ಮೈಸೂರು ಹಾಗೂ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಇವೆ. ನೂರಾರು ಕೋಟಿ ರೂಪಾಯಿ ಆದಾಯವಿದೆ. ತನ್ನ ಉದ್ಯಮದ ರಕ್ಷಣೆಗಾಗಿ ವಿಧಾನಸಭೆ ಪ್ರವೇಶಿಸಬೇಕೆಂಬ ಖಯಾಲಿಗೆ ಬಿದ್ದ ಸುಬ್ಬಾರೆಡ್ಡಿ ಈ ಗುರಿಸಾಧನೆಗಾಗಿ ಮಾಡಿದ ಒಟ್ಟು ಖರ್ಚು 100 ಕೋಟಿ ರೂಪಾಯಿ. ಆದರೆ ಚುನಾವಣೆ ಆಯೋಗಕ್ಕೆ ತೋರಿಸಿದ ಲೆಕ್ಕ ಮಾತ್ರ 1.50 ಲಕ್ಷ ರೂ.

ಈ ಬಾಗೆಪಲ್ಲಿ ಕ್ಷೇತ್ರ ಕಮ್ಯುನಿಸ್ಟರ ಭದ್ರಕೋಟೆ. ಜನಪ್ರಿಯ ನಾಯಕ ಜಿ.ವಿ.ಶ್ರೀರಾಮರೆಡ್ಡಿ ಇಲ್ಲಿಂದ ಗೆದ್ದು ಬರುತ್ತಿದ್ದರು. ಆದರೆ ಈ ಬಾರಿ ಧನಶಕ್ತಿ ಎದುರು ಜನಶಕ್ತಿ ಅಲ್ಲಿ ಪರಾಭವಗೊಂಡಿತು. ಗೆದ್ದ ಸುಬ್ಬಾರೆಡ್ಡಿ ಅದೇನು ಪವಾಡ ಮಾಡಿದರೋ ಚುನಾವಣೆಗೆ ಖರ್ಚು ಮಾಡಿದ್ದ ಬರೀ ಒಂದೂವರೆ ಲಕ್ಷ ಎಂದು ಲೆಕ್ಕ ಕೊಟ್ಟಿದ್ದಾರೆ. ಆದರೆ ಬಾಗೆಪಲ್ಲಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಇವರು ಮಾಡಿದ ಸಾಮೂಹಿಕ ಮದುವೆ, ನವದಂಪತಿಗೆ ನೀಡಿದ ಚಿನ್ನದ ತಾಳಿ, ಉಂಗುರ, ಮದುವೆಯಾದ ಪ್ರತಿ ಜೋಡಿಗೆ ನೀಡಿದ ಸೀಮೆಹಸು ಇವೆಲ್ಲ ಲೆಕ್ಕ ಹಾಕಿದರೆ ಶ್ರೀರಾಮರೆಡ್ಡಿಯನ್ನು ಸೋಲಿಸಲು ಸುಮಾರು 100 ಕೋಟಿ ರೂ.ಗಳನ್ನು ಸುಬ್ಬಾರೆಡ್ಡಿ ಖರ್ಚು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಸುಬ್ಬಾರೆಡ್ಡಿಯ ಕಲ್ಯಾಣ ಕೆಲಸಗಳು ಒಂದೆರಡಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸುವುದು, ಡಬ್ಬಾ ಅಂಗಡಿಯವರ ಪಾಲಿಕೆ ಕಂದಾಯ ಪಾವತಿ ಮಾಡುವುದು ಹೀಗೆ ನೂರಾರು ಕಸರತ್ತು ಮಾಡಿ ಶಾಸನಸಭೆ ಪ್ರವೇಶಿಸಿರುವ ಸುಬ್ಬಾರೆಡ್ಡಿ ಒಂದು ಉದಾಹರಣೆ ಮಾತ್ರ. ಇಂಥವರು ರಾಜ್ಯದಲ್ಲಿ ಅನೇಕರಿದ್ದಾರೆ. ಕೆಲವರು ಸೋತಿದ್ದಾರೆ. ಹಲವರು ಗೆದ್ದಿದ್ದಾರೆ. ಆದರೆ ಮುಂಢೆಯಂತೆ ಸತ್ಯ ನುಡಿದವರು ತುಂಬ ಕಡಿಮೆ. ಮುಂಢೆ  ಬಾಯಿತಪ್ಪಿ ಮಾತಾಡಿ ಆಯೋಗದ ಬಲೆಗೆ ಸಿಲುಕಿದ್ದಾರೆ.ಇಂಥ ವಾತಾವರಣದಲ್ಲೂ ಕೇವಲ ಜನ ಬೆಂಬಲದಿಂದ ಗೆದ್ದು ಬಂದ ವೈ.ಎಸ್.ವಿ.ದತ್ತ ಅಂಥವರೂ ನಮ್ಮ ನಡುವಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿದವರನ್ನು ಸೋಲಿಸಿ ಜನತೆ ಮನಗೆ ಕಳಿಸಿದ್ದಾರೆ. ಅಂತಲೆ ಪ್ರಜಾಪ್ರಭುತ್ವದ ಬಗ್ಗೆ ಆಗಾಗ ಭರವಸೆ ಮೂಡುತ್ತದೆ. ಆದರೆ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಕೊಡುವವರನ್ನು ತನಿಖೆಗೆ ಗುರಿಪಡಿಸಬೇಕಾಗಿದೆ.

Friday, June 28, 2013

ದಿನದ ಸಾಲುಗಳು -24ಜ್ಞಾನಿಯ ಅಂಗಳದಲ್ಲೂ  ವಜ್ಜೆ ಹೆಜ್ಜೆಗಳ ಗುರುತು 
ಸಹನಶೀಲನಿಗೂ ಸುಲಭವೇನು ಬೇಸರ ನುಂಗುವುದು.. 
೨ 
ಸಂತೆಯಲಿ ಮಾರದ ಪ್ರತಿಮೆಯ ಕಣ್ಣ ಕಳವಳ ಕೊಳ್ಳದವನ ಬೆನ್ನ ಹಿಂದೆಯೇ ನಡೆದುಬಂದಿತು
ಪರಂಪರೆಯೇ ಕೂಡಲ ಲೋಕದ ಪಹರೆಗೆ ನಿಂತ ಮೇಲೆ  ಸಂಗಮದ ಬಯಕೆ ಗುಳೆ ಹೊರಟಿದೆ 

೩ 
ಈ ದುಃಖ ನೀನಿರದ ಹೊತ್ತಲ್ಲೂ ಜತೆಗಿದೆ
ಖುಶಿಯ ದಾರಿ ಒಂದೇ ನೀನಿದ್ದರಷ್ಟೇ ಜತೆಗಿರುವುದು


ಮಾನಸಿಕ ಅಭದ್ರತೆ ಮತ್ತು ಪಾಪಪ್ರಜ್ಞೆ


ಮಾನಸಿಕ ಅಭದ್ರತೆ ಮತ್ತು ಪಾಪಪ್ರಜ್ಞೆ

ಶೂದ್ರ ಶ್ರೀನಿವಾಸ್

ನಾನು ಬರೆಯುವ ಮೇಜಿಗೆ ಹೊಂದಿ ಕೊಂಡಂತೆ ಚಿಕ್ಕ ಕಪಾಟು ಇದೆ. ಅದು ಒಂದು ರೀತಿಯಲ್ಲಿ ಗೂಡಿನಂತಿದೆ. ಅಲ್ಲಿ ಪುಟ್ಟ ಬುದ್ಧನ ಶಿಲಾ ಪ್ರತಿಮೆ ಇದೆ. ನನ್ನ ವಿಷಾದದ ಕ್ಷಣಗಳಲ್ಲಿ ಅದನ್ನು ಸುಮ್ಮನೆ ನೋಡುತ್ತ ಕೂರುವೆ. ಸುಮಾರು ಎರಡು ದಶಕಗಳ ಹಿಂದೆ ರಾಜಾಸ್ತಾನದ ಜೈಪುರದಿಂದ ತಂದಿದ್ದು. ಆ ಸೌಮ್ಯಧ್ಯಾನದ ಮುಖಾರವಿಂದದಲ್ಲಿ ಎಂಥದೋ ಅವ್ಯಕ್ತ ಸಂದೇಶವನ್ನು ಪಡೆಯುತ್ತಲೇ ಬಂದಿದ್ದೇನೆ. ಆ ಧ್ಯಾನದ ಸಂಕೇತದಲ್ಲಿ ನಮ್ಮನ್ನು ಮೌನದ ಕಡೆಗೆ ನಿರಂತರ ಕರೆದುಕೊಂಡು ಹೋಗುವ ಚೈತನ್ಯ ಇದೆ. ಸಾಮಾನ್ಯವಾಗಿ ಯಾರೇ ಕಣ್ಣುಮುಚ್ಚಿ ಕುಳಿತಾಗ ಅವರ ಮುಖದಲ್ಲಿ ಕಳೆ ಇರುತ್ತದೆ. ಮತ್ತೆ ಆ ಧ್ಯಾನ ಜಗತ್ತನ್ನು ತಿಳಿಗೊಳ್ಳದಂತೆ ಕಾಣುವುದೇ ಆಗಿರುತ್ತದೆ. ಯಾವ ಚಿಂತಕನೂ ತಿಳಿಯಾದ ಕೊಳದಲ್ಲಿ ಬಗ್ಗಡವನ್ನು ತುಂಬಲು ಹೋಗುವುದಿಲ್ಲ. ಯಾಕೆಂದರೆ ಅದು ತನ್ನನ್ನು ನೋಡಿಕೊಳ್ಳುವ ಮತ್ತು ಅರಿಯುವ ಕನ್ನಡಿಯಾಗಿರುತ್ತದೆ. ಹಾಗೆ ನೋಡಿದರೆ ನನ್ನ ಬಾಲ್ಯ ಕಾಲದ ಬಹಳಷ್ಟು ವರ್ಷ ಪಾತ್ರೆಯ ನೀರೇ ಕನ್ನಡಿಯಾಗಿತ್ತು. ಅಥವಾ ಬೇರೊಬ್ಬರ ನೋಟವೇ ಕನ್ನಡಿಯಾಗಿರುತ್ತಿತ್ತು. 

ಒಂದು ದೃಷ್ಟಿಯಿಂದ ಈ ನೋಟವೇ ಭದ್ರತೆ, ಅಭದ್ರತೆ ಮತ್ತು ಪಾಪಪ್ರಜ್ಞೆಯನ್ನು ಎಚ್ಚರಿ ಸುತ್ತಿದ್ದುದು. ಹಾಗೆ ನೋಡಿದರೆ ಕನ್ನಡಿಯಲ್ಲಿ ನಮ್ಮನ್ನು ನೋಡಿ ಏನೇನೋ ಅಂಕುಡೊಂಕುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮಲಿನತೆ ಇಲ್ಲದಂತೆ ನೋಡಿಕೊಳ್ಳುತ್ತೇವೆ. ಯಾವಾಗಲೂ ಚೆನ್ನಾಗಿರಲು ಪ್ರಯತ್ನಿಸುತ್ತೇವೆ. ಈ ‘ಚೆನ್ನಾಗಿರಲು’ ಎಂಬುದು ಎಷ್ಟು ಸಂತೋಷ ದಾಯಕವೋ ಅಷ್ಟೇ ಪೀಡೆಯಾಗಿ ಕಾಡಲು ಸಾಧ್ಯವಿರುತ್ತದೆ. ನಾರ್ಸಿಸಸ್ ಕಾಂಪ್ಲೆಕ್ಸ್ ಹುಟ್ಟಿಕೊಂಡದ್ದೇ ಈ ಕಾರಣಕ್ಕಾಗಿ ಇರಬಹುದು. ಇಲ್ಲದಿದ್ದರೆ ನಾರ್ಸಿಸ್ ಯಾಕೆ ಸಾಯುತ್ತಿದ್ದ. ಅವನಿಗೆ ರೂಪ ಮತ್ತು ಯೌವನ ಬಿಟ್ಟರೆ ಮತ್ತೇನು ಇಲ್ಲ ಎಂಬ ಕಾಲಮಿತಿಗೆ ತಲುಪಿದ್ದ. 

‘ಯಯಾತಿ’ ಮನಸ್ಥಿತಿಯ ಸ್ವಾರ್ಥ ಅಥವಾ ದೌರ್ಬಲ್ಯ ಎಂಥ ಹೀನಸ್ಥಿತಿಯಲ್ಲಿ ಕಾಡುತ್ತಿರುತ್ತದೆ. ಇತ್ತೀಚೆಗೆ ಸ್ನೇಹಿತರೊಬ್ಬರ ಜೊತೆ ಮಾತುಕತೆಗೆ ತೊಡಗಿದ್ದೆ. ಅವರು ಇದ್ದಕ್ಕಿದ್ದಂತೆ ಹಿಂದೆ ‘ವಾರ್ತಾಭಾರತಿ’ಯಲ್ಲಿ ‘ಮಾತು ಮೌನದ ಮುಂದೆ’ ಅಂಕಣದಲ್ಲಿ ಹಿರೇಮಲ್ಲೂರು ಈಶ್ವರನ್ ಅವರನ್ನು ಕುರಿತು ಬರೆದದ್ದನ್ನು ನೆನಪಿಸಿದರು. ಭಾವಚಿತ್ರ ಬದಲಾಯಿಸಿದ್ದರ ಬಗ್ಗೆ. ‘ಆ ಭಾವಚಿತ್ರ ಚೆನ್ನಾಗಿಲ್ಲ ಎಂದು ಯೌವನದಲ್ಲಿದ್ದ ಭಾವಚಿತ್ರ ಕೊಟ್ಟಿದ್ದರ’ ವಿಷಯ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಆಗ ಅವರಿಗೆ ಚೌಡಪ್ಪ ರೆಡ್ಡಿ ಎಂಬ ಸಭ್ಯ ಅಧಿಕಾರಿಯೊಬ್ಬರ ವಿಷಯ ತಿಳಿಸಿದ್ದೆ. ಅವರು ಕರ್ನಾಟಕ ಸರಕಾರದ ವಾರ್ತಾ ಇಲಾಖೆಯಲ್ಲಿ ನಿರ್ದೇಶಕರಾಗಿ ನಿವೃತ್ತಿ ಹೊಂದಿದವರು. ಅವರು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ವಿಚಿತ್ರ ಮನಸ್ಥಿತಿಗೆ ತಲುಪಿದ್ದರು. ತಮ್ಮ ಯೌವನದ ಭಾವಚಿತ್ರವನ್ನು ತಮಗೆ ಗೊತ್ತಿರುವ ಯಾರ್ಯಾರಿಗೋ ತೋರಿಸುತ್ತ ‘ನೋಡಿ ನಾನು ಹೀಗಿದ್ದೆ’ ಎಂದು ತೋರಿಸುತ್ತಿದ್ದರು. ಅಷ್ಟೇ ಅಲ್ಲ ಅದಕ್ಕೆ ಪೂರಕವಾಗಿ ಏನೇನೋ ಹೇಳುತ್ತಿದ್ದರು. ಆದರೆ ಇದನ್ನು ಅನುಭವಿಸಿದವರಿಗೆ ಬೇಸರವಾಗುತ್ತಿದ್ದರೂ; ಯಾರೂ ಸಿಟ್ಟು ವ್ಯಕ್ತಪಡಿಸುತ್ತಿರಲಿಲ್ಲ. 

ಯಾಕೆಂದರೆ ಅವರು ಅತ್ಯಂತ ಸಭ್ಯ ವ್ಯಕ್ತಿಯಾಗಿದ್ದರಿಂದ ಅವರು ಒಂದಷ್ಟು ಕೃತಿಗಳನ್ನು ಬರೆದಿದ್ದರು. ಅದರಲ್ಲಿ ‘ಧರ್ಮ ಭೂಮಿ’ ಎಂಬುದು ಒಂದು ಪೂರ್ಣಾವಧಿಯ ನಾಟಕ. ತಮ್ಮ ಇಲಾಖೆಯ ಕಲಾವಿದರಿಂದ ನಾಟಕವಾಡಿಸಿದ್ದರು. ಅದ್ದೂರಿ ಸೆಟ್‌ಗಳಿಂದ ಮಾಡಿದ್ದ ನಾಟಕ. ಕೇವಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾತ್ರವಲ್ಲ, ಕರ್ನಾಟಕದ ಬೇರೆ ಬೇರೆ ಕಡೆಯೂ ಪ್ರದರ್ಶನಗೊಂಡಿತ್ತು.ಅವರು ನಿರ್ದೇಶಕರಾಗಿದ್ದ ಕಾರಣಕ್ಕಾಗಿ. ಅದರಲ್ಲಿ ಏನೋ ಸಾಮಾಜಿಕ ಮತ್ತು ಸಾಮರಸ್ಯದ ಸಂದೇಶವಿದೆಯೆಂದು, ಎಲ್ಲ ಧರ್ಮಗಳ ಒಂದಷ್ಟು ಪವಿತ್ರ ಸಂದೇಶಗಳನ್ನು ‘ಧರ್ಮಭೂಮಿ’ಯಲ್ಲಿ ಸೇರಿದ್ದರು.
ಮುಗ್ಧ ಜನರಿಗೆ ಅದು ಭಾವಪೂರ್ಣವಾಗಿ ತಲುಪಿರಲು ಸಾಧ್ಯ. ಆದರೆ ನಮಗೆ ಹಿಂಸೆಯಾಗುತ್ತಿತ್ತು. ಅದನ್ನು ಲಂಕೇಶ್ ಅವರೂ ಮತ್ತು ನಾನೂ ಅನುಭವಿಸಿದ್ದೇವೆ. ಚೌಡರೆಡ್ಡಿಯವರ ಭಾವಚಿತ್ರದ ವಿಷಯದಲ್ಲಂತೂ; ‘ಶೂದ್ರ ಈ ರೀತಿಯಲ್ಲಿಯೂ ಇರಲು ಸಾಧ್ಯವಾ?’ಎಂದು ವಿಷಾದದ ಮೊರೆಹೋಗಿದ್ದರು.ಹಾಗೆ ನೋಡಿದರೆ ರೆಡ್ಡಿ ಅವರಿಗೆ ‘ಭಾವಚಿತ್ರ’ಮತ್ತು ‘ಧರ್ಮಭೂಮಿ’ ವಿಭಿನ್ನ ನೆಲೆಯ ನಾರ್ಸಿಸಸ್ ಕಾಂಪ್ಲೆಕ್ಸ್ ತುಂಬ ಆಳದಲ್ಲಿ ಕೆಲಸ ಮಾಡುತ್ತಿರುತ್ತಿತ್ತು. ಆದರೆ ಆತ ಮುಗ್ಧ ಮತ್ತು ಭ್ರಷ್ಟ ಅಧಿಕಾರಿಯಾಗಿರಲಿಲ್ಲ. 

ಎಲ್ಲ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಹಾಗೂ ಮೆಚ್ಚುಗೆಯಿಂದ ಎಲ್ಲರ ಕೈ ಹಿಡಿದು ಒಂದಷ್ಟು ಕ್ಷಣ ಸಂಭ್ರಮಿಸುತ್ತಿದ್ದರು.ಈಗಲೂ ಇಂಥವರಿಗೆ ಕೊರತೆ ಇಲ್ಲ.ಇವರೆಲ್ಲ ಜಾತ್ಯತೀತರು ಮತ್ತು ಮತಾತೀತರು. ಕೇವಲ ಮನುಷ್ಯರಾಗಿರುತ್ತಾರೆ. ಇಂಥವರಿಂದ ವಿಷಪೂರಿತ ಸಂದೇಶ ಜನರಿಗೆ ತಲುಪುವುದಿಲ್ಲ.ಆದರೆ ಕೆಲವರು ಎಷ್ಟು ಜಾತಿವಾದಿಗಳಾ ಗಿರುತ್ತಾರೆಂದರೆ; ಭಾರತದಂಥ ಬಹುಮುಖೀ ಸಮಾಜದಲ್ಲಿ ಬೇರೆ ಬೇರೆ ಸಂಸ್ಕೃತಿಯ ಮನಸ್ಸುಗಳನ್ನು ಒಳಗೆ ಬಿಟ್ಟುಕೊಳ್ಳಬೇಕೆಂದು ಯೋಚಿಸಲು ಹೋಗುವುದಿಲ್ಲ. 

ಅತ್ಯಂತ ಚೆನ್ನಾಗಿ ಬರೆಯುವ ಕವಿಗಳೂ ಕೂಡ ತಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ತಮ್ಮ ಮೇಲ್ವರ್ಗದ ಲೇಖಕರನ್ನೇ ಕರೆದಿರುತ್ತಾರೆ. ಸಂಘಟಕರೂ ಅವರೇ ಆಗಿರುತ್ತಾರೆ. ಅವರಿಂದ ಅದ್ಧೂರಿ ಮಾತುಗಳನ್ನು ಹೇಳಿಸಿಕೊಳ್ಳುತ್ತ ಮತ್ತು ಕೇಳಿಸಿಕೊಳ್ಳುತ್ತ ಕೊನೆಗೆ ತಾವು ದಾರ್ಶನಿಕರಂತೆ ಷರಾ ಎಳೆಯುವಂಥ ಮಾತುಗಳನ್ನು ಆಡಿರುತ್ತಾರೆ. ಇದು ಅವರಿಗೆ ಪಾಪ ಪ್ರಜ್ಞೆಯಾಗಿ ಕಾಡಿರುವುದೇ ಇಲ್ಲ. 

ಆಗ ಬಹಳಷ್ಟು ಬಾರಿ ಯೋಚಿಸಿರುವೆ:ನಿಜವಾಗಿಯೂ ಅವರಲ್ಲಿರುವ ‘ಸಾಂಸ್ಕೃತಿಕ ಅಭದ್ರತೆ’ಯಾವ ತೆರನದ್ದು ಎಂದು. ಇದು ಒಮ್ಮೆ ನಡೆದು ಹೋಗುವುದಿಲ್ಲ. ನಿರಂತರ ನಡೆದೇ ಹೋಗಿರುತ್ತದೆ. ಯಾವ ರೀತಿಯ ಸಂಕೋಚವೂ ಇರುವುದಿಲ್ಲ. ಇದರ ಮುಂದುವರಿದ ಭಾಗವಾಗಿ ತಮ್ಮ ತಮ್ಮ ಬಗ್ಗೆ ಬರೆಸಿ ಕೊಳ್ಳುತ್ತಿರುತ್ತಾರೆ ಮತ್ತು ಬರೆಯುತ್ತಾರೆ. ತಾವು ಪರೋಕ್ಷವಾಗಿ ಸಾಮಾಜಿಕ ಪಡೆಗಳು ಎಂದು ಮನಸ್ಸಿಗೆ ತಟ್ಟೇ ಇರುವುದಿಲ್ಲ.ಈ ದೃಷ್ಟಿಯಿಂದ ನನ್ನಂಥವರೂ ನಿಜವಾಗಿಯೂ ಅದೃಷ್ಟವಂತರು.

ಯಾಕೆಂದರೆ: ಲಂಕೇಶ್, ಅನಂತ ಮೂರ್ತಿ, ಪ್ರೊ.ಜಿ.ಎಸ್. ಶಿವರುದ್ರಪ್ಪ, ಕಿ.ರಂ.ನಾಗರಾಜ ಮತ್ತು ಡಿ.ಆರ್. ನಾಗರಾಜ್ ಅಂಥವರ ಕಾರಣಕ್ಕಾಗಿ; ಬಹುಮುಖಿ ನೆಲೆಗಳಿಗೆ ಹತ್ತಿರವಾದೆವು. ಇದರಿಂದ ನಾವು ಏನನ್ನೂ ಕಳೆದು ಕೊಳ್ಳಲಿಲ್ಲ. ಮಾನಸಿಕವಾಗಿ ಪಡೆದದ್ದೇ ಜಾಸ್ತಿ. ಹೀಗೆ ಪಡೆದದ್ದರಿಂದ ನಾವು ನಿಜವಾಗಿಯೂ ಸಂಭ್ರಮಿಸುತ್ತೇವೆ. ಬಿಜೆಪಿ ಅಧಿಕಾರದಿಂದ ಇಳಿದಿದ್ದಕ್ಕೆ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯ ಸಖ್ಯ ಕಳೆದು ಕೊಂಡಿದ್ದಕ್ಕೂ ಆನಂದಿಸುತ್ತೇವೆ. ಲಂಡನ್ನಿನಲ್ಲಿ ನಮ್ಮ ಆಟಗಾರರು ಐಸಿಸಿ ಚಾಂಪಿಯನ್‌ಷಿಪ್ ಪಡೆದದ್ದಕ್ಕೂ ಸಂತೋಷ ಪಡುತ್ತೇವೆ. ಅದೇ ಸಮಯಕ್ಕೆ ಇಂಗ್ಲೆಂಡಿನ ನಾಯಕ ಅಲೆಕ್ಸರ್ ಕುಕ್ ಎಂಥ ಅದ್ಭುತ ಆಟಗಾರ. 

ಆದರೆ ಸೋತಾಗ ಆತನ ವಿಷಾದಮಯ ಮುಖವನ್ನು ನೋಡಿ ಬೇಸರವಾಯಿತು. ಹಾಗೆ ನೋಡಿದರೆ ಎಲ್ಲ ಟೀಮುಗಳು ನನಗೆ ಇಷ್ಟ. ಬಹಳ ಕ್ರೌರ್ಯದಿಂದ ಕೂಡಿರುವುದೆಂದರೆ ಇಂಡಿಯಾ ಐಸಿಸಿ ಚಾಂಪಿಯನ್ ಆದಾಗ ಮೋದಿ ಕುಟುಂಬದವರು ಚಪ್ಪಾಳೆ ಬಾರಿಸಲಿಲ್ಲ. ಅದು ಅವರಿಗೆ ಸಂಭ್ರಮವೇ ಅಲ್ಲ. ಕೇವಲ ಪಾಕಿಸ್ತಾನ ಸೋತಾಗ ಮಾತ್ರ. ನಮ್ಮ ಮನಸ್ಸಿನ ಕನ್ನಡಿ ಎಷ್ಟು ಅಪರೂಪವಾದದ್ದು. ಪ್ರೀತಿ ಪೂರ್ವಕವಾದದ್ದನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದರೆ; ದೇಹಕ್ಕೆ ಎಷ್ಟು ಲವಲವಿಕೆಯನ್ನು ತುಂಬುತ್ತ ಹೋಗುತ್ತದೆ. ಬೇರೆಯವರಿಗೆ ಘಾಸಿಗೊಳಿಸಲು ಹೋದಂತೆಲ್ಲ ನಾವು ಪರೋಕ್ಷವಾಗಿ ದುರಂತದ ಮೆಟ್ಟಿಲನ್ನು ಏರುತ್ತಲೇ ಇರುತ್ತೇವೆ.
ಒಮ್ಮೊಮ್ಮೆ ಪೆಚ್ಚಾಗಿ ನನಗೆ ನಾನೇ ಕೇಳಿಕೊಳ್ಳುವೆ: ಯಾಕೆ ಹೀಗೆ ನಾನು ಯೋಚಿಸಬೇಕು ಎಂದು. ಮನಸ್ಸಿನೊಳಗೆ ಬಿಟ್ಟುಕೊಳ್ಳುವುದು ಬೇಡ; ಸುಮ್ಮನೆ ಇದ್ದು ಬಿಡೋಣ ಅನ್ನಿಸುತ್ತದೆ. ಆದರೆ ಆಗುವುದಿಲ್ಲ. ಯಾಕೆ? ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದವರು ಪ್ರೊ.ಜಿ.ಎಸ್. ಅವರ ಬಗ್ಗೆ ವ್ಯವಸ್ಥೆ ಮಾಡಿದ್ದ ವಿಚಾರ ಸಂಕಿರಣದಲ್ಲಿ ನಾವು ಒಂದಷ್ಟು ಮಂದಿ ವೈಯಕ್ತಿಕ ನೆಲೆಗಳಿಂದ ಪ್ರೊ.ಜಿ.ಎಸ್.ಎಸ್. ಅವರನ್ನು ಕುರಿತು ಮಾತಾಡುತ್ತಿದ್ದೆವು. 

ಆಗ ಸುಮತೀಂದ್ರ ನಾಡಿಗರು ಅತ್ಯಂತ ಅಸಹನೆಯಿಂದ; ಆದರೆ ಅದು ಅಸಹನೆ ಅಲ್ಲ ಎನ್ನುವ ರೀತಿಯಲ್ಲಿ ‘‘ಶಿವರುದ್ರಪ್ಪನವರು ಪರಿಪೂರ್ಣರಾಗಿರಲಿಲ್ಲ.ಆದರೆ ಪರಿಪೂರ್ಣತೆಯ ಕಡೆಗೆ ಹೋಗುವ ತುಡಿತವಿತ್ತು’’ ಎಂದಾಗ ನಿಜವಾಗಿಯೂ ನಗುಬಂತು. ಹಾಗೆ ನೋಡಿದರೆ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಪ್ರೊ.ಜಿ.ಎಸ್.ಎಸ್. ಅವರು ಅದ್ಭುತ ಕೆಳವರ್ಗದ ಪ್ರತಿಭಾವಂತರನ್ನು ತಮ್ಮ ವಿಭಾಗಕ್ಕೆ ಬರಮಾಡಿಕೊಂಡರು.  ಇದು ಬಹಳಷ್ಟು ಮೋದಿ ಮನಸ್ಸಿನವರಿಗೆ ಇಷ್ಟವಾಗಲಿಲ್ಲ. ನಾನಾ ರೀತಿಯ ಅನಾಮಿಕ ಪತ್ರಗಳನ್ನು ಪತ್ರಿಕೆಗಳ ಓದುಗರ ಅಂಕಣದಲ್ಲಿ ಎದುರಿಸಿದರು. 

ಇಂಥದ್ದನ್ನೆಲ್ಲ ಅನನ್ಯತೆಯಿಂದ ಒಳಗೆ ಬಿಟ್ಟುಕೊಂಡು ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚರ್ಚೆಗಳ ಅನನ್ಯತೆಯ ದಟ್ಟತೆಯನ್ನು ಬೆಳೆಸಿದರು. ಹಾಗೆ ನೋಡಿದರೆ: ಇದೇ ನಾಡಿಗರು ಯು.ಆರ್. ಅನಂತಮೂರ್ತಿಯವರ ಬರವಣಿಗೆಯ ಬಗ್ಗೆಯೇ ಒಂದೇ ಸಮನೇ; ಅಸಹನೆಯ ಪ್ರತಿಕ್ರಿಯೆಗಳನ್ನು ಪ್ರಕಟಿಸಿದರು. ಒಮ್ಮೆ ಬಿ.ಸಿ.ರಾಮಚಂದ್ರಶರ್ಮರಂಥ ಸುಸಂಸ್ಕೃತ ದೊಡ್ಡ ಕವಿಯೂ ಪ್ರೊ.ಜಿ.ಎಸ್.ಎಸ್. ಅವರ ಬಗ್ಗೆ ಕೆಟ್ಟದಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ವ್ಯಕ್ತಪಡಿಸಿದ್ದರು. ಶಾಂತಿನಾಥ ದೇಸಾಯಿ, ಮೊಕಾಷಿ ಮುಂತಾದವರು ಬೇಸರ ವ್ಯಕ್ತಪಡಿಸಿದರು. 

ಶರ್ಮರಿಗೆ ತಾವು ಮಾಡಿದ್ದು ತಪ್ಪು ಅನ್ನಿಸಿತು. ರಾತ್ರಿಯಲ್ಲಿ ಮಾನಸಿಕವಾಗಿ ಒದ್ದಾಡಿ; ಬೆಳಗ್ಗೆ ನನಗೆ ದೂರವಾಣಿಯಲ್ಲಿ ಸಂಪರ್ಕಿಸಿದರು: ‘‘ಶ್ರೀನಿವಾಸ್, ಶಿವರುದ್ರಪ್ಪನವರ ಮನೆಗೆ ಹೋಗಿ ಬರೋಣ. ರಾತ್ರಿಯೆಲ್ಲ ನಿದ್ದೆ ಇಲ್ಲ.’’ ಎಂದರು. ಅವರನ್ನು ಕರೆದುಕೊಂಡು ಪ್ರೊ.ಜಿ.ಎಸ್.ಎಸ್.ಅವರ ಮನೆಗೆ ಹೋದೆ. ಚೆನ್ನವೀರ ಕಣವಿಯವರು ಮತ್ತು ಪ್ರೊ.ಜಿ.ಎಸ್. ಅವರು ಕಾರ್ಯಕ್ರಮಕ್ಕೆ ಹೋಗಲು ಸಿದ್ಧವಾಗುತ್ತಿದ್ದರು. ರಾಮಚಂದ್ರಶರ್ಮರು ಪ್ರೊಫೆಸರ್ ಅವರ ಕೈ ಹಿಡಿದು ‘‘ಶಿವರುದ್ರಪ್ಪ ಅವರೇ, ದಯವಿಟ್ಟು ಕ್ಷಮಿಸಿ ನಿನ್ನೆ ಸಂಜೆ ನಾನು ಆ ರೀತಿ ಮಾತಾಡಬಾರದಿತ್ತು’’ ಎಂದರು. 

ಶಿವರುದ್ರಪ್ಪನವರು ನಗುತ್ತ ‘‘ಬಿಡಿ ಶರ್ಮರೆ, ಅದು ನೆನಪೇ ಇಲ್ಲ. ಮರೆತೇ ಬಿಟ್ಟಿದ್ದೇನೆ’’ ಎಂದು ಕಾಫಿ ಕೊಟ್ಟು ಪಕ್ಕದಲ್ಲಿ ಕೂರಿಸಿಕೊಂಡರು. ಇದನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ; ಶರ್ಮರಲ್ಲಿ ಆ ರೀತಿಯ ದೊಡ್ಡ ಗುಣವಿತ್ತು. ಕಾವ್ಯ, ಬಿಯರ್, ಇಸ್ಪೀಟು,ಫುಟ್ಬಾಲ್ ಮತ್ತು ಕ್ರಿಕೆಟ್ ಎಂದರೆ ಎಷ್ಟು ಚೇತೋಹಾರಿಯಾಗಿ ತೊಡಗಿಸಿಕೊಳ್ಳುತ್ತಿದ್ದರು.ಇಷ್ಟಾದರೂ ಕಾವ್ಯವೆಂದರೆ ಪ್ರತಿಬಾರಿ ಪುಳಕಗೊಳ್ಳುತ್ತಿದ್ದರು.ಕೇವಲ ತಮ್ಮ ಕವಿತೆಗಳನ್ನು ಮಾತ್ರವಲ್ಲ; ಬೇರೆ ಬೇರೆ ಭಾಷೆಗಳ ಅತ್ಯುತ್ತಮ ಕವಿತೆಗಳನ್ನು ನಮಗೆ ಓದಿ ಹೇಳಿದವರು. 

ಇದೆಲ್ಲದರ ನಡುವೆಯೂ ಅವರು ಹೇಳುತ್ತಿದ್ದುದು:‘‘ನಾನೊಬ್ಬ ಮನಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ: ಪ್ರತಿಯೊಬ್ಬನ ವ್ಯಕ್ತಿತ್ವದಲ್ಲಿ ‘ಪಾಪಪ್ರಜ್ಞೆ’ ಎಂಬುದು ಎಚ್ಚರವಾಗಿಲ್ಲದಿದ್ದರೆ; ನೀಚರಾಗಿ ಬಿಡುತ್ತಾರೆ, ರಾಕ್ಷಸರಾಗಿ ಬಿಡುತ್ತಾರೆ’’ ಎಂದು.ಇದಕ್ಕೆ ಸಂಬಂಧಿಸಿದಂತೆ ‘ಹಿಟ್ಲರ್’ ಮನಸ್ಥಿತಿ ಕುರಿತಂತೆ ಬಂದಿರುವ ಕವಿತೆಗಳನ್ನು ಹಾಗೂ ಕೃತಿಗಳನ್ನು ಉದಾಹರಿಸುತ್ತಿದ್ದರು. ಎರಿಕ್‌ಫ್ರೇಮ್‌ನಂಥ ಸೂಕ್ಷ್ಮ ಸಂವೇದನೆಯ ಮನಶಾಸ್ತ್ರಜ್ಞನ ‘ದಿ ಮೈಂಡ್ ಫ್ರಾಯ್ಡಾ’ಕೃತಿಯನ್ನು ಉಲ್ಲೇಖಿಸುತ್ತಿದ್ದರು. ಹಾಗೆಯೇ ‘ಆರ್ಟ್ ಆಫ್ ಲೀವಿಂಗ್’ ಕೃತಿಯನ್ನು.

ಹೀಗೆ ಏನೇನೋ ಬರೆಯುವ ಸಮಯಕ್ಕೆ ಧುತ್ತನೆ ‘ಅಭದ್ರತೆ ಮತ್ತು ಪಾಪಪ್ರಜ್ಞೆ’ಗೆ ಸವಾಲೆಸೆಯುವ ರೀತಿಯಲ್ಲಿ ಕೇದಾರನಾಥ ಮತ್ತು ಬದರಿನಾಥದಲ್ಲಿ ನಡೆದ ದುರಂತ ಒಂದು ದೊಡ್ಡ ಕನ್ನಡಿಯಂತೆ ಮುಂದಿದೆ. ಎಂಥದೋ ಅವ್ಯಕ್ತ ತಲ್ಲಣವನ್ನು ಹುಟ್ಟು ಹಾಕಿದೆ.ಒಂದು ಲಕ್ಷಕ್ಕೂ ಮೀರಿದ ಸಾವು. ಮನೆಮಠ ಕಳೆದುಕೊಂಡು ನಾಮಾವಶೇಷಗೊಂಡ ಕುಟುಂಬಗಳು.ಇಲ್ಲಿ ನನ್ನ ಜಾತಿಯವರ ಕೈಯಿಂದ ಬರೆಸುತ್ತೇನೆ, ಮಾತಾಡಿಸುತ್ತೇನೆ. ಈ ಕೃತಕತೆಯ ಮಧ್ಯೆಯೇ ಎಂಬತ್ತೈದರ ಮತ್ತು ನೂರರ ಗಡಿಯನ್ನು ದಾಟಿರುವ ವಯೋಮಾನದವರು ತೀರ್ಪುಗಾರರಾಗಿ ಅ.ನ.ಕೃ ಹೆಸರಿನ ಪ್ರತಿಷ್ಠಾನದ ಒಂದು ಲಕ್ಷ ರೂ. ಮೀರಿದ ಪ್ರಶಸ್ತಿಗೆ ತಮ್ಮ ಜಾತಿಯವರನ್ನೇ ಆರಿಸುತ್ತಾರೆ. 

ಆಯ್ಕೆಗೊಂಡವರ ಯೋಗ್ಯತೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಆಯ್ಕೆ ಮಾಡುವ ತೀರ್ಪುಗಾರರಲ್ಲಿ ‘ಪಾಪಪ್ರಜ್ಞೆ’ ಇರಬೇಕಾಗಿತ್ತು. ಗೊತ್ತಿಲ್ಲ; ಅವರು ‘ಪಾಪಪ್ರಜ್ಞೆ’ಯನ್ನು ಎಂದೂ ತಮ್ಮ ಮನಸ್ಸಿನೊಳಗೆ ಬಿಟ್ಟುಕೊಳ್ಳಲು ಸಮಯವೇ ಸಿಕ್ಕಿಲ್ಲ ಅನ್ನಿಸುತ್ತದೆ. ಅಥವಾ ನನ್ನಲ್ಲೇ ದೋಷವಿರಬಹುದು: ಇಂಥದ್ದನ್ನೆಲ್ಲ ಸುಮ್ಮನೆ ಮನಸ್ಸಿನ ಮೇಲೆ ಎಳೆದುಕೊಳ್ಳದೇ ಬಿಟ್ಟುಬಿಡಬೇಕಾಗಿತ್ತು ಎಂದು. ಆದರೆ ದುರಂತವೆಂದರೆ; ನಾವು ಬಹಳಷ್ಟು ಸಾಮಾಜಿಕ ಸಂಗತಿಗಳಿಗೆ ಸೆನ್ಸಿಟಿವ್ ಆಗಿರುವುದರಿಂದ ದೊಪ್ಪನೆ ಮನಸ್ಸಿನ ಮುಂದೆ ಬೀಳುತ್ತಲೇ ಇರುತ್ತವೆ.

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕೊನೆ ಎಂದು?ವಿ.ಪಿ. ನಿರಂಜನಾರಾಧ್ಯ

ಸೌಜನ್ಯ : ವಿಜಯ ಕರ್ನಾಟಕ

ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದ ಅಂಕಿ-ಅಂಶಗಳ ಪ್ರಕಾರ 2011ರಲ್ಲಿ 24,206 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಪರಾಧ ವಿಭಾಗದಲ್ಲಿ ಅತ್ಯಾಚಾರ ಬಹುದೊಡ್ಡ ಅಪರಾಧವಾಗಿ ಬೆಳೆದಿರುವ ಬಗ್ಗೆ ಬ್ಯುರೋ ಆತಂಕ ವ್ಯಕ್ತಪಡಿಸಿದೆ. ಈ ದಾಖಲಾತಿ ಬ್ಯೂರೋ 1971 ರಿಂದಲೂ ಈ ದಾಖಲಾತಿಗಳನ್ನು ನಿರ್ವಹಿಸುತ್ತಾ ಬಂದಿದೆ.

ಅತ್ಯಾಚಾರಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಸಾಲಿಗೆ ಮಧ್ಯ ಪ್ರದೇಶ(3,406) ಮತ್ತು ಪಶ್ಚಿಮ ಬಂಗಾಳ(2,363) ಸೇರಿವೆ. ನಂತರ ಉತ್ತರ ಪ್ರದೇಶ ಮತ್ತು ರಾಜಾಸ್ಥಾನ ಕ್ರಮವಾಗಿ 2,042 ಮತ್ತು 1,800 ಪ್ರಕರಣಗಳನ್ನು ದಾಖಲಿಸಿವೆ. ಇದೇ ಬ್ಯೂರೋ 2001ರಿಂದ 2011ರವರೆಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಒಟ್ಟು ಸಂಖ್ಯೆ 48,338 ಎಂದು ದಾಖಲಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2,113ರಿಂದ(2001) 7,112ಕ್ಕೆ(2011) ಹೆಚ್ಚಿದ್ದು, ಶೇಕಡ 336ರಷ್ಟು ಹೆಚ್ಚಳ ಕಂಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮಧ್ಯ ಪ್ರದೇಶ (9465) ಮತ್ತು ಕೊನೆ ಸ್ಥಾನದಲ್ಲಿ ಡಿಯು-ಡಮನ್(9) ಇದ್ದರೆ, ಕರ್ನಾಟಕವು 15ನೇ ಸ್ಥಾನ(719) ಪಡೆದಿದೆ. ಉಳಿದಂತೆ ಮಹಾರಾಷ್ಟ್ರ (6,868); ಉತ್ತರ ಪ್ರದೇಶ (5,949); ಆಂಧ್ರ ಪ್ರದೇಶ (3,977); ಚತ್ತೀಸ್‌ಗಢ (3,688); ಹೊಸ ದಿಲ್ಲಿ (2,909); ರಾಜಾಸ್ಥಾನ(2,776); ಕೇರಳ(2,101); ತಮಿಳನಾಡು (1,486); ಹರಿಯಾಣ (1,081); ಪಂಜಾಬ್(1,068) ;ಗುಜರಾತ್(999); ಪಶ್ಚಿಮ ಬಂಗಾಳ(744); ಒಡಿಶಾ(736); ಹಿಮಾ ಚಲ ಪ್ರದೇಶ(571); ಬಿಹಾರ(519) ಮತ್ತು ತ್ರಿಪುರ (457) ರಾಜ್ಯಗಳು ಮೊದಲ 14 ಸ್ಥಾ ಗಳಲ್ಲಿವೆ.

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಒಂದು ಪ್ರದೇಶ, ರಾಷ್ಟ್ರ ಅಥವಾ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೊಂದು ಜಾಗತಿಕ ಸಾಂಕ್ರಾಮಿಕ ರೋಗ. ಉದಾಹರಣೆಗೆ, ಜಗತ್ತಿನಲ್ಲಿ ದೊಡ್ಡಣ್ಣನೆನಿಸಿಕೊಂಡಿರುವ ಅಮೇರಿಕದಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಬ್ಬರು ಮಹಿಳೆ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗುತ್ತಾರೆ. 12 ವರುಷದ ಮಕ್ಕಳನ್ನು ಹೊರತುಪಡಿಸಿ ಲೈಂಗಿಕ ದೌರ್ಜನಕ್ಕೆ ಒಳಗಾದ ಒಟ್ಟು ಅಮೇರಿಕನ್ ಮಹಿಳೆಯರ ಸಂಖ್ಯೆ 2,47,730. ಇವರಲ್ಲಿ ಸುಮಾರು 87,000 ಮಹಿಳೆಯರ ಮೇಲೆ ಅತ್ಯಾಚಾರ, 70,000 ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನ ಮತ್ತು 91,000 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ ನಡೆದಿದೆ. ಇಂಥ ಪ್ರಕರಣಗಳಿಂದ ಸಮಾರು 4,315 ಮಹಿಳೆಯರು ಗರ್ಭಧರಿಸಿದ್ದಾರೆ. ಲೈಂಗಿಕ ದೌರ್ಜನಕ್ಕೆ ಒಳಗಾದ ಒಟ್ಟು ಮಹಿಳೆಯರ ಪೈಕಿ-ಶೇ. 17.7-ಬಿಳಿಯರು. ಶೇ. 18.8-ಕರಿ ಯರು. ಶೇ.6.8-ಏಷಿಯನ್ ಮತ್ತು ಪೆಸಿಪಿಕ್ ದ್ವೀಪದ ವರು. ಶೇ.34.1- ಅಮೆರಿಕನ್ ಭಾರತೀಯರು ಮತ್ತು ಅಲಾಸ್ಕನ್ನರು ಮತ್ತು ಶೇ.24.4-ಎಲ್ಲ ವರ್ಣದವರು ಸೇರಿದ್ದಾರೆ(2002ರ ಅಂಕಿ-ಅಂಶ).

ಅಮೆರಿಕದಲ್ಲಿ ಲೈಂಗಿಕ ದೌರ್ಜನಕ್ಕೆ ಒಳಗಾದವರಲ್ಲಿ ಪುರುಷರೂ ಸೇರಿದ್ದಾರೆ. ಶೇ.3ರಷ್ಟು(ಸುಮಾರು 2.78 ಮಿಲಿಯನ್) ಅಮೆರಿಕನ್ ಪುರುಷರು ತಮ್ಮ ಜೀವಿತಾವಧಿಯಲ್ಲಿ ಅತ್ಯಾಚಾರಕ್ಕೆ ಅಥವಾ ಅತ್ಯಾಚಾರದ ಪ್ರಯತ್ನಕ್ಕೆ ಒಳಗಾಗಿದ್ದಾರೆ. ಈ ಅಂಕಿ-ಅಂಶಗಳ ಅನ್ವಯ ಅತ್ಯಾಚಾರಕ್ಕೆ ಒಳಗಾದ ಪ್ರತಿ ಎಂಟು ಜನರಲ್ಲಿ ಒಬ್ಬರು ಪುರುಷರಾಗಿದ್ದಾರೆ. ಭಾರತದ ಸಂದರ್ಭದಲ್ಲಿ ಈ ಘಟನೆಗಳನ್ನು ಅವಲೋಕಿಸುವಾಗ ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯವಾಗಿ ದಲಿತ ವರ್ಗದ ಮೇಲಿನ ದೌರ್ಜನ್ಯಗಳ ತೀವ್ರತೆ ಹೆಚ್ಚು. ಉದಾಹರಣೆಗೆ; ಮಾನವ ಹಕ್ಕುಗಳ ಆಯೋಗದ ವರದಿ ಅನ್ವಯ, ನಮ್ಮ ದೇಶದಲ್ಲಿ ಪ್ರತಿದಿನ ಮೂರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಪ್ರತಿದಿನ ಇಬ್ಬರು ದಲಿತರು ಕೊಲೆಯಾಗುತ್ತಾರೆ. ಪ್ರತಿದಿನ ಎರಡು ದಲಿತ ಮನೆಗಳಿಗೆ ಬೆಂಕಿ ಬೀಳುತ್ತದೆ. ಪ್ರತಿದಿನ ಹನ್ನೊಂದು ದಲಿತರು ಒಂದಲ್ಲ ಒಂದು ರೀತಿಯ ದೈಹಿಕ ಹಲ್ಲೆಗೆ ಒಳಗಾಗುತ್ತಾರೆ. ವಾಸ್ತವದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಹತ್ತರಲ್ಲಿ ಒಂದು ಮಾತ್ರ ಬೆಳಕಿಗೆ ಬರುತ್ತದೆ. ಉಳಿದ ಒಂಬತ್ತು ಪ್ರಕರಣಗಳು ಸಮಾಜ, ಮರ್ಯಾದೆ, ಬಡತನ, ದೌರ್ಜನ್ಯವೆಸಗುವ ಸಿರಿವಂತರ ಹಣ ಅಥವಾ ತೋಳ್ಬಲದ ಅಬ್ಬರದ ಕಾರಣಕ್ಕೆ ಬೆಳಕಿಗೆ ಬರುವುದೇ ಇಲ್ಲ. ಇನ್ನು ವರದಿಯಾದ ಪ್ರಕರಣಗಳಲ್ಲಿ ನ್ಯಾಯಸಮ್ಮತ ತೀರ್ಪು ದೊರೆಯುವುದು ಮತ್ತೊಂದು ದೊಡ್ಡ ಸವಾಲು.

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ನಗರ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಸುದ್ದಿ ಮಾಧ್ಯಮಗಳು ಸಕ್ರಿಯವಾಗಿರುವ ನಗರಗಳಲ್ಲಿ ಇಂಥ ಪ್ರಕರಣಗಳು ಬಹುಬೇಗ ಸುದ್ದಿಯಾಗುತ್ತವೆ. ಆದರೆ, ಹಳ್ಳಿಗಾಡು ಪ್ರದೇಶದ ಹಾಡಿ, ಹಟ್ಟಿ, ಕಾಲೋನಿ, ಆದಿವಾಸಿ ಮತ್ತು ಬುಡಕಟ್ಟು ಜನಾಂಗಗಳು ವಾಸಿಸುವ ವಸತಿ ಪ್ರದೇಶ ಅಥವಾ ನಗರ ಪ್ರದೇಶದ ಪ್ರತಿಷ್ಠಿತವಲ್ಲದ ಕೊಳಗೇರಿ ಮತ್ತು ಜನವಸತಿ ಪ್ರದೇಶ ಇತ್ಯಾದಿ ಜಾಗಗಳಲ್ಲಿ ನಡೆಯುವ ಪ್ರಕರಣಗಳು ವರದಿಯಾಗುವುದಿಲ್ಲ. ದಲಿತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯರು ಎರಡು ರೀತಿಯ ತಾರತಮ್ಯಕ್ಕೆ ಒಳಗಾಗುತ್ತಾರೆ-ಒಂದು ಜಾತಿ ಮತ್ತೊಂದು ಲಿಂಗ.

ಈ ಎಲ್ಲ ಬರ್ಬರ ಕತ್ಯಗಳಿಗೆ ಮೂಲ ಕಾರಣ ಪುರುಷ ಪ್ರಧಾನ ಸಮಾಜದ ಹೆಣ್ಣು ಮಕ್ಕಳ ಬಗೆಗಿನ ಧೋರಣೆ, ನಿಲುವು ಮತ್ತು ನಡತೆ. ಸಮಾನತೆ, ಸಹಬಾಳ್ವೆ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಲೇ, ನಾವು ಮಹಿಳೆ ಮತ್ತು ಹೆಣ್ಣು ಮಕ್ಕಳನ್ನು ನಮ್ಮ ಮನೆ,ಕಛೇರಿ, ಸಾರ್ವಜನಿಕ ಸ್ಥಳ, ಅಷ್ಟೇ ಏಕೆ ಶಾಸನಸಭೆ, ಕಾರ್ಯಾಂಗ, ನ್ಯಾಯಾಂಗ ಹೀಗೆ ಹೆಸರಿಸುವ ಎಲ್ಲ ಜಾಗಗಳಲ್ಲಿ ಆಕೆಯನ್ನು ಎರಡನೇ ದರ್ಜೆಯ ನಾಗರೀಕಳಾಗಿಯೇ ಕಾಣುತ್ತೇವೆ. ಇದೇ ಸಂದರ್ಭದಲ್ಲಿ ನಾವು ಅನುಸರಿಸುತ್ತಿರುವ ನವ ವಶಾಹತುಶಾಹಿ ಆರ್ಥಿಕ ನೀತಿ ಇಂದು ಎಲ್ಲ ಮಾನವ ಸಂಬಂಧಗಳನ್ನು ಹಣದ ಸಂಬಂಧಗಳನ್ನಾಗಿ ಮಾರ್ಪಡಿಸಿದೆ. ಆಳುವ ಸರಕಾರಗಳು ಅನುಸರಿಸುತ್ತಿರುವ ಮಾರುಕಟ್ಟೆ ನೀತಿಗಳು ಹುಟ್ಟು ಹಾಕುತ್ತಿರುವ ಹೊಸ ಮಾರಾಟದ ಸಂಸ್ಕೃತಿಗೆ ಮಹಿಳೆ ಮತ್ತು ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ. ಈ ಸಂಸ್ಕೃತಿಯ ಭಾಗವಾಗಿ ಮಹಿಳೆಯನ್ನು ಒಂದು ಮಾರಾಟದ ಸರಕನ್ನಾಗಿಸಲಾಗಿದೆ. ದಿನನಿತ್ಯ ಮಹಿಳೆಯನ್ನು ಜಾಹೀರಾತುಗಳಲ್ಲಿ ಅಸಹನೀಯವಾಗಿ ಪ್ರತಿಬಿಂಬಿಸಲಾಗುತ್ತಿದ್ದು, ಇದು ಮಹಿಳೆಯನ್ನು ಒಂದು ಭೋಗದ ವಸ್ತುವನ್ನಾಗಿ ಮಾರ್ಪಡಿಸಿದೆ. ಇದಕ್ಕೆ ಪೂರಕವೆಂಬಂತೆ ನಮ್ಮ ಸಿನಿಮಾ ಮತ್ತು ಕಿರುತೆರೆ ಜಗತ್ತು ಹೆಣ್ಣು ಮಕ್ಕಳನ್ನು ಪ್ರತಿಬಿಂಬಿಸುವ ಮತ್ತು ನಡೆಸಿಕೊಳ್ಳುವ ರೀತಿ ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಭದ್ರಪಡಿಸುವ ಜತೆಗೆ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿದೆ.

ಹೀಗಾಗಿ, ಮಹಿಳೆ ಮತ್ತು ಅಸಹಾಯಕ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ಮಾನಸಿಕ ಕಿರುಕುಳದ ಕಾರಣಗಳನ್ನು ಕಾನೂನಿಗೂ ಮೀರಿದ ಆರ್ಥಿಕ- ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನಿಂದ ನೋಡಬೇಕಾಗಿದೆ. ಹುಟ್ಟಿನಿಂದಲೇ ಹೆಣ್ಣನ್ನು ಕೀಳಾಗಿ ಕಾಣುವ ಪುರುಷ ಪ್ರಧಾನ ಸಮಾಜಕ್ಕಿರುವ ಈ ರಕ್ತಗತ ಮಾನಸಿಕ ರೋಗ ವಾಸಿಯಾಗಬೇಕಾದರೆ ನಾವು ಕಲಿಯಬೇಕಾಗಿರುವದಕ್ಕಿಂತ ಕಲಿತು ಕರಗತ ಮಾಡಿಕೊಂಡಿರುವ ಹೆಣ್ಣಿನ ಬಗ್ಗೆ ನಮಗಿರುವ ಕೀಳರಿಮೆ, ನಕಾರಾತ್ಮಕ ಭಾವನೆ ಮತ್ತು ಸದಾಕಾಲ ಅವಳನ್ನು ಪರಾವಲಂಬಿಯನ್ನಾಗಿಸುವ ಮೂಲಕ ಹಿಡಿತಲ್ಲಿಟ್ಟು ಕೊಳ್ಳಬೇಕೆಂಬ ನಮ್ಮ ದುರಹಾಂಕಾರದ ಭಾವನೆಗಳನ್ನು ತೊರೆದು, ಆಕೆ ನಮ್ಮಂತೆಯೇ ಎಲ್ಲ ಹಕ್ಕುಗಳನ್ನುಳ್ಳ ಜೀವಿ ಎಂಬ ಸಮಾನತೆಯ ಮೂಲ ಪಾಠವನ್ನು ಕಲಿಯಬೇಕಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲಿನ ಹಿಂಸೆ, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಈ ಪ್ರತಿಯೊಂದು ಘಟನೆಯೂ ಮನುಕುಲಕ್ಕೊಂದು ಕಪ್ಪು ಚುಕ್ಕೆಯಾಗಿದೆ.

ದಲಿತರ ಹಿಂದೂಕರಣ


ರಘೋತ್ತಮ ಹೊ.ಬ, ಚಾಮರಾಜನಗರ

 

   ಒಂದು ವೈಯಕ್ತಿಕ ಅನುಭವ; ನಾನಿರುವ ಬಡಾವಣೆ (ಅಂಬೇಡ್ಕರ್ ಬಡಾವಣೆ)ಯಲ್ಲಿ ವಾರಕ್ಕೊಮ್ಮೆ ಅದೂ ಬೆಳ್ಳಂಬೆಳಗ್ಗೆ ಕೋಳಿಕೂಗುವ ಮುನ್ನ ಒಂದಷ್ಟು ಗಾಯನದ ದನಿಗಳು ಕೇಳುತ್ತವೆ. ಏನು ಅಂಬೇಡ್ಕರ್ ಬಡಾವಣೆಯ ದಲಿತರು ಸಂಗೀತ ವಿದುಷಿಗಳಾಗಲು ಹೊರಟಿದ್ದಾರೆಯೇ? ಎಂದು ಚಕಿತಗೊಳ್ಳಬೇಡಿ. ಯಾಕೆಂದರೆ ಅದು ಡೋಲು ತಮಟೆ ಬಡಿಯುತ್ತಾ ಅವರು ನಡೆಸುವ ಭಜನೆ ಕಾರ್ಯಕ್ರಮ. ವಾರಕ್ಕೊಮ್ಮೆ ‘ರಾಮ... ರಾಮ...’ ಎಂದು ರಾಮನನ್ನು ಜಪಿಸುವ ದಶಕಗಳ ಹಿಂದಿನ ಗುಲಾಮಗಿರಿಯ ಪಳೆಯುಳಿಕೆ ನೆನಪಿಸುವ ದಿವ್ಯ ಕಾರ್ಯಕ್ರಮ!

ಅಂದಹಾಗೆ ಅಂಬೇಡ್ಕರ್ ಬಡಾವಣೆ ಮತ್ತಿತರ ದಲಿತಕೇರಿಗಳಿಗೆ ರಾಮಮಂದಿರ (ಈಗಲೂ ದಲಿತಕೇರಿಗಳಲ್ಲೊಂದು ರಾಮ ಮಂದಿರ ಇದ್ದೇ ಇರುತ್ತದೆ!) ಕಟ್ಟಿಸಿಕೊಟ್ಟು, ಡೋಲು, ತಮಟೆ, ನಗಾರಿಗಳ ನೀಡಿ ರಾಮನ ಹೆಸರಿನಲ್ಲಿ ಭಜನೆ ಮಾಡಿ ಎಂದು ಹೇಳಿಕೊಟ್ಟವರು ಸಂಘಪರಿವಾರದ ಕಾರ್ಯ ಕರ್ತರೆ? ಖಂಡಿತ ಅಲ್ಲ. ಹಿಂದಿನ ಬಿಜೆಪಿ ಸರಕಾರದವರೇ? ಅವರೂ ಅಲ್ಲ. ಮತ್ತ್ಯಾರೆಂದರೆ ಸಾಕ್ಷಾತ್ ಪರಮಪೂಜ್ಯ ಮೋಹನದಾಸ ಕರಮಚಂದ್ ಗಾಂಧಿಯವರು. ದಲಿತರ ಖಾಲಿ ತಲೆಗಳೊಳಗೆ ಹಿಂದೂ ಧರ್ಮದ ವಿಷ ತುಂಬಿದ ವರ್ಣಾಶ್ರಮ ಧರ್ಮದ ಶ್ರೇಷ್ಠ ನೇತಾರರು! 

ನಿಜ, ಇತಿಹಾಸದಲ್ಲಿ ಕೇವಲ ಅವರ ಒಂದು ಮುಖವನ್ನು ಮಾತ್ರ ಬಿಚ್ಚಿಡಲಾಗಿದೆ. ಬೀದಿಬೀದಿಗಳಲ್ಲಿ ಜಾಗೃತವಾಗಿರುವ ಅವರ ಇಂತಹ ಐತಿಹಾಸಿಕ ಪಳೆಯುಳಿಕೆಗಳತ್ತ ಯಾರೂ ಗಮನಹರಿಸಲೇ ಹೋಗಿಲ್ಲ! ದಲಿತ ಕೇರಿಗಳಲ್ಲಿ ಈಗಲೂ ಜೀವಂತವಾಗಿರುವ ‘ರಾಮ ಮಂದಿರ, ಶ್ರೀರಾಮ ಭಜನೆ’ ಅಂತಹ ಪಳೆಯುಳಿಕೆಗಳಲ್ಲೊಂದು.

ಅಂದಹಾಗೆ ಅಂತಹ ಭಜನೆಗಳು ಪ್ರಾರಂಭವಾದದ್ದು? ಉತ್ತರ: 1932ರ ನಂತರ. ಅಂದರೆ ಪೂನಾ ಒಪ್ಪಂದದ ಸಂದರ್ಭದಲ್ಲಿ. ಯಾವ ಅಸ್ಪಶ್ಯರಿಗೆ ಪ್ರತ್ಯೇಕ ಮತದಾನ ನಿರಾಕರಿಸುವುದರ ಮೂಲಕ ಅವರ ಅಭಿವೃದ್ಧಿಯ ಹೆಬ್ಬಾಗಿ ಲನ್ನು ಗಾಂಧೀಜಿ ಮುಚ್ಚಿದರೋ ಆ ನಂತರ ಗಾಂಧೀಜಿಯವರು ತೆರೆದ ಈ ಪಳೆಯು ಳಿಕೆಯ ಬಾಗಿಲೇ ‘ಹರಿಜನ ಸೇವಕ ಸಂಘ’, ‘ರಾಮಮಂದಿರ’, ‘ರಾಮಭಜನೆ’ ಇತ್ಯಾದಿ ಕಾರ್ಯಕ್ರಮಗಳು. ಅಂದಹಾಗೆ ಈ ಕಾರ್ಯಕ್ರಮಗಳು ಹರಿಜನರನ್ನು ಕೊಂಡೊಯ್ದದ್ದೆಲ್ಲಿಗೆ? ಅದೇ ಹಿಂದೂ ಪದತಲದಡಿಗೆ. ವರ್ಣಾಶ್ರಮ ಧರ್ಮದ ಗುಲಾಮಗಿರಿಗೆ. 

ಹಾಗಿದ್ದರೆ ಇದನ್ನು ಏಕೆ ಪ್ರಾರಂಭಿಸಲಾಯಿತು? ಸಿಂಪಲ್, ಅಂಬೇಡ್ಕರ್‌ರತ್ತ ಅಸ್ಪಶ್ಯರು ಚಲಿಸುವುದನ್ನು ತಡೆಯಲು. ದಲಿತರ ಸ್ವಾಭಿಮಾನಿ ಹೋರಾಟದ ಸದ್ದಡಗಿಸಲು. ಹರಿಜನರ ನಿಜವಾದ ಉದ್ಧಾರಕ ನಾನು (ಗಾಂಧೀಜಿ) ಎಂದು ಅಂದಿನ ಬ್ರಿಟಿಷರಿಗೆ ತೋರಿಸಲು, ಮತ್ತವರನ್ನು ನಂಬಿಸಲು. ಹಾಗೆಯೇ ಅಂಬೇಡ್ಕರ್‌ರನ್ನು ಅಂತಹ ಕ್ರೆಡಿಟ್‌ನಿಂದ ದೂರತಳ್ಳಲು. ಅದಿರಲಿ, ಗಾಂಧೀಜಿಯವರು ಅಂದು ಪ್ರಾರಂಭಿಸಿದ ಇಂದಿಗೂ ಜೀವಂತವಾಗಿರುವ ರಾಮಮಂದಿರ, ಭಜನೆಯಂತಹ ಇಂತಹ ಅನಿಷ್ಟಗಳು ಆ ಕಾಲದಲ್ಲಿ ಹೇಗಿದ್ದವು? 

1934ರ ಗಾಂಧೀಜಿಯವರ ಸಂಪಾದಕತ್ವದ ‘ಹರಿಜನ’ ಪತ್ರಿಕೆಯ ‘ಮೈಸೂರು ವರದಿ’ಯ ಒಂದಷ್ಟು ಅಂಶಗಳನ್ನು ಉಲ್ಲೇಖಿಸುವುದಾದರೆ

1.ಬೆಂಗಳೂರಿನ ಕೆಂಗೇರಿಯಲ್ಲಿ 123 ಹರಿಜನ ಭಜನೆ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಅದರಲ್ಲಿ ಹರಿಜನರಲ್ಲದೆ ಸ್ಥಳೀಯ ಹಿಂದೂ ಯುವಕರೂ ಭಾಗವಹಿಸಿ ದ್ದರು.

2.ಮೈಸೂರು ನಗರ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ‘ಹರಿಜನ ಕೇರಿ’ಗಳಲ್ಲಿ 49 ಉಪನ್ಯಾಸ ಕಾರ್ಯಕ್ರಮ ಗಳನ್ನು ನಡೆಸಲಾಯಿತು.

3.ಮೈಸೂರಿನ ತಗಡೂರು ಗ್ರಾಮದಲ್ಲಿ ಹರಿಜನ ಕೇರಿಯನ್ನು ಗುಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಮೈಸೂರಿನ ರಾಮಕೃಷ್ಣಾಶ್ರಮದ ಸನ್ಯಾಸಿಗಳು ಭಾಗವಹಿಸಿ ದ್ದರು. ಹೀಗೆ ಸಾಗುತ್ತದೆ ಆ ವರದಿ. (ಆಧಾರ: ಕಾಂಗ್ರೆಸ್ ಮತ್ತು ಗಾಂಧಿ ಅಸ್ಪಶ್ಯರಿಗೆ ಮಾಡಿ ದ್ದೇನು? ಕೃತಿ. ಲೇಖಕರು: ಡಾ.ಬಿ.ಆರ್. ಅಂಬೇಡ್ಕರ್)

ಅಂದಹಾಗೆ ಆ ವರದಿಯಲ್ಲಿ ಎಲ್ಲಿಯೂ ಕೂಡ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕೊಡಿಸಲಾಯಿತು, ಕೆರೆಗಳಲ್ಲಿ ನೀರು ಕುಡಿಯಲು ಅವಕಾಶ ಕೊಡಿಸಲಾಯಿತು, ಶಿಕ್ಷಣ ನೀಡಲು ಕ್ರಮ ವಹಿಸಲಾಯಿತು, ನೌಕರಿಯಲ್ಲಿ ಮೀಸಲಾತಿ ನೀಡಲು ಹೋರಾಟ ಮಾಡಲಾಯಿತು ಇತ್ಯಾದಿ ಕಾರ್ಯಕ್ರಮಗಳಿಲ್ಲ! ಬದಲಿಗೆ ಉಪನ್ಯಾಸ, ಭಜನೆ, ಸ್ವಚ್ಛತೆ ... ಇತ್ಯಾದಿ. ಅದೂ ಎಲ್ಲಿ? ದಲಿತ ಕೇರಿಗಳಲ್ಲಿ! 

ಅಂದರೆ ದಲಿತ ಕೇರಿಗಳಲ್ಲಿ ‘ನಿಮ್ಮ ಮೇಲೆ ನೀವೇ ದೌರ್ಜನ್ಯ ಮಾಡಿಕೊಳ್ಳಬೇಡಿ’, ಅಥವಾ ‘ಮೇಲ್ಜಾತಿ ಜನ ದೌರ್ಜನ್ಯ ಎಸಗಿದರೆ ದೂರು ನೀಡಬೇಡಿ’ ಎಂದು ಉಪನ್ಯಾಸ ನೀಡಲಾಯಿತೆ? ಅಥವಾ ‘ಅಂಬೇಡ್ಕರ್ ಹಿಂದೆ ಹೋಗಬೇಡಿ, ಅವರು ನಿಮ್ಮನ್ನು ದಿಕ್ಕುತಪ್ಪಿಸು ತ್ತಿದ್ದಾರೆ’ ಎಂದು ಉಪನ್ಯಾಸ ನೀಡಲಾಯಿತೆ?. ಯಾಕೆಂದರೆ ಉಪನ್ಯಾಸ ನೀಡಬೇಕಿದ್ದು ಎಲ್ಲಿ? ಸವರ್ಣೀಯರಿಗೆ ತಾನೆ? ಯಾಕೆಂದರೆ ದೌರ್ಜನ್ಯ ಮಾಡುವವರು ಅವರು ತಾನೆ?. ‘ದೌರ್ಜನ್ಯ ಮಾಡಬೇಡಿ. ಅದು ಮಾನವಹಕ್ಕು ಗಳ ಉಲ್ಲಂಘನೆ’ ಎಂದು ಉಪನ್ಯಾಸ ನೀಡ ಬೇಕಿತ್ತು ತಾನೆ? ಅದು ಬಿಟ್ಟು ಹರಿಜನ ಕೇರಿಯಲ್ಲಿ 49 ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು ಎಂದರೆ?

ಇನ್ನು, ಭಜನೆ ಯಾಕೆ? ದಲಿತರಿಗೆ ಹಾಡು ಹೇಳುವುದು ಗೊತ್ತಿರಲಿಲ್ಲವೆ? ಅವರ ಬೀದಿಗಳಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಲೈಮಾದಪ್ಪ, ಮಾರಮ್ಮ ಇತ್ಯಾದಿ ಜನಪದ ದೇವರುಗಳ ಕತೆ, ಹಾಡು, ಇರಲಿಲ್ಲವೆ? ಹೀಗಿದ್ದರೆ ಅವರಿಗೆ ಏಕೆ ಬೇಕಿತ್ತು ಹಿಂದೂಗಳ ರಾಮ? ಹಾಗೆಯೇ ರಾಮನ ಆ ಭಜನೆ? ಇನ್ನು ಸ್ವಚ್ಛತೆ, ನಿಜ ದಲಿತಕೇರಿಗಳಲ್ಲಿ ಸ್ವಚ್ಛತೆ ಇಲ್ಲ ಅಥವಾ ಇದ್ದರೂ ಕಡಿಮೆ ಇರಬಹುದು. ಆದರೆ ಅವರ ಮನಸ್ಸುಗಳು ಸ್ವಚ್ಛವಾಗಿಯೇ ಇವೆ! ಅಂತಹ ನಿಷ್ಕಲ್ಮಶ ಮನಸ್ಸುಗಳಿಗೆ ಹಿಂದುತ್ವದ ವಿಷ ತುಂಬುವುದು? ‘ರಾಮ, ರಾಮ’ ಎಂದು ಜಪಿಸು ಎಂದು ಹೇಳಿಕೊಡುವುದು? ಇಂದಿನ ಆರೆಸ್ಸೆಸ್‌ನವರ ರೀತಿ ರಾಮನಭಕ್ತಿ ಹುಟ್ಟಿಸಲು ಯತ್ನಿಸಿರುವುದು? 

ಹೌದು, ಗಾಂಧೀಜಿ ಮಾಡಿದ್ದು ಇದನ್ನೆ. ‘ದಲಿತರ ಹಿಂದೂಕರಣ’ ಆ ಮೂಲಕ ‘ಕಾಂಗ್ರೆಸ್ ಮತಬ್ಯಾಂಕೀಕರಣ’ ಕಾರ್ಯಕ್ರಮ. (ಖಂಡಿತ, ಇಂದಿನ ಹಿಂದೂ-ಮುಸ್ಲಿಂ ಗಲಭೆಯಲ್ಲಿ ಅಕಸ್ಮಾತ್ ದಲಿತರೂ ಪಾಲ್ಗೊಂಡರೆ ಅದಕ್ಕೆ ಗಾಂಧೀಜಿಯವರೂ ಪರೋಕ್ಷವಾಗಿ ಕಾರಣರಾಗುತ್ತಾರೆ!) ಅಂದಹಾಗೆ ಅವರ ಆ ಕಾರ್ಯಕ್ರಮ ಆ ಕಾಲದಲ್ಲಿ ಹಲವಾರು ಸ್ಥಳೀಯ ದಲಿತ ನಾಯಕರುಗಳನ್ನು ಮೂರ್ಖರನ್ನಾಗಿಸಿತು, ಕೈ ಕಟ್ಟಿಹಾಕಿತು. 

ಉದಾಹರಣೆಗೆ 1935ರ ಆ ಕಾಲದಲ್ಲಿ ಮೈಸೂರು ಪ್ರಾಂತದಲ್ಲಿ ದಲಿತ ವರ್ಗಕ್ಕೆ ಸೇರಿದ ಮುಖಂಡರಾದ ಮುರುಗೇಶ ರಾಮಪಿಳ್ಳೆ ಎಂಬವರು ‘ದಲಿತರಿಗೆ ಹಿಂದೂ ದೇವಸ್ಥಾನದ ಬಾಗಿಲುಗಳು ತೆರೆಯದಿದ್ದರೆ ಅವರು ಬೇರೆ ಧರ್ಮದ ಕಡೆ ಹೋಗುವುದು ಖಚಿತ’ ಎಂದು ಗುಡುಗಿದ್ದರು. ಈ ನಿಟ್ಟಿನಲ್ಲಿ ಪಿಳ್ಳೆಯವರ ಆ ಮಾತಿಗೆ ಪ್ರೇರಣೆ ನೀಡಿದ್ದು 1935ರಲ್ಲೇ ‘ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ’ ಎಂಬ ಅಂಬೇಡ್ಕರ್‌ರ ಆ ಗಟ್ಟಿ ಕೂಗು. ಅದಿರಲಿ, ಅಂಬೇಡ್ಕರರು ಹಾಗೆ ಕೂಗಿದ್ದಕ್ಕೂ ಗಾಂಧೀಜಿ ಯವರು ‘ದಲಿತರನ್ನು ಹಿಂದೂಕರಣಗೊಳಿಸುವ ಈ ಕೃತ್ಯ’ಕ್ಕೆ ಭರದಿಂದ ಕೈಹಾಕಿದ್ದಕ್ಕೂ ಇರುವ ಸಂಬಂಧವನ್ನು ಗಮನಿಸಬಹುದು. ದುರಂತ ವೆಂದರೆ ಅಂತಹ ಹಿಂದೂಕರಣಗೊಳಿಸುವ ಪ್ರಕ್ರಿಯೆ ಈಗಲೂ ಜೀವಂತವಾಗಿದೆಯಲ್ಲಾ ಎಂಬುದು.

ಒಂದು ವಿಷಯ, ದಲಿತರನ್ನು ಹಿಂದೂಕರಣ ಅಥವಾ ಬ್ರಾಹ್ಮಣೀಕರಣ ಗೊಳಿಸುವುದು ಅಷ್ಟೊಂದು ಸುಲಭದ್ದಲ್ಲ ಅಥವಾ ಸಾಧ್ಯವೇ ಇಲ್ಲ. ಯಾಕೆಂದರೆ ಬಾಬಾಸಾಹೇಬ್ ಅಂಬೆಡ್ಕರ್‌ರೇ ಹೇಳುವ ಹಾಗೇ ಐತಿಹಾಸಿಕವಾಗಿ ದಲಿತರು ನಾಗ ಜನಾಂಗಕ್ಕೆ ಸೇರಿರುವ ಮೂಲ ಬೌದ್ಧರು. ಬ್ರಾಹ್ಮಣ ಮತ್ತವರ ಅನುಯಾಯಿಗಳು ಪರದೇಶಿ ಆರ್ಯರು. ವೈದಿಕ ಆರ್ಯರಿಗೂ ನಾಗ ಬೌದ್ಧರಿಗೂ ಐತಿಹಾಸಿಕವಾಗಿ ನಿರಂತರ ಸಂಘರ್ಷ ನಡೆದೇ ಇದೆ.

ಅಂದಹಾಗೆ ಆರ್ಯರ ದುರಾಚಾರಕ್ಕೆ ವಿರುದ್ಧವಾಗಿ ಬುದ್ಧ ನಡೆಸಿದ್ದು ಕ್ರಾಂತಿ. ಆದರೆ ಅದಕ್ಕೆ ವಿರುದ್ಧವಾಗಿ ಬೌದ್ಧ ಮೌರ್ಯ ಸಾಮ್ರಾಜ್ಯದ ವಿರುದ್ಧ ಬ್ರಾಹ್ಮಣ ಸೇನಾಧಿಪತಿ ಪುಷ್ಯಮಿತ್ರ ಶುಂಗ ಮನುಸ್ಮತಿಯ ಮೂಲಕ ನಡೆಸಿದ್ದು ಪ್ರತಿಕ್ರಾಂತಿ. ಪುಷ್ಯಮಿತ್ರ ಶುಂಗನ ಈ ಪ್ರತಿಕ್ರಾಂತಿಗೆ ವಿರುದ್ಧವಾಗಿ ಮತ್ತೆ ಕ್ರಾಂತಿ ‘ನಾಗಜನಾಂಗ’ದ ಆಧುನಿಕ ಪ್ರತಿನಿಧಿ ಯಾದ ಬಾಬಾಸಾಹೇಬ್ ಅಂಬೇಡ್ಕರ್‌ರ ಮೂಲಕ ಆರಂಭವಾಗಿದೆ.ಅವರ ಸಂವಿಧಾನ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಅಂತಹ ಪುನರ್ ಕ್ರಾಂತಿಯ ಪ್ರಮುಖ ಕುರುಹುಗಳಾಗಿವೆ. ಈ ನಿಟ್ಟಿನಲ್ಲಿ ಬ್ರಾಹ್ಮಣತ್ವದ ವಿರುದ್ಧದ ಕ್ರಾಂತಿಯ ವಾರಸು ದಾರರಾಗಿರುವ ದಲಿತರು ಹಿಂದೂಕರಣಗೊಳ್ಳುವುದು, ಗಾಂಧೀಜಿಯವರು ಆಶಿಸಿರುವ ಹಾಗೆ ರಾಮನಭಕ್ತರಾಗುವುದು ಸಾಧ್ಯವೆ? ಖಂಡಿತ ಅಸಾಧ್ಯ. ಯಾರಾದರೂ ಹಾಗೆ ತಿಳಿದುಕೊಂಡಿದ್ದರೆ ಅದು ಮೂರ್ಖತನ ವಾಗುತ್ತದಷ್ಟೆ.


Tuesday, June 25, 2013

ಇಷ್ಟೆ, ಇಷ್ಟೇ
ಡಾ.ಎಚ್.ಎಸ್.ಅನುಪಮಾ
ನಾನು
ಒಂದೇಒಂದು ಗುಟುಕನರಸಿ ಅರಳುವ ಹಕ್ಕಿಯ ಕಣ್ಣು
ಸುಡುಬಿಸಿಲಿಗೆ ಆವಿಯಾಗುವ ಶರತ್ಕಾಲದ ಗರಿಕೆ ಹನಿ
ಮುಳ್ಳಿನ ಜೊತೆಜೊತೆಯೇ ಅರಳಿ ಎಚ್ಚರಿಸುವ ಹೂವು 
ಗೆಲುವಿನ ಉನ್ಮಾದ ಸೋಲಿನ ಹತಾಶೆ ಅರಿಯದ ಮಿಣುಕುಹುಳ
ನಾನು ರೂಮಿಯಲ್ಲ
ಶಂಸನೆಂಬ ತಳವಿರದ ಗುಡಾಣ ತುಂಬಿದ ಗಾಳಿ

ನಾನು ಬುದ್ಧನಲ್ಲ
ಲೋಕಕ್ಕೆ ಭಿಕ್ಷುವನಿತ್ತು ಬಿಕ್ಕುಳಿಸಿಕೊಂಡ
ಯಶೋಧರೆಯ ನಡುರಾತ್ರಿಯ ಮೌನ

ನಾನು ಅಕ್ಕ ಪಾರ್ವತಿ ಹಾಜಿಮಾ ಅಲ್ಲ
ಮೊಟ್ಟೆಯಾಗಿದ್ದೂ ಮರಿಯಾಗದೇ ಉಳಿದ
ಅವರ ಗರ್ಭಚೀಲದ ಕನಸು..

ನಾನು ಚೆ ಅಲ್ಲ
ಅವನ ಬಂದೂಕಿನ ಬಾಯಲ್ಲಿ ಗೂಡುಕಟ್ಟಿ
ನೆರೂಡನ ಹಾಡಲು ಕಾದ ಹಕ್ಕಿಯ ಕೊರಳು

ಕ್ಷಮಿಸು
ನಾನು ಬೆಟ್ಟವಲ್ಲ ಬಯಲಲ್ಲ
ಗುಹೆಯಲ್ಲ ಕಣಿವೆಯಲ್ಲ

ಕಂಡಷ್ಟೂ ದೂರ ಹಬ್ಬಿರುವ ನೋಟದಲಿ 
ಆಳ ಎತ್ತರ ವಿಸ್ತಾರಗಳ ಕಲ್ಪನೆ
ಈ ಪುಟ್ಟ ಮಿದುಳಿನ ಅಳವಿನೊಳಗಿಲ್ಲ

ಅತ್ಯಾಚಾರ - ಬುನಾದಿಯಲ್ಲಿ ಹೂತು ಹೋಗಿರುವ ತಪ್ಪು ಕಲ್ಲು


- ಡಾ. ಎಚ್. ಎಸ್. ಅನುಪಮಾ


The Rape Of Europe 1910

ಈ ಸುಂದರವಾದ ಗ್ರಹ ಭೂಮಿ ಸಾವಿರಾರು ಕೋಟಿ ವರ್ಷಗಳ ಕೆಳಗೆ ಅಸ್ತಿತ್ವಕ್ಕೆ ಬಂತು. ಇನ್ನೆಷ್ಟೋ ಕೋಟ್ಯಂತರ ವರ್ಷಗಳ ಹಿಂದೆ ಕ್ರಿಮಿಕೀಟ ಪಶುಪಕ್ಷಿ ಪ್ರಾಣಿಗಳು ರೂಪುಗೊಂಡವು. ಮನುಷ್ಯನೆಂಬೋ ಎರಡು ಕಾಲಿನ ವಿಶಿಷ್ಟ ಪ್ರಾಣಿ ಹುಟ್ಟಿದ್ದು ಕೇವಲ ೪೦ ಸಾವಿರ ವರ್ಷದ ಹಿಂದೆ. ಈ ಸಾವಿರಾರು ವರ್ಷಗಳಲ್ಲಿ ಅವನ ರೂಪ, ನಡೆ, ನುಡಿ, ಸಮಾಜ ಎಲ್ಲವೂ ಬದಲಾಗುತ್ತಲೇ ಬಂದಿದೆ. ವಿಕಾಸವಾದದ ತುತ್ತತುದಿಯಲ್ಲಿರುವ ಮನುಷ್ಯನ ಹೆಗ್ಗಳಿಕೆ ಏನೆಂದರೆ ಅವನ ಬೆನ್ನುಹುರಿ ನೆಟ್ಟಗಿದೆ ಎನ್ನುವುದು ಹಾಗೂ ವಿಶ್ಲೇಷಣಾ, ವಿಚಕ್ಷಣಾ ಸಾಮರ್ಥ್ಯವಿರುವ ಮಿದುಳನ್ನು ಅವನು ಪಡೆದಿದ್ದಾನೆ ಎನ್ನುವುದು. 

ಆದರೆ ವಿಕಾಸದ ಅತ್ಯುಚ್ಛ ಬಿಂದುವಿನಲ್ಲಿದ್ದೇನೆಂದುಕೊಳ್ಳುವ ಮಾನವ ಸಮಾಜ ಈ ೨೦೧೩ನೇ ಇಸವಿಯಲ್ಲೂ ಹೇಗಿದೆ?!

ಬಹುಶಃ ಇನ್ಯಾವ ಜೀವಿ ಪ್ರಭೇಧವೂ ತನ್ನ ಒಂದು ಲಿಂಗ ಪ್ರಭೇಧವನ್ನು ನಡೆಸಿಕೊಳ್ಳಲಾರದಷ್ಟು ದುಷ್ಟವಾಗಿ ಆತ ನಡೆಸಿಕೊಳ್ಳುತ್ತಿದ್ದಾನೆ. ಇನ್ಯಾವುದೇ ಜೀವಿಗಳ ಹೆಣ್ಣು ಗುಂಪು ದೌರ್ಜನ್ಯ ವಿರೋಧ, ಹಕ್ಕೊತ್ತಾಯ ಎಂದು ಸಂಘಟಿತವಾಗಬೇಕಾದ ಅಥವಾ ದನಿಯೆತ್ತಲು ಸೆಮಿನಾರು, ಬರಹ, ಪುಸ್ತಕಗಳನ್ನು ಸಿದ್ಧಗೊಳಿಸಬೇಕಾದ ಅವಶ್ಯಕತೆಯಿಲ್ಲ. ಮಿದುಳು ವಿಕಾಸವಾದಷ್ಟು ಹೃದಯ ವಿಕಾಸವಾಗದೇ ಹೋದ ಕಾರಣ ನಾಗರಿಕ ಮನುಷ್ಯ ಸಮಾಜದಲ್ಲಿ ಅವ್ಯಾಹತವಾಗಿ ಅತ್ಯಾಚಾರವೆಂಬ ಅನಾಗರಿಕ, ಬರ್ಬರ ಕ್ರಿಯೆ ನಡೆಯುತ್ತಲೇ ಇದೆ. ಅದರ ಸ್ವರೂಪ ಅರಿಯುವ ನಮ್ಮ ತಿಳಿವಳಿಕೆಯಲ್ಲಿ, ವಿಶ್ಲೇಷಣೆಯಲ್ಲಿ, ಕಾನೂನುಗಳಲ್ಲಿ ಏನೋ ಒಂದು ಘನಲೋಪವಾಗಿದೆ.  
The Ray Circa 1725-1726
ಅತ್ಯಾಚಾರ ಲಾ ಅಂಡ್ ಆರ್ಡರ್ ಸಮಸ್ಯೆ ಅಲ್ಲ. ಹಾಗೆಯೇ ಉಳಿದ ಅಪರಾಧಗಳನ್ನು ಚರ್ಚಿಸಿದಂತೆ ಚರ್ಚಿಸಲೂ ಬರುವುದಿಲ್ಲ. ಕಾರಣ ಅದು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟ್‌ಗಳಲ್ಲೊಂದಾದ ಕಾಮದ ಜೊತೆ ಸಂಬಂಧ ಹೊಂದಿರುವಂಥದು. ಸಾವಿರಹೆಡೆಯ ಸರ್ಪ. ಆ ಭೀಭತ್ಸವನ್ನು ಅತಿ ಭಾವುಕಗೊಳ್ಳದೆ, ವಿನಾಕಾರಣ ಸಿಟ್ಟಿಗೇಳದೇ ವರ್ಣಿಸುವುದು ಕಷ್ಟ. ಈ ಸಮಸ್ಯೆಯ ಸ್ವರೂಪ, ಪರಿಹಾರಗಳನ್ನು ನಿರ್ಧರಿಸುವುದರಲ್ಲಿ ಸಮಾಜದ ಆಂತರಿಕ ರಚನೆಯೂ ಕಾರಣವಾಗಿರುವುದರಿಂದ ಮತ್ತೆಮತ್ತೆ ಭಿನ್ನ ದೃಷ್ಟಿಕೋನಗಳಲ್ಲಿ ವಸ್ತುನಿಷ್ಠ ನಡೆಸುವುದು ಅನಿವಾರ್ಯ ಅಗತ್ಯವಾಗಿದೆ.

***

ಇಡೀ ಸಮಾಜ ವ್ಯವಸ್ಥೆ ಮತ್ತು ಕುಟುಂಬ ನಡೆಯುತ್ತಿರುವುದೇ ಲಿಂಗ ತಾರತಮ್ಯದ ಮೇಲೆ. ಅದರಲ್ಲೂ ಭಾರತೀಯ ಸಮಾಜ ಅರ್ಧ ಜನಸಂಖ್ಯೆಯಷ್ಟಿರುವ ಹೆಣ್ಣನ್ನು ನಾನಾ ರೀತಿ, ನೀತಿ, ನಿಯಮಗಳನ್ನು ಸೃಷ್ಟಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದರಲ್ಲೇ ರೂಪುಗೊಂಡಿರುವಂಥದು. ನಮ್ಮ ಸಮಾಜ ಮಹಿಳೆಯರನ್ನು ಎರಡೇ ದೃಷ್ಟಿಯಲ್ಲಿ ನೋಡುತ್ತದೆ: ಅವರು ಹೆಂಡತಿಯರು ಅಥವಾ ವೇಶ್ಯೆಯರು. ಈ ಎರಡನ್ನು ಬಿಟ್ಟು ಮೂರನೆಯ ಲೈಂಗಿಕ ಅಸ್ತಿತ್ವ ಅವಳಿಗಿಲ್ಲ. ಇದನ್ನು ಅವಳೂ ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಲಾಗಿದೆ. 

ಲಿಂಗತಾರತಮ್ಯದ ಆತ್ಯಂತಿಕ ದೌರ್ಜನ್ಯ ಶೀಲ ಎಂಬ ಪರಿಕಲ್ಪನೆಯಲ್ಲಿದೆ. ಅವಳ ಗುಪ್ತಾಂಗಗಳಲ್ಲಿ ‘ಶೀಲ’ ಎಂಬ ಮೌಲ್ಯ ತುಂಬಿ ಅದನ್ನು ಕಾಪಾಡಿಕೊಳ್ಳಲು ಹೋರಾಡುವುದೇ ಬದುಕಿನ ಪರಮೋಚ್ಛ ಕರ್ತವ್ಯ ಎಂದು ಬಿಂಬಿಸಲಾಗಿದೆ. ಆದರೆ ಈ ಶೀಲದ ಪರಿಕಲ್ಪನೆ ಗಂಡಿಗೆ ಅನ್ವಯಿಸುವುದಿಲ್ಲ! ಆತನ ಗುಪ್ತಾಂಗಗಳ ಸಾಮರ್ಥ್ಯವಾದರೋ ಆತನ ಹೆಮ್ಮೆ ಮತ್ತು ಆಸ್ತಿ. ವಿನಯ, ಸಹನೆ, ಕರುಣೆ ಇತ್ಯಾದಿ ಉದಾತ್ತ ಗುಣಗಳೆಲ್ಲ ಇದ್ದರಷ್ಟೆ ಹೆಣ್ಣು ಎಂದು ಆರೋಪಿಸಿ, ಹೊಸ್ತಿಲ ಒಳಗಿನ ಕಾರ್ಯವನ್ನು ವೈಭವೀಕರಿಸಿ ಅವಳ ಮಾತು/ಹಕ್ಕು ಕಸಿದುಕೊಳ್ಳಲಾಗಿದೆ. ಮನೆ ಕೆಲಸ, ಮಕ್ಕಳನ್ನು ಹೆರುವುದು, ಗಂಡನಿಗೆ ಸುಖದಾಯಕವಾಗಿರುವುದು ಈ ಮೂರೂ ಅವಳ ಕರ್ತವ್ಯವೆಂಬಂತೆ ಬಿಂಬಿಸಲಾಗಿದೆ. ಎಷ್ಟು ಮಾಡಿದರೂ ಮುಗಿಯದ, ಯಾವ ಹೊಸತನ/ಕ್ರಿಯಾಶೀಲತೆ/ಆನಂದ ನೀಡದ ಮನೆಗೆಲಸವೆಂಬ ಬಾಂಡೆಡ್ ಲೇಬರ್‌ನ ಕಷ್ಟ, ಪ್ರಾಮುಖ್ಯತೆಯನ್ನು ಸಮಾಜವೂ ಅರಿಯದೇ; ಅವಳ ಕೆಲಸಕ್ಕೂ ಮತ್ತು ಸಮಾಜಕ್ಕೂ ಇರುವ ಸಂಬಂಧ ಅರ್ಥ ಮಾಡಿಕೊಳ್ಳದೆ ಸಾಮಾಜಿಕ-ಆರ್ಥಿಕ ವಿಚಾರಗಳಲ್ಲಿ ಮಹಿಳೆಯ ಪಾಲುದಾರಿಕೆ ಗುರುತಿಸಲು ಸಾಧ್ಯವಾಗದೇ ಹೋಯಿತು. 

 
  The rape
ಮಹಿಳೆಯೂ ಸಹಾ ಇವೆಲ್ಲದರ ಹೊರತಾಗಿ ತನಗೊಂದು ವ್ಯಕ್ತಿತ್ವವಿದೆ ಎಂದು ಭಾವಿಸಲೇ ಇಲ್ಲ. ತನ್ನನ್ನು ತಾನು ಪುರುಷ ದೃಷ್ಟಿಕೋನದಲ್ಲೇ ಅರ್ಥಮಾಡಿಕೊಂಡು ಇಂದಿಗೂ ಅವಳಿಗೆ ಅವಳೇ ಪರಕೀಯಳಾಗಿದ್ದಾಳೆ ಎಂದರೂ ತಪ್ಪಲ್ಲ. 

ಇಂಥ ಸಮಾಜ ಅವಳನ್ನು ಸದಾ ಶರಣಾಗತ ಸ್ಥಿತಿಯಲ್ಲಿಡಲು ಅತ್ಯಾಚಾರ ಎಂಬ ಅಸ್ತ್ರ ಬಳಸಿಕೊಂಡು ಬಂದಿದೆ. ಅನಾದಿಯಿಂದಲೂ ಯುದ್ಧವಿರಲಿ, ದಂಗೆಯಿರಲಿ ಅಥವಾ ಕ್ರಾಂತಿಯಿರಲಿ; ಯಾವ ಪಕ್ಷವಾದರೂ ಸೋಲಲಿ ಅಥವಾ ಗೆಲ್ಲಲಿ - ಈ ಕ್ರೌರ್ಯ, ಉನ್ಮಾದಗಳ ಅಂತಿಮ ಬಾಧಿತಳು ಮಹಿಳೆಯೇ. ಗೆದ್ದವನಿಗೆ ಸೋತವನ ಹೆಣ್ಮಕ್ಕಳ ಮೇಲೆ ಅಸೀಮ ಅಧಿಕಾರ ತಂತಾನೇ ದಕ್ಕಿಬಿಡುತ್ತದೆ. ಸೈನಿಕರು ಹೆಣ್ಣುಗಳನ್ನು ಮನಸೋ ಇಚ್ಛೆ ಬಳಸಿಕೊಳ್ಳಬಹುದು. ಕೆಲ ಮಹಾಮಹಿಮ ರಾಜಕುಲಗಳಂತೂ ತಾವು ಯುದ್ಧಭೂಮಿಗೆ ಹೋಗುವ ಮೊದಲು ಹಣೆಗೆ ತಿಲಕವಿಟ್ಟ ಹೆಂಡತಿಯರನ್ನು ಚಿತೆಗೇರಿಸಿ ಹೋಗುತ್ತಿದ್ದವು! ಈಗಲೂ ನಾಗರಿಕ ಸಮಾಜ ಬೇರೆಬೇರೆ ಕಾರಣಗಳಿಗಾಗಿ ರೂಪಿಸಿಕೊಂಡಿರುವ ಸೈನ್ಯ/ಪೊಲೀಸ್ ಮತ್ತಿತರ ರಕ್ಷಣಾ ವ್ಯವಸ್ಥೆಗಳು ಮಹಿಳೆಯರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ರಕ್ಷಕ ವ್ಯವಸ್ಥೆಯೇ ಮಹಿಳಾವಿರೋಧಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು ಸಮಾಜದ ವಿಪರ್ಯಾಸವಾಗಿದೆ. ಹೀಗೆ ಬರೀ ಮಾನಸಿಕ, ಬೌದ್ಧಿಕ ಅತ್ಯಾಚಾರವಷ್ಟೇ ಅಲ್ಲ, ದೈಹಿಕ ಅತ್ಯಾಚಾರವನ್ನೂ ನಡೆಸಿ ಅವಳು ಪ್ರಶ್ನೆಯೆತ್ತದಂತಹ, ದಂಗೆಯೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಇಂತಹ ಉಸಿರುಗಟ್ಟುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಅತ್ಯಾಚಾರವು ಕೇವಲ ಬಲವಂತದ ಲೈಂಗಿಕ ಕ್ರಿಯೆ ಅಲ್ಲ. ಒಬ್ಬ ವ್ಯಕ್ತಿಯಾಗಿ/ಮನುಷ್ಯಳಾಗಿ ಹೆಣ್ಣನ್ನು ನಾಶ ಮಾಡುವ; ಹೆಣ್ಣನ್ನು ನೀನು ಹೆಂಗಸು ಎಂದು ಬೆದರಿಸುವ; ಅಧಿಕಾರವಿರುವ ವರ್ಗ ಅಧಿಕಾರವಿಲ್ಲದ ವರ್ಗವನ್ನು ಹಿಡಿತದಲ್ಲಿಟ್ಟುಕೊಳ್ಳುವ ರಾಜಕೀಯ ಸಾಧನವಾಗಿದೆ. ಇಲ್ಲಿ ಪ್ರತಿಯೊಬ್ಬ ಗಂಡಸೂ ಅತ್ಯಾಚಾರ ಮಾಡಬಲ್ಲ, ಆದರೆ ಅವನು ಯಾಕೆ ಮಾಡಲಾರ ಎಂದರೆ ಕಾರಣ ಎರಡೇ - ಒಂದು ಅವನು ಕಾನೂನಿಗೆ ಹೆದರುತ್ತಾನೆ. ಸಿಕ್ಕಿಬಿದ್ದು ಶಿಕ್ಷೆ, ಅಪಮಾನವಾದರೆ ಎಂದು ಹೆದರುತ್ತಾನೆ. ಎರಡನೆಯದಾಗಿ ಅವನಿಗೆ ತನ್ನ ಶೀಲದ ಅಥವಾ ಹೆಣ್ಣಿನ ಶೀಲದ ಕುರಿತು ಗೌರವವಿದೆ. 


ನಾವು ರೋಮ್ಯಾಂಟಿಕ್ ಆಗಿ ವರ್ಣಿಸುವ ಕಾಮಕ್ಕೂ, ಭೀಭತ್ಸವೆನ್ನುವ ಅತ್ಯಾಚಾರಕ್ಕೂ ನಡುವಿನ ಗೆರೆ ತುಂಬ ತೆಳುವಾಗಿದೆ. ಆ ಗೆರೆ ‘ಒಪ್ಪಿಗೆ’ ಎಂಬ ಮೋಸಗಾರ ಪದವನ್ನೊಳಗೊಂಡಿದೆ. ಮೋಸಗಾರ ಏಕೆಂದರೆ ಈ ದೇಶದಲ್ಲಿ ದೈಹಿಕ ಒಪ್ಪಿಗೆ, ಬುದ್ಧಿಪೂರ್ವಕ ಒಪ್ಪಿಗೆ, ಮನಃಪೂರ್ವಕ ಒಪ್ಪಿಗೆ ಬೇರೆಬೇರೆಯಾಗಿವೆ. ಮೌನವೂ ಒಪ್ಪಿಗೆಯೆಂದೇ ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ, ಈ ಪದದ ವ್ಯಾಖ್ಯಾನವೇ ಗೊಂದಲದಿಂದ ಕೂಡಿ ಅಸ್ಪಷ್ಟವಾಗಿದೆ. ಕಾನೂನು ಪ್ರಕಾರ ೧೬ ವಯಸ್ಸಿನ ಬಾಲೆ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಬಹುದು. ಆದರೆ ಮದುವೆಯಾಗಲು ಕನಿಷ್ಠ ೧೮ ವರ್ಷವಾಗಿರಬೇಕು. ಹಾಗಾದರೆ ನಡುವಿನ ಈ ಎರಡು ವರ್ಷಗಳು ಏನು? ಮದುವೆ ಎನ್ನುವುದರ ವ್ಯಾಖ್ಯೆಯೇನು? ೧೯೮೭ರ ‘ಮಥುರಾ’ ಅತ್ಯಾಚಾರ ಕೇಸಿನ ತೀರ್ಪನ್ನು ನೋಡುವುದಾದರೆ, ಮಥುರಾ ಎಂಬ ೧೬ ವರ್ಷದ ಬುಡಕಟ್ಟು ಬಾಲೆಯ ಮೇಲೆ ಅತ್ಯಾಚಾರವಾಯಿತು. ಆಕೆಯ ಕೇಸನ್ನು ಪರಿಶೀಲಿಸಿದ ನ್ಯಾಯಾಲಯವು ಆ ಬಾಲೆಯ ಮೈಮೇಲೆ ಯಾವುದೇ ಹಿಂಸೆಯ ಕುರುಹುಗಳು ಇರಲಿಲ್ಲ, ಅವಳು ಪ್ರತಿರೋಧ ತೋರಿಲ್ಲ. ಆದ್ದರಿಂದ ಅವಳು ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿರಬೇಕು, ಎಂದೇ  ಅದು ಅತ್ಯಾಚಾರವಾಗುವುದಿಲ್ಲ ಎಂದು ತೀರ್ಪು ನೀಡಿತು! ಒಪ್ಪಿಗೆ ಕುರಿತ ಇಂಥ ಎಲ್ಲ ಗೊಂದಲಗಳಿಂದ ದಾಖಲಾಗುವ ಬೆರಳೆಣಿಕೆಯಷ್ಟು ಕೇಸುಗಳಲ್ಲೂ ಅಪರಾಧಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ.  

ಇಲ್ಲಿ ಅತ್ಯಾಚಾರ ಯಾಕೆ ತಪ್ಪು? ಯಾಕೆಂದರೆ ಯಾವುದೋ ಗಂಡಿಗೆ ಸೇರಿದ ವಸ್ತುವಿನ ಮೇಲೆ ದುರಾಕ್ರಮಣ ಆಗಿದೆ ಎಂಬ ನೈತಿಕ ಕಾರಣಕ್ಕೆ. ಹೆಣ್ಣುಜೀವಕ್ಕೆ ಅಪಚಾರ ಆಗಿದೆಯೆಂದಾಗಲೀ, ಅವಳ ಇಚ್ಛೆಯ ವಿರುದ್ಧ ನಡೆದಿದೆ ಎಂದಾಗಲೀ ಅಥವಾ ಒಂದು ವ್ಯಕ್ತಿತ್ವ ನಾಶ ಮಾಡುವ ಕ್ರಿಯೆಯೆಂದಾಗಲೀ ಅಲ್ಲ. ಕೇವಲ ಆಸ್ತಿಹಕ್ಕಿನ ಪ್ರಶ್ನೆಯೆಂಬಂತೆ ಅದು ಪರಿಗಣಿಸಲ್ಪಡುತ್ತದೆ. ಎಂದೇ ಯಾರದೂ ಆಸ್ತಿಯಲ್ಲದ ಅಥವಾ ಒಬ್ಬರಿಗಿಂತ ಹೆಚ್ಚು ಜನರ ಆಸ್ತಿಯಾಗಿರುವ ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಅದು ಆಕಸ್ಮಿಕ, ಬರ್ಬರ ಎಂದು ಯಾರಿಗೂ ಅನಿಸುವುದಿಲ್ಲ. ಲೈಂಗಿಕ ಕಾರ್ಯಕರ್ತರು ಸಾಯುವಂಥ ಹಿಂಸೆ ಅನುಭವಿಸುತ್ತಾರೆ. ಅದರ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ. ಕೋರ್ಟುಗಳಲ್ಲಿ ಈ ತನಕ ಚಾಲ್ತಿಯಲ್ಲಿದ್ದ ಎರಡು ಬೆರಳ ಪರೀಕ್ಷೆ - ಟೂ ಫಿಂಗರ್ ಟೆಸ್ಟ್ - ಕೂಡಾ ಬಳಕೆಯಾಗುತ್ತಿರುವುದು ಅವಳು ಈ ಮೊದಲೇ ಲೈಂಗಿಕ ಸಂಪರ್ಕ ಹೊಂದಿರಬಹುದೇ? ಬಹಳ ಸಾರಿ ಹೊಂದಿರಬಹುದೇ? ಅವಳ ನಡತೆ ಹೇಗಿತ್ತು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ. ಅವಳ ಮೊದಲಿನ ನಡತೆ, ಬೇರೆಯವರ ಜೊತೆ ಸಂಬಂಧ ಇವೆಲ್ಲ ಅತ್ಯಾಚಾರವೆಂಬ ಗುನ್ನೆ ಹಗುರವೋ ಭಾರವೋ ನಿರ್ಧರಿಸುವಂತಹ ಅಂಶಗಳಾಗಿವೆ! 

ಆಳದಲ್ಲಿ ಈ ಸಮಾಜ ರಚನೆ ಅತ್ಯಾಚಾರವನ್ನು ಒಪ್ಪಿಕೊಂಡಿದೆ. ಅತ್ಯಾಚಾರ ಹೆಚ್ಚುತ್ತಲೇ ಇರುವುದಕ್ಕೆ ಇದು ಕಾರಣವಾಗಿದೆ.

***

ಅತ್ಯಾಚಾರ ಎಂಬ ಮಾತು ಕೇಳಿದ ಕೂಡಲೇ ಬಹಳಷ್ಟು ಜನ ಹೆಣ್ಮಕ್ಕಳಿಗೆ ಪ್ರಚೋದಕ ಉಡುಪು ಧರಿಸದಂತೆ, ನಡುರಾತ್ರಿ, ನಿರ್ಜನ ಕತ್ತಲ ಪ್ರದೇಶಗಳಲ್ಲಿ ಒಬ್ಬರೇ ಓಡಾಡದಂತೆ; ಬಾರ್-ಪಬ್‌ಗಳಿಗೆ ಹೋಗದಂತೆ; ಗೆಳೆಯರ ಜೊತೆ ಸುತ್ತಾಡದಂತೆ ಬುದ್ಧಿ ಹೇಳಿ ಎಂಬ ಸಲಹೆ ಕೊಡುತ್ತಾರೆ. ಮಹಿಳಾ ಆಯೋಗವೂ ಸಹಿತ ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆ ಬೋಧಿಸಿ ಕತ್ತಲಾದ ಮೇಲೆ ಒಬ್ಬೊಬ್ಬರೇ ತಿರುಗಬೇಡಿ ಎಂದು ಸೂಚಿಸುತ್ತದೆ. ಇಂಥ ಸಲಹೆಸೂಚನೆಗಳಿಂದ ಮತ್ತೆ ಹೆಣ್ಣನ್ನು ನಾಲ್ಕು ಗೋಡೆಗಳೊಳಗೆ ಸುರಕ್ಷಿತವಾಗಿರಿಸುವ, ಅದು ಸುರಕ್ಷಿತವೆಂದು ನಂಬಿಸುವ ಪ್ರಯತ್ನ ಶುರುವಾಗಿದೆ. ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು ಎಂಬಿತ್ಯಾದಿ ಮಾತು ಕೇಳಿಬರುತ್ತಿದೆ. ಇವೆಲ್ಲ ವ್ಯಕ್ತಿಗತವಾಗಿ ಎಲ್ಲೋ ಕೆಲವರಿಗೆ ಸಾಧ್ಯವಾಗಬಹುದು. ಆದರೆ ಪ್ರಚೋದನೆ ಮತ್ತು ಪರಿಹಾರ ಎರಡರಲ್ಲೂ ಇರುವುದು ಕೇವಲ ಹೆಣ್ಣಿನ ಪಾತ್ರವಲ್ಲ ಎಂದು ಸಮಾಜಕ್ಕೆ ನೆನಪಿಸಬೇಕಿದೆ.

ನಗ್ನಚಿತ್ರಗಳನ್ನು ಬಿಡಿಸುವ ಒಬ್ಬ ಕಲಾವಿದನನ್ನು ನಿಮಗೆ ಸ್ಫೂರ್ತಿ ಯಾರು ಎಂದು ಕೇಳಿದರು. ಅದಕ್ಕೆ ಆತ ನನ್ನೆದುರು ಬರುವ ಪ್ರತಿ ಹೆಣ್ಣನ್ನೂ ನಾನು ನಗ್ನವಾಗಿ ಕಲ್ಪಿಸಿಕೊಳ್ಳುತ್ತೇನೆ ಎಂದು ಹೇಳಿದ! ನೋಡುವ ಕಣ್ಣು ನಿಮ್ಮನ್ನು ನಗ್ನವಾಗಿ ಕಲ್ಪಿಸಿಕೊಳ್ಳಬಲ್ಲದಾದರೆ ಎಂಥ ಉಡುಪು ತೊಟ್ಟರೇನು? ಶಾಲೆಗೆ ಹೋಗುವ ಎಳೆಯ ಮಕ್ಕಳು, ಕೂಲಿ ಕೆಲಸ ಮಾಡುವ ಹೆಣ್ಮಕ್ಕಳು, ಶಿಫ್ಟಿನಲ್ಲಿ ದುಡಿಯುವ ಇನ್ನೆಷ್ಟೋ ಉದ್ಯೋಗಸ್ಥ ಮಹಿಳೆಯರು, ಅಸಹಾಯಕ ಮುದುಕಿಯರ ಮೇಲೆಲ್ಲ ಅತ್ಯಾಚಾರವಾಗುತ್ತಿದೆ. ಅವರೆಲ್ಲ ಸುರಕ್ಷೆಯ ನೆಪದಲ್ಲಿ ಮನೆಯಲ್ಲಿರಬೇಕೆ? ರೈಲು, ಬಸ್ಸು, ಕಾರು, ವಿಮಾನದಲ್ಲಿಯೂ ಅತ್ಯಾಚಾರ ನಡೆಯುತ್ತಿದೆ. ಅಪರಿಚಿತ ಹೆಣ್ಮಕ್ಕಳನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ? ಅವಳ ಪ್ರತಿ ನಡೆ, ಚಹರೆಗಳನ್ನೂ ಲೈಂಗಿಕಾರ್ಥದಲ್ಲಿ ನೋಡಲಾಗುತ್ತದೆ. ಸೆರಗೆಳೆದುಕೊಳ್ಳುವುದು, ಸೆರಗು ಎಳೆದುಕೊಳ್ಳದಿರುವುದು, ಸೀರೆ ನೆರಿಗೆ ಸರಿ ಮಾಡಿಕೊಳ್ಳುವುದು, ಕೂದಲು ನೇವರಿಸುವುದು, ತುಟಿ ಸವರಿಕೊಳ್ಳುವುದು ಹೀಗೆ ಪ್ರತಿ ನಡೆಯಲ್ಲೂ ಲೈಂಗಿಕ ಸಂಕೇತಗಳನ್ನು ಹುಡುಕಲಾಗುತ್ತದೆ. ಹೀಗಿರುವಾಗ ಪ್ರಚೋದನೆಗೆ ಕಾರಣ ಅವಳನ್ನು ಪ್ರಚೋದಿಸುವ, ಆಹ್ಲಾದ ನೀಡುವ ವಸ್ತುವನ್ನಾಗಿ ಬಿಂಬಿಸಿ, ಬಳಸಿಕೊಳ್ಳುತ್ತಿರುವ ವ್ಯವಸ್ಥೆಯದೇ ಆಗಿದೆ.

ಪ್ರಚೋದನೆ ಅತಿಯಾದ ಸಂಪರ್ಕದಿಂದ ಬರುತ್ತಿದೆ. ನಾವಿಂದು ಯಾವುದನ್ನು ಮಾಹಿತಿ ಕ್ರಾಂತಿ ಅಥವಾ ಸಂಪರ್ಕ ಕ್ರಾಂತಿ ಎಂದು ಕರೆಯುತ್ತೇವೋ ಅದು ನಿಜಾರ್ಥದಲ್ಲಿ ಕ್ರಾಂತಿಯ ವಿರುದ್ಧ ನಡೆದಿರುವ ಪ್ರಾಸೆಸ್. ಸಂಪರ್ಕ ಕ್ರಾಂತಿ ಮನುಷ್ಯನಿಂದ ಮನುಷ್ಯತ್ವವನ್ನು, ಮಾನವೀಯ ಸಂಬಂಧಗಳನ್ನು ಕಸಿಯುತ್ತಿರುವ ಹಾಗೂ ಮನುಷ್ಯನನ್ನು ಕೈಕಾಲಾಡಿಸುವ ಯಂತ್ರವಾಗಿಸುತ್ತಿರುವ ಎಲ್ಲ ನಿದರ್ಶನಗಳಿವೆ.

ವಿಜ್ಞಾನ ಜೀವಪರವಾಗದೆ ಜೀವವಿರೋಧಿಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಅದು ಜನರಲ್ಲಿ ಸೈಂಟಿಫಿಕ್ ಟೆಂಪರ್ ಬೆಳೆಸದೆ ವಿಜ್ಞಾನದ ಕೂಸಾದ ತಂತ್ರಜ್ಞಾನವನ್ನು ಅವರ ಕೈಲಿಡುತ್ತಿರುವುದು. ವಿವೇಚನೆಯಿಲ್ಲದೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ, ಅದರಲ್ಲೂ ದುಷ್ಟ ಕಾರಣಗಳಿಗಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಕಾರವಾರದಲ್ಲಿ ಬಹಳ ಜನರ ಮೊಬೈಲಿನಲ್ಲಿ ಒಂದು ವೀಡಿಯೋ ಕ್ಲಿಪಿಂಗ್ ಹರಿದಾಡುತ್ತಿತ್ತೆಂದು ಪೊಲೀಸರು ತನಿಖೆ ನಡೆಸಿದರು. ತಮಿಳುನಾಡಿನ ಸಮುದ್ರ ತೀರದಲ್ಲಿ ಹೆಣ್ಣೊಬ್ಬಳಿಗೆ ಅಮಲು ಬರಿಸಿ, ಬೆತ್ತಲಾಗಿಸಿ, ಐದಾರು ಜನ ಸಾಮೂಹಿಕವಾಗಿ ಸಂಭೋಗಿಸಿದ ವೀಡಿಯೋ ಅದರಲ್ಲಿತ್ತು. ಅದನ್ನು ಡೌನ್‌ಲೋಡ್ ಮಾಡಿ, ತಮಿಳು ಸಂಭಾಷಣೆಗೆ ಕನ್ನಡ ಸಂಭಾಷಣೆ ಅಳವಡಿಸಿ, ಮೊಬೈಲಿನಿಂದ ಮೊಬೈಲಿಗೆ ಕಳಿಸಲಾಗುತ್ತಿತ್ತು. ಆದರೆ ತಮಿಳುನಾಡಿನ ಅದೇ ಸಮುದ್ರ ತೀರದಲ್ಲಿ ಲಕ್ಷಾಂತರ ಜನ ಸುನಾಮಿಗೆ ಕೊಚ್ಚಿ ಹೋಗಿದ್ದರು. ಅಲ್ಲಿ ಇನ್ನೆಷ್ಟೋ ಜಾತಿದೌರ್ಜನ್ಯಗಳು ಸಂಭವಿಸುತ್ತಿವೆ. ಅವನ್ನು ಡೌನ್‌ಲೋಡ್ ಮಾಡಿ, ಕನ್ನಡ ಮಾತು ಅಳವಡಿಸಿ ಎಲ್ಲರಿಗೂ ಹಂಚುವ, ತಂತ್ರಜ್ಞಾನವನ್ನು ಜನಜಾಗೃತಿಗೆ ಬಳಸಬೇಕೆನ್ನುವ ಯೋಚನೆ ಏಕೆ ಬರುತ್ತಿಲ್ಲ? 

ಬೆಂಗಳೂರಿನಲ್ಲಿ ಗಾರ್ಮೆಂಟ್ ಕೆಲಸ ಮಾಡುವ ೪೫ ವರ್ಷದ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾದಳು. ವಾರದ ಕೊನೆಯಲ್ಲಿ ತನ್ನೂರು ಮೈಸೂರಿಗೆ ಹೋಗುತ್ತಿದ್ದವಳ ಮೇಲೆ ಏಳು ಜನರ ಗುಂಪು ರಾತ್ರಿ ಒಂಭತ್ತೂವರೆಯಿಂದ ಎರಡರ ತನಕ ಅತ್ಯಾಚಾರ ನಡೆಸಿತು. ಆಕೆಗೆ ಮೊಬೈಲಿನಲ್ಲಿದ್ದ ವೀಡಿಯೋ ಕ್ಲಿಪಿಂಗ್ಸ್ ತೋರಿಸಿ ಹೀಗೆ ಮಲಗು, ಹಾಗೆ ಮಾಡು ಎಂದು ಹೇಳುತ್ತಿದ್ದರಂತೆ. ಅವರಲ್ಲೊಬ್ಬ ೧೬-೧೭ ವರ್ಷದವ. ೨೦ ವರ್ಷದ ಮಗನಿದ್ದ ಆಕೆ ನಾನು ನಿಮ್ಮಮ್ಮನ ಹಾಗೆ ಅನಿಸುವುದಿಲ್ಲವೇನೋ ಎಂದರೆ ಆ ಹುಡುಗ, ‘ಅಂಥ ಪುರಾಣನೆಲ್ಲ ವದರಬೇಡ, ಸುಮ್ನೆ ಮಲ್ಕ’ ಎಂದನಂತೆ! ಬೇರೆಯವರು ನಡೆಸುವ ಕಾಮಕ್ರಿಯೆ ನೋಡಿ ಪ್ರಚೋದನೆ ಪಡೆಯುವುದನ್ನು ವಾಯೂರಿಸಂ ಎನ್ನುತ್ತಾರೆ. ಅದೊಂದು ವಿಕೃತಿ. ಬ್ಲೂ ಫಿಲಂಗಳು ಹಾಗೂ ಮೊಬೈಲಿನಲ್ಲೂ ಹರಿದಾಡುವ ಇಂಥ ವೀಡಿಯೋ ಕ್ಲಿಪಿಂಗ್ಸ್ ವಾಯೂರಿಸಂ ಎಂಬ ವಿಕೃತಿಯನ್ನು ಹಾಗೂ ಎಳೆಯರಲ್ಲಿ ಕಾಮ ಕುರಿತ ದುಷ್ಟ ಕುತೂಹಲ/ತಪ್ಪು ಗ್ರಹಿಕೆಗಳನ್ನು ಬೆಳೆಸುತ್ತಿರುವುದು ಅತ್ಯಾಚಾರ ಹೆಚ್ಚಾಗಲು ಒಂದು ಮುಖ್ಯ ಕಾರಣವಾಗಿದೆ.  

ವಿಜ್ಞಾನ ವೈಜ್ಞಾನಿಕ ಮನೋಭಾವನ್ನಾಗಲೀ, ನೈತಿಕತೆಯನ್ನಾಗಲೀ ಬೆಳೆಸುತ್ತಿಲ್ಲ. ನೈತಿಕತೆಯ ಹಳೆಯ ವ್ಯಾಖ್ಯಾನಗಳನ್ನು ಬಿಟ್ಟುಬಿಡೋಣ. ನೈತಿಕತೆ ಎಂದರೆ ಕನಿಷ್ಟ ನಿಗ್ರಹ, ಬಳಸುವುದರ ಮುನ್ನ ಕೊಂಚ ವಿವೇಚನೆ. ಅದೇಕೆ ತಂತ್ರಜ್ಞಾನ ಬಳಸುವಾಗ ಸಾಧ್ಯವಾಗುತ್ತಿಲ್ಲ? ಮಾಹಿತಿ ಕ್ರಾಂತಿಯು ಜಗತ್ತನ್ನು, ಅದಲ್ಲಿರುವ ಬಾಧಿತರೆಲ್ಲರನ್ನು ಒಟ್ಟು ತಂದು ಇನ್ನೊಂದು ಕ್ರಾಂತಿ ನಡೆದು ಹೋಗಬೇಕಿತ್ತು. ಆದರೆ ಜೀವವಿರೋಧಿ ಮಾಹಿತಿ ಹಂಚಿಕೊಳ್ಳಲು ಅದು ಬಳಕೆಯಾಗುತ್ತಿದೆ. ಅಂತರ್ಜಾಲ ಬಳಕೆ ಮತ್ತು ವಿಸ್ತರಣೆ ನಾವು ಊಹಿಸಲಾರದ ವೇಗದಲ್ಲಿ ಆಗುತ್ತಿದೆ ಹಾಗೂ ಅದು ಯುವ ಪೀಳಿಗೆಯನ್ನು ನಾವು ಊಹಿಸಲಾರದಷ್ಟು ನಮ್ಮಿಂದ ದೂರ ಒಯ್ಯುತ್ತಿದೆ. ಇದನ್ನು ತಡೆಗಟ್ಟಲು ನಮ್ಮ ಬಳಿ ಯಾವ ಸುರಕ್ಷಾ ಕ್ರಮಗಳಿವೆ? 

ಬರೀ ಮೊಬೈಲು ಬಳಕೆ ಅಷ್ಟೇ ಅಲ್ಲ, ವೈದ್ಯಕೀಯ ವಿಜ್ಞಾನವೂ ಇಂಥ ದುಷ್ಟತನದಲ್ಲಿ ಹಿಂದೆ ಬಿದ್ದಿಲ್ಲ. ಹಿಮೋಫೀಲಿಯಾದಂತಹ ಲಿಂಗ ಕ್ರೋಮೋಸೋಮುಗಳ ಜೊತೆ ಬರುವ ಕಾಯಿಲೆಗಳನ್ನು ಪತ್ತೆ ಹಚ್ಚಿ ಗರ್ಭ ತೆಗೆಯುವ ಸಲುವಾಗಿ ಅಭಿವೃದ್ಧಿಯಾದ ಲಿಂಗಪತ್ತೆ ತಂತ್ರಜ್ಞಾನ ಕೋಟಿಗಟ್ಟಲೆ ಹೆಣ್ಣುಭ್ರೂಣಗಳು ಭೂಮಿಗೆ ಬರುವುದರಲ್ಲೆ ಕಣ್ಮುಚ್ಚುವಂತೆ ಮಾಡಿವೆ. ಸುಟ್ಟುಕೊಂಡವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಬಳಕೆಯಾಗಬೇಕಿದ್ದ ಪ್ಲಾಸ್ಟಿಕ್ ಸರ್ಜರಿ ಇವತ್ತು ಮುಖಮೈಚರ್ಮದ ಅಂದಚಂದ ಹೆಚ್ಚಿಸಲೆಂದೇ ಹೆಚ್ಚು ಬಳಕೆಯಾಗುತ್ತಿದೆ. ತೀರಾ ಆಘಾತಕಾರಿ ಎಂದರೆ ಹೈಮೆನೋಪ್ಲಾಸ್ಟಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವುದು. ಕನ್ಯತ್ವ ಎಂದರೆ ಹೈಮೆನ್ ಅಥವಾ ಕನ್ಯಾಪೊರೆ ಇರುವುದು ಎಂದು ನಂಬುವ ‘ಕನ್ಯೆ’ಯರಿಗೆ ಯಾವ ಸ್ತ್ರೀವಾದ ಬೋಧಿಸುವುದು? ಹೇಗೆ ಇಂಥ ವೈದ್ಯಕೀಯವನ್ನು ಜೀವವುಳಿಸುವ ವಿಜ್ಞಾನದ ಒಂದು ಶಾಖೆ ಅನ್ನುವುದು? 

ನೈತಿಕ ಪ್ರಜ್ಞೆ ಹಾಗೂ ವೈಚಾರಿಕತೆಯ ಅಧಃಪತನಕ್ಕೆ ತಂತ್ರಜ್ಞಾನ ನೇರ ಹೊಣೆಯಾಗಿದೆ.

***

ಸಮಾಜದ ಬುನಾದಿಯಲ್ಲಿ ಹೂತ ಕಲ್ಲುಗಳೇ ತಪ್ಪು ಗ್ರಹಿಕೆಗಳಿಂದ ಕೂಡಿವೆ. ಅದಕ್ಕೆ ಪರಿಹಾರವೇನು?

ಒಂದು ಹಂತದವರೆಗೆ ತಪ್ಪಿತಸ್ಥರನ್ನು ಹಿಡಿಯುವುದು, ತಕ್ಷಣದಲ್ಲಿ ಸೂಕ್ತ ಶಿಕ್ಷೆ ನೀಡುವುದು ಅತ್ಯಾಚಾರ ನಿಗ್ರಹದಲ್ಲಿ ಪಾತ್ರ ವಹಿಸಬಹುದು. ಆದರೆ ನೆನಪಿಡೋಣ, ಕಾನೂನು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುತ್ತದೆ. ತಪ್ಪು ಮತ್ತೆಮತ್ತೆ ಜರುಗದಂತೆ ಮಾಡುವುದು ಕಾನೂನಿನ ಹೊರತಾದ ವಿಶಾಲ ಸಾಮಾಜಿಕ ನೆಲೆಯ ಪ್ರಕ್ರಿಯೆಯೇ ಆಗಿದೆ. 

ಆವೇಶದಲ್ಲಿ ಕೆಲ ಮಹಿಳಾ ಸಂಘಟನೆಗಳು ಹಾಗೂ ಹೋರಾಟಗಾರರು ಅತ್ಯಾಚಾರಿಯನ್ನು ಗಲ್ಲಿಗೇರಿಸಬೇಕೆಂದು, ಅಂಥವರ ಗುಪ್ತಾಂಗವನ್ನು ಕತ್ತರಿಸಬೇಕೆಂದು ಸಲಹೆ ನೀಡುತ್ತಾರೆ. ಆದರೆ ಇದು ಅಮ್ಮ ನೀಡಬಹುದಾದ ಸಲಹೆಯಲ್ಲ. ಅಮ್ಮನೊಳಗಿನ ಪುರುಷ ವ್ಯವಸ್ಥೆ ರೂಪಿಸಿದ ಮನಸ್ಸಷ್ಟೆ ಹೀಗೆ ಯೋಚಿಸಬಲ್ಲದು. ಧನಂಜಯ ಚಟರ್ಜಿಯನ್ನು ಗಲ್ಲಿಗೇರಿಸಿದ ಮೇಲೆ ಬಂಗಾಳದಲ್ಲಿ ಅತ್ಯಾಚಾರ ಕಡಿಮೆಯಾಗಿದೆಯೆ? 

ಪ್ರತಿಭಟನೆಗೆ ನಮ್ಮೆದುರು ಎರಡು ಮಾದರಿಗಳಿವೆ - ಒಂದು ಇರೋಂ ಶರ್ಮಿಳಾ ಮಾದರಿ, ಇನ್ನೊಂದು ಭನವಾರಿ ದೇವಿಯದು. ಮಣಿಪುರದಲ್ಲಿ ಸೈನ್ಯದಂತಹ ಬಲಶಾಲಿ ವ್ಯವಸ್ಥೆ ನಡೆಸಿರುವ ಅತ್ಯಾಚಾರಗಳ ವಿರುದ್ಧ ದನಿಯೆತ್ತಿ ಹೋರಾಟಕ್ಕೆ ಚಾಲನೆ ನೀಡಿದ್ದು ಇರೋಂ ಶರ್ಮಿಳಾ. ಆದರೆ ಆ ಮಾದರಿಯ ದೀರ್ಘಕಾಲೀನತೆ ಕೇವಲ ಸಂಕೇತ ಮಾತ್ರವಾದರೆ ಆ ಸಂಕೇತವನ್ನು ವ್ಯವಸ್ಥೆಯೇ ಪೋಷಿಸಿ ನುಂಗಿಬಿಡುವ ಅಪಾಯವನ್ನು ಮರೆಯುವಂತಿಲ್ಲ. ಇರೋಂ ಶರ್ಮಿಳಾ ಎಂಬ ಆಕ್ಟಿವಿಸ್ಟ್ ಅನ್ನು ಉಪವಾಸ ಕಸಿದುಕೊಂಡಿದೆ ಎಂದೇ ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನು ಭನವಾರಿ ದೇವಿ ಎಂಬ ಬಡ, ತಳ ಸಮುದಾಯದ ದಿಟ್ಟ ಹೆಣ್ಣುಮಗಳು ಕಳೆದ ೨೧ ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರೂ ಇನ್ನೂ ಕೇಸು ಇತ್ಯರ್ಥವಾಗಿಲ್ಲ. ಏಳು ಆರೋಪಿಗಳಲ್ಲಿ ಮೂವರು ಆಗಲೇ ಸತ್ತು ಹೋಗಿದ್ದಾರೆ. ನೀರಜಾ ಭಾನೋಟ್ ಪ್ರಶಸ್ತಿ ಬಂದಾಗ ಭನವಾರಿ ಪ್ರಶಸ್ತಿಯಿಂದ ಹೊಟ್ಟೆ ತುಂಬುವುದಿಲ್ಲ, ನ್ಯಾಯ ಸಿಕ್ಕಾಗ ತುಂಬುತ್ತದೆ ಎಂದು ಹೇಳಿದ್ದರು. 

ಈ ಎರಡೂ ದಾರಿಗಳು - ಉಪವಾಸ ಸತ್ಯಾಗ್ರಹದಂತಹ ಸಾಂಕೇತಿಕ ಮಾದರಿ ಹಾಗೂ ಕಾನೂನು ಹೋರಾಟ - ಪ್ರತಿರೋಧದ ಮೊದಲ ಹೆಜ್ಜೆಗಳು ಎಂದು ಭಾವಿಸುವುದಾದರೆ ನಂತರದ ಹೆಜ್ಜೆ ಮಹಿಳೆ ಸಂಘಟಿತಳಾಗುವುದರಲ್ಲಿದೆ. ಈಗ ನಮ್ಮ ಬಹುಪಾಲು ಹೆಣ್ಣುಮಕ್ಕಳು ಜೈವಿಕ ಮಹಿಳೆಯರಷ್ಟೆ ಆಗಿದ್ದಾರೆ. ಆ ಜಾಗದಲ್ಲಿ ಸಾಮಾಜಿಕ, ರಾಜಕೀಯವಾಗಿ ಸ್ಪಂದಿಸಿ ಕ್ರಿಯಾಶೀಲಳಾಗಬಲ್ಲ ಮಹಿಳೆ ಹುಟ್ಟಿಕೊಳ್ಳಬೇಕು. ಪುರುಷ ದೃಷ್ಟಿಕೋನದಲ್ಲಿ ಅಲಂಕಾರಿಕ ವಸ್ತುವಾಗಿ ತನ್ನ ವ್ಯಕ್ತಿತ್ವ ಗ್ರಹಿಸಿಕೊಳ್ಳುವುದನ್ನು ನಿಲ್ಲಿಸಿ ತನ್ನತನವನ್ನು ತಾನು ಕಂಡುಕೊಳ್ಳಬೇಕು.

ಆಗ ಮಹಿಳೆಗೆ ದಕ್ಕುವ ಒಳನೋಟಗಳೇ ಬೇರೆ. 

ಮಹಿಳೆಯರ ಮುಂದೊಂದು ಸುಲಭದ ಮಾರ್ಗವಿದೆ. ಅದಕ್ಕೆ ಗಟ್ಟಿ ಮನಸ್ಸು, ದಿಟ್ಟ ವ್ಯಕ್ತಿತ್ವ ರೂಪುಗೊಳ್ಳಬೇಕು. ಅದೇ ನಿರಾಕರಣ ತತ್ವ. ನಿರಾಕರಣೆ ಎಂದರೆ ಯಾವ ವಸ್ತು, ವ್ಯಕ್ತಿ, ವಿಷಯ, ಸಿದ್ಧಾಂತ, ಪಕ್ಷದಿಂದ ಮಹಿಳೆಯ ಘನತೆಗೆ, ಮಹಿಳಾ ಗೌರವಕ್ಕೆ ಕುಂದು ಬರುತ್ತಿದೆಯೋ ಅಂಥ ಎಲ್ಲವನ್ನು ಸಾರಾ ಸಗಟಾಗಿ ಅವರು ನಿರಾಕರಿಸಬೇಕು. ನಮ್ಮ ಜನಪ್ರತಿನಿಧಿಗಳದು ಜೆಂಡರ್ ಇನ್‌ಸೆನ್ಸಿಟಿವ್ ವರ್ಗ. ತಾವೇನೋ ಮಹತ್ತರವಾದದ್ದನ್ನು ಸಾಧಿಸುತ್ತಿದ್ದೇವೆ, ಇದೆಲ್ಲ ಹೆಣ್ಣುಕುಲಕ್ಕೆ ಅರ್ಥವಾಗುವುದಿಲ್ಲ ಎಂದೇ ಅವರ ಭಾವನೆ. ರಾಜಕೀಯದಲ್ಲಿ ಮಹಿಳೆಯರಿಗೆ ನೀಡಿರುವ ಸ್ಥಾನಮಾನ ಮತ್ತು ಪ್ರಾತಿನಿಧ್ಯ ನೋಡಿದರೆ ಇದು ಅರ್ಥವಾಗುತ್ತದೆ. ಇದೇ ದುಷ್ಟತನ ಮುಂದುವರೆದು ತಮಗೆ ಯಾವ ಕಾನೂನೂ ಅನ್ವಯಿಸುವುದಿಲ್ಲವೆಂದು ಹೆಣ್ಣನ್ನು ಮನಬಂದಂತೆ ಉಪಯೋಗಿಸಿಕೊಳ್ಳಲಾಗುತ್ತದೆ. ರಾಜಕಾರಣದಲ್ಲಿ ಅನಾದಿಯಿಂದ ಮಹಿಳೆಗೆ ಸಿಕ್ಕಿರುವ ಎಂಟ್ರಿ ರಾಜಮಾರ್ಗದ್ದಲ್ಲ, ಬದಲಿಗೆ ಇಂಥ ಹಿಂಬಾಗಿಲಿನ ವರಸೆಗಳೇ. ಇದರ ವಿರುದ್ಧ ಮಹಿಳೆ ಜಾಗೃತಳಾಗಬೇಕು. ರೇಪಿಸ್ಟ್ ಇರುವ ಪಕ್ಷಕ್ಕೆ, ಅಂತಹ ಜನಪ್ರತಿನಿಧಿಗಳಿಗೆ ಮತ ಹಾಕದೇ ನಿರಾಕರಿಸಬೇಕು.  
ಕೀಳು ಅಭಿರುಚಿಯಲ್ಲಿ ಮಹಿಳೆಯರನ್ನು ಬಿಂಬಿಸಿ ಜಾಹೀರಾತು ತೋರಿಸುವ ವಸ್ತು, ಧಾರಾವಾಹಿ, ಸಿನಿಮಾಗಳನ್ನು ನಿರಾಕರಿಸಬೇಕು. ಇವತ್ತಿನ ಹೆಣ್ಣುಮಕ್ಕಳನ್ನು ಮುಕ್ಕಾಲು ಭಾಗ ಪ್ರಭಾವಿಸಿ ಹಾದಿ ತಪ್ಪಿಸುವವು ಜಾಹೀರಾತುಗಳು. ೫೦% ಮಾರುಕಟ್ಟೆ ಇರುವ ಮಹಿಳಾ ಸಮುದಾಯ ಮಾರುಕಟ್ಟೆ ತೋರಿಸುವ ಆಮಿಷಗಳಿಗೆ ಬಲಿಯಾಗದೇ ತಿರುಗಿ ಬಿದ್ದರೆ ಆರ್ಥಿಕ ಸಮೀಕರಣಗಳೇ ಬದಲಾಗಿಬಿಡಬಹುದು. 
ಇವೆಲ್ಲ ವಿಚಾರಗಳನ್ನು ಎಲ್ಲ ಮಹಿಳೆಯರಿಗೂ ತಲುಪಿಸಲು ಸಂಘಟಿತಳಾಗಬೇಕಾದ ಅವಶ್ಯಕತೆಯಿದೆ. 

ದೆಹಲಿ ಅತ್ಯಾಚಾರ ಪ್ರಕರಣದ ಸಮಯದಲ್ಲಿ ಮೇಲುವರ್ಗ ಅನುಭವಿಸುವ ದೌರ್ಜನ್ಯವಷ್ಟೇ ಮಾಧ್ಯಮದ ಗಮನ ಸೆಳೆಯುತ್ತದೆ; ದಿನನಿತ್ಯ ಎಷ್ಟೋ ಶ್ರಮಿಕ, ಬಡ ಸೋದರಿಯರು ಬರ್ಬರ ಹಿಂಸೆ, ಅತ್ಯಾಚಾರಕ್ಕೊಳಗಾಗಿದ್ದು ಯಾರ ಗಮನವನ್ನೂ ಸೆಳೆಯುವುದಿಲ್ಲ ಎಂಬ ಆರೋಪ ಕೇಳಿಬಂತು. ಇಂಥ ಆರೋಪ ಸುಳ್ಳಾಗುವಂತೆ, ಮತ್ತೆ ಕೇಳದಂತೆ ಯಾವ ವರ್ಗ/ಜಾತಿ/ಧರ್ಮ/ಉದ್ಯೋಗ/ಪಕ್ಷದ ಮಹಿಳೆಯೇ ಆಗಿರಲಿ. ಯಾವ ಪ್ರಾದೇಶಿಕ/ಭಾಷಿಕ/ಸಂಘಟನಾ ಹಿನ್ನೆಲೆಯವಳೇ ಆಗಿರಲಿ - ಎಲ್ಲರೂ ಶೋಷಿತ ಮಹಿಳೆಯರ ಪರವಾಗಿ ದನಿಯೆತ್ತಬೇಕು. ಪ್ರತಿ ವ್ಯವಸ್ಥೆಯೊಳಗಿರುವ ಪುರುಷತನ ಮಹಿಳೆಯನ್ನು ಶೋಷಣೆಗೊಳಪಡಿಸಿರುತ್ತದೆ. ಅದರ ವಿರುದ್ಧ ಎಲ್ಲ ಮಹಿಳೆಯರು ತಮ್ಮ ಉಳಿದ ಹಿನ್ನೆಲೆಯನ್ನು ಬದಿಗಿಟ್ಟು ಒಗ್ಗೂಡಿ ಹೋರಾಡಬೇಕು. ಆಗಷ್ಟೇ ಹೋರಾಟಕ್ಕೊಂದು ಪ್ರತಿಫಲ ದೊರೆಯಬಹುದಾಗಿದೆ.

ಇದೇ ಎದೆಯೋನಿಕಿಬ್ಬೊಟ್ಟೆಗಳ ನಡುವಿನಿಂದ ಹುಟ್ಟಿ ಬೆಳೆಯುವ ಗಂಡು ಅದು ಹೇಗೆ ಹೆರುವ ಜೀವಗಳತ್ತ ಹಿಂಸಾರೂಪಿಯಾಗಿ ತಿರುಗಿಬೀಳುತ್ತಾನೆ? ಹಾಗಾಗದಂತೆ ತಡೆಯಲು ಕುಟುಂಬದೊಳಗಿನಿಂದಲೇ ಲಿಂಗಸೂಕ್ಷ್ಮತೆ, ಲಿಂಗಸಮಾನತೆಯ ಪಾಠಗಳು ಶುರುವಾಗಬೇಕು. ಪ್ರತಿ ಅಪ್ಪಅಮ್ಮನೂ ತಮ್ಮ ಗಂಡು ಮಕ್ಕಳಿಗೆ ಜೆಂಡರ್ ಸೆನ್ಸಿಟಿವಿಟಿ ಹಾಗೂ ಹೆಣ್ಣಿನ ಮೇಲೆ ಗೌರವ ಮೂಡುವಂತೆ ನೋಡಿಕೊಳ್ಳಬೇಕು. ಹಾಗೂ ತಮ್ಮ ಹೆಣ್ಣುಮಕ್ಕಳಿಗೆ ದೇಹದ ಹೊರತಾಗಿ ಒಂದು ಅಸ್ತಿತ್ವ-ವ್ಯಕ್ತಿತ್ವ ಇದೆಯೆಂದೂ; ಅದೇ ನಿಜವಾದ ಸೌಂದರ್ಯವೆಂದೂ ಅರಿವು ಮೂಡಿಸಿ ಆತ್ಮಘನತೆಯ ಪಾಠ ಹೇಳಿಕೊಡಬೇಕು.


ನಕ್ಸಲ್ ಸಮಸ್ಯೆ-ಒಂದು ಅವಲೋಕನ


ವಿ.ಮಹಾಲಿಂಗಂ 
ಅನುವಾದ: ಸುರೇಶ್ ಭಟ್ ಬಾಕ್ರಬೈಲ್ರಾಷ್ಟ್ರೀಯ ಭದ್ರತೆಗೆ ಅತ್ಯಧಿಕ ಅಪಾಯವಿರುವುದೆ ಮಾವೊವಾದಿಗಳಿಂದ ಎಂದು ಪ್ರಧಾನಿ ಮನಮೋಹನ್ ಸಿಂಗ್ ಈಗಾಗಲೇ ಹೇಳಿದ್ದಾರೆ.ಆದರೆ ರಾಷ್ಟ್ರ ಮಾತ್ರ ಸಿಪಿಐ (ಮಾವೊವಾದಿ) ಒಡ್ಡಿರುವ ಸವಾಲನ್ನೆದುರಿಸಲು ಇನ್ನೂ ಶಕ್ತವಾಗಿಲ್ಲವೆಂದು ತೋರುತ್ತಿದೆ. ಪ್ರಸಕ್ತವಾಗಿ ಮಧ್ಯ ಭಾರತದ 83 ಜಿಲ್ಲೆಗಳು ನಕ್ಸಲ್ ಪೀಡೆಗೊಳಗಾಗಿವೆ ಎನ್ನಲಾಗಿದೆ.
2010ನೆ ಇಸವಿಯಲ್ಲಿ ಮಾವೊವಾದಿಗಳು ಛತ್ತೀಸ್‌ಗಡದಲ್ಲಿ ಹಲವಾರು ದೊಡ್ಡ ಮಟ್ಟಿನ ದಾಳಿಗಳನ್ನು ನಡೆಸಿದ್ದಾರೆ. ಇತ್ತೀಚಿನ ದರ್ಭಾ ಹತ್ಯಾಕಾಂಡ ಕೆಲವು ಕಾಂಗ್ರೆಸ್ ನಾಯಕರನ್ನೂ ಒಳಗೊಂಡಂತೆ 27ಕ್ಕೂ ಅಧಿಕ ಜನರನ್ನು ಆಹುತಿ ತೆಗೆದುಕೊಂಡಿದೆ. ಪ್ರತಿ ಬಾರಿಯೂ ನಕ್ಸಲ್ ದಾಳಿಯಾದಾಗ ರಾಜ ಕಾರಣಿಗಳಿಂದ,ಸರಕಾರಿ ಅಧಿಕಾರಿಗಳಿಂದ, ಆರಾಮ ಕುರ್ಚಿಯ ಬುದ್ಧಿಜೀವಿಗಳಿಂದ ಸಲಹೆಸೂಚನೆ ಹಾಗೂ ಪರಿಹಾರೋಪಾಯಗಳ ಸುರಿಮಳೆಯೆ ಸುರಿಯುತ್ತದೆ.
ಆದರೆ ಇವೆಲ್ಲವೂ ಅವಾಸ್ತವಿಕವಾಗಿವೆ ಯಾಕೆಂದರೆ ಇವರು ಸಂಘರ್ಷವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಇವರು ಸತ್ಯವನ್ನು ಕಡೆಗಣಿಸುವ ಕಾರಣ ಇಲ್ಲಿ ಯಾವ ಮೂಲಭೂತ ವಿಷಯಗಳು ಒಳಗೊಂಡಿವೆ ಎಂದು ನಿರ್ಧರಿಸುವಾಗ, ಪರಿಹಾರೋಪಾಯಗಳನ್ನು ಸೂಚಿಸುವಾಗ ಹೆಚ್ಚಿನ ವೇಳೆ ತಪ್ಪುಗಳಾಗುತ್ತವೆ.

ಛತ್ತೀಸ್‌ಗಡ, ಜಾರ್ಖಂಡ್, ಉತ್ತರಾಖಂಡ ಎಂಬ ಹೊಸ ರಾಜ್ಯಗಳನ್ನು ರಚಿಸಿದ ಬಳಿಕ 2003ರಲ್ಲಿ ಗಣಿಗಾರಿಕಾ ನೀತಿಯನ್ನು ಉದಾರೀಕರಿಸಿ, 2005ರಲ್ಲಿ ವಿಶೇಷ ಆರ್ಥಿಕ ವಲಯ ಕಾಯ್ದೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ ಈ ಹೊಸ ರಾಜ್ಯಗಳ ನಾಯಕರಿಗೆ ಕೈಗಾರಿಕೀಕರಣದಲ್ಲಿ ತೊಡಗಲು ಬೇಕಾದ ಆವೇಗ ದೊರಕಿತು. ಆದರೆ ಕೈಗಾರಿಕೀಕರಣ ಮಾಡುತ್ತಿರುವ ಸಂದರ್ಭದಲ್ಲಿ ಯಾರೂ ಸ್ಥಳೀಯ ಬುಡಕಟ್ಟು ಜನಾಂಗಗಳ ಬವಣೆಗಳತ್ತ ಗಮನಹರಿಸಲಿಲ್ಲ. ಖನಿಜ ಹಾಗೂ ಅರಣ್ಯ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದಂತಹ ಈ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಕಾರ್ಪೊರೇಟುಗಳು ಮತ್ತು ರಾಜಕಾರಣಿಗಳಿಬ್ಬರಿಗೂ ಅನುಕೂಲವೇ ಆಯಿತು.

ಇತ್ತ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗಾಗಿ ಹಾತೊರೆಯುತ್ತಿದ್ದ ಜನಸಾಮಾನ್ಯರು ಕೈಗಾರಿಕೀಕರಣದ ಹಿಂದಿರುವ ಉದ್ದೇಶಗಳ ಬಗ್ಗೆ ಮತ್ತು ಇದರಿಂದಾಗಿ ಆದಿವಾಸಿಗಳ ಜನ ಜೀವನದ ಮೇಲಾಗುವ ಹೆಚ್ಚುಕಡಿಮೆ ಅನಿವಾರ್ಯ ಪರಿಣಾಮಗಳ ಬಗ್ಗೆ ನಿರ್ಲಕ್ಷ ತಾಳಿದರು. ಅತ್ತ ಸರಕಾರವೂ ಸ್ಥಳೀಯರನ್ನು ಬಗ್ಗುಬಡಿದು ತನ್ನ ಕಾರ್ಯವನ್ನು ಮುಂದುವರಿಸಬಹುದೆಂದು ಭಾವಿಸಿತು.

ಆದರೆ ಸರಕಾರ ಇವೆಲ್ಲದರ ನಡುವೆ ಒಂದು ವಿಚಾರವನ್ನು ಮರೆತೇಬಿಟ್ಟಂತೆ ಕಾಣುತ್ತದೆ. ಅದೇನೆಂದರೆ ಆಳುವಿಕೆ ಮತ್ತು ಆಡಳಿತಗಳು ಎಲ್ಲಿಯವರೆಗೆ ಆಳ್ವಿಕೆಗೊಳಪಡುವ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡುತ್ತವೋ ಅಲ್ಲಿಯವರೆಗೆ ಮಾತ್ರ ಅವು ಪ್ರಸ್ತುತ. ಭೂಕಬಳಿಕೆದಾರರು ಮತ್ತು ಧನಿಕ ಉದ್ಯಮಿಗಳ ಪರವಾಗಿ ಪಕ್ಷಪಾತ ಮಾಡುವ ಸರಕಾರಗಳು ಅಪ್ರಸ್ತುತವಾಗಿ ಪರಿಣಮಿಸುತ್ತವೆ. ಆಗ ಬಡವರ ಬಗ್ಗೆ, ಅವರು ಅನುಭವಿಸುವ ಸಂಕಷ್ಟಗಳ ಬಗ್ಗೆ ಅನುಕಂಪ ತೋರುತ್ತಾ ಅವರನ್ನು ಬೆಂಬಲಿಸುವವರು ಸಂಗತರಾಗುತ್ತಾರೆ. ಮಾವೊವಾದಿಗಳು ರಾಬಿನ್ ಹುಡ್ ಥರ ಆದುದು ಹೀಗೆ.

ಅಧಿಕಾರಿಗಳು ಜನರಿಗೆ ತಿಳಿಸದೆ ಅನೇಕ ಉದ್ದಿಮೆಗಳೊಂದಿಗೆ ಒಪ್ಪಂದ  ಮಾಡಿಕೊಂಡು ದಾಖಲೆಪತ್ರಗಳಿಗೆ ಸಹಿ ಹಾಕಿದರು. ಆದಿವಾಸಿಗಳಿಗೆ ಸೇರಿದ ವಿಸ್ತಾರ ಭೂಪ್ರದೇಶಗಳನ್ನು ಗಣಿಗಾರಿಕೆ ಕಂಪೆನಿಗಳಿಗೆ ನೀಡಿದರು. ಜನರ ಆತಂಕಗಳಿಗೆ, ಗ್ರಾಮ ಪಂಚಾಯತುಗಳ ಪ್ರತಿರೋಧಗಳಿಗೆ ಕ್ಯಾರೇ ಎನ್ನಲಿಲ್ಲ. ಸಂತ್ರಸ್ತರಿಗೆ ಮರುವಸತಿ ಕಲ್ಪಿಸುವ ಕುರಿತಾಗಲಿ ಅವರ ಸಂಕಷ್ಟಗಳನ್ನು ಪರಿಹರಿಸುವ ಕುರಿತಾಗಲಿ ಯಾವುದೇ ಉಪಯುಕ್ತ ಕ್ರಮಗಳನ್ನು ಕೈಗೊಳ್ಳಲಿಲ್ಲ. ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ತುಂಬಿಕೊಂಡಿರುವ ಸನ್ನಿವೇಶದಲ್ಲಿ ಈ ರಹಸ್ಯ ಒಪ್ಪಂದಗಳು ಜನಮಾನಸದಲ್ಲಿ ಸಂಶಯದ ಬೀಜಗಳನ್ನು ಬಿತ್ತಿದವು. 

ಜಾರ್ಖಂಡದ ಮಾಜಿ ಮುಖ್ಯಮಂತ್ರಿ ಮಧುಕೋಡಾ ಭಾಗಿಯಾಗಿರುವ ಭ್ರಷ್ಟಾಚಾರ ಪ್ರಕರಣ ಇಡೀ ಕಥೆಯನ್ನು ಹೇಳಿತು. ಆದಿವಾಸಿಗಳ ಜೀವನಾಧಾರವಾಗಿದ್ದ ಭೂಮಿಗಳಿಗೂ, ಆ ಅಪಾರ ಖನಿಜ ಸಂಪತ್ತಿಗೂ, ಅರಣ್ಯ ಸಂಪತ್ತಿಗೂ ಅಪಾಯ ಬಂದೊದಗಿತ್ತು.ಬುಡಕಟ್ಟು ಜನ ಉದ್ಯಮಗಳಿಗೋಸ್ಕರ ಬಲವಂತವಾಗಿ ಒಕ್ಕಲೆಬ್ಬಿಸುವ ದುರಹಂಕಾರಿ, ಸ್ವೇಚ್ಛಾಪ್ರವೃತ್ತಿಯ ಆಡಳಿತದ ವಿರುದ್ಧ ಸಿಟ್ಟಿಗೆದ್ದರು. ಆಗ ನಡೆದ ವ್ಯಾಪಕ ಪ್ರತಿಭಟನೆಗಳ ವೇಳೆ ಅವರ ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಸಂಘರ್ಷಗಳು ಸಂಭವಿಸಿದವು.

ಭೂಮಿಯ ವಿಷಯ ಮತ್ತು ಬಡವರನ್ನು ಅವರ ಹೊಲ ಮನೆಗಳಿಂದ ಒಕ್ಕಲೆಬ್ಬಿಸಲು ಭದ್ರತಾ ಸಂಸ್ಥೆಗಳು ಹರಿಬಿಟ್ಟ ಹಿಂಸೆ ಇವೆರಡೂ ಮಾವೊವಾದಿಗಳಿಗೆ ಆದಿವಾಸಿಗಳ ಭಾವನೆಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಅತ್ಯಗತ್ಯವಾಗಿದ್ದ ನೆಲೆಗಟ್ಟನ್ನು ಒದಗಿಸಿದವು. ಜೊತೆಗೆ ಸರಕಾರ ಪ್ರಾರಂಭಿಸಿದ ಸಲ್ವಾ ಜುಡುಂ ಮತ್ತು ಆಪರೇಷನ್ ಗ್ರೀನ್ ಹಂಟ್‌ನಂತಹ ಭದ್ರತಾ ಕಾರ್ಯಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು. ಆ ಸಂದರ್ಭದಲ್ಲಿ ಮಾವೊವಾದಿಗಳು ಬುಡಕಟ್ಟು ಜನರ ಬಗೆಗೆ ಸಹಾನುಭೂತಿ ಪ್ರದರ್ಶಿಸಿದರು. ಆದರೆ ಸರಕಾರ ಒಂದಿನಿತೂ ಕನಿಕರ ತೋರಿಸಲಿಲ್ಲ. ಪರಿಣಾಮವಾಗಿ ಆದಿವಾಸಿಗಳು ಮಾವೊವಾದಿಗಳೊಂದಿಗೆ ಕೂಡಿಕೊಂಡರು.

ಭೂಗತವಾಗಿ ಕಾರ್ಯಾಚರಿಸುವ ಒಂದು ರಾಜಕೀಯ ಬಣವಾದ ಸಿಪಿಐ (ಮಾವೊವಾದಿ)ಯ ಗುರಿ: ‘ಜನತಾ ಸಮರ’ದ ಮೂಲಕ ಚುನಾಯಿತ ಸರಕಾರವನ್ನು ಉರುಳಿಸುವುದು. ಅದರ ನಾಯಕರು ಮತ್ತು ಸೈದ್ಧಾಂತಿಕರು ಯಾರೂ ಆದಿವಾಸಿಗಳಲ್ಲ, ಅವರೆಲ್ಲ ಹೊರಗಿನವರು. ಸ್ಥಳೀಯರನ್ನು ಅದರ ಕಾರ್ಯಕರ್ತರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಮಾವೊವಾದಿಗಳು ಪ್ರಭುತ್ವ ಮತ್ತು ಅದರ ಪಡೆಗಳ ವಿರುದ್ಧದ ತಮ್ಮ ಹೋರಾಟಕ್ಕಾಗಿ ಸ್ಥಳೀಯರನ್ನು ಸೇರಿಸಿಕೊಳ್ಳುವುದಕ್ಕೆ ಸರಕಾರ ನಿರ್ಮಿಸಿದ ಸನ್ನಿವೇಶವೇ ಕಾರಣವಾಗಿದೆ.

ಮಾವೊವಾದಿಗಳ ನೈಜ ಉದ್ದೇಶದ ಅರಿವಿಲ್ಲದ ಸ್ಥಳೀಯರನ್ನು ಮಾವೊವಾದಿ ಚಳವಳಿಯ ಪರವಾಗಿ ಹೋರಾಡಲು ಬಳಸಿಕೊಳ್ಳಲಾಗಿರುವುದು ಹೀಗೆ. ಒಂದು ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿ ಉಳಿದಷ್ಟೂ; ಜನರು ಬಡವರಾಗಿ, ದುಃಖಿತರಾಗಿ,ಅಸಂತುಷ್ಟರಾಗಿ ಉಳಿದಷ್ಟೂ ಮಾವೊವಾದಿಗಳಿಗೆ ಅನುಕೂಲವೇ.ಮಾವೊವಾದಿಗಳು ತಮ್ಮ ನಿಯಂತ್ರಣದಲ್ಲಿದೆ ಎಂದು ಹೇಳಿಕೊಳ್ಳುವ ಜಾಗಗಳಲ್ಲಿ ತಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಚಳವಳಿಯನ್ನು ಜೀವಂತವಾಗಿರಿಸುವುದು ಉದ್ಯಮಿಗಳು ಮತ್ತು ರಾಜಕಾರಣಿಗಳಿಂದ ಬರುವ ಕಾಪಿನ ಹಣ. ಈ ಕಾಪಿನ ದುಡ್ಡು ಮತ್ತು ಬಂದೂಕಿನ ಬಲವೇ ಅವರ ಸಾಮರ್ಥ್ಯದ ಪ್ರಧಾನ ಆಕರವಾಗಿವೆ.

ಇದೊಂದು ಕಾನೂನು, ಸುವ್ಯವಸ್ಥೆಯ ಪ್ರಶ್ನೆಯೇ? ನಕ್ಸಲ್ ಸಮಸ್ಯೆಯ ಹುಟ್ಟಿಗೆ ಅಭಿವೃದ್ಧಿ, ಮೂಲಭೂತ ವ್ಯವಸ್ಥೆಗಳು, ಶಿಕ್ಷಣ ಮತ್ತು ಆರೋಗ್ಯಸೇವೆಗಳ ಕೊರತೆಯೆ ಕಾರಣವೇ? ಇವು ಖಂಡಿತಾ ಪ್ರಮುಖ ವಿಷಯಗಳು ಹೌದಾದರೂ ಅವು ಈ ತಿಕ್ಕಾಟದ ನಿರ್ಣಾಯಕ ಅಂಶಗಳಲ್ಲ.ಲಭ್ಯ ಅಂಕಿ-ಸಂಖ್ಯೆಗಳ ಪ್ರಕಾರ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳ ಪೈಕಿ ಹೆಚ್ಚಿನವು ಮಾವೊವಾದಿಗಳ ಭದ್ರಕೋಟೆಗಳಲ್ಲ. 

2007ರಲ್ಲಿ ವಾಣಿ ಬೊರೂಹ ಮತ್ತು ಅಮರೇಶ್ ದುಬೆ ಎಂಬವರು ಭಾರತದ ವಿವಿಧ ಪ್ರದೇಶಗಳ ಹಿಂದುಳಿಯುವಿಕೆಯನ್ನು ಅಳೆಯುವ ವಿಚಾರದ ಮೇಲೆ ಅಧ್ಯಯನವೊಂದನ್ನು ಕೈಗೊಂಡಿದ್ದರು. ಈ ಅಧ್ಯಯನ ಹೇಳುವಂತೆ ಅತ್ಯಧಿಕ ದಾರಿದ್ರವಿರುವ 100 ಜಿಲ್ಲೆಗಳ ಪೈಕಿ ನಕ್ಸಲ್ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳ ಸಂಖ್ಯೆ ಕೇವಲ 26. ಅದೇ ರೀತಿ ಅತ್ಯಧಿಕ ಶಿಶುಮರಣ ವಿರುವ 100 ಜಿಲ್ಲೆಗಳ ಪೈಕಿ ಕೇವಲ 9 ಜಿಲ್ಲೆಗಳಲ್ಲಿ ಮಾವೊವಾದಿಗಳ ಸಮಸ್ಯೆಯಿದೆ.

ಉಣ್ಣಲು ಸಾಕಷ್ಟಿಲ್ಲದ ಕುಟುಂಬಗಳಿರುವ 100 ಜಿಲ್ಲೆಗಳ ಪೈಕಿ ಮಾವೊವಾದಿಗಳ ಸಮಸ್ಯೆ ಇರುವುದು ಬರೀ 15 ಜಿಲ್ಲೆಗಳಲ್ಲಿ. ಜನ ಅವರ ಭೂಮಿಯನ್ನು ಕಳೆದುಕೊಳ್ಳುವ ಮತ್ತು ಅವರನ್ನು ಅವರ ಪಾರಂಪರಿಕ ಮನೆಮಠಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆಯೇ ಎಡಪಂಥೀಯ ತೀವ್ರಗಾಮಿ ಸಿದ್ಧಾಂತದ ಕೇಂದ್ರಬಿಂದುವೆಂದು ಸಾಮಾನ್ಯ ಜ್ಞಾನ ತಿಳಿಸುತ್ತದೆ. ಮಾವೊವಾದಿಗಳಿಗೆ ಬೇಕಾಗಿರುವುದು ನ್ಯಾಯ.

Saturday, June 22, 2013


ಪಂಪಾರಡ್ಡಿ ಅರಳಹಳ್ಳಿ 
 
Death of Casagemas Pablo Picasso painting
 
 
ಊರುಗಳು ಸುಡುಗಾಡಾಗುತ್ತಿವೆ
ಸತ್ತವರನ್ನು ಇಲ್ಲಿ
ಹುತ್ತಿಕುವುದು ಎಂದು
ಅಲ್ಲ
ಬದುಕಿದ್ದವರು
ಸತ್ತಿದ್ದಕ್ಕಾಗಿ
ಇಲ್ಲಿಯ ಹಸಿವನ್ನು, ಅಳುವನ್ನು,
ಪ್ರೀತಿಯನ್ನು ಮಾರಿಕೊಳ್ಳಲಾಗಿದೆ
ಜೊತೆಗೆ ಮನುಷ್ಯರನ್ನು ಸಹ

ನಾನು
ಸ್ಮಶಾನ ಕಾಯುವವಗುತ್ತೇನೆ
ಬಂದವರನ್ನು ಸುಡುವುದು
ಬಾರದವರನ್ನು
ಬಿಡುವುದಕ್ಕಾಗಿ

ಗುರುತುಗಳು ಅಚ್ಚಳಿಯದೇ
ಇಂದಿಗೂ ಉಳಿದಿವೆ
ಬೆಂಕಿ ಹಚ್ಚುವ ಮುನ್ನ
ಮುಖ ನೋಡುತ್ತೇನೆ
ಮರು ಜನ್ಮ ಇಲ್ಲದ್ದಕ್ಕಾಗಿ
ಮರು ಹುಟ್ಟುಗಳನ್ನು
ಸಾರಲು

ನೆರಳನ್ನು ಬಿಟ್ಟು
ಹಿಂಬಾಲಿಸುವವರಿಗೆ
ನೆರಳಾಗಲು
ಸಾವಿನ ಸುದ್ದಿ ಸಾರುತ್ತೇನೆ
ಮತ್ತೆ ಊರು
ಸುಡಗಾಡಗದಂತೆ ಇರಲು.ದಿನದ ಸಾಲುಗಳು - 231
ಬಿದಿರ ದೇಹ ನಿನ್ನುಸಿರು ತಾಕಿ ರಾಗ ನುಡಿವ ಕೊಳಲಾಯಿತು
ನೀ ಉಸಿರ ತುಂಬುವುದ ನಿಲಿಸಿದ ಕ್ಷಣ ಮತ್ತದೇ ಒಣಬಿದಿರ ರೂಪ
ಸಾವು ಇಲ್ಲದೇ ಹೋಗಿದ್ದರೆ..
ಒಂದಂತೂ ಸತ್ಯ ನಿನ್ನ ಕೈರೊಟ್ಟಿಗೆ ಕಡೆತನಕ ಅದೇ ರುಚಿ ಇರುತ್ತಿರಲಿಲ್ಲ
3
 ಬೇಲಿ ತಬ್ಭಿಕೊಂಡೇ ಬೆಳೆವ ಬಳ್ಳಿಯಲಿ ಹೂ ಅರಳುವ ಹಾಗೆ
ನಮ್ಮಾತ್ಮದ ಹೂಗಳರಳುತ್ತಿವೆ ನಿನ್ನ ತುಟಿಗಳ ಸ್ಪರ್ಶದಿಂದ
4
ನಾ ಹಿಂತಿರುಗಿ ಬಂದ ಮೇಲೆ ನೀ ಮೊದಲಿನಂತಾದೆ ಎನುವೆಯಲ್ಲ ದೊರೆಶಾನಿ
ಹೇಳು ನಿನ್ನ ಪ್ರತಿಬಿಂಬಿಸುವ ಕನ್ನಡಿ ನೀ ದೂರಾದ ಮೇಲೆ ಏನಾಗಿ ಉಳಿಯುವುದು
..


ಚಿತ್ರ ಕೃಪೆ: ಡಾ  ಜಿ. ಕೃಷ್ಣ

ನನ್ನೊಳಗೆ ಉರಿವ ಪದ


N Krishnamurthy Bhadravathi


ಎನ್. ಕೃಷ್ಣಮೂರ್ತಿ ಭದ್ರಾವತಿ
ಧನ್ಯವಾದಗಳು ಮೇಷ್ಟ್ರೇ
ಕಪ್ಪನೆಯ ಒರಟ ನನ್ನೆದೆಗೆ
ನಿಮ್ಮ ಚಿತ್ತವೆಂಬೊ ಬೆತ್ತದ ಗೆರೆಯೆಳೆದು
ಬೆನ್ನುತಟ್ಟಿ  ನೀರೆರೆದು ಅಕ್ಷರಗಳ ಬಿತ್ತಿದ್ದಕ್ಕೆ

ಬೆನ್ನಿಗತ್ತಿದ ಹೊಟ್ಟೆಯಬ್ಬರವ ಮರೆಸಿತು ಪುಸ್ತಕ
ಬಕಾಸುರನ ಭೂರಿಭೋಜನದ ಕತೆ ಓದಿಸಿ
ನೀವು ಹೇಳಿದ ಸುಧಾಮನ ಮನೆಗೆ ಬಂದ ಕೃಷ್ಣ
ನ ಕತೆ ಮರೆಯಲಿ ಹೇಗೆ ಮೇಷ್ಟ್ರೇ

ಸುಧಾಮನ ಬದುಕಿನವನು ನಾನು
ಕೃಷ್ಣನ ಕಾಯುತ್ತಲೇ ಇದ್ದೇನೆ 
ಅಪ್ಪ ಅವ್ವ ಅಕ್ಕ ತಂಗಿಯರು ಮತ್ತು ನಾನು
ಕತ್ತಲಿಗೆ ಬೇಸರಿಸಿ

ಮೇಷ್ಟ್ರೇ, ನೀವು ಬಿತ್ತಿದ ಅಕ್ಷರ ಬೀಜಗಳು
ಒಡಲ ಸೀಳಿ ಚಿಗುರೊಡೆದು ಎರಡಾಸೆಯ ಹಸಿರೆಲೆ
ನಡುವಲ್ಲಿ ಕೆಂಡ ಗುಲಾಬಿಮೊಗ್ಗು
ಪ್ರಶ್ನಿಸುತ್ತಿದೆ ಆತ್ಮಗೌರವವ
ಇನ್ನೆಷ್ಟು ದಿನ ಹೀಗೆ

ಕತ್ತಲ ಗುಡಿಸಿಲ ಮೂಲೆಯ ಒಲೆಯಲಿ
ಬೂದಿಮುಚ್ಚಿದ ಕೆಂಡ ಕೆಂಪಾಗುತ್ತಿದೆ
ನನ್ನ ಮೆದುಳ ಮೂಡಣದಲಿ
ನಿಮ್ಮ ಅಕ್ಷರದ ಕಿಡಿಗಳ ಬೆಳಕು
ಹಗಲಾಗಬೇಕಿದೆ ಇನ್ನಾದರೂ ಕತ್ತಲ ಜಗಕೆ

ಮತ್ತದೇ ರಾಗShiela Nayak


ಶೀಲಾ ನಾಯಕ 

ನಿದ್ದೆಯಲಿ ಮೈಮರೆತಿದ್ದೆನೋ 
ಅಥವಾ ನೆನಪುಗಳ  ನಿದ್ದೆಯೋ.
ಕಪ್ಪೆಗಳ ವಟಗುಡುವಿಕೆ, ಜೀರುಂಡೆ ನಾದ..
ಮುಂಜಾನೆಯ ಆಲಾಪದಂತೆ 
ಕೇಳಿಸುವ ಮರುತನ ರಾಗ..
ಒಂದೇ ಸಮನೆ ನಿಲ್ಲದ ಹನಿಗಳ ನರ್ತನ..

 ಕಿವಿಯಲ್ಲಿ ಕರೆಯೊಂದು ಬುಸುಗುಟ್ಟುತ್ತಿದೆ ಸುಮ್ಮನೆ
ಕೋಗಿಲೆಯೇ...
ಮುಂಜಾನೆಯ ಹಾಡಿಲ್ಲವಲ್ಲವೀಗ..
ಸುಯ್ಯೆಂದು ನುಗ್ಗಿದ ಗಾಳಿಯ ಜತೆ 
ಒಂದಿಷ್ಟು ಹನಿಗಳು ಮುಖದ ಮೇಲೆಲ್ಲಾ..

ತುಟಿಗೆ ಉಪ್ಪು ಮುತ್ತು..
ಪ್ರತೀ ಋತುವಿನಲ್ಲೂ ಇದೇ ಕರೆ 
ಮತ್ತು ನಿರಾಕರಣೆ..
ರೌದ್ರ ಅಲೆಗಳ ಆರ್ಭಟ 
ಅದೇನು ಲಾವಣ್ಯದ ಮೋಡಿ;
ಆದ್ರತೆ, ಕರುಣಾಪೂರಿತ ಆಹ್ವಾನ

ಕಣಕಣದಲೂ ಸೇರಿ ಹೋಗಲಿರುವ 

ಆತ್ಮ ದೇಹದ ಮಿಲನ ಕರೆ
ನೋವು ಕಹಿ 

ಎಲ್ಲವೂ ಮರೆಸುವ ಅಪ್ಪುಗೆಯ ಕೊಡುಗೆ..
ಹೇಗೆ ನಿರಾಕರಿಸಲಿ.. 
ಕಾದಿದ್ದೇ ಈ ದಿನಕಾಗಿ.. ಈ ಆಹ್ವಾನಕ್ಕಾಗಿ..
ಹೊಸ್ತಿಲ ದಾಟಲೆತ್ನಿಸಿದಳ ಕಾಲಿಗೆ 
ಚಿಗುರೆಲೆಯ ಬೆರಳುಗಳ ಅಪ್ಪುಗೆ..

ಕಳಚಲಾಗಲಿಲ್ಲ..
ಇಲ್ಲೂ ಸೋಲು..
ಎಲ್ಲೆಡೆಯೂ ಸೋಲು..
ವಾತ್ಸಲ್ಯದ ಬಂಧವಿದು!

Friday, June 21, 2013

ಆಡ್ವಾಣಿ, ಮೋದಿ ಎಂಬ ಒಂದೇ ಮರದ ರೆಂಬೆಗಳು
ಏಜಾಜ್ ಆಶ್ರಫ್

ಸೌಜನ್ಯ : ವಿಜಯ ಕರ್ನಾಟಕ


ಕೋಮುವಾದಿ ಎಂದು ಅಡ್ವಾಣಿಯನ್ನು ಜರೆದಿದ್ದ ಯಾದವ್, ನಿತೀಶ್‌ ಮತ್ತೆ ಅವರನ್ನೇ ಬಯಸುತ್ತಿರುವುದು ಅಚ್ಚರಿಯಲ್ಲವೇ?

ನರೇಂದ್ರ ಮೋದಿ ಅವರ ವಿರುದ್ಧ ಸವಾಲೆಸೆಯುವ ಮೂಲಕ ಎಲ್.ಕೆ. ಆಡ್ವಾಣಿಯವರು ಎತ್ತಿರುವ ಭಾವೋದ್ರಿಕ್ತ ಚರ್ಚೆಯಲ್ಲಿ ಮೂರು ಪ್ರಮುಖ ಅಂಶಗಳಿವೆ. ಜೆಡಿ(ಯು) ಮತ್ತು ಬಿಜೆಪಿ ನಡುವಣ ವಿಭಜನೆಯಿಂದ ಈ ಪ್ರಶ್ನೆಗಳು ಈಗ ಇನ್ನಷ್ಟು ತೀಕ್ಷವಾಗಿವೆ. ಒಂದು, ಅದು ಸಮಾಜಕ್ಕಿರುವ ಹಿಂದುತ್ವದ ಸ್ವೀಕಾರಾರ್ಹ ಮಿತಿಯನ್ನು ಒರೆಗೆ ಹಚ್ಚುವ ಸಂಘ ಪರಿವಾರದ ಸಾಮರ್ಥ್ಯದ ಪರೀಕ್ಷೆ. ಎರಡು, ರಾಷ್ಟ್ರೀಯ ಪಾತ್ರ ವಹಿಸಲು ಬಯಸುವ ಹಿಂದುತ್ವ ನಾಯಕರಿಗೆ ತಮ್ಮನ್ನು ತಾವು ಪುನಾ ರೂಪಿಸಿಕೊಳ್ಳಲು ಸಾರ್ವಕಾಲಿಕ ಒತ್ತಡ ಹೇರುತ್ತದೆ. ಮೂರು, ಸೆಕ್ಯುಲರ್‌ವಾದಿಗಳ ಸೀಮಿತ ಕಲ್ಪನೆಗಳು ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಎದುರಿಸುವಲ್ಲಿ ಅವರ ಆತ್ಮವಿಶ್ವಾಸದ ಕೊರತೆಯನ್ನು ಎತ್ತಿ ತೋರಿಸುತ್ತದೆ.


ಮೋದಿಗೆ ಬಿಜೆಪಿಯ ಚುನಾವಣಾ ಪ್ರಚಾರದ ಸಾರಥ್ಯ ವಹಿಸಲಿದ್ದ ಗೋವಾ ಅಧಿವೇಶನದಿಂದ ಆಡ್ವಾಣಿ ದೂರವುಳಿದಾಗಲೇ ಸೆಕ್ಯುಲರ್ ಪಾಳಯದಲ್ಲಿ ಹಿಗ್ಗು ಕಾಣಿಸಿತು. ಆಡ್ವಾಣಿ ತಮ್ಮ ಸಂಘಟನಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ ಈ ಹಿಗ್ಗು ತಡೆಯಿಲ್ಲದ ಉತ್ಸಾಹವಾಗಿ ಮಾರ್ಪಟ್ಟಿತು. ಅವರು ಮೂಡಿಸಿದ ಆಶಾ ಕಿರಣ, ತಮ್ಮ ನಿರ್ಧಾರದಿಂದ ಹಿಂದೆ ಸರಿದ ಕೂಡಲೇ ಚದುರಿತು. ಮೋದಿಯರಿಗೆ ಹೋಲಿಸಿದರೆ ಆಡ್ವಾಣಿ, ಮೃದು ಹಿಂದುತ್ವ ಪ್ರತಿಪಾದಿಸುತ್ತಿದ್ದಾರೆ ಮತ್ತು ಸಹಮತದ ರಾಜ ಕಾರ ಣಕ್ಕೆ ಬದ್ಧರಾಗಿರುತ್ತಾರೆಂದು ನಂಬಲು ಕಲ್ಪನಾಶಕ್ತಿ ಹಾಗೂ ವಿಸ್ಮೃತಿಗಳು ಬೇಕಾಗುತ್ತವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, 'ಮೋದಿಗಿಂತ ಆಡ್ವಾಣಿಯೇ ಆಗ ಬಹುದು' ಎಂಬ ನಿಲುವನ್ನು ಸಮರ್ಥಿಸಿಕೊಂಡ ಬಳಿಕ ಈ ಇಬ್ಬರು ನಾಯಕರ ನಡುವಣ ನಾಜೂಕಾದ ವಿಭಜನೆ ಇನ್ನಷ್ಟು ವಿಸ್ತರಿಸಿದೆ.


ಕಳೆದ 2 ದಶಕಗಳ ವಿಪ್ಲವಕಾರಿ ರಾಜಕೀಯದ ಬೇರೆ ಬೇರೆ ಸಂದರ್ಭಗಳಲ್ಲಿ ಆಡ್ವಾಣಿ ಮತ್ತು ಮೋದಿ ಇಬ್ಬರೂ ಹಿಂದುತ್ವದ ನಿಷ್ಕಾರುಣ್ಯ ಮುಖವನ್ನು ಪ್ರದರ್ಶಿಸಿದ್ದಾರೆ. 1990ರಲ್ಲಿ ಆಡ್ವಾಣಿ ಅವರು ಸೋಮ ನಾಥದಿಂದ ಅಯೋಧ್ಯೆಗೆ ನಡೆಸಿದ ರಥಯಾತ್ರೆ ದೇಶ ವ್ಯಾಪಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿತು. ಜತೆಗೆ ದೇಶ ವಿಭಜನೆ ಕಾಲದಲ್ಲಾದಷ್ಟೇ ಆಳದ ಬಿರುಕನ್ನು ಭಾರತ ದಲ್ಲಿ ಉಂಟುಮಾಡಿತು. ಇದನ್ನ್ನೆಲ್ಲ ನಾವೀಗ ಮರೆತಿದ್ದೇವೆ.

ಸಂಧಾನದ ಎಲ್ಲ ಪ್ರಯತ್ನಗಳನ್ನೂ ಆಡ್ವಾಣಿ ಹಾಳುಗೆಡವಿದರು ಮತ್ತು ಬಿಹಾರದಲ್ಲಿ ಅವರನ್ನು ಬಂಧಿಸಿದಾಗ ದಿಲ್ಲಿಯಲ್ಲಿವಿ.ಪಿ. ಸಿಂಗ್ ಸರಕಾರ ಬಿದ್ದುಹೋಯಿತು. ಆಗ ಸಿಂಗ್ ಅವರ ಅನು ಯಾ ಯಿ ಯಾಗಿದ್ದ ಶರದ್ ಯಾದವ್ ಈಗ ಜೆಡಿ(ಯು) ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಒಬಿಸಿ ಮೀಸಲಾತಿ ಯನ್ನು ಜಾರಿಗೊಳಿಸುವ ನಿರ್ಧಾರದಿಂದ ಅವರು ಸಿಂಗ್‌ಗೆ ದಾಸ ರಾಗಿದ್ದರು. ಆಡ್ವಾಣಿ ರಾಜಕೀಯವನ್ನು ಒಬಿಸಿ ವಿರೋಧಿ ಮತ್ತು ಕೋಮುವಾದಿಯೆಂದು ಜರೆದಿದ್ದರು. ಆದರೆ ಈಗ ಇದೇ ಯಾದವ್ ಮತ್ತು ನಿತೀಶ್, ಮೋದಿಗೆದುರಾಗಿ ಆಡ್ವಾಣಿಯನ್ನು ಬಯಸುತ್ತಿರುವುದು ಅಚ್ಚರಿಯಲ್ಲವೇ? ಇಬ್ಬರು ಬಿಜೆಪಿ ನಾಯ ಕ ರ ಲ್ಲಿರುವ ಸೈದ್ಧಾಂತಿಕ ಭೇದ ಕೇವಲ ತೋರಿಕೆಯದ್ದಲ್ಲವೇ? ಆಡ್ವಾಣಿ ಮತ್ತು ಮೋದಿ ಇಬ್ಬರೂ ಒಂದೇ ಸೈದ್ಧಾಂತಿಕ ಚಿಲು ಮೆ ನೀರನ್ನು ಕುಡಿದವರಲ್ಲವೇ? ಹಾಗಿದ್ದರೂ ಹಿಂದುತ್ವದ ಪ್ರತಿ ಪಾದನೆ ಯಲ್ಲಿ ಇಬ್ಬರಲ್ಲೂ ಭಿನ್ನಮತವಿರುವುದು ಸ್ಪಷ್ಟ. ತಮ್ಮ ಹೊಸ ಇಮೇಜು ಸೃಷ್ಟಿಸಿಕೊಳ್ಳುವಲ್ಲಿ ಇಬ್ಬರ ಯಶಸ್ಸೂ ಬಹಳ ಭಿನ್ನ. ಭಾರತ ಎಷ್ಟು ವೈವಿಧ್ಯಮಯವೋ ಅಷ್ಟೇ ವೈವಿಧ್ಯ ವಾದ ಸಮಾಜದಿಂದ ಹಿಂದುತ್ವದ ರಾಜಕೀಯ ಕೂಡ ಆಂತರಿಕ ಮಿತಿ ಗಳಿಗೆ ಒಳಪಟ್ಟಿದೆ. ಅದು ಧಾರ್ಮಿಕ ಅಲ್ಪಸಂಖ್ಯಾ ತರನ್ನು- ನಿರ್ದಿಷ್ಟವಾಗಿ ಮುಸ್ಲಿಮರನ್ನು- ಹಾಗೂ ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ದೂರಮಾಡುತ್ತದೆ. ಬಿಜೆಪಿಯು ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸುತ್ತಿರುವುದರ ಹೊರತಾ ಗಿಯೂ, ಮೇಲ್ಜಾತಿ ಗಳು ಮತ್ತು ನಗರದ ಮಧ್ಯಮ ವರ್ಗ ದವರನ್ನು ಪ್ರತಿ ನಿಧಿ ಸುತ್ತಿದೆ ಎಂಬ ಕಲ್ಪನೆ ಇದೆ. ಆದರೆ ಈ ಎರಡು ವರ್ಗಗಳು ತಾವಾ ಗಿಯೇ ಪಕ್ಷಕ್ಕೆ ಬಹುಮತ ತಂದು ಕೊಡ ಲಾ ರ ವು. ಹಾಗಾಗಿ ಬಿಜೆಪಿಯ ಪ್ರತಿ ರಾಷ್ಟ್ರೀಯ ನಾಯಕನೂ ಸರ್ವರಿಗೂ ಮೆಚ್ಚುಗೆ ಯಾಗುವ ವ್ಯಕ್ತಿತ್ವ ಬೆಳೆಸಿಕೊಳ್ಳುವ ಅನಿವಾರ್ಯತೆಗೆ ಸಿಲುಕುವು ದರಲ್ಲಿ ಅಚ್ಚರಿಯಿಲ್ಲ. ಹೀಗೆ, ಆಡ್ವಾಣಿಯ ರೂಪ ಪರಿವರ್ತನೆ ಯು ಅವರ 'ಜಿನ್ನಾ ಕ್ಷಣ'ದೊಂದಿಗೆ ಪ್ರಕಟವಾಯಿತು. 2005 ರಲ್ಲಿ ಪಾಕಿಸ್ತಾನ ಭೇಟಿ ವೇಳೆ ಅವರು ಜಿನ್ನಾರನ್ನು ಒಬ್ಬ ಶ್ರೇಷ್ಠ ವ್ಯಕ್ತಿ ಯೆಂದು ಹೊಗಳಿದ್ದರು. 6 ವರ್ಷಗಳ ಎನ್‌ಡಿಎ ಆಡಳಿತದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾಗಿದ್ದಾಗ ಆಡ್ವಾಣಿ ಎಂದೂ ಹಿಂದುತ್ವದ ಬಗ್ಗೆ ಮಾತನಾಡದೆ, ಜಾತ್ಯತೀತವಾದದ ಜತೆಗೆ ಬಲವಂತದ ಸಂಸಾರ ನಡೆಸಿದ್ದರು. ಅನಾ ರೋಗ್ಯ ದಿಂದ ಬಳಲು ತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಇನ್ನೆಂದೂ ಸಕ್ರಿಯ ರಾಜಕಾರಣಕ್ಕೆ ಮರಳದ ಹಿನ್ನೆಲೆಯಲ್ಲಿ ಅವರ ಉದಾರವಾದಿ ಇಮೇಜನ್ನು ಆಡ್ವಾಣಿ ಆವಾಹಿಸಿಕೊಳ್ಳು ತ್ತಿದ್ದಾರೆ. ಆಡ್ವಾಣಿಯವರ ಈ ವ್ಯಕ್ತಿತ್ವವು ಎನ್‌ಡಿಎಯನ್ನು ಒಗ್ಗ ಟ್ಟಾ ಗಿ ರಿಸಲು ಮತ್ತು 2009ರ ಚುನಾವಣೆಯನ್ನು ಎದುರಿಸಲು ಅತಿ ಅಗತ್ಯವಾಗಿತ್ತು. (ಜಿನ್ನಾರಂತೆಯೇ ಆಡ್ವಾಣಿ ಅವರೂ ಖಾಸಗಿ ಜೀವನದಲ್ಲಿ ಧರ್ಮವನ್ನು ನಂಬುವು ದಿಲ್ಲ. ಆದರೆ ಸಾರ್ವಜ ನಿಕವಾಗಿ ನಂಬುವಂತೆ ತೋರ್ಪಡಿಸಿಕೊಳ್ಳುತ್ತಾರೆ.)

ವಿರೋಧಾಭಾಸವೆಂದರೆ, ಮೋದಿ ಅವರು ತುಲನಾತ್ಮಕವಾಗಿ 2002ರ ಗುಜರಾತ್ ಗಲಭೆ ಬಳಿಕ ಪ್ರವರ್ಧಮಾನಕ್ಕೆ ಬಂದರು. ಅವರು ತಮ್ಮ ಕೋಮುವಾದಿ ಕೊಂಕು ಮಾತುಗಳಿಂದ ಮತದಾ ರನ್ನು ಧ್ರುವೀಕರಣಗೊಳಿಸಿದವರು. ಮುಷರ‌್ರಫ್, ಭಯೋ ತ್ಪಾದನೆ ಮತ್ತು ಮುಸ್ಲಿಮರ ವಿರುದ್ಧ ಒಂದೇ ಉಸಿರಿನಲ್ಲಿ ಆಗಾಗ್ಗೆ ಮಾತನಾಡುವವರು. ಆಡ್ವಾಣಿಯವರು ಪ್ರಜ್ಞಾ ಪೂರ್ವಕವಾಗಿ ಹಿಂದುತ್ವದ ಮಾತುಗಾರಿಕೆಯನ್ನು ಕಡಿಮೆ ಮಾಡಿ, ತಾವು ಬಿಟ್ಟುಕೊಟ್ಟ ಹಿಂದುತ್ವದ ಅಧ್ವರ್ಯುವಿನ ಸ್ಥಾನ ತುಂಬಲು 2002ರ ಬಳಿಕ ಮೋದಿಗೆ ಅವಕಾಶ ಮಾಡಿಕೊಟ್ಟರು. ಜಿನ್ನಾ ಪ್ರಕರಣದಿಂದ ಆಡ್ವಾಣಿ ವಿವಾದಕ್ಕೆ ಸಿಕ್ಕಿದರು. ಜತೆಗೆ 2009ರ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆಯಿಂದ ಪಕ್ಷಕ್ಕೆ ಒಬ್ಬ ಹೊಸ ನಾಯಕನ ಅಗತ್ಯ ಉಂಟಾಯಿತು. ಸಂಘದ ಕಾರ್ಯಕರ್ತರ ನಡುವೆ ತಮಗಿ ರುವ ಬೆಂಬಲದಿಂದ ಮೋದಿ, ಬಿಜೆಪಿಯ ಹೊರಗೂ ತಮ್ಮ ಛಾಪು ವಿಸ್ತರಿಸಲು 'ಮಿಸ್ಟರ್ ಡೆವಲಪ್‌ಮೆಂಟ್' (ಅಭಿವೃದ್ಧಿಯ ಸೋಗು) ಎನಿಸಿಕೊಂಡರು.

ಬಿಜೆಪಿಯ ಡಿಎನ್‌ಎಯಲ್ಲೇ ಮರು ಆವಿಷ್ಕಾರದ ಅಗತ್ಯವಿದೆ. ತಮ್ಮ ಉದಾರವಾದಿ ನಿಲುವುಗಳಿಂದಲೇ ಕೆಲವು ಬಾರಿ ಬಿಜೆಪಿಗಿತಲೂ ಎತ್ತರವಾಗಿ ಬೆಳೆದ ವಾಜಪೇಯಿ ಅವರನ್ನೇ ಗಮನಿಸಿ. 1970 ಮತ್ತು 1980ರ ದಶಕಗಳಲ್ಲಿ ವಾಜಪೇಯಿ ಕೂಡ ಇತರ ಎಲ್ಲಾ ಹಿಂದು ತ್ವ ವಾದಿ ನಾಯಕರಂತೆಯೇ ಇದ್ದರು. ವಾಜಪೇಯಿ ಅವರ 13 ದಿನಗಳ ಸರಕಾರದ ವಿಶ್ವಾಸಮತ ಯಾಚನೆಯ ಚರ್ಚೆಯ ವೇಳೆ, ಸಿಪಿಐ ನಾಯಕ ಇಂದ್ರಜಿತ್ ಗುಪ್ತಾ ಅವರು 1983ರ ಅಸ್ಸಾಂ ಚುನಾವಣೆ ವೇಳೆ ವಾಜಪೇಯಿ ಮಾಡಿದ ಭಾಷಣವೊಂದನ್ನು ಉಲ್ಲೇಖಿಸಿದ್ದರು. ವಾಜಪೇಯಿ ಏನು ಹೇಳಿದ್ದರು ಗೊತ್ತೇ?, ''ವಿದೇಶೀಯರು ಸಲೀಸಾಗಿ ಇಲ್ಲಿಗೆ ಬರುತ್ತಿದ್ದಾರೆ. ಸರಕಾರ ಏನೂ ಮಾಡುತ್ತಿಲ್ಲ. ಒಂದು ವೇಳೆ ಪಂಜಾಬ್‌ಗೆ ವಿದೇಶೀಯರು ಈ ರೀತಿ ಲಗ್ಗೆಯಿಡುತ್ತಿದ್ದರೆ ಅಲ್ಲಿನ ಜನರೇ ಅವರನ್ನು ಕತ್ತರಿಸಿ ಎಸೆಯುತ್ತಿದ್ದರು.''

ವಾಜಪೇಯಿ ಮತ್ತು ಮೋದಿ ತಮ್ಮ ಇಮೇಜ್ ಬದಲಾಯಿಸಿಕೊಂಡು ಜನತೆ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು; ಆದರೆ ಆಡ್ವಾಣಿ ಏಕೆ ಯಶಸ್ವಿಯಾಗಲಿಲ್ಲ? ಮೊದ ಲ ನೆ ಯ ದಾಗಿ, ಆಡ್ವಾಣಿ ಅವರು ಸಂಘಕ್ಕೆ ಕಡುವೈರಿಯಾಗಿರುವ ಒಬ್ಬ ಪಾಕಿ ಸ್ತಾನಿ ನಾಯಕನನ್ನು ಹೊಗಳಿ ತಮ್ಮ ಪರಿವರ್ತ ನೆಯನ್ನು ಹೊರಗೆಡಹಿದರು. ಅವರಿಗಿದ್ದ ಸಂಘದ ಬೆಂಬಲವನ್ನು ಮುಟ್ಟು ಗೋಲು ಹಾಕಿಕೊಳ್ಳಲಾಯಿತು. ರಾಜಕೀಯದಲ್ಲಿ ಆಂತರಿಕ ಬೆಂಬಲ ದುರ್ಬಲವಾದರೆ ಗೆಲ್ಲುವುದು ಕನಸಿನ ಮಾತು. ಎರಡನೆಯದಾಗಿ, ನರೇಗಾದಂತಹ ಯೋಜನೆಗಳ ಮೂಲಕ ಕಾಂಗ್ರೆಸ್ ಬಿಜೆಪಿಯ ಮೇಲೆ ಸವಾರಿ ಮಾಡಿತು. 2009ರ ಚುನಾವಣೆಯಲ್ಲಿ ಅದು ಪ್ರತಿಬಿಂಬಿತವಾಯಿತು. ಇದರ ಜತೆಗೆ ವಾಜಪೇಯಿ ಅವರ ಉದಾರವಾದಿ ವ್ಯಕ್ತಿತ್ವವು ಸ್ವೀಕೃತವಾಗಲು ದುರ್ಬಲ ಕಾಂಗ್ರೆಸ್ ಕಾರಣವಾಯಿತು. ಹಾಗೆಯೇ ಎಡಪಕ್ಷಗಳ ಬೆಂಬಲಿತ ಮೈತ್ರಿಕೂಟವೂ ಕೇಂದ್ರದಲ್ಲಿ ಸ್ಥಿರತೆ ಒದಗಿಸುವಲ್ಲಿ ವಿಫಲವಾಯಿತು. ಕಾಂಗ್ರೆಸ್ ವಿರೋಧಿ ಮೈತ್ರಿಕೂಟವನ್ನು ಒಟ್ಟಾಗಿ ಹಿಡಿದಿಡುವ ಒಬ್ಬ ಸಮರ್ಥ ನಾಯಕನ ಅವಶ್ಯಕತೆಯೂ ಇತ್ತು. ಮೋದಿ ಮುಂಚೂಣಿಗೆ ಬರಲು ಕಾರಣವಾದ ಈಗಿನ ಸನ್ನಿವೇಶವೂ ಹೆಚ್ಚೂಕಡಿಮೆ ಅದೇ ರೀತಿಯಿದೆ. ನಿರ್ಣಯವಿಲ್ಲದ ಆಡಳಿತ ಹಾಗೂ ಹಗರಣಗಳಿಂದಾಗಿ ಯುಪಿಎ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಮತದಾರರ ಒಂದು ವರ್ಗದಲ್ಲಿ ಮೋದಿಯ ಅಭಿವೃದ್ಧಿ ಮಂತ್ರ ಜನಪ್ರಿಯತೆ ಪಡೆದು, ಅವರ ಭೂತಕಾಲವನ್ನು ಮರೆಯುವಂತೆ ಮಾಡಿದೆ.

ಇವೆಲ್ಲವೂ ಆಡ್ವಾಣಿಯವರ ಪುನರಾಗಮನವನ್ನು ತಳ್ಳಿಹಾಕುವುದಿಲ್ಲ. 2014ರ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ 200 ಸ್ಥಾನಗಳ ಸಮೀಪ ತಲುಪಿದರೆ ಆಡ್ವಾಣಿಗೆ ಅವಕಾಶ ಕಡಿಮೆ ಎಂಬುದರಲ್ಲಿ ಸಂದೇಹವೇ ಇಲ್ಲ. ಹಾಗಿದ್ದರೂ, ಬಿಜೆಪಿ ಈ ಸಂಖ್ಯೆ ತಲುಪಲು ವಿಫಲವಾದರೆ ಉದಾರವಾದಿ ಅಥವಾ ನ್ಯಾಯಸಮ್ಮತ ಆಡ್ವಾಣಿಗೆ ಮೈತ್ರಿಕೂಟವನ್ನು ಮುನ್ನಡೆಸುವ ಹೊಣೆ ಹೊರಿಸಬಹುದು. ಮೋದಿ(ತೀವ್ರವಾದಿ) ಮತ್ತು ಆಡ್ವಾಣಿ (ಸೌಮ್ಯವಾದಿ) ನಡುವಣ ಇಂತಹ ದ್ವಿಭಾಜಕ ವರ್ಗೀ ಕರ ಣ ದಿಂದ ಸೆಕ್ಯುಲರ್ ಬಳಗ ಕೂಡ ಅವರ ಭೂತಕಾಲವನ್ನು ಪ್ರಶ್ನಿಸುವುದಿಲ್ಲ. ಇದು ಮೋದಿತ್ವದಿಂದ ಅವರಿಗೆ ರಕ್ಷಣೆ ನೀಡಬಲ್ಲದು.

ವಾಜಪೇಯಿ-ಆಡ್ವಾಣಿ-ಮೋದಿ-ಹೀಗೆ ಬಲವಾದ ಪರಿವರ್ತನೆಯ ಮೂಲಕ ಹಿಂದುತ್ವವನ್ನು ಸಮಾಜ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಸಂಘ ಪರಿವಾರ ಸಾಕಷ್ಟು ದೂರ ಕ್ರಮಿಸಿದೆ. ಅದರ ಯಶಸ್ಸು, ಸೆಕ್ಯುಲರ್ ಬಳಗವನ್ನು ಭಂಗಗೊಳಿಸಿರುವುದರಲ್ಲಷ್ಟೇ ಅಲ್ಲದೆ, ತನ್ನ ಆದರ್ಶ ಭಾರತದ ಕಲ್ಪನೆಯನ್ನೇ ಪ್ರಶ್ನಿಸುವ ಸೈದ್ಧಾಂತಿಕ ಸಮರಕ್ಕೆ ಪ್ರತ್ಯುತ್ತರ ನೀಡುವಲ್ಲಿನ ವೈಫಲ್ಯವನ್ನು ಮುಚ್ಚಿಹಾಕಿರುವುದರಲ್ಲೆ ಇದೆ.

ನೆನಪಿಗೆ ಸಿಗುವ ಸಂಭ್ರಮದ ಕ್ಷಣಗಳು
ನೆನಪಿಗೆ ಸಿಗುವ ಸಂಭ್ರಮದ ಕ್ಷಣಗಳು

 

ಶೂದ್ರ ಶ್ರೀನಿವಾಸ್

 

‘‘ನೀನಾರೋ,ನಿನ್ನ ಹೆಸರೇನೋ.. ವಾಲ್ಮಿಕಿಗೂ ಮೊದಲ
ಆದಿ ಕವಿ ನೀನು.
ಕತ್ತಲಿನ ಹಾಳೆಯಲಿ ದೀಪಾವಳಿಯ ಕೃತಿ ಬರೆದು
ಕರಗಿ ಹೋದವ ನೀನು.’’

‘ಆದಿ ಕವಿಗೆ’ ಕವನದಿಂದ. ಜಿ.ಎಸ್. ಶಿವರುದ್ರಪ್ಪ ನಾಲ್ಕೈದು ದಿನಗಳ ಹಿಂದೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರನ್ನು ನೋಡಲು ಹೋದೆ. ಈಗ ಅವರಿಗೆ 86 ವರ್ಷ. ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಆದರೆ ಅವರ ಜೀವನ ಪ್ರೇಮ ಕ್ಕಂತೂ ಕೊರತೆ ಇಲ್ಲ. ಅತ್ಯಂತ ಶಿಸ್ತುಬದ್ಧ ಬದುಕನ್ನು ನಡೆಸಿಕೊಂಡು ಬಂದವರು. ಎಲ್ಲವನ್ನು ಕಾಣಬೇಕು ಮತ್ತು ಅರಿಯಬೇಕು ಎಂಬ ತಹತಹ ನಿರಂತರವಾಗಿರುವಂತೆ ನೋಡಿಕೊಂಡ ವರು. ಆದ್ದರಿಂದಲೇ ಎಲ್ಲದಕ್ಕೂ ಸ್ಪಂದಿಸು ತ್ತಿದ್ದರು. ಈಗಲೂ ಅದಕ್ಕೆ ಯಾವುದೇ ರೀತಿಯ ಚ್ಯುತಿ ಬಂದಿಲ್ಲ. ಅವರ ಕೊಠಡಿಗೆ ಹೋದಾಗ ರಮಣ ಮಹರ್ಷಿ ಕುರಿತ ಕೃತಿಯನ್ನು ಓದುತ್ತಿದ್ದರು. ನನಗೆ ಆಶ್ಚರ್ಯವಾಯಿತು. ಕೈಗಳಲ್ಲಿ ಶಕ್ತಿ ಇಲ್ಲ. ಹೇಗೆ ತೂಕದ ಪುಸ್ತಕವನ್ನು ಹಿಡಿದು ಓದುತ್ತಾರೆ ಎಂದು. ಹೋದ ತಕ್ಷಣ ಕೈಹಿಡಿದು ಪಕ್ಕದಲ್ಲಿ ಕೂರಿಸಿಕೊಂಡರು. ಬಲಗಡೆಯ ಕಿವಿಗೆ ಕೇಳಿಸಿಕೊಳ್ಳುವ ಚೈತನ್ಯವಿದೆಯೆಂದು ಯಾವಾಗಲೂ ನನ್ನಂಥವರನ್ನು ಬಲಗಡೆಯೇ ಕೂರಿಸಿಕೊಳ್ಳುವರು. 
 

ಈಗಲೂ ಯಾರ್ಯಾರೋ ಬರುವರು.ಪುಸ್ತಕಗಳನ್ನು ತಂದುಕೊಡುವರು. ಅಭಿಪ್ರಾಯ ತಿಳಿಸಿ ಎಂದು ಹೇಳುತ್ತಲೇ ಗಟ್ಟಿದನಿಯಲ್ಲಿ ಪರಿಚಯ ಮಾಡಿಕೊಳ್ಳುವರು. ಬಹಳಷ್ಟು ಬಾರಿ ಇದನ್ನು ನೋಡಿ ಮಾನಸಿಕವಾಗಿ ಬೆಳೆದ ಮನುಷ್ಯನೊಬ್ಬನಿಗೆ ಎಷ್ಟೊಂದು ಸಹನೆ ಇರಬೇಕಾಗುತ್ತದೆ ಎಂದು ಅನ್ನಿಸಿದೆ.ಯಾಕೆಂದರೆ ಯಾವುದನ್ನು ಕಡ್ಡಿ ಮುರಿದಂತೆ ನೇರವಾಗಿ ಹೇಳಲಾಗುವುದಿಲ್ಲ.ಯಾವುಯಾವುದೋ ರೀತಿಯ ಸಂಬಂಧಗಳ ಮತ್ತು ಒಡನಾಟ ಇಂಥವೆಲ್ಲ ಎಷ್ಟೊಂದು ಸಂಕೀರ್ಣತೆಯಿಂದ ಕೂಡಿರುತ್ತವೆ. 

ಅದರಲ್ಲೂ ಎತ್ತರೆತ್ತರಕ್ಕೆ ಬೆಳೆದಂತೆಲ್ಲ. ‘ಸಂತ’ನ ಗುಣದಂತೆ ಕೇವಲ ನೋಟ ಮತ್ತು ಅರಿವು ಉಳಿದಿರುತ್ತದೆ. ಇದನ್ನು ಬಹಳಷ್ಟು ಹಿರಿಯರನ್ನು ಕಂಡಾಗಲೆಲ್ಲ ಯೋಚಿಸಲು ತೊಡಗಿರುವೆ. ಅದರಲ್ಲೂ ಸಾರ್ವಜನಿಕವಾಗಿ ಕ್ರಿಯಾಶೀಲವಾಗಿರುವ ವ್ಯಕ್ತಿಗಳಿಗಂತೂ ಈ ಸಮಸ್ಯೆ ತೀವ್ರ ಸ್ವರೂಪದ್ದಾಗಿರುತ್ತದೆ.ಜಿ.ಎಸ್. ಶಿವರುದ್ರಪ್ಪನವರು ಎಲ್ಲರಿಗೂ ಗೊತ್ತಿರುವ ಕವಿ ಮತ್ತು ಉತ್ತಮ ಭಾಷಣ ಕಾರರಾಗಿರುವುದರಿಂದ ಸಭೆ ಸಮಾರಂಭಗಳಿಗೆ ಕರೆದುಕೊಂಡು ಹೋಗಲು ದುಂಬಾಲು ಬಿದ್ದಿರುತ್ತಾರೆ. ಏಕಾಂತಕ್ಕೆ ಅವಕಾಶವನ್ನೇ ಕೊಡುವುದಿಲ್ಲ. 

ಒಮ್ಮೆ ಕೆಲವು ವರ್ಷಗಳ ಹಿಂದೆ ಜಿ.ಎಸ್.ಎಸ್. ಅವರು ಹೀಗೆ ಹೇಳಿದ್ದರು: ‘‘ರಾಜ್ಯೋತ್ಸವದ ಎರಡು ಮೂರು ತಿಂಗಳು ಗಾಬರಿ ಹುಟ್ಟಿಸುತ್ತದೆ. ಯಾರ್ಯಾರೋ ಬಂದು ಒಂದೇ ಸಮನೆ ಪೀಡಿಸುವರು. ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಅವರು ಕರೆಯುವುದರಲ್ಲಿ ವಿನಯ ಮತ್ತು ಪ್ರಾಮಾಣಿಕತೆ ಇರುತ್ತದೆ. ಆದರೆ ಕರೆದ ಕಡೆಗೆಲ್ಲ ಹೇಗೆ ಹೋಗುವುದು? ಎಂದು ವಿಷಾದದಿಂದ ಹೇಳಿದ್ದರು. ಈ ದೃಷ್ಟಿಯಿಂದ ಪ್ರತಿಬಾರಿ ಅವರನ್ನು ಭೇಟಿಯಾದಾಗಲೆಲ್ಲ ಒಂದು ರೀತಿಯ ಸಂಕೋಚ ನನ್ನನ್ನು ಬಾಧಿಸುತ್ತಲೇ ಇರುತ್ತದೆ.

ಆದರೆ ಅವರೊಡನೆ ಏನೇನೋ ಮಾತಾಡಿ ಎದ್ದೇಳುವಾಗ ಕೈ ಹಿಡಿದೇ ಇರುತ್ತಾರೆ. ಮೊನ್ನೆ ಭೇಟಿಯಾದಾಗ ‘‘ಹೇಗಿದ್ದೀರಿ ಸರ್?’’ ಎಂದು ನಗುತ್ತಲೇ ‘‘ನನ್ನ ಪ್ರಪಂಚ, ನನ್ನ ಬೆಂಗಳೂರು ಇಷ್ಟೇ’’ ಎಂದು ಕೊಠಡಿಯನ್ನು ತೋರಿಸಿದರು. ಸೀಮಿತ ದೃಷ್ಟಿಯಿಂದ ಆ ಕೊಠಡಿ ಅವರ ಪಾಲಿಗೆ ಒಂದು ಪುಟ್ಟ ಪ್ರಪಂಚವೂ ಹೌದು. ಆದರೆ ಆ ಕೊಠಡಿಯಲ್ಲಿ ಎಂತೆಂಥ ಲೇಖಕರ ಉದ್ಗ್ರಂಥಗಳಿವೆ. ಅದರಲ್ಲೇ, ಅದಕ್ಕಾಗಿ ಬದುಕಿ ವಿಶ್ವವನ್ನು ಕಾಣಲು ಪ್ರಯತ್ನಿಸಿದವರು ಜಿ.ಎಸ್.ಎಸ್. 

ಇದೆಲ್ಲದರ ನಡುವೆ ಸಂತೋಷದ ಸುದ್ದಿಯೆಂದರೆ: ಪುಸ್ತಕಗಳನ್ನು ಈಗಲೂ ಓದುವ ಅವರ ಅದಮ್ಯ ಉತ್ಸಾಹ ವನ್ನು ಕಂಡು ಪುಳಕಿತರಾಗಿದ್ದೇನೆ.ಆಗ ನನ್ನ ಪ್ರೀತಿಯ ಲೇಖಕ ಖುಷ್‌ವಂತ್‌ಸಿಂಗ್ ಪ್ರತಿಬಾರಿ ನೆನಪಿಗೆ ಬರುವರು. ಹಾಗೆಯೇ ಅವರ ಮಾತು: ‘ನನಗೆ ತೊಂಬತ್ನಾಲ್ಕು ವರ್ಷ. ಈಗಲೂ ಓದಲು ಮತ್ತು ಬರೆಯಲು ನನಗೆ ಚೈತನ್ಯ ಮತ್ತು ದೃಷ್ಟಿಯನ್ನು ಕೊಟ್ಟಿದೆ ಪ್ರಕೃತಿ. ಸಾವಿನ ಕೊನೆಯ ಕ್ಷಣದವರೆಗೂ ಅದಿದ್ದರೆ ಸಾಕು’ ಎಂಬುದು ಅಪ್ಯಾಯಮಾನವಾಗಿ ಕೇಳಿಸುತ್ತಿರುತ್ತದೆ. ಹಾಗೆ ನೋಡಿದರೆ ಜಿ.ಎಸ್.ಎಸ್.ಅವರು ‘ರಮಣ ಮಹರ್ಷಿ’ಯ ಕೃತಿಯನ್ನು ಓದಿ ಆಪ್ತವಾಗಿ ಮಾತಾಡಿದ್ದರು. ನಾನು ಆ ಪುಸ್ತಕದ ಬಿಡುಗಡೆಗೆ ಹೋಗಿದ್ದವನು. 

ಅನಂತಮೂರ್ತಿಯವರು ಬಿಡುಗಡೆ ಮಾಡಿ ‘ರಮಣ’ರ ಸಂತರ ದೊಡ್ಡ ಗುಣವನ್ನು ಕುರಿತು ಆಪ್ತವಾಗಿ ನುಡಿದು ಹೋಗಿದ್ದರು. ಆದರೆ ಲಕ್ಷ್ಮಿನಾರಾಯಣ ಭಟ್ಟರು ‘ರಮಣ’ನಿಗಿಂತ ತಮ್ಮನ್ನು ಕುರಿತೇ ಹೆಚ್ಚಾಗಿ ಮಾತಾಡಿದರು. ತಮ್ಮ ಮಾತನ್ನು ತಾವೇ ಆಸ್ವಾದಿಸುತ್ತಿದ್ದರು. ಕೃತಿಯ ಪ್ರಾರಂಭದ ಪುಟಗಳಲ್ಲಿ ಅದನ್ನೇ ಮಾಡಿದ್ದಾರೆ. ಇದನ್ನು ಜಿ.ಎಸ್.ಎಸ್. ಅವರಿಗೆ ಹೇಳಿದಾಗ; ಹೌದು ಎನ್ನುವಂತೆ ಹಸನ್ಮುಖಿಗಳಾಗಿದ್ದರು.

ಕಳೆದ ಒಂದು ವರ್ಷದಿಂದ ಪ್ರೊ.ಜಿ.ಎಸ್. ಶಿವರುದ್ರಪ್ಪ ಅವರನ್ನು ಕುರಿತು; ಅವರ ವ್ಯಕ್ತಿತ್ವ ಮತ್ತು ಮಾನಸಿಕ ಲವಲವಿಕೆಯನ್ನು ಚೌಕಟ್ಟಾಗಿಟ್ಟು ‘ಜಿ.ಎಸ್.ಎಸ್. ಅವರ ಮನಸ್ಸು’ ಎಂಬ ಶೀರ್ಷಿಕೆಯ ಕೆಳಗೆ ಒಂದು ಕೃತಿ ರಚಿಸುವ ಆಶಯವಿದೆ. ಈ ದೃಷ್ಟಿಯಿಂದ ಸುಮ್ಮನೆ ಭೇಟಿಯಾದಾಗಲೂ ನಲವತ್ತೆರಡು ವರ್ಷಗಳಿಂದ ಭೇಟಿಯಾದ ಸಂದರ್ಭದ ನೂರಾರು ನೆನಪುಗಳು ಗರಿಗೆದರಿ ನಿಲ್ಲುತ್ತವೆ. ಹೀಗೆ ಆದಾಗ ವಕ್ರವಕ್ರವಾಗಿ ಅಥವಾ ಯಾವು ಯಾವುದೋ ಆಕಾರದಲ್ಲಿ ಮನಸ್ಸಿನಲ್ಲಿ ಬರವಣಿಗೆ ರೂಪುಗೊಳ್ಳುತ್ತ ಹೋಗುತ್ತದೆ. 

ಇತ್ತೀಚೆಗೆ ಅವರನ್ನು ಭೇಟಿಯಾದಾಗ, ಅವರಿಂದ ಒಂದು ಸಹಿಯನ್ನು ಪಡೆಯಲು ಹೋಗಿದ್ದೆ. ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಒಂದು ಅಪೂರ್ವ ಗ್ರಂಥಾಲಯವಿದೆ. ಅದು ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯ. ವಾಸ್ತು ಶಿಲ್ಪದ ಚೌಕಟ್ಟಿ ನಲ್ಲಿ ಕಲಾತ್ಮಕತೆಯನ್ನು ಹೊಂದಿರುವಂಥ ಭವನ. ಕಳೆದ ವರ್ಷ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ರಾಜ್ಯದ ಎಲ್ಲಾ ಗ್ರಂಥಾಲಯಗಳು ಸಾಧ್ಯವಾದ ಮಟ್ಟಿಗೆ ಇದೇ ರೀತಿ ಇರಬೇಕೆಂದು ನಾನು ಮನವಿ ಮಾಡಿದಾಗ ಎಲ್ಲರೂ ಪ್ರೀತಿ ಯಿಂದ ಒಪ್ಪಿಕೊಂಡು ನಿರ್ಣಯ ಮಾಡಿದರು. 

ಕಳೆದ ನಾಲ್ಕೂವರೆ ದಶಕಗಳಿಂದ ಅದು ನನಗಂತೂ ಒಂದು ಸ್ಮರಣೀಯ ಸ್ಮಾರಕ ವಿದ್ದಂತೆ. ನನ್ನ ಬದುಕಿನ ನೂರಾರು ಗಂಟೆಗಳನ್ನು ಅಲ್ಲಿ ಕಳೆಯಲು ಸಾಧ್ಯ ವಾಗಿದೆ. ಅಲ್ಲಿ ಎಂತೆಂಥ ಮಹನೀಯರೋ ಬಂದು ಓದಿ.. ಜಗತ್ತಿನ ಉದ್ದಗಲಕ್ಕೂ ಹರಡಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿ ಮಹಾನ್ ವಿಜ್ಞಾನಿ ಸರ್.ಸಿ.ವಿ. ರಾಮನ್ ಅವರು ಆ ಗ್ರಂಥಾಲಯದಲ್ಲಿ ಸಾಕಷ್ಟು ಕಾಲ ವನ್ನು ಕಳೆದಿದ್ದಾರೆ. ಇಂಥ ಗ್ರಂಥಾ ಲಯಕ್ಕೆ ನೂರು ವರ್ಷ ತುಂಬುತ್ತಿದೆ. ಅದರ ಸವಿನೆನಪಿಗಾಗಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಗ್ರಂಥಾಲಯದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಅದರಂತೆ ಹಿಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಈಗ ಸರಕಾರ ಬದಲಾಗಿರುವುದರಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಸಮಿತಿಯ ಅಧ್ಯಕ್ಷರಾಗಿ ಮುಂದು ವರಿಯುವರು. ಆದ್ದರಿಂದ ಈ ಶತಮಾನದ ಸ್ಮರಣೆಗೆ; ಕರ್ನಾಟಕ ಕಂಡ ಅಪೂರ್ವ ರಾಜಕಾರಣಿ, ಹೋರಾಟಗಾರ ಮತ್ತು ಚಿಂತಕ ‘ಶಾಂತವೇರಿ ಗೋಪಾಲ ಗೌಡರ ಸ್ಮಾರಕ’ ಗ್ರಂಥಾಲಯವನ್ನು ನಿರ್ಮಿಸುವ ಆಶಯದಿಂದ ಒಂದು ಮನವಿಯನ್ನು ನಾವು ಗೆಳೆಯರು ಸಿದ್ಧಪಡಿಸಿದ್ದೆವು. 

ಅದಕ್ಕೆ ಸಹಿ ಪಡೆಯಲು ಮನವಿಯನ್ನು ಕೊಟ್ಟಾಗ; ಆ ಎರಡು ಪುಟಗಳ ಮನವಿಯನ್ನು ಗಂಭೀರವಾಗಿ ಓದಿದರು. ‘ಗೋಪಾಲಗೌಡರ ಸ್ಮರಣೆಗೆ ಇದು ಆಗಲೇಬೇಕು. ಆದರೆ ಇಲ್ಲಿ ಶೇಷಾದ್ರಿ ಅಯ್ಯರ್ ಅವರನ್ನು ಯಾಕೆ ತಂದಿರಿ?’ ಎಂದು ಕೇಳಿದರು. ಆಗ ಆ ಗ್ರಂಥಾಲಯದ ಹೆಚ್ಚುಗಾರಿಕೆಯನ್ನು ವಿವರಿಸಿದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ಕರುಣಾನಿಧಿಯವರು ಮುಖ್ಯಮಂತ್ರಿಗಳಾಗಿದ್ದಾಗ; ಮದ್ರಾಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ಪಕ್ಕದಲ್ಲಿ ಹನ್ನೊಂದು ಎಕರೆ ಪ್ರದೇಶದಲ್ಲಿ ತಮಿಳುನಾಡಿನ ಅದ್ಭುತನಾಯಕ ‘ಅಣ್ಣಾದೊರೈ’ ಅವರ ನೆನಪಿ ನಲ್ಲಿ ಅದ್ಭುತ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ಅದು ನೂರೈವತ್ತು ಕೋಟಿ ರೂ.ಗಳ ವೆಚ್ಚದಲ್ಲಿ.

ನಾವು ಒಂದಷ್ಟು ಮಂದಿ ಗ್ರಂಥಾಲಯ ಇಲಾಖೆಯಿಂದ ಹೋಗಿ ನೋಡಿ ಬಂದೆವು. ಅದಕ್ಕಿಂತ ಭಿನ್ನವಾದ ‘ಶಾಂತವೇರಿ ಗೋಪಾಲ ಗೌಡ’ ಸ್ಮಾರಕ ಗ್ರಂಥಾಲಯವನ್ನು ನಿರ್ಮಿಸುವ ಆಶಯ ನಮ್ಮದೆಲ್ಲ ಆಗಬೇಕು. ಇದನ್ನು ವಿವರಿಸಿದಾಗ; ನಗುತ್ತಲೇ ಸಹಿ ಹಾಕಿದರು. ಸಹಿ ಹಾಕುವಾಗ ಬಲಗೈ ಬೆರಳುಗಳಿಗೆ ಏನೇನು ಶಕ್ತಿ ಇಲ್ಲ ಎಂದು ಕಷ್ಟಪಟ್ಟು ನಾಲ್ಕೈದು ನಿಮಿಷ ತೆಗೆದುಕೊಂಡರು. ಈ ಎಂಬತ್ತಾರನೆಯ ವಯಸ್ಸಿನಲ್ಲಿ ಹಿಂದಿನ ಲವಲವಿಕೆ ಮನಸ್ಸಿನ ತುಂಬ ಆವರಿಸಿದೆ. ಅದಕ್ಕೆ ಕಿಂಚಿತ್ತು ಧಕ್ಕೆಯಾಗಿಲ್ಲ. ನೆನಪು ಸಾಕಷ್ಟು ಆರೋಗ್ಯಪೂರ್ಣವಾಗಿದೆ. ಆದರೆ ದೇಹ ಕೇಳುವುದಿಲ್ಲ ಎಂಬ ವಿಷಾದ. 

ಪ್ರೊ.ಜಿ.ಎಸ್. ಅವರು ಸಹಿ ಮಾಡುತ್ತಿದ್ದರೆ ನನಗೆ ಬೀದರ್ ಜಿಲ್ಲೆಯ ಭಾಲ್ಕಿ ಮಹಾಮಠದ ಸ್ವಾಮೀಜಿ ಶ್ರೀ ಚನ್ನಬಸವ ಪಟ್ಟದ ದೇವರು ನೆನಪಿಗೆ ಬಂದರು. ಅವರಿಗೆನೂರು ಆರು ವರ್ಷ ಆದಾಗ ಭೇಟಿಯಾಗಿದ್ದೆ. ಆಗ ಅವರು ನನ್ನ ಬಾಯಿತುಂಬ ಸಕ್ಕರೆ ಹಾಕಿ, ಶಾಲು ಸಮೇತ ರಾಯಚೂರಿನ ಪ್ರಸಿದ್ಧ ಕವಿ ಮತ್ತು ಲೇಖಕ ಶಾಂತರಸರ ಸಂಪಾದಕತ್ವದಲ್ಲಿ ಬಂದಿರುವ ಕೃತಿಯನ್ನು ಕೊಟ್ಟರು. ಆ ಕೃತಿಯ ಹೆಸರು: ‘ಕಾಯಕ ಪರಿಣಾಮಿ’ ಎಂದು. ಸ್ವಾಮೀಜಿಯವರ ಪಾದದ ಬಳಿ ಕೂತು ಅವರ ಸಹಿ ಪಡೆಯುವಾಗ ಸುಮಾರು ಹತ್ತು ನಿಮಿಷ ತೆಗೆದು ಕೊಂಡಿದ್ದರು. ‘ಕಾಯಕ ಪರಿಣಾಮಿ’ ಓದುತ್ತಿದ್ದರೆ; ಇತಿಹಾಸದಲ್ಲಿ ಎಂತೆಂಥದೋ ಘಟಿಸಿ ಹೋಗಿದೆ. 

ಅದರ ಹಿಂದಿರುವ ಮಹಾನ್‌ಶಕ್ತಿಗಳು ಆಪ್ತವಾಗುತ್ತಾರೆ. ಪ್ರೊ.ಜಿ.ಎಸ್.ಎಸ್. ಅವರೂ ಇದೇ ಇತಿಹಾಸಕ್ಕೆ ಸೇರಿದವರು. ತಮ್ಮ ದೀರ್ಘ ಬದುಕಿನಲ್ಲಿ ನಾನಾ ರೀತಿಯ ಸಂಸ್ಥೆಗಳಿಗೆ ಜೀವ ತುಂಬಿದ್ದಾರೆ. ಎಂತೆಂಥದೋ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅದು ಮತೀಯ ಸಾಮರಸ್ಯದ ಕಾರ್ಯಕ್ರಮ ವಿರಬಹುದು. ಜಾತಿ ವಿನಾಶದ ಕಾರ್ಯಕ್ರಮವಿರಬಹುದು ಅಥವಾ ತುರ್ತು ಪರಿಸ್ಥಿತಿ ವಿರೋಧಿ ಕಾರ್ಯ ಕ್ರಮವಿರಬಹುದು. ಎಲ್ಲದರಲ್ಲೂ ಯಾರು ಮಾಡು ತ್ತಿದ್ದಾರೆಂದು ತಿಳಿದು ಪ್ರೀತಿಯಿಂದ ಭಾಗಿಯಾಗುತ್ತಿದ್ದರು. 

ಹಾಗೆಯೇ ಒಂದೆರಡು ಬಾರಿ ಬಂಧನಕ್ಕೂ ಒಳಗಾಗಿದ್ದಾರೆ. ಇದನ್ನೆಲ್ಲ ಸಂಭ್ರಮದಿಂದಲೇ ಸ್ವೀಕರಿಸುತ್ತಿದ್ದರು. ಅವರಿಗೆ ಕಾವ್ಯ ಮತ್ತು ಸಾಹಿತ್ಯ ಎಷ್ಟು ಇಷ್ಟವೋ; ಅಷ್ಟೇ ಸಾಮಾಜಿಕ ಕಾರ್ಯಕ್ರಮಗಳೂ ಮುಖ್ಯ ಎಂದು ಪರಿಭಾವಿಸಿಕೊಂಡಿದ್ದರು.ಇಂಥ ಅಪೂರ್ವ ವ್ಯಕ್ತಿತ್ವವನ್ನು ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಇಲ್ಲಿ ಅವರ ಸಾಹಿತ್ಯ, ಸಾಂಸ್ಕೃತಿಕ ಸಾಧನೆ ಕುರಿತು ಆಪ್ತವಾಗಿ ಚರ್ಚೆ ಯಾಯಿತು. ಅವರನ್ನು ತುಂಬ ಹತ್ತಿರದಿಂದ ಬಲ್ಲವರಿಂದ ಕೆಲವು ನೆನಪುಗಳನ್ನು ದಾಖಲಿಸಿದರು.

ಆ ದಾಖಲೆಯ ಸಮಯದಲ್ಲಿ ನಾನು ಒಂದರ್ಧ ಗಂಟೆ ಸಮಯ ಮಾತಾಡಿದೆ. ಆಗ ಅವರ ಬದುಕಿನ ಅರ್ಧ ಭಾಗದಷ್ಟು ಕಾಲಘಟ್ಟದಲ್ಲಿ ಅವರೊಡನೆ ಓಡಾಡಿದ್ದೇನೆ ಎಂದು ನೆನಪು ಮಾಡಿಕೊಂಡೆ. ಆಪ್ತ ಅನ್ನಿಸಿತು. ಅವರು ಹಾಗೆಯೇ ಮನೆಯಲ್ಲಿ ಎಷ್ಟೋ ಸಮಯ ಕೈಹಿಡಿದೇ ಮಾತಾಡಿಸುವ ಸ್ಪರ್ಶಾನುಭವ ‘ಹಾಯ್’ಅನ್ನಿಸಿದೆ. ಈ ‘ಹಾಯ್’ ಅವರನ್ನು ಕುರಿತು ಮತ್ತಷ್ಟು ಯೋಚಿಸುವ ಒಳನೋಟಗಳನ್ನು ನೀಡಲಿ ಎಂಬುದು ನನ್ನ ಆಶಯವಾಗಿದೆ. ಯಾಕೆಂದರೆ ಪ್ರೊ.ಜಿ.ಎಸ್. ಶಿವರುದ್ರಪ್ಪನವರು ಒಂದು ಸಾರ್ಥಕ ಜೀವನ ಚರಿತ್ರೆಗೆ ಹೇಳಿ ಮಾಡಿಸಿದ ವ್ಯಕ್ತಿತ್ವವನ್ನು ಹೊಂದಿರುವಂಥವರು. ‘ಕತ್ತಲಿನ ಹಾಳೆಯಲಿ ದೀಪಾವಳಿಯ ಕೃತಿ ಬರೆದು’ಎಂಬ ಸಾಲು ಎಷ್ಟು ಮಾರ್ಮಿಕವಾಗಿದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...