Wednesday, July 31, 2013

ಹೂವಿನ ಹೃದಯ ಚೂರಾಗಿದೆ

 
                                                                                              ನೋಶಿ ಗಿಲಾನಿ
                                                          ಅನುವಾದ:ರಮೇಶ್ ಮೇಗರವಳ್ಳಿ    
 
ಹೂವಿನ ಹೃದಯ ಚೂರಾಗಿದೆ
ಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ.

ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು?                           
ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ಈ ಸ೦ಜೆಯನ್ನು!


ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲ
ಆದರೂ ನೀ ಇಚ್ಛಿಸಿದರೆ ಬರಬಲ್ಲೆ.
 
ಈ ನಗರದ ಎಲ್ಲ ಬೀದಿಗಳೂ ಮಲಗಿವೆ
ಎಚ್ಚರವಾಗಿರುವುದೀಗ ನನ್ನ ಪಾಳಿ.


ಈ ಸ೦ಜೆಯ ಅನಿಶ್ಚಿತತೆಯಲ್ಲಿ
ಎಲ್ಲವೂ ಕ೦ಪಿಸುತ್ತಿವೆ.
 
ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವು
ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ?


ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನೆದೆ
ಈ ಸಂಜೆಯನ್ನು ನಮ್ಮದಾಗಿಸಿಕೊಳ್ಳೋಣ!
***

 
ಪಾಕೀಸ್ತಾನದ ಪ್ರಸಿದ್ಧ ಉರ್ದು ಕವಿಗಳಲ್ಲಿ ಒಬ್ಬರಾದ ನೋಷಿ ಗಿಲ್ಲಾನಿ ಹುಟ್ಟಿದ್ದು ೧೯೬೪ ರಲ್ಲಿ ಪಾಕೀಸ್ತಾನದ ಬಹವಾಲ್ಪುರ್ ನಲ್ಲಿ. ಬಹವಾಲ್ಪುರ್ ವಿಶ್ವವಿದ್ಯಾನಿಲಯದಲ್ಲಿ ಓದಿದ ಗಿಲ್ಲಾನಿಯವರ ಕವನಗಳು ೨೦೦೮ರಲ್ಲಿ ಇ೦ಗ್ಲಿಷ್ ಭಾಷೆಗೆ ಅನುವಾದಗೊ೦ಡವು. ಭಾಷಾ೦ತರದಿ೦ದಾಗಿ ಗಿಲ್ಲಾನಿ ಅ೦ತರ್ರಾಷ್ಟ್ರೀಯ ಮನ್ನಣೆಯನ್ನು ಪಡೆದ ಪಾಕೀಸ್ತಾನದ ಕವಯತ್ರಿಯಾದರು.ಅವರ ಕವನಗಳಲ್ಲಿನ ನಿರ್ಭಿಡತೆ ಉರ್ದುಭಾಷೆಯಲ್ಲಿ ಬರೆಯುವ ಮಹಿಳಾ ಸಾಹಿತಿಗಳಿಗೆ ಅಸ್ವಾಭಾವಿಕವಾದುದು.

೧೯೯೫ ರಲ್ಲಿ ಅಮೆರಿಕದ ಸ್ಯಾನ್ಫ್ರಾನ್ಸಿಸ್ಸ್ಕೋದಲ್ಲಿ ನೆಲೆಸಿದ ಗಿಲ್ಲಾನಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಪ್ರಸಿದ್ಧ ಉರ್ದು ಕವಿ ಸಯೀದ್ ಖಾನ್ ಅವರನ್ನು ಮದುವೆಯಾದ ಮೇಲೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಅವರ ವಿದೇಶೀ ವಾಸ ಅವರ ಅನೇಕ ಕವನಗಳ ಮೇಲೆ ಸಾಕಷ್ಟು ಪರಿಣಾಮ ಬೀರಿರುವುದನ್ನು ಗುರುತಿಸ ಬಹುದು.
ಹಲವು ದೇಶಗಳಲ್ಲಿ ಚದುರಿ ಹೋದ ಅವರ ಬದುಕು ಅವರ ಕವಿತೆಗಳ ಸ೦ಕೀರ್ಣತೆಯನ್ನು ಹೆಚ್ಚಿಸಿದೆ ಮತ್ತು ಮಹಿಳಾ ಅಸ್ಮಿತೆಯ ಭಾವವನ್ನು ಅದರಲ್ಲಿ ತು೦ಬಿ ಪಾಕೀಸ್ತಾನದ ಸ೦ಪ್ರದಾಯ ಬದ್ಧ ಲೇಖಕರ ವಿರುದ್ಧ ಒ೦ದು ಹೊಸ ಕ್ರಾ೦ತಿಯನ್ನು ಹುಟ್ಟು ಹಾಕಿದೆ.
 
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು!

ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು
ನಿನ್ನೊಡನೆ ಸ್ನೇಹ ಕುದುರಿಸುವಷ್ಟೇ!

ಸ೦ಪೂರ್ಣ ಹೊಸ ಕಥೆಯೆ ಇರಬಹುದು
ದಯವಿಟ್ಟು ವಿಷಯಕ್ಕೆ ಬಾ.

ಈ ನೆರಳುಗಳಲ್ಲಿ ನಾ ಮುಳುಗಬಹುದು
ದಯವಿಟ್ಟು ಬೆಳಗು ಕಣ್ಣ ದೀವಿಗೆಯ!

ದುಃಖವನ್ನರಿಯದೇ ಇದ್ದರೂ
ನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ.

ಹೃದಯ ಹಿ೦ಡಿ ಕೊಡ ಬೇಕು ರಕ್ತ!
ನೋಡು, ಬರೆಯ ಬೇಡ ಪದ್ಯ!

ಈ ಎಲ್ಲ ಅರ್ಥಗಳನ್ನು ನಿರಾಕರಿಸುವುದು
ಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ!
 
***

ನಾಲ್ಕು ಕವಿತೆಗಳು
Hridaya Shiva


 ಹೃದಯಶಿವ
ಕವಿತೆಗಳ ಸಹವಾಸವೇ ಬೇಡವೆಂದು
ಕಥೆ ಕಟ್ಟುತ್ತಿದ್ದ ಕೋಮಲ ಕವಯಿತ್ರಿ ಕಡೆಗೆ
ಕಾದಂಬರಿಯೊಂದರ ಪಾತ್ರವಾದುದರ ಬಗ್ಗೆ
ಪ್ರಬಂಧ ಬರೆದು
ಡಾಕ್ಟರೇಟ್ ಗಿಟ್ಟಿಸಿಕೊಂಡಾತ ಮೂಲತಃ
ನಾಟಕಕಾರನಾಗಿದ್ದಹಾದಿ ಮಧ್ಯೆ ಆಕಸ್ಮಿಕವಾಗಿ ಸಿಕ್ಕಿ
ಅಚ್ಚರಿಯಾಗಿ ಸೆಳೆದು
ಅನಿರ್ವಾಚ್ಯ ಕಲಹವನ್ನುಳಿಸಿ
ಮರೀಚಿಕೆಯಂತೆ ಮಾಯವಾದವಳ
ವಿಳಾಸ,ಫೋನ್ ನಂಬರ್
ಪಡೆದುಕೊಳ್ಳದುಬ್ಬೆಗ ಉದ್ಭವಿಸಿದಾಗ
ಆತ ಮುಟ್ಟಿನೋಡಿಕೊಂಡದ್ದು
ತನ್ನ ಉಲ್ಲಸಿತ ಹೃದಯವನ್ನುಕಣ್ಣೆದುರು,ಅದೇ ವಿಶಾಲ ನೀಲಿಸಮುದ್ರ;
ಎದೆಯೊಳಗೆ ನೆನಪುಗಳ ಮೊರೆತ.
ಈ ಗೇಟ್ ವೇ ಆಫ್ ಇಂಡಿಯಾ ಬಳಿ ಕುಳಿತು
ಹಳೆಯ ಡೈರಿಗಳ ಪುಟ ತಿರುವುದರಲ್ಲಿ
ಒಂದು ಬಗೆಯ ಸುಖ.

ಮುಸ್ಸಂಜೆಗಳ ಚಿತ್ರ ಕಣ್ಣಲ್ಲಿ ಮೂಡುತ್ತದೆ.
ಕ್ಷಣಕ್ಷಣಕ್ಕೂ ಕನಸುಗಳನ್ನು ನೇಯ್ದು ಬಲೆಯಾಗಿಸಿ
ಕತ್ತಲಿಳಿವುದರೊಳಗೆ ಮಾಯವಾಗಿಬಿಡುತ್ತವೆ
ಸಿಕ್ಕಿ,ಸಾಯಿರೆಂದು ತಟಸ್ಥವಾಗಿ ತಮ್ಮ ಪಾಡಿಗೆ.

ದುಂಡು ಅಕ್ಷರಗಳ ಪ್ರೇಮಪತ್ರ ಕೊಟ್ಟು ಹೋದ
ಹಸಿರು ಘಾಗ್ರಾದ ಹುಡುಗಿ ಮತ್ತೆ ಬರಲಿಲ್ಲ.
ಕಾಯುತ್ತಿರುವೆನಿಲ್ಲಿ,ಬೋಳು ಮರದ ಮೇಲೆ ಬಿಕ್ಕುವ
ಒಂಟಿ ಹಕ್ಕಿಯಂತೆ.


೪  
 
ಈ ಕಿರಿದಾದ ಕೋಣೆ
ನಲ್ಮೆಯ ಕತ್ತಲ ಕೂಪ.
ಈ ನಾಲ್ಕು ಗೋಡೆಗಳ
ಚೌಕಟ್ಟಿನೊಳಗೆ
ಕನಸುಗಳ ಪಂಜು ದಿಗ್ಗನುರಿದು
ಮತ್ತೆ ಕರ್ರಗಾಗುತ್ತದೆ.

ಕಣ್ಣು ಮುಚ್ಚಿ ಹೃದಯ ತೆರೆದಾಗ
ಒಂದು ಚಿತ್ರಸಂತೆಯ ಸಂಭ್ರಮ
ಮೊಳಗುತ್ತದೆ ಒಳಗೆ.
ರೆಪ್ಪೆ ತೆರೆದರೆ,
ದಿನದಂಚಿನ ಅನಾಥ ಬಣ್ಣಗಳು
ಕತ್ತಲಲ್ಲಿ ತುಯ್ಯುವ ನನ್ನಾತ್ಮವನ್ನು
ಅಪ್ಪಿಕೊಳ್ಳುತ್ತವೆ ನಿಮಿಷಕಾಲ.


ಮರ್ಯಾದಸ್ಥರು ಮತ್ತು ಇತರ ಕತೆಗಳು
Basheer Bm Bm
ಬಿ . ಎಂ . ಬಶೀರ


 
ಮಸ್ತಕಾಭಿಷೇಕ
 
ಆಳೆತ್ತರದ ಬಾಹುಬಲಿಯ ವಿಗ್ರಹಕ್ಕೆ ತುಪ್ಪ, ಹಾಲು, ಜೇನನ್ನು ಅಭಿಷೇಕ ಮಾಡಲಾಯಿತು.
‘ಇದೇನು?’ ಎಂದು ಕೇಳಿದರೆ ‘ಧರ್ಮ’ ಎನ್ನಲಾಯಿತು.
ಆತನ ಪಾದತಲದಲ್ಲಿ ಪುಟಾಣಿ ಮಗುವೊಂದು ಹಾಲಿಲ್ಲದೆ ಹಸಿವಿನಿಂದ ಕಣ್ಣೀರಿನ ಅಭಿಷೇಕ ಮಾಡುತ್ತಿತ್ತು.
‘‘ಇದೇನು?’’ ಎಂದು ಕೇಳಿದರೆ ‘‘ಕರ್ಮ’’ ಎನ್ನಲಾಯಿತು.
ಮಸ್ತಕಾಭಿಷೇಕದ ಮರುದಿನ ಬಾಹುಬಲಿ ‘ಮೈಯೆಲ್ಲ ಉರಿ’ ಎಂದು ಕಣ್ಣೀರಿಡುತ್ತಿರುವುದನ್ನು ನಾನು ಕಂಡೆ.

ರೋಬೊಟ್

 
ಆತನೊಬ್ಬ ವಿಜ್ಞಾನಿ. ಒಂದು ರೋಬೊಟನ್ನು ಮಾಡಲು ಹೊರಟ. ಹೆಂಡತಿ ಮಕ್ಕಳನ್ನು ಮರೆತು, ಸುಮಾರು ಇಪ್ಪತ್ತು ವರ್ಷಗಳ ಕಾಲದ ಪರಿಶ್ರಮದ ಬಳಿಕ ಒಂದು ರೋಬೊಟನ್ನು ಮಾಡಿದ. ತನ್ನ ಹೆಂಡತಿಯಲ್ಲಿ ಕೂಗಿ ಹೇಳಿದದ ‘‘ನೋಡು, ನಾನೊಂದು ಅಪರೂಪದ ರೋಬೊಟನ್ನು ನಿರ್ಮಿಸಿದ್ದೇನೆ’’
ಅದಕ್ಕೆ ಹೆಂಡತಿ ನಿಟ್ಟುಸಿರಿಟ್ಟು ಉತ್ತರಿಸಿದಳು ‘‘ಅದರಲ್ಲೇನಿದೆ ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ನಾನು ಅಂತಹದೇ ರೋಬೊಟೊಂದನ್ನು ಮದುವೆಯಾಗಿದ್ದೇನೆ’’

ಹಾಲು ಮಾರುವವಳು

 
ಸಂತೆಯಲ್ಲಿ ಹಾಲು ಮಾರುವವಳು ಮತ್ತು ಮೊಸರು ಮಾರುವವಳು ಎದುರು ಬದುರಾದರು.
ಮೊಸರು ಮಾರುವವಳು ಕಾಲು ಕೆದರಿ ಜಗಳಿಕ್ಕಿಳಿದಳು. ಹಾಲು ಮಾರುವವಳನ್ನು ಯದ್ವಾತದ್ವಾ ನಿಂದಿಸ ತೊಡಗಿದಳು. ಆದರೆ ಹಾಲು ಮಾರುವವಳು ವೌನವಾಗಿದ್ದಳು.
ತುಸು ಹೊತ್ತಿನ ಬಳಿಕ ಯಾರೋ ಕೇಳಿದರು ‘‘ಅವಳು ಅಷ್ಟು ಬೈದರೂ ನೀನೇಕೆ ಸುಮ್ಮಗಿದ್ದೆ?’’
ಹಾಲು ಮಾರುವವಳು ಉತ್ತರಿಸಿದಳು ‘‘ಹಾಲು ಮೊಸರಿನ ಮೇಲೆ ಬಿದ್ದರೂ, ಮೊಸರು ಹಾಲಿನ ಮೇಲೆ ಬಿದ್ದರೂ ಪರಿಣಾಮ ಮೊಸರೇ ಆಗುವುದು...ಏನಾದರೂ ಅದರ ಲಾಭ ಅವಳಿಗೇ. ಅದಕ್ಕೆ ವೌನವಾಗಿದ್ದೆ’’

ಬೆಲೆ

 
ಒಂದು ಖಾಲಿ ಕಾಗದ ಮತ್ತು ಸಾವಿರ ರೂಪಾಯಿಯ ನೋಟು ಮುಖಾಮುಖಿಯಾಯಿತು.
‘‘ನನಗೆ ಸಮಾಜದಲ್ಲಿ ಬೆಲೆಯಿದೆ. ನೀನೋ ಖಾಲಿ ಕಾಗದ’’ ನೋಟು ಬಿಂಕದಿಂದ ಬೀಗಿತು.
‘‘ನಿನ್ನ ಬೆಲೆ ಸಾವಿರಕ್ಕಿಂತ ಹೆಚ್ಚು ಬಾಳದು. ಆದರೆ ನಾನು ಖಾಲಿಯಾಗಿದ್ದೇನೆ. ಕೆಲವೊಮ್ಮೆ ನನ್ನಲ್ಲಿ ಬರೆಯಲ್ಪಡುವುದಕ್ಕೆ ಬೆಲೆಯನ್ನು ಕಟ್ಟುದಕ್ಕೂ ಕಷ್ಟವಾಗಬಹುದು’’ ಖಾಲಿ ಕಾಗದ ವಿನಯದಿಂದ ಹೇಳಿತು.

ಖಡ್ಗ

 
ಒಬ್ಬ ಕಮ್ಮಾನರ ರಾಜನಿಗೆ ಒಂದು ಖಡ್ಗವನ್ನು ಮಾಡಿಕೊಟ್ಟ.
‘‘ಎಂಥವನ ತಲೆಯನ್ನೂ ಈ ಖಡ್ಗ ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕುತ್ತದೆ’’ ಕಮ್ಮಾರ ರಾಜನಲ್ಲಿ ನುಡಿದ.
‘‘ಹೌದೆ?’’ ರಾಜ ಖಡ್ಗವನ್ನು ಬೀಸಿದ.
ಕಮ್ಮಾರನ ತಲೆ ಕೆಳಗುರುಳಿತು.
‘‘ಹೌದು, ನಿಜಕ್ಕೂ ಅಪರೂಪದ ಖಡ್ಗ ಇದು’’ ರಾಜ ತೃಪ್ತಿಯಿಂದ ಖಡ್ಗವನ್ನು ಒರೆಗೆ ಹಾಕಿಕೊಂಡ.

ಪೆಟ್ಟಿಗೆ

 
‘‘ಅಲ್ಲೊಂದು ಪೆಟ್ಟಿಗೆ ಅನಾಥವಾಗಿ ಬಿದ್ದಿದೆ. ಅದರೊಳಗೆ ಏನೋ ಇದ್ದ ಹಾಗಿದೆ’’ ಒಬ್ಬ ಹೇಳಿದ.
‘‘ಅದು ನನ್ನದು ಕಣ್ರೀ...ತುಂಬಾ ದಿನದಿಂದ ಅದನ್ನು ಹುಡುಕುತ್ತಾ ಇದ್ದೆ’’ ಜಿಪುಣನೊಬ್ಬ ಕೂಗಿ ಅತ್ತ ಧಾವಿಸಿದ.
ನೋಡಿದರೆ ಅಲ್ಲೊಂದು ಶವಪೆಟ್ಟಿಗೆ ಅನಾಥವಾಗಿ ಬಿದ್ದಿತ್ತು.

ಮರ್ಯಾದಸ್ಥರು!


 
‘‘ಪ್ರಾಯ 35 ದಾಟಿರಬೇಕಲ್ಲ...ಬಹುಶಃ ನೀನು ಈ ವೃತ್ತಿಗೆ ಹೊಸಬಳು...ಅಲ್ಲವೆ’’ ವೃದ್ಧ ಗಡ್ಡ ನೀಯುತ್ತಾ ಕೇಳಿದ.
ಮಹಿಳೆ ಮುಚ್ಚಿದ ಬುರ್ಖಾದೊಳಗಿಂದಲೇ ಹೇಳಿದಳು
‘‘ಹೌದು. ಈ ಊರಿನ ದೊಡ್ಡ ಮರದ ಮಿಲ್ಲಿನ ಸಾಹುಕಾರರ ಮಗ ನನ್ನ ಮಗಳನ್ನು ಮದುವೆಯಾಗಲು ಒಪ್ಪಿದ್ದಾರೆ. 50 ಪವನ್ ಬಂಗಾರ ಹಾಕಬೇಕು. ಎಲ್ಲೂ ಹಣ ಹುಟ್ಟಲಿಲ್ಲ. ನಾವು ಬಡವರು. ಬೇರೆ ವಿಧಿಯಿಲ್ಲ...ಅದಕ್ಕಾಗಿ ಬಂದಿದ್ದೇನೆ....’’
ವೃದ್ಧ ಬೆವರಿ, ಧಿಗ್ಗನೆ ಎದ್ದು ನಿಂತ. ಬಳಿಕ ಅವಸರವಸರವಾಗಿ ಮೊಬೈಲ್ ತೆಗೆದು ಫೋನಲ್ಲಿ ಮಾತನಾಡತೊಡಗಿದ ‘‘ಮಗನೇ...ಆ ಸಂಬಂಧ ನಮಗೆ ಬೇಡ. ಅವರು ಮರ್ಯಾದಸ್ಥರಲ್ಲ...’’
ಮಿಲಿಟರೀಕರಣ ನಿಲ್ಲಿಸಿ-ಮಾತುಕತೆಗೆ ಮುಂದಾಗಿ ಶ್ರೀರಾಮ್
 ಪಿಡಿಎಫ್  ಬೆಂಗಳೂರು

ಸೌಜನ್ಯ : ವಾರ್ತಾಭಾರತಿ 


ಮೇ 25ರಂದು ಬಸ್ತಾರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ‘ಪರಿವರ್ತನ್ ಯಾತ್ರಾ’ದ ಮೇಲೆ ಮಾವೋ ಪಕ್ಷದ ಗೆರಿಲ್ಲಾಗಳು ದಾಳಿ ನಡೆಸಿದರು. ಈ ದಾಳಿಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಂದಕುಮಾರ್ ಪಟೇಲ್ ಮತ್ತು ಮಾಜಿ ಗೃಹಮಂತ್ರಿ ಹಾಗೂ ಸೆಲ್ವಜುಡಂನ ಸಂಸ್ಥಾಪಕ ಮಹೇಂದ್ರಕರ್ಮ ಹಾಗೂ 30 ಮಂದಿ ಅಮಾಯಕ ಕಾಂಗ್ರೆಸ್ ಕಾರ್ಯ ಕರ್ತರು ಕೊಲ್ಲಲ್ಪಟ್ಟರು. ಈ ದಾಳಿಯ ಹಿನ್ನೆಲೆಯನ್ನು ತಿಳಿದುಕೊಳ್ಳದ ವ್ಯಾಪಾರೀ ಪತ್ರಿಕೆಗಳು ‘‘ಎಡಪಂಥೀಯ ತೀವ್ರಗಾಮಿ’’ಗಳ ರಕ್ತಕ್ಕೆ ಅರಚಾಡಿದವು. ‘‘ಮಾವೊವಾದಿಗಳ ಮೇಲಿನ ಯುದ್ಧದಲ್ಲಿ ಸರಕಾರ ಯಾತಕ್ಕೆ ದಾರಿ ತಪ್ಪಿದೆ’’ ಎಂದು ಒಂದು ಚಾನೆಲ್ ಅರಚಿದರೆ, ಇನ್ನೊಂದು ಚಾನೆಲ್ "ಮಾನವ ಹಕ್ಕು ಕಾರ್ಯಕರ್ತರು ಮಾವೊವಾದಿಗಳ ಭಯೋತ್ಪಾದನೆಯನ್ನು ಯಾಕೆ ಖಂಡಿಸುತ್ತಿಲ್ಲ"ವೆಂದು ಗಂಟಲು ನೋಯಿಸಿಕೊಂಡು ಚೀರಾಡುತ್ತಿತ್ತು.
ಇನ್ನು ಕೆಲವು ಚಾನೆಲ್‌ಗಳು ‘‘ಹಸಿರು ಭೇಟಿಗೆ ಇದು ತೀವ್ರ ಹಿನ್ನೆಡೆ,’’ ‘‘ಬಸ್ತರಿನ ಆಯಕಟ್ಟಿನ ಪ್ರದೇಶ ದಲ್ಲಿ ಯಾಕೆ ಸೈನ್ಯವನ್ನು ಬಳಸಬಾರದು’’ಎಂದು ತಮ್ಮ ಭದ್ರಕೋಟೆ (Safety Zone) ಗಳಿಂದ ಭೋಪರ್ ಪಿರಂಗಿಗಳು ಟಿವಿ ಪರದೆ ಮೇಲೆ ಗುಂಡುಗಳನ್ನು ಸಿಡಿಸುತ್ತಿದ್ದವು.ಇದು ‘‘ಪ್ರಜಾತಂತ್ರದ ಮೇಲೆ ನಡೆದ ದಾಳಿ’’ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಮತ್ತೆ ಮತ್ತೆ ಗುಡುಗಿದರು. 

2004ರಲ್ಲಿ ಆಂಧ್ರ ಪ್ರದೇಶದ ವೈ.ಎಸ್. ರಾಜಶೇಖರ್ ರೆಡ್ಡಿ ಸರಕಾರ ಮಾವೋ ಪಕ್ಷದ ಜೊತೆ ಮಾತುಕತೆ ನಡೆಯುತ್ತಿರುವಾಗ 13 ಜನ ಮಾವೊ ಗೆರಿಲ್ಲಾಗಳನ್ನು ಖಮ್ಮಂ ಜಿಲ್ಲೆಯಲ್ಲಿ ಆಂಧ್ರದ ಗ್ರೇಹೌಂಡ್ ಪೊಲೀಸರು ಊಟದಲ್ಲಿ ವಿಷವಿಟ್ಟು ಪ್ರಜ್ಞೆತಪ್ಪಿ ಮಲಗಿರುವಾಗ ಬಂಧಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ನಂತರ ಸಾಲಾಗಿ ನಿಲ್ಲಿಸಿ ಒಬ್ಬಿಬ್ಬರನ್ನು ಇನ್ನುಳಿದವರ ಸಮ್ಮುಖದಲ್ಲಿ ಸರದಿಯಲ್ಲಿ ತೊಡೆಯ ಕಾಲು ಕತ್ತರಿಸಿಕೊಂಡು ಹಾಕಿದ್ದು ನಿಮಗೆಲ್ಲರಿಗೂ ಗೊತ್ತಿದೆ. 

2011ರಲ್ಲಿ ಛತ್ತೀಸ್‌ಗಢದಲ್ಲಿ ಕೇಂದ್ರದ ಕೋಬ್ರಾ ಪಡೆಗಳು ನಾಲ್ಕು ವರ್ಷದ ಮಗುವಿನ ಬೆರಳುಗಳನ್ನು ಕತ್ತರಿಸಿ ಹಾಕಿರುವುದು ನೀವು ಮರೆತುಬಿಟ್ಟಿದ್ದೀರಾ? ಅದೇ ರೀತಿ 76 ವರ್ಷದ ಮುದುಕನನ್ನು ಕೋಬ್ರಾ ಪಡೆಗಳು ಮರಕ್ಕೆ ತಲೆಕೆಳಗೆ ಮಾಡಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿ ನಂತರ ಕುದಿಯುವ ಎಣ್ಣೆಯಲ್ಲಿ ಅದ್ದಿರುವುದನ್ನು ನೀವು ಮರೆತು ಬಿಟ್ಟಿರಾ? ಗುಡಿಸಲಿನಲ್ಲಿ ಮಲಗಿದ್ದ 80ರ ಹರೆಯದ ಇಬ್ಬರು ಮುದುಕರನ್ನು ಕೋಬ್ರಾ ಪಡೆಗಳು ಚಾಕುವಿನಿಂದ ಇರಿದು ಕೊಂದದ್ದನ್ನು ನೀವು ಮರೆತುಬಿಟ್ಟಿರಾ? ಇವು ಪ್ರಜಾಪ್ರಭುತ್ವದ ಮೇಲಿನ ದಾಳಿಯಲ್ಲವೆ?

ಫ್ಯಾಸಿಸ್ಟ್ ಪಕ್ಷಗಳ ಮತ್ತು ಸಂಘಟನೆಗಳ ಬೆಳವಣಿಗೆಯಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಮೇಲಿನ ದಾಳಿಯಲ್ಲಿ ಮತ್ತು ‘‘ಭಯೋತ್ಪಾದನೆ ಮೇಲಿನ’’ ದಾಳಿಯಲ್ಲಿ, ಅಮಾಯಕ ಮುಸ್ಲಿಮರ ಮೇಲಿನ ಪ್ರಭುತ್ವದ ಮತ್ತು ಫ್ಯಾಸಿಸ್ಟ್ ಸಂಘಟನೆಗಳ ದಾಳಿಗಳಲ್ಲಿ ಮಾಧ್ಯಮಗಳು ಪ್ರಭುತ್ವದ ಜೊತೆ ಕೈಜೋಡಿಸಿದ್ದವು. ಪ್ರಭುತ್ವಕ್ಕೆ ಬೆಂಬಲವನು° (logistic support) ನೀಡುತ್ತಿದ್ದವು. ಗುಜರಾತಿನಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಗರ್ಭಿಣಿಯ ಹೊಟ್ಟೆಯನ್ನು ತ್ರಿಶೂಲದಿಂದ ತಿವಿದು ಹೊಟ್ಟೆಯಲ್ಲಿದ್ದ ಮಗುವನ್ನು ತ್ರಿಶೂಲಕ್ಕೆ ಸಿಕ್ಕಿಸಿ ನಾಟ್ಯವನ್ನು ಪ್ರದರ್ಶಿಸಿದ್ದವು. ಇವು ಪ್ರಜಾಪ್ರಭುತ್ವದ ಮೇಲಿನ ದಾಳಿಯಲ್ಲವೇ! ಅಮಾಯಕ ಅಲ್ಪಸಂಖ್ಯಾತರ ಕಗ್ಗೊಲೆಗೆ ಕಾರಣನಾದವರ ಪರ ನೀವು 24x7 ಗಂಟೆ ಚುನಾವಣಾ ಪ್ರಚಾರ ನಡೆಸುತ್ತಿದ್ದೀರಿ. ಮಾನವ ಹಕ್ಕು ಕಾರ್ಯಕರ್ತರಿಗೆ ಉಪದೇಶ ನೀಡಲು ನಿಮಗೆ ಯಾವ ನೈತಿಕ ಹಕ್ಕು ಇದೆ! ದಯವಿಟ್ಟು ತಿಳಿಸುತ್ತೀರಾ? ಸೆಲ್ವಜುಡುಂ ಎಂಬ ಖಾಸಗಿ ಅರೆಸೇನಾ ಫ್ಯಾಸಿಸ್ಟ್ ಗೂಂಡಾಪಡೆಯು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಜಂಟಿ ಸಹಯೋಗದಿಂದ ಪ್ರಾರಂಭವಾಯಿತು. 

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ‘‘ಭದ್ರತಾ ಸಂಬಂಧಪಟ್ಟ ವೆಚ್ಚಗಳು’’ಹೆಸರಿನಲ್ಲಿ ಬಿಜೆಪಿ ಸರಕಾರಕ್ಕೆ ಹಣ ಒದಗಿಸತೊಡಗಿತು. ಈ ಹಣ ಸೆಲ್ವಜುಡುಂ ನಾಯಕರ ಜೇಬು ತುಂಬುತ್ತಿತ್ತು.ದೊಡ್ಡ ಬಂಡವಾಳಶಾಹಿಗಳು ಆದಿವಾಸಿಗಳನ್ನು ಅರಣ್ಯದಿಂದ ಖಾಲಿ ಮಾಡಿಸುವ ಗುತ್ತಿಗೆಯನ್ನು ಸೆಲ್ವಜುಡುಂ ಮಹೇಂದ್ರ ಕರ್ಮರಿಗೆ ನೀಡಿದ್ದರು. ಮಹೇಂದ್ರಕರ್ಮ ‘‘ಸ್ಥಳೀಯ ಜನರ’’ದಂಗೆಯ ವೇಷದಲ್ಲಿ ಒಬ್ಬ ಭೂಗಳ್ಳನಾಗಿದ್ದ.

ದಂತೇವಾಡ ಬಸ್ತಾರ್ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಗಣಿ ಗಾರಿಕೆ ನಡೆಸಲು ಇಡೀ ಹಳ್ಳಿಗಳನ್ನು ಖಾಲಿ ಮಾಡಲಾಯಿತು. ಬಲವಂತವಾಗಿ ಹಳ್ಳಿಯ ಜನರನ್ನು ಸರಕಾರ ಸ್ಥಾಪಿಸಿರುವ ಕ್ಯಾಂಪ್‌ಗಳಲ್ಲಿ ಕೂಡಿ ಹಾಕಲಾಯಿತು. ಈ ತಂತ್ರವನ್ನು ಅಮೆರಿಕದ ಸಾಮ್ರಾಜ್ಯಶಾಹಿಗಳು ವಿಯೆಟ್ನಾಂ, ಲಾವೋಸ್, ಕಾಂಬೋಡಿಯ ದೇಶಗಳಲ್ಲಿ ಯುದ್ಧಗಳಲ್ಲಿ ಪ್ರಯೋಗಿಸಿದ್ದರು. ಇದು ಹಳ್ಳದ ನೀರನ್ನು ಖಾಲಿ ಮಾಡಿ ಮೀನು ಹಿಡಿಯುವ ತಂತ್ರವಾಗಿದೆ. 

ಕ್ಯಾಂಪ್‌ಗಳಲ್ಲಿ ಸೆಲ್ವಜುಡುಂ ಪಡೆಗಳು ಆದಿವಾಸಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದವು. ಆದಿವಾಸಿ ಮಹಿಳೆಯರ ಮೇಲೆ ಮಾನಭಂಗ ನಡೆಸುತ್ತಿದ್ದವು. ಈ ಚಿತ್ರಹಿಂಸೆಯಿಂದ ತಪ್ಪಿಸಿಕೊಂಡು ಕ್ಯಾಂಪ್‌ಗಳಿಂದ ಓಡಿಹೋದ ಆದಿವಾಸಿಗಳನ್ನು ಮಾವೊವಾದಿಗಳೆಂದು ಹಣೆಪಟ್ಟಿ ಕಟ್ಟಿ ಸೆಲ್ವಜುಡುಂ ಪಡೆಗಳು ಭೇಟೆಯಾಡುತ್ತಿದ್ದವು. ಹಳ್ಳಿಗಳಿಂದ ಆದಿವಾಸಿಗಳನ್ನು ಬಲವಂತವಾಗಿ ಖಾಲಿ ಮಾಡುವುದು ಮತ್ತು ಅವರನ್ನು ಕ್ಯಾಂಪ್‌ಗಳಲ್ಲಿ ಕೂಡಿ ಹಾಕುವುದನ್ನು ಸೆಲ್ವಜುಡಂ ಪಡೆಗಳು ಮಾಡುತ್ತಿದ್ದವು. ಇದಕ್ಕೆ ರಾಜ್ಯ ಬಿಜೆಪಿ ಸರಕಾರ ಬೆಂಬಲ ನೀಡುತ್ತಿತ್ತು. 

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹಣದ ಸಹಾಯದ ಜೊತೆಗೆ ಬಂದೂಕು, ಮದ್ದುಗುಂಡುಗಳನ್ನು ಮತ್ತು ಕೇಂದ್ರದ ರಕ್ಷಣಾ ಪಡೆಗಳನ್ನು ಒದಗಿಸುತ್ತಿತ್ತು.ಛತ್ತೀಸ್‌ಗಢದಲ್ಲಿ ಆದಿವಾಸಿಗಳ ಭೂಮಿಗಳ ವಶಪಡಿಸುವಿಕೆ ಕುರಿತಂತೆ ಕೇಂದ್ರ ಸರಕಾರ ರಚಿಸಿರುವ ಸಮಿತಿಯ ವರದಿಯಲ್ಲಿ ಈ ರೀತಿ ಇದೆ ‘ಇಡೀ’ ಚರಿತ್ರೆಯಲ್ಲಿ ಕೊಲಂಬಸ್‌ನ ನಂತರ ಆದಿವಾಸಿಗಳ ಭೂಮಿಗಳನ್ನು ಕಿತ್ತುಕೊಳ್ಳುವ ಅತಿ ದೊಡ್ಡ ಯೋಜನೆಯಾಗಿದೆ. ‘ಈ ಉಲ್ಲೇಖ ಮಾನವ ಹಕ್ಕು ಸಂಘಟನೆಗಳಾಗಲೀ ಅಥವಾ ಪ್ರಜಾಸತ್ತಾತ್ಮಕ ಸಂಘಟನೆಗಳು ಮಾಡಿದ್ದಲ್ಲ. ಇದು ಕೇಂದ್ರ ಸರಕಾರದ ಗ್ರಾಮೀಣ ಸಚಿವಾಲಯ ಭೂಸಂಬಂಧದ ಬಗ್ಗೆ ರಚಿಸಿರುವ ಭೂಕಾಯಿದೆ ಸಮಿತಿ ತನ್ನ ವರದಿಯಲ್ಲಿ ವ್ಯಾಖ್ಯಾನಿಸಿದೆ. 

ವರದಿಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಬಗ್ಗೆ ಪ್ರಶ್ನೆಯನ್ನು ಎತ್ತಿದೆ. ಆದಿವಾಸಿಗಳ ಭೂಮಿ ಗಳನ್ನು ಕಿತ್ತುಕೊಳ್ಳುವ ಯೋಜನೆಗಳನ್ನು ಟಾಟಾ, ಎಸ್ಸಾರ್(essor)’ಕಂಪನಿಗಳು ಸಿದ್ಧಪಡಿಸಿದೆ.(burn all, Kill all, Loot all) (Hamletಸೆಲ್ವಜುಡುಂ ಜೂನ್ 2005ರಿಂದ ಸುಮಾರು ಆರು ತಿಂಗಳು ಕಾಲ ಪ್ರಭುತ್ವದ ಭದ್ರತಾ ಪಡೆಗಳ ಬೆಂಬಲದಿಂದ ಹಳ್ಳಿಗಳ ಮೇಲೆ ದಾಳಿ, ಸಾಮೂಹಿಕ ಭಯೋತ್ಪಾದನಾ ದಾಳಿಯನ್ನು ನಡೆಸಿದವು. ನೂರಾರು ಹಳ್ಳಿಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಿ ನೆಲಸಮ ಮಾಡಲಾಯಿತು.

ನಾಲ್ಕು ಲಕ್ಷ ಆದಿವಾಸಿಗಳು ಬಲವಂತವಾಗಿ ಊರುಗಳನ್ನು ಬಿಟ್ಟು ನೆರೆಯ ಪಕ್ಕದ ಒರಿಸ್ಸಾ, ಆಂಧ್ರಪ್ರದೇಶದ ಗಡಿಗಳಿಗೆ ಓಡಿಹೋಗುವಂತೆ ಮಾಡಲಾಯಿತು. ಒಂದು ಲಕ್ಷ ಜನ ರಾಜ್ಯ ಸರಕಾರ ಮತ್ತು ರಾಜ್ಯ ಸರಕಾರಗಳು ನಿರ್ಮಿಸಿರುವ ಕ್ಯಾಂಪ್‌ಗಳ)ಗಳಲ್ಲಿ ಕೂಡಿ ಹಾಕಲಾಯಿತು. ಈ ಕ್ಯಾಂಪ್‌ಗಳಲ್ಲಿ ಮಹಿಳೆಯ ಮೇಲೆ ವ್ಯಾಪಕವಾಗಿ ಪದೇ ಪದೇ ಅತ್ಯಾಚಾರಗಳು ನಡೆದವು. ವಿಶಾಲವಾದ ಭೂಮಿಗಳು ಪಾಳು ಬಿದ್ದವು. ಆದಿವಾಸಿಗಳಿಗೆ ಜೀವನಾಧಾರವಾಗಿದ್ದ ಕಾಡು ಉತ್ಪನ್ನಗಳು ಆದಿವಾಸಿಗಳಿಗೆ ಎಟುಕದಾದವು.

ಮಕ್ಕಳು ಕಲಿಯುವ ಶಾಲೆಗಳು ಪೊಲೀಸರ ಕ್ಯಾಂಪ್‌ಗಳಾಗಿ ಪರಿವರ್ತನೆಗೊಂಡವು. ಪೊಲೀಸರು ಜನರ ಹಕ್ಕುಗಳನ್ನು ಬೂಟುಕಾಲಿನಿಂದ ತುಳಿಯತೊಡಗಿದರು.ಗುಜರಾತಿನಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವಲ್ಲಿ ಯಾವ ರೀತಿ ನ್ಯಾಯಾಲಯಗಳು ಮತ್ತು ಕಾನೂನುಗಳು, ವಿಫಲವಾದವೋ, ಅದೇ ರೀತಿ ಆದಿವಾಸಿಗಳಿಗೆ ನ್ಯಾಯ ಒದಗಿಸುವಲ್ಲಿ ಈ ದೇಶದ ಸಂವಿಧಾನ ಮತ್ತು ಕಾನೂನುಗಳು ಸಂಪೂರ್ಣವಾಗಿ ವಿಫಲವಾಗಿವೆ. ‘‘ಆದಿವಾಸಿಗಳನ್ನು ಕಡೆಗಣಿಸಲಾಗಿದೆ. ಅವರ ಭೂಮಿಗಳನ್ನು ಖಾಸಗಿ ಬಂಡವಾಳ ಶಾಹಿಗಳು ಪ್ರಭುತ್ವದ ಬೆಂಬಲ ದಿಂದ ಕಿತ್ತುಕೊಳ್ಳಲಾಗುತ್ತಿದೆ’’ ಎಂದು ಕೇಂದ್ರದ ಗ್ರಾಮೀಣ ಸಚಿವಾಲಯ ಪ್ರಧಾನ ಮಂತ್ರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಇನ್ನು ಕೇಂದ್ರ ಸರಕಾರ ‘ಹಸಿರು ಬೇಟೆಯನ್ನು’ತೀವ್ರಗೊಳಿಸುತ್ತದೆ. ಈಗಾಗಲೇ ಕೇಂದ್ರ ಸರಕಾರವು 95 ಬೆಟಾಲಿಯನ್‌ಗಳನ್ನು ಕಳುಹಿಸಿಕೊಟ್ಟಿದೆ. ಇನ್ನೂ ಹೆಚ್ಚಿನ ಪಡೆಗಳನ್ನು ಕಳುಹಿಸಿ ಕೊಡಲು ತಯಾರಿ ನಡೆಸಿದೆ. ಛತ್ತೀಸ್‌ಗಡದ ಸರಕಾರವು ಮಾತುಕತೆಯ ನಾಟಕವಾಡುತ್ತಿದೆ. ಮೊದಲಿನಿಂದಲೂ ಮಾವೋ ಪಕ್ಷವು ಮಾತುಕತೆಗೆ ಮುಂದಾಗಿತ್ತು. ಪಿ. ಚಿದಂಬರಂ ಕೇಂದ್ರದ ಗೃಹಮಂತ್ರಿಯಾಗಿದ್ದಾಗ ಮಾವೋ ಪಕ್ಷದ ಆಝಾದ್‌ರನ್ನು ಮಾತುಕತೆಗೆ ಆಹ್ವಾನಿಸಿದೆವು.

ಸ್ವಾಮಿ ಅಗ್ನಿವೇಶ್ ಮಾತುಕತೆಯ ಮಧ್ಯಸ್ಥಿಕೆಯನ್ನು ವಹಿಸಿದ್ದರು. ನಂತರ ಕೇಂದ್ರ ಸರಕಾರ ಮತ್ತು ಆಂಧ್ರದ ಸರಕಾರಗಳು ಪಿತೂರಿ ನಡೆಸಿ ಮಾತುಕತೆಗೆ ಬಂದಿದ್ದ ಆಝಾದ್ ಮತ್ತು ಪತ್ರಕರ್ತ ಪಾಂಡೆಯನ್ನು ಕೊಂದು ಹಾಕಿದರು. ಇದೇ ರೀತಿ ಮಾತುಕತೆಯ ಆಮಿಶ ಒಡ್ಡಿ ಕೋಟೇಶ್ವರ ರಾವ್‌ರನ್ನು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರಗಳು ಕೊಂದುಹಾಕಿದವು. ಕೋಟೇಶ್ವರರಾವ್‌ರ ಶರೀರದ ಮೇಲೆ ಚಾಕುವಿನಿಂದ ಇರಿದ 80 ಗಾಯದ ಗುರುತು ಗಳಿದ್ದವು. ಗಾಯವಾಗದ ಜಾಗವೇ ಇರಲಿಲ್ಲ.
ಮಾತುಕತೆಗೆ ಕರೆದು ಕೊಲ್ಲುವುದು ಯಾವ ರೀತಿಯ ಪ್ರಜಾಪ್ರಭುತ್ವ! ಇದು ಪ್ರಜಾ ಪ್ರಭುತ್ವದ ಮೇಲಿನ ದಾಳಿಯಲ್ಲವೇ? ಆದಿವಾಸಿಗಳ ಮೇಲಿನ ಹಿಂಸೆಯಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಮೇಲೆ ನಡೆದ ನರಮೇಧದಲ್ಲಿ ಈ ಹಿಂಸೆ ‘ಮಾನವ ಕುಲದ ಮೇಲೆ ನಡೆದ ಅತ್ಯಂತ ಘೋರ ಅಪರಾಧವಾಗಿದೆ’ ಸ್ವಯಂಘೋಷಿತ ‘‘ಭಯೋತ್ಪಾದಕ ವಿರೋಧಿ’’ಮಾಧ್ಯಮಗಳ ನಿಜವಾದ ಬಣ್ಣ ಜನತೆಗೆ ಸ್ಪಷ್ಟವಾಗಿ ಗೊತ್ತಿದೆ.

ಮಾನವ ಹಕ್ಕು ಸಂಘಟನೆಗಳು ಹಿಂಸೆಯನ್ನು ಎಂದೆಂದಿಗೂ ಸಮರ್ಥಿಸುವುದಿಲ್ಲ. ಸರಕಾರ ಹಿಂಸೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಿ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ಸರಕಾರ ಗೌರವಿಸಬೇಕು. ಮಾನವ ಕಾರ್ಯಕರ್ತರು ಮತ್ತು ಮಾನವ ಹಕ್ಕು ಸಂಘಟನೆಗಳ ಮೇಲೆ ಪ್ರಭುತ್ವದ ಧಮನಕಾರಿ ನೀತಿಗಳು ನಿಲ್ಲಬೇಕು.

ಬಿಜೆಪಿ: ಇಬ್ಬಗೆಯ ರಾಜಕಾರಣಗಳ ನಡುವೆ ತೊನೆದಾಟ
ಕ್ರಿಸ್ಟೊಫರ್ ಜಾಫ್ರಲಾಟ್

ಸೌಜನ್ಯ : ವಾರ್ತಾಭಾರತಿ


ಭಾರತೀಯ ಜನತಾ ಪಕ್ಷದೊಳಗೆ ಪಕ್ಷ ಮತ್ತು ಅದರ ಸಾಧ್ಯತೆಗಳ ಕುರಿತಂತೆ ಎರಡು ವಿಭಿನ್ನ ದೃಷ್ಟಿಕೋನಗಳಿವೆ. ಒಂದು ದಿಕ್ಕಿನಲ್ಲಿ ಜನರನ್ನು ಜನಾಂಗ ಮತ್ತು ಧರ್ಮದ ನೆಲೆಯಲ್ಲಿ ಸಂಘಟಿ ಸುವ ತೀವ್ರಗಾಮಿ ರಾಜಕಾರಣವಿದ್ದರೆ ಮತ್ತೊಂದು ತುದಿಯಲ್ಲಿರುವುದು ಇಷ್ಟೊಂದು ತೀವ್ರವಲ್ಲದ, ಸ್ವಲ್ಪ ಮಟ್ಟಿನ ಸೌಮ್ಯ ರಾಜ ಕಾರಣ. ಇವೆರಡರ ಪ್ರತೀಕವೆ ನರೇಂದ್ರ ಮೋದಿ ಮತ್ತು ಲಾಲ್ ಕೃಷ್ಣ ಅಡ್ವಾಣಿ. ಹಾಗೆ ನೋಡಿದರೆ ಬಿಜೆಪಿಯಲ್ಲಿ ಈ ತೆರನಾದ ಎರಡು ರಾಜಕೀಯ ನಿಲುವುಗಳ ನಡುವಿನ ತೊನೆದಾಟ ಇಂದು ನಿನ್ನೆಯದಲ್ಲ; ಅದರ ಪೂರ್ವಾಶ್ರಮವಾದ ಜನಸಂಘದಲ್ಲೂ (ಸ್ಥಾಪನೆ: 1951) ಇದೇ ರೀತಿಯ ತುಯ್ದಾಟವಿತ್ತು. 1967ರಲ್ಲಿ ದೀನ ದಯಾಳ್ ಉಪಾಧ್ಯಾಯರು 1966-67ರ ಉಗ್ರ ಗೋಹತ್ಯೆ ವಿರೋಧಿ ಚಳವಳಿಯನ್ನು ಕಾಂಗ್ರೆಸ್ ವಿರೋಧಿ ಪಕ್ಷಗಳೊಂದಿಗೆ (ಕೆಲವು ಎಡಪಂಥೀಯರನ್ನೂ ಒಳಗೊಂಡಂತೆ) ಗಂಟು ಹಾಕಿ ಅದನ್ನು ಸಂಯುಕ್ತ ವಿಧಾಯಕ ದಳ ಎಂದು ಕರೆದು ಆ ಹೆಸರಲ್ಲಿ ಹೊಸ ಸಮ್ಮಿಶ್ರ ಸರಕಾರಗಳನ್ನು ರಚಿಸಲೆತ್ನಿಸಿದ್ದರು.

ಆ ಕಾಲಘಟ್ಟವನ್ನು ಲೋಹಿಯಾ ಪ್ರತಿಪಾದಿಸಿದ ‘‘ಕಾಂಗ್ರೆಸ್ಸೇತರ’’ ರಾಜಕೀಯದ ಸುವರ್ಣಯುಗ ಎನ್ನಬಹುದು.ಈ ತುಯ್ತ ಬಿಜೆಪಿಯ ವಂಶವಾಹಿಗಳಲ್ಲೆ ಇದೆ. ಒಂದೆಡೆ ಆರೆಸ್ಸೆಸ್‌ನ ಒಂದು ಅಂಗವಾಗಿರುವ ಕಾರಣಕ್ಕೆ ಅದರ ಹಿಂದೂ ರಾಷ್ಟ್ರೀಯ ವಾದದ ಕಲ್ಪನೆಯನ್ನು ಪ್ರಚಾರಪಡಿಸಬೇಕಾಗಿದೆ. ಮತ್ತೊಂದೆಡೆ ಒಂದು ರಾಜಕೀಯ ಪಕ್ಷವಾಗಿ ತನ್ನ ನೆಲೆಯನ್ನು ವಿಸ್ತರಿಸ ಬೇಕೆಂದಿದ್ದರೆ ಸಿದ್ಧಾಂತವನ್ನು ದುರ್ಬಲಗೊಳಿಸದೆ ವಿಧಿಯಿಲ್ಲ.

ಹಾಗಾಗಿ ಪಕ್ಷದ ಸ್ಥಾಪನೆಯಾಗಿ ಆರು ದಶಕಗಳೆ ಕಳೆದರೂ ಇಂದಿಗೂ ಅದರದ್ದು ಅಂಕುಡೊಂಕಿನ ಪಥ. ದಕ್ಷಿಣ ಭಾರತಕ್ಕೆ ಕಾಲಿಡುವ ಸಂದರ್ಭದಲ್ಲಿ ಅದು ‘ಹಿಂದಿ ರಾಷ್ಟ್ರಭಾಷೆ’ಯ ಡಿಮಾಂಡನ್ನು ಕೈಬಿಟ್ಟರೂ ಹಿಂದುತ್ವದ ಕಾರ್ಯಸೂಚಿಗೆ ಗಟ್ಟಿಯಾಗಿ ಆತುಕೊಂಡಿದೆ. ಈ ಹಿಂದೂತ್ವ ಸಿದ್ಧಾಂತದ ಕರ್ತೃಗಳಿಗೆ ಚುನಾವಣಾ ಪ್ರಕ್ರಿಯೆ ಮತ್ತು ಜನರನ್ನು ಜನಾಂಗ ಹಾಗೂ ಧರ್ಮದ ನೆಲೆಯಲ್ಲಿ ಸಂಘಟಿಸುವುದರ ನಡುವೆ ವೈರುಧ್ಯಗಳಿವೆಯೆಂದು ಅನಿಸದಿರುವುದೆ ಬಹುಮಟ್ಟಿಗೆ ಇದಕ್ಕೆ ಕಾರಣ. 

ಹಿಂದೂಗಳು ಬಹುಸಂಖ್ಯಾತರಾಗಿರುವ ನಾಡಿನಲ್ಲಿ ಜನರನ್ನು ಧರ್ಮದ ಆಧಾರದಲ್ಲಿ ಧ್ರುವೀಕರಿಸುವುದರಿಂದ ಬಿಜೆಪಿಗೆ ಲಾಭವೇ ಆಗಲಿದೆಯೆಂದು ಅವರು ಭಾವಿಸಿದ್ದಾರೆ. ನಿಜ ಹೇಳಬೇಕೆಂದರೆ ಬಿಜೆಪಿ ಸಂಸತ್ಸದಸ್ಯರ ಸಂಖ್ಯೆ 2ರಿಂದ 85ಕ್ಕೇರಿದ್ದೇ ಅದರ ಅಯೋಧ್ಯಾ ಚಳವಳಿ, ಅನೇಕಾನೇಕ ಯಾತ್ರೆಗಳು ಮತ್ತು ಗಲಭೆಗಳ (ಸುಮಾರು 1000 ಮಂದಿಯನ್ನು ಬಲಿ ತೆಗೆದುಕೊಂಡ 1989ರ ಭಾಗಲ್ಪುರ ಗಲಭೆಯಲ್ಲಿ ಪರ್ಯವಸಾನ) ಪರಿಣಾಮವಾಗಿ ನಂತರದ ರಥಯಾತ್ರೆಯ ಸಾರಥ್ಯ ವಹಿಸಿದಾತ ಇನ್ಯಾರೂ ಅಲ್ಲ, ಈಗ ಸೌಮ್ಯವಾದವನ್ನು ಬೋಧಿಸುತ್ತಿರುವ ಇದೇ ಅಡ್ವಾಣಿ. ಈ ಸೌಮ್ಯವಾದಿ ನಿಲುವಿನ ಹಿಂದೆ ಎಲ್ಲೋ ತಾನು ಮೋದಿಗಿಂತ ಭಿನ್ನವೆಂದು ತೋರ್ಪಡಿಸುವ ಉದ್ದೇಶವಿರಬಹುದೇ?
ವಾಸ್ತವದಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಹಾಕಿದ ತರುವಾಯದಲ್ಲಿ ಅಡ್ವಾಣಿಗೆ ಜ್ಞಾನೋದಯವಾಗಿದೆ. ‘ಈ ತೆರನಾದ ತಂತ್ರ ಗಾರಿಕೆಗೆ ಅದರದೇ ಆದ ಪರಿಮಿತಿಗಳಿವೆ; ಅದು ಪಕ್ಷವನ್ನೆಂದೂ ಅಧಿಕಾರದತ್ತ ಕೊಂಡೊಯ್ಯದು’ ಎಂಬ ಸತ್ಯವನ್ನಾತ ಅರಿತರು. ಮುಂದೆ 1996ರ ಚುನಾವಣೆಗಳಲ್ಲಿ ಗೆದ್ದ ಹೊರತಾಗಿಯೂ ಸರಕಾರ ರಚಿಸುವಲ್ಲಿ ಬಿಜೆಪಿ ವಿಫಲವಾದಾಗ ಅಡ್ವಾಣಿ, ‘‘ನಮ್ಮದು ಅತಿ ದೊಡ್ಡ ಪಕ್ಷವಾಗಿದ್ದರೂ ನಮ್ಮಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ.
ಆಗ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು ಮುಂದುವರಿಯುವುದು ಅಸಾಧ್ಯವೆಂಬ ಭಾವನೆ ನಮ್ಮಲ್ಲಿ ಮೂಡಿತು. ಆದುದರಿಂದ ಇತರ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ಸಮ್ಮಿಶ್ರ ಸರಕಾರ ರಚಿಸುವ ಮಾರ್ಗವನ್ನು ಆರಿಸಿಕೊಂಡೆವು’’ ಎಂದು ಸ್ಪಷ್ಟವಾಗಿ ಹೇಳಿದರು (25.10.1999ರ ಔಟ್‌ಲುಕ್ ನಿಯತಕಾಲಿಕೆಗೆ ನೀಡಿದ ಸಂದರ್ಶನ).ಈ ಸನ್ನಿವೇಶದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಜೊತೆಗೂಡಿ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟವನ್ನು (ಎನ್‌ಡಿಎ) ರಚಿಸಿ ಒಂದು ‘‘ರಾಷ್ಟ್ರೀಯ ಆಡಳಿತ ಕಾರ್ಯ ಸೂಚಿ’’ಯನ್ನು ತಯಾರಿಸಿದವು. 

ಈ ಅಜೆಂಡಾವನ್ನು ಸಿದ್ಧಗೊಳಿಸುವಾಗ ಸಂಘ ಪರಿವಾರದ ಕಾರ್ಯಕ್ರಮದ ಆಧಾರಸ್ತಂಭಗಳೆಂದೆ ಪರಿಗಣಿತವಾದ ವಿಷಯಗಳನ್ನು ಕೈಬಿಡಲಾಯಿತು.ಉದಾಹರಣೆಗೆ ರಾಮಮಂದಿರ ನಿರ್ಮಾಣ, ಜಮ್ಮುಕಾಶ್ಮೀರಗಳಿಗೆ ಸ್ವಲ್ಪಮಟ್ಟಿನ ಸ್ವಾಯತ್ತತೆಯನ್ನು ನೀಡಿರುವ ಸಂವಿಧಾನದ 370ನೆ ವಿಧಿಯನ್ನು ರದ್ದುಗೊಳಿಸುವುದು, ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ನಿರ್ದಿಷ್ಟ ಕಾನೂನಾತ್ಮಕ ಗುರುತನ್ನು ಒದಗಿಸುವ ಕೆಲವು ಅಂಶಗಳನ್ನು ಕಿತ್ತು ಹಾಕುವ ಉದ್ದೇಶವುಳ್ಳ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಮುಂತಾದವು. 

ಯಾಕೆಂದರೆ ಬಿಜೆಪಿಯ ಬಹುತೇಕ ಮಿತ್ರಪಕ್ಷಗಳಿಗೆ ಇವುಗಳಲ್ಲಿ ಹುದುಗಿರುವ ಹಿಂದೂತ್ವದ ಸೂಚಿತಾರ್ಥ ಹಿಡಿಸಲಿಲ್ಲ. ಅವುಗಳಿಗೆ ಹಿಂದೂತ್ವ ಸಿದ್ಧಾಂತದಲ್ಲಿ ನಂಬಿಕೆ ಇರಲೂ ಇಲ್ಲ, ಜತೆಗೆ ತಮ್ಮ ಮುಸ್ಲಿಂ ಬೆಂಬಲಿಗರನ್ನು ದೂರ ಮಾಡುವುದೂ ಬೇಕಿರಲಿಲ್ಲ. ಅಡ್ವಾಣಿಯನ್ನೂ ಒಳಗೊಂಡಂತೆ ಬಿಜೆಪಿಯ ನಾಯಕ ಗಣ ಇದನ್ನೆಲ್ಲ ಒಪ್ಪಿಕೊಂಡಿತು. ಅಂದು ಅಡ್ವಾಣಿಯನ್ನು ಎನ್‌ಡಿಎಯ ತೀವ್ರಗಾಮಿ ಮುಖವೆಂದೂ ವಾಜಪೇಯಿಯನ್ನು ಸೌಮ್ಯ ಮುಖವಾಡವೆಂದೂ ಪರಿಗಣಿಸಲಾಗುತ್ತಿತ್ತು ಎಂಬುದನ್ನು ಗಮನಿಸಬೇಕು. (ಮುಂದೊಮ್ಮೆ ಅಡ್ವಾಣಿಯೆ ಹೇಳುವಂತೆ)

ಸಮ್ಮಿಶ್ರ ರಾಜಕೀಯಕ್ಕೆ ತನ್ನ ಮಾರ್ಗವೆ ಉತ್ತಮವೆಂದು ಅಡ್ವಾಣಿ ವಾದಿಸುವ ಸ್ಥಿತಿಯಲ್ಲಿದ್ದುದು ಎನ್‌ಡಿಎ ಜಯ ಗಳಿಸಿ ಆರೆಸೆಸ್ಸ್‌ಗೆ ಅಧಿಕಾರದ ರುಚಿ ಹತ್ತುವ ತನಕ ಮತ್ತು 2002ರ ನರಮೇಧದ ವೇಳೆ ಮೋದಿಯನ್ನು ರಕ್ಷಿಸುವ ತನಕ. 2004ರಲ್ಲಿ ಸೋಲುಂಡಾಗ ಅಡ್ವಾಣಿಯ ನಿಲುವು ಅಸಮರ್ಥನೀಯವಾಯಿತು. 2009ರ ನಂತರವಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾ ಯಿಸಿತು. 2004ರ ಸೋಲಿಗೆ ಸಿದ್ಧಾಂತದ ಸಡಿಲಿಕೆಯೆ ಕಾರಣವೆಂದ ಆರೆಸ್ಸೆಸ್ ಮುಖ್ಯಸ್ಥ ಕೆ.ಸುದರ್ಶನ್ ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಡ್ವಾಣಿಯನ್ನು ಬಹಿರಂಗವಾಗಿ ಟೀಕಿಸಿದರು. 

ಬಳಿಕ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ‘‘ಅಡ್ವಾಣಿ ಮತ್ತು ವಾಜಪೇಯಿ ತಮ್ಮ ಸ್ಥಾನಗಳನ್ನು ಹೊಸಬರಿಗೆ ಬಿಟ್ಟುಕೊಡಬೇಕು’’ ಎಂದು ಹೇಳಿದರು. ಇಂತಹದೊಂದು ವಿದ್ಯಮಾನ ಹಿಂದೆಂದೂ ನಡೆದಿರಲಿಲ್ಲ. 2005ರ ಸೆಪ್ಟಂಬರ್ 18ರಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಡ್ವಾಣಿ, ‘‘ಆರೆಸ್ಸೆಸ್‌ನ ಪದಾಧಿಕಾರಿಗಳ ಸಮ್ಮತಿಯಿಲ್ಲದೆ ಯಾವುದೇ ರಾಜಕೀಯ ಅಥವಾ ಸಂಘಟನಾತ್ಮಕ ನಿರ್ಧಾರವನ್ನು ಕೈಗೊಳ್ಳಲಾಗದು ಎಂಬ ಭಾವನೆಯೊಂದು ಬೆಳೆದಿದೆ. ಈ ನಿಲುವಿನಿಂದ ಆರೆಸ್ಸೆಸ್‌ಗಾಗಲಿ ಪಕ್ಷಕ್ಕಾಗಲಿ ಒಳ್ಳೆಯದಾಗದು...
ಒಂದು ರಾಜಕೀಯ ಪಕ್ಷ ವಾಗಿರುವ ಬಿಜೆಪಿ ಜನತೆಗೆ ಉತ್ತರದಾಯಿ ಯಾಗಿದೆ; ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ವೇಳೆ ಅದರ ಸಾಧನೆಗಳು ಪರೀಕ್ಷೆಗೊಳ ಪಡುತ್ತವೆ. ಹಾಗಾಗಿ ಒಂದು ಪ್ರಜಾತಾಂತ್ರಿಕ, ಬಹುಪಕ್ಷಗಳ ಸನ್ನಿವೇಶದಲ್ಲಿ ಬಿಜೆಪಿಯಂತಹ ಸೈದ್ಧಾಂತಿಕ ಹಿನ್ನೆಲೆಯ ಪಕ್ಷವೊಂದು ತನ್ನ ಮೂಲ ಸೈದ್ಧಾಂತಿಕ ನಿಲುವನ್ನು ಕಾಪಾಡಿಕೊಳ್ಳುತ್ತಲೆ ಎಲ್ಲ ಸಿದ್ಧಾಂತಗಳ ಆಚೆಗಿರುವ ದೊಡ್ಡ ಸಂಖ್ಯೆಯ ಜನರನ್ನು ತಲುಪುವ ಹಾಗೆ ವಿಸ್ತರಿಸಿಕೊಳ್ಳಬೇಕಾ ಗಿದೆ’’ ಎಂದು ಹೇಳಿದರು.

2005ರ ಅಂತ್ಯದಲ್ಲಿ ಅಡ್ವಾಣಿಯನ್ನು ಪದಚ್ಯುತಿಗೊಳಿಸಿ ರಾಜನಾಥ್ ಸಿಂಗ್ ರನ್ನು ಪಕ್ಷಾಧ್ಯಕ್ಷರನ್ನಾಗಿ ನೇಮಿಸಲಾಯಿತು. 2009ರ ಚುನಾವಣೆಗಳ ಸಂದರ್ಭದಲ್ಲಿ ಅಡ್ವಾಣಿಯನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯೆಂದು ಬಿಂಬಿಸಲಾಯಿತು. ಆದರೆ ಚುನಾವಣೆಗಳಲ್ಲಿ ಸೋತಾಗ ಅಡ್ವಾಣಿ ಕೈಯಿಂದ ವಿಪಕ್ಷ ನಾಯಕನ ಸ್ಥಾನವನ್ನು ಕಸಿದುಕೊಳ್ಳಲಾಯಿತು. ಆರೆಸ್ಸೆಸ್ ಹುಕೂಮಿನ ಮೇರೆಗೆ ನಿತಿನ್ ಗಡ್ಕರಿ ಎಂಬ ಓರ್ವ ಅಜ್ಞಾತ ವ್ಯಕ್ತಿಗೆ ಪಕ್ಷಾಧ್ಯಕ್ಷ ಸ್ಥಾನ ಲಭಿಸಿತು. ಆದರೆ ಈ ವ್ಯಕ್ತಿ ಪಕ್ಷವನ್ನು 2014ರ ಚುನಾವಣಾ ಸಮರಕ್ಕೆ ಸಜ್ಜುಗೊಳಿಸುವ ಸ್ಥಿತಿಯಲ್ಲಿರಲಿಲ್ಲ ಎನ್ನುವು ದಕ್ಕೆ ಭ್ರಷ್ಟಾಚಾರದ ಆಪಾದನೆಗಳಷ್ಟೇ ಅಲ್ಲ, ಇನ್ನೂ ಅನೇಕ ಕಾರಣಗಳಿವೆ.

ನೂತನ ಅಧ್ಯಕ್ಷ ರಾಜನಾಥ್ ಸಿಂಘ್ ಸಂಘ ಪರಿವಾರದ ಅತ್ಯಂತ ಹಿರಿಯ ನಾಯಕರಾದ ಅಡ್ವಾಣಿಯ ಸಲಹೆಗಳನ್ನು ತುಚ್ಛೀಕರಿಸಿ ನರೇಂದ್ರ ಮೋದಿಯತ್ತ ವಾಲಿದರು; ಮೋದಿಯನ್ನು ಮುಂಚೂಣಿಗೆ ತರಲಾರಂಭಿಸಿದರು. ಹೀಗೆ ಅಡ್ವಾಣಿಯನ್ನು ದೂರ ಸರಿಸುವುದರೊಂದಿಗೆ 90ರ ದಶಕದಲ್ಲಿ ಪಕ್ಷದ ಮುಖಂಡರು ರೂಪಿಸಿದ್ದ ಕಾರ್ಯ ತಂತ್ರಕ್ಕೆ ತಿಲಾಂಜಲಿಯಿತ್ತರು. ರಾಜನಾಥ್ ಸಿಂಘ್ ತೆಗೆದುಕೊಂಡ ನಿರ್ಧಾರವೊಂದರ ಪರಿಣಾಮವಾಗಿ ಈಗಾಗಲೆ ಚಿಕ್ಕದಾಗಿದ್ದ ಎನ್‌ಡಿಎ ಮೈತ್ರಿಕೂಟಕ್ಕೂ ಅಪಾಯ ಎದುರಾಯಿತು.

‘‘ಎನ್‌ಡಿಎ ಅಜೆಂಡಾದಿಂದ ಆ ಮೂರು ವಿವಾದಾತ್ಮಕ ಅಂಶಗಳನ್ನು (ರಾಮ ಮಂದಿರ, 370ನೆ ವಿಧಿ ಮತ್ತು ಸಮಾನ ನಾಗರಿಕ ಸಂಹಿತೆ) ಕೈಬಿಟ್ಟ ನಂತರವೆ ನಾವು ಎನ್‌ಡಿಎ ಒಕ್ಕೂಟ ಸೇರಿದ್ದು. ಈಗ ಮತ್ತೊಮ್ಮೆ ಅವುಗಳನ್ನು ಸೇರಿಸ ಲೆತ್ನಿಸಿದರೆ ನಾವು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ’’ ಎನ್ನುತ್ತದೆ 2004ರಲ್ಲಿ ಜೆಡಿ(ಯು) ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ತೆಗೆದುಕೊಂಡಿತ್ತೆನ್ನಲಾದ ನಿರ್ಣಯ. 

ಆದರೆ ಈ ಅಂಶಗಳು ಮರುಸೇರ್ಪಡೆಗೊಳ್ಳುವುದಕ್ಕೂ ಮೊದಲೇ ಇದೇ ಜೂನ್ ತಿಂಗಳಲ್ಲಿ ಜೆಡಿ(ಯು) ತನ್ನ ಹಾದಿಯನ್ನು ಬದಲಾಯಿಸಿಬಿಟ್ಟಿದೆ. ಅಂದ ಹಾಗೆ ಆ ಮೂರಂಶಗಳು ಮರುಸೇರ್ಪಡೆಗೊಳ್ಳಲಾರವೆಂದು ತೋರುತ್ತದೆ. ಆದರೆ ಅದೀಗ ಅಷ್ಟೇನೂ ಮುಖ್ಯವಲ್ಲ, ಯಾಕೆಂದರೆ ಬಿಜೆಪಿ ಹಿಂದೂತ್ವದ ಮಾರ್ಗವನ್ನು ಪುನರಾಯ್ಕೆ ಮಾಡಿಕೊಂಡಿದೆ ಎನ್ನುವುದಕ್ಕೆ 2002ರ ನಂತರ ಮೋದಿ ಪಡಕೊಂಡಿರುವ ಹೆಸರೇ ಸಾಕು. ರಾಜನಾಥ್ ಸಿಂಗ್ ಮತ್ತಾತನ ಸಹಚರರು ಎನ್‌ಡಿಎ ಒಕ್ಕೂಟವನ್ನು ಇನ್ನಷ್ಟು ಛಿದ್ರಛಿದ್ರಗೊಳಿಸುವಂತಹ ಅಪಾಯಕಾರಿ ನಿರ್ಧಾರವನ್ನು ಯಾಕಾಗಿ ತೆಗೆದುಕೊಂಡರು?
ಇದಕ್ಕೆ ಎರಡು ಕಾರಣಗಳಿರಬಹುದು. 1.ಪ್ರಾಯಶಃ 2014ರ ಚುನಾವಣೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವಂತಹ ಇನ್ಯಾವನೇ ನಾಯಕ ಇರಲಿಲ್ಲ 2.ಮೋದಿ-ಕಾರ್ಪೊರೇಟ್ ವಲಯದ ಆರ್ಥಿಕ ಬೆಂಬಲದೊಂದಿಗೆ-(ಚಿಕ್ಕದೊಂದು) ಕೋಮುವಾದ ರಹಿತ ಅಭಿವೃದ್ಧಿಪರ ಅಲೆಯನ್ನು ಹುಟ್ಟುಹಾಕಬಹುದೆಂದು ಯೋಚಿಸಿರಬಹುದು. ಮೋದಿ ಗುಜರಾತ್‌ನಲ್ಲಿ ಸತತ ಮೂರು ಬಾರಿ ಸಾಧಿಸಿರುವ ಗೆಲವು ಆತ ಓರ್ವ ಶಕ್ತಿಯುತ (ಶ್ರೀಮಂತ) ಪ್ರಚಾರಕ ಮತ್ತು ನಿಪುಣ ಮಾರಾಟಗಾರ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಆತ ಮಧ್ಯಮವರ್ಗಗಳನ್ನು ಸೆಳೆಯಲೂಬಹುದು.

ಅದೇ ವೇಳೆ ಬಿಜೆಪಿಗೆ ಲಭಿಸಿದ್ದ ದಕ್ಷಿಣ ಭಾರತದ ಏಕೈಕ ರಾಜ್ಯವನ್ನು ಅದು ಇತ್ತೀಚೆಗಷ್ಟೆ ಕಳೆದುಕೊಂಡಿರುವ ವಿಚಾರವನ್ನು ಮರೆಯುವಂತಿಲ್ಲ. ಒಂದು ವೇಳೆ ಮೋದಿ ನಾಯಕತ್ವದಲ್ಲಿ ಬಿಜೆಪಿಗೆ ನಗರವಾಸಿಗಳ ಬೆಂಬಲ ದೊರೆತರೂ ಅದು ಪೂರ್ಣ ಬಹುಮತವನ್ನಂತೂ ಪಡೆಯಲಾರದು. ಅದೇಕೆಂದರೆ ಗುಜರಾತ್‌ನಲ್ಲಿ ನಗರವಾಸಿಗಳ ಸಂಖ್ಯೆ 44 ಪ್ರತಿಶತದಷ್ಟಿದ್ದರೆ ದೇಶದ ಉಳಿದೆಡೆಗಳಲ್ಲಿರುವುದು 30 ಪ್ರತಿಶತ. 

ದಕ್ಷಿಣ ಏಷಿಯಾದಲ್ಲೆಲ್ಲೂ ನಗರವಾಸಿ ಮತದಾರರು ಸರಕಾರಗಳ ಅಳಿವು ಉಳಿವನ್ನು ನಿರ್ಧರಿಸುವಂತಹ ಸ್ಥಿತಿ ಇಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಪಾಕಿಸ್ತಾನದ ಇಮ್ರಾನ್ ಖಾನ್.ಬಿಜೆಪಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದಿದ್ದರೆ ಸಮ್ಮಿಶ್ರ ಸರಕಾರದ ಹೊರತು ಅನ್ಯ ಮಾರ್ಗವಿಲ್ಲವೆಂದು ಅಡ್ವಾಣಿ ಮತ್ತೆ ಮತ್ತೆ ಸಂಘ ಪರಿವಾರಕ್ಕೆ ಹೇಳುತ್ತಲೆ ಬಂದಿದ್ದಾರೆ.

ನರೇಂದ್ರ ಮೋದಿಯಂತೂ ಸಮ್ಮಿಶ್ರ ಸರಕಾರಕ್ಕೆ ಹೇಳಿದ ವ್ಯಕ್ತಿಯಲ್ಲ. ಆತನ ಆಡಳಿತ ಕಾಲದಲ್ಲಿ ಗುಜರಾತ್‌ನ ಅನೇಕ ಹಿರಿಯ ಬಿಜೆಪಿಗರೆ ಪಕ್ಷದಿಂದ ದೂರವಾಗಿದ್ದಾರೆ. ಅತ್ತ ಬಿಜೆಪಿಯ ಬಹುತೇಕ ಸಂಭಾವ್ಯ ಬೆಂಬಲಿಗ ಪಕ್ಷಗಳಿಗೂ ಸಮ್ಮಿಶ್ರ ಸರಕಾರದ ಅನುಭವವಿಲ್ಲದ ಮೋದಿ ಬಗೆಗೆ ಭಯವಿದೆ.ಬಿಜೆಪಿಯ ಈ ಇಬ್ಬಗೆಯ ರಾಜಕಾರಣಗಳ ನಡುವಿನ ತೊನೆದಾಟ ಪ್ರಾಯಶಃ ಇನ್ನೂ ಬಹಳಷ್ಟು ಕಾಲ ಮುಂದುವರಿಯಲಿದೆ.

Tuesday, July 30, 2013

ಬೆಂಕಿ ಮತ್ತು ಬೆಳಕು ಒಟ್ಟಿಗೆ ಇರುವ ವಿಪರ್ಯಾಸಮುನ್ನುಡಿ


-ಜಿ ರಾಜಶೇಖರ

'ಬೆಂಕಿಗೆ ತೊಡಿಸಿದ ಬಟ್ಟೆ' ಎಂಬ ಆರಿಫ್ ರಾಜಾ ಅವರ ಪ್ರಸ್ತುತ ಕವನ ಸಂಕಲನದ ಶೀರ್ಷಿಕೆಯೇ ಜ್ವಲಂತವೂ ಜ್ವಾಜ್ಯಲ್ಯಮಾನವೂ ಆಗಿರುವ ಒಂದು ರೂಪಕ. ಬೆಂಕಿ ಮತ್ತು ಬೆಳಕು ಒಟ್ಟಿಗೆ ಇರುವ ವಿಪರ್ಯಾಸವನ್ನು ಅದು ಹೇಳುತ್ತದೆ. ಜೊತೆಗೆ ಬೆಂಕಿ, ಅದರ ಉರುವಲು ಮತ್ತು ಆ ಉರಿಯಲ್ಲಿ ಸುಟ್ಟುಕೊಂಡೇ ಅದಕ್ಕೆ ಸಾಕ್ಷೀಭೂತನೂ ಆಗಿರುವ ಕವಿ-ಎಲ್ಲವೂ ಒಂದಾಗಿರುವ ಅದ್ವೈತವೂ ಈ ಸಂಕಲನದ ಕವನಗಳ ವಸ್ತು ಎಂದು ಈ ಶೀರ್ಷಿಕೆ ಸೂಚಿಸುವಂತಿದೆ. ಅದು ಏನೇ ಇರಲಿ ಸಂಕಲನದ ಕವನಗಳ ಅರ್ಥ ಮತ್ತು ಸಂದರ್ಭಗಳು ವೈವಿಧ್ಯಮಯವಾಗಿದ್ದರೂ, ಓದುಗರಿಗೆ ಆ ಕವಿತೆಗಳನ್ನು ತಲುಪಲು ಅದರ ಶೀರ್ಷಿಕೆ ಒಂದು ಕೈಮರದಂತಿರು ವುದು ನಿಜ. ಅದಕ್ಕೆ ಸರಿಯಾಗಿ ಬೆಂಕಿಗೆ ತೊಡಿಸಿದ ಬಟ್ಟೆಯ ಹಾಗೆ ಉಪಮಾನ ಉಪಮೇಯಗಳು ಒಂದು ಮತ್ತೊಂದರಲ್ಲಿ ಲೀನವಾಗಿ ಬಿಡುವ ರೂಪಕವೇ ಆರಿಫ್‌ರಾಜಾ ಅವರ ಕವಿತೆಗಳ ಸ್ಥಾಯಿ ಅಲಂಕಾರ. 'ಬೆಂಕಿಗೆ ತೊಡಿಸಿದ ಬಟ್ಟೆ' ಎಂಬ ತಲೆ ಬರಹ ಹೊತ್ತ ಯಾವ ಕವಿತೆಯೂ ಸಂಕಲನದಲ್ಲಿಲ್ಲ. ಹಾಗಾಗಿ ಸಂಕಲನದ ಶೀರ್ಷಿಕೆ ಇಲ್ಲಿನ ಎಲ್ಲ ಕವಿತೆಗಳಿಗೆ ಅನ್ವಯವಾಗುತ್ತದೆ ಎಂದೇ ಭಾವಿಸಬೇಕು. ಉದಾಹರಣೆಗೆ ಸಂಕಲನದ ಮೊದಲ ಪುಟಗಳಲ್ಲೇ ಸಿಗುವ ಒಂದು ಇಡೀ ಕವಿತೆ, ಕವಿಯ ಊರಿನ ಸುಡುಬಿಸಿಲಿನ ಬಗ್ಗೆ ಇದೆ. ಊರಿನ ಮರ, ಮನೆ, ರಸ್ತೆಗಳನ್ನೆಲ್ಲ ಸ್ತಬ್ಧ ಚಿತ್ರದ ಹಾಗೆ ನಿಶ್ಚೇಷ್ಟಿತಗೊಳಿಸುವ ಈ ಬಿಸಿಲು ನಿಜದ ನೀರಿನ ಸೆಲೆಗಳನ್ನು ಬತ್ತಿಸಿ, ನೀರಿನ ಭ್ರಮೆಯನ್ನು ಹುಟ್ಟಿಸುವ ಬಿಸಿಲುಗುದುರೆಗಳನ್ನು ಮಾತ್ರ ಸೃಷ್ಟಿಸಬಲ್ಲದು. ಈ ಬಿಸಿಲು ಹುಟ್ಟಿಸುವ ಹೇವರಿಕೆಯನ್ನು ಸ್ತಬ್ಧಚಿತ್ರಿಕೆಗಳಂತಹ ವಿವರಗಳ ಮುಖಾಂತರವೇ ಕವಿ ಕಾಣಿಸುತ್ತಾರೆ.

ಕರೆಂಟು ತಂತಿಯ ಮೇಲೆ ಒಂಟಿಬುದ್ಧನ ಹಾಗೆ
ಬೋಧಿವೃಕ್ಷವೆಂಬಂತೆ ಕೂತ ಕಾಗೆ
ಮೈತುಂಬ ರಂಧ್ರಗಳ ಕೊರೆದು ಕರ್ಕಶವಾಗಿ ನುಡಿಯುತ್ತದೆ
ಭಟ್ಟಿ ಸಾರಾಯಿ ಇಳಿಸಿದಂತೆ ಬಿಸಿಲು
ತಲೆಗೆ ಮುಳ್ಳಿನ ಕಿರೀಟವಿಟ್ಟು
ಮುಖಕ್ಕೆ ಮೊಳೆ ಜಡಿಯಲಾರಂಭಿಸುತ್ತದೆ.

ತನ್ನ ಊರಿನ ಬಿರುಬಿಸಿಲನ್ನು ವರ್ಣಿಸಲು ಕವಿ ಇಲ್ಲಿ ಎರಡು ರೂಪಕಗಳನ್ನು- ಬೋಧಿವೃಕ್ಷದ ಕೆಳಗೆ ಏಕಾಂತದಲ್ಲಿ ಕೂತ ಬುದ್ಧ ಮತ್ತು ಮುಳ್ಳಿನ ಕಿರೀಟ ತೊಟ್ಟು ಮುಖಕ್ಕೆ ಮೊಳೆ ಜಡಿಸಿಕೊಂಡ ಏಸು-ಬಳಸಿಕೊಂಡಿದ್ದಾರೆ. ಈ ಬಿಸಿಲು ಮೊಳೆ ಜಡಿದ ಹಾಗೆ ಚುಚ್ಚುವುದರ ಜೊತೆ ಭಟ್ಟಿ ಸಾರಾಯಿಯಂತೆ ಮನಸ್ಸನ್ನು ಮಂಕುಗಟ್ಟಿಸಲೂ ಬಹುದು. ಆರಿಫ್‌ರ ಕವಿತೆಯ ಈ ಹೋಲಿಕೆ ಅಡಿಗರ 'ಕೂಪಮಂಡೂಕ'ದ 'ಹದಬಿಸಿಲು ಸಾರಾಯಿ ನೆತ್ತಿಗೇರಿ' ಎಂಬ ಮಾತನ್ನು ನೆನಪಿಗೆ ತರುತ್ತದೆ. ಅಡಿಗರು ತಮ್ಮ ಕವಿತೆಯಲ್ಲಿ ಈ ಹೋಲಿಕೆಯನ್ನು ಮುಂದುವರಿಸಿ ಬಾಳೆಗಿಡ ಫಲವತಿ ಯಾಗುತ್ತಲೇ ಸಾಯುವ ವಿಪರ್ಯಾಸವನ್ನು ಹೇಳುತ್ತಾರೆ. ಆದರೆ ಆರಿಫ್‌ರ ಕವಿತೆಯ ಬಿಸಿಲಿಗೆ ಬೆಳೆ ಇಲ್ಲ; ಸಾವು ಮಾತ್ರ ನಿಶ್ಚಿತ.

ಟಕಟಕ ಟಕಟಕ ಓಡಿ ಬರುತ್ತಿದೆ ಬಿಸಿಲುಗುದುರೆ
ಬಯಲು ಹೊಲಗಳಲಿ ಸುಡುವ ಬೀಜ ಬಿತ್ತಿ

ಈ ಬಿಸಿಲ ಫಸಲನು ಬೆವರ ಕುಡುಗೋಲಿನಿಂದ ಕುಯ್ದ ಬಿಸಿಲ ಮಕ್ಕಳು ಈಗ ಬಂದೂಕಿನಿಂದ ಬಿಸಿಲ ಸುಗ್ಗಿ ಮಾಡುತ್ತಿದ್ದಾರೆ. ಊರಿಗೆ ಊರನ್ನೇ ಬೇಹೋಶ್ ಆಗಿಸುವ ಈ ಬಿಸಿಲು ಯಾರನ್ನೂ ಬಿಟ್ಟಿಲ್ಲ. ಅದು ಮಹಾಸಮಾಜವಾದಿ; ಹೈದರಾ ಬಾದಿನ ನಿಜಾಮ ಮತ್ತು ಊರಿನ ಗುಲಾಮ ಎಲ್ಲರೂ ಅದರೆದುರು ಸಮಾನರು. ಕವಿತೆಯಲ್ಲಿ ಬಿಸಿಲಿಗೆ ಬಿದ್ದ ಊರು ಒಂದು ಸಬ್ಧಚಿತ್ರದ ಹಾಗೆ ಕಂಡರೂ, ಅದರ ವಿವರಗಳು, ಚರಿತ್ರೆಯ ಚಲನಶೀಲತೆ ಹಾಗೂ ಮನುಷ್ಯ ದುಡಿಮೆಗಳನ್ನು ಒಳ ಗೊಂಡಿವೆ. ಹಾಗಾಗಿ ಸಮಾಜವಾದಿಯಂತೆ ಯಾರನ್ನೂ ಬಿಡದ ಬಿಸಿಲಿಗೆ, ಒಂದು ವಾಸನೆಯೂ ಇದೆ. ಅದು ದುಡಿಮೆಯ, ಬೆವರಿನ ವಾಸನೆ. ಅದು ಸಾವಿನ ವಾಸನೆಯೂ ಆಗಬಹುದು.

ಬಿಸಿಲ ಹೂವು ಮುಡಿದು, ಬಿಸಿಲಿಗೇ ಛತ್ರಿ ಹಿಡಿದು
ಕುದ್ದು ಹೋದವರ ಆತ್ಮಗಳು
ಬಿಸಿಲಗಾಜನು ನಟ್ಟಿಸಿಕೊಂಡು ನಡೆದ ಹೆಜ್ಜೆ ಗುರುತು
ಕಾದ ಡಾಂಬರಿನುದ್ದಕೂ ಮೂಡಿಸುತ್ತದೆ
ಮೀನಿಗೆ ವಾಸನೆ ಇರುವಂತೆ ಬಿಸಿಲಿಗೂ ಒಂದು ವಾಸನೆ ಇದೆ.

ಈ ವಿಪರ್ಯಾಸದಿಂದ ಸಾಮಾನ್ಯನಿಗೆ ಬಿಡುಗಡೆ ಅವನ ದುಡಿಮೆಯಲ್ಲಾದರೆ, ಕವಿಗೆ ಕಾವ್ಯವೇ ಅವನ ಬಿಡುಗಡೆಯ ಹೊರ ಹಾದಿ; ಕಾವ್ಯವೇ ಜೀವದಾಯಿನಿ. ಸಂಕಲನದ 'ಯಾರಾದರೂ ಕೋಗಿಲೆಗೆ ಹಾಡಲು ಹೇಳಿ'-ಕವಿತೆಯ ಹಾಡು, ಕಾವ್ಯ, ಸಂಗೀತ ಮತ್ತ್ತು ಕಲೆ ಎಲ್ಲದಕ್ಕೂ ಸಂವಾದಿಯಾದ ಶಬ್ದ. ನನ್ನ ಎಲ್ಲಾ ಸುಂದರಿಯರು ಹಾಡದೆ ಹೀಗೆ ಹಾಳಾಗಿ ಹೋದರು ಎಂಬ ಕವಿತೆಯ ಮೊದಲ ಮಾತೇ ಕವಿಗೆ ಕಾವ್ಯ ಎಷ್ಟು ತುರ್ತಿನ ಅಗತ್ಯ ಎಂಬುದನ್ನು ಮನಗಾಣಿಸುತ್ತದೆ. ಕಾವ್ಯ ಕವಿಗೆ ಕೇವಲ ಗೀಳಲ್ಲ್ಲ; ಕೇವಲ ಆಶಯವೂ ಅಲ್ಲ. ಅದು ಒಂದು ಪ್ರಾರ್ಥನೆ, ನಾಸ್ತಿಕನ ಪ್ರಾರ್ಥನೆ.

ಗಡಿ ಬೇಲಿಯನು ದಾಟಲಾಗದ ಸ್ವರಕೆ ಯಾವ ಸ್ವಾದವೂ ಇಲ್ಲ
ಬಿಸಿಲುಗುದುರೆಯ ಬೆನ್ನೇರಿ ಸವಾರಿ ಹೊರಡಬಲ್ಲದು
ಒಯಸಿಸ್ಸಿನ ಪಕ್ಷಿಯ ಕೂಗು ಎದೆಯಿಂದ ಎದೆಗೆ
ಕರುಣೆಯಿಟ್ಟು ಕೋಗಿಲೆಗೆ ಹಾಡಲು ಹೇಳಿ
. . . . . . . . . . . . . . . . . . .
. . . . . . . . . . . . . . . . . . .
ಸೆರೆ ಹಕ್ಕಿ ನುಡಿಸುವ ಒಂದು ರಾಗದಿಂದ
ಬಿಡುಗಡೆಗೊಳ್ಳಬೇಕಿದೆ ಈ ಜಗ

ಬಿಸಿಲುಗುದುರೆ ಭ್ರಮೆಯಾದರೂ, ಓಯಸಿಸ್, ನೀರಿನ ನೈಜ ಸೆಲೆ. ಕೋಗಿಲೆಯ ಸ್ವರಕ್ಕೆ ಅಂದರೆ ಕಾವ್ಯಕ್ಕೆ ಬಿಸಿಲುಗುದುರೆಯ ಬೆನ್ನೇರಿ, ನಿಜದ ನೆಲೆಗಳನ್ನು ತಲುಪುವ ಚೈತನ್ಯವಿದೆ. ಸ್ವಾತಂತ್ರ್ಯವೇ ಅದರ ಸ್ವಾದ. ಸಂಕಲನದಲ್ಲಿ ಯಾರಾದರೂ ಕೋಗಿಲೆಗೆ ಹಾಡಲು ಹೇಳಿ ಮತ್ತು ಬಿಸಿಲುಗುದುರೆ ಕವಿತೆಗಳ ಹಾಗೆ ಒಂದು ಕೇಂದ್ರ ರೂಪಕ ಮತ್ತು ಅದನ್ನು ಪ್ರತಿಫಲಿಸುವ ಸಂವಾದಿ ರೂಪಕಗಳ ಗೊಂಚಲಾಗಿರುವ ಇನ್ನೊಂದು ಕವಿತೆ 'ಕಾಂಕ್ರೀಟ್ ಕಾಡಿನಲ್ಲಿ ಒಂದು ಮರ'. ಕಾಂಕ್ರೀಟ್ ಕಾಡನ್ನು ಕಲ್ಪಿಸಿಕೊಳ್ಳುವುದು ಈ ಕಾಲದಲ್ಲಿ ಕಷ್ಟವೇನಲ್ಲ. ಹಾಗೆ ನೋಡಿದರೆ ಮರಗಳು ತುಂಬಿದ ಕಾಡೇ ಈಗ ಒಂದು ಫ್ಯಾಂಟಸಿ. ಪ್ರಸ್ತುತ ಕವಿತೆ ಚಿತ್ರಿಸುವ ಮರವೂ ಫ್ಯಾಂಟಸಿಯ ಲೋಕದ್ದು.

ನಿದ್ರೆಯಲಿ ಚಲಿಸುವ ಮರ
ರಾತ್ರಿಯಿಡೀ ಸಂಚರಿಸಿ
ಸ್ವಸ್ಥಾನಕ್ಕೆ ಬಂದು ನಿಂತಿದೆ

ನಿದ್ರೆಯಲ್ಲಿ ಚಲಿಸುವ ಮರದ ಚಿತ್ರವೇ ನಾವು ನಿಂತ ನೆಲವನ್ನೂ ಅಲ್ಲಾಡಿಸುವಂತಿದೆ. ನಿದ್ರೆ ಮರದ್ದೋ? ಓದುಗನದ್ದೋ? ಕವಿತೆಯಲ್ಲಿ ಮುಂದೆ 'ಮರಕ್ಕೆ ಬೀಳುವ ಕನಸು' ಎಂಬ ಮಾತಿದೆ. ಅದು ಕೂಡ ಓದುಗನ ಕನಸೇ ಯಾಕಾಗಿರಬಾರದು ಅಥವಾ ಅದು ಮರದ್ದೇ ಕನಸೆ? ಮನುಷ್ಯನಂತೆ ಚಲಿಸುವ, ಮಾತಾಡುವ ಮರ ಕನಸೂ ಕಂಡೀತು. ಆದರೆ ತನ್ನ ವಿನಾಶವನ್ನು ತಾನೇ ಮೈಮೇಲೆ ಎಳೆದುಕೊಳ್ಳುವುದು ಮನುಷ್ಯನಿಗಲ್ಲದೆ ಮತ್ತಾರಿಗೆ ಸಾಧ್ಯ? 'ಹಣ್ಣಿನಲಿ ಮಾಗಿ ಸಿಹಿಯಾಗುವ ಎಲೆಗಳಲಿ ಚಿಗುರಿ ಉದುರಿ ಹೋಗುವ' ಕನಸು ಮೈತಳೆದ ಮರಕ್ಕೆ ಬೀಳುವ ಕೆಟ್ಟ ಕನಸೊಂದಿದೆ.

ಆದರೂ ತುರ್ತುಗಾಲದಲಿ
ಲೋಹದ ಹಕ್ಕಿಗಳು ತತ್ತಿ ಇಡುವ
ದುಃಸ್ವಪ್ನ ಕಂಡ ಮರ
ಇಡೀ ರಾತ್ರಿ
ಎಲೆಗಳಲಿ ಕನವರಿಸುತ್ತದೆ
ಮತ್ತೆ ದೂರದಲ್ಲೆಲ್ಲೋ
ಗರಗಸದ ಸದ್ದು ಕೇಳಿಸುತ್ತದೆ
ನಿಂತಲ್ಲೇ ಮರ ನಡುಗುತ್ತದೆ

ಲೋಹದ ಹಕ್ಕಿಗಳು ಇಡುವ ತತ್ತಿ ಬಾಂಬ್ ಅಲ್ಲದೆ ಇನ್ನೇನು ಆಗಿರಲು ಸಾಧ್ಯ? ಬಾಂಬಿನ ಹಾಗೆ ಮರ ಕಡಿಯುವ ಗರಗಸವೂ ನಾಗರಿಕತೆಯ ಒಂದು ಹತ್ಯಾರ. ದೇಶದ ಅಭಿವೃದ್ಧಿಗೆ ಅಣುಬಾಂಬು, ಅಣೆಕಟ್ಟು, ಹೆದ್ದಾರಿ ಮತ್ತು ಗಣಿಗಾರಿಕೆಗಳ ಹಾಗೆ ಕಾಡು ಕಡಿಯುವ ಗರಗಸವೂ ಒಂದು ಮೂಲಭೂತ ಅಗತ್ಯ. ಲೋಹದ ಹಕ್ಕಿ ತತ್ತಿ ಇಡುವ ಕನಸು ಮರದ್ದೋ? ಮನುಷ್ಯನದ್ದೋ? ಗರಗಸ ಹಿಡಿದ ಮನುಷ್ಯ ಮರದ ದುಃಸ್ವಪ್ನವೋ ಅಥವಾ ಗರಗಸದ ಸದ್ದಿಗೆ ನಡುಗಿದ ಮರ ಮನುಷ್ಯನ ದುಃಸ್ವಪ್ನವೊ? ಈ ಸಂದಿಗ್ಧ ಎ.ಕೆ.ರಾಮಾನುಜನ್ ಅವರ 'ಬುದ್ಧಿವಂತರಿಗೆ ಕನಸು ಬಿದ್ದರೆ' ಕವಿತೆಯನ್ನು ನೆನಪಿಸುತ್ತದೆ. ರಾಮಾನುಜನ್ ಕವಿತೆಯಲ್ಲಿ ಪ್ರಾಚೀನ ಚೀನದ ಒಬ್ಬ ಬುದ್ಧಿವಂತನಿಗೆ ಪ್ರತಿ ರಾತ್ರಿಯೂ ತಾನೊಂದು ಚಿಟ್ಟೆ ಎಂಬ ಕನಸು ಬೀಳುತ್ತದೆ. ಎಷ್ಟೋ ರಾತ್ರಿ ಚಿಟ್ಟೆಯಾಗಿ ಕನಸು ಕಂಡು ಕಡೆಗೆ ಅವನಿಗೆ ತಾನು ಮನುಷ್ಯನೋ ಚಿಟ್ಟೆಯೋ, ರಾತ್ರಿಯ ಚಿಟ್ಟೆ ಹಗಲು ಮನುಷ್ಯನ ಕನಸೋ, ಹಗಲು ರಾತ್ರಿಯ ಕನಸೋ ತಿಳಿಯದೆ ಭ್ರಮೆ ಹಿಡಿಯಿತು(ಹೊಕ್ಕುಳಲಿ ಹೂವಿಲ್ಲ-ಮನೋಹರ ಗ್ರಂಥಮಾಲಾ, ಧಾರವಾಡ.೧೯೬೯, ಪು.೬೯). ರಾಮಾನುಜನ್ ಅವರಿಗೆ ಕಾವ್ಯ ಒಂದು ಆಟ. ಮಾತು ಆಡುತ್ತ ಆಡುತ್ತ ವಾಸ್ತವ ಮತ್ತು ಅದರ ಗ್ರಹಿಕೆ, ಸತ್ಯ ಮತ್ತು ತೋರಿಕೆಗಳ ಬಗ್ಗೆ ತಾತ್ವಿಕ ಒಳನೋಟಗಳನ್ನು ಕೊಡುವುದು ಅವರ ಕಾವ್ಯದ ಹೆಚ್ಚುಗಾರಿಕೆ. ಮೇಲೆ ಉದ್ಧರಿಸಿದ ಅವರ ಕವಿತೆಯನ್ನು ನೆನಪಿಸುವ ಆರಿಫ್‌ರ 'ಕಾಂಕ್ರೀಟ್ ಕಾಡಿನಲ್ಲಿ ಒಂದು ಮರ' ಮುಕ್ತಾಯಗೊಳ್ಳುವುದು ಸರ್ವನಾಶದ ಮುನ್ನೋಟದೊಂದಿಗೆ; ಅದು ಮರ ಮತ್ತು ಮನುಷ್ಯ ಇಬ್ಬರ ದುರಂತವೂ ಹೌದು.

'ಕಾಡು ಬೆಟ ನದಿ ಸಮುದ್ರ
ಮಳೆ ಗಾಳಿ ಆಕಾಶ ಹಕ್ಕಿಗಳನ್ನು ಕಳೆದುಕೊಂಡು
ತಬ್ಬಲಿಯಾದ ಮರ
ದೂಳಿಡಿದು ಒಣಗಿ ಹೋಗುತ್ತದೆ
ಬದುಕಿಡೀ ಬಿಸಿಲಲ್ಲೇ ನಿಂತು...'

ಅದು ಅಪರೂಪಕ್ಕೆ ಒಮ್ಮೆ ಮಾತಾಡುವ ಮರ. ಅದರ ಮಾತು ಮನುಷ್ಯನಿಗೆ ಅರ್ಥವಾಗಲಾರದು. ಮರ ಕೊಲ್ಲುವ ವಿದ್ಯೆ ಬಲ್ಲ ಅವನಿಗೆ ಮರದ ಭಾಷೆ ಮಾತ್ರ ಗೊತ್ತಿಲ್ಲ.

ತನ್ನೆಲ್ಲ ಪಂಚೇಂದ್ರಿಯಗಳನ್ನು ತೆರೆದುಕೊಂಡು
ಪೃಥ್ವಿಯ ಮೇಲೆ ಸದಾ ಎಚ್ಚರವಿರುತ್ತದೆ
ಒಂದು ಮರ

ಅದು ಇಡೀ ಪೃಥ್ವಿಯಲ್ಲಿ ಮಾತಾಡುವ, ಕನಸು ಕಾಣುವ, ಒಂದೇ ಒಂದು ಮರ, ಅದೇ ಕೊನೆಯ ಮರ; ಅದು ಭಾಷೆಯಲ್ಲಿ ಮಾತ್ರ ಜೀವ ತಳೆದು ನಿಲ್ಲಬಲ್ಲ ಮರ. ಆದರೆ ನೋಡಿ, ಹೇಗೆ ಅದು ತನ್ನೆಲ್ಲ ಪಂಚೇಂದ್ರಿಯಗಳನ್ನು ತೆರೆದುಕೊಂಡು ಸದಾ ಎಚ್ಚರವಿದೆ! ಕಾವ್ಯದ ಮಾಂತ್ರಿಕತೆ ಎಂದರೆ ಇದೇ ಸರಿ!

ಒಟ್ಟಿಗಿದ್ದರೂ ಒಂದಾಗಲಾರದ ಪ್ರೀತಿಯ ಬಿಕ್ಕಟ್ಟು ಸಂಕಲನದ ಹಲವು ಕವಿತೆಗಳ ವಸ್ತುವಿನ ಮುಖ್ಯ ಎಳೆಯಾಗಿದೆ.

ತುಂಬು ಚಂದಿರನು ನೋಡಿದಾಗ
ನನಗೆ ಕಾಣಿಸವುದು ಅಲ್ಲಿ
ಒಡೆದ ಕನ್ನಡಿ ಚೂರು
ಹೆಸರೇ ಇರದ ಒಂದು ಊರು.
(ಒಂದು ಬೆಳದಿಂಗಳ ರಾತ್ರಿ)

ಹೆಸರಿರದ ಒಂದು ಊರು, ಒಂದು ಸ್ಥಿತಿ ಅಥವಾ ಆಶಯವಾಗಿರಲು ಮಾತ್ರ ಸಾಧ್ಯ. ಒಂದು ಸ್ಥಿತಿಯಾಗಿ ಅದು ಒಡೆದ ಕನ್ನಡಿ ಚೂರು; ಆಶಯವಾಗಿ ಅದು ಎಂದೂ ಮೈಗೂಡದ್ದು. ಈ ಭಗ್ನಸ್ಥಿತಿ, ಸಂಕಲನದ ಇನ್ನೊಂದು ಕವಿತೆಯಲ್ಲಿ ಅಕರಾಳವಿಕರಾಳ ರೂಪಕವಾಗಿ ನಮಗೆ ಎದುರಾಗುತ್ತದೆ.

ರಾತ್ರಿಯಾಗುತ್ತಿದ್ದಂತೆ ಮೂಡುತ್ತವೆ
ರಾತ್ರಿ ಎಂಬ ಬೆತ್ತಲೆ ಹೆಂಗಸಿಗೆ ಸಾವಿರದೊಂದು ಮೊಲೆಗಳು
ಹುಲಿಕಣ್ಣು ಉಗುರುಗಳು
. . . . . . . . . . .
ಕನಸುಗಳ ಮೇಲೆ ಕಾಲಿಟ್ಟಂತೆ ಬೆಚ್ಚುವ
ರಾತ್ರಿಯ ಬೀದಿಗಳಿಗೆ ಗೊತ್ತು
ಈ ರಾತ್ರಿ ಎಂಬುದು ಎಷ್ಟು ಭಾರವಾಗಿದೆ ಎಂದು
('ರಾತ್ರಿ')

ಅದು ಅತೃಪ್ತ ಹಂಬಲಗಳು ಮತ್ತು ಒಂಟಿತನ ಕಾಡುವ 'ಕತ್ತಲಿಗೆ ಕತ್ತಲು ಸೇರಿದಂಥ' ರಾತ್ರಿ. 'ಪುಟ್‌ಪಾತ್ ಮೇಲೆ ಚಿಂದಿಯುಟ್ಟು ನಡೆದಾಡುವ ಕುರುಡು ಭಿಕ್ಷುಕ'ನಂತಹ ದಿಕ್ಕೆಟ್ಟ ಅನಾಥ ರಾತ್ರಿ. 'ಸಿಗದ ಹುಡುಗಿಯರನ್ನು ನೆನೆಸಿಕೊಂಡು ಪಬ್ಬಿನಲ್ಲಿ ಬಿಯರ್ ಬುರುಗಿಸುವ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಗುಜರಾಯಿಸುವ, ಅಂಗೈಗನ್ನಡಿಯಲ್ಲಿ ಅಶ್ಲೀಲ ಸಿನಿಮಾಗಳನ್ನು ಸೆರೆ ಹಿಡಿದು ಹಸ್ತಮೈಥುನ ಮಾಡಿಕೊಳ್ಳುವ ಪಡ್ಡೆ ಹುಡುಗರ ಹಗಲು, ಇಳಿಸಂಜೆಗಳಲ್ಲೂ ಇದೇ ಕರಾಳ ರಾತ್ರಿ. (ಚೇ-)ಆದರೆ ಚೆ-ಗುವೇರಾ ಕುರಿತ ಈ ಕವಿತೆಯಲ್ಲಿ ಯುವಕರ ಆ ಸ್ಥಿತಿಯ ನಿರ್ವಿಣ್ಣತೆ ಯನ್ನು ಮಾತ್ರ ಕವಿ ಚಿತ್ರಿಸುತ್ತಿಲ್ಲ. ಈ ಸ್ಥಿತಿಯಿಂದ ಬಿಡುಗಡೆಯ ಒಂದು ಹೊಳಹು. ಆ ಹುಡುಗರು ಧರಿಸುವ ಚೆ-ಗುವೇರನ ಚಿರಪರಿಚಿತ ಮುಖವಿರುವ ಟಿ-ಶರ್ಟಿನಲ್ಲೇ ಇದೆ. ಚೆ-ಚಿತ್ರಿಕೆಯ ಟೀ ಶರ್ಟು ಆ ಹುಡುಗರಿಗೆ ಫ್ಯಾಶನ್, ಆದರೆ ಕವಿಗೆ ಅದು ವರ್ತಮಾನದ ನಿರರ್ಥಕತೆಗೆ ಪ್ರತಿಯಾಗಿ ವಿಮೋಚನೆಯ ಸಂಕೇತ. ಚೆ-ಗುವೇರಾ ಸಾಮ್ರಾಜ್ಯಶಾಹಿಯ ವಿರುದ್ಧ ಅಮೆರಿಕ ಖಂಡದ ದೇಶಗಳು ನಡೆಸಿದ ಹೋರಾಟದ ಮಹಾನ್ ಸಂಕೇತ. ಅವನನ್ನು ಕೊಲ್ಲಲು ಬಂದ ಅಮೆರಿಕದ ಬಾಡಿಗೆ ಬಂಟನಿಗೆ, ಚೆ ಹೇಳಿದ, ನೀನು ನನ್ನನ್ನು ಕೊಲ್ಲಲೆಂದೇ ಬಂದವ; ನನಗೆ ಗೊತ್ತು. ಗುಂಡು ಹಾರಿಸು; ನೀನೊಬ್ಬ ಹೇಡಿ. ಆದರೆ ತಿಳಕೊ. ನೀನೊಬ್ಬ ಮನುಷ್ಯನನ್ನು ಕೊಲ್ಲುತ್ತಿದ್ದೀಯ. ಚೆ, ಚಿತ್ರದ ಟಿ ಶರ್ಟಿನೊಂದಿಗೆ ಪ್ರಾರಂಭವಾಗುವ ಈ ಕವಿತೆ, ಬೊಲಿವಿಯಾದ ಕಾಡಿನಲ್ಲಿ ಸಂಭವಿಸಿದ ಚೆಯ ಕೊಲೆಯ ನೆನಪಿನೊಂದಿಗೆ ಮುಗಿಯುತ್ತದೆ.

ಸಂಕಲನದಲ್ಲಿ ಚೆ-ಗುವೇರನ ಬದುಕು ಇರಸ್ತಿಕೆಯ ಅರಿವು ಮತ್ತು ಬಿಡುಗಡೆಯ ಒಂದು ಸಂಕೇತವಾದರೆ, ಬುದ್ಧ ಅಂತಹ ಇನ್ನೊಂದು ಸಂಕೇತ. ಹೆಚ್ಚಿನ ವಿವರಣೆ ಬೇಡದ ಅದೇ ಹೆಸರಿನ ಈ ಪದ್ಯ ಇಡಿಯಾಗಿ ಉದ್ಧರಿಸಲು ಯೋಗ್ಯವಾಗಿದೆ.

ಬುದ್ಧನೆಂದರೆ
ತಳವಿರದ ತತ್ರಾಣಿ
ಕ್ಷಣಕ್ಷಣ ತುಂಬುತ್ತಲೇ
ಕ್ಷಣಕ್ಷಣ ಬರಿದಾಗುತ್ತಲೇ
ಇರುವ
ಬುದ್ಧನೆಂದರೆ
ಮಾಂಸದಂಗಡಿಯಲಿ ಕಡೆದಿಟ್ಟ
ಕುರಿಯ ರುಂಡ ಮತ್ತದರ
ಕಣ್ಣುಗೋಲಿಯಲಿ ಸೆರೆಸಿಕ್ಕ
ಕಸಾಯಿಯವನ ಅಸಹಾಯಕ ಚಿತ್ರ.

ಝೆನ್‌ಕತೆಯೊಂದರ ಹ್ರಸ್ವತೆ ಮತ್ತು ಅರ್ಥಪೂರ್ಣತೆಗಳನ್ನು ಪಡೆದಿರುವ ಈ ಕವಿತೆಯ ಮೊದಲ ಐದು ಸಾಲುಗಳಲ್ಲಿ ಬುದ್ಧ ಬೋಧಿಸಿದ ಬದುಕಿನ ನಿರಂತರ ಚಲನಶೀಲತೆ, ಪರಿವರ್ತನಶೀಲತೆ ಮತ್ತು ಆದಿ ಅಂತ್ಯ, ಹುಟ್ಟು ಸಾವುಗಳನ್ನು ಮೀರಿದ ಸಾತತ್ಯಗಳ ದರ್ಶನವಿದೆ. ಈ ವಾಕ್ಯಕ್ಕೆ ಪೂರ್ಣವಿರಾಮದ ನಿಲುಗಡೆ ಇಲ್ಲ ಎಂಬು ದನ್ನೂ ಗಮನಿಸಬೇಕು. ಕವಿತೆಯ ಎರಡನೆಯ ಚರಣದಲ್ಲಿ ಕಸಾಯಿ ಮತ್ತು ಕುರಿಯ ರೂಪಕದ ಮುಖಾಂತರ ಕವಿ ಹಿಂಸೆ ಎಸಗುವವನು ಮತ್ತು ಆ ಹಿಂಸೆಗೆ ಬಲಿಯಾಗುವ ಜೀವ-ಎರಡು ಪಾತ್ರಗಳೂ ಹಂಗಾಮಿ; ಹಿಂಸೆ ಮತ್ತು ನೋವು ಮಾತ್ರ ಶಾಶ್ವತ ಎಂಬ ಸತ್ಯವನ್ನು ಕಾಣಿಸುತ್ತಾರೆ. ಸಂಕಲನದ ಇನ್ನೊಂದು ಕವಿತೆ. ಪಶ್ಚಾತ್ತಾಪದಲ್ಲಿ ಈ ಸತ್ಯ ಇನ್ನೊಂದು ರೂಪಕವಾಗಿ ವ್ಯಕ್ತವಾಗುತ್ತದೆ. ಕೊಲೆಗಾರನೊಬ್ಬ ಹಿಡಿದು ಕೊಳ್ಳಲು ಕೊಟ್ಟ ಕುಸುರಿ ಕೆಲಸದ ಚಾಕು(ಕೊಲೆಯ ಹತ್ಯಾರಕ್ಕೂ ಕುಸುರಿ ಕೆಲಸ!) ಕವಿಗೆ ಹೀಗೆ ಕಾಣುತ್ತದೆ.

ಕೆಲಗಳಿಗೆ ಯಾರದೋ ವಿಧಿ ನನ್ನ ಅಂಗೈಯೊಳಗೆ
ಮಲಗಿತ್ತು ಮಗುವಿನಂತೆ

'ಯಾರದೋ ವಿಧಿ ನನ್ನ ಅಂಗೈಯಲ್ಲಿ' ಎಂಬ ಮಾತು 'ಮತ್ತೊಬ್ಬನ ಆತ್ಮಚರಿತ್ರೆ' ಎಂಬುದರ ಹಾಗೆ ನಾವೆಲ್ಲರೂ ಹಂಚಿಕೊಂಡಿರುವ ಮನುಷ್ಯ ಪಾಡನ್ನು ಹೇಳುವಂತ ಹದ್ದು. ಕವಿಯ ಈ ಜೀವನದೃಷ್ಟಿಯ ಇನ್ನೊಂದು ಸಶಕ್ತ ಪ್ರತಿಮೆ ಸಂಕಲನದ 'ಇಲ್ಲಿಂದಲೇ' ಎಂಬ ಶೀರ್ಷಿಕೆಯ ಕವಿತೆಯು ಮೊದಲಿಗೇ ನಾಟಕೀಯವಾಗಿ ನಮಗೆ ಎದುರಾಗುತ್ತದೆ.

ಆ ಕಡಲತೀರದ
ಆ ನಗರದ
ಆ ಹೋಟಲಿನ
೩೦೬ನೇ ನಂಬರಿನ ರೂಮಿನಲ್ಲಿ
ಅದೇ ಆ ನಾವು ಮಲಗೆದ್ದು ಬಂದ
ಜೋಡಿ ಮಂಚಗಳ ಮೇಲೆ
ಮತ್ತೆ ಯಾರೋ ಬಂದು ಕುಳಿತಿರಬಹುದು
ಸಖಿ

'ಆ ಕಡಲತೀರ ಆ ನಗರ ಆ ಹೋಟೆಲಿನ ಆ ರೂಮಿನ, ಆ ಜೋಡಿ ಮಂಚಗಳ ಮೇಲೆ-ಈ ಮಾತುಗಳು ಕಾಲದೇಶ ಸಂದರ್ಭಗಳನ್ನು ನಿರ್ದಿಷ್ಟಗೊಳಿಸುತ್ತವೆ. ಆದರೆ ಈಗ 'ಅದೇ ಆ ಮಂಚಗಳ ಮೇಲೆ ಕುಳಿತ ಯಾರೋ' ಎನ್ನುವಲ್ಲಿ ಆ ನಿರ್ದಿಷ್ಟತೆ ಮಾಯವಾಗಿ ಅಪರಿಚಿತತೆ ಮತ್ತು ಪರಕೀಯತೆ ಕಾಣಿಸಿಕೊಳ್ಳುತ್ತದೆ. ಆ ಹೋಟಲಿನ ಆ ರೂಮಿನ ಜೋಡಿ ಮಂಚಗಳು ಹೆಣ್ಣು ಗಂಡುಗಳ ಪ್ರೀತಿ ಇಲ್ಲದ ಹಂಗಾಮಿ ಸಮಾಗಮವನ್ನಲ್ಲದೆ ಬೇರೆ ಏನನ್ನೂ ಸಂಕೇತಿಸಲಾರವು. ಅದಕ್ಕೆ ಸರಿಯಾಗಿ ಅಲ್ಲಿ ಬರುವ ಜೋಡಿಗಳೂ 'ಒಬ್ಬರ ಮೇಲೊಬ್ಬರು ಎರಗಲು ಸಜ್ಜಾಗಿರುವ ಜೋಡಿ ಚಿರತೆಗಳಂತಹವರು'.

ಪ್ರೀತಿ, ಬಾಂಧವ್ಯಗಳೆಲ್ಲ ಕೇವಲ ವ್ಯವಹಾರವಾಗಿರುವ ಈ ಕೆಟ್ಟ ಕಾಲದಲ್ಲೂ ಚೆಯಂತಹವರ ವ್ಯಕ್ತಿತ್ವ ಕವಿಗೆ ಬದುಕಿನ ಒಂದು ಸಾಧ್ಯತೆಯಾಗಿ ಕಂಡರೆ, ನೊಂದ ವರಿಗೆ ತಮ್ಮ ಸ್ಥಿತಿಯ ಬಗ್ಗೆ ಕೊನೆಗಾದರೂ ಬರಬಹುದಾದ ಅರಿವು ಮತ್ತು ಸಿಟ್ಟು ಇನ್ನೊಂದು ಸಾಧ್ಯತೆಯಾಗಿ ಕಾಣುತ್ತದೆ. ಚೆಯ ಹೋರಾಟದ ಹಾಗೆ ಈ ಸಿಟ್ಟು ಕೂಡ ಇತಿಹಾಸವನ್ನು ಬದಲಾಯಿಸುತ್ತದೆ ಎಂಬುದು ಕವಿಯ ವಿಶ್ವಾಸ. ಸಂಕಲನದಲ್ಲಿ ಈ ಕ್ರಾಂತಿಕಾರೀ ಅರಿವನ್ನು ಮೂಡಿಸುವ ಕವಿತೆ 'ಇವು ೧೦ ನಂಬರಿನ ಶೂಗಳು' ನಿಸ್ಸಂದೇಹವಾಗಿ ಇದು ಅಮೆರಿಕದ ಸಾಮ್ರಾಜ್ಯಶಾಹಿಯನ್ನು ಪ್ರತಿಭಟಿಸುವ ಒಂದು ಬಂಡಾಯ ಕವಿತೆ. ಆದರೆ ಅದು, ಮಾಮೂಲಿ ಬಂಡಾಯ ಘೋಷಣೆಗಳ ಬದಲು ವಿಡಂಬನೆ ಲೇವಡಿಗಳ ಮುಖಾಂತರ ಅಮೇರಿಕದ ಅಧ್ಯಕ್ಷನ ಮುಖಕ್ಕೆ ಉಗಿಯುತ್ತದೆ, ಮುಂತಝಾರ್ ಅಲ್ ಜಯೀದಿ ಎಂಬ ಇರಾಕಿ ಪತ್ರಕರ್ತ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಶ್‌ನ ಮುಖಕ್ಕೆ ಎಸೆದ ನಂ ೧೦ ಸೈಜಿನ ಶೂ, ಈ ಕವಿತೆಯ ವಸ್ತು. ಪತ್ರಕರ್ತ ಎಸೆದ ಅವನ ಆ ಶೂ ದುರದೃಷ್ಟವಶಾತ್ ಸ್ವಲ್ಪದರಲ್ಲಿ ಗುರಿ ತಪ್ಪಿದರೂ ಕವಿಯ ಮಟ್ಟಿಗೆ ಶೋಷಿತರ ಆಕ್ರೋಶದ ಒಂದು ಶಾಶ್ವತ ಸಂಕೇತವಾಗಿದೆ. ಬುಶ್‌ನ ಮುಖಕ್ಕೆ ಎಸೆದ ಶೂ ಕವಿಗೆ ವಿನ್ಸೆಂಟ್ ವ್ಯಾನ್‌ಗೋನ ವರ್ಣ ಚಿತ್ರಗಳನ್ನು ನೆನಪಿಸುತ್ತದೆ. ವ್ಯಾನ್‌ಗೋ ಶೂಗಳ ಒಂದು ಸರಣಿ ವರ್ಣ ಚಿತ್ರಮಾಲಿಕೆಯನ್ನೇ ಮಾಡಿದ್ದ. ಅವುಗಳ ಕುರಿತು ಅನಂತಮೂರ್ತಿ 'ವ್ಯಾನ್‌ಗೋನ ಶೂಗಳು' ಎಂಬ ಸುಂದರ ಕವಿತೆಯೊಂದನ್ನು ರಚಿಸಿದ್ದಾರೆ. ವ್ಯಾನ್‌ಗೋನ ಶೂಗಳಿಗೆ, ಅವುಗಳನ್ನು ಮೆಟ್ಟಿ ಸವೆಸಿದ ಬಡವರ ದುಡಿಮೆ ಅಪೂರ್ವ ಜೀವಂತಿಕೆಯನ್ನು ಒದಗಿಸಿರುವುದನ್ನು ಅನಂತಮೂರ್ತಿ ತಮ್ಮ ಕವಿತೆಯಲ್ಲಿ ಕಾಣಿಸುತ್ತಾರೆ. ಆರಿಫ್ ರಾಜಾ ಅವರ ಕವಿತೆಯ ಇರಾಕಿ ಪತ್ರಕರ್ತನ ಶೂನ ಜೀವಂತಿಕೆ ಇರುವುದು: ಅವನು ಅದನ್ನು ಅಮೆರಿಕದ ಅಧ್ಯಕ್ಷನ ಮುಖಕ್ಕೆ ಎಸೆದದ್ದರಲ್ಲ್ಲಿ. ವ್ಯಾನ್‌ಗೋನ ಶೂಗೆ ಬಡವರ ದುಡಿಮೆಯ ಇತಿಹಾಸವಿದ್ದರೆ ಇರಾಕಿ ಪತ್ರಕರ್ತನ ಶೂಗೆ ಬಡವರ ಸಿಟ್ಟಿನ ಇತಿಹಾಸವಿದೆ. ಅಮೆರಿಕದ ಅಧ್ಯಕ್ಷನಿಗಾದರೋ ಗೆದ್ದವರು ಬರೆದ ಇತಿಹಾಸವಿದೆ. ಅಮೆರಿಕದ ಪ್ರಜಾಪ್ರಭುತ್ವದ ಹಾಗೆ ಅದರ ಇತಿಹಾಸವೂ ಗೆದ್ದವರು, ಗೆದ್ದವರಿಗಾಗಿ, ಗೆದ್ದವರಿಂದ ಬರೆಸಿದ ಇತಿಹಾಸ ಹಾಗಾಗಿ ಕವಿ ಹೇಳುವಂತೆ,

ಎಷ್ಟೊಂದು ಪಾದಗಳ ಭಾರ ಹೊತ್ತು ಬೆವರು ಕುಡಿದು
ಎಷ್ಟೊಂದು ರಸ್ತೆಗಳ ತುಳಿದು ಧೂಳು ಹಿಡಿದು
ಕಾಫಿ ತೋಟದಲೊ, ಕೆಸರುಗದ್ದೆಯಲೊ ಓಡಾಡಿರಬಹುದಾದ
ಈ ಶೂಗಳಿಗೆ ಇತಿಹಾಸವೇ ಇಲ್ಲ.
ಇತಿಹಾಸವಿಲ್ಲದ, ಅಂದರೆ ಗೆದ್ದವರ ಇತಿಹಾಸವಿಲ್ಲದ ಅಂತಹದ್ದೊಂದು ಶೂ ಈಗ ಇತಿಹಾಸ ನಿರ್ಮಿಸಿದೆ. ಆ ಶೂ ನೆನಪಿನಲ್ಲಿ
ಈಗ ದೇಶದ ತುಂಬಾ ಚೌಕಗಳಲ್ಲಿ
ಭಾರಿಗಾತ್ರದ ಶೂ ಪ್ರತಿಮೆಗಳು
ನಿರ್ಮಾಣಗೊಂಡ ಸುದ್ದಿ ಬರುತಿದೆ.

ಕವಿಯ ಮಾತು ಯಥಾರ್ಥವಿರಲಾರದು. ಏಕೆಂದರೆ ಇರಾಕ್‌ನಲ್ಲಿ ಈಗ ಇರುವುದು ಅಮೆರಿಕದ ಕೈಗೊಂಬೆ ಸರಕಾರ. ಅದು ಅಂತಹದಕ್ಕೆಲ್ಲ ಅವಕಾಶ ಕೊಡಲಾರದು. ಆದರೆ, ಭಾರೀ ಗಾತ್ರದ ಶೂನ ಪ್ರತಿಮೆ ನಿಜಕ್ಕೂ ಒಂದು ಒಳ್ಳೆಯ ಸರ್ರ್ರಿಯಲ್ ಕಲಾಕೃತಿಯಾಗಬಹುದು. ಅಮೇರಿಕದ ಅಧ್ಯಕ್ಷನಿಗೆ ಅದಕ್ಕಿಂತ ಒಳ್ಳೆಯ ಸ್ಮಾರಕವಿರಲಾರದು.

ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ಇಡಿಯಾಗಿ ಸೂಚಿಸಲು ಇಂಗ್ಲಿಷಿನಲ್ಲಿ 'ಬಾಡಿ ಪಾಲಿಟಿಕ್ಸ್' ಎಂಬ ನುಡಿಗಟ್ಟಿದೆ. ಆರಿಫ್ ಈ ಸಂಕಲನದ 'ಪ್ರಧಾನಿ ಮತ್ತು ವೇಶ್ಯೆ' ಎಂಬ ಕವಿತೆಯಲ್ಲಿ 'ದೇಶದೇಹ' ಎಂಬ ಮಾತನ್ನು ಅದೇ ಅರ್ಥದಲ್ಲಿ ಬಳಸಿದ್ದಾರೆ. ಪ್ರಧಾನಿಗೂ ವೇಶ್ಯೆಗೂ ಎತ್ತಣಿಂದೆತ್ತಣ ಸಂಬಂಧ ಎಂದು ಶೀರ್ಷಿಕೆ ನೋಡಿ ಚಕಿತರಾಗುವವರಿಗೆ ಕವಿತೆಯಲ್ಲಿ ಆ ಕುರಿತು ವಿವರಣೆ ಇದೆ. ಪ್ರಧಾನಿಗೆ ಗೊತ್ತಿರದ ದೇಶದೇಹದ ಗುಟ್ಟುಗಳು ಒಬ್ಬ ವೇಶ್ಯೆಗೆ ಗೊತ್ತಿರುತ್ತದೆ. ವೇಶ್ಯೆಗೆ ದೇಹವೇ ಕಾಯಕವೂ ಹೌದು; ವ್ಯವಹಾರವೂ ಹೌದು. ಅವಳಿಗೆ ತನ್ನದೇ ಆದ ನಿಯತ್ತು ಮತ್ತು ವೃತ್ತಿ ಧರ್ಮಗಳೂ ಇವೆ. ಹಾಗಾಗಿ ಅವಳಿಗೆ ದೇಹದ ಹಸಿವು, ನೀರಡಿಕೆ, ನಿದ್ರೆ, ಕಾಮ, ಮಲಮೂತ್ರಗಳ ಅವಸರವೆಲ್ಲ ಚೆನ್ನಾಗಿ ಗೊತ್ತು. ಸ್ವಲ್ಪ ಯೋಚಿಸಿದರೆ ದೇಶದ ರಾಜಕೀಯಕ್ಕೂ ಇದಕ್ಕೂ ಹತ್ತಿರದ ಸಂಬಂಧವಿದೆ. ನಮ್ಮ ದೇಹ ನಮ್ಮದು ಎನ್ನುವ ವ್ಯಕ್ತಿವಾದಿಗಳು ಆ ಕುರಿತು, ಈ ನಾಡಿನ ದಲಿತ, ಮುಸ್ಲಿಮ್ ಮತ್ತು ಆದಿವಾಸಿ ಹೆಂಗಸರನ್ನು ಒಂದು ಮಾತು ಕೇಳಬೇಕು. ಪ್ರಧಾನಿಗೆ ದೇಶದೇಹದ ಗುಟ್ಟುಗಳು ಗೊತ್ತಿಲ್ಲ ಎಂಬ ಕವಿಯ ಮಾತು ಅಕ್ಷರಶಃ ಕೂಡ ನಿಜ.

ದೇಶದ ಪ್ರಧಾನಿಗೂ ಗೊತ್ತಿರದ ದೇಶ ದೇಹದ ಗುಟ್ಟುಗಳನ್ನು ವೇಶ್ಯೆ ಬಿಟ್ಟರೆ, ಸಾರ್ವಜನಿಕ ಶೌಚಾಲಯಗಳು ಮಾತ್ರ ಕೇಳಿಸಿಕೊಳ್ಳುತ್ತವೆ. ಪ್ರಸ್ತುತ ಸಂಕಲನದ ಕೊನೆಯ ಕವಿತೆ, 'ನಾನೊಂದು ಸಾರ್ವಜನಿಕ ಶೌಚಾಲಯ, ದೇಶದೇಹ ನಾರುತ್ತಿರು ವುದನ್ನು ಹೇಳುತ್ತದೆ. ಸಾರ್ವಜನಿಕ ಶೌಚಾಲಯಗಳನ್ನು ಒಂದಲ್ಲ ಒಂದು ಸಲ ಬಳಸಲೇಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಂಡ ಎಲ್ಲರಿಗೂ-ಕಡೆಯ ಪಕ್ಷ ಎಲ್ಲ ಗಂಡಸರಿಗೂ-ದೇಹದ ಮಲಮೂತ್ರ ವಿಸರ್ಜನೆಯ ಅವಸರದೊಂದಿಗೆ, ದೇಹದ ಇನ್ನೊಂದು ಅವಸರದ ಅನಿವಾರ್ಯತೆಯ ಅರಿವೂ ಆಗುತ್ತದೆ-ಅಲ್ಲಿನ ಗೋಡೆಗಳ ಸಚಿತ್ರ ಲೈಂಗಿಕ ಸಾಹಿತ್ಯದ ಮೂಲಕ. ಮರ್ಯಾದಸ್ಥರು ಮುಚ್ಚಿಟ್ಟುಕೊಳ್ಳಬಯಸುವ ಅವರ ಗುಪ್ತ ಇಂಗಿತಗಳೆಲ್ಲ ಅಲ್ಲಿ ಬಹಿರಂಗವಾಗುತ್ತವೆ.

ನಾನೊಮ್ಮೆ ಪಾರ್ಲಿಮೆಂಟು ಇನ್ನೊಮ್ಮೆ ನ್ಯಾಯಾಲಯ
ನಾನು ಧರ್ಮ ಮಗದೊಮ್ಮೆ ದೇವಾಲಯ
ನಾನು ದೇಶ ಕೆಲವೊಮ್ಮೆ ಭಾಷೆ
ನಾನು ಹೆಣ್ಣು ನಾನು ವೇಶ್ಯೆ

ಖ್ಯಾತ ಲೇಖಕ ಸಾದತ್ ಹಸನ್ ಮಾಂಟೋನ (೧೯೧೨-೧೯೫೫) 'ಮೂರು ಸರಳ ಹೇಳಿಕೆಗಳು' ಎಂಬ ಕತೆಯಲ್ಲಿ ಮಹಾದುರ್ವಾಸನೆಯ ಸಾರ್ವಜನಿಕ ಶೌಚಾಲಯವೊಂದು ದೇಶ ವಿಭಜನೆಯ ರಾಜಕೀಯಕ್ಕೆ ರೂಪಕವಾಗುವಂತೆ, ಆರಿಫ್‌ರ ಈ ಕವಿತೆಯಲ್ಲಿ ಶೌಚಾಲಯ ಸಾರ್ವಜನಿಕ ಬದುಕಿಗೆ ಸಂಕೇತವಾಗುತ್ತದೆ.

ದೇಶದೇಹದ ಗುಟ್ಟುಗಳನ್ನು ಕೇಳಿಸಿಕೊಳ್ಳದಿರುವವರು ರಾಜಕಾರಣಿಗಳು ಮಾತ್ರವೇ ಅಲ್ಲ. ರಾಜಕಾರಣಿಗಳನ್ನೂ ನಾಚಿಸುವಷ್ಟು ದಗಲ್ಬಾಜಿ ರಾಜಕೀಯದಲ್ಲಿ ತೊಡಗಿಕೊಂಡ ಧರ್ಮಗುರುಗಳು ಸಹ ದೇಹದ ಗುಟ್ಟುಗಳನ್ನು ಏಕೆ, ದೇಹದ ಚೀರಾಟಗಳನ್ನು ಸಹ ಕೇಳಿಸಿಕೊಳ್ಳುವುದಿಲ್ಲ. ಅಫಘಾನಿಸ್ತಾನದಲ್ಲಿ ಕಲ್ಲಂಗಡಿ ಹಣ್ಣಿನ ಆಸೆ ತೋರಿಸಿ ಜೆಹಾದಿಗಳು ಆರು ವರ್ಷದ ಹಸುಳೆಯನ್ನು ಮಾನವ ಬಾಂಬ್ ಆಗಿ ಪ್ರಯೋಗಿಸಿದ ಹೃದಯ ವಿದ್ರಾವಕ ಪ್ರಸಂಗವೊಂದು ವಸ್ತುವಾಗಿರುವ 'ದೇವರ ಮಕ್ಕಳು' ಎಂಬ ಕವನದಲ್ಲಿ ಜೆಹಾದಿಗಳು ಹಚ್ಚಿದ ಬೆಂಕಿ, ದುಡಿಯುವವರ ನಿತ್ಯದ ಬದುಕನ್ನು ನಾಶಗೊಳಿಸಿದೆ.

ಸುಟ್ಟು ಹೋಗಿದೆ
ಅಪ್ಪನ ಜಟಕಾಬಂಡಿ ಅಮ್ಮನ ಹಿತ್ತಲ ಕಲ್ಲಂಗಡಿ
ನಾವೇ ಖುದ್ದಾಗಿ ನೆಟ್ಟ ಚಿಟ್ಟೆಗಳ ತೋಟ

ಅಪ್ಪನ ಜಟಕಾಬಂಡಿ ಅಮ್ಮನ ಕಲ್ಲಂಗಡಿ ಹಣ್ಣು, ಮತ್ತು ಮನೆಯವರೆಲ್ಲರೂ ನೆಟ್ಟು ಬೆಳೆಸಿದ ಚಿಟ್ಟೆ ಆಡುವ ತೋಟ-ಕವಿತೆಯಲ್ಲಿ ಇವು ಒಟ್ಟಾಗಿ ಲೌಕಿಕ ಪಾರಮಾರ್ಥಿಕಗಳನ್ನು ಒಳಗೊಂಡ ನೈತಿಕ ವಿಶ್ವವೊಂದನ್ನು ಕಟ್ಟಿಕೊಳ್ಳುತ್ತವೆ. ಅಫಘಾನಿಸ್ತಾನದ ಜೆಹಾದಿಗಳು ಮಾತ್ರವಲ್ಲ. ಇಡೀ ಭಾರತ ಉಪಖಂಡದ ಧರ್ಮ ದುರಂಧರರೆಲ್ಲರೂ ಸೇರಿ ನಾಶಪಡಿಸಿರುವ ನೈತಿಕ ವಿಶ್ವ ಇದು. ಹಾಗಾಗಿ ಆರಿಫ್ ಅವರ ಕವಿತೆಗಳಲ್ಲಿ ಅಪರೂಪಕ್ಕೆ ಹಾಜರಾಗುವ ಮುಸ್ಲಿಮ್ ಸಮುದಾಯದ ಬದುಕಿನ ವಿವರಗಳು ಧರ್ಮ ಮತ್ತು ಸಂಸ್ಕೃತಿಯ ವಿಶಿಷ್ಟ ಕಾರಣಗಳಿಗಾಗಿ ಬರದೆ, ಮುಸ್ಲಿಮರು ಇತರರ ಜೊತೆ ಹಂಚಿಕೊಂಡಿರುವ ಸುಖಕಷ್ಟಗಳನ್ನು ಹೇಳುವುದಕ್ಕೆ ಮಾತ್ರ ಬರುತ್ತವೆ. ಉದಾಹರಣೆಗೆ ಮುಸ್ಲಿಮ್ ಯುವತಿಯರ ಬಗ್ಗೆ ಬರೆಯುತ್ತ ಅವರು ದಹೇಜ್ ಎಂಬ ಉರ್ದು ಶಬ್ದವನ್ನು ತನ್ನ ಕವಿತೆಯೊಳಗೆ ತಂದುಕೊಳ್ಳುವುದು.

ನಮಗೂ ಸಿಟ್ಟು ಬರುತ್ತದೆ
ವಯಸ್ಸಿಗೆ ಬಂದ ನಿಮ್ಮ ಅಕ್ಕ ತಂಗಿಯರಂತೆ ನಮ್ಮ ಅಕ್ಕತಂಗಿಯರು
ದಹೇಜಿನ ಸೀಮೆಎಣ್ಣೆ ಡಬ್ಬಕ್ಕೆ ಬಲಿಯಾದಾಗ

ಎಂದು ಹೇಳಲು. 'ರಾಜಧಾನಿಯ ಬೀದಿಗಳಲ್ಲಿ' ಎಂಬ ಕವಿತೆ, ಕವಿ, ಅವರೇ ಹೇಳಿ ಕೊಂಡ ಪ್ರಕಾರ, 'ದೇವರು ದಿಂಡರು ಎಂದು ಹೊಡೆದಾಡಿ ಸಾಯ್ತಾ ಇರೋ ಸುವ್ವರ್ ಸೂಳೇ ಮಕ್ಕಳಿಗಾಗಿ' ಬರೆದಿರುವಂತಹದ್ದು. ಆ ಕವಿತೆಯಲ್ಲಿ ಗೋಮಾಂಸ ತಿಂದದ್ದಕ್ಕೆ ಬತ್ತಲೆ ಮಾಡಿ ಅಟ್ಟಾಡಿಸಿದವರು ಮತ್ತು ಹಂದಿಮಾಂಸದ ವಿರುದ್ಧ ಫತ್ವಾ ಹೊರಡಿಸಿದವರು ಸಾವಿನ ವ್ಯಾಪಾರಿಗಳಾದರೆ, ದಾರಿಯಲ್ಲಿ ಬಿದ್ದ ಹೆಣಗಳನ್ನು ಹೊತ್ತು ನಡೆಯುವವರು ಎರಡೂ ಸಮುದಾಯಗಳ ಸಾಮಾನ್ಯರು. ಶಾಸ್ತ್ರ್ತ ಗ್ರಂಥಗಳಲ್ಲಿ ಕವಿಗೆ ಕಾಣದ ಬ್ರಹ್ಮಾಂಡ, ಬಿರಿಯಾನಿ ಬೇಯಿಸುವ ಕುಕ್ಕರಿನಲ್ಲಿ ಕಾಣುತ್ತದೆ; ಆ ಕುಕ್ಕರಿನೆಡೆಗೆ ಕಣ್ಣುನೆಟ್ಟು ಕುಂತ ಹಸಿದವರು ಮಂಡಿಯೂರಿ ಪ್ರಾರ್ಥನೆಗೆ ಕೂತವರ ಹಾಗೆ ಕಾಣುತ್ತದೆ(ಬಾಳೆ ಎಲೆಯಲಿ ಬಿರಿಯಾನಿ). ಜೀವ 'ದೇಹದೊಳಗೆ ಉರಿದ ಒಲೆಯ' ಹಾಗೆ ಕಾಣುತ್ತದೆ(ಶಿಕಾರಿ). 'ಬುರ್ಖಾ ಹೌಸಿನ ಮುಂದೆ' ಕವಿತೆಯಲ್ಲಿ ಮುಸ್ಲಿಮ್ ಮಹಿಳೆಯರ ಬುರ್ಖಾವನ್ನು ಮೀರಿ ನಿಲ್ಲುವ ಅವರ ಹೆಣ್ತನ ಮತ್ತು ತಾಯ್ತನಗಳನ್ನು ಕವಿ ಕಾಣಿಸುತ್ತಾರೆ.

ಆರಿಫ್ ಅವರ ಮೊದಲ ಸಂಕಲನ 'ಜಂಗಮ ಫಕೀರನ ಜೋಳಿಗೆ' ಬಗ್ಗೆ ಬರೆಯುತ್ತ ಅಲ್ಲಿನ ಕೆಲವು ಕವಿತೆಗಳು ಅಸ್ಪಷ್ಟವಾಗಿವೆ ಎಂದು ಸಿರಾಜ್ ಅಹ್ಮದ್ ದೂರಿದ್ದಾರೆ. ಆ ಅಸ್ಪಷ್ಟತೆಯನ್ನು ಅವರು ಕವಿಯ ಸೃಜನಶೀಲ ಪುಂಡಾಟಿಕೆ ಎಂದು ಭಾವಿಸುತ್ತಾರೆ. ಕವಿತೆಯಲ್ಲಿ ಸ್ಪಷ್ಟತೆಯಾಗಲಿ, ಅಸ್ಪಷ್ಟತೆಯಾಗಲಿ, ಅಖೈರುಸ್ಥಿತಿ ಅಲ್ಲ. ಜೊತೆಗೆ ಮೊದಲ ಓದಿಗೇ ಎಲ್ಲವೂ ಸ್ಪಷ್ಟವಾಗಿ ಬಿಡುವ ಕವಿತೆಗಳ ದೊಡ್ಡ ಸಮಸ್ಯೆ ಎಂದರೆ, ಎರಡನೆಯ ಸಲ ಅವುಗಳನ್ನು ಓದುವ ಗೋಜಿಗೆ ಯಾರೂ ಹೋಗದಿರುವುದು. ಆದರೆ ಅರ್ಥ ವೆಂಬುದು ಹಂಗಾಮಿ ಎಂಬ ರಿಯಾಯಿತಿಯನ್ನು ಕೊಟ್ಟ ಮೇಲೆ ಸಹ, ಪ್ರಸ್ತುತ ಸಂಕಲನದ ಕೆಲವು ಕವಿತೆಗಳು ನನಗೂ ಅರ್ಥವಾಗಿಲ್ಲ. ಕವಿಯ ಮುಖೋದ್ಗತ, ಓದುಗನ ಹೃದ್ಗತವಾಗುವುದಕ್ಕೆ ಬೇಕಾದ ಸಂವಹನ ಆ ಕವಿತೆಗಳಿಗೆ ಸಿದ್ಧಿಸಿಲ್ಲ. ಅವುಗಳಲ್ಲಿ ಕೆಲವು ಕವಿತೆಗಳಿಗಾದರೂ ಕವಿ ಅವುಗಳ ಸಂದರ್ಭವನ್ನು ವಿವರಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ನನಗೆ ಅನ್ನಿಸಿತು. ಅದು ಹೇಗೂ ಇರಲಿ, ಆರಿಫ್ ಒಳ್ಳೆಯ ಕವಿ ಎಂಬುದರಲ್ಲಿ ದುಸರಾ ಮಾತಿಲ್ಲ. ಪ್ರಸ್ತುತ ಸಂಕಲನಕ್ಕೆ ಮುನ್ನುಡಿ ಬರೆಯಲು ಹೇಳಿ ಅವರು ನನ್ನ ಬಗ್ಗೆ ವಿಶೇಷ ಆದರ ಗೌರವಗಳನ್ನು ತೋರಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...