Saturday, August 31, 2013

ಢುಂಢಿ ಲೇಖಕ ಯೋಗೀಶ್ ಮಾಸ್ಟರ್ ಯಾರು ?

ಢುಂಢಿ ಲೇಖಕ ಯೋಗೀಶ್ ಮಾಸ್ಟರ್ ಅವರದು ಬಹುಮುಖ ಪ್ರತಿಭೆ.  ಅವರು ಸಾಹಿತ್ಯ, ಸಂಗೀತ, ನೃತ್ಯ, ನಟನೆ ಹೀಗೆ ಕಲೆಗಳನ್ನು ಮೈಗೂಡಿಸಿಕೊಂಡಿರುವ ಒಬ್ಬ ಕಲಾವಿದ. ಕ್ರಿಯಾಶೀಲ ಬರವಣಿಗೆ, ಕಾದಂಬರಿ, ಕಥೆ ಬರೆಯುವತ್ತ ಆಸಕ್ತಿ ಬೆಳೆಸಿಕೊಂಡ ಯೋಗೇಶ್ 16ನೇ ವಯಸ್ಸಿಗೆ 'ಭಗ್ನ ಹೃದಯ' ಎಂಬ ಕವನ ಸಂಕಲನ ಹೊರ ತಂದವರು.

ತರಂಗ ಪತ್ರಿಕೆಯಲ್ಲಿ ಪ್ರಕಟವಾದ 'ಸಮಾನಾಂತರ ರೇಖೆಗಳು' ಜನಪ್ರಿಯತೆ ಪಡೆದಿದ್ದಲ್ಲದೆ ಹಲವಾರು ಒಡೆದ ಕುಟುಂಬಗಳನ್ನು ಒಂದುಗೂಡಿಸಿದೆ. ನೂರಾರು ಲೇಖನ, ಕವನ, ಹಾಡುಗಳನ್ನು ಯೋಗೇಶ್ ಬರೆದಿದಿದ್ದಾರೆ. 
ಜೋ ಜೋ ಲಾಲಿ ಎಂಬ ಲಾಲಿಹಾಡುಗಳ ಸಂಗ್ರಹವಿರುವ ಆಲ್ಬಂ ಕೂಡಾ ಹೊರ ತಂದಿರುವ ಇವರು ಅಂತರಾಕ್ಷಿ, ಭೂಮಿ, ಸಿತಾರಾ ಮುಂತಾದ ಅಲ್ಬಂಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರ ವೃತ್ತಿ ಬದುಕಿನ ಒಂದು ಸಣ್ಣ ನೋಟ ಇಲ್ಲಿದೆ:

ಡಿಸೆಂಬರ್ 20 ರಂದು 1968ರಲ್ಲಿ ಹುಟ್ಟಿದ ಯೋಗೀಶ್ ಅವರು ಟಿಸಿಎಚ್ ಓದಿದ್ದು 16 ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. 25 ವರ್ಷಗಳ ಕಾಲ ಕೌನ್ಸಿಲರ್ ಆಗಿದ್ದು, 10 ವರ್ಷಗಳ ಕಾಲ ಆಧಾತ್ಮ ಪ್ರವಾಚಕರಾಗಿದ್ದು, 25 ವರ್ಷಗಳ ಕಾಲ ನಾಟಕಾಕಾರರಾಗಿ ಕಾಲ ಸವೆಸಿದ್ದಾರೆ. ಗುರುಗಳಾಗಿ ಹಲವರನ್ನು ನಾಟಕ ರಂಗ, ಕಿರುತೆರೆ, ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.
 

ಸಿನೆಮಾ ಕ್ಷೇತ್ರದ  ಬಿ. ಜಯಶ್ರೀ, ಸುರೇಶ್ ಅನಗನಹಳ್ಳಿ, ಆರ್ ನಾಗೇಶ್, ಎಂಎಸ್ ಸತ್ಯು, ಹಂಸಲೇಖ, ವಿ ಮನೋಹರ್ ಅವರುಗಳ ಜತೆ ಕೆಲಸ ಮಾಡಿದ್ದಾರೆ. ಚಿತ್ರಕಥೆ, ನಿರ್ದೇಶನ, ಸಂಗೀತ ಸಂಯೋಜನೆ, ಭಾಷಣ, ನೃತ್ಯ ಸಂಯೋಜನೆ, ಪ್ರವಾಸ, ಫೋಟೋಗ್ರಾಫಿ, ಮಾನವ ಜನಾಂಗ ಬಗ್ಗೆ ಅಧ್ಯಯನ ಎಲ್ಲವೂ ಇವರಿಗೆ ಇಷ್ಟ.

ಸುಮಾರು 208ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇಂಗ್ಲೀಷ್ ಹಾಗೂ ಕನ್ನಡ ನಾಟಕರಂಗ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಕೆರೆಗೆ ಹಾರ, ಮಹಾಕವಿ ಕಾಳಿದಾಸ, ಶ್ರೀರಾಘವೇಂದ್ರ ಮಹಿಮೆ, ಅಲ್ಲಮ ಪ್ರಭು, ಕಲ್ಯಾಣ ಕ್ರಾಂತಿ, ಸಿದ್ದರಾಮ, ಪುಷ್ಪಕ ವಿಮಾನ, basic instinct, mr. detective, ave maria, once upon a time, Call of the God ಮುಂತಾದವು ಇವರು ಅಭಿನಯಿಸಿದ ನಾಟಕಗಳಾಗಿವೆ.

ಜೋ ಜೋ ಲಾಲಿ, ದೂರಿ ದುದ್ದೂರಿ, ವೇದ-ಗಾದೆ, ಗೋಲ್ಗಾಥ ಗೀತೆ, ರಂಗ ಜ್ಯೋತಿ, ಅಂಧೇರಿ ನಗರಿ, ಚಿನ್ನಾರಿ ಚಿಲಿಪಿಲಿ ಸೇರಿದಂತೆ 17 ಆಲ್ಬಂಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಯು.ಕೆ ಅರುಣ್ ಹಾಗೂ ಶ್ರೀಮತಿ ರಾಧಾ ಅಮರನಾಥ್ ಅವರಿಂದ ಭರತನಾಟ್ಯ ಕಲಿತಿದ್ದಾರೆ. ಶಾಸ್ತ್ರೀಯ ನೃತ್ಯ, ಬ್ಯಾಲೆ, ಪಾಶ್ಚಿಮಾತ್ಯ, ಸಮಕಾಲೀನ ನೃತ್ಯ ಪ್ರಕಾರಗಳಲ್ಲೂ ಪರಿಣತರು.

ಸಮಾನಾಂತರ ರೇಖೆಗಳು, ಶುಭ ರಾತ್ರಿ, ಬಾ ಕಂದ ಬಾ, ಭಗ್ನ ಹೃದಯ, ಕ್ಷಮೆಯಿರಲಿ, ಗಿರಿಜಾ, ಅಂಕುರ, ದಿವ್ಯ ಜೀವನಕ್ಕೆ ಪ್ರವೇಶಿಕೆ (ಅನುವಾದ), ಯೋಗ, ಮುದ್ರಾ, ಬಂಧ ಹಾಗೂ ಪ್ರಾಣಾಯಾಮ (ಅನುವಾದ)..ಮುಂತಾದ 17 ಕೃತಿಗಳನ್ನು ಪ್ರಕಟಿಸಿದ್ದಾರೆ
 

ಹಲವಾರು ಚಿತ್ರಗಳಿಗೆ ವಾಯ್ಸ್ ಓವರ್- ನಿರ್ದೇಶನ ಮಾಡಿದ್ದಾರೆ,. ಬೆಡ್ ಟೈಮ್ ಸ್ಟೋರಿಸ್, ಟೇಲ್ಸ್ ಆಫ್ ತೆನಾಲಿ ರಾಮ, ಪಂಚತಂತ್ರ ಟೇಲ್ಸ್, ನೀತಿ ಕಥೆಗಳು, ಜಾತಕ ಟೇಲ್ಸ್ ಎಲ್ಲವೂ ಇಂಗ್ಲೀಷ್ ನಲ್ಲಿದೆ.
ನಾಳೆ ಬರುವುದು ಮತ್ತೆ, ಅಹಿಂಸಾ ಪರಮೋಧರ್ಮ, ಬುದ್ಧ ಪೂರ್ಣಿಮಾ, ರಂಜಾನ್, ಕ್ಷಮೆಯಿರಲಿ, ಆನಂದವನ ಮುಂತಾದ ಎಂಟಕ್ಕೂ ಅಧಿಕ ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆ.

ಇವರಿಗೆ ಪ್ರೇಮ, ಬಂಧನ ಹಾಗೂ ಮಾನವೀಯತೆ ಇರುವ ಚಲನಚಿತ್ರಗಳು ಇಷ್ಟ. ಹಾಗೇಯೇ ಯೋಗೀಶ್  ಅವರಿಗೆ ಹರ್ಮನ್ ಹೆಸ್ಸೆ, ಖಲೀಲ್ ಗಿಬ್ರಾನ್ ಲೇಖಕರ ಬರಹ ಓದುವುದು ಪ್ರಿಯವಾದ ಸಂಗತಿಯಾಗಿದೆ. ಹಣ ಸಿಕ್ಕರೆ ಸಂಸ್ಕೃತಿ ಉಳಿಸುವ ಚಿತ್ರಗಳನ್ನು ನಿರ್ಮಿಸುವ ಕನಸು ಅವರಿಗಿದೆ.


ಕೆಲವು ಹನಿಗಳು : ದಾಭೋಲ್ಕರ್ ರನ್ನು ನೆನೆದುವಿಲ್ಸನ್ ಕಟೀಲ್


ಹೃದಯ ಬೆಸೆಯುವ 'ಶೂದ್ರ'ಮಾತು ಮೌನದ ಮುಂದೆ- ಪುಸ್ತಕ ನೋಟ
ವಾರ್ತಾಭಾರತಿಓಟ- ಒಂದು


ಬಿ ವೈ ಲಲಿತಾಂಬ
ವಾರ್ತಾಭಾರತಿಬಂಡಾಯ ಹೃದಯದ ನೋವಾಗಬೇಕೇ ಹೊರತು ತಲೆಹರಟೆಯಾಗಬಾರದು: ಪ್ರಸನ್ನ
ಸಂದರ್ಶನ : ಹುಲಿಕುಂಟೆ ಮೂರ್ತಿ

 

  

ಪ್ರಸನ್ನ ಕನ್ನಡದ ರಂಗಭೂಮಿಯ ಅಂತಃಸಾಕ್ಷಿ. ರಾಷ್ಟ್ರೀಯ ನಾಟಕ ಶಾಲೆಯಿಂದ ಬಂದ ಕೂಡಲೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ’ಸಮುದಾಯ’ದ ಹುಟ್ಟಿಗೆ ಕಾರಣರಾದವರಲ್ಲಿ ಪ್ರಮುಖರು. ಅವರು ಹೆಗ್ಗೋಡಿನಲ್ಲಿ ಕಳೆದ ಎರಡು ದಶಕದಿಂದ ’ಚರಕ’ದಿಂದ ಮಾಡುತ್ತಿರುವ ಕೆಲಸ ದೇಶದ ಗಮನ ಸೆಳೆದಿದೆ. ಈಗ ’ಶ್ರಮಜೀವಿ ಆಶ್ರಮ’ ಕಟ್ಟಿದ್ದಾರೆ. ಬೆಂಗಳೂರಿನಂಥಾ ನಗರ ಜೀವನವನ್ನು ಅಷ್ಟಾಗಿ ಇಷ್ಟಪಡದ ಅವರು ಅಥೋಲ್ ಫುಗಾರ್ಡ್‌ನ ನಾಟಕ ’ಡಿoಚಿಜ ಣo meಛಿಛಿಚಿ’ ದ ಕನ್ನಡ ರೂಪ ’ಮೆಕ್ಕಾ ದಾರಿ’ ನಾಟಕವನ್ನು ನಿರ್ದೇಶಿಸಿ ಅದರ ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಹೊಸದಾಗಿ ಉದ್ಘಾಟನೆಗೊಳ್ಳುತ್ತಿರುವ ’ಅನಾವರಣ’ ಟ್ರಸ್ಟ್ ಬೆಳಕು ತಜ್ಞ ಅ.ನ.ರಮೇಶ್ ಅವರ ನೆನಪಿನಲ್ಲಿ ಆಯೋಜಿಸಿರುವ ’ಬೆಳಕ ಬಳ್ಳಿ ಅ.ನ.ರಮೇಶ್ ನೆನಪಿನೊಂದಿಗೆ’ ಕಾರ್ಯಕ್ರಮದಲ್ಲಿ ಮಂಗಳೂರಿನ ’ತರಿಕಿಟ ಕಲಾ ಕಮ್ಮಟ’ ಈ ನಾಟಕವನ್ನು ಪ್ರದರ್ಶಿಸಲಿದೆ.
ಒಂದು ಸಾಂಸ್ಕೃತಿಕ ಸಂಘಟನೆಯಾಗಿರುವ ಅನಾವರಣ ಟ್ರಸ್ಟ್‌ನ ಗೌರವ ಅಧ್ಯಕ್ಷರು ಶಶಿಧರ ಅಡಪ, ಅಧ್ಯಕ್ಷರು ಡಾ.ಕೆ.ವೈ.ನಾರಾಯಣಸ್ವಾಮಿ, ಕಾರ್ಯದರ್ಶಿ ಬಿ.ವಿಠ್ಠಲ್ ಹಾಗೂ ಸಂಘಟನಾ ಕಾರ್ಯದರ್ಶಿ ರವಿ.ಎಂ.
ಕವಯಿತ್ರಿ, ಹೋರಾಟಗಾರ್ತಿ ದು.ಸರಸ್ವತಿ, ತರಿಕಿಟ ತಂಡದ ವಾಣಿ ಹಾಗೂ ಖ್ಯಾತ ಪ್ರಸಾದನ ತಜ್ಞ ಬೆಳ್ತೂರು ರಾಮಕೃಷ್ಣ ಅಭಿನಯಿಸಿರುವ ’ಮೆಕ್ಕಾ ದಾರಿ’ ನಾಟಕ ಸೆಪ್ಟೆಂಬರ್ ೪ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ನಾಟಕದ ತಯಾರಿಗಾಗಿ ಬೆಂಗಳೂರಿನಲ್ಲಿದ್ದ ಪ್ರಸನ್ನ ’ಲಂಕೇಶ್’ಗಾಗಿ ಮಾತನಾಡಿದ್ದಾರೆ.

ಪ್ರಶ್ನೆ: ನಿಮ್ಮ ರಂಗಭೂಮಿಯ ಪ್ರವೇಶ ಹೇಗಾಯಿತು?
ಪ್ರಸನ್ನ: ರಂಗಭೂಮಿಗೆ ನಾನು ಬಂದಿದ್ದು ನನ್ನದೇ ಆಯ್ಕೆಯಿಂದ. ಸೆಂಟ್ರಲ್ ಕಾಲೇಜಲ್ಲಿ ಓದುತ್ತಿದ್ದಾಗ ಲಂಕೇಶ್ ನಮ್ಮ ಗುರುಗಳು. ಆಗ ಹವ್ಯಾಸಿ ನಾಟಕ ಮಾಡ್ತಿದ್ವಿ. ಆದ್ಮೇಲೆ ಎಂಎಸ್‌ಸಿ ಮಾಡ್ದೆ; ನಂತರ ಕೆಮಿಸ್ಟ್ರಿಯಲ್ಲಿ ಪಿಹೆಚ್‌ಡಿ ಮಾಡ್ಲಿಕ್ಕೆ ಕಾನ್ಪುರ್ ಐಐಟಿಗೆ ಹೋದೆ. ಆಗ ಅದು ಕೆಮಿಸ್ಟ್ರಿಯಲ್ಲಿ ಇಡೀ ದೇಶಕ್ಕೆ ದೊಡ್ಡ ಸಂಸ್ಥೆ ಆಗಿತ್ತು. ಆದ್ರೆ ಅಲ್ಲಿಗೆ ಹೋದಾಗ ದೊಡ್ಡ ವಿeನಿ ಆಗಲಿಕ್ಕೆ ನನ್ನ ವ್ಯಕ್ತಿತ್ವ ಸೂಕ್ತ ಅಲ್ಲ ಅಂತ ಅನ್ನಿಸ್ತು. ಓದೋಕಾಗಲ್ಲ ಅನ್ನೋ ಅಳುಕಿನಿಂದ ಅಲ್ಲ; ಬ್ರಿಲಿಯಂಟ್ ಆಗಿದ್ದೆ, ರ‍್ಯಾಂಕ್ ತಗೊಂಡಿದ್ದೆ, ಆದ್ರೆ, ವಿeನದಲ್ಲಿ ಸಂಶೋಧನೆ ಮಾಡಲಿಕ್ಕೆ ಬೇಕಾದ ಮನಸ್ಥಿತಿ ಇದ್ಯಲ್ಲ.. ಅದಲ್ಲ ನನ್ನ ಮನಸ್ಥಿತಿ ಅನ್ನಿಸ್ತು. ನಾಟಕಕ್ಕೆ ಪೂರ್ತಿ ತೊಡಗಿಕೊಳ್ಳೋಕೆ ಅಂತ ವಾಪಸ್ಸು ಬಂದೆ, ಎನ್.ಎಸ್.ಡಿ ಗೆ ಹೋದೆ. ಅಲ್ಲಿಂದ ಬಂದ ಮೇಲೆ ಸಮುದಾಯ ಕಟ್ಟಿ, ನಾಟಕ ಮಾಡಿ.. ಪೂರ್ಣವಾಗಿ ತೊಡಗಿಕೊಂಡೆ.

ಪ್ರಶ್ನೆ: ನೀವು ಸಮುದಾಯ ಕಟ್ಟಬೇಕಾಗಿ ಬಂದ ಕಾಲದ ಅಗತ್ಯ ಮತ್ತು ಆಶಯ ಹಾಗೂ ಸಮಕಾಲೀನ ರಂಗಭೂಮಿ ಕುರಿತು ಹೇಳಿ:

ಪ್ರಸನ್ನ: ಇವತ್ತಿನ ರಂಗಭೂಮಿ ಬಗ್ಗೆ ಮಾತಾಡೋದನ್ನ ಬಿಟ್ಟುಬಿಟ್ಟಿದೀನಿ. ಹಾಗಂದ ತಕ್ಷಣ ಇಲ್ಲಿ ಕೆಲಸ ಮಾಡ್ತಾ ಇರೋರ ಮೇಲೆ ಅಪವಾದ ಹೊರಿಸ್ತಿಲ್ಲ; ಅದು ನನ್ನ ಉದ್ದೇಶವೂ ಅಲ್ಲ. ಕೆಟ್ಟದ್ದೋ ಒಳ್ಳೇದೋ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದಾರೆ. ಇಲ್ಲಿ ಎರಡು ಸತ್ಯ ಇದೆ. ಇವತ್ತಿನ ರಂಗಭೂಮಿ ಜತೆ ಯಾವ ರೀತಿಯ ಸಂಬಂಧ ಇಟ್ಟುಕೊಳ್ಳೋದಕ್ಕೂ ನನಗೆ ಆಸಕ್ತಿ ಇಲ್ಲ. ಹಿಂದೆ ೭೦ರ ದಶಕದಲ್ಲಿ ನಾವು ನಾಟಕ ಮಾಡೋಕೆ ಶುರು ಮಾಡಿದಾಗ, ನಾಟಕ ಮತ್ತು ಚಳವಳಿ, ರಾಜಕೀಯ ಮತ್ತು ಸಾಹಿತ್ಯ, ಬದುಕು ಮತ್ತು ವಿಚಾರ ಇವುಗಳ ಮಧ್ಯೆ ಯಾವ ಅಂತರವೂ ಇರಲಿಲ್ಲ; ೩೦೦ರೂಪಾಯಿ ಫುಲ್ ಟೈಮ್ ಅಲೋಯನ್ಸ್ ತಗೋಂಡು ಸಮುದಾಯ ಕಟ್ಟಿದ್ವಿ. ಅಷ್ಟರಲ್ಲೇ ಸಂಭ್ರಮದಿಂದ ಜೀವನ ಮಾಡ್ತಿದ್ವಿ. ನಮ್ಮ ವಿಚಾರಕ್ಕೆ ಹಾಗೂ ನಾವು ಮಾಡುವ ಎಲ್ಲದಕ್ಕೂ ಪೂರ್ತಿ ತಾಳೆ ಆಗ್ತಿತ್ತು. ಆದ್ರೆ ಇವತ್ತು ವಿಚಾರ ಒಂದು ಆಚಾರ ಒಂದು, ಇರೋದು ಒಂದು ಮಾಡೋದು ಒಂದು, ದುಡಿಮೆ ಟೆಲಿವಿಷನ್ ನಲ್ಲಿ, ಇರೋದು ನಾಟಕದಲ್ಲಿ  ಇಂಥ ಪರಿಸ್ಥಿತಿ ಇದೆ. ಅವರಿಗೆ ಬೇರೆ ದಾರಿ ಇಲ್ಲ; ಇದನ್ನು ಗಟ್ಟಿಯಾಗಿ ಹೇಳೋಕೋದ್ರೆ ಈಗ ಅವರ ಮೇಲೆ ಗೂಬೆ ಕೂರಿಸಿದಹಾಗಾಗುತ್ತೆ. ಇದು ಒಂದು ಚಾರಿತ್ರಿಕ ಸಂದರ್ಭ; ಎಲ್ಲವನ್ನೂ ಮಾರುಕಟ್ಟೆ ಮಟ್ಟಕ್ಕೆ ಇಳಿಸಿ ಕುಲಗೆಡಿಸಲಾಗಿದೆ. ನನ್ನನ್ನು ಈ ಥರದ ಪ್ರಶ್ನೆ ಕೇಳಿದ್ರೆ ಏನು ಹೇಳಲಿ..? ನನಗೂ ಬೆಂಗಳೂರಿಗೂ ಸಂಬಂಧವೇ ಇಲ್ಲ, ನನ್ನ ಜತೆ ಹೆಗ್ಗೋಡಿಗೆ ಬನ್ನಿ; ಅಲ್ಲಿ ನಾನೊಂದು ’ಶ್ರಮಜೀವಿ ಆಶ್ರಮ’ ಕಟ್ಟಿದಿನಿ.


ಪ್ರಶ್ನೆ: ನಿಮ್ಮ ಪ್ರಯೋಗಗಳಲ್ಲಿ ತುಂಬಾ ಖುಷಿ ಕೊಟ್ಟಿರುವ ರಂಗಪ್ರಯೋಗ ಯಾವುದು ?
ಪ್ರಸನ್ನ: ಸುಮಾರು ಇದಾವೆ. ಕದಡಿದ ನೀರು, ತಾಯಿ, ಹುಲಿಯ ನೆರಳು.. ನನಗೆ ಹೆಚ್ಚು ಖುಷಿ ಕೊಟ್ಟ ನಾಟಕ ಲಂಕೇಶರ ’ನನ್ನ ತಂಗಿಗೊಂದು ಗಂಡು ಕೊಡಿ’ ವಿದ್ಯಾರ್ಥಿಯಾಗಿದ್ದಾಗ ಲಂಕೇಶರ ನಾಟಕಗಳಲ್ಲಿ ನಟಿಸಿದ್ದೆ. ಆದರೆ ಅದಾದ ಸುಮಾರು ಇಪ್ಪತ್ತೈದು ವರ್ಷದ ನಂತರ ಕನ್ನಡ ಭವನದ ನಯನದಲ್ಲಿ ಅವರ ನಾಟಕ ನಾನೇ ಮಾಡಿಸಿದ್ದೆ. ಲಂಕೇಶ್ ಬಂದಿದ್ರು ನಾಟಕ ನೋಡಲಿಕ್ಕೆ. ಆ ನಾಟಕದ ಕೇಂದ್ರ ಪಾತ್ರ ಜಗನ್ನಾಥ ಆದರೂ ತಾಯಿಯನ್ನು ಮೇಲೆ ತಂದು, ಕೇಂದ್ರವಾಗಿಟ್ಟುಕೊಂಡು ಒಂದು ಪದವನ್ನೂ ಬದಲಿಸದೆ ವಿಶಿಷ್ಟ ರೀತಿಯ ಪ್ರಯೋಗ ಮಾಡಿದ್ದೆ. ಅವಳ ಮೂಕವೇದನೆಯನ್ನೇ ಮಾತುಗಳನ್ನಾಗಿ ಮಾಡಿದ್ದೆ. ಆ ಕಾರಣಕ್ಕೆ ಅದು ನನಗೆ ಬಹಳ ಖುಷಿ ಕೊಟ್ಟ ನಾಟಕ.

ಪ್ರಶ್ನೆ: ಫುಗಾರ್ಡ್ ನಾಟಕಗಳು ಕನ್ನಡಕ್ಕೆ ಹೆಚ್ಚು ಬಂದಿಲ್ಲ; ಈಗ ನೀವು ’ಮೆಕ್ಕಾ ದಾರಿ’ ಮಾಡಿಸುತ್ತಿದ್ದೀರಿ.. ಈ ನಾಟಕ ಮತ್ತು ಪ್ರಯೋಗಗಳ ಬಗ್ಗೆ ಹೇಳಿ ಸಾರ್..?

ಪ್ರಸನ್ನ: ಹಿಂದೆ ನಾನೇ ಇಂಗ್ಲಿಷ್‌ನಲ್ಲಿ ಮಾಡಿಸಿದ್ದೆ; ಅದಕ್ಕಿಂತ ಕನ್ನಡದಲ್ಲಿ ಮಾಡೋವಾಗ ನನ್ನನ್ನ ಹೆಚ್ಚು ಕಾಡಿದ ನಾಟಕ ಇದು. ಬ್ರೆಕ್ಟ್‌ನ ’ತಾಯಿ’ ನಂತರ ಅಷ್ಟು ಗಟ್ಟಿಯಾದ ಸ್ತ್ರೀ ಪಾತ್ರ ಮತ್ತೆ ನನಗೆ ಕಾಣಿಸಿದ್ದು ಈ ’ಮೆಕ್ಕಾ ದಾರಿ’ಯಲ್ಲಿ. ಇಲ್ಲಿಯೂ ’ತಾಯಿ’ಯಲ್ಲಿ ಆದ ಹಾಗೆ ರಾಜಕೀಯ ಮೇಲಾಟಗಳನ್ನು ಮೀರಿದ ಓರ್ವ ಬಡ, ಶೂದ್ರ ಹೆಂಗಸು. ಅವಳು ತನ್ನ ಮಗನನ್ನ ಕ್ರಾಂತಿಯಿಂದ ಬಚಾವು ಮಾಡಲು ಹೋಗಿ ದೊಡ್ಡ ಕ್ರಾಂತಿಯಲ್ಲಿ ಸಿಕ್ಕಿ ಅವಳೇ ಸ್ವತಃ ದೊಡ್ಡ ಕ್ರಾಂತಿಕಾರಿಯಾದರೆ, ಇವಳು ಒಂದು ಗ್ರಾಮೀಣ ಪರಿಸರದಿಂದ ಬಂದವಳು, ಅದರಲ್ಲೂ ವೃದ್ಧೆ, ಗಂಡ ಸತ್ತವಳು ಒಂದು ವಿಚಿತ್ರ ಸಾಮಾಜಿಕ ವಾಸ್ತವಕ್ಕೆ ಎದುರಾಗುತ್ತಾಳೆ. ಈ ಪ್ರಕ್ರಿಯೆ ಇದ್ಯಲ್ಲಾ.. ನಾವು ನೋಡಿರುವ ಹಾಗೆ ರಾಜಕೀಯಕ್ಕೆ ಬರುವ ಎಲ್ಲರೂ ಭೂಮಾಲೀಕರ ಕುಟುಂಬದಿಂದಲೋ ಅಥವಾ ನನ್ನ ಹಾಗೆ ಜನಿವಾರ ಕಿತ್ತು ಎಸೆದೋ ಬಂದವರಿರುತ್ತಾರೆ. ಆದರೆ ಇಲ್ಲಿನ ಈ ಹೆಂಗಸು ಹಳೆಯ ವಸ್ತುಗಳನ್ನು ಮರುಬಳಕೆ ಮಾಡುತ್ತಾ, ಶಿಲ್ಪಗಳನ್ನು ಮಾಡುತ್ತಾ.. ಬೆಳಕನ್ನು ಹರಸುತ್ತಾ ಹೊರಡುತ್ತಾಳೆ; ಕತ್ತಲಿಗೆ ಹೆದರುತ್ತಾಳೆ. ಅವಳ ಶಿಲ್ಪಗಳೆಲ್ಲವೂ ಬೆಳಕನ್ನು ಪ್ರತಿಫಲಿಸುತ್ತವೆ; ಅವು ಬೆಳಕಿನ ಕಡೆಗೆ ನಡೆಯುವ ಕಾರಾವಾನ್ ಥರದವು. ಮೆಕ್ಕಾಗೆ ಹೋಗುವ ಕನಸು ಕಾಣತೊಡಗುತ್ತಾಳೆ. ಅವಳ ಪಾಲಿಗದು ಬೆಳಕಿನ ನಗರ. ಇದು ಸಂಪ್ರದಾಯಸ್ಥರಾದ ಆ ಊರಿನ ಜನಕ್ಕೆ ದೈವವಿರೋಧಿಯಂತೆ ಕಾಣುತ್ತದೆ.  ಯಾಕೆಂದರೆ ಒಂದು ತುಂಬಿದ ಕ್ರಿಶ್ಚಿಯನ್ ಸಮಾಜದ ನಡುವೆ ಬೇರೊಂದು ಧರ್ಮದ ಪುಣ್ಯಸ್ಥಳವನ್ನು ಬೆಳಕಿನದ್ದು ಎಂದಿವಳು ನಂಬುತ್ತಾಳೆ. ಆದರೆ, ಅವಳು ಯಾವುದನ್ನು ಬಿಡುಗಡೆಯ ದಾರಿ ಎಂದುಕೊಂಡಿದ್ದಳೋ ಅದರಿಂದಲೇ ಅನೇಕ ಕಷ್ಟಗಳಿಗೆ ಸಿಲುಕಿಸಿಬಿಡುತ್ತಾಳೆ. ಊರಿನವರೆಲ್ಲಾ ದೂರ ತಳ್ಳುತ್ತಾರೆ. ಇಂಥಾ ಪರಿಸ್ಥಿಯಲ್ಲಿ ಒಂದು ಹೆಂಗಸು, ಹೇಗೆ ಪ್ರತಿಕ್ರಿಯಿಸುತ್ತಾಳೆ.., ಹೇಗೆ ಬದಲಾಗುತ್ತಾಳೆ ಅನ್ನೋದು ನಾವೆಲ್ಲರೂ ಗಮನಿಸಬೇಕಾದ ಬಹಳ ದೊಡ್ಡ ಸಂಗತಿ. ಆಮೇಲೆ ಇತ್ತೀಚಿನ ದಿನಗಳಲ್ಲಿ ನಮ್ಮ ವಿಚಾರಗಳನ್ನು ಹಳ್ಳಿಗೆ ಹೊಂದಿಸಿ ನೋಡುತ್ತೇವೆ; ಆದರೆ ಹಾಗೆ ಮಾಡಬಾರದು. ಹಳ್ಳಿಯಲ್ಲಾಗುವ, ಹಳ್ಳಿಗರ ಮನಸ್ಥಿತಿಯಲ್ಲಾಗುವ ಬದಲಾವಣೆಗಳು.. ಕೇವಲ ಪುಸ್ತಕದ ಮೂಲಕ ಅಲ್ಲ, ಅನುಭವದ ಮೂಲಕ ನನ್ನವೂ ಆಗಬೇಕು. ಅದು ನಿಜವಾದ ದಾರಿ ಅಂತ ನನಗನ್ನಿಸುತ್ತಿದೆ.

ಪ್ರಶ್ನೆ: ’ಮೆಕ್ಕಾ ದಾರಿ’ ನೀವು ಹೇಳಿದ ರೀತಿಯ ನಿಜವಾದ ದಾರಿಯೇ ?

ಪ್ರಸನ್ನ: ನಾವು ಎಪ್ಪತ್ತು- ಎಂಭತ್ತರ ದಶಕದಲ್ಲಿ ಏನೇನು ತಲಹರಟೆ ಮಾಡಿದ್ದೆವೋ.. ಅಂದರೆ, ಮಾರ್ಕ್ಸ್‌ವಾದ, ಬಂಡಾಯ.. ಮೊದಲಾದವು ಕೇವಲ ತಲೆಹರಟೆಗಳಾಗದೆ, ಹೃದಯದ ನೋವಾಗಿ ಇವತ್ತು ನಮ್ಮ ಜೊತೆ ಕೆಲಸ ಮಾಡಬೇಕಾದ ಅಗತ್ಯವಿದೆ. ಅದನ್ನು ಬೇಕಾದರೆ ಹೃದಯದ ಆಶಯ ಅಂತ ಕರೆಯಿರಿ.. eನ ಅನ್ನುವುದು ಅನುಭವವಿಹೀನವಾಗಬಾರದು; ವಿಶ್ವವಿದ್ಯಾಲಯಗಳಲ್ಲಿ ಆಗಬಹುದು ಅಥವಾ ನಮ್ಮ ನಾಟಕಗಳನ್ನೇ ತೆಗೊಳ್ಳಿ.. ನಾವೀಗ ನಾಟಕವನ್ನೇ ಮಾಡುತ್ತಿಲ್ಲ; ಎಲ್ಲವನ್ನೂ ಪ್ರಯೋಗ ಎನ್ನುತ್ತೇವೆ.. ಪ್ರಯೋಗಾತ್ಮಕವಾಗಿ ಎಂಥ ಮಣ್ಣಂಗಟ್ಟಿ ಮಾಡ್ತೀರಿ ನೀವು..? ಜನರ ಜೊತೆ ಒಂದು ಸಂವಾದವೇ ಸಾಧ್ಯವಾಗದ ಹೊರತು ನೀವು ಮಾಡಿದ ನಾಟಕದ ಪ್ರಯೋಜನವೇನು....? ಕನ್ನಡದಲ್ಲಿ ನಾಟಕ ಮಾಡುತ್ತಿದ್ದೇವೆ ಅಂದಮೇಲೆ ಕನ್ನಡ ಮಾತನಾಡುವ ಜನರ ಜೊತೆ ಸಂವಾದ ನಡೆಯಬೇಕು.  ಈ ನಾಟಕ ಸ್ವಲ್ಪ ಮಟ್ಟಿಗೆ ಅದನ್ನು ಮಾಡುತ್ತೆ ಅಂತ ನನನಗನ್ನಿಸುತ್ತೆ. ಈ ನಾಟಕದಲ್ಲಿ ಕೆಲಸ ಮಾಡುವ ಕಲಾವಿದರು ಒಂದಲ್ಲ ಒಂದು ರೀತಿಯಲ್ಲಿ ಜನರ ಜತೆ ನಿಕಟವಾಗಿ ಸಂಪರ್ಕ ಹೊದಿರುವವರು; ಸಮಾಜ ಕಾರ್ಯಕರ್ತರು, ದು.ಸರಸ್ವತಿ ಆಗಲಿ, ವಾಣಿ ಅಥವಾ ಬೆಳ್ತೂರು ರಾಮಕೃಷ್ಣ ಎಲ್ಲರೂ ಅಷ್ಟೇ. ಅಂತಹವರ ಜತೆ ಕೆಲಸ ಮಾಡಲು ಸಂತೋಷ ಆಗುತ್ತೆ. ಹಾಗಂತ ನಾವು ಬರೇ ಘೋಷಣೆಗಳನ್ನು ಕೂಗ್ತಾ ಇಲ್ಲ. ನಟನೆಯ ವಿವರಗಳಿಗೆ ಹೋಗಿ ಕೆಲಸ ಮಾಡ್ತಿದ್ದೇವೆ ಹಾಗು ಅದು ಸಾಧ್ಯವಾಗ್ತಾ ಇದೆ. ಸೊಫೆಸ್ಟಿಕೇಷನ್ ಅನ್ನೋದು ಕೇವಲ ಗಿರೀಶ್ ಕಾರ್ನಾಡ್ ನಾಟಕದಲ್ಲಿರುತ್ತೆ, ಅಡಿಗರ ಪದ್ಯದಲ್ಲಿರುತ್ತೆ ಅನ್ನೋದನ್ನು ಒಡೀಬೇಕಾಗಿದೆ ನಾವು. ಇಲ್ಲೂ ಅದು ಸಾಧ್ಯ ಅನ್ನೋದನ್ನ ತೋರಿಸಬೇಕಾಗಿದೆ.

ಪ್ರಶ್ನೆ: ಈ ದಾರಿಯಲ್ಲಿ ನಿಮಗೆ ಎಂತಹ ಸಮಸ್ಯೆಗಳು ಎದುರಾಗಬಹುದು ?

ಪ್ರಸನ್ನ: ಖಂಡಿತಾ ಇಲ್ಲೂ ಸಮಸ್ಯೆಗಳಿವೆ; ಏನು ಅಂದ್ರೆ, ಇಂಥ ರಂಗಭೂಮಿ ಕೆಲಸ ಮಾಡುವಾಗ ಫಲವನ್ನು ತಕ್ಷಣ ನಿರೀಕ್ಷೆ ಮಾಡಬಾರದು. ನಾಲ್ಕು- ಐದು ಪ್ರದರ್ಶನಗಳಾಗುವವರೆಗೂ ಹಟ ಹಿಡಿದು ಕೆಲಸ ಮಾಡಬೇಕು. ಹಾಗೆ ಕೆಲಸ ಮಾಡುವವರ ಜತೆ ನಾನೂ ಕೆಲಸ ಮಾಡಲು ಸಿದ್ಧ. ಅವಸರದ ಒತ್ತಡಗಳಿಗೆ ಸಿಲುಕಿ, ಒಂದು ಹೆಜ್ಜೆ ಟೆಲಿವಿಷನ್‌ನಲ್ಲಿ, ಒಂದ ಹೆಜ್ಜೆ ರಂಗಭೂಮಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ಫಲ ಸಿಗೋಲ್ಲ. ನಮ್ಮ ಕನ್ನಡ ರಂಗಭೂಮಿಯಲ್ಲಿ ಮಹಾನ್ ನಟರೆಲ್ಲಾ ’ಮಹಾನ್’ ಆದದ್ದು ಹೀಗೆ. ಇವತ್ತಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ.

ಪ್ರಶ್ನೆ: ಒಂದು ನಾಟಕಕ್ಕೆ ನಿಜಕ್ಕೂ ಏನೇನು ಬೇಕಿದೆ ಸಾರ್?

ಪ್ರಸನ್ನ: ಒಂದು ನಾಟಕಕ್ಕೆ ನನ್ನ ಪ್ರಕಾರ ಬೇಕಿರುವುದು ಕೇವಲ ನಟರು, ನಾಟಕ, ಹಾಗೂ ಪ್ರೇಕ್ಷಕರು. ತುಂಬಾ ಸೆಟ್ಸ್ ಇರಬಾರದು, ಕಾಸ್ಟೂಮ್ಸ್ ಇರಬಾರದು. ಸಣ್ಣ ಸಣ್ಣ ಸಮುದಾಯಗಳ ನಡುವೆ ಹೋಗಿ ನಾಟಕ ಮಾಡಿ ಬರುವ ಹಾಗೆ ಇರಬೇಕು. ಜಾತಿ, ಲಿಂಗ, ವರ್ಣ, ಹಣಗಳಾಚೆಗೆ ನೋಡುವ ತಾಳ್ಮೆ ಇರುವ ಜನರೆದುರು ನಾಟಕ ಪ್ರದರ್ಶನಗೊಳ್ಳಬೇಕು. ಅವರು ರಂಗಶಂಕರದಲ್ಲಿ ಕೂತಿರ‍್ತಾರೋ, ಕಲಾಕ್ಷೇತ್ರದಲ್ಲಿ ಕೂತಿರ‍್ತಾರೋ, ಸೂಟ್ ಹಾಕ್ಕೊಂಡು ಬರ‍್ತಾರೋ ಅನ್ನೋ ಯಾವುದೂ ನನಗೆ ಮುಖ್ಯ ಅಲ್ಲ.

ಪ್ರಶ್ನೆ: ಹಳ್ಳಿಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳ ಬಗ್ಗೆ ಸ್ವಲ್ಪ ಹೇಳಿ..

ಪ್ರಸನ್ನ: ನನಗೆ ಈಗ ಅರ್ಥ ಆಗ್ತಾ ಇದೆ. ನಾವು ಮೊದಲೆಲ್ಲಾ ಕೆಲಸ ಮಾಡಿದ್ದು ಪಾಪಪ್ರಜ್ಞೆಯಿಂದ. ನಾನು ಬ್ರಾಹ್ಮಣನಾಗಿ ಹುಟ್ಟಿದೀನಿ, ಮಧ್ಯಮವರ್ಗದಲ್ಲಿ ಹುಟ್ಟಿದೀನಿ. ಆ ಪಾಪವನ್ನು ಅಂದರೆ, ಬ್ರಾಹ್ಮಣ್ಯದ ಪಾಪ ತೊಳ್ಕೋಳ್ಳೋದಕ್ಕೆ ನಾವು ಬಂಡಾಯವನ್ನೋ, ಇನ್ನೇನನ್ನೋ ಮಾಡಿದ್ವಿ. ಆದ್ರೆ ಈ ಪಾಪಪ್ರಜ್ಞೆಯಿಂದ ಏನೂ ಆಗಲ್ಲ; ನೀವು ಏನನ್ನು ನಂಬಿದೀರೋ ಅದೇ ರೀತಿ ಬದುಕಬೇಕು. ನನಗೀಗ ಹಳ್ಳೀಲಿ ಬದುಕೋದು ತುಂಬಾ ಸಂತೋಷ ಸಿಗ್ತಿದೆ. ಕಲಾವಿದರಿಗೆ ಆ ನಂಬಿಕೆ, ಕಾನ್ಫಿಡೆನ್ಸ್ ಇಲ್ಲದೆಹೋದ್ರೆ ಕಷ್ಟ.

ಪ್ರಶ್ನೆ: ಆದ್ರೆ ಹಳ್ಳಿಗಳು ಜಾತಿ ಅಸಮಾನತೆಯ ಕೂಪಗಳ ಹಾಗೆ ಇನ್ನೂ ಇದಾವಲ್ಲಾ ಸಾರ್..?

ಪ್ರಸನ್ನ: ನಿಜ. ಹಳ್ಳಿಯನ್ನು ವೈಭವೀಕರಿಸೋದ್ರಲ್ಲಿ ಯಾವ ಅರ್ಥವೂ ಇಲ್ಲ; ಹಳ್ಳಿಗಳು ಚೆನ್ನಾಗಿ ಇದ್ದಿದ್ರೆ ಜನ ಪೇಟೆಗ್ಯಾಕೆ ಬರ‍್ತಿದ್ರು.  ಹಳ್ಳಿಯಿಂದ ಬಡತನದ ಕಾರಣಕ್ಕೆ ಜನ ಪೇಟೆಗೆ ಬರಲಿಲ್ಲ, ಅದು ತಪ್ಪು ಕಲ್ಪನೆ. ಅದರ ನಿಜವಾದ ಕಾರಣ, ಸಾಮಾಜಿಕ ಸಂಘರ್ಷ; ಕೊಳಕುತನ. ಹಾಗಾಗಿ ಹಳ್ಳಿಗಳನ್ನು ರೋಮ್ಯಾಂಟಿಸೈಜ್ ಮಾಡಬಾರದು. ಆದ್ರೆ, ಅಲ್ಲಿ ಇಷ್ಟೋಂದು ಆವೇಗದ ಬದುಕು ಇಲ್ಲದ್ರಿಂದ ನೀವು ಅವರ ಜತೆ ಕೆಲಸ ಮಾಡಿದ್ರೆ, ಹತ್ತೋ ಇಪ್ಪತ್ತೋ ವರ್ಷಕ್ಕೆ ಫಲ ಸಿಗುತ್ತೆ. ನನಗೀಗ ಹಾಗೆ ಅನ್ನಿಸ್ತಿದೆ. ಪೇಟೆಯಲ್ಲಿ ಇದು ಸಾಧ್ಯವೇ ಇಲ್ಲ. ಇಲ್ಲಿ ಎಲ್ಲವನ್ನೂ ಸಂಕೇತ ಮಾಡಿಬಿಡುತ್ತಾರೆ, ಬಂಡಾಯ, ಸಂಸ್ಕೃತಿ, ಊಟ ಎಲ್ಲವೂ...

ಫ್ರಶ್ನೆ: ಇತ್ತೀಚೆಗೆ ಕರ್ನಾಟಕದ ಪ್ರಜ್ಞೆಯನ್ನು ಕಲಕಿದ ಎರಡು ವಿದ್ಯಮಾನಗಳು ಮಡೆಸ್ನಾನ ಮತ್ತು ಬಾಲಗಂಗಾಧರ ಗುಂಪಿನ ವಚನಗಳ ಕುರಿತ ಚರ್ಚೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ?

ಪ್ರಸನ್ನ: ಅದು ತಪ್ಪು ಎನ್ನದೆ ಇನ್ನೇನು ಹೇಳಲಿ ? ನಮ್ಮ ’ಚರಕ’ದಲ್ಲಿ ಇನ್ನೂರೈವತ್ತು ಜನ ಕೆಲಸ ಮಾಡ್ತಾರೆ. ಎಲ್ಲ ಬಡ ಹೆಣ್ಣುಮಕ್ಕಳು. ನಮ್ಮಲ್ಲಿ ಮೂರು ಟಾಯ್ಲೆಟ್ ಇದೆ. ಅವುಗಳನ್ನು ಎಲ್ಲರೂ ರೊಟೇಶನ್‌ನಲ್ಲಿ ಕ್ಲೀನ್ ಮಾಡಬೇಕು. ನಾವು ಅವರಿಗೆ ಮಡೆಸ್ನಾನ, ಜಾತಿವ್ಯವಸ್ಥೆ ಏನು ಹೇಳಲಿಲ್ಲ. ನಮ್ಮ ಪ್ರಾರ್ಥನಾ ಮಂದಿರದ ಮುಂದೆ ಕೆಲವರು ಗಣೇಶ ಮೂರ್ತಿ ಸ್ಥಾಪಿಸಬೇಕು ಅಂದ್ರು. ನಾನು ಒಪ್ಪಿದೆ, ಆದ್ರೆ ಅದಕ್ಕೆ ನೀವೇ ಪೂಜೆ ಮಾಡಬೇಕು ಅದನ್ನೂ ರೊಟೇಶನ್ ಮೂಲಕ ಮಾಡಬೇಕು ಅಂತ ಹೇಳಿದೆ. ಇಂಥ ಕಾರ್ಯಕ್ರಮಗಳ ಮೂಲಕ ಮಡೆಸ್ನಾನದಂಥಾ ಸಾಮಾಜಿಕ ಸಂಕಷ್ಟಗಳನ್ನು ಪರಿಹಾರ ಮಾಡ್ಕೋಬೇಕು. ತಡ ಆದರೂ ಇದು ಒಳ್ಳೆಯ ದಾರಿ. ಅದನ್ನೆಲ್ಲಾ ಒಂದೇ ಸಲ ಕಿತ್ತು ಹಾಕಿಬಿಡ್ತೀವಿ ಅಂತ ಹೋದ್ರೆ, ದೇಹದ ಒಂದು ಕಡೆ ಇದ್ದ ಕುರು ಇನ್ನೊಂದು ಕಡೆ ಆಗುತ್ತೆ ಅಷ್ಟೇ. ಬಾಲಗಂಗಾಧರ ಟೀಮಿನ ಸಮಸ್ಯೆಯೂ ಇಂಥಾದ್ದೇ. ನಾನೊಂದು ಸಲ ಅವರ ಕಾರ್ಯಕ್ರಮದಲ್ಲೇ ನನ್ನ ಅನುಭವದಲ್ಲಿ ಜಾತಿ ಇದ್ಯಪ್ಪ, ನೀವು ಏನೇನೋ ಹೇಳಿದ್ರೆ ನಾನು ಕೇಳಲ್ಲ ಅಂತ ಹೇಳಿದೆ. ಇಂಥಾದ್ದು ಅರ್ಧಸತ್ಯ. ಅಡ್ವಾಣಿ ಸೂಡೋ ಸೆಕ್ಯುಲರಿಸ್ಟ್ ಅಂತ ನಮ್ಮೆಲ್ಲರನ್ನೂ ಕರೆದಾಗ ಅದರಲ್ಲಿ ೨೦ ಪರ್ಸೆಂಟ್ ಸತ್ಯ ಇತ್ತು. ಆ ಇಪ್ಪತ್ತು ಪರ್ಸೆಂಟ್ ಸತ್ಯದಲ್ಲಿ ಅವರು ಬದುಕ್ತಾರೆ. ನಾವು ಅದನ್ನು ತಗೊಂಡು ತಿದ್ಕೋಬೇಕು. ಬಾಲಗಂಗಾಧರ ಹೇಳುವ ಸುಳ್ಳಿನಲ್ಲೂ ಇರಬಹುದಾದ ಸತ್ಯವನ್ನು ತಗೋಂಡು ಅವರನ್ನು ದೂರ ಇಡಬೇಕು.


ಪ್ರಶ್ನೆ: ಬೆಂಗಳೂರು ಕೇಂದ್ರಿತವಾಗಿ, ಸರ್ಕಾರದ ಸಹಾಯದಿಂದ ನಡೆಯುತ್ತಿರುವ ರಂಗ ಚಟುವಟಿಕೆ ಬಗ್ಗೆ ಏನು ಹೇಳ್ತೀರಿ ಸಾರ್..? ಅಥವಾ ಈ ಕುರಿತು ನಿಮ್ಮ ಸಲಹೆಗಳು ಸರ್ಕಾರಕ್ಕೆ..?

ಪ್ರಸನ್ನ: ನೋಡಿ.. ಸರ್ಕಾರಕ್ಕೆ ಯಾರೂ ಸಲಹೆ ಕೊಡೋಕೆ ಸಾಧ್ಯವಿಲ್ಲ; ಒಳ್ಳೇ ಸರ್ಕಾರಕ್ಕಾಗಲಿ, ಕೆಟ್ಟ ಸರ್ಕಾರಕ್ಕಾಗಲಿ. ನಾವು ಬಂಡಾಯ ಶುರು ಮಾಡಿದ್ದು, ಸಮುದಾಯ ಶುರು ಮಾಡಿದ್ದು ಸರ್ಕಾರದ ವಿರುದ್ಧವಾಗಿ. ಎಲ್ಲಾ ಚಳವಳಿಗಳೂ ಹುಟ್ಟಿದ್ದು ಸರ್ಕಾರದ ವಿರುದ್ಧವಾಗಿಯೇ. ಆದರೆ, ರಾಮಕೃಷ್ಣ ಹೆಗಡೆ ಅಧಿಕಾರಕ್ಕೆ ಬಂದಾಗ ನಾವೆಲ್ಲರೂ ಆ ಕಡೆ ಹೋಗಿಬಿಟ್ವಿ. ಈಗ ಸರ್ಕಾರ ತಿದ್ದುತೀವಿ ಅನ್ನೋ ಭ್ರಮೆಯಲ್ಲಿ ಓಡಾಡ್ತಾ ಇದೀವಿ. ಸರ್ಕಾರದಿಂದ ಹಣ ಬರುತ್ತೆ, ಏನೋ ಮಾಡ್ತೀವಿ ಅನ್ನೋದು ಸುಳ್ಳು. ಸರ್ಕಾರದಿಂದ ’ಸಮುದಾಯ’ಕಟ್ಟೋಕೆ ಆಗುತ್ತಾ..? ಮುನ್ನೂರು ರುಪಾಯಿಯಲ್ಲಿ ರಾಜ್ಯದ ನಲವತ್ತು ಕಡೆ ಸಮುದಾಯ ಕಟ್ಟಿದ್ವಿ. ದೊಡ್ಡದೊಡ್ಡ ನಾಟಕಗಳನ್ನು ಮಾಡಿದ್ವಿ. ನಾವೆಲ್ಲರೂ ಇವತ್ತು ಗೊಂದಲದಲ್ಲಿದ್ದೇವೆ. ಈ ಗೊಂದಲ ಬಿಟ್ಟು ಕೆಲಸ ಮಾಡೋಕೆ ಸಾಧ್ಯ ಇದೆ.
ಒಂದು ಹೇಳ್ತೀನಿ: ಬೆಂಗಳೂರು ಬಿಟ್ಟ ಮಾತ್ರಕ್ಕೆ ನಾವು ಸತ್ತೋಗಲ್ಲ; ನನ್ನ ಹಳ್ಳಿಗೆ ಬನ್ನಿ. ಅಲ್ಲಿ ನಾನೇನೋ ಮಾಡ್ತೀದಿನಲ್ಲಾ... ಅದನ್ನು ಗಮನಿಸಿ. ಅದು ಬಿಟ್ಟು, ನಾನು ಇಲ್ಲೇ ಇರ‍್ಬೇಕು, ಯಾವುದೋ ಅಕಾಡೆಮಿ ಅಧ್ಯಕ್ಷ ಆಗಬೇಕು ಅಂದ್ರೆ ಆಗಲ್ಲ; ಬದಲಾಗಿ ಟೆಲಿವಿಷನ್ ಅನ್ನೋ ಬಲಶಾಲಿ ರಾಕ್ಷಸನಿಗೆ ತುತ್ತಾಗ್ತೀರಿ. ನಾನು ಅಲ್ಲಿಗೆ ಹೋಗಲ್ಲ...

Yögèsh Master
Yögèsh Master

My basic interest initially started off with various aspects of literature. I wrote stories, novels, articles for magazines, theatrical play-scripts etc. One of my very popular stories called “Samanantara Rekhegalu” was published in the Kannada weekly ‘Taranga’.  It was a popular in those days for its influence on reuniting many broken families of the readers.
Another area of interest being music, I had my training under music guru Smt. Kamalamma Venkatesh of Vani Sangeeta Vidhyalaya which is one of the old and reputed music institute in Chamarajpet which have produced many noted musicians in Karnataka. Hindustani vocal and Bhajans were trained under Guru Smt. Bhramarambha Gopinath, who is a disciple of Saint Bhadragiri Keshava Das and she is also noted Bhajan singer and composer. 
I was trained in Bhajans in Shri Siddhashram (Chamarajapet, Bangalore) based on the principles of Sadguru Shree Siddharooda of Hubli – Karnataka, which is one of the oldest centre for Bhajan singing and other Ashram activities. There I was blessed to get Satsang experience with Shri Honnappa Bhagavatar, a noted south Indian musician and cine artist, Shri Sambhandha Murty Bhagavatar (musician and Keertanakar) and Pandit Sheshadri Gawai (a noted Hindustani Sangeet Vidwan) in the activities of Ashram.
In my youth I had a great privilege of Bhajan singing and other cultural activities in Shree Ramakrishna Mutt, Basavana Gudi Bangalore as a member of Vivekananda Balak Sangh, under the devout guidance of Swamy Purushothamananda a great inspiration of youth and noted Bhajan singer, also a preacher. My music composition mainly comprises of Dance dramas and light music. 
I started my career as a school teacher as such I’m known as “Yogesh master”. I worked as a school teacher for 16 years. Apart from taking up the regular subjects I took up directing and promoting culture activities.
I’m also a trained dancer, had the privilege of learning Bharatnatyam under Guru Shree U.K Arun Kumar and Vidhusi Smt. Radha Amarnath. My choreography mainly consists of contemporary form of dance. I composed hundreds of Ballets in Indian classical, western and contemporary dance forms.
I’ve written and directed several theatrical plays in Kannada and English (200 theatrical productions). I concentrate on giving utmost importance to spiritual, cultural and social awareness in my plays. I got the opportunities to gain experience in theatre, taking part in different workshops and theatre projects under the guidance of many achievers like B Jayashree, M S Sathyu, Hamsalekha, Suresh Anaganahalli, R Nagesh, B Suresh, V Manohar, Sundarashree and Renukabali Udayakumar. My theatre colleagues and juniors call me Guruji or Jee as I’m known for baptizing numerous people from different walks of life into theatrical activities.
I made short films to draw attention towards certain serious issues in society. There to quote a few; Nale baruvudu matte which is about de-addiction of drugs, Ananda Vana is about saving trees and Kshameyirali is all about the personal confession in one’s life.  

Read more: http://yogeshmaster.webnode.com//
Create your own website for free: http://www.webnode.com

ದಿನದ ಸಾಲು -46

1
ನಿನ್ನ ಸಂಧಿಸಿದ ಪರಿಣಾಮ ಇಷ್ಟೇ ಇಷ್ಟು
ಬೆತ್ತಲಾಗಲು ಬಟ್ಟೆ ಕಳಚಬೇಕೆಂಬ ಭ್ರಮೆ ಹೊರಟುಹೋಯಿತು
2
ಆ ತಿರುವಿನಲಿ ಸಿಕ್ಕರೂ ಸುಮ್ಮನೆ ಹೊರಟುಹೋದ ಚಿತ್ರ ಹಾದಿಗಂಟಿತು
ಬಾತಗಣ್ಣು ಉಬ್ಭಿದ ಗಲ್ಲ ಭಾರ ಉಸಿರು ವಜ್ಜೆ ಹೆಜ್ಜೆ ಕಂಡ ಕಣ್ಣು ತುಳುಕಿತು
3
 ಮಾತುಗಾರ ಮನುಷ್ಯನೊಳಗಿನ ಒಂದು ಪಾತ್ರ ಮಾತಿಲ್ಲದೆ ಬದುಕುಗಳೆಯಿತು
ಮೈತುಂಬ ಹೂವರಳಿಸಿದ ಗಿಡದ ಕಿರ್ದಿಯಲಿ ಕಳಚಿದ ಮೊಗ್ಗುಗಳಂಕಿ ಅಚ್ಚಾಗಿತ್ತು 
4
ಮುಂಜಾವು ಎಳೆಬಿಸಿಲು ಇಬ್ಬನಿ ಮೊಗ್ಗು ಎಲ್ಲ ನೆನಪುಗಳ ಬೆಟ್ಟಿ ಮಾಡಿಸುತಿವೆ
ನೆನಪು ಕಣ್ಣಲಿದೆಯೊ ಕಣ್ಣು ಹಾಯಿಸಿದಲಿ ನೆನಪಿದೆಯೊ ಅದುರಿದವು ಇಟ್ಟ ಹೆಜ್ಜೆ
5
ನನ್ನ ದೇಶದ ಕಾನೂನಿನ ಕೈಗಳು ಎಲ್ಲರಿಗಿಂತ ತುಸು ಉದ್ದವೇ
ಉಳಿದವರಿಗಿಂತ ಮೊದಲೇ ಮುಟ್ಟಿಬಿಡುತ್ತವೆ ಪ್ರಭುವಿನ ಪಾದಗಳ
6
ಕನ್ನಡಿ ಬಿದ್ದಿತೆಂದು ಲೋಕ ಕೂಗಿತು
ಮನಸು ಚೂರಾದ ಸಪ್ಪಳವಷ್ಟೇ ನನಗೆ ಕೇಳಿತು
7
ಒಳಗೆ ಸತ್ತೇ ಹೋಗುವಷ್ಟು ಬಾಯಾರಿಕೆ
ನದಿಯ ಬೆಲೆ ಅಂಗೈ ಮೇಲಿನ ಹನಿಗೂ ಬಂದಿತು
8
ಹನಿಗೂಡಿದ ಕಾರಣ ಹಿಮಾಲಯದಲಿ ಹುಡುಕುತ್ತಿದ್ದರು
ಅಂಗಾಲು ಚುಚ್ಚಿದ ಹಾದಿಮುಳ್ಳು ಊರಿನಲ್ಲೇ ಉಳಿದಿತ್ತು
9
ಹಗಲು ಅಳಾಕ ಅಭಿಮಾನ ಅಡ್ಡ ಇತ್ತು
ಖರೇ ಈ ನೆನಪುಗಳು ಯಾರ ಸೊತ್ತು
10
ಸಾವಿಗೂ ಬದುಕಿಗೂ ಅವಿನಾಭಾವವೇ
ಸಾವು ಉಳಿಸಿದ ಬೆಂಕಿ ಉರಿಯುತ್ತಿದೆ ಬದುಕಿನ ಗಾಳಿಯಲಿ

Friday, August 30, 2013

ಪುಸ್ತಕ ನೋಟ : ಬಿ. ಎ. ವಿವೇಕ ರೈ 'ಜರ್ಮನಿಯ ಒಳಗಿನಿಂದ'


ವಾರ್ತಾಭಾರತಿ 

'ಢುಂಢಿ' ಲೇಖಕನ ಬಂಧನ : ಮತೀಯವಾದಿಗಳಿಗೆ ಮಣಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಥವೇನು?


Gurushanth Sy


ಗುರುಶಾಂತ ಎಸ್.ವೈಒಂದು 'ಪಿಳ್ಳೆ ನೆವ' ಸಿಕ್ಕರೂ ಸಾಕೆಂದು ಕಾಯುತ್ತಿರುವ ಸಂಘಪರಿವಾರಕ್ಕೆ ಇತ್ತೀಚೆಗೆ ಬಿಡುಗಡೆಗೊಂಡ ಯೋಗೀಶ್ ಮಾಸ್ಟರ್ರವರ 'ಢುಂಡಿ' ಕಾದಂಬರಿಯು ಮಸೆಯುತ್ತಿದ್ದ ಲಾಠಿ ತಿರುವಲು ಸಿಕ್ಕ ಸುವರ್ಣ ಅವಕಾಶವೆಂದು ಬಗೆದಿದೆ. ಆ ಕಾದಂಬರಿ ಇನ್ನೂ ಮಾರುಕಟ್ಟೆಯಲ್ಲೇ ಸಿಗುತ್ತಿಲ್ಲ, ಓದಿ ಬಲ್ಲವರು ಬಹಳವಿಲ್ಲ, ವಿವಾದ ಬೆಳೆಯುತ್ತಿದ್ದ ಬಗೆ ಅರಿತ ಲೇಖಕ 'ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ' ಹೇಳಿಯಾಗಿದೆ. ಹೀಗಿರುವಾಗ ಆ ಕೃತಿಯನ್ನು ನಿಷೇಧಿಸುವಂತೆ, ಲೇಖಕನನ್ನು ಬಂಧಿಸಿ ದಂಡಿಸುವಂತೆ ಹಾಹಾಕಾರ ಎಬ್ಬಿಸಿ ಅಮಾಯಕರನ್ನು ಕೆರಳಿಸಿ, ಅಲ್ಲಲ್ಲಿ ಪ್ರತಿಭಟನೆಯನ್ನೂ ನಡೆಸುತ್ತಿರುವುದೇಕೆ?

ಸೋಗುಗಳು

ವಿವಾದವೆಬ್ಬಿಸುವ ಮೊದಲು ಕೃತಿಯ ಒಳ ತಿರುಳು ತಿಳಿಯದೇ, ವಾದವೇನೆಂದು ಅರಿಯದೇ, ಏಕಮುಖವಾಗಿ ಧಾಳಿ ಮಾಡುತ್ತಾ ಹೊರಟಿರುವ ಉದ್ದೇಶವಾದರೂ ಏನು? ಕೃತಿಯ ವಸ್ತು ವಿಶ್ಲೇಷಣೆಯ ಕುರಿತು ವಿಮರ್ಶೆಗೆ ಒತ್ತು ನೀಡುವ ಬದಲು ಧರ್ಮ, ದೇವರ ರಕ್ಷಣೆಯ ಸೋಗಿನಲ್ಲಿ ಅಡಗಿಸಿಕೊಂಡಿರುವ ಸಮಯ ಸಾಧಕ ರಾಜಕೀಯವಾದರೂ ಎಂತಹುದು? ಇಂತಹ ದುಷ್ಟ ಅಜೆಂಡಾಕ್ಕೆ ಸಾಥ್ ನೀಡುವ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗಗಳೇ ತಾವೆಂದು ಬೊಗಳೆ ಹೊಡೆಯುವ ವಿಜಯವಾಣಿ, ಉದಯವಾಣಿ ಮತ್ತು ಕೆಲ ಟಿ.ವಿ.ಚಾನೆಲ್ಗಳಿಗೆ ತಿರುಚಿ ಪ್ರಚೋದಿಸುತ್ತಾ ಪ್ರಸಾರಿಸಲು ಇರುವ ನೈತಿಕತೆಯಾದರೂ ಏನು?

ಚಿಂತನ ಮಂಥನದ ಬೆಳಕು ಬರಲಿ

'ಡುಂಡಿ' ಕಾದಂಬರಿ ಇತಿಹಾಸವಲ್ಲ, ಆದರೆ ಭಾರತೀಯ ಸಮಾಜದ ಬೆಳವಣಿಗೆಯ ಐತಿಹಾಸಿಕ ಕಾಲಘಟ್ಟದ ಅಂಶಗಳನ್ನು ಕಥಾ ವಸ್ತುವನ್ನಾಗಿ ಹೊಂದಿದೆ. ಆ ಕಾಲ ಘಟ್ಟದ ಚಿತ್ರಣವನ್ನು ಕಟ್ಟಿಕೊಡುವ ಒಂದು ಪ್ರಯತ್ನ. ಈ ಕೃತಿಯಲ್ಲಿನ ಗಣೇಶ/ ಗಣ-ಪತಿ ಆದಿಮ ಕಾಲದ, ಆದಿವಾಸಿ ಬುಡಕಟ್ಟುಗಳಿಗೆ ಸೇರಿದವ. ಮುಂದೆ ವೈಧಿಕರು ಇವನನ್ನು ತಮ್ಮೊಳಗೆ ಹಾಕಿಕೊಂಡ ಕಥಾವಸ್ತು ಇದಾಗಿದೆ ಎನ್ನುತ್ತಾರೆ ಲೇಖಕರು. ಇದನ್ನು ಬರೆಯುವಾಗಲೂ ದೇವಿಪ್ರಸಾದ್ ಚಟ್ಟೋಪಾಧ್ಯಾಯರ ಗಣಪತಿ ಹುಟ್ಟು ಕುರಿತ ವಿಶ್ಲೇಷಣೆ, ತಾಪಿ ಧರ್ಮರಾವ್ರವರ ವಿವಾಹ ಗ್ರಂಥ, ಯಾಜ್ಞವಲ್ಕ ಸ್ಮೃತಿ ಮುಂತಾದ ಹಲವು ಗ್ರಂಥಗಳ ಅಧ್ಯಯನದಿಂದ ಪಡೆದ ತಿಳುವಳಿಕೆಯನ್ನು ಆಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯವಿರುವವರು ಚರ್ಚಿಸಿ ಶ್ರೀಮಂತಗೊಳಿಸಬಹುದೆಂಬುದು ಲೇಖಕರ ಅನಿಸಿಕೆ. ಕಾದಂಬರಿಯಾಗಿರುವುದರಿಂದ ವಸ್ತುನಿಷ್ಠ ಅಂಶಗಳ ಜೊತೆಗೆ ಒಂದಿಷ್ಟು ಕಲ್ಪನೆಗಳು ಇರುವುದು ಸಹಜ. ಹಾಗೆ ಭಿನ್ನಾಭಿಪ್ರಾಯಗಳೂ ಸಹ. ಅದೇನಿದ್ದರೂ ಮುಕ್ತ ಮನಸ್ಸಿನಿಂದ ವಿದ್ವುತ್ ಪೂರ್ಣ ಸಂವಾದ, ಚರ್ಚೆ ನಡೆದರೆ ಎಲ್ಲರಿಗೂ ಫಲದಾಯಕ.

ಅರ್ಥೈಸುವಿಕೆ

ಆದರೆ ಸಂಘಪರಿವಾರ ಇಂತಹ ಯಾವುದೇ ಚರ್ಚೆಯನ್ನು ಎತ್ತದೇ 'ತಮ್ಮ' ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆಯೆಂದು, ಆರಾಧ್ಯ ದೇವರನ್ನು ಅವಹೇಳನ ಮಾಡಲಾಗಿದೆಯೆಂದು, ಲೇಖಕನನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕೆಂದೂ, ಕೃತಿಯನ್ನು ನಿರ್ಭಂಧಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಗಂಟಲು ಹರಿಯುವಂತೆ ಕೂಗಾಡುತ್ತಿದೆ. ಇದನ್ನನುಸರಿಸಿ ಮಾಧ್ಯಮದಲ್ಲಿನ ಸಂಘದ 'ಕರಸೇವಕರು' ಬೊಬ್ಬೆಯಿಡುವುದೂ ನಡೆದಿದೆ. ಇಂದು ದೇವರೆಂದು ಪೂಜಿಸುವ ಗಣೇಶ ಇಂದಿನಂತೆಯೇ ಇದ್ದನೇ? ಮನುಷ್ಯ ದೇಹ, ಆನೆಯ ಮುಖವೇ ಇತ್ತೇ? ಇರಲು ಸಾಧ್ಯವೇ? ಇದನ್ನು ಹೇಗೆ ಅರ್ಥೈಸುವುದು. ಆತನ ಇಷ್ಟಾರ್ಥಗಳು ಈಡೇರದಿದ್ದರೆ ವಿಘ್ನ ತಂದೊಡ್ಡುವುದು ಗ್ಯಾರಂಟಿ ಎಂದರೆ ಆತ ವಿನಯಮೂರ್ತಿಯೇ ಅಥವಾ ಒರಟುತನದವನೇ? ತಳ ಸಮುದಾಯಗಳು ಆದರಿಸಿ, ಆಚರಣೆಗಳ ಭಾಗವಾಗಿಸಿಕೊಂಡ ಜನ ಸಮುದಾಯಗಳ 'ಆಸ್ತಿ'ಗಳನ್ನು ಹಾಡ ಹಗಲೇ ಅಪಹರಿಸಿ ಬೆಣ್ಣೆ ಮೆಲ್ಲುವವರು ಉತ್ತರಿಸಬೇಕಾದ ಇಂತಹ ಹಲವು ಪ್ರಶ್ನೆಗಳಿವೆ!

ಇಂತಹ ದೇವರು, ದೈವಗಳೂ ಹುಟ್ಟಿದ್ದು, ಅವತಾರಗಳು ಘಟಿಸಿದ್ದು ಒಂದು ನಿರ್ಧಿಷ್ಠ ಕಾಲ ಘಟ್ಟದಲ್ಲಿ, ಸನ್ನಿವೇಶದಲ್ಲಿ ತಾನೇ! ನಮ್ಮಲ್ಲಿರುವ ಉತ್ಪಾದನಾ ಪಧ್ಧತಿ-ಪರಿಕರಗಳು, ಆಚರಣೆ, ನಂಬಿಕೆ, ಪಾತ್ರ- ಪ್ರತಿಮೆಗಳು, ಸಾಹಿತ್ಯ, ಹೀಗೆ ಇಂತಹವುಗಳ ಆಧಾರದಲ್ಲಿ ನಮ್ಮ ಇತಿಹಾಸವನ್ನು ವಿಶ್ಲೇಷಿಸುವುದು, ಅರಿಯುವುದು ಸಾಧ್ಯ ಅಲ್ಲವೇ? .

ವಾದಗಳ ಹೂರಣ

ಆದರೆ ತಾವು ಹೇಳಿದ್ದು ಮಾತ್ರ ಇತಿಹಾಸ, ಸಂಸ್ಕೃತಿ, ಉಳಿದವರದ್ದೆಲ್ಲಾ ವಿಕೃತಿ ಎನ್ನುವುದು ಫ್ಯಾಶಿಸ್ಟ್ ವರ್ತನೆಯಾಗಿದೆ. ಸದಾ ಚರಿತ್ರೆಯನ್ನು ತಮ್ಮ ಸಂಕುಚಿತ ವಿಕೃತ ಉದ್ದೇಶಗಳಿಗೆ ತಿರುಚುವ ಈ ಸಂಘಪರಿವಾರ ಈಗ ತಮ್ಮ ಭಾವನೆಗಳಿಗೆ ಧಕ್ಕೆ ಎಂದು ವಾದಿಸುವುದು ಉಳಿದವರಿಗೆ ಭಾವನೆ, ಬದುಕು ಇಲ್ಲವೆಂಬುದರ ನಿರಾಕರಣೆಯಾಗಿದೆ. ಹಾಗೆ ಅದು ವಾದಿಸುವಾಗ ತಾವು ಸೃಷ್ಟಿಸಿದ ವರ್ಣರಂಜಿತ ವಂಚನೆಯ ವಾದಗಳ ಹೂರಣವು ಸತ್ಯದ ಹುಡುಕಾಟದಲ್ಲಿ ಎಲ್ಲಿ ಹೊರ ಬೀಳುವುದೋ, ಸಮುದ್ರ ಮಥನಕ್ಕೆ 'ರಾಕ್ಷಸರ'ನ್ನು(ಶೂದ್ರರನ್ನು) ಹಚ್ಚಿ ಅಮೃತ ತಿನ್ನುವುದು ಎಲ್ಲಿ ತಪ್ಪಿ ಹೋಗುವುದೋ ಎಂಬ ದಿಗಿಲು ಇದರ ಹಿಂದೆ ಇದೆ.

ಹಾಗೆ ನೋಡಿದರೆ ಗಣಪತಿಯನ್ನು ಧರ್ಮೀಯರು ಸ್ವಾಗತಿಸುತ್ತಾರೆ, ಈತನಿಗೆ ಸಿಕ್ಕಷ್ಟು ವಿವಿಧ ಜಾತಿ, ಜನಾಂಗಗಳ ಪುರಸ್ಕಾರ, ವೈವಿಧ್ಯ ಆಚರಣೆ ರೀತಿ ಬೇರೆಯವರಿಗಿಲ್ಲ ಎನ್ನಬಹುದು. ಇಂತಹ 'ಗಣ- ಪತಿ'ಯನ್ನು 'ಹಿಂದುತ್ವದ ಶಕ್ತಿಗಳು' ಅಪಹರಿಸಿ ಬಂಧಿಯನ್ನಾಗಿಸುತ್ತಿದ್ದಾರೆ. ಮತೀಯ ದ್ವೇಶ ಹೊತ್ತಿಸಲು ಸಿಡಿ ಮದ್ದನ್ನಾಗಿಸುತ್ತಿದ್ದಾರೆ. ಇದು ಉಗ್ರ ಖಂಡನೀಯ.

ಬಂಧನ ಖಂಡನೀಯ

ಇದೀಗ ಬಂದ ಸುದ್ದಿಯಂತೆ (ಆ.29) ಚೆಡ್ಡಿ ಪಡೆ ನೀಡಿದ್ದ ದೂರನ್ನು ಅನುಸರಿಸಿ ಲೇಖಕ ಯೋಗೇಶ್ ಮಾಸ್ತರರನ್ನು ಬೆಂಗಳೂರಿನ ಕಲಾಸಿಪಾಳ್ಯಂನ ಪೋಲೀಸರು ಐ.ಪಿಸಿ 295(ಎ) ಪ್ರಕಾರ ಬಂದಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಕಾರಣ! ಒಂದು ಕೃತಿಯೊಂದರಲ್ಲಿನ ಅಂಶಗಳಿಗೆ ಯಾರೋ ಕೆಲವರು ತಕರಾರು ಎತ್ತಿದ್ದಾರೆ , ಗುಂಪುಕಟ್ಟಿ ದೊಂಬಿ ನಡೆಸುತ್ತಾರೆ ಎನ್ನುವುದನ್ನೇ ಆಧರಿಸಿ ಆರೋಪದ ಟೊಳ್ಳುತನ, ಹಿಂದಿರುವ ಕಪಟತನವನ್ನು ಪರಿಗಣಿಸದೇ ಮೊಕದ್ದಮೆ ದಾಖಲಿಸಿ ಬಂಧಿಸಿರುವುದು ಅಕ್ಷಮ್ಯ, ಇದು ಬರಹಗಾರನ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಕ್ರೂರ ಹಲ್ಲೆ. ಖಾವಿ ಪಡೆಯನ್ನು ಓಲೈಸುವ ಕಾಂಗ್ರೆಸ್ ಸರಕಾರದ ಈ ಕ್ರಮ ಖಂಡನೀಯ.

ಇಂತಹ ಕ್ರಮ ವಹಿಸುವಾಗ ಪ್ರತಿಗಾಮಿಗಳು ಸನ್ನಿವೇಶದ ದುರುಪಯೋಗ ಪಡೆಯಬಾರದೆಂಬ ಉದ್ದೇಶವಿದೆಯೆಂದು ಸರಕಾರ ಹೇಳಿಕೊಳ್ಳಬಹುದು. ಆದರೆ ಈ ಪ್ರತಿಗಾಮಿಗಳು ಇಷ್ಟಕ್ಕೆ ಸುಮ್ಮನಾಗುವ ಜಾಯಮಾನದವರೇನಲ್ಲ. ದೂರು ಕೊಟ್ಟಿರುವವರ ವಾದವನ್ನೇ ತಮ್ಮ ಕ್ರಮಕ್ಕೆ ಆಧರಿಸುವಂತಾದರೆ, ಅವರು ಹೇಳಿದ್ದಕ್ಕೆಲ್ಲಾ ಹೂಂ ಗುಟ್ಟುವುದಾದರೆ ಜೊಳ್ಳು ವಾದವನ್ನೇ ಸರಕಾರ ಪುರಸ್ಕರಿಸಿದಂತಲ್ಲವೇ? ಕೋಮುವಾದಿಗಳ ಬ್ಲಾಕ್ಮೇಲ್ಗೆ ಬಗ್ಗಿದಂತೆ ಅಲ್ಲವೇ?.

ಬ್ರಾಹ್ಮಣರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಮಡೆಸ್ನಾನ ಎಂದು ಉರುಳಾಡುವುದು, ಹುಟ್ಟಿನ ಕಾರಣಕ್ಕೆ ಜಾತಿ ಪಂಕ್ತಿಬೇಧ ಮಾಡುವುದು ಸಂವಿಧಾನ ಬಾಹೀರ, ಮಾನವನ ಘನತೆಗೆ ಅಪಮಾನಕರವಾಗಿವೆ, ನಿಲ್ಲಿಸಿ ಎಂದು ಕೇಳಿದರೂ ಕೇಳದ ಇವರು ಹಿಂದುತ್ವವಾದಿಗಳ ಮಾತಿಗೆ ಮಣಿಯುವುದರ ಅರ್ಥವೇನು? ಕರ್ನಾಟಕದಲ್ಲಿ ಕಾನೂನು, ಸಂವಿಧಾನ ಪಾಲಿಸಬೇಕೋ? ಅಥವಾ ಸಂಘಪರಿವಾರಿಗಳ ಬಾವೋದ್ರೇಕದ ಬ್ಲಾಕ್ ಮೇಲ್ ಹುಕುಂ ಸಾಕೋ, ಸರಕಾರ ಹೇಳಬೇಕು. ಇಲ್ಲಿ ಸಮಾಜವಾದಿ ಸಿದ್ಧರಾಮಯ್ಯನವರ , ಸೆಕ್ಯುಲರ್ ಮೌಲ್ಯಗಳ ಕಾಂಗ್ರೆಸ್ ಪಕ್ಷದ ತಾತ್ವಿಕ, ರಾಜಕೀಯ ಸಂದರ್ಭಸಾಧಕ ನೀತಿ ಬಯಲಾಗಿದೆ. ಮುಖ್ಯಮಂತ್ರಿ ಯಾರೇ ಆಗಿರಲಿ ಮೃದು ಹಿಂದುತ್ವದ ಧೋರಣೆಯನ್ನು ಕಾಂಗ್ರೆಸ್ ಬಿಡುವುದಿಲ್ಲ ಎಂದು ಈಗಲೂ ತೋರಿಸುತ್ತಿದೆ. ಪುಸಲಾಯಿಸುವುದರಿಂದ ಕೋಮುವಾದಿಗಳ ಅಟ್ಟಹಾಸವನ್ನು ಅಡಗಿಸಲು ಸಾಧ್ಯವಿಲ್ಲ.
ಈ ಕೂಡಲೇ ಸರಕಾರ ಬೇಷರತ್ತಾಗಿ ಲೇಖಕನನ್ನು ಬಿಡುಗಡೆ ಮಾಡಬೇಕು, ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕು.

ಧಾರ್ಮಿಕ ಭಾವನೆಗಳನ್ನು ಅಗೌರವಿಸಬೇಕೆಂದಲ್ಲ. ನಮ್ಮ ತಕರಾರು ಸಂಘಪರಿವಾರ ಈಗ ಹೇಳುವುದು ಧಾರ್ಮಿಕ ನಂಬಿಕೆಗಳೇ ಎಂಬುದಕ್ಕೆ? ಇಲ್ಲಿ ಸಂಘಪರಿವಾರ ಮತ್ತು ಸರಕಾರದ ಟೊಳ್ಳುತನವನ್ನು ಅರಿಯಬೇಕು. ನಾಡಿನ ಪ್ರಜ್ಷಾವಂತರು ಈಗಲೇ ಪ್ರತಿಭಟಿಸದಿದ್ದರೆ ಬರಹಗಾರರು, ಕಲಾವಿದರು ಬಾಯಿ, ಕೈ-ಕಾಲುಗಳಿಗೆ ಸ್ವಯಂ ಬೇಡಿ ತೊಟ್ಟು ಬಯಲು ಬಂಧಿಖಾನೆಯಲ್ಲಿ ಕಾಲ ನೂಕಬೇಕಾಗುತ್ತದೆ ಎಂಬುದನ್ನು ಮರೆಯದಿರೋಣ.

ಆಗಸ್ಟ್ 29, 2013

ಢುಂಢಿ ಕಾದಂಬರಿಕಾರ ಯೋಗೀಶ್ ಮಾಸ್ತರ ಬಂಧನ : ದಿನೇಶಕುಮಾರ್ ಅಭಿಮತDinesh Kumar
ಯೋಗೀಶ್ ಮಾಸ್ತರನ್ನು ಯಾವುದೋ ಹಾಫ್ ಮರ್ಡರ್ ಮಾಡಿಬಂದ ಲಡಕಾಸಿ ಕ್ರಿಮಿನಲ್ಲುಗಳ ಹಾಗೆ ಜೈಲಿಗೆ ತಳ್ಳಿದ ಕಥೆ ಹಾಗಿರಲಿ. ಗಣಪತಿ ಕುರಿತು ನನ್ನ ಮನಸ್ಸಲ್ಲಿ ಇರೋದು ಒಂಚೂರು ಹೇಳಬೇಕು. 
 
ಗಣಪತಿ ನಂಗೆ ಸಿಕ್ಕಾಪಟ್ಟೆ ಇಷ್ಟ. ಯಾಕೆಂದರೆ ಈತ ಇಂಡಿಯಾದ ಮೊಟ್ಟಮೊದಲ ಅಧಿಕೃತ ಇಂಟರ್ ಕ್ಯಾಸ್ಟ್ ದಂಪತಿಗಳ ಪುತ್ರ ಎಂಬುದು ನನ್ನ ಬಲವಾದ ನಂಬುಗೆ. (ನನ್ನ ಧಾರ್ಮಿಕ ನಂಬಿಕೆಗಳನ್ನು ದಯಮಾಡಿ ಯಾರು ಪ್ರಶ್ನಿಸಬೇಡಿ ಪ್ಲೀಸ್. ಹಾಗೆ ಪ್ರಶ್ನಿಸುವುದು ಅಪರಾಧ). 
 
ಯೋಗೀಶ್ ಮಾಸ್ತರರಿಗಿಂತ ಮುಂಚೆ ಪುರಾಣಗಳನ್ನು ಬರೆದವರ ಮೇಲೇ ನಂಗೆ ಸಿಕ್ಕಾಪಟ್ಟೆ ಸಿಟ್ಟು. ಯಾಕೆ ಅಂತೀರಾ? ಹತ್ತು ಹಲವು ಪುರಾಣಗಳಲ್ಲಿ ಬೇರೆ ಬೇರೆ ಡಿಜೈನಿನ ಕಥೆಗಳನ್ನು ನಾವು ಕೇಳಿದ್ದೇವೆ, ಯಾವುದು ನಿಜ ಅನ್ನೋದನ್ನು ನಮ್ಮ ಧರ್ಮರಕ್ಷಕರು ಮೊದಲು ಸ್ಪಷ್ಟಪಡಿಸಬೇಕು. ಅಷ್ಟು ಮಾತ್ರವಲ್ಲ, ಯಾವುದು ನಿಜವೋ ಅದನ್ನು ಹೊರತುಪಡಿಸಿ ಉಳಿದ ಪುರಾಣಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು, ಅದರನ್ನು ಬರೆದವರ ಮೇಲೆ ಕ್ರಿಮಿನಲ್ ಕೇಸು ಹೂಡಬೇಕು. (ಅವರು ಸತ್ತಿದ್ದರೂ ಕೂಡ). ಸಾಧ್ಯವಾದರೆ ಟಿವಿ9 ಸ್ಟುಡಿಯೋದಲ್ಲಿ ಢುಂಢಿ ಕಾದಂಬರಿಯನ್ನು ನಮ್ಮ ಕಾಲಘಟ್ಟದ ಮಹಾದಿವ್ಯಜ್ಞಾನಿ ಸೋಮಯಾಜಿ ಹರಿದು ಹಾಕಿದ ಹಾಗೆ ಒಂದೊಂದು ನ್ಯೂಸ್ ಚಾನೆಲ್ ನಲ್ಲೂ ಒಂದೊಂದು ಸೋಮಯಾಜಿಗಳು ಒಂದೊಂದು ಪುರಾಣವನ್ನು ಹರಿದುಹಾಕಬೇಕು.
 
ಅಥವಾ ಟಿವಿ ಚಾನಲ್ ನವರ ಒಪ್ಪಿಗೆ ಪಡೆದು ಅಲ್ಲೇ ಬೆಂಕಿ ಹಾಕಿ ಅವರ  ಟಿಆರ್ ಪಿ ಹೆಚ್ಚಿಸಬೇಕು ಎಂದು ನನ್ನ ಸವಿನಯ ಮನವಿ.
 
3

ಢುಂಢಿ ಲೇಖಕ ಯೋಗೇಶ್ವರ್ ಬಂಧನ : ಸೋರುತಿಹುದು ಮನೆಯ ಮಾಳಿಗಿ..ಡಾ. ಎಚ್. ಎಸ್. ಅನುಪಮಾಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಲೇಖಕರೊಬ್ಬರನ್ನು ಅವರು ಬರೆದ ಪುಸ್ತಕದ ಕಾರಣಕ್ಕೆ ಬಂಧಿಸಲಾಗಿದೆ. ಈ ಮೊದಲು ಶೂದ್ರ ಶಂಭೂಕ, ಚಿಕವೀರ ರಾಜೇಂದ್ರ, ಓ ದೇವರೇ ನೀನು ಹೆಣ್ಣಾಗಿದ್ದರೆ, ಸೀತಾಯಣ, ಆನು ದೇವಾ ಹೊರಗಣವನು, ಧರ್ಮ ಕಾರಣ, ಗಾಂಧಿ ಬಂದ, ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು - ಮುಂತಾದ ಹಲವು ಪುಸ್ತಕ, ಬರಹಗಳು ವಿವಾದಕ್ಕೆ ಗುರಿಯಾಗಿದ್ದವು. ಧರ್ಮ ರಕ್ಷಕರ ಕೆಂಗಣ್ಣಿಗೆ ಈಡಾಗಿ ನಿಷೇಧಿಸಲ್ಪಡುವವರೆಗೂ ಹೋದವು. ಆದರೆ ಪುಸ್ತಕ ಬರೆದ ಲೇಖಕರನ್ನು ಲಾ ಅಂಡ್ ಆರ್ಡರ್ ಸಮಸ್ಯೆ ಎಂದು ಪರಿಗಣಿಸಿ ವಿಚಾರಣೆಯಿಲ್ಲದೇ ಇದುವರೆಗು ಬಂಧಿಸಿರಲಿಲ್ಲ. ಈಗ ಅದೂ ನಡೆದಿದೆ.

ಕಾದಂಬರಿಕಾರರಾಗಿ ಅಷ್ಟೇನೂ ಪರಿಚಿತರಲ್ಲದ ಯೋಗೀಶ್ ಮಾಸ್ಟರ್ ಎಂಬ ರಂಗಕರ್ಮಿ, ಹಾಡುಗಾರರೊಬ್ಬರು ಗಣಪತಿಯ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ‘ಢುಂಢಿ’ ಕಾದಂಬರಿ ಬರೆದರು. ಜೊತೆಗೆ ತಾವೇ ಪ್ರಕಟಿಸಿ ಆಗಸ್ಟ್ ೨೪ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯನ್ನೂ ಮಾಡಿದರು. ಆ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಕೆ. ಎನ್. ಗಣೇಶಯ್ಯ, ಸಿ. ಎನ್. ರಾಮಚಂದ್ರನ್, ಬಂಜಗೆರೆ ಜಯಪ್ರಕಾಶ್ ಅವರು ಹೇಳಿದ ಮಾತುಗಳನ್ನಾಧರಿಸಿ ಹಿಂದೂ ಧರ್ಮ ರಕ್ಷಕರು ಈಗ ಗಣಪತಿಯ ಮಾನ ರಕ್ಷಣೆಗೆ ಮುಂದಾಗಿದ್ದಾರೆ. ಆ ಪುಸ್ತಕದ ಒಂದು ಪ್ರತಿಯನ್ನೂ ದುಡ್ಡು ಕೊಟ್ಟು ಕೊಳ್ಳದೇ, ಓದದೇ ಕೇವಲ ವರದಿಗಳನ್ನಾಧರಿಸಿ ಪುಸ್ತಕ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಮುಂದುವರೆದು ಲೇಖಕರ ವಿರುದ್ಧ ಜನಾಭಿಪ್ರಾಯ ರೂಪಿಸುವ, ಬರಹಗಾರರು ಇಂಥ ವಿಷಯಗಳನ್ನು ಬರೆಯಬಾರದು, ಬರೆದರೆ ಹುಶಾರ್ ಎಂದು ಬೆದರಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ. 

ಈಗ ಬರುತ್ತಿರುವ ಗಣೇಶ ಚೌತಿ ಹಬ್ಬ, ಗಣೇಶನನ್ನಿಡಲು ತಯಾರಾಗುತ್ತಿರುವ ಉತ್ಸವ ಸಮಿತಿಗಳ ಹಿನ್ನೆಲೆಯಲ್ಲಿ ಗಣೇಶನ ಕುರಿತು ‘ಧೈರ್ಯವಾಗಿ’ ಹೀಗೆಲ್ಲ ಬರೆದ ಪುಸ್ತಕ ಬಂದಿದೆಯೆನ್ನುವುದು ಚುನಾವಣೆಯಲ್ಲಿ ಸೋತು ಇಷ್ಯೂ ಒಂದಕ್ಕೆ ಕಾಯುತ್ತಿದ್ದವರಿಗೆ ಪರಮಾನಂದ ಉಂಟುಮಾಡಿರಬೇಕು. ಆ ಆನಂದದಲ್ಲೇ ಕುರುಡು ವಿವಾದ ಸೃಷ್ಟಿಸಿ, ಜನರನ್ನು ಕೆರಳಿಸಿ, ಅವರ ಧರ್ಮದ ರಕ್ಷಕರು ತಾವೆಂದು ಬಿಂಬಿಸಿಕೊಳ್ಳುವ ಕೆಲಸವೂ ನಡೆಯತೊಡಗಿದೆ. ಅಂಥವರಿಗೆ ಬೆಂಬಲ ನೀಡುತ್ತ ಕೆಲವು ದಿನಪತ್ರಿಕೆಗಳೂ, ಟಿವಿ ಚಾನೆಲ್ಲುಗಳೂ ಟೊಂಕಕಟ್ಟಿ ನಿಂತಿವೆ.  

ಆ ಪುಸ್ತಕ ಬಿಡುಗಡೆಯಾದ ಮರುದಿನದಿಂದಲೇ, ಆಗಸ್ಟ್ ೨೫ರಿಂದಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ‘ಢುಂಢಿ’ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡರು. ‘ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಸಿ. ಎನ್. ರಾಮಚಂದ್ರನ್, ಬಂಜಗೆರೆ ಜಯಪ್ರಕಾಶ್ ಹಾಗೂ ಯೋಗೀಶ್ ಮಾಸ್ಟರ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಪರಿಣಾಮವಾಗಿ ಐಪಿಸಿ ಸೆಕ್ಷನ್ ೨೯೫ ಅಡಿಯಲ್ಲಿ ಯೋಗೀಶ್ ಮಾಸ್ಟರ್ ಅವರನ್ನು ಆಗಸ್ಟ್ ೨೯ರಂದು ಅವರ ಮನೆಯಲ್ಲಿ ಕಲಾಸಿಪಾಳ್ಯ ಪೊಲೀಸರು ಬಂಧಿಸಿದರು. 

‘ಢುಂಢಿ’ ಓದದ ಹೊರತು ಅದರ ಕುರಿತು ಬರೆಯಬಾರದೆಂದುಕೊಂಡಿದ್ದೆವು. ಎಂದೇ ಯೋಗೀಶ್ ಮಾಸ್ಟರ್ ಸಂಪರ್ಕ ಸಾಧಿಸಿ ಪ್ರತಿ ಕಳಿಸಿಕೊಡಲು ಕೇಳಿದ್ದೆವು. ಹಿಂಜರಿಯುತ್ತಲೇ ತಮ್ಮ ಬಳಿ ಪ್ರತಿಗಳಿಲ್ಲವೆಂದು, ಸಿಕ್ಕಲ್ಲಿ ಒಂದೆರೆಡು ಪ್ರತಿ ಕಳಿಸುವೆನೆಂದು ಹೇಳಿ ಅವರು ಫೋನಿಟ್ಟ ಅರ್ಧ ಘಂಟೆಯಲ್ಲೇ ಬಂಧನವಾಗಿರುವ ಸುದ್ದಿ ಹೊರಬಿತ್ತು. 

ಬಹುಧರ್ಮಗಳ ದೇಶದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡುವುದು, ಬಂಧನಕ್ಕೊಳಗಾಗುವುದು ಎಷ್ಟು ಸುಲಭ!

ಕತೆಯೋ, ಕಾದಂಬರಿಯೋ, ಒಂದು ಸಾವಿರ ಪ್ರತಿ ಅಚ್ಚು ಹಾಕಿದರೆ ಅದು ಖಾಲಿಯಾಗಲು ವರ್ಷಗಟ್ಟಲೆ ಬೇಕು. ಆರೂವರೆ ಕೋಟಿ ಕನ್ನಡಿಗರಲ್ಲಿ ಎಷ್ಟು ಜನ ಅದನ್ನು ಓದಬಹುದು? ಅದನ್ನು ಓದಿದ ಜನರ ಕೆರಳಿದ ಭಾವನೆಯಲ್ಲಿ ಯಾವ ಧರ್ಮ, ದೇವರು ಮುಳುಗಿಹೋಗಬಹುದು? ಅಷ್ಟಕ್ಕೂ ಹಿಂದೂ ಧರ್ಮದ ಪುರಾಣಗಳ ಪಾತ್ರಗಳನ್ನು ವಿಶ್ಲೇಷಣೆಗೊಳಪಡಿಸಿರುವುದು, ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಿ ಕತೆ/ಕಾದಂಬರಿ/ನಾಟಕ/ಕವಿತೆ ಬರೆದಿರುವುದು ಇದೇನೂ ಮೊದಲ ಸಲವಲ್ಲ. ಧರ್ಮ, ಪುರಾಣ, ಸರ್ಕಾರ, ವ್ಯವಸ್ಥೆ ಮುಂತಾದ ಎಲ್ಲ ಪಟ್ಟಭದ್ರ ವ್ಯವಸ್ಥೆಗಳ ಚಲನಶೀಲತೆ ಕಡಿಮೆಯಾದ ಕೂಡಲೇ ಅದನ್ನು ಗ್ರಹಿಸಿ ಪ್ರಶ್ನಿಸುವ ಚೈತನ್ಯ ಸೃಜನಶೀಲ ಕಲೆಗಳಿಗಿದೆ. ಎಂದೇ ಯಥಾಸ್ಥಿತಿ ಬಯಸುವ ಎಲ್ಲ ವ್ಯವಸ್ಥೆಗಳು ಲೇಖಕ, ಕಲಾವಿದರನ್ನು ಗುಮಾನಿಯಿಂದ ನೋಡುತ್ತವೆ. ಅವರು ಕಾನೂನು ಸುವ್ಯವಸ್ಥೆ ಕಾಪಾಡಲು ಇರುವ ತೊಡಕುಗಳೆಂಬಂತೆ ಬಿಂಬಿಸಲು ಯತ್ನಿಸುತ್ತವೆ. ಫ್ಯಾಸಿಸ್ಟ್ ಹಾಗೂ ರಾಜಪ್ರಭುತ್ವದ ಆಳ್ವಿಕೆಯ ಕಾಲದಲ್ಲಿ ಅವೆಲ್ಲ ಸರ್ವೇಸಾಮಾನ್ಯವಾಗಿದ್ದವು. ಈಗ ಪ್ರಜಾಸತ್ತೆಯ ಮೌಲ್ಯವನ್ನೇ ಅಣಕಿಸುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಮುಂದುವರೆದಿರುವುದು ನಾಗರಿಕ ಸಮಾಜದ ಹಿನ್ನಡೆಯಾಗಿದೆ. 

ಕರ್ನಾಟಕದ ಮಟ್ಟಿಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರುವಾಗ ಈ ಘಟನೆ ಸಂಭವಿಸಿರುವುದು ಪ್ರಗತಿಪರರಿಗೆ ನಿರಾಸೆ ಮೂಡಿಸಿದೆ. ಈ ಸಲದ ಚುನಾವಣೆಯಲ್ಲಿ ಬರಹಗಾರರ ಅಭೂತಪೂರ್ವ ಬೆಂಬಲ ಪಡೆದ, ಗೆದ್ದಕೂಡಲೇ ಚಿಂತಕರನ್ನು ಭೇಟಿಯಾದ ಅವರ ಆಡಳಿತವಿರುವಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗಿರುವುದು ವಿಷಾದಕರ. ಪುಸ್ತಕ ಬಿಡುಗಡೆಯಾದ ಮರುದಿನದಿಂದಲೇ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡ ಸಂಘಟನೆಗಳು ಶಾಂತಿ ಸುವ್ಯವಸ್ಥೆ ಕದಡಲೇಬೇಕೆಂದು ಟೊಂಕಕಟ್ಟಿ ನಿಂತಿದ್ದವು. ಅಂಥವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳದೇ, ಲೇಖಕರನ್ನು ಬಂಧಿಸಿರುವ ಕ್ರಮವು ಉಚಿತವಲ್ಲ. ಮಹಾರಾಷ್ಟ್ರದಲ್ಲಿ ಬಾಳಾಠಾಕ್ರೆ ಕುರಿತು ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ, ಅದನ್ನು ಲೈಕ್ ಮಾಡಿದ್ದಕ್ಕೆ ಯುವತಿಯರು ಬಂಧಿಸಲ್ಪಟ್ಟರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕುರಿತ ಜೋಕ್, ವ್ಯಂಗ್ಯಚಿತ್ರ ಹಂಚಿಕೊಂಡದ್ದಕ್ಕಾಗಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ವಿದ್ಯಾರ್ಥಿಗಳು ಬಂಧಿಸಲ್ಪಟ್ಟರು. ಈಗ ಕರ್ನಾಟಕವೂ ಅದೇ ದಾರಿ ಹಿಡಿದಿರುವುದು ಅಪೇಕ್ಷಣೀಯವಲ್ಲ. 

ಈ ಮೊದಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗುತ್ತಿರುವಾಗ ಸಾಹಿತ್ಯಿಕ ವಲಯ ಒಗ್ಗಟ್ಟಾಗಿ ಪ್ರತಿಭಟಿಸಿತ್ತು. ಈಗಲೂ ಅಂಥ ಒಗ್ಗಟ್ಟಿನ ದನಿ ಎತ್ತಬೇಕಾದ ಅವಶ್ಯಕತೆಯಿದೆ. ಏಕೆಂದರೆ ‘ಆನಂದದಲ್ಲೂ, ಅತಂತ್ರ ಸ್ಥಿತಿಯಲ್ಲೂ’ ಎಚ್ಚರವಾಗಿಯೇ ಇರುವ ಕೋಮುವಾದಿಗಳ ದುಷ್ಟ ಚಾಲಾಕಿತನದ ವಿರುದ್ಧ ಒಟ್ಟಾಗಿ ಪ್ರತಿರೋಧಿಸುವ ಅವಶ್ಯಕತೆ ಹಿಂದೆಂದಿಗಿಂತ ಇಂದು ತುರ್ತು ವಿಷಯವಾಗಿದೆ.

ಕೇಸರಿ ದಿನಪತ್ರಿಕೆಯೊಂದು ಮುಖಪುಟದಲ್ಲಿ ‘ಅಂತೂ ಸೆರೆಯಾದ ಯೋಗೀಶ್ ಮಾಸ್ಟರ್’ ಎಂಬ ಶಿರೋನಾಮೆಯಡಿ ಸುದ್ದಿ ಪ್ರಕಟಿಸಿದೆ. ‘ಅಂತೂ’ ಎನ್ನಲು ಯೋಗೀಶ್ ಮಾಸ್ಟರ್ ತಲೆತಪ್ಪಿಸಿಕೊಂಡಿರಲಿಲ್ಲವಲ್ಲ? ಅಷ್ಟಕ್ಕೂ ಬಂಧಿಸಬೇಕಾದದ್ದು ಅವರನ್ನಲ್ಲ. ಯಾವ ಎಗ್ಗಿಲ್ಲದೆ ಜಾತಿ/ಧರ್ಮ/ಸಮುದಾಯ/ಭಾಷಿಕರನ್ನು ಗುರಿಯಾಗಿಸಿ ವೇದಿಕೆಗಳಿಂದ ಪ್ರಚೋದನಕಾರಿ ಭಾಷಣ ಮಾಡುವ; ಭಾಷಣಕ್ಕೆ ಟಿಕೆಟ್ ಇಟ್ಟು ದುಡ್ಡು ಮಾಡುವ; ಅಂಥ ಭಾಷಣದ ಸಿಡಿ ಮಾಡಿ ಮಾರುತ್ತ, ಚಪ್ಪಾಳೆಯನ್ನು ಓಟಾಗಿ ಪರಿವರ್ತಿಸಿಕೊಳ್ಳಲೆತ್ನಿಸುವ ಜನ ನೈಜ ಅಪಾಯಕಾರಿಗಳು. ಅವರನ್ನು ಮೊದಲು ಬಂಧಿಸಬೇಕು. ಅಂಥ ಭಾಷಣಕಾರರನ್ನು ತಮ್ಮ ಹೀರೋಗಳಾಗಿಸಿ ನಮೋನಮೋ ಎನ್ನುತ್ತ ಬ್ಯಾಂಡು ಬಜಾಯಿಸಿ ಕುಣಿಯುವವರನ್ನು ಬಂಧಿಸಬೇಕು. ತಾವೇ ಅಸಲಿ ಪ್ರಚೋದಕರಾಗಿದ್ದರೂ ಇನ್ಯಾರೋ ಬರೆದ ಪುಸ್ತಕ ಪ್ರಚೋದನಕಾರಿಯೆಂದು ಬಿಂಬಿಸಿ, ಅದರ ಲೇಖಕರನ್ನು ಬಂಧಿಸಿ ಎನ್ನುವ ಅಪ್ರಾಮಾಣಿಕ ಬೊಬ್ಬೆಕೋರರನ್ನು ಬಂಧಿಸಬೇಕು. ಗಣಪತಿ ಹಾಲು ಕುಡಿಯುವನೆಂದು ಸುಳ್ಳು ಹೇಳುತ್ತ, ಹೊಟ್ಟೆಗೆ ಹಿಟ್ಟಿಲ್ಲದವರೆದುರು ಲಕ್ಷ ಮೋದಕಗಳನ್ನು ಬೆಂಕಿಯಲ್ಲಿ ಸುಡುತ್ತ, ರಸೀದಿ ಪಟ್ಟಿ ಹಿಡಿದು ಗಣಪತಿ ಹೆಸರಲ್ಲಿ ಜನರನ್ನು ವಂಚಿಸುವವರು ಧಾರ್ಮಿಕ ಭಾವನೆಗಳನ್ನು ನಾಶಮಾಡುವವರು. ಅವರನ್ನು ನಿರ್ಬಂಧಿಸಬೇಕು.

ಏಕೆಂದರೆ ಇವರಿಗೆಲ್ಲ ಸುತ್ತಮುತ್ತ ಹೊತ್ತುರಿಯುತ್ತಿರುವ ಹತ್ತುಹಲವು ಸಮಸ್ಯೆಗಳು ಒಂಚೂರೂ ಬಾಧಿಸುವುದಿಲ್ಲ. ಧರ್ಮ, ಭಾಷೆ/ಸಮುದಾಯವೆನ್ನದೆ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿರುವಾಗ; ರೂಪಾಯಿ ಮೌಲ್ಯ ಕುಸಿದು ಪಾತಾಳ ಮುಟ್ಟಿ ಅರ್ಧಕ್ಕರ್ಧ ದೇಶವೇ ಹಸಿವಿನಿಂದ ಕಂಗೆಟ್ಟಿರುವಾಗ; ಶಿಕ್ಷಣ, ಆರೋಗ್ಯ ಮತ್ತಿನ್ಯಾವ ನಾಗರಿಕ ಸವಲತ್ತುಗಳಿಲ್ಲದೆ ಕೋಟ್ಯಂತರ ಜನ ಸ್ಲಮ್ಮುಗಳಲ್ಲಿ, ಗುಡ್ಡಗಾಡುಹಳ್ಳಿಗಳಲ್ಲಿ ಬದುಕಿರುವಾಗ ದೇಶಬಾಂಧವರ ಅಂಥ ಸಮಸ್ಯೆಗಳ ಬಗ್ಗೆ ಇವರಾರೂ ದನಿಯೆತ್ತುವುದಿಲ್ಲ. ಏಕೆಂದರೆ ಅಂಥ ಇಷ್ಯೂಗಳು ಮತ ಗಳಿಸಿಕೊಡುವುದಿಲ್ಲ. ಯಾರೋ ಬರೆದು ಹತ್ತಾರು ಜನ ಓದಿರಬಹುದಾದ ಕಾದಂಬರಿ ಪ್ರಚೋದಕವಾಗಿ, ಅದರ ನಿಷೇಧವೇ ಪ್ರಥಮ ಪ್ರಾಶಸ್ತ್ಯದ ಸಮಸ್ಯೆಯಾಗಿ ಅವರಿಗೆ ಕಾಣತೊಡಗುತ್ತದೆ. ‘ಗಣಪತಿ ಮೇಲೆ ಬರೆದಂತೆ ಪೈಗಂಬರರ ಮೇಲೆ ಬರೆಯಿರಿ, ಕ್ರಿಸ್ತನ ಮೇಲೆ ಬರೆಯಿರಿ ನೋಡೋಣ’ ಎನ್ನುವ ವಿತಂಡವಾದದ ಅಸಂಬದ್ಧ ಪ್ರಶ್ನೆಗಳು ಹೊಳೆಯುತ್ತವೆ.

ಗಣಪತಿ ಸಂಘಟನಾತ್ಮಕವಾಗಿ ಬಳಕೆಯಾಗಿದ್ದ. ದುಡ್ಡು ಮಾಡಿಕೊಳ್ಳುವ ದೇವರಾಗಿ ಬಳೆಕಯಾದ. ಈಗ ಮತ ಗಳಿಸಿಕೊಡುವವನಾಗಿಯೂ ಬಳಕೆಯಾಗುತ್ತಿರುವುದು ಹಿಂದೂಧರ್ಮದ ದುರಂತವೇ ಸರಿ. ಧರ್ಮವನ್ನು ತಪ್ಪುತಪ್ಪಾಗಿ ಅರ್ಥೈಸಿ ಅದನ್ನು ಢಾಂಭಿಕಗೊಳಿಸುತ್ತಿರುವವರಿಂದ ಧರ್ಮ ಮತ್ತು ಧಾರ್ಮಿಕ ಪ್ರವೃತ್ತಿ ಹಿನ್ನಡೆ ಅನುಭವಿಸುತ್ತಿದೆಯೇ ಹೊರತು ‘ಢುಂಢಿ’ಯಂತಹ ಕಾದಂಬರಿಗಳಿಂದಾಗಲೀ, ನಾಸ್ತಿಕರಿಂದಾಗಲೀ ಅಲ್ಲ ಎನ್ನುವುದನ್ನು ಧರ್ಮ ರಕ್ಷಕರು ಎಷ್ಟು ಬೇಗ ಅರಿತರೆ ಅಷ್ಟು ಒಳ್ಳೆಯದು. 

ಮತ್ತೊಂದು ಸೂಕ್ಷ್ಮವಿದೆ: ಯಾವುದೇ ಪ್ರಮಾಣದ ಧಾರ್ಮಿಕ ಬೋಧೆಯೂ ಮನುಷ್ಯ ಸಮಾಜವನ್ನು ವಿವೇಕಿಯನ್ನಾಗಿ, ಸಹಿಷ್ಣುವನ್ನಾಗಿ ಮಾಡಲಾರದು. ಏಕೆಂದರೆ ಧರ್ಮ ಮನುಷ್ಯನ ವೈಯಕ್ತಿಕ ಭಾವಕೋಶಕ್ಕೆ ಸಂಬಂಧಿಸಿದ್ದೇ ಹೊರತು ಸಾರ್ವಜನಿಕ ನೆಲೆಗೆ ಬಂದ ಕೂಡಲೇ ಅದು ಕೆಡುಕಿನ ಮೂಲವಾಗುತ್ತದೆ. ನಮ್ಮ ಕಷ್ಟಕೋಟಲೆಗಳ ಮೂಲ ಅರಿವಾಗದಂತೆ, ಪರಿಹಾರದ ದಾರಿ ಕಂಡುಕೊಳ್ಳದಂತೆ ತಡೆಯುತ್ತದೆ. ಜಗತ್ತಿನಾದ್ಯಂತ ಎಲ್ಲ ದುಷ್ಟತನದ ಮೂಲ ಧರ್ಮದ ತಪ್ಪು ವ್ಯಾಖ್ಯಾನವೇ ಆಗಿದೆ. ಹೀಗಾಗದಂತೆ ತಡೆಯಲು ಇರುವ ದಾರಿಯೆಂದರೆ ಧರ್ಮ, ನಂಬಿಕೆಗಳು ಇರುವುದಾದರೆ ಖಾಸಗಿಯಾಗಿರಲಿ. ಸುತ್ತಮುತ್ತಲು ಕಾಣದಂತೆ ಕಣ್ಣಿಗೆ ಭ್ರಮೆಯ ಪರದೆ ತೊಡಿಸದಿರಲಿ. ಮನುಷ್ಯರ ನಡುವೆ ಗೋಡೆಗಳನೆಬ್ಬಿಸದಿರಲಿ..


'ಬೀದಿ ಬೆಳಕಿನ ಕಂದೀಲು' ಮುಖಪುಟ ಯಾವುದಿರಲಿ ?
'ಬೀದಿ ಬೆಳಕಿನ ಕಂದೀಲು' ಇದು ಪ್ರಥಮ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕವಿ ಬಸವರಾಜ ಹೂಗಾರ ಅವರ ಲೇಖನಗಳ ಸಂಕಲನ. ನಮ್ಮ ಲಡಾಯಿ ಪ್ರಕಾಶನದಿಂದ ಪ್ರಕಟಣೆಗೆ ಸಿದ್ದವಾಗತೊಡಗಿದೆ. ಮಿತ್ರರಾದ ಅಪಾರ ಅವರು ಮೂರು ಮುಖಪುಟ ಮಾಡಿದ್ದಾರೆ. ಇವುಗಳಲ್ಲಿ ನಿಮಗೆ ಯಾವುದು ಇಷ್ಟವಾಯಿತು ?
Thursday, August 29, 2013

ಏಕಾಂತ ಸಂಜೆ
ಒಂದು ರೊಟ್ಟಿ
ಒಂದು ಕವಿತೆ
ಕೇಳಲೊಂದಿಷ್ಟು ಸಂಗೀತ-
ವಿದ್ದರೆ ಸಾಕು
ಈ ಸೂರಿನಡಿ ಒಬ್ಬಳೇ
ಇದ್ದುಬಿಡುವೆ
ಎಂಬ
ಜಂಭವಿತ್ತಲ್ಲ
ಹಾಗಾದರೆ, ಈ ಸಂಜೆ
ಏಕಾಂತಕ್ಕೆ ಜೀವ
ತುಂಬಲು ನೀನು ಬೇಕು
ಅಂತ ಯಾಕನ್ನಿಸಬೇಕು?

-ವಿಭಾ

ಗಣಪತಿಗೆ ಮಾಡಿದ ಅಪಚಾರ : ಕ್ರಿಮಿನಲ್ಸ್ ಗಳಂತೆ ಲೇಖಕ
ವಾರ್ತಾಭಾರತಿ ಸಂಪಾದಕೀಯ


ಒಬ್ಬ ಕೊಲೆಗಾರನನ್ನು, ಒಬ್ಬ ಕ್ರಿಮಿನಲ್‌ನನ್ನು ಬಂಧಿಸುವಾಗ ಪೊಲೀಸರು ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಒಬ್ಬ ಲೇಖಕನನ್ನು ಮಾತ್ರ, ಅತ್ಯಂತ ಸುಲಭವಾಗಿ ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಯಾಕೆಂದರೆ ಲೇಖಕರ ಹಿಂದಿರುವುದು, ಅವನ ಬಡಪಾಯಿ ಓದುಗರು ಮಾತ್ರ. ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಇರುವುದಿಲ್ಲ. ಅವನನ್ನು ಬಂಧಿಸಿದರೆ ಕೇಳುವವರು ಯಾರೂ ಇಲ್ಲ ಎನ್ನುವುದು ಪೊಲೀಸರಿಗೆ ಚೆನ್ನಾಗಿ ಗೊತ್ತಿದೆ. ಹೆಚ್ಚೆಂದರೆ, ಒಂದು ಹತ್ತು ಮಂದಿ ಚಿಂತಕರು, ಲೇಖಕರು ಸೇರಿ ಪ್ರತಿಭಟನೆ ನಡೆಸಬಹುದು. ಕೆಲವು ಜನ ಸೇರಿದರೆ ಅವರನ್ನು ಲಾಠಿಯಲ್ಲಿ ಮಣಿಸಬಹುದು. ಮತ್ತೂ ಜನ ಸೇರಿದರೆ ಅವರಿಗೆ ನಕ್ಸಲೀಯರೆಂಬ ಹಣೆಪಟ್ಟಿ ಕಟ್ಟಿ ಅವರನ್ನು ಮುಂದೆ ಹೆಜ್ಜೆ ಇಡದಂತೆ ಮಾಡಬಹುದು. ಬಹುಶಃ ಈ ಸರಳ ಯೋಚನೆಯ ಬಲದಿಂದಲೇ ಇರಬೇಕು, ಗುರುವಾರ ಓರ್ವ ಲೇಖಕನನ್ನು ಪೊಲೀಸರು ಬಂಧಿಸಿ ಎಳೆದೊಯ್ದಿದ್ದಾರೆ. ಅಂದ ಹಾಗೆ ಈತ ಯಾವುದೇ ಮಾಧ್ಯಮಗಳು ದಿನನಿತ್ಯ ನಡೆಸುವಂತೆ ಕೋಮು ಪ್ರಚೋದಕವಾದ ಬರಹಗಳನ್ನು ಬರೆದಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಲ್ಲ. ಆತ ಒಂದು ಕಾದಂಬರಿಯನ್ನು ಬರೆದ. ಅದೊಂದೇ ಕಾರಣಕ್ಕೆ ಕೃತಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿ ಎತ್ತೊಯ್ದರು. 

‘ಢುಂಢಿ’ ಎನ್ನುವ ಕಾದಂಬರಿಯನ್ನು ಬರೆದ ಲೇಖಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ. ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು. ಅದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಓರ್ವ ಹಿರಿಯ ಸಾಹಿತಿ ಮಾಡಿದ ಭಾಷಣ ಮತ್ತು ಪುಸ್ತಕದ ಮುನ್ನುಡಿಯನ್ನಷ್ಟೇ ಓದಿ ಚರ್ಚೆ ಮಾಡಿ, ಸಮಾಜವನ್ನು ಕಲಕಿದ್ದಾರೆ. ಇದೀಗ ಅದರ ಫಲವನ್ನು ಲೇಖಕ ಉಣ್ಣುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಿಘ್ನ ನಿವಾರಕ ಗಣಪತಿಯ ಕುರಿತಂತೆ ಪುರಾಣದಲ್ಲಿ ನೂರಾರು ಕತೆಗಳಿವೆ. ಗಣಪತಿಯನ್ನು ಭಾರತೀಯರಲ್ಲಿ ಬಹುತೇಕ ಮಂದಿ ವಿಘ್ನ ನಿವಾರಕ ಎಂದು ನಂಬುತ್ತಾರೆ. ಒಂದು ರೀತಿಯಲ್ಲಿ ಅವನ ರೂಪವೇ ವಿಮರ್ಶೆ, ಗೇಲಿಗೆ ಒಳಪಡುತ್ತದೆ. ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ. ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ. ‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು. ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಆ ಕೃತಿಗಿಲ್ಲ. ಒಂದು ವೇಳೆ ಆ ಕೃತಿ ಅದನ್ನು ನಂಬಿದವರ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ. ಆದರೆ, ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ.

ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ. ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು. ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದನು. ಇದೀಗ ಗಣಪತಿಯ ಸಂಶೋಧನಾತ್ಮಕ ಕೃತಿಯ ಬಗ್ಗೆ ತಮ್ಮ ಮೂಗಿನ ನೇರಕ್ಕೆ ವದಂತಿಗಳನ್ನು ಹಬ್ಬಿಸಿ ಅದೇ ಪತ್ರಿಕೆಗಳೇ ಲೇಖಕನ ಬಂಧನಕ್ಕೆ ಕಾರಣವಾಗಿರುವುದು ವಿಷಾದನೀಯ.
 
ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನ ಅಕ್ಷಮ್ಯ. ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಬಂಧಿಸಲ್ಪಟ್ಟ ಲೇಖಕನನ್ನು ತಕ್ಷಣ ಬಿಡುಗಡೆ ಮಾಡಿ, ಸರಿಯಾದ ದಾರಿಯಲ್ಲಿ ಕಾನೂನು ಹೆಜ್ಜೆಯಿಡಬೇಕು. ಗಣಪತಿ ವಿದ್ಯೆಯ ಅಧಿದೇವತೆ ಎಂಬ ನಂಬಿಕೆಯಿದೆ. ಜ್ಞಾನದ ಅಧಿದೇವತೆಯಾದ ಗಣಪತಿಯ ಹೆಸರಿನಲ್ಲೇ ಇದೀಗ ಜ್ಞಾನವನ್ನು ಅದುಮಿಡಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ಗಣಪತಿಗೆ ಮಾಡುವ ಅಪಚಾರವೇ ಸರಿ.

ಕಾದಂಬರಿ ಬಿಡುಗಡೆಯಾದ ವಾರದೊಳಗೆ ಲೇಖಕನ ಬಂಧನ!
ಕೆ. ಪಣಿರಾಜ್ಏನಾಯ್ತು?
ದಿನಾಂಕ 24.8.2013, ಶನಿವಾರ ಬೆಂಗಳೂರಿನಲ್ಲಿ, ಯೋಗಿಶ್ವರ್ ಮಾಸ್ತಾರ್ ಅವರು ಬರೆದ ’ಢುಂಢಿ’ ಕಾದಂಬರಿ ಬಿಡುಗಡೆಯಾಯಿತು. ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ-ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್, ಬಂಜಗೆರೆ ಜಯಪ್ರಕಾಶ್ ಹಾಗು ಗಣೇಶಯ್ಯ ಇವರುಗಳು ಪಾಲುಗೊಂಡು ಕಾದಂಬರಿಯನ್ನು ಮೆಚ್ಚುಗೆಯಿಂದ ಪರಾಮರ್ಶಿಸಿದ್ದರು. ದಿನಾಂಕ 29.8.2013, ಗುರುವಾರ ಸಂಜೆ 4 ಗಂಟೆ ಹೊತ್ತಿಗೆ ಕಾದಂಬರಿ ಬರೆದ ಯೋಗಿಶ್ವರ್ ಮಾಸ್ತಾರ್ ಅವರನ್ನು ಬೆಂಗಳೂರಿನ ಕಲಾಸಿಪಾಳ್ಯ ಠಾಣೆಯ ಪೋಲಿಸರು IPC Section-295A (295A. [ Deliberate and malicious acts intended to outrage religious feelings of any class by insulting its religion or religious beliefs.-- Whoever, with deliberate and malicious intention of outraging the religious feelings of any class of [ citizens of India], [ by words, either spoken or written, or by signs or by visible representations or otherwise] insults or attempts to insult the religion or the religious beliefs of that class, shall be punished with imprisonment of either description for a term which may extend to 8[ three years], or with fine, or with both.] ) ಲಗಾವು ಮಾಡಿ ಬಂಧಿಸಿದರು.

ಹೇಗಾಯ್ತು?
ದಿನಾಂಕ 26 ಹಾಗು 27.8.2013ರ ’ವಿಜಯವಾಣಿ’ ಹಾಗು ’ಉದಯವಾಣಿ’ ದಿನಪತ್ರಿಕೆಗಳು ಪ್ರಸ್ತುತ ಕಾದಂಬರಿ ಕುರಿತು ’ಭಾವನಾಪ್ರಚೋದಕ’ವಾದ ವರದಿ ರೂಪದ ಅಭಿಪ್ರಾಯಗಳನ್ನು ಪ್ರಕಟಿಸಿದವು.  ’ಹಿಂದುಗಳಿಗೆ ಬಹು ವಂದ್ಯನಾದ ಗಣೇಶನನ್ನು ಕೀಳಾಗಿ ಚಿತ್ರಿಸಲಾಗಿದೆ’, ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಿನಲ್ಲಿ ’ಪ್ರಚಾರ ಗಳಿಸಿಕೊಳ್ಳಲು’ ಕಾದಂಬರಿಯನ್ನು ಬಿಡುಗಡೆ ಮಾಡಲಾಗಿದೆ, ಇವುಗಳಿಂದ ’ಬಹುಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ’ ಎನ್ನುವುದು ಈ ವರದಿಗಳ(ಭಾವ ಪ್ರಚೋದಕ ಅಭಿಪ್ರಾಯ) ಸಾರಂಶ. ’26.8.2013ರ ’ವಿಜಯವಾಣಿ’ ಪತ್ರಿಕೆಯು ಓದುಗರ ಅಭಿಪ್ರಾಯವನ್ನೂ ಆಹ್ವಾನಿಸಿತು ಹಾಗು ಅವುಗಳನ್ನು ಮರುದಿನವೇ ಪ್ರಕಟಿಸಿತು. 

(’ವಿಜಯವಾಣಿ’ ಇ-ಕೊಂಡಿಗಳು: http://epapervijayavani.in/Details.aspx?id=8057&boxid=18843234 , http://epapervijayavani.in/Details.aspx?id=8058&boxid=182139812 , http://epapervijayavani.in/Details.aspx?id=8074&boxid=135621875 , http://epapervijayavani.in/Details.aspx?id=8093&boxid=14755119 )

ಖಾಸಗಿ ಕನ್ನಡ ಸುದ್ಧಿವಾಹಿನಿಗಳೂ- ’ರೌಡಿ ಗಣೇಶ’ ಎಂಬ ಶಿರೋನಾಮೆಯ ಹಾಕಿ- ಇದೇ ಬಗೆಯ ’ಭಾವಪ್ರಚೋದ’ ಅಭಿಪ್ರಾಯಗಳನ್ನು ಪ್ರಸಾರ ಮಾಡಿದವು.
ದಿನಾಂಕ 25.8.2013 ರಿಂದಲೇ, ’ಸಾರ್ವಜನಿಕ ಗಣೇಶೋತ್ಸವ ಸಮಿತಿ’, ’ಹಿಂದು ಜನ ಜಾಗೃತಿ ಸಮಿತಿ’ಗಳ ಹೆಸರಿನಲ್ಲೂ ಹಾಗು ತನ್ನ ಅಂಗ ಸಂಸ್ಥೆಗಳ ಮೂಲಕವೂ ’ಸಂಘಪರಿವಾರ’ವು ಕರ್ನಾಟಕದ ಎಲ್ಲ ಜಿಲ್ಲಾಕೇಂದ್ರಗಳಲ್ಲೂ ಪ್ರತಿಭಟನೆಗಳನ್ನು ಆಯೋಜಿಸಿತು. ಈ ಎಲ್ಲ ಸಭೆಗಳೂ ಮೇಲೆ ಕಾಣಿಸಿರುವ ವರದಿಗಳನ್ನು ಅಕ್ಷರಶಃ ಪುನರುಚ್ಚರಿಸಿದವು ಹಾಗು ’ಸರಕಾರವು ಕೃತಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಲೇಖಕರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದವು. ’ಕೂಡಲೇ ಬಂಧಿಸದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ನಾವು ಹೊಣೆಯಲ್ಲ..’ ಎಂಬ ಸಾರ್ವಜನಿಕ ಧಮಕಿಯಂತೂ ಇದ್ದೆ ಇತ್ತು. 26ನೇ ಸೋಮವಾರದ ಹೊತ್ತಿಗೇ ಯೋಗೀಶ್ವರ ಮಾಸ್ತರ್, ಡಾ.ಸಿ.ಎನ್.ರಾಮಚಂದ್ರನ್ ಹಾಗು ಬಂಜಗೆರೆ ಜಯಪ್ರಕಾಶ್ ಅವರ ಮೇಲೆ ’ಧಾರ್ಮಿಕ ಭಾವನೆಗಳಿಗೆ ಧಕ್ಕೆ’ಯ ದೂರುಗಳನ್ನು ಬೆಂಗಳೂರಿನ ಠಾಣೆಗಳಲ್ಲಿ ದಾಖಲಿಸಲಾಗಿತ್ತು.

ಇದರ ಅರ್ಥವೇನು?
ಯಾವುದೇ ಸಾಹಿತ್ಯ, ಅಭಿಪ್ರಾಯಗಳ ವಿರುದ್ಧ ಅಸಮಧಾನ ವ್ಯಕ್ತಗೊಳಿಸುವುದು, ಅವುಗಳ ವಿರುದ್ಧ ಪ್ರತಿಭಟಿಸುವುದು ಪ್ರಜಾಪ್ರಭುತ್ವದಲ್ಲಿ ಎಲ್ಲ ಪ್ರಜೆಗಳಿಗೂ ಇರುವ ಹಕ್ಕು. ಆದರೆ, ಪ್ರಜಾಪ್ರಭುತ್ವದಲ್ಲಿ ಈ ಬಗೆಯ ಸ್ವಾತಂತ್ಯ್ರ ಉಳಿದು, ಬೆಳೆಯುವುದು ಪರಸ್ಪರ ಭಿನ್ನಾಬಿಪ್ರಾಯಗಳ ಅನಿರ್ಭಂದಿತ ಪ್ರಸಾರ ಸಾಧ್ಯವಾಗುವಂಥ ಮುಕ್ತ ವಿಚಾರ ಸ್ವಾತಂತ್ಯ್ರವಿದ್ದಾಗ ಮಾತ್ರವೇ. ಒಂದು ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಅನ್ನುವುದೂ, ’ಭಾವನೆಗಳಿಗೆ ಧಕ್ಕೆ’ಯ ನೆಪದಲ್ಲಿ ನಮಗೆ ಪತ್ಯವಾಗದ ವಿಚಾರ ಉಳ್ಳವರನ್ನು ಬಂಧಿಸಬೇಕೆನ್ನುವುದೂ ಹಾಗು ಜನರನ್ನು ಭಾವೋದ್ರೇಕಿಸಿ ಗುಂಪು ಸೇರಸಿ, ಸಾರ್ವಜನಿಕ ಹಿಂಸೆಯ ವಾತಾವರಣ ನಿರ್ಮಿಸಉವುದು ಖಂಡಿತ ಲಾಗಾಯ್ತಿನ ಫ್ಯಾಸಿಸ್ಟ್ ವರಸೆ. ಈ ವಿದ್ಯಮಾನದಲ್ಲೂ ಸಂಘಪರಿವಾರವೂ ಅದನ್ನೇ ಮಾಡಿದೆ. ಹಾಗೆಯೇ ಅದು, ಈ ಬಗೆಯ ಗುರಿ ಸಾಧನೆಗಾಗಿ, ಸಮಾಜದಲ್ಲಿ ಯಾವ ಬಗೆಯ ಆಯಕಟ್ಟಿನ ಅವಕಾಶಗಳನ್ನು ರಚಿಸಿ ಜತನವಾಗಿಟ್ಟುಕೊಂಡಿದೆ ಎನ್ನುವುದನ್ನೂ ನಿಚ್ಚಳವಾಗಿ ತೋರುತ್ತಿದೆ.

ಮಾಡಬೇಕಾದ್ದೇನು?:
ಪ್ರಜಾಪ್ರಭುತ್ವ ಹಾಗು ನಾಗರಿಕ ಹಕ್ಕುಗಳಲ್ಲಿ ವಿಶ್ವಾಸವಿರಿಸಿಕೊಂಡಿರುವವರು ಸರಕಾರ ಹಾಗು ಕಾನೂನು ಪಾಲಕರನ್ನು ಮುಖಮುಲಾಜಿಲ್ಲದೆ ಕೇಳಬೇಕಾಗಿರೋದು ಒಂದೇ ಪ್ರಶ್ನೆಯನ್ನು: ದೊಡ್ಡಸಂಖ್ಯೆಯಲ್ಲಿ ಜನರನ್ನು ಗುಂಪುಗೂಡಿಸಿ, ಭಾವನಾತ್ಮಕವಾಗಿ ಪ್ರಚೋದಿಸಿ, ದೊಂಭಿ-ಹಿಂಸೆಗಳ ಬೆದರಿಕೆ ತೋರಿಸಿ, ’ಇಂಥವರನ್ನು ಬಂಧಿಸಿ’ ಎನ್ನುವ ದೂರು ಬಂದರೆ ನೀವು ಏನು ಮಾಡಬೇಕು? 

ನಾವು ಸ್ಪಷ್ಟವಾಗಿ ಹೇಳಬೇಕು:

ಗುಂಪಿನ ಒತ್ತಡಕ್ಕೆ ಮಣಿಯದೆ ಸಂವಿಧಾನಿಕ ಕಾನೂನು ವಿಧಾನಗಳಿಗೆ ಬದ್ಧತೆ ತೋರಬೇಕು; ದೂರಿನಲ್ಲಿರುವ ಸತ್ಯಾಸತ್ಯೆಗಳನ್ನು ಪರಾಂಬರಿಸಬೇಕು; ಜನರನ್ನು ಹಿಂಸಾತ್ಮಕವಾಗಿ ಅಣಿನೆರೆಸುತ್ತಿರುವವರು ಯಾರು, ಅವರ ಉದ್ದೇಶಗಳೇನು ಎಂದು ಗೊತ್ತು ಹಚ್ಚಿಕೊಳ್ಳಬೇಕು; ಅಂಥವರು ಉದ್ದೇಶ ಸಾರ್ವಜನಿಕ ಹಿಂಸೆಯನ್ನು ಪ್ರಚೋದಿಸುವುದೂ, ವೈಯಕ್ತಿ ಸ್ವಾತಂತ್ಯ್ರವನ್ನು ಹತ್ತಿಕ್ಕುವಂಥದ್ದೂ ಆಗಿದ್ದಲ್ಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು;  ಇಲ್ಲವಾದಲ್ಲಿ ದೂರಿನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ಪ್ರಸ್ತುತ ವಿದ್ಯಮಾನದಲ್ಲಿ ನೀವು ಹಾಗೆ ವರ್ತಿಸಿಲ್ಲ; ಗುಂಪುಹಿಂಸೆಯ ಬೆದರಿಕೆಯ ಮುಂದೆ ಕಾನೂನಿನ ಆಳ್ವಿಕೆಯನ್ನು ಬದಿಗಿರಿಸಿ ಡೊಗ್ಗುವ ನಾಚಿಕೆಗೇಡಿ ಕೆಲಸ ಮಾಡಿ ಫ್ಯಾಸಿಸ್ಟ್ ಮನೋಭಾವಕ್ಕೆ ಮಣೆ ಹಾಕಿದ್ದೀರಿ. ಇದನ್ನು ನಾವು ಪ್ರತಿಭಟಿಸುತ್ತೇವೆ. ಕೂಡಲೇ ಯೋಗಿಶ್ವರ ಮಾಸ್ತಾರರ ಮೇಲೆ ಜಡಿದಿರುವ ಕೇಸು ಹಿಂತೆಗೆದುಕೊಳ್ಳಿ. ಕೋಮುವಾದಿ ಭಾವನೆಗಳನ್ನು ಪ್ರಚೋದಿಸುತ್ತಿರುವ ಹಿತಾಸಕ್ತಿಗಳ ಮೇಲೆ ಕಠಿಣ ಕಾನೂನುಕ್ರಮ ಜರುಗಿಸಿ.

ದಲಿತರ ಹಸಿವನ್ನು ಮೀಸಲಾತಿಯಿಂದ ಹಿಂಗಿಸಲು ಸಾಧ್ಯವಿಲ್ಲ

ರಘೋತ್ತಮ ಹೊ.ಬ

ಚಾಮರಾಜನಗರ

 

ಮೀಸಲಾತಿ: ವೈಯಕ್ತಿಕವಾಗಿ ನಾನು ಅದರ ಫಲಾನುಭವಿ. ಫಲಾನುಭವಿ ಆಗಲೇಬೇಕು ಅಂತ ಓದಿದ್ದು. ಅದಕ್ಕೆ ಫಲಾನುಭವಿ. ಮನೆಯವರ ಒತ್ತಡ, ಹಾಗೇ ಅಣ್ಣಂದಿರು ಫಲಾನುಭವಿಗಳಾದರು. ನಾನು ಆಗದಿದ್ದರೆ ನನ್ನ ಅಪ್ಪಅಮ್ಮ ಸುಮ್ಮನೇ ಬಿಡುವರೇ ಎಂಬ ಸಾಮಾನ್ಯ ಆಲೋಚನೆ ಕೂಡ ನಾನು ಹಾಗೇ ಮೀಸಲಾತಿಯ ಫಲಾನುಭವಿ ಆಗುವಂತೆ ಮಾಡಿತು. ಆದರೆ ನನ್ನ ಬೇರೆ ಜಾತಿಯ ಸ್ನೇಹಿತರು ಅದರ(ಮೀಸಲಾತಿ)  ಫಲಾನುಭವ ಇಲ್ಲದೆ ನನಗಿಂತಲೂ ಚೆನ್ನಾಗಿ ಬದುಕುತ್ತಿದ್ದಾರೆ! ನನ್ನನ್ನೇ ಅಣಕಿಸುವಷ್ಟು! ಹಾಗಿದ್ದರೆ ನಾನು ಗಳಿಸಿದ್ದಾದರೂ ಏನು? ಅವರು ಕಳೆದುಕೊಂಡದ್ದಾದರೂ ಏನು? ಹೌದು, ನಾನು ಗಳಿಸಿದ್ದು ಬರೀ ಮೀಸಲಾತಿ ಮತ್ತು ಒಂದು ಉದ್ಯೋಗ. ಆದರೆ ಅವರು? ಇಡೀ ಜಗತ್ತನ್ನೇ ತಮ್ಮದೆಂದುಕೊಂಡರು. ಫುಟ್‌ಪಾತ್‌ನಲ್ಲಿ ಕಡಲೆಕಾಯಿ ಮಾರುವುದರಿಂದ ಹಿಡಿದು ಹೈಟೆಕ್ ಕಂಪೆನಿಯ ಸಿ.ಇ.ಒ.ಗಳಾಗುವವರೆಗೆ ಅವರು ಅವಕಾಶ ಪಡೆದರು.  ಎಲ್ಲ ಬಗೆಯ ಉದ್ಯಮಗಳೂ ಅವರಿಗೆ ತೆರೆದಿತ್ತು. ದಲಿತರ ಈ ಹೊತ್ತಿನ  ಹಸಿವನ್ನು ಮೀಸಲಾತಿ ಖಂಡಿತ ಇಂಗಿಸಲಾರದು. ಅವರಿಗೂ ತರೆಯಬೇಕಿದೆ ಎಲ್ಲ ಬಗೆಯ ಉದ್ಯಮಗಳು. ಇಲ್ಲದಿದ್ದರೆ ಮುಂದಿನ ಪೀಳಿಗೆಯಲ್ಲಿ ನಾಶ ಖಚಿತ.

ಉದ್ದಿಮೆ, ಹಾಗಿದ್ದರೆ ದಲಿತರು ಎಲ್ಲೆಲ್ಲಿ ನುಗ್ಗಬಹುದು?  ಉತ್ತರ ಬಹು ಆಯಾಮದ್ದು. ಅಂದಹಾಗೆ ನನಗೆ ಪರಿಚಿತ ಸ್ವಯಂ ಉದ್ಯೋಗ ನಡೆಸುತ್ತಿದ್ದ ದಲಿತ ಸಂಘರ್ಷ ಸಮಿತಿಯ  ಮುಖಂಡರೊಬ್ಬರು ಹೀಗೆ ಸವರ್ಣೀಯರ ವಿರುದ್ಧ ಹೋರಾಟ ಕೈಗೊಂಡಾಗ ಅವರಿಗೆ ಅಂಗಡಿ ಬಾಡಿಗೆ ನೀಡಿದ್ದ ಸವರ್ಣೀಯ ನೊಬ್ಬ ಅವರನ್ನು  ಖಾಲಿ ಮಾಡಿಸಿದ. ಆದರೆ ಅವರು ಹೆದರಲಿಲ್ಲ. ಬೇರೊಂದು ಅಂಗಡಿ ಬಾಡಿಗೆಗೆ ಪಡೆದು ತಮ್ಮ   ವ್ಯವಹಾರ ಮುಂದುವರಿಸಿದರು. ಖಂಡಿತ,  ಈ ಸಂದರ್ಭದಲ್ಲಿ ಅಸ್ಪಶ್ಯತಾಚರಣೆಗೆ ಮಣಿದರೆ ನಾವು ಈ ಶತಕದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ. ಉದ್ದಿಮೆಗೆ  ಇಳಿಯಬೇಕು. ವೊದಲು ಕಡಲೆಕಾಯಿ ಯನ್ನೇ ಮಾರಬೇಕು. ಫುಟ್‌ಪಾತ್‌ನಲ್ಲಿ ಟೀಯನ್ನೇ ಕಾಯಿಸಬೇಕು. 

ಚಪ್ಪಲಿ ಹೊಲಿಯುವುದಕ್ಕಿಂತ, ಶೌಚಾಲಯ ಶುಚಿಗೊಳಿಸುವುದಕ್ಕಿಂತ  ಇದು ಉತ್ತಮ ಕೆಲಸ! ಹಾಗಿದ್ದರೆ ಗ್ರಾಹಕರು? ನಾವೇ! ನಾವೇ ಕಡಲೆಕಾಯಿ ಮಾರಬೇಕು, ರೇಷನ್ ಅಂಗಡಿ ತೆರೆಯಬೇಕು, ಗೊಬ್ಬರದ ಅಂಗಡಿ ತೆರೆಯ ಬೇಕು, ಬೇರೆಯವರಿಗಿಂತ ಅರ್ಧ ರೂಪಾಯಿ ಕಮ್ಮಿ ತೆಗೆದುಕೊಳ್ಳಬೇಕು. ನಾವೇ ಅದರ ಗ್ರಾಹಕರೂ ಕೂಡ ಆಗಬೇಕು.  ನೋಡಿ, ಲಕ್ ಹೇಗೆ ಕುದುರುತ್ತದೆ ಎಂಬುದನ್ನು! ಉದ್ಯೋಗವೂ ಸೃಷ್ಟಿಯಾಗುತ್ತದೆ. ನಾಲ್ಕು ಕಾಸೂ ಕೂಡ ಬರುತ್ತದೆ.
 
ಯಾಕೆಂದರೆ ಇಂದಿಗೂ  ದಲಿತರು ಬಹುತೇಕ ಅಂಗಡಿಗಳಿಗೆ, ಹೋಟೆಲ್ಗಳಿಗೆ, ಕಂಪೆನಿಗಳಿಗೆ ಖಾಯಂ ಗಿರಾಕಿಗಳಾಗಿ ದ್ದಾರೆ, ಗ್ರಾಹಕರಾಗಿದ್ದಾರೆ. ಆದರೆ  ಮಾಲಕ ರಾಗುವುದು? ಖಂಡಿತ,  ಹೀಗೆ ಕೆಳಮಟ್ಟ ದಿಂದಲೇ ಪ್ರಾರಂಭವಾಗಬೇಕು. ಇಡೀ ಜಗತ್ತು ಸ್ಪರ್ಧಾತ್ಮಕತೆಯ ಹಿಂದೆ ಓಡುತ್ತಿದೆ. ಹೀಗಿರು ವಾಗ ದಲಿತರು ಅಪ್ಪಹಾಕಿದ ಮೀಸಲಾತಿ ಎಂಬ ಆಲದ ಮರಕ್ಕೆ ನೇತುಹಾಕಿಕೊಳ್ಳುವುದು? ಅದಕ್ಕೇ ಜೋತುಬೀಳುವುದು?

ಎಲ್ಲಿಯವರೆಗೆ ನಮ್ಮ ಹೋರಾಟ ಒಂದೇ ದಿಕ್ಕಿನೆಡೆಗೆ, ಬರೇ ಮೀಸಲಾತಿಯೆಡೆಗೆ ಇರುತ್ತದೆಯೋ ಅಲ್ಲಿಯವರೆಗೆ ನಮ್ಮನ್ನು ಬಲಿತೆಗೆದುಕೊಳ್ಳುವುದು ಪಟ್ಟಭದ್ರರಿಗೆ ಸುಲಭವಾಗುತ್ತದೆ.ಅದೇ ನಾವು ಮೀಸಲಾತಿ ಬೇಡುವವರಲ್ಲ.  ನೀಡುವವರಾಗುತ್ತೇವೆ ಎಂದು ವ್ಯಾಪಾರ ಉದ್ದಿಮೆಗಳೆಡೆ  ಮನಸ್ಸು ಮಾಡಿದರೆ? ವರ್ಣಾಶ್ರಮದ ಮೌಲ್ಯಗಳನ್ನು ಉಲ್ಟಾಪಲ್ಟಾ ಮಾಡುವತ್ತ ಚಿಂತಿಸಿದರೆ? ಹೊಸ ಬಗೆಯ  ಗ್ರಾಹಕರು ಹುಟ್ಟಿಕೊಳ್ಳುತ್ತಾರೆ. ಅಕಸ್ಮಾತ್ ಅಸ್ಪಶ್ಯತಾಚರಣೆಯೂ ನಡೆದರೆ  ಎಷ್ಟು ದಿನ ಅಂತ ನಡೆಯಲಿಕ್ಕಾಗುತ್ತದೆ? ನಡೆದರೆ ನಡೆಯಲಿ ಬಿಡಿ. 

ನಮ್ಮ ಮೇಲೆ ನಡೆದದ್ದು ನಮ್ಮ ಮಕ್ಕಳ ದಿನಕ್ಕೆ ಕೊನೆಗೊಳ್ಳ ಬಹುದು. ವೊಮ್ಮಕ್ಕಳ ದಿನಕ್ಕೆ ಕೊನೆಗೊಳ್ಳ ಬಹುದು.  ಬರೇ ಮೀಸಲಾತಿಗೆ ಜೋತು ಬಿದ್ದರೆ  ನಮ್ಮ ಮಕ್ಕಳು ಹೇಗೆ ಹೊಸ ರೀತಿ ಯೋಚಿಸಲು ಸಾಧ್ಯ? ನಮ್ಮಪ್ಪ ಮೀಸಲಾತಿ ಯಿಂದ ಕೆಲಸ ಗಿಟ್ಟಿಸಿದ್ದ ನಾನೂ ಕೂಡ ಮೀಸಲಾತಿಯಿಂದಲೇ   ಕೆಲಸ ತೆಗೆದುಕೊಳ್ಳ ಬೇಕು ಎಂದು ಆತ ಅಂದುಕೊಂಡರೆ ಆತನಿಗೆ ತೆಗೆದುಕೊಳ್ಳಲು ಅಲ್ಲಿ ಉದ್ಯೋಗವೇ ಇರುವುದಿಲ್ಲ. ಎಲ್ಲವೂ ಖಾಸಗೀಕರಣಗೊಂಡು ಮೀಸಲಾತಿ ಹಲ್ಲಿಲ್ಲದ ಹಾವಾಗುತ್ತದೆ. ಉಪಯೋಗಕ್ಕೆ ಬಾರದ ಆಯುಧವಾಗುತ್ತದೆ! 

ಅದರ ಬದಲು ಉದ್ದಿಮೆಶೀಲತೆಯ ಮೂಲಕ ನಾವು ಆತನಿಗೆ/ಆಕೆಗೆ ಬದುಕನ್ನು ಹೀಗೂ ಬಾಳಬಹುದು; ಏನಾದರೂ ಮಾಡು, ಬದುಕಲಿಕ್ಕೆ ವ್ಯಾಪಾರವಾದರೂ ಸೈ, ಸ್ವಯಂ ಉದ್ಯೋಗವಾದರೂ ಸೈ, ನಿನ್ನದೇ ಸ್ವಂತ ಉದ್ದಿಮೆಯಾದರೂ ಸೈ ಎಂಬ ಕನಸನ್ನು ಆತನಲ್ಲಿ/ಆಕೆಯಲ್ಲಿ ಬಿತ್ತಿದ್ದೇ ಆದರೆ?ಈ ದಿಕ್ಕಿನಲ್ಲಿ ಮೊನ್ನೆ ಬೆಂಗಳೂರಿನಲ್ಲಿ ನಡೆದ DICCI(Dalit India Chamber of Commerce and Industries) ಸಮಾವೇಶ ಗಮನಾರ್ಹ ವಾದುದೇ. ಯಾಕೆಂದರೆ ಮೀಸಲಾತಿ ನಿರ್ಯಕರಣಗೊಳ್ಳುತ್ತಿರುವ ಈ ದಿನಗಳಲ್ಲಿ ಬರೀ ಅದಷ್ಟಕ್ಕೆ ದಲಿತರು ಜೋತು ಬೀಳುವು ದೆಂದರೆ ಮುಂದೆ ಬದುಕುವುದಾದರೂ ಹೇಗೆ? ಖಾಸಗೀ ರಂಗದಲ್ಲಿ ಮೀಸಲಾತಿ ಎಂದು ಕೆಲವರು ಅನ್ನಬಹುದು. 

ಆದರೆ ಸರಕಾರಿ ಮೀಸಲಾತಿಯನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸದ ವ್ಯವಸ್ಥೆ ಖಾಸಗಿ ರಂಗದಲ್ಲಿ ಅದನ್ನು ಜಾರಿಗೊಳಿಸುತ್ತದೆ ಎಂಬುದು ಕನಸಿನ ಮಾತು.  ಈ ಕಾರಣಕ್ಕಾಗಿ ದಲಿತರಲ್ಲಿ ಉದ್ಯಮ ಶೀಲತೆ ಬೆಳೆಸುವ ನಿಟ್ಟಿನಲ್ಲಿ DICCIಯ ಮುಖ್ಯ ಪ್ರವರ್ತಕ, ದಲಿತ ಚಿಂತಕ ಚಂದ್ರಭಾನ್ ಪ್ರಸಾದ್ ಮತ್ತು ಅಧ್ಯಕ್ಷ ಮಿಳಿಂದ್ ಕಾಂಬ್ಳಿಯವರ ಪ್ರಯತ್ನ ಖಂಡಿತ ಹೊಸ ಮಾದರಿಯದ್ದು. ಅಂದ ಹಾಗೆ ಬೆಳೆಯುತ್ತಿರುವ ದಲಿತ ವಿದ್ಯಾರ್ಥಿ ಸಮೂಹಕ್ಕೆ ಸರಕಾರ ಎಷ್ಟು ಅಂತ ಉದ್ಯೋಗ ನೀಡಲಿಕ್ಕಾಗುತ್ತದೆ?

ಸರಕಾರ ನೀಡಲಿಲ್ಲವೆಂದರೆ ದಲಿತ ಸಮು ದಾಯ ಹೊಸದಾಗಿ  ಏನನ್ನೂ ಮಾಡು ವುದು ಬೇಡವೆ? ಹಿಂದೆ  ದಲಿತ ಯುವಕರಲ್ಲಿ ಒಂದು ಟ್ರೆಂಡ್ ಇತ್ತು. ಪದವಿ ಗಳಿಸಿದಾಕ್ಷಣ ಸರಕಾರ  ನಮಗೆ ಕರೆದು ಉದ್ಯೋಗ ಕೊಡಬೇಕು ಎಂಬುದೇ ಆ ಟ್ರೆಂಡ್! ಕೆಲಸ ಮಾಡು ಅಂದರೆ ಹ್ಞೂಂ ನಾನು ಓದಿಲ್ಲವೆ? ಎಂಬ ಉತ್ತರ ಅಂತಹ ವಿದ್ಯಾರ್ಥಿಗಳಿಂದ ಬರುತ್ತಿತ್ತು. ಆದರೆ ಈಗ? ಕಾಲ ಬದಲಾಗಿದೆ.  ನೀನು ಓದಿದ್ದೀಯ. ಅದು ನಿನ್ನ ಜ್ಞಾನಕ್ಕಷ್ಟೆ ಎಂಬ ವಿವರಣೆ ಈಗ ಸರ್ವೇಸಾಮಾನ್ಯವಾಗಿದೆ.
ಹಾಗಿದ್ದರೆ ಇಂತಹ ಸಮಯದಲ್ಲಿ ಏನು ಮಾಡುವುದು? ಖಂಡಿತ, ಉತ್ತರ:- ಉದ್ಯಮ ಶೀಲತೆ ಅಥವಾ entrepreneurship. ಹಿಂದೆ ದಿ.ಕಾಂಶಿರಾಂರವರು ತಾನು ದಲಿತರನ್ನು ಬೇಡುವ ಸಮಾಜದಿಂದ, ನೀಡುವ ಸಮಾಜವಾಗಿ ಪರಿವರ್ತಿಸುತ್ತೇನೆ ಎಂದಿದ್ದರು. ಅವರ ಉದ್ದೇಶ ದಲಿತರನ್ನು ರಾಜಕೀಯ ಹಕ್ಕು ಅಧಿಕಾರಗಳಿಗಾಗಿ ತಯಾರು ಮಾಡುವುದಾಗಿತ್ತು. ಖಂಡಿತ, ಕಾಂಶಿರಾಂ ಆ ದಿಸೆಯಲ್ಲಿ ಯಶಸ್ಸನ್ನೂ ಕೂಡ ಕಂಡರು. ಆದರೆ ದಲಿತರ ಭವಿಷ್ಯದ ಬದುಕಿನ  ಉದ್ಯೋಗದ ಪ್ರಶ್ನೆ?

ಖಂಡಿತ, ಚಂದ್ರಭಾನ್ ಪ್ರಸಾದ್‌ರ  DICCI(ಡಿಕ್ಕಿ) ಮಾದರಿಯ ಹೋರಾಟ ಈ ಸಂದರ್ಭದಲ್ಲಿ ಅತ್ಯಗತ್ಯವಾಗುತ್ತದೆ. ಒಂದು ಜನರೇಷನ್ ಚಂದ್ರಭಾನ್ ಪ್ರಸಾದ್‌ರ ಆ ದಿಕ್ಕಿನಲ್ಲಿ ಪ್ರಯತ್ನಿಸಬೇಕು. ದಲಿತರಲ್ಲಿ  ಉದ್ದಿಮೆಶೀಲತೆ  ಬೆಳೆಸಲು ತನು, ಮನ, ಧನ ಎಲ್ಲವನ್ನೂ ಮೀಸಲಿಡಬೇಕು. ಒಂದು ಹೊಸ ಚಳವಳಿಯ ರೂಪವಾಗಿ ಅದು ಹೊರಹೊಮ್ಮಬೇಕು. ಇಂದು ಟಾಟಾ, ಬಿರ್ಲಾ, ರಿಲಾಯನ್ಸ್, ವಿಪ್ರೊ, ಇನ್ಫೋಸಿಸ್ ಸರಕಾರಗಳಿಂದ ಬಹುಕೋಟಿ ಗಟ್ಟಲೆ ಸಾಲ, ಭೂಮಿ, ಸವಲತ್ತು ಪಡೆದು ದಲಿತರ ಮೀಸಲಾತಿಯನ್ನು ನಾಚಿಸುತ್ತಿವೆ. ಅದೇ ದಲಿತರೇ ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ? ಉದ್ಯಮಶೀಲತೆಯನ್ನು ಬೆಳೆಸುವತ್ತ/ ರೂಢಿಸುವತ್ತ ಕೈ ಜೋಡಿಸಿದರೆ?

'political power is the master key through which you can unlock all doors of progress’  ಇದು ಅಂಬೇಡ್ಕರರ ಶ್ರೇಷ್ಠ ನುಡಿ. ಆದರೆ ಮೀಸಲಾತಿ ಇಲ್ಲದ ಇಂತಹ ಜಾಗತೀಕರಣದ ಈ ಕಾಲದಲ್ಲಿ  ಆ ನುಡಿಗೆ entrepreneurship(ಉದ್ಯಮಶೀಲತೆ) is the master key through which you can unlock all doors of progress’  ಎಂದು ಹೊಸ ಅರ್ಥ ಕಲ್ಪಿಸಿದರೆ? ಖಂಡಿತ ಅಂತಹ ಹೊಸ ಅರ್ಥ ಕಲ್ಪಿಸಬೇಕಿದೆ. ಅಂಬೇಡ್ಕರ್ ಚಿಂತನೆಗೂ ಹೊಸ ಕಸುವು ತುಂಬುವ ಕೆಲಸ ನಡೆಂiಬೇಕಿದೆ.  ದಲಿತರಲ್ಲಿ ಉದ್ಯಮಶೀಲತೆ ನೆಲೆಗೊಳ್ಳಬೇಕಿದೆ. ಯಾಕೆಂದರೆ ವೊದಲೇ ಹೇಳಿದ ಹಾಗೆ LPGಯ, FDIನ ಈ ಯುಗದಲ್ಲಿ ದಲಿತರ ಹಸಿವನ್ನು ಕೇವಲ ಮೀಸಲಾತಿಯಿಂದಷ್ಟೆ ಹಿಂಗಿಸುವುದು ಖಂಡಿತ ಸಾಧ್ಯವಿಲ್ಲ ಅದಕ್ಕೆ.

ಮಂಡ್ಯ ಮತ್ತು ವಿಥುರಾ: ಲಿಂಗ ಸೂಕ್ಷ್ಮತೆಯ ಎರಡು ಮಾಪಕಗಳು
ಡಾ. ಎಚ್. ಎಸ್. ಅನುಪಮಾಪುರುಷರು ‘ಪತ್ನಿ ಪೀಡಿತ’ರಾಗಿ ತಮ್ಮ ಕಥೆವ್ಯಥೆ ಹೇಳಿಕೊಳ್ಳುತ್ತ ಪುರುಷರ ಹಕ್ಕಿನ ಸಂಘವನ್ನು ಸೃಷ್ಟಿಸಿಕೊಂಡು ಅದರ ಗೌರವಾಧ್ಯಕ್ಷರಾಗಿ ಮಾಜಿ ಮಹಿಳಾ ಮಂತ್ರಿಯನ್ನು ನೇಮಿಸಿಕೊಂಡಿರುವ ಬೆಳವಣಿಗೆಯ ಬೆನ್ನಲ್ಲೇ ಅತ್ಯಾಚಾರ ಪ್ರಕರಣಗಳು ದಿನದಿನಾ ವರದಿಯಾಗುತ್ತಿವೆ. ಕುಸಿಯುತ್ತಿರುವ ಲಿಂಗಾನುಪಾತ, ಜಾತಿ/ಧರ್ಮ/ಕಟ್ಟಳೆ/ಕುಟುಂಬ ಮರ್ಯಾದೆ/ಪ್ರೇಮದ ಹೆಸರಿನಲ್ಲಿ ಹೆಣ್ಣಿನ ಮೇಲೆ ಹೆಚ್ಚುತ್ತಲೇ ಇರುವ ದೌರ್ಜನ್ಯಗಳು, ತಾನೂ ಸರಿಸಮಾನಳೆಂದು ಭಾವಿಸತೊಡಗಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಲೇ ಅಸಮಾನ ವ್ಯವಸ್ಥೆಯನ್ನು ಗ್ರಹಿಸಿ ಸಿಡಿದೇಳುವ ಹೆಣ್ಣು ಮನಸ್ಸು, ಕೌಟುಂಬಿಕ ಜವಾಬ್ದಾರಿಯನ್ನೂ, ಆಸೆಆದರ್ಶಗಳನ್ನೂ ಬಿಟ್ಟುಕೊಡಲಾಗದ ಇಬ್ಬಂದಿತನ - ಇವೆಲ್ಲ ಆಧುನಿಕ ಭಾರತದ ಮಹಿಳೆಯರ ಸಂಕಥನದ ಅವಿನಾ ಭಾಗಗಳಾಗಿವೆ. ಸ್ತ್ರೀವಾದವೆನ್ನುವುದು ಪಾಶ್ಚಾತ್ಯ ಕಲ್ಪನೆಯೆಂದೂ, ಸ್ತ್ರೀವಾದವು ಕೇವಲ ಪುರುಷ ವಿರೋಧದತ್ತ ಗಮನ ನೀಡುವುದೆಂದೂ ತಪ್ಪು ಅಭಿಪ್ರಾಯ ಬಿತ್ತಲಾಗುತ್ತಿದೆ. ಎಚ್ಚೆತ್ತುಕೊಳ್ಳುತ್ತಿರುವ ಮಹಿಳಾ ಸಮೂಹ ತಾರತಮ್ಯ ವಿರೋಧಿಸುತ್ತ ಸಮಾನ ನೆಲೆಯ ಗೌರವ ಬಯಸುವುದನ್ನು ಬೇರೆಬೇರೆ ನೆಲೆಗಳಲ್ಲಿ ಹತ್ತಿಕ್ಕುತ್ತ, ಗುಮಾನಿಯಿಂದ ನೋಡಲಾಗುತ್ತಿದೆ. 

ಆಧುನಿಕತೆ ಎಲ್ಲೆಲ್ಲೋ ಪ್ರವೇಶಿಸಿರಬಹುದು. ಆದರೆ ಮಹಿಳೆಯ ಕುರಿತು, ಅವಳ ಅಪೇಕ್ಷಿತ ಗುಣಸ್ವಭಾವ, ಜವಾಬ್ದಾರಿಗಳ ಕುರಿತ ಗ್ರಹಿಕೆಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಒಂದೆಡೆ ಸಮಾನ ಅವಕಾಶ ಎನ್ನುವ ಆಧುನಿಕ ಸಮಾಜ ವ್ಯವಸ್ಥೆ, ಮತ್ತೊಂದೆಡೆ ಹೆಣ್ತನದ ಜವಾಬ್ದಾರಿ ಹೇರುವ ಕೌಟುಂಬಿಕ ವ್ಯವಸ್ಥೆ - ಈ ಎರಡರ ನಡುವಿನ ವೈರುಧ್ಯ ಲಿಂಗತಾರತಮ್ಯ ಮತ್ತು ಅಸೂಕ್ಷ್ಮತೆಯನ್ನು ಬಲಪಡಿಸುತ್ತಲೇ ಇದೆ. ನ್ಯಾಯ, ರಕ್ಷಣೆ, ಮಾಧ್ಯಮ, ಆಡಳಿತ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯನ್ನು ಬಲಗುಂದಿಸಲು ಅವಳ ಕೌಟುಂಬಿಕ, ವೈಯಕ್ತಿಕ ವಿವರಗಳನ್ನು ಎಳೆದು ತರುವುದು ಈ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಒಟ್ಟಾರೆಯಾಗಿ ನಾಗರಿಕ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಆಧುನಿಕತೆಯಷ್ಟು ಆಳವಾಗಿ ಇಳಿದಿಲ್ಲ ಎಂದು ತಿಳಿದುಬರುತ್ತದೆ.

ಹೀಗಿರುವಾಗ ಸಮಾಜದ ಮಹಿಳಾ ಸಂವೇದನೆ ಎಂಥದೆಂದು ತಿಳಿಯಲು ಇತ್ತೀಚಿನ ಎರಡು ಪ್ರಕರಣಗಳನ್ನು ಉಲ್ಲೇಖಿಸಬಹುದು. 


ಹೆಣ್ಣುಮಕ್ಕಳೇ, ಹುಶಾರ್! ರಾಜಕೀಯ ನಿಮಗಲ್ಲ!!

ಮಹಿಳಾ ಪ್ರತಿನಿಧಿಗಳ ಸಂಖ್ಯೆ, ಅವರಿಗೆ ಕೊಡಲಾಗುವ ಪ್ರಾಮುಖ್ಯತೆ-ಜವಾಬ್ದಾರಿ, ಮಹಿಳಾ ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಒದಗುವ ತೊಂದರೆ ಇವನ್ನೆಲ್ಲ ಗಮನಿಸಿದರೆ ರಾಜಕೀಯ ಕ್ಷೇತ್ರವು ‘ಮಹಿಳೆಯರೇ, ಇದು ನೀವು ಕಾಲಿಡುವ ಜಾಗವಲ್ಲ’ ಎಂದು ಭಯಾನಕ ವಾತಾವರಣ ಸೃಷ್ಟಿಸಿ ಹೇಳುತ್ತಲಿರುವಂತಿದೆ. ಮಹಿಳೆಯ ಘನತೆಗೆ ಕುಂದು ಬರುವಂಥ ಎಂಥ ನಡೆನುಡಿಯೂ ಮಹಿಳಾ ಮತಗಳನ್ನು ಕಿತ್ತುಕೊಳ್ಳಲಾರದು ಎಂದು ರಾಜಕಾರಣಿಗಳು ಧೈರ್ಯವಾಗಿದ್ದಾರೆ. ಹೆಂಡತಿಯನ್ನು ಕೊಂದರೇನು? ಒಬ್ಬಳಿರುವಾಗಲೇ ಮತ್ತೊಬ್ಬಳನ್ನು ಕಾನೂನು ಬಾಹಿರವಾಗಿ ಮದುವೆಯಾದರೇನು? ಹೆಂಡತಿಯನ್ನು ಮನೆಯಿಂದ ಹೊರಬರದಂತೆ ಗೃಹಬಂದಿಯಾಗಿಟ್ಟರೇನು? ಅವೆಲ್ಲ ಪುರುಷ ರಾಜಕಾರಣದ ಮಹಾತ್ವಾಕಾಂಕ್ಷೆಗೆ ಎಂದೂ ಅಡ್ಡ ಬರುವುದಿಲ್ಲ. ಬದಲಾಗಿ ಆಳುವವ ಮೊದಲು ಹೆಣ್ಣನ್ನು ಆಳಬೇಕೆಂದೂ, ಅಂಥದನ್ನೆಲ್ಲ ‘ಅರಗಿಸಿಕೊಂಡಿರುವುದು’ ಪುರುಷತ್ವದ ಸಂಕೇತವೆಂದೂ ಭಾವಿಸಲಾಗುತ್ತದೆ. ರಾಜಕಾರಣಿಗಳು ಮಹಿಳೆಯನ್ನು ನಾನಾ ರೀತಿಗಳಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಹತ್ತು ಹಲವು ಹಗರಣ, ವರದಿಗಳಲ್ಲಿ ನೋಡುತ್ತ ಬಂದಿದ್ದೇವೆ. ಮಾನಸಿಕ, ದೈಹಿಕ ದೌರ್ಜನ್ಯವಷ್ಟೆ ಅಲ್ಲ, ಚುನಾವಣೆಗೆ ನಿಂತಾಗಲಿಂದ ತೇಜೋವಧೆ ಮಾಡುವ ಪ್ರಯತ್ನಗಳು ಹೇಗೆ ನಡೆಯುತ್ತವೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆ ಸಾಕ್ಷಿಯಾಗಿದೆ.
 
ಮಹಿಳಾ ಸಮಾನತೆ ಕುರಿತು ಉದ್ದುದ್ದ ಮಾತನಾಡುವ ಪಕ್ಷಗಳು ಕೂಡಾ ಮಹಿಳಾ ಅಭ್ಯರ್ಥಿಗಳನ್ನು ಗ್ಲಾಮರ್‌ಗೆಂದು, ಮೀಸಲು ಕ್ಷೇತ್ರವೆಂಬ ಅನಿವಾರ್ಯತೆಗೆಂದು, ಜಾತಿಬಲವೆಂದು ಅಥವಾ ಕೌಟುಂಬಿಕ ಹಿನ್ನೆಲೆಯಿದೆಯೆಂದು ಬಳಸಿಕೊಳ್ಳುತ್ತವೆಯೇ ಹೊರತು ಅಧಿಕಾರ ಹಂಚಿಕೊಳ್ಳುವ ಆಶಯದಿಂದ ಕಣಕ್ಕಿಳಿಸುವುದಿಲ್ಲ. ಮಂಡ್ಯ ಉಪಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಹಣಾಹಣಿ ವೈಯಕ್ತಿಕತೆಯ ಗಡಿ ದಾಟಿ ಹಲವು ಕಾರಣಗಳಿಗೆ ಸುದ್ದಿಯಾಯಿತು. ಪಳಗಿದ ರಾಜಕೀಯ ನೇತಾರರು ಗೆಲುವಿಗಾಗಿ ತಮ್ಮ ಬತ್ತಳಿಕೆಯ ಒಂದೊಂದೇ ದುಷ್ಟ ಅಸ್ತ್ರಗಳ ಪ್ರಯೋಗದಲ್ಲಿ ನಿರತರಾದರು. 

ಚುನಾವಣೆ ಎಂಬ ಮಾಯಾ ಬಜಾರಿನಲ್ಲಿ ಹರಾಜಿಗಿಡುವ ವಿಷಯಗಳು ಒಂದೆರೆಡಲ್ಲ. ರಾಜಕಾರಣದಲ್ಲಿ ಲಿಂಗ ಅಸೂಕ್ಷ್ಮತೆ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎನ್ನುವುದಕ್ಕೆ ರಮ್ಯಾರನ್ನು ರಾಜಕೀಯ ನಾಯಕರು ನಡೆಸಿಕೊಂಡ ರೀತಿ ಉದಾಹರಣೆಯಾಗಿದೆ. ರಮ್ಯಾರನ್ನು ‘ಟೆಸ್ಟ್‌ಟ್ಯೂಬ್ ಬೇಬಿ’ ಎಂದು ಕರೆಯಲಾಯಿತು. ನಂತರ ರಮ್ಯಾ ತಮ್ಮ ತಂದೆಯ ಜೊತೆ ಇಲ್ಲವೆಂಬ ಸುದ್ದಿ ಸಂಗ್ರಹಿಸಿ ಅವರ ತಂದೆ ಯಾರಿರಬಹುದೆಂಬ ಊಹೆ ಶುರುವಾಯಿತು. ಅವರ ತಾಯ್ತಂದೆಯರ ಜಾತಿಯ ಬಗ್ಗೆ ಚರ್ಚೆ ಶುರುವಾಯಿತು. ಆಕೆಯ ಮೂಲ ಕೆದಕಿ ಅವರ ಜಾತಿ ಯಾವುದು ಎಂದು ಬಹಿರಂಗಪಡಿಸಿ ಆ ಮೂಲಕ ಬಹುಸಂಖ್ಯಾತ ಒಕ್ಕಲಿಗ ಮತದಾರರ ಓಟು ಒಡೆಯುವ ಪ್ರಯತ್ನ ನಡೆಯಿತು. ಹೀಗೆ ಜಾತಿಮತಗಳ ಲೆಕ್ಕಾಚಾರದ ರಾಜಕಾರಣದಲ್ಲಿ ರಮ್ಯಾ ತಮ್ಮ ಕುಟುಂಬದ ಗುಟ್ಟುಗಳನ್ನು ಬಯಲಾಗಿಸಬೇಕಾಯಿತು. ಇದು ಮಹಿಳಾ ಘನತೆಯನ್ನು ರಾಜಕಾರಣವು ಹೇಗೆ ಪರಿಭಾವಿಸುತ್ತದೆ ಎಂದೂ ತಿಳಿಸಿತು. 

ಪ್ರತಿಯೊಂದು ಜೀವಿಗೂ ತಾಯಿ ಮಾತ್ರ ವಾಸ್ತವ. ತಂದೆ ಊಹೆ. ರಮ್ಯಾ ಟೆಸ್ಟ್‌ಟ್ಯೂಬ್ ಬೇಬಿ ಹೌದೋ ಅಲ್ಲವೋ ಗೊತ್ತಿಲ್ಲ. ಆಕೆಯ ತಂದೆ ಕುರಿತು ಹೇಳಬಲ್ಲವರು ಅವರ ತಾಯಿ. ರಮ್ಯಾ ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳುತ್ತಿಲ್ಲ. ಆಕೆ ಬಯಸಿರುವುದು ಜನ ಪ್ರತಿನಿಧಿಯಾಗಲು. ಅದಕ್ಕೆ ಯಾರು ಆಕೆಯ ತಂದೆ ಎನ್ನುವುದು ಮುಖ್ಯವಲ್ಲ. ಚುನಾವಣೆಯಲ್ಲಿ ನಿಲ್ಲಲು ಭಾರತೀಯ ಪೌರನಾಗಿರಬೇಕು, ೨೧ ವರ್ಷ ವಯಸ್ಸಾಗಿರಬೇಕು ಎಂಬಿತ್ಯಾದಿ ಅರ್ಹತೆಗಳಿವೆಯೇ ಹೊರತು ಅವರ ಅಪ್ಪ ಅಮ್ಮ ಯಾರೆನ್ನುವುದು, ನೈಸರ್ಗಿಕವಾಗಿ ಫಲಿತಗೊಂಡ ಅಂಡಾಣುವಿನಿಂದ ಹುಟ್ಟಿದವರಷ್ಟೇ ಚುನಾವಣೆಗೆ ಸ್ಪರ್ಧಿಸಬೇಕೆನ್ನುವುದು ಅರ್ಹತೆಯ ಪಟ್ಟಿಯಲ್ಲಿ ಇಲ್ಲ. 

ಕ್ಷಣದ ಮಟ್ಟಿಗೆ ಇಂಥ ಸುದ್ದಿಗಳು ಜನಸಾಮಾನ್ಯರಿಗೆ ರೋಚಕವೆನಿಸಬಹುದೇ ಹೊರತು ಗೆಲುವು ಸೋಲಿಗೆ ಇದು ಮುಖ್ಯವಲ್ಲ. ರಮ್ಯಾ ಈಗ ಗೆದ್ದಿದ್ದಾರೆ. ಆದರೆ ಈ ಪ್ರಶ್ನೆಗಳೆಲ್ಲ ಚುನಾವಣಾ ರಾಜಕೀಯಕ್ಕೆ ಮುಖ್ಯವಾಗುತ್ತದೆ. ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಪೈಪೋಟಿ ನಡೆಸುತ್ತ ‘ರಮ್ಯಾ ಹುಟ್ಟಿನ ಮೂಲ ಏನು?’ ಎಂಬ ಚರ್ಚೆ ನಡೆಸುವ ಮಾಧ್ಯಮಗಳಿಗೆ ಮುಖ್ಯವಾಗುತ್ತದೆ. 

ರಮ್ಯಾ ಆಯ್ಕೆಯಾಗಿದ್ದಾರೆ. ಆದರೆ ತಾನು ಗೆದ್ದರೆ ಮಂಡ್ಯದಲ್ಲಿ ಉಳಿಯುವುದಾಗಿ ಹೇಳಿದ್ದ ಅವರು ತಮ್ಮ ರಾಜಕೀಯ ಪ್ರವೇಶದ ಉದ್ದೇಶ, ಬದ್ಧತೆ ಎಂಥದೆಂದು ಜಾಹೀರು ಮಾಡಿದ್ದಾರೆ. ಗೆದ್ದರಷ್ಟೆ ಮಂಡ್ಯದಲ್ಲಿದ್ದು ಜನಸೇವೆ ಮಾಡುವುದಾದರೆ ಅವರ ಸೋಲುಗೆಲುವು ಗಮನಿಸದೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದ ಜನತೆಗೆ ಪ್ರತಿಯಾಗಿ ಅವರು ಏನು ಕೊಟ್ಟಂತಾಯಿತು? ವೃತ್ತಿಪರ ರಾಜಕಾರಣಿಗಳು ಬಾಯಿ ಮಾತಿಗಾದರೂ ಸೋತರೂ ಕ್ಷೇತ್ರದ ಜನರ ಸೇವೆ ಮಾಡುತ್ತೇನೆಂದು, ಸೋತ ಬಳಿಕವೂ ಜನರ ತೀರ್ಪು ಗೌರವಿಸುತ್ತೇನೆಂದು ಹೇಳುತ್ತಾರೆ. ಆದರೆ ರಮ್ಯಾ ತಾನೆಂಥ ಎಳಸು ರಾಜಕಾರಣಿ ಎಂದು ತಮ್ಮ ಹೇಳಿಕೆಯಿಂದ ಸಾಬೀತುಪಡಿಸಿದ್ದಾರೆ. ತಾನು ಮಂಡ್ಯದಲ್ಲಿ ವಾಸಿಸುವುದು ಅಲ್ಲಿನ ಜನರ ಸೌಭಾಗ್ಯವೆಂದು ರಮ್ಯ ತಿಳಿದಂತಿದೆ. ಹೀಗೆ ಟೈಂಪಾಸ್ ರಾಜಕಾರಣ ಮಾಡುವವರನ್ನು, ಗೆಲ್ಲಿಸಿದರಷ್ಟೇ ‘ನಾನಿರುವುದೇ ನಿಮಗಾಗಿ’ ಎನ್ನುವ ಜನಪ್ರಿಯ ನಾಯಕರನ್ನು ಜನಪ್ರಿಯತೆ ಹೆಚ್ಚು ಕಾಲ ಪೊರೆಯುವುದಿಲ್ಲ. ಅಮಿತಾಭರಿಂದ ಹಿಡಿದು ವಿಫಲ ರಾಜಕಾರಣಿಗಳಾದ ಹಲವು ನಟರ ಉದಾಹರಣೆ ನಮ್ಮ ಮುಂದಿದೆ. ರಮ್ಯಾ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಮ್ಮ ಗೆಲುವನ್ನು ಜೀರ್ಣಿಸಿಕೊಳ್ಳಬೇಕು. ಕ್ಷೇತ್ರದ ಜನತೆ ಇಟ್ಟ ವಿಶ್ವಾಸವನ್ನು ನಿಜವಾಗಿಸಬೇಕು.

ಜೊತೆಗೆ ತರುಣಿಯಾಗಿರುವ ಆಕೆ ಮಹಿಳೆಯ ಘನತೆಗೆ ಕುಂದು ಬರುವಂಥ ನಡೆ ನುಡಿಗಳು ಮಹಿಳಾ ಮತಗಳನ್ನು ಕಿತ್ತುಕೊಳ್ಳಬಹುದು ಎಂಬ ಅಧೈರ್ಯವನ್ನು ರಾಜಕಾರಣದ ಸಹವರ್ತಿಗಳಲ್ಲಿ ಮೂಡಿಸಬೇಕು. ಅಷ್ಟಾದಲ್ಲಿ ಅದು ದೊಡ್ಡ ಸಾಧನೆಯಾಗಲಿದೆ. 

‘ನನ್ನಷ್ಟಕ್ಕೆ ನನ್ನನ್ನು ಇರಲು ಬಿಡಿ..’

ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಬರುವ ವರದಿಗಳನ್ನು ಗಮನಿಸಿ, ‘ಲೇಡೀಸ್ ಫಿಂಗರ್’ ಎಂಬ ಬ್ಲಾಗಿನಲ್ಲಿ ತಿಲೋತ್ತಮಾ ಶ್ರೀನಿವಾಸ್ ಎನ್ನುವವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಗಮನಿಸುವಂತೆ ವೃತ್ತಪತ್ರಿಕೆಗಳಲ್ಲಿ ‘ಇಬ್ಬರು ಯುವತಿಯರ ಮೇಲೆ ಗುಂಪು ಅತ್ಯಾಚಾರ; ಐವರ ಬಂಧನ’; ‘ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಐವರಿಂದ ಅತ್ಯಾಚಾರ’; ‘ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಮನೆಗೆಲಸದವನ ಬಂಧನ’ ಎಂದೆಲ್ಲ ವರದಿಗಳು ಬರುತ್ತವೆ. ಎಲ್ಲ ವರದಿಗಳಲ್ಲಿ ಹೆಚ್ಚುಕಡಿಮೆ ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಆ ಕ್ರಿಯೆ ಮೊದಲ ಪ್ರಾಶಸ್ತ್ಯ ಪಡೆಯುತ್ತವೆ. ನಂತರವಷ್ಟೆ ‘ಯಾರ ಬಂಧನ’ ಎನ್ನುವ ಮಾಹಿತಿಯಿರುತ್ತದೆ. ವರದಿಯಲ್ಲಿ ಜೊತೆಜೊತೆಗೆ ಅವಳು ‘ಒಬ್ಬಂಟಿಯಾಗಿದ್ದಳು/ಪಬ್‌ನಿಂದ ಹಿಂತಿರುಗುತ್ತಿದ್ದಳು/ಕೆರಳಿಸುವ ಉಡುಪಿನಲ್ಲಿದ್ದಳು/ಅರ್ಧರಾತ್ರಿಯಲ್ಲಿ ಲೈಬ್ರರಿಯಿಂದ ಒಂಟಿಯಾಗಿ ಹೋಗುತ್ತಿದ್ದಳು/ಗೆಳೆಯನ ಜೊತೆಗಿದ್ದಳು’ ಎನ್ನುವಂತಹ ಅಪರಾಧಕ್ಕೆ ಅವಶ್ಯವಿಲ್ಲದ ಸಂಗತಿಗಳನ್ನೂ ಸೇರಿಸಿ ಅತ್ಯಾಚಾರಕ್ಕೊಳಪಟ್ಟಿದ್ದರಲ್ಲಿ ಅವಳ ಪಾತ್ರವೂ ಇದ್ದೀತು ಎಂಬ ಭಾವನೆ ಸುಳಿಯುವಂತೆ ಮಾಡಲಾಗುತ್ತದೆ. ದಿನದಿನಾ ನ್ಯೂಸ್ ಪೇಪರುಗಳ ಅತ್ಯಾಚಾರ ವರದಿಯಲ್ಲಿ ‘ಪ್ಯಾಸಿವ್ ವಾಯ್ಸ್’ ಬಳಸುವುದನ್ನು ಅವರ ಅವಲೋಕನ ಗಮನಿಸುತ್ತದೆ. 

ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಮಾತನಾಡುತ್ತ ಒಬ್ಬರು, ‘ಎಂಜಿ ರೋಡಿನಲ್ಲಿ ಓಡಾಡುವ ಹುಡುಗಿಯರ ವೇಷಭೂಷಣಗಳನ್ನು ನೋಡಿದರೆ ಈಗ ಅತ್ಯಾಚಾರವಾಗುತ್ತಿರುವವರ ಸಂಖ್ಯೆ ತುಂಬ ಕಮ್ಮಿ’ ಎಂದು ಪ್ರತಿಕ್ರಿಯಿಸಿದರು! ಈ ಲೋಕದ ಹೆಣ್ಣುಗಳೆಲ್ಲ ಎಂಜಿ ರೋಡಿನಲ್ಲೇ ಇರುವರೆಂದು ಅವರು ಭಾವಿಸಿದಂತಿದೆ. ಒಬ್ಬ ರೇಪಿಸ್ಟ್ ಸಾಧು, ‘ಅತ್ಯಾಚಾರಿಗಳ ಕಾಲಿಗೆ ಬಿದ್ದು ಅವರನ್ನು ಅಣ್ಣಾ ಎಂದಿದ್ದರೆ ಬಿಟ್ಟುಬಿಡುತ್ತಿದ್ದರು’ ಎಂದು ಹೇಳಿದರು. ‘ಈಗ ನಡೆಯುತ್ತಿರುವ ಕೊಲೆ, ಆತ್ಮಹತ್ಯೆ, ಟ್ರಾಫಿಕ್ ಆಕ್ಸಿಡೆಂಟ್ ಸಾವುಗಳಿಗೆ ಹೋಲಿಸಿದರೆ ರೇಪ್ ಎಂಬ ಕ್ರೈಂನ ಅಂಕಿಅಂಶ ತುಂಬ ಕಮ್ಮಿಯಿದೆ, ಮಹಿಳಾ ಸಂಘಟನೆಗಳು ಸುಮ್ಮನೆ ಬೊಬ್ಬೆ ಹಾಕುತ್ತವೆ’ ಎಂದವರು ಮಗದೊಬ್ಬರು. ಟಿವಿ ಟಾಕ್‌ಷೋ ಒಂದರಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ ಹೆಸರಾಂತ ವ್ಯಕ್ತಿಯೊಬ್ಬರು ‘ಹಾಗೇನಾದರೂ ಆದಲ್ಲಿ ನಾವು ಬಳೆತೊಟ್ಟು ಕೂರುವುದಿಲ್ಲ’ ಎಂದರು. ರೇಪ್ ಕೇಸುಗಳ ಬಗ್ಗೆ ಪ್ರತಿಕ್ರಿಯಿಸುತ್ತ ಮಗದೊಬ್ಬರು, ‘ಈಗ ಹುಡುಗರಿಗೆ ಪರಿಶುದ್ಧ ಕನ್ಯೆಯರು ಸಿಗುವುದೇ ಕಷ್ಟ. ಹಾಗೆ ನೋಡಿದರೆ ಬಾಲ್ಯವಿವಾಹ ಒಂದು ಉತ್ತಮ ಪದ್ಧತಿಯಾಗಿತ್ತು’ ಎಂದರು. ಹೆಣ್ಣಿನ ವ್ಯಕ್ತಿತ್ವ ನಾಶ ಮಾಡಿ ಅವಳದಲ್ಲದ ತಪ್ಪಿಗೆ ಜೀವಮಾನವಿಡೀ ನರಳುವಂತೆ ಮಾಡುವ ಈ ಅಪರಾಧದ ಬಗೆಗೆ ಸಮಾಜದ ಪ್ರತಿಕ್ರಿಯೆಗಳು ದಿಗ್ಭ್ರಮೆ ಮೂಡಿಸುವಾಗಲೇ ಅಮ್ಮನ ಎದೆಹಾಲು ಕುಡಿದು ಬೆಳೆದದ್ದು ಎಲ್ಲರಿಗೂ ಮರೆತುಹೋಯಿತೇ ಎಂಬ ಅನುಮಾನ ಕಾಡತೊಡಗುತ್ತದೆ. 
 
 
ಈ ನಡುವೆ ಕೇರಳದ ವಿಥುರಾ ಕೇಸು ಮತ್ತೆ ಮುನ್ನೆಲೆಗೆ ಬಂದಿದೆ. ತಿರುವನಂತಪುರದಿಂದ ೩೬ ಕಿಮೀ ದೂರದಲ್ಲಿರುವ ಊರು ವಿಥುರಾ. ೧೯೯೫ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕೆಲಸ ಕೊಡಿಸುವುದಾಗಿ ಒಬ್ಬ ಕರೆದೊಯ್ದು ದೇಹ ಮಾರಾಟ ಜಾಲದಲ್ಲಿ ತೊಡಗಿಸಿದ. ೧೯೯೫ ನವೆಂಬರ್‌ನಿಂದ ೧೯೯೬ ಮೇ ತನಕ ಅನೇಕ ಸ್ಥಳಗಳಲ್ಲಿ, ಅನೇಕ ಜನ ಅವಳ ಮೇಲೆ ಅತ್ಯಾಚಾರ ಎಸಗಿದರು. ನಂತರ ಅವಳನ್ನು ಪಾರು ಮಾಡಲಾಯಿತು. ಈ ಕೇಸಿನಲ್ಲಿ ಜಗತಿ ಶ್ರೀಕುಮಾರ್ ಎಂಬ ಮಲಯಾಳಂ ನಟನೂ ಸೇರಿದಂತೆ ಸರ್ಕಾರಿ ಅಧಿಕಾರಿ ಹಾಗೂ ಬಿಸಿನೆಸ್ ಸಾಮ್ರಾಜ್ಯದ ಗಣ್ಯರಿರುವುದು ಪತ್ತೆಯಾಯಿತು. ಮಲಯಾಳಂ ಹಾಸ್ಯನಟ ಶೀಘ್ರ ಬಿಡುಗಡೆಯಾದರೂ ಉಳಿದ ೩೫ ಆರೋಪಿಗಳ ವಿಚಾರಣೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಆರೋಪಿಗಳು ಒಬ್ಬರಾದ ಮೇಲೊಬ್ಬರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತ ೧೮ ವರ್ಷ ಕಳೆಯಿತು. ಆಕೆ ೨೦೧೧ರಲ್ಲಿ ಎಲ್ಲ ಕೇಸುಗಳನ್ನೂ ಒಂದೇ ಆಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಕೇರಳ ಹೈಕೋರ್ಟಿಗೆ ಮನವಿ ಮಾಡಿದ್ದಳು. ಕೋರ್ಟು ಅದು ಸಾಧ್ಯವಿಲ್ಲವೆಂದು ಹೇಳಿತು. ಅವಳ ಸಮೀಪವರ್ತಿಗಳು ತಿಳಿಸಿರುವಂತೆ ಸರ್ಕಾರದಿಂದ ಆಕೆಗೆ ಯಾವ ಧನಸಹಾಯವೂ ದೊರೆಯಲಿಲ್ಲ. ಕೆಲಸಕ್ಕೆ ಹೋಗಲು ಪ್ರಯತ್ನಿಸಿದಾಗ ಹಳೆಯ ನೆರಳುಗಳು ಮತ್ತೆ ಹಿಂಬಾಲಿಸಿದಾಗ ಹೆದರಿದ ಆಕೆ ಈಗ ಮನೆಯಲ್ಲೇ ಇದ್ದಾಳೆ. ಕೋರ್ಟು, ಕಚೇರಿ ಎಲ್ಲದರಿಂದ ತಪ್ಪಿಸಿಕೊಂಡು ಇದ್ದಾಳೆ. 
 
ಜಗತಿ ಶ್ರೀಕುಮಾರ್ ಖುಲಾಸೆಯಾದುದರ ವಿರುದ್ಧ ಪ್ರಾಸಿಕ್ಯೂಷನ್ ಮೇಲ್ಮನವಿ ಸಲ್ಲಿಸಲಿಲ್ಲ. ಆತ ಖುಲಾಸೆಗೊಂಡ ಮೇಲೆ ಇನ್ನೂ ೨೨ ಕೇಸುಗಳು ಬಾಕಿಯಿವೆ. ಈಗ ವಿಶೇಷ ನ್ಯಾಯಾಲಯಕ್ಕೆ ೨೨ರಲ್ಲಿ ೧೫ ಕೇಸುಗಳನ್ನು ವರ್ಗಾಯಿಸಲಾಗಿದೆ. ಆಗಸ್ಟ್ ೧೨ರಿಂದ ಅಕ್ಟೋಬರ್ ಒಂದರವರೆಗೆ ಅತ್ಯಾಚಾರಕ್ಕೊಳಗಾದ ಆಕೆಯಿಂದ ಮೊದಲು ಹೇಳಿಕೆ ಪಡೆಯುವುದೆಂದು, ನಂತರ ಆರೋಪಿಗಳನ್ನು ವಿಚಾರಣೆಗೊಳಪಡಿಸುವುದೆಂದು ನಿಗದಿಗೊಳಿಸಲಾಗಿತ್ತು. ಆಗಸ್ಟ್ ೧೯ರಂದು ಆಕೆ ವಿಶೇಷ ನ್ಯಾಯಾಲಯದೆದುರು ಹಾಜರಾಗಲು ವಿಫಲಳಾದಾಗ ನ್ಯಾಯಾಧೀಶರು, ‘ಕೋರ್ಟಿನೆದುರು ಹಾಜರಾಗುವುದನ್ನು ಪದೇಪದೇ ತಪ್ಪಿಸುವುದರಿಂದ ವಿಶೇಷ ನ್ಯಾಯಾಲಯದ ಕೆಲಸಗಳು ಆಗಲೇ ಎರಡು ತಿಂಗಳು ವಿಳಂಬವಾಗಿದೆ. ಎಲ್ಲವನ್ನೂ ಒಮ್ಮೆಲೇ ವಿಚಾರಣೆ ಮಾಡಲು ಸಾಧ್ಯವಿಲ್ಲ. ಕಾನೂನಿನ ಎದುರು ಎಲ್ಲರೂ ಸಮಾನರು. ಬರಲು ಆಕೆಗೆ ವಿಶೇಷ ಪೊಲೀಸ್ ರಕ್ಷಣೆ ಬೇಕಾದರೆ ಕೊಡಬಹುದು, ಷೆಡ್ಯೂಲಿನ ಅವಧಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿತಗೊಳಿಸಬಹುದು. ಆದರೆ ಆಕೆ ಸೆ.೨ರಂದು ಕೋರ್ಟಿನೆದುರು ಬರಲೇಬೇಕು. ಬರಲು ಆಕೆಗೆ ಏನು ಕಷ್ಟವಿದೆ? ಇಂಥ ನಡವಳಿಕೆಗಳು ನ್ಯಾಯವ್ಯವಸ್ಥೆಯನ್ನು ಅಪಹಾಸ್ಯ ಮಾಡಿದಂತೆ, ನೆಗ್ಲಿಜೆನ್ಸ್ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಗುಡುಗಿದ್ದಾರೆ. 
 
ಆಕೆಯೀಗ ಹೇಳುತ್ತಿದ್ದಾಳೆ, ‘ನನಗೇನೂ ಬೇಡ. ನನ್ನಷ್ಟಕ್ಕೆ ನನ್ನನ್ನು ಇರಲು ಬಿಡಿ.’

ನ್ಯಾಯ ಸಿಗಬೇಕೆನ್ನುವವರು ನ್ಯಾಯಾಲಯದೆದುರು ಹಾಜರಾಗಲೇಬೇಕು. ಸರಿ. ಆದರೆ ಈಗ ಅವಳ ಪರಿಸ್ಥಿತಿಯನ್ನರಿತು ಮದುವೆಯಾದವನೊಡನೆ ಸಂಸಾರ ನಡೆಸುತ್ತಿರುವ ಆಕೆ ೧೧ ತಿಂಗಳ ಮಗುವಿನ ತಾಯಿಯಾಗಿ ೨೨ ಕೇಸುಗಳಿಗಾಗಿ ಎಷ್ಟು ಸಾರಿ ಕೋರ್ಟಿನೆದುರು ಹಾಜರಾಗಬೇಕು? ನ್ಯಾಯ ಕೇಳಲು ಹೋದರೆ ವಿಳಂಬ ಮತ್ತಿತರ ಅಡಚಣೆಗಳು ಒಂದೆಡೆಯಾದರೆ, ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತ ಮುಜುಗರಕ್ಕೊಳಗಾಗುವ ಹಿಂಸೆ ಇನ್ನೊಂದು ಕಡೆ. ಆಕೆ ಪದೇಪದೇ ಕೋರ್ಟಿಗೆ ಅಲೆಯುತ್ತ, ೧೮ ವರ್ಷ ಕೆಳಗೆ ತಾನು ಅಪ್ರಾಪ್ತಳಾಗಿರುವಾಗ ಸತತ ಆರು ತಿಂಗಳು ನಡೆದ ದೌರ್ಜನ್ಯವನ್ನು ನೆನಪಿಸಿಕೊಳ್ಳುತ್ತ ಇನ್ನೆಷ್ಟು ಕಾಲ ಅತ್ಯಾಚಾರದ ನೆನಪಿನಲ್ಲಿ, ನೆರಳಿನಲ್ಲಿ ಬದುಕಬೇಕು? ಈಗ ಯೋಚಿಸುವ. ಆಕೆ ನಮ್ಮ ಮಗಳೋ, ತಂಗಿಯೋ ಆಗಿದ್ದರೆ ನಾವು ಏನು ಹೇಳುತ್ತಿದ್ದೆವು? 

ನ್ಯಾಯಾಧೀಶರು ಅಸೂಕ್ಷ್ಮವಾಗಿದ್ದಷ್ಟು ನ್ಯಾಯದಾನವೂ ಲಿಂಗ ತಾರತಮ್ಯ ಪೀಡಿತವಾಗಿರುತ್ತದೆ. ಒಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ‘ಹೆರಿಗೆ ನೋವು ಭೂಮಿ ಮೇಲೆ ಅತ್ಯಂತ ತೀವ್ರತರವಾದ ನೋವು ಎನ್ನುತ್ತಾರೆ. ಆ ನೋವನ್ನೇ ಸಹಿಸಿಕೊಂಡು ಮಕ್ಕಳನ್ನು ಹೆತ್ತಿರುವೆ, ಗಂಡ ಹೊಡೆವ ನೋವಿಗೆ ವಿಚ್ಛೇದನ ಕೇಳುತ್ತೀಯಲ್ಲ’ ಎಂದರಂತೆ. ಹೆರಿಗೆ ನೋವು, ಗಂಡ ಹೊಡೆವ ನೋವು ಎರಡೂ ಹೋಲಿಸಲ್ಪಡುವ ಮಾನಗಳೇ? ಉದ್ದೇಶಪೂರ್ವಕವಾಗಿ ಹಿಂಸೆ ಕೊಡಲೆಂದೇ ಹೊಡೆದ ನೋವನ್ನು ಸಂತತಿ ಮುಂದುವರಿಕೆಗಾಗಿ ಹೆಣ್ಣು ಸಹಿಸಲೇಬೇಕಾಗಿರುವ ಹೆರಿಗೆ ನೋವೆಂಬ ನೈಸರ್ಗಿಕ ನೋವಿನೊಡನೆ ಹೋಲಿಸಲಾದೀತೇ? ಆ ನೋವನ್ನೇ ತಡೆದುಕೊಂಡ ಮೇಲೆ ಉಳಿದೆಲ್ಲ ನೋವೂ ಅವಳಿಗೆ ಸಹ್ಯ, ಗೌಣ ಎಂದರ್ಥವೇ? 

ನ್ಯಾಯಾಧೀಶರು ಹೀಗೆಂದ ಮೇಲೆ ಸ್ವತಂತ್ರ ಭಾರತದ ಹೆಣ್ಣುಮಕ್ಕಳು ತಮ್ಮ ಮಾನ, ನ್ಯಾಯ ಪಡೆಯಲು ಕೋರ್ಟನ್ನು ನೆಚ್ಚಬಹುದೆ? ಕಾಲಮಿತಿಯೊಳಗೆ ಕೇಸು ಇತ್ಯರ್ಥವಾಗದ ಹೊರತು ನ್ಯಾಯವ್ಯವಸ್ಥೆ ನ್ಯಾಯದಾನ ಮಾಡಲು ಸಾಧ್ಯವೇ? 

ಡೆಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಅಪ್ರಾಪ್ತ ವಯಸ್ಕ ಆರೋಪಿಯ ತಾಯಿ ಬದುಕುಪಾರ್ವತೇಶ್

Her poverty, not son's fate, on the mind of Dec 16 juvenile's mother
Delhi gabgrape ಡೆಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಅಪ್ರಾಪ್ತ ವಯಸ್ಕ ಆರೋಪಿಯ ತಾಯಿ ಉತ್ತರಪ್ರದೇಶದ ಹಳ್ಳಿಯ ತನ್ನ ಮನೆಯಲ್ಲಿ.

ಕಳೆದ ಡಿಸೆಂಬರ್ ತಿಂಗಳ ಮೂಳೆ ಕೊರೆಯುವ ಚಳಿಯ ಮುಂಜಾನೆ, ಉತ್ತರಪ್ರದೇಶದ ಹಳ್ಳಿ ನಿದ್ರೆಯ ಮಂಪರಿನಿಂದ ಮೈ ಮುರಿದು ಏಳುತ್ತಿತ್ತು. ಕುಗ್ರಾಮದ ಗಲ್ಲಿಗಳಲ್ಲಿ ನರಳಿ ತೆವಳಿ ಬಂದಿದ್ದವು ಪೊಲೀಸ್ ವಾಹನಗಳು. ಯಾರಿಗೂ ಗೊತ್ತಿಲ್ಲದ ಹುಡುಗನೊಬ್ಬನ ವಿಳಾಸವನ್ನು ಗಾಳಿಸತೊಡಗಿದ್ದವು.

ತಾಸುಗಳ ತರುವಾಯ, ಹುಡುಗನ ತಂದೆಯನ್ನು ಅರಸಿದ ಪೊಲೀಸರು ಕಡೆಗೂ ಬಂದು ನಿಂತದ್ದು ಹಳ್ಳಿಯ ಅಂಚಿನ ಅರೆ ಇಟ್ಟಿಗೆ ಅರೆ ಪ್ಲ್ಯಾಸ್ಟಿಕ್ ಸೂರಿನ ಮುಂದೆ. ತಂದೆ ಕಳೆದ ಐದಾರು ವರ್ಷಗಳಿಂದ ಮಾನಸಿಕ ಅಸ್ವಸ್ಥ. ಪೊಲೀಸರು ತನಗೆ ಏನು ಹೇಳುತ್ತಿದ್ದಾರೆಂದು ಅರ್ಥವಾಗದ ಸ್ಥಿತಿ ಆತನದು.

ತಂದೆಯನ್ನು ಬಿಟ್ಟು ತಾಯಿಯತ್ತ ತಿರುಗಿದ್ದರು ಪೊಲೀಸರು. ದಿಲ್ಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯೊಬ್ಬಳ ಗ್ಯಾಂಗ್ ರೇಪ್ ಮತ್ತು ಕೊಲೆ ಸಂಬಂಧದಲ್ಲಿ ಆಕೆಯ ಹಿರಿಮಗನನ್ನು ಬಂಧಿಸಿರುವುದಾಗಿ ತಿಳಿಸಿದರು.
ಅಂದಿಗೆ ಆಕೆಯ ಮಗ ಅಪ್ರಾಪ್ತ ವಯಸ್ಕ ಎನ್ನಲಾಗಿತ್ತು. (ಆರು ಮಂದಿಯಿಂದ ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿಯ ಮೇಲೆ ಅತಿ ಕ್ರೂರ ಹಲ್ಲೆ ನಡೆಸಿದ್ದ ಈತನ ಹೆಸರನ್ನು ಅಪ್ರಾಪ್ತ ವಯಸ್ಕ ಎಂಬ ಕಾರಣಕ್ಕೆ ಬಹಿರಂಗ ಮಾಡಲಾಗಿಲ್ಲ. ಎರಡು ಸಲ ವಿದ್ಯಾರ್ಥಿನಿಯ ಮೇಲೆ ಎರಗಿದ್ದ. ಒಮ್ಮೆಯಂತೂ ಆಕೆ ಪ್ರಜ್ಞಾಹೀನಳಾಗಿದ್ದಾಗ ಲೈಂಗಿಕ ಹಲ್ಲೆ ಮಾಡಿದ್ದ. ಬರಿಗೈಯನ್ನು ತೂರಿಸಿ ಆಕೆಯ ಕರುಳುಗಳನ್ನು ಹೊರಗೆಳೆದು ತೋರಿದ್ದ. ಅತ್ಯಾಚಾರ ಎಸಗಿದ ಕಾಲಕ್ಕೆ ಈತ ನಿಜವಾಗಿಯೂ ಅಪ್ರಾಪ್ತ ವಯಸ್ಕನೇ ಎಂಬ ಕುರಿತು ಅಪ್ರಾಪ್ತರ ಕುರಿತ ನ್ಯಾಯಮಂಡಳಿ ಇದೇ 31ರಂದು ತೀರ್ಪು ನೀಡಲಿದೆ.  ಅಪ್ರಾಪ್ತ ಎಂದಾದಲ್ಲಿ ಅವನಿಗೆ ಹೆಚ್ಚೆಂದರೆ ಮೂರೇ ವರ್ಷಗಳ ಜೈಲು ಶಿಕ್ಷೆ.). 

ಒಂಬತ್ತು ತಿಂಗಳ ನಂತರ,  ತನ್ನ ಮಗನ ಹಣೆಬರೆಹ ಇದೇ 31ರಂದು ನಿರ್ಧಾರ ಆಗಲಿದೆ ಎಂಬ ಸುದ್ದಿ ತಾಯಿಗೆ ತಲುಪಿದ್ದು ಮೊನ್ನೆ ಸೋಮವಾರ ಸಂಜೆ.

ತೀರ್ಪಿನ ದಿನ ದಿಲ್ಲಿಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಆಕೆಯ ಉತ್ತರ- ಹೋಗಲಾರೆ. ದುಡ್ಡೂ ಇಲ್ಲ, ಅಲ್ಲಿ ಗುರುತು ಪರಿಚಯದವರ್ಯಾರೂ ಇಲ್ಲ. ಮಾತಾಡುತ್ತಿದ್ದಂತೆ ಎರಡೂ ಪಕ್ಕೆಗಳನ್ನು ಒತ್ತಿ ಹಿಡಿದಿದ್ದಳು. ದೀರ್ಘ ದಿನದ ಮುಗಿತಾಯದ ಹೊತ್ತು. ಹಿಂದಿನ ದಿನ ಭಾನುವಾರ ಬೆಳಿಗ್ಗೆ ಚಹಾದ ಜೊತೆ ಆರ್ಧ ರೊಟ್ಟಿ ತಿಂದಿದ್ದಳಂತೆ. ಆನಂತರ ಉಪವಾಸ.
ಮನೇಲಿ ಅಗಳು ಅನ್ನ ಕೂಡ ಇಲ್ಲ. ಇಂದು ಚಾಕರಿಯೂ ಸಿಗಲಿಲ್ಲ. ಮುಂದಿನ ಊಟ ಎಲ್ಲಿಂದ ಬಂದೀತೆಂದು ಗೊತ್ತಿಲ್ಲ ಎಂದಳಾಕೆ.

ಹೊಲಗೆಲಸದಾಕೆ. ಮಾನಸಿಕ ಕಾಯಿಲೆ ಮನುಷ್ಯನ ಪತ್ನಿ. ಆರು ಮಕ್ಕಳ ತಾಯಿ. ಇತ್ತೀಚೆಗೆ ಕೂಲಿ ಕೆಲಸ ಸಿಗೋದು ಭಾಳಾ ಕಷ್ಟ. ಸುಗ್ಗಿ ಬಂದಾಗಷ್ಟೇ ಕೈ ತುಂಬ ಚಾಕರಿ. ಆಮೇಲಿನ ಕೆಲ ತಿಂಗಳುಗಳು ಹೊಲಗದ್ದೆಯ ಕೆಲಸ ಇರಲ್ಲ. ಆದ್ರೆ ಎಷ್ಟು ಹೊಟ್ಟೆಗಳನ್ನು ತುಂಬಿಸಬೇಕು ನಾನು ಎಂದು ಹೈರಾಣಗಿದ್ದಳು.

ಬಡತನದ ರೇಖೆಯ ಕೆಳಗೆ ಬದುಕವವರಿಗೆ ದೊರೆಯುವ ಮಾಸಿಕ ರೇಷನ್ನು 15 ಕೆಜಿ ಗೋಧಿ ಮತ್ತು 20 ಕೇಜಿ ಅಕ್ಕಿ. ಹದಿನೈದು ದಿನಗಳಲ್ಲೇ ಖಾಲಿ. ಉಳಿದ ದಿನ ಹೊಟ್ಟೆ ಹೊರೆಯುವುದೇ ದೊಡ್ಡ ಹೋರಾಟ.

ತಿಂಗಳು ತಿಂಗಳು ಹಣ ಕಳಿಸುತ್ತಿದ್ದ ತನ್ನ ಹಿರಿಯ ಮಗ ಜೈಲು ಸೇರಿದ್ದು ದುರದೃಷ್ಟಕರ ಎನ್ನುತ್ತಾಳೆ. ಆದರೆ ಅವನು ಜೈಲು ಸೇರಿದ ನಂತರ ಈಕೆಯನ್ನು ನೋಡಲು ಬಂದ ಮೀಡಿಯಾ ಮಂದಿ ಮಾತಾಡುವ ಮುನ್ನ ಅಷ್ಟಿಷ್ಟು ಹಣ ಕೈಗಿಡ್ತಿದ್ರು. . . ಸಾವಿರ ರುಪಾಯಿ ಕೊಟ್ಟಿದ್ರು. ಇಬ್ಬರು ಸಣ್ಣ ಗಂಡು ಮಕ್ಕಳಿಗೆ ಅರಿವೆ ಖರೀದಿಸಿ ತಂದೆ ಅಂತಾಳೆ. 

ಮೀಡಿಯಾ ಮಂದಿ ಆಗಾಗ ಹಣ ನೀಡ್ತಿದ್ದೇನೋ ಹೌದು. ಆದ್ರೆ ಅವರು ಕೇಳ್ತಿದ್ದ ಪ್ರಶ್ನೆಗಳಿಂದ ಆಕೆಗೆ ಕಿರಿ ಕಿರಿ ಆಗ್ತಿತ್ತಂತೆ. ಮಗನ್ನ ಪೋಲೀಸ್ನೋರು ಹಿಡ್ದು ಜೈಲ್ಗಾಕಿರಾದ್ರಿಂದ ತನ್ಗೆ ಸಂಕ್ಟ ಆದಾತಾ ಅನ್ನೋ ಪ್ರಶ್ನೇನೇ ನೂಕಿ ಬಿಟ್ಟಳು ಆಕೆ. . . . .  ಕುತ್ಗೆ ಮಟ್ಟ ಕಷ್ಟ ಕಣ್ಣೀರ್ನಾಗೆ ಮುಳ್ಗಿರೋ ಬದ್ಕು ನಂದು. ಸದಾ ದೊಡ್ಡ ಮಗನದೇ ಧ್ಯಾನ ಮಾಡ್ತಾ ಕುಂತ್ಕಳ್ಳಕ್ಕೆ ಆಗಲ್ಲ. ಅವನ ಅಪ್ಪ, ಕೂಳು ಕೇಳುವ ಅಷ್ಟೊಂದು ಹೊಟ್ಟೆಗಳು, ಚಾಕರಿ ಇಲ್ಲ, ದುಡ್ಡಿಲ್ಲ, ಊಟ ಇಲ್ಲ, ಬಂಧುಗಳೂ ಇಲ್ಲ. . .
ಮಗನ್ನ ನೋಡೋಕೆ ಒಂದ್ಸಲಾನೂ ಆಕೆ ದಿಲ್ಲಿಗೆ ಹೋಗಿಲ್ಲ. ಮಗನ್ನ ಜೈಲ್ಗಾಕಿದ್ದಾರೇಂತ ನನ್ನಿಂದಲೇ ಆಕೆಗೆ ಗೊತ್ತಾಗಿದ್ದು. ಹೇಳಿದಾಗ ಆಕೆಗೆ ಏನೂ ಅನಿಸಿದಂತೆ ಕಾಣಲಿಲ್ಲ. ನಿರ್ಲಿಪ್ತಳಾಗಿದ್ದಂತೆ ಅನ್ನಿಸ್ತು ಅಂತ ಆ ಪ್ರದೇಶದ ಸರ್ಕಲ್ ಇನ್ಸ್ಪೆಕ್ಟರ್ ಹೇಳಿದರು. ಆದ್ರೆ ಆಕೆಯ ಹೆಣ್ಣುಮಕ್ಳಲ್ಲಿ ಒಬ್ಬಾಕೆ ಹೇಳುವ ಪ್ರಕಾರ ತಾಯಿ ರಾತ್ರಿ ನಿದ್ದೇನೇ ಮಾಡಲ್ಲವಂತೆ. ಮಗನ ಬಂಧನದ ನಂತರ ತಾಯಿ ಆರೋಗ್ಯ ತೀರಾ ಕೆಟ್ಟು ಹೋಗಿದೆ. ಒಂದೊಂದ್ಸಲ ಬುದ್ದಿ ಕೆಟ್ಟೋಳ ತರ ಆಡ್ತಾಳೆ.
ಮೂರ್ನೇ ಕ್ಲಾಸು ಓದ್ತಿದ್ದಾಗ ಮನೇ ಬಿಟ್ಟೋದ ಅವ್ನು. ಹೋಟ್ಲಾಗೆ ಪಾತ್ರೇ ತೊಳಿಯಾಕೆ ಜನ ಬೇಕಾಗಿದ್ರಂತೆ. ತಿಂಗ್ಳಿಗೆ 300 ರುಪಾಯಿ ಸಂಬ್ಳ. ಅವರಪ್ನಿಗೆ ಹುಚ್ಚು ಹಿಡಿದ್ಮ್ಯಾಕಂತೂ ಈ ದುಡ್ಡು ಭಾಳಾ ಆಸ್ರ ಆಗಿತ್ತು. ಮನೆ ಬಿಟ್ಟೋದ್ಮ್ಯಾಕೆ 10-11 ವರ್ಸದಾಗೆ ಅವ್ನು ಬಂದಿದ್ದು ಒಂದೇ ದಪಾ. ಅವ್ನು ಒಳ್ಳೇ ಕೂಸೇ. ಪೋಲೀಸ್ನೋರು ಹೇಳೋದೇ ನಿಜಾ ಆಗಿದ್ರೆ ಅವ್ನು ಕೆಟ್ಟ ಸಾವಾಸಕ್ಕೆ ಬಿದ್ದಿರ್ಬೇಕು ಅಂತಾಳೆ ತಾಯಿ.
 
ಕಳೆದ ಒಂದು ವರ್ಷದಲ್ಲಿ ಮಗನ ಜೊತೆ ಆಕೆ ಮಾತಾಡಿದ್ದು ಒಮ್ಮೆ ಮಾತ್ರ. ಅವ್ನಿಗೆ ಬಿಡ್ಗಡೆ ಆದ್ಮ್ಯಾಕೆ ಇಲ್ಲೇ ಮನೆ ತಾವ ಬಂದು ಹಳ್ಳೀಲೇ ಚಾಕ್ರಿ ಮಾಡ್ಕೊಂಡಿರ್ಲಿ ಅಂತಾಳೆ ಅಪ್ರಾಪ್ತ ಆರೋಪಿಯ ಅಮ್ಮ. ಮಗನ್ನ ಪಟ್ಣಕ್ಕೆ ಹೋಗಾಕೆ ಬಿಟ್ಟಿದ್ದೇ ತಪ್ಪು ಅನ್ನೋ ಪಶ್ಚಾತ್ತಾಪ ಆಕೆಗೆ. ಉಳಿದ ಮಕ್ಳ ಪೈಕಿ ಯಾರ್ನೂ ಕಳ್ಸೋ ಇರಾದೆ ಇಲ್ಲವಂತೆ.
ಈ ಹಳ್ಳೀಗ್ ವಾಪಸ್ ಬಂದ್ರೆ  ಆ ಹುಡುಗುನ್ಜೊತ್ಗೆ ಯಾರು ಸೇರ್ತಾರೆ? ಮಾಡ್ಬಾರದ್ ಮಾಡವ್ನೇ. ಜನ ಹತ್ರ ಬಿಟ್ಗಳಾಕಿಲ್ಲ ಅಂತಾನೆ ಆ ಹಳ್ಳಿ ಪ್ರಧಾನ.

ಅತ್ಯಾಚಾರ ಮಾಡಿದಾಗ ಹುಡುಗ ಅಪ್ರಾಪ್ತ ಆಗಿದ್ದ ಎಂದು ನಂಬಲು ಸ್ಥಳೀಯ ಪೊಲೀಸರು ತಯಾರಿಲ್ಲ. ಕೇವಲ ಏಳೇ ವರ್ಷದ ಹುಡುಗ ಕೆಲಸ ಮಾಡಲು ಮನೆ ಬಿಟ್ಟು ಸಿಟಿಗೆ ಹೋಗೋದು ಸಾಧ್ಯವೇ ಎಂಬುದು ಅವರ ಪ್ರಶ್ನೆ.
ಆದರೆ ತನ್ನ ಮಗನ್ನ ಪೊಲೀಸರು ದಸ್ತಗಿರಿ ಮಾಡಿದಾಗ ಅವನು ಅಪ್ರಾಪ್ತ ವಯಸ್ಕ ಅಂತಾಳೆ ತಾಯಿ. ದಿಲ್ಲಿ ಮತ್ತು ಸುತ್ತಮುತ್ತ ಹೊಟೆಲು ಧಾಬಾಗಳಲ್ಲಿ ಕೆಲಸ ಮಾಡಲು ಏಳು ವರ್ಷಗಳಷ್ಟು ಎಳೆಯ ಮಕ್ಕಳನ್ನ ಹೆತ್ತವರು ಕಳಿಸಿಕೊಡುತ್ತಾರೆ ಅಂತಾರೆ ನೆರೆ ಹೊರೆಯವರು. 

ಬಡವ್ರು ಭಾಳಾ ಜನ ಇದ್ದಾರೆ, ಆದ್ರೆ ಅವ್ರೆಲ್ಲ ಕ್ರಿಮಿನಲ್ ಕೆಲ್ಸಾ ಮಾಡಾಕಿಲ್ಲ. . . . .ಬಡವ್ರಾಗಿರಾದಾಗ್ಲೀ ಇಲ್ಲಾ ಕೆಟ್ಸಾವಾಸಾ ಮಾಡಾದಾಗ್ಲೀ ಕೆಟ್ಕೆಲ್ಸಾ ಮಾಡಾಕೆ ಲೈಸೆನ್ಸು ಅಲ್ಲ ಎಂಬುದು ಪ್ರಧಾನನ ವಾದ.

ಕೋರ್ಟು ಏನ್ ತೀರ್ಮಾನಾ ಮಾಡ್ತದೇ ಅಂತ ತಲೆ ಕೆಡಿಸ್ಕಂಡು ಕುತ್ಕಳಾಕೆ ಈಗ ಟೈಮಿಲ್ಲ. . .ಗಂಟೆ ಹೊಡೆದಂತೆ ಹೇಳ್ತಾಳೆ ತಾಯಿ. ಅಂಗಿದ್ರೆ  ನಿನ್ಮಗ ಏನೂ ಅರೀದವ್ನು ಅಂತೀಯಾ ಎಂಬ ಪ್ರಶ್ನೆಗೆ ಆಕೆಯ ಉತ್ತರ- ಆ ದೇವ್ರೇ ಬಲ್ಲ”?
ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...