Monday, September 30, 2013

ಗಾಂಧಿ ಜಯಂತಿ ಹೀಗೂ ಆಚರಣೆಗಾಂಧಿ ಜಯಂತಿ ಅಂದರೆ ೨-೧೦- ೨೧೦೩ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಶ್ರೀ ಎಚ್. ಜಿ. ಗೋವಿಂದ ಗೌಡ ಅವರ ಮನೆಯಲ್ಲಿ ಈ ಬಾರಿ ನಮ್ಮ ಗಾಂಧಿ ಜಯಂತಿಯ ಆಚರಣೆ. ವಿಶೇಷವೆಂದರೆ ಮಹಾರಾಷ್ಟ್ರದ ಮೈಂದರ್ಗಿಯಲ್ಲಿರುವ ಗೆಳೆಯ ಗಿರೀಶ್ ಜಕಾಪುರೆ ಬರೆದಿರವ ೨೦೦ ಪಟಗಳ ‘ಮಲೆನಾಡ ಗಾಂಧಿ(ಎಚ್. ಜಿ. ಗೋವಿಂದಗೌಡ ಒಂದು ಆಪ್ತ ಚಿತ್ರ)’ ಪುಸ್ತಕ ಅಂದು ಬೆಳಿಗ್ಗೆ ೧೧ಕ್ಕೆ ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಪುಸ್ತಕ ಪ್ರಕಟಗೊಳ್ಳಲು ಪ್ರೇರೇಪಣೆ ನೀಡಿದ ಕವಿ, ಯುವ ಚೇತನ ನಾಗತಿಹಳ್ಳಿ ರಮೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ನೀವೂ ಬರುವಿರಲ್ಲವೆ?
ಅಂದಹಾಗೆ ಈ ಪುಸ್ತಕಕ್ಕೆ ಶ್ರೀ ಯು. ಆರ್. ಅನಂತವೂರ್ತಿ ಅವರು ಮುನ್ನುಡಿ ಬರೆದಿದ್ದು; ಶ್ರೀ ಎಂ. ಶ್ರೀಧರವೂರ್ತಿ ಅವರ ಅಪರೂಪದ ಪೋಟೋ ಬಳಸಿ ಎಂ. ಅರ್. ಗುರುಪ್ರಸಾದ್ ರಕ್ಷಾಪುಟ ವಿನ್ಯಾಸ ಮಾಡಿದ್ದಾರೆ. ಕೇರಳದ ಕಲಾವಿದ ಮತ್ತು ಶಿಲ್ಪಿ ಬೈಜುನಾಥ್ ಅವರ ರೇಖಾಚಿತ್ರ, ಗೋವಿಂದ ಗೌಡರ ಜೀವನದ ಕೆಲ ಆಪ್ತ ಚಿತ್ರಗಳೂ ಇಲ್ಲಿವೆ.
ಬನ್ನಿ, ಪರಿಶುದ್ಧ ನಡೆಯ ಪ್ರಾಮಾಣಿಕ ಚೇತನ (ಮಾಜಿ ಶಿಕ್ಷಣ ಸಚಿವರು, ಹಿರಿಯ  ಗಾಂಧಿವಾದಿ)ಎಚ್. ಜಿ. ಗೋವಿಂದಗೌಡರಿಗೆ ಗೌರವ ಸಲ್ಲಿಸೋಣ. ಆ ವೂಲಕ ಈ ಭಾರಿಯ ಗಾಂಧಿಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ  ಕ್ಷಣಗಳನ್ನು ನಮ್ಮ ನೆನಪಿನ ಭಾಗವಾಗಿಸಿಕೊಳ್ಳೋಣ.
 
ನ. ರವಿಕುಮಾರ, 
ಅಭಿನವದ ಪರವಾಗಿ(೯೪೪೮೮೦೪೯೦೫)
ನಾಗತಿಹಳ್ಳಿ ರಮೇಶ್ ಅವರ ದೂರವಾಣಿ:೮೯೫೧೬೧೪೫೬೩, ೯೪೪೮೬೬೫೪೭೪
ವೆಂಕ್‌ಟೇಶ್(ಗೋವಿಂದ U ಗೌಡ ಅವರ ಮಗ)೯೪೪೮೦೫೨೧೧೭
ಗೋವಿಂದ ಗೌಡ ಅವರ ಸಂಪರ್ಕ:೦೮೨೬೫೨೨೧೦೨೩
ಗಿರೀಶ್ ಜಕಾಪುರೆ: ೯೯೭೨೦೧೬೨೫೦,೯೮೬೦೮೩೮೬೦೫
ಮರೆಯಬಾರದ ಮಾತು: ಒಮ್ಮೆ ಶಾಂತವೇರಿ ಗೋಪಾಲಗೌಡರಿಗೆ ಶಾಸಕ ಸ್ಥಾನದ ಕೋಟಾದಡಿಯಲ್ಲಿ ನಿವೇಶನ ಕೊಡುತ್ತೇವೆಂದು ಹೋದ ಅಧಿಕಾರಿಗಳಿಗೆ ಹೇಳಿದರಂತೆ: ‘ನೀವು ಕರ್ನಾಟಕದ ಎಲ್ಲ ಬಡವರಿಗೂ ನಿವೇಶನಗಳನ್ನು ಕೊಟ್ಟು  ಉಳಿದರೆ ನನ್ನ ಪಾಲನ್ನು ತೆಗೆದುಕೊಳ್ಳುತ್ತೇನೆ’ ಎಂದು.


https://mail-attachment.googleusercontent.com/attachment/?ui=2&ik=64db019aae&view=att&th=141727c889727a6a&attid=0.1&disp=inline&realattid=f_hm8ok6db0&safe=1&zw&saduie=AG9B_P_apJ-8s6ZpZQ22vq2XigUY&sadet=1380605407659&sads=_XY49-FFZ4_XlqnINa4jvh3btKA

ಸತ್ಯಾನ್ವೇಷಣೆ..ಹಂದಲಗೆರೆ ಗಿರೀಶ್

ಬುದ್ದನ ಕೊಟ್ಟ ಈ ಭೂಮಿಗೆ
ಗಾಂಧಿಯ ಬಿಸಿನೆತ್ತರ
ರುಚಿನೋಡುವ ಬಯಕೆಯಾಗಿತ್ತೇ..?

ಗೋಡ್ಸೆಯ ಗುಂಡುಗಳಿಗೆ
ಮತೀಯತೆಯ ಬಿಸಿತಾಗಿ
ಗಾಂಧಿಯ ಮಡಿಲ ಅರಸಿದವೋ..?

ಜಗವೆಲ್ಲಾ ಸುಖ-ಭೋಗವರಸಿ
ಹೊರಟಿರುವಾಗ, ಕಾಲವೇ..
ಗಾಂಧಿ ನಿರುಪಯೋಗಿ ಎಂದು ತೀರ್ಮಾನಿಸಿತ್ತೇ..?

ಮುರಿದ ಚರಕ! ಒಡೆದ ದೇಶ..
ಸ್ವರಾಜ್ಯ ಮರೀಚಿಕೆಯಾಗಿ,
ಅಸಹಾಯಕತೆಗೆ ಬೇಸತ್ತು
ಗಾಂಧಿಯೇ ಸಾವನ್ನು ಪ್ರೀತಿಸಿದನೇ?

ಅಥವಾ....

ಸುಡುತ್ತಿದ್ದುದು
ಅವರು ಬಂದರು
ಗೋಳುಹುಯ್ದುಕೊಂಡರು, ನಕ್ಕರು,
ನನ್ನ ಗೆಳೆಯರನ್ನೂ ನಗಿಸಿದರು,
ಹೊರಳಿ ಹೋದರು.

ಹೇಗೋ ಸಹಿಸಿಕೊಂಡೆ.

ಸಹಿಸಿಕೊಂಡದ್ದು ಅವರ ಮೇಲಿನ
ಗೌರವಕ್ಕಲ್ಲ,
ಬೇವಾರ್ಸಿ ಸಿಟ್ಟಿಗೆ
ಉರಿದುಬೀಳುವ ತಾಕತ್ತಿರಲಿಲ್ಲ.

ಇದ್ದಬಿದ್ದ ಚೂರು ಧೈರ್ಯದ ರಾಕೇಲಿಗೆ
ಸಿಟ್ಟನು ಗೀರಿ ಹೊತ್ತಿಸಿದ್ದರೂ
ಮೊದಲು ಸುಡುತ್ತಿದ್ದುದು
ಮುಕುಳಿ ಮೇಲಿನ ನನ ಚಡ್ಡಿ.

ಬರೀ ಚಡ್ಡಿಯಲಿ ಅಲೆಯುವವರು
ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತೆ.

ಬೆತ್ತಲಾಗುವ ಬೊಂಬಡಿ ಹೊಡೆವರೆಲ್ಲ
ಬಸಿಯುವ ಬೆವರಿನಲ್ಲೂ ಕೋಟು ತೊಡುವವರು
ಬಯಸುವರು ಇನ್ನೊಬ್ಬರು ಬೆತ್ತಲಾಗುವುದನ್ನು
ಬೆತ್ತಲಾದವರ ಅಂಕುಡೊಂಕು ಹುಡುಕಲಿಕ್ಕಾಗಿ
ಮೊಲೆಗಳು ಕಂಡರೆ ಕಚಗುಳಿ ಪಡೆಯಲಿಕ್ಕಾಗಿ.

ಸಿಕ್ಕ ಗೋಡೆಗೆ ಉಚ್ಚೆ ಹೊಯ್ಯುವವರ
ಎದುರುತ್ತರಗಳಲ್ಲೂ ಅದೇ ವಾಸನೆಯಿರುತ್ತದೆ
ಕೊಳಚೆಯಲಿ ಉರುಳಾಡುವವರಿಗೆ ಬುದ್ಧಿ
ಕಲಿಸಲು ಹೋದರೆ ಕೈ ರಾಡಿಯಾಗುತ್ತದೆ.

ಬರೀ ಚಡ್ಡಿಯಲಿ ಅಲೆಯುವವರು
ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತೆ.

ಮಹಾತ್ಮನ ನೆರಳಿನಲಿ ಕಳೆದು ಹೋದ ಕಸ್ತೂರಿ
ಡಿ. ಉಮಾಪತಿ

ಸೌಜನ್ಯ : ವಿಜಯ ಕರ್ನಾಟಕ


ಗಾಂಧಿಯ ವ್ಯಕ್ತಿತ್ವದಲ್ಲಿ ಕಸ್ತೂರ ಬಾ ಪ್ರಭಾವ ಸಾಕಷ್ಟಿದ್ದರೂ ಪಠ್ಯೇತರವಾಗಿ ಅವರ ಸ್ಮರಣೆ ತೀರಾ ಅಪರೂಪ
ನಾಡಿದ್ದು ಗಾಂಧಿ ಜಯಂತಿ. ಗಾಂಧಿ ಏರಿದ ಎತ್ತರದ ಎಲ್ಲ ಶ್ರೇಯಸ್ಸು ಕಸ್ತೂರ ಬಾ ಅವರದು ಎಂದು ತಂದೆಯ ಮುಖಕ್ಕೆ ರಾಚಿದಂತೆ ಹೇಳಿದ್ದ ಈ ದಂಪತಿಗಳ ಹಿರಿಯ ಮಗ ಹರಿಲಾಲ್.

 

 ಆಧುನಿಕ ಔಷಧಿಯಲ್ಲಿ ಗಾಂಧಿಗೆ ನಂಬಿಕೆ ಇರಲಿಲ್ಲ. ಬದುಕು ಸಾವಿನ ನಡುವೆ ಹೋರಾಟ ನಡೆಸಿದ್ದ ಕಸ್ತೂರ ಬಾಗೆ ಪೆನ್ಸಿಲಿನ್ ಚುಚ್ಚುಮದ್ದು ನೀಡುವ ಅಗತ್ಯ ಇತ್ತು. ಕೂಡದು ಎಂದು ಗಟ್ಟಿಯಾಗಿ ಅಡ್ಡ ನಿಂತರು ಅಹಿಂಸಾವಾದಿ ಗಾಂಧಿ. ಪುಣೆಯಲ್ಲಿ ಸೆರೆಮನೆ ವಾಸದಲ್ಲಿ ಪತಿಯ ಬಾಹುಗಳಲ್ಲೇ ಪ್ರಾಣಬಿಟ್ಟರು ಕಸ್ತೂರ ಬಾ.

''ತನ್ನನ್ನು ನನ್ನಲ್ಲಿ ಕಳೆದುಕೊಳ್ಳುವ ಆಕೆಯ ಸಾಮರ್ಥ್ಯವೇ ಕಸ್ತೂರ ಬಾ ಕಡೆಗೆ ಸಾರ್ವಜನಿಕರು ಆಕರ್ಷಿತರಾದ ಮೂಲ ಕಾರಣ,'' ಎಂಬುದು ಆಕೆಯ ಜೀವನಚರಿತ್ರೆಗೆ ಬರೆದ ಮುನ್ನುಡಿಯಲ್ಲಿ ಗಾಂಧಿ ಹೇಳಿರುವ ಮಾತು.

ಹದಿಮೂರನೆಯ ವಯಸ್ಸಿಗೆ ಮದುವೆ. 1888ರಲ್ಲಿ ತಮ್ಮ 19ನೇ ವರ್ಷದಲ್ಲಿ ಮೊದಲ ಮಗ ಹರಿಲಾಲನ ಜನನ. ಮಣಿಲಾಲ್, ರಾಮದಾಸ್ ನಂತರ ಕಿರಿಯ ಮಗ ದೇವದಾಸ್ ಜನಿಸಿದ್ದು 1900ರಲ್ಲಿ. ಆನಂತರ ಪತ್ನಿಯ ಅಭಿಪ್ರಾಯವನ್ನು ಕೇಳುವ ಗೋಜಿಗೆ ಹೋಗದ ಗಾಂಧಿ ಅವರಿಂದ ಬ್ರಹ್ಮಚರ್ಯ ಪಾಲನೆಯ ಏಕಪಕ್ಷೀಯ ನಿರ್ಧಾರ. ಆಗ ಕಸ್ತೂರ ಬಾ ಅವರ ವಯಸ್ಸು 31. ದಾಂಪತ್ಯ ಜೀವನದ ಈ ಗುರುತರ ನಿರ್ಧಾರ ಕುರಿತು ತಮ್ಮ ನಿಲುಮೆ ಏನಿತ್ತೆಂದು ಆಕೆಯ ಬಾಯಿಂದಲೇ ಹೊರಬಿದ್ದ ಮಾತುಗಳು ಎಲ್ಲಿಯೂ ದಾಖಲಾಗಿಲ್ಲ. ಆರೋಗ್ಯಕರ ಲೈಂಗಿಕ ಬದುಕಿನ ಕುರಿತು ಅಸ್ವಾಭಾವಿಕ ಅನುಮಾನವನ್ನು ಬೆಳೆಸಿಕೊಂಡ ಗಾಂಧಿಯನ್ನು ಕಮ್ಯೂನಿಸ್ಟರು ಆಷಾಡಭೂತಿ ಎಂದು ಟೀಕಿಸಿರುವುದುಂಟು.

ದೈಹಿಕ ಸಾಮೀಪ್ಯವಿಲ್ಲದ ಕಾಮರಹಿತ ಪ್ರೇಮ ಗಾಂಧಿ ಮತ್ತು ಹಲವು ಹೆಣ್ಣುಮಕ್ಕಳ ನಡುವೆ ಇತ್ತು. ಮೀರಾಬೆನ್ ಮತ್ತು ಗಾಂಧಿ ನಡುವಣ ಇಂತಹ ಸಂಬಂಧ ಖುದ್ದು ಕಸ್ತೂರ ಬಾ ಅವರಿಗೆ ಅಸೂಯೆ ಮೂಡಿಸಿತ್ತಂತೆ. ಬೆತ್ತಲೆಯಾಗಿ ಹೆಣ್ಣುಮಕ್ಕಳ ಜತೆ ಮಲಗಿ ಕಾಮವನ್ನು ಗೆದ್ದ ಪ್ರಯೋಗ ನಡೆಸುವ ಗಾಂಧಿ ಕುರಿತು, ಅನುಚಿತ ನಡವಳಿಕೆಯ ಕುರಿತು ಆ ಹೆಣ್ಣುಮಕ್ಕಳ್ಯಾರೂ ದೂರಿಲ್ಲ. ಗಾಂಧಿಯ 'ಊರುಗೋಲು'ಗಳಲ್ಲಿ ಒಬ್ಬರಾಗಿದ್ದ ಹೆಣ್ಣುಮಗಳು ಮನು ಕೂಡ ಈ ಪ್ರಯೋಗದಲ್ಲಿ ಪಾಲ್ಗೊಂಡಿದ್ದರು. 'ಬಾಪು, ನನ್ನ ತಾಯಿ' ಎಂಬುದಾಗಿ ಆಕೆ ಬರೆದ ಪುಟ್ಟ ಪುಸ್ತಕ ಗಾಂಧಿಯನ್ನು ಟೀಕೆ ಮಾಡುವ ಬಾಯಿಗಳನ್ನು ಮುಚ್ಚಿಸಿದ್ದು ಹೌದು.

ಕಡುಕೋಪದ ಗಳಿಗೆಗಳಲ್ಲಿ ಕಸ್ತೂರ ಬಾ ಅವರನ್ನು ಮನೆಯಿಂದ ಹೊರಹಾಕಲು ತಾವು ಮುಂದಾದದ್ದನ್ನು ಗಾಂಧಿಯೇ ಹೇಳಿಕೊಂಡಿದ್ದಾರೆ. ಆಶ್ರಮದ ಕಕ್ಕಸುಗಳನ್ನು ತೊಳೆಯಬೇಕೆಂಬ ಪತಿಯ ಆದೇಶವನ್ನು ಅವರು ತಿರಸ್ಕರಿಸುತ್ತಾರೆ. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲ ತತ್ವಗಳನ್ನು ಗಾಂಧಿ ಕಲಿತದ್ದು ತಮ್ಮ ಪತ್ನಿಯಿಂದಲೇ. ಪತಿಗಿಂತ ನಾಲ್ಕು ತಿಂಗಳು 22 ದಿವಸಗಳಷ್ಟು ವಯಸ್ಸಿನಲ್ಲಿ ದೊಡ್ಡವರು ಕಸ್ತೂರ ಬಾ. ಏಪ್ರಿಲ್ ಹನ್ನೊಂದರ ಆಕೆಯ ಜನ್ಮದಿನದಂದು, ಕಸ್ತೂರ ಬಾ ಅವರನ್ನು ದೇಶ ನೆನೆದಿದ್ದರೆ-ಅದನ್ನು ಈವರೆಗೆ ಯಾರೂ ಕಂಡಿಲ್ಲ. ಗಾಂಧಿಯನ್ನು ಬಿಟ್ಟು ಕಸ್ತೂರಬಾ ಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಗಾಂಧಿಯನ್ನು ನೆನೆದರೆ ಕಸ್ತೂರ ಬಾ ಅವರನ್ನು ನೆನೆದಂತೆಯೇ ಲೆಕ್ಕ ಎಂದು ತಿಳಿದಂತಿದೆ ನಮ್ಮ ಸಾಮೂಹಿಕ ಸಾಕ್ಷಿಪ್ರಜ್ಞೆ. ಗುರುತಿಸದೆ ಮಣ್ಣಾಗಿರುವ ಸಾವಿರಾರು ಅಜ್ಞಾತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಪ್ರತೀಕ ಕಸ್ತೂರ ಬಾ ಎನ್ನುತ್ತಾರೆ ಹಿರಿಯ ಸರ್ವೋದಯ ಕಾರ್ಯಕರ್ತ ಬಿಜು ನೇಗಿ.

ಹಿರಿಯರು ನಿಶ್ಚಯಿಸಿದಂತೆ ಮೋಹನದಾಸನನ್ನು ವರಿಸಿದ ಕಸ್ತೂರ್ ಕಪಾಡಿಯಾ, ವೈವಾಹಿಕ ಜೀವನದ 62 ವರ್ಷಗಳನ್ನು ಗಾಂಧಿಯೊಂದಿಗೆ ಕಳೆದರು. ಕಸ್ತೂರ ಬಾ ಆದರು. ಗುಜರಾತಿನ ಪಟ್ಟಣವೊಂದರ ಶಾಲಾ ಬಾಲಕನಿಂದ, ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವರಾಜ್ಯ ಗಳಿಕೆಯ ಹೋರಾಟದ ನಾಯಕನಾಗಿ ಪತಿಯ ರೂಪಾಂತರದಲ್ಲಿ ಜತೆಗಿದ್ದು ಏರಿಳಿತಗಳನ್ನು ಹಂಚಿಕೊಂಡವರು ಅವರು. ''ಪತಿಯ ಪ್ರಯೋಗಗಳಲ್ಲಿ ಪಾಲ್ಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಸುಕಾಗಿ ಮಹಾತ್ಮನ ನೆರಳಿನಲ್ಲಿ ಕಳೆದುಹೋಗಿದೆ. ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅವರು ಬರೆದದ್ದನ್ನು ಓದುವ ಅವಕಾಶ ಇಲ್ಲ. ಅವರ ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಶಬ್ದಗಳನ್ನು ಸೋಸಿ ಆಕೆಯನ್ನು ಸಮೀಪಿಸಬೇಕಿದೆ,'' ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ.

ತಮ್ಮ ತವರಿನಿಂದ ದೊರೆತ ದಾಗೀನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಬಾ ಅವರನ್ನು ಬಲವಂತ ಮಾಡಿದ್ದರು ಗಾಂಧಿ. ಮಕ್ಕಳನ್ನು ಸಾಧುಗಳನ್ನಾಗಿ ಮಾಡಿ, ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರ ಬಾ. ಒಮ್ಮೆ ಕಸ್ತೂರ ಬಾಗೆ ದಕ್ಕಿದ್ದ ಕಂಠಾಭರಣದ ಉಡುಗೊರೆ ಕುರಿತು, ''ನನ್ನ (ದೇಶ) ಸೇವೆಗೋ ಅಥವಾ ನಿನ್ನ ಸೇವೆಗೋ?,'' ಎಂದು ದನಿಯೇರಿಸಿದ್ದರು ಬಾಪೂ. ತಿರುಗಿ ಬಾ ನೀಡಿದ ಉತ್ತರ ಹೀಗಿತ್ತು- ''ಒಪ್ಪುತ್ತೇನೆ... ಆದರೆ, ನೀವು ಸಲ್ಲಿಸಿದ ಸೇವೆ ನಾನು ಸಲ್ಲಿಸಿದ ಸೇವೆಯೆಂದೇ ಲೆಕ್ಕ. ನಿಮಗಾಗಿ ನಾನು ಹಗಲಿರುಳು ದೇಹ ಸವೆಸಿ ದುಡಿದಿದ್ದೇನೆ. ಅದು ಸೇವೆ ಅಲ್ಲವೇನು?''

ಕಸ್ತೂರ್ ಅವರ ತಂದೆ-ತಾಯಿ ಗೋಕಲದಾಸ್ ಮತ್ತು ವ್ರಜಕುನ್ವರ್ಬ ಕಪಾಡಿಯಾ ಸಿರಿವಂತರು. ಹತ್ತಿ, ಧಾನ್ಯ, ವಸ್ತ್ರಗಳನ್ನು ಅರೇಬಿಯಾ ಮತ್ತು ಆಫ್ರಿಕಾ ದೇಶಗಳಿಗ ರಫ್ತು ಮಾಡುವ ವ್ಯವಹಾರ. ''ಕಸ್ತೂರ್ ಮನೆಯಿಂದ ನಾಲ್ಕೈದು ಮನೆಗಳ ಅಂತರದಲ್ಲಿ ತಾತ ಮೋಹನದಾಸ್ ಮನೆ. ಇಬ್ಬರಿಗೂ ಏಳನೆಯ ವಯಸ್ಸಿನಲ್ಲಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಅಂದಿನಿಂದಲೇ ಅಜ್ಜಿಯ ಬದುಕಿನ ಕಥೆಯನ್ನು ತಾತನ ಬದುಕು ಮಬ್ಬಿಗೆ ಸರಿಸಿಬಿಟ್ಟಿತು,'' ಎಂದಿದ್ದಾರೆ ಮೊಮ್ಮಗ ಅರುಣ್ ಗಾಂಧಿ. ಹದಿಮೂರನೆಯ ವಯಸ್ಸಿಗೆ ವಿವಾಹ. ಕಸ್ತೂರ್ ಕಪಾಡಿಯಾ ಈಗ ಕಸ್ತೂರ ಬಾ ಗಾಂಧಿ. ಪೋರಬಂದರು ತೊರೆದು ರಾಜಕೋಟ್ ಮನೆಯಲ್ಲಿ ವಾಸ. ಹೊಸ ಊರು, ಹೊಸ ಮನೆ, ಹೊಸ ಹೆಸರು.

ಮೋಹನದಾಸ್ ಶಾಲಾ ವಿದ್ಯಾರ್ಥಿ ಮತ್ತು ಗೃಹಸ್ಥ ಎರಡೂ ಆಗಿದ್ದ. ಪತ್ನಿ ತಾನು ಹೇಳಿದಂತೆ ಕೇಳಬೇಕು ಎಂಬ ಇರಾದೆಗೆ ಬಿದ್ದಿದ್ದ. ಮನೆ ಬಿಟ್ಟು ಹೊರಗೆ ಹೋಗುವುದಾದರೆ ತನ್ನ ಅನುಮತಿ ಪಡೆಯಲೇಬೇಕು. ಎಲ್ಲಿ , ಯಾವಾಗ, ಯಾರನ್ನು, ಯಾಕೆ ಭೇಟಿ ಮಾಡಿ ಮಾತನಾಡಿದೆ ಎಂದು ತಿಳಿಸಬೇಕು. ತನಗೇ ನಿಷ್ಠಳಾಗಿರಬೇಕು ಎಂದು ವಿಧಿಸಿದ್ದ. ಕಸ್ತೂರ ಬಾ ಎದುರು ವಾದಿಸುತ್ತಿದ್ದಿಲ್ಲ , ಪ್ರಶ್ನಿಸುತ್ತಿರಲಿಲ್ಲ. ಗಂಡ ಹೇಳುವುದು ಸಕಾರಣ ಅಲ್ಲ ಎನಿಸಿದ್ದನ್ನು ಮೌನವಾಗಿ ತಳ್ಳಿ ಹಾಕುತ್ತಿದ್ದರು.

ಈ ನಡುವೆ, ಪತಿಗೆ ಹೊಸ ಶಾಲಾ ಗೆಳೆಯ ಗಂಟುಬಿದ್ದದ್ದು ಕಸ್ತೂರ ಬಾಗೆ ಗೊತ್ತಾಗಿತ್ತು. ಷೇಖ್ ಮೆಹ್ತಾಬ್ ನಡತೆಯ ಬಗೆಗೆ ಆಕೆಗೆ ಅನುಮಾನವಿತ್ತು. ''ಕತ್ತಲು ಕಂಡರೆ ತನಗೆ ಹೆದರಿಕೆ. ಆದರೆ, ಕಸ್ತೂರ ಬಾ ಹೆದರುವುದಿಲ್ಲ. ತನಗೆ ನಿದ್ದೆ ಬಾರದು, ಆದರೆ ಪತ್ನಿ ಗಡದ್ದು ನಿದ್ದೆ ಮಾಡುತ್ತಾಳೆ,'' ಎಂಬ ಮೋಹನದಾಸ್ ಸಮಸ್ಯೆಗೆ ಮೆಹ್ತಾಬ್ ಸೂಚಿಸಿದ ಪರಿಹಾರ ಮಾಂಸಾಹಾರ ಸೇವನೆ. ಹೆಚ್ಚೂ ಕಡಿಮೆ ವರ್ಷಪೂರ್ತಿ ಮಾಂಸಾಹಾರ ಸೇವನೆಯ ಪ್ರಯೋಗವನ್ನು ಮೋಹನದಾಸ್ ನಡೆಸಿದ್ದರು. ಪತಿಯ ಪ್ರತಿಯೊಂದು ನಡೆಯೂ ಸೂಕ್ಷ್ಮಮತಿ ಪತ್ನಿಗೆ ತಿಳಿಯದೆ ಇರುತ್ತಿರಲಿಲ್ಲ. ಕಸ್ತೂರ್ ಪಾಲಿಗೆ ಭಾವನಾತ್ಮಕವಾಗಿ ಕಿತ್ತು ತಿನ್ನುವ ದಿನಗಳು ಅವು. ದಾಂಪತ್ಯದ ಬಗ್ಗೆಯೂ ಮೆಹ್ತಾಬ್ ಸಲಹೆ ನೀಡುತ್ತಿದ್ದ. ರಾತ್ರಿ ಆಯಿತೆಂದರೆ ಪತಿಯಿಂದ ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಿತ್ತು. ಈ ಮಾತುಗಳನ್ನು ಆಡುತ್ತಿರುವುದು ತನ್ನ ಪತಿಯೇ ಎಂಬ ಸೋಜಿಗದೊಡನೆ ಮನೋಕ್ಲೇಶ ಆಕೆಯನ್ನು ಕಾಡಿತ್ತು. ಮೆಹ್ತಾಬ್ ತಾನೇ ಮುಂದಾಗಿ ಹಣ ಪಾವತಿ ಮಾಡಿ ಮಿತ್ರ ಮೋಹನದಾಸನನ್ನು ವೇಶ್ಯಾಗೃಹಕ್ಕೂ ಕಳಿಸಿದ. ಆದರೆ, ಪತ್ನಿಯೊಂದಿಗೆ ಕಲೆತಿದ್ದ ಮೋಹನದಾಸ ಹೊಸ ಸ್ತ್ರೀಯನ್ನು ಕೂಡಲು ಅಸಮರ್ಥನಾದ. ಪತಿ ಸತ್ಯದೊಂದಿಗೆ ಪ್ರಯೋಗಗಳನ್ನು ಮಾಡಿದರೆ, ಆ ಪ್ರಯೋಗಗಳನ್ನು ಅನುಭವಿಸಿದ್ದು ಪತ್ನಿ.

ಬಾಳಪಯಣದಲ್ಲಿ ಹುಟ್ಟಿದ ಮಕ್ಕಳು ಹರಿಲಾಲ್, ಮಣಿಲಾಲ್, ರಾಮದಾಸ್ ಹಾಗೂ ದೇವದಾಸ್. ಮಕ್ಕಳನ್ನು ಪತಿ ನಡೆಸಿಕೊಳ್ಳುವ, ಸಲಹುವ ರೀತಿ ಪತ್ನಿಗೆ ಸಮ್ಮತವಿರಲಿಲ್ಲ.''ಪುರುಷರಾಗುವುದಕ್ಕೆ ಮುನ್ನವೇ ಅವರನ್ನು ಸಾಧು ಸನ್ಯಾಸಿಗಳನ್ನಾಗಿ ಮಾಡುತ್ತಿದ್ದೀರಿ, ಅತಿ ನಿಷ್ಠುರಿಯಾಗಿ ನಡೆದುಕೊಳ್ಳುತ್ತಿದ್ದೀರಿ,'' ಎಂದು ದೂರಿದ್ದರು. ಹಿರಿಯ ಮಗ ಹರಿಲಾಲ್ ಮತ್ತು ಪತಿಯ ಮಧ್ಯೆ ಹೊಗೆಯಾಡುತ್ತಿದ್ದ ದೀರ್ಘ ಘರ್ಷಣೆ ತಾರಕಕ್ಕೇರಿ, ಮಗ ಮನೆ ತೊರೆದು ಇಸ್ಲಾಮ್ ಧರ್ಮಕ್ಕೆ ಪರಿವರ್ತಿನೆ ಆದದ್ದು ಕಸ್ತೂರ ಬಾ ಅವರಿಗೆ ಭಾರಿ ವ್ಯಥೆಯ ವಿಷಯವಾಗಿತ್ತು.

’ದೀಪದ ಗಿಡ’ : ಬರೆದ ಪದ್ಯಗಳಲ್ಲ; ಬದುಕಿದ ಪದ್ಯಗಳು.

-ಎಸ್. ನಟರಾಜ ಬೂದಾಳು
’ಅದು ಸ್ವಚ್ಛಂದ ಹಾರುವುದು ಓದುಗನ ಮನದಾಗಸದಲ್ಲಿ ರೆಕ್ಕೆ ಬಿಚ್ಚಿದಾಗ ಮಾತ್ರ’

ಈಗಾಗಲೇ ಈ ದ್ವಿಪದಿಗಳನ್ನು ಕುರಿತು ಈ ಪುಸ್ತಕದಲ್ಲಿ ಇಬ್ಬರು- ರಹಮತ್ ತರೀಕೆರೆ ಮತ್ತು ಜಿ.ರಾಜಶೇಖರ್ ಮಾತನಾಡಿದ್ದಾರೆ. ಮೂರನೆಯವನಾಗಿ ನಾನು ನಿಂತಿದ್ದೇನೆ.

ಇವು ಬರೆದ ಪದ್ಯಗಳಲ್ಲ; ಬದುಕಿದ ಪದ್ಯಗಳು. ಹಾಗಾಗಿ ನಾನು, ಬಸೂ ಇಬ್ಬರೇ ಓದಿಕೊಳ್ಳಬೇಕಾದ ಪುಸ್ತಕವನ್ನು ಕುರಿತು ಎಲ್ಲರಿಗೂ ಹೇಳಬೇಕಾಗಿ ಬಂದದ್ದು - ಒಂದು ರೀತಿಯಲ್ಲಿ ನಾನಿಷ್ಟಪಡುವ ಕೆಲಸವೇನಲ್ಲ.  ಆದರೆ ಈ ಪುಸ್ತಕ ಅಂಥದ್ದು ಎಂದು ಗೊತ್ತಾಗುವ ಮೊದಲೇ ಈ ಕೆಲಸಕ್ಕೆ ಒಪ್ಪಿಕೊಂಡಿದ್ದೆ.  ಆದುದರಿಂದ ಇಷ್ಟವಿಲ್ಲದ ಈ ಕೆಲಸ ಮಾಡುತ್ತಿದ್ದೇನೆ.  ಇದನ್ನು ಓದುವಾಗ ನಿಮಗೂ ಹಾಗೇ ಅನ್ನಿಸುತ್ತೆ ಎಂಬುದು ನನಗೆ ಖಾತ್ರಿಯಾಗಿ ಗೊತ್ತು. ಸಾಮಾನ್ಯವಾಗಿ ಕವಿಗಳು ಒಂದು ಸಂಗತಿಗೆ ಓದುಗರನ್ನು ಗೋಗರೆಯುತ್ತಾರೆ.  ಹೇಳುತೇನೆ ಕೇಳಾ ಎಂದು ಕೇಳುವ ತನಕ ಬಿಡೋಲ್ಲ. ಆದರೆ ಕೆಲವು ಕವಿಗಳಿರುತ್ತಾರೆ ಮಿರ್ಜಾಗಾಲಿಬ್ ಥರದವರು, ಅಲ್ಲಮನ ಥರದವರು. ನೂರಾರು ಅನಾಮಿಕ ತತ್ವಪದಕಾರರು, ಅವರು ಹಾಗೆ ಯಾರೋ ನನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಇಚ್ಚಿಸುವುದೂ ಇಲ್ಲ, ಹಾಗೆ ಮಾಡಲು ಕೇಳುವುದೂ ಇಲ್ಲ. ಆ ಕವನವೋ ದ್ವಿಪದಿಯೋ ವಚನವೋ ತತ್ವವೋ ಉಳಿದರೆ ಉಳಿಸಿಕೊಂಡವರದಾಗಿ ಉಳಿಯಲಿ ಹಾಗೇ ಉಳಿಯುತ್ತಾ ಹೋಗಲಿ ಅಥವಾ ವಿಸರ್ಜನೆಗೊಳ್ಳಲಿ, ನನಗೆ ಅದರ ಗೊಡವೆ ಇಲ್ಲ ಎಂಬುದು ಅವರ ದೊಡ್ಡತನ. ಅಂತಹ ದೊಡ್ಡಸ್ತಿಕೆ ಬಗೆಗೆ ನಾನು ಮಾತನಾಡುತ್ತಿಲ್ಲ.  ಆದರೂ ಒಂದು ಕೋರಿಕೆ: ನನ್ನನ್ನು ನನ್ನ ಮಾತನ್ನು ಇಲ್ಲೇ ಈಗಲೇ ಮರೆತುಬಿಡಿ, ನಂತರ ಈ ಪುಸ್ತಕ ಓದಿ.


ಕನ್ನಡದ ಶ್ರಾವಕ ಪ್ರತಿಭೆ ಘನವಾದದ್ದು. ಅದು ಇಡಿಯಾಗಿ ಅನೇಕ ಮಹಾಕಾವ್ಯಗಳನ್ನು ಅನೇಕ ರಾತ್ರಿಗಳು ಕೂತು ಕೇಳಬಲ್ಲದು,   ಸಾವಿರಾರು ತತ್ವಪದಗಳನ್ನು ನೆನಪಿನಲ್ಲಿಟ್ಟು ಕಾಪಾಡಬಲ್ಲುದು, ಸಾವಿರಾರು ವಚನಗಳನ್ನು ನಡೆದು ನುಡಿಯಬಲ್ಲದು. ಅಲ್ಲಮನಂತಹ ವೈಶ್ವಿಕ ಪ್ರತಿಭೆಗಳೊಡನೆ ಸಂವಾದಿಸಬಲ್ಲದು, ಯಾವ ಯೂನಿವರ್ಸಿಟಿ ಪ್ರಿಸ್ಕ್ರೈಬ್ ಮಾಡದಿದ್ದರೂ  ಚಿದಾನಂದಾವಧೂತ ಕವಿಯ ದೇವಿ ಮಹಾತ್ಮೆಯ ಹತ್ತಾರು ಸಾವಿರ ಪ್ರತಿಗಳನ್ನು ಬೀದಿ ಬದಿಯಲ್ಲಿ ಕೊಂಡು ಪಾರಾಯಣ ಮಾಡಬಲ್ಲದು. ಇಂತಹ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ ಕಾವ್ಯ ಸೂಕ್ಷ್ಮವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಕಾವ್ಯಕ್ಕೆ ಕೇಳುಗರು ಕಮ್ಮಿ ಎಂಬ ಕೊರಗು ಆಧುನಿಕ ಕನ್ನಡದ ಸಂದರ್ಭಕ್ಕೆ ಅನ್ವಯವಾಗುವ ಮಾತು. ಇದು ಕುವೆಂಪು ಬೇಂದ್ರೆಯವರಿಂದ ಹಿಡಿದು ಯಾರೇ ಈ ಹೊತ್ತಿನ ಕವಿಯವರೆಗೂ ಸತ್ಯ. ಹೊಸಗನ್ನಡದ ಮಟ್ಟುಗಳು - ಅವು ಹಾಡಿನವಾಗಿರಲಿ, ಮುಕ್ತಛಂದವಾಗಿರಲಿ - ಸಾಮಾನ್ಯನವರೆಗೆ ಹೋಗಿ ಮುಟ್ಟಿವೆ ಎಂದು ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಕಾವ್ಯ ಕಟ್ಟುವ ಕುಶಲಗಾರಿಕೆಯ ಬಗೆಗೆ ಅದೆಷ್ಟೇ ಸಂಭ್ರಮದಿಂದ ನವ್ಯರ ಬಗೆಗೆ ಮಾತನಾಡಿದರೂ ಇಡಿಯಾಗಿ ಹೊಸಗನ್ನಡದ ಕಾವ್ಯವೇ ಕನ್ನಡದ ಮನಸ್ಸು ಮುಟ್ಟಿಮಾತನಾಡಿಸಿದ ಸಾಹಿತ್ಯಪ್ರಕಾರವೇ? ಎನ್ನುವುದು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ.  ಕಾವ್ಯಪ್ರೀತಿ ಇರುವವರು ಎಂದು ಗುರುತಿಸಿಕೊಂಡಿರುವ ಇಲ್ಲಿರುವ ನಾವೇ ಅದೆಷ್ಟು ಕವನಗಳನ್ನು ಕವನಸಂಕಲನಗಳನ್ನು ಇಷ್ಟಪಟ್ಟು ಓದಿದ್ದೇವೆ? ಎಂದು ಒಮ್ಮೆ ಗಮನಿಸಿ ನೋಡಿಕೊಂಡರೆ ಉತ್ತರ ತುಂಬಾ ನಿರಾಶಾದಾಯಕವೆನ್ನಿಸುತ್ತದೆ. ಕವನ ಸಂಕಲನಗಳ ಮಾರಾಟ ಮಾತ್ರ ಕಡಿಮೆಯಲ್ಲ; ಹೊಸಗನ್ನಡದ ಕವನ ಪ್ರಕಾರ ಕನ್ನಡದ ಜನಮನಸ್ಸನ್ನು ಮುಟ್ಟಿಲ್ಲವೆನ್ನುವುದು ವಾಸ್ತವ.

ಕವಿತೆ ಹಕ್ಕಿ, ಕವಿತೆ ಬಟ್ಟೆ, ಕವಿತೆ ನೀರು, ಕವಿತೆ ಸೋಪಾನ, ಕವಿತೆ ಗುರು, ಕವಿತೆ ಎಲ್ಲವೂ - ಇತ್ಯಾದಿ ಮಾತುಗಳನ್ನು ಅನುಪಮಾ ಅವರು ಇಲ್ಲಿ ಹೇಳಿದ್ದಾರೆ. ಯಾಕೆ ಕವಿತೆ ಜನಮನಸ್ಸನ್ನು ಮುಟ್ಟುತ್ತಿಲ್ಲ ಎಂದು ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ.  ಕಸುಬು ಕಾವ್ಯವಾಗಬೇಕು ಎನ್ನುವುದು ತೋಲ್ಗಾಪ್ಪಿಯನಾರ್‌ನ ಕಾವ್ಯ ಮೀಮಾಂಸೆಯ ನಿಲುವು. ಕಾವ್ಯವೆಂಬುದೊಂದು ಕಸುಬುದಾರಿಕೆ ಎನ್ನುವುದು ತೀರಾ ಈಚಿನ ನವ್ಯ ಕಾವ್ಯದ ದಾರಿ.  ಈ ಎರಡೂ ತುದಿಗಳಿಗೆ ಕಾವ್ಯವೆನ್ನುವುದು ಲಾಳಿ ಹೊಡೆಯುತ್ತಿದೆ. ’ಕಾವ್ಯವೆಂಬ’ ಹೆಸರಿನ ತೊಟ್ಟಿಲಲ್ಲಿ ಕಾಲ ಕಾಲಕ್ಕೆ ದರ್ಶನ, ಮೀಮಾಂಸೆ ಮತ್ತು ನಾಟಕ-ಕಾವ್ಯಗಳೆಲ್ಲ ಮಲಗಿ ಎದ್ದು ಹೋಗಿವೆ. ಹಾಗಾಗಿ ಕಾವ್ಯದ ಯಜಮಾನಿಕೆ ಈಗ ನಾವು ಯಾವುದನ್ನು ಕಾವ್ಯವೆಂದು ಗುರುತಿಸುತ್ತಿದ್ದೇವೆಯೋ ಆ ಪೋತಪ್ಪನಾಯಕನದ್ದೇ ಆಗಿರಬೇಕಿಲ್ಲ. ಒಂದು ಸಮೂಹದ ಬದುಕನ್ನು ಓದಲು  ಕಾವ್ಯವಷ್ಟೇ ಅಲ್ಲ ಆ ಸಮೂಹದ ಕಸುಬು ಮುಂತಾದುವು ಕೂಡ ಮಾಧ್ಯಮವಾಗಬಲ್ಲವು ಎಂಬುದು ಇದರ ಇಂಗಿತ. ಲೋಕವನ್ನು ವ್ಯಾಖ್ಯಾನಿಸಿ ಕೊಡುವ ಹಕ್ಕು ಕಾವ್ಯಕ್ಕೆ ಮಾತ್ರವೇ ಅಲ್ಲ, ಅನೇಕ ಕಸುಬುಗಳು ಈ ಕೆಲಸವನ್ನು ಅದಕ್ಕಿಂತ ಚೆನ್ನಾಗಿ ಮಾಡಬಲ್ಲವು. ಹಾಗಾಗಿ ಜನಮನಸ್ಸಿನ ಬಳಿಗೆ ಹೋಗಲಾರದ ಅಸಾಮರ್ಥ್ಯ ಇಂದಿನ ಕವಿತೆಯಲ್ಲಿಯೇ ಇರಬೇಕು.

ಬಸೂ ಅವರ ಈ ದ್ವಿಪದಿಗಳನ್ನು ಓದುವಾಗ ಅದೆಲ್ಲೆಲ್ಲಿಂದಲೋ ಸಂಬಂಧ ಕಟ್ಟಿಕೊಂಡು ಬಂದ ಕೆಲವು ಸಂಗತಿಗಳನ್ನು ನಾನು ಇಲ್ಲಿ ಹೇಳಲೇಬೇಕು.  ಹೇಗೂ ಈ ಮಾತುಗಳನ್ನು ನೀವು ಈಗಲೇ ಮರೆಯಬೇಕಾಗಿರುವುದರಿಂದ ಇವು ಏನಾದರೇನು? ನನಗೆ ಅವುಗಳ ಗೊಡವೆ ಇಲ್ಲ.

ಮೊದಲಿಗೆ, ಈ ದ್ವಿಪದಿಗಳು ಬಸೂ ಇನ್ನೂ ಬರೆಯುತ್ತಲೇ ಇರುವ ಗಜಲ್‌ಗಳಿಂದ ಕಳಚಿಕೊಂಡು ಬಂದ ಷೇರ್‌ಗಳಂತೆ ಕಾಣಿಸುತ್ತವೆ. ಅದಷ್ಟೇ ಅಲ್ಲ. ಇದಕ್ಕೆ ಇನ್ನೊಂದು ಆಯಾಮವೂ ಇದೆ.  ಗಜಲ್ ಎಂದರೆ ನಲ್ಲೆಯೊಡನೆ ಮಾತುಕತೆ ಎಂಬರ್ಥವೂ ಇದೆ. ಅದು ಕೇವಲ ಮಾತುಕತೆಯಲ್ಲ; ಇಡಿಯಾಗಿ ತನ್ನನ್ನು ಪ್ರೀತಿಸುವ ಜೀವಕ್ಕೆ ಒಪ್ಪಿಸಿಕೊಳ್ಳುವುದು. ಗಮನಿಸಬೇಕು: ಇದು ದೈವಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವ ತನ್ನನ್ನೇ ಇಲ್ಲವಾಗಿಸಿಕೊಳ್ಳುವ ಭಕ್ತಿಯಲ್ಲ, ಭಕ್ತಿಗೆ  ಯಜಮಾನ ಗುಣವಿದೆ. ಭಕ್ತ ಯಾವ ರೀತಿಯ ಸಂಬಂಧ ಸ್ಥಾಪಿಸಿಕೊಳ್ಳಲು ಬಯಸಿದರೂ ಸರಿಯೇ, ಅಲ್ಲಿ ದೈವದ್ದೇ ಯಜಮಾನಿಕೆ.   ಅದಕ್ಕಿಂತ ದೊಡ್ಡದಾದ ಪ್ರೇಮ ಮತ್ತು ವಿಷಾದ  ಗಜಲ್‌ನ ಜೀವದ್ರವ್ಯ. ಈ ಒಪ್ಪಿಸಿಕೊಳ್ಳುವ ಪ್ರಕ್ರಿಯೆ ಅನೇಕ ನಿರಸನಗಳನ್ನು ಒಮ್ಮೆಲೇ ಸಾಧಿಸಿಬಿಡುತ್ತದೆ. ಗಂಡು, ದೈವ, ಇತ್ಯಾದಿ ಕೇಂದ್ರಗಳೆಲ್ಲ ಕಳಚಿಬೀಳುತ್ತವೆ. ಅದಕ್ಕೇ ಗಜಲ್ ಎದುರಾದರೆ ಧಾರ್ಮಿಕತೆ, ಪುರುಷಾಧಿಕಾರ, ಇತ್ಯಾದಿ ಅಧಿಕಾರ ಕೇಂದ್ರಗಳು ಆತಂಕ ಪಡುತ್ತವೆ. ಅಂತಹ ನಿರಸನದ ಕೆಲವು ದ್ವಿಪದಿಗಳನ್ನು ನನ್ನ ಪಾಡಿಗೆ ನಾನು ಓದಿಕೊಳ್ಳುತ್ತೇನೆ.

ನನ್ನಂತೆ ನಿನಗೂ ಲೋಕವೆಲ್ಲ ಸುಂದರವಾಗಿ ಕಂಡರೆ
ಹೆಚ್ಚೇನಿಲ್ಲ ನನಗಿರುವ ಕುರುಡುತನ ನಿನಗೂ ಇದೆ

ಏನು ಮಾಡಲಿ ನನ್ನ ಅಂಗಳವೇ ಅಷ್ಟು ಕಿರಿದು
ನೀ ಬರುವುದಾದರೆ ನನ್ನ ಹೆಜ್ಜೆಗಳ ಮೇಲೆಯೇ ಕಾಲೂರಿಕೊಂಡು ಬರಬೇಕು

ನೀ ನಡೆದು ಬಂದ ಈ ಧೂಳು ದಾರಿಯಲ್ಲಿ ಹೆಜ್ಜೆ ಗುರುತುಗಳಿರಲಿಲ್ಲ
ನನ್ನೆಡೆಗೆ ಹೆಜ್ಜೆ ಮೂಡದ ಹಾಗೆ ನಡೆದು ಬರಲು ನಿನಗಷ್ಟೇ ಸಾಧ್ಯ

ಬರಿ ಬರಿ ಎನುವ ನಿನ ಸೊಲ್ಲು ಕೇಳಿಸಿಕೊಂಡಾಗಿದೆ ಜೀವವೇ
ಒಮ್ಮೆ ಎದೆಗೊರಗು; ಮಣ್ಣಿಗೆ ಬೀಜ ಬೀಳದೆ ಹೋದರೆ ಮೊಳಕೆ ಏಳದು

ಎಲ್ಲವೂ ನಿರಸನಗೊಂಡಿದ್ದರೆ ಮತ್ತೇ ಹೇಳಿಕೊಳ್ಳುವುದಕ್ಕೂ ಏನೂ ಉಳಿಯುತ್ತಿರಲಿಲ್ಲ.  ಆದರೆ ಹಾಗಾಗಲಿಲ್ಲ, ಅವೆಲ್ಲ ಕವನಗಳಾಗಿವೆ ಎಂದರೆ, ಅಲ್ಲಿನ ಅರಕೆಯನ್ನೆ ಮತ್ತೆ ಅವು ಇಲ್ಲಿ ಮುಂದುವರಿಸಿವೆ ಎಂದೇ ಅರ್ಥ.

ಈ ಸಾಲುಗಳನು ಯಾರಾದರೂ ಬರೆಯಬಹುದೆಂಬ ಮಾತಿಗೆ ಎದುರಾಡಲಾರೆ
ನನ್ನದೆಂಬ ಬದುಕೊಂದಿದ್ದರೆ ನನ್ನಲೂ ಈ ಸಾಲುಗಳು ಹುಟ್ಟುತ್ತಿರಲಿಲ್ಲ


ಈ ಸಾಲುಗಳನ್ನು ಓದಿದ ಮೇಲೆ ಈ ಸಂಕಲನ ಬರದೆ ಇರುವಂತಿದ್ದರೆ ಎಷ್ಟು ಚೆನ್ನಿತ್ತು ಎನ್ನಿಸಿತು.


ತುಂಬಿದ ಕೊಡನ . . . . ಎಂಬಂತೆ ಕಾಮಲತೆಯೊಡನೆ ಬದುಕಿದ ಅಲ್ಲಮನೆದುರಿಗೆ ಒಮ್ಮೆಲೇ ಧುತ್ತೆಂದು ತೆರೆದುಕೊಂಡ ಆ ಖಾಲಿಯನ್ನು ಅವನು ಅದು ಹೇಗೆ ಎದುರಿಸಿದನೋ.. .   ಊರ ಹೊರಗಿನ ತೋಟದಲ್ಲಿ ಏಕಾಕಿಯಾಗಿ ಕೂತು ಒಂದೆ ಸಮನೆ ಕಾಲ ಹೆಬ್ಬೆರಳಿನಿಂದ ನೆಲ ಕೆರೆಯುವಾಗ (ಅದು ಅವನ ಮನಸ್ಸಿನ ತೀವ್ರ ಆತಂಕಿತ ಸ್ಥಿತಿಯನ್ನೂ ಸೂಚಿಸುತ್ತದೆ) ಅದೇನೋ ನೆಲದೊಳಗಿನ ಚೂಪಾದ ವಸ್ತುವೊಂದು ಅವನ ಹೆಬ್ಬೆರಳನ್ನು ಗೀರಿಬಿಡುತ್ತದೆ. ಸಣ್ಣ ರೊಚ್ಚಿನಿಂದ ಅದನ್ನು ಬಗೆ ಮಾಡಿ ನೋಡಿದಾಗ ಗುಮ್ಮಟಾಕಾರದ ತುದಿಯೊಂದು ಗೋಚರಿಸುತ್ತದೆ. ಕಾಮಲತೆಯನ್ನು ಬಿಟ್ಟು ಮತ್ತೇನನ್ನೂ ಕಾಣಲಾರದ ಕಣ್ಣಿಗೆ ಅದು ಅವಳ ಕುಚದ  ಭಾಗವೇನೋ ಎನ್ನಿಸಿ, ಅವಸರ ಅವಸರವಾಗಿ ಅದನ್ನು ಬಗೆ ಮಾಡಿ ನೋಡುತ್ತಾನಂತೆ! ಇದು ಯಾರೋ ಅಲ್ಲಮನನ್ನು ಬಾಳಿದವನ ಅಲ್ಲಮನ ಓದು!  ಬಸೂ ನಮ್ಮ ಮೈಮನಸ್ಸುಗಳ ಮೇಲೆ ಯಾವ್ಯಾವುದನ್ನೋ ಹರಿದಾಡಿಸಿಬಿಡುತ್ತಾರೆ. ಅದೇನೇನು ಎಂಬುದೆಲ್ಲ ನಮ್ಮ ಮನೋಕೋಶಕ್ಕೆ ಬಿಟ್ಟ ಸಂಗತಿ.


ದ್ವಿಪದಿಗಳನ್ನು ಓದಲು ಬೇಕಾದ ಮೀಮಾಂಸಾ ಸಿದ್ಧತೆಯೊಂದನ್ನು ಕುರಿತು ಮೊದಲು ಮಾತನಾಡಬೇಕಾಗಿದೆ. ಯಾಕೆಂದರೆ ವಚನಗಳನ್ನು, ’ಭಾರತೀಯ’ ಎಂದು ಕರೆದುಕೊಂಡ ಸಂಸ್ಕೃತ ಮೀಮಾಂಸೆಯ ಎದುರಿಗೆ ಬಂದಾಗ ಅವುಗಳನ್ನು ತನ್ನಲ್ಲಿನ ಯಾವ ಫ್ರೇಮುಗಳಿಗೂ ಅವು ಒಗ್ಗದೇ ಹೋದಾಗ ಅವು ಕಾವ್ಯವಲ್ಲ, ಸಾಹಿತ್ಯವಲ್ಲ ಸ್ವಭಾವೋಕ್ತಿ ಎಂದು ಅಲಾಯಿದ ತೆಗೆದು ಇಟ್ಟುಬಿಟ್ಟಿದ್ದನ್ನು ನಾವು ನೋಡಿದ್ದೇವೆ. ನಾವು ಈವರೆಗೆ ನಡೆದ ಕಾವ್ಯದ ಜಾಡು ಯಾವ ಥರದ್ದು? ಕನಿಷ್ಠ ಆಧುನಿಕ ಕಾವ್ಯದ ಮಟ್ಟಿಗಾದರೂ ಯೋಚಿಸಿದರೆ, ಕವಿ-ಕಾವ್ಯ-ಓದುಗ ಈ ಮೂರರ ಸಂಬಂಧದಲ್ಲಿ ಉಂಟಾಗುವ ಕಾವ್ಯವೆಂಬ ಪ್ರಕ್ರಿಯೆಯಲ್ಲಿ ಓದುಗನಿಗೆಂದು ಉಳಿಸಿದ್ದು, ತುಂಬಾ ಕಡಿಮೆ. ಮಾತೆತ್ತಿದರೆ ಕವಿ ಹೇಳುತೀನಿ ಕೇಳಾ ಅಂತಲೋ, ನಿನಗೆ ಅರ್ಥವಾಗುತ್ತೋ ಇಲ್ಲವೋ ಅಂತಾ ಅನುಮಾನಿಸುತ್ತಲೋ  ಕವನದ ಜೊತೆಗೆ ಕವಿಯೂ ಸಪೋರ್ಟು ಕೊಟ್ಟುಕೊಂಡು ನಿಂತಿದ್ದಾರೆ ಅಂತಾ ಅನ್ನಿಸುತ್ತೆ. . ಯಂಗಾರ ಆಗಲಿ, ನಾನೂ ಇಲ್ಲೇ ಇರ‍್ತೀನಿ ಅಂತಾ. ಒಂದು ಉದಾಹರಣೆ ಕೊಡೋದಾದ್ರೆ. ಜಡೆ ಅಂತಾ ಜಿ ಎಸ್ ಎಸ್ ಅವರ ಒಂದು ಕವನ ಇದೆ. ಒಳ್ಳೆಯ ಕವನ. ಜಡೆಗಳ ಹಿಂದೆ ಹೊರಟ ಕವಿ ಕಂಡ ನಾನಾ ಜಡೆಗಳ ಒಂದು ವಿಸ್ತಾರವಾದ ವಿವರಣೆ ಇದೆ. ದ್ರೌಪದಿಯ ಸಿರಿಮುಡಿಯಿಂದ ಹಿಡಿದು ಈ ಹೊತ್ತಿನವರೆಗೆ  ಅವುಗಳ ಹಿಂದೆ ಹೋಗಿ, ಕಂಡ ಜಡೆಗಳನ್ನೆಲ್ಲ ಮುಟ್ಟಿ ಎಳೆದು ಆಮೇಲೆ ಆಕಡೆ ಮುಖ ಕಾಣುಸ್ತಿಲ್ಲ ಅಂತಾ ನಮ್ಮ ಮುಖವನ್ನು ಆಕಡೆ ತಿರುಗಿಸಿ ಆಂ, ಮುಗೀತು ಇನ್ನೇನು ಇಲ್ಲ ಅಂತಾ ಹೇಳಿ ಸಮಾಧಾನಿಸಿ ಆಮೇಲೇ ಕವಿ ನಿರ್ಗಮಿಸ್ತಾರೆ. ಈ ಜಡೆಗಳ ಹಿಂದೆ ಇಷ್ಟು ದೂರ ಇವರು ಯಾಕೆ ಬರಬೇಕಿತ್ತು, ನಾವೇ ಹೋಗ್ತಿರಲಿಲ್ವೆ ಅಂತಾ ಮಧ್ಯದಲ್ಲಿಯೇ ಅನ್ನಿಸೋಕೆ ಶುರುವಾಗುತ್ತೆ!

ಇಲ್ಲಿನ ದ್ವಿಪದಿಗಳಲ್ಲಿ ಕತ್ತಲು-ಬೆಳಕುಗಳ ಜುಗಲ್‌ಬಂದಿ ನಡೆದೇ ಇದೆ.  ಸುತ್ತ ಅಗಾಧವಾದ ಕತ್ತಲಿದೆ ಎಂದು ಹೌಹಾರಿಲ್ಲ. ಕಾಲಿಟ್ಟಲ್ಲೆಲ್ಲ ಕಲ್ಲುಮುಳ್ಳುಗಳಿವೆಯೆಂದು ನಿಂತಲ್ಲೇ ನಿಂತಿಲ್ಲ. ಕೈಯಲ್ಲೊಂದು ದೀವಿಗೆ ಕಾಲಿಗೊಂದು ಜೊತೆ ಚಪ್ಪಲಿ ಮೆಟ್ಟಿದರೆ ತೀರಿತು ಎಂಬ  ಸಮಾಧಾನವಿದೆ. 

ದ್ವಿಪದಿ ಪ್ರಕಾರವೇ ಕನ್ನಡದ ಜಾಯಮಾನಕ್ಕೆ ಹೊಸದು. ಇದು ಕಾವ್ಯದ ಒಂದು ಮಟ್ಟು. ವಿಶೇಷವಾಗಿ ಗಜಲ್‌ನ ಷೇರ್‌ಗಳ ಲಯ ಮತ್ತು ಕಟ್ಟುಗಳ ಮಾದರಿಗಳು ನಮಗೆ ತಕ್ಷಣ ಎದುರಿಗೆ ಬರುತ್ತವೆ. ಕನ್ನಡದಲ್ಲಿ ಇಂತಹ ದ್ವಿಪದಿಗಳನ್ನು ವಿಶೇಷವಾಗಿ ಉತ್ತರ ಕರ್ನಾಟಕದ ಗಜಲ್ ಲಯ ಮತ್ತು ಸತ್ವವನ್ನು ಹಿಡಿಯಬಲ್ಲವರು ಪ್ರಯೋಗಿಸಿದ್ದಾರೆ. ಇಲ್ಲಿ ಶಾಂತರಸರನ್ನು ನೆನೆಯಲೇಬೇಕು. (ಜಿಗಿದು ಹೋದವು ತಾರೆ ಎಂದೋ ನೀಲಾಂಬರಕೆ
ಯಾರು ಕರೆತರುವರು ಅವುಗಳನಿಲ್ಲಿ ರಂಗೋಲಿ ಹಾಕಲಿಕೆ ). ನೆನಪಿಗೆ ಬರುವ ಇನ್ನೂ ಕೆಲವು ಹೆಸರುಗಳೆಂದರೆ, ಎಚ್ ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಸಿದ್ಧರಾಮ ಹಿರೇಮಠ, ಅಬ್ದುಲ್ ಮಜೀದ್ ಖಾನ್ ರಾಘವೇಂದ್ರ ಇಟಗಿ, ಡಾ. ದಸ್ತಗೀರ್ ಸಾಬ್ ದಿನ್ನಿ ಡಾ. ಕಾಶಿನಾಥ ಅಂಬಲಗೆ, ಪ್ರಭಾವತಿ ದೇಸಾಯಿ, ಚಿದಾನಂದ ಸಾಲಿ ಮುಂತಾದವರು.   ಈ ದ್ವಿಪದಿಗಳಲ್ಲಿ ಇರುವ  ಇಕ್ಕಟ್ಟು ಇಲ್ಲಿನ ವಿಶೇಷ.  ಅದೇನೆಂದರೆ ಮೊದಲನೆಯ ಪಾದದಲ್ಲಿ ಕವಿ ನಮ್ಮನ್ನು ಆಹ್ವಾನಿಸಿ ಎರಡನೆಯ ಪಾದದಲ್ಲಿ ಅವನು ನಿರ್ಗಮಿಸಿಬಿಡುತ್ತಾನೆ.  ಈ ಆಹ್ವಾನ ಮತ್ತು ತಕ್ಷಣದ ವಿಸರ್ಜನೆ ನಮ್ಮನ್ನು ಆತಂಕಿತರನ್ನಾಗಿಸುತ್ತೆ.  ಮತ್ತು ಕವನ ನಮ್ಮಲ್ಲಿ ಮುಂದುವರಿಯುತ್ತದೆಯಾದ್ದರಿಂದ, ಆ ಕವನದ ಮುಂದಿನ ನಿರ್ವಹಣೆಯ ಜವಾಬ್ದಾರಿ ನಮಗೆ ವರ್ಗಾವಣೆಯಾಗುತ್ತದೆ.  ಝೆನ್ ಕೋನ್‌ಗಳ ಹಾಗೆ, ಹಾಯಿಕುಗಳ ಹಾಗೆ.


ನೀನು ಹಚ್ಚಿದ್ದು ಒಂದೇ ಮೋಂಬತ್ತಿ
ಈ ರಾತ್ರಿಗಳೆಯಲು ಬೇಕಿದ್ದ ಬೆಳಕೂ ಅಷ್ಟೆ

ಆ ದೊಡ್ಡ ಮನೆಯ ಹಜಾರದಲಿ ಪುಟ್ಟ ಅಕ್ವೇರಿಯಂ
ತನ್ನ ಬದುಕಿನ ರೂಪಕಗಳೇ ಕಣ್ಣೆದುರಿಗಿದ್ದಾಗ ಮನುಷ್ಯರಿಗೆ ಸಮಾಧಾ

ಗೆಳೆಯಾ ಹಣತೆ ಹಚ್ಚಿಡು
ಕತ್ತಲಾಗಿದೆಯೆಂದು ಗೊತ್ತಾಗಲಿ

ಬೆಳೆವ ದಾರಿಯಲಿ ನನ್ನ ಎಲ್ಲ ಹಿತನುಡಿಗೆ ಮಗಳು ಕಿವಿಗೊಟ್ಟಳು
ಮಾತಿಗಿಂತ ಅವಳ ಎದುರಿಗಿತ್ತು ತುಳಿವ ಕಾಲಿಗೂ ಅನ್ನ ನೀಡುವ ನೆಲ

ಬೆಳಕಲ್ಲ ಕತ್ತಲು
ಹಣತೆ ಹಚ್ಚುವುದ ಕಲಿಸಿತು...

ಕೊನೆಯ ಮಾತು:  ’ ಮಾ ನಿಷಾದ  . . .ಕವಿತೆಗೊಂದು ನಿರಂತರತೆಯ ಶಾಪ : ಎಂದಿಗೂ ನೀನು ವಿಷಾದವನ್ನೇ ನುಡಿಯುತ್ತಿರು. . .

ನಾವು ಸಂಭ್ರಮಪಟ್ಟೆವು ಬೆಳಗಾಯಿತೆಂದು
ಇಂದೂ ಸಾವು ಒಂದು ಹೆಜ್ಜೆ ಮುಂದೆ ಬಂದಿತು

ಸಂಜೆ ಮನೆಗೆ ಬಂದವರು ಕತ್ತಲಲಿರುವುದ ನೋಡಿ ಕುಹಕವಾಡಿ ಹೋದರು
ನೀನಿಲ್ಲದ ಖಾಲಿತನ ಹಣತೆ ಬೆಳಕಿನಲಿ ಎದ್ದು ಕಾಣುವುದು ನನಗೆ ಬೇಕಿರಲಿಲ

ನಡೆವಾಗ ಮಗಳು ನಾಲ್ಕು ಹೆಜ್ಜೆ ಹಿಂದೆಯೇ ಉಳಿದಳು
ಹಿಂತಿರುಗಬೇಕೆಂದರೆ ಹಾದಿಬದಿ ಕಾಣುತಿದೆ ಏಕಮುಖ ಸಂಚಾರದ ಫಲಕ

ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ
ಕವಿಯೇ, ನೂರು ಸಾಲು ಬರೆದರೂ ಕವಿತೆ ಹುಟ್ಟದು

ಯಾರೂ ಯಾವ ವ್ಯಾಖ್ಯಾನವನ್ನೂ ಕೊಡಲಾಗದ ಈ ದ್ವಿಪದಿಯೊಂದಿಗೆ ನನ್ನ ಮಾತನ್ನು ಮುಗಿಸುತ್ತೇನೆ:

ಎಷ್ಟೆಲ್ಲ ಅವಸರಿಸಿದರೂ ಮನೆಗೆ ಮರಳುವಷ್ಟರಲ್ಲಿ ಕತ್ತಲಾಯಿತು
ದೀಪವಿಲ್ಲದ ಕೋಣೆ ಗೋಡೆಗಾನಿ ಮಗಳು ಒರಗಿದ್ದಳು ಮೌನವೇ ಮಲಗಿದ ಹಾಗೆ.

---

ನಾವು ಇಬ್ಬರೇ
ಮಾತಾಗುವಾಗ ಮೂವ್ವರು ಮೌನವಾದಾಗ ಒಬ್ಬರು

ಬೆಳಗುವ ಚಂದಿರ, ಗಂಧ ಸೂಸುವ ರಾತ್ರಿರಾಣಿ, ನಿದ್ದೆಯಲ್ಲೂ ನಗುವ ಕೂಸು
ಈ ರಾತ್ರಿ ಸಹನೀಯವೆನಿಸಿತು ದುಃಖದ ಗೋಣಿಚೀಲದಲ್ಲಿ ಕಾಲು ಚಾಚಿದ್ದರೂ

ಹಣತೆ ಹಚ್ಚಿದ ಜನ ಕತ್ತಲನು ಸಾಯಿಸಿದ ಸಂಭ್ರಮದಲಿದ್ದರು
ಆ ಬೆಳಕ ನಾನೇ ಹುಟ್ಟಿಸಿದೆನೆಂಬ ಕತ್ತಲೆಯ ಬಿಗುಮಾನ ಯಾರಿಗೆ ಕಾಣಬೇಕು?

ಈ ದಿನದ ಸತ್ಯ ಬೇರೇನಲ್ಲ ಹಗಲೆಲ್ಲ ಬೆಳಕಾದವನು
ಕೊನೆಗೆ ಬಿಟ್ಟುಹೋದನು ಕತ್ತಲನ್ನೇ..

ಬೆಳಕಿನಲ್ಲಿ ಎಷ್ಟು ನೋಡಿದರೂ ಕಾಣದು ಕತ್ತಲೆಯ ಗಾಯ
ಬೆಳಕು ಕಂಡ ಸಮಾಧಾನ ನೆತ್ತಿಗೇರಿ ಕತ್ತಲೆಯ ಕಣ್ಣು ಅರಳುವುದು

ರಸ್ತೆಯಲ್ಲಿ ತಗ್ಗಿತ್ತೋ ನಾನೇ ಬಿದ್ದೆನೋ ಯಾರು ನೂಕಿದರೋ ಗೊತ್ತಿಲ್ಲ
ಯಾರ ವಿಚಾರಿಸಲಿ ಎಲ್ಲ ನನ್ನಂಥವರೇ ನಿನಗೊಂದು ನೆಪಬೇಕಿತ್ತು ಹೊರೆ ಹೊರಿಸಿಕೊಳಲು

ಈ ಹೊತ್ತು ಹೃದಯಕ್ಕೇನೊ ಆಗಿದೆಯೆನಿಸಿ ಮುಟ್ಟಿಕೊಂಡೆ
ನಿನ್ನ ಹೃದಯ ತಾಕಿ ಮುಟ್ಟಿಕೊಂಡ ಬೆರಳು ಒದ್ದೆಯಾದವು

ಎಷ್ಟು ಸಲ ತೊಳೆದರೂ ಕನ್ನಡಿಯನ್ನ
ಮುಖದ ಮೇಲಿನ ಕಲೆ ಹಾಗೇ ಉಳಿಯಿತು

ನೀ ಕೇಳಿದೆ ಕಲ್ಲಿನ ಕಥೆಯೇನು?
ಹೇಗೆ ಹೇಳುವುದು ಕಲ್ಲಾದ ಮೇಲೆ ಕಥೆ..

ಹಚ್ಚಿಟ್ಟ ಹಣತೆಯೆದುರು ಇನ್ನಷ್ಟು ನಿಚ್ಚಳ ಕತ್ತಲಾದ ಅರಿವು
ಮಗಳ ಸುಖದ ಸ್ಪರ್ಶಕ್ಕೆ ದುಃಖದ ಹಕ್ಕಳೆ ಕಿತ್ತುಕೊಂಡೇ ಬಂದಿತು

ನಿನ್ನಿಂದ ಈ ಅಕ್ಷರಗಳನು ಬೇರ್ಪಡಿಸಿ ನೋಡಿದರೆ....
ಏನಿಲ್ಲ ನೀರಿನಿಂದ ಬೇರ್ಪಡಿಸಿದ ಮೀನು ಸಿಕ್ಕುವುದು

ನಿನ್ನ ಮೈಯಲ್ಲಿ ಬೆಂಕಿ ಇಲ್ಲದೆಯೂ ಬಿಸುಪಿದೆ ತುಟಿ ಉಸುರಿತು
ನಿನ್ನ ಬೆರಳಾಡುವ ತನಕವಷ್ಟೆ ಈ ಬಿಸುಪು ಎನುತ ನಕ್ಕಳಾಕೆ

ಸುಮ್ಮನೆ ದೀಪ ಹಚ್ಚಿಟ್ಟೆ
ಕಾಣುವುದು ನಿಚ್ಚಳವಾದಂತೆ ಹುಡುಕುವ ಉತ್ಸಾಹವೇ ತಣ್ಣಗಾಯಿತು

ನೀನು ಬಡವಿ ಎಂಬುದು ನನಗೂ ಗೊತ್ತು
ಹಸಿವಿನರಿವು ನಿನಗಿದೆಯೆಂದೇ ಬೊಗಸೆ ನಿನ್ನಡೆಗೆ ಚಾಚಿತು

ಉದುರಿದ ಹನಿಗಳಿಂದಲೇ ಮುಗಿದು ಹೋಗದು ದುಃಖದ ಮಾಪನ
ಯಾವಾಗಲೂ ಅಖಂಡ ಕಡಲಿನ ಬೊಗಸೆ ನೀರಷ್ಟೆ ದಡಕ್ಕಪ್ಪಳಿಸುವುದು

ನೀವು ಹೇಳುತ್ತಲೇ ಇದ್ದೀರಿ ಹೂ ಬಿಡಲು ಬೇಕು ಮಳೆ, ಗುಡುಗಲ್ಲ
ಹೇಳಿ ಗುಡುಗು ಮಿಂಚು ಸಿಡಿಲಿಲ್ಲದೆ ಮಳೆಯಾಗುವುದು ಎಲ್ಲಿ?

ಎಷ್ಟೆಲ್ಲ ಅವಸರಿಸಿದರೂ ಮನೆಗೆ ಮರಳುವಷ್ಟರಲ್ಲಿ ಕತ್ತಲಾಯಿತು
ದೀಪವಿಲ್ಲದ ಕೋಣೆಯ ಗೋಡೆಗಾನಿ ಮಗಳು ಒರಗಿದ್ದಳು ಮೌನವೇ ಮಲಗಿದ ಹಾಗೆ

ಪೂರ್ತಿ ತೆರೆದ ನನ್ನ ಅಂಗಡಿ ಖಾಲಿಯೇ ಉಳಿಯಿತು
ತಲುಬುದಾರರೆಲ್ಲ ಅರೆತೆರೆದ ಅಂಗಡಿಯನ್ನೇ ಹುಡುಕಿಹೋದರು

ಹಗಲೆಂದರೆ ಬೆಳಕು ಇರುಳೆಂದರೆ ಕತ್ತಲು
ಕುರುಡರ ಪಾಠಕ್ಕೆ ಒಂದೇ ಸಾಲು ....

ನಿನ್ನ ಸಮಾಧಿ ಕಡೆಗೆ ಮಗಳ ಕೈಹಿಡಿದು ನಡೆವಾಗ ಏನಿತ್ತು ಸಾಕ್ಷಿ ನನ್ನ ಬಳಿ
ಒಡೆದುಹೋದ ಕ್ಯಾಸೆಟ್‌ನಲ್ಲಿದ್ದ ನಿನ್ನ ಹಾಡು ಅತ್ತು ಸುಮ್ಮನಾಗದಂಥ ಕಣ್ಣು

ಸಂತೋಷ ಕೊನೆಯ ಮೆಟ್ಟಿಲ ಮೇಲಿದೆಯೆಂದು ಧಾವಿಸಿಬಂದೆ
ಹುಳ್ಳ ನಗೆ ಬೀರಿ ಹತ್ತಿಬಂದ ಮೆಟ್ಟಿಲಲಿದ್ದ ಸಂತೋಷ ನನ್ನ ಕಡೆ ನೋಡಿತು

ವಿವಾದವೇ ಅಲ್ಲದ ವಿವಾದ


ಸನತ್‌ಕುಮಾರ ಬೆಳಗಲಿ


ಅನಂತಮೂರ್ತಿ ಅವರು ಆಡುವ ಪ್ರತಿಯೊಂದು ಮಾತೂ ಯಾಕೆ ವಿವಾದದ ಅಲೆಯನ್ನೆಬ್ಬಿಸುತ್ತದೆ. ಹಾಗೆ ನೋಡಿದರೆ ಅವರ ‘ಸಂಸ್ಕಾರ’ವನ್ನು ಹೊರತುಪಡಿಸಿ ಯಾವ ಕೃತಿಯೂ ವಿವಾದಕ್ಕೆ ಕಾರಣವಾಗಿಲ್ಲ. ಆದರೆ ಅವರ ಭಾಷಣಗಳು, ಅನಿಸಿಕೆಗಳು ಮಾತ್ರ ಬಲಪಂಥೀಯ ಫ್ಯಾಸಿಸ್ಟರ ಆಕ್ರೋಶಕ್ಕೆ ಗುರಿಯಾಗುತ್ತಲೇ ಇವೆ. ಎಪ್ಪತ್ತರ ದಶಕದಲ್ಲಿ ಅವರು ಬರೆದ ‘ಸಂಸ್ಕಾರ’ದ ಬಗ್ಗೆ ಆಗ ನಮ್ಮ ಬಿಜಾಪುರ ಜಿಲ್ಲೆಯ ಮಾಧ್ವ ಬ್ರಾಹ್ಮಣರಲ್ಲಿ ಕೆಲವರು ಅವರ ವಿರುದ್ಧ ಕೆಂಡಕಾರುತ್ತಿದ್ದರು. ಅಂತಲೇ ಕುತೂಹಲದಿಂದ ಅದನ್ನು ಧಾರವಾಡದಿಂದ ತರಿಸಿ ಓದಿದ ನಾನು ಅವರ ಬರವಣಿಗೆ ಬಗ್ಗೆ ತುಂಬ ಪ್ರಭಾವಿತನಾಗಿದ್ದೆ. ಹಾಗೆ ನೋಡಿದರೆ ಅನಂತಮೂರ್ತಿ ಆಡುವ ಮಾತಿನಲ್ಲಿ ವಿವಾದ ಎಂಬುದಿರುವುದಿಲ್ಲ. ಅವರು ಎಸೆಯುವ ಕಲ್ಲು ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ. ಆದರೆ ಬೊಗಳುವ ಹುಚ್ಚು ನಾಯಿಗಳು ಇದರಿಂದ ಕೆರಳುತ್ತವೆ. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಕನ್ನಡ ಸಾಹಿತ್ಯವನ್ನು ಭೂಸಾ ಸಾಹಿತ್ಯವೆಂದು ಟೀಕಿಸಿದ್ದರು.

ಜನಪರವಲ್ಲದ ಪ್ರತಿಗಾಮಿ ಸಾಹಿತ್ಯದ ಬಗ್ಗೆ ಅವರು ಈ ಮಾತನ್ನು ಆಡಿದ್ದರು. ಆದರೆ ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದವು. ಆಗ ಅನಂತ ಮೂರ್ತಿ ಬಸವಲಿಂಗಪ್ಪನವರ ಬೆಂಬಲಕ್ಕೆ ನಿಂತರು. ಆಗಲೂ ಇಂಥ ಟೀಕೆಗಳನ್ನು ಎದುರಿಸಿದ್ದರು. ಲೋಹಿಯಾವಾದಿಯಾದ ಅನಂತಮೂರ್ತಿ ಮೊದಲು ಕಾಂಗ್ರೆಸ್ಸಿನ ಕಡುವಿರೋಧಿ.  ಕಾಂಗ್ರೆಸ್ಸೇತರ ಪಕ್ಷಗಳ ಏಕತೆಯ ಪ್ರತಿಪಾದಕರಾಗಿದ್ದರು. ಆದರೆ ಮಾರ್ಕ್ಸ್‌ವಾದಿ ಹಿನ್ನೆಲೆಯ ನನ್ನಂಥವರಿಗೆ ಈ ನಿಲುವು ಸಮ್ಮತವಾಗದಿದ್ದರೂ ಈಗಿನ ಅವಿವೇಕಿಗಳಂತೆ ಅವರನ್ನು ಹೀಗೆಳೆಯಲಿಲ್ಲ. ಆದರೆ ಅನಂತಮೂರ್ತಿ ನಂತರ ಬದಲಾದರು.
1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಗಾಂಧಿ ಹಂತಕರು ಕೆಡವಿದ ನಂತರ ಅವರು ಸಂಪೂರ್ಣ ಬದಲಾದರು. ಅನೇಕತೆಯ ಭಾರತದಲ್ಲಿ ಬಹುಮುಖಿ ಬದುಕಿಗೆ ಸಂಘ ಪರಿವಾರದಿಂದ ಗಂಡಾಂತರ ಬಂದಿದೆ ಎಂದು ಅರಿವಾದ ನಂತರ ಅವರ ವಿರುದ್ಧ ಸಿಡಿದು ನಿಂತರು.ಭೈರಪ್ಪ ‘ಆವರಣ’ ಎಂಬ ನೀಚಕೃತಿ ಬರೆದಾಗ ಅನಂತಮೂರ್ತಿ ಆತ ಸಾಹಿತಿಯೇ ಅಲ್ಲ, ಚರ್ಚಾಕೋರ ಎಂದರು. ಆಗಲೂ ಈ ಅವಿವೇಕಿಗಳು ಅಸಭ್ಯವಾಗಿ ಬೈದಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಬಾರದು ಎಂದಾಗಲೂ ಅದೇ ಬೊಗಳಿಕೆ.

ಅನಂತ ಮೂರ್ತಿ ಹೇಳಿದ ಮಾತುಗಳಲ್ಲಿ ವಿವಾದವೇ ಇರಲಿಲ್ಲ. ಗುಜರಾತ್‌ನಲ್ಲಿ 2002ರಲ್ಲಿ ಸರಕಾರದ ಉಸ್ತುವಾರಿಯಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಸಿದ ಮೋದಿ ನರಹಂತಕ ನಲ್ಲದೆ ಮತ್ತೇನು ಜನಾನುರಾಗಿ ಎಂದು ಕರೆಯಬೇಕೆ! ಇದ್ದದ್ದನ್ನು ಇದ್ದಂತೆ ಹೇಳಿದರೆ ಇವರ ಎದೆಗೆ ಒದ್ದಂತಾಗುತ್ತದೆ ಏಕೆ? ಈ ಗೋಡ್ಸೆ ಮರಿಗಳನ್ನು ಚುಚ್ಚದಿದ್ದರೆ ಅನಂತಮೂರ್ತಿ ಅವರಿಗೂ ಸಮಾಧಾನವಾಗುವುದಿಲ್ಲ. ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಸೇವಿಸುತ್ತಿದ್ದರು ಎಂದು ಅನಂತಮೂರ್ತಿ ಹೇಳಿದ ಮಾತೊಂದರಿಂದ ಈ ಪರ ಪಿಂಡದಂಡದ ಹುಚ್ಚು  ಕೆರಳಿದೆ. 

“ಭಾರತದ ಅನ್ನ ತಿಂದು ಭಾರತದಿಂದ ಜ್ಞಾನ ಪೀಠ ಪಡೆದುಕೊಂಡು ಇದೀಗ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿರುವ ಅನಂತ ಮೂರ್ತಿಯವರಿಂದ ಜ್ಞಾನಪೀಠ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು” ಎಂದು ಸ್ವಾಮಿಯೊಬ್ಬ ಹೇಳಿದ್ದಾನೆ. ‘ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು’ ಎಂಬ ಅನಂತ ಮೂರ್ತಿ ಅಭಿಪ್ರಾಯದ ಬಗೆಗೂ ಚಡ್ಡಿ ಪರಿವಾರದವರು ಮಾನಸಿಕ ಸ್ಥಿಮಿತ ಕಳೆದು ಕೊಂಡು ಅರಚಾಡುತ್ತಿದ್ದಾರೆ. ಬ್ರಾಹ್ಮಣ ಮಹಾಸಭಾವೂ ಆಕ್ರೋಶ ವ್ಯಕ್ತಪಡಿಸಿದೆ.

ಅವರ ಹೇಳಿಕೆ ಖಂಡಿಸಿ ಪೋಸ್ಟ್‌ಕಾರ್ಡ್ ಚಳವಳಿ ನಡೆಸುವುದಾಗಿ ಅದು ಬೆದರಿಕೆ ಹಾಕಿದೆ. ರಾಷ್ಟ್ರೀಯ ಸ್ವಯಂ ಸೇವಕನಾಗಿ ರೂಪಾಂತರಗೊಂಡಿರುವ ಒಂದು ಕಾಲದ ಸಂಶೋಧಕ ಚಿದಾನಂದ ಮೂರ್ತಿ ಎಂದಿನಂತೆ ಕೆರಳಿ ನಿಂತಿದ್ದಾರೆ. ಉಳಿದವರು ಹಾಳಾಗಿ ಹೋಗಲಿ. ಪೇಜಾವರ ಸ್ವಾಮಿಗಳಂಥವರೂ ಕೂಡ ಅನಂತಮೂರ್ತಿ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಕೆಲ ಅವಿವೇಕಿಗಳಂತೆ ಅಸಭ್ಯ ಭಾಷೆ ಬಳಸಿಲ್ಲ. ಅವರು ಮಠಾಧೀಶರ ಪೈಕಿ ಮೃದು ಹಿಂದುತ್ವವಾದಿ, ಧಾರ್ಮಿಕ ರಂಗದ ವಾಜಪೇಯಿ. ಆದರೆ ಅವರ ಬದ್ಧತೆ ಇರುವುದು ಆರೆಸ್ಸೆಸ್‌ನ ಅದೆ ಫ್ಯಾಸಿಸ್ಟ್ ಸಿದ್ಧಾಂತಕ್ಕೆ. ಅಂತಲೆ ಅವರ ಮಾತು ಸಿಹಿಲೇಪಿತ ಮಾತ್ರೆ ಇದ್ದಂತೆ.ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಸೇವಿಸುತ್ತಿದ್ದರು ಎಂಬುದು ವಿವಾದಾಸ್ಪದ ವಿಷಯವೇ ಅಲ್ಲ. ಅದು ಬ್ರಾಹ್ಮಣರ ಅವಹೇಳನವೂ ಅಲ್ಲ. ಎಪ್ಪತ್ತರ ದಶಕದ ಕೊನೆಯಲ್ಲಿ ನಾನು ಹುಬ್ಬಳ್ಳಿಯಲ್ಲಿದ್ದಾಗ ಈ ಬಗ್ಗೆ ಮಾತಾಡಲು ಧಾರವಾಡದ ಸಾಧನಕೇರಿಯಲ್ಲಿದ್ದ ಕನ್ನಡದ ಖ್ಯಾತ ಸಂಶೋಧಕ ಶಂ.ಭಾ.ಜೋಶಿ ಅವರ ಮನೆಗೆ ಹೋಗಿದ್ದೆ. “ಹೌದು ಇದು ನಿಜ. ಇದಕ್ಕೆ ಖಚಿತ ಆಧಾರಗಳಿವೆ” ಎಂದು ಹಲವಾರು ಗ್ರಂಥಗಳನ್ನು ಓದಿ ತೋರಿಸಿದ್ದರು.


ಈ ಬಗ್ಗೆ ಡಾ.ಡಿ.ಎನ್.ಝಾ ಬರೆದ ಪುಸ್ತಕದಲ್ಲಿ ಹಲವಾರು ಉಲ್ಲೇಖಗಳು ಇವೆ. ಕರ್ನಾಟಕದ ಎಡಪಂಥೀಯ ಪಂಡಿತ ದಿವಂಗತ ಎಸ್.ಆರ್.ಭಟ್ ಅವರು ಬ್ರಾಹ್ಮಣರ ಗೋಮಾಂಸ ಭಕ್ಷಣೆ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರು ಮೂಲದ ಭಟ್ಟರು ಬೆಂಗಳೂರಿನ ಗಾಂಧಿ ನಗರದಲ್ಲಿದ್ದಾಗ ಅವರೊಂದಿಗೆ ಹೋಗಿ ಆಗಾಗ ಚರ್ಚಿಸುತ್ತಿದ್ದೆ. ಸಂಸ್ಕೃತ-ಕನ್ನಡ-ಇಂಗ್ಲಿಷ್, ಪಾಲಿ ಹೀಗೆ ಹಲವಾರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಈ ಬಗ್ಗೆ ನೀಡುತ್ತಿದ್ದ ದಾಖಲೆಗಳನ್ನು ಯಾರಿಂದಲೂ ನಿರಾಕರಿಸಲಾಗುವುದಿಲ್ಲ.


ಅನಂತಮೂರ್ತಿ ಅವರ ವಿರುದ್ಧ ಹರಿಹಾಯುತ್ತಿರುವ ಈ ಮೋದಿ ಬ್ರಿಗೇಡ್ ಎಂಬ ಸಂಘಪರಿವಾರದ ಮಂದಿಗೆ ಗೋವುಗಳನ್ನು ಪೂಜಿಸುವುದು ಮಾತ್ರ ಗೊತ್ತು. ಅವುಗಳನ್ನು  ಸಾಕುವುದಿಲ್ಲ, ಸಗಣಿ ಬಳೆಯುವುದಿಲ್ಲ. ಅವುಗಳಿಗೆ ಮೇವು ಕೊಡುವುದಿಲ್ಲ. ತಾಯಿಯ ಹಾಲನ್ನು ಕುಡಿಯಲು ಕರುವಿಗೆ ಅವಕಾಶ ನೀಡದೆ ಹಾಲು ಹಿಂಡಿ ಪಾತ್ರೆ ತುಂಬಿಸಿಕೊಳ್ಳುತ್ತಾರೆ. ಅನೇಕ ಕಡೆ ವಯಸ್ಸಾದ ಗೋವುಗಳು ಹೊಟ್ಟೆಗಿಲ್ಲದೆ ನರಳಿ ಸತ್ತು ಹೋಗುತ್ತವೆ. ಗೋಮಾಂಸ ರಫ್ತು ಮಾಡುವ ಉದ್ಯಮಿಗಳಲ್ಲಿ ಸಂಘ ಪರಿವಾರಕ್ಕೆ ಗುರುದಕ್ಷಿಣೆ ನೀಡುವ ವ್ಯಕ್ತಿಗಳು ಸೇರಿದ್ದಾರೆ.


ಗೋಮಾಂಸ ಭಕ್ಷಣೆ ಹಿಂದುಗಳಿಗೆ ನಿಷಿದ್ಧ ಎಂಬ ಇಂದಿನ ನಂಬಿಕೆಗೆ ಇವರು ಹೇಳುವ ಹಿಂದು ಧರ್ಮಶಾಸ್ತ್ರಗಳಲ್ಲಿ ಆಧಾರವಿದೆಯೇ? ಪ್ರಾಚೀನ ಭಾರತದಲ್ಲಿ ಬ್ರಾಹ್ಮಣರು ಗೋವಧೆ ಮಾಡುತ್ತಿದ್ದರು. ಗೋಮಾಂಸ ಭಕ್ಷಿಸುತ್ತಿದ್ದರು ಎಂಬುದಕ್ಕೆ ಶ್ರುತಿ,ಸ್ಮೃತಿಗಳೆರಡರಲ್ಲೂ ಸಾಕಷ್ಟು ಉದಾಹರಣೆಗಳಿವೆ. ವೇದಕಾಲೀನ ಆರ್ಯರು ಅಶ್ವಮೇಧ, ರಾಜಸೂಯ ಮಹಾ ಯಾಗಗಳನ್ನು ಕಾಮೇಷ್ಟಿಗಳೆಂಬ ನಾನಾ ರೀತಿಯ ಚಿಕ್ಕಪುಟ್ಟ ಯಜ್ಞಗಳನ್ನು ಮಾಡಿ ಕುದುರೆ, ಆಡು, ಗೋವು ಮೊದಲಾದ ಸಾಕು ಪ್ರಾಣಿಗಳನ್ನು ಆಹುತಿ ನೀಡಿ ಹವಿತ ಶೇಷ ವನ್ನು ತಾವು ಭಕ್ಷಿಸುತ್ತಿದ್ದರು ಎಂಬುದು ವಿವಾದಾತೀತ ಸತ್ಯ.


ಋಗ್ವೇದದ ಒಂದು ಸೂತ್ರದಲ್ಲಿ ಗೋವನ್ನು ವಧಾಸ್ತಂಭಕ್ಕೆ ಕಟ್ಟಿ ವಧಿಸಲು ಸಿದ್ಧತೆ ಮಾಡುವ ವರ್ಣನೆಯಿದೆ. ಆ ಕಾಲದ ಯಜ್ಞಗಳು ಜನಜೀವನದ ಮುಖ್ಯ ಅಂಗವಾಗಿದ್ದುದರಿಂದ ಈ ರೀತಿ ಪ್ರಾಣಿವಧೆ ಮತ್ತು ಮಾಂಸ ಭಕ್ಷಣೆ  ಹೆಚ್ಚಾಗಿ ಯಜ್ಞಗಳ ಮೂಲಕ ನಡೆಯುತ್ತಿದ್ದವು. ವಾಸ್ತವಾಂಶ ಹೀಗಿರುವುದರಿಂದ ಗೋಮಾಂಸ ಭಕ್ಷಣೆ ಬಗ್ಗೆ ಅನಂತ ಮೂರ್ತಿ ಹೇಳಿದ ಮಾತಿನಲ್ಲಿ ವಿವಾದಾಸ್ಪದವಾದುದೇನೂ ಇಲ್ಲ.


ಬಿಜೆಪಿಯ ಹಿರಿಯ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಗೋಮಾಂಸ ತುಂಬ ಇಷ್ಟವಾದುದು ಎಂಬುದು ಸಂಘಪರಿವಾರದ ಉನ್ನತ ನಾಯಕರಿಗೆಲ್ಲ ಗೊತ್ತಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಕೂಡ ಈ ದೇಶದಿಂದ ಲಕ್ಷಾಂತರ ಟನ್ ಗೋಮಾಂಸ ವಿದೇಶಕ್ಕೆ ರಫ್ತು ಆಗುತ್ತಿತ್ತು. ಆಗ ಬಾಯಿಮುಚ್ಚಿಕೊಂಡಿದ್ದ ಈ ನಕಲಿ ದೇಶಭಕ್ತರು ಈಗೇಕೆ ಈ ಪರಿ ಅರಚಾಡುತ್ತಿದ್ದಾರೆ. ಗೋವು ಇವರಿಗೆಂದೂ ಪ್ರೀತಿಯ ಪ್ರಾಣಿಯಲ್ಲ. ಗೋವಿನ ಹೆಸರಿನಲ್ಲಿ ರಾಜಕಾರಣ ಮಾಡಿ ಓಟ್ ಬ್ಯಾಂಕ್ ನಿರ್ಮಿಸಿಕೊಳ್ಳಲು ಮಾತ್ರ ಇವರಿಗೆ ಗೋವು ಬೇಕು.


ಮೋದಿಯನ್ನು ಮುಂದಿಟ್ಟುಕೊಂಡರೂ ಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂದು ಈ ಚಡ್ಡಿಗಳಿಗೆ ಖಾತ್ರಿಯಾಗಿದೆ. ಅಂತಲೇ ಈ ರೀತಿ ಹತಾಶೆಯಿಂದ ಅರಚಾಡುತ್ತಿದ್ದಾರೆ. ಈ ಹುಚ್ಚಿಗೆ ಯಾವ ಔಷಧಿ ನೀಡಬೇಕೆಂಬುದು ಮತದಾರರಿಗೆ ಗೊತ್ತಿದೆ. ಅವರು ಖಂಡಿತವಾಗಿ ನೀಡುತ್ತಾರೆ. ಅನಂತಮೂರ್ತಿ ಅವರನ್ನು ಬೈದಷ್ಟು ಬಿಜೆಪಿಗೆ ಬೀಳುವ ಮತಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ ಎಂಬುದು ಈ ಮೂರ್ಖರಿಗೆ ಗೊತ್ತಿಲ್ಲ.

Saturday, September 28, 2013

ನುಡಿದ ವೀಣೆ ಮತ್ತು ಕಡಿದ ತಂತಿ


ಜೀವ ಮಿಡಿತ ಸದ್ದು - ಒಂದು ನೋಟ

ಇಂದಿನ ವಾರ್ತಾಭಾರತಿ

Friday, September 27, 2013

ಪ್ರವರ ಕೊಟ್ಟೂರು ಕವಿತೆಗಳು

ಚಂದಿರನ ರಾತ್ರಿ ಹನಿಗಳು
________________________
 

ನಿನ್ನ ನಶೆಯಲ್ಲಿದ್ದ
ಚಂದಿರ
ಜೇಬು ತುಂಬಾ
ಬೆಳದಿಂಗಳ ತುಂಬಿಕೊಂಡು
ಅಲ್ಲಿಗೂ ಇಲ್ಲಿಗೂ
ಪೋಲಿ ಅಲೆಯುತಿದ್ದಾನೆ

ಸಾಗರವನ್ನೂ
ತನ್ನತ್ತ ಬರ ಸೆಳೆವ
ಚಂದಿರನಲ್ಲಿ
ಕಾಮನಿರಬಹುದು

ಚಂದಿರ
ಸ್ತ್ರೀಲಿಂಗವೋ?
ಪುಲ್ಲಿಂಗವೋ?
ದುಂಡಗೆ, ಗುಂಡಗೆ
ಮೈತುಂಬಿಕೊಂಡು
ಬೆಳದಿಂಗಳ ಸ್ಖಲ್ಲಿಸುತಿದ್ದರೆ
ಪುಲ್ಲಿಂಗ,
ನಾಚಿಕೆಗೆ, ಕಾಮನೆಗೆ
ಸೆರಗು ಹೊದ್ದು
ಕೂತು ಕತ್ತಲಾಗಿದ್ದರೆ
ಸ್ರೀಲಿಂಗ.

ಮೋಡಗಳ ಸೆರಗಿನಲ್ಲಿ ಅವಳ
ಘಮಲನ್ನು
ಆಸ್ವಾಧಿಸುತ್ತಾ ತಿರುಗುತ್ತಾನೆ
ರಸಿಕ ಚಂದಿರ
 


"ಗಾಂಧಿ" ಕನಸು ಮತ್ತು ವಾಸ್ತವ
____________________
 

೧.
ಗಾಂಧೀ ತಾತ
ಮೊನ್ನೆ ಕನಸಿನಲಿ ಬಂದಿದ್ದ,
ನಾನಂತೂ
ಆತನ ಊರುಗೋಲು ಕಸಿದುಕೊಂಡು
ಓಣಿಯ ತುಂಬಾ
ಕುದುರೆಯಾಟ ಆಡಿದ್ದೆ,
ಬೆನ್ನತ್ತಿ ಬಂದ ಆ ಫಕೀರನ
ಬೊಚ್ಚು ಬಾಯಲ್ಲಿ
ಅದೇ ಮಾಸದ ನಗು,

೨.
ನಮ್ಮೂರ ಸರ್ಕಲ್ಲಿನ
ಗಾಂಧಿಯ ಕೈಯಲ್ಲಿ ಕೋಲಿಲ್ಲ
ಅದಕ್ಕೇ
ಕಟ್ಟೆಯ ಮೇಲೆ ಜನ
ನಿರಾತಂಕವಾಗಿ ಜೂಜಾಡುತಿದ್ದಾರೆ

 

ಡಿ ಎಸ್ ಎಸ್ ಒಳಜಗಳ : ಮುಂದಿನ ದಾರಿ ಏನು ?


ನಾಗರಾಜ ಹೆತ್ತೂರ


ಗುಲ್ಬರ್ಗದಲ್ಲಿ ನಡೆದ ದಲಿತ ಚಳವಳಿಗಳ ಕುರಿತ  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚಳವಳಿ ಅಳಿವು-ಉಳಿವಿನ ಬಗ್ಗೆ ಎಷ್ಟು ಚರ್ಚೆ ಆಯಿತೋ ಗೊತ್ತಿಲ್ಲ. ಗೋವಿಂದಯ್ಯ ದೇವನೂರರನ್ನು ವೇದಿಕೆಯಲ್ಲೇ ಟೀಕಿಸಿದ್ದು, ವಾದ ವಿವಾದ ಆಗಿದ್ದು ಸುದ್ದಿಯಾಯಿತು. ಇಂತಹ ಬೆಳವಣಿಗೆಗಳು ನಿಜಕ್ಕೂ ದಲಿತ ಚಳವಳಿಗಳಿಯ ಇಂದಿನ ದೊಡ್ಡ ದುರಂತಗಳು. ದೇವನೂರು ಆಗಲಿ, ಗೋವಿಂದಯ್ಯ, ಸಿದ್ದಲಿಂಗಯ್ಯ, ಸಿದ್ದಯ್ಯ  ಆಗಲಿ, ಹಳೆ ಮಾದರಿಗಳನ್ನೇ ಇಟ್ಟುಕೊಂಡು ಹೊಸ ಪೀಳಿಗೆಗೂ ಅವರ ವಾದವನ್ನೇ ಹೇರಲು ಬರುತ್ತಾರೆ. ಹೇಳಿದ್ದನ್ನೇ ಹೇಳಿ ಹೇಳಿ ಬೋರು ಹಿಡಿಸುತ್ತಾರೆ. ಈಗಾಗಲೇ ಬಲಗೈ-ಎಡಗೈ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದೆ. ಇಬ್ಬರನ್ನೂ ಒಂದು ಮಾಡುವ ಗೋಜಿಗೆ ಇಂದಿನ ನಾಯಕರು ಯಾವತ್ತೂ ಮನಸ್ಸು ಮಾಡುತ್ತಿಲ್ಲ. ದೇವನೂರು  ಒಳಮೀಸಲಾತಿ ವರ್ಗೀಕರಣದ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಇವರು ಮಾತನಾಡುವುದಿಲ್ಲ ಎಂಬುದನ್ನೇ ಕೆ.ಬಿ. ಸಿದ್ದಯ್ಯ, ಗೋವಿಂದಯ್ಯ, ಹನುಮಂತಯ್ಯನಂತಹವರು ಬೈದುಕೊಂಡು ತಿರುಗುತ್ತಾರೆ. ದೇವನೂರಿಗೆ ಈಗ ಅದು ಬೇಕಾಗಿಯೂ ಇಲ್ಲ. ಸಿದ್ದಲಿಂಗಯ್ಯನವರಂತೂ ಅಧಿಕಾರದ ಇದ್ದರೆ ಸಾಕು ಯಾರ ಕಾಲಿಗೂ ಬಿದ್ದು ಆಸನದಲ್ಲಿ ಕುಳಿತುಕೊಳ್ಳೇ ಸಿದ್ದ ಎಂದು ತಾವಾಯಿತು ತಮ್ಮ ಕೆಲಸ ವಾಯಿತು ಎಂದುಕೊಂಡು ಹಾಯಾಗಿದ್ದಾರೆ. ರಾಜ್ಯದಲ್ಲಿ ಆರಂಭವಾಗಿ ಉಚ್ರಾಯ ಸ್ಥಿತಿಯಲ್ಲಿ ಇದ್ದ ,ಒಂದಿಡೀ ತಲೆಮಾರನ್ನು ಆವರಿಸಿಕೊಂಡು ದಲಿತ ಯುವಕರಲ್ಲಿ ಹೊಸ ಭರವಸೆ ಹುಟ್ಟಿಸಿದ್ದ ಬಹುಜನ ಮೂಮೆಂಟ್ ಹಾಳಾಗಲು ಕಾರಣಕರ್ತರಾದವರೇ ಈ ಮಹಾನುಭವರು. ಮೊನ್ನೆ ಕೂಡ ಇದೇ ಕಾರಣಕ್ಕೆ ಜಗಳ ಆಗಿದ್ದು ಗೋವಿಂದಯ್ಯ ಯಾರನ್ನೋ ಟಾರ್ಗೆಟ್ ಮಾಡುವ ಭರದಲ್ಲಿ ಡಿಎಸ್ಎಸ್ ಈಗ ಎಲ್ಲಿದೆ...? ಎಂದಿದ್ದು ಅಲ್ಲಿದ್ದ ದಸಂಸ ಮುಖಂಡ ಮಾವಳ್ಳಿ ಶಂಕರ್ ನ್ನು ಕೆರಳಿಸಿದೆ.  ಇಂದಿನ ಪರಿಸ್ಥಿತಿ ಡಿಎಸ್ಎಸ್ ಇದೆಯೇ..? ಇಲ್ಲವೇ..? ಎಂದು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ. ಸಾವಿರ ಸಂಘಟನೆಗಳಾಗಿವೆ. ಇನ್ನು ಎಡಗೈನವರು ಅರ್ಥವಿಲ್ಲದ ಒಳಮೀಸಲಾತಿಗೆ ದಿನಾ ಪ್ರತಿಭಟನೆ ನಡೆಸುತ್ತಾರೆ. ನಿಜಕ್ಕೂ ಏನಾಗುತ್ತಿದೆ...?  ದೊಡ್ಡವರೆನಿಸಿಕೊಂಡವರಿಗೆ ಇವರನ್ನು ಸರಿ ಮಾಡುವುದು ಕಷ್ಟವೇನಲ್ಲ. ಆದರೆ ಯಾರೂ ತಮ್ಮತ್ವ ಬಿಡುತ್ತಿಲ್ಲ. ಸಿದ್ದಯ್ಯ, ಹನುಮಂತಯ್ಯ  ನವರ ಕಾವ್ಯದ ಬಗ್ಗೆ ಬಲಗೈನವರು ವೇದಿಕೆಯಲ್ಲಿ ಟೀಕಿಸಿಕೊಂಡು ತಿರುಗುವುದು, ಮಹದೇವರ ಎದೆಗೆ ಬಿದ್ದ ಅಕ್ಷರದಲ್ಲಿ ಎಡಗೈನವರ  ಬಗ್ಗೆ ಬರೆದಿಲ್ಲ ಅದೂ ಒಂದು ಬುಕ್ಕಾ...? ಎಂದು ಸಿದ್ದಯ್ಯ ಟೀಕಿಸುವುದು ... ನಿಜಕ್ಕೂ ಇವರ ಟೀಕೆ-ಟಿಪ್ಪಣಿ ಗಳನ್ನು ನೋಡಿದರೆ ಬೇಸರ ಎನಿಸುತ್ತದೆ. ಹೊಸ ತಲೆಮಾರಿನ ಯುವಕರಿಗೆ ಇವರೆಲ್ಲ ಏನು ಮೆಸೆಜ್ ಕೊಡುತ್ತಿದ್ದಾರೆ..? ಹೊಸದನ್ನು ಕೊಡದ ಇವರಿಂದ ಏನು ನಿರೀಕ್ಷಿಸಲು ಸಾಧ್ಯ..?
ಗುಲ್ಬರ್ಗದಲ್ಲಿ ನಡೆದ ದಲಿತ ಚಳವಳಿಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚಳವಳಿ ಅಳಿವು-ಉಳಿವಿನ ಬಗ್ಗೆ ಎಷ್ಟು ಚರ್ಚೆ ಆಯಿತೋ ಗೊತ್ತಿಲ್ಲ. ಗೋವಿಂದಯ್ಯ ದೇವನೂರರನ್ನು ವೇದಿಕೆಯಲ್ಲೇ ಟೀಕಿಸಿದ್ದು, ವಾದ ವಿವಾದ ಆಗಿದ್ದು ಸುದ್ದಿಯಾಯಿತು. 
 
ಇಂತಹ ಬೆಳವಣಿಗೆಗಳು ನಿಜಕ್ಕೂ ದಲಿತ ಚಳವಳಿಗಳಿಯ ಇಂದಿನ ದೊಡ್ಡ ದುರಂತಗಳು. ದೇವನೂರು ಆಗಲಿ, ಗೋವಿಂದಯ್ಯ, ಸಿದ್ದಲಿಂಗಯ್ಯ, ಸಿದ್ದಯ್ಯ ಆಗಲಿ, ಹಳೆ ಮಾದರಿಗಳನ್ನೇ ಇಟ್ಟುಕೊಂಡು ಹೊಸ ಪೀಳಿಗೆಗೂ ಅವರ ವಾದವನ್ನೇ ಹೇರಲು ಬರುತ್ತಾರೆ. ಹೇಳಿದ್ದನ್ನೇ ಹೇಳಿ ಹೇಳಿ ಬೋರು ಹಿಡಿಸುತ್ತಾರೆ. ಈಗಾಗಲೇ ಬಲಗೈ-ಎಡಗೈ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದೆ. ಇಬ್ಬರನ್ನೂ ಒಂದು ಮಾಡುವ ಗೋಜಿಗೆ ಇಂದಿನ ನಾಯಕರು ಯಾವತ್ತೂ ಮನಸ್ಸು ಮಾಡುತ್ತಿಲ್ಲ. ದೇವನೂರು ಒಳಮೀಸಲಾತಿ ವರ್ಗೀಕರಣದ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಇವರು ಮಾತನಾಡುವುದಿಲ್ಲ ಎಂಬುದನ್ನೇ ಕೆ.ಬಿ. ಸಿದ್ದಯ್ಯ, ಗೋವಿಂದಯ್ಯ, ಹನುಮಂತಯ್ಯನಂತಹವರು ಬೈದುಕೊಂಡು ತಿರುಗುತ್ತಾರೆ. ದೇವನೂರಿಗೆ ಈಗ ಅದು ಬೇಕಾಗಿಯೂ ಇಲ್ಲ. 
 
ಸಿದ್ದಲಿಂಗಯ್ಯನವರಂತೂ ಅಧಿಕಾರದ ಇದ್ದರೆ ಸಾಕು ಯಾರ ಕಾಲಿಗೂ ಬಿದ್ದು ಆಸನದಲ್ಲಿ ಕುಳಿತುಕೊಳ್ಳೇ ಸಿದ್ದ ಎಂದು ತಾವಾಯಿತು ತಮ್ಮ ಕೆಲಸ ವಾಯಿತು ಎಂದುಕೊಂಡು ಹಾಯಾಗಿದ್ದಾರೆ. ರಾಜ್ಯದಲ್ಲಿ ಆರಂಭವಾಗಿ ಉಚ್ರಾಯ ಸ್ಥಿತಿಯಲ್ಲಿ ಇದ್ದ ,ಒಂದಿಡೀ ತಲೆಮಾರನ್ನು ಆವರಿಸಿಕೊಂಡು ದಲಿತ ಯುವಕರಲ್ಲಿ ಹೊಸ ಭರವಸೆ ಹುಟ್ಟಿಸಿದ್ದ ಬಹುಜನ ಮೂಮೆಂಟ್ ಹಾಳಾಗಲು ಕಾರಣಕರ್ತರಾದವರೇ ಈ ಮಹಾನುಭವರು. ಮೊನ್ನೆ ಕೂಡ ಇದೇ ಕಾರಣಕ್ಕೆ ಜಗಳ ಆಗಿದ್ದು ಗೋವಿಂದಯ್ಯ ಯಾರನ್ನೋ ಟಾರ್ಗೆಟ್ ಮಾಡುವ ಭರದಲ್ಲಿ ಡಿಎಸ್ಎಸ್ ಈಗ ಎಲ್ಲಿದೆ...? ಎಂದಿದ್ದು ಅಲ್ಲಿದ್ದ ದಸಂಸ ಮುಖಂಡ ಮಾವಳ್ಳಿ ಶಂಕರ್ ನ್ನು ಕೆರಳಿಸಿದೆ. ಇಂದಿನ ಪರಿಸ್ಥಿತಿ ಡಿಎಸ್ಎಸ್ ಇದೆಯೇ..? ಇಲ್ಲವೇ..? ಎಂದು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ. ಸಾವಿರ ಸಂಘಟನೆಗಳಾಗಿವೆ. 
 
ಇನ್ನು ಎಡಗೈನವರು ಅರ್ಥವಿಲ್ಲದ ಒಳಮೀಸಲಾತಿಗೆ ದಿನಾ ಪ್ರತಿಭಟನೆ ನಡೆಸುತ್ತಾರೆ. ನಿಜಕ್ಕೂ ಏನಾಗುತ್ತಿದೆ...? ದೊಡ್ಡವರೆನಿಸಿಕೊಂಡವರಿಗೆ ಇವರನ್ನು ಸರಿ ಮಾಡುವುದು ಕಷ್ಟವೇನಲ್ಲ. ಆದರೆ ಯಾರೂ ತಮ್ಮತ್ವ ಬಿಡುತ್ತಿಲ್ಲ. ಸಿದ್ದಯ್ಯ, ಹನುಮಂತಯ್ಯ ನವರ ಕಾವ್ಯದ ಬಗ್ಗೆ ಬಲಗೈನವರು ವೇದಿಕೆಯಲ್ಲಿ ಟೀಕಿಸಿಕೊಂಡು ತಿರುಗುವುದು, ಮಹದೇವರ ಎದೆಗೆ ಬಿದ್ದ ಅಕ್ಷರದಲ್ಲಿ ಎಡಗೈನವರ ಬಗ್ಗೆ ಬರೆದಿಲ್ಲ ಅದೂ ಒಂದು ಬುಕ್ಕಾ...? ಎಂದು ಸಿದ್ದಯ್ಯ ಟೀಕಿಸುವುದು ... ನಿಜಕ್ಕೂ ಇವರ ಟೀಕೆ-ಟಿಪ್ಪಣಿ ಗಳನ್ನು ನೋಡಿದರೆ ಬೇಸರ ಎನಿಸುತ್ತದೆ. ಹೊಸ ತಲೆಮಾರಿನ ಯುವಕರಿಗೆ ಇವರೆಲ್ಲ ಏನು ಮೆಸೆಜ್ ಕೊಡುತ್ತಿದ್ದಾರೆ..? ಹೊಸದನ್ನು ಕೊಡದ ಇವರಿಂದ ಏನು ನಿರೀಕ್ಷಿಸಲು ಸಾಧ್ಯ..?

ಸೆ 30 ಧಾರವಾಡ : 'ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ' ವಿಶೇಷ ಉಪನ್ಯಾಸ


ಕೆ ಪಿ ಮೃತ್ಯಂಜಯ ಅವರಿಗೆ 2013 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ
ಹತ್ತು ವರ್ಷದ ಹಿಂದೆ ಹತ್ತುವ ನಿಚ್ಚಣಿಕೆಯಿಂದ ಇಳಿದುಹೋದ ವಿಭಾ ಬದುಕಿದ್ದರೆ ಇಂದಿಗೆ (ಸೆಪ್ಟಂಬರ 27) ಮೂವತ್ತಾರು ವರ್ಷ ತುಂಬುತ್ತಿದ್ದವು. ಅವಳಿಗೆ ಬದುಕನ್ನು ಪ್ರೀತಿಸುವುದೆಂದರೆ ಕಾವ್ಯವನ್ನು ಪ್ರೀತಿಸುವುದೇ ಆಗಿತ್ತು .

ಅವಳ ಡೈರಿಯಲ್ಲಿ ಒಂದು ಸಾಲಿದೆ . ಕಾವ್ಯ ಬರೆಯುವುದೆಂದರೆ ನನಗೆ ನನ್ನ ಗೆಳೆಯನನ್ನು ಪ್ರೀತಿಸುವುದಾಗಿದೆ.

ಹೀಗೆ ಕಾವ್ಯವನ್ನು ಉಸಿರಾಗಿಸಿಕೊಂಡಿದ್ದ ಅವಳ ನೆನಪಿನಲ್ಲಿ ಲಡಾಯಿ ಪ್ರಕಾಶನ ನಡೆಸುವ 2013 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಸ್ಪರ್ಧೆಗೆ 78 ಹಸ್ತಪ್ರತಿ ಕವನ ಸಂಕಲನ ಬಂದಿದ್ದವು.

ಈ ಸಲದ ಪ್ರಶಸ್ತಿಯು ಕೆ ಪಿ ಮೃತ್ಯಂಜಯ ಅವರ 'ನನ್ನ ಶಬ್ಧ ನಿನ್ನಲಿ ಬಂದು' ಹಸ್ತಪ್ರತಿ ಕವನ ಸಂಕಲನಕ್ಕೆ ದೊರೆತಿದೆ. ಪ್ರಶಸ್ತಿಯು 5000 ರೂ ನಗದು ಮತ್ತು ಪಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಕಟಿಸುವುದು.

ಸಂಸ್ಕೃತಿ ಚಿಂತಕರಾದ ಡಾ. ಎಸ್ ನಟರಾಜ ಬೂದಾಳ ಮತ್ತು ಕವಯಿತ್ರಿ ಎಂ. ಆರ್ ಕಮಲಾ ಅವರು ತೀರ್ಪುಗಾರರಾಗಿದ್ದರು. ಸುನಂದಾ ಮತ್ತು ಪ್ರಕಾಶ ಕಡಮೆ ಅವರು ವಿಭಾ ಸಾಹಿತ್ಯ ಪ್ರಶಸ್ತಿಯ ಸಂಚಾಲಕರಾಗಿದ್ದಾರೆ

ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ

ಪ್ರಶಸ್ತಿ ಪಡೆದ ಕೆ.ಪಿ. ಮೃತ್ಯುಂಜಯ  ಮೂಲತಃ ತುಮಕೂರು ಜಿಲ್ಲೆಯವರು. ಎರಡು ದಶಕಗಳ ಕಾಲ ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ  ಈ ಕವಿಯೀಗ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದು ಮುದ್ದಣನ ನಾಡಾದ ಕಾರ್ಕಳದ ಬಜಗೋಳಿಯಲ್ಲಿ.

ಈ ತನಕ  ಅವರ ಐದು ಕವಿತಾ ಸಂಕಲನಗಳು ಪ್ರಕಟವಾಗಿವೆ.  'ನನ್ನ ಶಬ್ಧ ನಿನ್ನಲಿ ಬಂದು' ಆರನೇ ಕೃತಿ .

’ಒಂದು ಅನುರಾಗಕ್ಕಾಗಿ ಎಷ್ಟೆಲ್ಲ’ ಕೃತಿಗೆ ’ಮುದ್ದಣ ಕಾವ್ಯ ಪುರಸ್ಕಾರ’ ಲಭಿಸಿದೆ. ೨೦೦೦ದಲ್ಲಿ ’ಮರ್ತ್ಯ ಮೀರದ ಮಾತು’, ೨೦೦೨ರಲ್ಲಿ ’ಎಲೆ ಎಸೆದ ಮರ’, ೨೦೦೪ರಲ್ಲಿ ’ಅವರವರ ಸಾವು’ ಹಾಗೂ ೨೦೧೦ರಲ್ಲಿ ’ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು’ ಕವನ ಸಂಕಲನಗಳು ಪ್ರಕಟವಾಗಿವೆ. ’ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ’, ’ಕನ್ನಡ ಸಾಹಿತ್ಯ ಪರಿಷತ್ ಕಥಾ ಸ್ಪರ್ಧೆ’ಗಳಲ್ಲಿ ವಿಜೇತರು.

ಅವರ ಎರಡನೇ ಕವನ ಸಂಕಲನ ’ಮರ್ತ್ಯ ಮೀರದ ಮಾತು’ವಿಗೆ ಅಂಕೋಲದ ಡಾ. ದಿನಕರ ದೇಸಾಯಿ ಪ್ರತಿಷ್ಠಾನದ ’ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ ಹಾಗೂ ಮಂಡ್ಯದ ಕನ್ನಡ ಸಾಹಿತ್ಯ ಪರಿಷತ್‌ನ ’ಎಂ.ಎಲ್. ಶ್ರೀಕಂಠೇಶಗೌಡ ಸಾಹಿತ್ಯ ಪ್ರಶಸ್ತಿ’ದೊರೆತಿದೆ.  ಮೂರನೇ ಕವನ ಸಂಕಲನ ’ಎಲೆ ಎಸೆದ ಮರ’ಕ್ಕೆ ತುಮಕೂರಿನ ’ವೀಚಿ ಸಾಹಿತ್ಯ ಪ್ರತಿಷ್ಠಾನ’ದ ’ವೀಚಿ ಸಾಹಿತ್ಯ ಪ್ರಶಸ್ತಿ’ ಗಳಿಸಿದ್ದಾರೆ.

’ಅವರವರ ಸಾವು’ ಎಂಬ ನಾಲ್ಕನೇ ಕೃತಿಗೆ ಬೆಂಗಳೂರಿನ ’ಎಂ.ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ ವಿಶೇಷ ಪ್ರಶಸ್ತಿ’ ಹಾಗೂ ’ಹೂಗಾರ್ ಸ್ಮಾರಕ ಸಾಹಿತ್ಯ ಪ್ರಶಸ್ತಿ’ ಪಡೆದಿದ್ದಾರೆ.  ಐದನೇ ಸಂಕಲನ ’ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು’ವಿಗೆ ’ಶೂದ್ರ’ ಸಾಹಿತ್ಯಕ ಪತ್ರಿಕೆಯ ’ಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಪುರಸ್ಕಾರ’ವನ್ನು ಪಡೆದುಕೊಂಡಿದ್ದಾರೆ.

ದಿನದ ದೀಪ - 59

1
ಕವಿತೆಗೆ ಸಾವು ಇರುವುದು ಹೌದಾದರೆ
ಅಂಥ ಕಾಲದ ಕಣ್ಣುಗಳಲಿ ಇರಲಾರದು ಹನಿ ಕಣ್ಣೀರು
2
ಅರ್ಥವಾಗುವುದೆಂದರೆ ಇಷ್ಟೇ
ನೀ ಮಾತನಾಡುವಾಗ ನಾ ಮೌನವಾಗಿರುವುದು ಅಥವಾ..
3
ಕಪ್ಪೆ ಕೂಗಿಗೆ ರಾತ್ರಿಯ ನಿಶ್ಶಬ್ದ ಕದಡಿತೆಂಬ ದನಿ ಕೇಳಿಬಂತು 
ಕಣ್ತೆರೆದರೆ ಕಾಣಿಸಿತು ಅರೆನಿಮೀಲಿತನ ಅದೇ ಮುಗುಳು ನಗು

4
ಬೆಳದಿಂಗಳ ಬಾಯಿ
ಸೂಸುತ್ತಿದೆ ಕತ್ತಲ ವಾಸನೆ
5
ನೀನು ಬಾಯಿ ಕಟ್ಟಿಕೊಂಡಿರುವುದು ಸುಳ್ಳಲ್ಲ
ನಿನ್ನ ಮೌನ ನನ್ನಲಿ ಮಾತು ಹುಟ್ಟಿಸುತ್ತಿದೆ

ಝೆನ್ ಕಥೆ : ದಾರಿ ಯಾವುದು?
ಜೋಶು ತಮ್ಮ ಗುರು ನಾನ್‌ಸೆನ್‌ರನ್ನು ಕೇಳಿದರು:

‘ನಿಜವಾದ ದಾರಿ ಯಾವುದು?’
‘ದಿನನಿತ್ಯದ ದಾರಿಯೇ ನಿಜವಾದ ದಾರಿ.’
‘ಅದನ್ನು ಅರ್ಥ ಮಾಡಿಕೊಳ್ಳಬಹುದೇ?’
‘ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅದು ದೂರ ಆಗುತ್ತದೆ.’
‘ಪ್ರಯತ್ನಿಸದೇ ಇದ್ದರೆ ಅರ್ಥ ಮಾಡಿಕೊಳ್ಳುವುದು ಹ್ಯಾಗೆ?’
‘ಅದಕ್ಕಾಗಿ ಪ್ರಯತ್ನಿಸಬೇಡ. ಅರ್ಥ ಮಾಡಿಕೊಳ್ಳಲು ಹೋಗಬೇಡ. ನಿನ್ನನ್ನೇ ಅದರಲ್ಲಿ ಕಾಣು. ಅದಕ್ಕಾಗಿ ಆಕಾಶದ ಹಾಗೆ ತೆರೆದುಕೋ.’


ಓ ನನ್ನ ಹೃದಯವೇ

ಮಿರ್ಜಾ ಗಾಲೀಬ್

ಅನು: ಡಾ.ಎಚ್.ಎಸ್.ಅನುಪಮಾ


ಓ ನನ್ನ ಹೃದಯವೇ
ಹೋಗು
ಎಲ್ಲಿ ನಿನ್ನನ್ನು ಮಾತನಾಡಿಸಲು ಯಾರೂ ಇಲ್ಲವೋ
ನಿನ್ನ ಭಾಷೆ ಗೊತ್ತಿರುವವರು ಯಾರೂ ಇಲ್ಲವೋ
ಅಲ್ಲಿ ಹೋಗಿ ನೆಲೆಸು..
ಓ ನನ್ನ ಹೃದಯವೇ
ಮನೆಯೊಂದನ್ನು ಕಟ್ಟಿಸು
ಹೇಗೆಂದರೆ
ಅದಕ್ಕೆ ಗೋಡೆಗಳೇ ಇರಬಾರದು
ಬಾಗಿಲುಗಳೂ!
ನೆರೆಹೊರೆಯವರು, ಕಾವಲುಗಾರರೂ..
ಯಾರೋ ಬಂದರೆಂದು ಹೇಳುವವರೂ ಇರಬಾರದು!
ನೀನು ಅಸ್ವಸ್ಥನಾದರೆ
ನಿನ್ನನ್ನು ಉಪಚರಿಸಲು ಯಾರೂ ಇರಬಾರದು
ನೀನು ಸತ್ತೇ ಹೋದರೆ ದುಃಖಿಸಲೂ ಯಾರೂ ಇರಬಾರದು!

ಬರ್ಟೋಲ್ಟ್ ಬ್ರೆಕ್ಟ್, ೧೯೨೦ರಲ್ಲಿ ತನ್ನ ತಾಯಿ ಮರಣಿಸಿದಾಗ ಬರೆದಿದ್ದು.

ಉಸಿರು ತೊರೆದವಳನ್ನು ಮಣ್ಣಲ್ಲಿ ಮಲಗಿಸಿದರು
ಹೂವು ಅರಳಿದವು
ಚಿಟ್ಟೆಗಳು ರೆಕ್ಕೆ ಪಟಪಟಿಸಿ ಹಾರಾಡಿದವು
ಅಮ್ಮ ಎಷ್ಟು ಹಗುರವಾಗಿದ್ದಳೆಂದರೆ
ಅವಳ ದೇಹ ನೆಲಕ್ಕೆ ಭಾರವಾಗದ ಹಾಗೆ
ನೀಳವಾಗಿ ಚಾಚಿಕೊಂಡಿತು
ಇಷ್ಟು ಹಗುರವಾಗಲು ಅವಳು
ಎಷ್ಟು ಕಾಲ ನವೆದು ನೋಯಬೇಕಾಯಿತು?!


ಅನು : ಡಾ.ಎಚ್.ಎಸ್.ಅನುಪಮಾ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...