Sunday, September 22, 2013

ಮೂರು ಕವಿತೆಗಳು





1
ನೋಟ



ನಡುರಾತ್ರಿ
ಕಾಳ ಕತ್ತಲು
ಏನು ಸಂಭವಿಸಿತೊ
ಆ ಓಣಿಯ ನಾಯಿ
ಸದ್ದು ಮಾಡಿತು ಒಂದೇ ಸವನೆ
ಸುಮ್ಮನೆ ಮಲಗಿದ್ದ ಮನೆಯ ನಾಯಿ
ಗಡಗ್ಗನೆ ಎದ್ದು ತಾನೂ
ರಾಗ ತಗೆಯಿತು ಶಕ್ತ್ಯಾನುಸಾರ
ಕ್ಷಣಹೊತ್ತು ಅಷ್ಟೇ
ಊರ ತುಂಬೆಲ್ಲ ನಾಯಿಗಳದ್ದೇ ಸದ್ದು

ಯಾಕೊ ಬೆಳಿಗ್ಗೆ ನಡೆದಿದ್ದೆಲ್ಲ
ನೆನಪಿಗೆ ಬಂದಿತು
ಬಸ್ಸೇರಿ ಬರುವಾಗ
ದಾರಿಯಲಿ ಅಳುತ ಮಲಗಿದ
ಗಾಯಗೊಂಡ ಮನುಷ್ಯ
ಅಪಘಾತದ ಕುರುಹು
ನೋಡುತ್ತಲೇ ನಿಲದೆ ಹೊರಟ ಬಸ್ಸು
ನಿಲಿಸಿರಿ ಎಂಬ ಮಾತಿಗೆ
ಯಾವ ವಾಹನವೂ ನಿಂತಿಲ್ಲ
ನಮಗ್ಯಾಕ್ರೀ ಇಲ್ಲದ ರಗಳೆ
ಮಾತಾಡುತ್ತಲೇ ವೇಗ ಹೆಚ್ಚಿಸಿದ್ದ ಚಾಲಕ

ಹೆಚ್ಚೇನು ಮಾಡದೆ ಚಾಲಕನ ಹಾಗೆ
ತಾನೂ ಓಡಿ
ಎಲ್ಲರಂತೆ ನಿರಾಳವಾದ ಮನಸು
ಈಗ ತೂಗುತಿದೆ ಎಲ್ಲವ
ನಾಯಿಯ ಭಾಷೆ ನಾಯಿಗೆ ಅರ್ಥವಾಗುವ
ಕಾಲದಲಿ
ಮನುಷ್ಯನ ಭಾಷೆ ಮನುಷ್ಯನರಿಯದ
ವಾಸ್ತವ
ಅರಗಿಸಿಕೊಳುವಾಗ
ಕವಿದ ಕತ್ತಲೆಗೆ ಇನ್ನಷ್ಟು ದಟ್ಟತೆ !


2


ಸ್ವರ
ಹಲ್ಲಿಗಳ ಕೂಗು ಒಂದೇ ಸ್ವರ
ಕೋಳಿಗಳ ಕೂಗು ಒಂದೇ ಸ್ವರ
ನಾಯಿಗಳ ಕೂಗು ಒಂದೇ ಸ್ವರ
ಮನುಷ್ಯರದ್ದು ?
ಜೀವಸಂಕುಲದಲ್ಲಿ ಒಂದೇ ಭಿನ್ನ ಸ್ವರ
 
3
 
ಊರಪೇಟೆಯಲಿ
ಅದೇ ಹಾಲು ನೀರು
ಬನಿ ಬಸಿದುಕೊಂಡೇ ಕಂಪನಿಗಳು
ತಲುಪಿಸುತ್ತವೆ ಮನೆಮನೆಗೆ ಹಾಲು

ಈಗೀಗ ಬತ್ತ ಬೆಳೆವ
ಕೈಯಲ್ಲೇ ಕಲಬೆರಿಕೆ
ಮಾಲ್ ಗಳ ಬೆಳ್ಳನೆ ಅಕ್ಕಿಯಲ್ಲಿ
ಸಣ್ಣ ಬಿಳಿ ಬೆಣಜು ಹಳ್ಳು

ದೇಶಿಯೊ ವಿದೇಶಿಯೊ
ಇದೆಲ್ಲ ಅಗಳು ಹಿಚುಕಿ
ಬೆಂದ ಅನ್ನ ನೋಡಿದ ಹಾಗೆ

ಯಾಕೆ ಹೀಗೆ ಎಂಬ ಪ್ರಶ್ನೆ
ಬೆಳದ ಹಾಗೆ
ಕೂಡಿ ಕಳೆವ ಲೆಕ್ಕದಾಚೆ
ಹೊಳೆದ ಉತ್ತರ ಇದೊಂದೇ
ಅಲ್ಲಿ ಇಲ್ಲಿ ಎಲ್ಲ ಕಡೆ
ಮನುಷ್ಯ ಉಳಿದಿಲ್ಲ
ಮನುಷ್ಯನಾಗಿ

ಇದೇ ಅಂತಿಮ ತೀರ್ಮಾನವಲ್ಲ
ಬೇರೆ ಉತ್ತರ
ನಿಮಗೂ ಗೊತ್ತಿರಬಹುದು

 


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...