Thursday, September 26, 2013

ಹಿಂದೂಧರ್ಮ – ಗೋಮತಿ ಮತ್ತು ಪೆರಿಯಾರ್
 -ಎನ್. ರವಿಕುಮಾರ್, ಶಿವಮೊಗ್ಗ

ವರ್ತಮಾನ

ಕರ್ನಾಟಕ ವಿಚಾರ ವೇದಿಕೆ ಇತ್ತೀಚೆಗೆ ವಿಚಾರ ಸಂಕಿರಣ ಹಾಗು ಪೆರಿಯಾರ್ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ನಡೆಸುವ ಮೂಲಕ ಈ.ವಿ.ಪೆರಿಯಾರ್ (ಈರೋಡು ವೆಂಕಟಪ್ಪ ರಾಮಸ್ವಾಮಿ ನಾಯ್ಕರ್ : 1879-1973) ವಿಚಾರಧಾರೆಗಳ ಪ್ರಸ್ತುತತೆ ಮತ್ತು ಹಿಂದೂ ಧರ್ಮದ ಶ್ರೇಣಿಕೃತ ವ್ಯವಸ್ಥೆಯ ಜೀವಂತಿಕೆಯನ್ನು ಚರ್ಚೆಗೀಡು ಮಾಡಿತು. ದೇಶದಲ್ಲಿಯ ಪ್ರಗತಿಪರ ವಿಚಾರಧಾರೆಗಳಿಗೆ ಹಿನ್ನಡೆಯಾಗುತ್ತಿರುವ ಈ ಆತಂಕದ ವೇಳೆಯಲ್ಲಿ ಪೆರಿಯಾರ್ ಅವರ ವಿಚಾರ ಧಾರೆಗಳು, ಸಾಮಾಜಿಕ ಹೋರಾಟದ ಇತಿಹಾಸಗಳನ್ನು ನೆನಪಿಸುವ, ವಿಚಾರ ಪ್ರಚೋದಿಸುವ, ಅದೇ ಕಾಲಕ್ಕೆ ಹಿಂದೂತ್ವದ ಹೆಸರಿನಲ್ಲಿ ನಡೆದ ಮನುಷ್ಯ ವಿರೋಧಿ ಕೃತ್ಯಗಳನ್ನು ಖಂಡಿಸುವ, ಎಚ್ಚರಿಸುವ ಜವಾಬ್ದಾರಿಯನ್ನು ಕರ್ನಾಟಕ ವಿಚಾರ ವೇದಿಕೆ ಮಾಡಿದೆ.

 periyar

ಜಾತಿ ನಿರ್ಮೂಲನೆಗಾಗಿ ಕ್ರಾಂತಿಕಾರಿ ಹೋರಾಟವನ್ನೆ ಮಾಡಿದ ಈ.ವಿ. ಪೆರಿಯಾರ್ ಹುಟ್ಟಿದ ತಮಿಳುನಾಡಿನಲ್ಲಿ ವೈರುಧ್ಯವೆಂಬಂತೆ ಇಂದು ಜಾತೀಯತೆಯ, ಹಿಂದೂ ಧರ್ಮದೊಳಗಿನ ಮತೀಯ ದ್ವೇಷ ಹೆಚ್ಚುತ್ತಲೆ ಇದೆ. ಇದು ಪೆರಿಯಾರ್ ಬಿತ್ತಿದ ಬೀಜವಲ್ಲ. ಅಸಹಿಷ್ಣುತೆಯ ಕುಲುಮೆಯೊಳಗೆ ಮೇಲ್ಜಾತಿಗಳ ಮನುಷ್ಯ ದ್ವೇಷದ ಸಾಂಪ್ರಾದಾಯದ ಅಸ್ತಿತ್ವಕ್ಕಾಗಿ ನಡೆಸಿರುವ ಕಟುಕತನಗಳು ಎಂಬುದಕ್ಕೆ ಈ ಹಸಿ ಘಟನೆಯೊಂದೆ ಸಾಕು ಎನಿಸುತ್ತದೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಸೀವಲಪೇರಿ ಗ್ರಾಮದ ಮೇಲ್ಜಾತಿಯ ಹುಡುಗಿ ಗೋಮತಿ ಅದೇ ಗ್ರಾಮದ ದಲಿತ ಹುಡುಗ ಮುರುಗನ್‌ನನ್ನು ಪ್ರೀತಿಸುತ್ತಿದ್ದಳು. ಇದನ್ನು ಸಹಿಸದ ಹುಡುಗಿಯ ಸಹೋದರರು ಒಡಹುಟ್ಟಿದ ಸಹೋದರಿ gomathy-murugan-honour-killingಗೋಮತಿಯ ಗಂಟಲಿಗೆ ಆಸಿಡ್ ಸುರಿದು‍, ಸಾಲದೆಂಬಂತೆ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಅಮಾನುಷವಾಗಿ ಕೊಂದು ಹಾಕಿದರು. (ಸೆ 13, 2013)
ಹಿಂದೂ ಧರ್ಮದೊಳಗಿನ ಜಾತಿಯ ದ್ವೇಷದ ಕೆನ್ನಾಲಿಗೆ ಬರು ಬರುತ್ತಾ ದಲಿತ ಜಾತಿಯನ್ನು ವಿರೋಧಿಸುವುದಿರಲಿ, ದಲಿತರೊಂದಿಗೆ ಸಹಬಾಳ್ವೆ, ಸ್ನೇಹ, ಪ್ರೀತಿ ಬಯಸುವ ತಮ್ಮವರನ್ನು ಕೊಂದು (ಮರ್ಯಾದಾ ಹತ್ಯೆ) ಹಾಕುವ ಅಮಾನುಷತೆ ಹಿಂದೂ ಧರ್ಮಾಭಿಮಾನಿಗಳಲ್ಲಿ ತೆರೆದುಕೊಳ್ಳುತ್ತಿದೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಅಪಾಯಕಾರಿಯಾಗಿದೆ.

ಇಂತಹ ಘಟನೆಗಳು ತಮಿಳುನಾಡಿನಲ್ಲಿ ನಿರಂತರ. ಅವುಗಳಾವು ದೆಹಲಿಯ ದಾಮಿನಿ ಅತ್ಯಾಚಾರ-ಹತ್ಯೆ ಪ್ರಕರಣದಷ್ಟು ಪ್ರಚಾರ ಪಡೆದುಕೊಳ್ಳುತ್ತಿಲ್ಲ. ತಮಿಳುನಾಡಿನಲ್ಲೆ ಪೆರಿಯಾರ್ ನಿಮ್ನ ಜಾತಿ, ಸಮುದಾಯಗಳ ಧ್ವನಿಯಾದವರು. ಹಿಂದೂ ಧರ್ಮದಲ್ಲಿನ ವರ್ಣಾಶ್ರಮ ನೀತಿ, ಶ್ರೇಣಿಕೃತ ಜಾತಿ ವ್ಯವಸ್ಥೆಯ, ಅಮಾನುಷ ಧೋರಣೆಗಳನ್ನು ಅಷ್ಟೆ ಪ್ರಖರವಾಗಿ ಪೆರಿಯಾರ್ ವಿರೋಧಿಸದವರು. ತಮ್ಮ ಹೆಸರಿಗೆ ತಗಲಿಕೊಂಡಿದ್ದ ಜಾತಿ ಸೂಚಕ ’ನಾಯ್ಕರ್’ ಪದವನ್ನು (1929) ಕಿತ್ತಾಕುವ ಮೂಲಕ ಜಾತಿ ರಹಿತ ಸಮಾಜಕ್ಕಾಗಿ ಪಣ ತೊಟ್ಟವರು.

Periyar_and_Maniammai

ಹಿಂದೂಸ್ಥಾನದ ಚರಿತ್ರೆಯಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಪೆರಿಯಾರ್ ಸಾಮಾಜಿಕ ನ್ಯಾಯದ ಹೋರಾಟಗಾರನಾಗಿ ಬಹುಜನರಿಗೆ ದನಿಯದವರು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟು ಹಾಕಿದ ಪೆರಿಯಾರ್ ದೇವರು, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು-ಜನಿವಾರಗಳನ್ನು ಕಂಡ ಕಂಡಲ್ಲಿ ಕಿತ್ತೆಸೆಯುವಂತೆ ಕರೆ ನೀಡಿದರು. ಮನುವಾದಿಗಳನ್ನು ವಿರೂಪಗೊಳಿಸದರು. ಅದಕ್ಕೆ ಕಾರಣ ಸ್ಪಷ್ಟವಾಗಿದೆ. ಶತಮಾನಗಳಿಂದಲೂ ಜಾತಿಯ ಹೆಸರಿನಲ್ಲಿ ಈ ದೇಶದ ಬಹು ಜನರನ್ನು ಶಿಕ್ಷಣ-ಮನುಷ್ಯ ಸಹಜ ಸಂಬಂಧಗಳಿಂದಲೂ ದೂರವಿಟ್ಟವರ್‍ಯಾರು? ಇಂದು ಸಾಮಾಜಿಕ ನ್ಯಾಯ, ಸಮಾನತೆ, ಹಕ್ಕುಗಳಿಗಾಗಿ ಹೋರಾಡುವ ಮನಸ್ಸುಗಳಲ್ಲಿ ಕರಗದಷ್ಟು ಇತಿಹಾಸದ ನೋವಿದೆ ಅಥವಾ ನೋವಿನ ಕಾವಿದೆ ಎಂಬುದನ್ನು ಪೆರಿಯಾರ್ ಅವರನ್ನು ವಿರೋಧಿಸುವವರು ಅರ್ಥಮಾಡಿಕೊಳ್ಳಬೇಕು.

ಪೆರಿಯಾರ್ ತಮಿಳುನಾಡಿನಲ್ಲಿಯೆ ಬಹುದೊಡ್ಡ ಸಾಮಾಜಿಕ ಕ್ರಾಂತಿಯನ್ನೆ ಮಾಡಿದವರು. ಜಾತಿ ವಿಷವೃಕ್ಷವನ್ನು ಬುಡ ಮಟ್ಟ ಕಿತ್ತೊಗೆಯಲು ಕೊಡಲಿ ಹಿಡಿದು ನಿಂತವರು. ಜಾತಿ ರಹಿತ ನೆಲೆಯಲ್ಲಿ ಮಹಿಳಾ ಹಕ್ಕು ಕಾಯ್ದೆಯ ಜಾರಿಗೆ 30 ರ ದಶಕದಲ್ಲಿಯೇ ದೊಡ್ಡ ದನಿ ಎತ್ತಿದ ಪೆರಿಯಾರ್ ನಾಡಿನಲ್ಲಿ ಗೋಮತಿ ಎಂಬ ಹೆಣ್ಣು ಮಗಳು ಹಿಂದೂ ಮತದೊಳಗಿನ ಜಾತಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ಜಾತಿ ಕಲಹಕ್ಕೆ ಹಳ್ಳಿಗೆ ಹಳ್ಳಿಯೆ ಉರಿದು ಹೊಗೆಯಾಡುತ್ತಿದೆ. ದಲಿತರನ್ನು ಮುಟ್ಟಿದ್ದಕ್ಕೆ, ಪ್ರಕೃತಿದತ್ತ ಪ್ರೀತಿಯನ್ನು ಸಾರಿದ್ದಕ್ಕೆ, ಮುಗ್ದ ಜೀವಗಳು ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿರುವುದರ ಹಿಂದೆ ಯಾವ ಧರ್ಮದ ದಾರಿ ದೀವಿಗೆ ಇದೆ?

periyar-ambedkar

ಭಾರತದಲ್ಲಿನ ಕೋಮು ಗಲಭೆಗಳು ಹಿಂದೂ-ಮುಸ್ಲಿಂರ ನಡುವಿನ ಕ್ರೂರ ಮಾರಾಮಾರಿಯನ್ನೆ ಉಲ್ಲೇಖಿಸಿರುತ್ತವೆ.
 ರಾಜಕೀಯ ಕಾರಣಗಳ ನೆಲೆಯಲ್ಲಿ ಬಹುತೇಕ ನಡೆಯುವ ಈ ಕೋಮುಗಲಭೆಗಳು ಸಾಂದರ್ಭಿಕವಾಗಿ ನಡೆಯತ್ತಿರುತ್ತವೆಯಾದರು, ಹಿಂದೂ ಧರ್ಮದೊಳಗೆ ಇರುವ ಜಾತಿಯ ಒಳಜಗಳ, ಹತ್ಯೆಗಳ ಹಿಂದೆ ಸಾಮಾಜಿಕ ಅಸಮಾನತೆಗಳು ಸದಾ ಕೆಲಸ ಮಾಡುತ್ತಿದೆ. ಇದು ಕೋಮು ಗಲಭೆಗಿಂತ ಹೆಚ್ಚು ಅನಾಹುತವನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೆ ಅಂಬೇಡ್ಕರ್ ಅವರು ’ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಆದರೆ ಹಿಂದೂ ಆಗಿ ಸಾಯಲಾರೆ’ ಎಂದು ಬೌದ್ಧ ಧರ್ಮವನ್ನು ಅನುಸರಿಸಿದ್ದು. ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳನ್ನಷ್ಟೆ ಅಲ್ಲ ಮನುಷ್ಯ ಪ್ರೀತಿಯ ಸಹಜ ಸ್ವಭಾವದ ಎಲ್ಲರಲ್ಲೂ ಬಸವಣ್ಣ, ಬುದ್ಧ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು ಅವರ ವಿಚಾರಧಾರೆಗಳನ್ನು ಪಸರಿಸುವ, ಆ ತಳಪಾಯದಲ್ಲಿ ಮುಂದಿನ ಪೀಳಿಗೆಯನ್ನು ಎಚ್ಚರಿಸುವ ಕೆಲಸ ನಡೆಯಬೇಕು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...