Monday, September 16, 2013

ಮನದನ್ನೆ


ದ ರಾ ಬೇಂದ್ರೆ
 
 
ಆಡದಿರು ಮನದನ್ನೆ
ಎನಗೆ ಇದಿರಾಡದಿರು

ವಾದಕ್ಕೆ ಬೇಸತ್ತು
ಮರ್ಮ ಘಾತಕೆ ಸತ್ತು
ಉಳಿದು ಬಂದೆ;
ಎಲ್ಲಿಹುದು ತಿಳಿವಳಿಕೆ
ಜೀವನದ ಸಲುವಳಿಕೆ
ಎಂದು ತಳಮಳಿಸಿ ನೀರಡಿಸಿ ಬಂದೆ;
ಹೇಳುತಿರೆ ' ಹೂಂ ' ಎನ್ನು
ಒರೆದು ನೋಡಿ ಹೊನ್ನು
ಹೊಳೆದ ಗೆರೆ ಬಣ್ಣಗಳ ತಿಳಿದು ತಿಳಿದು ನೋಡು
ಎದೆಯ ಆಳದ ಮಾತನಳೆದು ಆಡು;
ಹೀಗೆನಲು ಹಾಗೆಂದು
ಬೆಂದ ಹೆಣವನೆ ಕೊಂದು
ಭೂತಲೀಲೆಯಲೀಗ ತೊಡಗಬೇಡ;
ಅಡಗಿ ಅಡಕದೆ ಮನವ ಮಡಗಬೇಡ
ನಿನ್ನ ತಿಳಿವನು ಹಣಿಸು
ನಿನ್ನ ಹೊಟ್ಟೆಯನುಣಿಸು
ಇದಿರಾಡದಿರು ಗೆಳತಿ ನೀನು ಕೂಡ
ಹೃದಯವನು ರಣರಂಗ ಮಾಡಬೇಡ.
       ***
 
ವಾದಕ್ಕೆ ಪ್ರತಿವಾದ
ಸಾಕು ವಾದವಿವಾದ
ಜೀವ ಸಂವಾದಕ್ಕೆ ಹಸಿದು ಬಂದೆ
ನೀಡು ಸಿಪ್ಪೆಯ ಸುಲಿದು ತಿಳಲನೊಂದೆ
ಜೀವಜೀವಾಳದಲಿ
ಹೃದಯಾಂತರಾಳದಲಿ
ಇಳಿದು ನೋಡು
ಬಗೆಯ ಬಾನ್ ಬಯಲನ್ನು
ಅಳೆದು ನೋಡು.
ಹಚ್ಚಿ ರೆಕ್ಕೆಗೆ ರೆಕ್ಕೆ ಹಾರಿ ನೋಡು.
ಈಸಾಡು ತೇಲಾಡು ಮುಂದೋಡು ಮೇಲಾಡು
ಅಣಕ ಮೂದಲಿಕೆಯಲಿ ಕಟಕಬೇಡ
ಕೆನ್ನೀರ ಕೆಸರನ್ನು ಕಲಕಬೇಡ.
ಯುಗಯುಗದ ಕಣ್ಣೀರು
ಎದೆಯೊಳಿದೆ ಮುನ್ನೀರು
ಅದರ ತೆರೆಗಳ ತೆರೆದು ಮುಳುಗಿ ನೋಡು
ನೆಲೆಯಿರದ ನೆಲವನ್ನು ಬಗೆದು ನೋಡು,
ನಾಗಲೋಕದ ರತ್ನ-
ರಾಶಿ ತರುವ ಪ್ರಯತ್ನ
ವ್ಯರ್ಥ ಆಯಾಸದಲಿ ಮಾಡಬೇಡ
ನನ್ನದಿದು ನಿನ್ನದಿದು
ಎಂದು ಎರಡನು ಬಗೆದು
ಪಾಲುಗಾರಿಕೆಗಾಗಿ ಹೆಣಗಬೇಡ
ನೀನಗೆ ನೀರಿಲ್ಲೆಂದು ಒಣಗಬೇಡ.
ನಿನ್ನ ಮೈಸಿರಿಯೇನು?
ನನ್ನ ಐಸಿರಿಯೇನು?
ಒಂದುಸಿರೆ ತಾನಾಡಿದಂತೆ ಇಹುದು
ಹೀಗಿರಲು ಬಾಳುದ್ದ ಬದುಕಬಹುದು.
ಗಾಳಿಮಾತುಗಳೆಂದು ಉಸಿರನೆಳೆದಾಡಿದರೆ
ಪ್ರಾಣವೇ ಬರಿ ಗಾಳಿಯಾಗಲಹುದು.
        ***
 
ಗಂಡು ದರ್ಪವ ಹರಿದು
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ,
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು,
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು,
ಮಲಗಿರುವ ಹಾವನ್ನು
ಕೆಣಕಬೇಡ
ಕಚ್ಚಿ ವಿಷ ಕಾರಿದರೆ
ತಿಣಕಬೇಡ.
ನಗೆಯ ನಾಗಸ್ವರವ
ಅದರದೇ ತರ ತರವ
ಹಚ್ಚಿ ನೋಡು
ನನ್ನೆದೆಯ ಒಲೆದಾಟ
ನನ್ನ ತಲೆದೂಗಾಟ
ಮೆಚ್ಚಿ ನೋಡು.
ಸಿಡುಕಿರಲಿ ಮಿಡುಕಿರಲಿ
ಯಾವದೇ ಒಡಕಿರಲಿ
ಅದರ ಸಪ್ಪಳವನ್ನ ಮಾಡಬೇಡ
ಹಾಳು ರಾಗವ ಮತ್ತೆ ಹಾಡಬೇಡ
ಅದಕಾಗಿ ಜೀವದುಸಿರೆತ್ತಬೇಡ.
ಹುಟ್ಟ ಹುಸಿನಗೆಯಲ್ಲಿ
ತಿಳಿದವರ ಬಗೆಯಲ್ಲಿ
ನನ್ನ ಜೀವನಕೆ ಬೆಳಕಿತ್ತು ನೋಡು.
ಮುನಿದರೂ ಕ್ಷಮಿಸುವೆನು
ಕೂಸಿನೊಲು ರಮಿಸುವೆನು
ಅಂಗೈ ಹುಣ್ಣಿನಾರೈಕೆ ಕೊಡುವೆ
ಕೂಸೆಂದು ಹುಡುಗನೊಲು ಮುತ್ತನಿಡುವೆ.
ನಿನ್ನ ಕಣ್ಣೀರ್ಮುತ್ತು
ನನ್ನ ಕೊರಳಿನ ಸುತ್ತು
ಆಭರಣವೆಂದು ಮೆರೆದಾಡುತಿರುವೆ
ಸ್ವರ್ಗ ನರಕಕ್ಕೆ ಕರೆದಲ್ಲಿ ಬರುವೆ.

ಇದಿರಾಡದಿರು ಮತ್ತೆ
ಎದಿರಾಡದಿರು ಇತ್ತ
ಮಾಡದಿರು ಬಾಳನ್ನು ಬೇಳೆಯಂತೆ
ಕೂಡಿರಲಿ ಬಾಳು ಇಡಿಗಾಳಿನಂತೆ.
ನಾನೆಂದರೂ ಒಂದೆ
ನೀನೆಂದರೂ ಒಂದೆ
ಹೊಂದುಗೂಡಿಕೆ ಇರದ ಜನಕೆ ನೊಂದೆ
ನೀನು ನನ್ನವಳೆಂದು ಬಳಿಗೆ ಬಂದೆ
ಹೊಸ ಹುಟ್ಟು ಬರುವದಿದೆ ಇನ್ನು ಮುಂದೆ
ಆಗೋಣ ಆ ಜಗದ ತಾಯಿತಂದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...