Saturday, September 14, 2013

ಪಾಲ್ ವೆಲೆರಿ : ಸಾಮಾಜಿಕ ಕಟ್ಟುಗಳ ಮುರಿಯುವವನೇ ಕವಿ


ಶ್ರೀದೇವಿ ಕೆರೆಮನೆ                       ಮೊನ್ನೆ ಯಾರೋ ಸ್ನೇಹಿತರು ಕೇಳಿದ್ದರು ನಿಮ್ಮನ್ನು ಯಾವುದಾದರೂ ಲೈಬ್ರರಿಯಲ್ಲಿ ಕೂಡಿಟ್ಟರೆ ಯಾವ ಸೆಕ್ಷನ್‌ಗೆ ಮೊದಲು ಹೋಗುತ್ತೀರಿ? ನನ್ನ ಉತ್ತರ ಸಹಜವಾಗಿಯೇ ಸಿದ್ಧವಾಗಿತ್ತು ನೋ ಡೌಟ್ ಕವಿ, ಕವಿತೆಗಳ ಕಡೆಗೆ, ಅದರಲ್ಲೂ ಪಾಶ್ಚಾತ್ಯ ಕವಿಗಳು ಹಾಗೂ ಅವರ ಕವಿತೆಗಳು ನನ್ನ ಮೊದಲ ಆಧ್ಯತೆ ನನ್ನ ಸಾಹಿತ್ಯಾಸಕ್ತಿ ಗೊತ್ತಿರುವ ಅವರು ಅದರಲ್ಲೂ ಫ್ರೆಂಚ್ ಕವಿಗಳು ಮೊದಲು ಸೆಳೆಯುತ್ತಾರೆ ಅಲ್ಲವೇ? ಎಂದಿದ್ದರು.
 
 
ನಿಜ, ಫ್ರೆಂಚ್ ಸಾಹಿತಿಗಳದ್ದು ಒಂದು ಅದ್ಭುತವಾದ ಲೋಕ. ನೋಡಿದವರು ಏನೆಂದುಕೊಂಡಾರು ಎನ್ನುವ ಕಿಂಚಿತ್ ಆಲೋಚನೆಯೂ ಇಲ್ಲದೇ ಅಂದುಕೊಂಡಂತೆ ಬದುಕುವ ಧ್ರಾಷ್ಟ್ಯ  ತೋರಿದ, ತಮ್ಮ ಕಾವ್ಯಕ್ಕಾಗಿ, ಕಾವ್ಯ ಬರೆಯುವ ಅನುಭವಕ್ಕಾಗಿ, ಕಾವ್ಯದ ವಸ್ತುವಿಗಾಗಿ ಅತೀ ಕನಿಷ್ಟವಾಗಿ ಬದುಕಿ ತೋರಿಸಿದ, ಸ್ವೇಚ್ಛೆ, ಸ್ವಚ್ಛಂದತೆಯನ್ನು ಹೊಂದಿಯೂ ಅಲ್ಲೊಂದು ಶಿಸ್ತನ್ನು ಕಾಯ್ದುಕೊಂಡ, ಶಿಸ್ತಿನ ಸಿಪಾಯಿ ಆಗುತ್ತಲೇ ಎಲ್ಲಾ ಸಾಮಾಜಿಕ ಕಟ್ಟಳೆಗಳನ್ನು ಕಿತ್ತೊಗೆದು ಭಂಡತನ ಮೆರೆದ, ಅನುಭವಕ್ಕೆಂದು ಇದ್ದೆಲ್ಲ ಶ್ರೀಮಂತಿಕೆಯನ್ನು ಎಡಗಾಲಲ್ಲಿ ಒದ್ದು ಬಡತನವನ್ನು ಮೈದುಂಬಿ ಆಹ್ವಾನಿಸಿಕೊಂಡ, ಸರಾಯಿ ಗಡಂಗದಲ್ಲಿ, ಸೂಳೆಗೆರೆಯಲ್ಲಿ ವರ್ಷಗಟ್ಟಲೆ ಬದುಕಿದ, ಕೊನೆಗೆ ತಮ್ಮೆಲ್ಲ ತಪ್ಪುಗಳನ್ನು ಯಾವ ಕೀಳರಿಮೆಯೂ ಇಲ್ಲದೇ ಒಪ್ಪಿಕೊಂಡು,ಅದಕ್ಕೆಲ್ಲ ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತ ಬದುಕಿದ ಫ್ರೆಂಚ್ ಕವಿಗಳ ಲೋಕ ನಿಜಕ್ಕೂ ಈಸ್ಟಮನ್ ಕಲರ್‌ನಿಂದ ಕೂಡಿದ ಅದ್ಭುತ ಲೋಕ.
 
 
 ಗಣಪತಿಯನ್ನು ಅವಹೇಳನ ಮಾಡಿ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಯೋಗೇಶ್ ಮಾಸ್ತರ್ ಎಂಬುವವರು ಜೈಲು ಸೇರಿದ ಘಟನೆ ನೆನಪಾದಾಗಲೆಲ್ಲ ಆ ಕಾಲದಲ್ಲೇ ಇಡೀ ಸಮಾಜಕ್ಕೆ, ಧರ್ಮಕ, ಧೈವತ್ವಕ್ಕೆ, ರಾಜತ್ವಕ್ಕೆ, ಚರ್ಚಗೆ ಸವಾಲೆಸೆದು ಅವನ್ನೆಲ್ಲ ಖಂಡಿಸಿ, ಸಾರಾಸಗಟಾಗಿ ಅಲ್ಲಗಳೆದು, ಬಂಡೆದು ಬದುಕಿದ ಕವಿಗಳ ದೊಡ್ಡ ಪರಂಪರೆಯೇ ಫ್ರೆಂಚ್ ಸಾಹಿತ್ಯದಲ್ಲಿದ್ದುದು ನೆನಪಾಗುತ್ತದೆ. 
 
ಮಾಮೂಲಿ ಬದುಕಿಗೆ, ಸಾಮಾಜಿಕ ಕಟ್ಟಳೆಗೆ ಸೆಡ್ಡು ಹೊಡೆದು ಬರೆದಿದ್ದಷ್ಟೇ ಅಲ್ಲ, ಸೆಡ್ಡು ಹೊಡೆದು ನಿಂತ ಫ್ರೆಂಚ್ ಸಾಹಿತಿಗಳು ಇಡೀ ವಿಶ್ವ ಸಾಹಿತ್ಯ ಮಾಲಿಕೆಯಲ್ಲೇ ಒಂದು ಅಚ್ಚರಿಗಳ ಸಮಾವೇಶ.ನಾವಿಲ್ಲಿ  ದೈವೀಪ್ರೇರಣೆಯಿಂದ ಬರೆದೆ ಎಂದೋ, ಪುಷ್ಕರಣಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿ ಬರೆದರೆ ಮಾತ್ರ ಸ್ಪೂತಿ ಉಕ್ಕುಕ್ಕಿ ಹರಿಯುತ್ತದೆ ಎಂಬ ಭಾರತೀಯ ಹಾಗೂ ಕನ್ನಡ ಕವಿಕಲಿಗಳ ದೈವಾಂಶ ಸಂಭೂತತೆಯ ಬಗ್ಗೆ ಕಣ್ಣು ಮುಚ್ಚಿ ಹೇಳುತ್ತಿರುವಾಗ, ಅತ್ತ ಫ್ರೆಂಚ್ ಸಾಹಿತಿಗಳು ದೈವೀ ಪ್ರೇರಣೆಯಿಂದ ಕವಿತೆ ಹುಟ್ಟುತ್ತದೆ ಎಂಬ ಅಂಶವನ್ನೇ ಗೇಲಿ ಮಾಡುತ್ತ, ದೈವಿಪ್ರೇರಣೆಯಲ್ಲಿ ಬರೆಯುವವನು ಬರೀ ಮುರ್ಖ ಎಂದು ವಾದಿಸುತ್ತ, ಹಾಗೆ ಬರೆಯಲು ಕವಿಯೇನು ದೇವರ ಕಾರುಕೂನನೇ ಎಂದು ಹಾಸ್ಯಮಾಡಿದವನು ಫ್ರೆಂಚ್ ಕವಿಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವವ 'ಪಾಲ್ ವೆಲೆರಿ'.
 
ದೇವರನ್ನು ದೊಡ್ಡ ಮೋಸ ಎಂದೇ ಪರಿಭಾವಿಸಿದ್ದ ಪಾಲ್ ವೆಲೆರಿ 
ದೇವರೆಂದರೆ ಭಯ,
ದೇವರೆಂದರೆ ಆಸೆ
ದೇವರೆಂದರೆ ಚಳಿ
ದೇವರೆಂದರೆ ಹಸಿವೆ 
ಹೀಗೆ ಭಾವನೆಗಳ ಆವೇಗದಲ್ಲಿ ಕವನ ಹುಟ್ಟುವುದಿಲ್ಲ ಎನ್ನುತ್ತಿದ್ದ. ಭಾವನೆಗಳ ತೀವ್ರತೆ ಕವಿತೆಗೆ ವಸ್ತುವೂ ಆಗಲಾರದು ಎನ್ನುವ 'ಪಾಲ್ ವೆಲೆರಿ'  ಫ್ರೆಂಚ್ ಕಾವ್ಯ ಜಗತ್ತಿನಲ್ಲಿ ಅಪರೂಪದ ರೂಪಕ ಕವಿತೆಗಳಿಗೆ ಸೋಪಾನ ಹಾಕಿ ಕೊಟ್ಟವನು. ಸಾಂಪ್ರದಾಯಿಕ ಕಲ್ಪನೆಗಳನ್ನು ಧ್ವಂಸ ಮಾಡುವುದೇ ಕವಿತೆ ಎಂದು ನಂಬಿದ್ದ 'ಪಾಲ್ ವೆಲೆರಿ' ಸಾಮಾಜಿಕ ಕಟ್ಟುಗಳನ್ನು ಮುರಿಯುವವನೇ ಸಾಹಿತಿ ಅಥವಾ ಕವಿ ಎಂದು ನಂಬಿದ್ದ.  ಹೀಗಾಗಿ ಆತ ಇಡೀ ಸಾಮಾಜಿಕ ಬದುಕನ್ನು ತನ್ನದೇ ಆದ ಒಂದು ವಿಶಿಷ್ಟ ದೃಷ್ಟಿಕೋನದಲ್ಲಿ, ವಿಚಿತ್ರ ಪ್ರಯೋಗದಲ್ಲಿ ಅಧ್ಯಯನ ನಡೆಸುವುದಕ್ಕೆಂದೇ ತನ್ನ ಬದುಕನ್ನು ಮೀಸಲಾಗಿಟ್ಟು ಬಿಟ್ಟ.
 
              ನೀನು ಬರೆದ ಕಾವ್ಯ ಜಗತ್ತನ್ನು ಬೆಚ್ಚಿ ಬೀಳಿಸದಿದ್ದರೆ ಕಾವ್ಯದಿಂದೇನು ಪ್ರಯೋಜನ ಎಂದು ಕೇಳಿದ ಫ್ರೆಂಚ ಸಾಹಿತ್ಯದಲ್ಲಿ ಒಬ್ಬ ಅಪರೂಪದ ಕವಿ ಎಂದೇ ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿರುವ ಬೋಧಿಲೇರ್‌ನ ಮುಂದುವರಿದ ಭಾಗದಂತೆ ಗೋಚರವಾಗುವ  'ಪಾಲ್ ವೆಲೆರಿ' ವರ್ಲೆನ್, ಮೆರ್ಲಾಮೆ, ರ್‍ಯಾಂಬೋ ಮುಂತಾದವರ ಪ್ರತಿನಿಧಿಯಂತೆ ಕಾಣುತ್ತಿದ್ದ. 
 
ವಿಶಷ್ಟ ಅನುಭವಕ್ಕಾಗಿ ತಮ್ಮ ಜೀವನವನ್ನೇ ಒತ್ತೆಯಿಡುವ ಫ್ರೆಂಚ್ ಸಾಹಿತ್ಯಲೋಕಕ್ಕೆ ಮತ್ತೊಂದು ಕೊಡುಗೆಯಂತೆ ಗೋಚರವಾಗುತ್ತಿದ್ದ  'ಪಾಲ್ ವೆಲೆರಿ' ಹುಟ್ಟಿದ್ದು ಮೆಡಿಟರೇನಿಯನ್ ಸಮುದ್ರ ತೀರದ ಸೀಟೆ ಎನ್ನುವ ಚಿಕ್ಕ ಊರಲ್ಲಿ ೧೮೭೧ ಅಕ್ಟೋಬರ್ ಮುವತ್ತರಂದು. ಬಂದರು ಪ್ರದೇಶವಾದ ಸೀಟೆಯಲ್ಲಿ ಆತನ ತಂದೆ 'ಬಾರ್ಷೆಮಿ ವೆಲೆರಿ' ಸುಖದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ತಾಯಿ 'ಫೆನ್ರಿ ಗ್ರೇಸ್ಸಿ' ಇಟಾಲಿಯನ್ ಕೌನ್ಸಿಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಚಿಕ್ಕಂದಿನಿಂದಲೇ ಸಂಪ್ರದಾಯಗಳನ್ನು ಪ್ರಶ್ನಿಸುತ್ತಲೇ ಬೆಳೆದ 'ಪಾಲ್ ವೆಲೆರಿ'ಯ ಬಂಡುಕೋರ ಗುಣ ಚಿಕ್ಕಂದಿನಿಂದಲೇ ಆತನನ್ನು ಹಾಗೂ ಆತನ ಕುಟುಂಬವನ್ನು ಹಲವಾರು ಸಲ ಇಕ್ಕಟ್ಟಿಗೆ ಸಿಲುಕಿಸಿತ್ತು. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೀಟೆಯಲ್ಲಿಯೇ ಮುಗಿಸಿದ ವೆಲೆರಿ ಮಾಂಟ್‌ಪೆಲಿಯರ್ ವಿಶ್ವ ವಿದ್ಯಾನಿಲಯದಲ್ಲಿ  ಕಾನೂನು ಹಾಗೂ ಕಾವ್ಯವನ್ನು ಅಭ್ಯಾಸ ಮಾಡಿದ. ಐಸಿ ಯುನಿವರ್ಸಿಟಿಯಲ್ಲಿ ವಾಸ್ತು ವಿಜ್ಞಾನವನ್ನು ಅಭ್ಯಸಿಸಿದ ಪಾಲ್ ವೆಲೆರಿಯ ಆಸಕ್ತಿ, ಪ್ರವೃತ್ತಿ ಹಾಗೂ ಉದ್ಯೋಗ ಎಲ್ಲದರಲ್ಲಿಯೂ ವಿಭಿನ್ನತೆಯನ್ನು ಕಾಯ್ದುಕೊಂಡ.ವಾಸ್ತುವಿಜ್ಞಾನ ಆತನ ಆಸಕ್ತಿಯ ಕ್ಷೇತ್ರ. ಹೀಗಾಗಿ ಕಾನೂನು, ವಾಸ್ತುವಿಜ್ಞಾನ ಮತ್ತು ಸಾಹಿತ್ಯ ಎನ್ನುವ ಮೂರು ವಿಭಿನ್ನ ಆಯಾಮಗಳನ್ನು ಒಗ್ಗೂಡಿಸಿ ಕಾವ್ಯ ರಚಿಸುವುದು ವೆಲೆರಿಯಿಂದ ಸಾದ್ಯವಾಯಿತು.
 
 ಹದಿಹರೆಯದಲ್ಲಿಯೇ ಫ್ರೆಂಚ್ ಕಾವ್ಯದ ಅಪರೂಪದ ರೂಪಕ ಚಕ್ರವರ್ತಿ ಎಂದೇ ಹೆಸರು ಗಳಿಸಿದ್ದ ಆಂಡ್ರೆ ಜಿಡೆ'ಯ ಸಂಪರ್ಕಕ್ಕೆ ಬಂದ ವೆಲೆರಿಯ ಕಾವ್ಯ ಆತನಿಂದ ಬಹಳಷ್ಟು ಪ್ರಭಾವಕ್ಕೆ ಒಳಗಾಯಿತಲ್ಲದೇ ರೂಪಕ, ಪ್ರತಿಮೆ ಹಾಗೂ ಅಮೂರ್ತ ಕಲ್ಪನೆಗಳು ಕಾವ್ಯದಲ್ಲಿ ಮಡುಗಟ್ಟಲು ಸಹಕಾರಿಯಾಯಿತು. ಅಷ್ಟರಲ್ಲೇ ಪ್ರೆಂಚ್ ಕಾವ್ಯದ ಸಿಂಬಲಿಸ್ಟಗಳೆಂದೇ ಹೆಸರುವಾಸಿಯಾಗಿದ್ದ ಮರ್ಲಾಮೆ ಹಾಗೂ ಇನ್ನಿತರರು ಆತನನ್ನು ತಮ್ಮ ತೆಕ್ಕೆಗೆ ಎಳೆದುಕೊಂಡಾಗಿತ್ತು. 
 
ಸ್ಟಿಫನ್ ಮರ್ಲಾಮೆ  ಮುಂತಾದ ಸಿಂಬಲಿಸ್ಟಗಳ ಜೊತೆ ಸಿಂಬಲಿಸ್ಟ ಮೂವ್‌ಮೆಂಟ್‌ನ ಒಬ್ಬ ಸಕ್ರೀಯ ಸದಸ್ಯನೆನಿಸಿಕೊಂಡ ವೆಲೆರಿಯ ಕಾವ್ಯ ಮಾರ್ಗ ಎಲ್ಲರೂ ತುಳಿದ ರಾಜಮಾರ್ಗವಾಗಿರಲಿಲ್ಲ. ಬದಲಾಗಿ ಮದಗಜವೊಂದು  ದಟ್ಟವಾದ ಕಾಡಿನಲ್ಲಿ ಸ್ವಚ್ಛಂದವಾಗಿ ತನ್ನ ದಾರಿಯನ್ನು ತಾನೇ ನಿರ್ಮಿಸಿಕೊಂಡಂತಿತ್ತು. ಆತನ ಹಲವಾರು ಕವಿತೆಗಳು 'ಸಿಂಬಲಿಸ್ಟ ಮೂವ್‌ಮೆಂಟ್' ಪತ್ರಿಕೆಯಲ್ಲಿ ಪ್ರಕಟವಾಗಿಯೂ ತಮ್ಮ ಅನನ್ಯತೆಯನ್ನು ಕಾಯ್ದುಕೊಂಡು ಕಾವ್ಯಲೋಕದ ದಿಗ್ಗಜರನ್ನು ಸೆಳೆಯುವಲ್ಲಿ ಸಫಲವಾಯಿತು.            
 
ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿದ ಪಾಲ್ ವೆಲೆರಿಗೆ ಆ ಪ್ರೇಮವನ್ನು ದಕ್ಕಿಸಿಕೊಳ್ಳಲಾಗಲಿಲ್ಲ.. ಆ ಈಡೇರದ ಪ್ರೇಮಪ್ರಕರಣ ಆತನಿಗೆ ಸಾಕಷ್ಟು ನೋವನ್ನು ನೀಡಿತು. ಇದರಿಂದಾಗಿ ವೆಲೆರಿ ಎಲ್ಲಾ ಲೌಕಿಕ ಸಂಬಂಧಗಳನ್ನು ತೊರೆದು ತನ್ನ ಸಮಯವನ್ನು ಕೇವಲ ಓದು ಹಾಗೂ ಕಾವ್ಯದ ಮೂಲ ಹುಡುಕುತ್ತ ಕಾವ್ಯರಚನೆ ಮಾಡುವುದರಲ್ಲಿ ಕಳೆದ.ಫ್ರೆಂಚ್ ಕವಿಗಳ ವಿಕ್ಷಿಪ್ತ ಮನಸ್ಥಿತಿಯಿಂದ ಪಾಲ್ ವೆಲೆರಿಯೇನೂ ಹೊರತಾಗಿರಲಿಲ್ಲ.
 
 ಸುಮಾರು ಇಪ್ಪತ್ತು ವರ್ಷಗಳ ಕಾಲ ಹೊರ ಪ್ರಪಂಚದೊಂದಿಗೆ ಯಾವ ಸಂಪಕ್ವೂ ಇರದೇ ಫ್ತಾರಿಸ್‌ನ 'ಗೇಲುಸಾಕ್' ಎಂಬ ಬೀದಿಯಲ್ಲಿ ಚಿಕ್ಕದೊಂದು ಕೋಣೆಯಲ್ಲಿ ತನ್ನನ್ನೇ ತಾನು ಬಂಧಿಯಾಗಿಸಿಕೊಂಡು ಉಳಿದು ಬಿಟ್ಟ. ಪ್ರತಿದಿನ ಬೆಳಿಗ್ಗೆ ಐದು ಘಂಟೆಗೆ ಎದ್ದು ಆ ಸಮಯದಲ್ಲಿ ತನ್ನೊಳಗೆ ಮೂಡುವ ಭಾವನೆಗಳನ್ನು, ಅಕ್ಷರಗಳನ್ನು ಒಂದೆಡೆ ದಾಖಲಿಸುತ್ತಾ ಹೋದ. ಆ ಮೂಲಕ ವೆಲೆರಿ ತನ್ನನ್ನು ತಾನು ಕಂಡುಕೊಂಡಿದ್ದಷ್ಟೆ ಅಲ್ಲ ತನ್ನೊಳಗಿನ ಕಾವ್ಯವನ್ನೂ ಕಂಡುಕೊಂಡ. ಆ ಸಮಯದಲ್ಲಿ ಅತ್ಯದ್ಭುತ ಕವನಗಳು ಸೃಷ್ಟಿಯಾದವು.
 
೧೮೯೦ರಲ್ಲಿ ರಚಿತವಾದ 'ಲಾಜಿನೆ ಪಾರ್ಕ' ಆತನಿಗೆ ತಕ್ಷಣ ಕೀರ್ತಿ ತಂದುಕೊಟ್ಟ ಕೃತಿ. ಅದ್ಭುತ ಶಬ್ಧ ಸಂಯೋಜನೆ ಇರುವ ಈ ಕವನ ವೆಲೆರಿಗೆ  ಫ್ರೆಂಚ್ ಕಾವ್ಯ ಜಗತ್ತಿನೊಳಗೆ ರೆಡ್ ಕಾರ್ಪೆಟ್‌ನ ಸ್ವಾಗತ ಸಿಗುವಂತೆ ಮಾಡಿತು. 'ಆ ಡಿ ದ ವೆರ್ಸ ಆನ್ ಸೀ ಯು', 'ದಿ ಸಿಮೆಟ್ರಿ ಬೈದಿ ಸೀ' ಅಥವಾ 'ದಿ ಗ್ರೇವ್‌ಯಾರ್ಡ ಬೈ ದಿ ಸೀ' ಕವನಗಳು ಆತನಿಗೆ ಇನ್ನಿಲ್ಲದಂತೆ ಹೆಸರು ತಮದು ಕೊಟ್ಟಿತು. ಅದರಲ್ಲೂ ಬದುಕಿನ ನಶ್ವರತೆಯನ್ನು ಹೇಳುವ 'ದಿ ಸಿಮೆಟ್ರಿ ಬೈ ದಿ ಸೀ' ಅಥವಾ 'ದಿ ಗ್ರೇವ್‌ಯಾರ್ಡ ಬೈ ದಿ ಸೀ' ವೆಲೆರಿಯನ್ನು ಅತ್ಯತ್ತಮ ಅಸಂಗತ ಕವಿಯನ್ನಾಗಿಯೂ ಪ್ರಪಂಚಕ್ಕೆ ತೆರೆದಿಟ್ಟಿತು.
 
ಹುಡುಗಿಯ ಉನ್ಮಾದದ ಕೂಗು,
ಹೊಳೆವ ಹಲ್ಲುಗಳು
ಬೆಂಕಿಯ ಜೊತೆ ಆಡುವ 
ಆಕೆಯ ಸಂಪದ್ಭರಿತ ಮೊಲೆಗಳು
ಅವಳ ಪ್ರಜ್ವಲಿಸುವ 
ಆಸೆ ತುಂಬಿದ ತುಟಿಗಳು
ಪ್ರೇಮದ ಉನ್ಮಾದದ ಸ್ಥಿತಿಯಲ್ಲಿ
ಸೆಟೆದು ನಿಂತ ಆಕೆಯ ಬೆರಳುಗಳು
ಎಲ್ಲವೂ ಒಂದಲ್ಲಾ ಒಂದು ದಿನ 
ಸ್ಮಶಾನ ಸೇರಿ ಮಣ್ಣಾಗಲೇ ಬೇಕು
ಪ್ರೇಮದ ಮಾದಕತೆಯಲ್ಲಿ  ಅರಳಿದ್ದ 
ಪ್ರೀತಿ ವಿರಹದಲ್ಲಿ ನೀರು ತುಂಬಿಕೊಂಡಿದ್ದ
ಆಕೆಯ ಕಣ್ಣುಗಳ ಮೇಲೆ
ಹುಳುಗಳು ಹರಿದಾಡುತ್ತವೆ
ಎನ್ನುತ್ತ ಸ್ಮಶಾನ ವೈರಾಗ್ಯದ ಚಿತ್ರಣ ನೀಡುತ್ತಾನೆ.
 
            ೧೯೩೧ ಹಾಗೂ ೧೯೩೪ರಲ್ಲಿ  ಆತನ ಮೆಲೊಡ್ರಾಮಾಗಳು ರಂಗದ ಮೇಲೆ ಪ್ರದರ್ಶನಗೊಂಡವು. ಇದಕ್ಕೂ ಮೊದಲು ಅಂದರೆ ೧೯೨೫ರಲ್ಲಿ ಆತ ಫ್ರಾನ್ಸನ ಅಕಾಡೆಮಿಗೆ ಆಯ್ಕೆಗೊಂಡ. ೧೯೩೩ರಲ್ಲಿ ಮೆಡಿಟೆರಿಯನ್ ನೈಸ್‌ನಲ್ಲಿರುವ ಕೇಂದ್ರ ವಿಶ್ವವಿದಾಲಯದಲ್ಲಿ ಶೈಕ್ಷಣಿಕ ಆಡಳಿತಗಾರನಾಗಿ ಆಯ್ಕೆಗೊಂಡ.೧೯೩೭ರಲ್ಲಿ ಫ್ರಾನ್ಸ ಕಾಲೇಜಿನಲ್ಲಿ ಪ್ರೊಫೆಸರ್ ಆಪ್ ಪೋಯೆಟ್ರಿ'ಯಾಗಿ ನೇಮಕಗೊಂಡ. ೧೯೩೯ರಲ್ಲಿ ಆತ ಬಹು ದಿನಗಳಿಂದ ಬರೆಯ ಬೇಕೆಂದು ಕನಸು ಕಾಣುತ್ತಿದ್ದ 'ಲಿಬರ್ಟೋ ಫಾರ್ ಜೆರವ್ಯು ಟೈಲ್‌ಪೆರ್‍ಸ್ ಕಾಲ್‌ಬೆಕ್ ಡು ನ ರೈಸೆ' ಬರೆದ. ಆದರೆ ಅದರ ನಂತರ ಆತ ಬಹುಕಾಲ ಬದುಕುಳಿಯಲಿಲ್ಲ. ತನ್ನ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಅಂದರೆ ಜುಲೈ ೨ ೧೯೪೫ರಲ್ಲಿ ವಿಧಿವಶನಾದ. ಆತನನ್ನು ಆತನ ಪ್ರೀತಿಯ ಊರಾದ ಸೆಟೆಯಲ್ಲಿ ಶಾಸ್ವತವಾಗಿ ಮಲಗಿಸಲಾಯಿತು. 
 
      ಪಾಲ್ ವೆಲೆರಿಯ ಪ್ರಕಾರ ಯಾವ ಸಾಹಿತಿಯೂ ತನ್ನ ಕೃತಿಯನ್ನು ಪೂರ್ಣಗೊಳಿಸುವುದಿಲ್ಲ. ಆತನ ಎಲ್ಲಾ ಕೃತಿಗಳೂ ಅಪೂರ್ಣವೆ. ಕೇವಲ ವೈಚಾರಿಕ ಮನೋಭಾವದಿಂದಷ್ಟೇ ಹುಟ್ಟುವುದಿಲ್ಲ ಎಂದು ಬಲವಾಗಿ ನಂಬಿದ್ದ ವೆಲೆರಿ ಶಬ್ಧಗಳ ಪರಿಣಾಮಕಾರಿ ಜೋಡಣೆಯಿಂದಾಗಿ ಡೈನಮೇಟ್‌ನಂತಹ ಕಾವ್ಯವನ್ನು ಸೃಷ್ಟಿಸಬಹುದೆಂದು ವಾದಿಸುತ್ತಿದ್ದ . 'ಪ್ರತಿ ಶಬ್ಧಕ್ಕೂ ಜೀವ ಇರುತ್ತದೆ, ಅಂತಃಸತ್ವವಿರುತ್ತದೆ. ಹಾಗೆ ಅಂತಃಸತ್ವಗಳಿರುವ ಜೀವಂತ ಶಬ್ಧಗಳನ್ನು ಜೋಡಿಸಿದಾಗ ಮಾತ್ರ ಅತ್ಯುತ್ತಮ ಕವನ ಸೃಷ್ಟಿಯಾಗುತ್ತದೆ ಮತ್ತು ಆ ಕವಿತೆ ನಿಶ್ಚಿತ ಪರಿಣಾಮವೇ ಬದುಕಿನ ಸತ್ಯ' ಎನ್ನುತ್ತಾನೆ. 'ಹೇಳಬೇಕಾದದ್ದನ್ನು ಯಾವುದೇ ಉತ್ಪ್ರೇಕ್ಷೆ ಇಲ್ಲದೇ ವಾಸ್ತವಿಕ ನೆಲೆಗಟ್ಟಿನಲ್ಲಿ ಸಂಕ್ಷಿಪ್ತವಾಗಿ ಹಾಗೂ ಕ್ರಮಬದ್ಧವಾಗಿ ಹೇಳುವುದೇ ಕವಿತೆ' ಎಂದು ಖಡಾಖಂಡಿತವಾಗಿ ಹೇಳುವ ಪಾಳ್ ವೆಲೆರಿ ಎಂದೂ ಕಾವ್ಯವನ್ನು ನಿರ್ಜಿವ, ನಿಸ್ಸತ್ವ ಎಂದು ಯೋಚಿಸಲೇ ಇಲ್ಲ. 
 
'ಕಾವ್ಯ ಹಾಗೂ ಅದರಲ್ಲಿ ಅಡಕವಾದ ಶಬ್ಧಗಳೂ  ಮನುಷ್ಯನ ಬೌಧಿಕತೆಯ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ' ಎಂಬುದು ವೆಲೆರಿಯ ನಂಬಿಕೆಯಾಗಿತ್ತು. ಹೀಗಾಗಿ ಆತ ಶಬ್ಧಗಳನ್ನುವಿಭಿನ್ನವಾಗಿ ಜೋಡಿಸುತ್ತ ರೂಢಿಗತ ಪದ್ದತಿಗಳನ್ನು ಧಿಕ್ಕರಿಸುತ್ತ, ಅರ್ಥಗಳನ್ನು ಅದಲು ಬದಲು ಮಾಡುತ್ತ, ಶಬ್ಧ ಶಬ್ಧಗಳಲ್ಲಿ ವೈರುಧ್ಯವನ್ನು ಸೃಷ್ಟಿಸುತ್ತ ಎರಡು ವಾಕ್ಯದ ನಡುವಿನ ಅರ್ಥ ಮಾತ್ರವಲ್ಲ ಎರಡು ಶಬ್ಧಗಳ ನಡುವಿನ ಅರ್ಥವನ್ನು ಕೂಡ ಕಟ್ಟಿಕೊಡಲೆತ್ನಿಸಿದ. ಶುದ್ಧವಾದ ಶಬ್ಧಕ್ಕೆ ಅಲಂಕಾರದ, ವಿಶೇಷಾರ್ಥದ ಅವಶ್ಯಕತೆಯಿಲ್ಲ ಎಂಬುದನ್ನು ಒತ್ತಿ ಹೇಳಿದ ವೆಲೆರಿ ಶಬ್ಧಕ್ಕೆ ಹೊದಿಸಿದ್ದ ಅವಕುಂಠನವನ್ನು ಸರಿಸಿದ್ದಷ್ಟೇ ಅಲ್ಲ, ಪ್ರತೀ ಶಬ್ಧಕ್ಕೂ ಇದೇ ಅರ್ಥ ಎಂಬ ಪೂರ್ವಸಿದ್ಧಾಂತವನ್ನು ಬುಡಮೇಲು ಮಾಡಿ ವರ್ತಮಾನದ ನೆಲೆಯಲ್ಲಿ ಅರ್ಥ ಕಂಡುಕೊಳ್ಳಬೇಕಾದ ಅನಿವಾರ್‍ಯತೆಯನ್ನು ಸೃಷ್ಟಿಸಿದ. 
 
ಆತನ ಕವನಗಳ ವಿಷಯ ವಸ್ತುಗಲೂ ಕೂಡ ವರ್ತಮಾನಕ್ಕೇ ಸಂಬಂಧ ಪಟ್ಟಿದ್ದವು. ವರ್ತಮಾನದ ಘಟನೆಗಳು ಮನುಷ್ಯನ ವರ್ತನೆಯನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಕುರಿತು ಆಳವಾಗಿ ಅಧ್ಯಯನ ನಡೆಸಿದ. ವರ್ತಮಾನದ ಘಟನೆಗಳು, ಮನುಷ್ಯ ವರ್ತನೆ ಮತ್ತು ಆ ವರ್ತನೆ ಮತ್ತು ಆ ವರ್ತನೆಗೆ ಹೊಂದಿಕೊಂಡ ಭಾವನೆಗಳ ಮೇಲೆ ಆತ ರಚಿಸಿದ ಕವಿತೆಗಳು ಒಂದು ರೀತಿಯ ಹೊಸ ಕಾವ್ಯದ ಅಲೆಯನ್ನೇ ಫ್ರಾನ್ಸನಲ್ಲಿ ಹುಟ್ಟುಹಾಕಿತು.
                           

        

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...