Sunday, October 27, 2013

ಪೇಜಾವರರಿಗೆ ನೀಡಬೇಕಿದೆ ಮಾನವ ದೀಕ್ಷೆ

ಸನತ್‌ಕುಮಾರ ಬೆಳಗಲಿ

ಸೌಜನ್ಯ : ವಾರ್ತಾಭಾರತಿ

ಬ್ರಾಹ್ಮಣ್ಯ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗಲೆಲ್ಲ, ಆ ಬಿಕ್ಕಟ್ಟಿನಿಂದ ಪಾರಾಗಲು ನಾನಾ ಕುತಂತ್ರಗಳನ್ನು ನಡೆಸುತ್ತದೆ. ಹತಾಶೆಗೊಂಡು ಗುಂಡಾಗಿರಿಗೆ ಇಳಿಯುತ್ತದೆ. ಹಿಂಸಾಚಾರಕ್ಕೂ ಹೇಸುವುದಿಲ್ಲ ಎಂಬುದು ಚಾರಿತ್ರಿಕ ಸತ್ಯ. ಕೆ.ಎಸ್.ಭಗವಾನ್ ತಮ್ಮ ‘ಶಂಕರಾಚಾರ್ಯರ ಪ್ರತಿಗಾಮಿತನ’ ಪುಸ್ತಕದಲ್ಲಿ ಈ ಕುರಿತು ವಿವರವಾಗಿ ದಾಖಲಿಸಿದ್ದಾರೆ. ಈಗ ಪೇಜಾವರ ಸ್ವಾಮಿಗಳು ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ಹೊರಟಿರುವುದು ಕೂಡ ಇಂತಹ ಕುತಂತ್ರವಲ್ಲದೇ ಬೇರೇನೂ ಅಲ್ಲ. ತಮ್ಮ ಜಾತಿಯ ಹಿತಾಸಕ್ತಿಗಾಗಿ ಇಂತಹ ಮಸಲತ್ತುಗಳನ್ನು ಅವರು ಮಾಡಲೇಬೇಕಾಗುತ್ತದೆ. ಮನುಷ್ಯನ ಉನ್ನತಿಯ ಬಗ್ಗೆ ಎಂದೂ ಆಲೋಚಿಸದ ರೋಗಗ್ರಸ್ತ ಮನಸ್ಸುಗಳು ಮಾತ್ರ ಜಾತಿ ಹೆಸರಿನಲ್ಲಿ ದೀಕ್ಷೆಗಳಿಗೆ ಮುಂದಾಗುತ್ತವೆ. ಬಾಗಲ ಕೋಟೆಯ ಮಾಧ್ವಮಂಡಳದ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಮಾತನಾಡಿದ ಪೇಜಾವರ ಸ್ವಾಮಿಗಳು, ‘ಕನಕದಾಸರಿಗೆ ಮಾಧ್ವರಿಂದ ಯಾವುದೇ ಅಪಚಾರವಾಗಿಲ್ಲ. ಆದರೆ ಕನಕನ ಅನುಯಾಯಿಗಳು ಮತ್ತು ಕಾಗಿನೆಲೆ ಕನಕಪೀಠದ ಮಠಾಧೀಶರಿಂದ ಕನಕದಾಸರಿಗೆ ಅಪಚಾರವಾಗಿದೆ’ ಎಂದು ಹಿಂದುಳಿದ ಸಮುದಾಯಗಳ ಸ್ವಾಭಿಮಾನವನ್ನು ಕೆಣಕಿದ್ದಾರೆ.
ವಿಷ್ಣು ಆರಾಧನೆ ಮತ್ತು ಮುದ್ರೆಗಳ ಧಾರಣೆಯನ್ನು ಕನಕದಾಸರು ಮಾಡುತ್ತಿದ್ದರು. ಕನಕರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕುರುಬರು ಅದನ್ನು ಮಾಡಬೇಕು. ಅವರಿಗೆ ತಾವು ವೈಷ್ಣವ ದೀಕ್ಷೆ ನೀಡಲು ಸಿದ್ಧವಿರುವುದಾಗಿ ಪೇಜಾವರರು ಹೇಳಿದ್ದಾರೆ. ಬ್ರಾಹ್ಮಣರು ಮತ್ತು ಕುರುಬರ ಮಧ್ಯೆ ವಿವಾದ ಹುಟ್ಟುಹಾಕಲು ಬುದ್ಧಿಜೀವಿಗಳಿಂದ ಹುನ್ನಾರ ನಡೆದಿದೆ ಎಂದು ಪೇಜಾವರರು ಎಂದಿನಂತೆ ಆರೋಪಿಸಿದ್ದಾರೆ. ಪೇಜಾವರರ ಈ ಮಾತಿನಿಂದ ಕೆರಳಿದ ಕಾಗಿನೆಲೆ ಕನಕ ಪೀಠಾಧೀಶರು, ‘ಕುರುಬರು ವೈಷ್ಣವ ದೀಕ್ಷೆ ತೆಗೆದುಕೊಳ್ಳುವುದಿಲ್ಲ.ಬೇಕಿದ್ದರೆ ಪೇಜಾವರರು ಮತ್ತು ಬ್ರಾಹ್ಮಣರು ಹಾಲುಮತದ ದೀಕ್ಷೆ ಪಡೆಯಲಿ’ ಎಂದು ಸವಾಲು ಹಾಕಿದ್ದಾರೆ. 

 

‘ಕುರುಬರಿಗೆ ವೈಷ್ಣವ ದೀಕ್ಷೆ ಬೇಡ. ಪೇಜಾವರರೇ ಬೀರದೇವರ ದೀಕ್ಷೆ ಪಡೆದು ಕುರಿ ಕಾಯಲು ಹೋಗಲಿ’ ಎಂದು ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ ನೇರವಾಗಿ ಪೇಜಾವರರಿಗೆ ಹೇಳಿದ್ದಾರೆ. ಆದರೂ ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಅದರಲ್ಲೂ ಮಾಧ್ವಮತದ ರಕ್ಷಣೆಗೆ ಪಣ ತೊಟ್ಟಿರುವ ಪೇಜಾವರರು ಕನಕ ಸಿದ್ಧಾಂತ ಬೇಕು ಎನ್ನುವುದಾದರೆ ಹಾಲುಮತದವರು ವೈಷ್ಣವ ಪರಂಪರೆಯವರೆಂದು ಒಪ್ಪಿಕೊಳ್ಳಬೇಕು ಎಂದು ಮೊಂಡು ವಾದ ಮಾಡಿದ್ದಾರೆ.
ವೈಷ್ಣವ ದೀಕ್ಷೆ ಸ್ವೀಕರಿಸದಿದ್ದರೆ, ಕನಕ ಸಿದ್ಧಾಂತ, ಕನಕಪೀಠವೆಂದು ಹೇಳುವುದು ಬಿಡಬೇಕು ಎಂದು ಕೆಣಕಿದ್ದಾರೆ. ಇಷ್ಟು ವರ್ಷಗಳ ಕಾಲ ವಿಶಾಲ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದ, ಸಮಾಜ ಸುಧಾರಕರು ಎಂಬ ಪೋಸು ಕೊಡುತ್ತಿದ್ದ ಪೇಜಾವರರು ಕುರುಬರಿಗೆ ವೈಷ್ಣವ ದೀಕ್ಷೆ ನೀಡುವ ಹಠ ಹಿಡಿದು ಅತ್ಯಂತ ಕುಬ್ಜರಾಗಿದ್ದಾರೆ. ತಮ್ಮನ್ನು ತಾವು ಏನೆಂದು ತೋರಿಸಿ ಕೊಂಡಿದ್ದಾರೆ. ಈವರೆಗೆ ಹಾಕಿದ್ದ ಹಿಂದೂತ್ವದ ಸೋಗು ಬ್ರಾಹ್ಮಣ್ಯದ ಹಿತಾಸಕ್ತಿಗೆ ಮಾತ್ರ ಎಂಬುದು ಇದರಿಂದ ಸ್ಪಷ್ಟವಾಗಿದೆ. 

ಬ್ರಾಹ್ಮಣ್ಯದ ಈ ಕುತಂತ್ರ ಹೊಸದಲ್ಲ.ಚರಿತ್ರೆಯಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಗೌತಮ ಬುದ್ಧನನ್ನು ಈ ದೇಶದಿಂದ ಓಡಿಸಿದ್ದು, ಏಕಲವ್ಯನ ಬೆರಳು ಕತ್ತರಿಸಿದ್ದು, ಶಂಬುಕನ ಹತ್ಯೆ ಮಾಡಿದ್ದು, ನಾಗಾರ್ಜುನ ಕೊಂಡ ನಾಶ ಮಾಡಿದ್ದು ಹೀಗೆ ಸಾವಿರಾರು ಉದಾಹರಣೆಗಳನ್ನು ಕೊಡ ಬಹುದು. ಪುರೋಹಿತಶಾಹಿಯ ಕುತಂತ್ರದ ಬಗ್ಗೆ ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ, ಬಸವಣ್ಣ, ನಾರಾಯಣಗುರುಗಳು ಸಾಕಷ್ಟು ರೋಸಿಹೋಗಿದ್ದರು.

ಬ್ರಾಹ್ಮಣ್ಯದ ಹುನ್ನಾರದ ಬಗ್ಗೆ ರೋಸಿ ಹೋಗಿದ್ದ ಸ್ವಾಮಿ ವಿವೇಕಾನಂದರು, ‘ನೀಚರು, ಕುತಂತ್ರಿಗಳೂ ಆದ ಪುರೋಹಿತರು ಎಲ್ಲ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರವೆಂದು ಪ್ರಚಾರ ಮಾಡುತ್ತಾರೆ. ಈ ಠಕ್ಕ ಪುರೋಹಿತರಾಗಲಿ-ಅವರ ತಾತ ಮುತ್ತಾತಂದಿರಾಗಲಿ ಕಳೆದ 400 ತಲೆಮಾರುಗಳಿಂದ ವೇದದ ಒಂದು ಭಾಗವನ್ನು ಓದಿಲ್ಲ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕಿದೆ’ ಎಂದು ಹೇಳಿದ್ದರು.
ಸುಳ್ಳು ಹೇಳುವುದು ಪುರೋಹಿತ ಶಾಹಿಯ ಜಾಯಮಾನ. ಐದು ಸಾವಿರ ವರ್ಷಗಳಿಂದ ಇಂತಹ ಸುಳ್ಳುಗಳನ್ನು ಹೇಳುತ್ತಲೇ ಬಂದಿದ್ದಾರೆ. ಈಗ ಪೇಜಾವರ ಸ್ವಾಮಿಗಳು ಕುರುಬರು ವಿಷ್ಣುವಿನ ಆರಾಧಕರು ಎಂದು ಹೇಳುತ್ತಿರುವುದು ಕೂಡ ಹಸಿಸುಳ್ಳು. ಈ ದೇಶದ ಕುರುಬ ಸಮುದಾಯದ ಆರಾಧ್ಯದೈವ ಮೈಲಾರ ಲಿಂಗ. ಮಹಾರಾಷ್ಟ್ರದಲ್ಲಿ ಮೈಲಾರಲಿಂಗನಿಗೆ ಖಂಡೋಬ ಎಂದು ಕರೆಯುತ್ತಾರೆ.ಕರ್ನಾಟಕದ ಬಹುಭಾಗಗಳಲ್ಲಿ ಮೈಲಾರಲಿಂಗನ ಜೊತೆ ಬೀರದೇವರಿಗೂ ಕೂಡ ಕುರುಬರು ನಡೆದುಕೊಳ್ಳುತ್ತಾರೆ.

ವಾಸ್ತವ ಸ್ಥಿತಿ ಹೀಗಿರುವಾಗ ಕನಕದಾಸರು ಉಡುಪಿಗೆ ಬಂದು ವಿಷ್ಣುವನ್ನು ಸರ್ವೋತ್ತಮ ಎಂದು ಹಾಡಿಹೊಗಳಿದ ಮಾತ್ರಕ್ಕೆ ಕುರುಬರೆಲ್ಲ ವೈಷ್ಣವ ದೀಕ್ಷೆ ಪಡೆದುಕೊಳ್ಳಬೇಕೆಂದು ಹೇಳುವುದು ಅತಿರೇಕವಾಗುತ್ತದೆ. ಪೇಜಾವರ ಸ್ವಾಮಿಗಳು ಕೂಡ ಸಮಾಜಸುಧಾರಕರು ಎಂದು ತೋರಿಸಿಕೊಳ್ಳಲು ದಲಿತ ಕೇರಿಗಳಿಗೆ ಭೇಟಿ ಕೊಡುತ್ತಾರೆ. ಹಾಗೆಂದು ಅವರು ಅಂಬೇಡ್ಕರ್ ದೀಕ್ಷೆ ತೆಗೆದುಕೊಳ್ಳುವರೇ? ಬ್ರಾಹ್ಮಣ್ಯ ತನ್ನ ಉಳಿವಿಗಾಗ ಆಗಾಗ ತನ್ನ ವೇಷ ಬದಲಿಸಿಕೊಳ್ಳುತ್ತದೆ. ತನ್ನ ತಂತ್ರವನ್ನು ನವೀಕರಣಗೊಳಿಸಿಕೊಳ್ಳುತ್ತದೆ.

ನವ ವಿಧಾನಗಳಲ್ಲಿ ವಂಚನೆಗೆ ಮುಂದಾಗುತ್ತದೆ. ತನ್ನ ಅಸ್ತಿತ್ವಕ್ಕೆ ಗಂಡಾಂತರ ಬಂದಾಗ, ಹಿಂದೂಧರ್ಮಕ್ಕೆ ಗಂಡಾಂತರ ಬಂದಿದೆಯೆಂದು ಬೊಬ್ಬೆ ಹಾಕುತ್ತದೆ. ಹಿಂದೂ ಧರ್ಮದ ಹೆಸರಿನಲ್ಲಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಹೇರಲು ಹುನ್ನಾರ ನಡೆಸುತ್ತದೆ. ಈಗ ಶಿವಾಜಿಯನ್ನು ಹಿಂದೂ ಧರ್ಮದ ಸಾಮ್ರಾಟ ಎಂದು ಹೇಳಿಕೊಳ್ಳುವ ಇದೇ ಶಕ್ತಿಗಳು, ಶಿವಾಜಿ ಬದುಕಿದ್ದಾಗ ಆತ ಕ್ಷತ್ರಿಯನಲ್ಲ ಎಂದು ಆತನ ಪಟ್ಟಾಭಿಷೇಕಕ್ಕೆ ಅಡ್ಡಿಯುಂಟು ಮಾಡಿದ್ದವು. ಪೇಜಾವರ ಸ್ವಾಮಿಗಳು ಕುರುಬರನ್ನು ಮಾತ್ರ ಕೆಣಕಿಲ್ಲ. ಲಿಂಗಾಯತರು ಕೂಡ ಹಿಂದೂಗಳು ಎಂದು ಹೇಳಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೊರಟಿದ್ದಾರೆ.

ಆದರೆ ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗು ಕೊಯ್ಯುವೆ ಎಂದು ಹೇಳಿದ ಬಸವಣ್ಣನ ಅನುಯಾಯಿಗಳು ಹಿಂದೂ ಗಳಾಗಲು ಹೇಗೆ ಸಾಧ್ಯ ಎಂದು ರಾಜ್ಯದ ಲಿಂಗಾಯತ ಮಠಾಧೀಶರೇ ಪೇಜಾವರರಿಗೆ ತಿರುಗೇಟು ನೀಡಿದ್ದಾರೆ. ಪೇಜಾವರರ ಈ ಹೇಳಿಕೆ ಬಗ್ಗೆ ಸಂಘ ಪರಿವಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಶ್ವರಪ್ಪನವರು ಮಾತ್ರ ಅವರೇನೋ ಹೇಳಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದು ಹೇಳಿ ತೇಲಿಸಿ ಬಿಟ್ಟಿದ್ದಾರೆ. 

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು, ‘ಕುರುಬರು ಶೈವ ಪಂಥಕ್ಕೆ ಸೇರಿದವರು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಪ್ರಶ್ನೆಗಳಲ್ಲಿ ಆರೆಸ್ಸೆಸ್ ತನ್ನ ನಿಲುವುಗಳನ್ನು ಸ್ಪಷ್ಟಪಡಿಸಬೇಕು. ಸೌಜನ್ಯಾ ಹತ್ಯೆ ತನಿಖೆಗಾಗಿ ನಡೆದ ಹೋರಾಟದಲ್ಲಿ ಒಂದೆಡೆ ಧರ್ಮಾಧಿಕಾರಿ ಪರವಾಗಿ ನಿಲುವು ತಾಳಿದರೆ, ಇನ್ನೊಂದೆಡೆ ಅವರ ವಿರುದ್ಧವಾಗಿ ಬೆಳ್ತಂಗಡಿ ತಾಲೂಕಿನ ಜನತೆಯ ಹೋರಾಟವನ್ನು ಹೈಜಾಕ್ ಮಾಡಲು ಅದು ಕುತಂತ್ರ ನಡೆಸಿದೆ. ಈ ಇಬ್ಬಂದಿತನ ಅದಕ್ಕೆ ಹೊಸತಲ್ಲ. ಈ ದೀಕ್ಷೆ-ಆ ದೀಕ್ಷೆಗಳಿಂದೆಲ್ಲ ಈ ದೇಶ ಹಾಳಾಗಿ ಹೋಗಿದೆ. ಈಗ ಮನುಷ್ಯತ್ವದ ಅರಿವು ಮೂಡಬೇಕಿದೆ.

‘ಆ ಮತದ, ಈ ಮತದ ಹಳೆ ಮತದ ಸಹವಾಸ. ಸಾಕಿನ್ನೂ ಸೇರಿರೇ ಮನುಜನಮತಕ್ಕೆ’ ಎಂದು ರಾಷ್ಟ್ರಕವಿ ಕುವೆಂಪು ನೀಡಿದ ಕರೆ ಎಲ್ಲೆಡೆ ಪ್ರತಿಧ್ವನಿಸ ಬೇಕಿದೆ. ಏನಾದರೂ ಆಗುವ ಮೊದಲು ಮಾನವನಾಗು ಎಂದು ಕವಿ ಸಿದ್ದಯ್ಯ ಪುರಾಣಿಕರು ಹೇಳಿದ ಮಾತು ಈಗ ಕೈದೀವಿಗೆಯಾಗಬೇಕಿದೆ.ಪೇಜಾವರರು ಈಗ 80ರ ಇಳಿವಯಸ್ಸಿನಲ್ಲಿ ಇದ್ದಾರೆ. 20ರ ಯುವಕರಂತೆ ಕರ್ನಾಟಕ ಮಾತ್ರವಲ್ಲ ದೇಶದ ಉದ್ದಗಲಕ್ಕೂ ಓಡಾಡುತ್ತಾರೆ. 

ಆದರೆ ಅವರು ಎಷ್ಟೇ ಪ್ರಯಾಸಪಡಲಿ, ಈ ದೇಶ ಮತ್ತೆ ವರ್ಣಾಶ್ರಮ ಧರ್ಮದ ಕರಾಳಯುಗಕ್ಕೆ ವಾಪಸ್ ಆಗುವುದಿಲ್ಲ. ಭಾರತ ಎಂದಿಗೂ ಹಿಂದೂರಾಷ್ಟ್ರ ಆಗುವುದಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕಿದೆ. ಒಮ್ಮೊಮ್ಮೆ 60ದಾಟಿದಾಗ ಅರಳು-ಮರುಳು ಆಗುತ್ತದೆಯೆಂದು ಜನ ಹೇಳುತ್ತಾರೆ. ಪೇಜಾವರರಂತಹ ಮಠಾಧೀಶರಿಗೆ ಆ ರೀತಿ ಆಗಿದ್ದರೆ ನಾಡಿನ ದಲಿತ ಸಂಘಟನೆಗಳು, ಪ್ರಗತಿಪರರು ಅವರಿಗೆ ಮಾನವತೆಯ ದೀಕ್ಷೆ ನೀಡಬೇಕಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...