Sunday, October 20, 2013

ಸಂವಿಧಾನದ ಬೇರುಗಳಿಗೆ ಜ್ಯೋತಿಷ್ಯ ಮಾಫಿಯಾ ಕೊಡಲಿ
 
ಸೌಜನ್ಯ : ಪ್ರಜಾವಾಣಿಭಾರತದಲ್ಲಿ ಹುಟ್ಟುವ ಪ್ರತಿ ಮಗುವೂ ಮಾತು ಕಲಿಯುವ ಮುನ್ನ, ಅಕ್ಷರ ಕಲಿಯುವ ಮುನ್ನ, ರಾಜಕೀಯ ಸಂವಿಧಾನಕ್ಕೆ ಪರಿಚಯ ಪಡೆಯುವ ಮುನ್ನವೇ ವಿಧಿವಾದ, ದೈವವಾದ, ಬ್ರಹ್ಮವಾದ, ಆತ್ಮವಾದ, ಜಾತಿವಾದ, ದ್ವೈತಾದ್ವೈತವಾದಗಳ ಮತ್ತು ಪ್ರಮಾಣವಾದಗಳನ್ನಾಧರಿಸಿದ ಸಾಂಸ್ಕೃತಿಕ ಸಂವಿಧಾನದ ಜೀತದಾಳಾಗುತ್ತದೆ.
ಈ ತಾತ್ವಿಕತೆಗಳ ಬೇಕುಬೇಡಗಳನ್ನು ನಿರ್ಧರಿಸುವ ಅವಕಾಶ ದೊರಕುವ ಮುನ್ನವೇ ಜೀತಕ್ಕೆ ಸಿಕ್ಕಿಕೊಳ್ಳುತ್ತಾರೆ. ಈ ಜೀತಸ್ಥಿತಿಯಿಂದ ಬಿಡುಗಡೆ ಪಡೆಯಲು ಜೀವನಪೂರ್ತಿ ಹೋರಾಡಬೇಕಾಗುತ್ತದೆ. ಇದು ಭಾರತದಲ್ಲಿ ಹುಟ್ಟುವ ಪ್ರತಿ ಮನುಷ್ಯ ಜೀವಿಯ ಸಮಸ್ಯೆ. ಈ ಅತಂತ್ರ ಸ್ಥಿತಿಯ ಅಸಹಾಯಕತೆಯನ್ನು ಬಳಸಿಕೊಂಡು ಸಮೂಹವನ್ನು ದಿಕ್ಕುತಪ್ಪಿಸಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ದುಷ್ಟ ಪ್ರಯತ್ನ ಇದೀಗ ಜ್ಯೋತಿಷ್ಯದ ಮೂಲಕ ನಡೆಯುತ್ತಿದೆ.

ನಮ್ಮ ಜೀವನಕ್ರಮವನ್ನು ರೂಪಿಸಿ ನಿಯಂತ್ರಿಸುವ ಎರಡು ಸಂವಿಧಾನಗಳು ಚಾಲ್ತಿಯಲ್ಲಿರುತ್ತವೆ. ಒಂದು: ರಾಜಕೀಯ ಸಂವಿಧಾನ, ಇನ್ನೊಂದು: ಸಾಂಸ್ಕೃತಿಕ ಸಂವಿಧಾನ. ಸಮೂಹದ ರಾಜಕೀಯ ಆಡಳಿತ ಶೈಲಿಯನ್ನು ರಾಜಕೀಯ ಸಂವಿಧಾನ ನಿರ್ವಹಿಸಿದರೆ, ಸಮೂಹದ ಜೀವನಶೈಲಿಯನ್ನು ಸಾಂಸ್ಕೃತಿಕ ಸಂವಿಧಾನ ನಿರ್ವಹಿಸುತ್ತದೆ.

ರಾಜಕೀಯ ಸಂವಿಧಾನದಷ್ಟೇ ಮಹತ್ವ ಈ ಸಾಂಸ್ಕೃತಿಕ ಸಂವಿಧಾನಕ್ಕೂ ಇದೆ. ಏಕೆಂದರೆ ನಾವು ತಿನ್ನುವ ಅನ್ನ, ಕಟ್ಟುವ ಮನೆ, ಒಪ್ಪಿಕೊಳ್ಳುವ ಸಂಗಾತಿ, ಪೂಜಿಸುವ ದೇವರು, ನಮ್ಮ ಆಚರಣೆಯ ವಿಧಿ-ನಿಷೇಧಗಳು, ನಮ್ಮ ನಂಬುಗೆಗಳು ಇತ್ಯಾದಿಗಳನ್ನು ಸಾಂಸ್ಕೃತಿಕ ಸಂವಿಧಾನ ನಿಯಂತ್ರಿಸುತ್ತದೆ.

ಹಾಗಾಗಿ ನಮ್ಮ ಜೀವನಕ್ರಮದಲ್ಲಿ ಇರಬಹುದಾದ ಊನಗಳಿಗೆ ಕಾರಣಗಳು ಇಲ್ಲಿಯೇ ಇರುತ್ತವೆ. ರಾಜಕೀಯ ಸಂವಿಧಾನವು ಸಮೂಹಕ್ಕೆ ಸಮಾನವಾಗಿ ಹಂಚುವ ಅಧಿಕಾರವನ್ನು ಸಾಂಸ್ಕೃತಿಕ ರಾಜಕಾರಣದ ಮೂಲಕ ಕಿತ್ತುಕೊಂಡು ಕೆಲವೇ ಜನರ ಸಮೂಹಕ್ಕೆ ನೀಡುವ ಪ್ರಜಾಪ್ರಭುತ್ವ-ವಿದ್ರೋಹಿ ಚಟುವಟಿಕೆಗಳು ಅನಿಯಂತ್ರಿತವಾಗಿ ನಡೆಯುತ್ತಿವೆ. ಸಾಂಸ್ಕೃತಿಕ ರಾಜಕಾರಣ ನೇರವಾಗಿ ನಿತ್ಯದ ಬದುಕಿನೊಡನೆ ಸಂಘರ್ಷಕ್ಕೆ ಇಳಿದಿದೆ.

ಹಾಗಾಗಿ ಈ ಸಾಂಸ್ಕೃತಿಕ ರಾಜಕಾರಣವನ್ನು ನಿಭಾಯಿಸದೇ ಹೋದರೆ ಸಮಾನ ಅವಕಾಶಗಳ ಪ್ರಜಾಸತ್ತೆ ಕೇವಲ ಕನಸಾಗಿ ಉಳಿಯುತ್ತದೆ. ಸೋಲಾರ್ ಕುಟುಂಬದ ಹೊಸಿಲು ದಾಟಿದ ಸಂಭ್ರಮವನ್ನು ವಿಶ್ವ ಆಚರಿಸುತ್ತಿರುವಾಗ ಭಾರತವನ್ನು ಕಂದಾಚಾರ, ಮೌಢ್ಯ, ಅಜ್ಞಾನಗಳ ಬಾವಿಗೆ ತಳ್ಳುವ ಪ್ರಯತ್ನಗಳು ದೊಡ್ಡ ಪ್ರಮಾಣದಲ್ಲಿ ಪ್ರತಿನಿತ್ಯ ರಾಚುವಂತೆ ನಡೆಯುತ್ತಿವೆ.

ನಿತ್ಯದ ಬದುಕಿಗೆ ಅಗತ್ಯವಾದ ಆರೋಗ್ಯಕರ ನಂಬುಗೆಗಳನ್ನು, ಆತ್ಮವಿಶ್ವಾಸವನ್ನು, ನಿಸರ್ಗವಿವೇಕವನ್ನು ನಾಶಮಾಡುವ ವ್ಯವಸ್ಥಿತ ಸಂಚು ಪ್ರತಿದಿನವೂ ಜ್ಯೋತಿಷ್ಯದ ಹೆಸರಿನಲ್ಲಿ ನಡೆಯುತ್ತಿದೆ. ಗಣಿ ಮಾಫಿಯಾ, ಮರಳು ಮಾಫಿಯಾ, ಭೂ-ಮಾಫಿಯಾಗಳು ಕರ್ನಾಟಕದಲ್ಲಿ ಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸಿವೆ. ಇವು ಸಾಲದು ಎಂಬಂತೆ ಸಮೂಹದ ವಿವೇಕವನ್ನು ನಾಶಮಾಡುವುದರ ಮೂಲಕವೇ ನೂರಾರು ಕೋಟಿ ರೂಪಾಯಿಗಳ ದಂಧೆಗೆ ಇಳಿದಿರುವ ಜೋತಿಷ್ಯ ಮಾಫಿಯಾ ಪ್ರಜಾಪ್ರಭುತ್ವವನ್ನು ಉಳಿಯಗೊಡದಂತಹ ಅಪಾಯವನ್ನು ಮುಂದೊಡ್ಡುತ್ತಿದೆ.

ಮಧ್ಯಮ ವರ್ಗದ ಮುಗ್ಧ ಹೆಣ್ಣುಮಕ್ಕಳ ಮಾರುಕಟ್ಟೆಯನ್ನು ಪ್ರಧಾನವಾಗಿ ಬಳಸಿಕೊಳ್ಳುವ ಈ ಮಾಫಿಯಾ ಈಗ ನೇರವಾಗಿ ಮನೆಮನೆಗೂ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಅಂತಿಮವಾಗಿ ಈ ಮಾಫಿಯಾ ರಾಜಕೀಯ ಸಂವಿಧಾನವನ್ನು ಬುಡಮೇಲು ಮಾಡುತ್ತದೆ. ಸಮೂಹದ ನಿಸರ್ಗವಿವೇಕ ನಾಶವಾದರೆ, ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕುತ್ತು ಬಂದರೆ, ಪ್ರಜಾಪ್ರಭುತ್ವದ ಸರ್ವನಾಶವಾದಂತೆಯೇ. ಏಕೆಂದರೆ ಪ್ರಜಾಪ್ರಭುತ್ವ ನಿಂತಿರುವುದೇ ನಿಸರ್ಗವಿವೇಕ ಮತ್ತು ಸಾಮಾನ್ಯ ತರ್ಕದ ತಳಹದಿಯ ಮೇಲೆ.

ನಮಗೆ ಹುಟ್ಟಿನೊಡನೆಯೇ ಒಂದು ನಿಸರ್ಗ ವಿವೇಕ ಒಂದು ಸಾಮಾನ್ಯ ತರ್ಕ ನಮ್ಮೊಡನೆ ಬಂದಿವೆ. ಅವು ನಾವು ಎದುರಾಗುವ ಎಲ್ಲ ಸಂಗತಿಗಳ ಸರಿ ತಪ್ಪುಗಳನ್ನು ಒಂದು ಹಂತಕ್ಕೆ ನಿರ್ಣಯಿಸಿಕೊಡಬಲ್ಲವು. ಆದರೆ ಈ ನಿಸರ್ಗ ವಿವೇಕವನ್ನು ದಿಕ್ಕು ತಪ್ಪಿಸುವ ಕೆಲವು ಸಂಗತಿಗಳಿವೆ. ಸಮೂಹದ ಬದುಕನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೆಲವು ಗುಂಪುಗಳು ನಮ್ಮ ವಿವೇಕದ ದಿಕ್ಕು ತಪ್ಪಿಸುತ್ತವೆ.

ಈ ದೇಶದ ಸುಮಾರು ಹದಿನೈದು ಕೋಟಿ ಜನರನ್ನು ನೀವು ಅಸ್ಪೃಶ್ಯರು, ಮುಟ್ಟಬಾರದವರು ಎಂದು ಸಾವಿರಾರು ವರ್ಷಗಳ ಕಾಲ ನಂಬಿಸುತ್ತಲೇ ಬಂದಿದ್ದಾರಲ್ಲ, ಅದು ಸಾಧ್ಯವಾದದ್ದು ಹೇಗೆ? ನಿಸರ್ಗ ವಿವೇಕವಿರುವ ಯಾರಿಗಾದರೂ ಇದೊಂದು ಅಪ್ಪಟ ಮೋಸ ಎಂದು ಗೊತ್ತಾಗುತ್ತದೆ. ಹಾಗೆಯೇ ತಾವು ಜ್ಞಾನದ ಅಧಿಕಾರಿಗಳೆಂದು ನಂಬಿಸಲು ಅಕರಾಳ ವಿಕರಾಳ ವೇಷ ತೊಟ್ಟು, ತಾವಾಗಿ ಬೆಳೆದ ಗಡ್ಡ ಮುಡಿಗಳನ್ನೇ ಬಂಡವಾಳವಾಗಿಸಿಕೊಂಡು, ಕೈ ಕುತ್ತಿಗೆಗಳಿಗೆ ಪ್ರಾಚ್ಯ ವಸ್ತುಸಂಗ್ರಹಾಲಯದಿಂದ ತಂದ ಬಳೆ-ಸರಗಳನ್ನು ಹಾಕಿಕೊಂಡು ಕುಳಿತುಕೊಳ್ಳುವ ಇವರು, ಎದುರಿಗೆ ಮುದ್ದಾದ, ಮೊದ್ದು ಮೊದ್ದಾಗಿ ಪಲುಕುವ ಹೆಣ್ಣುಮಗಳನ್ನು ಕೂರಿಸಿಕೊಳ್ಳುತ್ತಾರೆ.

ನಂತರ ಶುರುವಾಗುತ್ತದೆ ಇವರ ಜ್ಞಾನಧಾರೆಯ ಕರಾಮತ್ತು! ಅಮೆರಿಕದ ಅಧ್ಯಕ್ಷ ಒಬಾಮಾ ಅವರನ್ನು ಕಾಡುತ್ತಿರುವ ಸಿರಿಯಾ ಸಮಸ್ಯೆಯಿಂದ ಹಿಡಿದು ಬೆಳಗಾವಿಯ ಬಳಿಯ ಖಾನಾಪುರದಲ್ಲಿರುವ ಹೆಣ್ಣು ಮಗಳ ಕೂದಲು ಉದುರುತ್ತಿರುವ ಸಮಸ್ಯೆಯವರೆಗೆ – ಯಾವುದೇ ಘನಘೋರ ತೊಂದರೆ ಇರಲಿ! ಕ್ಷಣಾರ್ಧದಲ್ಲಿ ಪರಿಹರಿಸಿಕೊಡುತ್ತಾರೆ! ಅಷ್ಟೇ ಅಲ್ಲ, ಇವರು ಕೊಡುವ ಒಂದು ಚಿಟಿಕೆ ಕುಂಕುಮವನ್ನು ಶುಕ್ಲಪಕ್ಷದ ಬುಧವಾರದ ದಿನ ಕುಟುಂಬದ ಯಜಮಾನ ಹಸುವಿನ ಗಂಜಲಿಗೆ ಸೇರಿಸಿ ಕುಡಿದುಬಿಟ್ಟರೆ ಎದುರು ಪಕ್ಷದ ವಕೀಲ ಮತ್ತು ನ್ಯಾಯಾಸ್ಥಾನದಲ್ಲಿ ಕುಳಿತಿರುವ ನ್ಯಾಯಮೂರ್ತಿ ಕೂಡ ಇವರು ಬಯಸಿದಂತೆ ತೀರ್ಪು ನೀಡುತ್ತಾರೆ!

ಮುಖ್ಯವಾದದ್ದೆಂದರೆ ನಿಮ್ಮ ಮೆದುಳನ್ನು ಅವರ ಪಾದದಡಿಯಲ್ಲಿ ಜೀತಕ್ಕಿಡಬೇಕು ಅಷ್ಟೆ! ಮೊದಲೇ ಅಕ್ಷರಹೀನ ಸಮಾಜ. ಇರಬಹುದಾದ ಅಷ್ಟಿಷ್ಟು ತರ್ಕ ಮತ್ತು ವಿವೇಕವನ್ನು ನಾಶಮಾಡಿದರೆ ಮುಗಿಯಿತು. ನಮ್ಮ ಬದುಕಿನ ಬಹಳ ಮುಖ್ಯ ನಿರ್ಧಾರಗಳನ್ನು ನಾವು ತೆಗೆದುಕೊಳ್ಳಲು ಸಾಧ್ಯವಾಗದಂತಾಗುತ್ತದೆ. ಹಾಗೆ ಇವುಗಳನ್ನು ನಿರ್ವಹಿಸುತ್ತಾರೆ. ತಿನ್ನುವ ಅನ್ನ, ಕಟ್ಟುವ ಮನೆ, ಪೂಜಿಸುವ ದೇವರು, ತೊಡುವ ಬಟ್ಟೆ, ಮದುವೆಯಾಗುವ ಸಂಗಾತಿ ಎಲ್ಲವನ್ನೂ ಮತ್ತಾರೋ ನಿರ್ಧರಿಸುವಂತಾಗುತ್ತದೆ. ಕಡೆಗೆ ನಮ್ಮ ರಾಜಕೀಯ ನಿರ್ಧಾರಗಳೂ ಅವರ ಒಪ್ಪಿಗೆ ಮತ್ತು ತೀರ್ಮಾನಕ್ಕೆ ಪರೋಕ್ಷವಾಗಿ ವರ್ಗಾವಣೆಯಾಗುತ್ತವೆ.

ತರ್ಕವಂಚನೆ ಮತ್ತು ಪ್ರಮಾಣ ಇವುಗಳನ್ನು ನಿರ್ವಹಿಸಲು ಬಲ್ಲ ಸಣ್ಣ ಗುಂಪೊಂದು ಇಡೀ ಭಾರತೀಯ ಜನಸಮೂಹವನ್ನೇ ದಿಕ್ಕು ತಪ್ಪಿಸುತ್ತಿದೆ. ಇಂದಿಗೂ ಬಹಳ ದೊಡ್ಡ ಸಮೂಹವನ್ನು ತನ್ನ  ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅದಕ್ಕೆ ಸಾಧ್ಯವಾಗಿರುವುದು ಪ್ರಮಾಣ ಮತ್ತು ತರ್ಕವಂಚನೆಯನ್ನು ಅದು ಯಶಸ್ವಿಯಾಗಿ ಬಳಸುತ್ತಿರುವುದರಿಂದಲೇ. ಅಕ್ಷರಹೀನ ಸಮಾಜವನ್ನು ಅಕ್ಷರದ ಮೂಲಕ ನಿಯಂತ್ರಿಸಿದ ಹಾಗೆಯೇ ಪ್ರಮಾಣಗಳನ್ನು ಸ್ವೀಕರಿಸುವ ತರ್ಕಹೀನ ಸಮಾಜವನ್ನು ಪ್ರಮಾಣ ಮತ್ತು ತರ್ಕವಂಚನೆಗಳ ಮೂಲಕ ನಿಯಂತ್ರಿಸಲು ಸಾಧ್ಯ.

ಯಾವುದಾದರೂ ತರ್ಕಹೀನ  ಸಂಗತಿಯೊಂದನ್ನು ಒಪ್ಪಿಸುವ ಮೊದಲು ಪ್ರಮಾಣವನ್ನು ಸೃಷ್ಟಿಸಲಾಗುತ್ತದೆ. ಪ್ರಮಾಣವೆಂದರೆ ನೀವು ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬೇಕಾದದ್ದು. ಯಾಕೆಂದರೆ ಅದು ಪವಿತ್ರವಾದದ್ದೋ, ಅವರು ಹೇಳುವ ಜ್ಞಾನದ ಆಕರದಿಂದಲೋ ಬಂದಿರುತ್ತದೆ. ಹಾಗಾಗಿ ಅದನ್ನು ನೀವು ಪ್ರಶ್ನಿಸುವಂತಿಲ್ಲ.

ತರ್ಕವೂ ಕೂಡ ಸಾಕ್ಷರತೆಯಂತೆಯೇ ಒಂದು ಮಾಧ್ಯಮ, ಗಣಿತದಂತೆ. ಅದನ್ನು ನಾವು ಪಡೆದುಕೊಂಡರೆ ಆ ದಾರಿಯಲ್ಲಿ ನಡೆವ ಸಂದರ್ಭ ಬಂದಾಗ ಅಂಜಬೇಕಿಲ್ಲ. ಅದಿಲ್ಲದೆ ಹೋದರೆ ಸುಲಭವಾಗಿ ಸೋತುಹೋಗುತ್ತೇವೆ. ಅಕ್ಷರ, ಹೋರಾಟ, ತರ್ಕ ಮತ್ತು ಸಾಂಸ್ಕೃತಿಕ ರಾಜಕಾರಣ – ಈ ನಾಲ್ಕು ಅಂಶಗಳನ್ನು ತನ್ನದಾಗಿಸಿಕೊಂಡರೆ ಮಾತ್ರ ಭಾರತೀಯ ಸಮಾಜಕ್ಕೆ ಬಿಡುಗಡೆಯೆಂದು ಅಂಬೇಡ್ಕರ್ ನಂಬಿದ್ದರು.

ಇವೆಲ್ಲ ಈ ಸಮಾಜಕ್ಕೆ ದೊರಕಲಿ ಎಂದು ನಾಲ್ಕೂ ಅಂಶಗಳನ್ನು ದೊರಕಿಸಿಕೊಳ್ಳುವ ಮಾದರಿಯನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಸಾವಿರಾರು ವರ್ಷಗಳಿಂದ ಅನ್ಯಾಯಕ್ಕೆ ಒಳಗಾದ ಶೂದ್ರ, ದಲಿತ ಸಮೂಹ ಮೊದಲಿನ ಎರಡು ಅಂಶಗಳಾದ ಅಕ್ಷರ ಮತ್ತು ಹೋರಾಟವನ್ನು ದಕ್ಕಿಸಿಕೊಳ್ಳುವುದರಲ್ಲಿಯೇ ಸೋತು ಸುಣ್ಣವಾಗಿದೆ... ಆದರೆ ಅಕ್ಷರ ಮತ್ತು ಹೋರಾಟಗಳು ಕೊಟ್ಟ ಬಿಡುಗಡೆಯ ರುಚಿಯನ್ನು ಕಾಣುತ್ತಿದ್ದಾರೆ.

ಅಕ್ಷರ ವಂಚನೆಯ ಮೂಲಕ ಸಮೂಹವನ್ನು ವಂಚಿಸುತ್ತ ಬಂದ ವರ್ಗವೀಗ ತರ್ಕ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ವಂಚನೆಗೆ ಬಳಸುತ್ತಿದೆ. ಈ ನೆಲದಲ್ಲಿ ಈಗ ಅಧಿಕಾರ ನಿರ್ವಹಿಸುತ್ತಿರುವುದು ಅಕ್ಷರವೂ ಅಲ್ಲ, ಆರ್ಥಿಕತೆಯೂ ಅಲ್ಲ, ಸಂಖ್ಯಾಬಲವೂ ಅಲ್ಲ. ಬದಲಿಗೆ ತರ್ಕವನ್ನು ಸಮೂಹದ ಹತ್ತಿರಕ್ಕೆ ಬಿಡದಂತೆ ನೋಡಿಕೊಂಡು, ಪ್ರತಿದಿನವೂ ಹೊಸ ಹೊಸ ಪ್ರಶ್ನಿಸಲಾಗದ ಪ್ರಮಾಣಗಳನ್ನು ಸೃಷ್ಟಿಸುತ್ತಾ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸುತ್ತಿರುವ ಸಣ್ಣಗುಂಪೊಂದು ಅಧಿಕಾರ ಕೇಂದ್ರಗಳನ್ನು ಪರೋಕ್ಷವಾಗಿ ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ.

ಮೊದಲೇ ಅಕ್ಷರಹೀನ ಸಮಾಜ, ಮೇಲೆ ಕಠಿಣ ತರ್ಕವನ್ನು ಹೇರಿದರೆ ಅದು ಉಸಿರೆತ್ತಲೂ ಸಾಧ್ಯವಾಗುವುದಿಲ್ಲ. ಇನ್ನು ಪ್ರಮಾಣಗಳನ್ನು ಕೇವಲ ಅಧಿಕಾರ ಕೇಂದ್ರಗಳನ್ನು ನಿಯಂತ್ರಿಸಲಷ್ಟೇ ಬಳಸುವುದಿಲ್ಲ. ಸಾಮಾನ್ಯರ ಬದುಕಿನ ನಿತ್ಯ ಸಂಗತಿಗಳನ್ನು ಪ್ರಮಾಣಗಳ ಮೂಲಕ ನಿಯಂತ್ರಿಸಲಾಗುತ್ತಿದೆ. ತರ್ಕಹೀನತೆ ಅಕ್ಷರಹೀನತೆಗಿಂತ ಕೇಡೆನ್ನುವುದರಲ್ಲಿ ಸಂಶಯವಿಲ್ಲ. ತಿಳಿವಳಿಕೆಯನ್ನು ಪಡೆಯಲು ಅಕ್ಷರ ಹೇಗೆ ಮಾಧ್ಯಮವೋ ತರ್ಕವೂ ಹಾಗೆಯೇ ಒಂದು ಮಾಧ್ಯಮ. ತರ್ಕ ಅಂದರೆ ನಿಸರ್ಗವಿವೇಕ ಮತ್ತು ಪ್ರಮಾಣಗಳು ಪ್ರತಿಷೇಧ ಅಸ್ತಿತ್ವವುಳ್ಳವು. ಅಂದರೆ ಒಂದು ಇದ್ದರೆ ಇನ್ನೊಂದು ಇರಲು ಸಾಧ್ಯವಿಲ್ಲ.

ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ತಾತ್ವಿಕ ಸಂಘರ್ಷವು ತರ್ಕಮಾಧ್ಯಮವನ್ನು ಬಳಸುತ್ತಲೇ ಬಂದಿದೆ. ಹಾಗಾಗಿ ತಾತ್ವಿಕ ಸಂಘರ್ಷದ ಸ್ವರೂಪ ಅರ್ಥವಾಗಬೇಕಾದರೆ ತರ್ಕವನ್ನವಲಂಬಿಸಲೇಬೇಕು. ಅನಕ್ಷರಸ್ಥ ಸಮೂಹ ಅಕ್ಷರವನ್ನು ದಕ್ಕಿಸಿಕೊಳ್ಳಲು ಪಟ್ಟ ಪಾಡನ್ನು ಈಗ ವಿವೇಕವನ್ನು ದಕ್ಕಿಸಿಕೊಳ್ಳಲು ಪಡಬೇಕಾಗಿದೆ. ಬೇರೆ ಮಾರ್ಗವಿಲ್ಲ.
ನಾವೀಗ ಹೆಣಗಲೇಬೇಕು. ಈಗ  ನಾವು ತಟಸ್ಥವಾಗಿರಲಾಗದು. ನಮಗೆ ನಿಸರ್ಗದತ್ತವಾಗಿ ದೊರಕಿರುವ ವಿವೇಕವನ್ನು ಕಾಪಾಡಿಕೊಳ್ಳಬೇಕಾಗಿದೆ. ಹಾಗಾಗಿ ತರ್ಕದ ಕೌಶಲವನ್ನು ನಾವು ದಕ್ಕಿಸಿಕೊಳ್ಳಬೇಕಾಗಿದೆ. ಅಂಬೇಡ್ಕರರ ರಾಜಕೀಯ ಸಂವಿಧಾನ ಮತ್ತು ಸಾಂಸ್ಕೃತಿಕ ಸಂವಿಧಾನ – ಎರಡೂ ಈ ತರ್ಕದ (ವಿಜ್ಞಾನದ) ತಳಹದಿಯ ಮೇಲೆ ನಿಂತಿವೆ. ನಾವು ನಮ್ಮನ್ನು ಸರಿಯಾಗಿ ನಿರ್ವಹಿಸಲು ಈ ಎರಡೂ ಸಂವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಪಕ್ಕದ ಮಹಾರಾಷ್ಟ್ರ ತಡವಾಗಿಯಾದರೂ ಎಚ್ಚೆತ್ತು ಕಂದಾಚಾರ ಮತ್ತು ಮೌಢ್ಯಾಚರಣೆ ನಿಷೇಧ ವಿಧೇಯಕವನ್ನು ಜಾರಿಗೆ ತಂದಿದೆ. ಕರ್ನಾಟಕವೂ ತಕ್ಷಣ ಎಚ್ಚೆತ್ತುಕೊಳ್ಳಬೇಕು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...