Tuesday, October 22, 2013

ದಾರಿ











ಈ ದಾರಿಯೇ ಅಂಥದು
ನಡೆಯುತ್ತಾನೆ ಇಲ್ಲಿ ಹೆಳವನೂ 
ಬೆಳೆದ ಬಾಲವ ತಾನೇ
ಕತ್ತರಿಸಿಕೊಂಡು
ರಿವರ್ಸ್ ಗೇರಿಲ್ಲದೆ
ಮುಂತೆವಳುವ ಹಲ್ಲಿಯ ಹಾಗೆ

ಇದು ಎಲ್ಲ ಮನೆಗಳ ಮಾತು 
ಕೂಸು ಹುಟ್ಟುವ ಮೊದಲೇ 
ಸಿದ್ದವಾಗುವ ಕುಲಾವಿ
ಹಂದಿಮಾಂಸದೂಟ ಅವನಿಗೊಂದು ನೆಪ
ಇವಗೆ ಶಿಲುಬೆಯ ಮೊಳೆ
ಬೆನ್ನಟ್ಟಿ ಬಂದ ದೊಂಬಿದಂಡವೂ ಸಹ
ಸದಾಕಾಲ ನೆಪದ ಕನ್ನಡಿ ಎದುರಿಗಿಟ್ಟೆ
ನಿರಾಕಾರದ ಹಕ್ಕಿ ಹಾರಲಾರಂಭಿಸುತ್ತದೆ

ಬುದ್ಧನದೇ ಆದ ಭಾಷೆ ಇಲ್ಲವಾಗುವುದು
ಅವ ನಡೆವ ದಾರಿ ಅಲ್ಲಿಗೇ ನಿಂತುಬಿಡುವುದು
ಪ್ರೀತಿ ತುಂಬಿದ ಭಿಕ್ಷಾಪಾತ್ರೆ ಕಾಣದಂತಾಗುವುದು
ಸಾವೆಂದರೆ ಇಷ್ಟೇ..


ಸಾವಿನೆದುರು ತಲ್ಲಣ ಕ್ಷಣ ಮಾತ್ರವಷ್ಟೇ
ನಿಸೂರಾಗಿರುವುದೇ ಲೋಕದ  ಮೂಲ ಸ್ವಭಾವ

ಮುಸ್ಸಂಜೆ ಗೋಡೆ ಚಾಚಿದ ಕೌನೆಳ್ಳಿನಲಿ
ನನ್ನ ಬಿಂಬದ ನೆರಳು
ಇಷ್ಟಿಷ್ಟೇ ಇಲ್ಲವಾಗುವ ಹೊತ್ತು
ಕಣ್ಣಕುಂಚ ಚಿತ್ರಿಸುವುದು 
ಮುಳುಗುವ ಸೂರ್ಯನ ಚಿತ್ರ
ಈ ಹಾದಿಪಯಣಿಗನಿಗೆ 
ಪಾದವೇ ಕನ್ನಡಿಯಾದ ಅರಿವು..

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...