Friday, October 11, 2013

‘ಅಂಚೆ ಚೀಲ’




M.s. Rudreswaraswamy

ಎಂ ಎಸ್ ರುದ್ರೇಶ್ವರಸ್ವಾಮಿ

ಅಂಚೆ ಚೀಲ ಗಂಡೋ ಹೆಣ್ಣೋ?
ಪ್ರಶ್ನೆಯೇನೋ ಸರಳ, ಉತ್ತರ
ಹುಡುಕಹೊರಟರೆ ಜಿಜ್ಞಾಸೆ
ಉಡುವ ಬಟ್ಟೆ ಗಂಡೋ ಹೆಣ್ಣೋ
ಎಂದಂತೆ; ಬಿಟ್ಟಿಲ್ಲ ಯಾರೂ
ಸುಮ್ಮನೆ ಬಟ್ಟೆಗಳನ್ನು
ಹೆಣ್ಣಾಗಿಸಿದ್ದಾರೆ ಇಲ್ಲವೆ ಗಂಡಾಗಿಸಿದ್ದಾರೆ.

ಮೈಗೆಲ್ಲ ಮಲ್ಲಿಗೆ ಶ್ರೀಗಂಧದ
ಸುಗಂಧ ಲೇಪಿಸಿದ ಅಂಚೆ ಚೀಟಿಗಳ ಹೊತ್ತ
ಪತ್ರಗಳು ಬೀಗುತ್ತಿವೆ ಒಳಗೊಳಗೆ
ಕಪ್ಪುಶಾಯಿಯ ಮುಖಮುದ್ರೆ ಹೊತ್ತ
ಸೂತಕದ ಪತ್ರಗಳು ದುಃಖಿಸುತ್ತಿವೆ
ತಡೆತಡೆದು ಕಣ್ಣೀರು, ಯಾರಿಗೂ ಹೇಳಲಾಗದೆ
ಕಳೆದುಕೊಂಡವರ ನೋವ.
ಎಲ್ಲವೂ ಇದೆ ಇಲ್ಲಿ ಅಂಚೆ ಚೀಲದಲ್ಲಿ
ಸುಮ್ಮನೆ ಸಾಗಿದೆ ಪಯಣ ಮಾತಿಲ್ಲದೆ
ಅವನು ಹೆಸರು ಬರೆದು ಕಳುಹಿಸಿದೆಡೆಗೆ.

ಏನೆಲ್ಲ ಇದೆ ಅಂಚೆ ಚೀಲದಲ್ಲಿ?
ದುಗುಡ-ದುಮ್ಮಾನ, ಪ್ರೀತಿ-ಪ್ರೇಮ,
ವ್ಯವಹಾರ, ಅಸಹನೆ, ಒಂದೇ ಎರಡೇ!
ತುಂಬಿದೆ ಎಲ್ಲ ಅದರೊಡಲೊಳಗೆ
ಕುದಿಯುತ್ತಿದ್ದರೂ ಲಾವಾಗ್ನಿ ಒಳಗೊಳಗೆ
ಕ್ಷಮಯಾಧರಿತ್ರಿ ಇದ್ದ ಹಾಗೆ ಹೊರಗೆ
ಜಿಜ್ಞಾಸೆಗೆಡೆಯಲ್ಲಿ? ಗಂಡಲ್ಲ ಅಂಚೆಚೀಲ.

1 comment:

  1. nirbhaavuka mukhamudreya cheelegalalloo adeshto bhava.! chennaagide.

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...