Wednesday, October 23, 2013

ಗಾಂಧೀಜಿ ಮತ್ತು ಭಗತ್ ಸಿಂಗ್







ಡಾ. ಜಗದೀಶ ಕೊಪ್ಪ


ಸೌಜನ್ಯ : ವಾರ್ತಾಭಾರತಿ


ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಭಗತ್ ಸಿಂಗ್ ಹೆಸರು ಅಜರಾಮರವಾದುದು. ಕೇವಲ ತನ್ನ ಇಪ್ಪತ್ಮೂರನೇ ವಯಸ್ಸಿಗೆ ಬ್ರಿಟಿಷರ ವಿರುದ್ಧ ದಂಗೆಯೆದ್ದು ಸಾವಿಗೂ ಅಂಜದೆ, ಸಂಗಾತಿಗಳ ಜೊತೆ ನೇಣುಗಂಬವನ್ನು ಏರುವುದರ ಮೂಲಕ ತನ್ನ ಜೀವವನ್ನು ಬಲಿದಾನ ಮಾಡಿದ ಅಪ್ರತಿಮ ದೇಶ ಭಕ್ತ.ಭಗತ್ ಸಿಂಗ್‌ನ ಜೀವನ ಚರಿತ್ರೆ ಮತ್ತು ಆತನ ವಿಚಾರಧಾರೆಗಳು ಕನ್ನಡಿಗರಿಗೆ ಈಗಾಗಲೇ ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಕೃತಿಗಳ ಮೂಲಕ ತಲುಪಿವೆ. ಅವುಗಳಲ್ಲಿ “ನಾನೇಕೆ ನಾಸ್ತಿಕ” ಎಂಬ ಕೃತಿ ಮುಖ್ಯವಾದುದು. ಜೊತೆಗೆ “ಭಗತ್ ಸಿಂಗ್ ಬರಹ ಮತ್ತು ಭಾಷಣಗಳು” ಕೃತಿಯ ವಿಶೇಷವೆಂದರೆ, ಭಗತ್ ಸಿಂಗ್‌ನ ಭಾಷಣಗಳು ಮತ್ತು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳು, ತನ್ನ ತಂದೆ ಹಾಗೂ ಗೆಳೆಯರು ಮತ್ತು ಸರಕಾರಕ್ಕೆ ಬರೆದ ಪತ್ರಗಳು ಇವುಗಳ ಜೊತೆ ಜೊತೆಗೆ ಬ್ರಿಟಿಷ್ ಸರಕಾರ, ಗಾಂಧಿ ಮತ್ತು ಅವರ ಚಿಂತನೆಗಳು, ದೇವರು, ಧರ್ಮ, ಕುರಿತಂತೆ ಭಗತ್ ಸಿಂಗ್‌ನ ಮನೋಧರ್ಮ ಈ ಕೃತಿಯಲ್ಲಿ ಅಡಕವಾಗಿದೆ.

ದೇಶ ಭಕ್ತಿಯೆನ್ನುವುದು ಅನುಮಾನ ಮತ್ತು ಅಪಹಾಸ್ಯಕ್ಕೆ ಈಡಾಗಿರುವ ಈ ದಿನಗಳಲ್ಲಿ ಭಗತ್ ಸಿಂಗ್‌ನಂತಹ ದೇಶ ಭಕ್ತರ ಬದುಕನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕು ಎಂಬ ಪ್ರಶ್ನೆಗಳು ಕೂಡ ನಮ್ಮನ್ನು ಕಾಡುತ್ತಿವೆ. ಎಂದೋ ಬರೆದಿಟ್ಟ ಇತಿಹಾಸಗಳನ್ನು ಈಗ ಪ್ರತಿಯೊಂದನ್ನು ಪ್ರಶ್ನಿಸಿ ಒಪ್ಪಿಕೊಳ್ಳುವ ಆಧುನಿಕ ಜಗತ್ತಿಗೆ ಬೈಬಲ್ ಅಥವಾ ಭಗವದ್ಗೀತೆ ಅಲ್ಲ. ಹಾಗಾಗಿ ಚರಿತ್ರೆಯನ್ನು ಮುರಿದು ಕಟ್ಟಬೇಕಾದ ಇಂದಿನ ಸಂದರ್ಭದಲ್ಲಿ ಯಾವುದೇ  ಘಟನೆಗಳ ಬಗ್ಗೆಯಾಗಲಿ, ವ್ಯಕ್ತಿಯ ಬಗ್ಗೆಯಾಗಲಿ ರಾಗ ದ್ವೇಷಗಳಿಲ್ಲದ, ನಿರ್ಲಿಪ್ತ ಹಾಗೂ ನಿಷ್ಕಲ್ಮಷ ಮನೋಭಾವದಿಂದ ಪರಿಶೀಲಿಸುವ ಅಗತ್ಯವಿದೆ. 

ಆದ್ದರಿಂದ ಇತಿಹಾಸವನ್ನು ಮುರಿದು ಕಟ್ಟುವ ಸಂದರ್ಭದಲ್ಲಿ, ಸಂಭ್ರಮಕ್ಕಾಗಲಿ, ಸಂಕಟಗಳಿಗಾಗಲಿ ಎಡೆ ಇರಬಾರದು. ಭಗತ್ ಸಿಂಗ್‌ನ ಬದುಕಿನಲ್ಲಿ ಬ್ರಿಟಿಷ್ ಸರಕಾರದಿಂದ ಹಿಡಿದು, ಗಾಂಧಿ ಮತ್ತು ಕಮ್ಯೂನಿಷ್ಟರು ಹಾಗೂ ದೇಶ ಭಕ್ತರು ನಡೆದುಕೊಂಡ ಕೆಲವು ನಡೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.
ಭಗತ್ ಸಿಂಗ್‌ನ ವಿಚಾರಧಾರೆಗಳನ್ನು ಗಮನಿಸಿದಾಗ ಕೇವಲ ತನ್ನ ಇಪ್ಪತ್ಮೂರನೇ ವಯಸ್ಸಿಗೆ ಆತ ಇಂತಹ ಪ್ರಖರ ವೈಚಾರಿಕತೆಯ ಮನೋಭಾವವನ್ನು ಹೊಂದಲು ಸಾಧ್ಯವಾಗಿತ್ತಾ? ಎಂದು ಆಶ್ಚರ್ಯವಾಗುತ್ತೆ. 

ಭಗತ್‌ಸಿಂಗ್‌ನ ಬಹುತೇಕ ಚಿಂತನೆಗಳು ಸೆರೆಮನೆಯ ವಾಸದ ಬದುಕಿನಲ್ಲಿ ರೂಪುಗೊಂಡಿರುವುದು ವಿಶೇಷ.ಭಗತ್ ಸಿಂಗ್‌ನಲ್ಲಿದ್ದ ಆತ್ಮ ಗೌರವ ಮತ್ತು ದೇಶ ಭಕ್ತಿ ವಿಚಾರಗಳ ಹಿಂದೆ ಆತನ ಕುಟುಂಬದ ಪ್ರಭಾವ ದಟ್ಟವಾಗಿದೆ. ಲಾಹೋರಿನ ಖಾಲ್ಸ ಹೈಸ್ಕೂಲಿಗೆ ಭಗತ್ ಸಿಂಗ್ ದಾಖಲಾಗುವ ಸಂದರ್ಭದಲ್ಲಿ ಬ್ರಿಟಿಷ್ ಸರಕಾರವನ್ನು ಓಲೈಸುತ್ತಿರುವ ಆ ಶಾಲೆಗೆ ವೊಮ್ಮಗನನ್ನು ಸೇರಿಸಲು ಆತನ ತಾತ ವಿರೋಧಿಸಿದ್ದರು. 

ಆರ್ಯ ಸಮಾಜದ ವತಿಯಿಂದ ನಡೆಯುತ್ತಿದ್ದ ದಯಾನಂದ ಆಂಗ್ಲೊ ನೇಟಿವ್ ಶಾಲೆಗೆ ಭಗತ್‌ನನ್ನು ಸೇರಿಸಿದ್ದರು. ನಂತರ ಭಗತ್ ಸಿಂಗ್ ಲಾಹೋರಿನ ನ್ಯಾಷನಲ್ ಕಾಲೇಜ್ ಸೇರುವ ವೇಳೆಗೆ ಅಪ್ರತಿಮ ಚರ್ಚಾಪಟುವಾಗಿ,  ದೇಶಪ್ರೇಮಿಯಾಗಿ ಹಾಗೂ ನಾಟಕಕಾರನಾಗಿ ರೂಪುಗೊಂಡಿದ್ದ.ಕುತೂಹಲದ ಸಂಗತಿಯೆಂದರೇ ಆತ ಗಾಂಧೀಜಿ ವಿಚಾರಧಾರೆಗಳಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಮನಸೋತು ಬ್ರಿಟಿಷ್ ಸರಕಾರದ ಪಠ್ಯ ಪುಸ್ತಕಗಳು ಮತ್ತು ವಿದೇಶಿ ವಸ್ತ್ರಗಳನ್ನು ಬಹಿರಂಗವಾಗಿ ಸುಟ್ಟುಹಾಕಿದ್ದ. 

ಅವರ ಅಸಹಕಾರ ಚಳವಳಿಗೆ 1920ರ  ಕಾಲೇಜು ದಿನಗಳಲ್ಲಿ ಕೈ ಜೋಡಿಸಿದ್ದ. 1921ರಲ್ಲಿ ಈಗಿನ ಪಾಕಿಸ್ಥಾನದಲ್ಲಿರುವ ನಾಂತನಾ ಸಾಹಿಬ್ ಗುರುದ್ವಾರದಲ್ಲಿ ಪ್ರತಿಭಟಿಸುತ್ತಿದ್ದ ಸಿಖ್ ಭಕ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ ಪೊಲೀಸರ ವಿರುದ್ಧ ಗಾಂಧೀಜಿ ಪ್ರತಿಭಟಿಸಿದೆ ಮೌನ ತಾಳಿದಾಗ ಸಿಡಿದೆದ್ದ ಭಗತ್‌ಸಿಂಗ್ ಗಾಂಧಿಯ ವಿಚಾರ ಧಾರೆ ಮತ್ತು ಅಹಿಂಸೆ ಕುರಿತಾದ ನಂಬಿಕೆಗಳಿಗೆ ವಿದಾಯ ಹೇಳಿದ್ದ.

ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಪಕ್ಷದ ಬಗ್ಗೆ ಭ್ರಮ ನಿರಶನಗೊಂಡಿದ್ದ ಭಗತ್ ಸಿಂಗ್ ತನ್ನ ಮನೋಭಾವಕ್ಕೆ ತಕ್ಕಂತೆ ಅಂತಿಮವಾಗಿ ಚಂದ್ರಶೇಖರ್ ಅಜಾದ್ ಮತ್ತು ಇತರರು ಸ್ಥಾಪಿಸಿದ್ದ “ಹಿಂದೂಸ್ಥಾನ್ ರಿಪಬ್ಲಿಕ್ ಅಸೋಸಿಯೇಷನ್” ಎಂಬ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದ. ಈ ಸಂಘಟನೆಯ ಜೊತೆಗೂಡಿ ಅವನ ಸಂಗಾತಿಗಳು ಮತ್ತು ಅವನು ನಡೆಸಿದ ಎಲ್ಲಾ ಸಾಹಸಗಳು, ಕೃತ್ಯಗಳು ಈಗಾಗಲೇ ಭಗತ್ ಸಿಂಗ್ ಭಾಷಣಗಳು ಮತ್ತು ಬರಹಗಳು ಕೃತಿಯಲ್ಲಿ ದಾಖಲಾಗಿವೆ. 

ಲಾಲಾಲಜಪತ್ ರಾಯ್ ಹತ್ಯೆಗೆ ಪ್ರತಿಯಾಗಿ ಬ್ರಿಟಿಷ್ ಸರಕಾರದ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪೊಲೀಸ್ ಅಧಿಕಾರಿಯ ಹತ್ಯೆ ಮತ್ತು ಕೇಂದ್ರ ಅಸೆಂಬ್ಲಿ ಸಭಾಂಗಣದಲ್ಲಿ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾದ ನಂತರ ಭಗತ್‌ಸಿಂಗ್‌ನ ನಿಜವಾದ ವೈಚಾರಿಕತೆ ಮತ್ತು ಆತನ ದೇಶಪ್ರೇಮ ಬೆಳಕಿಗೆ ಬಂತು.ಲಾಹೋರ್ ಸೆರೆಮನೆಯಲ್ಲಿ ಬಂಧಿತರಾದ ಭಾರತೀಯರನ್ನು ಪ್ರಾಣಿಗಳಂತೆ ಉಪಚರಿಸುತ್ತಿದ್ದ ಬ್ರಿಟಿಷರ ಧೋರಣೆಯ ವಿರುದ್ಧ ಸಿಡಿದೆದ್ದ ಭಗತ್ ಸಿಂಗ್ 116 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ  ಬ್ರಿಟಿಷ್ ಸರಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದ.
ಕೈದಿಗಳಿಗೆ ಉತ್ತಮ ದರ್ಜೆಯ ಆಹಾರ, ವಸತಿ ಮತ್ತು ಆರೋಗ್ಯ ಸೇವೆ ದೊರೆಯಲು  ಕಾರಣಕರ್ತನಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಭಗತ್ ಸಿಂಗ್ ಮಂಡಿಸಿದ ವಾದಗಳು, ನೀಡಿದ ಹೇಳಿಕೆಗಳು, ನಂತರ ವಿವಿಧ ಸಂದರ್ಭದಲ್ಲಿ ಆತ ಬರೆದ ಅನೇಕ ಪತ್ರಗಳು, ವಿವಿಧ ವಿಷಯಗಳ ಮೇಲೆ ಪತ್ರಿಕೆಗಳಿಗೆ ಸೆರೆಮನೆಯಿಂದಲೇ ಬರೆದ ಲೇಖನಗಳು ಪರೋಕ್ಷವಾಗಿ ಬ್ರಿಟಿಷ್ ಸರಕಾರಕ್ಕೆ ನಡುಕವನ್ನುಂಟು ಮಾಡಿದ್ದವು.

ಈ ಕಾರಣಕ್ಕಾಗಿ ನಿಧಾನವಾಗಿ ನಡೆಯುತ್ತಿದ್ದ ವಿಚಾರಣೆಯನ್ನು ತ್ವರಿತಗೊಳಿಸಿದ ಸರಕಾರ ಕೆಲವೇ ತಿಂಗಳ ಅವಧಿಯಲ್ಲಿ ಭಗತ್ ಸಿಂಗ್ ಮತ್ತು ಆತನ ಸಂಗಡಿಗರನ್ನು ನೇಣುಗಂಬಕ್ಕೇರಿಸಿತು. ಅಂದಿನ ವೈಸ್ ರಾಯ್ ಲಾರ್ಡ್ ಇರ್ವಿನ್ 1930ರ ಮೇ 1ರಂದು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಮೇ 5ರಿಂದ ತ್ವರಿತ ವಿಚಾರಣೆಗೆ ಆದೇಶ ನೀಡಿದ್ದನು. ಅದರಂತೆ ಲಾಹೋರ್ ನಗರದ ಪೂಂಚ್ ಹೌಸ್‌ನಲ್ಲಿ ವಿಚಾರಣೆ ಆರಂಭವಾಯಿತು.

ಜುಲೈ 2ರಂದು ನ್ಯಾಯಮಂಡಳಿಯಲ್ಲಿದ್ದ ನ್ಯಾಯಾಧೀಶರನ್ನು ಬದಲಿಸಿ, ಮೂವರು ಬ್ರಿಟಿಷ್ ನ್ಯಾಯಾಧೀಶರು ಇರುವಂತೆ ನೋಡಿಕೊಂಡಿದ್ದ ವೈಸ್‌ರಾಯ್ ಇರ್ವಿನ್ ಬ್ರಿಟಿಷ್ ಸರಕಾರಕ್ಕೆ  ಇದ್ದ ಸೇಡಿನ ಮನೋಭಾವವನ್ನು ಬಹಿರಂಗಗೊಳಿಸಿದ್ದ. ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳ ವಿಚಾರಣೆಯ ನಂತರ 1930ರ ಅಕ್ಟೋಬರ್ ೩೧ರಂದು ಈ ಮೂವರು ಬ್ರಿಟಿಷ್ ನ್ಯಾಯಾಧೀಶರನ್ನು ಒಳಗೊಂಡಿದ್ದ ಪೀಠ 300 ಪುಟಗಳ ತೀರ್ಪನ್ನು  ಪ್ರಕಟಿಸಿತು.

ಬಾಂಬ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಇವರಿಗೆ ಮರಣದಂಡನೆಯನ್ನು ವಿಧಿಸಿ, ಉಳಿದ ಹನ್ನೆರೆಡು ಮಂದಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು  ನೀಡಲಾಗಿತ್ತು. ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ ಗಲ್ಲುಶಿಕ್ಷೆಗೆ ಎದೆಗುಂದದ ಭಗತ್ ಸಿಂಗ್ “ನನ್ನ ಬಾಯಿಗೆ ಬಂದೂಕ ಇಟ್ಟು ಗುಂಡು ಹಾರಿಸಿದರೂ ನಾನು ಚಿಂತಿಸುವುದಿಲ್ಲ ಏಕೆಂದರೆ, ನಾನು ಸಾವಿನ ಭಯದಿಂದ ದೂರವಾಗಿದ್ದೇನೆ” ಎಂದಿದ್ದ.ಅಂತಿಮವಾಗಿ 1931 ಮಾರ್ಚ್ ೨೪ರಂದು ಮ್ಯಾಜಿಸ್ಟ್ರೇಟ್ ಅನುಪಸ್ಥಿತಿಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟಿಷ್ ಸರಕಾರ ಸಂಜೆ 7:30ರ ಸಮಯದಲ್ಲಿ ಮೂವರನ್ನು ಗಲ್ಲಿಗೇರಿಸಿತು. 

ನಂತರ ಮಧ್ಯರಾತ್ರಿ ಸಟ್ಲೇಜ್ ನದಿಯ ದಡದ ಹುಸೇನಿವಾಲ ಎಂಬ ಸ್ಥಳದಲ್ಲಿ ಗುಪ್ತವಾಗಿ ಭಗತ್ ಸಿಂಗ್ ಮತ್ತು ಸಹಚರರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.ಭಗತ್ ಸಿಂಗ್‌ನನ್ನು ನೇಣಿಗೆ ಹಾಕುವ ಕೆಲವೇ ಗಂಟೆಗಳ ಹಿಂದೆ ಆತನಿಗೆ ಮಾಹಿತಿ ನೀಡಲಾಗಿತ್ತು. ಆ ದಿನ ಅವನು ಸೆರೆಮನೆಯಲ್ಲಿ ರಷ್ಯಾದ ಕ್ರಾಂತಿಕಾರಿ ನಾಯಕ ಲೆನಿನ್‌ರವರ ಆತ್ಮ ಚರಿತ್ರೆ ಓದುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಬ್ರಿಟಿಷ್ ಸರಕಾರದ ಕ್ಷಮೆ ಕೇಳಲು ನಿರಾಕರಿಸಿದ್ದ ಭಗತ್ ಕೊನೆಯ ದಿನಗಳಲ್ಲಿ ತನ್ನ ಗೆಳೆಯ ಕಾಮ್ರೇಡ್ ಬ್ರಿಜೋನ್ ಕುಮಾರ್ ಸಿನ್ಹಾ ಇವರ ಒತ್ತಾಯಕ್ಕೆ ಮಣಿದು, ತೀರ್ಪು ಕುರಿತಂತೆ ಮರುಪರಿಶೀಲನೆಗಾಗಿ ಬ್ರಿಟಿಷ್ ಸರಕಾರಕ್ಕೆ ಮನವಿ ಸಲ್ಲಿಸಿದ್ದ.

ಇಂದಿಗೂ ಭಗತ್‌ಸಿಂಗ್‌ನ ಸಾವು ಮತ್ತು ಕಾಂಗ್ರೆಸ್ ಪಕ್ಷ ಹಾಗೂ ಮಹಾತ್ಮ ಗಾಂಧಿಯವರ ನಡವಳಿಕೆ  ಕುರಿತಂತೆ ಅಸಮಾಧಾನ ಮತ್ತು ವಿವಿಧ ಬಗೆಯ ಹೇಳಿಕೆಗಳು ಇತಿಹಾಸದಲ್ಲಿ ದಾಖಲಾಗಿವೆ. ಇವೆಲ್ಲವನ್ನು  ಕೂಲಂಕಶವಾಗಿ ಪರಿಶೀಲಿಸಿದಾಗ ಭಗತ್ ಸಿಂಗ್‌ನ ಜೀವ ಉಳಿಸಲು ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಎಲ್ಲರೂ ಶ್ರಮಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 1931ರ ಫೆಬ್ರವರಿ 14 ರಂದು ಕಾಂಗ್ರೆಸ್ ಪಕ್ಷದ  ಅಧ್ಯಕ್ಷರಾಗಿದ್ದ ಮದನ್ ಮೋಹನ್ ಮಾಳಯ ವೈಸ್ ರಾಯ್ ಇರ್ವಿನ್‌ನನ್ನು ಭೇಟಿ ಮಾಡಿ, ಭಗತ್ ಸಿಂಗ್‌ಗೆ  ಜೀವದಾನ ನೀಡುವಂತೆ ಮನವಿ ಸಲ್ಲಿಸಿದ್ದರು.


ಗಲ್ಲು ಶಿಕ್ಷೆ ಜಾರಿಗೆ ತರುವ ಉದ್ದೇಶದಿಂದ ಸಿಮ್ಲಾ ಪ್ರವಾಸವನ್ನು ಮೊಟಕುಗೊಳಿಸಿ ದೆಹಲಿಗೆ ವಾಪಸಾಗಿದ್ದ ಲಾರ್ಡ್ ಇರ್ವಿನ್‌ನನ್ನು ಮಾರ್ಚ್ 19ರಂದು ಗಾಂಧೀಜಿ ಸಹ ಭೇಟಿಯಾಗಿ ಮನವಿ ಮಾಡಿರುವುದನ್ನು ವೈಸ್ ರಾಯ್ ತನ್ನ ದಿನಚರಿಯಲ್ಲಿ ದಾಖಲಿಸಿಕೊಂಡಿದ್ದಾನೆ. “ಗಾಂಧಿಯವರ ಭೇಟಿಯಿಂದ ನನಗೆ ಇರಿಸು ಮುರುಸು ಉಂಟಾಯಿತು. ಅವರ ಬೇಡಿಕೆಗೆ ಯಾವ ಭರವಸೆಯನ್ನೂ ನೀಡಲಿಲ್ಲ. ಕಾನೂನಿನ  ಪ್ರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ ” ಎಂದು ಇರ್ವಿನ್ ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. 

ಅದರೂ ಕೂಡ ಭಗತ್ ಸಿಂಗ್ ಮರಣಾ ನಂತರ ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷ ದೇಶ್ಯಾದಂತ ತೀವ್ರ ಟೀಕೆ ಮತ್ತು ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಮಾರ್ಚ್ ಕೊನೆಯ ವಾರ ಕರಾಚಿ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಗಾಂಧೀಜಿ ಕಪ್ಪುಬಾವುಟದ ಪ್ರದರ್ಶನ ಎದುರಿಸಬೇಕಾಯಿತು. ಓರ್ವ ಯುವಕ ಗಾಂಧಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ.

1931ರ ಮಾರ್ಚ್ ತಿಂಗಳ 29ರ “ಯಂಗ್ ಇಂಡಿಯ” ಪತ್ರಿಕೆಯಲ್ಲಿ ಭಗತ್‌ಸಿಂಗ್ ಮತ್ತು ಸಂಗಾತಿಗಳ ಮರಣ ದಂಡನೆಯನ್ನು ಪ್ರಸ್ತಾಪಿಸಿರುವ ಗಾಂಧೀಜಿ, ಭಗತ್ ಅಸಹಾಯಕತೆಯಿಂದಾಗಿ ಅನಿವಾರ್ಯವಾಗಿ ಹಿಂಸೆಯ ಹಾದಿಯನ್ನು ತುಳಿಯಬೇಕಾಯಿತೇ ಹೊರತು ಆತ ಎಂದೂ ಹಿಂಸೆಯ ಪ್ರತಿಪಾದಕನಾಗಿರಲಿಲ್ಲ ಎಂದಿದ್ದಾರೆ. ಆತನ ಧೈರ್ಯವನ್ನು, ದೇಶ ಭಕ್ತಿಯನ್ನು ಶ್ಲಾಘನೆ ಮಾಡಿರುವ ಅವರು ಯಾರೂ ಆತನ ಹಾಗೆ ಹಿಂಸೆಯ ಹಾದಿ ತುಳಿಯಬಾರದು ಎಂದಿದ್ದಾರೆ. 

ಅನಕ್ಷರಸ್ತರು, ಅಂಗವಿಕಲರು ಅಪಾರ ಸಂಖ್ಯೆಯಲ್ಲಿ ಇರುವ ಈ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಹಿಂಸೆಯಿಂದ ಯಾವುದೇ ಪ್ರತಿಫಲ ಸಿಗಲಾರದು ಎಂದಿದ್ದಾರೆ. ಗಾಂಧೀಜಿಯವರ ಈ ನಿಷ್ಟುರ ಅಭಿಪ್ರಾಯದ ಮಾತುಗಳಿಗೆ ನಮ್ಮ ಸಹಮತ ಇದೆಯಾದರೂ ಅವರು ಬ್ರಿಟಿಷರ ಮೇಲೆ ಒತ್ತಡ ಹೇರುವುದರ ಮೂಲಕ ಮೂವರ ಪ್ರಾಣ ಉಳಿಸಬಹುದಿತ್ತು ಎಂಬ ಸಣ್ಣ ಅಸಮಾಧಾನದ ಭಾವವೊಂದು ಮನಸ್ಸಿನಲ್ಲಿ ಹಾಗೇಯೇ ಉಳಿದು ಬಿಡುತ್ತದೆ.


ಭಗತ್ ಸಿಂಗ್‌ನ ಈ ದುರಂತದ ಬದುಕು ಮತ್ತು ಬಲಿದಾನ ಅಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ  ಹೊಸ ಆಯಾಮವನ್ನು ತಂದುಕೊಟ್ಟಿತು. ಹೋರಾಟಗಾರರಿಗೆ ಸ್ಫೂರ್ತಿಯಾಯಿತು. ದುರಂತವೆಂದರೆ, ತನ್ನ ಪ್ರಖರ ವಿಚಾರಗಳಿಂದ ಪ್ರಸಿದ್ದಿ ಪಡೆದ ಹುತಾತ್ಮ ಭಗತ್ ಸಿಂಗ್ ವರ್ತಮಾನದ  ಈ ದಿನಗಳಲ್ಲಿ ಹಲವು ಸಂಘಪರಿವಾರದ ಸಂಘಟನೆಗಳ ಖಾಸಾಗಿ ಸ್ವತ್ತಾಗಿದ್ದಾನೆ.


‘ನಾನೇಕೆ ನಾಸ್ತಿಕ’ ಎಂಬ ಕೃತಿಯ ಮೂಲಕ ದೇವರು, ಧರ್ಮ ಇವುಗಳ ಕುರಿತು ಮಾತನಾಡಿರುವ ವೈಚಾರಿಕ ಪ್ರತಿಭೆ ಭಗತ್ ಸಿಂಗ್ ಈಗ ‘ಹಿಂದೂ ದೇಶ ಭಕ್ತರು’ ಎಂಬ ಆರೋಪ ಹೊತ್ತಿರುವ ಕೋಮುವಾದಿ ಸಂಘಟನೆಗಳಿಗೆ ಮಾದರಿಯಾಗಿದ್ದಾನೆ. ಅದೇ ರೀತಿ ಖ್ಯಾತ ಇತಿಹಾಸಕಾರ ಕೆ.ಎನ್. ಪಣಿಕ್ಕರ್ ಹೇಳುವಂತೆ ಭಗತ್ ಸಿಂಗ್ ಭಾರತದ ಮೊಟ್ಟ ಮೊದಲ ಮಾರ್ಕ್ಸ್‌ವಾದಿ ಎಂಬ ಮಾತನ್ನು  ಒಪ್ಪುವುದಾದರೂ, ಆತ ಎಂದೂ ತನ್ನ ಜೀವಿತದಲ್ಲಿ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತನಾಗಿರಲಿಲ್ಲ.

ಆದರೆ ಎಡ ಪಂಥೀಯ ವಿಚಾರಧಾರೆ ಅದರಲ್ಲೂ ರೈತರು, ಕೂಲಿಕಾರ್ಮಿಕರ ಬಗ್ಗೆ ಕಮ್ಯೂನಿಷ್ಟರಂತೆ ಕಾಳಜಿ ಹೊಂದಿದ್ದ. ಜೊತೆಗೆ  ರಷ್ಯಾ ಕ್ರಾಂತಿಯಿಂದ ಸ್ಫೂರ್ತಿಗೊಂಡಿದ್ದ. ಇದೇ ಕಾರಣಕ್ಕಾಗಿ ಇಂದು ಹಿಂಸೆ ಮತ್ತು ನೆತ್ತರಿನ ನದಿಯಲ್ಲಿ ಮಿಂದೇಳುತ್ತಿರುವ ಮಾವೋವಾದಿ ನಕ್ಸಲರಿಗೂ ಸಹ ಭಗತ್ ಸಿಂಗ್ ಸ್ಫೂರ್ತಿಯಾಗಿದ್ದಾನೆ. ದೇಶದ ದುರಂತವೆಂದರೆ, ಮನುಕುಲಕ್ಕೆ ಬೆಳಕಾಗ ಬಲ್ಲ ಚಿಂತನೆಗಳನ್ನು ನೀಡಿದ ಎಲ್ಲಾ ಮಹಾತ್ಮರನ್ನು ಮತ್ತು ದಾರ್ಶನಿಕರನ್ನು ನಾವು  ಮತ್ತೆ ಮತ್ತೆ ಅವರವರ ಕುಲ, ಜಾತಿಯ ನೆಲೆಗಳಿಗೆ   ಕೊಂಡೊಯ್ದು ಬಂಧಿಸಿ ಇಡುತ್ತಿದ್ದೇವೆ. 

ಇಂತಹ ನಾಯಕರನ್ನು ಜಾತಿ ಮತ್ತು ಧರ್ಮದ ಹಾಗೂ ಸ್ವಾರ್ಥದ ಸಂಕೋಲೆಗಳಿಂದ ಬಿಡುಗಡೆಗೊಳಿಸಿ, ಅವರ ವಿಚಾರಗಳನ್ನು ಈ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಯೋಜನೆಗಳನ್ನು ಅನುಷ್ಠಾಣಗೊಳಿಸಬೇಕಿದೆ. ಭಗತ್ ಸಿಂಗ್‌ನ ಬದುಕು ಹೋರಾಟ ಒಂದು ರೀತಿಯಲ್ಲಿ ಮಾದರಿಯಾದರೆ, ಮತ್ತೊಂದು ರೀತಿಯಲ್ಲಿ ಅವನು ಹಿಡಿದ ಹಿಂಸೆಯ ಹಾದಿ ಎಚ್ಚರಿಕೆಯ ಸಂದೇಶವಾಗಬಲ್ಲದು. ಈ ಕಾರಣಕ್ಕಾಗಿಯೇ ಇದನ್ನು ನಾನು ಚರಿತ್ರೆಯನ್ನು ಮುರಿದು ಕಟ್ಟುವ ಸಂಭ್ರಮ ಮತ್ತು ಸಂಕಟ ಎಂದು ಕರೆಯಲು ಇಚ್ಛಿಸುತ್ತೇನೆ.


ಭಗತ್ ಸಿಂಗ್‌ನ ಎಲ್ಲಾ ವಿಚಾರಗಳು ಮತ್ತು ಆ ದಿನಗಳ ಗಾಂಧೀಜಿಯ ನಡುವಳಿಕೆಗಳು ವಿಶೇಷವಾಗಿ, ಪೂನಾ ಒಪ್ಪಂದ, ಕಾಂಗ್ರೆಸ್ ಪಕ್ಷದ ಅಧಕ್ಷ ಸ್ಥಾನಕ್ಕೆ ಸುಭಾಷ್ ಚಂದ್ರಬೋಸ್‌ರನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಹಾಗೂ ಭಗತ್ ಸಿಂಗ್ ಜೀವ ಉಳಿಸುವಲ್ಲಿ ತೀವ್ರವಾಗಿ ಪ್ರತಿಭಟಿಸುವ ಸಾಧತೆಗಳು ಇದ್ದರೂ ಕೂಡ ನಿಸ್ತೇಜರಾದ ಸಂಗತಿ, ಹೀಗೆ ಇವೆಲ್ಲವೂ ಈ ದಿನಗಳಿಗೆ ಪ್ರಸ್ತುತ ಎಂದು ಅನಿಸದಿದ್ದರೂ ಕೂಡ, ಗಾಂಧಿ ಮತ್ತು ಭಗತ್ ಸಿಂಗ್‌ನನ್ನು ಅರಿಯಲು ಮತ್ತು ಇಂದಿನ ಯುವ ಜನಾಂಗ ತಮ್ಮ  ಹೋರಾಟದ ಹಾದಿ ಕುರಿತಂತೆ ಸ್ಪಷ್ಟತೆಯನ್ನು ಕಂಡುಕೊಳ್ಳಲು ಸಹಾಯವಾಗುತ್ತವೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...