Monday, October 28, 2013

ಪೇಜಾವರರ ವೈಷ್ಣವ ದೀಕ್ಷೆ : ನಾಗರಾಜ ಹರಪನಹಳ್ಳಿ ಪ್ರತಿಕ್ರಿಯೆ

 
 
 ನಾಗರಾಜ ಹರಪನಹಳ್ಳಿ
 
ಕನಕದಾಸನ ಆರಾಧಕರು(ಕುರುಬರು) ಬಯಸಿದರೆ ವೈಷ್ಣವ ದೀಕ್ಷೆ ನೀಡಲು ನಾವು ಸಿದ್ಧ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ್ಥ ಶ್ರೀಗಳು ಹೇಳಿದರಂತೆ ಬಾಗಲಕೋಟೆಯಲ್ಲಿ. ಕನಕದಾಸರು ವೈಷ್ಣವ ಸಿದ್ಧಾಂತದ ಪರಿಪಾಲಕರಂತೆ. ಕನಕನ ಸಿದ್ಧಾಂತದ ಬಗ್ಗೆ ಅವರು ಸತ್ಯ ಹೇಳಿದ್ದಾರಂತೆ. ಈ ಹಿನ್ನೆಲೆಯಲ್ಲಿ ಕನಕನ ಭಕ್ತರು ಒಪ್ಪಿದರೆ ಅವರಿಗೆ ವೈಷ್ಣವ ದೀಕ್ಷೆ ನೀಡಲಾಗುವುದು. ಇದು ನಮ್ಮ ಸಲಹೆ. ಉಳಿದದ್ದು ಅವರಿಗೆ ಬಿಟ್ಟದ್ದು ಎಂದು ಪೇಜಾವರರು ಹೇಳಿದರಂತೆ - ಪ್ರಜಾವಾಣಿ ಪತ್ರಿಕೆ ಪುಟ 5 ರಲ್ಲಿ (26 ಅಕ್ಟೋಬರ್ 2013) ವರದಿಯಾಗಿದೆ.
ವರದಿ ಓದಿದ ಮೇಲೆ ಪೇಜಾವರರ ಹೇಳಿಕೆ ಕುರಿತು ನನಗನ್ನಿಸಿದ್ದು.......

 
 ದೀಕ್ಷೆ ಕೊಡುವೆ ಎಂಬ ಮಾತಿನಲ್ಲೇ ತಾವು ಶ್ರೇಷ್ಠ ಎಂಬ ಅಹಂಕಾರ ವೈಷ್ಣವರ ಸ್ವಾಮಿಜೀಯಾದ ನಿಮ್ಮಲ್ಲಿದೆ. ಕನಕ ಅನುಯಾಯಿಗಳಿಗೆ ಮುಕ್ತಿ, ಧರ್ಮದ ಮಾರ್ಗ ತೋರಿಸಲು ಅವರದೇ ಸ್ವಾಮಿಜೀ ಇದ್ದಾರೆ. ಅವರಿಗೆ ಪೇಜಾವರರ ಅಗತ್ಯ ಇಲ್ಲ ಅಂತ ನನಗನ್ನಿಸಿತು. ಪೇಜಾವರರು ರಾಜಕೀಯ ಹೇಳಿಕೆಗಳನ್ನು ನೀಡುವಲ್ಲಿ ಪ್ರಸಿದ್ಧರು. ಕುರುಬರನ್ನು ಕುರುಬರಾಗಿ ಪ್ರತ್ಯೇಕಿಸುವ ಜಾಣತನ ಅವರ ಹೇಳಿಕೆಯಲ್ಲಿದೆ. ಬಿಜೆಪಿಯಲ್ಲಿರುವ ಕನಕ ಸಮುದಾಯ(ಕುರುಬ ಸಮುದಾಯವನ್ನು) ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಅವರು ಇಂಥ ಹೇಳಿಕೆ ನೀಡಿದ್ದಾರೆ ಅನ್ನದೇ ವಿಧಿಯಿಲ್ಲ. ಲಿಂಗಾಯಿತರ ಜೊತೆ, ಬ್ರಾಹ್ಮಣರ ಜೊತೆ ಕನಕ ಅನುಯಾಯಿಗಳು ಸೇರದಂತೆ ನೋಡಿಕೊಳ್ಳುವುದು ಪೇಜಾವರರ ಹೇಳಿಕೆಯ ಹಿಂದಿರುವ ಮತ್ತೊಂದು ತಂತ್ರ. ಸಮುದಾಯಗಳು ಎಂದಿಗೂ ಒಗ್ಗೂಡದಿರಲಿ. ಅವರು ಕನ್ನಡಿಗರು, ಭಾರತೀಯರು ಆಗದಿರಲಿ. ಕನಕ ಅನುಯಾಯಿಗಳು ಅನ್ನುವ ಮೂಲಕ ಅವರಿಗೊಂಡು ಆವರಣ ತೊಡಿಸಿ, ವೈಷ್ಣವರ ಕೃಪಾಕಟಾಕ್ಷವೇ ಪರಮ ಮೋಕ್ಷ ಎಂಬ ದಾಸ್ಯ ಅನುಭವಿಸಲಿ ಎಂಬ ಶೋಷಕ ಮುಖ ಎದ್ದುಕಾಣುವಂತಹದ್ದು. ಮನುಷ್ಯರ ಉದ್ಧಾರದ ಮಾತು ಆಡಿದ ಬಸವ, ಬುದ್ಧನನ್ನು ಪೇಜಾವರರಲ್ಲಿ ಕಾಣುವುದಿರಲಿ, ಕಲ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತಿದೆ. ಬಾಗಲಕೋಟೆಯಲ್ಲಿ ಪೇಜಾವರರ ಮಾತು ಜಾತಿಯ ಚೌಕಟ್ಟಿನ ಬೇಲಿ ಗಟ್ಟಿಗೊಳಿಸುವ ಹುನ್ನಾರು ಅಲ್ಲದೇ ಇನ್ನೇನು? ಈ ಆಧುನಿಕ ಕಾಲದಲ್ಲಿ ಪೇಜಾವರರ ಮಾತು ಕೃತಿ ಮುರಿದು ಬೀಳಲಿ ಎಂದು ಬಯಸುತ್ತೇನೆ. ಪೇಜಾವರರ ವೈಷ್ಣವ ದೀಕ್ಷೆಯ ಜೀವವಿರೋಧಿ ಮಾತು ಅವರ ಸನಿಹ ಕಾಲುಮುರಿದು ಬಿದ್ದು ಒದ್ದಾಡಲಿದೆ ಎಂಬ ಮಹತ್ತರ ಆಶಾವಾದ ನನ್ನದು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...