Thursday, October 31, 2013

ವಿಚಾರವಂತಿಕೆಯನ್ನು ದೂರವಿಟ್ಟ ದುರಂತ


-ಜಿ.ಪಿ.ಬಸವರಾಜು
ಧರ್ಮ ಎಂದರೇನು? ಈ ಪ್ರಶ್ನೆಯನ್ನು ಎತ್ತಿದ ತಕ್ಷಣವೇ ಅನೇಕ ವಿವರಣೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಬುದ್ಧನಿಂದ ಆರಂಭಿಸಿ ಅಥವಾ ಅದಕ್ಕೂ ಹಿಂದಕ್ಕೆ ಹೋಗಿ, ಇಂದಿನವರೆಗೂ ಧರ್ಮವನ್ನು ವಿವಿಧ ನೆಲೆಯಲ್ಲಿ ಬಣ್ಣಿಸುವವರ ದಂಡೇ ಸಿದ್ಧವಾಗಿ ನಿಲ್ಲುತ್ತದೆ. ಪ್ರತಿಯೊಂದು ಧರ್ಮದ ಹುಟ್ಟು, ಬೆಳವಣಿಗೆ, ಅದರ ಸುಸಂಗತತೆ  ಹೀಗೆ ಅನೇಕ ಅಂಶಗಳನ್ನು ಎತ್ತಿಕೊಂಡು ಪ್ರವಚನಕ್ಕೆ ಆರಂಭಿಸುವವರಿಗೆ ನಮ್ಮಲ್ಲಿ ಬರವೇ ಇಲ್ಲ. ಅಷ್ಟೇಕೆ, ಯಾವ ದೇಶದಲ್ಲಾದರೂ ಧರ್ಮವನ್ನು ವೈಭವೀಕರಿಸಿ ವರ್ಣಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಆದರೂ ಈ ಭೂಮಿಯ ಮೇಲೆ ಧರ್ಮದ ಹೆಸರಿನಲ್ಲಿ ನಡೆದಷ್ಟು ಅಮಾನುಷ ಕೃತ್ಯಗಳು ಬೇರೆ ಯಾವುದರ ಹೆಸರಿನಲ್ಲಿಯೂ ನಡೆದಿಲ್ಲ.

ಭಾರತದಲ್ಲಂತೂ ಧರ್ಮ ಎಂದರೆ ಮೈ ನಡುಗಬೇಕು, ಅಷ್ಟೊಂದು ಮಠಗಳಿವೆ, ಧರ್ಮಕ್ಷೇತ್ರಗಳಿವೆ, ಧರ್ಮಗುರುಗಳಿದ್ದಾರೆ. ಯೋಗ, ಸಂಗೀತ, ಆಯುರ್ವೇದ, ದೇಸೀಪದ್ಧತಿಯ ಚಿಂತನೆ ಹೀಗೆ ಅನೇಕ ಸಂಗತಿಗಳನ್ನು ತಂದು ಧರ್ಮದ ಜೊತೆ ತಳುಕುಹಾಕಿ ಚೀಲಗಟ್ಟಲೆ ಹಣತುಂಬಿಸಿಕೊಳ್ಳುವ ಧಂದೆಯೂ ನಮ್ಮ ನಾಡಿನಲ್ಲಿ ನಿರ್ಲಜ್ಜ ರೀತಿಯಲ್ಲಿ ನಡೆಯುತ್ತಲೇ ಇದೆ. ಮತಧರ್ಮಗಳು, ಧರ್ಮಪೀಠಗಳು, ಜಾತಿಕೇಂದ್ರಗಳು ಅಧಿಕಾರ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಜಾತಿ ಸಂಘಟನೆಗಳು ಹೆಚ್ಚುತ್ತಲೇ ಹೋಗುತ್ತಿವೆ. ಧರ್ಮ ಎನ್ನುವುದು ಯಾವುದಕ್ಕೂ ಅಂಟಿಕೊಂಡ ಸಂಗತಿಯಲ್ಲ ಎಂದು ಹೇಳುತ್ತಿದ್ದರೂ, ಧರ್ಮ ಮತ್ತು ರಾಜಕೀಯದ ನಂಟು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಹೋಗುತ್ತಿದೆ. ಮತಧರ್ಮಗಳ ವಿಚಾರ ಬಂದಾಗ ನಮ್ಮ ರಾಜಕಾರಣಿಗಳು ಓಟುಗಳ ಮೇಲೇ ಕಣ್ಣಿಟ್ಟು ಮಾತನಾಡುವುದು ಒಂದು ಪರಿಪಾಠವಾಗಿ ಹೋಗಿದೆ. ಮುಕ್ತವಾಗಿ ಮತಧರ್ಮಗಳನ್ನು ವಿವೇಚಿಸುವ, ಅವುಗಳ ಓರೆಕೋರೆಗಳನ್ನು ವಿಮರ್ಶೆಗೆ ಒಡ್ಡುವ ಕ್ರಮವೇ ನಮ್ಮಲ್ಲಿ ಮರೆಯಾಗುತ್ತಿದೆಯೇನೋ ಎಂಬಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಸಾಹಿತ್ಯ ಕೃತಿಯಲ್ಲಿ ಧರ್ಮದ ಪ್ರಶ್ನೆ ಬಂದರೆ ಸಾಕು ಬೀದಿಗಿಳಿದು ಪ್ರತಿಭಟಿಸುವ, ಕೃತಿಕಾರನ ಕ್ಷಮೆಗೆ ಒತ್ತಾಯಿಸುವ ಸಂದರ್ಭಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಮತಧರ್ಮಗಳು ತೀರ ಸೂಕ್ಷ್ಮ ಸಂಗತಿಗಳಾಗುತ್ತ, ಯಾರೂ ಅವುಗಳ ಬಗ್ಗೆ ಮಾತನಾಡದಂಥ ವಾತಾವರಣ ಸೃಷ್ಟಿಯಾಗಿದೆ.

ಮನುಷ್ಯರ ಬದುಕನ್ನು ಪ್ರೀತಿ, ಸಹನೆ, ಕರುಣೆಗಳಿಂದ ಕಟ್ಟಲು ರೂಪಿಸಿದ ಮಾರ್ಗವೇ ಧರ್ಮ. ಬುದ್ಧ ಕರುಣೆಯನ್ನೇ ತನ್ನ ಮಾರ್ಗದ ಮುಖ್ಯ ಅಂಶವಾಗಿಸಿಕೊಂಡ. ಜೈನ ಧರ್ಮ ಅಹಿಂಸೆಯನ್ನೇ ಬೋಧಿಸಿತು. ನನ್ನ ಧರ್ಮ ಎಂದರೆ ಕರುಣೆ ಎನ್ನುತ್ತಾರೆ ದಲಾಯಿ ಲಾಮ. ಕ್ಷಮಿಸುವುದನ್ನು ಒಂದು ಧರ್ಮ ಹೇಳಿದರೆ, ಸಹಜೀವನಕ್ಕೆ ಅಗತ್ಯವಾದ ಸಹನೆಯನ್ನು ಇನ್ನೊಂದು ಧರ್ಮ ಹೇಳುತ್ತದೆ. ಗಾಂಧೀಜಿಯವರಿಗೆ ಸತ್ಯವೇ ಧರ್ಮವಾಗಿತ್ತು. ಸತ್ಯ, ಕರುಣೆ, ಅಹಿಂಸೆ ಹೀಗೆ ಸರಳ ರೂಪದಲ್ಲಿ ಧರ್ಮವನ್ನು ನೋಡಿದಾಗ ಅದು ಹೆಚ್ಚು ಅರ್ಥವಂತಿಕೆಯನ್ನು ತುಂಬಿಕೊಂಡಿರುತ್ತದೆ. ಮನುಷ್ಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿಯೂ ಕಾಣಿಸುತ್ತದೆ. ಇಂಥ ಸರಳವಾದ ಸಂಗತಿಗಳಿಂದ ಧರ್ಮವನ್ನು ನೋಡಿದಾಗ ಅದು ಸುಲಭವಾಗಿ ಅರ್ಥವೂ ಆಗುತ್ತದೆ. ಅದಕ್ಕೆ ಅರ್ಥವಾಗದ ಮಂತ್ರಗಳು, ಶ್ಲೋಕಗಳು ಬೇಡ. ಉದ್ದುದ್ದ ವ್ಯಾಖ್ಯಾನಗಳು, ಅರ್ಥವಿವರಣೆಗಳು ಬೇಡ. ಸತ್ಯವಂತನಾಗಿ ಬದುಕುವುದು ಕಷ್ಟ. ಆದರೆ ಸತ್ಯವಂತನಾಗಿರು ಎಂದು ಹೇಳಿದಾಗ ಅದು ಮನುಷ್ಯರಿಗೆ ಅರ್ಥವಾಗುತ್ತದೆ. ಅದರ ಆಚರಣೆಗೂ ಅವರು ಪ್ರಯತ್ನಿಸಬಹುದು.

ಪ್ರತಿಯೊಂದು ಧರ್ಮವೂ ವ್ಯಕ್ತಿಯ ಘನತೆಯನ್ನು ಹೆಚ್ಚಿಸಲು ನೋಡುತ್ತದೆ. ಅವನ ಅಂತರಂಗದ ವಿಕಾಸಕ್ಕೆ ನೆರವಾಗುವಂತಿರುತ್ತದೆ. ಅಲ್ಲಿ ಗುಲಾಮಗಿರಿ ಇರುವುದಿಲ್ಲ. ಗುಲಾಮಗಿರಿಯಿಂದ ಮನುಷ್ಯನನ್ನು, ಮನುಷ್ಯನ ಮನಸ್ಸನ್ನು ಬಿಡಿಸುವುದೇ ಧರ್ಮದ ಮುಖ್ಯ ಗುರಿಯಾಗಿರುತ್ತದೆ. ಆದರೆ ಇವತ್ತು ನಮ್ಮ ಧರ್ಮಗಳು ಹೇಗಿವೆ ನೋಡಿ. ನಮ್ಮ ಧರ್ಮಗುರುಗಳನ್ನು ನೋಡಿದರೂ ಅದು ತಿಳಿದುಬಿಡುತ್ತದೆ.  ನಮ್ಮಲ್ಲಿ ಯಾವ ಧರ್ಮಗುರುವೂ ಸಮಾನತೆಯನ್ನು ಇಷ್ಟಪಡುವುದಿಲ್ಲ. ಎಲ್ಲರೂ ಅವರ ಮುಂದೆ ಭಕ್ತರು; ಅಂದರೆ ಈ ಭಕ್ತರು ಗುರುವಿಗೆ ಅಡಿಯಾಳಾಗಿರಬೇಕು. ತನ್ನನ್ನು ಪೂಜಿಸಬೇಕು, ಹೊತ್ತು ಮೆರೆಯಬೇಕು, ತನ್ನ ಕಾಲಿಗೆರಗಬೇಕು ಇತ್ಯಾದಿ ಈ ಬಗೆಯ ಆಚರಣೆಗಳಿಗೆ ಮತ್ತು ವಿಚಾರಗಳಿಗೇ ಒತ್ತು ಇರುತ್ತದೆ. ಇಲ್ಲವಾದರೆ ಅಡ್ಡಪಲ್ಲಕ್ಕಿ ಉತ್ಸವ ಯಾಕೆ ನಡೆಯಬೇಕು. ದರ್ಬಾರು ಯಾಕೆ ನಡೆಯಬೇಕು?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಂತೂ ಸಮಾನತೆಗೆ ಹೆಚ್ಚು ಒತ್ತು ಇರುತ್ತದೆ. ಈ ವ್ಯವಸ್ಥೆಯ ಅಡಿಯಲ್ಲಿ ಬದುಕುವವರೆಲ್ಲರೂ ಸಮಾನರು. ಇಲ್ಲಿ ಯಾರದೂ ದರ್ಬಾರು ಇರುವುದಿಲ್ಲ. (ರಾಜಕಾರಣಿಗಳ ದರ್ಬಾರು ಇರುವುದಿಲ್ಲವೇ ಎಂದರೆ ಅದಕ್ಕೂ ಒಂದು ಕೊನೆ ಎಂಬುದು ಇರುತ್ತದೆ. ಅಂಥ ದರ್ಬಾರನ್ನು ಮತದಾರರು ಕೊನೆಗೊಳಿಸುವ ಅವಕಾಶವನ್ನು ಪಡೆದಿರುತ್ತಾರೆ) ದರ್ಬಾರು ನಡೆಸುತ್ತಿದ್ದ ರಾಜರ ಕಾಲವಂತೂ ಮುಗಿಯಿತು. ರಾಜರ ಪಳೆಯುಳಿಕೆಗಳಾಗಿ ಉಳಿದಿರುವ ರಾಜವಂಶಸ್ಥರ ದರ್ಬಾರುಗಳು ಸಾಂಕೇತಿಕವಾಗಿ ನಡೆದರೂ, ಅವು ಸಾರ್ವಜನಿಕವಾಗಿ ನಡೆಯುವಂತಿಲ್ಲ. ಹೀಗಾಗಿಯೇ ಅವುಗಳನ್ನು ಖಾಸಗೀ ದರ್ಬಾರುಗಳೆಂದು ಕರೆಯುತ್ತಾರೆ. ಅಲ್ಲಿ ರಾಜನಿಗೆ ಮುಜುರೆ ಸಲ್ಲಿಸುವುದು, ಕಪ್ಪ ಕಾಣಿಕೆ ಸಲ್ಲಿಸುವುದು ಇತ್ಯಾದಿ ಆಚರಣೆಗಳು ಕೇವಲ ಸಾಂಕೇತಿಕವಾಗಿರುತ್ತವೆ. ಆಗಿಹೋದ ಒಂದು ಕಾಲದ ವ್ಯವಸ್ಥೆಯ ಅಣಕಗಳಂತೆ ಈ ಆಚರಣೆಗಳು ಕಾಣುವುದರಿಂದ ಯಾರೂ ಇಂಥ ಆಚರಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ; ಪ್ರಹಸನಗಳನ್ನು ನೋಡಿ ನಗುತ್ತಾರೆ. ಇಂಥ ಆಚರಣೆಗಳಲ್ಲಿ ಭಾಗವಹಿಸುವವರು ಸಾರ್ವಜನಿಕರ ಕರುಣೆಗೆ ಪಾತ್ರರಾಗುವ ಸ್ಥಿತಿಯೂ ಇದೆ. ಇಂಥ ಹೊತ್ತಿನಲ್ಲಿ ವಿವೇಚನೆಯಿಲ್ಲದ ಕೆಲವರು ಧರ್ಮಗುರುಗಳು ಅಡ್ಡಪಲ್ಲಕ್ಕಿ, ಉದ್ದಪಲ್ಲಕ್ಕಿ ಉತ್ಸವಗಳನ್ನು ಆಚರಿಸಿಕೊಳ್ಳಲು ನೋಡುತ್ತಾರೆ. ಅನಗತ್ಯ ಗೊಂದಲ, ವಿವಾದಗಳನ್ನೂ ಹುಟ್ಟುಹಾಕುತ್ತಾರೆ. ಈ ಪಲ್ಲಕ್ಕಿಯ ಉತ್ಸವವೇ ಹಾಸ್ಯಾಸ್ಪದವಾದದ್ದು. ಒಬ್ಬರ ಹೆಗಲಮೇಲೆ ಕುಳಿತು ಪ್ರಯಾಣಿಸುವುದು ಎಂಥ ಅಮಾನವೀಯ. ಮುದುಕರೋ, ನಡೆಯಲಾಗದ ದುರ್ಬಲರೋ ಇಂಥದನ್ನು ಬಯಸಿದರೆ ಅದಕ್ಕೆ ಅರ್ಥವಿರುತ್ತದೆ. ಅದೊಂದು ನೆರವು ಎಂದುಕೊಂಡು ಅದನ್ನು ಒದಗಿಸಬಹುದು. ಆದರೆ ಧಡಿಯರಾದವರು, ಗಟ್ಟಿಮುಟ್ಟಾಗಿದ್ದು ಕುಸ್ತಿಗೆ ಇಳಿಯಬಲ್ಲ ಜಟ್ಟಿಗಳಂಥ ಸ್ವಾಮಿಗಳು ತಮ್ಮನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಎಂದು ಜನರಿಗೆ ಹೇಳುವುದು ಎಂಥ ಹಾಸ್ಯಾಸ್ಪದ. ಇಂಥ ಆಚರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತವೆ. ಇದಕ್ಕೆ ಧರ್ಮದ ಹೊದಿಕೆ ಇರುತ್ತದೆ. ಹೀಗಾಗಿ ಇದನ್ನು ಪ್ರಶ್ನಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಒಂದೇ ಜಾತಿಗೆ ಸೇರಿದ ಜನ ಈ ಉತ್ಸವಗಳ ವಿಚಾರದಲ್ಲಿ ???? ??????? ಯುದ್ಧಕ್ಕೆ ಮುಂದಾದರೂ ಸರ್ಕಾರಗಳು ಮೌನವಾಗಿದ್ದುಬಿಡುತ್ತವೆ. ಇಂಥ ಉತ್ಸವಗಳನ್ನು ನಿಷೇಧಿಸುವ ಧೈರ್ಯವನ್ನು ತೋರುವುದಿಲ್ಲ. ಜಾತಿ ಸಂಘಟನೆಗಳು, ಅವುಗಳ ಬಲಾಬಲಗಳು, ಓಟಿನ ರಾಜಕಾರಣ ಹೀಗೆ ಎಲ್ಲವೂ ಸೇರಿಕೊಂಡು ಇಂಥ ಪಲ್ಲಕ್ಕಿ ಉತ್ಸವಗಳು ನಿಷೇಧಕ್ಕೆ ಒಳಗಾಗುವುದಿಲ್ಲ. ನಷೇಧದ ಮಾತಿರಲಿ, ಆರೋಗ್ಯಕರ ಚರ್ಚೆಗೂ ಇಲ್ಲಿ ಅವಕಾಶವಿರುವುದಿಲ್ಲ.

ಮುಖ್ಯವಾದ ಮಾತೆಂದರೆ ಮನುಷ್ಯ ಮೊದಲು ಗುಲಾಮಗಿರಿಯಿಂದ ಹೊರಬರಬೇಕು. ಮುಕ್ತವಾಗಿ ಚಿಂತಿಸುವ, ಚರ್ಚಿಸುವ ವಿಚಾರವಂತಿಕೆಯನ್ನು ತನ್ನದಾಗಿ ಮಾಡಿಕೊಳ್ಳಬೇಕಾದರೆ  ಮೊದಲು ಅವನು ಸ್ವತಂತ್ರನಾಗಬೇಕು. ಮೌಢ್ಯಗಳಿಂದ ಹೊರಬರಬೇಕು. ಸಮಾನತೆ ನಮಗೆ ಬೇಕು ಎಂದು ಹೇಳುತ್ತಲೇ ಅರ್ಹನೋ, ಅನರ್ಹನೋ ಆದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಮೆರೆಸುವ ಮೌಢ್ಯಕ್ಕೆ, ದಾಸ್ಯಕ್ಕೆ ನಾವು ಒಳಗಾಗುತ್ತೇವೆ. ಅದೂ ಸಾರ್ವಜನಿಕವಾಗಿ ಇಂಥ ಆಚರಣೆಗಳು ಇರಬೇಕೇ ಬೇಡವೇ ಎಂದು ನಾವು ಯೋಚಿಸುವುದೇ ಇಲ್ಲ. ನಮ್ಮ ಜಾತಿ, ನಮ್ಮ ಧರ್ಮ ಎಂದ ಕೂಡಲೇ ನಮ್ಮ ವಿಚಾರ ಶಕ್ತಿಯೇ ಕುಗ್ಗಿಹೋಗಿಬಿಡುತ್ತದೆ.

ವಿಚಾರವಂತಿಕೆ ಎಂಬುದನ್ನು ನಮ್ಮ ಹತ್ತಿರ ಕರೆದುಕೊಂಡರೆ ಎಲ್ಲ ರೀತಿಯ ಮೌಢ್ಯಗಳೂ ದೂರವಾಗುತ್ತವೆ. ಆದರೆ ವಿಚಾರವಂತಿಕೆ ಯಾರಿಗೆ ಬೇಕು? ಬರ್ಟ್ರಂಡ್ ರಸೆಲ್, ಕುವೆಂಪು ಅವರಿಗಿಂತ ನಮಗೆ ಮಂಕುಬೂದಿಯ ಬಾಬಾಗಳೇ ಹೆಚ್ಚು ಪ್ರಿಯ. ಹೀಗಾಗಿಯೇ ಈ ನಾಡಿನಲ್ಲಿ ಬೂದಿಬಾಬಾಗಳ ಸಂಖ್ಯೆ ಹೆಚ್ಚು. ಮನುಷ್ಯನನ್ನು ಮನುಷ್ಯ ಹೆಗಲಮೇಲೆ ಹೊತ್ತು ನಡೆಸುವ ಉತ್ಸವಗಳು, ಪಾದವನ್ನು ತೊಳೆದು ಕೊಳೆ ನೀರನ್ನು ಕುಡಿಯುವ ಆಚರಣೆಗಳು, ನದಿನೀರಿನಲ್ಲಿ ಹೆಣಗಳನ್ನು ತೇಲಿಬಿಡುವ ಪದ್ಧತಿಗಳು, ಮಡಸ್ನಾನದಂಥ ಅನಿಷ್ಟಗಳು, ಇಂಥವೇ ನೂರಾರು ಆಚರಣೆಗಳು ಇಲ್ಲಿ ಜೀವಂತವಾಗಿರುವುದರ ಹಿಂದೆ ವಿಚಾರವಂತಿಕೆಯನ್ನು ನಾವು ದೂರವಿಟ್ಟಿರುವ ದೊಡ್ಡ ಚರಿತ್ರೆಯೇ ಇದೆ.

ಸೌಜನ್ಯ : ಸಂಯುಕ್ತ ಕರ್ನಾಟಕ-ಜಿ.ಪಿ.ಬಸವರಾಜು

೯೪೮೦೦ ೫೭೫೮೦

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...