Tuesday, October 29, 2013

‘ಕರುಕ್ಕು’ - ಅಸ್ಪೃಶ್ಯತೆಯಿಂದ ದಲಿತ ಪ್ರಜ್ಞೆಯ ಕಡೆಗೆ


ಡಾ. ಎಚ್. ಎಸ್. ಅನುಪಮಾಅಸ್ಪೃಶ್ಯತೆಯ ಅವಮಾನಕರ ಅನುಭವಗಳನ್ನು ದಲಿತ ಮನಸ್ಸು ದಾಟಿಬರಬೇಕಾದರೆ ಹಲವು ಗಾಯಗಳನ್ನು ಹೊತ್ತೇ ಬರಬೇಕು. ಅವರ ಸೋಲು-ಗೆಲುವು ಸ್ವೀಕಾರ-ನಿರಾಕರಣೆ ಕೇವಲ ಅವರದಷ್ಟೇ ಅಲ್ಲ, ಅಥವಾ ಅವರ ಸಮುದಾಯದ್ದಷ್ಟೇ ಅಲ್ಲ; ಬೇರೆ ಆಯ್ಕೆಯೇ ಇಲ್ಲದಂತೆ ಮಾಡಿರುವ ಸಮಾಜದ್ದೂ ಆಗಿರುತ್ತದೆ. ಆದರೆ ಸಾಹಿತ್ಯದಲ್ಲಿ ದಲಿತ ಧ್ವನಿಯ ಅಭಿವ್ಯಕ್ತಿಗೆ, ಅದರ ಸೃಜನಶೀಲ ಕಲಾತ್ಮಕತೆಯ ಬೆಳವಣಿಗೆಗೆ ಅವಕಾಶ ನೀಡದೆ ಸಾವಿರಾರು ವರ್ಷ ಗತಿಸಿದವು. ಎಂದೇ ದಲಿತ ಅಸ್ತಿತ್ವ ತನ್ನ ವೈಯಕ್ತಿಕ ಅನುಭವದ ನೆಲೆಯನ್ನು ದಾಖಲಿಸುವುದರಲ್ಲಿಯೇ ತನ್ನ ಅಸ್ತಿತ್ವವನ್ನೂ ಕಂಡುಕೊಳ್ಳಬಯಸುತ್ತದೆ. ದಲಿತ ಬದುಕಿನ ಕಷ್ಟಗಳ ಪುರಾವೆ ಆತ್ಮಕತೆಯ ರೂಪದಲ್ಲಿ ಒದಗಿಬರುತ್ತದೆ.

ತಮಿಳಿನಲ್ಲಿ ಪ್ರಕಟವಾದ ಮೊತ್ತಮೊದಲ ದಲಿತ ಆತ್ಮಕತೆ ‘ಕರುಕ್ಕು’. ೧೯೯೨ರಲ್ಲಿ ಬಾಮಾ ಫಾಸ್ಟಿನಾ ಬರೆದ ಈ ಆತ್ಮಕಥಾನಕ ೨೦೦೦ನೇ ಇಸವಿಯಲ್ಲಿ ಇಂಗ್ಲಿಷ್‌ಗೆ, ನಂತರ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿತು. ತಮಿಳು ದಲಿತ ಕ್ರಿಶ್ಚಿಯನ್ ಸಮುದಾಯದ ಮಹಿಳೆ ಬದುಕಿನ ವಿವಿಧ ಸ್ತರಗಳಲ್ಲಿ ಎದುರಿಸುವ ತಾರತಮ್ಯ, ಅದನ್ನಾಕೆ ಪ್ರಶ್ನಿಸಿ ಎದುರುಗೊಳ್ಳುವ ಪರಿ, ಕೊನೆಗೆ ತನ್ನದೇ ದಾರಿ ನಿರ್ಮಿಸಿಕೊಂಡು ನಡೆಯುತ್ತಿರುವುದು - ಇವೆಲ್ಲವೂ ಆ ಪುಸ್ತಕದಲ್ಲಿ ವಿವರಿಸಲ್ಪಟ್ಟಿವೆ. ತಮಿಳು ದಲಿತ ಬರವಣಿಗೆ ಎಂಬ ಕಾರಣಕ್ಕೆ, ದಲಿತ ಮಹಿಳೆಯ ಬರಹ ಎಂಬ ಕಾರಣಕ್ಕೆ, ದಲಿತ ಕ್ರಿಶ್ಚಿಯನ್ ಬರವಣಿಗೆ ಎಂಬ ಕಾರಣಕ್ಕೆ ‘ಕರುಕ್ಕು’ವನ್ನು ಭಿನ್ನ ಆಯಾಮಗಳಲ್ಲಿ ನೋಡಬಹುದಾಗಿದೆ.

ಇತರ ಭಾರತೀಯ ಭಾಷೆಗಳಿಗೆ, ಅದರಲ್ಲೂ ದಕ್ಷಿಣ ಭಾರತದ ಭಾಷೆಗಳಿಗೆ ಹೋಲಿಸಿದರೆ ತಮಿಳಿನಲ್ಲಿ ದಲಿತ ಬರವಣಿಗೆ ಸ್ವಲ್ಪ ತಡವಾಗಿ ಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪೆರಿಯಾರ್ ನೇತೃತ್ವದಲ್ಲಿ ಪ್ರಬಲವಾಗಿ ನಡೆದ ಅಬ್ರಾಹ್ಮಣ ಚಳುವಳಿಯ ಹೊರತಾಗಿಯೂ; ಸ್ವಾತಂತ್ರ್ಯಾನಂತರ ಶೋಷಿತ ವರ್ಗಗಳಿಗೆ ಕೊಡಲ್ಪಟ್ಟ ಹಕ್ಕು-ಸವಲತ್ತುಗಳ ಹೊರತಾಗಿಯೂ; ದ್ರಾವಿಡ ಪಕ್ಷಗಳು ದಶಕಗಳಿಂದ ಆಡಳಿತ ನಡೆಸುತ್ತಿರುವ ಹೊರತಾಗಿಯೂ; ಇಂದಿಗೂ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿರುವ ರಾಜ್ಯಗಳಲ್ಲಿ ತಮಿಳುನಾಡು ನಾಲ್ಕನೆಯ ಸ್ಥಾನದಲ್ಲಿದೆ. ಕೆಲ ವಿಶ್ಲೇಷಕರ ಪ್ರಕಾರ ಅಂಬೇಡ್ಕರ್ ಜನ್ಮಶತಮಾನೋತ್ಸವದ ನಂತರ ಹಾಗೂ ಮಂಡಲ್ ವರದಿಯ ನಂತರದ ಬೆಳವಣಿಗೆಗಳ ಫಲವಾಗಿ ಇತ್ತೀಚಿನ ಎರಡು ದಶಕಗಳಲ್ಲಿ ದಲಿತ ಸಮುದಾಯದ ಜಾಗೃತಿ, ಬರವಣಿಗೆ ಹಾಗೂ ಸಂಘಟನೆಗಳು ಅಲ್ಲಿ ಗಮನಾರ್ಹವಾಗಿ ಬೆಳೆಯುತ್ತಿವೆ. ಹಾಗಿರುತ್ತ ಅಂಬೇಡ್ಕರ್ ಶತಮಾನೋತ್ಸವದ ಹೊತ್ತಿನಲ್ಲಿ, ದೇಶ ಬಾಬ್ರಿ ಮಸೀದಿ ಕೆಡವಿದ ಹಾಗೂ ಮಂಡಲ್ ವರದಿಯ ಅನುಷ್ಠಾನ ಕುರಿತ ಗೊಂದಲದಲ್ಲಿ ಮುಳುಗಿದ್ದಾಗ ಬಂದ ಬಾಮಾ ಆತ್ಮಕತೆ ಇದ್ಯಾವುದರ ಬಗ್ಗೆ ಮಾತನಾಡದೇ ಇದ್ದರೂ ಹಲವು ಕಾರಣಗಳಿಗಾಗಿ ಮುಖ್ಯವೆನಿಸುವ ಪುಸ್ತಕವಾಗಿದೆ.

ಶ್ರಮಿಕರ ತುಂಬು ಕುಟುಂಬವೊಂದರಲ್ಲಿ ಹುಟ್ಟಿದ ಬಾಮಾ ತನ್ನ ಇಡೀ ಬದುಕು, ಅದು ರೂಪುಗೊಂಡ ವಾತಾವರಣ, ಗಾಯಗೊಳಿಸಿದ ವ್ಯವಸ್ಥೆ, ತನ್ನ ವ್ಯಕ್ತಿಗತ ಹೋರಾಟ - ಇವೆಲ್ಲದರ ಕುರಿತು ಬರೆಯುತ್ತ ಹೋಗಿದ್ದಾರೆ. ಕರುಕ್ಕು ಎಂದರೆ ತಮಿಳಿನಲ್ಲಿ ತಾಳೆಯ ಗರಿ. ಅದರ ಎರಡು ಬದಿಗಳಲ್ಲೂ ಗರಗಸದಂತಹ ರಚನೆಯಿದೆ. ಅದನ್ನು ಮುಟ್ಟಿದರೆ ತರಚಿಕೊಳ್ಳುವುದು, ಗಾಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಆ ಬಹೂಪಯೋಗಿ ಗರಿಯ ಸಂಗ್ರಹ ದಲಿತ ಬದುಕಿಗೆ ಅನಿವಾರ್ಯವಾಗಿದೆ. ಹೀಗೆ ಅನಿವಾರ್ಯವಾಗಿ ಗಾಯಗೊಳ್ಳುತ್ತ, ಮಾಯುತ್ತ, ಮತ್ತೆ ಗಾಯಗೊಳ್ಳುವ ದಲಿತ ಬದುಕನ್ನು ಅವರು ತಾಳೆಯ ಗರಿಗೆ ಹೋಲಿಸುತ್ತಾರೆ.
ಕರುಕ್ಕು ಒಂದು ಆತ್ಮಕಥೆಯಷ್ಟೇ ಅಲ್ಲ, ಅನುಭವ ಕಥನ ಎಂದೂ ಕರೆಯಬಹುದು. ಆತ್ಮಕತೆಯಲ್ಲಿ ವ್ಯಕ್ತಿಯ ಬದುಕಿಗೆ ಸಂಬಂಧಿಸಿದ ವೈಯಕ್ತಿಕ ವಿವರಗಳು ಒಂದಾದ ಮೇಲೊಂದರಂತೆ ಬಂದುಹೋದರೆ ಬಾಮಾ ತಮ್ಮ ಪುಸ್ತಕದ ಒಂಭತ್ತು ಅಧ್ಯಾಯಗಳಲ್ಲಿ ಇಡೀ ಸಮುದಾಯದ ಚಿತ್ರಣ ಕಟ್ಟಿಕೊಡುತ್ತಾರೆ. ಅಲ್ಲಿ ಅವರು ‘ನಾನು’ ಎಂದರೆ ಅದು ಬಾಮಾ ಮಾತ್ರ ಅಲ್ಲ, ತಮಿಳುನಾಡಿನ ಯಾವುದೇ ಹಳ್ಳಿಯ ಪರಯಾ ಸಮುದಾಯದ ಪ್ರತಿನಿಧಿ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ತನ್ನನ್ನು ಸಮುದಾಯದ ಮುಖೇನ ಗುರುತಿಸಿಕೊಳ್ಳುತ್ತ, ನಿರೂಪಿಸಿಕೊಳ್ಳುತ್ತ ಹೋಗುವ ಬರವಣಿಗೆಯ ಕ್ರಮ ದಲಿತ ಆತ್ಮಕಥಾನಕಗಳ ಮುಖ್ಯಗುಣವಾಗಿದ್ದು ಅದು ಇಲ್ಲೂ ನಿಚ್ಚಳವಾಗಿ ಕಂಡುಬರುತ್ತದೆ ಹಾಗೂ ಆ ಮೂಲಕ ಇಡೀ ಸಮುದಾಯದ ಪರವಾಗಿ ಮಾತನಾಡುವ ಎಚ್ಚರ ಹಾಗೂ ಅದರ ನೋವುನಲಿವಿನೊಂದಿಗೆ ತನ್ನದನ್ನು ಹೇಳಿಕೊಳ್ಳುವ ತಾದಾತ್ಮ್ಯವೂ ಒದಗಿಬಂದಿದೆ.

ಮಧುರೈ ಜಿಲ್ಲೆಯ ಹಳ್ಳಿಯ ಪ್ರಕೃತಿ ಚಿತ್ರಣ; ಅಲ್ಲಿನ ಪರಯಾ-ಪಲ್ಲ-ಚಾಳಿಯಾರ್-ನಾಡಾರ್ ಜನಸಮುದಾಯಗಳು; ಸಮುದಾಯಗಳ ನಡುವಿನ ಅಂತರ್‌ಸಂಬಂಧಗಳು ಹಾಗೂ ಬಿಕ್ಕಟ್ಟುಗಳು; ಕೇರಿಯ ಮಕ್ಕಳ ಶಿಕ್ಷಣ-ಮನೋರಂಜನೆ; ದಲಿತ ಕೌಟುಂಬಿಕ ಬದುಕಿನ ಚಿತ್ರಣ; ಕ್ಯಾಥೊಲಿಕ್ ಚರ್ಚ್‌ನ ಪಾದ್ರಿ ಮತ್ತು ಸನ್ಯಾಸಿನಿಯರು; ಸೇವೆಯೆಂಬ ಪದವನ್ನು ಅಪಾರ್ಥಗೊಳಿಸಿ ಭ್ರಮನಿರಸನಗೊಳಿಸಿದ ಕ್ರೈಸ್ತ ಸನ್ಯಾಸಿನಿಯರ ಕಾನ್ವೆಂಟ್ ಜಗತ್ತು - ಹೀಗೆ ೧೩೪ ಪುಟಗಳಲ್ಲಿ, ೯ ಅಧ್ಯಾಯಗಳಲ್ಲಿ ಅವರ ಅನುಭವಗಳು ಹರಡಿಕೊಂಡಿವೆ. ಒಂದು ಸೂಕ್ಷ್ಮ ಮನಸ್ಸು ತನ್ನ ಸುತ್ತಲ ತಾರತಮ್ಯ-ಅಸಮಾನತೆಯನ್ನು ಅರಿಯುತ್ತ, ಅದನ್ನು ವಿರೋಧಿಸುತ್ತ, ತನ್ನ ದಾರಿ ತಾನು ಕಂಡುಕೊಳ್ಳುತ್ತಲೇ ದಲಿತ ಮನಸ್ಸಾಗಿ ಜಾಗೃತಗೊಂಡ ಅನುಭವದ ಕಥನ ಇದಾಗಿದೆ. ಇದನ್ನೇ ಎಲಿಯನಾರ್ ಜೆಲಿಯಟ್ ಭಾಷೆಯಲ್ಲಿ ಹೇಳುವುದಾದರೆ ‘ಫ್ರಂ ಅನ್‌ಟಚಬಲ್ ಟು ದಲಿತ್’ ಆಗಿ ವ್ಯಕ್ತಿತ್ವವೊಂದು ರೂಪುಗೊಂಡ ಬಗೆ ಇಲ್ಲಿ ಅನಾವರಣಗೊಂಡಿದೆ.

ಭಾರತದ ತಳಸಮುದಾಯಗಳು, ಅದರಲ್ಲೂ ದಲಿತರು ಸಾವಿರಾರು ವರ್ಷಗಳ ಸಾಮಾಜಿಕ ಹೀನ ಪರಿಸ್ಥಿತಿಯಿಂದ ವಿಮೋಚನೆಗೊಳ್ಳಲು ದಾರಿಯೇ ಇಲ್ಲವೆಂದುಕೊಂಡಿದ್ದಾಗ ಮತಾಂತರ ಒಂದು ಗಮನಾರ್ಹ ಆಯ್ಕೆಯಾಗಿ ಒದಗಿಬಂತು. ಅದರಲ್ಲೂ ತಮಿಳುನಾಡಿನ ದಲಿತರು ಕ್ರಿಶ್ಚಿಯಾನಿಟಿಯನ್ನು ವಿಮೋಚನೆಯ ಮಾರ್ಗವೆಂದು ನಂಬಿ ದೊಡ್ಡ ಸಂಖ್ಯೆಯಲ್ಲಿ ಮತಾಂತರವಾದರು. ತಮಿಳುನಾಡಿನ ಕ್ರಿಶ್ಚಿಯನ್ನರಲ್ಲಿ ೮೦% ದಲಿತರು. ಆದರೆ ಮಾನವ ಪ್ರೀತಿ ಬೋಧಿಸುವ ಕ್ರೈಸ್ತ ಧರ್ಮದಲ್ಲೂ ಒಳತಾರತಮ್ಯ ಇರುವುದು ಹಲವು ಬಾರಿ ಬಾಮಾ ಅನುಭವಕ್ಕೆ ಬಂದಿದೆ. ಸ್ವತಂತ್ರ ದೇಶದ ಪ್ರಜೆಯಾಗಿ ಒಬ್ಬ ಹುಡುಗಿ ಸ್ವಾತಂತ್ರ್ಯ ಮತ್ತು ಸಮಾನತೆ ಪಡೆಯಲು ಸಾಧ್ಯವಾಗದೇ ಹೋಗುವುದರ ಜೊತೆಗೆ ಕರುಣೆ ಮತ್ತು ಸಮಾನತೆಯನ್ನು ಬೋಧಿಸುವ ಕ್ರೈಸ್ತ ಧರ್ಮದಲ್ಲೂ ಸಮಾನತೆ, ಸಮಾನ ಗೌರವ ದೊರೆಯದೇ ಇರುವುದನ್ನು ಬೆಳೆಯುವ ಮನಸ್ಸು ಗುರುತಿಸುತ್ತ ಹೋಗುತ್ತದೆ. ವ್ಯಕ್ತಿಯೊಬ್ಬನ ಜಾತಿಶ್ರೇಣಿಯು ಆತನ ಧರ್ಮ ಮತ್ತು ಸಮಾಜದಲ್ಲಿ ಸ್ಥಾನ ನಿರ್ಧರಿಸುವ ಅಂಶ ಎನ್ನುವುದನ್ನು ಸೂಕ್ಷ್ಮ ಮನಸ್ಸು ಅರಿಯುತ್ತ ಹೋಗುತ್ತದೆ. ಬೆಳೆಯುತ್ತ ಹೋದಂತೆ ಧಾರ್ಮಿಕವಾಗಿ ತಾನು ಕ್ರೈಸ್ತಳೆಂಬ ಅರಿವೂ, ಜನ್ಮಜಾತವಾಗಿ ಜಾತಿ ಕಾರಣದಿಂದ ಬಂದ ದಲಿತ ಎಂಬ ಅರಿವೂ ಒಟ್ಟೊಟ್ಟಿಗೆ ಹುಟ್ಟುತ್ತದೆ. ಇದರ ಜೊತೆಗೆ ಗಾಢವಾಗಿರುವ ಮಹಿಳಾ ಪ್ರಜ್ಞೆಯೂ ಸೇರಿ ಮೂರೂ ಸ್ತರಗಳ ಜಾಗೃತಿ ಮತ್ತು ಬಂಡಾಯವನ್ನು ಅವರಲ್ಲಿ ಹುಟ್ಟುಹಾಕುತ್ತವೆ.
ಅವರು ನಿರೂಪಿಸಿರುವ ಬಾಲ್ಯದ ಕೆಲ ಅನುಭವಗಳಲ್ಲಿ ಆ ವ್ಯಕ್ತಿತ್ವ ರೂಪುಗೊಂಡ ಬಗೆ ಅರ್ಥವಾಗುತ್ತದೆ:
ಮೂರನೇ ತರಗತಿಯಲ್ಲಿದ್ದಾಗ ಒಮ್ಮೆ ಶಾಲೆಯಿಂದ ಮನೆಗೆ ಬರುತ್ತಾ ನೋಡುತ್ತಾರೆ: ಒಬ್ಬ ಪರಯಾ ತಿಂಡಿ ಪೊಟ್ಟಣವನ್ನು ಅದರ ದಾರದ ತುದಿ ಹಿಡಿದು ಜಾಗರೂಕವಾಗಿ ತರುತ್ತಲಿದ್ದಾನೆ. ಅವನ ಸರ್ಕಸ್ ಅವರಿಗೆ ನಗು ತರಿಸುತ್ತದೆ. ಆದರೆ ಹಾಗೆ ತಂದವ ಅದನ್ನು ಮೇಲ್ಜಾತಿ ನಾಯಕನ ಕೈಗಿತ್ತು ವಂದಿಸಿ ದೂರ ನಿಲ್ಲುತ್ತಾನೆ. ಅವನೋ ತಾನು ತಿಂದ ನಂತರ ಚೂರೊಂದನ್ನು ಇವನೆಡೆಗೆ ಹಾಕುತ್ತಾನೆ. ಆತ ಹಾಗೇಕೆ ಪೊಟ್ಟಣ ಹಿಡಿದು ತಂದ? ಏಕೆ ಹಾಗೆ ದೈನೇಸಿಯಾಗಿ ನಿಂತ? ಎಂದು ಅರ್ಥವಾದಾಗ ಆ ಪುಟ್ಟ ಮನಸಿಗೆ ಅಸ್ಪೃಶ್ಯತೆಯ ಮೊದಲ ಅನುಭವವಾಗುತ್ತದೆ. ಅರ್ಥವಾದ ವಿಷಯ ಸಾವಿರ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಹೊಲದಲ್ಲಿ ದುಡಿದು ಮನೆಗೆ ಹೋಗದೇ ಆತ ಹೀಗೇಕೆ ಕೈ ಮುಗಿದು ನಿಲ್ಲಬೇಕಿತ್ತು ಎನಿಸಿ ಪ್ರತಿರೋಧದ ಮೊದಲ ಚಳಕು ಅನುಭವಕ್ಕೆ ಬರುತ್ತದೆ.

ಅವರ ಇಬ್ಬರು ಅಜ್ಜಿಯರು ನಾಯ್ಕರರ ಮನೆಗೆಲಸಕ್ಕೆ ಹೋಗುತ್ತಿರುತ್ತಾರೆ. ಒಮ್ಮೆ ಬಾಮಾ ಅವರ ಜೊತೆ ಹೋದಾಗ ಅಜ್ಜಿ ಇಟ್ಟ ಪಾತ್ರೆಯಲ್ಲಿ ತಿಂದುಳಿದಿರುವುದನ್ನು ಹಾಕಿದ್ದು ಕಾಣಿಸುತ್ತದೆ. ಅದನೇಕೆ ತಾವು ತಿನ್ನಬೇಕೆಂದು ಅಜ್ಜಿ ಜೊತೆ ವಾದಕ್ಕಿಳಿದಾಗ ಅಜ್ಜಿ, ‘ಅವ್ರು ನಮ್ಮುನ್ನ ಆಳಿದ ಮಾರಾಜ್ರು. ಅವರಿಲ್ದೆ ನಾವೆಂಗ್ ಬದುಕ್ತಿವಿ? ನಂ ಹೊಟ್ಟೆ ತುಂಬ್ಸೋರೇ ಅವ್ರು. ಅವ್ರು ತಲತಲಾಂತ್ರದಿಂದ ಶ್ರೀಮಂತ್ರು, ನಾವ್ ಬಡವ್ರು. ಇದ್ನ ತಪ್ಪಸಕ್ಕಾಗುತ್ತಾ?’ ಎಂದು ಅಮಾಯಕವಾಗಿ ಪ್ರಶ್ನಿಸುತ್ತಾರೆ. ಅಜ್ಜಿಯ ಅಸಹಾಯಕತೆ ಬಾಮಾರನ್ನು ಸುಮ್ಮನಾಗಿಸುವುದಿಲ್ಲ. ಬದಲಾಗಿ ಅನ್ಯಾಯ ತುಂಬಿದ ವ್ಯವಸ್ಥೆ ಉಸಿರುಗಟ್ಟಿಸುವ ಅರಿವು ಮೂಡಿಸಿ ಅದರಿಂದ ಹೊರಬರುವ ದಾರಿಗಳ ಆಯ್ಕೆ ಶುರುವಾಗುತ್ತದೆ.

ಕೆಲವು ಸಣ್ಣಪುಟ್ಟ ಎನಿಸಿಬಿಡಬಹುದಾದ ವಿಷಯಗಳೂ ಸೂಕ್ಷ್ಮ ಮನಸ್ಸನ್ನು ಎಷ್ಟು ಘಾಸಿಗೊಳಿಸಬಹುದೆಂದು ಅವರ ಕೆಲ ನಿರೂಪಣೆಗಳಲ್ಲಿ ವ್ಯಕ್ತವಾಗುತ್ತದೆ. ಚರ್ಚ್ ನಡೆಸುವ ಶಾಲೆಯಲ್ಲಿ ಓದುತ್ತಿದ್ದರೂ ಅಲ್ಲಿನ ಟೀಚರುಗಳು ಹಾಗೂ ಹಾಸ್ಟೆಲಿನ ವಾರ್ಡನ್ ದಲಿತ ಮಕ್ಕಳನ್ನು ಸುಮ್ಮನೇ ಅಪವಾದ, ಅಪಮಾನಕ್ಕೀಡುಮಾಡುತ್ತಿರುತ್ತಾರೆ. ಒಮ್ಮೆ ಕಾಲೇಜಿನಲ್ಲಿ ‘ದಲಿತ ವಿದ್ಯಾರ್ಥಿಗಳು ಎದ್ದು ನಿಲ್ಲಿ’ ಎಂದು ಶಿಕ್ಷಕರು ಹೇಳುತ್ತಾರೆ. ಅದುವರೆಗೆ ಬಾಮಾ ದಲಿತ ಹುಡುಗಿ ಎಂದು ತಿಳಿಯದಿದ್ದವರು ಆಕೆ ದಲಿತ ಎಂದು ತಿಳಿದ ತಕ್ಷಣ ಗುಸುಗುಸು ಮಾತು, ಉದ್ಗಾರಗಳನ್ನು ಶುರುಮಾಡುತ್ತಾರೆ. ದಲಿತ ಮಕ್ಕಳಿಗೆ ವಿಶೇಷ ಟ್ಯೂಷನ್ ಇದೆಯೆಂದು ಹೇಳಿದಾಗ ತನಗ್ಯಾವ ಸ್ಪೆಷಲ್ ಟ್ಯೂಷನ್ನಿನ ಅಗತ್ಯವಿಲ್ಲವೆಂದು ಹೇಳಿ ಕೂತುಬಿಡುತ್ತಾರೆ. ಮೇಷ್ಟರ ಮಟ್ಟಿಗೆ ಇದು ತೀರಾ ಸಾಮಾನ್ಯ ಕ್ರಿಯೆ ಎನಿಸಿದರೂ ಜಾಗೃತಗೊಂಡ ವ್ಯಕ್ತಿತ್ವ ಈ ತೆರನ ಗುರುತಿಸುವಿಕೆಯಿಂದ ವಿಚಿತ್ರ ತಳಮಳ ಅನುಭವಿಸಿ ಕನಲುತ್ತದೆ.
ಮತ್ತೊಮ್ಮೆ ಶಾಲೆಯ ಮಕ್ಕಳು ಆಡುವಾಗ ಬಾಗಿದ ತೆಂಗಿನಮರವೊಂದನ್ನು ಹಾರಿ, ಮುಟ್ಟಿ ಮುಂದೆ ಹೋಗುತ್ತಿರುತ್ತಾರೆ. ಬಾಮಾ ಹಾಗೆ ಹಾರಿ ಮುಟ್ಟಿದಾಗ ಕಾಯಿ ಕೆಳಗೆ ಬೀಳುತ್ತದೆ. ಅವರ ಮೇಲೆ ಕಾಯಿ ಕಿತ್ತ ಆರೋಪ ಬರುತ್ತದೆ. ಅವರೇನು ಹೇಳಿದರೂ ಕೇಳದೇ ಕ್ಲಾಸ್ ಟೀಚರ್ ಜಾತಿ ಹಿಡಿದು ಬೈದು ಶಾಲೆಯಿಂದ ಹೊರಹಾಕುತ್ತಾರೆ. ಪಾದ್ರಿಯ ಬಳಿ ಹೋಗಿ ಕ್ಷಮೆ ಕೇಳಿ ಪತ್ರ ತರುವಂತೆ ಹೇಳುತ್ತಾರೆ. ಆಕೆ ಏನೂ ತಪ್ಪು ಮಾಡದೇ ಇದ್ದರೂ ಪಾದ್ರಿ, ‘ನೀವು ಕೇರಿಯ ಮಕ್ಕಳೇ ಹೀಗೆ, ಕದಿಯುವವರು. ನೀನೇ ಕದ್ದಿರಬೇಕು’ ಎಂಬ ಆಪಾದನೆ ಹೊರಿಸುತ್ತಾ ಕ್ಷಮಾಪಣೆಯ ಪತ್ರ ಕೊಡುತ್ತಾರೆ.

ಚರ್ಚಿನ ಒಳಗೆ-ಹೊರಗೆ, ಶಾಲೆಯ ಒಳಗೆ-ಹೊರಗೆ ಎಲ್ಲಕಡೆಯೂ ಆದ ಇಂಥ ಅನುಭವಗಳು ಅನ್ಯಾಯ, ತಾರತಮ್ಯವನ್ನು ಎಳೆಎಳೆಯಾಗಿ ಆ ಪುಟ್ಟ ಜೀವಕ್ಕೆ ಬಿಚ್ಚಿ ತೋರಿಸುತ್ತವೆ. ಅದರ ಜೊತೆಗೆ ಶಿಕ್ಷಣ ಮಾತ್ರ ತಮಗೆ ಗೌರವ ತಂದುಕೊಡುವುದೆಂದು ಸೈನ್ಯದಲ್ಲಿರುವ ಅಪ್ಪ ಹಾಗೂ ಎಂಎ ಕಲಿತ ಅಣ್ಣ ಹೇಳುವ ಮಾತನ್ನು ಮತ್ತೆಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತವೆ.

ಕೊನೆಗೆ ತನ್ನ ಸಮುದಾಯದವರಿಗಾಗಿ ಏನಾದರೂ ಮಾಡಲೇಬೇಕೆನಿಸಿ ಸನ್ಯಾಸಿನಿಯಾಗುತ್ತಾರೆ. ಶೋಷಿತರ ಪರ ಕೆಲಸ ಮಾಡಿದ ಒಬ್ಬ ಸಂತಳ ಆರ್ಡರಿನ ಸನ್ಯಾಸಿನಿಯಾಗಲು ಕಾನ್ವೆಂಟ್ ಸೇರುತ್ತಾರೆ. ಅವರು ನಡೆಸುವ ಶಾಲೆಯಲ್ಲಿ ಗಣಿತ ಟೀಚರಾಗುತ್ತಾರೆ. ಆದರೆ ಶ್ರೀಮಂತ ಮಕ್ಕಳಿಗಾಗೇ ಅವರು ನಡೆಸುವ ಶಾಲೆ ತನ್ನ ಸೇವೆಯ ಕಾರ್ಯಕ್ಷೇತ್ರ ಅಲ್ಲವೆಂದು ಏಳು ವರ್ಷ ಕಳೆಯುವ ಹೊತ್ತಿಗೆ ಬಲವಾಗಿ ಅನಿಸತೊಡಗುತ್ತದೆ. ಕಾರಲ್ಲಿ ಬಂದಿಳಿದು ಸೇವಕ/ಸೇವಕಿಯರಿಂದ ಚೀಲ, ಊಟದ ಬಾಕ್ಸ್ ಹೊರಿಸಿ ತರುವ ಸಿರಿವಂತ ಮಕ್ಕಳಿಗೇ ತಾನು ಕಲಿಸಬಯಸಿದ್ದು? ತೋರಿಕೆಗಾಗಿ ಕೆಲ ಬಡಮಕ್ಕಳನ್ನು ಅವು ಸೇರಿಸಿಕೊಂಡರೂ ಅವರ ಇರವಿನಿಂದ ತಮ್ಮ ಶಾಲೆಯ ಸ್ಟಾಂಡರ್ಡ್ ಕಡಿಮೆಯಾಗುವುದೆಂದೇ ಭಾವಿಸುವ ಇಂಥ ಶಾಲೆಗಳಲ್ಲಿರಲಾರೆ ಎಂದು ಹೇಳಿದ ಕೂಡಲೇ ಅಲ್ಲಿಂದಿಲ್ಲಿಗೆ ಎಲ್ಲೆಲ್ಲಿಗೋ ಮೂರು ಬಾರಿ ವರ್ಗಾವಣೆಯಾಗುತ್ತಾರೆ. ಕೊನೆಗೆ ಜಮ್ಮುವಿನ ಶಾಲೆಯೊಂದಕ್ಕೆ ಕಳಿಸಲ್ಪಡುತ್ತಾರೆ.
ಜಮ್ಮುವಿನಲ್ಲಿ ಉಳಿದವರು ಇವರ ಇರುವಿಕೆಯನ್ನೇ ಗಮನಿಸದಂತಿರುತ್ತಾರೆ. ತೀವ್ರ ಅನಾಥಭಾವ ಕಾಡತೊಡಗುತ್ತದೆ. ಡವರಲ್ಲಿ ಬಡವರಾಗಿ ಬದುಕುತ್ತೇವೆಂದು ಪ್ರತಿಜ್ಞೆ ಮಾಡಿ ತಿಂದುಂಡು ಬದುಕುವ ಸನ್ಯಾಸಿನಿಯರ ಸುಖ ಜೀವನ ಶೈಲಿ, ಅವರ ನಡೆನುಡಿಯ ವ್ಯತ್ಯಾಸ ಬಾಮಾರನ್ನು ಆತ್ಮ ನಿರೀಕ್ಷೆಗೆ ಒಡ್ಡುತ್ತದೆ. ಎಲ್ಲರನ್ನೂ ಪ್ರಶ್ನಿಸುತ್ತಾರೆ. ಎಲ್ಲ ಕಡೆ ಪ್ರಶ್ನಿಸುತ್ತಾರೆ. ವಿಶ್ವಾಸ-ವಿಧೇಯತೆ-ನಂಬಿಕೆ-ಅನುಯಾಯಿತ್ವ ಎಂಬ ಪದಗಳನ್ನು ಅಸ್ತ್ರವಾಗಿ ಬಳಸಿ ಬಾಮಾರನ್ನು ಸುಮ್ಮನಿರಿಸಲು ಯತ್ನಿಸಲಾಗುತ್ತದೆ.

ಬರಬರುತ್ತ ತಿಳಿಯತೊಡಗುತ್ತದೆ: ಚರ್ಚ್‌ನ ರಚನೆಗಳೊಳಗೆ ಎಲ್ಲರಿಗೂ ಪ್ರವೇಶ ಮಾತ್ರವಿದೆ, ಆದರೆ ಅಲ್ಲೂ ದಲಿತರು ಅಂಚಿಗೆ ದೂಡಲ್ಪಟ್ಟವರು. ದಲಿತ ಸಿಸ್ಟರುಗಳು ಉಳಿದವರಂತೆ ತರಬೇತಿ-ವಿದ್ಯೆ ಪಡೆದರೂ ಅವರನ್ನು ಹಿಂದುಳಿದ ಕುಗ್ರಾಮಗಳಿಗೆ ಕಳಿಸಲಾಗುತ್ತದೆ. ಕಾನ್ವೆಂಟಿನ ಸ್ಥಾಪಕ ಸಂತಳಿಗೂ, ಅದರ ಸದ್ಯದ ಧೋರಣೆ-ಆಶಯಗಳಿಗೂ ಯಾವ ಸಂಬಂಧವೂ ಇರುವುದಿಲ್ಲ. ತಮಿಳು ಪರಯ್ಯಾ ನನ್‌ಗೆ ಅಲ್ಲಿ ಯಾವ ಗೌರವದ ಸ್ಥಾನವೂ ಇಲ್ಲ. ದಲಿತ ಮಹಿಳೆ ಸಿಸ್ಟರ್ ಆಗಬೇಕೆಂದರೆ ಅವರದ್ದು ಬೇರೆಯೇ ಪಂಥ ಇದೆ, ಅದನ್ನು ಸೇರಬೇಕೆಂದು ಅವರಿಗೆ ಅರಿವಾಗುತ್ತದೆ.

ಧರ್ಮ ಒಂದು ಸ್ಥಾಪಿತ ಚೌಕಟ್ಟು. ತನ್ನ ಹಿತಾಸಕ್ತಿಯ ಹೊರತಾಗಿ ವಿಶಾಲವಾಗಿ ಅದು ಚಿಂತಿಸಲಾರದು. ಆದರೆ ಬಾಮಾ ಕ್ರಿಶ್ಚಿಯಾನಿಟಿಯಲ್ಲಿ ನಂಬಿಕೆಯಿಟ್ಟು ಅದು ಬೋಧಿಸುವ ಪ್ರೀತಿ ಮತ್ತು ಸೋದರತೆಯನ್ನು ಹರಡುವ ಉದ್ದೇಶ ಹೊಂದಿ ನನ್ ಆಗಿರುತ್ತಾರೆ. ಬರಬರುತ್ತ ಬೈಬಲಿನಲ್ಲಿರುವ ಜೀಸಸ್‌ಗೂ, ದಿನನಿತ್ಯ ಪೂಜಿತನಾಗುವ ಜೀಸಸ್‌ಗೂ ಅಜಗಜಾಂತರ ವ್ಯತ್ಯಾಸವಿರುವುದು ಕಾಣತೊಡಗುತ್ತದೆ. ಜೀಸಸ್ ಬಡ ಕುಟುಂಬದಲ್ಲಿ ಹುಟ್ಟಿ, ಬಡವರಿಗಾಗೇ ಬದುಕಿ, ಬಡವರ ಸಲುವಾಗಿಯೇ ದೇಹ ತ್ಯಜಿಸಿದವನು. ಆದರೆ ಚರ್ಚಿನ ಸಿರಿವಂತ ಜೀಸಸ್ ಜಾಗದಲ್ಲಿ ಅವರಿಗೆ ಆ ಬಡ ದೇವಸುತನನ್ನು ಕಲ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗೆ ಅಲ್ಲಿ ತನ್ನ ಗುರಿ ಸಾಧನೆ ಕಷ್ಟ್ಲ ಹಾಗೂ ಆ ವ್ಯವಸ್ಥೆ ತನ್ನೊಳಗಿನ ರೆಬೆಲ್ ಅನ್ನು ನಿಧಾನವಾಗಿ ಕರಗಿಸುತ್ತಿರುವುದು ಅರಿವಿಗೆ ಬಂದ ಕೂಡಲೇ ಎಚ್ಚೆತ್ತು ಅಲ್ಲಿಂದ ಹೊರಬರಲು ಯತ್ನಿಸುತ್ತಾರೆ. ಆದರೆ ಅದೇನೂ ಸುಲಭದ ಆಯ್ಕೆಯಾಗಿರುವುದಿಲ್ಲ. ಅಲ್ಲಿ ತನ್ನ ಪ್ರಾಣ, ಮನಸ್ಸು ಎಲ್ಲಕ್ಕೂ ಸಂಚಕಾರ ಒದಗಬಹುದೆಂದು ಒಬ್ಬ ಹಿತೈಷಿಯೊಬ್ಬರು ನುಡಿದಾಗ ನಿಂತ ನಿಲುವಿನಲ್ಲಿ ಚಕ್ರವ್ಯೂಹದಂಥ ವ್ಯವಸ್ಥೆಯಿಂದ ಏಕಾಂಗಿಯಾಗಿ ಹೊರಬೀಳುತ್ತಾರೆ.

ಹೀಗೆ ಸನ್ಯಾಸಿನಿಯಾಗಿ ಹೋದವಳು ಅದನ್ನು ತೊರೆದು ಮನೆಗೆ ಬರುವುದೆಂದರೆ ಎಷ್ಟು ಗೊಂದಲ, ಅವಮಾನ ಎಂದು ಆಕೆಗೆ ಗೊತ್ತು. ಕೇವಲ ಆಕೆಗಷ್ಟೇ ಅಲ್ಲ, ಅವರ ಮನೆಯವರಿಗೂ ಅವಮಾನವೇ. ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗುವುದನ್ನು ವಿರೋಧಿಸಿ, ಏನೋ ಸಾಧಿಸುವ ಛಲ ಹೊತ್ತು ಸನ್ಯಾಸಿನಿಯಾಗಿರುತ್ತಾರೆ. ಈಗ ಮತ್ತೆ ಮನೆಯವರಿಗೆ ತಿಳಿದರೆ - ಅದರಲ್ಲೂ ಅಪ್ಪಯ್ಯನಿಗೆ ತಿಳಿದರೆ - ಏನೆನ್ನುವರೋ ಎಂಬ ಆತಂಕ. ಯಾರಿಗೂ ಹೇಳದೇ ಕೇಳದೇ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಲ್ಲಿನ ಬಟ್ಟೆಗಳನ್ನೂ ಕಳಚಿ ಅಲ್ಲೇ ಬಿಟ್ಟು ಬರುತ್ತಾರೆ.

***
‘ಕರುಕ್ಕು’ವಿನಲ್ಲಿ ಎರಡು ಅಂಶಗಳು ವಿಶೇಷ ಗಮನ ಸೆಳೆಯುತ್ತವೆ:
ಮೊದಲನೆಯದಾಗಿ ಈ ಇಡೀ ಪುಸ್ತಕದಲ್ಲಿ ಬಾಮಾ ಒಮ್ಮೆಯೂ ಅಂಬೇಡ್ಕರ್ ಹೆಸರನ್ನು ಉಲ್ಲೇಖಿಸುವುದಿಲ್ಲ. ಅಂಬೇಡ್ಕರರಷ್ಟೇ ಅಲ್ಲ, ಶೋಷಿತ ಸಮುದಾಯಗಳ ಕುರಿತು ತುಂಬ ಕಾಳಜಿ ಹೊಂದಿದ್ದ, ಅವರ ಸಲುವಾಗಿ ಜೀವಮಾನವಿಡೀ ಹೋರಾಡಿದ ಫುಲೆ ಅಥವಾ ಪೆರಿಯಾರ್ ಅಂಥವರ ಉಲ್ಲೇಖವೂ ಒಮ್ಮೆಯೂ ಇಲ್ಲ. ಶಾಲಾ ಕಾಲೇಜು ದಿನಗಳಲ್ಲಿ ಅವರಿಗೆ ಅಂಬೇಡ್ಕರ್ ಪರಿಚಯ ಉಂಟಾಗಿರಲು ಸಾಕು. ಅವರು ಅಂಬೇಡ್ಕರ್ ವಿಚಾರಗಳ ಅಧ್ಯಯನ ಮುಂದುವರೆಸಲಿಲ್ಲವೋ ಅಥವಾ ಅವರ ವಿಚಾರಗಳನ್ನು ಒಪ್ಪಲಿಲ್ಲವೋ ಅಂತೂ ಅಂಬೇಡ್ಕರ್ ಬಾಮಾ ಬರವಣಿಗೆಯ ಕ್ಯಾನ್ವಾಸಿನಲ್ಲಿ ಎಲ್ಲೂ ಕಾಣಿಸುವುದಿಲ್ಲ.

ಎಲ್ಲರೂ ಅಂಬೇಡ್ಕರ್ ಚಿಂತನೆಗಳಿಂದಲೇ ಪ್ರಭಾವಿತರಾಗಿರಬೇಕೆಂದೇನೂ ಇಲ್ಲ. ಆದರೂ ೬೦-೭೦ರ ದಶಕಗಳು ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ದಲಿತ ಚಳುವಳಿ ಶುರುವಾದ ಕಾಲ. ನಂತರ ಅದು ಉಚ್ಛ್ರಾಯ ಹಂತ ತಲುಪಿತು. ಅಂಬೇಡ್ಕರ್ ಮತ್ತು ಅಂಬೇಡ್ಕರ್‌ವಾದ ದಲಿತರನ್ನೆಷ್ಟೋ ಹಾಗೇ ದಲಿತೇತರರನ್ನೂ ಸೆಳೆದಿತ್ತು. ಆದರೆ ಉಳಿದ ರಾಜ್ಯಗಳಲ್ಲಿ ಇದು ಸಂಭವಿಸಲಿಲ್ಲ. ಬಾಮಾ ತನ್ನ ಸುತ್ತಮುತ್ತಲ ಅಸಮಾನತೆ ಗುರುತಿಸಿ ಕುದಿಯುತ್ತಿದ್ದರೂ ತನಗಿಂತ ಆರೇಳು ದಶಕ ಮೊದಲೇ ಅದರ ವಿರುದ್ಧ ಕಾನೂನುಬದ್ಧವಾಗಿ, ಸಂಘಟನಾತ್ಮಕವಾಗಿ ಹೋರಾಡಿದ ಅಂಬೇಡ್ಕರ್ ವಿಚಾರಗಳು ಅವರಿಗೆ ಇಂಬಾಗದೇ ಇರುವುದು ಆಶ್ಚರ್ಯಕರವಾಗಿದೆ. ಫುಲೆ, ಸಾವಿತ್ರಿಬಾಯಿ, ಪೆರಿಯಾರರ ವಿಚಾರಗಳೂ ಸಹ ಸ್ಫೂರ್ತಿಯಾಗದೇ ಹೋಗಿವೆ. 

ಬಹುಶಃ ಬಾಮಾ ಸಮುದಾಯವನ್ನು ಸಂಘಟಿಸಿ ಹೋರಾಡುವ ಕ್ರಿಯೆಗಿಳಿಯಲಿಲ್ಲ. ಸಮುದಾಯದ ಸಲುವಾಗಿ ತಾನು ಮಾತ್ರ ಹೋರಾಡಬಯಸಿದ್ದರು. ಈಗಲೂ ಅವರು ದಲಿತ, ಮಹಿಳಾ ಮತ್ತಿತರೆ ಯಾವ ಚಳುವಳಿಯ ಭಾಗವೂ ಅಲ್ಲ. ಸ್ವತಂತ್ರವಾಗಿ ತನ್ನ ನಂಬಿಕೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಅಸ್ಮಿತೆಯೂ ಅವರ ಈ ಧೋರಣೆಗೆ ಕಾರಣವಾಗಿರಬಹುದು. ಮೊದಲ ಸುಧಾರಣಾಕಾರರು, ಹೋರಾಟಗಾರರು ತುಳಿದ ದಾರಿಗಿಂತ ಭಿನ್ನವಾದ, ಕ್ರಿಶ್ಚಿಯನ್ ಧರ್ಮದೊಳಗೇ ಇರುವ ದಾರಿಯ ಹುಡುಕಾಟ ಬಾಮಾ ಅವರದಿರಬಹುದು.

ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಧಾರ್ಮಿಕವಾಗಿದ್ದುಕೊಂಡೇ ರ‍್ಯಾಶನಲ್ ಆಗಿ ಬಾಮಾ ಯೋಚಿಸಬಲ್ಲರು. ಬಾಲ್ಯದ ಒಂದೆರೆಡು ಅನುಭವಗಳನ್ನು ಅವರು ಹೇಳಿಕೊಂಡಿರುವುದರಲ್ಲಿಯೇ ಕುರುಡು ಅನುಯಾಯಿತ್ವ ಅವರದಲ್ಲವೆಂದು ತಿಳಿಯುತ್ತದೆ. ಪೂಜೆಯ ನಂತರ ಪಾದ್ರಿ ಕೊಡುವ ಪವಿತ್ರ ರೊಟ್ಟಿ ಏಸುವೆಂದೂ, ಅದನ್ನು ಕಚ್ಚದೇ ಜಗಿಯದೇ ಎಂಜಲಲ್ಲಿ ನೆನೆಸಿ ನುಂಗಿಬಿಡಬೇಕೆಂದು ಪದೇಪದೇ ಹೇಳಲಾಗುತ್ತಿರುತ್ತದೆ. ಅದನ್ನೇನಾದರೂ ಅಪ್ಪಿತಪ್ಪಿ ಜಗಿದರೆ ಏಸುವಿಗೆ ನೋವಾಗಿ ರಕ್ತ ಸುರಿಯುವುದೆಂದೂ ಅದು ಬಾಯಲ್ಲಿ ಬರುವುದೆಂದೂ ಹೇಳಲಾಗುತ್ತದೆ. ಆದರೆ ಬಾಮಾಗೆ ರೊಟ್ಟಿಯನ್ನು ಜಗಿದು ನೋಡುವ ಆಸೆ. ಒಂದು ದಿನ ಜಗಿದೇ ಬಿಡುತ್ತಾರೆ. ಏನಾಶ್ಚರ್ಯ! ಬಾಯಿಂದ ರಕ್ತ ಬರುವುದಿಲ್ಲ. ಪಾದ್ರಿ ಹೇಳುವುದು ಸುಳ್ಳೆನಿಸತೊಡಗುತ್ತದೆ. ದೇವರಿರುವ ಬಗೆಗೆ ಅನುಮಾನವಿಲ್ಲದಿದ್ದರೂ ಅದು ಪಾದ್ರಿ ಹೇಳುವಂತೆ ಅಲ್ಲ ಎಂದು ಅನಿಸತೊಡಗುತ್ತದೆ.
ಆಸ್ತಿಕತೆಯ ನಡುವೆಯೂ ವಿಚಾರವಾದದ ಮೂಲದಿಂದ ಕೊಂಚ ನಾಸ್ತಿಕತೆ ಮೊಳೆತರೆ ಆರೋಗ್ಯಪೂರ್ಣ ಧಾರ್ಮಿಕತೆ ಹುಟ್ಟಬಹುದು ಹಾಗೂ ಢಾಂಭಿಕತೆಯಿಂದ ಪಾರು ಮಾಡುವ ಯೋಚನಾ ಕ್ರಮ ರೂಢಿಯಾಗಬಹುದು.

***
೧೯೯೭ನೇ ಇಸವಿಯಲ್ಲಿ ನಾಲ್ವರು ತಮಿಳು ದಲಿತ ಕ್ರಿಶ್ಚಿಯನ್ ಮಹಿಳೆಯರ ಸಂದರ್ಶನ ರೂಪಿ ಕಥನ ಹೊರಬಂತು- ‘ಫ್ರಂ ರೋಲ್ ಟು ಐಡೆಂಟಿಟಿ’ (ಜಾನ್ ಡಬ್ಲ್ಯು. ಬಿ. ವೆಬ್‌ಸ್ಟರ್). ಆ ಮಹಿಳೆಯರು ಹಿಂದೂ ಧಾರ್ಮಿಕ ವ್ಯವಸ್ಥೆ, ಕ್ರಿಶ್ಚಿಯನ್ ಧಾರ್ಮಿಕ ವ್ಯವಸ್ಥೆ, ದಲಿತ ಕೌಟುಂಬಿಕ ವ್ಯವಸ್ಥೆ - ಈ ಮೂರರ ನಡುವೆ ತಮ್ಮ ಐಡೆಂಟಿಟಿಗಾಗಿ ಶ್ರಮಿಸುವುದು ಅವರ ಮಾತುಗಳಿಂದ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಈ ಅಸ್ಮಿತೆಗಳು ಪೂರಕವಾಗಿ ಅವರನ್ನು ಮಿತಿಗೊಳಪಡಿಸಿದರೆ, ಮತ್ತೆ ಕೆಲವೊಮ್ಮೆ ಬಿಡುಗಡೆಯ ದಾರಿಗಳನ್ನೂ ತೋರಿಸಿವೆ. ಏನೇ ಆದರೂ ಶಿಕ್ಷಣ, ಉದ್ಯೋಗ ಅವಕಾಶ ಹಾಗೂ ಬದಲಾದ ಆರ್ಥಿಕ ಪರಿಸ್ಥಿತಿ ಅವರು ತಮ್ಮ ಹಕ್ಕಿನ ಕುರಿತು ಪ್ರಶ್ನಿಸುವಷ್ಟು ಜಾಗೃತಿ ಮೂಡಿಸುತ್ತಿರುವುದು ಆಶಾದಾಯಕವಾಗಿದೆ. ಬಹುಶಃ ಬಾಮಾ ತನ್ನ ಸಮುದಾಯ ಕುರಿತು ಕನಸುವುದೂ ಇಂತಹ ಬದಲಾವಣೆಯನ್ನೇ.

ಸಾಧಾರಣವಾಗಿ ಇತರ ಆತ್ಮಕತೆಗಳಂತೆ ದಲಿತ ಆತ್ಮಕತೆಗಳು, ಅದರಲ್ಲೂ ದಲಿತ ಮಹಿಳಾ ಆತ್ಮಕತೆಗಳು ತೃಪ್ತಭಾವದಿಂದ, ತನ್ನ ಇದುವರೆಗಿನ ಬದುಕು-ಸಾಧನೆಯ ಕುರಿತು ಹೆಮ್ಮೆಯನ್ನು ಪ್ರಕಟಿಸುತ್ತ ಕೊನೆಯಾಗುವುದಿಲ್ಲ. ಬದಲಾಗಿ ನಿರೂಪಣೆಯ ಪ್ರತಿ ಹಂತದಲ್ಲೂ ಅಭದ್ರತೆಯ ತೊಳಲಾಟ, ತನ್ನ ಸಮುದಾಯ ಆತ್ಮಗೌರವಯುಕ್ತ ಬಿಡುಗಡೆಯತ್ತ, ಸ್ವಯಂಪರಿಪೂರ್ಣತೆಯತ್ತ ಸಾಗುವುದು ಹೇಗೆಂಬ ಕುರಿತ ಕಾಳಜಿ ಕಂಡುಬರುತ್ತದೆ. ‘ಗಿಡ ನೆಟ್ಟವನು ನೀರುಣಿಸುತ್ತಾನೆ’ ಎಂಬ ತನ್ನ ತಾಯಿಯ ಮಾತನ್ನು ನೆನೆಯುತ್ತ ದೇವರ ಮೇಲಿನ ಅಚಲ ವಿಶ್ವಾಸದಿಂದ ಬರಹದ ಕೊನೆ ತಲುಪುವ ಬಾಮಾ ೧೯೯೨ರಲ್ಲಿ ಬರೆದ ನಂತರ ಬಹುದೂರದ ಹಾದಿ ಕ್ರಮಿಸಿದ್ದಾರೆ. ಸಮುದಾಯದ ಪರ ಮಾತನಾಡುವ ದಿಟ್ಟ ದನಿಯಾಗಿ ಹೊರಹೊಮ್ಮಿದ್ದಾರೆ.

ತೀವ್ರ ದೈಹಿಕ ಶ್ರಮ ಬೇಡುವ ಕೆಲಸಗಳನ್ನೇ ಮಾಡುವ ತನ್ನ ಜನ ಮೈಮುರಿದು ದುಡಿದರೂ ಏಕೆ ಸಂತೋಷವಾಗಿರುತ್ತಾರೆ ಎಂದರೆ ಅವರು ‘ಶ್ರಮದ ಕೆಲಸಕ್ಕೆ ಹುಟ್ಟಿದವರು’ ಎಂದು ಬರೆಯುತ್ತಾರೆ. ಎದ್ದಾಗಿನಿಂದ ಮಲಗುವ ತನಕ ಒಂದು ನಿಮಿಷವೂ ಬಿಡುವು ಕೊಡದೇ ದುಡಿದರೂ ಉಣ್ಣುವ ಗಂಜಿಗೇ, ಅಪರೂಪದ ಒಣಮೀನು-ಬಾಡೂಟಕ್ಕೆ ತೃಪ್ತಿ ಪಡುವ ತನ್ನ ಜನ ಏಕೆ ಹಾಗಿದ್ದಾರೆಂದರೆ ಅವರಿಗೆ ತಮ್ಮ ಹೀನಸ್ಥಿತಿಯ ಕುರಿತು ಪ್ರಶ್ನಿಸಲು ಪುರುಸೊತ್ತೇ ಇಲ್ಲವೆನ್ನುತ್ತಾರೆ. ತಮಗೊದಗಿದ ದುರ್ಗತಿಯ ಕುರಿತು ಅರಿವು ಮೂಡಿಸಿ ಶಿಕ್ಷಣದ ಮೂಲಕ ಅವರನ್ನು ಎಚ್ಚರಿಸಬೇಕೆನ್ನುವುದು ಬಾಮಾ ಗುರಿಯಾಗಿದೆ. ಕಾಂಚೀಪುರಂ ಬಳಿಯ ಉತ್ತಿರ ಮೇರೂರ್ ಎಂಬಲ್ಲಿ ಶಾಲಾಶಿಕ್ಷಕಿಯಾಗಿರುವ ಬಾಮಾ ಅಕ್ಯಾಡೆಮಿಕ್ ವಲಯದ ಸಭೆ-ಸೆಮಿನಾರುಗಳಿಂದ ಮಾರು ದೂರ. ಪುರುಷ ಪ್ರಾಧಾನ್ಯದಿಂದ ತುಂಬಿದ ದಲಿತ ಸಂಘಟನೆಗಳಿಂದಲೂ ದೂರ. ಅಲ್ಲದೇ ಜಾತಿ ಪ್ರಶ್ನೆಯನ್ನೇ ಎತ್ತದೆ ವ್ಯವಹರಿಸುವ ಮಹಿಳಾ ಚಳುವಳಿಯಿಂದಲೂ ದೂರ.

‘ದಲಿತ್ ವುಮೆನ್ ಟಾಕ್ ಡಿಫರೆಂಟ್ಲಿ’ ಎನ್ನುವ ಗೋಪಾಲ ಗುರು ಮಾತಿಗೆ ಉದಾಹರಣೆಯೆಂಬಂತೆ ಬರವಣಿಗೆ ಹಾಗೂ ಅಧ್ಯಾಪನವನ್ನು ಹೋರಾಟದ ಹಾದಿಯಾಗಿ ಆಯ್ದುಕೊಂಡು ಏಕಾಂಗಿಯಾಗಿ ತಮ್ಮ ಹಾದಿ ಸವೆಸುತ್ತಿರುವ ಬಾಮಾ ಧಾರ್ಮಿಕ ಚೌಕಟ್ಟಿನೊಳಗೆ ತಮ್ಮನ್ನಿಟ್ಟುಕೊಳ್ಳದಿದ್ದರೆ ಇನ್ನಷ್ಟು ವಿಶಾಲ ಜನಸಮುದಾಯವನ್ನು ಸಂಘಟಿಸಬಹುದಿತ್ತೇನೋ; ಮತ್ತಷ್ಟು ಜನರನ್ನು ತಲುಪುವ ಹೋರಾಟಗಾರ್ತಿ ರೂಪುಗೊಳ್ಳಲು ಸಾಧ್ಯವಾಗುತ್ತಿತ್ತೇನೋ ಎನಿಸದೇ ಇರುವುದಿಲ್ಲ.

ಕೊನೆಗೆ ಇಷ್ಟು ಆಳ ಮುನ್ನೋಟವುಳ್ಳ ಮಹಿಳಾ ನಾಯಕತ್ವ ದಲಿತ ಚಳುವಳಿಗೆ ಬೇಕಾಗಿದೆ ಎನ್ನುವ ಭಾವನೆ ಎದೆಯ ನಿಜದ ಮಾತಾಗಿ ಪುಸ್ತಕ ಓದಿ ಮುಗಿಸುವ ಹೊತ್ತಿಗೆ ಓದುಗರ ಮನದ ಮೇಲ್ಪದರದಲ್ಲಿ ತೇಲತೊಡಗುತ್ತದೆ..

-    ಡಾ. ಎಚ್. ಎಸ್. ಅನುಪಮಾ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...