Tuesday, October 01, 2013

ಮಹಿಳೆಯ ಕುರಿತು ಗಾಂಧಿ







ಅಹಿಂಸೆಯ ಇನ್ನೊಂದು ಅವತಾರ ಸ್ತ್ರೀ. ಅಹಿಂಸೆಯೆಂದರೆ ಅನಂತವಾದ ಪ್ರೀತಿ. ಇದರ ಅರ್ಥ ನೋವನ್ನು ಸಹಿಸುವ ಅಪಾರ ಶಕ್ತಿ. ಇದನ್ನು ಪುರುಷನ ತಾಯಿಯಾಗಿರುವ ಸ್ತ್ರೀಯಲ್ಲದೆ ಮತ್ತಾರು ತೋರಿಸಲು ಸಾಧ್ಯ? ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಶಿಶುವನ್ನಿಟ್ಟುಕೊಂಡು ಪೋಷಿಸುವ ಸ್ತ್ರೀ ಎಲ್ಲ ನೋವುಗಳನ್ನು ಸಂತೋಷವಾಗಿ ಸಹಿಸುತ್ತಾಳೆ. ಹೆರಿಗೆಯ ನೋವನ್ನು ಮೀರಿಸುವಂತಹ ನೋವು ಬೇರೇನಿರಲು ಸಾಧ್ಯ? ಆದರೆ ಆ ನೋವನ್ನೆಲ್ಲಾ ಆಕೆ ಸೃಷ್ಟಿ ಕಾರ್ಯದಲ್ಲಿ ಮರೆತುಬಿಡುತ್ತಾಳೆ. ನಂತರ ಮಗುವಿನ ದೈನಂದಿನ ಬೆಳವಣಿಗೆಗೆ ಪರಿಶ್ರಮ ತೋರುವವಳೂ ಸ್ತ್ರೀಯೇ. ಅವಳು ತನ್ನ ಈ ಪ್ರೀತಿಯನ್ನು ಮಾನವ ಸಮುದಾಯಕ್ಕೆಲ್ಲಾ ಹರಡಲಿ. ತಾನು ಪುರುಷನ ಕಾಮದ ವಸ್ತು ಮಾತ್ರ ಎನ್ನುವುದನ್ನು ಮರೆಯಲಿ. ಆಗ ಆಕೆ ತಾಯಿಯಾಗಿ, ಸೃಷ್ಟಿಕರ್ತೆಯಾಗಿ ಮತ್ತು ಪುರುಷನ ಪಕ್ಕ ನಿಲ್ಲುವ ಹೆಮ್ಮೆಯ ಸ್ಥಾನ ಅಲಂಕರಿಸಬಹುದು. ನೋವು ಮತ್ತು ನಂಬಿಕೆಯಿಂದ ಧೃಢವಾದ ಆತ್ಮಶಕ್ತಿಯುಳ್ಳ ಸ್ತ್ರೀ ಸತ್ಯಾಗ್ರಹದ ನಾಯಕತ್ವವನ್ನು ವಹಿಸಲು ಸಂಪೂರ್ಣ ಅರ್ಹಳಾದವಳು.
 
 
ಹೆಂಗಸರು ಮತ್ತು ಗಂಡಸರ ಬಗ್ಗೆ ನನಗಿರುವ ಕಲ್ಪನೆಯೆಂದರೆ ಗಂಡಸು ಗಂಡಸಾಗಿದ್ದೂ ಹೆಂಗಸಾಗಿರಬೇಕು, ಹೆಂಗಸು ಹೆಂಗಸಾಗಿದ್ದೂ ಗಂಡಸಾಗಿರಬೇಕು. ಇದರರ್ಥ ಇಷ್ಟೆ: ಮನುಷ್ಯ ಹೆಂಗಸಿನಲ್ಲಿರುವ ವಿನಯ, ಸದ್ವರ್ತನೆ, ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು, ಹೆಂಗಸು ತನ್ನ ಪುಕ್ಕಲುತನ ಬಿಟ್ಟು ಧೈರ್ಯ ಮತ್ತು ಎದೆಗಾರಿಕೆ ಬೆಳೆಸಿಕೊಳ್ಳಬೇಕು.

ನನ್ನ ದೃಷ್ಟಿಯಲ್ಲಿ ಹಿಂದಿನ ಕಾಲದ ಕಾನೂನು ಕಟ್ಟಳೆಗಳನ್ನೆಲ್ಲ ಮಾಡಿದವರು ಗಂಡಸರೇ. ಆದ್ದರಿಂದ ಹೆಂಗಸಿನ ಬಗ್ಗೆ ಸರಿಯಾದ ಮಾಹಿತಿಯಾಗಲೀ, ಅಭಿಪ್ರಾಯವಾಗಲೀ ಬೆಳೆದುಬರಲು ಸಾಧ್ಯವಾಗಿಲ್ಲ. ನಿಜವಾಗಿ ಹೇಳಬೇಕೆಂದರೆ ಹೆಂಗಸು, ಗಂಡಸು ಇಬ್ಬರೂ ಸಮಾನರೇ. ಇಬ್ಬರ ಸ್ಥಾನ ಮತ್ತು ಕಾರ್ಯಗಳಲ್ಲಿ ವ್ಯತ್ಯಾಸವಿದೆಯಷ್ಟೇ. 

ಮಹಿಳೆಯರೇ, ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ ಆತ ತೊಟ್ಟ ಬಟ್ಟೆ, ಅವನ ಹಣದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಡಿ. ಆತ ಎಷ್ಟರಮಟ್ಟಿಗೆ ವಿದ್ಯಾವಂತ ಎನ್ನುವುದನ್ನು ನೋಡಿ. ಆತನ ಗುಣ ಎಂತಹುದು ಎನ್ನುವುದನ್ನು ತಿಳಿದುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಆತನ ಭಾವನೆ, ನಡವಳಿಕೆ, ಆಲೋಚನೆಗಳು ನಿಮ್ಮದರೊಂದಿಗೆ ಹೊಂದಾಣಿಕೆಯಾಗುವುದೇ ನೋಡಿ. ಅಂತಹವರು ಸಿಕ್ಕಿದರೆ ಸರಿ ಮದುವೆಯಾಗಿ, ಇಲ್ಲದಿದ್ದರೆ ಮದುವೆಯಾಗದಿರುವುದೇ ಲೇಸು. ಯಾರೋ ಸಿಕ್ಕಿದವರನ್ನು ಮದುವೆಯಾಗಿ ಇಲ್ಲದ ಬವಣೆಗಳಿಗೆ ಸಿಗುವ ಬದಲು ಸೂಕ್ತ ಗುಣವುಳ್ಳ ವ್ಯಕ್ತಿ ಸಿಗದಿದ್ದರೆ ಮದುವೆಯಾಗದಿರುವುದೇ ಒಳ್ಳೆಯದು

1 comment:

  1. ಗಾಂಧೀಜಿ ಇದರ ಬಗ್ಗೆ ಹೇಳಿರುವ ಮೂಲವನ್ನು ನೀಡಲು ಸಾದ್ಯವಾಗುತ್ತದಾ?

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...