Saturday, November 30, 2013

ಅಂಬೇಡ್ಕರ್‌ : ಅಂತಿಮ ಯಾತ್ರೆಯ ಆರ್ದ್ರ ಚಿತ್ರಗಳು

ಸೌಜನ್ಯ : ಪ್ರಜಾವಾಣಿ

ಡಿಸೆಂಬರ್‌ 4, 1956ನೇ ಇಸವಿ. ಡಾ. ಅಂಬೇಡ್ಕರ್‌ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು ಅಂಬೇಡ್ಕರ್‌ರವರನ್ನು ಭೇಟಿ ಮಾಡಿ ನಾಳಿನ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ರಾತ್ರಿ 11.15ಕ್ಕೆ ಲೇಖನಿ ಕೆಳಗಿಡುವ ವೇಳೆಗೆ ಬಾಬಾ ಸಾಹೇಬರು ಸಾಕಷ್ಟು ಬಳಲಿದ್ದರು. ನಂತರ ಕೊಂಚ ಊಟ ಮಾಡಿದರು.

ತಮ್ಮ ಆಪ್ತ ಕಾರ್ಯದರ್ಶಿ ನಾನಕ್‌ಚಂದುರತ್ತು ಜೊತೆ ‘ಬುದ್ಧ ಅಂಡ್‌ ಹಿಸ್‌ ಧಮ್ಮ’ ಗ್ರಂಥದ ಬಗ್ಗೆ ಮಾತನಾಡಿದರು ಹಾಗೂ ಈ ಪುಸ್ತಕದ ಅರ್ಪಣೆಯ ಟೈಪ್‌ ಮಾಡಿದ ಪುಟಗಳನ್ನು ಜೊತೆಗೆ ಬರ್ಮಾ ಸರ್ಕಾರಕ್ಕೆ ತಾವು ಬರೆದಿರುವ ಪತ್ರಗಳನ್ನು ತೆಗೆದು ತಮ್ಮ ಟೇಬಲ್‌ ಮೇಲಿಡುವಂತೆ ಸೂಚಿಸಿದರು. ರಾತ್ರಿ ಮತ್ತೊಮ್ಮೆ ಅವುಗಳನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ‘ಬೆಳಿಗ್ಗೆ ಬೇಗನೇ ಬಂದುಬಿಡು. ಅವುಗಳೆಲ್ಲವನ್ನು ನಾಳೆಯೇ ತುರ್ತಾಗಿ ಕಳುಹಿಸಬೇಕು’ ಎಂದು ಹೇಳಿದರು.

ಎಲ್ಲ ಕೆಲಸ ಮುಗಿಸಿ, ‘ಬೆಳಿಗ್ಗೆ ಬೇಗ ಬರುವೆ’ ಎಂದು ಹೇಳಿದ ರತ್ತು ತಮ್ಮ ಸೈಕಲ್‌ ಹತ್ತಿ ಮನೆಗೆ ತೆರಳಿದರು. ನಂತರ ಬಾಬಾ ಸಾಹೇಬರು ಟೇಬಲ್‌ ಮೇಲಿಟ್ಟಿದ್ದ ಎಲ್ಲಾ ಕಾಗದ ಪತ್ರಗಳನ್ನು ಓದಿ ಮುಗಿಸಿ, ತಡರಾತ್ರಿ ಮಲಗಿಕೊಂಡರು. ಡಿಸೆಂಬರ್‌ 6ರ ಮುಂಜಾವು. ಬೆಳಿಗ್ಗೆ 6.30ಕ್ಕೆ ಬಾಬಾ ಸಾಹೇಬರ ಪತ್ನಿ ಸವಿತಾ ಅಂಬೇಡ್ಕರ್‌ ಅವರು ಚಹಾದೊಂದಿಗೆ ಕೊಠಡಿಗೆ ಬಂದರು. ಬಾಬಾ ಸಾಹೇಬರು ನಿದ್ದೆಯಲ್ಲಿದ್ದರು. ಅದು ಚಿರನಿದ್ರೆ.

ತಕ್ಷಣವೇ ರತ್ತು ಅವರಿಗೆ ಕರೆ ಹೋಯಿತು. ಅಂಬೇಡ್ಕರ್‌ ನಿಧನರಾದ ಸುದ್ದಿಯನ್ನು ನಂತರ ಆಕಾಶವಾಣಿಗೆ ತಿಳಿಸಲಾಯಿತು. ಈ ವಾರ್ತೆ ರೇಡಿಯೊದಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಇಡೀ ದೇಶದ ಸೂತಕದ ಸಂಚಲನೆ. ಬಾಬಾ ಸಾಹೇಬರ ಕೋಟಿ ಕೋಟಿ ಅನುಯಾಯಿಗಳು ದಿಗ್ಭ್ರಾಂತರಾದರು. ಲಕ್ಷ ಲಕ್ಷ ಜನರು ಅಂಬೇಡ್ಕರ್‌ರವರು ಕೊನೆಯುಸಿರೆಳೆದ ನವದೆಹಲಿಯ ಅಲಿಪುರ ರಸ್ತೆಯಲ್ಲಿರುವ 26ನೇ ನಂಬರಿನ ಬಂಗಲೆಯತ್ತ ಧಾವಿಸಲಾರಂಭಿಸಿದರು. ಅಂಬೇಡ್ಕರ್‌ರವರ ಪಾರ್ಥಿವ  ಶರೀರವನ್ನು ಅವರ ಕರ್ಮಭೂಮಿ ಮುಂಬೈಗೆ ತರುವುದಾಗಿಯೂ, ಮುಂಬೈನಲ್ಲೇ ಅಂತಿಮ ಶವಸಂಸ್ಕಾರ ಮಾಡುವುದಾಗಿಯೂ ಪ್ರಕಟಿಸಲಾಯಿತು.

ದುಡ್ಡಿನ ಕೊರತೆ
1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು. ಆ ಸಂದರ್ಭದಲ್ಲಿ  ಅಂಬೇಡ್ಕರ್‌ ಅವರು ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಭಾರತ ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜನೆ ಹೊಂದುತ್ತಿತ್ತೇನೋ? ಆಗ ದಲಿತರಿಗಾಗಿ ರೂಪುಗೊಳ್ಳುವ ದೇಶಕ್ಕೆ  ಅಂಬೇಡ್ಕರ್‌ ಅವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿ ಆಗಿರಬಹುದಿತ್ತು. ಆದರೆ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.

ಅಧಿಕಾರದ ಮಾತಿರಲಿ, ಅಂಬೇಡ್ಕರ್‌ ತಮ್ಮ ವಿದ್ಯೆ–ತಿಳಿವಳಿಕೆಯನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ರೂಪುಗೊಳ್ಳಲು ಸಾಧ್ಯವಿತ್ತು. ಅವರಿಗಿದ್ದ ಜ್ಞಾನ ಮತ್ತು ಪ್ರತಿಭೆಗೆ ಅವರು ವಿದೇಶದಲ್ಲಿ ಉನ್ನತ ಹುದ್ದೆ ಪಡೆದು ಅಲ್ಲಿಯೇ ನೆಲೆಸಬಹುದಿತ್ತು. ಆದರೆ, ಅವರದು ಭಾರತದಲ್ಲಿಯೇ ಉಳಿದು ಪ್ರವಾಹದ ವಿರುದ್ಧ ಈಜುವ ಮನೋಭಾವವಾಗಿತ್ತು. ಜ್ಞಾನ–ಶೀಲ–ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗಳನ್ನೇ ಉಸಿರಾಡುವಂತೆ ಕಾಣಿಸುತ್ತಿದ್ದ ಅವರು ತಮ್ಮ ಬದುಕಿನ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು. ಆ ಮುಗ್ಗಟ್ಟು ಅವರ ಸಾವಿನ ಸಂದರ್ಭದಲ್ಲೂ ಎದುರಾಯಿತು.

ಅಂಬೇಡ್ಕರ್‌ ಅವರ ದೇಹವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್‌ ಏರ್‌ಲೈನ್ಸ್‌ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ, 5,000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ‘ಭಾರತದ ಸಂವಿಧಾನ ಶಿಲ್ಪಿ’ ಎನ್ನುವ ಖ್ಯಾತಿಯ ಹಾಗೂ ಕೇಂದ್ರ ಸರ್ಕಾರದ ಮಾಜಿ ಕಾನೂನು ಮಂತ್ರಿಗಳೂ ಆದ ಅಂಬೇಡ್ಕರ್‌ ಅವರ ಅಲ್ಮೇರಾ ತೆರೆದು ನೋಡಿದರೆ ಅಲ್ಲಿದ್ದುದು ಕೇವಲ 300 ರೂಪಾಯಿ! ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್‌ರವರಲ್ಲಿ ವಿಚಾರಿಸಿದರೆ, ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. 5,000 ರೂಪಾಯಿ ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಯಿತು. ಆಗ ಟಿ.ಬಿ. ಬೋನ್‌ಸ್ಲೆ ಎನ್ನುವವರು ತಮ್ಮ ಅಂಬಾಸಿಡರ್‌ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು.

ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರೂ ಮುಂದಾಗಲಿಲ್ಲ. ಕೊನೆಗೆ ಅಂದಿನ ಸಂಪರ್ಕ ಖಾತೆ (ವಿಮಾನಯಾನವೂ ಸೇರಿದಂತೆ) ಸಚಿವರಾದ ಬಾಬು ಜಗಜೀವನರಾಂ ಅವರನ್ನು ಸಂಪರ್ಕಿಸಲಾಯಿತು. ಅವರು, ‘ವಿಮಾನವನ್ನು ಉಚಿತವಾಗಿ ಬಯಸುತ್ತೀರೋ ಅಥವಾ ಅರ್ಧ ಬೆಲೆಯ (ರೂ. 2,500) ಬಾಡಿಗೆಗೆ ಬಯಸುತ್ತೀರೋ’ ಎಂದು ಅಂಬೇಡ್ಕರ್‌ರವರ ಮತ್ತೊಬ್ಬ ಸಹಾಯಕರಾದ ಡಾ. ಶಂಕರಾನಂದ ಶಾಸ್ತ್ರಿಯವರನ್ನು ಕೇಳಿದರು. ಅಂಬೇಡ್ಕರ್‌ರವರು ತಾವು ಬದುಕಿರುವಷ್ಟು ದಿನ ತನಗಾಗಿ ಯಾರಲ್ಲೂ ಏನನ್ನೂ ಬೇಡಿಕೊಂಡಿರಲಿಲ್ಲ.

ಹಾಗಾಗಿ ಉಚಿತವಾಗಿ ಬೇಡ, ಅರ್ಧ ಬಾಡಿಗೆಯನ್ನು ತಾನು ನೀಡುತ್ತೇನೆ. ಆದರೆ ಈಗ ಹಣ ಇಲ್ಲ. ಬಾಂಬೆಗೆ ಹೋದ ನಂತರ ಅಲ್ಲಿ ಈ ಹಣವನ್ನು ನೀಡುತ್ತೇನೆ, ಸಹಾಯ ಮಾಡಿ’ ಎಂದು ಶಂಕರಾನಂದ ಶಾಸ್ತ್ರಿಯವರು ಕೇಳಿಕೊಂಡರು. ತಕ್ಷಣ ಸ್ಪಂದಿಸಿದ ಜಗಜೀವನರಾಂರವರು– ‘ಸದ್ಯಕ್ಕೆ ನಿಮ್ಮಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ’ ಎಂದು ಹೇಳಿ ಇಂಡಿಯನ್‌ ಏರ್‌ಲೈನ್ಸನ ಲಘು ವಿಶೇಷ ವಿಮಾನಕ್ಕೆ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಅಂಬೇಡ್ಕರ್‌ರವರ ನಿಕಟವರ್ತಿಗಳಾದ ‘ಗಾಯಕ್‌ವಾಡ್‌’ ಅವರು ಪಾವತಿಸಿದರು.

ಅಭಿಮಾನಿಗಳ ಅಶ್ರುತರ್ಪಣ
ದೆಹಲಿಯಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟಿದ್ದ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತವಾದ ಟ್ರಕ್‌ ಮೇಲಿಟ್ಟು ನಂ. 26, ಅಲಿಪುರ ರಸ್ತೆಯಲ್ಲಿನ ಮನೆಯಿಂದ ದೆಹಲಿಯ ಸಪ್ಧರ್‌ಜಂಗ್‌ ವಿಮಾನ ನಿಲ್ದಾಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಮಧ್ಯಾಹ್ನ 3ಕ್ಕೆ ಹೊರಟ ಮೆರವಣಿಗೆ, ಸುಮಾರು 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಃಖತಪ್ತ ಜನರು ಬಾಬಾಸಾಹೇಬರ ಪಾರ್ಥಿವ  ಶರೀರದ ಜೊತೆ ಸಾಗಿದ್ದರಿಂದ ವಿಮಾನ  ನಿಲ್ದಾಣವನ್ನು ಸೇರಬೇಕಾದರೆ ರಾತ್ರಿ 9 ಗಂಟೆಯಾಗಿತ್ತು.

ರಾತ್ರಿ 9.45ಕ್ಕೆ ಸರಿಯಾಗಿ ಬಾಬಾ ಸಾಹೇಬರ ದೇಹವನ್ನು ಹೊತ್ತ ವಿಶೇಷ ವಿಮಾನವು ಮುಂಬೈನತ್ತ ಪ್ರಯಾಣ ಬೆಳೆಸಿತು. ಈ ವಿಮಾನದಲ್ಲಿ ಸವಿತಾ ಅಂಬೇಡ್ಕರ್‌, ರತ್ತು, ಬಿಕ್ಕು ಆನಂದ ಕೌಸಲಾಯನ್‌, ಡಾ. ಶಂಕರಾನಂದ ಶಾಸ್ತ್ರಿ ಸೇರಿದಂತೆ 11 ಜನರಿದ್ದರು. ವಿಮಾನವು ನಿಲ್ದಾಣ ಬಿಟ್ಟು ಆಕಾಶಕ್ಕೇರಿದ ತಕ್ಷಣ ಆ ಪರಿಸರದಲ್ಲಿ ಜಮಾಯಿಸಿದ್ದ 7 ಲಕ್ಷಕ್ಕೂ ಅಧಿಕ ಜನರು ದುಃಖಪೂರಿತರಾಗಿ ‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಮರ್‌ ರಹೇ’ ಎಂದು ಘೋಷಣೆ ಕೂಗಿದರು.

ಮುಂಬೈನ ಸಾಂತಾಕ್ರೂಜ್‌ ವಿಮಾನ ನಿಲ್ದಾಣಕ್ಕೆ ಬಾಬಾ ಸಾಹೇಬರ ಪಾರ್ಥಿವ ಶರೀರ ತಲುಪಿದಾಗ, ಅಲ್ಲಿ ಸುಮಾರು 5 ಲಕ್ಷ ಮಂದಿ ಡಿಸೆಂಬರ್‌ ಚಳಿಯನ್ನು ಲೆಕ್ಕಿಸದೆ ನೆರೆದಿದ್ದರು. ಸುಮಾರು 25–30 ಮೈಲಿಗಳಿಂದ ಅಂಬೇಡ್ಕರ್‌ರವರ ಅಭಿಮಾನಿಗಳು ನಡೆದುಕೊಂಡೇ ವಿಮಾನ ನಿಲ್ದಾಣ ಬಂದಿದ್ದರು. ವಿಮಾನ ನಿಲ್ದಾಣದಿಂದ ಅಂಬೇಡ್ಕರರ ಪಾರ್ಥಿವ ದೇಹ ಅವರ ಸ್ವಗೃಹ ‘ರಾಜಗೃಹ’ಕ್ಕೆ ಬಂದು ಸೇರುವಷ್ಟೊತ್ತಿಗೆ ಬೆಳಗಿನ ಜಾವ 5.30. ಡಿಸೆಂಬರ್‌ 7ರ ಬೆಳಿಗ್ಗೆ 11 ಗಂಟೆಯ ತನಕ ಬಾಬಾ ಸಾಹೇಬರ ಪಾರ್ಥಿವ  ಶರೀರವನ್ನು ‘ರಾಜಗೃಹ’ದ ಪೋರ್ಟಿಕೋದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬಾಬಾ ಸಾಹೇಬರ ಅಂತಿಮ ದರ್ಶನ ಪಡೆಯಲು ಸುಮಾರು 20 ಕಿ.ಮೀ.ಗಳಷ್ಟು ಉದ್ದದ ಕ್ಯೂ ಇತ್ತು.

ಹೂವಿನಿಂದ ಅಲಂಕೃತಗೊಂಡ ಟ್ರಕ್‌ನ ಮೇಲೆ ಹಾಸಿಗೆಯನ್ನಿಟ್ಟು, ಹಾಸಿಗೆಯ ಮೇಲೆ ಶೋಷಿತರ ವಿಮೋಚಕ ಬಾಬಾಸಾಹೇಬರ ಶವವನ್ನು ಮಲಗಿಸಲಾಯಿತು. ತಲೆಯ ಪಕ್ಕ ಭಗವಾನ್‌ ಬುದ್ಧನ ಪ್ರತಿಮೆ ಇಡಲಾಯಿತು. ನಂತರ ‘ದಾದರ್‌’ ಕಡೆಗೆ ಅಂತಿಮ ಯಾತ್ರೆ ಹೊರಟಿತು. ಬಾಬಾ ಸಾಹೇಬರ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇಷ್ಟೊಂದು ಬೃಹತ್‌ ಸಂಖ್ಯೆಯ ಜನರು ಭಾಗವಹಿಸಿದ್ದು ಮುಂಬೈನ ಇತಿಹಾಸದಲ್ಲೇ ಇರಲಿಲ್ಲ.
ಅಂಬೇಡ್ಕರ್‌ರವರು ಪ್ರಶಾಂತವಾಗಿ ಚಿರನಿದ್ರೆಯಲ್ಲಿ ಮಲಗಿರುವುದನ್ನು ನೋಡಲಾಗದೆ ಹೆಂಗಸರು ಸೇರಿದಂತೆ ಲಕ್ಷಾಂತರ ಜನ ಎದೆ ಬಡಿದುಕೊಂಡು ರೋಧಿಸುತ್ತಿದ್ದರು. ಅಂದು ಸಂಜೆ 6 ಗಂಟೆಗೆ ಅಂತಿಮಯಾತ್ರೆಯ ಶವ ಸಂಸ್ಕಾರ ಸ್ಥಳಕ್ಕೆ  (ಚೈತ್ಯ ಭೂಮಿ) ಮೆರವಣಿಗೆ ತಲುಪಿತು. ಪಾರ್ಥಿವ ಶರೀರದ ಮುಂದೆ 2 ಲಕ್ಷ ಜನ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿದರು. (ಅದೇ ತಿಂಗಳ 16ರಂದು ಮುಂಬೈನಲ್ಲಿ 10 ಲಕ್ಷ ಜನರು ಅಂಬೇಡ್ಕರ್‌ ನೇತೃತ್ವದಲ್ಲಿ ಬೌದ್ಧ ಧರ್ಮ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್‌ರವರು ಎಲ್ಲಾ ತಯಾರಿ ನಡೆಸಿದ್ದರು).

ಸಾಗರ – ಜನಸಾಗರ
ಸಮುದ್ರದ ದಡದಲ್ಲಿ ಶವ ಸಂಸ್ಕಾರದ ಸ್ಥಳವಿತ್ತು. ಸಮುದ್ರದ ಒಳಗೆ ಸೊಂಟ ಮಟ್ಟದ ನೀರಿನಲ್ಲೇ ಜನರು ಗಂಟೆಗಟ್ಟಲೆ ನಿಂತಿದ್ದರು. ಜನರಿಗೆ ಬಾಬಾ ಸಾಹೇಬರ ಕಳೆಬರಹ ಕಾಣಲೆಂದು 6 ಅಡಿ ಎತ್ತರದ ಮಣ್ಣಿನ ದಿಬ್ಬ ನಿರ್ಮಿಸಿ, ಆ ದಿಬ್ಬದ ಮೇಲೆ ಗಂಧದ ಕಟ್ಟಿಗೆಗಳನ್ನಿಟ್ಟು ಅದರ ಮೇಲೆ ಬಾಬಾ ಸಾಹೇಬರನ್ನು ಮಲಗಿಸಲಾಗಿತ್ತು. ರಾತ್ರಿ 7.30ಕ್ಕೆ ಸರಿಯಾಗಿ ಅಂಬೇಡ್ಕರ್‌ ಪುತ್ರ ಯಶವಂತರಾವ್‌ ಅಂಬೇಡ್ಕರ್‌ರವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಶವಸಂಸ್ಕಾರವು ಬೌದ್ಧಧರ್ಮದ ವಿಧಿವಿಧಾನಗಳಂತೆ ನೆರವೇರಿತು.
ವಿಶೇಷವೆಂದರೆ ಆ ಇಡೀ ರಾತ್ರಿ ಲಕ್ಷಾಂತರ ಜನರು ಅಲ್ಲೇ ಉಳಿದುಕೊಂಡಿದ್ದರು. ಬೆಳಿಗ್ಗೆ 6.30ಕ್ಕೆ ಅಲ್ಲಿಂದ ‘ಚಿತಾಭಸ್ಮ’ವನ್ನು ತೆಗೆದ ನಂತರ ಜನರು ಅಲ್ಲಿಂದ ತೆರಳಿದರು. ಚಿತಾಭಸ್ಮವನ್ನು ಒಂದು ಮಣ್ಣಿನ ಕುಡಿಕೆಯಲ್ಲಿಟ್ಟು ತೆರೆದ ವಾಹನದ ಮೂಲಕ ಅವರ ನಿವಾಸ ‘ರಾಜಗೃಹ’ಕ್ಕೆ ತರಲಾಯಿತು. ಚಿತಾಭಸ್ಮವನ್ನು ತರುವಾಗ ಮೆರವಣಿಗೆಯಲ್ಲಿ 5 ಲಕ್ಷ ಜನರು ಸೇರಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಚಿತಾಭಸ್ಮವನ್ನು ಈಗ ಮುಂಬೈನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ಮತ್ತು ನಾಗಪುರದಲ್ಲಿ ಸಂರಕ್ಷಿಸಿಡಲಾಗಿದೆ.

ಈಗಲೂ ಅಂಬೇಡ್ಕರ್‌ ಅವರ ಪರಿನಿರ್ವಾಣದ ದಿನ ಡಿಸೆಂಬರ್‌ 6ರಂದು, ಮುಂಬೈನ ಚೈತ್ಯಭೂಮಿಯಲ್ಲಿರುವ ಅವರ ಸಮಾಧಿಗೆ ದೇಶದ ಮೂಲೆ ಮೂಲೆಗಳಿಂದ ಜನರು ಬಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಡಿಸೆಂಬರ್‌ 6 ಅಂಬೇಡ್ಕರ್‌ ಸ್ಮೃತಿ ದಿನ ಮಾತ್ರವಲ್ಲದೆ, ಅದು ಮನುಷ್ಯತ್ವದ ಹೊಳಪನ್ನು ನವೀಕರಿಸುವ ದಿನವೂ ಆಗಿದೆ. ಎಲ್ಲ ಮಹಾತ್ಮರ ನೆನಪುಗಳಿಗೂ ಮಾನಸಿಕ ಕೊಳಕನ್ನು ತೊಳೆದು ಹೊಳಪು ನೀಡುವ ಜೀವಂತಿಕೆಯ ಮಾಂತ್ರಿಕ ಶಕ್ತಿ ಇರುತ್ತದಲ್ಲವೇ?

ಪೆರಿಯಾರ್: ಮಾನವೀಯ ಸಂಬಂಧಗಳ ಸಂತ - 2

ಶೂದ್ರ ಶ್ರೀನಿವಾಸ


ಭಾಗ - 2
ಕೃಪೆ : ವಾರ್ತಾಭಾರತಿ

ಈ  ದೃಷ್ಟಿಯಿಂದ ಪೆರಿಯಾರ್ ಅವರನ್ನು ನೆನಪು ಮಾಡಿಕೊಂಡಾಕ್ಷಣ ಈ ಎಲ್ಲ ಘಟನೆಗಳು ಮಾತ್ರ ನೆನಪಾಗುವುದಿಲ್ಲ. ಮತ್ತೆ ಬೆಂಗಳೂರಿನ ಮತ್ತು ಕರ್ನಾಟಕದ ವಿಚಾರವಾದಿ ಸಂಘಟನೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಅದು ಅಂತರ್‌ಜಾತಿಯ ವಿವಾಹ ಇರ ಬಹುದು, ವಿಧವಾ ವಿವಾಹ ಇರಬಹುದು ಅಥವಾ ಅಪ್ರಾಪ್ತ ಮದುವೆಯನ್ನು ತಪ್ಪಿಸುವುದು ಇರಬಹುದು. ಇಲ್ಲೆಲ್ಲ ಪ್ರೊ.ಎಂ.ಡಿ. ನಂಜುಂಡ ಸ್ವಾಮಿಯವರ ಜೊತೆ ಪ್ರೊ. ನಂಬಿಯಾರ್, ಡಿ.ಆರ್.ನಾಗರಾಜ್, ಸಿದ್ದಲಿಂಗಯ್ಯ ಮತ್ತು ನನ್ನಂಥವರು ಕ್ರಿಯಾಶೀಲರಾಗಿದ್ದೆವು.

ಕೆಲವೊಮ್ಮೆ ನಮ್ಮೆಡನೆ ಪ್ರಸಿದ್ಧ ಕಾದಂಬರಿಕಾರರಾದ ಬೀchi ಯವರೂ ಭಾಗಿಯಾಗು ರುತ್ತಿದ್ದರು. ಶಿವಾಜಿನಗರದ ತಮಿಳು ಸಂಘದ ಸುತ್ತಮುತ್ತ ಇಂಥ ಹತ್ತಾರು ಕಾರ್ಯಕ್ರಮಗಳ ಸವಿನೆನಪು ಈಗಲೂ ಮನಸ್ಸಿನಲ್ಲಿ ಆಪ್ತವಾಗಿ ಧ್ವನಿಸುತ್ತಿದೆ. ಆ ಕಾಲಕ್ಕೆ ಪೆರಿಯಾರ್ ಅವರ ವಿಚಾರ ವೇದಿಕೆಯ ಹತ್ತಾರು ಸಂಘಟನೆ ಗಳು ಸಾಕಷ್ಟು ಕ್ರಿಯಾಶೀಲವಾಗಿ ದ್ದುವು. ಆ ಎಲ್ಲ ಸಂಘಟನೆಗಳ ಬೆಂಬಲದಿಂದಲೇ ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಪುರಭವನದಲ್ಲಿ ಸಾವಿರಾರು ಪೆರಿಯಾರ್ ಅಭಿಮಾನಿಗಳು ನೆರೆದಿದ್ದರು. 

ಅಂದು ನಾವೂ ಕೂಡ ‘ದ್ರಾವಿಡ ಕಜಗಂ’ ಸಮವಸ್ತ್ರವಾದ ಕಪ್ಪು ಷರ್ಟನ್ನು ಧರಿಸಿದ್ದೆವು. ಕೆಲವು ಜಾತೀವಾದಿಗಳು ಗದ್ದಲವೆಬ್ಬಿಸಲು ಅಲ್ಲಲ್ಲಿ ಕೂತಿದ್ದರು. ಮಧ್ಯೆ ಸ್ವಲ್ಪ ಗದ್ದಲ ಮಾಡಿದರೂ; ತಮ್ಮ ಬೇಳೆ ಇಲ್ಲಿ ಬೇಯುವುದಿಲ್ಲವೆಂದು ಪುರಭವನದ ಹೊರಗೆ ಪ್ರತಿಭಟನೆಯ ಕೂಗನ್ನು ಹಾಕಿ ಹೊರಟು ಹೋದರು. 

ಆದರೆ ‘ಪೆರಿಯಾರ್’ ಅವರು ತಮ್ಮ ಹೆಸರಿಗೆ ತಕ್ಕಂತೆ ದೊಡ್ಡ ವ್ಯಕ್ತಿ ಯಾಗಿಯೇ ಸಾಮಾಜಿಕ ಏರುಪೇರುಗಳ ನಡುವಿನ ತಾರತಮ್ಯ ಕುರಿತು ತುಂಬ ದೀರ್ಘವಾಗಿ ಮಾತಾಡಿದ್ದರು. ಅವರಿಗೆ ತೊಂಬತ್ತು ವರ್ಷದ ವಯೋಮಾನ ಕಿಂಚಿತ್ತೂ ಅಡ್ಡಿಯಾಗಲೇ ಇಲ್ಲ. ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರನ್ನು ನೆನಪು ಮಾಡಿಕೊಂಡಾಕ್ಷಣ; ಈ ಕೆಲವು ನೆನಪುಗಳು ಧುತ್ತನೆ ಮನಸ್ಸಿನ ತುಂಬ ಗುನುಗುನಿಸಲು ತೊಡಗುತ್ತದೆ. 

ಈ ದಟ್ಟಗೊಳಿಸುವ ದ್ಯೋತಕವಾಗಿ ಇತ್ತೀಚೆಗೆ ಪೆರಿಯಾರ್ ಅವರನ್ನು ಕುರಿತ ಚಲನಚಿತ್ರ ವನ್ನು ನೋಡುವ ಸದವಕಾಶ ದೊರಕಿತ್ತು. ಡಾ.ಸಿದ್ದಲಿಂಗಯ್ಯನವರು ಈಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಪೀಠದ ಮುಖ್ಯಸ್ಥರಾಗಿದ್ದಾರೆ. ಅಲ್ಲಿ ಈ ಚಿತ್ರವನ್ನು ನೋಡಲು ವ್ಯವಸ್ಥೆ ಮಾಡಿದ್ದರು. 

ಸುಮಾರು ಮೂರು ಗಂಟೆಯ ಈ ಚಿತ್ರವನ್ನು ನೋಡುವ ಮುನ್ನ ಅಧ್ಯಯನ ಪೀಠದ ವಿದ್ಯಾರ್ಥಿಗಳನ್ನು ಕುರಿತು ನನಗೆ ಒಂದು ಗಂಟೆ ಮಾತಾಡುವ ಅವಕಾಶ ಸಿಕ್ಕಿತ್ತು. ಆತ್ಮೀಯ ಪ್ರಶ್ನೋತ್ತರಗಳ ನಂತರ ಚಲನಚಿತ್ರ ನೋಡಲು ಕೂತಿದ್ದೆವು. ಇದಕ್ಕಿಂತ ಮೊದಲು ಡಾ.ಸಿದ್ದಲಿಂಗಯ್ಯ ಅವರು ಆ ಪೀಠದ ಗ್ರಂಥಾಲಯವನ್ನು ಬೆಳೆಸುತ್ತಿರುವ ಕ್ರಮ ಕಂಡು ಖುಷಿಯಾಯಿತು.

ಈರೋಡ್ ವೆಂಕಟರಾಮಸ್ವಾಮಿ ನಾಯ್ಕರ್ ಅಥವಾ ಇ.ವಿ.ಆರ್ ಅವರು ‘ಪೆರಿಯಾರ್’ ಆಗಿದ್ದರ ಹಿಂದೆ ಒಂದು ದೀರ್ಘ ಮಾನವೀಯ ಹೋರಾಟದ ನಡಿಗೆ ಇದೆ. ‘ಪೆರಿಯಾರ್’ ಎಂದರೆ ಹಿರಿಯರು, ದೊಡ್ಡವರು ಮತ್ತು ಘನತೆವುಳ್ಳವರು ಎಂದು. ಅಂಥದ್ದನ್ನು ಪಡೆದು ದೀರ್ಘಕಾಲ ಹೋರಾಟದಲ್ಲಿ ಮುಂದು ವರೆದವರು. 1879ಸೆಪ್ಟೆಂಬರ್ 17ರಂದು ಹುಟ್ಟಿ 1973 ಡಿಸೆಂಬರ್ 24ರಂದು ನಿಧನರಾಗುವ 94 ವರ್ಷಗಳವರೆಗೆ ಬದುಕಿನ ಒಂದೊಂದು ಘಟನೆಯೂ ಅಮೂಲ್ಯವಾದದ್ದು. ಒಬ್ಬ ದೊಡ್ಡ ವ್ಯಾಪಾರಿ ಕುಟುಂಬದಿಂದ ಬಂದವರು.

ಈ ಹಿನ್ನೆಲೆಯನ್ನಿಟ್ಟುಕೊಂಡು ರಾಜಶೇಖರ್ ಅವರು ನಿರ್ದೇಶಿಸಿರುವ ಚಿತ್ರವಿದು. ಇದರಲ್ಲಿ ತಮಿಳಿನ ಜನಪ್ರಿಯ ನಟ ಸತ್ಯರಾಜ್ ಅವರು ಪೆರಿಯಾರ್ ಪಾತ್ರವನ್ನು ಅತ್ಯಂತ ಮಾರ್ಮಿಕ ವಾಗಿ ನಿರ್ವಹಿಸಿದ್ದಾರೆ. ಹಾಗೆ ನೋಡಿದರೆ ನಾವು ಪೆರಿಯಾರ್ ಅವರನ್ನು ಅವರ ಕೊನೆಯ ಹತ್ತು ವರ್ಷದ ಕಾಲಘಟ್ಟದಲ್ಲಿ ನೋಡಿರುವಂಥ ವರು. ಆದರೆ ಎಲ್ಲಿಯೂ ನಾವು ನೋಡಿದ ನಂಬಿಕೆಯ ‘ಚಿತ್ರ’ ಧಕ್ಕೆ ಬರುವುದಿಲ್ಲ. 

ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ ಅವರೊಡನೆ ಓಡಾಡಿದ ನೆನಪುಗಳು ಮಾರ್ಮಿಕವಾಗುವ ರೀತಿಯಲ್ಲಿ ಪೆರಿಯಾರ್ ಅವರು ಸತ್ಯರಾಜ್ ಅವರ ನಟನೆಯ ಮೂಲಕ ನಮ್ಮಲ್ಲಿ ಜೀವಂತ ವಾಗಿ ನಿಲ್ಲುತ್ತಾರೆ. ಇಡೀ ಚಿತ್ರವನ್ನು ಅತ್ಯಂತ ಮಾನವೀಯ ನೆಲೆಗಳಿಂದ ನೋಡಿರುವಂಥದ್ದು. ಪ್ರಾರಂಭದಲ್ಲಿ ತಂದೆ ತಾಯಿಗಳ ಮತ್ತು ಬಂಧು ಬಾಂಧವರ ವಿರೋಧವನ್ನು ಕಟ್ಟಿಕೊಂಡು ಬಾಲ್ಯವಿವಾಹವನ್ನು ವಿರೋಧಿಸುವಂಥದ್ದು ಮತ್ತು ಮೂಢನಂಬಿಕೆಗಳ ಚೌಕಟ್ಟಿನಲ್ಲಿ ಘಟಿಸುತ್ತಿದ್ದ ಕೆಲವು ಅತಿರೇಕಗಳ ಬಗ್ಗೆ; ಗುಣಾತ್ಮಕ ಮನಸ್ಥಿತಿ ಯನ್ನು ಬೆಳೆಸಿಕೊಂಡು ಅತ್ಯಂತ ಸಂಯಮದಿಂದ ಹೋರಾಡುವುದು ಅತ್ಯಂತ ಮಹತ್ವಪೂರ್ಣ ವಾದದ್ದು. ಇಡೀ ಚಿತ್ರ ಮಾನವೀಯ ನೆಲೆಯಲ್ಲಿ ‘ಪೆರಿಯಾರ್’ ಅವರ ವ್ಯಕ್ತಿತ್ವವನ್ನು ರಿಜಿಸ್ಟರ್ ಮಾಡುತ್ತ ಹೋಗುತ್ತದೆ.

 

ಹಾಗೆಯೇ ಅವರು ಗಾಂಧೀಜಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸುವುದು; ಅಲ್ಲಿಯವರೆಗೂ ತಾವು ನಂಬಿದ್ದ ಅಹಿಂಸಾತ್ಮಕ ಮನಸ್ಥಿತಿಗೆ ‘ಸತ್ಯಾಗ್ರಹ’ ಎಂಬ ಚಿಂತನೆ ಗಟ್ಟಿಯಾದ ನೆಲೆಯನ್ನು ಕಂಡುಕೊಳ್ಳುತ್ತದೆ. ಆದರೆ ಪೆರಿಯಾರ್ ಅವರು ಆರು ವರ್ಷ ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದು 1925ರಲ್ಲಿ ಹೊರಗೆ ಬರುವರು. ಇದಕ್ಕೆ ಮುಖ್ಯ ಕಾರಣ: ಅವರು ಸಮಾಜ ಸುಧಾರಣೆಯ ಬಗ್ಗೆ ಗಾಢವಾದ ಒಲವನ್ನು ಬೆಳೆಸಿಕೊಂಡಿದ್ದವರು.

ಇಲ್ಲಿಯ ವೌಢ್ಯತೆಯ ಬಗ್ಗೆ ತೀವ್ರತೆಯ ಚಿಕಿತ್ಸೆ ಎಂದರೆ; ಪೂರ್ಣ ತೊಡಗಿಸಿಕೊಳ್ಳುವುದು ಎಂದು ನಂಬಿದ್ದರು. ಆದ್ದರಿಂದ ಕಾಂಗ್ರೆಸ್‌ನಲ್ಲಿ ಇದ್ದು ಪುರೋಹಿತ ಶಾಹಿ ಮತ್ತು ಮೇಲ್ಜಾತಿಯವರ ವಕ್ರತೆಗಳನ್ನು ಮಾತಾಡಲು ಆಗುವುದಿಲ್ಲವೆಂಬುದನ್ನು ನಂಬಿ ದ್ದರು. ಆದರೆ ಕೊನೆಯವರೆಗೂ ರಾಜಾಜಿ ಯವರು ಪೆರಿಯಾರ್ ಅವರನ್ನು ಕಾಂಗ್ರೆಸ್ಸಿನಡೆಗೆ ಸೆಳೆಯಲು ತುಂಬ ಪ್ರಯತ್ನಿಸುವರು. ಈ ಕೆಲಸವನ್ನು ಗಾಂಧೀಜಿಯವರು ಮಾಡುವರು.

ಇಡೀ ಚಿತ್ರದುದ್ದಕ್ಕೂ ರಾಜಾಜಿಯವರ ಒಟ್ಟು ಪಾತ್ರ ಅತ್ಯಂತ ಘನತೆಯಿಂದಲೇ ಬೆಳೆಯುತ್ತ ಹೋಗುತ್ತದೆ. ಅವರಿಬ್ಬರ ನಡುವೆ ‘ಬ್ರಾಹ್ಮಣ ಅಬ್ರಾಹ್ಮಣ’ ಎಂಬ ಮನಸ್ಥಿತಿಯೂ ಎಲ್ಲಿಯೂ ರಿಜಿಸ್ಟರ್ ಆಗುವುದಿಲ್ಲ. ಇಲ್ಲೆಲ್ಲ ನಿರ್ದೇಶಕರು ಅತ್ಯಂತ ಸೂಕ್ಷ್ಮ ಸಂವೇದನೆಯುಳ್ಳವರು ಎಂಬುದು ದಾಖಲಾಗುತ್ತ ಹೋಗುತ್ತದೆ. 

ಇದಕ್ಕೆ ಮುಖ್ಯ ಕಾರಣ: ನಿರ್ದೇಶಕರು ಪೆರಿಯಾರ್ ಅವರ ಒಟ್ಟು ವ್ಯಕ್ತಿತ್ವವನ್ನು ಅತ್ಯಂತ ಘನತೆಯಿಂದಲೇ ನೋಡಿ ಚಿತ್ರವನ್ನು ಬೆಳೆಸಿದ್ದಾರೆ. ಬಹಳಷ್ಟು ಬಾರಿ ತಮಿಳು ಚಿತ್ರಗಳು ಒಂದು ರೀತಿಯಲ್ಲಿ ಮೆಲೋ ಡ್ರಾಮಗಳು ಆಗುವ ಸಾಧ್ಯತೆ ಇರುತ್ತದೆ. ಒಂದು ದೃಷ್ಟಿಯಿಂದ ‘ಪೆರಿಯಾರ್’ ಅವರ ಒಟ್ಟು ವ್ಯಕ್ತಿತ್ವವನ್ನು ಭಾವನಾತ್ಮಕವಾಗಿ ನೋಡುತ್ತಲೇ ಒಬ್ಬ ದೊಡ್ಡ ಸಂತನ ವ್ಯಕ್ತಿತ್ವವನ್ನು ಚಿತ್ರದಲ್ಲಿ ದಾಖಲಿಸಿದ್ದಾರೆಂಬುದೇ ಈ ಚಿತ್ರದ ಹೆಚ್ಚುಗಾರಿಕೆ ಇರುವುದು. ಆ ಕಾಲಕ್ಕೆ ಅಂಬೇಡ್ಕರ್ ಅವರಿಗೂ ಪೆರಿಯಾರ್ ಅವರು ಆಕರ್ಷಕರಾಗಿದ್ದರು.

ಬಹಳಷ್ಟು ಮಂದಿಗೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ‘ಒಬ್ಬ ಕ್ರೂಡ್ ಬ್ರಾಹ್ಮಣ ವಿರೋಧಿ ಮತ್ತು ದೈವ ವಿರೋಧಿ’ ಎಂಬ ಧೋರಣೆ ಇದೆ. ಅದನ್ನು ಮುರಿಯುವ ಹಂತದಲ್ಲಿ ಚಿತ್ರ ಗಂಭೀರವಾಗಿ ಬೆಳೆಯುತ್ತ ಹೋಗುತ್ತದೆ. ಎಲ್ಲವನ್ನು ಜನಸಾಮಾನ್ಯರ ಕಷ್ಟ ಕಾರ್ಪಣ್ಯ ಗಳ ನಡುವೆ ಇಟ್ಟು ‘ಪೆರಿಯಾರ್’ ಅವರ ಮನಸ್ಥಿತಿ ಈ ರೀತಿಯಲ್ಲಿ ಉನ್ನತ ಮಟ್ಟದ್ದು ಎಂಬುದು ಸಾಬೀತಾಗುತ್ತ ಹೋಗುತ್ತದೆ.

ಪೆರಿಯಾರ್ ವಿರೋಧಿ ಬ್ರಾಹ್ಮಣರು ಅವರ ಕಡೆಗೆ ಚಪ್ಪಲಿ ಎಸೆದಾಗ ಅದನ್ನು ಸಂಗ್ರಹಿಸಿ ಅಯ್ಯೋ ಒಂದೇ ಎಸೆದಿದ್ದಾರಲ್ಲ ಎಂದು ಯೋಚಿಸುವ ಸಮಯಕ್ಕೆ ಇನ್ನೊಂದು ಎಸೆದಾಗ ಪ್ರೀತಿಯಿಂದ ‘ಈಗ ಸರಿಹೋಯಿತು’ ಎಂದು ಉದ್ಗಾರ ತೆಗೆಯು ವರು. ಕುಟುಂಬದ ಚೌಕಟ್ಟಿನಲ್ಲಿ ತಮ್ಮ ಹೋರಾಟದ ಕ್ಷಣಗಳಲ್ಲಿ ಆತ್ಮೀಯವಾಗಿ ಏನನ್ನು ಬಯಸದೇ ತ್ಯಾಗ ಮಯಿಯಾಗಿ ದುಡಿದ ಮೊದಲನೆಯ ಹೆಂಡತಿ ನಾಗಮ್ಮಳ ಪಾತ್ರದ ಬೆಳವಣಿಗೆಯಂತೂ ಅತ್ಯಂತ ಮನೋಜ್ಞವಾಗಿದೆ.

ಆಕೆಯ ನಿಧನದ ನಂತರ ತಮ್ಮ ಒಂಟಿತನದ ಬಿಡುಗಡೆಗಾಗಿ ಹೋರಾಟ ದಲ್ಲಿಯೇ ಇದ್ದ ಮಣಿ ಅಮ್ಮಾಯಿ ಪಾತ್ರವಂತೂ ಮಾನವೀಯವಾಗಿ ಬೆಳೆದಿರುವಂಥದ್ದು. ಇಲ್ಲೆಲ್ಲ ಪೆರಿಯಾರ್ ಅವರ ವಿಷಾದ ದಟ್ಟವಾಗಿ ದಾಖಲಾಗುತ್ತ ಹೋಗುತ್ತದೆ ‘ನನ್ನಿಂದ ಏನನ್ನು ಬಯಸದೇ ತಾಯಿಯ ರೀತಿಯಲ್ಲಿ ನಡ ಕೊಂಡರು’ ಎಂಬುದರ ಬಗ್ಗೆ ಪ್ರಶ್ನೆ ಕೇಳಿ ಕೊಳ್ಳುತ್ತಲೇ ‘ಗಂಡು ಹೆಣ್ಣು’ ಸಂಬಂಧದ ಅದಮ್ಯತೆಯ ಗಾಢ ಒಲವನ್ನು ದಾಖಲಿಸುತ್ತಾರೆ.

ಅಷ್ಟು ದೀರ್ಘಕಾಲದ ಎಲ್ಲ ವಯೋವೃದ್ಧರು ಪುಟ್ಟ ಮಕ್ಕಳೇ ಆಗಿ ಬಿಟ್ಟಿರುತ್ತಾರೆ.ಇದಕ್ಕೆ ಪೆರಿಯಾರ್ ಅವರು ಭಿನ್ನರಲ್ಲ. ಅಲ್ಲೆಲ್ಲ ಮಣಿಅಮ್ಮಾಯಿ ತಾಯಿಯ ಸ್ಥಾನದಲ್ಲಿ ಪೋಷಣೆಯಲ್ಲಿ ತೊಡಗುತ್ತಾರೆ. ಯಾಕೆಂದರೆ ಅವರ ಒಟ್ಟು ಹೋರಾಟದ ಬಗ್ಗೆ ಗೌರವವನ್ನು ಇಟ್ಟುಕೊಂಡೇ ತ್ಯಾಗಮಯಿಯಾದವರು. ಪೆರಿಯಾರ್ ಅವರು ತಮಿಳುನಾಡಿನಿಂದ ಹೊರಗೆ ಚಿಂತಕರಿಗೆ ಮತ್ತು ವಿಚಾರವಾದಿಗಳಿಗೆ ಪರಿಚಯವಾಗಿದ್ದವರು. 

ಆದರೆ ತಮಿಳುನಾಡಿನಲ್ಲಿ ಆರೇಳು ದಶಕಗಳ ಕಾಲ ವಿಭಿನ್ನ ದೃಷ್ಟಿಯಲ್ಲಿ ಮನೆ ಮನೆಯ ಮಾತಾಗಿದ್ದವರು. ಅಷ್ಟರಮಟ್ಟಿಗೆ ಸಾಮಾಜಿಕವಾಗಿ ವ್ಯಾಪಿಸಿಕೊಂಡಿದ್ದರು. ಈ ದೃಷ್ಟಿಯಿಂದ ಅವರ ಸಾವಿಗೆ ಜನರು ಭಾಗವಹಿಸುವಿಕೆಯ ದೃಶ್ಯವೂ ಆಪ್ತವಾಗಿದೆ. ಚಿತ್ರ ಮುಗಿದ ಮೇಲೆ ನಮ್ಮ ನಡುವೆಯೇ ದೀರ್ಘ ಕಾಲದವರೆಗೂ ಅನನ್ಯವಾಗಿದ್ದ ಬೆಳಕಿನ ದೀವಿಗೆಯೊಂದು ಮರೆಯಾಯಿತು ಎಂಬ ವಿಷಾದದ ಚಿತ್ರವೊಂದು ಗಾಢವಾಗುತ್ತ ಹೋಗುತ್ತದೆ. 

ಪೆರಿಯಾರ್ ಚಲನಚಿತ್ರ ನೋಡಿದವರ ಮನದಲ್ಲಿ ಒಬ್ಬ ಸಂತನಾಗಿ ವ್ಯಾಪಿಸಿಕೊಳ್ಳುತ್ತಾರೆ ಎಂಬುದು ಚಿತ್ರದ ಸಾರ್ಥಕತೆಯ ನೆಲೆಯಲ್ಲಿ ಮಹತ್ವಪೂರ್ಣವಾದದ್ದು. ಆದರೆ ಮುಂದೆ ಪೆರಿಯಾರ್ ಅವರ ನಂತರ ‘ಮಣೆ ಅಮ್ಮಾಯ’ ಒಟ್ಟು ಹೋರಾಟಕ್ಕೆ ಚಾಲನೆಯಾಗಿ ಒಂದಷ್ಟು ದಿವಸ ಮುಂದುವರಿದರು. 

ಇಂದು ಪೆರಿಯಾರ್ ಟ್ರಸ್ಟ್ ಅತ್ಯಂತ ಶ್ರೀಮಂತವಾಗಿರುವಂಥದ್ದು. ಅದರ ಸಿಂಹಾಸನದ ಮೇಲೆ ಕೂತಿರುವಂಥವರು: ವೀರಮಣಿಯವರು, ಪೆರಿಯಾರ್ ಅವರ ಹೋರಾಟದ ಗಾಢತೆ ಅವರಿಗಿಲ್ಲ. ಅಣ್ಣಾ ದೊರೈ ಅವರು ಮುಖ್ಯಮಂತ್ರಿಗಳಾಗಿದ್ದಾಗ ಟ್ರಸ್ಟ್‌ಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆಯನ್ನು ಕೊಟ್ಟರು ಮತ್ತು ಬೇರೆ ಬೇರೆ ರೂಪದಲ್ಲಿ ಸೇರುತ್ತಲೇ ಇದೆಯಂತೆ. ಕೆಲವು ವರ್ಷಗಳ ಹಿಂದೆ ವೀರಮಣಿಯವರು ಬೆಂಗಳೂರಿಗೆ ಬಂದಿದ್ದರು.

ನಮ್ಮ ಹೋರಾಟದ ಸ್ನೇಹಿತರಾದ ಮತ್ತು ಉದ್ಯಮಿಯೂ ಆದ ಭಕ್ತವತ್ಸಲ ಅವರ ಮನೆಯಲ್ಲಿ ಊಟಕ್ಕೆ ಸೇರಿದ್ದೆವು. ಡಾ. ಸಿದ್ದಲಿಂಗಯ್ಯ, ಕಾಳೇಗೌಡ ನಾಗವಾರ ಮತ್ತು ನಾನು. ದೀರ್ಘವಾದ ಮಾತುಕತೆ ಇತ್ತು. ನಮ್ಮ ಮೂವರನ್ನು ತಮಿಳುನಾಡೆಲ್ಲ ಸುತ್ತಾಡಲು ವಿನಂತಿಸಿಕೊಂಡರು. 

ಅದರ ಒಟ್ಟು ವೆಚ್ಚವನ್ನು ವ್ಯವಸ್ಥೆ ಮಾಡುವೆವು ಎಂದರು. ನಾವು ಖುಷಿಯಿಂದ ತಮಿಳುನಾಡನ್ನು ಅಧ್ಯಯನ ಮಾಡಬಹುದು ಎಂದು ಯೋಚಿಸಿದೆವು. ಅದೇ ಸಮಯಕ್ಕೆ ನಮ್ಮ ಬೆಂಗಳೂರಿನ ವಿಚಾರವಾದಿ ಗೆಳೆಯರು ನಮ್ಮಲ್ಲಿ ಕೇಳಿಕೊಂಡರು: ಇಲ್ಲಿಯ ವಿಚಾರವಾದಿ ಚಳವಳಿಗೆ ಸ್ವಲ್ಪ ಆರ್ಥಿಕ ಸಹಾಯ ಮಾಡಲು ಇದನ್ನು ವೀರಮಣಿಯವರ ಬಳಿ ಪ್ರಸ್ತಾಪಿಸಿದೆ. 

ಅವರು ಅಷ್ಟು ಉತ್ಸಾಹ ತೋರಿಸಲಿಲ್ಲ. ನಾವೂ ತಮಿಳುನಾಡನ್ನು ಅಧ್ಯಯನ ಮಾಡುವ ಉತ್ಸಾಹವನ್ನು ಕೈಬಿಟ್ಟೆವು. ಮತ್ತೆ ಎರಡು ಮೂರು ವರ್ಷಗಳ ನಂತರ ಬೆಂಗಳೂರಿನ ಯಾವುದೋ ಒಂದು ಸಭೆಯಲ್ಲಿ ಸಿಕ್ಕಿದ್ದರು. ಅವರನ್ನು ಮಾತಾಡಿಸುವ ತೀವ್ರತೆ ನನ್ನೊಳಗೆ ಗಟ್ಟಿಯಾಗಲೇ ಇಲ್ಲ.

ಇರಲಿ, ನನಗೆ ವೀರಮಣಿಯೂ ಮುಖ್ಯವಲ್ಲ; ಆ ಟ್ರಸ್ಟ್ ಕೂಡ ಮುಖ್ಯವಲ್ಲ. ಆದರೆ ‘ಸ್ವಾಭಿಮಾನ ಚಳವಳಿಯ’ ಒಬ್ಬ ದೊಡ್ಡ ಚಿಂತಕ ಮತ್ತು ಹೋರಾಟಗಾರರ ಜೊತೆ ಕೆಲವು ಗಂಟೆಗಳ ಒಡನಾಟವಿತ್ತು ಎಂಬುದೇ ಮುಖ್ಯವಾದದ್ದು. ಅದನ್ನು ಆಪ್ತಗೊಳಿಸುವ ರೀತಿಯಲ್ಲಿ ಪೆರಿಯಾರ್ ಚಿತ್ರವೂ ಇದೆ. ಇದಕ್ಕಾಗಿ ಡಾ.ಸಿದ್ದಲಿಂಗಯ್ಯ ಅವರಿಗೆ ಋಣಿಯಾಗಿರಲೇ ಬೇಕು.

ಮಂಗಳೂರು ವಿವಿ ಕುಲಪತಿಗಳಿಗೊಂದು ಬಹಿರಂಗ ಪತ್ರಡಾ.ನಿತ್ಯಾನಂದ ಬಿ.ಶೆಟ್ಟಿ, 
ತುಮಕೂರು

ಸೌಜನ್ಯ : ವಾರ್ತಾಭಾರತಿ

ಮಾನ್ಯ ಕುಲಪತಿಗಳಿಗೆ ನಮಸ್ಕಾರಗಳು

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದ ನನಗೆ ಮಂಗಳೂರು ವಿಶ್ವವಿದ್ಯಾನಿಲಯ ಈಗ ತಪ್ಪುಕಾರಣಗಳಿಗಾಗಿ ಸುದ್ದಿಯಲ್ಲಿರುವುದನ್ನು ನೋಡಿದಾಗ ಬಹಳ ದುಃಖವಾಗುತ್ತಿದೆ. ವಿಶ್ವವಿದ್ಯಾನಿಲಯದ ಬಗ್ಗೆ ಮತ್ತು ತಮ್ಮ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವ ಹೊಂದಿರುವ ನಾನು ಆ ಗೌರವ ಸದ್ಯದ ನೇಮಕಾತಿ ಹಗರಣದ ಅಪವಾದದ ಸುರಿಮಳೆಯಲ್ಲಿ ಕೊಚ್ಚಿ ಹೋಗದಿರಲಿ ಎಂದು ಹಾರೈಸುತ್ತಿದ್ದೇನೆ. 

ಸರ್, ಮಂಗಳೂರಿನ ಈ ವಿಶ್ವವಿದ್ಯಾನಿಲಯದಲ್ಲಿ ಮಂಗಳೂರಿನವರು ಎಷ್ಟು ಜನರಿದ್ದಾರೆ, ಮಂಗಳೂರಿನವರಲ್ಲದವರು ಎಷ್ಟಿದ್ದಾರೆ ಎಂಬ ಪ್ರಶ್ನೆಗಳನ್ನು ನಾನು ಕೇಳಬಯಸುವುದಿಲ್ಲ. ಮೊನ್ನೆ ನಡೆದ ಕನ್ನಡ ಪ್ರಾಧ್ಯಾಪಕರ ಹುದ್ದೆಗೆ ವಿಷಯ ತಜ್ಞರಾಗಿ ಬಂದ ಮೂರೂ ಜನರು ಮೈಸೂರಿ ನವರೇ ಯಾಕೆ ಎಂಬ ಪ್ರಶ್ನೆಯೂ ನನ್ನದಲ್ಲ. 

ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಈಗಾಗಲೇ ಆಯ್ಕೆಯಾಗಿದ್ದಾರೆೆ ಎಂದು ವ್ಯಾಪಕವಾಗಿ ಸುದ್ದಿಯಲ್ಲಿರುವವರೂ ಕೂಡ ಮೈಸೂರಿನವರಾ ಎಂಬ ಪ್ರಶ್ನೆಯನ್ನೂ ನಾನು ಕೇಳುವುದಿಲ್ಲ. ಹಾಗೆಯೇ ಇತಿಹಾಸ ವಿಭಾಗಕ್ಕೆ ಪ್ರಾಧ್ಯಾಪಕರಾಗಿ ಆಯ್ಕೆಯಾದವರೂ ಮೈಸೂರಿ ನವರಾ ಎಂಬುದನ್ನೂ ನಾನು ಕೇಳುವುದಿಲ್ಲ. ನಾನು ಕೇಳುವುದಿಷ್ಟೇ.

ಇದು, ನನ್ನಂತಹ ಸಾವಿರಾರು ಜನರು ಓದಿ ಬದುಕಿನ ದಾರಿಯನ್ನು ಕಂಡುಕೊಳ್ಳುವುದಕ್ಕೆ ಮತ್ತು ಯೋಚನಾಕ್ರಮವನ್ನು ಸಿದ್ಧಿಸಿಕೊಳ್ಳುವುದಕ್ಕೆ ಕಾರಣ ವಾದ ಒಂದು ವಿಶ್ವವಿದ್ಯಾನಿಲಯದ ಘನತೆಯ ಪ್ರಶ್ನೆ. ವಿಶ್ವವಿದ್ಯಾನಿಲಯಗಳು ಘನತೆಯಿಂದ ಕಾರ್ಯ ನಿರ್ವಹಿಸಬೇಕಿದ್ದರೆ ಸ್ವತಃ ತಮಗೂ ತಿಳಿದಿರುವಂತೆ ಅಲ್ಲಿಯ ಅಧ್ಯಾಪಕರ ನೇಮಕಾತಿ ಪಾರದರ್ಶಕ ವಾಗಿರಬೇಕು. ಯಾಕೆಂದರೆ ಒಂದು ವಿಶ್ವವಿದ್ಯಾ ನಿಲಯವೆಂದರೆ ಅತ್ಯುತ್ತಮ ತಿಳುವಳಿಕೆಯ ಪ್ರಾಧ್ಯಾಪಕರಲ್ಲದೇ ಬೇರೇನೂ ಅಲ್ಲ. 

ಪಾಶ್ಚಾತ್ಯ ಚಿಂತಕರು ವಿಶೇಷವಾಗಿ ಇಮ್ಯಾನ್ಯುವೆಲ್‌ಕಾಂಟ್, ಹೆಗೆಲ್, ಹೈಡೆಗರ್ ಅಂತಹ ತತ್ವಜ್ಞಾನಿಗಳಿಂದ ಹಿಡಿದು ಇಪ್ಪತ್ತನೇ ಶತಮಾನದ ಹೆಬರ್‌ಮಾಸ, ಲ್ಯೊತಾರ್, ಡೆರಿಡಾ, ಬಿಲ್ ರೀಡಿಂಗ್ಸ್ ಮೊದಲಾದವರು ಸಮಾಜದಲ್ಲಿ ವಿಶ್ವವಿದ್ಯಾ ನಿಲಯದ ಪಾತ್ರ, ಅದರ ಉದ್ದೇಶದ ಕುರಿತು ತಮ್ಮ ಚಿಂತನೆಯನ್ನು ಸತತವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. 

ಕಳೆದ ಮೂರುವರೆ ದಶಕಗಳಿಂದ ವಿಶ್ವವಿದ್ಯಾನಿಲಯದಲ್ಲೇ ಇರುವ ತಮ್ಮ ಗಮನಕ್ಕೆ ‘ದಿ ಐಡಿಯಾ ಆಫ್ ಯೂನಿವರ್ಸಿಟಿ’ಯ ಬಗ್ಗೆ ಖಂಡಿತಾ ಯೋಚಿಸಿರುತ್ತೀರಿ ಎಂಬುದು ನನ್ನ ನಂಬಿಕೆ. ವಿಶ್ವವಿದ್ಯಾಲಯವು ಕೇವಲ ಪಾಠ ಪ್ರವಚನ ಮಾಡುವ ಸಂಸ್ಥೆ ಆಗಿರದೆ, ಅದೊಂದು ತಾತ್ವಿಕ ವಿದ್ಯಮಾನವಾಗಿದೆ.

ತಮ್ಮ ಗಮನಕ್ಕೆ ನಾನು ತರಬಯಸುವುದೇನೆಂದರೆ, 19ನೆಯ ಶತಮಾನದಲ್ಲಿ ವಿಶೇಷವಾಗಿ ಜರ್ಮನಿ ಯಲ್ಲಿ ಬೆಳೆದು ಬಂದ ಹುಂಬೋಲ್ಟ್ ಮಾದರಿಯ ವಿಶ್ವವಿದ್ಯಾನಿಲಯದ ಪರಿಕಲ್ಪನೆಯಲ್ಲಿ ಜರ್ಮನ್ನರಿಗೆ ವಿಶ್ವವಿದ್ಯಾನಿಲಯ ಅಂದರೆ ಅದೊಂದು ಅನ್ವೇಷಣೆಯ ದಾರಿ. 

ಅವರ ಪ್ರಕಾರ ವಿಶ್ವ ವಿದ್ಯಾನಿಲಯದಲ್ಲಿರುವವರ ಜವಾಬ್ದಾರಿ ಏನೆಂದರೆ ‘ಜ್ಞಾನ’ವನ್ನು ವ್ಯವಸ್ಥಿತವಾಗಿ, ವೈಜ್ಞಾನಿಕ ವಾಗಿ ಅರಸುವುದು. ಅಂದರೆ, ‘ಸ್ವತಂತ್ರ’ವಾಗಿ, ‘ಪರಿಶ್ರಮ’ ದಿಂದ ‘ಸತ್ಯ’ವನ್ನು ಶೋಧಿಸುವುದು. ಈ ದೃಷ್ಟಿ ಯಿಂದಲೇ ವಿಶ್ವವಿದ್ಯಾನಿಲಯಕ್ಕೆ ನಮ್ಮ ಸರಕಾರಗಳು ‘ಶೈಕ್ಷಣಿಕ ಸ್ವಾತಂತ್ರ’ವನ್ನು ಕೊಟ್ಟಿವೆ. ಈ ಶೈಕ್ಷಣಿಕ ಸ್ವಾತಂತ್ರ್ಯ ಇರುವುದು ಜ್ಞಾನವನ್ನು ಜ್ಞಾನಕ್ಕೋಸ್ಕರ ಅರಸುವ ಉದ್ದೇಶದಿಂದ.

ಸಾಮಾನ್ಯವಾಗಿ ಸಮಾಜವು ವಿಶ್ವವಿದ್ಯಾನಿಲಯ ದಿಂದ ಪ್ರಯೋಜನಾತ್ಮಕ, ಉಪಯೋಗಿಕ (್ಠಠಿಜ್ಝಿಜಿಠಿಚ್ಟಜಿಚ್ಞ) ಪ್ರಶ್ನೆಗಳನ್ನು ಕೇಳುತ್ತ, ವಿಶ್ವವಿದ್ಯಾನಿಲಯವು ಯಾವುದೋ ಒಂದು ವೃತ್ತಿಗಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುವು ಮಾಡಿಕೊಡುವಂತಹ, ‘ಗಳಿಕೆ’ಗೆ ಬೇಕಾದ ಕಲಿಕೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ವಿಶ್ವವಿದ್ಯಾನಿಲಯಗಳ ಉದ್ದೇಶ ‘ಉನ್ನತ’ ಶಿಕ್ಷಣವನ್ನು ಕೊಡುವುದಾಗಿದೆ. 

ಅಂದರೆ, ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನದ ಶಿಕ್ಷಣವನ್ನು ಒದಗಿಸುವುದು, ವೈಜ್ಞಾನಿಕ ಸಂಶೋಧನೆ ಕೈಗೊಳ್ಳಲು ತರಬೇತು ನೀಡುವುದು; ಉದಾತ್ತವಾದ, ಶ್ರೇಷ್ಠವಾದ ಶೈಕ್ಷಣಿಕ ಸಾಮರ್ಥ್ಯ ಬೆಳೆಸುವುದು ವಿಶ್ವವಿದ್ಯಾನಿಲಯದ ಧ್ಯೇಯ ಮತ್ತು ಉದ್ದೇಶ. ಉದ್ಯೋಗದ ಉದ್ದೇಶದಿಂದಷ್ಟೇ ವಿದ್ಯಾರ್ಥಿಗಳನ್ನು ತಯಾರಿಗೊಳಿಸದೆ, ಅವರನ್ನು ಸತ್ಯಶೋಧಕರನ್ನಾಗಿಸುವ, ಸ್ವಂತ ಆಲೋಚನಾ ಶಕ್ತಿಯುಳ್ಳ ವಿಚಾರವಂತರನ್ನಾಗಿಸುವ, ವ್ಯಕ್ತಿತ್ವದ ಸ್ವ-ವಿಕಸನಗೊಳಿಸುವ ಸಾಮರ್ಥ್ಯ ಬೆಳೆಸುವ ಶಿಕ್ಷಣವೇ ಉನ್ನತ ಶಿಕ್ಷಣ.

ಅರ್ಥದಲ್ಲಿ ವಿಶ್ವವಿದ್ಯಾನಿಲಯವು ತನ್ನದೇ ಆದ ಒಂದು ಜಗತ್ತು. ವಿಶಾಲವಾದ ಅರ್ಥದಲ್ಲಿ ಅದು ‘ಸಂಸ್ಕೃತಿ’ಯನ್ನು ಬೆಳೆಸುವ ಲೋಕ. ದೇಶಕ್ಕಾಗಿ ಚಿಂತಕರನ್ನು, ಮುಂಬರುವ ಪ್ರಾಧ್ಯಾಪಕರನ್ನು ತರಬೇತುಗೊಳಿಸುವ ಲೋಕ. ಈ ಲೋಕಕ್ಕೆ ಬೇಕಾಗುವುದು ಎರಡು ರೀತಿಯ ಸ್ವಾತಂತ್ರ್ಯ: ಒಂದು, ಪ್ರಾಧ್ಯಾಪಕರು ಯಾವುದೇ ಅಡೆತಡೆ, ಹಂಗು ಇಲ್ಲದೆ ಅವರಿಗೆ ಇಷ್ಟವಾದುದ್ದನ್ನು, ಅವರು ಮುಖ್ಯವೆಂದು ತಿಳಿದದ್ದನ್ನು ಕಲಿಸುವ ಸ್ವಾತಂತ್ರ. ಎರಡನೆಯದು, ವಿದ್ಯಾರ್ಥಿಗಳು ಅವರಿಗೆ ಮುಖ್ಯವೆನಿಸಿದ, ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ಕುರಿತು ಅಧ್ಯಯನ ಮಾಡುವ ಸ್ವಾತಂತ್ರ. ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಡದ ವಿಶ್ವವಿದ್ಯಾಲಯ, ಒಂದು ವಿಶ್ವವಿದ್ಯಾನಿಲಯವೇ ಅಲ್ಲ.

ಸರಕಾರದ ಶಾಸನದಿಂದ ಸ್ಥಾಪಿತಗೊಂಡು, ಪೂರ್ಣ ಪ್ರಮಾಣದ ವಿದ್ಯಾರ್ಥಿ-ಶಿಕ್ಷಕರನ್ನೊಳ ಗೊಂಡ, ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿದ ಒಂದು ವಿದ್ಯಾಸಂಸ್ಥೆ ವಿಶ್ವವಿದ್ಯಾನಿಲಯ ಆಗದೆ ಇರಬಹುದು; ಆದರೆ, ಸತ್ಯ, ಸಂಶೋಧನೆ, ಸ್ವಾತಂತ್ರಗಳ ಪ್ರತೀಕವಾದ ಒಬ್ಬ ಸಾಕ್ರೇಟಿಸ್‌ನೇ ಒಂದು ವಿಶ್ವವಿದ್ಯಾನಿಲಯ ಆಗಬಹುದು. ಈ ಎಲ್ಲ ತಾತ್ವಿಕ ಸಂಗತಿಗಳು ತಮಗೆ ಗೊತ್ತಿರುತ್ತಿದ್ದರೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಹೀಗೊಂದು ಹಗರಣ ಸಂಭವಿಸುತ್ತಿರಲಿಲ್ಲ.

ತಾವು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಬಂದ ಮೇಲೆ ಇಲ್ಲಿ ಏನೋ ಮಹತ್ವವಾದುದನ್ನು ಸಾಧಿಸಿ ಬಿಡುತ್ತೀರಿ ಎಂದು ನಮ್ಮಂತವರೆಲ್ಲ ತಿಳಿದುಕೊಂಡಿದ್ದೆವು. ನನ್ನ ಜೊತೆಗೆ ನಡೆಸಿದ ಖಾಸಗಿ ಮಾತುಕತೆಯಲ್ಲೂ ಕೂಡ ತಮ್ಮ ಅವಧಿಯಲ್ಲಿ ವಿಶ್ವವಿದ್ಯಾನಿಲಯ ಸಾಧಿಸಿದ ಅನೇಕ ಸಾಧನೆಗಳನ್ನು ತಾವು ಹಂಚಿಕೊಳ್ಳುತ್ತಿದ್ದಿರಿ. ಆಗೆಲ್ಲ ನನಗೆ ಬಹಳ ಸಂತೋಷವಾಗುತ್ತಿತ್ತು. ಆದರೆ ತಮ್ಮ ಕಾಲದಲ್ಲಿ ವಿಶ್ವವಿದ್ಯಾನಿಲಯಕ್ಕೆ ಒಳ್ಳೆಯ ಹೆಸರೂ ಬಂತು.

ಹಾಗೆಯೇ ತಾವು ನಿರ್ಗಮಿಸುವ ಕಾಲದಲ್ಲಿ ಹೀಗೊಂದು ಕೆಸರೂ ನಿರ್ಮಾಣವಾಗಬಹುದು ಎಂದು ನಾನು ತಿಳಿದು ಕೊಂಡಿರಲಿಲ್ಲ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇಷ್ಟರವರೆಗೆ ನೇಮಕಾತಿಯಂತಹ ಸಂದರ್ಭದಲ್ಲಿ ಕೇವಲ ತಾಂತ್ರಿಕ ಅಂಶಗಳನ್ನಷ್ಟೇ ಇಟ್ಟುಕೊಂಡು ಇಂತಹ ಒಂದು ‘ವ್ಯವಸ್ಥಿತ ಪ್ರಯತ್ನ’ ಮತ್ತು ಬೇಕೆಂದೇ ಕೆಲವರನ್ನು ಹೊರಗಿಡುವುದಕ್ಕಾಗಿ ನಡೆಸಿದ ‘ಆಯ್ಕೆಯ ರಾಜಕೀಯ’ ನಡೆದದ್ದು ನನಗೆ ನೆನಪಿಲ್ಲ. 

ಈಗಲೂ ನಾನು ಹೇಳುತ್ತಿರುವ ಈ ‘ವ್ಯವಸ್ಥಿತ ಪ್ರಯತ್ನ ಮತ್ತು ಆಯ್ಕೆಯ ರಾಜಕೀಯ’ ಎಂಬಂತಹ ಪದಪ್ರಯೋಗಗಳು ಸುಳ್ಳಾಗಲಿ ದೇವರೇಎಂದು ನಾನು ಹಾರೈಸುತ್ತಿದ್ದೇನೆ. ನಮ್ಮ ವಿಶ್ವವಿದ್ಯಾನಿಲಯಗಳನ್ನು ಸರಕಾರ ಸ್ವಾಯತ್ತ ಎಂದು ಘೋಷಿಸಿರುವುದು ಈಗಾಗಲೇ ನಾನು ಪ್ರಸ್ತಾವಿಸಿದ ಹತ್ತು ಹಲವು ಘನವಾದ ಸಂಗತಿಗಳನ್ನು ನಿರ್ವಹಿಸುವುದಕ್ಕೆಯೇ ಆಗಿದೆ.
ಆದರೆ ಇದನ್ನು ಮರೆತು ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳು; ಅದರ ಆಡಳಿತದ ಅನ್ಯಾನ್ಯ ಅಂಗಭಾಗಗಳಲ್ಲಿ ಕುಳಿತವರ ಸಂಬಂಧಿಕರನ್ನು, ಜಾತಿ ಬಾಂಧವರನ್ನು, ಊರಿನವರನ್ನು ಮತ್ತು ಗರ್ಲ್‌ಫ್ರೆಂಡ್‌ಗಳನ್ನು (ಇದನ್ನು ಬರೆಯುವುದಕ್ಕೆ ಅಸಹ್ಯವಾಗುತ್ತದೆ) ಅಧ್ಯಾಪನದಂತಹ ಮಹತ್ವದ ಹುದ್ದೆಗಳಿಗೆ ತುಂಬಿಸ ಹೊರಟಿರುವುದು ಅತ್ಯಂತ ಹೇಸಿಗೆಯ ಸಂಗತಿಯಾಗಿದೆ. ವಿಶ್ವವಿದ್ಯಾನಿಲಯಗಳೆಂದರೆ ಏನು..? ಘನತ್ಯಾಜ್ಯ ಸುರಿಹೊಂಡಗಳೇ..?

ಯುಜಿಸಿ ನಿಯಮಾವಳಿಯಲ್ಲಿ ಒಂದಂಶವಂತೂ ಬಹಳ ಸ್ಪಷ್ಟವಾಗಿದೆ. ತಾವು ಅದನ್ನು ಗಮನಿಸಿರುತ್ತೀರಿ ಎಂಬುದು ನನ್ನ ವಿಶ್ವಾಸ. ಯಾವುದೇ ಒಂದು ವಿಶ್ವವಿದ್ಯಾನಿಲಯ ತಾನು ಹೊಂದಿರುವ ಯಾವುದೇ ನಿಕಾಯವೊಂದಕ್ಕೆ ಆ ಕ್ಷೇತ್ರದಲ್ಲಿ ಆಳವಾದ ಪಾಂಡಿತ್ಯ ಇರುವವವರನ್ನು, ಘನವಾದ ವಿದ್ವ್ವತ್ಪೂರ್ಣ ಕೆಲಸ ಮಾಡಿದವರನ್ನು ಗುರುತಿಸಿ ಕರೆದು ಕೆಲಸ ಕೊಡಬಹುದೆಂದು ಇದೆ. 

(ಇದೇ ಮಂಗಳೂರು ವಿ.ವಿ.ಯಿಂದ ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಹೀಗೆ ಆಮಂತ್ರಿತರಾಗಿ ಹೋದ ಪ್ರೊ.ಕೇಶವನ್ ವೆಳುತ್ತಾಟ್‌ರವರನ್ನು ನೆನಪಿಸಿಕೊಳ್ಳಿ) ಆಗ ಯಾವ ತಾಂತ್ರಿಕ ನಿಯಮಗಳೂ ಅನ್ವಯವಾಗುವುದಿಲ್ಲ. ಈ ನಿಯಮ ನಮ್ಮ ನಡುವಿನ ಎಷ್ಟು ಜನ ಕುಲಪತಿಗಳಿಗೆ ಗೊತ್ತಿದೆ ಮತ್ತು ಇದನ್ನು ನಮ್ಮ ರಾಜ್ಯದ ಎಷ್ಟು ಕುಲಪತಿಗಳು ಬಳಸಿಕೊಂಡು ತಮ್ಮ ವಿಶ್ವವಿದ್ಯಾನಿಲಯವನ್ನು ಬೆಳೆಸಿದ್ದಾರೆ.?

ಸರ್,
ತಮ್ಮ ಮೇಲೆ ಮತ್ತು ವಿಶ್ವವಿದ್ಯಾನಿಲಯದ ಮೇಲೆ ಒಂದು ದೊಡ್ಡ ಆಪಾದನೆ ಬಂದಿದೆ. ವಯೋವೃದ್ಧರೂ, ಜ್ಞಾನವೃದ್ಧರೂ ಆಗಿರುವ ತಮ್ಮ ಮೇಲೆ ಬಂದಿರುವ ಈ ಆಪಾದನೆಯಿಂದ ವೈಯಕ್ತಿಕವಾಗಿ ನಾನು ದಿಗ್ಭ್ರಾಂತನಾಗಿದ್ದೇನೆ. ಸೀಸರನ ಹೆಂಡತಿ ಪರಿಶುದ್ಧಳಾಗಿರಬೇಕು ಎಂಬುದೊಂದು ಜನನುಡಿ. ತಾವೂ ಈ ಅಗ್ನಿಪರೀಕ್ಷೆಗೆ ಸಿದ್ಧರಾಗಬೇಕು. ಈಗಾಗಲೇ ನಡೆದಿರುವ ಎಲ್ಲ ಆಯ್ಕೆಗಳನ್ನು ತಡೆಹಿಡಿದು ಮತ್ತೊಮ್ಮೆ ಕೂಲಂಕಷವಾಗಿ ಪ್ರತಿಯೊಂದು ಅರ್ಜಿಯನ್ನೂ ಅನ್ಯ ವಿಶ್ವವಿದ್ಯಾನಿಲಯದ ವಿಷಯತಜ್ಞರಿಂದ ಮರುಮೌಲ್ಯಮಾಪನ ಮಾಡಿಸಿ, ಅರ್ಹರಿಗೆ ಸೂಕ್ತವಾದ ಕಾಲಾವಕಾಶ ಕೊಟ್ಟು ಮತ್ತೊಮ್ಮೆ ಸಂದರ್ಶನವನ್ನು ಪಾರದರ್ಶಕವಾಗಿ ನಡೆಸಿ ವಿಶ್ವವಿದ್ಯಾನಿಲಯಕ್ಕೆ ಉತ್ತಮರನ್ನೇ ತನ್ನಿ ಎಂದು ಭಿನ್ನವಿಸಿಕೊಳ್ಳುತ್ತೇನೆ.
ತಾವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಬಂದಿದ್ದೀರಿ. ಒಳ್ಳೆಯ ಹೆಸರು ಗಳಿಸಿಕೊಂಡಿದ್ದೀರಿ. ಆದರೆ ಈಗ ನೀವು ಹೊರಡುವುದಕ್ಕೆ ಇನ್ನು ಆರು ತಿಂಗಳು ಮಾತ್ರ ಇದೆ. ಹೊರಡುವಾಗ ಕುಲಪತಿಯಾಗಿಯೇ ನಿರ್ಗಮಿಸಿ, ವ್ಯಾಕುಲಪತಿಯಾಗಿ ನಿರ್ಗಮಿಸಬೇಡಿ.

(ಈ ಪತ್ರದಲ್ಲಿ ಪ್ರಸ್ತಾವವಾದ ‘ವಿಶ್ವವಿದ್ಯಾನಿಲಯ ಎಂಬ ಐಡಿಯಾ’ದ ಕುರಿತು ಚರ್ಚಿಸಿ, ನನ್ನ ಅರಿವು ವಿಸ್ತರಿಸಿದ ಗೆಳೆಯ ಎನ್.ಎಸ್.ಗುಂಡೂರ್‌ಗೆ ಕೃತಜ್ಞತೆಗಳು.)

Friday, November 29, 2013

ಆದಿಮಾನವನ ಕೊನೆಯ ಕೊಂಡಿ - ಅಂಡಮಾನ್ ಬುಡಕಟ್ಟು ಕುಲಗಳುಡಾ ಎಚ್ ಎಸ್ ಅನುಪಮಾ

 'ಅಂಡಮಾನ : ಕಂಡಹಾಗೆ ` ಡಾ ಅನುಪಮಾ ಅವರ ಪ್ರವಾಸ ಕಥನ.  ನಮ್ಮ ಪ್ರಕಾಶನ ಪ್ರಕಟಿಸುತ್ತಿರುವ ಹೊಸ ಪುಸ್ತಕ ಇದಾಗಿದೆ. ಅದರಲ್ಲಿನ ಒಂದು ಅಧ್ಯಾಯ ನಿಮ್ಮ ಓದಿಗಾಗಿ ಇಲ್ಲಿದೆ. ಇದರಲ್ಲಿನ ಒಂದು ಭಾಗ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು
ಅಂಡಮಾನಿಗೆ ಹೋಗುತ್ತೇವೆ ಎಂದ ಕೂಡಲೇ ಬಂಧುವೊಬ್ಬರು, ‘ಅಯ್ಯೋ, ಅಲ್ಲಿ ಬಿಲ್ಲು ಬಾಣ ಇಟ್ಕಂಡಿರೋ ಕಾಡುಮನುಷ್ಯರು ಇದಾರಂತಲ್ಲ, ಅಲ್ಯಾಕೆ ಹೋಗ್ತಿದೀರ?’ ಎಂದರು. ಅಂಡಮಾನ್ ಎಂದರೆ ಕಾಡು, ಕಾಡು ಮನುಷ್ಯರು ಎಂದು ತಿಳಿದುಕೊಂಡ ಮೇನ್ ಲ್ಯಾಂಡಿನವರ ತಿಳುವಳಿಕೆಗೆ ವಿರುದ್ಧವಾಗಿ ಅಂಡಮಾನಿನ ಮೂರೂವರೆ ಲಕ್ಷ ಜನಸಂಖ್ಯೆಯಲ್ಲಿ ೦.೫% ಮಾತ್ರ ಮೂಲನಿವಾಸಿಗಳಿದ್ದಾರೆ. ಉಳಿದ ೯೯.೫% ವಲಸಿಗರೇ ತುಂಬಿದ್ದಾರೆ. ಅಂಡಮಾನಿನ ರಸ್ತೆ, ಬೀದಿಯಲ್ಲಿ ನಡೆದುಹೋಗುವಾಗ ನೀವು ಕಲಕತ್ತೆಯಲ್ಲೋ ಅಥವಾ ಕೇರಳ, ತಮಿಳುನಾಡಿನ ಸಣ್ಣಪಟ್ಟಣವೊಂದರಲ್ಲೋ ನಡೆಯುತ್ತಿರುವ ಭಾಸವಾಗುವುದೇ ಹೊರತು ‘ಕಾಡು ಮನುಷ್ಯ’ರ ದ್ವೀಪದಲ್ಲಿರುವಂತೆ ಅಲ್ಲ.

ಅಂಡಮಾನ್ ಭಿನ್ನ ಭಾಷೆ, ದೇಶ, ಕುಲಗಳ; ಮಾನವಶಾಸ್ತ್ರೀಯವಾಗಿ ಭಿನ್ನ ತಳಿಗಳ; ಭಿನ್ನ ಕಾಲಮಾನದಲ್ಲಿ ಬದುಕುತ್ತಿರುವ ಗುಂಪುಗಳ ಒಂದು ವಸಾಹತುವಾಗಿದೆ.  ನಾಗರಿಕ ಸಮಾಜ ೨೧ನೇ ಶತಮಾನದಲ್ಲಿರುವಾಗ, ಆಧುನಿಕತೆಯೆಂಬ ಮಾಯಾಂಗನೆಯ ಮೋಹಕ್ಕೆ ಸಿಲುಕದೆ ಗಡಿಯಾರ-ಕ್ಯಾಲೆಂಡರುಗಳ ಹಂಗಿಲ್ಲದೆ ವಿಕಾಸವಾದದ ರೇಸಿನಲ್ಲಿ ನಮಗಿಂತ ೫೫ ಸಾವಿರ ವರ್ಷ ಹಿಂದೆ ‘ಐರನ್ ಏಜ್’ನಲ್ಲೇ ಉಳಿದುಬಿಟ್ಟಿರುವ ಸಮುದಾಯಗಳು ಅಂಡಮಾನಿನಲ್ಲಿವೆ. ಅಲ್ಲಿ ನಾಲ್ಕು ನೀಗ್ರಾಯ್ಡ್ ಹಾಗೂ ಎರಡು ಮಂಗೋಲಾಯ್ಡ್ ಬುಡಕಟ್ಟು ಕುಲಗಳಿವೆ. ಜರವಾ, ಗ್ರೇಟ್ ಅಂಡಮಾನಿಗಳು, ಒಂಗೇಗಳು ಮತ್ತು ಸೆಂಟಿನಲೀಯರು ನೀಗ್ರಾಯ್ಡ್ ಬುಡಕಟ್ಟುಗಳಾದರೆ ಶೊಂಪೇನರು ಹಾಗೂ ನಿಕೋಬಾರಿಗಳು ಮಂಗೋಲಾಯ್ಡ್ ಬುಡಕಟ್ಟು ಕುಲಗಳಾಗಿವೆ.

ನೀಗ್ರಾಯ್ಡ್ ಬುಡಕಟ್ಟುಗಳು ಆಫ್ರಿಕಾ ಮೂಲದವರೆನ್ನಲಾಗುತ್ತದೆ. ದಕ್ಷಿಣ ಆಫ್ರಿಕಾ, ದಕ್ಷಿಣ ಭಾರತ, ಅಂಡಮಾನ್, ಆಸ್ಟ್ರೇಲಿಯಾ ಭೂಭಾಗಗಳೆಲ್ಲ ಸಂಪರ್ಕ ಹೊಂದಿದ್ದ ಕಾಲವೊಂದಿತ್ತು. ಆಗ ಜಾಂಜೀಬಾರ್ ಮೂಲಕ ಸಂಭವಿಸಿದ ಮಹಾಚಲನೆಯಲ್ಲಿ ಭೂ ಮಧ್ಯರೇಖೆಯ ಕೆಳ ಭಾಗದ ಪ್ರದೇಶದಲ್ಲಿ ನೀಗ್ರಾಯ್ಡ್ ಜನರು ಹರಡಿಕೊಂಡರು. ಕ್ರಮೇಣ ಭೂಭಾಗಗಳು ದೂರ ಸರಿದು ಖಂಡಗಳು ಜನ್ಮ ತಾಳಿದವು. ಅಂಡಮಾನ್ ಭೂಭಾಗ ಮಾತ್ರ ಸುತ್ತ ಸಾವಿರಾರು ಮೈಲು ನೀರೇ ನೀರಾಗಿ ಉಳಿದ ಭೂ ಪ್ರದೇಶಗಳಿಂದ ದೂರವುಳಿಯಿತು. ಉಳಿದ ಮಾನವರೊಂದಿಗೆ ಕೊಡು-ಕೊಳು-ಘರ್ಷಣೆ-ಸಂಪರ್ಕ ಇಲ್ಲವಾಗಿ; ಹಂಚಿಕೊಂಡ ಜ್ಞಾನ ಇಲ್ಲವಾಗಿ; ಸ್ಪರ್ಧೆ ಇಲ್ಲವಾಗಿ;  ಅಂಡಮಾನಿನ ಬುಡಕಟ್ಟು ಮಾನವಕುಲ ಆದಿಮವಾಗಿಯೇ ಉಳಿಯಿತು. ಉಳಿದ ಜಗತ್ತನ್ನು ಪ್ರಭಾವಿಸಿ, ಬದಲಿಸಿದ ಸಂಶೋಧನೆ, ಆವಿಷ್ಕಾರಗಳಾವುವೂ ಅವರನ್ನು ತಲುಪದೆ ಹೋದವು. 

ರೋಗರುಜಿನ, ಪ್ರಾಕೃತಿಕ ವಿಕೋಪಗಳನ್ನೆಲ್ಲ ದಾಟಿ ಬಂದಿದ್ದರೂ ಅವರು ವಿನಾಶದ ಅಂಚಿಗೆ ಸರಿದಿರಲಿಲ್ಲ. ಆದರೆ ಅವರ ಜನಸಂಖ್ಯೆ ಈಗ ಆಧುನಿಕ ಮಾನವರ ಸಂಪರ್ಕಕ್ಕೆ ಬಂದಮೇಲೆ ಕುಸಿಯುತ್ತಿದ್ದು ಇದು ಕಳವಳದ ಸಂಗತಿಯಾಗಿದೆ. ಪ್ರಸ್ತುತ ಜರವಾಗಳ ಜನಸಂಖ್ಯೆ ೨೫೦ ಎಂಬ ಅಂದಾಜಿದ್ದರೆ ಗ್ರೇಟ್ ಅಂಡಮಾನಿಗಳ ಸಂಖ್ಯೆ ೫೨. ಒಂಗೇಗಳು ೯೯, ಸೆಂಟಿನೆಲೀಯರು ೩೯ ಜನ ಮಾತ್ರ ಇದ್ದಾರೆ. ಸಾವಿರಾರು ವರ್ಷಗಳಿಂದ ಹೊರಜಗತ್ತಿನ ಸಂಪರ್ಕವಿಲ್ಲದೆ ದ್ವೀಪಗಳಲ್ಲಿ ವಾಸಿಸುತ್ತಿದ್ದರೂ ಈಗ ಆಧುನಿಕ ಮನುಷ್ಯನ ಸಂಪರ್ಕಕ್ಕೆ ಬಂದ ‘ತಪ್ಪಿ’ಗೆ ಬುಡಕಟ್ಟು ಸಮುದಾಯಗಳು ತನ್ನ ನೆಲದಲ್ಲಿ ತಾನೇ ಪರದೇಶಿಯಾಗುತ್ತ ವಿನಾಶದ ಅಂಚಿಗೆ ಸರಿಯುತ್ತಿರುವುದು ನಾಗರಿಕತೆಯ ದುರಂತಗಳಲ್ಲೊಂದಾಗಿದೆ.

ಅಷ್ಟಕ್ಕೂ ನಿಜವಾದ ಅಂಡಮಾನಿನ ಚರಿತ್ರೆ ಅವರ ರಕ್ತದಲ್ಲಿ ಹರಿಯುತ್ತಿರುವಾಗ ನಾವು ನೂರಿನ್ನೂರು ವರ್ಷಗಳ ಜೈಲು ಚರಿತ್ರೆಯನ್ನೇ ಅಂಡಮಾನಿನದೆಂದು ಬಿಂಬಿಸುತ್ತಿದ್ದೇವೆ. ಅಂಡಮಾನ್ ಅವರ ನೆಲ. ನಾವೀಗ ಅವರ ನೆಲವನ್ನೇ ಅತಿಕ್ರಮಿಸಿ ಅಕ್ರಮ ಸಕ್ರಮ ಮಾಡಿಕೊಂಡಿದ್ದೇವೆ. ಅವರಿಗೊಂದಿಷ್ಟು ಜಾಗ ತೋರಿಸಿ ನೀವಿಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ತಯಾರು ಮಾಡಿ ವಿನಾಶವಾಗದೇ ಉಳಿಯಿರಿ ಎಂದು ಪ್ರದರ್ಶನಕ್ಕಿಟ್ಟ ವಸ್ತುಗಳಾಗಿ ನೋಡುತ್ತಿದ್ದೇವೆ. ಆದರೆ ನಾವು ನಾಗರಿಕರು, ಗಿಡಮರಬಳ್ಳಿಗಳಷ್ಟೇ ಸಹಜವಾಗಿ ಬದುಕುವ ಅವರು ಅನಾಗರಿಕ ‘ಕಾಡುಜನ’.
ಆಹಾ ನಾಗರಿಕತೆಯೆ!

ಜರವಾ:  ಗಡಿಯಾರ-ಕ್ಯಾಲೆಂಡರುಗಳ ಹಂಗಿಲ್ಲದ ಕುಲ

ವಿನಾಶದ ಅಂಚಿನಲ್ಲಿರುವ ಜರವಾಗಳ ಜನಸಂಖ್ಯೆ ೨೫೦. ಗ್ರೇಟ್ ಅಂಡಮಾನಿಗಳ ಭಾಷೆಯಲ್ಲಿ ಜರವಾ ಎಂದರೆ ‘ಪರದೇಶಿ.’ ಈಗಷ್ಟೇ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುತ್ತಿರುವ ಜರವಾಗಳು ದಕ್ಷಿಣ ಮತ್ತು ಮಧ್ಯ ಅಂಡಮಾನಿನ ಪಶ್ಚಿಮ ಕರಾವಳಿಗುಂಟ ಜಿರ್ಖಾಟಾಂಗ್, ಕದಂತಲಾ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಅವರು ವಾಸಿಸುವ ಅರಣ್ಯ ಪ್ರದೇಶವನ್ನು ‘ಜರವಾ ರಿಸರ್ವ್’ ಎಂಬ ಹೆಸರಿನಲ್ಲಿ ರಕ್ಷಿತಾರಣ್ಯವಾಗಿ ಕಾದಿರಿಸಲಾಗಿದೆ. ಪೋರ್ಟ್‌ಬ್ಲೇರ್-ದಿಗ್ಲಿಪುರ್ ಜೋಡಿಸುವ ೩೩೩ ಕಿಮೀ ಉದ್ದದ ಅಂಡಮಾನ್ ಟ್ರಂಕ್ ರೋಡ್ ಈ ‘ಜರವಾ ರಿಸರ್ವ್’ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯ ವಾಹನ ಸಂಚಾರವನ್ನು ಅಂಡಮಾನ್ ಆಡಳಿತ ನಿಯಂತ್ರಿಸಿದೆ. ಆ ಪ್ರದೇಶ ಪ್ರವೇಶಿಸುವ ಮುನ್ನ ಜಿರ್ಖಾಟಾಂಗ್‌ನಲ್ಲಿ ಪೂರ್ಣ ತಪಾಸಣೆಗೊಳಪಡಿಸಿ ಅನುಮತಿಪತ್ರ ಕೊಡುತ್ತಾರೆ. ಬೆಳಿಗ್ಗೆ ೬, ೯, ೧೨ ಗಂಟೆಗೆ ಮತ್ತು ಮಧ್ಯಾಹ್ನ ೩ ಗಂಟೆಗೆ ಮಾತ್ರ ಕಾನ್ವಾಯ್‌ಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ವಾಹನಗಳು ಒಟ್ಟೊಟ್ಟಿಗೆ ರಿಸರ್ವ್ ಮೂಲಕ ಹಾದುಹೋಗಬಹುದು. ದಟ್ಟಕಾಡಿನಲ್ಲಿರುವ ೫೦ ಕಿಮೀ ದೂರವನ್ನು ಗಂಟೆಗೆ ೪೦ ಕಿಮೀಗಿಂತ ಹೆಚ್ಚು ವೇಗದಲ್ಲಿ ಕ್ರಮಿಸುವಂತಿಲ್ಲ, ಕಿಟಕಿಯ ಗಾಜುಗಳನ್ನು ಇಳಿಸುವಂತಿಲ್ಲ, ಮಧ್ಯದಲ್ಲೆಲ್ಲೂ ವಾಹನ ನಿಲ್ಲಿಸುವಂತಿಲ್ಲ, ಓವರ್ ಟೇಕ್ ಮಾಡುವಂತಿಲ್ಲ, ಜರವಾಗಳ ಜೊತೆ ಬೆರೆಯುವಂತಿಲ್ಲ, ಛಾಯಾಚಿತ್ರ ತೆಗೆಯುವಂತಿಲ್ಲ ಇತ್ಯಾದಿ ನಿರ್ಬಂಧಗಳಿವೆ.

ಅಂಡಮಾನಿಗೆ ಹೋದವರಿಗೆ ಗುಟ್ಟಾಗಿ ಒಂದು ಕ್ರಿಮಿನಲ್ ಆಸೆಯಿರುತ್ತದೆ - ಆ ಬುಡಕಟ್ಟು ಜನರನ್ನು ಸಾಧ್ಯವಾದರೆ ನೋಡಬೇಕೆನ್ನುವುದು. ಅಂಡಮಾನಿಗೆ ನಾವು ಹೊರಟಾಗ ಒಳಗೊಳಗೇ ಈ ಆಸೆಯಿಟ್ಟುಕೊಂಡಿದ್ದು ಸುಳ್ಳಲ್ಲ. ಥೇನ್ ಚಂಡಮಾರುತ ಅಂಡಮಾನನ್ನು ಅಪ್ಪಳಿಸಿದಾಗ ನಾವೂ ಅಲ್ಲಿದ್ದೆವು. ವಾತಾವರಣ ಮುನಿಸಿಕೊಂಡ ಕಾರಣ ಹ್ಯಾವ್‌ಲಾಕ್ ದ್ವೀಪ ಪ್ರಯಾಣವನ್ನು ರದ್ದುಗೊಳಿಸಿ ಉತ್ತರ ಅಂಡಮಾನ್ ಪ್ರಯಾಣ ಆಯ್ಕೆಮಾಡಿಕೊಂಡಿದ್ದು ಜರವಾ ರಿಸರ್ವ್‌ನಲ್ಲಿ ಹಾದುಹೋಗುವಾಗ ಅವರ ಭೇಟಿಯಾಗಬಹುದೆಂಬ ಕಾರಣಕ್ಕಾಗಿಯೇ.

ಅಂದು ಬೆಳಿಗ್ಗೆ..

   ನೂರಾರು ವಾಹನಗಳು ಒಂದರ ಹಿಂದೊಂದು ಚಲಿಸುತ್ತಿದ್ದವು. ಅಂಕುಡೊಂಕಾದ ಒದ್ದೆ ರಸ್ತೆಯಲ್ಲಿ ಸುತ್ತ ಜ್ಞೀಂಗುಡುವ ಜೀರುಂಡೆ, ಹಕ್ಕಿಯುಲಿತದ ನಡುವೆ ಕಿಟಕಿ ಮುಚ್ಚಿಕೊಂಡು ಉಸಿರು ಬಿಗಿಹಿಡಿದು ಒಬ್ಬ ಜರವಾ ಎದುರು ಕಾಣಬಹುದೇ ಎಂದು ಆಚೀಚಿನ ಸಂದು, ಪೊದೆಗಳತ್ತ ಕಣ್ಣು ಹಾಯಿಸುತ್ತ ಕಾದಿದ್ದೆವು. ಮೋಡ ತುಂಬಿದ ಆಕಾಶ, ನಾವೇ ಹೇರಿಕೊಂಡ ಮೌನ, ನಡುನಡುವೆ ಡ್ರೈವರ್ ಜರವಾಗಳ ಕುರಿತು ಕತೆಯಂತೆ ಹೇಳುತ್ತಿದ್ದ ವಿವರಗಳು - ಇವೆಲ್ಲವೂ ಆ ಬೆಳಗಿಗೆ ಇಲ್ಲದ ಗಾಂಭೀರ್ಯ ತುಂಬಿದ್ದವು. ನಮ್ಮ ಡ್ರೈವರ್ ಪ್ರಕಾರ ಇತ್ತೀಚೆಗೆ ಅವರು ನೋಡಲು ಕಂಡಿದ್ದು ಕಡಿಮೆ, ಮೊನ್ನೆ ಒಬ್ಬ ರಸ್ತೆ ಬದಿ ಕಾಣಿಸಿದ್ದ, ಆದರೆ ವಾಹನದತ್ತ ಕಲ್ಲು ತೂರಿ ಕಿಟಕಿ ಗಾಜು ಒಡೆದಿದ್ದ. ಇವತ್ತೇನಾದರೂ ರಸ್ತೆಪಕ್ಕ ಬಂದರೆ ನಿಮ್ಮ ಅದೃಷ್ಟ ಎಂದು ಹೇಳಿದ. ಯಾರಿಗೂ ಹೇಳಬೇಡಿರೆಂದು ತನ್ನ ಬಳಿಯಿದ್ದ ಜರವಾ ಫೋಟೋ, ವೀಡಿಯೋ ತೋರಿಸಿದ.

ಇದ್ದಕ್ಕಿದ್ದಂತೆ ಎದುರಾದರು ಜರವಾ ದಂಪತಿಗಳು! ತನ್ನ ತೆರೆದೆದೆಯನ್ನು ಕೈಕಟ್ಟಿ ಮುಚ್ಚಿಕೊಂಡ ಆಕೆ ಸೊಂಟಕ್ಕೆ ಕೆಂಪು ಹಗ್ಗ ನೇಯ್ದುಕೊಂಡಿದ್ದಳು. ಗಂಭೀರ ನಿಲುವಿನ ಮುಖದಲ್ಲಿ ನಗೆಯ ಸುಳಿವಿಲ್ಲ. ಆತ ಬೆನ್ನ ಹಿಂದೆ ಬಿದಿರಿನ ಬುಟ್ಟಿ, ಕೈಯಲ್ಲಿ ಬಾಣ ಹಿಡಿದು ತದೇಕ ಚಿತ್ತದಿಂದ ಗಂಭೀರನಾಗಿ ವಾಹನಗಳ ಕಾನ್ವಾಯ್ ನೋಡುತ್ತಿದ್ದ. ಮಣ್ಣು ಬಳಿದುಕೊಂಡ ಮುಖದ ಚರ್ಮಕಾಂತಿ ಮನ ಸೆಳೆಯಿತು. ಸ್ವಲ್ಪ ಮುಂದೆ ಹೋಗುವುದರಲ್ಲಿ ಅಮ್ಮ ಮಗು ಸಿಕ್ಕರು. ವರ್ಷದ ಮಗುವನ್ನು ಪಕ್ಕ ನಿಲ್ಲಿಸಿಕೊಂಡಾಕೆ ಯಾವುದೋ ಬೇರಿಗೋ, ನೀರಿನ ಮೂಲಕ್ಕೋ ಹುಡುಕಾಟ ನಡೆಸಿ ಅಗೆಯುತ್ತಿದ್ದಳು. ಬಾಗಿದ ಭಂಗಿಗೆ ಹಿಂಭಾಗ ಮುಂಭಾಗಗಳೆಲ್ಲ ತೊನೆಯುತ್ತಿದ್ದರೂ ಚಲಿಸುವ ವಾಹನಗಳ ಪರಿವೆ ಇಲ್ಲದೆ ತನ್ನಷ್ಟಕ್ಕೆ ಕೆಲಸದಲ್ಲಿ ಮುಳುಗಿಹೋದ ಮಹಿಳೆ. ನಂತರ ಕಂಡ ನಾಲ್ಕಾರು ಮಹಿಳೆಯರು ಪಕ್ಕಾ ಜರವಾ ಉಡುಪಿನಲ್ಲಿದ್ದರು. ಕೊಂಚ ಮುಂದೆ ಹೋದ ಮೇಲೆ ನೀಲಿ ದಿರಿಸು ಧರಿಸಿದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕರ್ತನೊಟ್ಟಿಗೆ ಹತ್ತಿಪ್ಪತ್ತು ಜರವಾಗಳು ಜೀಪಿನಲ್ಲಿ ವಿವಿಧ ಭಂಗಿಗಳಲ್ಲಿ ಕೂತು, ಮಲಗಿದ್ದರು. ಅವರಿಗಾಗಿ ಪೋರ್ಟ್‌ಬ್ಲೇರ್‌ನ ಜಿಬಿ ಪಂತ್ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ವ್ಯವಸ್ಥೆ ಇದ್ದು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದರು. ಬಾರಾಟಾಂಗ್ ದ್ವೀಪ ಹತ್ತಿರ ಬಂದಂತೆ ಎಳೆಯ ಜರವಾ ತರುಣನೊಬ್ಬ ಬಂದ. ನೀಳಕಾಯದ, ಹುರಿ ಮೈಯ, ಗಂಭೀರ ನಿಲುವಿನ ಅವನು ಕೈಯಲ್ಲೊಂದು ಬಾಣ ಹಿಡಿದು ಬಿರುಸಾಗಿ ವಾಹನಗಳ ಒಳಗಿರುವವರನ್ನು ಪರೀಕ್ಷಿಸುತ್ತಿದ್ದಾನೋ ಎಂಬಂತೆ ಇಣುಕಿ ನೋಡುತ್ತ ನಡೆಯುತ್ತಿದ್ದ. ನಗೆಯ ಸುಳಿವೂ ಇಲ್ಲದ ಮುಖ. 

ಥಳಥಳಿಸುವ ಆ ನಗ್ನ ಮೈಗಳಲ್ಲಿ ಒಂದಾದರೂ ಗಾಯವಿರಲಿಲ್ಲ, ಕಲೆಯಿರಲಿಲ್ಲ. ಮುಖಮೈಗೆ ಅಲಂಕಾರಿಕವಾಗಿ ಮಣ್ಣು ಮೆತ್ತಿಕೊಂಡು ಬರಿಗಾಲು ಬರಿಮೈಯಲ್ಲಿ ತಿರುಗಿ ಮಲಗುವ ಅವರ ಚರ್ಮದ ಕಾಂತಿಯೋ ಅದ್ಭುತ. ಬೇರೆಬೇರೆ ಮಣ್ಣುಗಳ ಔಷಧೀಯ ಗುಣ ಅವರಿಗೆ ಗೊತ್ತಿದೆಯಂತೆ. ನಾರುಬೇರುಗಳ ರಹಸ್ಯ ತಿಳಿದಿದೆಯಂತೆ. ಹುತ್ತದ ಬಳಿ ಗೂಡು ಕಟ್ಟುವ ಒಂದು ಹಕ್ಕಿಯ ಎಂಜಲು ವಿಷಪೂರಿತವಾಗಿದ್ದು ಬಾಣದ ತುದಿಗೆ ಅದನ್ನು ಸವರುತ್ತಾರಂತೆ. ಡ್ರೈವರ್ ಹೇಳಿದ ಈ ಅಂತೆಕಂತೆಗಳು ಎಷ್ಟು ನಿಜವೋ, ಸುಳ್ಳೋ ಆದರೆ ಸಾವಿರಾರು ವರ್ಷಗಳಿಂದ ಗಾಯ-ಎಲುವು ಮುರಿತ-ಹೆರಿಗೆ-ಕಾಯಿಲೆಗಳನ್ನು ಆಧುನಿಕ ವೈದ್ಯದ ಕಲ್ಪನೆಯಿಲ್ಲದೆ ಆ ಸಮುದಾಯ ದಾಟಿಬಂದಿರುವುದು ನಿಜ. ಅವರ ಪುರಾತನರ ಕಾಯಿಲೆ, ನೋವು ನರಳಾಟಗಳ ಚರಿತ್ರೆ ನಮಗೆ ಗೊತ್ತಿಲ್ಲ. ಆದರೆ ಅಂಡಮಾನಿಗೆ ಹೋದವರು ಹೊತ್ತೊಯ್ದ ದಡಾರ, ಡೆಂಗಿ, ಮಲೇರಿಯಾ, ಕಾಲರಾ, ಕಾಲಾ ಅಜಾರ್, ಟೈಫಾಯ್ಡ್ ಕಾಯಿಲೆಗಳೂ; ಹಡಗಿನಲ್ಲಿ ನುಸುಳಿ ಬಂದ ಸೊಳ್ಳೆ, ನೊಣ, ಇಲಿಗಳೂ ಆದಿವಾಸಿಗಳಿಗೆ ವಿನಾಶಕಾರಿಯಾಗಿದ್ದು ಕಣ್ಣೆದುರಿನ ಸತ್ಯವಾಗಿದೆ.

   ಮೂರು ದಿನಗಳ ನಂತರ ಅದೇ ದಾರಿಯಲ್ಲಿ ಮಧ್ಯಾಹ್ನ ಮೂರರ ಕಾನ್ವಾಯ್‌ನಲ್ಲಿ ವಾಪಸ್ ಬರುವಾಗ ತಂಡತಂಡವಾಗಿ ಜರವಾ ಜನರನ್ನು ನೋಡಿದೆವು. ಹೆಚ್ಚಿನ ಗಂಡುಹೆಣ್ಣುಗಳು ಸೊಂಟದ ಮೇಲೆ ನಗ್ನರೇ. ಬೇಟೆಯಾಡಿದ ಎರಡು ಹಂದಿಗಳನ್ನು ಬಾಳೆಪಟ್ಟೆಯಿಂದ ಬೆನ್ನ ಮೇಲೆ ತೂಗಿಕೊಂಡು ರಸ್ತೆ ದಾಟಲು ಕಾಯುತ್ತಿದ್ದ ತರುಣ; ಕೊಂಚ ವಯಸ್ಸಾದ, ನಡುರಸ್ತೆಗೇ ಬಂದು ವಾಹನಗಳಲ್ಲಿದ್ದವರಿಗೆ ಶೇಕ್ ಹ್ಯಾಂಡ್ ಕೊಟ್ಟು ಸಾಗುತ್ತಿದ್ದ ಹಿರಿಯ; ಕೈಯಲ್ಲಿ ಬಾಣ ಹಿಡಿದು ತದೇಕಚಿತ್ತನಾಗಿ ಸಾಗುವ ವಾಹನಗಳ ನೋಡುತ್ತಿದ್ದ ಪೋರ; ಒಂದರ ಪಕ್ಕ ಒಂದು ಎರೆಮಣ್ಣಿನ ಬೊಂಬೆಗಳನ್ನು ಜೋಡಿಸಿಟ್ಟಂತೆ ಸಾಲಾಗಿ ಕುಳಿತ ಎಳೆಕೂಸುಗಳು; ನಗ್ನ ಬಸುರಿ; ಮೊಲೆ ಚೀಪುವ ಮಗುವಿನೊಟ್ಟಿಗೆ ರಸ್ತೆಪಕ್ಕ ನಿಂತು ನಗೆ ಹಿಂದಿರುಗಿಸಿದ ಮಹಿಳೆ; ವಿ ಸೈನ್ ತೋರಿಸುತ್ತ ಕೈಯಾಡಿಸುತ್ತಿದ್ದ ಹುಡುಗ; ಏನನ್ನೋ ತಿನ್ನುತ್ತ, ತಿನ್ನುತ್ತಿದ್ದುದನ್ನು ವಾಹನಗಳತ್ತ ಬಿಸಾಡಿದ ಹುಡುಗಹುಡುಗಿ ಜೋಡಿ - ಹೀಗೇ ವಾಪಸು ಬರುವಾಗ ಇಡೀ ಹಳ್ಳಿಯೇ ರಸ್ತೆ ಮೇಲಿದೆಯೇನೋ ಎಂಬಂತೆ ಹಲವಾರು ಜರವಾ ತಂಡಗಳು ಎದುರುಸಿಕ್ಕಿದ್ದವು. ಅಷ್ಟೊಂದು ಬಸುರಿ-ಎಳೆಕೂಸುಗಳನ್ನು ನೋಡಿದ ಕೃಷ್ಣನ ಗೈನಕಾಲಜಿಸ್ಟ್ ಮನಸ್ಸು ಖುಷಿಯಾಯಿತು. ಜರವಾಗಳು ಸದ್ಯಕ್ಕೆ ನಾಶವಾಗುವ ಸಮುದಾಯ ಅಲ್ಲವೆನಿಸಿ ನೆಮ್ಮದಿಯಾಯಿತು.

ಮರುದಿನ ‘ಅಂಡಮಾನ್ ಶೀಖಾ’ ಪತ್ರಿಕೆಯ ಮುಖಪುಟದಲ್ಲಿ ಬಾರಾಟಾಂಗ್ ಬಳಿ ಮನೆಯೊಂದಕ್ಕೆ ನುಗ್ಗಿದ ಜರವಾ ತಂಡ ಮನೆಯಲ್ಲಿ ಮಾಡಿಟ್ಟ ಅಡುಗೆ, ಅಕ್ಕಿ, ತೆಂಗಿನ ಕಾಯಿ, ತರಕಾರಿ, ಬಟ್ಟೆ ಮತ್ತಿತರ ಸಾಮಾನುಗಳನ್ನು ಹೊತ್ತೊಯ್ದಿತೆಂದೂ, ಪ್ರತಿಭಟಿಸಿದ್ದಕ್ಕೆ ಮನೆಯೊಡೆಯನ ಮೇಲೆ ಹಲ್ಲೆಗೂ ಯತ್ನಿಸಿತೆಂದು ವರದಿಯಾಗಿತ್ತು.

   ನಾಗರಿಕ ಸಮಾಜದ ಜೊತೆಯ ಬುಡಕಟ್ಟುಗಳ ಘರ್ಷಣೆ, ಮುಖಾಮುಖಿ ಹೊಸದಲ್ಲ. ಕೆಲವರ್ಷಗಳ ಕೆಳಗೆ ಜರವಾ ಗುಂಪೊಂದು ಹಳ್ಳಿಗೆ ಬಂದಿತ್ತು. ಮರವೇರಿ ತೆಂಗಿನಕಾಯಿ ಕೊಯ್ದು ಕೆಳಗಿಳಿಯುವಾಗ ಒಬ್ಬ ಹುಡುಗ ಮರದಿಂದ ಕೆಳಗೆ ಬಿದ್ದ. ಮೇಲೇಳಲಾರದ ಅವನನ್ನು ಅಲ್ಲೇ ಬಿಟ್ಟು ತಂಡದ ಇತರರು ವಾಪಸು ತೆರಳಿದರು. ಆಡಳಿತವು ಅವನಿಗೆ ಎನ್ಮೆ ಎಂಬ ಹೆಸರಿಟ್ಟು ಆಸ್ಪತ್ರೆಯಲ್ಲಿ ಮುರಿದ ಎಲುಬಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಎರಡು ತಿಂಗಳ ಬಳಿಕ ಹೆಲಿಕಾಪ್ಟರಿನಲ್ಲಿ ಅವನನ್ನು ಕಾಡಿಗೆ ಬಿಟ್ಟುಬಂತು. ಒಬ್ಬ ಎನ್ಮೆಯ ಭೇಟಿ ಮತ್ತು ನಾಗರಿಕ ಸಮಾಜದ ಜೊತೆಗಿನ ಅವನ ಅನುಭವಗಳು ಆ ಸಮುದಾಯಕ್ಕೆ ಯಾವ ಸಂದೇಶ ರವಾನಿಸಿರಬಹುದು? ಊಹೆಯಷ್ಟೇ ನಮ್ಮದು.

   ಜರವಾಗಳು ನಾಗರಿಕರ ಜೊತೆ ಬೆರೆಯತೊಡಗಿದ್ದು ಅವರನ್ನು ಪ್ರತ್ಯೇಕವಾಗಿಡುವುದನ್ನು ನಿಲ್ಲಿಸಬೇಕೆಂದು ಅಂಡಮಾನ್ ಆಡಳಿತ ಇತ್ತೀಚೆಗೆ ತೀರ್ಮಾನಿಸಿತ್ತು. ಜೆಟ್ಟಿ, ಶಾಲೆ, ತನಿಖಾಠಾಣೆ, ರಸ್ತೆಯ ಹತ್ತಿರ ಉಳಿದವರ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವ ಜರವಾಗಳನ್ನು ಮುಖ್ಯವಾಹಿನಿಯಲ್ಲಿ ತರಬೇಕೆನ್ನುವುದು ಅದರ ನಿಲುವು. ಆದರೆ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ಸಭೆ ಸೇರಿ ಈ ನಿರ್ಧಾರವನ್ನು ಜರವಾಗಳಿಗೇ ಬಿಡಬೇಕೆಂದು ತೀರ್ಮಾನಿಸಿದೆ. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರ ಜೊತೆ ಅಂಡಮಾನ್ ಆಡಳಿತ ಕಲ್ಯಾಣ ಯೋಜನೆಯೊಂದನ್ನು ಸಿದ್ಧಗೊಳಿಸಿ ಅದರಂತೆ ಈಗ ಜರವಾ ಹಳ್ಳಿಗಳಿಗೆ ಪ್ರತಿದಿನ ಒಬ್ಬರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನೀಲಿ ಸಮವಸ್ತ್ರ ಧರಿಸಿ ಹೋಗುತ್ತಾರೆ. ಮೊದಮೊದಲು ಅವರಿಗೆ ಇಷ್ಟವಾದ ತೆಂಗು, ಬಾಳೆಹಣ್ಣು, ಅಲ್ಯುಮಿನಿಯಂ ಪಾತ್ರೆ, ಕೆಂಪು ಬಟ್ಟೆಗಳನ್ನು ಪೂರೈಸಿ ಅವರ ವಿಶ್ವಾಸ ಗಳಿಸಲಾಯಿತು. ಕೊನೆಗೆ ಅವರ ಸೆಟಲ್‌ಮೆಂಟ್‌ಗಳಿಗೇ ಹೋಗಿ ಔಷಧಿ, ಚಿಕಿತ್ಸೆ ಕೊಡಲು ಶುರುಮಾಡಲಾಯಿತು. ಈಗ ಅವರ ಮೇಲ್ವಿಚಾರಣೆಗೆಂದೇ ಒಂದು ಇಲಾಖೆಯಿದೆ, ಆಸ್ಪತ್ರೆಗೆ ಕರೆತಂದು, ಬಿಟ್ಟುಬರಲು ಜೀಪುಗಳಿವೆ. ರೋಗನಿರೋಧಕ ಲಸಿಕೆ ಹಾಕಲಾಗುತ್ತಿದೆ. ಗರ್ಭಿಣಿಯರಿಗೆ, ಎಳೆ ಶಿಶುಗಳಿಗೆ, ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಈ ಬೆಳವಣಿಗೆಯ ನಂತರ ಅವರ ಜನಸಂಖ್ಯೆ ಕಳೆದ ೧೦ ವರ್ಷಗಳಲ್ಲಿ ಏರಿಕೆ ಕಂಡಿದೆ.

ಈಗ ಸರ್ಕಾರದ ‘ಜರವಾ ಪಾಲಿಸಿ’ ಹೀಗಿದೆ:

    ದೈಹಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಜರವಾಗಳು ಆಧುನಿಕ ಸಮಾಜದ ಮುಖಾಮುಖಿಗೆ ಸಿದ್ಧರಾಗುವವರೆಗೆ ಸಂಪರ್ಕವೇರ್ಪಡದಂತೆ ರಕ್ಷಿಸುವುದು
    ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ಅಸ್ಮಿತೆ ರಕ್ಷಿಸುವುದು
    ವೈದ್ಯಕೀಯ ನೆರವು ನೀಡುವುದು
    ತಮ್ಮ ಜೀವನಶೈಲಿ ಉಳಿಸಿಕೊಳ್ಳಲು ತಕ್ಕ ಸಂಪನ್ಮೂಲಗಳಿಗಾಗಿ ಅವರಿರುವ ಪ್ರದೇಶ ರಕ್ಷಿಸುವುದು.
    ಅವರ ಅನನ್ಯ ಜೀವನಶೈಲಿ ಮತ್ತು ಸಂಸ್ಕೃತಿ ಉಳಿಸುವಂತೆ ಅವರ ವಾಸಸ್ಥಳದ ಸುತ್ತಮುತ್ತಲ ಜನರಿಗೆ ತಿಳುವಳಿಕೆ ನೀಡುವುದು.

ಅವರಿಗಾಗಿ ೧೦೨೮ ಚ. ಕಿಮೀ ಕಾಡು ಕಾದಿಟ್ಟ ಪ್ರದೇಶವಾಗಿರುವಂತೆಯೇ, ಅವರ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುವುದು, ಅರಣ್ಯ ಉತ್ಪನ್ನಗಳ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಕನಿಷ್ಠ ಹಸ್ತಕ್ಷೇಪ, ಗರಿಷ್ಠ ಸ್ವಾಯತ್ತತೆ ಸರ್ಕಾರದ ಗುರಿಯಾಗಿದೆ. ಆದರೂ ನಾಗರಿಕ ಜಗತ್ತು ಅದರ ಉಲ್ಲಂಘನೆ ಮಾಡುತ್ತಿರುವ ಸೂಚನೆಗಳಿವೆ. 

ಆದಿಮ ಸಮುದಾಯಗಳನ್ನು ಹೇಗೆ ನಡೆಸಿಕೊಳ್ಳಬೇಕೆನ್ನುವ ಬಗ್ಗೆ ಆಧುನಿಕ ಸಮಾಜಕ್ಕೆ ಗೊಂದಲಗಳಿವೆ. ಆ ಸಮುದಾಯಗಳನ್ನು ವಿಕಾಸವಾದದ ಹಂತಗಳಲ್ಲಿ ಆಧುನಿಕಗೊಳಿಸದೇ ಒಂದೇ ಸಲ ‘ಐರನ್ ಏಜ್’ ನಲ್ಲಿರುವವರನ್ನು ೨೧ನೇ ಶತಮಾನಕ್ಕೆ ಎಳೆದುತಂದರೆ ಕಲ್ಚರಲ್ ಶಾಕ್ ಅನುಭವಿಸುವುದಿಲ್ಲವೆ? ಅಥವಾ ಅವರಿಗೊಂದಿಷ್ಟು ‘ರಕ್ಷಿತ ಪ್ರದೇಶ’ವನ್ನು ಘೋಷಿಸಿ ಕಲ್ಲನ್ನು ಕಲ್ಲಿನಿಂದ ಕುಟ್ಟಿ ಬೆಂಕಿ ಕಾಯಿಸಿಕೊಳ್ಳಿ ಎಂದು ಅವರಷ್ಟಕ್ಕೆ ಅವರನ್ನು ಬಿಟ್ಟುಬಿಡಬಹುದೆ? ಅವರ ಹಕ್ಕು ಸ್ವಾತಂತ್ರ್ಯ ಸ್ವಾಯತ್ತತೆ ಎಷ್ಟರಮಟ್ಟಿಗೆ, ಎಲ್ಲಿಯವರೆಗೆ ರಕ್ಷಿಸಬೇಕು? ನಮ್ಮೆಲ್ಲ ಕ್ರಿಯೆಗಳೂ, ಯೋಜನೆಗಳೂ ಪ್ರಯೋಗವೇ ಆಗಿರುವಾಗ ಸ್ಪಷ್ಟ, ಖಚಿತ ಒಮ್ಮತ ಸಾಧ್ಯವಾಗುತ್ತಿಲ್ಲ.

    ಜರವಾ ಎಂದರೆ ಗಂಭೀರ ನಿಲುವಿನ ಕಪ್ಪುಮೂರ್ತಿಗಳು ಕಣ್ಣೆದುರು ಬರುತ್ತಿವೆ. ಪ್ರವಾಸಿಗಳೆದುರು ನಿಂತು ಅಂಗಲಾಚುತ್ತ ನೃತ್ಯ, ಉಡುಪು, ಹಾಡು, ಕಲೆ ಪ್ರದರ್ಶಿಸುವ ದುರ್ದಿನಗಳು ಅವರಿಗೆ ಬಾರದೇ ಇರಲಿ..

ಗ್ರೇಟ್ ಅಂಡಮಾನಿಗಳು

    ಒಂದು ಕಾಲದಲ್ಲಿ ಇಡೀ ದಕ್ಷಿಣ ಅಂಡಮಾನಿನಲ್ಲಿ ಹರಡಿಕೊಂಡಿದ್ದ ಆದಿವಾಸಿ ಕುಲ ಇದು. ೧೭೮೯ರಲ್ಲಿ ಆರ್ಕಿಬಾಲ್ಡ್ ಬ್ಲೇರ್ ಮೊದಲು ಈ ದ್ವೀಪಗಳ ಸರ್ವೆಗೆ ಕಾಲಿರಿಸಿದಾಗ ಅವರ ಜನಸಂಖ್ಯೆ ೧೦,೦೦೦ ಇರಬಹುದೆಂಬ ಅಂದಾಜು. ನಂತರ ಬ್ರಿಟಿಷರು ಅಂಡಮಾನಿನಲ್ಲಿ ಯೂನಿಯನ್ ಜ್ಯಾಕ್ ಧ್ವಜ ಹಾರಿಸಿದಾಗ ಸುಮಾರು ೫೦೦೦ದಷ್ಟು ಇದ್ದವರು ಬರಬರುತ್ತ ಸಂಖ್ಯೆಯಲ್ಲಿ ಕಡಿಮೆಯಾದರು. ೧೯೦೧ರಲ್ಲಿ  ೬೨೫ ಜನ ಇದ್ದವರು ೧೯೨೭ರಲ್ಲಿ ೨೦೦, ೧೯೪೭ರಲ್ಲಿ ೨೫, ೧೯೬೯ರಲ್ಲಿ ಅತಿಕಡಿಮೆ ೧೯ ಜನ ಉಳಿದಿದ್ದರು. ನಂತರ ಏರಿಕೆ ಕಾಣುತ್ತಿರುವ ಜನಸಂಖ್ಯೆ ೧೯೭೧ರಲ್ಲಿ ೨೪, ೧೯೯೯ರಲ್ಲಿ ೪೧ ಹಾಗೂ ಈಗ ೨೦೧೧ರಲ್ಲಿ ೫೨ ಜನರಿದ್ದಾರೆ.

   ಗ್ರೇಟ್ ಅಂಡಮಾನಿಗಳಲ್ಲೇ ೧೦ ಪಂಗಡಗಳಿದ್ದು ಅದರಲ್ಲಿ ೭ ವಿನಾಶದ ಅಂಚಿಗೆ ಸರಿದು ಕಾಣೆಯಾಗಿವೆ. ಈಗ ಅಕಾ ಜೆರು, ಅಕಾ ಬೊ, ಅಕಾ ಕರಿ ಎಂಬ ಮೂರು ಪಂಗಡಗಳಷ್ಟೇ ಉಳಿದಿವೆ. ಕಳೆದ ವರ್ಷ ಅಕಾಬೊಗಳು ಮಾತ್ರ ಆಡುತ್ತಿದ್ದ ವಿಶಿಷ್ಟ ಬೊವಾ ಭಾಷೆ ಗೊತ್ತಿದ್ದ ಹಿರಿಯ ಜೀವವೊಂದು ಕಣ್ಮುಚ್ಚಿದಾಗ ಆಕೆಯ ಜೊತೆಗೇ ಅವಳ ಭಾಷೆಯೂ ಸಮಾಧಿಯಾಯಿತು. ಈಗ ಅವರ ಭಿನ್ನ ಉಪಪಂಗಡಗಳು ಸಾಂಸ್ಕೃತಿಕ, ಭಾಷಿಕ ಅಸ್ಮಿತೆ ಹಾಗೂ ಪ್ರದೇಶವನ್ನು ಸಂಪೂರ್ಣ ಕಳೆದುಕೊಂಡಿವೆ. ಒಂದು ಕಾಲದಲ್ಲಿ ದಕ್ಷಿಣ ಅಂಡಮಾನ್, ರಟ್‌ಲ್ಯಾಂಡ್ ದ್ವೀಪ, ಲಿಟಲ್ ಅಂಡಮಾನಿನ ೩೫೦ ಕಿಮೀ ಉದ್ದಕ್ಕೂ ವಾಸಿಸುತ್ತಿದ್ದವರು ಈಗ ಸ್ಟ್ರೈಟ್ ದ್ವೀಪಕ್ಕೆ ಸೀಮಿತಗೊಂಡು ಸರ್ಕಾರ ನೀಡಿದ ಸವಲತ್ತುಗಳೊಂದಿಗೆ ಬದುಕುತ್ತಿದ್ದಾರೆ.

  ಈ ನೀಗ್ರಾಯ್ಡ್ ಕುಲ ಮತ್ತು ಆಧುನಿಕ ಮನುಷ್ಯನ ಮುಖಾಮುಖಿ ಶುರುವಾದದ್ದು ಅಂಡಮಾನಿಗೆ ಬ್ರಿಟಿಷರು ಕಾಲಿರಿಸಿದ ನಂತರ. ಪೀನಲ್ ಸೆಟಲ್‌ಮೆಂಟ್ ಶುರುವಾದಾಗ ಪೋರ್ಟ್‌ಬ್ಲೇರ್‌ನ ಖೈದಿಗಳೂ, ಬ್ರಿಟಿಷರೂ ಹೆದರುತ್ತಿದ್ದುದು ಗ್ರೇಟ್ ಅಂಡಮಾನಿಗರಿಗೆ. ಗುಂಪುಗಳಲ್ಲಿ ಬಂದು ನಾಗರಿಕ ಮನುಷ್ಯನನ್ನು ಕೊಂದು ಕತ್ತರಿಸುತ್ತಿದ್ದ ಇವರ ಬಗ್ಗೆ ಊಹಾಪೋಹದ ಕತೆಗಳೇ ಹಬ್ಬಿದ್ದವು. ದೂದ್‌ನಾಥ ತಿವಾರಿ ಎಂಬ ಸಿಪಾಯಿ ೧೮೫೭ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಗಡೀಪಾರು ಶಿಕ್ಷೆಗೊಳಗಾಗಿ ೧೮೫೮ರಲ್ಲಿ ಅಂಡಮಾನಿಗೆ ಕಳಿಸಲ್ಪಟ್ಟಿದ್ದ. ಪೋರ್ಟ್‌ಬ್ಲೇರಿಗೆ ಬಂದ ತಿಂಗಳೊಳಗೆ ತನ್ನ ೯೦ ಜನ ಸಂಗಾತಿಗಳೊಂದಿಗೆ ಜೈಲಿನಿಂದ ತಪ್ಪಿಸಿಕೊಂಡ. ಕಾಡು ಹೊಕ್ಕವರಲ್ಲಿ ತಿವಾರಿಯನ್ನು ಬಿಟ್ಟು ಮತ್ತೆಲ್ಲರೂ ಗ್ರೇಟ್ ಅಂಡಮಾನಿಗಳಿಂದ ಹತರಾದರು. ಏನನಿಸಿತೋ, ತಿವಾರಿಯನ್ನು ಕೊಲ್ಲದೇ ತಮ್ಮ ನೆಲೆಗೆ ಕರೆದೊಯ್ದ ಬುಡಕಟ್ಟು ಜನ ಅವನ ಬಟ್ಟೆಬರೆ ತೆಗೆದು ಮೈಗೆ ಮಣ್ಣು ಹಚ್ಚಿ ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಲೀಪಾ, ಗೀಜಾರನ್ನು ಕೊಟ್ಟು ಮದುವೆ ಮಾಡಿದರು. ಒಂದು ವರ್ಷ ಹಾಗೂ ಹೀಗೂ ಕಾಲ ಕಳೆದ ತಿವಾರಿ ಅವರ ಭಾಷೆ ಕಲಿತ. ಅವರು ಪೋರ್ಟ್‌ಬ್ಲೇರ್ ಬಳಿ ಅಬರ್ಡೀನ್ ಪೊಲೀಸ್ ಸ್ಟೇಷನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದುದನ್ನು ತಿಳಿದುಕೊಂಡ. ಆದಿವಾಸಿಗಳಿಂದ ತಪ್ಪಿಸಿಕೊಂಡವ ಬ್ರಿಟಿಷರಿಗೆ ಆ ಸುದ್ದಿ ಮುಟ್ಟಿಸಿದ. ಬಿಲ್ಲುಬಾಣ ಹಿಡಿದ ಆದಿವಾಸಿಗಳು ಹಾಗೂ ಗನ್, ಪಿಸ್ತೂಲು ಹಿಡಿದ ಬ್ರಿಟಿಷರ ನಡುವೆ ಕಾಳಗ ನಡೆದು ಹಲವಾರು ಆದಿವಾಸಿಗಳೂ, ಬ್ರಿಟಿಷರೂ ಸತ್ತುಹೋದರು. ಇದು ಅಬರ್ಡೀನ್ ಕಾಳಗ ಎಂದು ಹೆಸರಾಯಿತು. ದೂದ್‌ನಾಥ ತಿವಾರಿ ಸಹಾಯ ನೀಡಿದ್ದಕ್ಕಾಗಿ ಬ್ರಿಟಿಷರು ಅವನನ್ನು ಬಿಡುಗಡೆ ಮಾಡಿ ೧೮೬೦ರಲ್ಲಿ ಮೇನ್‌ಲ್ಯಾಂಡಿಗೆ ಕಳಿಸಿದರು. ಅಬರ್ಡೀನ್ ಕಾಳಗದ ನೆನಪಿಗಾಗಿ ಪೋರ್ಟ್‌ಬ್ಲೇರಿನ ಜನಜಂಗುಳಿ ಮಾರುಕಟ್ಟೆ ಪ್ರದೇಶದಲ್ಲಿ ಈಗಲೂ ಒಂದು ಸ್ಮಾರಕ ಸ್ತಂಭ ಕಾಣಬಹುದು.

ನಾಗರಿಕ ಜಗತ್ತು ಅಮಾಯಕ ಆದಿವಾಸಿಗಳನ್ನು ಅವರ ನೆಲದಲ್ಲೇ ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬದಲು ವಿಜಯದ ಕುರುಹಾಗಿ ಸ್ತಂಭ ನಿಲಿಸಿ ಮಡಿದ ತನ್ನವರ ಹೆಸರನ್ನಷ್ಟೇ ಅದರಲ್ಲಿ ಕೆತ್ತಿಟ್ಟುಕೊಂಡರೆ ಈ ಘಟನೆಯ ನಂತರ ದ್ರೋಹ ಬಗೆದ ಆಧುನಿಕ ಮನುಷ್ಯನ ಮೇಲೆ ಆದಿವಾಸಿಗಳ ಕ್ರೋಧ, ಅನುಮಾನ ಮತ್ತಷ್ಟು ಹೆಚ್ಚಾಯಿತು. ೧೮೫೮ರಲ್ಲಿ ಇಂಡಿಯನ್ ನೇವಿಯ ಲೆಫ್ಟಿನೆಂಟ್ ಟೆಂಪಲ್ ಎಂಬಾತ ಮೂರು ನಾಡದೋಣಿಗಳನ್ನು ಹಿಡಿದು ಅಂಡಮಾನಿಗಳ ಗುಡಿಸಲು ನಾಶಗೊಳಿಸಿ ಆರು ಜನರನ್ನು ಕೊಂದ. ನಂತರ ಬುಡಕಟ್ಟುಗಳು ಮೂರು ಬಾರಿ ದಾಳಿ ನಡೆಸಿದರು. ಇದಾದ ಮೇಲೆ ಪೋರ್ಟ್‌ಬ್ಲೇರ್ ಸೂಪರಿಂಟೆಂಡೆಂಟ್ ಸ್ಥಳೀಯರ ಜೊತೆ ಸ್ನೇಹದಿಂದಿರುವ ಅವಶ್ಯಕತೆ ಮನಗಂಡು ಅಧಿಕಾರಿಗಳು ಮತ್ತು ಅಪರಾಧಿಗಳು ಬುಡಕಟ್ಟುಗಳ ಜೊತೆ ಹೇಗೆ ವರ್ತಿಸಬೇಕೆಂಬ ನೀತಿ ಸಂಹಿತೆಯನ್ನು ರೂಪಿಸಿದ. ‘ಅಂಡಮಾನ್ ಹೋಂ’ ತೆರೆಯಲಾಯಿತು. ಕ್ಯಾಪ್ಟನ್ ಕಾರ್ಬೈನ್ ಅದರ ಮುಖ್ಯಸ್ಥನಾದ. ಆತ ೨೮ ಅಂಡಮಾನಿಗಳ ಮನವೊಲಿಸಿ ಅಂಡಮಾನ್ ಹೋಂನಲ್ಲಿರುವಂತೆ ಮಾಡಿದ. ಅವನ ನಂತರ ಬಂದ ಇ.ಎಚ್.ಮ್ಯಾನ್ ಅಂಡಮಾನಿಗರ ಕುರಿತು ವ್ಯವಸ್ಥಿತ ಅಧ್ಯಯನ ನಡೆಸಿದ. ತಪ್ಪಿಸಿಕೊಂಡು ಓಡುವ ಖೈದಿಗಳನ್ನು ಹಿಡಿದು ತರಲು ಬೇಟೆನಾಯಿಗಳಂತೆ ಅವರನ್ನು ಬಳಸಿಕೊಳ್ಳಲಾಯಿತು. ಇದು ೧೯೦೦ರ ತನಕ ಹೀಗೇ ಮುಂದುವರೆಯಿತು. ಆದರೆ ನಾಗರಿಕ ಜಗತ್ತಿನೊಂದಿಗೆ ಏರ್ಪಟ್ಟ ನಿರಂತರ ಸಂಪರ್ಕ ಗ್ರೇಟ್ ಅಂಡಮಾನಿಗಳ ಪಾಲಿಗೆ ಬಹು ತುಟ್ಟಿಯಾಗಿ ಪರಿಣಮಿಸಿತು. ಎರಡು ಬಾರಿ ಕಾಡಿದ ದಡಾರಕ್ಕೆ (ಮೀಸಲ್ಸ್ ಎಪಿಡೆಮಿಕ್) ಹಲವರು ಬಲಿಯಾದರು. ನಂತರ ಅಂಡಮಾನ್ ಹೋಂಗಳನ್ನು ಮುಚ್ಚಲಾಯಿತು.

   ಹೀಗೆ ತಮ್ಮ ಕುಲದ ಸಾವಿರಾರು ಹಿರಿಯರನ್ನು ಕಳೆದುಕೊಂಡ ಗ್ರೇಟ್ ಅಂಡಮಾನಿಗಳ ಸಂತತಿ ಇಂದು ವಿನಾಶದ ಅಂಚಿನಲ್ಲಿದೆ. ಅವರೀಗ ಪ್ರತ್ಯೇಕವಾಗಿ ಸ್ಟ್ರೈಟ್ ದ್ವೀಪದಲ್ಲಿ ವಾಸಿಸುತ್ತಿದ್ದಾರೆ. ಮೀನು, ನೀರಾನೆ, ಏಡಿ, ಆಮೆ, ಮೊಟ್ಟೆ, ಹಂದಿ, ಮೊಸಳೆ, ಆಕ್ಟೋಪಸ್, ಮೃದ್ವಂಗಿಗಳು, ಗೆಡ್ಡೆಗೆಣಸು ಆಹಾರವಾಗಿದ್ದ ಬೇಟೆಯ ಕುಲ ಈಗ ಅನ್ನ, ಚಪಾತಿ, ಮಸಾಲೆ ಸಾಂಬಾರ್, ಮೀನು ಫ್ರೈ ಮಾಡಿ ತಿನ್ನುವಷ್ಟು ನಾಗರಿಕರಾಗಿದ್ದಾರೆ. ನಾಗರಿಕರ ಎಲ್ಲ ದುರಭ್ಯಾಸ, ದುಶ್ಚಟ, ಕಾಯಿಲೆಗಳೂ ಅವರನ್ನು ಮುತ್ತಿಕೊಂಡಿವೆ. ಕುಡಿತಕ್ಕೆ ಅಂಟಿಕೊಂಡಿದ್ದಾರೆ. ನಾಗರಿಕ ಸಂಪರ್ಕ ಏರ್ಪಡುವ ಮೊದಲು ನಗ್ನರಾಗಿರುತ್ತಿದ್ದ ಗ್ರೇಟ್ ಅಂಡಮಾನಿಗಳು ಈಗ ಲಭ್ಯವಿರುವ ಯಾವ ಉಡುಪಾದರೂ ಸರಿ, ಧರಿಸುತ್ತಾರೆ. ಅಲಂಕಾರವನ್ನು ತುಂಬ ಇಷ್ಟಪಡುತ್ತಾರೆ. ಕೆಲವರಿಗೆ ಜೆಟ್ಟಿ-ಬಂದರಿನಲ್ಲಿ ಸಹಾಯಕರ ಕೆಲಸ ಕೊಡಲಾಗಿದೆ.

ಪಾರಂಪರಿಕ ಜ್ಞಾನ ಹೊಂದಿದ್ದ, ತಮ್ಮಷ್ಟಕ್ಕೆ ತಾವು ಸಾವಿರಾರು ವರ್ಷ ಬದುಕಿದ್ದ ಅವರಿಗೆ ಗ್ರೇಟ್ ಅಂಡಮಾನಿಗಳೆಂಬ ಉದ್ದನೆಯ ಹೆಸರು ನೀಡಿ ನಾವು ಮಾಡಿರುವ ಉಪಕಾರ ಇಂಥದು.

ಒಂಗೇ

   ಲಿಟಲ್ ಅಂಡಮಾನ್ ದ್ವೀಪದ ಒಳ ಪ್ರದೇಶಗಳಲ್ಲಿ ಬದುಕುವ ಒಂಗೇಗಳು ನೀಗ್ರೋ ಲಕ್ಷಣ ಹೊಂದಿದ ಕುಳ್ಳ ಮೈಕಟ್ಟಿನ ಗಟ್ಟಿಜನರು. ೧೮೨೫ರಲ್ಲಿ ಬ್ರಿಟಿಷ್ ನೌಕಾಧಿಕಾರಿಯೊಬ್ಬ ಈ ಜನರ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿ ಭೀಕರ ಕಾಳಗವಾಯಿತು. ಅದು ನಾಗರಿಕ ಜಗತ್ತಿನೊಡನೆ ಅವರ ಪ್ರಥಮ ಮುಖಾಮುಖಿ. ನಂತರದ ಭೇಟಿಗಳೂ ರಕ್ತಮಯವಾಗೇ ಇದ್ದವು. ಈ ಆದಿವಾಸಿಗಳನ್ನು ಪರಿಚಯ ಮಾಡಿಕೊಳ್ಳಲು ಬ್ರಿಟಿಷರು ಮತ್ತೆ ಮತ್ತೆ ಪ್ರಯತ್ನಿಸಿ ಅಂತೂ ಕೊನೆಗೆ ಯಶಸ್ವಿಯಾದರು. ಆದರೆ ನಾಗರಿಕ ಜಗತ್ತಿನ ಸಂಪರ್ಕ ಹಲವು ಜೈವಿಕ, ದೈಹಿಕ ಬದಲಾವಣೆಗಳನ್ನುಂಟುಮಾಡಿ ಆ ಸಮುದಾಯಕ್ಕೆ ದೊಡ್ಡ ಹಾನಿ ಮಾಡಿದೆ. ಹಲವು ಕಾಯಿಲೆಗಳು ಮುತ್ತಿ ಎಷ್ಟೋ ಸಾವುನೋವುಗಳಾಗಿವೆ. ಈಗವರು ೯೯ ಜನ ಉಳಿದಿದ್ದಾರೆ. ಈ ಸಮುದಾಯ ಮತ್ತದರ ಅನನ್ಯತೆ ರಕ್ಷಿಸುವ ಸಲುವಾಗಿ ಅಂಡಮಾನ್ ಆಡಳಿತ ಲಿಟಲ್ ಅಂಡಮಾನ್ ಬಳಿ ಸೌತ್ ಬೇ ಹಾಗೂ ದುಗಾಂಗ್ ಕ್ರೀಕ್‌ಗಳಲ್ಲಿ ಎಲ್ಲ ಸೌಲಭ್ಯ ಒದಗಿಸಿ ಪುನರ್ವಸತಿ ಕಲ್ಪಿಸಿದೆ. ಶಾಲೆ ತೆರೆಯಲಾಗಿದೆ. ವಯಸ್ಕರ ಕಲಿಕಾ ಕೇಂದ್ರವೂ ಇದೆ.

ಸೆಂಟಿನೆಲೀಯರು

   ಪೋರ್ಟ್‌ಬ್ಲೇರ್ ಪಶ್ಚಿಮಕ್ಕಿರುವ ಉತ್ತರ ಸೆಂಟಿನೆಲ್ ದ್ವೀಪದ ಆದಿವಾಸಿ ಸಮುದಾಯ ಸೆಂಟಿನೆಲೀಯರು. ಇಡೀ ವಿಶ್ವದಲ್ಲೇ ತಮ್ಮ ಜೀವನಶೈಲಿ-ಪ್ರದೇಶವನ್ನು ನಾಗರಿಕ ಜಗತ್ತಿನಿಂದ ಸಂಪೂರ್ಣ ಬೇರೆಯಾಗಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಏಕೈಕ ಸಮುದಾಯ ಅದು. ಅವರ ವಾಸಸ್ಥಾನ ಭಾರತಕ್ಕೆ ಸೇರಿದ್ದರೂ ತಮ್ಮ ನೆಲದ ಮೇಲೆ ಅವರಿಗೆ ಸಂಪೂರ್ಣ ಸ್ವಾಮ್ಯವಿದೆ. ೬೦ ಸಾವಿರ ವರ್ಷ ಕೆಳಗಿನ ಶಿಲಾಯುಗ ಮನುಷ್ಯನ ಜೀವಂತ ಕೊಂಡಿ ಅವರು.

   ಆ ದ್ವೀಪ ಬಿಟ್ಟು ಬೇರೆಲ್ಲೂ ಹೋಗದ ಇವರಿಗೆ ಸಾವಿರಾರು ವರ್ಷಗಳಿಂದ ಇತರ ಮೂಲನಿವಾಸಿ ಕುಲಗಳ ಸಂಪರ್ಕವೂ ಇಲ್ಲ. ಬೇಟೆ ಮತ್ತು ಮೀನುಗಾರಿಕೆಯನ್ನೇ ಆಹಾರಕ್ಕಾಗಿ ಸಂಪೂರ್ಣ ಅವಲಂಬಿಸಿರುವ ಈ ಸಮುದಾಯಕ್ಕೆ ಕೃಷಿ ಗೊತ್ತಿಲ್ಲ. ಬೆಂಕಿ ಗೊತ್ತಿಲ್ಲ. ಲೋಹ ತಯಾರಿಕೆ, ಕುಲುಮೆ ಗೊತ್ತಿಲ್ಲ. ಕೆಲ ಆಯುಧ ಬಳಸುತ್ತಾರೆ. ಜಾವೆಲಿನ್, ಬಿಲ್ಲು, ಮೂರ‍್ನಾಲ್ಕು ತರಹದ ಬಾಣ ಉಪಯೋಗಿಸುತ್ತಾರೆ. ದ್ವೀಪದ ಹತ್ತಿರ ಒಡೆದ ಹಡಗುಗಳ ಲೋಹ ಬಳಸಿ ಆಯುಧ ಮಾಡಿಕೊಂಡಿದ್ದಾರೆ. ಕಡಲ ಜೀವಿಗಳೇ ಮುಖ್ಯ ಆಹಾರ. ತೆಂಗು ನೈಸರ್ಗಿಕವಾಗಿ ಬೆಳೆಯದಿದ್ದರೂ ತೇಲಿ ಬರುವ ಕಾಯಿ ಅವರಿಗೆ ಗೊತ್ತು. ಬಾಣದಲ್ಲಿ ಮೀನು ಹಿಡಿಯುತ್ತಾರೆ. ೧೦ ಮೀ. ದೂರದ ತನಕ ನಿಖರ ಗುರಿಯಿಟ್ಟು ಜಾವೆಲಿನ್ ಬಿಸಾಡುತ್ತಾರೆ.

    ಸೆಂಟಿನೆಲೀಯರನ್ನು ಪರಿಚಯ ಮಾಡಿಕೊಳ್ಳಲು ಆಧುನಿಕ ಮನುಷ್ಯ ಪ್ರಯತ್ನಿಸುತ್ತಲೇ ಇದ್ದರೂ ಅವರು ಸ್ನೇಹ ಹಸ್ತ ಚಾಚಿಲ್ಲ. ಸೆಂಟಿನೆಲೀಯರಷ್ಟೇ ಅಲ್ಲ, ಜಗತ್ತಿನ ಬಹುತೇಕ ಆದಿವಾಸಿ ಬುಡಕಟ್ಟುಗಳು ಹೊರಜಗತ್ತಿನೊಂದಿಗೆ ಶತ್ರುತ್ವ ಹೊಂದಿದ್ದರೆ ಅದಕ್ಕೆ ಕಾರಣ ನಾಗರಿಕ ಸಮಾಜದ ಅತ್ಯಾಚಾರ, ದೌರ್ಜನ್ಯವನ್ನು ಪರಂಪರಾಗತವಾಗಿ ಎದುರಿಸಿ ಉಳಿದುಕೊಂಡಿರುವ ಅವರು ಅದರ ನೆನಪನ್ನು ಮರೆಯದಿರುವುದು. ೧೮೭೯ರಲ್ಲಿ ಆದಿವಾಸಿಗಳನ್ನು ‘ಮನುಷ್ಯ’ರನ್ನಾಗಿ ಮಾಡುವ ಪ್ರಯತ್ನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಸೆಂಟಿನೆಲ್ ದ್ವೀಪಕ್ಕೆ ಹೋಗಿ ಸ್ವಲ್ಪ ವಯಸ್ಸಾದ ಒಂದು ಜೋಡಿಯನ್ನೂ ಕೆಲವು ಮಕ್ಕಳನ್ನೂ ಹಿಡಿದು ತಂದ. ಪೋರ್ಟ್‌ಬ್ಲೇರಿಗೆ ಬಂದ ಕೆಲ ದಿನಗಳಲ್ಲೇ ಹಿರಿಯ ಜೋಡಿಗೆ ಆರೋಗ್ಯ ಕ್ಷೀಣಿಸಿ ಅವರು ತೀರಿಕೊಂಡರು. ನಂತರ ಮಕ್ಕಳನ್ನು ವಾಪಸು ಬಿಟ್ಟುಬರಲಾಯಿತು. ಆ ಅಧಿಕಾರಿ ಸೆಂಟಿನೆಲೀಯರು ಆರೋಗ್ಯವಂತರಲ್ಲವೆಂದೂ, ಅವರ ಮುಖ ಒಂದೂ ಭಾವನೆಯಿಲ್ಲದ ಈಡಿಯಾಟಿಕ್ ಚಹರೆ ಹೊಂದಿದೆಯೆಂದೂ, ಅವರು ವರ್ತನೆಯೇ ಗೊತ್ತಿಲ್ಲದ ಕಾಡುಜನರೆಂದೂ ಜರೆದ.

   ಆದರೆ ಭಾರತ ಸರ್ಕಾರ ದ್ವೀಪ ಸಂದರ್ಶಿಸಲು ಹತ್ತಿರ ಹೋದಾಗ ಕಂಡ ಸೆಂಟಿನೆಲೀಯರು ತುಂಬ ಆರೋಗ್ಯವಂತರಾಗಿದ್ದರಲ್ಲದೆ ಚುರುಕಾಗಿ ಕೈ ಬಾಯಿ ಆಡಿಸುತ್ತಾ ತಮ್ಮ ಭಾಷೆ ಮಾತನಾಡುವ ಬುದ್ಧಿವಂತರಾಗಿಯೂ ಇದ್ದರು. ೧೯೬೭ರಿಂದ ಅಂಡಮಾನಿ ಆಡಳಿತವು ಅವಶ್ಯವಿರುವ ವಸ್ತುಗಳನ್ನು ದೋಣಿಗಳಲ್ಲಿ ಒಯ್ದು ಅವರ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನಿಸಿದೆ. ಆದರೆ ಸ್ನೇಹ ಗಳಿಸುವುದಿರಲಿ, ಕೆಲವರು ಪ್ರಾಣ ಕಳೆದುಕೊಳ್ಳುವಂತಾಗಿ ೯೦ರ ದಶಕದ ನಂತರ ಈ ಕಾರ್ಯಕ್ರಮ ಕೈಬಿಡಲಾಯಿತು. ೨೦೦೬ರಲ್ಲಿ ಸೆಂಟಿನೆಲ್ ದ್ವೀಪದ ಬಳಿ ಅಕ್ರಮ ಮೀನುಗಾರಿಕೆಗೆ ತೆರಳಿದ ದೋಣಿಯ ಇಬ್ಬರು ಬೆಸ್ತರನ್ನು ಅವರು ಕೊಂದರು. ಮೃತರ ದೇಹ ತರಲು ಹೆಲಿಕಾಪ್ಟರ್ ಹೋದಾಗ ಪೈಲಟ್‌ಗಳ ಕಡೆ ಬಾಣಗಳ ಮಳೆ ಸುರಿಸಿದರು. ಹಿಂದೂ ಮಹಾಸಾಗರದ ಸುನಾಮಿ ಲಕ್ಷಾಂತರ ಜನರನ್ನು ಮುಳುಗಿಸಿದಾಗ ಸುನಾಮಿಯ ದಾರಿಯಲ್ಲೇ ಇದ್ದ ಸೆಂಟಿನೆಲ್ ದ್ವೀಪವಾಸಿಗಳು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು. ಸುನಾಮಿ ಅಲೆಗಳಿಂದ, ಭೂಕಂಪದಿಂದ ಹೇಗೆ ಬದುಕುಳಿದರೋ, ಎಷ್ಟು ಜನ ಸಾವನ್ನಪ್ಪಿದರೋ ತಿಳಿದಿಲ್ಲ. ಅವರು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂದು ನೋಡಹೋದ ಹೆಲಿಕಾಪ್ಟರನ್ನು ಬಾಣ ಬಿಟ್ಟು ಓಡಿಸಿದರು. ಹೊರಜಗತ್ತಿನ ಯಾವುದೇ ಸಂಪರ್ಕ, ಸಹಾಯ ಬಯಸದೆ ಒಬ್ಬಂಟಿಯಾಗಿ ನೈಸರ್ಗಿಕ ವಿಪತ್ತನ್ನೂ ಎದುರಿಸಿದ ಗಟ್ಟಿಗರ ಕುಲ ಅದು.

ದ್ವೀಪಕ್ಕೆ ಭೇಟಿ ಇತ್ತವರು ಗಮನಿಸಿರುವಂತೆ, ಅವರು ಮರದ ಕೊಡಲಿ ಹಿಡಿದಿರುತ್ತಾರೆ. ಅಪರಿಚಿತ ದೋಣಿ ಕಂಡೊಡನೆ ೩೦-೪೦ ಜನರ ಗುಂಪು ತೀರಕ್ಕೆ ಬಂದು ನಾಗರಿಕರನ್ನು ಎದುರಿಸುತ್ತದೆ. ಅವರಲ್ಲಿ ಅರ್ಧದಷ್ಟು ಜೋಡಿಗೆ ಮಕ್ಕಳಿದ್ದವು. ಹೆಂಗಸರ ಸಂಖ್ಯೆ ಗಂಡಸರಿಗಿಂತ ಕಡಿಮೆಯಿತ್ತು. ಅವರ ಗಣತಿ ಇಲ್ಲಿಯವರೆಗೂ ದೂರದಿಂದಲೇ ನಡೆದಿದೆ. ೨೦೦೧ರಲ್ಲಿ ೨೧ ಗಂಡು ೧೮ ಹೆಣ್ಣುಗಳನ್ನು ಗಮನಿಸಲಾಗಿದೆ. ಬೇಟೆ ಸಮುದಾಯಗಳು ಪ್ರತಿ ೧.೫ ಚ.ಕಿಮೀಗೆ ಒಬ್ಬ ವ್ಯಕ್ತಿಯನ್ನು ಹೊಂದುತ್ತವೆಂಬ ನಿಯಮದ ಪ್ರಕಾರ ಅವರ ಜನಸಂಖ್ಯೆ ೩೯ ಇರಬೇಕೆಂದು ನಿರ್ಧರಿಸಲಾಗಿದೆ.

ದಕ್ಷಿಣ ಅಮೆರಿಕಾದ ಚಿಂಟಾಲಾರ್ಗಾ ಬುಡಕಟ್ಟುಗಳ ಕತೆ ನೆನಪಾಗುತ್ತಿದೆ: ನಾಗರಿಕ ಜಗತ್ತಿಗೆ ಅಪಾರ ಪ್ರತಿರೋಧ ತೋರಿದ್ದ ಬ್ರೆಜಿಲ್‌ನ ಈ ಬುಡಕಟ್ಟು ರಬ್ಬರ್ ಬೆಳೆಗಾರರ ದೌರ್ಜನ್ಯಕ್ಕೆ ಬಲಿಯಾದರು. ಒಬ್ಬ ಪ್ಲಾಂಟರ್ ಈ ಭಯಂಕರ ಕಾಡುಜನರನ್ನು ನಿರ್ನಾಮ ಮಾಡಲು ಹೆಲಿಕಾಪ್ಟರಿನಿಂದ ಡೈನಮೈಟ್ ಬಿಸಾಡುವ ಯೋಜನೆ ಹಾಕಿದ್ದ. ಸ್ಫೋಟದ ನಂತರ ಯಾರಾದರೂ ಉಳಿದರೇ ಎಂದು ನೋಡುತ್ತ ಹೊರಟವನಿಗೆ ಒಬ್ಬ ಚಿಂಟಾ ತಾಯಿ ಮಗುವಿಗೆ ಹಾಲೂಡಿಸುತ್ತಿರುವುದು ಕಾಣಿಸಿತು. ಕೂಡಲೇ ಆ ಮಗುವಿನ ತಲೆ ಹಾರಿಸಿ, ತಾಯಿಯನ್ನು ತಲೆಕೆಳಗಾಗಿ ಮರಕ್ಕೆ ನೇತಾಡಿಸಿ ಅರ್ಧರ್ಧ ಸೀಳಿದ್ದಾಗಿ ಆತ ಹೆಮ್ಮೆಯಿಂದ ಹೇಳಿಕೊಂಡ . ಕೆಲವರು ಈ ಘಟನೆ ವಿರೋಧಿಸಿ ಕೋರ್ಟಿಗೆ ಹೋದರು. ಪ್ರಕರಣ ಹಲವು ವರ್ಷ ನಡೆದು ಅಂತೂ ಕೊನೆಗೆ ಒಬ್ಬನಿಗೆ ೧೦ ವರ್ಷ ಜೈಲಾಯಿತು. ಆದರೆ ಆತನಿಗೂ ಕ್ಷಮಾದಾನ ನೀಡಲಾಯಿತು. ಬಿಡುಗಡೆಯಾಗಿ ಹೊರಬಂದವನೇ ಆತ, ‘ಈ ಆದಿವಾಸಿ ಜನ ಸೋಮಾರಿಗಳು ಮತ್ತು ದ್ರೋಹಿಗಳು, ಅವರನ್ನು ಕೊಲ್ಲುವುದೇ ಸೂಕ್ತ’ ಎಂದು ಹೇಳಿದ!

ದಕ್ಷಿಣ ಅಮೆರಿಕಾದ ಚಿಂಟಾಲಾರ್ಗಾಗಳಂತೆಯೇ ತಮ್ಮ ಪ್ರದೇಶವನ್ನು ಇಂದಿಗೂ ಕಾಯ್ದುಕೊಂಡಿರುವ ಸೆಂಟಿನೆಲೀಯರಿಗೆ ಸದ್ಯಕ್ಕೆ ಕ್ರೂರಪ್ರಾಣಿಗಳಿಂದಾಗಲೀ, ಪ್ರಕೃತಿಯಿಂದಾಗಲೀ ಅಪಾಯವಿಲ್ಲ. ಅಪಾಯವೇನಿದ್ದರೂ ನಾಗರಿಕ ಮನುಷ್ಯನದೇ.

ಓ ದೇವರೇ, ಉತ್ತರ ಸೆಂಟಿನೆಲ್ ಎಂಬ ‘ಈಡನ್ ಗಾರ್ಡನ್’ನ ಈ ಆಡಂ-ಈವ್‌ರನ್ನು ರಕ್ಷಿಸು..

ಶೊಂಪೇನರು

ಇದು ಮಂಗೋಲಾಯ್ಡ್ ಆದಿವಾಸಿ ಕುಲ. ಗ್ರೇಟ್ ನಿಕೋಬಾರ್ ದ್ವೀಪದ ಒಳಭಾಗಗಳಲ್ಲಿ ಜೀವಿಸುತ್ತಾರೆ. ಈಗಲೂ ಅರೆ ಅಲೆಮಾರಿಗಳಾಗಿರುವ, ತುಂಬ ನಾಚಿಕೆ ಸ್ವಭಾವದ ಈ ಜನರ ಜನಸಂಖ್ಯೆ ೨೦೦ರ ಆಸುಪಾಸು.

ನಿಕೋಬಾರಿಗಳು

ತಾರಿಕ್, ಸೊಂಪಾಯ್, ಸೊಮ್ಲುರು, ಸೊಮಿತ, ಸೊಪಿಮ್ಯುನ್, ಸೊಪನ್‌ಜಾನ್ಸ್, ಸೊಪ್ಲಾಮಾಂಗ್, ಸೊಪ್‌ಕಾನೊಲ್ಡ್ ಹೀಗೆ ವಿವಿಧ ಹೆಸರುಗಳಿಂದ ಕರೆದುಕೊಳ್ಳುವ ಒಟ್ಟೂ ೧೨ ನಿಕೋಬಾರ್ ದ್ವೀಪಗಳಲ್ಲಿ ವಾಸಿಸುವ ಮಂಗೋಲಾಯ್ಡ್ ಬುಡಕಟ್ಟುಗಳ ಸಮೂಹವೇ ನಿಕೋಬಾರಿಗಳದ್ದು. ಆಫ್ರಿಕಾದ ಗುಡ್ ಹೋಪ್ ಭೂಶಿರದ ನೌಕಾಮಾರ್ಗ ಕಂಡುಹಿಡಿದ ಮೇಲೆ ಯೂರೋಪಿನ ನೌಕೆಗಳು ಪೌರ್ವಾತ್ಯ ದೇಶಗಳಿಗೆ ವಾಣಿಜ್ಯ, ವ್ಯವಹಾರ ಸಂಬಂಧಗಳಿಗೆ ಬರುವುದು ಹೆಚ್ಚಾಯಿತು. ಆಗೆಲ್ಲ ಅವರು ನಿಕೋಬಾರ್ ದ್ವೀಪಗಳನ್ನು ಭೇಟಿಮಾಡಿದ್ದಾರೆ. ಈ ಕಾರಣದಿಂದ ಅಂಡಮಾನಿನ ದ್ವೀಪವಾಸಿಗಳಿಗಿಂತ ನಿಕೋಬಾರಿಗಳು ಕೊಂಚ ಮುಂದಿದ್ದಾರೆಂದು ಹೇಳಬಹುದು. ೩೦ ಸಾವಿರದಷ್ಟು ಜನಸಂಖ್ಯೆಯಿರುವ ನಿಕೋಬಾರಿಗಳು ಬಹುಪಾಲು ಕ್ರಿಶ್ಚಿಯನ್ನರು. ಅವರದೇ ಸಮುದಾಯದ ಬಿಷಪ್ ಜಾನ್ ರಿಚರ್ಡ್‌ಸನ್ ಶ್ರಮದ ಪ್ರತಿಫಲವಾಗಿ ನಿಕೋಬಾರಿಗಳ ಹಲವು ಸಮುದಾಯಗಳು ಇಂದು ಒಗ್ಗೂಡಿವೆ. ಅವರು ನಾಗರಿಕ ಜಗತ್ತಿನೊಂದಿಗೆ ಪೈಪೋಟಿಗಿಳಿಯಲು ಸಮರ್ಥರಾಗಿದ್ದಾರೆ. ರಿಚರ್ಡ್‌ಸನ್ ನಂತರ ಎಡ್ವಿನ್ ಮೋಸೆಸ್ ಮತ್ತು ಹೆನ್ರಿ ಲಾರೆನ್ಸ್ ಅವರೂ ಸಮುದಾಯದ ಪರವಾಗಿ ಕೆಲಸ ಮಾಡಿದ್ದಾರೆ.

ಬಿಷಪ್ ಜಾನ್ ರಿಚರ್ಡ್‌ಸನ್ ನಿಕೋಬಾರ್ ಆದಿವಾಸಿಗಳ ಪಿತಾಮಹ ಎನ್ನಬಹುದು. ೧೮೮೪ರಲ್ಲಿ ಕಾರ್ ನಿಕೋಬಾರಿನ ಮುಸ್ ಹಳ್ಳಿಯಲ್ಲಿ ಹುಟ್ಟಿದ ಅವರು ಆದಿವಾಸಿ ಸಮುದಾಯಕ್ಕೆ ಸೇರಿದವರು. ಚುರುಕು ಹುಡುಗನನ್ನು ಗುರುತಿಸಿದ ಮಿಷನರಿಗಳು ಪ್ರಾಥಮಿಕ ಶಿಕ್ಷಣ ಕೊಡಿಸಿ ನಂತರ ಧಾರ್ಮಿಕ ಶಿಕ್ಷಣ ಕೊಡಲು ಮರ್ಬಾಗೆ ಕಳಿಸಿದರು. ಅಲ್ಲಿಂದ ಬಂದ ರಿಚರ್ಡ್‌ಸನ್ ಪಾದ್ರಿಯಾಗಿ, ಸಮಾಜಸೇವಾ ಕಾರ್ಯಕರ್ತನಾಗಿ ರೂಪುಗೊಂಡರು.

ಕ್ರಿಶ್ಚಿಯನ್ ಧರ್ಮ ಬೋಧಿಸುತ್ತಾ ಹಳ್ಳಿಹಳ್ಳಿ ತಿರುಗಿದ ಎಳೆಯ ಪಾದ್ರಿ ಹಲವು ಗುಂಪುಗಳಲ್ಲಿ ಹಂಚಿಹೋಗಿದ್ದ ಸಮುದಾಯವನ್ನು ಒಟ್ಟಿಗೆ ತಂದರು. ಮೂಢನಂಬಿಕೆಗಳಲ್ಲಿ ಮುಳುಗಿದವರಿಗೆ ವಿಜ್ಞಾನ ಬೋಧಿಸಿ ಅರ್ಥ ಮಾಡಿಸಿದರು. ನಿಕೋಬಾರಿ ಭಾಷೆಗೆ ರೋಮನ್ ಲಿಪಿ ಅಳವಡಿಸಿದರು. ಬೈಬಲ್ ಅನ್ನು ನಿಕೋಬಾರಿ ಭಾಷೆಗೆ ಭಾಷಾಂತರಿಸಿದರು. ಶಿಕ್ಷಣದ ಮಹತ್ವ ಹೇಳಿದರು. ಶಾಲೆಗಳನ್ನು ತೆರೆದರು. ಅವರು ಅಂಡಮಾನ್ ನಿಕೋಬಾರ್ ದ್ವೀಪಗಳ ಮೊತ್ತಮೊದಲ ನಾಮಕರಣಗೊಂಡ ಸಂಸತ್ ಸದಸ್ಯರು. ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ, ಶ್ರೀರಾಂಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.

ನಿಕೋಬಾರಿಗಳ ಪಾಲಿಗಂತೂ ರಿಚರ್ಡ್‌ಸನ್ ನಿಜವಾದ ಉದ್ಧಾರಕರೇ ಆಗಿದ್ದಾರೆ. 

ಕರೇನರು

ಅಂಡಮಾನಿನ ಮೂಲನಿವಾಸಿಗಳಲ್ಲದಿದ್ದರೂ ಅಲ್ಲಿರುವ ಬುಡಕಟ್ಟು ಸಮುದಾಯವೆಂದು ಗುರುತಿಸಬಹುದಾದ ಸಮುದಾಯಗಳೂ ಕೆಲವಿವೆ. ಅಂಥ ಒಂದು ಕುಲ ಕರೇನರದ್ದು. ಬರ್ಮಾ ಮೂಲದ ಕರೇನರು ಭಾರತಕ್ಕೆ ೧೯೨೫ರ ಸುಮಾರಿಗೆ ಬಂದರು. ಮೂಲತಃ ಮಂಗೋಲಿಯಾದ ಕರೇನರು ಕ್ರಿ.ಪೂ ಕಾಲದಲ್ಲಿ ಟರ್ಕಿ, ಚೀನಾಗಳಿಗೆ ವಲಸೆ ಹೋದರು. ಚೀನಾ ರಾಜನ ತೊಂದರೆ ಸಹಿಸಲಾರದೇ ಟಿಬೆಟ್, ಬರ್ಮಾ, ಕಾಂಬೋಡಿಯಾ, ವಿಯೆಟ್ನಾಂಗಳತ್ತ ವಲಸೆ ಬಂದರು. ಕ್ರಿ.ಪೂ ೧೦೦೦ದ ಹೊತ್ತಿಗೆ ಬರ್ಮಾಗೆ ಬಂದರು. ಬರ್ಮಾದ ಪೂರ್ವ ಕರಾವಳಿ ಮತ್ತು ನದಿಮುಖಜ ಭೂಮಿಗಳಲ್ಲಿ ವಾಸಿಸುವ ಅವರು ಉಳಿದ ಬರ್ಮೀಯರಿಗಿಂತ ಭಿನ್ನವೂ, ವಿಶಿಷ್ಟವೂ ಆಗಿದ್ದಾರೆ. ಅವರು ಅಂಡಮಾನಿಗೆ ವಲಸೆ ಬಂದ ಕತೆ ಹೀಗಿದೆ:

೧೯೨೫. ಅಂಡಮಾನಿನ ಚೀಫ್ ಕಮಿಷನರ್ ಫೆರಾರ್ ಅವರ ಕಸಿನ್ ಮಾರ್ಷಲ್ ಅಂಡಮಾನಿಗೆ ಬಂದರು. ಮಾತುಕತೆಯ ಸಮಯದಲ್ಲಿ ಜಂಗಲಿನಲ್ಲಿ ಕೆಲಸ ಮಾಡಲು ತನಗೆ ಗಟ್ಟಿಮುಟ್ಟಾದ ನಂಬಿಕಸ್ಥ ಜನರು ಬೇಕೆಂದೂ, ಬರುವವರಿಗೆ ಒಂದು ವರ್ಷ ಉಚಿತ ರೇಷನ್ ಹಾಗೂ ಸಾಗುವಳಿ ಮಾಡಲು ಭೂಮಿ ಕೊಡುವುದಾಗಿಯೂ ಫೆರಾರ್ ಹೇಳಿದರು. ಇದನ್ನು ಕೇಳಿದ ಮಾರ್ಷಲ್ ಬರ್ಮಾಕ್ಕೆ ಹೋದನಂತರ ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ವಿಷಯ ಕುರಿತು ಪ್ರಕಟಣೆ ನೀಡಿದರು. ಅದನ್ನು ಓದಿದ ಸ್ಥಳೀಯ ಪಾದ್ರಿ ತಮ್ಮ ಗೆಳೆಯರೊಟ್ಟಿಗೆ ಹೋಗಿ ಅಂಡಮಾನನ್ನು ನೋಡಿಬಂದರು. ೧೯೨೫ ಏಪ್ರಿಲ್‌ನಲ್ಲಿ ೧೨ ಕುಟುಂಬಗಳನ್ನು ತಮ್ಮೊಟ್ಟಿಗೆ ಕರೆದೊಯ್ದರು. ನಂತರ ಹಲವು ಕುಟುಂಬಗಳು ಬಂದವು. ಜಂಗಲ್ ಕೆಲಸ ಮುಗಿದ ಮೇಲೆ ಕೆಲವರು ತಮ್ಮ ದೇಶಕ್ಕೆ ವಾಪಸಾದರೆ ಹಲವರು ಇಲ್ಲೇ ಉಳಿದರು. ಅವರಿಗೆಲ್ಲ ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಪೌರತ್ವ ನೀಡಿತು. ಈಗ ಅಂಡಮಾನಿನಲ್ಲಿ ೨೦೦೦ ಜನಸಂಖ್ಯೆಯಷ್ಟಿರುವ ಕರೇನರು ಉತ್ತರ ಅಂಡಮಾನಿನ ಕರ್ಮಟಾಂಗ್ ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಸಂಕೋಚ ಸ್ವಭಾವದ, ಪ್ರಾಮಾಣಿಕ ಶ್ರಮದ ದುಡಿಮೆಗಾರರಾದ ಅವರು ಕೃಷಿ, ಮೀನುಗಾರಿಕೆ, ಬೇಟೆಗಳಲ್ಲಿ ತೊಡಗಿದ್ದಾರೆ. ಬರ್ಮಾದಿಂದ ಬಂದು ೭೫ ವರ್ಷವಾದರೂ ಶೈಕ್ಷಣಿಕವಾಗಿ, ಸಾಮಾಜಿಕ-ಆರ್ಥಿಕವಾಗಿ ಅವರು ಹಿಂದುಳಿದ ಸಮುದಾಯವೇ ಆಗಿದ್ದಾರೆ. ತಮ್ಮ ಮೂಲ ಆಚರಣೆ, ಸಂಸ್ಕೃತಿ ಉಳಿಸಿಕೊಂಡಿದ್ದಾರೆ.

  ಇಷ್ಟೇ ಅಲ್ಲದೆ ಅಂಡಮಾನಿನಲ್ಲಿ ಜಾರ್ಖಂಡ್ ಕಡೆಯಿಂದ ವಲಸೆ ಹೋದ ಆದಿವಾಸಿಗಳೂ, ಬ್ರಿಟಿಷರು ಅಪರಾಧಿ ಬುಡಕಟ್ಟು ಎಂದು ಹೆಸರಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ ಭಂಟು ಸಮುದಾಯವೂ ಇವೆ.

ಈಗ:

ಇಂದಿನ ಅಂಡಮಾನಿನಲ್ಲಿ ಬೇರೆಬೇರೆ ಸಮುದಾಯಗಳು ಬೇರೆಬೇರೆ ಕಾಲಮಾನದಲ್ಲಿ ಬದುಕುತ್ತಿದ್ದು ಅದು ಭಾರತದ ವಸಾಹತುವಿನಂತೆ ಬೆಳೆಯುತ್ತಿದೆ. ಆದರೆ ಜರವಾ, ಒಂಗೇ, ಸೆಂಟಿನೆಲೀಯರಿಗೆ ಭಾರತೀಯತೆ, ರಾಷ್ಟ್ರೀಯತೆ, ಸ್ವಾತಂತ್ರ್ಯ ಸಂಗ್ರಾಮ, ಇತಿಹಾಸ ಎಂಬ ಪದಗಳು ಅರ್ಥವಾದರೆ ಅವರು ನಕ್ಕುಬಿಡುತ್ತಾರೇನೋ? ಅವರು ಭಾರತೀಯ ವಲಸಿಗರನ್ನು ‘ವಸಾಹತುಶಾಹಿ’ ಎಂದೂ, ವಲಸೆಯನ್ನು ಅತಿಕ್ರಮಣ ಎಂದೂ, ವಲಸೆಯನ್ನು ಪ್ರೋತ್ಸಾಹಿಸುವ ಸರ್ಕಾರದ ನೀತಿಯನ್ನು ಅಕ್ರಮ-ಸಕ್ರಮ ಎಂದೂ ಕರೆಯಬಹುದೇನೋ? ಒಂದೇ ಪದಪುಂಜ ಒಂದೇ ಪ್ರದೇಶದಲ್ಲಿ ವಾಸಿಸುವ ಬೇರೆಬೇರೆ ಜನರಲ್ಲಿ ಹೇಗೆ ವಿರುದ್ಧ ಅರ್ಥಗಳನ್ನು ಸ್ಫುರಿಸಬಹುದಲ್ಲವೆ!?

ಮಹುವಾ ಮರ ಹೂಬಿಟ್ಟಾಗ ಅಥವಾ ಜೇನು ದೊರೆತಾಗಲಷ್ಟೇ ಮದ್ಯ ತಯಾರಿಸಿ ಕುಡಿಯುತ್ತಿದ್ದವರಿಗೆ ಕ್ರೇಟುಗಟ್ಟಲೆ ಮದ್ಯ ಕಣ್ಣೆದುರು ಕುಣಿಯತೊಡಗಿದರೆ? ಬೇಟೆಗಾರ ಕುಲಗಳಿಗೆ ಅಕ್ಕಿ, ಗೋಧಿ, ಸಕ್ಕರೆ ಪರಿಚಯಿಸಿ, ರೇಷನ್ನಿನಲ್ಲಿ ಪೂರೈಸಿ ಆಹಾರ ಭದ್ರತೆ ದೊರಕಿದರೆ? ಮೈಕೈಗೆ ಬಳಿದ ಜೇಡಿಮಣ್ಣೇ ಉಡುಪಾದ ಅರೆನಗ್ನ ಅರಣ್ಯವಾಸಿಗಳಿಗೆ ಅಂದಚಂದದ ಉಡುಪು, ಅದರಿಂದ ಉತ್ಪ್ರೇಕ್ಷೆಗೊಳ್ಳುವ ದೇಹ ಸೌಂದರ್ಯ ನೋಡಿಕೊಳ್ಳಲೊಂದು ಕನ್ನಡಿ ಸಿಕ್ಕರೆ? ತನ್ನ ನಿಯಂತ್ರಣಕ್ಕೆ ಸಿಗದ ಕಾಯಿಲೆ ಕಸಾಲೆಗಳಿಗೆ ಜೀವಗಳ ಬಲಿಕೊಡುತ್ತಿದ್ದ, ಹಲ್ಲುಕಚ್ಚಿ ನೋವು ಸಹಿಸುತ್ತಿದ್ದ ಜನರಿಗೆ ತಕ್ಷಣದ ಪರಿಹಾರವೊಂದು ಮಾತ್ರೆ ಔಷಧಿಯ ರೂಪದಲ್ಲಿ ಗೋಚರಿಸಿದರೆ? ಹಗಲು ಹೊತ್ತಿನ ವಿರಾಮ ಕಳೆಯಲು ಹಾಡು, ನರ್ತನ, ವಾದನದಲ್ಲಿ ತೊಡಗುತ್ತಿದ್ದ ಸಂಗೀತಪ್ರಿಯ ಬುಡಕಟ್ಟುಗಳಿಗೆ ರಾತ್ರಿಹಗಲೆನ್ನದೆ ಕೂಗುವ ಟಿವಿ ಒಂದು ಬಟನಿನಷ್ಟೇ ದೂರವೆಂದಾದರೆ?

ಆಹಾರ, ಆರೋಗ್ಯ, ಪ್ರಸಾಧನ, ಮನರಂಜನೆ ಎಲ್ಲವೂ ಕೈಗಾರಿಕೀಕರಣಗೊಂಡ ಜಗತ್ತಿನ ಆಮಿಷಗಳಾಗಿ ಬುಡಕಟ್ಟುಗಳನ್ನು ಅಯಸ್ಕಾಂತದಂತೆ ಸೆಳೆಯುತ್ತವೆ. ಬದಲಾದ ಆಹಾರ ಸಂಸ್ಕೃತಿ ಮಿಕ್ಕ ಬದಲಾವಣೆಗೆ ನಾಂದಿಯಾಗುತ್ತದೆ. ನಾಲಿಗೆ ಮತ್ತು ಹೊಟ್ಟೆಯ ಒತ್ತಡಕ್ಕೆ ಕೈಕಾಲು ತಲೆ ಹೇಗೆ ಬೇಕಾದರೂ ಕುಣಿಯುತ್ತವೆ. ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಅಂಡಮಾನ್ ದ್ವೀಪದ ಆದಿಮ ಬುಡಕಟ್ಟುಗಳು ಉದಾಹರಣೆಯಾಗಿವೆ. ಒಂಗೇ ಮತ್ತು ಗ್ರೇಟ್ ಅಂಡಮಾನಿಗಳು ನಾಗರಿಕಗೊಳ್ಳಲು ಮೊದಲು  ಅಪಾರ ಪ್ರತಿರೋಧ ತೋರಿದರೂ ಈಗ ನಾಗರಿಕರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಹಾಗೆಯೇ ಇದೆಲ್ಲವನ್ನು ನಿರಾಕರಿಸಿ ಒಂಟಿ ದ್ವೀಪದಲ್ಲಿ ಯಾರ ಸಂಪರ್ಕವಿಲ್ಲದೆ ಬದುಕುತ್ತಿರುವ ಸೆಂಟಿನೆಲೀಯರೂ ಇದ್ದಾರೆ. ಇವೆಲ್ಲದರಿಂದ ಅವರು ಪಡೆದಿದ್ದೆಷ್ಟು, ತೆತ್ತಿದ್ದೆಷ್ಟು? ಕಾಲವೇ ಹೇಳಬೇಕು.

ಬುಡಕಟ್ಟು ಜನರ ಕಲ್ಯಾಣಕ್ಕಾಗಿಯೇ ಅಂಡಮಾನಿನಲ್ಲಿ ಒಂದು ಇಲಾಖೆಯಿದೆ. ಸೋನಿಯಾ ಗಾಂಧಿ ಆದಿವಾಸಿಗಳ ಬಗೆಗೆ ಖುದ್ದು ಆಸಕ್ತರಾಗಿದ್ದಾರೆ. ಸೆಂಟಿನೆಲೀಯರನ್ನು ಹೊರತುಪಡಿಸಿ ಉಳಿದವರಿಗೆ ವಯಸ್ಕರ ಶಿಕ್ಷಣ ಕೇಂದ್ರಗಳು ತೆರೆಯಲ್ಪಟ್ಟಿವೆ. ಜರವಾಗಳಿಗೆ ಕದಂತಲಾದಲ್ಲಿ, ಒಂಗೇಗಳಿಗೆ ದುಗಾಂಗ್ ಕ್ರೀಕ್‌ನಲ್ಲಿ, ಶೊಂಪೆನ್‌ಗಳಿಗೆ ಗ್ರೇಟ್ ನಿಕೋಬಾರಿನಲ್ಲಿ ವಯಸ್ಕರ ಕಲಿಕಾ ಕೇಂದ್ರಗಳಿವೆ. ನಿಕೋಬಾರಿಗಳು ಶಿಕ್ಷಣದ ಮಹತ್ವ ಅರಿತು ಶಾಲಾಕಾಲೇಜಿಗೆ ಹೋಗತೊಡಗಿದ್ದಾರೆ ಹಾಗೂ ಅವರನ್ನು ವಿದ್ಯಾವಂತರನ್ನಾಗಿಸುವಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪಾತ್ರ ದೊಡ್ಡದಿದೆ. ಅವರಿಗಾಗಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.  

ನಾಗರಿಕ ಸಮಾಜದಲ್ಲಿ ವಿಲೀನಗೊಳಿಸಿದರೂ ನಾವು ಅವರಿಗೆ ಯಾವ ಸ್ಥಾನ ಕೊಟ್ಟೇವು? ಕಡಿಮೆ ಸಂಖ್ಯೆಯ ಜನರಿಗೊಂದು ಹೆಸರಿಟ್ಟು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಮಾಜ; ಕಲ್ಲುಮಣ್ಣನ್ನೂ ಕರಗಿಸಿ ನೆಕ್ಕುವ ಆಧುನಿಕತೆ - ಈ ಪುಟ್ಟ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಬಹುದೆ?

ಇನ್ನೂ ಒಂದು ಸೂಕ್ಷ್ಮವಿದೆ: ಬುಡಕಟ್ಟು ಪ್ರದೇಶಗಳು ಪ್ರವಾಸಿಗರಿಗೆ ಮ್ಯೂಸಿಯಂಗಳಾಗುವ ಅಪಾಯವಿದೆ. ಡಿಆರ್ ಹೇಳುವಂತೆ, ಆಧುನಿಕ ಪ್ರವಾಸಿಗೆ ಯಾವುದೂ ಪವಿತ್ರವಲ್ಲ. ಆತ ಶಾಶ್ವತ ಉದ್ರೇಕದ ಹುಡುಕಾಟದಲ್ಲಿ ಇರುತ್ತಾನೆ. ಎಲ್ಲವೂ ಸಲೀಸಾಗಿ ಬೇಗ ಸಿಗಬೇಕು. ಸಂಸ್ಕೃತಿಯೊಂದು ನೂರಾರು ವರ್ಷ ನಿರಂತರ ಏಕಾಗ್ರತೆಯಲ್ಲಿ ರೂಢಿಸಿಕೊಂಡಿದ್ದು ಒಂದು ಸಂಜೆಯಲ್ಲಿ ಸಿಗಬೇಕು. ಈ ಮನಸ್ಥಿತಿ ಬುಡಕಟ್ಟುಗಳನ್ನು ಪ್ರದರ್ಶನದ ಆರ್ಟಿಫ್ಯಾಕ್ಟ್‌ಗಳಂತೆ ನೋಡುವ, ಕಾನೂನುಬಾಹಿರವಾಗಿ ಅವರ ಸಂಪರ್ಕ ಬೆಳೆಸುವ ಪ್ರಯತ್ನಗಳಿಗೆ ಕಾರಣವಾಗುತ್ತದೆ. ಪ್ರವಾಸಿಗಳ ಹಸಿವು, ಅದನ್ನು ತಣಿಸುವವರ ಮಾರುಕಟ್ಟೆ ಬುದ್ಧಿ, ನಾಗರಿಕ ಜಗತ್ತಿನ ದುಶ್ಚಟಗಳು, ಆಮಿಷಗಳೆಲ್ಲ ಆಧುನಿಕತೆ ಒಡ್ಡುವ ಕಲ್ಚರಲ್ ಶಾಕ್ ಆಗಿ ಈ ಸಮುದಾಯಗಳನ್ನು ಬಾಧಿಸಬಹುದಾಗಿದೆ. 

ಮಗಳು ಹೇಳಿದಳು: ‘ನಾವು ನಮ್ಮ ಮಕ್ಕಳೊಂದಿಗೆ ಅಂಡಮಾನಿಗೆ ಬರುವಾಗ ಬಹುಶಃ ಪೋರ್ಟ್‌ಬ್ಲೇರ್ ಡಿಸಿ ಒಬ್ಬ ಜರವಾ ಆಗಿರಬಹುದು’ ಎಂದು. ಆದರೆ ಇಲ್ಲ. ಒಬ್ಬ ಜರವಾ ಎಂಪಿ, ಜರವಾ ಮಂತ್ರಿ ಇನ್ನು ಇಪ್ಪತ್ತೈದು ವರ್ಷದಲ್ಲಿ ಹುಟ್ಟಿಬರಬಹುದು. ರಾಜಕಾರಣದ ಕಾರ್ಖಾನೆ ಬಹು ವೇಗವಾಗಿ ಉತ್ಪಾದಿಸುತ್ತದೆ. ಆದರೆ ಶಿಕ್ಷಣವೆಂಬ ಕಾರ್ಖಾನೆಯ ಉತ್ಪಾದನಾ ಗತಿ ನಿಧಾನ. ಒಬ್ಬ ಜರವಾ ರಾಜಕಾರಣಿ ಬಂದಷ್ಟು ಬೇಗ ಒಬ್ಬ ಜರವಾ ವೈದ್ಯ, ಇಂಜಿನಿಯರ್ ಅಥವಾ ಟೀಚರ್ ಬರಲಾರ. ನಾವು ಕಲಿಯುವ ವಿಜ್ಞಾನ, ಗಣಿತ, ಇತಿಹಾಸ, ವ್ಯಾಕರಣ, ಭೂಗೋಳ ಇವೆಲ್ಲ ಅವರಿಗೆ ತಲೆಕೆಟ್ಟ ನಾಗರಿಕ ಮನುಷ್ಯರ ರಗಳೆ ಎನಿಸಬಹುದು. ಓದು, ಬರಹ, ಲಿಪಿಯೇ ಗೊತ್ತಿರದ ಸಮುದಾಯಕ್ಕೆ ಆಧುನಿಕ ಶಿಕ್ಷಣ ಪದ್ಧತಿಯೇ ಹಾಸ್ಯಾಸ್ಪದವೆನಿಸಬಹುದು. ಕಾನೂನು, ಕೋರ್ಟು, ಅರ್ಥಶಾಸ್ತ್ರ, ಸೈನ್ಯ, ರಾಜ್ಯಶಾಸ್ತ್ರ ಅರ್ಥವಾಗದೇ ಉಳಿಯಬಹುದು. ಔಪಚಾರಿಕ ಶಿಕ್ಷಣದ ಅಗತ್ಯ, ಪ್ರಾಮುಖ್ಯತೆ ತಿಳಿಯಲು ಆ ಸಮುದಾಯಗಳು ಕ್ರಮಿಸಬೇಕಾದ ದೂರ ಇನ್ನೂ ಬಹಳವಿದೆ.

ಹೀಗಿರುವಾಗ ಸಹಜತೆ, ಮುಗ್ಧತೆ ಕಳೆದುಕೊಳ್ಳದೇ ನಾಗರಿಕ ಸಮಾಜದೊಂದಿಗೆ ತಮಗೆ ವಿಲೀನ ಬೇಕೋ ಅಥವಾ ಸ್ವಾಯತ್ತತೆ ಬೇಕೋ ಎಂದು ತಾವೇ ನಿರ್ಧರಿಸುವಷ್ಟು ಆ ಸಮುದಾಯ ಸುಸಜ್ಜಿತವಾಗಲಿ ಎಂದಷ್ಟೇ ಹಾರೈಸಬಹುದಾಗಿದೆ..

Thursday, November 28, 2013

ಪ್ಲ್ಯಾಸ್ಟಿಕ್ ಹೂ ಮತ್ತು ಗುಲಾಬಿ
ವಿದ್ಯಾಶಂಕರ್ ಹರಪನಹಳ್ಳಿ 


'ಹೂವು ಬೇಕೆ ಎಂದು
ಮುಂಬಾಗಿಲಿಗೆ ಬಂದು
ನಗುನಗುತಾ ಕೇಳಿದಳು
ಹೂವಿನವಳು....'

ಕೆ.ಎಸ್ಸ್.ನ.ರ ಭಾವ ಪದ್ಯದಲಿ
ಮೈಮರೆತಿದ್ದೆ... ಅಯ್ಯೋ
ನೀನ್ಯಾಕೆ ಕಾಡುವೆ ಹುಡುಗಿ...
ಪ್ಲ್ಯಾಸ್ಟಿಕ್ ಹೂವಿಗೆ ಮಾರುಹೋದವರು ನಾವು
ಒಣಗಿದ, ಅಳದ, ನರಳದ ಹೂಗಳು
ವರ್ಷಗಟ್ಟಲೆ ಬಾಳಿಕೆ ಬರುವವು...

ಹಸಿವೇ? ಓಹೋ!
ನಮಗೂ ಹಸಿವಿನ ಪರಿಚಯವುಂಟು
ಪರಿಚಯವೇನು ಅದು ನಮ್ಮ ಸಂಗಾತಿ
ನಿನ್ನ ಹಸಿವಿನಂತಲ್ಲವದು
ಉಂಡರೆ ಬಗೆಹರಿಯುವದಲ್ಲ
ಅದು ಅಗಾಧ, ಅನಂತಾನಂತ
ಈ ಜನ್ಮಕೆ ತೀರುವುದಲ್ಲ...

ಅಣ್ಣ, ಅಪ್ಪ, ಅಂಕಲ್ ಅನಬೇಡ
ಸ್ವಲ್ಪ ಮಾರ್ಕೆಟಿಂಗ್ ಕಲಿಯೇ ಹುಡುಗಿ
ನೀಟಾಗಿ ಡ್ರೆಸ್ ಹಾಕು
ಸುಕೊಮಲವಾಗಿ ನಸುನಗು
ಹೂವಿಲ್ಲದಿದ್ದರೆ ನಮ್ಮ ಬದುಕು ವ್ಯರ್ಥವನ್ನು
ಸಾಧ್ಯವಾದರೆ ಪೇಸ್ಬೂಕ್ಕಿಗೆ ಬಾ...
ಹೋಗೋಗು ಅದೆಲ್ಲಾ ಕಲಿತು ಬಾ
ನಾನೇಷ್ಟು ಕಷ್ಟಪಟ್ಟೆ ಗೊತ್ತಾ?

ಹೋಗೋಗು..
ಸರಿಯಾದ ಕಣ್ಣಿಗೆ ನೀನು ಬಿದ್ದರೆ ಆಗಬಹುದು ನೀನೂ ಪ್ರೆಟ್ಟಿ ವೂಮನ್!?
ತುಂಡುಬಟ್ಟೆ, ಬಡಕಲು ಹೊಟ್ಟೆ
ಯಾರ್ಯಾರ ಅದೃಷ್ಟ ಬಲ್ಲವರಾರು?
ಓದಿದ್ದೀಯಾ ಷಾ ನಾಟಕ?
ರಿಚ್ಚರ್ಡ್ ಗೇರ್ ಸಿನಿಮಾ?

ಅವನ್ಯಾರೋ ಅವಿವೇಕಿ!
ಬಾಲಕಾರ್ಮಿಕ ಕಾನೂನು ಅರಿವಿಲ್ಲದವನು
ಸುಮ್ಮನೇ ಹತ್ತು ರೂ ಕೈಗಿಟ್ಟು ನಡೆದ
ಕರುಣೆಯಂತೆ ಸುಟ್ಟು ಸುಡುಗಾಡು...

ಒಮ್ಮೆ ಬುದ್ಧ ಏನ್ಹೇಳಿದನೆಂದರೆ...
....................................
ಹಲ್ಲೋ ಮೊನ್ನೆ ಆಮೇರಿಕಾದಲ್ಲಿ

ವೌಢ್ಯ ಮತ್ತು ಅಜ್ಞಾನವೇ ವರ ಎನಿಸಿಕೊಳ್ಳುವ ಪರಿ


ವೌಢ್ಯ ಮತ್ತು ಅಜ್ಞಾನವೇ ವರ ಎನಿಸಿಕೊಳ್ಳುವ ಪರಿ

 

-ಶಶಿ ಪುತ್ತೂರು

 ಸೌಜನ್ಯ : ವಾರ್ತಾಭಾರತಿ

ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಬೆಳಗಾವಿಯ ಈ ಅಧಿವೇಶನ ವೌಢ್ಯ ಪ್ರತಿಬಂಧಕ ಮಸೂದೆ ವಿಚಾರದಲ್ಲಿ ಚಾರಿತ್ರಿಕ ವೆನಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ರೈತ ವಿಠ್ಠಲ ಅರಭಾವಿಯವರ ದುರಂತದ ಕಾವೇ ಅನಿರೀಕ್ಷಿತವಾಗಿ ಅಧಿವೇಶನವನ್ನು ಆವರಿಸು ತ್ತಿರುವುದು ನಿರಾಸೆಯನ್ನು ಹುಟ್ಟಿಸಿದೆ. ನಿಜ ವಾಗಲೂ ಇದೊಂದು ಗಂಭೀರ ಸಮಸ್ಯೆಯೇ. ಈ ವಿಚಾರದಲ್ಲಿ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಖುಷಿ ಯಲ್ಲಿ ಯಡ್ಡಿಯಾದಿಯಾಗಿ ಇತರರು ರೈತಪರ ಎಂಬ ಸೋಗಿನ ಮುಖವಾಡ ಹಾಕಿಕೊಂಡು ಸಿಎಂ ವಿರುದ್ಧ ಮುಗಿಬಿದ್ದಿದ್ದಾರೆ. 

ಇವರ ನಾಟಕ ಗಳೇನೇ ಇರಲಿ ಕೊನೆ ಪಕ್ಷ ರೈತರ ವಿಚಾರ ದಲ್ಲಾದರೂ ಚಾರಿತ್ರಿಕ ನಿರ್ಧಾರ ತೆಗೆದು ಕೊಳ್ಳುವಂತಾಗಲು ಆಗಿಹೋದ ಈ ದುರಂತ ಒಂದು ಕಾರಣವಾದರೂ ಆಗಲಿ. ಅದೇ ರೀತಿ ಮೌಢ್ಯ ಪ್ರತಿಬಂಧಕ ಮಸೂದೆಯ ವಿಚಾರ ಇದರಿಂದ ಮಂಕಾಗದಿರಲಿ.

ಮನುಷ್ಯನಿಗೆ ಫ್ಯಾಂಟಸಿ ಜಗತ್ತು ಮತ್ತು ಅತಿಮಾನುಷ ಶಕ್ತಿ ಇಂಥವುಗಳ ಮೇಲೆ ಅದೇನೋ ಒಲವು. ವಿಶ್ವೇಶ್ವರಯ್ಯನವರ ಇನ್ನಿತರ ಸಾಧನೆಗಳಿಗಿಂತ ಅವರೇನೋ ಲಂಡನ್‌ನಲ್ಲಿ ಥೇಮ್ಸ್ ನದಿ ಸೇತುವೆ ಬಿರುಕು ಬಿಟ್ಟಿದ್ದನ್ನು ದಾಟುವ ಮೊದಲೇ ಊಹಿಸಿದ ಕಥೆಯಲ್ಲೇ ನಮಗೆ ಆಸಕ್ತಿ ಹೆಚ್ಚು.

ವಿಜಯನಗರದ ಆದಿ ಪುರುಷರಾದ ಹಕ್ಕ ಬುಕ್ಕ ವಿದ್ಯಾರಣ್ಯರೆದುರು ಅಟ್ಟಿಸಿಕೊಂಡು ಬರುತ್ತಿದ್ದ ನಾಯಿಗಳ ವಿರುದ್ಧವೇ ಒಂದು ಜಾಗದಲ್ಲಿ ಮೊಲವೊಂದು ತಿರುಗಿ ನಿಂತ ಕಥೆ, ಕುಂತಿ ಕೈಯಿಂದ ಅವಳ ಐದು ಜನ ಮಕ್ಕಳಲ್ಲಿ ಬೇರೆ ಯಾರೂ ಬೀಳದೇ ಕೇವಲ ಭೀಮನಷ್ಟೆ ಮಗುವಿದ್ದಾಗ ಬಂಡೆಮೇಲೆ ಬಿದ್ದು ಬಂಡೆ ಚೂರಾದದ್ದು ಇಂತಹ ಅತಿಮಾನುಷ ಶಕ್ತಿಯ ಕುರಿತಾದ ಕಥಾ ಸಂಗತಿಗಳ ಕುರಿತಾದ ಆಕರ್ಷಣೆ ಮಾನವನಲ್ಲಿ ಇದ್ದದ್ದೇ.

ನಮ್ಮನ್ನು ಕಾಯುವ ಸರ್ವಶಕ್ತ ಮಹಾಮಹಿಮೆಯ ದೇವರಿದ್ದನೆನ್ನುವ ನಂಬಿಕೆಯೂ ಕೂಡ ಇದೇ ಸಾಲಿಗೆ ಸೇರುವಂಥಾದ್ದು. ಅದು ಮಿತಿಯೊಳಗಿ ರುವ ಮನೋ ಸಹಜ ನಿರುಪದ್ರವಿ ನಂಬಿಕೆ ಯಾದರೆ ಅದರಲ್ಲಿ ತಪ್ಪಾಗಲೀ ತೊಂದರೆ ಯಾಗಲೀ ಖಂಡಿತಾ ಇಲ್ಲ. ಆದರೆ ಮಾನವನ ಈ ದೌರ್ಬಲ್ಯವನ್ನು ದುರುಪಯೋಗಪಡಿಸಿ ಕೊಳ್ಳುವ ಸಲುವಾಗಿ ಇಂತಹ ನಂಬಿಕೆಗಳು ಪ್ರತ್ಯಕ್ಷ ಯಾ ಪರೋಕ್ಷ ರೂಪದಲ್ಲಿ ‘‘ಹೇರಿಕೆ’’ಯಾಗ ತೊಡಗಿದಾಗ ಸಮಸ್ಯೆಗಳು ಒಂದೊಂದಾಗೇ ಕಾಣಿಸಿಕೊಳ್ಳುತ್ತವೆ.
ಮೂಲತಃ ವೈಯಕ್ತಿಕವಾಗಿ ರಬೇಕಿದ್ದ ಈ ನಂಬಿಕೆಗಳು ಸಾರ್ವತ್ರಿಕಗೊಂಡು ಭೂತಾಕಾರವಾಗಿ ಬೆಳೆದು ನಿಂತಾಗ ಇಂತಹ ನಂಬಿಕೆ ಅಥವಾ ಅದರ ಉಪ ಉತ್ಪನ್ನ ಗಳು ಅದನ್ನ ಪಾಲಿಸುವವನಿಗಲ್ಲದೇ ಅವನ ಹತ್ತಿರ ದಲ್ಲಿರುವವರಿಗೂ ಸಮಸ್ಯೆಯಾಗಿ ಕಾಡುವು ದುಂಟು. 25-30 ವರ್ಷಗಳ ಹಿಂದೆ ಮಹಿಳಾ ಸಾಧಕಿ ಯೊಬ್ಬರ ಜೀವನವನ್ನಾಧರಿಸಿ ಮಯೂರಿ, ನಾಚೆಮಯೂರಿ ಎಂಬ ಚಲನಚಿತ್ರಗಳು ಹಲವು ಭಾಷೆಗಳಲ್ಲಿ ಬಂದು ಹೆಸರು ಮಾಡಿತ್ತಲ್ಲದೇ ಅದು ಎಷ್ಟೋ ದುರಂತಕ್ಕೀಡಾದವರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಜೀವನೋತ್ಸಾಹದ ಸ್ಫೂರ್ತಿಯನ್ನು ನೀಡಿತ್ತು.

ಅಪಘಾತವೊಂದರಲ್ಲಿ ಕಾಲನ್ನು ಕಳಕೊಂಡಿದ್ದರೂ ತನ್ನ ಆ ದುರ್ವಿಧಿ ಯನ್ನು ಮೆಟ್ಟಿನಿಂತು ಕಾಲೇ ಪ್ರಾಮುಖ್ಯವೆನಿಸಿದ ನೃತ್ಯ ಕ್ಷೇತ್ರದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಂತಹ ಛಲಗಾತಿಯ ಕಥೆಯದು. ಆದರದು ಹಳೆಯ ಕಥೆ. ಈ ಹಿಂದೆ ತನ್ನ ಬದುಕಿನಲ್ಲಿ ಆಕೆ ಮಾಡಿದ್ದು ಸಾಧನೆಯೇ. ಆದರೆ ತನ್ನತನವನ್ನೇ ಮಾರಿಕೊಂಡಿರುವ ಆಕೆ ಛಲಕ್ಕೆ ಮಾದರಿಯಾಗಿ ಈಗ ಉಳಿದಿಲ್ಲ ಎಂಬುದೇ ಬೇಸರದ ಸಂಗತಿ.

ಸ್ಫೂರ್ತಿಯೆನಿಸಬೇಕಿದ್ದ ಆಕೆ ಪ್ರತಿದಿನ ಜನರ ಸಹಜ ಜೀವನೋತ್ಸಾಹಕ್ಕೆ ಪೆಟ್ಟು ಕೊಟ್ಟು ಕನ್ನಡಿಗಂಟಿನ ಭ್ರಮಾಜಗತ್ತಿನ ಚಟಕ್ಕೆ ಬೀಳಿಸುವಂತಹ ಧನಲಕ್ಷ್ಮಿ ಯಂತ್ರದಂತಹ ಹಿಂದಿ ಛಾನೆಲ್‌ಗಳ ಢೋಂಗಿ (ಈ ಜಾಹೀರಾತು ಆರಂಭವಾಗುವ ಮುನ್ನ ಅದರ ವಿಶ್ವಾಸಾರ್ಹತೆಗೆ ನಾವು ಜವಾಬ್ದಾರರಲ್ಲ ಎಂಬ ಛಾನೆಲ್ ನವರ ಸಣ್ಣ ಅಕ್ಷರದ ಸ್ಪಷ್ಟೀಕರಣ ವಿರುತ್ತದೆ) ಜಾಹೀರಾತಿನ ಪ್ರಚಾರಕಿಯಾಗಿ ಇದೀಗ ಕುಪ್ರಸಿದ್ಧ. ಎಷ್ಟೊ ಕುಟುಂಬ ಈಕೆಯ ಮಾತಿನಿಂದ ಪ್ರೇರಿತರಾಗಿ ಹಣ ಹಾಗೂ ನೆಮ್ಮದಿ ಯನ್ನೂ ಕಳಕೊಂಡದ್ದಿದೆ. ಎಲ್ಲಿಯ ಅಂದಿನ ಜೀವನೋತ್ಸಾಹಿ ನಾಚೆ ಮಯೂರಿ? ಎಲ್ಲಿಯ ಈಗಿನ ನಾಚಿಕೆ ಬಿಟ್ಟ ವಯ್ಯಾರಿ?
ದಾರಿಬದಿಯ ಪುಸ್ತಕ ಮಾರಾಟಗಾರರಿರ ಬಹುದು, ಪುಸ್ತಕ ಮಳಿಗೆಯಿರಬಹುದು ಅಲ್ಲಿ ಸುಮ್ಮನೆ ಕಣ್ಣು ಹಾಯಿಸಿ ನೋಡಿ ಅಲ್ಲಿ ಸಾಕಷ್ಟು ಅಧ್ಯಾತ್ಮ, ಜ್ಯೋತಿಷ್ಯ, ದೇವಿ ಮಹಾತ್ಮೆ, ವಾಸ್ತು ಇಂತಹ ಪುಸ್ತಕಗಳು ರಾಶಿ ರಾಶಿ ಇರುತ್ತವೆ. ಅಂದರೆ ಅದು ಇವತ್ತಿಗೂ ಒಳ್ಳೆ ಮಾರುಕಟ್ಟೆ ಸರಕಾಗಿಯೇ ಇದೆಯೆಂಬುದು ಸತ್ಯ. ಅಂದರೆ ಜನರಲ್ಲಿ ಭಕ್ತಿ ಭಾವ ಜಾಸ್ತಿಯಾಗಿದೆ ಎಂದು ಖಂಡಿತಾ ಇದರರ್ಥವಲ್ಲ. 

ವಾಸ್ತವವಾಗಿ ಜನರಿಗೆ ಈ ವಿಚಾರದಲ್ಲಿ ಭಕ್ತಿಗಿಂತ ಭಯವೇ ಹೆಚ್ಚು ಕಾಡುವ ಸಂಗತಿಯಾಗಿದೆ. ಮಾನವನ ಇಂತಹ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮಂದಿಗಂತೂ ಯಾವ ಧರ್ಮದಲ್ಲೂ ಬರವಿಲ್ಲ. ಪುಣ್ಯ-ಮೋಕ್ಷಗಳ ಭ್ರಮೆ, ಕರ್ಮಫಲದ ಭೂತ ತೋರಿಸಿ ಜನರನ್ನು ವಂಚಿಸಿದ ಇತಿಹಾಸ ಬಹಳ ಪುರಾತನವಾದದ್ದು. ಅಧ್ಯಾತ್ಮ ಡಾಂಭಿಕ ಧಾರ್ಮಿಕತೆ ಎಂಬುದು ಒಂದು ಈಸಿ ಹಾಗೂ ಸೇಫೆಸ್ಟ್ ಬ್ಯುಸಿನೆಸ್ ಆಗಿಬಿಟ್ಟಿದೆ. ಚಾಣಾಕ್ಷತನದ ಮಾತು ಹಾಗೂ ತಂತ್ರಗಾರಿಕೆಯೇ ಇದರ ಮೂಲ ಬಂಡವಾಳ. 

ಸಾಕ್ಷಿ ತಿರುಗಿ ಬಿದ್ದು ಈಗ ಖುಲಾಸೆಯಾದ ಕಂಚಿ, ನಿತ್ಯಾನಂದ, ಆಸಾರಾಂ ಇಂಥವರನ್ನೆಲ್ಲ ನೋಡಿದಾಗ ಇವರು ಹೇಳುವು ದಕ್ಕೂ ಮಾಡುವುದಕ್ಕೂ ಸಂಬಂಧವೇ ಇಲ್ಲ ಎನ್ನುವುದು ಎಂಥವರಿಗೂ ತಿಳಿದದ್ದೇ. ಆದರೂ ಒಮ್ಮೆ ಈ ಮೌಢ್ಯದ ಬಲೆಗೆ ಬಿದ್ದ ಮೇಲೆ ಎಂತಹ ಜ್ಞಾನೋದಯವಾದರೂ ಸುಲಭದಲ್ಲಿ ಕಳಚಿ ಕೊಳ್ಳಲಾಗದು ಎಂಬುದು ಅಷ್ಟೇ ಸತ್ಯ. ಹಾಗಾಗಿ ಈ ಮೌಢ್ಯದ ಪ್ರತಿಪಾದಕರು ಎಲ್ಲ ಸಂದರ್ಭದಲ್ಲೂ ನಮ್ಮ ಸುತ್ತ ಮುತ್ತ ನಿರ್ಭಿಡೆ ಯಿಂದ ಇದ್ದೇ ಇರುತ್ತಾರೆ.

ನವಗ್ರಹಗಳ ಕಲ್ಪನೆ ತಪ್ಪು (ಸೂರ್ಯ ಗ್ರಹವಲ್ಲ) ಗ್ರಹಣ ಎಂಬುದು ಪ್ರಾಕೃತಿಕ ವಿದ್ಯಮಾನವೇ ಹೊರತು ಭಯಪಡು ವಂಥಾದ್ದೇನಿಲ್ಲ ಎಂದು ತಿಳಿದಿದ್ದರೂ ಇಂದಿಗೂ ಈ ಕುರಿತಾದ ಹಳೆಯ ಆಚರಣೆಗಳನ್ನು ಆಚರಿಸಲಾಗುತ್ತಿದೆಯಲ್ಲವೇ? ಪ್ರತಿದಿನ ಟಿವಿಗಳಲ್ಲಿ ಮಹಾಮಹಾ ಜೋತಿಷಿ ಗಳು ಬೊಂಬಡಾ ಹೊಡಕೊಳ್ಳುತ್ತಲೇ ಇದ್ದಾರೆ. ಆವತ್ತು ಪ್ರಳಯ ಆಗೇ ಆಗುತ್ತದೆ ಎಂದು ಸಾರಿದವರು ಇಂದಿಗೂ ಇದ್ದಾರೆ. 

ಇಂತಹ ದಿವ್ಯ ಜ್ಞಾನಿಗಳಿಗೆ ಕೇದಾರನಾಥದಲ್ಲಿ ಅನಾಹುತ ನಡೆದು ಲಕ್ಷಾಂತರ ಜನರು (ಅದರಲ್ಲಿ ಎಲ್ಲರೂ ಆಸ್ತಿಕರೇ) ಸಾಯುವ ಸಂಗತಿ ಹೊಳೆಯಲೇ ಇಲ್ಲ ಎನ್ನುವುದು ಸೋಜಿಗ. ಬದಲಿಗೆ ವಿಜ್ಞಾನ ಒರಿಸ್ಸಾದ ಚಂಡಮಾರುತವನ್ನು ಗ್ರಹಿಸಿ ಮುನ್ನೆಚರಿಕೆ ನೀಡಿದ ಫಲವಾಗಿ ಲಕ್ಷಾಂತರ ಜನರ ಪ್ರಾಣಹಾನಿ ತಪ್ಪಿದಂತಾಗಿತ್ತು. ಮೊನ್ನೆ ಮೊನ್ನೆ ಟಿವಿಯಲ್ಲಿ ಒಂದು ಸುದ್ದಿ ಬಂದಿತ್ತು. ಮೂಲ ನಕ್ಷತ್ರದ ಶನಿ ಎಂಬ ನಿಂದನೆ ಕೇಳೀ ಕೇಳೀ ಸಾಕಾದ ಮಗ ಪತ್ರ ಬರೆದಿಟ್ಟು ಮನೆ ಬಿಟ್ಟ ಕಥೆ ಅದು. 

ಮಗಳಾಗಿದ್ದರೆ ಓಡಿಹೋಗಲು ಧೈರ್ಯ ಸಾಲದೇ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಳು. ಇಂತಹ ಮನೆಹಾಳ ಮೌಢ್ಯಗಳಿಗೆ ಕಡಿವಾಣ ಬೀಳುವುದು ಬೇಡವೇ? ಈ ಮಸೂದೆಯ ಕುರಿತು ಕೇವಲ ಪ್ರಸ್ತಾಪವಷ್ಟೇ ನಡೆದಿದೆ. ಆಗಲೇ ಅದರ ಫಲಾನುಭವಿಗಳೆನಿಸಿದ ಜಿಗುಟು ಢಂಬಾಚಾರಿಗಳು ಇದು ಹಿಂದೂ ಧರ್ಮದ ಮೇಲಿನ ದಾಳಿ ಎಂಬಂತೆ ವಿಷಯ ವನ್ನೇ ತಿರುಚಿ ಜನರನ್ನು ಅದರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. 

ಇಂಥವರುಗಳಿಂದಲೇ ಧಾರ್ಮಿಕ ಮೌಲ್ಯಗಳೆಲ್ಲ ನಿಂತ ನೀರಂತಾಗಿ ಜಾತೀಯತೆ ಲಿಂಗ ತಾರತಮ್ಯವೇ ಮೊದಲಾದ ಹುಳುಗಳು ತುಂಬಿ ಕೊಳೆತು ನಾರುತ್ತಿವೆ. ಅದಕ್ಕೆ ಮಾನವೀಯ ವೌಲ್ಯಗಳ ಮೂಲಕ ಜೀವಂತಿಕೆ ತುಂಬಿ ಶುದ್ಧೀಕರಿಸಲು ಸ್ವಾಮಿ ವಿವೇಕಾನಂದರು ಆವತ್ತೇ ಸಾಕಷ್ಟು ಯತ್ನಿಸಿದ್ದರು. ಆದರೆ ಇಂದು ಅವರ ಹೆಸರನ್ನೇ ಅದಕ್ಕಾಗಿ ದುರುಪಯೋಗಿಸಿ ಕೊಳ್ಳಲಾಗುತ್ತಿದೆ.

ಮೌಢ್ಯದ ವಿರುದ್ಧದ ಹೋರಾಟ ಯಾವುದೋ ತೆವಲಿಗಾಗಿ ಅಲ್ಲ. ಚಿಕ್ಕವನಿದ್ದಾಗ ನನ್ನೂರಲ್ಲಿ ನೋಡಿದ್ದ ‘ದಾರವಾಡ ಪೊಲೀಸ್’ ಎಂದು ತಮಾಷೆ ಮಾಡುತ್ತಿದ್ದ ಹೆಂಗಸರು ಈಗಿಲ್ಲ. ಆ ಧಾರವಾಡ ಪೊಲೀಸ್ ಬೇರೆ ಯಾರೂ ಅಲ್ಲ ಗಂಡ ಸತ್ತು ಮಂಡೆ ಬೋಳಿಸಿ ಕೆಂಪು ಬಟ್ಟೆ ಉಟ್ಟ ಬ್ರಾಹ್ಮಣ ಹೆಂಗಸರು. ಸತಿ ಪದ್ಧತಿ, ಬೆತ್ತಲೆ ಸೇವೆಗಳಿಂದ ಹಿಡಿದು ಧಾರವಾಡ ಪೊಲೀಸ್ ತನಕದ ಬದಲಾವಣೆಗಳೆಲ್ಲ ಇಂತಹ ಮೌಢ್ಯ ವಿರೋಧಿಗಳ ಹೋರಾಟದ ಫಲವೇ ಅಲ್ಲವೆ? ಮೌಢ್ಯಗಳ ವಿರುದ್ಧ ಹೋರಾಡಿ ಪ್ರಾಣ ತೆತ್ತ ದಾಬೋಲ್ಕರರಿಗೆ ಜೀವವೇನೂ ಹೆಚ್ಚಾಗಿರಲಿಲ್ಲ. 

ಅದೇ ರೀತಿ ಯಾರ ಮೇಲೂ ದ್ವೇಷ ಸಾಧನೆಯೂ ಇರಲಿಲ್ಲ. ಜನರನ್ನು ಮೌಢ್ಯ ವಿಮುಕ್ತಗೊಳಿಸುವ ಪ್ರಾಮಾಣಿಕ ಕಳಕಳಿಯೊಂದೇ ಅವರ ಹಿಂದಿದ್ದದ್ದು. ದೇವೇಗೌಡರು ಪ್ರಧಾನಿಯಾಗಿದ್ದಾಗ ಬೆಳ್ತಂಗಡಿಯಲ್ಲಿ ನಡೆದ ಆಯುತ ಚಂಡಿಕಾಯಾಗಕ್ಕೆ ಹೋಗಿದ್ದೆ. ಮಧ್ಯರಾತ್ರಿಯ ಪೂರ್ಣಾಹುತಿ ಸಮಯದಲ್ಲೂ ಇದ್ದೆ. ಅದೇ ರೀತಿ ವೆನೆಝುಯೆಲಾದ ಖ್ಯಾತ ವಿಜ್ಞಾನಿಯಾಗಿದ್ದ ಪಳ್ಳತ್ತಡ್ಕ ಕೇಶವಭಟ್ಟರ ಮನೆಯಲ್ಲಿ ನಡೆದ ಪುತ್ರಕಾಮೇಷ್ಠಿಯಾಗಕ್ಕೂ ಹೋಗಿದ್ದೆ. 

(ರಾಮಾಯಣದಲ್ಲಿ ನಡೆದಂತೆ ಪಾಯಸ ಕೊಡುವವನು ಯಜ್ಞದಲ್ಲಿ ಬರುವುದನ್ನು ನೋಡಲು) ಆಯುತ ಚಂಡಿಕಾ ಯಾಗದಲ್ಲಿ (ಪ್ರಚಾರದ ಪ್ರಕಾರ ಯಾರೋ ರಾಜನ ಬಳಿಕ ಸಾವಿರ ವರ್ಷದ ನಂತರ ನಡೆಯುವುದಂತೆ ಅದು) ಕೊನೆಯಲ್ಲಿ ನಮಗೆ ಹಣ ಸಂದಾಯವಾಗಿಲ್ಲ ಎಂದು ನಡೆದ ಬ್ರಾಹ್ಮಣರ ಗಲಾಟೆ ಬಿಟ್ಟರೆ ನನಗೆ ಇವೆಲ್ಲ ಮೋಸಗಾರರ ಆಟದಂತೆ (ಲೋಡುಗಟ್ಟಲೆ ಆಹಾರ ದಾನ್ಯ, ತುಪ್ಪ, ರೇಶ್ಮೆ ಸೀರೆ, ಬಟ್ಟೆಗಳು ಇನ್ನಿತರ ಅಮೂಲ್ಯ ವಸ್ತುಗಳು ಬೆಂಕಿಗೆ ಆಹುತಿ ಕೊಟ್ಟು ಏನು ಸಾಧಿಸಲಾಯಿತೋ ಗೊತ್ತಿಲ್ಲ) ತೋರಿದ್ದು ಬಿಟ್ಟರೆ ಬೇರೇನಿಲ್ಲ.

ಇದೀಗ ಜಾತಕ ನೋಡದೇ ಮದುವೆಯೇ ಇಲ್ಲ. ಗಂಡು ಹೆಣ್ಣು ಮನೆಯವರೆಲ್ಲರ ಒಪ್ಪಿಗೆ ಇದ್ದರೂ ಹೊಂದಾಣಿಕೆ ಇರದ ಜಾತಕದ ಕಾರಣ ನಡೆಯದ ಮದುವೆಗಳು ಸಾಕಷ್ಟಿವೆ. (ಅದೇ ರೀತಿ ಜಾತಕ ನೋಡಿ ಕುಲಗೆಟ್ಟ ಮದುವೆಗಳೂ ಬೇಕಷ್ಟಿವೆ) ಆದರೆ ಮೂಲತಃ ಹಿಂದೂ ಸಂಸ್ಕೃತಿಯಲ್ಲಿ ಮದುವೆ ಜಾತಕ ಎನ್ನುವುದೇ ಇಲ್ಲ.

ಜಾತಿ ಅಡೆತಡೆ ಬಿಟ್ಟರೆ ಯಾರನ್ನೂ ಕೂಡ ಸೀದಾ ವರಿಸಬಹುದಿತ್ತು. ಸೀತಾ ಸ್ವಯಂವರಕ್ಕಾಗಲೀ, ದ್ರೌಪದಿ ಸ್ವಯಂವರಕ್ಕಾಗಲೀ ಜಾತಕ ನೋಡಿ ಯಾರೂ ಬಂದಿರಲಿಲ್ಲ. ಗೆದ್ದಾತ ಮದುವೆಯಾಗಿ ಹೋದ ಅಷ್ಟೆ. ಇಂತಹ ಮುಖ್ಯ ಮದುವೆಗಳಲ್ಲೇ ಕಾಣದ ಜಾತಕ ಇದೀಗ ರೋಗದಂತೆ ಹರಡಿದ್ದಾದರೂ ಹೇಗೆ? ಇದಕ್ಕೆ ಕಾರಣ ಪುರುಷರಾದರೂ ಯಾರು? ಇಂತಹ ಮೌಢ್ಯಗಳು ಇಂದು ಟಿವಿ ಜೋತಿಷಿಗಳ ಮೂಲಕ ವ್ಯಾಪಕವಾಗಿ ಹಬ್ಬುತ್ತಿದೆ. 

ಅದಕ್ಕೆ ಒಳ್ಳೆಯ ಉದಾಹರಣೆ ಇತ್ತೀಚೆಗೆ ಹಬ್ಬಿದ ವಾಸ್ತುರೋಗ. ವಾಸ್ತವವಾಗಿ ಇಂತಹ ಮೌಢ್ಯಗಳ ಬಗ್ಗೆ ಉದಾಸೀನ ತಾಳುವಿಕೆಯೇ ಅಥವ ಅರಿವಿಲ್ಲದಿರುವಿಕೆಯೇ ಒಂದು ರೀತಿಯಲ್ಲಿ ಲಾಭಕರ. ಒಮ್ಮೆ ಅದರ ಸಹವಾಸಕ್ಕೆ ಅಥವಾ ಚಟಕ್ಕೆ ಬಿದ್ದಿರೋ ಹೊರಬರಲಾಗುವುದೇ ಇಲ್ಲ. ಅಜ್ಞಾನವೇ ವರ ಎಂದರೆ ಇದೇ ತಾನೆ? ನಿತ್ಯ ಭವಿಷ್ಯ ನೋಡುತ್ತಾ ಅದನ್ನೇ ತಲೆಯಲ್ಲಿ ತುಂಬಿಕೊಂಡಿರುತ್ತಾನೆ. 

ತಪ್ಪದೇ ನಿಯಮಾನುಸಾರ ವ್ರತ ಕೈಗೊಳ್ಳುವವನು(ಳು) ಕಾರಣಾಂತರದಿಂದ ತಪ್ಪಿದರೆ ತಪ್ಪಿದ ದಿನ ಗೊಂದಲದಲ್ಲೇ (ಅನಾಹುತ ಜರಗಿ ಬಿಡುತ್ತೋ ಎನ್ನುವ ಭಯದಲ್ಲಿ) ಕಳೆಯುತ್ತಾರೆ. ಟಿವಿಯಲ್ಲಿ, ಪತ್ರಿಕೆಯಲ್ಲಿ ಜೋತಿಷ್ಯ ಹೇಳುವ ದೈವಜ್ಞ ಸೋಮಯಾಜಿ ಒಮ್ಮೆ ಟಿವಿಯಲ್ಲಿ ಒಂದು ಘಟನೆಯನ್ನು ಹೇಳಿದ್ದರು. 

ಪ್ರಸಿದ್ಧ ನಾಡಿ ಜೋತಿಷ್ಯಕ್ಕೆ ಹೆಸರಾದ ತಮಿಳುನಾಡಿನ ಕ್ಷೇತ್ರಕ್ಕೆ ಅವರು ಹೋಗಿದ್ದಾಗ ಅವರಿಗೆ ಬೆದರಿಕೆಗಳು ಬಂದಿತ್ತಂತೆ. ನಮ್ಮ ವ್ಯವಹಾರದಲ್ಲಿ ನೀವು ಮೂಗು ತೂರಿಸಬೇಡಿ ಜಾಗ್ರತೆ ಎಂದು. ಜೋತಿಷ್ಯದ ಸಾಚಾತನ ಇಲ್ಲೇ ವ್ಯಕ್ತವಾಗುತ್ತದಲ್ಲವೇ? ಜ್ಞಾನದ ಬೆಳಕಲ್ಲಿ ಅಜ್ಞಾನದ ಕೇಡ ನೋಡಾ ಎಂದು ಯಾರೋ ವಚನಕಾರರು ಹೇಳಿದ್ದರು.

ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ತರುವ ಪ್ರಯತ್ನಗಳು ಯಾವುದಿದ್ದರೂ ಅದು ಸ್ತುತ್ಯರ್ಹವಾದುದು. ಅದು ಎಷ್ಟರಮಟ್ಟಿಗೆ ಯಶಸ್ವಿಗೊಳ್ಳುವುದೋ ಎಂಬುದು ಬೇರೆ ಮಾತು. ಕೊನೆ ಪಕ್ಷ ನರೇಂದ್ರ ನಾಯಕ್, ಧಾಬೋಲ್ಕರರಂಥವರ ಕಾರ್ಯದ ಬೆಂಬಲಕ್ಕಾದರೂ ಇಂತಹ ಮಸೂದೆ ಕಾನೂನಿನಲ್ಲಿ ಇರಲೇಬೇಕಾದುದು ಅನಿವಾರ್ಯ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನಿದ್ದರೂ ಸೇದುವವರು ಇಂದಿಗೂ ಇದ್ದಾರೆ. ಆದರೆ ಆ ಕಾನೂನು ಇರುವ ಕಾರಣಕ್ಕೆ ಕೊನೆ ಪಕ್ಷ ಕಿರಿಕಿರಿ ಅನುಭವಿಸುವಾತ ನಿಸ್ಸಂಕೋಚವಾಗಿ (ನನ್ನ ದುಡ್ಡೂ ನನ್ನ ಸಿಗರೇಟು ನಿನಗೇಕೆ? ಎಂಬ ಉತ್ತರದ ಭಯವಿರದೇ) ಆಕ್ಷೇಪವಾದರೂ ಎತ್ತಬಹುದಲ್ಲವೇ? ಆದಷ್ಟು ಬೇಗ ಈ ಜನಪರ ಮಸೂದೆ ಕಾರ್ಯ ರೂಪಕ್ಕೆ ಬರುವಂತಾಗಲಿ ಎಂದು ಆಶಿಸೋಣ.

ಡಿ 14 ಬೆಂಗಳೂರ : ಬಿ ಎ ವಿವೇಕ ರೈ ಪುಸ್ತಕ ಬಿಡುಗಡೆ

Photo: ನನ್ನ ಮೂರು ಪುಸ್ತಕಗಳ ಬಿಡುಗಡೆ . ದಯವಿಟ್ಟು ಬನ್ನಿರಿ .

ಭಾಷೆಯ ಉಳಿವು ಹೇಗೆ?

-ಜಿ.ಪಿ.ಬಸವರಾಜು


ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಲ್ಲಿ ಬರುವ ಎರಡು ಪದಗಳನ್ನು ನೋಡಿ: ’ಮೇಗಾಳಿ’ ಮತ್ತು ’ಕಿಗ್ಗಾಳಿ.’ ಮೇಲುನೋಟಕ್ಕೆ ಈ ಕನ್ನಡ ಪದಗಳು ನಮಗೆ ಪರಿಚಿತವೆಂದೇ ತೋರುತ್ತವೆ. ಆದರೆ ನಿಖರವಾದ ಅರ್ಥವನ್ನು ಹೇಳಲು ಹೊರಟಾಗ ತೊಡಕು ಎದುರಾಗುತ್ತದೆ. ಕನ್ನಡದ ಬಹುದೊಡ್ಡ ವಿದ್ವಾಂಸರಾದ ಡಾ.ಡಿ.ಎಲ್.ನರಸಿಂಹಾಚಾರ್ ಅವರಿಗೇ ಈ ತೊಡಕು ಎದುರಾಯಿತು. ಕಿಟ್ಟಲ್ ಪದಕೋಶವನ್ನು ಅವರು ಹುಡುಕಿದರೆ ಅಲ್ಲಿ ಈ ಪದಗಳಿರಲಿಲ್ಲ. ಬೇರೆಬೇರೆಯ ಪದಕೋಶಗಳಲ್ಲಿಯೂ ಅರ್ಥಸ್ಪಷ್ಟವಾಗಲಿಲ್ಲ. ತಮಗೆ ಸರಿಕಂಡ ರೀತಿಯಲ್ಲಿ ಈ ಪದಗಳನ್ನು ಬಿಡಿಸಿಕೊಂಡು, ಅರ್ಥಹುಡುಕಲು ಹೆಣಗಿದರೂ ಅವರ ಮನಸ್ಸಿಗೆ ಒಪ್ಪುವ ಅರ್ಥ ಸಿಕ್ಕಲಿಲ್ಲ. ಇಂಥ ಒಂದು ಸಂದರ್ಭದಲ್ಲಿ ಅವರು ರಜಾದಿನದಲ್ಲಿ ಹಳ್ಳಿಗೆ ಹೋದಾಗ, ಅವರ ಮಿತ್ರ, ಹಳ್ಳಿಯ ಮನುಷ್ಯ ತನ್ನ ಬೇಟೆಯ ಅನುಭವವನ್ನು ಬಣ್ಣಿಸುತ್ತಾನೆ. ಈ ಬಣ್ಣನೆಯಲ್ಲಿ ಮೇಲಿನ ಎರಡೂ ಪದಗಳು ತಲೆಹಾಕುತ್ತವೆ. ಡಿಎಲ್‌ಎನ್ ಅವರಿಗೆ ಕುಣಿದಾಡುವಷ್ಟು ಸಂತೋಷವಾಗಿ ಅವರು ’ಮೇಗಾಳಿ’ ಮತ್ತು ’ಕಿಗ್ಗಾಳಿ’ಗಳ ಅರ್ಥ ಕೇಳುತ್ತಾರೆ. ಆ ಮಿತ್ರ ಸುಲಭವಾಗಿ ಅರ್ಥವನ್ನು ವಿವರಿಸುತ್ತಾರೆ.

ಸುಮಾರು ಹನ್ನೆರಡನೇ ಶತಮಾನದಲ್ಲಿ ಬಳಕೆಯಾಗುತ್ತಿದ್ದ ಕನ್ನಡ ಪದಗಳು ೨೦ನೇ ಶತಮಾನದಲ್ಲಿ ’ಕಣ್ಮರೆ’ಯಾಗುವುದು ಸೋಜಿಗವೇನಲ್ಲ. ಹನ್ನೆರಡನೇ ಶತಮಾನದಲ್ಲಿ ಜೀವಂತವಾಗಿದ್ದ ಬೇಟೆ ೨೦ನೇ ಶತಮಾನದಲ್ಲಿ ಉಳಿದಿರುವುದಿಲ್ಲ. ಇನ್ನು ಅದಕ್ಕೆ ಸಂಬಂಧಿಸಿದ ಪದಗಳು ಉಳಿಯುವುದು ಹೇಗೆ? ಕನ್ನಡವೇ ಆಗಲಿ, ಜಗತ್ತಿನ ಯಾವುದೇ ಭಾಷೆಯಾಗಲಿ, ಅದು ಉಳಿಯುವುದು ಪದಕೋಶಗಳಲ್ಲಿ, ಕಾವ್ಯಗಳಲ್ಲಿ ಅಲ್ಲ. ಅದು ಜನರ ನಾಲಿಗೆಯ ಮೇಲೆ. ಜನ ಆಡದಿದ್ದರೆ ಶಬ್ದಗಳು ಮರೆಯಾಗುತ್ತವೆ; ನಿಧಾನಕ್ಕೆ ಭಾಷೆ ತನ್ನ ಪದಸಂಪತ್ತನ್ನು ಕಡಿಮೆಮಾಡಿಕೊಳ್ಳುತ್ತದೆ; ಬಡವಾಗುತ್ತದೆ. ಭಾಷೆಯ ಉಳಿವು ಅದನ್ನು ಆಡುವವರ ಮೇಲೆ, ಜನ ಸಮುದಾಯದ ಮೇಲೆ ಉಳಿದಿರುತ್ತದೆ.

ಯಾವುದೇ ಭಾಷೆ ನಿಂತ ನೀರಾಗಿರುವುದಿಲ್ಲ. ಅದು ನಿರಂತರ ಹರಿಯುವ ತೊರೆ. ಚಲನಶೀಲತೆಯೇ ಅದರ ಜೀವಂತಿಕೆ. ಸಮುದಾಯಗಳು ಕೂಡಾ ದ್ವೀಪಗಳಾಗಿರುವುದಿಲ್ಲ. ಪರಸ್ಪರ ಸಖ್ಯ, ಸಹಬಾಳ್ವೆ, ಕೊಡುಕೊಳ್ಳುವಿಕೆ ಇತ್ಯಾದಿಗಳಿಂದ ಈ ಸಮುದಾಯಗಳೂ ಚಲನೆಯನ್ನು ಪಡೆದುಕೊಳ್ಳುತ್ತವೆ. ಇಂಥ ಒಡನಾಟದಲ್ಲಿ ಭಾಷೆಗಳೂ ಬೆರೆಯುವುದು ಸಹಜವಾಗಿರುತ್ತದೆ. ಆದರೆ ಆಕ್ರಮಣಕಾರರು, ವಲಸಿಗರು, ರಾಜ್ಯ-ಸಾಮ್ರಾಜ್ಯಗಳನ್ನು ವಿಸ್ತರಿಸುವವರು ಇತ್ಯಾದಿ ಬೆಳವಣಿಗೆಗಳೂ ಭಾಷೆಯ ಸ್ವರೂಪವನ್ನು ಬದಲಾಯಿಸುತ್ತ ಹೋಗುತ್ತವೆ. ಹೊಸ ಹೊಸ ಪದಗಳು ಬಂದು ಸೇರಿದಂತೆ, ಹಳೆಯ ಪದಗಳು ಬಿಟ್ಟುಹೋಗುತ್ತ ಭಾಷೆ ಬದಲಾಗುತ್ತ ಹೋಗುತ್ತದೆ. ಭಾಷೆ ಬದಲಾಗುವುದು ಸಹಜ. ಆದರೆ ಸತ್ತೇಹೋಗುವುದು?
ಹೌದು ಜಗತ್ತಿನಲ್ಲಿ ಅನೇಕ ಭಾಷೆಗಳು ಸತ್ತೇಹೋಗಿವೆ. ಭಾರತವನ್ನೇ ನೋಡಿ: ಯುನೆಸ್ಕೋ ಅಂಕಿಅಂಶಗಳ ಪ್ರಕಾರ, ೧೯೬೦ ರ ದಶಕದಲ್ಲಿ ಭಾರತದಲ್ಲಿದ್ದ ಜೀವಂತ ಭಾಷೆಗಳ ಸಂಖ್ಯೆ ಸುಮಾರು ೧,೧೦೦. ಐದು ದಶಕಗಳ ನಂತರ ಈ ಭಾಷೆಯಲ್ಲಿ ಸುಮಾರು ೨೨೦ ಭಾಷೆಗಳು ಇಲ್ಲವಾದವು. ಇದು ಹೇಗಾಯಿತು?

ಈ ಕಾರಣವನ್ನು ತಿಳಿಯಬೇಕಾದರೆ, ಭಾಷೆಯನ್ನು ಇನ್ನೊಂದು ದಿಕ್ಕಿನಿಂದ ನೋಡಬೇಕು; ಜಗತ್ತಿನಲ್ಲಿರುವ ತೀರ ಸಣ್ಣ ಸಮುದಾಯಗಳನ್ನು ಹತ್ತಿರದಿಂದ ಗಮನಿಸಬೇಕು. ಆದಿವಾಸಿಗಳು, ಬುಡಕಟ್ಟುಗಳು, ನಾಗರಿಕ ಜಗತ್ತಿನ ಬೆಳಕಿಗೇ ಬಾರದೆ ಕಾಡಿನ ಕತ್ತಲಲ್ಲಿ ಉಳಿದ ಸಮುದಾಯಗಳು ಇತ್ಯಾದಿ ಅತಿ ಚಿಕ್ಕ ಗುಂಪುಗಳು, ಸಮುದಾಯಗಳು ತಮ್ಮದೇ ಭಾಷೆಯನ್ನು, ಸಂಸ್ಕೃತಿಯನ್ನು ಪೊರೆದುಕೊಂಡೇ ಬಂದಿವೆ. ಇಂಥ ಸಮುದಾಯಗಳು ಭಾಷೆಯನ್ನು ಕಳೆದುಕೊಳ್ಳಲಾರವೇನೋ ಎನ್ನಿಸುತ್ತದೆ. ಆದರೆ ರಭಸವಾಗಿ ಹರಿಯುವ ಈ ಬದುಕಿನ ಗತಿಯಲ್ಲಿ ಯಾವ ಸಮುದಾಯವೂ ದ್ವೀಪವಾಗಿ ಉಳಿಯಲಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಪುಟ್ಟ ಸಮುದಾಯಗಳು ದೊಡ್ಡ ಸಮುದಾಯಗಳ ಪ್ರಭಾವಕ್ಕೆ ಒಳಗಾಗುವುದು ಅನಿವಾರ್ಯವಾಗುತ್ತದೆ. ಪ್ರಭಾವ ಎಂದರೆ ಅದು ಭಾಷೆ, ಸಂಸ್ಕೃತಿ, ಸಾಮಾಜಿಕ ವಿದ್ಯಮಾನಗಳು ಹೀಗೆ ಎಲ್ಲವೂ ಸೇರುತ್ತವೆ. ದೊಡ್ಡ ಸಮುದಾಯದ ಆಕ್ರಮಣ ಎಷ್ಟು ಜೋರಾಗಿರುತ್ತದೆ ಎಂದರೆ ಸಣ್ಣ ಸಮುದಾಯದ ಭಾಷೆಯಲ್ಲಿ ದೊಡ್ಡ ಸಮುದಾಯದ ಭಾಷೆಯ ನೆರಳೇ ಜೋರಾಗಿರುತ್ತದೆ. ನಿಧಾನಕ್ಕೆ ಸಣ್ಣ ಸಮುದಾಯ ತನ್ನ ಮೂಲ ಭಾಷೆಯನ್ನೇ ಕಳೆದುಕೊಂಡುಬಿಡುತ್ತದೆ. ದೊಡ್ಡ ಮೀನು ಸಣ್ಣ ಮೀನನ್ನು ನುಂಗಿದಂತೆ ದೊಡ್ಡ ದೊಡ್ಡ ಸಮುದಾಯಗಳು ಸಣ್ಣ ಸಮುದಾಯಗಳನ್ನು ಪೂರ್ಣವಾಗಿ ನುಂಗಿಬಿಡುತ್ತವೆ.

 ಒಂದು ಭಾಷೆಯನ್ನಾಡುವ ಸಣ್ಣಸಣ್ಣ ಸಮುದಾಯಗಳು ಎಂದರೆ ಅವು ಎಷ್ಟು ಸಣ್ಣ ಸಮುದಾಯಗಳು? ವಾರ‍್ಲಿ ಎನ್ನುವ ಭಾಷೆಯನ್ನು ಆಡುವವರ ಸಂಖ್ಯೆ ಕೇವಲ ೧೬೫. ಅಷ್ಟೇಕೆ ಹತ್ತು ಜನರಿಗೆ ಮಾತ್ರ ಸೀಮಿತವಾಗಿರುವ ಭಾಷೆಗಳೂ ಜಗತ್ತಿನಲ್ಲಿವೆ. ಈ ಹತ್ತು ಜನ ತೊಂದರೆಗೀಡಾದರೆ, ಸತ್ತುಹೋದರೆ ಆ ಭಾಷೆಯೂ ಅವರೊಂದಿಗೆ ಇಲ್ಲವಾಗುತ್ತದೆ.
ಬಹುಜನರಾಡುವ ದೊಡ್ಡ ಭಾಷೆಗಳಿಗೂ ಅಪಾಯಗಳಿವೆ. ಒಂದು ಭಾಷೆಯನ್ನಾಡುವ ಜನ ಹತ್ತು ಸಾವಿರಕ್ಕೂ ಕಡಿಮೆಯಾದರೆ, ಒಂದು ಭಾಷೆಯನ್ನು ಹಿರಿಯರು ಮಾತ್ರ ಆಡುತ್ತಿದ್ದು, ಮಕ್ಕಳು ಅಂದರೆ ಹೊಸ ತಲೆಮಾರು ಆ ಭಾಷೆಯನ್ನು ಆಡದಿದ್ದರೆ, ಮನೆಯಲ್ಲಿ ಮಾತ್ರ ಒಂದು ಭಾಷೆಯನ್ನು ಬಳಸುತ್ತ ಉಳಿದ ಕಡೆ ಅದರ ಉಪಯೋಗವೇ ಇಲ್ಲದಂತಾದರೆ ಭಾಷೆ ನಿಧಾನಕ್ಕೆ ಕಾಲ್ತೆಗೆಯುತ್ತದೆ. ಅದಕ್ಕಾಗಿಯೇ ತಾಯಿಭಾಷೆಯನ್ನು ಉಳಿಸಿಕೊಳ್ಳಬೇಕೆಂಬ ಚಳವಳಿಗಳು ನಡೆಯುತ್ತಲೇ ಇರುತ್ತವೆ. ಜನಭಾಷೆ ಎನ್ನುವುದು ಜನರ ಬದುಕಿನ ಜೊತೆಯಲ್ಲಿರಬೇಕು. ಮನೆಯ ಒಳಗೆ ಹೊರಗೆ, ಶಿಕ್ಷಣಕ್ಕೆ-ಆಡಳಿತಕ್ಕೆ, ಪಂಚಾಯಿತಿ ಕಟ್ಟೆಗೆ ಪಾರ್ಲಿಮೆಂಟಿಗೆ ಹೀಗೆ ಎಲ್ಲದಕ್ಕೂ ಭಾಷೆ ಬಳಕೆಯಾಗುತ್ತಿರಬೇಕು. ಆಗಲೇ ಅದರ ಬೆಳವಣಿಗೆ. ಆದರೆ ಜಗತ್ತಿನ ಅನೇಕ ಭಾಗಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಇದಕ್ಕೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಿರುತ್ತವೆ.

ಸಾಮ್ರಾಜ್ಯಗಳನ್ನು ವಿಸ್ತರಿಸುತ್ತ ಹೋದಾಗ ಒಂದು ಭಾಷೆಯನ್ನು ಹಲವಾರು ಭಾಷೆಗಳ ಮೇಲೆ ಹೇರಲಾಗುತ್ತದೆ. ಈ ಭಾರಕ್ಕೆ ಭಾಷೆಗಳು ಮಾತ್ರ ತತ್ತರಿಸುವುದಿಲ್ಲ. ಸಮುದಾಯಗಳ ಮನಸ್ಸುಗಳು, ಪ್ರತಿಭೆಗಳು, ಚಿಂತನೆಗಳು ಕುಗ್ಗಿಹೋಗುತ್ತವೆ. ಸಾಮ್ರಾಜ್ಯಶಾಹಿ ಹೇರುವ ಭಾಷೆಯನ್ನು ಕಲಿಯುವ ಒತ್ತಡದಲ್ಲಿಯೇ ಸಮುದಾಯಗಳು ದಣಿದುಬಿಡುತ್ತವೆ. ಅವುಗಳ ಚೈತನ್ಯ ಕಗ್ಗಿಬಿಡುತ್ತದೆ. ಇಂಥ ಘಟ್ಟಗಳನ್ನು ಭಾರತೀಯರಾದ ನಾವು ಚೆನ್ನಾಗಿಯೇ ಅನುಭವಿಸಿದ್ದೇವೆ.

ಕರ್ನಾಟಕದಲ್ಲಿ ೨೨ ಅನುಸೂಚಿತ ಭಾಷೆಗಳಿವೆ. ಒಟ್ಟು ಇಲ್ಲಿರುವ ಭಾಷೆಗಳ ಸಂಖ್ಯೆ ೭೨. ಕೊರಗ, ಇರುಳ, ಸೋಲಿಗ, ಬಡಗ, ಯರವ, ಗೌಳಿ, ಬೆಟ್ಟಕುರುಬ, ಜೇನುಕುರುಬ, ಸಿದ್ದಿ, ಹಕ್ಕಿಪಿಕ್ಕಿ ಇತ್ಯಾದಿ ಪುಟ್ಟ ಪುಟ್ಟ ಸಮುದಾಯಗಳ ಭಾಷೆಗಳೂ ಇವೆ. ಇವುಗಳಲ್ಲಿ ಅನೇಕ ಭಾಷೆಗಳು ಉಳಿಯಲಾರದ ಕಷ್ಟವನ್ನು ಎದುರಿಸುತ್ತಿವೆ. ಹಕ್ಕಿಪಿಕ್ಕಿ ಮತ್ತು ಸಿದ್ದಿ ಭಾಷೆಗಳಂತೂ ತೀರ ಅಪಾಯದಲ್ಲಿವೆ. ಕೊಡವ ಮತ್ತು ತುಳು ಭಾಷೆಗಳು ಕೂಡಾ ಅಪಾಯದ ಸ್ಥಿತಿಯಲ್ಲಿವೆ.

ಹಾಗಾದರೆ ಈ ಭಾಷೆಗಳನ್ನು ಪೊರೆಯುವುದು ಹೇಗೆ? ಭಾಷೆ ಎಂದರೆ ಜನ ಸಮುದಾಯ. ಸಮುದಾಯ ಎಂದರೆ ಸಮುದಾಯದ ಬದುಕು. ಆ ಬದುಕನ್ನು ರೂಪಿಸುವ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ವಿದ್ಯಮಾನಗಳು ಇತ್ಯಾದಿ. ನಾವು ಅಭಿವೃದ್ಧಿಯ ಹೆಸರಿನಲ್ಲಿ ನಾಗರಿಕ ಜಗತ್ತು ತೆಗೆದುಕೊಳ್ಳುವ ತೀರ್ಮಾನಗಳು ಸಣ್ಣಪುಟ್ಟ ಸಮುದಾಯಗಳ ಉಳಿವಿಗೆ, ಬೆಳವಣಿಗೆಗೆ ಪೂರಕವಾಗಿರಬೇಕು. ಇಲ್ಲವಾದರೆ ಸಮುದಾಯಗಳು ಕಣ್ಮರೆಯಾಗಿಬಿಡುತ್ತವೆ. ಕಾಡುಗಳಲ್ಲಿ ವಾಸವಾಗಿರುವ ನಮ್ಮ ಅನೇಕ ಸಮುದಾಯಗಳನ್ನು ಹತ್ತಿರದಿಂದ ಗಮನಿಸಿದರೆ ಈ ಅಂಶಗಳು ನಿಚ್ಚಳವಾಗುತ್ತವೆ.

ಎಲ್ಲ ಸಮುದಾಯಗಳು ಮನುಷ್ಯನ ಬದುಕಿಗೆ ಏಕೆ ಮುಖ್ಯ? ಪ್ರತಿಯೊಂದು ಸಮುದಾಯದ ಬೆನ್ನಿಗೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಅವು ವಿಕಾಸಗೊಂಡ ಕ್ರಮದಲ್ಲಿ ಭಾಷೆ, ಸಂಸ್ಕೃತಿ, ತಿಳಿವಿನ ಒರತೆಗಳು ಇವೆ. ತಿಳಿವು ಎನ್ನುವುದು ಬಹುದೊಡ್ಡ ನಿಧಿ. ಆಧುನಿಕ ವಿದ್ಯೆಯ ರೂಪದಲ್ಲಿ ನೋಡಿದಾಗ ಮಾತ್ರ ನಮಗೆ ಅದರ ಪ್ರಾಮುಖ್ಯತೆ ತಿಳಿಯುತ್ತದೆ. ಆದರೆ ಪ್ರತಿಯೊಂದು ಪರಂಪರೆಯಲ್ಲಿಯೂ ಉಳಿದುಕೊಂಡು ಬಂದಿರುವ ಜ್ಞಾನ ಎಷ್ಟು ದೊಡ್ಡದು. ಜೇನುಕುರುಬ ಸಮುದಾಯ ಜೇನಿನ ಹುಳುವಿನಿಂದ ಕಚ್ಚಿಸಿಕೊಳ್ಳದೆಯೇ ಜೇನುತುಪ್ಪವನ್ನು ಸಂಗ್ರಹಿಸುವ ಕೌಶಲ, ಕಾಡಾನೆಗಳನ್ನು ಹಿಡಿದು ಪಳಗಿಸುವ ಕೌಶಲ ಇವೆಲ್ಲವನ್ನು ನೋಡಬಹುದು. ಬೇಟೆಯ ಕೌಶಲ, ಕಾಡಿನ ಗಿಡಮರ ಸಸ್ಯಗಳೊಂದಿಗೆ ಬೆಳೆಸಿದ ಸ್ನೇಹ, ಅವುಗಳ ಬಳಕೆಯಲ್ಲಿ ತೋರುವ ಅಪಾರ ತಿಳುವಳಿಕೆ, ನಮ್ಮ ನೀರು, ನೆಲ, ಗುಡ್ಡಬೆಟ್ಟಗಳನ್ನು, ಪ್ರಾಣಿ ಪಕ್ಷಿಗಳ ಜೊತೆ ಅನೇಕ ಪುಟ್ಟ ಪುಟ್ಟ ಸಮುದಾಯಗಳು ಬದುಕಿ ಬಂದಿರುವ ರೀತಿಯಲ್ಲಿಯೇ ತಿಳಿವಿನ ಜಲವೂ ಇದೆ. ಇದನ್ನೆಲ್ಲ ನಾವು ಗೌರವಿಸಿದಾಗ, ಎಲ್ಲ ಸಮುದಾಯಗಳ ಬದುಕನ್ನು ಮಾನ್ಯ ಮಾಡಿದಾಗ ಮನುಕುಲ ಇಡಿಯಾಗಿ ಮುನ್ನಡೆಯಲು ಸಾಧ್ಯ. ಇಲ್ಲವಾದರೆ ಅವೆಲ್ಲವನ್ನು ಹೊಸಕಿ, ದೊಡ್ಡ ಸಮುದಾಯಗಳು ಮೆರೆಯುತ್ತವೆ. ಅಂಥ ಸಮುದಾಯಗಳ ಅಡಿಯಲ್ಲಿ ಹಲವು ಸಮುದಾಯಗಳ ನರಳು, ಯಾತನೆಯ ನೋವು ಸದ್ದಿಲ್ಲದೆ ಕೇಳುತ್ತಿರುತ್ತದೆ.

(ಸೌಜನ್ಯ: ಸಂಯುಕ್ತ ಕರ್ನಾಟಕ)
-ಜಿ.ಪಿ.ಬಸವರಾಜು
೯೪೮೦೦೫೭೫೮೦

Wednesday, November 27, 2013

ಕೃಷ್ಣ, ಕನಕ ಮತ್ತು ಪ್ರಸ್ತುತ ರಾಜಕೀಯ

ವಸು ಮಳಲಿ

ಸೌಜನ್ಯ : ಪ್ರಜಾವಾಣಿ

ರ್ನಾಟಕದ ಬಹುಮುಖ್ಯ ಸಮುದಾಯ ವಾದ ಕುರುಬರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ತಮ್ಮನ್ನು ಹೆಚ್ಚೆಚ್ಚು ಪ್ರಕಟಪಡಿಸಿಕೊಳ್ಳುತ್ತಿದ್ದಾರೆ. ಅದು ಸಹಜವೂ ಹೌದು. ‘ಅಹಿಂದ’ ಸಂಘಟನೆಯ ಮೂಲಕ ಜನನಾಯಕರಾಗಿ ಮೂಡಿಬಂದ ಸಿದ್ದರಾಮಯ್ಯನವರಿಂದಾಗಿ ಆ ಸಮುದಾಯ ಗಳಿಗೆ ದನಿ ಬಂದಂತಾಗಿದೆ.
ಅಂಬೇಡ್ಕರ್‌ ಅವರು ಸಮುದಾಯದ ಬೆಳವಣಿಗೆಗೆ ರಾಜಕೀಯ ಅಧಿಕಾರ ಬೇಕು ಎಂದು ಬಯಸಿದ್ದನ್ನು ಇಲ್ಲಿ ನೆನೆಯಬಹುದು. ಕರ್ನಾಟಕದ ಪಶುಪಾಲಕ ಸಮುದಾಯ ಗಳಲ್ಲಿ ಕುರುಬರು ಪ್ರಮುಖರು. ಇವರು ಮೂಲತಃ ಕನ್ನಡಿಗರು. ಪಶುಪಾಲನೆಯನ್ನೇ ಉಳಿಸಿಕೊಂಡು ಅರೆ ಅಲೆಮಾರಿಗಳಾಗಿ ಬದುಕುವ ಕುರುಬರು ಇಂದಿಗೂ ಇದ್ದಾರೆ. ಅವರು ಕಾಡುಗೊಲ್ಲರಂತೆ ಹುಲ್ಲುಗಾವಲು ಗಳನ್ನು ಅರಸಿ ನಾಡಿನುದ್ದಗಲಕ್ಕೂ ಓಡಾಡುತ್ತಾರೆ.

ಕೃಷಿ ವಿಸ್ತರಿಸಿದಂತೆ, ಜನವಸತಿ ಹೆಚ್ಚಿದಂತೆ ಹುಲ್ಲುಗಾವಲುಗಳು ಕರಗುತ್ತಿವೆ.  ಇಷ್ಟಾದರೂ ಪುರಾತನವಾದ ಪಶುಪಾಲನಾ ವಿಧಾನವನ್ನೇ ಅನುಸರಿಸುತ್ತಾ ಬಂದಿರುವುದು ವಿಶೇಷವೇ ಸರಿ. ಆದ್ದರಿಂದ ಅವರು ಮಾತನಾಡುವ ಭಾಷೆ ಯಲ್ಲೂ ತನ್ನ ಪ್ರಾಚೀನತೆಯು ಉಳಿದಿದೆ. ಅದ ರಲ್ಲೂ ಜೇನು ಕುರುಬರ ಮಾತಿನಲ್ಲಿ ಕನ್ನಡದ ಮೂಲ ಪದಗಳು ಉಳಿದು ಬಂದಿವೆ.
ಕುರುಬ ರಲ್ಲಿ ಕೆಲವರು ಪಶುಪಾಲಕರ ಹಂತದಲ್ಲಿದ್ದರೆ, ಮತ್ತೆ ಕೆಲವರು ಬುಡಕಟ್ಟು ಹಂತದಲ್ಲೇ ಇದ್ದಾರೆ. ಹೆಚ್ಚಿನವರು ಕೃಷಿಕರಾಗಿ ನೆಲೆ ನಿಂತಿದ್ದಾರೆ. ಪ್ರಸ್ತುತ ಕೃಷಿ ಹಂತದಿಂದ ಮೇಲೆದ್ದು ಆಧುನಿಕತೆಯ ಕಡೆಗೆ ದಾಪುಗಾಲು ಹಾಕಿದೆ ಈ ಸಮುದಾಯ. ಇದು ಅವರನ್ನು ರಾಜಕೀಯವಾಗಿ ಸಮರ್ಥವಾಗುವಂತೆ ಮಾಡಿದೆ.

ತಮ್ಮ ‘ಐಡೆಂಟಿಟಿ’ಗಾಗಿ ಶಿಕ್ಷಿತ ಸಮುದಾಯ ಇಂದು ಚರ್ಚೆಗಿಳಿದಿರುವುದು ಕಾಣಬರುತ್ತದೆ. ಈ ಐಡೆಂಟಿಟಿಗಳಲ್ಲಿ ಕನಕದಾಸರಿಗೆ ಸಾಂಸ್ಕೃತಿಕ ನಾಯಕತ್ವ ಕೊಡಲಾಗಿ, ಕನಕ ಕೇಂದ್ರಿತವಾದ ಹಲವು ಪ್ರಶ್ನೆಗಳು ತಲೆಯೆತ್ತುತ್ತಿವೆ. ಕನಕರು ವೈಷ್ಣವ ಪಂಥಾನುಯಾಯಿಯಾಗಿ ದಾಸವರೇಣ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ ಸಾಮರಸ್ಯ ಮತ್ತು ಸಂಘರ್ಷಗಳನ್ನು ತಮ್ಮ ಸಾಹಿತ್ಯದಲ್ಲಿ ಪ್ರಕಟಪಡಿಸಿದ್ದು ಅಧ್ಯಯನಕ್ಕೆ ಇಂದೂ ಗ್ರಾಸವಾಗಿದೆ.

ಕನಕರು ವೈಷ್ಣವರಾದ ಕಾರಣಕ್ಕೆ ಕುರುಬರು ವೈಷ್ಣವ ಪಂಥವನ್ನು ಅನುಸರಿಸಬೇಕೇ, ಅನುಸರಿ ಸಬಾರದೇ ಎಂಬ ಪ್ರಶ್ನೆ ಇಂದು ಉಡುಪಿಯ ಶ್ರೀ ಕೃಷ್ಣನ ದೇಗುಲಕ್ಕೂ, ಮಠಕ್ಕೂ ಹೋಗಿ ನಿಲ್ಲುತ್ತದೆ. ಚರಿತ್ರೆಯನ್ನು ಮುಂದಿಟ್ಟು ಇಂದಿನ ಉಡುಪಿಯ ದೇಗುಲದ ನಂಬಿಕೆಗಳನ್ನು ಪ್ರಶ್ನಿಸು ವುದು ನನ್ನ ಉದ್ದೇಶವಲ್ಲ. ಆದರೆ, ಚರಿತ್ರೆಯ ವಿಚಾರಗಳನ್ನು ಮುಂದಿಟ್ಟು ಜನ ವಾದಕ್ಕಿಳಿಯು ವುದರಿಂದ, ಕನಕನ ಚರಿತ್ರೆ ಮತ್ತೆ ಮತ್ತೆ ಪರಾಮರ್ಶನಗೊಳ್ಳುತ್ತಿದೆ.

ಸುಮಾರು 2,300 ವರ್ಷಗಳ ಹಿಂದೆ ಕರಾವಳಿಗೆ ಉತ್ತರದಿಂದ ಬರುತ್ತಿದ್ದ ವ್ಯಾಪಾರಗಾರರು ಬೌದ್ಧರಾಗಿದ್ದು ಇಲ್ಲಿ ಬೌದ್ಧ ಕೇಂದ್ರಗಳನ್ನು ಸ್ಥಾಪಿಸಿದ್ದರು. ಅಂತಹ ಕೇಂದ್ರಗಳಲ್ಲಿ ಉಡುಪಿಯೂ ಒಂದು. ಕರಾವಳಿಯ ದೇವಾಲಯಗಳು ಸಾಗರದಲ್ಲಿ ಬರುವ ವ್ಯಾಪಾರಗಾರರಿಗೆ ದೀಪಸ್ತಂಭಗಳಾಗಿ ದಾರಿ ತೋರಿಸುತ್ತಿದ್ದವು. ಆ ಕಾರಣಕ್ಕೂ ದೇವರು ಪಶ್ಚಿಮ ಮುಖವಾಗಿರುವ ಸಾಧ್ಯತೆ ಇದೆ.

ಮಾಧ್ವರು ಉಡುಪಿಯನ್ನು ಕೈಗೆತ್ತಿಕೊಳ್ಳುವ ಹೊತ್ತಿಗೆ ಮೂಲದಲ್ಲಿದ್ದ ಬೌದ್ಧ ಯಕ್ಷನ ಪ್ರತಿಮೆ ಯನ್ನು ಜನರು ಕೃಷ್ಣನೆಂದು ಆರಾಧಿಸ ತೊಡಗಿದ್ದರು. ದಂಡ ಹಿಡಿದ ಯಕ್ಷನನ್ನು ಕಡೆ ಗೋಲ ಕೃಷ್ಣನೆಂದು ನಂಬಿ ದೇಗುಲ ಕಟ್ಟಿದರು. ವೈಷ್ಣವ ಮತ ಪ್ರಬಲವಾಗಿದ್ದ 14–15ನೇ ಶತ ಮಾನದಲ್ಲಿ ಅದರಲ್ಲೂ ವಿಜಯನಗರ ಸಾಮ್ರಾ ಜ್ಯದ ಎರಡನೆಯ ಅರ್ಧದಲ್ಲಿ ವೈಷ್ಣವ ಮತಕ್ಕೆ ಹೆಚ್ಚಿನ ಆದ್ಯತೆ ದೊರಕಿತು. ಹಾಗಾಗಿ ವೈಷ್ಣವ ದೇವಾಲಯಗಳೂ ಪ್ರಾಬಲ್ಯಕ್ಕೆ ಬಂದವು.

ಈ ಎಲ್ಲಾ ಹಿನ್ನೆಲೆಯಲ್ಲಿ ಕನಕ ತನ್ನ ಕುಲ ಮೂಲದ ದೇವರಾದ ಬೀರಪ್ಪನನ್ನು ಬಿಟ್ಟು ಆದಿ ಕೇಶವನನ್ನು ಹಾಡಿ ಹೊಗಳಿದರೆ, ಅದು ಸಮಾಜದಲ್ಲಿ ಮೇಲಿನ ಸ್ತರದಲ್ಲಿದ್ದ ವೈದಿಕರ ಸಮಕ್ಕೇರುವ ಪ್ರಯತ್ನವಾಗಿತ್ತು. ಆದರೆ ಹಾಗೆ ಏರುತ್ತಲೇ ತನ್ನ ಸಾಮರ್ಥ್ಯವನ್ನೂ, ಪ್ರತಿಭಟನೆ ಯನ್ನೂ ತೋರ್ಪಡಿಸುವ ಸಾಧ್ಯತೆಯಾಯಿತು.

ಇಂದು ನಡೆಯುತ್ತಿರುವ ಧರ್ಮಗುರುಗಳ ವಾದದಲ್ಲಿ ಕುರುಬರು ಮೂಲತಃ ಶೈವರು, ಆದ್ದರಿಂದ ಉಡುಪಿಯ ಪೇಜಾವರ ಶ್ರೀಗಳು ಅವರಿಗೆ ವೈಷ್ಣವ ದೀಕ್ಷೆಯ ವಿಚಾರವನ್ನು ಹೇಳು ವುದು ಅಸಮಂಜಸ ಎಂದು ಹೇಳಲಾಗುತ್ತಿದೆ. ಕುರುಬರ ಮೂಲ ದೇವರು ಬೀರಪ್ಪ, ಮೈಲಾರ, ಎಲ್ಲಮ್ಮ ಇತ್ಯಾದಿಯಾದ ಜನಪದ ದೇವತೆಗಳು. ಕರ್ನಾಟಕದಲ್ಲಿ ಶೈವ ಪಂಥ ಹರಡತೊಡಗಿ ದಾಗ ಮೂಲದ ಜನಪದ ದೇವತೆಗಳು ಶೈವ ಗೊಂಡವು. ಬೀರಪ್ಪ - ಬೀರೇಶ್ವರನಾದ, ಮೈಲಾರ -ಮೈಲಾರಲಿಂಗವಾಯಿತು.
ಮಾದಪ್ಪ- ಮಾದೇಶ್ವರನಾದ. ಹಾಗಾಗಿ ಕುರುಬರು ಶೈವರಾಗಿ ಕಾಣಿಸಿಕೊಳ್ಳುತ್ತಾರೆ. ಜನಪದರು ತಮ್ಮ ಜನಪದ ದೇವರುಗಳನ್ನು ಪೂಜಿಸುವುದಲ್ಲದೇ ಇತರರ ದೇವರುಗಳಿಗೂ ನಡೆದುಕೊಳ್ಳುತ್ತಾರೆ. ವೆಂಕಟೇಶ್ವರ, ಮಂಜುನಾಥ, ಉಡುಪಿಯ ಕೃಷ್ಣ– ಇವೆಲ್ಲಾ ರಾಜಾಶ್ರಯದಿಂದ ಬೆಳೆದು ನಿಂತಾಗ ಆ ದೇವರುಗಳಿಗೆ ಜನಪದರು ನಡೆದುಕೊಳ್ಳ ತೊಡಗಿದರು. ಅದರ ಅರ್ಥ ಅವರು ಶೈವ ರೆಂದಾಗಲೀ, ವೈಷ್ಣವರೆಂದಾಗಲೀ ಅಲ್ಲ.

ಹೆಚ್ಚೆಂದರೆ ಶಿವನಿಗೆ ನಡೆದುಕೊಳ್ಳುವವರು ಸೋಮವಾರವನ್ನೂ, ಶ್ರೀನಿವಾಸನಿಗೆ ನಡೆದು ಕೊಳ್ಳುವವರು ಶನಿವಾರವನ್ನೂ ವಾರವಾಗಿ ಆಚರಿಸುತ್ತಾರೆ. ಅದರಾಚೆಗೆ ಬದುಕಿನ ಕ್ರಮ ದಲ್ಲಿ ಹೆಚ್ಚೇನೂ ಅಂತರಗಳಿರುವುದಿಲ್ಲ. ಮಂಜುನಾಥ, ರಂಗನಾಥರಿಗೆ ಮಾತ್ರವಲ್ಲ ಹಾಸನ ಜಿಲ್ಲೆಯಲ್ಲಿ ಜಿನನಾಥನಿಗೂ ಪೂಜೆ ಕೊಡುತ್ತಾರೆ. ಉತ್ತರ ಕರ್ನಾಟಕದಾದ್ಯಂತ ಉರುಸ್, ಬಸವ ಜಯಂತಿಗಳನ್ನು ತಪ್ಪದೇ ಆಚರಿಸುತ್ತಾರೆ. ಹಾಗೆಂದು ಅವರು ಮುಸಲ್ಮಾನರೂ ಅಲ್ಲ, ಅಥವಾ ವೀರಶೈವ ದೀಕ್ಷೆಯನ್ನು ಸ್ವೀಕರಿಸಿದ ವರೂ ಅಲ್ಲ. ಜನಪದರಲ್ಲಿ ಪಂಥ ಸಿದ್ಧಾಂತ ಗಳನ್ನು ಮೀರಿದ ಉದಾರತೆ ಸಹಜವಾಗಿ ಕಾಣುತ್ತದೆ.
ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ರಾಮಾನುಜಾಚಾರ್ಯರ ಪ್ರಭಾವದಿಂದ 12ನೇ ಶತಮಾನದಲ್ಲಿ ವೈಷ್ಣವಧರ್ಮ ಪ್ರಚಲಿತ ಗೊಂಡಿತು. ಆನಂತರದಲ್ಲಿ ಜನಪದ ದೇವರು ಗಳು ವೈಷ್ಣವಗೊಂಡಿವೆ. ಎಲ್ಲಾ ಊರ ದೇವತೆ ಗಳನ್ನು ಲಕ್ಷ್ಮಿಯ ಅಂಶವೆಂದೂ, ಗಂಡು ದೇವರು ಗಳನ್ನು ವಿಷ್ಣುವಿನ ಅಂಶ ಇಲ್ಲವೇ ನರಸಿಂಹ ಅಥವಾ ಗರುಡನ ಅವತಾರವೆಂದು ಭಾವಿಸ ತೊಡಗಿದರು.

ಗಿಡ್ಡಮ್ಮ, ಮೆಳ್ಳಳ್ಳಿಯಮ್ಮ, ತೆರಣ್ಯದಮ್ಮ ಎಲ್ಲರೂ ಲಕ್ಷ್ಮಿಯರೇ ಆಗಿದ್ದಾರೆ, ಹಾಗೆಂದರೆ ಇವರನ್ನು ಆರಾಧಿಸುವವರೆಲ್ಲಾ ವೈಷ್ಣವರೇ? ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಇವೆಲ್ಲಾ ಅವರು ಎಂದೂ ಕೇಳರಿಯದ ಪದಗಳು. ಅಥವಾ ಅವು ಅವರ ಬದುಕಿನ ಮೂಲಭೂತ ಸವಾಲುಗಳಲ್ಲ.

ನಮ್ಮಲ್ಲಿರುವ ಇವತ್ತಿನ ಕಲ್ಪನೆಯ ಶೈವವೂ ಒಂದು ಮೂಲದ್ದಲ್ಲ. ಪಾಶುಪತ, ಲಕುಲೀಶ,  ಕಾಪಾಲಿಕ, ರುದ್ರ, ಭೈರವ, ಮಹಾದೇವ, ನಾಥ, ಹೀಗೆ ಹಲವು ಭಿನ್ನ ಧಾರೆಗಳು ಅದರಲ್ಲಿ ಸೇರಿಹೋಗಿವೆ. ಹಾಗೆ ನೋಡಿದರೆ, ಯಾವುದೂ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದುದಲ್ಲ. ಹಲವು ಮೂಲೆಗಳಿಂದ ಹರಿದು ಬಂದವು. ವೀರಶೈವ ಪಂಥವೊಂದೇ ಈ ನಾಡಿನ ಕೊಡುಗೆ. ವೀರಶೈವ ಚಳವಳಿಯ ಸಂದರ್ಭದಲ್ಲಿ ಕುರುಬರು ವೀರ ಶೈವರಾದರು ಅಥವಾ ಅದರ ಪ್ರಭಾವದಿಂದ ಸಸ್ಯಾಹಾರಿಗಳಾದ ಹಲವು ಜಾತಿಗಳಲ್ಲಿ ಕುರುಬರೂ ಸೇರುತ್ತಾರೆ.

ವಿಜಯನಗರ ಸಾಮ್ರಾಜ್ಯದ ಹುಟ್ಟನ್ನು ಕುರುಬ ಜನಾಂಗದ ಮೂಲದಲ್ಲಿ ಗುರುತಿಸ ಲಾಗಿದೆ. ಹಂಪಿ ಪ್ರದೇಶದ ಬಹುಸಂಖ್ಯಾತ ಸಮುದಾಯವಾದ ಪಶುಪಾಲಕ ಹಿನ್ನೆಲೆಯಿಂದ ಬಂದ ಜನ ರಾಜತ್ವವನ್ನು ಹುಟ್ಟು ಹಾಕಿದ್ದರೆ, ಅದು ಸಹಜವಾದ ಪ್ರಕ್ರಿಯೆಯೇ ಆಗುತ್ತದೆ.

ಕನ್ನಡನಾಡಿನ ಮೂಲ ಜನರು ನಾಲ್ಕು ಹಿನ್ನೆಲೆಗಳಿಂದ ಬರುತ್ತಾರೆ. ಬಯಲು ಸೀಮೆಯ ಪಶುಪಾಲಕರು, ಕಡಲತೀರದ ಮೀನುಗಾರರು, ಗುಡ್ಡಗಾಡು ಪ್ರದೇಶದ ಬೇಡರು, ಆನಂತರದಲ್ಲಿ ನೆಲೆನಿಂತು ಕೃಷಿಕರಾದ ಸಮುದಾಯಗಳು. ಈ ನಾಲ್ಕು ಸಮುದಾಯಗಳ ಹಿನ್ನೆಲೆಯಲ್ಲಿ ರಾಜತ್ವದ ಹುಟ್ಟು ತಾರ್ಕಿಕವಾಗಿರುತ್ತದೆ. ಹಾಗೇ ಮಧ್ಯಕಾಲೀನ ಯುಗದಲ್ಲಿ ಬಂದ ವಿಜಯನಗರ ಸಾಮ್ರಾಜ್ಯದ ನಂತರ ಅಂದರೆ, ೧೫ನೆಯ ಶತಮಾನದ ನಂತರ ಆ ಸಮುದಾಯಕ್ಕೆ ಮತ್ತೆ ಅಧಿಕಾರ ಸಿಗಲು ೫೦೦ ವರ್ಷಗಳೇ ಕಳೆದಿವೆ. ಈ ಹೊತ್ತಿನಲ್ಲಿ ಸಿದ್ದರಾಮಯ್ಯನವರು ನಾಯಕತ್ವ ವಹಿಸಿರುವಾಗ ಜವಾಬ್ದಾರಿಗಳು ಅಷ್ಟೇ ಗುರುತರವಾಗಿವೆ.

ಹಾಗಾಗಿ, ಈ ನಾಯಕತ್ವಕ್ಕೆ ಬೆಂಬಲ ಕೊಡುವ ಜನರು ಮೈಮರೆಯದಂತೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗು ತ್ತದೆ. ಉಡುಪಿಯಿಂದ ಎದ್ದಿರುವ ದಿಕ್ಕು ತಪ್ಪಿಸುವ ಪ್ರಶ್ನೆಗಳಿಗೆ ಮನ್ನಣೆ ಕೊಡುವುದಕ್ಕಿಂತ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳ ಬೇಕಾಗಿದೆ. ಇಂತಹ ವಾದಗಳು ಪ್ರಗತಿಯೆಡೆಗೆ ಸಾಗಬೇಕಾದ ಜನರ ಗಮನವನ್ನು ಅಡ್ಡದಾರಿ ಗೆಳೆಯುತ್ತವೆ.

ಕರ್ನಾಟಕದಲ್ಲಿ ಶೇಕಡ ೫೦ಕ್ಕೂ ಹೆಚ್ಚು ಹೆಣ್ಣುಮಕ್ಕಳು ೧೫ ವರ್ಷಕ್ಕೆ ಮೊದಲೇ ಮದುವೆಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಗುಲ್ಬರ್ಗ, ಕೊಪ್ಪಳ, ಹಾವೇರಿ, ಬಳ್ಳಾರಿ ಹಾಗೂ ದಕ್ಷಿಣ ಕರ್ನಾಟಕದ ಚಾಮರಾಜ ನಗರಗಳಲ್ಲಿ ಇವರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ಅದರಲ್ಲೂ ಕುರುಬ ಸಮುದಾಯದ ಹೆಣ್ಣು ಮಕ್ಕಳಿಗೆ ನಾಲ್ಕೈದು ವರ್ಷಕ್ಕೇ ತಾಳಿ ಕಟ್ಟಲಾಗುತ್ತಿದೆ. ತೊಟ್ಟಿಲ ಮದುವೆಗಳು ಇಂದಿಗೂ ನಿರಂತರವಾಗಿ ನಡೆ ಯುತ್ತಿವೆ ಎಂದರೆ ಅದು ಅತಿಶಯೋಕ್ತಿಯಲ್ಲ.
ಯಾದಗಿರಿ ಸಮೀಪದ ಹಳ್ಳಿ ಕಾನಳ್ಳಿ. ಮಲ್ಲಮ್ಮ, ಬಸಮ್ಮ, ಸಾಕಮ್ಮ, ದೇವಮ್ಮ ಇವ ರೆಲ್ಲರೂ ಮೂರು–ನಾಲ್ಕು ವಯಸ್ಸಿಗೇ ಮದುವೆ ಯಾದವರು. ಸೋದರಮಾವನಿಗೆ, ಇಲ್ಲವೇ ಸೋದರಮಾವನ ಮಗ ಅಥವಾ ಮತ್ಯಾರಾ ದರೂ ಕುಟುಂಬದ ಹುಡುಗರಿಗೆ ಕೊಟ್ಟವರು. ಈ ಹುಡುಗಿಯರನ್ನು ಹನ್ನೆರಡು ಹದಿಮೂರಕ್ಕೆ ಮೈನೆರೆದಾಗ ಅವರ ಗಂಡನ ಮನೆಗೆ ಕಳುಹಿಸಿ ದ್ದಾರೆ. ಹದಿನೈದಕ್ಕೆ ತಾಯಿಯಾಗಿ, ಹದಿನಾರಕ್ಕೆ ಕಂಕುಳಲ್ಲಿ ಒಂದು, ಹೊಟ್ಟೆಯಲ್ಲಿ ಮತ್ತೊಂದನ್ನು ಹೊತ್ತ ಪುಟ್ಟ ತಾಯಂದಿ ರಾಗಿದ್ದಾರೆ.

ಕೂಲಿ ಮಾಡುತ್ತಾ ಬದುಕನ್ನು ತೇಯುತ್ತಿದ್ದಾರೆ. ಕುರುಬ, ಕಬ್ಬಲಿಗ ಈ ಜಾತಿ ಯಿಂದ ಬಂದ ಈ ಪುಟ್ಟ ತಾಯಂದಿರು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಗಾರೆ ಕೆಲಸಕ್ಕೆ ಕಚ್ಚೆ ಕಟ್ಟಿ ನಿಂತಿದ್ದಾರೆ. ಇಲ್ಲವೇ ಮನೆ ಮನೆಯ ಕಸಗುಡಿಸಿ ಪಾತ್ರೆ ಬೆಳಗುತ್ತಾರೆ. ಚಾಮರಾಜ ನಗರದ ಉಪ್ಪಾರರೂ ಇಂತಹುದೇ ಸುಳಿಗೆ ಸಿಕ್ಕಿ ಮೂವತ್ತು ವಯಸ್ಸಿಗೆಲ್ಲಾ ಗಂಡ ಬಿಟ್ಟ ಒಂಟಿ ಹೆಣ್ಣುಗಳಾಗಿ ಉಳಿದು ಕೂಲಿ ನಾಲಿ ಮಾಡಿ  ಬದುಕನ್ನು ಕರಗಿಸುತ್ತಾರೆ.

ಇವರೆಲ್ಲರ ಬಿಡು ಗಡೆಗೆ ಶೈವ ಅಥವಾ ವೈಷ್ಣವ ಸಿದ್ಧಾಂತಗಳು ಸಹಾಯಕ್ಕೆ ಬರಲಾರವು. ಬಡತನಕ್ಕಂಟಿದ ಮೂಢನಂಬಿಕೆ ನಾಯಿಯ ಮೈಗೆ ಹತ್ತಿದ ಚಿಗಟದ ಹಾಗೆ ಜೊತೆಯಲ್ಲೇ ಸದಾ ರಕ್ತ ಹೀರು ತ್ತದೆ. ಬಿಡುಗಡೆಯ ಕುರಿತು ಯೋಚಿಸುವ ಸದ ವಕಾಶ ಅಹಿಂದ ಚಳವಳಿಯದಾಗಬಾರದೇಕೆ?

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...