Friday, November 22, 2013

ಪೆರಿಯಾರ್: ಮಾನವೀಯ ಸಂಬಂಧಗಳ ಸಂತಶೂದ್ರ ಶ್ರೀನಿವಾಸ

ಕೃಪೆ : ವಾರ್ತಾಭಾರತಿ


ನಮ್ಮ ನಡುವೆ ಮೂಢನಂಬಿಕೆಗಳನ್ನು ಕುರಿತು ತೀವ್ರವಾದ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಪ್ರೇರಕ ಶಕ್ತಿಯಾದವರು: ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯವರು. ಲೇಖಕರು. ನ್ಯಾಯವಾದಿಗಳು, ಸಮಾಜ ಸುಧಾರಕರು, ಇತಿಹಾಸಕಾರರು ಮತ್ತು ಇತರೆ ಸಾಮಾಜಿಕ ಚಿಂತಕರನ್ನೆಲ್ಲ ಒಳಗೊಂಡು ಒಂದು ಅದ್ಭುತ ಅಧ್ಯಯನ ರೂಪದ ದೀರ್ಘ ಟಿಪ್ಪಣಿ ಯನ್ನು ಸಿದ್ಧಪಡಿಸಿದ್ದಾರೆ. ಮತ್ತು ಸಾರ್ವಜನಿಕ ವಾಗಿ ಚರ್ಚೆಗೆ ಬಿಟ್ಟಿದ್ದಾರೆ. 

 

ಹಾಗೆಯೇ ಇದನ್ನು ಸರಕಾರಕ್ಕೂ ಸಲ್ಲಿಸಿದ್ದಾರೆ. ಆದರೆ,ದುರಂತ ವೆಂದರೆ: ಸರಕಾರವೇ ಮುಂದೆ ನಿಂತು ಈ ಕೆಲಸ ಮಾಡಿಸಿದೆ ಎಂಬ ಅಭಿಪ್ರಾಯ ವನ್ನು ಕೆಲವು ಜಾತೀಯವಾದಿ ಸಂಘಟನೆಗಳು ಗುಲ್ಲೆಬ್ಬಿಸುತ್ತಿವೆ. ಅಕಸ್ಮಾತ್ ಮೂಢನಂಬಿಕೆಗಳ ವೈಪರೀತ್ಯಗಳನ್ನು ಕಂಡು ಸರಕಾರವೇ ಇಂಥದ್ದನ್ನು ಕಾನೂನಿನ ಸಾಧ್ಯ ಸಾಧ್ಯತೆಗಳ ಚೌಕಟ್ಟಿನಲ್ಲಿ ವ್ಯವಸ್ಥೆ ಮಾಡಿದರೆ ತಪ್ಪೇನು? ಯಾಕೆಂದರೆ ಅಷ್ಟೊಂದು ತೀವ್ರ ಪ್ರಮಾಣದಲ್ಲಿ; ನಮ್ಮ ಮಧ್ಯೆ ಜ್ಯೋತಿಷಿಗಳು, ವಾಸ್ತುವಿನ ಅವೈಜ್ಞಾನಿಕ ಪಂಡಿತರು, ರೋಲ್‌ಕಾಲ್ ದೇವರನ್ನು ಸೃಷ್ಟಿಸುವ ಸಮಾಜ ಘಾತುಕರ ನಡುವೆ; ಒಂದು ರೀತಿಯ ಒಳ ಒಪ್ಪಂದ ಇರುವ ರೀತಿಯಲ್ಲಿ ಕೆಲವು ಮಾಧ್ಯಮಗಳನ್ನು ಬಳಸಿಕೊಂಡು ಮಿಂಚುತ್ತಿದ್ದಾರೆ.

ಅಸತ್ಯವನ್ನೇ ವರ್ಣಮಯವಾಗಿ ಹೇಳುತ್ತ ‘ಸತ್ಯ’ವೆಂದು ನಂಬಿಸಿ ವಿವಿಧ ರೂಪದಲ್ಲಿ ವಸೂಲಿಗೆ ತೊಡಗಿ ದ್ದಾರೆ. ಇದನ್ನು ತೀವ್ರವಾಗಿ ಪ್ರತಿಭಟಿಸುವ ವಿಚಾರವಾದಿ ಸಂಘಟನೆಗು ದುರ್ಬಲವಾಗಿ ರುವುದನ್ನು ಅನುಕೂಲಕರವಾಗಿ ಬಳಸಿ ಕೊಳ್ಳುತ್ತಿದ್ದಾರೆ. ಹಾಗೆಯೇ ನಗರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಸೂಲಿಗಾಗಿಯೇ ಮೂಲೆಗುಂಪಾಗಿದ್ದ ದೇವರುಗಳು ಬೀದಿಗೆ ಬರುತ್ತಿದ್ದಾರೆ. 

ಇದರ ಜೊತೆಗೆ ಯಾವ ಯಾವುದೋ ಹೆಸರಿನ ‘ದೇವತೆಗಳು’ ಧುತ್ತನೆ ನಾಲ್ಕುಗೋಡೆಗಳ ಮಧ್ಯೆ ಬಂದು ಕೂತು ದೇವಸ್ಥಾನಗಳ ಹೆಸರಿನಲ್ಲಿ ಪೂಜೆಯನ್ನು ಸ್ವೀಕರಿಸುತ್ತಿದ್ದಾರೆ. ಇದೆಲ್ಲ ಅಕ್ರಮ ವಸೂಲಿದಾರರ ಕುತಂತ್ರ. ಕೆಲವು ವರ್ಷಗಳ ಹಿಂದೆ ಇಂಥದ್ದನ್ನೇ ಕುರಿತು ಚರ್ಚಿಸಲು ನಾವು ಒಂದಷ್ಟು ಮಂದಿ ಲೇಖಕರು ಮತ್ತು ಕಲಾವಿದರು ಪ್ರೊ.ಬಿ.ಕೆ.ಚಂದ್ರಶೇಖರ್ ಅವರ ಮನೆಯಲ್ಲಿ ಸೇರಿದ್ದೆವು. 

ಅಂದು ಮುಖ್ಯವಾಗಿ ತಮಿಳು ನಾಡಿನಲ್ಲಿ ತೀವ್ರ ರೀತಿಯಲ್ಲಿ ತಲೆಯೆತ್ತಿ ಪ್ರಚಾರಗೊಳ್ಳುತ್ತಿರುವ ‘ಓ ಶಕ್ತಿ’ ದೇವತೆಗೆ ಸಂಬಂಧಿಸಿದಂತೆ ಚರ್ಚಿಸಲು ತಮಿಳು ನಾಡಿನಲ್ಲಿ ಇಂಥದ್ದರ ವಿರುದ್ಧ ದೊಡ್ಡ ದನಿಯಾಗಿ ಸಂಘಟನೆಯನ್ನು ರೂಪಿಸಿದರು: ಮಹಾನ್ ಸಂತ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು.ಅವರ ಸಂಘಟನೆ ದುರ್ಬಲ ವಾಗಿರುವುದರಿಂದ; ಬಹುದೊಡ್ಡ ದೊಡ್ಡ ಹಿತಾಸಕ್ತಿಗಳು ‘ಓ ಶಕ್ತಿ’ಯನ್ನು ಮುಂದಿಟ್ಟು ಕೊಂಡು ‘ಭಕ್ತಿ’ಯ ಹೆಸರಿನಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದಾರೆ.

ಮೂಲಭೂತವಾಗಿ ಹೆಣ್ಣು ಮಕ್ಕಳಿಗೆ ಸೀಮಿತಗೊಂಡ ಈ ದೇವತೆ ಹುಟ್ಟಿಸುತ್ತಿರುವ ಭೀತಿ ಗಾಬರಿ ತರುವಂಥದ್ದು. ಮುಗ್ಧ ಜನರನ್ನು ಎಷ್ಟು ಪ್ರಮಾಣದಲ್ಲಿ ದಾರಿ ತಪ್ಪಿಸಬೇಕೋ ಅಷ್ಟು ಪ್ರಮಾಣದಲ್ಲಿ ಚಟುವಟಿಕೆ ನಡೆಯುತ್ತಿದೆ. ಇದು ಸತ್ಯ ಎನ್ನುವ ರೀತಿಯಲ್ಲಿ ಕೆಲವು ಜ್ಯೋತಿಷಿಗಳು ಪ್ರವಾದಿಗಳ ರೀತಿಯಲ್ಲಿ ಉಪದೇಶಕ್ಕೆ ತೊಡಗಿದ್ದಾರೆ. 

ನೂರಾರು ವರ್ಷಗಳಿಂದ ಇರುವ ನಮ್ಮ ಹಳೆಯ ದೇವಸ್ಥಾನಗಳು ಪೂಜೆ ಇಲ್ಲದೆ; ಅಲ್ಲಿಯ ಪೂಜಾರಿಗಳು ಕೂಡ ಹೊಟ್ಟೆಪಾಡಿಗಾಗಿ ಒದ್ದಾಡುತ್ತಿದ್ದಾರೆ. ಹಾಗೆಯೇ ‘ಓ ಶಕ್ತಿ’ಯ ನೆಪದಲ್ಲಿ ಪ್ರತಿವರ್ಷ ಲಕ್ಷಾಂತರ ಕೆಂಪು ಸೀರೆಗಳು ಕೆಲವು ಪಟ್ಟಭದ್ರ ರಿಂದ ಸಿದ್ಧವಾಗುತ್ತಿವೆ. ಇದು ಕೇವಲ ತಮಿಳು ನಾಡಿಗೆ ಮಾತ್ರ ಸೀಮಿತವಾಗಿಲ್ಲ.ಒಟ್ಟು ದಕ್ಷಿಣ ಭಾರತವನ್ನು ಆವರಿಸಿಕೊಂಡಿದೆ. ಇದರೊಟ್ಟಿ ಗೆಯೇ ಮಾಯ ಮಾಟವೂ ವಿಕೃತರೂಪಗಳಿಂದ ತನ್ನ ಕಾರ್ಯ ನಿರ್ವಹಿಸುತ್ತಿದೆ.

ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿದ್ದ ರಾಮ, ಕೃಷ್ಣ, ಈಶ್ವರ ಮುಂತಾದ ದೇವರ ದೇವಸ್ಥಾನಗಳ ಜಾಗದಲ್ಲಿ ‘ಶನಿಮಹಾತ್ಮ’ ದೇವಸ್ಥಾನಗಳು ಎದ್ದು ನಿಲ್ಲುತ್ತಿವೆ. ಭೀತಿ ಮತ್ತು ಭಕ್ತಿಯನ್ನು ಸಮೀಕರಿಸಿ ವಸೂಲಿ ಬಾಜಿಗೆ ಸುಲಭ ತಂತ್ರವನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಇದೆಲ್ಲದಕ್ಕಿಂತ ದೊಡ್ಡ ದುರಂತವೆಂದರೆ ಜನಸಾಮಾನ್ಯರಲ್ಲಿ ಬದುಕುವ ‘ವಿಲ್‌ಪವರ್’ನ್ನೇ ದುರ್ಬಲಗೊಳಿ ಸುತ್ತಿದ್ದಾರೆ.

ಮೊದಲೇ ಆರ್ಥಿಕ ಸಂಕಷ್ಟಗಳಿಂದ ನರಳುತ್ತಿರುವ ಜನರನ್ನು ಅತಂತ್ರಗೊಳಿಸು ತ್ತಿದ್ದಾರೆ. ಈ ದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಇದನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ನಿಜವಾದ ಅಪ ಪ್ರಚಾರವೆಂದರೆ; ದೇವಸ್ಥಾನಗಳನ್ನು ಮುಚ್ಚಿಸುತ್ತಾರೆನ್ನುವುದು, ಸಮಾಜದ ಕೆಲವು ಪ್ರಾಮಾಣಿಕ ನಂಬಿಕೆಗಳನ್ನು ನುಚ್ಚುನೂರು ಮಾಡುವರು ಎಂದು ಒಂದೇ ಸಮನೆ ಕೆಲವರು ಕೂಗುತ್ತಿದ್ದಾರೆ ಮತ್ತು ಸುದ್ದಿ ಹಬ್ಬಿಸುತ್ತಿದ್ದಾರೆ. 

ಹಾಗೆ ನೋಡಿದರೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲಘಟ್ಟದಲ್ಲಿ ಅತ್ಯಂತ ನಿರ್ದಾಕ್ಷಿಣ್ಯವಾಗಿ ಬೀದಿ ಬದಿಯಲ್ಲಿ, ರಸ್ತೆ ಬದಿಯಲ್ಲಿ ಸಾರ್ವಜನಿಕರಾಗಿ ತೊಂದರೆ ಯಾಗುತ್ತಿದ್ದ ಎಲ್ಲ ಮತಧರ್ಮದವರ ‘ರೋಲ್‌ಕಾಲ್’ ಮಂದಿರಗಳನ್ನು ಚರ್ಚುಗಳನ್ನು ನೆಲಸಮ ಮಾಡಿಸಿದರು. ಆಗ ಕೆಲವರು ಶಾಪ ಹಾಕುವ ರೀತಿಯಲ್ಲಿ ಮಾತಾಡಿಕೊಂಡಾಗ; ನಿರ್ಭಯವಾಗಿ ಒಂದು ಮಾತು ಹೇಳಿದರು: 

‘‘ನನ್ನನ್ನು ಬೀದಿಯ ಬದಿಯ ವಸೂಲಿ-ದೇವರು ರಕ್ಷಣೆ ಮಾಡದಿದ್ದರೂ; ನೂರಾರು ವರ್ಷಗಳಿಂದ ಇರುವ ಹಳೆಯ ದೇವಸ್ಥಾನಗಳ ದೇವರು ರಕ್ಷಣೆ ಮಾಡುವರು’’ ಎಂದು. ಈಗ ಆ ರೀತಿಯಲ್ಲಿ ಮಾತಾಡುವವರೇ ಇಲ್ಲ. ಜಾತಿಗಳು ಪ್ರಾಬಲ್ಯ ವಾಗಿರುವ ಕಾರಣಕ್ಕಾಗಿ; ಎಲ್ಲದರಲ್ಲೂ ರಾಜಿ ಮಾಡಿಕೊಂಡು ಆಡಳಿತ ನಡೆಸುವ ವ್ಯವಸ್ಥೆ ಸೃಷ್ಟಿಯಾಗುತ್ತಿದೆ. ಇಂಥ ವೈಪರೀತ್ಯಗಳು ತೀವ್ರ ರೀತಿಯಲ್ಲಿ ಜನಸಾಮಾನ್ಯರ ನಡುವೆ ಗಟ್ಟಿಯಾಗುತ್ತಿರುವ ಸಮಯದಲ್ಲಿ ‘ಪೆರಿಯಾರ್’ ಮತ್ತು ‘ನಾರಾಯಣ ಗುರು’ಅವರ ರೀತಿಯಲ್ಲಿ ಸಾಮಾಜಿಕ ಅನಿಷ್ಟಗಳ ಬಗ್ಗೆ ಧ್ವನಿಯೆತ್ತುವ ಸಂತ ಸಮಾನರು ಬೇಕಾಗಿದೆ.
ನೂರಾರು ವರ್ಷ ಗಳಿಂದ ಈ ರೀತಿಯಲ್ಲಿ ಮೂಢ ನಂಬಿಕೆಗಳನ್ನು ನಮ್ಮ ಸಂತ ಮಹನೀಯರು ವಿರೋಧಿ ಸುತ್ತಲೇ ಬಂದಿದ್ದಾರೆ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಪೆರಿಯಾರ್ ಅವರು ಎತ್ತಿದ ಕೂಗು ಅತ್ಯಂತ ಮಹತ್ವಪೂರ್ಣವಾದದ್ದು. ಮಾನವೀಯ ನೆಲೆಯಲ್ಲಿ ಅರ್ಥ ಪೂರ್ಣವಾದದ್ದು.

ಅದಕ್ಕಾಗಿಯೇ ‘ದ್ರಾವಿಡ ಕಜಗಂ’ಎಂಬ ವ್ಯಾಪಕ ಅರ್ಥದಲ್ಲಿ ಕೆಲಸ ಮಾಡುವ ಸಂಘಟನೆ ಯನ್ನು ಕಟ್ಟಿದರು. ಒಂದು ದೃಷ್ಟಿಯಿಂದ ಇದರ ಕೂಸುಗಳೇ ಡಿ.ಎಂ.ಕೆ. ಮತ್ತು ಎ.ಐ.ಡಿ.ಎಂ.ಕೆ. ದುರಂತವೆಂದರೆ: ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಎಲ್ಲ ಹೋರಾಟದ ಸಿದ್ಧಾಂತಗಳನ್ನು ಬದಿಗೊತ್ತಿ; ಆಡಳಿತದ ಅನುಕೂಲ ಗಳನ್ನು ಬದಿಗೊತ್ತಿ ವ್ಯವಹರಿಸುತ್ತಿದ್ದಾರೆ. ಮೂಢನಂಬಿಕೆಗಳು ಮತ್ತು ಪುರೋಹಿತ ಶಾಹಿಯ ವಿರುದ್ಧ ಹುಟ್ಟಿಕೊಂಡ ದ್ರಾವಿಡಕಜಗಂ; ಸಾಮಾಜಿಕವಾಗಿ ವೂಡಿರುವ ಸಾಧನೆ ಸ್ಮರಣೀಯವಾದದ್ದು. ಎಲ್ಲ ಸಣ್ಣ ಪುಟ್ಟ ಜಾತಿಗಳಲ್ಲಿ ಸ್ವಾಭಿಮಾನವನ್ನು ಬೆಳೆಸಿತು. ಇದರಿಂದ ಎಂತೆಂಥ ನಾಯಕರು ಬೆಳಕಿಗೆ ಬಂದರು. 

ಇದು ಮುಂದುವರಿದು ಸಾಹಿತ್ಯ ಮತ್ತು ಇತರೆ ಕಲಾ ಪ್ರಕಾರಗಳಲ್ಲಿ ಅದ್ಭುತ ಪ್ರತಿಭೆಗಳು ಕಾಣಿಸಿಕೊಂಡವು. ಮತ್ತೊಂದು ಅರ್ಥದಲ್ಲಿ ಸ್ವಾತಂತ್ರ ಚಳವಳಿಯ ದೊಡ್ಡ ಕೊಡುಗೆಯಾಗಿಯೂ ನಾವು ಇದನ್ನು ಚರ್ಚಿಸಬೇಕಾಗಿದೆ. ದೇವರು ಮತ್ತು ಧರ್ಮವೆಂಬುದು ಅದರ ಪಾಡಿಗೆ ಅದು ಸಾಂಕೇತಿಕವಾಗಿ ಇರಬೇಕಾಗುತ್ತದೆ. ಆದರೆ ಅದನ್ನೇ ಮುಂದಿಟ್ಟುಕೊಂಡು ಶೋಷಣೆಯ ದಾರಿಗಳನ್ನು ಬೆಳೆಸುತ್ತ ಹೋದರೆ ಅಪರಾಧವಾಗುತ್ತದೆ.

ಇಂಥ ಅಪರಾಧಗಳು ಚರಿತ್ರೆಯಲ್ಲಿ ಎಷ್ಟು ಭೀಕರವಾಗಿ ನಡೆದು ಬಿಟ್ಟಿವೆ. ಸಾಮಾಜಿಕವಾಗಿ ಕೆಲವು ಜಾತಿಗಳು ಕಣ್ಣು ತೆರೆಯಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಹಿಂಸೆಯನ್ನು ಅನುಭವಿಸಿವೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಕೊಡುಗೆಯಾಗಿ ಹಾವನೂರು ವರದಿಯು ಅಪೂರ್ವ ರೀತಿಯಲ್ಲಿ ಹಿನ್ನೆಲೆ ಯಾಗಿ ಕೆಲಸ ಮಾಡಿದೆ. ಸ್ವಲ್ಪ ಮಟ್ಟಿಗೆ ಇದರ ಹಿಂದೆ ‘ದ್ರಾವಿಡ ಕಜಗಂ’ ಸಂಘಟನೆಯ ಧ್ಯೇಯದ್ದೇಶದ ನೆರಳು ಬಿದ್ದಿರುವಂಥದ್ದು ನಿಜ.
ಇದಕ್ಕೆ ದೇವರಾಜ ಅರಸು ಅವರಂಥ ನಾಯಕರು ತರ್ಕಬದ್ಧವಾಗಿ ಬಳಸಿಕೊಂಡರು. ಯಾರೂ ಅದರ ಬಗ್ಗೆ ಕ್ಷುಲ್ಲಕವಾಗಿ ಗಟ್ಟಿದನಿ ಯಲ್ಲಿ ಮಾತಾಡದಂತೆ; ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಜಾರಿಗೆ ತಂದರು. ಇಂಥದ್ದು ವಿವಿಧ ರೂಪಗಳಲ್ಲಿ ಭಾರತದ ಉದ್ದಗಲಕ್ಕೂ ನಡೆದಿದೆ.

ನಮ್ಮ ವಿದ್ಯಾರ್ಥಿ ದಿನಗಳಲ್ಲಿ ಹಾಗೂ ನಾನು ‘ಶೂದ್ರ’ ಪ್ರಾರಂಭಿಸಿದ ದಿನಗಳಲ್ಲಿ ಪೆರಿಯಾರ್ ಮತ್ತು ಕೋವೂರ್ ಅವರು ಮೂಢನಂಬಿಕೆಗಳ ವಿರುದ್ಧ ಸಾರಿದ ಸಮರ ಚಾರಿತ್ರಿಕವಾದದ್ದು. ಕೆಲವೊಮ್ಮೆ ಅದು ಅತ್ಯಂತ ಕ್ರೂಡ್ ಅನ್ನಿಸಿದರೂ; ಆ ಕಾಲಘಟ್ಟಕ್ಕೆ ಅಂಥದ್ದು ಅನಿವಾರ್ಯವಾಗಿತ್ತು. ಆ ನಿಟ್ಟಿನಲ್ಲಿ ಪೆರಿಯಾರ್ ಅವರು ಮಾಡಿರುವ ಕೆಲಸ ಸ್ತುತ್ಯಾರ್ಹವಾದದ್ದು. ಅವರ ಸಂಯಮ ಮತ್ತು ಕೆಚ್ಚು ಸದಾ ಚರ್ಚಿಸಬಹು ದಾದಂಥದ್ದು. 

ನಾವು ಒಂದಷ್ಟು ಗೆಳೆಯರು ಪೆರಿಯಾರ್ ಅವರ ಕಾರ್ಯಕರ್ತರಾಗಿ ದುಡಿದೆವು ಎಂಬುದೇ ಸ್ಮರಣೀಯವಾದ ನೆನಪು. ನಾವು ಅವರ ಜೊತೆಯಲ್ಲಿ ಕೆಲಸ ಮಾಡುವಾಗ ತೊಂಬತ್ತರ ವಯಸ್ಸಿನ ಗಡಿಯನ್ನು ದಾಟಿದ್ದರು. ಆದರೂ ಅವರ ಉತ್ಸಾಹ ಮತ್ತು ಜೀವನ ಪ್ರೀತಿ ಎಷ್ಟು ಗಾಢವಾಗಿತ್ತು. ತಾವು ನಂಬಿದ ಹೋರಾಟಕ್ಕೆ ಸಂಬಂಧಿಸಿದಂತೆ ಕಿಂಚಿತ್ತೂ ಹೊಂದಾಣಿಕೆ ಮಾಡಿಕೊಳ್ಳದೇ ಮುಂದುವರಿದವರು. 

ನೂರಾರು ವರ್ಷಗಳಿಂದ ಬೇರುಬಿಟ್ಟಿದ್ದ ಮೂಢ ನಂಬಿಕೆಗಳ ‘ಮೂರ್ತಿಭಂಜಕ’ರಾಗಿ ನಿರ್ವಹಿಸಿದ ಪಾತ್ರ ಚಾರಿತ್ರಿಕವಾದದ್ದು. ಜಾತಿವಾದಿಗಳು ಅವರಿಗೆ ಯಾವ ಯಾವ ರೀತಿಯಲ್ಲಿ ಶಾಪ ಹಾಕಿದರು. ಹಿಂಸಾತ್ಮಕವಾಗಿ ಅವರ ಕಡೆಗೆ ಕಲ್ಲುಗಳನ್ನು ಮೊಟ್ಟೆಗಳನ್ನು ಮತ್ತು ಚಪ್ಪಲಿಗಳನ್ನು ಎಸೆದರು. 

ಆದರೆ ಅವರು ಗಾಂಧೀಜಿಯವರ ಮೂಲಕ ಸತ್ಯಾಗ್ರಹವನ್ನು ನಂಬಿದ್ದರಿಂದ ಉದ್ದಕ್ಕೂ ಅಹಿಂಸಾತ್ಮಕವಾಗಿಯೇ ನಡಕೊಂಡರು. ಇದು ನಿಜವಾಗಿಯೂ ಹೆಚ್ಚುಗಾರಿಕೆಯೇ ಸರಿ. ‘ದ್ರಾವಿಡಕಜಗಂ’ ಚಳವಳಿ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಅದರ ಕೆಲವು ಕಾರ್ಯಕರ್ತರು ಮಡಿವಂತ ಬ್ರಾಹ್ಮಣರ ಜುಟ್ಟುಗಳನ್ನು ಕತ್ತರಿಸಿದ ಪ್ರಸಂಗಗಳನ್ನು ಬಿಟ್ಟರೆ; ಮತ್ತೆಲ್ಲಿಯೂ ಹಿಂಸಾತ್ಮಕ ಘಟನೆಗಳು ನಡೆದದ್ದಕ್ಕೆ ಉದಾಹರಣೆಗಳು ಇಲ್ಲ. 

ಆದರೆ ಪೆರಿಯಾರ್ ಅವರು ನಮ್ಮ ಪುರಾಣಗಳನ್ನು ಅಧ್ಯಯನ ಮಾಡಿದ್ದರಿಂದ ಅಧ್ಯಯನ ಶೀಲತೆಗೆ ಧಕ್ಕೆ ತರದೆ ಕಾರ್ಯಕರ್ತರಿಗೂ ‘ವಾಗ್ವಾದ ಮತ್ತು ಸಂವಾದ’ಗಳಲ್ಲಿ ನಂಬಿಕೆಯನ್ನು ಬೆಳೆಸಿದರು. ಮೂರ್ತಿ ಭಂಜಕರನ್ನಾಗಿ ಬೆಳೆಸಿದರು. ಈ ರೀತಿ ಬೆಳೆಸದಿದ್ದರೆ; ಒಂದು ವಿಶಾಲಾರ್ಥದಲ್ಲಿ ಸಾವಿರಾರು ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ತಮಿಳುನಾಡಿನ ಸೇಲಂನಲ್ಲಿ ರಾಮರ ದೇವಸ್ಥಾನದಲ್ಲಿ ರಾಮನಿಗೆ ಚಪ್ಪಲಿ ಹಾರ ಹಾಕಿದ್ದು ಐತಿಹಾಸಿಕ ಘಟನೆಯಾಗಿ ಉಳಿದಿದೆ.

ನಾನೂ ನಾಸ್ತಿಕನಾದರೂ; ಈ ರೀತಿಯ ಕ್ರಿಯೆಯ ಬಗ್ಗೆ ನನಗೆ ಗೌರವವಿಲ್ಲ. ಆದರೆ ಪೆರಿಯಾರ್ ಅವರ ಸಿಟ್ಟು ಮತ್ತು ಆಕ್ರೋಶದ ಹಿಂದಿನ ಮಾನವೀಯ ಸಂಬಂಧಗಳ ಬಗೆಗಿನ ವಿಷಾದವನ್ನು ನಾವು ಯಾರೂ ಪ್ರಶ್ನಿಸುವಂತಿಲ್ಲ. ಈ ಘಟನೆ ನಡೆದಾಗ; ಕೇವಲ ತಮಿಳುನಾಡಿನ ಮಡಿವಂತ ಜನತೆ ಮಾತ್ರ ಅಲ್ಲ; ರಾಷ್ಟ್ರದ ಉದ್ದಗಲಕ್ಕೂ ಪೆರಿಯಾರ್ ಅವರಿಗೆ ಭೌತಿಕವಾಗಿ ತೀವ್ರರೀತಿಯ ಪರಿಣಾಮ ಘಟಿಸಬಹುದು ಎಂದು ತಿಳಿದಿದ್ದರು.

ಆದರೆ ಅಂಥದ್ದು ಸಣ್ಣ ಪ್ರಮಾಣ ದಲ್ಲಿಯೂ ಪೆರಿಯಾರ್ ಅವರಿಗಾಗಲಿ, ಅವರ ಕಾರ್ಯಕರ್ತರಿಗಾಗಲಿ ಘಟಿಸಲಿಲ್ಲ. ವೈಪರೀತ್ಯವೆಂದರೆ: ಇದಕ್ಕೆ ಮೂರು ದಶಕಗಳ ಹಿಂದೆ ಮತೀಯವಾದಿಗಳು ಹಿಂಸಾತ್ಮಕ ನೆಲೆಯಲ್ಲಿ ರಾಮ ಮಂದಿರವನ್ನು ‘ಅಯೋಧ್ಯೆಯನ್ನು’ ಕೃತಕವಾಗಿ ಸೃಷ್ಟಿಸಿಕೊಂಡು ಕಟ್ಟಲು ಹೋದರು.

ಬಾಬರಿ ಮಸೀದಿಯನ್ನು ಕೆಡವಿದರು. ಒಂದು ವೇಳೆ ಅಂಥ ಜಾಗದಲ್ಲಿ ಪೆರಿಯಾರ್ ಅವರಂಥ ಮೂರ್ತಿ ಭಂಜಕ ನಾಯಕರಿದ್ದಿದ್ದರೆ; ಸೃಷ್ಟಿಯಾಗುತ್ತಿದ್ದ ಸಂವಾದ ನಿಜವಾಗಿಯೂ ಬೇರೆ ರೀತಿಯದಾಗಿರುತ್ತಿತ್ತು. ಬಾಬರಿ ಮಸೀದಿಯನ್ನು ಕೆಡವದೆ ಕೆಲವು ಕಳಂಕಗಳನ್ನು ತಪ್ಪಿಸಿ ಮತೀಯ ಸಾಮರಸ್ಯದ ನೆಲೆಯಲ್ಲಿ ಅಪೂರ್ವ ಕೆಲಸ ನಡೆಯುತ್ತಿತ್ತೇನೋ. ಇದು ನನ್ನ ಆಶಯ. ಆದರೆ ಆ ಶಕ್ತಿ ನಿಜವಾಗಿಯೂ ಪೆರಿಯಾರ್ ರಾಮಸ್ವಾಮಿ ನಾಯಕರಿಗಿತ್ತು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...