Tuesday, November 26, 2013

ಫಾಸ್ಟ್ ಫುಡ್ ಮುಂದೆ ನಮ್ಮ ರೊಟ್ಟಿ..ಚಪಾತಿ..ಮುದ್ದೆಗಳೇ ಹಿಂದೆ..




  -ಡಾ.ಎಸ್.ಬಿ.ಜೋಗುರ



ಮುಂದಿನ ಪೀಳಿಗೆಗೆ ಫಾಸ್ಟ್ ಫುಡ್ ಭರಾಟೆಯಲ್ಲಿ ನಮ್ಮ ಅಡುಗೆ ಮನೆಯ ರೊಟ್ಟಿ, ಮುದ್ದೆ, ಚಪಾತಿಗಳೇ ಅಪರಿಚಿತವಾಗುವ ದಿನಗಳು ತುಂಬಾ ದೂರವಂತೂ ಇಲ್ಲ. ಜಾಗತೀಕರಣದ ಸಂದರ್ಭದಲ್ಲಿ ಅದರ ಭಾಗವೇ ಆಗಿ, ಪ್ರಸರಣದ ಪಾಲುದಾರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಹತ್ತು ಹಲವಾರು ಫಾಸ್ಟ್ ಫುಡ್  ಕಂಪನಿಗಳ ಸಾಲಲ್ಲಿ ಮ್ಯಾಕಡೊನಾಲ್ಡ್ ಅಗ್ರಗಣ್ಯ. ೧೯೫೫ ರ ಸಂದರ್ಭದಲ್ಲಿ ರೇ ಕ್ರ್ಯಾಕ್ ಎಂಬುವವರಿಂದ ಆರಂಭವಾದ ಈ ಫಾಸ್ಟ್ ಫುಡ್  ಮಳಿಗೆ ತುಂಬಾ ಫಾಸ್ಟಾಗೇ ಬೆಳೆದದ್ದು ಚರಿತ್ರೆ. ಅದು ಈ ಮಟ್ಟದಲ್ಲಿ ಬೆಳೆಯಬಹುದೆಂಬ ಅಂದಾಜು ಬಹುಷ: ಅದರ ಪಿತಾಮಹನಿಗೂ ಇದ್ದಿರಲಿಕ್ಕಿಲ್ಲ. ಪ್ರಸ್ತುತ ಸಂದರ್ಭದಲ್ಲಿಯ ಬದುಕಿನ ವೇಗಕ್ಕೆ ಪೂರಕವಾಗಿ ಅದು ಬೆಳೆದದ್ದಂತೂ ಹೌದು. ಅಮೆರಿಕೆಯಂಥಾ ರಾಷ್ಟ್ರಗಳಲ್ಲಂತೂ ಈ ಮಳಿಗೆ ಒಂದು ಜನಪ್ರಿಯ ಸಂಸ್ಕೃತಿಯ ಪ್ರಾತಿನಿಧಿಕ ರೂಪವಾಗಿ ಗುರುತಿಸಿಕೊಳ್ಳುತ್ತಿದೆ. ಅಮೇರಿಕೆಯ ಯಾವುದೋ ಒಂದು ಭಾಗದಲ್ಲಿ ಈ ಮ್ಯಾಕಡೊನಾಲ್ಡ್ ಮಳಿಗೆ ಆರಂಭವಾಗುತ್ತಿದೆ ಎಂದರೆ ಆ ಭಾಗದ ಯುವಕರಿಗೆ ಅದೊಂದು ಹೆಮ್ಮೆಯ ವಿಷಯ. ಆ ಭಾಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಡ್ಡೆಯಾಗಿ ಅದು ಮನ್ನಣೆ ಗಳಿಸುತ್ತದೆ. ಫಾಸ್ಟ್ ಫುಡ್ ಜೊತೆಗೆ ತನ್ನದೇಯಾದ ವಿಶಿಷ್ಟ ಪರಂಪರೆಯೊಂದನ್ನು ಈ ಮ್ಯಾಕ್ಡೊನಾಲ್ಡ್ ಹುಟ್ಟುಹಾಕಿದೆ. ಆ ಮಳಿಗೆಯ ಬಣ್ಣ, ಆಹಾರದ ರುಚಿ, ಕ್ರಮ ಎಲ್ಲವೂ ಈ ಪರಂಪರೆಯ ಸ್ವತ್ತೇ ಆಗಿವೆ.
   

        



    ಜೂನ್ ೨೦೧೨ ರ ವೇಳೆಗೆ ಇಡೀ ವಿಶ್ವದಲ್ಲಿ ಸುಮಾರು ೧೧೮ ರಾಷ್ಟ್ರಗಳಲ್ಲಿ ಒಟ್ಟು ೩೩೦೦೦ ಮ್ಯಾಕಡೊನಾಲ್ಡ್ ಫಾಸ್ಟ್ ಫುಡ್  ಮಳಿಗೆಗಳಿವೆ. ಮೆರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾರ್ಜ್ ರಿಟ್ಜರ್ ಎನ್ನುವವರು ತಮ್ಮ ಕೃತಿ ’ದ ಮ್ಯಾಕ್ಡೊನಾಲ್ಡೈಜೇಶನ್ ಆಫ್ ಸೊಸೈಟಿ’ ಎನ್ನುವುದರಲ್ಲಿ ಆ ಬಗ್ಗೆ ವಿವರಿಸಿದ್ದಾರೆ. ೨೦೦೬ ರ ಸಂದರ್ಭದಲ್ಲಿ ಈ ಫಾಸ್ಟ್ ಫುಡ್ ಸಂಸ್ಥೆ ೨೧.೬ ಬಿಲಿಯನ್ ಡಾಲರ್ ವ್ಯವಹಾರ ಮಾಡಿರುವುದಿದೆ. ರೆಸ್ಟಾರೆಂಟ್ ಉದ್ಯಮದಲ್ಲಿ ಜಾಗತೀಕರಣದ ಭರಾಟೆಯೊಂದಿಗೆ ತೀವ್ರವಾಗಿ ಹೆಜ್ಜೆ ಹಾಕಿದ ಮ್ಯಾಕ್ಡೊನಾಲ್ಡ್ ಹೆಚ್ಚೂ ಕಡಿಮೆ ಜಾಗತೀಕರಣ ಪ್ರಕ್ರಿಯೆಯ ಎಡಗೈ-ಬಲಗೈ ಎಂದರೂ ಸಲ್ಲುತ್ತದೆ. ಮಾರ್ಟಿನ್ ಪ್ಲಿಮ್ಮರ್ ಎನ್ನುವ ಚಿಂತಕರು ಹೇಳುವ ಹಾಗೆ ’ಮುಂಬರುವ ದಿನಗಳಲ್ಲಿ ವಿಶ್ವದ ಮೂಲೆ ಮೂಲೆಯಲ್ಲೂ  ಈ ಮ್ಯಾಕ್ಡೊನಾಲ್ಡ್ ಮಳಿಗೆಗಳದ್ದೇ ಹಾವಳಿ. ಒಂದು ಮಳಿಗೆ ಈಗಾಗಲೆ ನಿಮಗೆ ಸಮೀಪದಲ್ಲಿದ್ದರೆ, ಅದರ ಇನ್ನೊಂದು ಮಳಿಗೆಯನ್ನು ಮತ್ತೂ ನಿಮಗೆ ಹತ್ತಿರವಾಗುವ ಹಾಗೆ ಸ್ಥಾಪಿಸಲಾಗುತ್ತದೆ. ಇನ್ನೂ ವಿಶೇಷವೆಂದರೆ, ಸೌಲಭ್ಯ ವಿಸ್ತರಣೆಯ ಹೆಸರಲ್ಲಿ ನಿಮ್ಮ ಮನೆಗೆ ಎಂಟ್ರಿ ಹೊಡೆದರೂ ಅಚ್ಚರಿಯಿಲ್ಲ. ಆಗ ನಿಮ್ಮ ಹಾಸಿಗೆಯಲ್ಲಿಯೇ ರೊನಾಲ್ಡ್ ಮ್ಯಾಕಡೊನಾಲ್ಡನ ಬೂಟುಗಳು, ಅವನ ಕೆಂಪು ಬಣ್ಣದ ಕೂದಲಿನ ವಿಗ್ ಕಂಡರೂ ಕಾಣಬಹುದು’ ಎನ್ನುತ್ತಾರೆ. ಅಂತರರಾಷ್ಟ್ರೀಯ ಮಳಿಗೆಗಳ ಸಂಘಟನೆಯೊಂದು ಹೇಳುವಂತೆ ೨೦೦೬ ರಲ್ಲಿ ಅಮೆರಿಕೆಯಲ್ಲಿ ಹೆಚ್ಚೂ ಕಡಿಮೆ ೭.೬೭.೪೮೩ ಇಂಥಾ ಮಳಿಗೆಗಳಿವೆ. ಇವುಗಳಲ್ಲಿ ಮ್ಯಾಕಡೊನಾಲ್ಡ್ ದ್ದೇ ಹೆಚ್ಚೂ ಕಡಿಮೆ ೬೭ ಪ್ರತಿಶತ ಪಾಲಿದೆ. ಅತಿ ಮುಖ್ಯವಾಗಿ ಫಿಜ್ಜಾ, ಬರ್ಗರ್, ಸ್ಯಾಂಡವಿಚ್ ಗಳಂಥಾ ಫಾಸ್ಟ್ ಫುಡ್ ನ್ನೇ ಗ್ರಾಹಕರಿಗೆ ಫಾಸ್ಟ್ ಆಗಿ ತಿನ್ನಿಸುವ ಈ ಮ್ಯಾಕ್ ಡೊನಾಲ್ಡ್ ದಿನಕ್ಕೆ ೫೦ ಮಿಲಿಯನ್ ಜನರ ಬಾಯಿ ಚಪಲಕ್ಕೆ ಸಜ್ಜಾಗುತ್ತದೆ. 

    ವಿಶ್ವದ ೧೧೮ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ವಹಿವಾಟು ನಡೆಸುವ ಈ ಬ್ರಾಂಡು ಜಪಾನದಲ್ಲಿ ೩೮೨೮, ಕೆನಡಾದಲ್ಲಿ ೧೩೭೫, ಚೈನಾದಲ್ಲಿ ೭೮೦, ರಷ್ಯಾದಲ್ಲಿ ೧೫೫, ಭಾರತದಂತಹ ಸಾಂಪ್ರದಾಯಿಕ ನೆಲದಲ್ಲಿ ೨೦೦೭ ರ ಸಂದರ್ಭದಲ್ಲಿ ೧೨೮ ರಷ್ಟಿದ್ದರೆ ಈಗ ೨೫೦ ರಷ್ಟು ಶಾಖೆಗಳನ್ನು ಹೊಂದಿರುವುದಿದೆ. ಕೇವಲ ಈ ಮ್ಯಾಕಡೊನಾಲ್ಡ್ ಮಾತ್ರ ಹೀಗೆ ಜಾಗತೀಕರಣದ ಲಾಭ ಪಡೆದು, ಆಯಾ ರಾಷ್ಟ್ರಗಳ ಆಹಾರವಿಧಾನ ಮತ್ತು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಬೊಬ್ಬಿರಿಯುವ ಅಗತ್ಯವಂತೂ ಇಲ್ಲ.  ಅದರ ಜೊತೆಯಲ್ಲಿ ವಾಲ್ ಮಾರ್ಟ್, ಕೆ.ಎಫ್.ಸಿ., ಸಬ್ ವೇ ಯಂಥಾ ಇನ್ನೂ ಅನೇಕ ಕಂಪನಿಗಳು ಅದೇ ಕೆಲವನ್ನು ಮಾಡುತ್ತಿವೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯಂಥಾ ಶಹರಗಳಲ್ಲಿಯೂ ಈಗ ಕೆ.ಎಫ್.ಸಿ., ಡೊಮಿನೋ ದಂಥಾ ಮಳಿಗೆಗಳು ತಳ ಊರಿದವು. ಮುಂಬರುವ ದಿನಗಳಲ್ಲಿ ತಾಲೂಕು ಮತ್ತು ಹೋಬಳಿಗಳೇ ಅವುಗಳ ಟಾರ್ಗೆಟ್. ಸಾಧ್ಯವಾದಷ್ಟು ನಿಮ್ಮ ಹತ್ತಿರ ಬಂದು ನಿಮಗೆ ಒಟ್ಟಾರೆಯಾಗಿ ಅಜ್ಞಾತವಾಗಿರುವ ರುಚಿಯೊಂದನ್ನು ನಿಮ್ಮ ನಾಲಿಗೆಗೆ ಲೇಪಿಸುತ್ತವೆ. ಇವುಗಳ ಹಾವಳಿಯ ನಡುವೆ ನಮ್ಮ ಅಡುಗೆ ಮನೆಯ ರೊಟ್ಟಿ, ಚಪಾತಿ, ಮುದ್ದೆಗಳೇ ನಮ್ಮ ಸಂತಾನಕ್ಕೆ ಪೂರ್ಣ ಪ್ರಮಾಣದಲ್ಲಿ ಅಲರ್ಜಿಯಾಗಬಹುದು.


    ಈ ಜಾಗತೀಕರಣ ಎನ್ನುವುದು ಒಂದು ವ್ಯಾಪಕವಾದ ಪ್ರಸರಣ ಪ್ರಕ್ರಿಯೆ. ಮನುಷ್ಯನ ವಿವೇಚನೆಗೆ ಅವಕಾಶ ಕೊಡದೇ, ಸಿಕ್ಕಿದ್ದನ್ನೆಲ್ಲಾ ತನ್ನ ತೆಕ್ಕೆಯಲ್ಲಿ ಬಾಚಿಕೊಳ್ಳುವ ಈ ಪ್ರಕ್ರಿಯೆಯ ನಡುವೆ ಸ್ಥಳೀಯ ಸಣ್ಣ ಪುಟ್ಟ ವಾಣಿಜ್ಯ ಮಳಿಗೆಗಳು ಹೂತುಹೋಗುವುದಂತೂ ಖಚಿತ. ಜಾಗತೀಕರಣದಂತಹ ಪ್ರಕ್ರಿಯೆ ಉಂಟು ಮಾಡಿರುವ ತೀವ್ರತರದ ಪ್ರಭಾವದ ಕಮಾಲ್ ಈ ಮ್ಯಾಕಡೊನಾಲ್ಡ್ ಮಳಿಗೆಯಲ್ಲೂ ಇದೆ. ಈ ಕೆಳಗಿನ ಕೆಲವು ಸಂಗತಿಗಳು ಆ ಮಾತನ್ನು ಪುಷ್ಟೀಕರಿಸಬಲ್ಲವು
    ಜಾಗತಿಕ ಸಂಸ್ಕೃತಿಯ ಆಚರಣೆ- ಈ ಬಗೆಯ ಮಳಿಗೆಗಳು ಮುಕ್ತ ಮಾರುಕಟ್ಟೆಯ ನೆಪದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಸ್ಥಾಪನೆಯಾದರೂ ಜಾಗತಿಕ ಮಟ್ಟದ ಸಾಂಸ್ಕೃತಿಕ ರಿವಾಜುಗಳನ್ನು ಮಾತ್ರ ಮರೆಯುವುದಿಲ್ಲ. ಈ ಮ್ಯಾಕಡೊನಾಲ್ಡ್ ಕೂಡಾ ಅಂಥಾ ಒಂದು ಜಾಗತೀಕರಣ ಪ್ರಕ್ರಿಯೆಯ ಮೂಲಕ ತನ್ನ ಬಳಿಗೆ ಬರುವವರನ್ನು ಮ್ಯಾಕ್ಡೊನಾಲ್ಡೀಕರಣಗೊಳಿಸದೇ ಬಿಡದು.
    ವಿಶ್ವಬಂಧುತ್ವ- ಇದು ವ್ಯವಹಾರಿಕವಾಗಿ ಸ್ಥಾಪನೆಯಾದ ಬಂಧುತ್ವ. ಲಾಭವನ್ನೇ ಕೇಂದ್ರೀಕರಿಸಿದ ಬಂಧುತ್ವ. ಕೆ.ಎಫ್.ಸಿ., ಸಬ್ ವೇ, ವಾಲ್ ಮಾರ್ಟ್, ಡೊಮಿನೋ ಮುಂತಾದ ಸಂಸ್ಥೆಗಳೊಂದಿಗೆ ಹೊಂದಿರುವ ಬಂಧುತ್ವ. ಈ ಬಗೆಯ ಸಂಬಂಧಕ್ಕೆ ಜಾಗತೀಕರಣವೇ ಆಧಾರ.

    ಸಾಮಾಜಿಕ ಸಂಘಟನೆ- ಜನಪ್ರಿಯ ಸಂಸ್ಕೃತಿಯ ಕಕ್ಷೆಯಲ್ಲಿ ಸೇರಿರುವ ಈ ಮ್ಯಾಕಡೊನಾಲ್ಡ್ ಫಾಸ್ಟ್ ಫುಡ್ ವಿಶ್ವದ ಎಲ್ಲ ಕಡೆಗಳಲ್ಲಿಯೂ ತನ್ನದೇಯಾದ ಒಂದು ಕರಾರುವಕ್ಕಾದ ಸಾಂಸ್ಕೃತಿಕವಾದ ರಚನೆ ಮತ್ತು ಕಟ್ಟಳೆಗಳನ್ನು ಹೊಂದಿದೆ. ಆ ಮೂಲಕ ಅದು ಜಾಗತೀಕರಣಕ್ಕೆ ಪೂರಕವಾಗಿ ಸಲ್ಲಬಹುದಾದ ಸಂಘಟನೆಯನ್ನು ರೂಪಿಸಿಕೊಳ್ಳುತ್ತದೆ.

    ಜಾಗತಿಕ ಪ್ರಜ್ಞೆ- ಈ ಬಗೆಯ ಅಂಗಡಿಗಳು ತಮ್ಮ ಬಳಿಗೆ ಬರುವ ಗ್ರಾಹಕರಿಗೆ ಒಂದು ಬಗೆಯ ಜಾಗತಿಕ ಪ್ರಜ್ಞೆಯನ್ನು ಒದಗಿಸುವ ಜೊತೆಗೆ ಅಲ್ಲಿಯ ವಿಶಿಷ್ಟ ರಿವಾಜುಗಳ ಬಗ್ಗೆ ಒಂದು ಬಗೆಯ ಮೇಲರಿಮೆಯನ್ನು ಗ್ರಾಹಕರಲ್ಲಿ ಬೆಳೆಸುವಲ್ಲಿಯೂ ಇದು ಕಸರತ್ತನ್ನು ಮಾಡುತ್ತದೆ.

ಈ ಮೇಲಿನ ಬಹುತೇಕ ಸಂಗತಿಗಳು ಮ್ಯಾಕಡೊನಾಲ್ಡೀಕರಣದ ಮೂಲಕ ಜಾಗತೀಕರಣಕ್ಕೆ ನೆರವಾಗುವ ಇಲ್ಲವೇ ಪ್ರಭಾವಕ್ಕೊಳಪಡುವ ಅಂಶಗಳಾಗಿವೆ. ಪರೋಕ್ಷವಾಗಿ ಈ ಬಗೆಯ ಬಹುತೇಕ ಫ್ರಾಂಚೈಸ್‌ಗಳು ನಾ ನಿನಗಾದರೆ, ನೀ ನನಗೆ ಎನ್ನುವ ಧೊರಣೆಯನ್ನು ಜಾಗತೀಕರಣದೊಂದಿಗೆ ಸಂಧಾನ ಮಾಡಿಕೊಂಡಂತಿವೆ. ಜಾಗತೀಕರಣದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ರೊನಾಲ್ಡ್ ರಾಬರ್ಟ್ಸನ್  ಅವರು ಸಾಂಸ್ಕೃತಿಕ ಬಹುತ್ವ ಮತ್ತು ಸಾರೂಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ’ಈ ಜಾಗತೀಕರಣ ಪ್ರಕ್ರಿಯೆ ಅಂತಿಮವಾಗಿ ಯಾವ ನೆಲದಲ್ಲಿ ಸ್ಥಳೀಯವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಗಾಧವಾಗಿ ಹೊಂದಿರಲಾಗಿದೆಯೋ ಅಂಥಾ ಕಡೆಗಳಲ್ಲಿ [ಉದಾ-ಭಾರತವನ್ನೇ ನಾವು ಹೆಸರಿಸಬಹುದು] ಜಾಗತೀಕರಣ ಅಲ್ಲಿಯ ಬಹುತ್ವವನ್ನು ಸಾರೂಪ್ಯಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.’ ಎಂದಿರುವರು. ಈ ದಿಸೆಯಲ್ಲಿ  ಜಾಗತೀಕರಣ ಪ್ರಕ್ರಿಯೆಗೆ ಸಾಥ್ ನೀಡುವ ಅಸಂಖ್ಯಾತ ವಾಣಿಜ್ಯೀಕೃತ ಸಂಸ್ಥೆಗಳ ಸಾಲಲ್ಲಿ ಈ ಮ್ಯಾಕ್ಡೊನಾಲ್ಡ್ ಕೂಡಾ ಒಂದು. ಭಾರತದಂತಹ ಬಹುತ್ವದ ನೆಲೆಯಲ್ಲಿ ಜಾಗತೀಕರಣಕ್ಕೆ ತೀವ್ರವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುವದಿಲ್ಲ. ಸಾರೂಪ್ಯ ಸಂಸ್ಕೃತಿಯ ನೆಲೆಗಳಲ್ಲಿ ಅದಾಗಲೇ ಜಾಗತೀಕರಣ ವ್ಯಾಪಕವಾದ ಪ್ರಸರಣವನ್ನು ಸಾಧ್ಯವಾಗಿಸಿಕೊಂಡಿದೆ. ಇಡೀ ವಿಶ್ವವೇ ಸಾರೂಪ್ಯತೆಯನ್ನು ಬಯಸುತ್ತದೆ. ಅದರ ಅಧಿಕೃತ ವಕ್ತಾರ ತಾನು ಎನ್ನುವ ಹಾಗೆ ಜಾಗತೀಕರಣ ವ್ಯವಹರಿಸುತ್ತಿರುವುದು ಈ ಕಾಲದ ನಗ್ನ ಸತ್ಯ. ಇದರ ಪ್ರಭಾವಳಿಯಿಂದ ಹೊರಗುಳಿಯುವದಾಗಲೀ. ತಪ್ಪಿಸಿಕೊಂಡು ಓಡಿ ಹೋಗುವುದಾಗಲೀ ಸಾಧ್ಯವಿಲ್ಲ. ಘಟಿಸುವ ಎಲ್ಲ ಬಗೆಯ ಸ್ಥಿತ್ಯಂತರಗಳಿಗೆ ಕಷ್ಟವೋ.. ಇಷ್ಟವೋ.. ಸಾಕ್ಷಿಯಾಗುವದಷ್ಟೇ ನಮ್ಮ ಮಿತಿ.

                                

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...