Wednesday, November 20, 2013

ರಾಜ ಕನಕನಾಯಕ ಕನಕದಾಸನಾದ ಕಥೆ!


ವಿಜಯಾ ಮಹೇಶ್

 

ಕುರುಬ ಸಮುದಾಯದವರನ್ನು ಪೇಜಾವರರು ಈ ಕಾಲಕ್ಕೆ ಬಿಡುವ ಹಾಗೆ ಕಾಣುತ್ತಿಲ್ಲ. ಏನಾದರೊಂದು ಗತಿ ಕಾಣಿಸಲೇಬೇಕೆಂಬ ನಿರ್ಧಾರಕ್ಕೆ ಬಂದು ಬಿಟ್ಟಿರುವಂತಿದೆ. ಈಗಾಗಲೇ ಕನಕದಾಸರು ಅವರ ಹತ್ತಿರ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದರೆ, ಇನ್ನು ‘ಇಡೀ ಕುರುಬ ಸಮುದಾಯದವೇ ನಮ್ಮ ಹತ್ತಿರ ಸಿಕ್ಕಿ ಹಾಕಿಕೊಳ್ಳಲಿ ಬಿಡಿ’ ಎನ್ನುವ ರೀತಿಯಲ್ಲಿ ಪೇಜಾವರರು ವೈಷ್ಣವ ದೀಕ್ಷೆಯ ಮಾತನ್ನಾಡುತ್ತಿದ್ದಾರೆ. 


ನಿಜ ಹೇಳುವುದಾದರೆ ಪೇಜಾವರರು ಸುಮ್ಮ ಸುಮ್ಮನೆ ಈ ರೀತಿಯ ಕಾರ್ಡ್‌ಗಳನ್ನು ಬಿಡುತ್ತಿಲ್ಲ! ಈ ಕಥೆಗಳು ಶತಶತಮಾನಗಳ ಹಿಂದೆಯೂ ಅಗಿವೆ. ಇದಕ್ಕೆ ನಾವು ಸ್ವಲ್ಪ ಅಂದರೆ ನಿನ್ನೆಯ 16ನೆ ಶತಮಾನಕ್ಕೆ ಕೊಂಚ ಹೋಗೋಣ. ಪ್ರಸಿದ್ಧ ಪಾಳೇಯಗಾರನಾಗಿದ್ದ ಬೀರಪ್ಪ ನಾಯಕ ಒಬ್ಬ ಸಮರ್ಥ ದಕ್ಷ ಅಡಳಿತಗಾರನಾಗಿದ್ದನು. ಸ್ವತಃ ವಿದ್ಯಾವಂತನಲ್ಲದೆ ಸಮ ಸಮಾಜದ ಮಾದರಿಯಲ್ಲಿ ಎಲ್ಲಾ ವರ್ಗಗಳನ್ನು ಪ್ರೀತಿಯಿಂದ ಕಾಣುತ್ತಿದ್ದನು. 

ವಿಜಯನಗರದ ದೊರೆಗೆ ಎಲ್ಲಾ ರೀತಿಯ ಬೆಂಬಲ ಕೊಟ್ಟು ಅವರ ಜೊತೆ ಬಾಂಧವ್ಯದಿಂದ ಇದ್ದು ಅಳುತ್ತಿದ್ದ ಬೀರಪ್ಪನಾಯಕನು ಶಿವನ ಆರಾಧಕ. ಬಾಡ ಕಾಗಿನೆಲೆ ಸುತ್ತಮುತ್ತಲಿನ ಪ್ರದೇಶಗಳಿಂದ ಹಿಡಿದು ಮಹಾರಾಷ್ಟ್ರದ ಹಲವು ಭಾಗಗಳವರೆಗೂ ಇದ್ದು ಕುರುಬ ಜನಾಂಗವು ನಾವಂದುಕೊಂಡಂತೆ ಅವಿದ್ಯಾವಂತರು ಸಂಸ್ಕಾರವಿಲ್ಲದವರೇನು ಆಗಿರಲಿಲ್ಲ.
ಇದು ಸನಾತನಿಗಳು ಉದ್ದೇಶಪೂರ್ವಕವಾಗಿ ಬ್ರಾಹ್ಮಣೇತರರನ್ನು ಹೀಯಾಳಿಸಿಕೊಂಡು ಬಂದ ಕಥೆಗಳಾಗಿವೆ ಅಷ್ಟೆ. ಮತ್ತೊಂದು ಜನಾಂಗದ ಅಚರಣೆಗಳನ್ನು ಕೀಳಾಗಿ ನೋಡುವುದಲ್ಲದೆ ಆ ಜನಾಂಗವು ಕೀಳು ಎನ್ನುವ ಪ್ರಖರ ಪಂಡಿತರುಗಳು ಇವರು. ರಾಜನಾಗಿದ್ದ ಬೀರಪ್ಪನಾಯಕನ ಮಗ ಕನಕನಾಯಕನು ಶೂರ ಅಪ್ರತಿಮ ಸೇನಾನಿ ಎಲ್ಲಾ ರೀತಿಯ ವಿದ್ಯೆಗಳನ್ನು ಕಲಿತಿದ್ದವನು. 

ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ ಪಟು ಎಲ್ಲವೂ ಆಗಿದ್ದು ಜೊತೆಗೆ ಅಧ್ಯಯನವನ್ನು ಗಂಭೀರವಾಗಿ ಕಂಡಿದ್ದವನು. ಬೀರಪ್ಪನಾಯಕ ತನ್ನ ಸಂಸ್ಥಾನದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದ್ದಲ್ಲದೆ ಅಪಾರ ಪ್ರಮಾಣದ ಪುಸ್ತಕ ಸಂಗ್ರಹ ಹೊಂದಿದ್ದನು. ಕಾಲಾನಂತರ ದಾಳಿಯಲ್ಲಿ ಅದು ನಾಶವಾಯಿತೆಂದು ಹೇಳಲಾಗಿದೆ. ಅನೇಕ ತತ್ವಶಾಸ್ತ್ರಗಳನ್ನು ಓದಿಕೊಂಡಿದ್ದ ಕನಕನಾಯಕ ಅಂತಿಮವಾಗಿ ಕನಕದಾಸನಾಗಿದ್ದೇ ಒಂದು ದುರಂತ ಕಥೆ!

ಬೀರಪ್ಪನಾಯಕ ಸತ್ತ ಮೇಲೆ ಕನಕನಾಯಕ ಪಾಳೇಯಗಾರನಾಗಿ ಪ್ರಜೆಗಳನ್ನು ಸಕಲ ರೀತಿಯಲ್ಲೂ ಗೌರವಿಸುತ್ತಾ ಪ್ರೀತಿ ಪಾತ್ರನಾಗಿದ್ದನು. ವಿಜಯನಗರದ ಕೃಷ್ಣದೇವರಾಯನು ಮುಸ್ಲಿಮರು ರಕ್ಕಸತಂಗಡಿಯಲ್ಲಿ ಅತಿಕ್ರಮಣ ಮಾಡಲು ಬಂದಾಗ ಕನಕನಾಯಕನಿಗೆ ಸೇನೆಯ ಸಮೇತ ಬರಲು ಹೇಳುತ್ತಾನೆ. 

ಅದರಂತೆ ಸಕಲ ಸಿದ್ಧತೆಗಳೊಡನೆ ಕನಕನಾಯಕನು ಯುದ್ಧಕ್ಕೆ ಹೊರಡುತ್ತಾನೆ. ಸ್ವತಃ ಕೃಷ್ಣದೇವರಾಯನು ಮತ್ತು ಅವನ ಸೇನೆ ಯುದ್ಧದಲ್ಲಿ ಸುಸ್ತಾಗಿ ಇನ್ನೇನು ಸೋಲು ಖಚಿತ ಎನ್ನುವಾಗ ರಣರಂಗದಲ್ಲಿ ಮುಂದಾಳತ್ವ ವಹಿಸಿ ಕನಕನಾಯಕ ಹೋರಾಡಿ ಜಯ ತಂದುಕೊಡುತ್ತಾನೆ. ಯುದ್ಧದಲ್ಲಿ ಗೆದ್ದ ಸಂಭ್ರಮವು ರಾಜಗುರು ವ್ಯಾಸರಾಯನಿಗೆ ತಲುಪುತ್ತದೆ. ಕೃಷ್ಣದೇವರಾಯನನ್ನು ಅಭಿನಂದಿಸಿ ಆಶೀರ್ವಾದ ಮಾಡಿ ಅವರು ಧರ್ಮ ಪ್ರಚಾರಕ್ಕಾಗಿ ಪ್ರವಾಸ ಹೊರಟು ಬಿಡುತ್ತಾರೆ!
ಎಲ್ಲಾ ಸರಿ, ಯುದ್ಧದಲ್ಲಿ ಹೋರಾಡಿ ಜಯ ತಂದುಕೊಟ್ಟ ಕನಕನಾಯಕ ಏನಾದ? ವ್ಯಾಸರಾಯರು, ಕೃಷ್ಣದೇವರಾಯನು ಇನ್ನಿತರರು ಕನಕನಾಯಕ ಏನಾದನೆಂದು ಕೇಳುವುದೇ ಇಲ್ಲ! ಜಯದ ಮಾಲೆ ಕನಕ ನಾಯಕನಿಗೆ ಹಾಕಿ ಅಭಿನಂದಿಸಬೇಕಾದ ವ್ಯಾಸರಾಯರು ಏನೂ ಕಾಣದಂತೆ ಹೊರಟಿದ್ದು ಯಾಕೆ? ಸನಾತನಿಗಳು ಬರೆದುಕೊಂಡಿರುವುದು ಹೀಗೆ. 

ಮೈಯೆಲ್ಲಾ ಗಾಯಗಳಾಗಿ ರಕ್ತಸಿಕ್ತವಾಗಿ ಬಿದ್ದು ರಣರಂಗದಲ್ಲಿ ನರಳುತ್ತಲೇ ಮಲಗಿದ್ದ ಕನಕನಾಯಕನಿಗೆ ಒಂದು ಹೊತ್ತಿನಲ್ಲಿ ಕನಸು ಬಿಳುತ್ತದೆ! ಕನಸಿನಲ್ಲಿ ವಿಷ್ಣು ಕಾಣಿಸಿಕೊಂಡು ‘‘ಯಾರು ನೀನು?’’ ಎಂದು ಕೇಳಿದಾಗ ‘‘ನಾನು ಕನಕನಾಯಕ. ರಾಜನಾಗಿರುವೆ’’ ಎನ್ನುತ್ತಾನೆ. ಅದಕ್ಕೆ ವಿಷ್ಣು ಈ ಅಧಿಕಾರ, ಪದವಿ ಎನ್ನುವ ಮೋಹದಿಂದ ನಿನಗೆ ಹೊರಗೆ ಬರಲಾಗುವುದಿಲ್ಲವೇ?’’ ಎಂದು ಕೇಳುತ್ತಾನೆ. 

ಅದಕ್ಕೆ ‘‘ಯಾಕೆ? ನನಗೆ ಅಧಿಕಾರ ಪಟ್ಟ, ಪದವಿ ಬೇಕು. ನಾನು ಎಂತಹ ಪರಾಕ್ರಮಿ ಎನ್ನುವುದು ನಿನಗೆ ಗೊತ್ತಿಲ್ಲ’’ ಎನ್ನುತ್ತಾನೆ ಕನಕ. ‘‘ಹಾಗಾದರೆ ನಿನಗೆ ನನ್ನ ದಾಸನಾಗಲು ಇಷ್ಟವಿಲ್ಲ’’ ಎಂದು ವಿಷ್ಣು ಹೇಳುವಾಗ ಕನಕನಿಗೆ ಒಂದು ದಿವ್ಯಪ್ರಭೆ ಆವರಿಸಿಕೊಳ್ಳುತ್ತದೆ. ಕನಕನಾಯಕ ಒಂದು ರೀತಿ ಗೊಂದಲಕ್ಕೆ ಸಿಲುಕಿ ಏನೇನನ್ನೋ ಬಡಬಡಿಸುತ್ತಾ ಹಾಗೆಯೇ ನರಳಾಡುತ್ತಾ, ಕೆಲವು ದಿವಸಗಳು ಅಲ್ಲಿಯೇ ಓಡಾಡಿಕೊಂಡಿರುತ್ತಾನೆ. 

ಇತ್ತ ಯುದ್ಧಕ್ಕೆ ಹೋದ ಕನಕನಾಯಕರು ಸತ್ತು ಹೋದರೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರೆ ಮತ್ತೆ ಕೆಲವರು ಕನಕರು ಬದುಕಿದ್ದಾರೆಂದೂ, ಬಂದೇ ಬರುವರೆಂದೂ ಹೇಳುತ್ತಿರುತ್ತಾರೆ. ಹೀಗಿರುವಾಗ, ಊಟವಿಲ್ಲದೆ ಸ್ನಾನವಿಲ್ಲದೆ ಹರಿದ ಬಟ್ಟೆಯಲ್ಲೆ ಓಡಾಡುತ್ತಿದ್ದ ಕನಕನಾಯಕನನ್ನು ಕಂಡ ಜನ ಯಾರೋ ಹುಚ್ಚನೆಂದು ಅವರಿಗೆ ಚೂರು ಅನ್ನ ಹಾಕಿ ಬಟ್ಟೆ ಕೊಟ್ಟು ನೋಡಿಕೊಳ್ಳುತ್ತಿರುವಾಗ, ಬಾಡಗ್ರಾಮದ ಕೆಲವರು ಬಂದು ಕನಕನಾಯಕರನ್ನು ನೋಡಿ ರಾಜ ಕನಕನಾಯಕನೆಂದು ಗೊತ್ತಾಗಿ ಮರಳಿ ಊರಿಗೆ ಕರೆಯುತ್ತಾರೆ.

ಅದರೆ ಕನಕನಾಯಕ ಒಂದು ವಿಷಾದ ನಗೆ ಬೀರಿ ಏನೋ ಮಾತನಾಡುತ್ತಾ ಹೊರಟು ಹೋಗುತ್ತಾರೆ. ಬಾಡ ಗ್ರಾಮದ ಜನರು ಕನಕರಿಗೆ ಬುದ್ಧಿ ಭ್ರಮಣೆಯಾಗಿ ಹುಚ್ಚನಂತೆ ಅಲೆಯುತ್ತಿದ್ದಾರೆಂದು ತಿಳಿದು ಮರುಗುತ್ತಾರೆ! ಅಂದಹಾಗೆ ಕನಕನಾಯಕರು ಪಾಳು ಬಿದ್ದ ಛಾವಡಿಗಳ ಮೇಲೆ ಕಾಲ ಕಳೆಯುತ್ತಾ ಅಲೆದಾಡುತ್ತಿರುವ ವಿಷಯ ಯಾರಿಗೂ ಗೊತ್ತಾಗುವುದೇ ಇಲ್ಲವೇ? ಯುದ್ಧದಲ್ಲಿ ಜಯ ತಂದುಕೊಟ್ಟ ಕನಕನಾಯಕರನ್ನು ಕೃಷ್ಣದೇವರಾಯ ಮರೆತು ಬಿಟ್ಟನೆ? ಪಾಳೇಗಾರನೊಬ್ಬ ಈ ರೀತಿ ಆಗುವುದು ಸಾಧ್ಯವೇ? ಅಗುತ್ತೇ! ಖಂಡಿತ ಆಗುತ್ತದೆ! ಸನಾತನಿಗಳ ತಂತ್ರಗಳೇ ಅಂತಹದ್ದು. 

ಮೂಲತಃ ಕನಕನಾಯಕ ಅಂದಿನ ಕರ್ಮಠ ಸನಾತನ ಧರ್ಮವನ್ನು ವಿರೋಧಿಸಿದ್ದವನು. ವಿಜಯನಗರದ ಅರಸರ ಜೊತೆ ಒಳ್ಳೆಯ ಬಾಂಧವ್ಯವಿದ್ದರೂ ತನ್ನ ಸ್ವಸಾಮಾರ್ಥ್ಯದಿಂದ ಆಳುತ್ತಿದ್ದವನು. ನೋಡನೋಡುತ್ತಲೇ ಒಬ್ಬ ರಾಜ ಬೀದಿ ಬೀದಿ ಅಲೆಯುತ್ತಾ ತನ್ನ ರಾಜ್ಯ ಕೋಶ, ಜನ ಜಾತಿಗಳನ್ನು ಮರೆತು ದಿಕ್ಕಿಲ್ಲದವನಂತೆ ಅಲೆಯಬೇಕಾದ ಪರಿಸ್ಥಿತಿ ಹೇಗೆ ತಾನೇ ಬಂತು ಎನ್ನುವುದೇ ಪ್ರಶ್ನೆ. ಯಾಕೆಂದರೆ ಇಲ್ಲಿ ಮೂಲನಿವಾಸಿ ರಾಜರುಗಳನ್ನೆಲ್ಲಾ ಹೀಗೆಯೇ ಯಕ್ಕುಟ್ಟಿಸಿದ ಉದಾಹರಣೆಗಳು ಬೇಕಾದಷ್ಟಿದೆ! ಇರಲಿ ಮುಂದೇನಾಯಿತು ನೋಡಿ.

ಕನಕರಿಗೆ ಮುಂದೆ ಎಷ್ಟೋ ತಿಂಗಳುಗಳು ಕಳೆದ ಮೇಲೆ ಒಮ್ಮೆ ಹೀಗೆ ಯಾವುದೋ ಪಾಳು ದೇವಾಲಯದ ಹತ್ತಿರ ಮಲಗಿದ್ದಾಗ ಕನಸಿನಲ್ಲಿ ಕೇಶವನೆಂಬ ದೇವರು ಬಂದು ‘‘ಕನಕ ನಿನಗೆ ನನ್ನ ದಾಸನಾಗಲೂ ಇಷ್ಟವಿಲ್ಲವೇ? ಇನ್ನೂ ನಿನಗೆ ಮನೆ ಸಂಸಾರ ಪದವಿ, ಅಧಿಕಾರ, ಮೋಹ ಹೋಗಿಲ್ಲವೇ?’’ ಎಂದು ಕೇಳಿದಾಗ ಕನಕರಿಗೆ ಒಂದು ರೀತಿ ಎಲ್ಲೋ ಸುಖವಾಗಿರುವಂತೆ ಅನಿಸಿ, ‘‘ಹೌದು, ನಾನು ನಿನ್ನ ದಾಸನಾಗಲು ಇಷ್ಟ ಪಡುತ್ತೇನೆ. 

ಏನೋ ಒಂದು ರೀತಿ ಅವರ್ಣನೀಯ ಆನಂದವಾಗುತ್ತಿದೆ’’ ಎಂದು ಹೇಳುತ್ತಾನೆ. ಕೇಶವ ಮತ್ತೆ ಕಾಣಿಸಿಕೊಂಡು ‘‘ಈ ಅಧಿಕಾರವೆಲ್ಲಾ ಕ್ಷಣಿಕ. ನಿಜವಾದ ಸುಖ ನೀನು ಪಡೆದುಕೊಳ್ಳುವ ಮೋಕ್ಷದಲ್ಲಿದೆ. ಬಾ ನಾನು ನಿನಗೆ ಅನವರತ ರಕ್ಷಣೆ ನೀಡುವೆ’’ ಎಂದಾಗ ಕನಕರಿಗೆ ಒಮ್ಮೆಲೆ ಶಕ್ತಿ ಬಂದಂತಾಗಿ ಅಲ್ಲಿಂದ ಎದ್ದು ಹೊರಟು ಬಿಡುತ್ತಾರೆ, ಹಾಗೆಯೇ ರಾಜ ಕನಕನಾಯಕ ಈ ಘಟನೆಯ ನಂತರ ‘‘ಕನಕದಾಸ’’ರಾಗುತ್ತಾರೆ.

ನಂತರ ಕನಕರು ಕಂಡ ಕಂಡ ಊರುಗಳಲ್ಲಿ ತಿರುಗಾಡುತ್ತಾ ಕೀರ್ತನೆಗಳನ್ನು ಹೇಳುತ್ತಾ, ಕಾಲ ಕಳೆಯುತ್ತಿರುವಾಗ ಒಮ್ಮೆ ಪಂಡರಪುರಕ್ಕೆ ನಂತರ ಇತರ ಸ್ಥಳಗಳಿಗೆ ಹೋಗಿ ಕೊನೆಗೆ ಉಡುಪಿ ಕೇಶವನನ್ನು ನೋಡಲು ಬರುತ್ತಾರೆ. ಕನಕ ಬಂದಾಗ ಅಲ್ಲಿನ ಯಾವುದೇ ವ್ಯಕ್ತಿಗೆ ಇವನಾರು ಎನ್ನುವುದು ಗೊತ್ತಿಲ್ಲದೆ ಬಯ್ದು ಹೊರ ಕಳುಹಿಸುವಾಗ ವ್ಯಾಸರಾಯರು ಬರುತ್ತಾರೆ! ಬಂದವರೆ ‘‘ಏನೋ ಕನಕ ನೀನಿಲ್ಲಿ’’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಲ್ಲದೆ ಒಂದು ರೀತಿ ಸಂತೋಷವೂ ಅಗುತ್ತದಂತೆ! ಶಿಷ್ಯರನ್ನು ಕರೆದು ಕನಕ ಇಲ್ಲೇ ಇರುವನೆಂದು ಅವನಿಗೆ ಊಟ ಹಾಕಬೇಕೆಂದು ಅಪ್ಪಣೆ ಮಾಡುತ್ತಾರೆ. ಆದರೆ ಅವರ್ಯಾರು ಕನಕನನ್ನು ಉಡುಪಿಯ ಮಠದೊಳಕ್ಕೋ ಅಥವಾ ದೇವಾಲಯದ ಒಳಕ್ಕೋ ಕರೆಯುವುದಿಲ್ಲ.

ಬದಲು ಅಲ್ಲೇ ಹೊರಗೆ ಜಗುಲಿಯ ಮೂಲೆಯಲ್ಲಿ ಇರಿಸುತ್ತಾರೆ. ಚಳಿಚಳಿ ಎಂದು ನಡುಗುತ್ತಿದ್ದರೂ ಯಾವುದೇ ಸಹಾಯ ಮಾಡದೆ ರಾತ್ರಿ ಎಲ್ಲರ ಊಟವಾದ ಮೇಲೆ ಮಿಕ್ಕಿದ್ದರೆ ಅಥವಾ ಜ್ಞಾಪಕವಾದ ಮೇಲೆ ಕನಕರಿಗೆ ಒಂದು ತುತ್ತು ಹಾಕುವುದಾಗುತ್ತದೆ.! ಆದರೆ ಕನಕರಿಗೆ ಇದ್ಯಾವುದರ ಪರಿವೇ ಇರುವುದಿಲ್ಲ. ಕೇವಲ ಕೇಶವ ಕೃಷ್ಣನ ಧ್ಯಾನ ಮಾಡುತ್ತಾ ‘‘ತನ್ನ ಕಷ್ಟಗಳೆಲ್ಲಾ ಪರಿಹಾರವಾಗಿ ಕೇವಲ ಸ್ಮರಣೆ ಮಾತ್ರದಿಂದಲೇ ಸಂತೃಪ್ತಿಯಾಗಿ ಕಾಲ ಕಳೆಯುತ್ತಿರುವೆ’’ ಎಂದು ಹೇಳುತ್ತಿರುತ್ತಾರೆ! ಹೀಗಿರುವಲ್ಲಿ......

ಒಂದು ಸಾರಿ ರಾತ್ರಿ ಎಷ್ಟೊತ್ತಾದರೂ ಮಠದ ಶಿಷ್ಯರು ಕನಕನಿಗೆ ಊಟ ಕೊಡುವುದಿಲ್ಲ. ಎಲ್ಲಾ ಕೆಲಸ ಮುಗಿಸಿ ಬೀಗ ಹಾಕಿಕೊಂಡು ಹೊರಟು ಹೋಗುತ್ತಾರೆ! ಹೊಟ್ಟೆ ಹಸಿವಿನಿಂದ ನರಳಾಡುತ್ತಿರುವ ಕನಕರು ಕೃಷ್ಣನಿಗೆ ತನ್ನ ಸಂಕಟ ಹೇಳಿಕೊಂಡು ಹಾಗೆಯೇ ನಿದ್ರೆಗೆ ಜಾರುತ್ತಾರೆ. 

ಆಗ ಸ್ವತಃ ಕೃಷ್ಣನೇ ಬಂದು ‘‘ಯಾಕೆ, ಭೋಜನ ಕೊಡಲಿಲ್ಲವೇ’’ ಎಂದು ಹೇಳಿದಂತಾಗಿ ‘‘ನೀನು ಒಳಗೆ ಎದ್ದು ಬಂದು ನನ್ನ ಕೊರಳಿನಲ್ಲಿರುವ ಮುತ್ತಿನಹಾರವನ್ನು ತೆಗೆದುಕೊಂಡು ಹೋಗಿ ಅದನ್ನು ಅಡವಿಟ್ಟು ಊಟ ಮಾಡಿಕೊಂಡು ಬಾ’’ ಎನ್ನುತ್ತಾನೆ ಕೃಷ್ಣ. ಕನಸಿನಲ್ಲಿ ಹೇಳಿದಂತಾದರೂ ಕನಕ ಸೀದಾ ಗುಡಿಯೊಳಗೆ ಹೋಗಿ ಕೃಷ್ಣನ ಕೊರಳಲ್ಲಿದ್ದ ಹಾರ ತೆಗೆದುಕೊಂಡು ಅಲ್ಲಿಯೇ ಇದ್ದ ಗಿರವಿ ಅಂಗಡಿಯಲ್ಲಿಟ್ಟು ಬಂದ ಹಣದಿಂದ ಸಂತೃಪ್ತನಾಗಿ ಉಂಡು ಮಲಗುತ್ತಾರೆ. ಬೆಳಗ್ಗೆ ಗುಡಿಯ ಬಾಗಿಲು ತೆರೆದು ನೋಡಿದಾಗ ಕೃಷ್ಣನ ಕೊರಳಲ್ಲಿ ಮುತ್ತಿನಸರ ಮಾಯ ವಾಗಿರುತ್ತದೆ. ಅಲ್ಲಿನ ಶಿಷ್ಯರು ಇದು ಕನಕನದೇ ಕೆಲಸ, ಅವನೇ ಕದ್ದಿದ್ದಾನೆ ಎಂದು ಗುರುಗಳಿಗೆ ದೂರು ಹೇಳುತ್ತಾರೆ. 

ವ್ಯಾಸರಾಯರು ಕನಕನಲ್ಲಿಗೆ ಬಂದು ‘‘ಏನೋ ಕನಕ ಮುತ್ತಿನ ಹಾರ ಕಾಣೆ ಆಗಿದೆ. ನೀನೇನಾದರೂ ತೆಗೆದುಕೊಂಡೆಯಾ’’ ಎಂದು ಕೇಳುತ್ತಾರೆ. ಅದಕ್ಕೆ ‘‘ಹೌದು, ಕೃಷ್ಣನಿಗೆ ತುಂಬಾ ತುಂಬಾ ಹಸಿವಾಗಿತ್ತು ಕೃಷ್ಣನೇ ಮುತ್ತಿನಹಾರ ಕೊಟ್ಟು ಭೋಜನ ಮಾಡಿದ’’ ಎಂದು ಕನಕ ಹೇಳಿದಾಗ ‘‘ನಿನಗೋ ಹಸಿವು ಇಲ್ಲ, ಕೃಷ್ಣನಿಗೋ’’ ಎಂದು ವ್ಯಾಸರಾಯರು ಗೇಲಿ ಮಾಡುತ್ತಾರೆ! ‘‘ನನಗೆ ಹಸಿವಾದರೇ ಕೃಷ್ಣನಿಗೆ ಹಸಿವಾದಂತೆ’’ ಎಂದು ಕನಕ ಹೇಳಿದಾಗ ಸುಮ್ಮನೆ ನಕ್ಕು ವ್ಯಾಸರಾಯರು ಅಂಗಡಿಯಲ್ಲಿದ್ದ ಹಾರವನ್ನು ತರಿಸಿ ಮತ್ತೆ ಕೃಷ್ಣನ ಕೊರಳಿಗೆ ಹಾಕುತ್ತಾರೆ. 

ಈ ನಿಟ್ಟಿನಲ್ಲಿ ಕನಕನನ್ನು ಕಳ್ಳನೆಂದು ಆರೋಪಿಸಿ, ನಗೆಯಾಡುವ ಉಡುಪಿ ಮಠದವರು ಗೇಲಿ ವಸ್ತುವಾಗಿ ಕನಕನನ್ನು ಕಂಡರು ಎನಿಸುವುದಿಲ್ಲವೆ? ಒಂದು ವಿಷಯ, ಕನಕರಿಗೆ ಉಡುಪಿಯ ಮಠದಲ್ಲಾಗಲೀ ಇನ್ನಾವುದೇ ದೇವಾಲಯದಲ್ಲಾಗಲೀ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಖಂಡಿತ ಕೊಟ್ಟಿಲ್ಲ. ಅತ್ತ ಕನಕದಾಸರು ಒಂದು ಜಾತಿ ಜನಾಂಗಕ್ಕೆ ಏನೂ ಸಹಾಯ ಮಾಡದಂತೆ, ಇತ್ತ ಬ್ರಾಹ್ಮಣ ಸಮುದಾಯದಲ್ಲೂ ಗೌರವ ಸಿಗದಂತೆ ಅವರನ್ನು ಒಂದು ರೀತಿ ಮಾನಸಿಕ ಆಶಾಂತಿಗೆ ಒಳಗಾದವನಂತೆ ವೈದಿಕರು ಮಾಡಿಟ್ಟಿದ್ದರು. 

ಅಂದು ಕನಕನಾಯಕನೆಂಬ ಪಾಳೇಯಗಾರನನ್ನು, ಯುದ್ಧ ಕಲಿಯನ್ನು, ದಕ್ಷ ಅಡಳಿತಗಾರನ್ನು ಮಾನಸಿಕವಾಗಿ ಅಧ್ವಾನ ಮಾಡಿದ ಸನಾತನಿಗಳು ಮುಖ್ಯವಾಗಿ ಅವನನ್ನು ಅಧಿಕಾರಹೀನನ್ನಾಗಿ ಮಾಡಿ ಮುಗಿಸಿದರು. ಕತ್ತಿ ಹಿಡಿದು ಕುದುರೆ ಮೇಲೆ ಕುಳಿತ ರಾಜನನ್ನು ಕನಕ‘ದಾಸ’ನನ್ನಾಗಿ ಮಾಡಿ ಕೃಷ್ಣ ಮಂದಿರದ ಹೊರಗೆ ಕುಳಿತು ವೈರಾಗ್ಯದಿಂದ ‘‘ಬಾಗಿಲನ್ನು ತೆರೆದು ಸೇವೆಯನು ಕೊಡುಹರಿಯೇ, ಕೂಗಿದರೂ ದ್ವನಿ ಕೇಳಲಿಲ್ಲವೇ?’’ ಎಂದು ಹೇಳಿಸಿದರು! ಗಮನಿಸಿ, ಮನುವಾದಿಗಳು ಇತಿಹಾಸವನ್ನು ಪುರಾಣವನ್ನಾಗಿಸಿ, ಪುರಾಣವನ್ನು ಇತಿಹಾಸವೆಂದು ಸಾರುವುದರಲ್ಲಿ ಆಳುವ ವರ್ಗಕ್ಕೆ ಸೇರಿದ ಕನಕನಾಯಕನನ್ನು ಭಿಕ್ಷೆ ಬೇಡುವ ಕನಕದಾಸನನ್ನಾಗಿ ಮಾಡಿರುವುದೇ ದೊಡ್ಡ ದ್ರೋಹವಲ್ಲವೇ? ಕುರುಬ ಬಂಧುಗಳು ಮೊದಲು ಕನಕರನ್ನು ಉಡುಪಿ ಮಠದಿಂದ ಹೊರಗೆ ಕರೆದುಕೊಂಡು ಬರುವ ಕೆಲಸ ಮಾಡಬೇಕು. 

ಕನಕರ ಜೀವಿತ ಕಾಲದಲ್ಲೆ ಕನಕರಿಗೆ ಅಷ್ಟೊಂದು ನೋವು ಕಷ್ಟಗಳನ್ನು ಕೊಟ್ಟವರು ಈಗ ಗೌರವ ಕೊಡುವುದು ಉಂಟೆ? ಮುಖ್ಯವಾಗಿ ಕನಕರಿಂದ ಉಡುಪಿಯ ಮಠದವರಿಗೆ ಒಳ್ಳೆ ಕಮಾಯಿ ಇದೆ. ಕ್ಷೇತ್ರ ನೋಡಲು ಬರುವ ಪ್ರವಾಸಿಗರಿಗೆ ಇತರೆ ಜನರಿಗೆ ಒಂದಷ್ಟು ಕಥೆ ಹೇಳಿ ಹಣಗಿಟ್ಟಿಸುವ ತಂತ್ರವಿರುವುದರಿಂದ ಕನಕನ ಕಿಂಡಿ ಅವರಿಗೆ ಬೇಕಾಗಿದೆ. ಈಗ ಪೇಜಾವರರು ವೈಷ್ಣವ ದೀಕ್ಷೆ ಎಂಬ ಕಾರ್ಡು ಬಿಟ್ಟಿದ್ದಾರೆ. 

ಇಷ್ಟಕ್ಕೂ ಕನಕರು ವೈಷ್ಣವ ಸಿದ್ಧಾಂತಿಗಳಾಗಿದ್ದರು ಎನ್ನುವ ವಾದವೇ ದೊಡ್ಡ ಸುಳ್ಳು. ಕನಕನಾಯಕನ ತಂದೆ ಬೀರಪ್ಪನಾಯಕ ತಿರುಪತಿಗೆ ಹೋಗಿ ಬರುತ್ತಿದ್ದ ಕಾಲಘಟ್ಟದಲ್ಲಿಗೆ ತಿರುಪತಿಯು ಶೈವರ ಆಚರಣೆಗೆ ಒಳಾಗಾಗಿತ್ತು. ಕನಕನಿಗೆ ತಿಮ್ಮಪ್ಪನಾಯಕನೆಂದು ಹೆಸರಿಟ್ಟಿದ್ದ ಬೀರಪ್ಪನಾಯಕ ಶಿವನ ಆರಾಧಕ. 

ಹೀಗಿರುವಾಗ ಮಗ ಕನಕದಾಸ ವೈಷ್ಣವ ಹೇಗಾಗುತ್ತಾರೆ? ಖಂಡಿತವಾಗಿಯೂ ಕನಕರು ಒಬ್ಬ ದಾರ್ಶನಿಕ ಸಂತರಷ್ಟೆ ಅಲ್ಲ, ರಾಜರೂ ಹೌದು, ಈ ರಾಜ್ಯ ಆಳಿದ್ದ ದೊರೆಯೂ ಹೌದು. ಈ ನಿಟ್ಟಿನಲ್ಲಿ ಕನಕರಿಗೆ ಮಾಡಿದ ಅನ್ಯಾಯ 16ನೆ ಶತಮಾನಕಷ್ಟೆ ಸೀಮಿತವಾಗಲಿ. ಈಗಲೂ ಅದು ಮುಂದುವರಿಯುವುದು ಬೇಡ. ಅದಕ್ಕಾಗಿ ಮೊದಲು ಉಡುಪಿಯಿಂದ ಕನಕರನ್ನು ಹೊರತರುವ ಕೆಲಸವಾಗಬೇಕಷ್ಟೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...