Thursday, November 21, 2013

ಮೂಢನಂಬಿಕೆ-ಸಂಪ್ರದಾಯ ಇತ್ಯಾದಿ…ನಾ ದಿವಾಕರ್

ಕೃಪೆ : ಅವಧಿ

ದೇವರು, ದೇವಾಲಯ, ಪೂಜೆ, ಆಚರಣೆಗಳು, ಹೋಮ-ಹವನ-ಯಜ್ಞ ಇತ್ಯಾದಿ ಇವೆಲ್ಲವೂ ವ್ಯಕ್ತಿಗತ ನಂಬಿಕೆಯನ್ನಾಧರಿಸಿದ ಪ್ರಕ್ರಿಯೆಗಳು. ಮಾನವ ಸಮಾಜದ ಉಗಮ ಕಾಲದಿಂದಲೂ ವಿವಿಧ ರೂಪಗಳನ್ನು ಈ ಪ್ರಕ್ರಿಯೆಗಳನ್ನು ತನ್ನನ್ನು ತಾನು ತೊಡಗಿಸಿಕೊಂಡೇ ಬಂದಿದ್ದಾನೆ. ನಾಗರಿಕತೆ ಬೆಳೆದಂತೆಲ್ಲಾ ಈ ಸಂಪ್ರದಾಯಗಳು, ಆಚರಣೆಗಳು ಬದಲಾಗುತ್ತಲೇ ಬಂದಿವೆ. ಈ ಲೇಖನಕ್ಕೆ ಪ್ರೇರಣೆ ನೀಡಿದ ಲೇಖನದಲ್ಲಿ ಉಲ್ಲೇಖಿಸಲಾಗಿರುವ ಆಚರಣೆಗಳು ಸ್ವಾಭಾವಿಕವಾಗಿ ಕೆಳಸ್ತರದ ಜನಸಮುದಾಯಗಳ ನಂಬಿಕೆಗಳನ್ನಾಧರಿಸಿವೆ. ಆಧುನಿಕತೆಯ ದೃಷ್ಟಿಕೋನದಿಂದ ನೋಡಿದಾಗ ಕೆಲವು ಆಚರಣೆಗಳು ಅಮಾನವೀಯ, ಅನಾಗರೀಕ, ಮೌಢ್ಯ ಎನಿಸುತ್ತದೆ. ಆದರೆ ಆಧುನಿಕ ಸಮಾಜ ಆಧುನಿಕತೆಯನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂಬ ಪ್ರಶ್ನೆ ಎದುರಾದಾಗ ಇಡೀ ನಾಗರಿಕ ಪ್ರಜ್ಞೆ ಕಪ್ಪೆಚಿಪ್ಪಿನಲ್ಲಿ ಹುದುಗಿದಂತೆ ಸುಪ್ತವಾಗಿಬಿಡುತ್ತದೆ.

ಆಧುನಿಕ ಸಮಾಜ ಎಂದು ಕರೆದುಕೊಳ್ಳುವ ಪ್ರಸ್ತುತ ನಾಗರಿಕ ಸಮಾಜದಲ್ಲಿನ ಅನೇಕ ಆಚರಣೆ ಮತ್ತು ಸಂಪ್ರದಾಯಗಳನ್ನು ವ್ಶೆಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಬುಡಕಟ್ಟು ಮತ್ತು ಕೆಳಸ್ತರದ ಜನಸಮುದಾಯಗಳಿಗೂ, ನಗರವಾಸಿ ನಾಗರಿಕರಿಗೂ ವ್ಯತ್ಯಾಸವೇ ಕಾಣುವುದಿಲ್ಲ. ಪ್ರಾಣಿ ಬಲಿ ಕೊಡುವ ವಿಷಯವನ್ನು ಹೊರತುಪಡಿಸಿಯೇ ನೋಡಿದರೂ, ನಗರ ಪ್ರದೇಶಗಳಲ್ಲಿ, ಸುಶಿಕ್ಷಿತರಲ್ಲಿ ಮೌಢ್ಯ ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದೆ. ತಮ್ಮ ನೈತಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳಲು, ಮಾನಸಿಕ ತುಮುಲತೆಗಳನ್ನು ಪರಿಹರಿಸಿಕೊಳ್ಳಲು ದೇವರು ಎಂಬ ಕಾಲ್ಪನಿಕ ಸೃಷ್ಟಿಯ ಮೊರೆ ಹೋಗುವುದು ಸಾಮಾನ್ಯವಾದ ಮನುಜ ಲಕ್ಷಣ. ಈ ನಿಟ್ಟಿನಲ್ಲಿ ಆಧ್ಯಾತ್ಮ ಒಂದು ಹಾದಿಯಾದರೆ, ವಿಧಿವಿಧಾನಗಳನ್ನಾಧರಿಸಿದ ಆಚರಣೆಗಳು ಮತ್ತೊಂದು ಹಾದಿ. ವಿಪರ್ಯಾಸವೆಂದರೆ ಇಂದು ಬಹುತೇಕ ಸುಶಿಕ್ಷಿತರು ಎರಡೂ ಹಾದಿಗಳಲ್ಲಿ ಮೌಢ್ಯತೆಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ದೇವಾಲಯ ಸಂಸ್ಕೃತಿ ದೇವರ ಪರಿಕಲ್ಪನೆಯನ್ನೇ ವಿಕೃತಗೊಳಿಸಿರುವುದು ಆಧುನಿಕ ದೇವಾಲಯಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.ನಂಬಿಕೆ-ಮೂಢನಂಬಿಕೆಗಳ ಪ್ರಶ್ನೆ ಇಲ್ಲಿ ಮಹತ್ವವಾಗುತ್ತದೆ. ಬುಡಕಟ್ಟು ಸಮುದಾಯಗಳು ಸುಶಿಕ್ಷಿತರಾಗಿರುವುದಿಲ್ಲ. ಅನೇಕ ಗ್ರಾಮೀಣ ಸಮುದಾಯಗಳು ಅಲ್ಪ ಮಟ್ಟಿನ ಶಿಕ್ಷಣ ಹೊಂದಿದ್ದರೂ ತಾವು ಅನುಸರಿಸಿಕೊಂಡು ಬಂದ ಸಂಪ್ರದಾಯ-ಆಚರಣೆಗಳನ್ನು ಧಿಕ್ಕರಿಸುವ ಆತ್ಮ ಸ್ಥೈರ್ಯ ಹೊಂದಿರುವುದಿಲ್ಲ. ಮೇಲಾಗಿ ಈ ಸಮುದಾಯಗಳು ದೈವ ಕಲ್ಪನೆಯನ್ನು ಸೃಷ್ಟಿಯ ರೂಪದಲ್ಲಿ ಸಾಕ್ಷಾತ್ಕರಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಇವರ ನಂಬಿಕೆಗಳು ನೈಜವೂ, ನಿಷ್ಕಪಟವೂ ಆಗಿರುತ್ತದೆ. ಬೂಟಾಟಿಕೆಯಾಗಲೀ, ಕಪಟವಾಗಲೀ ಇರುವುದಿಲ್ಲ. ಹಾಗಾಗಿಯೇ ದೇವರು ಮೈಮೇಲೆ ಬರುವ ಪ್ರಕರಣಗಳು ಗ್ರಾಮದೇವತೆಗಳ ಪೂಜೆಗಳಲ್ಲಿ ಸಾಮಾನ್ಯವಾಗಿರುತ್ತದೆ. ವ್ಶೆಜ್ಞಾನಿಕವಾಗಿ ಇದು ಮಾನಸಿಕ ಪ್ರಕ್ರಿಯೆಯಾದರೂ, ತಾವು ಪೂಜಿಸುವ ದೇವತೆಯನ್ನು ಹತ್ತಿರದಿಂದ ಸ್ಪರ್ಶಿಸಿ    ಪೂಜಿಸುವ ಈ ಜನಸಮುದಾಯಗಳಿಗೆ ದೈವೀಕ ಕಲ್ಪನೆ ಹೃದಯಕ್ಕೆ ಹತ್ತಿರವಾಗಿರುತ್ತದೆ.

ಆದರೆ ನಗರ ಪ್ರದೇಶಗಳ ಸುಶಿಕ್ಷಿತ ಸಮುದಾಯದ ದೇವಾಲಯಗಳಲ್ಲಿ ಕಲ್ಪಿತ ದೇವರುಗಳು ಸ್ಪರ್ಶ ಕ್ರಿಯೆಗೆ ಒಳಪಡುವುದಿಲ್ಲ. ದೇವರ ಶಿಲ್ಪವನ್ನು ಕೆತ್ತುವ ಶಿಲ್ಪಿಯೂ ಪ್ರತಿಷ್ಠಾಪನೆಯ ನಂತರ ಅಸ್ಪೃಶ್ಯನಾಗುತ್ತಾನೆ. ಎಂತಹ ಪರಮ ಭಕ್ತರಾದರೂ ದರ್ಶನ ಯೋಗ್ಯರಾಗಿರುತ್ತಾರೆಯೇ ಹೊರತು ಸ್ಪರ್ಶಯೋಗ್ಯರಾಗಿರುವುದಿಲ್ಲ. ಹಾಗಾಗಿ ಗ್ರಾಮೀಣ-ಬುಡಕಟ್ಟು ಸಮುದಾಯಗಳ ಮುಕ್ತ ದೇವರು ಸುಶಿಕ್ಷಿತ ನಗರೀಕೃತ ಸಮಾಜದಲ್ಲಿ ಬಂಧಿತನಾಗುತ್ತಾನೆ. ಹಾಗೆಯೇ ತನ್ನ ಆರಾಧಕರಿಂದ ದೂರವೂ ಆಗುತ್ತಾನೆ. ಈ ಅಂತರ-ಕಂದರಗಳನ್ನು ತುಂಬಲು ತಮ್ಮನ್ನು ತಾವೇ ನೇಮಿಸಿಕೊಂಡಿರುವ ಏಜೆಂಟರುಗಳು ಜನತೆಯ ದೈವೀಕ ಕಲ್ಪನೆಯನ್ನು ತಮ್ಮ ಸ್ವಾಧೀನದಲ್ಲಿರಿಸಿಕೊಂಡು, ಕಾಲ್ಪನಿಕ ದೇವರ ಬೇಕು ಬೇಡಗಳನ್ನು ನಿರ್ದೇಶಿಸುವರಾಗುತ್ತಾರೆ.

ದೈವ-ಭಕ್ತಾದಿಗಳ ನಡುವೆ ಈ ಮಾನಸಿಕ-ದೈಹಿಕ ಅಂತರ ಇರುವುದರಿಂದಲೇ ಗ್ರಾಮದೇವತೆಗಳಂತೆ ನಗರ ದೇವತೆಗಳು ಮೈಮೇಲೆ ಬರುವ ಪ್ರಕ್ರಿಯೆ ಇಲ್ಲಿ ಕಂಡುಬರುವುದಿಲ್ಲ. ಈ ಭಿನ್ನತೆಗಳು ನಂಬಿಕೆಯ ಪ್ರಶ್ನೆಯಾಗಿ ಎದುರಾಗುತ್ತವೆ.
ಆದರೆ ವ್ಶೆಜ್ಞಾನಿಕ ಮನೋಭಾವದಿಂದ ನೋಡಿದಾಗ ಎರಡೂ ನಂಬಿಕೆಗಳನ್ನು ಮೂಢನಂಬಿಕೆಗಳೆಂದೇ ಹೇಳಬಹುದು. ಸೂರ್ಯ-ಚಂದ್ರ ಗ್ರಹಣಗಳು ನಭೋಮಂಡಲದಲ್ಲಿ ನಡೆಯುವ ಸ್ವಾಭಾವಿಕ ಪ್ರಕ್ರಿಯೆಗಳು ಎಂದು ವಿಜ್ಞಾನದಲ್ಲಿ ಓದಿರುವ ಸುಶಿಕ್ಷಿತರೂ, ಗ್ರಹಣಗಳ ಸಮಯದಲ್ಲಿ ಹೋಮ, ಯಜ್ಞದ ಮೊರೆಹೋಗುತ್ತಾರೆ. ನೈವೇದ್ಯದ ಹೆಸರಿನಲ್ಲಿ ಅಪಾರ ಮೊತ್ತದ ಆಹಾರ ಪದಾರ್ಥಗಳು ವ್ಯರ್ಥವಾದರೂ ಸುಮ್ಮನಿರುತ್ತಾರೆ. ಅನೇಕ ದೇವಾಲಯಗಳಲ್ಲಿ ದೇವತೆಗಳಿಗೆ ಸೀರೆ ಉಡಿಸುವ ಪರಂಪರೆಯನ್ನು ಸುಶಿಕ್ಷಿತರೇ ಹೆಚ್ಚು ಪಾಲಿಸುತ್ತಾರೆ. (ಉದಾ. ನಿಮಿಷಾಂಬ) ತಾವು ಸಲ್ಲಿಸುವ ಸೀರೆ, ಕುಪ್ಪಸ, ಪಂಚೆ, ವಜ್ರ, ಚಿನ್ನದೊಡವೆ ಇವೆಲ್ಲವೂ ದೇವರಿಗೆ ಸೇರುವುದಿಲ್ಲ, ವಾಣಿಜ್ಯ ಪ್ರಕ್ರಿಯೆಗೊಳಗಾಗಿ ದಂಧೆಗಳಾಗಿ ಪರಿಣಮಿಸುತ್ತವೆ ಎಂಬ ಅರಿವಿದ್ದೂ ಸುಶಿಕ್ಷಿತರು ಈ ದೇವಾಲಯಗಳಿಗೆ ಮುಗಿ ಬೀಳುತ್ತಾರೆ. ದೇವಾಲಯಗಳ ಸುತ್ತಲಿನ ಜನ ಕೂಳಿಲ್ಲದೆ, ಸೂರಿಲ್ಲದೆ ಬದುಕುತ್ತಿದ್ದರೂ, ಚಿನ್ನದ ಕಳಶ, ವಜ್ರದ ಕಿರೀಟ, ಚಿನ್ನದ ರಥಗಳು ಪ್ರಜ್ವಲಿಸುತ್ತಿರುತ್ತವೆ. ಇದನ್ನು ಸುಶಿಕ್ಷಿತ ಆಧುನಿಕ ಸಮಾಜ ಮುಕ್ತ ಕಂಠದಿಂದ ಶ್ಲಾಘಿಸಿ, ಸ್ವಾಗತಿಸಿ, ಆರಾಧಿಸುತ್ತವೆ. ಇದು ಪ್ರಾಣಿ ಬಲಿಯಷ್ಟೇ ಮೌಢ್ಯ ಮತ್ತು ಕ್ರೌರ್ಯವಲ್ಲವೇ?

ಭಾರತೀಯ ಸಮಾಜವನ್ನು ಕಿತ್ತು ತಿನ್ನುತ್ತಿರುವ ದಾರಿದ್ರ್ಯತೆ, ಅನಕ್ಷರತೆ, ಅಪೌಷ್ಟಿಕತೆ, ವಸತಿಹೀನತೆ ಇವೆಲ್ಲ ಸಮಸ್ಯೆಗಳೂ ಪಟ್ಟಭದ್ರ ಹಿತಾಸಕ್ತಿಗಳ ಹೋಮಗಳಿಗೆ ಹವಿಸ್ಸುಗಳಾಗಿ ಅರ್ಪಿತವಾಗುತ್ತಿವೆ. ಈ ಹವಿಸ್ಸುಗಳ ಆವಿ ಇಡೀ ಸಮಾಜವನ್ನು ಸುತ್ತುವರೆದು, ಪ್ರಜ್ಞಾವಂತ ಸಮುದಾಯಗಳನ್ನೂ ಕಂಗೆಡಿಸುತ್ತಿವೆ. ಈ ಸನ್ನಿವೇಶದಲ್ಲಿ ಬುಡಕಟ್ಟು-ಗ್ರಾಮೀಣ ಸಮುದಾಯಗಳನ್ನು ಮಾತ್ರ ಮೂಢನಂಬಿಕೆಯ ಪ್ರತೀಕವಾಗಿ ಗುರುತಿಸದೆ, ವೈಜ್ಞಾನಿಕ ಮನೋಭಾವದಿಂದ ದೂರ ಸರಿಯುತ್ತಿರುವ ಆಧುನಿಕ ನಾಗರಿಕ ಸಮಾಜವನ್ನೂ ಇದೇ ಪಟ್ಟಿಗೆ ಸೇರಿಸಬೇಕಾಗುತ್ತದೆ. ಶಾಸನಗಳು ಮೌಢ್ಯವನ್ನು ಕೊನೆಗೊಳಿಸುತ್ತವೆಯೇ ಎಂಬ ಜಿಜ್ಞಾಸೆಯೊಡನೆಯೇ ವಿಜ್ಞಾನ ಮುಂದುವರೆಯುತ್ತಿದೆ ಆದರೆ ವೈಜ್ಞಾನಿಕ ಮನೋಭಾವ ಕ್ಷೀಣಿಸುತ್ತಿದೆ. ಇದು ಭಾರತೀಯ ಸಮಾಜದ ವಿಪರ್ಯಾಸ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...