Monday, November 25, 2013

ಕೊಲ್ಲು



ವಿ ಆರ್ ಕಾರ್ಪೆಂಟರ್

ಮೊದಲಿಗೆ ನಾನು ಹುಟ್ಟಿದೆನೆಂದು
ಕೊಲ್ಲಲಾಯಿತು

ಆ ನಂತರ ನನ್ನ ಹೆಸರನ್ನು
ಕೊಲ್ಲಲಾಯಿತು

ಮತ್ತೆ, ಬೆಳೆಯುತ್ತೇನೆಂದು
ಕೊಲ್ಲಲಾಯಿತು

ಅತ್ತೆನೆಂದು, ನಕ್ಕೆನೆಂದು
ಆಕಳಿಸಿದೆ, ಬಿಕ್ಕಳಿಸಿದೆ
ತೂಕಡಿಸಿದೆ, ಮಲಗಿದೆ
ಎದ್ದೆ, ಬಿದ್ದೆ
ಎಡವಿದೆ, ಓಡುವುದ ಕಲಿತೆನೆಂದು
ಈಜುವುದು, ಗಾಳಿಪಟ ಹಾರಿಸುವುದ ಕಲಿತೆನೆಂದು
ಕೊಲ್ಲಲಾಯಿತು

ಬರಬರುತ್ತಾ...,
ಮುಂದೆ ನಡೆದೆನೆಂದೋ,
ಹಿಂಜರಿಯುತ್ತಿದ್ದೇನೆಂದೋ
ಕೊಲ್ಲಲಾಯಿತು

ಹಾಗೆಯೇ,
ಪ್ರೇಮಕ್ಕೆ ಬಿದ್ದೆನೆಂದು
ಸಂಭೋಗಿಸಿದೆನೆಂದು
ಹಾದರವ ಅಪ್ಪಿಕೊಂಡೆನೆಂದು
ಅಕ್ಷರವ ಒಪ್ಪಿಕೊಂಡೆನೆಂದು
ಕೊಲ್ಲಲಾಯಿತು

ಕೆಲ ವರ್ಷಗಳ ಹಿಂದೆ
ಸೋಮಾರಿ, ಬೊಗಳೆ
ಹುಚ್ಚ, ಹುಂಬ, ಧೂರ್ತ
ಪಿಶಾಚಿ, ಬಂಡುಕೋರನೆಂದು
ಕೊಲ್ಲಲಾಯಿತು

ಅಂತೆಯೇ,
ಸತ್ಯ -ಬರೆದೆನೆಂದು, ಹಂಚಿದೆನೆಂದು
ಹಾಡು -ಕೇಳಿದೆನೆಂದು, ಕೇಳಿಸಿದೆನೆಂದು
ಜೀವ -ಉಳಿಸಿದೆನೆಂದು, ಉಳಿಸಿಕೊಂಡೆನೆಂದು
ಅಂಗಾಗ -ಉಳ್ಳವನೆಂದು, ವಿಕಲಾಂಗನೆಂದು
ಕೊಲ್ಲಲಾಯಿತು

ಹ್ಹ ಹ್ಹ ಹ್ಹ
ಈಗ ಏನೂ ದಕ್ಕುತ್ತಿಲ್ಲ
ನನ್ನ ಕೊಲೆಗಾರರಿಗೆ
ಯಾಕೆಂದರೆ,
ನಾನೀಗ ಶೂನ್ಯವಾಗಿದ್ದೀನೆ...

ನನ್ನ ಶೂನ್ಯವನ್ನು ಎಂದೋ
ಕೊಲ್ಲಲಾಯಿತು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...