Tuesday, December 31, 2013

ಕೋರೆಗಾಂವ್ ಎಂಬ ಶೋಷಿತರು ನಡೆಸಿದ ಶ್ರೇಷ್ಠ ಯುದ್ಧದ ಬಗ್ಗೆರಘೋತ್ತಮ ಹೊ.ಬಕೋರೇಗಾಂವ್ ಎಂಬ ಶೋಷಿತರು ನಡೆಸಿದ ಶ್ರೇಷ್ಠ ಯುದ್ಧದ ಬಗ್ಗೆ

ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಬರೇ ಆ ರಾಜರು ಈ ರಾಜರ ವಿರುದ್ಧ, ಮಹಮ್ಮದೀಯರು ಬ್ರಿಟಿಷರ ವಿರುದ್ಧ, ಬ್ರಿಟಿಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ... ಹೀಗೆ ಸಾಮ್ರಾಜ್ಯಶಾಹಿಗಳು ನಡೆಸಿದ ಯುದ್ಧಗಳ ಬಗ್ಗೆಯಷ್ಟೆ ಚರಿತ್ರೆ ದಾಖಲಿಸಲಾಗಿದೆ. ಆದರೆ ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು ದಾಖಲಿಸಿದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ! ಇತಿಹಾಸ ಕೃತಿಯ ಯಾವ ಪುಟದಲ್ಲೂ ಅಂತಹ ದ್ದೊಂದು ಯುದ್ಧದ ಬಗ್ಗೆ ಉಲ್ಲೇಖವಿಲ್ಲ. 


ಯಾಕೆ? ಖಂಡಿತ ಅದು ಶೋಷಿತ ಸಮುದಾಯದ ಬಗೆಗಿನ ಇತಿಹಾಸಕಾರರ ತಾತ್ಸಾರವಷ್ಟೆ! ಈ ನಿಟ್ಟಿನಲ್ಲಿ ಶೋಷಿತರು ಶೋಷಕ ಶಕ್ತಿಗಳ ವಿರುದ್ಧ ಸಾರಿದ ಯುದ್ಧದ ಬಗ್ಗೆ ಹೇಳಲೇ ಬೇಕಾಗುತ್ತದೆ. ಖಂಡಿತ, ಆ ಯುದ್ಧ ಕೋರೇಗಾಂವ್ ಯುದ್ಧ. ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ. ಹಾಗಿದ್ದರೆ ಆ ಯುದ್ಧ ಯಾರ ವಿರುದ್ಧ ನಡೆ ಯಿತು? ಯಾರು ನಡೆಸಿದರು? ಎಂಬ ಪ್ರಶ್ನೆ ಮೂಡುತ್ತದೆ. 

ಈ ನಿಟ್ಟಿನಲ್ಲಿ 1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಆ ಯುದ್ಧದ details ಹೇಳುವುದಕ್ಕೂ ಮುನ್ನ ಆ ಸಮಯ ದಲ್ಲಿ ಇದ್ದ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸುವುದು ಸೂಕ್ತವೆನಿಸುತ್ತದೆ. ಹೌದು, 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ. ಆಗಿನ ಪೇಶ್ವೆ ಅಥವಾ ಬ್ರಾಹ್ಮಣ ಮಂತ್ರಿ 2ನೆ ಬಾಜೀರಾಯ. ಹಾಗಿದ್ದರೆ ಪೇಶ್ವೆಗಳ ಆ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಅಂಬೇಡ್ಕರರ ಪ್ರಕಾರವೇ ಹೇಳುವು ದಾದರೆ ‘‘ಮರಾಠರ ರಾಜ್ಯದಲ್ಲಿ ಪೇಶ್ವೆಗಳ ಆಡಳಿತದಲ್ಲಿ, ಅಸ್ಪಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು ಆತ ಮಲಿನವಾಗುವುದನ್ನು ತಪ್ಪಿಸಲು ಸಾರ್ವಜನಿಕ ಬೀದಿಗಳಲ್ಲಿ ಅಸ್ಪಶ್ಯರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು.


ಒಂದು ವೇಳೆ by mistake ಅಸ್ಪಶ್ಯನೊಬ್ಬನನ್ನು ಹಿಂದೂ ವೊಬ್ಬ ಮುಟ್ಟಿ ಆತ ಮಲಿನಗೊಳ್ಳುವುದನ್ನು ತಪ್ಪಿಸಲು ಅಸ್ಪಶ್ಯನು ತನ್ನ ಕುತ್ತಿಗೆಗೆ ಅಥವಾ ಮುಂಗೈಗೆ ಕಪ್ಪುದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು. ಅಲ್ಲದೆ ಪೇಶ್ವೆಗಳ ರಾಜಧಾನಿಯಾದ ಪೂನಾದಲ್ಲಿ ಹಿಂದೂಗಳು ಅಸ್ಪಶ್ಯನೋರ್ವ ನಡೆದ ದಾರಿಯಲ್ಲಿ ನಡೆದು ಮಲಿನಗೊಳ್ಳುವುದನ್ನು ತಡೆಯಲು ಅಸ್ಪಶ್ಯನು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ಆತ ಗುಡಿಸಬೇಕಾಗಿತ್ತು! ಅದಲ್ಲದೆ ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪಶ್ಯನೊಬ್ಬ ದಾರಿಯಲ್ಲಿ ಉಗಿದು, ಆ ಉಗುಳನ್ನು ಹಿಂದೂ ವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪಶ್ಯ ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತುಹಾಕಿಕೊಳ್ಳಬೇಕಾಗು ತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು!’’ ಪೇಶ್ವೆಗಳ ಕಾಲದ ಅಸ್ಪಶ್ಯರ ಸ್ಥಿತಿಗತಿಯನ್ನು ಅಂಬೇಡ್ಕರರು ಹೀಗೆ ವಿವರಿಸುತ್ತಾ ಹೋಗುತ್ತಾರೆ.


ಅಂದಹಾಗೆ ಇಂತಹ ವಿಚಿತ್ರ ಸಾಮಾಜಿಕ ದುಸ್ಥಿತಿಯ ಸಂದರ್ಭದಲ್ಲಿ ಮಾಹಾರಾಷ್ಟ್ರದ ಅಸ್ಪಶ್ಯರಾದ ಮಹಾರರಿಗೆ ದೌರ್ಜನ್ಯಕೋರ ಇಂತಹ ಪೇಶ್ವೆಗಳ, ಮತ್ತವರ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅದ್ಭುತ ಅವಕಾಶವೊಂದು ಬರುತ್ತದೆ. ಹೌದು, ಅದೇ ಕೋರೇಗಾಂವ್ ಯುದ್ಧ! ಇದೇನು ಅಸ್ಪಶ್ಯರು ಮೇಲ್ಜಾತಿಗಳ ವಿರುದ್ಧ, ಅವರ ದೌರ್ಜನ್ಯದ ವಿರುದ್ಧ ನೇರಾನೇರ ಕಾದಾಟಕ್ಕಿಳಿದದ್ದಲ್ಲ. 

ಆದರೆ ಯಾವ ಜಾತಿ/ವರ್ಣವ್ಯವಸ್ಥೆಯಲ್ಲಿ ಶಸ್ತ್ರಹಿಡಿಯುವುದು ಇಂತಹ ಜಾತಿಗೆ/ವರ್ಣಕ್ಕೆ ಎಂದು ಮೀಸಲಾಗಿತ್ತೋ ಅಂತಹ ಶ್ರೇಣೀಕೃತ ಜಾತಿವ್ಯವಸ್ಥೆಯ ಸಮಯ ದಲ್ಲಿ ಬ್ರಿಟಿಷರ ಪರವಾಗಿ, ಅವರ ಸೇನೆಯಲ್ಲಿ ಸೈನಿಕರಾಗಿಯಷ್ಟೆ ಅಸ್ಪಶ್ಯ ಮಹಾರರು ಕಾದಾಡಿದ್ದು. ಹಾಗಿದ್ದರೆ ಆ ಹೋರಾಟ ಹೇಗಿತ್ತು? ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಭಾಗ 3 (ಇಂಗ್ಲಿಷ್ ಆವೃತ್ತಿ) ಪುಟ.4ರ ಪ್ರಕಾರ ಹೇಳುವುದಾದರೆ ‘‘ಭೀಮಾ ನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‌ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್‌ನ 24 ಗನ್‌ಮೆನ್‌ಗಳ ಸಹಾಯದಿಂದ 20,000 ಅಶ್ವದಳವಿದ್ದ, 8,000ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12 ಗಂಟೆಗಳು ಯಾವುದೇ ವಿಶ್ರಾಂತಿ-ಆಯಾಸ ವಿಲ್ಲದೆ, ಆಹಾರ-ನೀರಿನ ಪರಿವಿಲ್ಲದೆ ಕ್ಯಾಪ್ಟನ್ ಎಫ್.ಎಫ್.ಸ್ಟಾಂಟನ್‌ನ ನೇತೃತ್ವದಲ್ಲಿ ಜಯಿಸು ತ್ತಾರೆ!’’

ಸವಿಸ್ತಾರವಾಗಿ ಹೇಳುವುದಾದರೆ ಕ್ಯಾಪ್ಟನ್ ಸ್ಟಾಂಟನ್‌ನ ನೇತೃತ್ವದಲ್ಲಿ ಸಿರೂರ್‌ನಿಂದ 1818 ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೇನೆ ಸತತ 27ಕಿ.ಮೀ.ಗಳು ನಡೆದು ಮಾರನೆ ದಿನ 1ನೆ ತಾರೀಕು ಬೆಳಗ್ಗೆ ಕೋರೇಗಾಂವ್ ರಣಾಂಗಣವನ್ನು ತಲುಪುತ್ತದೆ. ಅದೇ ಸಮಯದಲ್ಲಿ ಮೂರೂ ದಿಕ್ಕುಗಳಿಂದಲೂ ತಲಾ 600ರಷ್ಟಿದ್ದ ಪೇಶ್ವೆಯ ಕಾಲ್ದಳದ 3 ತುಕಡಿಗಳು ಕ್ಯಾಪ್ಟನ್ ಸ್ಟಾಂಟನ್‌ನ ಪಡೆಯನ್ನು ಸುತ್ತುವರಿಯುತ್ತವೆ.

ಅಲ್ಲದೆ ಪೇಶ್ವೆಯ ಈ ಸೈನ್ಯದ ಬೆಂಬಲಕ್ಕೆ ಬೃಹತ್ ಅಶ್ವದಳ, ರಾಕೆಟ್‌ದಳ ಬೇರೆ! ಒಟ್ಟಾರೆ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಟಿಷ್ ಸೇನೆಯು ಪೇಶ್ವೆಗಳ ಕಾಲ್ದಳ ಮತ್ತು ಫಿರಂಗಿದಳಗಳಿಂದ ಸಂಪೂರ್ಣ ವೃತ್ತಾಕಾರ ಮಾದರಿಯಲ್ಲಿ ಸುತ್ತುವರಿ ಯಲ್ಪಡುತ್ತದೆ. ಹೇಗೆಂದರೆ ಪಕ್ಕದಲ್ಲೇ ಇದ್ದ ಭೀಮಾನದಿಗೆ ಹೋಗುವ ದಾರಿಗಳೆಲ್ಲ ಬಂದ್ ಆಗುವ ಮಟ್ಟಿಗೆ! ಕಡೆಗೆ ವಿಧಿಯಿಲ್ಲದೆ ಎರಡೂ ದಳಗಳೂ ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸುತ್ತವೆ.

ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದ್ದೇ ತಡ ಎರಡೂ ಪಡೆಗಳೂ ಬೀದಿ ಬೀದಿಗಳಲ್ಲಿ, ಮನೆ-ಗುಡಿಸಲುಗಳ ಮುಂದೆ ಕೈಕೈ ಮಿಲಾಯಿಸುತ್ತಾ ನೇರಾ-ನೇರ ಕಾದಾಟಕ್ಕಿಳಿ ಯುತ್ತವೆ. ಅದರಲ್ಲೂ ಬಹುತೇಕ ಮಹಾರರೇ ತುಂಬಿದ್ದ ಬ್ರಿಟಿಷ್ ಸೈನ್ಯಕ್ಕೆ ಬಹಳ ಹಾನಿ ಯಾಗುತ್ತದೆ. ಆದರೂ ಎದೆಗುಂದದ ಮಹಾರ್ ಸೈನಿಕರು ಅತ್ಯುತ್ಕೃಷ್ಟ ಧೈರ್ಯದಿಂದ ಮುನ್ನುಗ್ಗುತ್ತಲೇ ಹೋಗುತ್ತಾರೆ. ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಸ್ಟಾಂಟನ್‌ನಂತೂ ‘‘ಕಡೆಯ ಸೈನಿಕನಿರುವ ತನಕ, ಕಡೆಯ ಬುಲೆಟ್ ಇರುವ ತನಕ ಹೋರಾಡುತ್ತಲೇ ಇರಿ’’ ಎಂದು ಹುರಿದುಂಬಿಸುತ್ತಲೇ ಇರುತ್ತಾನೆ.

ಪರಿಣಾಮ ವಾಗಿ ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲ ದುರದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗು ತ್ತಾರೆ. ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆ ಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9ಗಂಟೆಗೆ ಗುಂಡಿನ ದಾಳಿಯನ್ನು ನಿಲ್ಲಿಸುತ್ತದೆ ಹಾಗೂ ವಿಧಿಯಿಲ್ಲದೆ ಕೋರೇಗಾಂವ್‌ನಿಂದ ರಾತ್ರೋರಾತ್ರಿ ಕಾಲ್ಕೀಳು ತ್ತದೆ!

ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತ ಪೂರ್ವ ಜಯ ದಾಖಲಿಸುತ್ತಾರೆ. ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ಹಾಗೆಯೇ ಅಸ್ಪಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ.

ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್‌ನಲಿ,್ಲ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣ ಗೊಳ್ಳುತ್ತದೆ ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ. ಒಂದು ವಾಸ್ತವ, ಅದೆಂದರೆ ‘‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು’’ ಎಂದು ಹೇಳಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಭುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು.

ಆ ಕಾರಣಕ್ಕಾಗಿ ಕೋರೆಗಾಂವ್‌ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತಿ ವರ್ಷ ಸಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು. ಯಾಕೆಂದರೆ ಅಂಬೇಡ್ಕರರಿಗೆ ತಿಳಿದಿತ್ತು ಕೋರೇಗಾಂವ್‌ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ, ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ಎಂಬುದು.

ಒಂದು ವೇಳೆ ಕೋರೇಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಮತ್ತೂ ಮುಂದುವರಿದಿರುತ್ತಿತ್ತು. ಅಂದಹಾಗೆ ಅಂತಹ ಅಟ್ಟಹಾಸದ ವಾತಾವರಣದಲ್ಲಿ ಆ ಯುದ್ಧ ನಡೆದು 73 ವರ್ಷಗಳ ನಂತರ(1891) ಹುಟ್ಟಿದ ಅಂಬೇಡ್ಕರರು ಶಿಕ್ಷಣ ಪಡೆಯಲಾಗುತ್ತಿತ್ತೇ? ವಿದೇಶಿ ವ್ಯಾಸಂಗಕ್ಕೆ ತೆರಳಲಾಗುತ್ತಿತ್ತೆ? ಸಂವಿಧಾನಶಿಲ್ಪಿ ಯಾಗಲು ಸಾಧ್ಯವಿತ್ತೆ? ಈ ನಿಟ್ಟಿನಲ್ಲಿ ಕೋರೇಗಾಂವ್ ಯುದ್ಧ ಅಸ್ಪಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಅಪರೂಪದ ಮೈಲುಗಲ್ಲಾಗಿ ಉಳಿಯುತ್ತದೆ. ಹಾಗೆಯೇ ಸ್ಫೂರ್ತಿಯ ಸಂಕೇತವೂ ಅದಾಗುತ್ತದೆಯೆಂದರೆ ಅತಿಶಯೋಕ್ತಿಯೇನಲ್ಲ.

ಧಾರವಾಡ ಸಾಹಿತ್ಯ ಸಂಭ್ರಮ : ಲೆಕ್ಕ ಒಪ್ಪಿಸುವ ವಿಚಾರ ಏನಾಯ್ತು ?


ಕಸಾಪ ಮತ್ತು ಮಹಿಳೆ

ಡಾ. ಎಚ್. ಎಸ್. ಅನುಪಮಾ
ಸ್ತ್ರೀ ಭ್ರೂಣ ಹತ್ಯೆ-ಕೌಟುಂಬಿಕ ದೌರ್ಜನ್ಯ-ಅತ್ಯಾಚಾರ ದಿನನಿತ್ಯ ನಡೆಯುತ್ತಿದೆ. ಕನಿಷ್ಠ ಕೂಲಿಯಿಲ್ಲದೆ, ಉದ್ಯೋಗ ಪರಿಸರದಲ್ಲಿ ಸುರಕ್ಷತೆಯಿಲ್ಲದೆ, ವೇತನ ತಾರತಮ್ಯವನ್ನೆದುರಿಸುತ್ತ ಅಸಂಘಟಿತ ವಲಯದಲ್ಲಿ ಲಕ್ಷಾಂತರ ಮಹಿಳೆಯರು ದುಡಿಯುತ್ತಿದ್ದಾರೆ. ಮೀಸಲಾತಿಯ ಹೊರತಾಗಿಯೂ ರಾಜಕೀಯದಲ್ಲಿ ಕ್ರಿಯಾಶೀಲ ಮಹಿಳೆಯರ ಸಂಖ್ಯೆ ತುಂಬ ಕಡಿಮೆಯಿದೆ. ನ್ಯಾಯಾಲಯ, ಸರ್ಕಾರ, ರಕ್ಷಣಾ ವ್ಯವಸ್ಥೆ, ವಿಜ್ಞಾನ-ತಂತ್ರಜ್ಞಾನಗಳು ಮಹಿಳಾ ಘನತೆಗೆ ಮುಳುವಾಗುವಂತೆ ವರ್ತಿಸುವಾಗ ಸಣ್ಣ ಆಕ್ರೋಶವೂ ಹುಟ್ಟಲಾಗದಷ್ಟು ಸಮಾಜ ಜಡಗೊಂಡಿದೆ.

ಇದರ ನಡುವೆಯೇ ಮಹಿಳಾ ಸಮುದಾಯ ಜಾಗೃತಗೊಳ್ಳತೊಡಗಿರುವ ಸ್ಪಷ್ಟ ಸೂಚನೆಗಳಿವೆ. ಸಾಮಾಜಿಕ ಮಹಿಳೆ ಕಾಣಿಸತೊಡಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಇರವನ್ನು ಸಾಬೀತುಪಡಿಸುತ್ತ, ಅನನ್ಯತೆಯನ್ನು ದಾಖಲಿಸುತ್ತ ಅಸ್ಮಿತೆಯ ಶೋಧದಲ್ಲಿದ್ದಾಳೆ. ವಿಶ್ವಾದ್ಯಂತ ಸ್ತ್ರೀವಾದಿ ದೃಷ್ಟಿಕೋನವು ಮಹಿಳಾ ಹಕ್ಕು ಜಾಗೃತಿ ಮತ್ತು ಹೋರಾಟವನ್ನು ಹುಟ್ಟುಹಾಕುತ್ತಿದೆ. ಅಷ್ಟೇ ಅಲ್ಲ, ಮಹಿಳಾ ದೃಷ್ಟಿಕೋನವು ಸಾಹಿತ್ಯ ಕ್ಷೇತ್ರವನ್ನೂ ಮರುಪೂರಣಗೊಳಿಸುತ್ತಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ದಶಕಗಳಲ್ಲಿ ಅನೇಕ ಸೂಕ್ಷ್ಮ ಬರಹಗಾರ್ತಿಯರಿಂದ ವಿಪುಲ, ವೈವಿಧ್ಯಮಯ ಹಾಗೂ ಮೌಲಿಕ ಕನ್ನಡ ಸಾಹಿತ್ಯ ರಚನೆಯಾಗಿದೆ.
ಹೀಗಿರುತ್ತ ೧೯೧೫ರಲ್ಲಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಗೆ ಯಾವ ಸ್ಥಾನಮಾನ ನೀಡಿದೆ ಎಂದು ನೋಡಹೊರಟರೆ ಉಳಿದ ಪುರುಷಪಾರಮ್ಯದ ವ್ಯವಸ್ಥೆಗಳಿಗಿಂತ ಅದು ಏನೇನೂ ಭಿನ್ನವಾಗಿಲ್ಲ ಎನ್ನುವುದು ತಿಳಿದುಬರುತ್ತದೆ. ಕನ್ನಡ ಸಾಹಿತ್ಯವು ಮಹಿಳಾ ಭಾಗವಹಿಸುವಿಕೆಯಿಂದ ವೈವಿಧ್ಯ ಪಡೆದಿದ್ದು ಹೌದಾದರೂ ಶತಮಾನೋತ್ಸವ ಪೂರೈಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯ ಕ್ಷೇತ್ರ ಹೇಗೋ ಹಾಗೆಯೇ ಮಹಿಳೆಯನ್ನು ತೀರಾ ಅವಜ್ಞೆಗೊಳಪಡಿಸಿದೆ. 

ಈ ನೂರು ವರ್ಷಗಳಲ್ಲಿ ಕಸಾಪ ೨೪ ಅಧ್ಯಕ್ಷರನ್ನು ಪಡೆದಿದ್ದು ಅದರಲ್ಲಿ ಒಬ್ಬೇ ಒಬ್ಬ ಮಹಿಳೆಯಿಲ್ಲ! ಮಹಿಳಾ ಅಧ್ಯಕ್ಷೆಯಿಲ್ಲದಿದ್ದರೇನು, ಅಖಿಲ ಭಾರತ ಸಮ್ಮೇಳನಗಳಲ್ಲಿ ಎಷ್ಟು ಮಹಿಳಾ ಅಧ್ಯಕ್ಷರಿದ್ದರು ಎಂದು ನೋಡಿದರೆ ಜಯದೇವಿ ತಾಯಿ ಲಿಗಾಡೆ ಮಂಡ್ಯದಲ್ಲಿ ೧೯೭೪ರಲ್ಲಿ ಅಧ್ಯಕ್ಷೆಯಾಗುವವರೆಗೆ ಮಹಿಳೆ ಕಾಯಬೇಕಾಯಿತು. ಅದಾದಮೇಲೆ ಇಲ್ಲಿಯವರೆಗೆ - ಎಂದರೆ ೮೦ ಸಮ್ಮೇಳನಗಳಲ್ಲಿ ಒಟ್ಟು ನಾಲ್ವರು ಮಹಿಳೆಯರಷ್ಟೇ ಅಧ್ಯಕ್ಷ ಪದವಿ ಅಲಂಕರಿಸಿದ್ದಾರೆ! ಲಿಗಾಡೆಯವರಲ್ಲದೆ ಬಾಗಲಕೋಟೆಯ ೬೮ನೇ ಸಮ್ಮೇಳನಕ್ಕೆ ಶಾಂತಾದೇವಿ ಮಾಳವಾಡ, ಮೂಡುಬಿದಿರೆಯ ೭೧ನೇ ಸಮ್ಮೇಳನಕ್ಕೆ ಕಮಲಾ ಹಂಪನಾ ಹಾಗೂ ಗದಗಿನಲ್ಲಿ ನಡೆದ ೭೬ನೇ ಸಮ್ಮೇಳನಕ್ಕೆ ಗೀತಾ ನಾಗಭೂಷಣ ಬಿಟ್ಟರೆ ಮತ್ಯಾವ ಮಹಿಳೆಯೂ ಕಸಾಪ ಕಣ್ಣಿಗೆ ಬಿದ್ದಿಲ್ಲ. ಈಗಿನ ಕ.ಸಾ.ಪದ ಕಾರ್ಯಕಾರಿ ಸಮಿತಿ ನೋಡಿದರೆ ಅದರಲ್ಲಿರುವ ೪೬ ಜನರಲ್ಲಿ ಕೇವಲ ಮೂವರು ಮಹಿಳೆಯರಷ್ಟೆ ಇದ್ದಾರೆ. ೩೦ ಜಿಲ್ಲೆಗಳಲ್ಲಿ ಈಗಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಯಾದಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಮಹಿಳೆಯಿದ್ದಾರೆ. ಅದೂ ಆಕೆ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಮೊತ್ತಮೊದಲ ಮಹಿಳಾ ಜಿಲ್ಲಾಧ್ಯಕ್ಷೆ ಎಂಬ ಮಾತೂ ಕೇಳಿಬಂದಿದೆ. ಒಂದು ಸಂಸ್ಥೆಯ ಸ್ವರೂಪದಲ್ಲಿಯೇ ಹೀಗಿದ್ದ ಮೇಲೆ ಇನ್ನು ಸಮ್ಮೇಳನಗಳು ಅದರ ಪ್ರತಿಬಿಂಬವಲ್ಲದೆ ಬೇರೇನಾಗಿರಲು ಸಾಧ್ಯ?
 
ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನಗಳಲ್ಲೂ ಪುರುಷರದ್ದೇ ಮೇಲುಗೈ. ಮಡಿಕೇರಿ ೮೦ನೇ ಸಮ್ಮೇಳನಕ್ಕೆ ಸಜ್ಜಾಗಿದೆ. ಸರ್ವಾನುಮತದ ಆಯ್ಕೆಯಾಗಿ ನಾ. ಡಿಸೋಜಾ ಅಧ್ಯಕ್ಷರಾಗಿದ್ದಾರೆ. ಈ ಸಲದ ಸಮ್ಮೇಳನದ ಆಮಂತ್ರಣ ಪತ್ರಿಕೆಯತ್ತ ಕಣ್ಣಾಡಿಸಿದರೆ ಮಹಿಳೆಯರು ತಮ್ಮ ಇಲ್ಲದಿರುವಿಕೆಯಿಂದಲೇ ಎದ್ದು ಕಾಣುತ್ತಾರೆ! ಉದ್ಘಾಟನಾ ಸಮಾರಂಭಕ್ಕೆ ೨೪ ಜನ ವೇದಿಕೆಯ ಮೇಲಿರುತ್ತಾರೆ. ಅದರಲ್ಲಿ ಒಬ್ಬರೇ ಮಹಿಳೆ - ಅದೂ ಆಕೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವೆ ಎಂಬ ಕಾರಣಕ್ಕೆ. ಮೂರು ದಿನದ ಸಮ್ಮೇಳನದಲ್ಲಿ ಮುಖ್ಯ ಹಾಗೂ ಸಮಾನಾಂತರ ವೇದಿಕೆಗಳಲ್ಲಿ ಒಟ್ಟು ೧೬ ಗೋಷ್ಠಿಗಳು ನಡೆಯಲಿದ್ದು ಮಹಿಳಾ ಗೋಷ್ಠಿ ಅದರಲ್ಲಿ ಇಲ್ಲ. ಮಹಿಳಾ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಮಹಿಳೆಯರ ಭಾಗವಹಿಸುವಿಕೆ ನಗಣ್ಯವೆನಿಸುವಷ್ಟಿದೆ. ಯಾವುದೇ ಗೋಷ್ಠಿಯ ಅಧ್ಯಕ್ಷತೆಯನ್ನು ಮಹಿಳೆಗೆ ನೀಡಿಲ್ಲ. ಯಾವುದೇ ಗೋಷ್ಠಿಗೂ ಮಹಿಳೆ ಆಶಯ ಮಾತುಗಳನ್ನಾಡುತ್ತಿಲ್ಲ. ಎಲ್ಲೋ ಕೆಲ ಮಹಿಳೆಯರು ವಿಷಯ ಮಂಡನೆಯಲ್ಲಿ ಕಾಣುತ್ತಾರೆ. ವಿರಳವಾಗಿ ಸಭಾ ನಿರ್ವಹಣೆಯಲ್ಲಿ ಕಾಣಬರುತ್ತಾರೆ. ‘ಕೊಡಗು ಜಿಲ್ಲೆಯ ಮುಂದಿನ ಸವಾಲುಗಳು’, ‘ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’, ‘ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು’, ‘ಕನ್ನಡ ಸಾಹಿತ್ಯ ಮತ್ತು ದೇಶೀಯತೆ’ ಎಂಬ ಗೋಷ್ಠಿಗಳಲ್ಲಿ ಒಬ್ಬ ಮಹಿಳೆಯೂ ಇಲ್ಲ. ಸನ್ಮಾನ ಸಮಾರಂಭದಲ್ಲಿ ೮೨ ಜನ ಸನ್ಮಾನ ಸ್ವೀಕರಿಸುತ್ತಿದ್ದು ಅದರಲ್ಲಿ ೫ ಜನ ಮಾತ್ರ ಮಹಿಳೆಯರಿದ್ದಾರೆ. ಸಮಾರೋಪ ಸಮಾರಂಭದಲ್ಲಿ ೨೧ ಜನರಲ್ಲಿ ಮೂವರು ಮಹಿಳೆಯರಿದ್ದಾರೆ. ಇಬ್ಬರು ಮಾಜಿ ಸಚಿವೆ ಮತ್ತು ಜಿಲ್ಲಾ ಪಂಚಾಯ್ತಿ ಸಿಇಒ ಎಂಬ ಕಾರಣಕ್ಕೆ ಇದ್ದಾರೆ. ಮುಖ್ಯ ಕವಿಗೋಷ್ಠಿಯ ೨೮ ಕವಿಗಳಲ್ಲಿ ೮ ಮಹಿಳೆಯರು, ಸಮಾನಾಂತರ ವೇದಿಕೆಯ ೩೬ ಕವಿಗಳಲ್ಲಿ ೪ ಮಹಿಳೆಯರು ಇದ್ದಾರೆ. 
 
ಈ ಬಾರಿ ಭಾಷೆ-ಪರಿಸರ-ದಾಸ ಸಾಹಿತ್ಯ-ದೇಶೀಯತೆ-ವಿಜ್ಞಾನ ತಂತ್ರಜ್ಞಾನ-ಸಾಂಸ್ಕೃತಿಕ ಸಂಶೋಧನೆ-ಕನ್ನಡ ಸ್ಥಾನಮಾನದ ಕುರಿತು ಗೋಷ್ಠಿಗಳಿವೆ. ಆದರೆ ಮಹಿಳೆಯ ಯಾವ ಸಮಸ್ಯೆಯೂ ಗೋಷ್ಠಿಯೊಂದರಲ್ಲಿ ಚರ್ಚೆಗೊಳಪಡುವಷ್ಟು ಮಹತ್ವದ ವಿಷಯವೆನಿಸಲಿಲ್ಲವೆ? ಮಹಿಳಾ ಹೋರಾಟ, ಚಳುವಳಿ, ಸಂಘಟನೆಗಳಲ್ಲಿರುವವರ ಜೊತೆ ಕನ್ನಡ ಸಾಹಿತ್ಯ-ಸಾಹಿತಿಗಳು ಗುರುತಿಸಿಕೊಳ್ಳುವುದು ಮುಖ್ಯವಲ್ಲವೆ? ಪರಕಾಯ ಪ್ರವೇಶ ಮಾಡಿ ತನ್ನದಲ್ಲದ ನೋವು, ಸಂಕಟಗಳನ್ನು ಅಕ್ಷರವಾಗಿ ಅಭಿವ್ಯಕ್ತಿಸಬಲ್ಲ ಸೂಕ್ಷ್ಮಜ್ಞ ಸಾಹಿತಿಗಳಲ್ಲೇ ಇಷ್ಟು ಲಿಂಗ ಅಸೂಕ್ಷ್ಮತೆ ಇದೆಯೆಂದಾದರೆ ಭಾರತೀಯ ಸಮಾಜ ಮಹಿಳೆಯನ್ನು ೨೧ನೇ ಶತಮಾನದಲ್ಲಿ ಹೀಗೆ ನಡೆಸಿಕೊಳ್ಳುತ್ತಿರುವುದರಲ್ಲಿ ಏನಚ್ಚರಿಯಿದೆ? 

ಇಂಥ ಪ್ರಶ್ನೆ ಎತ್ತಿದ ಕೂಡಲೇ ಕರ್ನಾಟಕ ಲೇಖಕಿಯರ ಸಂಘದತ್ತ ಬೊಟ್ಟುಮಾಡಿ ಅದರ ಸಮ್ಮೇಳನಗಳಲ್ಲಿ ಮಹಿಳಾ ವಿಷಯ ಕುರಿತೇ ಚರ್ಚೆ ಮಾಡಿ ಎಂಬ ಉತ್ತರ ಬರುವುದು ನಿರೀಕ್ಷಿತ. ಆದರೆ ನಮಗೆ ಬೇಕಿರುವುದು ಪ್ರತ್ಯೇಕ ಮಹಿಳಾ ಸಮ್ಮೇಳನಗಳೆಂಬ ಮಹಿಳಾ ಮೀಸಲಾತಿಯಲ್ಲ. ಬದಲಾಗಿ ಸರ್ವ ಕನ್ನಡಿಗರ ಸಮ್ಮೇಳನದಲ್ಲಿ ಕನ್ನಡತಿಯರಿಗೂ ಸಮಾನ ಅವಕಾಶ ಹಾಗೂ ಸಹಭಾಗಿತ್ವ ಸಿಗಬೇಕು. ಸರ್ವರ ಮನದಲ್ಲಿ ಮಹಿಳೆಗೆ ಸಮಾನ ಗೌರವ ದೊರೆಯಬೇಕು. 
 
ಬಹುಶಃ ‘ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು’ ಗೋಷ್ಠಿಯ ಆಶಯ ಮಾತುಗಳನ್ನು ಮಹಿಳೆಯೊಬ್ಬಳು ಆಡಿದ್ದರೆ ಅರ್ಧಕ್ಕರ್ಧ ಜನಸಮುದಾಯ ಕಸಾಪವನ್ನು ಏನೆಂದು ಭಾವಿಸಿದೆ ಎಂದು ತಿಳಿಯುತ್ತಿತ್ತು. ಆದರೆ ಎಲ್ಲಿಯವರೆಗೆ ಧಾರ್ಮಿಕ ವ್ಯಕ್ತಿಗಳ ಇರುವಿಕೆಯೇ ದಿವ್ಯ ಸಾನ್ನಿಧ್ಯವೆಂದು ಕಸಾಪ ಬಗೆಯುವುದೋ ಅಲ್ಲಿಯವರೆಗೆ ಮಹಿಳೆಯನ್ನು ನಾಮಮಾತ್ರವಾಗಿ ಬಳಸಿಕೊಳ್ಳುವುದು ಮುಂದುವರೆಯುತ್ತದೆ. 

ಮುಂಬರುವ ದಿನಗಳಲ್ಲಾದರೂ ಕಸಾಪ ತನ್ನ ಇಂಥ ಧೋರಣೆ ಬದಲಿಸಿಕೊಳ್ಳದೇ ಹೋದಲ್ಲಿ, ಸಮ್ಮೇಳನದ ಸ್ವರೂಪ ಬದಲಾಗದೇ ಹೋದಲ್ಲಿ ಪ್ರಸ್ತುತ ಬೀದರ ಜಿಲ್ಲೆಯ ಸೋದರಿಯರು ಹೇಗೆ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದಾರೋ, ಅದೇ ಮೇಲ್ಪಂಕ್ತಿ ಅನುಸರಿಸಿ ಪ್ರತಿ ಜಿಲ್ಲೆಯ ಮಹಿಳೆಯರೂ ಕ್ರಿಯಾಶೀಲರಾಗಬಹುದು. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಈ ವಿಷಯದತ್ತ ಗಮನ ಹರಿಸಿ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತು ರಚನೆಯಾಗುವ ಒತ್ತಡವೂ ಹುಟ್ಟಿಕೊಳ್ಳಬಹುದು. 
 

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪರವಾಗಿ,

ಶಿವಶಂಕರ ಬಣಕಾರ : ಬಾನಾಡಿಗಳ ಕಾವ್ಯನೋಡಿ ಕಲಿ


ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು.. ಯಾರ ಜತೆ ನಿಲ್ಲಬೇಕು ಮತ್ತು ಯಾರ ಜತೆ ನಿಲ್ಲಬಾರದು.. ಹೀಗೆ
ಕಳೆದ ವರ್ಷ

ಬೆನಕ ಕುಂಬಾರ

೨೦೧೩ ರಲ್ಲಿ ನನ್ನನ್ನು ಹಿಡಿದಿಟ್ಟ ಕೆಲ ವಿಷಯಗಳು ಮತ್ತು ಕೃತಿಗಳ ನೆನಪಿಗೆ ಈ ಪದ್ಯ

ಕಳೆಯಿತು ಇನ್ನೊಂದು ವರ್ಷ
ನೆಲಕೆ ಬಿದ್ದ ರೈತನ ನೆತ್ತರ ಕಲೆ
ಅಮಾಯಕ ಸೌಜನ್ಯಳ ಮೈಮೇಲಿನ
ಕಾಮುಕ ಗುರುತುಗಳ ಅಳಿಸದೆ

ಬಸವನ ಹುಳುವಿನ ಜಾಡು
ಇರುವೆಯ ಹೋರಾಟ
ಕಮರಿಹೋದ ಕನಸುಗಳ
ಕಂದೀಲಿನ ಕಪ್ಪು ಕಣ್ಣ ಮಸಕಾಗಿಸಿತು

ರಸ್ತೆ ನಕ್ಷತ್ರಗಳ ಬೆಳಕಿನಲ್ಲಿ
ಹೃದಯದ ಹುದಲು ತಿಳಿಯಾಗುವ
ಸೂಚನೆ, ಜನಸಾಹಿತ್ಯದ ಹೊಸ
ದಿಗಂತ- ಹಾಡು ಹಕ್ಕಿಗಳ ಸ್ನೇಹ

ದೀಪದ ಗಿಡ ತೇವ ಕಾಯುವ
ಬೀಜದಿಂದ ಮೊಳೆತು ಎದೆಯಲಿ
ದ್ವಿಪದಿಗಳ ಪುಟ್ಟ ಮೆರವಣಿಗೆ
ನೋವುಗಳ ಮರೆಸಿ ಕಾದ ಬರವಣಿಗೆ

ಎಳೆಯ ಪಾಪಕ್ಕೊಂದು ಹೆಸರಿಟ್ಟು
ಪರ ಭಾಷೆಯ ನಗರಕ್ಕೆ ಉಡಿ ತುಂಬಿ
ಕಳಿಸಿದ ಸಾರ್ಥಕತೆ, ಢುoಢಿಯ
ನೆಪದಲ್ಲಿ ಮೂಲಗಳ ಹುಡುಕಾಟದ
ಎಚ್ಚರದ ಹೊಸ ಮಿಣುಕು ಹುಳಗಳ
ಹಾರಾಟ ತಲೆಯ ಲಂಟಾನ ಬಳ್ಳಿಯಲ್ಲಿ

ಪಂಜು, ನವಿಲು, ನವಿಲಾದವರ
ಅನವರತ ಕಿಚ್ಚಿಗೆ ಬೆಚ್ಚಗೆ ಕೂರಲಾಗದ
ಸ್ಥಿತಿಯಲ್ಲಿ 'ಹೃದಯ' ತಲ್ಲಣದ ಹಾಡಿಗೆ
ಬಾಬಾಸಾಹೇಬ, ಬುದ್ಧರ ತೋರುಬೆರಳ
ತೋರಿ ಹೊರಟೆ ಹೋಯಿತು ವರುಷ
ಈ ಖರಾಬು ದುನಿಯಾದ ವಿಳಾಸ ಹೇಳದೆ.

Monday, December 30, 2013

ಜ 3 ಮತ್ತು 4 ಬಳ್ಳಾರಿ : `ಹೈದರಾಬಾದ್ ಕರ್ನಾಟಕದ ಮಕ್ಕಳ ಭಾಷಾ ಕಲಿಕೆಯ ತೊಡಕುಗಳು' - ಸೆಮಿನಾರ್

`ಹೈದರಾಬಾದ್ ಕರ್ನಾಟಕದ ಮಕ್ಕಳ ಭಾಷಾ ಕಲಿಕೆಯ ತೊಡಕುಗಳು' ಕುರಿತಂತೆ ಮೈಸೂರಿನ ಸಿ ಐ ಐಎಲ್ ಮತ್ತು ಕೃಷ್ಣದೇವರಾಯ ವಿವಿ ಬಳ್ಳಾರಿಯಲ್ಲಿ ಜನವರಿ 3 ಮತ್ತು 4 ರಂದು ಸೆಮಿನಾರ್ ನಡೆಸಲಿದೆ.ಜ 2,3, 4 ಮತ್ತು 5, ಧಾರವಾಡ : ಜಿ ಎಸ್ ಶಿವರುದ್ರಪ್ಪ ಸ್ಮರಣೆಯ ನಾಟಕೋತ್ಸವ


ಧಾರವಾಡ ಸಾಹಿತ್ಯ ಸಂಭ್ರಮ ಕುರಿತು ಬೇಳೂರು ಸುದರ್ಶನ ಅವರ ಪತ್ರ
 

ಮಾನ್ಯರೇ
ನಮಸ್ಕಾರಗಳು. ಜನವರಿ ೧೭ರಿಂದ ೧೯ರವರೆಗೆ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಸಂಘಟಿಸಲಿರುವ `ಸಾಹಿತ್ಯ ಸಂಭ್ರಮ' ೨೫-೨೮ ಲಕ್ಷ ರೂ. ಖರ್ಚಾಗಬಹುದು ಎಂಬ ಸುದ್ದಿ ಪ್ರಜಾವಾಣಿಯಲ್ಲಿ ಓದಿದೆ. ಇದರಲ್ಲಿ ಭಾಗವಹಿಸುವ ಪ್ರತಿನಿಧಿಗಳೂ ೫೦೦ ರೂ. ಶುಲ್ಕ ನೀಡಬೇಕು. ಇದಲ್ಲದೆ ಸರ್ಕಾರದಿಂದ ೧೫ ಲಕ್ಷ ರೂ. ಹಣವನ್ನೂ ಕೋರಲಾಗಿದೆ. 

ಸಾಹಿತ್ಯದ ಅಭಿರುಚಿ, ಪುಸ್ತಕ ಸಂಸ್ಕೃತಿ ಬೆಳೆಸಲು ಇಂಥ ಸಮಾವೇಶಗಳು ಬೇಕು ಎಂದು ಹೇಳುವವರಿದ್ದಾರೆ. ಆದರೆ `ಜನರ ನೋವಿಗೆ ಮಿಡಿವ ಪ್ರಾಣಮಿತ್ರ' ಆಗಬೇಕೆಂದರೆ ಅದು ಸುಲಭವಾಗಿ ದಕ್ಕಬೇಕು. ಕೇವಲ ಓದುಗರಿಗಲ್ಲ, ಸಾಹಿತ್ಯಾಸಕ್ತರಿಗೆ, ಯುವ ಲೇಖಕರಿಗೆ. ಕಂಪ್ಯೂಟರ್‌ ಯುಗದಲ್ಲಿ ಕೇವಲ ಸಾಫ್ಟ್‌ವೇರ್‌ ಸಮುದಾಯ ಮತ್ತು ಪತ್ರಕರ್ತರು ಕನ್ನಡದಲ್ಲಿ ಬರೆಯುತ್ತ ಉಳಿದವರೆಲ್ಲ ಕನ್ನಡ ಟೈಪ್‌ ಮಾಡುವುದು ಹೇಗೆ ಎಂದು ತಬ್ಬಿಬ್ಬಾಗಿ ಕೂತಿರುವಾಗ, ಗ್ರಾಮೀಣ ಯುವ ಸಮುದಾಯವು ಕೇವಲ ಮೊಬೈಲ್‌ಗಳಲ್ಲೇ ಫೇಸ್‌ಬುಕ್ ಚಟುವಟಿಕೆ ನಡೆಸುತ್ತಿರುವಾಗ, ಭಾಷೆ, ಸಾಹಿತ್ಯ ಪ್ರೀತಿಯನ್ನು ಹುಟ್ಟಿಸಲು ಇಂಥ ಖರ್ಚಿನ (ನಾನು ದುಬಾರಿ ಎನ್ನುತ್ತಿಲ್ಲ; ಈ ಕಾಲದಲ್ಲಿ ೨೮ ಲಕ್ಷ ಇಂಥ ಸಮಾವೇಶಕ್ಕೆ ಏನೂ ಅಲ್ಲ ಬಿಡಿ) ಮತ್ತು ಶುಲ್ಕದ ಸಮಾವೇಶಕ್ಕೆ ಸರ್ಕಾರವು ಬೆಂಬಲ ನೀಡಬೇಕೆ? ಹಾಗಾದರೆ ಪುಂಡಲೀಕ ಹಾಲಂಬಿಯವರು ಕೇಳುವಂತೆ ಕಸಾಪಕ್ಕೆ ಯಾಕೆ ಹಣ ನೀಡಬಾರದು? ಸಾಹಿತ್ಯ ಸಮ್ಮೇಳನದ ಆಸುಪಾಸಿನಲ್ಲೇ ಇಂಥ ಸಾಹಿತ್ಯ ಸಂಭ್ರಮ ಆಚರಿಸುವ ಸಮಯಸ್ಫೂರ್ತಿಯ ಹಿನ್ನೆಲೆ ಏನು? ಕೇವಲ ೨೦೦+೧೦೦ ಜನರಿಗೆ ಎಂದು ಮಿತಿ ಹಾಕಿರುವ ಸಮ್ಮೇಳನಕ್ಕೆ ಸರ್ಕಾರವು ಯಾಕೆ ಬೆಂಬಲ ನೀಡಬೇಕು? ಕನ್ನಡದ ಸಾಹಿತ್ಯವೇ ಮುಕ್ತವಾಗಿ (ಮತ್ತು ಕಲಿಕೆಗೆ ಉಚಿತವಾಗಿ) ಜನತೆಗೆ ದೊರಕಬೇಕೆಂದು ಸರ್ಕಾರವು ಕಣಜ ಜಾಲತಾಣವನ್ನೇ ರೂಪಿಸಿದೆ; ಸರ್ಕಾರವು ಟ್ರಸ್ಟ್‌ಗಳಿಗೆ ಹಣ ನೀಡುವ ಬದಲು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕವೇ / ಕಣಜ ಜಾಲತಾಣದ ಮೂಲಕವೇ (ಸೂಕ್ತ ಗುಣಮಟ್ಟದ ಷರತ್ತುಗಳೊಂದಿಗೆ) ಇಂಥ ಶಿಸ್ತಿನ ಗೋಷ್ಠಿಯನ್ನು ನಡೆಸಬಾರದೇಕೆ? ಸಾಹಿತ್ಯವು ಓಪನ್‌ಸೋರ್ಸ್‌ ಆಗುವ ಬದಲು ಖಾಸಗೀಕರಣ ಆಗುತ್ತಿದೆ ಎಂದು ನಿಮಗೆ ಅನ್ನಿಸುವುದಿಲ್ಲವೆ? ಇದು ಯಾವ ಇಸಂ? ಇದರಲ್ಲೇನು ಸಮಾಜಪ್ರೀತಿ ಇದೆ? 


ಇಷ್ಟಕ್ಕೂ ಇಂಥ ಸಮ್ಮೇಳನವನ್ನು ಒಂದು ಟ್ರಸ್ಟ್‌ ಅದರ ಪಾಡಿಗೆ ಆಚರಿಸಿದರೆ ನನ್ನದೇನೂ ಮಾತಿಲ್ಲ. ಖಾಸಗಿ ಟ್ರಸ್ಟ್‌ನ ಚಟುವಟಿಕೆಗಳನ್ನು ವಿರೋಧಿಸಲು ನಾನಾರು? ಆದರೆ ಸರ್ಕಾರದ ಹಣ ಸಾರ್ವಜನಿಕ ಹಣ. ಅದನ್ನು ಶುಲ್ಕ ಮತ್ತು ಸಂಖ್ಯಾಮಿತಿ ಇರುವ ಸಮ್ಮೇಳನಕ್ಕೆ ಬಳಸುವುದಕ್ಕೆ ನನ್ನ ವಿರೋಧವಿದೆ. ಕನ್ನಡ ಭಾಷೆಯೇ ಅಪಾಯದಲ್ಲಿರುವಾಗ ಕೊಂಡು ಓದುವ ಸಂಸ್ಕೃತಿಯ ಪ್ರಚಾರದ ಜೊತೆಗೆ (ಇದೂ ದೊಡ್ಡ ವಿಷಯ; ಪುಸ್ತಕ ಖರೀದಿ ಮತ್ತು ಮುಕ್ತ ಸಾಹಿತ್ಯ ಎರಡೂ ಒಟ್ಟಿಗೇ ಇರುವ ಟ್ರಾನ್ಸಿಶನ್‌ನ ಕಾಲ ಇದು. ಆದ್ದರಿಂದ ಖರೀದಿಯನ್ನು ಸಂಪೂರ್ಣ ವಿರೋಧಿಸಲಾರೆ) ತೆತ್ತು ಭಾಗವಹಿಸುವ ಸಮಾವೇಶಗಳನ್ನೂ ನಡೆಸುವ ಪರಿಪಾಠ ಆರಂಭವಾಗಿರುವುದು, ಇದಕ್ಕಾಗಿ ಸರ್ಕಾರವೂ ಹಣ ನೀಡಬೇಕು ಎನ್ನುವುದು ವಿಷಾದನೀಯ. ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಎಲ್ಲ `ಪ್ರಗತಿಪರ' ಲೇಖಕರೂ ಈ ಬಗ್ಗೆ ಚಿಂತಿಸಲು ವಿನಂತಿ.
---
ವಿಶ್ವಾಸದಿಂದ
ಬೇಳೂರು ಸುದರ್ಶನಇದನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದೇನೆ. ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಮುಕ್ತ ಸಾಹಿತ್ಯ ಚಳವಳಿಯ ಅಜೆಂಡಾ ಇದೆ ಎಂದು ಭಾವಿಸಿದ್ದೇನೆ. 

ಜ 7,8, 9 ಮಡಿಕೇರಿ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...