Thursday, December 05, 2013

ಕಾವ್ಯ ಮನುಷ್ಯನ ಮಾತೃಭಾಷೆ


ಸಂದರ್ಶನ : ಕುಮಾರ್ ಎಸ್

ಸೌಜನ್ಯ : ವಿಜಯ ಕರ್ನಾಟಕ

 


 

ಭಾರತೀಯ ಕಾವ್ಯವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಗಮನ ಸೆಳೆದಿರುವ ಕೆ. ಸಚ್ಚಿದಾನಂದನ್ ಅವರು, ಮಲಯಾಳಂನ ಪ್ರಸಿದ್ಧ ಕವಿಗಳಲ್ಲಿ ಒಬ್ಬರು. ಹೊಸ ಮತ್ತು ಹಳೆಯ ತಲೆಮಾರಿನ ಕೊಂಡಿಯಂತಿರುವ ಸಚ್ಚಿದಾನಂದನ್ ನಮ್ಮ ನಡುವಿನ ವಿಭಿನ್ನ ಕಾವ್ಯ ಶಕ್ತಿ. ವ್ಯಂಗ್ಯ, ವಿಡಂಬನೆಯ ಮೂಲಕ ಕಾವ್ಯವನ್ನು ಸಮಾಜದ ದನಿಯಾಗಿ ದುಡಿಸಿಕೊಂಡ ಇವರಿಗೆ ಕರ್ನಾಟಕದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಇದೇ ಮೊದಲ ಬಾರಿಗೆ ನೀಡುತ್ತಿರುವ 'ಕುವೆಂಪು ರಾಷ್ಟ್ರೀಯ ಪುರಸ್ಕಾರ' ಸಂದಿದೆ. ಈ ಹಿನ್ನೆಲೆಯಲ್ಲಿ ಒಂದು ಪುಟ್ಟ ಮಾತುಕತೆ.

* 'ಕುವೆಂಪು ರಾಷ್ಟ್ರೀಯ ಪುರಸ್ಕಾರ'ಕ್ಕೆ ಪಾತ್ರರಾಗಿರುವ ಮೊದಲ ಕವಿ ನೀವು. ಏನನ್ನಿಸುತ್ತಿದೆ?
- ಇದು ನನಗೆ ಮತ್ತು ನನ್ನ ಭಾಷೆಗೆ, ಸೋದರ ಭಾಷೆಯ ಸಂಸ್ಥೆ ಗುರುತಿಸಿ ನೀಡುತ್ತಿರುವ ಗೌರವ. ಕಾವ್ಯವೇ ಮನುಷ್ಯರ ಮಾತೃಭಾಷೆ ಮತ್ತು ಅದು ಜಾತಿ, ವರ್ಗ, ಧರ್ಮ, ಭಾಷೆ, ಪ್ರಾದೇಶಿಕತೆಗಳೆಂಬ ಅಂತರಗಳನ್ನು ಒಡೆದು ಹಾಕುತ್ತದೆ ಎಂದು ನಂಬಿದವನು ನಾನು. ಈ ಪ್ರಶಸ್ತಿ ನನ್ನ ನಂಬಿಕೆಯನ್ನು ಬಲಗೊಳಿಸಿದೆ. ಎರಡನೆಯದಾಗಿ, ಇದು ಕುವೆಂಪು ಹೆಸರಿನಲ್ಲಿ ನೀಡುತ್ತಿರುವುದು. ಜಾತಿ ವಿರೋಧಿಯಾಗಿದ್ದ ಕುವೆಂಪು, ಮನುಷ್ಯ ಘನತೆ, ಸಮಾನತೆ, ಸ್ತ್ರೀ ಸಮಾನತೆ ಪರವಾಗಿದ್ದರು. ವಿಶ್ವಮಾನವತಾವಾದವನ್ನು ಎತ್ತಿ ಹಿಡಿದವರು. ಮೂರನೆಯದಾಗಿ, ಬಹುದೊಡ್ಡ ಸಾಹಿತ್ಯ ಪರಂಪರೆ ಇರುವ ನೆರೆಯ ನಾಡಿನಿಂದ ನನಗೆ ಈ ಗೌರವ ಸಂದಿರುವುದು. ಬಂಗಾಳಿ, ಒರಿಸ್ಸಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಇಂಥ ಗೌರವ ಸಂದಾಗ ಆದಷ್ಟೇ ಸಂತೋಷ ನನಗಾಗಿದೆ.

* ಕನ್ನಡದ ಹೆಮ್ಮೆಯ ಕವಿ ಕುವೆಂಪು ಅವರನ್ನು ಈ ಹೊತ್ತಿನಲ್ಲಿ ನೀವು ಹೇಗೆ ಕಾಣುತ್ತೀರಿ?
- ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾಲೇಖಕ. ಅವರ 'ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ 'ರಸೋ ವೈ ಸಃ'ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.

* ಒಂದು ಭಾಷೆಯ ಸಾಹಿತ್ಯಕ ಪ್ರಶಸ್ತಿಯನ್ನು,ಇನ್ನೊಂದು ಭಾಷೆಯ ಸಾಹಿತಿಗೆ ನೀಡುವ ಈ ಪರಿಪಾಠದ ಬಗ್ಗೆ ಏನು ಹೇಳುತ್ತೀರಿ?
- ನಮ್ಮ ಭಾಷೆಗಳು ಪರಸ್ಪರ ಪ್ರೀತಿಯಿಂದ ಕಾಣುವುದು, ವಿನಿಮಯ ಮಾಡಿಕೊಳ್ಳುವುದು ಹಾಗೂ ಸಂವಾದಕ್ಕೆ ಪ್ರೇರಣೆ ನೀಡುವುದು ಬಹುಮುಖ್ಯ. ನಮಗೆ ಭಾರತೀಯ ಭಾಷೆಗಳ ಸಾಹಿತ್ಯಕ್ಕಿಂತ ಹೆಚ್ಚು ವಿದೇಶಿ ಸಾಹಿತ್ಯದ ಬಗ್ಗೆ ಗೊತ್ತು. ನಮ್ಮ ನೆರೆಯ ಭಾಷಾ ಸಾಹಿತ್ಯವನ್ನು ಅರಿಯುವುದಕ್ಕೆ ಈ ಪ್ರಶಸ್ತಿ ಒಂದು ಕಾರಣ. ಇದೊಂದು ರೀತಿಯಲ್ಲಿ ಭಾರತೀಯ ಭಾಷೆಗಳ ಸೋದರತ್ವದ ಅಭಿವ್ಯಕ್ತಿ. ದಕ್ಷಿಣ ಭಾರತದ ಭಾಷೆಗಳ ಮಟ್ಟಿಗೆ ಇನ್ನಷ್ಟು ತೀವ್ರವಾದದ್ದು. ನನ್ನ ಮಟ್ಟಿಗೆ ಈ ಪ್ರಶಸ್ತಿ ಆಲೋಚನೆ ಮತ್ತು ಕಾಳಜಿಗಳಲ್ಲಿ ಸಮಾನ ನೆಲೆಗಳನ್ನು ಹೊಂದಿರುವ ಕನ್ನಡ ಮತ್ತು ಮಲಯಾಳಂ ಭಾಷೆಗಳ ನಡುವೆ ಮಹತ್ವದ ವಿನಿಮಯಕ್ಕೆ ಉತ್ತೇಜಕವಾಗುವುದೆಂಬ ಭರವಸೆ ನೀಡಿದೆ.

* ಮಲಯಾಳಂ ಕಾವ್ಯಲೋಕದಲ್ಲಿ ಹೊಸತೇನಿದೆ?
ಮೈಕ್ರೋ ಬ್ಲಾಗಿಂಗ್, ಸೋಷಿಯಲ್ ನೆಟ್‌ವರ್ಕ್‌ಗಳು ಬಂದ ಮೇಲೆ ಕವಿತೆ ಬರೆಯುವವರು ಹೆಚ್ಚಾಗಿದ್ದಾರೆ. ಮೊದಲು ಬ್ಲಾಗ್‌ಗೆ ಬರೆಯುತ್ತಾರೆ. ಆಮೇಲೆ ಸಂಕಲನಗಳನ್ನು ತರುತ್ತಾರೆ. ಪ್ರಯೋಗಗಳು ನಡೆಯುತ್ತಿವೆ. ಫೋಟೋ, ವಿಡಿಯೋಗಳ ಮೂಲಕ ಮಲ್ಟಿಮೀಡಿಯಾ ಕಾವ್ಯ ಬರುತ್ತಿದೆ. ಭಾಷೆ ಮತ್ತು ಅಭಿವ್ಯಕ್ತಿಯ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆ. ಹೊಸ ಸಾಧ್ಯತೆಗಳ ಹುಡುಕಾಟ ನಡೆದಿದೆ. ಕಾವ್ಯದ ಭಾಷೆಯಲ್ಲೂ ಬದಲಾವಣೆ ಕಾಣುತ್ತಿದೆ. ಈಗ ನಿತ್ಯದ ಭಾಷೆ ಕಾವ್ಯಾಭಿವ್ಯಕ್ತಿ ಕಾಣುತ್ತಿದೆ. ಹೊಸ ತಲೆಮಾರಿನ ಕವಿಗಳು, ನಿತ್ಯ ವ್ಯವಹಾರದ ಭಾಷೆ ಬಳಸುತ್ತಿದ್ದಾರೆ. ಹೊಸ ಮಾಧ್ಯಮದಿಂದ ಕಾವ್ಯಾಭಿವ್ಯಕ್ತಿ ಸುಲಭವಾಗಿದೆ. ಕವಿಗಳು, ಯಾವುದೇ ಪತ್ರಿಕೆ ಅಥವಾ ವೇದಿಕೆಗಾಗಿ ಕಾಯಬೇಕಿಲ್ಲ. ಆದರೆ ಸರಿಯಾದ ವಿಮರ್ಶೆ ಇಲ್ಲದಿರುವುದು ಸಮಸ್ಯೆಯಾಗಿದೆ. ಕಾಮೆಂಟ್ ಮಾಡುವವರು ಉತ್ಪ್ರೇಕ್ಷೆಯ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಅವು ವಸ್ತುನಿಷ್ಠವಾಗಿರುವುದಿಲ್ಲ. ಅವರಿಗೆ ಕಾವ್ಯ ಪರಂಪರೆಯಾಗಲಿ, ಭಾಷೆಯ ಬಗ್ಗೆಯಾಗಲಿ ಜ್ಞಾನವಿರುವುದಿಲ್ಲ. ಇದು ಕಾವ್ಯದ ಗುಣಮಟ್ಟವನ್ನು ಹಾಳು ಮಾಡುತ್ತಿದೆ.

* ನಿಮ್ಮನ್ನು ಸೆಳೆಯುವ ಹೊಸ ತಲೆಮಾರಿನ ಕವಿಗಳಾರು?
ಹೊಸ ದನಿಯೊಂದು ಕೇಳಿಬರುತ್ತಿದೆ. ಹೊಸ ತಲೆಮಾರಿನ ಬಹಳಷ್ಟು ಮಂದಿ ಕಾವ್ಯ ಕೃಷಿ ಮಾಡುತ್ತಿದ್ದಾರೆ. ಇದು ಶ್ರೇಷ್ಠ ಕಾವ್ಯ ಅಲ್ಲದಿರಬಹುದು; ಹೊಸ ಜಗತ್ತನ್ನೇ ಸೃಷ್ಟಿ ಮಾಡಿಲ್ಲದಿರಬಹುದು. ಆದರೆ ಜೀವಂತಿಕೆಯ ಕಾವ್ಯ ಕೃಷಿಯನ್ನಂತೂ ಮಾಡುತ್ತಿದ್ದಾರೆ. ಇವರೆಲ್ಲಾ ಒಬ್ಬರಿಗಿಂತ ಒಬ್ಬರು ಭಿನ್ನರು. ಸಮತೋಲನ, ಕೌಶಲ್ಯಗಳು ಇವರ ಕಾವ್ಯದಲ್ಲಿ ಕಾಣಿಸುತ್ತವೆ. ಆದರೆ ವಿಶಾಲ ದೃಷ್ಟಿಕೋನದ ಕೊರತೆ ಇದೆ. ಇವೆಲ್ಲಗಳಾಚೆಗೆ ನಾನು ಯಾವುದೇ ಕಟ್ಟುಪಾಡುಗಳನ್ನಿಟ್ಟುಕೊಳ್ಳದೆ ಅವರ ಕವಿತೆಗಳನ್ನು ಅನುವಾದಿಸಿದ್ದೀನಿ. ಬೇರೆ ಭಾಷೆಯ ಕವಿಗಳಿಗೂ ಅವು ತಲುಪಲಿ ಎಂಬ ಕಾರಣಕ್ಕೆ. ಲತೀಶ್ ಮೋಹನ್, ವಿಷ್ಣು ಪ್ರಸಾದ್, ವಿಲ್ಸನ್, ನಜೀರ್ ನಮ್ಮ ಹೊಸ ತಲೆಮಾರಿನ ಭರವಸೆಯ ಕವಿಗಳು.

* ನಿಮ್ಮ ಗಮನ ಸೆಳೆದ ಅನ್ಯಭಾಷೆಯ ಕಾವ್ಯ ಮತ್ತು ಕವಿಗಳು ಯಾರು?
ಬೇರೆ ಭಾಷೆಯ ಹೊಸ ತಲೆಮಾರಿನ ಕಾವ್ಯದ ಬಗ್ಗೆ ಹೆಚ್ಚು ಪರಿಚಿತನಲ್ಲ. ಯಾಕೆಂದರೆ ಅವುಗಳ ಅನುವಾದ ಬರುತ್ತಿಲ್ಲ. ಆದರೆ ಹಿರಿಯ ತಲೆಮಾರಿನ ಕವಿಗಳು ಪರಿಚಿತ. ಅವರ ಅನುವಾದಗಳನ್ನು ಓದಿದ್ದೇನೆ. ಕನ್ನಡದಲ್ಲಿ ಅಡಿಗ, ಕಂಬಾರರಂಥ ಕಾವ್ಯ ಪ್ರತಿಭೆಗಳನ್ನು ಬಲ್ಲೆ. ಆದರೆ ಸಮಕಾಲೀನ ಕವಿಗಳಲ್ಲಿ ನನಗೆ ಮರಾಠಿಯ ಅರುಣ್ ಕೋಲಟ್ಕರ್ ತುಂಬಾ ಇಷ್ಟ. ಅವರು ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. ಹೊಸ ಶೈಲಿ, ಬದುಕಿನ ಬಗ್ಗೆ ಹೊಸ ಒಳನೋಟಗಳನ್ನಿಟ್ಟುಕೊಂಡು ಕಾವ್ಯಬರೆಯುತ್ತಾರೆ. ಆಪ್ತವೂ, ಆತ್ಮೀಯವೂ.. ಆದ ಕಾವ್ಯ ಅವರದ್ದು. ಅವರ 'ಜ್ಯೂರಿ', 'ಸರ್ಪಸೂತ್ರ' ಇದಕ್ಕೆ ಉತ್ತಮ ಉದಾಹರಣೆಗಳು. ನನಗೆ ಇಷ್ಟವಾಗುವ ಒಬ್ಬ ಕವಿಯನ್ನು ಹೆಸರಿಸಿ ಅಂದ್ರೆ, ನನಗೆ ಮೊದಲು ಹೊಳೆಯುವ ಹೆಸರು ಅರುಣ್ ಕೋಲಟ್ಕರ್. ಇಂಗ್ಲಿಷ್‌ನಲ್ಲಿ ಬರೆಯುತ್ತಿರುವ ಜೀತ್ ತಾಯಿಲ್, ವಿವೇಕ್ ನಾರಾಯಣ್ ಇಬ್ಬರೂ ಹೊಸ ರೀತಿಯ ಕಾವ್ಯವನ್ನು ನೀಡಿರುವ ಕವಿಗಳು.

* ಕಾವ್ಯ ನಿಮ್ಮೊಳಗೆ ಮೊಳೆತದ್ದು ಹೇಗೆ?
ನಾನು ಚಿಕ್ಕವನಿದ್ದಾಗ ರಾಮಾಯಣ ಓದುತ್ತಿದ್ದೆ. ಅದು ನಿತ್ಯವೂ ನಡೆಯುತ್ತಿತ್ತು. ಕಾವ್ಯವೆಂಬ ವಿಸ್ಮಯದತ್ತ ಕಣ್ಣರಳಿಸುವಂತೆ ಮಾಡಿದ್ದೇ ಅದು ಎಂದು ನನಗನಿಸುತ್ತೆ. ಕಾವ್ಯದಲ್ಲಿ ಅಂಥ ತೇಜಸ್ಸು, ಅಂಥ ಕಿಡಿ ಇದೆ. ನಾನು ಓದುತ್ತಿದ್ದ ರಾಮಾಯಣದಲ್ಲಿ, ಪದಗಳ ಬಳಕೆ, ದೃಶ್ಯವನ್ನು ಕಟ್ಟಿಕೊಡುವ ಬಗೆ.. ಅದರಲ್ಲಿ ಮಾಂತ್ರಿಕತೆಯನ್ನು ಅನುಭವಿಸಿದ್ದೆ. ಚಿಕ್ಕವನಿದ್ದಾಗ ನನಗೆ ಮ್ಯಾಜಿಷಿಯನ್ ಆಗುವ ಆಸೆ ಇತ್ತು. ಮ್ಯಾಜಿಕ್ ಶೋಗಳು ಎಲ್ಲೇ ನಡೆದರೂ ನೋಡಲು ಹೋಗುತ್ತಿದ್ದೆ. ಶಾಲೆಯಲ್ಲಿ ನನ್ನ ಗೆಳೆಯ ಮೊಹಮ್ಮದ್ ಜೊತೆ ಮ್ಯಾಜಿಕ್ ಮಾಡಿ ತೋರಿಸುತ್ತಿದ್ದೆ. ಕಾವ್ಯಭಾಷೆಯಲ್ಲಿ ಅದಕ್ಕಿಂತ ದೊಡ್ಡ ಮ್ಯಾಜಿಕ್ ಮಾಡಬಹುದು ಎಂದು ನನಗೆ ಅನ್ನಿಸಿತು. ಅದೇ ಕವಿತೆಯತ್ತ ಸೆಳೆದದ್ದು.

* ಈಗ ಏನು ಬರೆಯುತ್ತಿದ್ದೀರಿ?
ಬಾಲ್ಯದ ಆತ್ಮವೃತ್ತಾಂತವನ್ನು ದೀರ್ಘ ಕಾವ್ಯದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಬಾಲ್ಯದ ಬಗ್ಗೆ ಬರೆದ ದೀರ್ಘ ಕವಿತೆಯನ್ನು ಆಪ್ತರು ಓದಿ, ಮೆಚ್ಚಿದ್ದಾರೆ. ಅದನ್ನೇ ಮುಂದುವರಿಸುತ್ತಿದ್ದೇನೆ. ನನಗೆ ಕಲೆಯ ಬಗ್ಗೆಯೂ ಆಸಕ್ತಿ. ಜಗತ್ತಿನ ಪ್ರಮುಖ ಗ್ಯಾಲರಿಗಳಲ್ಲಿ, ವಿಶ್ವಪ್ರಸಿದ್ಧ ಕಲಾಕೃತಿಗಳನ್ನು ನೋಡಿ ಬಂದಿದ್ದೇನೆ. ನಾನು ಇಷ್ಟಪಟ್ಟ ಕಲಾಕೃತಿಗಳ ಮೇಲೆ ಬರೆದ ಕವಿತೆಗಳ ಸಂಕಲನವೊಂದು ತರುವ ಇಚ್ಛೆ ಇದೆ. ಇವುಗಳ ಜೊತೆಗೆ ಮಹಾಭಾರತದ ಪ್ರಸಂಗಗಳನ್ನು, ಸಮಕಾಲೀನ ನೆಲೆಯಲ್ಲಿ ನೋಡುವ ದೀರ್ಘ ಕವಿತೆಗಳನ್ನು ಬರೆಯುತ್ತಿದ್ದೇನೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...