Friday, December 06, 2013

ಬೀದಿ ಹಾಡು


ಮೊದಲು ಬದುಕಲು ಕಲಿ
ಯಾರೊ ಕುಂಡೆಗೆ ಝಾಡಿಸಿ
ಒದ್ದಂತಾಗಿ
ಮಾನದ ಕಡೆಯ ಗೋಡೆ ದಾಟಿ
ಗಾಳಿಗೂಡುತ್ತದೆ ಹರಿದ ಜಂಪರಿನ ಚೂರು
ಹೊಟ್ಟೆಯ ಸಂಧಾನಕೆ
ನೆಲ ಕಚ್ಚಿವೆ ಜೋಡು ಜಡೆ
ಬೀದಿಗೆ ಚಾಚಿದ ನೆರಳ ಮೇಲೆ
ಕುಣಿಕುಣಿದು ಚಲಿಸುತ್ತಿವೆ ಧನಿಕರ ಕಾರು
ಕುಪ್ಪಳಿಸುತಿದೆ ಹಸಿದ ಜೀವದ ಹೋರಾಟ

ಎಚ್ಚರವಾದ ಜೋಳಿಗೆಗೆ ಒತ್ತರಿಸಿ ಬರುವ ಬಿಕ್ಕಳಿಕೆ
ತೆರೆದೆದೆಯ ಮೇಲೆ ನಿರ್ದಯಿ ನಾಯಿ ನಾಲಿಗೆ
ಬರಡು ನೆಲದೊಡಲಿಗೆ ನಾಲ್ಕು ಹನಿ ಕಣ್ಣೀರು
ಭಯವಿರದ ಹಾದಿಯಲಿ ಎಲ್ಲ ಸಲೀಸು

ಮಾನ ಪ್ರಾಣ ನ್ಯಾಯ ಮಂಡಿಯೂರಿದ ಗುರುತು
ಬತ್ತಿ ಹೋಗಿದೆ ಧ್ವಜ ಹಾರಿಸಿದ ಹೆಮ್ಮೆ
ಕನಲದೆ ಛೀತ್ಕಾರಗಳಿಗೆ ಭಯಗೊಳದೆ
ತಿರುಗುತಿದೆ ಬೂಟುಗಾಲು

ಹಸಿ ಭ್ರೂಣದ ಅಳು
ಮೂಳೆಗಳಿಲ್ಲದ ದೇಹ
ನಿರಾಶ್ರಿತರಿಗೊಂದು ಶಿಬಿರ

ಎಲ್ಲ ಕಡೆ

ದೇಶದ ಹೆಸರು
ಕಸದ ತೊಟ್ಟಿಯ ಮೇಲೆ
ಇನ್ನಷ್ಟು ನಿಚ್ಚಳ

ಕೂಸಿನ ನಗು ಇರುವೆಯ ಅನ್ನ
ಗಾಂಧಿಯ ಕನಸನ್ನೂ ಕದ್ದವರಿಗೇ
ರಾಜ್ಯ ಕೊಟ್ಟವರಾರು?
ನಮ್ಮ ನಿರ್ಗತಿಕರಾಗಿ ಮಾಡಿದವರು ಯಾರು?
ಅಶೋಕ ಚಕ್ರ ? ಮೂರು ಬಣ್ಣದ ಬಟ್ಟೆ ?
ದುಷ್ಟ ಕೈ ಸೇರಿದ ಸಂವಿಧಾನದ ಹೊತ್ತಿಗೆ ?
ಹುಡುಕುತ್ತ ಹೋದರೆ ಕಾಣುತಿವೆ
ಕಸದ ರಾಶಿಯೊಳಗೆ ಅವರದೇ ಪಳಿಯುಳಿಕೆಗಳು..

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...