Friday, December 06, 2013

ಮಡೆ ಸ್ನಾನ ಆಚರಣೆ ಇರಲಿ ಎನ್ನುವುದಾದರೆ ಬೆತ್ತಲೆ ಸೇವೆಯೂ ಇರಲಿ ಬಿಡಿ ಚಿದಂಬರ ಬೈಕಂಪಾಡಿ


ಆಧುನಿಕತೆಯನ್ನು ಅಪ್ಪಿಕೊಳ್ಳುವ ಮನಸ್ಸುಗಳು ಕುಕ್ಕೆಯಲ್ಲಿ ಮಡೆ ಮಡೆ ಸ್ನಾನಕ್ಕೆ ಅಂಟಿಕೊಂಡಿರುವುದು ವಿಷಾದನೀಯ. ಬದಲಾವಣೆಯನ್ನು ಬಯಸುತ್ತಲೇ ಒಂದು ಕಾಲದಲ್ಲಿ ಮಾಡಿದ ಕಟ್ಟುಪಾಡುಗಳನ್ನು ಮರು ಮೌಲ್ಯಮಾಪನ ಮಾಡದೆ ಸಂದ್ರದಾಯ ಮತ್ತು ಪಾವಿತ್ರ್ಯ ಎನ್ನುವ ಕಾರಣಕ್ಕೆ ಅನುಸರಿಸಲು ಮುಂದಾಗಿರುವುದು ಮೌಢ್ಯತೆಯ ಪರಾಕಾಷ್ಠೆ.

ಮಡೆ ಮಡೆ ಸ್ನಾನಕ್ಕೆ ದೇವಸ್ಥಾನ ಮಂಡಳಿ ಅಥವಾ ಭಕ್ತರು ಕೊಡುತ್ತಿರುವ ಕಾರಣಗಳನ್ನು ಸರ್ಕಾರವೂ ಕಣ್ಣುಮುಚ್ಚಿ ಒಪ್ಪಿಕೊಂಡಿರುವುದು ದುರಂತ ಮಾತ್ರವಲ್ಲ ತನಗಿರುವ ಅಧಿಕಾರವನ್ನು ಚಲಾಯಿಸಲಾಗದ ಅಪವಾದಕ್ಕೆ ಗುರಿಯಾಗಿದೆ.

ಮೌಢ್ಯಗಳನ್ನು ನಿವಾರಿಸಲು ಸುಧಾರಣೆ ಬಯಸುವ ಸರ್ಕಾರ ಅನಾದಿ ಕಾಲದಿಂದ ಕೆಳ ವರ್ಗ ಅನುಸರಿಸಿಕೊಂಡು ಬರುತ್ತಿರುವ ಅಥವಾ ಅನುಸರಿಸಿಕೊಂಡು ಬರಬೇಕೆಂದು ಒತ್ತಡ ಹಾಕಿರುವ ಮನಸ್ಸುಗಳಿಗೆ ಕಡಿವಾಣ ಹಾಕಲಾಗದೆ ಮಕಾಡೆ ಮಲಗಿತು ಎನ್ನಬೇಕೇ?

 yellamma-neem-leaves-devadasi

ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಕೂಡಾ ದೇವರಿಗೆ ಹರಕೆ ಎನ್ನುವ ವ್ಯಾಖ್ಯೆ ಕೊಡಲಾಗುತ್ತಿತ್ತು. ಬೆತ್ತಲೆ ಸೇವೆ ಅಮಾನವೀಯ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ಎಂಜಲು ಎಲೆಯ ಮೇಲೆ ಹೊರಳಾಡಿ ಹರಕೆ ತೀರಿಸಲು ಅವಕಾಶ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ?

ಮಡೆ ಮಡೆ ಸ್ನಾನ ಮಾಡುತ್ತಿರುವವರು ಕೆಳವರ್ಗದ ಜನರು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ನಾಗಾರಾಧನೆ, ಭೂತಾರಾಧನೆಯನ್ನು ಅನಾದಿ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಈ ಭಾಗದ ಜನರು ಬದಲಾವಣೆಯನ್ನು ನಿರಾಕರಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂಥ ಹರಕೆಯನ್ನು ದೇವರಿಗೆ ಅರ್ಪಿಸಬೇಕು ಎಂದು ಹೇಳಿರುವವರು ಯಾರು, ಯಾವ ಗ್ರಂಥದಲ್ಲಿ ಇಂಥ ಹರಕೆಯನ್ನು ಅನೂಚಾನವಾಗಿ ಅನುಸರಣೆ ಮಾಡಿಕೊಂಡು ಬರಬೇಕೆಂದು ಹೇಳಲಾಗಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

 made-snana

ಚರ್ಮ ರೋಗ ವಾಸಿಯಾಗುತ್ತದೆ, ಸಂತಾನ ಭಾಗ್ಯ ಬರುತ್ತದೆ ಎನ್ನುವ ವಾದಗಳನ್ನು ಒಪ್ಪಿಕೊಳ್ಳಲೇ ಬೇಕೆಂಬ ಕಟ್ಟುಪಾಡುಗಳಿಲ್ಲ. ಆದರೆ ಕೆಳವರ್ಗದ ಮನಸ್ಸುಗಳಿಗೆ ಇಂಥ ವಾದಸರಣಿಯನ್ನು ಅರೆದು ಕುಡಿಸಿಬಿಟ್ಟಿದ್ದಾರೆ. ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುವವರು ಸಾಮೂಹಿಕ ಸಹಭೋಜನ ಆಯೋಜಿಸಿ ಎಲ್ಲರೂ ಊಟ ಮಾಡಿ ಉಳಿದ ಎಂಜಲು ಎಲೆಯ ಮೇಲೆ ದಿನಪೂರ್ತಿ ಉರುಳುಸೇವೆ ಮಾಡಲು ಅವಕಾಶ ಮಾಡಿಕೊಡುವರೇ?

ಇಂಥ ಆಚರಣೆಗಳು ಶತಮಾನಗಳ ಹಿಂದೆ ಇದ್ದ ತಲೆ ಮೇಲೆ ಮಲಹೊರುವಂಥ ಮತ್ತು ಮಲತಿನ್ನಿಸುವಂಥ ಘಟನೆಯಷ್ಟೇ ಅಪಾಯಕಾರಿ.ಈ ಆಚರಣೆಗಳು ನಿಲ್ಲಬಾರದು ಎನ್ನುವ ಮನಸ್ಸುಗಳು ಕೆಳವರ್ಗದವರ ಬಾಯಿಂದ ಇಂಥ ಮಾತುಗಳನ್ನು ಆಡಿಸುತ್ತಿವೆಯೇ ಹೊರತು ಆ ಜನ ತಮ್ಮ ಹೃದಯಾಂತರಾಳದಿಂದ ಹೇಳುತ್ತಿರುವ ಮಾತುಗಳಲ್ಲ. ಮಡೆಸ್ನಾನದ ಹರಕೆ ಹೇಳಿಕೊಳ್ಳುವ ಜನರು ಯಾವ ವರ್ಗದವರು ಎನ್ನುವುದನ್ನು ಅವಲೋಕಿಸಿದರೆ ಭಯಾನಕ ಸತ್ಯ ಬೆಳಕಿಗೆ ಬರುತ್ತದೆ.

ಇಂಥ ಆಚರಣೆಗಳು ಸರ್ಕಾರದ ಅಧೀನದ ದೇವಸ್ಥಾನದಲ್ಲೇ ನಡೆಯಲು ಅವಕಾಶವಾಗಿರುವುದು ವಿಪರ್ಯಾಸ. ಪುರೋಗಾಮಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಡೆಸ್ನಾನ ನಿಷೇಧಿಸುವ ಎದೆಗಾರಿಕೆ ತೋರಬೇಕಾಗಿದೆ. ಇಲ್ಲವಾದರೆ ನೂರಾರು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಆಚರಣೆಗಳನ್ನು ಮತ್ತೆ ಜಾರಿಗೆ ತಂದು ದೇವರ `ಕೃಪೆ’ಗೆ ಪಾತ್ರರಾಗಲಿ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...