Thursday, December 05, 2013

ಚಲಪತಿಯವರೇ ಈ ಪಾಪದಲ್ಲಿ ನಿಮಗೂ ಪಾಲು ಬೇಕೆ?


 

-ಜಯಪ್ರಕಾಶ್ ಶೆಟ್ಟಿ ಹೆಚ್

ಕೃಪೆ : ವಾರ್ತಾಭಾರತಿ

 

ಇತ್ತೀಚೆಗೆ ಕರಾವಳಿಯ ಕಡಲಕಿನಾರೆ ಬೇರೆ ಬೇರೆ ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಯಾಕೋ ಏನೋ ಹಾಗೆ ಸುದ್ದಿಯಾಗು ತ್ತಿರುವುದೆಲ್ಲವೂ ಅನಪೇಕ್ಷಿತ ಕಾರಣಗಳಿಗೇ ಆಗುತ್ತಿವೆ. ಈ ಸುದ್ದಿಗಳೇ ಇಲ್ಲಿಂದ ಮತ್ತೆ ಮತ್ತೆ ರವಾನೆಯಾಗುತ್ತಿವೆ. ಚರ್ಚ್‌ಗೆ ಕಲ್ಲು ಹೊಡೆದ ರಂತೆ, ನೆರವಿಗೆ ಬಂದವರನ್ನೇ ಥಳಿಸಿದರಂತೆ, ಪಬ್ಬಿಗೆ ನುಗ್ಗಿದರಂತೆ, ಬಸ್ಸಿನಿಂದ ಎಳೆದು ಹಲ್ಲೆ ಮಾಡಿದರಂತೆ.... ಹೀಗೆ ತರಾವರಿ ಸುದ್ದಿಗಳು ಇಲ್ಲಿ ಸಂಭವಿಸುತ್ತಲೇ ಇರುವುದು ನಮಗೆ ರೂಢಿಯಾಗಿಬಿಟ್ಟಿದೆ.

ಅದರ ಜೊತೆಗೆ ಹಾಗೆ ಸುದ್ದಿಯಾಗುವಾಗಲೆಲ್ಲಾ ಕರಾವಳಿಯ ಬುದ್ಧಿವಂತರು ಹೀಗೇಕೆ ಎಂದು ಬೇರೆಯವರ ಸಂಶಯ, ಅನುಮಾನಗಳ ಜೊತೆಗೆ ಕಟಕಿಗೆ ಗುರಿಯಾಗಿ ಅನುಭವಿಸಬೇಕಾದ ಮಾನಸಿಕ ಹಿಂಸೆಯೂ ಇಲ್ಲಿಯೇ ಹುಟ್ಟಿ ಬೆಳೆದ ನಮಗೆ ರೂಢಿಯಾಗಿಬಿಟ್ಟಿದೆ. ದುರಂತವೆಂದರೆ ಇಲ್ಲಿಯ ವರೆಗೆ ಹೀಗೆ ಸುದ್ದಿಯಾಗುತ್ತಿದ್ದ ಸಂಗತಿಗಳು ಜನಸಾಮಾನ್ಯರ ನಟ್ಟನಡುವಿನ ಗಾಂಪರ ಗದ್ದಲಗಳು. ದಡ್ಡರು, ಬುದ್ಧಿ ಇಲ್ಲದವರು ಮಾಡು ತ್ತಿದ್ದ ಸುದ್ದಿಗಳು.

ಆದರೆೆ ಈಗ ಸುದ್ದಿ ಎದ್ದಿರುವುದು ಗಾಂಪರಗುಂಪಿನ ನಡುವಿಂದ ಅಲ್ಲ. ಬುದ್ಧಿವಂತರ ಜಿಲ್ಲೆಯ ಬುದ್ಧಿವಂತರನ್ನು ಉತ್ಪಾದಿಸುವ ಕಾರ್ಖಾನೆ ಎಂದೂ, ಈ ಭಾಗದ ಬೌದ್ಧಿಕ ಹಿರಿಮೆಯ ನೆಲೆಯೆಂದೂ ನಮ್ಮಲ್ಲಿ ಅನೇಕರು ಇನ್ನೂ ನಂಬಿಕೊಂಡಿರುವ ವಿಶ್ವವಿದ್ಯಾನಿಲಯದಲ್ಲಿ. ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಗಳೆರಡರಲ್ಲೂ ಹೀಗೆ ಈ ಬಾರಿ ಸುದ್ದಿಯಾದುದು ವಿಶ್ವವಿದ್ಯಾಲಯವೇ.

ಯಾರದೋ ಸಣ್ಣ ಆತ್ಮಹತ್ಯೆಯೋ, ಲೈಂಗಿಕ ಕಿರುಕುಳವೋ, ಕೆಲಸ ಮಾಡದ ಕೆಲಸಗಳ್ಳತನವೊ ಇತ್ಯಾದಿ ಸುದ್ದಿಗಳು ಇಲ್ಲಿಂದ ಆಗೀಗ ಬಿತ್ತರಗೊಳ್ಳುತ್ತಿದ್ದುದು ಹೊಸ ತಲ್ಲ. ಆದರೆ ಈ ಜ್ಞಾನದ ಕಾರ್ಖಾನೆ ವಿಶ್ವವಿದ್ಯಾನಿಲಯವೊಂದರ ಬೋಧಕ ಹುದ್ದೆಗಿರ ಬೇಕಾದ ಘನತೆಯನ್ನೇ ಸಂತೆಯಲ್ಲಿಟ್ಟು ಹರಾಜು ಹಾಕಿತೆಂಬ ಮೂಲಕ ಭರ್ಜರಿಯಾಗಿಯೇ ಸದ್ದು ಮಾಡಿದೆ. ಯೋಚಿಸಿ ನೋಡಿದರೆ ಕರಾವಳಿಯ ಮಾನವನ್ನೂ ಮೂರಾಬಟ್ಟೆ ಮಾಡಿದೆ.

ಮೊನ್ನೆ ಇದ್ದಕ್ಕಿದ್ದ ಹಾಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕರ ಹುದ್ದೆಗೆ ಸಂದರ್ಶನ ಇದೆ ಎಂದೂ, ಸಂದರ್ಶನಕ್ಕೆ ಮೊದಲೇ ಆ ಹುದ್ದೆಗಳು ಯಾರ್ಯಾರಿಗೆ ಎಂಬುದು ನಿಗದಿಯಾಗಿದೆ ಎಂದೂ ಹರಿದಾಡಿದ ಗಾಳಿಸುದ್ದಿ ಯನ್ನು ಅನೇಕರಂತೆ ನಾನೂ ಕೇಳಿಸಿಕೊಂಡಿದ್ದೆ. ನನಗೆ ಅದು ಅಚ್ಚರಿ, ಆತಂಕ, ನಿರಾಸೆ ಯಾವುದಕ್ಕೂ ಕಾರಣವಾಗಿರಲಿಲ್ಲ.

ಯಾಕೆಂದರೆ ಸ್ನಾತಕೋತ್ತರ ಅಂಕಪಟ್ಟಿಯನ್ನು ಹಿಡಿದು ಅಲ್ಲಿಂದ ಹೊರಬಂದ ಮೇಲೆ ಆ ವಿಶ್ವವಿದ್ಯಾನಿಲಯವನ್ನು ಉದ್ಯೋಗದ ಕಾರಣಕ್ಕಾಗಿ ಅಲೆಯುವ ಅಗತ್ಯ ಮತ್ತು ಕನಸು ಎರಡೂ ನನ್ನದಾಗಿರಲಿಲ್ಲ. ಸಂಬಂಧವೇ ಇಲ್ಲದ ಬೌದ್ಧಿಕ ಗೋಪುರವಾಗಿ ದ್ವೀಪದಂತೆ ಉಳಿದು ಹೋದ ಅದರ ಇರುವಿಕೆ ಈ ನಿರಾಸಕ್ತಿಯ ಒಂದು ಕಾರಣ. 

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸಂಶೋಧನಾಸಕ್ತಿಯನ್ನು ಉತ್ತೇಜಿಸುವ ವಾತಾವರಣದ ಲವಲೇಶವೂ ಅಲ್ಲಿ ನನಗೆ ಗೋಚರವಾಗದಿರುವುದು ಈ ನಿರಾಸಕ್ತಿಗೆ ಮತ್ತೊಂದು ಮುಖ್ಯಕಾರಣ. ಪ್ರಾಯಶಃ ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆಯೇ ಯುಜಿಸಿಯ ಜೆಆರ್‌ಎಫ್ ಪಾಸಾದ ಅನೇಕರ ಅಭಿಪ್ರಾಯ ಇದಕ್ಕಿಂತ ಬೇರೆ ಇರಲಾರದು. 

ಈ ನಡುವೆಯೂ, ಅದು ನಾನು ಓದಿದ ಜಾಗ, ಇಂದು ನಾನು ಉಣ್ಣುತ್ತಿರುವ ತುತ್ತುಗಳನ್ನು ಗಳಿಸಿಕೊಟ್ಟ ಪ್ರಮಾಣಪತ್ರವನ್ನು ಇಲ್ಲಿಂದಲೇ ಪಡೆದೆ ಎನ್ನುವ ಮಮಕಾರವಿತ್ತು. ಈ ಎಳೆ ಯೊಂದನ್ನು ಕಿತ್ತುಕೊಳ್ಳಲಾಗದ ಕಾರಣದಿಂದಾಗಿ, ಒಂದು ಸಡಿಲವಾದ ನಂಟುತನವಂತೂ ಆ ವಿಶ್ವವಿದ್ಯಾನಿಲಯ ಮತ್ತು ವಿಭಾಗದ ಜೊತೆಗೆ ಹಾಗೆ ಉಳಿದೇ ಇತ್ತು. 

ಆದರೆ ಈ ಸಡಿಲಸಂಬಂಧವೂ ಮತ್ತಷ್ಟು ಸಡಿಲವಾಗುವಂತಾದ ಸಂದರ್ಭವನ್ನು ಈಗ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ನಮ್ಮ ಮನೆಯ ಒಳಗಿನ ಅಸಮಾಧಾನವನ್ನು ನಾವೇ ನುಂಗಬೇಕು ಅನ್ನುವ ಲೋಕನೀತಿಯು ಸರಿಯೇ ಆಗಿದ್ದರೂ, ಊರೆಲ್ಲಾ ಸೇರಿಕೊಂಡು ಅದೇ ಜಾಗದತ್ತ ಕೈತೋರಿಸಿ ನಗುತ್ತಿರುವಂತೆ ಭಾಸ ವಾಗುತ್ತಿರುವ ಘಳಿಗೆಯಲ್ಲಿ ಅದನ್ನು ಹೇಳಿ ಕೊಂಡು ಹಗುರಾಗಬೇಕೆನಿಸುತ್ತಿದೆ.

ಹಾಗೆ ಹೇಳಿಕೊಳ್ಳಲೇಬೇಕೆಂಬ ಒತ್ತಡಕ್ಕೆ ಕಾರಣ ವಾದುದು ಎರಡು ಪ್ರತ್ಯೇಕ ಮಾದರಿಯ ಪತ್ರಿಕೆ ಗಳಲ್ಲಿ ಪ್ರಕಟವಾದ ಎರಡು ಪ್ರತ್ಯೇಕ ಲೇಖನ ಗಳು. ಅದರಲ್ಲಿ ಒಂದು ಲೇಖನ ನನ್ನಂತೆಯೇ ವಿಭಾಗದ ಜೊತೆಗೆ ಹಳೆಯ ನಂಟಿರುವ ಮೂಲದಿಂದ ಬಂದುದಾದರೆ, ಇನ್ನೊಂದು ಲೇಖನ ಕರಾವಳಿ ಕನ್ನಡಿಗರ ಬಗೆಗೆ ಈಗಲೂ ಒಳ್ಳೆಯ ಭಾವನೆಯನ್ನು ಉಳಿಸಿಕೊಂಡಿರುವ ಕರಾವಳಿಯೇತರ ಮೂಲದಿಂದ ಬಂದುದು. 

ವಿಭಾಗದ ಹಳೆಯ ನಂಟಿನ ನೆಲೆಯಿಂದ ಬಂದ ಲೇಖನದ ವಿವರಗಳಿಗೆ ನಾನು ಇನ್ನಷ್ಟು ಮಸಾಲೆಯನ್ನು ಸೇರಿಸಬಯಸುವುದಿಲ್ಲ. ಆದರೆ ಆ ಲೇಖನ ಎತ್ತಿದ ಕೆಲವು ಮೌಲಿಖ ಪ್ರಶ್ನೆಗಳು ಪ್ರಶ್ನೆ ಎತ್ತಿದವರನ್ನೂ ಮೀರಿ ನಿಜಕ್ಕೂ ಗಂಭೀರ ವಾದವುಗಳು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಅಲ್ಲಿ ಸಿಟ್ಟಿದೆ, ಆಕ್ರೋಶ ಇದೆ. 

ಆದರೆ ಉದ್ದೇಶದ ಬಗೆಗೆ ನಾನು ಮಾತಾಡಲಾರೆ. ಅದೇ ವಿ.ವಿ.ಯ ಒಬ್ಬ ವಿದ್ಯಾರ್ಥಿಯಾಗಿ ಸಹಜವಾಗಿ ಅಂತಹದೇ ಸಿಟ್ಟು ನನ್ನಲ್ಲಿಯೂ ಇದೆ ಎನ್ನುವುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಬಲ್ಲೆ. ಆ ಕಾರಣ ಕ್ಕಾಗಿಯೇ ಉದ್ಯೋಗದ ಪ್ರಕಟಣೆ ಬಂದಾಗ ಅದು ನಾವು ಹೋಗಬಾರದ ಜಾಗ ಎಂದೇ ಆ ಕಡೆಗೆ ನಿರ್ಲಕ್ಷ್ಯವನ್ನೂ ವಹಿಸಿದ ಅನೇಕರಂತೆ ನಾನೂ ಇದ್ದೆ. ನಾನು ಅರ್ಜಿ ಗುಜರಾಯಿಸಿರಲಿಲ್ಲ.

ಆದರೆ ಇಡಿಯ ವಿಷಯ ಕೇವಲ ಒಂದು ಹುದ್ದೆಯನ್ನು ಯಾರಿಗೋ ಕೊಟ್ಟುಬಿಡುವ ಉದ್ಯೋಗದ ಪ್ರಶ್ನೆ ಅಷ್ಟೇ ಅಲ್ಲ. ಒಂದು ವಿಭಾಗವನ್ನು ಹೇಗೆ ಮುನ್ನಡೆಸಬೇಕು ಎನ್ನುವ ತಾತ್ವಿಕ ಹಾಗೂ ಸೈದ್ಧಾಂತಿಕ ಖಚಿತತೆಯ ಜೊತೆಗೆ ನಿಷ್ಪಹತೆಯ ಪ್ರಶ್ನೆಯೂ ಹೌದು. ಯಾಕೆಂದರೆ ವಿಶ್ವವಿದ್ಯಾಲಯವೊಂದು ಅಶಕ್ತರ ಪಾಲಿನ ಗಂಜಿಕೇಂದ್ರ ಅಲ್ಲ. ಅಥವಾ ತಮ್ಮವರದ್ದೇ ಒಕ್ಕೂಟವೊಂದನ್ನು ಕಟ್ಟಿಕೊಂಡು ಆಳುವ ಗರ್ಭಗುಡಿಯೂ ಅಲ್ಲ. 

ಅಲ್ಲಿ ಸಮರ್ಥರು ಇರಲೇಬೇಕು ಮತ್ತು ಆ ಸಮರ್ಥರಿಗೆ ಸಾಮಾಜಿಕ ಉತ್ತರದಾಯಿತ್ವವೂ ಇರಬೇಕು ಎಂಬುದನ್ನು ವಿಶ್ವವಿದ್ಯಾನಿಲಯದಿಂದ ಹೊರಗಿರುವ ದಡ್ಡನೂ ಅರ್ಥಮಾಡಿಕೊಳ್ಳಬಲ್ಲ. ಆದರೆ ಸಮರ್ಥರ ಆಯ್ಕೆ ಮತ್ತು ಸಮಷ್ಟಿಗೆ ಉತ್ತರದಾಯಿತ್ವವನ್ನು ಉಳಿಸಿಕೊಳ್ಳಬಲ್ಲ ಬೋಧಕವರ್ಗದ ಇರುವಿಕೆ ವಿಭಾಗವೊಂದರಲ್ಲಿ ಸಾಧ್ಯವಾಗಬೇಕಾದರೆ, ಅಲ್ಲಿ ಗರ್ಭಗುಡಿಯ ದೇವರುಗಳು ಉತ್ಪಾದನೆಗೊಂಡಿರಬಾರದು. 

ದೇವರುಗಳನ್ನು ನಿರಾಕರಿಸಿ ಬಯಲಿನಲ್ಲಿ ನಿಲ್ಲಬಲ್ಲವನನ್ನೂ ಒಪ್ಪಿಕೊಳ್ಳುವ ಛಾತಿ ಆ ವಿಭಾಗಕ್ಕೆ ಇರಬೇಕು. ಅಂತಹ ಒಳ್ಳೆಯ ಪರಂಪರೆ ಈ ವಿಭಾಗದಲ್ಲಿ ಸಾಧ್ಯವಾಗಿದಿದ್ದರೆ, ನಾನೂ ಸೇರಿ ಇವತ್ತಿನ ವಿದ್ಯಾರ್ಥಿಗಳಿಗೆ ವಿಭಾಗ ದಲ್ಲಿ ಶಿವರಾಮ ಪಡಿಕ್ಕಲ್ ತರಹದ ಕನ್ನಡದ ಶ್ರೇಷ್ಠ ವಿದ್ವತ್ತುಗಳಿಂದ ಪಾಠಕೇಳಿಸಿಕೊಳ್ಳುವ ಅವಕಾಶ ಲಭ್ಯವಾಗುತ್ತಿತ್ತು. ಊರೂರುಗಳಿಂದ ಕನ್ನಡದ ವಿದ್ವತ್ತುಗಳನ್ನು ಹುಡುಕಿ ಕನ್ನಡ ವಿಶ್ವವಿದ್ಯಾನಿಲಯವನ್ನು ಕಟ್ಟಿದಂತೆ ವಿಭಾಗವನ್ನು ಕಟ್ಟುವ ಕೆಲಸ ನಡೆಯುತ್ತಿತ್ತು. 

ಒಂದು ವಿಭಾಗ ಬೇರೆ ಬೇರೆ ಉಪಶಾಖೆಯಾಗಿ ಈಗಾಗಲೇ ಬೆಳೆದಿರುತ್ತಿತ್ತು. ಕನ್ನಡದ ವಿದ್ವತ್‌ಲೋಕದ ಜ್ಞಾನೋತ್ಪಾದನೆಯ ಪ್ರಕ್ರಿಯೆಯಲ್ಲಿ ಮತ್ತೆ ಮತ್ತೆ ಉದ್ಧರಣಗೊಳ್ಳಬಲ್ಲ ಸಮೃದ್ಧ ಪರಾಮರ್ಶನ ಸಂಪತ್ತು ಈ ವಿಶ್ವವಿದ್ಯಾಲಯದ ಅಧ್ಯಾಪಕರಿಂದ ಸೃಷ್ಟಿಯಾಗಿರುತ್ತಿತ್ತು. ಆದರೆ ಇದೆಲ್ಲಕ್ಕೆ ನೆಲದ ಮೇಲಿನ ಎಲೆಯನ್ನ್ನು ಹಿಡಿದು ದೂಷಿಸಿದ ರಾಗದು. ಬಿತ್ತಿದ ಬೀಜವನ್ನು ಕೆದಕಬೇಕು. ನೆಲ ಹಸನುಮಾಡಿಟ್ಟು ಹೋದ ಪರಿಯನ್ನೂ ಗಮನಿಸಬೇಕು. ಬೇವು ಬಿತ್ತಿ ಮಾವು ಬೆಳೆಯ ಬೇಕೆಂದರೆ ಹೇಗೆ ಸಾಧ್ಯವಾಗಬೇಕು? ಮೊದಲ ಲೇಖನಕ್ಕೆ ಇಷ್ಟು ಪ್ರತಿಕ್ರಿಯೆ ಸಾಕೆನಿಸುತ್ತದೆ.

ಇನ್ನು ಎರಡನೆಯ ಲೇಖನ ನನ್ನನ್ನು ಹೆಚ್ಚು ಡಿಸ್ಟರ್ಬ್ ಮಾಡಿತು. ಅದು ಚಲಪತಿಯವರು ಗೌರಿಲಂಕೇಶ್ ಪತ್ರಿಕೆಗೆ ಬರೆದ ಲೇಖನ. ಎಳೆ ಎಳೆಯಾಗಿ ಸಂದರ್ಶನವೆಂಬ ನಾಟಕ ಹೇಗೆ ನಡೆಯಿತೆಂಬುದನ್ನು ಅವರು ಬಿಚ್ಚಿಟ್ಟ ಬಗೆ ಕಂಡು ನನಗೆ ನಿಜಕ್ಕೂ ನೋವೆನಿಸಿತು. ಮಾಹಿತಿ ತಿಳಿಸುವಲ್ಲಿ ಆದ ವಿಳಂಬ, ತಾಂತ್ರಿಕ ಅಗತ್ಯಗಳ ಎಣಿಕೆ ಮಾಡಿದ ಅತಾಂತ್ರಿಕ ಬಗೆ, ಇವೆಲ್ಲವುಗಳ ಜೊತೆಗೆ ಕನ್ನಡದ ಸಾಹಿತ್ಯಲೋಕಕ್ಕೆ ಸಾಕಷ್ಟು ಪರಿಚಿತವಿರುವ ಇಬ್ಬರು ಅಭ್ಯರ್ಥಿಗಳನ್ನು ಕ್ಯಾರೆ ಅನ್ನದೆ ಹೊರದಬ್ಬಿ ಸಾಧಿಸಿದ ವಿಜಯದ ಸಾಧನೆಗಳು ನನ್ನನ್ನು ನಿಬ್ಬೆರಗಾಗಿಸಿದುವು. 

ಅದು ವಿಶ್ವವಿದ್ಯಾಲಯವೆಂದರೆ ‘ಘನತ್ಯಾಜ್ಯ ಸುರಿಯುವ ಹೊಂಡವಲ್ಲ’ ಎನ್ನುವುದನ್ನೇ ತಿದ್ದಿ ಬರೆಯಲು ಮಾಡಿದ ತಾಲೀಮಿನಂತೆಯೇ ಕಂಡಿತು. ಚಲಪತಿಯವರ ಮುಖ್ಯ ತಕರಾರು ಅವರುಗಳು ಮಾಡಿದ ಲೆಕ್ಕಾಚಾರಗಳು ವೈಜ್ಞಾನಿಕವಾಗಿರಲಿಲ್ಲ ಎನ್ನುವುದು. ತಮಗೆ ಕೆಲಸ ಕೊಡಲಿಲ್ಲ ಎನ್ನುವುದಕ್ಕಿಂತಲೂ ತಮ್ಮನ್ನು ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ ಎನ್ನುವುದು. 

ಆ ತಕರಾರಿಗೆ ಆಕ್ಷೇಪವಿಲ್ಲ. ಆದರೆ ಆ ವೈಜ್ಞಾನಿಕ ಲೆಕ್ಕಾಚಾರವಿರಲಿ, ಕೋಣಾಜೆಯ ಗುಡ್ಡೆಯಿಂದಾಚೆಗೆ ಒಂದು ಜಗತ್ತಿದೆ, ಅಲ್ಲಿಯೂ ಮಾತುಬಲ್ಲ ಅಧ್ಯಾಪಕರಿರಬಹುದು ಎಂಬುದನ್ನೇ ಮಾನ್ಯಮಾಡಿ ಗೊತ್ತಿರದ ವಿಭಾಗವೊಂದರಿಂದ ಚಲಪತಿಯವರು ಯಾಕೆ ಅದನ್ನು ನಿರೀಕ್ಷಿಸಬೇಕು ಎಂಬುದಷ್ಟೇ ನನ್ನ ಪ್ರಶ್ನೆ.

ಇದಕ್ಕೆ ಪೂರಕ ಪುರಾವೆ ಒದಗಿಸಲು ಇದೇ ವಿಭಾಗ ನಡೆಸಿದ ಕಾಲೇಜು ಅಧ್ಯಾಪಕರ ಪುನರ್ಮನನ ಶಿಬಿರದ ಸಣ್ಣಕಥೆಯೊಂದನ್ನು ಇಲ್ಲಿ ಜೋಡಿಸಿಕೊಡುತ್ತಿದ್ದೇನೆ. ಹಾಗೆ ಜೋಡಿಸಿಕೊಡುತ್ತಿರುವುದು ಚಲಪತಿಯವರಿಗೆ ಆಗುವ ಆತಂಕ ಕೊಂಚ ಕಡಿಮೆಯಾಗಲಿ ಎಂದಷ್ಟೇ. ವಿಭಾಗವನ್ನು, ವಿಶ್ವವಿದ್ಯಾಲಯವನ್ನು ದುರಸ್ತಿಮಾಡುತ್ತೇನೆ ಎನ್ನುವ ಹುಂಬತನದಿಂದ ಖಂಡಿತಾ ಅಲ್ಲ.

ಈ ವಿಭಾಗದಡಿಗೆ 2003ರಲ್ಲಿ ಕನ್ನಡ ಉಪನ್ಯಾಸಕರಿಗಾಗಿ ಪುನಶ್ಚೇತನ ಶಿಬಿರವೊಂದು ನಡೆದಿತ್ತು. ಆ ಶಿಬಿರದಲ್ಲಿ ಸುಮಾರು 35ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳಿದ್ದರು. ಹೆಮ್ಮೆ ಎನಿಸುವಂತೆ ಶಿಬಿರಾರ್ಥಿಗಳಾಗಿ ಕನ್ನಡದ ಸೃಜನಶೀಲ, ಸೃಜನೇತರ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದವರೂ ಇದ್ದರು. 

ಕಥೆಗಾರ ಅಮರೇಶ ನುಗಡೋಣಿ, ವೆಂಕಟೇಶ ಇಂದ್ವಾಡಿ, ಮಾಧವ ಪೆರಾಜೆ, ನಿತ್ಯಾನಂದ ಶೆಟ್ಟಿ, ಮಹಾಲಿಂಗ ಭಟ್, ಬಿ.ವಿ.ವಸಂತಕುಮಾರ್, ವಿಕಾಸದ ಈಗಿನ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಸಾದ ಸ್ವಾಮಿ, ವಿಭಾಗದವರೇ ಆದ ಶಿವರಾಮ ಶೆಟ್ಟಿ ಮುಂತಾದ ಅನೇಕರು ಇದ್ದರು. ಸಹಜವಾಗಿಯೇ ಪ್ರತೀ ಸೆಷನ್‌ಗಳಲ್ಲಿಯೂ ವಿಷಯದ ಕುರಿತು ಬಹಳ ಅರ್ಥಪೂರ್ಣವಾದ ಚರ್ಚೆಗಳು ಕೆಳಗೆ ಕುಳಿತ ಶಿಬಿರಾರ್ಥಿಗಳಿಂದಲೇ ನಡೆಯುತ್ತಿತ್ತು. 

ಆಯೋಜಕರು ಕರೆಸಿದ್ದ ಸಂಪನ್ಮೂಲ ವ್ಯಕ್ತಿಗಳು ಸಂಪತ್ತು ಖಾಲಿಯಾಗಿ ಪರಿಪಾಟಿಲಿಗೆ ಗುರಿಯಾಗುತ್ತಿದ್ದರು. ಒಂದು ಸಣ್ಣ ಉದಾಹರಣೆ ಕೊಡುವುದಾದರೆ ಪ್ರಬಂಧ ಸಾಹಿತ್ಯದ ಮೇಲೆ ಮಾತನಾಡಬೇಕಾದವರೊಬ್ಬರು ಮಾತೇ ಆಡದೆ ಪ್ರಬಂಧಗಳನ್ನು ಓದಿಯೇ ತಮ್ಮ ತರಗತಿ ಮುಗಿಸಿದ್ದರು. 

ಅವರ ಅದ್ವಾನ ಇಷ್ಟೇ ಆಗಿರಲಿಲ್ಲ. ಓದಬೇಡಿ ಚರ್ಚೆ ಆಗಲಿ ಎಂಬ ಸಲಹೆ ನೀಡಿದ್ದಕ್ಕೇ ಕೋಪಿಸಿಕೊಂಡು ಹೈಸ್ಕೂಲ್ ಮೇಸ್ಟ್ರಿಗೂ ಕಡೆಯಾಗಿ ಅವರು ತರಗತಿ ಬಿಟ್ಟು ಹೊರನಡೆದಿದ್ದರು. ವಿಭಾಗದ ಹಿರಿಯರೊಬ್ಬರು ಅವರನ್ನು ಸಮಾಧಾನಮಾಡಿ ಕರೆತಂದುದಲ್ಲದೆ, ಮಿಕ್ಕ ಅವಧಿಪೂರ್ತಿ ಅವರೂ ಅಲ್ಲಿಯೇ ಕೂರುವ ಮೂಲಕ ನಮ್ಮೆಲ್ಲರನ್ನು ಸುಮ್ಮಗೆ ಕೂರುವಂತೆ ಮಾಡಿ ಪ್ರಾಥಮಿಕ ಶಾಲೆಯ ತರಗತಿಯನ್ನು ಆಗುಗೊಳಿಸಿದ್ದರು.

ವಿಭಾಗದ ಕೆಲವು ಅಧ್ಯಾಪಕರು 10 ವರ್ಷಗಳ ಹಿಂದೆ ನಾನು ತರಗತಿಯಲ್ಲಿ ಕೇಳಿಸಿಕೊಂಡುದಕ್ಕಿಂತ ಹೊಸತೇನನ್ನೂ ಹೇಳಿದಂತೆ ನನಗೆ ಕಂಡಿಲ್ಲ. ಹೀಗೆ ನಿಲಯದ ಕಲಾವಿದರು ಹಾಗೂ ತಮಗೆ ಬೇಕಾದವರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆರಿಸಿಕೊಂಡ ಆ ಶಿಬಿರದ ಕೆಲವೇ ಸೆಷನ್‌ಗಳನ್ನು ಹೊರತುಪಡಿಸಿ ಮಿಕ್ಕವು ಸಪ್ಪೆಯಾಗಿದ್ದುವು. ತಾನೇ ಇರಿಸಿಕೊಂಡ ‘ಸಾಂಸ್ಕೃತಿಕ ಪಠ್ಯ ಚಿಂತನೆ’ಯ ಪರಿಭಾಷೆಯ ಪ್ರಾಥಮಿಕ ಪರಿಚಯವನ್ನೂ ಮಾಡಲಾಗದೆ ಆ ಶಿಬಿರ ಸೋತಿತ್ತು. 

ನಮ್ಮದೇ ವಿಭಾಗವೆಂಬ ಇದ್ದಬದ್ದ ಗೌರವವೂ ನಮಗೆ ಕರಗಿಹೋಗಿತ್ತು. ಆದರೆ ವಿಷಯ ಈ ಬೌದ್ಧಿಕ ದಾರಿದ್ರದ್ದಷ್ಟೇ ಆಗಿರಲಿಲ್ಲ. ಇಂತಹ ದಾರಿದ್ರದ ನಡುವೆಯೂ ಆ ಶಿಬಿರದ ಶಿಬಿರಾರ್ಥಿಗಳಿಗೆ ನೀಡಲಾದ ಪ್ರಮಾಣಪತ್ರದಲ್ಲಿ ಭಾಗವಹಿಸಿದ ಅಷ್ಟೂ ಮಂದಿಗೆ ‘ಬಿ’ ಶ್ರೇಣಿಯ ಏಕರೂಪದ ಪ್ರಮಾಣಪತ್ರವನ್ನು ನೀಡಲಾಗಿತ್ತು. 

ಈ ಮೌಲ್ಯಮಾಪನವನ್ನು ಅವರು ಯಾವ ಮಾನದಂಡವಿಟ್ಟು ನಡೆಸಿದರೋ ನನಗಂತೂ ಅರಿವಾಗಲಿಲ್ಲ. ಕೇಳಿದ ಪ್ರಶ್ನೆಗಳನ್ನು ಉತ್ತರಿಸಲಾರದೆ ಚಡಪಡಿಸಿದ ತಮ್ಮ ಸೋಲು, ಹತಾಶೆಯ ಸೇಡೆಲ್ಲವನ್ನೂ ಪ್ರಮಾಣಪತ್ರದಲ್ಲಿ ನಮೂದಿಸಿದ ಕೆಳದರ್ಜೆಯ ಶ್ರೇಣಿಯ ಮೂಲಕವೇ ಅವರುಗಳು ತೀರಿಸಿಕೊಂಡಿದ್ದರು. 

ಆ ಪ್ರಮಾಣಪತ್ರ ಮತ್ತು ಅವರು ನೀಡಲಾದ ಆ ಶ್ರೇಣಿಯಿಂದ ನಾವುಗಳು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಗಳಿಸಿಕೊಳ್ಳುವುದೂ ಏನೂ ಇರಲಿಲ್ಲ. ಕರ್ನಾಟಕದ ಬೇರೆ ಬೇರೆ ಕಡೆಯಿಂದ ಬಂದ ನಿಜವಾಗಿಯೂ ಬುದ್ಧಿವಂತರಾಗಿದ್ದ ಅನೇಕರು ಇವರ ಮಾಪಕದಲ್ಲಿ ‘ಬಿ’ ದರ್ಜೆಗಿಂತ ಮೇಲೇರದೇ ಹೋದುದು ಪವಾಡವೇ ಆಗಿತ್ತು. ಪ್ರಾಯಶಃ ಅವರು ಉಳಿಸಿಕೊಂಡ ‘ಏ’ ಶ್ರೇಣಿಯನ್ನು ಸಿನೆಮಾ ಸೆನ್ಸಾರ್ ಮಂಡಳಿಯವರಿಗೆ ಉದಾರ ದೇಣಿಗೆ ನೀಡಿರಬಹುದು. 

ಹೀಗೆ ತಮ್ಮನ್ನು ಕಂಗಾಲು ಮಾಡಬಲ್ಲವರಿಗೆ ಇಂತಹ ಪ್ರತಿಕ್ರಿಯೆ ಕೊಡಬಲ್ಲ ಈ ಮಂದಿ ಪ್ರಶ್ನಿಸಬಲ್ಲವರನ್ನು ಅದು ಹೇಗೆ ತಾನೆ ಯುನಿವರ್ಸಿಟಿಯ ಆವರಣದೊಳಕ್ಕೆ ಬರುವುದಕ್ಕೆ ಬಿಟ್ಟಾರು? ಚಲಪತಿಯವರೇ ಸಹಜವಾಗಿಯೇ ಅವರು ನಿಮ್ಮನಾಗಲೀ, ಇನ್ನಾರೇ ಸಮರ್ಥರನ್ನಾಗಲೀ ಅಲ್ಲಿಂದ ಅಟ್ಟುವುದರಲ್ಲಿ ಅಚ್ಚರಿ ಏನೂ ಇಲ್ಲ. 

ಇದಕ್ಕಾಗಿ ದಯವಿಟ್ಟು ವ್ಯಥೆಪಡಬೇಡಿ. ಸರಕಾರಿ ಕಾಲೇಜಿನಲ್ಲೋ, ಖಾಸಗಿ ಕಾಲೇಜುಗಳಲ್ಲೋ ಮಕ್ಕಳಿಗೆ ಪಾಠ ಮಾಡಿಕೊಂಡು, ಏನೋ ತಮಗೆ ಗೊತ್ತಾದುದನ್ನು ಬರೆದುಕೊಂಡು ಬದುಕುತ್ತಿರುವ ಮನಸ್ಸುಗಳನ್ನು ಇಂದು ಯುನಿವರ್ಸಿಟಿಗಳೆಂಬ ಅನುತ್ಪಾದಕ ಜಾಗಗಳಲ್ಲಿ ಹುಡುಕಲು ಹೋಗದಿರುವುದೇ ವಾಸಿ.

ಇದನ್ನು ಹೇಳುವುದಕ್ಕಷ್ಟೇ ಈ ಉದಾಹರಣೆಯನ್ನು ನೀಡಿದೆ. ನಾನಂತೂ ಈ ಶಿಬಿರದ ಪ್ರಮಾಣಪತ್ರದಲ್ಲಿ ನಮೂದಾದ ಗ್ರೇಡ್ ನೋಡಿದ ದಿನವೇ ಸಂಶೋಧನೆಯ ಆಸಕ್ತಿಯೇನಾದರೂ ಆದರೆ ಅದನ್ನಂತೂ ಈ ವಿಶ್ವವಿದ್ಯಾಲಯದ, ಈ ವಿಭಾಗದ ಗರ್ಭಗುಡಿಯಲ್ಲಿ ಮಾಡಲೇಬಾರದು ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದೆ.

ಉದ್ಯೋಗದ ಕಾರಣಕ್ಕೆ ಮರೆತೂ ಕೂಡಾ ಇದೊಂದು ಜಾಗಕ್ಕೆ ಪ್ರವೇಶ ಮಾಡಬಾರದು ಅಂತಾನೂ ನಿರ್ಧರಿಸಿದ್ದೆ. ಇಂದಿನ ಬೆಳವಣಿಗೆಗಳು ಅದಕ್ಕೆ ಪೂರಕವಾಗಿಯೇ ಇವೆ. ಯಾರಿಗೇ ನಿರಾಸೆ ಆಗಲಿ. ನನಗಂತೂ ಸಮಾಧಾನವಿದೆ. ಇನ್ನೂ ಒಂದು ಸಣ್ಣ ಸಂಗತಿಯನ್ನು ಹೇಳಿ ಈ ಮಾತುಗಳನ್ನು ಮುಗಿಸುತ್ತೇನೆ. 

ಈ ವಿಭಾಗದ ಅಧ್ಯಾಪಕರು ಇತರರ ಮೌಲ್ಯಾಂಕನವನ್ನು ತಾಂತ್ರಿಕವಾಗಿ ಮಾಡಿದ ರೀತಿಯನ್ನು ನಾನು ಆಕ್ಷೇಪಿಸಲಾಗದು. ಅದು ಸರಿಯೂ ಇರಬಹುದು. ಆದರೆ ಅವರು ಉಳಿದವರಿಗೆ ಹಾಕುವ ಪ್ರಶ್ನೆಗಳು ಅವರಿಗೂ ಅನ್ವಯವಾಗುತ್ತವೆೆ ಎಂದು ಭಾವಿಸುತ್ತೇನೆ.

ಹಾಗೆಯೇ ಇಷ್ಟೊಂದು ಪ್ರಶ್ನೆ ಹಾಕುವವರು ಕನಿಷ್ಠ ಕಳೆದೆರಡು ದಶಕಗಳಿಂದ ಕನ್ನಡದ ಸಂಶೋದನಾರ್ಥಿಗಳು, ವಿಮರ್ಶಕರು ಕೋಟ್ ಮಾಡಬಲ್ಲ ಎಷ್ಟು ವಿದ್ವತ್ ಕೃತಿಗಳನ್ನು ಕೊಟ್ಟಿದ್ದಾರೆ? ಮಂಗಳೂರಿನ ಭಾಗದಿಂದ ಇನ್ನೂ ಕೂಡಾ ಅದೇ ಹಳೆಕಾಲದ ಪಂಜೆ, ಮುಳಿಯ, ಗೋವಿಂದ ಪೈ, ಕುಕ್ಕಿಲ, ತೆಕ್ಕುಂಜೆ, ಸೇಡಿಯಾಪು ಮತ್ತು ಪಡಿಕ್ಕಲ್ ಅವರು ಕೊಟ್ಟ ಕೃತಿಗಳಲ್ಲದೆ ಉಲ್ಲೇಖಿಸುವುದಕ್ಕೆ ಬೇರೇನು ಸಿಗುತ್ತದೆ? ಸಿಗುವುದಿದ್ದರೆ ಅವುಗಳ ಸಂಖ್ಯೆ ಎಷ್ಟಿದೆ? ಅದು ಸಾಕೆ? ಕರ್ನಾಟಕದಾದ್ಯಂತ ಚರ್ಚೆ ಎಬ್ಬಿಸಿದ, ಬಹಳ ಮುಖ್ಯವಾದ ಸಾಂಸ್ಕೃತಿ ಪ್ರಶ್ನೆಗಳನ್ನು ಎದುರಿಗೆ ತಂದುಕೊಂಡ ಘನತರ ಚಿಂತನೆಗಳುಳ್ಳ ಕೃತಿಗಳು ಈ ವಿಭಾಗದಿಂದ ಬಂದಿರುವುದುಂಟೆ? ಯಾರೋ ಬರೆದುದೊಂದಿಷ್ಟನ್ನು ಸಂಪಾದಿಸಿದ ಮಾತ್ರಕ್ಕೆ ಅದು ವಿಶ್ವವಿದ್ಯಾಲಯದ ಜ್ಞಾನೋತ್ಪಾದನೆ ಎನಿಸುತ್ತದೆಯೇ? ವಿಶ್ವವಿದ್ಯಾನಿಲಯವೆಂದರೆ ವರ್ಷಕ್ಕೊಂದಿಪ್ಪತ್ತು ಮೂವತ್ತು ಮಕ್ಕಳಿಗೆ ಎಂ.ಎ. ಪ್ರಮಾಣಪತ್ರವನ್ನು ಉತ್ಪಾದಿಸಿಕೊಟ್ಟರೆ ಸಾಕೇ? ಅದಕ್ಕೆ ಅವರೇ ಝರಾಕ್ಸ್ ಮಾಡಿಕೊಂಡು ಓದಬಹುದಾದ ಓಪನ್ ಯುನಿವರ್ಸಿಟಿ ನೋಟ್ಸ್‌ಗಳೇ ಸಾಕಲ್ಲವೇ? ಇಂತಹ ಪ್ರಶ್ನೆಗಳನ್ನು ಮತ್ತೆ ಮತ್ತೆ ವಿಭಾಗದಲ್ಲಿ, ಕಾಲೇಜುಗಳಲ್ಲಿ ಇರುವ ನಾವುಗಳು ಕೇಳಿಕೊಳ್ಳಬೇಕಿದೆ. ಹಾಗೆ ಕೇಳಿಕೊಳ್ಳದೆ ಹೋದುದರಿಂದಾಗಿಯೇ ನಮ್ಮ ಪಕ್ಕದಲ್ಲಿ ಗಿಂಡಿಮಾಣಿಗಳನ್ನೇ ಇರಿಸಿಕೊಂಡು ಬಚಾವಾಗುತ್ತಿರುತ್ತೇವೆ. ಪಾಳೆಗಾರರ ಪಲ್ಲಕ್ಕಿ ಉತ್ಸವಗಳಲ್ಲಿ ಠಳಾಯಿಸುತ್ತಿರುತ್ತೇವೆ.

ಮಲಗುವ ಮುನ್ನ ನಿದ್ದೆಗೆ ತೊಡಕಾಗದಿರಲಿ ಎಂದು ದಿಂಬು ಹೊದಿಕೆಗಳನ್ನು ಸರಿಮಾಡಿಕೊಂಡು ಬೆಳಕನ್ನು ನಿವಾರಿಸಿಕೊಳ್ಳುವ ನಿದ್ರಾಮತಿಗಳಂತೆ, ಹೊರಗಿನಿಂದ ಮಿಂಚುಹುಳು ಬಂದರೂ ಬೆಚ್ಚಿ ಬೀಳುತ್ತೇವೆ. ಎಲ್ಲವನ್ನೂ ನಿವಾರಿಸಿ ಕೊನೆಗೆ ವಿಭಾಗವನ್ನೂ, ಸಂಸ್ಥೆಯನ್ನೂ ನಿವಾರಿಸುತ್ತೇವೆ. ಚಲಪತಿಯವರೇ ಈ ಪಾಪದಲ್ಲಿ ನಿಮಗೂ ಪಾಲು ಬೇಕೆ?

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...