Friday, January 31, 2014

ಫೆ 6 ಶಿವಮೊಗ್ಗ : ದಲಿತ ಬ್ರಾಹ್ಮಣ ಪುಸ್ತಕ ಬಿಡುಗಡೆ
ಬೂಸಾ ಚಳವಳಿಯ ಹೆಚ್ಚುಗಾರಿಕೆ

ಶೂದ್ರ ಶ್ರೀನಿವಾಸ್


ವಾರ್ತಾಭಾರತಿ


‘‘ಸಂಸ್ಕೃತವ ತಿಳಿಯದ ಸ್ವರ್ಗದಲ್ಲಿ ನೆಲಸದ
ಕಪ್ಪು ದೇವತೆಗಳು ಬರಿಗಾಲಿನವರು ಬೆರಗೆ ಸಿರಿಯಾಗಿದ್ದ ನಮ್ಮ ಹಿರಿಯರ ಕನಸು
ಮೈಯಾಗಿ ನಮ್ಮಡನೆ ಬಾಳುವವರು’’
-ಸಿದ್ದಲಿಂಗಯ್ಯ

ಕಳೆದ ಶತಮಾನದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕಗಳು ಕರ್ನಾಟಕದಲ್ಲಿ ನಾನಾ ರೀತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಮುಖಾಮುಖಿಯಾಗಿಸಿತ್ತು. ಒಂದು ರೀತಿಯಲ್ಲಿ ಮಧ್ಯಮ ವರ್ಗದ ವಿದ್ಯಾ ವಂತರ ಮನಸ್ಸುಗಳಲ್ಲಿ ಮಡುಗಟ್ಟಿದ್ದ ಸಾಂಪ್ರದಾ ಯಿಕ ಮಿಥ್‌ಗಳನ್ನು ಛಿದ್ರ ಛಿದ್ರಗೊಳಿಸಲು ಹೊರಟ ಕಾಲಘಟ್ಟವದು. ಅದರಲ್ಲೂ ದಲಿತ ಸಮುದಾಯದ ಮಧ್ಯಮ ವರ್ಗ ವಿದ್ಯಾವಂತರಿಗೆ ‘ಸ್ವಾಭಿಮಾನ’ವನ್ನು ಅರ್ಥೈಸಿಕೊಳ್ಳಲು ಸಾಧ್ಯ ವಾಯಿತು. ಈ ಸಂದರ್ಭದಲ್ಲಿ ಇಬ್ಬರು ‘ಹೀರೊ’ ಗಳಾಗಿ ಪ್ರೊಜೆಕ್ಟಾದರು.

ಒಬ್ಬರು ಬಸವಲಿಂಗಪ್ಪನವರು ಮತ್ತೊಬ್ಬರು ಸಿದ್ದಲಿಂಗಯ್ಯನವರು. ಇವರ ಬಗ್ಗೆ ಕೇವಲ ದಲಿತರು ಮಾತ್ರವಲ್ಲ ಸವರ್ಣೀ ಯರೂ ಕೂಡ; ‘‘ಏನು ಇವರೂ ಹೀಗೆ ಮಾತಾಡುತ್ತಾರೆ ಮತ್ತು ಬರೆಯುತ್ತಾರೆ’’ ಎಂದು ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡ ವರು. ಸವರ್ಣೀಯರಲ್ಲೇ ಕೆಲವು ಸೂಕ್ಷ್ಮ ಸಂವೇದನೆಯ ಲೇಖಕರು, ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರು ಇವರಿಗೆ ಬೆಂಬಲ ಸೂಚಿಸಿದಾಗ; ಜಾತಿಯ ಕಾರಣದ ಚೌಕಟ್ಟಿ ನಲ್ಲಿ ಹೆಚ್ಚು ಮನಸ್ಸುಗಳು ಛಿದ್ರಗೊಳ್ಳಲಿಲ್ಲ. ಅಷ್ಟರಮಟ್ಟಿಗೆ ಕರ್ನಾಟಕದಲ್ಲಿ ಸಾಮಾಜಿಕ ವಾಗಿ ವೇದಿಕೆ ಆರೋಗ್ಯ ಪೂರ್ಣವಾಗಿ ರೂಪುಗೊಂಡಿತ್ತು. 

ಈ ದೃಷ್ಟಿಯಿಂದ ‘ಕನ್ನಡ ಸಾಹಿತ್ಯದಲ್ಲಿ ಏನೂ ಇಲ್ಲ ಬೂಸಾ’ಎಂಬ ಹೇಳಿಕೆಯನ್ನು ಮತ್ತು ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಸಂಕಲನದ ಕವನಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾ ಯಿತು. ಮತ್ತೆ ಇದಕ್ಕೆ ಪೂರಕವಾಗಿ ಒಂದು ಹೇಳಬೇಕೆಂದರೆ: ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಅದರ ಬೆನ್ನೆಲುಬಾದ ‘ಸಂವಿಧಾನ’ ಕೆಲವು ಮಿತಿಗಳ ನಡುವೆಯೂ ರಕ್ಷಣಾತ್ಮಕ ಕೋಟೆಯನ್ನು ನಿರ್ಮಾಣ ಮಾಡಿ ಕೊಟ್ಟಿದೆ. 

ಇಲ್ಲದಿದ್ದರೆ ಬೇರೆ ಬೇರೆ ವರ್ಗದ ಜನರು ನಿರ್ಭಿಡೆಯಿಂದ ಅಭಿಪ್ರಾಯಗಳನ್ನು ಮಂಡಿಸಲು ಆಗುತ್ತಿರಲಿಲ್ಲ. ಆದರೆ ಇದನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ಕೆಲವು ಬಲಪಂಥೀಯ ಮನಸ್ಸುಗಳು ಏನು ಬೇಕಾದರೂ ಮಾತಾಡಬಹುದು ಮತ್ತು ಹೇಗೆ ಬೇಕಾದರೂ ನಡಕೊಳ್ಳಬಹುದು ಎಂಬ ಧೋರಣೆಗಳನ್ನು ದಟ್ಟ ಗೊಳಿಸಿಕೊಂಡಿದ್ದಾರೆ. ಇರಲಿ, ಇಂಥದ್ದು ಒಂದು ದೊಡ್ಡ ಸಮಾಜದಲ್ಲಿ ಸ್ವಾಭಾವಿಕವಿರಬಹುದು.

ಕೆಲವು ದಿವಸಗಳ ಹಿಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕ್ರಿಯಾಶೀಲ ನಾಯಕರಾದ ಲಕ್ಷ್ಮಿನಾರಾಯಣ ನಾಗವಾರರ ದೂರವಾಣಿ ಕರೆಬಂತು. ‘‘ಶೂದ್ರ ಅವರೆ,ಬೂಸಾ ಚಳವಳಿಗೆ ನಲವತ್ತು ವರ್ಷವಾಯಿತು. ಇದಕ್ಕಾಗಿ ಒಂದು ನೆನಪಿನ ಸಂಚಿಕೆಯನ್ನು ಹಾಗೂ ಕಾರ್ಯಕ್ರಮವೊಂದನ್ನು ರೂಪಿಸೋಣ’’ ಎಂದರು. ಅದನ್ನು ಕೇಳಿ ಸಂತೋಷವಾಯಿತು. ಹೌದಲ್ಲವೇ, ನಾಲ್ಕು ದಶಕಗಳು ನಮ್ಮ ಕಣ್ಣ ಮುಂದೆಯೇ ಎಷ್ಟು ಜಾಗ್ರತೆ ಕಳೆದು ಹೋಗಿ ಬಿಟ್ಟಿದೆ ಅನ್ನಿಸಿತು. 

ಹಾಗೆ ನೋಡಿದರೆ ಇತ್ತೀಚೆಗೆ ಬೆಂಗಳೂರಿನ ಸುಚಿತ್ರ ಚಲನಚಿತ್ರ ಅಕಾಡಮಿ ಯಲ್ಲಿ ನನ್ನ ನಾಲ್ಕು ದಶಕಗಳ ಸಾಹಿತ್ಯಕ ಅನು ಭವಗಳನ್ನು ಕುರಿತು ಮಾತಾಡಿದ್ದೆ. ಸುಮಾರು ಒಂದು ಕಾಲು ಗಂಟೆಯ ನನ್ನ ಮಾತುಗಳಲ್ಲಿ ‘ಬೂಸಾಚಳವಳಿ’ಯ ಕುರಿತು ಪ್ರಸ್ತಾಪವಿತ್ತು. ಹಾಗೆ ನೋಡಿದರೆ ನಮ್ಮ ನಡುವಿನ ಬಹುಪಾಲು ಮಂದಿ ವಿದ್ಯಾವಂತರಿಗೆ ಕೆಲವು ಬಹುಮುಖ್ಯ ಚಾರಿತ್ರಿಕ ಘಟನೆಗಳೇ ನೆನಪಿಲ್ಲ. ಅವರಿಗೆ ಅವು ಏನೇನು ಅಲ್ಲ. 

ವಿದ್ಯಾರ್ಥಿಗಳ ಮುಂದೆ ನಿಂತು ಪಾಟ ಮಾಡುವ ಅಧ್ಯಾಪಕರೂ ಕೂಡ; ಮಾನ ಸಿಕವಾಗಿ ಖಾಲಿಯಾಗಿಯೇ ಇರುತ್ತಾರೆ. ಇನ್ನು ಬಹುಮುಖ್ಯ ವಿಷಾದಮಯ ಸಂಗತಿಗಳನ್ನು ಗ್ರಹಿಕೆಯ ಒಳಗೆಯೆ ಬಿಟ್ಟುಕೊಂಡಿ ರುವುದಿಲ್ಲ. ಆದ್ದರಿಂದಲೇ ಬೂಸಾ ಚಳವಳಿಯ ಬಗ್ಗೆ, ತುರ್ತು ಪರಿಸ್ಥಿತಿಯ ಬಗ್ಗೆ ಕೆಲವು ಮುಗ್ಧ ಪ್ರಶ್ನೆಗ ಳನ್ನು ಕೇಳುವುದು. ಇದೆಲ್ಲವನ್ನು ಒಪ್ಪಿಕೊಂಡರೂ ಈಗ ಅದನ್ನೆಲ್ಲ ಅವಲೋಕಿಸಿಕೊಂಡರೆ; ನಮ್ಮ ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ಒಂದು ಚಿತ್ರಣ ದೊರಕಲು ಸಾಧ್ಯವಿರುತ್ತದೆ.

ಬಸವಲಿಂಗಪ್ಪನವರು ಕಂದಾಯ ಸಚಿವರಾಗಿ ಸಾಕಷ್ಟು ಅಗ್ರೇಸಿವ್ ಆಗಿದ್ದವರು. ನೂರಾರು ವರ್ಷಗಳಿಂದ ಇದ್ದ ಅನಿಷ್ಟ ಮಲಹೊರುವ ಪದ್ಧತಿಯನ್ನು ತಪ್ಪಿಸಲು ಕಾನೂನಿನ ಚೌಕಟ್ಟನ್ನು ರೂಪಿಸಿದವರು. ಇದರಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ಇದರ ಬೆನ್ನಲ್ಲೇ ಅವರು ‘ಕನ್ನಡ ಸಾಹಿತ್ಯ ಬೂಸಾ’ಎಂದು ಕರೆದರು. ಹೀಗೆ ಕರೆಯುವುದಕ್ಕೆ ಮುಖ್ಯ ಕಾರಣ: ಕನ್ನಡ ಸಾಹಿತ್ಯ ದಲಿತರ ಮತ್ತು ಕೆಳವರ್ಗದವರ ಪರ ಇಲ್ಲ ಎಂದು.
 
ಒಂದು ದೃಷ್ಟಿಯಿಂದ ಕೆಲವು ಎಡ ಬಿಡಂಗಿ ಚಿಂತಕರ ಮಾತಿನಿಂದ ಮಿಸ್‌ಗೈಡ್ ಆಗಿ ಆ ರೀತಿಯಲ್ಲಿ ಹೇಳಲು ಸಾಧ್ಯವಾಯಿತು. ಆದರೆ ಈ ಹೇಳಿಕೆಯನ್ನು ಅವರು ಉಡಾಫೆ ಯಿಂದ ಹೇಳಲಿಲ್ಲ. ಅದರ ಹಿಂದೆ ವಿಷಾದವಿತ್ತು. ಮೂಲಭೂತವಾಗಿ ಸಾಹಿತ್ಯ ಜನಪರವಾಗಿರ ಬೇಕು ಎಂದು. ಇದಕ್ಕೆ ಕೆಲವು ಜಾತಿವಾದಗಳು ಮತ್ತು ದಲಿತ ವಿರೋಧಿ ಸಂಘಟನೆಗಳು ಒಂದು ಗೂಡಿ ಬಸವಲಿಂಗಪ್ಪನವರ ವಿರುದ್ಧ ಧ್ವನಿಯೆತ್ತಿದರು. 

ಮತ್ತು ಅವರನ್ನು ಸಚಿವ ಸಂಪುಟದಿಂದ ತೆಗೆಯಬೇಕು ಎಂದು ಒತ್ತಡ ತಂದರು. ಈ ಕಾಲಘಟ್ಟದಲ್ಲಿ ಕರ್ನಾಟಕದ ಉದ್ದಗಲಕ್ಕೂ ನೂರಾರು ವರ್ಷಗಳಿಂದ ಇದ್ದ ಜೀತ ಪದ್ಧತಿ ಯನ್ನು ತಪ್ಪಿಸಬೇಕು ಎಂಬ ಕೂಗು ಕೂಡ ತೀವ್ರ ವಾಗಿತ್ತು. ಇದಕ್ಕೆ ಪರೋಕ್ಷವಾಗಿ ಬಸವಲಿಂಪ್ಪ ನವರ ಕುಮ್ಮಕ್ಕು ಇದೆ ಎಂದು ಜಮೀನ್ದಾರಿ ಮೇಲ್ವರ್ಗದ ಜವರು ಯೋಚಿಸಿದರು. ಹಾಗೆಯೇ ಬಹಳಷ್ಟು ಮಂದಿ ರಾಜಕೀಯ ನಾಯಕರು ಬಸವಲಿಂಗಪ್ಪನವರ ಜನಪ್ರಿಯತೆ ಯನ್ನು ಸಹಿಸಲಿಲ್ಲ. ಅವರೆಲ್ಲ ಕೆ.ಎಚ್. ರಂಗ ನಾಥ್ ಅವರಂಥ ಸೌಮ್ಯ ನಾಯಕರನ್ನು ಬಯ ಸುತ್ತಿದ್ದರು.

ಯಾಕೆಂದರೆ ಬಸವಲಿಂಗಪ್ಪನವರ ಜನಪ್ರಿಯತೆ ಮತ್ತು ಅಗ್ರೆಸಿವ್‌ನೆಸ್‌ನಿಂದ ಕೇಂದ್ರದ ನಾಯಕರು ಬಸವಲಿಂಗಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಬಿಟ್ಟರೆ ಎಂಬ ಆತಂಕವನ್ನು ಬೆಳೆಸಿಕೊಂಡಿದ್ದರು. ದೇವರಾಜ ಅರಸು ಅವರಂಥ ರಚನಾತ್ಮಕ ನಾಯಕರು ಮುಖ್ಯಮಂತ್ರಿಗಳಾಗಿದ್ದ ಕಾರಣಕ್ಕಾಗಿ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು. ಆ ಕಾಲಘಟ್ಟದಲ್ಲಿ ಕರ್ನಾಟಕದ ಸರಕಾರಗಳ ಅಳಿವು-ಉಳಿವು ವಿದ್ಯಾರ್ಥಿ ಚಳವಳಿಗಳ ಮೇಲೆ ಅವಲಂಬಿತ ಗೊಂಡಿತ್ತು. ಬಹಳಷ್ಟು ರಾಜಕೀಯ ನಾಯಕರು ಕೆಲವು ವಿದ್ಯಾರ್ಥಿ ನಾಯಕರನ್ನು ಸಾಕಿಕೊಂಡಿ ದ್ದರು. ಈ ಕಾರಣಕ್ಕಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಮಿನಿ ಶಾಸನ ಸಭೆಗಳ ಚುನಾವಣೆಯ ಬಿಸಿಯನ್ನೇ ಪಡೆದಿದ್ದವು.

ಬಸವಲಿಂಗಪ್ಪನವರ ‘‘ಕನ್ನಡ ಸಾಹಿತ್ಯ ಬೂಸಾ’’ ಎಂಬ ಹೇಳಿಕೆಯು ಆತುರದ ಮಾತು ಅನ್ನಿಸಿದರೂ ನಾವೆಲ್ಲ ಅವರ ಬೆಂಬಲಕ್ಕೆ ನಿಂತೆವು. ಅವರನ್ನು ಡಿ.ಆರ್.ನಾಗರಾಜ್, ಸಿದ್ದಲಿಂಗಯ್ಯ ಮತ್ತು ನಾನು ದೀರ್ಘವಾಗಿ ಚರ್ಚಿಸಿ ‘ಶೂದ್ರ’ ಅವರ ಪರವಾಗಿ ಧ್ವನಿಯೆತ್ತಿ ವಿಷಯ ಮಂಡಿಸಿತು. ಒಂದು ರೀತಿಯಲ್ಲಿ ಅವರ ವಿರುದ್ಧದ ಹೋರಾಟವು ಹಿಂಸಾತ್ಮಕ ಸ್ವರೂಪವನ್ನು ಪಡೆದಿತ್ತು. ನಾವೆಲ್ಲ ಆ ಹಿಂಸೆಯನ್ನು ಬೇರೆ ಬೇರೆ ರೂಪದಲ್ಲಿ ಅನುಭವಿಸಿದೆವು. 

ಲಂಕೇಶ್ ಅವರಂತೂ ಬಸವಲಿಂಗಪ್ಪನವರ ಪರ ವಾಗಿ ಧ್ವನಿಯೆತ್ತಿದ್ದಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಂಭಾಗದಲ್ಲಿ ಅವರ ಜುಬ್ಬಾವನ್ನೆಲ್ಲ ಕಿತ್ತು ಬಿಸಾಕಿ ದೈಹಿಕ ವಾಗಿ ಬಡಿದಿದ್ದರು. ಅದೇ ರೀತಿಯಲ್ಲಿ ವಿ.ವಿ. ಪುರಂನ ಒಕ್ಕಲಿಗರ ಕಾಲೇಜಿನ ಸಮಾರಂಭ ಒಂದರಲ್ಲಿ ದೈಹಿಕ ಹಿಂಸೆ ಯನ್ನು ಅನುಭವಿಸಿದ್ದರು. ಇದೇ ಸಮಯ ದಲ್ಲಿ ನಾವು ‘ಶೂದ್ರ’ದ ಸಂಚಿಕೆಯಲ್ಲಿ ಅವರನ್ನು ಬೆಂಬಲಿಸಿ ಬರೆದಿದ್ದೆವು. 

ನಂತರ ಅವರ ಚಿಂತನೆಯ ಮಿತಿಗಳನ್ನು ಕುರಿತು ಬರೆದೆವು. ಅದನ್ನು ಬಸವಲಿಂಗಪ್ಪವರು ಗೌರವದಿಂದಲೇ ಸ್ವೀಕರಿಸಿದರು. ಇದೇ ಸಮಯಕ್ಕೆ ಯು.ಆರ್. ಅನಂತಮೂರ್ತಿ ಯವರು ಅವರ ಪರವಾಗಿ ನಿಂತರು. ಕುವೆಂಪು ಅವರು ಬಸವಲಿಂಗಪ್ಪನವರ ಹೇಳಿಕೆಯ ಪರವಾಗಿ ಮಾತಾಡಿದಾಗ ಜಾತಿವಾದಿ ವಿದ್ಯಾರ್ಥಿಗಳ ಹೋರಾಟದ ಹಿಂಸಾತ್ಮಕತೆ ಕುಗ್ಗುತ್ತ ಹೋಯಿತು. ಇದೇ ಸಮಯಕ್ಕೆ ಮಹಾರಾಷ್ಟ್ರದ ದಲಿತ ಪ್ಯಾಂಥೆರ್ಸ್ ಸಂಘಟನೆಯ ಲೇಖಕರು ಹಾಗೂ ಬೇರೆ ಬೇರೆ ರಾಜ್ಯಗಳ ವಿಚಾರ ಪೂರ್ಣ ಲೇಖಕರು ಅವರಿಗೆ ಬೆಂಬಲ ವನ್ನು ಸೂಚಿಸಿದರು. 

ಇಷ್ಟಾದರೂ ದೇವರಾಜ ಅರಸು ಅವರು ಬಸವಲಿಂಗಪ್ಪನವ ರನ್ನು ತಾತ್ಕಾಲಿಕವಾಗಿ ಸಂಪುಟದಿಂದ ಕೈಬಿಡ ಬೇಕಾಯಿತು. ದುರಂತವೆಂದರೆ ಕರ್ನಾಟಕದ ಯಾವ ದಲಿತ ಶಾಸಕರೂ ಬಸವಲಿಂಗಪ್ಪನವರ ಪರ ನಿಲ್ಲಲಿಲ್ಲ. ಅವರು ಅಧಿಕಾರದಿಂದ ಕೆಳಕ್ಕಿಳಿದರೂ ಜನ ಅವರ ಮನೆಯ ಮುಂದೆ ನೆರೆದಿರುತ್ತಿದ್ದರು. ಏನಾದರೂ ಕೆಲಸ ಮಾಡಿಸುತ್ತಾರೆಂದು ಮತ್ತು ತಮ್ಮ ಪರವಾಗಿ ಮಾತಾಡುವ ನಾಯಕ ಎಂದು.

ಇದೇ ಸಮಯದಲ್ಲಿ ಬಸವಲಿಂಗಪ್ಪನವರು ಯು.ಆರ್.ಅನಂತಮೂರ್ತಿಯವರನ್ನು ಮತ್ತು ನನ್ನನ್ನು ಬೆಂಗಳೂರಿನ ಕುಮಾರಕೃಪಾ ಬಡಾವಣೆಯ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಆ ದಿನ ಎರಡು ಮೂರುಗಂಟೆ ತುಂಬ ಖಾಸಗಿಯಾದ ಮಾತುಗಳ ಚೌಕಟ್ಟಿನಲ್ಲಿ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳು ಚರ್ಚೆಯಾಗಿದ್ದವು. ನಾವು ಆ ಮಾತುಗಳನ್ನು ಎಲ್ಲಿಯೂ ದಾಖಲಿಸದಿದ್ದರೂ; ನಮ್ಮ ಕಾಲಘಟ್ಟದ ‘ರಿಮಾರ್ಕೆಬಲ್’ನಾಯಕ ಎಂಬುದರಲ್ಲಿ ಎರಡನೆಯ ಮಾತಿಲ್ಲ. ಹಾಗೆ ನೋಡಿದರೆ ನಾನು ನಿಜವಾಗಿಯೂ ಕೆ.ಎಚ್. ರಂಗನಾಥ್ ಅವರಿಗಿಂತ ಹೆಚ್ಚಾಗಿ ಬಸವಲಿಂಗಪ್ಪನವರನ್ನು ಇಷ್ಟಪಡುತ್ತಿದ್ದೆ. 

ಒಂದಂತೂ ಸತ್ಯ: ಇಂದು ಕರ್ನಾಟಕದಲ್ಲಿ ದಲಿತ ಚಳವಳಿಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳಿಂದ ಬೆಳೆದಿದ್ದರೂ; ಆ ಚಳವಳಿಗಳು ‘ಸ್ವಾಭಿಮಾನ’ದ ಸ್ವರೂಪವನ್ನು ಪಡೆದಿದ್ದು ಬಸವಲಿಂಗಪ್ಪ ನವರ‘ಬೂಸಾ ಚಳವಳಿ’ಯ ಕಾರಣಕ್ಕಾಗಿ. ಹಾಗೆಯೇ ದಲಿತ ಕವಿ ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನದ ಕಾರಣಕ್ಕಾಗಿ. ದಲಿತ ವಿದ್ಯಾವಂತರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಎಂಥ ಸಂಚಲನವನ್ನು ಮೂಡಿಸಿತು. ಬಸವಲಿಂಗಪ್ಪನವರಷ್ಟೇ ಡಾ. ಸಿದ್ದಲಿಂಗಯ್ಯನವರು ಕರ್ನಾಟಕದ ಉದ್ದಗಲಕ್ಕೂ ಸುತ್ತಿದ್ದರು. 

ಇಂದು ಕರ್ನಾಟಕದಲ್ಲಿ ತುಂಬ ಮಿಲಿಟೆಂಟಾಗಿ ಯೋಚಿಸುವ ಸಾವಿರಾರು ಮಂದಿ ದಲಿತ ಯುವಕರು ಇದ್ದಾರೆ. ಇದಕ್ಕೆ ದಲಿತ ಸಂಘರ್ಷ ಸಮಿತಿ ಕಾರಣವಾದರೂ; ಅಂಥ ಒಂದು ಸಂಘಟನೆ ಬೇಕಾಗಿದೆ ಎಂದು ಯೋಚಿಸಲು ವೇದಿಕೆ ಸಿದ್ಧವಾಗಿದ್ದು: ಬಸವಲಿಂಗಪ್ಪನವರು ಎತ್ತಿದ ಕೆಲವು ಮೂಲಭೂತ ಪ್ರಶ್ನೆಗಳಿಂದ. ಆ ಪ್ರಶ್ನೆಗಳು ಸ್ವಾಭಿಮಾನದ ಸಂಚಲನಕ್ಕೆ ಕಾರಣವಾದವು. ಯಾಕೆಂದರೆ ಅವರ ಕಾಲಕ್ಕೆ ಅವರ ಪರವಾಗಿ ದೊಡ್ಡ ಪ್ರಮಾಣದಲ್ಲಿ ಧ್ವನಿಯೆತ್ತುವ ‘ದಲಿತಪಡೆ’ಯೇ ಇರಲಿಲ್ಲ. ಇದ್ದಿದ್ದರೆ; ಬಸವಲಿಂಗಪ್ಪನವರು ಸಚಿವ ಸಂಪುಟದಿಂದ ಹೊರಗೆ ಬರುವ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ. 

ಆದರೆ ಒಂದು ಆರೋಗ್ಯಪೂರ್ಣ ಸಂಗತಿಯೆಂದರೆ: ದಲಿತೇತರ ಹಿರಿಯ ಸಾಂಸ್ಕೃತಿಕ ಚಿಂತಕರು ಅವರ ಪರವಾಗಿ ಇದ್ದದ್ದು. ಇದಕ್ಕೆ ಸಂಬಂಧಿಸಿದಂತೆ ಬಸವಲಿಂಗಪ್ಪನವರಿಗೆ ತುಂಬ ಮೆಚ್ಚುಗೆಯೂ ಇತ್ತು. ಅಷ್ಟರಮಟ್ಟಿಗೆ ನಮ್ಮ ಸಮಾಜ ‘ಪೋಲರೈಸ್’ ಆಗಿದೆಯಲ್ಲ ಎಂದು. ತುಂಬ ಆತ್ಮೀಯತೆಯಿಂದ ಇದನ್ನು ಬಳ್ಳಾರಿಯ ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವಡ್ಡರ್ಸೆ ರಘುರಾಮ ಶೆಟ್ಟರು ಹಿರಿಯ ಚಿಂತಕರಾದ ಮುದೇನೂರು ಸಂಗಣ್ಣ ಮತ್ತು ನಾನು ಇರುವಾಗ ವ್ಯಕ್ತಪಡಿಸಿದ್ದರು. ಒಂದು ದೃಷ್ಟಿಯಿಂದ ‘ಕುವೆಂಪು’ ಅವರ ಹೇಳಿಕೆಯಿಂದಲೇ ರೋಮಾಂಚಿತರಾದವರು. ಈ ರೀತಿಯಲ್ಲಿ ನನ್ನ ಪಕ್ಷದಿಂದ ಬೆಂಬಲ ಸಿಗಲಿಲ್ಲವಲ್ಲ ಎಂಬ ಗಾಢ ವಿಷಾದವೂ ಅವರಲ್ಲಿ ತುಂಬಿಕೊಂಡಿತ್ತು.

ಇಂದು ಕರ್ನಾಟಕದ ಉದ್ದಗಲಕ್ಕೂ ಪ್ರತಿಯೊಂದು ಹಳ್ಳಿಯಲ್ಲಿಯೂ ‘ಅಂಬೇಡ್ಕರ್ ಸಂಘ’ವಿದೆ. ಹಾಗೆಯೇ ಇನ್ನು ಕೆಲವು ಕಡೆ ‘ದಲಿತ ಸೇವೆ’ಎಂಬುದಿದೆ. ಇದಕ್ಕೆಲ್ಲ ಹಿನ್ನೆಲೆಯಾಗಿ ಬಸವಲಿಂಗಪ್ಪನವರ ಕೊಡುಗೆ ಅಪಾರವಾದದ್ದು.ಹಾಗೆಯೇ ಬೂಸಾ ಚಳವಳಿಯ ಸಂದರ್ಭದಲ್ಲಿಯೇ ‘ಎಮರ್ಜ್’ ಆದ ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ಕವನ ಸಂಕಲನವನ್ನು ನಾವು ಅವಲೋಕಿಸಿಕೊಳ್ಳಬೇಕಾಗುತ್ತದೆ. 

ಅದೇ ಸಮಯಕ್ಕೆ ‘ದಲಿತ ಸಂಘರ್ಷ ಸಮಿತಿ’ ಹುಟ್ಟಿಕೊಳ್ಳಲು ಓ. ಶ್ರೀಧರನ್ ಎಂಬ ವಕೀಲರನ್ನು ಮರೆಯಲು ಸಾಧ್ಯವಿಲ್ಲ. ಬೆಂಗಳೂರಿನ ಗಾಂಧಿನಗರದ ಒಂದು ಹೊಟೇಲ್‌ನಲ್ಲಿ ಒಬ್ಬಂಟಿಯಾಗಿದ್ದ ತಮಿಳು ಮೂಲದವರು. ಅವರು ಸದಾ ಕನವರಿಸುತ್ತಿದ್ದುದು ‘ದಲಿತ ಸಂಘಟನೆ’ಯ ಬಗ್ಗೆ. ಈಗಲೂ ನೆನಪಿದೆ; ಇಂಥ ಸಂಘಟನೆ ಕುರಿತು ಚರ್ಚಿಸಲು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಒಮ್ಮೆ ಸೇರಿದ್ದರು. ಅದರಲ್ಲಿ ಓ. ಶ್ರೀಧರನ್, ಡಿ.ಆರ್. ನಾಗರಾಜ್ ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಚಿಕ್ಕ ಸಾಹುಕಾರ್‌ಮತ್ತು ಓ. ರಾಜಣ್ಣ ಮುಂತಾದವರಿದ್ದರು.

ತುಂಬ ದೀರ್ಘವಾದ ಚರ್ಚೆ. ಆ ಚರ್ಚೆಯಿಂದ ಹುಟ್ಟಿದ ಮಗುವೇ ದಲಿತ ಸಂಘರ್ಷ ಸಮಿತಿ. ಇದರ ಹಿಂದೆ ಧ್ವನಿಪೂರ್ಣವಾಗಿರುವುದು: ಬೂಸಾ ಚಳವಳಿಯ ಸಂಘರ್ಷ. ಹಾಗೆ ನೋಡಿದರೆ ಭದ್ರಾವತಿಯ ಪ್ರೊ. ಬಿ. ಕೃಷ್ಣಪ್ಪ ಮುಂತಾದವರು ಆಮೇಲೆ ಸೇರ್ಪಡೆಗೊಂಡವರು. ಅದು ಏನೇ ಆಗಿರಲಿ, ‘ದಲಿತ ಸಂಘರ್ಷ ಸಮಿತಿ’ ಅದ್ಭುತವಾಗಿ ಬೆಳೆದಿದೆ. ಕೆಲವು ಭಿನ್ನಾಭಿಪ್ರಾಯಗಳ ಮೂಲಕ ಬೇರೆ ಬೇರೆ ಸಂಘಟನೆಗಳು ಹುಟ್ಟಿಕೊಂಡಿರಬಹುದು. ಆದರೆ ಅವರೆಲ್ಲ ಸಾಮಾಜಿಕ ಸಂಕಷ್ಟಗಳ ಸಮಯದಲ್ಲಿ ಒಂದೇ ವೇದಿಕೆಯ ನೆರಳಲ್ಲಿ ಕೆಲಸ ಮಾಡುವಂಥವರು. 

ಇದು ಮಾವಳ್ಳಿ ಶಂಕರ್ ಅವರಂಥ ಮತ್ತು ಲಕ್ಷ್ಮಿನಾರಾಯಣ ನಾಗವಾರ ಅಂಥವರಿಗೂ ಗೊತ್ತು. ಇಲ್ಲೆಲ್ಲ ನಾಲ್ಕು ದಶಕಗಳ ಹಿಂದೆ ಸಾಂಸ್ಕೃತಿಕವಾಗಿ ರೋಮಾಂಚನವನ್ನೆಬ್ಬಿಸಿದ ‘ಬೂಸಾ ಚಳವಳಿ’ಯನ್ನು ಮತ್ತು ಬಸವಲಿಂಗಪ್ಪನವರನ್ನು ಮರೆತು ಯೋಚಿಸಲು ಸಾಧ್ಯವೇ ಇಲ್ಲ. ಇಂದು ಅತ್ಯಂತ ಸೂಕ್ಷ್ಮವಾಗಿ ಬರೆಯುತ್ತಿರುವ ಮತ್ತು ಯೋಚಿಸುತ್ತಿರುವ ಎಲ್ಲ ದಲಿತ ಯುವಕ ಯುವತಿಯರಿಗಂತೂ ‘ಬೂಸಾ ಚಳವಳಿ’ಯನ್ನು ಮತ್ತು ಬಸವಲಿಂಗಪ್ಪನವರನ್ನು ಮರೆಯಲು ಸಾಧ್ಯವೇ ಇಲ್ಲ. ಇವೆಲ್ಲವನ್ನು ಚರ್ಚಿಸಲು ಬೆಂಗಳೂರಿನಲ್ಲಿ ಫೆಬ್ರವರಿ ಎರಡರಂದು ರವಿವಾರ ಒಂದಷ್ಟು ಸಂವಾದ ಗೋಷ್ಠಿಗಳಿವೆ. ಅವು ಒಂದು ಕಾಲಘಟ್ಟದ ಅರ್ಥಪೂರ್ಣತೆಯನ್ನು ವಿಸ್ತರಿಸುವಂತಾಗಲಿ.

ಫೆ 2 ಧಾರವಾಡ : ಕ್ರಿಸ್ತಕಾವ್ಯ ನೃತ್ಯ ರೂಪಕ
‘ಕ್ರಿಸ್ತಕಾವ್ಯ’

          ಇತಿಹಾಸದಲ್ಲಿ ಮಾನವ ಕಲ್ಯಾಣಕ್ಕಾಗಿ ಪ್ರೀತಿ-ಸ್ನೇಹ-ಶಾಂತಿಗಳನ್ನು ಪ್ರತಿಪಾದಿಸಿದ ಇಂಥ ‘ಮಹಾತ್ಮ’ರು ಹಲವರು. ಅತ್ಯಂತ ಪ್ರಭಾವಶಾಲೀ ಧರ್ಮವೊಂದರ ಹುಟ್ಟಿಗೆ ಕಾರಣನಾದ ಎಂಬ ಸಂಗತಿಗಿಂತ ತಾನು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳಿಂದಲೇ ಮುಖ್ಯನಾಗುವ ‘ಏಸುಕ್ರಿಸ್ತ’  ಮಹಾತ್ಮರ ಸಾಲಿಗೆ ಸೇರುತ್ತಾನೆ. ಹಾಗೆಯೇ ಏಸುವಿನ ಹುಟ್ಟಿನಿಂದ ಆರಂಭಿಸಿ, ಆತನ ಪುನರುತ್ಥಾನದವರೆಗಿನ  ಜೀವನ ಘಟನೆಗಳು, ಧರ್ಮ-ಅಧರ್ಮಗಳ, ಸದ್ಗುಣ-ದುರ್ಗುಣಗಳ ಸಂಘರ್ಷವನ್ನೇ ಪ್ರತಿನಿಧಿಸುತ್ತವೆ. ಸಾವಿರಾರು ವರುಷಗಳಿಂದ ಏಸುವಿನ ಸುತ್ತ ಬೆಳೆದಿರುವ ಪವಾಡಗಳ, ಪುರಾಣಗಳ ಅತಿಮಾನುಷ ಪರಿವೇಶವನ್ನು ಕಳಚಿ ನಿಲ್ಲಿಸಿದರೂ ಏಸು ಕ್ರಿಸ್ತ ಸಾಧನೆಯಿಂದ ದೇವಮಾನವ.

     ಮಾನವೀಯ ಮೌಲ್ಯಗಳು, ಮನೋವೈಜ್ಞಾನಿಕ ದೃಷ್ಟಿಕೋನ ಮತ್ತು ರಸಸೃಷ್ಟಿ ಇವುಗಳಿಂದ ಕ್ರಿಸ್ತನ ಹಿಂದಿನ  ಜಗತ್ತು, ಕ್ರಿಸ್ತನಿದ್ದ ಕಾಲಘಟ್ಟ ಮತ್ತು ಇಂದಿನ ಸಮಾಜ ಇವುಗಳನ್ನು ಸಂಶೋಧನಾತ್ಮಕವಾಗಿ ಶೋಧಿಸುವ ಪ್ರಯತ್ನವಿದು. ಅಂದರೆ ‘ಮನಸ್ಸಿ’ನ ಭಾವನೆಗಳೇ ಇಲ್ಲಿಯ ಕೇಂದ್ರ ಬಿಂದು.

       ಸ್ವತಃ ಮನೋವೈದ್ಯೆಯೂ, ಭರತನಾಟ್ಯ ಕಲಾವಿದೆಯೂ ಆದ ಡಾ|| ಕೆ.ಎಸ್. ಪವಿತ್ರಾರ ಸೃಜನ ಪ್ರತಿಭೆಯ ಒಳನೋಟ ಮತ್ತು ಕಲ್ಪನಾಶೀಲತೆಗಳಿಂದ ‘ಕ್ರಿಸ್ತಕಾವ್ಯ’ ರೂಪುಗೊಂಡಿದೆ. ‘ಕ್ರಿಸ್ತಕಾವ್ಯ’ದ ಪ್ರತಿಸಾಲಿನ ಹಿಂದೆ, ಸಂದರ್ಭದ ಹಿಂದೆ ಧರ್ಮಬೋಧನೆಗಿಂತ ಇಂದಿನ ಸಮಾಜದ ಆಗುಹೋಗುಗಳನ್ನು ಅವಲೋಕಿಸುವ, ಅವುಗಳಿಗೊಂದು ಸಂದೇಶ  ನೀಡುವ ಪ್ರಯತ್ನವಿದೆ.

    ಕನ್ನಡ ಸಾಹಿತ್ಯದ ವಿಭಿನ್ನ ಆಕರಗಳನ್ನು ‘ಕ್ರಿಸ್ತಕಾವ್ಯ’ ದ ಸಾಹಿತ್ಯಕ್ಕಾಗಿ ಆರಿಸಿಕೊಳ್ಳಲಾಗಿದೆ.. ಶ್ರೀ ವಿಲಿಯಂ ಅವರು ಸಂಪಾದಿಸಿರುವ ‘ಕ್ರಿಸ್ತಕಾವ್ಯ’ ಎಂಬ ಗ್ರಂಥದ ಸಾಹಿತ್ಯದ ಜೊತೆಗೇ ಡಾ|| ಎ.ಜಿ. ಗೋಪಾಲಕೃಷ್ಣ ಕೊಳ್ತಾಯ ಅವರ ಸಾಹಿತ್ಯವನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ

    ‘ಕ್ರಿಸ್ತಕಾವ್ಯ’ ವನ್ನು ಇದೇ ಫೆಬ್ರುವರಿ  ೨ರ ಭಾನುವಾರದಂದು ಸೃಜನ ರಂಗಮಂದಿರ, ಧಾರವಾಡದಲ್ಲಿ ೬ ಗಂಟೆಗೆ ಡಾ|| ಪವಿತ್ರಾ ಸಹೃದಯರ ಮುಂದಿಡಲಿದ್ದಾರೆ. ಈ ಕಾರ್ಯಕ್ರಮವನ್ನು  ಶ್ರೀವಿಜಯ  ಕಲಾನಿಕೇತನ (ರಿ) ಶಿವಮೊಗ್ಗ ’ಇಂಟ್ಯಾಕ್’ ಧಾರವಾಡ, ಲಡಾಯಿ ಪ್ರಕಾಶನ, ಕರ್ನಾಟಕ ಜನಸಾಹಿತ್ಯ ಸಂಘಟನೆ, ’ಸಮುದಾಯ’  ’ಇಪ್ಟಾ’, ’ಚಿಲಿಪಿಲಿ’ ಈ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಮತ್ತು ಬೆಂಗಳೂರು ಪ್ರಾಯೋಜನೆ ನೀಡಲಿವೆ.ಫೆ 2 ಬೆಂಗಳೂರು : ಡಬ್ಬಿಂಗ್ ಬೇಕೊ ಬೇಡವೊ? : ವಿಚಾರ ಸಂಕಿರಣ ಮತ್ತು ಸಂವಾದ

Thursday, January 30, 2014

ಆಪತ್ಕಾಲದಲ್ಲಿ ಆಪ್ ಮೇಲೆ ಮುಗಿಬಿದ್ದವರು
ಏಜಾಜ್ ಆಶ್ರಫ್


ಸೌಜನ್ಯ : ವಿಜಯ ಕರ್ನಾಟಕಆಮ್ ಆದ್ಮಿ ಪಾರ್ಟಿ ಮೇಲೆ ನಿಧಾನವಾಗಿ ಒತ್ತಡ ಸೃಷ್ಟಿಯಾಗತೊಡಗಿದೆ. ಕಾಶ್ಮೀರ ಕುರಿತು ನ್ಯಾಯವಾದಿ ಪ್ರಶಾಂತ್ ಭೂಷಣ್ ನೀಡಿದ ಹೇಳಿಕೆ, ಉಗಾಂಡ ಮಹಿಳೆಯರ ಮನೆ ಮೇಲೆ ದಿಲ್ಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ನಡೆಸಿದ ಮಧ್ಯರಾತ್ರಿ ದಾಳಿ ಬಗ್ಗೆ ವ್ಯಾಪಕ ಟೀಕೆಗಳು ಈಗಾಗಲೇ ವ್ಯಕ್ತವಾಗಿವೆ. ಇದರಿಂದಾಗಿ, ಆಪ್ ನಾಯಕರು ತಮ್ಮ ಮೂಲ ವಿಚಾರಧಾರೆಯಿಂದ ತುಸು ಹಿಂದೆ ಸರಿದು, ತಮ್ಮದಲ್ಲದ ವಿಚಾರಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಿ ಸು ತ್ತಿ ದ್ದಾರೆ. ರಾಜಕೀಯವಾಗಿ ಬಲಪಂಥೀಯರು, ಎಡಪಂಥೀ ಯರು ಎಂದು ಗುರುತಿಸಿಕೊಂಡಿರುವವರೆಲ್ಲರೂ ಆಪ್ ಮೇಲೆ ಈ ರೀತಿ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಮಾತ್ರ ಸದ್ಯಕ್ಕೆ ಮೌನವಾಗಿದೆ.

ಆಪ್‌ನ ದಿಢೀರ್ ಬೆಳವಣಿಗೆಯೂ ಈ ಒತ್ತಡಕ್ಕೆ ಒಂದು ಕಾರಣ. ಬೇರೆ ಪಕ್ಷಗಳಿಗೆ ಹೋಲಿಸಿದರೆ ರಾಜಕಾರಣದ ಅಂಗಳ ದಲ್ಲಿ ಆಪ್ ಒಂದು ಸಣ್ಣ ಹಕ್ಕಿ. ಅದಕ್ಕೆ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲೂ ಹಾರಿ ತೋರಿಸಬೇಕೆಂಬ ಬಯಕೆ. ಆದರೆ ಉಳಿದ ಪಕ್ಷಗಳಿಗೆ ಈ 'ಹಕ್ಕಿ ಮರಿ'ಯನ್ನು ಪಂಜರಕ್ಕೆ ಸೀಮಿತಗೊಳಿಸುವ ಆಸೆ. ತನ್ನ ಮುಂದಿರುವ ಸವಾಲು ಎಷ್ಟು ದೊಡ್ಡದೆಂಬ ಅರಿವಿಲ್ಲದೆ, ಘನತೆಗೆ ಕುಂದು ಎಂಬ ಆತಂಕವೂ ಇಲ್ಲದೆ, ಈ ಹಕ್ಕಿ ಸಿಕ್ಕಸಿಕ್ಕಲ್ಲಿ ಹಿಕ್ಕೆ ಹಾಕುತ್ತ ಸ್ವಚ್ಛಂದ ವಾಗಿ ಹಾರುತ್ತಿದೆ. ಹಾಗಾಗಿಯೇ, ಆಪ್‌ಗೆ ರಾಷ್ಟ್ರೀಯ ದೃಷ್ಟಿಕೋನ ಇಲ್ಲ ಎಂದು ಎಲ್ಲ ಪಕ್ಷಗಳೂ ಹರಿಹಾಯುತ್ತಿವೆ. ರಾಷ್ಟ್ರಮಟ್ಟದಲ್ಲಿ ಈಗ ಚಾಲ್ತಿಯಲ್ಲಿರುವ ರಾಜಕಾರಣದ ಮಾದರಿಯನ್ನು ಮುಂದುವರಿಸಬೇಕೆಂಬುದು ಈ ಟೀಕಾಕಾರರ ಆಸೆ. ಏಕೆಂದರೆ, ಆ ಮಾದರಿ ಮಾಯವಾಗಿಬಿಟ್ಟರೆ ಹೊಸ ಮಾದರಿಗೆ ಹೊಂದಿ ಕೊಳ್ಳುವುದು ಹಳೇ ರಾಜಕಾರಣಿಗಳಿಗೆ ಕಷ್ಟವಾಗುತ್ತದೆ.

ಆಪ್ ಬಗ್ಗೆ ಬಿಜೆಪಿ ಕಟು ಟೀಕೆಯನ್ನೇ ಮಾಡಿದೆ. ಇದು ಮಾವೋವಾದಿಗಳ ತಂಡ, ಪ್ರತ್ಯೇಕತಾವಾದಿಗಳ ಗುಂಪು, ಮುಕ್ತ ಮಾರುಕಟ್ಟೆಯನ್ನು ವಿರೋಧಿಸುವ ಕಮ್ಯುನಿಸ್ಟ್‌ಗಳ ಪ್ರತಿರೂಪ, ದೇಶದ ಮರ್ಯಾದೆ ಕಳೆಯುತ್ತಿರುವ ಹಾದಿ ತಪ್ಪಿದ ಯುವಕರ ಹಿಂಡು ಎಂಬುದು ಬಿಜೆಪಿಯ ವಾದ. ಕೇಸರಿಪಡೆಯ ಆರ್ಥಿಕ ಬೆಳವಣಿಗೆಯ ದೂರದೃಷ್ಟಿ, ಅದನ್ನು ನರೇಂದ್ರ ಮೋದಿ ಮಾತ್ರ ಜಾರಿಗೆ ತರಬಲ್ಲರೆಂಬ ನಂಬಿಕೆಗೆ ಆಪ್ ಪರ್ಯಾಯ ವಾಗಿಬಿಡ ಬಲ್ಲದು ಎಂಬ ಭಯ ಬಿಜೆಪಿಯಲ್ಲಿ ಮೊಳಕೆ ಯೊಡೆದಿದೆ.

ದಿಲ್ಲಿ ಚುನಾವಣೆಯ ಶಾಕ್ ಹೊಡೆಯುವವರೆಗೂ ಕಾಂಗ್ರೆಸ್ ಉದಾಸೀನದಿಂದಲೇ ಇತ್ತು. ಆಪ್ ಕಾರ‌್ಯಕರ್ತ ರೆಲ್ಲ ಬಿಜೆಪಿಗೆ ಸಹಾಯ ಮಾಡುತ್ತಿರುವ ಬಲಪಂಥೀಯ ಹೋರಾ ಟ ಗಾರರು ಎಂದೇ ಭಾವಿಸಿತ್ತು. ಆಪ್ ತನ್ನ ಸಾಮ ರ್ಥ್ಯಕ್ಕೆ ಮೀರಿದ ಸಾಹಸ ಮಾಡುತ್ತಿದೆ ಎಂದೂ ಜರೆದಿತ್ತು. ಆದರೆ ಮೋದಿ ಓಟಕ್ಕೆ ಆಪ್ ಅಡ್ಡಗಾಲು ಹಾಕುತ್ತದೆ, ತನಗೆ ಅಗತ್ಯವಿರುವ ರಾಜಕೀಯ ಸನ್ನಿವೇಶ ಸೃಷ್ಟಿಗೆ ಸಹಾಯಕ ವಾಗುತ್ತದೆ ಎಂಬುದು ಕಾಂಗ್ರೆಸ್‌ಗೆ ಈಗ ಅರಿವಾಗುತ್ತಿದೆ. ಜತೆಗೆ, ಈವರೆಗೆ ತನ್ನ ಮತಬ್ಯಾಂಕ್ ಆಗಿದ್ದ ನಗರ ಪ್ರದೇಶದ ಬಡವರು ಆಪ್‌ನತ್ತ ಹೋಗಿಬಿಡಬಹುದು ಎಂಬ ಆತಂಕವೂ ಕಾಂಗ್ರೆಸ್‌ಗೆ ಇದೆ.

ಎಡರಂಗಕ್ಕೂ ಆಪ್‌ನ ಸಾಮರ್ಥ್ಯ ತಡವಾಗಿ ಗೊತ್ತಾಯಿತು. ದಿಲ್ಲಿಯ ವಿದ್ಯುತ್ ಮತ್ತು ನೀರಿನ ಸಮಸ್ಯೆ ಪರಿಹಾರಕ್ಕೆ ಹೋರಾ ಡುವ ಮೂಲಕ ಆಪ್ ರಾಜಕೀಯದಲ್ಲಿ ಎತ್ತರಕ್ಕೆ ಏರಿದ್ದನ್ನು ಎಡರಂಗ ಪ್ರಶಂಸಿಸಿತು. ಇನ್ನೊಂದೆಡೆ, ಮೋದಿ ವಿರುದ್ಧ ವಾಗ್ದಾಳಿ ಮಾಡದೇ ಇರುವುದಕ್ಕೆ, ಭ್ರಷ್ಟಾಚಾರ ಮತ್ತು ಆರ್ಥಿಕ ನವ ಉದಾರೀಕರಣ ನೀತಿಯ ನಡುವೆ ಇರುವ ಸಂಬಂಧದ ಕುರಿತು ತಿಳಿದುಕೊಳ್ಳದೇ ಇರುವುದಕ್ಕೆ ಟೀಕಿಸಿತು. ಬುದ್ಧಿ ಜೀವಿಗಳ ವಲಯದಲ್ಲಿ ತನ್ನ ಬಗ್ಗೆ ಇರುವ ಅನುಕಂಪವನ್ನು ಆಪ್ ಎಲ್ಲಿ ಕಿತ್ತುಕೊಂಡುಬಿಟ್ಟೀತೊ ಎಂಬ ಭಯ ಎಡರಂಗಕ್ಕೆ ಆವರಿ ಸಿದೆ. ಪರ್ಯಾಯ ರಾಜಕಾರಣದ ಧ್ರುವತಾರೆ ಎಂಬ ತನ್ನ ಪಟ್ಟಕ್ಕೆ ಎಲ್ಲಿ ಕುತ್ತು ತಂದೀತೋ ಎಂಬ ಆತಂಕ ಕಾಡುತ್ತಿದೆ.

ಕಾಶ್ಮೀರ ಕುರಿತ ಭೂಷಣ್ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು ಇದೇ ಹಿನ್ನೆಲೆಯಲ್ಲಿ. ಕಾಶ್ಮೀರ ಭಾರತದ ಭಾಗವಾಗಿ ರಬೇಕೆ ಬೇಡವೆ ಎಂಬ ಬಗ್ಗೆ ಜನಾಭಿಪ್ರಾಯ ಪಡೆಯಲು ಭೂಷಣ್ ಎರಡು ವರ್ಷಗಳ ಹಿಂದೆಯೇ ಸಲಹೆ ನೀಡಿದ್ದರು. ಅದಕ್ಕಿಂತ ಭಿನ್ನ ಎನ್ನುವಂತೆ ಈ ಬಾರಿ ಅವರು, ಜನಾಭಿಪ್ರಾಯ ರೂಪಿಸುವ ಸಲುವಾಗಿ ರಕ್ಷಣಾ ಪಡೆಗಳ ಸಿಬ್ಬಂದಿಗೆ ವಿಶೇಷಾಧಿಕಾರ ಕಾಯ್ದೆಯಡಿ ನೀಡಲಾಗಿರುವ ದಂಡನೆಯ ವಿನಾಯಿತಿ ತೆಗೆದುಹಾಕಲು ಒತ್ತಾಯಿಸಿದರು. ಈ ಉತ್ತರ ಬರುತ್ತದೆ ಎಂಬುದು ಗೊತ್ತಿದ್ದರೂ ಪತ್ರಕರ್ತರು ಕೆಲವೊಮ್ಮೆ ಹೆಡ್‌ಲೈನ್‌ಗಳಿಗಾಗಿ ಇಂಥ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಪಕ್ಷ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ, ರಾಷ್ಟ್ರಮಟ್ಟದ ಗುರಿ ಇಟ್ಟುಕೊಂಡು ಮುನ್ನುಗುತ್ತಿರುವ ಸಂದರ್ಭದಲ್ಲಿ ಹಳೆ ನಿಲುವು ಬದಲಾಗಿರ ಬ ಹುದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿಯೂ ಪ್ರಶ್ನೆ ಕೇಳಿರ ಬಹುದು. ಆಗ, ಅಧಿಕಾರದಲ್ಲಿರುವ ವ್ಯಕ್ತಿ ತನ್ನ ನಂಬಿಕೆಗೆ ವಿರುದ್ಧ ವಾದ ಮಾತು ಆಡುತ್ತಾನೆಂಬ ಇಂಗಿತ ಇರುತ್ತದೆ. ಟಿವಿ ಸುದ್ದಿ ವಾಹಿನಿಗಳ ಪ್ರೈಮ್‌ಟೈಮ್ ಧ್ವನಿಗಳು ಭೂಷಣ್‌ಗೆ ಜವಾಬ್ದಾರಿ ಯಿಂದ ಮಾತನಾಡುವಂತೆ ಸಲಹೆ ನೀಡಿದ್ದೂ ಇದೇ ಕಾರಣಕ್ಕಾಗಿ. ಭೂಷಣ್ ಹೇಳಿಕೆಗೆ ಪ್ರತಿಕ್ರಿಯೆಗಳು ಬರತೊಡಗಿದ ಸಂದರ್ಭ ದಲ್ಲಿ ಆಪ್ ದಿಗಿಲುಗೊಂಡಂತೆ ಭಾಸವಾಯಿತು. ಭದ್ರತೆ ವಿಷಯದಲ್ಲಿ ರಾಷ್ಟ್ರೀಯ ಒಮ್ಮತ ಇರಬೇಕೆಂಬ ನಿಲುವನ್ನು ತಿಳಿಸಲು ಆಪ್ ಒಲವು ಹೊಂದಿದಂತೆ ಆರಂಭದಲ್ಲಿ ಗೋಚರಿ ಸಿತು. ನಂತರ ತುಸು ಬದಲಾವಣೆ ಮಾಡಿಕೊಂಡು, ಅಭಿಪ್ರಾಯ ಹೇಳಿಕೊಳ್ಳುವುದು ಕಾಶ್ಮೀರದ ಜನತೆಯ ಮೂಲಭೂತ ಹಕ್ಕು ಎಂದು ಆಪ್ ಪ್ರತಿಪಾದಿಸಿತು. ವಿರೋಧಿಗಳ ರಾಜಕೀಯ ಅಜೆಂಡಾಗಳಿಗೆ ಪ್ರತಿಕ್ರಿಯಿಸುವಾಗ ಎಷ್ಟು ಎಚ್ಚರದಿಂದ ಇರಬೇಕೆಂಬುದಕ್ಕೆ ಭೂಷಣ್ ಪ್ರಕರಣ ಸಾಕ್ಷಿ.

ಇತರ ಪಕ್ಷಗಳಿಗಿಂತ ವಿಭಿನ್ನವಾಗಿ ಯೋಚಿಸಿದ ಆಪ್, ಮತದಾ ರನಿಗೆ ಆಪ್ತ ಎನ್ನಿಸುವಂತಹ ವಿಷಯಗಳನ್ನೇ ಆರಿಸಿ ಕೊಂಡಿತು. ಸ್ಥಳೀಯ ಮತ್ತು ತಕ್ಷಣ ಆಗಬೇಕಾದ ವಿಷಯ ಗಳವು. ನೀರು, ವಿದ್ಯುತ್ತು, ಆರೋಗ್ಯ, ಶಿಕ್ಷಣ, ಭದ್ರತೆ ಇತ್ಯಾದಿ. ಪಾರ ದರ್ಶಕ, ಸಂವೇದನಶೀಲ, ಸ್ವಚ್ಛ ಆಡಳಿತದ ವಾಗ್ದಾನ. ಆಡಳಿತ ದಲ್ಲಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಜನರ ಸಹಭಾಗಿತ್ವಕ್ಕೆ ಒತ್ತು ನೀಡುವುದಾಗಿ ಆಪ್ ನೀಡಿದ ಭರವಸೆಯೂ ಜನರನ್ನು ಸೆಳೆಯಿತು.

ವಿಪರ್ಯಾಸವೆಂದರೆ, ಉಗಾಂಡದವರು ನಡೆಸುತ್ತಿದ್ದರೆನ್ನ ಲಾದ ವೇಶ್ಯಾವಾಟಿಕೆ ಮತ್ತು ಮಾದಕದ್ರವ್ಯ ಜಾಲದ ಮೇಲೆ ಸೋಮನಾಥ್ ಭಾರ್ತಿ ಮಧ್ಯರಾತ್ರಿ ದಾಳಿ ಮಾಡಿದ್ದು ಕೂಡ ತಮ್ಮ ಕ್ಷೇತ್ರದ ಜನರ ಒತ್ತಡದಿಂದಾಗಿ. ಅದು ಕೇಂದ್ರ ಮತ್ತು ದಿಲ್ಲಿ ಸರ್ಕಾರದ ಮಧ್ಯೆಯೇ ಬಿಕ್ಕಟ್ಟಿಗೆ ಕಾರಣವಾಗಿಬಿಟ್ಟಿತು. ದಿಲ್ಲಿ ಪೊಲೀಸರು ಯಾರ ಸುಪರ್ದಿಯಲ್ಲಿ ಕೆಲಸ ಮಾಡಬೇಕೆಂಬ ವಿಷಯ ವಿಸ್ತೃತವಾಗಿ ಚರ್ಚೆಯಾಗುವುದಕ್ಕೂ ಅನುವು ಮಾಡಿ ಕೊಟ್ಟಿತು. ಆವೇಶದ ಭರದಲ್ಲಿ ಭಾರ್ತಿ ಜನಾಂಗೀಯ ನಿಂದನೆ ಮಾಡಿದರೆಂಬ ಆರೋಪ ಕೇಳಿಬಂತು. ಅದಾದ ಮರುದಿನವೇ, ಅಂತಹ ಕೃತ್ಯ ಎಸಗಿದ್ದು ಭಾರ್ತಿ ಅಲ್ಲ, ಪೊಲೀಸರು ಎಂಬುದನ್ನು ತೋರಿಸುವ ವಿಡಿಯೋ ಫೂಟೇಜ್ ಕೂಡ ಬಹಿರಂಗಕ್ಕೆ ಬಂತು. ಈಗ ತನಿಖೆ ನಡೆಯುತ್ತಿದೆ, ಯಾರು ತಪ್ಪಿತಸ್ಥರು ಎಂಬುದು ಮುಂದೊಂದು ದಿನ ಗೊತ್ತಾಗಲಿದೆ.

ಆದರೂ ಭಾರ್ತಿ ತೋರಿದ್ದು ಅತ್ಯುತ್ಸಾಹ. ಅವರ ಕ್ಷೇತ್ರದ ಜನರೇ ಆ ಕೆಲಸ ಮಾಡುವಂತೆ ಕೇಳಿಕೊಂಡಿದ್ದರೂ ಅದು 'ಕಾನೂನು ಕೈಗೆತ್ತಿಕೊಂಡಿದ್ದಕ್ಕೆ' ಒಂದು ಉದಾಹರಣೆಯಾಗಿ ದಾಖಲಾಯಿತು. ಜತೆಗೆ, ಮಾದಕದ್ರವ್ಯ ಜಾಲದ ವಿರುದ್ಧ ಜನ ಹಲವು ಬಾರಿ ದೂರಿತ್ತರೂ ಪೊಲೀಸರು ವಿವಿಧ ಹಿತಾಸಕ್ತಿಗಳಿಗೆ ಮಣಿದು ಕ್ರಮ ಕೈಗೊಳ್ಳದೇ ಇದ್ದುದೂ ಬಹಿರಂಗವಾಯಿತು.

ಇಂತಹ ಇನ್ನಷ್ಟು ವಿವಾದಗಳು ಮುಂದಿನ ದಿನಗಳಲ್ಲಿ ಸೃಷ್ಟಿಯಾಗುವುದು ಖಚಿತ. ಯಾಕೆಂದರೆ ತಳಮಟ್ಟದಲ್ಲಿ ಹಲವು ರೀತಿಯ ರಾಜಕೀಯ ಒಳಒಪ್ಪಂದಗಳಿವೆ. ಆಪ್‌ನ ಆಡಳಿತ ವೈಖರಿಯಿಂದಾಗಿ ಆ ಹಿತಾಸಕ್ತಿಗಳ ಜತೆ ಸಂಘರ್ಷ ಏರ್ಪಡು ತ್ತದೆ. ಲಂಚ ತೆಗೆದುಕೊಳ್ಳದ ಹಾಗೆ ತಡೆಯುವ ಮತ್ತು ದಕ್ಷತೆ ಯಿಂದ ಕೆಲಸ ಮಾಡುವಂತೆ ಒತ್ತಡ ಹೇರುವ ಆಡಳಿತಗಾರರ ವಿರುದ್ಧ ಅಧಿಕಾರಶಾಹಿ ಬಂಡೇಳುವುದು ಸಹಜ.

ಆದರೂ, ಆಡಳಿತ ನಡೆಸುವಾಗ ಪ್ರಜಾಪ್ರಭುತ್ವದ ಆಶಯ ಗಳಿಗೆ ಇಂಬು ಕೊಡಬೇಕು, ನೀತಿ- ನಿಯಮಗಳನ್ನು ಪಾಲಿಸ ಬೇಕು ಎಂಬುದನ್ನು ಆಪ್ ಮರೆಯಬಾರದು. ತಮಗೆ ಬೇಕಾದ ರೀತಿಯ ಅಭಿವೃದ್ಧಿ ಕುರಿತು ನಿರ್ಧರಿಸಲು ಮತ್ತು ಯೋಜನೆಗಳ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲು ಮೊಹಲ್ಲಾ ಸಭೆಗಳಿಗೆ ಅಧಿಕಾರ ನೀಡಿರುವುದೇನೋ ಸರಿ. ಆದರೆ ಅವೇ ಕೊನೆಗೆ ಈ ಜಾತಿ ಪಂಚಾಯಿತಿಗಳಾಗಿ ಮಾರ್ಪಡದಂತೆ ಎಚ್ಚರ ವಹಿಸಬೇಕು. ಆಯಾ ಪ್ರದೇಶದಲ್ಲಿ ಬಹುಸಂಖ್ಯಾತರಾಗಿ ರುವ ಸಮುದಾಯದವರ ಕೈಗೊಂಬೆಗಳಾಗದಂತೆ ನೋಡಿ ಕೊಳ್ಳ ಬೇಕು. ಅಧಿಕಾರ ವಿಕೇಂದ್ರೀಕರಣದಿಂದ ಗೊಂದಲ ಏರ್ಪಡು ತ್ತದೆ ಎಂಬುದು ಟೀಕಾಕಾರರ ಆತಂಕ.

ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಪ್ರಜಾಪ್ರಭುತ್ವದಿಂದ ಗೊಂದಲ ಶುರುವಾಗುತ್ತದೆ ಎಂದು ಹೇಳುವ ಸಾಕಷ್ಟು ಜನ ಇದ್ದರು. ಆಪ್‌ನಲ್ಲಿ ಕೂಡ ಹಲವು ಕ್ಷೇತ್ರಗಳಿಂದ ಬಂದಿರುವ, ಹಲವು ವಿಚಾರಧಾರೆಗಳ ಜನ ಒಂದೆಡೆ ಸೇರಿದ್ದಾರೆ. ಅವರೆಲ್ಲ ಸಣ್ಣ ವಿಷಯಗಳ ಬಗ್ಗೆ ಚಿಂತಿಸಿದ್ದಕ್ಕೇ ತಾವು ದೊಡ್ಡದಾಗಿ ಬೆಳೆಯಲು ಸಾಧ್ಯವಾಯಿತು. ಆ ಸ್ಥಳೀಯತೆಯ ಮೂಸೆ ಯಿಂದಲೇ ರಾಷ್ಟ್ರೀಯ ದೃಷ್ಟಿಕೋನ ಹೊರಹೊಮ್ಮ ಬೇಕು. ಆಮೆಯು ಆಮೆಯಂತೆ ಮುನ್ನಡೆದಿದ್ದರಿಂದಲೇ ಮೊಲ ಕ್ಕಿಂತ ಮೊದಲು ಗುರಿ ತಲುಪಿತು ಎಂಬುದನ್ನು ಆಪ್ ನಾಯಕರು ನೆನಪಿಡಬೇಕು.

ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ಅಲ್ಪ ಪ್ರಾತಿನಿಧ್ಯ

ಆಕಾರ್ ಪಟೇಲ್

ವಾರ್ತಾಭಾರತಿ

ಭಾರತೀಯ ನಾಗರಿಕ ಸೇವಾ ಹುದ್ದೆಗಳಲ್ಲಿ ಮುಸ್ಲಿಮರ ಅಲ್ಪ ಪ್ರಾತಿನಿಧ್ಯಕ್ಕೆ ಏನು ಕಾರಣ? ಅವರ ವಿರುದ್ಧವಿರುವ ಪೂರ್ವಾಗ್ರಹವೇ ಇದಕ್ಕೆ ಕಾರಣ ಎಂದು ಸಮುದಾಯದ ನಾಯಕರು ಹೇಳುತ್ತಾರೆ. ಅವರ ಧರ್ಮದ ಕಾರಣದಿಂದಾಗಿ ಅವರು ಈ ಹುದ್ದೆಗಳಿಗೆ ಬರುವುದನ್ನು ಉದ್ದೇಶಪೂರ್ವಕವಾಗಿ ತಡೆಯಲಾಗುತ್ತಿದೆ. ರಾಜಕೀಯ ವಲಯದಲ್ಲಿ ಮುಸ್ಲಿಮರ ಅಲ್ಪ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ಕಮ್ಯುನಿಸ್ಟರು ಮತ್ತು ಕಾಂಗ್ರೆಸಿಗರು ಒಪ್ಪುತ್ತಾರೆ. ಆದಾಗ್ಯೂ, ಇದಕ್ಕೆ ಏನು ಕಾರಣ ಎಂಬುದನ್ನು ಅವರು ಬಹಿರಂಗವಾಗಿ ಚರ್ಚಿಸುವುದಿಲ್ಲ. 

ಶಾಸನ ಹಾಗೂ ಮೀಸಲಾತಿ ಮುಂತಾದುವುಗಳ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಲು ಅವರು ಬಯಸುತ್ತಾರೆ. ಬಿಜೆಪಿಯು ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳತ್ತ ಕಣ್ಣು ಹಾಯಿಸುವುದಿಲ್ಲ. ಎಲ್ಲ ಭಾರತೀಯರನ್ನು ಸಮಾನವಾಗಿ ಪರಿಗಣಿಸಬೇಕು ಎಂದಷ್ಟೇ ಪಕ್ಷದ ನಾಯಕರು ಹೇಳುತ್ತಾರೆ. ಈ ವಿಷಯದಲ್ಲಿ ಕೆಲವರನ್ನು ಅನುಕೂಲಹೀನರು ಎಂಬುದಾಗಿ ಪರಿಗಣಿಸುವುದು ತಪ್ಪು ಹಾಗೂ ಸರಕಾರ ತಟಸ್ಥ ಹಾಗೂ ಸಮರ್ಥವಾಗಿದ್ದರೆ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ.

ಮುಸ್ಲಿಮರ ಹಿಂದುಳಿಯುವಿಕೆಗೆ ಒಂದು ಕಾರಣ ಅವರು ಹೊಂದಿರುವ ಜಾತಿ ಮೂಲ ಎಂಬುದಾಗಿ ನಾನು ಈ ಮೊದಲು ಅಭಿಪ್ರಾಯಪಟ್ಟಿದ್ದೆ. ಉಪಖಂಡದ ಹೆಚ್ಚಿನ ಮುಸ್ಲಿಮರು ಕೆಳ ಜಾತಿಗಳಿಂದ ಮತಾಂತರಗೊಂಡವರಾಗಿದ್ದಾರೆ. ಹಿಂದೂಗಳಲ್ಲಿ ಕೂಡ ಈ ಜಾತಿಗಳಿಗೆ ಸೇರಿದ ಜನರ ಪ್ರಾತಿನಿಧ್ಯ ನಾಗರಿಕ ಸೇವಾ ಹುದ್ದೆಗಳಲ್ಲಿ ವಿರಳವಾಗಿದೆ. ಇದಕ್ಕೆ ಕಾರಣ ಅವರ ಸಂಸ್ಕೃತಿ ಎಂದು ನನಗನಿಸುತ್ತದೆ.

‘ಎಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಪ್ರಕಟಗೊಂಡ ಲೇಖನವೊಂದು ಈ ವಿಷಯವನ್ನು ಬೇರೆ ರೀತಿಯಲ್ಲಿ ನೋಡುತ್ತದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ನಸೀಂ ಎ. ಝೈದಿ ಬರೆದಿರುವ ಆ ಲೇಖನ ಆಯ್ದ ಕಾಲೇಜುಗಳಿಂದ ನಾಗರಿಕ ಸೇವಾ ಪರೀಕ್ಷೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳ ವಿವರಗಳನ್ನು ಸಂಗ್ರಹಿಸುತ್ತದೆ.

‘‘2013 ಮೇ 3ರ ಪ್ರಕಟನೆಯಂತೆ, ವಿವಿಧ ಸೇವೆಗಳಿಗಾಗಿ ಆಯ್ಕೆಗೆ ಶಿಫಾರಸುಗೊಂಡಿರುವ 998 ಅಭ್ಯರ್ಥಿಗಳ ಪೈಕಿ 28 ಮಂದಿ ಮಾತ್ರ ಮುಸ್ಲಿಮರು. ಇದು ಒಟ್ಟು ಅಭ್ಯರ್ಥಿಗಳ 2.8 ಶೇ. ಆಗಿರುತ್ತದೆ. ಇದು ಪ್ರತಿವರ್ಷ ಮರುಕಳಿಸುತ್ತದೆ ಹಾಗೂ 3 ಶೇ.ದ ಗಡಿಯನ್ನು ದಾಟುವುದು ಅಸಾಧ್ಯವೆಂಬಂತೆ ಕಂಡುಬರುತ್ತದೆ’’.

ಅರ್ಜಿ ಹಾಕಿದವರಲ್ಲಿ ಎಷ್ಟು ಮುಸ್ಲಿಮರು ಹಾಗೂ ಅವರ ಪೈಕಿ ಎಷ್ಟು ಮಂದಿ ಯಶಸ್ವಿಯಾಗಿದ್ದಾರೆ ಎಂಬ ಅಂಶದತ್ತ ಝೈದಿ ಗಮನ ಹರಿಸುತ್ತಾರೆ. ಇಲ್ಲೊಂದು ಸಮಸ್ಯೆಯಿದೆ. ಕೇಂದ್ರ ಲೋಕಸೇವಾ ಆಯೋಗವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ಸಾಮಾನ್ಯ ವರ್ಗಗಳ ಅಭ್ಯರ್ಥಿಗಳ ವಿವರವಾದ ಮಾಹಿತಿಗಳನ್ನು ಸಂಗ್ರಹಿಸುತ್ತದೆ, ಆದರೆ, ಅದು ಮುಸ್ಲಿಮರಿಗಾಗಿ ಪ್ರತ್ಯೇಕ ಅಂಕಿಅಂಶಗಳನ್ನು ಹೊಂದಿಲ್ಲ.

ಹಾಗಾಗಿ, ಝೈದಿ ಅಭ್ಯರ್ಥಿಗಳ ಕಾಲೇಜುವಾರು ವಿಶ್ವವಿದ್ಯಾನಿಲಯ ಅಂಕಿಅಂಶಗಳನ್ನು ವಿಶ್ಲೇಷಿಸುವುದರತ್ತ ಗಮನ ಹರಿಸುತ್ತಾರೆ. ಅವರು ವಿಶ್ವವಿದ್ಯಾನಿಲಯಗಳ ಎರಡು ಪಟ್ಟಿಗಳನ್ನು ತಯಾರಿಸುತ್ತಾರೆ. ಮೊದಲ ಪಟ್ಟಿಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ, ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾನಿಲಯ ಮತ್ತು ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾನಿಲಯ. ಇವುಗಳನ್ನು ಮುಸ್ಲಿಂ ವಿದ್ಯಾರ್ಥಿಗಳ ಕೇಂದ್ರಗಳು ಎಂಬುದಾಗಿ ಪರಿಗಣಿಸಲಾಗಿದೆ.

ಎರಡನೆ ಪಟ್ಟಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯ, ಲಕ್ನೋ ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಮತ್ತು ಜೈಪುರದ ರಾಜಸ್ಥಾನ ವಿಶ್ವವಿದ್ಯಾನಿಲಯ. ಅವರು ಐದು ವರ್ಷಗಳ ಅಂಕಿಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿದಾಗ, ಮುಸ್ಲಿಂ ಪ್ರಾಬಲ್ಯದ ವಿಶ್ವವಿದ್ಯಾನಿಲಯಗಳ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣ (10.2 ಶೇ.). ಸಾಮಾನ್ಯ ವಿವಿಗಳ ಮುಸ್ಲಿಂ ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣ (4.3 ಶೇ.)ಕ್ಕಿಂತ ಹೆಚ್ಚು ಎಂಬ ಅಂಶವನ್ನು ಅವರು ಕಂಡುಕೊಂಡರು.
ಬಳಿಕ ಅವರು ಈ ವಿವಿಗಳಿಂದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆಯನ್ನು ವಿಶ್ಲೇ ಷಿಸಿ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಂಡರು. ನಾಲ್ಕು ಮುಸ್ಲಿಂ ಪ್ರಾಬಲ್ಯದ ಸಂಸ್ಥೆ ಗಳಿಂದ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ವಾರ್ಷಿಕ ಸರಾಸರಿ 25ಕ್ಕಿಂತ ಕಡಿಮೆ. ಎರಡನೆ ಪಟ್ಟಿಯ ವಿವಿಗಳಿಂದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ 444ಕ್ಕೂ ಅಧಿಕ.

ಹಾಗಾಗಿ ಅವರು ಈ ಕೆಳಗಿನ ತೀರ್ಮಾನಕ್ಕೆ ಬರುತ್ತಾರೆ: ‘‘ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾಗುವ ಸಾಧ್ಯತೆಗಿಂತಲೂ, ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಅದರಲ್ಲಿ ಪಾಲ್ಗೊಳ್ಳುವುದೇ ಈ ಸೇವೆಗಳಲ್ಲಿ ಮುಸ್ಲಿಮರ ಅಲ್ಪ ಪ್ರಾತಿನಿಧ್ಯಕ್ಕೆ ಪ್ರಮುಖ ಕಾರಣವಾಗಿದೆ’’. ಮುಸ್ಲಿಂ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರುವ ಇನ್ನೊಂದು ಅಂಶವನ್ನೂ ಝೈದಿ ಕಂಡುಕೊಂಡಿದ್ದಾರೆ: ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಹುಡುಗಿಯರು ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ, ಆದರೆ, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಉತ್ತೇಜಿಸಲಾಗುತ್ತಿಲ್ಲ.ಇಲಿಬೋನು


ರಘು ನಿಡುವಳ್ಳಿ  ಗೆದ್ದದ್ದು ನಾನೇ ಆದರೂ ಸೋತದ್ದು ಯಾರು?
ನಿರ್ಧರಿಸಬೇಕಾದ್ದು ನೀವು.

ಈ ಒಂದಂಕದ ನಾಟಕಕೆ ಪಾತ್ರಧಾರಿಗಳು ಇಬ್ಬರೆ
ಒಂದು ನಾನು, ಮತ್ತೊಂದು ಯಕಶ್ಚಿತ್ ಇಲಿ!
ಕ್ಷಮಿಸಿ, ಒಂದು ಭಯಾನಕ ಮೂಷಿಕ!!
ಆಕಾರ ಚಿಕ್ಕದೆ ಆದರೆ ಮಾಡಿದ ಅವಾಂತರ ದೊಡ್ಡದು
ಹಾಗಾಗಿ ಈ ಗುಣವಾಚಕ!

ಎಲ್ಲ ಶುರುವಾದ್ದದ್ದು ಎಂಟು ದಿನಗಳಹಿಂದೆ,
ಪಾಸ್‍ಪೋರ್ಟಿಗಾಗಿ ಎಸೆಸಲ್ಸಿ ಮಾರ್ಕ್ಸ್ ಕಾರ್ಡ್ ಹುಡುಕಲು ಹೊರಟಾಗ,
ಪೇರಿಸಿಟ್ಟಿದ ದಾಖಲಾತಿಗಳ ಅಡಿಯಿಂದ
ಚಂಗನೆ ಜಿಗಿದು ಹೋಗಿದ್ದ ಈ ಮಹಾಶಯ!
ಮಾರ್ಕುಗಳನ್ನ ಸ್ವಾಹ ಮಾಡಿ ಬರೀ ಕಾರ್ಡು ಉಳಿಸಿದ್ದ.
ಕಡತಗಳು ಅಸ್ತಿತ್ವ ಕಳೆದುಕೊಂಡ ತರಗೆಲೆಗಳಾಗಿದ್ದವು.
ಹಳೆಯ ಟ್ರಂಕು ಅಕ್ಷರಶಃ ಸುಲ್ತಾನರ ದಾಳಿಗೆ ಸಿಕ್ಕು ಮುಕ್ಕಾದ ಹಾಳು ಹಂಪೆಯಾಗಿತ್ತು.

ಇದರಿಂದಾದ ಎಡವಟ್ಟು,
ನಾನು ನಾನೇ ಎಂಬುದಕ್ಕೆ ಮಾಡಿಸಿದ ‘ಅಫಿಡವಿಟ್ಟು’
ಪತ್ರಗಳ ತಾಪತ್ರಯ ಎಲ್ಲವೂ ಕ್ಷಮಾರ್ಹ.
ಆದರೆ,
ದೇವಕಿಗೆ ಕೊಡಲು ಧೈರ್ಯ ಸಾಲದೆ
‘ಲವಲವಿಕೆ’ಯ ಹಾಳೆಗಳ ನಡುವೆ ಹುದುಗಿಸಿಟ್ಟಿದ್ದ ಪ್ರೇಮಪತ್ರ
ಮೊದಲ ಪ್ರೇಮದ ‘ನೆನಪಿನ ಶೇಷ ‘
ಅನಾಮತ್ತಾಗಿ ಅವಶೇಷವಾಗಿ ಕಣ್ಣೆದುರೆ ಚದುರಿ ಬಿದ್ದಿರುವಾಗ
ಎದೆಯಾಳದಿಂದ ಒತ್ತರಿಸಿಕೊಂಡು ಬಂದ ಆವೇಶ..
.......

ಯುದ್ದ ಘೋಷಣೆಯಾದ ದಿನದಿಂದಲೂ ನನ್ನದು ಎಡಬಿಡದ ಸಿದ್ದತೆ
ಮೊದಲಿಗೆ ಕರಾರಿನ ಮೇಲೆ ಕರೆತಂದ ಪಕ್ಕದ ಮನೆಯ ಬೆಕ್ಕು!
ಅದರದ್ದು ಹೆಚ್ಚು ಕಡಿಮೆ ಟಾಮೆಂಜರಿ ಕತೆ.
ಬೆನ್ನತ್ತಿ ಸೋತು ಹೈರಾಣಾಗಿ,
ಅರ್ದಲೀಟರ್ ಲೀಟರ್ ಹಾಲನ್ನ ಹೊಟ್ಟೆಗೆ ಸುರುವಿಕೊಂಡು
ಯುದ್ದವಿರಾಮ ಘೋಷಿಸಿ ನಿರುಮ್ಮಳ ಮಲಗಿತು.
ಮಿಕಮಿಕನೆ ನೋಡುತ್ತಿದ್ದ ‘ಮಿಕ’ದ ಕಣ್ಣಲ್ಲಿ
ನನ್ನಡೆಗೆ ಮತ್ತದೆ ಅಣಕ
ನಂತರದ್ದು ಬ್ರಹ್ಮಾಸ್ತ್ರ ‘ಪಾಷಣ’!
ಆದರೆ ಅದರ ಪಾಶಕ್ಕೂ ಸಿಗದೆ
ನನ್ನ ಕ್ಲೇಶ ಕೊನೆಯಾಗದೆ ಮೊರೆಹೋದದ್ದು
ಇಲಿಬೋನಿಗೆ!!
...

ಈಗ ಬೋನಿನೊಳಗೆ ಬೊಂಡದ ಆಮಿಷಕ್ಕೆ
ಬಲಿಯಾದ ನನ್ನ ವೈರಿ , ಆಚೆ ನಾನು.
ಇಬ್ಬರ ನಡುವೆ ಪ್ರಶ್ನೆಗಳ ಮುಖಾಮುಖಿ.
ನಿಜವಾಗಿಯೂ ಆ ಪ್ರೇಮಪತ್ರದಲ್ಲಿ ಪ್ರೇಮವಿತ್ತಾ?
ಬಹುಶಃ ಪ್ರೇಮದ ಘಾಟುಮುಗಿದು ನೆನಪಿನ ಕಮಟು ಮಾತ್ರವೇ ಉಳಿದಿತ್ತೇನೋ?
ತರ್ಕಿಸಬಲ್ಲ ಮನುಷ್ಯನನ್ನೇ ಹೀಗೆ ಬೋನಿಗೆ ಸಿಕ್ಕಿಸುವ ‘ಆಮಿಷ’ ಯಾವುದುಗೊತ್ತ?
ಬಂಧಿಯಾಗಿದ್ದರು ಬೊಂಡವ..ಮೆಲ್ಲುತ್ತಿದ್ದ ಇಲಿಯನ್ನ ಕಂಡಾಗ
ನನಗನ್ನಿಸಿದ್ದು ‘ಪ್ರೇಮ’ವೆಂಬ ಎರಡಕ್ಷರವೆ!!

ಫೆ 8 ಹಾಸನ : ದೇವಪ್ಪ ಹಾಸನ ಕಾದಂಬರಿ ಬಿಡುಗಡೆ


ಜ 31 ಬೆಂಗಳೂರು : ಡಾ ಎಚ್.ಎಸ್ ರಾಘವೇಂದ್ರರಾವ್ ಅವರ ಹೊಸ ಪುಸ್ತಕ ಬಿಡುಗಡೆ

ಡಾ  ಎಚ್.ಎಸ್ ರಾಘವೇಂದ್ರರಾವ್ ಅವರ ಹೊಸ ಪುಸ್ತಕದ ಬಿಡುಗಡೆ  31-01-2014 ರ ಸಂಜೆ 4.30 ಗೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ನಡೆಯಲಿದೆ. ಭಾಗವಹಿಸಿಜ 31 ಧಾರವಾಡ : ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Wednesday, January 29, 2014

ಹೊತ್ತು ಮುಳುಗುವ ಮುನ್ನ...
ಕೋ. ಚೆನ್ನಬಸಪ್ಪ

ಅಂದು ಬೆಳಗ್ಗೆ ಗಾಂಧೀಜಿ ವಾಯುವಿಹಾರಕ್ಕಾಗಿ ಹೊರಗೆ ಹೋಗಲಿಲ್ಲ. ಕೊಠಡಿಯಲ್ಲೇ ಅತ್ತಿಂದಿತ್ತ ಅಡ್ಡಾಡುತ್ತಿದ್ದರು. ಸಾಧಾರಣವಾಗಿ ಅವರ ಪಕ್ಕದಲ್ಲೇ ಇದ್ದು ಅವರೊಡನೆ ನಡೆಯುತ್ತಿದ್ದ ಮನು ಗಾಂಧಿ, ಅಂದು ಲವಂಗವನ್ನು ಕುಟ್ಟಿ ಪುಡಿ ಮಾಡುತ್ತಿದ್ದಳು. ಗಾಂಧೀಜಿಗೆ ಸ್ವಲ್ಪ ಕೆಮ್ಮಾಗಿತ್ತು. ಆ ಕೆಮ್ಮಿಗೆ ತಾಳೆ ಬೆಲ್ಲದ ಪಾನಕದಲ್ಲಿ ಲವಂಗದ ಪುಡಿ ಬೆರಸಿ ಕುಡಿಯುತ್ತಿದ್ದರು. ಆ ಪುಡಿ ಮುಗಿದು ಹೋಗಿತ್ತು. ಮತ್ತೆ ಆ ಪಾನಕಕ್ಕೆ ಬೆರಸಲು ಪುಡಿ ಅರೆಯುತ್ತಿದ್ದಳು. ಗಾಂಧೀಜಿ: ‘‘ಏನು ಮಾಡುತ್ತಿದ್ದೀ?’’ ಎಂದು ಕೇಳಿದರು. ‘‘ಪುಡಿ ಅರೆಯುತ್ತಿದ್ದೇನೆ. ಇಲ್ಲದಿದ್ದರೆ ರಾತ್ರಿ ಬೇಕೆಂದಾಗ ಏನೂ ಇರುವುದಿಲ್ಲ...’’ ಗಾಂಧೀಜಿ ಹೊತ್ತು ಮುಳುಗುವ ಮುಂಚೆ ಏನಾಗುವುದೋ ಯಾರು ಬಲ್ಲರು! ನಾನು ಬದುಕಿರುತ್ತೇನೋ ಇಲ್ಲವೋ ಯಾರಿಗೆ ಗೊತ್ತು? ಎಂದರು.

ತಮ್ಮ ಕೊಠಡಿಗೆ ಹೋಗುವಾಗ ಪ್ಯಾರೇಲಾಲರ ಕೊಠಡಿಯಲ್ಲಿ ಹಾದುಹೋಗುವಾಗ ಗಾಂಧೀಜಿ ಕಾಂಗ್ರೆಸ್ಸಿನ ಅಂಗರಚನೆಯ ಕರಡನ್ನು ಪ್ಯಾರೇಲಾಲರಿಗೆ ಕೊಟ್ಟು: ‘‘ನನ್ನ ಅಭಿಪ್ರಾಯಗಳಲ್ಲಿ ಏನಾದರೂ ಕೊರತೆಗಳಿದ್ದರೆ ಅದನ್ನು ತುಂಬು. ತುಂಬ ಒತ್ತಡದ ಸನ್ನಿವೇಶದಲ್ಲಿ ತಯಾರಿಸಿದ್ದೇನೆ.’’

ಹತ್ತುಗಂಟೆ ಹೊತ್ತಿನಲ್ಲಿ ತಾವು ಹೊಸದಾಗಿ ಕಲಿತಿದ್ದ ಬೆಂಗಾಲಿ ಭಾಷೆಯ ಬರಹ ಏನೋ ಓದುತ್ತಿದ್ದರು. ತರುವಾಯ ಲಂಡನ್‌ನ ‘ಟೈಮ್ಸ್’ ಪತ್ರಿಕೆಯಲ್ಲಿ ಬಂದಿದ್ದ ಒಂದು ಸುದ್ದಿ ನೆಹರೂ ಮತ್ತು ಪಟೇಲರ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಎಂಬ ಬಗ್ಗೆ ಪ್ಯಾರೇಲಾಲ್ ಓದಿ ಹೇಳಿದರು. ‘‘ಅದನ್ನು ಗಮನಿಸಿದ್ದೇನೆ. ಆ ಬಗ್ಗೆ ಪ್ರಾರ್ಥನಾ ಸಭೆಯೊಂದರಲ್ಲಿ ಆಗಲೇ ಪ್ರಸ್ತಾಪಿಸಿದ್ದೇನೆ’’ ಎಂದರು. ಪ್ಯಾರೇಲಾಲ್ ಅಲ್ಲಿಂದ ಹೊರಡುವುದರಲ್ಲಿದ್ದಾಗ ದೆಹಲಿಯ ಕೆಲವು ವೌಲಾನಾಗಳು ಗಾಂಧಿ ದರ್ಶನಕ್ಕೆ ಬಂದರು. 

‘‘ತಾವು ಇಲ್ಲಿಯೇ ಉಳಿಯಬೇಕೆಂದು ನಾವು ಬಯಸುವುದಿಲ್ಲ. ತಾವು ಎಲ್ಲಿದ್ದರೂ ನಮ್ಮ ಹಿತರಕ್ಷಣೆ ಮಾಡುತ್ತೀರಿ. ತಾವು ಹಿಂದಿರುಗಿ ಬರುವುದರ ಕಾಲಾವಧಿಯಲ್ಲಿ ನಿಮ್ಮ ಉಪವಾಸದ ಫಲ ಎಷ್ಟು ಪ್ರಗತಿಯಾಗಿದೆ ಎಂಬುದನ್ನು ನಾವು ಸಂಗ್ರಹಿಸುತ್ತೇವೆ’’ ಎಂದರು. ಗಾಂಧೀಜಿ: ‘‘ಹದಿನಾಲ್ಕನೇ ತಾರೀಖು ಇಲ್ಲಿರುವ ನಿರೀಕ್ಷೆ. ಆದರೆ ದೈವ ಇನ್ನೊಂದನ್ನು ಇಚ್ಛಿಸಿದರೆ, ಅದು ಬೇರೆ ಮಾತು.ನಾನು ನಾಡಿದ್ದಾದರೂ ಇಲ್ಲಿಂದ ಹೊರಡುತ್ತೇ ನೆಂಬುದು ನನಗೆ ನಿಶ್ಚಯವಿಲ್ಲ. ಅದೆಲ್ಲ ಭಗವಂತನ ಕೈಯಲ್ಲಿದೆ.’’

ಸಂಜೆ 4.30ರವರೆಗೆ ಸರ್ದಾರ ಪಟೇಲರೊಡನೆ ಮಾತನಾಡುತ್ತ ಕುಳಿತಿದ್ದರು. ಪ್ರಾರ್ಥನಾ ಸಭೆಗೆ ಹೊತ್ತಾಯಿತೆಂದು ಆಭಾ ಚಡಪಡಿಸುತ್ತಿದ್ದಳು. ಗಾಂಧೀಜಿಗೆ ಗಡಿಯಾರ ತೋರಿಸಿದಳು. ಸರ್ದಾರರು ಹೊರನಡೆದರು. ಗಾಂಧೀಜಿ ಪ್ರಾರ್ಥನಾ ಸಭೆಗೆ ನಡೆಯಲು ಎದ್ದರು. ಹೋಗುವಾಗ, ಕಾಥಿಯಾವಾಡದಿಂದ ಬಂದಿದ್ದವರು ತಮ್ಮ ದರ್ಶನಕ್ಕೆ ಕಾದಿದ್ದಾರೆ ಎಂದು ಹೇಳಿದಾಗ, ಗಾಂಧೀಜಿ: ‘‘ಪ್ರಾರ್ಥನೆ ಮುಗಿದ ನಂತರ ಬಂದು ಕಾಣಲು ಹೇಳಿ ಆಗ ನಾನು ಬದುಕಿದ್ದರೆ.’’
ಅವರು ಬದುಕಿ ಹಿಂದಿರುಗಲಿಲ್ಲ!

ಕೈ ಮುಗಿಯುತ್ತಾ ನಮಸ್ಕರಿಸುವಂತೆ ನಟಿಸುತ್ತಾ ಬಂದ ಕೊಲೆಗಾರ ‘ಢಮಾರ್ ಢಮಾರ್ ಢಮಾರ್’ ಗಾಂಧಿ ಎದೆಗೆ ಗುಂಡಿಕ್ಕಿದ.
‘‘ಹೇ ರಾಮ್...ರಾ..ಮ್..ರಾ..ಮ್..’’ಉಸಿರು ನಿಂತಿತು.

ಇತ್ತೀಚೆಗೆ ಸಂಘಪರಿವಾರದವರೊಂದು ಸುದ್ದಿ ಹುಟ್ಟಿಸಿದರು: ಎದೆಗೆ ಗುಂಡಿಕ್ಕಿದ್ದಾಗ, ಕೊನೆ ಉಸಿರು ಎಳೆಯುವಾಗ, ಗಾಂಧಿ ‘ಹೇ ರಾಮ್’ ಎನ್ನಲೇಇಲ್ಲ! ಗಾಂಧೀಜಿ ಬದುಕಿದ್ದಾಗಲೂ ದ್ವೇಷಿಸಿದರು. ಅವರನ್ನು ಕೊಂದ ಮೇಲೂ ದ್ವೇಷಿಸುತ್ತಿದ್ದಾರೆ. ಅವರೆಷ್ಟೆ ದ್ವೇಷಿಸಿದರೂ ಆ ಜ್ಯೋತಿ ನಂದುವುದಿಲ್ಲ. ಕೋಮುಸೌಹಾರ್ದ ಆ ಸಂದೇಶ ಸಾಯುವುದಿಲ್ಲ. ಇತ್ತೀಚೆಗೆ ಯುಕ್ತ ರಾಷ್ಟ್ರ ಸಂಸ್ಥೆ (್ಠ್ಞಟ)ಪ್ರತಿವರ್ಷ ಗಾಂಧೀ ಜಯಂತಿ ಅಕ್ಟೋಬರ್ 2ರಂದು ಅಹಿಂಸಾ ದಿನವನ್ನಾಗಿ ಆಚರಿಸಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಿದೆ. ಗಾಂಧೀ ಜ್ಯೋತಿಯನ್ನು ನಂದಿಸಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಅದು ಇನ್ನೂ ಉಜ್ವಲವಾಗುತ್ತಿದೆ. ‘ಈ ದೇಶವನ್ನು ಬೆಳಗಿಸಿದ ಆ ಬೆಳಕು ಸಾಮಾನ್ಯವಾದ ಬೆಳಕಲ್ಲ. ಸಾವಿರಾರು ವರ್ಷಗಳವರೆಗೆ ಆ ಬೆಳಕು ಕಾಣಿಸುತ್ತಲೇ ಇರುತ್ತದೆ.. ಆ ಬೆಳಕು ನಿತ್ಯ ಸತ್ಯಗಳನ್ನು ಪ್ರತಿನಿಧಿಸುತ್ತದೆ’ ಎಂದು ಅಂದು ನೆಹರು ಹೇಳಿದ ಮಾತು ಇಂದು ದಿಟವಾಗಿದೆ.

ಯುಗಪುರುಷನ ಯುಗಳ

ಬೋಳುವಾರು ಮಹಮದ್ ಕುಂಞಿ


ಶುಕ್ರವಾರದ ಸಂಜೆಯ ಹೊತ್ತು. ಸುಮಾರು ಸಾವಿರದಷ್ಟು ಮಂದಿ ಬಾಪೂಜಿಯ ದರ್ಶನಕ್ಕಾಗಿ ಬಿರ್ಲಾ ಭವನದಲ್ಲಿ ಕಾದು ನಿಂತಿದ್ದರು. ಸಂಜೆಯ ಪ್ರಾರ್ಥನಾ ಸಭೆಗೆ ಬಾಪೂಜಿ ಹೊರಟರು. ತಮ್ಮ ಕೊಠಡಿಯಿಂದ ಹೊರಗೆ ಬಂದರು. ತಮ್ಮ ಮೊಮ್ಮಕ್ಕಳಾದ ಅಭಾ ಮತ್ತು ಮನು ಹೆಗಲುಗಳ ಮೇಲೆ ಕೈಯಿರಿಸಿಕೊಂಡು ನಡೆದರು. ಸಭೆ ನಡೆಯಲಿರುವ ಅಂಗಳದ ಮೆಟ್ಟಲು ಏರಿದ ಬಾಪೂಜಿ, ಸಭಿಕರ ವಂದನೆ ಗಳಿಗೆ ಕೈ ಮುಗಿದು ಪ್ರತಿವಂದಿಸುತ್ತಾ ಹೆಜ್ಜೆ ಹಾಕಿದರು. ಗುಂಪಿನ ನಡುವಿನಿಂದ ಎದುರು ಬಂದ ಯುವಕ ನಾಥೂರಾಮ ಗೋಡ್ಸೆಯ ನಮಸ್ಕಾರವನ್ನೂ ಬಾಪೂಜಿ ಎದೆತುಂಬಿ ಸ್ವೀಕರಿಸಿ ದರು. ಬಳಿಕ, ಅವನ ಪಿಸ್ತೂಲಿನಿಂದ ಸಿಡಿದು ಬದ ಮೂರೂ ಗುಂಡುಗಳನ್ನು ತಮ್ಮ ಎದೆಯೊಳಗೆ ತುಂಬಿಕೊಂಡರು; ಭೂಮಿಗೆ ಬಿದ್ದರು. ಬಾಪೂಜಿಗೆ ಕಣ್ಣು ಕತ್ತಲೆ ಬಂದಂತಾ ಯಿತು. ತನ್ನನ್ನು ಯಾರೋ ಮಡಿಲಲ್ಲಿ ಮಲಗಿಸಿ ತಲೆಯನ್ನು ಪ್ರೀತಿಯಿಂದ ನೇವರಿಸುತ್ತಿದ್ದಾರೆ ಎಂದು ಭಾಸವಾಯಿತು. ಕಣ್ಣು ತೆರೆಯಲು ಯತ್ನಿಸಿದರು. ಸಾಧ್ಯವಾಗಲಿಲ್ಲ.

‘‘ಈ ದಿನಕ್ಕಾಗಿಯೇ ಕಾಯುತ್ತಿದ್ದೀಯಲ್ಲವೇ ಮೋಹನಾ?’’ ಕಣ್ಣುರೆಪ್ಪೆಗಳ ಸಂದಿಯಿಂದ ನುಗ್ಗಿ ಒಳಬಂದ ಮೆಹತಾಬ ಪ್ರಶ್ನಿಸಿದ್ದ!
ಬಾಪೂಜಿಯ ಮುಖದಲ್ಲಿ ಮಂದಹಾಸ ಮೂಡಿತು; ತುಟಿಗಳು ಅದುರಿದವು. ತಮ್ಮ ಬಾಲ್ಯದ ಗೆಳೆಯನನ್ನು ಎವೆಯೊಳಗೆಯೇ ದಿಟ್ಟಿಸಿ ನೋಡಿದರು. ತೆಳುವಾದ ಕೋಲಿಗೆ ಬಟ್ಟೆ ಹೊದಿಸಿದಂತೆ ಕಾಣಿಸುತ್ತಿದ್ದ ಎಂಭತ್ತರ ಮುದಿಯನ ಮುಖದಲ್ಲಿ ವ್ಯಂಗ್ಯದ ಗೆರೆಗಳಿದ್ದಿರಲಿಲ್ಲ. ಒಣಗಿ ಹೋದ ಕೆನ್ನೆಗಳಲ್ಲಿ ಹುದುಗಿ ಹೋಗಿದ್ದ ನೀಲಿ ಕಣ್ಣುಗಳಲ್ಲಿ ಕಪಟ ಕಾಣಿಸಲಿಲ್ಲ.

ಬಾಪೂಜಿಯ ಎದೆಯೊಳಗೆ ಮೆಹತಾಬ ಮಾತನಾಡು ತ್ತಿದ್ದ: ‘ಮುಂದೊಂದು ದಿನ ಚರಿತ್ರೆ ಓದುವವರು, ದೇಶ ವಿಭಜನೆಯಲ್ಲಿ ನಿನ್ನನ್ನೂ ಪಾಲುದಾರನೆಂದು ತಿಳಿದಾರೆಂಬ ಭಯದಿಂದಲ್ಲವೇ ನೀನು, ಆಗಸ್ಟ್ 15ರ ಸಮಾರಂಭವನ್ನು ತಪ್ಪಿಸಿಕೊಂಡು ಕಲಕತ್ತಾಕ್ಕೆ ಹೋಗಿ ಕುಳಿತದ್ದೂ? ನಿಜ ಹೇಳು ಮೋಹನಾ.., ನಿನಗಿಷ್ಟವಾಗದ ಪ್ರತಿ ಯೊಂದನ್ನೂ ನಿನ್ನ ಉಪವಾಸ ಸತ್ಯಾಗ್ರಹದಿಂದ ಸೋಲಿಸುತ್ತಿದ್ದ ನೀನು, ದೇಶ ವಿಭಜನೆ ಯಂತಹ ವಿಪತ್ತಿನ ವಿರೋಧವಾಗಿ ಯಾಕೆ ಉಪವಾಸ ಸತ್ಯಾಗ್ರಹ ಹೂಡಲಿಲ್ಲಾ? ಕಾಂಗ್ರೆಸ್ ಕಾರ್ಯಕಾರೀ ಸಭೆಯಲ್ಲಿ ದೇಶ ವಿಭಜನೆಯ ಪ್ರಶ್ನೆ ಬಂದಾಗ ನೀನೇಕೆ ವೌನ ವಾಗಿದ್ದೇ? ಅಥವಾ, ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಕಿರುತ್ತಿದ್ದರೂ ನಿನ್ನ ಜನರು ನಿನ್ನನ್ನು ಕಡೆಗಣಿಸುತ್ತಾರೆಂಬ ಆತಂಕವಿತ್ತೇ? ಇದ್ದಿರಲೇ ಬೇಕು. ನಿನ್ನ ಅಮೂಲ್ಯವಾದ ಉಪವಾಸವೆಂಬ ಆಯುಧವನ್ನು ನಿನ್ನ ಶಿಷ್ಯರೇ ನಿಷ್ಪ್ರಯೋಜ ಕವೆಂದು ಸಾರುವುದು ನಿನಗೆ ಇಷ್ಟವಿದ್ದಿರಲಿಲ್ಲ; ಅಲ್ಲವೇ ಮೋಹನಾ?’ ಬಾಪೂಜಿಯ ಎದೆಗೆ ಮೊದಲನೆಯ ಗುಂಡು ನಾಟಿತು.

‘ಕಸ್ತೂರಿ ನಿನ್ನ ಹೆಂಡತಿಯಾಗಿ ಬಂದಾಗ ಹದಿಮೂರು ವರ್ಷದ ಪುಟ್ಟ ಹುಡುಗಿ. ಸುಮಾರು ಅರುವತ್ತು ವರ್ಷಗಳ ಕಾಲ ಅವಳು ನಿನ್ನ ನೆರಳಲ್ಲೇ ಬದುಕಿದಳು. ಸಪ್ತಪದಿ ತುಳಿಯುವಾಗ ನೀನು ಅವಳಿಗೆ ನೀಡಿದ್ದ ವಾಗ್ದಾನಗಳಲ್ಲಿ ಯಾವುದನ್ನು ಪೂರೈಸಿರುವೆ ಹೇಳು? ಗಂಡನ ಆದರ್ಶ ಕಾಪಾಡಲು, ಆಶ್ರಮವಾಸಿಗಳ ಕಕ್ಕಸು ತೊಳೆಯಲೂ ಹಿಂಜರಿಯದಿದ್ದ ಹೆಂಡತಿ ಅವಳು. ಆದರೆ. ಗಂಡನ ಸಂಪಾದನೆಯಲ್ಲಿ ಅವಳು ಮುಂದೆ ಬರಲಿರುವ ತನ್ನ ಸೊಸೆಗಾಗಿ ಒಂದಿಷ್ಟು ಬಂಗಾರ ಕೂಡಿಡಲು ಆಸೆಪಟ್ಟದ್ದು, ದೊಡ್ಡ ತಪ್ಪಾಗಿ ಕಾಣಿಸಿತ್ತಲ್ಲವೇ ನಿನಗೆ?’ ಎರಡನೆಯ ಗುಂಡು ಬಾಪೂಜಿಯ ಎದೆಗೆ ಇರಿಯಿತು.

‘‘ದಕ್ಷಿಣ ಆಫ್ರಿಕಾದಲ್ಲಿರುವಾಗ, ನಿನ್ನ ಮಕ್ಕಳಿಗೆ ಅಲ್ಲಿಯ ಬಿಳಿಯರ ಶಾಲೆಗಳಲ್ಲಿ ಆಧುನಿಕ ಶಿಕ್ಷಣ ಕೊಡಿಸಬಲ್ಲ ಶಕ್ತಿ ಮತ್ತು ಅವಕಾಶ ಎರಡೂ ನಿನಗೆ ಇದ್ದವು. ಆದರೆ ನಿನಗೆ, ಮಕ್ಕಳ ಶಿಕ್ಷಣಕ್ಕಿಂತ ನಿನ್ನ ಆದರ್ಶಗಳೇ ಮುಖ್ಯವಾಗಿಬಿಟ್ಟಿತು. ನಿನ್ನ ಮೊಂಡುತನದಿಂದಾಗಿ ಆ ಮಕ್ಕಳು ತಮ್ಮ ಶಿಕ್ಷಣದ ಹಕ್ಕನ್ನೇ ಕಳೆದುಕೊಂಡರು. ಮಕ್ಕಳಿಗೆ ಹೆತ್ತವರು ನೀಡ ಬೇಕಾದದ್ದು ಪ್ರೀತಿಯನ್ನು ಮಾತ್ರ; ಹೆತ್ತವರು ನಂಬಿದ ವಿಚಾರವನ್ನಲ್ಲ. ಮಕ್ಕಳನ್ನು ಹಿರಿಯರಂತೆ ವರ್ತಿಸಲು ಒತ್ತಾಯಿಸಿ ಜೀವನವನ್ನು ಹಿಮ್ಮುಖವಾಗಿ ಹರಿಸಬಾರ ದೆಂಬುದು ನಿನಗೆ ಗೊತ್ತಿತ್ತು. ಆದರೂ ಅಸಹಾಯಕರಾಗಿದ್ದ ಮಕ್ಕಳ ಮೇಲೆ ನಿನ್ನ ಆದರ್ಶವನ್ನು ಪ್ರಯೋಗಿಸಿದ್ದು ತಪ್ಪಲ್ಲವೇ?’’ ಮೂರನೆಯ ಗುಂಡು ಬಾಪೂಜಿಯ ಎದೆಯಾಳಕ್ಕೆ ಇಳಿಯಿತು.

ಮೆಹತಾಬ ಮಾತು ಮುಂದುವರಿಸಿದ್ದ, ‘ಇವುಗಳು ನನ್ನ ಪ್ರಶ್ನೆಗಳಲ್ಲ ಮೋಹನಾ; ನೀನು ನಿನ್ನನ್ನೇ ಕೇಳಿಕೊಳ್ಳುತ್ತಿರುವ ಪ್ರಶ್ನಿಗಳು. ಹೋಗಲಿ ಬಿಡು, ನಿನ್ನ ನೋವನ್ನು ಮರೆಸಲು ನಾನೊಂದು ಕತೆ ಹೇಳುತ್ತೇನೆ, ಕೇಳು’
‘ನಿನ್ನನ್ನು ರಾಷ್ಟ್ರಪಿತನೆಂದೇ ಕರೆದಿದ್ದ ಸುಭಾಸ್‌ಚಂದ್ರ ಬೋಸರಿಗೆ ನಿನ್ನ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ, ಬ್ರಿಟಿಷರ ಬಗೆಗಿನ ನಿನ್ನ ನಿಲುವು ಅವರಿಗೆ ಹಿಡಿಸಿದ್ದಿರಲಿಲ್ಲ ವೆಂಬುದೂ ನಿನಗೆ ಗೊತ್ತು. ಸುಭಾಸ್‌ಚಂದ್ರ ಬೋಸ ರೊಂದಿಗೆ ನಾನು ಜೈಲಿನಲ್ಲಿದ್ದಾಗ, ಒಂದು ದಿನ ಸಂಜೆ ನಿನ್ನ ಬಗ್ಗೆ ತಮಾಷೆಯಾಗಿ ಮಾತಾಡಿಕೊಳ್ಳುತ್ತಿದ್ದೆವು. ನೀನು ದನದ ಹಾಲು ಕುಡಿಯುವುದನ್ನು ತ್ಯಜಿಸಿ ಆಡಿನ ಹಾಲು ಕುಡಿಯುವುದರ ಹಿಂದಿದ್ದ ತಾತ್ವಿಕ ನಿಲುವುಗಳ ಬಗ್ಗೆ ಚರ್ಚೆಯಾಗುತ್ತಿತ್ತು. ದನ ಮತ್ತು ಆಡುಗಳ ನಡುವೆ ಏನು ಭೇದವಿದೆ? ಎರಡೂ ಮಾತು ಬಾರದ ಮೂಕ ಪ್ರಾಣಿಗಳು. ದನದ ಹಾಲಿನ ಬಗೆಗಿನ ನಿನ್ನ ನಿಲುವಿಗೆ, ನಿನ್ನ ಮೊಂಡುತನವೊಂದೇ ಕಾರಣವೆಂದು ನಾವೆಲ್ಲ ತೀರ್ಮಾನಿಸಿದ್ದೆವು. ಆ ದಿನದ ಚರ್ಚೆಯಲ್ಲಿ, ನಿನ್ನನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ, ದಕ್ಷಿಣದ ಮೈಸೂರು ಪ್ರಾಂತ್ಯದಿಂದ ಬಂದಿದ್ದ ಐ.ಎನ್.ಎ. ಯೋಧನೊಬ್ಬ ಹೇಳಿದ್ದ ಕತೆಯಿದು; ಕೇಳು:’

‘ಕಲ್ಲುಗಳನ್ನು ಕಡೆದು ಅದಕ್ಕೆ ಜೀವ ತುಂಬಬಲ್ಲ ಜಕಣಾಚಾರಿಯೆಂಬ ಶಿಲ್ಪಿಯಿದ್ದ. ಅವನೊಂದು ದಿನ ಶಿಲೆಯನ್ನು ಕಡೆದು ಸುಂದರವಾದ ದೇವರ ಮೂರ್ತಿ ಯೊಂದನ್ನು ನಿರ್ಮಿಸಿದ. ಅದು ಎಷ್ಟು ಸುಂದರವಾದ ಮೂರ್ತಿಯಾಗಿಬಿಟ್ಟಿತೆಂದರೆ, ಅದನ್ನು ನಿರ್ಮಿಸಿದ ಜಕಣಾಚಾರಿಯೂ ಅಚ್ಚರಿಯಿಂದ, ಹಗಲು ರಾತ್ರಿ ಅದನ್ನೇ ನೋಡುತ್ತಾ ಕುಳಿತುಬಿಟ್ಟ. ಜಕಣಾಚಾರಿಯ ಅಪರೂಪದ ವರ್ತನೆಯಿಂದ ಕುತೂಹಲಗೊಂಡ ಅವನ ಶಿಷ್ಯನೊಬ್ಬ, ಇದರ ಕಾರಣವನ್ನು ಪ್ರಶ್ನಿಸಿದಾಗ ಜಕಣಾಚಾರಿ ಹೇಳಿದ, ‘‘ಈ ಮೂರ್ತಿ ಪರಿಪೂರ್ಣವಾಗಿದೆ’’. ಜಕಣಾಚಾರಿ ಹಾಗೆ ಹೇಳಿದ್ದೇ ತಡ; ಆ ಮೂರ್ತಿಯು ನೆಲದಿಂದ ಕಳಚಿಕೊಂಡು ಬಾನಿನತ್ತ ಏರತೊಡಗಿತು. ಶಿಷ್ಯನಿಗೆ ತನ್ನ ಗುರುವಿನ ಮಾತಿನಿಂದಾದ ಪ್ರಮಾದ ಅರ್ಥವಾಗಿಬಿಟ್ಟಿತ್ತು.’

‘ಪರಿಪೂರ್ಣವಾದ ಯಾವುದೂ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಆದ್ದರಿಂದಲೇ, ಮೂರ್ತಿಯನ್ನು ಜಕಣಾಚಾರಿ ‘ಪರಿಪೂರ್ಣ’’ವೆಂದು ಕರೆದ ನಂತರ, ಅದು ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಅದು ಮೇಲಕ್ಕೆ ಏರಲೇಬೇಕು; ಏರತೊಡಗಿತು. ಜಾಣನಾದ ಆ ಶಿಷ್ಯ ತಡ ಮಾಡಲಿಲ್ಲ. ಓಡಿ ಹೋಗಿ ಕೊಡಲಿಯಿಂದ ಮೂರ್ತಿಯ ಕಾಲುಗಳ ಮೇಲೆ ಬರೆಯೊಂದನ್ನು ಎಳೆದುಬಿಟ್ಟ. ಮೂರ್ತಿ ‘ಭಿನ್ನವಾಗಿ’ ಬಿಟ್ಟಿತ್ತು. ಮೂರ್ತಿ ಮರಳಿ ಕೆಳಗಿಳಿದು ನೆಲದ ಮೇಲೆ ನಿಂತಿತು.
‘ಅರ್ಥವಾಯಿತೆ ಮೋಹನಾ?’ಮೆಹತಾಬ ವಿಷಾದದಿಂದ ಪ್ರಶ್ನಿಸಿದ್ದ;
ಅರೆ ಕ್ಷಣ ವೌನದ ನಂತರ ಬಾಪೂಜಿಯ ಕಿವಿಯಲ್ಲಿ ಗುಟ್ಟಾಗಿ ಹೇಳಿದ, ‘ನೀನೀಗ ಭಿನ್ನಗೊಂಡ ಮೂರ್ತಿಯಲ್ಲ ಮೋಹನಾ; ಪರಿಪೂರ್ಣ ಯುಗಪುರುಷ.’
ಬಾಪೂಜಿಯ ಉಸಿರು ನಿಂತಿತು.
ಯುಗಪುರುಷನ ಮೇಲೆ ಯಾರೂ ಗೆರೆ ಎಳೆಯದಿರಲಿ.
ಆಮೆನ್.

 
‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ಯಿಂದ

ಹೇ ರಾಮ್...!

ಕೆ. ಎಸ್. ನಾರಾಯಣಸ್ವಾಮಿಹೇ ರಾಮ್...!

ಉಪವಾಸ ಯಜ್ಞ
 
ದೆಹಲಿಯಲ್ಲಿ ಹಿಂದೂ ಮುಸ್ಲಿಮ್ ಗಲಭೆಗಳು ವಿಪರೀತ ಉಲ್ಬಣಗೊಂಡವು. ರಾಷ್ಟ್ರೀಯ ಸ್ವಾತಂತ್ರ ಸಮಯದಲ್ಲಿ ದೇಶಭಕ್ತಿಯಿಂದ ಹೋರಾಡಿದ್ದ ಮುಸ್ಲಿಮ್ ನಾಯಕರ ಮನೆಗಳ ಮೇಲೆ ಗೂಂಡಾಗಳ ಹಲ್ಲೆ ನಡೆದಿತ್ತು. ಕೆಲವು ಗೌರವಾನ್ವಿತ ರಾಷ್ಟ್ರೀಯ ಮುಸ್ಲಿಮ್ ನಾಯಕರು ಗಾಂಧೀಜಿ ಬಳಿಗೆ ಬಂದು ತಮಗಾಗುತ್ತಿದ್ದ ತೀವ್ರ ಆಂತರಿಕ ನೋವನ್ನು ದುಃಖದಿಂದ ತೋಡಿಕೊಂಡರು ‘‘ದೆಹಲಿಯಲ್ಲಿ ಜೀವಿಸುವುದೇ ಕಷ್ಟವಾಗುತ್ತಿದೆ. ಸುತ್ತಲೂ ಕತ್ತಲೆ ಕವಿಯುತ್ತಿದೆ. ಭೀಕರ ಮತೀಯ ಸಂಘರ್ಷದ ಘಟನೆಗಳಲ್ಲಿ ನಾವು ನಿಸ್ಸಹಾಯಕರಾ ಗುತ್ತಿದ್ದೇವೆ. ನಮ್ಮ ರಾಷ್ಟ್ರ ಭಕ್ತಿಯನ್ನೇ ಶಂಕಿಸಿ ಹೊರದೂಡಲು ಪ್ರಯತ್ನಗಳು ನಡೆದಿವೆ. ನೀವೊಬ್ಬರೇ ನಮಗೆ ಸಾಂತ್ವನ ನೀಡುತ್ತಿದ್ದೀರಿ. ಇಂಗ್ಲೆಂಡಿಗಾದರೂ ಹೋಗಿ ನೆಲೆಸಲು ನೀವು ಅವಕಾಶ ಮಾಡಿಕೊಡಲು ಪ್ರಯತ್ನಿಸಿ. ಪಾಕಿಸ್ತಾನದಲ್ಲೂ ನಮ್ಮಂಥ ರಾಷ್ಟ್ರೀಯ ಮುಸ್ಲಿಮರನ್ನು ಸಹಿಸಲಾರರು. ಗಫಾರ್ ಖಾನರಂಥವರನ್ನೇ ಅವರು ಗೌರವಿಸಲಿಲ್ಲ’’ ಎಂದು ಮನಬಿಚ್ಚಿ ಮನವಿ ಮಾಡಿದರು. ಗಾಂಧೀಜಿ ಅವರ ಅಳಲನ್ನು ಗಮನಿಸಿ ನೊಂದುಕೊಂಡರು. ವೌನವಾಗಿ ಚಿಂತಿಸತೊಡಗಿದರು.

ಜನವರಿ 12 ಸೋಮವಾರ ಅವರ ವೌನದ ದಿನ. ಆ ದಿನ ಪ್ರಾರ್ಥನಾ ಸಭೆಗೆ ಲಿಖಿತ ಸಂದೇಶವೊಂದನ್ನು ಡಾ.ಸುಶೀಲಾ ನಯ್ಯಾರ್ ಅವರು ಬರೆದುಕೊಳ್ಳುವಂತೆ ಹೇಳಿದರು. ಬರೆಯುತ್ತ ಬರೆಯುತ್ತ ಆಕೆ ತೀವ್ರವಾಗಿ ಆಘಾತಗೊಂಡು ಅಣ್ಣ ಪ್ಯಾರಿಲಾಲರ ಬಳಿಗೆ ಓಡಿಬಂದರು. ‘‘ಗಾಂಧೀಜಿ ನಾಳಿನಿಂದ ಅನಿರ್ದಿಷ್ಟ ಕಾಲದ ಉಪವಾಸ ಘೋಷಿಸಿದ್ದಾರೆ’’ ಎಂದು ಕಂಬನಿ ತುಂಬಿ ನುಡಿದರು.

ಅವರು ಬರೆದು ಕಳುಹಿಸಿದ್ದ ಪ್ರವಚನ ಹೀಗಿತ್ತು :-
‘‘ನನ್ನ ನಿಸ್ಸಹಾಯಕತೆ ಹೃದಯವನ್ನು ಕೊರೆಯುತ್ತಿದೆ. ಈ ಉಪವಾಸದ ಸಂಕಲ್ಪ ಕೈಗೊಂಡೊಡನೆ ನಿರಾಳವೆನಿಸುತ್ತಿದೆ. ಕಳೆದ ಮೂರು ದಿನಗಳಿಂದ ಚಿಂತಿಸುತ್ತಿದ್ದಾಗ ಈ ನಿರ್ಣಯ ಹಠಾತ್ತನೆ ಆಂತರ್ಯದಲ್ಲಿ ಮಿಂಚಿತು. ಇದು ಭಗವಂತನ ಚಿತ್ತ ಎನಿಸಿತು. ಈಗ ಹರ್ಷ ಉಕ್ಕುತ್ತಿದೆ. ತನ್ನ ಜೀವವನ್ನೇ ಆಹುತಿಯಾಗಿ ನೀಡುವ ಶುದ್ಧ ಹೃದಯದ ಮಾನವನಿಗೆ ಅದ ಕ್ಕಿಂತ ಅಮೂಲ್ಯವಾದ ಕೊಡುಗೆ ಉಂಟೆ? ಈ ಹೆಜ್ಜೆಯನ್ನು ಸಮರ್ಥಿಸಬಲ್ಲ ನಿರ್ಮಲತೆ ನನ್ನಲ್ಲಿ ತುಂಬಿಕೊಳ್ಳಲಿ ಎಂದು ನಿರಂತರ ಪ್ರಾರ್ಥನೆಯಲ್ಲಿರುತ್ತೇನೆ. ನೀವೂ ನನ್ನೊಡನೆ ಪ್ರಾರ್ಥಿಸಿ.’’

 ಉಪವಾಸದ ಸುದ್ದಿ ದೆಹಲಿಯನ್ನು ಸಿಡಿಲು ಬಡಿದಂತೆ ಬಡಿಯಿತು. ಎಲ್ಲೆಲ್ಲೂ ನೀರವ ಆತ್ಮ ನಿರೀಕ್ಷೆ ಹರಡಿತು. ಎಲ್ಲ ಘರ್ಷಣೆಗಳೂ ಕ್ಷಣಕಾಲ ಸ್ತಬ್ಧವಾದವು. ಮೂರು ದಿನಗಳು ಕಳೆದವು. ಖಿನ್ನರಾದ ಜವಹರಲಾಲರು ಬಾಪೂವನ್ನು ಕಾಣಲು ಬಂದರು. ಅವರ ಕೃಶ ದೇಹದ ಸಂಕಟವನ್ನು ನೋಡಲಾರದೆ ಹೊರ ಬಂದರು. ಹೊರಗೆ ಕೆಲವರು ಕಪ್ಪು ಬಾವುಟ ಹಿಡಿದು ಕೂಗಿದರು. ‘‘ಈ ಗಾಂಧಿ ಸಾಯಲಿ ಬಿಡಿ’’ ನೆಹರೂ ಆವೇಶ ದಿಂದ ಕೆಂಪಾಗಿ ಆ ಕಡೆ ನುಗ್ಗಿ ‘‘ಯಾರು ಕೂಗಿದವರು? ಮುಂದೆ ಬನ್ನಿ! ಮೊದಲು ನನ್ನನ್ನು ಕೊಲ್ಲಿ! ನಂತರ ಗಾಂಧಿ!’’ ಎಂದು ಘರ್ಜಿಸಿದರು. ಆ ಸಣ್ಣ ಗುಂಪು ದಿಕ್ಕೆಟ್ಟು ಓಡಿ ಹೋಯಿತು. ಮಹಾತ್ಮನ ಅದಮ್ಯ ಚೇತನದ ಅಪ್ರತಿಹತ ಸಂಕಲ್ಪ ಶಕ್ತಿ ಯನ್ನು ಕಂಡು ವೌಂಟ್‌ಬೇಟನ್ನರು ‘‘ಈ ವಿರಾಟ್ ಶಕ್ತಿ ಅದ್ಭುತವಾದುದು. ಅವರ ಯಶಸ್ಸಿನ ಕೀರ್ತಿ ಆಶ್ಚರ್ಯಕರ ಪರಿಣಾಮ ಮಾಡೀತು’’ಎಂದು ನುಡಿದರು. ‘‘ಮುಸ್ಲಿಮರ ಪಕ್ಷಪಾತಿ ಈ ಗಾಂಧಿ’’ಎಂದು ದೂರಿದವರೂ ಇದ್ದರು. ಭಾರತೀಯ ಮುಸ್ಲಿಮರು ಎಚ್ಚೆತ್ತು ಸೌಹಾರ್ದ ಕುದುರಿಸ ಬೇಕು ಎಂದುಕೊಂಡರು. ವಾತಾವರಣವೇ ಬದಲಾಗ ತೊಡಗಿ ಹಿಂದೂ ಮುಖಂಡರೂ ಸಿಖ್ ಜನಾಂಗದವರೂ, ನಿರಾಶ್ರಿತರಾಗಿ ಆಕ್ರೋಶಗೊಂಡಿದ್ದವರೂ ಕ್ರಮೇಣ ಪ್ರಶಾಂತರಾಗಿ ಯೋಚಿಸತೊಡಗಿದರು.

ಎಲ್ಲೆಲ್ಲೂ ನೀರವತೆ ತುಂಬು ತಿತ್ತು. ಉಪವಾಸದ ಐದನೇ ದಿನ ಗಾಂಧೀಜಿಯ ಸ್ಥಿತಿ ಚಿಂತಾ ಜನಕವಾಗಿದೆಯೆಂದು ವೈದ್ಯರ ತಂಡ ಪ್ರಕಟಿಸಿತು. ಅಪಾ ಯದ ಅಂಚಿಗೆ ಬರುತಿದ್ದಾರೆ ಎಂದರು. ವೌಂಟ್ ಬೇಟನ್ನರು ಪತ್ನಿಯೊಡನೆ ಧಾವಿಸಿ ಬಂದು ವೌನವಾಗಿ ಕುಳಿತರು. ಬಿರ್ಲಾ ಭವನಕ್ಕೆ ಪ್ರಮುಖ ನಾಯಕರು ಬಂದರು. ರಾಜಕೀಯ ವಾತಾವರಣ ಹಠಾತ್ತನೆ ಬದಲಾಗಹತ್ತಿತು. ಸರ್ವಧರ್ಮೀಯ ಗುಂಪುಗಳು ಒಟ್ಟು ಗೂಡಿ ಸೌಹಾರ್ದದ ಮೆರವಣಿಗೆಗಳು ದೆಹಲಿಯ ವಿವಿಧ ಭಾಗಗಳಿಂದ ಬಿರ್ಲಾ ಭವನದ ಕಡೆಗೆ ನಡೆದವು. ಕಲ್ಕತ್ತೆಯ ಮಹಾಪವಾಡ ಇಲ್ಲಿಯೂ ಗೋಚರಿಸ ತೊಡಗಿತ್ತು. ಪ್ರಮುಖ ಕಾರ್ಯ ಕರ್ತರು, ಪ್ರತಿಷ್ಟಿತ ಮುಸ್ಲಿಮ್ ಮುಖಂಡರು ಮತ್ತು ಮಂತ್ರಿ ಮಹೋದಯರೂ ಗಾಂಧೀಜಿಯ ಕ್ಷೀಣ ವಾಣಿಯನ್ನು ಆಲಿಸುತ್ತಿದ್ದರು.

‘ಮುಸ್ಲಿಮರ ದೇಶಭಕ್ತಿ ಪ್ರಜ್ವಲಿತವಾಗಿ ಬೆಳಗುವಂತಾಗಲಿ. ಅವರು ಸಂಶಯಕ್ಕೆ ಬಲಿಯಾಗದಿರಲಿ. ತೆರೆದ ಹೃದಯಗಳು ಭವಿಷ್ಯದಲ್ಲಿ ಭರವಸೆಯಿಟ್ಟು ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್ ಪಂಥೀಯರೆಲ್ಲ ಸ್ವತಂತ್ರ ಭಾರತದಲ್ಲಿ ಪ್ರೇಮದಿಂದ ಒಟ್ಟಿಗೆ ಬಾಳಲು ಸಂಕಲ್ಪಿಸಿ ನಡೆದುಕೊಳ್ಳಿ’ ಎಂದವರು ನಿಧಾನವಾಗಿ ಕೇಳಿಕೊಂಡರು. ಪ್ರಮುಖರೆಲ್ಲ ಗಂಭೀರವಾಗಿ ಚರ್ಚಿಸಿದರು. ಬಾಪುವಿನ ಸನ್ನಿಧಿಯಲ್ಲಿ ಒಂದು ಪ್ರತಿಜ್ಞಾ ಘೋಷಣೆಯನ್ನು ಸಿದ್ಧ ಮಾಡಿ ಸರ್ವಾನುಮತದಿಂದ ಅಂಗೀಕರಿಸಲೊಪ್ಪಿದರು.
ಡಾ. ರಾಜೇಂದ್ರಪ್ರಸಾದರ ಅಧ್ಯಕ್ಷತೆಯಲ್ಲಿ 130 ಪ್ರಮು ಖರ ಒಂದು ಶಾಂತಿ ಸಮಿತಿ ಸಭೆ ಸೇರಿತು. 1948ರ ಜನವರಿ 18ರ ಬೆಳಗ್ಗೆ ಸಮಿತಿಯ ಸರ್ವಸದಸ್ಯರೂ ಹಾಜರಿ ದ್ದು ಶಾಂತಿ ಸಮಿತಿಯ ಮನವಿಗೆ ಸಹಿ ಹಾಕಲು ಸಮ್ಮತಿಸಿ ದ್ದರು. ಅದರಲ್ಲಿ ‘‘ಹಿಂದಿನ ದಿನಗಳಂತೆಯೇ ದೆಹಲಿಯಲ್ಲಿ ಹಿಂದೂ, ಮುಸ್ಲಿಮ್, ಸಿಖ್ ಮತ್ತು ಇತರ ಎಲ್ಲ ಧರ್ಮಾನು ಯಾಯಿಗಳು ಪೂರ್ಣಮೈತ್ರಿಯಿಂದ ಸೋದರ ಸೋದರಿ ಯರಂತೆಯೇ ಬಾಳಿಬದುಕಲು ಹೃದಯಪೂರ್ಣವಾಗಿ ಇಚ್ಛಿಸಿ ಸಂಕಲ್ಪಿಸಿರುತ್ತೇವೆ. ಮುಸ್ಲಿಮ್ ಬಾಂಧವರ ಪ್ರಾಣ, ಆಸ್ತಿಪಾಸ್ತಿ ಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ರಕ್ಷಿಸಲು ಕಂಕಣ ಬದ್ಧರಾಗಿದ್ದೇವೆಂಬ ಪ್ರತಿಜ್ಞೆ ಕೈಗೊಳ್ಳುತ್ತೇವೆ. ಈಚೆಗೆ ದೆಹಲಿ ಯಲ್ಲಿ ನಡೆದಿರುವ ದುರಂತ ಘಟನೆಗಳು ಮತ್ತೆ ಮರುಕಳಿಸ ದಿರುವಂತೆ ಸಕಲ ಪ್ರಯತ್ನಗಳನ್ನೂ ಕೈಗೊಳ್ಳಲು ವಚನಬದ್ಧರಾ ಗುತ್ತೇವೆ...’

ದೆಹಲಿಯ ಖ್ವಾಜಾ ಖುದು ಬುದ್ದೀನರ ಸಮಾಧಿ ಸ್ಥಳದಲ್ಲಿ ನಾಳೆ ನಡೆಯುವ ಉರುಸ್, ಇತರ ಎಲ್ಲ ಮುಸ್ಲಿಮ್ ಪವಿತ್ರ ದಿನಗಳು ನಿರಾತಂಕವಾಗಿ ನಡೆಯಲು ಅನುವು ಮಾಡಿಕೊಡು ತ್ತೇವೆಂದೂ ಈಗ ಇತರರು ಆಕ್ರಮಿಸಿರುವ ಮಸೀದಿಗಳನ್ನು ಮುಸ್ಲಿಮ್ ಬಾಂಧವರಿಗೆ ವಹಿಸಿಕೊಡುವುದಾಗಿಯೂ ಗಾಂಧೀಜಿಗೆ ನಾವು ವಚನ ನೀಡುತ್ತೇವೆ. ದೆಹಲಿ ಬಿಟ್ಟು ಹೋಗಿರುವವರು ಹಿಂತಿರುಗಿ ಬಂದರೆ ಅವರ ಆಸ್ತಿಪಾಸ್ತಿ ಗಳೂ ವ್ಯವಹಾರಗಳೂ ಹಿಂದಿನಂತೆಯೇ ಅವರಿಗೆ ಸೇರುವಂತೆ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡುತ್ತೇವೆ...


ಮಹಾತ್ಮಾಜಿ ಅವರು ನಮ್ಮ ಮಾತಿನಲ್ಲಿ ವಿಶ್ವಾಸವಿಟ್ಟು ತಮ್ಮ ಉಪವಾಸ ಮುಕ್ತಾಯಗೊಳಿಸಿ ಎಂದಿನಂತೆ ರಾಷ್ಟ್ರವನ್ನು ಋಜು ಪಥದಲ್ಲಿ ನಡೆಸಬೇಕೆಂದು ವಿನಯಪೂರ್ವಕ ಭಿನ್ನವಿಸುತ್ತೇವೆ..’’ ಎಂದು ಸ್ಪಷ್ಟ ಬರವಣಿಗೆಯಲ್ಲಿ ತಿಳಿಸಲಾಗಿತ್ತು. ಮನವಿಗೆ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜೇಂದ್ರಪ್ರಸಾದ್, ಪ್ರಧಾನಿ ನೆಹರೂ, ವೌಲಾನಾ ಆಝಾದ್, ಡಾ. ಝಕೀರ್ ಹುಸೈನ್, ಮುಸ್ಲಿಮ್ ಸಂಸ್ಥೆಗಳ ಪರವಾಗಿ ಹಿಫ್‌ಜೂರ್ ರಹಮಾನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರವಾಗಿ ಗೋಸ್ವಾಮಿ ಗಣೇಶ್‌ದತ್, ಹಿಂದೂ ಮಹಾಸಭೆಯ ಬಸಂತ್‌ಲಾಲ್ ಮತ್ತು ನಾರಾಯಣದಾಸ್, ಸಿಖ್‌ಸಂಘ ಸಂಸ್ಥೆಗಳ ನಾಲ್ಕು ಪ್ರತಿನಿಧಿಗಳು ಸಹಿ ಮಾಡಿದ್ದರು. ಪಾಕಿಸ್ತಾನದ ಹೈಕಮೀಷನರ್ ಜಾಹಿದ್ ಹುಸೈನ್, ದೆಹಲಿಯ ಸರಕಾರದ ಪರವಾಗಿ ಕಮಿಷನರ್ ರಂಧಾವ ಸಹಿ ಹಾಕಿದ್ದರು.

ಅತ್ಯಂತ ನಿಶ್ಯಕ್ತರಾಗಿದ್ದರೂ ಗಾಂಧೀಜಿ ಈ ಮನವಿಗೆ ಓಗೊಟ್ಟು ‘‘ನನ್ನ ಷರತ್ತುಗಳಿಗೆಲ್ಲ ನೀವು ಸಮ್ಮತಿಸಿರುವುದು ಸಂತೋಷ. ಆದರೆ ಈ ಎಲ್ಲ ಸಂಕಲ್ಪಗಳು ಕೇವಲ ದೆಹಲಿ ನಗರಕ್ಕಷ್ಟೇ ಅನ್ವಯವಾಗುವುದೆಂದು ಭಾವಿಸಬಾರದು. ದೇಶಕ್ಕೆಲ್ಲ ಇದೇ ನಿರ್ಣಯ ಜಾರಿಯಾಗಬೇಕು. ಇಲ್ಲದಿದ್ದರೆ ನನ್ನ ಶ್ರಮವೆಲ್ಲ ವ್ಯರ್ಥವಾದೀತು. ದೆಹಲಿ ತನ್ನ ಮನೆಯನ್ನು ಸರಿಪಡಿಸಿಕೊಂಡರೆ ಎಲ್ಲ ಕಡೆಯೂ ಅದರ ಪ್ರಭಾವ ಇದ್ದೇ ಇರುತ್ತದೆ. ಆ ಕಡೆಯೂ ನಿಮ್ಮೆಲ್ಲರ ಗಮನ ಹರಿಯಲಿ’’ಎಂದರು.
ದೆಹಲಿಯ ಸಾಮಾನ್ಯ ನಾಗರಿಕರು ಅದ್ಭುತವಾಗಿ ಸ್ಪಂದಿಸಿದರು. ಎರಡು ಲಕ್ಷ ಜನರ ಸಹಿ ಸಂಗ್ರಹಿಸಿ ಗಾಂಧೀಜಿಗೆ ಒಪ್ಪಿಸಿದರು. ಮುಸ್ಲಿಮ್ ಮತ್ತು ಹಿಂದೂ ಮಹಿಳೆಯರು ನಿರ್ಭಯವಾಗಿ ಓಡಾಡಿ ಜನತೆಯನ್ನು ಸಮಾಧಾನಗೊಳಿಸುತ್ತಿದ್ದ ದೃಶ್ಯ ಎಲ್ಲ ಮೊಹಲ್ಲಗಳಲ್ಲೂ ಕಾಣಿಸಿತು.

ಆಮ್ ಆದ್ಮಿಯ ಮುಂದಿರುವ ಸವಾಲುಗಳು
ಇಂಗ್ಲೀಷ್ ಮೂಲ: ನಿಸ್ಸಿಮ್ ಮನ್ನತ್ತುಕ್ಕರೀನ್ 

ಅನುವಾದ : ಬಿ.ಶ್ರೀಪಾದ ಭಟ್
ಕೆಲವು ವರ್ಷಗಳ ಹಿಂದೆ ಪಾರದರ್ಶಕ ಗಾಜಿನ ಷೋಕೇಶಿನಲ್ಲಿ ಪೇರಿಸಿಟ್ಟ ಸುಮಾರು 80,000 ಪಾದರಕ್ಷೆಗಳ ಕಡೆಗೆ ಬೆರಳು ತೋರಿಸುತ್ತಾ ನನ್ನ ನಾಲ್ಕು ವರ್ಷದ ಮಗಳು ‘‘ಈ ಚಿಕ್ಕ ಪಾದರಕ್ಷೆಗಳಿಗೆ ಇಲ್ಲಿ ಏನು ಕೆಲಸ?’’ ಎಂದು ಕೇಳಿದಳು. ಇವುಗಳಲ್ಲಿ 8000 ಪಾದರಕ್ಷೆಗಳು ಮಕ್ಕಳ ಶೂಗಳಾಗಿದ್ದವು. ಅಂದು ನಾವು ಪೋಲೆಂಡಿನ ಸರಕಾರಿ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದಂತಹ ಸಂದರ್ಭ. ಈಗಿನ ಮ್ಯೂಸಿಯಂ ಸ್ಥಳವು ಒಂದು ಕಾಲದಲ್ಲಿ ಜರ್ಮನಿಯ ನಾಜಿಗಳ ಘಾತುಕ ಯಾತನಾ ಶಿಬಿರವಾಗಿತ್ತು. ನಾನು ನನ್ನ ಮಗಳ ಪ್ರಶ್ನೆಗೆ ಉತ್ತರಿಸದೆ ದೂರದಲ್ಲಿ ದೃಷ್ಟಿ ಹಾಯಿಸಿದೆ.

ನಮ್ಮಂತಹ ಸಾಮಾನ್ಯ ಜನರು ಅರ್ಥಾತ್ ‘ಆಮ್ ಆದ್ಮಿ’ ಈ ಘಾತುಕ ಯಾತನಾ ಶಿಬಿರಗಳ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನುವ ಸಾರ್ವಕಾಲಿಕ ಸತ್ಯವನ್ನು ನಾನು ನನ್ನ ನಾಲ್ಕು ವರ್ಷದ ಮಗಳಿಗೆ ಹೇಳಲಿಲ್ಲ. ಈ ‘ಆಮ್ ಆದ್ಮಿ’ ಗಳೇ ಸಾವಿರಾರು ಇತರ ಲಕ್ಷಾಂತರ ಸಾಮಾನ್ಯ ಜನರನ್ನು ಈ ಗ್ಯಾಸ್ ಛೇಂಬರ್‌ಗೆ ತಳ್ಳಿದ್ದರು. ಈ ಆಮ್ ಆದ್ಮಿಗಳೇ ಹಿಟ್ಲರ್‌ನನ್ನು ಚುನಾಯಿಸಿ ಆತನಿಗೆ ಆಳುವ ಅಧಿಕಾರ ನೀಡಿದ್ದರು. 

ರ್ವಾಂಡಾದ ಸಾಮಾನ್ಯ ಜನರೇ ತಮ್ಮದೇ ದೇಶದ ಲಕ್ಷಾಂತರ ಸಾಮಾನ್ಯ ಜನರನ್ನು ಹತ್ಯೆಗೈದಿದ್ದರು. ಈ ಸಾಮಾನ್ಯ ಜನರೇ ನರೋಡ ಪಾಟಿಯಾದಲ್ಲಿ ಗುಂಪುಗೂಡಿ ತಮ್ಮ ನೆರೆಹೊರೆಯ ಸಾಮಾನ್ಯ ಜನರ ಮೇಲೆ ಅತ್ಯಾಚಾರ ನಡೆಸಿದ್ದರು, ಅವರ ಮನೆಗಳನ್ನು ಲೂಟಿ ಮಾಡಿ, ಸುಟ್ಟು ಹಾಕಿದ್ದರು, ತಮ್ಮ ನೆರೆಹೊರೆಯವರ ಹತ್ಯೆಗೈದಿದ್ದರು. ‘ಆಮ್ ಆದ್ಮಿ’ ಮತ್ತೆ ಉದಯಿಸಿದ್ದಾನೆ. ನಾವು ಈ ಬೆಳವಣಿಗೆಯನ್ನು ಸ್ವಾಗತಿಸಲೇಬೇಕು. ಆದರೆ ಆಮ್ ಆದ್ಮಿ ಅಂದರೆ ಏನು ಅರ್ಥ? 27 ಮಹಡಿಗಳ ವೈಭವೋಪೇತ ಮ್ಯಾನ್ಷನ್ ಅನ್ನು ಸುತ್ತುವರಿದ ಸಾವಿರಾರು ಸ್ಲಂಗಳಲ್ಲಿ ವಾಸಿಸುತ್ತಿರುವ ಸಾಮಾನ್ಯರು ಈ ಆಮ್ ಆದ್ಮಿಯ ವರ್ತುಲದ ಒಳಗಿದ್ದಾರೆಯೇ?

ಈ ಆಮ್ ಅಥವಾ ಸಾಮಾನ್ಯ ಪದದ ವಿಶ್ಲೇಷಣೆ ನಮ್ಮಲ್ಲಿ ಸಂದಿಗ್ಧತೆಯನ್ನು ಹುಟ್ಟು ಹಾಕುತ್ತದೆ. ಯಾವ ಬಗೆಯ ಸಾಮಾನ್ಯತೆ ಅಥವಾ ಜೀವನ ಮಟ್ಟ ಈ ಸಾಮಾನ್ಯತೆಯಿಂದ ಹೊರ ಗಿಡುತ್ತದೆ? ಈ ಆರ್ಥಿಕ ವಿಶ್ಲೇಷಣೆಯ ಹೊರ ತಾಗಿಯೂ ಈ ಸಾಮಾನ್ಯತೆಯನ್ನು ನಿರ್ಧರಿಸಲು ಬಳಸಬಹುದಾದ ನೈತಿಕ ಮತ್ತು ನ್ಯಾಯವಂತಿಕೆಯ ಮಾನದಂಡಗಳಾವುವು? ಏಕೆಂದರೆ ಸಾಮಾನ್ಯ ಜನರು ಇತರೇ ಆಮ್ ಆದ್ಮಿಗೆ ಏನನ್ನಾದರೂ ಮಾಡಲು ಸಾಮರ್ಥ್ಯವಿರುವವರೆಂದು ನಾವಾಗಲೇ ಗಮನಿಸಿದ್ದೇವೆ.

authoritarian  authoritarian ನಾವು ಕೇವಲ ಆಮ್ ಆದ್ಮಿ ಟೋಪಿ ಧರಿಸಿ, ‘ಮೈ ಹೂಂ ಆಮ್ ಆದ್ಮಿ’ ಮಂತ್ರ ಜಪಿಸುತ್ತ ಇದು ಆರಂಭ ಮಾತ್ರ ಎಂದು ಮೇಲಿನ ಪ್ರಶ್ನೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಲ್ಲಿನ ಈ ಸಾಮಾನ್ಯ ಜನರು ಕೇವಲ ಒಂದು ಸಂಕೇತವಲ್ಲ. ವಿವಿಧ ಜಾತಿಗಳು, ವರ್ಗಗಳು, ಜನಾಂಗೀಯ ಭಿನ್ನತೆಯಂತಹ ಸಂಕೀರ್ಣತೆಯನ್ನು ಒಳಗೊಳ್ಳದೆ ಏಕರೂಪಿಯಾಗಿ ಶೂನ್ಯದಲ್ಲಿ ಈ ಆಮ್ ಆದ್ಮಿ ಇರಲು ಸಾಧ್ಯವೇ ಇಲ್ಲ. 

ಮೇಲಿನ ವಿಪರ್ಯಾಸಗಳನ್ನು, ಸಂಧಿಗ್ಧತೆಗಳನ್ನು, ಭಿನ್ನತೆಗಳನ್ನು ಗುರುತಿಸದೆ, ಮಾನ್ಯ ಮಾಡದೆ, ಪ್ರಜಾಪ್ರಭುತ್ವದ ಮಾದರಿಗಳನ್ನು ಅನುಸರಿಸದೇ ಹೋದರೆ ಈ ಪ್ರಜಾಪ್ರಭುತ್ವವೇ ಟೊಳ್ಳಾಗುತ್ತದೆ. ಈ ಟೊಳ್ಳುಗೊಂಡಂತಹ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಸರಕಾರವೆಂದರೆ ಒಬ್ಬ ವ್ಯಕ್ತಿ ಅನೇಕರ ಮೇಲೆ ಅಧಿಕಾರ ಚಲಾಯಿಸುವುದೆಂದೇ ಅರ್ಥ. ಈ ಜನತೆ ಒಕ್ಕೂಟದಲ್ಲಿ ಒಂದಾಗುವು ದೆಂದರೆ ಈ ಒಗ್ಗಟ್ಟು ಸ್ವರೂಪ ಪಡೆದುಕೊಳ್ಳುವುದೇ ಇಲ್ಲಿನ ಬಲು ದೊಡ್ಡ ವ್ಯಂಗ. ಈ ಸರ್ವಾಧಿಕಾರದ ರೂಪದಲ್ಲಿ ಸಾಮಾನ್ಯ ಜನರ ಮೇಳೆ ದಬ್ಬಾಳಿಕೆಯನ್ನು ನಡೆಸುವ ಸಾಮರ್ಥ್ಯ ಪಡೆದುಕೊಂಡಿರುತ್ತದೆ.

ಈ ಜನ ಸಾಮಾನ್ಯರ ಉತ್ಕರ್ಷವನ್ನು ಸಂಭ್ರ ಮಿಸುವುದರ ಮೂಲಕ ಈ ಜನಸಾಮಾನ್ಯರನ್ನು ಜನಪ್ರಿಯತೆಯೊಂದಿಗೆ ಸಮೀಕರಿಸುವ ಅಪಾ ಯಕ್ಕೆ ತಳ್ಳಲ್ಪಡುತ್ತೇವೆ. ಪ್ರಜಾಪ್ರಭುತ್ವವೆಂದರೆ ಕೇವಲ ದೂರವಾಣಿ ಲೈನ್‌ಗಳನ್ನು ಉದ್ಘಾಟಿಸು ವುದು ಮಾತ್ರವಲ್ಲ, ಜನ ಸಾಮಾನ್ಯರನ್ನು ನಿನ್ನ ಅಭಿಪ್ರಾಯವನ್ನು ತಿಳಿಸಲು ವೋಟ್ ಮಾಡಿ ಎಂದು ಕೇಳುವುದು ಮಾತ್ರವಲ್ಲ.
ಈ ಮಾದರಿಯ ಜನಪ್ರಿಯತೆಯ ಅಭಿಪ್ರಾಯವನ್ನೇ ನಾವು ಅಳತೆಗೋಲಾಗಿ ಪರಿಗಣಿಸಿದಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರದರ್ಶಿತವಾಗುವ ‘ಬಿಗ್ ಬಾಸ್’ ಕಾರ್ಯಕ್ರಮಕ್ಕೂ ಇದೇ ಬಗೆಯ ಮಾನ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಈ ‘ಬಿಗ್ ಬಾಸ್’ನ ಜನಪ್ರಿಯತೆ ಸಹ ಜನ ಸಾಮಾನ್ಯರ ವೋಟ್‌ನ ಮೇಲೆ ಅವಲಂಬಿತ ವಾಗಿದೆ. ಇದರ ವೋಟ್‌ನ ಶೇಕಡಾವಾರು ಪ್ರಮಾಣ ಸಾರ್ವತ್ರಿಕ ಚುನಾವಣೆಗಿಂತಲೂ ಅಧಿಕವಿತ್ತೇ ಎನ್ನುವುದರ ಬಗೆಗೂ ಚರ್ಚೆಯಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕೇವಲ ಜ್ಞಾನಯುಕ್ತ ಗುಂಪು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ನ್ಯಾಯವಂತ ಸಮುದಾಯವೂ ಹೌದು. ಹಾಗಾಗಿಯೇ ಇಲ್ಲಿ ನಾವು ಯಾವ ಮಾದರಿಯ ಆಮ್ ಆದ್ಮಿ ಆಗಿರಬೇಕೆಂಬುದೇ ಪ್ರಮುಖವಾಗಿ ನಿರ್ಧರಿಸಲ್ಪಡಬೇಕು.

ಸಾಮಾಜಿಕ, ರಾಜಕೀಯ ಹೋರಾಟಗಳು ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳ ಸಮುದಾಯ ಗಳ, ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಯನ್ನು ಪ್ರಾತಿನಿಧಿಸಿದಾಗ ಮಾತ್ರ (ಅದು ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ಆಗಿರಲಿ) ಅದರ ಚಳವಳಿ ತನ್ನ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ. ಇದನ್ನು ಒಳಗೊಳ್ಳದೇ ಹೋದರೆ ಆ ಚಳವಳಿ ತಾನು ಪ್ರಾತಿನಿಧಿಸುವ ಸಾಮಾನ್ಯತೆ ಮತ್ತು ಸರಳತೆ ಕೇವಲ ನಿರ್ವಿಕಾರವಾಗಿರುತ್ತದೆ. ಇದು ನಿರ್ವಾತದಲ್ಲಿ ಜರಗುತ್ತಿರುತ್ತದೆ.

Zapatistas Zapatistasಮೆಕ್ಸಿಕೋದಲ್ಲಿ ಮೂಲ ಜನಾಂಗವಾದ ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದಿಟ್ಟ ನಾಯಕ ಮಾರ್ಕೋಸ್ ನನ್ನು ಅಲ್ಲಿನ ಪ್ರಭುತ್ವವು ಆತನನ್ನು ಗೇ ಎಂದು ಆರೋಪಿಸಿ ಕಳಂಕಗೊಳಿಸಲು ಯತ್ನಿಸಿತು. ಆಗ ಮಾರ್ಕೋಸ್ ಉತ್ತರಿಸಿದ್ದು ಹೀಗೆ: ‘‘ಹೌದು, ಮಾರ್ಕೋಸ್ ಸಾನ್ ಫ್ರಾನ್ಸಿಸ್ಕೋದಲ್ಲಿ ಗೇ ಅನ್ನುವುದು ನಿಜ, ಹಾಗೆಯೇ ದಕ್ಷಿಣ ಅಮೆರಿಕದಲ್ಲಿ ಮಾರ್ಕೋಸ್ ಕಪ್ಪುವರ್ಣೀಯ, ಯುರೋಪಿನಲ್ಲಿ ಮಾರ್ಕೋಸ್ ಏಷ್ಯಾದವನು, ಸ್ಪೇನ್‌ನಲ್ಲಿ ಅರಾಜಕತಾವಾದಿ, ಇಸ್ರೇಲ್‌ನಲ್ಲಿ ಮಾರ್ಕೋಸ್ ಫೆಲೆಸ್ತೀನಿಯನ್, ಜರ್ಮನಿ ಯಲ್ಲಿ ಮಾರ್ಕೋಸ್ ಯಹೂದಿ, ಪೋಲಂಡ್ ನಲ್ಲಿ ಜಿಪ್ಸಿ, ಬೋಸ್ನಿಯಾದಲ್ಲಿ ಪೆಸಿಫಿಸ್ಟ್, ಈ ಮಾರ್ಕೋಸ್ ಮೆಟ್ರೋ ನಗರಗಳಲ್ಲಿ ರಾತ್ರಿ 10 ಘಂಟೆಗೆ ಏಕಾಂಗಿಯಾಗಿ ಸಂಚರಿಸುವ ಮಹಿಳೆ, ಈ ಮಾರ್ಕೋಸ್ ಜಮೀನಿಲ್ಲದ ರೈತ, ಸ್ಲಂನ ಸದಸ್ಯ, ನಿರುದ್ಯೋಗಿ, ಅತೃಪ್ತ ವಿದ್ಯಾರ್ಥಿ ಮತ್ತು ಬೆಟ್ಟಗುಡ್ಡಗಳಲ್ಲಿ .’’
ಹಾಗಿದ್ದಲ್ಲಿ ನಮ್ಮ ‘ಆಮ್ ಆದ್ಮಿ’ ಮಾರ್ಕೋಸ್‌ನಂತೆ ‘ಇನ್ನು ಸಾಕು ಮಾಡಿ ಎಂದು ಪ್ರತಿರೋಧಿಸುವ ಅಲ್ಪಸಂಖ್ಯಾತರಾಗಬಲ್ಲರೇ?’ ನಮ್ಮ ‘ಆಮ್ ಆದ್ಮಿ’ ತಮ್ಮೆಲ್ಲ ಶಕ್ತಿಯನ್ನು ಬಳಸಿ ಮಾತನಾಡಬಲ್ಲ ಅಲ್ಪಸಂಖ್ಯಾತರು ಮತ್ತು ಶಾಂತವಾಗಿ, ಮೌನವಾಗಿ ಆಲಿಸುವ ಬಹುಸಂಖ್ಯಾತರಾಗಬಲ್ಲರೇ? ನಮ್ಮ ‘ಆಮ್ ಆದ್ಮಿ’ ಖೈರ್ಲಾಂಜಿಯಲ್ಲಿ ದಲಿತರಾಗಬಲ್ಲರೇ? ಬಸ್ತರ್‌ನಲ್ಲಿ ಆದಿವಾಸಿಗಳಾಗಬಲ್ಲರೇ? ಮಣಿಪುರದಲ್ಲಿ ಮನೋರಮಾ?

ಆಮ್ ಆದ್ಮಿ ಈ ಕ್ಷಣದ ಅಗತ್ಯಗಳಿಗೆ ಮಾತ್ರ ಸ್ಪಂದಿಸುತ್ತಾ ಕಾಲಹರಣ ಮಾಡುವರೇ ಅಥವಾ ತಮ್ಮನ್ನು ಮೀರಿದ ಜಗತ್ತೊಂದು ಇದೆ ಎನ್ನುವ ಸಾಮಾನ್ಯ ಜ್ಞಾನದ ಪ್ರಾಪ್ತಿಗಾಗಿ ಪ್ರಯತ್ನಿಸು ವರೇ? ದೇಶಾಭಿಮಾನವನ್ನು ಮೀರಿದ ಮಾನವೀಯತೆಯ ಆವರಣದ ಕಡೆಗೆ ಮುಖ ತಿರುಗಿಸುವರೇ? ಈ ಎಲ್ಲಾ ಪ್ರಶ್ನೆಗಳಿಗೆ, ಅವುಗಳ ಪ್ರಸ್ತುತೆಯ ಕುರಿತಾಗಿ ಮಾನ್ಯತೆ, ಅಂಗೀಕಾರಗಳು ಇಲ್ಲದೇ ಹೋದರೆ, ಈ ಪ್ರಶ್ನೆಗಳಿಗೆ ಕನಿಷ್ಠ ಉತ್ತರಿಸುವ ಪ್ರಯತ್ನವನ್ನೂ ಮಾಡದೇ ಹೋದಲ್ಲಿ ಈ ಆಮ್ ಆದ್ಮಿಯಲ್ಲಿ ಆಮ್ ಅನ್ನುವಂತಹದ್ದೇನು ಇಲ್ಲವೆಂದೇ ಅರ್ಥ. ಕನಿಷ್ಠ 27 ಮ್ಯಾನ್ಷನ್ ಕಟ್ಟಡದಲ್ಲಿ ವಾಸಿಸುವ ಜನತೆ ಮೇಲಿನ ಅರ್ಥದಲ್ಲಿ ಆಮ್ ಆದ್ಮಿ ಆಗಲು ಬಯಸಿದರೆ ಅದು ಕುಟಿಲತೆ ಎಂದು ಅರ್ಥೈಸಬಾರದು. ಅದನ್ನು ಸದೃಢವಾದ ಐಡಿಯಾಲಜಿ ಎಂದೇ ಪರಿಗಣಿತವಾಗುತ್ತದೆ.

ಬಾರ್ಬರಿಸಂ ಮತ್ತು ಪ್ರಾದೇಶಿಕ ಸಂಸ್ಕೃತಿಯ ನಡುವೆ ಸಿಲುಕಿಕೊಂಡ ಸಾಮಾನ್ಯ ಜನತೆಯೇ ಬಾಸ್ಟಿಲ್‌ನಲ್ಲಿ ರಾಜ ದರ್ಬಾರನ್ನು ಕೆಳಗಿಳಿಸಿತು, ಹೈಟಿಯಲ್ಲಿ ಗುಲಾಮಿ ಸಂಸ್ಕೃತಿಯ ವಿರುದ್ಧ ದಂಗೆಯೆದ್ದಿತು. ದ್ವಾರಪಾಲಕರಾಗಲು, ಕ್ಲರ್ಕ್‌ಗಳಾಗಲು, ಗಾರ್ಡ್‌ಗಳಾಗಲು, ನರೋಡಾ ಪಟಿಯಾದ, ರ್ವಾಂಡಾದ ಭವಿಷ್ಯದ ಮ್ಯಾನೆಜರ್‌ಗಳಾಗಲು ನಿರಾಕರಿಸುವಂತಹ ‘ಆಮ್ ಆದ್ಮಿ’ಗಳನ್ನು ಶೋಧಿಸೋಣ. ನಮ್ಮ ‘ಆಮ್ ಆದ್ಮಿ’ಗಳನ್ನು ನಾವೇ ಕಟ್ಟೋಣ.

ಫೆ 2 ಗದಗ : ಚೇತನ ಸೊಲಗಿ ಅವರ ಕವನ ಸಂಕಲನ ಬಿಡುಗಡೆ


ಜ 30 ಉಡುಪಿ : ಗಾಂಧಿ ಸ್ಮೃತಿ 2014 ಮತ್ತು ಮೋಹನದಾಸ ನಾಟಕಫೆ 1 ಕುಂದಾಪೂರ : ಗಾಂಧಿ ಸ್ಮೃತಿ ಮತ್ತು ಪುಸ್ತಕ ಬಿಡುಗಡೆ


Tuesday, January 28, 2014

ನಾಮಸ್ಮರಣೆ
ಪಂಜಾಬಿ ಮೂಲ: ಪಾಶ್
ಕನ್ನಡ ಅನುವಾದ: ಸಂವರ್ತ 'ಸಾಹಿಲ್'
 

ಭಾರತ 
ಹೆಮ್ಮೆ ಮತ್ತು ಗರ್ವ ತೊಟ್ಟ 
ಈ ಹೆಸರಿನ ನಾಮಸ್ಮರಣೆ ಮಾಡಿದರೆ ಸಾಕು
ಮತ್ತಿನ್ನೇನು ಬೇಕಿಲ್ಲ.

ಈ ಹೆಸರಿನ ಅರ್ಥ ಇರುವುದು
ಬಯಲಲ್ಲಿ ಮರದ ನೆರಳನ್ನು ಅಳೆಯುತ್ತ
ಸಮಯ ತಿಳಿದುಕೊಳ್ಳುವ 
ಮಕ್ಕಳ ನಡುವೆ.
ಆ ಮಕ್ಕಳಿಗೆ 
ಹಸಿವೆಯ ಹೊರತು ಮತ್ತಿನ್ಯಾವ ಸಮಸ್ಯೆಯೂ ಇಲ್ಲ.
ಹಸಿದಾಗ ಅವರು
ತಿನ್ನಬಲ್ಲರು ತಮ್ಮ ರಕ್ತ ಮಾಂಸಗಳನ್ನೇ.
ಬದುಕು ಅವರಿಗೆ ಒಂದು ಆಚಾರ
ಸಾವಿನ ಅರ್ಥ- ವಿಮುಕ್ತಿ.
ದೇಶದ ಐಕ್ಯತೆ ಕುರಿತು ಯಾರಾದರು ನುಡಿದರೆ
ಅವರ ಮುಂಡಾಸನ್ನು ಗಾಳಿಯಲ್ಲಿ ಹಾರಿಸಿ
ಹೇಳಬಯಸುತ್ತೇನೆ ನಾನು
ಭಾರತದ ಅರ್ಥ
ಯಾವುದೋ ದುಷ್ಯಂತನಿಗೆ ಸಂಬಂಧಿಸಿಲ್ಲ
ಅದು ನೆಲೆಸಿರುವುದು ಹೊಲ ತೋಟಗಳಲ್ಲಿ 

ಬತ್ತ ಬೆಳೆಯುವಲ್ಲಿ
ದರೋಡೆ ಅಗೋಚರವೂ ಮೌನವೂ ಆಗಿರುವಲ್ಲಿ.ದೊರೆ ಮತ್ತು ಕಡಲು

ಶ್ರೀದೇವಿ ಕೆರೆಮನೆ

 
ಕಡಲ ದಂಡೆಯ ಉಸುಕಿನಲ್ಲಿ
ಹೆಜ್ಜೆಯಿಟ್ಟ ದೊರೆಗೆ ಒಂದೇ ಭಯ
ಕಾಲು ಮುತ್ತಿಕ್ಕುವ ಅಲೆಗಳ ವೈಯ್ಯಾರಕೆ
ಸೋತು ಹೋದರೇನು ಮಾಡುವುದು?

ಕಡಲಿಗೋ ಅದಾವ ಯೋಚನೆಯೂ ಇಲ್ಲ...
ನೊರೆ ನೊರೆಯಾಗಿ ಉಕ್ಕಿ
ದಡದಲ್ಲಿ ನಿಂತ ದೊರೆಯ
ಪಾದ  ಪೂಜೆಯೊಂದೆ 
ಮನದಾಳದ ಬಯಕೆ.....

ಹೆಜ್ಜೆಯಿಟ್ಟಲ್ಲೆಲ್ಲ ಮಾಸದ ಗುರುತು
ಇಡೀ ದಂಡೆಯ ಹೃದಯದ ತುಂಬ
ತನ್ನದೇ ಹೆಜ್ಜೆ ಗುರುತುಗಳು
ತನ್ನೆದೆಯೊಳಗಿನ ಪುಳಕವನ್ನು 
ಮಾತಾಗಿಸುವ ಬಯಕೆಯಿಲ್ಲ ದೊರೆಗೆ

ತನ್ನದಲ್ಲ ಎಂಬ ಸತ್ಯದ ಅರಿವಿದ್ದರೂ
ಪದೇ ಪದೇ ಕಾಲಿಗೆ ಕಚಗುಳಿಯಿಡುವ
ಕಡಲಿನ ಜೀವನ್ಮುಖಿಗೆ ದೊರೆ ಸೋತಿದ್ದಾನೆ
ಅಲೆಗಳ ನಡುವೆ ಅಂಗಾತ ಮಲಗಿ
ತಾನೇ ಕಡಲಾಗ ಬಯಸಿದ್ದಾನೆ

ಕಾಲದ ಬಿಸಿಗೆ ಅರಳುವ ಚಿತ್ರಗಳುನಾಗರಾಜ್ ಹರಪನಹಳ್ಳಿಕಾಡುತ್ತಿದೆ ಹಾದಿ ಪದೇ ಪದೇ
ಚಿತ್ರವಾಗದವರ ಬಿಸಿಯುಸಿರು
ಏನೋ ತಾಗಿದಂಥ ಪಾದಗಳು


ಇದೇ ಹಾದಿಯಲ್ಲಿ ಕುಳಿತು
ಹಸಿವೆ ಬೇಡುವ ಆಕೆ
ಕರಗುತ್ತಿದೆ ಅಂತಃಕರಣ ಕಣ್ಣಲ್ಲಿ
ಕಣ್ಣ ದಾರಿಯಲ್ಲಿ ಕನಸು
ಕನವರಿಕೆಗಳ ಸಾಲು ಮೆರವಣಿಗೆ


ಹಗಲು ಬಟ್ಟೆಯ ಮೇಲೆ
ಇರುಳ ನೆರಳು
ಮಹಲ ಮುಂಭಾಗ
ಹಸಿವೆಯ ತಂಗುದಾಣ ;
ಅಲ್ಲೇ ದುಡಿವ ಜೀವದ
ಊಟ ನಿದ್ರೆ ಸುಖ
ಬಯಲ ಆಲಯ ಹೊದ್ದ
ಸೂರಿಲ್ಲದವರ ದೇಹ ಮೇಲೆ
ಹರಿಯುತ್ತಿದೆ ಮೋರೆ ನೀರು
ಕಸಕಡ್ಡಿ
ಉಳ್ಳವರ ಕುಡಿತದಮಲಿನ ಕಾರು

ಯಾವುದೋ ಕೊಳದ ನಿಂತ ನೀರು
ಬಿಸಿಲಿಗೆ ಬೆಂದ ಕಂದನ ಮುಖಕೆ
ತಂಪು ನೀಡುವ ನೆಮ್ಮದಿ
ಬೆನ್ನ ಮೇಲೆ ಹಸಿಕಂದನಿಟ್ಟುಕೊಂಡು
ಅಲೆಯುತ್ತಾಳೆ ಅಮ್ಮ ನಾಳೆಯ
ಕೂಸಿನ ತೊಟ್ಟು ಗಂಜಿ ಬಸಿಗಾಗಿ


ನೆರಳಲಿ ಕುಳಿತ ಕೊರಳಲಿ
ಕುಹಕ ನಗು
ಕಣ್ಣಲಿ ಸಂಚು ಭೇಟ

ಉರಿವ ಅಂಗಾಲು ನಿತ್ಯದ ಹಾದಿಯಲಿ
ಹೊತ್ತು ಸಾಗಿವೆ ಯಾವುದೋ ಹಳೆಯ  ನೆನಪು
ಕಳೆದು ಹೋದ ಹೆಜ್ಜೆ
ಮರಳಿ ಕಂಡಾವು ಎಂಬ ಧ್ಯಾನದಕಕ್ಷೆ

ಹಾದಿಯಲಿ ನಿಂತ ಬುದ್ಧ ಎದೆಗಿಳಿಯಲಾರ
ಬೆತ್ತ ಹಿಡಿದ ಗಾಂಧಿ ಕಣ್ಣ ಮುಂದಿನ ಚಿತ್ರ
ಕಾಮ ಕಾಲುವೆಯಲಿ
ಹರಿಯುವುದೇ ಪ್ರೇಮದ ನೀರು ?
ದ್ವೇಷದ ಜನಿವಾರ ತೊಟ್ಟವರ ನೆಲದಲಿ
ಬದುಕೆಂದರೆ ಕೂಡಿಡುವ ಆಸೆ
ದುಃಖ ನಿತ್ಯ ಸ್ಥಾಯಿ

ನಡೆಯುತ್ತಲೇ ಇವೆ ಹಸಿವೆಯ ಪಾದ
ದೂರದಲಿ ಕಾಣುತಿದೆ ಒಂದು ತಿರುವುನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...