Sunday, January 12, 2014

ಸ್ವಗತದ ಹಾಡು




ವಿದ್ಯಾ



ನಮ್ಮೊಳಗೆ
ಅದೆಷ್ಟು ಗತಗಳಿವೆ!
ಅಸಂಗತ ಸ್ವಗತಗಳಿವೆ!
ಸಂಧಿಸದ ರೇಖೆಗಳಿವೆ!
ಕಣ್ಣು ಕೂಡದ ದಿನಗಳಿವೆ!
ಮುನಿದು ಹೆಪ್ಪುಗಟ್ಟಿ ಕೂತ ರಾತ್ರಿಗಳಿವೆ!

ಅವು ಮರೆತರೂ ಕ್ಷಣ
ಮರೆಯಗೊಡದ "ನಾವು"
ಎದೆಯಲ್ಲಿ ಅರಳಿದ ಹೂಗಳ
ಹೊಸಕುತ್ತಿದ್ದೇವೆ ನಮ್ಮದೇ ಕಾಲಿನಿಂದ..

ಈ ಸುಡುಮರಳಿನಾಚೆ
ಉಪ್ಪು ನೀರಿನದೆ ಕಡಲು,
ಸಿಹಿಯೊರತೆ ಸಣ್ಣ ಝರಿ ಕಣ್ಣಿಗೆ,
ಅರಿವಿನಂತೆ ..

ಹೊತ್ತು ಹೊತ್ತೋಡುತ್ತಿದೆ ನಮ್ಮಮುತ್ತುಗಳ
ಸೂರ್ಯ ಕಂತುವ ಹೊತ್ತು
ನಾವಿತ್ತ ಒಟ್ಟು ಹೆಜ್ಜೆಗಳ
ಅಳಿಸೀತು ಕಾಲದಲೆ ಹುಚ್ಚೆದ್ದು!
ನೆನ್ನೆಹುದುಗಿದ್ದ ಕಾಲ ಅಡಿಯಲ್ಲಿ
ಹೂವೂ ಅರಳದೆ ಹೋದೀತು..

ಇದ್ದಾಗ ಮುಟ್ಟಿ ಮನ ತಟ್ಟದವರು..
ಇಲ್ಲದಿದ್ದಾಗ ಬಯಲ ತಟ್ಟಿ ಅತ್ತೇವು!

ಇದೋ! ಇಂದೇ ಹುಣ್ಣಿಮೆ!
ನಾವೇ ನಮ್ಮ ಕಡಲಿನೊಳಗೆ
ಕಂತಿಸಿದ ಸಾವಿರ ಸೂರ್ಯರ
ಕುದಿ ತಣಿಸಿ, ಬೆಳದಿಂಗಳಲಿ
ಮತ್ತೊಮ್ಮೆ ಹೆಜ್ಜೆಯಿಡುವ ಒಟ್ಟಿಗೆ..

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...