Wednesday, January 29, 2014

ಯುಗಪುರುಷನ ಯುಗಳ

ಬೋಳುವಾರು ಮಹಮದ್ ಕುಂಞಿ


ಶುಕ್ರವಾರದ ಸಂಜೆಯ ಹೊತ್ತು. ಸುಮಾರು ಸಾವಿರದಷ್ಟು ಮಂದಿ ಬಾಪೂಜಿಯ ದರ್ಶನಕ್ಕಾಗಿ ಬಿರ್ಲಾ ಭವನದಲ್ಲಿ ಕಾದು ನಿಂತಿದ್ದರು. ಸಂಜೆಯ ಪ್ರಾರ್ಥನಾ ಸಭೆಗೆ ಬಾಪೂಜಿ ಹೊರಟರು. ತಮ್ಮ ಕೊಠಡಿಯಿಂದ ಹೊರಗೆ ಬಂದರು. ತಮ್ಮ ಮೊಮ್ಮಕ್ಕಳಾದ ಅಭಾ ಮತ್ತು ಮನು ಹೆಗಲುಗಳ ಮೇಲೆ ಕೈಯಿರಿಸಿಕೊಂಡು ನಡೆದರು. ಸಭೆ ನಡೆಯಲಿರುವ ಅಂಗಳದ ಮೆಟ್ಟಲು ಏರಿದ ಬಾಪೂಜಿ, ಸಭಿಕರ ವಂದನೆ ಗಳಿಗೆ ಕೈ ಮುಗಿದು ಪ್ರತಿವಂದಿಸುತ್ತಾ ಹೆಜ್ಜೆ ಹಾಕಿದರು. ಗುಂಪಿನ ನಡುವಿನಿಂದ ಎದುರು ಬಂದ ಯುವಕ ನಾಥೂರಾಮ ಗೋಡ್ಸೆಯ ನಮಸ್ಕಾರವನ್ನೂ ಬಾಪೂಜಿ ಎದೆತುಂಬಿ ಸ್ವೀಕರಿಸಿ ದರು. ಬಳಿಕ, ಅವನ ಪಿಸ್ತೂಲಿನಿಂದ ಸಿಡಿದು ಬದ ಮೂರೂ ಗುಂಡುಗಳನ್ನು ತಮ್ಮ ಎದೆಯೊಳಗೆ ತುಂಬಿಕೊಂಡರು; ಭೂಮಿಗೆ ಬಿದ್ದರು. ಬಾಪೂಜಿಗೆ ಕಣ್ಣು ಕತ್ತಲೆ ಬಂದಂತಾ ಯಿತು. ತನ್ನನ್ನು ಯಾರೋ ಮಡಿಲಲ್ಲಿ ಮಲಗಿಸಿ ತಲೆಯನ್ನು ಪ್ರೀತಿಯಿಂದ ನೇವರಿಸುತ್ತಿದ್ದಾರೆ ಎಂದು ಭಾಸವಾಯಿತು. ಕಣ್ಣು ತೆರೆಯಲು ಯತ್ನಿಸಿದರು. ಸಾಧ್ಯವಾಗಲಿಲ್ಲ.

‘‘ಈ ದಿನಕ್ಕಾಗಿಯೇ ಕಾಯುತ್ತಿದ್ದೀಯಲ್ಲವೇ ಮೋಹನಾ?’’ ಕಣ್ಣುರೆಪ್ಪೆಗಳ ಸಂದಿಯಿಂದ ನುಗ್ಗಿ ಒಳಬಂದ ಮೆಹತಾಬ ಪ್ರಶ್ನಿಸಿದ್ದ!
ಬಾಪೂಜಿಯ ಮುಖದಲ್ಲಿ ಮಂದಹಾಸ ಮೂಡಿತು; ತುಟಿಗಳು ಅದುರಿದವು. ತಮ್ಮ ಬಾಲ್ಯದ ಗೆಳೆಯನನ್ನು ಎವೆಯೊಳಗೆಯೇ ದಿಟ್ಟಿಸಿ ನೋಡಿದರು. ತೆಳುವಾದ ಕೋಲಿಗೆ ಬಟ್ಟೆ ಹೊದಿಸಿದಂತೆ ಕಾಣಿಸುತ್ತಿದ್ದ ಎಂಭತ್ತರ ಮುದಿಯನ ಮುಖದಲ್ಲಿ ವ್ಯಂಗ್ಯದ ಗೆರೆಗಳಿದ್ದಿರಲಿಲ್ಲ. ಒಣಗಿ ಹೋದ ಕೆನ್ನೆಗಳಲ್ಲಿ ಹುದುಗಿ ಹೋಗಿದ್ದ ನೀಲಿ ಕಣ್ಣುಗಳಲ್ಲಿ ಕಪಟ ಕಾಣಿಸಲಿಲ್ಲ.

ಬಾಪೂಜಿಯ ಎದೆಯೊಳಗೆ ಮೆಹತಾಬ ಮಾತನಾಡು ತ್ತಿದ್ದ: ‘ಮುಂದೊಂದು ದಿನ ಚರಿತ್ರೆ ಓದುವವರು, ದೇಶ ವಿಭಜನೆಯಲ್ಲಿ ನಿನ್ನನ್ನೂ ಪಾಲುದಾರನೆಂದು ತಿಳಿದಾರೆಂಬ ಭಯದಿಂದಲ್ಲವೇ ನೀನು, ಆಗಸ್ಟ್ 15ರ ಸಮಾರಂಭವನ್ನು ತಪ್ಪಿಸಿಕೊಂಡು ಕಲಕತ್ತಾಕ್ಕೆ ಹೋಗಿ ಕುಳಿತದ್ದೂ? ನಿಜ ಹೇಳು ಮೋಹನಾ.., ನಿನಗಿಷ್ಟವಾಗದ ಪ್ರತಿ ಯೊಂದನ್ನೂ ನಿನ್ನ ಉಪವಾಸ ಸತ್ಯಾಗ್ರಹದಿಂದ ಸೋಲಿಸುತ್ತಿದ್ದ ನೀನು, ದೇಶ ವಿಭಜನೆ ಯಂತಹ ವಿಪತ್ತಿನ ವಿರೋಧವಾಗಿ ಯಾಕೆ ಉಪವಾಸ ಸತ್ಯಾಗ್ರಹ ಹೂಡಲಿಲ್ಲಾ? ಕಾಂಗ್ರೆಸ್ ಕಾರ್ಯಕಾರೀ ಸಭೆಯಲ್ಲಿ ದೇಶ ವಿಭಜನೆಯ ಪ್ರಶ್ನೆ ಬಂದಾಗ ನೀನೇಕೆ ವೌನ ವಾಗಿದ್ದೇ? ಅಥವಾ, ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಕಿರುತ್ತಿದ್ದರೂ ನಿನ್ನ ಜನರು ನಿನ್ನನ್ನು ಕಡೆಗಣಿಸುತ್ತಾರೆಂಬ ಆತಂಕವಿತ್ತೇ? ಇದ್ದಿರಲೇ ಬೇಕು. ನಿನ್ನ ಅಮೂಲ್ಯವಾದ ಉಪವಾಸವೆಂಬ ಆಯುಧವನ್ನು ನಿನ್ನ ಶಿಷ್ಯರೇ ನಿಷ್ಪ್ರಯೋಜ ಕವೆಂದು ಸಾರುವುದು ನಿನಗೆ ಇಷ್ಟವಿದ್ದಿರಲಿಲ್ಲ; ಅಲ್ಲವೇ ಮೋಹನಾ?’ ಬಾಪೂಜಿಯ ಎದೆಗೆ ಮೊದಲನೆಯ ಗುಂಡು ನಾಟಿತು.

‘ಕಸ್ತೂರಿ ನಿನ್ನ ಹೆಂಡತಿಯಾಗಿ ಬಂದಾಗ ಹದಿಮೂರು ವರ್ಷದ ಪುಟ್ಟ ಹುಡುಗಿ. ಸುಮಾರು ಅರುವತ್ತು ವರ್ಷಗಳ ಕಾಲ ಅವಳು ನಿನ್ನ ನೆರಳಲ್ಲೇ ಬದುಕಿದಳು. ಸಪ್ತಪದಿ ತುಳಿಯುವಾಗ ನೀನು ಅವಳಿಗೆ ನೀಡಿದ್ದ ವಾಗ್ದಾನಗಳಲ್ಲಿ ಯಾವುದನ್ನು ಪೂರೈಸಿರುವೆ ಹೇಳು? ಗಂಡನ ಆದರ್ಶ ಕಾಪಾಡಲು, ಆಶ್ರಮವಾಸಿಗಳ ಕಕ್ಕಸು ತೊಳೆಯಲೂ ಹಿಂಜರಿಯದಿದ್ದ ಹೆಂಡತಿ ಅವಳು. ಆದರೆ. ಗಂಡನ ಸಂಪಾದನೆಯಲ್ಲಿ ಅವಳು ಮುಂದೆ ಬರಲಿರುವ ತನ್ನ ಸೊಸೆಗಾಗಿ ಒಂದಿಷ್ಟು ಬಂಗಾರ ಕೂಡಿಡಲು ಆಸೆಪಟ್ಟದ್ದು, ದೊಡ್ಡ ತಪ್ಪಾಗಿ ಕಾಣಿಸಿತ್ತಲ್ಲವೇ ನಿನಗೆ?’ ಎರಡನೆಯ ಗುಂಡು ಬಾಪೂಜಿಯ ಎದೆಗೆ ಇರಿಯಿತು.

‘‘ದಕ್ಷಿಣ ಆಫ್ರಿಕಾದಲ್ಲಿರುವಾಗ, ನಿನ್ನ ಮಕ್ಕಳಿಗೆ ಅಲ್ಲಿಯ ಬಿಳಿಯರ ಶಾಲೆಗಳಲ್ಲಿ ಆಧುನಿಕ ಶಿಕ್ಷಣ ಕೊಡಿಸಬಲ್ಲ ಶಕ್ತಿ ಮತ್ತು ಅವಕಾಶ ಎರಡೂ ನಿನಗೆ ಇದ್ದವು. ಆದರೆ ನಿನಗೆ, ಮಕ್ಕಳ ಶಿಕ್ಷಣಕ್ಕಿಂತ ನಿನ್ನ ಆದರ್ಶಗಳೇ ಮುಖ್ಯವಾಗಿಬಿಟ್ಟಿತು. ನಿನ್ನ ಮೊಂಡುತನದಿಂದಾಗಿ ಆ ಮಕ್ಕಳು ತಮ್ಮ ಶಿಕ್ಷಣದ ಹಕ್ಕನ್ನೇ ಕಳೆದುಕೊಂಡರು. ಮಕ್ಕಳಿಗೆ ಹೆತ್ತವರು ನೀಡ ಬೇಕಾದದ್ದು ಪ್ರೀತಿಯನ್ನು ಮಾತ್ರ; ಹೆತ್ತವರು ನಂಬಿದ ವಿಚಾರವನ್ನಲ್ಲ. ಮಕ್ಕಳನ್ನು ಹಿರಿಯರಂತೆ ವರ್ತಿಸಲು ಒತ್ತಾಯಿಸಿ ಜೀವನವನ್ನು ಹಿಮ್ಮುಖವಾಗಿ ಹರಿಸಬಾರ ದೆಂಬುದು ನಿನಗೆ ಗೊತ್ತಿತ್ತು. ಆದರೂ ಅಸಹಾಯಕರಾಗಿದ್ದ ಮಕ್ಕಳ ಮೇಲೆ ನಿನ್ನ ಆದರ್ಶವನ್ನು ಪ್ರಯೋಗಿಸಿದ್ದು ತಪ್ಪಲ್ಲವೇ?’’ ಮೂರನೆಯ ಗುಂಡು ಬಾಪೂಜಿಯ ಎದೆಯಾಳಕ್ಕೆ ಇಳಿಯಿತು.

ಮೆಹತಾಬ ಮಾತು ಮುಂದುವರಿಸಿದ್ದ, ‘ಇವುಗಳು ನನ್ನ ಪ್ರಶ್ನೆಗಳಲ್ಲ ಮೋಹನಾ; ನೀನು ನಿನ್ನನ್ನೇ ಕೇಳಿಕೊಳ್ಳುತ್ತಿರುವ ಪ್ರಶ್ನಿಗಳು. ಹೋಗಲಿ ಬಿಡು, ನಿನ್ನ ನೋವನ್ನು ಮರೆಸಲು ನಾನೊಂದು ಕತೆ ಹೇಳುತ್ತೇನೆ, ಕೇಳು’
‘ನಿನ್ನನ್ನು ರಾಷ್ಟ್ರಪಿತನೆಂದೇ ಕರೆದಿದ್ದ ಸುಭಾಸ್‌ಚಂದ್ರ ಬೋಸರಿಗೆ ನಿನ್ನ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ, ಬ್ರಿಟಿಷರ ಬಗೆಗಿನ ನಿನ್ನ ನಿಲುವು ಅವರಿಗೆ ಹಿಡಿಸಿದ್ದಿರಲಿಲ್ಲ ವೆಂಬುದೂ ನಿನಗೆ ಗೊತ್ತು. ಸುಭಾಸ್‌ಚಂದ್ರ ಬೋಸ ರೊಂದಿಗೆ ನಾನು ಜೈಲಿನಲ್ಲಿದ್ದಾಗ, ಒಂದು ದಿನ ಸಂಜೆ ನಿನ್ನ ಬಗ್ಗೆ ತಮಾಷೆಯಾಗಿ ಮಾತಾಡಿಕೊಳ್ಳುತ್ತಿದ್ದೆವು. ನೀನು ದನದ ಹಾಲು ಕುಡಿಯುವುದನ್ನು ತ್ಯಜಿಸಿ ಆಡಿನ ಹಾಲು ಕುಡಿಯುವುದರ ಹಿಂದಿದ್ದ ತಾತ್ವಿಕ ನಿಲುವುಗಳ ಬಗ್ಗೆ ಚರ್ಚೆಯಾಗುತ್ತಿತ್ತು. ದನ ಮತ್ತು ಆಡುಗಳ ನಡುವೆ ಏನು ಭೇದವಿದೆ? ಎರಡೂ ಮಾತು ಬಾರದ ಮೂಕ ಪ್ರಾಣಿಗಳು. ದನದ ಹಾಲಿನ ಬಗೆಗಿನ ನಿನ್ನ ನಿಲುವಿಗೆ, ನಿನ್ನ ಮೊಂಡುತನವೊಂದೇ ಕಾರಣವೆಂದು ನಾವೆಲ್ಲ ತೀರ್ಮಾನಿಸಿದ್ದೆವು. ಆ ದಿನದ ಚರ್ಚೆಯಲ್ಲಿ, ನಿನ್ನನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ, ದಕ್ಷಿಣದ ಮೈಸೂರು ಪ್ರಾಂತ್ಯದಿಂದ ಬಂದಿದ್ದ ಐ.ಎನ್.ಎ. ಯೋಧನೊಬ್ಬ ಹೇಳಿದ್ದ ಕತೆಯಿದು; ಕೇಳು:’

‘ಕಲ್ಲುಗಳನ್ನು ಕಡೆದು ಅದಕ್ಕೆ ಜೀವ ತುಂಬಬಲ್ಲ ಜಕಣಾಚಾರಿಯೆಂಬ ಶಿಲ್ಪಿಯಿದ್ದ. ಅವನೊಂದು ದಿನ ಶಿಲೆಯನ್ನು ಕಡೆದು ಸುಂದರವಾದ ದೇವರ ಮೂರ್ತಿ ಯೊಂದನ್ನು ನಿರ್ಮಿಸಿದ. ಅದು ಎಷ್ಟು ಸುಂದರವಾದ ಮೂರ್ತಿಯಾಗಿಬಿಟ್ಟಿತೆಂದರೆ, ಅದನ್ನು ನಿರ್ಮಿಸಿದ ಜಕಣಾಚಾರಿಯೂ ಅಚ್ಚರಿಯಿಂದ, ಹಗಲು ರಾತ್ರಿ ಅದನ್ನೇ ನೋಡುತ್ತಾ ಕುಳಿತುಬಿಟ್ಟ. ಜಕಣಾಚಾರಿಯ ಅಪರೂಪದ ವರ್ತನೆಯಿಂದ ಕುತೂಹಲಗೊಂಡ ಅವನ ಶಿಷ್ಯನೊಬ್ಬ, ಇದರ ಕಾರಣವನ್ನು ಪ್ರಶ್ನಿಸಿದಾಗ ಜಕಣಾಚಾರಿ ಹೇಳಿದ, ‘‘ಈ ಮೂರ್ತಿ ಪರಿಪೂರ್ಣವಾಗಿದೆ’’. ಜಕಣಾಚಾರಿ ಹಾಗೆ ಹೇಳಿದ್ದೇ ತಡ; ಆ ಮೂರ್ತಿಯು ನೆಲದಿಂದ ಕಳಚಿಕೊಂಡು ಬಾನಿನತ್ತ ಏರತೊಡಗಿತು. ಶಿಷ್ಯನಿಗೆ ತನ್ನ ಗುರುವಿನ ಮಾತಿನಿಂದಾದ ಪ್ರಮಾದ ಅರ್ಥವಾಗಿಬಿಟ್ಟಿತ್ತು.’

‘ಪರಿಪೂರ್ಣವಾದ ಯಾವುದೂ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಆದ್ದರಿಂದಲೇ, ಮೂರ್ತಿಯನ್ನು ಜಕಣಾಚಾರಿ ‘ಪರಿಪೂರ್ಣ’’ವೆಂದು ಕರೆದ ನಂತರ, ಅದು ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಅದು ಮೇಲಕ್ಕೆ ಏರಲೇಬೇಕು; ಏರತೊಡಗಿತು. ಜಾಣನಾದ ಆ ಶಿಷ್ಯ ತಡ ಮಾಡಲಿಲ್ಲ. ಓಡಿ ಹೋಗಿ ಕೊಡಲಿಯಿಂದ ಮೂರ್ತಿಯ ಕಾಲುಗಳ ಮೇಲೆ ಬರೆಯೊಂದನ್ನು ಎಳೆದುಬಿಟ್ಟ. ಮೂರ್ತಿ ‘ಭಿನ್ನವಾಗಿ’ ಬಿಟ್ಟಿತ್ತು. ಮೂರ್ತಿ ಮರಳಿ ಕೆಳಗಿಳಿದು ನೆಲದ ಮೇಲೆ ನಿಂತಿತು.
‘ಅರ್ಥವಾಯಿತೆ ಮೋಹನಾ?’ಮೆಹತಾಬ ವಿಷಾದದಿಂದ ಪ್ರಶ್ನಿಸಿದ್ದ;
ಅರೆ ಕ್ಷಣ ವೌನದ ನಂತರ ಬಾಪೂಜಿಯ ಕಿವಿಯಲ್ಲಿ ಗುಟ್ಟಾಗಿ ಹೇಳಿದ, ‘ನೀನೀಗ ಭಿನ್ನಗೊಂಡ ಮೂರ್ತಿಯಲ್ಲ ಮೋಹನಾ; ಪರಿಪೂರ್ಣ ಯುಗಪುರುಷ.’
ಬಾಪೂಜಿಯ ಉಸಿರು ನಿಂತಿತು.
ಯುಗಪುರುಷನ ಮೇಲೆ ಯಾರೂ ಗೆರೆ ಎಳೆಯದಿರಲಿ.
ಆಮೆನ್.

 
‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ಯಿಂದ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...