Friday, January 24, 2014

ಪಂಡಿತ್ ಸವಿೂರ್ ಚಟರ್ಜಿಯವರ ನುಡಿ ಮತ್ತು ತಬಲದ ನುಡಿ

ಶೂದ್ರ ಶ್ರೀನಿವಾಸ್
 
ವಾರ್ತಾಭಾರತಿ
 
 

""The Buddha did not speak of god,  nor of prayer nor sacrifice. What was he preaching them ? He was speaking of agony and he was telling people that there was a way out of it. He said that there was agony everywhere and in everything that the agony had a game, that agony could be over come and that there was a way to overcome it''

-Debipranad chattopadhyaya


ಭಾರತ ಕಂಡ ಕೆಲವೇ ಅಪರೂಪದ ತತ್ವಜ್ಞಾನಿಗಳಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರೂ ಕೂಡ ಒಬ್ಬರಾಗಿದ್ದರು. ಈ ಮಹಾನ್ ಚಿಂತಕರನ್ನು ನಾವು ಕಂಡಿದ್ದೆವು, ಅವರ ಜೊತೆಯಲ್ಲಿ ಒಂದಷ್ಟು ಕಾಲ ಕಳೆದಿದ್ದೆವು ಎಂಬುದು ಒಂದು ಶ್ರೀಮಂತ ನೆನಪಾಗಿ ಸದಾ ಮಿಡಿಯುತ್ತಿರುತ್ತದೆ. ವೈಯಕ್ತಿಕವಾಗಿ ಇವರನ್ನು ನೆನಪು ಮಾಡಿಕೊಂಡಾಕ್ಷಣ ನಿಜ ವಾಗಿಯೂ ಪುಳಕಿತನಾಗುವೆ. 

ಅದಕ್ಕೆ ಮುಖ್ಯ ಕಾರಣ: ಅವರ ‘ವಿಥಿಯಿಸಂ’ ಮತ್ತು ‘ಲೋಕಯತ್’ ಕೃತಿಗಳು ಸಾಕಷ್ಟು ಪ್ರಭಾವವನ್ನು ಬೀರಿದ್ದವು. ನನ್ನಂಥವನ ಪ್ರಾರಂಭದ ಗುಡಿಗುಡಿ ವಿಚಾರವಾದಕ್ಕೆ ಸ್ವಲ್ಪಮಟ್ಟಿನ ಶಿಸ್ತುಬದ್ಧತೆ ಬರಬೇಕಾದರೆ ಈ ಕೃತಿಗಳು ಸಾಕ್ಷಬದ್ಧವಾಗಿ ನಿಲ್ಲುತ್ತವೆ. ಹೀಗೆ ಭಾರತದ ಉದ್ದಗಲಕ್ಕೂ ತತ್ವಶಾಸ್ತ್ರದ ವಿದ್ಯಾರ್ಥಿಗಳನ್ನು ದಾಟಿಯೂ ಲಕ್ಷಾಂತರ ಮಂದಿಯ ಮೇಲೆ ಪ್ರಭಾವ ಬೀರಿರಲು ಸಾಧ್ಯ. 

ಹಾಗೆ ನೋಡಿದರೆ ದೇವಿ ಪ್ರಸಾದ್ ಚಟ್ಟೋಪಾಧ್ಯಾಯರಲ್ಲಿ ಪ್ರವೇಶ ಪಡೆಯಬೇಕಾದರೆ; ಮೊದಲು ಅವರ ‘ಸಮ್ ಪ್ರಾಬ್ಲಮ್ಸ್ ಆಫ್ ಅರ್ಲಿ ಬುದ್ಧಿಸಮ್’ ಎಂಬ ಲೇಖನವನ್ನು ತುಂಬ ಇಷ್ಟಪಟ್ಟಿದ್ದೆ. ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಎಸ್.ಆರ್. ಭಟ್ ಎಂಬ ವಿದ್ವಾಂಸರು ಪರಿಚಯವಾದರು. ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ‘ನವಕರ್ನಾಟಕ ಪುಸ್ತಕಾಲಯ’ವಿತ್ತು. ಅಲ್ಲಿಂದ ನೂರು ಗಜದ ದೂರದಲ್ಲಿ ಸಮಾಜವಾದಿ ಪಕ್ಷದ ಕಚೇರಿಯೂ ಇತ್ತು. 

ನಾನು ವಾರಕ್ಕೆ ನಾಲ್ಕೈದು ಬಾರಿಯಾದರೂ ಅಲ್ಲಿಗೆ ಹೋಗುತ್ತಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಪುಸ್ತಕಾಲಯಕ್ಕೆ ಸಾಮಾನ್ಯವಾಗಿ ಹೋಗುತ್ತಿದ್ದೆ. ಇದಕ್ಕೆ ಮುಖ್ಯ ಕಾರಣ: ನಮ್ಮ ಹೊಸ ಓದಿಗೆ ಪೂರಕವಾದ ಕೃತಿಗಳು ಅಲ್ಲಿ ದೊರಕುತ್ತಿತ್ತು. ಇಂಥ ಸಮಯದಲ್ಲಿ ಅಲ್ಲಿ ಎಸ್. ಆರ್.ಭಟ್ ಎನ್ನುವವರು ಪರಿಚಯವಾದರು. ಗಂಭೀರವಾದ ಓದನ್ನು ಒಳಗೆ ಬಿಟ್ಟುಕೊಂಡು ಸದಾ ನಗು ನಗುತ್ತ ಇದ್ದವರು. ಆಗ ನವಕರ್ನಾಟಕದಲ್ಲಿ ಈಗಿನ ಸಂಸ್ಥೆಯ ಆಧಾರಸ್ತಂಭವಾದ ರಾಜಾರಾಮ್ ಅವರು ಕ್ರಿಯಾಶೀಲ ಕಾರ್ಯಕರ್ತ ರಾಗಿದ್ದರು. 

ಒಮ್ಮೆ ಅವರು ‘ಬುದ್ಧಿಸಂ’ ಎಂಬ ಕೃತಿಯನ್ನು ಓದಿ ಎಂದು ಕೊಟ್ಟರು. ಆಗ ಅದರ ಬೆಲೆ ಕೇವಲ ಎರಡು ರೂಪಾಯಿ. ಅಂದರೆ ಆ ಕಾಲಕ್ಕೆ ಈ ಎರಡು ರೂಪಾಯಿಯೂ ಕೂಡ ಬೆಲೆಯನ್ನು ಪಡೆದಿತ್ತು. ಆ ಕೃತಿಯ ಮುಖಪುಟ ಇಷ್ಟ ವಾಯಿತು. ಆ ಕೃತಿಯಲ್ಲಿ ರಾಹುಲ ಸಾಂಕೃತ್ಯಾ ಯನ, ದೇವಿಪ್ರಸಾದ್ ಚಟ್ಟೋಪಾಧ್ಯಾಯ, ವೈ. ಬಲರಾಮಮೂರ್ತಿ, ರಾಮ ವಿಲಾಸ್ ಶರ್ಮ ಮತ್ತು ಮುಲ್ಕರಾಜ್ ಆನಂದ್ ಅವರ ಲೇಖನ ಗಳಿದ್ದುವು. 

ಅದರಲ್ಲಿ ಅತ್ಯಂತ ದೀರ್ಘಲೇಖನ ಚಟ್ಟೋಪಾಧ್ಯಾಯ ಅವರದ್ದು. ಒಂದು ದೃಷ್ಟಿಯಿಂದ ಈ ಕೃತಿಯ ಮೂಲಕ ನಾನು ದೇವಿಪ್ರಸಾದ್ ಅವರ ಮುಂದಿನ ಅಮೂಲ್ಯ ಕೃತಿಗಳ ಓದಿಗೆ ಪ್ರವೇಶ ಪಡೆದೆ. ಎಸ್.ಆರ್. ಭಟ್ ಅವರು ಆ ಕಾಲಕ್ಕೆ ರಾಜಕೀಯ ಮತ್ತು ತತ್ವಶಾಸ್ತ್ರದ ವಿಷಯದಲ್ಲಿ ಅತ್ಯಂತ ಗಂಭೀರ ವಿದ್ವಾಂಸರಾಗಿದ್ದರು ಎಂಬುದನ್ನು ಹಿಂದೆಯೇ ಪ್ರಸ್ತಾಪಿಸಿರುವೆ. ಇದರಿಂದ ನಾನಂತೂ ಅವರಿಗೆ ಸದಾ ಉಪಕೃತನಾಗಿರಲೇ ಬೇಕು. 

ಅವರಿಂದ ಸಾಕಷ್ಟು ಅರಿವನ್ನು ಪಡೆದಿದ್ದೇನೆ. ಡಿ.ಆರ್. ನಾಗರಾಜ್ ಮತ್ತು ಸಿದ್ಧಲಿಂಗಯ್ಯ ಮತ್ತು ನಾನು ಸಾಕಷ್ಟು ಸಂಜೆಗಳನ್ನು ನವಕರ್ನಾಟಕದಲ್ಲಿ ಕಳೆದಿದ್ದೇವೆ. ನನಗೆ ನಿರಂಜನ ಅವರ ಕುಟುಂಬವನ್ನು ಎಸ್.ಆರ್. ಭಟ್ ಅವರು ಪರಿಚಯಿಸಿದ್ದು, ಆ ಸುಮಾರಿಗೆ ‘ಶೂದ್ರ’ವನ್ನು ಪ್ರಾರಂಭಿಸಿದ್ದೆ. ಏನೇ ಅರ್ಥಪೂರ್ಣ ಕೃತಿ ಬಂದರೂ ಅದನ್ನು ಓದಲು ಸೂಚಿಸುತ್ತಿದ್ದರು. 

ಮುಂದೆ ಚಟ್ಟೋಪಾಧ್ಯಾಯರ ‘ಸ್ಕೂಲ್ ಆಫ್ ಥಾಟ್’ ಯೋಚನಾ ಕ್ರಮಕ್ಕೆ ಸೇರಿದ ಸಾಕಷ್ಟು ವಿದ್ಯಾಂಸರು ಪರಿಚಯವಾದರು. ಅದರಲ್ಲಿ ಡಾ. ಜಿ.ರಾಮಕೃಷ್ಣ, ಪ್ರೊ. ಸೇತೂರಾವ್ ಮತ್ತು ಪ್ರೊ.ಸಂಜಯ ಬಿಸ್ವಾಸ್ ಇಂತಹ ಮಹನೀಯರ ಜೊತೆ ಯಾವಯಾವುದೋ ಅರ್ಥಪೂರ್ಣ ವೇದಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.

ಡಾ. ಜಿ. ರಾಮಕೃಷ್ಣ ಅವರಂತೂ ಎಷ್ಟೋ ವರ್ಷ ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದವರು. ನೂರಾರು ವಿದ್ಯಾರ್ಥಿಗಳನ್ನು ಹೊಸಚಿಂತನೆಯ ಕಡೆಗೆ ತೊಡಗಿಸಿದವರು. ಅದರಿಗೆಲ್ಲ ದೇವಿಪ್ರಸಾದ್ ಅಂಥ ಚಿಂತಕರನ್ನು ಪರಿಚಯಿಸುತ್ತ ಬಂದವರು. ಈಗ ‘ಹೊಸತು’ ಪತ್ರಿಕೆಯ ಮೂಲಕ ಮುಂದುವರಿಸುತ್ತಿದ್ದಾರೆ. 

ಜೊತೆಗೆ ಕರ್ನಾಟಕದ ಎಲ್ಲ ವಿಚಾರಶೀಲ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮತ್ತು ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರ ಅತ್ಯಂತ ನಿಕಟ ಸಂಬಂಧವನ್ನಿಟ್ಟು ಕೊಂಡಿದ್ದವರು. ಅದರ ಮೂಲಕ ದೇವಿಪ್ರಸಾದ್ ಅವರನ್ನು ಬೇರೆಬೇರೆಯವರಿಗೆ ವಿಸ್ತರಿಸಿದ್ದು ಮಹತ್ವ ಪೂರ್ಣವಾದದ್ದು. ಈ ನಿಟ್ಟಿನಲ್ಲಿ ಡಾ. ಕೆ. ಮರುಳಸಿದ್ದಪ್ಪನವರು 1995ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದರು. 

ಆಗ ಅವರು ಆಗಿನ ಉಪಕುಲಪತಿಗಳಾಗಿದ್ದ ಡಾ. ಡಿ.ಎಂ. ನಂಜುಂಡಪ್ಪ ಅಂಥವರ ಬೆಂಬಲದಿಂದ ಕೆಲವು ಅಪೂರ್ವ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅದರಲ್ಲಿ ಪ್ರೊ. ದೇವಿಪ್ರಸಾದ್ ಚಟ್ಟೋಪಾಧ್ಯಾಯರ ಉಪನ್ಯಾಸವೂ ಇತ್ತು. ಅದು ಅತ್ಯಂತ ಚೇತೋಹಾರಿಯಾಗಿತ್ತು ಎಂದು ಹೇಳಿದರೆ ಕ್ಲೀಷೆಯಾಗುತ್ತದೆ. 

ಯಾಕೆಂದರೆ ಅವರ ವ್ಯಕ್ತಿತ್ವ ಅಷ್ಟರಮಟ್ಟಿಗೆ ಹಿರಿದಾದದ್ದು. ಉಪನ್ಯಾಸ ಆದ ಮೇಲೆ ಒಂದೆರಡು ಗಂಟೆ ಅವರ ಜೊತೆಯಲ್ಲಿ ಊಟ ಮಾಡುವ ಅವಕಾಶವನ್ನು ಡಾ. ಕೆ.ಎಂ.ಎಸ್ ಅವರು ವ್ಯವಸ್ಥೆ ಮಾಡಿದ್ದರು, ಆಗಂತೂ ಕಲ್ಕತ್ತೆಯ ಸಾಂಸ್ಕೃತಿಕ ಲೋಕವನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದರು. ಇದರ ಮಧ್ಯೆ ಡಿ.ಡಿ. ಕೌಸಾಂಬಿ, ರಾಹುಲ ಸಾಂಕೃತ್ಯಾಯನ ಮುಂತಾದವರ ಕೊಡುಗೆ ಕುರಿತು ಪ್ರಸ್ತಾಪವೂ ಬಂದು ಹೋಗಿತ್ತು. ಇದನ್ನೆಲ್ಲ ಈಗ ಫ್ರೆಷ್ಷಾಗಿ ನೆನಪು ಮಾಡಿಕೊಂಡರೆ ‘ಹಾಯ್’ ಅನ್ನಿಸುತ್ತದೆ.
ಇಂಥ ತತ್ವಜ್ಞಾನಿ, ಚಿಂತಕ ನಮ್ಮಿಂದ ಮರೆಯಾಗಿ ಎರಡು ದಶಕಗಳೇ ಕಳೆದು ಹೋಗಿದೆ. 

ಆದರೆ ಅವರ ನೆನಪನ್ನು ಮತ್ತು ಅವರ ಕೊಡುಗೆಯನ್ನು ‘ಮಾ-ಲೆ’ ಪ್ರಕಾಶನದಿಂದ ಜೀವಂತವಾಗಿಟ್ಟಿದ್ದಾರೆ. ‘ಮಾ-ಲೆ’ ಎಂದರೆ ‘ಮಾರ್ಕ್ಸ್ ಮತ್ತು ಲೆನಿನ್’ ಎಂದು. ಈ ವೇದಿಕೆಯ ಮೂಲಕ ಎಷ್ಟೊ ಅಪೂರ್ವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಆಗ ಎಷ್ಟೋ ವರ್ಷಗಳಿಂದ ಕ್ರಿಯಾಶೀಲರಾಗಿರುವ ಮುಖಗಳನ್ನೆಲ್ಲ ಮತ್ತೆ ಭೇಟಿಯಾಗುವ ಮತ್ತು ಅವರ ಉತ್ಸಾಹ ಮತ್ತು ತಾದಾತ್ಮವನ್ನು ಅರಿಯುವ ಅವಕಾಶ ದೊರುಕುತ್ತದೆ.

ಹೀಗೆ ದೊರಕುವ ಒಂದು ಅಪೂರ್ವ ಕಾರ್ಯಕ್ರಮವನ್ನು ಡಾ.ಜಿ.ಆರ್. ಅವರ ನೇತೃತ್ವದಲ್ಲಿ ಅವರ ಹಳೆಯ ವಿದ್ಯಾರ್ಥಿಗಳೂ ಸೇರಿಕೊಂಡು ಏರ್ಪಡಿಸಿದ್ದರು. ಅದು ಪಂಡಿತ್ ಸಮೀರ ಚಟರ್ಜಿ ಮತ್ತು ಪಂಡಿತ್ ನಾಗರಾಜ ರಾವ್ ಹವಲ್ದಾರ್ ಅವರ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ, ಪಂಡಿತ್ ಸಮೀರ್ ಚಟರ್ಜಿಯವರು ಅತ್ಯಂತ ಖ್ಯಾತ ತಬಲಾ ಕಲಾವಿದರು. ರವಿಶಂಕರ್, ಪಂಡಿತ್ ಭೀಮ್‌ಸೇನ್ ಜೋಶಿ, ಪಂಡಿತ್ ಜಸ್‌ರಾಜ್, ಉಸ್ತಾದ್ ಅಲಿ ಅಕ್ಬರ್ ಖಾನ್, ಉಸ್ತಾದ್ ವಿಲಾಯತ್ ಖಾನ್ ಮುಂತಾದ ಸ್ಮರಣೀಯರಿಗೆ ತಬಲ ಸಾಥಿಯಾಗಿ ಬಹಳ ಎತ್ತರಕ್ಕೆ ಸಂಗೀತ ಲೋಕದಲ್ಲಿ ನಿಂತಿರುವರು. ಹಾಗೆಯೇ ಪಂಡಿತ್ ನಾಗರಾಜ್ ರಾವ್ ಹವಾಲ್ದಾರ್ ಅವರು ಅಪರೂಪದ ಗಾಯಕರು. 

ಇವರ ಮಗ ಓಂಕಾರ್ ಹವಾಲ್ದಾರ್ ಅವರು ಅತ್ಯಂತ ಪ್ರತಿಭಾವಂತ ಯುವ ಪ್ರತಿಭೆಯಾಗಿ ಬೆಳೆದಿರುವಂಥವರು. ಒಮ್ಮೆ ಪತ್ರಿಕೆಗಳಲ್ಲಿ ಓಂಕಾರ್ ಅವರು ಅಫ್ಘಾನಿಸ್ತಾನದಲ್ಲಿ ಭಾರತದ ಸಂಗೀತದ ರಾಯಭಾರಿಯಾಗಿ, ಅಲ್ಲಿಯ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಗೀತ ಹೇಳಿ ಬಂದರು ಎಂದು ಓದಿದಾಗ ಖುಷಿಯಾಯಿತು. ನಂತರ ಅದಕ್ಕೆ ಸಂಬಂಧಿಸಿದ ಅವರ ಅನುಭವಗಳನ್ನು ಕೇಳಿ ಬ್ಯೂಟಿಫುಲ್ ಅನ್ನಿಸಿತು.

ಇಂದು ಪಂಡಿತ್ ಸಮೀರ್ ಚಟರ್ಜಿ ಯವರು ಅಫ್ಘಾನಿಸ್ತಾನದ ಸಾಂಸ್ಕೃತಿಕಲೋಕ ದಲ್ಲಿ ಚಿರಪರಿಚಿತರು. ಅಲ್ಲಿಯ ಸರಕಾರ ಮತ್ತು ಸಮಾನ ಮನಸ್ಕರು ಪಂಡಿತ್ ಚಟರ್ಜಿಯಂಥವರಿಗೆ ರಕ್ಷಣೆ ಕೊಡುತ್ತಿದ್ದರೂ; ವೈಯಕ್ತಿಕ ಆತ್ಮಸ್ಥೈರ್ಯವೂ ಬಹಳ ಮುಖ್ಯ. ತಾಲಿಬಾನ್ ಮತ್ತು ಅದರ ಪ್ರೇರಿತ ಸಂಘಟನೆಗಳು ಅಲ್ಲಿ ಒಟ್ಟು ಮಾನವೀಯ ಸಂಬಂಧಗಳನ್ನು ಮುರಿಯುತ್ತಿರುವ ಸಮಯದಲ್ಲಿ ಯಾವುದೇ ಸಮಾಜದಲ್ಲಿ ಹಿಂಸೆಯೇ ಕೊನೆಯಲ್ಲ ಎಂದು ಜನಸಮುದಾಯಕ್ಕೆ ಧೈರ್ಯವನ್ನು ತುಂಬುವುದು ಅತ್ಯಂತ ಮಹತ್ವಪೂರ್ಣವಾದದ್ದು.

ಅದರಲ್ಲೂ ಸಮೀರ್ ಚಟರ್ಜಿಯಂಥವರು ಎಂತೆಂಥ ಅಪೂರ್ವ ಕಲಾವಿದರಿಗೆ ತಬಲ ನುಡಿಸುತ್ತ; ಅವರ ಮಾನಸಿಕ ದುಗುಡ, ಧುಮ್ಮಾನ ಮತ್ತು ಆತಂಕಗಳು ನಾದದ ರೂಪದಲ್ಲಿ ತಲುಪುವಾಗ; ಅದರ ಮಿಡಿತಕ್ಕೆ ಬೆರಳಿನಲ್ಲಿ ವಿಷಾದ ತುಂಬಿಕೊಂಡು ಧ್ವನಿಯನ್ನು ಹಿಡಿದಿಡುವುದು ಅಷ್ಟು ಸುಲಭದ ಕೆಲಸವಲ್ಲ. ಅದು ಬೆರಳುಗಳ ಚಮತ್ಕಾರದಿಂದ ಸ್ಪಂದಿಸುವುದಿಲ್ಲ. ಅಭಿರುಚಿ ಮತ್ತು ಮಾನಸಿಕ ಸ್ಥೈರ್ಯದಿಂದ ಬೆರಳೆಂಬ ಚರ್ಮದ ವಾಹಕದಿಂದ ಇನ್ನೊಂದು ಚರ್ಮದ ವಾಹಕಕ್ಕೆ ಮುಟ್ಟಿ ಮುಟ್ಟಿ ಜೀವ ತುಂಬುವುದಿದೆಯಲ್ಲ ಎಷ್ಟು ಅದ್ಭುತವಾದದ್ದು. 

ಇದನ್ನು ಅರಿತದ್ದರಿಂದಲೇ ಪಂಡಿತ್ ಚಟರ್ಜಿಯವರು ಧೈರ್ಯವಾಗಿ ಓಂಕಾರ್ ಅಂಥವರನ್ನು ಜೊತೆಗಿಟ್ಟುಕೊಂಡು; ಅಲ್ಲಿಯ ಜನರ ಮಧ್ಯೆ ನಿಂತು ನಾವು ನಿಮ್ಮೆಡನೆ ಇದ್ದೇವೆ, ಎಲ್ಲಾ ರೀತಿಯ ಹಿಂಸೆಗೂ ಕೊನೆಯೆಂಬುದೊಂದು ಇರುತ್ತದೆ ಎಂದು ಅರಿವು ಮೂಡಿಸುವುದಿದೆಯಲ್ಲ ನಿಜವಾಗಿಯೂ ಸ್ಮರಣೀಯವಾದದ್ದು. ಇದಕ್ಕೆಲ್ಲ ಪೂರಕವಾಗಿ ಅವರ ನಲವತ್ತೈದು ನಿಮಿಷಗಳ ಮಾತು ಎಲ್ಲೋ ಅವರ ತಬಲದ ಧ್ವನಿಪೂರ್ಣತೆ ತರಂಗಗಳ ರೂಪದಲ್ಲಿ ಸಭಿಕರ ಮನಸ್ಸಿನಲ್ಲಿ ಆವರಿಸಿಕೊಳ್ಳುತ್ತಿತ್ತು. 

ಅದಕ್ಕೆ ತಕ್ಕಂತೆ ಅವರು ತೋರಿಸುತ್ತಿದ್ದ ನಾನಾ ರೀತಿಯ ಚಿತ್ರಗಳು ಒಂದು ರೀತಿಯಲ್ಲಿ ಆತಂಕವನ್ನು ಮೂಡಿಸುತ್ತಿತ್ತು. ಇಷ್ಟಾದರೂ ಅಲ್ಲಿಯ ಹುಡುಗ ಹುಡುಗಿಯರು ಧೈರ್ಯವಾಗಿ ಭಾಗವಹಿಸುತ್ತ ನಮ್ಮ ಹಾಡು ಮತ್ತು ಧ್ವನಿಯ ಮೂಲಕ ಸುಖದ ದಿನಗಳಿಗಾಗಿ, ನೆಮ್ಮದಿಯ ದಿನಗಳಿಗಾಗಿ ಕಾಯೋಣ ಎಂದು ಆತ್ಮಾಭಿಮಾನವನ್ನು ಶ್ರೀಮಂತಗೊಳಿಸಿಕೊಳ್ಳುವುದು ಮೆಚ್ಚು ವಂಥದ್ದು. 

ಅದೇ ಸಮಯಕ್ಕೆ ಇದಕ್ಕೆಲ್ಲ ಅನುಕೂಲವಾಗುವಂತೆ ಕಲಾತ್ಮಕ ಭವನಗಳು ನಿರ್ಮಾಣವಾಗುತ್ತಿರುವುದನ್ನು ಕಂಡು ಸಂತೋಷವಾಯಿತು. ಇದಕ್ಕೆಲ್ಲ ಬೆಂಬಲ ಎಂಬಂತೆ ಕ್ರಿಕೆಟ್ ಟೀಮ್ ಅಸ್ತಿತ್ವಕ್ಕೆ ಬಂದಿರುವುದನ್ನು ಕಂಡು ‘ಸಾಮಾಜಿಕವಾಗಿ ಭಾಗವಹಿಸುವುದು’ ನಮ್ಮೆಲ್ಲರ ಜವಾಬ್ದಾರಿ ಎಂಬ ಮನಸ್ಥಿತಿ ಯುವ ಜನಾಂಗದಲ್ಲಿ ಹೆಚ್ಚಾಗಲು ಸಾಧ್ಯವಿರುತ್ತದೆ. ಚರ್ಚೆಯ ಸಂದರ್ಭದಲ್ಲಿ ಎಷ್ಟೊಂದು ಆತ್ಮವಿಶ್ವಾಸದಿಂದ ಉತ್ತರಿಸುತ್ತಿದದರು. ಯಾರೋ ಒಬ್ಬರು ‘‘ಒಂದು ಕಾಲದಲ್ಲಿ ಅಫ್ಘಾನಿಸ್ತಾನವೂ ಹಿಂದೂಸ್ತಾನವೇ ಆಗಿತ್ತು ಅಲ್ಲವೇ?’’ ಎಂದು ಕೇಳಿದಾಗ, ವಿನಯದಿಂದಲೇ ‘‘ಎಂದೂ ಆಗಿರಲಿಲ್ಲ’’ ಎಂದರು.

ಪಂಡಿತ್ ಸಮೀರ್ ಚಟರ್ಜಿಯವರು ಬಹುದೊಡ್ಡ ಸಾಂಸ್ಕೃತಿಕ ರಾಯಭಾರಿಯಾಗಿ; ವೈಯಕ್ತಿಕ ತೊಂದರೆಗಳನ್ನು ಮತ್ತು ಆತಂಕಗಳನ್ನು ಬದಿಗಿಟ್ಟು ಅಲ್ಲಿಯ ಜನರ ಮಿಡಿತಕ್ಕೆ ತಬಲದ ಧ್ವನಿಯನ್ನು ತಲುಪಿಸುತ್ತಿದ್ದಾರೆ. ಇದಕ್ಕಾಗಿ ತಮ್ಮಂತೆ ಯೋಚಿಸುವ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಕಲಾವಿದರನ್ನು, ಲೇಖಕರನ್ನು ಒಳಗೆ ಬಿಟ್ಟುಕೊಳ್ಳಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ನಾವೆಲ್ಲ ನಿಜವಾಗಿಯೂ ಕೈಜೋಡಿಸಬೇಕು ಮತ್ತು ಬೇರೆಬೇರೆ ರೂಪದಲ್ಲಿ ಸಹಕಾರಿಯಾಗಿ ನಿಲ್ಲಬೇಕು. ಈ ದೃಷ್ಟಿಯಿಂದ ಡಾ. ಜಿ. ರಾಮಕೃಷ್ಣ ಅವರು ಮತ್ತು ಅವರ ಪ್ರೀತಿಯ ಶಿಷ್ಯ ವಿನಾಯಕ ಕುಲಕರ್ಣಿಯವರು ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರ ಸ್ಮರಣೀಯ ನೆಪದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಿದ್ದು ಸಾರ್ಥಕವಾದ ಕೆಲಸ. 

ಕೊನೆಗೂ ಚಟ್ಟೋಪಾಧ್ಯಾಯ ಅಂಥವರು ತಮ್ಮ ತತ್ವಶಾಸ್ತ್ರದ ಮೂಲಕ. ಮನುಷ್ಯರ ನಡುವಿನ ‘ಅಗೋನಿ’ ಅರ್ಥಾತ್ ಮರಣಯಾತನೆಯನ್ನು ಕಡಿಮೆ ಮಾಡುವುದೇ ಆಗಿರುತ್ತದೆ. ದೇವರು ಮತ್ತು ಧರ್ಮವನ್ನು ಮೀರಿದ್ದು ‘ಮಾನವಧರ್ಮ’ ಎಂದು ಆಲಾಪನೆಯಾಗಿ ಪಿಸುಗುಡಿತ್ತಿರುವುದು ಸಂಗೀತ, ಕಾರ್ಯಕ್ರಮದ ಕೊನೆಯಲ್ಲಿ ಪಂಡಿತ್ ಚಟರ್ಜಿಯವರಿಗೆ ನಮಸ್ಕರಿಸುವಾಗ ನಮ್ಮಲ್ಲಿ ಆವರಿಸಿಕೊಂಡಿದ್ದರು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...