Thursday, January 30, 2014

ಇಲಿಬೋನು


ರಘು ನಿಡುವಳ್ಳಿ  ಗೆದ್ದದ್ದು ನಾನೇ ಆದರೂ ಸೋತದ್ದು ಯಾರು?
ನಿರ್ಧರಿಸಬೇಕಾದ್ದು ನೀವು.

ಈ ಒಂದಂಕದ ನಾಟಕಕೆ ಪಾತ್ರಧಾರಿಗಳು ಇಬ್ಬರೆ
ಒಂದು ನಾನು, ಮತ್ತೊಂದು ಯಕಶ್ಚಿತ್ ಇಲಿ!
ಕ್ಷಮಿಸಿ, ಒಂದು ಭಯಾನಕ ಮೂಷಿಕ!!
ಆಕಾರ ಚಿಕ್ಕದೆ ಆದರೆ ಮಾಡಿದ ಅವಾಂತರ ದೊಡ್ಡದು
ಹಾಗಾಗಿ ಈ ಗುಣವಾಚಕ!

ಎಲ್ಲ ಶುರುವಾದ್ದದ್ದು ಎಂಟು ದಿನಗಳಹಿಂದೆ,
ಪಾಸ್‍ಪೋರ್ಟಿಗಾಗಿ ಎಸೆಸಲ್ಸಿ ಮಾರ್ಕ್ಸ್ ಕಾರ್ಡ್ ಹುಡುಕಲು ಹೊರಟಾಗ,
ಪೇರಿಸಿಟ್ಟಿದ ದಾಖಲಾತಿಗಳ ಅಡಿಯಿಂದ
ಚಂಗನೆ ಜಿಗಿದು ಹೋಗಿದ್ದ ಈ ಮಹಾಶಯ!
ಮಾರ್ಕುಗಳನ್ನ ಸ್ವಾಹ ಮಾಡಿ ಬರೀ ಕಾರ್ಡು ಉಳಿಸಿದ್ದ.
ಕಡತಗಳು ಅಸ್ತಿತ್ವ ಕಳೆದುಕೊಂಡ ತರಗೆಲೆಗಳಾಗಿದ್ದವು.
ಹಳೆಯ ಟ್ರಂಕು ಅಕ್ಷರಶಃ ಸುಲ್ತಾನರ ದಾಳಿಗೆ ಸಿಕ್ಕು ಮುಕ್ಕಾದ ಹಾಳು ಹಂಪೆಯಾಗಿತ್ತು.

ಇದರಿಂದಾದ ಎಡವಟ್ಟು,
ನಾನು ನಾನೇ ಎಂಬುದಕ್ಕೆ ಮಾಡಿಸಿದ ‘ಅಫಿಡವಿಟ್ಟು’
ಪತ್ರಗಳ ತಾಪತ್ರಯ ಎಲ್ಲವೂ ಕ್ಷಮಾರ್ಹ.
ಆದರೆ,
ದೇವಕಿಗೆ ಕೊಡಲು ಧೈರ್ಯ ಸಾಲದೆ
‘ಲವಲವಿಕೆ’ಯ ಹಾಳೆಗಳ ನಡುವೆ ಹುದುಗಿಸಿಟ್ಟಿದ್ದ ಪ್ರೇಮಪತ್ರ
ಮೊದಲ ಪ್ರೇಮದ ‘ನೆನಪಿನ ಶೇಷ ‘
ಅನಾಮತ್ತಾಗಿ ಅವಶೇಷವಾಗಿ ಕಣ್ಣೆದುರೆ ಚದುರಿ ಬಿದ್ದಿರುವಾಗ
ಎದೆಯಾಳದಿಂದ ಒತ್ತರಿಸಿಕೊಂಡು ಬಂದ ಆವೇಶ..
.......

ಯುದ್ದ ಘೋಷಣೆಯಾದ ದಿನದಿಂದಲೂ ನನ್ನದು ಎಡಬಿಡದ ಸಿದ್ದತೆ
ಮೊದಲಿಗೆ ಕರಾರಿನ ಮೇಲೆ ಕರೆತಂದ ಪಕ್ಕದ ಮನೆಯ ಬೆಕ್ಕು!
ಅದರದ್ದು ಹೆಚ್ಚು ಕಡಿಮೆ ಟಾಮೆಂಜರಿ ಕತೆ.
ಬೆನ್ನತ್ತಿ ಸೋತು ಹೈರಾಣಾಗಿ,
ಅರ್ದಲೀಟರ್ ಲೀಟರ್ ಹಾಲನ್ನ ಹೊಟ್ಟೆಗೆ ಸುರುವಿಕೊಂಡು
ಯುದ್ದವಿರಾಮ ಘೋಷಿಸಿ ನಿರುಮ್ಮಳ ಮಲಗಿತು.
ಮಿಕಮಿಕನೆ ನೋಡುತ್ತಿದ್ದ ‘ಮಿಕ’ದ ಕಣ್ಣಲ್ಲಿ
ನನ್ನಡೆಗೆ ಮತ್ತದೆ ಅಣಕ
ನಂತರದ್ದು ಬ್ರಹ್ಮಾಸ್ತ್ರ ‘ಪಾಷಣ’!
ಆದರೆ ಅದರ ಪಾಶಕ್ಕೂ ಸಿಗದೆ
ನನ್ನ ಕ್ಲೇಶ ಕೊನೆಯಾಗದೆ ಮೊರೆಹೋದದ್ದು
ಇಲಿಬೋನಿಗೆ!!
...

ಈಗ ಬೋನಿನೊಳಗೆ ಬೊಂಡದ ಆಮಿಷಕ್ಕೆ
ಬಲಿಯಾದ ನನ್ನ ವೈರಿ , ಆಚೆ ನಾನು.
ಇಬ್ಬರ ನಡುವೆ ಪ್ರಶ್ನೆಗಳ ಮುಖಾಮುಖಿ.
ನಿಜವಾಗಿಯೂ ಆ ಪ್ರೇಮಪತ್ರದಲ್ಲಿ ಪ್ರೇಮವಿತ್ತಾ?
ಬಹುಶಃ ಪ್ರೇಮದ ಘಾಟುಮುಗಿದು ನೆನಪಿನ ಕಮಟು ಮಾತ್ರವೇ ಉಳಿದಿತ್ತೇನೋ?
ತರ್ಕಿಸಬಲ್ಲ ಮನುಷ್ಯನನ್ನೇ ಹೀಗೆ ಬೋನಿಗೆ ಸಿಕ್ಕಿಸುವ ‘ಆಮಿಷ’ ಯಾವುದುಗೊತ್ತ?
ಬಂಧಿಯಾಗಿದ್ದರು ಬೊಂಡವ..ಮೆಲ್ಲುತ್ತಿದ್ದ ಇಲಿಯನ್ನ ಕಂಡಾಗ
ನನಗನ್ನಿಸಿದ್ದು ‘ಪ್ರೇಮ’ವೆಂಬ ಎರಡಕ್ಷರವೆ!!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...