Saturday, January 11, 2014

ಬೆಳೆಯುವ ಪೈರು ಮೊಳಕೆಯಲ್ಲಿ......

ಯೋಗೀಶ್ ಮಾಸ್ಟರ್ಮಕ್ಕಳನ್ನು ಕುರಿತು ಬೆಳೆಯುವ ಪೈರು ಮೊಳಕೆಯಲ್ಲಿ ಅಂತ ಸರ್ವೇ ಸಾಧಾರಣವಾದ ಮಾತೊಂದನ್ನು ನಾವು ಯಾವಾಗಲೂ ಕೇಳುತ್ತಿರುತ್ತೇವೆ. ಮಕ್ಕಳನ್ನು ನೋಡಿದಾಗ ಅವರು ಬೆಳೆದು ವಯಸ್ಕ ನಾಗರಿಕರಾದಾಗ ಹೇಗಿರುತ್ತಾರೆಂದು ಈಗಲೇ ತಿಳಿಯುತ್ತದೆ ಎಂಬ ಅರ್ಥದಲ್ಲಿ ಅದನ್ನು ಬಳಸುತ್ತೇವೆ. ಆದರೆ, ಮಕ್ಕಳ ವಿಷಯದಲ್ಲಿ ಬಿತ್ತಿದಂತೆ ಬೆಳೆ ಎಂಬುದು ನಾನು ಉಪಾಧ್ಯಾಯನಾಗಿ, ಮಕ್ಕಳನ್ನು ಗಮನಿಸುವ ವಯಸ್ಕನಾಗಿ, ನನ್ನದೇ ಮಕ್ಕಳ ಪೋಷಕನಾಗಿ ಕಂಡುಕೊಂಡಿರುವ ಸತ್ಯ.
ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವಗಳು ಮಕ್ಕಳ ಹದವಾದ ಮನೋಭೂಮಿಯಲ್ಲಿ, ಫಲವತ್ತಾದ ಸೆಲೆಯಲ್ಲಿ ಮತ್ತು ಬಹು ಹಸಿಯಾದ ಚೈತನ್ಯದ ಮಣ್ಣಿನಲ್ಲಿ ಎಂತೆಂತಹ ಬೀಜಗಳನ್ನು ಬಿತ್ತಿ ಫಸಲನ್ನು ಕಾಣುವರು ಎಂಬುದನ್ನು ನಾವು ನಿಷ್ಪಕ್ಷಪಾತವಾಗಿ ಗಮನಿಸಬೇಕಾದ ಸಂಗತಿ. ದಯಮಾಡಿ ಗಮನಿಸಲೇ ಬೇಕಾದ ವಿಷಯವೆಂದರೆ, ಫಸಲಿನ ಫಲದ ಸ್ವರೂಪಕ್ಕೆ ಕಾರಣ ಬಿತ್ತಿರುವ ಬೀಜದ್ದು!!  

ಇಡೀ ಮನುಕುಲದಲ್ಲಿ ನಾವು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಕಾರ್ಯವೆಂದರೆ, ಮಕ್ಕಳನ್ನು ಬೆಳೆಸುವುದು, ಅವರೊಂದಿಗೆ ವ್ಯವಹರಿಸುವುದು.

ಧರ್ಮ, ದೇವರು, ದೇಶ, ಭಾಷೆ, ರಾಜಕೀಯ, ಸಮಾಜ, ಕಲೆ, ಸಂಸ್ಕೃತಿ; ಎಲ್ಲದಕ್ಕಿಂತ ಮೊದಲ ಆದ್ಯತೆ ಮಕ್ಕಳಿಗೆ ಕೊಡಬೇಕೆನ್ನುವುದು ನನ್ನ ದೃಷ್ಟಿ ಮತ್ತು ಕಳಕಳಿ.

ಇಲ್ಲಿ, ನನ್ನ ಟಾರ್ಗೆಟ್ಟು ದೊಡ್ಡವರು. ಮಕ್ಕಳ ಬಗೆಗಿನ ಕಾಳಜಿಯಿಂದ ಸೋ ಕಾಲ್ಡ್ ದೊಡ್ಡವರ ಜೊತೆ ಸ್ವಲ್ಪ ವಿಷಯಗಳನ್ನ ಹಂಚಿಕೊಳ್ಳೋಣಾಂತ ಮಾತುಗಳನ್ನು ಬರಹದ ರೂಪದಲ್ಲಿ ತಂದುಬಿಟ್ಟಿದ್ದೀನಿ.

ನೇರವಾಗಿ ಹೇಳಣಾಂದ್ರೆ, ನನ್ನ ಅನೇಕ ಸಹ-ಹಿರಿಯರಿಗೆ ಕೇಳಕ್ಕೆ ಪುರುಸೊತ್ತೂ ಇಲ್ಲ, ತಾಳ್ಮೆಯಂತೂ ಮೊದಲೇ ಇಲ್ಲ. ಜೊತೆಗೆ ಇವನು ಹೇಳಿದರೆ ನಾವು ಕೇಳಿಬಿಡಬೇಕಾ ಅನ್ನೋ ಧೋರಣೆ. ಅದಕ್ಕೇ, ಪತ್ರಿಕೆಯಲ್ಲಾದರೆ, ಪುಸ್ತಕದಲ್ಲಾದರೆ, ಸುಮ್ಮನೆ ಹಂಗೆ ತಿರುವಿಹಾಕಿದಾಗ, ವಿಷಯವೇನಾದರೂ ಕಣ್ಣಿಗೆ ಬಿದ್ದಾಗ, ಒಬ್ಬರೇ ಓದಿಕೊಳ್ಳುತ್ತಾ ಇರ‍್ತಾರಲ್ಲಾ, ಆತ್ಮ ವಿಮರ್ಶೆ ಆಗಬಹುದೇನೋ ಅಂತ ಒಂದು ಆಸೆ.

ನಾನು ಇಲ್ಲಿ ಹಿರಿಯರನ್ನು ನಿಷ್ಠೂರವಾಗಿ ಅಂದಾಗ, ಯಾರಾದರೂ ಯಾಕಯ್ಯಾ ನಮಗೆಲ್ಲಾ ಹಾಗೆ ಬೈತೀಯಾ, ಅಂತ ನನ್ನ ಜೊತೆ ಜಗಳಕ್ಕೆ ಬಂದ್ರೆ, ಅವರನ್ನು ಕುಂಬಳಕಾಯಿ ಕಳ್ಳ ಅಂತ ಅಂತೀನಿ. ಹಾಗಾಗಿ ಹೆಗಲು ಮುಟ್ಟಿ ನೋಡಿಕೊಂಡರೂ ಬೇರೆಯವರಿಗೆ ಗೊತ್ತಾಗದ ಹಾಗೆ ಸ್ವಪರೀಕ್ಷೆ ಮಾಡಿಕೊಳ್ಳುವುದು ಸೂಕ್ತವೇನೋ. ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ನಾನೂ ಮಾಡ್ಕೊಳ್ತಿದ್ದೀನಿ ಅನ್ನೋದೂ ಉಂಟು. ಅದೇ ಮೊದಲ ನಿಜ ಕೂಡ.

ಬೆಳೆಯುವ ಮತ್ತು ಅರಳುವ ಮಕ್ಕಳು ನಮ್ಮ ಜೊತೆ ಇರುವಾಗ ಆತ್ಮ ವಂಚನೆಯಿಲ್ಲದೇ, ನಮ್ಮ ತಪ್ಪನ್ನು ನಾವು ತಿದ್ದಿಕೊಳ್ಳಲೇ ಬೇಕು. ಹೇ, ನಾವು ಹಿಂಗೇ ಬಿಡು, ಅಂತ ಆಲಸ್ಯ ಮಾಡಿದ್ರೆ, ನಾವು ನಮ್ಮನ್ನು ನಾವು ಹಾಳು ಮಾಡ್ಕೋಳ್ಳೋದರ ಜೊತೆ, ನಮ್ಮ ಮುಂದಿನ ಪೀಳಿಗೆಯ ಸಂಸ್ಕೃತಿಯನ್ನೂ ಹಾಳು ಮಾಡ್ತೀವಿ. ಸಂಸ್ಕೃತಿ, ಸಂಸ್ಕಾರ ಇತ್ಯಾದಿ ದೊಡ್ಡ ಪದಗಳ ಬಗ್ಗೆ ಮಾತಾಡುವುದಕ್ಕಿಂತ ಸ್ವಲ್ಪ ಕಾಮನ್ ಸೆನ್ಸ್ ಇಟ್ಟುಕೊಂಡು, ಹೃದಯವನ್ನು ಮೆದುವಾಗಿಟ್ಟುಕೊಂಡು, ಮನಸ್ಸನ್ನ ಹದವಾಗಿಟ್ಟುಕೊಂಡು ಮಕ್ಕಳ ಜೊತೆ ಪ್ರಜ್ಞೆಯಿಂದ ವರ್ತಿಸೋಣ. ಮಕ್ಕಳೊಂದಿಗೆ ವ್ಯವಹರಿಸುವಾಗ ನಮಗೆ ಬೇಕಾಗಿರುವುದು ಅಪಾರ ಜ್ಞಾನವೋ, ಪಾಂಡಿತ್ಯವೋ ಅಲ್ಲ. ಸಾಮಾನ್ಯ ಪ್ರಜ್ಞೆ. ನಮಗೆ ನಿಮಗೆ ಮಾತ್ರವಲ್ಲ, ಇಡೀ ಜಗತ್ತಿನ ಜನಕ್ಕೇ ಬೇಕಾಗಿರೋದು ಸಿಕ್ತ್ ಸೆನ್ಸು, ಮಾಸ್ಟರ್ ಮೈಂಡು, ಟುಸ್ಕ ಪುಸ್ಕ ಅಲ್ಲ. ಒಂದು ಚೂರು ಕಾಮನ್ ಸೆನ್ಸ್! 

ಮಕ್ಕಳ ಮನಸ್ಸು ತಬುಲಾ ರಸಾ ಅಂತಾರೆ. ಅಂದರೆ ಖಾಲೀ ಸ್ಲೇಟಂತೆ! ಅವರೊಂದಿಗೆ ನಮ್ಮ ಯಾವುದೇ ಮಾತುಗಳು, ಯಾವುದೇ ವ್ಯವಹಾರಗಳು, ಯಾವುದೇ ವರ್ತನೆಗಳು; ಆ ಖಾಲೀ ಸ್ಲೇಟಲ್ಲಿ ಬರೀ ಬರೆಯುವುದಲ್ಲ, ಕೊರೆಯುವುದು, ಕೆತ್ತುವುದು. ಅವರ ಒಳ ಮನಸ್ಸಿನಲ್ಲಿ ಶಾಶ್ವತ ದಾಖಲಾತಿಯಾಗುವ ಎಲ್ಲಾ ಸಾಧ್ಯತೆಗಳೂ ಇರುವುದರಿಂದ, ಬಹು ಎಚ್ಚರಿಕೆಯಿಂದ ಕೊರೆಯೋಣ.

ಸರಳ ಮಕ್ಕಳು ಮತ್ತು ಅಧಿಕ ಪ್ರಸಂಗಿ ಹಿರಿಯರು !
ಸರಳ ಮಕ್ಕಳು. ಹೌದು, ಮಕ್ಕಳು ಯಾವಾಗಲೂ ಸರಳರೇ.
ನೇರ ಮತ್ತು ಪಾರದರ್ಶಕ ಜೊತೆಗೆ ನಿಷ್ಟುರ.

ಕೊಂಕಿಲ್ಲದವರು, ವ್ಯಂಗ್ಯ ಅರಿಯದವರು, ಕಪಟ ತಿಳಿಯದವರು, ಜೊತೆಗೆ ತಾವು ಸ್ಮಾರ್ಟ್ ಅಂತ ತೋರಿಸಿಕೊಳ್ಳಬೇಕೆಂಬ ತೆವಲು ಇಲ್ಲದವರು.

ತಾವು ಹೇಗಿರುತ್ತಾರೋ ಹಾಗೇ ಇರುವವರು.

ನೋಡುವರ ಕಣ್ಣಿಗೆ ತಾನು ಹೀಗೆ ಕಾಣಿಸಿಕೊಳ್ಳಬೇಕು ಅನ್ನೋ ತಿಕ್ಕಲುತನ ಏನೂ ಇಲ್ಲದವರು. ಒಟ್ಟಾರೆ ಲೋಕದ ಲೌಕಿಕ ಜ್ಞಾನವಿಲ್ಲದ ಮುಗ್ಧರು.

ಅಧಿಕ ಪ್ರಸಂಗಿ ಹಿರಿಯರು.
ಹೌದ್ರೀ ಖಂಡಿತ ಹೌದು. ಬಹಳಷ್ಟು ಜನ, ಅದರಲ್ಲೂ ಮಕ್ಕಳ ವಿಷಯದಲ್ಲಿ ಎಷ್ಟೋ ಜನ ಹಿರಿಯರು ಸಾಮಾನ್ಯವಾಗಿ ಅಧಿಕ ಪ್ರಸಂಗಿಗಳು.

ಕೊಂಕಣ ಸುತ್ತಿ ಮೈಲಾರಕ್ಕೆ ಬರುವವರು. ಪಾರದರ್ಶಕತೆ!!! ಹಾಗಂದ್ರೆ ಏನು?
ಕೊಂಕೇ ಸುಖ, ವ್ಯಂಗ್ಯವೇ ಹಾಸ್ಯ, ಯಾವುದು ಹಾಸ್ಯ, ಯಾವುದು ಅಪಹಾಸ್ಯ ಅಂತ ಗೊತ್ತಿಲ್ದೇ ಸ್ಯಾಡಿಸ್ಟ್‌ಗಳ ಥರ ಬೇರೆಯವರಿಗೆ ನೋವು ಕೊಟ್ಟು ನಗುವವರು.

ತಾವು ಸ್ಮಾರ್ಟ್ ಅಂತ ತೋರಿಸ್ಕೊಳ್ಳೋಕೆ ಹೋಗಿ ಪೆಕ್ರುಪೆಕ್ರಾಗಿ ಆಡ್ಕೊಂಡಿರುವವರು.
ತಮಗೆ ಬೃಹತ್ ಬ್ರಹ್ಮಾಂಡವೇ ತಲೇಲಿದೆ ಅಂತ, ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕುವವರು.  ತಾನೊಬ್ಬ ಬೃಹಸ್ಪತಿ, ಅವನಿಗೇನು ಗೊತ್ತು, ಇವನಿಗೇನು ಗೊತ್ತು ಅಂತ ಎಲ್ಲರನ್ನೂ ಲೇವಡಿ ಮಾಡುವವರು.
ಒಟ್ಟಾರೆ ತಾನು ತಿಳಿದಿರೋದೇ ಜ್ಞಾನ, ಅದೇ ಕರೆಕ್ಟಾಗಿರೋದು ಅಂತ ತಿಳಿದಿರೋ ಅಜ್ಞಾನಿಗಳು.

ಇಂಥಾ ದೊಡ್ಡವರ ಸಾಲಿಗೆ ಸೇರಲು ಇಷ್ಟ ಪಡದೇ, ಸರಳ ಮಕ್ಕಳ ತಂದೆಯಾಗಿ, ಮಕ್ಕಳ ವಿಷಯದಲ್ಲಿ ನಾನು ಕಂಡುಕೊಂಡ ದೊಡ್ಡವರ ಅಧಿಕ ಪ್ರಸಂಗತನಗಳನ್ನು ಗಮನಕ್ಕೆ ತರುತ್ತಾ ಹೋಗುತ್ತೇನೆ. ತಿಳಿಯದೇ ನಾವೂ ಅಂತೆಯೇ ಮಾಡುವಂತಿದ್ದರೆ, ತಕ್ಷಣ ತಿದ್ದುಕೊಂಡುಬಿಡೋಣ. ಅಥವಾ ಅಂತಹ ಇತರರ ಗಮನಕ್ಕೆ ಈ ವಿಷಯವನ್ನು ಮನವರಿಕೆ ಮಾಡಿಕೊಡೋಣ. ಒಟ್ಟಾರೆ ಇಲ್ಲಿ ನಮ್ಮ ಉದ್ದೇಶ, ಮಕ್ಕಳ ಎಳೆಯ ಮನಸ್ಸಿಗೆ ಘಾಸಿ ಮಾಡುವಂತಹ ಯಾವುದೇ ಕೆಲಸವನ್ನು ಮಾಡಬಾರದು ಎಂದು. ಏಕೆಂದರೆ, ಅದು ಕೇಡಿನ ಬೀಜವನ್ನು ಉತ್ತಿ ಬೆಳೆಯುವುದು! 

ಚೋ ಚ್ವೀಟ್
ಚೋ ಚ್ವೀಟ್ ಅಂತ ಧಾವಿಸಿ ಮಗುವನ್ನು ಎತ್ತಿಕೊಳ್ಳುವ ಮಂದಿ,
ನನಗೆ ಹಸಿದಿರುವ ಪ್ರಾಣಿ ತನ್ನ ಬೇಟೆಯ ಮೇಲೆ ಎರಗುವಂತೆ ಕಾಣುತ್ತಾರೆ.
ಆ ಮಗುವಿಗೆ ತಾನು ಗೊತ್ತಿರಲಿ, ಗೊತ್ತಿಲ್ಲದಿರಲಿ ಗಬ್ಬಕ್ಕನೆ ಎತ್ತಿಕೊಂಡು ಲೊಚ್ಚಕ್ಕನೆ ಮುತ್ತು ಕೊಟ್ಟರೆ,
ಆ ಮಗುವಿಗೆ ರೇಗಿ, ಇರಿಟೇಟ್ ಆಗಿ, ಅದರ ಹೃದಯ ಬಾಯಿಗೆ ಬಂದು ಬೆದರಿ ಅಳುವುದೇ ಫಲ.
ಅಸಹಾಯಕ ಸ್ಥಿತಿಯಲ್ಲಿನ ಸರಳ ಮಗುವಿಗೆ ದೊಡ್ದವರು ಮಾಡುವ ಮೊಟ್ಟ ಮೊದಲ ಶೋಷಣೆಯೇ ಆ ಮಗುವಿನ ಸಮ್ಮತಿಯಿಲ್ಲದೇ ಅದನ್ನು ಎತ್ತಿಕೊಳ್ಳುವುದು. ಅದರ ಹಿತವಾದ, ಪರಿಚಿತವಾದ, ಮುದವಾದ, ಅದರದೇ ಆದ ಕ್ಷೇತ್ರದ ಪರಿಧಿಯಲ್ಲಿ ಅತಿಕ್ರಮಣ ಮಾಡುವುದು.

ನಿಮಗೆ ಮುದ್ದಾಗಿ ಬಿಟ್ಟರೆ ಸಾಕೇ? ಆ ಮಗುವಿಗೆ ನಿಮ್ಮ ಸಾಂಗತ್ಯ ಬೇಕೇ ಬೇಡವೇ ಅದನ್ನು ನೀವು ತಿಳಿಯುವುದು ಬೇಡವೇ? ನಿಮ್ಮ ಸಂತೋಷಕ್ಕೆ, ನಿಮ್ಮ ಮನರಂಜನೆಗೆ ಅದನ್ನು ಎತ್ತಿಕೊಳ್ಳುವುದು ಎಂದರೆ ಏನರ್ಥ? ಅದು ಅಂಗಡಿಯಲ್ಲಿ ನೀವು ನಿಮಗಾಗಿ ಕೊಂಡಿರುವ ಆಟದ ಸಾಮಾನಲ್ಲ.

ನೀವು ಅದರ ಅನುಮತಿಯಿಲ್ಲದೇ ಎತ್ತಿಕೊಳ್ಳುವ ಶೋಷಣೆಗೆ ಅದರ ಪ್ರತಿಭಟನೆಯೇ ಅಳು.
ಹಾಗಿದ್ದರೂ ಕೆಲವರು ಬಿಡುವುದಿಲ್ಲ. ಅದು ಕೊಸರಿಕೊಂಡು, ಅರಚಿ, ಅತ್ತು, ರಂಪಾಟ ಮಾಡುತ್ತಿದ್ದರೂ, ಚೋ ಚ್ವೀಟ್ ಅಂತ ತಬ್ಬಿಕೊಂಡು, ಲೊಚ ಲೊಚ ಅಂತ ಮುಖದ ಮೇಲೆ ಮುತ್ತುಕೊಟ್ಟು ದೌರ್ಜನ್ಯ ಮಾಡಿಬಿಡುತ್ತಾರೆ.

ಮೊದಲು ನೀವು ಮಗುವನ್ನು ನೋಡಿದಾಗ, ನಗು ಮುಖದಿಂದ ಮಾತಾಡಿಸಿ. ಮೃದುವಾಗಿ, ಮೆದುವಾಗಿ ವರ್ತಿಸಿ, ಅದು ಯಾರ ಸುಪರ್ದಿನಲ್ಲಿರುತ್ತದೆಯೋ ಅವರ ಜೊತೆ ಸಲಿಗೆಯಿಂದಲೋ, ಆತ್ಮೀಯವಾಗಿಯೋ ಇರಿ. ಅದಕ್ಕೆ ನೀವು ರಾಕ್ಷಸರೋ, ದೆವ್ವಗಳೋ ಅಲ್ಲ, ನಮಗೆ ಗೊತ್ತಿರುವವರು, ನಮ್ಮ ಮನೆಯವರಿಗೆ ಹತ್ತಿರವಾಗಿರುವವರು ಅನ್ನೋ ಭಾವನೆ ಬರುತ್ತದೆ. ನಿಮ್ಮ ಕೈಗಳನ್ನು ಚಾಚಿ, ನಗುತ್ತಾ ಕರೆಯಿರಿ. ಬಂದರೆ ನಿಮ್ಮ ಭಾಗ್ಯ. ಆನಂದಿಸಿ. ಮುಖ ಆ ಕಡೆ ತಿರುಗಿಸಿಕೊಂಡು ಬಿಟ್ಟು ಬರಲಿಲ್ಲವೋ, ಮುಂದಿನ ದಿನಗಳಲ್ಲಿ ಲಭಿಸಬಹುದಾದ ಅದರ ಸಾಮಿಪ್ಯದ ಭಾಗ್ಯಕ್ಕೆ ಕಾಯಿರಿ.  

ಯಾವುದೇ ಮಗುವನ್ನು ಎತ್ತಿಕೊಳ್ಳುವ ಮೊದಲು ಅದರ ಸಕಾರಾತ್ಮಕ ಸಂಕೇತಕ್ಕೆ ಕಾಯಿರಿ. ಅದು ಎತ್ತಿಕೊಳ್ಳಲು ಒಪ್ಪಿಗೆ ನೀಡಿದರೆ ಮಾತ್ರ ಎತ್ತಿಕೊಳ್ಳಿ. ಅದರ ಕ್ಷೇತ್ರದೊಳಗೆ ಯಾರದೇ ಅತಿಕ್ರಮಣ ಸಲ್ಲದು. ಇದು ಮಕ್ಕಳ ವಿಷಯದಲ್ಲಿ ಮಾತ್ರವಲ್ಲ. ದೊಡ್ಡವರ ವಿಷಯದಲ್ಲಿಯೂ, ಮುದ್ದಿನ ಪ್ರಾಣಿಗಳ ವಿಷಯದಲ್ಲಿಯೂ ಸಹ!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...