Friday, January 24, 2014

ಡಬ್ಬಿಂಗ್ ವಿವಾದ ಏಕೆ ?

ಟಿ ಕೆ ತ್ಯಾಗರಾಜ್

ನನಗೆ ಕನ್ನಡ ಚಲನಚಿತ್ರವನ್ನು ಕನ್ನಡದಲ್ಲೇ ನೋಡುವುದು ಇಷ್ಟ.ಹಾಗೇ ತಮಿಳು,ತೆಲುಗು,ಮಲಯಾಳಮ್,ಹಿಂದಿ,ಇಂಗ್ಲಿಷ್ ಚಿತ್ರಗಳನ್ನು ಆಯಾ ಭಾಷೆಯಲ್ಲೇ ನೋಡುವುದು ಅಷ್ಟೇ ಇಷ್ಟ.ಬಹುತೇಕ ಬಿಳಿಯರೇ(ಕರಿಯರೂ ಇರುತ್ತಾರೆ)ನಟಿಸಿರುವ ಇಂಗ್ಲಿಷ್ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ನನಗೆ ಮಾತನಾಡುವ ಯಂತ್ರಗಳ ಹಾಗೆ ಕಾಣುತ್ತದೆ.ಹಾಗೆ ಮೋಹನ್ ಲಾಲ್ ನಟಿಸಿದ ಮಲಯಾಳಂ,ಸಲ್ಮಾನ್ ಖಾನ್ ನಟಿಸಿದ ಹಿಂದಿ,ಸೂರ್ಯ ನಟಿಸಿದ ತಮಿಳು,ನಾಗಚೈತನ್ಯ ನಟಿಸಿದ ತೆಲುಗು ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದಾಗ ಅದೇ ಅನುಭವ ಉಂಟಾಗುತ್ತದೆ.
ಆಯಾ ಭಾಷೆಯ ಬನಿಯನ್ನು ಅದರ ಮೂಲ ಸ್ವರೂಪದಲ್ಲೇ ಅನುಭವಿಸುವುದರಲ್ಲಿ ಇರುವ ಖುಷಿ ಡಬ್ ಮಾಡುವುದರಿಂದ ಸಿಗಲಾರದು.ಒಂದು ಭಾಷೆಯ ನುಡಿಗಟ್ಟು ಅನುವಾದಗೊಂಡಾಗ ಅದರ ನಿಜಾರ್ಥ,ಗೂಢಾರ್ಥಕ್ಕೂ ಧಕ್ಕೆ ಉಂಟಾಗುತ್ತದೆ.ಕೆಲವು ತಿಂಗಳ ಹಿಂದೆ ಪುನೀತ್ ರಾಜ್ ಕುಮಾರ್ ನಟಿಸಿದ ಕನ್ನಡ ಚಿತ್ರವೊಂದು ಥಿಯೇಟರ್ ನಿಂದ ಮಾಯವಾಗಿ ಕನ್ನಡ ಟಿ.ವಿ.ವಾಹಿನಿಗಳಲ್ಲಿ ಪ್ರಸಾರವಾಗುವ ಮುನ್ನವೇ ಹಿಂದಿ ಭಾಷೆಗೆ ಡಬ್ ಆಗಿ ಹಿಂದಿ ಟಿ.ವಿ.ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತ್ತಿತ್ತು.ಪುನೀತ್ ನಟಿಸಿದ ಚಿತ್ರವನ್ನು ನೋಡಿರದ ಕಾರಣ ಅದನ್ನು ನೋಡಬೇಕೆಂದು ಕುಳಿತರೂ ಒಂದು ನಿಮಿಷವೂ ನೋಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಪುನೀತ್ ಬಾಯಲ್ಲಿ ಹಿಂದಿ ಕೇಳುವುದು ನನಗೆ ಕಿರಿಕಿರಿ ಉಂಟುಮಾಡುತ್ತಿತ್ತು.ಲಂಕೇಶ್ ಬರೆದ "ಅವ್ವ" ಕವನವನ್ನು ಕನ್ನಡದ ಮಕ್ಕಳಿಗೆ ಕನ್ನಡ ಪಠ್ಯ ಪುಸ್ತಕದಲ್ಲಿ ಒದಗಿಸುವ ಬದಲು ಅದರ ಇಂಗ್ಲಿಷ್ ಅನುವಾದವನ್ನು ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿ ಪ್ರಕಟಿಸಿ ಓದಿಸುವಂಥ ಶಿಕ್ಷೆ ಅದು.ಉಳಿದವರಿಗೆ ಹೇಗೋ ಏನೋ ನನಗೆ ಗೊತ್ತಿಲ್ಲ. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಹುಟ್ಟಿದ ನನಗೆ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಇಂಗ್ಲಿಷ್ ಫಿಲ್ಮ್ ಮಾರ್ನಿಂಗ್ ಶೋ ನೋಡುವ ಅವಕಾಶ ಇರುತ್ತಿತ್ತು. ಹಾಗೇ ಹಿಂದಿ,ತಮಿಳು,ಮಲಯಾಳಂ ಭಾಷೆಗಳ ಒಳ್ಳೆ ಚಿತ್ರಗಳನ್ನು ನೋಡಲು ಸಾಧ್ಯವಾಗಿದ್ದು ಇಲ್ಲೇ.ಈಗ ಅಲ್ಲಿ ಇಂಗ್ಲಿಷ್ ಚಿತ್ರಗಳ ಮಾರ್ನಿಂಗ್ ಶೋ ಇದ್ದಂತಿಲ್ಲ.
ನಾನು ಹುಟ್ಟಿ ಬೆಳೆದ ಗೌಳಿ ಬೀದಿಯಲ್ಲಿ ತಮಿಳು,ತೆಲುಗು,ಮಲಯಾಳಂ,ತುಳು ಭಾಷಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದರು.ಕೊಡಗಿನವನಾದ ಕಾರಣ ಕೊಡವ ಮತ್ತು ಅರೆಭಾಷೆ,ಬ್ಯಾರಿ ಸೇರಿದಂತೆ ಈ ಎಲ್ಲ ಭಾಷೆಗಳು ತಕ್ಕಮಟ್ಟಿಗೆ ಗೊತ್ತು. ಗೋಕಾಕ್ ಚಳವಳಿ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿಯಾಗಿಯೂ ಕ್ರಿಯಾಶೀಲನಾಗಿದ್ದ ನಾನು ಕನ್ನಡವನ್ನೇ ಉಸಿರಾಡುತ್ತಿದ್ದರೂ,ಕನ್ನಡದಲ್ಲೇ ಮಾತನಾಡುತ್ತಿದ್ದರೂ,ಬರೆಯುತ್ತಿದ್ದರೂ ಭಾಷೆಯ ಬಗ್ಗೆ ದುರಭಿಮಾನವಾಗಲೀ, ಅಂಧಾಭಿಮಾನವಾಗಲೀ ಇಲ್ಲ.ಉಳಿದ ಭಾಷೆಯನ್ನು ಗೌರವಿಸುವಂಥ ಮನೋಸ್ಥಿತಿ ನನ್ನದು. ಈ ವಿವಿಧ ಭಾಷೆಗಳ ಚಲನಚಿತ್ರಗಳನ್ನು ನೋಡಿದ ಪರಿಣಾಮವಾಗಿ ಈ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ತಕ್ಕ ಮಟ್ಟಿಗಿನ ಜ್ನಾನ ಇದೆ.ಮಹಾತ್ಮಾ ಗಾಂಧಿ ಹೇಳಿದಂತೆ ಮಕ್ಕಳಿಗೆ ಬಾಲ್ಯದಲ್ಲಿ ಗ್ರಹಿಸುವ ಶಕ್ತಿ ಸಾಕಷ್ಟಿರುವುದರಿಂದ ಸಾಧ್ಯವಾದಷ್ಟು ಹೆಚ್ಚ್ಚು ಭಾಷೆಗಳನ್ನು ಹೇಳಿಕೊಡುವುದು ಒಳಿತು.ಭಾರತದ ಉಳಿದ ಭಾಗಗಳ ಭಾಷೆಗಳನ್ನು ಕಲಿತುಕೊಳ್ಳಲು ನಮಗೆ ಅಷ್ಟು ಅವಕಾಶ ಇಲ್ಲದಿರಬಹುದು.ಆದರೆ ದಕ್ಷಿಣದ ನಮ್ಮ ನೆರೆ ರಾಜ್ಯಗಳ ಭಾಷೆ ತಿಳಿದುಕೊಳ್ಳುವುದು ಅಷ್ಟು ಕಷ್ಟವೇನೂ ಅಲ್ಲ.ಹಾಗೇ ತಿಳಿಯುವುದರಿಂದ ಸಾಂಸ್ಕೃತಿಕ ವಿನಿಮಯವೂ ಸಾಧ್ಯವಾಗುತ್ತದೆ. ಪರಸ್ಪರ ಅರಿವು ಹೆಚ್ಚಾಗುವುದರಿಂದ ಭಾಷಾ ದ್ವೇಷವೂ ಕಡಿಮೆಯಾಗುತ್ತದೆ.
ಬೆಂಗಳೂರಿನಲ್ಲಿ ನಮ್ಮ ಕುಟುಂಬಕ್ಕೆ ಆಪ್ತರಾಗಿರುವ ಲಿಂಗಾಯತರ ಮನೆ ಹುಡುಗನೊಬ್ಬ ಸಿಕ್ಕಿಂ ಹುಡುಗಿಯನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ.ಈಗ ಅವನು ಸಿಕ್ಕಿಂನ ಯಾವುದೋ ಬುಡಕಟ್ಟು ಭಾಷೆಯನ್ನೂ,ಆ ಹುಡುಗಿ ಕನ್ನಡವನ್ನೂ ಸೊಗಸಾಗಿ ಮಾತನಾಡುತ್ತಿದ್ದಾಳೆ.ಈ ಮದುವೆಯಿಂದ ಕನ್ನಡಕ್ಕೇನೂ ಧಕ್ಕೆಯಾಗಿಲ್ಲ.ಓರ್ವ ಕನ್ನಡಿಗಳ ಸಂಖ್ಯೆ ಜಾಸ್ತಿಯಾಗಿದೆ.ಹಾಗೆ ಇನ್ನೊಂದು ಭಾರತೀಯ ಭಾಷೆಯನ್ನು ಕನ್ನಡದ ಹುಡುಗನೊಬ್ಬ ಹೆಚ್ಚಿಗೆ ಕಲಿತಂತಾಗಿದೆ. ನಮ್ಮ ಮಕ್ಕಳು ಕನ್ನಡದ ಜತೆ ಇತರ ಭಾಷೆಯ ಚಿತ್ರಗಳನ್ನು ಅವುಗಳ ಮೂಲ ಭಾಷೆಯಲ್ಲೇ ನೋಡುವುದರಿಂದ ಭಾಷಾ ಜ್ನಾನದ ಜತೆ ಸಾಂಸ್ಕೃತಿಕ ಪ್ರಜ್ನೆಯೂ ಜಾಗೃತವಾಗಿರುತ್ತದೆ."ನಾವೆಲ್ಲ ಹಿಂದು,ನಾವೆಲ್ಲ ಒಂದು" ಎನ್ನುವ ಹುಸಿ ಘೋಷಣೆಯ ನಡುವೆಯೂ ಅಸಂಖ್ಯಾತ ಜಾತಿ ತಾರತಮ್ಯ,ನಾವೆಲ್ಲ ಭಾರತೀಯರು ಎನ್ನುತ್ತಲೇ ಭಾಷೆ,ಧರ್ಮದ ತಾರತಮ್ಯ ಇನ್ನೆಷ್ಟು ವರ್ಷ ಮುಂದುವರಿಯಬೇಕು? ಡಬ್ಬಿಂಗ್ ಪರ ಮತ್ತು ವಿರೋಧ ಇರುವವರ ವ್ಯಾವಹಾರಿಕ ಲೆಕ್ಕಾಚಾರಗಳು ಏನಿವೆಯೋ? ಅದು ನನಗೆ ಬೇಕಿಲ್ಲ.ಅನೇಕ ಪರದೇಸಿ ಭಾಷೆಗಳ ಶ್ರೇಷ್ಠ ಚಿತ್ರಗಳೂ ಸೇರಿದಂತೆ ಭಾರತದ ಇತರ ಭಾಗಗಳ ಅತ್ಯುತ್ತಮ ಚಿತ್ರಗಳನ್ನು ಸಬ್ ಟೈಟಲ್ ನೆರವಿನಿಂದ ವೀಕ್ಷಿಸಿರುವ ನನಗೆ ಈಗ ನಡೆಯುತ್ತಿರುವ ಡಬ್ಬಿಂಗ್ ಪರ ಇರುವವರ ಹಠ ಕಂಡು ಅನುಕಂಪ ಉಂಟಾಗುತ್ತಿದೆ.ನಾವು ಇನ್ನಷ್ಟು ತೆರೆದುಕೊಳ್ಳುವ,ವಿಸ್ತರಿಸಿಕೊಳ್ಳುವ ಕಾಲಘಟ್ಟದಲ್ಲಿ ಶಿಲಾಯುಗಕ್ಕೆ ವಾಪಸಾಗುತ್ತಿರುವಂತೆ ಕಾಣುತ್ತಿದೆ.ಅಂದ ಹಾಗೆ ದಾಖಲೆಗಳ ಪ್ರಕಾರ ನನ್ನ ಮಾತೃ ಭಾಷೆ ತೆಲುಗು.ಆದರೆ ತೆಲುಗಿನಲ್ಲಿ ಸರಿಯಾಗಿ ಒಂದು ವಾಕ್ಯವೂ ಮಾತನಾಡಲು ಬರುವುದಿಲ್ಲ.ನನ್ನ ಮಗನಿಗೋ ತೆಲುಗಿನ ಗಂಧ ಗಾಳಿಯೇ ಇಲ್ಲ.ಯಾಕೆಂದರೆ ನಾವೆಲ್ಲ ಯೋಚಿಸುವುದು,ಮಾತನಾಡುವುದು,ಉಸಿರಾಡುವುದು ಕನ್ನಡದಲ್ಲೇ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...