Saturday, January 25, 2014

ಈ ರಾಜ್ಯದಲ್ಲಿ ಹೋರಾಟಗಳಿಗೆ ಸಾವೇ ಶಕ್ತಿಯಾಗಿದೆಯೇ? 


ಆನಂದ ಜಕ್ಕಣ್ಣವರ
ಕರ್ನಾಟಕ ಇದು ಬರಿ ಮಣ್ಣೇ? ಅಲ್ಲ, ಶಕ್ತಿ ಕಣಾ, ದೇವಕಣಾ...
                                            -ಕುವೆಂಪು

ಕರ್ನಾಟಕ ವರ್ಣನೆಗೆ ನಿಲುಕದ ನಾಡು, ಭಾರತದ ಸಾರಸತ್ವ ಲೋಕದಲ್ಲಿ ಮೊದಲ ಸ್ಥಾನದಲ್ಲಿರುವ ಸುಶಿಕ್ಷಿತರ ನೆಲೆವೀಡು. ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ ತಾಯ್ನಾಡು.  ಆದರ್ಶರಾಜರು, ಮಾದರಿಆಡಳಿತಗಾರರು, ಕಲಾವಿದರು, ವಿಜ್ಞಾನಿಗಳು, ತಂತ್ರಜ್ಞರು,ಇತಿಹಾಸ ತಜ್ಞರು,  ಕವಿ ಪುಂಗವರು, ದಾರ್ಶನಿಕರು, ಸಾಹಿತಿಗಳು, ಶರಣರು, ದಾಸವರೇಣ್ಯರು, ಕ್ರೀಡಾಪಟುಗಳು, ತಮ್ಮ ಚಿಂತನೆಗಳಿಂದ,ನಡೆನುಡಿಗಳಿಂದ,ಕೃತಿಗಳಿಂದ ಕಾಯಕಗಳಿಂದ  ಹಾಗೂ ಸಾಧನೆಗಳಿಂದ ಶ್ರೇಷ್ಠ  ಸಾಂಸ್ಕ್ರತಿಕ ಪರಂಪರೆಯನ್ನು ಸೃಷ್ಟಿಸಿರುವುದು,ಇದೇ ನಾಡಿನಲ್ಲೇ!

ಇಂಥಹ ಭವ್ಯವಾದ ಪರಂಪರೆಯನ್ನು ಹೊಂದಿದ ಕರ್ನಾಟಕದಲ್ಲಿ ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ ವಿಚಿತ್ರ ವಿಚಿತ್ರ ಘಟನೆಗಳನ್ನು ಗಮನಿಸಿದರೆ ಈ ರಾಜ್ಯದ  ಸಂಸ್ಕೃತಿ ಯಾವ ದಿಕ್ಕಿನಡೆಗೆ ಸಾಗುತ್ತಿದೆ. ಎಂಬುದು ಅನುಮಾನದ ದೃಷ್ಟಿಯಿಂದ ನೋಡಬೇಕಾದ ಅನಿವಾರ್ಯತೆ ಎದುರಾಗಿದೆ. ನಮ್ಮದು ಭಾಗ್ಯದ ಸರ್ಕಾರ ಎಂದು  ಆರಂಭದಿಂದಲೂ ಹೇಳುತ್ತ ಬಂದಿರುವ ಪಕ್ಕಾ ಸಮಾಜವಾದಿ ಚಿಂತಕ ಎಂದು ಕರೆಯಿಸಿಕೊಂಡ ಮಾನ್ಯ ಸಿದ್ಧರಾಮಯ್ಯನವರ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಮೈತ್ರಿಭಾಗ್ಯ, ಅಲ್ಪಸಂಖ್ಯಾತ ಮಕ್ಕಳ ಪ್ರವಾಸ ಭಾಗ್ಯ ಇಂತಹ ಹಲವು ಭಾಗ್ಯಗಳನ್ನು ನೀಡಿ, ಅವುಗಳ ಆಯುಷ್ಯವನ್ನು ಅಲ್ಪದರಲ್ಲಿಯೇ ಕುಸಿಯುವಂತೆ ಮಾಡಿ ಭಾಗ್ಯಗಳನ್ನು ಅಭಾಗ್ಯದೆಡೆಗೆ ಸಾಗುವಂತೆ ಮಾಡಿದೆ.
ಅನ್ನಭಾಗ್ಯದಡಿಯಲ್ಲಿ ೩೦.ಕೆಜಿ ಅಕ್ಕಿ ವಿತರಣೆಯಲ್ಲಿನ ಲೋಪವನ್ನು ಗಮನಿಸಿದರಂತೂ ಯಾವುದು ಭಾಗ್ಯ? ಎಂದು ಪ್ರಶ್ನೆ ಮೂಡುವುದು ಸಹಜವಾದಂತಿದೆ. ೧.ರೂ.ದಂತೆ ೩೦ಕೆಜಿ.ಒಮ್ಮೊಮ್ಮೆ ಅದಕ್ಕಿಂತಲೂ ಕಡಿಮೆ ಪ್ರಮಾಣದ ಅಕ್ಕಿ ಪೂರೈಕೆಯಾಗುತ್ತಿದ್ದರೂ ಗುಣಮಟ್ಟದಲ್ಲಿ ಸೋತು ಸುಣ್ಣವಾಗಿ ಅದೆಷ್ಟೋ ಫಲಾನುಭವಿಗಳು ಹತ್ತಿರದ ಹೋಟೆಲಗಳಗೆ ಇಡ್ಲಿ, ದೋಸೆಗೆ ರೂ.೧೦ರಂತೆ ಮಾರಾಟವಾಗುತ್ತಿರುವುದು ಭಾಗ್ಯವೆಂದೆ ಹೇಳಬಹುದೆ? ಇದೆ ರೀತಿ ಕ್ಷೀರಭಾಗ್ಯದಲ್ಲಿಯೂ ಹಾಲಿನಪುಡಿ ಸರಿಯಿಲ್ಲಾ ಎಂದು ಹಾಲು ಕಳಪೆಯಿದೆ ಎಂದು ಹಲವು ಶಾಲೆಗಳಲ್ಲಿ ಪಾಲಕರ ಆಪಾದನೆಯಿಂದ ಹಾಲು ಕೊಡುವುದನ್ನು ನಿಲ್ಲಿಸಲಾಗಿದೆ. ಇದು ಒಂದು ಹಂತದ್ದಾದರೆ ಇನ್ನೂ ಸಮಸ್ಯೆಗಳತ್ತ ಕೈ ಚಾಚಿದರೆ ಕೈಗೊಂದು ಕಾಲಿಗೊಂದರಂತೆ ಸಮಸ್ಯೆಗಳು ತೆರೆದುಕೊಳ್ಳುತ್ತಿವೆ. ಮೊನ್ನೆ-ಮೊನ್ನೆನೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಓರ್ವ ರೈತ ಕಬ್ಬಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲವೆಂದು ಮನಸ್ಸಿಗೆ ನೋವು ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದು ಕರಾಳವಾಗಿಯೇ ಇರುವಂತಹ ಸಂದರ್ಭದಲ್ಲಿಯೇ ಅನುದಾನರಹಿತ ಶಾಲಾ-ಕಾಲೇಜು ಗಳ ಶಿಕ್ಷಕರು ನ್ಯಾಯಕೋರಿ ನಾಲ್ಕು ಶಿಕ್ಷಕರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು  ಉಸಿರುಗಟ್ಟಿಸುವಂತೆ  ಮಾಡಿದೆ.

ಈ ಘಟನೆಗಳು  ನಡೆದುಹೋದ ಮೇಲೆ ಸರ್ಕಾರ ಸಹಾಯಕ್ಕೆ ಬರಬೇಕಾಯಿತು. ಇಂತಹ ಹಲವು ಹೋರಾಟಗಳು ನಿರಂತರವಾಗಿ ನಡಿಯುತ್ತಲೇ ಬರುತ್ತಿವೆ. ಮುಂದೆ ಇಂತಹದ್ದೆ ಇನ್ನೊಂದು ಸಂದರ್ಭ ಎದುರಾಗುವುದು ಕೂಡಾ ತೀರಾ ಸಮೀಪದಲ್ಲಿಯೇ ಇದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತಾಗಿ ಇದೇ ತಿಂಗಳ ೨೭ರಿಂದ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ಮಾಡಲು ಹೋರಟಿದ್ದೇವೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ವೇದಿಕೆ ಈಗಾಗಲೇ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಬರೀ ಈ ರೀತಿಯಾದ ಹೋರಾಟಗಳನ್ನು ಮಾಡುತ್ತಾಹೋದರೆ ನ್ಯಾಯ ಸಿಗುವುದೆಂತು? ಈ ಹೋರಾಟದಲ್ಲಿಯೂ ಯಾರಾದರೂ ವಿಷ ಕುಡಿದು ಸಾಯಲೆಬೇಕೆ? ಆವಾಗ ಮತ್ತೆ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಕಣ್ಣು ತೆರಯಿಸಬಹುದೆನೋ? ಹೋರಾಟ ಮಾಡುತ್ತಾ ಮಾಡುತ್ತಾ ಜೀವವನ್ನು ತ್ಯಾಗ ಮಾಡಿದಾಗಲೇ ನ್ಯಾಯ ದೊರಕುತ್ತದೆ ಎಂಥಾದರೆ ಮನುಷ್ಯ ಜೀವವೆಂದರೆ ಅದೇನು ಹುಲ್ಲುಕಡ್ಡಿಯೇ? ಒಂದು ಜೀವವನ್ನು ಉಳಿಸಿಕೊಳ್ಳಲು ಓರ್ವ ವೈದ್ಯ ಎಷ್ಟು ಹೆಣಗಾಡುತ್ತಾನೆ ಎಂಬುದು ಅವನಿಗೆ ಗೊತ್ತು. ಅಂಥಹದರಲ್ಲಿ ಹೋರಾಟದ ಮೂಲಕ ಪ್ರಾಣಕಳೆದುಕೊಳ್ಳುತ್ತಿರುವ  ಆತ್ಮಗಳಿಗೆ ಬೆಲೆನೇ ಇಲ್ಲವೇ? ಅಥವಾ ಆ ಹೋರಾಟಗಳಿಗೆ ಸಾವೇ ಶಕ್ತಿಯಾಗಿದೆಯೇ?

ಕೋಟಿ-ಕೋಟಿ ಹಣವನ್ನು ಯಾವದೋ ಕೆಲಸಕ್ಕೆ ಬಾರದ ಯೋಜನೆಗಳಿಗೆ ವ್ಯಯ ಮಾಡುವುದನ್ನು ಬಿಟ್ಟು, ಇ ತರಹದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರಲ್ಲಿ ಸ್ವಲ್ಪ ವ್ಯಯ ಮಾಡಿದರೆ ಅದೆಷ್ಟೋ ಜೀವಗಳು ಬದುಕಿ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಂಡು ರಾಜ್ಯದಲ್ಲಿ ತಲೆದೋರಿದ ನೀರುದ್ಯೋಗ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆಗೊಳಿಸಬಹುದಾಗಿದೆ. ಕಳೆದ ೨ ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ನೇಮಕಾತಿಗಳು ನಡೆದಿಲ್ಲಾ.ಯುವ ಜನತೆ ಕಂಗಾಲಾಗಿದ್ದಾರೆ. ಯುವಕರೇ ನಾಳಿನ ನಾಯಕರು ಎಂದೆಲ್ಲಾ ದೊಡ್ಡದಾಗಿ ಹೇಳುವ ಮಾತು ನಿಜವಾಗಬೇಕಾದರೆ ಕೂಡಲೇ ಸರ್ಕಾರ ನೇಮಕಾತಿ ಪ್ರಕ್ರಿಯನ್ನು ಪ್ರಾರಂಭಿಸಬೇಕು.ಇಲ್ಲದೆ ಹೋದರೆ ಬಿಸಿರಕ್ತದಯುವಕರು ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಎಂಥೆಂಥಾ ಅವಘಡಗಳನ್ನು ಮಾಡಿಕೊಳ್ಳುತ್ತಾರೋ ಅದಕ್ಕೆ  ಮುಂದೆ ಬರುವ ಎಲ್ಲ ಹೋರಾಟಗಳಿಗೆ ಸಾವು ಶಕ್ತಿಯಾಗಿ ಮಾದರಿಯಾಗುವುದಕ್ಕಿಂತ ಮುಂಚೆ ಸರ್ಕಾರ ಅವುಗಳಿಗೆ ಸ್ಪಂದಿಸುವಂತಾಗಲಿ ಎಂಬುದೇ ನಮ್ಮ ಆಶಯ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...