Sunday, January 19, 2014

ಗಿರಿ ಮುಟ್ಟದ ಕೊರಗರ ಕೂಗು

ಜಗದೀಶ ಡಿ

Displaying gokula dasa.jpg

ಕೊರಗರ ಮೊದಲ ಪದವೀಧರ ಗೋಕುಲದಾಸರ ಮನದಾಳದ ಮಾತುಗಳು


    ಕೊರಗರು ಕರಾವಳಿ ಭಾಗದ ಮೂಲ ನಿವಾಸಿಗಳು. ಅವರು ಬೆತ್ತಲೆ ಅಥವಾ ಅರೆ ಬೆತ್ತಲೆ ಇದ್ದವರು ಕಾಡಿನಲ್ಲಿ ಅಲೆದಾಡುತ್ತಾ ತಮಗೆ ಬೇಕಾದ ಆಹಾರವನ್ನು ಸಂಗ್ರಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಭಾರತಕ್ಕೆ ಜಲಮಾರ್ಗ ಶೋಧಿಸಿದ ಪೋರ್ಚುಗೀಸರು ಕರಾವಳಿ ಭಾಗದ ಹೇರಳ ಸಂಪತ್ತು ಕಂಡು ಬೆಕ್ಕಸ ಬೆರೆಗಾದರು. ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದರು. ಮುಂದೆ ಗೋವಾ ವಶಪಡಿಸಿಕೊಂಡರು. ಮತಾಂತರ ಮಾಡಿದರು. ಆ ಸಮಯದಲ್ಲಿ ಗೋವಾದಿಂದ ಹಲವಾರು ಜನ ವಲಸೆ ಬಂದರು. ಅವರು ಮಂಗಳೂರು ಮತ್ತು ಉಡುಪಿ ಸುತ್ತಾ ಮುತ್ತಾ ನೆಲೆ ನಿಂತರು. ಆ ವೇಳೆಗೆ ಆರ್ಯರು, ಬಂಟರು, ಜೈನರು ಮುಂತಾದ ’ಉನ್ನತ’  ಶ್ರೇಣಿಯವರು ಮೂಲ ನಿವಾಸಿಗಳಾದ ಕೊರಗರನ್ನು ಭಯಾನಕವಾಗಿ ಹಿಂಸಿಸಿ, ಕೊಂದಿದ್ದರು. ಈ ರಕ್ತಪಾತಕ್ಕೆ ಹೆದರಿದ ಅಳಿದುಳಿದ ಕೊರಗರು ಕಾಡುಗಳನ್ನು ಸೇರಿಕೊಂಡರು. ಕಾಡುಗಳಲ್ಲಿ ಭೂಗತ ಜೀವನ ನಡೆಸತೊಡಗಿದರು. ’ಉನ್ನತ’ ಸಮುದಾಯಗಳು ಇವರನ್ನು ನಾಯಿಗೆ ಇದ್ದ ಬೆಲೆಯೂ ಇರದಂತೆ ಮಾಡಿದರು. ಇವರ ದಬ್ಭಾಳಿಕೆಯ ವಿರುದ್ದ ಹೋರಾಡಿದವರು ಭೂತಗಳಾಗಿ ಹೋದರು.

Displaying IMG_3339.jpg

    ಭೂಮಿಯ ಮೂಲ ಒಡೆಯರಾದ ಇವರಿಗೆ ಭೂಮಿ ಇಲ್ಲದಂತೆ ಮಾಡಿದರು. ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಸಾಯುವಂತೆ ಮಾಡಿದರು. ಬ್ರಿಟಿಷರು ಭಾರತಕ್ಕೆ ಬಂದಾಗ ಇವರ ಸ್ಥಿತಿ ಹೇಗಿತ್ತು ಎಂದರೆ, ಕಾಡಿನ ಕೇಂದ್ರ ಭಾಗದಲ್ಲಿ ಊರಿನಿಂದ ಯಾರು ಪ್ರವೇಶಿಸಲು ಸಾದ್ಯವಾಗದ ಜಾಗದಲ್ಲಿ ತಾತ್ಕಲಿಕ ಗುಡಿಸಲು ಮತ್ತು ಗುಹೆಗಳನ್ನು ಮಾಡಿಕೊಂಡು ವಾಸಿಸುತ್ತಿದ್ದರು. ಕೆಲವು ಕೊರಗರು ಮೇಲ್ಜಾತಿಯವರು ತಿಂದು ಬಿಟ್ಟ ಎಲೆಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಅದರಲ್ಲಿ ಅಳಿದುಳಿದ ಆಹಾರವನ್ನು ಸಾದ್ಯವಾದಷ್ಟನ್ನು ಬೇರ್ಪಡಿಸಿ ಅದನ್ನು ಒಣಗಿಸಿ ತಿನ್ನುತಿದ್ದರು. ಮತ್ತೇ ಕೆಲವೊಂದು ಕೊರಗ ಗುಂಪುಗಳು ’ಉನ್ನತ’ ಜಾತಿಯವರ ಹೊಲಗಳಲ್ಲಿ ಜೀತಗಳಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕಟ್ಟುನಿಟ್ಟಿನ ಅಸ್ಪುಶ್ಯತೆಯನ್ನು ಆಚರಣೆಯಲ್ಲಿ ಇಡಲಾಗಿತ್ತು. ಇವರು ಮೇಲ್ಜಾತಿಯವರು ಆಚರಿಸುವ ಹಬ್ಬಗಳಲ್ಲಿ, ಪೂಜೆಗಳಲ್ಲಿ ದೇವಸ್ಥಾನದ ಒಂದು ಮೂಲೆಯಲ್ಲಿ ದೂರದಲ್ಲಿ ನಿಂತು ಡೋಲು ಬಾರಿಸಬೇಕಾಗಿತ್ತು. ಇವರಲ್ಲಿದ ಪ್ರಕೃತಿ ಪೂರಕ ಆಚರಣೆಗಳನ್ನು ಧಮನ ಮಾಡಿ ವೈಧಿಕ ಪೂಜೆಗಳನ್ನು ಬಲವಂತವಾಗಿ ಹೇರಲಾಯಿತು. ನೀಚದಾನ(ಅಜಲು ಪದ್ಧತಿ)ಯನ್ನು ಜಾರಿಗೆ ತಂದರು. ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಇವರ ಕುಶಲ ಕಲೆಗಳು, ಸಂಗೀತ ಇವೆಲ್ಲವನ್ನು ನಿಯಂತ್ರಿಸಿದರು. ಸಾದ್ಯವಾದಷ್ಟನ್ನು ಲೂಟಿ ಮಾಡಿ ಸಾಂಸ್ಕೃತಿಕ ಶ್ರೀಮಂತರಾದರು. ಕೊರಗರ ಸಮಾಧಿಯ ಮೇಲೆ ಬಂಗಲೆ ಕಟ್ಟಿಕೊಂಡು ಮೆರೆದರು.

    ಇಂತಹ ಉಸಿರುಗಟ್ಟಿಸುವಂತಹ ಸ್ಥಿತಿಯಲ್ಲಿದ್ದಾಗಲೂ ಪದವಿ ಪಡೆದ ಗೋಕುಲದಾಸರು ತೆರೆದಿಟ್ಟ ಸತ್ಯಾಸಂಗತಿಗಳು ನನ್ನನ್ನು ಬೆರಗುಗೊಳಿಸಿತು. ಅವರ ಮಾತುಗಳಿವು.

ನನ್ನನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ:  ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮ ಮೂಲ ಊರು ಕಾರ್ಕಳದಿಂದ ೧೮ ಕಿ.ಮೀ. ದೂರದ ಒಂದು ಹಳ್ಳಿ. ಅದು ಕಾಡಿನ ಮಧ್ಯೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಶಿಕ್ಷಣವನ್ನು ಆರಂಭಿಸಿದರು. ಅಲ್ಲಿಯವರೆಗೆ ಕೊರಗರಿಗೆ ಅಕ್ಷರ ಜ್ಞಾನ ಇರಲೇ ಇಲ್ಲ. ಏಕೆಂದರೆ, ಅದು ನಿಷಿದ್ಧವಾಗಿತ್ತು. ೧೮೦೦ರಲ್ಲಿ ಕುದುಮುಳ ರಂಗರಾಯ್ ಎಂಬುವರು ಅಸ್ಪುಶ್ಯರಿಗಾಗಿ ಶಾಲೆಯೊಂದನ್ನು ತೆರೆದರು. ರಾಜ್ ಭಾಪುಲೆ ಸಹ ಅವರ ಕಾಲಾಮಾನದವರು. ಅವರು ಕಾಡಿಗೆ ಬಂದು ಶಾಲೆಗೆ ಬರುವಂತೆ ನನ್ನನು ಕರೆದರು. ನಾನು ಹೆದರಿ ಹೋಗಲಿಲ್ಲ. ಕೊನೆಗೆ ಬಲವಂತವಾಗಿ ಶಾಲೆಗೆ ಕರೆತಂದರು. ನನಗೆ ಊರಿಗೆ ಬಂದರೆ ಸಾಯಿಸಿಬಿಡುತ್ತಾರೆ ಎಂಬ ಭಯ ಇತ್ತು. ನಾನು ಮೊದಲ ಭಾರಿ ಶಾಲೆಗೆ ಹೋಗಿ ಬದುಕಿ ಹಿಂದುರುಗಿ ಹೋದಾಗ ಸ್ವಲ್ಪ ಧೈರ್ಯ ಬಂತು. ನನ್ನನ್ನು ಯಾರು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಅಪ್ಪಿ-ತಪ್ಪಿ ಮುಟ್ಟಿಸಿಕೊಂಡರು ಸ್ನಾನ ಮಾಡುತ್ತಿದ್ದರು. ಕುದುಮುಳ ರಂಗರಾಯರು ಕೊರಗ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಭೂಮಿ ಕೊಡಬೇಕು ಎಂದರು. ಆದರೆ ಸರ್ಕಾರಗಳು ಗಮನ ಹರಿಸಲಿಲ್ಲ, ಆದರೂ ಒಂದು ಕಾಯ್ದೆ ಬಂದಿತ್ತು.  ’ಶೋಷಿತ ವರ್ಗಕ್ಕೆ ಭೂಮಿ’ ಎಂಬ ಕಾಯ್ದೆಯದು. ಅದರಲ್ಲಿಯೂ ಕೊರಗರು ಭೂಮಿ ತೆಗೆದುಕೊಳ್ಳಲು ಹೋಗಲಿಲ್ಲ. ಅವರು ಹೆದರಿ ಕೊಂಡರು. ಏಕೆಂದರೆ ಭೂಮಿ ತೆಗೆದುಕೊಂಡವರನ್ನು ’ಮೇಲ್ಜಾತಿ’ಯವರು ಕೊಂದು ಹಾಕಿದರು.

Displaying images2.jpg

ಮೇಲಿನ ನೀರು ಮೇಲೆ ಕೆಳಗಿನ ನೀರು ಕೆಳಗೆ:  ನಾನು ೭ ನೇ ತರಗತಿ ಓದುತ್ತಿದ್ದೇನು. ಬಂಟರ ಹುಡುಗನೊಬ್ಬ ನನ್ನ ಸ್ನೇಹಿತನಾಗಿದ್ದನು. ಅವನು ನನ್ನನು ಎಲ್ಲರೂ ಕಾಣುವಂತೆ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಗೊತ್ತಾದರೆ ಮನೆಯವರು ಅವನಿಗೆ ಹೊಡೆಯುತ್ತಿದ್ದರು. ಒಂದು ದಿನ ಇದಕ್ಕಿದಂತೆ ಶಾಲೆಗೆ ರಜೆ ಘೋಷಿಸಿದರು. ನಾವು ಖುಷಿಯಿಂದ ಮನೆಗೆ ನಡೆದು ಹೋಗುತ್ತಿದ್ದೇವು. ಮನೆ ಇನ್ನೂ ೨ ಮೈಲಿ ದೂರ ಇತ್ತು. ಬಂಟರ ಹುಡುಗ(ಸ್ನೇಹಿತ)ನಿಗೆ ತುಂಬಾ ಬಾಯಾರಿಕೆಯಾಯಿತು. ಅಲ್ಲೇ ಹತ್ತಿರದಲ್ಲಿ ಇದ್ದ ಸೂರಣ್ಣನ ಅಂಗಡಿಗೆ ಹೋಗಿ ನೀರು ಕುಡಿದುಕೊಂಡು ಬರೋಣ ಎಂದು ಕರೆದುಕೊಂಡು ಹೋದನು. ಅಲ್ಲಿ ಅವನು ನೀರು ಕುಡಿದನು. ನನಗೂ ತುಂಬಾ ಬಾಯಾರಿಕೆಯಾಗಿತ್ತು. ನನಗೆ ಸ್ನೇಹಿತ ನೀರುಕೊಡಲು ಬಂದಾಗ ಅಂಗಡಿಯ ಮಾಲಿಕನಾದ ಸೂರಣ್ಣ ಕೆಳಗಿನ ನೀರು ಕೆಳಗೆ, ಮೇಲಿನ ನೀರು ಮೇಲೆ ಎಂದು ಹೇಳಿ ನೀರನ್ನು ಕೊಡದೆ ಕಿತ್ತುಕೊಂಡನು. ಹತ್ತಿರದಲ್ಲೆ ಇದ್ದ ತೆಂಗಿನ ಚಿಪ್ಪಿನಿಂದ ನೀರು ಕುಡಿಯಲು ಸ್ನೇಹಿತ ಹೇಳಿದನು. ಆದರೆ ನನಗೆ ಅವಮಾನವಾಗಿದ್ದರಿಂದ ನೀರು ಕುಡಿಯಲಿಲ್ಲ. ಮನಸ್ಸಿನಲ್ಲಿಯೇ ಹಳ್ಳದಲ್ಲಿ ಹರಿಯುವ ಸ್ವಚ್ಚ ನೀರು ಕುಡಿಯುತ್ತೇನೆ, ನಿಮ್ಮ ಕೊಳಕು ನೀರು ಬೇಡ ಎಂದು ನಿರ್ದರಿಸಿದೆ. ವಿಜ್ಞಾನದಲ್ಲಿ ನಮ್ಮ ಗುರುಗಳು ಹೇಳಿಕೊಟ್ಟ ಪಾಠ ’ನೀರು ಮೇಲಿನಿಂದ ಕೆಳಗೆ ಹರಿಯುತ್ತದೆ’ ಎಂಬುದು ಅವತ್ತು ನನಗೆ ವಿಚಿತ್ರವಾಗಿ ಕಂಡಿತ್ತು. ಇಂತಹ ಹಲವಾರು ಅವಮಾನಗಳ ನಡುವೆ ಮೆಟ್ರೇಕ್ಯುಲೇಷನ್ ಮುಗಿಸಿದೆ. ದಿಟ್ಟತನ ಮಾಡಿ ಪದವಿ ಓದಿದೆ. ಪೋಸ್ಟ ಮಾಸ್ಟರ್ ಆಗಿ ಕೂಡ ಕೆಲಸ ಮಾಡಿದೆ.

ಪೌರಕಾರ್ಮಿಕರಾಗಿ ಸಿಟಿಗೆ ಬಂದರು: ಕೊರಗರು ಅಸ್ಪುಶ್ಯರಿಗಿಂತ ಅಸ್ಪುಶ್ಯರು. ಅವರಿಗೆ ಶಿಕ್ಷಣ ಇಲ್ಲ. ಇದ್ದರೂ ಅದು ಕೇವಲ ೦.೦೧% ಮಾತ್ರ. ಅಲ್ಲದೆ ನಮಗೆ ಕೃಷಿ ಬಿಟ್ಟು ಬೇರೆ ಕಸಬು ಗೊತ್ತಿಲ್ಲ. ಕೃಷಿ ಮಾಡುವುದಕ್ಕೆ ಭೂಮಿ ಇಲ್ಲ. ’ಕುಕ್ಕೆ’ ಹೆಣೆಯುವ ಕೆಲಸ ಮಾಡುತ್ತಿದ್ದೇವು. ಪ್ಲಾಸ್ಟಿಕ್ ಬಂದು ಅದನ್ನು ಕಿತ್ತು ಕೊಂಡಿತು. ಬದುಕಾ ಬೇಕಲ್ಲ! ಸಿಟಿಗೆ ವಲಸೆ ಬಂದರು. ೧೮೬೫ರಲ್ಲಿ ಮಂಗಳೂರು ಪುರಸಭೆ ಸ್ಥಾಪನೆಯಾಯಿತು. ನಮ್ಮನು ಕಸ ಗುಡಿಸಲು, ಮಲಹೊರಲು ಸೇರಿಸಿಕೊಂಡರು. ಪೌರಕಾರ್ಮಿಕರಾಗಿ ದುಡಿಯಲು ನಿಂತೆವು. ಕೇವಲ ಊಟಕೋಸ್ಕರ ದುಡಿದೆವು. ನಮಗೆ ಪ್ರತ್ಯೇಕ ಕಾಲೋನಿಗಳಿವೆ.  ನಗರದಲ್ಲಿ ಅವುಗಳನ್ನು ಸ್ಲಂ ಅನ್ನುತಾರೆ. ೧೯೮೬ರಲ್ಲಿ ಎಸ್.ಟಿ ಯಿಂದ ಎಸ್.ಸಿ ಗೆ ಸೇರಿಸಿದರು. ಆದರೂ ಪ್ರಯೋಜನ ಆಗಿಲ್ಲ. ಈಗಲೂ ನಾವು ಪೌರಕಾರ್ಮಿಕರಾಗಿಯೇ ಇದ್ದಾರೆ.

ಒಟ್ಟು ೧೭೦೦೦ ಇದ್ದಾರೆ: ಕೊರಗರ ಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ. ಒಂದು ಅಂದಾಜಿಗೆ ಹೇಳುವುದಾದದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೬ರಿಂದ ೭ ಸಾವಿರ ಇದ್ದಾರೆ. ಕಾಸರಗೂಡಿನಲ್ಲಿ ೨ ಸಾವಿರದಷ್ಟಿದ್ದಾರೆ. ಬೈಂದೂರು ಮತ್ತು ಉಡುಪಿ ಸುತ್ತಮುತ್ತ ೮-೯ ಸಾವಿರ ಇರಬಹುದು. ಒಟ್ಟು ೧೭೦೦೦ ಜನ ಕೊರಗರು ಇರಬಹುದು. ಜನಗಣತಿಯಲ್ಲಿ ಸರಿಯಾದ ಅಂಕಿಅಂಶ ಸಿಗೋದಿಲ್ಲ. ಕೊರಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಬರುತ್ತಿದೆ. ಇದಕ್ಕೆ ಅವರ ಅತಿಯಾದ ದುಡಿತ, ಕಾಯಿಲೆಗಳು, ನಮ್ಮಲ್ಲಿರುವ ಮೂಢನಂಬಿಕೆಗಳು ಕಾರಣವಾಗಿವೆ.

ಎಲ್ಲಾ ಹಬ್ಬವೂ ನಮ್ಮದೇ: ಕೊರಗಲ್ಲಿ ಅನೇಕ ಹಬ್ಬಗಳಿವೆ. ಹಬ್ಬಗಳೆಲ್ಲ ಪ್ರಕೃತಿಗೆ ಒಳಿತನ್ನು ಬಯಸುವುಗಳಾಗಿವೆ. ಉದಾಹರಣೆಗೆ ಕೊರಲ್‌ಪರ್ಬ ಹಬ್ಬ. ಭತ್ತದ ಪೈರನ್ನು ಬಾಗಿಲಿಗೆ ಕಟ್ಟುವ ಹಬ್ಬ. ಅವತ್ತು ಭೂಮಿ ಪೂಜೆ ಮಾಡುತ್ತೇವೆ. ಅದು ಫಲವತ್ತತೆಯ ಹಬ್ಬವಾಗಿದೆ. ನಮಗೆ ಹಬ್ಬ ಅಂದರೆ ಯಾವತ್ತು ನಾವು ಖುಷಿಯಿಂದ ವಿಶೇಷ ಅಡಿಗೆ ಮಾಡಿ ತಿನ್ನುತ್ತೇವೆಯೋ ಅವತ್ತು ನಮಗೆ ಹಬ್ಬ. ವೈಧಿಕರು ಆಚರಿಸುವ ಬಹುತೇಕ ಹಬ್ಬಗಳು ನಮ್ಮವು. ನಮ್ಮ ಹಬ್ಬಗಳನ್ನು ನಮ್ಮಿಂದ ಕಿತ್ತುಕೊಂಡು ಅದಕ್ಕೆ ವೈಧಿಕ ಲೇಪನ ಮಾಡಿದ್ದಾರೆ. ಎಲ್ಲಾ ಹಬ್ಬಗಳು ನಮ್ಮವೇ ಆದರೆ ಯಾವುದು ನಮ್ಮದಲ್ಲ ಎನ್ನುವಂತಾಗಿದೆ. ನಾವು ಪ್ರಕೃತಿಯನ್ನು ಆರಾಧಿಸತ್ತೇವೆ. ಕೊರಗಜ್ಜ ನಮ್ಮ ಕುಲದೈವ. ನಾವು ಹುಟ್ಟು-ಸಾವು ಎರಡಕ್ಕೂ ಒಂದು ಕಲ್ಲನ್ನು ಸಂಕೇತವಾಗಿ ಇಡುತ್ತೇವೆ. ಅದಕ್ಕೆ ’ಮಾಂಜಾ’ ಅನ್ನುತ್ತೇವೆ.

ಕೊಂದರು, ಮಾಯವೆಂದರು, ಭೂತವಾಗಿಸಿದರು: ಕೊರಗಜ್ಜ ನಮ್ಮ ಕುಲದ ನಾಯಕ. ಇವರ ಭೂತ ಪೂಜೆ ಮಾಡಿದಾಗ  ಸಂಕೇತವಾಗಿ ಗೆಜ್ಜೆ ಮತ್ತು ಕತ್ತಿ ಇಡುತ್ತಾರೆ. ಅವನನ್ನು ವೈಧಿಕರು ಕೊಂದರು. ಅಮೇಲೆ ಮಾಯವಾದನು ಎಂದರು. ಕೊರಗಜ್ಜ ಮಹಾಪರಕ್ರಮಿಯಾಗಿದ್ದನು. ಅವನಿಗೆ ಏಳು ಮಂದಿಯ ಶಕ್ತಿ ಇತ್ತು. ಮೇಲ್ಜಾತಿಯ ದೌರ್ಜನ್ಯವನ್ನು ಮೆಟ್ಟಿ ನಿಂತವನಾಗಿದ್ದನ್ನು. ಮೇಲ್ಜಾತಿಯವರು ಅವನಿಗೆ ಹೆದರಿದರು. ವಂಚನೆಯಿಂದ ಅವನನ್ನು ಕೊಂದು ಹಾಕಿದರು. ಭೂತವನ್ನಾಗಿ ಮಾಡಿದರು. ವೈಧಿಕರ ವಿರುದ್ದ ಹೋರಾಡಿದ ನಾಯಕನಿಗೆ ಗುಡಿ ಕಟ್ಟಿಸಿ ಪೂಜೆ ಮಾಡಿಸುತ್ತಾರೆ ನನಗೆ ಅದರಲ್ಲಿ ಒಮ್ಮತವಿಲ್ಲ. ಈ ಭಾಗದಲ್ಲಿ ಅನೇಕ ನೀಚಕಲ್ಲುಗಳಿವೆ. ಅದನ್ನು ಮಾತ್ತಿಕಲ್ಲು ಎಂದೂ ಸಹ ಕರೆಯುತ್ತೇವೆ. ದೇವಸ್ಥಾನದ ಮುಂದೆ ಒಂದು ಕಲ್ಲು ನಿಲ್ಲುಸುತ್ತಾರೆ. ಅಲ್ಲಿ ಬಲಿ ಕೊಡುತ್ತಾರೆ. ಮೊದಲೆಲ್ಲ ನರಬಲಿ ಕೊಡುತ್ತಿದ್ದರು. ಈಗ ಪ್ರಾಣಿಬಲಿ ಕೊಡುತ್ತಾರೆ. ಇವೆಲ್ಲವು ನಮ್ಮನ್ನು ನಿರ್ನಾಮ ಮಾಡಲು ಮಾಡಿದ ತಂತ್ರಗಳಾಗಿವೆ.

ಸಹ ಬೋಜನ ಎಲ್ಲಾ ಸುಳ್ಳು: ನಮ್ಮ ಪಾಲಿಗೆ ದೇವರು ಅಂಬೇಡ್ಕರ್. ಅವರು ಧರ್ಮಚಾರಣೆಗಳಿರುವ ಮನುಸ್ಪುತಿ ಸುಟ್ಟು ಹಾಕಿ ನಮಗೆ ನ್ಯಾಯ ಕೊಡಿಸಲು ಹೋರಾಡಿದವರು. ನಾವು ಅವರ ಹಾದಿಯಲ್ಲಿದ್ದೇವೆ. ಭೂಮಿ ಮತ್ತು ಶಿಕ್ಷಣ ನಮ್ಮ ಹೋರಾಟದ ಮೂಲ ಮಂತ್ರವಾಗಿದೆ. ಸರ್ಕಾರಗಳು ಭೂಮಿ ಕೊಟ್ಟಿದ್ದೇವೆ, ಅಸ್ಪುಶ್ಯತೆ ಇಲ್ಲ. ಎಂಬ ನಾಟಕ ಆಡುತ್ತಿದೆ. ಅವರ ಪ್ರಕಾರ ಸಹಬೋಜನ ಎಂದರೆ ದುಡ್ಡು ಕೊಟ್ಟು ಹೋಟೆಲ್‌ನಲ್ಲಿ ಊಟ ಮಾಡುವುದು. ಒಂದೇ ಬಸ್ಸಿನಲ್ಲಿ ಹೋಗುವುದು ಎಂದು ಹೇಳುತ್ತಿದ್ದಾರೆ. ಅವರವರ ಮನೆಗಳಲ್ಲಿ ಸಹಬೋಜನವು ಇಲ್ಲ ಸಹವರ್ತಿಯೂ ಇಲ್ಲ. ಎಲ್ಲಾ ಅಸ್ಪುಶ್ಯತೆಯೇ ಆಗಿರುತ್ತದೆ. ನಮ್ಮವರು ಕೂಡ ದೇವಸ್ಥಾನಗಳ ಒಳಗೆ ಹೋಗಲು ಹೆದರುತ್ತಾರೆ. ನಮಗೆ ದೇವರ ಭಯವಿಲ್ಲ. ದೇವರನ್ನು ಕೂಡಿ ಹಾಕಿಕೊಂಡಿರುವವರು ದಂಡಿಸುತ್ತಾರೆ, ಪೆಟ್ಟು ಕೊಡುತ್ತಾರೆ ಎಂಬ ಭಯವಿದೆ.

ಕೊರಗರಿಗೆ ಮಾತ್ರ ಅರ್ಥವಾಗುವ ಭಾಷೆ: ಎಲ್ಲಾ ಭಾಷೆಗಳು ಪ್ರಕೃತಿಯಿಂದಲೇ ಹುಟ್ಟಿವೆ. ಪ್ರಕೃತಿಯ ಶಬ್ಧಗಳನ್ನು ಮನುಷ್ಯ ಅನುಸರಿಸುತ್ತಾ ಭಾಷೆ ಮಾಡಿಕೊಂಡಿದ್ದಾನೆ. ನಮ್ಮದು ಒಂದು ಭಾಷೆ ಇದೆ. ಅದಕ್ಕೆ ’ಕೊಟ್ಟ’ ಅಂತ ಕರೆಯುತ್ತಾರೆ. ವೀರಪ್ಪ ಮೊಹ್ಲಿ ಅದರ ಬಗ್ಗೆ ಬರೆದಿದ್ದಾರೆ. ಇದಕ್ಕೆ ಲಿಪಿ ಇಲ್ಲ. ಸಮುದಾಯದ ಹೊರಗೆ ಇದ್ದಾಗ ನಾವು ಈ ಭಾಷೆ ಬಳಸುವುದಿಲ್ಲ. ನಮ್ಮ ರಕ್ಷಣೆಗಾಗಿ, ನಮ್ಮವರೆ ಇದ್ದಾಗ ನಾವು ಈ ಭಾಷೆ ಮಾತಾನಾಡುತ್ತೇವೆ. ಬೇರೆಯವರು ಇದ್ದಾಗ, ಕನ್ನಡ ತುಳು ಅಥವಾ ಕೊಂಕಣಿಯಲ್ಲಿ ಮಾತಾನಾಡುತ್ತೇವೆ.

ನಮಗೆ ಭೂಮಿ ಬೇಕು: ೧೯೮೭ರಲ್ಲಿ ಕಾಪುವಾರು ದೇವದಾಸ ಶೆಟ್ಟಿ ಕೊರಗ ಸಂಘ ಮಾಡಿದರು. ಅದರ ಮೂಲಕ ಹಲವಾರು ಹೋರಾಟಗಳನ್ನು ಮಾಡಿದೆವು. ನಮಗೆ ಕೃಷಿ ಮಾಡಲು ಭೂಮಿ ಬೇಕು. ಉಪ ಕಸಬುಗಳಿಗೆ ತರಬೇತಿ ನೀಡಬೇಕು. ಅದಕ್ಕೆ ಪ್ರೋತ್ಸಾಹ ಕೊಡಬೇಕು. ಹೆಚ್ಚು ಹೆಚ್ಚು ಶಿಕ್ಷಣ ಕೊಡಬೇಕು. ಸಮಾನತೆ ಬೇಕು. ಎಲ್ಲರಂತೆ ಸಮಾಜದಲ್ಲಿ ನಾವು ಬಾಳುವಂತಗಬೇಕು. ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗಬೇಕು. ಇವೆಲ್ಲದಕ್ಕಾಗಿ ನಾನು ಬದುಕಿರುವರಗೆ ಹೋರಾಡುತ್ತೇನೆ. ಇದು ನನ್ನ ಆಸೆ.

    ಹೀಗೆ ಮನದಾಳದ ಮಾತುಗಳನ್ನು ಗೋಪಾಲದಾಸರು ನಮ್ಮಲ್ಲಿ ಹಂಚಿಕೊಂಡರು. ಕೊರಗರು ಸಮಾಜದಲ್ಲಿ ಯಾವ ಸ್ಥಿತಿಯಲ್ಲಿ ಇದ್ದಾರೆ? ಈ ಸ್ಥಿತಿಗೆ ಕಾರಣರು ಯಾರು?  ಇವರಿಗೆ ನಿಜವಾಗಿ ಬೇಕಿರುವುದು ಏನು? ಎಂಬುದು ನಮಗೆ ತಿಳಿಯಬೇಕು. ಮಾನವ ಹಕ್ಕುಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಮಗೆ ಕೊರಗರ ಕೂಗು ಕೇಳಿಸುವುದಿಲ್ಲ. ’ಅಸ್ಪುಶ್ಯತೆ ಇಲ್ಲವೆ ಇಲ್ಲ’ ಎಂದು ಬಡಾಯಿ ಕೊಚ್ಚಿ ಕೊಳ್ಳುತ್ತೇವೆ. ಆದರೆ ವಾಸ್ತವತೆ ನಾವು ಅಂದುಕೊಂಡಿದಕ್ಕಿಂತ ತೀರ ಭಿನ್ನವಾಗಿರುತ್ತದೆ. ಉದ್ಯೋಗ ಖಾತ್ರಿ ಯೋಜನೆ.  ಕೊರಗರಿಗೆ ಮುಟ್ಟೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಗಾಕ್ಕೆ ಸಂಬಂಧಿಸಿದಂತೆ ೧೨೦ ದೂರುಗಳಿವೆ. ಕೊರಗರ ಪರವಾಗಿ ಅನೇಕ ಸಂಘಸಂಸ್ಥೆಗಳು ಕೂಡ ಕೆಲಸ ನಿರ್ವಹಿಸುತ್ತಿವೆ. ಕೊರಗರು ಸಂವಿಧಾನದ ಆಶಯದಂತೆ ಬದುಕುವಂತಾದರೆ ಎಲ್ಲರ ಪ್ರಯತ್ನಗಳು ಸಾರ್ಥಕವಾಗುತ್ತದೆ.

ಜಗದೀಶ ಡಿ
ಪತ್ರಿಕೋದ್ಯಮ ವಿದ್ಯಾರ್ಥಿ
ಬದುಕು ಕಮ್ಯುನಿಟಿ ಕಾಲೇಜ್
ಬೆಂಗಳೂರು


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...