Monday, January 27, 2014

ಪತ್ರಿಬಾಲ್ ಎನ್‌ಕೌಂಟರ್ ವಿಚಾರಣೆ: ಇದೆಂತಹ ಗಣರಾಜ್ಯ?
ರವಿ ನಿತೇಶ್

ಸೌಜನ್ಯ: ವಾರ್ತಾಭಾರತಿಪತ್ರಿಬಾಲ್ ಎನ್‌ಕೌಂಟರ್ ವಿಚಾರಣೆ: ಇದೆಂತಹ ಗಣರಾಜ್ಯ?


ಪತ್ರಿಬಾಲ್ ಎನ್‌ಕೌಂಟರ್ ಪ್ರಕರಣದಲ್ಲಿ ಸುದೀರ್ಘ ವಿಚಾರಣೆಯ ಬಳಿಕ ಸುಪ್ರೀಂ ಕೋರ್ಟ್ ತಳೆದ ನಿರ್ಣಯ ಪೂರ್ಣ ಪ್ರಮಾಣದ ಗಣರಾಜ್ಯವೊಂದರ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಬೇಕಾಗಿದೆ. ಎನ್‌ಕೌಂಟರ್‌ನಲ್ಲಿ ಭಾಗಿಯಾದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೊಡಿ ಅಥವಾ ಅವರ ವಿರುದ್ಧ ಸೇನಾ ವಿಚಾರಣೆ (ಕೋರ್ಟ್ ಮಾರ್ಶಲ್) ನಡೆಸಿ ಎಂದು ಸುಪ್ರೀಂ ಕೋರ್ಟ್ 2012 ಮೇ 1ರಂದು ಭಾರತೀಯ ಸೇನೆಗೆ ಸೂಚಿಸಿತು. ತನ್ನ ಅಧಿಕಾರಿಗಳ ವಿರುದ್ಧ ಸೇನಾ ವಿಚಾರಣೆ ನಡೆಸುವುದಾಗಿ ಸೇನೆ 2012 ಜೂನ್ 29ರಂದು ಘೋಷಿಸಿತು.

ಈಗ 2014 ಜನವರಿ 24ರಂದು ಸೇನಾ ವಿಚಾರಣೆಯನ್ನು ಪೂರ್ಣಗೊಳಿಸಿದ ಸೇನೆ, ಆರೋಪಿ ಅಧಿಕಾರಿಗಳ ವಿರುದ್ಧ ಯಾವುದೇ ಪುರಾವೆ ಲಭಿಸಿಲ್ಲ ಎಂದು ಹೇಳಿದೆ. ಸೇನೆ ಸುಪ್ರೀಂ ಕೋರ್ಟನ್ನೇ ಏಮಾರಿಸಿ ಹೇಗೆ ತನ್ನ ಅಧಿಕಾರಿಗಳನ್ನು ರಕ್ಷಿಸಿತು ಎನ್ನುವುದು ಅತ್ಯಂತ ಕಳವಳದ ಸಂಗತಿಯಾಗಿದೆ. ಈ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ 2000ದಲ್ಲಿ ನಕಲಿ ಎನ್‌ಕೌಂಟರ್‌ಗಳನ್ನು ನಡೆಸಿದ ಆರೋಪಗಳಿಗೆ ಒಳಗಾಗಿದ್ದರು. ನಕಲಿ ಎನ್‌ಕೌಂಟರ್‌ಗಳಲ್ಲಿ ಐವರು ನಾಗರಿಕರು ಮೃತಪಟ್ಟಿದ್ದರು.

ಜಮ್ಮು ಮತ್ತು ಕಾಶ್ಮೀರದ ಚಿತ್ತಿಸಿಂಗ್‌ಪುರದಲ್ಲಿ 34 ಸಿಖ್ಖರ ಹತ್ಯೆಯಾದ ಬಳಿಕ 2000 ಮಾರ್ಚ್ 25ರಂದು ಪತ್ರಿಬಾಲ್ ಎನ್‌ಕೌಂಟರ್‌ಗಳು ನಡೆದಿ ದ್ದವು. ಸಿಖ್ಖರ ಹತ್ಯೆ ಘಟನೆ ಖಂಡಿತವಾಗಿಯೂ ದುರದೃಷ್ಟಕರ ಹಾಗೂ ಆ ಪ್ರಕರಣದಲ್ಲಿ ವ್ಯಾಪಕ ಶೋಧ ಹಾಗೂ ವಿಚಾರಣೆ ನಡೆಸಬೇಕಾಗಿತ್ತು. ಈ ಹತ್ಯಾಕಾಂಡವನ್ನು ಅಜ್ಞಾತ ಸಮಾಜವಿರೋಧಿ ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ನಡೆಸಿವೆ. ಈ ಹತ್ಯಾಕಾಂಡ ನಡೆದ ಹೊತ್ತುಗಾರಿಕೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ. 

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು ಹತ್ಯಾಕಾಂಡ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆ ಘಟನೆಗೆ ಒಂದಕ್ಕಿಂತ ಹೆಚ್ಚು ವಿವರಣೆಗಳನ್ನು ಕೊಡಲಾಗುತ್ತಿದೆ. ಇದನ್ನು ಪಿತೂರಿ ಎಂಬುದಾಗಿ ಬಣ್ಣಿಸುವ ಹಲವು ವಾದಗಳು ಚಾಲ್ತಿ ಯಲ್ಲಿವೆ. ಅದನ್ನು ಭಯೋತ್ಪಾದಕ ದಾಳಿ ಅಥವಾ ಯಾರೋ ಹೇಳಿ ಮಾಡಿಸಿದ ಹತ್ಯಾಕಾಂಡ ಎಂಬು ದಾಗಿ ಪರಿಗಣಿಸಬಹುದಾಗಿದೆ. ಆದರೆ, ಅದರ ಉದ್ದೇಶ ಮಾತ್ರ ಒಂದೇ- ಕಾಶ್ಮೀರದಲ್ಲಿ ಶಾಂತಿ ನೆಲೆಸಿಲ್ಲ ಹಾಗೂ ಅಲ್ಲಿ ಕಾನೂನು ಮತ್ತು ವ್ಯವಸ್ಥೆ ಯನ್ನು ಕಾಪಾಡಲು ಭದ್ರತಾ ಪಡೆಗಳ ನಿಯೋಜನೆ ಅಗತ್ಯ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವುದು.

ಆದರೆ, ಬಳಿಕ ನಡೆದಿರುವುದು ಮಾತ್ರ ಹೆಚ್ಚಿನ ಆಘಾತಕಾರಿ ಮತ್ತು ದುರದೃಷ್ಟಕರ ಘಟನೆಯಾಗಿದೆ. ಅದೆಂದರೆ, ಪತ್ರಿಬಾಲ್‌ನಲ್ಲಿ ಐವರು ನಾಗರಿಕರನ್ನು ಎನ್‌ಕೌಂಟರ್‌ನಲ್ಲಿ ಕೊಂದಿರುವುದು ಹಾಗೂ ಇದನ್ನು ನಡೆಸಿದವರು ಹೊರಗಿನವರು ಯಾರೂ ಅಲ್ಲ, ಭಾರತೀಯ ಸೈನಿಕರೇ. ಈ ಘಟನೆಯನ್ನು ಪ್ರತಿಭಟಿಸಿ ಜನರು ಮನೆ ಯಿಂದ ಹೊರಬಂದು ದೊಡ್ಡ ಮಟ್ಟದಲ್ಲಿ ಪ್ರತಿಭಟಿ ಸಿದ್ದು ಇನ್ನೊಂದು ದೊಡ್ಡ ಬೆಳವಣಿಗೆಯಾಯಿತು. 

ಜನರು ಸೇನೆಯ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದರು. ಅದು ಅಸಹಜವಾಗಿರಲಿಲ್ಲ. ಅವರ ಕೃತ್ಯ ಸಮರ್ಥನೀ ಯವಾಗಿತ್ತು. ಯಾಕೆಂದರೆ ಸಶಸ್ತ್ರ ಸೈನಿಕರ ಕೆಲಸ ಜನರನ್ನು ಕೊಲ್ಲುವುದಾಗಿರಲಿಲ್ಲ, ಜನರಿಗೆ ರಕ್ಷಣೆ ಕೊಡುವುದಾಗಿತ್ತು. ಅದೂ ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ನಿಯೋಜನೆಯಿಂದ ತಮಗಾಗುತ್ತಿರುವ ದಿನನಿತ್ಯದ ತೊಂದರೆಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದರು.

ಜನರ ಬೃಹತ್ ಪ್ರತಿಭಟನೆಗೆ ಮಣಿದ ಸರಕಾರ ಪ್ರಕರಣದ ತನಿಖೆಗೆ ಸಿಬಿಐಯನ್ನು ನಿಯೋಜಿಸಿತು. ತನಿಖೆ ನಡೆಸಿದ ಸಿಬಿಐ 2006 ಮೇ 11ರಂದು ಭಾರತೀಯ ಸೇನೆಯ ಐವರು ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪ)ಯಿಂದ ಲಭಿಸಿದ ವಿಚಾರಣೆಯಿಂದ ವಿನಾಯಿತಿ ಅಧಿಕಾರವನ್ನು ಬಳಸಿಕೊಂಡ ಸೇನೆ ದೋಷಾರೋಪ ಪಟ್ಟಿಯನ್ನು ಪ್ರಶ್ನಿಸಿತು. ಈ ಕಾಯ್ದೆಯ ಪ್ರಕಾರ, ಯಾವುದೇ ಸೇನಾ ಸಿಬ್ಬಂದಿಯ ವಿಚಾರಣೆಗೆ ಪೂರ್ವಾನುಮತಿ ಅಗತ್ಯ.

ಆರು ವರ್ಷಗಳ ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಪ್ರಕರಣ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ತಲುಪಿತು. ಈ ಎನ್‌ಕೌಂಟರ್‌ಗಳು ಅತ್ಯಂತ ಅಮಾನುಷವಾಗಿದೆ ಹಾಗೂ ಇದರಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಎಲ್ಲರಿಗೂ ಮಾದರಿಯಾಗಬಹುದಾದ ಶಿಕ್ಷೆಯನ್ನು ನೀಡಬೇಕು ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತು. ಭಾರತೀಯ ಕಾನೂನಿನ ಪ್ರಕಾರ ಸಶಸ್ತ್ರ ಪಡೆಗಳ ಸಿಬ್ಬಂದಿಯೊಬ್ಬನ ವಿಚಾರಣೆಗೆ ಅನು ಮತಿ ಪಡೆಯುವುದು ಎಷ್ಟು ಕಷ್ಟ ಎಂಬುದನ್ನು ಈ ಅವಧಿಯಲ್ಲಿ ಬಹುತೇಕ ಎಲ್ಲರೂ ಅರ್ಥಮಾಡಿ ಕೊಂಡಿದ್ದಾರೆ. 

ಅದೂ ಅಲ್ಲದೆ ಭಾರತೀಯ ನ್ಯಾಯಾಂಗದಲ್ಲಿ ಪ್ರಕರಣಗಳ ವಿಚಾರಣೆ ಯಾವ ವೇಗದಲ್ಲಿ ನಡೆಯುತ್ತದೆ ಎಂಬುದಕ್ಕೂ ಇದೊಂದು ಉದಾಹರಣೆಯಾಗಿದೆ. ಘಟನೆ ನಡೆದದ್ದು 2000ದಲ್ಲಿ ಹಾಗೂ ಅದರ ನ್ಯಾಯಾಂಗ ಪ್ರಕ್ರಿಯೆ ಮುಗಿದದ್ದು 2012ರಲ್ಲಿ. 2014ರಲ್ಲಿ ಆರಂಭದಲ್ಲಿ ಇದ್ದ ಸ್ಥಿತಿಗೇ ಪ್ರಕರಣ ಮರಳಿದೆ. ಅದೂ ಅಲ್ಲದೆ, ಪ್ರಧಾನ ತನಿಖಾ ಸಂಸ್ಥೆಯಾಗಿದ್ದರೂ ಸಿಬಿಐ ಹೇಗೆ ಅಸಹಾಯಕವಾಗಿದೆ ಹಾಗೂ ಅದರ ತನಿಖೆ ಸೇನೆಯೆದುರು ಹೇಗೆ ಮಂಕಾಯಿತು ಎಂಬುದಕ್ಕೂ ಇದು ಉದಾಹರಣೆಯಾಗಿದೆ.

ಒಂದೋ ತನ್ನ ಅಧಿಕಾರಿಗಳ ವಿಚಾರಣೆಗೆ ಅನು ಮತಿ ನೀಡುವ, ಇಲ್ಲವೇ ಕೋರ್ಟ್ ಮಾರ್ಶಲ್ ನಡೆಸುವ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಸೇನೆಗೆ ನೀಡಿರುವುದೂ ವಿಚಿತ್ರವಾಗಿದೆ. ಎಲ್ಲರೂ ಊಹಿಸಿದಂತೆ ಕೋರ್ಟ್ ಮಾರ್ಶಲ್ ನಡೆಸುವ ಆಯ್ಕೆಯನ್ನು ಸೇನೆ ಸೂಚಿಸಿತು. ಇದು ಮತ್ತೂ ಒಂದು ಪ್ರಶ್ನೆಯನ್ನು ಎತ್ತಿದೆ. ನಾಗರಿಕ ಪ್ರದೇಶ ಗಳಲ್ಲಿ ನಡೆಯುವ ನಾಗರಿಕರ ಕೊಲೆಗಳು ಮತ್ತು ಅವರ ಮೇಲೆ ನಡೆಯುವ ಅತ್ಯಾಚಾರಗಳಂಥ ಅತ್ಯಂತ ಗಂಭೀರ ಪ್ರಕರಣಗಳಲ್ಲೂ ನ್ಯಾಯಾಂಗ ವ್ಯವಸ್ಥೆಗೆ ಸಮಾನಾಂತರವಾಗಿ ಇನ್ನೊಂದು ವಿಚಾರಣೆ ನಡೆಯಬಹುದೇ?

ಇದು ಗಣರಾಜ್ಯವೊಂದರ ಸಮಗ್ರ ಕಲ್ಪನೆಯ ಸಿಂಧುತ್ವಕ್ಕೆ ಸವಾಲಾಗಿರುವ ಪ್ರಶ್ನೆಯಲ್ಲವೇ?

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...