Thursday, February 27, 2014

ಶೈಕ್ಷಣಿಕ ಕ್ರಾಂತಿ ಮತ್ತು ನಾರಾಯಣ ಗುರು


ಬಾಬು ಶಿವ ಪೂಜಾರಿ

ಯಾವುದೇ ಸಮಾಜ ಅನಗತ್ಯ ಜಾಡ್ಯಗಳನ್ನು ತೊರೆದು ಹೊಸತನದ ತಿರುವು ಪಡೆಯಲು ಶಿಕ್ಷಣ ಏಕಮಾತ್ರ ಮಾರ್ಗ. ಎಲ್ಲಾ ಜಾತಿ ಜನಾಂಗಗಳ ಸ್ತ್ರೀ ಪುರುಷರಿಗೆ ಶಿಕ್ಷಣದ ಅಗತ್ಯವಿದೆ ಎಂಬ ನೆಲೆಯಲ್ಲಿ ಶಿವಗಿರಿಯಲ್ಲಿ ವಿದ್ಯೆಯ ಅಧಿದೇವತೆ ಶಾರದೆಯನ್ನು ಪ್ರತಿಷ್ಠಾಪಿಸಿದರು. ದೇವಸ್ಥಾನಗಳು ಶಿಕ್ಷಣಕ್ಕೆ ಸಹಕಾರ ಆಶ್ರಯಗಳಾಗಬೇಕೆಂದು ಗುರು ಕರೆಕೊಟ್ಟರು. ಗುರುಗಳು ಸ್ವತಃ ಕೆಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

ಶೈಕ್ಷಣಿಕ ಕ್ರಾಂತಿ ಮತ್ತು ನಾರಾಯಣ ಗುರು

ಶೋಷಣೆಗೆ ಬಲಿಯಾಗಿ ನಿಕೃಷ್ಟ ಮತ್ತು ಅಸ್ವಸ್ಥ ಸ್ಥಿತಿಗೆ ಮುಟ್ಟಿದ್ದೇವೆ ಎನ್ನುವ ವ್ಯಕ್ತಿಗತ ಅನುಭವ ಆಗುವ ತನಕ ಯಾವುದೇ ಶೋಷಿತ ಸಮುದಾ ಯದ ಸುಧಾರಣೆ ಸಾಧ್ಯವಿಲ್ಲ. ಪ್ರತಿಯೊಬ್ಬನಿಗೂ ಅವನ ಜನ್ಮಜಾತ ಸಮುದಾಯಕ್ಕೆ/ ವರ್ಗಕ್ಕೆ ಮತ್ತು ವ್ಯಕ್ತಿಗತವಾಗಿ, ಅವನಿಗೆ/ಅವಳಿಗೆ ಒಟ್ಟು ಸಮಾಜ ದಲ್ಲಿರುವ ಸ್ಥಾನಮಾನ, ಕುಂದು ಕೊರತೆಗಳ ಬಗೆಗೆ ಹಾಗೂ ಅವು ಹಾಗೇಕೆ ಎನ್ನುವ ನೈಜ ತಿಳುವಳಿಕೆ ಬಲಿಯುವ ತನಕ ಸಾಮಾಜಿಕ ಪರಿವರ್ತ ನೋತ್ಥಾನ ಅಸಾಧ್ಯ.

ತನ್ನ ಸಮಾಜದ ಹಿರಿಮೆ- ಗರಿಮೆಗಳ, ಐತಿಹಾಸಿಕ ದಾಖಲೆಗಳ ತಿಳುವಳಿಕೆ ಗಳೊಂದಿಗೆ ಅಭಿಮಾನ ಮತ್ತು ಸ್ವಾಭಿಮಾನ ಬೆಳೆಯಬೇಕು. ವ್ಯಕ್ತಿಗೆ ಅಕ್ಷರದ ಅನುಭವವಾದಾಗ ಸಮುದಾಯಕ್ಕೆ ಶಿಕ್ಷಣದ ಅಗತ್ಯದ ಅನುಭವ ತಾನಾಗಿ ವೇದ್ಯವಾಗುತ್ತದೆ. ವ್ಯಕ್ತಿಗೆ ಆಂತರಿಕ ವಿಶ್ವಾಸ ಪಡೆಯಲು ಮತ್ತು ತನ್ನ ಸುತ್ತಮುತ್ತಲಿನ ಬಾಹ್ಯ ಜಗತ್ತಿನ ಆಗುಹೋಗುಗಳ ಸ್ಥಿತಿಗತಿಗಳನ್ನು ಅರಿಯಲು ಇರುವ ಏಕಮಾತ್ರ ಸಾಧನ ವೌಲ್ಯಾ ಧಾರಿತ ಶಿಕ್ಷಣ ಆಂತರಿಕ ತಿಳುವಳಿಕೆಯಿಂದ ಮೂಡಿರುವ ಆತ್ಮೀಯವಾದ ವಿಶ್ವಾಸ ಮತ್ತು ಮಾನಸಿಕ ದೃಢತೆಯೇ ವ್ಯಕ್ತಿ ವಿಕಾಸಕ್ಕೆ ಮತ್ತು ಸಮಾಜದ ಪುರೋಗಾಮಿತ್ವಕ್ಕೆ ಸೋಪಾನ.

ನಿರಂತರ ಬದಲಾಗುತ್ತಿರುವ ಪರಿಸರ ಹಾಗೂ ಪರಿಸ್ಥಿತಿಗೆ ಸಮಾಜ ತನ್ನನ್ನು ಒಡ್ಡಿಕೊಂಡು, ತಿದ್ದಿಕೊಂಡು, ಪ್ರಗತಿಪರ ಉನ್ನತಿ ಸಾಧಿಸಲು ಆಧುನಿಕ ಶಿಕ್ಷಣದ ಅಗತ್ಯವಿದೆ. ವ್ಯಕ್ತಿ, ಕುಟುಂಬ, ಸಮಾಜದ ಬೆಳವಣಿಗೆಯ ತಳಹದಿಯೇ ಶಿಕ್ಷಣ. ಶಿಕ್ಷಣದಿಂದ ಶೂದ್ರರು ವಂಚಿತರಾದುದೇ ಅವರ ಹೀನ ಅಸ್ವಸ್ಥ ಸ್ಥಿತಿಗೆ ಕಾರಣ. ಇಂತಹ ದುಸ್ಥಿತಿ ಯಿಂದ ಈ ಸಮುದಾಯಗಳ ಪುನರುತ್ಥಾನವಾ ಗಬೇಕು. ಅದು ಸಾಧ್ಯವಾಗಲು ಪ್ರತಿ ಪುರುಷ ಮತ್ತು ಸ್ತ್ರೀಗೂ ಸಮಾನ ಶಿಕ್ಷಣದ ಅಗತ್ಯ ಮಾತ್ರವಲ್ಲ ಅನಿವಾರ್ಯ ಎನ್ನುವುದು ಗುರು ಸಿದ್ಧಾಂತ.

ಸ್ತ್ರೀ-ಪುರುಷರು ಸುಸಂಸ್ಕೃತ, ಸುಶೀಲ, ಪ್ರಜ್ಞಾವಂತ, ಕರ್ತವ್ಯನಿಷ್ಠೆಯುಳ್ಳ, ಪರಿವರ್ತನಶೀಲ ಗುಣದ ವಿದ್ಯಾ ಸಂಪನ್ನರಾಗಬೇಕು. ಆವಾಗ ವಿವೇಕ ವುಳ್ಳ ಸತ್ಸಂಸ್ಕೃತಿಕ ಕೌಟುಂಬಿಕ ಹಿನ್ನೆಲೆಯುಳ್ಳ ಅಪೇಕ್ಷಿತ ಉತ್ತಮ ಸಮಾಜದ ನಿರ್ಮಾಣವಾಗು ವುದು. ಹೀಗಾದಾಗ ಮಾತ್ರ ಆಧುನಿಕ ಸಾಮಾ ಜಿಕ ಪುನರುತ್ಥಾನ, ಪ್ರಗತಿ ಸಾಧ್ಯವಾಗುತ್ತದೆ. ತಾಯಿಯಿಂದ ಆರೈಕೆ, ಮುದ್ದಾಟ ಒಡನಾಟಗಳ ನಿರ್ದೇಶನಗಳಲ್ಲಿ ಮಗು ತನ್ನ ಬುನಾದಿ ವ್ಯಕ್ತಿತ್ವ ರೂಢಿಸಿಕೊಂಡು ಭವಿಷ್ಯದ ಸಮಾಜವಾಗುವುದು. 

ವಿದ್ಯಾವಂತೆ, ಪ್ರಜ್ಞಾವಂತೆ, ಸುಸಂಸ್ಕೃತ, ಧರ್ಮ ಬೀರುವಾದ ತಾಯಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಢಿಸಲು ಸಮರ್ಥಳಾಗಬಲ್ಲಳು. ಇಂತಹ ತಾಯಂದಿರಿಂದ ವಿದ್ಯಾವಂತ, ಪ್ರಜ್ಞಾವಂತ, ವ್ಯಕ್ತಿಗಳಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯವಾಗಬಲ್ಲದು. ತಾಯಿ ಸಮಾಜದ ಅಭಿ ವೃದ್ಧಿಯ ಪ್ರಧಾನ ಭೂಮಿಗೆ ನಿರ್ವಹಿಸುವವಳು. ಆದ್ದರಿಂದ ಆಕೆಗೆ ಉತ್ತಮ ಶಿಕ್ಷಣದ ಅನಿ ವಾರ್ಯತೆ ಇದೆ ಎನ್ನುವುದು ಗುರುಗಳ ಶಿಕ್ಷಣ ಕ್ರಾಂತಿಯ ಮೂಲಮಂತ್ರ.

ಆ ಕಾಲದಲ್ಲಿ ಈಳವರಿಗೆ ತಿರುವನಂತಪುರದ ಸರಕಾರಿ ಶಾಲೆಗಳಲ್ಲಿ ಪ್ರವೇಶವಿರಲಿಲ್ಲ. ಮಿಶನರಿ ಶಾಲೆಗಳಲ್ಲಿ ಪ್ರವೇಶವಿದ್ದರೂ ಶುಲ್ಕ ತೆರಲು ಈಳವರಾದಿ ಶೋಷಿತರಿಗೆ ಸಾಧ್ಯವಾಗುತ್ತಿರಲಿಲ್ಲ. ಈಳವರು ಏಕೋಪಾಧ್ಯಾಯ ಶಾಲೆಗಳಲ್ಲಿ ತಮ್ಮ ಜಾತಿಯ ಹಿರಿಯರಿಂದ ಸಾಗಿ ಬಂದ ಪರಂಪರಾ ಗತ ವಿದ್ಯೆಯನ್ನು ಕಲಿಯಬೇಕಿತ್ತು. 

ಗುರುಗಳು ಅರುವಿಪ್ಪುರ ಇಂಗ್ಲಿಷ್, ಮಲಯಾಳ ಶಾಲೆಗಳನ್ನು ಆರಂಭಿಸಿದರು. ಆಲುವ ಅದ್ವೈತಾಶ್ರಮದಲ್ಲಿ ಮಲೆಯಾಳ, ಸಂಸ್ಕೃತ ಶಾಲೆಗಳನ್ನು ಸ್ಥಾಪಿಸಿದರು. ಶಿವಗಿರಿಯಲ್ಲಿ ಕುರುವರ ಮಕ್ಕಳಿಗೆ ಮತ್ತು ವಯಸ್ಕರಿಗೆ ರಾತ್ರಿ ಶಾಲೆಗಳನ್ನು ಆರಂಭಿಸಿದರು. ಗುರುಗಳ ಶಿಕ್ಷಣ ಕ್ರಾಂತಿಯ ಹರವು ಬಹುಮುಖ ವಾಗಿತ್ತು. ಮಾತೃಭಾಷೆ, ಧಾರ್ಮಿಕ ವಿಧಿ-ವಿಧಾನ ಗಳನ್ನು ತಿಳಿದುಕೊಳ್ಳಲು ಸಂಸ್ಕೃತ, ಸರಕಾರಿ ಉದ್ಯೋಗ ಪಡೆಯಲು ಹಾಗೂ ಸರಕಾರಿ ವ್ಯವಹಾರಗಳ ತಿಳುವಳಿಕೆ ಇಂಗ್ಲಿಷನ್ನು ಕಲಿಯ ಬೇಕೆಂದು ನಿರ್ದೇಶನ ಮಾಡಿದರು. ಸ್ವಾತಂತ್ರೋತ್ತರ ಭಾರತ ಇದೇ ತ್ರಿಭಾಷಾ ಸೂತ್ರ ಅಂಗೀಕರಿಸಿತು.

ತಿರುವನಂತಪುರದಲ್ಲಿ 1834ರಲ್ಲಿ, ಕೊಚ್ಚಿಯಲ್ಲಿ 1837ರಲ್ಲಿ ಸರಕಾರ ಶಾಲೆಗಳನ್ನು ತೆರೆಯಿತು. 1865ರಲ್ಲಿ ಎರ್ನಾಕುಲಂನಲ್ಲಿ, 1866ರಲ್ಲಿ ತಿರುವನಂತಪುರದಲ್ಲಿ ಸರಕಾರಿ ಕಾಲೇಜುಗಳನ್ನು ಆರಂಭ ಮಾಡಿತು. ಸರಕಾರ ಜಾತಿವಾದದ ಅಸ್ಪಶ್ಯತೆಯ ನೆಲೆಯಲ್ಲಿ ಈಳವರು ಮತ್ತು ಆವರ್ಣರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಪ್ರವೇಶ ನಿರಾಕರಿಸಿತು. ನಾಯರ್‌ರು ಆವರ್ಣರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಪ್ರವೇಶ ಕೊಡ ಬಾರದೆಂದು ಬ್ರಾಹ್ಮಣರೊಡಗೂಡಿ ಸಂಘಟಿತ ರಾಗಿ ವಿರೋಧಿಸುತ್ತ ಬಂದರು.

ಸರಕಾರ ಆವರ್ಣರಿಂದ ಶಿಕ್ಷಣ ತೆರಿಗೆ ಪಡಕೊಂಡು ಅವರ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ಕೊಡದಿದ್ದುದರ ವಿರುದ್ಧ ಸುಮಾರು ಐವತ್ತು ವರ್ಷಗಳ ತನಕ ಆಗಾಗ ಚಳವಳಿಗಳು ನಡೆದವು. ಪರಿಣಾಮವಾಗಿ ತಿರುವಾಂಕೂರಿನ ಅನೇಕ ಕಡೆಗಳಲ್ಲಿ ನಾಯರ್- ಈಳವ ಹಾಗೆಯೇ ನಾಯರ್-ನಾಡರ್ ಸಮು ದಾಯಗಳೊಳಗೆ ಕಲಹಗಳೂ, ಸಂಘರ್ಷಗಳೂ ನಡೆಯುತ್ತಿದ್ದವು.

ಗುರು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ಕೊಟ್ಟರು. ಔದ್ಯೋಗಿಕ ಕ್ರಾಂತಿಯಿಂದ ಸಾಮಾಜಿಕ ಪರಿ ವರ್ತನೆ ಮತ್ತು ಅಭಿವೃದ್ಧಿ ಸಾಧಿಸಲು ವೃತ್ತಿಪರ ಶಿಕ್ಷಣ ಆರಂಭಿಸಿದವರಲ್ಲಿ ನಾರಾಯಣ ಗುರು ಗಳು ಪ್ರಮುಖರಾಗುತ್ತಾರೆ. ಅರುವಿಪ್ಪುರದಲ್ಲಿ, ಅನಂತರ ಶಿವಗಿರಿಯಲ್ಲಿ ನೇಯ್ಗೆಯ ಉದ್ಯಮ ಘಟಕಗಳನ್ನು ಮತ್ತು ನೇಯ್ಗೆಯ ತರಬೇತಿ ಕೇಂದ್ರಗಳನ್ನು ತೆರೆದರು. ಇದು ಶಿಕ್ಷಣದೊಂದಿಗೆ ವೃತ್ತಿಪರ ಶಿಕ್ಷಣಕ್ಕೆ ಹೊಸ ತಿರುವನ್ನು ಕೊಟ್ಟಿತು. 

ತೆಂಗಿನ ನಾರಿನ ಕೈಗಾರಿಕೆ, ವೈಜ್ಞಾನಿಕ ಕೃಷಿಗಾರಿಕೆ, ಗುಡಿ ಕೈಗಾರಿಕೆಗಳ ತರಬೇತಿಗಳನ್ನು, ವೃತ್ತಿಪರ ಶಿಕ್ಷಣಗಳನ್ನಾಗಿ ಅಳವಡಿಸಿಕೊಂಡರು. ಇದರಿಂದ ಶಿಕ್ಷಣ ಬಹುಮುಖದ ಹೊಸ ಆಯಾಮಗಳ ನೆಲೆ ಗಳನ್ನು ಕಂಡುಕೊಳ್ಳುವಲ್ಲಿ ಸಫಲತೆ ಪಡೆಯಿತು. ಎಸ್‌ಎನ್‌ಡಿಪಿಯ ವಾರ್ಷಿಕ ಸಭೆಗಳಲ್ಲಿ ಔದ್ಯೋಗಿಕ ವಸ್ತು ಪ್ರದರ್ಶನ ಮತ್ತು ಪ್ರಾತ್ಯ ಕ್ಷತೆಯ ತರಬೇತಿಗಳನ್ನು ಸಂಪನ್ಮೂಲ ವ್ಯಕ್ತಿ ಗಳಿಂದ ಪ್ರಸ್ತುತ ಪಡಿಸುತ್ತಿದ್ದರು. 

1905ರಲ್ಲಿ ಕ್ವಿಲಾನಿನ ಎಸ್‌ಎನ್‌ಡಿಪಿ ಅಧಿವೇಶನದಲ್ಲಿ ಪ್ರಥಮ ಮತ್ತು 1906ರಲ್ಲಿಯ ಕಣ್ಣಾನೂರಿನ ಅಧಿವೇಶನದಲ್ಲಿ ಎರಡನೆಯ ಬಾರಿ ಔದ್ಯೋಗಿಕ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತ ಪಡಿಸಿದರು. ಹೀಗೆ ಹೊಸ ಹೊಸ ಕೈಗಾರಿಕೆ ಗಳಿಗೆ, ಗ್ರಾಮೋದ್ಯೋಗಗಳಿಗೆ ಪ್ರೋತ್ಸಾಹ ಕೊಟ್ಟರು.

ಪ್ರತಿಯೊಬ್ಬನಿಗೂ ಅಕ್ಷರ ಜ್ಞಾನವಿರಬೇಕೆನ್ನುವ ಗುರುಗಳು ಶಿವಗಿರಿಯಲ್ಲಿ ವಯಸ್ಕರ ಶಿಕ್ಷಣವನ್ನು ಆರಂಭಿಸಿದರು. ಹಗಲು ಶಾಲೆಗೆ ಹೋಗಲು ಸಾಧ್ಯವಿಲ್ಲದ ಮಕ್ಕಳಿಗಾಗಿ ರಾತ್ರಿ ಶಾಲೆಗಳನ್ನು ತೆರೆದರು. 1904ರಲ್ಲಿ ಶಿವಗಿರಿಯಲ್ಲಿ ಕುರುವರ ಮಕ್ಕಳಿಗಾಗಿ ರಾತ್ರಿ ಶಾಲೆಯೊಂದನ್ನು ತೆರೆದರು. ಪ್ರಾಯಶಃ ದಕ್ಷಿಣ ಭಾರತದಲ್ಲಿ ವಯಸ್ಕರ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಮತ್ತು ರಾತ್ರಿ ಶಾಲೆ ತೆರೆದ ಮೊದಲಿಗರು ನಾರಾಯಣ ಗುರುಗಳು. 

ಚೆಂಬಳಂತಿಯಲ್ಲಿ ಪುಲಯ್ಯ ಜನಾಂಗದ ಮಕ್ಕಳಿಗಾಗಿ ಶಾಲೆಯನ್ನು ಇದೇ ಸಮಯದಲ್ಲಿ ಸ್ಥಾಪಿಸಿದರು. 1905ರಲ್ಲಿ ಗುರುದೇವರ 50ನೆ ಜನ್ಮೋತ್ಸವದ ಸಂದರ್ಭದಲ್ಲಿ ವರ್ಕಳದ ಸಮೀಪದ ವೆಟ್ಟೂರು ಗ್ರಾಮದಲ್ಲಿ ಪರಯ್ಯ ಮತ್ತು ಪುಲಯ್ಯರ ಮಕ್ಕಳಿಗಾಗಿ ರಾತ್ರಿ ಶಾಲೆ ಯನ್ನು ಸ್ಥಾಪಿಸಿದರು.

ಈ ಶಾಲೆಗಳಲ್ಲಿ ಗುರು ದೇವರ ಶಿಷ್ಯರು ಉಪಾಧ್ಯಾಯರಾಗಿ ಧರ್ಮಾ ರ್ಥ ಸೇವೆ ಆಗಿ ಕಲಿಸುತ್ತಿದ್ದರು. ಗುರುಗಳು ಸಿಲೋನಿನಲ್ಲಿ ತನ್ನ ಶಿಷ್ಯ ಸತ್ಯವೃತ ಸ್ವಾಮಿಗಳಿಂದ 42ಕ್ಕೂ ಹೆಚ್ಚು ರಾತ್ರಿ ಶಾಲೆ ಸ್ಥಾಪಿಸಿದರು. ಗುರುಗಳು ಪ್ರತಿಷ್ಠೆ ಮಾಡಿದ ಪ್ರತಿ ದೇವಸ್ಥಾನ ಸುತ್ತಮುತ್ತ ಶಾಲೆಗಳನ್ನು ತೆರೆಯಲು ಮೊದಲ ಆದ್ಯತೆ ಕೊಡುತ್ತಿದ್ದರು. ಸಮಾಜದ ಪ್ರತಿ ವರ್ಗದವರು ವಿದ್ಯಾವಂತರಾಗಬೇಕು ಎನ್ನುವುದು ಅವರ ಶಿಕ್ಷಣ ನೀತಿಯಾಗಿತ್ತು.
॥ಶೂದ್ರ ಸಾಕ್ಷರ ಸಂಯುಕ್ತಂ ದೂರತಃ ಪರಿವರ್ಜಯೇತ್ ॥

ಮಾ 11 ಬೆಂಗಳೂರು : ದಲಿತರು ಮತ್ತು ಸ್ವಾವಲಂಬನೆ - ವಿಚಾರ ಸಂಕಿರಣ ಮತ್ತು ಸಂವಾದ

ಗಿಬ್ರಾನ್ : ಮತ್ತೆರಡು ಕತೆಗಳು
ಕವಿತೆ - ಕಥೆ

 

ಖಲೀಲ ಗಿಬ್ರಾನ್

ಅನು : ಡಾ ಎಚ್ ಎಸ್ ಅನುಪಮಾನನ್ನೆದೆಯಾಳದಿಂದ

ನನ್ನೆದೆಯಾಳದಿಂದ ಒಂದು ಹಕ್ಕಿ ಮೇಲೆದ್ದಿತು ಮತ್ತು ಆಗಸದತ್ತ ಮುಖ ಮಾಡಿ ಹಾರತೊಡಗಿತು.

ಮೇಲೆಮೇಲಕ್ಕೆ ಏರುತ್ತ ಹೋದ ಹಾಗೆ ಅದು ದೊಡ್ಡದೊಡ್ಡದಾಗಿ ಬೆಳೆಯಿತು.

ಮೊದಲು ಅದು ಪುಟ್ಟ ಗುಬ್ಬಿಯಷ್ಟೇ ಆಗಿತ್ತು, ನಂತರ ಟಿಟ್ಟಿಭವಾಯಿತು. ಹದ್ದಿನಷ್ಟಾಗಿ, ಆಮೇಲೆ ವರ್ಷಋತುವಿನ ದೊಡ್ಡ ಮೋಡದಷ್ಟಾಗಿ, ಆಮೇಲೆ ನಕ್ಷತ್ರ ಖಚಿತ ಸ್ವರ್ಗವನೆಲ್ಲ ಆವರಿಸುವಷ್ಟು ಅದು ಬೆಳೆಯಿತು.

ನನ್ನೆದೆಯಾಳದಿಂದ ಒಂದು ಹಕ್ಕಿ ಆಗಸದತ್ತ ಹಾರಿತು. ಹಾರತೊಡಗಿದಂತೆಲ್ಲ ದೊಡ್ಡದಾಗಿ ಬೆಳೆಯುತ್ತ ಹೋಯಿತು. ಆದರೂ ನನ್ನೆದೆಯನ್ನು ಮಾತ್ರ ಅದು ಬಿಟ್ಟು ಹೋಗಲಿಲ್ಲ.

ನನ್ನ ಚೇತನವೇ, ನನ್ನ ಅಕಳಂಕಿತ ಜ್ಞಾನವೇ, ನಾನು ನಿನ್ನಷ್ಟು ಎತ್ತರಕೆ ಹಾರುವುದಾದರೂ ಹೇಗೆ? ಬೆಳೆಬೆಳೆದು ಮನುಜ ಆಗಸವನಿಡೀ ಆವರಿಸುವುದ ನಿನ್ನೊಡನೆ ನೋಡುವುದಾದರೂ ಹೇಗೆ?

ನನ್ನೊಳಗಿರುವ ಈ ಕಡಲ ಇಬ್ಬನಿಯ ಹನಿಗಳಾಗಿಸುವುದು ಹೇಗೆ? ನಿನ್ನೊಡನೆ ಅನಂತ ಅವಕಾಶದಲಿ ಸುತ್ತುವುದು ಹೇಗೆ?

(ದಿ ಫೋರ್ ರನ್ನರ್)ಯುದ್ಧ ಮತ್ತು ಪುಟ್ಟ ರಾಜ್ಯಗಳು

ಒಮ್ಮೆ ಒಂದು ಕುರಿ ಮತ್ತು ಕುರಿಮರಿ ಮೇಯುತ್ತಿರುವ ಒಂದು ಹುಲ್ಲುಗಾವಲಿನ ಮೇಲೆ, ಆಗಸದಲೊಂದು ಹದ್ದು ಸುತ್ತುವರೆಯತೊಡಗಿತು. ಹಸಿದು ಕುರಿಮರಿಯನ್ನೇ ನೋಡುತ್ತ ಚಕ್ರಾಕಾರ ತಿರುಗತೊಡಗಿತು. ಇನ್ನೇನು ಅದು ಕೆಳಗಿಳಿದು ಬೇಟೆಯನ್ನು ಹಿಡಿಯಬೇಕು, ಅಷ್ಟರಲ್ಲಿ ಇನ್ನೊಂದು ಹದ್ದು ಕಾಣಿಸಿಕೊಂಡಿತು. ಅದು ಹಸಿದು ಕುರಿ ಮತ್ತು ಕುರಿ ಮರಿಯತ್ತಲೇ ಗುರಿಯಿಟ್ಟು ಹಾರತೊಡಗಿತು. ಇಬ್ಬರೂ ಪ್ರತಿಸ್ಪರ್ಧಿ ಎದುರಾಳಿಗಳು ಸಿಳ್ಳು ಹಾಕುತ್ತ, ಭಯಾನಕವಾಗಿ ಕಿರುಚುತ್ತ ಆಗಸದಲ್ಲಿ ಕಾದಾಡತೊಡಗಿದವು.

ಕುರಿ ಮೇಲೆ ನೋಡಿತು. ಅದಕ್ಕೆ ತುಂಬ ಆಶ್ಚರ್ಯವಾಯಿತು. ತನ್ನ ಮರಿಯತ್ತ ತಿರುಗಿ ಹೇಳಿತು,

‘ಮಗೂ, ಎಂಥ ವಿಚಿತ್ರ?! ಈ ಎರಡೂ ಮಹಾನ್ ಪಕ್ಷಿಗಳು ಒಂದರೊಡನೊಂದು ಸೆಣಸುತ್ತಿವೆ. ವಿಶಾಲ ಆಗಸ ಅವರಿಬ್ಬರೂ ಹಿಡಿಸುವಷ್ಟು ದೊಡ್ಡದಿಲ್ಲವೇ? ನನ್ನ ಮರಿಯೇ, ಪ್ರಾರ್ಥಿಸು, ದೇವರು ಈ ಇಬ್ಬರು ರೆಕ್ಕೆಗಳಿರುವ ಸೋದರರ ನಡುವೆ ಬೇಗ ಶಾಂತಿ ಹುಟ್ಟುವಂತೆ ಮಾಡಲಿ.’

ಕುರಿಮರಿ ಹೃತ್ಪೂರ್ವಕವಾಗಿ ಪ್ರಾರ್ಥಿಸತೊಡಗಿತು.

(ದಿ ಫೋರ್ ರನ್ನರ್)

ಜೈಹಿಂದ್’ ಘೋಷಣೆಯ ಹಿಂದಿರುವ ಜೈನುಲ್ ಆಬಿದೀನ್ ಹಸನ್!ಬಿ. ಎಂ. ಬಶೀರ್

ಜೈಹಿಂದ್’ ಘೋಷಣೆಯ ಹಿಂದಿರುವ ಜೈನುಲ್ ಆಬಿದೀನ್ ಹಸನ್!


ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಬಳಿಕವೂ ಸ್ವಾತಂತ್ರ ಚಳವಳಿಯಲ್ಲಿ ಬಳಸಲಾದ ಘೋಷಣೆಗಳೂ ಇಂದಿಗೂ ವಿವಿಧ ರಾಜಕೀಯ ರೂಪಗಳಲ್ಲಿ ವರ್ತಮಾನವನ್ನು ಕಾಡುತ್ತಲೇ ಬರುತ್ತಿದೆ. ಅದು ಈ ದೇಶವನ್ನು ಒಂದಾಗಿಸುವುದಕ್ಕೆ ಸ್ಫೂರ್ತಿಯಾಗಬೇಕಾಗಿತ್ತು. ದುರದೃಷ್ಟವಶಾತ್ ರಾಜಕೀಯ ಶಕ್ತಿಗಳು ಅವುಗಳನ್ನು ತಮ್ಮ ಸ್ವಾರ್ಥ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ. ‘ವಂದೇ ಮಾತರಂ’ ಘೋಷಣೆಯನ್ನು ಆರೆಸ್ಸೆಸ್ ಜನರು ಅದು ಹೇಗೆ ವಿರೂಪಗೊಳಿಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲರನ್ನು ಒಗ್ಗೂಡಿಸಲು ಬಳಸಲಾಗಿದ್ದ ವಂದೇಮಾತರಂ ಘೋಷಣೆಯನ್ನು ಇಂದು ಕೆಲವು ಶಕ್ತಿಗಳು ಹಿಂದೂ-ಮುಸ್ಲಿಮರನ್ನು ಒಡೆಯಲು ಬಳಸುತ್ತಿದ್ದಾರೆ. 

ಬಂಕಿಮಚಂದ್ರ ಚಟರ್ಜಿ ತನ್ನ ಆನಂದ ಮಠ ಕಾದಂಬರಿಯಲ್ಲಿ ‘ವಂದೇಮಾತರಂ’ ಹಾಡನ್ನು ಬಳಸಿದ್ದರು. ಅದರಲ್ಲಿ ಮ್ಲೇಚ್ಛರನ್ನು ಅಥವಾ ಮುಸ್ಲಿಮರನ್ನು ಕೊಂದು ಹಾಕಲು ಆನಂದ ಮಠದ ಉಗ್ರವಾದಿ ಸನ್ಯಾಸಿಗಳು ಈ ಹಾಡನ್ನು ಬಳಸುತ್ತಾರೆ. ಇದೊಂದು ದುರ್ಗೆಯ ಆರಾಧನೆಯೂ ಆಗಿದೆ. ಆದರೆ ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ‘ವಂದೇ ಮಾತರಂ’ ಘೋಷಣೆ ಬೇರೆ ಅರ್ಥದಲ್ಲಿ ಬಳಸಲ್ಪಟ್ಟಿತು. 

ಅಂತೆಯೇ ‘ಅಲ್ಲಾಹು ಅಕ್ಬರ್’ ಎನ್ನುವ ಘೋಷಣೆ ಮುಸ್ಲಿಮರಿಗೆ ಸೀಮಿತವಾದುದೇನೋ ಹೌದು. ಆದರೆ ಖಿಲಾಫತ್‌ಚಳವಳಿ ಮತ್ತು ಇನ್ನಿತರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ‘ಅಲ್ಲಾಹು ಅಕ್ಬರ್’ ಎನ್ನುವ ಘೋಷಣೆಯ ಜೊತೆ ಜೊತೆಗೇ ಅದೆಷ್ಟೋ ಸ್ವಾತಂತ್ರ ಹೋರಾಟಗಾರರು ಹುತಾತ್ಮರಾದರು. ಮದ್ರಸದ ಉಲೇಮಾಗಳೂ ಈ ‘ಅಲ್ಲಾಹು ಅಕ್ಬರ್’ ಅಂದರೆ ‘ದೇವರಷ್ಟೇ ದೊಡ್ಡವನು’ ಎನ್ನುವ ಘೋಷಣೆಯನ್ನು ಬಳಸಿಕೊಂಡು ಬ್ರಿಟಿಷರ ವಿರುದ್ಧ ನಿಂತರು. ‘ಇಂಕ್ವಿಲಾಬ್ ಜಿಂದಾಬಾದ್’ ಭಗತ್ ಸಿಂಗ್ ಸಮಕಾಲೀನರು ಉದ್ಗರಿಸಿದ ಘೋಷಣೆ. 

ಆದರೆ ಇಂದು ಈ ಘೋಷಣೆ ಕೇವಲ ಕಮ್ಯುನಿಷ್ಟರಿಗೆ ಸೀಮಿತಗೊಂಡಿದೆ. ಕ್ರಾಂತಿ ಚಿರಾಯುವಾಗಲಿ ಎನ್ನುವುದು ಎಂದೆಂದಿಗೂ, ಎಲ್ಲೆಲ್ಲೂ ಸಲ್ಲಬಹುದಾದ ಘೋಷಣೆಯಾಗಿದೆ. ಆದರೆ ಈ ಘೋಷಣೆಯನ್ನೂ ರಾಜಕೀಕರಣ ಗೊಳಿಸಲಾಗಿರುವುದು ವಿಪರ್ಯಾಸ.

ಅಂತೆಯೇ ನಮ್ಮ ನಡುವೆ ಇನ್ನೊಂದು ಘೋಷಣೆ ಚಿರಸ್ಥಾಯಿಯಾಗಿ ಉಳಿದಿದೆ. ಅದುವೇ ‘ಜೈಹಿಂದ್’. ಈ ಘೋಷಣೆಯನ್ನು ಸ್ಮರಿಸುವಾಗ ನಮ್ಮ ಕಣ್ಮುಂದೆ ನಿಲ್ಲುವವರು ನೇತಾಜಿ ಸುಭಾಶ್ ಚಂದ್ರಭೋಸ್. ಆದರೆ ಈ ಘೋಷಣೆಗೆ ಅತ್ಯಂತ ಕುತೂಹಲಕರವಾದ ಹಿನ್ನೆಲೆಯಿದೆ. ಈ ಹಿನ್ನೆಲೆ ಒಂದು ಕೃತಿಯ ಮೂಲಕ ಹೊರ ಬಿದ್ದಿದೆ.

ಆ ಕೃತಿಯ ಹೆಸರು ‘ಲೆಜೆಂಡೋಟ್ಸ್ ಆಫ್ ಹೈದರಾಬಾದ್’. ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ನರೇಂದ್ರ ಲೂಥೆರ್ ಹೊರ ತಂದಿರುವ ಈ ಕೃತಿ, ಇತಿಹಾಸದ ಧೂಳಿನಲ್ಲಿ ಮುಚ್ಚಿ ಹೋಗಿರುವ ಹತ್ತು ಹಲವು ಕುತೂಹಲಕಾರಿ ಸಂಗತಿಗಳನ್ನು ಹೊರಗೆ ತಂದಿದೆ. ಅವುಗಳಲ್ಲಿ ‘ಜೈ ಹಿಂದ್’ ಘೋಷಣೆಯ ಹಿಂದಿರುವ ಕುತೂಹಲಕಾರಿ ಅಂಶವೂ ಒಂದು.
ಜೈ ಹಿಂದ್ ಘೋಷಣೆಯನ್ನು ತನ್ನ ಹೋರಾಟದ ಪ್ರಧಾನ ಅಸ್ತ್ರವಾಗಿ ಮಾಡಿಕೊಂಡವರು ನೇತಾಜಿ ಸುಭಾಶ್ ಚಂದ್ರಭೋಸ್. ಭಾರತೀಯರಿಗೆ ಭಾರತೀಯ ರೀತಿಯಲ್ಲೇ ಶುಭಾಶಯವನ್ನು ಹೇಳಲು ನೇತಾಜಿ ‘ಜೈಹಿಂದ್’ ಘೋಷಣೆಯನ್ನು ಜರ್ಮನಿಯಲ್ಲಿ ಬಳಸಿಕೊಂಡರು ಆದರೆ ಅವರಿಗೆ ಈ ಘೋಷಣೆಯ ಸಲಹೆಯನ್ನು ನೀಡಿದ್ದು ಅವರ ಪ್ರೀತಿಯ ಶಿಷ್ಯ, ಐಎನ್‌ಎಯ ಪ್ರಧಾನ ಭಾಗವಾಗಿದ್ದ ಜೈನುಲ್ ಆಬಿದೀನ್ ಹಸನ್ ಅವರು. 

ಜೈನುಲ್ ಆಬಿದೀನ್ ಅವರು ನೇತಾಜಿಯನ್ನು ಸೇರಿಕೊಂಡ ಸಂದರ್ಭವೇ ಅವಿಸ್ಮರಣೀಯವಾದುದು. ಜೈನುಲ್ ಆಬಿದೀನ್ ಅವರು ಹೈದರಾಬಾದಿನ ಕಲೆಕ್ಟರ್ ಒಬ್ಬರ ಪುತ್ರ. ಎಂಜಿನಿಯರಿಂಗ್ ಕಲಿಕೆಗಾಗಿ ಜರ್ಮನಿಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಜರ್ಮನಿಯಲ್ಲಿ ಬ್ರಿಟಿಷರ ವಿರುದ್ಧ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಅದಕ್ಕಾಗಿ ಜರ್ಮನಿಯಲ್ಲಿರುವ ಭಾರತೀಯರನ್ನು ಸಂಘಟಿಸುತ್ತಿದ್ದರು.

ಹೀಗಿರುವಾಗ, ವಿದ್ಯಾರ್ಥಿಯಾಗಿರುವ ಆಬಿದೀನ್ ಅವರು ಸುಭಾಶ್‌ಚಂದ್ರ ಬೋಸ್ ಅವರಿಂದ ತೀವ್ರ ಪ್ರಭಾವಕ್ಕೊಳಗಾದರು. ಗಡಿಪಾರಿಗೊಳಗಾಗಿರುವ ಭಾರತೀಯ ಕೈದಿಗಳನ್ನು ಸಂಘಟಿಸಿ ನೇತಾಜಿ ಸಭೆ ನಡೆಸುತ್ತಿದ್ದಾಗ ಅದರಲ್ಲಿ ಆಬಿದೀನ್ ಭಾಗವಹಿಸಿದರು. ಅಂದು ಅವರು ನೇತಾಜಿಯವರನ್ನು ಭೇಟಿ ಮಾಡಿದರು ‘‘ನನ್ನ ಕಾಲೇಜು ವಿದ್ಯಾಭ್ಯಾಸ ಮುಗಿದದ್ದೇ, ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ’’ ಎಂದು ಆಬಿದೀನ್ ನೇತಾಜಿಯಲ್ಲಿ ಕೇಳಿಕೊಂಡರಂತೆ.

ಆದರೆ ನೇತಾಜಿಯವರು ಆಬಿದೀನ್ ಮಾತನ್ನು ಒಪ್ಪಲಿಲ್ಲ ‘‘ಶಾಲೆ, ಕಾಲೇಜು ಎಂದು ಸಣ್ಣ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಂಡರೆ, ದೊಡ್ಡ ವಿಷಯಗಳನ್ನು ಯೋಚಿಸಲೂ ಸಾಧ್ಯವಿಲ್ಲ. ನನ್ನ ಹೋರಾಟಕ್ಕೆ ಕೈಜೋಡಿಸುವ ಬಯಕೆಯಿದ್ದರೆ, ದೇಶಕ್ಕಾಗಿ ಹೋರಾಡುವ ಆಸೆಯಿದ್ದರೆ ಅದು ಈ ಕ್ಷಣದಿಂದಲೇ ಶುರುವಾಗಲಿ’’ ಎಂದು ಕರೆ ನೀಡಿದರು. ಅಷ್ಟೇ. ಆಬಿದೀನ್ ತನ್ನ ಕಾಲೇಜನ್ನು ತ್ಯಜಿಸಿ, ನೇತಾಜಿಯವರ ಸೇನೆಯನ್ನು ಸೇರಿಕೊಂಡರು.

ಅಷ್ಟೇ ಅಲ್ಲ, ನೇತಾಜಿಯವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ಐಎನ್‌ಎಯಲ್ಲಿ ಅವರು ಮೇಜರ್ ಆಗಿ ದುಡಿದರು. ರಣಭೂಮಿಯಲ್ಲಿ ಹೋರಾಡಿದರು. ತನ್ನ ಸೇನೆಯಲ್ಲಿ ಭಾರತೀಯತೆಯನ್ನು ಉದ್ದೀಪಿಸುವ ಶುಭಾಶಯ ಘೋಷಣೆಯೊಂದು ಇದೇ ಸಂದರ್ಭದಲ್ಲಿ ಸುಭಾಶ್ ಚಂದ್ರ ಭೋಸರಿಗೆ ಬೇಕಾಗಿತ್ತು. ಆಗ ಸೇನೆಯಲ್ಲಿರುವ ಹಲವರು ಹಲವು ಸಲಹೆಗಳನ್ನು ನೀಡಿದರು. ಜೈನುಲ್ ಆಬಿದೀನ್ ಹಸನ್ ಮೊದಲು ‘ಹಲೋ’ ಎನ್ನುವ ಘೋಷಣೆಯ ಸಲಹೆ ನೀಡಿದರು. ಆದರೆ ಅದು ನೇತಾಜಿಗೆ ಸಮ್ಮತವಾಗಲಿಲ್ಲ. 

ಇದಾದ ಬಳಿಕ ಆಬಿದೀನ್ ‘ಜೈ ಹಿಂದ್’ ಘೋಷಣೆಯನ್ನು ಪ್ರಸ್ತಾಪ ಮಾಡಿದರು. ಇದು ನೇತಾಜಿಗೆ ಭಾರೀ ಇಷ್ಟವಾಯಿತು. ಮಾತ್ರವಲ್ಲ, ಐಎನ್‌ಎಯ ಸಾಹಸಗಾಥೆಯಲ್ಲಿ ಜೈ ಹಿಂದ್ ಘೋಷಣೆ ಕೊನೆಯವರೆಗೂ ಉಳಿಯಿತು ಮತ್ತು ಇಂದಿಗೂ ಆ ಪದ ಅನುರಣಿಸುತ್ತಲೇ ಇದೆ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಐಎನ್‌ಎ ಸೇನೆ ಬರ್ಮಾ ಗಡಿ ದಾಟಿ ಇಂಫಾಲ ತಲುಪುವ ಹೊತ್ತಿನಲ್ಲಿ, ತಂಡದಲ್ಲಿದ್ದ ಜೈನುಲ್ ಆಬಿದೀನ್ ಹಸನ್ ತೀವ್ರಗಾಯಗೊಂಡರು.

ಆ ಘರ್ಷಣೆಯಲ್ಲಿ ಅವರು ಅಂಗವಿಕಲರಾದರು. ಇಂದು ಜೈನುಲ್ ಆಬಿದೀನ್ ಹಸನ್‌ರಂತಹ ನೂರಾರು ಯೋಧರ ‘ಜೈಹಿಂದ್’ ಉದ್ಗಾರಗಳನ್ನು ದೇಶ ಮರೆತು ಬಿಡುತ್ತಿದೆ. ಆ ದೇಶಪ್ರೇಮಿಗಳ ನೆನಪನ್ನು ಅಳಿಸುವ ಪ್ರಜ್ಞಾಪೂರ್ವಕ ಕೆಲಸವೂ ನಡೆಯುತ್ತಿದೆ. ಬದಲಿಗೆ ದೇಶದ ಸ್ವಾತಂತ್ರದಲ್ಲಿ ಯಾವ ಪಾತ್ರವೂ ಇಲ್ಲದ ಆರೆಸ್ಸೆಸ್‌ನ ನಾಯಕರನ್ನು ಮುನ್ನೆಲೆಗೆ ತರುವ ಕೃತ್ಯ ಜರಗುತ್ತಿದೆ. ಇದು ದೇಶದ ದುರಂತವೇ ಸರಿ.

ಅಂದ ಹಾಗೆ ಪಾಕಿಸ್ತಾನ ರಚನೆಯಾಗುವ ಸಂದರ್ಭದಲ್ಲೂ ಆಳದಲ್ಲಿ ಜಿನ್ನಾ ಅವರಿಗೆ ಅದು ಜಾತ್ಯತೀತ ರಾಷ್ಟ್ರವಾಗಿರಬೇಕು ಎನ್ನುವ ಆಶಯವಿತ್ತು. ಇದನ್ನೇ ಅಡ್ವಾಣಿಯವರು ಪಾಕಿಸ್ತಾನದಲ್ಲಿ ಹೇಳಿದ್ದರು. ಪಾಕಿಸ್ತಾನದ ಮೊತ್ತ ಮೊದಲ ರಾಷ್ಟ್ರಗೀತೆಯನ್ನು ಜಿನ್ನಾ ಅವರು ಲಾಹೋರ್‌ನ ಜಗನ್ನಾಥ್ ಆಝಾದ್ ಕೈಯಲ್ಲಿ ಬರೆಸಿದರು. ಸುಮಾರು ಒಂದೂವರೆ ವರ್ಷಗಳ ಕಾಲ ಪಾಕಿಸ್ತಾನ ಇದನ್ನು ರಾಷ್ಟ್ರಗೀತೆಯಾಗಿ ಒಪ್ಪಿಕೊಂಡಿತ್ತು. ಈ ಗೀತೆಯನ್ನು ಬರೆಯಲು ಜಗನ್ನಾಥ್ ಅವರಿಗೆ ಜಿನ್ನಾ ಅವರು ಐದು ದಿನಗಳಷ್ಟನ್ನೇ ನೀಡಿದ್ದರಂತೆ. 

ಆದರೂ ಈ ಐದು ದಿನಗಳ ಒತ್ತಡದಲ್ಲಿ ಹಾಡನ್ನು ಬರೆದರೂ ನಾನು ಪಾಕಿಸ್ತಾನದ ರಾಷ್ಟ್ರಗೀತೆಗೆ ನ್ಯಾಯವನ್ನು ನೀಡಿದ್ದೆ ಎನ್ನುತ್ತಾರೆ ಜಗನ್ನಾಥ್ ಆಝಾದ್. ಆದರೆ ಉತ್ತರ ಪಂಜಾಬ್ ಮತ್ತು ಇನ್ನಿತರ ಕಡೆ ಹಿಂಸೆ ವ್ಯಾಪಿಸಿದಂತೆ ಜಗನ್ನಾಥ್ ಆಝಾದ್ ಭಾರತಕ್ಕೆ ವಲಸೆ ಬಂದರು. ಪಾಕಿಸ್ತಾನ ಸ್ವತಂತ್ರಗೊಂಡ ಒಂದೂವರೆ ವರ್ಷದೊಳಗೆ ಪಾಕಿಸ್ತಾನದಲ್ಲಿ ಈ ರಾಷ್ಟ್ರಗೀತೆ ಬದಲಾಯಿತು. ಇದೆಲ್ಲವನ್ನು ನಾವು ಯಾಕೆ ಮತ್ತೆ ಮತ್ತೆ ನೆನೆಯಬೇಕೆಂದರೆ ಈ ದೇಶ ಯಾವುದೇ ಒಂದು ಧರ್ಮ ಅಥವಾ ಜಾತಿಯಿಂದ ನಿರ್ಮಾಣವಾದುದಲ್ಲ. 

ಎಲ್ಲ ಜಾತಿ ಧರ್ಮಗಳ ಜನರ ಕೊಡುಗೆಗಳಿಂದ, ವೈವಿಧ್ಯ ಭಾರತವಾಗಿ ಅರಳಿದೆ ನಮ್ಮ ನೆಲ. ಬಹುತ್ವವೇ ಇದರ ವೈಶಿಷ್ಟ. ಈ ವೈಶಿಷ್ಟವನ್ನು ಅಳಿಸುವ ಪ್ರಯತ್ನ ಕೆಲವು ಶಕ್ತಿಗಳಿಂದಾಗುತ್ತಿದೆ. ಆ ಶಕ್ತಿಯನ್ನು ವಿಫಲಗೊಳಿಸಿ, ದೇಶವನ್ನು ಒಂದಾಗಿ ಉಳಿಸಬೇಕೆಂದರೆ, ಇಂತಹ ನೆನಪುಗಳನ್ನು ನಾವು ಸದಾ ಹಸಿರಾಗಿ ಇಟ್ಟುಕೊಳ್ಳಬೇಕು. 

ಜೈಹಿಂದ್ ಎನ್ನುವ ಘೋಷಣೆಯೊಂದಿಗೆ ತನ್ನ ಬದುಕನ್ನೇ ದೇಶಕ್ಕಾಗಿ ಅರ್ಪಿಸಿದ ಜೈನುಲ್ ಆಬಿದೀನ್ ಹಸನ್, ಹಾಗೆಯೇ ಜಿನ್ನಾ ಅವರ ಆತ್ಮೀಯರಾಗಿದ್ದುಕೊಂಡು ಪಾಕಿಸ್ತಾನಕ್ಕೆ ತುಂಬು ಹೃದಯದೊಂದಿಗೆ ರಾಷ್ಟ್ರಗೀತೆಯನ್ನು ಬರೆದುಕೊಟ್ಟ ಜಗನ್ನಾಥ್ ಆಝಾದ್ ಇಂತಹ ಹೆಸರುಗಳ ನೂಲುಗಳಿಂದ ನಾವು ಹರಿದ ಭಾಗಗಳಿಗೆ ಮತ್ತೆ ತೇಪೆ ಹಾಕಬೇಕು. ಹಿಂದು, ಮುಸ್ಲಿಮ್, ಬ್ರಾಹ್ಮಣ, ದಲಿತ ಇತ್ಯಾದಿಗಳೆಲ್ಲ ವೈವಿಧ್ಯವಾಗಿಯಷ್ಟೇ ನಮ್ಮ ನಡುವೆ ಇರಲಿ. ಅದು ನಮ್ಮನ್ನು ಪರಸ್ಪರ ಒಡೆಯದಿರಲಿ. ಬದಲಿಗೆ ನಮ್ಮನ್ನು ಇನ್ನಷ್ಟು ಒಂದಾಗಿಸುವುದಕ್ಕೆ ಆ ಅಸ್ಮಿತೆಗಳು ನೆಪವಾಗಲಿ.

Wednesday, February 26, 2014

ಸಂತಕವಿತೆ - ಕಥೆ 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ

ನನ್ನ ತಾರುಣ್ಯದಲ್ಲಿ ಒಮ್ಮೆ ಬೆಟ್ಟಗಳಾಚೆಯಿದ್ದ ಮೌನ ಕಾಡಿನಲ್ಲಿ ಒಬ್ಬ ಸಂತನನ್ನು ಭೇಟಿಯಾದೆ; ನಾವು ಸನ್ನಡತೆ, ಮೌಲ್ಯದ ಸ್ವರೂಪಗಳ ಬಗೆಗೆ ಮಾತನಾಡುತ್ತಿರುವಾಗಲೇ ಒಬ್ಬ ಡಕಾಯಿತ ಬಳಲಿ ಕುಂಟುತ್ತ ಪರ್ವತ ಶ್ರೇಣಿಯನ್ನು ಹತ್ತಿಳಿದು ಬಂದ. ಸಂತನೆದುರು ಬಂದವನೇ ಮೊಣಕಾಲೂರಿ ಕುಳಿತು ಹೇಳಿದ: ‘ಓ ಸಂತನೇ, ನಾನು ಆರಾಮವಾಗಿರುತ್ತಿದ್ದೆ, ಆದರೆ ನನ್ನ ಪಾಪ ಮಣಭಾರವಾಗಿ ನನ್ನ ಮೇಲೆ ಹೇರಿಕೊಂಡಿದೆ.’

‘ನನ್ನ ಪಾಪಗಳೂ ಕೂಡಾ ತುಂಬ ಭಾರವಾಗಿ ನನ್ನ ಮೇಲೆ ಹೇರಿಕೊಂಡಿವೆ’, ಸಂತ ಹೇಳಿದ.

ಢಕಾಯಿತನೆಂದ, ‘ಆದರೆ ನಾನೊಬ್ಬ ಕಳ್ಳ ಮತ್ತು ದರೋಡೆಕೋರ.’

ಅದಕ್ಕೆ ಸಂತ ಉತ್ತರಿಸಿದ, ‘ನಾನೂ ಒಬ್ಬ ಕಳ್ಳ ಮತ್ತು ದರೋಡೆಕೋರ.’

ಢಕಾಯಿತನೆಂದ, ‘ಆದರೆ ನಾನೊಬ್ಬ ಕೊಲೆಗಾರ. ಎಷ್ಟೋ ಜನರ ರಕ್ತ ನನ್ನ ಕಿವಿಯಲ್ಲಿ ಅಳುತ್ತ ಕೂಗುತ್ತದೆ.’

ಸಂತ ಉತ್ತರಿಸಿದ, ‘ನಾನೂ ಸಹಾ ಒಬ್ಬ ಕೊಲೆಗಡುಕ. ನನ್ನ ಕಿವಿಯಲ್ಲಿಯೂ ಎಷ್ಟೋ ಜನರ ರಕ್ತ ಕೂಗುತ್ತದೆ.’
ಢಕಾಯಿತ ಹೇಳಿದ, ‘ನಾನು ಲೆಕ್ಕವಿರದಷ್ಟು ಅಪರಾಧ ಎಸಗಿದ್ದೇನೆ.’

ಸಂತ ಹೇಳಿದ, ‘ನಾನೂ ಲೆಕ್ಕವಿರದಷ್ಟು ಅಪರಾಧ ಎಸಗಿದ್ದೇನೆ.’

ಆಗ ಢಕಾಯಿತ ಎದ್ದು ನಿಂತ, ಸಂತನೆಡೆ ದಿಟ್ಟಿಸಿದ, ಅವನ ಕಣ್ಣುಗಳಲ್ಲಿ ಏನೋ ವಿಶಿಷ್ಟ ನೋಟ ಕಾಣಿಸಿಕೊಂಡಿತು. ನಮ್ಮನ್ನು ಬಿಟ್ಟು ಹೋಗುವಾಗ ಪರ್ವತಗಳ ಇಳಿಜಾರನ್ನು ಕುಪ್ಪಳಿಸುತ್ತ ಇಳಿದ.

ಸಂತನೆಡೆ ತಿರುಗಿ ಹೇಳಿದೆ, ‘ನೀನು ಮಾಡದೇ ಇದ್ದ ಅಪರಾಧಗಳನ್ನೆಲ್ಲ ಮಾಡಿದೆ ಎಂದು ಸುಮ್ಮನೇ ಏಕೆ ಆರೋಪಿಸಿಕೊಂಡೆ? ನೋಡು, ಆ ಮನುಷ್ಯ ಹೋಗುವಾಗ ನಿನ್ನ ಮೇಲೆ ನಂಬಿಕೆಯನ್ನೇ ಕಳೆದುಕೊಂಡು ಹೋದ.’

ಸಂತ ಉತ್ತರಿಸಿದ, ‘ನಿಜ, ಅವನಿನ್ನು ನನ್ನ ನಂಬಲಾರ. ಆದರೆ ಅವನು ಹೋಗುವಾಗ ಹೆಚ್ಚು ನೆಮ್ಮದಿಯಿಂದಿದ್ದ.’

ಆ ಕ್ಷಣದಲ್ಲಿ ಢಕಾಯಿತ ದೂರದಲ್ಲೆಲ್ಲೋ ಹಾಡುತ್ತಿದ್ದುದು ಕೇಳಿಬಂತು. ಅವನ ಹಾಡಿನ ದನಿಯ ಗುಂಗು ಕಣಿವೆಯನ್ನು ಸಂತಸದಿಂದ ತುಂಬಿತು.

(ದಿ ಫೋರ್ ರನ್ನರ್)

ಮಾರ್ಚ 2 : ಹಾಸನ : ತಳ ಸಮುದಾಯಗಳ ಪ್ರತಿರೋಧದ ನೆಲೆಗಳು - ವಿಚಾರ ಸಂಕಿರಣ


ಮಾ 8 ಮೈಸೂರು : ಮಹಿಳಾ ದಿನಾರಣೆ - ಹಕ್ಕೊತ್ತಾಯ ಜಾಥಾ ಮತ್ತು ಬಹಿರಂಗ ಸಮಾವೇಶ


ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ 

೦7.03.2014

‘ವಿಮೆನ್ ಇನ್ ಬ್ಲಾಕ್’ -
 ಸಂಜೆ ೫.೩೦, ಗಾಂಧಿ ಚೌಕದಿಂದ,
ವಿಮೋಚನಾ, ಬೆಂಗಳೂರು ಇವರ ಸಹಯೋಗದಲ್ಲಿ
ಪಂಜು ಮತ್ತು ಆಕಾಶ ದೀಪ ಬಿಡುವುದರೊಂದಿಗೆ ಕ್ಯಾಂಡಲ್ ಲೈಟ್ ವಿಜಿಲ್.


೦೮.೦೩.೨೦೧೪
ಹಕ್ಕೊತ್ತಾಯ ಜಾಥಾ ಮತ್ತು ಬಹಿರಂಗ ಸಮಾವೇಶ

ಜಾಥಾ: ಅರಮನೆ ಮೈದಾನದಿಂದ ಬೆಳಿಗ್ಗೆ ೯ ಗಂಟೆಗೆ, ಬಲೂನು ಹಾರಿಬಿಡುವ ಮೂಲಕ ಚಾಲನೆ.  

ಚಾಲನೆ: ಡಾ. ಮೀರಾ ನಾಯ್ಕ್, ಡಾ. ವಿಜಯಾ, ವಿಜಯಾ ದಬ್ಬೆ, ಸಿ. ಜಿ. ಮಂಜುಳಾ, ಡಾ. ಸಬಿಹಾ ಭೂಮಿ ಗೌಡ, ಮರ್ಲಿನ್ ಮಾರ್ಟಿಸ್ ಹಾಗೂ ಮೈಸೂರು ಮತ್ತು ಕರ್ನಾಟಕದ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳಿಂದ.

ಸಾಂಸ್ಕೃತಿಕ ಕಾರ್ಯಕ್ರಮ: ಸಮತಾ ವೇದಿಕೆಯ ಸುಮತಿ ಮತ್ತು ರೂಪಾ ರಾವ್ ನೇತೃತ್ವದಲ್ಲಿ ಸಖಿ ಬಳಗ, ಸಂವಾದ, ತರಿಕಿಟ ಕಲಾಕಮ್ಮಟ, ಭೂಮ್ತಾಯಿ ಬಳಗದವರಿಂದ 

ಸಮಾವೇಶ ಉದ್ಘಾಟನೆ: ಮಣಿಪುರದ ಚಿತ್ರಾ ಅಹಾಂತೆಮ್, ಲೋರೆಂಬಮ್ ನ್ಗಾಂಬಿ ದೇವಿ, ತಾಕೆಲ್ಲಂಬಮ್ ರೇಣುಬಾಲಾ ದೇವಿ. 

ಪ್ರಸ್ತಾವನೆ: ಸುಮನಾ ಎಂ ಎನ್, ಸಮತಾ ಅಧ್ಯಯನ ಕೇಂದ್ರ, ಮೈಸೂರು.

ಸಹಮತದ ನುಡಿ: ಎಲ್ಲ ಸಹಭಾಗಿ ಸಂಘಟನೆಗಳ ಪ್ರತಿನಿಧಿಗಳಿಂದ 

ನಿರ್ಣಯಗಳ ಅಂಗೀಕಾರ.

ಮಾ 7 ಮೈಸೂರು : ಮಹಿಳಾ ದೌರ್ಜನ್ಯ: ಲಿಂಗತ್ವ-ಕಾನೂನು-ಪ್ರತಿರೋಧದ ನೆಲೆಗಳು- ವಿಚಾರ ಸಂಕಿರಣ

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ 
ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಮೈಸೂರು ವಿವಿ, ಮೈಸೂರು 
ಇವರ ಸಂಯುಕ್ತ ಆಶ್ರಯದಲ್ಲಿ

ಮಹಿಳಾ ದೌರ್ಜನ್ಯ: ಲಿಂಗತ್ವ-ಕಾನೂನು-ಪ್ರತಿರೋಧದ ನೆಲೆಗಳು
ವಿಚಾರ ಸಂಕಿರಣ

೦೭. ೦೩. ೨೦೧೪, ಶುಕ್ರವಾರ, ಕುವೆಂಪು ಕನ್ನಡ ಅಧ್ಯಯನ ಕೇಂದ್ರದ                                        ನೂತನ ಸಭಾಂಗಣ 

 ಉದ್ಘಾಟನಾ ಗೋಷ್ಠಿ ೧೧.೦೦- ೧೨.೦೦

ಸ್ವಾಗತ ಮತ್ತು ಪ್ರಾಸ್ತಾವಿಕ              ಪ್ರೀತಿ ಶ್ರೀಮಂಧರಕುಮಾರ್
ಉದ್ಘಾಟನೆ                                 ಪ್ರೊ ಸಿ ಬಸವರಾಜು ಕುಲಸಚಿವರುಗಳು, ಮೈಸೂರು ವಿವಿ,   
ಪುಸ್ತಕ ಬಿಡುಗಡೆ                           ಸುನಂದಾ ಜಯರಾಮ್ 
ಶಿಖರೋಪನ್ಯಾಸ                        ಡಾ. ಕಾರಿನ್ ಕುಮಾರ್ 
ಅಧ್ಯಕ್ಷತೆ                                ಡಾ. ನೀಲಗಿರಿ ತಲವಾರ್
ನಿರ್ವಹಣೆ                                ಡಾ. ಜಯಲಕ್ಷ್ಮಿ ಸೀತಾಪುರ್


ಗೋಷ್ಠಿ ೧                                          ೧೨.೦೦-೧.೦೦

ಅತ್ಯಾಚಾರ ಕಾನೂನು ಮತ್ತು ವಯಸ್ಸು - ಬಾನು ಮುಷ್ತಾಕ್ 
ಸಂವಾದದಲ್ಲಿ:
 • ಶಕುನ್ 
 • ಮಲ್ಲಿಗೆ 
 • ಬಾಬು ರಾಜ್ 

ಗೋಷ್ಠಿ - ೨                       ೧.೦೦-೨.೦೦

ಲೈಂಗಿಕತೆ ಮತ್ತು ಹಿಂಸೆ-ಒಂದು ಭಿನ್ನ ಆಯಾಮ - ಅಕೈ ಪದ್ಮಶಾಲಿ 
   ಸಂವಾದದಲ್ಲಿ :
 • ಸೋನು ನಿರಂಜನ್ 
 • ಅರವಿಂದ್ ನಾರಾಯಣ್
 • ಡಾ. ವಸುಂಧರಾ ಭೂಪತಿ 

ಗೋಷ್ಠಿ - ೩                             ೨.೩೦-೩.೩೦
 ಪರೀಕ್ಷಾ ವಿಧಾನ ಮತ್ತು ಕಾನೂನು - ಡಾ. ಎಚ್. ಎಸ್. ಅನುಪಮಾ 
ಸಂವಾದದಲ್ಲಿ:  
 • ರೇಣುಕಾ ಹೆಳವರ 
 • ಮೈತ್ರೆಯಿ 
 • ನವೀನ್ ಸೂರಿಂಜೆ 

ಗೋಷ್ಠಿ - ೪                        ೩.೩೦-೪.೩೦

ಜಾತಿ ಮತ್ತು ವರ್ಗ ದೌರ್ಜನ್ಯ: ಮಹಿಳಾ ಪ್ರತಿರೋಧದ ನೆಲೆಗಳು
 • ದು ಸರಸ್ವತಿ
 • ಡಾ. ಮೀನಾಕ್ಷಿ ಬಾಳಿ 
       

Tuesday, February 25, 2014

ಖಲೀಲ ಗಿಬ್ರಾನ್ ಕವಿತೆ

 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾಅವರು ಹೇಳುತ್ತಾರೆ, ನರಿ ಮತ್ತು ಹೆಗ್ಗಣ
ಒಂದೇ ತೊರೆಯಿಂದ ನೀರು ಕುಡಿಯುತ್ತವೆ
ಎಲ್ಲಿ ಸಿಂಹವೂ ಬಂದು ನೀರು ಕುಡಿಯುವುದೋ ಅಲ್ಲಿ..

ಅವರು ಹೇಳುತ್ತಾರೆ, ಹದ್ದು ಮತ್ತು ರಣಹದ್ದು 
ಸತ್ತ ಪ್ರಾಣಿಯ ಅದೇ ಮಾಂಸದಲ್ಲಿ ಕೊಕ್ಕು ತೂರಿಸುತ್ತವೆ
ಆದರೂ ಸತ್ತ ವಸ್ತುವಿನೆದುರಿಗೆ
ಒಂದರೊಡನೊಂದು ಶಾಂತಿಯಿಂದಿವೆ..

ಯಾವ ದೈವೀ ಹಸ್ತ 
ನನ್ನ ಬಯಕೆಗಳಿಗೆ ಲಗಾಮು ಹಾಕಿದೆಯೋ,
ನನ್ನ ಹಸಿವು, ದಾಹಗಳನ್ನು 
ಘನತೆ ಮತ್ತು ಹೆಮ್ಮೆಯನ್ನಾಗಿಸಿದೆಯೋ,
ಓ, ಅಂಥ ಪ್ರೇಮವೇ,
ನನ್ನೊಳಗಿನ ಅಚಲ ಮತ್ತು ಬಲಶಾಲಿ
ರೊಟ್ಟಿ ತಿಂದು ವೈನ್ ಕುಡಿದು
ನನ್ನೊಳಗಿನ ದುರ್ಬಲನನ್ನು ಆಮಿಷಗೊಳಿಸದೇ ಇರಲಿ.
ಅದಕ್ಕಿಂತ ನಾ ಹಸಿದು ಉಪವಾಸ ಬೀಳಲಿ, 
ನನ್ನ ಹೃದಯ ದಾಹದಿಂದ ಒಣಗಲಿ,
ನಾ ಮರಣಿಸಿ ನಾಶವಾಗಲಿ,
ಅದಕ್ಕೂ ಮುನ್ನ ನಾನು ಕೈ ಚಾಚುತ್ತೇನೆ
ನೀನು ತುಂಬಿಸದ ಬಟ್ಟಲಿಗೆ,
ನೀನು ಹರಸಿ ನೀಡದ ಆ ಪಾತ್ರೆಗೆ.


ಖಲೀಲ ಗಿಬ್ರಾನ್ : ಎರಡು ಕಥೆಗಳು
 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ
 
 
ನ್ಯಾಯ ಮತ್ತು ನ್ಯಾಯದಾನ

ಎಷ್ಟೋ ವರ್ಷಗಳ ಕೆಳಗೆ ಒಬ್ಬ ಮಹಾನ್ ಚಕ್ರವರ್ತಿಯಿದ್ದ. ಅವನು ತುಂಬ ಜ್ಞಾನಿಯಾಗಿದ್ದ. ತನ್ನ ಪ್ರಜೆಗಳ ಹಿತಕ್ಕಾಗಿ ನ್ಯಾಯ ಕಾನೂನುಗಳನ್ನು ರೂಪಿಸಲು ಬಯಸಿದ್ದ.

ಅವನು ಒಂದು ಸಾವಿರ ಭಿನ್ನ ಬುಡಕಟ್ಟುಗಳಿಗೆ ಸೇರಿದ ಒಂದು ಸಾವಿರ ಪಂಡಿತೋತ್ತಮರನ್ನು ತನ್ನ ರಾಜಧಾನಿಗೆ ಕರೆದು ಕಾನೂನುಗಳನ್ನು ರೂಪಿಸಲು ಕೇಳಿಕೊಂಡ.

ಆ ಕೆಲಸ ಮುಗಿಯುತ್ತ ಬಂತು.

ಓಲೆಗರಿಯ ಮೇಲೆ ಬರೆದ ಒಂದು ಸಾವಿರ ಕಾನೂನುಗಳನ್ನು ಚಕ್ರವರ್ತಿಯ ಮುಂದೆ ತರಲಾಯಿತು. ಆದರೆ  ಅದನ್ನು ಓದಿ ಅವನ ಆತ್ಮ ಬಿಕ್ಕಿಬಿಕ್ಕಿ ಅತ್ತಿತು. ಏಕೆಂದರೆ ಒಂದು ಸಾವಿರ ರೀತಿಯ ಅಪರಾಧ ಬೇರೆಬೇರೆ ವೇಷತೊಟ್ಟು ತನ್ನ ರಾಜ್ಯದಲ್ಲಿದೆಯೆಂದು ಅವನಿಗೆ ಅದುವರೆಗೂ ತಿಳಿದೇ ಇರಲಿಲ್ಲ.

ನಂತರ ಅವನು ತನ್ನ ಕರಣಿಕರನ್ನು ಕರೆದು ಮುಗುಳ್ನಗುತ್ತ ಆ ನಿಯಮಗಳನ್ನು ತಾನೇ ಹೇಳಿ ಬರೆಸಿದ. ಅವನು ಬರೆಸಿದ್ದು ಕೇವಲ ಏಳು ಕಾನೂನುಗಳನ್ನು ಮಾತ್ರ.

ಆಗ ಆ ಒಂದು ಸಾವಿರ ಪಂಡಿತರು ಕೋಪದಲ್ಲಿ ಆಸ್ಥಾನ ಬಿಟ್ಟು ಹೊರಟು ಹೋದರು. ತಂತಮ್ಮ ಬುಡಕಟ್ಟು ಕುಲಗಳಿಗೆ ತಾವು ಬರೆದ ನಿಯಮಗಳನ್ನೇ ಪಾಲಿಸುವಂತೆ ಬೋಧಿಸಿದರು. ಪ್ರತಿ ಕುಲವೂ ತನ್ನ ಕುಲದ ಪಂಡಿತ ಬರೆದ ಕಾನೂನನ್ನೇ ಅನುಸರಿಸಿತು. 

ಅದಕ್ಕೇ ಈ ದಿನದವರೆಗೆ ಒಂದು ಸಾವಿರ ಕಾನೂನುಗಳಿವೆ.

ಇದೊಂದು ಮಹಾನ್ ದೇಶ. ಇದರಲ್ಲಿ ಒಂದು ಸಾವಿರ ಸೆರೆಮನೆಗಳಿವೆ. ಅವೆಲ್ಲ ಸಾವಿರ ಕಾನೂನು ಭಂಗ ಮಾಡಿದ ಸ್ತ್ರೀಪುರುಷರಿಂದ ತುಂಬಿ ಹೋಗಿವೆ.

ಇದು ನಿಜವಾಗಿ ಮಹಾನ್ ದೇಶ. ಇಲ್ಲಿನ ಜನ ಒಂದು ಸಾವಿರ ಕಾನೂನು ಮಾಡಿದವರ ಹಾಗೂ ಒಬ್ಬ ಜ್ಞಾನಿ ಚಕ್ರವರ್ತಿಯ ವಂಶಸ್ಥರೇ ಆಗಿದ್ದಾರೆ.

(ದಿ ವಾಂಡರರ್)


ಹುಚ್ಚ

ಒಮ್ಮೆ ಹುಚ್ಚರ ಧಾಮದ ಉದ್ಯಾನದಲ್ಲಿ ನಾನಿದ್ದೆ. ಕುತೂಹಲದ ಕಣ್ಣುಗಳ ಸುಂದರ, ಪೇಲವ ಮುಖದ ಒಬ್ಬ ತರುಣ ಅಲ್ಲಿಗೆ ಬಂದ. 

ಬೆಂಚಿನ ಮೇಲೆ ನಾನು ಅವನ ಪಕ್ಕ ಕುಳಿತುಕೊಂಡೆ. ‘ನೀನು ಇಲ್ಲೇಕೆ ಇದ್ದೀ?’ ಎಂದು ಕೇಳಿದೆ.

ನನ್ನೆಡೆಗೆ ಆಶ್ಚರ್ಯಚಕಿತನಾಗಿ ನೋಡಿ ಹೇಳಿದ, ‘ಇದೊಂತರಾ ಊಹಿಸದ ಪ್ರಶ್ನೆಯಾಯಿತಲ್ಲ? ಆದರೂ ಉತ್ತರ ಹೇಳುತ್ತೇನೆ ಕೇಳಿ. ನನ್ನ ತಂದೆಗೆ ನನ್ನನ್ನು ತನ್ನ ಪುನಸೃಷ್ಟಿ ಎನ್ನುವಂತೆ ಮಾಡುವ ಹಂಬಲವಿತ್ತು. ನನ್ನ ಚಿಕ್ಕಪ್ಪನಿಗೂ ಅದೇ ಆಸೆಯಿತ್ತು. ನನ್ನಮ್ಮನಿಗಾದರೋ ತನ್ನ ಪ್ರಖ್ಯಾತ ತಂದೆಯ ರೀತಿ ಬೆಳೆಸಲು ಆಸೆಯಿತ್ತು. ನನ್ನ ಅಕ್ಕನಾದರೋ ಕಡಲಲ್ಲಿ ವ್ಯಾಪಾರ ಮಾಡುತ್ತ ತಿರುಗುವ ತನ್ನ ಗಂಡ ನನ್ನ ನಿಖರ ಆದರ್ಶವಾಗಬೇಕೆಂದು ನಂಬಿದ್ದಳು. ನನ್ನಣ್ಣ ನಾನು ಅವನಂತೇ ಒಬ್ಬ ಉತ್ತಮ ಕ್ರೀಡಾಪಟುವಾಗಬೇಕೆಂದು ಬಯಸಿದ್ದ.'

`ಹಾಗೇ ನನ್ನ ಗುರುಗಳೂ ಸಹಾ - ತತ್ವಶಾಸ್ತ್ರ, ಸಂಗೀತದ ಗುರುಗಳು, ತರ್ಕಶಾಸ್ತ್ರ ಪಂಡಿತರು ಕೂಡಾ ನಾನು ಅವರ ಕನ್ನಡಿಯ ಬಿಂಬದಂತೆ ಆಗಬೇಕೆಂಬ ನಿಶ್ಚಯವನ್ನು ಹೊಂದಿದ್ದರು.'

‘ಅದಕ್ಕೇ ನಾನು ಈ ಜಾಗಕ್ಕೆ ಬಂದೆ. ಇದು ವಿವೇಕಯುತ ಸ್ಥಳವಾಗಿ ನನಗೆ ತೋರಿದೆ. ಕೊನೆ ಪಕ್ಷ ಇಲ್ಲಿ ನಾನು ನಾನಾಗಿರಬಹುದು.’

ನಂತರ ಇದ್ದಕ್ಕಿದ್ದಂತೆ ಅವನು ನನ್ನತ್ತ ತಿರುಗಿ ಕೇಳಿದ: ‘ಆದರೆ ಹೇಳು, ನೀನೂ ಕೂಡಾ ಉತ್ತಮ ಶಿಕ್ಷಣ ಮತ್ತು ಬೋಧನೆಯ ಕಾರಣದಿಂದಲೇ ಇಲ್ಲಿಗೆ ಬಂದೆಯೇನು?’

ನಾನು ಉತ್ತರಿಸಿದೆ, ‘ಇಲ್ಲ, ನಾನು ಒಬ್ಬ ಭೇಟಿ ನೀಡುವವ ಅಷ್ಟೇ.’

ಅವನೆಂದ, ‘ಓಹ್, ಹಾಗಾದರೆ ಈ ಗೋಡೆಯಾಚೆಯ ಹುಚ್ಚರ ಧಾಮದಲ್ಲಿ ಬದುಕುತ್ತಿರುವವನೇ ನೀನು?’

(ದಿ ವಾಂಡರರ್)

Monday, February 24, 2014

ಕಾಗೋಡು ಹೇಳಿದ ಕಟುಸತ್ಯ


ಸನತಕುಮಾರ ಬೆಳಗಲಿಕಾಗೋಡು ಹೇಳಿದ ಕಟುಸತ್ಯ

ತೀರ್ಥಹಳ್ಳಿ ಬಳಿ ಹಳ್ಳಿಯೊಂದರಲ್ಲಿ ಭೂರಹಿತ ದಲಿತರಿಗೆ ಅರಣ್ಯಭೂಮಿ ಹಕ್ಕು ಕೊಡಿಸಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ನಕ್ಸಲರ ಹೋರಾಟ ಮತ್ತು ಸಿದ್ಧಾಂತ ಏನೇ ಇರಬಹುದು. ಆದರೆ, ಆ ಹಳ್ಳಿಯ ದಲಿತರಿಗೆ ಅರಣ್ಯ ಭೂಮಿ ಕೊಡುವ ಹಕ್ಕನ್ನು ಜಿಲ್ಲಾಡಳಿತ ನೀಡಿದೆ. 79 ಮಂದಿಗೆ ಹಕ್ಕು ಪತ್ರ ಸಿಕ್ಕಿದೆ. ಈ ಕಾರಣದಿಂದಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ ಮಾತಿನಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ. ವಿಧಾನಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಅವರು ಸದನದ ಹೊರಗೆ ಬರೀ ಸಾಮಾನ್ಯ ಪ್ರಜೆಯಾಗಿ ಈ ಮಾತು ಹೇಳಿದ್ದರೆ, ಅವರನ್ನು ನಕ್ಸಲ್ ಬೆಂಬಲಿಗರೆಂದು ಡಾ.ಬಿನಾಯಕ್ ಸೇನ್‌ರಂತೆಯೇ ಪ್ರಭುತ್ವ ಸೆರೆಮನೆಗೆ ತಳ್ಳುತಿತ್ತು. 

ಆದರೆ ಅವರು ಆ ಮಾತನ್ನು ಶಾಸನಸಭೆಯಲ್ಲಿ ಹೇಳಿದ್ದಾರೆ. ವಿಧಾನಸಭಾಧ್ಯಕ್ಷರಾಗಿ ನಕ್ಸಲರನ್ನು ಅಭಿನಂದಿಸಿದ ಕಾಗೋಡು ತಿಮ್ಮಪ್ಪ ಅವರ ಮಾತಿನ ಬಗ್ಗೆ ಸಹಜವಾಗಿಯೇ ಕೆಲವರಿಗೆ ಆಕ್ರೋಶ ಇರಬಹುದು. ಅವರು ವಿಶೇಷವಾಗಿ ಸರಕಾರವನ್ನು ಮತ್ತು ತಾವೇ ಸಾರಥ್ಯ ವಹಿಸಿರುವ ವಿಧಾನ ಸಭೆಯನ್ನು ನಿಂದಿಸಿದರೇನು ಎಂಬ ಭಾವನೆ ಮೂಡುತ್ತದೆ. ಚುನಾಯಿತ ಸರಕಾರದ ವೈಫಲ್ಯ ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗು ತ್ತದೆ. ಪ್ರಜಾಪ್ರಭುತ್ವದಲ್ಲಿ ಸರಕಾರದ ವೈಫಲ್ಯವೆಂದರೆ, ಅದು ಶಾಸಕಾಂಗದ ವೈಫಲ್ಯವೂ ಹೌದು.

ನಮ್ಮ ಸಂಸತ್ತು ಮತ್ತು ಶಾಸನಸಭೆ ಮುಂಚಿನಂತಿಲ್ಲ. ಕೋಟಿ ಕೋಟಿ ರೂಪಾಯಿ ಚೆಲ್ಲಿ ರಾಜ್ಯಸಭೆಯನ್ನು ಪ್ರವೇಶಿಸಲು ಕಾರ್ಪೊರೇಟ್ ಧಣಿಗಳು, ರಿಯಲ್ ಎಸ್ಟೇಟ್ ಮಾಫಿಯಾದವರು ಜನರ ನೋವಿಗೆ ಸ್ಪಂದಿಸಬೇಕಾದ ಶಾಸನಸಭೆಯನ್ನು ತಮ್ಮ ಹಿತಾಸಕ್ತಿಗೆ ಬಳಸುತ್ತಿದ್ದಾರೆ. ಅಂತಲೇ ಲೋಕಸಭೆಯಲ್ಲಿ ಆಂಧ್ರದ ಸಂಸದರೊಬ್ಬರು ಮೆಣಸಿನ ಪುಡಿ ಎರಚಿದ ಘಟನೆ ನಡೆದಿದೆ. ಜವಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ, ನಮ್ಮ ಸಂಸತ್ತು ಘನತೆಯಿಂದ ಕೂಡಿತ್ತು.

ಪ್ರತಿಪಕ್ಷ ಸಾಲಿನಲ್ಲಿದ್ದ ರಾಮಮನೋಹರ ಲೋಹಿಯಾ, ಎ.ಕೆ.ಗೋಪಾಲನ್, ಭೂಪೇಶ್ ಗುಪಾತಿ, ಎನ್.ಜಿ.ರಂಗಾ, ನಾಥ್ ಪೈ, ಎಸ್.ಎಂ.ಜೋಗಿ, ಡಾಂಗೆ ಅವರಂತಹವರು ವಾಗ್ವಾದಕ್ಕೆ ಇಳಿಯುತ್ತಿದ್ದರು. ಆದರೆ ಯಾರೂ ಸಹ ತೋಳೇರಿಸಿ ಕುಸ್ತಿ ಯಾಡುತ್ತಿರಲಿಲ್ಲ. ಚರ್ಚೆ, ಸಂವಾದದ ಮೂಲಕ ಜನಪರವಾದ ಕಾನೂನು ರೂಪಿಸುತ್ತಿದ್ದರು. ಕಮ್ಯೂನಿಸ್ಟ್ ಪಕ್ಷದ ಹಿರಿಯ ಸಂಸದ ಗುರುದಾಸ ಗುಪ್ತಾ ಅವರು ಹೇಳಿದಂತೆ ಸಂಸತ್ತಿನಲ್ಲಿ ಈಗ ಕಲಾಪಗಳು ನಡೆಯುತ್ತಿಲ್ಲ. 

ಸಂಸತ್ ಕಲಾಪದ ದಿನಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕಲಾಪದಲ್ಲಿ ಜನರ ಸಮಸ್ಯೆಗಳು ಚರ್ಚೆಯಾಗಬೇಕು ಮತ್ತು ಅವುಗಳಿಗೆ ಪರಿಹಾರ ದೊರೆಯಬೇಕು. ವರ್ಷಕ್ಕೆ ನೂರು ದಿನಗಳಾದರು ಕಲಾಪ ನಡೆಯಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ಸಂಸತ್ತು ಮತ್ತು ಶಾಸನಸಭೆಯನ್ನು ಕಾರ್ಪೊರೇಟರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಸತ್ ಸದಸ್ಯರು ಕಲಾಪಕ್ಕೆ ಹಾಜರಾಗದೆ ತಮ್ಮ ಹೆಸರಿನ ಬಳಿ ಸಹಿ ಹಾಕಿಕೊಂಡು ವೇತನ, ದಿನಭತ್ಯೆ ತೆಗೆದುಕೊಂಡು ಹೋಗುವಂತಹ ದಿನಗಳು ಬರಬಹುದು. ಸಂಸತ್‌ನಲ್ಲಿ ಘನತೆ ಮತ್ತು ಗೌರವ ಕಾಪಾಡುವಂತಹ ಸಂಸದರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಎಂತಹ ಸಮಸ್ಯೆಗಳು ತಲೆದೋರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಗುರುದಾಸ ಗುಪ್ತಾ ಅವರು ಹೇಳಿದ ಮಾತುಗಳಿಗೆ ಅನುಗುಣವಾಗಿ ಕಾಗೋಡು ತಿಮ್ಮಪ್ಪ ಅವರು ಹೇಳಿದ ಮಾತನ್ನು ಇಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ನಕ್ಸಲರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಬಡವರ ಹಿತ ಕಾಪಾಡುವಲ್ಲಿ ವಿಫಲವಾದ ಸರಕಾರದ ಬಗ್ಗೆ ಕಾಗೋಡು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದರಲ್ಲಿ ಬೇರೆ ಯಾವುದೇ ಲೋಪ ಹುಡುಕಬೇಕಾಗಿಲ್ಲ. ನಕ್ಸಲರ ಬಗ್ಗೆ ಹೇಳಿದ ಮಾತುಗಳು ಸರಕಾರದ ಅಧಿಕೃತ ಕಡತಗಳಲ್ಲಿ ದಾಖಲಾಗಿದೆ. ಇದನ್ನು ಕಡತದಿಂದ ಕಿತ್ತು ಹಾಕುವಂತೆ ಆಳುವ ಸರಕಾರವಾಗಲಿ ಮತ್ತು ವಿರೋಧ ಪಕ್ಷದವರಾಗಲಿ, ಯಾರೂ ಕೇಳಲಿಲ್ಲ. ಶಾಸನಬದ್ಧ ಆಡಳಿತದಿಂದ ಜನಹಿತ ಕಾಪಾಡುವುದು ಕಷ್ಟ ಎಂಬುದು ಸರಕಾರ ಒಪ್ಪಿಕೊಂಡಂತಾಗಿದೆ.

ಕಾಗೋಡು ತಿಮ್ಮಪ್ಪ ಅವರು ಮೊದಲು ಬಾರಿಗೆ 1972ರಲ್ಲಿ ವಿಧಾನಸಭೆ ಪ್ರವೇಶಿಸಿದಾಗ, ಎಡಪರ ಚಿಂತಕರಾಗಿದ್ದ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಅವರು ಭೂಸುಧಾರಣಾ ಕಾನೂನು ಜಾರಿಗೆ ತಂದರು. ಭೂರಹಿತರಿಗೆ ಭೂಮಿಯ ಒಡೆತನ ಲಭ್ಯವಾಯಿತು. ಕಾಗೋಡು ತಿಮ್ಮಪ್ಪ ಅವರು ರೋಷದಿಂದ ಜನರ ಪರವಾಗಿ ಮಾತನಾಡುವುದನ್ನು ನೋಡುತ್ತಿದ್ದೆ. ಅವರಲ್ಲಿ ಆ ಆಕ್ರೋಶ ಕಡಿಮೆಯಾಗಿದ್ದರೂ ಇನ್ನೂ ಜನಪರ ಕಾಳಜಿ, ಕಳಕಳಿಯಿದೆ ಎಂಬುದಕ್ಕೆ ಈ ಮಾತು ಸಾಕ್ಷಿ. ಆದರೆ ಈಗ ಕಾಲ ಬದಲಾಗಿದೆ.

ಭೂಮಿಯನ್ನು ಬಡವರಿಂದ ಕಿತ್ತುಕೊಂಡು ಕಾರ್ಪೊರೇಟ್ ಬಂಡವಾಳಶಾಹಿಗಳ ಬುಟ್ಟಿಗೆ ಹಾಕುವ ಉಸ್ತುವಾರಿಯನ್ನು ಸರಕಾರವೇ ವಹಿಸಿಕೊಂಡಿದೆ. ಅದಕ್ಕೆಂದೇ ಸರಕಾರದಿಂದ ಕೆಲಸ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಕ್ಸಲರತ್ತ ಮೊರೆ ಹೋಗಬೇಕಾದಂತಹ ಪರಿಸ್ಥಿತಿ ಬಂದರೂ, ಅಚ್ಚರಿಪಡಬೇಕಿಲ್ಲ. ಸ್ವತಃ ಗೇಣಿದಾರರ ಹೋರಾಟದ ಹಿನ್ನೆಲೆಯಿಂದ ಬಂದಿರುವ ಕಾಗೋಡು ತಿಮ್ಮಪ್ಪನವರಿಗೆ ಈ ಕಟು ವಾಸ್ತವದ ಸಂಗತಿ ಅರ್ಥವಾಗಿದೆ.

ಅನೇಕ ಪ್ರಸಂಗಗಳಲ್ಲಿ ಶಾಸಕರುಮತ್ತು ಮಂತ್ರಿಗಳು ಜನರ ಪರವಾಗಿ ಪ್ರಭಾವ ಬೀರಿದ್ದರೂ ಕೂಡ ಅಧಿಕಾರಿಶಾಹಿ ಅದಕ್ಕೆ ಅಡ್ಡಗಾಲು ಹಾಕುತ್ತಿದೆ. ಯಾರೇ ಮುಖ್ಯಮಂತ್ರಿ ಯಾಗಿರಲಿ ಜನಪರ ಕಾರ್ಯಕ್ರಮ ಗಳು ಜಾರಿಯಾಗದಂತೆ ಅಡ್ಡಗಾಲು ಹಾಕುವ ಅಧಿಕಾರಶಾಹಿಗೆ ಉಳ್ಳವರ ಬೆಂಬಲವಿರುತ್ತದೆ. ಅಂತಲೇ ಅಸಹಾಯಕರಾಗಿ ನಿಂತಿರುವ ಜನ ನಕ್ಸಲರತ್ತ ಮೊರೆ ಹೋಗುತ್ತಾರೆ.

ಕಾಗೋಡು ತಿಮ್ಮಪ್ಪನವರು ಮಾತ್ರವಲ್ಲ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರು ಕೂಡ ಒಮ್ಮೆ ಈ ವ್ಯವಸ್ಥೆಯ ಬಗ್ಗೆ ರೋಸಿ ಹೋಗಿ ‘ನಾನು ಯುವಕನಾಗಿದ್ದರೆ ನಕ್ಸಲೀಯನಾಗುತ್ತಿದ್ದೆ’ ಎಂದು ಹೇಳಿದ್ದರು.

ಹೀಗೆ ಹೇಳಿದ ಮಾತ್ರಕ್ಕೆ ಅವರನ್ನು ನಕ್ಸಲ್ ಬೆಂಬಲಿಗನೆಂದಾಗಲಿ ಅಥವಾ ಬಂದೂಕಿನ ಮೂಲಕವೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ ಎಂಬುದಾಗಲಿ ಅಲ್ಲ. ಹಾಗೆಂದು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಸರಿಯೋ ತಪ್ಪೋ ತಮ್ಮದೇ ಮಾರ್ಗ ಹಿಡಿದಿರುವ ನಕ್ಸಲೀಯರನ್ನು ಭಯೋತ್ಪಾದಕರೆಂದು ಬಿಂಬಿಸುವುದು ಕೂಡಾ ಸರಿಯಲ್ಲ.

ಆಪ್‌ನ ಇತಿಮಿತಿಗಳು ಮತ್ತು ಹೊಸ ಸಾಧ್ಯತೆಗಳು

ಡಿ ಉಮಾಪತಿನಲವತ್ತೊಂಬತ್ತು ದಿನಗಳ ದಿಲ್ಲಿಯ ಅಧಿಕಾರ ಸೂತ್ರ ಹಿಡಿದ ಕೇಜ್ರಿವಾಲ್ ಸಂಗಾತಿಗಳ ಆಡಳಿತವನ್ನು ಅವಾಂತರ, ಅರಾಜಕತೆ, ಅಂಧಾದುಂಧಿ, ಸಿಂಹಸ್ವಪ್ನ ಎಂದು ಕರೆದವರಿದ್ದಾರೆ. ಅವರವರ ಭಾವಕ್ಕೆ ಮತ್ತು ಅವರವರ ಭಕುತಿಗೆ ತಕ್ಕಂತೆ ಹೊರಬಿದ್ದಿರುವ ಬಣ್ಣನೆಗಳಿವು. ಹೊಸ ಪಕ್ಷದ ಯಶಸ್ಸಿನ ಕುರಿತು ಮೂಗು ಮುರಿದು ಅದನ್ನು ಮಣ್ಣುಗೂಡಿಸಲು ತವಕಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಾರ್ಟಿಗಳು ಆಮ್ ಆದ್ಮಿ ಪಾರ್ಟಿಯ ಸರಕಾರದ ನಿರ್ಗಮನದಿಂದ ಒಂದು ರೀತಿಯಲ್ಲಿ ನಿರಾಳ ಆಗಿವೆ.

ಎದ್ದಾಗ ತಲೆಯ ಮೇಲೆ ಕೂರಿಸಿ ಮೆರೆಸುವ ಮತ್ತು ಬಿದ್ದಾಗ ಪಾತಾಳಕ್ಕೆ ತುಳಿವ ಧೋರಣೆಯ ಸಮೂಹ ಮಾಧ್ಯಮಗಳೂ ಕೇಜ್ರಿವಾಲ್ ಪಾಲಿಗೆ ಖಳನಾಯಕನ ಪಾತ್ರವನ್ನು ಧರಿಸಿ, ಖಡ್ಗ ಹಿರಿದು ನಿಂತಿವೆ. ಅಣ್ಣಾ-ಕೇಜ್ರಿವಾಲ್ ತಂಡದ ಆಂದೋಲನವನ್ನು ಮತ್ತು ಆಮ್ ಆದ್ಮಿ ಪಾರ್ಟಿಯ ಗೆಲುವನ್ನು-ಸರಕಾರ ರಚನೆಯನ್ನು ತಮ್ಮದೇ ಆಂದೋಲನ, ತಮ್ಮದೇ ಸರಕಾರ ಎಂಬಂತೆ ಒಳಗಿದ್ದು ಬಿಂಬಿಸಿದ್ದ ಪತ್ರಿಕೆಗಳು-ಚಾನೆಲ್ಲುಗಳು ಭ್ರಮೆಯಲ್ಲಿ ವಾಸ್ತವವನ್ನೂ, ವಾಸ್ತವವನ್ನು ಭ್ರಮೆಯೊಳಗೂ ಬೆರೆಸಿಬಿಟ್ಟಿದ್ದವು. ನ್ಯಾಯ ಪಕ್ಷಪಾತ, ನಿರ್ಲಿಪ್ತ ರಚನಾತ್ಮಕ ಧೋರಣೆಯ ಗುಣಗಳು ನಮ್ಮ ಸಮೂಹ ಮಾಧ್ಯಮಗಳಿಗೆ ಇಲ್ಲ. ಇವುಗಳ ಜನ್ಮಜಾತ ದೋಷಗಳೇ ಈ ಧೋರಣೆಗೆ ಕಾರಣ.

ಆಮ್ ಆದ್ಮಿ ಪಾರ್ಟಿಯ ಬಗೆಗೆ ಮಧ್ಯಮವರ್ಗ ಮತ್ತು ಮೇಲ್ಮಧ್ಯಮವರ್ಗಗಳ ಒಂದು ವರ್ಗದ ಜನ ಭ್ರಮನಿರಸನ ಆಗಿದ್ದಾರೆ. ಕೇವಲ ಮಧ್ಯಮವರ್ಗ ಮತ್ತು ಮೇಲ್ಮಧ್ಯಮ ವರ್ಗ ಮಾತ್ರವೇ ಅಲ್ಲ, ಸಫಾಯಿ ಕರ್ಮಚಾರಿಗಳಿಂದ ಹಿಡಿದು, ಆಟೊ ಚಾಲಕರು, ಅನಧಿಕೃತ ಕಾಲನಿಗಳ ನಿವಾಸಿಗಳು, ಮಧ್ಯಮವರ್ಗದ ಅತಿ ಕೆಳಸ್ತರದ ಜನರು, ಬೀದಿ ಬದಿಯ ವ್ಯಾಪಾರಿಗಳ ಬೆಂಬಲದಿಂದ ಎದ್ದು ನಿಂತ ಪಕ್ಷವಿದು. ಬೀದಿಗೆ ಬೀಳದೆ, ರಸ್ತೆಯಲ್ಲಿ ಧರಣಿ ಮಾಡದೆ, ವಾಹನ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿ ತಮ್ಮ ಗಾಣದೆತ್ತಿನ ದಿನಚರಿಗೆ ಅಡ್ಡಿ ಉಂಟು ಮಾಡದೆ ಸುಸೂತ್ರವಾಗಿ ಸರಕಾರ ನಡೆಸಿಕೊಂಡು ಹೋಗಬಲ್ಲ ಮುಖ್ಯಮಂತ್ರಿಯನ್ನು ನಿರೀಕ್ಷಿಸಿದ್ದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ಬಹುಪಾಲ ಜನಕ್ಕೆ ಕೇಜ್ರಿವಾಲ್ ಸರಕಾರದ ಆಡಳಿತ ವೈಖರಿ ಮತ್ತು ಪಲಾಯನ ನಿರಾಸೆ ಉಂಟು ಮಾಡಿವೆ. ಸದಾ ಗೋಡೆಯ ಮೇಲೆ ಕುಳಿತ ಈ ವರ್ಗಗಳು, ನರೇಂದ್ರ ಮೋದಿ ಬದಿಗೆ ಹಾರಲು ಹೊರಟಿವೆ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ಹತ್ತು ವರ್ಷಗಳ ಆರ್ಥಿಕ ಸುಧಾರಣೆಗಳ ಫಲವನ್ನು ಉಂಡು, ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಅರಳಿ, ಹತ್ತು ಪಟ್ಟು ಬೆಳೆದಿರುವ ಹೊಸ ಮಧ್ಯಮವರ್ಗ ಮೈಗೂಡಿಸಿಕೊಂಡಿರುವುದು ಕೂಡ ಪಟ್ಟಭದ್ರ ಗುಣಗಳನ್ನೇ.

ಬಹುಮುಖಿ ಸಮಾಜ, ಸಮಾನತೆ, ಸಾಮಾಜಿಕ ನ್ಯಾಯದ ಕುರಿತು ಈ ವರ್ಗಗಳು ಈವರೆಗೆ ತೋರುತ್ತಾ ಬಂದಿರುವ ನೀತಿ-ನಿಯತ್ತು ಅಷ್ಟಕ್ಕಷ್ಟೆ . ಈ ವರ್ಗದ ಸಹಿಷ್ಣುತೆ ಮತ್ತು ಔದಾರ್ಯದ ಪಾತ್ರೆ ದೊಡ್ಡದಾಗಲಿ. ರಕ್ತದ ರುಚಿ ಕಂಡ ಚಂಡ ವ್ಯಾಘ್ರನಂತೆ ತನ್ನದೇ ನೆರೆಹೊರೆಯ ವಂಚಿತ ಸಮದಾಯಗಳ ಮೇಲೆ ಎರಗಿ ಬೀಳಲು ಸದಾ ಹೊಂಚು ಹಾಕುತ್ತಿರುವ ವರ್ಗಗಳಿವು. ಅಸಮಾನತೆ, ಹಸಿವು, ಅಮಾನವೀಯತೆ, ಅಸಹನೆ, ಅಸ್ಪೃಶ್ಯತೆಯ ಆಚರಣೆ, 'ಶ್ರೇಷ್ಠ'ನ ಮಲವನ್ನು 'ಕನಿಷ್ಠ'ನು ಬಳಿದು ತಲೆ ಮೇಲೆ ಹೊರುವ ಅವಹೇಳನ, ನಿಂತ ನೆಲವನ್ನೇ ಕಿತ್ತುಕೊಂಡು ಆದಿವಾಸಿಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಬಕಾಸುರ ಬಾಯಿಗೆ ಇಡುವ ರಾಜ್ಯಶಕ್ತಿಯ ಕ್ರೌರ್ಯ, ಶೋಷಣೆಯ ಕರಾಳ ಮುಖಗಳನ್ನು ಹುಸಿ ದೇಶಭಕ್ತಿಯ ಹಿಂದೆ ಅವಿಸಿಡುವ ವರ್ಗಗಳಿವು. ಸರಕಾರಿ ಕಚೇರಿಗಳಲ್ಲಿ , ಮಂತ್ರಿಮಂಡಲಗಳಲ್ಲಿ ಕೈ ಬೆಚ್ಚಗಾಗುವ ಕ್ರಿಯೆ ಮಾತ್ರವೇ ಭ್ರಷ್ಟಾಚಾರ ಎಂಬ ತಿಳಿವಳಿಕೆ ಈ ವರ್ಗಗಳದು. ಇತರೆ ಅನ್ಯಾಯಗಳು ಮತ್ತು ಅನಿಷ್ಟಗಳು ಕೂಡ ಭ್ರಷ್ಟ ಆಚರಣೆಯೇ ಎಂದು ಈ ವರ್ಗಗಳು ನಂಬುವುದಿಲ್ಲ.

ಇನ್ನು, ಮೋದಿಯವರಿಗೆ ಸೆಡ್ಡು ಹೊಡೆದಾರು ಎಂದು ಕೇಜ್ರಿವಾಲರಿಗೆ ಗರಿ ಕಟ್ಟಿದ್ದ ಲೋಕಸಭೆ ಚುನಾವಣೆ ಸಮೀಕ್ಷೆಗಳು ಹಠಾತ್ತನೆ ಆಮ್ ಆದ್ಮಿ ಪಾರ್ಟಿಗೆ ಆರೇಳಕ್ಕಿಂತ ಹೆಚ್ಚು ಸ್ಥಾನಗಳು ಗಿಟ್ಟುವುದಿಲ್ಲ ಎಂದಿವೆ.

ಎಡ, ಬಲ, ಮಧ್ಯಮ ಪಂಥೀಯ ವಿಚಾರಧಾರೆಗಳ ಮೈತ್ರಿಕೂಟದಂತಿರುವ ಆಪ್, ತನ್ನ ಏಳು ವಾರಗಳ ಹಯಾಮಿನಲ್ಲಿ ಹಲವು ಅವಾಂತರಗಳನ್ನು ಮಾಡಿಕೊಂಡಿದೆ ನಿಜ. ಆದರೆ ಈ ವಿಚಾರಧಾರೆಗಳ ಮೈತ್ರಿಕೂಟವೇ ತಮ್ಮ ಪಾರ್ಟಿಯ ಶಕ್ತಿ ಎನ್ನುತ್ತಾರೆ ಕೇಜ್ರಿವಾಲ್. ಗುರಿ ಮುಖ್ಯವೇ ವಿನಾ ದಾರಿ ಮುಖ್ಯವಲ್ಲ ಎಂಬರ್ಥದ ಮಾತುಗಳನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನೀರು ಸಿಗದ ಜನರಿಗೆ ನೀರು ಸಿಗಬೇಕು; ಅದು ಎಡಪಂಥೀಯ ವಿಚಾರಧಾರೆಯಿಂದ ಬರುತ್ತದೆಯೋ, ಬಲಪಂಥೀಯದಿಂದ ಬರುತ್ತದೆಯೋ ಎಂಬುದು ಮುಖ್ಯ ಅಲ್ಲ ಎಂಬುದು ಅವರ ವಾದ. ಹೋರಾಟಗಳಿಗೆ ಕೇವಲ ನೈತಿಕ ನೆಲೆಯಿದ್ದರೆ ಸಾಲದು, ಸೈದ್ಧಾಂತಿಕ ನಿಲುವು ಬೇಕು ಎನ್ನುವ ತತ್ತ್ವದಲ್ಲಿ ಅವರಿಗೆ ನಂಬಿಕೆ ಇಲ್ಲ.

ಕೇಜ್ರಿವಾಲ್ ರಾಜಕೀಯವಾಗಿ ಬಲು ಜಾಣರು. ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುವ ಪಕ್ಷವಲ್ಲ, ಈ ಪಕ್ಷಕ್ಕೆ ಹಾಕಿದ ಮತಗಳು ವ್ಯರ್ಥ ಮತಗಳು ಎಂಬ ಬಿಜೆಪಿಯ ಪ್ರಚಾರವನ್ನು ಭವಿಷ್ಯದ ದೃಷ್ಟಿಯಿಂದ ಸುಳ್ಳು ಮಾಡುವುದು ಅವರಿಗೆ ಅನಿವಾರ್ಯ ಆಗಿತ್ತು. ಹೀಗಾಗಿಯೇ, ಕೇಳದೆಯೇ ಒದಗಿ ಬಂದ ಕಾಂಗ್ರೆಸ್ಸಿನ ಬೆಂಬಲವನ್ನು ಪಡೆದು ಸರಕಾರ ರಚಿಸಿಯೇಬಿಟ್ಟರು. ತಮ್ಮ ಸರಕಾರ ಅಲ್ಪಾಯು ಎಂಬುದೂ ಅವರಿಗೆ ಗೊತ್ತಿತ್ತು. ತಮ್ಮ ಬೆಂಬಲಿಗ ಸಮೂಹಗಳ ಸಂಖ್ಯಾಬಲದ ಅಂದಾಜೂ ಅವರಿಗೆ ಇತ್ತು. ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಕೆಲ ವರ್ಗಗಳ ಪ್ರತಿಕ್ರಿಯೆಯನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ತಮ್ಮನ್ನು ಬೆಂಬಲಿಸಿದ ಬಹುಸಂಖ್ಯಾತ ಕೆಳವರ್ಗಗಳು ಮತ್ತು ಕೆಳಮಧ್ಯಮವರ್ಗಗಳನ್ನು ಒಲಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿತ್ತು. ಮುಖ್ಯಮಂತ್ರಿಯಾಗಿದ್ದೂ ಧರಣಿ ನಡೆಸಿದ್ದು, ರಾತ್ರಿಯೆಲ್ಲ ದಿಲ್ಲಿಯ ಚಳಿಯಲ್ಲಿ ರಸ್ತೆಯಲ್ಲೇ ಮಲಗಿದ್ದು, ಬೀದಿಯಲ್ಲಿ ನಿಂತ ತಮ್ಮ ಮಾರುತಿ ವ್ಯಾಗನ್ ಆರ್ ವಾಹನದಲ್ಲೇ ಸಚಿವ ಸಂಪುಟ ಸಭೆ ನಡೆಸಿದ್ದು... ಇವೆಲ್ಲ ಈ ವರ್ಗಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ.

ವ್ಯಕ್ತಿಗಳನ್ನು ಬದಲಾಯಿಸಿದರೆ ಸಾಕು, ಅಸಮಾನತೆಯ ಮೂಲ ಬೇರುಗಳನ್ನು ಮುಟ್ಟುವ ಅಗತ್ಯವೇ ಇಲ್ಲ. ಶೀಲಾ ದೀಕ್ಷಿತ್, ಮನಮೋಹನ ಸಿಂಗ್, ರಾಹುಲ್ ಗಾಂಧಿ, ನರೇಂದ್ರ ಮೋದಿಗೆ ಅಧಿಕಾರ ನೀಡದೆ ಹೋದರೆ ಎಲ್ಲವೂ ತಂತಾನೇ ನೆಟ್ಟಗಾಗುತ್ತದೆ ಎಂಬುದು ಕೇಜ್ರಿವಾಲ್ ಪಾರ್ಟಿಯ ಅತಿ ಸರಳೀಕೃತ ತಿಳಿವಳಿಕೆ. ಆದರೆ ವಂಚಿತರು ಮತ್ತು ಅವಮಾನಿತ ಸಮುದಾಯದ ಪರ ದನಿ ಎತ್ತುವ ಖ್ಯಾತ ಸಾಮಾಜಿಕ ಚಿಂತಕ ಆನಂದ ತೇಲ್ತುಂಬ್ಡೆ ಅವರು ಆಪ್ ಕುರಿತು ಚಿಕಿತ್ಸಕ ಮಧ್ಯಪಥವನ್ನು ತುಳಿದಿದ್ದಾರೆ. ''ಮಾಮೂಲು ಸಿನಿಕತೆ ಇಲ್ಲವೇ ಅತಿಶಯೋಕ್ತಿಗಳನ್ನು ಬದಿಗಿಟ್ಟು ಆಪ್ ಅನ್ನು ನೋಡಬೇಕಾಗುತ್ತದೆ,'' ಎನ್ನುತ್ತಾರವರು. ಆಪ್‌ನ ಮಿತಿಗಳನ್ನು ಎತ್ತಿ ಹೇಳುತ್ತಲೇ, ಅದು ಹುಟ್ಟಿಹಾಕಬಹುದಾದ ಹೊಸ ಬದಲಾವಣೆಗಳನ್ನು ಸ್ವಾಗತಿಸಬೇಕು ಎಂದೂ ಪ್ರತಿಪಾದಿಸುತ್ತಾರೆ.

''ಆಮ್ ಆದ್ಮಿ ಪಾರ್ಟಿಯ ಕಸಬರಿಕೆ, ತನ್ನ ಅಲ್ಪಾವಧಿ ಆಡಳಿತದಲ್ಲಿ ಸರಕಾರಿ ವ್ಯವಸ್ಥೆಯಲ್ಲಿನ ಹೊಲಸನ್ನು ಗುಡಿಸಿ ಹಾಕುತ್ತದೆಯೋೀ ಇಲ್ಲವೋ ತಿಳಿಯದು. ಆದರೆ ಊಳಿಗಮಾನ್ಯ ಮೌಲ್ಯಗಳೇ ರಾಜಕಾರಣವನ್ನು ಆಳುತ್ತಿರುವ ಇಂದಿನ ಸಂದರ್ಭದಲ್ಲಿ ಹೊಸ ಸಾಂಸ್ಕೃತಿಕ ಮಾದರಿಯೊಂದನ್ನು ರಚಿಸಿದರೆ ಅದೇ ದೊಡ್ಡ ಕ್ರಾಂತಿ. ಸದ್ಯಕ್ಕೆ ಆಪ್ ಇಂತಹ ನಿರೀಕ್ಷೆಯನ್ನು ಆಗುಮಾಡುವಂತೆ ತೋರುತ್ತಿದೆ. ಈ ಊಳಿಗಮಾನ್ಯ ನಡವಳಿಕೆಯನ್ನು ಬಿಡದೆ ಬೆನ್ನತ್ತಿ ವಿಐಪಿ ಮತ್ತು ವಿವಿಐಪಿ ರೋಗವನ್ನು ನಿಜವಾಗಿಯೂ ನಾಶ ಮಾಡಿದ್ದೇ ಆದರೆ, ಅದು ಜನರಿಗೆ ಈ ಪಕ್ಷ ಮಾಡುವ ಅತಿದೊಡ್ಡ ಉಪಕಾರ. ಸಾಮಾನ್ಯ ಪ್ರಜೆಗಿಂತ ಹೆಚ್ಚು ಬೆಲೆಯನ್ನು ನಾಯಕನೊಬ್ಬನಿಗೆ ನೀಡುವ ಈ ರೋಗ, ಜನತಂತ್ರದ ಮೂಲ ನಿರಾಕರಣೆಯಲ್ಲದೆ ಬೇರೇನೂ ಅಲ್ಲ. ಕಸ ಗುಡಿಸುವವನು ಇಲ್ಲವೇ ಕೃಷಿ ಕೂಲಿಯಾಳೊಬ್ಬನ ಜೀವಕ್ಕಿಂತ ರಾಜಕೀಯ ನಾಯಕನೊಬ್ಬನ ಜೀವ ಹೆಚ್ಚು ಶ್ರೇಷ್ಠ ಆಗುವುದಾದರೂ ಹೇಗೆ? ಈ ಊಳಿಗಮಾನ್ಯ ಸಂಸ್ಕೃತಿಯನ್ನು ಮುರಿಯುವ ಯಾವುದೇ ಕ್ರಿಯೆಯನ್ನು ಈ ದೇಶದಲ್ಲಿ ಕ್ರಾಂತಿಕಾರಿ ಎಂದೇ ಪರಿಗಣಿಸಬೇಕಾಗುತ್ತಿದೆ,'' ಎಂಬುದು ಆನಂದ್ ನಿಲುವು.

ಆಮ್ ಆದ್ಮಿ ಪಾರ್ಟಿಯಂತಹ ಭಿನ್ನ ಬಗೆಯ ಹೊಸ ರಾಜಕೀಯ ಪಕ್ಷ ಎಡವಿ ಬೀಳುವುದು, ಎದ್ದೇಳುವುದು, ಬೀಳುವ ಪ್ರಕ್ರಿಯೆ ಕೂಡ ಜನತಂತ್ರದ ಯಶಸ್ಸಿಗೆ ಬಹುಮೂಲ್ಯ ಪ್ರಯೋಗ ಎಂಬ ನಿಲುವನ್ನು ಸುಲಭವಾಗಿ ಅಲ್ಲಗಳೆಯಲು ಬಾರದು.

Friday, February 21, 2014

ಫೆ 25 ಕುಮಟಾ : ಬಿ ಪಿ ಶಿವಾನಂದ ರಾವ್ ಸನ್ಮಾನ ಮತ್ತು ಕೃತಿ ಬಿಡುಗಡೆ


ಮಾ 1 ಬೆಂಗಳೂರು : ಬೇಲೂರು ರಘುನಂದನ್ ಕವನ ಸಂಕಲನ ಬಿಡುಗಡೆಫೆ 23 ಗಂಗಾವತಿ : ಅಲ್ಲಾಗಿರಿರಾಜ್ ಗಜಲ್ ಸಂಕಲನ ಬಿಡುಗಡೆ
ಮನ್ಸೂರ್ ಅವರ ಬೆಚ್ಚನೆಯ ಮನಸ್ಥಿತಿ

ಶೂದ್ರ ಶ್ರೀನಿವಾಸ್

ಸುಮಾರು ವರ್ಷಗಳ ಹಿಂದೆ ಓದಿದ ‘ಆನ್ ಇಂಟರ್‌ವ್ಯೆ ವಿಥ್ ಸಿಗ್‌ಮಂಡ್ ಫ್ರಾಯ್ಡಾ’ಲೇಖನವನ್ನು ಓದುತ್ತಿದ್ದೆ. ಇದು ಪ್ರೊ. ಸುನಿತ್‌ಕುಮಾರ್ ಚಟರ್ಜಿಯವರು 1935ರಲ್ಲಿ ವಿಯೆನ್ನಾದಲ್ಲಿ ಫ್ರಾಯ್ಡಾ ಅವರನ್ನು ಭೇಟಿ ಮಾಡಿದಾಗ; ಸಂದರ್ಶನ ರೂಪದ ಲೇಖನ. ಹದಿನಾರು ಪುಟಗಳ ಲೇಖನ. ಅರ್ಥ ಗರ್ಭಿತವಾಗಿ ಫ್ರಾಯ್ಡಾ ಎಂಬ ಅವಧೂತನನ್ನು ಅದ್ಭುತವಾಗಿ ಚಿತ್ರಿಸಿರುವ ಲೇಖನ. ಎಷ್ಟೊಂದು ರೀತಿಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿರುವ ಪರಿಕಲ್ಪನೆಯನ್ನು ನಮ್ಮ ಮುಂದೆ ಬಿಚ್ಚಿಡುವಂಥದ್ದು. ಹಾಗೆ ನೋಡಿದರೆ ನನ್ನ ಅಭಿಮಾನದ ಚಿಂತಕ ಎರಿಕ್ ಫ್ರಾಮ್‌ನ ‘ದಿ ಮೈಂಡ್ ಆಫ್ ಫ್ರಾಯ್ಡಾ’ ಕೃತಿಯನ್ನು ಓದುವಾಗ ಈ ಲೇಖನ ಮುಖಾ ಮುಖಿಯಾಗಿದೆ. 

ಆ ರೀತಿಯಲ್ಲಿ ಸಾರ್ವಕಾಲಿಕ ವಾಗಿ ಮುಖಾಮುಖಿಯಾಗುವ ‘ಜೀನಿಯಸ್ ನೆಸ್ಸನ್ನು’ಚಟರ್ಜಿಯವರು ತುಂಬಿಸಿಟ್ಟಿದ್ದಾರೆ. ಆದ್ದರಿಂದಲೇ ಸಾವಿರಾರು ದಿನಗಳ ನಂತರವೂ ಮರು ಓದಿನಲ್ಲಿ ವಿಷಾ ದದ ಸೆರಗನ್ನು ನಮ್ಮ ಮನಸ್ಸಿನ ಮೇಲೆ ಎಸೆದು ಬಿಡುತ್ತದೆ. ಇಂಥಕ್ಷಣ ಭಂಗುರವಲ್ಲದ ಮನಸ್ಥಿತಿಯಲ್ಲಿರು ವಾಗ ಸಂಜೆ ಐದೂವರೆಯ ಸುಮಾ ರಿಗೆ ಮೊಬೈಲ್‌ಗೆ ಕರೆ ಬಂತು. ನನಗೆ ಪರಿಚಯವಿಲ್ಲದ ಹುಡುಗಿಯ ಕರೆ: ‘ಬಾಬಯ್ಯ ಅವರು ತಿಳಿಸಿದರು; ನಿಮಗೆ ಪ್ರೊ. ಹಸನ್ ಮನ್ಸೂರ್ ಅವರು ನಿಧನರಾದ ವಿಷಯವನ್ನು ತಿಳಿಸಲು. 

ಸಂಜೆ ಆರೂವರೆಗೆ ಶವ ಸಂಸ್ಕಾರ ಇದೆ’ ಎಂದು. ಒಂದು ಕ್ಷಣ ತೆರೆದ ಪುಸ್ತಕವನ್ನು ಹಾಗೆಯೇ ಎದೆಯ ಮೇಲಿಟ್ಟು ಕೊಂಡು ಕಣ್ಣು ಮುಚ್ಚಿದೆ. ಲೇಖನದ ಎಷ್ಟೋ ಸಾಲುಗಳ ಜೊತೆ ಪ್ರೊ. ಮನ್ಸೂರ್ ಅವರ ಒಡನಾಟದ ಜೊತೆಯ ನೆನಪು ಆವ ರಿಸಿಕೊಂಡಿತು. ಇದರೊಟ್ಟಿಗೆಯೇ ಸದಾ ಸೌಮ್ಯತೆಯ ನಗುಮುಖದ ದರ್ಶನವನ್ನು ಮತ್ತೆ ಪಡೆಯಬಲ್ಲೆನೆ ಅನ್ನಿಸಿತು.
ಹಾಗೆಯೇ ಚಟರ್ಜಿಯವರ ಪ್ರಶ್ನೆಗೆ ಉತ್ತರಿಸುತ್ತ ಫ್ರಾಯ್ಡಾ ಹೀಗೆ ಹೇಳುವರು: ‘‘ಕಲೆ, ಸೌಂದರ್ಯ, ಸಂತೋಷ- ಎಲ್ಲವೂ ದೇಹದ ಸುತ್ತಲೂ ಆವರಿಸಿಕೊಂಡಿ ರುವಂಥದ್ದು. ಇದು ನನ್ನ ಪ್ರಾಮಾಣಿಕ ತೀರ್ಮಾನ. ಸಾವಿನ ನಂತರ ಇದ್ಯಾವುದು ಉಳಿದಿರುವುದಿಲ್ಲ.’’ ಎಂಬ ಧ್ವನಿಯು ಮೆಲು ಧ್ವನಿಯಲ್ಲಿ ಗುನುಗುನಿಸುತ್ತಿತ್ತು.

ಪ್ರೊ. ಹಸನ್ ಮನ್ಸೂರ್ ಅವರು ಯಾವಾಗ ಪರಿಚಯವಾದರು ಎಂಬುದು ನಿರ್ದಿಷ್ಟವಾಗಿ ಗೊತ್ತಿಲ್ಲ. ಆದರೆ ಅವರು ಪರಿಚಯವಾಗುವ ಮುನ್ನ; ವಿವಿಧ ಕ್ಷೇತ್ರಗಳ ಮಹನೀಯರನ್ನು ಪರಿಚಯಿಸಿದ ಬೆಂಗಳೂರು ವಿಶ್ವವಿದ್ಯಾಲಯದ ವರ್ಣಮಯ ಕೇಂದ್ರವಾದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಮನ್ಸೂರ್ ಅವರು ವೇಗವಾಗಿ ನಡೆಯುತ್ತಿದ್ದುದು ಮನಸ್ಸಿನ ತುಂಬ ಆವರಿಸಿಕೊಂಡಿದೆ. ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದರೂ, ಶಿಕ್ಷಕರ ಸಂಘದಲ್ಲಿ ಮತ್ತು ನೌಕರರ ಸಂಘದಲ್ಲಿ ತಮ್ಮನ್ನು ನೇರವಾಗಿ ಗುರುತಿಸಿಕೊಂಡವರು.

ಮಾರ್ಡ್ಸ್ ಲೆನಿನ್ ಮತ್ತು ಮಾವೋ ಅವರ ಸಿದ್ಧಾಂತಗಳನ್ನು ಗಂಭೀರವಾಗಿ ಓದಿಕೊಂಡಿದ್ದವರು. ಆದ್ದರಿಂದ ಹೆಚ್ಚು ಹೆಚ್ಚು ಸಮಸ್ಯೆ ಇರುವ ಕಡೆ ದಟ್ಟವಾಗಿ ಭಾಗಿಯಾಗು ತ್ತಿದ್ದರು. ಈ ಕಾರಣಕ್ಕಾಗಿಯೇ ‘ಶೂದ್ರ’ ಪ್ರಾರಂಭಿಸಿದ ಮೇಲಂತೂ ಅವರ ಒಡನಾಟ ಆಪ್ತವಾಗ ತೊಡಗಿತು. ವರ್ಗ ಸಮರದ ಬಗ್ಗೆ ತಮ್ಮ ಒಲವು ತೀವ್ರವಾಗಿದ್ದರೂ; ಜಾತಿ ವ್ಯವಸ್ಥೆಯ ವೈಪರೀತ್ಯಗಳ ಕುರಿತಂತೆ ನಿರ್ದಾಕ್ಷಿಣ್ಯತೆಯನ್ನು ಒಟ್ಟು ತಮ್ಮ ವ್ಯಕ್ತಿತ್ವದಲ್ಲಿ ಉಳಿಸಿಕೊಂಡಿದ್ದರು! ಈ ಕಾರಣಕ್ಕಾಗಿಯೇ ದಲಿತರನ್ನು ಮತ್ತು ಕೆಳವರ್ಗದವರನ್ನು ಹೋರಾಟದ ಮುಂಚೂಣಿಯಲ್ಲಿ ಕ್ರಿಯಾತ್ಮಕವಾಗಿ ಕಾಣಿಸಿಕೊಳ್ಳಲು ಒಟ್ಟು ತಮ್ಮ ಶ್ರಮವನ್ನು ಧಾರೆಯೆರೆದರು. 

ಒಮ್ಮಿಮ್ಮೆ ಅವರೊಡನೆ ಪೂರ್ಣ ತೊಡಗಿಸಿಕೊಂಡವರ ರೀತಿಯಲ್ಲಿ ಸಮರ್ಪಿಸಿಕೊಂಡು ಬಿಟ್ಟಿದ್ದರು. ಮತ್ತು ಮನ್ಸೂರರ ಬಹುದೊಡ್ಡ ಗುಣವೆಂದರೆ : ಇದ್ಯಾವುದರಿಂದಲೂ ಕಿಂಚಿತ್ತೂ ಪ್ರಚಾರವನ್ನು ಬಯಸುತ್ತಿರಲಿಲ್ಲ. ತಮ್ಮ ಸಂಬಳದ ಮತ್ತು ನಿವೃತ್ತಿಯ ನಂತರವೂ ಒಂದಷ್ಟು ಹಣವನ್ನು ಈ ನೊಂದ ಸಂಘಟನೆಗೆ ಮೀಸಲಿಟ್ಟವರಂತೆ ; ಒಟ್ಟು ಅವರ ವ್ಯಕ್ತಿತ್ವ ಇತ್ತು. ಇಂಥ ಅದ್ಭುತ ವ್ಯಕ್ತಿತ್ವದ ಸಂಪರ್ಕದಿಂದ ಅಥವಾ ಒಡನಾಟದಿಂದ ಎಲ್ಲೆಲ್ಲೋ ಓಡಾಡಿದ್ದೇನೆ, ಎಂತೆಂಥದೋ ಸ್ಮರಣೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ.

ಈಗ ಯಾವುದನ್ನೂ ಸೆನ್ಸಾರ ಮಾಡುವ ಅಗತ್ಯವಿಲ್ಲ ಎಂಬುದು ಗೊತ್ತಿದ್ದರೂ, ಪ್ರಾತಃ ಸ್ಮರಣೀಯ ನೆಪದಲ್ಲಿ ನಮಗೆ ನಾವೇ ಹೇಳಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕೆಲವರು ಕೊಟ್ಟು ಹೋದ ಬದುಕು ಕೆಲವು ಮಾದರಿಗಳನ್ನು ನಮ್ರತೆಯಿಂದ ಬಿಟ್ಟು ಹೋಗಿರುತ್ತಾರೆ. ಅವರ್ಯಾರು ಹೀಗೆ ಬಿಟ್ಟು ಹೋಗಬೇಕು ಎಂದು ಜೀವನವನ್ನು ಅನುಭವಿಸಿದವರಲ್ಲ. ಹೀಗೆ ಇರುವುದರಲ್ಲಿ ನೈಜವಾದ ಸಂಭ್ರಮವಿರುತ್ತದೆ ಎಂದು ತಿಳಿದವರು.

ಆದ್ದರಿಂದಲೇ ಇಂದು ನಾವು ಅವರನ್ನು ಸ್ಮರಿಸಿಕೊಳ್ಳಲು ಅಥವಾ ಅರ್ಥೈಸಿಕೊಳ್ಳಲು ಸಾಧ್ಯವಿರುವುದು. ಮನ್ಸೂರ್ ಅವರ ಬಹಳ ದೊಡ್ಡ ವ್ಯಕ್ತಿತ್ವವೆಂದರೆ; ಹಿಂದೆ ಹೇಳಿದ ರೀತಿಯಲ್ಲಿ ತಾವು ಎಲ್ಲಿಯೂ ಪ್ರೊಜೆಕ್ಟ್ ಆಗದೆ; ನೀವು ಮುಂದೆ ನಡೆಯಿರಿ ಭಯ ಪಡಬೇಡಿ ಎಂದು ಹೇಳುತ್ತಿದ್ದವರು. ಇದನ್ನು ಅವರ ಜೊತೆಯಲ್ಲಿ ಮಾನವ ಹಕ್ಕುಗಳ ಸಂಘಟನೆ ಕುರಿತಂತೆ ಹಾಗೂ ಮತೀಯ ಸಾಮರಸ್ಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ಕಂಡಿದ್ದೇನೆ. ಇಲ್ಲಿ ಕಂಡಿದ್ದೇನೆ ಎನ್ನುವುದಕ್ಕಿಂತ ಆಪ್ತವಾಗಿ ಅನುಭವಿಸಿದ್ದೇನೆ ಎಂಬುದು ಸೂಕ್ತವಾಗಬಹುದು.

ಈ ದೃಷ್ಠಿಯಿಂದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಎಂಬ ಸಂಸ್ಥೆಯಲ್ಲಿ ಐದು ವರ್ಷ ಉಪಾಧ್ಯಕ್ಷನಾಗಿದ್ದೆ. ಇದರ ರಾಜ್ಯಾಧ್ಯಕ್ಷರಾಗಿದ್ದವರು ಹಿರೇಮಠ್ ಅವರು. ಇಂದು ಗಣಿ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಧೃಷ್ಟಾರರಂತೆ ಕೆಲಸ ಮಾಡುತ್ತಿರುವಂಥವರು. ಖ್ಯಾತ ಪತ್ರಕರ್ತ ಮತ್ತು ಮತೀಯ ಸಾಮರಸ್ಯಕ್ಕೆ ಒಟ್ಟು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವಂಥವರು ಇದರ ರಾಷ್ಟ್ರೀಯ ಅಧ್ಯಕ್ಷರಾಗಿರುವಂಥವರು.

ನಂತರ ಇದರ ಅವಳಿ ಸಂಸ್ಥೆ ಎನ್ನುವ ರೀತಿಯಲ್ಲಿರುವ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್’(ಪಿಯುಸಿಎಲ್)ಸಂಸ್ಥೆಯಲ್ಲಿ ರಾಜ್ಯಮಟ್ಟದ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಸಾಧ್ಯವಾಗಿದ್ದೂ ಕೂಡ; ಪ್ರೊ. ಹಸನ್ ಮನ್ಸೂರ್ ಅವರ ಪ್ರೋತ್ಸಾಹದಿಂದ.ಇದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಪ್ರಸಿದ್ಧ ನ್ಯಾಯವಾದಿ ವಿ.ಎಂ. ತಾರ್ಕುಂಡೆಯವರು. ಈ ಎರಡೂ ಸಂಸ್ಥೆಗಳನ್ನು ಪ್ರಾರಂಭಿಸಿದವರು ಹಿರಿಯ ನಾಯಕರಾದ ಜಯಪ್ರಕಾಶ್ ನಾರಾಯಣ್ ಅವರು.

ನಾವು ಪ್ರಜಾಪ್ರಭುತ್ವದಲ್ಲಿ ಕ್ರಿಯಾಶೀಲರಾಗಿದ್ದೀವಿ ಎಂಬುದಕ್ಕೆ ಅರ್ಥಪೂರ್ಣತೆ ಬರುವುದು: ಎಷ್ಟರ ಮಟ್ಟಿಗೆ ಮಾನವ ಹಕ್ಕುಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತಿದ್ದೇವೆ ಎಂಬುದರಿಂದ: ಈ ಕಾರಣಕ್ಕಾಗಿ ಈ ಎರಡೂ ಅಪೂರ್ವ ಸಂಸ್ಥೆಗಳ ಜೊತೆ ಗುರುತಿಸಿಕೊಂಡಿದೆ ಎಂಬುದು ನಾನು ಗೌರವದಿಂದ ಇಂದು ಮತ್ತೆ ಮತ್ತೆ ಸ್ಮರಿಸಿಕೊಳ್ಳುವಂಥ ಆಯಾಮವನ್ನು ಮುಂದೊಡ್ಡುತ್ತಿರುತ್ತದೆ. ಈ ಮಾನವ ಹಕ್ಕುಗಳ ಸಂಸ್ಥೆಗಳ ಜೊತೆಗೆ; ಭಾರತದ ವಿವಿಧ ಕ್ಷೇತ್ರಗಳ ಅರ್ಥಪೂರ್ಣ ವ್ಯಕ್ತಿಗಳೆಲ್ಲ ತೊಡಗಿಸಿಕೊಂಡವರು.

ಅವರಲ್ಲಿ ಕೆಲವರನ್ನಾದರೂ ಹತ್ತಿರದಿಂದ ನೋಡುವ ಹಾಗೂ ಜೀವನಾನುಭವಗಳನ್ನು ಕೇಳುವ ಸದಾವಕಾಶವನ್ನು ಅನುಭವಿಸಿದ್ದೇನೆ. ಅದ್ಭುತ ಹೋರಾಟಗಾರರು ಸಂಕಷ್ಟಗಳಲ್ಲಿ ಇದ್ದಾಗ ಅವರನ್ನು ನಿಜವಾಗಿಯೂ ಕಾಪಾಡಿರುವುದು: ಈ ಮಾನವ ಹಕ್ಕುಗಳ ಸಂಘಟನೆಗಳೇ ಆಗಿವೆ. 

ಪೊಲೀಸರ ಅತಿರೇಕಗಳನ್ನು ಬಯಲಿಗೆಳೆದು ನ್ಯಾಯ ದೊರಕಿಸಿಕೊಟ್ಟಿರುವ ಸಾವಿರಾರು ಘಟನೆಗಳನ್ನು ಉದಾಹರಿಸಬಹುದು. ಇಂದಿಗೂ ವಿಶ್ವದ ಮಟ್ಟದಲ್ಲಿ ‘ಅಮೆನೆಸ್ಟಿ ಇಂಟರ್ ನ್ಯಾಷನಲ್’ ಸಂಸ್ಥೆಗೆ ಅಭೂತಪೂರ್ವ ಧ್ವನಿ ಇದೆ. ಅದು ಪ್ರತ್ಯಕ್ಷವಾಗಿ ಪರೋಕ್ಷ ‘ಪಿಯುಸಿಎಲ್ ಮತ್ತು ಸಿಎಫ್‌ಡಿ’ಯಂಥ ಸಂಸ್ಥೆಗಳಿಗೆ ಬೆಂಬಲವಾಗಿ ನಿಂತಿರುವುದರ ಜೊತೆಗೆ ನಿಜವಾದ ವಿರೋಧಪಕ್ಷಗಳ ರೀತಿಯಲ್ಲಿ ಕೆಲಸ ಮಾಡುವಂತೆ ನೈತಿಕ ಜವಾಬ್ದಾರಿಯನ್ನು ಕೊಡುತ್ತಿರುತ್ತದೆ.

ಈ ಹಿನ್ನೆಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿ ದಾಖಲಿಸಬಹುದು ಅನ್ನಿಸುತ್ತದೆ. ಕೆಲವು ವರ್ಷಗಳ ಹಿಂದೆ ಮುಂಬೈಯಲ್ಲಿ ನಡೆದ ‘ಪಿಯುಸಿಎಲ್’ ಸಮಾವೇಶವು ನಾನಾ ರೀತಿಯ ಹೋರಾಟದ ಮನಸ್ಸುಗಳನ್ನು ನನ್ನ ಮನೋ ಲೋಕದೊಳಗೆ ಬಿಟ್ಟುಕೊಳ್ಳಲು ಸಾಧ್ಯವಾಯಿತು. ಕರ್ನಾಟಕದಿಂದ ಪ್ರೊ. ಮನ್ಸೂರು ಅವರು ಮತ್ತು ನಾನು ಹೋಗಿದ್ದೆವು. ಹೋದಾಗ ಸಮಾವೇಶದ ಹಿಂದಿನ ರಾತ್ರಿ ಮುಂಬೈ ರಾತ್ರಿಲೋಕದ ಕೆಲವು ವೈಪರೀತ್ಯವನ್ನರಿಯಲು ಸುಮ್ಮನೆ ಸುತ್ತಾಡಿದೆವು. ಆಗ ಎಲ್ಲೆಲ್ಲೂ ಕುಡಿದ ಬೆಚ್ಚನೆಯ ಟೀ; ಇಂದಿಗೂ ನೆನಪು ಮಾಡಿಕೊಂಡರೆ ‘ಹಾಯ್’ ಅನ್ನಿಸುತ್ತದೆ. ಇಂಥ ‘ಹಾಯ್’ಗಳನ್ನು ಪ್ರೊ. ಮನ್ಸೂರು ಅವರು ನನ್ನ ಹಾಗೆ ನೂರಾರು ಮಂದಿಗೆ ರವಾನಿಸಿದ್ದಾರೆ. 

ಹೀಗೆ ರವಾನಿಸಿ ಕೊಂಡ ರೂಪಕಗಳಂತೆ ಸಮಾವೇಶದಲ್ಲಿ ಯಾರ್ಯಾರೋ ಪರಿಚಯವಾದರು. ಅದರಲ್ಲೂ ತಮಿಳುನಾಡಿನಿಂದ ಸಾಕಷ್ಟು ಮಂದಿ ಲೇಖಕರು, ಕಲಾವಿದರು ಬಂದಿದ್ದರು. ‘ಎಲ್.ಟಿ.ಟಿ.ಇ’ಯಂಥ ಸೂಕ್ಷ್ಮ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಕಾರಣದಿಂದ ನೂರಾರು ಕುಟುಂಬಗಳು ಪೊಲೀಸರ ಅತಿರೇಕಗಳನ್ನು ಎದುರಿಸಿದವರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ‘ಪಿಯುಸಿಎಲ್’ ಎಂಬ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಧ್ವನಿಯೆತ್ತಬೇಕು ಎಂಬುದು ಅವರ ಆಶಯವಾಗಿತ್ತು. ಆ ಆಶಯವು ಪ್ರಾಮಾಣಿಕವಾಗಿಯೂ ಇತ್ತು. 

ಪಾಪ! ತಮಿಳುನಾಡಿನ ಪ್ರತಿನಿಧಿಗಳು ಸಮಾವೇಶದಲ್ಲಿ ಪ್ರಸ್ತಾಪಿಸಲು ಭಯಪಡುತ್ತಿದ್ದರು. ಕೊನೆಗೆ ಪ್ರೊ. ಮನ್ಸೂರು ಅವರು ಮತ್ತು ನಾನು ಪ್ರಸಿದ್ಧ ನ್ಯಾಯವಾದಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಕನ್ನಾಬಿರನ್ ಅವರ ಬಳಿ ಹಾಗೂ ನ್ಯಾಯಮೂರ್ತಿ ತಾರ್ಕುಂಡೆಯವರ ಬಳಿ ಚರ್ಚಿಸಿದೆವು. 

ಆಗ ಅವರು ಈ ವಿಷಯವನ್ನು ತಮಿಳುನಾಡಿನ ಪ್ರತಿನಿಧಿಗಳು ಪ್ರಸ್ತಾಪಿಸಬೇಕಾಗಿಲ್ಲ. ನಮಗೆಲ್ಲರಿಗೂ ಸಂಬಂಧಿಸಿದ ವಿಷಯ. ನೀವೇ ಪ್ರಸ್ತಾಪ ಮಾಡಿ ಎಂದರು. ಆಗ ಮನ್ಸೂರು ಅವರು ನನಗೆ ಪ್ರಸ್ತಾಪಿಸಲು ಸೂಚಿಸಿದ್ದರು. ಇದನ್ನು ನಾನು ಸ್ವಲ್ಪಮಟ್ಟಿಗೆ ಭಾವನಾತ್ಮಕವಾಗಿಯೇ ಮಂಡಿಸಿದ್ದೆ. ಯಾಕೆಂದರೆ ಅವರ ಹಿಂಸೆ ಎಂಥದ್ದು ಎಂಬುದನ್ನು ಮೊದಲೇ ಸ್ವಲ್ಪಮಟ್ಟಿಗೆ ಅರಿತಿದ್ದೆ.

ಮುಂಬೈ ‘ಪಿಯುಸಿಎಲ್’ಸಮಾವೇಶವೂ ಭಾರತದ ಉದ್ದಗಲಕ್ಕೂ ಎಂತೆಂಥ ಹೋರಾಟದ ಸಮಸ್ಯೆಗಳಿವೆ ಮತ್ತು ಅದರಲ್ಲಿ ತೊಡಗಿಸಿಕೊಂಡವರನ್ನು ಹತ್ತಿರದಿಂದ ಅರಿಯಲು ಸಾಧ್ಯವಾಯಿತು. ಅದೇ ಸಮಯಕ್ಕೆ ನ್ಯಾಯಮೂರ್ತಿ ಸುರೇಖ್ ಅವರು ನ್ಯಾಯಮೂರ್ತಿ ಕೃಷ್ಣ ಅವರು ಪರಿಚಯವಾದರು. ಮುಂದೆ ಇವರು ತಮ್ಮ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯ ಕಾರಣದಿಂದ ರಾಷ್ಟ್ರದ ‘ಉಚ್ಛ ನ್ಯಾಯಾಲಯ’ದ ನ್ಯಾಯಮೂರ್ತಿಗಳಾದವರು.

ಮುಂಬೈಯಲ್ಲಂತೂ ಶಿವಸೇನೆಯ ಬಾಳಠಾಕೆಯಂಥವರ ಅತಿರೇಕಗಳನ್ನು ನಿಯಂತ್ರಣದಲ್ಲಿಟ್ಟವರು. ಅಲ್ಪಸಂಖ್ಯಾತರಿಗೆ ನೈತಿಕವಾಗಿ ಧ್ವನಿಯಾದವರು. ಇವರು ಕರ್ನಾಟಕದವರು, ಬೆಂಗಳೂರಿನವರು ಎಂದಾಗ ಮಾನಸಿಕವಾಗಿ ಸಂತೋಷವಾಗಿತ್ತು. ಈ ರೀತಿಯ ಸಂತೋಷವನ್ನು ಹೋದ ಕಡೆಯಲ್ಲೆಲ್ಲ ದೊರಕಿಸಿಕೊಟ್ಟಿದ್ದಾರೆ. ಅವರ ಜೊತೆ ಸುತ್ತಾಡುವುದೇ ಆಪ್ತವಾಗಿ ಉಳಿದಿರುವಂಥದ್ದು. ಈ ನೆಪದಲ್ಲಿ ಕೇರಳದ ಮೀನುಗಾರರ ಸಂಘಟನೆಯ ಎರಡು ದಿನದ ಕಾರ್ಯಕ್ರಮದಲ್ಲಿ ಕೊಚ್ಚಿನ್‌ನಲ್ಲಿ ಪರಿಚಯವಾದ ಹೋರಾಟದ ನಾಯಕ ಟಾಮ್ ಕೊಚೇರಿ, ಮೀನುಗಾರರ ಕುಟುಂಬಗಳಲ್ಲಿ ಕುಡಿತ ಬಿಡಿಸುವ ಸಂಘಟನೆಯ ಮರ್ಸಿ ಎಂಬ ಹುಡುಗಿ. ಎಷ್ಟು ಸುಂದರವಾದ ಹುಡುಗಿ. 

ಅಷ್ಟೇ ಸುಂದರ ಆಕೆಯ ಮಾನವೀಯ ಮನಸ್ಸು. ಈ ಮನಸ್ಸಿನಿಂದಲೇ ಕುಡಿತ ಬಿಟ್ಟ ಪೀಟರ್ ತನ್ನ ಐವತ್ತೈದನೆಯ ವಯಸ್ಸಿನಲ್ಲಿ ಕಾವ್ಯ ಬರೆಯಲು ಪ್ರಾರಂಭಿಸಿದ. ಆ ಕಾವ್ಯದ ಮೂಲಕ ಮೀನುಗಾರರ ಗುಡಿಸಲುಗಳಲ್ಲಿ ದಿನನಿತ್ಯ ಆರಾಧನೆಯ ಮಾತಾದ. ನಾನು ಆತನ ಬಗ್ಗೆ ‘ಪೀಟರ್ ದಿ ಗ್ರೇಟ್’ಎಂದು ‘ಶೂದ್ರ’ ದ ಕನಸಿಗೊಂದು ಕಣ್ಣುವಿನಲ್ಲಿ ಬರೆದಾಗ; ಮರ್ಸಿ ಎಂಬ ಹುಡುಗಿಗೆ ಸಂತೋಷವಾಗಿತ್ತು. ಅದನ್ನು ಓದಿ ‘ಪೀಟರ್’ ಅಂತೂ ಕುಣಿದಾಡೇ ಬಿಟ್ಟರಂತೆ. 

ಮತ್ತೊಮ್ಮೆ ಎರ್ನಾಕುಲಂನಲ್ಲಿ ಭಾರತದ ಎಂತೆಂಥದೋ ಅದ್ಭುತ ಸಂಘಟನೆಯ ನಾಯಕರೆಲ್ಲ ಸೇರಿದ್ದರು.ಅದರಲ್ಲಿ ಸ್ವಾಮಿ ಅಗ್ನಿವೇಶ್, ಕಿಷನ್ ಪಾಟ್ನಾಯಕ್, ಮೇಧಾಪಾಟ್ಕರ್, ಕೆಲವು ಗುಡ್ಡಗಾಡಿನ ನಾಯಕರು ಮುಂತಾದವರೆಲ್ಲ ಸೇರಿದ್ದರು. ‘ಭಾರತದರಾಜಕಾರಣಕ್ಕೆ ಹೊಸ ನಾಯಕತ್ವವನ್ನು ಕೊಡುವುದು’ ಮುಖ್ಯ ವಿಷಯವಾಗಿತ್ತು. ಇಲ್ಲಿಯ ಮಾತನ್ನು ಚರ್ಚೆಯನ್ನು ಈಗ ಮನ್ಸೂರು ಅವರ ‘ನೇಪಥ್ಯ’ದಲ್ಲಿ ಹೇಗೆ ಗ್ರಹಿಸಿಕೊಳ್ಳಬಲ್ಲೆ ಮತ್ತು ಅರ್ಥೈಸಿಕೊಳ್ಳಬಲ್ಲೆ ಎಂಬುದು ಮುಖಾಮುಖಿಯಾಗುತ್ತದೆ. ಇಂಥದಕ್ಕೆ ಎಷ್ಟೊಂದು ಮಗ್ಗುಲುಗಳು. 

ಬಾಬರಿ ಮಸೀದಿಯನ್ನು ಮೂಲಭೂತವಾದಿಗಳು ಕೆಡವಿದ ಸಂದರ್ಭದಲ್ಲಿ; ಆದ ಹಿಂಸೆಯನ್ನು ಕುರಿತು ಒಂದು ವರದಿ ಸಿದ್ಧಪಡಿಸಲು ಕುಲದೀಪ ನಾಯಕ್‌ಅವರು ಕೇಳಿದ್ದರು. ಆಗ ನಾವು ಮನ್ಸೂರರ ಜೊತೆ ಬೆಳಗಾವಿ, ಹುಬ್ಬಳ್ಳಿ ಧಾರವಾಡ ಸುತ್ತಾಡುವಾಗ; ಎಂದೆಂದಿಗೂ ಮರೆಯಲು ಸಾಧ್ಯವಾಗದಂತ ದೃಶ್ಯಗಳು ಹಾಗೂ ವ್ಯಕ್ತಿಚಿತ್ರಣಗಳು ಎದುರಾದವು. ಅದನ್ನೆಲ್ಲ ಈಗ ಮನ್ಸೂರ್ ಅವರನ್ನು ಸಾಕ್ಷಿಭೂತ ವಾಗಿಟ್ಟುಕೊಂಡು ಹೇಗೆ ವ್ಯಾಖ್ಯಾನಿಸುವುದು ಅನ್ನಿಸಿದೆ. ಅವರ ಶ್ರೀಮತಿಯವರು ಎಷ್ಟು ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು.

ಈ ವ್ಯಾಖ್ಯಾನದ ಮಗ್ಗುಲುಗಳಿಗೆ ಹತ್ತಾರು ದಿಕ್ಕುಗಳಿರುತ್ತವೆ. ಈ ದೃಷ್ಟಿಯಿಂದ ನಾವು ಪಾಕಿಸ್ತಾನದ ಲಾಹೋರಿಗೆ ಶಾಂತಿ ಸಮ್ಮೇಳನಕ್ಕೆ ಹೋದಾಗ ಆದ ಅನುಭವಗಳನ್ನು ಬರೆದರೂ ಅದನ್ನು ಕುರಿತು ಮಾತಾಡಿದರೆ ಮತ್ತೆ ಕೆಲವು ಒಳನೋಟಗಳು ಗರಿಗೆದರಿ ನಿಂತಿರುತ್ತದೆ. ಅಂಥ ಕಡೆಯಲ್ಲೆಲ್ಲ ಪ್ರೊ. ಮನ್ಸೂರು ಅವರ ಸೌಮ್ಯ ಮುಖದ ನಗು ವಿಸ್ತಾರಗೊಳ್ಳುತ್ತಲೇ ಇರುತ್ತದೆ. ಈ ವಿಸ್ತಾರಕ್ಕೆ ಎಲ್ಲೆ ಎಂಬುದು ಇರುವುದಿಲ್ಲ.

ಯಾಕೆಂದರೆ ಅಷ್ಟರ ಮಟ್ಟಿಗೆ ನಮ್ಮ ಮನಸ್ಸಿನಲ್ಲಿ ಬೇರು ಬಿಟ್ಟಿರುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಬಂದಮೇಲೆ ಕುಲದೀಪನಾಯರ್ ಅವರ ಮನೆಯಲ್ಲಿ ನಾವು ಕಳೆದ ಕಾಲ ಮತ್ತು ನ್ಯಾಯಮೂರ್ತಿ ಸಾಚಾರ್ ಅವರ ಮನೆಯಲ್ಲಿ ನಡೆದ ಮಾತುಕತೆಯನ್ನು ಹೇಗೆ ವಿಸ್ತರಿಸಿ ಬರೆಯುವುದು ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ಆ ಮಾತು ರಾಷ್ಟ್ರ ವ್ಯಾಪಕತೆಯನ್ನು ಪಡೆದಿರುತ್ತದೆ. 

ಸ್ವಾತಂತ್ರ ಪಡೆದ ಇಷ್ಟು ವರ್ಷಗಳ ನಂತರವೂ ‘ಸ್ವಾತಂತ್ರ ಪಡೆದ ಸಂದರ್ಭ’ದ ಹುಣ್ಣು ಯಾಕೆ ವಾಸಿಯಾಗದಂತೆ ನೋಡಿಕೊಳ್ಳುತ್ತಿದ್ದೇವೆ? ಹಾಗೂ ಇಷ್ಟು ವರ್ಷಗಳ ನಂತರವೂ ನಾವು ಮತೀಯ ಸಾಮರಸ್ಯದ ಬಗ್ಗೆ ಮಾತಾಡುತ್ತಿದ್ದೇವೆ. ಇನ್ನು ಎಷ್ಟು ದಿವಸ ಹೀಗೆ ಮಾತಾಡುತ್ತ ಹೋಗಬೇಕು ಅನ್ನಿಸುತ್ತದೆ.

ಇಂಥ ಹಿನ್ನೆಲೆಯ ನೂರಾರು ಮಾತುಗಳನ್ನು ಮನ್ಸೂರು ಅವರ ಬಳಿ ಮಾತಾಡಿರುವೆ. ಅದರಲ್ಲೂ ಅವರ ಜೊತೆ ಬೆಂಗಳೂರಿನಲ್ಲಿ ಎಷ್ಟೊಂದು ಸುತ್ತಾಡಿರುವೆ. ಅವರು ಬೆಂಗಳೂರಿನ ಇಂಥ ಭೀಕರ ಟ್ರಾಫಿಕ್‌ನಲ್ಲಿಯೂ ಎರಡು ಮೂರು ಕಿ.ಮೀಟರ್ ವಾಕ್ ಮಾಡಿಯೇ ಮನೆಗೆ ಅಥವಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಅವರು ಆಟೊದಲ್ಲಿ ಪ್ರಯಾಣಿಸಿದ್ದನ್ನು ಕಂಡೇ ಇಲ್ಲ. ಪ್ರೊ. ಮನ್ಸೂರು ಅವರ ಸಂಘಟನೆಗಾಗಿ ನಡಿಗೆಯ ಹೆಚ್ಚುಗಾರಿಕೆಯನ್ನು ಕುರಿತು ಪಾಟೀಲಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ರಾಯಚೂರು, ಸಂಘಟನೆಗಾಗಿ ದಾವಣಗೆರೆ ಮತ್ತು ತುಮಕೂರು ಮುಂತಾದ ಕಡೆಯಲ್ಲೆಲ್ಲ ಪ್ರಸ್ತಾಪಿಸಿರುವೆ.

ನಾವು ಕೆಲವು ದಿವಸ ನಮ್ಮ ಹೋರಾಟಗಳಿಗೆ ಮುಸ್ಲಿಂ ಬಾಂಧವರನ್ನು ಒಳಗೆ ಬಿಟ್ಟುಕೊಳ್ಳಬೇಕು ಎಂದು ಕೆಲವು ಕಾರ್ಯಕ್ರಮಗಳನ್ನು ರೂಪಿಸಿದ್ದೆವು. ಹಾಗೆಯೇ ಅವರನ್ನು ‘ಭಾರತ ಮತ್ತು ಪಾಕಿಸ್ತಾನ’ದ ಸ್ನೇಹಕೂಟದ ಸದಸ್ಯರಾಗಲು ಪ್ರೇರೇಪಿಸಿದ್ದೆವು. ಇತ್ತೀಚೆಗೆ ನಾನು ಕೆಲವು ವರ್ಷಗಳಿಂದ ‘ಪಿಯುಸಿಎಲ್’ಮತ್ತು ‘ಸಿಎಫ್‌ಡಿ’ಯಿಂದ ದೂರ ಉಳಿದಿದ್ದೆ. ಅದಕ್ಕೆ ಅವರಿಗೆ ನನ್ನ ಮೇಲೆ ಸಣ್ಣ ಪ್ರಮಾಣದ ಸಿಟ್ಟು ಇತ್ತು. 

ನನ್ನ ಓದು ಮತ್ತುಬರವಣಿಗೆಗೆ ಹೆಚ್ಚು ತೊಂದರೆಯಾಗುತ್ತಿದ್ದುದರಿಂದ ಪ್ರಾಮಾಣಿಕವಾಗಿ ನನ್ನನ್ನು ತೊಡಗಿಸಿಕೊಳ್ಳಲು ಆಗಿರಲಿಲ್ಲ. ಇದನ್ನು ಅವರಿಗೆ ಹೇಳಿದ್ದೆ. ಈಗ ಅವರಿಗೆ ಶ್ರದ್ಧಾಂಜಲಿಯ ನೆಪದಲ್ಲಿ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಳ್ಳುವೆ. ನೋವು ಮತ್ತು ಸಂತೋಷವನ್ನು ಪ್ರೀತಿಯಿಂದ ಸ್ವೀಕರಿಸುತ್ತ ಸಾಗಿದವರು. ತಮ್ಮ ಬಾಲ್ಯಕಾಲದ ಮತ್ತು ಯೌವನದ ಅಪರೂಪದ ಘಟನೆಗಳನ್ನು ಸ್ವಾರಸ್ಯಪೂರ್ಣವಾಗಿ ಹೇಳಿದ್ದರು. ಈಗ ಅವುಗಳನ್ನೆಲ್ಲ ಸಾಹಿತ್ಯ, ಸಂಸ್ಕೃತಿ, ಮತ್ತು ರಾಜಕೀಯ ಚೌಕಟ್ಟಿನಲ್ಲಿ ಗ್ರಹಿಸಿಕೊಳ್ಳಲು ಹೊರಟಾಗ,ಉದ್ದನೆಯ ನಿಲುವುಗನ್ನಡಿಯಲ್ಲಿ ನಗುತ್ತ ನಿಂತಿರುತ್ತಾರೆ. ಎಂಬತ್ನಾಲ್ಕು ವರ್ಷದ ತುಂಬು ಜೀವನವನ್ನು ಅನುಭವಿಸಿದ್ದಾರೆ.

ಇಪ್ಪತ್ತನೆಯ ಶತಮಾನ ಕಂಡ ಅದ್ಭುತ ವಿದ್ವಾಂಸರು ಮತ್ತು ಚಿಂತಕರಾದ ಸುನೀತ್‌ಕುಮಾರ್ ಚಟರ್ಜಿಯವರ ಲೇಖನದಿಂದ ಇದನ್ನು ಪ್ರಾರಂಭಿಸಿದ್ದೆ. ಫ್ರಾಯ್ಡಾ ಕುರಿತ ಆ ಸಂದರ್ಶನ ಲೇಖನದ ಕೊನೆಯ ಸಾಲುಗಳು ಹೀಗಿವೆ. ಅದು ಯುರೋಪಿನ ಅನಾಮಿಕ ಕವಿಗಳ ಸಾಲುಗಳು: "I believe in nothing /97 I die, I shall be nothing, Even as he bebore I was born/upon this sun-lit earth, Monstrous/Soon Ishall call you for the last-time, /Be my good mother, o Eternal Darkness'' ಓ ಎಟರ್‌ನಲ್ ಡಾರ್ಕ್‌ನೆಸ್ ಎಂಬುದು ಎಂಥ ಅದ್ಭುತ ನುಡಿಗಟ್ಟು.

ಗ್ಯಾರಂಟಿ ಗೋಳ್ಡ್....ಬೊಳುವಾರು ಮುಹಮ್ಮದ್ ಕುಂಞ

 
ಗ್ಯಾರಂಟಿ ಗೋಳ್ಡ್....
---------------
ಆಡಿಸುವವರೂ ಆಡುವವರೂ ಒಂದೇ ಎಂಬುದು ಗೊತ್ತಾಗಬಾರದೆಂಬ ಕಾರಣಕ್ಕೆ ’ಜೈ ಭಜರಂಗ’ ತಂಡದ ಹೆಸರನ್ನು ’ಮಾತೃಭೂಮಿ ಸ್ಟಾರ್ಸ್’ ಅಂತ ಬದಲಾಯಿಸಿದ್ದಾಗಲೇ ’ಗುಸು.. ಗುಸು..’ ಶುರುವಾಗಿತ್ತು. 

ಅದರೆ, ಎರಡನೆಯ ಸೆಮಿಪೈನಲ್ಸ್’ನಲ್ಲಿ ’ಮಾತೃಭೂಮಿ ಸ್ಟಾರ್ಸ್” ತಂಡವು ’ಒಸಾಮಾ ಫ್ರೆಂಡ್ಸ್” ಎದುರು ಮುಗ್ಗರಿಸಿದಾಗಲಂತೂ ‘ಗುಸು ಗುಸು’ ಒಮ್ಮಿಂದೊಮ್ಮೆಗೆ ’ಗುರು.. ಗುರು..’ ಆಗಿ ಬದಲಾಗಿತ್ತು. ಯಾವಾಗ ’ಬೆಸ್ಟ್ ಕ್ಯಾಚರ್’ ಅವಾರ್ಡಿಗೆ ’ಅಬ್ದುಲ್ ಮುತ್ತಲಿಬ್’ನ ಹೆಸರು ಸೂಚಿತವಾಯಿತೋ, ತಾವೇ ಕರ್ಕೊಂಡು ಬಂದು ಫಿಕ್ಸ್ ಮಾಡಿದ್ದ ಫಿಸಿಕಲ್ ಡೈರೆಕ್ಟರ್ ಬಾಬು ಮಾಸ್ಟರ್ ಮೇಲೆಯೇ ‘ಮಾತೃಭೂಮಿ’ ಬೆಂಬಲಿಗರು ಮುಗಿಬಿದ್ದಿದ್ದರು.
 
ಅತಿ ಉತ್ಸಾಹದಿಂದಲೇ ಉದ್ಘಾಟನೆಗೊಂಡಿದ್ದ ‘ಮುತ್ತುಪ್ಪಾಡಿ ಆಚಾರ್ಯ ಕಪ್’ ಕೆಟ್ಟ ಜಗಳದಲ್ಲಿ ಕೊನೆಯಾಗುತ್ತಿರುವುದು ಚಡ್ಡಿ ಅನಂತಣ್ಣನವರಿಗೆ ಬಹಳ ನಿರಾಸೆಯನ್ನುಂಟುಮಾಡಿತ್ತು.
 ಮಾಸ್ಟರದ್ದು ತಪ್ಪಿಲ್ಲ ಎನ್ನುವುದನ್ನು ವಿವರಿಸಲು ಅವರು ಈ ಕತೆ ಹೇಳಿದ್ದು:
 
“ಇಂದ್ರಾಗಾಂಧಿ ಪ್ರೈಮಿನಿಸ್ಟರ್ ಆಗಿದ್ದಾಗ..” ಅಂತ ಚಡ್ಡಿ ಅನಂತಣ್ಣ ಶುರು ಮಾಡುವಾಗಲೇ ಸುತ್ತ ನಿಂತಿದ್ದವರೆಲ್ಲರ ಕಿವಿ ಕುತ್ತ ಆಗಿತ್ತು. “ನಮ್ಮ ದೇಶದಲ್ಲಿ ನೂರು ಕೋಟಿ ಜನರಿದ್ರೂ ಒಂದೇ ಒಂದು ಒಲಂಪಿಕ್ ಮೆಡಲು ಸಿಕ್ಕುವುದಿಲ್ಲ ಯಾಕೇ..? ಎಂಬ ಪ್ರಶ್ನೆಗೆ ಉತ್ತರ ಹುಡುಕ್ಲಿಕ್ಕೆ ಒಂದು ಮೀಟಿಂಗ್ ಕರೆದಿದ್ರು. ಎರಡು ಗಂಟೆಯ ಬಿಸಿ ಬಿಸಿ ಚರ್ಚೆಯ ನಂತರ ಒಂದು ’ಫ್ಯಾಕ್ಟ್ ಫೈಡಿಂಗ್ ಕಮಿಟಿ’ಯ ನೇಮಕ ಆಯ್ತು. 

ಆ ಕಮಿಟಿಯ ಅಧ್ಯಕ್ಷರು, ಹತ್ತು ಮಂದಿಯ ತಂಡವನ್ನು ಕಟ್ಟಿಕೊಂಡು, ಇಪ್ಪತ್ತು ದೇಶಗಳನ್ನು ಮೂವತ್ತು ದಿನಗಳಲ್ಲಿ ಸುತ್ತಿ ಬಂದು, “ಒಂದು ವೇಳೆ ಒಲಂಪಿಕ್ಸ್’ನಲ್ಲಿ ಕಬಡ್ಡಿ ಆಟವನ್ನು ಸೇರಿಸಿದರೆ ಗೋಳ್ಡ್ ಗ್ಯಾರಂಟಿ..” ಎಂಬ ರಿಪೋರ್ಟ್ ಕೊಟ್ಟರು.

ಇಂದ್ರಾಗಾಂಧಿ ಯಾವುದಕ್ಕೂ ತಡಮಾಡುವವರಲ್ಲ; ಒಲಂಪಿಕ್ಸ್ ಅಧ್ಯಕ್ಷರನ್ನು ಮನೆಗೇ ಕರೆಸಿ ಊಟ ಹಾಕಿಸಿ, ಮುಂದಿನ ಒಲಂಪಿಕ್ಸ್’ಗೆ ಕಬಡ್ಡಿ ಸೇರಿಸಲು ವಿನಂತಿದರು. ಆದರೆ, ಆ ಅಧ್ಯಕ್ಷರು ಕೈ ತೊಳೆದುಕೊಳ್ಳುವ ಮೊದಲೇ ’ನೋ’ ಅಂದುಬಿಟ್ರು. ಇಂದ್ರಾ ಗಾಂಧಿ ಒಮ್ಮೆ ತೀರ್ಮಾನ ಮಾಡಿದ್ರೆ ಸುಲಭದಲ್ಲಿ ಸೊಲುವ ಹೆಣ್ಣುಮಗಳಲ್ಲ. ಕೊನೆಗೆ ಇಂದ್ರಾಗಾಂಧಿಯ ಒತ್ತಾಯ ಸಹಿಸಿಕೊಳ್ಳಲಾಗದೆ, ಉಂಡ ಮನೆಗೆ ಎರಡು ಬಗೆಯಬಾರದೆಂಬ ಒಂದೇ ಒಂದು ಕಾರಣಕ್ಕೆ, “ಮೊದ್ಲು ನೀವು ಏಷ್ಯನ್ ಗೇಮ್ಸ್ ನಲ್ಲಿ ಸೇರಿಸಿಕೊಳ್ಳಿ. ಆಮೇಲೆ ನೋಡುವ” ಎಂದು ಕೈ ಒರಸಿಕೊಂಡರು ಆ ಒಲಂಪಿಕ್ ಅಧ್ಯಕ್ಷರು.

ಏಷ್ಯನ್ ಗೆಮ್ಸ್ ಸಮಿತಿಯ ಏಳರಲ್ಲಿ ಆರು ಮಂದಿ ಇಂದ್ರಾಗಾಂಧಿ ಹೇಳಿದ ಹಾಗೆಯೇ ಕೇಳುವವರು. ಉಳಿದ ಒಬ್ಬರು ಮೀಟಿಂಗ್’ಗಳಿಗೇ ಬರುತ್ತಿರಲಿಲ್ಲ. ಹಾಗಾಗಿ ಮುಂದಿನ ಏಷ್ಯನ್ ಗೆಮ್ಸ್ ನಲ್ಲಿ ಕಬಡ್ಡಿ ಸೇರಿದ್ದೂ ಆಯಿತು. ಹಿಂದೂಸ್ತಾನಕ್ಕೆ ಗೋಳ್ಡ್ ಮೆಡಲೂ ಬಂತು. ಸಿಲ್ವರ್ ಪಾಕಿಸ್ಥಾನಕ್ಕೆ, ಬಾಂಗ್ಲಾಕ್ಕೆ ಬ್ರೋಂಜ್. 

ಇಂದ್ರಾಗಾಂಧಿಗೆ ನಂಬ್ಲಿಕ್ಕೇ ಆಗ್ಲಿಲ್ಲ. ಮತ್ತೊಂದು ಕಮಿಟಿ ರಚಿಸಿ, ’ಇದೇಕೆ ಹೀಗೇ ?’ ಎಂಬ ಸಂಶೋಧನಾ ವರದಿ ಕೊಡಲು ಹೇಳಿದ್ರು. ಮೂರು ತಿಂಗಳ ಕಾಲ ಮತ್ತೊಮ್ಮೆ ಲೋಕವೆಲ್ಲ ಸುತ್ತಿ ಬಂದ ಆ ಕಮಿಟಿ ಒಂದೇ ಒಂದು ಸಾಲಿನ ರಿಪೋರ್ಟ್ ಕೊಟ್ಟಿತು. 

“ಬೇರೆಲ್ಲಾ ಆಟಗಳಲ್ಲಿ ಮೆಡಲು ಸಿಕ್ಕುವುದು ಗುರಿ ಮುಟ್ಟಿದವನಿಗೆ ಮಾತ್ರ; ಆದರೆ ಕಬಡ್ಡಿಯಲ್ಲಿ ಮಾತ್ರ ಗುರಿ ಮುಟ್ಟುವವನನ್ನು ಕಾಲೆಳೆದು ಅಡ್ಡ ಮಲಗಿಸುವವನಿಗೆ ಸಿಕ್ತದೆ.”

[ಸ್ವಾತಂತ್ರ್ಯದ ಓಟ: 911-912]
 
 

ಆಡಿಸುವವರೂ ಆಡುವವರೂ ಒಂದೇ ಎಂಬುದು ಗೊತ್ತಾಗಬಾರದೆಂಬ ಕಾರಣಕ್ಕೆ ’ಜೈ ಭಜರಂಗ’ ತಂಡದ ಹೆಸರನ್ನು ’ಮಾತೃಭೂಮಿ ಸ್ಟಾರ್ಸ್’ ಅಂತ ಬದಲಾಯಿಸಿದ್ದಾಗಲೇ ’ಗುಸು.. ಗುಸು..’ ಶುರುವಾಗಿತ್ತು.

ಅದರೆ, ಎರಡನೆಯ ಸೆಮಿಪೈನಲ್ಸ್’ನಲ್ಲಿ ’ಮಾತೃಭೂಮಿ ಸ್ಟಾರ್ಸ್” ತಂಡವು ’ಒಸಾಮಾ ಫ್ರೆಂಡ್ಸ್” ಎದುರು ಮುಗ್ಗರಿಸಿದಾಗಲಂತೂ ‘ಗುಸು ಗುಸು’ ಒಮ್ಮಿಂದೊಮ್ಮೆಗೆ ’ಗುರು.. ಗುರು..’ ಆಗಿ ಬದಲಾಗಿತ್ತು. ಯಾವಾಗ ’ಬೆಸ್ಟ್ ಕ್ಯಾಚರ್’ ಅವಾರ್ಡಿಗೆ ’ಅಬ್ದುಲ್ ಮುತ್ತಲಿಬ್’ನ ಹೆಸರು ಸೂಚಿತವಾಯಿತೋ, ತಾವೇ ಕರ್ಕೊಂಡು ಬಂದು ಫಿಕ್ಸ್ ಮಾಡಿದ್ದ ಫಿಸಿಕಲ್ ಡೈರೆಕ್ಟರ್ ಬಾಬು ಮಾಸ್ಟರ್ ಮೇಲೆಯೇ ‘ಮಾತೃಭೂಮಿ’ ಬೆಂಬಲಿಗರು ಮುಗಿಬಿದ್ದಿದ್ದರು.

ಅತಿ ಉತ್ಸಾಹದಿಂದಲೇ ಉದ್ಘಾಟನೆಗೊಂಡಿದ್ದ ‘ಮುತ್ತುಪ್ಪಾಡಿ ಆಚಾರ್ಯ ಕಪ್’ ಕೆಟ್ಟ ಜಗಳದಲ್ಲಿ ಕೊನೆಯಾಗುತ್ತಿರುವುದು ಚಡ್ಡಿ ಅನಂತಣ್ಣನವರಿಗೆ ಬಹಳ ನಿರಾಸೆಯನ್ನುಂಟುಮಾಡಿತ್ತು.
ಮಾಸ್ಟರದ್ದು ತಪ್ಪಿಲ್ಲ ಎನ್ನುವುದನ್ನು ವಿವರಿಸಲು ಅವರು ಈ ಕತೆ ಹೇಳಿದ್ದು:

“ಇಂದ್ರಾಗಾಂಧಿ ಪ್ರೈಮಿನಿಸ್ಟರ್ ಆಗಿದ್ದಾಗ..” ಅಂತ ಚಡ್ಡಿ ಅನಂತಣ್ಣ ಶುರು ಮಾಡುವಾಗಲೇ ಸುತ್ತ ನಿಂತಿದ್ದವರೆಲ್ಲರ ಕಿವಿ ಕುತ್ತ ಆಗಿತ್ತು. “ನಮ್ಮ ದೇಶದಲ್ಲಿ ನೂರು ಕೋಟಿ ಜನರಿದ್ರೂ ಒಂದೇ ಒಂದು ಒಲಂಪಿಕ್ ಮೆಡಲು ಸಿಕ್ಕುವುದಿಲ್ಲ ಯಾಕೇ..? ಎಂಬ ಪ್ರಶ್ನೆಗೆ ಉತ್ತರ ಹುಡುಕ್ಲಿಕ್ಕೆ ಒಂದು ಮೀಟಿಂಗ್ ಕರೆದಿದ್ರು. ಎರಡು ಗಂಟೆಯ ಬಿಸಿ ಬಿಸಿ ಚರ್ಚೆಯ ನಂತರ ಒಂದು ’ಫ್ಯಾಕ್ಟ್ ಫೈಡಿಂಗ್ ಕಮಿಟಿ’ಯ ನೇಮಕ ಆಯ್ತು.

ಆ ಕಮಿಟಿಯ ಅಧ್ಯಕ್ಷರು, ಹತ್ತು ಮಂದಿಯ ತಂಡವನ್ನು ಕಟ್ಟಿಕೊಂಡು, ಇಪ್ಪತ್ತು ದೇಶಗಳನ್ನು ಮೂವತ್ತು ದಿನಗಳಲ್ಲಿ ಸುತ್ತಿ ಬಂದು, “ಒಂದು ವೇಳೆ ಒಲಂಪಿಕ್ಸ್’ನಲ್ಲಿ ಕಬಡ್ಡಿ ಆಟವನ್ನು ಸೇರಿಸಿದರೆ ಗೋಳ್ಡ್ ಗ್ಯಾರಂಟಿ..” ಎಂಬ ರಿಪೋರ್ಟ್ ಕೊಟ್ಟರು.

ಇಂದ್ರಾಗಾಂಧಿ ಯಾವುದಕ್ಕೂ ತಡಮಾಡುವವರಲ್ಲ; ಒಲಂಪಿಕ್ಸ್ ಅಧ್ಯಕ್ಷರನ್ನು ಮನೆಗೇ ಕರೆಸಿ ಊಟ ಹಾಕಿಸಿ, ಮುಂದಿನ ಒಲಂಪಿಕ್ಸ್’ಗೆ ಕಬಡ್ಡಿ ಸೇರಿಸಲು ವಿನಂತಿದರು. ಆದರೆ, ಆ ಅಧ್ಯಕ್ಷರು ಕೈ ತೊಳೆದುಕೊಳ್ಳುವ ಮೊದಲೇ ’ನೋ’ ಅಂದುಬಿಟ್ರು. ಇಂದ್ರಾ ಗಾಂಧಿ ಒಮ್ಮೆ ತೀರ್ಮಾನ ಮಾಡಿದ್ರೆ ಸುಲಭದಲ್ಲಿ ಸೊಲುವ ಹೆಣ್ಣುಮಗಳಲ್ಲ. ಕೊನೆಗೆ ಇಂದ್ರಾಗಾಂಧಿಯ ಒತ್ತಾಯ ಸಹಿಸಿಕೊಳ್ಳಲಾಗದೆ, ಉಂಡ ಮನೆಗೆ ಎರಡು ಬಗೆಯಬಾರದೆಂಬ ಒಂದೇ ಒಂದು ಕಾರಣಕ್ಕೆ, “ಮೊದ್ಲು ನೀವು ಏಷ್ಯನ್ ಗೇಮ್ಸ್ ನಲ್ಲಿ ಸೇರಿಸಿಕೊಳ್ಳಿ. ಆಮೇಲೆ ನೋಡುವ” ಎಂದು ಕೈ ಒರಸಿಕೊಂಡರು ಆ ಒಲಂಪಿಕ್ ಅಧ್ಯಕ್ಷರು.

ಏಷ್ಯನ್ ಗೆಮ್ಸ್ ಸಮಿತಿಯ ಏಳರಲ್ಲಿ ಆರು ಮಂದಿ ಇಂದ್ರಾಗಾಂಧಿ ಹೇಳಿದ ಹಾಗೆಯೇ ಕೇಳುವವರು. ಉಳಿದ ಒಬ್ಬರು ಮೀಟಿಂಗ್’ಗಳಿಗೇ ಬರುತ್ತಿರಲಿಲ್ಲ. ಹಾಗಾಗಿ ಮುಂದಿನ ಏಷ್ಯನ್ ಗೆಮ್ಸ್ ನಲ್ಲಿ ಕಬಡ್ಡಿ ಸೇರಿದ್ದೂ ಆಯಿತು. ಹಿಂದೂಸ್ತಾನಕ್ಕೆ ಗೋಳ್ಡ್ ಮೆಡಲೂ ಬಂತು. ಸಿಲ್ವರ್ ಪಾಕಿಸ್ಥಾನಕ್ಕೆ, ಬಾಂಗ್ಲಾಕ್ಕೆ ಬ್ರೋಂಜ್.

ಇಂದ್ರಾಗಾಂಧಿಗೆ ನಂಬ್ಲಿಕ್ಕೇ ಆಗ್ಲಿಲ್ಲ. ಮತ್ತೊಂದು ಕಮಿಟಿ ರಚಿಸಿ, ’ಇದೇಕೆ ಹೀಗೇ ?’ ಎಂಬ ಸಂಶೋಧನಾ ವರದಿ ಕೊಡಲು ಹೇಳಿದ್ರು. ಮೂರು ತಿಂಗಳ ಕಾಲ ಮತ್ತೊಮ್ಮೆ ಲೋಕವೆಲ್ಲ ಸುತ್ತಿ ಬಂದ ಆ ಕಮಿಟಿ ಒಂದೇ ಒಂದು ಸಾಲಿನ ರಿಪೋರ್ಟ್ ಕೊಟ್ಟಿತು.

“ಬೇರೆಲ್ಲಾ ಆಟಗಳಲ್ಲಿ ಮೆಡಲು ಸಿಕ್ಕುವುದು ಗುರಿ ಮುಟ್ಟಿದವನಿಗೆ ಮಾತ್ರ; ಆದರೆ ಕಬಡ್ಡಿಯಲ್ಲಿ ಮಾತ್ರ ಗುರಿ ಮುಟ್ಟುವವನನ್ನು ಕಾಲೆಳೆದು ಅಡ್ಡ ಮಲಗಿಸುವವನಿಗೆ ಸಿಕ್ತದೆ.”

[ಸ್ವಾತಂತ್ರ್ಯದ ಓಟ: 911-912]

ಹದ್ದು ಮತ್ತು ಅಂಬರಗುಬ್ಬಿ

ಕವಿತೆ - ಕಥೆ
 
ಖಲೀಲ ಗಿಬ್ರಾನ್
ಅನು : ಡಾ ಎಚ್ ಎಸ್ ಅನುಪಮಾ


ಸಿಡಿಲು

ಒಂದು ಬಿರುಗಾಳಿ, ಮಳೆಯ ದಿನ. ಬಿಷಪ್ ತಮ್ಮ ಕ್ಯಾಥೆಡ್ರಲ್‌ನಲ್ಲಿ ಕುಳಿತಿದ್ದರು. ಕ್ರೈಸ್ತಳಲ್ಲದ ಒಬ್ಬಾಕೆ ಅಲ್ಲಿ ಬಂದಳು. ಅವರೆದುರು ನಿಂತು, ‘ನಾನು ಕ್ರೈಸ್ತಳಲ್ಲ, ನನಗೆ ನರಕದ ಉರಿ ಜ್ವಾಲೆಯಿಂದ ಮೋಕ್ಷ ಇಲ್ಲವೆ?’ ಎಂದು ಕೇಳಿದಳು.

ಅವಳೆಡೆ ನೋಡಿದ ಬಿಷಪ್ ಹೇಳಿದರು: ‘ಇಲ್ಲಿ ಮೋಕ್ಷ ಸಿಗುವುದು ಯಾರು ಪವಿತ್ರಾತ್ಮನ ಪವಿತ್ರ ಜಲದ ತೀರ್ಥದಿಂದ ಶುದ್ಧಿಯಾಗಿರುತ್ತಾರೋ ಅವರಿಗೆ ಮಾತ್ರ.’

ಅವರು ಇಷ್ಟು ಹೇಳುತ್ತಿರುವಾಗಲೇ ಆಕಾಶದಿಂದ ಗುಡುಗು, ಮಿಂಚಿನೊಂದಿಗೆ ಸಿಡಿಲು ಬಂದು ಎರಗಿತು. ಕ್ಯಾಥೆಡ್ರಲ್ ಗೆ ಬೆಂಕಿ ಹೊತ್ತಿಕೊಂಡಿತು. ಊರ ಜನ ಓಡೋಡಿ ಬಂದರು, ಆ ಮಹಿಳೆಯನ್ನು ರಕ್ಷಿಸಿದರು. ಬಿಷಪ್ ಉರಿಯ ಜ್ವಾಲೆಗೆ ಆಹಾರವಾದರು. 


ಹದ್ದು ಮತ್ತು ಅಂಬರಗುಬ್ಬಿ

ಒಂದು ದೊಡ್ಡ ಬೆಟ್ಟದ ಬಂಡೆಯ ಮೇಲೆ ಹದ್ದು ಮತ್ತು ಅಂಬರಗುಬ್ಬಿ ಭೇಟಿಯಾದವು. ಅಂಬರಗುಬ್ಬಿ ಹೇಳಿತು, ‘ಶುಭ ದಿನ ನಿಮಗೆ.’ ಕೆಳಗೆ ನೋಡುತ್ತ ಮೆಲುದನಿಯಲ್ಲಿ ಹದ್ದು ಹೇಳಿತು, ‘ಶುಭ ದಿನ.’

‘ಎಲ್ಲ ಸರಿಯಿದೆ ಅಲ್ಲವೆ?’

‘ಏಯ್, ಎಲ್ಲ ಸರಿಯಿದೆ. ಆದರೆ ನಿನಗೆ ಗೊತ್ತಿಲ್ಲವೆ, ನಾವು ಪಕ್ಷಿರಾಜರು. ನಾವು ಮಾತನಾಡಿಸುವುದಕ್ಕಿಂತ ಮೊದಲು ನೀನು ಮಾತನಾಡಿಸಬಾರದು.’

‘ನಾನು ನಾವೆಲ್ಲ ಒಂದೇ ಕುಟುಂಬದವರು ಎಂದು ತಿಳಿದಿದ್ದೇನೆ.’

‘ತಿರಸ್ಕಾರದಿಂದ ನೋಡಿದ ಹದ್ದು ಹೇಳಿತು, ‘ನಾವಿಬ್ಬರೂ ಒಂದೇ ಕುಟುಂಬದವರು ಅಂತ ಅವನ್ಯಾವನು ನಿನಗೆ ಹೇಳಿದ್ದು?’

‘ನಿಮಗೆ ನೆನಪಿಸಲೇ, ನಾನೂ ನಿಮ್ಮಷ್ಟೇ ಎತ್ತರ ಹಾರಬಲ್ಲೆ. ಈ ಭೂಮಿ ಮೇಲಿನ ಜೀವಿಗಳಿಗೆ ನನ್ನ ಇಂಪಾದ ಸ್ವರದಿಂದ ಖುಷಿ ಮತ್ತು ನೆಮ್ಮದಿ ನೀಡಬಲ್ಲೆ. ನಿನ್ನ ಧ್ವನಿ ಖುಷಿ, ನೆಮ್ಮದಿ ನೀಡಲಾರದೆಂದು ನೆನಪಿಸಬಯಸುತ್ತೇನೆ.’

ಹದ್ದು ಸಿಟ್ಟಿಗೆದ್ದು ಹೇಳಿತು, ‘ಖುಷಿ ಮತ್ತು ನೆಮ್ಮದಿ! ಪುಟಗೋಸಿ ಜೀವಿಯೇ! ನನ್ನ ಬಲಿಷ್ಠ ಕೊಕ್ಕಿನಿಂದ ಒಮ್ಮೆ ಕುಕ್ಕಿ ನಿನ್ನ ನಾಶ ಮಾಡಿಬಿಡಬಲ್ಲೆ. ನನ್ನ ಪಾದದಷ್ಟು ದೊಡ್ಡವೂ ಇಲ್ಲ ನೀನು.’

ಅದು ಹೀಗೆ ಹೇಳಿದ ಕೂಡಲೇ ಅಂಬರಗುಬ್ಬಿ ಎತ್ತರಕ್ಕೆ ಹಾರಿತು. ಹದ್ದಿನ ಕುತ್ತಿಗೆಯ ಹಿಂದೆ ಬೆನ್ನ ಮೇಲೆ ಕುಳಿತು ಅದರ ರೆಕ್ಕೆಗಳನ್ನು ಕುಕ್ಕತೊಡಗಿತು. ಹದ್ದಿಗೆ ಸಿಟ್ಟು ಬಂದು ಅತ್ಯಂತ ವೇಗವಾಗಿ, ಮೇಲೆಮೇಲೆ, ಅಡ್ಡಾದಿಡ್ಡಿ ಹಾರಿ ಅಂತೂ ಆ ಪುಟ್ಟ ಹಕ್ಕಿಯನ್ನು ಬೆನ್ನ ಮೇಲಿಂದ ಬೀಳಿಸಲು ಯತ್ನಿಸಿತು. ಸಾಧ್ಯವಾಗಲಿಲ್ಲ. ಕೊನೆಗೆ ಎಂದೆಂದೂ ಅಂಜದಿದ್ದಷ್ಟು ಹೆದರುತ್ತ, ತನ್ನ ಬೆನ್ನ ಮೇಲೆ ಕುಕ್ಕುವ ಆ ಪುಟ್ಟ ಹಕ್ಕಿಯನ್ನು ಹೊತ್ತು, ಆ ಕ್ಷಣದ ತನ್ನ ವಿಧಿಗಾಗಿ ಹಳಿದುಕೊಳ್ಳುತ್ತ ಮೊದಲು ಕುಳಿತಿದ್ದ ಎತ್ತರ ಬೆಟ್ಟದ ಬಂಡೆಯ ಮೇಲೆ ಬಂದು ಕುಳಿತಿತು. 

ಅದೇ ಹೊತ್ತಿಗೆ ಪುಟ್ಟ ಆಮೆಯೊಂದು ಆ ದಾರಿಯಲ್ಲಿ ಬಂತು. ಅದು ಅಲ್ಲಿನ ದೃಶ್ಯ ನೋಡಿ ಗಹಗಹಿಸಿ ನಗಲಾರಂಭಿಸಿತು. ಅದಕ್ಕೆ ಎಷ್ಟು ನಗು ಬಂತು ಎಂದರೆ ನಗುನಗುತ್ತ ಬೋರಲಾಗಿ ಮಲಗಿ ಹೊರಳಾಡತೊಡಗಿತು.

ಕೆಳಗೆ ನೋಡಿದ ಹದ್ದು ಆಮೆಯತ್ತ ತಿರುಗಿ ಹೇಳಿತು, ‘ನಿಧಾನ ತೆವಳುವಂಥವನೇ, ನೆಲದ ಮೇಲೆ ನೀನೊಬ್ಬನೇ ಇರಬೇಕು ಅಂಥವನು, ಏನು ನೋಡಿ ಅಷ್ಟು ನಗುತ್ತಿರುವೆ?’

ಆಮೆ ಹೇಳಿತು, ‘ನೀನು ಕುದುರೆಯಾಗಿ ಬದಲಾಗಿದ್ದೀ, ಆ ಪುಟ್ಟ ಅಂಬರಗುಬ್ಬಿ ಸವಾರನಾಗಿ ನಿನ್ನ ನಡೆಸುತ್ತಿದೆ, ಆದರೆ ಪುಟ್ಟ ಹಕ್ಕಿಯೇ ನಿನಗಿಂತ ಉತ್ತಮ ಎಂದಾಯಿತು.’

ಹದ್ದು ಅದಕ್ಕೆ ಉತ್ತರಿಸಿತು, ‘ನಿನ್ನ ಕೆಲಸ ನೀನು ನೋಡಿಕೊಂಡು ತೊಲಗು ಇಲ್ಲಿಂದ. ಇದು ನಾನು ಮತ್ತು ನನ್ನ ಸೋದರನ ನಡುವಿನ ಮನೆಜಗಳ. ಇದಕ್ಕೂ ನಿನಗೂ ಸಂಬಂಧವಿಲ್ಲ.’

(ದಿ ವಾಂಡರರ್)

Thursday, February 20, 2014

ವಿಮೆನ್ ಇನ್ ಬ್ಲಾಕ್ - ಬೀದಿಯ ಪರ್ಯಾಯ ಶಕ್ತಿ

ಡಾ. ಎಚ್. ಎಸ್. ಅನುಪಮಾ


 
ಯುದ್ಧ ಕಾಲವೋ, ಶಾಂತಿ ಕಾಲವೋ, ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ಯುದ್ಧಹಿಂಸೆಯಿಂದ ಬಾಧಿತರಾದವರು ಕಾಣಸಿಗುತ್ತಾರೆ. ಬೇರೆಬೇರೆ ಭಾಗಗಳಲ್ಲಿ ಅದರ ಸ್ವರೂಪ ಮತ್ತು ತೀವ್ರತೆ ಬೇರೆಯದಿರಬಹುದು, ಆದರೆ ಯುದ್ಧ ಕೊನೆಗೂ ಬಾಧಿಸುವುದು ಹೆಣ್ಣನ್ನೇ. ಯಾರು ಗೆದ್ದರೂ, ಯಾರು ಸೋತರೂ ವಿಧವೆಯರು, ಮಕ್ಕಳನ್ನು ಕಳೆದುಕೊಂಡ ಅಮ್ಮಂದಿರು, ಸೋದರರನ್ನು ಕಳೆದುಕೊಂಡ ಸೋದರಿಯರು ಸೃಷ್ಟಿಯಾಗುತ್ತಾರೆ. ಅಂಥ ‘ವೀರ ಮರಣ’ಗಳಾದರೂ ಸಾವಿರಾರು ಕುಟುಂಬಗಳ ಸಮತೋಲನ ಮತ್ತು ಜೀವಿತವನ್ನೇ ಏರುಪೇರು ಮಾಡುತ್ತವೆ. ಈಗ ದೇಶದೇಶಗಳ ನಡುವೆ ‘ಮಾಡು ಇಲ್ಲವೆ ಮಡಿ’ ತರಹದ ನೇರಾನೇರ ಯುದ್ಧ ನಡೆಯದೇ ಇರಬಹುದು. ಆದರೆ ಗಡಿ, ಉಗ್ರಗಾಮಿ, ರಕ್ಷಣೆಯ ನೆಪದಲ್ಲಿ ನಿರಂತರ ಯುದ್ಧ ಚಾಲ್ತಿಯಲ್ಲಿದೆ. ಅದಕ್ಕೆ ನೀರೆರೆಯಲು ರಾಷ್ಟ್ರೀಯತೆ, ದೇಶಭಕ್ತಿ, ಸುರಕ್ಷತೆ-ಸಮಗ್ರತೆ ಎಂಬಿತ್ಯಾದಿ ಭಾರವಾದ ಶೀರ್ಷಿಕೆಗಳಿವೆ. ಆಂತರಿಕ ಮತ್ತು ಬಾಹ್ಯ ಭದ್ರತೆಯ ಕಾರಣಕ್ಕಾಗಿ ನಮ್ಮದೇ ದೇಶಗಳ ನಮ್ಮದೇ ಸರ್ಕಾರಗಳು ರೂಪಿಸುವ ಯುದ್ಧನೀತಿ ನಮ್ಮ ಮನೆಯನ್ನೇ ನಾವು ನಾಶಮಾಡಿಕೊಳ್ಳುವಂತೆ ಇರುತ್ತದೆ. ಮಿಲಿಟರಿಯ ವಿಷಯಗಳು ಗುಪ್ತವಾಗಿರುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆಂದು ತೆಗೆದುಕೊಳ್ಳುವ ನಿರ್ಧಾರಗಳು ಪರಿಣಾಮ ಅನುಭವಿಸಿದ ಮೇಲಷ್ಟೇ ಜನಸಾಮಾನ್ಯರಿಗೆ ತಿಳಿದುಬರುತ್ತದೆ. 
 
ಈ ಯುದ್ಧ ಉನ್ಮಾದ ಮತ್ತು ತತ್ಸಂಬಂಧಿ ಹಿಂಸೆ ನೂರಕ್ಕೆ ನೂರು ‘ಅತಿ ಪುರುಷ’ ಮನಸ್ಥಿತಿಯ ಸೃಷ್ಟಿ. ಅದು ಸಮಾಜದ ನೈತಿಕತೆಯ ನೇಯ್ಗೆಯನ್ನೇ ಭ್ರಷ್ಟಗೊಳಿಸುತ್ತದೆ. ಎಂದೇ ಅದನ್ನು ಪ್ರತಿರೋಧಿಸುವುದು ತಾಯಿ ಮನಸುಗಳಿಗಲ್ಲದೇ ಬೇರೆಯವರಿಗೆ ಸಾಧ್ಯವಿಲ್ಲ. ಮನುಷ್ಯ ಮನುಷ್ಯನಾಗಿ ಉಳಿಯಲು ಹಿಂಸೆಯನ್ನು ಪ್ರತಿರೋಧಿಸುವುದು ಗಡಿಗೆರೆಯಿರದ ತಾಯಂದಿರ ಪರಮ ಕರ್ತವ್ಯ ಎಂದು ಮಹಿಳೆ ಮರೆಯುವಂತಿಲ್ಲ.  

ಅಂಥ ಒಂದು ಪ್ರಯತ್ನ ‘ವಿಮೆನ್ ಇನ್ ಬ್ಲಾಕ್’.

೧೯೮೮ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ ‘ವಿಮೆನ್ ಇನ್ ಬ್ಲಾಕ್’ ಕಪ್ಪು ಉಡುಗೆ ಧರಿಸಿದ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಕಪ್ಪು ಬಣ್ಣ ದುಃಖ ಸೂಚಕ, ಮರಣ ಸೂಚಕ. ಆದರೆ ಒಂದು ನಿಷ್ಕ್ರಿಯ ಸಂಕೇತವನ್ನು ಹಿಂಸೆಯ ವಿರುದ್ಧ ಪ್ರತಿರೋಧದ ಮತ್ತು ದಿಟ್ಟತನದ ಸಂಕೇತವಾಗಿ ಬಳಸಿಕೊಂಡು ಹುಟ್ಟಿದ್ದು ವಿಮೆನ್ ಇನ್ ಬ್ಲಾಕ್ ಸಂಘಟನೆ. ಆಕ್ರೋಶವನ್ನು ಪದಗಳಿಲ್ಲದೆ ತೋರಿಸಬಹುದಾದ ಭಾಷೆಯ ಸಂಕೇತ ಮೌನ. ಅದನ್ನೂ ಸಾಂಕೇತಿಕವಾಗಿ ವಿಮೆನ್ ಇನ್ ಬ್ಲಾಕ್ ಬಳಸಿಕೊಂಡಿತು. 
 
೧೯೮೭ರಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ ಆಕ್ರಮಿಸಿಕೊಂಡ ೨೦ ವರ್ಷದ ಬಳಿಕ ಮೊದಲ ಪ್ಯಾಲೆಸ್ಟೀನಿಯನ್ ಇಂತಿಫಾದಾ ಶುರುವಾಯಿತು. ಇಸ್ರೇಲಿ ಸೇನೆ ನಗರಗಳನ್ನಾವರಿಸಿಕೊಂಡಿತು. ಆಗ ಸಂಭವಿಸಿದ ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಈ ಸಂಘಟನೆ ಹುಟ್ಟಿಕೊಂಡಿತು. ಆ ಮೊದಲು ದ. ಆಫ್ರಿಕಾ, ಅರ್ಜೆಂಟೀನಾದಲ್ಲಿ ಕಂಡುಬಂದ ಅಹಿಂಸಾತ್ಮಕ ಪ್ರತಿರೋಧದ ಸ್ವರೂಪದಿಂದ ಸ್ಫೂರ್ತಿ ಪಡೆದ ಕೆಲವು ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ನಡುಭಾಗದ ಹಗಾರ್ ಸ್ಕ್ವೇರ್ (ಅಥವಾ ಪ್ಯಾರಿಸ್ ಸ್ಕ್ವೇರ್)ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ ಚಕಮಕಿಯಲ್ಲಿ ಮಡಿದವರ ಸಾವಿಗೆ ಶೋಕಿಸುತ್ತ ಕಪ್ಪು ಬಟ್ಟೆ ಧರಿಸಿ ಮೌನವಾಗಿ ನಿಂತರು. ಬಿಚ್ಚಿದ ಹಸ್ತದ ಕಪ್ಪು ಪ್ಲಕಾರ್ಡಿನಲ್ಲಿ ‘ಸ್ಟಾಪ್ ಆಕ್ಯುಪೇಷನ್’ ಎಂದು ಬರೆಯಲಾಗಿತ್ತು. 
 
ಕೂಡಲೇ ಇದು ಇಸ್ರೇಲಿನ ಇತರ ನಗರಗಳಿಗೂ ಹರಡಿತು. ಇಸ್ರೇಲ್ ಪ್ರಜೆಗಳಾದ ಅರಬ್ ಪ್ಯಾಲಸ್ಟೀನಿಯನ್ನರು ಹೆಚ್ಚಿರುವ ಉತ್ತರ ಇಸ್ರೇಲಿನಲ್ಲಿ ಗಮನ ಸೆಳೆಯಿತು. ಎರಡೂ ದೇಶಗಳ ನಡುವೆ ಸಂಪರ್ಕವಿರಿಸಿಕೊಂಡ, ಗಡಿ ದಾಟಿ ಎರಡೂ ಕಡೆಯ ಜೈಲುಗಳಿಗೆ ಭೇಟಿ ನೀಡುವ ಸಪ್ಲೈ ಗುಂಪಿನೊಡನೆ ಸಂಪರ್ಕ ಸಾಧಿಸಿತು. ಚಳುವಳಿಯೋಪಾದಿಯಲ್ಲಿ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್‌ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. ಇದಕ್ಕೆ ಯಾವ ನಿರ್ದಿಷ್ಟ ಚೌಕಟ್ಟೂ ಇರಲಿಲ್ಲ. ಪ್ರತಿ ಊರಿನ ಮಹಿಳೆಯರೂ ಅಲ್ಲಲ್ಲಿನ ಸ್ವರೂಪ ನಿರ್ಧರಿಸಿದರು. ೧೯೯೩ರ ತನಕ ಪ್ರತಿವಾರ ಹೆಚ್ಚು ಕಡಿಮೆ ೪೦ ನಗರಗಳಲ್ಲಿ ಈ ಜಾಗೃತಿ ನಡೆಯುತ್ತಿತ್ತು. ೧೯೯೩ರ ಓಸ್ಲೋ ಒಪ್ಪಂದವಾದ ಬಳಿಕ ಮೌನಜಾಗೃತಿಯ ಸಂಖ್ಯೆ ಕಡಿಮೆಯಾದರೂ ಮತ್ತೆ ಹಿಂಸೆ ಶುರುವಾದಾಗ ಮೊದಲಿನಂತೇ ಮುಂದುವರೆಯಿತು.

ಇದು ನಿಧಾನವಾಗಿ ಬೇರೆಬೇರೆ ದೇಶಗಳಿಗೂ ಹಬ್ಬಿತು. ಆಯಾ ಪ್ರದೇಶಗಳ ರಾಜಕೀಯ ಹಾಗೂ ಸಾಮಾಜಿಕ ಕಾರಣಗಳನ್ನು ಪ್ರತಿಭಟಿಸುತ್ತ ಶುರುವಾಯಿತು. ಜರ್ಮನಿ, ಯುಗೋಸ್ಲಾವಿಯಾ, ಭಾರತ, ನೇಪಾಳ, ಅಮೆರಿಕ, ಆಸ್ಟ್ರೇಲಿಯಾ, ಫಿಲಿಪೀನ್ಸ್, ಮಾಲಿ, ಕೆನಡ, ಇಂಗ್ಲೆಂಡ್, ಇಟಲಿ, ಸ್ವಿಜರ್ಲೆಂಡ್, ಜಪಾನ್, ಫ್ರಾನ್ಸ್, ಸ್ವೀಡನ್, ಟರ್ಕಿ, ನೈರೋಬಿ, ದ. ಆಫ್ರಿಕಾ, ಮೆಕ್ಸಿಕೋ, ನೆದರ್‌ಲೆಂಡ್, ಉತ್ತರ ಐರ‍್ಲೆಂಡ್, ಸ್ಪೇನ್ ಹೀಗೇ ಹಲವಾರು ದೇಶಗಳ ಮಹಿಳೆಯರನ್ನು ಸಕ್ರಿಯವಾಗಿಸಿತು. ಉಳಿದ ದೇಶಗಳ ಸಂಘಟನೆಗೆ ಇಸ್ರೇಲಿನ ಸಮಸ್ಯೆ ಜೊತೆಗೆ ಸಂಬಂಧವಿರಲಿಲ್ಲ. ಅವರೆಲ್ಲ ತಂತಮ್ಮನ್ನು ಬಾಧಿಸುತ್ತಿದ್ದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು. ಜನಾಂಗೀಯ ಕಲಹ, ಯುದ್ಧ, ಅಣ್ವಸ್ತ್ರ, ಶಸ್ತ್ರಾಸ್ತ್ರ ತಯಾರಿಕೆ, ಮಹಿಳಾ ದೌರ್ಜನ್ಯ ಇತ್ಯಾದಿ ಮಾನವ ಹೃದಯಗಳ ನಡುವೆ ಅಸಹನೆ, ದ್ವೇಷ ಬಿತ್ತುವ ಎಲ್ಲ ಪ್ರಯತ್ನಗಳನ್ನು ಈ ಸಂಘಟನೆಯ ಮಹಿಳೆಯರು ಪ್ರತಿಭಟಿಸಿದರು.

ಚಿಕ್ಕ ಆದರೆ ಹರಿತವಾದ ಸಂದೇಶವುಳ್ಳ ಸ್ಲೋಗನ್ನುಗಳನ್ನು ಆ ಮಹಿಳೆಯರು ಹಿಡಿದರು. ಕೆಲ ಸ್ಲೋಗನ್ನುಗಳನ್ನು ನೋಡಿ: ‘ಇನ್ನೂ ಸುರಕ್ಷಿತ ವಿಶ್ವ, ಮಹಿಳೆಯರಿಗಾಗಿ’, ‘ಅಹಿಂಸಾತ್ಮಕ ನಾಳೆ, ಮಕ್ಕಳ ಹಕ್ಕು,’ ‘ಯುದ್ಧ ಋತುಚಕ್ರದ ವೈರಿ’, ‘ಇನ್ನೂ ಕಾರುಣ್ಯಮಯ ವಿಶ್ವ ಕಲ್ಪಿಸಿಕೊಳ್ಳಿ’, ‘ಬೇಕಿರುವುದು ನ್ಯಾಯ, ಪ್ರತೀಕಾರವಲ್ಲ’. ಸಂಘಟನೆಯು ಬೇರೆಬೇರೆ ಅಹಿಂಸಾ ಮಾರ್ಗಗಳನ್ನೂ ಅನುಸರಿಸಿತು - ಕಪ್ಪು ಬಟ್ಟೆ ಧರಿಸಿ ರಸ್ತೆ ತಡೆ ಮಾಡುವುದು; ಮಿಲಿಟರಿ ಬೇಸ್ ಮತ್ತಿತರ ನಿಷೇಧಿತ ಪ್ರದೇಶಗಳಿಗೆ ಹೋಗುವುದು; ಸಾಕ್ಷಿಗಳೆದುರು ಅಹಿಂಸಾತ್ಮಕವಾಗಿ ಕಾನೂನು ಭಂಗ ಮಾಡುವುದು ಇತ್ಯಾದಿ.
 
೧೯೯೦ರಲ್ಲಿ ಯುಗೋಸ್ಲಾವಿಯಾದ ಮಹಿಳೆಯರು ಅಲ್ಲಿ ತೀವ್ರಗೊಳ್ಳತೊಡಗಿದ್ದ ರಾಷ್ಟ್ರೀಯತೆ ಹಾಗೂ ಆ ನೆಪದ ಹಿಂಸೆಯನ್ನು ನೇರವಾಗಿ ಖಂಡಿಸಿದರು. ರಾಷ್ಟ್ರವಾದಿಗಳ ರಕ್ತಪಾತದ ರಾಜಕಾರಣವನ್ನು ಟೀಕಿಸಿದರು. ಆದರೆ ಅವರನ್ನು ದೇಶದ್ರೋಹಿಗಳೆಂದು ಜರಿದು ಹಿಂಸಾತ್ಮಕ ಆಕ್ರಮಣ ನಡೆದವು. ಆದರೂ ಆ ಮಹಿಳೆಯರು ಮೌನ ಪ್ರತಿಭಟನೆ ನಿಲ್ಲಿಸಲಿಲ್ಲ. ಇಸ್ರೇಲಿನಲ್ಲೂ ಈ ಸಂಘಟನೆಯ ಮಹಿಳೆಯರಿಗೆ ವಿರುದ್ಧವಾಗಿ ‘ಭವಿಷ್ಯದ ಇಸ್ರೇಲ್’ ಎಂಬ ಹಸಿರು ಟೋಪಿ ಧರಿಸಿದ ಮಹಿಳಾ ಸಂಘಟನೆ ಶುರುಮಾಡಲಾಯಿತು. ಇವರನ್ನು ಅರಬ್ ಏಜೆಂಟರಂತೆ ನೋಡಲಾಯಿತು. ದಾರಿಹೋಕರು ‘ಸೂಳೆಯರು’, ‘ದ್ರೋಹಿಗಳು’ ಎಂದು ಜರಿದರು. ಅದೆಲ್ಲವನ್ನು ಘನತೆಯಿಂದ ಸಹಿಸಿ ಮೌನ ಪ್ರದರ್ಶನ ಮುಂದುವರೆಯಿತು. 

ಭಾರತದಲ್ಲಿ ಇದು ೧೯೯೨ರಲ್ಲಿ ಶುರುವಾಯಿತು. ಮೊತ್ತಮೊದಲು ಬೆಂಗಳೂರಿನಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡುವ ‘ವಿಮೋಚನಾ’ ಸಂಸ್ಥೆ ಮೌನಜಾಗೃತಿಯನ್ನು ಸಂಘಟಿಸಿತು. ಅಯೋಧ್ಯಾ ರಾಮಮಂದಿರ ಗಲಾಟೆ ಮತ್ತು ಬಾಬ್ರಿ ಮಸೀದಿ ಧ್ವಂಸದ ವಿರುದ್ಧ, ಹಿಂದೂ ರಾಷ್ಟ್ರೀಯತೆ ಹೆಸರಿನ ಹಿಂಸಾ ರಾಜಕಾರಣದ ವಿರುದ್ಧ ವಿಮೆನ್ ಇನ್ ಬ್ಲಾಕ್ ಅನ್ನು ಪ್ರತಿ ಗುರುವಾರ ಸಂಘಟಿಸಲಾಯಿತು. ಹಾಗೆಯೇ ಚೆನ್ನೈ, ಮುಂಬೈ, ಕೊಲ್ಲಾಪುರ, ದೆಹಲಿ ಇತ್ಯಾದಿ ದೇಶದ ನಾನಾ ಕಡೆ ಅಸಹನೆ ಮತ್ತು ದ್ವೇಷದ ರಾಜಕಾರಣ ಹಬ್ಬುವುದು ಬೇಡ ಎಂದು ಮಹಿಳೆಯರು ಮೌನವಾಗಿ ಬೀದಿಬೀದಿಗಳಲ್ಲಿ ನಿಂತರು. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಕಾನೂನುಬದ್ಧವಾಗಿಯೇ ನಡೆಯುತ್ತಿರುವ ಪ್ರಭುತ್ವದ ಹಿಂಸೆಯನ್ನು ಪ್ರಶ್ನಿಸಿತು. ರಾಜಕೀಯ ವಿಷಯಗಳ ಜೊತೆಗೇ ಮಹಿಳಾ ದೌರ್ಜನ್ಯವನ್ನೂ ವಿರೋಧಿಸಲಾಯಿತು. ವರದಕ್ಷಿಣೆ, ವಧುದಹನ, ಸ್ತ್ರೀ ಭ್ರೂಣಹತ್ಯೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ನೀಲಿಚಿತ್ರ ಮುಂತಾದ ವಿಷಯಗಳತ್ತ ಪ್ಲಕಾರ್ಡುಗಳು ಗಮನ ಸೆಳೆದವು. 

***

ಯಾವುದೇ ದೇಶದ, ಯಾವುದೇ ಗುಂಪಿನ ಮಹಿಳೆಯರು ಒಗ್ಗೂಡಿ ವಿಮೆನ್ ಇನ್ ಬ್ಲಾಕ್ ಸಂಘಟಿಸಬಹುದು. ಮೆರವಣಿಗೆಯಿಲ್ಲ, ಧಿಕ್ಕಾರ ಕೂಗಬೇಕಿಲ್ಲ. ಸುಲಭವಾಗಿ ಜನರನ್ನು ಸೇರಿಸಬಹುದು, ಮಕ್ಕಳನ್ನೂ ಕರೆತರಬಹುದು. ವಿಮೆನ್ ಇನ್ ಬ್ಲಾಕ್ ಸಂಘಟನೆಗೆ ಸಂವಿಧಾನ ಇಲ್ಲ. ಮ್ಯಾನಿಫೆಸ್ಟೋ ಇಲ್ಲ. ಕ್ರಿಯೆ ಮತ್ತು ಮಾತುಗಳಲ್ಲೇ ಅದರ ಆಶಯ ಸ್ಪಷ್ಟವಾಗಬೇಕು. ಒಂದು ಸ್ತ್ರೀವಾದಿ ತಿಳುವಳಿಕೆ ಗಟ್ಟಿಯಾಗಿ ಅದರ ಬೆನ್ನಿಗಿದೆ: ಯುದ್ಧಕಾಲದಲ್ಲಿ-ಶಾಂತಿ ಕಾಲದಲ್ಲಿ; ಆಂತರಿಕ ಅಥವಾ ಬಾಹ್ಯ ಸ್ವರೂಪಗಳಲ್ಲಿ ಪುರುಷ ಸಮಾಜ ಎಸಗುವ ದೌರ್ಜನ್ಯ ಅಂತರ್‌ಸಂಬಂಧ ಹೊಂದಿದೆ ಎನ್ನುವುದು. ಹಿಂಸೆ ದೊಡ್ಡ ಜನಸಮುದಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಧನವಾಗಿದೆ ಎಂಬ ಅರಿವೂ ಅದಕ್ಕಿದೆ. ಆದ್ದರಿಂದ ಅದು ಹಿಂಸೆಯನ್ನು ವಿರೋಧಿಸುತ್ತದೆ. ಹಿಂಸೆ ವಿರೋಧಿಸುವ ಪುರುಷರೂ ಈ ಸಂಘಟನೆಯ ಜೊತೆಗಿದ್ದಾರೆ. 
 
ಇದಕ್ಕೀಗ ವಿಶ್ವಾದ್ಯಂತ ೧೦ ಸಾವಿರಕ್ಕಿಂತ ಅಧಿಕ ಕ್ರಿಯಾಶೀಲ ಮಹಿಳೆಯರು ಕಾರ್ಯಕರ್ತರಾಗಿದ್ದಾರೆನ್ನುವ ಅಂದಾಜಿದೆ. ಜೆರುಸಲೇಂ, ಬೀಜಿಂಗ್, ಸರ್ಬಿಯಾ, ಬ್ರಸೆಲ್ಸ್ ಸೇರಿದಂತೆ ಕೆಲವು ಕಡೆ ಅಂತರರಾಷ್ಟ್ರೀಯ ಸಮ್ಮೇಳನ ನಡೆಸಿದೆ. ಎಲ್ಲ ದೇಶಗಳ ಸಂಘಟನೆಗಳ ಹೆಣ್ಣುಮಕ್ಕಳು ಇ ಮೇಲ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರೆ. ಮಿಲೆನಿಯಂ ಶಾಂತಿ ಪ್ರಶಸ್ತಿ ಲಭಿಸಿದೆ. ವರ್ಲ್ಡ್ ಸೋಶಿಯಲ್ ಫೋರಂನ ಸಹಸಂಘಟನೆಯಾಗಿ ಜಾಗತೀಕರಣ ಮತ್ತು ಸಾಮ್ರಾಜ್ಯಶಾಹಿಯ ಭಿನ್ನ ರೂಪಗಳನ್ನೂ ವಿರೋಧಿಸುತ್ತಿದೆ.

ಹೆಣ್ಣೇನೂ ಅಭಿಜಾತ ಅಹಿಂಸಾ ಪ್ರತಿಪಾದಕಳಲ್ಲ. ಆದರೆ ನ್ಯಾಯ ಮತ್ತು ದಮನ ಈ ಎರಡೂ ಏನು ಎನ್ನುವುದು ಒಂದಲ್ಲ ಒಂದು ಕಾರಣಕ್ಕಾಗಿ ದಮನಿತಳಾದ ಮಹಿಳೆಗೆ ಚೆನ್ನಾಗಿ ಗೊತ್ತು. ಎಂದೇ ಯುದ್ಧ, ಹಿಂಸೆಯ ಅನುಭವ ಗಂಡು ಮತ್ತು ಹೆಣ್ಣಿಗೆ ತುಂಬ ಭಿನ್ನವಾಗಿದೆ. ಹಿಂಸೆ ಕುರಿತ ಸ್ತ್ರೀವಾದಿ ವಿಶ್ಲೇಷಣೆ ಬೇರೆಯೇ ಇರುತ್ತದೆ. ಎಲ್ಲಿ ಹಿಂಸೆಯಿದೆಯೋ ಅಲ್ಲಿ ದೌರ್ಜನ್ಯ ಇದ್ದೇ ಇರುತ್ತದೆ. ಎಂದೇ ಹುತಾತ್ಮಳಾಗಬಯಸದೇ ತನ್ನ ಭಿನ್ನ ದೃಷ್ಟಿ ಹಾಗೂ ಶಕ್ತಿಯನ್ನು ತೋರಿಸುವುದು ಈ ಇಂಥ ಸಂಘಟನೆಗಳ ಹಿಂದಿನ ತಾತ್ವಿಕತೆಯಾಗಿದೆ.

***

ಆಳ್ವಿಕರಿಗೊಂದು ಅಧಿಕಾರವಿದ್ದಂತೆ ಬೀದಿಗೊಂದು ಅಧಿಕಾರವಿರುತ್ತದೆ. ಅಧಿಕಾರ ಒಂದೆಡೆ ಸಂಚಯವಾಗುವುದನ್ನು ತಡೆಗಟ್ಟಿ ವಿಕೇಂದ್ರೀಕರಿಸುವ ಒಂದು ಚಲನಶೀಲ ಸಮತೋಲನದ ಶಕ್ತಿ ಬೀದಿಗಿರುತ್ತದೆ. ಬೀದಿಗಿರುವ ಶಕ್ತಿ ಮತ್ತು ಅಧಿಕಾರ ಎರಡನ್ನೂ ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಸಮಾಜ ಸೋತಿರುವುದರಿಂದಲೇ ನಾಗರಿಕ ಸಮಾಜದಲ್ಲೂ ಅನಾಗರಿಕ ಕ್ರೌರ್ಯ ಅನಾಯಾಸವಾಗಿ ಪ್ರವೇಶ ಪಡೆದಿದೆ. 

ಹಿಂಸೆಗೆಳಸದಂತೆ ಅತ್ಯಂತ ಸರಳವಾಗಿ ಜನರನ್ನು ತಲುಪುವ ಸಾಧ್ಯತೆ ಬೀದಿಗಿದೆ. ಅದರಲ್ಲೂ ವಂಚಿತ ಮತ್ತು ಅಸಹಾಯಕ ವ್ಯಕ್ತಿ ಇಡೀ ಸಮಾಜದ ಅಂತಸ್ಸಾಕ್ಷಿ ಪ್ರಶ್ನಿಸಲು ಹಾಗೂ ತನ್ನೆದೆಯೊಳಗಿನ ಸಿಟ್ಟನ್ನು ನೈತಿಕ ಆಕ್ರೋಶವಾಗಿಸಲು ಬೀದಿಯನ್ನು ಬಳಸಿಕೊಳ್ಳಬೇಕು. ಅದರಲ್ಲೂ ಮಹಿಳೆಯರು ದೌರ್ಜನ್ಯ ನಿಲ್ಲಿಸುವಂತೆ ಹಕ್ಕೊತ್ತಾಯ ತರಲು, ವಂಚಿಸಲ್ಪಟ್ಟ ರಾಜಕೀಯ ಅವಕಾಶವನ್ನು ಸಾಮುದಾಯಿಕವಾಗಿ ಕಂಡುಕೊಳ್ಳಲು ಹಾಗೂ ಸೋದರತೆ-ಮಾನವತೆಗಳನ್ನು ಹಂಚಲು ಈ ಸುಲಭ ವಿಧಾನ ಬಳಸಿಕೊಳ್ಳಲೇಬೇಕು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಬರುತ್ತಿದೆ. ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಕಳೆದ ವರ್ಷ ಮಂಗಳೂರಿನಲ್ಲಿ ಸಮಾವೇಶ, ಹಕ್ಕೊತ್ತಾಯ ಜಾಥಾ ಹಾಗೂ ‘ವಿಮೆನ್ ಇನ್ ಬ್ಲಾಕ್’ ಅನ್ನು ಸಂಘಟಿಸಿತ್ತು. ಅದೇ ರೀತಿ ಈ ವರ್ಷವೂ ಮಾರ್ಚ್ ೭ರಂದು ಮೈಸೂರಿನಲ್ಲಿ ‘ವಿಮೋಚನಾ’ ಸಂಸ್ಥೆಯ ಸಹಯೋಗದೊಂದಿಗೆ ಸಂಜೆ ೫.೩೦ ಘಂಟೆಗೆ ಕೆ.ಆರ್. ವೃತ್ತ ಹಾಗೂ ದೇವರಾಜ ಅರಸ್ ರಸ್ತೆಯಲ್ಲಿ ವಿಮೆನ್ ಇನ್ ಬ್ಲಾಕ್ ಸಂಘಟಿಸಲಾಗಿದೆ. ನಿಮ್ಮ ಮನದಲ್ಲಿರುವುದನ್ನು ಪ್ಲಕಾರ್ಡುಗಳಲ್ಲಿ ಹಿಡಿದು ಕಪ್ಪು ಉಡುಗೆ ಧರಿಸಿ ಬನ್ನಿ. ನಿಮ್ಮ ಮನದಾಳದ ಸಾತ್ವಿಕ ಸಿಟ್ಟು ಸಮಾಜದ ನೈತಿಕ ಧೈರ್ಯವಾಗಿ ಭಾಷಾಂತರಗೊಳ್ಳಬೇಕಾದರೆ ಒಂದು ಹೆಜ್ಜೆ ಮುಂದಿಟ್ಟು ಬನ್ನಿ.

ಅವಶ್ಯವೆನಿಸಿದಾಗಲೆಲ್ಲ ನಿಮ್ಮನಿಮ್ಮ ಊರುಗಳಲ್ಲಿ ಈ ಅಹಿಂಸಾತ್ಮಕ ಪ್ರಯೋಗ ಮಾಡಿ ನೋಡಿ.


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...