Monday, February 03, 2014

ದಿನದ ದೀಪ -75








1
ನೀ ಹೇಳಿದೆಯೆಂದು ಬರೆಯಲು ಕುಳಿತ ಕವಿತೆ ಕೊನೆ ತಲುಪಿತು
ಹಚ್ಚಿದ ಮೋಟು ಬೀಡಿಯೂ ಬೆರಳಿಗೆ ತಾಗುವಷ್ಟು ಕಿರಿದಾಯಿತು

2
ಆತ್ಮಕತೆಯ ಸಂಕಟದ ಪದಗಳನಾಡುವಾಗ ತುಟಿ ಅದುರಿತು
ಸಭಾಂಗಣದ ತುಂಬ ಜೋರು ಚಪ್ಪಾಳೆ ಒಂದೇ ಸವನೆ ಮೊಳಗಿತು

3
ಕವಿ ಸುಟ್ಟುಕೊಂಡಿದ್ದ
ಕವಿತೆ ಬೆಳಕಾಗಿ ಉಳಿಯಿತು

4
ಎಲ್ಲಿ ಹೋದರೂ ಸದಾ ಮಾತಾಡುತ್ತಲೇ ಇರುವ ಬದುಕು ಮೊಬೈಲು
ನಿಲಿಸೆಂಬ ಯಾವ ಸೂಚನೆಯೂ ಇಲ್ಲ ಕರೆನ್ಸಿ ಖಾಲಿಯಾಗುವವರೆಗೂ  

5
ಕಣ್ಣೀರೆ ಅಕ್ಷರಗಳಾದರೂ ಬರೆದ ಹಾಳೆಗಳು ಸಮಾಧಾನದ ನಗೆ ಸೂಸುತ್ತ ಸಾಗಿದವು
ಹೇಗೆ ಸುಮ್ಮನಿರಲಿ ಖಾಲಿ ಕಾಗದ ಬೆಂಕಿಯ ಹಾಗೆ ಧಗಧಗ ಉರಿಯತೊಡಗಿವೆ

6
ಬೀದಿ ದೀಪದ ಕಡೆ ಹಾರುವ ಪತಂಗದ ರೆಕ್ಕೆಗೆ ಬಲವಾದ ಹುರುಪು
ಬದುಕಿನನುಭವದ ಕಥೆಗಳೆಲ್ಲ ಪ್ರತಿಸಲವೂ ಬೇರೆ ಹೆಸರಿನಲ್ಲೇ ಪ್ರಕಟವಾದವು

7
ಈ ಹಾದಿ ಎಲ್ಲಿಗೆ ಕರೆದೊಯ್ಯುವುದೆಂದು ಅವರೆಲ್ಲ ಯೋಚಿಸುತ್ತ ನಿಂತಿದ್ದರು 
ಬುದ್ಧನತ್ತ ತಿರುಗಿದೆ, ಹಾದಿ ಅವನ ಕಾಲದ ಹಿಂದೆಯೇ ನಡೆದು ಬರುತ್ತಿತ್ತು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...