Thursday, February 20, 2014

ಮೈಸೂರು : ಮಹಿಳಾ ದಿನಾಚರಣೆಯ ಕರಪತ್ರ


ಆತ್ಮೀಯರೇ,
ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಮಾನವ ಕುಲದ ಆಶಯವಾಗಿರುವ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರನ್ನೂ ಸಮಾನ ಭಾಗೀದಾರರನ್ನಾಗಿ ಮಾಡಿಕೊಳ್ಳಬೇಕೆಂಬ ಅರಿವನ್ನು ಸಮಾಜ ಪಡೆಯಬೇಕಿದೆ. ಮುಂಬರಲಿರುವ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಸುಳ್ಳು ಆಶ್ವಾಸನೆಗಳು, ಪೊಳ್ಳು ಭರವಸೆಗಳ ವಾಕ್ಚಾತುರ್ಯ ಪ್ರದರ್ಶನಕ್ಕೆ ತಾಲೀಮು ಶುರುವಾಗಿದೆ. ಎಲ್ಲ ರಾಜಕೀಯ ಪಕ್ಷ/ಸಿದ್ಧಾಂತಗಳೂ ಮಹಿಳಾ ವಿಷಯಕ್ಕೆ ಕೇವಲ ಮಾತಿನಲ್ಲಷ್ಟೇ ಮನ್ನಣೆ ನೀಡುತ್ತಿವೆ. ಹೈಟೆಕ್ ಅಭಿವೃದ್ಧಿ ಮಂತ್ರ, ಜಾತಿ ಮತ್ತು ಕೋಮುವಾದಿ ರಾಜಕಾರಣದ ರಹಸ್ಯ ಕಾರ್ಯ ಸೂಚಿಗಳನ್ನು ಮಹಿಳೆ ಮನಗಾಣಬೇಕಿದೆ. ಜೊತೆಗೆ ಎಂತಹುದೇ ದೌರ್ಜನ್ಯದ ಸಂದರ್ಭದಲ್ಲಿಯೂ ಮಹಿಳೆಯರು ಪ್ರತಿರೋಧಿಸುವ ಶಕ್ತಿ ಕಳೆದುಕೊಳ್ಳದೇ ಒಗ್ಗಟ್ಟಾಗಿ ಇರುವುದು ಅತಿ ಅವಶ್ಯವಾಗಿದೆ.

ಈ ನಿಟ್ಟಿನಲ್ಲಿ ಸಮಾನ ಮನಸ್ಕ ಮಹಿಳಾ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಕಳೆದ ವರ್ಷ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅಸ್ತಿತ್ವಕ್ಕೆ ಬಂತು. ಹಾಗೂ ಮಂಗಳೂರಿನಲ್ಲಿ ಬೃಹತ್ ಪ್ರಮಾಣದ ರ‍್ಯಾಲಿ, ವಿಚಾರ ಸಂಕಿರಣಗಳನ್ನು ನಡೆಸಲಾಯಿತು. ಹಾಗೇ ಈ ವರ್ಷವೂ ಎಲ್ಲ ಮಹಿಳೆಯರೂ/ಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳೂ ಒಟ್ಟಾಗಿ ಮೈಸೂರಿನಲ್ಲಿ ಮಾರ್ಚ್ ೭ ಮತ್ತು ೮ ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿವೆ.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಪೂರ್ಣ ಹೊಣೆಗಾರಿಕೆಯೊಂದಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಹಿಳಾ ದೌರ್ಜನ್ಯ ಮತ್ತು ಕಾನೂನು, ಪರ‍್ಯಾಯ ನ್ಯಾಯ ಪ್ರತಿಭಟನೆಯ ನೆಲೆಗಳು ಕುರಿತ ವಿಚಾರ ಸಂಕಿರಣವನ್ನು ಮಾರ್ಚ್ ೭ ರಂದು ನಡೆಸಲಿದೆ. ಅದೇ ದಿನ ಸಂಜೆ ೫.೩೦ ಘಂಟೆಗೆ ಮೈಸೂರಿನ ಕೆ.ಆರ್. ವೃತ್ತ ಹಾಗೂ ದೇವರಾಜ ಅರಸ್ ರಸ್ತೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧದ ಸಾಂಕೇತಿಕ ಕ್ರಮವಾಗಿ Womeಟಿ iಟಿ ಃಟಚಿಛಿಞ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಹಾಗೆಯೇ ಮಾರ್ಚ್ ೮ ರಂದು ಮೈಸೂರಿನ ಅರಮನೆ ಉತ್ತರ ದ್ವಾರದಿಂದ ಬೆಳಗ್ಗೆ ೧೦.೦೦ ಘಂಟೆಗೆ ಹಕ್ಕೊತ್ತಾಯ ಜಾಥಾ ಮತ್ತು ಮೆರವಣಿಗೆ ಹೊರಡಲಿದ್ದು ದಸರಾ ವಸ್ತು ಪ್ರದರ್ಶನ ಆವರಣದಲ್ಲಿನ ಬಿ.ವಿ. ಕಾರಂತ ರಂಗಮಂದಿರದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ.

ದುಡಿಮೆಗೆ ಮುಂದು ಒಡೆತನದಲ್ಲಿ ಹಿಂದು
ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ಮಹಿಳೆಯರು ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟಿದ್ದಾರೆ. ಜಗತ್ತಿನ ಒಟ್ಟು ದುಡಿಮೆಯ ಅವಧಿಯ ಮೂರನೇ ಎರಡು ಭಾಗದಷ್ಟು ಮಹಿಳೆಯರದು. ಅವರಿಗೆ ಸಿಗುವುದು ಜಗತ್ತಿನ ಒಟ್ಟು ಆದಾಯದ ಹತ್ತನೇ ಒಂದು ಭಾಗದ ಒಡೆತನ. ಅವರು ಹೊಂದಿರುವುದು ಜಗತ್ತಿನ ಒಟ್ಟು ಆಸ್ತಿಯ ನೂರನೇ ಒಂದು ಭಾಗ ಮಾತ್ರ. ಈ ವೈರುಧ್ಯ ನಮಗೆ ನೆನಪಿರಬೇಕು. ಇನ್ನು ನಮ್ಮ ದೇಶದಲ್ಲಂತೂ ಬಹು ಪಾಲು ಹೆಣ್ಣು ಮಕ್ಕಳು ಶಿಕ್ಷಣ, ಆರೋಗ್ಯ, ಪೌಷ್ಠಿಕತೆ ಎಲ್ಲದರಲ್ಲೂ ಹಿಂದಿದ್ದರೂ ಯಾವ ಸೌಲಭ್ಯ/ಸುರಕ್ಷತೆಗಳೂ ಇಲ್ಲದ ಅಸಂಘಟಿತ ವಲಯದಲ್ಲಿ ಬಿಡಿಗಾಸಿಗೆ ದುಡಿದು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ.

ಈ ದುಡಿಮೆಗೆ ಸಿಗುವ ಬೆಲೆ ಯಥೇಚ್ಛ ಹಿಂಸೆ!
ಗೃಹ ಸಚಿವಾಲಯದ ನ್ಯಾಶನಲ್ ಕ್ರೈಂ ಬ್ಯೂರೋ ದಾಖಲೆ ಪ್ರಕಾರ,
    ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ೨೦೦೮ರಲ್ಲಿ ೧,೯೫,೮೫೬ ರಷ್ಟಿದ್ದುದು ೨೦೧೨ರಲ್ಲಿ ೨,೪೪,೨೭೦ ರಷ್ಟು ಹೆಚ್ಚಿದೆ. ಈ ಅಪರಾಧಗಳು ಅತ್ಯಾಚಾರವಲ್ಲದೆ, ಅಪಹರಣ, ಕಿರುಕುಳ, ಲೈಂಗಿಕ ದೌರ್ಜನ್ಯ, ಗಂಡ ಮತ್ತು ಆತನ ಕುಟುಂಬದವರು ನಡೆಸುವ ಕ್ರೌರ್ಯವನ್ನೂ ಒಳಗೊಂಡಿವೆ.
    ಪ್ರತಿ ೨೬ ನಿಮಿಷದಲ್ಲಿ ಒಬ್ಬ ಮಹಿಳೆ ಕಿರುಕುಳವನ್ನು ಅನುಭವಿಸುತ್ತಾಳೆ
    ಪ್ರತಿ ೩೪ ನಿಮಿಷದಲ್ಲಿ ಒಂದು ಅತ್ಯಾಚಾರ ಸಂಭವಿಸುತ್ತದೆ
    ಪ್ರತಿ ೪೩ ನಿಮಿಷಕ್ಕೊಂದು ಅಪಹರಣ ಪ್ರಕರಣ ಜರುಗುತ್ತದೆ
    ಇನ್ನು ದಮನಿತರಲ್ಲೆ ದಮನಿತರಾದ ದಲಿತ ಮಹಿಳೆಯರ ಸ್ಥಿತಿಯಂತೂ ದಾರುಣವಾದುದು. ಬೈಗುಳ, ದೈಹಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಕಿರುಕುಳ, ಕೌಟುಂಬಿಕ ದೌರ್ಜನ್ಯ ದಲಿತ ಮಹಿಳೆಯರ ಬದುಕಿನ ಮಾಮೂಲಿ ಸಂಗತಿಗಳಾಗಿ ಬಿಟ್ಟಿವೆ. ಪ್ರತಿ ೩ ನಿಮಿಷಕ್ಕೊಮ್ಮೆ ದಲಿತ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಇದಲ್ಲದೆ ಜಾತೀಯತೆ ಮತ್ತು ಅಸ್ಪೃಶ್ಯತೆಯ ಕಾರಣಕ್ಕೆ ದಲಿತರ ಆಸ್ತಿಗೆ ಹಾನಿ, ಮನೆಗೆ ಬೆಂಕಿಹಚ್ಚುವುದು, ಹತ್ಯೆ ಮಾಡುವುದರಿಂದಾಗಿ ದಲಿತ ಮಹಿಳೆ ದುಪ್ಪಟ್ಟು ಶೋಷಣೆಗೆ ಒಳಗಾಗಿದ್ದಾಳೆ.

ಮಹಿಳೆಯರ ಮೇಲಿನ ಹಿಂಸೆಗೆ ಪರವಾನಿಗೆ ನೀಡುವ ಮಾರುಕಟ್ಟೆ ಆರ್ಥಿಕತೆ
ಲಾಭಕೋರತನವೇ ಉಸಿರಾಗಿರುವ ಮಾರುಕಟ್ಟೆ ಆರ್ಥಿಕತೆಯೊಂದಿಗೆ ಅಭಿವೃದ್ಧಿ ಮಂತ್ರ ಜಪಿಸುವ ಕೋಮುವಾದಿ ರಾಜಕಾರಣವೂ ಸೇರಿಕೊಂಡು ಪರಿಸರ ಹಾಗೂ ಮಹಿಳೆಯರ ಮೇಲೆ ನಿರಂತರ ದಾಳಿ ನಡೆಸಿವೆ. ಹಿಂಸೆಯನ್ನು ತನ್ನ ಮೂಲದಲ್ಲಿಯೇ ಹುದುಗಿಸಿಕೊಂಡಿರುವ ಇಂದಿನ ಅಭಿವೃದ್ಧಿ ಮಾದರಿಯೊಂದಿಗೆ ಕೈ ಜೋಡಿಸಿರುವ ಆಧುನಿಕ ತಂತ್ರಜ್ಞಾನವು ಪ್ರಕೃತಿಯೊಂದಿಗಿನ ಮನುಷ್ಯರ ಸಾವಯವ ಸಂಬಂಧವನ್ನೇ ನಿರ್ನಾಮಮಾಡಿ ಜೀವನ ಶೈಲಿಯನ್ನೇ ಹಿಂಸಾತ್ಮಕಗೊಳಿಸಿದೆ. ಹೈಟೆಕ್ ತಂತ್ರಜ್ಞಾನದಿಂದ ಹೆಣ್ಣಿನ ಗರ್ಭವೂ ಮಾರಾಟದ ಸರಕಾಗಿದೆ. ಹೆಣ್ಣು ಶಿಶುವಿಗೆ ತಾಯಿಯ ಗರ್ಭವೂ ಸುರಕ್ಷಿತ ನೆಲೆಯಾಗಿ ಉಳಿದಿಲ್ಲ.

ಖಾಸಗೀಕರಣ, ಉದಾರೀಕರಣದ ಹಿನ್ನೆಲೆಯಲ್ಲಿ ಪ್ರಭುತ್ವವು ತನ್ನ ಎಲ್ಲ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಆ ಮೂಲಕ ಬಿಡಿಗಾಸಿನ ಸಂಬಳಕ್ಕೆ ಬೆವರಿನ ದುಡಿಮೆಯನ್ನು ದೋಚಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುವು ಮಾಡಿಕೊಟ್ಟಿದೆ. ಸೇವೆಯ ಹೆಸರಿನಲ್ಲಿ ಜೀತಗಾರರಂತೆ ದುಡಿಯುವ ಗಾರ್ಮೆಂಟ್ಸ್ ಮಹಿಳೆಯರು, ಪೌರಕಾರ್ಮಿಕ ಮಹಿಳೆಯರು, ಗೃಹಕಾರ್ಮಿಕ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರು, ಬಿಸಿಂiಟದವರು, ಆಶಾ ಕಾರ್ಯಕರ್ತೆಯರು ಹೈಟೆಕ್‌ಯುಗದ ಕೂಲಿಯಾಳುಗಳಾಗಿದ್ದಾರೆ.

ರಕ್ಷಣೆಯ ಹೆಸರಿನಲ್ಲಿ ದಾಳಿಗೀಡಾಗುವ ಮಹಿಳೆಯರ ದೇಹ
ದೇಶ ರಕ್ಷಣೆ, ಧರ್ಮರಕ್ಷಣೆ, ಸಮುದಾಯ ಮತ್ತು ಕುಟುಂಬದ ಗೌರವದ ರಕ್ಷಣೆಯ ಹೆಸರಿನಲ್ಲಿ ಮಹಿಳೆಯರು ಅತ್ಯಾಚಾರ ಹಾಗೂ ಹತ್ಯೆಗೆ ಈಡಾಗುತ್ತಿದ್ದಾರೆ.
    ಕಾಶ್ಮೀರ, ಈಶಾನ್ಯ ಭಾರತದ ಮಹಿಳೆಯರದಂತೂ ಅತ್ಯಂತ ಶೋಚನೀಯ ಸ್ಥಿತಿ. ಮನೆಯಿಂದ ಹೊರಗೆ ಹೋದ ಗಂಡ-ಮಕ್ಕಳು ಕ್ಷೇಮವಾಗಿ ಹಿಂತಿರುಗುವ ಖಾತ್ರಿಯೇ ಇಲ್ಲದ, ಯಾವಾಗ ಯಾವ ದೌರ್ಜನ್ಯಕ್ಕೆ ಈಡಾಗುವೆವೋ ಎಂಬ ಆತಂಕದ ಪರಿಸ್ಥಿತಿಯಲ್ಲಿ ಅವರು ಬದುಕುತ್ತಿದ್ದಾರೆ. ಸೇನೆಯವರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.
    ಪೊಲೀಸರು ಅನೈತಿಕ ಸಾಗಣೆ ಕಾಯ್ದೆ, ಸೆಕ್ಷನ್ ೩೭೭ (ಅಸಹಜ ಲೈಂಗಿಕತೆ) ಅನ್ನು ಗುರಾಣಿಯಂತೆ ಬಳಸಿಕೊಂಡು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಭೀಕರವಾಗಿ ಅತ್ಯಾಚಾರ ಮಾಡುತ್ತಾರೆ.
    ಅಣೆಕಟ್ಟು, ಹೈವೆ ಎಂಬ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಆದಿವಾಸಿ ಮಹಿಳೆಯರು ನೆಲೆ, ನೆಲ ಕಳೆದುಕೊಂಡು ಅತಂತ್ರರಾಗುತ್ತಿದ್ದಾರೆ. ಪರ್ಯಾಯ ಬದುಕು ಕಟ್ಟಿಕೊಳ್ಳಲು ಸೂಕ್ತ ಪರಿಹಾರ ಕಲ್ಪಿಸುವ ಬದಲು ಅವರಿಗೆ ಉಗ್ರಗಾಮಿಗಳೆಂಬ ಪಟ್ಟಕಟ್ಟಿ ಪೊಲೀಸರು ಹಿಂಸೆ ನೀಡಲು ಸರ್ಕಾರಗಳು ಅನುವು ಮಾಡಿಕೊಡುತ್ತಿವೆ.
    ಪ್ರಜಾತಂತ್ರದ ನಾಲ್ಕನೇ ಸ್ತಂಭವೆನಿಸಿಕೊಂಡಿರುವ ಮಾಧ್ಯಮ ಪ್ರತಿನಿಧಿಗಳು, ನ್ಯಾಯ ನೀಡುವ ನ್ಯಾಯಾಂಗದ ಪ್ರತಿನಿಧಿಗಳಾದ ನ್ಯಾಯಾಧೀಶರುಗಳೇ ಲೈಂಗಿಕ ದೌರ್ಜನ್ಯ ನಡೆಸಿದರೆ  ಪೊಲೀಸು, ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಸಿಗುವ ಖಾತ್ರಿಯೇ ಇಲ್ಲವೆಂದಾದರೆ ನ್ಯಾಯಕ್ಕಾಗಿ ಮೊರೆ ಇಡುವುದಾದರೂ ಯಾರಲ್ಲಿ?

ಮಹಿಳಾ ಪ್ರತಿರೋಧದ ನೆಲೆಗಳು, ಹೋರಾಡುವ ಚೈತನ್ಯವೇ ದಾರಿ 
ಕಳೆದ ೩-೪ ದಶಕಗಳಿಂದ ಮಹಿಳಾ ಚಳವಳಿ ನಿರಂತರವಾಗಿ ನಡೆಸಿಕೊಂಡು ಬಂದಿರುವ ಹೋರಾಟದ ಫಲವಾಗಿ ಮಹಿಳೆಯರ ಮೇಲಿನ ಹಿಂಸೆಯು ಇತ್ತೀಚಿನ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಎಲ್ಲಾ ಅಡೆ-ತಡೆಗಳ ನಡುವೆಯೂ ಮಹಿಳೆಯರು ತಲೆ ಎತ್ತಿ ನಿಂತಿರುವುದಷ್ಟೆ ಅಲ್ಲ, ಇರುವ ಕಾನೂನಿನ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ವಿವೇಕ, ಸ್ಥೈರ್ಯವನ್ನೇ ನೆಚ್ಚಿಕೊಂಡು ಪ್ರತಿರೋಧದ ನೆಲೆಗಳನ್ನು, ಭಿನ್ನ ನ್ಯಾಯ ಮತ್ತು ಶಿಕ್ಷೆಯ ಕಲ್ಪನೆಗಳನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಹೀಗೆ ಜಾಗೃತಗೊಂಡ ಮಹಿಳೆಯರು ಪ್ರಭುತ್ವದ ಮೇಲೆ ಒತ್ತಡ ಹಾಕುವ ನೈತಿಕ ಶಕ್ತಿಯಾಗಬೇಕು. ವಿಫಲಗೊಂಡ ನ್ಯಾಯವ್ಯವಸ್ಥೆಯನ್ನು ಬಡಿದೆಬ್ಬಿಸಬೇಕಲ್ಲದೆ, ನಿಷ್ಪಕ್ಷಪಾತವಾದ ನ್ಯಾಯ ಹಾಗೂ ಶಿಕ್ಷಾ ವ್ಯವಸ್ಥೆಗೂ ನಾಂದಿ ಹಾಡಬೇಕು. ಮರಣದಂಡನೆ, ಷಂಡರನ್ನಾಗಿಸುವುದು ದೌರ್ಜನ್ಯ, ಹಿಂಸೆಗೆ ಪರಿಹಾರವಲ್ಲ. ಹೆಣ್ಣನ್ನು ಕುರಿತ ಆರೋಗ್ಯಕರ ಮನೋಭಾವನೆ ಬೆಳೆಸುವುದು, ಮಾನವಜೀವಿಯಾಗಿ ಆಕೆಯನ್ನು ಹಾಗೂ ಆಕೆಯ ದುಡಿಮೆಯನ್ನು ಗೌರವಿಸುವುದು ನಿತ್ಯ ಕಲಿಯಬೇಕಾದ ಪಾಠವಾಗಬೇಕು. ಮಹಿಳೆಯರನ್ನು ಶೋಷಿಸುವ, ಹಿಂಸಿಸುವ, ಕೀಳಾಗಿ ಕಾಣುವ ಎಲ್ಲಾ ಮೂಢಾಚರಣೆಗಳನ್ನು ನಿಷೇಧಿಸಬೇಕು. ಇದು ಸಾಧ್ಯವಾಗುವುದು ನಮ್ಮ ಐಕ್ಯತೆಯಿಂದಷ್ಟೇ. ಇಂತಹ ಸನ್ನಿವೇಶದಲ್ಲಿ ನಾಡಿನ ಹಲವಾರು ಪ್ರಗತಿಪರ ಮಹಿಳಾ ಸಂಘಟನೆಗಳು ಮೈಸೂರಿನಲ್ಲಿ ಒಟ್ಟಿಗೆ ಆಚರಿಸುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಐಕ್ಯತೆಯ ಸಂಕೇತವಾಗಿದೆ.

ಸಹಭಾಗಿ ಸಂಸ್ಥೆಗಳು :

ಮೈಸೂರಿನ ಶಕ್ತಿ ಧಾಮ, ಆರ್.ಎಲ್.ಹೆಚ್.ಪಿ., ಸಮತಾ ವೇದಿಕೆ, ಸಮತಾ ಅಧ್ಯಯನ ಕೇಂದ್ರ, ಜನ ಶಿಕ್ಷಣ ಸಂಸ್ಥೆ, ಗ್ರ್ಯಾಮ್ ಎಸ್.ವಿ.ವೈ.ಎಂ., ಒಡನಾಡಿ, ಆಶೋದಯ ಸಮಿತಿ, ಓ.ಡಿ.ಪಿ., ಎನ್.ಡಬ್ಲ್ಯೂ.ಎಫ್., ಎ.ಐ.ಎಂ.ಎಸ್.ಎಸ್., ವಿಸ್ಮಯ ಫೌಂಡೇಷನ್, ಮೈಸೂರು ಯೂತ್ ಫೋರಂ, ಧ್ವನಿ ಮಹಿಳಾ ಒಕ್ಕೂಟ, ಪಿ.ಯು.ಸಿ.ಎಲ್., ಮಂಡ್ಯದ ರೈತ ಸಂಘ ಸ್ಪಂದನ, ಮಹಿಳಾ ಮುನ್ನಡೆ, ಬೆಂಗಳೂರಿನ ವಿಮೋಚನಾ ಸಂಸ್ಥೆ, ಸಮಾನತಾ ಮಹಿಳಾ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ,  ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್), ಗಾರ್ಮೆಂಟ್ ಅಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ, ಸಮತಾ, ಬಿ.ಜಿ.ವಿ.ಎಸ್, ಮಹಿಳೋದಯ, ದಲಿತ ಬಹುಜನ ಚಳವಳಿ, ಂIPWಂ,  ಹೆಂಗಸರ ಹಕ್ಕಿನ ಸಂಘ, ನ್ಯಾಷನಲ್ ಫೆಡರೇಷನ್ ಫಾರ್ ವಿಮೆನ್, ಭಾರತೀಯ ಮಹಿಳಾ ಒಕ್ಕೂಟ, ಮಾನಸ ಬಳಗ, ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಅಭಿಮತ.


ಸೂಚನೆ :
೧.    ಧನಸಹಾಯ ಮಾಡುವವರು, ನಗದು. ಡಿಡಿ, ಚೆಕ್, ಮೂಲಕ ಉಳಿತಾಯ ಖಾತೆ ಸಂಖ್ಯೆ ೯೭೦೮, ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತ, ಮೈಸೂರು, ಸಹಕಾರ ಸಂಕೀರ್ಣ, ಸಹಕಾರ ಭವನದ ಆವರಣ, ಚಾಮರಾಜ ಜೋಡಿ ರಸ್ತೆ, ಮೈಸೂರು ಖಾತೆಗೆ ಸಂದಾಯ ಮಾಡುವಂತೆ ಕೋರುತ್ತೇವೆ.

೨.    ಸಂಪರ್ಕಿಸಬೇಕಾದ ವಿಳಾಸ : ಮನೆ ನಂ.೧೨೨೬/೧ ಅಮರ, ೨ನೇ ಅಡ್ಡರಸ್ತೆ, ೩ನೇ ಮುಖ್ಯರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು,

೩.    ವಿವರಗಳಿಗೆ ಸಂಪರ್ಕಿಸಿ :
ಭಾಗ್ಯ            -    ೯೮೮೬೦೪೨೨೮೫
ಎಂ.ಎನ್. ಸುಮನ        -    ೯೪೪೮೧೭೭೧೧೭
ರತಿ ರಾವ್        -    ೯೪೪೮೦೫೧೩೮೭
ಸರಸ್ವತಿ            -    ೮೭೨೨೬೭೮೯೫೫
ರಮೇಶ್            -    ೯೪೮೧೦೬೭೯೯೧
ಬಸವರಾಜು        -    ೯೮೮೬೭೬೭೮೭೩
ದು. ಸರಸ್ವತಿ           -    ೯೪೮೨೬೪೨೧೪೭
ಪ್ರೀತಿ ಶುಭಚಂದ್ರ         -    ೯೪೪೯೩೨೩೯೫೦

ಡಿ.ಡಿ. / ಚೆಕ್ ಅನ್ನು ಮೈಸೂರು ಜಿಲ್ಲಾ ಮಹಿಳಾ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ಎಂದು ನಮೂದಿಸುವುದು.
ಬನ್ನಿರಿ, ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಿ, ಆರೋಗ್ಯಕರ ಹಾಗೂ ಸಮಾನತೆಯ ಸಮಾಜ ಕಟ್ಟುವಿಕೆಯಲ್ಲಿ ಸಹಭಾಗಿಗಳಾಗೋಣ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...