Wednesday, February 19, 2014

ಸಾಂಸ್ಕೃತಿಕ ನೀತಿಯ ಸುತ್ತಜಿ.ಪಿ.ಬಸವರಾಜು


ತಮಿಳರಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ. ಈ ಭಾವನೆಗೆ ಧಕ್ಕೆ ತರುವ ರಾಜಕೀಯ ಪಕ್ಷಗಳನ್ನು ಅವರು ಕ್ಷಮಿಸುವುದಿಲ್ಲ. ಚುನಾವಣೆಗಳಲ್ಲಿ ಅಂಥ ಪಕ್ಷಗಳು ನೆಲಕಚ್ಚುವಂತೆ ಮಾಡುತ್ತಾರೆ. ತಮಿಳು ಭಾಷೆ ಮತ್ತು ಸಂಸ್ಕೃತಿಗಳು ಇವತ್ತಿಗೂ ಅಲ್ಲಿ ಉಳಿದುಕೊಂಡಿವೆ; ಸೊಂಪಾಗಿ ಬೆಳೆದಿವೆ. ತಮಿಳರನ್ನು ಬಿಟ್ಟರೆ ತೆಲುಗರಲ್ಲಿ ಇಂಥ ಭಾವನೆಗಳು ಒಡೆದು ಕಾಣಿಸುತ್ತವೆ. ಈ ಕಾರಣದಿಂದಾಗಿ ಅಲ್ಲಿ ’ತೆಲುಗುದೇಶಂ’ ಪಕ್ಷವನ್ನು ಕಟ್ಟಿ ಬೆಳಸಲಾಯಿತು. ಈ ಪಕ್ಷ ಆಂಧ್ರಪ್ರದೇಶವನ್ನು ಆಳಿದ್ದೂ ಹೌದು. ಈ ಎರಡು ರಾಜ್ಯಗಳಲ್ಲಿ ಸಿನಿಮಾದ ನಟನಟಿಯರು ರಾಜಕೀಯಕ್ಕೆ ಬರುವುದು ಸಾಧ್ಯವಾಗಿರುವುದೂ ಈ ಅಂಶಗಳನ್ನು ಪೋಷಿಸುವುದರ ಮೂಲಕವೇ. ಮಲೆಯಾಳಿಗಳಿಗೂ ತಮ್ಮ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಅಭಿಮಾನವಿದೆ. ಅವರು ತಮ್ಮ ಭಾಷೆಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ತಮ್ಮ ಉಡುಗೆ, ತೊಡುಗೆ, ಊಟೋಪಚಾರ, ಆಚಾರ ವಿಚಾರಗಳನ್ನು ಅವರು ಉಳಿಸಿಕೊಂಡೇ ಬಂದಿದ್ದಾರೆ. ಆದರೆ ರಾಜಕೀಯದಲ್ಲಿ ಈ ಎರಡು ಅಂಶಗಳು ಪ್ರಧಾನಪಾತ್ರ ವಹಿಸಿಲ್ಲ. ಕರ್ನಾಟಕದಲ್ಲಿ ಭಾಷೆ ಮತ್ತು ಸಂಸ್ಕೃತಿಗಳ ವಿಚಾರದಲ್ಲಿ ಪ್ರಬುದ್ಧ ಚಿಂತನೆ ಇದೆ. ಆದರೆ ಭಾವೋದ್ವೇಗದ ಸಂಗತಿಗಳಾಗಿ ಈ ಅಂಶಗಳನ್ನು ಕನ್ನಡಿಗರು ಬಳಸಿಕೊಂಡಿಲ್ಲ. ಭಾಷೆಗೆ ಸಿಕ್ಕಬೇಕಾದ ಜಾಗ ಸಿಕ್ಕದಿದ್ದರೂ ಕನ್ನಡಿಗರು ರಾಜಕೀಯ ಪಕ್ಷಗಳನ್ನು ಶಿಕ್ಷಿಸುವುದಿಲ್ಲ. ಈ ಭಾವನಾತ್ಮಕ ಅಂಶಗಳನ್ನೆ ಆಧರಿಸಿಯೇ ರಾಜಕೀಯ ಮಾಡಿದ ಪಕ್ಷಗಳು ಕರ್ನಾಟಕದಲ್ಲಿ ಅಷ್ಟಾಗಿ ಇಲ್ಲ. ವಾಟಾಳರಂಥವರು ಇತಿಹಾಸದ ಮೇಲೆಯೇ ಇವತ್ತಿಗೂ ಸವಾರಿ ಮಾಡುತ್ತ ತಮ್ಮ ಉಳಿವನ್ನು ಕಾಯ್ದುಕೊಳ್ಳಲು ನೋಡುತ್ತಿದ್ದಾರೆ. ಅಂಥವರಿಗೂ ಈಗ ರಾಜಕೀಯ ಉಳಿವು ಕಷ್ಟವಾಗಿದೆ. ಹೀಗಾಗಿಯೇ ಇವತ್ತು ಭಾಷೆಯ ವಿಚಾರದಲ್ಲಿ, ಅದರ ವಿವಿಧ ಹಂತದ ಬಳಕೆಯ ವಿಚಾರದಲ್ಲಿ ನಾವು ಮತ್ತೆ ಮತ್ತೆ ನ್ಯಾಯಾಲಯದ ಬಾಗಿಲನ್ನು ತಟ್ಟಬೇಕಾದ ಪರಿಸ್ಥಿತಿ ಉಂಟಾಗಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಎಲ್ಲ ಭಾಷೆಗಳಿಗೆ, ಸಂಸ್ಕೃತಿಗಳಿಗೆ, ಈ ಸಂಸ್ಕೃತಿಗಳ ಸಮುದಾಯಗಳಿಗೆ ಸಿಕ್ಕಬೇಕಾದ ನ್ಯಾಯ ಸಿಕ್ಕಲಿಲ್ಲ ಎಂಬುದು ನೋವಿನ ಸಂಗತಿಯೇ.

ಇಂಥ ಹಿನ್ನೆಲೆಯಿರುವ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ಮುಂದಾಳುತನದ ಸರ್ಕಾರ ಸಾಂಸ್ಕೃತಿಕ ನೀತಿಯನ್ನು ರೂಪಿಸಲು ಹೊರಟಿದೆ. ಇದೇನೂ ಹೊಸ ಪ್ರಯತ್ನವಲ್ಲ. ಕಳೆದ ಹದಿನೆಂಟು ವರ್ಷಗಳಿಂದ ’ಸಾಂಸ್ಕೃತಿಕ ನೀತಿ’ ನಿರೂಪಿತವಾಗುತ್ತಲೇ ಇದೆ. ಮೊದಲು ಈ ಪ್ರಯತ್ನ ಆರಂಭವಾದದ್ದು ರಾಜ್ಯದಲ್ಲಿ ಜನತಾದಳ ಸರ್ಕಾರವಿದ್ದಾಗ; ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಇದಕ್ಕಾಗಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು. ಆಗ ಈ ಕೆಲಸ ಪೂರ್ಣವಾಗಲಿಲ್ಲ. ಮುಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದಾಗಲೂ ಇನ್ನೊಂದು ಸಮಿತಿಯ ರಚನೆಯಾಯಿತು. ಆದರೆ ಸಾಂಸ್ಕೃತಿಕ ನೀತಿ ಎನ್ನುವುದು ಚಿಂತನೆಯಲ್ಲಿಯೇ ಉಳಿದುಕೊಂಡಿತು. ಇದೀಗ ಸಿದ್ಧರಾಮಯ್ಯನವರ ಸರ್ಕಾರ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಆರು ತಿಂಗಳು ಕಳೆದು ಹೋಗಿವೆ. ಇನ್ನೂ ಈ ಕಾರ್ಯ ನಡೆಯುತ್ತಲೇ ಇದೆ. ಈ ನೀತಿಯ ಹಿಂದಿರುವ ಆಶಯ ಪ್ರಧಾನವಾಗಿ ಕನ್ನಡ ಮತ್ತು ಸಂಸ್ಕೃತಿಗೊಂದು ಆಡಳಿತಾತ್ಮಕ ನೀತಿಯನ್ನು ರೂಪಿಸುವುದೇ ಆಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ರಾಜ್ಯದಲ್ಲಿರುವ ಅನೇಕ ಸಾಂಸ್ಕೃತಿಕ ಸಂಘಟನೆಗಳಿಗೆ ಹಣಕಾಸನ್ನೂ ಒದಗಿಸುತ್ತಿದೆ. ರಾಜ್ಯ ಸರ್ಕಾರ ನೀಡುತ್ತಿರುವ ಬಹುಪಾಲು ಪ್ರಶಸ್ತಿ, ಗೌರವಗಳನ್ನು ನಿರ್ಣಯಿಸುವಲ್ಲಿಯೂ, ತಕ್ಕ ವ್ಯಕ್ತಿಗಳನ್ನು ಹುಡುಕುವುದು ಇತ್ಯಾದಿ ಹಲವಾರು ಚಟುವಟಿಕೆಗಳಲ್ಲಿಯೂ ಇದರ ಕಾರ್ಯವಿಧಾನವಿದೆ. ಆದರೂ ಇದು ಸರ್ಕಾರದ ಇಲಾಖೆಯಾಗಿರುವ ಕಾರಣ, ಅಧಿಕಾರಿಗಳ, ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುವುದು ಸಾಮಾನ್ಯ ಸಂಗತಿಯಾಗಿದೆ. ಒಂದೊಂದು ಸರ್ಕಾರ ಬಂದಾಗಲೂ ಇದರ ಕಾರ್ಯವೈಖರಿಯಲ್ಲಿ ಏರುಪೇರುಗಳನ್ನು ನೋಡಬಹುದು. ಇಂಥದನ್ನು ತಡೆಯುವುದೇ ಈ ಸಾಂಸ್ಕೃತಿಕ ನೀತಿಯ ಹಿಂದಿರುವ ಪ್ರಧಾನ ಗುರಿ. ಇದರಾಚೆಗೂ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಸಂಗತಿಗಳ ಬಗ್ಗೆ ಈ ನೀತಿ ದಾರಿತೋರಿಸಬಹುದು. ಅದಕ್ಕೆ ಅಗತ್ಯವಾದ ಚಿಂತನೆಯೂ ಈ ನೀತಿಯಲ್ಲಿ ಸಿಕ್ಕುವಂತೆ ಮಾಡಬಹುದು. ಬರಗೂರರ ತಂಡ ಹೇಗೆ ಈ ಹೊಣೆಗಾರಿಕೆಯನ್ನು ನಿಭಾಯಿಸುವುದೋ ಕಾದುನೋಡಬೇಕು. ಈ ತಂಡದಲ್ಲಿ ಗುರುಲಿಂಗ ಕಾಪಸೆ, ಡಿ.ಕೆ.ಚೌಟ, ಗೀತಾ ನಾಗಭೂಷಣ, ಭಾನು ಮುಷ್ತಾಕ್, ಸಿ.ಬಸವಲಿಂಗಯ್ಯ ಮತ್ತು ಚಂದ್ರಕಾಂತ ಕುಸನೂರು ಇದ್ದಾರೆ.

 ಸಾಂಸ್ಕೃತಿಕ ನೀತಿ ಎನ್ನುವುದು ಬಹಳ ಹಿಂದಿನಿಂದಲೂ ಚರ್ಚೆಗೆ, ಸಂವಾದಕ್ಕೆ ಒಳಗಾಗಿರುವ ಸಂಗತಿಯೇ. ಕಪಿಲಾ ವಾತ್ಸಾಯನ, ರಾಮಚಂದ್ರ ಗುಹ, ಜ್ಯೋತೀಂದ್ರ ಜೈನ್ ಮೊದಲಾದವರು ಈ ಬಗ್ಗೆ ಮಾತನಾಡಿದ್ದಾರೆ; ತಮ್ಮ ನಿಲುವುಗಳನ್ನು ನೇರವಾಗಿ ಮಂಡಿಸಿದ್ದಾರೆ. ಅನೇಕರು ಇಂಥ ಸಾಂಸ್ಕೃತಿಕ ನೀತಿಯ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಈ ನೀತಿಯನ್ನು ರೂಪಿಸುವುದರ ಮೂಲಕ ನಾವು ಕೆಲವು ಅಪಾಯಗಳನ್ನು ಎದುರಿಸಬೇಕಾದ ಸನ್ನಿವೇಶ ಬರಬಹುದು ಎಂಬ ಆತಂಕವನ್ನು ತೋರಿಸಿದ್ದಾರೆ. ನಮ್ಮಲ್ಲಿರುವ ಭಾಷೆಗಳು, ಸಂಸ್ಕೃತಿಗಳು, ಪುಟ್ಟ ಪುಟ್ಟ ಜನ ಸಮುದಾಯಗಳು, ಅವುಗಳ ವೈವಿಧ್ಯತೆ, ಜೀವ ಚಿಮ್ಮುವ ಚೈತನ್ಯ ಎಲ್ಲವೂ ಉಳಿಯಬೇಕಾದರೆ ಇಂಥ ನೀತಿಯಿಂದ ಸಾಧ್ಯವಿಲ್ಲ; ಇಂಥ ನೀತಿ ಏಕ ರೂಪಿಯಾದ ಸಂಸ್ಕೃತಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟು, ಬಹು ಸಂಸ್ಕೃತಿಗೆ ಪೆಟ್ಟುಕೊಡಬಹುದೆಂದು ಈ ಗಣ್ಯರು ಅನುಮಾನಿಸಿದ್ದಾರೆ. ನಮ್ಮ ಸರ್ಕಾರೀ ಕಾರ್ಯಕ್ರಮಗಳು, ಕಲೆ ಮತ್ತು ಸಂಸ್ಕೃತಿ ಇಲಾಖೆಗಳ ಕೆಲಸದ ವಿಧಾನ ಇವುಗಳನ್ನು ನೋಡಿದಾಗ ಕಪಿಲಾ ವಾತ್ಸಾಯನ ಅಂಥವರ ಭಯಕ್ಕೆ ಕಾರಣವಿದೆ ಎನಿಸುತ್ತದೆ. ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯಗಳಿಗೆ ಸಿಕ್ಕುವ ಗೌರವ, ಸಂಭಾವನೆ ಸ್ವಲ್ಪಮಟ್ಟಿಗೆ ಸಮಾಧಾನಕರವಾಗಿಯೇ ಇವೆ. ಆದರೆ ನಮ್ಮ ಬುಡಕಟ್ಟು ಮತ್ತು ಜಾನಪದ ಕಲಾವಿದರಿಗೆ ಸಿಕ್ಕುವ ಗೌರವ ಮತ್ತು ಸಂಭಾವನೆಗಳು ಹೇಗಿವೆ? ಇಲ್ಲಿ ಯಾವ ನೀತಿ ಕೆಲಸ ಮಾಡುತ್ತಿದೆ? ಇತ್ತೀಚೆಗೆ ನಾನೊಂದು ಬುಡಕಟ್ಟು ಕಲಾಮೇಳವನ್ನು ನೋಡಲು ಹೋಗಿದ್ದೆ. ರಾಷ್ಟ್ರದ ಅನೇಕ ಭಾಗಗಳಿಂದ ಬಂದಿದ್ದ ಬುಡಕಟ್ಟು ಕಲಾವಿದರು ತಮ್ಮ ಉಡುಗೆ, ತೊಡುಗೆ, ವಾದ್ಯಗಳ ಸಮೇತ ತಮ್ಮ ಕಲಾ ನಿಪುಣತೆಯನ್ನು ತೋರಿಸಿದರು. ಸಾವಿರಾರು ಜನ ನೋಟಕರು ಆನಂದಿಸಿದರು. ಆದರೆ ಅವರಿಗೆ ಕೊಟ್ಟ ಗೌರವ ಧನದ ಬಗ್ಗೆ ಕೇಳಿ ವಿಷಾದ ತುಂಬಿಕೊಂಡಿತು. ಎರಡನೇ ದರ್ಜೆಯ ರೈಲೋ, ಬಸ್ಸಿನ ಪ್ರಯಾಣ, ಸಾಮಾನ್ಯ ಊಟ ವಸತಿ. ಗೌರವ ಧನ ಎಂದರೆ ಈ ಕಲಾವಿದರ ಪ್ರತಿದಿನದ ದುಡಿಮೆಯ ಹಣ. ಅಂದರೆ ದಿನದ ಕೂಲಿ.

ದಸರಾದಲ್ಲಿ ಭಾಗವಹಿಸಲೆಂದು ಬರುವ ಜಾನಪದ ಕಲಾವಿದರ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಎಷ್ಟೋ ಜನ ಕಲಾವಿದರು ಮೈಸೂರಿನ ಕಲಾಮಂದಿರದ ಕಟ್ಟೆಯ ಮೇಲೆ ಮಲಗಿ ರಾತ್ರಿಯನ್ನು ಕಳೆದುಹೋಗಿದ್ದಾರೆ. ಇದೆಲ್ಲ ಯಾವುದೇ ಸಾಂಸ್ಕೃತಿಕ ನೀತಿ ಇಲ್ಲದೆಯೂ ನಡೆದಿರಬಹುದು. ಇದ್ದೂ ನಡೆಯಬಹುದಾದದ್ದು. ಯಾಕೆಂದರೆ ಇವತ್ತು ಭಾಷೆಯ ಹೆಸರಿನಲ್ಲಿ ತೆಗೆದುಕೊಳ್ಳುವ ಬಹುಪಾಲು ತೀರ್ಮಾನಗಳು ಸಣ್ಣಪುಟ್ಟ ಭಾಷೆಗಳನ್ನು ಹೊಸಕಿ ಹಾಕಲು ನೋಡುತ್ತವೆ. ಸಂಸ್ಕೃತಿಯ ವಿಚಾರದಲ್ಲಿ ನಮ್ಮ ಚಿಂತನೆ ಇರುವುದೂ ಈ ಮಾದರಿಯಲ್ಲಿಯೇ. ಹೀಗಾಗಿಯೇ ಇಂಥ ನೀತಿ ನಿರೂಪಣೆಗಳೇ ಬೇಡ; ಇರುವ ಸಾಂಸ್ಕೃತಿಕ ಸಂಸ್ಥೆಗಳನ್ನು ಬಲವಾಗಿ ಬೆಳಸಿ, ರಾಜಕೀಯ ಹಸ್ತಕ್ಷೇಪವಿಲ್ಲದಂತೆ ಅವುಗಳ ಸ್ವಾಯತ್ತತೆಯನ್ನು ಕಾಪಾಡಿ ಎಂದು ಹೇಳಲಾಗುತ್ತಿದೆ.

ನಮ್ಮ ಅಕಾಡೆಮಿಗಳು ಎಷ್ಟೇ ಸ್ವಾಯತ್ತವಾಗಿವೆ ಎಂದುಕೊಂಡರೂ, ರಾಜಕೀಯ ಬೇಕುಬೇಡಗಳಿಗೆ ಮಣಿಯುವ ಆಟ ಇನ್ನೂ ನಿಂತಿಲ್ಲ. ಇವುಗಳ ನೇಮಕದ ಹಿಂದಿರುವ ರಾಜಕೀಯ ಒತ್ತಡಗಳನ್ನು ನಾವೆಲ್ಲ ಬಲ್ಲೆವು. ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ಕನ್ಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯವಿಧಾನ ಇವೆಲ್ಲ ರಾಜಕೀಯ ಒತ್ತಡಗಳಿಂದ ಮುಕ್ತವಾಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಇಂಥ ಹೊತ್ತಿನಲ್ಲಿ ಕೊನೆಯ ಪಕ್ಷ ಈ ಸಂಸ್ಥೆಗಳಿಗೆ, ಇಲಾಖೆಗಳಿಗೆ ಮುಕ್ತಿಯನ್ನು ದೊರಕಿಸಿಕೊಡುವುದಕ್ಕಾದರೂ ಒಂದು ಉದಾರವಾದ ಸಾಂಸ್ಕೃತಿಕ ಮಾರ್ಗದರ್ಶನ ಸೂತ್ರ ಬೇಕಾಗಬಹುದೇನೋ. ನಮ್ಮ ಸರ್ಕಾರ ನೀಡುತ್ತಿರುವ ಪ್ರಶಸ್ತಿ, ಗೌರವಗಳಿಗೆ ತೂಕ ಬರುವುದಕ್ಕಾದರೂ ಇಂಥ ಸೂತ್ರ ಅಗತ್ಯ. ಆದರೆ ಇಂಥ ನೀತಿಗಳನ್ನು ನೀವು ಹೇಗೆಯೇ ರೂಪಿಸಿ, ನಾವು ರಂಗೋಲಿಯ ಕೆಳಗೆ ನುಸುಳುತ್ತೇವೆ ಎನ್ನುವ ರಾಜಕಾರಣ ಇರುವವರೆಗೆ ಈ ಪರಿಸ್ಥಿತಿ ಸುಧಾರಿಸುವುದಿಲ್ಲ. ಇದೆಲ್ಲ ಬಹಳ ಸಂಕೀರ್ಣವಾದ ಸಂಗತಿಯಾಗಿರುತ್ತದೆ. ಆದರೂ ಪ್ರಜಾಪ್ರಭುತ್ವದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯಬೇಕು. ತಪ್ಪುಗಳನ್ನು ಸರಿಪಡಿಸಬೇಕು. ಮತ್ತೆ ಹುಟ್ಟಿಕೊಳ್ಳುವ ಹೊಸ ತಪ್ಪು ಹೆಜ್ಜೆಗಳನ್ನು ತಿದ್ದುವ ಉತ್ಸಾಹವೂ ನಮಗಿರಬೇಕು. ಇದೇ ಪ್ರಜಾಪ್ರಭುತ್ವದ ಉಮೇದು.

(ಸೌಜನ್ಯ: ಸಂಯುಕ್ತ ಕನಾಟಕ)

-ಜಿ.ಪಿ.ಬಸವರಾಜು
೯೪೮೦೦ ೫೭೫೮೦

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...