Friday, February 07, 2014

ಅನಂತಮೂರ್ತಿಯವರ ಸುತ್ತ ಈ ಟಿಪ್ಪಣಿ

 
ಶೂದ್ರ ಶ್ರೀನಿವಾಸ್
 
 
 
 
 

 
ಕೆಲವು ಲೇಖಕರು, ಕಲಾವಿದರು ಮತ್ತು ಚಿಂತಕರು ಸದಾ ಕ್ರಿಯಾಶೀಲವಾಗಿರುತ್ತಾರೆ. ಅದರ ಮೂಲಕ ತಮ್ಮ ಕಾಲಮಾನದ ಸಮಾಜ ವನ್ನು ಲವಲವಿಕೆಯಿಂದ ಇಟ್ಟಿರುತ್ತಾರೆ. ಈ ದೃಷ್ಟಿ ಯಿಂದ ಜಗತ್ತಿನ ಸೃಜನಶೀಲ ಪ್ರಕ್ರಿಯೆ ಸಂದರ್ಭ ದಲ್ಲಿ ಮತ್ತು ನಮ್ಮದೇ ದೇಸಿ ಆಗು ಹೋಗುಗಳ ಚೌಕಟ್ಟಿನಲ್ಲಿ ಎಷ್ಟು ಸಂಭ್ರಮದಿಂದ ಬದುಕನ್ನು ಕಾಣಲು ಪ್ರಯತ್ನಿಸಿದ್ದಾರೆ. ಹಾಗೂ ಸದಾ ಅದ ರಲ್ಲಿ ತೊಡಗಿಸಿಕೊಳ್ಳುವುದರಲ್ಲಿ ತಮ್ಮ ಅಸ್ತಿತ್ವವನ್ನು ಜೀವಂತವಾಗಿಟ್ಟುಕೊಂಡಿರುತ್ತಾರೆ. 
 
ಇದಕ್ಕೆ ಸಾಕ್ಷಿಭೂತವಾಗಿ ನಮ್ಮ ವರ್ತಮಾನದಲ್ಲಿ ಆರು ದಶಕಗಳಿಗೂ ಮೇಲ್ಪಟ್ಟು ಒಂದಲ್ಲ ಒಂದು ವಿಧ ದಲ್ಲಿ ಸುದ್ದಿಯಲ್ಲಿರುವಂತಹವರು ಹಾಗೆಯೇ ಅರ್ಥ ಪೂರ್ಣವಾಗಿರುವಂತಹವರು: ಯು. ಆರ್.ಅನಂತಮೂರ್ತಿಯವರು. ಅವರನ್ನು ಪ್ರೀತಿ ಸುವ ಮತ್ತು ಗೌರವಿಸುವಂತಹವರಲ್ಲಿ ಹೊಟ್ಟೆಕಿಚ್ಚು ತುಂಬುವ ರೀತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ. ಇಂತಹದನ್ನು ನನ್ನ ಅನುಭವದ ನೆಲೆಯಲ್ಲಿ ತುಂಬ ಹತ್ತಿರದಿಂದ ಕುವೆಂಪು, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಲಂಕೇಶ್ ಮತ್ತು ಅನಂತಮೂರ್ತಿಯವರಲ್ಲಿ ದಟ್ಟವಾಗಿ ಕಾಣಲು ಸಾಧ್ಯವಾಗಿದೆ. 
 
ಅನಂತಮೂರ್ತಿ ಯವರಂತೂ ತಮ್ಮ ‘ಸಂಸ್ಕಾರ’ ಕಾದಂಬರಿಯ ದಿನಗ ಳಿಂದಲೂ ಇಂದಿನವರೆವಿಗೂ ಚರ್ಚೆ ಯಲ್ಲಿದ್ದಾರೆ. ಅದು ಅವರ ಸೃಜನ ಶೀಲ ಬರವಣಿಗೆ ಕುರಿತು ಇರ ಬಹುದು. ನನ್ನ ಅರಿವಿನ ಮಟ್ಟಿಗೆ ರವೀಂದ್ರನಾಥ ಠಾಗೋರರ ನಂತರ ಆ ಪ್ರಮಾಣದಲ್ಲಿ ಚಿಂತಿಸುತ್ತಿರುವಂತಹವರು ಅನಂತಮೂರ್ತಿಯವರು. 
 
ಎಷ್ಟೊಂದು ಅಭಿಮಾನಿಗಳು. ಅಷ್ಟೇ ದೂರದಲ್ಲಿ ನಿಂತು ಗುಮಾನಿಯಿಂದ ನೋಡುವವರ ಪ್ರಮಾ ಣವೂ ಜಾಸ್ತಿಯೇ ಇದೆ. ಇವರಲ್ಲಿ ಬಹು ಪಾಲು ಮಂದಿ ಮೂರ್ತಿಯವರ ಕಿಂಚಿತ್ತೂ ಬರವಣಿಗೆಯನ್ನು ಓದದವರು. ಓದಕೂಡ ದೆಂದು ಹಠತೊಟ್ಟು ಸ್ಯಾಡಿಸ್ಟ್‌ಗಳಾಗಿರು ವಂತಹವರು. ಇನ್ನು ಕೆಲವರು ಓದಿ ಕೊಂಡ ವರಾದರೂ ಮತ್ತೊಂದು ರೀತಿಯಲ್ಲಿ ಸ್ಯಾಡಿ ಸ್ಟ್‌ಗಳಾಗಿರುವಂತಹವರು. ಇತ್ತೀಚಿನ ವರ್ಷ ಗಳಲ್ಲಿ ಈ ಎರಡೂ ಮುಖಗಳ ವ್ಯಕ್ತಿತ್ವವನ್ನು ಅರಿಯಲು ಸಾಧ್ಯವಾಯಿತು. ಆಗ ನಿಜ ವಾಗಿಯೂ ಮಾನಸಿಕವಾಗಿ ಒದ್ದಾಡಿದ್ದೇನೆ.
 
ಕಳೆದ ವರ್ಷ ನನಗೆ ಪ್ರೊ.ಕಿ.ರಂ.ಅವರ ಹೆಸರಿನಲ್ಲಿಯ ‘ಸಂಸ್ಕೃತಿ’ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಮತ್ತು ಪುಸ್ತಕ ಪ್ರಾಧಿಕಾರ ನೀಡುವ ಪ್ರೊ.ಜಿ.ವಿ. ರಾಜರತ್ನಂ ಅವರ ಹೆಸರಿನ ಸಾಹಿತ್ಯಕ ಪರಿಚಾರಕ ಪ್ರಶಸ್ತಿಯನ್ನು ಅನಂತ ಮೂರ್ತಿಯವರು ಪ್ರಧಾನಮಾಡಿದರು. ಆಗ ವಿಷ್ ಮಾಡಿದ ನನ್ನ ಬಾಲ್ಯಕಾಲದ ಗೆಳೆಯರು; ಅನಂತಮೂರ್ತಿಯವರು ಇದ್ದಿದ್ದ ಕಾರಣಕ್ಕಾಗಿ ನಾವು ಬರಲಿಲ್ಲ ಎಂದು ಸ್ವಲ್ಪ ರ್ಯಾಷ್ ಆಗಿಯೇ ಹೇಳಿದರು. 
 
ಅವರನ್ನು ನನಗೆ ವಿಷ್ ಮಾಡಿ ಅಥವಾ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದವನಲ್ಲ. ಆದರೆ ಅವರು ತಮ್ಮ ಆಕ್ರೋಶವನ್ನು ಈ ರೀತಿ ಯಲ್ಲಿ ತೀರಿಸಿಕೊಂಡಾಗ ಖೇದವಾಯಿತು. ಇದಕ್ಕೆ ಮುಖ್ಯ ಕಾರಣ: ಅನಂತಮೂರ್ತಿಯವರು ಮತೀಯವಾದಕ್ಕೆ ಸಂಬಂಧಿಸಿದಂತೆ ತೀವ್ರ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಬಂದವರು. ಹಾಗೆಯೇ ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿಯವರ ಕಾರ್ಯ ವೈಖರಿಗೆ ಸಂಬಂಧಿಸಿ ದಂತೆ ತಮ್ಮ ಅಭಿಪ್ರಾಯಗಳನ್ನು ಹೇಳುತ್ತ ಬಂದಿ ರುವಂತಹವರು. ಪ್ರಜಾಪ್ರಭುತ್ವದ ಬಗ್ಗೆ ಗೌರವ ವಿರುವಂತಹವರು ಯಾರೇ ಆಗಲಿ ಇದರ ಬಗ್ಗೆ ಹೇಳುವ ತುರ್ತು ಇದ್ದೇ ಇರುತ್ತದೆ.
 
ಅಂತಹದನ್ನು ತಮ್ಮ ಜೀವಿತದುದ್ದಕ್ಕೂ ಮಾಡುತ್ತಾ ಬಂದಿದ್ದಾರೆ. ಮತ್ತೆ ಕೆಲವರು ನನಗೆ ಬೇರೆ ಬೇರೆ ರೀತಿಯಲ್ಲಿ ಮುಖಾಮುಖಿಯಾದರು. ಎರಡು ವರ್ಷಗಳ ಹಿಂದೆ ನಾನು ಕರ್ನಾಟಕ ಸಾಹಿತ್ಯ ಅಕಾಡಮಿಗೆ ‘ಜ್ಞಾನಪೀಠ ಪ್ರಶಸ್ತಿ’ ಮಾಲೆಯಲ್ಲಿ ಬರುವ ಕೃತಿಗಳಲ್ಲಿ ಅನಂತಮೂರ್ತಿಯವರನ್ನು ಕುರಿತು ಒಂದು ರೀತಿಯ ಅನನ್ಯತೆಯಿಂದ ಬರೆದು ಕೊಟ್ಟಿದ್ದೆ. ಹಾಗೆ ನೋಡಿದರೆ ಇವರ ಬಗ್ಗೆ ಬರೆ ಯುವ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ. 
 
ಮೊದಲು ನಾನು ಬೇರೆ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಕುರಿತು ಬರೆಯಬೇಕಾಗಿತ್ತು. ಕೊನೆಗೆ ನಾನಾ ಕಾರಣಗಳಿಗಾಗಿ ಅನಂತ ಮೂರ್ತಿಯವರನ್ನು ಕುರಿತಂತೆ ಬರೆಯಲು ಕೆಲವರು ಒಪ್ಪಿ ಕೈ ಬಿಟ್ಟಿದ್ದರು. ಆಗ ಅಂದಿನ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದ ಗೀತಾ ನಾಗಭೂಷಣ ಅವರು ನನಗೆ ಬರೆಯಲು ಸೂಚಿ ಸಿದರು. ನಾನು ಬರೆಯಲು ಸಂತೋಷದಿಂದ ಒಪ್ಪಿಕೊಂಡೆ. ಆದರೆ ಸ್ವಲ್ಪ ಸಮಯ ತೆಗೆದು ಕೊಂಡೆ.
 
ಗೀತಾನಾಗಭೂಷಣ ಅವರು ಬದ ಲಾದ ಮೇಲೆ ಪ್ರೊ.ಎಂ. ಎಚ್. ಕೃಷ್ಣಯ್ಯನವರು ಅಧ್ಯಕ್ಷರಾಗಿ ಬಂದರು. ಅವರು ನನ್ನ ಪ್ರೀತಿಯ ಗುರುಗಳಾಗಿದ್ದವರು. ‘‘ಶೂದ್ರ, ನೀವು ಬರೆಯದೆ ಇನ್ಯಾರು ಬರೆಯಬೇಕು?’’ ಎಂದು ಒತ್ತಾಯ ಮಾಡಿದರು. ಇದರಿಂದ ಒಂದಾರು ತಿಂಗಳು ಅನಂತಮೂರ್ತಿಯವರನ್ನು ಬಿಟ್ಟು ಮತ್ತೇನನ್ನು ಓದಲು ಹೋಗಲಿಲ್ಲ. ಅದರಿಂದ ಹಿಂದೆ ಓದಿದ್ದಕ್ಕಿಂತ ಮರು ಓದು ಅವರ ಕಥೆಗಳು ಹಾಗೂ ಕಾದಂಬರಿ ಲೋಕ ಹೊಸ ಆಯಾ ಮಗಳನ್ನು ಸಾಹಿತ್ಯಕವಾಗಿ ಹಾಗೂ ಸಾಮಾಜಿಕ ವಾಗಿ ತೆರೆದಿಟ್ಟಿತು.
 
ಕೊನೆಗೆ ಪುಸ್ತಕ ಬಿಡುಗಡೆ ಯಾಯಿತು. ಸಾಕಷ್ಟು ಚರ್ಚೆಯಾಯಿತು. ಕೆಲವು ಅಬ್ರಾಹ್ಮಣ ಗೆಳೆಯರು ‘‘ಶೂದ್ರ, ಪುಸ್ತಕ ಚೆನ್ನಾಗಿ ಬಂದಿದೆ. ಆದರೆ ನೀನು ಬರೆಯಬಾರ ದಾಗಿತ್ತು’’ ಎಂದು ಹೇಳಿದಾಗ ಗಾಬರಿಗೊಂಡೆ. ಪುಸ್ತಕ ಚೆನ್ನಾಗಿ ಬಂದಿದೆ ಮತ್ತು ಅಕಾಡಮಿ ಯಿಂದ ಪ್ರಕಟಗೊಳ್ಳುತ್ತಿದೆಯಲ್ಲ ಎಂದು ಸಂಭ್ರ ಮದಲ್ಲಿದ್ದಾಗ; ಈ ರೀತಿಯ ಮಾತಿನಿಂದ ಪೆಚ್ಚಾದೆ. ಆದರೂ ಒಬ್ಬ ದೊಡ್ಡ ಲೇಖಕನನ್ನು ಅರಿಯಲು ಸಾಧ್ಯವಾಯಿತಲ್ಲ ಎಂದು; ಸಮಾ ಧಾನದ ಮೊರೆ ಹೋದೆ. ಹಾಗೆ ನೋಡಿದರೆ ಲಂಕೇಶ್ ಅವರು ಸೃಜನಾತ್ಮಕವಾಗಿ ಯಾವ ಒಳ್ಳೆಯ ಕೃತಿ ಕಂಡರೂ; ಓದದೆ ಆತ್ಮಕ್ಕೆ ವಂಚನೆ ಮಾಡಿಕೊಳ್ಳಬೇಡ ಎಂದು ನನ್ನಂತಹವರನ್ನು ಬೆಳೆಸಿ ದವರು. 
 
ಹಿಂದೆ ಪ್ರಸ್ತಾಪಿಸಿದ್ದರೂ ಮತ್ತೊಮ್ಮೆ ಪ್ರಸ್ತಾಪಿಸುವೆ: ‘ಸೂರ್ಯನ ಕುದುರೆ’ ಕಥೆ ಬಂದಾಗ ತಕ್ಷಣ ನಾನು ಓದಿರಲಿಲ್ಲ. ಅದಕ್ಕೆ ಅವರು ಛೀಮಾರಿ ಹಾಕಿದರು. ಓದಿ, ಅವರ ಮುಂದೆ ಕೂತಾಗ; ‘‘ಒಬ್ಬ ಲೇಖಕ ಅವನ ಬದುಕಿನಲ್ಲಿ ಇಂತಹದೊಂದು ಕಥೆ ಬರೆದರೆ ಸಾಕು’’ ಎಂದು ಆತ್ಮೀಯವಾಗಿ ಹೇಳಿದ್ದರು.  ಇರಲಿ, ಯು.ಆರ್. ಅನಂತಮೂರ್ತಿಯ ವರು ಎಂದೆಂದಿಗಿಂತ ಇಂದು ಹೆಚ್ಚು ಸುದ್ದಿಯಲ್ಲಿ ದ್ದಾರೆ. 
 
ಅದು ‘‘ನರೇಂದ್ರಮೋದಿಯವರು ಈ ದೇಶದ ಪ್ರಧಾನಿಯಾದರೆ ನಾನು ಇಲ್ಲಿರಲು ಬಯಸುವುದಿಲ್ಲ’’ ಎಂದು ಭಾವನಾತ್ಮಕವಾಗಿ ಹೇಳಿದ್ದನ್ನು; ತುಂಬ ವಾಚ್ಯವಾಗಿ ತೆಗೆದು ಕೊಂಡು ಎಡಬಿಡಂಗಿಗಳ ರೀತಿಯಲ್ಲಿ ವಿವಿಧ ವಲಯಗಳಿಗೆ ಸೇರಿದ ಮೂಲಭೂತವಾದಿ ಚಿಂತಕರು ಪ್ರತಿಕ್ರಿಯಿಸಿದ್ದಾರೆ. ಈಗ ಕರ್ನಾಟ ಕದ ರಾಜ್ಯಪಾಲರಾದ ಹಂಸರಾಜ ಭಾರದ್ವಾಜ್ ಅವರು ಅನಂತಮೂರ್ತಿಯವರ ಬಗ್ಗೆ ತುಂಬ ಹಗುರವಾಗಿ ಮಾತಾಡಿರುವುದರಿಂದ ಎಲ್ಲ ಕಡೆಯೂ ವಿರೋಧಕ್ಕೆ ಕಾರಣರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ: ಅನಂತಮೂರ್ತಿ ಯವರ ಅಧ್ಯಕ್ಷತೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲ ಯಕ್ಕೆ ಉಪಕುಲಪತಿಗಳನ್ನು ಆಯ್ಕೆ ಮಾಡಲು ಒಂದು ಸಮಿತಿಯನ್ನು ಏರ್ಪಡಿಸಿತ್ತು.
 
ಅದಕ್ಕೆ ಅನಂತಮೂರ್ತಿಯವರು ಹೆಚ್ಚು ಶಿಸ್ತುಬದ್ಧವಾಗಿ ಅರ್ಹತೆಯುಳ್ಳ ಒಬ್ಬ ದಲಿತ ಮಹಿಳೆಯನ್ನು ಆಯ್ಕೆ ಮಾಡಿದ್ದಾರೆ. ಆದರೆ ಕುಲಾದಿಪತಿಗಳಾದ ರಾಜ್ಯಪಾಲರು ಕಾನೂನು ಮತ್ತು ತಾಂತ್ರಿಕ ದೃಷ್ಟಿಯನ್ನು ಬದಿಗೊತ್ತಿ ತಮ್ಮ ಮೂಗಿಗೆ ನೇರವಾಗಿ ಯಾವುದೋ ಒಂದು ಹೆಸ ರನ್ನು ತರಿಸಿಕೊಂಡು ಆಯ್ಕೆ ಮಾಡಿ ದ್ದಾರೆ. ಇದನ್ನು ಪ್ರಶ್ನಿಸಲು ತೊಡಗಿ ದಾಗ; ‘‘ನಾನು ಯಾರನ್ನು ಕೇರ್ ಮಾಡುವುದಿಲ್ಲ ಕೇಂದ್ರದಲ್ಲಿ ನಾನು ಕಾನೂನು ಮಂತ್ರಿಯಾಗಿದ್ದವನು’’ ಎಂದು ಗಟ್ಟಿ ಧ್ವನಿಯಲ್ಲಿ ಈ ಪ್ರಮಾಣ ದಲ್ಲಿ ‘ನಾನು’ ಮತ್ತು ‘ಯಾರಿಗೂ ಕೇರ್ ಮಾಡುವುದಿಲ್ಲ’ ಎಂಬುದನ್ನು ಬಳಸಿರುವವರನ್ನು ಕಂಡೇ ಇಲ್ಲ. 
 
ಸಂವಿಧಾನ ಬದ್ಧವಾಗಿ ಒಂದು ರಾಜ್ಯದ ಪ್ರಥಮ ಪ್ರಜೆಯಾಗಿರುವಂತಹವರು ಇಷ್ಟೊಂದು ‘ಆರೋಗೆಂಟ್’ಆಗಿ ಮಾತಾಡಿದರೆ ಹೇಗೆ?ಅದೇ ಸಮಯಕ್ಕೆ ನಮ್ಮ ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರಗಳು. ಅವುಗಳ ನೈತಿಕತೆಯ ಅಸ್ತಿ ತ್ವವನ್ನು ಕಾಪಾಡುವಂತಹವರೇ ಬಾಯಿಗೆ ಬಂದದ್ದನ್ನೆಲ್ಲ ಮಾತಾಡುವುದು ಸೂಕ್ತವಲ್ಲ. ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳಲ್ಲಿ ರಾಜ್ಯಪಾಲರ ಬಗ್ಗೆ ಹೇಗೆ ‘ಗುಸು ಗುಸು’ ಮಾತಾಡಿಕೊಳ್ಳುತ್ತಾರೆ ಎಂಬು ದನ್ನು ತಿಳಿಯಲು ಪ್ರಯತ್ನಿಸಬೇಕು. ಉಪ ಕುಲಪತಿಗಳು ಹಾಗೂ ಇತರೆ ಉನ್ನತ ಅಧಿಕಾರಿಗಳು ಕೊಳ್ಳುವ ಅಥವಾ ಮಾರುವ ವಸ್ತುಗಳಲ್ಲ. ಹಾಗೆ ಆದರೆ ಯಾವ ವಿಶ್ವವಿದ್ಯಾಲಯವೂ ಗುಣಾತ್ಮಕ ವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.
 
‘ಈ ರಾಜ್ಯಪಾಲರು ಬಂದ ಮೇಲೆ ಎಲ್ಲ ವಿಶ್ವ ವಿದ್ಯಾಲಯಗಳು ಕುಲಗೆಟ್ಟಿವೆಯಂತೆ’ ಎಂದು ಎಲ್ಲ ವಲಯಗಳಲ್ಲೂ ಮಾತಾಡಿಕೊಳ್ಳುವಂತಾ ಗಿದೆ. ಇದರ ಜೊತೆಗೆ ಕೆಲವರಿಗೆ ಡಾಕ್ಟರೇಟ್ ಕೊಡಿಸುವುದರಲ್ಲಿ ನಾಡೋಜ ಪ್ರಶಸ್ತಿ ಕೊಡಿ ಸುವುದರಲ್ಲಿಯೂ ಪ್ರವೇಶ ಮಾಡುವರಂತೆ. ಸುತ್ತಲೂ ತಮ್ಮ ಜಾತಿಯ ಒಂದಷ್ಟು ಪುರೋ ಹಿತರನ್ನು ಏಜೆಂಟರನ್ನಾಗಿ ಮಾಡಿಕೊಂಡಿರು ವರಂತೆ. ಎಷ್ಟೊಂದು ರೀತಿಯ ಬೀದಿಯ ಮಾತು. 
 
ಈ ಎಲ್ಲವನ್ನು ಸೇರಿಸಿ ಹಾಗೂ ಅನಂತ ಮೂರ್ತಿಯವರ ಬಗ್ಗೆ ಸಾಕಷ್ಟು ಹಗುರವಾಗಿ ಮಾತಾಡಿರುವುದನ್ನು ಕಂಡು ಲೇಖಕರು, ಕಲಾವಿದರು ಮತ್ತು ಇತರೆ ಸಾಮಾಜಿಕ ಕಾರ್ಯಕರ್ತರು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಮತ್ತು ರಾಜ್ಯಪಾಲರು ಬೇಷರತ್ತಾಗಿ ಅನಂತಮೂರ್ತಿ ಯವರ ಕ್ಷಮಾಪಣೆಯನ್ನು ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇಲ್ಲಿ ಕ್ಷಮಾಪಣೆ ವಿಷಯ ಬದಿಗಿರಲಿ. ಆದರೆ ಮೊದಲನೆಯ ಬಾರಿಗೆ ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲರ ವಿರುದ್ಧ ಲೇಖಕರು, ಕಲಾವಿದರು ಬೀದಿಗಿಳಿದಿರುವುದು.
 
ಇಷ್ಟೆಲ್ಲ ಬರೆಯಲು ಮುಖ್ಯ ಕಾರಣ: ಕೆಲವರು ಅನಂತಮೂರ್ತಿಯವರು ಪ್ರಚಾರ ಕ್ಕಾಗಿ ಎಂತೆಂಥದೋ ಮಾತಾಡುವರು ಎಂದು ಕ್ಷುಲ್ಲಕವಾಗಿ ಪ್ರತಿಕ್ರಿಯಿಸುವಾಗ; ವೇದನೆ ಯಾಗುತ್ತದೆ. ಅವರಿಗೆ ನ್ಯಾಯಬದ್ಧವಾಗಿ ಎಷ್ಟು ಪ್ರಚಾರ ಸಿಗಬೇಕಾಗಿತ್ತೋ ಅಷ್ಟು ಸಿಕ್ಕಿದೆ. ಒಬ್ಬ ಪ್ರಜಾಪ್ರಭುತ್ವವಾದಿಯಾಗಿ ತಮ್ಮ ನಿಲುವನ್ನು ಹೇಳುತ್ತ ಹೋಗುವುದು ಹಾಗೂ ಸಮರ್ಥಿಸಿಕೊಳ್ಳುವುದು ಆರೋಗ್ಯಪೂರ್ಣವಾದದ್ದು. ಯಾವ ಭ್ರಷ್ಟ ಅಥವಾ ಮೂಲಭೂತವಾದಿ ತಮ್ಮ ನಡಾವಳಿಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅದರ ಬದಲು ನಾನು ಅಥವಾ ನಾವು ಆ ರೀತಿಯವರಲ್ಲ ಎಂದು ಅಡ್ಡದಾರಿಯ ಮೊರೆ ಹೋಗುವರು.
 
ಮೊನ್ನೆ ಬೆಂಗಳೂರಿನಲ್ಲಿ ‘ರಾಜ್ ನ್ಯೂಸ್ ಚಾನೆಲ್’ನವರು ಸಂವಾದದ ಸಮಯದಲ್ಲಿ ನನಗೆ ಇಂತಹ ಪ್ರಶ್ನೆಯನ್ನು ಕೇಳಿದರು: ‘‘ಅನಂತಮೂರ್ತಿಯವರು ಸದಾ ಪ್ರಚಾರದಲ್ಲಿರಲು ಈ ರೀತಿ ಮಾಡುತ್ತಾರಾ?’’ ಎಂದು. ಆ ಪ್ರಶ್ನೆಯ ಹಿಂದೆ ಯಾವುದೇ ರೀತಿಯ ಕುಯುಕ್ತಿ ಇಲ್ಲದಿದ್ದರೂ; ವಾದದ ದೃಷ್ಟಿಯಿಂದ ಕೇಳಿದ್ದರೂ; ಅನಂತಮೂರ್ತಿಯವರನ್ನು ನರೇಂದ್ರ ಮೋದಿಯವರನ್ನು ಹಾಗೂ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಅಪರಾದವಾಗುತ್ತದೆ.
ಈ ಎಲ್ಲ ಕಾರಣಗಳಿಗಾಗಿ ರಾಜ್ಯಪಾಲರಿಗೆ ಪರಮಾಧಿಕಾರವನ್ನು ಕೊಟ್ಟು ಕೂರಿಸುವುದು ತಪ್ಪು. ಕೆಲವರು ಹಳೆಯ ರಾಜಮಹಾರಾಜರ ಅಥವಾ ಪಾಳೆಯಗಾರರ ರೀತಿಯಲ್ಲಿ ವರ್ತಿಸುವ ಅಧಿಕಾರದ ಮೂಲಗಳನ್ನು ಅವರಿಗೆ ಅಸ್ತ್ರಗಳ ರೂಪದಲ್ಲಿ ಕೊಡಬಾರದು. ಇದಕ್ಕೆ ಬದಲಾಗಿ ಗಂಭೀರವಾಗಿ ಯೋಚಿಸುವ ಉನ್ನತ ಸಮಿತಿಗಳು ನಿಜವಾಗಿಯೂ ಅಸ್ತಿತ್ವಕ್ಕೆ ಬರಬೇಕಾಗಿದೆ. ಅದು ಎಲ್ಲ ವಲಯಗಳಿಗೂ ಅಂತಹ ಸಮಿತಿಗಳು ಇರಬೇಕು. 
 
ಆಗ ಮಾತ್ರ ನಾವು, ಆಡಳಿತದಲ್ಲಿ ಪಾರದರ್ಶಕತೆಯನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಎಡಬಿಡಂಗಿಗಳಂತೆ ಎಲ್ಲ ಅಧಿಕಾರವೂ ನನ್ನ ಕೈಯಲ್ಲಿದೆ ಎಂದು ‘ಅಹಂ’ನಿಂದ ಮೆರೆಯಲು ಅವಕಾಶ ಕೊಟ್ಟಂತಾಗುತ್ತದೆ. ಕೊನೆಗೂ ಈ ರೀತಿಯ ಕೂಗನ್ನು ಯಾರಿಗೆ ಹೇಳುವುದು ಮತ್ತು ಯಾರಿಗೆ ತಲುಪಿಸುವುದು ಎಂಬುದು ಗೊತ್ತಾಗುವುದೇ ಇಲ್ಲ. ಕೇಳುವ, ಕೇಳಿಸಿಕೊಳ್ಳುವ ಸೂಕ್ಷ್ಮತೆಗಳನ್ನೇ ಕಳೆದುಕೊಳ್ಳುತ್ತಿದ್ದೇವೆ ಅನ್ನಿಸುತ್ತದೆ. 
 
ಹೀಗಾಗುವುದರಿಂದಲೇ, ಬಹಳಷ್ಟು ಗಂಭೀರ ಸ್ವಭಾವದವರು ಮಾನಸಿಕವಾಗಿ ಪ್ರತಿಭಟಿಸದೆ ನಿವೃತ್ತರಾಗಿ ಬಿಡುವುದು. ತಮ್ಮ ಮುಂದೆ ಎಂತಹ ಅನ್ಯಾಯಗಳಾಗುತ್ತಿದ್ದರೂ; ‘‘ನಮಗೆಲ್ಲ ಇದ್ಯಾಕಪ್ಪ’’ ಎಂಬ ‘ಮಗುಂ’ಧೋರಣೆಯ ಮೊರೆ ಹೋಗಿಬಿಡುವರು. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಕೂಗುಗಳೆಲ್ಲ ಕ್ಷೀಣಿಸಿ ಹೋಗಿವೆ. ಹಿಂದೆ ನಮ್ಮ ಸಾರ್ವಜನಿಕ ಉದ್ಯಮಗಳು ಅತ್ಯಂತ ಸುಸ್ಥಿತಿಯಲ್ಲಿದ್ದಾಗ ಕಾರ್ಮಿಕ ಸಂಘಟನೆಗಳು ಜೀವಂತವಾಗಿದ್ದುವು. ಅವರಲ್ಲಿಯೂ ಒಂದಷ್ಟು ಮಂದಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಲವಲವಿಕೆಯಿಂದ ಭಾಗವಹಿಸಬೇಕು ಎಂಬ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದರು.
 
ಈಗ ಎಲ್ಲ ಕಡೆ ‘ಭಿಕೋ’ ಅನ್ನಿಸುವ ವಾತಾವರಣ ಆವರಿಸಿಕೊಳ್ಳುತ್ತಿದೆ. ಸಣ್ಣ ಪ್ರಮಾಣದ ದೊಡ್ಡ ಪ್ರಮಾಣದ ಪಾಳೆಗಾರರು ವೇದಿಕೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಯಾರ್ಯಾರಿಗೆ ಎಂತವರು ಮಾರ್ಗದರ್ಶಕರಾಗಬೇಕು ಎಂಬ ಗೊಂದಲದ ಪರಿಸ್ಥಿತಿಯಲ್ಲಿದ್ದೇವೆ. ಅನಂತಮೂರ್ತಿಯಂತವರು ನಿಜವಾಗಿಯೂ ದೊಡ್ಡ ಮಾರ್ಗದರ್ಶಕರು. ಈ ದೃಷ್ಟಿಯಿಂದ ಇಲ್ಲಿಯ ಟಿಪ್ಪಣಿಯನ್ನು ‘ಸಿಮೋನ್‌ವೇಲ್’ಎಂಬ ದೊಡ್ಡ ಚಿಂತಕಿಯನ್ನು ಕುರಿತು ಬರೆಯುವಾಗಿನ ಈ ಸಾಲುಗಳನ್ನು ಇಲ್ಲಿ ದಾಖಲಿಸಲು ಬಯಸುವೆ: ‘‘ಮಾನವ ಸ್ಥಿತಿಯಲ್ಲಿನ ಮೂಲ ವಿರೋಧವೆಂದರೆ, ಅವನು ಕಡ್ಡಾಯಗಳಿಗೆ ಒಳಗಾಗಿದ್ದಾನೆ. ಆದರೆ ನ್ಯಾಯಕ್ಕಾಗಿ ಹಂಬಲಿಸುತ್ತಾನೆ.
 
ನಿಯತಿಯಲ್ಲಿ ಅವನು ನಿರ್ಬಂಧಿತ; ಆದರೆ ಒಳಿತಿಗಾಗಿ ಹಾತೊರೆಯುತ್ತಾನೆ. ಅವನ ದೇಹ ಮಾತ್ರವಲ್ಲ, ಅವನ ಯೋಚನೆಗಳೂ ಹೀಗೆ ಸಿಕ್ಕಿಬಿದ್ದಿವೆ; ಆದರೂ ಒಳಿತಿಗಾಗಿ ಶ್ರಮಿಸುವುದೇ ಅವನ ಅಸ್ತಿತ್ವದ ಜೀವಾಳವಾಗಿದೆ. ಆದ್ದರಿಂದಲೇ ನಾವೆಲ್ಲರೂ ನಿಯತಿಗೂ ಒಳಿತಿಗೂ ನಡುವೆ ಸಂಬಂಧವಿದೆಯೆಂದು ನಂಬುತ್ತೇವೆ.’’

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...