Wednesday, February 19, 2014

ಮಹಾತ್ಮ ಜ್ಯೋತಿಬಾ ದಾರ್ಶನಿಕ ನಿಲುವು


ರವಿ ರಾ. ಅಂಚನ್

ಇಪ್ಪತ್ತೊಂದನೆ ಶತಮಾನದ ಕೊಲಾಹಲದ ಮಧ್ಯದಲ್ಲಿ ಭಾರತದ ಸಾಮಾಜಿಕ ಕ್ರಾಂತಿಯ ಹರಸಾಹಸಿ ಜ್ಯೋತಿಬಾ ಫುಲೆ ಅವರಿಗೆ 11 ಮೇ 1888ರಲ್ಲಿ ಶ್ರಮಿಕ ಜನಪದದಿಂದ ದತ್ತವಾದ ‘ಮಹಾತ್ಮ’ ಎಂಬ ಬಿರುದಿಗೆ ಅದರದ್ದೇ ಆದ ನೆಲೆ ಮತ್ತು ನಿಲುವುಗಳಿವೆ. ಅದಕ್ಕೂ ಮುಂಚೆ 24 ಮೇ, 1885ರಲ್ಲಿ ಪುಣೆಯ ಸಾರ್ವಜನಿಕ ಹಾಲಿನಲ್ಲಿ ಕೃಷ್ಣ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೆಯ ಮರಾಠಿ ಸಾಹಿತ್ಯ ಪರಿಷತ್ತು ಸಂಪನ್ನವಾಗಿತ್ತು. ಅಂದಿನ ಸಭೆಗೆ ಆಮಂತ್ರಣವಿದ್ದೂ ಬರಲಾರದ ಮತ್ತು ಬಹಿಷ್ಕರಿಸಿದ 43 ಮಂದಿ ಸಾಹಿತಿಗಳ ಪತ್ರವನ್ನು ಓದಿ ಹೇಳಲಾಯಿತು. 

 ಮಹಾತ್ಮ ಜ್ಯೋತಿಬಾ ದಾರ್ಶನಿಕ ನಿಲುವು

ಅದರಲ್ಲಿ ಮೊದಲು ಓದಿದ ಪತ್ರವೇ ಜ್ಯೋತಿಬಾ ಅವರದ್ದಾಗಿತ್ತು. ಅದರಲ್ಲಿ ಅವರು ‘‘ಎಲ್ಲಿಯವರೆಗೆ ಶೋಷಿತ ಬಡ ಬಹುಸಮುದಾಯಗಳ ಪ್ರಶ್ನೆಗೆ ಮರಾಠಿ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾನವಿಲ್ಲವೋ ಅಲ್ಲಿಯವರೆಗೆ ನಿಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಲ್ಲಿ ಯಾವ ಸಾರ್ಥಕತೆಯಿದೆ? ಮಾನವೀಯ ಅಧಿಕಾರವನ್ನೆ ಅಲ್ಲಗಳೆಯುವ ನಿಮ್ಮ ಲೇಖಕರ ಸಂಸ್ಥೆಯೊಂದಿಗೆ ನಮ್ಮಂತವರ ಹೊಂದಾಣಿಕೆ ಎಂತು ಸಾಧ್ಯ?... ಶೂದ್ರಾತಿಶೂದ್ರರನ್ನು ಶೋಷಣೆ ಮಾಡುತ್ತಲೇ ಇರುವ ನಿಮ್ಮಂತವರಲ್ಲಿ ನನ್ನ ನಂಬಿಕೆ ಹೋಗಿದೆ’’ ಎಂದು ಸ್ಪಷ್ಟವಾಗಿ ದಾಖಲಿಸಿದ್ದರು.

ಇಲ್ಲಿ ನಮಗೆ ಇಲಿಯಟ್ ಅವರ ‘‘ಮನುಷ್ಯನನ್ನು ಜೀವಂತ ಇಡುವ ಕೆಲಸವನ್ನು ಕಾವ್ಯ ಮಾಡುತ್ತದೆ’’ ಎನ್ನುವ ಆಶಯದ ವಿವೇಚನೆ ಭಾರತೀಯ ನೆಲೆಗಟ್ಟಿನಲ್ಲಿ ಎಷ್ಟು ವಾಸ್ತವ ಎನ್ನುವುದರತ್ತ ಗಮನ ಹರಿಸುವಂತೆ ಮಾಡುತ್ತದೆ. ಯಾಕೆಂದರೆ ಜ್ಯೋತಿಬಾ ಅವರ ಜೀವಿತ ಕಾಲದಲ್ಲೇ ಮರಾಠಿ ಸಾಹಿತ್ಯದ ಮೊದಲ ಬಂಡಾಯ ಕಾವ್ಯ ಸಾವಿತ್ರಿಬಾಯಿ ಫುಲೆ ಅವರಿಂದ, ದಲಿತ ಸಾಹಿತ್ಯದ ಮೊದಲನೆಯ ಪುಟ ಮುಕ್ತಾ ಸಾಳ್ವೆ ಅವರಿಂದ, ಮೊದಲನೆಯ ಬಂಡಾಯ ಕೃತಿ ತಾರಾಬಾಯಿ ಶಿಂಧೆ ಅವರಿಂದ, ಮೊದಲ ಮರಾಠಿ ಸಾಮಾಜಿಕ ನಾಟಕ ಸ್ವತಃ ಜ್ಯೋತಿಬಾ ಅವರಿಂದ ಸಾಹಿತ್ಯ ಲೋಕಕ್ಕೆ ದಾಂಗುಡಿಯಿಟ್ಟು ಹೊಸಚರ್ಚೆಯನ್ನು ಹುಟ್ಟುಹಾಕಿದರೂ ಇವರೆಲ್ಲರ ಹೆಸರು ಮರಾಠಿ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಲು ಇಪ್ಪತ್ತನೆಯ ಶತಮಾನದ ‘ದಲಿತ್ ಪ್ಯಾಂಥರ್’ ಚಳವಳಿಯವರೆಗೆ ಕಾಯಬೇಕಾದದ್ದು ಹಿಂದಿನ ಸಾಹಿತ್ಯ ಚರಿತ್ರೆಯ ಹುಸಿನೆಲೆಗಳತ್ತ ಬೊಟ್ಟು ಮಾಡುತ್ತದೆ. 

ಇಂತಹ ಚಾರಿತ್ರಿಕ ವ್ಯಂಗ್ಯ ಕೇವಲ ಮರಾಠಿ ಸಾಹಿತ್ಯದ್ದು ಮಾತ್ರವಲ್ಲ ಇತರ ಭಾರತೀಯ ಭಾಷೆಗಳ ಸ್ಥಿತಿಗತಿಯೂ ಹೌದು. ಇವು ಮೇಲ್ವರ್ಗದ ಅಧಿಕಾರಶಾಹಿ ಚರಿತ್ರೆಯ ಮಿತಿಯೂ ಹೌದು. ಇಂಥ ಅಮಾನುಷ ಸಾಹಿತ್ಯಿಕ ನೆಲೆಗೆ ಆಗಾಗ ಬಿಸಿ ಮುಟ್ಟಿಸಿದವರು ಜ್ಯೋತಿಬಾ. ಜ್ಯೋತಿಬಾ ಅವರ ‘ರೈತರ ಕಣ್ಣೀರು’ ಕೃತಿವಾಚನವನ್ನು 1884ರಲ್ಲಿ ತನ್ನ ದರಬಾರದಲ್ಲಿ ಆಲಿಸಿದ ಬರೋಡಾದ ಮಹಾರಾಜ ಸಯಾಜಿರಾವ್ ಗಾಯಾಕ್ವಾಡ್ ಅದುವರೆಗೆ ತನ್ನ ಅರಮನೆಯಲ್ಲಿ ಪರಂಪರೆಯಿಂದ ಸಾಗಿಬಂದ ‘ನಿತ್ಯ ಬ್ರಾಹ್ಮಣ ಭೋಜನವನ್ನು’ ನಿಲ್ಲಿಸಿ , ಆ ಹಣವನ್ನು ಬಡವರ ‘ಶಿಕ್ಷಣಕ್ಕಾಗಿ’ ವಿನುಯೋಗಿಸುವ ಮನಸು ಮಾಡಿದರು. 

ಇದರ ಪ್ರಯೋಜನ ಹಲವು ವಿದ್ಯಾರ್ಥಿಗಳಿಗೆ ಆಯಿತಲ್ಲದೆ; ಅವರಲ್ಲಿ ಡಾ. ಬಾಬಾ ಸಾಹೇಬ್ ಅವರೂ ಒಬ್ಬರಾಗಿದ್ದರು. ಇದು ಜ್ಯೋತಿಬಾ ಅವರ ಮಾತು, ಬರಹ, ಕೃತಿ ಎಲ್ಲವೂ ಒಂದು ಮಾನವೀಯ ದರ್ಶನವಾಗಿ ಆಕೃತವಾಗುತ್ತಿದ್ದ ಪರಿಯಾಗಿತ್ತು. ಇದಕ್ಕೆ ಇನ್ನೊಂದು ಉದಾಹರಣೆ 1885ರಲ್ಲಿ ಯುಗಾದಿಯ ದಿನದಂದು ಅವರು ಆಯೋಜಿಸಿದ ಒಂದು ವಿಶಿಷ್ಟ ರೀತಿಯ ಜನಪದೀಯ ಕಲಾ ಮೇಳ. ಅಂದು ಅದು ಸಾಯಂಕಾಲ 4 ಗಂಟೆಗೆ ಭವಾನಿ ಪೇಟೆಯ ವಿಠೋಬಾ ಮಂದಿರದಿಂದ ಹೊರಟು, ಡಾ. ಸದೋಬಾ ಗಾವಡೆ ಅವರ ಮನೆಗೆ ರಾತ್ರಿ 9 ಗಂಟೆಗೆ ಮುಟ್ಟುತ್ತದೆ. 

ಆ ಕಲಾ ಮೇಳದ ವಿಶಿಷ್ಟತೆ ಯೆಂದರೆ ಹಳದಿ ಮತ್ತು ಹಸಿರು ಬಣ್ಣದ ಧ್ವಜ ಹಿಡಿದ ಎಲ್ಲ ವರ್ಗದ ಮತ್ತು ಮತಧರ್ಮದ ಜನರ ಭಾಗವಹಿಸುವಿಕೆ. ಅದಲ್ಲದೆ ಅಲ್ಲಿ ಜನಪದೀಯವಾದ ಎಲ್ಲ ಗಾಳಿವಾದ್ಯ ಮತ್ತು ಚರ್ಮವಾದ್ಯಗಳ ಕಲಾತ್ಮಕ ಸಂಯೋಜನೆ, ಕಲಾವಿದರು ಮತ್ತು ಅಥಿತಿಗಳೆಲ್ಲರೂ ಕಾಲುನಡಿಗೆಯಲ್ಲೇ ಜೊತೆಜೊತೆಯಲ್ಲಿ ಸಾಗುವ ಸಮಾನತೆಯ ಅಪೂರ್ವ ದೃಶ್ಯಾವಳಿ , ದಲಿತರು-ಬಲಿತರು, ಕಲಿತವರು-ಕಲಿಯದವರು, ಸವರ್ಣೀಯರು- ಅವರ್ಣೀಯರು, ಎಲ್ಲರೂ ಅಲ್ಲಿದ್ದರು! ಆದರೂ ಅಲ್ಲಿ ಯಾರಿಗೂ ಯಾರೂ ಛತ್ರ ಹಿಡಿದಿರಲಿಲ್ಲ.

ರಥವೇರಿದವರು ಬೀಗುವ, ಕಾಲುನಡಿಗೆಯವರು ಬಸವಳಿಯುವ ತಾರತ್ಯಮದ ಸಂಕಟ ಅಲ್ಲಿರಿಲಿಲ್ಲ. ಯುಗಾದಿಯ ನಿಮಿತ್ತ ಸಿಹಿ ಹಂಚುವುದರಲ್ಲಿ, ಹಂಚುವ ಕೈಗಳು ಮತ್ತು ಪಡೆಯುವ ಕೈಗಳು ಯಾವುದೇ ಒಂದು ಜಾತಿಯ ಏಕಸಾಮ್ಯ ಇರಲಿಲ್ಲ. ಅಲ್ಲಿ ಎಲ್ಲರೂ ಇದ್ದರು! ದೇವರ ಗುಡಿಯಿಂದ ಹೊರಟು ಜ್ಞಾನವಿಜ್ಞಾನ ಸಂಪನ್ನನೊಬ್ಬನ ಮನೆಯಿಂಗಳದಲ್ಲಿ ನಿಂತ ಈ ಜನಪದೀಯ ಜಾಥಾದಲ್ಲಿ ‘ಭಕ್ತಿಗೀತೆಯ’ ಬದಲಿಗೆ ‘ತತ್ವಗೀತೆಗಳ’ ಅಳವಡಿಕೆ ಸಮತಾ ಕ್ರಾಂತಿಯ ಸಂದೇಶವಾಹಕದಂತಿತ್ತು. ಮರಾಠಿ ಮಣ್ಣಿನ ಮಣ್ಣಿನ ತಮಾಷಾ ಮತ್ತು ಝಲ್ಸಾ ರಂಗರೂಪಗಳು ಅಂದು ಹೊಸ ಚೈತನ್ಯದಿಂದ ಮೈ ತುಂಬಿದ್ದವು.

ಈ ಜಾಥಾದಲ್ಲಿ ಜ್ಯೋತಿಬಾ ಅವರೊಡನೆ ಭಾಗವಹಿಸಿದವರಲ್ಲಿ ರಾಮಯ್ಯ ವೆಂಕಯ್ಯ ಅಯ್ಯೋವರು, ಮಹದೇವ ಗೋವಿಂದ ರಾನಡೆ, ಕೃಷ್ಣರಾವ್ ಭಾಲೇಕರ್, ಎಲ್.ಕೆ. ಘೋರ್ಪಡೆ, ದೇವರಾಜ್ ಕೊಂಡಾಜಿ ಠೋಸರ್, ಎಚ್.ಎಲ್.ನವಲ್ಕರ್, ಗೋಪಾಲಬಾಬಾ ವಲಂಗಕರ್, ರಾಮಚಂದ್ರ ವಿಠೋಬಾ ಧಮಣಸ್ಕರ್, ಮಾಮಾ ಪರಮಾನಂದ್, ರಾಮಶೇಟ್ ಬಾಪೂಶೇಟ್ ಉರವಣೆ, ವಾಸುದೇವ ಬಾಬಾಜಿ ನವರಂಗೆ, ತುಕಾರಾಮ್ ತಾತ್ಯಾ ಪಡವಲ್, ಬಾವೂ ಕೊಂಡಾಜಿ ಪಾಟೀಲ್, ದೋಂಡಿರಾಮ್‌ನಾಮದೇವ ಕುಂಬಾರ್, ಗ್ಯಾನೋಬಾ ಕೃಷ್ಣಾಜಿ ಸಾಸಣೆ, ನಾರಾಯಾಣ ಮೇಘಾಗಿ ಲೋಖಂಡೆ, ಮುಕ್ತಾ ಸಾಳ್ವೆ, ಫಾತಿಯಾ ಶೇಖ್, ಉಸ್ಮಾನ್ ಶೇಖ್, ತಾರಾಬಾಯಿ ಶಿಂಧೆ ಮೊದಲಾದವರೆಲ್ಲರಿದ್ದರು ಅಲ್ಲಿ ಯಾರೂ ಪ್ರಧಾನರೂ ಇರಲಿಲ್ಲ. ಯಾರೂ ಗೌಣರೂ ಆಗುವಂತಿರಲಿಲ್ಲ. 

ಜಾಥಾದ ಸಮರೋಪದಲ್ಲಿ ಮೊದಲ ಮರ್ಯಾದೆಯ ಮಣೆ ಕಲಾವಿದರಿಗೆ. ಆ ಬಳಿಕ ಅಯ್ಯಾವರು, ರಾನಡೆ ಮತ್ತು ಜ್ಯೋತಿಬಾ ಅವರಿಂದ ಉಪನ್ಯಾಸ ನಡೆದು ಕಾರ್ಯಕ್ರಮ ಡಾ. ಸದೋಬಾ ಗಾವಡೆ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿಂದಲೇ ‘ಜಾಥಾಗಳು’ ಜಾಜಪದೀಯ ಕಲಾವಿದರನ್ನು ಕಾರ್ಯಕ್ರಮದ ಪ್ರಧಾನ ಭಾಗವಾಗಿ ಪರಿಗಣಿಸುವ ಹೊಸ ಪೃಥೆಯೊಂದಕ್ಕೆ ಮಹಾರಾಷ್ಟ್ರದಲ್ಲಿ ಗತಿಪಡೆಯುತ್ತದೆ.

ಇದೇ ವರ್ಷ ಮಳೆಗಾಲದ ಸಂದರ್ಭದಲ್ಲಿ ಎರಡು ತಿಂಗಳು ಪುಣೆಯಲ್ಲಿ ಇದ್ದ ಬರೋಡಾದ ಮಹಾರಾಜ ಸಯಾಜಿರಾವ್ ಗಾಯಾಕ್ವಾಡ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಒಂದು ಜ್ಯೋತಿಬಾ ವರ ಮುಂದಾಳುತನದಲ್ಲಿ ನಡೆಯುತ್ತದೆ. ಅಂದು ಡಾ. ಬಂಡಾರ್ಕರ್, ರಾನಡೆ, ಜ್ಯೋತಿಬಾ ಅವರಿಂದ ಅಭಿನಂದನಾ ಭಾಷಣ ನಡೆಯುತ್ತದೆ. ಈ ಕಾರ್ಯಕ್ರಮದ ವರದಿಯೊಂದು ರಾನಡೆಯವರ ನಿಯಂತ್ರಣದಲ್ಲಿದ್ದ ಪ್ರಾರ್ಥನಾ ಸಮಾಜದ ‘ಜ್ಞಾನಪ್ರಕಾಶ’ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ.
ಅದರಲ್ಲಿ ರಾನಡೆಯವರ ಭಾಷಣದ ಹೊಗಳಿಕೆ ಮತ್ತು ಜ್ಯೋತಿಬಾ ಅವರ ಭಾಷಣದ ತೆಗಳಿಕೆಯನ್ನು ಅದು ವಾಗ್ವಾದಕ್ಕೆ ಎಡೆಮಾಡುತ್ತದೆ. ಇದಕ್ಕೆ ಉತ್ತರವಾಗಿ ‘ಇಶಾರ’ ಅಂದರೆ ‘ಗುರಿ’ ಎಂಬ ಕೃತಿಯನ್ನು ಜ್ಯೋತಿಬಾ ಹೊರತರುತ್ತಾರೆ. ಅದರಲ್ಲಿ ರಾನಡೆಯವರ ಬರೆದ ಮರಾಠ ಚರಿತ್ರೆಯ ವೈಭವೀಕರಣಕ್ಕೆ ಪ್ರತಿಯಾಗಿ ಪೇಶ್ವೆ ಎರಡನೆಯ ಬಾಜಿರಾಯನ ವಿಲಾಸಿ ಖಯಾಲಿಯಿಂದ ಶೂದ್ರಾತಿ ಶೂದ್ರರು ಮತ್ತು ಮಹಿಳೆಯರು ಪಟ್ಟ ಪಾಡಿನ ನುಡಿಚಿತ್ರವಿದೆ. 

‘ಅವರಿಗಿಂತ ಬ್ರಿಟಿಷರೇ ವಾಸಿ’ ಎಂಬ ಮಾತುಗಳಿವೆ. ಇದರ ಬೆನ್ನಿಗೆ 1885ರ ಜೂನ್‌ನಿಂದ ಜ್ಯೋತಿಬಾ ಅವರ ಹೊರತಂದ ‘ಸತ್ಸಾರ’ ಎಂಬ ಪತ್ರಿಕೆಯಲ್ಲಿ ತುಳುನಾಡಿನ ನೇತ್ರಾವತಿ ಮೂಲದಲ್ಲಿ ಸಂಪ್ರದಾಯಸ್ತ ಮನೆತನ ಒಂದರಲ್ಲಿ ಜನಿಸಿದ ರಮಾಬಾಯಿ ಪಂಡಿತ್; ಕ್ರಿಶ್ಚನ್ ಯಾಕಾಗಬೇಕಾಯಿತು? ಎಂಬ ವಿಷಯದ ಬಗ್ಗೆ ಮತ್ತು ಆಕೆಯ ಮಹಿಳಾಪರ ಸಾಮಾಜಿಕ ಚಟುವಟಿಕೆಯ ಬಗ್ಗೆ ಗೌರವಾದರದ ಉಲ್ಲೇಖಗಳು ದೊರೆಯುತ್ತದೆ. ಅದಲ್ಲದೆ ತಾರಾಬಾಯಿ ಶಿಂಧೆ ಅವರ ‘ಸ್ತ್ರಿ ಪುರುಷ ತುಲನಾ’ ಎಂಬ ಬಂಡಾಯ ಕೃತಿಯನ್ನು ಸಾರಸ್ವತ ಲೋಕದಲ್ಲಿ ಚಿರವಾಗಿಸುವ ವಸ್ತುನಿಷ್ಟ ವಿಮರ್ಶೆಯೂ ಇದೆ.

ಈ ಇಬ್ಬರು ಮಹಿಳೆಯರು ಬೆನ್ನುಹತ್ತಿ ಅವರ ತೇಜೋವಧೆಗೆ ತಿಳಕರಂತವರು ತನ್ನ ಲೇಖನಿ ಝಳಪಿಸಿದಾಗ ಅದಕ್ಕೆ ಪ್ರತಿಯಾಗಿ ಅವರಿಬ್ಬರ ಪ್ರತಿಭೆ ಮತ್ತು ಸ್ವಾತಂತ್ರಕ್ಕೆ ಧಕ್ಕೆಯಾಗದಂತೆ ತನ್ನ ಲೇಖನಿಯನ್ನು ಬಳಸಿದವರು ಜ್ಯೋತಿಬಾ. ಜ್ಯೋತಿಬಾ ಅವರು ತನ್ನ 36 ವರ್ಷದ ಸುದೀರ್ಘ ಬರವಣಿಗೆಯಲ್ಲಿ; ಅವರು ಪಾಶ್ವವಾಯು ಪೀಡಿತರಾಗಿದ್ದಾಗಲೂ ಎಡಗೈಯಿಂದ 1896ರಲ್ಲಿ ಬರೆದ ‘ಸಾರ್ವಜನಿಕ ಸತ್ಯ ಧರ್ಮ’ ಕೃತಿ ಅವರ ಶ್ರಮ-ಸೃಜನಶೀಲತೆ ಮತ್ತು ಜನಮುಖಿ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಂತಿವೆ. 

ಅವರ ಒಂದೊಂದು ಕೃತಿಯೂ ದೀರ್ಘ ವಿವೇಚನೆಗೆ ಧಕ್ಕುವಂತದ್ದಾಗಿದೆ. ಆದರೆ ಇವಾವುದಕ್ಕೂ ಅಂದೂ- ಇಂದೂ ಯಾವ ಪ್ರಶಸ್ತಿಗಳು ದಕ್ಕದಿದ್ದರೂ; ಇಂದಿಗೂ ಅದು ಮರಾಠಿ ಸಾಹಿತ್ಯದ ಮೈಲುಗಲ್ಲಾಗಿ ಭಾರತೀಯ ಸಾಹಿತ್ಯಕ್ಕೆನೇ ಏಕೆ; ವಿಶ್ವಸಾಹಿತ್ಯದಲ್ಲೂ ಅಧ್ಯಯನಕಾರರ ಕುತೂಹಲಕ್ಕೆ ಆಕರವಾಗಿ ಉಳಿದುಕೊಂಡದ್ದು ಅದರ ದಾರ್ಶನಿಕ ವೈಶಿಷ್ಟವಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...